ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜುಲೈ 26, 2023

ದೇವರೊಡನೆ ಸಂದರ್ಶನ - 14


ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ.
ದೇವರು: ಒಂದು ಮಾತು ಮನಸ್ಸಿನಲ್ಲಿರಲಿ, ಗಣೇಶ. ಯಾವುದು ಸತ್ಯ, ಯಾವುದು ಸರಿ ಅನ್ನುವುದನ್ನು ಕೊನೆಗೆ ನಿರ್ಧರಿಸಬೇಕಾದವನು ನೀನೇ! ಹಿಂದಿನ ಇತಿಹಾಸವನ್ನು ತಿಳಿ, ಧರ್ಮಗ್ರಂಥಗಳು, ಶಾಸ್ತ್ರಗಳು, ನೀವುಗಳೇ ಮಾಡಿಕೊಂಡಿರುವ ಕಟ್ಟಳೆಗಳು, ಸಂಪ್ರದಾಯಗಳ ಕುರಿತೂ ತಿಳಿದುಕೋ, ಕೇಳು, ಅಧ್ಯಯನ ಮಾಡು, ವಿಚಾರ ಮಾಡು, ಚರ್ಚೆ ಮಾಡು. ಯಾವುದನ್ನೂ ಕಣ್ಣು ಮುಚ್ಚಿಕೊಂಡು ಒಪ್ಪುವ ಅಗತ್ಯವೂ ಇಲ್ಲ, ಯಾರೋ ಹೇಳಿದರು ಅಂತ ಒಪ್ಪಲೇಬೇಕು ಅಂತಲೂ ಇಲ್ಲ. ಇಷ್ಟೆಲ್ಲಾ ಆದ ಮೇಲೆ ನಿನ್ನ ಅಂತರಂಗಕ್ಕೆ ಯಾವುದು ಸರಿ ಅನ್ನಿಸುತ್ತದೋ ಅದನ್ನು ನೀನೇ ಕಂಡುಕೊಳ್ಳಬೇಕು. ಅರಿತವರು ಎಂದು ನೀನು ಭಾವಿಸುವ ಸಜ್ಜನರು ಯಾವ ದಾರಿಯಲ್ಲಿ ಸಾಗುತ್ತಾರೋ ಅವರ ದಾರಿಯಲ್ಲೇ ನಿನ್ನ ಬಂಡಿಯೂ ಸಾಗಲಿ. ಗೊತ್ತಾಯಿತಾ, ಕೊನೆಗೆ ಸತ್ಯವನ್ನು ಕಂಡುಕೊಳ್ಳಬೇಕಿರುವುದು ನೀನೇ, ನೀನೇ, ನೀನೇ!
ಗಣೇಶ: ಅದೇನೋ ಸರಿ, ಆದರೆ ನಾನು ಕಂಡುಕೊಳ್ಳಬೇಕಾದ ಸತ್ಯ ಯಾವುದು ಅನ್ನೋದಾದರೂ ನನಗೆ ಅರ್ಥವಾಗಬೇಕಲ್ಲವಾ? ಸ್ವಲ್ಪ ಸುಳಿವು ಕೊಟ್ಟರೆ, ಕೈ ತೋರಿಸಿದರೆ ಆ ದಾರಿಯಲ್ಲಿ ನಡೆಯಬಹುದು. ಯಾಕೋ ನಿನ್ನೆಯ ಮಾತಿಗೂ ಇವತ್ತಿನ ಮಾತಿಗೂ ಏನು ಸಂಬಂಧ ಅನ್ನುವುದೂ ಅರ್ಥವಾಗುತ್ತಿಲ್ಲ. ನನ್ನ ಅಸ್ತಿತ್ವ ಇದ್ದರೆ ಮಾತ್ರ ಉಳಿದೆಲ್ಲಾ ಅಸ್ತಿತ್ವದ ಅರಿವು ನಮಗಾಗುತ್ತೆ ಅನ್ನೋದು ನಿನ್ನೆ ನೀನು ಹೇಳಿದ್ದು. ಅದನ್ನು ಮುಂದುವರೆಸು ದೇವರೇ.
ದೇವರು: ನಿನ್ನ ಅಸ್ತಿತ್ವ ಅನ್ನುವುದು ದೊಡ್ಡದು ಅಂತ ನಿನಗೆ ಆಗಿರುವ ಸಂತೋಷದಿಂದ ನೀನು ಇನ್ನೂ ಹೊರಬಂದಿಲ್ಲ. ಇರಲಿ, ನಿನ್ನ ಅಸ್ತಿತ್ವಕ್ಕೆ ಕಾರಣವಾದರೂ ಏನು ಅಂತ ಯೋಚಿಸಿದ್ದೀಯಾ? ನೀನು ಇದ್ದೀಯಾ ನಿಜ, ಆದರೆ ಏಕೆ ಇದ್ದೀಯಾ?
ಗಣೇಶ: ಗೊಂದಲವಾಗುತ್ತಿದೆ. ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟವಾಗುತ್ತಿದೆ.
ದೇವರು: ನೇರವಾಗಿ ಕೇಳುತ್ತೇನೆ, ನಿನಗೆ ಇರಬೇಕು ಅನ್ನಿಸುತ್ತದೋ ಇಲ್ಲವೋ?
ಗಣೇಶ: ಇದೆಂತಹ ಪ್ರಶ್ನೆ? ಯಾರಿಗಾದರೂ ಇರಬಾರದು ಅನ್ನಿಸುತ್ತಾ? ಇದಕ್ಕೆ ಉತ್ತರವನ್ನು ಯಾವ ಮುಠ್ಠಾಳನಿಗೆ ಕೇಳಿದರೂ ಹೇಳುತ್ತಾನೆ.
ದೇವರು: ಈಗ ಹಿಂದಿನ ಪ್ರಶ್ನೆಗೆ ಮತ್ತೆ ಹಿಂತಿರುಗೋಣ. ಇರಬೇಕು ಅನ್ನಿಸುತ್ತದಲ್ಲಾ ಏಕೆ? ನಾನೇ ಹೇಳಿಬಿಡುತ್ತೇನೆ, ಕೇಳು. ನೀನು ಇರುವುದಕ್ಕಿಂತ ಇರಬೇಕು ಅನ್ನುವ ಆಸೆ ಇದೆಯಲ್ಲಾ ಅದು ದೊಡ್ಡದು. ನೀವುಗಳೇ ಏಕೆ, ಜಗತ್ತಿನ ಯಾವೊಂದೂ ಪ್ರಾಣಿ, ಕ್ರಿಮಿ-ಕೀಟ ಸಹ ಸಾಯಲು ಇಚ್ಛಿಸುವುದಿಲ್ಲ. ನೀವು ತಿಂದು ತೇಗುವ ಕುರಿ, ಕೋಳಿಗಳೇ ಮಾತನಾಡಲು ಬರುತ್ತಿದ್ದರೆ ತಮ್ಮ ಜೀವ ಉಳಿಸಲು ನಿಮ್ಮನ್ನು ಬೇಡಿಕೊಳ್ಳುತ್ತಿದ್ದವು. ಹೌದೋ ಅಲ್ಲವೋ? ಈ ಬದುಕಬೇಕು ಅನ್ನುವ ಆಸೆ ನಿಮ್ಮಗಳನ್ನು ಬದುಕಿಸಿದೆ. ಅದು ನಿಮ್ಮ ಒಳಗೇ ಇರುವ ಸಂಗತಿ. ಅದು ಒಂದು ರೀತಿಯ ಆಸೆ, ಭರವಸೆ, ನಿರೀಕ್ಷೆಗಳಿರಬಹುದು, ಅದು ನಿಮ್ಮನ್ನು ಬದುಕುವಂತೆ ಮಾಡುತ್ತಿದೆ. ಆ ಆಸೆ ಏನು ಗೊತ್ತಾ? ಈಗ ಇರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಆಸೆ. ಇದೇ ಎಲ್ಲಾ ಜೀವಿಗಳಲ್ಲೂ ಅಂತರ್ಗತವಾಗಿ ಹುದುಗಿದೆ. ವಿಚಾರ ಮಾಡಬಲ್ಲವರು ಇದನ್ನು ಆತ್ಮೋನ್ನತಿಯ ಆಸೆ ಅನ್ನುತ್ತಾರೆ.
ಗಣೇಶ: ನೀನು ಹೇಳುವುದು ಸ್ವಲ್ಪ ತಲೆಗೆ ಹೋಗುತ್ತಿದೆ. ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುವಂತೆ, ಸಹನೀಯವಾಗುವಂತೆ ಮಾಡುತ್ತದೆ. ಇದು ಏಕೆ ಹೀಗೆ?
ದೇವರು: ನಿಮ್ಮ ಅಸ್ತಿತ್ವಕ್ಕೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಅಂತರ್ಗತ ಪ್ರಜ್ಞೆಯಿಂದ ಅಂತ ಗೊತ್ತಾಯಿತಲ್ಲಾ? ಇದು ಹೊರನೋಟಕ್ಕೆ ಕಾಣುವುದಿಲ್ಲ. ಒಳಗೊಳಗೇ ಕಾಣದಂತೆ ಕೆಲಸ ಮಾಡುವ ಈ ಒಳಪ್ರಜ್ಞೆ ಜೀವಿಗಳ ವಿಚಿತ್ರ, ವಿಶಿಷ್ಟ ಗುಣವಾಗಿದೆ. ನಿನ್ನ ಶರೀರ ಅನ್ನುವುದು ಒಂದು ಬಂಡಿ ಎಂದುಕೊಂಡರೆ ಆ ಬಂಡಿಯ ಒಡೆಯನೂ ನೀನೇ, ಪ್ರಯಾಣಿಕನೂ ನೀನೇ! ಆ ಬಂಡಿ ಮುಂದಕ್ಕೆ ಹೋಗುತ್ತಿರಬೇಕು ಅಂದರೆ ಅದನ್ನು ಸರಿಯಾಗಿ ನಡೆಸಬೇಕು. ಆ ಪ್ರಯಾಣ ಏಕೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕಾದವನು ಪ್ರಯಾಣಿಕನೇ. ಈ ಬಂಡಿ, ಬಂಡಿಯ ಮಾಲೀಕ, ಬಂಡಿಯ ಪ್ರಯಾಣಿಕ ಎಲ್ಲವೂ ಒಂದು ರೀತಿಯ ವಿಸ್ಮಯವಾಗಿ ಕಾಣುತ್ತದೆಯಲ್ಲವೇ? ಪ್ರಯಾಣಿಸುತ್ತಾ ಹೋದಂತೆ ಗುಟ್ಟು ಬಯಲಾಗುತ್ತಾ ಹೋಗುತ್ತದೆ. ಆದರೆ ಇದು ಬಹು ದೀರ್ಘವಾದ ಪಯಣ. ಗೊತ್ತಿದ್ದೋ, ಗೊತ್ತ್ತಿಲ್ಲದೆಯೋ ನೀವು ಪ್ರಯಾಣ ಮಾಡುತ್ತಲೇ ಇರುತ್ತೀರಿ. ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಬಯಕೆ ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತಿರುತ್ತದೆ. ವಿಶೇಷ ಅಂದರೆ ಹೋಗುತ್ತಾ ಹೋಗುತ್ತಾ ಉತ್ತಮ ಸ್ಥಿತಿ ಅಂದರೇನು ಅನ್ನುವ ನಿಮ್ಮ ಕಲ್ಪನೆ ಸಹ ಬದಲಾಗುತ್ತಾ ಹೋಗುತ್ತದೆ.
ಗಣೇಶ: ನೀನು ಹೇಳೋದು ಕೇಳಿದರೆ ಮುಂದಕ್ಕೆ ಹೋಗೋದು ಅಂದರೆ ಕೊನೆಗೊಮ್ಮೆ ಸ್ವರ್ಗಾನೋ, ಮೋಕ್ಷಾನೋ ಪಡೆಯುವವರೆಗೆ ಬದುಕುವ ಹೆಸರಿನಲ್ಲಿ ಒದ್ದಾಡೋದಾ?
ದೇವರು: ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ಶರೀರದ ಮೂಲಕ ಹೊಂದಿರುವ ಅಸ್ತಿತ್ವವನ್ನೇ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ಪ್ರಾಪ್ತಿ(ಸಾಮ್ರಾಜ್ಯ ಅಂದುಕೋ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ಜೀವಿಯ ಆಸೆಯಾಗಿದೆ. ಇದಕ್ಕಾಗಿಯೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ. ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಿಮ್ಮದಾಗಬೇಕೆಂಬವರೆಗೆ ಈ ಅಸೆ ಅಪ್ರಜ್ಞಾತ್ಮಕವಾಗಿ ಸುಪ್ತವಾಗಿರುತ್ತದೆ. ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ಎಂದು ಅಂದುಕೊಳ್ಳುತ್ತೀರಿ.
ಗಣೇಶ: ಅರ್ಥವಾಗಲಿಲ್ಲ.
ದೇವರು: ನೋಡು, ಹೆಚ್ಚು ಹೆಚ್ಚು ಗಳಿಸುತ್ತೀಯಾ, ಅದನ್ನು ಅನುಭವಿಸಲು ದೀರ್ಘಾಯಸ್ಸು ಬೇಕೆನ್ನುತ್ತೀಯಾ. ಈ ದೀರ್ಘಾಯಸ್ಸು ಅಂದರೆ ಏನು? ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಿಮಗೆ ಗೊತ್ತಿಲ್ಲದಂತೆಯೇ ಅದು ಏನೆಂದು ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೀರಿ. ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೀರಿ, ಅಲ್ಲವಾ? ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಈ ಶರೀರದಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಿಮಗೆ ಇರುತ್ತದೆ. ಆದರೂ ದೀರ್ಘಾಯಸ್ಸು ಬೇಕು!
ಗಣೇಶ: ಮತ್ತೂ ಅರ್ಥವಾಗಲಿಲ್ಲ.
ದೇವರು: ನಿನಗೆ ಈ ವಿಷಯದಲ್ಲಿ ಚಿಂತನೆ ನಡೆಸಿದರೆ ಸೂಕ್ಷ್ಮ ಅರ್ಥವಾಗುತ್ತಾ ಹೋಗುತ್ತದೆ. ಸೂತ್ರ ರೂಪದಲ್ಲಿ ಇಷ್ಟು ತಿಳಿದುಕೋ. ಬೇಕು, ಬೇಕು ಅನ್ನುವ ಒಳ ಆಸೆ ನಿಮ್ಮನ್ನು ಬದುಕುವಂತೆ ಮಾಡುತ್ತದೆ. ಈ ಬೇಕು ಅನ್ನುವ ಕಾಮ ದಾರಿ ತಪ್ಪಿಸಿದರೆ ನಿಮ್ಮ ಶತ್ರು, ಸರಿದಾರಿಯಲ್ಲಿ ನಡೆಸಿದರೆ ನೀವು ಹೇಳುವ ಪುರುಷಾರ್ಥ ಸಾಧನೆಗೆ ಸಹಕಾರಿ.
ಗಣೇಶ: ಹೌದು, ನೀನು ಹೇಳಿದಂತೆ ಅದು ಏನೇ ಇರಲಿ, ನಾನಂತೂ ಬದುಕಬೇಕು, ಹೆಚ್ಚು ಕಾಲ ಬದುಕಬೇಕು.  ಅದಕ್ಕಾದರೂ ಅವಕಾಶ ಕೊಡು.
ದೇವರು: (ನಗುತ್ತಾ) ಆಗಲಿ, ಗಣೇಶಾ. ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ. ಇದೇ ಸತ್ಯ! ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ಲಕ್ಷ್ಯವಿದ್ದರೆ ಶಾರೀರಿಕ ಅಸ್ತಿತ್ವ ಮೀರಿ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಬದುಕುವುದು ಅಂದರೆ ಇದೇ ಆಗಿದೆ. ನೀನೊಬ್ಬನೇ ಏನು, ಎಲ್ಲರೂ ಬದುಕಲಿ ಎಂಬುದೇ ನನ್ನ ಆಸೆ.
     "ಏನ್ರೀ ಇದು? ನಿಮ್ಮ ಮುಂದಿಟ್ಟಿದ್ದ ಚಹ ಆರಿ ತಣ್ಣಗಾಗಿಹೋಗಿದೆ. ಬಾಯಿ ಬಿಟ್ಟುಕೊಂಡು ಏನು ಯೋಚನೆ ಮಾಡುತ್ತಾ ಕೂತಿದ್ದೀರಿ?" ಎಂಬ ಪತ್ನಿಯ ಮಾತು ಕೇಳಿ ಎಚ್ಚರಗೊಂಡ ಗಣೇಶರು, "ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ, ಈಗ ನೀನು ಚಹ ಬಿಸಿ ಮಾಡಿಕೊಂಡು ತರಬೇಕು" ಎಂದರು. ದುರುಗುಟ್ಟಿ ನೋಡಿದ ಪತ್ನಿಯ ನೋಟವನ್ನು ನಗುತ್ತಾ ಸ್ವೀಕರಿಸಿದ ಗಣೇಶರು ಟಿವಿಯ ರಿಮೋಟಿನ ಗುಂಡಿ ಒತ್ತಿದರು. ಅವರ ದುರದೃಷ್ಟಕ್ಕೆ ಯಾರೋ ಉಪನ್ಯಾಸ ಮಾಡುತ್ತಾ ಹೇಳುತ್ತಿದ್ದರು:
     " . . . ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬಹುದೇ? ಕವಿ ಹೇಳುತ್ತಾನೆ:
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ || . . ."
     ಟಿವಿಯನ್ನು ಆಫ್ ಮಾಡಿದ ಗಣೇಶರು ಮಡದಿ ಮತ್ತೆ ಬಿಸಿ ಮಾಡಿ ತಂದ ಚಹವನ್ನು ಗುಟುಕರಿಸತೊಡಗಿದರು.
-ಕ.ವೆಂ.ನಾಗರಾಜ್.

ಸೋಮವಾರ, ಜೂನ್ 22, 2020

1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]


     ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ 1975ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಅತ್ಯಂತ ಪವಿತ್ರವೆಂದು ಭಾವಿಸಲಾಗಿರುವ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾರಕವೆನಿಸುವ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. 1975ರ ಜೂನ್ 26ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. 'ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಆಗಿಹೋಯಿತು. 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ' ಎಂಬ ಜಾಹಿರಾತಿನ ಹಾಡು ಎಲ್ಲರಿಗೂ ಬಾಯಿಪಾಠವಾದಂತಾಗಿತ್ತು.
     ಹಾಸನದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಬೀಗಮುದ್ರೆ ಬಿದ್ದಿತು. ಅದಕ್ಕೆ ಮುಂಚೆಯೇ ಎಚ್ಚೆತ್ತಿದ್ದ ಸಂಘದ ಕಾರ್ಯಕರ್ತರು ಕಟ್ಟಡದಲ್ಲಿದ್ದ ವಸ್ತುಗಳನ್ನು ಬೇರೆಡೆಗ ಸಾಗಿಸಿಬಿಟ್ಟಿದ್ದರು. ಸಂಘದ ಪ್ರಚಾರಕರುಗಳು, ಹಿರಿಯ ನಾಯಕರು ಭೂಗತರಾಗಿದ್ದರು. ಆರೆಸ್ಸೆಸ್ ನಿಷೇಧದ ಹಿನ್ನೆಲೆಯಲ್ಲಿ ದಿ. ಬಿ.ಆರ್.ಕೃಷ್ಣಮೂರ್ತಿ, ದಿ. ಎಸ್.ವಿ.ಗುಂಡೂರಾವ್, ಕರಿಬಸಪ್ಪ, ಮುಂತಾದವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ತುರ್ತುಪರಿಸ್ಥಿತಿ ವಿರೋಧಿಸಲು ಲೋಕನಾಯಕ ಜಯಪ್ರಕಾಶ ನಾರಾಯಣರ  ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಜನ್ಮ ತಾಳಿತು. ಅದರ ಬೆನ್ನೆಲುಬು ಆರೆಸ್ಸೆಸ್ಸೇ ಆಗಿತ್ತು. ಹಾಸನ ಜಿಲ್ಲೆಯಲ್ಲೂ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಚಟುವಟಿಕೆಗಳನ್ನು ಸಂಘದ ಕಾರ್ಯಕರ್ತರು ಆರಂಭಿಸಿದರು. 'ಕಹಳೆ' ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅನಾವರಣ ಮಾಡುವ ಪತ್ರಿಕೆಯನ್ನು ಗುಪ್ತವಾಗಿ ಹಂಚುವ ಕೆಲಸ ಆರಂಭವಾಯಿತು. ಮುದ್ರಿತ ಪತ್ರಿಕೆಗಳನ್ನು ತರುವ, ವಿತರಿಸುವ ಕೆಲಸ ಬಂಧನವನ್ನು ಎದುರಿಸುವ ಭೀತಿಯಲ್ಲೇ ಜಿಲ್ಲೆಯ ಎಲ್ಲಾ ಮೂಲೆಗೂ ತಲುಪಿಸುವ ಕೆಲಸವನ್ನು ಅನಾಮಧೇಯ ಸಂಘದ ಹುಡುಗರು ಯಶಸ್ವಿಯಾಗಿ ಮಾಡುತ್ತಿದ್ದರು. 1975ರ ಜುಲೈ 4ರಂದು ಹಾಸನದ ಗ್ರಂಥಾಲಯದಲ್ಲಿ ಕಹಳೆ ಪತ್ರಿಕೆಯ ಪ್ರತಿ ಹಾಕುತ್ತಿದ್ದನೆಂದು ಶ್ರೀನಿವಾಸ ಎಂಬ ವಿದ್ಯಾರ್ಥಿಯ ಬಂಧನವಾಯಿತು. ಮರುದಿನ ಹಾಸನ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಫುಡ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದೆನೆಂದು ಆರೋಪಿಸಿ ಬಂಧಿಸಿದರು. ನಾನು ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದು, ನನ್ನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. (ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ನಂತರದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗಾಯಿಸಿದ್ದರು.) ಜಿಲ್ಲೆಯಲ್ಲಿ ಬಂಧನಗಳ ಸರಣಿಗೆ ಚಾಲನೆ ಚುರುಕುಗೊಂಡಿತು. ಪಾರಸಮಲ್ ಸೇರಿದಂತೆ ಹಲವರ ಬಂಧನ ಮುಂದಿನ ವಾರಗಳಲ್ಲಿ ಆಯಿತು. ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಲೋಕ ಸಂಘರ್ಷ ಸಮಿತಿ ನಿರ್ಧಾರದಂತೆ ಜಿಲ್ಲೆಯಲ್ಲೂ ಚಳುವಳಿ ಪ್ರಾರಂಭಿಸುವ ಬಗ್ಗೆ ಚರ್ಚಿಸಲು  9-11-1075ರಂದು ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಜನಾರ್ಧನ ಐಯಂಗಾರ್, ಕಛ್ ರಾಮಚಂದ್ರ, ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ ಇವರೆಲ್ಲರೂ ಚಂದ್ರಶೇಖರರ ಮನೆಯಲ್ಲಿ ಸೇರಿದ್ದಾಗ ನಮ್ಮ ಜೊತೆಯಲ್ಲೇ ಇದ್ದ ಇನ್ನೊಬ್ಬ ಸ್ನೇಹಿತ (ಆತನ ಹೆಸರನ್ನು ಉದ್ದೇಶಪೂರ್ವಕ ಉಲ್ಲೇಖಿಸಿಲ್ಲ) ಕೊಟ್ಟಿದ್ದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯದೆ ಅನ್ವಯ ಬಂಧಿಸಿ ಜೈಲಿಗೆ ತಳ್ಳಿದರು. ಮಾಹಿತಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸದೆ ಆತನನ್ನು ನಮ್ಮ ವಿರುದ್ಧ ಸಾಕ್ಷಿಯಾಗಿ ಪೋಲಿಸರು ಬಳಸಿಕೊಂಡರು. ಪೋಲಿಸರ ಭಯಕ್ಕೆ ಆತ ಕೋರ್ಟಿನಲ್ಲಿ ನಮ್ಮ ವಿರುದ್ಧ ಸಾಕ್ಷಿಯನ್ನೂ ಹೇಳಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದ ಕಾರಣ ಪ್ರಕರಣ ಮುಗಿಯುವವರೆಗೂ ಹಲವು ತಿಂಗಳು ಹಾಸನದ ಜೈಲಿನಲ್ಲೆ ಕಳೆಯಬೇಕಾಯಿತು. ಚಳುವಳಿ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ಬಂಧಿತರಾದ ನಮ್ಮನ್ನು 'ಮಂಗಳಪಾಂಡೆ ತಂಡ' ಎಂದು ಹಾಸ್ಯ ಮಾಡುತ್ತಿದ್ದರು. ಹೀಗೆ ಘೋಷಿತ ದಿನಾಂಕದ ಮೊದಲೇ ಹಾಸನದಲ್ಲಿ ಚಳುವಳಿ ಉದ್ಘಾಟನೆಯಾದಂತಾಗಿತ್ತು.
     ಹಾಸನದ ಜೈಲಿನ ಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು. ಬಂಧಿತರಾದವರ ಜನಿವಾರ, ಉಡುದಾರ, ಶಿವದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ನಮ್ಮನ್ನು ಇತರ ಕಳ್ಳಕಾಕರು, ಕೊಲೆಗಾರರು, ಇತ್ಯಾದಿ ಅಪರಾಧಿಗಳೊಂದಿಗೇ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಸಮಾಧಿ ಎನ್ನಲಾಗುತ್ತಿತ್ತು. ಕೈದಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ನನಗೆ ಸಮಾಧಿಯ ಒಳಗೆ ಜಾಗ ಸಿಕ್ಕಿತ್ತು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಅಲ್ಲಿರಬೇಕಿತ್ತು. ಅದನ್ನು ನೆನೆಸಿಕೊಂಡರೆ ಈಗಲೂ ವಾಕರಿಕೆ ಬರುತ್ತದೆ. ಊಟಕ್ಕೆ ಬಿಟ್ಟಾಗ ಕೊಡುತ್ತಿದ್ದ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ಅರ್ಧಂಬರ್ಧ ಬೆಂದ ಬೇಳೆ ಸಾರುಗಳನ್ನು ಹಸಿವು ತಡೆಯದೆ ತಿನ್ನಲೇಬೇಕಿತ್ತು. ಸ್ನಾನ ಮಾಡಲು, ತಟ್ಟೆ ತೊಳೆಯಲು, ಮುಖ ತೊಳಯಲು ಇದ್ದ ತೊಟ್ಟಿಯ ನೀರು ಚರಂಡಿಯ ನೀರಿನಂತೆ ಕಾಣುತ್ತಿತ್ತು. ಕಟ್ಟಿಸಿದಾಗಿನಿಂದ ಅದನ್ನು ಬಹುಷಃ ಶುಚಿ ಮಾಡಿರಲಿಕ್ಕಿಲ್ಲ.
     ಹಾಸನ ಜಿಲ್ಲೆಯಲ್ಲೂ ನಿಗದಿತ ದಿನಾಂಕದಿಂದ ಚಳುವಳಿ ಆರಂಭವಾಗೇ ಬಿಟ್ಟಿತು. ಇಂತಹ ಸ್ಥಳದಲ್ಲಿ ಇಂತಹವರ ನಾಯಕತ್ವದಲ್ಲಿ ಚಳುವಳಿ ಮಾಡಲಾಗುವುದೆಂದು ಮೊದಲೇ ಕರಪತ್ರಗಳನ್ನು ಹಂಚಿ ಆ ಸಮಯಕ್ಕೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಳುವಳಿ ಮಾಡಲಾಗುತ್ತಿತ್ತು. ಹಾಸನದ ಗುಂಡೂರಾಯರು, ವೆಂಕಟರಮಣೇಗೌಡ, ಕರಿಬಸಪ್ಪ, ಅರಸಿಕೆರೆಯ ದುರ್ಗಪ್ಪಶೆಟ್ಟಿ, ಶ್ರೀನಿವಾಸಮೂರ್ತಿ, ಬಸವರಾಜು, ರಾಮಚಂದ್ರ, ಮರುಳಸಿದ್ದಪ್ಪ, ಛಾಯಾಪತಿ, ಆಲೂರಿನ ಮರಸು ಮಂಜುನಾಥ್, ಬಸವೇಗೌಡ, ಅರಕಲಗೂಡು ಹಿರಣ್ಣಯ್ಯ, ಅನಂತರಾಮು, ಬೇಲೂರಿನ ರವಿ, ನಾರಾಯಣ ಕಾಮತ್, ಚ.ರಾ.ಪಟ್ಟಣದ ಮಳಲಿಗೌಡ, ಸಕಲೇಶಪುರದ ಲೋಕೇಶಗೌಡ, ಹುರುಡಿ ವಿಶ್ವನಾಥ್, ಸತ್ಯನಾರಾಯಣ ಗುಪ್ತ, ವಿ.ಎಸ್.ಭಟ್, . . ಅಬ್ಬಾ, ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, (ಎಲ್ಲರ ಹೆಸರುಗಳನ್ನು ನಮೂದಿಸಲಾಗದಿರುವುದಕ್ಕೆ ಕ್ಷಮೆಯಿರಲಿ) ಇವರೆಲ್ಲರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚಳುವಳಿಗಳು ನಡೆದೇ ನಡೆದವು. ಬಂಧನಕ್ಕೊಳಗಾಗಿ ಸತ್ಯಾಗ್ರಹಿ ತಂಡಗಳು ಜೈಲಿಗೆ ಬರುತ್ತಿದ್ದಂತೆ ಒಳಗಿದ್ದ ಕೈದಿಗಳಿಂದ ಅವರಿಗೆ ವೀರೋಚಿತ ಸ್ವಾಗತ ಕಾದಿರುತ್ತಿತ್ತು. ಹಾಗೆಂದು ಇದೇನೂ ಸುಲಲಿತವಾಗಿ ನಡೆಯುತ್ತಿದ್ದ ಚಳುವಳಿಗಳೇನೂ ಅಲ್ಲ. ಭಾಗವಹಿಸಿದವರಿಗೆ ಪೋಲಿಸ್ ಠಾಣೆಯಲ್ಲಿ ಭಯಂಕರವಾದ, ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆತಿಥ್ಯ ಸಿಗುತ್ತಿತ್ತು. ಸಕಲೇಶಪುರದಲ್ಲಿ ಹುರುಡಿ ವಿಶ್ವನಾಥ್ ಮತ್ತು ಸಂಗಡಿಗರ ಮೇಲೆ ಪೋಲಿಸರು ಅಮಾನುಷವಾಗಿ ವರ್ತಿಸಿದ್ದರಿಂದ ಅವರುಗಳು ಹಲವು ದಿನಗಳವರೆಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. ಈರೀತಿ ಅಮಾನುಷವಾಗಿ ವರ್ತಿಸಿದ್ದ ಸಕಲೇಶಪುರದ ಪೋಲಿಸರ ವಿರುದ್ಧ ಪ್ರತಿಭಟಿಸಿದ್ದ ಹಲವರುಗಳನ್ನೂ ಸಹ ರಕ್ಷಣಾ ಕಾಯದೆ ಅನ್ವಯ ಬಂಧಿಸಿ ಸೆರೆಗೆ ತಳ್ಳಿದ್ದರು. ಚಳುವಳಿ ಮಾಡಿದ ಎಲ್ಲರನ್ನೂ ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಲಾಗುತ್ತಿತ್ತು. ವಿಚಾರಣೆ ವಿಳಂಬವಾಗಿ ಮಂದಗತಿಯಲ್ಲಿ ಸಾಗುತ್ತಿತ್ತು, ವರ್ಷಕ್ಕೂ ಮೀರಿದ ಅವಧಿಯವರೆಗೂ ವಿಚಾರಣೆಗಳು ಮುಂದುವರೆದಿದ್ದಿದೆ.
     ಮೊದಲೇ ಚಳುವಳಿಯ ಸ್ಥಳ, ಸಮಯ ಮತ್ತು ಭಾಗವಹಿಸುವವರ ವಿವರಗಳನ್ನು ಪ್ರಕಟಿಸುತ್ತಿದ್ದರಿಂದ ಪೋಲಿಸರು ಚಳುವಳಿ ತಡೆಯಲು ಮತ್ತು ಚಳುವಳಿ ಮಾಡುವುದಕ್ಕೆ ಮೊದಲೇ ಬಂಧಿಸಲು ಸಹಾಯವಾಗುತ್ತಿದ್ದರಿಂದ ನಂತರದ ದಿನಗಳಲ್ಲಿ ತಂತ್ರ ಬದಲಿಸಿ ಬೇರೆ ಬೇರೆ ಸ್ಥಳಗಳಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಲೇಖನ ವಿಸ್ತಾರದ ಭಯದಿಂದ ಒಂದೆರಡು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮಾತ್ರ ಉಲ್ಲೇಖಿಸುವೆ. ಅರಸಿಕೆರೆಯಲ್ಲಿ ಒಂದು ಶವಯಾತ್ರೆ ನಡೆದಿತ್ತು. ದುಃಖತಪ್ತರು ವಾದ್ಯಸಮೇತ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆ ಬಸ್ ಸ್ಟ್ಯಾಂಡ್ ಸಮೀಪ ಬರುತ್ತಿದ್ದಂತೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳು ಮೆರವಣಿಗೆಯಲ್ಲಿದ್ದವರಿಂದ ಮೊಳಗಲಾರಂಭಿಸಿದವು. ಪೋಲಿಸರಿಗೆ ಇದು ಸತ್ಯಾಗ್ರಹ ಎಂದು ಅರಿವಾಗಿ ಧಾವಿಸುವಷ್ಟರಲ್ಲಿ ಶವದ ಆಕಾರದ ಗೊಂಬೆಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿಬಿಟ್ಟಿದ್ದರು. ಆ ಬೊಂಬೆಯಲ್ಲಿ ಹುದುಗಿಸಿಟ್ಟಿದ್ದ ಸರಪಟಾಕಿಗಳು ಕಿವಿ ಗಡಚಿಕ್ಕುವ ಶಬ್ದ ಹೊರಡಿಸಲು ಪ್ರಾರಂಭಿಸಿದಾಗ ಪೋಲಿಸರು ಕಕ್ಕಾಬಿಕ್ಕಿಯಾಗಿದ್ದರು. 
     ಹಾಸನದ ನರಸಿಂಹರಾಜವೃತ್ತದಲ್ಲಿ ಸಕಲೇಶಪುರದ ಲೋಕೇಶಗೌಡರ ನೇತೃತ್ವದಲ್ಲಿ ಚಳುವಳಿ ನಡೆಯುವುದೆಂದು ಪ್ರಚುರವಾಗಿತ್ತು. ಅದನ್ನು ಶತಾಯ ಗತಾಯ ತಡೆಯಲು ಪೋಲಿಸರು ಎಲ್ಲೆಡೆ ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಆ ರಸ್ತೆಯಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಿ ಬೇರೆ ದಾರಿಯಿಂದ ಸಂಚರಿಸಲು ವ್ಯವಸ್ಥೆ ಮಾಡಿದ್ದರು. ಜನರು ಒಟ್ಟಿಗೆ ಓಡಾಡದಂತೆ, ಅಲ್ಲಿ  ನಿಂತುಕೊಳ್ಳದಂತೆ ಪೋಲಿಸರು ತಾಕೀತು ಮಾಡುತ್ತಿದ್ದರು. ಹೀಗಿದ್ದಾಗ ಅಲ್ಲಿಗೆ ಒಂದು ಮೆಟಡಾರ್ ಅಲ್ಲಿಗೆ ಬಂದಿತು. ಬೇರೆ ದಾರಿಯಲ್ಲಿ ಹೋಗುವಂತೆ ಪೋಲಿಸರು ಸೂಚಿಸುವಾಗ ಅವರಿಗೆ ಅದರಲ್ಲಿ ಮೈಗೆಲ್ಲಾ ಬ್ಯಾಂಡೇಜ್ ಹಾಕಿಕೊಂಡಿದ್ದರೂ ರಕ್ತ ಒಸರುತ್ತಿದ್ದ ಅಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿ ಮತ್ತು ಆತನ ಬಂಧುಗಳಿದ್ದುದು ಕಂಡುಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದಾಗ ಮಾನವೀಯತೆಯಿಂದ ಆ ವಾಹನವನ್ನು ಮುಂದೆ ಹೋಗಲು ಬಿಟ್ಟರು. ಸ್ವಲ್ಪ ದೂರ ಹೋದ ಆ ವಾಹನ ಸರ್ಕಲ್ ಸಮೀಪದಲ್ಲೇ ಕೆಟ್ಟು ನಿಂತುಬಿಟ್ಟಿತು. ಬೇರೆ ವಾಹನ ತರುವುದಾಗಿ ಹೇಳಿ ವ್ಯಾನಿನಲ್ಲಿದ್ದವರು ನಾಲ್ಕು ಭಾಗಗಳಾಗಿ ನಾಲ್ಕು ರಸ್ತೆಗಳಲ್ಲಿ ಸ್ವಲ್ಪ ಮುಂದೆ ಸಾಗಿ ಅಂಗಿಯ ಒಳಗೆ ಹುದುಗಿಸಿಟ್ಟಿದ್ದ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ವ್ಯಾನಿನ ಒಳಗೆ ಇದ್ದ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿ ಒಂದು ಕೈಯಲ್ಲಿ ಭಗವಾದ್ವಜ ಇನ್ನೊಂದು ಕೈಲ್ಲಿ ತ್ರಿವರ್ಣ ದ್ವಜ ಹಿಡಿದು ಹೊರಗೆ ಬಂದು ಸರ್ಕಲ್ಲಿನ ಮಧ್ಯದಲ್ಲಿ ನಿಂತು, 'ಭಾರತಮಾತಾ ಕಿ ಜೈ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಎಂದು ಘೋಷಿಸಲು ಪ್ರಾರಂಭಿಸಿತ್ತು. ಆತ ಮತ್ಯಾರೂ ಆಗಿರದೇ ಲೋಕೇಶಗೌಡರೇ ಆಗಿದ್ದರು! ಪೋಲಿಸರಿಗೆ ಕೆಲಕ್ಷಣ ಯಾರನ್ನು ಬಂಧಿಸಬೇಕು ಎಂದು ತಿಳಿಯದೆ ಪರದಾಡಿ, ಕೊನೆಗೆ ಎಲ್ಲರನ್ನೂ ಬಂಧಿಸಿ ಹಾಸನದ ಸೆರೆಮನೆಗೆ ಅಟ್ಟಿದ್ದರು. 
     ಅರಕಲಗೂಡಿನ ಅನಂತ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭ ಏರಿ ಅಲ್ಲಿ ಕಪ್ಪು ಬಾವುಟ ಹಾರಿಸಿ ಕೆಳಗೆ ಇಳಿದು ಬರುತ್ತಾ ಕಂಬಕ್ಕೆ ಗ್ರೀಸ್ ಮೆತ್ತಿ ಬಂದಿದ್ದ. ಮರುದಿನ ಬೆಳಿಗ್ಗೆ ಆ ಕಪ್ಪು ಬಾವುಟ ಇಳಿಸಿ ರಾಷ್ಟ್ರದ್ವಜ ಹಾರಿಸಲು ಅಧಿಕಾರಿಗಳು ಪಟ್ಟಿದ್ದ ಪಾಡು ಅಷ್ಟಲ್ಲ. ಹೊಳೆನರಸಿಪುರದ ಭಗವಾನ್ ಎಂಬ ಬಾಲಕ ಸಂತೆಯಲ್ಲಿ, 'ಕಹಳೆ ಓದಿ, ಇಂದಿರಾಗಾಂಧಿ ಮಾಡಿದ ಅವಾಂತರ ನೋಡಿ' ಎಂದು ಜನರಿಗೆ ಪತ್ರಿಕೆ ಹಂಚುತ್ತಿದ್ದುದನ್ನು ಕಂಡು ಪೋಲಿಸರು ಅವನನ್ನು ಬಂಧಿಸಿ ವಿಚಾರಿಸಿದಾಗ, 'ಯಾರು ಕೊಟ್ಟರೋ ಗೊತ್ತಿಲ್ಲ, ಹಂಚು ಅಂದರು, ಹಂಚುತ್ತಿದ್ದೆ' ಎಂದು ಉತ್ತರಿಸಿದ್ದ. ಇನ್ನೂ ಚಿಕ್ಕವನಾಗಿದ್ದರಿಂದ ಅವನಿಗೆ ಎಚ್ಚರಿಕೆ ಕೊಟ್ಟು ಹಿಂಭಾಗಕ್ಕೆ ಎರಡು ಬಾರಿಸಿ ಬಿಟ್ಟುಕಳಿಸಿದ್ದರು. ಇಂತಹ ಯಾವುದೇ ಸುದ್ದಿಗಳು ಆಕಾಶವಾಣಿಯಲ್ಲಾಗಲೀ, ಪತ್ರಿಕೆಯಲ್ಲಾಗಲೀ ಪ್ರಕಟವಾಗುತ್ತಲೇ ಇರಲಿಲ್ಲ. ಕೇವಲ ಭೂಗತ ಪತ್ರಿಕೆ 'ಕಹಳೆ'ಯ ಮೂಲಕ ಮಾತ್ರ ಸುದ್ದಿ ಹೊರಜಗತ್ತಿಗೆ ತಿಳಿಯುತ್ತಿತ್ತು. ಜನರು ಆ ಪತ್ರಿಕೆಯನ್ನು ಓದಲು, ಕೈಯಲ್ಲಿ ಹಿಡಿದುಕೊಳ್ಳಲೂ ಹೆದರುತ್ತಿದ್ದರೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಚಳುವಳಿಯಲ್ಲಿ ಅರಸಿಕೆರೆ ತಾಲ್ಲೂಕು ಮುಂಚೂಣಿಯಲ್ಲಿತ್ತು. ಬಂಧಿತರು, ಭಾಗವಹಿಸಿದವರಲ್ಲಿ ಅವರದೇ ಸಿಂಹಪಾಲು. ಉಳಿದ ತಾಲ್ಲೂಕುಗಳೂ ಗಣನೀಯ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದವು. ಆದರೆ ಇತರ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ  ಹೊಳೆನರಸಿಪುರ ತಾಲ್ಲೂಕಿನಲ್ಲಿ ವ್ಯಕ್ತವಾದ ಪ್ರತಿಭಟನೆ ಸ್ವಲ್ಪ ಸಪ್ಪೆಯೆಂದೇ ಹೇಳಬೇಕಾಗುತ್ತದೆ.
     ಭಾರತ ರಕ್ಷಣಾ ಕಾಯದೆ (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು ಡಿಫೆನ್ಸ್ ಆಫ್ ಇಂದಿರಾ ರೂಲ್ಸ್ ಮತ್ತು ಆಂತರಿಕ ಭದ್ರತಾ ಶಾಸನ (ಮೀಸಾ-ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಅನ್ನು ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್ ಎಂದು ವ್ಯಂಗ್ಯವಾಗಿ ಆಡಿಕೊಳ್ಳಲಾಗುತ್ತಿತ್ತು. ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆಯಿಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಕಾರಣ ಕೊಡದೆ ಬಂಧಿಸಲು ಅವಕಾಶ ಕೊಡುವ ಮೀಸಾ ಕಾಯದೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಮೀಸೆಯೇ ಬರದಿದ್ದ ವಿದ್ಯಾರ್ಥಿಗಳಾದ ಹಾಸನದ ಪಾರಸಮಲ್, ಅರಕಲಗೂಡಿನ ಪಟ್ಟಾಭಿರಾಮರನ್ನು ಬಂಧಿಸಿದ್ದರು. ಇತರ ಮೀಸಾ ಬಂದಿಗಳೆಂದರೆ, ದಿ. ಎಸ್.ವಿ.ಗುಂಡೂರಾವ್, ದಿ. ವೆಂಕಟರಮಣೇಗೌಡ, ದಿ. ಎನ್.ಕೆ.ಗಣಪಯ್ಯ, ಸಕಲೇಶಪುರದ ತರುಣ ಸತ್ಯನಾರಾಯಣಗುಪ್ತ, ಅರಸಿಕೆರೆಯ ಶ್ರೀನಿವಾಸಮೂರ್ತಿ, ದುರ್ಗಪ್ಪಶೆಟ್ಟಿ, ಆಲೂರು ತಾ.ನ ದಿ. ಬಸವೇಗೌಡ, ಮರಸು ಮಂಜುನಾಥ್, ಆರೆಸ್ಸೆಸ್ಸಿನ ಜಿಲ್ಲಾ ಪ್ರಚಾರಕ ದಿ. ಪ್ರಭಾಕರ ಕೆರೆಕೈ, ಅರೆಹಳ್ಳಿಯ ನಾರಾಯಣ ಕಾಮತ್, ಡಾ. ವಿ.ಎಸ್.ಭಟ್, ಸಕಲೇಶಪುರ. ಇವರ ಪೈಕಿ ಗಣಪಯ್ಯನವರು ಭಾರತೀಯ ಲೋಕದಳಕ್ಕೆ ಸೇರಿದವರಾಗಿದ್ದು ಉಳಿದವರೆಲ್ಲರೂ ಆರೆಸ್ಸೆಸ್ಸಿನವರು. ನನ್ನನ್ನೂ ಮೀಸಾ ಪ್ರಕಾರ ಬಂಧಿಸಲು ಆಗಿನ ಎಸ್.ಪಿ.ಯವರು ಶಿಫಾರಸು ಮಾಡಿದ್ದರೂ, ಆಗಿನ ಜಿಲ್ಲಾಧಿಕಾರಿ ಶ್ರೀ ಧೀರೇಂದ್ರಸಿಂಗರು ಅವರ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಮೀಸಾ ಬಂದಿಯಾಗಿಸಲು ಒಪ್ಪದ ಕಾರಣ ಮೀಸಾಬಂದಿಯಾಗಿ ಬಳ್ಳಾರಿ ಜೈಲಿಗೆ ಹೋಗುವುದು ತಪ್ಪಿತ್ತು. ದೇವೇಗೌಡರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಸರ್ಕಾರ ಮುಂಜಾಗ್ರತೆಯಾಗಿ ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಭಾರತ ರಕ್ಷಣಾ ಕಾಯದೆಯನ್ವಯ ಜಿಲ್ಲೆಯಲ್ಲಿ ಸುಮಾರು ೩೦೦ ಜನರು ಬಂಧಿತರಾಗಿದ್ದು ಅವರೆಲ್ಲರೂ ಆರೆಸ್ಸೆಸ್ಸಿನ ಮೂಲದವರೇ ಆಗಿದ್ದು ವಿಶೇಷವೇ ಸರಿ. ಇದಲ್ಲದೆ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಒಳಗೊಂಡವರು, ಜೈಲುಗಳಲ್ಲಿ ಸ್ಥಳವಿಲ್ಲದೆ ಹೆದರಿಸಿ, ಬೆದರಿಸಿ ಬಿಡಲ್ಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ವಿವಿಧ ಕಾಲೇಜಿನ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಬಂಧನಕ್ಕೆ ಒಳಗಾಗದೆ, ಭೂಗತರಾಗಿ ಚಳುವಳಿಗೆ ಪ್ರೇರಿಸುವ, ಜನಜಾಗೃತಿ ಮಾಡುವ ಆರೆಸ್ಸೆಸ್ಸಿನ ತರುಣರ, ಪ್ರಚಾರಕರುಗಳ ಸಂಖ್ಯೆ ಮತ್ತು ಅವರು ತುರ್ತು ಪರಿಸ್ಥಿತಿ ತೆರವಿಗೆ ಮಾಡಿದ ಕೆಲಸ ಶ್ಲಾಘನೀಯವಾದುದಾಗಿದೆ. ಬಂಧನದ ಕಾಲದಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಜಿಲ್ಲಾ ಪ್ರಚಾರಕ ಪ್ರಭಾಕರ ಕೆರೆಕೈ ನಂತರದಲ್ಲಿ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಮೃತಪಟ್ಟರು. 
     ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರುದ್ಧ ಜನರ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಇಂದಿರಾ ಸರ್ಕಾರ ತುರ್ತು ಪರಿಸ್ಥಿತಿ ತೆರವುಗೊಳಿಸಿ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಮೇಲಿನ ನಿಷೇಧ ರದ್ದು ಪಡಿಸಲೇಬೇಕಾತು. ಲೋಕಸಭೆ ವಿಸರ್ಜಿಸಿ ಚುನಾವಣೆ ನಡೆಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮದು ಸರಿಯಾದ ಕ್ರಮವಾಗಿತ್ತೆಂದು ಸಮರ್ಥಿಸಿಕೊಳ್ಳಬಹುದೆಂದು ಎಣಿಸಿದ್ದ ಅವರ ಎಣಿಕೆ ತಲೆಕೆಳಗಾಯಿತು. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಜನತಾಪಕ್ಷ ರಚಿಸಿಕೊಂಡು ಚುನಾವಣೆ ಎದುರಿಸಿ ಯಶಸ್ವಿಯಾದವು. ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ನೀಡಿತು. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ಹಾಸನದಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಹಾಸನದ ಎಸ್. ನಂಜೇಶಗೌಡರು ಅಲ್ಪ ಬಹುಮತದಿಂದ ಜಯಗಳಿಸಿದ್ದು ಜಿಲ್ಲೆಯ ಜನತೆಯ ಪ್ರಜಾಫ್ರಭುತ್ವದ ಒಲವನ್ನು ಎತ್ತಿ ತೋರಿಸಿತ್ತು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬೆಂಬಲಿಸಿದಂತಿತ್ತು.
     ಸುಮಾರು 8 ವರ್ಷಗಳ ಹಿಂದೆ, ದಿನಾಂಕ 29-12-2012ರಂದು ತುರ್ತುಪರಿಸ್ಥಿತಿಯ ನೆನಪುಗಳಿಗೆ ಸಂಬಂಧಿಸಿದ ಲೇಖಕನ "ಆದರ್ಶದ ಬೆನ್ನು ಹತ್ತಿ. ." ಕೃತಿ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರ ಸಮಾವೇಶ ಏರ್ಪಡಿಸಲಾಗಿತ್ತು. (ಪುಸ್ತಕದ ಪ್ರತಿ ಬೇಕಿದ್ದವರು ಲೇಖಕರನ್ನು ಸಂಪರ್ಕಿಸಬಹುದು.) ಎಷ್ಟೋ ಜನರು ಸತ್ತೇ ಹೋಗಿದ್ದರು, ಎಷ್ಟೋ ಜನರು ಊರು ಬಿಟ್ಟು ಹೋಗಿದ್ದು ಅವರ ವಿಳಾಸ ತಿಳಿದಿರಲಿಲ್ಲ. ಹಾಗಾಗಿ ಅಂದು ತರುಣರಾಗಿದ್ದು, ಈಗ ಜೀವನ ಸಂಧ್ಯಾಕಾಲದಲ್ಲಿರುವ ಜಿಲ್ಲೆಯ ಸುಮಾರು 100 ಜನರನ್ನು ಶ್ರಮವಹಿಸಿ ಒಟ್ಟಿಗೆ ಸೇರಿಸಿದ್ದು ಮರೆಯಲಾಗದ ಅನುಭವ ನೀಡಿತ್ತು. 1975-77ರ ಅವಧಿಯಲ್ಲಿ ಬಂಧಿತರಾಗಿದ್ದಾಗ ಕಂಡಿದ್ದವರು ಸುಮಾರು 35 ವರ್ಷಗಳ ನಂತರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಅವರುಗಳಿಗೆ ಆದ ಅನುಭವ, ಆನಂದ ಅವರ್ಣನೀಯ. ಪರಸ್ಪರರನ್ನು ತಬ್ಬಿಕೊಂಡು, 'ಅಯ್ಯೋ, ನೀನಿನ್ನೂ ಬದುಕಿದ್ದೀಯೇನೋ, ಸತ್ತೇ ಹೋಗಿದ್ದಿಯೇನೋ ಅಂದುಕೊಂಡಿದ್ದೆ' ಎಂದು ಆನಂದಭಾಷ್ಪ ಸುರಿಸಿದ್ದರು. ಎಲ್ಲರೂ ಹಿಂದಿನ ತಾರುಣ್ಯದ ಕಾಲಕ್ಕೆ ಜಾರಿದ್ದರು. ಜೈಲಿನಲ್ಲಿ ಹಾಡುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಹಾಡನ್ನು ಎದೆಯುಬ್ಬಿಸಿ ಸಾಮೂಹಿಕವಾಗಿ ಹಾಡಿದಾಗ ಕಣ್ಣಂಚಿನಲ್ಲಿ ನೀರಾಡಿದ್ದವು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಉಳಿವಿಗೆ ಕಾರಣ ಎಂಬ ಸಂದೇಶ ಬಿತ್ತರವಾಗಿತ್ತು.
-ಕ.ವೆಂ.ನಾಗರಾಜ್.
*****
ತುರ್ತು ಪರಿಸ್ಥಿತಿ ಹಿಂತೆಗೆತವಾಗಿ ಆರೆಸ್ಸೆಸ್ಸಿನ ಮೇಲಿನ ನಿಷೇಧ ತೆರವಾದಮೇಲೆ ಹಾಸನ ನಗರದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸಿದ ಗೆಳೆಯರು ಒಟ್ಟಿಗೆ ತೆಗೆಸಿಕೊಂಡಿದ್ದ 43 ವರ್ಷಗಳ ಹಿಂದಿನ ಅಪರೂಪದ ಫೋಟೋ  

