ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಜುಲೈ 26, 2013

ಸ್ವಾಮಿ ಚಿದ್ರೂಪಾನಂದ ಸರಸ್ವತಿ - ಕಿರುಪರಿಚಯ

     ಅದೊಂದು ಅಪೂರ್ವ ಸನ್ನಿವೇಶ. ಕೆ.ಆರ್. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ಶ್ರೀ ಮಧುಸೂದನರಾವ್ ಮತ್ತು ಶ್ರೀಮತಿ ಸ್ವರೂಪರಾಣಿ ದಂಪತಿಗಳು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಗೋಶಾಲೆಯಲ್ಲಿ ಸ್ಥಾಪಿಸಿದ್ದ ವೇಣುಗೋಪಾಲಸ್ವಾಮಿ ದೇವರ ವಿಗ್ರಹದ ವಿಧಿವತ್ ಪ್ರತಿಷ್ಟಾಪನೆ ಕಾರ್ಯ ಹುಬ್ಬಳ್ಳಿಯ ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಸಾನ್ನಿಧ್ಯದಲ್ಲಿ ೦೯-೦೬-೨೦೧೩ರಂದು ನೆರವೇರಿತ್ತು. ಆ ಗೋಶಾಲೆಗೂ ಒಂದು ಹಿನ್ನೆಲೆಯಿತ್ತು. ೨೦ ವರ್ಷದ ಬೆಳೆದ ಮಗ ಸುಭಾಷ್ ಅಕಾಲಿಕವಾಗಿ ತೀರಿಹೋದ ದುಃಖವನ್ನು ಅರಗಿಸಿಕೊಳ್ಳಲಾಗದ ಆ ದಂಪತಿಗಳು ಗೋಶಾಲೆಯನ್ನು ನಡೆಸುವ ಮೂಲಕ ಮರೆಯಲು ಪ್ರಯತ್ನಿಸಿದ್ದಾರೆ. ಆಹ್ವಾನವಿದ್ದದ್ದರಿಂದ ಹಾಸನದ ವೇದಭಾರತಿಯ ನಾವು ಹದಿನೈದು ವೇದಾಭ್ಯಾಸಿಗಳು ಆ ಸಮಾರಂಭಕ್ಕೆ ಹೋಗಿದ್ದೆವು. ನಮ್ಮ ತಂಡದಲ್ಲಿ ಮಹಿಳೆಯರೂ ಇದ್ದು ಸ್ವಾಮಿಗಳ ಸಮ್ಮುಖದಲ್ಲಿ ವೇದಘೋಷವನ್ನೂ ಮಾಡಿದೆವು. ಮಹಿಳೆಯರೂ ವೇದಮಂತ್ರಗಳನ್ನು ಹೇಳಿದ್ದನ್ನು ಕೇಳಿದ ಸ್ವಾಮಿಗಳು ಆನಂದಿತರಾಗಿ ವೇದಭಾರತಿಯ ಕುರಿತು ವಿಚಾರಿಸಿದರು. ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸುಗಳ ತಾರತಮ್ಯವಿಲ್ಲದೆ ಕಳೆದ ಒಂದು ವರ್ಷದಿಂದ ವೇದಾಭ್ಯಾಸ ಮಾಡುತ್ತಿರುವ ಬಗ್ಗೆ, ಇದಕ್ಕೆ ಪೂರಕವಾದ ವೈಚಾರಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿ, ಈ ಕಾರ್ಯಕ್ಕೆ ಅವರ ಆಶೀರ್ವಾದವನ್ನೂ ಕೋರಿದೆವು. ಆಗ ಅವರು ಉದ್ಗರಿಸಿದ್ದೇನೆಂದರೆ, "ಇದು ನಿಜವಾಗಿ ರಾಷ್ಟ್ರ ಕಟ್ಟುವ ಕೆಲಸ. ಆಗಬೇಕಾಗಿರುವುದೂ ಇದೇ. ಕೇವಲ ನನ್ನ ಆಶೀರ್ವಾದ ನಿಮಗೆ ಸಾಕೆ? ಐ ವಿಲ್ ಬಿ ವಿತ್ ಯು! " ಈ ಭೇಟಿಯ ಫಲಶ್ರುತಿಯಾಗಿ ಇದೀಗ ಸ್ವಾಮಿಗಳು ವೇದಭಾರತಿ ಮತ್ತು ಹುಬ್ಬಳ್ಳಿಯ ಆರ್ಷವಿದ್ಯಾಕೇಂದ್ರದ ಆಶ್ರಯದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ತಿಂಗಳು ೨೫ ರಿಂದ ೩೦ರವರೆಗೆ ಗೀತಾಜ್ಞಾನಯಜ್ಞ ನಡೆಸಿಕೊಡುತ್ತಿದ್ದಾರೆ. ಪ.ಪೂ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಗಳವರ ಕಿರುಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.
     ಪೂಜ್ಯರ ಪೂರ್ವಾಶ್ರಮದ ಹೆಸರು ದತ್ತಾತ್ರೇಯ. ಸಾತ್ವಿಕ ದಂಪತಿಗಳಾದ ಕೃಷ್ಣಭಟ್ಟ-ಕಮಲಾಬಾಯಿಯವವರ ಮೂರನೆಯ ಮಗನಾಗಿ ೧೧-೧-೧೯೪೮ರಲ್ಲಿ ಜನಿಸಿದ ಇವರು ಚಿಕ್ಕಂದಿನಲ್ಲಿಯೇ ತಂದೆಯವರನ್ನು ಕಳೆದುಕೊಂಡು, ತಾಯಿ ಮತ್ತು ಸೋದರಮಾವನ ಆಶ್ರಯದಲ್ಲಿ ಸುಯೋಗ್ಯ ಶಿಕ್ಷಣ, ಸಂಸ್ಕಾರಗಳನ್ನು ಪಡೆದರು. ಬಾಲ್ಯದಿಂದಲೇ ಭಜನೆ, ಕೀರ್ತನೆ, ಸತ್ಸಂಗಗಳಲ್ಲಿ ಕಳೆಯುವ ಅವಕಾಶ ಮತ್ತು ಸಂಸ್ಕಾರ ಅವರಿಗೆ ಲಭ್ಯವಾಗಿತ್ತು. ತಬಲ ಮತ್ತು ಹಾರ್ಮೋನಿಯಮ್ ನುಡಿಸುವುದನ್ನು ಕಲಿತ ಅವರಿಗೆ ಸಂಗೀತದಲ್ಲೂ ಆಸಕ್ತಿಯಿತ್ತು. ಅವರ ತಾಯಿ ಹಸ್ತ ಸಾಮುದ್ರಿಕ, ಶರೀರ ಹಾಗೂ ಮುಖಲಕ್ಷಣ ಶಾಸ್ತ್ರಗಳನ್ನು ತಿಳಿದವರಾಗಿದ್ದು, ಮಗನಿಗೆ ಬಯ್ಯುವಾಗ ಆಗಾಗ್ಗೆ 'ನೀನು ಸನ್ಯಾಸಿ ಆಗು' ಅನ್ನುತ್ತಿದ್ದರಂತೆ. ಹುಬ್ಬಳ್ಳಿಯ ಭೂಮರೆಡ್ಡಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜನಿಯರಿಂಗ್ ಶಿಕ್ಷಣ ಪಡೆದು, ಕೆಲಕಾಲ ಅಣ್ಣಿಗೇರಿ, ನವಲಗುಂದಗಳಲ್ಲಿ ಖಾಸಗಿ ಸೇವೆಯನ್ನೂ ಸಲ್ಲಿಸಿದ್ದರು. ಸ್ವಾಮಿ ಚಿನ್ಮಯಾನಂದರ ಪ್ರಭಾವಕ್ಕೆ ಒಳಗಾದ ಅವರು ೧೯೭೯-೮೦ರಲ್ಲಿ ಸ್ವಾಮಿ ಚಿನ್ಮಯಾನಂದರ ಸಾಂದಿಪಿನಿ ಗುರುಕುಲದಲ್ಲಿ ಎರಡೂವರೆ ವರ್ಷಗಳ ಕಾಲ ವೇದಾಂತ ಸಾಧನಾ ತರಬೇತಿ ಪಡೆದರು. ನಂತರ ಸ್ವಾಮಿ ದಯಾನಂದ ಸರಸ್ವತಿಗಳವರ ಆಚಾರ್ಯತ್ವದಲ್ಲಿ ಹೃಷಿಕೇಶ, ಮುಂಬಯಿ, ಉತ್ತರಕಾಶಿಗಳಲ್ಲಿ ಶಾಸ್ತ್ರ ಅಧ್ಯಯನ ತರಬೇತಿ ಪಡೆದು, ನೈಷ್ಟಿಕ ಬ್ರಹ್ಮಚಾರಿ ದೀಕ್ಷೆ ಹೊಂದಿ ಮುಕ್ತಚೈತನ್ಯ ಎಂಬ ಹೆಸರು ಪಡೆದರು. ಮೂರು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಮಳಗಿಯಲ್ಲಿ ಆಶ್ರಮ ಹೊಂದಿ ಭಜನೆ, ಸತ್ಸಂಗ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡರು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಶುದ್ಧ ಅದ್ವೈತ ವೇದಾಂತವನ್ನು ಮನಸ್ಸಿಗೆ ನಾಟುವಂತೆ ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಹೃಷಿಕೇಶದ ಗಂಗಾತಟದಲ್ಲಿ ಸ್ವಾಮಿ ದಯಾನಂದ ಸರಸ್ವತಿಗಳಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ಚಿದ್ರೂಪಾನಂದ ಸರಸ್ವತಿ ಎಂಬ ನಾಮಧೇಯವನ್ನು ಸದ್ಗುರುವಿನಿಂದ ಪಡೆದರು.
     ಗುರುಗಳ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳ ಕಾಲ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ವೇದ, ಉಪದೇಶಸಾರ, ಇತ್ಯಾದಿಗಳನ್ನು ಆಳವಾಗಿ ಅಭ್ಯಸಿಸಿದ ಪೂಜ್ಯರು, ಗುರುಗಳ ಸೂಚನೆಯಂತೆ ತಾವು ಹೊಂದಿದ ಜ್ಞಾನಪ್ರಸಾರಕಾರ್ಯವನ್ನು ಮಾಡುತ್ತಾ ಎಲ್ಲೆಡೆ ಪ್ರವಾಸ ಮಾಡತೊಡಗಿದರು. ಹಲವು ಸಲ ವಿದೇಶಗಳಲ್ಲೂ ಸಂಚರಿಸಿ ಆಧ್ಯಾತ್ಮಿಕ ಪ್ರಚಾರ ಮಾಡಿದರು. ಇದೀಗ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಾಶ್ರಮದಲ್ಲಿ ಸಿವಿಲ್ ಇಂಜನಿಯರ್ ಆಗಿ ಮನೆಗಳನ್ನು ಕಟ್ಟುತ್ತಿದ್ದ, ಮುರಿದ ಮನೆಗಳನ್ನು ಸರಿಪಡಿಸುತ್ತಿದ್ದ ಪೂಜ್ಯರು ಈಗಲೂ ಆಧ್ಯಾತ್ಮಿಕ ಇಂಜನಿಯರ್ ಆಗಿ ಮುರಿದ ಮನಗಳನ್ನು ಕಟ್ಟುವ ಕಾಯಕ ಮುಂದುವರೆಸಿದ್ದಾರೆ. ಜನರ ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ, ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಈ ಕಾರ್ಯಕ್ಕೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿಸಿ ಹೇಳಬಲ್ಲ ಅವರ ಪಾಂಡಿತ್ಯ, ಜನರೊಡನೆ ಬೆರೆಯುವ ರೀತಿಗಳು ಸಹಕರಿಸಿವೆ.
