ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಸೆಪ್ಟೆಂಬರ್ 23, 2012

ನಮ್ಮ ಆಚರಣೆಗಳು, ಸಂಪ್ರದಾಯಗಳು ವೇದೋಕ್ತವೇ?


'ಕವಿಮನ'ದ ಓದುಗರಿಗೆ,
ನಮಸ್ಕಾರಗಳು.
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?


ಗುರುವಾರ, ಸೆಪ್ಟೆಂಬರ್ 20, 2012

ಮೂಢ ಉವಾಚ - 91



ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನು
ಯಾರಿಗಾಗೀ ಜಗವು ರಚಿಸಿದವರಾರು |
ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನು
ಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..೩೧೭

ರವಿ ಸೋಮರಿಹರು ಇಹುದು ಭೂಮಂಡಲವು
ವಾಯು ಜಲವಿಹುದು ಆಗಸವು ತುಂಬಿಹುದು |
ಜಗವನನುಭವಿಪ ಜೀವಿಗಳ ಲೆಕ್ಕವಿಟ್ಟವರಾರು 
ಎಲ್ಲದಕೆ ಕಾರಣನು ಎಂತಿಹನೊ ಮೂಢ || ..೩೧೮

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ || ..೩೧೯

ನಾನಾರೆಂದು ತಿಳಿಸಿ ಹೇಳುವನೆ ಗುರುವು
ಅವನೆಂತೆಂದು ತೋರಿ ತಿದ್ದುವನೆ ಗುರುವು |
ಜಗವನನುಭವಿಸೆ ಮಾರ್ಗದರ್ಶಿಯೆ ಗುರುವು
ಗುರಿಯವನು ಗುರುವವನು ಒಬ್ಬನೇ ಮೂಢ || ..೩೨೦
*****************
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 14, 2012

ಮೂಢ ಉವಾಚ - 90


ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ || ..೩೧೩

ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ
ಪ್ರಿಯ ಸುತರು ನರರಲ್ತೆ ದೇವಾಧಿದೇವನ |
ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ
ಮೇಲು ಕೀಳುಗಳ ಸರಿಸಿಬಿಡು ಮೂಢ || ..೩೧೪

ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ || ..೩೧೫

ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು
ಜನನ ಮರಣಗಳ ಚಕ್ರ ತಿರುಗುವುದು ಏಕೆ |
ಹುಟ್ಟುವುದು ಏಕೆ ಸಾಯುವುದು ಮತ್ತೇಕೆ
ಅನಾದಿ ಪ್ರಶ್ನೆಗಳು ಅನಂತವೋ ಮೂಢ || ..೩೧೬
*************
-ಕ.ವೆಂ.ನಾಗರಾಜ್.

ಮಂಗಳವಾರ, ಸೆಪ್ಟೆಂಬರ್ 11, 2012

ಓದುಗರಿಗೆ ವಂದನೆ

     10163 ಪುಟವೀಕ್ಷಣೆಗಳನ್ನು ಕಂಡಿರುವ  'ಕವಿಮನ'ದ ಭಾವಗಳನ್ನು ಅವಲೋಕಿಸಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.
-ಕ.ವೆಂ.ನಾಗರಾಜ್.

ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು
ಬ್ಲಾಗ್ ವೀಕ್ಷಕರೊಂದಿಗೆ ಅತ್ಯಂತ ಹೆಚ್ಚು ಜನಪ್ರಿಯ ರಾಷ್ಟ್ರಗಳ ಗ್ರಾಫ್‌
ಪ್ರವೇಶಪುಟವೀಕ್ಷಣೆಗಳು
ಭಾರತ
6995
ಅಮೇರಿಕಾ ಸಂಯುಕ್ತ ಸಂಸ್ಥಾನ
1323
ರಶಿಯಾ
972
ಮಲೇಶಿಯಾ
123
ಜರ್ಮನಿ
59
ಸಂಯುಕ್ತ ಅರಬ್ ಎಮಿರೇಟಸ್
55
ಕೆನಡಾ
47
ದಕ್ಷಿಣ ಕೋರಿಯಾ
38
ಬ್ರಿಟನ್/ಇಂಗ್ಲೆಂಡ್
36
ಉಕ್ರೈನ್
30

