ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮೇ 12, 2010

ಮೂಢ ಉವಾಚ - 8















                 
                             ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||


                   ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ|
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ||


                   ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ||


                   ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು|
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ||
************

   -ಕ.ವೆಂ.ನಾಗರಾಜ್

ಮೂಢ ಉವಾಚ - 7


               ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ|
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ||

               ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ|
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ||

               ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ|
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ||

               ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು|
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ||
               
                             -ಕ.ವೆಂ.ನಾಗರಾಜ್.

ಮಂಗಳವಾರ, ಮೇ 11, 2010

ರಂಗ


ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ|
ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲ ಕಾಣಮ್ಮಾ||


ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು|
ಹೋದ್ರೆ ಹೋಗ್ಲಿ ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಧರ್ಮ||   ||ರಂಗಾ||


ಮನೆ ಮಂದಾಳ ಬಿಟ್ ಹೋಯ್ತು ನಿನ್ ನೌಕ್ರಿಗ್ ಪಾಡಾಯ್ತು|
ಹೋದ್ರೆ ಹೋಯ್ತು ಬಿಡಮ್ಮಾ ಮಕ್ಳಿಗ್ ಮಾಡೋದ್ ನಿಮ್ ಕರ್ಮ|| ||ರಂಗಾ||


ಅಪ್ಪಂಗ್ ಸೀರಿಯಸ್ ಕಾಣಪ್ಪಾ ಬೇಗ್ ಬಾರೋ ನನ್ ಮಗನೇ|
ಆಸ್ಪತ್ರೆಗ್ ಕರಕೊಂಡ್ ಹೋಗಮ್ಮಾ ದುಡ್ಡೆಷ್ಟ್ ಬೇಕು ಹೇಳಮ್ಮಾ||  ||ರಂಗಾ||


ಅಪ್ಪ ಕೈಬಿಟ್ರು ಕಾಣಪ್ಪಾ ಗತಿ ಕಾಣಿಸು ಬಾರಪ್ಪಾ|
ಸತ್ಮೇಲಿನ್ನೇನ್ ಬಿಡಮ್ಮಾ ಮಣ್ ಮಾಡಿ ಮುಗಿಸಮ್ಮಾ||                ||ರಂಗಾ||


                                                                -ಕ.ವೆಂ. ನಾಗರಾಜ್

ಮೂಢ ಉವಾಚ -6

                        ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ|
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ||

                  ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನಬೇಡ ನಿನ್ನದೆನೆಬೇಡ
ಜಗವೃಕ್ಷರಸ ಹರಿವ ಕೊಂಬೆ ನೀನು ಮೂಢ||

                  ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು|
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ||

                   ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು|
ಒಳಿತು ಮಾಡದ ಕೆಡಕು ಎಣಿಸಲರಿಯರಿಹರ|
ಇವರೊಳು ನೀಯಾರು ನಾಯಾರು ಹೇಳು ಮೂಢ||
-ಕ.ವೆಂ.ನಾಗರಾಜ್.

ಭಾನುವಾರ, ಮೇ 9, 2010

ಏನಂತೆ? ? . . . .! !

                ಏನಂತೆ?  ? .  . .! !


ಏನಂತೆ? ಸೋತರೇನಂತೆ?
              ಸೋಲೆಂಬುದೇನೆಂದು ತಿಳಿಯಿತಂತೆ!
              ಗೆಲುವಿನ ದಾರಿಯದು ಕಂಡಿತಂತೆ!!


ಏನಂತೆ? ಬಿದ್ದರೇನಂತೆ?
              ನೋವೆಂಬುದೇನೆಂದು ತಿಳಿಯಿತಂತೆ!
              ನೋಡಿ ನಡೆಯಲು ಕಲಿತೆನಂತೆ!!


ಏನಂತೆ? ಹಸಿವಾದರೇನಂತೆ?
              ದುಡಿದು ಉಣ್ಣಲು ಮಾರ್ಗವಂತೆ!
              ಹಳಸಿದ ಅನ್ನವೂ ರುಚಿಯಂತೆ!!


ಏನಂತೆ? ದುಃಖವಾದರೇನಂತೆ?
              ಸಂತೋಷದ ದಾರಿ ಸಿಕ್ಕಿತಂತೆ!
              ಸುಖವೆಂಬುದೊಳಗೇ ಇದೆಯಂತೆ!!


ಏನಂತೆ? ತಪ್ಪಾದರೇನಂತೆ?
              ನಡೆ ತಿದ್ದಿ ಸಾಗುವ ಮನಸಂತೆ!
              ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
              ನಿಂದಕರ ಬಾಯಿ ಹೊಲಸಂತೆ!
              ನಾನಾರೆಂದು ನನಗೆ ತಿಳಿಯಿತಂತೆ!!


ಏನಂತೆ? ಸೂರಿಲ್ಲದಿರೇನಂತೆ?
              ಲೋಕವೆ ನನ್ನ ಮನೆಯಂತೆ!
              ಬಹು ದೊಡ್ಡ ಮನೆಯೇ ನನ್ನದಂತೆ!!


ಏನಂತೆ? ದಿಕ್ಕಿಲ್ಲದಿರೇನಂತೆ?
             ಜನರೆಲ್ಲ ನನ್ನ ಬಂಧುಗಳಂತೆ!
             ಬಲು ದೊಡ್ಡ ಸಂಸಾರ ನನ್ನದಂತೆ!!


                     ?   ?    !    !
-ಕ.ವೆಂ.ನಾಗರಾಜ್.

ರಾಯರ ಊರುಗೋಲು

ರಾಯರ ಊರುಗೋಲು
     ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುವಾಗ ರಸ್ತೆಯಲ್ಲಿ ಎಡವಿ ಬಿದ್ದರು. ಸಣ್ಣ ಪುಟ್ಟ ತರಚಿದ ಗಾಯಗಳಾದವು. ಅವರು ಹಿಡಿದಿದ್ದ ಊರುಗೋಲಿನ ಹಿಡಿಕೆ ಮುರಿದುಹೋಯಿತು.ಬಿದ್ದ ಪೆಟ್ಟಿಗಿಂತ ಮುರಿದ ಊರುಗೋಲಿನ ಚಿಂತೆ ಅವರಿಗೆ ಜಾಸ್ತಿಯಾಯಿತು. ಕೆಲವು ವರ್ಷಗಳ ಹಿಂದೆ ನಡೆದಾಡುವಾಗ ತಡವರಿಸುತ್ತಿದ್ದುದನ್ನು ಕಂಡ ಅವರ ಮಗ ಕೊಡಿಸಿದ್ದ ಊರುಗೋಲು ಅವರಿಗೆ ಮೆಚ್ಚುಗೆಯಾಗಿತ್ತು. ಎಲ್ಲಿ ಹೋಗುವಾಗಲೂ ಅದನ್ನು ಬಿಡುತ್ತಿರಲಿಲ್ಲ. ಅದರ ಮೇಲೆ ಮೋಹವಿತ್ತಲ್ಲದೆ ಅವಲಂಬಿತರೂ ಆಗಿದ್ದರು. ಅದನ್ನು ರಿಪೇರಿ ಮಾಡಿಸಲು ಬಡಗಿಯನ್ನು ಹುಡುಕಿಕೊಂಡು ಹೋದ ಅವರಿಗೆ ಸಮೀಪದ ಹೊಸಮನೆಯಲ್ಲಿ ಮರಗೆಲಸ ಮಾಡುತ್ತಿದ್ದ ಬಡಗಿ ಕಂಡು ಅವನನ್ನು ವಿಚಾರಿಸಿದರು.
ರಾಯರು: ಈ ಕೋಲನ್ನು ರಿಪೇರಿ ಮಾಡಿಕೊಡುತ್ತೀಯೇನಪ್ಪಾ?
ಬಡಗಿ:      ಆಗಲಿ. ನಾಳೆ ಮಾಡಿಕೊಡುತ್ತೇನೆ.
ರಾಯರು: ಈಗಲೇ ಮಾಡಿಕೊಟ್ಟರೆ ಒಳ್ಳೆಯದು. ಇದೇ ನನ್ನ ಕಾಲು. ಎಷ್ಟು ಕೊಡಬೇಕು?
ಬಡಗಿ:     ಇಪ್ಪತ್ತೈದು ರೂಪಾಯಿ ಆಗುತ್ತೆ. ರಿವೆಟ್ ಹಾಕಬೇಕು. ಗಮ್ ಹಾಕಿ ಸರಿಯಾಗಿ ಕೂಡಿಸಬೇಕು. ಬಹಳ ಕೆಲಸವಿದೆ.
ರಾಯರು: ಇಪ್ಪತ್ತು ರೂಪಾಯಿ ಕೊಡುತ್ತೇನೆ. ಸರಿಯಾಗಿ ಮಾಡಿಕೊಡಪ್ಪಾ.
      ಇವರ ಸಂಭಾಷಣೆಯನ್ನು ಗಮನಿಸುತ್ತಿದ್ದ ಮನೆಯ ಮಾಲಿಕರು ಬಡಗಿಗೆ ಊರುಗೋಲು ರಿಪೇರಿ ಮೊದಲು ಮಾಡಿಕೊಡಲು ತಿಳಿಸಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟು ನೀರು ಬೇಕೇ ಎಂದು ಕೇಳಿದರು. ಮನೆಯಾಕೆಗೆ ಹೇಳಿ ಕಾಫಿ ಮಾಡಿಸಿಕೊಟ್ಟರು. ಮೈ ಕೈ ನೋವಿದ್ದ ರಾಯರಿಗೆ ಕಾಫಿ ಹಿತವಾಗಿತ್ತು. ಬಡಗಿಗೂ ಏನನ್ನಿಸಿತೋ ಬಹಳ ಮುತುವರ್ಜಿಯಿಂದ ರಿಪೇರಿ ಮಾಡಿಕೊಟ್ಟ. ರಾಯರು ಹಣ ಕೊಡಲು ಹೋದರೆ ಆತ ಬೇಡವೆಂದ. ಆಗ ನಡೆದ ಸಂಭಾಷಣೆ:
ರಾಯರು: ಏಕಪ್ಪಾ? ಸಾಲಲಿಲ್ಲವೇ? ಇಪ್ಪತ್ತೈದು ರೂಪಾಯಿಯನ್ನೇ ತೊಗೋ.
ಬಡಗಿ:      ಬೇಡ ಸಾರ್. ನನಗೂ ವಯಸ್ಸಾದ ತಂದೆಯಿದ್ದಾರೆ. ನಿಮ್ಮಿಂದ ಈ ಕೆಲಸಕ್ಕೆ ದುಡ್ಡು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸಿ ಸಾರ್. ಅಷ್ಟು ಸಾಕು.
ರಾಯರು: ಹಣ ಕೊಡದಿರಲು ನನಗೂ ಸರಿಯಾಗುವುದಿಲ್ಲ. ಹೋಗಲಿ, ಹತ್ತು ರೂಪಾಯಿಯಾದರೂ ತೆಗೆದುಕೋ.
      ಹತ್ತು ರೂಪಾಯಿಯನ್ನು ಕೊಟ್ಟು ಬಡಗಿಗೆ, ಮನೆಮಾಲಿಕರಿಗೆ ಧನ್ಯವಾದ ಹೇಳಿ ಕೋಲನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾ ರಾಯರು ಮನೆಗೆ ವಾಪಸಾದರು.
                                                                                                                    -  ಕ.ವೆಂ. ನಾಗರಾಜ್.
(ಲೇಖಕನ ಸ್ವಗತ: ಆ ಬಡಗಿಯ, ಹೊಸಮನೆ ಮಾಲಿಕನಲ್ಲಿನ ಹಿರಿಯರನ್ನು, ವಯಸ್ಸಾದವರನ್ನು ಗೌರವಿಸುವ ಮನೋಭಾವ ಎಲ್ಲರಿಗೂ ಬಂದರೆ ಎಷ್ಟು ಚೆನ್ನ!) 

ಶನಿವಾರ, ಮೇ 8, 2010

ಪಿಕಳಾರನ ಸಂಸಾರ

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||

ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು ||

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ |
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||
****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                                                                                      ಚಿತ್ರಗಳು: ಬಿ.ಎಸ್.ಆರ್. ದೀಪಕ್.)




 











ಶುಕ್ರವಾರ, ಮೇ 7, 2010

ಸ್ವಾರ್ಥ


         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು||

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ
ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ||


ನಗುವು ಬಂದೀತೆಂದು ಹಲ್ಲ ಮುರಿದಿತ್ತು
ಓಡಿ ಹೋದಾರೆಂದು ಕಾಲ ತುಂಡರಿಸಿತ್ತು.
ಬೇಡವೆಂದವರ ಕೈಯನೇ ಕಡಿದಿತ್ತು||

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನೆ ಸೀಳಿ ಗಹಗಹಿಸಿ ನಕ್ಕಿತ್ತು||

ಸಾಕ್ಷಿಯಾದವರ ನಾಲಗೆಯ ನುಂಗಿತ್ತು
ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು||
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]
21-04-2013ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟವಾಗಿದೆ.