ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಡಿಸೆಂಬರ್ 7, 2010

ಸೇವಾ ಪುರಾಣ -28: ಅರಕಲಗೂಡು ಕಿಟ್ಟಿ - ಹೀಗೊಬ್ಬ ಕಳ್ಳ!!

ಜೈಲಿನ ಸುಧಾರಣೆ
     ಕೈದಿಯಾಗಿದ್ದಾಗಿನ ನನ್ನ ಅನುಭವಗಳು ಜೈಲನ್ನು ಸುಧಾರಿಸುವತ್ತ ಸಹಾಯ ಮಾಡಿದವು. ಪುರಸಭೆ ಸಿಬ್ಬಂದಿ ನೆರವು ಪಡೆದು ಮೊದಲು ಜೈಲಿನ ನೀರಿನ ತೊಟ್ಟಿ, ಚರಂಡಿ ಸುತ್ತಮುತ್ತಲಿನ ಆವರಣವನ್ನು ಎಷ್ಟೋ ವರ್ಷಗಳ ನಂತರ ಸ್ವಚ್ಛಗೊಳಿಸಲಾಯಿತು. ಡಿ.ಜಿ.ಪಿ.ರವರೊಂದಿಗೆ ಪತ್ರವ್ಯವಹಾರ ನಡೆಸಿ ಕಟ್ಟಡದ ದುರಸ್ತಿಗೆ, ಸುಣ್ಣ ಬಣ್ಣಕ್ಕೆ ವ್ಯವಸ್ಥೆಯಾಯಿತು. ನಿಗದಿತ ಪ್ರಮಾಣದ ಆಹಾರ ಸಾಮಗ್ರಿಗಳು ಕೈದಿಗಳಿಗೆ ತಲುಪುತ್ತಿತ್ತು. ಆ ಜೈಲಿಗೆ ಹಳಬರಾಗಿದ್ದ ಕೆಲವು ಕೈದಿಗಳು ನನಗೆ 'ನಮ್ಮನ್ನೂ ಮನುಷ್ಯರಂತೆ ಕಂಡವರು ನೀವೇ ಸಾರ್' ಎಂದು ಹೇಳಿದಾಗ ನನಗೆ ಖುಷಿಯಾಗಿದ್ದು ಸತ್ಯ. ಜೈಲಿನಲ್ಲಿ ಸ್ಥಳಾವಕಾಶದ ಕೊರತೆಯಿದ್ದುದರಿಂದ ಎಂಟಕ್ಕಿಂತ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಇಡಲು ನಾನು ಒಪ್ಪುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಕೈದಿಗಳನ್ನು ಹಾಸನದ ಜೈಲಿಗೆ ವರ್ಗಾಯಿಸುತ್ತಿದ್ದೆ. ಮಹಿಳಾ ಕೈದಿಗಳು ಬಂದರೆ ಮಹಿಳಾ ಗಾರ್ಡುಗಳಿಲ್ಲವೆಂಬ ಕಾರಣ ತೋರಿಸಿ ಅವರನ್ನು ಕೂಡಲೇ ಹಾಸನ ಅಥವ ಮೈಸೂರು ಜೈಲಿಗೆ ಕಳುಹಿಸುತ್ತಿದ್ದೆ. ಈ ಉಪಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಡಲು ಅವಕಾಶವಿತ್ತು. ನ್ಯಾಯಾಲಯದಲ್ಲಿ ಕೈದಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ ಸಂದರ್ಭದಲ್ಲಿ ಅವರನ್ನು ಮೈಸೂರು ಅಥವ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗುತ್ತಿತ್ತು.
     ಕೈದಿಗಳನ್ನು ನೋಡಲು ಬರುವ ಬಂಧುಗಳು, ಸ್ನೇಹಿತರನ್ನು ಗಾರ್ಡುಗಳು ಹಣ ಪಡೆದು ನನ್ನ ಅನುಮತಿ ಪಡೆಯದೆ ಭೇಟಿಗೆ ಅವಕಾಶ ಕೊಡುತ್ತಿದ್ದುದನ್ನು ತಪ್ಪಿಸಿ ನನ್ನ ಅನುಮತಿ ಪಡೆದೇ ಭೇಟಿಗೆ ಅವಕಾಶ ಕೊಡುವಂತೆ ನಿರ್ಬಂಧಿಸಿದೆ. ಇದೂ ಪೋಲಿಸರ ಅಸಮಾಧಾನ ಹೆಚ್ಚಿಸಿತು. ವಾರಕ್ಕೊಮ್ಮೆ ಕೈದಿಗಳಿಗೆ ಮಾಂಸಾಹಾರ, ಮಾಂಸ ತಿನ್ನದವರಿಗೆ ಸಿಹಿ ಕೊಡಲು ಅವಕಾಶವಿದ್ದು ಸರಿಯಾಗಿ ತಲುಪುವಂತೆ ನೋಡಿಕೊಂಡೆ. ಮಜ್ಜಿಗೆ ಕೊಡಲು ಅವಕಾಶವಿರದಿದ್ದರೂ ಕೊಡಲು ಅನುಕೂಲ ಮಾಡಿದೆ. ಹಬ್ಬ ಹರಿದಿನಗಳಲ್ಲಿ ಕೈದಿಗಳಿಗೆ ನನ್ನ ಖರ್ಚಿನಲ್ಲಿ ಮನೆಯಿಂದ ಸಿಹಿ ಕಳುಹಿಸುತ್ತಿದ್ದೆ.
     ದಿನಕ್ಕೊಮ್ಮೆ ಅನಿರೀಕ್ಷಿತ ಸಮಯದಲ್ಲಿ ಜೈಲಿಗೆ ಭೇಟಿ ಕೊಟ್ಟು ವ್ಯವಸ್ಥೆ ಬಗ್ಗೆ ಗಮನಿಸುತ್ತಿದ್ದೆ. ಕೈದಿಗಳು ಗಾರ್ಡುಗಳಿಗೆ ಹಣ ನೀಡಿ ಬೀಡಿ, ಸಿಗರೇಟು, ಇಸ್ಪೀಟು ಎಲೆಗಳು, ಹೆಂಡಗಳನ್ನು ಪಡೆದುಕೊಳ್ಳುತ್ತಿದ್ದುದನ್ನು ಪತ್ತೆ ಹಚ್ಚಿ ಭೇಟಿ ನೀಡಿದಾಗ ವಶಪಡಿಸಿಕೊಳ್ಳುತ್ತಿದ್ದೆ. ಇದಕ್ಕೆ ನನ್ನದೇ ಆದ ಉಪಾಯವಿತ್ತು. ತಹಸೀಲ್ದಾರರ ಛೇಂಬರಿನ ಹಿಂದಿನ ಕಿಟಕಿಯ ಸಂದಿನಿಂದ ಜೈಲಿನ ಆವರಣ ಕಾಣುತ್ತಿತ್ತು. ನನ್ನ ಗುಮಾಸ್ತರನ್ನು ಜೈಲಿಗೆ ಹೋಗಿರಲು ತಿಳಿಸಿ ಹಿಂದೆಯೇ ಬರುತ್ತೇನೆಂದು ಹೇಳಿ ಕಿಟಕಿಯ ಸಂದಿನಿಂದ ಗಮನಿಸುತ್ತಿದ್ದೆ. ಗುಮಾಸ್ತ ಜೈಲಿನ ಬಾಗಿಲು ಬಡಿದ ಕೂಡಲೇ ಗಾರ್ಡುಗಳು ಕೈದಿಗಳಿಗೆ ಸನ್ನೆ ಮಾಡುತ್ತಿದ್ದರು. ಅವರು ಗಡಿಬಿಡಿಯಿಂದ ಬೀಡಿ, ಸಿಗರೇಟು, ಮದ್ಯದ ಬಾಟಲಿ, ಇತ್ಯಾದಿಯನ್ನು ಗಿಡದ ಸಂದಿ, ಚರಂಡಿ, ತಿಪ್ಪೆ ಮುಂತಾದ ಸಂದಿಗೊಂದಿಗಳಲ್ಲಿ ಮುಚ್ಚಿಟ್ಟು ಓಡಿ ಹೋಗಿ ಸಭ್ಯರಂತೆ ಜೈಲಿನ ಸೆಲ್‌ಗಳಲ್ಲಿ ಕುಳಿತಿರುತ್ತಿದ್ದರು. ನಂತರ ನಾನು ಹೋಗಿ ಮುಚ್ಚಿಟ್ಟ ಸ್ಥಳ ಬಿಟ್ಟು ಬೇರೆಡೆಗಳಲ್ಲಿ ಮೊದಲು ಹುಡುಕಿದಂತೆ ಮಾಡಿ ಕೊನೆಗೆ ಆ ಸ್ಥಳಗಳಲ್ಲಿರುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದೆ. ಈ ಗುಟ್ಟನ್ನು ನನ್ನ ಗುಮಾಸ್ತರಿಗೂ ತಿಳಿಸಿರಲಿಲ್ಲ. ಅವರಿಗೆಲ್ಲಾ ನಾನು ಹೇಗೆ ಕಂಡು ಹಿಡಿದೆನೆಂದು ಆಶ್ಚರ್ಯವಾಗುತ್ತಿತ್ತು. ಈ ಜೈಲಿಗೆ ಸಂಬಂಧಿಸಿದಂತೆ ನೆನಪಿನಲ್ಲಿ ಉಳಿದಿರುವ ಒಂದೆರಡು ಸಂಗತಿಗಳನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಅರಕಲಗೂಡು ಕಿಟ್ಟಿ
     ನಾನು ಜೈಲು ಸೂಪರಿಂಟೆಂಡೆಂಟ್ ಆದ ಎರಡನೆ ದಿನ ಒಬ್ಬ ಕೈದಿಯನ್ನು ಪೋಲಿಸರು ಕರೆತಂದಿದ್ದರು. ಅವನು "ನಮಸ್ಕಾರ ಹೊಸ ಸಾಹೇಬರಿಗೆ" ಎಂದು ಸಲ್ಯೂಟ್ ಹೊಡೆದು ನಕ್ಕ. ಪೋಲಿಸರು ಹೇಳಿದಂತೆ ಆತ ಜೈಲಿಗೆ ಬರುವುದು, ಹೋಗುವುದು ಸಾಮಾನ್ಯವಾಗಿತ್ತಂತೆ. ಜೈಲಿಗೆ ನಿತ್ಯದ ಭೇಟಿ ನೀಡಿದ ಸಂದರ್ಭದಲ್ಲಿ ಅವನನ್ನು ಮಾತನಾಡಿಸಿದೆ. ಅವನು ಹೇಳಿದ ಸಂಗತಿ ಆಶ್ಚರ್ಯಕರವಾಗಿತ್ತು. "ನನಗೆ ಗೊತ್ತು ಸಾರ್, ನೀವು ಒಳ್ಳೆಯವರು. ನಮ್ಮೂರಿನ ಅಳಿಯ" ಎಂದ ಅವನು ಹೇಳಿದ್ದೇನೆಂದರೆ "ಸಾರ್, ನಾನೊಬ್ಬ ಕಳ್ಳ, ನಿಜ. ಆದರೆ ನಿಜವಾಗಿ ತಪ್ಪು ಮಾಡಿದಾಗ ಪೋಲಿಸರು ನನ್ನನ್ನು ಹಿಡಿಯುವುದಿಲ್ಲ. ಅವರಿಗೆ ಆಗುವುದೂ ಇಲ್ಲ ಬಿಡಿ. ಇನ್ನು ಯಾವಾಗಲೋ ಅವರಿಗೆ ಕೇಸುಗಳನ್ನು ಹಾಕಬೇಕೆಂದನ್ನಿಸಿದಾಗ ಮಾಡದೆ ಇರುವ ತಪ್ಪು ಹೊರಿಸಿ ಸುಳ್ಳು ಕೇಸು ಹಾಕಿ ಕರೆದುಕೊಂಡು ಬರುತ್ತಾರೆ. ಎರಡು ದಿನ ಇರ್ತೀನಿ, ಹೋಗ್ತೀನಿ. ಮತ್ತೆ ಬರ್ತಾ ಇರ್ತೀನಿ." ಮುಂದುವರೆಸಿ "ನಾನು ಗ್ರಾಜುಯೇಟ್, ಸಾರ್. ನನ್ನ ಸರ್ಟಿಫಿಕೇಟ್ ತೋರಿಸಲಾ ಸಾರ್" ಎಂದು ಶರ್ಟು ಬಿಚ್ಚಿ ಮೈಮೇಲಿದ್ದ ಚಾಕು, ಚೂರಿಗಳ ಗಾಯಗಳ ಗುರುತುಗಳನ್ನು ತೋರಿಸಿದ. ನಾನು ಪ್ರತಿಕ್ರಿಯಿಸದೆ ಮುಗುಳ್ನಕ್ಕೆ.
     ಸುಮಾರು ಎರಡು ತಿಂಗಳ ನಂತರದಲ್ಲಿ ಒಂದು ದಿನ ಬೆಳಿಗ್ಗೆ ಒಂಬತ್ತು ಘಂಟೆಯಿರಬಹುದು, ಅರಕಲಗೂಡು ಕಿಟ್ಟಿ ನನ್ನ ಮನೆಗೇ ಬಂದವನು "ಸಾರ್, ತಪ್ಪು ತಿಳಿಯಬೇಡಿ. ನನಗೆ ಹೊಟ್ಟೆ ಹಸಿಯುತ್ತಿದೆ. ತಿಂಡಿ ತಿಂದಿಲ್ಲ. ಒಂದಿಪ್ಪತ್ತು ರೂಪಾಯಿ ಕೊಡಿ ಸಾರ್. ೨-೩ ಘಂಟೆಯ ಒಳಗೆ ನಿಮ್ಮ ಹಣ ವಾಪಸು ಕೊಡುತ್ತೇನೆ. ನಾನು ಕಳ್ಳ ಇರಬಹುದು ಸಾರ್. ಕಳ್ಳರಿಗೂ ನಿಯತ್ತು ಇರುತ್ತೆ. ಖಂಡಿತಾ ನಿಮ್ಮ ಹಣ ವಾಪಸು ಕೊಡುತ್ತೇನೆ" ಎಂದ. ನಾನು ಅವನಿಗೆ ಹಣ ಕೊಟ್ಟೆ. ಇನ್ನು ಮುಂದೆ ಮನೆಯ ಹತ್ತಿರ ಬರಬಾರದು ಎಂದು ಹೇಳಿದೆ. ಆ ದಿನ ಕಛೇರಿಯಲ್ಲಿದ್ದಾಗ ಸುಮಾರು ೧೧ ಘಂಟೆಯ ವೇಳೆಗೆ ಕಿಟ್ಟಿ ಬಂದೇ ಬಿಟ್ಟ. "ಸಾರ್, ನೀವು ಒಳ್ಳೆ ಮನಸ್ಸಿನಿಂದ ದುಡ್ಡು ಕೊಟ್ಟಿರಿ ಸಾರ್. ತಿಂಡಿ ತಿಂದವನೇ ಬಸ್ ಸ್ಟಾಂಡಿಗೆ ಹೋದೆ. ಒಂದು ಬಸ್ ಹತ್ತಿ ಇಳಿದೆ. ಇಳಿಯುವಾಗ ನನ್ನ ಕೈಯಲ್ಲಿ ಪರ್ಸ್ ಇತ್ತು. ಸಿಕ್ಕಿದ ಪರ್ಸ್‌ನಲ್ಲಿ ೧೫೫ ರೂಪಾಯಿ ಇತ್ತು. ಇನ್ನೊಂದೆರಡು ದಿನಕ್ಕೆ ಸಾಕು. ತೊಗೊಳಿ ಸಾರ್, ನಿಮ್ಮ ಇಪ್ಪತ್ತು ರೂಪಾಯಿ" ಎಂದ ಅವನ ಮಾತು ಕೇಳಿ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. 'ಆ ದುಡ್ಡು ನೀನೇ ಇಟ್ಟುಕೋ. ನನಗೆ ಬೇಡ. ಇನ್ನುಮುಂದೆ ಹೀಗೆಲ್ಲಾ ಹಣ ಕೇಳಲು ಬರಬೇಡ" ಎಂದೆ. ಹೋಗುವಾಗ ಅವನು "ಸಾರ್, ನಿಮ್ಮ ಕ್ಲರ್ಕ್ ಸರಿಯಿಲ್ಲ. ತರಲೆ. ಅದಕ್ಕೆ ಕಳೆದ ವರ್ಷ ಅವನ ಮನೆಯಲ್ಲಿ ಕಳ್ಳತನ ಮಾಡಿದ್ದೆ" ಎಂದು ಗುಟ್ಟಾಗಿ ಹೇಳಿದ್ದ. "ಹೇಗೂ ಕಳವಾಗಿದ್ದಕ್ಕೆ ದೂರು ಕೊಟ್ಟಿರುತ್ತಾರೆ. ಪೋಲಿಸರಿಗೆ ಹೇಳಿ ಕೇಸ್ ಹಾಕಿಸಿದರೆ?" ಎಂದರೆ ಅವನು "ನಾನೇ ನಿಮ್ಮ ಕ್ಲರ್ಕಿಗೆ, ಪೋಲಿಸರಿಗೆ ಬೇಕಾದರೆ ಹೇಳಲಾ? ಯಾರೂ ಏನೂ ಮಾಡಲ್ಲ" ಎಂದು ಉತ್ತರಿಸಿದ್ದ. "ಒಂದು ಮಾತು ಸಾರ್. ನೀವು ಏನು ಬೇಕಾದರೂ ಮಾಡಿ. ನನಗೆ ನಿಮ್ಮನ್ನು ಕಂಡರೆ ಗೌರವ. ಅದಕ್ಕೆ ನಿಮ್ಮ ಹತ್ತಿರ ಏನನ್ನೂ ಮುಚ್ಚಿಡುತ್ತಿಲ್ಲ" ಎಂದೂ ಹೇಳಿ ಹೋಗಿದ್ದ. ನಾನು ಅವನು ಹೋಗುವುದನ್ನೇ ನೋಡುತ್ತಾ ಕುಳಿತಿದ್ದೆ. ಕಿಟ್ಟಿ ಹೋದ ಮೇಲೆ ಗುಮಾಸ್ತನನ್ನು ಅವನ ಮನೆಯಲ್ಲಿ ಎಂದಾದರೂ ಕಳ್ಳತನವಾಗಿತ್ತೇ ಎಂದು ಕೇಳಿದರೆ "ಹೌದು ಸಾರ್, ಒಂದು ವರ್ಷದ ಹಿಂದೆ ಕ್ಯಾಶ್ ೫೦೦ ರೂಪಾಯಿ ಮತ್ತು ಒಂದು ಉಂಗುರ ಕಳುವಾಗಿತ್ತು" ಎಂಬ ಉತ್ತರ ಆತನಿಂದ ಬಂದಿತ್ತು!

3 ಕಾಮೆಂಟ್‌ಗಳು:

  1. ಮಜವಾದ ಅನುಭವಗಳು... ನೆನಪಿಸಿಕೊಳ್ಳಲು ಯೋಗ್ಯವಾದವೇ...!
    ಧನ್ಯವಾದಗಳು ಹಂಚಿಕೊಳ್ಳುತ್ತಿರುವುದಕ್ಕೆ...! :)

    ನಿಮ್ಮೊಲವಿನ,
    ಸತ್ಯ.. :)

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಜ, ಸತ್ಯಚರಣರೇ. ನೆನೆಸಿಕೊಳ್ಳಲು ಖುಷಿಯಾಗುತ್ತದೆ. ಕಹಿ ನೆನಪುಗಳೂ ಸಾಕಷ್ಟಿವೆ. ಧನ್ಯವಾದಗಳು.

      ಅಳಿಸಿ