ನಿಂತಿರುವವರು: ನಾಗಭೂಷಣ, ವಾಸುದೇವ, . . . . ,ರವಿಕುಮಾರ್, ಸತ್ಯಮೂರ್ತಿ, ಕುಮಾರ್, ಫಾಲಾಕ್ಷ, ಶ್ರೀರಾಮ, ಸುಬ್ರಹ್ಮಣ್ಯ, ಪ್ರಸನ್ನ, ಹಿರಿಯಣ್ಣ, ರಾಮಶಂಕರಬಾಬು, ಸುವರ್ಣ, ಪುರುಷೋತ್ತಮ
ಕುಳಿತಿರುವವರು: ಎ.ವಿ. ಚಂದ್ರಶೇಖರ್, ಶಿವರಾಮ್, ಬಸವರಾಜು, ಪಾರಸಮಲ್, ಜಯಪ್ರಕಾಶ್, ಕರಿಬಸಪ್ಪ, ಎಸ್.ವಿ. ಗುಂಡೂರಾವ್, ರಾಜಶೇಖರ್, ಜನಾರ್ಧನ ಐಯ್ಯಂಗಾರ್, ಚಂದ್ರಶೇಖರ್, ಶಾಂತಿಲಾಲ್, ಲೇಖಕ ಕ.ವೆಂ.ನಾಗರಾಜ್, ರಾಮಚಂದ್ರ.
****

ಶನಿವಾರ, ಅಕ್ಟೋಬರ್ 20, 2018

ಮೂಢ ನಂಬಿಕೆ


     ಹಲವು ವರ್ಷಗಳ ಹಿಂದಿನ ಸಂಗತಿ. ಹಳೇಬೀಡಿನ ತುಂಬು ಕುಟುಂಬದ ಪ್ರಧಾನ ವ್ಯಕ್ತಿಯಾದ ನಮ್ಮ ತಾಯಿ ಲಕ್ಷ್ಮಮ್ಮನವರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಕುಳಿತುಹೋಗಿತ್ತು. ತಾಯಿಯವರಿಗೆ ಗಾಬರಿಯಾಗಿ ಒಳಕ್ಕೆ ಓಡಿ ಬಂದವರು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡರು. ನಮ್ಮ ಊರಿನ ಪ್ರಮುಖ ಪುರೋಹಿತರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದರೆ 'ಕಾಗೆ ತಲೆಯ ಮೇಲೆ ಕುಳಿತರೆ ಮರಣದ ಸೂಚನೆ' ಎಂದುಬಿಟ್ಟರು. ಮೊದಲೇ ಆತಂಕಿತರಾಗಿದ್ದ ನಮ್ಮ ತಾಯಿಗೆ ಜ್ವರ ಬಂದಿತು. ಇದಾಗಿ ಏಳೆಂಟು ದಿನಗಳಾಗಿರಬಹುದು. ಹಲ್ಲಿಯೊಂದು ಸಹ ಅವರ ತಲೆಯ ಮೇಲೆ ಬಿದ್ದುಬಿಟ್ಟಿತು. ಮೊದಲೇ ಹೆದರಿದ್ದ ಅವರು ಇನ್ನೂ ಹೆದರಿಬಿಟ್ಟರು. ನಮ್ಮ ಜೋಯಿಸರು ಪಂಚಾಂಗ ಹರಡಿಕೊಂಡು ತಲೆ ಆಡಿಸಿ ಹೇಳಿದರು: "ಇನ್ನು ಆರು ತಿಂಗಳಲ್ಲಿ ಮರಣ". ನಮ್ಮ ತಾಯಿ ಕುಸಿದುಹೋಗಿ ಹಾಸಿಗೆ ಹಿಡಿದುಬಿಟ್ಟರು. ಕೆಲವು ದಿನಗಳಲ್ಲಿ ಹಾಸಿಗೆ ಬಿಟ್ಟು ಏಳಲೂ ಆಗದಷ್ಟು ನಿಶ್ಶಕ್ತಿ ಅವರನ್ನು ಆವರಿಸಿತು. ಅವರಿಗೆ ತಾವು ಸಾಯುವುದು ಖಂಡಿತ ಅನ್ನಿಸಿಬಿಟ್ಟಿತ್ತು. ನಾನು ಬೇಲೂರಿನ ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ ಹೇಗೆಲ್ಲಾ ಧೈರ್ಯ ಹೇಳಬೇಕೆಂದು ಹೇಳಿಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಅವನೂ ಕಚ್ಚೆಪಂಚೆ, ಸಿಲ್ಕ್ ಜುಬ್ಬಾ ಧರಿಸಿ ಢಾಳಾಗಿ ವಿಭೂತಿ ಪಟ್ಟೆ, ಕುಂಕುಮ ಹಚ್ಚಿಕೊಂಡು ಬಂದಿದ್ದ. ಅಮ್ಮನಿಗೆ, "ಇವರು ಪ್ರಸಿದ್ಧ ಜ್ಯೋತಿಷಿ. ನಾಲ್ಕು ವರ್ಷ ಕೇರಳದಲ್ಲಿ ಅಧ್ಯಯನ ಮಾಡಿದ್ದಾರೆ. ಇವರನ್ನೂ ಭವಿಷ್ಯ ಕೇಳೋಣ ಅಂತ ಕರಕೊಂಡು ಬಂದಿದೀನಿ" ಎಂದು ಹೇಳಿ ನನ್ನ ಸ್ನೇಹಿತನಿಗೆ ಮುಂದುವರೆಸುವಂತೆ ಸೂಚನೆ ಕೊಟ್ಟೆ. ಆಗಿನ ಸಂಭಾಷಣೆ:
ಸ್ನೇಹಿತ: ಅಮ್ಮಾ, ಕಾಗೆ ತಲೆಯ ಮೇಲೆ ಕುಳಿತದ್ದು ಎಂದು? ಎಷ್ಟು ಹೊತ್ತಿಗೆ?
ಅಮ್ಮ: ಶನಿವಾರ, ಬೆಳಿಗ್ಗೆ ೮ ಗಂಟೆ ಇರಬಹುದು.
ಸ್ನೇಹಿತ: (ಕಣ್ಣುಮುಚ್ಚಿ ಏನೋ ಮಣಮಣಿಸಿ, ನಂತರ ಕವಡೆಗಳನ್ನು ಹಾಕಿ ಎಣಿಸಿ, ಗುಣಿಸಿದಂತೆ ಮಾಡಿ) ಶನಿವಾರ. ಹೂಂ. ಶನಿದೇವರ ವಾರ. ಶನಿಯ ವಾಹನ ಕಾಕರಾಜ ನಿಮ್ಮ ತಲೆಯ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಾನೆ. ನಿಮಗೆ ಅಭಯ ನೀಡಿದ್ದಾನೆ. ಸಂತೋಷಪಡಿ.
ಅಮ್ಮ: ಆದರೆ ತಲೆ ಮೇಲೆ ಹಲ್ಲಿ ಬಿದ್ದಿತ್ತಲ್ಲಾ?
ಸ್ನೇಹಿತ: ಆಮೇಲೆ ಏನಾಯಿತು?
ಅಮ್ಮ: ಪರಕೆಯಲ್ಲಿ ಹಲ್ಲಿಗೆ ಹೊಡೆದೆ. ಅದು ಸತ್ತುಹೋಯಿತು. ಹೊರಗೆ ಹಾಕಿದೆ.
ಸ್ನೇಹಿತ: (ಜೋಳಿಗೆಯ ಚೀಲದಿಂದ ಪಂಚಾಂಗ ತೆಗೆದು ನೋಡಿ ಏನೋ ಲೆಕ್ಕಾಚಾರ ಹಾಕಿದಂತೆ ಮಾಡಿ): ಸರಿಯಾಗಿಯೇ ಇದೆ. ಹಲ್ಲಿ ಬಿದ್ದರೆ ಮರಣ. ಹಲ್ಲಿ ತಲೆ ಮೇಲೆ ಬಿತ್ತು. ಸತ್ತು ಹೋಯಿತು. ನಿಮಗೆ ಶನಿದೇವನ ಆಶೀರ್ವಾದ ಗಟ್ಟಿಯಾಗಿದೆ. ನಿಮಗೆ ಪೂರ್ಣ ಆಯಸ್ಸಿದೆ. ನಿಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ನಿಮಗೆ ಸಾವಿಲ್ಲ. ತಾಯಿ, ಪುಣ್ಯವಂತರು ನೀವು. ಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿಬನ್ನಿ.
     ನಂತರದಲ್ಲಿ ಖುಷಿಯಿಂದ ಹಾಸಿಗೆಯಿಂದ ಎದ್ದ ಅಮ್ಮ ಕೈಕಾಲು ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿದ್ದರು. ಗೆಲುವಾಗಿದ್ದರು. ನನ್ನಿಂದಲೇ ಐವತ್ತು ರೂಪಾಯಿ (ಆಗ ಆ ಹಣ ದೊಡ್ಡ ಮೊತ್ತವೇ ಆಗಿತ್ತು.) ದಕ್ಷಿಣೆ ಹಣವನ್ನು ತಾಂಬೂಲದೊಂದಿಗೆ ಅವನಿಗೆ ಕೊಡಿಸಿದ್ದರು. ಅವನನ್ನು ಬಸ್ಸು ಹತ್ತಿಸಿ ಬರಲು ಅವನೊಂದಿಗೆ ಹೋದಾಗ ಅವನು ಹೇಳಿದ್ದು: "ಈ ಸುಳ್ಳು ಜ್ಯೋತಿಷ್ಯ ಹೇಳಿದ್ದು ಎಷ್ಟು ಸರೀನೋ ಗೊತ್ತಿಲ್ಲ. ನಿನಗೋಸ್ಕರ ಬಂದೆ. ಬಂದದ್ದಕ್ಕೂ ಲಾಭ ಅಯಿತು ಬಿಡು". "ಜ್ಯೋತಿಷ್ಯ ಸುಳ್ಳೋ, ನಿಜಾನೋ ನನಗೆ ಮುಖ್ಯ ಅಲ್ಲ. ಅಮ್ಮ ಗೆಲುವಾದಳಲ್ಲ, ಅದು ಮುಖ್ಯ" ಎಂದು ನಾನು ಹೇಳುತ್ತಿದ್ದಾಗ ಬೇಲೂರು ಬಸ್ಸು ಬಂದಿತ್ತು. ಅವನನ್ನು ಕಳಿಸಿ ಮನೆಗೆ ಬಂದರೆ ಅಮ್ಮ ಅದಾಗಲೇ ಹಾಸಿಗೆ ಮಡಿಸಿಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮೊದಲಿನಂತೆ ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. ಈ ಘಟನೆ ನಡೆದ ನಂತರದಲ್ಲೂ ಮುಂದಿನ ೨೫ ವರ್ಷಗಳವರೆಗೆ ನಮ್ಮಮ್ಮ ಬದುಕಿದ್ದರು. 
-ಹೆಚ್.ಎಸ್. ಪುಟ್ಟರಾಜು, ಜಾವಗಲ್.
***
ಮಾಹಿತಿಗೆ: ಇದು ಡಿಸೆಂಬರ್, 2014ರ ಕವಿಕಿರಣ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಪುಟ್ಟರಾಜು ಹೇಳಿದ್ದ ವಿಚಾರವನ್ನು ಲೇಖನವಾಗಿಸಿ ಪ್ರಕಟಿಸಿದೆ.

ಪುಟ್ಟರಾಜು, ಹೋಗಿ ಬಾ!



     ನಂಬುವುದು ಕಷ್ಟವಾಯಿತು. 'ಪುಟ್ಟರಾಜು ಹೋಗಿಬಿಟ್ಟ' ಎಂಬ ಸುದ್ದಿ ದೂರವಾಣಿ ಮೂಲಕ ತಿಳಿದಾಗ ಗರಬಡಿದುಬಿಟ್ಟಂತಾಯಿತು. ನನ್ನ ತಾಯಿಯ ತಮ್ಮ, ನನ್ನದೇ ವಯಸ್ಸಿನವನು ಕಣ್ಮರೆಯಾದ ಎಂದು ತಿಳಿದಾಗ ಆಘಾತವಾಗಿತ್ತು. ಆದರೆ, ಸತ್ಯ ಸತ್ಯವೇ. ಬಾಲ್ಯದ ಗೆಳೆತನದ ತಾಳಿಕೆ ಬಹಳ ದೀರ್ಘವಾಗಿರುತ್ತದೆ. ಆದರೆ ನನ್ನ ಮತ್ತು ಪುಟ್ಟರಾಜುವಿನದು ಅದಕ್ಕೂ ಮೀರಿದ ಹುಟ್ಟಿನಿಂದಲೂ ಬಂದ ಗೆಳೆತನ. ಹುಟ್ಟಿನಿಂದ ಬಂದ ಗೆಳೆತನಕ್ಕೆ ಎಂದೂ ಚ್ಯುತಿ ಬರಲೇ ಇಲ್ಲ. ಕೊನೆತನಕ ಮಧುರ ವಿಶ್ವಾಸ ಯಾವುದೇ ಚುಕ್ಕೆಯಿಲ್ಲದಂತೆ ಉಳಿದಿತ್ತು. ಒಂದು ಸಣ್ಣ ಸ್ವರೂಪದ ಮನಸ್ತಾಪವಾಗಲೀ, ಕಿತ್ತಾಟವಾಗಲೀ, ಜಗಳವಾಗಲೀ ಹುಡುಗಾಟಕ್ಕಾದರೂ, ಬಾಲ್ಯದ ಹುಡುಗಾಟದ ದಿನಗಳಲ್ಲೂ ಆಗಿರಲೇ ಇಲ್ಲ. ಇಬ್ಬರೂ ಹುಟ್ಟಿದ್ದು ಹಳೇಬೀಡಿನ ಮನೆಯಲ್ಲಿಯೇ! ಅವನು ಹುಟ್ಟಿದ ಕೆಲವು ತಿಂಗಳುಗಳಲ್ಲೇ ನಾನೂ ಈ ಭೂಮಿಗೆ ಬಂದಿದ್ದು. ಅಜ್ಜ ಪುಟ್ಟಯ್ಯನವರ ನೆನಪಿನಲ್ಲಿ ಅವನಿಗೆ ಪುಟ್ಟರಾಜು ಎಂದು ಹೆಸರಿಟ್ಟಿದ್ದರು. ನನಗೆ ನಾಗರಾಜ ಎಂಬ ಹೆಸರು ಬರಲು ಕಾರಣ ನನ್ನ ತಾಯಿಯ ಅಣ್ಣ ಶ್ರೀನಿವಾಸಮೂರ್ತಿಯವರು. "ಭಾವ, ಮಗುವಿಗೆ ನಾಗರಾಜ ಎಂದು ಹೆಸರಿಡಿ" ಎಂದು ಅವರು ನನ್ನ ತಂದೆಯವರಿಗೆ ಬರೆದಿದ್ದ ಪೋಸ್ಟ್ ಕಾರ್ಡನ್ನು ನನಗೆ ಓದಲು, ಬರೆಯಲು ಬಂದ ನಂತರದಲ್ಲಿ ನಾನೇ ಓದಿದ್ದೆ. ಹಿಂದೆಲ್ಲಾ ಬರುತ್ತಿದ್ದ ಪೋಸ್ಟ್ ಕಾರ್ಡುಗಳನ್ನು ತೊಲೆಗೋ, ಕಿಟಿಕಿಯ ಸರಳಿಗೋ ಕಟ್ಟುತ್ತಿದ್ದ ಒಂದು ಕೊಕ್ಕೆಯ ತಂತಿಗೆ ಚುಚ್ಚಿ ಇಡುತ್ತಿದ್ದರು. ಎಷ್ಟೋ ವರ್ಷಗಳವರೆಗೆ ಅವು ಇರುತ್ತಿದ್ದವು. ಹೀಗಾಗಿ ಆ ಕಾರ್ಡು ನನಗೆ ಓದಲು ಸಿಕ್ಕಿತ್ತು. ಪುಟ್ಟರಾಜುವನ್ನು ಪುಟ್ಟ ಎಂದು ಕರೆಯುತ್ತಿದ್ದರೆ, ನನ್ನನ್ನು ಈಗಲೂ ರಾಜು ಎಂತಲೇ ನನ್ನ ಬಂಧುಗಳು, ಹತ್ತಿರದವರು ಕರೆಯುತ್ತಾರೆ. ಪುಟ್ಟರಾಜು ಎಂಬ ಹೆಸರಿನಲ್ಲಿಯೇ ಪುಟ್ಟ ಮತ್ತು ರಾಜು ಎರಡೂ ಇವೆ. ಇದು ನಮ್ಮ ಅಕಳಂಕಿತ ಸ್ನೇಹದ ಗುರುತಾಗಿ ಭಾವಿಸುತ್ತೇನೆ. 
     ನನ್ನ ಮತ್ತು ಪುಟ್ಟರಾಜವಿನ ಸ್ನೇಹ ಸಂಬಂಧಗಳ ಬಗ್ಗೆ ಈ ಸಂದರ್ಭದಲ್ಲಿ ಹಂಚಿಕೊಂಡು ನೋವು ಮರೆಯಬಯಸುವ, ಸಮಾಧಾನ ಪಟ್ಟುಕೊಳ್ಳುವ ಸಣ್ಣ ಪ್ರಯತ್ನವಿದು. ಚಿಕ್ಕಂದಿನಲ್ಲಿ ಬೇಸಿಗೆಯ ರಜೆ ಬಂತೆಂದರೆ ನನ್ನ ವಾಸ ಹಳೇಬೀಡಿನ ಅಜ್ಜಿಯ ಮನೆಯಲ್ಲಿಯೇ. ಬೇಸಿಗೆ ರಜ ಏನು, ಯಾವುದೇ ರಜಾದಿನಗಳು, ಸಣ್ಣಪುಟ್ಟ ಸಮಾರಂಭಗಳು ಇತ್ಯಾದಿ ದಿನಗಳಲ್ಲೂ ಹಳೇಬೀಡಿನಲ್ಲೇ ಇರುತ್ತಿದ್ದುದು. ಹಳೇಬೀಡಿನ ಮನೆಯೋ ಮಕ್ಕಳ ಸಾಮ್ರಾಜ್ಯ. ಅಲ್ಲಿಯ ಮಕ್ಕಳು, ಊರಿನ ಮಕ್ಕಳು ಸೇರಿ ಬೀದಿಗಳಲ್ಲಿ ಆಡುತ್ತಿದ್ದರೆ ಅದೊಂದು ದೊಡ್ಡ ಸೈನ್ಯಗಳ ನಡುವಿನ ಕಾದಾಟವೇನೋ ಎಂಬಂತಿರುತ್ತಿತ್ತು. ಹಳೇಬೀಡಿನ ಬಹುತೇಕರು ನನ್ನ ಪರಿಚಿತರು, ವಿಶ್ವಾಸಿಗಳು ಆಗಿರುವುದು ಇದೇ ಕಾರಣಕ್ಕೆ. ಕಳ್ಳ-ಪೋಲಿಸ್ ಆಟ, ಚಿನ್ನಿ-ದಾಂಡು, ಬುಗುರಿ, ಲಗೋರಿ, ಗೋಲಿಯಾಟ, ಚೆಂಡಾಟ, ಇತ್ಯಾದಿ ಯಾವುದೇ ಆಟವಿರಲಿ, ಪುಟ್ಟರಾಜುವಿನ ಗುಂಪಿನಲ್ಲೇ ನಾನಿರಬೇಕು. ಆಟದ ನಡುವೆ ಇತರರೊಂದಿಗೆ ಜಗಳಗಳಾದಾಗ ಅವನು ನನ್ನ ಪಕ್ಷಪಾತಿಯಾಗಿರುತ್ತಿದ್ದ. ನನಗೆ ಅವನದೇ ಭೀಮಬಲವಾಗಿರುತ್ತಿತ್ತು. ಗೋಲಿ, ಚಿನ್ನಿ-ದಾಂಡು, ಬುಗುರಿ ಇತ್ಯಾದಿಗಳಲ್ಲಿ ಚುರುಕಾಗಿದ್ದ ನನ್ನನ್ನು ಸೇರಿಸಬಾರದೆಂದು ಹೇಳುತ್ತಿದ್ದ ಕೆಲವು ಹುಡುಗರ ಬಾಯಿ ಮುಚ್ಚಿಸುತ್ತಿದ್ದವನು ಪುಟ್ಟರಾಜು. ಗೋಲಿಯಾಟದಲ್ಲಿ ಎರಡು ದೊಡ್ಡ ಡಬ್ಬಿಗಳಷ್ಟು ಗೋಲಿಗಳನ್ನು ಗೆದ್ದು ಪುಟ್ಟರಾಜುವಿಗೆ ಕೊಟ್ಟಿದ್ದೆ. ಇಬ್ಬರೂ ಸೇರಿ ಬುಗುರಿಯಾಟದಲ್ಲಿ ಎಷ್ಟು ಜೊತೆಗಾರರ ಬುಗುರಿಗಳಿಗೆ ಗುನ್ನ ಹಾಕಿ ಒಡೆದಿದ್ದೆವೋ ಲೆಕ್ಕವಿಲ್ಲ. ದೇವಸ್ಥಾನದ ಮೇಲ್ಭಾಗದಲ್ಲೆಲ್ಲಾ ಹತ್ತಿ ಕುಣಿಯುತ್ತಿದ್ದೆವು. ಯಾರ ಯಾರದೋ ಮನೆಯ ಅಟ್ಟಗಳು, ಸಂದಿ-ಗೊಂದಿಗಳಲ್ಲಿ ಅಡಗಿ ಆಟವಾಡುತ್ತಿದ್ದೆವು. ೫೦-೬೦ ಮಕ್ಕಳು ಒಟ್ಟಿಗೇ ಧಡಗುಟ್ಟಿಕೊಂಡು ಆಟವಾಡುವಾಗ ಅದೊಂದು ರಣರಂಗವೇನೋ ಎಂಬಂತೆ ಕಾಣುತ್ತಿತ್ತು. ಮನೆಯವರಿಗೆ ಮಕ್ಕಳನ್ನು ಹಿಡಿದು ಸ್ನಾನ, ತಿಂಡಿ, ಊಟ ಮಾಡಿಸುವುದೆಂದರೆ ಹರಸಾಹಸವಾಗುತ್ತಿತ್ತು. ರಜೆ ಮುಗಿದು ವಾಪಸು ಹೋಗುವಾಗ ಹೋಗಬೇಕಲ್ಲಾ ಎಂಬ ಸಂಕಟದೊಂದಿಗೆ ಮರಳುತ್ತಿದ್ದೆ. 
     ಪ್ರಾಥಮಿಕ ಶಾಲಾದಿನಗಳಲ್ಲಿ ಕೆಲವೊಮ್ಮೆ ಅವನೊಂದಿಗೆ ಅವನ ತರಗತಿಗೂ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲಾ ಮಾಸ್ತರುಗಳು ಇದಕ್ಕೆ ಆಕ್ಷೇಪಿಸುತ್ತಿರಲಿಲ್ಲ. ಅಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಅವರು ಕಲಿತಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಮಾಸ್ತರರು ಪರೀಕ್ಷಿಸುವ ವಿಧಾನವೂ ವಿಚಿತ್ರವಾಗಿತ್ತು. ಒಂದು ಪ್ರಶ್ನೆ ಕೇಳಿದಾಗ ಉತ್ತರ ಹೇಳದ ವಿದ್ಯಾರ್ಥಿ ನಿಂತುಕೊಂಡಿರಬೇಕಿತ್ತು. ನಂತರ ಪಕ್ಕದ ವಿದ್ಯಾರ್ಥಿಯ ಸರದಿ. ಹೀಗೆ ಸರಿಯುತ್ತರ ಬರುವವರೆಗೂ ಮುಂದುವರೆಯುತ್ತಿತ್ತು. ಸರಿಯುತ್ತರ ಹೇಳಿದ ವಿದ್ಯಾರ್ಥಿಯಿಂದ ಉತ್ತರ ಹೇಳದ ಸಹಪಾಠಿಗಳ ಮೂಗು ಹಿಡಿಸಿ ಕೆನ್ನೆಗೆ ಹೊಡೆಸುತ್ತಿದ್ದರು. ಹೀಗೆಯೇ ಒಂದು ಸಲ ಸುಮಾರು ೧೦-೧೨ ಹುಡುಗರು ಉತ್ತರ ಹೇಳದೇ ನಿಂತುಕೊಂಡರು. ಪುಟ್ಟರಾಜುವೂ ಉತ್ತರ ಹೇಳದೆ ನಿಂತುಕೊಂಡ. ಪಕ್ಕದಲ್ಲಿದ್ದ ನಾನು ಉತ್ತರ ಹೇಳಿದೆ. ಪುಟ್ಟರಾಜು ನನ್ನ ಕಿವಿಯಲ್ಲಿ ಮೆಲ್ಲಗೆ ಪಿಸುಗುಟ್ಟಿದ್ದ: "ಆ ಕೊನೆಯಲ್ಲಿ ನಿಂತಿದ್ದಾಳಲ್ಲಾ ಅವಳಿಗೆ ಜೋರಾಗಿ ಬಾರಿಸು. ನನಗೆ ಎರಡು ಸಲ ಹೊಡೆದಿದ್ದಾಳೆ". ಆ ಹುಡುಗಿಯ ಹೆಸರನ್ನು ಗೀತಾನೋ. ಲೀಲಾನೋ ಏನೋ ಹೇಳಿದ್ದ, ನನಗೆ ನೆನಪಿಲ್ಲ. ನಾನು ಹಾಗೆಯೇ ಮಾಡಿದ್ದೆ. ಏಟಿನ ರಭಸಕ್ಕೆ ಆ ಹುಡುಗಿಯ ಕಣ್ಣಿನಲ್ಲಿ ನೀರು ತುಳುಕಿತ್ತು.
     ಚಿಕ್ಕಂದಿನಲ್ಲಿ ಮಕ್ಕಳು ಒಬ್ಬರೊಬ್ಬರಿಗೆ ಅಡ್ಡಹೆಸರುಗಳನ್ನು ಇಟ್ಟು ಚುಡಾಯಿಸುವುದು, ರೇಗಿಸುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ದೊಡ್ಡವರೂ ಅದೇ ಹೆಸರಿನಿಂದ ಅವರುಗಳನ್ನು ರೇಗಿಸುತ್ತಿದ್ದುದು ತಮಾಷೆಯಾಗಿರುತ್ತಿತ್ತು, ಕಂಕಭಟ್ಟ, ಕಾಳಂಭಟ್ಟ, ಪೆದ್ದಂಭಟ್ಟ, ತಿಮ್ಮಿ, ದಾಸಿ, ಬೋಂಡ, ಪಾಯಸ, ರವೆ ಉಂಡೆ, ಹೀಗೆ ಅಡ್ಡ ಹೆಸರುಗಳಿರುತ್ತಿದ್ದವು. ಪುಟ್ಟರಾಜುವಿಗಿದ್ದ ಅಡ್ಡ ಹೆಸರು ಕಾಳಂಭಟ್ಟ! ಒಮ್ಮೊಮ್ಮೆ ಮನೆಯಲ್ಲಿ ಎಲ್ಲರೊಡನೆ ಕುಳಿತು ಅಜ್ಜಿಯೋ, ಅತ್ತೆ ಪ್ರಭಾಮಣಿಯವರೋ ಕೈತುತ್ತು ಹಾಕುತ್ತಿದ್ದಾಗಿನ ತುತ್ತಿನ ರುಚಿಯನ್ನು, ಅದು ಕೆಂಪುಮೆಣಸಿನಕಾಯಿ, ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ರುಬ್ಬಿದ ಚಟ್ನಿ ಕಲಸಿದ ಅನ್ನವಾದರೂ, ಈಗಲೂ ನೆನಪಿಸಿಕೊಳ್ಳುವಂತಾಗುತ್ತದೆ. ಹತ್ತು-ಹನ್ನೆರಡು ಜನರಿಗೆ ಕೈತುತ್ತು ಹಾಕುವಾಗ ಮತ್ತೆ ನಮ್ಮ ಸರದಿ ಬರುವವರೆಗೆ ಕೈಯೊಡ್ಡಿ ಕುಳಿತಿರುತ್ತಿದ್ದೆವು. ಹಂಚಿ ತಿನ್ನುವ ಅಭ್ಯಾಸ ಬರಬೇಕೆಂದರೆ ಒಟ್ಟು ಕುಟುಂಬದಲ್ಲಿ ಇರಬೇಕು, ಒಟ್ಟಾಗಿ ಇರಬೇಕು. ಊಟವಾದ ಮೇಲೆ ರಾಮಸ್ವಾಮಿ ಹೇಳುವ ಬಾಯಿ ಬಿಟ್ಟುಕೊಂಡು ಕೇಳುವಂತಿದ್ದ ಸ್ವಾರಸ್ಯಕರ ಕಟ್ಟುಕಥೆಗಳನ್ನು ಕೇಳಿ ಮಲಗುತ್ತಿದೆವು. 
     ಹಳೇಬೀಡಿನ ಮನೆಯಲ್ಲಿ ನನಗೆ ಅಜ್ಜನೆಂದರೆ ಭಯಮಿಶ್ರಿತ ಪ್ರೀತಿ ಮತ್ತು ಗೌರವ. ಆಸ್ತಮಾ ಕಾರಣದಿಂದ ನರಳುತ್ತಿದ್ದ ಮತ್ತು ಸದಾ ಗಂಭೀರವಾಗಿರುತ್ತಿದ್ದ ಶಾನುಭೋಗ ಸುಬ್ಬರಾಯರಿಗೆ ಸಿಟ್ಟು ಜಾಸ್ತಿ. ಒಮ್ಮೆ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಪುಟ್ಟರಾಜ ಯಾವ ಕಾರಣಕ್ಕೋ ಹಟ ಮಾಡುತ್ತಿದ್ದ. ಅವನ ಗಲಾಟೆ ಗಮನಿಸುತ್ತಿದ್ದ ನನ್ನಜ್ಜ ಪಕ್ಕದಲ್ಲಿದ್ದ ಹಿತ್ತಾಳೆ ಲೋಟವನ್ನು ಅವನೆಡೆಗೆ ಬೀಸಿದ್ದರು. ಠಣ್ಣನೆ ಶಬ್ದ ಮಾಡುತ್ತಾ ಅದು ಪುಟ್ಟರಾಜುವಿನ ತಲೆಗೆ ಅಪ್ಪಳಿಸಿತ್ತು. ಅವನು ನೋವಿನಿಂದ ಊಟ ಬಿಟ್ಟು ಅಳುತ್ತಾ ಹೊರಗೆ ಓಡಿದಾಗ ಅಜ್ಜಿ ಅವನನ್ನು ಹಿಂಬಾಲಿಸಿ ಓಡಿಹೋಗಿ ಅವನನ್ನು ಸಮಾಧಾನಿಸಿ ಊಟ ಮಾಡುವಂತೆ ಮಾಡಿದ್ದರು. ನಾನೂ ಹೆದರಿ ಗಬಗಬನೆ ಊಟ ಮಾಡಿ ಮೇಲೆದ್ದಿದ್ದೆ. ತಾಯಿಯ ಇತರ ತಮ್ಮಂದಿರಾದ ಸೂರ, ಗೋಪಾಲ, ಶಂಕರ, ರಾಮಸ್ವಾಮಿಯವರನ್ನೂ ಸಹ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರಾಗಿದ್ದರೂ ಅವರೊಡನೆ ಇರುವ ಸಲಿಗೆ, ಪ್ರೀತಿ, ವಿಶ್ವಾಸಗಳಿಂದಾಗಿ ಏಕವಚನದಲ್ಲೇ ಚಿಕ್ಕಂದಿನಿಂದಲೂ ಮಾತನಾಡಿಸುತ್ತಾ ಬಂದಿರುವೆ. ತಿಳುವಳಿಕೆ ಬಂದ ಮೇಲೂ ಈ ಸ್ವಭಾವ ಮುಂದುವರೆದಿದ್ದು ಇದನ್ನು ಯಾರೂ ತಪ್ಪಾಗಿ ಭಾವಿಸಿಲ್ಲ. ನಾನು ಬಹುವಚನ ಬಳಸುತ್ತಿದ್ದುದು ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರನ್ನು ಕುರಿತು ಮಾತ್ರ. ನನ್ನ ಅಜ್ಜ ಕಾಯಿಲೆಯಿಂದ ವಿಧಿವಶರಾದಾಗ ನನ್ನ ಮತ್ತು ಪುಟ್ಟರಾಜುವಿನ ವಯಸ್ಸು ೧೦ ವರ್ಷಗಳಷ್ಟೆ ಆಗಿತ್ತು. ಪ್ರಜಾವಾಣಿ ಪತ್ರಿಕೆಯ ೩ನೆಯ ಪುಟದಲ್ಲಿ, 'ಹಳೇಬೀಡಿನ ಹುಲಿ ಎಂದು ಪ್ರಸಿದ್ಧರಾಗಿದ್ದ ಶ್ಯಾನುಭೋಗ್ ಹೆಚ್.ಪಿ. ಸುಬ್ಬರಾಯರು ನಿಧನರಾದರು' ಎಂಬ ಸಣ್ಣ ಸುದ್ದಿ ಪ್ರಕಟವಾಗಿತ್ತು.
     ಒಂದು ಸಲ ಅವನಿಗೆ ನಾಲ್ಕಾಣೆ ಪಾವಲಿ ಸಿಕ್ಕಿತ್ತು. ಆಗ ನಾಲ್ಕಾಣೆ ಎಂದರೆ ದೊಡ್ಡ ಹಣವೇ! ಆಗ ಆಣೆ ರೂಪಾಯಿ ಕಾಲ. ಒಂದು ಆಣೆಗೆ ಹನ್ನೆರಡು ಕಾಸು. ಒಂದು ರೂಪಾಯಿಗೆ ೧೬ ಆಣೆ. ೬ ಕಾಸು ಒಂದು ತೂತಿನ ಬಿಲ್ಲೆ ನಾಣ್ಯ, ೩ ಕಾಸು ದೊಡ್ಡ ತಾಮ್ರದ ನಾಣ್ಯ. ಒಂದೊಂದು ಕಾಸಿಗೂ ಬೆಲೆ ಇತ್ತು. ಚಿಲ್ಲರೆ ಸಮಸ್ಯೆ ಇರಲಿಲ್ಲ. ಈಗ ೨೫ ಪೈಸೆ, ೫೦ ಪೈಸೆಗಳಿಗೂ ಬೆಲೆಯೇ ಇಲ್ಲ, ಸಿಗುವುದೂ ಇಲ್ಲ. ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿ ಕಡಲೆಕಾಯಿ ತಂದ. ಒಂದು ದೊಡ್ಡ ಚೀಲದ ತುಂಬಾ ಕಡಲೆಕಾಯಿ ಬಂತು. ನನ್ನನ್ನು ಅಲ್ಲೇ ನಿಲ್ಲಿಸಿ ಮನೆಗೆ ಓಡಿಹೋಗಿ ಜೇಬಿನಲ್ಲಿ ಒಂದೆರಡು ಅಚ್ಚು ಬೆಲ್ಲವನ್ನೂ ಇಟ್ಟುಕೊಂಡು ಬಂದ. ಇಬ್ಬರೂ ಶಾಲೆಯ ಮೆಟ್ಟಿಲ ಮೇಲೆ ಕುಳಿತು ಸಾಕಾಗುವಷ್ಟು ತಿಂದೆವು. ಆದರೂ ಮುಕ್ಕಾಲು ಚೀಲ ಕಡಲೆಕಾಯಿ ಉಳಿದಿತ್ತು. ಏನು ಮಾಡುವುದು? ಮನೆಯಲ್ಲಿ ಹೇಳಿದರೆ ಬೈತಾರೆ. ಮೆಲ್ಲಗೆ ಮನೆಯ ಹಿತ್ತಲ ಗೋಡೆಯ ಬಳಿಯಿಂದ ಬಂದವನು ಅಲ್ಲಿ ಚೀಲ ಇಟ್ಟ. ಮುಂಬಾಗಿಲಿಂದ ಇಬ್ಬರೂ ಬಂದೆವು. ಯಾರೂ ನೋಡದಂತೆ ಚೀಲವನ್ನು ಅಟ್ಟಕ್ಕೆ ಸಾಗಿಸಿದ. ನನ್ನನ್ನು  ಕೆಳಗೆ ಇರಲು ಹೇಳಿ ಅವನು ಅಟ್ಟ ಹತ್ತಿದ. "ನಾನು ಮೊದಲು ಹೋಗಿ ತಿನ್ನುತ್ತೇನೆ. ಆಮೇಲೆ ನೀನು ಹೋಗಿ ತಿನ್ನು. ಇವತ್ತು ಅದನ್ನು ಮುಗಿಸಿಬಿಡಬೇಕು" ಎಂದು ಹೇಳಿದ. ಹಾಗೆ ಹೋದವನು ಎಷ್ಟು ಹೊತ್ತಾದರೂ ಕೆಳಗೆ ಬರಲೇ ಇಲ್ಲ. ಊಟದ ಸಮಯ ಆಯಿತು. ಎಲ್ಲರೂ ಬಂದರೂ ಪುಟ್ಟನ ಸುಳಿವಿಲ್ಲ. ಅವನನ್ನು ಹುಡುಕಲು ಶುರು ಮಾಡಿದರು. ನನ್ನನ್ನು ಕೇಳಿದರು. ನನಗೆ ಉಭಯಸಂಕಟ. ಹೇಳುವಂತಿಲ್ಲ, ಬಿಡುವಂತಿಲ್ಲ. ಗೊತ್ತಿಲ್ಲ ಎಂದುಬಿಟ್ಟೆ. ಊರಲ್ಲೆಲ್ಲಾ ಹುಡುಕಾಡಿದರೂ ಅವನು ಸಿಗದಾದಾಗ ಅಜ್ಜಿ ಆತಂಕದಿಂದ ಅಳತೊಡಗಿದರು. ನನಗೆ ಅವರು ಅಳುವುದನ್ನು ನೋಡಲಾಗದೆ ಪುಟ್ಟ ಅಟ್ಟದಲ್ಲಿ ಇರುವುದನ್ನು ಹೇಳಿಬಿಟ್ಟೆ. ಮೇಲೆ ಹತ್ತಿ ನೋಡಿದರೆ ಅವನು ಕಡಲೆಕಾಯಿ ತಿಂದೂ ತಿಂದೂ ಸುಸ್ತಾಗಿ ಮಲಗಿಬಿಟ್ಟಿದ್ದ. ನಿದ್ದೆ ಬಂದಿತ್ತು. ಎಷ್ಟು ತಿಂದರೂ ಚೀಲ ಖಾಲಿಯಾಗಿರಲಿಲ್ಲ. ಇನ್ನೂ ಅರ್ಧ ಚೀಲ ಕಡಲೆಕಾಯಿ ಉಳಿದಿತ್ತು. ಅವನ ಪರಿಸ್ಥಿತಿ ನೋಡಿ ಯಾರೂ ಅವನನ್ನು ಬೈಯಲಿಲ್ಲ. ಮರುದಿನವೆಲ್ಲಾ ಭೇದಿ ಕಿತ್ತುಕೊಂಡಿತ್ತು. ನಾನೂ ಹೊಟ್ಟೆನೋವಿನಿಂದ ಒದ್ದಾಡಿದ್ದೆ. ಹೆಚ್ಚಾಗಿದ್ದ ಕಡಲೆಕಾಯಿಯನ್ನು ಏನು ಮಾಡಬೇಕಿತ್ತೆಂದು ನಮ್ಮಿಬ್ಬರಿಗೂ ಹೊಳೆಯದೆ ಈ ಫಜೀತಿಯಾಗಿತ್ತು. ಅಲ್ಲದೆ ಈಗಿನಂತೆ ಪದಾರ್ಥಗಳನ್ನು ದಂಡ ಮಾಡುವ ಮನಸ್ಥಿತಿ ಆಗಿನ ಕಾಲದಲ್ಲಿ ಇರಲಿಲ್ಲ.
     ಬಾಲ್ಯ, ಯೌವನದ ದಿನಗಳಲ್ಲಿನ ಆಟ, ಹುಡುಗಾಟ, ತುಂಟಾಟಗಳನ್ನು ಯಾವ ಮುಚ್ಚುಮರೆ ಇಲ್ಲದೆ ಇಬ್ಬರೂ ಹಂಚಿಕೊಳ್ಳುತ್ತಿದ್ದೆವು. ಹಳೇಬೀಡಿನ ದೊಡ್ಡಕೆರೆಗೆ ಊರಿನ ಹೆಚ್ಚಿನ ಹೆಂಗಸರು ಬಟ್ಟೆಗಳನ್ನು ಒಗೆಯಲು ಬುಟ್ಟಿಗಳಲ್ಲಿ ಇಟ್ಟುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಒಟ್ಟಿಗೇ ಮಾತನಾಡಲು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲೂ ಅವಕಾಶವಾಗುತ್ತಿದ್ದುದೂ ಇದಕ್ಕೆ ಒಂದು ಕಾರಣವಾಗಿದ್ದಿರಬಹುದು. ಪುಟ್ಟರಾಜು ಜೊತೆಗೆ ಓದುತ್ತಿದ್ದ ಕೆಲವು ಹುಡುಗಿಯರೂ ಅಲ್ಲಿ ಬಟ್ಟೆ ಒಗೆಯಲು ಹೋಗುತ್ತಿದ್ದರಂತೆ. ಪುಟ್ಟರಾಜು ಆಗ ಕೆರೆಯಲ್ಲಿ ಈಜಾಡಲು ಹೋಗುತ್ತಿದ್ದನಂತೆ. ಆ ಹುಡುಗಿಯರು ಬರಿಯ ಚಡ್ಡಿಯಲ್ಲಿ ಈಜುತ್ತಿದ್ದ ಇವನನ್ನು ನೋಡುತ್ತಾ ಮುಸಿ ಮುಸಿ ನಗುತ್ತಿದ್ದರಂತೆ. ಅವನೂ ಆ ಹುಡುಗಿಯರನ್ನು ಮೆಚ್ಚಿಸಲು ಕೆರೆಯ ಮಧ್ಯಭಾಗದವರೆಗೂ ಈಜಿಕೊಂಡು ಹೋಗಿಬರುತ್ತಿದ್ದನಂತೆ. ಒಂದು ಸಲ ನನ್ನನ್ನೂ ಕರೆದುಕೊಂಡು ಹೋಗಿ ಆ ರೀತಿ ಈಜಾಡಿದ್ದ. ಈಜು ಬಾರದ ನಾನು ಕೆರೆಯ ದಂಡೆಯಲ್ಲಿ ನಿಂತು ನೋಡುತ್ತಿದ್ದೆ. ಅವನ ಕಟ್ಟುಮಸ್ತಾಗಿದ್ದ ಶರೀರ ನೀರಿನಲ್ಲಿ ತೊಯ್ದು ಬಿಸಿಲಿನಲ್ಲಿ ಮಿರಮಿರನೆ ಹೊಳೆಯುತ್ತಿತ್ತು. ಅವನು ಹೇಳಿದ್ದ ಸಂಗತಿ ನಿಜವಾಗಿತ್ತು. ಕೆಲವು ಹುಡುಗಿಯರು ಅವನು ಈಜುವುದನ್ನು ನೋಡುತ್ತಾ ನೆಪ ಮಾತ್ರಕ್ಕೆ ಬಟ್ಟೆ ಒಗೆಯುತ್ತಿದ್ದುದನ್ನು ಗಮನಿಸಿದ್ದೆ. 
     ಪುಟ್ಟರಾಜನಿಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅದು ಹೇಗೋ ಎಸ್ಸೆಸ್ಸೆಲ್ಸಿವರೆಗೆ ಬಂದಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಹಲವಾರು ಸಲ ನಪಾಸಾಗಿದ್ದ. ೯-೧೦ ಸಲ ಸಪ್ಲಿಮೆಂಟರಿ ಪರೀಕ್ಷೆಗೆ ನಾಮಕಾವಸ್ಥೆಗೆ ಹೋಗಿಬಂದಿದ್ದ. ಅನೇಕ ಸಲ ಪಠ್ಯಪುಸ್ತಕಗಳು ಬದಲಾಗಿದ್ದರಿಂದ ಹಳೆಯ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಪರೀಕ್ಷಾಪತ್ರಿಕೆಗಳನ್ನು ಮಂಡಳಿ ಸಿದ್ಧಪಡಿಸಬೇಕಾಗಿತ್ತು. ಹೀಗಾಗಿ ಅತಿ ಹಳೆಯ ಸ್ಕೀಮಿನ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡುವ ನಿರ್ಧಾರವನ್ನು ಮಂಡಳಿ ಒಮ್ಮೆ ತೆಗೆದುಕೊಂಡಿತ್ತು. ಈ ವಿಷಯ ಪೇಪರಿನಲ್ಲಿ ಬಂದಿದ್ದನ್ನು ಓದಿದ್ದ ನಾನು, ಪುಟ್ಟನಿಗೆ, "ಈ ಸಲ ನೀನು ಪಾಸಾಗುತ್ತೀಯ" ಎಂದಿದ್ದೆ. ಅವನು, "ಅದು ಹೇಗೆ ಸಾಧ್ಯ? ಉತ್ತರಪತ್ರಿಕೆಯಲ್ಲಿ ಒಂದಕ್ಷರವನ್ನೂ ನಾನು ಬರೆದೇ ಇಲ್ಲ" ಎಂದಿದ್ದ. ಕೊನೆಗೂ ಅವನು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗಿಯೇಬಿಟ್ಟ! ಹೀಗೆ ಪಾಸಾದವರನ್ನು 'ಗಾಂಧಿ ಪಾಸು' ಎನ್ನುತ್ತಿದ್ದರು. ಗಾಂಧಿ ಹೆಸರನ್ನು ಇಂತಹದಕ್ಕೆಲ್ಲಾ ಏಕೆ ಬಳಸುತ್ತಾರೋ ಗೊತ್ತಿಲ್ಲ. ಅವನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇರಬಹುದು. ಆದರೆ ಅವನ ವ್ಯವಹಾರ ಜ್ಞಾನ, ಲೋಕಸಂಗ್ರಹ ಶಕ್ತಿ, ಧೈರ್ಯ ಇತರರನ್ನು ಮೀರಿಸುವಂತಿತ್ತು.
     'ಶ್ರೀ ಕೃಷ್ಣ ಸೋಡಾ ಫ್ಯಾಕ್ಟರಿ' -  ಹಳೇಬೀಡು ಕುಟುಂಬದ ಕೊಡುಗೆ ಮತ್ತು ಕುಟುಂಬವನ್ನು ಭದ್ರ ನೆಲೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಸೂರ, ಗೋಪಾಲ, ಶಂಕರ, ರಾಮು, ಪುಟ್ಟ, ಚಿದ ಎಲ್ಲರೂ ಇಲ್ಲಿ ಕೆಲಸ ಮಾಡಿದ್ದಾರೆ, ಗೋಲಿ ಸೋಡಾಬಾಟಲುಗಳಿಗೆ ಗ್ಯಾಸ್ ತುಂಬಿಸಿದ್ದಾರೆ, ಬಣ್ಣ ಬಣ್ಣದ ಸಿಹಿನೀರಿನ ಕ್ರಶ್ ಬಾಟಲುಗಳನ್ನು ಸಿದ್ಧಪಡಿಸಿದ್ದಾರೆ, ಹೊತ್ತು ಇತರ ಅಂಗಡಿಗಳಿಗೆ ಮಾರಾಟಕ್ಕೆ ಕೊಟ್ಟಿದ್ದಾರೆ, ಬಸ್‌ಗಳು ಬಂದಾಗ ಕ್ರೇಟುಗಳನ್ನು ಹೆಗಲ ಮೇಲೆ ಹೊತ್ತು 'ಸೋಡಾ, ಸೋಡಾ' ಎಂದು ಮಾರಾಟ ಮಾಡಿ ಸಂಪಾದಿಸಿದ್ದಾರೆ, ಬಾಟಲುಗಳನ್ನು ತೊಳೆದಿದ್ದಾರೆ, ಲಿಂಬು ಶರಬತ್ತು ಮಾಡಿದ್ದಾರೆ. ಅಜ್ಜಿ ಶರಬತ್ತಿನ ಕಾನ್ಸೆಂಟ್ರೇಟ್ಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ನಾನು ಅಂಗಡಿಯಲ್ಲಿ ಕುಳಿತು ಇವರೆಲ್ಲರ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಮನೆಯ ಮುಂದಿನ ಸೋಡಾ ರೂಂನಲ್ಲಿ ಸಹ ಸೋಡಾ, ಕ್ರಶ್‌ಗಳನ್ನು ತಯಾರಿಸುವುದು, ಇತ್ಯಾದಿ ಮಾಡಲಾಗುತ್ತಿತ್ತು. ಬಾಟಲುಗಳನ್ನು ತೊಳೆಯುವುದು, ದೊಡ್ಡ ಕ್ರೇಟುಗಳಲ್ಲಿ ಬಾಟಲುಗಳನ್ನು ಸಾಗಿಸಲು ಒಂದು ಕೈಗಾಡಿಯಿತ್ತು. ಆ ಗಾಡಿಯಲ್ಲಿ ನಾವುಗಳೂ ಕುಳಿತು ದೂಡಿಕೊಂಡು ಹೋಗಿ ಆಟವಾಡುತ್ತಿದ್ದೆವು. ಸೂರ, ಗೋಪಾಲ, ಶಂಕರ, ರಾಮು, ಚಿದ ಎಲ್ಲರೂ ತಮ್ಮದೇ ಆದ ವೃತ್ತಿಜೀವನ ಆರಿಸಿಕೊಂಡು ಹೋದಾಗ, ಸೋಡಾ ಫ್ಯಾಕ್ಟರಿಯನ್ನು ಅಭಿವೃದ್ಧಿ ಪಡಿಸಿ ಕೊನೆಯವರೆಗೂ ಮುಂದುವರೆಸಿ, ನಂತರ ಬೇಕರಿಯನ್ನೂ ಪ್ರಾರಂಭಿಸಿ ಉಚ್ಛ್ರಾಯ ಸ್ಥಿತಿಗೆ ತಂದವನೇ ಪುಟ್ಟರಾಜು! ಒಂದು ಘಟನೆ ನೆನಪಿಗೆ ಬರುತ್ತಿದೆ. ಈ ಸೋಡಾ ಫ್ಯಾಕ್ಟರಿ ಎದುರಿಗೆ ಮತ್ತೊಬ್ಬರು ತಮ್ಮದೇ ಆದ ಸೋಡಾ ಫ್ಯಾಕ್ಟರಿ ಇಟ್ಟರು. ಆಗ ಗೋಲಿ ಸೋಡಾದ ಬೆಲೆ ೧೫ ಪೈಸೆ ಇದ್ದಿರಬಹುದು. ಪುಟ್ಟರಾಜ ತಾನು ಮಾರುವ ಸೋಡಾದ ಬೆಲೆ ೧೨ ಪೈಸೆಗೆ ಇಳಿಸಿದ. ಪ್ರತಿಸ್ಪರ್ಧಿಯೂ ೧೨ ಪೈಸೆಗೆ ಮಾರತೊಡಗಿದಾಗ, ೧೦ ಪೈಸೆಗೆ ಇಳಿಸಿದ. ಹೀಗೆ ಪೈಪೋಟಿ ನಡೆದು ೮ ಪೈಸೆಗೆ ಇಬ್ಬರೂ ಮಾರತೊಡಗಿದರು. ಪುಟ್ಟರಾಜು ೫ ಪೈಸೆಗೆ ಇಳಿಸಿದಾಗ ಇನ್ನೊಂದು ಅಂಗಡಿಯವನು ಕೈಚೆಲ್ಲಲೇಬೇಕಾಯಿತು. ಕೊನೆಗೆ ಉಳಿದದ್ದು ಇವನ ಸೋಡಾ ಫ್ಯಾಕ್ಟರಿಯೇ! ಎಲ್ಲರೂ ಹಳೇಬೀಡು ಬಿಟ್ಟರೂ, ಇವನು ಮಾತ್ರ ಅಲ್ಲಿಯೇ ಬಹಳ ವರ್ಷಗಳ ಕಾಲ ಇದ್ದವನು. ಈಚೆಗೆ ಕೆಲವು ವರ್ಷಗಳ ಹಿಂದೆ ವ್ಯಾಪಾರದ ಸ್ಥಳವನ್ನು ಜಾವಗಲ್ಲಿಗೆ ಸ್ಥಳಾಂತರಿಸಿ ಮಗನನ್ನು ಉದ್ಯಮದಲ್ಲಿ ಪ್ರತಿಷ್ಠಾಪಿಸಿದವನು. ಯಾವ ಟೆಕ್ಕಿಗೂ ಕಡಿಮೆಯಿಲ್ಲದಂತೆ ಸಂಪಾದನೆ ಮಾಡುವ, ಹಲವು ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿರುವ ಉದ್ಯಮದ ಈ ಸ್ಥಿತಿಯ ಹಿನ್ನೆಲೆಯಲ್ಲಿ ಪುಟ್ಟರಾಜುವಿನ ಮತ್ತು ಅವನಿಗೆ ಜೊತೆಯಾಗಿ, ತಕ್ಕಂತೆ ಕೈಜೋಡಿಸಿ ಮುನ್ನಡೆಸುತ್ತಿರುವ ಮಗ ರಾಘವೇಂದ್ರನ ಶ್ರಮವಿದೆ. ಬೆಂಗಳೂರಿನಲ್ಲೂ ಮನೆ ಕಟ್ಟಿಸಿದ್ದಾನೆ. ಅಲ್ಲಿಯೂ ಒಂದು ಬೇಕರಿ, ಕಾಂಡಿಮೆಂಟ್ಸ್ ಅಂಗಡಿ ತೆರೆದಿದ್ದ. ಆದರೆ ನಿರ್ವಹಣಾ ವೆಚ್ಚ ಜಾಸ್ತಿಯಾಗಿದ್ದರಿಂದ ಅದನ್ನು ಮುಚ್ಚಬೇಕಾಯಿತು. ಅದಕ್ಕೆ ಪುಟ್ಟರಾಜು ನನ್ನ ಮಗಳೊಂದಿಗೆ ಮಾತನಾಡುತ್ತಾ ನೀಡಿದ್ದ ಪ್ರತಿಕ್ರಿಯೆಯೆಂದರೆ, "ನನಗೆ ನಷ್ಟವಾಗಲಿಲ್ಲ. ಬೆಂಗಳೂರಿನಲ್ಲಿ ಹೇಗೆ ವ್ಯಾಪಾರ ಮಾಡಬೇಕೆಂಬುದು ಗೊತ್ತಾಯಿತು. ಮತ್ತೆ ಬೆಂಗಳೂರಿನಲ್ಲಿ ಅಂಗಡಿ ತೆರೆಯುತ್ತೇನೆ"- ಇದು ಪುಟ್ಟರಾಜನ ರೀತಿ, ನೀತಿ!
     ಪುಟ್ಟರಾಜುಗೆ ರಾ.ಸ್ವ.ಸಂಘದ ನಿಕಟ ಸಂಬಂಧವಿತ್ತು. ೧೯೭೦ರ ದಶಕದಲ್ಲಿ ಎರಡು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ವಿಸ್ತಾರಕ್ ಆಗಿ ಕೆಲಸ ಮಾಡಿದ್ದ. ನಾನು ಆಗ ಬಿಎಸ್‌ಸಿ ಓದುತ್ತಿದ್ದೆ. ಆಗ ನಾನು ಯಾವ ದೊಡ್ಡ ಮನುಷ್ಯನಾಗಿದ್ದೆನೋ ಗೊತ್ತಿಲ್ಲ, ಅವನಿಗೆ ಉಪದೇಶ ಮಾಡಿದ್ದೆ, "ಮೊದಲು ಮನೆಯ ಕಡೆ ಗಮನ ಕೊಡು, ಆಮೇಲೆ ದೇಶದ ಕೆಲಸ". ಅವನು ನಕ್ಕು ಸುಮ್ಮನಾಗಿದ್ದ. ನನಗೂ ಚಿಕ್ಕಂದಿನಿಂದಲೂ ಸಂಘದ ಸಂಪರ್ಕವಿದ್ದರೂ, ಅತಿ ಹೆಚ್ಚು ಸಂಪರ್ಕಕ್ಕೆ ಬರಲು ಪುಟ್ಟರಾಜುವೇ ಕಾರಣವೆಂದರೆ ತಪ್ಪಿಲ್ಲ. ಸಂಘದ ಪ್ರಚಾರಕರುಗಳು ಹಳೇಬೀಡಿನ ಮನೆಗೆ ಸಂಪರ್ಕಕ್ಕೆ, ಊಟಕ್ಕೆ ಬಂದಾಗ 'ಬಿಟ್ಟಿ ಊಟದವರು' ಎಂದು ಪುಟ್ಟರಾಜುವಿನೊಡನೆ ನಾನು ಹೇಳಿದ್ದುದೂ ಇದೆ. ಆಗಲೂ ಅವನು ನನ್ನೊಡನೆ ಚರ್ಚೆ ಮಾಡಿರಲಿಲ್ಲ. ಮುಗುಳ್ನಕ್ಕಿದ್ದ. ಆದರೆ, ಆ 'ಬಿಟ್ಟಿ ಊಟದವರ' ಹಿರಿಮೆ, ಗರಿಮೆಗಳ ಅರಿವು ನನಗೆ ಆಗಲು ಹೆಚ್ಚು ಸಮಯ ಆಗಲಿಲ್ಲ. ಆ ಬಿಟ್ಟಿ ಊಟದವರು ಇತರರ ಸಲುವಾಗಿ ತಮ್ಮ ಸ್ವಂತದ ಜೀವನವನ್ನೇ 'ಬಿಟ್ಟಿರುವುದು' ನನ್ನ ಕಣ್ಣು ತೆರೆಸಿತು. ನಂತರದಲ್ಲಿ ನಾನೂ ಕಟ್ಟರ್ ಸಂಘಿಯಾಗಿ ಬದಲಾದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪುಟ್ಟರಾಜು ಭೂಗತ ಕೆಲಸಗಳನ್ನು ಮಾಡಿದರೆ, ನಾನು ಬಂದಿಯಾಗಿ ಸೆರೆಮನೆಯಲ್ಲಿದ್ದೆ. ಆಗ ಪ್ರಾಂತ ಪ್ರಚಾರಕರಾಗಿದ್ದ ಶ್ರೀ ಹೊ.ವೆ. ಶೇಷಾದ್ರಿಯವರೂ ಸೇರಿದಂತೆ ಹಲವರು ಹಳೇಬೀಡಿನ ಮನೆಗೆ ಬಂದು ಹೋಗಿದ್ದಿದೆ. ಅಲ್ಲಿನ ಸಬ್‌ಇನ್ಸ್‌ಪೆಕ್ಟರರು ಮಫ್ತಿಯಲ್ಲಿ ಒಮ್ಮೆ ಇವನ ಮನೆಗೆ ಬಂದಿದ್ದಾಗ ಇವನು ಮನೆಯಲ್ಲಿರಲಿಲ್ಲ. ನನ್ನ ಅಜ್ಜಿಗೆ ಅವರು ಸಬ್‌ಇನ್ಸ್‌ಪೆಕ್ಟರ್ ಎಂದು ಗೊತ್ತಿಲ್ಲ. ಯಾರೋ ಸಂಘದವರು ಎಂದೇ ತಿಳಿದುಕೊಂಡು ಮನೆಯಲ್ಲಿದ್ದ ಕಡಲೆಕಾಯಿಯನ್ನು ಅವರ ಮುಂದಿನ ಬೆಂಚಿನ ಮೇಲೆ ಸುರಿದು, ಬೆಲ್ಲವನ್ನೂ ಕೊಟ್ಟು ಮಾತನಾಡಿಸತೊಡಗಿದರು. "ನನ್ನ ಮೊಮ್ಮಗ ಜೈಲಿನಲ್ಲಿದ್ದಾನೆ. ಇವನಿಗೂ ಒಂದು ಸ್ವಲ್ಪ ಬುದ್ಧಿ ಹೇಳಿ. ಎಲ್ಲಾ ಸರಿ ಆಗುವವರೆಗೆ ಸುಮ್ಮನಿರಲು ಹೇಳಿ" ಎಂದು ಅವರಿಗೇ ಹೇಳಿದ್ದರು. ಕಡಲೆಕಾಯಿ, ಬೆಲ್ಲ ಕೆಲಸ ಮಾಡಿತ್ತು. ಅವರು, "ಏನು ಮಾಡ್ತಾನಮ್ಮಾ?" ಎಂದು ಕೇಳಿದ್ದರು. ಅಜ್ಜಿ, "ಏನು ಮಾಡ್ತಾನೆ? ಸರ್ಕಾರ ಸರಿಯಿಲ್ಲ. ಜನರಿಗೆ ಬುದ್ಧಿ ಬರೋವರೆಗೂ ಸರಿಯಾಗಲ್ಲ" ಅಂತಿರ್ತಾನೆ. ಇದನ್ನು ಬಿಟ್ಟು ಇನ್ನೇನು ಮಾಡ್ತಾನೆ ಅಂದಿದ್ದರು. ಸಬ್‌ಇನ್ಸ್‌ಪೆಕ್ಟರ್, "ಪರಿಸ್ಥಿತಿ ಸತಿಯಿಲ್ಲ ಕಣಮ್ಮಾ. ನಿಮ್ಮ ಮಗನಿಗೆ ಹುಷಾರಾಗಿರಲು ಹೇಳಿ. ಪೊಲೀಸ್ನೋರು ಅರೆಸ್ಟ್ ಮಾಡಿದರೆ ಕಷ್ಟ" ಎಂದು ಹೇಳಿಹೋಗಿದ್ದರು. ಮುಂದೊಮ್ಮೆ ಜನಾಂದೋಲನದಿಂದಾಗಿ ತುರ್ತುಪರಿಸ್ಥಿತಿ ಕೊನೆಗೊಳ್ಳಲೇಬೇಕಾಗಿ ಬಂದಿತ್ತು. ಎಲ್ಲಾ ಸರಿಹೋಗತೊಡಗಿತ್ತು.
     ದಿನಗಳು ಉರುಳಿದವು. ಒಂದು ಸಲ ಹಳೇಬೀಡಿಗೆ ಹೋಗಿದ್ದಾಗ ಪುಟ್ಟ, "ರಾಜು, ನಾನು ಮದುವೆ ಆಗೋ ಹುಡುಗೀನ ತೋರಿಸ್ತೀನಿ ಬಾ" ಎಂದು ಪೇಟೆ ಬೀದಿಯಲ್ಲಿಯೇ ಇದ್ದ ರತ್ನಮ್ಮನವರ ಮನೆಗೆ ಕರೆದುಕೊಂಡು ಹೋಗಿ ಸತ್ಯವತಿಯನ್ನು ತೋರಿಸಿದ್ದ. ನನ್ನ ಸಂಕೋಚದ ಸ್ವಭಾವದಿಂದಾಗಿ ಸತ್ಯವತಿಯನ್ನು ದಿಟ್ಟಿಸಿ ನೋಡಲಾಗದಿದ್ದರೂ ನೋಡಿದ್ದೆ. ನನಗೆ ಅವರು ಕುಡಿಯಲು ಹಾಲು ಕೊಟ್ಟರು. ನನ್ನ ಪರಿಚಯವನ್ನೂ ಅವರಿಗೆ ಮಾಡಿಕೊಟ್ಟ. ನನಗೆ ಕಕ್ಕಾಬಿಕ್ಕಿಯಾಗಿತ್ತು. ನನಗೆ ಅವರೊಡನೆ ಏನು ಮಾತನಾಡಲಿಕ್ಕಿದೆ? ಏನೋ ತೊದಲಿದ್ದೆ. ಹೊರಗೆ ಬಂದಾಗ ಪುಟ್ಟ ಕೇಳಿದ್ದ, "ಹೇಗಿದ್ದಾಳೆ?" ನಾನು, "ಚೆನ್ನಾಗಿದ್ದಾಳೆ" ಎಂದಿದ್ದೆ. ಮುಂದೊಂದು ದಿನ ಅವರುಗಳ ಸರಳ ವಿವಾಹವಾಯಿತು. 
     ನನ್ನದೂ ಮದುವೆಯಾಯಿತು. ನೌಕರಿಯ ನಿಮಿತ್ತವಾಗಿ ಹಲವಾರು ಊರುಗಳಿಗೆ ವರ್ಗಾವಣೆಯಾಗಿ ಊರೂರು ಸುತ್ತಿದೆ. ಹೀಗಾಗಿ ನಮ್ಮಿಬ್ಬರ ಭೇಟಿ ಅಪರೂಪವಾಗಿತ್ತಾದರೂ, ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿತ್ತು. ಬೇಲೂರಿನಲ್ಲಿ ನೌಕರಿಯ ಸಲುವಾಗಿ ಬಂದಾಗ ಮತ್ತೆ ವಾರಕ್ಕೊಮ್ಮೆಯಾದರೂ ಸಿಗುತ್ತಿದ್ದೆವು. ಇಬ್ಬರ ಬಾಂಧವ್ಯ ಸ್ಥಿರವಾಗಿಯೇ ಮುಂದುವರೆದಿತ್ತು. ನನ್ನ ಎಲ್ಲಾ ಚಟುವಟಿಕೆಗಳನ್ನೂ ಅವನು, ಅವನದನ್ನು ನಾನೂ ಮೆಚ್ಚುತ್ತಿದ್ದೆವು. ಸೇವೆಯಿಂದ ಸ್ವಯಂನಿವೃತ್ತಿ ಹೊಂದಿ ಹಾಸನಕ್ಕೆ ಬಂದಾಗ, ಹಾಸನಕ್ಕೆ ಯಾವುದೇ ಕಾರಣಕ್ಕೆ ಬಂದರೂ ನನ್ನ ಮನೆಗೆ ಅವನು ಬರದೇ ಹೋಗುತ್ತಿರಲಿಲ್ಲ. ನಮ್ಮಿಬ್ಬರಲ್ಲಿ ಫೋನಿನಲ್ಲಾದರೂ ನಿರಂತರವಾಗಿ ಸಂಪರ್ಕ ಇದ್ದೇ ಇತ್ತು. ಎಲ್ಲರೊಡನೆ ಸಹಜವಾಗಿ, ಮುಕ್ತವಾಗಿ, ನಿಸ್ಸಂಕೋಚವಾಗಿ ಮಾತನಾಡುವ ಅವನ ಸ್ವಭಾವ ಯಾರಿಗೆ ತಾನೇ ಮೆಚ್ಚುಗೆಯಾಗದಿರದು? 
     ನಮ್ಮ ಕುಟುಂಬ ಸಮಾವೇಶಗಳಿಗೂ ತಪ್ಪದೆ ಬರುತ್ತಿದ್ದ. ನಮ್ಮ ಪತ್ರಿಕೆ ಕವಿಕಿರಣದ ಒಬ್ಬ ಒಳ್ಳೆಯ ಓದುಗ ಇವನೇ ಆಗಿದ್ದ. ಮೊದಲ ಸಂಚಿಕೆಯನ್ನು ನನ್ನ ತಮ್ಮ ಅನಂತ ಪ್ರಾಯೋಜಿಸಿದ್ದರೆ, ಎರಡನೆಯ ಸಂಚಿಕೆಯನ್ನು ಪ್ರಾಯೋಜಿಸಿದ್ದವನು ಇವನೇ. ಪ್ರತಿ ಸಂಚಿಕೆ ತಲುಪಿದಾಗ, "ಪತ್ರಿಕೆ ತಲುಪಿತು. ತುಂಬಾ ಚೆನ್ನಾಗಿದೆ" ಎನ್ನುತ್ತಾ ಅದರಲ್ಲಿದ್ದ ಲೇಖನಗಳ ಬಗ್ಗೆ ಮಾತನಾಡುತ್ತಿದ್ದ. ಕೊನೆಯ ಸಲ ಅವನು ನನಗೆ ಭೇಟಿಯಾಗಿದ್ದು ಒಂದೂವರೆ ತಿಂಗಳ ಹಿಂದೆ ಅನಸೂಯತ್ತೆಯ ೮೦ನೆಯ ಹುಟ್ಟುಹಬ್ಬ ಮತ್ತು ಮುರಳಿ-ಉಮಾರ ೨೫ನೆಯ ವಿವಾಹ ವಾರ್ಷಿಕೋತ್ಸವದ ಸಮಾರಂಭದಲ್ಲಿ. ಬಹಳ ಹೊತ್ತು ಒಟ್ಟಿಗೇ ಕುಳಿತು ಮಾತನಾಡಿದೆವು, ಒಟ್ಟಿಗೇ ಊಟ ಮಾಡಿದೆವು. ನಮ್ಮ ಕವಿಕಿರಣ ಟ್ರಸ್ಟ್ ಮತ್ತು ಪತ್ರಿಕೆಯ ಹೊಸ ಸ್ವರೂಪದ ಬಗ್ಗೆ ತಿಳಿಸಿದಾಗ ಅವನು, "ನಾನು ಏನು ಮಾಡಬೇಕು, ಹೇಳು, ಮಾಡುತ್ತೇನೆ" ಎಂದಿದ್ದ. ನಂತರ ಅವನನ್ನು ನೋಡಿದ್ದು, ಅವನು ಶಾಂತನಾಗಿ ಚಿರನಿದ್ರೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ! ಅಯ್ಯೋ ವಿಧಿಯೇ!! 
     ಅವನು ಬರೆಯುತ್ತಿರಲಿಲ್ಲವಾದರೂ, ಓದುವ ಹವ್ಯಾಸ ಇತ್ತು. ಮಹರ್ಷಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಓದಿ ಪ್ರಭಾವಿತನಾಗಿದ್ದ. ಗೊಡ್ಡು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಿರಲಿಲ್ಲ. ಹಾಗೆಂದು ಮನೆಯ ಯಾರೊಬ್ಬರ ಭಾವನೆಗಳಿಗೂ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಒಳಗೊಂದು, ಹೊರಗೊಂದು ಎಂಬ ಸ್ವಭಾವ, ನಡವಳಿಕೆಗಳು ಅವನದಾಗಿರಲಿಲ್ಲ. ಮುಚ್ಚುಮರೆ, ಕಪಟತನಗಳಿರಲಿಲ್ಲ. ಪುಟ್ಟರಾಜು ಬರೆಯದಿದ್ದರೂ, ಅವನು ನನ್ನೊಡನೆ ಹಂಚಿಕೊಂಡಿದ್ದ ಒಂದು ವಿಷಯವನ್ನು ಅವನ ಹೆಸರಿನಲ್ಲೇ 'ಮೂಢನಂಬಿಕೆ' ಎಂಬ ಶೀರ್ಷಿಕೆಯಲ್ಲಿ ಲೇಖನವಾಗಿಸಿ ಡಿಸೆಂಬರ್, ೨೦೧೪ರ ಕವಿಕಿರಣದಲ್ಲಿ ಪ್ರಕಟಿಸಿದ್ದೆ. ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತಲೇ ಇವೆ. ಬಡಬಡಿಕೆ ನಿಲ್ಲುವುದೇ ಇಲ್ಲ. ಇದು ನನಗಾಗಿ ನಾನು ಬಡಬಡಿಸಿರುವುದು. ಕ್ಷಮಿಸಿ.
     ವೈಯಕ್ತಿಕವಾಗಿ ಏನೇ ಸಮಸ್ಯೆಗಳು ಬಂದರೂ ಎದೆಗುಂದದೆ, ಅದಕ್ಕಾಗಿ ಯಾರನ್ನೂ ದೂಷಿಸದೆ, ದ್ವೇಷಿಸದೆ ನಿರ್ಲಿಪ್ತನಾಗಿ ಬಂದದ್ದನ್ನು ಬಂದಂತೆ ಸ್ವೀಕರಿಸುವ ಅವನ ನಿರ್ಲಿಪ್ತತೆ ಎಲ್ಲರಿಗೂ ಬರುವುದು ಕಷ್ಟ. ಎಷ್ಟೋ ಸಲ ನೋವು ನುಂಗಿ ನಗುವ ನಂಜುಂಡನಾಗಿ ಅವನು ನನಗೆ ಕಂಡಿದ್ದಾನೆ. ಕರ್ಮಯೋಗಿಯಂತೆ ಬಾಳಿದ್ದಾನೆ. ದಸರಾ ಉತ್ಸವ ನೋಡಲು ಪತ್ನಿ, ಸೊಸೆ ಮತ್ತು ಮೊಮ್ಮಗಳು ಮೈಸೂರಿಗೆ ಹೋಗಿದ್ದಾರೆ. ಅಂದು ಆಯುಧಪೂಜೆ. ಎಂದಿನಂತೆ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಅಡುಗೆ ಮಾಡಿ, ತಾನು ಊಟ ಮಾಡಿ ಮಗನಿಗೂ ಬಡಿಸಿದ್ದಾನೆ. ಸ್ವಲ್ಪ ಸಮಯದ ನಂತರ ಎದೆನೋವು ಕಾಣಿಸಿಕೊಂಡಿದೆ. ಮಗ ತಕ್ಷಣ ವೈದ್ಯರ ಬಳಿ ಕರೆದೊಯ್ದಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲು ಸಿದ್ಧನಾದ ಸಂದರ್ಭದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಎಲ್ಲಾ ಮುಗಿಯಿತು! ಅವನ ಅನಿರೀಕ್ಷಿತ ಅಂತ್ಯದ ಕುರಿತು ಇತರರಿಗಿರಲಿ, ಸ್ವತಃ ಪುಟ್ಟರಾಜುವಿಗೂ ಗೊತ್ತಿತ್ತೋ ಇಲ್ಲವೋ! ಇದರಲ್ಲಿ ನಮಗೆ ಒಂದು ಸಂದೇಶವೂ ಇದೆ, "ಮುಂದೆ ಮಾಡಬೇಕು ಎಂದುಕೊಂಡಿರುವ ಕೆಲಸಗಳನ್ನು ಮುಂದಕ್ಕೆ ಹಾಕದೆ ಇಂದೇ ಮಾಡಿ" ಎಂಬುದೇ ಆ ಸಂದೇಶ, ಆದೇಶ!  
     "ನ ಕಿಲ್ಬಿಷಮತ್ರ ನಾಧಾರೋ ಅಸ್ತಿ, ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಿಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||" - ಆ ಪರಮಾತ್ಮನ ನ್ಯಾಯವಿಧಾನದಲ್ಲಿ ನ್ಯೂನತೆಯೆಂಬುದೇ ಇಲ್ಲ. ಗೂಢವಾಗಿ ಇರಿಸಲ್ಪಟ್ಟ ದೋಷವಿಲ್ಲದ ಪಾತ್ರೆಯಲ್ಲಿ ಬೇಯುತ್ತಿರುವ ಆಹಾರವನ್ನು ಬೇಯಿಸಿದವನೇ ಉಣ್ಣಬೇಕಿದೆ. 'ಮಾಡಿದ್ದುಣ್ಣೋ ಮಹರಾಯ' ಎಂಬುದೇ ಈ ವೇದಮಂತ್ರದ ಅರ್ಥ. 'ಕರ್ಮಕ್ಕೆ ತಕ್ಕ ಫಲವಿದೆ' ಎಂಬುದು ಭಗವದ್ಗೀತೆಯ ಸಾರ. ಪುಟ್ಟರಾಜು, ನೀನೊಬ್ಬ ಕರ್ಮಯೋಗಿ. ಕರ್ಮ ಮಾಡುತ್ತಲೇ ಜೀವನ ಮುಗಿಸಿದೆ. ಒಳ್ಳೆಯ ಕರ್ಮಗಳ ರಾಶಿಯೇ ನಿನ್ನ ಬೆನ್ನಿಗಿದೆ. ಪುಟ್ಟರಾಜುವಾಗಿ ನಿನ್ನ ಕರ್ಮಪಥ ಅಂತ್ಯವಾಗಿದೆ. ಮುಂದೆ ನೀನು 'ದೊಡ್ಡ'ರಾಜುವಾಗಿ ಮತ್ತೊಂದು ರೀತಿಯಲ್ಲಿ ಮುನ್ನಡೆಯುವ ಬಗ್ಗೆ ನಮಗೆ ಅದಮ್ಯ ವಿಶ್ವಾಸವಿದೆ. ಆದರೆ, ದೇವರ ಆಟ ಹೇಗಿದೆಯೆಂದರೆ ಹಿಂದೆ ಹೇಗಿದ್ದೆವು, ಮುಂದೆ ಹೇಗಾಗುತ್ತೇವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ, ಅವನ ಸಂದೇಶ ಮಾತ್ರ ಸ್ಪಷ್ಟ, 'ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತದೆ'. ನಮ್ಮ ಸನಾತನ ಧರ್ಮದ ತಿರುಳೂ ಇದೇ ಆಗಿದೆಯೆಂಬುದು ಆಧ್ಯಾತ್ಮಿಕ ಶ್ರೇಷ್ಠರೆಲ್ಲರ ಮಾತು! ಅದೇನೇ ಇರಲಿ, ಪ್ರೀತಿಯ ಪುಟ್ಟರಾಜು, ನನ್ನ ಪಾಲಿಗೆ, ನಿನ್ನನ್ನು ನಂಬಿರುವವರ, ನಿನ್ನನ್ನು ಪ್ರ್ರೀತಿಸುವವರ, ನಿನ್ನ ಬಂಧುಗಳು, ಸ್ನೇಹಿತರು, ವಿಶ್ವಾಸಿಗಳೆಲ್ಲರ ಪಾಲಿಗೆ ನೀನೊಂದು ದೊಡ್ಡ ಶೂನ್ಯ ನಿರ್ಮಿಸಿ ಹೋಗಿರುವೆ. ಅದನ್ನು ಸಹಿಸುವ ಶಕ್ತಿಯನ್ನು ದೇವರು ಎಲ್ಲರಿಗೂ ಕೊಡಲಿ. ಹೋಗಿ ಬಾ, ಪುಟ್ಟರಾಜು! ನಿನ್ನ ಮುಂದಿನ ಪಯಣ ಸುಖಮಯವಾಗಿರಲಿ, ಆನಂದದಾಯಕವಾಗಿರಲಿ.
-ಕ.ವೆಂ.ನಾಗರಾಜ್.

ಮಂಗಳವಾರ, ಅಕ್ಟೋಬರ್ 2, 2018

ಷಣ್ಮುಖರಾಗೋಣ!


     ನಾವು ಆರು ಜನರು ಕವಿಕಿರಣ ವಿಶ್ವಸ್ತ ಮಂಡಳಿಯ ಸದಸ್ಯರು - ಷಣ್ಮುಖರು! ಆರು ಜನರಿಗೂ ಅವರದೇ ಆದ ಕೆಲಸ ಕಾರ್ಯಗಳು! ಅದು ಅವರವರು ಇಷ್ಟಪಡುವ ಸಾಮಾಜಿಕ ಕಾರ್ಯಗಳಿರಬಹುದು, ಹವ್ಯಾಸಗಳಿರಬಹುದು, ವೃತ್ತಿಯಲ್ಲಿ ವ್ಯಸ್ತರಿರಬಹುದು, ಕೌಟುಂಬಿಕ ಸಮಸ್ಯೆಗಳು, ಜವಾಬ್ದಾರಿಗಳಿರಬಹುದು, ಇನ್ನಿತರ ಒತ್ತಡಗಳಿರಬಹುದು, ಏನೋ ಇರಬಹುದು! ಆದರೂ, ಈ ಕಾರ್ಯ ಮಾಡಲು ಮುಂದೆ ಬಂದಿದ್ದೇವೆ. ಇದಕ್ಕೆ ಸಮಯ ಹೊಂದಾಣಿಕೆ ಹೇಗೆ? ಏನು ಮಾಡಬಹುದು? ಒಂದೆರಡು ಸಣ್ಣ ಟಿಪ್ಸ್, ನಮಗಾಗಿ!!
೧. ಮನಸ್ಸು ಮಾಡೋಣ: 
     ನಮ್ಮ ಮನಸ್ಸು ಒಪ್ಪುವ ಕೆಲಸಕ್ಕೆ ಸಮಯ ಹೊಂದಾಣಿಕೆ ಆಗಿಯೇ ಆಗುತ್ತದೆ. ಮೊದಲು ನಮ್ಮ ಮನಸ್ಸನ್ನು ಅಣಿ ಮಾಡಿಕೊಳ್ಳೋಣ. ಬಲವಂತದಿಂದ ಆಗುವ ಕೆಲಸ ಇದಲ್ಲ. ನಮ್ಮ ಮನಸ್ಸಿಗೇ ಬರಬೇಕು. ಇದಕ್ಕಾಗಿ ಮಾಡುವ ಕೆಲಸದ ವಿವರ ಮತ್ತು ಪರಿಜ್ಞಾನ ಹೊಂದಬೇಕು. ವಿಶ್ವಸ್ತ ಮಂಡಳಿಯ ಕೆಲಸ ಸದಾ ಕಾಲ ಇರುವುದಿಲ್ಲ. ಮತ್ತು ಇದನ್ನು ಪ್ರತಿನಿತ್ಯ ಮಾಡಲೇಬೇಕು ಎಂಬುದೂ ಇಲ್ಲ. ನಮ್ಮ ದಿನನಿತ್ಯದ, ವೃತ್ತಿ, ಹವ್ಯಾಸ, ಕೌಟುಂಬಿಕ, ಸಾಮಾಜಿಕ ವಿಷಯಗಳಿಗೆ ಮತ್ತು ಇಂತಹ ಇನ್ನಿತರ ಸಂಗತಿಗಳಿಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆ ಮಾಡಿ ಉಳಿಯುವ ಸ್ವಲ್ಪ ಸಮಯವನ್ನಾದರೂ ಈ ಕೆಲಸಕ್ಕೆ ನೀಡಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು. ಸಮಯ, ಸಂದರ್ಭ, ಅಗತ್ಯತೆ ಅನುಸರಿಸಿ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಮಯವನ್ನು ವಿಶೇಷವಾಗಿ ಹೊಂದಿಸಿಕೊಳ್ಳಲು ಮನಸ್ಸು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಒಂದು ಪ್ರಧಾನ ಅಂಶವೆಂದರೆ, ಇದು ಆರು ಜನರ ಪೈಕಿ ಯಾರೊಬ್ಬರೂ ಇನ್ನೊಬ್ಬರ ಸಲುವಾಗಿ, ಅವರ ಉಪಕಾರಕ್ಕಾಗಿ ಮಾಡುತ್ತಿರುವ ಕೆಲಸವಾಗಿಲ್ಲ. ಎಲ್ಲರೂ ಮಾಡುತ್ತಿರುವುದು ಒಂದು ಯಜ್ಞವೆಂಬ ಭಾವನೆಯಿಂದ! ಹೇಳುವ ಮಂತ್ರ - ಇದಂ ನಮಮ - ಇದು ನಮಗಾಗಿ ಅಲ್ಲ! ಎಲ್ಲರಿಗಾಗಿ!! ಆತ್ಮ ಸಂತೋಷದ ಸಲುವಾಗಿ!! ಪರಮಾತ್ಮನ ಪ್ರೀತ್ಯರ್ಥದ ಸಲುವಾಗಿ!!
೨. ವಿಶ್ವಸ್ತ ಮಂಡಳಿಯ ವಿಶ್ವಸನಾ ಪತ್ರ (ಟ್ರಸ್ಟ್ ಡೀಡ್) ಓದೋಣ!
     ನಾವು ಮಾಡುವ ಕೆಲಸದ ಅರಿವು ನಮಗಿರಬೇಕು; ಅದಕ್ಕಾಗಿ ಟ್ರಸ್ಟ್ ಡೀಡ್ ಅನ್ನು ಸಮಯ ಮಾಡಿಕೊಂಡು ಓದೋಣ, ಮನನ ಮಾಡಿಕೊಳ್ಳೋಣ! ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಓದುತ್ತಾ ಹೋದಂತೆ ನಮಗೆ ವಿವಿಧ ಭಾವಗಳು ಮೂಡಬಹುದು: ಇದೆಂತಹ ಹುಚ್ಚು ಕಲ್ಪನೆ, ಇದು ನಮ್ಮಂತಹವರಿಂದ ಸಾಧ್ಯವೇ? ಮಾಡಲು ಕೆಲಸವಿಲ್ಲ, ನಮಗೆ ಈಗಿರುವ ಕೆಲಸಕಾರ್ಯಗಳೇ ಹಾಸಿ ಹೊದೆಯುವಷ್ಟಿರುವಾಗ ಇದಕ್ಕೆಲ್ಲಾ ಎಲ್ಲಿ ಸಮಯ ಕೊಡುವುದು? ಹೀಗೆ ಸಮ್ಮಿಶ್ರ ವಿಚಾರಗಳು ಮನಸ್ಸಿನಲ್ಲಿ ಮೂಡಬಹುದು. ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ಈ ಉದ್ದೇಶ ಸರ್ವ ಸಾಮಾನ್ಯನ ಹಿತದ ಸಲುವಾಗಿ ಇದೆಯೇ, ಇಲ್ಲವೇ? ಬರುವ ಉತ್ತರ ಇದೆಯೆಂದೇ ಆಗಿರುತ್ತದೆ. ಎರಡನೆಯ ಪ್ರಶ್ನೆ: ನಮ್ಮಿಂದ ಈ ಕೆಲಸ ಸಾಧ್ಯವೇ? ಉತ್ತರ: ಖಂಡಿತಾ ಸಾಧ್ಯ! ಇಂತಹ ಕೆಲಸಗಳನ್ನು ಹಿಂದೆ ಮಾಡಿದ್ದವರು, ಈಗ ಮಾಡುತ್ತಿರುವವರು ಮತ್ತು ಮುಂದೆ ಮಾಡುವವರೂ ನಮ್ಮ ನಿಮ್ಮಂತಹ ಸಾಮಾನ್ಯರೇ. ಬೇಕಾಗಿರುವುದು ಮಾನಸಿಕ ಬಲ ಮತ್ತು ಮಾಡಬೇಕೆಂಬ ಮನಸ್ಸು, ಅಷ್ಟೇ! ಇರುವ ಆರು ಜನರೂ ಸಂಘ ಪರಿವಾರದ ಮೂಲದವರು, ಅವರ ವಿಚಾರಗಳಿಂದ ಪ್ರೇರಿತರಾದವರು ಮತ್ತು ಇದೇ ಉದ್ದೇಶದ ಚಟುವಟಿಕೆಗಳಲ್ಲಿ ಒಂದಲ್ಲಾ, ಒಂದು ರೀತಿಯಲ್ಲಿ ತೊಡಗಿಸಿಕೊಂಡವರೇ! ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ರೂಪದಲ್ಲಿ ಮಾಡುತ್ತಿದ್ದೇವೆ ಅಷ್ಟೇ! ಮನಸ್ಸು ಮಾಡಿದರೆ ನಮ್ಮ ಕಣ್ಣ ಮುಂದೆಯೇ ಉದ್ದೇಶ ಈಡೇರುವುದನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ, ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯಂತೂ ಖಂಡಿತಾ ಕಾಣುತ್ತದೆ. ನಮ್ಮ ತೊಡಗುವಿಕೆಯ ರೀತಿ ಇದನ್ನು ಅವಲಂಬಿಸಿದೆ. 
೩. ಕವಿಕಿರಣ ಪತ್ರಿಕೆಯ ಪ್ರಭೆ ಬೆಳಗಿಸುವುದು:
     ಟ್ರಸ್ಟಿನ ಮೊದಲ ಹೆಜ್ಜೆಯಾಗಿ ಕವಿಕಿರಣ ಪತ್ರಿಕೆಯನ್ನು ಬೆಳೆಸುವತ್ತ ಗಮನ ನೀಡಿದರೆ ಜೊತೆ ಜೊತೆಗೆ ಟ್ರಸ್ಟಿನ ಇತರ ಉದ್ದೇಶಗಳೂ ಈಡೇರುವುದನ್ನು ಕಾಣಲು ಸಾಧ್ಯವಿದೆ. ಇರುವ ಆರು ಜನರೂ ಸಂಪನ್ಮೂಲ ವ್ಯಕ್ತಿಗಳೇ, ಶಕ್ತಿಯುಳ್ಳವರೇ ಆಗಿದ್ದಾರೆ. ಆದರೆ ಅವರ ಶಕ್ತಿ ಪ್ರತ್ಯೇಕವಾಗಿ ಹರಿದು ಹಂಚದಿರುವಂತೆ, ಸಂಘಟಿತವಾಗಿ ಪ್ರವಹಿಸಿದರೆ ಅನಿರೀಕ್ಷಿತ ಫಲ ಸಿಗುತ್ತದೆಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸವನ್ನು ಸಣ್ಣದು ಎಂಬ ದೃಷ್ಟಿಯಿಂದ ನೋಡದೆ ಮಾಡಲು ಗಮನ ಕೊಡೋಣ. ಸಣ್ಣ ಸಣ್ಣ ಕೆಲಸಗಳು ಅಡೆತಡೆಯಿಲ್ಲದೆ ಚೆನ್ನಾಗಿ ಆದರೆ, ದೊಡ್ಡ ದೊಡ್ಡ ಕೆಲಸಗಳು ಮತ್ತಷ್ಟು ಚೆನ್ನಾಗಿ ಮತ್ತು ಸುಲಭವಾಗಿ ಆಗುತ್ತವೆ. ದೊಡ್ಡ ಕೆಲಸಗಳಿಗೆ ಸಣ್ಣ ಕೆಲಸಗಳೇ ತಳಪಾಯ. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ ಎಂಬ ಭಾವನೆಯಿಂದ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿರಿಸಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಬರಬೇಕು. ಇನ್ನು ಎರಡು, ಎರಡೂವರೆ ತಿಂಗಳಲ್ಲಿ ತ್ರೈಮಾಸಿಕ ಕವಿಕಿರಣದ ಹೊಸ ರೂಪ ಅವತರಿಸಬೇಕು. ಅದಕ್ಕಾಗಿ ನಾವು ಸಹಕರಿಸಬೇಕು. ಕವಿಮನೆತನದವರು ಮತ್ತು ಬಂಧುಗಳನ್ನು ಚಂದಾದಾರರು, ಪೋಷಕರುಗಳನ್ನಾಗಿಸಲು ಮೊದಲ ಹಂತದಲ್ಲಿ ಕೆಲಸ ಪ್ರಾರಂಭವಾಗಬೇಕು. ಪರಿಚಯವಿರುವ ಸ್ನೇಹಿತರು, ಹಿತೈಷಿಗಳನ್ನೂ ಮಾತನಾಡಿಸಬೇಕು. ಇನ್ನೊಬ್ಬರನ್ನು ಈ ಬಗ್ಗೆ ಪ್ರೇರಿಸುವ ಮೊದಲು ನಾವು ಆ ಕೆಲಸ ಮಾಡಿರಬೇಕು, ನಮ್ಮ ದೇಣಿಗೆಯನ್ನು ನಾವು ಮೊದಲು ಸಕಾಲದಲ್ಲಿ ನೀಡೋಣ ಮತ್ತು ಆಗ ನಮಗೆ ನೈತಿಕ ಬಲ ಸಹಜವಾಗಿ ಇರುತ್ತದೆ. ಕೆಲಸ ವೇಗವಾಗಿ ಆಗುತ್ತದೆ. ಟ್ರಸ್ಟಿನ ಒಂದು ಔಪಚಾರಿಕ ಉದ್ಘಾಟನೆ ಮತ್ತು ಕವಿಕಿರಣ ಪರಿಚಯಿಸುವ ಸಮಾರಂಭವನ್ನು ನವೆಂಬರ್ ತಿಂಗಳಿನಲ್ಲಿ ಅಥವ ಡಿಸೆಂಬರ್ ಮೊದಲ ವಾರದ ಒಳಗೆ ಮಾಡಿದರೆ ಕಾರ್ಯಕ್ಕೆ ಅನುಕೂಲವಾಗಬಹುದು. ಇದಕ್ಕೆಲ್ಲಾ ಬೇಕಾಗುವ ಸಮಯವನ್ನು, ಮೊದಲೇ ಹೇಳಿದಂತೆ ನಮ್ಮ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡ ನಂತರ ಉಳಿಯುವ ಸಮಯದಲ್ಲಿ ಕೊಡಲು ಸಾಧ್ಯವಿದೆ. 
     ಷಣ್ಮುಖರಾಗೋಣ! ಭಿನ್ನ ವಿಚಾರಗಳು, ಭಿನ್ನ ಕೆಲಸ ಕಾರ್ಯಗಳಿದ್ದರೂ ಒಂದು ಸಮಾನ ಭಾವದ, ಸರ್ವಹಿತದ ಕೆಲಸಕ್ಕಾಗಿ, ಆರು ತಲೆಗಳಿದ್ದರೂ, ಒಂದೇ ದೇಹದೊಂದಿಗೆ ಚಲಿಸುವ ಷಣ್ಮುಖನಂತೆ ಮುಂದೆ ಸಾಗೋಣ!
-ಕ.ವೆಂ. ನಾಗರಾಜ್.

ಭಾನುವಾರ, ಸೆಪ್ಟೆಂಬರ್ 30, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೨


ಆರ್ಥಿಕ ಸಂಪನ್ಮೂಲ ಕ್ರೋಢೀಕರಣ
     ಕವಿಕಿರಣ ಪತ್ರಿಕೆಗೆ ಭಾರತದ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇಂದ ಶೀರ್ಷಿಕೆಗೆ ಒಪ್ಪಿಗೆ ಪಡೆದ ನಂತರದಲ್ಲಿ ಸೋದರ ಸುರೇಶನನ್ನು ಮುದ್ರಕ ಮತ್ತು ಪ್ರಕಾಶಕ ಎಂದು ಅಧಿಕೃತಗೊಳಿಸಿ ಆವನಿಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ಅಗತ್ಯದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಧಿಕಾರ ಪತ್ರ ನೀಡಿದೆ. ಪ್ರಮಾಣ ಪತ್ರ ಸಲ್ಲಿಸಿದ ನಂತರ ಪತ್ರಿಕೆಯ ನೋಂದಣಿ ಪತ್ರ ಬಂದಿತು. ಪತ್ರಿಕೆ ಅಧಿಕೃತವಾಗಿ ಬೆಂಗಳೂರಿನಲ್ಲಿ ನಡೆದ ಕವಿಮನೆತನದವರ ಮೂರನೆಯ ಕುಟುಂಬ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆಯೂ ಆಯಿತು. ಪ್ರಾರಂಭದ ಸಂಚಿಕೆಗೆ ಅಮೆರಿಕಾದಲ್ಲಿರುವ ನನ್ನ ಕಿರಿಯ ಸಹೋದರ ಅನಂತ ಪ್ರಾಯೋಜಕನಾಗಿ ಮುಂದೆ ಬಂದಿದ್ದ. ಬೆಂಗಳೂರಿನ ಸಮಾವೇಶದಲ್ಲಿಯೇ ಜಾವಗಲ್ಲಿನಲ್ಲಿದ್ದ ನನ್ನ ತಾಯಿಯ ತಮ್ಮ ಪುಟ್ಟರಾಜುವನ್ನು ಮುಂದಿನ ಸಂಚಿಕೆಗೆ ಪ್ರಾಯೋಜಕನಾಗಲು ಒಪ್ಪಿಸಿದ್ದೆ. ಹೀಗೆ ಅಡಿಗಳನ್ನಿಟ್ಟು ಕವಿಕಿರಣ ಮುನ್ನಡೆಯಲಾರಂಭಿಸಿತು. ಮೊದಲ ಎರಡು ಸಂಚಿಕೆಗಳನ್ನು ಶಿವಮೊಗ್ಗದ ರಾಯಲ್ ಪ್ರಿಂಟರ್ಸಿನಲ್ಲಿ ಮುದ್ರಿಸಿ ಪಡೆಯಲಾಗಿತ್ತು. ಆ ವೇಳಗೆ ೧೪-೦೭-೨೦೦೯ರಲ್ಲಿ ನನ್ನ ತಂದೆ ಕವಿ ವೆಂಕಟಸುಬ್ಬರಾಯರು ಕೀರ್ತಿಶೇಷರಾದರು. ನಾನೂ ಸ್ವ ಇಚ್ಛಾ ನಿವೃತ್ತಿ ಪಡೆದು ಹಾಸನಕ್ಕೆ ಬಂದೆ. ನಂತರದ ಕವಿಕಿರಣ ಪತ್ರಿಕೆಗಳ ಮುದ್ರಣ ಮಿತ್ರ ಪಾಂಡುರಂಗರವರ (ಈಗ ಅವರು ಕವಿಕಿರಣ ಚಾರಿಟಬಲ್ ಟ್ರಸ್ಟಿನ ಸದಸ್ಯರುಗಳ ಪೈಕಿ ಒಬ್ಬರು) ಬಾಲಾಜಿ ಪ್ರಿಂಟರ್ಸಿನಲ್ಲಿ ಮುದ್ರಣ ಮಾಡಿಸಲು ಪ್ರಾರಂಭವಾಗಿದ್ದು, ಅದು ಅವಿರತವಾಗಿ ಮುಂದುವರೆದುಕೊಂಡು ಬಂದಿದೆ. ಪಾಂಡುರಂಗರವರ ಸಹಕಾರದ ಬಗ್ಗೆ ತಿಳಿಸಲೇಬೇಕು. ಅವರು ಮುದ್ರಣಕ್ಕೆ ಸಂಬಂಧಿಸಿದ ಕಾಗದ ಮತ್ತು ಇತರ ಕನಿಷ್ಠ ವೆಚ್ಚವನ್ನು ಮಾತ್ರ ಪಡೆಯುತ್ತಿದ್ದು, ಅವರ ಲಾಭಾಂಶವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ನನ್ನದೂ ಒಂದು ಸಣ್ಣ ಪಾಲಿರಲಿ ಎಂದು ಅವರು ಹೇಳುತ್ತಿದ್ದರು. ಅವರೇ ಒಂದೆರಡು ಸಲ ತಮ್ಮ ಪಾಲಿನ ದೇಣಿಗೆ ಎಂದು ಹಣ ನೀಡಿದ್ದೂ ಇದೆ. 

     ಮೂಲ ವಿಷಯಕ್ಕೆ ಬರುತ್ತೇನೆ. ಕವಿಕಿರಣ ಪತ್ರಿಕೆಗೆ ಒಬ್ಬೊಬ್ಬ ಕವಿ ಕುಟುಂಬಗಳವರು ವಾರ್ಷಿಕವಾಗಿ ರೂ. ೫೦೦/- ಕೊಡಬೇಕೆಂಬುದು ಸಮಾವೇಶದ ಸಂದರ್ಭದಲ್ಲಿ ಮಾತಾಗಿತ್ತು. ಪ್ರಾರಂಭದ ಒಂದೆರಡು ವರ್ಷ ಹಲವರು ನೀಡಿದರು. ನಂತರ ಅವರ ಸಂಖ್ಯೆ ಕ್ಷೀಣಿಸಿತು. ಆದರೂ ಪತ್ರಿಕೆಗೆ ಯಾವುದೇ ಚಂದಾದರ ನಿಗದಿಸದೆ ಉಚಿತವಾಗಿ ಎಲ್ಲಾ ಕವಿ ಕುಟುಂಬಗಳವರಿಗೂ, ಬಂದುಗಳಿಗೂ ಮತ್ತು ಮಿತ್ರರಿಗೂ ಅಂಚೆಯ ಮೂಲಕ ಮತ್ತು ಖುದ್ದಾಗಿ ವಿತರಣೆ ಆಗುತ್ತಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ನಿರೀಕ್ಷೆ ಇದ್ದುದರಿಂದ ಪ್ರತಿ ಸಂಚಿಕೆಗೂ ಒಬ್ಬರನ್ನು ಪ್ರಾಯೋಜಕರಾಗುವಂತೆ ಪ್ರೇರಿಸಿ ಸಂಚಿಕೆ ಮುನ್ನಡೆಸಿಕೊಂಡು ಬರಲಾಯಿತು. ಪ್ರಾಯೋಜಕರಾಗಲು ಒಪ್ಪಿ ನಂತರ ಹಿಂದೆ ಸರಿದಿದ್ದ ಇಬ್ಬರು ಮಹನೀಯರೂ ಇದ್ದರು. ಪ್ರಾಯೋಜಕರಾಗಿ ಮುಂದೆ ಬಂದು ಸಹಕರಿಸಿದ್ದ ಮಹನೀಯರುಗಳಿವರು:
೧. ಶ್ರೀ ಕ.ವೆಂ. ಅನಂತ, ಕಾಲೇಜ್‌ವಿಲೆ, ಪಿಎ,  ಯು.ಎಸ್.ಎ. (ಎರಡು ಸಂಚಿಕೆಗಳು)
೨. ಶ್ರೀ ಹೆಚ್,ಎಸ್. ಪುಟ್ಟರಾಜು, ಜಾವಗಲ್, ಅರಸಿಕೆರೆ ತಾ.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು (ಇವರು ಹೆಸರು ಪ್ರಕಟಿಸಲು ಇಚ್ಛಿಸಿರಲಿಲ್ಲ)
೪. ಶ್ರೀ ಬಿ.ವಿ. ಹರ್ಷ, ಬೆಂಗಳೂರು. (ಈಗ ಲಂಡನ್)
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು.(ವಿಶೇಷ ಪೂರಕ ಸಂಚಿಕೆ-೧)
೬. ಶ್ರೀ ಎನ್. ಶ್ರೀನಿವಾಸ, ಬೆಂಗಳೂರು.
೭. ಶ್ರೀ ಹೆಚ್..ಕೆ.  ಸತ್ಯನಾರಾಯಣ, ಶಿಕಾರಿಪುರ.
೮. ಶ್ರೀ ಬಿ.ಎಲ್. ಸತೀಶಕುಮಾರ್, ಬೆಂಗಳೂರು..
೯. ಶ್ರೀ ಎಮ್.ಎಸ್. ನಾಗೇಂದ್ರ, ಬೆಂಗಳೂರು..
೧೦. ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು..
೧೧. ಶ್ರೀ ವಿನಯ್ ನಾಗರಾಜ್, ಬೆಂಗಳೂರು..
೧೨. ಶ್ರೀ ಕ.ವೆಂ.ನಾಗರಾಜ್, ಹಾಸನ.
೧೩. ಕೆಳದಿ ಜೋಯಿಸ್ ಮನೆತನದವರು
೧೪. ದಿ. ಶ್ರೀ ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು..
೧೫. ದಿ. ಶ್ರೀಮತಿ ರತ್ನಮ್ಮ ಬ.ನ.ಸುಂದರರಾವ್ ಕುಟುಂಬವರ್ಗ, ಬೆಂಗಳೂರು.
೧೬. ಶ್ರೀ ಹೆಚ್.ಎಸ್.ರಾಮಸ್ವಾಮಿ, ಹಾಸನ, ಶ್ರೀಮತಿಯರಾದ ಸೀತಮ್ಮ ವೆಂಕಟಸುಬ್ಬರಾವ್, 
   ಸಾವಿತ್ರಮ್ಮಸತ್ಯನಾರಾಯಣ, ಬೆಂಗಳೂರು.
೧೭. ಶ್ರೀ ಎಸ್.ಕೆ. ಪ್ರಕಾಶ್, ಶ್ರೀ ಎಸ್.ಕೆ. ಗೋಪಿನಾಥ್, ಬೆಂಗಳೂರು. (ವಿಶೇಷ  ಪೂರಕ ಸಂಚಿಕೆ-೨)
೧೮. ಶ್ರೀಮತಿ ಬಿಂದುರಾಘವೇಂದ್ರ, ಬೆಂಗಳೂರು.
೧೯. ಶ್ರೀ ಕವಿ ವೆಂ. ಸುರೇಶ್, ಶಿವಮೊಗ್ಗ.
೨೧. ಡಾ|| ಕೆ. ಕೃಷ್ಣಜೋಯಿಸ್, ಶ್ರೀ ಹೆಚ್.ಎಸ್.ಜಯಶಂಕರ, ಶ್ರೀಮತಿ ಹೆಚ್.ಎಸ್. ಸಾವಿತ್ರಮ್ಮ,  
    ಬೆಂಗಳೂರು.

     ವಿಶೇಷವೆಂದರೆ ವಾರ್ಷಿಕ ಚಂದಾ ಹಣವನ್ನು ನೀಡಲು ಯಾವುದೇ ಕುಟುಂಬಗಳನ್ನವರನ್ನಾಗಲೀ, ಬಂಧುಗಳನ್ನಾಗಲೀ ಒತ್ತಾಯಿಸಲೇ ಇಲ್ಲ. ಸಂಗ್ರಹಕ್ಕಾಗಿ ಯಾರನ್ನೂ ನಿಯೋಜಿಸಲಿಲ್ಲ. ಸ್ವಪ್ರೇರಣೆಯಿಂದ ನೀಡಲಿ ಎಂಬುದು ಅಪೇಕ್ಷೆಯಾಗಿತ್ತು. ಅದಕ್ಕೆ ಸ್ಪಂದಿಸಿದ್ದವರು ಕೆಲವರು ಮಾತ್ರ. ಅಂತಹ ಸತತ ಪ್ರೋತ್ಸಾಹಕರನ್ನು ನೆನೆಯಲೇಬೇಕು. ಹೆಸರಿಸಬೇಕೆಂದರೆ:
ಶ್ರೀ/ಶ್ರೀಮತಿಯರಾದ:
೧. ದಿ. ಕವಿ ವೆಂಕಟಸುಬ್ಬರಾಯರು, ಶಿವಮೊಗ್ಗ
೨. ದಿ. ಸಾ.ಕ. ಕೃಷ್ಣಮೂರ್ತಿಯವರು, ಬೆಂಗಳೂರು
೩. ಕ.ವೆಂ. ನಾಗರಾಜ್, ಹಾಸನ,
೪. ಕವಿ ವೆಂ. ಸುರೇಶ್, ಶಿವಮೊಗ್ಗ,
೫. ಡಾ. ಕೆಳದಿ ಗುಂಡಾಜೋಯಿಸ್, ಕೆಳದಿ,
೬. ಸಾ.ಕ. ರಾಮರಾವ್, ಬೆಂಗಳೂರು,
೭. ಸೀತಮ್ಮ ವೆಂಕಟಸುಬ್ಬರಾವ್, ಬೆಂಗಳೂರು,
೮. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು, 
೯. ಡಾ. ಕೆಳದಿ ಕೃಷ್ಣಜೋಯಿಸ್, ಬೆಂಗಳೂರು,

     ಮೇಲೆ ಹೆಸರಿಸಿದವರಲ್ಲದೆ, ಭೇಟಿಯಾದ ಸಂದರ್ಭಗಳಲ್ಲಿ ಆಗಾಗ್ಗೆ ವಂತಿಕೆ ನೀಡುವವರೂ ಇದ್ದರು. ಎಲ್ಲರೂ ಅಭಿನಂದನಾರ್ಹರು. ಮಿತ್ರರ ಪೈಕಿ ಕವಿಕಿರಣದ ಕಾರ್ಯ ಮೆಚ್ಚಿ ಕೇಳದಿದ್ದರೂ ಸ್ವ ಇಚ್ಛೆಯಿಂದ ಆಗಾಗ್ಗೆ ಹಣ ನೀಡುತ್ತಿದ್ದ ಶ್ರೀಯುತ ರಮೇಶ ಕಾಮತ್, ಗುರುಪ್ರಸಾದ ಕಾಮತ್, ಸುಮಂಗಲಿ ಸಿಲ್ಕ್ಸ್‌ನ ಗೋಪಾಲಕೃಷ್ಣ ಮೊದಲಾದವರೂ ಅಭಿನಂದನೆಗೆ ಪಾತ್ರರು. ಇಷ್ಟೆಲ್ಲದರ ನಡುವೆ, ಚಂದಾ ಇಲ್ಲದೆ, ಸಂಗ್ರಹಕ್ಕೆ ತೊಡಗದೆ, ಜಾಹಿರಾತು ಇಲ್ಲದೆ ೧೧ ವರ್ಷಗಳ ನಂತರದಲ್ಲಿಯೂ, ಪತ್ರಿಕೆಯ ನಿಧಿಯಾಗಿ ರೂ. ೬೪೧೦೮/- ಶಿಲ್ಕು ಉಳಿದಿದೆ. ಜಮಾ-ಖರ್ಚುಗಳ ಪ್ರತಿ ಪೈಸೆಗೂ ಲೆಕ್ಕ ಇಟ್ಟಿದೆ. ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಲೂ ಇತ್ತು. ಈ ಹಣ ಈಗ ಕವಿಕಿರಣ ಚಾರಿಟಬಲ್ ಟ್ರಸ್ಟಿನ ಪ್ರಾರಂಭಿಕ ನಿಧಿಯಾಗಲಿದೆ. ಎಲ್ಲಾ ವಿಶ್ವಸ್ತರುಗಳೂ ತಮ್ಮ ದೇಣಿಗೆಯಾಗಿ ತಲಾ ರೂ. ೧೫೦೦೦/- ನೀಡಲಿದ್ದಾರೆ. ಸತ್ಕಾರ್ಯಕ್ಕೆ ನಾಂದಿಯಾಗಲಿದೆ. ಸಜ್ಜನ ಬಂದುಗಳೂ ತಮ್ಮ ಸಹಾಯ ಹಸ್ತ ಚಾಚಲು ಅವಕಾಶವಿದೆ. 
-ಕ.ವೆಂ.ನಾಗರಾಜ್. 

ಶುಕ್ರವಾರ, ಸೆಪ್ಟೆಂಬರ್ 28, 2018

ಕವಿಕಿರಣ - ೧೧ ವರ್ಷಗಳ ಪಯಣ - ಭಾಗ: ೧


     ಕವಿಕಿರಣ ಪತ್ರಿಕೆ ಸಾರ್ಥಕ ೧೧ ವರ್ಷಗಳನ್ನು ಪೂರ್ಣಗೊಳಿಸಿ, ಹೊಸ ರೀತಿಯಲ್ಲಿ ೧೨ನೆಯ ವರ್ಷಕ್ಕೆ ಕಾಲಿಡಲು ಸಿದ್ಧವಾಗಿದೆ. ೧೧ ವರ್ಷಗಳಲ್ಲಿ ನಾನು ಬರೆದ ಸಂಪಾದಕೀಯದ ವಿಷಯಗಳು ಸುಮಧುರ ಬಾಂಧವ್ಯ, ಉತ್ತಮ ವ್ಯಕ್ತಿತ್ವದ ಆಶಯ, ಸಜ್ಜನ ಶಕ್ತಿಯ ಉದ್ದೀಪನೆಗೆ ಸಂಬಂಧಿಸಿದವೇ ಆಗಿದ್ದವು. ಸಂಪಾದಕೀಯದ ವಿಷಯಗಳ ಸಂಕ್ಷಿಪ್ತ ವಿವರಣೆ ಕೊಡುವ ಪ್ರಯತ್ನ ಇದು:
ಡಿಸೆಂಬರ್, ೨೦೦೮: ಕವಿಕಿರಣದ ಆಶಯ
ಜೂನ್, ೨೦೦೯: ಉತ್ತಮ ಬಾಂಧವ್ಯದೆಡೆಗೆ
ಡಿಸೆಂಬರ್, ೨೦೦೯: ಕಹಿ ನೆನಪುಗಳನ್ನು ಮರೆತು ಕ್ಷಮಿಸಿ ಚೆನ್ನಾಗಿರಬೇಕು.
ಜೂನ್, ೨೦೧೦: ಕವಿಮನೆತನದ ಕಳೆದುಹೋದ ಕೊಂಡಿಗಳನ್ನು ಸೇರಿಸುವ ಪ್ರಯತ್ನ ಆಗಲಿ.
ಜೂನ್, ೨೦೧೦: ದಿ. ಕವಿ ವೆಂಕಟಸುಬ್ಬರಾಯರ ನೆನಪಿನಲ್ಲಿ. (ವಿಶೇಷ ಸಂಚಿಕೆ)
ಡಿಸೆಂಬರ್, ೨೦೧೦: ನಾವೆಷ್ಟು ಒಳ್ಳೆಯವರು? ಒಳಗಿನ ಕಶ್ಮಲಗಳ ನಿವಾರಣೆಯ ಅಗತ್ಯ.
ಜೂನ್, ೨೦೧೧: ಸಂಪ್ರದಾಯಗಳು ಸಂಕೋಲೆಗಳಾಗಬಾರದು.
ಡಿಸೆಂಬರ್, ೨೦೧೧: ಸಹವಾಸ ದೋಷ ಕಾರಣ ಅಲ್ಲ; ನಮ್ಮ ತಪ್ಪುಗಳಿಗೆ ನಾವೇ ಕಾರಣ.
ಜೂನ್, ೨೦೧೨: ಎಂದೆಂದೂ ಇರುವ ಪರಮಾತ್ಮ ಹೊಸದಾಗಿ ಅವತರಿಸುವುದಿಲ್ಲ. ಅವನು ನಮ್ಮೊಳಗೂ ಇದ್ದಾನೆ. ಜಾಗೃತರಾಗೋಣ. ಸಜ್ಜನ ಶಕ್ತಿಗೆ ಬಲ ತುಂಬೋಣ.
ಡಿಸೆಂಬರ್, ೨೦೧೨: ನಾವು ಬದಲಾದರೆ ಜಗತ್ತು ಬದಲಾಗುತ್ತದೆ.
ಜೂನ್, ೨೦೧೩: ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು.
ಡಿಸೆಂಬರ್, ೨೦೧೩: ಜಾತಿ ಪದ್ಧತಿ ಒಳ್ಳೆಯದಲ್ಲ. ಯಾರೂ ಮೇಲಲ್ಲ, ಯಾರೂ ಕೀಳಲ್ಲ.
ಜೂನ್, ೨೦೧೪: ಸಾಧಕನ ರೀತಿ, ಸಾಧನೆಯ ಹಾದಿ.
ಡಿಸೆಂಬರ್, ೨೦೧೪: ಆಹಾರದ ಪೋಲು ಸಮಾಜಕ್ಕೆ ಬಗೆಯುವ ದ್ರೋಹ.
ಜೂನ್, ೨೦೧೫: ದುರ್ವಿಚಾರಗಳು ದೂರವಾಗಲಿ.
ಡಿಸೆಂಬರ್, ೨೦೧೫: ನಮ್ಮ ಹಣೆಯ ಬರಹಕ್ಕೆ ನಾವೇ ಹೊಣೆ. ಅದನ್ನು ದೇವರೂ ಬದಲಾಯಿಸಲಾರ. ಬದಲಾಯಿಸುವ ಶಕ್ತಿ ಇದ್ದರೆ ಅದು ನಮಗೇ!
ಜೂನ್, ೨೦೧೬: ಕವಿಕಿರಣ ಪತ್ರಿಕೆ ನಡೆದು ಬಂದ ಹಾದಿಯ ಅವಲೋಕನ.
ಜೂನ್, ೨೦೧೬: ದಿ. ಸಾ. ಕ. ಕೃಷ್ಣಮೂರ್ತಿಯವರ ನೆನಪಿನಲ್ಲಿ (ವಿಶೇಷ ಸಂಚಿಕೆ).
ಡಿಸೆಂಬರ್, ೨೦೧೭: ಋಣಾತ್ಮಕ ಮನೋಭಾವ ತ್ಯಜಿಸೋಣ; ಭರವಸೆಯಿರಲಿ.
ಜೂನ್, ೨೦೧೮: ಇಂದೇನೋ, ಮುಂದೇನೋ ಎಂಬ ಅನಿಶ್ಚಿತ ಸ್ಥಿತಿಯಲ್ಲಿರುವ ಮನುಷ್ಯ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಸಮಚಿತ್ತ ಮನೋಭಾವ ಬೆಳೆಸಿಕೊಳ್ಳಬೇಕು. ಇರುವ ಅಲ್ಪ ಕಾಲದಲ್ಲಿ ಸಮಾಜೋಪಯೋಗಿಯಾಗಿ ಬಾಳಬೇಕು.
-ಕ.ವೆಂ.ನಾಗರಾಜ್.