ಸೋಮವಾರ, ಸೆಪ್ಟೆಂಬರ್ 10, 2012

ಮೂಢ ಉವಾಚ - 89


ಭಕ್ತಿಯೆಂಬುದು ಪ್ರೀತಿ ಭಕ್ತಿಯೆಂಬುದು ರೀತಿ
ಬೇಕೆಂಬುದು ಭಕ್ತಿ ಬೇಡದಿಹುದೂ ಭಕ್ತಿ |
ರಾಗ ದ್ವೇಷಗಳೂ ಭಕ್ತಿ ನವರಸಗಳೂ ಭಕ್ತಿ
ನಿಜ ಭಾವಾಭಿವ್ಯಕ್ತಿ ಭಕ್ತಿ ಮೂಢ || ..೩೦೯

ತಿನಿಸ ಕಂಡೊಡನೆ ಹಸಿವು ಹಿಂಗುವುದೆ
ಜಠರಾಗ್ನಿ ತಣಿದೀತು ಸೇವಿಸಲು ತಾನೆ? |
ಅರಿವು ಇದ್ದೊಡನೆ ಪರಮಾತ್ಮ ಸಿಕ್ಕಾನೆ
ಅನುಭವಿಸಿ ಕಾಣಬೇಕವನ ಮೂಢ || ..೩೧೦

ದುರ್ಜನರ ಸಂಗವದು ರಾಗದ್ವೇಷಕೆ ದಾರಿ
ಒಳಕರೆಗೆ ಕಿವುಡಾಗಿ ಬೀಳುವರು ಜಾರಿ |
ಕುಜನರಿಂ ದೂರಾಗಿ ಸುಜನರೊಡನಾಡೆ
ಮೇಲೇರುವ ದಾರಿ ಕಂಡೀತು ಮೂಢ || .೩೧೧

ದೇವನನು ಮೆಚ್ಚಿಸಲು ನಾಮ ಪಟ್ಟೆಗಳೇಕೆ
ರುದ್ರಾಕ್ಷಿ ಸರವೇಕೆ ಜಪಮಣಿಯು ಬೇಕೆ |
ತೋರಿಕೆಯ ನಡೆ ಸಲ್ಲ ನುಡಿಯು ಬೇಕಿಲ್ಲ
ಅಂತರಂಗದ ಭಾವ ಸಾಕೆಲ್ಲ ಮೂಢ || ..೩೧೨
****************
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 6, 2012

ಸತ್ತವರ ರಾಜ್ಯಕ್ಕೆ ಬದುಕಿದ್ದವರ ಹೋರಾಟ [ಒಂದು ಸ್ಮಶಾನದ ಕಥೆ]



