ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜುಲೈ 31, 2017

ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ

   

     ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. (ಭಾರತದಲ್ಲೂ ಗಾಂಧೀಜಿ ಮತ್ತು ಅವರ ಕಾಂಗ್ರೆಸ್ ಸಂಗಡಿಗರ ಹೊರತಾಗಿ ಉಳಿದವರ ತ್ಯಾಗ, ಬಲಿದಾನಗಳನ್ನು ಗೌಣವಾಗಿಸಿ ಬಿಂಬಿಸಲಾಗುತ್ತಿದೆ. ಸುಭಾಷ ಚಂದ್ರ ಬೋಸರ ಕುರಿತ ಎಷ್ಟೋ ಸತ್ಯಗಳು ಇನ್ನೂ ಕತ್ತಲ ಗರ್ಭದಲ್ಲೇ ಅಡಗಿರುವುದು ಒಂದು ಸಣ್ಣ ಉದಾಹರಣೆಯಷ್ಟೆ.) ಭಗತ್ ಸಿಂಗ್ ಮತ್ತು ಅವನ ಸಂಗಡಿಗರ ವಿರುದ್ಧ ವಿಚಾರಣೆ ನಡೆಯುವಾಗ ಅವರ ಪರವಾಗಿ ಧ್ವನಿ ಎತ್ತಲು ಗಾಂಧೀಜಿಯವರ ಮೇಲೆ ಜನರ ಒತ್ತಡ ಹೆಚ್ಚಿದ್ದರೂ ಗಾಂಧೀಜಿ ಒಪ್ಪಿರಲಿಲ್ಲ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ, ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಈಗ ಅಲ್ಲಿರುವ ಹಿಂದೂಗಳು ಶೇ.2ಕ್ಕಿಂತಲೂ ಕಡಿಮೆಯಿದ್ದು, ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧrfm ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ.
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮವನ್ನು ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ! ಅವನು ಎಂತಹ ವ್ಯಕ್ತಿತ್ವದವನು ಎಂಬುದಕ್ಕೆ ಈ ಉದಾಹರಣೆ ಸಾಕು. ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ ೧೯೬೧ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ ೧೯೪೭ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. ೨೬-೦೩-೧೯೩೧ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು. ಭಗತ್ ಸಿಂಗನ ೧೦೫ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗ. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಇದು ಮಾನವತೆಗೆ, ಇತಿಹಾಸಕ್ಕೆ ಮಾಡುವ ಅಪಚಾರ. ಇಂತಹ ಅಪಚಾರ ಮಾಡುವ ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಅಂಡಮಾನ್ ಜೈಲಿನಲ್ಲಿರುವ ಸ್ಮಾರಕದಲ್ಲಿರುವ ವೀರ ಸಾವರ್ಕರರ ಹೆಸರನ್ನು ಅಳಿಸುವ ಅಪಚಾರ ಮಾಡಿದವರು ಹಿಂದಿನ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮಣಿಶಂಕರ ಐಯರ್ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂದು ಶಾಲಾಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಭಾರತಕ್ಕೆ ಗಾಂಧೀಜಿ ಮತ್ತು ಕಾಂಗ್ರೆಸ್ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಬೋಧಿಸಲಾಗುತ್ತಿದೆ. ಭಗತ್, ಚಂದ್ರಶೇಖರ ಆಜಾದ್, ಮದನಲಾಲ್ ಧಿಂಗ್ರಾ, ಕರ್ನಾಟಕದ ಸಂಗೊಳ್ಳಿ ರಾಯಣ್ಣ, ಧೊಂಡಿಯಾವಾಘ ಮೊದಲಾದ ಅಸಂಖ್ಯ ಶೂರವೀರ ಹೋರಾಟಗಾರರ ಬಲಿದಾನಗಳಿಗೆ ಕಿಮ್ಮತ್ತಿಲ್ಲವೇ? ಇಂತಹ ಸ್ಥಿತಿಗೆ ಮರುಗಿ ನಿಟ್ಟುಸಿರು ಬಿಟ್ಟರಷ್ಟೇ ಸಾಕೇ? ಚಿಂತಿಸಿ. ಅಸಂಖ್ಯ ಅಜ್ಞಾತ ಬಲಿದಾನಿಗಳನ್ನು ಅಗೌರವಿಸುವವರಿಗೆ ಪಾಠ ಕಲಿಸಬೇಕಿದೆ. ನೈಜ ಇತಿಹಾಸ ಹೊರಬರಬೇಕಿದೆ. ಸರ್ಕಾರಗಳು ಮಾಡಬೇಕಾದ ಈ ಕೆಲಸವನ್ನು ಮಾಡದಿದ್ದಲ್ಲಿ ಪ್ರಜ್ಞಾವಂತರೇ ಅದನ್ನು ಮಾಡಲು ಮುಂದೆ ಬರಬೇಕಿದೆ.
-ಕ.ವೆಂ.ನಾಗರಾಜ್.


ಶುಕ್ರವಾರ, ಜುಲೈ 28, 2017

ವಿಘಟನೆಯೋ, ವಿನಾಶವೋ?


     ಇಂದು ನಮಗೇನಾಗಿದೆ? ಯಾರನ್ನಾದರೂ ಗುರುತಿಸಲು ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಆ ಜಾತಿಯವರು, ಈ ಜಾತಿಯವರು, ಎಡ ವಿಚಾರದವರು, ಬಲ ವಿಚಾರದವರು, ತಮಿಳರು, ಕನ್ನಡಿಗರು, ಆ ಪಕ್ಷದವರು, ಈ ಪಕ್ಷದವರು, ಇತ್ಯಾದಿಗಳೇ ಮಾನದಂಡವಾಗುತ್ತಿರುವುದು ದುರ್ದೈವದ ಸಂಗತಿ. ನಾವು ಮನುಷ್ಯರನ್ನು ಗುರುತಿಸುವುದು ಯಾವಾಗ? ಕಂಡದ್ದನ್ನು ಕಂಡಂತೆ ಹೇಳುವವರನ್ನು, ನ್ಯಾಯ ಪಕ್ಷಪಾತಿಗಳನ್ನೂ ಸಹ ಒಂದಲ್ಲಾ ಒಂದು ಹಣೆಪಟ್ಟಿ ಹಚ್ಚಿಯೇ ಗುರುತಿಸುತ್ತಾರೆ. ಬ್ರಿಟಿಷರ ಬಳುವಳಿಯಾದ ವಿಭಜಿಸಿ ಆಳುವ ಪ್ರವೃತ್ತಿ ಇಂದು ಬೃಹತ್ ವಿಷವೃಕ್ಷವಾಗಿ ಬೆಳೆದಿದ್ದು ಅದರ ಫಲವನ್ನು ಜನಸಾಮಾನ್ಯರು ಭೋಗಿಸುತ್ತಿದ್ದಾರೆ. ನೋಡುವ ಕಣ್ಣುಗಳಿಗೆ ಬಣ್ಣದ ಕನ್ನಡಕಗಳು ಅಳವಡಿಸಲ್ಪಟ್ಟು ಆ ಕನ್ನಡಕಗಳು ತಮಗೆ ಬೇಕಾದಂತೆ ದೃಷ್ಯವನ್ನು ತೋರಿಸುತ್ತಿವೆ. ಮಾನವತೆ, ವಾಸ್ತವತೆಗಳು ಕಣ್ಮರೆಯಾಗಿಬಿಟ್ಟಿವೆ. ಸಮಸ್ಯೆಗಳನ್ನು ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಿರುವುದು ಸಮಸ್ಯೆಗಳು ಇತ್ಯರ್ಥವಾಗದಿರುವಂತೆ ಮಾಡುತ್ತಿವೆ.  ಬೆಂದ ಮನೆಯಲ್ಲಿ ಗಳ ಹಿರಿಯುವವರಿಗೆ ಸಮಸ್ಯೆ ಇತ್ಯರ್ಥವಾಗುವುದು ಬೇಕಾಗಿಲ್ಲ. ಸಮಸ್ಯೆಗಳನ್ನು ಹುಟ್ಟು ಹಾಕಿ ಸ್ವಾರ್ಥಸಾಧನೆ ಮಾಡಿಕೊಳ್ಳುವುದೇ ಅವರಿಗೆ ಲಾಭಕರ. ಹೀಗಾಗಿ ನಮ್ಮ ಪವಿತ್ರ ಸಂವಿಧಾನದ ಆಶಯಗಳಾದ ಸಮಾನತೆ, ನೈಜ ಜಾತ್ಯಾತೀತತೆ, ಧರ್ಮನಿರಪೇಕ್ಷತೆ, ಇತ್ಯಾದಿಗಳು ಹುಡುಕಿದರೂ ಕಾಣಸಿಗದಾಗಿವೆ.
     ಒಂದೆರಡು ವ್ಯಾಪಕವಾದ ಚಳುವಳಿಗಳು, ಪ್ರತಿ-ಚಳುವಳಿಗಳನ್ನು ಕಂಡ ಉದಾಹರಣೆಗಳನ್ನು ಗಮನಿಸೋಣ. ಹೈದರಾಬಾದಿನ ವಿದ್ಯಾರ್ಥಿ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ ಅದನ್ನು ರಾಜಕೀಯ ಕಾರಣಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತೇ ಹೊರತು ಸತ್ಯ ಎಲ್ಲೋ ಮುಚ್ಚಿಹೋಯಿತು. ಆತ ದಲಿತನೋ, ಹಿಂದುಳಿದವನೋ ಎಂಬ ಚರ್ಚೆಗಳೂ ಆದವು. ತ್ವರಿತ ಇತ್ಯರ್ಥಗೊಳಿಸಿ ಸತ್ಯ ಹೊರತರುವ ಪ್ರಯತ್ನ ಹಿಂದೆಯೇ ಉಳಿದು, ಆತನ ಸಾವನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಲಾಯಿತು. ನಮ್ಮ ಮುಖ್ಯಮಂತ್ರಿಗಳೂ ವೇಮುಲನ ಆತ್ಮಹತ್ಯೆ ಸಂದರ್ಭದಲ್ಲಿ ಮಾಡಿದ ಪ್ರತಿಕ್ರಿಯೆಗಳು, ನಮ್ಮ ರಾಜ್ಯದಲ್ಲೇ ಆದ ರೈತರ ಆತ್ಮಹತ್ಯೆಗಳು, ಅಧಿಕಾರಿಗಳ ಆತ್ಮಹತ್ಯೆಗಳ ಸಂದರ್ಭದಲ್ಲಿ ಕೊಟ್ಟ ಪ್ರತಿಕ್ರಿಯೆಗಳನ್ನು ಗಮನಿಸಿದರೆ ವ್ಯತ್ಯಾಸ ಅರ್ಥೈಸಿಕೊಳ್ಳಬಹುದು. ಸತ್ತ ಪ್ರಾಣಿಗಳ ಮೇಲೆ ಎರಗುವ ರಣಹದ್ದುಗಳಂತೆ ಯಾವುದೋ ಆತ್ಮಹತ್ಯೆ, ಕೊಲೆಗಳ ಸಂದರ್ಭದಲ್ಲಿ ಅದನ್ನೂ ಸ್ವಲಾಭಕ್ಕೆ, ವಿರೋಧಿಗಳ ಮೇಲೆ ಗೂಬೆ ಕೂರಿಸುವುದಕ್ಕೆ ಕಾಯುತ್ತಿರುವ ರಾಜಕಾರಣಿಗಳು ಮತ್ತು ಕೆಲವು ಮಾಧ್ಯಮಗಳವರು ಹೇಸಿಗೆ ಹುಟ್ಟಿಸುತ್ತಾರೆ. ಸತ್ಯ ಹೊರಬರುವಷ್ಟರಲ್ಲಿ ಅವರುಗಳು ಬೇಳೆ ಬೇಯಿಸಿಕೊಂಡುಬಿಡುತ್ತಾರೆ.
     ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಕನ್ನಯ್ಯನ ವಿಷಯವನ್ನೂ ಪ್ರಸ್ತಾಪಿಸಲೇಬೇಕು. ದೇಶದ್ರೋಹಿ ಚಟುವಟಿಕೆಗಳು, ಘೋಷಣೆಗಳನ್ನು ಮಾಡಿದ ಆರೋಪದ ಮೇಲೆ ವಿದ್ಯಾರ್ಥಿ ಸಂಘದ ನಾಯಕನಾಗಿದ್ದ ಆತನನ್ನೂ ಮತ್ತು ಇತರ ಹಲವರನ್ನೂ ಬಂಧಿಸಿದಾಗ ದೊಡ್ಡ ಕೋಲಾಹಲವೇ ಆಯಿತು. ದೇಶಾದ್ಯಂತ ಪರ-ವಿರೋಧ ಚಳುವಳಿಗಳು, ಚರ್ಚೆಗಳು ನಡೆದವು. ಎಡವಿಚಾರಿಗಳು ಮತ್ತು ಬಲವಿಚಾರಿಗಳ ನಡುವೆ ಸಂಘರ್ಷವೇ ಆಯಿತು. ಇದಕ್ಕೆ ಕಾರಣ ಆತ ಪ್ರತಿನಿಧಿಸುತ್ತಿದ್ದ ವಿಚಾರ ಮತ್ತು ಆತನ ಜಾತಿ! ಇಲ್ಲೂ ಅಷ್ಟೆ, ಸತ್ಯ ಯಾರಿಗೂ ಪಥ್ಯವಾಗಿರಲಿಲ್ಲ. ಯಾವ ರಾಜಕೀಯ ಪಕ್ಷಗಳವರು ಯಾವ ರಾಜಕೀಯ ಪಕ್ಷದ ವಿರುದ್ಧ ಮೇಲುಗೈ ಪಡೆಯಲು ಈ ಪ್ರಕರಣ ಬಳಸಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಬ್ಬ ಬಡ ಕೂಲಿಕಾರಳ ಮಗನಾದ ಕನ್ನಯ್ಯ ಎಷ್ಟು ವರ್ಷಗಳಿಂದ ವಿದ್ಯಾರ್ಥಿಯಾಗಿಯೇ ಅಲ್ಲಿ ಉಳಿದಿದ್ದಾನೆ, ಆತನ ನಂತರ ಬಂದ ನೂರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿಹೋಗಿದ್ದರೂ  ಇನ್ನೂ ಆತನ ಸಂಶೋಧನೆ ಏಕೆ ಮುಗಿದಿಲ್ಲ, ಬಡತಾಯಿಯನ್ನು ಸಲಹಲು ಆತ ಏಕೆ ಮುಂದುವರೆಯಲಿಲ್ಲ, ಇತ್ಯಾದಿಗಳು ಸಾಮಾನ್ಯನಾಗಿ ನನ್ನನ್ನು ಕಾಡುತ್ತವೆ. ರಾತ್ರೋರಾತ್ರಿ ಕನ್ನಯ್ಯನನ್ನು ನಾಯಕನನ್ನಾಗಿ ಬೆಳೆಸಿದ ಸ್ವಹಿತಾಸಕ್ತರು ಅವನನ್ನು ಬಿಹಾರದ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಆತನ ಖಾತೆಗೆ ಲಕ್ಷಾಂತರ ರೂ.ಗಳು ಜಮೆಯಾಗುತ್ತವೆ.  ಇಂದು ಆತ ವಿಮಾನದ ಬಿಸಿನೆಸ್ ಕ್ಲಾಸಿನಲ್ಲಿ ಸಂಚರಿಸುತ್ತಾನೆ. ಹೇಗೆ? ಏಕೆ?
     ಪ್ರೊ. ಕಲಬುರ್ಗಿಯವರ ಹತ್ಯೆಯಿರಬಹುದು, ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಕಮ್ಯುನಿಸ್ಟರು ನಡೆಸಿರುವ ತಮ್ಮ ವಿರೋಧಿಗಳ, ಪ್ರಧಾನವಾಗಿ ಆರೆಸ್ಸೆಸ್ಸಿನವರ ಹತ್ಯೆಗಳಿರಬಹುದು, ಈ ಎಲ್ಲಾ ಸಂಗತಿಗಳಲ್ಲಿ ಸತ್ತವರ ಜಾತಿ ಮತ್ತು ಅವರು ಪ್ರತಿನಿಧಿಸುವ ವಿಚಾರಗಳು ಪ್ರಮುಖ ಪಾತ್ರ ವಹಿಸಿರುವುದನ್ನು ಗಮನಿಸಬಹುದು. ಅವರ ವಿಚಾರಗಳನ್ನು ಸಮರ್ಥಿಸುವವರು ಮಾತ್ರ ಅದನ್ನು ಪ್ರತಿಭಟಿಸುತ್ತಾರೆ, ವಿರೋಧಿಸುವವರು ಸುಮ್ಮನಿರುತ್ತಾರೆ ಅಥವ ಅವರ ಹುಳುಕುಗಳನ್ನು ಎತ್ತಿ ಆಡುತ್ತಾರೆ. ಇದು ನಿಲ್ಲಬೇಕು. ಎಡವಿಚಾರವೋ, ಬಲವಿಚಾರವೋ ಮುಖ್ಯವಲ್ಲ. ಮಾನವೀಯತೆ ಮುಖ್ಯವಾಗಬೇಕು. ಸತ್ಯ ಮಾತ್ರ ಪ್ರಕಾಶಿಸಬೇಕು. ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ, ಜಿಲ್ಲಾಧಿಕಾರಿ ಡಿ.ಕೆ. ರವಿಯವರ ಆತ್ಮಹತ್ಯೆ(?) ಪ್ರಕರಣಗಳಲ್ಲಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿತು. ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ಆಡಳಿತ ಪಕ್ಷದ ಪ್ರಮುಖರಿಂದಲೇ ಆಯಿತು ಮತ್ತು ಆಗುತ್ತಿದೆ ಎಂಬ ಸಂಶಯ ವ್ಯಕ್ತವಾದುದು ಸುಳ್ಳಲ್ಲ. ಗಣಪತಿಯವರ ಪ್ರಕರಣದಲ್ಲಿ ಮಂತ್ರಿಯ ಪಾತ್ರವಿಲ್ಲವೆಂದಾಗುತ್ತದೆ, ಅವರು ಮತ್ತೆ ಮಂತ್ರಿಯಾಗಿ ಬರುತ್ತಾರೆ ಎಂಬುದು ಸಾಮಾನ್ಯರು ಆಡಿಕೊಳ್ಳುತ್ತಿರುವ ಮಾತು. ಮಂತ್ರಿಯ ಪಾತ್ರ ಇದೆಯೋ, ಇಲ್ಲವೋ ಎಂಬುದು ಮುಖ್ಯವಲ್ಲ. ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬರಲು ಕಾರಣರು ಯಾರೆಂದು ತಿಳಿಯಬೇಕು ಮತ್ತು ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬುದಷ್ಟೇ ಜನಸಾಮಾನ್ಯನ ನಿರೀಕ್ಷೆ. ಯಾರು ಕೆಟ್ಟವರು ಎಂದರೆ ಸತ್ತವರೇ ಕೆಟ್ಟವರು ಎಂದಾಗಬಾರದು. ಆ ನಿರೀಕ್ಷೆ ನೆರವೇರಬಹುದೇ?
     ತಪ್ಪು ಯಾರು ಮಾಡಿದರೂ ಅದನ್ನು ತಪ್ಪೆಂದು ಗುರುತಿಸುವ ಮನೋಭಾವ ಬೆಳೆಯಬೇಕು. ಸಂಬಂಧಿಸಿದವರ ಜಾತಿ, ಪಕ್ಷ, ಅವರಿಂದ ಸಿಗುವ ಲಾಭ, ಇತ್ಯಾದಿಗಳು ಮಾನದಂಡವಾಗಬಾರದು. ಜಾತಿ, ಪಕ್ಷ, ಇತ್ಯಾದಿಗಳ ಓಲೈಕೆಯ ಪರಾಕಾಷ್ಠೆಯೆಂದರೆ ತಪ್ಪು ಮಾಡಿದವರು ಸಹ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತಾವು ದಲಿತರೆಂದು, ಹಿಂದುಳಿದವರೆಂದು, ಅಲ್ಪ ಸಂಖ್ಯಾತರೆಂದು ತುಳಿಯಲು ಪ್ರಯತ್ನಿಸುತ್ತಿದ್ದಾರೆಂದು ಗುಲ್ಲು ಎಬ್ಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ನಾನು ತಹಸೀಲ್ದಾರನಾಗಿದ್ದಾಗಿನ ಒಂದು ಘಟನೆಯಿದು.. ಅನಧಿಕೃತವಾಗಿ 20 ದಿನಗಳಿಗೂ ಹೆಚ್ಚು ಕಾಲ ಗೈರು ಹಾಜರಾಗಿದ್ದ ಇಬ್ಬರು ಗ್ರಾಮಲೆಕ್ಕಿಗರ ವಿರುದ್ಧ ಶಿಸ್ತುಕ್ರಮಕ್ಕೆ ಪ್ರಸ್ತಾವನೆ ಕಳುಹಿಸಿದ್ದೆ. ಇಬ್ಬರಲ್ಲಿ ಒಬ್ಬ ದಲಿತ ಸಮುದಾಯದವನು. ದಲಿತ ಸಂಘಟನೆಯವರು ನನ್ನನ್ನು ಕಂಡು ದಲಿತನೆಂಬ ಕಾರಣಕ್ಕಾಗಿ ಅಧೀನ ನೌಕರನಿಗೆ ತೊಂದರೆ ಕೊಡುತ್ತಿದ್ದೇನೆಂದು ದೂರಿದ್ದರು. ಇಬ್ಬರು ನೌಕರರು ಮಾಡಿರುವುದೂ ಒಂದೇ ತಪ್ಪು, ತಪ್ಪಿಗೆ ಶಿಕ್ಷೆ ಸಹಾ ಒಂದೇ ಆಗಬೇಕು, ಇನ್ನೊಬ್ಬ ಗ್ರಾಮಲೆಕ್ಕಿಗ ನನ್ನ ಜಾತಿಗೇ ಸೇರಿದವನಾಗಿದ್ದು ನಾನು ಪಕ್ಷಪಾತ ಮಾಡುತ್ತಿಲ್ಲವೆಂದು ಅವರಿಗೆ ಮನವರಿಕೆ ಮಾಡಿದ್ದರೂ ಅವರಿಗೆ ಸಮಾಧಾನವಾಗಿರಲಿಲ್ಲ.  ರಾಜ್ಯದ ಗೃಹಮಂತ್ರಿಯಾಗಿದ್ದ, ತಮ್ಮ ಕೈಯಲ್ಲಿ ಬಹುದೊಡ್ಡ ಅಧಿಕಾರ ಹೊಂದಿರುವ, ವೈದ್ಯಕೀಯ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಒಡೆಯರಾಗಿರುವ, ಶ್ರೀಮಂತರಾಗಿರುವ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವ್ಯಕ್ತಿಯೇ ತಾವು ದಲಿತನೆಂಬ ಕಾರಣದಿಂದ ಕಡೆಗಣಿಸಲಾಗಿದೆಯೆಂದು ಅಲವತ್ತುಕೊಂಡಿದ್ದರಲ್ಲವೇ? ನೇರ ಚುನಾವಣೆಯಲ್ಲಿ ಸೋತು, ಹಿಂಬಾಗಿಲಿನಿಂದ ಪ್ರವೇಶ ಪಡೆದು ಇಷ್ಟೊಂದು ಸವಲತ್ತು ಪಡೆದಿದ್ದರೂ ಈ ರೀತಿ ಹೇಳುವುದು ಸರಿಯೇ? ಜಾತಿಯ ಆಧಾರದಲ್ಲಿ ರಾಜಕೀಯ ನಡೆಯುವುದು ಮೊದಲು ನಿಲ್ಲಬೇಕು. ವಿಘಟನೆಯ ಪ್ರವೃತ್ತಿಯಿಂದ ವಿನಾಶವೇ ಕಟ್ಟಿಟ್ಟ ಬುತ್ತಿ ಎಂಬುದನ್ನು ಪ್ರಜ್ಞಾವಂತರು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ವಿಘಟನೆಯ ವಿಷಬೀಜ ಬಿತ್ತುವವರ ವಿರುದ್ಧ ಜಾಗೃತರಾಗಿರಬೇಕಿದೆ.
-ಕ.ವೆಂ.ನಾಗರಾಜ್.



ಮಂಗಳವಾರ, ಜುಲೈ 25, 2017

ಜಯಚಂದ್ರ, ಮೀರ್ ಸಾದಿಕರ ಸಂತತಿ ಸಾವಿರವಾಗಿದೆ! ಎಚ್ಚರ!!


     ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿದ್ದ ರಜಪೂತ ದೊರೆ ಪೃಥ್ವಿರಾಜ ಚೌಹಾನನ ಅಂತ್ಯಕ್ಕೆ ಕಾರಣನಾದವನು ನೆರೆಯ ಕನೌಜ ರಾಜ್ಯದ ದೊರೆ ಜಯಚಂದ್ರ. ಜಯಚಂದ್ರನ ರಾಜ್ಯ ವಿಸ್ತರಣಾಕಾಂಕ್ಷೆಗೆ ಅಡ್ಡಿಯಾದುದಲ್ಲದೆ ತನ್ನ ಮಗಳು ಸಂಯೋಗಿತಾಳನ್ನು ಪೃಥ್ವಿರಾಜ ಪ್ರೇಮಿಸಿದ್ದುದು ಅವನ ಮೇಲಿನ ಅವನ ದ್ವೇಷಕ್ಕೆ ಕಾರಣವಾಗಿತ್ತು. ಅವಮಾನಿಸಲೆಂದೇ ಜಯಚಂದ್ರ ತನ್ನ ಮಗಳು ಸಂಯೋಗಿತಾಳ ಸ್ವಯಂವರದ ಸಂದರ್ಭದಲ್ಲಿ ಪೃಥ್ವಿರಾಜನ ಪ್ರತಿರೂಪದ ಗೊಂಬೆ ಮಾಡಿಸಿ ದ್ವಾರಪಾಲಕನ ಸ್ಥಾನದಲ್ಲಿ ನಿಲ್ಲಿಸಿದ್ದ. ಪೃಥ್ವಿರಾಜ ಚಾಣಾಕ್ಷತನದಿಂದ ಅಲ್ಲಿಗೆ ಧಾವಿಸಿ ಸಂಯೋಗಿತಾಳನ್ನು ಕರೆದುಕೊಂಡು ಹೋಗಿ ವಿವಾಹವಾಗಿದ್ದು ದ್ವೇಷಾಗ್ನಿ ಮತ್ತಷ್ಟು ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ದೆಹಲಿಯನ್ನು ವಶಪಡಿಸಿಕೊಳ್ಳಲು ಹೊಂಚುಹಾಕಿದ್ದ ಮಹಮದ್ ಘೋರಿಗೆ ತನ್ನ ಸೈನ್ಯದ ಸಹಾಯಹಸ್ತ ಚಾಚಿ  ಜಯಚಂದ್ರ ದೆಹಲಿಯ ಪತನಕ್ಕೆ ನಾಂದಿ ಹಾಡಿದ್ದ. ಮೊದಲೊಮ್ಮೆ ಪೃಥಿರಾಜನಿಂದ ಸೋತು ಓಡಿಹೋಗಿದ್ದ ಘೋರಿ ತನ್ನ ಎರಡನೆಯ ಪ್ರಯತ್ನದಲ್ಲಿ ಜಯಚಂದ್ರನ ಅನಿರೀಕ್ಷಿತ ನೆರವಿನಿಂದ ಯಶಸ್ವಿಯಾಗಿದ್ದ. ಸಹಾಯದ ಕೃತಜ್ಞತೆಯನ್ನೂ ತೋರದಿದ್ದ ಮಹಮದ್ ಘೋರಿ ನಂತರದಲ್ಲಿ ಜಯಚಂದ್ರನನ್ನೂ ಸಂಹರಿಸಿದ್ದ. ಜಯಚಂದ್ರ ತನ್ನ ಮಗಳು ವಿಧವೆಯಾಗುವುದನ್ನೂ ಲೆಕ್ಕಿಸದೆ ಪೃಥ್ವಿರಾಜನ ನಾಶಕ್ಕೆ ಪ್ರಯತ್ನಿಸದೇ ಇದ್ದಿದ್ದರೆ, ಸಂಬಂಧದ ಕಾರಣದಿಂದ ವಿಶ್ವಾಸದಿಂದ ಇದ್ದಿದ್ದರೆ ಎರಡೂ ರಾಜ್ಯಗಳು ಮತ್ತಷ್ಟು ಬಲಿಷ್ಠವಾಗುತ್ತಿದ್ದವು. ಮೊಘಲರಾಗಲೀ, ಇತರ ವಿದೇಶೀಯರಾಗಲೀ ಭಾರತಕ್ಕೆ ಬರಲಾಗುತ್ತಿರಲಿಲ್ಲ. ಹೀಗಾಗದೆ ಇದ್ದುದರಿಂದಾಗಿ ಭಾರತ ದೊಡ್ಡ ಬೆಲೆ ತೆರಬೇಕಾಯಿತು. ಶತಮಾನಗಳ ಕಾಲ ಮೊಘಲರ ಆಳ್ವಿಕೆಗೆ ದೇಶ ಒಳಪಟ್ಟಿತು.
     ಇನ್ನೊಂದು ಉದಾಹರಣೆ ನೋಡೋಣ. ಧಾರವಾಡದ ಕಲೆಕ್ಟರ್ ಆಗಿದ್ದ ಬ್ರಿಟಿಷರ ಪ್ರತಿನಿಧಿ ಥ್ಯಾಕರೆ ಕಿತ್ತೂರನ್ನು ವಶಪಡಿಸಿಕೊಳ್ಳಲು 21ನೇ ಅಕ್ಟೋಬರ್ 1824ರಲ್ಲಿ ದಂಡೆತ್ತಿ ಬಂದಾಗ ವೀರಾವೇಶದಿಂದ ಹೋರಾಡಿ ಥ್ಯಾಕರೆಯನ್ನು ಸಂಹರಿಸಿದ್ದ ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ, ಶೌರ್ಯ ನಾಡಿಗೇ ತಿಳಿದ ಸಂಗತಿ. ಚನ್ನಮ್ಮನನ್ನು ನಿಯಂತ್ರಿಸದಿದ್ದರೆ ಬೇರೆ ಸಂಸ್ಥಾನಗಳವರೂ ತಿರುಗಿ ಬಿದ್ದಾರೆಂದು ಯೋಚಿಸಿದ ಬ್ರಿಟಿಷರು ತಮ್ಮ ಸೈನ್ಯ ಒಗ್ಗೂಡಿಸಿ 1824ರ ಡಿಸೆಂಬರ್ 3ರಲ್ಲಿ ಮತ್ತೆ ದಾಳಿ ಮಾಡಿದಾಗ ಬ್ರಿಟಿಷರೊಂದಿಗೆ ಕೈಜೋಡಿಸಿದವನು ಕಿತ್ತೂರಿನ ನಾಡದ್ರೋಹಿ ಮಲ್ಲಪ್ಪಶೆಟ್ಟಿ! ಕಿತ್ತೂರು ಸೈನ್ಯದ ತೋಪುಗಳು ಸಿಡಿಯದಂತೆ ಅವುಗಳಿಗೆ ನೀರು ತುಂಬಿಸಿಬಿಟ್ಟಿದ್ದರು ಆ ದ್ರೋಹಿಗಳು. ಪರಿಣಾಮವಾಗಿ ಚನ್ನಮ್ಮ ಬಂದಿಯಾಗಿ ಬೈಲಹೊಂಗಲದ ಸೆರೆಮನೆಯಲ್ಲಿರಬೇಕಾಯಿತು. 1829ರ ಏಪ್ರಿಲ್, 2ರಲ್ಲಿ ಚನ್ನಮ್ಮನ ದೇಹಾಂತ್ಯವಾಗಿತ್ತು. ಚನ್ನಮ್ಮ ಬಂಧನದಲ್ಲಿದ್ದರೂ ಸಂಗೊಳ್ಳಿ ರಾಯಣ್ಣ ತನ್ನ ಹೋರಾಟ ಮುಂದುವರೆಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಈ ರಾಯಣ್ಣ ಬ್ರಿಟಿಷರಿಗೆ ಸೆರೆ ಸಿಕ್ಕಲು ಕಾರಣನಾದವನು ಅವನ ದೂರದ ಬಂಧು ಲಕ್ಕಪ್ಪ! ರಾಯಣ್ಣನ ಜೊತೆ ಜೊತೆಗೇ ಇದ್ದು ಅವನೊಂದಿಗೆ ಕಾಳಗದಲ್ಲಿ ನೆರವು ನೀಡುವ ನಾಟಕವಾಡುತ್ತಾ ಬ್ರಿಟಿಷರಿಗೆ ರಾಯಣ್ಣನ ಸುಳಿವು ನೀಡಿದ್ದ ಆ ಲಕ್ಕಪ್ಪ. ನಂತರದಲ್ಲಿ ರಾಯಣನನ್ನು ವಿಚಾರಣೆಯ ನಾಟಕ ಆಡಿ ಗಲ್ಲಿಗೇರಿಸಲಾಯಿತು.
     ನಮ್ಮ ನಡುವೆಯೇ ಇದ್ದು ನಮ್ಮ ಹಿತೈಷಿಯಂತೆಯೇ ನಂಬಿಸಿ ಕೊರಳು ಕತ್ತರಿಸುವವರ ಸಂತತಿ ಇಂದು ಸಾವಿರ, ಸಾವಿರವಾಗಿದೆ. ಅಧಿಕಾರ ಮತ್ತು ಹಣಗಳಿಕೆಯ ಮೇಲಾಟದಲ್ಲಿ ದೇಶದ ಹಿತ ಕಡೆಗಣಿಸಲ್ಪಟ್ಟಿದೆ. ನ್ಯಾಯಾಂಗ, ಶಾಸಕಾಂಗ, ಆಡಳಿತಾಂಗಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಹಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿರುವುದು ಢಾಳಾಗಿ ಗೋಚರಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಹಣ, ಅಧಿಕಾರ, ಪ್ರಭಾವ ಇರುವವರ ಪರವಾಗಿ ವ್ಯವಸ್ಥೆ ಟೊಂಕ ಕಟ್ಟಿನಿಂತಿದೆಯೇನೋ ಎನ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಉದಾಹರಣೆಗಳನ್ನು ಸಾಲುಸಾಲಾಗಿ ಕೊಡಬಹುದು. ಬಹುಜನರ ನಿರೀಕ್ಷೆ, ಅಪೇಕ್ಷೆಗಳನ್ನು ಕಡೆಗಣಿಸಲಾಗುತ್ತಿದೆ. ಕುಡಿಯುವ ನೀರಿಗೆ ವರ್ಷಕ್ಕೂ ಹೆಚ್ಚು ಕಾಲದಿಂದ ಚಳುವಳಿಗಳನ್ನು ಮಾಡುತ್ತಿರುವವರ ಜನರ ಗೋಳನ್ನು ಕೇಳುವುದಿರಲಿ, ಅವರೊಂದಿಗೆ ಅಮಾನುಷವಾಗಿ ವರ್ತಿಸುತ್ತಾರೆ, ಚಳುವಳಿ ಹತ್ತಿಕ್ಕಲು ಶ್ರಮಿಸುತ್ತಾರೆಯೇ ಹೊರತು, ಪರಿಹಾರ ಹುಡುಕುವ ಗೋಜಿಗೇ ಹೋಗುವುದಿಲ್ಲ.
     ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ದೇಶದ್ರೋಹದ ಮತ್ತು ಜನಾಂಗೀಯ ಸೌಹಾರ್ದ ಕದಡುವ ಚಟುವಟಿಕೆಗಳನ್ನೂ ಬೆಂಬಲಿಸುವವರನ್ನು ಬುದ್ಧಿಜೀವಿಗಳೆಂಬಂತೆ ಬಿಂಬಿಸಲಾಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಭಯೋತ್ಪಾದಕರು, ಮಾವೋವಾದಿಗಳು ಸೇನೆ, ಪೋಲಿಸ್ ಮತ್ತು ಜನಸಾಮಾನ್ಯರ ವಿರುದ್ಧ ನಡೆಸುತ್ತಿರುವ ರಕ್ತಪಾತಗಳನ್ನು ಬೆಂಬಲಿಸುವವರು, ಸಮರ್ಥಿಸುವವರು, ರಕ್ಷಣೆ ಕೊಡುತ್ತಿರುವವರು ಹೊರಗಿನವರಲ್ಲ, ನಮ್ಮ ನಡುವೆಯೇ ಇರುವವರು! ಅಂತಹವರ ಸಮರ್ಥನೆಗೆ ಆಕರ್ಷಣೀಯ ಮುಖವಾಡದ ಹೆಸರುಗಳನ್ನು ಹೊಂದಿದ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗಳೇ ಇವೆ. ಅವುಗಳಿಗೆ ವಿದೇಶೀ ದೇಣಿಗೆ ಸರಾಗವಾಗಿ ಹರಿದುಬರುತ್ತದೆ. ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ, ಪ್ರಚೋದಕ ಹೇಳಿಕೆಗಳನ್ನು ಕೊಡುವವರು ನಮ್ಮ ದೇಶದ ಸಂಸದರೂ ಆಗಿದ್ದಾರೆ! ವಿವಿಧ ರಾಜಕೀಯ ನಾಯಕರುಗಳೂ ಅಧಿಕಾರ ಮತ್ತು ಮತಗಳಿಕೆಯ ದೃಷ್ಟಿಯಿಂದ ಅವರನ್ನೇ ಬೆಂಬಲಿಸುತ್ತಾರೆ ಅಥವ ಅವರ ವಿರುದ್ಧ ಸಣ್ಣ ಧ್ವನಿಯನ್ನೂ ಎತ್ತುವುದಿಲ್ಲ. ಪಾಕಿಸ್ತಾನದ ನೆಲದಲ್ಲಿ ನಿಂತು ಅಲ್ಲಿನ ಟಿವಿ ಚಾನೆಲ್ಲಿಗೆ ಸಂದರ್ಶನ ಕೊಡುತ್ತಾ ಈಗಿನ ಸರ್ಕಾರವನ್ನು ಕಿತ್ತೆಸೆಯುವ ಕೆಲಸಕ್ಕೆ ಸಹಕಾರ ಕೊಡಿ ಎಂದು ಪಾಕಿಸ್ತಾನದ ಜನರನ್ನು ಕೋರುವ ಹಿಂದಿನ ಕೇಂದ್ರ ಸರ್ಕಾರದ ಮಂತ್ರಿಗಳ ನಡೆಯನ್ನು ಏನೆನ್ನಬೇಕು?
     ಸಾಮಾನ್ಯರು ಸ್ವತಃ ಜಾಗೃತಗೊಂಡು ದೇಶದ ಹಿತಕ್ಕೆ ಮಾರಕವಾಗಿ ವರ್ತಿಸುವ ಜಯಚಂದ್ರ, ಮಲ್ಲಪ್ಪಶೆಟ್ಟಿ, ಮೀರ್ ಸಾದಿಕರುಗಳನ್ನು ನಿಯಂತ್ರಿಸುವ ಕೆಲಸ ಮಾಡಬೇಕಿದೆ. ಜನರನ್ನು ಈ ದಿಸೆಯಲ್ಲಿ ಜಾಗೃತಗೊಳಿಸುವ ಕೆಲಸವನ್ನು ಪ್ರಜ್ಞಾವಂತರು ಮಾಡಲೇಬೇಕಿದೆ. ನೆಹರೂ ಆಡಳಿತದ ಕಾಲದಲ್ಲಿ ಇತಿಹಾಸ ರಚನೆಯ ಹೊಣೆಯನ್ನು ಎಡ ವಿಚಾರಧಾರೆಯ ವಿದ್ವಾಂಸರಿಗೆ ವಹಿಸಿದ್ದು ದೊಡ್ಡ ಪ್ರಮಾದವೇ ಆಗಿದೆ. ಇತಿಹಾಸ ಪದದ ಅರ್ಥವೆಂದರೆ ಅದು ಹಾಗೆ ಇತ್ತು ಎಂದು! ಇದ್ದದ್ದನ್ನು ಇದ್ದಂತೆ ಹೇಳುವ ಇತಿಹಾಸ ನೈಜ ಇತಿಹಾಸವೆನಿಸುತ್ತದೆ. ಈಗ ಶಾಲೆಗಳಲ್ಲಿ ನಾವು ಕಲಿಯುತ್ತಿರುವುದು ತಿರುಚಲ್ಪಟ್ಟ ಇತಿಹಾಸ ಮಾತ್ರ. ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಕಾಂಗ್ರೆಸ್ ನೇತಾರರಾದ ಗಾಂಧಿ, ನೆಹರು ಮುಂತಾದವರ ಗುಣಗಾನ ಮಾಡುವ ಸಂಗತಿಯಾಗಿದೆ. ದೇಶಕ್ಕಾಗಿ ಬಲಿದಾನ ಮಾಡಿದ ಅಸಂಖ್ಯ ಶೂರ, ವೀರರ, ಸಾಧು-ಸಂತರ ಹೆಸರುಗಳೇ ನಮ್ಮ ಪೀಳಿಗೆಗೆ ತಿಳಿದೇ ಇಲ್ಲ. ಸುಭಾಷ ಚಂದ್ರ ಬೋಸರ ಕುರಿತ ವಿವರಗಳನ್ನು ಮುಚ್ಚಿಡಲು ಹೇಗೆ ಶ್ರಮಿಸಲಾಯಿತು ಎಂಬುದು ಈಗ ಬೆಳಕಿಗೆ ಬರುತ್ತಿದೆ. ನೈಜ ಇತಿಹಾಸವನ್ನು ಮಕ್ಕಳಿಗೆ ಕಲಿಸುವ ಕೆಲಸ ಆಗಬೇಕು. ಸಜ್ಜನ ಶಕ್ತಿ ಜಾಗೃತಗೊಳ್ಳಲಿ, ಜಯಚಂದ್ರ, ಮೀರ್ ಸಾದಿಕರುಗಳ ಸಂತತಿ ಅಂತ್ಯವಾಗಲಿ ಎಂಬುದು ಸಾಮಾನ್ಯರ ಆಶಯವಾಗಿದೆ.
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 24, 2017

ಧೃಢನಿರ್ಧಾರ ಇತಿಹಾಸದ ಗತಿಯನ್ನೇ ಬದಲಿಸಬಲ್ಲದು!


     ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು. ಅದನ್ನೇ ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ. ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಇದ್ದು, ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ. ವಿಷಯದ ಆಳಕ್ಕೆ ಹೋಗದೆ, ನಮ್ಮ ದೈನಂದಿನ ಬದುಕಿನಲ್ಲಿ ಸಂಕಲ್ಪದ ಮಹತ್ವಕ್ಕೆ ಇಂದಿನ ಜಿಜ್ಞಾಸೆಯನ್ನು ಸೀಮಿತಗೊಳಿಸಿ ಚರ್ಚಿಸೋಣ.
     ದೈನಂದಿನ ವ್ಯವಹಾರಗಳಲ್ಲಿ ಸಂಕಲ್ಪ ಎಂದರೆ ಯಾವುದಾದರೂ ವಿಷಯದಲ್ಲಿ ನಾವು ಕೈಗೊಳ್ಳುವ ನಿರ್ಧಾರ ಎಂದುಕೊಳ್ಳಬಹುದು. ಈ ಸಂಕಲ್ಪ ಮಾಡುವುದಕ್ಕೂ ಸಾಮರ್ಥ್ಯ ಇರಬೇಕು. ಅದನ್ನು ಗಳಿಸಿಕೊಳ್ಳುವುದು ಹೇಗೆ? ಅದನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ಅದು ನಮ್ಮೊಳಗೆಯೇ ಇದೆ, ಉಪಯೋಗಿಸಿಕೊಳ್ಳಬೇಕಷ್ಟೆ. ಹೆಂಡ ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಅವರಲ್ಲಿನ ಇಚ್ಛಾಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.
     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ ಸ್ವಾಮಿ ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ ಸಂಕಲ್ಪದ ಕಾರಣದಿಂದ! ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಇದು ಅವರವರ ವೈಯಕ್ತಿಕ ಸ್ವಭಾವಗಳನ್ನು ಅವಲಂಬಿಸಿರುತ್ತದೆ. ವ್ರತದಲ್ಲಿ ಇರುವವರೆಗೂ ತಮ್ಮನ್ನು ನಿಯಂತ್ರಿಸಿಕೊಳ್ಳುವ ಕೆಲವರು ವ್ತತದ ಅವಧಿ ಮುಗಿದ ತಕ್ಷಣ ಅದುವರೆಗೆ ತಡೆಹಿಡಿದಿಟ್ಟುಕೊಂಡಿದ್ದ, ಕುಡಿಯುವ, ತಿನ್ನುವ, ಧೂಮಪಾನ ಮಾಡುವ, ಇತ್ಯಾದಿ ತಮ್ಮ ದುರಭ್ಯಾಸಗಳನ್ನು ಹಪಾಹಪಿಯಿಂದ ಎಂಬಂತೆ ಮುಂದುವರೆಸುವುದನ್ನೂ ಕಾಣುತ್ತೇವೆ. ಇಂತಹ ಪ್ರವೃತ್ತಿ ಸಲ್ಲದು. ಸರ್ವೇ ಜನಾಃ ಸುಖಿನೋ ಭವನ್ತು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಂಕಲ್ಪ ಮಾಡಿ, ಸ್ವತಃ ತಾವೇ ಒಳ್ಳೆಯ ನಡವಳಿಕೆಯವರಾಗದಿದ್ದರೆ ಸಂಕಲ್ಪಕ್ಕೆ ಬೆಲೆಯೇನು? 
     ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಇವುಗಳನ್ನು ಅಂತರಂಗ ಒಪ್ಪುವ ರೀತಿಯಲ್ಲಿ ಮಾಡಬೇಕಷ್ಟೆ. ತೋರಿಕೆಯ ಆಚರಣೆಗಳು ತೋರಿಕೆಯ ಫಲ ಕೊಟ್ಟಾವು! ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ಮನಸ್ಸು ಹೀಗೆ ನಮ್ಮ ಅಧೀನಕ್ಕೆ ಬರಲು ಇಂತಹ ಸತ್ಸಂಗಗಳು, ಸಜ್ಜನ ಸಹವಾಸ, ಗುರು-ಹಿರಿಯರ ಮಾರ್ಗದರ್ಶನ ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.
     ಸಂಕಲ್ಪ ಮಾಡಲೂ ಸಾಮರ್ಥ್ಯ ಇರಬೇಕು ಎಂದು ಮೊದಲೇ ಹೇಳಿದೆಯಲ್ಲವೇ? ಒಬ್ಬ ಸಣಕಲ ತಾನು ಒಬ್ಬ ದೊಡ್ಡ ಪೈಲ್ವಾನ್ ಆಗುತ್ತೇನೆ ಎಂದರೆ, ಭ್ರಷ್ಠಾಚಾರವೇ ಉಸಿರಾಗಿರುವ ರಾಜಕಾರಣಿಯೊಬ್ಬ ರಾಮರಾಜ್ಯವನ್ನು ತರುವುದು ತನ್ನ ಸಂಕಲ್ಪ ಎಂದು ಘೋಷಿಸಿದರೆ ಅದಕ್ಕಿಂತ ಆರ್ಥಹೀನ ಸಂಗತಿ ಮತ್ತೊಂದಿಲ್ಲ. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಬೊಗಳೆ ಬಿಡುವವರಿಗಿಂತ ನಿರ್ಧರಿಸಿದಂತೆ ಮಾಡಿ ತೋರಿಸಿದವರು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ, ಆದರಣೀಯರಾಗುತ್ತಾರೆ. ಧೃಢ ಸಂಕಲ್ಪ ಮಾಡಿದರೆ ಸಾಧಿಸಲಾಗದುದು ಏನೂ ಇಲ್ಲವೆಂಬುದಕ್ಕೆ ಅನೇಕ ಸಾಕ್ಷಿಗಳು ಸಿಗುತ್ತವೆ. ನಂದರ ದುರಾಡಳಿತವನ್ನು ಚಂದ್ರಗುಪ್ತನನ್ನು ಬೆಳೆಸುವ ಮೂಲಕ ಸಾಧಿಸಿದ ಚಾಣಕ್ಯ, ಹಕ್ಕ-ಬುಕ್ಕರನ್ನು ಮುಂದಿಟ್ಟು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ವಿದ್ಯಾರಣ್ಯ ಮುಂತಾದವರ ಆದರ್ಶ ನಮ್ಮ ಮುಂದಿದೆ. ಧೃಢಕಾಯರೂ ಸಾಧಿಸುವುದು ಕಷ್ಟವೆನಿಸಿದ ಹಿಮಾಲಯದ ಎವರೆಸ್ಟ್ ಶಿಖರವನ್ನು ಕಾಲು ಕಳೆದುಕೊಂಡಿದ್ದರೂ ಅಳವಡಿಸಿದ್ದ ಕೃತಕ ಕಾಲಿನ ಸಹಾಯದಿಂದ, ಕೇವಲ ಸಂಕಲ್ಪದ ಬಲದಿಂದ ಏರಿದ್ದ ಗಟ್ಟಿಗಿತ್ತಿ ಉತ್ತರಪ್ರದೇಶದ ಅಂಬೇಡ್ಕರ್‌ನಗರದ ಅರುಣಿಮಾ ಸಿನ್ಹಾ.
     ಇತ್ತೀಚಿನ ಉದಾಹರಣೆ ನೋಡೋಣ. ಶ್ರೀ ಸೀತಾರಾಮ ಕೆದಿಲಾಯ ಒಬ್ಬ ಆರೆಸ್ಸೆಸ್ ಪ್ರಚಾರಕರು. ಅವರ ಮನಸ್ಸಿಗೆ ಭಾರತವನ್ನು ಕಾಲುನಡಿಗೆಯಲ್ಲಿ ಸುತ್ತಬೇಕೆಂದು ಮನಸ್ಸಿಗೆ ಬಂದಿತು. ಆ ಯಾತ್ರೆ ಹೇಗಿರಬೇಕೆಂದು ಚಿಂತಿಸಿ ಸಂಕಲ್ಪ ಮಾಡಿ 9.8.2012ರಂದು ಕನ್ಯಾಕುಮಾರಿಯಿಂದ ಪಾದಯಾತ್ರೆ ಪ್ರಾರಂಭಿಸಿಯೇಬಿಟ್ಟರು. ದಿನಕ್ಕೆ 10-15 ಕಿ.ಮೀ. ನಡಿಗೆ. ಕೊನೆಯಲ್ಲಿ ಸಿಗುವ ಹಳ್ಳಿಯಲ್ಲಿ ವಾಸ್ತವ್ಯ. ಗ್ರಾಮದ ಯುವಕರು, ಮುಖ್ಯಸ್ಥರುಗಳೊಂದಿಗೆ ಸಮಾಲೋಚನೆ, ಅಶಕ್ತರ, ಕಾಯಿಲೆಯಿಂದ ನರಳುವವರ, ದೀನ-ದುರ್ಬಲರ ಕುರಿತು ಕರ್ತವ್ಯಪ್ರಜ್ಞೆ, ಜಾಗೃತಿ ಮೂಡಿಸುವ ಕೆಲಸ, ಗಿಡ ನೆಡುವುದು, ಇತ್ಯಾದಿಗಳು ಅಲ್ಲಿನ ಕಾರ್ಯಕ್ರಮದಲ್ಲಿ ಸೇರಿರುತ್ತಿದ್ದವು. ಮರುದಿನ ಮುಂದಿನ ಗ್ರಾಮಕ್ಕೆ ನಡಿಗೆ ಮುಂದುವರೆದಾಗ ಅಲ್ಲಿನ ಗ್ರಾಮಸ್ಥರೂ ಅವರೊಡನೆ ಕೆಲವು ಕಿ.ಮೀ. ನಡೆದು ಬೀಳ್ಕೊಡುತ್ತಿದ್ದರು. ಒಂದು ರಾಜ್ಯದ ಪ್ರವಾಸ ಮುಗಿದಾಗ ಅಲ್ಲಿನ ಸಮಸ್ಯೆಗಳು, ಪರಿಹಾರ ಇತ್ಯಾದಿ ಕುರಿತು ಅಲ್ಲಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದರು. ಹೀಗೆ ಸತತವಾಗಿ 5 ವರ್ಷಗಳ ಕಾಲ ಒಟ್ಟು 1797 ದಿನಗಳು ನಡೆದು, 23 ರಾಜ್ಯಗಳು, 2350 ಹಳ್ಳಿಗಳನ್ನು ಸಂದರ್ಶಿಸಿದ ಅವರು ನಡೆದ ದೂರ 23100 ಕಿ.ಮೀ.ಗಳು. ಕಳೆದ 9.7.2017ರ ಗುರುಪೂರ್ಣಿಮೆ ದಿನದಂದು ಮರಳಿ ಕನ್ಯಾಕುಮಾರಿ ತಲುಪಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. 5 ವರ್ಷಗಳ ಹಿಂದೆ ವಾಮನನಾಗಿ ಹೊರಟಿದ್ದ ವ್ಯಕ್ತಿ ತ್ರಿವಿಕ್ರಮನಾಗಿ ಜನಮನವನ್ನು ಗೆದ್ದುಬಿಟ್ಟಿದ್ದರು. ಅವರ ಘೋಷವಾಕ್ಯ, "ಭಾರತವನ್ನು ತಿಳಿಯಿರಿ, ಭಾರತವೇ ಆಗಿ, ಭಾರತವನ್ನು ವಿಶ್ವಗುರುವನ್ನಾಗಿಸಿ" ಎಂಬುದಾಗಿತ್ತು. 
     ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅರ್ಪಣಾ ಮನೋಭಾವಗಳಿದ್ದರೆ ಏನ್ನಾದರೂ ಸಾಧಿಸಬಹುದು. ದೌರ್ಭಾಗ್ಯವೆಂದರೆ ಸಾಧಕರುಗಳನ್ನು ನಾವು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಳ್ಳುತ್ತೇವೆ. ಅವರುಗಳಿಗೆ ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರಯತ್ನಿಸುವ ನಿರ್ಧಾರದಿಂದ ಸಾಧನೆ ಆರಂಭವಾಗುತ್ತದೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ಇಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರು ಹೇಳುತ್ತಿದ್ದುದೂ ಇದನ್ನೇ- ಧೃಢನಿರ್ಧಾರದ ಒಬ್ಬ ವ್ಯಕ್ತಿ ಗಮನಾರ್ಹ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಒಂದು ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 22, 2017

ಅಮರ ಸ್ನೇಹ


     ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು, ಶಪಿಸುವವರು, ದೂಷಿಸುವವರು, ಇತ್ಯಾದಿಯವರಿಗಿಂತ ನಮ್ಮ ಕಷ್ಟ, ನೋವುಗಳಿಗೆ ನಿಜವಾಗಿ ಸ್ಪಂದಿಸುವವರು ಮತ್ತು ಮೃದುವಾಗಿ ನಮ್ಮ ಗಾಯಗಳ ಮೇಲೆ ಕೈಯಾಡಿಸಿ ಸಾಂತ್ವನ ಹೇಳುವವರೇ ಹೆಚ್ಚು ಪ್ರಿಯರೆನಿಸುತ್ತಾರೆ ಅಲ್ಲವೇ? ಹೀಗೆ ಮಾಡುವವರೇ ನಿಜವಾದ ಸ್ನೇಹಿತರು! ಅಂತಹ ಸ್ನೇಹಿತರ ಸಂಖ್ಯೆ ಸಾವಿರವಾಗಲಿ, ಸ್ನೇಹ ಅಮರವಾಗಲಿ.
     ಸ್ನೇಹ ಅನ್ನುವುದು ಇಬ್ಬರು ಅಥವ ಹೆಚ್ಚಿನ ಜನರೊಂದಿಗೆ ಪರಸ್ಪರ ಹೊಂದಿರುವ ಮಧುರ ಅನುಬಂಧ, ಭಾವಬಂಧ. ಜೀವಿಗಳು ಸ್ವಭಾವತಃ ಸಮಾಜಾವಲಂಬಿಯಾಗಿರುವುದರಿಂದ ಸ್ನೇಹಕ್ಕೆ ಮಹತ್ವ ಬರುತ್ತದೆ. ಸ್ನೇಹ ಅನೇಕ ಗುಣವಿಶೇಷಗಳನ್ನು ಹೊಂದಿದ್ದು ಅದರಲ್ಲಿ ಕರುಣೆ, ಅನುಕಂಪ, ಸತ್ಯ, ಸಮಾನಭಾವ, ಅವಲಂಬನೆ, ನಂಬಿಕೆ, ಸಹವಾಸದಲ್ಲಿ ಸಂತಸ, ಭದ್ರತೆಯ ಭಾವ, ಅಂಜಿಕೆ, ಅಳುಕುಗಳಿಲ್ಲದೆ ಭಾವನೆಗಳ ವಿನಿಮಯ, ಇತ್ಯಾದಿಗಳು ಒಳಗೊಳ್ಳುತ್ತವೆ. ಮೂರ್ಖತನವನ್ನು ನಿರ್ಭಿಡೆಯಿಂದ ತೋರಿಸಿಕೊಳ್ಳಲು ಸಂಕೋಚಿಸದಿರುವುದು ಸ್ನೇಹಿತರಲ್ಲಿ ಮಾತ್ರ ಸಾಧ್ಯ. ಗಾಢವಾದ ಸ್ನೇಹತ್ವ ಹೊಂದಿರುವವರು ಹೆಚ್ಚು ಸಂತೋಷಿಗಳಾಗಿರುತ್ತಾರೆಂಬುದು ಒಂದು ಸಂಶೋಧನೆಯಿಂದ ತಿಳಿದುಬಂದಿರುವ ಸತ್ಯ. ಸ್ನೇಹಕ್ಕೆ ಯಾವುದೇ ನಿಬಂಧನೆಗಳು, ನಿಯಮಗಳನ್ನು ಅನ್ವಯಿಸಲಾಗದಿದ್ದರೂ, ಸ್ನೇಹವನ್ನು ಸಾಮಾನ್ಯವಾಗಿ ಸಮಾನ ಹಿನ್ನೆಲೆ, ಪ್ರವೃತ್ತಿ, ವೃತ್ತಿ, ಆಸಕ್ತಿಗಳು ಮತ್ತು ಇಂತಹುದೇ ಸಾಮಾನ್ಯ ಸಂಗತಿಗಳು ನಿರ್ಧರಿಸುತ್ತವೆ.
     ಸ್ನೇಹ ಬಾಲ್ಯದಿಂದ ವೃದ್ಧಾಪ್ಯದವರೆಗೆ ವಿವಿಧ ರೀತಿಗಳಲ್ಲಿ ವ್ಯಕ್ತಗೊಳ್ಳುತ್ತವೆ. ಬಾಲ್ಯದಲ್ಲಿ ಆಟದ ವಸ್ತುಗಳನ್ನು, ತಿಂಡಿ ಪದಾರ್ಥಗಳನ್ನು ಹಂಚಿಕೊಳ್ಳುವುದರಿಂದ, ಒಟ್ಟಿಗೆ ಆಡುವುದರಿಂದ, ಆಟ-ಪಾಠಗಳನ್ನು ಮಾಡುವುದರಿಂದ ಸ್ನೇಹ ಚಿಗುರುತ್ತದೆ. ಈ ಚಿಕ್ಕ ವಯಸ್ಸಿನಲ್ಲಿ ಆಟದ ಸಾಮಾನುಗಳನ್ನು ಮಕ್ಕಳು ಇತರರೊಡನೆ ಹಂಚಿಕೊಳ್ಳಲು ಇಷ್ಟಪಡದಿದ್ದರೂ, ತಾವು ಇಷ್ಟಪಡುವ, ಸ್ನೇಹಿತರೆಂದು ಭಾವಿಸುವ ಓರಗೆಯವರೊಂದಿಗೆ ಹಂಚಿಕೊಳ್ಳುತ್ತವೆ. ಸ್ನೇಹಿತರೊಂದಿಗೆ ಮಾತ್ರ ಆಟವಾಡಲು, ಒಟ್ಟಿಗೆ ಇರಲು ಬಯಸುತ್ತವೆ. ಬಾಲ್ಯದಲ್ಲಿ ಉತ್ತಮ ಗೆಳೆಯರನ್ನು ಹೊಂದುವ ಮಕ್ಕಳು ಮುಂದೆ ಸಮಾಜದೊಡನೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳಬಲ್ಲವು. ಬಾಲ್ಯದ ಗೆಳೆತನಗಳು ನಂತರದ ಗೆಳೆತನಗಳಿಗಿಂತ ಹೆಚ್ಚು ದೀರ್ಘವಾಗಿ ಬಾಳುತ್ತವೆ ಎಂಬುದು ಅನುಭವವೇದ್ಯ ಸಂಗತಿ. ಬೆಳೆಯುತ್ತಾ ಹೋದಂತೆ ಸ್ನೇಹ ಹೆಚ್ಚು ನಿರೀಕ್ಷೆಗಳನ್ನು ಹೊಂದುತ್ತಾ ಹೋಗುತ್ತದೆ. ಪ್ರಾರಂಭದಲ್ಲಿನ ಸರಳ ವಿಚಾರಗಳು, ಅಂದರೆ ಅಕ್ಕ-ಪಕ್ಕದವರು, ಸಮೀದವರೊಡನೆ ಹೊಂದುವ ಸ್ನೇಹ ನಂತರದಲ್ಲಿ ಒಬ್ಬರಲ್ಲಿ ಒಬ್ಬರ ವಿಶ್ವಾಸ, ನಂಬಿಕೆಗಳನ್ನು ಬಯಸುತ್ತದೆ. ಅದಕ್ಕೂ ನಂತರದಲ್ಲಿ, ಸಮಾನ ಅಭಿರುಚಿ, ಹವ್ಯಾಸಗಳು, ಆಸಕ್ತಿಗಳು ಗಣನೆಗೆ ಬರುತ್ತವೆ. ಸ್ನೇಹ ಶಾಲೆಯಲ್ಲಿ ಕಲಿಯುವಂತಹ ಸಂಗತಿಯಲ್ಲ. ಆದರೆ ಸ್ನೇಹದ ಅರ್ಥ ತಿಳಿಯದವರು ಏನನ್ನೂ ಕಲಿತಿಲ್ಲವೆಂದೇ ಅನ್ನಬೇಕಾಗುತ್ತದೆ. ಸ್ನೇಹಿತರನ್ನು ಪಡೆಯಲು ಇರಬೇಕಾದ ಅರ್ಹತೆಯೆಂದರೆ ಸ್ವತಃ ಸ್ನೇಹಿತರಾಗುವುದು!
     ಹರಯ ಬರುವ ಸಮಯದಲ್ಲಿ ಯುವಕ-ಯುವತಿಯರ ಸ್ವಭಾವ ನಿರ್ಧರಿಸುವಲ್ಲಿ ಸ್ನೇಹ ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಗಮನಿಸಬಹುದಾದ ಸಂಗತಿಯೆಂದರೆ ಯಾರು ಪಾಠ-ಪ್ರವಚನಗಳಲ್ಲಿ, ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಾರೋ ಅವರುಗಳು ಹಾದಿ ತಪ್ಪಲಾರರು ಮತ್ತು ಆರೋಗ್ಯವಂತರಾಗಿರುತ್ತಾರೆ. ತದ್ವಿರುದ್ಧವಾಗಿರುವವರಲ್ಲಿ ಹಲವರು ಹರಯದ ಉತ್ಸಾಹದಲ್ಲಿ ಕುಡಿಯುವುದು, ಧೂಮಪಾನ ಮಾಡುವುದು, ಅಡ್ಡದಾರಿ ಹಿಡಿಯುವುದು, ಇತ್ಯಾದಿಗಳಲ್ಲಿ ತೊಡಗುವುದನ್ನು ಕಾಣಬಹುದು. ವಿರುದ್ಧ ಲಿಂಗಿಗಳ ಬಗ್ಗೆ ಕಾಮಾಕರ್ಷಣೆಯೇ ಸ್ನೇಹವೆಂದು ಭಾವಿಸುವ ವಯಸ್ಸು ಇದು. ಹಾಗೆಂದು ಎಲ್ಲರೂ ಹಾಗಿರುತ್ತಾರೆ ಎನ್ನಲಾಗುವುದಿಲ್ಲ. ಪವಿತ್ರ ಪ್ರೇಮಿಗಳೂ ಇರುತ್ತಾರೆ. ಇಂತಹ ಸೆಳೆತಕ್ಕೆ ಒಳಗಾದವರು ಇದನ್ನೇ ಜೀವನದ ಪ್ರಥಮ ಆದ್ಯತೆಯೆಂದು ತಿಳಿದು ಅನಾಹುತಗಳನ್ನು ಮಾಡಿಕೊಂಡಿರುವುದೂ ಇದೆ.      ಹಣ್ಣು ಮಾಗಿದ ನಂತರ ರುಚಿ ಜಾಸ್ತಿ. ಹಾಗೆಯೇ, ಪ್ರೌಢರಾದಾಗ ಜೀವನದ ಅನುಭವಗಳ ಹಿನ್ನೆಲೆಯಲ್ಲಿ ಸ್ನೇಹಕ್ಕೆ ಮೆರುಗು ಬರುತ್ತದೆ. ನಿಜವಾದ ಸ್ನೇಹದ ಗುಣವೆಂದರೆ ಅರ್ಥ ಮಾಡಿಕೊಳ್ಳುವುದು ಮತ್ತು ಅರ್ಥವಾಗುವುದು ಎಂಬ ಅರಿವು ಆಗ ಮೂಡಿರುತ್ತದೆ. ಬೆಳಕಿನಲ್ಲಿ ಒಂಟಿಯಾಗಿ ನಡೆಯುವುದಕ್ಕಿಂತಲೂ ಕತ್ತಲೆಯಲ್ಲಿ ಸ್ನೇಹಿತರೊಡಗೂಡಿ ನಡೆಯುವುದು ಹಿತಕರವಾಗಿರುತ್ತದೆ. ಎಲ್ಲರೂ ತೊರೆದುಹೋದರೂ ನೈಜ ಸ್ನೇಹಿತ ಎಂತಹ ಸಂದರ್ಭದಲ್ಲೂ ಒಟ್ಟಿಗೆ ಇರಬಯಸುತ್ತಾನೆ. ಅವನು ಕಷ್ಟದಲ್ಲಿ ಸೂಕ್ತ ಸಲಹೆ ಕೊಡುತ್ತಾನೆ, ತಾಳ್ಮೆಯಿಂದ ಕೇಳುತ್ತಾನೆ, ಸಮಸ್ಯೆ ಬಂದಾಗ ಪಲಾಯನ ಮಾಡದೆ ಎದೆಗೊಡುತ್ತಾನೆ, ಧೈರ್ಯದಿಂದ ಸಮರ್ಥಿಸುತ್ತಾನೆ ಮತ್ತು ಬದಲಾಗದೆ ಇರುತ್ತಾನೆ. ಇಂತಹ ಒಬ್ಬ ಸ್ನೇಹಿತ ನೂರಾರು ಬಂಧುಗಳಿಗಿಂತಲೂ ಮಿಗಿಲಾಗಿರುತ್ತಾನೆ.
     ಎಲ್ಲಾ ಸ್ನೇಹಗಳೂ ಒಂದೇ ರೀತಿ ಇರುವುದಿಲ್ಲ, ಇದ್ದರೂ ಹಲವು ಕಾರಣಗಳಿಂದಾಗಿ ದೀರ್ಘಕಾಲ ಬಾಳಲಾರವು. ಸ್ನೇಹದ ತಾಳಿಕೆ, ಬಾಳಿಕೆ ಸಂಬಂಧಿಸಿದವರ ಮನೋಭಾವಗಳನ್ನು ಅವಲಂಬಿಸಿರುತ್ತದೆ. ಒಂದು ಉದಾಹರಣೆ ನೋಡೋಣ. ಅವರಿಬ್ಬರೂ ಬಾಲ್ಯದಿಂದಲೂ ಪರಿಚಿತರು. ರಾಜಕಾರಣದಲ್ಲಿ ಆಸಕ್ತಿ ಹೊಂದಿದವರು, ಒಂದೇ ಸಮುದಾಯಕ್ಕೆ ಸೇರಿದವರು. ಸಮಾನ ಆಸಕ್ತಿಗಳು ಅವರನ್ನು ಒಟ್ಟುಗೂಡಿಸಿದ್ದವು. ಇಬ್ಬರೂ ಪರಸ್ಪರ ಕೈಜೋಡಿಸಿ ಮೇಲೆ ಬಂದರು. ಒಬ್ಬರ ಉತ್ಕರ್ಷಕ್ಕೆ ಇನ್ನೊಬ್ಬರು ಸಹಕಾರಿಗಳಾಗಿದ್ದರು. ಕ್ರಮೇಣ ಅವರು ರಾಜ್ಯಮಟ್ಟದಲ್ಲೂ ಮಿಂಚಿದರು. ಆಗ ಅವರ ಸ್ನೇಹಕ್ಕೆ ಮುಳ್ಳಾಗಿದ್ದು ಅಸೂಯೆ. ಎಲ್ಲಿ ಅವರು ಬೆಳೆದರೆ ತಮ್ಮ ಏಳಿಗೆಗೆ ಧಕ್ಕೆಯಾಗುತ್ತದೋ, ಎಲ್ಲಿ ಅವರು ತಮಗಿಂತ ಹೆಚ್ಚು ಹೆಸರು, ಕೀರ್ತಿ ಗಳಿಸುತ್ತಾರೋ, ತಮ್ಮ ಮತ್ತು ತಮ್ಮವರ ಅsವೃದ್ಧಿಗೆ ತೊಡಕಾಗುತ್ತಾರೋ ಎಂಬ ಭಾವನೆ ಬಲಿಯಲಾರಂಭಿಸಿತೋ, ಅಲ್ಲಿಗೆ ಅವರ ಸ್ನೇಹ ಬಲಿಯಾಯಿತು. ರಾಮ-ಲಕ್ಷ್ಮಣ, ಲವ-ಕಶ, ಎರಡು ದೇಹ-ಒಂದೇ ಅತ್ಮ, ಇತ್ಯಾದಿ ಕರೆಸಿಕೊಳ್ಳುತ್ತಿದ್ದವರು ಶತ್ರುಗಳಾಗಿ ಬದಲಾದರು. ಅವರ ಕಾಲು ಇವರು, ಇವರ ಕಾಲು ಅವರು ಎಳೆದರು. ಇಬ್ಬರೂ ಪತನ ಕಂಡರು. ಇಂತಹ ಅಸೂಯೆ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ, ಅದು ಸಾಹಿತ್ಯವಿರಬಹುದು, ಕಲೆಯಿರಬಹುದು, ವೃತ್ತಿಯಿರಬಹುದು, ಸಮಾಜಸೇವೆ ಆಗಬಹುದು, ಧಾರ್ಮಿಕ ರಂಗವಿರಬಹುದು, ಯಾವುದೇ ಇರಬಹುದು, ಎಲ್ಲಾ ರಂಗಗಳಲ್ಲೂ ಅಸೂಯೆ ಮುಳ್ಳಾಗಿ ಆತ್ಮೀಯರೇ ಶತ್ರುಗಳಾಗುವಂತೆ ಮಾಡಿಬಿಡುತ್ತದೆ.
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರು
ಇಂಥವರ ಸಂಗದಿಂ ದೂರವಿರು ಮೂಢ ||
     ಸ್ನೇಹದಲ್ಲೂ ಅನೇಕ ವಿಧಗಳನ್ನು ಕಾಣಬಹುದು-ಸಾಂದರ್ಭಿಕ ಸ್ನೇಹ, ಕಪಟ ಸ್ನೇಹ, ಅನಿವಾರ್ಯ ಸ್ನೇಹ, ವೃತ್ತಿ/ವ್ಯವಹಾರ ನಿಮಿತ್ತದ ಸ್ನೇಹ, ಇತ್ಯಾದಿ ಪಟ್ಟಿ ಬೆಳೆಸುತ್ತಾ ಹೋಗಬಹುದು. ರೈಲು, ಬಸ್ಸುಗಳಲ್ಲಿ ಪ್ರಯಾಣಿಸುವಾಗ ಅಕ್ಕ-ಪಕ್ಕ ಇರುವವರೊಂದಿಗೆ ಸಹಜವಾಗಿ ಪ್ರಾರಂಭವಾಗುವ ಸಾಂದರ್ಭಿಕ ಮಾತುಗಳ ವಿನಿಮಯ ಪ್ರಯಾಣ ಮುಗಿಯುವ ವೇಳೆಗೆ ಆತ್ಮೀಯತೆಗೆ ತಿರುಗಬಹುದು. ಇಂತಹ ಸಾಂದರ್ಭಿಕ ಸ್ನೇಹ ಪ್ರಯಾಣದ ಅಯಾಸವನ್ನೂ ಮರೆಸಬಲ್ಲದು. ಇನ್ನು ಕಛೇರಿಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ, ವ್ಯವಹಾರ ಕ್ಷೇತ್ರಗಳಲ್ಲಿ ಸಂಪರ್ಕಕ್ಕೆ ಬರುವವರೊಡನೆ ಸ್ನೇಹದಿಂದ ವರ್ತಿಸಲೇಬೇಕಾಗುತ್ತದೆ. ಅದು ವ್ಯವಹಾರದ ಯಶಸ್ಸಿಗೆ ಅಗತ್ಯವಾಗಿರುತ್ತದೆ. ಕಪಟ ಸ್ನೇಹಕ್ಕೆ ರಾಜಕಾರಣದ ಮಿತ್ರರುಗಳು ಉತ್ತಮ ಉದಾಹರಣೆಯಾಗುತ್ತಾರೆ. ಸಮಯ ಬಂದಾಗ ಕಾಲು ಹಿಡಿಯುವ, ಅಗತ್ಯ ಪೂರೈಸಿದೊಡನೆ ಕಾಳೆಳೆಯುವ ಜನರಿಗೇನೂ ಅಲ್ಲಿ ಕೊರತೆಯಿಲ್ಲ. ಅಲ್ಲಿ ಸ್ವಂತದ ಏಳಿಗೆ ಮಾತ್ರ ಪರಿಗಣಿತವಾಗಿರುತ್ತದೆ. ಇಷ್ಟವಿರಲಿ, ಇಲ್ಲದಿರಲಿ ನೇತಾರರುಗಳು ಹೇಳಿದ್ದಕ್ಕೆಲ್ಲಾ ಜೈ ಅನ್ನುವವರು, ಅವರೇ ಇಂದ್ರ, ಚಂದ್ರ, ದೇವೇಂದ್ರ ಅನ್ನುವವರು, ಹೊಗಳಿ ಅಟ್ಟಕ್ಕೇರಿಸುವವರು ಮತ್ತು ಆ ಮೂಲಕ ತಮ್ಮ ಸ್ವಾರ್ಥ ತೀರಿಸಿಕೊಳ್ಳುವವರ ಹಿಂಡೇ ಕಣ್ಣಿಗೆ ರಾಚುತ್ತಿರುತ್ತದೆ. ರಕ್ತ ಸಂಬಂಧ, ವೈವಾಹಿಕ ಸಂಬಂಧಗಳ ಮೂಲಕ ಮೂಡುವ ಸ್ನೇಹ ಗಟ್ಟಿಯಾಗಿರುತ್ತದಾದರೂ ಅಲ್ಲೂ ಸಹ ವೈಮನಸ್ಸುಗಳಿಂದಾಗಿ ಸ್ನೇಹಕ್ಕೆ ಧಕ್ಕೆ ಬಂದು, ಸಂಬಂಧಗಳು ಕಳಚಿಕೊಳ್ಳುವುದನ್ನೂ ಕಾಣುತ್ತಿರುತ್ತೇವೆ. ನೈಜ ಸ್ನೇಹ ಹೊರತುಪಡಿಸಿ ಉಳಿದೆಲ್ಲಾ ಸ್ನೇಹಗಳು ಸಾಮಾನ್ಯವಾಗಿ ಸ್ನೇಹದ ಮುಖವಾಡ ಧರಿಸಿರುತ್ತವೆ.
     ಒಂದಂತೂ ಸತ್ಯ. ಈ ಸ್ನೇಹ ಅನ್ನುವುದು ಎಲ್ಲರಿಗೂ ಅನಿವಾರ್ಯ ಮತ್ತು ಅಗತ್ಯ. ಅದು ಇಲ್ಲದಿದ್ದರೆ ಬದುಕು ನೀರಸವಾಗುತ್ತದೆ. ಅದು ಭಗವಂತ ನೀಡಿರುವ ಜೀವನದ ಅತ್ಯಮೂಲ್ಯ ಮತ್ತು ಅದ್ಭುತ ಉಡುಗೊರೆ. ಚಾಣಕ್ಯ ಹೇಳಿದಂತೆ ಪ್ರತಿ ಸ್ನೇಹದಲ್ಲೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥವಿಲ್ಲದ ಸ್ನೇಹ ಇರಲಾರದು. ಅದು ಕಹಿ ಸತ್ಯ. ಆದರೆ ಅಂತಹ ಸ್ವಾರ್ಥವೂ ಪರಸ್ಪರರ ಏಳಿಗೆಗೆ ಪೂರಕವಾಗಿದ್ದರೆ ಸ್ನೇಹಕ್ಕೆ ಅರ್ಥ ಬರುತ್ತದೆ. ಸ್ನೇಹ ಕಳೆದುಹೋದಾಗ ಮಾತ್ರ ಅದರ ಬೆಲೆ ತಿಳಿದೀತು! ನಾವು ಬರುವಾಗ ಒಂಟಿ, ಹೋಗುವಾಗ ಒಂಟಿ, ಆದರೆ ಬಂದು ಹೋಗುವ ನಡುವಿನ ಅವಧಿಯಲ್ಲಿ ನಾವು ಒಂಟಿಯಲ್ಲ ಎಂಬ ಭಾವನೆ ಮೂಡಿಸುವುದೇ ಸ್ನೇಹದ ಅದ್ಭುತ ಚಮತ್ಕಾರ.
-ಕ.ವೆಂ.ನಾಗರಾಜ್.