     ಹುಬ್ಬಳ್ಳಿಯಲ್ಲಿ ಆರ್ಷವಿದ್ಯಾಪೀಠದ ಹೆಸರಿನಲ್ಲಿ ಆಶ್ರಮ ಹೊಂದಿರುವ ಇವರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಮಲಗುಂದದಲ್ಲಿ ಗುರುಕುಲವೊಂದನ್ನೂ ಸ್ಥಾಪಿಸಿದ್ದಾರೆ. ಆಶ್ರಮ ಮತ್ತು ಗುರುಕುಲದಲ್ಲಿ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು, ಆಧ್ಯಾತ್ಮ ಶಿಬಿರಗಳು, ಸೇವಾಕಾರ್ಯದ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಗಳನ್ನು ಆಗಾಗ್ಗೆ ನಡೆಸುತ್ತಾ ಬಂದಿರುವುದಲ್ಲದೆ, ಅನೇಕ ಮಾರ್ಗದರ್ಶಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ. ಸ್ವಾಮಿ ದಯಾನಂದ ಸರಸ್ವತಿಯವರು ೨೦೦೦ದಲ್ಲಿ ಪ್ರಾರಂಭಿಸಿದ ಅಖಿಲ ಭಾರತ ಸೇವಾ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶಾಲೆಗಳ ಸಮೀಪದಲ್ಲಿಯೇ ಛಾತ್ರಾಲಯ(ಹಾಸ್ಟೆಲ್)ಗಳನ್ನು ಸ್ಥಾಪಿಸಿ ಅವರುಗಳಿಗೆ ಉಚಿತವಾಗಿ ಊಟ, ವಸತಿಗಳನ್ನು ಒದಗಿಸುವುದಲ್ಲದೆ ಶಿಕ್ಷಣಕ್ಕೆ ಪೂರಕವಾದ ಆವಶ್ಯಕತೆಗಳನ್ನು ಒದಗಿಸುವುದು, ಆಟೋಟಗಳು, ಕುಶಲಕಲೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದವುಗಳಲ್ಲಿ ತರಬೇತಿ ನೀಡುವುದರ ಜೊತೆಗೆ ಅವರನ್ನು ಸದ್ವಿಚಾರಗಳನ್ನು ಹೊಂದುವ ಸುಯೋಗ್ಯ ಮಾನವರನ್ನಾಗಿ ರೂಪಿಸಿ ಭವಿಷ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದ ೧೧ ರಾಜ್ಯಗಳಲ್ಲಿ ೪೦ ಛಾತ್ರಾಲಯಗಳನ್ನು ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಸೇವಾ ಅಭಿಯಾನದ ಪ್ರಮುಖರಾಗಿರುವ ಪೂಜ್ಯ ಸ್ವಾಮಿ ಚಿದ್ರೂಪಾನಂದರ ಮುಂದಾಳತ್ವದಲ್ಲಿ ೧೭ ಛಾತ್ರಾಲಯಗಳಲ್ಲಿ ೫೦೦ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ೧೨೦ ಸಂಧ್ಯಾ ಗುರುಕುಲಗಳು ೪೦೦೦ಕ್ಕೂ ಹೆಚ್ಚು ಶಾಲೆಗೆ ಹೋಗುವ ಮಕ್ಕಳಿಗೆ ಉಪಯೋಗಿಯಾಗಿವೆ. ಹೊನ್ನಾವರದಲ್ಲಿ ಒಂದು ಪ್ರಾಥಮಿಕ ಶಾಲೆ, ಕಲಭಾವಿಯಲ್ಲಿ ಪ್ರೌಢಶಾಲೆ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವೇದ ಪಾಠಶಾಲೆಗಳು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ೧೭೦ ಸ್ವಸಹಾಯ ಸಂಘಗಳು ಕಾರ್ಯನಿರತವಾಗಿವೆ. ೧೯೯೮ರಲ್ಲಿ ಪೂಜ್ಯರಿಂದ ಪ್ರಾರಂಭವಾದ ಅಕ್ಷಯ ಟ್ರಸ್ಟ್ ಸಹಾಯ ಅಗತ್ಯವಿರುವ ಎಲ್ಲರಿಗೆ ಜಾತಿ,ಮತ, ರಾಷ್ಟ್ರೀಯತೆಗಳ ಭೇದವಿಲ್ಲದೆ ಶಿಕ್ಷಣ ನೀಡುವ ಗುರಿ ಹೊಂದಿದ್ದು ೬ ಶಾಲೆಗಳು, ಪಿಯು ವಿಜ್ಞಾನ ಕಾಲೇಜು ಮತ್ತು ವೇದಪಾಠಶಾಲೆ ನಡೆಸುತ್ತಿದ್ದು ಸುಮರು ೫೦೦೦ ಮಕ್ಕಳು ಪ್ರಯೋಜನ ಹೊಂದಿದ್ದಾರೆ. 'ಸ್ವಾಸ್ಥ್ಯ' ಎಂಬ ಕನಸಿನ ಯೋಜನೆ ರೂಪಿಸಿರುವ ಇವರು, ಅಕ್ಷಯ ಟ್ರಸ್ಟ್ ವತಿಯಂದ ಇದರ ಅಡಿಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಭವನದಲ್ಲಿ ನಿಯಮಿತವಾಗಿ ಧಾರ್ಮಿಕ ಪ್ರವಚನಗಳು, ಧ್ಯಾನ, ಪ್ರಾರ್ಥನೆ ಮತ್ತು ಯೋಗ ಮಾಡಲು ಅವಕಾಶ, ಸಾತ್ವಿಕ ಆಹಾರ, ವ್ಯಾಯಾಮಶಾಲೆ, ಈಜುವಕೊಳ, ಇತ್ಯಾದಿಗಳನ್ನು ಒದಗಿಸಿ ಸ್ವಾಸ್ಥ್ಯ ಜೀವನ ನಡೆಸಬಯಸುವವರಿಗೆ ಅವಕಾಶ ಕಲ್ಪಿಸಬಯಸಿದ್ದಾರೆ. 
     ಇವರ ವಿಚಾರಧಾರೆಯ ಕೆಲವು ಅಂಶಗಳು ಹೀಗಿವೆ:
* ಸಮಾಜದಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದೆ. ಜನರು ಧರ್ಮಭೀರುಗಳಾಗಬೇಕು.
* ಸಂನ್ಯಾಸಿಗಳ ಅವಶ್ಯಕತೆ ಸಮಾಜಕ್ಕೆ ಇಲ್ಲ. ಬದಲಾಗಿ ಸುಸಂಘಟಿತವಾದ ಸಮಾಜವನ್ನು ಕಟ್ಟುವಂತಹ, ಜಾತಿರಹಿತ ಸಮಾಜವನ್ನು ಕಟ್ಟಬಲ್ಲ ಉತ್ಸಾಹಿ ತರುಣರ ಅವಶ್ಯಕತೆ ಇದೆ. ಅವರನ್ನೇ ಸಂನ್ಯಾಸಿಗಳೆಂದು ಕರೆದರೂ ತಪ್ಪಿಲ್ಲ.
* ಜಾತಿಯ, ರಾಜಕಾರಣಿಗಳ ಅಥವ ಸರಕಾರದ, ಅಧಿಕಾರಿಗಳ ಮುಲಾಜಿಗೆ ಒಳಪಟ್ಟು ಉತ್ಸಾಹ ತೋರುವ ಸಂನ್ಯಾಸಿಗಳಿಂದ ಸಮಾಜದಲ್ಲಿ ಸುಸಂಘಟನೆ ತರಲಾಗದು. ಯಾವ ಮತ್ತು ಯಾರ ಮುಲಾಜಿಗೂ ಒಳಗಾಗದ ಸಂನ್ಯಾಸಿಗಳು ಇರಬೇಕು. ಇಂತಹ ಉತ್ಕಟ ಅನಿಸಿಕೆಯನ್ನು ಸಾಕಾರಗೊಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿರುವೆ. ಆಗುತ್ತಾ ಇಲ್ಲ. ಆದರೂ ಸಂಕಲ್ಪ ದೂರವಾಗಿಲ್ಲ.
* ಸಂನ್ಯಾಸಿಗಳಲ್ಲಿ ಎರಡು ವಿಧ - ಸಾಧಕ ಸಂನ್ಯಾಸಿ, ಜ್ಞಾನಿ ಸಂನ್ಯಾಸಿ. ಜ್ಞಾನಿ ಸಂನ್ಯಾಸಿಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಸಾಧಕ ಸಂನ್ಯಾಸಿಗಳಿಗೆ ರಾಷ್ಟ್ರಹಿತ, ಸಮಾಜಹಿತ, ಧರ್ಮರಕ್ಷಣೆ ಮತ್ತು ಆತ್ಮವಿಕಾಸಗಳೆಂಬ ನಾಲ್ಕು ಕರ್ತವ್ಯಗಳಿವೆ. ಸಮಾಜಹಿತವೆಂದರೆ ಸಮಸ್ತ ಮಾನವಕುಲಹಿತ. ಸಮಾಜವೆಂದರೆ ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ಕ್ಷತ್ರಿಯ ಸಮಾಜ, ಇತ್ಯಾದಿ ಪರಿಗಣಿಸುವುದಲ್ಲ. ಸದ್ಯದ ಸಂನ್ಯಾಸಿಗಳು ಜಾತಿ ಆಧಾರಿತ ಸಮಾಜದ ಸುಸಂಘಟನೆಗಾಗಿ ದುಡಿಯುವಂತಹವರಾದರೆ ಆದಷ್ಟು ಬೇಗ ತಮ್ಮ ವಿಚಾರಧಾರೆಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಒಳ್ಳೆಯದು.
* ಯುವಕರ ವಿಚಾರದಲ್ಲಿ ಧಾರ್ಮಿಕ ಜವಾಬ್ದಾರಿ ಹೊತ್ತ ಗುರುಗಳು, ಆಚಾರ್ಯರು, ಸಂನ್ಯಾಸಿಗಳು ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಧಾರ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಯುವಪೀಳಿಗೆಗೆ ಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ.
* ದೀನ ದಲಿತ, ಕಡುಬಡವ ಮಕ್ಕಳಿಗೆ ಸಂಸ್ಕಾರ, ಶಿಕ್ಷಣಗಳನ್ನು ಉಚಿತವಾಗಿ ನೀಡುವ ಪ್ರಯತ್ನವನ್ನು ಪ್ರತಿ ಯುವಕ-ಯುವತಿಯರು, ಸಂನ್ಯಾಸಿಗಳು ಯಾವುದೇ ರೀತಿಯಲ್ಲಿ ಮಾಡಬೇಕು.
* ಮೌಲ್ಯಗಳ ಅಧಃಪತನದಿಂದಾಗಿ ಜನರಲ್ಲಿ ಸುಳ್ಳು, ವಂಚನೆ. ಮೋಸಗಳು ಇವೆ, ಇದರಿಂದಾಗಿ ಅಸತ್ಯದ ಅನುಸರಣೆ ಮಾಡುತ್ತಾರೆ, ಸತ್ಯವನ್ನು ದೂರ ಮಾಡುತ್ತಾರೆ. ಸತ್ಯಕ್ಕೆ ಕುಂದಿಲ್ಲ. ಶಾಸ್ತ್ರಾಧ್ಯಯನ, ಶಾಸ್ತ್ರ ಪರಂಪರೆ ಇದು ಒಬ್ಬಿಬ್ಬರ ಕೊಡುಗೆಯಲ್ಲ. ಸಹಸ್ರಾರು ವರ್ಷಗಳ, ಸಹಸ್ರಾರು ಜನರ ಶ್ರಮಕ್ಕೆ ವೈಜ್ಞಾನಿಕತೆಯಿದೆ, ವಿಶ್ಲೇಷಣೆ ಇದೆ, ಕರ್ತವ್ಯವೂ ಇದೆ. ಪ್ರಮಾಣರಹಿತವಾದ ಇತರ ಮಾರ್ಗಗಳನ್ನು ಜನರು ಅನುಸರಿಸುತ್ತಾರೆಂದರೆ ಇದಕ್ಕೆ ಮೌಲ್ಯದ ಅಧಃಪತನವೇ ಕಾರಣ. ಕ್ರಮೇಣ ಇದರಲ್ಲಿ ಕೊರತೆ ಕಾಣುವ ಜನರು ಇದರಿಂದ ದೂರ ಸರಿಯುತ್ತಾರೆ. ಸತ್ಯ ತಲೆಯೆತ್ತುತ್ತದೆ. 
     ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇದೇ ೨೫ರಿಂದ ೩೦ರವರೆಗೆ ಇವರು ಭಗವದ್ಗೀತೆಯ ಮತ್ತು ಉಪನಿಷತ್ ಕುರಿತು ನಡೆಸಿಕೊಡಲಿರುವ ಪ್ರವಚನಗಳು ಆಸಕ್ತರಿಗೆ ಮಾರ್ಗದರ್ಶಿಯಾಗಲಿರುವುದರಲ್ಲಿ ಅನುಮಾನವಿಲ್ಲ.

-ಕ.ವೆಂ.ನಾಗರಾಜ್.
(ಆಧಾರ: ಸ್ವಾಮಿ ಸುವ್ರತಾನಂದ ಸರಸ್ವತಿಯವರ 'ಚಿದ್ರೂಪ ದರ್ಶನ')     

ಸೋಮವಾರ, ಜುಲೈ 15, 2013

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

-ಕ.ವೆಂ.ನಾಗರಾಜ್.



ಭಾನುವಾರ, ಜುಲೈ 14, 2013

ಕೃಷ್ಣ-ಸತ್ಯಭಾಮೆಯರ ಸಂಭಾಷಣೆ


                                        
ಸೂತ್ರಧಾರ:  ಕೇಳಿ ಸಜ್ಜನರೇ, ಒಂದು ದಿನ ಶ್ರೀಕೃಷ್ಣ ದ್ವಾರಕಾನಗರದಲ್ಲಿದ್ದಾಗ ನಾರದ ಅಲ್ಲಿಗೆ ಬರುತ್ತಾನೆ. ಕೃಷ್ಣ ಅವನನ್ನು ಸ್ವಾಗತಿಸಿ ಅದರಾತಿಥ್ಯ ಮಾಡುತ್ತಾನೆ. ನಾರದ ಮಹರ್ಷಿ ಕೃಷ್ಣನಿಗೆ ಒಂದು ದಿವ್ಯವಾದ ಪಾರಿಜಾತದ ಹೂವನ್ನು ಕೊಡುತ್ತಾನೆ. ಕೃಷ್ಣ ಏನು ಮಾಡಿದನಪ್ಪಾ ಅಂದರೆ, ಆ ಪಾರಿಜಾತವನ್ನು ಅತಿ ಪ್ರೀತಿಯಿಂದ ರುಕ್ಮಿಣಿಯ ತುರುಬಿಗೆ ಮುಡಿಸುತ್ತಾನೆ. ಈ ವಿಷಯ ಒಬ್ಬಳು ಸೇವಕಿಯಿಂದ ಸತ್ಯಭಾಮೆಗೆ ಗೊತ್ತಾಗುತ್ತದೆ. ಸವತಿ ಮಾತ್ಸರ್ಯದಿಂದ ಬುಸುಗುಡುವ ಸತ್ಯಭಾಮೆಗೆ ಕೋಪ ಬರುತ್ತದೆ. ಕೃಷ್ಣ ಬರುವ ಸಮಯಕ್ಕೆ ಸರಿಯಾಗಿ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು ಮಲಗಿಬಿಡುತ್ತಾಳೆ. ಕೃಷ್ಣ ಬಂದು ಬಾಗಿಲು ಬಡಿದರೆ ತೆಗೆಯುವುದೇ ಇಲ್ಲ. ಆಗ ಅವರಿಬ್ಬರ ನಡುವೆ ನಡೆದ ಮಾತುಕತೆ ಏನಪ್ಪಾ ಅಂದ್ರೆ, . . ಬೇಡ, ಬೇಡ, ನಾನು ಹೇಳಿದರೆ ಅದರಲ್ಲಿ ಸ್ವಾರಸ್ಯ ಇರಲ್ಲ. ನೀವೇ ಕೇಳಿ. ಅವರು ಏನು ಮಾತನಾಡಿಕೊಂಡರು ಎಂದು ನಾನು ಹೇಳಿ ನಾನೇಕೆ ಮಧ್ಯ ಸಿಕ್ಕಿ ಹಾಕಿಕೊಳ್ಳಲಿ? ಇನ್ನು, ನೀವುಂಟು ಅವರುಂಟು.
ಕೃಷ್ಣ:   ಗಿಣಿಯಂತೆ ಮಾತನಾಡುವವಳೇ, ತಾವರೆ ಹೂವಿನ ಸುಗಂಧದವಳೇ, ಮುದ್ದು ಚೆಲುವೆ ಬಾಗಿಲು ತೆಗೆಯೇ.
ಭಾಮೆ: ಬಾಗಿಲಲ್ಲಿ ನಿಂತು ಏನೇನೋ ಮಾತನಾಡುತ್ತಿರುವವನು ನೀನು ಯಾರು? ಹೇಳಯ್ಯಾ ನಿನ್ನ ಹೆಸರು.
ಕೃಷ್ಣ:   ನಾಗವೇಣಿ, ಕೇಳು ಕೇಳೆಲೆ, ನಾನು ವೇಣುಗೋಪಾಲ ಕಣೇ.
ಭಾಮೆ: ನೀನು ವೇಣುಗೋಪಾಲ ಆದರೆ ಒಳ್ಳೆಯದೇ ಆಯಿತು. ಹೋಗಿ ದನ ಮೇಯಿಸು ಹೋಗಯ್ಯಾ.
ಕೃಷ್ಣ:   ನಯನ ಮನೋಹರಿ, ನಾನು ಕ್ರೂರ ಕಾಳಿಂಗನ ಹೆಡೆ ಮೆಟ್ಟಿ ಮಣಿಸಿದವನು ಕಣೇ.
ಭಾಮೆ: ಅಂತಹ ಶೂರ ನೀನಾದರೆ ಒಳ್ಳೆಯದಾಯಿತು. ಹೋಗಿ ಹಾವಾಡಿಸು ಹೋಗಯ್ಯಾ.
ಕೃಷ್ಣ:   ಜಟ್ಟಿಗಳ ಜಟ್ಟಿಗಳನ್ನೇ ಕುಟ್ಟಿ ಪುಡಿ ಮಾಡಿದಾತ ಬಂದಿರುವೆ, ಬಾಗಿಲು ತೆಗೆಯೇ.
ಭಾಮೆ: ಮಲ್ಲರ ಗೆದ್ದವನಾದರೆ ಇಲ್ಲಿಗೆ ಏಕೆ ಬಂದೆ, ಗರಡಿಗೆ ಹೋಗಿ ಸಾಮು ಮಾಡಯ್ಯಾ.
ಕೃಷ್ಣ:   ಜಾಂಬವಂತನನ್ನು ಗೆದ್ದು ಕಾಮಿನಿಯ ಪಡೆದವನು ಕಾಣೇ, ಬಾಗಿಲು ತೆಗಿ.
ಭಾಮೆ: ಹಾಗಾದರೆ ಇಲ್ಲಿಗೆ ಏಕೆ ಬಂದೆ, ಕಾಡಿಗೆ ಹೋಗಿ ಬೇಡರ ಜೊತೆ ಬಾಳು ಹೋಗಯ್ಯಾ.
ಕೃಷ್ಣ:   ಕಾಂತಾಮಣಿಯೇ, ವೃಷಭವ ಕಟ್ಟಿ ನೀಲಕಾಂತೆಯನ್ನು ತಂದವನು ನಾನೇ ಕಣೇ.
ಭಾಮೆ: ಅದೇ ಆಟ ಆಡಿ ಸಂತೋಷವಾಗಿರು ಹೋಗಯ್ಯಾ.
ಕೃಷ್ಣ:   ಪ್ರಾಣಕಾಂತೆ, ನಿನ್ನನ್ನು ರಮಿಸಿ ಸಂತಸಪಡುವ ನಿನ್ನ ಪ್ರಿಯ ರಮಣ ಬಂದಿರುವೆ, ಬಾಗಿಲು ತೆಗೆಯೇ.
[ರಮಣನೆಂಬ ನುಡಿ ಕೇಳಿ ಖುಷಿಯಾದರೂ ಹೊರಗೆ ತೋರ್ಪಡಿಸದೆ ಸತ್ಯಭಾಮೆ ಬಾಗಿಲು ತೆರೆದು ಹುಸಿ ಮುನಿಸು ತೋರಿ ಪುನಃ ಮಂಚದ ಮೇಲೆ ಮಲಗುವಳು.]
ಕೃಷ್ಣ:   ಮುನಿಸು ಬಿಡು ರಮಣಿ, ನಿನಗೆ ಒಂದು ಹೂವು ಕೊಡುವುದು ಏನು ಚಂದ, ನಿನಗೆ ಪಾರಿಜಾತದ ವೃಕ್ಷವನ್ನೇ ತಂದುಕೊಡುವೆ.
[ಇಷ್ಟರಲ್ಲೇ ಭಾಮೆಯ ಹುಸಿಮುನಿಸು ಎಲ್ಲೋ ಮಾಯವಾಗಿ ಪರಸ್ಪರರು ಸಮೀಪಿಸುವಾಗ . . ತೆರೆ ಎಳೆದು ಸೂತ್ರಧಾರ ಧಾವಿಸುವನು.]
ಸೂತ್ರಧಾರ: ನೋಡಿದಿರಾ. ಕೃಷ್ಣ ಏನು ಸಾಧನೆ ಮಾಡಿದ್ದರೇನು. ಭಾಮೆಗೆ ಬೇಕಿದ್ದು ಅವನ ಪ್ರೀತಿ. ಅದನ್ನು ತೋರಿಸಿದ ಮೇಲೆಯೇ ಅವಳು ಒಲಿದು ಬಂದದ್ದು. ಮುಂದೆ ನರಕಾಸುರನ ಹಾವಳಿ ಹೆಚ್ಚಿ ಜನರು ಕಷ್ಟ ಪಡುತ್ತಿರುತ್ತಾರೆ. ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಂದಿಗೆ ಇಂದ್ರಲೋಕಕ್ಕೆ ಹೋಗುವ ದಾರಿಯಲ್ಲಿ ಪ್ರಾಗ್ಜೋತಿಷಪುರಕ್ಕೆ ಹೋಗಿ ಅಲ್ಲಿದ್ದ ಮುರ, ನರಕಾಸುರ ಮುಂತಾದ ರಾಕ್ಷಸರನ್ನು ಸಂಹರಿಸುತ್ತಾನೆ. ದೇವಲೋಕದಲ್ಲಿ ಕೃಷ್ಣ-ಭಾಮೆಯರಿಗೆ ಅದ್ಭುತವಾದ ಸ್ವಾಗತ ದೊರೆಯುತ್ತದೆ. ಕೃಷ್ಣ ಬೇಡವೆಂದರೂ ಕೇಳದೆ ಭಾಮೆ ದೇವಲೋಕದಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರುಸಹಿತ ಕಿತ್ತು ಗರುಡನ ಬೆನ್ನ ಮೇಲೆ ಇಟ್ಟುಬಿಡುತ್ತಾಳೆ. ಈ ಕಾರಣಕ್ಕೆ ಇಂದ್ರನಿಗೂ, ಕೃಷ್ಣನಿಗೂ ಯುದ್ಧವಾಗಿ ಇಂದ್ರನ ಗರ್ವಭಂಗವೂ ಈ ನೆಪದಲ್ಲಿ ಆಗುತ್ತದೆ. ಲೋಕ ಕಲ್ಯಾಣವೂ ಆಗುತ್ತದೆ.
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಶಂತು ಮಾ ಕಶ್ಚಿದ್ ದುಃಖ ಭಾಗಿನಃ ||
******
ರಚನೆ: ಕ.ವೆಂ.ನಾಗರಾಜ್.
ಸಲಹೆ: ಈ ಕಿರುರೂಪಕದ ಪ್ರಾರಂಭದಲ್ಲಿ ಕೃಷ್ಣನ ಕುರಿತು ಒಂದು ಹಾಡನ್ನೋ ಅಥವ ನೃತ್ಯವನ್ನೋ ಜೋಡಿಸಿಕೊಳ್ಳಬಹುದು.
ಆಧಾರ: ೧೮ನೆಯ ಶತಮಾನದ ಕೆಳದಿ ಸುಬ್ಬಕವಿಯ 'ಪಾರಿಜಾತ' ಕೃತಿಯ ಭಾಗ. 

ಸೋಮವಾರ, ಜುಲೈ 8, 2013

ಇಲಾಖಾ ವಿಚಾರಣೆಗೆ ನೂರಾರು ವಿಘ್ನಗಳು: ಕುರಿ ಕಾಯುವ ತೋಳಗಳು

    ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ, ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಇಂತಹ ಪ್ರಕರಣಗಳಲ್ಲಿ ನೌಕರರಿಗೆ ಅವರ ಮೇಲಾಧಿಕಾರಿಯಿಂದ ಕಾರಣ ಕೇಳಿ ನೋಟೀಸು ಕೊಡಲಾಗುತ್ತದೆ. ಆ ನೋಟೀಸಿಗೆ ನೌಕರ ಕೊಡುವ ಉತ್ತರ ಸಮರ್ಪಕವಿರದಿದ್ದಲ್ಲಿ/ ಉತ್ತರವನ್ನೇ ಕೊಡದಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಕಛೇರಿಯ ಅಧಿಕಾರಿ ಪೂರಕ ವಿವರಗಳು, ದಾಖಲಾತಿಗಳೊಂದಿಗೆ ವರದಿ ಕೊಡಬೇಕು. ಶಿಸ್ತು ಪ್ರಾಧಿಕಾರಿ ಅದನ್ನು ಪರಿಶೀಲಿಸಿ ಕ್ರಮ ಅಗತ್ಯವೆನಿಸಿದರೆ ಆಪಾದನೆಗಳು, ಆಪಾದನೆಗಳ ಪೂರ್ಣ ವಿವರಗಳು, ಸಮರ್ಥಿಸುವ ದಾಖಲೆಗಳ ಪಟ್ಟಿ. ಸಾಕ್ಷಿ ಹೇಳುವವರ ಪಟ್ಟಿಗಳೊಂದಿಗೆ ನೌಕರನಿಗೆ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದೆಂದು ಕಾರಣ ಕೇಳಿ ನೋಟೀಸು ಕೊಡಬೇಕಾಗುತ್ತದೆ. ನೌಕರ ಸಲ್ಲಿಸುವ ಉತ್ತರ ಪರಿಶೀಲಿಸಿ  ಉತ್ತರ ಸಮರ್ಪಕವಿರದಿದ್ದಲ್ಲಿ ಇಲಾಖಾ ವಿಚಾರಣೆಗೆ ಆದೇಶಿಸಿ ಒಬ್ಬರು ವಿಚಾರಣಾಧಿಕಾರಿಯನ್ನು ಮತ್ತು ಪ್ರಕರಣವನ್ನು ಸರ್ಕಾರದ ಪರವಾಗಿ ಮಂಡಿಸಲು ಒಬ್ಬ ಮಂಡನಾಧಿಕಾರಿಯನ್ನು ನೇಮಿಸುತ್ತಾರೆ. ವಿಚಾರಣಾಧಿಕಾರಿ ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ಆರೋಪಗಳು ರುಜುವಾತಾದವೇ, ಇಲ್ಲವೇ ಎಂಬ ಬಗ್ಗೆ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸುತ್ತಾರೆ. ಆರೋಪಗಳು ರುಜುವಾತಾಗಿದ್ದರೆ, ವಿಚಾರಣಾಧಿಕಾರಿಯ ಆದೇಶದ ಪ್ರತಿಯೊಂದಿಗೆ ನೌಕರನಿಗೆ ಸೂಕ್ತ ಶಿಕ್ಷೆ ನೀಡಬಾರದೇಕೆಂಬ ಬಗ್ಗೆ ಪುನಃ ನೋಟೀಸು ನೀಡಿ, ಆತನಿಂದ ಬರುವ ಉತ್ತರ ಗಮನಿಸಿ ಶಿಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ದೀರ್ಘ ಅವಧಿ ಬೇಕೆಂಬುದು ಯಾರಿಗೂ ಅರ್ಥವಾಗುತ್ತದೆ. ಆರೋಪಗಳು ಗುರುತರವಾಗಿದ್ದರೆ, ನೌಕರನನ್ನು ಅಮಾನತ್ತಿನಲ್ಲಿರಿಸಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕೆಲವು ತಿಂಗಳ ನಂತರ ಅವನನ್ನು ಪುನಃ ಸೇವೆಗೆ ತೆಗೆದುಕೊಂಡು ಬೇರೆ ಕಛೇರಿಗೆ ನಿಯೋಜಿಸುತ್ತಾರೆ. ಎಚ್ಚರಿಕೆ ನೀಡುವುದು, ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯುವುದು, ಹಿಂಬಡ್ತಿ ನೀಡುವುದು, ಇತ್ಯಾದಿಗಳು ಸೇರಿದಂತೆ ಸೇವೆಯಿಂದ ವಜಾಗೊಳಿಸುವ ಶಿಕ್ಷೆ ನೀಡಲು ಶಿಸ್ತು ಪ್ರಾಧಿಕಾರಿಗೆ ಅಧಿಕಾರವಿರುತ್ತದೆ.
     ಸರ್ಕಾರದ ಇಲಾಖೆಗಳಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು, ಸುಗಮ, ಜನಪರ ಆಡಳಿತ ನೀಡಲು ಇಲಾಖಾ ವಿಚಾರಣೆಗಳು ಪ್ರಮುಖ ಪಾತ್ರ ವಹಿಸಬಲ್ಲವು. ದೌರ್ಭಾಗ್ಯವಶಾತ್ ಭ್ರಷ್ಟಾಚಾರದ ಕರಿನೆರಳು ಬಿದ್ದು ಇವು ಕೇವಲ ಅರ್ಥಹೀನ ಪ್ರಕ್ರಿಯೆಗಳಾಗಿಬಿಟ್ಟಿರುವುದು ದುರ್ದೈವ. ಎಲ್ಲಾ ಇಲಾಖಾ ವಿಚಾರಣೆಗಳೂ ಹೀಗಾಗಿವೆ ಎಂದು ಹೇಳಲಾಗದಿದ್ದರೂ ನೈಜ ಮತ್ತು ಅರ್ಥಪೂರ್ಣ ವಿಚಾರಣೆಗಳು ಬೆರಳೆಣಿಕೆಯಷ್ಟು ಮಾತ್ರ ಎನ್ನಬಹುದು. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದಾಗ ನನ್ನ ಸೇವಾ ಅನುಭವದಿಂದ ತಿಳಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
ಹುಟ್ಟುವ ಮೊದಲೇ ಸಾಯುವ ವಿಚಾರಣೆಗಳು:
    ಸಣ್ಣ ಪುಟ್ಟ ತಪ್ಪುಗಳನ್ನು ಮಾನವೀಯತೆಯ ನೆಲೆಯಲ್ಲಿ ಕ್ಷಮಿಸುವ ಸಂಗತಿಗಳನ್ನು ಈ ವ್ಯಾಪ್ತಿಯಲ್ಲಿ ನಾನು ಸೇರಿಸಬಯಸುವುದಿಲ್ಲ. ಅಪರೂಪಕ್ಕೆ ಅನಿವಾರ್ಯವಾಗಿ ತಡವಾಗಿ ಬರುವ ನೌಕರರು, ಉದ್ದೇಶವಿಲ್ಲದೆ, ಗೊತ್ತಿಲ್ಲದೆ ಮಾಡುವ ಸಣ್ಣ ತಪ್ಪುಗಳು, ಮುಂತಾದುವನ್ನು ಎಚ್ಚರಿಕೆ ನೀಡಿ ಮುಂದೆ ಈ ರೀತಿ ಮಾಡದಿರಲು ತಿಳುವಳಿಕೆ ನೀಡಿ ಮಂಗಳ ಹಾಡಲಾಗುವ ಪ್ರಕರಣಗಳನ್ನೂ ಗಣಿಸುವ ಅಗತ್ಯವಿಲ್ಲ. ಅದರೆ ಶಿಸ್ತು ಕ್ರಮ ಅಗತ್ಯವಿದ್ದೂ ಯಾವ ಕ್ರಮವನ್ನೂ ಅನುಸರಿಸದೆ ಮುಕ್ತಾಯ ಮಾಡುವ ಸಂಗತಿಗಳೇ ಹೆಚ್ಚು ಎಂಬುದು ಸಾಮಾನ್ಯ ಅನುಭವ. ೧೫ ದಿನಗಳಿಗಿಂತ ಹೆಚ್ಚು ಕಾಲ ಒಬ್ಬ ನೌಕರ ಅನಧಿಕೃತ ಗೈರುಹಾಜರಾದನೆಂದರೆ ಅದು ಗುರುತರ ಅಪರಾಧವೇ. ಸಾಬೀತಾದರೆ ನೌಕರಿಯಿಂದ ವಜಾ ಮಾಡಬಹುದಾಗಿರುತ್ತದೆ. ಕೆಲವರು ತಿಂಗಳುಗಟ್ಟಲೆ ಗೈರುಹಾಜರಾದ ಪ್ರಕರಣಗಳಲ್ಲೂ ಕಛೇರಿಯ ಮುಖ್ಯಸ್ಥರ ಅದಕ್ಷತೆಯ ಕಾರಣದಿಂದ ಯಾವುದೇ ಕ್ರಮ ಆಗದೆ, ಅವರುಗಳು ಸಂಬಳವನ್ನೂ ಪಡೆದ ನಿದರ್ಶನಗಳಿವೆ. ಇಂತಹ ಅದಕ್ಷತೆಯಿಂದ ವಯೋನಿವೃತ್ತಿ ಅವಧಿ ನಂತರವೂ ಸೇವೆಯಲ್ಲಿ ಮುಂದುವರೆದು ಸಂಬಳ ಪಡೆದವರೂ ಇದ್ದಾರೆ. ಇಂತಹ ಪ್ರಕರಣಗಳಿಗೆ ಕಾರಣಗಳೆಂದರೆ: 
೧. ಕಛೇರಿ ಮುಖ್ಯಸ್ಥರ ಅಸಮರ್ಪಕ ಕಾರ್ಯವೈಖರಿ, ೨. ಭ್ರಷ್ಟಾಚಾರ - ಸಂಬಂಧಿಸಿದವರಿಂದ ಲಂಚ ಪಡೆದು ಪ್ರಕರಣ ಮುಚ್ಚಿಹಾಕುವುದು, ಈ ತಪ್ಪನ್ನೇ ಬಂಡವಾಳ ಮಾಡಿಕೊಂಡು ಆ ನೌಕರನನ್ನು ಆಗಾಗ್ಗೆ ಶೋಷಿಸುವುದು, ೩. ಶಿಸ್ತು ಪ್ರಾಧಿಕಾರದ ಅಧಿಕಾರಿಗಳ ಹಸ್ತಕ್ಷೇಪ (ಇಲ್ಲೂ ಭ್ರಷ್ಟಾಚಾರವೇ ಪ್ರಧಾನ ಅಂಶ), ೪. ರಾಜಕಾರಣಿಗಳ ಹಸ್ತಕ್ಷೇಪ.
ವಿಫಲಗೊಳ್ಳುವ ವಿಚಾರಣೆಗಳು:
     ದಕ್ಷ ಅಧಿಕಾರಿಗಳಿದ್ದು ಶಿಸ್ತುಕ್ರಮ ಕೈಗೊಂಡ ಪ್ರಕರಣಗಳಲ್ಲೂ ಹೆಚ್ಚಿನ ವಿಚಾರಣೆಗಳು ವಿಫಲವಾಗಿ ಆರೋಪಿಗಳು ಪಾರಾಗುತ್ತಾರೆ ಎಂಬುದು ವಿಡಂಬನೆಯೇ ಸರಿ. ಇದಕ್ಕೆ ಮೂಲಕಾರಣಗಳನ್ನು ವಿಶ್ಲೇಷಿಸಿದರೆ ಕಾಣುವ ಸಂಗತಿಗಳು ಇವು: ೧. ದಕ್ಷ ವಿಚಾರಣಾಧಿಕಾರಿಗಳು ಮತ್ತು ಮಂಡನಾಧಿಕಾರಿಗಳನ್ನು ನೇಮಿಸದಿರುವುದು, ೨. ಆರೋಪ ಪಟ್ಟಿ ತಯಾರಿಸುವಲ್ಲಿ ಲೋಪ, ೩. ವಿಚಾರಣಾ ನಿಯಮಗಳು, ಕಾನೂನುಗಳ ತಿಳುವಳಿಕೆಯಲ್ಲಿನ ಕೊರತೆ, ೩. ಭ್ರಷ್ಟತೆ, ೪. ಇತರ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಸ್ತಕ್ಷೇಪ, ೪. ವಕೀಲರುಗಳು ಸರ್ಕಾರದ ಪರವಾಗಿ ಆಗಲೀ, ಆರೋಪಿ ನೌಕರರ ಪರವಾಗಿ ಆಗಲೀ ಹಾಜರಾಗಲು ಅವಕಾಶವಿಲ್ಲದಿರುವುದು.
     ಒಂದು ಶಿಸ್ತು ಕ್ರಮ ಯಶಸ್ವಿಯಾಗಿ ಜರುಗಬೇಕೆಂದರೆ ಪ್ರಾಥಮಿಕವಾಗಿ ಆರೋಪಿಯ ವಿರುದ್ಧದ ಆರೋಪ ಪಟ್ಟಿಯನ್ನು ಸರಿಯಾಗಿ ಸಿದ್ಧಪಡಿಸುವುದಲ್ಲದೆ, ಆರೋಪಗಳನ್ನು ಸಮರ್ಥಿಸುವ ಪೂರಕ ದಾಖಲೆಗಳು ಮತ್ತು ಸಾಕ್ಷಿದಾರರ ವಿವರಗಳನ್ನು ವಿಚಾರಣಾಧಿಕಾರಿಯವರಿಗೆ ಒದಗಿಸಬೇಕು. ಆದರೆ, ಅಸಮರ್ಪಕ ಕಾರ್ಯವೈಖರಿಯಿಂದಾಗಿ ಮತ್ತು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಆರೋಪ ಪಟ್ಟಿ ಸಿದ್ಧಪಡಿಸುವಾಗಲೇ ಅದರಲ್ಲಿ ಹುರುಳಿಲ್ಲದಂತೆ ಆಗಿರುತ್ತದೆ. ಅಗತ್ಯದ ದಾಖಲೆಗಳನ್ನು ಉಲ್ಲೇಖಿಸಿಯೇ ಇರುವುದಿಲ್ಲ. ಸಂಬಂಧಪಟ್ಟ ಸಾಕ್ಷಿಗಳನ್ನು ಕೈಬಿಟ್ಟು, ಸಂಬಂಧಪಡದವರನ್ನು ಸಾಕ್ಷಿಗಳಾಗಿ ಹೆಸರಿಸಿರುವ ಪ್ರಕರಣಗಳು ಇವೆ. 
     ಒಬ್ಬ ಅಸಮರ್ಪಕ ಮತ್ತು ಇಲಾಖಾ ವಿಚಾರಣೆ ನಡೆಸುವ ರೀತಿ ಗೊತ್ತಿಲ್ಲದ ಅಧಿಕಾರಿಯನ್ನು ವಿಚಾರಣಾಧಿಕಾರಿಯಾಗಿ ನೇಮಿಸಿದರೆ ಎಷ್ಟರಮಟ್ಟಿಗೆ ವಿಚಾರಣೆಯಲ್ಲಿ ಸತ್ಯಾಸತ್ಯತೆ ತಿಳಿದೀತು? ಅದೇ ರೀತಿ ಇಲಾಖಾ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಬೇಕಾದ ಮಂಡನಾಧಿಕಾರಿಗಳು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದ ಕಾರಣಕ್ಕಾಗಿಯೇ ಬಹುತೇಕ ವಿಚಾರಣೆಗಳು ವಿಫಲಗೊಳ್ಳುತ್ತವೆ ಎಂಬುದು ನನ್ನ ಅನುಭವದಿಂದ ಕಂಡಿರುವೆ. ಮಂಡನಾಧಿಕಾರಿ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷಿಗಳ ವಿಚಾರಣೆ ಸರಿಯಾಗಿ ಮಾಡಬೇಕು, ಪೂರಕ ದಾಖಲೆಗಳನ್ನು ವಿಚಾರಣಾಧಿಕಾರಿಗಳ ಮುಂದೆ ಇಡಬೇಕು, ಅಗತ್ಯವಿದ್ದರೆ ಆರೋಪ ಪಟ್ಟಿಯಲ್ಲಿ ಸೇರಿರದ, ಆದರೆ ವಿಚಾರಣೆಗೆ ಅಗತ್ಯವೆನಿಸಿದ ದಾಖಲೆಗಳನ್ನು ಹಾಜರುಪಡಿಸುವ, ಹೊಸ ಸಾಕ್ಷಿಗಳನ್ನು ಕರೆಸುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಈ ರೀತಿ ಆಗದ ಕಾರಣದಿಂದ ಸ್ವತಃ ಜಿಲ್ಲಾಧಿಕಾರಿಯವರೇ ಖುದ್ದು ಆಸಕ್ತಿ ವಹಿಸಿದ ಪ್ರಕರಣಗಳಲ್ಲೂ ಗುರುತರ ಆರೋಪಗಳಿಂದ ಆರೋಪಿಗಳು ಪಾರಾಗಿದ್ದ ಬಗ್ಗೆ ಹಿಂದಿನ ಲೇಖನಗಳಲ್ಲಿ ಪ್ರಸ್ತಾಪಿಸಿರುವೆ.
ನಾಟಕವಾಗುವ ವಿಚಾರಣೆ
     ಇಲಾಖಾ ವಿಚಾರಣೆ ಒಂದು ನಾಟಕವೆನ್ನುವಂತೆ ಆಗಿರುವುದಕ್ಕೆ ಒಂದು ಪ್ರಸಂಗವನ್ನು ಉಲ್ಲೇಖಿಸುವೆ. ಅದಕ್ಕೆ ಮುಂಚೆ ಒಂದು ಸ್ವಾರಸ್ಯಕರ ವಿಷಯ ಹೇಳುವೆ. ನಾನು ರಾಜಕೀಯವಾಗಿ ಒಂದು ಶಕ್ತಿಕೇಂದ್ರವಾಗಿರುವ ತಾಲ್ಲೂಕಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಮಧ್ಯಾಹ್ನ ಒಂದು ಗ್ರಾಮದ ಸುಮಾರು ೨೦-೨೫ ಜನರು ನನಗೆ ಜೈಕಾರ ಘೋಷಣೆ ಮಾಡುತ್ತಾ ಬಂದಿದ್ದವರು ನನ್ನ ಛೇಂಬರಿಗೆ ಬಂದು ಮಾಲಾರ್ಪಣೆ ಮಾಡಿ ತಮ್ಮ ಗ್ರಾಮದ ಶಾಲೆಯ ಪಕ್ಕದ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿದ್ದಕ್ಕೆ ನನ್ನನ್ನು ಅಭಿನಂದಿಸಿಹೋದರು. ನನಗೆ ಆಶ್ಚರ್ಯವಾಗಿತ್ತು, ಏಕೆಂದರೆ ಅಂತಹ ಯಾವುದೇ ಕ್ರಮ ನಾನು ತೆಗೆದುಕೊಂಡಿರಲಿಲ್ಲ. ಆ ಜಮೀನಿನ ವಿಷಯ ನ್ಯಾಯಾಲಯದಲ್ಲಿದ್ದು ಯಥಾಸ್ಥಿತಿ ಕಾಪಾಡಲು ನ್ಯಾಯಾಲಯದ ಆದೇಶವಿತ್ತು. ತಕ್ಷಣ ಗ್ರಾಮಕ್ಕೆ ಹೊರಟು ರೆವಿನ್ಯೂ ಇನ್ಸ್ ಪೆಕ್ಟರರಿಗೆ ಕರೆಕಳುಹಿಸಿದರೆ ಆತ ಕೈಗೆ ಸಿಗಲಿಲ್ಲ. ಜಮೀನಿನ ಹತ್ತಿರ ಹೋಗಿ ನೋಡಿದರೆ ಆ ಜಮೀನಿನ ಸುತ್ತ ತಂತಿ ಬೇಲಿ ಹಾಕಿ ಒಂದು ಫಲಕ ನೇತುಹಾಕಿದ್ದರು. 'ಒತ್ತುವರಿ ತೆರವುಗಳಿಸಿ ಈ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದೆ. ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು - ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿ' ಎಂದು ಆ ಫಲಕದಲ್ಲಿತ್ತು. ಆ ಫಲಕವನ್ನು ತೆಗೆಸಿ, ಆರೀತಿ ಯಾರು ಮಾಡಿದವರು ಎಂದು ವಿಚಾರಿಸಿದರೆ ಗ್ರಾಮದಲ್ಲಿ ಯಾರೂ ಸರಿಯಾಗಿ ಮಾಹಿತಿ ಕೊಡಲಿಲ್ಲ. ಜೈಕಾರ ಹಾಕಿಕೊಂಡು ಬಂದಿದ್ದವರು ಅಲ್ಲಿರಲೇ ಇಲ್ಲ. ವಾಪಸು ಬಂದ ಮೇಲೆ ಸೂಕ್ಷ್ಮವಾಗಿ ಪಡೆದ ಮಾಹಿತಿಯ ಪ್ರಕಾರ ಸ್ಥಳೀಯ ರಾಜಕಾರಣಿಗಳೊಂದಿಗೆ ಷಾಮೀಲಾದ ರೆವಿನ್ಯೂ ಇನ್ಸ್ ಪೆಕ್ಟರನ ಕುಮ್ಮಕ್ಕಿನಿಂದಲೇ ಇದು ನಡೆದಿದ್ದುದು ಗೊತ್ತಾಯಿತು. ಅಂದು ರಾತ್ರಿಯೇ ರೆವಿನ್ಯೂ ಇನ್ಸ್ ಪೆಕ್ಟರನನ್ನು ಕರೆಸಿ ವಿಚಾರಿಸಿದರೆ ಆತ ತನಗೇನೂ ಗೊತ್ತಿಲ್ಲವೆಂದೇ ವಾದಿಸಿದ್ದ. ಅವನ ಕಾರ್ಯವ್ಯಾಪ್ತಿಯ ಗ್ರಾಮದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘನೆ ಪ್ರಕರಣ ನಡೆಯಲು ಕಾರಣರಾದವರು ಯಾರು, ಆ ಫಲಕವನ್ನು ಹಾಕಿಸಿದವರು ಯಾರು ಈ ಕುರಿತು ವಿಚಾರಿಸಿ ಒಂದು ದಿನದ ಒಳಗೆ ವರದಿ ಸಲ್ಲಿಸಲು ತಿಳಿಸಿದೆ ಮತ್ತು ಇಂತಹ ಘಟನೆ ನಡೆಯಲು ಅವಕಾಶ ಕೊಟ್ಟಿದ್ದಕ್ಕೆ ಆತನ ಮತ್ತು ಸಂಬಂಧಿಸಿದ ಗ್ರಾಮಲೆಕ್ಕಿಗರ ಮೇಲೆ ಕ್ರಮ ತೆಗೆದುಕೊಳ್ಳಬಾರದೇಕೆಂದು ವಿವರಣೆ ಕೇಳಿ ನೋಟೀಸನ್ನೂ ನೀಡಿದೆ. ಮರುದಿನ ಫಲಕದ ಫೋಟೋ ಸಹಿತ ನ್ಯಾಯಾಲಯಕ್ಕೆ ದೂರು ಅರ್ಜಿ ಸಹ ಸಲ್ಲಿತವಾಗಿ ನನಗೆ ನ್ಯಾಯಾಲಯದಿಂದ ವಿವರಣೆ ಕೇಳಿ ಸಮನ್ಸ್ ಸಹ ಬಂದಿತ್ತು. ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿ ನೀಡಿದೆ. 
     ರೆವಿನ್ಯೂ ಇನ್ಸ್ ಪೆಕ್ಟರ್ ಕಿತಾಪತಿ ಸ್ವಭಾವದವನಾಗಿದ್ದು ನಾನು ಮೇಲಾಧಿಕಾರಿಯಾಗಿದ್ದುದು ಅವನಿಗೆ ಕಷ್ಟವಾಗಿತ್ತು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಡ್ಡಿಯಾಗಿತ್ತು. ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಆ ತಾಲ್ಲೂಕಿನ ರಾಜಕೀಯ ಪುಡಾರಿಗಳೊಂದಿಗೆ ಸಂಪರ್ಕವಿದ್ದ ಆತ ಅವರುಗಳ ಮೂಲಕ ಮತ್ತು ಜನರನ್ನು ಗುಂಪು ಕೂಡಿಸಿ ದೂರುಗಳನ್ನು ಹೇಳಿಸುವ ಮೂಲಕ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲು ಸತತ ಪ್ರಯತ್ನ ನಡೆಸಿದ್ದ. ಅವು ಫಲಪ್ರದವಾಗಿರಲಿಲ್ಲ. ಹೀಗಾಗಿ ಅವನು ನನಗೆ ಕೆಟ್ಟ ಹೆಸರು ಬರುವಂತಹ ಪ್ರಕರಣಗಳನ್ನು ಸೃಷ್ಟಿಸುತ್ತಿದ್ದ. ಅವನ ಇಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ನನಗೆ ಪೂರಕವಾದ ಸಾಕ್ಷ್ಯ/ದಾಖಲೆ ಸಿಗುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ನನಗೆ ಮಾಹಿತಿ ಹಕ್ಕು ಆಯೋಗದಿಂದ ಒಂದು ಪ್ರಕರಣದಲ್ಲಿ ಅರ್ಜಿದಾರರಿಗೆ ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದಿದ್ದುದಕ್ಕೆ ನನಗೆ ದಂಡ ವಿಧಿಸಬಾರದೇಕೆಂದು ಕೇಳಿ ನೋಟೀಸು ಬಂದಿತು. ನನ್ನ ಹಿಂದಿನ ತಹಸೀಲ್ದಾರರ ಕಾಲದ ಆ ಪ್ರಕರಣದ  ವಿಷಯ ನನ್ನ ಗಮನಕ್ಕೇ ಬಂದಿರಲಿಲ್ಲ. ಕಡತಗಳನ್ನು ತೆಗೆಸಿ ನೋಡಲಾಗಿ ಸಂಬಂಧಿಸಿದ ಕಡತ ಕಾಣೆಯಾಗಿದ್ದು, ರೆವಿನ್ಯೂ ಇನ್ಸ್ ಪೆಕ್ಟರ್ ಹಿಂದೆ ಕಛೇರಿಯ ಗುಮಾಸ್ತನಾಗಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಕಡತ ಕಣ್ಮರೆ ಮಾಡಿದ್ದು, ತನ್ನ ನಂತರದ ಗುಮಾಸ್ತರಿಗೆ ದುರುದ್ದೇಶಪೂರ್ವಕವಾಗಿ ಛಾರ್ಜು ಕೊಟ್ಟಿರದಿದ್ದುದು ಗೊತ್ತಾಯಿತು. ಆ ವ್ಯಕ್ತಿಗೂ ಇವನಿಗೂ ಇದ್ದ ವೈಯಕ್ತಿಕ ದ್ವೇಷದಿಂದ ಹೀಗೆ ಮಾಡಿದ್ದ. ಆಗಲೇ ಹಿಂದಿನ ತಹಸೀಲ್ದಾರರು ಅವನಿಗೆ ನೋಟೀಸನ್ನೂ ಕೊಟ್ಟಿದ್ದರು. ರಾಜಕೀಯ ಪ್ರಭಾವದಿಂದ ವಿಷಯವನ್ನು ಮುಚ್ಚಿಹಾಕಲಾಗಿತ್ತು. ಇದನ್ನು ಬಳಸಿ ಅವನಿಗೆ ಪಾಠ ಕಲಿಸಲು ನಿರ್ಧರಿಸಿದ ನಾನು ಪುನಃ ಅವನಿಗೆ ನೋಟೀಸು ನೀಡಿ ೭ ದಿನಗಳ ಕಾಲಾವಕಾಶದಲ್ಲಿ ಕಡತ ಹಾಜರುಪಡಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೂಚನೆ ಕೊಟ್ಟೆ. ಅವನಿಂದ ಉತ್ತರ ಬರದಿದ್ದರಿಂದ ಜಿಲ್ಲಾಧಿಕಾರಿಯವರಿಗೆ ಪೂರಕ ದಾಖಲೆಗಳೊಂದಿಗೆ ವರದಿ ನೀಡಿದೆ. ಈ ಹಂತದಲ್ಲಿ ಕಳೆದ ೩-೪ ವರ್ಷಗಳಿಂದ ಸಿಕ್ಕದಿದ್ದ ಕಡತ ರೆಕಾರ್ಡು ಕೋಣೆಯಲ್ಲಿ ಸಿಕ್ಕಿತೆಂಬಂತೆ ಮಾಡಿದರು. ಮಾಹಿತಿ ಕೇಳಿದವರಿಗೆ ಪೂರ್ಣ ಮಾಹಿತಿ ನೀಡಿ ಮಾಹಿತಿ ಹಕ್ಕು ಆಯೋಗಕ್ಕೆ ವಿಳಂಬಕ್ಕೆ ಮನ್ನಿಸುವಂತೆ ಕೋರಿ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದೆ. ನನ್ನ ಒತ್ತಾಯದಿಂದಾಗಿ ಕಡತ ಕಣ್ಮರೆ ಮತ್ತು ಮಾಹಿತಿ ಹಕ್ಕು ಆಯೋಗದಿಂದ ನೋಟೀಸು ಬರಲು ಕಾರಣನಾದ ಆರೋಪಗಳ ಕುರಿತು ಇಲಾಖಾ ವಿಚಾರಣೆಗೆ ಆದೇಶವಾಗಿ, ಪಕ್ಕದ ತಾಲ್ಲೂಕಿನ ತಹಸೀಲ್ದಾರರನ್ನು ವಿಚಾರಣಾಧಿಕಾರಿಯಾಗಿ ಮತ್ತು ಅದೇ ಕಛೇರಿಯ ಶಿರಸ್ತೇದಾರರನ್ನು ಮಂಡನಾಧಿಕಾರಿಯಾಗಿ ನೇಮಿಸಿದ್ದರು. ಅಪರ ಜಿಲ್ಲಾಧಿಕಾರಿಯವರು 'ಹೋಗಲಿ, ಬಿಟ್ಟುಬಿಡು' ಎಂದು ನನಗೆ ಹೇಳಿದ್ದಾಗಲೇ ವಿಚಾರಣೆ ಹೇಗಾಗಬಹುದೆಂದು ನನಗೆ ಗೊತ್ತಾಗಿತ್ತು. ವಿಚಾರಣಾಧಿಕಾರಿಯವರು ಈಚೆಗೆ ತಹಸೀಲ್ದಾರರಾಗಿ ಬಡ್ತಿ ಹೊಂದಿದವರಾಗಿದ್ದು ಆರೋಪಿ ನೌಕರರ ಸ್ನೇಹಿತರಾಗಿದ್ದರು. ಇನ್ನು ಮಂಡನಾಧಿಕಾರಿಯೂ ಆತನಿಗೆ ಪರಮಾಪ್ತ ಸ್ನೇಹಿತನಾಗಿದ್ದ. ಆ ಮಂಡನಾಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದವನಾಗಿದ್ದು, ಆ ಕುರಿತು ವಿಚಾರಣೆ ಇನ್ನೂ ನಡೆಯುತ್ತಿತ್ತು. ಆ ಸಮಯದಲ್ಲಿ ನಾನು ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಪಡೆದೆ. ನಿವೃತ್ತನಾಗಿದ್ದರೂ, ವಿಚಾರಣೆ ಸಮಯದಲ್ಲಿ ಹಾಜರಾಗಿ ಸಾಕ್ಷ್ಯ ಹೇಳಿದೆ. ಮಂಡನಾಧಿಕಾರಿ ಪೂರಕ ದಾಖಲೆಗಳನ್ನು ವಿಚಾರಣೆ ಕಾಲದಲ್ಲಿ ಹಾಜರು ಪಡಿಸಿ ಗುರುತು ಮಾಡಿಸಲಿಲ್ಲ. ಅಲ್ಲೂ 'ಮ್ಯಾಚ್ ಫಿಕ್ಸ್' ಆಗಿತ್ತು. ಸಹಜವಾಗಿ ಆರೋಪಗಳು ಸಾಬೀತಾಗಲಿಲ್ಲವೆಂದು ವಿಚಾರಣಾಧಿಕಾರಿ ವರದಿ ಕೊಟ್ಟರು. ಆ ರೆವಿನ್ಯೂ ಇನ್ಸ್ ಪೆಕ್ಟರ್ ಶಿರಸ್ತೇದಾರನಾಗಿ ಬಡ್ತಿ ಹೊಂದಿದ.
ಏನು ಮಾಡಬಹುದು?
೧. ಇಲಾಖಾ ವಿಚಾರಣೆಗಳನ್ನು ನಡೆಸುವ ಸಲುವಾಗಿಯೇ ಪ್ರತ್ಯೇಕ ವಿಭಾಗ ತೆರೆದು, ಅಲ್ಲಿ ಸೇವಾ ನಿಯಮಗಳು, ಕಾಯದೆಗಳ ಅರಿವು ಇರುವವರು ಮಾತ್ರ ಇರಬೇಕು. ನಿಷ್ಪಕ್ಷಪಾತಿಗಳು ಮತ್ತು ಪ್ರಾಮಾಣಿಕರೆಂದು ಗುರುತಿಸಲ್ಪಟ್ಟವರನ್ನು ಅಲ್ಲಿ ನೇಮಕವಾಗುವಂತೆ ನೋಡಿಕೊಂಡರೆ ಉತ್ತಮ.
೨. ಆರೋಪ ಪಟ್ಟಿಗಳನ್ನು ಲೋಪಗಳಿಲ್ಲದಂತೆ ಸಿದ್ಧಪಡಿಸಬೇಕು. ಪೂರಕ ದಾಖಲೆ ಮತ್ತು ಸಾಕ್ಷ್ಯಗಳ ವಿವರವಿರುವಂತೆ ನೋಡಿಕೊಳ್ಳಬೇಕು. ನ್ಯೂನತೆಗಳಿಗೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು.
೩. ರಾಜಕೀಯ ಮತ್ತು ಇತರರ ಹಸ್ತಕ್ಷೇಪಗಳು ಶಿಕ್ಷಾರ್ಹ ಅಪರಾಧಗಳಾಗಬೇಕು.
೪. ಸ್ವತಃ ಇಲಾಖಾ ವಿಚಾರಣೆಗಳನ್ನಾಗಲೀ, ಇನ್ನಿತರ ವಿಚಾರಣೆಗಳನ್ನಾಗಲೀ ಎದುರಿಸುತ್ತಿರುವವರನ್ನು ವಿಚಾರಣಾಧಿಕಾರಿ ಅಥವ ಮಂಡನಾಧಿಕಾರಿಯಾಗಿ ನೇಮಿಸಬಾರದು.
೫. ವಿಚಾರಣೆ ಅಸಮರ್ಪಕವಾಗಿ ನಡೆದುದು ತಿಳಿದರೆ, ಪುನರ್ವಿಚಾರಣೆಗೆ ಆದೇಶಿಸುವುದಲ್ಲದೆ, ಪುನರ್ವಿಚಾರಣೆಯಲ್ಲಿ ಅಸಮರ್ಪಕ ವಿಚಾರಣೆ ನಡೆದುದು ಖಚಿತವಾದರೆ, ಅದಕ್ಕೆ ಕಾರಣರಾದವರಿಗೆ ದಂಡ ವಿಧಿಸಲು ಅವಕಾಶವಿರಬೇಕು.
೬. ಇಲಾಖಾ ವಿಚಾರಣೆಗಳ ಕುರಿತು ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ಎಲ್ಲಾ ಕಛೇರಿ ಮುಖ್ಯಸ್ಥರುಗಳಿಗೆ ಮತ್ತು ಹಿರಿಯ ನೌಕರರುಗಳಿಗೆ ನೀಡುತ್ತಿರಬೇಕು.
     ಒಟ್ಟಾರೆಯಾಗಿ ಹೇಳಬೇಕೆಂದರೆ, ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮೇಲಾಧಿಕಾರಿಗಳ, ಆಡಳಿತದ ಮುಖ್ಯಸ್ಥರುಗಳ, ನಮ್ಮನ್ನಾಳುವವರ ಮನೋಭಾವದಲ್ಲಿ ಬದಲಾವಣೆಯಾಗದಿದ್ದರೆ ಎಲ್ಲವೂ ವ್ಯರ್ಥವಾಗುತ್ತವೆ. ಯಾವುದೇ ಸುಧಾರಣೆ ಮೇಲಿನಿಂದ ಬರಬೇಕು. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಉನ್ನತ ಸ್ಥಾನಗಳಲ್ಲಿರುವವರು ಭ್ರಷ್ಟಾತಿಭ್ರಷ್ಟರಾಗಿದ್ದು ಇತರರನ್ನು, ಕೆಳಗಿನವರನ್ನು ಮಾತ್ರ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತೋಳಗಳು ಕುರಿಗಳನ್ನು ಕಾಯುತ್ತಿವೆ. ಕುರಿಗಳು ಕುರಿಗಳಾಗೇ ಉಳಿದರೆ ತೋಳಗಳ ರಾಜ್ಯಭಾರಕ್ಕೆ ಅಡ್ಡಿಯೆಲ್ಲಿಯದು?

ಬುಧವಾರ, ಜುಲೈ 3, 2013

ಅಪ್ಪ - ಮಗ - ಮೊಮ್ಮಗ


     ಅದೊಂದು ವಿಶಿಷ್ಟ ಸಂದರ್ಭ. ದಿನಾಂಕ 28-12-2008ರಂದು ಬೆಂಗಳೂರಿನಲ್ಲಿ ನಡೆದ ಕವಿ ಕುಟುಂಬಗಳ ಮತ್ತು ಬಂಧು-ಬಳಗದವರ ಸಮಾವೇಶದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯನವರ ವ್ಯಕ್ತಿತ್ವ ಪರಿಚಯಿಸುವ ಕೃತಿ 'ಕವಿ ಸುಬ್ರಹ್ಮಣ್ಯಯ್ಯ' ಅನ್ನು ಮೊಮ್ಮಗ ಕವಿನಾಗರಾಜ್ ರಚಿಸಿದ್ದು, ಅದನ್ನು ಬಿಡುಗಡೆ ಮಾಡಿದ್ದು ಕವಿ ಸುಬ್ರಹ್ಮಣ್ಯಯ್ಯನವರ ಮಗ ದಿ. ಕವಿ ವೆಂಕಟಸುಬ್ಬರಾಯರು.ದ್ವನಿವರ್ಧಕದ ಸಮಸ್ಯೆಯಿಂದ ಅವರ ಮಾತುಗಳು ಸ್ಪಷ್ಟವಾಗಿ ಕೇಳದಿದ್ದರೂ ಇದೊಂದು ಅಪರೂಪದ ವಿಡಿಯೋ ಆಗಿ ಉಳಿದಿರುವುದು ವಿಶೇಷ. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ್ದ ಅವರು ತಮ್ಮ ತಂದೆಯ ಬಗ್ಗೆ ನೆನಪಿಸಿಕೊಂಡಿದ್ದಲ್ಲದೆ, ಮಕ್ಕಳು, ಮೊಮ್ಮಕ್ಕಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅವರ ಭಾಷಣದ ಒಂದು ತುಣುಕು ಇದು.