     ಇದು ಒಂದು ಸ್ಮಶಾನದ ಕಥೆ. ಸ್ಮಶಾನದ ಹೆಸರಿನಲ್ಲಿ ಪಟ್ಟಣದ ಹೃದಯಭಾಗದಲ್ಲಿದ್ದ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ನಡೆಸಿದ್ದ ಹುನ್ನಾರದ ಕಥೆ. ಒಂದು ಪ್ರತಿಷ್ಠಿತ ತಾಲ್ಲೂಕಿನ ತಹಸೀಲ್ದಾರನಾಗಿದ್ದ ಸಂದರ್ಭದಲ್ಲಿ ಒಂದು ದಿನ ಪಟ್ಟಣದ ಕ್ರಿಶ್ಚಿಯನ್ ಸಮಾಜದ ಕೆಲವರು ಪಾದ್ರಿಯನ್ನು ಮುಂದಿಟ್ಟುಕೊಂಡು ಕ್ರಿಶ್ಚಿಯನ್ ಸಮುದಾಯದ ಸ್ಮಶಾನಕ್ಕಾಗಿ ಪಟ್ಟಣದ ಹತ್ತಿರವಿದ್ದ ಒಂದು ಸರ್ಕಾರಿ ಜಾಗದಲ್ಲಿ ಸುಮಾರು ಎರಡು ಎಕರೆ ಪ್ರದೇಶವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿದರು. ನಾನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟೆ. ಅವರು ಕೇಳಿದ್ದ ಜಾಗದ ಪರಿಶೀಲನೆಯನ್ನು ಅಂದು ಸಾಯಂಕಾಲವೇ ಯಾರಿಗೂ ಪೂರ್ವ ಸೂಚನೆ ಕೊಡದೆ ಮಾಡಿದೆ. ಅವರು ಕೇಳಿದ್ದ ಜಾಗದಲ್ಲಿ ಸುಮಾರು 2-3 ಗುಂಟೆಯಷ್ಟು ಜಾಗದಲ್ಲಿ ಕೆಲವು ಸಮಾಧಿಗಳಿದ್ದವು, ಎಲ್ಲವೂ ಬಹಳ ಹಳೆಯವು. ಇತ್ತೀಚಿಗೆ ಯಾವುದೇ ಹೆಣಗಳನ್ನು ಹೂಳಿದ ಕುರುಹುಗಳಿರಲಿಲ್ಲ. ಅವರು ಕೇಳಿದ್ದ ಜಾಗದ ಪಕ್ಕದಲ್ಲೇ ಒಂದು ಸರ್ಕಾರಿ ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣ ಸಾಗಿತ್ತು. ವಿದ್ಯಾರ್ಥಿ ನಿಲಯದ ಪಕ್ಕದಲ್ಲೇ ಸ್ಮಶಾನಕ್ಕೆ ಜಾಗ ಕೊಡುವುದು ಸೂಕ್ತವಾಗಿರಲಿಲ್ಲ. ನಾನು ಬದಲೀ ಜಾಗವಿದ್ದರೆ ಪರಿಶೀಲಿಸಿ ತಿಳಿಸಲು ನನ್ನ ಅಧೀನ ಸಿಬ್ಬಂದಿಗೆ ಮೌಖಿಕ ಸೂಚನೆ ಕೊಟ್ಟಿದ್ದಲ್ಲದೆ, ಸ್ಮಶಾನದ ವ್ಯವಸ್ಥೆ, ನಿರ್ವಹಣೆ ಹೊಣೆ ಪುರಸಭೆಯದಾದ್ದರಿಂದ ಮುಖ್ಯಾಧಿಕಾರಿಗೂ ಸೂಚನೆ ಕೊಟ್ಟು ವಿಷಯ ತುರ್ತಾಗಿದ್ದು, ಅನಗತ್ಯ ತಿರುವುಗಳನ್ನು ಪಡೆಯುವ ಮೊದಲೇ ಅಂತಿಮಗೊಳಿಸುವುದು ಸೂಕ್ತವೆಂದು ಹೇಳಿ, ಎರಡು ದಿನಗಳ ಒಳಗೇ ಈ ಕೆಲಸವಾಗಬೇಕೆಂದು ಸೂಚಿಸಿದೆ. 
     ಮರುದಿನ ಬೆಳಿಗ್ಗೆ ಹಲವರು ನನ್ನ ಮನೆಗೆ ಬಂದು ಕ್ರಿಶ್ಚಿಯನರು ಎರಡು ಎಕರೆ ಜಾಗದಲ್ಲಿ ಕಲ್ಲುಕಂಬಗಳನ್ನು ರಾತ್ರೋರಾತ್ರಿ ನೆಟ್ಟು, ಮುಳ್ಳು ತಂತಿ ಬೇಲಿ ಹಾಕಿದ್ದಾರೆಂದೂ, ಅದನ್ನು ತೆಗೆಸಬೇಕೆಂದೂ ಆಗ್ರಹಿಸಿದರು.  ಬಹುಷಃ ನಾನು ಸ್ಮಶಾನಕ್ಕೆ ಆ ಜಾಗ ಸೂಕ್ತವಲ್ಲವೆಂದು  ಭಾವಿಸಿ ಬೇರೆ ಜಾಗ ಗುರುತಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದು ಅವರಿಗೆ ಗೊತ್ತಾಗಿ ಆ ರೀತಿ ಬೇಲಿ ಹಾಕಿದ್ದಿರಬಹುದು. 'ನಾನು ಸರಿಪಡಿಸುತ್ತೇನೆ, ಗಲಾಟೆ ಮಾಡಿಕೊಳ್ಳಲು ಹೋಗಬೇಡಿ' ಎಂದು ದೂರು ಹೇಳಬಂದವರಿಗೆ ಸಮಾಧಾನ ಪಡಿಸಿ ಕಳಿಸಿದೆ. ರಾಜಕೀಯ ಪಕ್ಷಗಳ ಮುಖಂಡರುಗಳಿಂದ, ಸಂಘ-ಸಂಸ್ಥೆಗಳ ನಾಯಕರುಗಳಿಂದ ಪರ, ವಿರೋಧವಾಗಿ ದೂರವಾಣಿ ಕರೆಗಳು ಬರಲಾರಂಭಿಸಿದವು. ಕೆಲವರು ಕಛೇರಿಗೆ ಬಂದು ಮನವಿಯನ್ನೂ ಸಲ್ಲಿಸಿದರು. ಪ್ರತಿಭಟನೆ ಮಾಡುವ ಮಾತುಗಳೂ ಕೇಳಿಬಂದವು.   ಎಲ್ಲರೂ ನಾನು ಏನು ಮಾಡುತ್ತೇನೆಂದು ಗಮನಿಸುತ್ತಿದ್ದರು. ಪತ್ರಕರ್ತರುಗಳ ಪ್ರಶ್ನೆಗಳಿಗೆ ಹುಷಾರಾಗಿ ಪ್ರತಿಕ್ರಿಯಿಸಿದ್ದೆ. ಎಚ್ಚರಿಕೆಯಿಂದ ಮುಂದುವರೆಯದಿದ್ದರೆ ಅಶಾಂತಿ ಮೂಡಿ, ಕಾನೂನು ಮತ್ತು ಶಿಸ್ತುಪಾಲನೆ ಸಮಸ್ಯೆ ಉದ್ಭವಿಸುವುದು ನಿಚ್ಛಳವಾಗಿತ್ತು. 
     ನನ್ನ ವಾಹನದ ಚಾಲಕ ಕ್ರಿಶ್ಚಿಯನ್ ಆಗಿದ್ದರಿಂದ ನನ್ನ ವಾಹನ ಬಳಸದೆ, ಪರಿಚಿತರ ಖಾಸಗಿ ವಾಹನದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದೆ. ಬಲವಾದ ಮುಳ್ಳು ತಂತಿ ಬೇಲಿಯನ್ನೇ ಹಾಕಿದ್ದರು. ಚರ್ಚ್ ಹೆಸರಿನಲ್ಲಿ ಫಲಕವನ್ನೂ ಬರೆಸಿದ್ದರು. ನಂತರ ಡಿ.ವೈ.ಎಸ್.ಪಿ., ಲೋಕೋಪಯೋಗಿ ಇಲಾಖೆ, ಪುರಸಭೆಯ ಅಧಿಕಾರಿಗಳೊಡನೆ ಪ್ರವಾಸಿ ಮಂದಿರದಲ್ಲಿ ರಹಸ್ಯ ಸಭೆ ನಡೆಸಿದೆ. ಅಧೀನ ಸಿಬ್ಬಂದಿಗಳನ್ನು ಸಭೆಯಲ್ಲಿ ಸೇರಿಸಿರಲಿಲ್ಲ. ವಿಳಂಬವನ್ನೂ ಮಾಡುವಂತಿಲ್ಲ, ದುಡುಕಿಯೂ ಮುಂದುವರೆಯುವಂತಿಲ್ಲ. ನಿಯಮಾನುಸಾರ ಬೇಲಿ ತೆರವು ಮಾಡುವುದೆಂದರೆ ಅವರಿಗೆ ನೋಟೀಸು ಕೊಡಬೇಕು, ವಿವರಣೆ ಕೇಳಬೇಕು, ಆದೇಶ ಮಾಡಿ ತೆರವುಗೊಳಿಸಬೇಕು. ನೋಟೀಸು ತಲುಪಿದ ತಕ್ಷಣ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದೋ, ಪ್ರಕರಣ ದಾಖಲಿಸುವುದೋ ಮಾಡುತ್ತಾರೆ. ಪ್ರಕರಣ ನ್ಯಾಯಾಲಯಕ್ಕೆ ಹೋಯಿತೆಂದರೆ ಶೀಘ್ರ ಇತ್ಯರ್ಥ ಕಷ್ಟ. ಇನ್ನು ಹೊರಗೆ ಎರಡು ಬಣಗಳ ಜಟಾಪಟಿ, ಮಧ್ಯದಲ್ಲಿ ಅಧಿಕಾರಿಗಳು ಜನರ ಹಾಗೂ ಮೇಲಾಧಿಕಾರಿಗಳ ದೂಷಣೆಗೆ ಒಳಗಾಗುವರು. ಇದನ್ನೆಲ್ಲಾ ಯೋಚಿಸಿ, ಹೇಗೂ ಬೇಲಿಯನ್ನು ಅಕ್ರಮವಾಗಿ ಹಾಕಿದ್ದಾರೆ, ಜಾಗದ ಮೇಲೆ ಅವರಿಗೆ ಅಧಿಕಾರವಿಲ್ಲ. ಅವರು ಹೇಗೆ ಗುಟ್ಟಾಗಿ ಹಾಕಿದ್ದರೋ ಹಾಗೆಯೇ ಅದನ್ನು ಗುಟ್ಟಾಗಿ ತೆಗೆಸಿದರೆ ಸೂಕ್ತವೆಂದು ಪೋಲಿಸರಿಗೆ ಮತ್ತು ಸಹ ಇಲಾಖಾ ಅಧಿಕಾರಿಗಳಿಗೆ ಮನವರಿಕೆ ಮಾಡಿದೆ. ಜಿಲ್ಲಾಧಿಕಾರಿಯವರಿಗೆ ಮತ್ತು ಅಸಿಸ್ಟೆಂಟ್ ಕಮಿಷನರರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಅವರ ಒಪ್ಪಿಗೆಯನ್ನೂ ಸಹ ಪಡೆದೆ. ಅದರಂತೆ ಲೋಕೋಪಯೋಗಿ ಇಲಾಖೆಯ ವಾಹನಗಳ ನೆರವಿನಿಂದ ಅಂದು ಮಧ್ಯರಾತ್ರಿ 12 ಘಂಟೆಗೆ ಬೇಲಿ ತೆಗೆಸಿ ಮುಳ್ಳುತಂತಿಯನ್ನು ಲಾರಿಯಲ್ಲಿ ಸಾಗಿಸಿ ಒಂದು ಅಜ್ಞಾತ ಸ್ಥಳದಲ್ಲಿ ಇರಿಸಲಾಯಿತು. ಬೆಳಗಿನ ಜಾವ 2ರ ವೇಳೆಗೆ ಕೆಲಸ ಮುಗಿಸಿ ಏನೂ ಗೊತ್ತಿಲ್ಲದಂತೆ ಮನೆಗಳಿಗೆ ಮರಳಿದೆವು. 
     ಮರುದಿನ ಬೆಳಿಗ್ಗೆ ಕಛೇರಿಗೆ ಹೋಗುತ್ತಾ ದಾರಿಯಲ್ಲಿ ಪೋಲಿಸ್ ಠಾಣೆ ಮುಂದೆ ಜನ ಜಮಾಯಿಸಿದ್ದನ್ನು ಗಮನಿಸಿದೆ. ಕಾರಣ ತಿಳಿದಿದ್ದರೂ ಏನೂ ಗೊತ್ತಿಲ್ಲದವನಂತೆ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ನನ್ನ ವಾಹನ ಚಾಲಕ ಸ್ಮಶಾನದ ಬೇಲಿಯನ್ನು ಯಾರೋ ತೆಗೆದು ಹಾಕಿದ್ದಾರೆಂದು ಹೇಳಿದ. ಆ ಬಗ್ಗೆ ನಾನು ಏನು ಹೇಳುತ್ತೇನೆಂದು ತಿಳಿದುಕೊಳ್ಳುವುದು ಅವನ ಉದ್ದೇಶವಾಗಿದ್ದಿರಬೇಕು.  ನಾನು, "ಹೌದಾ? ಯಾರಂತೆ?" ಎಂದು ಕೇಳಿದ್ದಲ್ಲದೆ ಉಪಾಯವಾಗಿ ವಿಷಯ ತಿಳಿದುಕೊಂಡು ನನಗೂ ತಿಳಿಸುವಂತೆ ಅವನಿಗೇ  ಹೇಳಿದೆ. ನಿರೀಕ್ಷೆಯಂತೆ ಅರ್ಧ ಘಂಟೆಯ ನಂತರದಲ್ಲಿ ಗುಂಪು ನನ್ನ ಕಛೇರಿಗೆ ಬಂದೇ ಬಂದಿತು. ಕೆಲವರನ್ನು ಮಾತ್ರ ಛೇಂಬರಿಗೆ ಬರಮಾಡಿಕೊಂಡೆ. ಉದ್ವಿಗ್ನರಾಗಿದ್ದ ಪಾದ್ರಿ ಬುಸುಗರೆಯುತ್ತಿದ್ದರು. ಒಂದು ಲೋಟ ನೀರು ತರಿಸಿಕೊಟ್ಟು, ಸಮಾಧಾನದಿಂದ ವಿಷಯ ಹೇಳುವಂತೆ ಕೋರಿದೆ. ಆಗ ನಡೆದ ಸಂಭಾಷಣೆ:
ಪಾದ್ರಿ:  ನಮ್ಮ ಸ್ಮಶಾನದ ಬೇಲಿಯನ್ನು ಯಾರೋ ಕಿತ್ತುಹಾಕಿದ್ದಾರೆ. ನಮಗೆ ನ್ಯಾಯ ಬೇಕು.
ನಾನು:  ಸ್ಮಶಾನಕ್ಕೆ ಜಾಗ ಕೇಳಿ ಅರ್ಜಿ ಹಾಕಿದ್ದಿರಲ್ಲವೆ? ಅಂದೇ ಸಾಯಂಕಾಲ ನಾನು ಆ ಜಾಗ ನೋಡಿದ್ದೆ. ಅಲ್ಲಿ ಬೇಲಿ ಏನೂ ಇರಲಿಲ್ಲವಲ್ಲಾ?
ಪಾದ್ರಿ:  ಹೇಗೂ ಮಂಜೂರು ಆಗುತ್ತದೆ ಅಂತ ಅಲ್ಲಿ ಬೇಲಿ ಹಾಕಿದ್ದೆವು. ಅದನ್ನು ತೆಗೆದು ಹಾಕಿದ್ದಾರೆ.