ಬುಧವಾರ, ಜುಲೈ 19, 2017

ದಲಿತತ್ವದಿಂದ ಉನ್ನತಿಯೆಡೆಗೆ! - 9


     ನಾವು ಮುಂದೆ ಬರಬೇಕೆಂದರೆ ಇನ್ನೊಬ್ಬರನ್ನು ದ್ವೇಷಿಸುವುದರಿಂದ, ಇನ್ನೊಬ್ಬರನ್ನು ತುಳಿಯುವುದರಿಂದ, ಇನ್ನೊಬ್ಬರ ಪ್ರಗತಿಗೆ ಅಡ್ಡಿಯಾಗುವುದರಿಂದ ಮುಂದೆ ಬರಬಹುದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ನೆರೆಯವರನ್ನು ಪ್ರೀತಿಸು ಎಂಬ ಏಸುವಿನ ವಾಣಿ ಇಲ್ಲಿ ಪ್ರಸ್ತುತ. ನಮ್ಮ ನೆರೆಯವರು ನಮ್ಮ ಬಗ್ಗೆ ಅಸಹಿಷ್ಣುವಾಗಿದ್ದರೆ ನಮ್ಮ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ನೆರೆಯವನನ್ನು ಹತ್ತಿಕ್ಕಿ ಮೆರೆಯುತ್ತೇವೆ ಎಂಬುದೂ ನೆಮ್ಮದಿ ಕೊಡುವುದಿಲ್ಲ. ಬದಲಾಗಿ ಪ್ರತಿಕ್ಷಣವೂ ಅವನೇನು ಮಾಡುತ್ತಾನೋ ಎಂಬ ಅಂಜಿಕೆ, ಅಳುಕುಗಳಲ್ಲಿಯೇ ಜೀವನ ಸವೆಯುತ್ತದೆ. ಬದಲಾಗಿ ಹೊಂದಿಕೊಂಡು ಹೋದರೆ? ಇಬ್ಬರಿಗೂ ನೆಮ್ಮದಿ! ಈ ತತ್ವವನ್ನು ಎಲ್ಲರೂ ಮನಗಾಣುವ, ಎಲ್ಲರಿಗೂ ಮನಗಾಣಿಸುವ ಕೆಲಸಕ್ಕೆ ಒತ್ತು ಕೊಡಬೇಕು. ಕಾಯದೆ, ಕಾನೂನುಗಳು ಒಂದು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಹಟಕ್ಕೆ ಬಿದ್ದರೆ ಹಾನಿ ತಪ್ಪದು. ಪ್ರಚೋದಿಸುವವರ, ಹಾದಿ ತಪ್ಪಿಸುವವರ ವಿರುದ್ಧ ಎಚ್ಚರಿಕೆಯಿಂದಿರಬೇಕು. ಸಂಘರ್ಷದಿಂದ ಫಲ ಸಿಗಬಹುದು, ಆದರೆ ಅದು ಮಾಡುವ ಹಾನಿಯ ಮುಂದೆ ಸಿಗುವ ಫಲ ಚಿಕ್ಕದೇ ಆಗಿರುತ್ತದೆ. ಸಾಮರಸ್ಯದಿಂದ ಸಿಗುವ ಫಲ ಚಿಕ್ಕದೇ ಆದರೂ ಅದು ದೀರ್ಘಕಾಲಿಕ ಲಾಭ ತರದೇ ಇರದು.
     ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವವರಾದರೆ, ನಡೆಯುವುದಾದರೆ ಈ ಜಗತ್ತು ನಡೆಯುವುದಾದರೂ ಹೇಗೆ? ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಅವರವರ ವಿಚಾರ ಅವರಿಗಿರಲಿ. ಆದರೆ, ನನ್ನ ವಿಚಾರವೇ ಸರಿ, ಅದನ್ನು ಎಲ್ಲರೂ ಒಪ್ಪಲೇಬೇಕೆಂಬ ಆಗ್ರಹ ಮಾತ್ರ ಸರಿಯೆನಿಸುವುದಿಲ್ಲ.
ನಿನಗೆ ನೀನೆ ಬಂಧು ನಿನಗೆ ನೀನೆ ಶತ್ರು
ಪರರು ಮಾಡುವುದೇನು ನಿನದೆ ತಪ್ಪಿರಲು |
ಉನ್ನತಿಗೆ ಹಂಬಲಿಸು ಅವನತಿಯ ಕಾಣದಿರು
ನಿನ್ನುದ್ಧಾರ ನಿನ್ನಿಂದಲೇ ಮೂಢ ||
     ದಲಿತತ್ವದಿಂದ ಮೇಲೇರಬೇಕೆಂದರೆ ಮೇಲೇರಬೇಕೆಂಬ ಅದಮ್ಯ ವಿಶ್ವಾಸ ಮೊದಲು ಇರಬೇಕು. ಸವಲತ್ತುಗಳು, ಸಮಾಜ ಸುಧಾರಕರ ಬೆಂಬಲಗಳು, ಕಾಯದೆ-ಕಾನೂನುಗಳನ್ನು ಸಹಾಯಕ್ಕಾಗಿ ಬಳಸಿಕೊಳ್ಳಬಹುದೇ ಹೊರತು ಅಷ್ಟರಿಂದ ಮಾತ್ರ ಮೇಲೆ ಬರುವುದು ಕಷ್ಟ. ಆತ್ಮವಿಶ್ವಾಸವಿದ್ದರೆ ನೂರು ರೀತಿಯ ಅಡ್ಡಿ-ಅಡಚಣೆಗಳು ಏನೂ ಮಾಡಲಾರವು. ಉತ್ತಮ ರೀತಿಯ ವಿದ್ಯಾಭ್ಯಾಸ ಗಳಿಕೆ ಗುರಿಯಾಗಬೇಕು. ಇಂದು ಯಾರಾದರೂ ಮುಂದಿದ್ದಾರೆಂದು ಅಂದುಕೊಂಡರೆ ಅವರು ಏಕೆ ಮುಂದಿದ್ದಾರೆ ಎಂಬ ಅಂಶವನ್ನು ಅಧ್ಯಯಿಸಿದರೆ ಅವರ ಜೀವನಶೈಲಿ ಮತ್ತು ಮುಂದುವರೆಯಬೇಕೆಂಬ ಛಲವೇ ಅದಕ್ಕೆ ಕಾರಣವೆಂಬುದು ಗೊತ್ತಾಗುತ್ತದೆ. ಇದನ್ನು ನಮ್ಮದಾಗಿಸಿಕೊಳ್ಳಬಾರದೇಕೆ? ಆತ್ಮ ವಿಶ್ವಾಸವಿಲ್ಲದವನ ಬಳಿ ಇರುವ ಹಣ, ಅಧಿಕಾರ, ತೋಳ್ಬಲ ಎಲ್ಲವೂ ವ್ಯರ್ಥ. ಆತ್ಮವಿಶ್ವಾಸವಿರುವವನಿಗೆ ಇವು ಯಾವುವೂ ಇಲ್ಲದಿದ್ದರೂ ಅವನು ಯಶಸ್ವಿಯಾಗುವನು. ಯೋಗ್ಯತೆ ಇದ್ದವರು ಯಾವ ರಂಗದಲ್ಲಿಯೇ ಆಗಲಿ ಯಶಸ್ಸು ಕಾಣುತ್ತಾರೆ, ಇಲ್ಲದವರು ಹಿಂದುಳಿಯುತ್ತಾರೆ. ಯೋಗ್ಯತೆ ಮತ್ತು ಅರ್ಹತೆಗಳಿಗೆ ಜಾತಿ ಮಾನದಂಡ ಅಲ್ಲವೇ ಅಲ್ಲ, ಆಗಲೂಬಾರದು. ದಲಿತರಲ್ಲಿ ಆತ್ಮವಿಶ್ವಾಸವನ್ನು, ಸ್ವಾಭಿಮಾನವನ್ನು ಜಾಗೃತಗೊಳಿಸುವ ಕೆಲಸ ಆದ್ಯತೆ ಪಡೆಯಬೇಕು. ಆಗ ಅಂಬೇಡ್ಕರರ ಆಶಯದಂತೆ ಸ್ವಂತ ಬಲದಿಂದ ಮಂದೆ ಬರುವ ಛಲ ಅವರಲ್ಲಿ ಮೂಡುತ್ತದೆ.  
     ದೇಶಪ್ರೇಮ, ಧರ್ಮಪ್ರೇಮ, ಜಾತಿಪ್ರೇಮ, ಭಾಷಾಪ್ರೇಮ ಎಲ್ಲವೂ ಒಳ್ಳೆಯದೇ. ಅಸಮಾನತೆಗೆ ದೇಶ, ಧರ್ಮ, ಜಾತಿ, ಭಾಷೆಗಳು ಕಾರಣವಲ್ಲ. ಆದರೆ ದೇಶ, ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಅದೆಷ್ಟು ಮಾರಣಹೋಮಗಳಾಗಿವೆ! ನಿಜವಾದ ಕಾರಣ ನಿಮಗೆ ಈಗ ಗೊತ್ತಾಗಿರಬಹುದು. ಇತರ ದೇಶ/ಧರ್ಮ/ಜಾತಿ/ಭಾಷೆಗಳ ಮೇಲಿನ ದ್ವೇಷವೇ ಅದು! ಅದನ್ನು ತ್ಯಜಿಸಿದರೆ ನಾವು ವಿಶ್ವಮಾನವರೇ. ಅಸಮಾನತೆಯನ್ನು ಹೋಗಲಾಡಿಸಲು ಧರ್ಮ/ಜಾತಿಗಳು ಹುಟ್ಟಿದವು. ಆದರೆ ಮುಂದೆ ಅವೇ ಅಸಮಾನತೆಗೆ ಮೆಟ್ಟಲುಗಳಾದವು. ಸಮಾನತೆಯ ಸಾಧನೆಗೆ ಕೇವಲ ಸರ್ಕಾರವನ್ನು ನೆಚ್ಚಿ ಕುಳಿತುಕೊಳ್ಳುವಲ್ಲಿ, ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಕೇವಲ ಸಾಧನ ಮಾತ್ರ. ಆ ಸಾಧನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಮಾಡಬೇಕಾದವರು ನಾವುಗಳೇ.
     ಸಮಾನತೆಯನ್ನು ಜನರ ಬುದ್ಧಿಶಕ್ತಿಯಲ್ಲಿ, ದೇಹಶಕ್ತಿಯಲ್ಲಿ, ಮನೋಭಾವದಲ್ಲಿ, ಭೌತಿಕ ಸೌಂದರ್ಯದಲ್ಲಿ, ಇತ್ಯಾದಿ ಹತ್ತು ಹಲವು ರೀತಿಗಳಲ್ಲಿ ತರುವುದು ಸಾಧ್ಯವಿದೆಯೇ? ಸಮಾನತೆಯನ್ನು ತರಲು ಸಾಧ್ಯವಿರುವಂತಹ ಸಂಗತಿಗಳಲ್ಲಿ ಮಾತ್ರ ಅದನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ. ಯಾವುದರಲ್ಲೋ ಸಮಾನತೆ ತರುತ್ತೇವೆಂದು ಮತ್ತಿನ್ಯಾವುದೋ ರೀತಿಯ ತಾರತಮ್ಯಗಳನ್ನು ಜನರ ನಡುವೆ ಉಂಟುಮಾಡುವ, ಸಮಾನತೆಯ ಹೆಸರಿನಲ್ಲಿ ಅಸಮಾನತೆ ಹೆಚ್ಚಿಸುವ ಸರ್ಕಾರದ ಇಂದಿನ ರೀತಿ-ನೀತಿಗಳು, ಕಾರ್ಯಕ್ರಮಗಳು ಬದಲಾದರೆ ಮಾತ್ರ ಏನನ್ನಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯ. ಈ ವೇದಮಂತ್ರದ ಸಂದೇಶ ಅರ್ಥಪೂರ್ಣವಾಗಿದೆ:
ಯೇ ಪಂಥಾನೋ ಬಹವೋ ದೇವಯಾನಾ ಅಂತರಾ ದ್ಯಾವಾಪೃಥಿವೀ ಸಂಚರಂತಿ | ತೇಷಾಮಜ್ಯಾನಿಂ ಯತಮೋ ವಹಾತಿ ತಸ್ಮೈಮಾದೇವಾಃ ಪರಿಧತ್ತೇಹ ಸರ್ವೇ | ಗ್ರೀಷ್ಮೋ ಹೇಮಂತಃ ಶಿಶಿರೋ ವಸಂತಃ ಶರದ್ವರ್ಷಾಃ ಸ್ವಿತೇನೋದಧಾತ | ಆನೋಗೋಷು ಭಜತಾಂ ಪ್ರಜಯಾಂ ನಿವಾತ ಇದ್ ವಃ ಶರಣೇಸ್ಯಾಮ | ಇದಾವತ್ಸರಾಯ ಪರಿವತ್ಸರಾಯ ಸಂವತ್ಸರಾಯ ಕೃಣುತಾ ಬೃಹನ್ನವಮ್ | ತೇಷಾಂ ವಯಂ ಸುಮತೌ ಯಜ್ಞಿಯಾನಾಮಪಿ ಭದೇ ಸೌಮನಸೇ ಸ್ಯಾಮ || (ಅಥರ್ವ.6.55.1,2)
     ಅರ್ಥ: ಜನರು ಒಳ್ಳೆಯವರಾಗಲು ಬಹಳಷ್ಟು ದಾರಿಗಳಿವೆ. ಯಾವ ದಾರಿ ಒಳ್ಳೆಯದೋ ಅದರಲ್ಲಿ ಮಾತ್ರ ಹೋಗಬೇಕು. ಒಳ್ಳೆಯ ದಾರಿಯ ಪಯಣ ಮತ್ತು ಒಳ್ಳೆಯದನ್ನೇ ಮಾಡುವುದರಿಂದ ಸದಾ ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ. ನಮಗಾಗಿ ಶ್ರಮಿಸುವ ಹಾಲು ಕೊಡುವ ಹಸುಗಳಿಗೆ, ಹೊಲ-ಗದ್ದೆಗಳಲ್ಲಿ ದುಡಿಯುವ ಎತ್ತುಗಳಿಗೆ, ಜೀವರಿಗೆ ನಾವು ಒಳಿತನ್ನೇ ಬಯಸಬೇಕು. ಮನೆಯಲ್ಲೂ, ಮನೆಯ ಹೊರಗೂ ಎಲ್ಲೆಡೆಯೂ, ಎಲ್ಲರೊಂದಿಗೂ ನಮ್ಮ ನಡವಳಿಕೆಗಳು ಪ್ರೇಮಭಾವದಿಂದ ಕೂಡಿರಬೇಕು. ಅನ್ನ, ಜಲ, ಅವಕಾಶಗಳು ಸಮೃದ್ಧಿಯಾಗಿರುವಂತೆ ನೋಡಿಕೊಂಡು, ಜ್ಞಾನಪ್ರಸಾರ, ಕೆಲಸಕಾರ್ಯಗಳು, ಸಮಾನ ಅವಕಾಶಗಳು ಸದಾ ಸಮೃದ್ಧವಾಗಿರುವಂತೆ ಇರಬೇಕು. ಹೀಗಿದ್ದರೆ ದೇಶದ ಉನ್ನತಿ, ಎಲ್ಲರಲ್ಲಿ ಭಾವೈಕ್ಯ ಮೂಡದೇ ಇದ್ದೀತೆ? ತಾರತಮ್ಯವಿರದ ಸಹೃದಯ ಪೂರ್ಣ ಸದ್ಗುಣಗಳು ಮಾತ್ರ ಸಮಾನತೆಗೆ ಪ್ರೇರಕ ಅಂಶಗಳು.
     ಪ್ರಗತಿ ಜೀವಂತಿಕೆಯ ಸಂಕೇತ. ಈಗ ಇರುವುದಕ್ಕಿಂತ ಮುಂದಿನ ಉತ್ತಮ ಸ್ಥಿತಿಗೆ ಮುಂದೆ ಹೋಗೋಣ. ಮುಂದೆ ಹೋದಾಗ ಹಿಂತಿರುಗಿ ನೋಡಿ, ಹಿಂದೆ ಬಿದ್ದವರನ್ನು ಮುಂದೆ ಬರಲು ಸಹಕರಿಸಿ ಕೈಹಿಡಿದು ಮುಂದೆ ತರೋಣ. ಮತ್ತೆ ಮುಂದೆ ಹೋಗೋಣ, ಮತ್ತೆ ಹಿಂದಿರುವವರನ್ನೂ ಮುಂದಕ್ಕೆ ತರೋಣ, ಮತ್ತೆ ಮುಂದೆ ಹೋಗೋಣ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇದು ನಿಜವಾದ ಸಮಾನತೆಯ, ನಿಜವಾದ ಮಾನವತೆಯ, ನಿಜವಾದ ವಿಶ್ವಭ್ರಾತೃತ್ವದ ಕಲ್ಪನೆ. ಈ ಕಲ್ಪನೆ ಸಾಕಾರವಾಗಬೇಕಾದರೆ ಇದಕ್ಕೆ ಪೂರಕವಾದ ಜ್ಞಾನದ ಅರಿವನ್ನು ಮೂಡಿಸುವ ಕಾರ್ಯ ಮುಂದೆ ಇರುವವರದಾಗಿದೆ. ಟೀಕೆ ಮಾಡುತ್ತಾ, ಒಬ್ಬರನ್ನೊಬ್ಬರು ದೂಷಿಸುತ್ತಾ ಅವರ ಕಾಲನ್ನು ಇವರು ಕಾಲನ್ನು ಅವರು ಎಳೆಯುತ್ತಾ ಪರಿಸ್ಥಿತಿ ವಿಷಮಗೊಳಿಸುವುದರಿಂದ ಯಾರೂ ಮುಂದೆ ಬರಲಾರರು.. ಮುಂದೆ ಬರಬೇಕೆಂದರೆ ಮುಂದೆ ಹೋಗಬೇಕಷ್ಟೆ. ಸಮಾನತೆ ಬೇಕೆಂದರೆ ಹಿಂದಿರುವವರನ್ನು ಮುಂದೆ ತರಬೇಕಷ್ಟೆ, ಮುಂದಿರುವವರನ್ನು ಹಿಂದೆ ತರುವುದಲ್ಲ. ಇದಕ್ಕೆ ಬೇರೆ ಅಡ್ಡದಾರಿಗಳಿಲ್ಲ. ಸಂ ಅಜತಿ ಇತಿ ಸಮಾಜಃ - ಒಂದುಗೂಡಿ ಮುಂದುವರೆಯುವುದೇ ಸಮಾಜ. ಇಲ್ಲದಿದ್ದರೆ ಅದು ಸಮಾಜ ಅನ್ನಿಸಿಕೊಳ್ಳದೆ, ದುಃ ಅಜ ಅರ್ಥಾತ್ ದುರಾಜ ಆಗುತ್ತದೆ. ದಲಿತತ್ವ ಮತ್ತು ಉನ್ನತಿ ಇವೆರಡೂ ನಮ್ಮ ಜೀವನದ ಸ್ಥಿತಿಗಳಷ್ಟೆ. ನಮಗಿಂತ ಎಷ್ಟೋ ಜನರು ನಮಗಿಂತ ಮುಂದಿರುತ್ತಾರೆ. ಆದ್ದರಿಂದ ನಾವು ಹಿಂದುಳಿದವರು. ನಮಗಿಂತ ಅದೆಷ್ಟೋ ಜನರು ಹಿಂದುಳಿದಿದ್ದಾರೆ. ಆದ್ದರಿಂದ ನಾವು ಮುಂದುವರೆದವರು! ನಾವೀಗ ಮಾಡಬೇಕಾದುದೇನೆಂದರೆ ಹಿಂದುಳಿದಿರುವವರನ್ನು ನಮ್ಮ ಜೊತೆಜೊತೆಗೇ ಮುಂದೆ ತಂದು, ನಮಗಿಂತ ಮುಂದೆ ಇರುವವರ ಜೊತೆಗೆ ಸಮನಾಗಿ ಹೋಗುವ ಮತ್ತು ಅವರನ್ನೂ ಮೀರಿಸುವ ಪ್ರಯತ್ನ ಎಡೆಬಿಡದೆ ಮಾಡೋಣ, ಮುನ್ನಡೆಯೋಣ, ದಲಿತತ್ವದಿಂದ ಉನ್ನತಿಯೆಡೆಗೆ ಸಾಗೋಣ.
 ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. 16-32]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ; ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ; ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ; ಅಂತೆಯೇ ನಡುವಯಸ್ಕನಿಗೆ ನಮಸ್ಕಾರ; ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.
-ಕ.ವೆಂ.ನಾಗರಾಜ್.


ಮಂಗಳವಾರ, ಜುಲೈ 18, 2017

ದಲಿತತ್ವದಿಂದ ಉನ್ನತಿಯೆಡೆಗೆ! - 8


     ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ಸಮಯದಿಂದ ತಾರತಮ್ಯ ಪ್ರಾರಂಭವಾಗುತ್ತದೆ. ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಹೆಣ್ಣೂ ಸಹ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನೂ ತಳ್ಳಿಹಾಕಲಾಗದು. ಜಾತಿ, ಧರ್ಮದ ಕಟ್ಟುಪಾಡುಗಳಲ್ಲಿ ಆಕೆಯನ್ನು ಕಟ್ಟಿಹಾಕಿ ಶಿಕ್ಷಣ ಪಡೆಯುವ ಹಕ್ಕಿನಿಂದಲೂ ಅವರು ವಂಚಿತರಾಗಿರುವುದು ಸುಳ್ಳಲ್ಲ. ಅವರು ಧರಿಸುವ ವಸ್ತ್ರಗಳ ಬಗ್ಗೆ ಸಹ ಮತಾಂಧರು ಕಟ್ಟುನಿಟ್ಟು ಮಾಡಿರುವುದು ತಿಳಿದ ವಿಷಯ. ಹೆಣ್ಣು ಎಷ್ಟು ಸುರಕ್ಷಿತ ಎಂಬುದು ಈಗ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೇ ಸಾಕ್ಷಿ ಹೇಳುತ್ತಿವೆ. ಅನೇಕ ಕಾರಣಗಳಿಂದಾಗಿ ಲಿಂಗಸಮಾನತೆ ಸಾಧ್ಯವಿರದಿರಬಹುದು, ಆದರೆ ಸಮಾನ ಅವಕಾಶಗಳಿಂದ ಹೆಣ್ಣು ವಂಚಿತಳಾಗಬಾರದು. ಇಲ್ಲಿ ಹಿಂದಿನ ಸಂಗತಿಗಳಲ್ಲಿ ವಿಶ್ಲೇಷಿಸಿದಂತೆ ಸಮಾನತೆ ಎಂದರೆ ಸಮಾನ ಅವಕಾಶಗಳು ಎಂದು. ಸಮಾನ ಅವಕಾಶಗಳಿದ್ದು ಹೆಣ್ಣು ಎಷ್ಟು ಸಾಧನೆ ಮಾಡಲು ಸಾಧ್ಯವೋ ಮಾಡಲು ಸಾಧ್ಯವಾಗುವಂತಾಗಬೇಕು.
     ಈ ವೇದಮಂತ್ರದ ಆಶಯ ಉದಾತ್ತವಾದುದಾಗಿದೆ: ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. 5.59.6] - ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ ಎಂಬುದು ಇದರ ಅರ್ಥ.
     ಸಮಾನತೆಯ ಬಗ್ಗೆ ಮಾತನಾಡುವಾಗ ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕಿದೆ. ಅದೆಂದರೆ ಯಾವುದೇ ವ್ಯಕ್ತಿ ಈಗ ತಾನು ಇರುವುದಕ್ಕಿಂತ ಮೇಲಿನ ಸ್ಥಿತಿಗೆ ತಲುಪಲು ಪ್ರಯತ್ನಿಸುತ್ತಲೇ ಇರುತ್ತಾನೆ. ಕಟು ವಾಸ್ತವವೆಂದರೆ ಮೊದಲು ನಾವು ನಮ್ಮನ್ನು ಇಷ್ಟಪಡುತ್ತೇವೆ, ನಂತರ ಬೇರೆಯವರನ್ನು! ಸಮಾನತೆಯನ್ನು ಯಾರೂ ಕೊಡುವುದಿಲ್ಲ, ನಾವು ಗಳಿಸಬೇಕು. ಬಡವ ಶ್ರೀಮಂತನಾಗಲು, ಆಟಗಾರ ಶ್ರೇಷ್ಠ ಆಟಗಾರನಾಗಲು, ಇರುವುದಕ್ಕಿಂತ ಉನ್ನತ ಅಧಿಕಾರ ಹೊಂದಲು ಬಯಸುತ್ತಲೇ ಇರುತ್ತಾರೆ. ಸಮಾನತೆಯೆಂದರೆ ಎಲ್ಲರೂ ಒಂದು ಹಂತದಲ್ಲೇ ಉಳಿದು ಸಮನಾಗಿ ಬಾಳುವುದಲ್ಲ. ಪದೇ ಪದೇ ಒತ್ತಿ ಹೇಳುತ್ತಿರುವಂತೆ ಇಲ್ಲೂ ಸಹ ಉನ್ನತ ಸ್ಥಿತಿ ತಲುಪಲು ಎಲ್ಲರಿಗೂ ಸಮಾನ ಅವಕಾಶವಿರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಆದರೆ ಈಗೇನಾಗುತ್ತಿದೆ? ಭ್ರಷ್ಟಾಚಾರ ಈ ಎಲ್ಲಾ ಸಮಾನ ಅವಕಾಶಗಳಿಗೆ ಕೊಕ್ಕೆ ಹಾಕಿದೆ. ಅಪಮಾರ್ಗಗಳನ್ನು ಬಳಸಿ ಮೇಲೇರುವ ಪ್ರಯತ್ನ, ಇತರರನ್ನು ಮುಂದೆ ಬರದಂತೆ ತಡೆಯುವ ಪ್ರಯತ್ನಗಳು ಮೇಲುಗೈ ಸಾಧಿಸಿವೆ. ಸಮಾನತೆ, ವಿಶ್ವಭ್ರಾತೃತ್ವದ ಕನಸು ಕಾಣುವವರು ಮೊದಲು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಇತರರಿಗೆ ಅವರು ಮಾರ್ಗದರ್ಶಿಯಾಗಬಲ್ಲರು.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಭಾರತ ರತ್ನ ಅಂಬೇಡ್ಕರರು ಸಾಮಾಜಿಕ ತಾರತಮ್ಯದ ವಿರುದ್ಧ ಪ್ರಬಲ ದ್ವನಿ ಎತ್ತುವುದರೊಡನೆ ಶಿಕ್ಷಣ ಮತ್ತು ಸ್ವಾಭಿಮಾನದ ಮಹತ್ವವನ್ನೂ ಒತ್ತಿ ಹೇಳಿದ್ದಾರೆ. ದಲಿತರು ತಮ್ಮನ್ನು ಬೇರೆಯವರು ಉದ್ಧಾರ ಮಾಡಲಿ ಎಂದು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಇತರರು ಮೊದಲು ತಮ್ಮ ಉದ್ಧಾರ ನೋಡಿಕೊಂಡು ದಲಿತರ ಹೆಸರಿನಲ್ಲಿ ಲಾಭ ಪಡೆಯುವರಷ್ಟೇ ಹೊರತು ದಲಿತರಿಗೆ ಅದರಿಂದ ಪ್ರಯೋಜನ ಕಡಿಮೆ. ಬಲಶಾಲಿಯಾದವರು ಉಳಿಯುತ್ತಾರೆ ಎಂಬುದು ಪ್ರಕೃತಿ ನಿಯಮ. ದೇಶದ ಪ್ರಥಮ ಪ್ರಧಾನಿ ನೆಹರೂರವರ ವಿಷಯವನ್ನೇ ಪ್ರಾಸಂಗಿಕವಾಗಿ ಉದಾಹರಿಸುವುದಾದರೆ ಇತಿಹಾಸವನ್ನು ತಿರುಚುವುದಕ್ಕೆ ಅವಕಾಶ ಮಾಡಿಕೊಟ್ಟು, ಗಾಂಧಿ ಮತ್ತು ನೆಹರೂರವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂಬ ಅಂಶಕ್ಕೆ ಒತ್ತು ಕೊಟ್ಟಿದ್ದರು. ಇಂದು ಯಾರನ್ನೇ ಕೇಳಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂಬ ಪ್ರಶ್ನೆಗೆ ಗಾಂಧೀಜಿ ಎಂಬ ಉತ್ತರ ಥಟ್ಟನೆ ಬಂದುಬಿಡುತ್ತದೆ. ದೇಶಕ್ಕಾಗಿ ಪ್ರಾಣ ತೆತ್ತ ಅಸಂಖ್ಯ ಶೂರ ವೀರರ ನೆನಪುಗಳನ್ನು ಉದ್ದೇಶಪೂರ್ವಕ ಮರೆಮಾಚುವಲ್ಲಿ ಅಧಿಕಾರಬಲದಿಂದ ನೆಹರೂ ಸಂತತಿ ಯಶಸ್ವಿಯಾಯಿತು.. ಸಂಗೊಳ್ಳಿ ರಾಯಣ್ಣ, ದೊಂಡಿಯವಾಘ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ, ರಾಣಾ ಪ್ರತಾಪ, ಶಿವಾಜಿ, ಭಗತಸಿಂಹ, ರಾಜಗುರು, ಚಂದ್ರಶೇಖರ ಆಜಾದ್, ಸಾವರ್ಕರ್, ಆಶ್ಫಾಕ್ ಉಲ್ಲಾ, ಮದನಲಾಲ ಧಿಂಗ್ರ, ವಾಸುದೇವ ಬಲವಂತ ಫಡಕೆ, ಉಧಮ್ ಸಿಂಗ್ ಮೊದಲಾದ ಸಹಸ್ರ ಸಹಸ್ರ ಬಲಿದಾನಿಗಳ ಕುರಿತು ವಿವರಗಳನ್ನು ಶಾಲೆಗಳಲ್ಲಿ ಕಲಿಸಿ ದೇಶಾಭಿಮಾನ ಬೆಳೆಸುವ ಕೆಲಸ ಆಗಿದೆಯೇ? ಆಗುವುದೇ? ಅದೆಷ್ಟೋ ಜನರ ಹೆಸರುಗಳೇ ತಿಳಿಯದಷ್ಟರ ಮಟ್ಟಿಗೆ ಇತಿಹಾಸದ ಮೇಲೆ ಪರದೆ ಎಳೆದುಬಿಟ್ಟಿದ್ದಾರೆ. ದೇಶಕ್ಕಾಗಿ ಇವರುಗಳು ಮಾಡಿದ ಬಲಿದಾನವನ್ನು ನೆನೆಸಿಕೊಳ್ಳದಿದ್ದರೆ ಅದು ನಮ್ಮ ಕೃತಘ್ನತೆಯಾಗುವುದಿಲ್ಲವೇ? ಕೆಲವರ ಸ್ವಾರ್ಥಕ್ಕಾಗಿ  ಇವರುಗಳ ನಿಸ್ವಾರ್ಥ ಸೇವೆಗೆ ಮಸಿ ಬಳಿಯಬೇಕೇ? ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ಸತ್ಯಸಂಗತಿಗಳನ್ನು ತಿರುಚಬೇಕೆ? ಸತ್ಯ ಇತಿಹಾಸ ಬೆಳಕಿಗೆ ಬರಲಿ ಎಂದು ಅಪೇಕ್ಷಿಸಿದರೆ ಅದನ್ನು ಕೇಸರೀಕರಣ ಎಂಬ ಕಾಲ್ಪನಿಕ ಗುಮ್ಮನನ್ನು ಛೂ ಬಿಟ್ಟು ಅದುಮಿಡುವ ಪ್ರಯತ್ನ ಮಾಡುತ್ತಾರೆ. ನಮಗೆ ಬೇಕಿರುವುದು ಕೇಸರೀಕರಣವೂ ಅಲ್ಲ, ಹಸಿರೀಕರಣವೂ ಅಲ್ಲ, ಕೆಂಪು ಛಾಯೆಯೂ ಅಲ್ಲ, ಇರುವುದನ್ನು ಇದ್ದಂತೆ ಇತಿಹಾಸವನ್ನು ತಿಳಿಯುವ ಹಕ್ಕು ಅಷ್ಟೆ. ಈ ಧ್ವನಿ ದುರ್ಬಲವಾದರೆ ಅದನ್ನು ಯಾರೂ ಕೇಳುವುದಿಲ್ಲ. ಪ್ರಬಲವಾದರೆ, ಸತ್ಯ ಪುಟಕ್ಕಿಟ್ಟ ಚಿನ್ನದಂತೆ ಹೊರಬರುತ್ತದೆ. ಅದೇ ರೀತಿ ದಲಿತರು ಮುಂದೆ ಬರಬೇಕೆಂದರೆ ದಲಿತರೇ ಸ್ವಾಭಿಮಾನದ ಕೆಚ್ಚಿನಿಂದ ಮುಂದೆ ಬರುವ ಮನಸ್ಸು ಮಾಡಿದರಷ್ಟೇ ಸಾಧ್ಯ. ಸ್ವಾಮಿ ವಿವೇಕಾನಂದರು ಸಾರಿದ್ದೂ ಇದನ್ನೇ - ಏಳು, ಎದ್ದೇಳು, ಬಲಶಾಲಿಯಾಗು! ಆಗ ಜಗತ್ತು ನಿನ್ನ ಮಾತು ಕೇಳುತ್ತದೆ!
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ|
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ||
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ದಲಿತತ್ವದಿಂದ ಉನ್ನತಿಯೆಡೆಗೆ! - 7


     ಇನ್ನೊಂದು ಪ್ರಮುಖ ಸಂಗತಿಯನ್ನು ಇಲ್ಲಿ ಗಮನಿಸಬೇಕಿದೆ. ಅದೆಂದರೆ ಹಿಂದಿರುವುದಕ್ಕೆ ಅಥವ ಮುಂದೆ ಇರುವುದಕ್ಕೆ ಜಾತಿ ಎಂದೂ ಕಾರಣ ಅಲ್ಲವೇ ಅಲ್ಲ. ನಿಜವಾದ ಕಾರಣವೆಂದರೆ ಜೀವನಶೈಲಿ ಮಾತ್ರ ಹಿಂದೆ ಉಳಿಯುವುದರಲ್ಲಿ ಅಥವ ಮುಂದೆ ಬರುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಕುಟಿಲ ರಾಜಕಾರಣಿಗಳು, ಪೂರ್ವಾಗ್ರಹ ಪೀಡಿತ, ಸ್ವಾರ್ಥಪ್ರೇರಿತ ಸಾಹಿತಿಗಳು ಮತ್ತು ಇಂತಹ ಮನಸ್ಕರು ಮಾತ್ರ ಅಧಿಕಾರ, ಕೀರ್ತಿ ಮತ್ತು ಸ್ವಲಾಭದ ಸಲುವಾಗಿ ಸಂವಿಧಾನಾತ್ಮಕವಾದ ಈ ಜಾತ್ಯಾತೀತ ದೇಶದಲ್ಲಿ ಜಾತಿ ಜಾತಿಗಳಲ್ಲಿ ವಿಷಬೀಜ ಬಿತ್ತುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೃಪಾಪೋಷಿತ ಮಾಧ್ಯಮಗಳೂ ಇದಕ್ಕೆ ನೀರೆರೆಯುತ್ತಿವೆ. ಜಾತಿ ವಿದ್ವೇಷ ಅಥವ ಜಾತಿಪ್ರೇಮವನ್ನೇ ಬಂಡವಾಳವಾಗಿಸಿಕೊಂಡ ಕೆಲವು ಸಾಹಿತಿಗಳೂ ಜಾತಿ-ಜಾತಿಗಳಲ್ಲಿ ವೈಮನಸ್ಯ ಪೋಷಿಸುತ್ತಿರುವುದು ಪರಿಸ್ಥಿತಿ ವಿಷಮಗೊಳಿಸಿದೆ. ಭಾರತದ ರಾಷ್ಟ್ರಪತಿಯಾಗಿದ್ದ ಡಾ, ಝಾಕಿರ್ ಹುಸೇನರು ಹೇಳಿದ್ದ ಈ ಮಾತು ಇಲ್ಲಿ ಬಹಳ ಪ್ರಸ್ತುತವಾಗುತ್ತದೆ: "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!"
     ಎಲ್ಲರೂ ಎಲ್ಲಾ ವಿಷಯಗಳಲ್ಲಿ ಪ್ರವೀಣರಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾರರು. ಯಾರು ಯಾವ ವಿಷಯದಲ್ಲಿ ಪ್ರವೀಣರಾಗಿರುತ್ತಾರೋ ಆ ಕ್ಷೇತ್ರದಲ್ಲಿ ಬದುಕು ಕಾಣಬಲ್ಲರು. ಹೀಗಾಗಿ ಕೆಲವರು ಬೌದ್ಧಿಕ ಕ್ಷೇತ್ರ, ಕೆಲವರು ವಾಣಿಜ್ಯ ಕ್ಷೇತ್ರ, ಆಡಳಿತಾತ್ಮಕ ಕ್ಷೇತ್ರ, ಶಾರೀರಿಕ ಶ್ರಮದ ಕ್ಷೇತ್ರಗಳಲ್ಲಿ ತೊಡಗಿಕೊಂಡು ಜೀವನದ ದಾರಿ ಕಾಣುತ್ತಾರೆ. ನಿಜ ಸಮಾನತೆಯೆಂದರೆ ಈ ಎಲ್ಲಾ ಕೆಲಸಗಳಲ್ಲಿ ಉಚ್ಛ-ನೀಚ ಭಾವನೆಗಳಿಗೆ ಅವಕಾಶ ಕೊಡದಿರುವುದು. ಸಮಾನತೆಯಿರಬೇಕೆಂದು ಎಲ್ಲರೂ ವಕೀಲರಾಗಲಿ, ವೈದ್ಯರಾಗಲಿ, ಇಂಜನಿಯರರಾಗಲಿ, ಕಾರ್ಮಿಕರಾಗಿರಲಿ ಎಂದು ಬಯಸುವುದು ಉಚಿತವಾಗುವುದೇ? ಸ್ವಸ್ಥ ಸಮಾಜಕ್ಕೆ, ಸಮಾಜದ ಅಸ್ತಿತ್ವಕ್ಕೆ ಒಬ್ಬರಿಗೊಬ್ಬರು ಪೂರಕವಾದ ಈ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವವರು ಇರಬೇಕು. ವಾಸ್ತವವಾಗಿ ನೋಡಿದರೆ ಯಾವ ಒಂದು ವಿಭಾಗವೂ ಚಿಕ್ಕದಲ್ಲ ಅಥವ ದೊಡ್ಡದಲ್ಲ. ಯಾವುದೊಂದು ಇಲ್ಲದಿದ್ದರೂ ಆ ಸಮಾಜ ಅಂಗವಿಕಲವಾಗುತ್ತದೆ. ಈ ಕೆಲಸಗಳು ಸಂಬಂಧಿಸಿದ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯವನ್ನು, ಒಲವನ್ನೂ ಅವಲಂಬಿಸಿದವಾದ್ದರಿಂದ ಅವರುಗಳ ಆ ಕೆಲಸಗಳಿಗೆ ಮನ್ನಣೆ ನೀಡುವ ಮನೋಭಾವ ಮೂಡಿದಲ್ಲಿ ಅದು ಸಮಾನತೆಯೆನಿಸೀತು.
     ವಿಶ್ವಮಾನವ ಕಲ್ಪನೆ, ವಿಶ್ವಭ್ರಾತೃತ್ವ ಅನ್ನುವುದನ್ನೂ ಪರಸ್ಪರರಲ್ಲಿ ಸೋದರತೆ, ಸಮಾನತೆಗೆ ಪರ್ಯಾಯವಾಗಿ ಬಳಸುವುದನ್ನು ಕಂಡಿದ್ದೇವೆ. ಪ್ರಪಂಚದಲ್ಲಿ 196 ದೇಶಗಳಿವೆಯೆಂದು ಗುರುತಿಸುತ್ತಾರೆ. ಎಷ್ಟೋ ದೇಶಗಳ ಹೆಸರುಗಳೇ ನಮಗೆ ಗೊತ್ತಿಲ್ಲ. ವಿಶ್ವಭ್ರಾತೃತ್ವ ಸಾಧ್ಯವಿದ್ದರೆ ಈ ದೇಶಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಅಥವ ವಿವಿಧ ದೇಶಗಳ ನಡುವೆ ಸ್ನೇಹಭಾವವಿರುತ್ತಿತ್ತು. ಈಗಲಾದರೋ ದೇಶಗಳು ಒಡೆಯುತ್ತಿವೆ, ಆಕ್ರಮಣಕ್ಕೆ ಒಳಗಾಗುತ್ತವೆ, ಗಡಿರೇಖೆಗಳು ಬದಲಾಗುತ್ತವೆ. ಪ್ರಪಂಚವೇ ಒಂದು ಕುಟುಂಬ (ವಸುಧೈವ ಕುಟುಂಬಕಮ್) ಎಂಬ ವೇದವಾಣಿಯ ಸಾಕಾರಕ್ಕೆ ಪೂರಕ ವಾತಾವರಣವಿದೆಯೇ? ಈ 196 ದೇಶಗಳ ಪೈಕಿ 49 ದೇಶಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಾಗಿವೆ, ಕೆಲವು ಇಸ್ಲಾಮಿಕ್ ದೇಶಗಳೆಂದೇ-ಪಾಕಿಸ್ತಾನವೂ ಸೇರಿ- ಘೋಷಿಸಲ್ಪಟ್ಟ ದೇಶಗಳಾಗಿವೆ. 120 ದೇಶಗಳು ಕ್ರಿಶ್ಚಿಯನ್ ದೇಶಗಳೆಂದು ಗುರುತಿಸಲ್ಪಡುತ್ತವೆ. ಒಂದು ಅಂದಾಜಿನ ಪ್ರಕಾರ ಮತ/ಧರ್ಮದ ಅನುಸಾರ ಪ್ರಪಂಚದ ಜನಸಂಖ್ಯೆ ಸುಮಾರು ಹೀಗಿದೆ:
೧. ಕ್ರಿಶ್ಚಿಯನ್ - 2 ಬಿಲಿಯನ್.
೨. ಇಸ್ಲಾಮ್ -  1.3ಬಿಲಿಯನ್,
೩. ಹಿಂದೂ -  900 ಮಿಲಿಯನ್,
೪. ಇತರರು -  850 ಮಿಲಿಯನ್,
೫. ಬೌದ್ಧ -    360 ಮಿಲಿಯನ್,
೬. ಚೀನಾ ಮೂಲವಾಸಿ - 225ಮಿಲಿಯನ್,
೭. ಆದಿವಾಸಿ ಪದ್ಧತಿ -    95 ಮಿಲಿಯನ್.
೮. ಯಹೂದ್ಯರು -       19 ಮಿಲಿಯನ್.
     ವಸ್ತುಸ್ಥಿತಿಯಂತೆ ವಿಶ್ಲೇಷಣೆ ಮಾಡಿದರೆ ಮತ/ಧರ್ಮಗಳೂ ಸಮಾನತೆಯ ಶತ್ರುಗಳಾಗಿ ಪರಿಣಮಿಸಿರುವುದು ಗೋಚರವಾಗದಿರದು. ಎಲ್ಲಿ ಪರಧರ್ಮ ಸಹಿಷ್ಣುತೆ ಇರುತ್ತದೋ ಅಲ್ಲಿ ಸಮಾನತೆಯ ಕನಸು ಕಾಣಬಹುದು. ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪ್ರಪಂಚದಲ್ಲಿ ಕೇವಲ ಸುಮಾರು 2016 ವರ್ಷಗಳ ಹಿಂದೆ ಪ್ರಾರಂಭವಾದ ಕ್ರಿಶ್ಚಿಯನ್ ಮತವನ್ನು ಇಂದು ಪ್ರಪಂಚದ ಅತಿ ಹೆಚ್ಚು ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಸುಮಾರು 1400 ವರ್ಷಗಳ ಹಿಂದೆ ಜನಿಸಿದ ಇಸ್ಲಾಮ್ ಮತಾನುಯಾಯಿಗಳು ಎರಡನೆಯ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಕ್ಷಿಪ್ರ ಪ್ರಗತಿಯ ಹಿಂದೆ ತಮ್ಮ ತಮ್ಮ ಧರ್ಮಗಳನ್ನು ಅಗ್ರಣಿಗಳಾಗಿಸಲು ನಡೆದ ಪ್ರಯತ್ನಗಳದು ಸಿಂಹಪಾಲೆಂದರೆ ತಪ್ಪಾಗಲಾರದು. ಆಸೆ, ಆಮಿಷ, ಅನಿವಾರ್ಯತೆ, ಬಡತನ ಮತ್ತು ಅಜ್ಞಾನಗಳ ದುರುಪಯೋಗ, ಕುಟಿಲೋಪಾಯಗಳು, ದುರ್ಮಾರ್ಗಗಳು, ಬಲಪ್ರಯೋಗಗಳಿಂದ ಮಾಡಲಾದ ಮತಾಂತರಗಳ ಕೊಡುಗೆಯೂ ಇದರಲ್ಲಿದೆ. ಪ್ರಪಂಚವನ್ನೇ ಕ್ರಿಶ್ಚಿಯನ್/ಮುಸ್ಲಿಮ್ ಬಹುಸಂಖ್ಯಾತರನ್ನಾಗಿಸಲು ಪ್ರಯತ್ನಗಳು ಎಡೆಬಿಡದೆ ನಡೆಯುತ್ತಿದ್ದು, ಇದಕ್ಕಾಗಿ ಯುದ್ಧಗಳು ಸಂಭವಿಸಿವೆ, ಸಂಭವಿಸಲಿವೆ. ಆರೋಗ್ಯಕರ ಪೈಪೋಟಿ ಮಾನವನ ಅಭಿವೃದ್ಧಿಗೆ ಪೂರಕ. ಅನಾರೋಗ್ಯಕರ ಪೈಪೋಟಿ ಮಾನವನಿಗೆ ಮಾರಕ. ಪೈಪೋಟಿ ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವೆ ಯುದ್ಧಗಳು -ನೇರ ಮತ್ತು ಪರೋಕ್ಷ-  ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಧರ್ಮ/ಮತದ ಹೆಸರಿನಲ್ಲಿ ವೈಚಾರಿಕ ಮನೋಭಾವ. ಚಿಂತನೆಗಳಿಗೆ ಇರುವ ಅವಕಾಶಗಳಿಗೆ ಬೇಡಿ ತೊಡಿಸಲಾಗಿದೆ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ವಿರೋಧಿ ಮತ/ಧರ್ಮಗಳವರನ್ನು ನಿಂದಿಸುವವರೂ ಇದ್ದಾರೆ. ಯಾರಿಗೆ ಯಾವ ಧರ್ಮ ಇಷ್ಟವೋ ಅದನ್ನು ಅನುಸರಿಸಲು ಅವಕಾಶ ಕೊಟ್ಟರೆ, ಮತಾಂತರಕ್ಕೆ ಪ್ರೋತ್ಸಾಹ ಸಿಗದಿದ್ದರೆ, ಪ್ರಲೋಭನೆ ಒಡ್ಡದಿದ್ದರೆ ಸಮಾನತೆಯ, ವಿಶ್ವಭ್ರಾತೃತ್ವದ ಕನಸು ಕಾಣಲು ಅವಕಾಶವಿದೆ.
     ಭಾಷೆಗಳೂ ಸಹ ಅಸಮಾನತೆಯ ಕಾರಣವಾಗಿವೆಯೆಂಬುದು ಕಹಿ ಸತ್ಯ. ಪ್ರಪಂಚದಲ್ಲಿ 6000-7000 ಭಾಷೆಗಳು ಇವೆಯೆನ್ನಲಾಗಿದೆ. ಜನಸಂಖ್ಯಾವಾರು ಲೆಕ್ಕ ಹಾಕಿದರೆ, 2009ರ ಅಂಕಿ ಅಂಶಗಳಂತೆ ಚೈನೀಸ್ ಭಾಷೆಯನ್ನು 1213 ಮಿಲಿಯನ್ ಜನರು ಮಾತನಾಡುತ್ತಿದ್ದು ಪ್ರಥಮ ಸ್ಥಾನದಲ್ಲಿ ಬರುತ್ತದೆ. ಅನುಕ್ರಮವಾಗಿ 2,3 ಮತ್ತು 4ನೆಯ ಸ್ಥಾನಗಳಲ್ಲಿ 329 ಮಿಲಿಯನ್ ಜನ ಮಾತನಾಡುವ ಸ್ಪಾನಿಷ್, 328ಮಿಲಿಯನ್ ಜನರು ಮಾತನಾಡುವ ಇಂಗ್ಲಿಷ್ ಮತ್ತು 229 ಮಿಲಿಯನ್ ಜನರು ಮಾತನಾಡುವ ಅರೇಬಿಕ್ ಭಾಷೆಗಳು ಬರುತ್ತವೆ. 182 ಮಿಲಿಯನ್ ಜನರು ಮಾತನಾಡುವ ಹಿಂದಿ 5ನೆಯ ಸ್ಥಾನದಲ್ಲಿದೆ. ಭಾರತ ದೇಶವೊಂದರಲ್ಲೇ 1652 ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಬ್ರಿಟಿಷರ ಬಳುವಳಿಯಾಗಿ ಭಾರತಕ್ಕೆ ಬಂದ ಇಂಗ್ಲಿಷನ್ನು 1965ರವರೆಗೆ ಮಾತ್ರ ಉಳಿಸಿಕೊಳ್ಳಲು ಸಂವಿಧಾನದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವ ವಿಚಾರದಲ್ಲಿ ದಕ್ಷಿಣ ಭಾರತದಲ್ಲಿ ಉಗ್ರ ಚಳುವಳಿಗಳು ನಡೆದು ವಿಷಯ ತಣ್ಣಗಾಯಿತು. ಪ್ರಾದೇಶಿಕ ಭಾಷೆಗಳ ಜೊತೆಗೆ ಇಂಗ್ಲಿಷಿನ ಬದಲಿಗೆ ಹಿಂದಿಯನ್ನು ಒಪ್ಪಿಕೊಂಡಿದ್ದರೆ, ಇಂದು ಹಿಂದಿ ಮಾತನಾಡುವವರ ಸಂಖ್ಯೆ ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುತ್ತಿತ್ತು. ಈ ಅಂಕಿ ಅಂಶಗಳನ್ನು ಸಾಂದರ್ಭಿಕವಾಗಿ ಹೇಳಿದ್ದಷ್ಟೆ ಹೊರತು ಮುಖ್ಯ ವಿಷಯಕ್ಕೆ ಬರುತ್ತೇನೆ. ಸ್ವಭಾಷಾ ಪ್ರೇಮಕ್ಕಿಂತ ಇತರ ಭಾಷಾದ್ವೇಶ ಸಹ ಸೋದರತೆಯ ಭಾವನೆಗೆ ಕೊಡಲಿ ಪೆಟ್ಟು ಹಾಕಿದೆ. ಹಿಂದಿ ಭಾಷೆಯ ಮೇಲಿನ ದ್ವೇಶ ಗುಲಾಮಗಿರಿಯ ಬಳುವಳಿಯಾದ ಇಂಗ್ಲಿಷನ್ನು ಅನಿವಾರ್ಯವನ್ನಾಗಿ ಉಳಿಸಿತು. ಇಂಗ್ಲಿಷ್ ಇಲ್ಲದೆ ಬೆಳವಣಿಗೆ, ಪ್ರಗತಿ ಅಸಾಧ್ಯ ಅನ್ನುವುದು ಸರಿಯಲ್ಲ ಅನ್ನುವುದನ್ನು ಪ್ರಪಂಚದ ಭಾಷಾ ಅಂಕಿ ಸಂಖ್ಯೆಗಳು ಸಾರಿವೆ. ಭಾಷಾವಾರು ರಾಜ್ಯಗಳ ರಚನೆ ಸಹ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಭಾಷೆಯ ಹೆಸರಿನಲ್ಲಿ ಅಕ್ಕ ಪಕ್ಕದ ರಾಜ್ಯಗಳ ನಡುವೆ ಹಿಂಸಾತ್ಮಕ ಗಲಭೆಗಳಾಗಿವೆ, ಆಗುತ್ತಿವೆ. ನಮ್ಮ ಭಾಷೆಯೇ ಹೆಚ್ಚು ಎಂಬ ವಾದ ವಿವಾದಗಳು ಮಾನವರ ನಡುವೆ ಕಂದಕ ಉಂಟು ಮಾಡುತ್ತಿವೆ. ನಮ್ಮ ನಮ್ಮ ಭಾಷೆಗಳನ್ನು ಪ್ರೀತಿಸೋಣ, ಉಳಿಸೋಣ, ಬೆಳೆಸೋಣ; ಇತರ ಭಾಷೆಗಳನ್ನು ದ್ವೇಷಿಸದಿರೋಣ ಎಂಬ ಭಾವನೆ ಬರುವುದು ಸಾಧ್ಯವಾದಾಗ ಮಾತ್ರ ಸೋದರತೆ, ಸಮಾನತೆಗಳ ಮಾತನ್ನಾಡಲು ನಮಗೆ ಹಕ್ಕಿರುತ್ತದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 17, 2017

ದಲಿತತ್ವದಿಂದ ಉನ್ನತಿಯೆಡೆಗೆ! - 6


     ದಲಿತ, ಶೋಷಿತ, ಹಿಂದುಳಿದವರ ಪ್ರಮುಖ ಅಗತ್ಯತೆ ಮತ್ತು ಅವಶ್ಯಕತೆ ಸಮಾನತೆಯ ಪ್ರತಿಪಾದನೆಯಾಗಿದೆ. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ - ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ.
     ವ್ಯಾವಹಾರಿಕವಾಗಿ ಸಮಾನತೆ ಅನ್ನುವುದು ಹೇಳುವಷ್ಟು ಸುಲಭವಲ್ಲ. ಸಮಾನತೆಯೆಂದರೆ ಒಬ್ಬ ಹೆಸರಾಂತ ಜಟ್ಟಿ/ಕುಸ್ತಿಪಟುವನ್ನು, ಒಬ್ಬ ಬಡಕಲು ದೇಹದವನನ್ನು ಮತ್ತು ಅನಾರೋಗ್ಯಪೀಡಿತನನ್ನು ಸಮಾನ ಬಲಶಾಲಿ ಎಂದು ಒಪ್ಪಿಕೊಳ್ಳಬೇಕೆಂದು ವಾದಿಸುವುದಲ್ಲ. ಒಬ್ಬ ವಿದ್ವಾಂಸನನ್ನೂ, ಓದು ತಲೆಗೆ ಹತ್ತದವನನ್ನೂ ಮತ್ತು ಮಾನಸಿಕ ವಿಕಲ್ಪನನ್ನು ಸಮಾನ ಜ್ಞಾನಿಗಳೆಂದು ಪರಿಗಣಿಸುವುದಲ್ಲ. ಜಾತಿಯ ಆಧಾರದಲ್ಲಿ ಒಬ್ಬರು ಶೇ. 50ರಷ್ಟು ಅಂಕ ಪಡೆದವರೂ, ಶೇ. 60 ಅಂಕ ಪಡೆದ ಇತರರಿಗೆ ಸಮ ಎಂದು ಪರಿಗಣಿಸುವುದರಲ್ಲಿ ಸಮಾನತೆ ಬರುವುದಿಲ್ಲ. 100 ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ 100 ಮೀ. ಓಡಿದವನನ್ನೂ, 80-90 ಮೀ. ಓಡಿದವರನ್ನೂ ಸಮರೆಂದು ಪರಿಗಣಿಸುವುದಲ್ಲ. ಬದಲಾಗಿ ಅಶಕ್ತರು, ಹಿಂದುಳಿದವರು ಎಂದು ಪರಿಗಣಿಸಲ್ಪಟ್ಟವರಿಗೆ ಅಗತ್ಯದ ಎಲ್ಲಾ ಅನುಕೂಲ, ಸೌಲಭ್ಯಗಳನ್ನು ಕಲ್ಪಿಸಿ ಅವರು ಮುಂದೆ ಬರಲು ಅವಕಾಶ ಕಲ್ಪಿಸುವುದರಲ್ಲಿ ಸಮಾನತೆ ಕಾಣಬೇಕು. ಎಲ್ಲರೂ ಒಂದೇ ಎತ್ತರದವರಾಗಬೇಕೆಂದು ಕೆಲವರ ತಲೆ, ಕಾಲುಗಳನ್ನು ಕತ್ತರಿಸುವುದು ಸಮಾನತೆಯಾಗಲಾರದು. ಅದು ಪ್ರಗತಿಯ ಲಕ್ಷಣವಲ್ಲ. ಸಮಾನತೆಯೆಂದರೆ ವಿವಿಧ ವಿಷಯಗಳನ್ನೆಲ್ಲಾ ಸಮಾನ ರೀತಿಯಲ್ಲಿ ನೋಡುವುದಲ್ಲ, ವಿವಿಧ ವಿಷಯಗಳನ್ನು ವಿವಿಧ ದೃಷ್ಟಿಯಿಂದ ನೋಡುವುದು. ಸಮಾನ ಅವಕಾಶಗಳಿಂದ ಯಾರೂ ವಂಚಿತರಾಗದೆ ಇರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ.
     ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ಎಲ್ಲರೂ ಒಂದೇ ರೀತಿಯಲ್ಲಿ ಇರಲು, ಅಂದರೆ ಎಲ್ಲರೂ ಆರೋಗ್ಯವಂತರು, ಬಲಶಾಲಿಗಳು, ಜ್ಞಾನಿಗಳು, ಅಂಗವೈಕಲ್ಯತೆಯಿಲ್ಲದವರು, ಒಂದೇ ಜಾತಿ/ಧರ್ಮದವರು, ಒಂದೇ ವಿಚಾರ ಹೊಂದಿದವರು ಆಗಲು -ನಾವು, ನೀವು ಇಷ್ಟಪಟ್ಟರೂ ಸಹ- ಸಾಧ್ಯವಿದೆಯೇ? ಹೀಗಿರುವಾಗ ನಿಜವಾದ ಸಮಾನತೆಯೆಂದರೆ, ವ್ಯವಹರಿಸುವಾಗ ಪಕ್ಷಪಾತ, ದುರಾಗ್ರಹ, ಅಭಿಮಾನಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ತಾವು ಇಷ್ಟಪಡುವ, ಇರಬಯಸುವ ರೀತಿಯಲ್ಲಿ ಬಾಳಲು, ಬದುಕಲು ಸಹಕರಿಸುವುದು ಅನ್ನಬಹುದಷ್ಟೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಅರಿಯಬೇಕಿದೆ. ಇಲ್ಲಿ ದೇವರು ಎಂಬ ಪದವನ್ನು ಯಾವುದೇ ಜಾತಿ/ಮತಗಳವರ ದೇವರು ಎಂಬರ್ಥದಲ್ಲಿ ಬಳಸಿಲ್ಲ. ಜಾತಿಗೊಬ್ಬ ದೇವರು, ಮತಕ್ಕೊಬ್ಬ ದೇವರು ಎನ್ನುವುದು, ಅವರ ದೇವರನ್ನು ಇವರು, ಇವರ ದೇವರನ್ನು ಅವರು ನಿಂದಿಸುವ ಮನೋಭಾವಗಳು ಮಾನವನ ಸಂಕುಚಿತ ಭಾವನೆಯನ್ನು ತೋರಿಸುತ್ತದೆ. ಈ ರೀತಿಯ ತಾರತಮ್ಯವೆಸಗದ ಮನೋಭಾವನೆ ಬೆಳೆಸಿಕೊಂಡವರು ಮಾತ್ರ ಕೇವಲ ಮಾನವರಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಜೀವಿಗಳ ಕುರಿತು ಅಕ್ಕರೆ, ಅಕರಾಸ್ತೆ ಹೊಂದುತ್ತಾರೆ. ಪ್ರಪಂಚದಲ್ಲಿ ಒಂದೇ ಒಂದು ವಿಚಾರದಲ್ಲಿ ಮಾತ್ರ ಸಮಾನತೆಯಿದೆ. ಎಲ್ಲರೂ ಕೊನೆಗೆ ಸಾಯುತ್ತಾರೆ ಅನ್ನುವುದೇ ಆ ಸಮಾನತೆ. ಸಾವಿನಲ್ಲಿ ಮಾತ್ರ ಎಲ್ಲರೂ ಸಮಾನರು.
     ಸಮಾನತೆಯ ಇನ್ನೊಂದು ಆಯಾಮವನ್ನೂ ಗಮನಿಸಬೇಕು. ಅದು ಪ್ರಗತಿಗೆ ಅಡ್ಡಿಯಾಗಬಾರದು. ಎಲ್ಲರೂ ಯಾವುದಾದರೂ ಒಂದು ಸಂಗತಿಗೆ ಸಂಬಂಧಿಸಿದಂತೆ ಸಮಾನರಾದರು ಎಂದಿಟ್ಟುಕೊಳ್ಳೋಣ. ಮುಂದೆ? ಎಲ್ಲರೂ ಅಲ್ಲಿಯೇ, ಆ ಸಮಾನ ಸ್ಥಿತಿಯಲ್ಲಿಯೇ ಉಳಿದುಬಿಡಬೇಕೇ? ಇರುವ ಸ್ಥಿತಿಗಿಂತ ಯಾರೂ ಮುಂದೆ ಹೋಗಬಾರದು ಎಂದರೆ ಪ್ರಗತಿ ಹೇಗೆ ಸಾಧ್ಯವಾದೀತು? ಮುಂದೆ ಹೋಗಲೇಬೇಕು. ಹಾಗೆ ಮುಂದೆ ಹೋಗುವಾಗ ಹಿಂದಿರುವವರನ್ನೂ ಜೊತೆಗೆ ಕರೆದೊಯ್ಯುವ ಮನಸ್ಸು ಮಾಡಬೇಕು. ಮುಂದೆ ಇರುವವರನ್ನು ಸಮೀಪಿಸಿ ಅವರೊಡನೆ ಸಮರಾಗುವ ಪ್ರಯತ್ನ ಮಾಡಬೇಕು, ಮತ್ತೆ ಮುಂದುವರೆಯಬೇಕು. ಎಲ್ಲರೂ ಮುಂದೆ ಬರಬೇಕೆಂಬ ವಿಚಾರದಲ್ಲಿ ಮಾತ್ರ ಸಮಾನತೆಯಿರಲೇಬೇಕು. ಮುಂದಿರುವವರನ್ನು ದೂಷಿಸುವುದರಿಂದ ಹಿಂದಿರುವವರು ಮುಂದೆ ಬರಲಾರರು. ಮುಂದೆ ಬರಬೇಕೆಂದರೆ ಪ್ರಯತ್ನಪಟ್ಟು ಮುಂದೆ ಬರಬೇಕಷ್ಟೇ. ಈ ವೇದಮಂತ್ರ ನೆನಪಿನಲ್ಲಿಡಬೇಕಾದುದಾಗಿದೆ: ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || (ಋಕ್.10.191.4.)      ಇದರ ಅರ್ಥ ಹೀಗಿದೆ; 'ನಿಮ್ಮ ಆಲೋಚನೆಗಳು, ಹೃದಯಗಳು, ಮನಸ್ಸುಗಳು ಸಮಾನವಾಗಿರಲಿ. ಹೀಗೆ, ನಿಮ್ಮ ಒಳಿತೂ ಸಹ ಒಟ್ಟಿಗೇ ಆಗುವುದು'.
     ಆರ್ಥಿಕ ಸಮಾನತೆಯನ್ನೂ ಸಹ ವ್ಯಾವಹಾರಿಕವಾಗಿ ಉಳಿಸಿಕೊಂಡು ಬರುವುದು ದುಸ್ಸಾಧ್ಯ. ಒಂದು ಸಣ್ಣ ಕಾಲ್ಪನಿಕ ಉದಾಹರಣೆ ನೋಡೋಣ. ಒಂದು ಹಳ್ಳಿಯಲ್ಲಿ ಒಂದು ನೂರು ಕುಟುಂಬಗಳಿದ್ದು, ಅದರಲ್ಲಿ 30 ಕುಟುಂಬಗಳು ಶ್ರೀಮಂತ, 40 ಕುಟುಂಬಗಳು ಮಧ್ಯಮ ಮತ್ತು 40 ಕುಟುಂಬಗಳು ಬಡ ಕುಟುಂಬಗಳೆಂದು ಭಾವಿಸೋಣ. ಅವರಲ್ಲಿನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡು ಬಂದ ಹಣವನ್ನು -ಕುಟುಂಬಕ್ಕೆ ತಲಾ 15 ಲಕ್ಷ ರೂ. ಎಂದುಕೊಳ್ಳೋಣ- ಎಲ್ಲಾ ಕುಟುಂಬಗಳವರಿಗೆ ಹಂಚಲಾಯಿತು ಎಂದುಕೊಳ್ಳೋಣ. ಐದು ವರ್ಷಗಳು ಕಳೆದ ನಂತರ ಸಮೀಕ್ಷೆ ನಡೆಸಿದರೆ ಆ ಹಳ್ಳಿಯಲ್ಲಿ ಶ್ರೀಮಂತ, ಮಧ್ಯಮ ಮತ್ತು ಬಡ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚು-ಕಡಿಮೆ ಕಂಡುಬರಲಾರದು. ಇದಕ್ಕೆ ಮೂಲಕಾರಣ ಜನರ ಮನೋಭಾವ ಎನ್ನುವುದನ್ನು ತಿಳಿಯಲು ಕಷ್ಟವೇನಲ್ಲ. ಬುದ್ಧಿ ಮತ್ತು ಶ್ರಮ ಉಪಯೋಗಿಸಿಕೊಂಡವರು ಮತ್ತು ಹಣವನ್ನು ಸೂಕ್ತ ರೀತಿ ಉಪಯೋಗಿಸಿಕೊಂಡವರು ಶ್ರೀಮಂತರಾಗುತ್ತಾರೆ, ಅಲ್ಪ ಬುದ್ಧಿ, ಅಲ್ಪ ಶ್ರಮಪಡುವವರು ಮಧ್ಯಮವರ್ಗದವರಾಗುತ್ತಾರೆ. ದುಶ್ಚಟಗಳಿಗೆ ದಾಸರಾದವರು, ಸೋಮಾರಿಗಳು, ಹಣವನ್ನು ಸೂಕ್ತ ರೀತಿಯಲ್ಲಿ ಬಳಸಲು ಬರದವರು ತಮ್ಮ ಹಣವನ್ನು ಪೋಲು ಮಾಡಿ ಬಡವರಾಗುತ್ತಾರೆ. ಮತ್ತೆ ಸಮಾನತೆಯ ಕೂಗು ಬಂದರೆ ಪುನಃ ಎಲ್ಲರ ಹಣವನ್ನು ಕಸಿದು ಸಮಾನವಾಗಿ ಹಂಚಬೇಕೆ? ಇಲ್ಲಿ ಅಗತ್ಯವಿರುವುದು ಜನರನ್ನು ಶ್ರಮಜೀವಿಗಳಾಗಿಸುವುದಕ್ಕೆ, ದುಶ್ಚಟಗಳಿಂದ ದೂರವಿರಿಸುವುದಕ್ಕೆ ಬೇಕಾದ ಜ್ಞಾನದ ತಿಳಿವನ್ನು ಮೂಡಿಸುವುದಕ್ಕೆ, ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಿ ಮುಂದೆ ಬರಲು ಸಹಕರಿಸುವುದಕ್ಕೆ ಅಷ್ಟೆ. ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಪಡಿಸಿಕೊಳ್ಳುವವರಿಗೆ ಮಾತ್ರ ಸೌಲಭ್ಯ ನೀಡಿದರೆ ಮಾತ್ರ ಪ್ರಯೋಜನವಾದೀತು. ಇಲ್ಲದಿದ್ದರೆ ಅದು ಅಪಾತ್ರದಾನವಾಗುವುದು.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಶುಕ್ರವಾರ, ಜುಲೈ 14, 2017

ದಲಿತತ್ವದಿಂದ ಉನ್ನತಿಯೆಡೆಗೆ! - 5


     ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ ಹರಿಸಿದ್ದಾಯಿತು. ದಲಿತ ಎಂಬ ಪದದ ವ್ಯಾಖ್ಯೆಯನ್ನು, ವ್ಯಾಪ್ತಿಯನ್ನು ನಿರ್ಧರಿಸುವುದು ಸೂಕ್ತವೆನಿಸುತ್ತದೆ. ಸಾವಿರಾರು ಕೋಟಿ ರೂ. ಬೆಲೆ ಬಾಳುವ ಆಸ್ತಿ-ಪಾಸ್ತಿಗಳನ್ನು, ರಾಜಕೀಯವಾಗಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿರುವವರನ್ನು ದಲಿತ ಎನ್ನುವುದಾದರೆ ಅದು ಆ ಪದದ ಅರ್ಥಕ್ಕೆ ಮತ್ತು ನಿಜವಾಗಿ ದಲಿತರೆನಿಸಿಕೊಂಡವರಿಗೆ ಮಾಡುವ ಅಪಹಾಸ್ಯವಾಗುತ್ತದೆ. ಇಂತಹ ಬಲಿತರು ಸಾಮಾನ್ಯರಂತೆ ಪರಿಗಣಿತರಾಗಬೇಕು ಮತ್ತು ಮೀಸಲಿರಿಸದ ಸಾಮಾನ್ಯ ಸ್ಥಾನಗಳಿಂದ ಸ್ಪರ್ಧಿಸುವಂತಾಗಬೇಕು. ಹೀಗಾದಾಗ ಮಾತ್ರ ನಿಜದಲಿತರು ಅಧಿಕಾರ ಹಿಡಿಯಲು ಸಾಧ್ಯವಿದೆ. ಜಾತಿಪದ್ಧತಿ ನಾಶವಾಗಬೇಕೆನ್ನುವವರೇ ಇಂದು ಜಾತಿ ಆಧಾರದಲ್ಲಿ ಸಿಗುವ ಸವಲತ್ತುಗಳಿಗಾಗಿ ಜಾತಿಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆಂದರೆ ಇದನ್ನು ಪರಿಸ್ಥಿತಿಯ ವ್ಯಂಗ್ಯವೆನ್ನಬಹುದು. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು, ಗೃಹಮಂತ್ರಿಯಾಗಿ ಉನ್ನತ ಅಧಿಕಾರ ಹೊಂದಿರುವವರು, ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವವರು ಮತ್ತು ಕೋಟ್ಯಾಂತರ ರೂ.ಗಳ ಆಸ್ತಿಯ ಒಡೆಯರು ಮುಖ್ಯಮಂತ್ರಿಯ ಹುದ್ದೆ ಅಲಂಕರಿಸುವ ಸಲುವಾಗಿ ದಲಿತ ಎಂಬುದನ್ನು ದಾಳವಾಗಿ ಬಳಸಿಕೊಳ್ಳುತ್ತಾರೆಂದರೆ ಏನೆನ್ನಬೇಕು? ಜಾತಿಯ ಹೆಸರಿನಲ್ಲೇ ರಾಜಕಾರಣ ಮಾಡುವ ಧುರೀಣರು ತಮ್ಮನ್ನು ಜಾತ್ಯಾತೀತರೆಂದು ಕರೆಸಿಕೊಳ್ಳುತ್ತಿರುವುದು ಕ್ರೂರ ಹಾಸ್ಯವಾಗಿದೆ. ಎ.ಡಿ.ಜಿ.ಪಿ.ಯಂತಹ ಉನ್ನತ ಅಧಿಕಾರಿಯೊಬ್ಬರು ತಮ್ಮ ವಿರುದ್ಧ ದೂರು ಬಂದಾಗ ದಲಿತ ಎಂಬ ಕಾರಣಕ್ಕಾಗಿ ತೊಂದರೆ ಕೊಡುತ್ತಾರೆಂದು ಹುಯಿಲೆಬ್ಬಿಸಿದ್ದರು. ವೇಶ್ಯಾವಾಟಿಕೆಗೆ ಸಹಕರಿಸಲು ಲಂಚ ಪಡೆದ ಆರೋಪಕ್ಕೊಳಗಾಗಿರುವ ಹಿರಿಯ ಪೋಲಿಸ್ ಅಧಿಕಾರಿಣಿಯೊಬ್ಬರು ತಾವು ದಲಿತರೆಂಬ ಕಾರಣಕ್ಕೆ ಕಿರುಕುಳ ಕೊಡುತ್ತಿದ್ದಾರೆಂದು ಅಲವತ್ತುಕೊಳ್ಳುತ್ತಾರೆ. ಸಚಿವರೊಬ್ಬರು ತಮ್ಮ ಪತ್ನಿಯ ಮೂಲಕ ಲಂಚ ಸ್ವೀಕರಿಸಿದ ಆರೋಪ ಬಂದಾಗಲೂ ಈ ದಲಿತ ಕಾರ್ಡಿನ ಬಳಕೆಯಾಯಿತು. ಸ್ವಾರ್ಥ ಮತ್ತು ಆರೋಪದ ವಿರುದ್ಧ ರಕ್ಷಣೆ ಎರಡಕ್ಕೂ ಜಾತಿ ಬಳಕೆಯಾಗುತ್ತದೆಂದರೆ ವ್ಯವಸ್ಥೆಯಲ್ಲಿ ಏನೋ ಲೋಪವಿದೆ ಅನ್ನಿಸುವುದಿಲ್ಲವೇ? ಆರ್ಥಿಕವಾಗಿ ಬಲಾಢ್ಯರಾಗಿರುವವರಿಗೆ ಜಾತಿ ಆಧಾರದ ಸವಲತ್ತುಗಳು ನಿಲ್ಲಬೇಕು ಮತ್ತು ಅವರನ್ನು ಸಾಮಾನ್ಯ ವರ್ಗಕ್ಕೆ ಸೇರಿಸಬೇಕು ಎಂಬ ವಾದದಲ್ಲಿ ಹುರುಳಿಲ್ಲವೆನ್ನಲಾಗುವುದಿಲ್ಲ. ವಾರ್ಷಿಕ ಆದಾಯದ ವಿವರ ಅನುಸರಿಸಿ ಎಷ್ಟು ಆದಾಯದ ಮೇಲಿದ್ದರೆ ಅವರನ್ನು ದಲಿತರೆಂದು ಪರಿಗಣಿಸಬಾರದು ಎಂಬ ಮಿತಿ ನಿಗದಿಸುವುದು ಉತ್ತಮ. ದಲಿತರೆಂದರೆ ಕೇವಲ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರೆಂಬ ಭಾವನೆ ದೂರವಾಗಬೇಕು. ಎಲ್ಲಾ ಬಡವರ, ದೀನ-ದಲಿತರ ಅಭಿವೃದ್ಧಿಯನ್ನು ಜಾತಿ ತಾರತಮ್ಯವಿಲ್ಲದೆ ಮಾಡುವ ಕಾಲ ಬಂದರೆ ಜಾತಿ ಆಧಾರದಲ್ಲಿ ತಾರತಮ್ಯ ಮಾಡಲು ಅವಕಾಶವಿಲ್ಲದ ಸಂವಿಧಾನಕ್ಕೆ ಬೆಲೆ ಮತ್ತು ಗೌರವ ಬರುತ್ತದೆ.
     ಸವರ್ಣೀಯರು ಎಂಬ ಪದದ ಬಳಕೆ ಕುರಿತೂ ಸಹ ಚರ್ಚೆಯಾಗಬೇಕಿದೆ. ಇಂದು ವ್ಯಾವಹಾರಿಕವಾಗಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿ ಇಲ್ಲವೇ ಇಲ್ಲ. ಜನಸಾಮಾನ್ಯರಂತೂ ತಮ್ಮನ್ನು ವರ್ಣೀಯರು ಎಂದು ಗುರುತಿಸಿಕೊಳ್ಳುವುದೇ ಇಲ್ಲ. ಈಗ ಇರುವುದು ಹುಟ್ಟಿನ ಆಧಾರದ ಜಾತಿಪದ್ದತಿ. ಇದನ್ನೇ ಸಾಂಪ್ರದಾಯಿಕರು, ರಾಜಕಾರಣಿಗಳು, ತಮ್ಮನ್ನು ತಾವೇ ಪ್ರಗತಿಪರರು, ಬುದ್ಧಿಜೀವಿಗಳು, ಜಾತ್ಯಾತೀತರು ಎಂದೆಲ್ಲಾ ಹಣೆಪಟ್ಟಿ ಹಚ್ಚಿಕೊಂಡು ಜನರ ಕಣ್ಣಿಗೆ ಮಣ್ಣೆರಚುವವರು, ಜಾತಿ ಆಧಾರದಲ್ಲಿ ಬೇಳೆ ಬೇಯಿಸಿಕೊಳ್ಳುವವರು ಮತ್ತಷ್ಟು ಬಲಗೊಳಿಸುತ್ತಿದ್ದಾರೆ. ಜಾತಿ ಬದಲಾವಣೆಗೆ ಕಾನೂನು ಒಪ್ಪಲಾರದು. ಬ್ರಾಹ್ಮಣ/ಲಿಂಗಾಯತ/ಒಕ್ಕಲಿಗ ಜಾತಿಗೆ ಸೇರಿದವರೊಬ್ಬರು ಕುರುಬ ಜಾತಿಗೆ ಅಥವ ಪರಿಶಿಷ್ಟ ಜಾತಿಗೆ ಸೇರಲು ಇಚ್ಛಿಸಿದರೆ ಅವಕಾಶವಿದೆಯೇ? ಸವಲತ್ತಿನ ಸಲುವಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಅದೆಷ್ಟು ಪ್ರಕರಣಗಳಿವೆಯೋ! ಇಂತಹ ಜಾತೀಯತೆಯನ್ನು ಬಲಪಡಿಸುವ ವ್ಯವಸ್ಥೆಯಲ್ಲಿ ತಮ್ಮ ಆಸಕ್ತಿಗೆ ಅನುಸಾರವಾದ ವರ್ಗವನ್ನು ಆರಿಸಿಕೊಳ್ಳುವ ಅವಕಾಶವಿದ್ದ ವರ್ಣವ್ಯವಸ್ಥೆಯನ್ನು ಹೋಲಿಸುವುದು ಸಾಧ್ಯವೇ ಇಲ್ಲ. ವರ್ಣೀಯತೆ ಮತ್ತು ಹುಟ್ಟಿನ ಆಧಾರದ ಜಾತೀಯತೆಗಳು ವಿರುದ್ಧವಾದ ಸಂಗತಿಗಳು. ವರ್ಣೀಯತೆಯಲ್ಲಿ ಹುಟ್ಟಿನ ಆಧಾರದ ಜಾತಿಗೆ ಬೆಲೆಯಿಲ್ಲ. ಹುಟ್ಟಿನ ಆಧಾರದ ಜಾತಿಯಲ್ಲಿ  ವರ್ಣೀಯತೆಗೆ ಅರ್ಥವಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಈಗ ವರ್ಣೀಯತೆ ಚಾಲ್ತಿಯಲ್ಲಿ ಇಲ್ಲವೇ ಇಲ್ಲ.
     ಇತ್ತೀಚಿನ ವಾಸ್ತವಿಕ ಉದಾಹರಣೆ ಕೊಡಬೇಕೆಂದರೆ ಹೊಳೆನರಸಿಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದೇವಸ್ಥಾನಕ್ಕೆ ಪ.ಜಾ.,ಪ.ಪಂ.ಗಳಿಗೆ ಸೇರಿದವರಿಗೆ ಗ್ರಾಮದ ದೇವಸ್ಥಾನಕ್ಕೆ ಪ್ರವೇಶ ನಿಶೇಧದ ವಿಷಯ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಪಡೆದು, ಸವರ್ಣೀಯರು ಮತ್ತು ದಲಿತರ ನಡುವಿನ ಸಂಘರ್ಷ ಎಂಬಂತೆ ಬಿಂಬಿಸಲಾಯಿತು. ಆ ಗ್ರಾಮದಲ್ಲಿರುವುದು 270 ಒಕ್ಕಲಿಗ ಕುಟುಂಬಗಳು ಮತ್ತು 30 ಪ.ಜಾ./ಪ.ಪಂ. ಕುಟುಂಬಗಳು ಮಾತ್ರ. ಬೇರೆ ಯಾವುದೇ ಜಾತಿಗಳವರು ಅಲ್ಲಿ ಇಲ್ಲ. ಅಲ್ಲಿನ ಯಾವುದೇ ಒಕ್ಕಲಿಗ ಕುಟುಂಬಗಳವರು ತಮ್ಮನ್ನು ಸವರ್ಣೀಯರು ಎಂದು ಗುರುತಿಸಿಕೊಳ್ಳುತ್ತಾರೆಯೇ? ಗುರುತಿಸಿಕೊಳ್ಳುವುದಾದರೆ ಯಾವ ವರ್ಣಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ ಎಂಬುದನ್ನು ಆ ಪದ ಬಳಸುವವರೇ ವಿವರಿಸಬೇಕು. ಹುಟ್ಟಿನ ಜಾತಿ ಆಧಾರದ ಜಾತಿ ವ್ಯವಸ್ಥೆ ಪ್ರಬಲವಾಗಿರುವ ಇಂದಿನ ವ್ಯವಸ್ಥೆಯಲ್ಲಿ ಕರ್ಮಕ್ಕನುಗುಣವಾದ ಜಾತಿ ವ್ಯವಸ್ಥೆಗೆ ಬೆಲೆಯೇ ಇಲ್ಲ. ಹಾಗಿದ್ದೂ ಸವರ್ಣೀಯರು ಎಂಬ ಪದದ ಬಳಕೆ ಎಷು ಉಚಿತ?  
     ವರ್ಣ ಎಂದರೆ ಆರಿಸಿಕೊಳ್ಳುವುದು ಎಂದರ್ಥ. ಇದು ಹುಟ್ಟಿನಿಂದ ಬರುವಂತಹುದಲ್ಲ. ತಮ್ಮ ವೃತ್ತಿ, ಗುಣ, ಸ್ವಭಾವಕ್ಕೆ ಅನುಸಾರವಾಗಿ ಆರಿಸಿಕೊಳ್ಳುವಂತಹದು. ಒಬ್ಬ ಬ್ರಾಹ್ಮಣನ ಮಗ ಬ್ರಾಹ್ಮಣ ಆಗಬಹುದು, ಆಗದೆಯೂ ಇರಬಹುದು. ವೈಶ್ಯ, ಕ್ಷತ್ರಿಯ, ಶೂದ್ರರ ಮಕ್ಕಳೂ ಸಹ ತಮ್ಮದಲ್ಲದ ವರ್ಣಕ್ಕೆ ಸೇರಲು ತಮ್ಮ ಸಾಮರ್ಥ್ಯ, ಆಸಕ್ತಿಗಳಿಗನುಸಾರವಾಗಿ ಅವಕಾಶವಿತ್ತದ್ದು ವರ್ಣಾಶ್ರಮ. ಈಗ ಈ ರೀತಿ ವ್ಯವಸ್ಥೆ ಇದೆಯೇ? ಬಹು ಹಿಂದೆ ಈ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಇತ್ಯಾದಿಗಳು ವರ್ಣ ಪದ್ಧತಿಯಲ್ಲಿ ಹುಟ್ಟಿನ ಜಾತಿಯನ್ನು ತೋರಿಸುತ್ತಿದ್ದುದಾಗಿರಲಿಲ್ಲ. ಗುರುಗಳ ಗುರು ಎಂದು ಪೂಜಿಸಲ್ಪಡುವ ವ್ಯಾಸ ಮಹರ್ಷಿ ಮೂಲತಃ ಬೆಸ್ತ ಜನಾಂಗದವರು. ಸಪ್ತರ್ಷಿಗಳೆಂದು ಕರೆಯಲ್ಷಪಡುವ ವಿಶ್ವಾಮಿತ್ರ, ವಸಿಷ್ಠ ಮುಂತಾದವರು ಯಾರೂ ಸಹ ಹುಟ್ಟಿನ ಬ್ರಾಹ್ಮಣರಲ್ಲ. ಮಹಾಪತಿವ್ರತೆಯೆಂದು ನಮಿಸಲ್ಪಡುವ ಅನಸೂಯೆ ಈಗ ಅಂತ್ಯಜರೆಂದು ಗುರುತಿಸಲ್ಪಡುತ್ತಿರುವ ಜಾತಿಗೆ ಸೇರಿದ್ದವಳಾಗಿದ್ದಳು. ಕ್ಷಾತ್ರ ತೇಜದಿಂದ ಬೆಳಗಿದ ಬ್ರಾಹ್ಮಣರಿಗೇನೂ ಕೊರತೆಯಿರಲಿಲ್ಲ. ಇವು ಕೇವಲ ಉದಾಹರಣೆಗಾಗಿ ಉಲ್ಲೇಖಿಸಿದ್ದಷ್ಟೆ. ಇಂತಹ ಸಹಸ್ರಾರು ನಿದರ್ಶನಗಳು ಕಾಲನ ಬುತ್ತಿಯಲ್ಲಿವೆ. ನಮಗೆ ಗೊತ್ತಿಲ್ಲದ ಅದು ಯಾವುದೋ ಬಹುದೀರ್ಘವಾದ ಹಿಂದಿನ ಕಾಲಘಟ್ಟದಲ್ಲಿ ಇವು ಹುಟ್ಟಿನ ಜಾತಿಗಳಂತೆ ಪರಿಗಣಿತವಾಗಿ ಬಂದಿರುವುದು ದುರದೃಷ್ಟ. ಮಕ್ಕಳು ತಮ್ಮ ತಂದೆ-ತಾಯಿಯರ ವೃತ್ತಿಯನ್ನೇ ಸಾಮಾನ್ಯವಾಗಿ ಮುಂದುವರೆಸಿಕೊಂಡು ಬಂದುದೂ ಇದಕ್ಕೆ ಒಂದು ಕಾರಣವಿದ್ದೀತು. ನಾಲ್ಕು ವರ್ಣಗಳು ನಾಲ್ಕು ಜಾತಿಗಳಾಗಿ ಮುಂದುವರೆದಿದ್ದರೆ ವರ್ಣಾಶ್ರಮ ಬೇರೆ ರೀತಿಯಲ್ಲಿ ಚಾಲ್ತಿಯಲ್ಲಿದೆ ಎನ್ನಬಹುದಿತ್ತು. ಈಗ ಅದೆಷ್ಟು ಜಾತಿ, ಉಪಜಾತಿಗಳಿವೆಯೋ ದೇವರಿಗೇ ಗೊತ್ತು.
     ಯಾವುದೇ ರಾಷ್ಟ್ರವಿರಲಿ, ಅದಕ್ಕೆ ಅದರದೇ ಆದ ಏನೇ ಸಿದ್ಧಾಂತಗಳಿರಲಿ, ಕಮ್ಯುನಿಸ್ಟ್ ದೇಶವಾಗಿರಲಿ, ಮತೀಯ ಆಡಳಿತವಿರುವ ದೇಶವೇ ಆಗಲಿ ಈ ನಾಲ್ಕು ಬಗೆಯ ವಿಭಾಗಗಳು ಇದ್ದೇ ಇರುತ್ತವೆ- ಬುದ್ಧಿಜೀವಿ, ವ್ಯಾಪಾರೋದ್ಯಮ ಜೀವಿ, ಶಕ್ತಿಜೀವಿ ಮತ್ತು ಶ್ರಮಜೀವಿ. ಒಪ್ಪಲಿ, ಒಪ್ಪದಿರಲಿ ಈ ಬಗೆಯ ವರ್ಣಾಶ್ರಮ ಇದ್ದೇ ಇರುತ್ತದೆ. ಎಲ್ಲರೂ ಬುದ್ಧಿಜೀವಿಗಳು, ಎಲ್ಲರೂ ವ್ಯಾಪಾರಿಗಳು, ಎಲ್ಲರೂ ಯೋಧರು, ಪೋಲಿಸರು ಮತ್ತು ಎಲ್ಲರೂ ಶ್ರಮಜೀವಿಗಳು ಆಗಲು ಸಾಧ್ಯವಿದೆಯೇ? ಅವರವರ ಶಕ್ತಿ, ಸಾಮರ್ಥ್ಯ, ಅವಕಾಶ ಮತ್ತು ಬುದ್ಧಿಮತ್ತೆಗಳಿಗೆ ಅನುಸಾರವಾಗಿ ಆಯಾ ವರ್ಗಕ್ಕೆ ಸೇರಿರುತ್ತಾರೆ. ಇದನ್ನೇ ಜಾತಿಯೆನ್ನಬಹುದೇ? ಈ ನಾಲ್ಕು ಅಂಗಗಳೂ ಸಾಮರಸ್ಯದಿಂದ ಕೆಲಸ ಮಾಡಿದರೆ ದೇಶ ಮುನ್ನಡೆಯುತ್ತದೆ. ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಿದ್ದರೆ ಅವರೂ ಮುಂದುವರೆಯುವುದಿಲ್ಲ, ಇನ್ನೊಬ್ಬರಿಗೂ ಅವಕಾಶವಾಗುವುದಿಲ್ಲ, ಪರಿಣಾಮವಾಗಿ ದೇಶಕ್ಕೆ ನಷ್ಟವಾಗುತ್ತದೆ. ಸವರ್ಣೀಯರು, ಅವರ್ಣೀಯರು ಎಂಬ ಪದಗಳು ಈಗ ಮಾಧ್ಯಮಗಳಲ್ಲಿ, ರಾಜಕೀಯ ಮಾಡುವವರಲ್ಲಿ, ಬೆಂದ ಮನೆಯಲ್ಲಿ ಗಳ ಹಿರಿಯುವವರಲ್ಲಿ ಜೀವಂತವಾಗಿರಿಸಲಾಗಿರುವ ಇಲ್ಲದ ಗುಮ್ಮ ಅಷ್ಟೆ. ಈ ಪದಗಳ ಬಳಕೆಯನ್ನು ನಿಷೇಧಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಜಾತಿಬೇಧ, ಅಸ್ಪೃಷ್ಯತೆಗಳ ವಿರುದ್ಧ ಹೋರಾಡುವ ನೈಜ ಕಳಕಳಿಯಿದ್ದರೆ ಹುಟ್ಟಿನ ಜಾತಿ ಪದ್ಧತಿ ವಿರೋಧಿಸುವ ಚಳುವಳಿ ನಡೆಯಲಿ. ಕಾಲ್ಪನಿಕ ಗುಮ್ಮನ ವಿರುದ್ಧ ಹೋರಾಡುವ ಬದಲು ನೈಜ ರಾಕ್ಷಸನನ್ನು ಎದುರಿಸುವುದು ಒಳ್ಳೆಯ ನಡೆಯೆನಿಸುತ್ತದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ದಲಿತತ್ವದಿಂದ ಉನ್ನತಿಯೆಡೆಗೆ! - 4


     2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು ಮಕ್ಕಳು ದಲಿತವರ್ಗದವರು. ಬಿಸಿಯೂಟ ತಯಾರಿಸುವವರು ದಲಿತರಾಗಿದ್ದರೆ ದಲಿತರಲ್ಲದ ಮಕ್ಕಳು ಪೋಷಕರ ಸೂಚನೆಯಂತೆ ಊಟವನ್ನು ಸ್ವೀಕರಿಸಲು ನಿರಾಕರಿಸಿದ ಪ್ರಸಂಗಗಳೂ ಇವೆ. ದಲಿತರು ಮತ್ತು ದಲಿತೇತರರ ನಡುವಣ ಸಂಘರ್ಷಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಜಮೀನು ವ್ಯಾಜ್ಯ, ಇತ್ಯಾದಿಗಳು ಕಾರಣವಾಗಿದ್ದು ಕೆಲವರ ಚಿತಾವಣೆಯಿಂದ ಎರಡೂ ಸಮುದಾಯಗಳಲ್ಲಿ ದ್ವೇಷ ಹೆಚ್ಚುವ ಪ್ರಸಂಗಗಳಿಗೆ ಕೊರತೆಯಿಲ್ಲ. ಪ.ಜಾ., ಪ.ಪಂ.ಗಳ ದೌರ್ಜನ್ಯ ತಡೆ ಕಾಯದೆಯ ದುರ್ಬಳಕೆಗಳ ಪ್ರಸಂಗಗಳೂ ವೈಷಮ್ಯ ಹೆಚ್ಚಳಕ್ಕೆ ಕಾರಣವಾದದ್ದೂ ಇದೆ. ಈ ಕಾಯದೆಯನ್ನು ಅರ್ಹ ಪ್ರಕರಣಗಳಲ್ಲೂ ಸಮರ್ಪಕವಾಗಿ ಬಳಸದಿರುವುದೂ ಸಹ ಇದೆ. ದಲಿತರಿಗೆ ಬಹಿಷ್ಕಾರ ವಿಧಿಸಿದ ಪ್ರಸಂಗಗಳೂ ಕಾಣಸಿಗುತ್ತಿರುತ್ತವೆ. ನಗರ ಪ್ರದೇಶಗಳಲ್ಲಿ ಅಷ್ಟಾಗಿ ಕಾಣಬರದಿದ್ದರೂ ಗ್ರಾಮೀಣ ಭಾಗಗಳಲ್ಲಿ ಜಾತಿಯ ಕಾರಣದಿಂದ ಭೇದಭಾವ ಮಾಡುತ್ತಿರುವುದು ಕಂಡುಬರುತ್ತದೆ. ಹೋಟೆಲ್ಲುಗಳು, ಶಾಲೆಗಳು, ದೇವಸ್ಥಾನಗಳು, ಸಾಂಪ್ರದಾಯಿಕ ಆಚರಣೆಗಳು, ಸಾರ್ವಜನಿಕ ನೀರಿನ ಮೂಲಗಳು, ಇತ್ಯಾದಿಗಳು ಜಾತಿ ಕಾರಣದಿಂದ ದಲಿತರಿಗೆ ಪ್ರವೇಶಕ್ಕೆ ಕಿರಿಕಿರಿ ಉಂಟುಮಾಡುವ ತಾಣಗಳಾಗಿವೆಯೆನ್ನಬಹುದು. ಅಂತರ್ಜಾತೀಯ ಪ್ರೇಮ ಪ್ರಕರಣಗಳೂ ದಲಿತರ ಮತ್ತು ಇತರರ ನಡುವಣ ಸಂಘರ್ಷಗಳಿಗೆ ಕಾರಣವಾಗಿವೆ. ಕೆಲವು ದಶಕಗಳ ಹಿಂದೆ ಇದ್ದ ಅಸ್ಪೃಷ್ಯತೆಯ ಆಚರಣೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದರೂ ಪೂರ್ಣ ನಿಂತಿಲ್ಲದಿರುವ ಉದಾಹರಣೆಗಳು ಕಾಣಸಿಗುತ್ತವೆ. ಆದರೂ ಅಸ್ಪೃಷ್ಯತೆ ಆಚರಣೆ ವಿರುದ್ಧದ ಜಾಗೃತಿ ಮೂಡುತ್ತಿರುವುದಂತೂ ಒಳ್ಳೆಯ ಬೆಳವಣಿಗೆಯೆನ್ನಬಹುದು.
     ಅನೇಕ ರೀತಿಯ ವೈವಿಧ್ಯಗಳಿಂದ, ವ್ಶೆರುದ್ಧ್ಯಗಳಿಂದ ಕೂಡಿದ ಹಿಂದೂ ಧರ್ಮದ ವಿಶಿಷ್ಟತೆಯಿಂದಾಗಿ ದಲಿತರ ತಾವು ಹಿಂದೂಗಳೋ, ಹಿಂದೂಯೇತರರೋ ಎಂಬ ಚರ್ಚೆ ಮುಂದುವರೆದೇ ಇದೆ. ಹಿಂದೂಗಳಲ್ಲಿ ದೇವರನ್ನು ನಂಬುವವರು, ನಂಬದವರು, ವಿವಿಧ ರೀತಿಯ ಆಚರಣೆಗಳು, ಸಂಪ್ರದಾಯಗಳನ್ನು ಆಚರಿಸುವವರು, ತಮ್ಮ ಆಚರಣೆ, ಸಂಪ್ರದಾಯಗಳೇ ಶ್ರೇಷ್ಠವೆನ್ನುವವರು, ಎಲ್ಲರೂ ಸಮಾನರು, ಎಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವವರು, ಸಂಪ್ರದಾಯಗಳನ್ನು ಧಿಕ್ಕರಿಸುವವರು, ಹೀಗೆ ವಿವಿಧ ಮನೋಭಾವದವರೆಲ್ಲರೂ ಕಾಣಸಿಗುವುದು ವಿಶೇಷವಾಗಿದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿರುವ ದಲಿತರಲ್ಲಿಯೇ 900ಕ್ಕೂ ಹೆಚ್ಚು ಉಪಜಾತಿಗಳಿದ್ದು ಭಿನ್ನ ಆಚರಣೆಗಳನ್ನು ಹೊಂದಿವೆ. ಪರಸ್ಪರರಲ್ಲಿ ವೈಮನಸ್ಯಗಳು ಸಹ ಕಾಣಬರುತ್ತವೆ. ಸಿಕ್ಖರಾಗಿ ಪರಿವರ್ತಿತ ಹೆಚ್ಚಿನ ದಲಿತರು ತಾವು ಇತರ ದಲಿತರಿಗಿಂತ ಮೇಲೆಂದು ಭಾವಿಸುವುದಲ್ಲದೆ ಪರಸ್ಪರರಲ್ಲಿ ವಿವಾಹ ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಒಬ್ಬ ಹಿರಿಯ ನಾಯಕರು ದಲಿತರನ್ನು ಜಾತಿಪದ್ಧತಿ ವಿರುದ್ಧ ಒಗ್ಗೂಡಿಸುವುದಕ್ಕಿಂತ ಜಾತಿ ಆಧಾರದಲ್ಲಿ ಸಂಘಟಿಸುವುದು ಸುಲಭವೆಂದು ಹೇಳಿದುದರಲ್ಲಿ ಸತ್ಯಾಂಶವಿದೆ.
     ಸಿಕ್ಖರು ಜಾತಿಪದ್ಧತಿಯನ್ನು ಒಪ್ಪುವುದಿಲ್ಲವಾದರೂ ಸಾಮಾನ್ಯವಾಗಿ ಜಾತಿ ಮೀರಿ ವಿವಾಹ ಸಂಬಂಧಗಳನ್ನು ಮಾಡುವುದಿಲ್ಲ. ಸಿಕ್ಖರಾಗಿರುವ ದಲಿತರನ್ನು ಸಿಕ್ಖರಲ್ಲಿನ ಒಂದು ವರ್ಗವೆಂದು ಗುರುತಿಸಲಾಗುತ್ತಿದೆ. ಬಹುಜನ ಸಮಾಜ ಪಕ್ಷದ ಸ್ಥಾಪಕ ಶ್ರೀ ಕಾನ್ಶೀರಾಮರು ಸಿಖ್ ಮೂಲದವರಾಗಿದ್ದರೂ ಬೌದ್ಧದರ್ಮವನ್ನು ಸ್ವೀಕರಿಸಿರದಿದ್ದರೂ ಅದನ್ನು ಪಾಲಿಸುತ್ತಿದ್ದರು. 70 ವರ್ಷಗಳ ಹಿಂದೆ ಸ್ಥಾಪಿತವಾದ ದೇರಾ ಸಚ್ ಖಂಡ್‌ನ ಈಗಿನ ಮುಖ್ಯಸ್ಥ ಸಂತ ನಿರಂಜನ ದಾಸರಾಗಿದ್ದು ಈ ಸಂಸ್ಥೆಗೆ ದಲಿತಸಿಕ್ಖರು ಲಕ್ಷಾಂತರ ಸಂಖ್ಯೆಯಲ್ಲಿ ಅನುಯಾಯಿಗಳಾಗಿದ್ದಾರೆ. ದಲಿತ ಸಿಕ್ಖರು ಮತ್ತು ದಲಿತೇತರ ಸಿಕ್ಖರಲ್ಲಿಯೂ ಸಹ ಕೆಲವೆಡೆ ಸಂಘರ್ಷಗಳಾದ ಉದಾಹರಣೆಗಳಿವೆ. ದೇರಾ ಸಚ್ ಖಂಡ್ ನಾಯಕ ರಮಾನಂದ ದಾಸರ  ಕೊಲೆ (24.5.2009) ಇಂತಹ ಸಂಘರ್ಷದ ಪರಿಣಾಮವಾಗಿತ್ತು.
     ಕ್ರಿಶ್ಚಿಯನರಲ್ಲೂ ಸಹ ಜಾತಿ ಪದ್ಧತಿ ದಕ್ಷಿಣ ಭಾರತದಲ್ಲಿ ಜಾರಿಯಲ್ಲಿದೆ. ದಲಿತ ಕ್ರಿಶ್ಚಿಯನರಿಗೆ ತಾರತಮ್ಯ ನೀತಿಯ ಬಿಸಿ ತಟ್ಟದೇ ಇಲ್ಲ. 1992ರಲ್ಲಿನ ಒಂದು ಅಧ್ಯಯನದಲ್ಲಿ ತಮಿಳುನಾಡಿನಲ್ಲಿ ಅವರಿಗೆ ಪ್ರತ್ಯೇಕ ಚರ್ಚುಗಳು, ಪ್ರತ್ಯೇಕ ಸ್ಮಶಾನಗಳಿದ್ದು ಅವರು ಪ್ರತ್ಯೇಕವಾಗಿ ಆಚರಣೆಗಳನ್ನು ಆಚರಿಸಬೇಕಾಗಿದ್ದ ಬಗ್ಗೆ ಹೇಳಲಾಗಿದೆ. ಆಕರ್ಷಣೆ ಮತ್ತು ಸವಲತ್ತುಗಳ ಆಮಿಷ ಒಡ್ಡಿ ದಲಿತರ ಬಡತನ ಮತ್ತು ಶಿಕ್ಷಣದ ಕೊರತೆಯನ್ನು ಬಂಡವಾಳ ಮಾಡಿಕೊಂಡು ಕ್ರಿಶ್ಚಿಯನರಾಗಿ ಮತಾಂತರ ಮಾಡಲಾಗುತ್ತಿದೆಯೆಂಬ ಆರೋಪವೂ ಕೇಳಿಬರುತ್ತಿದೆ.
     ಓಟ್ ಬ್ಯಾಂಕ್ ರಾಜಕಾರಣಗಳಿಗೆ ದಲಿತರು ದಾಳವಾಗಿ ಬಳಸಲ್ಪಡುತ್ತಿದ್ದಾರೆ ಎಂಬುದು ಬಹಳವಾಗಿ ಕೇಳಿಬರುವ ಮಾತು. ವಿಶೇಷವಾಗಿ ಕಾಂಗ್ರೆಸ್ ಕುರಿತು ಈ ಮಾತು ಕೇಳಿಬರುತ್ತಿದ್ದು, ಇದೀಗ ಭಾ.ಜ.ಪ. ಸಹ ಹಿಂದೆ ಬಿದ್ದಿಲ್ಲ. 2014ರ ಸಮೀಕ್ಷೆಯಂತೆ ಶೇ. 24ರಷ್ಟು ದಲಿತರು ಭಾಜಪವನ್ನು ಬೆಂಬಲಿಸಿದ್ದರು (2009ರಲ್ಲಿ ಈ ಪ್ರಮಾಣ ಶೇ.12ರಷ್ಟಿತ್ತು) ಮತ್ತು ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದು ಶೇ. 19ರಷ್ಟು ಬೆಂಬಲ ಗಳಿಸಿತ್ತು. ಬಹುಜನಸಮಾಜ ಪಕ್ಷ ಶೇ. 14ರಷ್ಟು ಬೆಂಬಲ ಗಳಿಸಿದ್ದರೆ, ಪಂಜಾಬಿನಲ್ಲಿ ಶೇ. 21ರಷ್ಟು ಮತ್ತು ದೆಹಲಿಯಲ್ಲಿ ಶೇ.40ಕ್ಕೂ ಹೆಚ್ಚು ದಲಿತರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದರು. ದಲಿತ ಮತದಾರರನ್ನು ಯಾವ ಪಕ್ಷವೂ ಕಡೆಗಣಿಸುವಂತಿಲ್ಲವೆಂದು ಈ ಸಮೀಕ್ಷೆ ತೋರಿಸಿದೆ.
     ವಚನ ಸಾಹಿತ್ಯದ ಪಿತಾಮಹನೆಂದು ಕೆಲವು ವಿದ್ವಾಂಸರು ಪರಿಗಣಿಸಿರುವ ಮಾದರ ಚನ್ನಯ್ಯ ಮೊದಲ ದಲಿತ ಸಾಹಿತಿಗಳಲ್ಲಿ ಒಬ್ಬರಾಗಿದ್ದು, 11ನೆಯ ಶತಮಾನದ ಚಾಲುಕ್ಯರ ಆಡಳಿತ ಕಾಲದಲ್ಲಿದ್ದವರು. ಡೋಹರ ಕಕ್ಕಯ್ಯನ ರಚನೆಗಳೂ ಗಮನ ಸೆಳೆಯುತ್ತವೆ. 1984ರಲ್ಲಿ ಬಾಬು ಜಗಜೀವನರಾಮರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. ಮಹಾತ್ಮ ಫುಲೆ ಮತ್ತು ಬಾಬಾಸಾಹೇಬ ಅಂಬೇಡ್ಕರರ ದಲಿತರ ಸ್ಥಾನಮಾನಗಳು, ಸಮಸ್ಯೆಗಳು, ಪರಿಹಾರಗಳ ಕುರಿತ ಅನೇಕ ಬರಹಗಳು, ಗ್ರಂಥಗಳು ಅನೇಕ ಭಾಷೆಗಳಲ್ಲಿ ಅನುವಾದಿತಗೊಂಡು ಮಹತ್ವ ಪಡೆದಿವೆ. ಇವರುಗಳಿಂದ ಪ್ರೇರಣೆಗೊಂಡ ಅನೇಕ ಸಾಹಿತಿಗಳು ದಲಿತ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 13, 2017

ದಲಿತತ್ವದಿಂದ ಉನ್ನತಿಯೆಡೆಗೆ! - 3


     ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ ಪರವಾಗಿದ್ದರು. ಕಿರುಕುಳಕ್ಕೆ ಒಳಗಾದ ಕನಕದಾಸರು ಮತ್ತು ಇತರರಿಗೆ ಕೊನೆಗೆ ಮಾನ್ಯತೆಯೂ ದಕ್ಕಿತ್ತು. ಅಂಬೇಡ್ಕರರ ಪ್ರೇರಣೆಯಿಂದಾಗಿ ದಲಿತರಲ್ಲಿ ಬೌದ್ಧ ಮತದ ಕುರಿತು ಒಲವು ಕಂಡುಬರುತ್ತಿದೆ. ಜಮ್ನಾಲಾಲ್ ಬಜಾಜರು ಅಸ್ಪೃಷ್ಯತೆ ನಿವಾರಣೆಗಾಗಿ ತಮ್ಮದೇ ಆದ ರೀತಿಯಲ್ಲಿ ಹೋರಾಡಿದವರು. ದೇವಸ್ಥಾನಗಳಿಗೆ ಪ್ರವೇಶಕ್ಕಾಗಿ ಜನರನ್ನು ಜಾಗೃತಿಗೊಳಿಸಿದರು. ದಲಿತರಿಗಾಗಿಯೇ ತಮ್ಮ ಜಮೀನು ಮತ್ತು ತೋಟಗಳಲ್ಲಿ ಸಾರ್ವಜನಿಕ ಬಾವಿಗಳನ್ನು ತೋಡಿಸಿದರು. ತಮ್ಮ ಹೆಚ್ಚಿನ ಸಂಪತ್ತನ್ನು ದೀನ ದಲಿತರ ಸಲುವಾಗಿ ವಿನಿಯೋಗಿಸಿದವರು.
     ಭಾರತದ ಸಂವಿಧಾನವಾಗಲೀ, ಯಾವುದೇ ಕಾನೂನು, ಕಾಯದೆಗಳಾಗಲೀ ದಲಿತರ ವಿರುದ್ಧ ತಾರತಮ್ಯ ತೋರಿಸಿಲ್ಲ, ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ಬದಲಾಗಿ ಅವರ ಅಭಿವೃದ್ಧಿಯ ಸಲುವಾಗಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ, ವಿಶೇಷ ಸವಲತ್ತುಗಳನ್ನು ಅನೇಕ ಯೋಜನೆಗಳ ಮೂಲಕ ಒದಗಿಸುತ್ತಿದೆ. ದಲಿತರ ವಿರುದ್ಧದ ದೌರ್ಜನ್ಯ, ತಾರತಮ್ಯ ಮತ್ತು ಇತರ ಅಪರಾಧಗಳ ತಡೆಗಾಗಿ 1995ರಲ್ಲಿ ಪ.ಜಾ. ಪ.ಪಂ. ದೌರ್ಜನ್ಯ ತಡೆ ಕಾಯದೆ ಜಾರಿಗೆ ಬಂದಿದೆ. ಸರ್ಕಾರಿ ನೇಮಕಾತಿಗಳಲ್ಲಿ, ಶಿಕ್ಷಣ ರಂಗದಲ್ಲಿ, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಮೀಸಲಾತಿ ಪದ್ಧತಿಯನ್ನು ಮೊದಲು ಜಾರಿಗೆ ತಂದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಕೇವಲ 20 ವರ್ಷಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿತ್ತು. ಇದನ್ನು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ವಿಪರ್ಯಾಸವೆಂದರೆ ಇನ್ನೂ ಹತ್ತು ಹಲವು ಜಾತಿಗಳನ್ನು ಈ ವ್ಯಾಪ್ತಿಗೆ ಸೇರಿಸಲು ಒತ್ತಡ ತರಲಾಗುತ್ತಿದೆ. ಒಳಮೀಸಲಾತಿಗೂ ಒತ್ತಾಯಿಸಲಾಗುತ್ತಿದೆ. ಇದರ ಫಲಶೃತಿ ಎಂಬಂತೆ ಹಿಂದುಳಿದ ಇತರ ಜಾತಿಗಳವರಿಗೂ ಮೀಸಲಾತಿ ಸೌಲಭ್ಯ ಕೊಡಲಾಗುತ್ತಿದೆ. ಮುಸಲ್ಮಾನರಿಗೂ ಪ್ರತ್ಯೇಕ ಮೀಸಲಾತಿಗೆ ರಾಜಕೀಯ ಪಕ್ಷಗಳೇ ಆತುರ ತೋರುತ್ತಿವೆ. ಇತ್ತೀಚಿನ ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯ ಸೋರಿಕೆಯಾದ ಅಂಕಿ-ಅಂಶಗಳಂತೆ ಕರ್ನಾಟಕದಲ್ಲಿ ಮುಸ್ಲಿಮರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳ ಪೈಕಿ ಎರಡನೆಯ ಸ್ಥಾನದಲ್ಲಿದ್ದರೂ, ಅವರು ಅಲ್ಪ ಸಂಖ್ಯಾತರೆಂದು ಕರೆಸಿಕೊಳ್ಳುತ್ತಾರೆ! ಸರ್ವೋಚ್ಛ ನ್ಯಾಯಾಲಯ ಮೀಸಲಾತಿ ಶೇ.50ಕ್ಕೆ ಮೀರಬಾರದೆಂದು ನಿರ್ಬಂಧ ಹೇರಿರದೇ ಇದ್ದಿದ್ದರೆ ಇದು ಎಲ್ಲಿಗೆ ಮುಟ್ಟುತ್ತಿತ್ತೋ ದೇವರೇ ಬಲ್ಲ. ಹಿಂದುಳಿದವರನ್ನು ಮುಂದೆ ತರುವ ಉದ್ದೇಶದ ಮೀಸಲಾತಿಯನ್ನು ದುರ್ಬಳಕೆಗಾಗಿ, ರಾಜಕೀಯ ಕಾರಣಗಳಿಗಾಗಿ ಬಳಸುತ್ತಿರುವ ಕಾರಣದಿಂದ ಪ್ರಬಲ ಜಾತಿಗಳೆನಿಸಿಕೊಂಡವರೂ ಮೀಸಲಾತಿ ಬಯಸಿ ಹಿಂಸಾತ್ಮಕ ಚಳುವಳಿ ನಡೆಸುತ್ತಿರುವದನ್ನು ಕಾಣುತ್ತಿದ್ದೇವೆ. ಇರುವ ನೂರಾರು, ಸಾವಿರಾರು ಜಾತಿ ಉಪಜಾತಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳವರು, ಹಿಂದುಳಿದವರು ಇತ್ಯಾದಿ ಹಣೆಪಟ್ಟಿಗಳಲ್ಲಿ ಜಾತಿಯ ಕಾರಣದಿಂದ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಜಾತಿಯ ಕಾರಣದಿಂದ ಯಾವುದೇ ವಿಶೇಷ ಸೌಲಭ್ಯ ಪಡೆಯದಿರುವ ಜಾತಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಬಹುದು! ಅಂತಹವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 10ರ ಒಳಗೇ ಬಂದರೂ ಆಶ್ಚರ್ಯವಿಲ್ಲ. ಇವರುಗಳಿಗೆ ಅರ್ಹತೆಯಿದ್ದರೂ ಮೀಸಲಾತಿಯ ನೀತಿಯಿಂದಾಗಿ ಅವಕಾಶಗಳಿಂದ ವಂಚಿತರಾಗಿರುವ ಪ್ರಸಂಗಗಳು ಕಡಿಮೆಯಲ್ಲ. ವಿದೇಶಗಳಿಗೆ ಇಂತಹವರ ಪ್ರತಿಭಾಪಲಾಯನಕ್ಕೂ ಇದು ಎಡೆ ಮಾಡಿರುವುದು ಸುಳ್ಳಲ್ಲ. ಮೀಸಲಾತಿ ನೀತಿಯಿಂದ ಅನುಕೂಲಗಳಿರುವಂತೆ ಅನಾನುಕೂಲಗಳೂ ಇವೆ. ಇದನ್ನು ಅವ್ಶೆಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದಿರುವುದು ಹಿನ್ನಡೆಗೆ ಕಾರಣವೂ ಆಗಿದೆಯೆಂದರೆ ತಪ್ಪಲ್ಲ. ಇದು ದೊಡ್ಡ ಚರ್ಚೆಯ ವಿಷಯವೆಂಬುದರಲ್ಲಿ ಅನುಮಾನವಿಲ್ಲ.
     ರಾಜಕೀಯವಾಗಿ ದಲಿತರಿಗೂ ಅಧಿಕಾರದ ಸವಿ ಸಿಕ್ಕಿದೆ. ದಲಿತರಿಗಾಗಿಯೇ ಮೀಸಲಾದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿದ್ದು ಅನೇಕ ಪ್ರಭಾವಿ ರಾಜಕಾರಣಿಗಳು ಹೊರಹೊಮ್ಮಿದ್ದಾರೆ, ಹೊರಹೊಮ್ಮುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲಾತಿಯ ಸೌಲಭ್ಯ ಅವರಿಗೆ ಸಿಕ್ಕಿದೆ. ಈ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೂ ಮೀಸಲಾತಿ ಸೌಲಭ್ಯ ವಿಸ್ತರಣೆಯಾಗಿದೆ.  1997ರಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಶ್ರೀ ಕೆ.ಆರ್. ನಾರಾಯಣನ್ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಉತ್ತರಪ್ರದೇಶದಲ್ಲಂತೂ ದಲಿತರು ಕ್ರಾಂತಿಯನ್ನೇ ಉಂಟುಮಾಡಿದ್ದರು. ದಲಿತರ ನೇತೃತ್ವದ ಬಹುಜನಸಮಾಜ ಪಕ್ಷದ ನೇತಾರೆ ಮಾಯಾವತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಾಮೋದರಮ್ ಸಂಜೀವಯ್ಯ 1960-62ರ ಅವಧಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜಿತನ್ ರಾಮ್ ಮಾಂಜಿಯವರು ಒಂದು ವರ್ಷದ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ತಾವು ಹೇಳಿದಂತೆ ಕೇಳುತ್ತಾರೆಂದು ಭಾವಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದ ನಿತೀಶಕುಮಾರರು ಮಾಂಜಿ ತಮ್ಮ ಕೈಗೊಂಬೆಯಾಗದಿದ್ದರಿಂದ ಅವರನ್ನು ಕೆಳಗಿಳಿಸಿ ಮತ್ತೆ ತಾವೇ ಮುಖ್ಯಮಂತ್ರಿಯಾದರು. ಬಾಬು ಜಗಜೀವನರಾಮರು ಉಪಪ್ರಧಾನ ಮಂತ್ರಿಯಾಗಿದ್ದರು. ಅವರ ಪುತ್ರಿ ಶ್ರೀಮತಿ ಮೀರಾಕುಮಾರಿ ಲೋಕಸಭೆಯ ಸ್ಪೀಕರ್ ಆಗಿದ್ದರು. ದಲಿತರ ರಾಜಕೀಯ ಪಕ್ಷಗಳಾಗಿ ಬಹುಜನ ಸಮಾಜ ಪಕ್ಷ, ಮಹಾರಾಷ್ಟ್ರದಲ್ಲಿ ರಿಪಬ್ಲಿಕನ್ ಪಾರ್ಟಿ, ತಮಿಳುನಾಡಿನಲ್ಲಿ ವಿದುತಲೈ ಚಿರುತಾಯಿಗಳ್ ಕಚ್ಚಿ, ಅಂಬೇಡ್ಕರರ ಮೊಮ್ಮಗ ಶ್ರೀ ಪ್ರಕಾಶ ಯಶವಂತ್ ಅಂಬೇಡ್ಕರ್ ಸ್ಥಾಪಿಸಿದ ಭಾರಿಪ ಬಹುಜನ ಮಹಾಸಂಘ, ಬಿಹಾರದ ಲೋಕ ಜನಶಕ್ತಿ ಪಾರ್ಟಿಗಳು ಮುಂಚೂಣಿಯಲ್ಲಿವೆ. ಬಂಗಾರು ಲಕ್ಷ್ಮಣ್, ಕಲ್ಯಾಣಸಿಂಗ್(ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದವರು), ರಾಮಚಂದ್ರ ವೀರಪ್ಪ, ಡಾ. ಸೂರಜ್ ಭಾನ್ ಮೊದಲಾದ ದಲಿತ ನಾಯಕರು ಭಾ.ಜ.ಪ.ದ ಹಿರಿಯ ನಾಯಕರುಗಳ ಪಟ್ಟಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ (ಲೋಕಸಭೆಯ ವಿಪಕ್ಷ ನಾಯಕ), ಪರಮೇಶ್ವರ್ (ಕ.ಕಾಂಗ್ರೆಸ್ ಅಧ್ಯಕ್ಷ, ಗೃಹಮಂತ್ರಿ) ಮೊದಲಾದವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. 
     ದಿ. ಇ.ವಿ.ರಾಮಸ್ವಾಮಿ ಪೆರಿಯಾರರ ಪ್ರಭಾವ ತಮಿಳುನಾಡಿನಲ್ಲಿ ಇಂದಿಗೂ ಕಾಣಬರುತ್ತದೆ. ಸಾಮಾಜಿಕ ಹೋರಾಟಗಾರರಾಗಿದ್ದ ಇವರು ಸ್ವಾಭಿಮಾನ ಆಂದೋಳನದ ಹರಿಕಾರರಾಗಿ ದ್ರಾವಿಡ ಚಳುವಳಿ ಉತ್ತೇಜಿಸಿದವರು. ದಕ್ಷಿಣ ಭಾರತವನ್ನೊಳಗೊಂಡ ಸ್ವತಂತ್ರ ದ್ರಾವಿಡಸ್ಥಾನದ ಕನಸು ಕಂಡವರು. ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ದ್ರಾವಿಡ ಕಳಗಂ ಸ್ಥಾಪಕರು. ತಮಿಳುನಾಡಿನ ಇಂದಿನ ಅನೇಕ ರಾಜಕೀಯ ಪಕ್ಷಗಳು ದ್ರಾವಿಡ ಕಳಗಂನಿಂದ ವಿಭಜನೆಗೊಂಡಿದ್ದರೂ ಇವರ ವಿಚಾರದ ಆಧಾರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿವೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 8, 2017

ದಲಿತತ್ವದಿಂದ ಉನ್ನತಿಯೆಡೆಗೆ! - 2


     ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಆಚಾರ್ಯ ವಿನೋಬಾಭಾವೆಯವರ ಭೂದಾನ ಆಂದೋಳನ ಒಂದು ಕ್ರಾಂತಿಯನ್ನೇ ಉಂಟುಮಾಡಿತ್ತೆನ್ನಬಹುದು. ದೇಶಾದ್ಯಂತ ಸಂಚರಿಸಿದ ಅವರು ಉಳ್ಳವರಿಂದ ಭೂದಾನ ಪಡೆದು ಅದನ್ನು ದೀನ ದಲಿತರಿಗೆ ಹಂಚುವ ಮಹತ್ಕಾರ್ಯ ಮಾಡಿ ಅನೇಕ ದಲಿತರ ಸ್ವಾಭಿಮಾನಿ ಬದುಕಿಗೆ ಆಶ್ರಯವಾದವರು. ಸಾಮಾಜಿಕ ನ್ಯಾಯ ಒದಗಿಸುವ ಅತ್ಯಂತ ಸುಂದರಮಾರ್ಗವಿದಾಗಿತ್ತು. ಬಲವಂತದಿಂದ, ಹಿಂಸೆಯಿಂದ ಸಾಧ್ಯವಾಗದುದು ಮನವೊಲಿಕೆಯಿಂದ ಸಾಧ್ಯವೆಂಬುದನ್ನು ತೋರಿಸಿಕೊಟ್ಟಿದ್ದವರು ವಿನೋಬಾಜಿ. ಅವರು 1975-77ರ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದ ದೂಷಣೆಗೆ ಒಳಗಾಗಿದ್ದೂ ಇತ್ತು. ಆದರೆ ಅವರ ಉದ್ದೇಶ ಜನರು ಮತ್ತು ಆಳುವವರು ಇಬ್ಬರೂ ಕಾನೂನನ್ನು ಗೌರವಿಸಬೇಕೆಂಬುದಾಗಿದ್ದು, ಇದನ್ನು ಆ ಸಮಯದಲ್ಲಿ ಆಡಳಿತದಲ್ಲಿದ್ದವರು ಜನರನ್ನು ದಾರಿತಪ್ಪಿಸಲು ಅವರ ಹೇಳಿಕೆಯನ್ನು ಭಾಗಶಃ ಬಳಸಿಕೊಂಡಿದ್ದರು.
     ಮದರ್ ತೆರೇಸಾ ಅವರು ಬಡಜನರ ಸೇವೆ ಮಾಡಿ ಹೆಸರಾದವರು. ಬಡವರಲ್ಲಿ ಬಡವರ, ಕಾಯಿಲೆಯಿಂದ ನರಳುತ್ತಿದ್ದವರ, ಸಾಯುವ ಸ್ಥಿತಿಯಲ್ಲಿದ್ದ ಜನರ ಆರೈಕೆ ಮಾಡಿದ್ದವರು. ಅನಾಥರ, ನೆರವು ಸಿಗದವರ ಆಶಾಕಿರಣವಾಗಿದ್ದ ಅವರ ವಿರುದ್ಧ ಸೇವೆಯ ಹೆಸರಿನಲ್ಲಿ ಮತಾಂತರ ಮಾಡಿದವರೆಂಬ ಆರೋಪವೂ ಇದೆ. ಅವರಿಗೆ ನೊಬೆಲ್ ಪ್ರಶಸ್ತಿಯೂ ಕೊಡಲ್ಪಟ್ಟಿತ್ತು.
     ಸ್ವಾಮಿ ವಿವೇಕಾನಂದರಂತೂ ದೀನದಲಿತರ ಪರವಾಗಿ ಬಲವಾದ ದ್ವನಿ ಎತ್ತಿದವರು. ಕಟುವಾದ ನುಡಿಗಳಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಅನಿಷ್ಟ ಆಚರಣೆಗಳನ್ನು ಖಂಡಿಸಿದ್ದವರು. 'ದರಿದ್ರದೇವೋಭವ' ಎಂದು ಘೋಷಿಸಿ ಜಾಗೃತಿ ಮೂಡಿಸಿದ್ದವರು. ಎಲ್ಲಾ ನ್ಯೂನತೆಗಳ ನಡುವೆಯೂ ಬದಲಾವಣೆಗೆ ತೆರೆದುಕೊಳ್ಳಬಲ್ಲ ಹಿಂದೂಧರ್ಮದ ಶ್ರೇಷ್ಠತೆಯನ್ನು ಜಗತ್ತಿನಲ್ಲಿ ಎತ್ತಿ ಹಿಡಿದ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.
     ಮಹರ್ಷಿ ದಯಾನಂದ ಸರಸ್ವತಿಯವರು ಸಾಮಾಜಿಕ-ಧಾರ್ಮಿಕ ಜಗತ್ತಿನಲ್ಲಿ ಪ್ರಬಲ ಅಲೆಯನ್ನೆಬ್ಬಿಸಿದವರು. 'ವೇದಗಳಿಗೆ ಹಿಂತಿರುಗಿ' ಎಂಬ ಘೋಷವಾಕ್ಯದೊಂದಿಗೆ ಜಾತಿಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದ ಅವರು 1875ರಲ್ಲಿ ಆರ್ಯಸಮಾಜವನ್ನು ಸ್ಥಾಪಿಸಿ ಪುರಾಣಗಳು, ಮೂರ್ತಿಪೂಜೆ ಮತ್ತು ಅಂಧ ಸಂಪ್ರದಾಯಗಳನ್ನು ಕಟುವಾಗಿ ವಿರೋಧಿಸಿದರು. ಜನರನ್ನು ಹುಟ್ಟಿನ ಜಾತಿಯ ಆಧಾರದಲ್ಲಿ ಗುರುತಿಸುವುದು ತಪ್ಪೆಂದು, ಅವರು ಆಚರಿಸುವ ವೃತ್ತಿ ಮತ್ತು ಕೆಲಸಗಳಿಂದ ಮಾತ್ರ ಗುರುತಿಸಬೇಕೆಂದು ಪ್ರತಿಪಾದಿಸಿದವರು. ಅಸ್ಪೃಷ್ಯತೆ, ಬಾಲ್ಯವಿವಾಹಗಳ ವಿರುದ್ಧ ಅಭಿಯಾನ ಮಾಡಿದವರು. ಅಂತರ್ಜಾತೀಯ ವಿವಾಹ, ವಿಧವಾ ವಿವಾಹಗಳಿಗೆ ಪ್ರೋತ್ಸಾಹವಿತ್ತ ಅವರು ಎಲ್ಲಾ ಜಾತಿಗಳವರೂ ಮತ್ತು ಮಹಿಳೆಯರೂ ವೇದದ ಕಲಿಕೆ ಮಾಡಲು ಹಕ್ಕುಳ್ಳವರೆಂದು ಸಾಧಾರವಾಗಿ ನಿರೂಪಿಸಿದ್ದಲ್ಲದೆ ಪ್ರತ್ಯಕ್ಷ ಆಚರಣೆಗೂ ತಂದವರು. ಕ್ರಿಶ್ಚಿಯನ್ ಮತ್ತು ಇಸ್ಲಾಮ್ ಮತಗಳಿಗೆ ಮತಾಂತರಗೊಂಡವರನ್ನು ಮರಳಿ ಹಿಂದೂಧರ್ಮಕ್ಕೆ ಕರೆತರುವ ಶುದ್ಧೀಕರಣ ಕಾರ್ಯಕ್ಕೂ ಅವರು ಚಾಲನೆ ಕೊಟ್ಟವರು, ಭಾರತ ಭಾರತೀಯರದು ಎಂದವರು. ಅವರ ನಿಷ್ಠುರ ಮಾತು, ನಡಳಿಕೆಗಳನ್ನು ಸಹಿಸದ ವಿರೋಧಿಗಳಿಂದ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ಹಲವು ಸಲ ನಡೆದಿದ್ದವು. ಕೊನೆಗೂ ಅವರು ವಿಷಪ್ರಾಶನಕ್ಕೆ ಬಲಿಯಾಗಬೇಕಾಯಿತು.
     ಜ್ಯೋತಿಬಾ ಫುಲೆಯವರು ಬ್ರಾಹ್ಮಣ ಜನಾಂಗದವರಾಗಿದ್ದು ಅಸ್ಪೃಷ್ಯತೆಯ ಆಚರಣೆಯ ಕಡುವಿರೋಧಿಯಾಗಿದ್ದಲ್ಲದೆ ಜಾತಿಬೇಧ ಮಾಡದೆ ಎಲ್ಲಾ ಸಮುದಾಯದವರಿಗಾಗಿ ಶಾಲೆ ತೆರೆದಿದ್ದವರು. ಸತ್ಯಶೋಧಕ ಸಮಾಜ ಸ್ಥಾಪಿಸಿ ಜಾತಿರಹಿತ ಸಮಾಜಕ್ಕಾಗಿ ದುಡಿದವರು. ಅಸ್ಪೃಷ್ಯರನ್ನು ದಲಿತ ಎಂಬ ಪದದಿಂದ ಮೊಟ್ಟಮೊದಲಿಗೆ ಸಂಬೋಧಿಸಿದವರು ಇವರೇ! ಇವರೂ ಸಹ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಜಾಗೃತಿ ಮೂಡಿಸಲು ಶ್ರಮಿಸಿದವರು.
     1958ರಲ್ಲಿ ಉದಯಪುರದ ಖಾಟಿಕ್ ಸಮುದಾಯದವರು ಜೈನಮುನಿ ಸಮೀರ ಮುನಿಯವರ ಪ್ರೇರಣೆಯಿಂದ ಜೈನರಾದರು. ದಲಿತ ಸಮುದಾಯಕ್ಕೆ ಸೇರಿದ 22 ವರ್ಷದ ತರುಣ 2005ರಲ್ಲಿ ಜಾಲೋರಿನಲ್ಲಿ ಜೈನಮುನಿಯಾಗಿ ದೀಕ್ಷೆ ಪಡೆದರೆ, 2010ರಲ್ಲಿ ಮಹರ್ ಜನಾಂಗದ ಇಂಜನಿಯರ್ ವಿಶಾಲ್ ದಾಮೋದರ್ ಸಮೇತ್ ಶಿಖರಿನಲ್ಲಿ ಜೈನ ಸನ್ಯಾಸಿಯಾದರು. 1984ರಲ್ಲಿ ಜೋಧಪುರದ ಭಂಗಿ ಸಮುದಾಯದವರು ಆಚಾರ್ಯ ತುಳಸಿಯವರ ಪ್ರಭಾವದಿಂದ ಜೈನ ಧರ್ಮ ಸ್ವೀಕರಿಸಿದರು.
     ಬ್ರಹ್ಮಸಮಾಜ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಮಕೃಷ್ಣ ಮಿಷನ್‌ಗಳು ದಲಿತರನ್ನು ಸಾಮಾಜಿಕ ಬಹಿಷ್ಕಾರಗಳಿಂದ ಮುಕ್ತಿಗೊಳಿಸಲು ಮತ್ತು ಎಲ್ಲರಂತೆ ಒಂದು ಎಂಬ ಅಭಿಪ್ರಾಯ ಕ್ರೋಢೀಕರಣ ಮತ್ತು ಜಾಗೃತಿಗಾಗಿ ಅಪೂರ್ವವಾಗಿ ಶ್ರಮಿಸಿವೆ, ಶ್ರಮಿಸುತ್ತಿವೆ. ದಲಿತರು ತಮ್ಮದೇ ಆದ ಪೂಜಾಸ್ಥಳಗಳನ್ನು ಹೊಂದಿದ್ದರೂ, 1928ರಿಂದ ಪ್ರಥಮವಾಗಿ ಮೇಲುಜಾತಿಯವರ ದೇವಸ್ಥಾನವಾದ ವಾರ್ಧಾದ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಬಹಿರಂಗವಾಗಿ ಮತ್ತು ಆತ್ಮೀಯವಾಗಿ ಪ್ರವೇಶ ಸಿಕ್ಕಿತು. ನಂತರದಲ್ಲಿ ಇನ್ನಿತರ ಹಲವು ದೇವಾಲಯಗಳಿಗೂ ಅವರ ಪ್ರವೇಶವನ್ನು ಸ್ವಾಗತಿಸಲಾಯಿತು. 1936-47ರ ಅವಧಿಯಲ್ಲಿ ಕೇರಳದ ಅರಸರು ಅಲ್ಲಿನ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಹಿಂದೂಗಳಿಗೂ ಮುಕ್ತ ಪ್ರವೇಶಕ್ಕೆ ಅನುಮತಿಸಿ ಘೋಷಿಸಿದ್ದು ಅಸ್ಪೃಷ್ಯತೆಯ ನಿವಾರಣೆಯಲ್ಲಿ ದಿಟ್ಟ ಹೆಜ್ಜೆಯೆನಿಸಿತ್ತು. ಸತ್ನಾಮಿ ಆಂದೋಳನದ ರೂವಾರಿ ಪಂಜಾಬಿನ ಸುಧಾರಕ ದಲಿತ ಗುರು ಘಾಸಿದಾಸ್, ದಲಿತ ಗುರು ರವಿದಾಸ್ ಮೊದಲಾದವರು ದಲಿತರ ಹಿತಕ್ಕೆ ಶ್ರಮಿಸಿದ್ದವರು. ಸುಧಾರಕ ಗ್ಯಾನಿ ದಿತ್ತ್ ಸಿಂಗ್ ಸಿಂಗ್ ಸಭಾ ಪ್ರಾರಂಭಿಸಿ ದಲಿತರನ್ನು ತಮ್ಮ ತೆಕ್ಕೆಗೆ ಸೆರಿಸಿಕೊಳ್ಳುವ ಕೆಲಸ ಮಾಡಿದರು. ದೇವಾಲಯಗಳಿಗೆ ದಲಿತರ ಪ್ರವೇಶ ವಿವಾದಗಳನ್ನೂ ಸೃಷ್ಟಿಸಿತ್ತು. ಸುಬ್ರಹ್ಮಣ್ಯ ಭಾರತಿಯವರು ದಲಿತರಿಗೆ ಬ್ರಾಹ್ಮಣತ್ವ ದೀಕ್ಷೆ ಕೊಡಿಸಿದ್ದೂ ವಿವಾದದ ಸಂಗತಿಯಾಗಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದುಳಿದವರಲ್ಲದೆ ದಲಿತರ ಮಹರ್ ರೆಜಿಮೆಂಟ್ ಸಹ ಅಸ್ತಿತ್ವದಲ್ಲಿತ್ತು. ಆದಿವಾಸಿಗಳು, ಗುಡ್ಡಗಾಡು ಜನಾಂಗಗಳವರ ಅನುಪಮ ಸಂಘಟಕ ಶಿವಾಜಿ ಬ್ರಿಟಿಷರಿಗೆ ಮತ್ತು ಮೊಘಲರಿಗೆ ಸಿಂಹಸ್ವಪ್ನವಾಗಿದ್ದುದು ಇತಿಹಾಸ.
    ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರರು ದಲಿತ ವಿಮೋಚನಾ ಕಾರ್ಯಕ್ಕಾಗಿ ಅನುಪಮ ಕಾರ್ಯ ಮಾಡಿದವರು. ಅಸ್ಪೃಷ್ಯರೆಂದು ಪರಿಗಣಿಸಲ್ಪಟ್ಟಿದ್ದ ಮಹರ್ ಜಾತಿಯಲ್ಲಿ ಜನಿಸಿದ ಅವರು ಅಸ್ಪೃಷ್ಯತೆಯ ಕರಾಳ ಅನುಭವಗಳ ನಡುವೆಯೂ ಛಲದಿಂದ ಉತ್ತಮ ಶಿಕ್ಷಣ ಪಡೆಯಲು ಸಫಲರಾಗಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ಹೋಗಿ ನ್ಯೂಯಾರ್ಕಿನ ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ. ಸಂಪಾದಿಸಿದರು. ಲಂಡನ್ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಗಳಿಸಿ ಭಾರತಕ್ಕೆ ಹಿಂತಿರುಗಿದವರು. ಅವರು ಕಾನೂನು ಶಾಸ್ತ್ರದಲ್ಲೂ ಪದವಿ ಪಡೆದರು. ಅಸ್ಪೃಷ್ಯತೆ ವಿರುದ್ಧ ಹೋರಾಡಿದ್ದಲ್ಲದೆ ದಲಿತರಿಗೆ ಸ್ವಾಭಿಮಾನದ ಬದುಕಿಗಾಗಿ ಪ್ರೇರೇಪಿಸಿ, ಎಲ್ಲರ ಗೌರವಾದರಗಳಿಗೆ ಪಾತ್ರರಾದ ಅವರನ್ನು ವಿಶೇಷವಾಗಿ ದಲಿತ ಸಮುದಾಯವು ಅತ್ಯುನ್ನತ ಸ್ಥಾನದಲ್ಲಿರಿಸಿ ಗೌರವಿಸುತ್ತಿದೆ. ಮೂಕನಾಯಕ ಎಂಬ ಸಾಪ್ತಾಹಿಕ, ಬಹಿಷ್ಕೃತ ಭಾರತ ಎಂಬ ನಿಯತಕಾಲಿಕಗಳನ್ನು ಹೊರತಂದು ಸಮಾಜದ ಜಾಗೃತಿಗೆ ಶ್ರಮಿಸಿದವರು. 1924ರಲ್ಲಿ ಬಹಿಷ್ಕೃತ ಹಿತಕಾಮಿಸಭಾ ಸ್ಥಾಪಿಸಿ ಸಾಮಾಜಿಕ-ರಾಜಕೀಯ ಹಿತಾಸಕ್ತಿಗಳಿಗಾಗಿ ಹೋರಾಡಲು ದಲಿತರಿಗೆ ಪ್ರೇರಿಸಿದರು. ಶಿಕ್ಷಣ, ಸಂಘರ್ಷ ಮತ್ತು ಸಂಘಟನೆ ಎಂಬ ಧ್ಯೇಯವಾಕ್ಯದೊಂದಿಗೆ ಹುರಿದುಂಬಿಸಿದರು. ಅವರ ಪ್ರಕಾರ ಕ್ರಿ.ಶ. 400ರ ಸುಮಾರಿನಲ್ಲಿ ಬೌದ್ಧ ಮತ್ತು ಆರ್ಯ ಸಂಸ್ಕೃತಿಗಳ ನಡುವೆ ಶ್ರೇಷ್ಠತ್ವಕ್ಕಾಗಿ ಸಂಘರ್ಷ ನಡೆದ ಸಂದರ್ಭದಲ್ಲಿ ಅಸ್ಪೃಷ್ಯತೆಯ ಉಗಮವಾಯಿತೆನ್ನಲಾಗಿದೆ. ತಾರತಮ್ಯ ದೃಷ್ಟಿಗೆ ಮನುಸ್ಮೃತಿ ಕಾರಣವೆಂದು ಆ ಪುಸ್ತಕವನ್ನು ಸುಟ್ಟವರು. 1932ರಲ್ಲಿ ದಲಿತ ಪ್ರತಿನಿಧಿಗಳನ್ನು ದಲಿತರು ಮಾತ್ರ ಚುನಾಯಿಸಬೇಕೆಂದು ಬ್ರಿಟಿಷರ ಆಡಳಿತ ಕಾಲದಲ್ಲಿ ಒತ್ತಾಯಿಸಿದ್ದರು. ಇದು ದಲಿತರನ್ನು ಪ್ರತ್ಯೇಕವಾಗಿ ಉಳಿಸುತ್ತದೆಯೆಂದು ಮತ್ತು ಬದಲಾವಣೆಗೆ ಹಿಂದೂಧರ್ಮ ತೆರೆದುಕೊಳ್ಳುತ್ತದೆಯೆಂದು ಪ್ರತಿಪಾದಿಸಿದ್ದ ಗಾಂಧೀಜಿ ಮತ್ತು ಇತರ ನಾಯಕರು ಇದನ್ನು ವಿರೋಧಿಸಿದ್ದರು. ನಂತರದಲ್ಲಿ ದಲಿತರಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿರಿಸುವ ನಿರ್ಧಾರಕ್ಕೆ ಸಹಮತಿ ದೊರಕಿತ್ತು. ಇದು ಇತರರನ್ನು ದಲಿತರಿಂದ ಪ್ರತ್ಯೇಕಿಸುವ ಅಪಾಯ ತಪ್ಪಿಸಿ ಅವರನ್ನೂ ಒಳಗೊಂಡ ರಾಜಕೀಯ ವ್ಯವಸ್ಥೆ ರೂಪಿತವಾದುದು ಸಮಾಧಾನದ ಸಂಗತಿ. ಇದು ಸ್ವತಂತ್ರ ಭಾರತದಲ್ಲೂ ಮುಂದುವರೆದುಕೊಂಡು ಬಂದಿದೆ. ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ರೂಪಿಸುವಲ್ಲಿ ಅಂಬೇಡ್ಕರರ ಪಾತ್ರ ಮಹತ್ವದ್ದಾಗಿದೆ. ಅವರು ಆಚರಣೆಯಲ್ಲಿದ್ದ ಅಸ್ಪೃಷ್ಯತೆಯಿಂದ ಅನುಭವಿಸಿದ ಕಷ್ಟ, ನೋವುಗಳಿಂದಾಗಿ 14.10.1956ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರಲ್ಲದೆ ನಂತರದಲ್ಲಿ ಸುಮಾರು 5ಲಕ್ಷದಷ್ಟು ಸಮರ್ಥಕರನ್ನೂ ಬೌದ್ಧಧರ್ಮಕ್ಕೆ ಪರಿವರ್ತಿಸಿದರೆನ್ನಲಾಗಿದೆ.
(ಮುಂದುವರೆಯುವುದು)
-ಕ.ವೆಂ.ನಾಗರಾಜ್.