ನಾನು:  ಹೌದಾ? ಯಾರು?
ಪಾದ್ರಿ:  ನಿಮಗೆ ಗೊತ್ತಿಲ್ಲದೆ ಇರುತ್ತಾ? ನೀವುಗಳೇ ಮಾಡಿಸಿರುತ್ತೀರಿ.
ನಾನು:  ನನಗೆ ನೀವು ಬೇಲಿ ಹಾಕಿದ್ದೇ ಗೊತ್ತಿಲ್ಲ. ಗೊತ್ತಾಗಿದ್ದರೂ ನಾನೇ ಮುಂದೆ ನಿಂತು ತೆಗೆಸುತ್ತಿದ್ದೆ. ನಿಮ್ಮದಲ್ಲದ ಜಾಗಕ್ಕೆ ನೀವು ಬೇಲಿ ಹಾಕುವುದು ಸರಿಯಾ?
ಪಾದ್ರಿ:  ನೋಡಿ, ನಮ್ಮ ಜನ ಎಲ್ಲಾ ಬಡವರು. ಅವರಿಗೆ ಸ್ಮಶಾನಕ್ಕೆ ಜಾಗ ಇಲ್ಲ. ಮನೆ ಮನೆಯಲ್ಲೂ ಚಂದಾ ಎತ್ತಿ ಹಣ ಕೂಡಿಸಿ ಬೇಲಿ ಹಾಕಿಸಿತ್ತು. ಬೇಲಿಗೆ ಹಾಕಿದ್ದ ಮುಳ್ಳುತಂತಿಯನ್ನೂ ಹೊತ್ತುಕೊಂಡು ಹೋಗಿದ್ದಾರೆ. 
ನಾನು:  ನಿಮಗೆ ಸ್ಮಶಾನಕ್ಕೆ ಜಾಗ ಬೇಕು ತಾನೆ? ಒಳ್ಳೆಯ ಜಾಗ ನೋಡಿ ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನನ್ನದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಿಸಿಕೊಡುತ್ತೇನೆ. ಈಗ ಸಮಾಧಾನವಾಗಿ ಎಲ್ಲರೂ ಹೋಗಿ. ನಾನು ಮತ್ತೆ ನಿಮ್ಮ ಹತ್ತಿರ ಮಾತನಾಡುತ್ತೇನೆ. 
ಪಾದ್ರಿ:  ತಾವು ದಯವಿಟ್ಟು ಸಬ್ ಇನ್ಸ್‌ಪೆಕ್ಟರರಿಗೆ ಹೇಳಿ ಬೇಲಿ ಕಿತ್ತು ಹಾಕಿದ್ದಕ್ಕೆ ಕೇಸು ಹಾಕಲು ಹೇಳಬೇಕು.
ನಾನು:  ನೋಡಿ, ಪೋಲಿಸರ ಕೆಲಸದಲ್ಲಿ ನಾನು ಮೂಗು ತೂರಿಸುವುದು ಸಾಧ್ಯವಿಲ್ಲ. ನೀವೇ ಹೋಗಿ ಕೇಳಿಕೊಳ್ಳಿ.
ಪಾದ್ರಿ:  ಇಷ್ಟು ಹೊತ್ತೂ ಅದೇ ಕೆಲಸ ಮಾಡಿದೆವು. ಅವರು ದೂರನ್ನೇ ತೆಗೆದುಕೊಳ್ಳುತ್ತಿಲ್ಲ. ನೀವು ಒಂದು ಮಾತು ಹೇಳಿ.
ನಾನು:  ಯಾಕೆ ತೆಗೆದುಕೊಳ್ಳುತ್ತಿಲ್ಲ?
ಪಾದ್ರಿ:  ಆ ಜಾಗ ನಿಮ್ಮದಾ ಅಂತ ಕೇಳುತ್ತಾರೆ. ಜಾಗದ ದಾಖಲೆ ಕೊಡಿ ಅಂತಾರೆ. ನಿಮ್ಮ ಜಾಗದಲ್ಲಿ ಬೇಲಿ ಹಾಕಿದ್ದು ಯಾರಾದರೂ ಕಿತ್ತಿದ್ದರೆ, ಯಾರ ಮೇಲಾದರೂ ಅನುಮಾನವಿದ್ದರೆ ದೂರು ಕೊಟ್ಟರೆ ತೆಗೆದುಕೊಳ್ಳುತ್ತೇವೆ ಅನ್ನುತ್ತಾರೆ.
ನಾನು:  ಅವರು ಹೇಳಿದ್ದರಲ್ಲಿ ತಪ್ಪಿದೆಯಾ? ಸರ್ಕಾರಿ ಜಾಗದಲ್ಲಿ ನೀವು ಹಾಕಿದ್ದ ಬೇಲಿ ಬಗ್ಗೆ ನಾನು ಅವರಿಗೆ ದೂರು ತೆಗೆದುಕೊಳ್ಳಿ ಎಂದು ಹೇಗೆ ಹೇಳಲಿ? ನಾವು ಮಾಡಬೇಕಿದ್ದ ಕೆಲಸವನ್ನು ಬೇರೆ ಯಾರೋ ಮಾಡಿದ್ದಾರೆ. ನಮ್ಮ ಶ್ರಮ ತಪ್ಪಿತು. ಮೊದಲು ನೀವು ನಿಮ್ಮದಲ್ಲದ ಜಾಗದಲ್ಲಿ ಬೇಲಿ ಹಾಕಿದ್ದೇ ತಪ್ಪು. ಈಗ ಸದ್ಯಕ್ಕೆ ನಿಮಗೆ ಈ ಬೇಲಿ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ. ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಗಮನ ಕೊಡೋಣ.
ಪಾದ್ರಿ:  ನಮಗೆ ಆ ಜಾಗವೇ ಬೇಕು. ನಾವು ಜನ ಸೇರಿಸಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿ ನಮ್ಮವರ ಸಮಾಧಿಗಳಿವೆ. 
ನಾನು:  ನೋಡಿ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲಾ ಸಂಗತಿಗಳನ್ನು ಗಮನಿಸಿಯೇ ಆ ಜಾಗವೋ, ಮತ್ತಾವ ಜಾಗವೋ ಸೂಕ್ತ ಸ್ಥಳ ಕೊಡಿಸುವ ಜವಾಬ್ದಾರಿ ನನ್ನದು. ಅಲ್ಲಿ ಸುಮಾರು 2-3 ಗುಂಟೆ ಜಾಗದಲ್ಲಿ ಮಾತ್ರ ಸಮಾಧಿಗಳಿವೆ. ನೀವು ಬೇಲಿ ಹಾಕಿದ್ದು ಅನ್ನುವುದು ಎರಡು ಎಕರೆ ಜಾಗಕ್ಕೆ. ಅಲ್ಲಿರುವ ಸಮಾಧಿಗಳಿಗೆ ಯಾವ ತೊಂದರೆಯೂ ಆಗದಂತೆ ರಕ್ಷಣೆ ಕೊಡುವುದು ನಮ್ಮ ಹೊಣೆ. ಅದನ್ನು ನಮಗೆ ಬಿಡಿ. ಇನ್ನು ಪ್ರತಿಭಟನೆ ಮಾತು. ನಿಮ್ಮ ವಿರುದ್ಧವೂ ಪ್ರತಿಭಟನೆ ಮಾಡಲು ಜನ ಕಾಯುತ್ತಿದ್ದಾರೆ. ಈ ವಿಷಯ ನನಗೆ ಮಾಹಿತಿ ಬಂದಿದೆ. ಬಹುಷಃ ನಿಮಗೂ ಗೊತ್ತಿರಬೇಕು. ನಾನು ಇಬ್ಬರ ಬಗ್ಗೆಯೂ ಒಂದೇ ರೀತಿ ವ್ಯವಹರಿಸುವೆ. ಶಾಂತಿ ಭಂಗ ಆಗುವ ಸಂಧರ್ಭ ಬಂದರೆ ನಾನು ಮುಲಾಜು ನೋಡುವುದಿಲ್ಲ. ಶಾಂತಿಯಿಂದಿರಿ. ಮುಂದೆ ಏನು ಕೆಲಸ ಆಗಬೇಕೋ ಅದನ್ನು ನೋಡೋಣ. ನೀವು ಇಂದು ಸಂಜೆಯೋ, ನಾಳೆ ಬೆಳಿಗ್ಗೆಯೋ ಒಬ್ಬರೇ ಬನ್ನಿ, ಮಾತನಾಡೋಣ. ಈಗ ನನಗೆ ಬೇರೆ ತುರ್ತು ಕೆಲಸ ಇದೆ. ಮಾಡಲು ಅವಕಾಶ ಕೊಡಿ.
     ಬಂದವರಿಗೆ ತಮ್ಮ ಕೆಲಸವಾಗುವುದಿಲ್ಲವೆಂದು ಮನದಟ್ಟಾಯಿತು. ಅಲ್ಲದೆ ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳುವುದೂ ಕಷ್ಟವೆಂಬ ಅರಿವೂ ಆಗಿತ್ತು. 'ನೀವೇ ನ್ಯಾಯ ಕೊಡಿಸಬೇಕು' ಎಂದು ಹೇಳಿ ಜಾಗ ಖಾಲಿ ಮಾಡಿದರು. ಬೀಸುವ ದೊಣ್ಣೆ ತಪ್ಪಿಸಿಕೊಂಡ ಸ್ಥಿತಿ ನನ್ನದಾಗಿತ್ತು. 
     ನಂತರದಲ್ಲಿ, ನಾನು, ಪುರಸಭೆಯ ಮುಖ್ಯಾಧಿಕಾರಿ ಹಾಗೂ ನನ್ನ ಸಿಬ್ಬಂದಿ ಮುತುವರ್ಜಿ ವಹಿಸಿ ಪಟ್ಟಣದ ಹೆಲಿಪ್ಯಾಡ್ ಸಮೀಪದಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿ, ಆ ಜಾಗದ ಕುರಿತು ಇದ್ದ ಸಣ್ಣ ಪುಟ್ಟ ಸಮಸ್ಯೆ ಪರಿಹರಿಸಿ, ಆ ಜಾಗವನ್ನು ಕ್ರಿಶ್ಚಿಯನ್ ಸ್ಮಶಾನಕ್ಕೆ ಮಂಜೂರು ಮಾಡಲು ಪ್ರಸ್ತಾವನೆ ಸಿದ್ಧಪಡಿಸಿ, ಪಾದ್ರಿಗೂ ಆ ಜಾಗ ತೋರಿಸಿ ಅವರಿಂದಲೂ ಒಪ್ಪಿಗೆ ಪತ್ರ ಬರೆಸಿಕೊಂಡು ಉಪವಿಭಾಗಾಧಿಕಾರಿಯವರಿಗೆ ಕಳಿಸಿ ಮಂಜೂರಾತಿ ಪಡೆದದ್ದಾಯಿತು. ಸ್ವಲ್ಪ ಎಚ್ಚರಿಕೆಯಿಂದ ಕಾರ್ಯ ಮಾಡದೇ ಇದ್ದಿದ್ದರೆ, ಸಮಸ್ಯೆ ಉಲ್ಬಣವಾಗುತ್ತಿತ್ತೇ ಹೊರತು, ಇತ್ಯರ್ಥವಾಗುತ್ತಿರಲಿಲ್ಲ. ಜನಾಂಗೀಯ ಘರ್ಷಣೆಗಳಾಗುತ್ತಿದ್ದವು, ರಾಜಕಾರಣಿಗಳ ಬೇಳೆ ಚೆನ್ನಾಗಿ ಬೇಯುತ್ತಿತ್ತು, ಅಧಿಕಾರಿಗಳು ಬಲಿಪಶುಗಳಾಗುತ್ತಿದ್ದರು. ಅದನ್ನು ತಪ್ಪಿಸಿದ ಸಮಾಧಾನ ನನ್ನದಾಗಿತ್ತು. 
-ಕ.ವೆಂ.ನಾಗರಾಜ್.
**************
25.6.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.





ಮಂಗಳವಾರ, ಸೆಪ್ಟೆಂಬರ್ 4, 2012

ಭಕ್ತಿ - ಒಂದು ಜಿಜ್ಞಾಸೆ


     ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು ಏಕೆ?, ಹೇಗೆ? ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಮಾನವನ ಸಂಪತ್ತು. ಸ್ವಾಭಾವಿಕ ಜ್ಞಾನದಲ್ಲೇ ತೃಪ್ತರಾಗಿ ನೈಮಿತ್ತಿಕ ಜ್ಞಾನ ಬಯಸದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುತ್ತಾರೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
     ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ- ಭಗವದ್ಗೀತೆ ಹೇಳುತ್ತದೆ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
     ಒಂದೆರಡು ಸರಳ ಉದಾಹರಣೆಗಳನ್ನು ಕೊಟ್ಟು ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ ಎಂದು ಮುಕ್ತಾಯ ಹಾಡುವೆ. ಪರಮಾತ್ಮನನ್ನು ದ್ವೇಷಿಸುವ ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷ ಭಕ್ತಿಗೆ ಉದಾಹರಣೆಯಾಗಿ ಕೊಡಬಹುದು. ಪ್ರಾಸಂಗಿಕವಾಗಿ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ."
     ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ) ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ.