ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 24, 2014

ಉಪ್ಪು ತಿಂದ ಮೇಲೆ . . . 3/3

 ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .2/3
ಮುಂದೆ:
   ಸಲೀಮನ ಹೆಂಡತಿ ಶಾಕಿರಾಬಾನು ಕಿರಣನಿಗೆ ಫೋನು ಮಾಡಿದ್ದಳು, "ಭಯ್ಯಾ, ಸಲೀಂ ಎಲ್ಲಿದಾರೆ? ಎರಡು ದಿನದಿಂದಾ ಫೋನು ಮಾಡಿಲ್ಲ. ಅವರ ಫೋನು ಸ್ವಿಚಾಫ್ ಆಗಿದೆ. ನಿಮಗೇನಾದರೂ ಗೊತ್ತಾ?" ಕಿರಣ, "ನಾನು ಮೊನ್ನೇನೇ ವಾಪಸು ಬಂದೆ. ಅವನು ಇನ್ನೂ ಏನೋ ಕೆಲಸ ಇದೆ. ಬರೋದು ಒಂದು ವಾರ ಆಗುತ್ತೆ ಅಂತ ಹೇಳಿದ್ದ. ಅದಕ್ಕೇ ನಾನು ಬಸ್ಸಿನಲ್ಲಿ ವಾಪಸ್ಸು ಬಂದುಬಿಟ್ಟೆ" ಅಂದ. ಆಕೆ, "ಅವರು ಬರೋದು ಎಷ್ಟು ದಿನ ಆದರೂ ದಿನಕ್ಕೆ ಎರಡು ಮೂರು ಸಲ ನನಗೆ ಫೋನು ಮಾಡುತ್ತಾರೆ. ಈಸಲ ಮಾಡಲಿಲ್ಲವಲ್ಲಾ, ಅದಕ್ಕೇ ಗಾಬರಿ ಆಗಿದೆ". "ಅವನದು ಎಂಥದೋ ಚೀಟಿ ವ್ಯವಹಾರ ಅಂತೆ. ತಲೆ ಕೆಡಿಸಿಕೊಂಡಿದ್ದ. ಅದಕ್ಕೇ ಫೋನು ಮಾಡಿಲ್ಲವೇನೋ. ನೀವು ಗಾಬರಿ ಮಾಡಿಕೊಳ್ಳಬೇಡಿ. ಫೋನು ಮಾಡ್ತಾನೆ ಬಿಡಿ" ಎಂದು ಸಮಾಧಾನ ಮಾಡಿದ.
     ಇದಾಗಿ ಎರಡು ದಿನಗಳು ಕಳೆದಿದ್ದವು. ಅಂದು ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಕಿರಣನ ಮನೆಯ ಮುಂದೆ ನಿಂತಿತ್ತು. 'ಕಿರಣ್ ಇದ್ದಾರಾ?' ಎಂದು ಕೇಳಿ ಬಾಗಿಲು ಬಡಿದವರಿಗೆ ಕಿರಣನೇ ಬಾಗಿಲು ತೆಗೆದ. ದಫೇದಾರ, "ಸಾಹೇಬ್ರು ಕರಿತಿದಾರೆ. ಬರಬೇಕಂತೆ" ಎಂದದ್ದಕ್ಕೆ ಕಾರಣ ವಿಚಾರಿಸಿದಾಗ, 'ನಂಗೊತ್ತಿಲ್ಲ' ಎಂಬ ಉತ್ತರ ಬಂತು. ಬೆಳಿಗ್ಗೆ ಬರುತ್ತೇನೆಂದರೂ ಕೇಳದೆ, "ಒಂದೈದು ನಿಮಿಷದ ಕೆಲಸ. ಏನೋ ಕೇಳಬೇಕಂತೆ. ಬಂದು ಹೋಗಿ ಸಾರ್" ಎಂದು ಬಲವಂತದಿಂದ ಕಿರಣನನ್ನು ಜೀಪಿನಲ್ಲಿ ಕೂರಿಸಿಕೊಂಡರು. ಪೋಲಿಸ್ ಠಾಣೆ ತಲುಪುತ್ತಿದ್ದಂತೆಯೇ ಅವರ ವರಸೆಯೇ ಬದಲಾಯಿತು. ಬನ್ನಿ ಸಾರ್, ಹೋಗಿ ಸಾರ್ ಅನ್ನುತ್ತಿದ್ದ ದಫೇದಾರ, ಕಿರಣನನ್ನು ಕತ್ತು ಹಿಡಿದು ಠಾಣೆಯ ಒಳಕ್ಕೆ ದೂಡಿದ ರಭಸಕ್ಕೆ ಅವನು ಗೋಡೆಗೆ ಡಿಕ್ಕಿ ಹೊಡೆದು ಬಿದ್ದಿದ್ದ. ಏನಾಗುತ್ತಿದೆ ಎಂದು ತಿಳಿಯದೆ ಅವನು ಕಕ್ಕಾಬಿಕ್ಕಿಯಾಗಿದ್ದಾಗಲೇ ಇನ್ನೊಬ್ಬ ಪೇದೆ ಜಾಡಿಸಿ ಅವನ ಬೆನ್ನಿಗೆ ಒದ್ದಿದ್ದ. ಸಬ್ಬಿನಿಸ್ಪೆಕ್ಟರ್ ರೌಂಡ್ಸಿಗೆ ಹೋಗಿದ್ದವರು ಇನ್ನೂ ಬಂದಿರದಿದ್ದರಿಂದ ಅವನನ್ನು ಸೆಲ್ಲಿನೊಳಗೆ ದೂಡಿ ಬೀಗ ಹಾಕಿದರು. ಕಿರಣನಿಗೆ ಏನೋ ಎಡವಟ್ಟಾಗಿದೆ, ತಾನು ಮಾಡಿದ ಕೆಲಸದ ಸುಳಿವು ಅವರಿಗೆ ಸಿಕ್ಕಿರಬಹುದೆಂದು ಅಂದುಕೊಂಡು ಗಾಬರಿಯಾಗಿ ಮುದುರಿ ಕುಳಿತು ಏನು ಹೇಳಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ.
     'ಆ ಬದ್ಮಾಶ್ ಇದ್ದನೇನ್ರೋ?' ಎನ್ನುತ್ತಲೇ ಒಳಬಂದಿದ್ದ ಸಬ್ಬಿನಿಸ್ಪೆಕ್ಟರರ ಧ್ವನಿ ಕೇಳಿಯೇ ಕಿರಣ ನಡುಗಿಬಿಟ್ಟಿದ್ದ. 'ಇನ್ನು ನನ್ನ ಕಥೆ ಮುಗಿಯಿತು' ಎಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದ, 'ಈ ಕುತ್ತಿನಿಂದ ಒಮ್ಮೆ ಹೊರಬಂದರೆ ಸಾಕು. ನಾನು ಇನ್ನು ಮುಂದೆ ಯಾವ ತಪ್ಪೂ ಮಾಡುವುದಿಲ್ಲ, ದೇವರೇ ಕಾಪಾಡು'. ಪಿ.ಸಿ. ಒಬ್ಬ ಸೆಲ್ಲಿನೊಳಗಿಂದ ಕಿರಣನ ಕುತ್ತಿಗೆ ಪಟ್ಟಿ ಹಿಡಿದು ದರದರ ಎಳೆದುತಂದು ನಿಲ್ಲಿಸಿದ. ತಲೆ ತಗ್ಗಿಸಿ ನಿಂತಿದ್ದ ಕಿರಣನ ಗದ್ದವನ್ನು ಲಾಠಿಯಿಂದ ಮೇಲಕ್ಕೆತ್ತುತ್ತಾ ಸಬ್ಬಿನಿಸ್ಪೆಕ್ಟರ್ ಗದರಿಸಿದ:
"ಮಗನೇ, ಸಲೀಮನಿಗೆ ಏನು ಮಾಡಿದೆ ಹೇಳು. ನಾನು ಬಾಯಿ ಬಿಡಿಸೋ ಮುಂಚೆಯೇ ನೀನೇ ಬಾಯಿ ಬಿಟ್ಟರೆ ಬದುಕಿಕೊಳ್ತೀಯ. ಬೊಗಳು."
"ಸಾರ್, ನಾನೇನೂ ಮಾಡಿಲ್ಲ ಸಾರ್. ಭಾನುವಾರ ನಾನೂ, ಸಲೀಂ ಬೆಂಗಳೂರಿಗೆ ಹೋಗಿದ್ದೆವು. ಅವತ್ತು ಸಂಜೆಗೇ ನಾನು ವಾಪಸು ಬಂದೆ. ಅವನು ಎಂಥದೋ ಚೀಟಿ ವ್ಯವಹಾರ ಅಂತ ಇನ್ನೂ ಒಂದು ವಾರ ಇರ್ತೀನಿ ಅಂತ ಹೇಳಿದ್ದ. ಅಷ್ಟೇ ನನಗೆ ಗೊತ್ತಿರೋದು ಸಾರ್."
     ರಪ್ಪನೆ ಬೀಸಿದ ಲಾಠಿಯಿಂದ ಬಿದ್ದ ಪೆಟ್ಟಿನಿಂದ ಅವನ ಎಡತೋಳು ಮುರಿದೇಹೋಯಿತು ಎನ್ನುವಂತೆ ಆಗಿ ನೋವಿನಿಂದ ಚೀರುತ್ತಾ ಕಿರಣ ಹೇಳಿದ,
"ಪ್ಲೀಸ್ ಹೊಡೀಬೇಡಿ ಸಾರ್. ನಾನು ಹೇಳ್ತಾ ಇರೋದು ನಿಜಾ ಸಾರ್".
"ಬೆಂಗಳೂರಿಗೆ ಎಷ್ಟು ಹೊತ್ತಿಗೆ ಹೋದಿರಿ? ಏನೇನು ಮಾಡಿದಿರಿ?"
"ಸಾರ್, ಬೆಳಿಗ್ಗೆ ಹತ್ತು ಅಥವ ಹತ್ತೂವರೆ ಹೊತ್ತಿಗೆ ಅಲ್ಲಿದ್ದಿವಿ ಸಾರ್. ಒಟ್ಟಿಗೇ ತಿಂಡಿ ತಿಂದೆವು. ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿ ಮಧ್ಯಾಹ್ನ ಸಿಗ್ತೀನಿ ಅಂತ ಹೇಳಿ ಹೋದವನು, ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಹೋಟೆಲ್ ರೂಮ್ ಹತ್ತಿರ ಬಂದೆ. ಅವನು ಮಲಗಿದ್ದ. ಸ್ವಲ್ಪ ಹೊತ್ತು ಮಾತನಾಡುತ್ತಿದ್ದು, ಅವನಿಗೆ ಹೇಳಿ ನಾನು ವಾಪಸು ಬಂದೆ. ಇಷ್ಟೇ ಸಾರ್ ನಡೆದಿದ್ದು. ನಿಮ್ಮಾಣೆ ನಿಜ ಸಾರ್."
"ನನ್ನಾಣೆ ಅಂತೀಯಾ" ಅನ್ನುತ್ತಾ ಬಿದ್ದ ಬಲವಾದ ಮತ್ತೊಂದು ಲಾಠಿ ಏಟಿನ ಪೆಟ್ಟಿಗೆ ಅಳುತ್ತಾ ಕುಕ್ಕರಿಸಿದ ಕಿರಣ.
"ಹೋಟೆಲ್ ರೂಮ್ ಬುಕ್ ಮಾಡಿದ್ದವರು ಯಾರು?"
"ಸಲೀಮನೇ ಬುಕ್ ಮಾಡಿದ್ದ ಸಾರ್. ಅವನು ಇನ್ನೂ ಕೆಲವು ದಿವಸ ಅಲ್ಲೇ ಇರುತ್ತಿದ್ದನಲ್ಲಾ, ಅದಕ್ಕೆ."
"ಸಲೀಮ ಅಲ್ಲ, ಬುಕ್ ಮಾಡಿದ್ದು ನೀನು. ಅದು ಸರಿ ರಮೇಶ ಅಂತ ಸುಳ್ಳು ಹೆಸರಿನಲ್ಲಿ ಏಕೆ ಬುಕ್ ಮಾಡಿದ್ದೆ?"
"ನಾನು ಮಾಡಿಲ್ಲ ಸಾರ್. ಸಲೀಮನೇ ಮಾಡಿದಾನೆ. ಯಾಕೆ ಬೇರೆ ಹೆಸರಿನಲ್ಲಿ ಬುಕ್ ಮಾಡಿದ ಅಂತ ಅವನನ್ನೇ ಕೇಳಬೇಕು, ಸಾರ್."
     ಇದನ್ನು ಕೇಳಿದ ಸಬ್ಬಿನಿಸ್ಪೆಕ್ಟರ್ ಎದ್ದು ಬಂದವರೇ ರಪರಪನೆ ಕಿರಣನಿಗೆ ಬಾರಿಸತೊಡಗಿದರು. "ಬದ್ಮಾಶ್, ನೀನು ಸುಲಭಕ್ಕೆ ಬಾಯಿ ಬಿಡಲ್ಲ. ನಿನಗೆ ಹೇಗೆ ಬಾಯಿ ಬಿಡಿಸಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ. ರಮೇಶ ಅನ್ನೋ ಹೆಸರಿನಲ್ಲಿ ರೂಮು ಬುಕ್ ಮಾಡಿದರೂ ರಿಜಿಸ್ಟರಿನಲ್ಲಿ ಸೈನು ಮಾಡುವಾಗ ಕಿರಣ ಅಂತ ಮರೆತು ಸೈನು ಮಾಡಿದಾಗಲೇ ನೀನು ಸಿಕ್ಕಿಬಿದ್ದೆ ಬಿಡು" ಎಂದಾಗ ಕಿರಣನ ಜಂಘಾಬಲ ಉಡುಗಿಹೋಯಿತು. 'ಬೆಳಿಗ್ಗೆ ಹೊತ್ತಿಗೆ ಎಲ್ಲಾ ಸರಿಯಾಗಿ ಹೇಳಿಬಿಡು. ನಿನ್ನಪ್ಪನ್ನ ಕೊಂದ ಪಾಪೀನೂ ನೀನೇ ಅನ್ನೋದಕ್ಕೂ ನಮಗೆ ಸಾಕ್ಷಿ ಸಿಕ್ಕಿದೆ' ಎಂಬ ಮಾತಂತೂ ಅವನನ್ನು ಪಾತಾಳಕ್ಕೆ ದೂಡಿಬಿಟ್ಟಿತ್ತು.
     ಬಿದ್ದ ಪೆಟ್ಟಿನ ನೋವುಗಳಿಂದ ರಾತ್ರಿಯೆಲ್ಲಾ ನರಳುತ್ತಾ ಇದ್ದ ಕಿರಣನಿಗೆ ನರಕದರ್ಶನವಾದಂತಾಗಿತ್ತು. ಮೈಮೇಲೆ ಅಂಡರ್ ವೇರ್ ಬಿಟ್ಟರೆ ಬೇರೆ ಬಟ್ಟೆ ಉಳಿಸಿರಲಿಲ್ಲ. ಮರುದಿನ ಬೆಳಿಗ್ಗೆ ಎಂಟು ಗಂಟೆಯ ವೇಳೆಗೇ ಸಬ್ಬಿನಿಸ್ಪೆಕ್ಟರರ ಆಗಮನವಾಯಿತು. ಕಾಲಿನ ಪಾದದ ಗೆಣ್ಣುಗಳ ಮೇಲೆ ಹೊಡೆದಿದ್ದರಿಂದ ಪಾದ ಊರಿದರೇ ಪ್ರಾಣ ಹೋಗುವಂತಾಗಿದ್ದ ಕಿರಣನನ್ನು ತಂದು ಅವರ ಮುಂದೆ ನಿಲ್ಲಿಸಿದ್ದರು. ಅಲ್ಲೇ ಬೆಂಚಿನ ಮೇಲೆ ಕುಳಿತಿದ್ದ ಶಾಕಿರಾಬಾನು ಕಿರಣನನ್ನು ಕಂಡವಳೇ ರೋಷದಿಂದ ಚಪ್ಪಲಿಯಿಂದ ಹೊಡೆಯಲು ಧಾವಿಸುತ್ತಿದ್ದಂತೆಯೇ ಇಬ್ಬರು ಮಹಿಳಾ ಪೋಲಿಸರು ಆಕೆಯನ್ನು ತಡೆದು ಕೂರಿಸಿದ್ದರು. ಶಾಕಿರಾಬಾನು ಎಲ್ಲವನ್ನೂ ಹೇಳಿಬಿಟ್ಟಳು. 'ಅಪ್ಪನನ್ನೇ ಕೊಂದ ಹರಾಮಕೋರ್ ಸಾರ್ ಇವನು. ನನ್ನ ಗಂಡನನ್ನೂ ಬಲಿ ತೆಗೆದುಕೊಂಡುಬಿಟ್ಟ' ಎಂದು ಅತ್ತಳು. ಸಲೀಮನ ಮನೆಯಲ್ಲೇ ಎಲ್ಲಾ ಮಾತುಕತೆಗಳಾಗುತ್ತಿದ್ದು, ಶಾಕಿರಾಗೆ ಎಲ್ಲವೂ ತಿಳಿದಿತ್ತು. ಸಲೀಮನೂ ಅವಳಿಗೆ ಹೇಳಿದ್ದ. ಹೀಗಾಗಿ ಸಣ್ಣಸ್ವಾಮಿಯ ಕೊಲೆ ಮಾಡಿದವನು ಕಿರಣನೇ ಎಂಬುದು ಜಾಹಿರಾಗಿಬಿಟ್ಟಿತು. 'ಇನ್ನು ಸತ್ಯ ಹೇಳದಿದ್ದರೆ ಉಳಿಗಾಲವಿಲ್ಲ'ವೆಂದುಕೊಂಡ ಕಿರಣ ಅದನ್ನು ಒಪ್ಪಿಕೊಂಡ. 'ದೇವರಂಥ ತಂದೇನ ಕೊಂದುಬಿಟ್ಟೆ ಸಾರ್. ಆ ಸಲೀಮನ ಮಾತು ಕೇಳಿ ಹಾಳಾಗಿಬಿಟ್ಟೆ. ಅವನು ಅದನ್ನೇ ನೆಪ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಾ ಹಣ ಕೀಳುತ್ತಲೇ ಹೋದ ಸಾರ್. ಅವನು ಇದ್ದರೆ ತನ್ನ ತಂದೆಯ ಕೊಲೆ ಮಾಡಿದ್ದು ತಾನೇ ಎಂದು ಯಾವತ್ತಾದರೂ ಹೊರಬರುತ್ತೆ ಅಂತ ಅವನನ್ನೂ ಮುಗಿಸಿಬಿಟ್ಟೆ ಸಾರ್'- ಕಿರಣ ಹೇಳಿದ್ದನ್ನೆಲ್ಲಾ ಧ್ವನಿಮುದ್ರಣ ಮಾಡಿಕೊಂಡದ್ದಲ್ಲದೆ, ಲಿಖಿತ ಹೇಳಿಕೆ ಸಹ ಪಡೆದರು. ಕಿರಣ ಬೆಂಗಳೂರಿನ ಹೋಟೆಲಿನಲ್ಲಿ ಮದ್ಯದಲ್ಲಿ ವಿಷ ಬೆರೆಸಿ ಅವನ ಸಾವಿಗೆ ಕಾರಣನಾಗಿದ್ದ. ಸಲೀಮನ ಕಾರಿನಿಂದಾಗಿ ಮತ್ತು ಹೋಟೆಲಿನ ರಿಜಿಸ್ಟರಿನಲ್ಲಿ ಕಿರಣ ತನ್ನ ಸಹಿಯನ್ನೇ ಮರೆತು ಮಾಡಿದ್ದರಿಂದಾಗಿ ಪೋಲಿಸರು ಸಲೀಮನ ಮನೆ ಹುಡುಕಿಕೊಂಡು ಬಂದಿದ್ದರು. ಶಾಕಿರಾಬಾನು ಕೊಟ್ಟ ಮಾಹಿತಿ ಅದುವರೆಗ ಮುಚ್ಚಿದ್ದ ರಹಸ್ಯದ ತೆರೆಯನ್ನು ಸರಿಸಿತ್ತು. ಪ್ರಾಥಮಿಕ ವಿಚಾರಣೆ ನಂತರ ಹೆಚ್ಚಿನ ವಿಚಾರಣೆಗೆ ಬೆಂಗಳೂರು ಪೋಲಿಸರು ಕಿರಣನನ್ನು ಕರೆದೊಯ್ದರು. ಸ್ಥಳೀಯ ಠಾಣೆಯಲ್ಲಿ ಸಹ ಸಣ್ಣಸ್ವಾಮಿಯ ಕೊಲೆಯ ಕಡತ ಮತ್ತೆ ಧೂಳು ಕೊಡವಿಕೊಂಡು ಮೇಲೆ ಬಂದಿತ್ತು.
* * * *
ಕೊನೆಯಲ್ಲಿ ಒಂದು ಚೂರು ಕೊಸರು:
     ಇದು ಸತ್ಯಘಟನೆಗೆ ಕೊಟ್ಟಿರುವ ಕಥೆಯ ರೂಪ. ಹೆಸರು, ಸ್ಥಳಗಳನ್ನು ಬದಲಾಯಿಸಿರುವೆ. ಕಲ್ಪನೆಯ ಎಳೆಗಳನ್ನೂ ಮೂಲಕ್ಕೆ ಧಕ್ಕೆಯಾಗದಂತೆ ಸೇರಿಸಿರುವೆ. ಕಥೆಯ ಕಿರಣ ನನ್ನ ಅಧೀನ ನೌಕರನಾಗಿದ್ದ. ಅಮಾನತ್ತಿನಲ್ಲಿದ್ದ ಗ್ರಾಮಲೆಕ್ಕಿಗ ಕಿರಣನನ್ನು ಪುನರ್ನೇಮಿಸಿ ನಾನು ತಹಸೀಲ್ದಾರನಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕು ಕೇಂದ್ರದಿಂದ ಐದು ಕಿ.ಮೀ. ದೂರದ ಸ್ಥಳಕ್ಕೆ ನೇಮಿಸಿ ಆದೇಶ ಬಂದಿತ್ತು. ತಾಲ್ಲೂಕಿನ ಇನ್ನೊಂದು ಹೋಬಳಿಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳು ಹೆಚ್ಚಾಗಿ ಖಾಲಿಯಿದ್ದುದರಿಂದ ಅವನನ್ನು ಆ ಹೋಬಳಿಯ ಒಂದು ವೃತ್ತಕ್ಕೆ ನಿಯೋಜಿಸಿ ಛಾರ್ಜು ವಹಿಸಿಕೊಳ್ಳಲು ಆದೇಶಿಸಿದ್ದೆ ಮತ್ತು ಅದನ್ನು ಸ್ಥಿರೀಕರಿಸಲು ಜಿಲ್ಲಾಧಿಕಾರಿಯವರಿಗೆ ಬರೆದಿದ್ದೆ. ಆ ವೃತ್ತ ತಾಲ್ಲೂಕು ಕೇಂದ್ರದಿಂದ ಸುಮಾರು ೩೦ ಕಿ.ಮೀ. ದೂರದಲ್ಲಿತ್ತು. ಅಂದು ಮಧ್ಯಾಹ್ನವೇ ಜಿಲ್ಲಾ ಕೇಂದ್ರದಿಂದ ರಾಜ್ಯಮಟ್ಟದ ಪ್ರಭಾವಿ ರಾಜಕಾರಣಿಯವರು ದೂರವಾಣಿ ಮೂಲಕ ನನ್ನ ಕ್ರಮದ ಬಗ್ಗೆ ಆಕ್ಷೇಪಿಸಿ, ತಾವೇ ಅವನನ್ನು ಮೊದಲಿದ್ದ ಸ್ಥಳಕ್ಕೆ ಹಾಕಿಸಿದ್ದಾಗಿಯೂ, ಕೂಡಲೇ ಅವನನ್ನು ಅದೇ ಸ್ಥಳಕ್ಕೆ ಕೆಲಸಕ್ಕೆ ಹಾಕಬೇಕೆಂದೂ ಒಂದು ರೀತಿಯ ಬೆದರಿಕೆಯ ಧ್ವನಿಯಲ್ಲಿ ಮಾತನಾಡಿದ್ದರು. ನಾನು, 'ಅವರ ಮಾತಿನಂತೆಯೇ ಆತನನ್ನು ಈಗಲೇ ಆ ಸ್ಥಳಕ್ಕೆ ಮತ್ತೆ ಹಾಕಿದರೆ ಆಡಳಿತದಲ್ಲಿ ಬಿಗಿ ಹೊರಟುಹೋಗುತ್ತದೆ, ಅಧೀನ ಸಿಬ್ಬಂದಿಯಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಲಿ. ಆಮೇಲೆ ತಮ್ಮ ಮಾತಿನಂತೆಯೇ ಅವನನ್ನು ಅದೇ ಸ್ಥಳಕ್ಕೆ ನಿಯೋಜಿಸುತ್ತೇನೆ' ಎಂದು ಅವರನ್ನು ಒಪ್ಪಿಸಿದ್ದೆ. ಮರುದಿನ ಸ್ಥಳೀಯ ಪುರಸಭೆ ಕೌನ್ಸಿಲರರು ಒಂದು ಹಿಂಡು ಜನರೊಂದಿಗೆ ನನ್ನ ಛೇಂಬರಿಗೆ ಬಂದು ಗ್ರಾಮಲೆಕ್ಕಿಗನನ್ನು ದೂರದ ಸ್ಥಳಕ್ಕೆ ಹಾಕಬಾರದೆಂದು ಗಲಾಟೆ ಮಾಡಿದ್ದರು. ಅವರೂ ಹಿರಿಯ ರಾಜಕಾರಣಿಯ ಕುಮ್ಮಕ್ಕಿನಿಂದಲೇ ಬಂದಿದ್ದವರೆಂದು ತಿಳಿಯಲು ಕಷ್ಟವೇನಿರಲಿಲ್ಲ. ಅವರನ್ನು ಗದರಿಸಿ ಕಳುಹಿಸಿದ್ದೆ. ಅವರು ಹೋದ ನಂತರ ಮತ್ತೆ ಆ ಹಿರಿಯ ರಾಜಕಾರಣಿಗೆ ಫೋನು ಮಾಡಿ, 'ಒಂದೆರಡು ತಿಂಗಳ ನಂತರ ಅವನನ್ನು ಮತ್ತೆ ಮೊದಲಿದ್ದ ಸ್ಥಳಕ್ಕೆ ಖಂಡಿತಾ ಹಾಕುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು' ಕೋರಿದ ಮೇಲೆ ಅವರು ಸುಮ್ಮನಾಗಿದ್ದರು. ಇದಾಗಿ ಒಂದೆರಡು ತಿಂಗಳ ನಂತರದಲ್ಲಿ ಸ್ನೇಹಿತನ ಕೊಲೆ ಮಾಡಿ ಸಿಕ್ಕಿಬಿದ್ದಿದ್ದ ಕಿರಣನಿಗೆ ಮೊದಲು ನೇಮಕವಾಗಿದ್ದ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶವಾಗಲೇ ಇಲ್ಲ. ನನಗೂ ತದನಂತರದ ಒಂದೆರಡು ತಿಂಗಳಲ್ಲಿ ಆ ತಾಲ್ಲೂಕಿನಿಂದ ಎತ್ತಂಗಡಿಯಾಗಿತ್ತು.
-ಕ.ವೆಂ.ನಾಗರಾಜ್.

ಸೋಮವಾರ, ಏಪ್ರಿಲ್ 21, 2014

ಉಪ್ಪು ತಿಂದ ಮೇಲೆ . . . 2/3

ಹಿಂದಿನ ಭಾಗಕ್ಕೆ ಲಿಂಕ್: ಉಪ್ಪು ತಿಂದ ಮೇಲೆ . . .1/3
ಮುಂದೆ:
  ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಪೋಲಿಸ್ ಜೀಪು ಮನೆ ಮುಂದೆ ಬಂದು ನಿಂತಿತು. ಮನೆಯ ಒಳಗೆ ಬಂದ ಸಬ್ಬಿನಿಸ್ಪೆಕ್ಟರ್, ಗಾಬರಿಯಾಗಿದ್ದ ರಾಜಮ್ಮ, ಕಿರಣರನ್ನು ಕುರಿತು 'ಸಣ್ಣಸ್ವಾಮಿ ಬಂದರೇನಮ್ಮಾ?" ಎಂದು ಕೇಳಿದರು. ಇಲ್ಲವೆಂದು ತಲೆಯಾಡಿಸಿದಾಗ, 'ನಿನ್ನೆ ಹೊರಗೆ ಹೋಗುವಾಗ ಯಾವ ಬಟ್ಟೆ ಹಾಕಿಕೊಂಡಿದ್ದರು?' ಎಂಬ ಪ್ರಶ್ನೆಗೆ, ರಾಜಮ್ಮನಿಂದ, 'ನಶ್ಯದ ಬಣ್ಣದ ಶರಟು, ಬೂದು ಬಣ್ಣದ ಪ್ಯಾಂಟು ಹಾಕಿಕೊಂಡು ಹೋಗಿದ್ದರು' ಎಂಬ ಉತ್ತರ ಬಂತು. 'ಸ್ವಲ್ಪ ನಮ್ಮ ಜೊತೆ ಬನ್ನಿಮ್ಮಾ' ಎಂದು ರಾಜಮ್ಮನನ್ನೂ, ಜೊತೆಗೆ ಕಿರಣನನ್ನೂ ಕರೆದುಕೊಂಡು ಹೋದ ಜೀಪು ಸೀದಾ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ನಿಂತಿತು. ರಾಜಮ್ಮ ಕೆಟ್ಟದನ್ನು ನೆನೆಸಿಕೊಂಡು ಅಳಲೂ ಆಗದೆ ಗಾಬರಿಯಾಗಿ ತೇಲುಗಣ್ಣು ಮಾಡಿದ್ದರು. ಸಬ್ಬಿನಿಸ್ಪೆಕ್ಟರರು, 'ಗಾಬರಿಯಾಗಬೇಡಿರಮ್ಮಾ. ನೋಡಿ ಅಲ್ಲಿ ಒಂದು ಬಾಡಿ ಇದೆ. ನಿಮ್ಮ ಮನೆಯವರದು ಅಲ್ಲದೆಯೂ ಇರಬಹುದು. ನೋಡಿ ಹೇಳೀಮ್ಮಾ' ಎಂದರು. ರಾಜಮ್ಮ ಆ ದೇಹವನ್ನು ನೋಡಿದೊಡನೆಯೇ ಮೂರ್ಛೆ ತಪ್ಪಿಬಿದ್ದರು. ಅದು ಸಣ್ಣಸ್ವಾಮಿಯದೇ ದೇಹವಾಗಿತ್ತು. 
     ಊರಿನ ಹೊರವಲಯದಲ್ಲಿ ಸ್ಮಶಾಣದ ಸಮೀಪದ ಪೊದೆಯಲ್ಲಿ ಕೆಲವು ನಾಯಿಗಳು ಗೋಣೀಚೀಲವನ್ನು ಎಳೆದಾಡುತ್ತಿದ್ದು, ಹರಿದ ಚೀಲ ಒಳಗಿಂದ ಹೊರಗೆ ಇಣುಕಿದ್ದ ಕೈಯನ್ನು ಕಚ್ಚಿ ತಿನ್ನುತ್ತಿದ್ದವು. ಇದನ್ನು ಗಮನಿಸಿದ ಬೆಳಗಿನ ವಾಕಿಂಗಿಗೆ ಹೋಗಿಬರುತ್ತಿದ್ದ ಕೆಲವರು  ನಾಯಿಗಳನ್ನು ಓಡಿಸಿ ಪೋಲಿಸ್ ಠಾಣೆಗೆ ಫೋನು ಮಾಡಿದ್ದರು. ಪೋಲಿಸರು ಧಾವಿಸಿ ಮಹಜರ್ ಮಾಡಿ, ಫೋಟೋಗಳನ್ನು ತೆಗೆದುಕೊಂಡು ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಅನುಮಾನದ ಮೇಲೆ ಸಣ್ಣಸ್ವಾಮಿಯ ಮನೆಗೆ ಹೋಗಿ ವಿಚಾರಿಸಿದ್ದರು. ಅನುಮಾನ ಧೃಢಪಟ್ಟಿತ್ತು. ಹೆಚ್ಚಿನ ವಿಚಾರಣೆಗಾಗಿ ರಾಜಮ್ಮ ಮತ್ತು ಕಿರಣರನ್ನು ಠಾಣೆಗೆ ಕರೆದೊಯ್ದಿದ್ದರು. ರಾಜಮ್ಮ ಅಂದು ದಿನಪೂರ್ತಿ ಮನೆಯಲ್ಲೇ ಇದ್ದುದನ್ನು ಅಕ್ಕಪಕ್ಕದ ಮನೆಯವರು ಖಚಿತಪಡಿಸಿದರು. ಕಿರಣ ಅಂದು ತಿರುಮಲೂರಿಗೆ ಹೋಗಿ ತನ್ನೊಂದಿಗೇ ಸಾಯಂಕಾಲದವರೆಗೂ ಇದ್ದುದನ್ನು ಅಲ್ಲಿನ ಗಣೇಶಪ್ಪ ಹೇಳಿದರು. ಪೆಟ್ರೋಲ್ ಬಂಕಿನ ಮಾಲಿಕನೂ ಕಿರಣ ಕೆಲಸ ಕೇಳಿ ತಮ್ಮ ಮನೆಗೆ ಬಂದಿದ್ದನೆಂದು ಹೇಳಿಕೆ ಕೊಟ್ಟರು. ಸಣ್ಣಸ್ವಾಮಿ ಕೊಲೆಯಾಗುವ ಮುನ್ನ ಅವರನ್ನು ಕಂಡಿದ್ದವರು ಅವರ ಪತ್ನಿ ರಾಜಮ್ಮ ಮಾತ್ರ. ಹೀಗಾಗಿ ಎಷ್ಟೋ ಪ್ರಕರಣಗಳನ್ನು ಭೇದಿಸಿದ್ದ ಸಬ್ಬಿನಿಸ್ಪೆಕ್ಟರರಿಗೆ ಇದೊಂದು ಕಗ್ಗಂಟಾಗಿತ್ತು. ತಮಗೆ ತಿಳಿಸದೆ ಊರನ್ನು ಬಿಟ್ಟು ಹೋಗಬಾರದೆಂದು, ಕರೆಕಳಿಸಿದಾಗ ಕೂಡಲೇ ಬರಬೇಕೆಂದು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದರು.
* * * *
     ಸಣ್ಣಸ್ವಾಮಿಯ ಪತ್ನಿ ರಾಜಮ್ಮಳಿಗೆ ಬರಬೇಕಾದ ಬಾಕಿ ಸಂಬಳ, ಕುಟುಂಬ ಪಿಂಚಣಿ, ಗ್ರಾಚುಯಿಟಿ, ರಜಾ ಸಂಬಳ, ಸಮೂಹ ವಿಮೆ ಹಣ, ಇತ್ಯಾದಿಗಳು ಇತ್ಯರ್ಥವಾಗಲು ಆರು ತಿಂಗಳು ಹಿಡಿಯಿತು. ಸಲೀಮನೂ ಇದಕ್ಕಾಗಿ ಓಡಾಡಿ ಸಹಾಯ ಮಾಡಿದ್ದ. ನಂತರದ ಒಂದು ದಿನ ಸಲೀಮನ ಮನೆಯಲ್ಲಿ ಸೇರಿ ಮಾತನಾಡುವುದೆಂದು ಕಿರಣ, ಸಲೀಮ ಮಾತನಾಡಿಕೊಂಡಿದ್ದಂತೆ ಅಂದು ಸಾಯಂಕಾಲ ಸೇರಿದ್ದರು. ಕಿರಣನೇ ಶುರು ಮಾಡಿದ: 'ಸಲೀಮ, ನಾವು ಅವತ್ತು ಮಾತನಾಡಿಕೊಂಡಿದ್ದಂತೆ ಬರುವ ಹಣದಲ್ಲಿ ಮೂವತ್ತು ಪರ್‍ಸೆಂಟ್ ತಂದಿದೀನಿ. ನೋಡು, ಈ ಬ್ಯಾಗಲ್ಲಿ ಮೂರೂವರೆ ಲಕ್ಷ ಇದೆ. ಲೆಕ್ಕ ಹಾಕಿಕೋ'. ಸಲೀಮ, "ಪ್ರಾವಿಡೆಂಟ್ ಫಂಡಿಂದ ಏಳೂವರೆ ಲಕ್ಷ ಬಂತಲ್ಲಾ, ಅದರಲ್ಲಿ ಮೂವತ್ತು ಪರ್‍ಸೆಂಟ್ ಕೊಡಲಿಲ್ಲವಲ್ಲಾ? ಇನ್ನೂ ಇನ್ಶೂರೆನ್ಸ್ ಹಣ ಬರಬೇಕು ಅಲ್ಲವಾ?" ಕಿರಣ ರೇಗಿದ, "ಪ್ರಾವಿಡೆಂಟ್ ಹಣ ನಮ್ಮಪ್ಪ ಕೂಡಿಟ್ಟ ಹಣ. ಇನ್ಶೂರೆನ್ಸ್ ಹಣಾನೂ ಅಷ್ಟೆ, ಅಪ್ಪ ಸಂಬಳದಿಂದ ಕಟ್ಟಿದ್ದ ಹಣ. ಅದರಲ್ಲಿ ಹೇಗೋ ಕೊಡಕ್ಕಾಗತ್ತೆ? ನೀನು ಹೊಸ ತರಲೆ ಮಾಡಬೇಡ". ಸಲೀಮ, "ನನಗೆ ಅದೆಲ್ಲಾ ಗೊತ್ತಿಲ್ಲ. ನನಗೆ ಎಲ್ಲದರಲ್ಲೂ ಪಾಲು ಬರಲೇಬೇಕು". ಇಬ್ಬರಲ್ಲೂ ಬಹಳ ಹೊತ್ತು ಜಟಾಪಟಿ ನಡೆಯಿತು. ಜೋರು ಜೋರಾಗಿ ಮಾತು ನಡೆದಾಗ, ಕೈ ಮಿಲಾಯಿಸುವ ಹಂತಕ್ಕೂ ಬಂದಿದ್ದಾಗ ಒಂದೆರಡು ಸಲ ಸಲೀಮನ ಪತ್ನಿ ಶಾಕಿರಾಬಾನು ಆತಂಕದಿಂದ ಇಣಕಿ ನೋಡಿ ಹೋಗಿದ್ದಳು. ಕೊನೆಯಲ್ಲಿ ಇನ್ನೂ ನಾಲ್ಕು ಲಕ್ಷ ಸಲೀಮನಿಗೆ ಕೊಡುವುದೆಂದು ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಒಪ್ಪಿದ. ಕಿರಣ ಈ ನಾಲ್ಕು ಲಕ್ಷವನ್ನೂ ಒಮ್ಮೆಗೇ ಕೊಡದೆ ಕಂತಿನಲ್ಲಿ ಹಾಗೂ ಹೀಗೂ ಸಲೀಮನಿಗೆ ತಲುಪಿಸುವಾಗ ನಾಲ್ಕೈದು ತಿಂಗಳು ತಡ ಮಾಡಿದ್ದ. ಅಷ್ಟರಲ್ಲಿ ಕಿರಣನಿಗೆ ಅನುಕಂಪದ ಮೇಲೆ ಗ್ರಾಮಲೆಕ್ಕಿಗನಾಗಿ ಹತ್ತಿರದ ಹಳ್ಳಿಗೆ ನೇಮಿಸಿ ಆದೇಶವೂ ಬಂದಿತು.
     ಸಲೀಮನಿಗೆ ಕಿರಣ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡಿದ್ದ. ಆಗಾಗ್ಗೆ ಐದು ಸಾವಿರ, ಎರಡು ಸಾವಿರ, ಹೀಗೆ ಕೇಳಿ ಪಡೆಯುತ್ತಿದ್ದ. ಇಷ್ಟವಿಲ್ಲದಿದ್ದರೂ, 'ಇದೇ ಕೊನೆ ಸಲ' ಎಂದು ಹೇಳಿ ಕೊಡುತ್ತಿದ್ದ ಕಿರಣ, ಅವನ ಕಾಟ ತಡೆಯದಾದಾಗ, 'ಸಲೀಮ, ನೋಡು, ನೀನು ಐದು ಸಾವಿರ ಕೇಳ್ತಾ ಇದೀಯಾ, ತೊಗೋ, ಹತ್ತು ಸಾವಿರ ಕೊಡ್ತಾ ಇದೀನಿ. ಇನ್ನು ಮುಂದೆ ನೀನು ನನ್ನನ್ನು ಮಾತನಾಡಿಸುವುದಕ್ಕೆ ಬರಲೇಬಾರದು. ಅರ್ಧಕ್ಕಿಂತ ಹೆಚ್ಚು ಹಣ ನಿನಗೇ ಕೊಟ್ಟಿದೀನಿ. ನಿನಗೆ ಇನ್ನೂ ತೃಪ್ತಿ ಇಲ್ಲವಲ್ಲಾ. ನೀನು ಏನು ಮಾಡ್ತೀಯೋ ಮಾಡಿಕೋ ಹೋಗು. ಇನ್ನು ಮುಂದೆ ನಾನು ಒಂದು ಪೈಸೆ ಕೊಡಲ್ಲ' ಎಂದಿದ್ದ. ಸಲೀಮ ಮಾತನಾಡದೆ ನಗುತ್ತಾ ಹಣ ಪಡೆದು ಹೋಗಿದ್ದ.
     ನಂತರ ಒಂದು ತಿಂಗಳು ಕಾಣಿಸಿಕೊಳ್ಳದಿದ್ದ ಸಲೀಮ, ಒಂದು ದಿನ ಇದ್ದಕ್ಕಿದ್ದಂತೆ ಬಂದವನು, "ಕಿರಣ, ಇದೇ ಕೊನೆ ಸಲ. ಮತ್ತೆ ಇನ್ನು ಯಾವತ್ತೂ ಬರೋದೇ ಇಲ್ಲ. ಹತ್ತು ಸಾವಿರ ತುರ್ತಾಗಿ ಬೇಕಾಗಿದೆ. ಹೊಸ ಟ್ಯಾಕ್ಸಿ ಸಾಲದ ಕಂತು ಕಟ್ಟಲು ಸಾಲದಾಗಿದೆ. ಇಲ್ಲ ಅನ್ನಬೇಡ" ಅಂದ. ಕಿರಣ, "ಕೊಡಕ್ಕಾಗಲ್ಲ. ಏನು ಬೇಕಾದರೂ ಮಾಡಿಕೋ" ಅಂದ. ಸಲೀಮ, "ಹೋಗಲಿ ಬಿಡು. ಇನ್ಸ್‌ಪೆಕ್ಟರ್ ಹತ್ರ ಹೋಗ್ತೀನಿ. ನಡೆದಿದ್ದೆಲ್ಲಾ ಹೇಳಿಬಿಡ್ತೀನಿ" ಎಂದ. ಕಿರಣ. "ಏನು ಹೆದರಿಸ್ತೀಯಾ? ನಿನ್ನೂ ಒದ್ದು ಒಳಗೆ ಹಾಕ್ತಾರೆ" ಅಂದ. "ನನ್ನನ್ನು ಯಾಕೆ ಹಾಕ್ತಾರೆ? ಅಪ್ಪ ಮಗ ಟ್ಯಾಕ್ಸಿ ಬಾಡಿಗೆಗೆ ತೆಗೆದುಕೊಂಡಿದ್ದರು. ದಾರಿಯಲ್ಲಿ ಹೋಗ್ತಾ ಮಗ ಅಪ್ಪನ್ನ ಸಾಯಿಸಿದ. ವಿಷಯ ಬಾಯಿ ಬಿಟ್ಟರೆ ನನ್ನನ್ನೂ ಮುಗಿಸಿಬಿಡ್ತೀನಿ ಅಂತ ಹೆದರಿಸಿದ. ಹೆದರಿ ಸುಮ್ಮನಿದ್ದೆ ಅಂತ ಹೇಳ್ತೀನಿ". ಕಿರಣ ನಡುಗಿಬಿಟ್ಟ. "ದಮ್ಮಯ್ಯ ಅಂತೀನಿ. ಪ್ರಾಣ ಹಿಂಡಬೇಡ ಕಣೋ. ನಿನಗೆ ಹಣ ಸುರಿಯಕ್ಕೆ ದೇವರಂಥಾ ಅಪ್ಪನ್ನ ಕೊಂದುಬಿಟ್ಟೆನಲ್ಲಾ. ಎಂಥಾ ಪಾಪಿ ಆಗಿಬಿಟ್ಟೆ ನಾನು. ಆಯ್ತು. ಹತ್ತು ಸಾವಿರ ಸಾಯಂಕಾಲ ಕೊಡ್ತೀನಿ. ನಿನ್ನ ಕಾಲಿಗೆ ಬೇಕಾದ್ರೆ ಬೀಳ್ತೀನಿ. ಇನ್ನು ಮುಂದೆ ನನ್ನನ್ನು ಹೀಗೆಲ್ಲಾ ಕಾಡಬೇಡ ಕಣೋ" ಎಂದ ಕಿರಣನಿಗೆ ಅಭಯ ಕೊಟ್ಟು ಸಲೀಮ ಕಾಲ್ಕಿತ್ತ.
     'ಅಂದು ಹತ್ತು ಸಾವಿರ ತೆಗೆದುಕೊಂಡು ಹೋಗಿದ್ದವನು ಇವತ್ತು ಮತ್ತೆ ಐದು ಸಾವಿರ ಕೇಳ್ತಾ ಇದಾನೆ. ಇವತ್ತು ಕೊಟ್ಟರೂ ಮತ್ತೆ ಕೇಳಲ್ಲಾ ಅನ್ನುವುದು ಏನು ಗ್ಯಾರಂಟಿ?' ಎಂದು ಯೋಚಿಸುತ್ತಿದ್ದ ಕಿರಣನಿಗೆ ತಲೆ ಚಿಟ್ಟು ಹಿಡಿದುಹೋಯಿತು. 'ಹಣದ ಆಸೆಗೆ ಅಪ್ಪನನ್ನೇ ಕೊಂದೆ. ಆದರೆ ಹಣ ಸಲೀಮನ ಕೈಸೇರುತ್ತಿದೆ' ಎಂದು ಅವನ ಮೇಲೆ ಸಿಟ್ಟು ಉಕ್ಕಿಬರುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದ. ಸಂಜೆ ಸ್ಟೇಡಿಯಮ್ಮಿನ ಹತ್ತಿರ ಹೋದಾಗ ಸಲೀಮ ಅವನಿಗಿಂತ ಮುಂಚೆಯೇ ಬಂದು ಮಾಮೂಲು ಜಾಗದಲ್ಲಿ ಕುಳಿತಿದ್ದುದನ್ನು ಕಂಡು ಮೈ ಉರಿದುಹೋದರೂ ತೋರ್ಪಡಿಸಿಕೊಳ್ಳದೆ ಪಕ್ಕ ಹೋಗಿ ಕುಳಿತ. ಕಿರಣನೇ, "ಸಲೀಮ, ನೀನು ಕೇಳಿದ್ದಕ್ಕಿಂತಲೂ ಹೆಚ್ಚು ದುಡ್ಡು ನಿನಗೆ ಸಿಕ್ಕಿದೆ. ಆದರೂ ಈರೀತಿ ಗೋಳುಗುಟ್ಟಿಸೋದು ಸರೀನಾ? ನಿನ್ನ ಭಾಮೈದಂಗೆ ಆಕ್ಸಿಡೆಂಟ್ ಅಂತ ಸುಳ್ಳು ಬೇರೆ ಹೇಳ್ತೀಯಲ್ಲಾ, ಅವನು ಈಗ ನಾನು ಬರುವಾಗ ದಾರಿಯಲ್ಲೇ ಸಿಕ್ಕಿದ್ದ. ಹಿಂಗೆ ಯಾಕೆ ಮಾಡ್ತೀಯಾ?" ಸಲೀಮನ ನಗುವೇ ಅವನ ಉತ್ತರವಾಗಿತ್ತು. "ದುಡ್ಡಿದೆ ಅಂತ ಏನೇನೋ ಹಲ್ಲಂಡೆ ವ್ಯವಹಾರ ಮಾಡಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದೀನಿ ಕಣೋ. ಹಾಕಿರೋ ದುಡ್ಡು ಉಳಿಸಿಕೊಳ್ಳೋದಕ್ಕಾದರೂ ಖರ್ಚು ಮಾಡಬೇಕು. ಅದಕ್ಕೇ ನಿನ್ನನ್ನು ಕೇಳಿದ್ದು ಕಣೋ. ನಿನ್ನ ಮೇಲಾಣೆ, ಇನ್ನು ನಿನ್ನ ಹತ್ತಿರ ಮತ್ತೆ ದುಡ್ಡು ಕೇಳಲ್ಲ" ಅಂದ. ಸ್ವಲ್ಪ ಹೊತ್ತಿನ ಮೌನದ ನಂತರ ಕಿರಣ ಐದು ಸಾವಿರ ರೂ. ಕೊಡುತ್ತಾ ಹೇಳಿದ, "ನನಗೆ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸ ಇದೆ. ನಿನಗೆ ಅನುಕೂಲ ಆದಾಗ ನಿನ್ನ ಟ್ಯಾಕ್ಸೀಲೇ ಹೋಗಿಬರೋಣ. ಯೋಚನೆ ಮಾಡಬೇಡ, ಡೀಸೆಲ್ ನಿನಗೂ ಹಾಕಿಸ್ತೀನಿ, ನಿನ್ನ ಗಾಡಿಗೂ ಹಾಕಿಸ್ತೀನಿ". ಸಲೀಮ ನಗುತ್ತಾ, "ಅದನ್ನು ಹೇಳಬೇಕಾ? ನನಗೂ ಬೆಂಗಳೂರಿನಲ್ಲಿ ಕೆಲಸ ಇದೆ. ಈ ಭಾನುವಾರ ಹೋಗೋಣ". ತಿನ್ನುತ್ತಿದ್ದ ಕಡಲೆಕಾಯಿಯೂ ಮುಗಿಯಿತು. ಅವರ ಮಾತುಕತೆಗಳೂ ಮುಗಿದು ಇಬ್ಬರೂ ಜಾಗ ಖಾಲಿ ಮಾಡಿದರು.
. . . .(ಮುಂದುವರೆಯುವುದು)

ಭಾನುವಾರ, ಏಪ್ರಿಲ್ 20, 2014

ಉಪ್ಪು ತಿಂದ ಮೇಲೆ . . .1/3

     ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್. ನೀನು ಯಾವ ಅರ್ಜೆಂಟ್ ಕೆಲಸದಲ್ಲೂ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನಿನ್ನ ಆಫೀಸ್ ಮುಂದುಗಡೆಯಿಂದಾನೇ ಮಾತಾಡ್ತಾ ಇದೀನಿ. ನೀನು ಈಗ ತಾನೇ ಒಳಗೆ ಹೋಗಿ ಕೂತಿದ್ದೀಯಾ ಅಂತಾನೂ ಗೊತ್ತು. ನಾನೇನೂ ನಿನ್ನ ಟೈಮ್ ವೇಸ್ಟ್ ಮಾಡಲ್ಲ. ಒಂದು ಐದು ಸಾವಿರ ದುಡ್ಡು ಬೇಕಿತ್ತು. ನನಗೆ ನಿನ್ನ ಬಿಟ್ರೆ ಯಾರಿದಾರೆ? ಅದಕ್ಕೆ ಬಂದೆ. ಇಲ್ಲಾ ಅನ್ನಬೇಡ" ಅಂದ. ಕಿರಣ ಹೊರಗೆ ಬಂದು ನೋಡಿದರೆ ಸಲೀಮ ಅಲ್ಲಿ ನಗುತ್ತಾ ನಿಂತಿದ್ದುದನ್ನು ಕಂಡು ಮೈ ಉರಿಯಿತು. ಆದರೂ ಹೊರಗೆ ತೋರಿಸಿಕೊಳ್ಳದೆ, "ಕಳೆದ ವಾರವಿನ್ನೂ ಹತ್ತು ಸಾವಿರ ಇಸ್ಕೊಂಡಿದ್ದೆ. ಈಗ ಮತ್ತೆ ಐದು ಸಾವಿರಾನಾ? ನನಗೆ ದಯವಿಟ್ಟು ಹಿಂಸೆ ಮಾಡಬೇಡ. ಇದೇ ಕೊನೆ ಸಲ ಅಂತ ಪ್ರತಿಸಲಾನೂ ಹೇಳ್ತೀಯಾ. ಮತ್ತೆ ಮತ್ತೆ ಬಂದು ಪ್ರಾಣ ಹಿಂಡ್ತೀಯಲ್ಲೋ" ಅಂದ. ಸಲೀಮ ಹೇಳಿದ, "ನಾನೂ ಮತ್ತೆ ಕೇಳಬಾರದೂ ಅಂತಾನೇ ಇದ್ದೆ ಕಣೋ. ಏನು ಮಾಡಲಿ, ನನ್ನ ಭಾವಮೈದಂಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೇಲಿ ಇದಾನೆ. ತುರ್ತಾಗಿ ದುಡ್ಡು ಬೇಕಿತ್ತು ಬಂದೆ. ನಿಜಕ್ಕೂ ಇದೇ ಕೊನೆ ಸಲ. ಮತ್ತೆ ನಿನ್ನಾಣೆಗೆ ನಿನ್ನ ಹತ್ರ ದುಡ್ ಕೇಳಲ್ಲ". "ಇವತ್ತು ಸಾಯಂಕಾಲ ಸ್ಟೇಡಿಯಮ್ ಹತ್ತಿರ ಬಾ. ಅಲ್ಲೇ ಮಾತಾಡೋಣ" ಎಂದ ಕಿರಣನಿಗೆ ಸಲೀಮ, "ಖಂಡಿತಾ ಬರ್ತೀನಿ. ನೀನು ದುಡ್ ಕೊಡೋದ್ ಮಾತ್ರ ಮರೀಬೇಡ" ಎಂದು ಹೇಳಿದವನೇ ಕೈಬೀಸುತ್ತಾ ಟ್ಯಾಕ್ಸಿ ಚಲಾಯಿಸಿಕೊಂಡು ಹೊರಟ.
     ಕಿರಣನಿಗೆ ತಲೆ ಕೆಟ್ಟುಹೋಯಿತು. ಗ್ರಾಮಲೆಕ್ಕಿಗನಾಗಿ ಕೆಲಸ ಸಿಕ್ಕಿ ಇನ್ನೂ ಆರು ತಿಂಗಳಾಗಿತ್ತಷ್ಟೇ. ಈ ಸಲೀಮನಿಂದ ಹೇಗೆ ಪಾರಾಗುವುದೆಂದು ತಿಳಿಯದೆ ಕುರ್ಚಿಯ ಮೇಲೆ ಕುಳಿತು ಚಿಂತಿಸಲಾರಂಭಿಸಿದ. ಜಾತಿ ಸರ್ಟಿಫಿಕೇಟು, ಪೆನ್ಶನ್ನು, ಆ ಕೆಲಸ, ಈ ಕೆಲಸ ಎಂದು ಬಂದವರಿಗೆ ಸಬೂಬು ಹೇಳಿ ಮಧ್ಯಾಹ್ನ ಬರಲು ಹೇಳಿ ಬೈಕು ಹತ್ತಿ ಸೀದಾ ಮನೆಗೆ ಹೋಗಿ ಮಲಗಿಬಿಟ್ಟ. ತಲೆ ಸಿಡಿದು ಹೋಗುತ್ತಿತ್ತು. ಮನಸ್ಸು ಹಿಂದಿನ ಘಟನೆಗಳನ್ನು ಮೆಲುಕು ಹಾಕಿತು.
     ಹಾಗೂ ಹೀಗೂ ಬಿ.ಎ. ಡಿಗ್ರಿ ಮುಗಿಸಿದ ಕಿರಣನಿಗೆ ಎಲ್ಲೂ ನೌಕರಿ ಸಿಗಲಿಲ್ಲ. ಅಪ್ಪ ಸಣ್ಣಸ್ವಾಮಿ ಕೃಷಿ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ. ನೌಕರಿ ಸಿಕ್ಕದ ಮಗನಿಗೆ ಒಂದು ಸಣ್ಣ ದಿನಸಿ ಅಂಗಡಿ ಇಟ್ಟುಕೊಟ್ಟು ವ್ಯಾಪಾರ ಮಾಡಲು ಕೂರಿಸಿದ. ಉಡಾಳ ಕಿರಣನಿಗೆ ಅದರಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ನಷ್ಟ ಅನುಭವಿಸಿ ಅಂಗಡಿಯನ್ನು ಆರೇ ತಿಂಗಳಲ್ಲಿ ಮುಚ್ಚಬೇಕಾಯಿತು. ಅಂಗಡಿಯಲ್ಲಿ ಬರುತ್ತಿದ್ದ ಹಣ ಸಲೀಮ ಮತ್ತು ಇತರ ಗೆಳೆಯರೊಂದಿಗೆ ಕುಡಿಯುವುದಕ್ಕೆ, ತಿನ್ನುವುದಕ್ಕೆ, ಇಸ್ಪೀಟು ಆಡುವುದಕ್ಕೆ ಬಳಸಿದರೆ ಅಂಗಡಿ ಮುಚ್ಚದೆ ಇನ್ನೇನಾಗುತ್ತದೆ. ಅಪ್ಪನ ಬೈಗುಳ, ಬುದ್ಧಿವಾದಗಳು ಅವನ ತಲೆಗೆ ನಾಟುತ್ತಿರಲಿಲ್ಲ. ಒಮ್ಮೆ ಖರ್ಚಿಗೆ ಕಿರಣ ಅಪ್ಪನಲ್ಲಿ ಹಣ ಕೇಳಿದಾಗ, ಮಾತಿಗೆ ಮಾತು ಬೆಳೆದು ಅಪ್ಪ ಸಿಟ್ಟಿನ ಭರದಲ್ಲಿ ಮಗನಿಗೆ ಕೆನ್ನೆಗೆ ಹೊಡೆದಿದ್ದ. ಕಿರಣ ಒಬ್ಬನೇ ಇದ್ದಿದ್ದರೆ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ, ಆದರೆ ಹೊಡೆಸಿಕೊಂಡಾಗ ಸಲೀಮ ಅಲ್ಲೇ ಇದ್ದುದು ಅವನಿಗೆ ಅವಮಾನವಾದಂತಾಗಿತ್ತು. ಧುಮುಗುಟ್ಟುತ್ತಾ ಸಲೀಮನೊಂದಿಗೆ ಹೊರಟುಬಿಟ್ಟ. ಎರಡು ದಿನ ಮನೆಗೆ ಹೋಗಿರಲಿಲ್ಲ. ವ್ಯಾಪಾರ ಮಾಡಲು ಮನಸ್ಸಿಲ್ಲ, ಕೆಲಸ ಮಾಡಲು ಬೇರೆ ನೌಕರಿಯಿಲ್ಲ. ಕುಡಿಯುವುದಕ್ಕೆ, ಇಸ್ಪೀಟು ಆಡುವುದಕ್ಕೆ ಕಾಸು ಬೇಕು. ಏನು ಮಾಡಬೇಕೆಂದು ತೋಚದವನಿಗೆ ಸಲೀಮನ ಸಲಹೆ ಆಪ್ಯಾಯಮಾನವಾಗಿ ಕಂಡಿತ್ತು. ಸಲೀಮ ಕೇಳಿದ್ದ:
"ನಿನ್ನ ಅಪ್ಪನಿಗೆ ಇನ್ನೂ ಎಷ್ಟು ವರ್ಷ ಸರ್ವಿಸಿದೆ?"
"ವರ್ಷ ಎಲ್ಲಿ ಬಂತು, ಇನ್ನು ಆರು ತಿಂಗಳಿಗೆ ರಿಟೈರಾಗ್ತಾರೆ. ಮುಂದೆ ಏನು ಮಾಡೋದೋ ತೋಚ್ತಾ ಇಲ್ಲ ಕಣೋ."
"ಸರ್ವಿಸಿನಲ್ಲಿ ಇದ್ದಾಗ್ಲೇ ಸತ್ರೆ ಮಕ್ಕಳಿಗೆ ನೌಕರಿ ಕೊಡ್ತಾರೆ. ಹೆಂಡ್ತಿಗೆ ಫ್ಯಾಮಿಲೀ ಪೆನ್ಶನ್ನೂ ಬರುತ್ತೆ ಅಲ್ವೇನೋ?"
"ಅದೇನೋ ಸರಿ. ನಮ್ಮಪ್ಪ ಈ ಆರು ತಿಂಗಳಲ್ಲಿ ಸಾಯ್ತಾರಾ? ಅವರ ಆರೋಗ್ಯ ಸರಿಯಿಲ್ಲ. ಆದರೂ ಈಗಲೇ ಅಂತೂ ಸಾಯಲ್ಲ."
ಸಲೀಮ ಗುಟ್ಟಾಗಿ ಕಿವಿಯಲ್ಲಿ ಏನೋ ಹೇಳಿದ. ನಂತರ ಬಹಳ ಹೊತ್ತು ಇಬ್ಬರೂ ಗುಸು ಗುಸು ಮಾತಾಡಿದರು. ಕಿರಣ ಮನೆಗೆ ವಾಪಸು ಹೋದ. ಮಾಮೂಲಿನಂತೆ ಇರತೊಡಗಿದ.
     ನಂತರದಲ್ಲಿ ಒಂದು ದಿನ ಸಣ್ಣಸ್ವಾಮಿ ಬೆಳಿಗ್ಗೆ ಎಂದಿನಂತೆ ಕಛೇರಿಗೆ ನಡೆದು ಹೊರಟಿದ್ದಾಗ ರಸ್ತೆಯ ತಿರುವಿನಲ್ಲಿ ಸಲೀಮ ತನ್ನ ಟ್ಯಾಕ್ಸಿ ನಿಲ್ಲಿಸಿಕೊಂಡು ಯಾರ ಹತ್ತಿರವೋ ಮೊಬೈಲಿನಲ್ಲಿ ಮಾತನಾಡುತ್ತಿದ್ದವನು ಇವರನ್ನು ಕಂಡೊಡನೇ, "ಬನ್ನಿ ಸಾರ್. ನಾನೂ ಆಕಡೇನೇ ಹೋಗ್ತಾ ಇದೀನಿ. ನಿಮ್ಮನ್ನು ಆಫೀಸಿಗೆ ಬಿಟ್ಟು ಹೋಗ್ತೀನಿ" ಅಂತ ಕರೆದ. ಮಗನ ಗೆಳೆಯ ಅಂತ ಅವರೂ ಕಾರು ಹತ್ತಿ ಕುಳಿತರು. ಕಾರು ಚಲಿಸುತ್ತಿದ್ದಂತೆಯೇ ಹಿಂದಿನ ಸೀಟಿನಲ್ಲಿ ಮಗನೂ ಇರುವುದನ್ನು ಕಂಡರು. ಅಸಮಾಧಾನದಿಂದ ಅವನನ್ನು ನೋಡುತ್ತಾ ಕೇಳಿದರು, "ತಿರುಮಲೂರಿಗೆ ಹೋಗಲಿಲ್ಲವಾ?" "ಹೋಗ್ತೀನಪ್ಪಾ. ಸಲೀಮ ತಿರುಮಲೂರು ಮಾರ್ಗವಾಗೇ ಹೋಗ್ತಾ ಇದಾನೆ. ನನಗೆ ಡ್ರಾಪ್ ಕೊಡ್ತಾನೆ"- ಕಿರಣನ ಉತ್ತರ. ಸಣ್ಣಸ್ವಾಮಿ ಸಲೀಮನನ್ನು ಉದ್ದೇಶಿಸಿ, "ತಿರುಮಲೂರಿನಲ್ಲಿ ನನ್ನ ನೆಂಟ ಗಣೇಶಪ್ಪ ಇದಾನೆ. ಅಲ್ಲಿ ಪೆಟ್ರೋಲ್ ಬಂಕಿನ ಮೇನೇಜರ್ ಪೋಸ್ಟ್ ಕಿರಣಂಗೆ ಕೊಡಿಸ್ತೀನಿ ಅಂತ ಹೇಳಿದಾನೆ. ಅಲ್ಲಾದರೂ ಜಿತವಾಗಿ ಕೆಲಸ ಮಾಡು ಅಂತ ನೀನಾದರೂ ಹೇಳು ಸಲೀಮ" ಅಂದರು. ಸಲೀಮ ಸುಮ್ಮನೆ ನಕ್ಕ. ಮುಂದುವರೆಯುತ್ತಿದ್ದಂತೆ ಕಾರಿನ ಕಿಟಕಿಯ ಬಣ್ಣದ ಗಾಜುಗಳು ಮೇಲೇರಿದವು. ಜನಸಂಚಾರ ಹೆಚ್ಚು ಇಲ್ಲದ ರಸ್ತೆಯಲ್ಲಿ ಕಾರು ಚಲಿಸಿದಾಗ, 'ಟ್ರಾಫಿಕ್ ಅವಾಯ್ಡ್ ಮಾಡಲು ಈ ರಸ್ತೆಯಲ್ಲಿ ಹೋಗುತ್ತಿರುವುದಾಗಿ' ಸಲೀಮನ ವಿವರಣೆ ಬಂದಿತು. ಅಷ್ಟರಲ್ಲಿ ಸಣ್ಣಸ್ವಾಮಿಯ ಕುತ್ತಿಗೆಗೆ ಒಂದು ಬಟ್ಟೆಯ ಕುಣಿಕೆ ಬಲವಾಗಿ ಬಿಗಿಯಲ್ಪಟ್ಟಿತು. ಕೃಶ ಶರೀರ ಹೆಚ್ಚು ಪ್ರತಿರೋಧ ತೋರದೆ ಕುಸಿಯಿತು.
                        ****
    ಗಂಡ ಮಧ್ಯಾಹ್ನವೂ ಊಟಕ್ಕೆ ಬರಲಿಲ್ಲ. ಸಾಯಂಕಾಲ ಬೇಗ ಬರ್ತೀನಿ, ದೇವಸ್ಥಾನಕ್ಕೆ ಹೋಗೋಣ ಅಂದಿದ್ದವರು ರಾತ್ರಿ ಎಂಟಾದರೂ ಬರಲಿಲ್ಲವಲ್ಲ ಅಂತ ರಾಜಮ್ಮ ಆತಂಕದಿಂದ ವರಾಂಡಾದಲ್ಲೇ ಕಾದು ಕುಳಿತಿದ್ದರು. ತುಂಬಾ ಹೊತ್ತು ಕುಳಿತಿರಲಾರದೆ ಚಡಪಡಿಸುತ್ತಾ ಓಡಾಡುತ್ತಲೂ ಇದ್ದರು. ಈ ಹಾಳಾದ ಕಿರಣ ತಿರುಮಲೂರಿಗೆ ಹೋಗ್ತೀನಿ ಅಂತ ಹೇಳಿ ಬೆಳಿಗ್ಗೆ ಹೋದವನು ಇನ್ನೂ ಬಂದಿಲ್ಲ ಅಂದುಕೊಳ್ಳುತ್ತಿರುವಾಗಲೇ ಕಿರಣ ಬಂದಿದ್ದ. ಸೀದಾ ತನ್ನ ರೂಮಿಗೆ ಹೋಗುತ್ತಿದ್ದವನನ್ನು ತಡೆದು, "ಅಪ್ಪ ಇನ್ನೂ ಬಂದಿಲ್ಲ ಕಣೋ, ಮಧ್ಯಾಹ್ನ ಊಟಕ್ಕೂ ಬರಲಿಲ್ಲ. ನೀನು ಹೋಗಿ ಒಂದು ಸಲ ನೋಡಿಕೊಂಡು ಬಾರೋ" ಅಂದರು. "ಬರ್ತಾರೆ, ಬಿಡಮ್ಮಾ. ಏನೋ ಕೆಲಸ ಜಾಸ್ತಿ ಇರಬೇಕು" ಅಂದ ಕಿರಣನಿಗೆ ರಾಜಮ್ಮ, "ಇಲ್ಲಾ ಕಣೋ ಅವರು ಯಾವತ್ತೂ ಇಷ್ಟು ಲೇಟು ಮಾಡಿರಲಿಲ್ಲ ಕಣೋ. ಹೋಗ್ಬಾರೋ" ಅಂತಾ ಬೇಡುವ ಧ್ವನಿಯಲ್ಲಿ ಹೇಳಿದರು. ಕಿರಣ ಬೈಕು ಹತ್ತಿ ಹೊರಗೆ ಹೋದವನು ಅರ್ಧ ಘಂಟೆ ನಂತರ ವಾಪಸು ಬಂದ. "ಆಫೀಸು ಬಾಗಿಲು ಹಾಕಿತ್ತಮ್ಮಾ. ಹಳೇಪೇಟೇಲಿ ಇರೋ ಕ್ಲರ್ಕ್ ರಂಗಪ್ಪನ ಮನೆಗೆ ಹೋಗಿ ಬಂದೆ. ಅಪ್ಪ ಇವತ್ತು ಆಫೀಸಿಗೇ ಹೋಗಿಲ್ಲವಂತೆ ಕಣಮ್ಮಾ. ರಜಾನೂ ಹಾಕಿಲ್ಲವಂತೆ. ಎಲ್ಲಿಗೆ ಹೋಗಿದಾರೆ ಅಂತ ನನ್ನನ್ನೇ ಕೇಳಿದರು" ಎಂದು ಹೇಳಿದ್ದನ್ನು ಕೇಳಿ ರಾಜಮ್ಮ ಕುಸಿದು ಕುಳಿತರು. ದುಂಬಾಲು ಬಿದ್ದು ಸಣ್ಣಸ್ವಾಮಿಯ ಸ್ನೇಹಿತರ ಮನೆಗೆಲ್ಲಾ ಅವನೊಂದಿಗೆ ಹೋಗಿಬಂದರು. ಸಣ್ಣಸ್ವಾಮಿಯ ಆಪ್ತ ಸ್ನೇಹಿತ ರುದ್ರಪ್ಪ ಹೇಳಿದಂತೆ ಪೋಲಿಸ್ ಕಂಪ್ಲೇಂಟ್ ಕೊಡಲು ತಾಯಿ ಮಗ ಪೋಲಿಸ್ ಠಾಣೆಗೆ ಹೋದರು. ರುದ್ರಪ್ಪನೂ ಜೊತೆಗೆ ಬಂದಿದ್ದ.
     ದೂರು ತೆಗೆದುಕೊಳ್ಳಲು ಸತಾಯಿಸಿದ್ದ ದಫೇದಾರ ಸಬ್ ಇನ್ಸ್‌ಪೆಕ್ಟರ್ ಬರುವವರೆಗೂ ದೂರು ತೆಗೆದುಕೊಂಡಿರಲಿಲ್ಲ. ಅರ್ಧ ಗಂಟೆ ನಂತರದಲ್ಲಿ ಬಂದಿದ್ದ ಸಬ್ಬಿನಿಸ್ಪೆಕ್ಟರ್ ರಾಜಮ್ಮನ ಗೋಳು ನೋಡಲಾರದೆ ದೂರು ತೆಗೆದುಕೊಳ್ಳಲು ಪೇದೆಗೆ ಸೂಚಿಸಿದ್ದರು. 'ಮನೆಯಲ್ಲಿ ಏನಾದರೂ ಜಗಳ ಆಗಿತ್ತಾ? ಅವರಿಗೆ ಆಗದವರು ಯಾರಾದರೂ ಇದ್ದಾರಾ?, ನೆಂಟರಿಷ್ಟರು, ಸ್ನೇಹಿತರು ಯಾರಾದರೊಂದಿಗೆ ಜಗಳ ಆಗಿತ್ತಾ? ಯಾವುದಾದರೂ ಕೋರ್ಟ್ ಕೇಸ್ ಇದೆಯಾ?' ಇತ್ಯಾದಿ ಪ್ರಶ್ನೆಗಳಿಗೆ 'ಅಂತಹುದೇನೂ ಇಲ್ಲ. ಅವರು ಕಾಣೆ ಆಗೋದಿಕ್ಕೆ ಕಾರಣವೇ ಇಲ್ಲ' ಎಂದು ತಾಯಿ, ಮಗ ಇಬ್ಬರೂ ಹೇಳಿದ್ದರು. 'ಸಣ್ಣಸ್ವಾಮಿ ತುಂಬಾ ಸಂಭಾವಿತ' ಅಂತ ರುದ್ರಪ್ಪನ ಶಿಫಾರಸೂ ಸೇರಿತು. 'ವಿಚಾರಿಸ್ತೀವಿ. ಬರ್ತಾರೆ ಬಿಡಮ್ಮಾ. ಏನೋ ಕಾರಣ ಇರತ್ತೆ, ಎಲ್ಲಿಗೋ ಹೋಗಿರ್ತಾರೆ. ಬಂದ ಮೇಲೆ ತಿಳಿಸದೇ ಇರಬೇಡಿ' ಎಂದು ಹೇಳಿ ಸಬ್ಬಿನಿಸ್ಪೆಕ್ಟರ್ ಅವರನ್ನು ಸಾಗಹಾಕಿದರು. ಅಳುತ್ತಲೇ ರಾಜಮ್ಮ ಮನೆಗೆ ಬಂದರು. ಅಂದು ರಾತ್ರಿ ಊಟ ಮಾಡಲು ಮನಸ್ಸಾಗದೆ ಹಾಗೇ ಇದ್ದವರಿಗೆ ಅದು ಯಾವಾಗಲೋ ನಿದ್ದೆ ಬಂದಿತ್ತು.

. . .(ಮುಂದುವರೆಯುವುದು)

ಸೋಮವಾರ, ಮಾರ್ಚ್ 3, 2014

ಹೊಳೆ ದಾಟಿದ ಮೇಲೆ . . .

     ಹೊಳೆ ದಾಟಿದ ಮೇಲೆ ಅಂಬಿಗನನ್ನು, ವಿದ್ಯಾಭ್ಯಾಸದ ನಂತರ ಶಿಷ್ಯ ಗುರುವನ್ನು, ಸಂಸಾರಿಯಾದ ಮಕ್ಕಳು ಪೋಷಕರನ್ನು, ಕಾಮವಾಂಛೆ ತೀರಿದ ನಂತರ ಪುರುಷ ಸ್ತ್ರೀಯನ್ನು, ಕೈಕೊಂಡ ಕೆಲಸ ಪೂರ್ಣವಾದ ನಂತರ ಕೆಲಸಕ್ಕೆ ನೆರವಾದವರನ್ನು ಮತ್ತು ರೋಗ ಗುಣವಾದ ನಂತರ ವೈದ್ಯನನ್ನು ಅವಗಣಿಸುವುದು ಸಾಮಾನ್ಯ ಎಂದು ವಿದುರನೀತಿಯಲ್ಲಿ ಉಲ್ಲೇಖವಿದೆ. ಸ್ವಾರ್ಥ ಪ್ರಧಾನವಾದಾಗ ಇಂತಹ ಅವಗಣನೆ ಕೆಲವೊಮ್ಮೆ ಕ್ರೂರ ರೂಪವನ್ನೂ ತಳೆಯಬಲ್ಲದು. ಇಂತಹ ಒಂದು ಕ್ರೂರ ಘಟನೆಯ ಕಥೆಯ ರೂಪ ಇಲ್ಲಿದೆ:
     ಗಡಿಬಿಡಿಯಿಂದ ಸುಬ್ಬಣ್ಣ ಬಸ್ ನಿಲ್ದಾಣದ ಹತ್ತಿರ ಬರುವುದಕ್ಕೂ ಅವನು ಹತ್ತಬೇಕಾಗಿದ್ದ ಬಸ್ಸು ಅವನ ಕಣ್ಣ ಮುಂದೆಯೇ ಹೊರಟುಹೋಗುವುದಕ್ಕೂ ಸರಿಯಾಯಿತು. ಇನ್ನು ಮುಂದಿನ ಬಸ್ಸಿಗೆ ಏಳು ಗಂಟೆಯವರೆಗೆ ಕಾಯಬೇಕಲ್ಲಾ ಎಂದುಕೊಂಡವನು ಹೋಟೆಲಿನಲ್ಲಿ ಕಾಫಿ ಕುಡಿದು ಸಮೀಪದ ಪಾರ್ಕಿಗೆ ಹೋಗಿ ಅಲ್ಲಿನ ಬೆಂಚಿನ ಮೇಲೆ ಉಸ್ಸಪ್ಪಾ ಎಂದು ಕುಳಿತವನಿಗೆ ಹಿಂದಿನ ದಿನಗಳ ನೆನಪಾದವು. ಇಪ್ಪತ್ತು ವರ್ಷಗಳ ಕಾಲ ಕಛೇರಿ ಗುಮಾಸ್ತನಾಗಿದ್ದವನು ಬಡ್ತಿ ಹೊಂದಿ ಕಳೆದ ಹನ್ನೆರಡು ವರ್ಷಗಳಿಂದ ಸೂಪರಿಂಟೆಂಡೆಂಟ್ ಆಗಿದ್ದ. ೩೨ ವರ್ಷಗಳ ಸೇವೆಯಿಂದ ರಸ ಹೀರಿದ ಕಬ್ಬಿನಂತೆ ತೋರುತ್ತಿದ್ದ ಅವನು ಅಷ್ಟರಲ್ಲಿ ಇಪ್ಪತ್ತು ವರ್ಗಾವಣೆಗಳನ್ನು ಕಂಡಿದ್ದ. ನ್ಯಾಯ, ನೀತಿ, ನಿಯತ್ತು ಎಂದು ದುಡಿಯುವವರನ್ನು ಕಂಡರೆ ಯಾರಿಗೆ ತಾನೇ ಹೊಂದಾಣಿಕೆ ಆಗುತ್ತೆ? ಮೇಲಾಧಿಕಾರಿಗಳು, ರಾಜಕಾರಣಿಗಳ ಅವಕೃಪೆ, ಸಹೋದ್ಯೋಗಿಗಳ ಅಸಹಕಾರಗಳನ್ನು ಇಂತಹ ನಿಯತ್ತಿನ ಪ್ರಾಣಿಗಳು ಎದುರಿಸಬೇಕಾದದ್ದೇ. ಹೀಗಾಗಿ ಊರಿಂದ ಊರಿಗೆ ಅಲೆಯಬೇಕಾಗಿದ್ದ ಸುಬ್ಬಣ್ಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಕಳೆದ ಇಪ್ಪತ್ತು ವರ್ಷಗಳಿಂದಲೂ ಹೆಂಡತಿ ಪರಿಮಳ, ಮಕ್ಕಳು ಶ್ವೇತಾ ಮತ್ತು ಶಂಕರರನ್ನು ಹೊಸೂರಿನಲ್ಲೇ ಬಿಟ್ಟು, ಸೂಟ್ ಕೇಸ್ ಹಿಡಿದುಕೊಂಡು ತಾನೊಬ್ಬನೇ ವರ್ಗಾವಣೆ ಆದ ಸ್ಥಳಕ್ಕೆ ಸುತ್ತಾಡುತ್ತಿದ್ದ. ವಾರಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ ಮಕ್ಕಳೊಡನೆ ಕಳೆದು ಬರುತ್ತಿದ್ದ. ಸುತ್ತಾಟ, ಹೋಟೆಲ್ ಊಟ, ಕೆಲಸದ ಒತ್ತಡ ಎಲ್ಲವೂ ಸೇರಿ ಆರೋಗ್ಯವೂ ಅಷ್ಟಕ್ಕಷ್ಟೇ ಆಗಿದ್ದ ಸುಬ್ಬಣ್ಣ ದೈಹಿಕವಾಗಿ, ಮಾನಸಿಕವಾಗಿ ಸೋತುಹೋಗಿದ್ದ. ಕಷ್ಟಪಟ್ಟು ಸಾಲ-ಸೋಲ ಮಾಡಿ ೧೫ ವರ್ಷದ ಹಿಂದೆ ಊರಿನಲ್ಲಿ ತನ್ನದೇ ಆದ ಒಂದು ಪುಟ್ಟ ಮನೆ ಕಟ್ಟಿದ್ದ ಸುಬ್ಬಣ್ಣ, ಮನೆಯ ಖರ್ಚಿನ ಜೊತೆಗೆ ಸಾಲದ ಕಂತುಗಳು, ಬಡ್ಡಿಗೆ ಹಣ ಹೊಂದಿಸುವಲ್ಲಿ ಹೈರಾಣಾಗಿದ್ದ. ಕಳೆದ ವರ್ಷವಷ್ಟೇ ಮನೆ ಸಾಲ ತೀರಿತ್ತು. ಮಗಳ ಮದುವೆಯೂ ಆಗಿ ಆಕೆ ಗಂಡನೊಂದಿಗೆ ನರಸಾಪುರದಲ್ಲಿ ಸುಖವಾಗಿದ್ದುದು ಮನಸ್ಸಿಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಗ್ರಾಜುಯೇಟ್ ಮಗ ಶಂಕರನಿಗೆ ನೌಕರಿ ಸಿಕ್ಕಿರದಿದ್ದುದೇ ಒಂದು ಚಿಂತೆಯಾಗಿದ್ದು, ಅದಕ್ಕಾಗಿ ಅವರಿವರ ಕೈಕಾಲು ಹಿಡಿದರೂ ಪ್ರಯೋಜನವಾಗಿರಲಿಲ್ಲ. ಅವನಿಗೊಂದು ನೌಕರಿ ಸಿಕ್ಕಿಬಿಟ್ಟಿದ್ದರೆ, ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು ಎಂದು ಅವನ ಮನ ಯೋಚಿಸುತ್ತಿತ್ತು.
     ಕತ್ತಲಾಗುತ್ತಾ ಬಂದು ಪಾರ್ಕಿನಲ್ಲಿದ್ದ ಜನರು ಖಾಲಿಯಾಗುತ್ತಿದ್ದರು. ಗಡಿಯಾರ ಏಳು ಗಂಟೆಗೆ ಹತ್ತು ನಿಮಿಷವಿರುವುದನ್ನು ತೋರಿಸುತ್ತಿತ್ತು. ಸುಬ್ಬಣ್ಣ ಜೋಳಿಗೆಯಂತಿದ್ದ ಬ್ಯಾಗನ್ನು ಹೆಗಲಿಗೇರಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಅಪರೂಪಕ್ಕೆ ಬಸ್ಸು ಸರಿಯಾದ ಸಮಯಕ್ಕೆ ಬಂತು. ಟಿಕೆಟ್ ಪಡೆದು ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ. ಹೊಸೂರಿಗೆ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ. ಸದ್ಯ, ಇನ್ನು ಆರು ತಿಂಗಳಿಗೆ ರಿಟೈರಾಗುತ್ತಿದ್ದು, ಈ ಪ್ರಯಾಣ, ಒದ್ದಾಟ ತಪ್ಪಿ, ಉಪ್ಪೋ, ಗಂಜಿಯೋ ಬರುವ ಪೆನ್ಶನ್ನಿನಲ್ಲಿ ಮನೆ ಊಟ ಮಾಡಿಕೊಂಡು ಮನೆಯವರೊಂದಿಗೆ ಇರಬಹುದೆಂದುಕೊಂಡಾಗ ಸಂತೋಷವಾಗುತ್ತಿತ್ತು. ಮನೆ ತಲುಪಿದಾಗ ರಾತ್ರಿ ಒಂಬತ್ತೂ ಮುಕ್ಕಾಲು ಆಗಿತ್ತು. ತರಲೆ ಭಾವಮೈದುನ ಕಿಟ್ಟನೂ ಮನೆಗೆ ಬಂದಿದ್ದ. ಎಲ್ಲರೂ ಹರಟೆ ಹೊಡೆಯುತ್ತಿದ್ದರು. ಕಿಟ್ಟ ಬಂದಾಗಲೆಲ್ಲಾ ಏನೇನೋ ಹೆಂಡತಿ, ಮಕ್ಕಳ ತಲೆಗೆ ತುಂಬಿ ಮನಸ್ಸು ಕೆಡಿಸುತ್ತಿದ್ದರಿಂದ ಸುಬ್ಬಣ್ಣನಿಗೆ ಅವನನ್ನು ಕಂಡರೆ ಅಷ್ಟಕ್ಕಷ್ಟೇ ಇದ್ದರೂ ಔಪಚಾರಿಕವಾಗಿ ಮಾತನಾಡಿಸುತ್ತಿದ್ದ.
     ಊಟ ಮಾಡುತ್ತಾ ಇದ್ದಾಗ ಕಿಟ್ಟ ಹೇಳಿದ: ಆ ಮೂಲೆಮನೆ ವೆಂಕಟೇಶ, ಅದೇ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದೋನು, ಆಕ್ಸಿಡೆಂಟ್ ಆಗಿ ಸತ್ತಿದ್ದನಲ್ಲಾ, ಅವನ ಮಗನಿಗೆ ಅನುಕಂಪದ ಆಧಾರದ ಮೇಲೆ ಡಿ.ಸಿ. ಆಫೀಸಿನಲ್ಲಿ ಅಸಿಸ್ಟೆಂಟ್ ಆಗಿ ಅಪಾಯಿಂಟ್ ಆಯಿತು. ನಿನ್ನೆ ನೌಕರಿಗೆ ಸೇರಿದ.
ಪರಿಮಳ:  ಹಾಗಾದರೆ ವೆಂಕಟೇಶನ ಹೆಂಡತಿಗೆ ಪೆನ್ಶನ್ ಬರಲ್ಲವಾ?
ಕಿಟ್ಟ:  ಎಲ್ಲಾ ಬರುತ್ತೆ. ಪೆನ್ಶನ್, ಗ್ರಾಚುಯಿಟಿ, ಬರಬೇಕಾಗಿದ್ದ ಎಲ್ಲ ಸವಲತ್ತೂ ಬಂದೇ ಬರುತ್ತೆ. ವೆಂಕಟೇಶ ಸತ್ತ ಅನ್ನೋದೊಂದೇ ಹೊರತು ಅವನ ಮನೆಯವರಿಗೆ ಇನ್ನೂ ಅನುಕೂಲವೇ ಆಯಿತು. ಮಗನಿಗೆ ಹೊಸ ನೌಕರಿ, ಒಳ್ಳೆ ಸಂಬಳ, ಜೊತೆಗೆ ವೆಂಕಟೇಶನ ಹೆಂಡತಿಗೆ ಸಾಯೋವರೆಗೂ ಪೆನ್ಶನ್ನು! ರಾಜರ ಹಂಗೆ ಇರಬಹುದು.
ಸುಬ್ಬಣ್ಣ:  ಏನೋ ನೀನು ಹೇಳೋದು? ಹೆಂಡತಿ, ಮಕ್ಕಳು ಚೆನ್ನಾಗಿರಬೇಕು ಅಂದ್ರೆ ಗಂಡ ಸತ್ತರೂ ಪರವಾಗಿಲ್ಲ ಅಂತ ಹೇಳ್ತೀಯಲ್ಲೋ!
ಕಿಟ್ಟ: ಇನ್ನೇನು ಬಿಡಿ ಭಾವಾ. ಆ ಕುಡುಕ ವೆಂಕಟೇಶ ಹೆಚ್ಚು ದಿನ ಏನೂ ಬದುಕ್ತಾ ಇರಲಿಲ್ಲ. ನೂರೆಂಟು ಕಾಯಿಲೆ ಅವನಿಗೆ. ಕೆಲಸದಲ್ಲಿದ್ದಾಗಲೇ ಸತ್ತಿದ್ದರಿಂದ ಮನೆಗೆ ಉಪಕಾರ ಆಯ್ತು ಬಿಡಿ. 
     ಸುಬ್ಬಣ್ಣ ಮಾತು ಮುಂದುವರೆಸದೆ ಊಟ ಮಾಡಿದವನೇ ಸುಸ್ತಾಗಿದ್ದರಿಂದ ಹೋಗಿ ಮಲಗಿಬಿಟ್ಟ. ಮಲಗಿದರೂ ಮನಸ್ಸು ಮಲಗಲಿಲ್ಲ. ಮಗನಿಗೆ ಒಂದು ನೌಕರಿ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತು, ಸುಖವಾಗಿ ಕಣ್ಣು ಮುಚ್ಚಬಹುದಿತ್ತು. ಮಿನಿಸ್ಟರು ಕೊಮಾರೇಗೌಡರು ೫ ಲಕ್ಷ ಕೊಟ್ಟರೆ ಡೈರಿಯಲ್ಲಿ ನೌಕರಿ ಕೊಡಿಸ್ತೀನಿ ಅಂದಿದ್ರು. ಸಾಲ ಸೋಲಾನಾದ್ರೂ ಮಾಡಿ ಹಣ ಹೊಂದಿಸಿ ಅವನಿಗೆ ಒಂದು ಕೆಲಸ ಅಂತ ಕೊಡಿಸಬೇಕು ಅಂತೆಲ್ಲಾ ಮನ ಯೋಚಿಸುತ್ತಿತ್ತು. ಹಾಗೆಯೇ ನಿದ್ರೆ ಆವರಿಸಿತು. ಗಾಢ ನಿದ್ದೆಯಲ್ಲಿದ್ದ ಸುಬ್ಬಣ್ಣನಿಗೆ ಮಧ್ಯರಾತ್ರಿಯಲ್ಲಿ ಏನೋ ಶಬ್ದವಾದಂತಾಗಿ ಎಚ್ಚರವಾಯಿತು. ಲೈಟು ಹಾಕಲು ಎದ್ದವನಿಗೆ ಹಿಂಬದಿಯಿಂದ ತಲೆಗೆ ದೊಣ್ಣೆಯಿಂದ ಬಲವಾದ ಪೆಟ್ಟು ಬಿದ್ದಿತ್ತು. ಕುಸಿದು ಬೀಳುತ್ತಾ 'ಅಮ್ಮಾ' ಎಂದದ್ದೇ ಅವನ ಕೊನೆಯ ಮಾತಾಯಿತು.
     ಓದುಗರೇ, ಹೇಳಬೇಕಾಗಿದ್ದಷ್ಟನ್ನು ಹೇಳಿಯಾಗಿದೆ. ಶೇಷ ಭಾಗವನ್ನು ತಮ್ಮ ವಿವೇಚನೆಗೆ ತಕ್ಕಂತೆ ಮುಂದುವರೆಸಿಕೊಳ್ಳಬಹುದು.  
-ಕ.ವೆಂ.ನಾಗರಾಜ್.    

ಬುಧವಾರ, ಜೂನ್ 5, 2013

ಪರಮೇಶಿ


    ಮಗ ದೂಕಿದ ರಭಸಕ್ಕೆ ಬೋರಣ್ಣ ಮುಖ ಅಡಿಯಾಗಿ ಬಿದ್ದ. ಮೂಗು ಒಡೆದು ರಕ್ತ ಚಿಮ್ಮಿತ್ತು. ಹೆಗಲಲ್ಲಿದ್ದ ಟವೆಲಿನಿಂದ ರಕ್ತ ಸುರಿಯದಂತೆ ಒತ್ತಿ ಹಿಡಿದುಕೊಂಡ ಬೋರಣ್ಣನನ್ನು ದುರುಗುಟ್ಟಿಕೊಂಡು ನೋಡಿದ ಪರಮೇಶಿ ಅಪ್ಪನ ಮುರುಕುಲು ಟ್ರಂಕು ಕೊಡವಿ ಅದರಲ್ಲಿದ್ದ ೨೦೦ ರೂಪಾಯಿ ಎತ್ತಿಕೊಂಡು ಹೊರಟ. ಪರಮೇಶಿಯ ಹೆಂಡತಿ ನಾಗಿಗೆ ಇದೆಲ್ಲಾ ಮಾಮೂಲು. ಅವಳು ಗೊಣಗಾಡಿಕೊಂಡು ಕಸ ಗುಡಿಸುವುದನ್ನು ಮುಂದುವರೆಸಿದಳು. ಮನೆಯ ಕಟ್ಟೆಯ ಮೇಲೆ ತಲೆಯ ಮೇಲೆ ಕೈ ಹೊತ್ತು ಕುಳಿತ ಬೋರಣ್ಣ, 'ಎಂಥಾ ಮಗ ಹಿಂಗಾಗ್ಬುಟ್ನಲ್ಲಾ' ಅಂತ ಕೊರಗುತ್ತಿದ್ದ. ಪರಮೇಶಿ ಮೊದಲು ಹೀಗಿರಲಿಲ್ಲ. ಅಪ್ಪನ ಜೊತೆ ಜೊತೆಗೆ ಇದ್ದ ಒಂದೂವರೆ ಎಕರೆ ಹೊಲದಲ್ಲಿ ಕಷ್ಟಪಟ್ಟು ಗೇಮೆ ಮಾಡುತ್ತಿದ್ದ. ಬರುವ ಆದಾಯ ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು. ಗೆಳೆಯರ ಸಾವಾಸದಿಂದ ಕುಡಿಯುವ ಚಟಕ್ಕೆ ಬಿದ್ದ ಮೇಲೆ ಪರಮೇಶಿಗೆ ಹಣ ಸಾಲದಾಗುತ್ತಿತ್ತು. ಅಪ್ಪನಿಗೆ ಬರುತ್ತಿದ್ದ ಸಂಧ್ಯಾ ಸುರಕ್ಷದ ಪಿಂಚಣಿ ಹಣದ ಮೇಲೂ ಅವನ ಕಣ್ಣು ಬೀಳುತ್ತಿತ್ತು. ಈಗ ಆಗಿದ್ದೂ ಅದೇ. 
     ಪರಮೇಶಿಯ ಇಸ್ಪೀಟು ಗೆಳೆಯರು ಕೊಟ್ಟಿದ್ದ ಸಲಹೆ ಅವನಿಗೆ ಚೆನ್ನಾಗಿ ಕಂಡಿತ್ತು. ಅಪ್ಪನಿಗೆ ೬೦ ವರ್ಷ ಆಗಿರದಿದ್ದರೂ ಸರ್ಕಾರೀ ಡಾಕ್ಟರರಿಗೆ ಲಂಚ ಕೊಟ್ಟು ೬೫ ವರ್ಷ ಅಂತ ಸರ್ಟಿಫಿಕೇಟು ಮಾಡಿಸಿದ. ಜಮೀನು ಇದ್ದರೆ ಪಿಂಚಣಿ ಬರಲ್ಲ ಅಂತ ವಿಲೇಜ್ ಅಕೌಂಟೆಂಟ್ ಹೇಳುತ್ತಿದ್ದುದನ್ನು ಕೇಳಿದ್ದ ಅವನು ಅಪ್ಪನನ್ನು ಪುಸಲಾಯಿಸಿ, ಅವನಿಗೆ ಇಷ್ಟವಿಲ್ಲದಿದ್ದರೂ ಪಿಂಚಣಿ ಆಸೆ ತೋರಿಸಿ ಜಮೀನನ್ನು ತನ್ನ ಹೆಸರಿಗೆ ಬರೆಸಿಕೊಂಡ. ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಿಲ್ಲವೆಂದು ಅಪ್ಪನಿಂದ ಅಫಿಡವಿಟ್ಟು ಮಾಡಿಸಿದ. ಅಪ್ಪನ ಕೈಯಲ್ಲಿದ್ದ ಉಂಗುರ ಮತ್ತು ಕೊರಳಲ್ಲಿದ್ದ ಒಂದೆಳೆ ಬಂಗಾರದ ಸರ ಲಂಚಕ್ಕಾಗಿ ಖರ್ಚಾದರೂ ಪಿಂಚಣಿ ಆದೇಶ ಬಂದಾಗ ಬೋರಣ್ಣ ಖುಷಿ ಪಟ್ಟಿದ್ದ. ಹೇಗೋ ಜೀವನಕ್ಕೆ ಹಗುರವಾಯ್ತು ಅಂದುಕೊಂಡಿದ್ದ. ಆ ಹಣವನ್ನೂ ಪರಮೇಶಿ ಈರೀತಿ ಕಿತ್ತುಕೊಂಡು ಹೋಗತೊಡಗಿದಾಗ ಅವನಿಗೆ ಕೊರಗುವುದೊಂದೇ ಉಳಿದಿದ್ದ ದಾರಿಯಾಗಿತ್ತು.
     ಹಲವು ದಿನಗಳ ನಂತರ ಪರಮೇಶಿಗೆ ಇನ್ನೊಂದು ಐಡಿಯಾ ಹೊಳೆಯಿತು. ಹೆಂಡತಿಯ ಊರು ದುಮ್ಮೇನಹಳ್ಳಿಯ ವಿಳಾಸದಲ್ಲಿ ಅಪ್ಪನಿಗೆ 'ರುದ್ದಾಪಿ' (ವೃದ್ಧಾಪ್ಯ ವೇತನ) ಮಾಡಿಸಲು ಆರು ತಿಂಗಳು ಅಲೆದಾಡಿದ. ಅಂತೂ ಅದೂ ಸಿಕ್ಕಿತು. ಆ ಹಳ್ಳಿಯ ಹತ್ತಿರದ ಬ್ಯಾಂಕಿನಲ್ಲಿ ಅಕೌಂಟು ತೆಗೆದು ಹಣ ಅಲ್ಲೇ ಜಮಾ ಆಗುವಂತೆ ಆಯಿತು. ಅಪ್ಪನೊಡನೆ ಆದ ಒಪ್ಪಂದದಂತೆ ಆ ಹಣ ಪರಮೇಶಿಯ ಪಾಲಾಗುತ್ತಿತ್ತು. ಕುಡಿತ, ಇಸ್ಪೀಟಿನ ಚಟಕ್ಕೆ ಬಿದ್ದ ಅವನು ಮಾಡಿದ ಸಾಲಕ್ಕೆ ಪಿತ್ರಾರ್ಜಿತವಾಗಿದ್ದ ಜಮೀನು ಸಾಲಗಾರರ ಸ್ವತ್ತಾಗಲು ತಡವಾಗಲಿಲ್ಲ. ನಾಗಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಮನೆಯ ಕಡೆ ಯೋಚನೆ ಮಾಡುವುದನ್ನೇ ಪರಮೇಶಿ ಬಿಟ್ಟಿದ್ದ. ಹಗಲಿನಲ್ಲಿ ಗೆಳೆಯರೊಡನೆ ಪಾಳು ಮನೆಯ ಜಗಲಿಯಲ್ಲಿ ಇಸ್ಪೀಟಾಟ, ಸಂಜೆ ಹೊತ್ತು ಕುಡಿಯುವುದಕ್ಕೆ ಅಂದಿನ ಖರ್ಚು ಹೇಗಾದರೂ ನಿಭಾಯಿಸಿದರೆ ಅವನಿಗೆ ತೃಪ್ತಿಯಾಗುತ್ತಿತ್ತು. ಎಡವಟ್ಟಾದಾಗ ನಾಗಿಯ ಹತ್ತಿರಾನೋ, ಅಪ್ಪನ ಹತ್ತಿರಾನೋ ಕುಡಿಯುವುದಕ್ಕೆ ಹಣ ಕಿತ್ತುಕೊಳ್ಳುತ್ತಿದ್ದ. ಕೊಡದಿದ್ದರೆ ನಾಲ್ಕು ಬಾರಿಸುತ್ತಲೂ ಇದ್ದ. ಇನ್ನು ಮುಂದೆ ಅಗ್ಗದ ದರದಲ್ಲಿ ಹೆಂಡ ಕೊಡ್ತಾರಂತೆ, ರೂಪಾಯಿಗೆ ಒಂದು ಕೆಜಿ ಅಕ್ಕಿಯಂತೆ, ೩೦ ಕೆಜಿ ಕೊಡ್ತಾರಂತೆ ಅಂತ ಸುದ್ದಿ ಕೇಳಿದ ದಿನ ಪರಮೇಶಿ ಗೆಳೆಯರೊಡನೆ ಖುಷಿಗೆ ಹೆಚ್ಚಾಗೇ ಕುಡಿದು ಸಂಭ್ರಮ ಪಟ್ಟಿದ್ದ. ಹೇಗೂ ಅಪ್ಪನ ಹೆಸರಿನಲ್ಲಿ ಒಂದು ಕಾರ್ಡು ಮತ್ತು ತನ್ನ ಹೆಸರಿನಲ್ಲಿ ಒಂದು ಕಾರ್ಡು ಇರುವುದರಿಂದ ೬೦ ಕೆಜಿ ಅಕ್ಕಿ ಸಿಗುತ್ತೆ. ೧೫ ಕೆಜಿ ಮನೆಗೆ ಸಾಕಾಗುತ್ತೆ, ಉಳಿದ ೪೫ ಕೆಜಿ ಅಕ್ಕಿಯನ್ನು ಮಾರಿದರೆ ಎಷ್ಟು ಸಿಗಬಹುದು ಎಂದು ಅವನ ಮನಸ್ಸು ಲೆಕ್ಕ ಹಾಕುತ್ತಿತ್ತು.
     ಕೆಲಸ ಮಾಡಲು ಒಗ್ಗದ ಸೋಂಬೇರಿ ಪರಮೇಶಿ ಗೆಳೆಯರ ಬಳಗ ಸಾಯಂಕಾಲದ ಖರ್ಚಿಗೆ ಹೇಗಾದರೂ ದುಡ್ಡು ಹೊಂದಿಸೋಕೆ ಮನೆಹಾಳು ಐಡಿಯಾಗಳನ್ನೇ ಮಾಡುತ್ತಿತ್ತು. ಅದರಿಂದ ಹಾಗೂ ಹೀಗೂ ಕಾಸು ಹೊಂದಾಣಿಕೆಯಾಗುತ್ತಿತ್ತು. ಊರಿನಲ್ಲಿ ಸಣ್ಣ ಪುಟ್ಟ ಕಳ್ಳತನ ಆದರೂ ಜನ ಇವರನ್ನೇ ಅನುಮಾನಿಸುತ್ತಿದ್ದರು. ದಪ್ಪ ಚರ್ಮದ ಇವರಿಗೆ ಅದರಿಂದ ಏನೂ ಅನ್ನಿಸುತ್ತಿರಲಿಲ್ಲ. ದಿನಗಳು ಹೀಗೇ ಸಾಗುತ್ತಿದ್ದವು. ಒಮ್ಮೆ ಇವರು ಮಾಮೂಲು ಕಟ್ಟೆ ಮೇಲೆ ಬೀಡಿ ಸೇದುತ್ತಾ ಕುಳಿತಿದ್ದಾಗ ತಿಮ್ಮೇಗೌಡ ತನ್ನ ಹೆಂಡತಿಯೊಂದಿಗೆ ಬ್ಯಾಗು ಹಿಡಿದು ಪೇಟೆ ಬಸ್ಸು ಹತ್ತಿದ್ದನ್ನು ಕಂಡರು. ಇವರುಗಳು ಕಣ್ಣಿನಲ್ಲೇ ಮಾತನಾಡಿಕೊಂಡರು. ಸದ್ದಿಲ್ಲದೆ ತಿಮ್ಮೇಗೌಡನ ಮನೆಯ ಕಡೆಗೆ ಹೊರಟರು. ಹಳ್ಳಿಯ ಹೆಚ್ಚಿನವರು ಜಮೀನು, ಕೂಲಿ ಕೆಲಸಗಳಿಗೆ ಹೋಗಿ ಮುದುಕರು, ಮೋಟರು ಮಾತ್ರ ಕೆಮ್ಮುತ್ತಾ, ನರಳುತ್ತಾ ಮನೆಗಳಲ್ಲಿ ಉಳಿದಿದ್ದ ಹೊತ್ತು ಅದು. ಹೊಂಚು ಹಾಕಿ ತಿಮ್ಮೇಗೌಡನ ಮನೆಗೆ ಹೋದ ಅವರು ತಿಮ್ಮೇಗೌಡನ ಮಗಳು ಇವರು ಯಾಕೆ ಬಂದರು ಎಂದು ಅಂದುಕೊಳ್ಳುವ ಹೊತ್ತಿಗೆ ಇವರ ಹಿಡಿತಕ್ಕೆ ಸಿಕ್ಕಿಬಿದ್ದಿದ್ದಳು. ಬಾಯಿ ಮುಚ್ಚಿದ್ದರಿಂದ ಕೊಸರಾಡಲು ಮಾತ್ರ ಅವಳಿಗೆ ಸಾಧ್ಯವಾಗಿದ್ದುದು. ಕೆಲವೇ ನಿಮಿಷಗಳಲ್ಲಿ ಎಲ್ಲಾ ಮುಗಿಯಿತು. ಬಾಯಿಯೊಡನೆ ಮೂಗೂ ಮುಚ್ಚಿದ್ದರಿಂದ ಅವಳ ಆಯಸ್ಸೂ ಮುಗಿದಿತ್ತು. ಅವಳು ಸತ್ತಿದ್ದನ್ನು ಕಂಡು ಗಾಬರಿಯಾದ ಗೆಳೆಯರು ಸ್ವಲ್ಪ ಹೊತ್ತಿನಲ್ಲೇ ಸಾವರಿಸಿಕೊಂಡು ಅವಳನ್ನು ಅಡಿಗೆ ಕೋಣೆಗೆ ಎಳೆದುಹಾಕಿ, ಮೈಮೇಲೆ ಸೀಮೆ ಎಣ್ಣೆ ಸುರಿದು, ಗ್ಯಾಸ್ ಸ್ಟೌವಿನ ಗ್ಯಾಸ್ ಹೊರಬಿಟ್ಟು ಅಡಿಗೆಮನೆಯ ಬಾಗಿಲು, ಕಿಟಕಿಗಳನ್ನು ಹಾಕಿ ಯಾರಿಗೂ ಕಾಣದಂತೆ ಒಬ್ಬೊಬ್ಬರಾಗಿ ಹೊರಬಂದರು. ಬಂದವರೇ ಅರ್ಧ ಘಂಟೆಯ ನಂತರದಲ್ಲಿ ಮನೆಯ ಹಿಂಭಾಗದಿಂದ ಬೆಂಕಿ ಕಡ್ಡಿ ಗೀರಿ ಅಡಿಗೆ ಮನೆಯ ಕಿಟಕಿಯ ಒಳಗೆ ಹಾಕಲು ಪರಮೇಶಿಯನ್ನು ಪುಸಲಾಯಿಸಿದರು. ಪರಮೇಶಿ ಅಡಿಗೆ ಮನೆ ಕಿಟಕಿ ತೆರೆದು ಕಡ್ಡಿ ಗೀರುತ್ತಿದ್ದಂತೆಯೇ ಭುಗಿಲೆದ್ದ ಜ್ವಾಲೆ ಅವನ ಮುಖದ ಮೇಲೇ ಅಪ್ಪಳಿಸಿತ್ತು. ಗ್ಯಾಸ್ ಸಿಲಿಂಡರ್ ಸಿಡಿದು ೧೭ ವರ್ಷದ ರುಕ್ಮಿಣಿ ಮತ್ತು ಮನೆಯ ಹಿಂಭಾಗದಲ್ಲಿ ಹೋಗುತ್ತಿದ್ದ ಪರಮೇಶ ಎಂಬ ವ್ಯಕ್ತಿಯ ದುರ್ಮರಣ ಎಂದು ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು. 

-ಕ.ವೆಂ.ನಾಗರಾಜ್.

ಸೋಮವಾರ, ಜನವರಿ 21, 2013

'ಬ್ರೇಕಿಂಗ್' ನ್ಯೂಸ್!


   ಗಾಬರಿಯಿಂದ ಮತ್ತು ನಡುಗುವ ಧ್ವನಿಯಿಂದ ಮಂಕ ದೂರವಾಣಿಯಲ್ಲಿ, "ಬೇಗ ಬಾರೋ. ನಾನು ಮಹಾರಾಜ ಪಾರ್ಕಿನಲ್ಲಿದ್ದೀನಿ. ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟಿದ್ದೀನಿ. ಪರಿಹಾರ ಸಿಗದೇ ಇದ್ದರೆ ನಾನು ಸತ್ತು ಹೋಗಿಬಿಡ್ತೀನಿ. ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ" ಎಂದಾಗ ಮಡ್ಡಿ, "ಏನು ಸಮಾಚಾರ? ಗಾಬರಿಯಾಗಬೇಡ. ಈಗಲೇ ಹೊರಟುಬರ್ತೀನಿ" ಅಂದವನೇ ಪ್ಯಾಂಟು ಸಿಕ್ಕಿಸಿಕೊಂಡು ಸ್ಕೂಟರ್ ಹತ್ತಿ ಪಾರ್ಕಿಗೆ ಬಂದ. ಒಂದು ಮೂಲೆಯ ಬೆಂಚಿನಲ್ಲಿ ತಲೆಯ ಮೇಲೆ ಟವೆಲ್ ಹಾಕಿಕೊಂಡು ಕುಳಿತಿದ್ದವನು ಮಂಕ ಎಂದು ಗೊತ್ತಾದದ್ದು ಅವನು ಮಡ್ಡಿಯನ್ನು ಕುರಿತು 'ನಾನು ಇಲ್ಲಿದ್ದೀನಿ, ಬಾರೋ' ಎಂದು ಕರೆದಾಗಲೇ. ಆಗ ನಡೆದ ಸಂಭಾಷಣೆ:
ಮಡ್ಡಿ: ಯಾಕೋ ಹಿಂಗಿದೀಯ? ಏನಾಯ್ತೋ?
ಮಂಕ: ಸಂಕ್ರಾಂತಿ ಹಬ್ಬದ ಹಿಂದಿನ ದಿನ ನನಗೂ ನನ್ನ ಹೆಂಡತಿಗೂ ನಾನು ಹಬ್ಬಕ್ಕೆ ಸೀರೆ ಕೊಡಿಸಲಿಲ್ಲ ಎಂದು ಜಗಳ ಆಗಿದ್ದು ನಿನಗೆ ಗೊತ್ತಲ್ಲಾ?
ಮಡ್ಡಿ: ಹೌದು, ನೀನೇ ಹೇಳಿದ್ದೆ. ಸ್ವಲ್ಪ ತೊಂದರೆ ಇದೆ. ಶಿವರಾತ್ರಿ ಹೊತ್ತಿಗೆ ಕೊಡಿಸ್ತೀನಿ ಅಂದಿದ್ದೆಯಂತೆ.
ಮಂಕ: ಹೂಂ, ಕಣೋ. ಅವಳೂ ಸುಮ್ಮನಾಗಿದ್ದಳು. ಹಬ್ಬದ ದಿನ ಅವಳ ತಮ್ಮ ಮನೆಗೆ ಬಂದಿದ್ದ. ಅವನು ನನ್ನ ಹೆಂಡತಿ ತಲೆ ಕೆಡಿಸಿ ಮತ್ತೆ ನಮಗೆ ಜಗಳ ತಂದಿಟ್ಟ. ನಾನೂ ಸಿಟ್ಟಿಗೆದ್ದು ಎರಡು ಮಾತು ಜಾಸ್ತಿನೇ ಆಡಿದೆ. ಸಿಟ್ಟಿನಲ್ಲಿ ನಿನ್ನ ಕಟ್ಟಿಕೊಂಡು ಸಾಕಾಗಿ ಹೋಗಿದೆ ಡೈವೋರ್ಸ್ ಕೊಡ್ತೀನಿ ಅಂದೆ. ಅವತ್ತೆಲ್ಲಾ ದುಸುಮುಸುನಲ್ಲೇ ಕಳೀತು ಕಣೋ. ಮರುದಿನ ಬೆಳಿಗ್ಗೆ ಅವಳು ತನ್ನ ತಮ್ಮನ ಜೊತೆಗೆ ತೌರುಮನೆಗೆ ಹೊರಟೇಬಿಟ್ಟಳು ಕಣೋ. ನಾನೂ ಹೇಳೋ ಅಷ್ಟು ಹೇಳಿದೆ, ಕೇಳಲೇ ಇಲ್ಲ.
ಮಡ್ಡಿ: ಯಾಕಂತೆ?
ಮಂಕ: ನಾನು ಯಾವೋಳ ಜೊತೆಗೋ ಸಂಬಂಧ ಇಟ್ಟುಕೊಂಡಿದ್ದೇನಂತೆ. ಅದಕ್ಕೇ ಡೈವೋರ್ಸ್ ಮಾತಾಡ್ತಿದೀನಿ, ಹಾಗೆ, ಹೀಗೆ ಅಂತ ಅಂದಳು ಕಣೋ. ಏನು ಹೇಳಿದರೂ ಕೇಳಲಿಲ್ಲ. ಹೋದಳು. ಫೋನು ಮಾಡಿದರೆ ಸ್ವಿಚಾಫ್ ಮಾಡಿಕೊಂಡಿದ್ದಳು.
ಮಡ್ಡಿ: ಆಮೇಲೆ?
ಮಂಕ: ಅವಳು ಹೋದ ದಿವಸ ನಾನು ಊಟಾನೂ ಮಾಡದೆ ಬೇಜಾರಾಗಿ ಮಲಗಿಕೊಂಡಿದ್ದೆ. ಮಧ್ಯಾಹ್ನದ ಹೊತ್ತಿಗೆ ಯಾರೋ ಡಬ ಡಬ ಅಂತ ಬಾಗಿಲು ಬಡಿದರು. ತೆಗೆದು ನೋಡಿದರೆ ಟಿವಿಯವರು ಬಂದು ನನ್ನನ್ನು ಮುತ್ತಿಕೊಂಡರು. ಮಹಿಳಾ ಸಂಘದವರೂ ಬಂದಿದ್ದರು. ಹೆಗಲ ಮೇಲೆ ಬಣ್ಣ ಬಣ್ಣದ ಶಾಲಿನಂತಹುದನ್ನು ಹಾಕಿಕೊಂಡಿದ್ದ ಕೆಲವು ದಾಂಡಿಗರೂ ಇದ್ದರು. ಅವರು ನನ್ನನ್ನು ಏನೇನೋ ಕೇಳಿದರು. ನಾನು ತಬ್ಬಿಬ್ಬಾಗಿ ಮಾತನಾಡಲು ತಡವರಿಸಿದಾಗ ಎಲ್ಲರೂ ಸೇರಿ ನನ್ನನ್ನು ಹಿಗ್ಗಾಮುಗ್ಗಾ ಹೊಡೆದರು  ಕಣೋ. ಅವರಲ್ಲಿ ಒಬ್ಬಳು ಮಾರಿಮುತ್ತು ಅಂತಹವಳು ಇದ್ದಳು. ಅವಳನ್ನು ನೋಡಿದರೇ ಮೂರ್ಛೆ ಹೋಗುವಂತಾಗುತ್ತೆ. ಅವಳು ಚಪ್ಪಲಿಯಲ್ಲೂ ಹೊಡೆದಳು ಕಣೋ.
ಮುಂದೆ ಮಾತನಾಡಲಾಗದೇ ಮಂಕ ಬಿಕ್ಕಿ ಬಿಕ್ಕಿ ಅಳತೊಡಗಿದ. ಮಡ್ಡಿ ಸಮಾಧಾನ ಮಾಡಿದ.
ಮಡ್ಡಿ: ಯಾರೋ ಅವರು ಬಂದಿದ್ದವರು?
ಮಂಕ: ಆ 'ತೋರಣ' ಟಿವಿಯವರು. ಬಂದ ಜನ ಯಾರೂ ಅಂತಲೇ ನನಗೆ ಗೊತ್ತಿಲ್ಲ. ಅವರು ಏನು ಕೇಳಿದರೋ, ನಾನು ಏನು ಉತ್ತರ ಕೊಟ್ಟೆನೋ ನನಗೇ ಗೊತ್ತಿಲ್ಲ ಕಣೋ. ಟಿವಿಯವರು 'ಈಗ ಸ್ಟುಡಿಯೋಗೆ ಹೋಗಿ ಸುದ್ದಿ ಕೊಡಬೇಕು. ಇನ್ನು ಒಂದು ಗಂಟೆ ಬಿಟ್ಟು ಬರ್ತೀವಿ, ಇವನನ್ನು ಪೋಲಿಸರು ಬರುವವರೆಗೂ ಎಲ್ಲೂ ಹೋಗಲು ಬಿಡಬೇಡಿ' ಅಂತ ಅಲ್ಲಿದ್ದ ಜನಕ್ಕೆ ಹೇಳಿ ಹೋದರು. ಆ ಜನರಿಗೆ ಬಚ್ಚಲುಮನೆಗೆ ಹೋಗಿ ಬರ್ತೀನಿ ಅಂತ ಸುಳ್ಳು ಹೇಳಿ ಒಳಕ್ಕೆ ಹೋದವನು ಹಿಂದುಗಡೆ ಕಾಂಪೌಂಡು ಹಾರಿ ಇಲ್ಲಿ ಬಂದು ಕೂತಿದೀನಿ ಕಣೋ. ನಾನು ಇಲ್ಲಿರೋದು ಗೊತ್ತಾದರೆ ಕೊಂದೇ ಬಿಡ್ತಾರೋ ಏನೋ. ಆ ಜನ ನನ್ನ ಮನೇನ ಏನು ಮಾಡಿರ್ತಾರೋ ಗೊತ್ತಿಲ್ಲ. ಮೂಢಂಗೂ ವಿಷಯ ತಿಳಿಸು. ಅವನು ಏನಾದರೂ ಮಾಡ್ತಾನೆ. 
     ಅಳುತ್ತಾ, ಬಿಕ್ಕುತ್ತಾ ಮಾತನಾಡುತ್ತಿದ್ದ ಮಂಕನ ಗೋಳು ನೋಡಿ ಏನು ಹೇಳಬೇಕೋ ಗೊತ್ತಾಗದೇ ಅವನನ್ನು ಸಮಾಧಾನ ಮಾಡಿ 'ಸದ್ಯಕ್ಕೆ ನನ್ನ ಮನೆಗೆ ಬಂದಿರು' ಎಂದು ಹೇಳಿ ಸ್ಕೂಟರಿನಲ್ಲಿ ಕರೆದುಕೊಂಡು ಹೊರಟ. ಮಂಕ ಮುಖ ಕಾಣದಂತೆ ಟವೆಲಿನಲ್ಲಿ ಮುಖ ಮರೆ ಮಾಡಿಕೊಂಡು ಕುಳಿತಿದ್ದ. ಮಡ್ಡಿಯ ಹೆಂಡತಿ ಮಂಕನನ್ನು ಕಂಡವಳೇ, 'ಈ ದರಿದ್ರಾನ ನಮ್ಮ ಮನೆಗೆ ಯಾಕ್ರೀ ಕರಕೊಂಡು ಬಂದ್ರೀ?' ಅಂತ ಮನೆಯ ಬಾಗಿಲಲ್ಲೇ ಅಡ್ಡ ಹಾಕಿದಳು. ಅವಳನ್ನು ಸಮಾಧಾನಿಸಿ ಮನೆಯೊಳಗೆ ಕರೆದುಕೊಂಡು ಹೋಗಲು ಮಡ್ಡಿಗೆ ಸಾಕು ಸಾಕಾಯಿತು. ಟಿವಿಯಲ್ಲಿ ಮಂಕನನ್ನು ಜನರು ಹೊಡೆಯುತ್ತಿದ್ದ ದೃಷ್ಯವನ್ನು ಪದೇ ಪದೇ ತೋರಿಸಿ, 'ಪತ್ನಿಪೀಡಕ ಪತಿ ಪರಾರಿ' ಎಂಬ ಬ್ರೇಕಿಂಗ್ ನ್ಯೂಸ್ ಹಾಕಿದ್ದರು. ಮಡ್ಡಿಯ ಹೆಂಡತಿಯ ಸಿಟ್ಟಿನ ಕಾರಣ ಗೊತ್ತಾಯಿತು. ಮಂಕನ ಪತ್ನಿ ಕಣ್ಣೀರು ಹಾಕಿಕೊಂಡು 'ತನ್ನ ಗಂಡ ಯಾರೋ ಬೇರೆ ಒಬ್ಬರನ್ನು ಮದುವೆ ಆಗುವ ಸಲುವಾಗಿ ತನಗೆ ಡೈವೋರ್ಸ್ ಕೊಡ್ತೀನಿ ಅಂತ ಹೇಳಿ ನನ್ನನ್ನು ಬೀದಿಪಾಲು ಮಾಡುತ್ತಿದ್ದಾರೆ' ಎನ್ನುತ್ತಿದ್ದ ಸುದ್ದಿಯ ಕ್ಲಿಪಿಂಗ್ ಆಗಾಗ ಹಾಕುತ್ತಲೇ ಇದ್ದರು. ಟಿವಿ ನಿರ್ವಾಹಕ ರೋಗನಾಥ "ಮಂಕ ಮಳ್ಳನಂತೆ ಕಂಡರೂ ಪತ್ನಿಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ; ವಿಚಾರಿಸಲು ಹೋಗಿದ್ದವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ; ಪೋಲಿಸರು ಆರೋಪಿಯ ಹುಡುಕಾಟದಲ್ಲಿದ್ದಾರೆ. ಪರಾರಿಯಾದ ಪಾಪಿ ಪತಿಯ ವಿರುದ್ಧ ಜನರ ಆಕ್ರೋಷ ಎಷ್ಟಿತ್ತು ಎಂಬುದನ್ನು ಒಂದು ಬ್ರೇಕ್ ನಂತರ ನೋಡೋಣ. ಸದಾ ನಿಮ್ಮೊಂದಿಗೆ, ನಿಮ್ಮೆಲ್ಲರ ಅಚ್ಚುಮೆಚ್ಚಿನ ಸುಟ್ಟ-ಸೊಟ್ಟ-ಅಕಟಕಟ ಸುದ್ದಿಗಳನ್ನು ನೀಡುವ ತೋರಣ ನ್ಯೂಸ್" ಎಂದು ಹೇಳುತ್ತಿದ್ದುದನ್ನು ಕೇಳಿದ ಮಂಕ ಕುಸಿದುಬಿಟ್ಟ. ಜನರಿಂದ ಬಿದ್ದ ಪೆಟ್ಟಿನಿಂದ ಜರ್ಜರಿತನಾಗಿದ್ದ ಅವನಿಗೆ ಅದಕ್ಕಿಂತ ಈ ಸುದ್ದಿಯಿಂದ ಬಿದ್ದ ಪೆಟ್ಟು ದೊಡ್ಡದಾಗಿತ್ತು. ಮಡ್ಡಿ ಅವನನ್ನು ಸಮಾಧಾನಿಸಿ, ತನ್ನ ಪತ್ನಿಗೂ ನಿಜ ವಿಷಯ ತಿಳಿಸಿ ಅವಳನ್ನು ಒಪ್ಪಿಸಿ ಹಸಿದಿದ್ದ ಅವನಿಗೆ ತಿಂಡಿ, ಕಾಫಿ ಕೊಡಿಸಿದ. ಮಂಕನನ್ನು ತನ್ನ ಮನೆಯಲ್ಲೇ ಬಿಟ್ಟು, ಮಡ್ಡಿ ಮಂಕನ ಮನೆಯ ಸ್ಥಿತಿ ನೋಡಲು ಅವನ ಮನೆಗೆ ಹೋದರೆ ಮನೆಯ ಮುಂದೆ ಇಬ್ಬರು ಪೋಲಿಸರು ಕಾಯುತ್ತಿದ್ದರು. ಅವನ ಮನೆಯ ಟಿವಿ, ಪೀಠೋಪಕರಣಗಳು, ಸಾಮಾನುಗಳನ್ನು ಜನರು ಒಡೆದು ಹಾಕಿದ್ದು, ಮನೆಯ ಒಳಗೆ ಬಾಂಬು ಸಿಡಿದರೆ ಹೇಗಾಗುತ್ತದೋ ಹಾಗೆ ಆಗಿತ್ತು.
     ಇತ್ತ ಮೂಢನೂ ಟಿವಿಯ ಸುದ್ದಿ ನೋಡಿ ಬೆಚ್ಚಿದ್ದ. 'ಇದೇನಪ್ಪಾ ಗ್ರಹಚಾರ' ಎಂದು ನೋಡಿಕೊಂಡು ಬರೋಣವೆಂದು ಹೊರಡಲು ಸಿದ್ಧವಾಗುತ್ತಿದ್ದ ಹಾಗೇ ಮಡ್ಡಿಯ ಫೋನ್ ಬಂತು. ಮಡ್ಡಿ ಮತ್ತು ಮೂಢ ತಡ ಮಾಡದೆ ಮಂಕನ ಹೆಂಡತಿಯ ಊರಿಗೆ ಹೋದರು. ಮಂಕನ ಹೆಂಡತಿಯನ್ನು ಕಂಡು ಅಲ್ಲಿ ನಡೆದಿದ್ದ ಎಲ್ಲಾ ಸಂಗತಿಯನ್ನು ಅವಳಿಗೆ ತಿಳಿಸಿದರು. ಅವಳು ಗಾಬರಿಯಾಗಿ ಅಳತೊಡಗಿದಳು. ಅವಳು ಟಿವಿಯನ್ನೇ ನೋಡಿರಲಿಲ್ಲ. ತಮ್ಮನ ಮೇಲೆ ಎಗರಾಡಿದಳು. ದೇವರಂತಹ ಗಂಡನನ್ನು ಜನರಿಂದ ಹೊಡೆಸಿದ ತಮ್ಮನ ಮೇಲೆ ಕೆಂಡದಂತೆ ಉರಿದು ಬಿದ್ದಾಗ ನಿಜ ಸಂಗತಿ ಬಯಲಾಗಿತ್ತು. ತನ್ನ ಸ್ನೇಹಿತ ಮುಠ್ಠಾಳ ತೋರಣ ಟಿವಿಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದು, ಟಿವಿಗೆ ಏನಾದರೂ ಹೊಸ ಸುದ್ದಿ ಕೊಟ್ಟರೆ ಅವನಿಗೆ ೫೦೦೦ ರೂ. ಸಿಗುತ್ತಿತ್ತಂತೆ. ಅದರ ನಾಲ್ಕು ಪಟ್ಟು ದುಡ್ಡನ್ನು ಮತ್ತು ಅದಕ್ಕೂ ಹೆಚ್ಚು ಹಣವನ್ನು ಸುದ್ದಿಗೆ ಸಂಬಂಧಿಸಿದವರಿಂದಲೇ ಅವರ ಶಕ್ತ್ಯಾನುಸಾರ ವಸೂಲು ಮಾಡಿಕೊಳ್ಳುತ್ತಿದ್ದರಂತೆ. ಅದರಲ್ಲಿ ೨೦೦೦ ರೂ. ಅನ್ನು ತನಗೆ ಕೊಡುವುದಾಗಿ ಪುಸಲಾಯಿಸಿ ಈ ಸುದ್ದಿ ಹೊರಬರುವಂತೆ ಮಾಡಿದ್ದನಂತೆ. ದುಡ್ಡಿನ ಆಸೆಗೆ ಮಾತ್ರ ಹೀಗೆ ಮಾಡಿದ್ದು, ಜನರನ್ನು ಸೇರಿಸಿ ಭಾವನಿಗೆ ಹೊಡೆಯುತ್ತಾರೆಂದು ತನಗೆ ನಿಜಕ್ಕೂ ಗೊತ್ತಿರಲಿಲ್ಲವೆಂದು ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿದ.  
     ಪ್ರಕರಣಕ್ಕೆ ಮುಕ್ತಾಯ ಹಾಡುವುದು ಹೇಗೆಂದು ಯೋಚಿಸಿದ ಮಂಕ, ಮೂಢರಿಗೆ ಒಂದು ಪ್ಲಾನು ಹೊಳೆಯಿತು. ಮಂಕನ ಭಾವಮೈದುನನನ್ನೂ ಕರೆದುಕೊಂಡು ಮುಠ್ಠಾಳನ ಮನೆಗೆ ಹೋಗಿ, 'ತಪ್ಪನ್ನು ಸರಿ ಮಾಡಿಸಿ ಸುಖಾಂತ್ಯವಾಗುವಂತೆ' ಮಾಡಬೇಕೆಂದು ಕೇಳಿಕೊಂಡರು. ಮುಠ್ಠಾಳ, 'ಇದು ಸುಮ್ಮನೆ ಆಗುವ ಕೆಲಸ ಅಲ್ಲ, ರೋಗನಾಥ ಒಪ್ಪಬೇಕು' ಅಂದ. ರೋಗನಾಥನೊಡನೆ ದೂರವಾಣಿಯಲ್ಲಿ ಮಾತನಾಡಿದ ನಂತರ, '೧೦೦೦೦ ರೂ. ಕೊಟ್ಟರೆ ಸರಿ ಮಾಡುತ್ತಾರೆ. ಇಂಥಾ ಕೇಸಿನಲ್ಲಿ ೫೦೦೦೦ಕ್ಕಿಂತ ಕಡಿಮೆ ಮುಟ್ಟಲ್ಲವಂತೆ. ಆದರೆ ಮಂಕ ಪಾಪರ್ ಮನುಷ್ಯ ಅಂತ ೧೦೦೦೦ಕ್ಕೆ ಒಪ್ಪಿದ್ದಾರೆ. ಮಂಕ ಮಾತ್ರ ಒಬ್ಬನೇ ಗುಟ್ಟಾಗಿ ಬರಬೇಕು. ನಮ್ಮ ಕರಿಬಣ್ಣದ ಕಾರು ಗೋವಿಂದ ಗ್ಯಾರೇಜ್ ಮುಂದೆ ಇರುತ್ತೆ. ಅಲ್ಲಿಗೆ ಸಾಯಂಕಾಲ ೬ಕ್ಕೆ ಸರಿಯಾಗಿ ಮಂಕ ಒಬ್ಬನೇ ಬಂದು ಹತ್ತಬೇಕು. ನೀವು ಯಾರೂ ಬರಬಾರದು' ಅಂದ. ಚೌಕಾಸಿ ಮಾಡುವುದಾದರೆ ಬರಲೇಬೇಡಿ ಅಂತಲೂ ಹೇಳಿದ. ಒಪ್ಪಿ ಹೊರಬಂದ ಮಂಕ, ಮೂಢರು ಮುಠ್ಠಾಳನನ್ನು ಮನೆಗೆ ವಾಪಸು ಕಳಿಸಿ, ಯಾರೂ ಹಿಂಬಾಲಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು ಹೋಗಿದ್ದು ಸೀದಾ ಲೋಕಾಯುಕ್ತರ ಬಳಿಗೆ. ವಿಷಯ ತಿಳಿದ ಅವರು ಎಲ್ಲಾ ಸಿದ್ಧತೆ ಮಾಡಿಕೊಂಡು ಹೋಗಲು ತಮ್ಮ ಎಸ್.ಪಿ.ಗೆ ಸೂಚನೆ ನೀಡಿದರು. 
     ಅಂದು ಸಂಜೆ "೧೦೦೦೦ ರೂ. ಲಂಚ ಸ್ವೀಕರಿಸುತ್ತಿದ್ದ 'ತೋರಣ' ಟಿವಿಯ ರಿಪೋರ್ಟರ್ ಮುಠ್ಠಾಳ ಮತ್ತು ನಿರ್ವಾಹಕ ರೋಗನಾಥನನ್ನು ಲೋಕಾಯುಕ್ತ ಪೋಲಿಸರು ಬಂಧಿಸಿದ್ದಾರೆಂದು, ಅಂದು ತೋರಣ ಟಿವಿಯಲ್ಲಿ ಪ್ರಸಾರವಾಗಿದ್ದ ಸುದ್ದಿ ಪೂರ್ವನಿಯೋಜಿತವಾಗಿದ್ದು ಅದರಿಂದಾಗಿ ಮಂಕನ ಸಂಸಾರ ಮುರಿದು ಬೀಳುವುದರಲ್ಲಿತ್ತೆಂದು, ಅವರ ಮನೆಗೆ ಆದ ಹಾನಿಗೂ ಸಹ ಅವರುಗಳೇ ಕಾರಣವೆಂದು ಮಡ್ಡಿ ನೀಡಿದ ದೂರಿನ ಪ್ರಕಾರ ತರಲೆಪೇಟೆ ಪೋಲಿಸರು ಕ್ರಿಮಿನಲ್ ಮೊಕದ್ದಮೆಯನ್ನು ಸಹ ದಾಖಲಿಸಿಕೊಂಡಿದ್ದಾರೆಂದು" 'ಕತ್ತರಿ' ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬಿತ್ತರವಾಗುತ್ತಿತ್ತು.
-ಕ.ವೆಂ.ನಾಗರಾಜ್.

ಸೋಮವಾರ, ಆಗಸ್ಟ್ 8, 2011

ಮಂಕನ ಸಂಸಾರ


     ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು:
"ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರುತ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರ್ನ ಕಂಡು ಮೈ ಉರಿಯುತ್ತೆ". ಅವಳ ಗೆಳತಿ ನಗುತ್ತಿದ್ದರೆ, ಇವಳು ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರು(ಕಡು)ನೋಟ ಬೀರಿದಳು. ಬೆಳಿಗ್ಗೆ ನಡೆದ ಮಾತಿನ ಚಕಮಕಿಯಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಮಂಕನ ಮುಖ ಇನ್ನೂ ದಪ್ಪಗಾಯಿತು. ಅದೇ ಸಮಯಕ್ಕೆ ಪಕ್ಕದ್ಮನೆ ಗಿರಿಜಮ್ಮ ಬಂದವರು "ಮನೆಗೆ ನೆಂಟರು ಬಂದು ವಕ್ಕರಿಸಿಕೊಂಡಿದ್ದಾರೆ ಕಣ್ರೀ, ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿ ಕೊಡ್ತೀನಿ, ಸ್ವಲ್ಪ ಹಾಲಿದ್ರೆ ಕೊಡಿ" ಎಂದವರು ಹದಿನೈದೇ ನಿಮಿಷ ಮಾತನಾಡಿದ್ದರು. ಅವರು ನಿಜವಾಗಿ ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಲು ಬಂದಿದ್ದು, ಹಾಲು ಒಂದು ನೆಪವಾಗಿತ್ತು. ಹೋಗುವಾಗ ಮಂಕನ ಹೆಂಡತಿಯಿಂದ "ನೀವು ಬಿಡ್ರಿ, ಗಿರಿಜಮ್ಮ, ಪುಣ್ಯವಂತರು. ನಿಮ್ಮ ಮನಸ್ಸಿನಲ್ಲಿ ಇರೋದನ್ನು ಅರ್ಥ ಮಾಡಿಕೊಳ್ಳೋ ಗಂಡನ್ನ ಪಡೆದಿದ್ದೀರಿ. ಎಲ್ಲರಿಗೂ ಆ ಪುಣ್ಯ ಇರಬೇಕಲ್ಲಾ" ಎಂಬ ಶಹಭಾಸಗಿರಿಯನ್ನೂ ಪಡೆದು ಹೋದರು. ತಿಂಡಿ ಆದ ಮೇಲೆ ಬಾಕಿಯಿದ್ದ ಕಾಫಿ ಸಲುವಾಗಿ ಕಾಯುತ್ತಲೇ ಇದ್ದ ಮಂಕನ ಮುಖ ಹೆಂಡತಿಯ ಪರೋಕ್ಷ ಕುಕ್ಕುಮಾತಿನಿಂದ ಮತ್ತಷ್ಟು ಕೆಂಪಡರಿತ್ತು.
     ಗೆಳತಿಯೊಂದಿಗೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು ಗಂಡನ ಮುಂದೆಯೂ ಒಂದು ಲೋಟ ಕಾಫಿ ಕುಕ್ಕಿ ಪಿಸುಗುಟ್ಟಿದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ". ಮಂಕ ಮರುಮಾತಾಡದೆ ಅವಳನ್ನು ದುರುಗುಟ್ಟಿ ನೋಡುತ್ತಾ ಎದ್ದು ರೂಮಿಗೆ ಹೋದವನು ಕನ್ನಡಿಯಲ್ಲಿ ಮುಖ ನೋಡಿಕೊಂಡು ಬಲವಂತದ ನಗೆ ನಕ್ಕ. ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು. ಅದೇ ಸಮಯಕ್ಕೆ ಸ್ನೇಹಿತನನ್ನು ಹುಡುಕಿಕೊಂಡು ಮೂಢ ಅಲ್ಲಿಗೇ ಬರಬೇಕೇ! ಸ್ನೇಹಿತನನ್ನು ಕಂಡು ಮಂಕ ಇನ್ನಷ್ಟು ಚಿತ್ರವಿಚಿತ್ರವಾಗಿ ನಕ್ಕ!
*************
-ಕ.ವೆಂ.ನಾಗರಾಜ್.

ಮಂಗಳವಾರ, ಮೇ 24, 2011

ಎಳ್ಳು ನೀರು


     ಮೂವರು ಸ್ನೇಹಿತರು -ಮೂಢ, ಮಂಕ, ಮುಠ್ಠಾಳ-  ಒಮ್ಮೆ ಒಟ್ಟಿಗೆ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮಂಕನ ನೇತೃತ್ವದಲ್ಲಿ ಪ್ರವಾಸಕ್ಕೆ ಹೊರಟರು. ಮುಠ್ಠಾಳನಿಗೆ ದಾರಿಯಲ್ಲಿ ಬಾಯಾರಿಕೆಯಾಯಿತು. ಮಂಕ ಎಳನೀರು ಮಾರುತ್ತಿದ್ದ ಸ್ಥಳದಲ್ಲಿ ಟ್ಯಾಕ್ಸಿ ನಿಲ್ಲಿಸಿದ. ಮುಠ್ಠಾಳ ಟ್ಯಾಕ್ಸಿಯಲ್ಲೇ ಕುಳಿತಿದ್ದ. ಎಳನೀರು ಕೊಳ್ಳಲು ಮಂಕ ಇಳಿದಾಗ ಮೂಢನೂ ಅವನೊಂದಿಗೆ ಹೋದ. ನಾಲ್ಕು ಎಳನೀರು ಕೆತ್ತಲು ಹೇಳಿದ ಮಂಕ. ಕೆತ್ತಿದ ಮೊದಲ ಎಳನೀರನ್ನು ಮಂಕ ತೆಗೆದುಕೊಂಡು ಟ್ಯಾಕ್ಸಿಯಲ್ಲಿ ಕುಳಿತಿದ್ದ ಮುಠ್ಠಾಳನಿಗೆ ಕೊಟ್ಟು ಬಂದ. ಎರಡನೆಯ ಎಳನೀರನ್ನು ಟ್ಯಾಕ್ಸಿ ಚಾಲಕನಿಗೆ ಕೊಟ್ಟ. ಮೂರನೆಯ ಎಳನೀರು ಕೆತ್ತಿದಾಗ ತನಗೆ ಕೊಡುತ್ತಾನೆಂದು ಮೂಢ ತೆಗೆದುಕೊಳ್ಳಲು ಕೈ ಮುಂದು ಮಾಡುತ್ತಿದ್ದಾಗ ಮಂಕ ಆ ಎಳನೀರನ್ನು ಅವನಿಗೆ ಕೊಡದೆ ತಾನೇ ಗಟಗಟ ಕುಡಿದ. ವಯಸ್ಸಿನಲ್ಲಿ ಹಿರಿಯನಾದ ಮೂಢನಿಗೆ ನಾಚಿಕೆ ಮತ್ತು ಕಸಿವಿಸಿಯಾಯಿತು. ಎಳನೀರು ಕುಡಿಯಲು ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಲ್ಕನೆಯ ಎಳನೀರನ್ನು ಕೆತ್ತಿದ್ದ ಮಾರುವವನು ಅದನ್ನು ಮೂಢನ ಮುಂದೆ ಹಿಡಿದ. ಕುಡಿಯಲೂ ಆಗದೆ ಬಿಡಲೂ ಆಗದೆ ಮನಸ್ಸಿಲ್ಲದ ಮನಸ್ಸಿನಿಂದ ಮೂಢ ಕುಡಿದ ಎಳನೀರು ಕಹಿಯಾಗಿತ್ತು.
(ಚಿತ್ರ ಕೃಪೆ: ಅಂತರ್ಜಾಲ)

ಸೋಮವಾರ, ಮೇ 23, 2011

ಹಿತೋಪದೇಶ

     ನೀತಿ, ನಿಯಮ, ನಿಯತ್ತು ಎಂದು ಅದಕ್ಕೇ ಜೋತು ಬಿದ್ದು ಕೆಲಸ ಮಾಡುತ್ತಿದ್ದ ಆ ಫುಡ್ ಇನ್ಸ್‌ಪೆಕ್ಟರನನ್ನು ಕಂಡು ಅವನ ಸಹೋದ್ಯೋಗಿಗಳು ಹಿಂದೆ ಮುಸಿ ಮುಸಿ ನಗುತ್ತಿದ್ದರು. ಬದುಕಲು ತಿಳಿಯದವನು, ನಾಲಾಯಕ್, ಇತ್ಯಾದಿ ಹಂಗಿಸುತ್ತಿದ್ದವರಿಗೆ ಮತ್ತು ಹಾವು ಹೊಡೆದು ಹದ್ದಿಗೆ ಹಾಕಬೇಕು ಎಂದು ಸಲಹೆ ಕೊಡುತ್ತಿದ್ದವರಿಗೆ ಬರವಿರಲಿಲ್ಲ. ಆತನ ಪ್ರಾಮಾಣಿಕತೆಯನ್ನು ಮೆಚ್ಚುತ್ತಿದ್ದವರೂ ಇದ್ದರು. ಅವನು ತಪಾಸಣೆಗೆ ಬಂದರೆ ಅಂಗಡಿಯವರು, ಸಹಕಾರ ಸಂಘಗಳವರು ಬೆಚ್ಚುತ್ತಿದ್ದರು. ತಪಾಸಣೆ ಕಾಲದಲ್ಲಿ ಕಂಡು ಬಂದ ದೋಷಗಳ ಪಟ್ಟಿಯೊಂದಿಗೆ ಮೇಲಾಧಿಕಾರಿಗೆ ಯಾವುದೇ ಮುಲಾಜಿಗೆ ಒಳಗಾಗದೆ ವರದಿ ನೀಡುತ್ತಿದ್ದ. ಮೇಲಾಧಿಕಾರಿಯಿಂದ ತಪ್ಪಿತಸ್ಥ ಅಂಗಡಿಗಳವರಿಗೆ ಏಕೆ ಪರವಾನಗಿ ರದ್ದುಗೊಳಿಸಬಾರದೆಂದು ನೋಟೀಸು ತಪ್ಪದೇ ಹೋಗುತ್ತಿತ್ತು. ಅಂಗಡಿಗಳವರು ಅಧಿಕಾರಿಗೆ ತಪ್ಪುಕಾಣಿಕೆ ಒಪ್ಪಿಸಿದ ಕೂಡಲೇ ಮುಂದಿನ ಯಾವುದೇ ಕ್ರಮವಿಲ್ಲದೆ ಪ್ರಕರಣ ಮುಕ್ತಾಯ ಕಾಣುತ್ತಿತ್ತು. ಫುಡ್ ಇನ್ಸ್‌ಪೆಕ್ಟರ್ ವರದಿಗಳನ್ನು ಕೊಡುತ್ತಿದ್ದಷ್ಟೂ ಮೇಲಾಧಿಕಾರಿಗೆ ಆದಾಯ ಜಾಸ್ತಿಯಾಗುತ್ತಿತ್ತು. ಇದರ ಪರಿಣಾಮವಾಗಿ ಅಂಗಡಿಗಳವರು ಫುಡ್ ಇನ್ಸ್‌ಪೆಕ್ಟರನನ್ನು ಹಿಂದಿನಿಂದ ಆಡಿಕೊಳ್ಳುವುದು ಸಾಮಾನ್ಯವಾಯಿತು. ತನ್ನ ಪ್ರಾಮಾಣಿಕತೆಯೂ ಅಧಿಕಾರಿಯ ಅಕ್ರಮ ಸಂಪಾದನೆಗೆ ಮಾರ್ಗವಾದುದನ್ನು ಕಂಡು ಅವನಿಗೆ ಬೇಸರವಾಯಿತು. ಒಮ್ಮೆ ಒಂದು ನ್ಯಾಯಬೆಲೆ ಅಂಗಡಿಯವನು ಎರಡು ಚೀಲ ಸಕ್ಕರೆ, ಐದು ಚೀಲ ಅಕ್ಕಿಯನ್ನು ಹೋಟೆಲ್ ಒಂದಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವನ ಕೈಗೆ ಸಿಕ್ಕಿಬಿದ್ದ. ಮೇಲಾಧಿಕಾರಿಗೆ ವರದಿ ಮಾಡಿದರೆ ಪ್ರಯೋಜನವಾಗುವುದಿಲ್ಲವೆಂದು ಗೊತ್ತಿದ್ದರಿಂದ ಅಗತ್ಯ ವಸ್ತುಗಳ ಕಾಯದೆ ಪ್ರಕಾರ ಅವನಿಗೇ ಇದ್ದ ಅಧಿಕಾರ ಉಪಯೋಗಿಸಿ ನೇರವಾಗಿ ವಸ್ತುಗಳನ್ನು ಅಮಾನತ್ತು ಪಡಿಸಿ ಪೋಲೀಸ್ ಠಾಣೆಗೆ ದೂರು ನೀಡಿದ. ಮೇಲಾಧಿಕಾರಿ ಅವನನ್ನು ಕರೆಯಿಸಿ ಆ ರೀತಿ ಮಾಡಿದ್ದಕ್ಕೆ ಚೆನ್ನಾಗಿ ನಿಂದಿಸಿದ. ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಅಪರಾಧಿಗೆ ರೂ. ೫೦೦೦ ದಂಡ ವಿಧಿಸಲಾಯಿತು. ಅಂಗಡಿಯವನ ಪರವಾನಗಿ ಸಹ ರದ್ದಾಯಿತು. ಅಂಗಡಿಯವನ ತಪ್ಪಿಗೆ ತಕ್ಕ ಶಿಕ್ಷೆಯಾಯಿತೆಂದುಕೊಂಡ ಫುಡ್ ಇನ್ಸ್ ಪೆಕ್ಟರನಿಗೆ ತಾನು ಪ್ರಾಮಾಣಿಕತೆಯಿಂದ ನಡೆದುಕೊಂಡ ತಪ್ಪಿಗೂ ಶಿಕ್ಷೆಯಾಗಲಿರುವುದರ ಅರಿವಿರಲಿಲ್ಲ. ಒಂದೇ ವಾರದಲ್ಲಿ ಹೊಸ ಅಂಗಡಿಗೆ ಪರವಾನಗಿ ನೀಡಲಾಯಿತು. ಹೊಸ ಮಾಲೀಕ ಹಳೆಯ ಅಂಗಡಿ ಮಾಲೀಕನ ತಮ್ಮನೇ ಆಗಿದ್ದ. ಅಂಗಡಿಯ ಮಾಲಿಕ ಅವನನ್ನು ಹಂಗಿಸುವ ರೀತಿಯಲ್ಲಿ ನೋಡಿ ನಕ್ಕ. ಮಾರನೆಯ ದಿನ ಫುಡ್ ಇನ್ಸ್‌ಪೆಕ್ಟರನನ್ನು ಆಡಳಿತ ಹಿತದೃಷ್ಟಿಯಿಂದ ಗುಮಾಸ್ತನನ್ನಾಗಿ ವರ್ಗಾವಣೆ ಮಾಡಿದ ಆದೇಶವನ್ನು ಅಧಿಕಾರಿ ತನ್ನ ಸ್ವಹಸ್ತದಿಂದ ಅವನಿಗೆ ಕೊಟ್ಟು ಹಿತೋಪದೇಶ ಮಾಡಿದ.
-ಕ.ವೆಂ.ನಾಗರಾಜ್.

ಸೋಮವಾರ, ಮೇ 16, 2011

ತೊಳಲಾಟ

     ಅವನೊಬ್ಬ  ಫುಡ್‌ಇನ್ಸ್‌ಪೆಕ್ಟರ್ ಆಗಿದ್ದ. ಸಾಕಷ್ಟು ಕಮಾಯಿ ಬರುವ ಆ ಹುದ್ದೆಯಲ್ಲಿದ್ದರೂ ಅವನೊಬ್ಬ ನೀತಿ ನಿಯತ್ತಿನ ಪ್ರಾಣಿಯಾಗಿದ್ದು ಲಂಚಕ್ಕೆ ಕೈ ಒಡ್ಡುತ್ತಿರಲಿಲ್ಲ. ಹಾಗೆಂದು ಅವನ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವೇನಾಗಿರಲಿಲ್ಲ. ಕೆಳಮಧ್ಯಮ ವರ್ಗಕ್ಕೆ ಸೇರಿಸಬಹುದಾದ ಕುಟುಂಬ ಅವನದು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವದ ಅವನಿಗೆ ತಿಂಗಳ ಕೊನೆಯ ಭಾಗದಲ್ಲಿ ಇನ್ನೂ ಸಂಬಳ ಬರಲು ಎಷ್ಟು ದಿನ ಎಂದು ಲೆಕ್ಕ ಹಾಕಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಆತ ಒಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ತಪಾಸಣೆಗೆ ಹೋದ. ಅಂಗಡಿಯ ಮಾಲಿಕನ ಲೆಕ್ಕಪತ್ರಗಳನ್ನು ನೋಡಿ ಹೊರಡುವ ಸಂದರ್ಭದಲ್ಲಿ ಅವನ ಸ್ವಭಾವದ ಅರಿವಿದ್ದ ಮಾಲೀಕ "ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಲಂಚ ಅಲ್ಲ. ಮನೆಗೆ ಹಣ್ಣು ತೆಗೆದುಕೊಂಡು ಹೋಗಿ ಸ್ವಾಮಿ" ಎಂದು ಐವತ್ತು ರೂಪಾಯಿ ಕೊಡಬಂದಾಗ 'ಬೇಡ' ಎಂದರೂ ಬಲವಂತವಾಗಿ ಆತನ ಜೇಬಿಗೆ ಹಾಕಿದ. ಅವನಿಗೆ ಹಣದ ಅಗತ್ಯವಿತ್ತು. ಮನಸ್ಸು ಡೋಲಾಯಮಾನಸ್ಥಿತಿಯಲ್ಲಿತ್ತು. ಹಾಗಾಗಿ ಸುಮ್ಮನೆ ಹೊರಬಂದ. ಜೇಬಿನಲ್ಲಿ ಹಣವಿದೆ. ಯಾತಕ್ಕಾದರೂ ಉಪಯೋಗಕ್ಕೆ ಆಗುತ್ತದೆ ಎಂದು ಅನ್ನಿಸುತ್ತಿದ್ದರೂ ಅವನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಸರಿಯಾಗಿ ಊಟ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ. ಬಹಳಷ್ಟು ಯೋಚಿಸಿ ಆ ಹಣ ಹಿಂತಿರುಗಿಸಲು ನಿರ್ಧರಿಸಿದ ಮೇಲಷ್ಟೇ ಅವನಿಗೆ ನಿದ್ದೆ ಬಂದಿದ್ದು. ಬೆಳಿಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿ ಹೋದರೆ ಅಂಗಡಿಯ ಬಾಗಿಲು ಇನ್ನೂ ತೆರೆದಿರಲಿಲ್ಲ. ಮಾಲೀಕನಿಗೆ ಕಾಯುತ್ತಾ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ. ಸ್ವಲ್ಪ ಸಮಯದ ನಂತರ ಬಂದ ಮಾಲೀಕನಿಗೆ ಫುಡ್ ಇನ್ಸ್‌ಪೆಕ್ಟರ್ ಅಂಗಡಿಯ ಬಳಿ ಕಾಯುತ್ತಿದ್ದುದನ್ನು ನೋಡಿ ಗಾಬರಿಗೊಂಡ. ಏನೋ ಗ್ರಹಚಾರ ಕಾದಿದೆ ಅಂದುಕೊಂಡವನಿಗೆ ಅವನು ಐವತ್ತು ರೂಪಾಯಿ ಹಿಂತಿರುಗಿಸಿ "ನೀವು ಹಣ ಕೊಟ್ಟಾಗ ನನ್ನ ಮನಸ್ಸು ಚಂಚಲವಾಯಿತು. ಇನ್ನೊಮ್ಮೆ ದಯವಿಟ್ಟು ಈ ರೀತಿ ಮಾಡಬೇಡಿ" ಎಂದು ಹೇಳಿ ವಾಪಸು ನಿರಾಳ ಮನಸ್ಸಿನಲ್ಲಿ ಹಿಂತಿರುಗಿದ. ಅಂಗಡಿಯವನೂ ನಿಟ್ಟುಸಿರು ಬಿಟ್ಟ.
-ಕ.ವೆಂ.ನಾಗರಾಜ್.
[ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]

ಶನಿವಾರ, ಜುಲೈ 17, 2010

ಪಾಪ ಶೇಷ

     ದೇವಸ್ಥಾನದ ಅರ್ಚಕನಾಗಿದ್ದ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆದು ದೇವಸ್ಥಾನ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದ. ಮೂಢನ ಗೆಳೆಯ ಮಂಕ ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದವನು ದೇವಸ್ಥಾನದ ಒಳಗೆ ದೇವರಿಗೆ ನಮಸ್ಕರಿಸಿ ಹೋಗಲು ಬಂದ.ಆಳೆತ್ತರದ ದೇವರ ವಿಗ್ರಹದ ಹಿಂದೆ ಇದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ದೇವಸ್ಥಾನದಲ್ಲಿ ಯಾರೂ ಇಲ್ಲವೆಂದುಕೊಂಡ ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ನಿವೇದನೆ ಮಾಡಿಕೊಂಡ: "ದೇವರೇ, ನನಗೆ ಜೀವನವೇ ಬೇಸರವಾಗಿದೆ. ಎಲ್ಲಾ ವಿಷಯದಲ್ಲೂ ನನ್ನ ಹೆಂಡತಿ ನನ್ನನ್ನು ತಪ್ಪು ಹುಡುಕಿ ಮೂದಲಿಸುತ್ತಿರುತ್ತಾಳೆ. ನಾನು ಎಷ್ಟು ಹೊಂದಿಕೊಂಡು ಹೋದರೂ ಅವಳ ಸ್ವಭಾವದಲ್ಲಿ ಬದಲಾವಣೆಯಾಗುತ್ತಿಲ್ಲ. ಯಾವಾಗಲೂ ಅವರಿವರ ಎದುರಿಗೆ, ಮಕ್ಕಳ ಎದುರಿಗೆ ಚುಚ್ಚಿ ಮಾತನಾಡುವುದು, ಪರೋಕ್ಷವಾಗಿ ಹಂಗಿಸುವುದು ಮಾಡುತ್ತಿರುತ್ತಾಳೆ. ನಾನು ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ.ನೀನೇ ಅವಳಿಗೆ ಒಳ್ಳೆಯ ಬುದ್ಧಿ ಕೊಡಬೇಕು."
     ವಿಗ್ರಹದ ಹಿಂದಿದ್ದ ಮೂಢನಿಗೆ ನಗು ಬಂತು. ಅಲ್ಲಿಂದಲೇ "ವತ್ಸಾ" ಎಂದ. ಮಂಕ ಗಾಬರಿಯಿಂದ ಕಣ್ಣು ಬಿಟ್ಟು ನೋಡಿದರೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಬಾಯಿ ಬಿಟ್ಟುಕೊಂಡು ನಿಂತಿದ್ದ. ಅಶರೀರವಾಣಿ ಮುಂದುವರೆಯಿತು: "ಇದಕ್ಕೆ ನಿನ್ನ ಪೂರ್ವಜನ್ಮದ ಕರ್ಮವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ಪಾಪಶೇಷ ಹೋಗುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ."
     ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟುಕೊಂಡಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ತಿರುಗಿ ನೋಡುತ್ತಾ ಹೊರಬಿದ್ದ.
     ಮನೆಗೆ ಕಾಲಿಡುತ್ತಿದ್ದಂತೆ ಹೆಂಡತಿ ಶುರು ಮಾಡಿದಳು: "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಮಂಕು ಬುದ್ಧಿಗೆ? . . . . . ."ಗಂಡ ಮರುಮಾತಾಡದೆ ಪುನಃ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ತನಗಲ್ಲವೆಂಬಂತೆ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವು ದಿನಗಳಲ್ಲಿ ಗಂಡ ಏನೇ ಅಂದರೂ ಸುಮ್ಮನಿರುವುದನ್ನು ಕಂಡ ಹೆಂಡತಿಗೆ ಕಸಿವಿಸಿಯಾಗತೊಡಗಿತು. ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ಮಾಡಿದರೂ ಸುಮ್ಮನಿರುವುದನ್ನು ಕಂಡು 'ಇಂಥಾ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ!' ಅಂದುಕೊಂಡಳು.
     ದೇವರು 'ಅಭಯ' ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು!

ಭಾನುವಾರ, ಮೇ 9, 2010

ರಾಯರ ಊರುಗೋಲು

ರಾಯರ ಊರುಗೋಲು
     ರಾಯರಿಗೆ ಪ್ರತಿದಿನ ಮುಂಜಾನೆ ಬೇಗ ಎದ್ದು ವಾಕಿಂಗ್ ಹೋಗುವ ಅಭ್ಯಾಸವಿತ್ತು. ವಯಸ್ಸಾಗಿದ್ದರಿಂದ ಹೆಚ್ಚು ದೂರ ಹೋಗುತ್ತಿರಲಿಲ್ಲ. ಮನೆಯ ಹತ್ತಿರದಲ್ಲೇ ಸ್ವಲ್ಪ ದೂರ ಹೋಗಿ ಬರುತ್ತಿದ್ದರು. ಒಮ್ಮೆ ಹೀಗೆ ಹೋಗುವಾಗ ರಸ್ತೆಯಲ್ಲಿ ಎಡವಿ ಬಿದ್ದರು. ಸಣ್ಣ ಪುಟ್ಟ ತರಚಿದ ಗಾಯಗಳಾದವು. ಅವರು ಹಿಡಿದಿದ್ದ ಊರುಗೋಲಿನ ಹಿಡಿಕೆ ಮುರಿದುಹೋಯಿತು.ಬಿದ್ದ ಪೆಟ್ಟಿಗಿಂತ ಮುರಿದ ಊರುಗೋಲಿನ ಚಿಂತೆ ಅವರಿಗೆ ಜಾಸ್ತಿಯಾಯಿತು. ಕೆಲವು ವರ್ಷಗಳ ಹಿಂದೆ ನಡೆದಾಡುವಾಗ ತಡವರಿಸುತ್ತಿದ್ದುದನ್ನು ಕಂಡ ಅವರ ಮಗ ಕೊಡಿಸಿದ್ದ ಊರುಗೋಲು ಅವರಿಗೆ ಮೆಚ್ಚುಗೆಯಾಗಿತ್ತು. ಎಲ್ಲಿ ಹೋಗುವಾಗಲೂ ಅದನ್ನು ಬಿಡುತ್ತಿರಲಿಲ್ಲ. ಅದರ ಮೇಲೆ ಮೋಹವಿತ್ತಲ್ಲದೆ ಅವಲಂಬಿತರೂ ಆಗಿದ್ದರು. ಅದನ್ನು ರಿಪೇರಿ ಮಾಡಿಸಲು ಬಡಗಿಯನ್ನು ಹುಡುಕಿಕೊಂಡು ಹೋದ ಅವರಿಗೆ ಸಮೀಪದ ಹೊಸಮನೆಯಲ್ಲಿ ಮರಗೆಲಸ ಮಾಡುತ್ತಿದ್ದ ಬಡಗಿ ಕಂಡು ಅವನನ್ನು ವಿಚಾರಿಸಿದರು.
ರಾಯರು: ಈ ಕೋಲನ್ನು ರಿಪೇರಿ ಮಾಡಿಕೊಡುತ್ತೀಯೇನಪ್ಪಾ?
ಬಡಗಿ:      ಆಗಲಿ. ನಾಳೆ ಮಾಡಿಕೊಡುತ್ತೇನೆ.
ರಾಯರು: ಈಗಲೇ ಮಾಡಿಕೊಟ್ಟರೆ ಒಳ್ಳೆಯದು. ಇದೇ ನನ್ನ ಕಾಲು. ಎಷ್ಟು ಕೊಡಬೇಕು?
ಬಡಗಿ:     ಇಪ್ಪತ್ತೈದು ರೂಪಾಯಿ ಆಗುತ್ತೆ. ರಿವೆಟ್ ಹಾಕಬೇಕು. ಗಮ್ ಹಾಕಿ ಸರಿಯಾಗಿ ಕೂಡಿಸಬೇಕು. ಬಹಳ ಕೆಲಸವಿದೆ.
ರಾಯರು: ಇಪ್ಪತ್ತು ರೂಪಾಯಿ ಕೊಡುತ್ತೇನೆ. ಸರಿಯಾಗಿ ಮಾಡಿಕೊಡಪ್ಪಾ.
      ಇವರ ಸಂಭಾಷಣೆಯನ್ನು ಗಮನಿಸುತ್ತಿದ್ದ ಮನೆಯ ಮಾಲಿಕರು ಬಡಗಿಗೆ ಊರುಗೋಲು ರಿಪೇರಿ ಮೊದಲು ಮಾಡಿಕೊಡಲು ತಿಳಿಸಿ ಕುಳಿತುಕೊಳ್ಳಲು ಕುರ್ಚಿ ಕೊಟ್ಟು ನೀರು ಬೇಕೇ ಎಂದು ಕೇಳಿದರು. ಮನೆಯಾಕೆಗೆ ಹೇಳಿ ಕಾಫಿ ಮಾಡಿಸಿಕೊಟ್ಟರು. ಮೈ ಕೈ ನೋವಿದ್ದ ರಾಯರಿಗೆ ಕಾಫಿ ಹಿತವಾಗಿತ್ತು. ಬಡಗಿಗೂ ಏನನ್ನಿಸಿತೋ ಬಹಳ ಮುತುವರ್ಜಿಯಿಂದ ರಿಪೇರಿ ಮಾಡಿಕೊಟ್ಟ. ರಾಯರು ಹಣ ಕೊಡಲು ಹೋದರೆ ಆತ ಬೇಡವೆಂದ. ಆಗ ನಡೆದ ಸಂಭಾಷಣೆ:
ರಾಯರು: ಏಕಪ್ಪಾ? ಸಾಲಲಿಲ್ಲವೇ? ಇಪ್ಪತ್ತೈದು ರೂಪಾಯಿಯನ್ನೇ ತೊಗೋ.
ಬಡಗಿ:      ಬೇಡ ಸಾರ್. ನನಗೂ ವಯಸ್ಸಾದ ತಂದೆಯಿದ್ದಾರೆ. ನಿಮ್ಮಿಂದ ಈ ಕೆಲಸಕ್ಕೆ ದುಡ್ಡು ಪಡೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನನ್ನ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಹರಸಿ ಸಾರ್. ಅಷ್ಟು ಸಾಕು.
ರಾಯರು: ಹಣ ಕೊಡದಿರಲು ನನಗೂ ಸರಿಯಾಗುವುದಿಲ್ಲ. ಹೋಗಲಿ, ಹತ್ತು ರೂಪಾಯಿಯಾದರೂ ತೆಗೆದುಕೋ.
      ಹತ್ತು ರೂಪಾಯಿಯನ್ನು ಕೊಟ್ಟು ಬಡಗಿಗೆ, ಮನೆಮಾಲಿಕರಿಗೆ ಧನ್ಯವಾದ ಹೇಳಿ ಕೋಲನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಾ ರಾಯರು ಮನೆಗೆ ವಾಪಸಾದರು.
                                                                                                                    -  ಕ.ವೆಂ. ನಾಗರಾಜ್.
(ಲೇಖಕನ ಸ್ವಗತ: ಆ ಬಡಗಿಯ, ಹೊಸಮನೆ ಮಾಲಿಕನಲ್ಲಿನ ಹಿರಿಯರನ್ನು, ವಯಸ್ಸಾದವರನ್ನು ಗೌರವಿಸುವ ಮನೋಭಾವ ಎಲ್ಲರಿಗೂ ಬಂದರೆ ಎಷ್ಟು ಚೆನ್ನ!) 

ಮಂಗಳವಾರ, ಮಾರ್ಚ್ 9, 2010

ಮೂಢನ ಕಥೆಗಳು - 2: ಪಾಪಶೇಷ

ಪಾಪಶೇಷ

     ದೇವಸ್ಥಾನದ ಅರ್ಚಕನಾಗಿದ್ದ ಮೂಢ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ. ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದ ಮಂಕ ದೇವಸ್ಥಾನದ ಒಳಗೆ ಬಂದು ದೇವರಿಗೆ ನಮಸ್ಕಾರ ಮಾಡಿದ. ಆಳೆತ್ತರದ ದೇವರ ವಿಗ್ರಹದ ಹಿಂದೆ ಶುಚಿ ಕಾರ್ಯದಲ್ಲಿ ತೊಡಗಿದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ಯಾರೂ ಇಲ್ಲವೆಂದುಕೊಂಡು ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ಪ್ರಾರ್ಥಿಸಿದ:
      "ಓ ದೇವರೇ, ನನಗೆ ಜೀವನವೇ ಬೇಸರವಾಗಿದೆ. ಯಾವುದೇ ವಿಷಯಕ್ಕೆ, ಲೋಪಕ್ಕೆ ತಪ್ಪಿರಲಿ, ಇಲ್ಲದಿರಲಿ, ನನ್ನ ಹೆಂಡತಿ ನನ್ನನ್ನೇ ದೋಷಗಾರನನ್ನಾಗಿ ಮಾಡುತ್ತಾಳೆ. ಮಕ್ಕಳ ಎದುರಿಗೆ, ಅವರಿವರ ಎದುರಿಗೆ ನನ್ನ ಬಗ್ಗೆ ಚುಚ್ಚಿ ಮಾತಾಡುತ್ತಾಳೆ, ಪರೋಕ್ಷವಾಗಿ ಹಂಗಿಸುತ್ತಾಳೆ. ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಅವಳಿಗೆ ನೀನೇ ಒಳ್ಳೆಯ ಬುದ್ಧಿ ಕೊಡಬೇಕು, ದೇವರೇ".
     ಮೂಢನಿಗೆ ನಗು ಬಂತು. ವಿಗ್ರಹದ ಹಿಂದಿನಂದಲೇ 'ವತ್ಸಾ' ಎಂದ. ಗಾಬರಿಯಿಂದ ಕಣ್ಣು ಬಿಟ್ಟು ನೋಡಿದ ಮಂಕನಿಗೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಕೈಮುಗಿದು ಬಾಯಿಬಿಟ್ಟುಕೊಂಡು ನೋಡುತ್ತಾ ನಿಂತ. ಅಶರೀರ ವಾಣಿ ಮುಂದುವರೆಯಿತು.
     "ಇದಕ್ಕೆ ನಿನ್ನ ಪೂರ್ವಜನ್ಮದ ಪಾಪಶೇಷವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ನಿನ್ನ ನಿನ್ನ ಪೂರ್ವ ಕರ್ಮ ಕಳೆಯುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ".
      ಕಣ್ಣು ಕಣ್ಣು ಬಿಟ್ಟು ಬಾಯಿ ಬಿಟ್ಟುಕೊಂಡು ನಿಂತಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ಮನೆಗೆ ಹೋದೊಡನೆ ಪತ್ನಿ ಶುರು ಮಾಡಿದಳು . . "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಬುದ್ಧಿಗೆ....". ಮಂಕ ಮಾತನಾಡದೆ ಮತ್ತೆ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವೇ ದಿನಗಳಲ್ಲಿ ಗಂಡ ತಾನು ಏನೇ ಅಂದರೂ ಸುಮ್ಮನಿರುವುದನ್ನು ಗಮನಿಸಿದ ಪತ್ನಿಗೆ ಕಸಿವಿಸಿಯಾಗತೊಡಗಿತು. ಗಂಡ ತನ್ನೊಡನೆ ಜಗಳಮಾಡಲಿ, ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ತೆಗೆದರೂ ಆತ ಸುಮ್ಮನಿರುವುದನ್ನು ಕಂಡ ಪತ್ನಿಗೆ ಮುಜುಗುರವಾಯಿತು. 'ಇಂತಹ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ' ಎಂದು ಮರುಗಿದಳು. 'ದೇವರು' ಅಭಯ ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು.

ಭಾನುವಾರ, ಮಾರ್ಚ್ 7, 2010

ಮೂಢನ ಕಥೆಗಳು - 1


                                                                          ಜಗಳ
     ಸಮಯವಿದ್ದುದರಿಂದ ಮೂಢ ತನ್ನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಆತನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೋ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆದಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆಂದಿದ್ದಾಗ ಅವನನ್ನು ನೋಡಿದ ಗೆಳೆಯ 'ಏಯ್, ಬಾರೋ' ಎಂದು ನಗುತ್ತಾ ಆಹ್ವಾನಿಸಿದ. 'ಊರಗಲ ಬಾಯಿ ಮಾಡಿಕೊಂಡು ಮಾತಾಡಿಸೋದು ನೋಡು'ಎಂದು ಮೂದಲಿಸಿದ ಪತ್ನಿ ಮೂಢನಿಗೆ 'ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತನಾಡುತ್ತಾರೆ. ನನ್ನ ಹತ್ತಿರ ಮುಖ ಗಂಟಿಕ್ಕಿಕೊಂಡು ಮಾತಾಡುತ್ತಾರೆ' ಎಂದು ದೂರಿದಳು. ಮೂಢ ಸುಮ್ಮನಿರಲಾರದೆ 'ಊರಿನವರು ನಗುತ್ತಾ ಮಾತಾಡಿಸಿದಾಗ ಇವನು ಸಿಟ್ಟು ಮಾಡಿಕೊಂಡು ಮಾತಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ' ಎಂದ. ಮಂಕನ ಪತ್ನಿ 'ಅದಕ್ಕೇ ನಿಮ್ಮನ್ನು ಎಲ್ಲರೂ ಮೂಢ ಅನ್ನುವುದು' ಎಂದು ಹೇಳಿ ಒಳಗೆ ಹೋದರೂ ಅವಳ ಒಳಮನಸ್ಸು 'ಅದೂ ನಿಜ' ಎಂದು ಹೇಳುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತಾಡಿದವು. ತಿಂಡಿಯ ರುಚಿ ಹೆಚ್ಚಾಯಿತು.
- ಕ.ವೆಂ.ನಾಗರಾಜ್.

ಪ್ರೀತಿಯ ಅಂತ್ಯ

    
                                                                   ಚಿತ್ರಕೃಪೆ: ಅಂತರ್ಜಾಲ

     ಒಂದು ಸುಂದರವಾದ ದ್ವೀಪವಿತ್ತು. ಅಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಬಾಳುತ್ತಿದ್ದವು. ಒಂದು ದಿನ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿ ಉಂಟಾಯಿತು. ಎಲ್ಲಾ ಭಾವನೆಗಳೂ ಜೀವಭಯದಿಂದ ತತ್ತರಿಸಿದವು. ಜೀವ ಉಳಿಸಿಕೊಳ್ಳಲು ಪರದಾಡಿದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಎಲ್ಲಾ ಭಾವನೆಗಳೂ ಜೀವ ಉಳಿದರೆ ಸಾಕೆಂದುಗಡಿಬಿಡಿಯಲ್ಲಿ ದೋಣಿ ಎರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿ ಇಳಿದು ಬಂದು ನೋಡಿದರೆ ದುರಭಿಮಾನ ಮುಖ ಊದಿಸಿಕೊಂಡು ಒಂದುಕಡೆ ಕುಳಿತಿತ್ತು. ಅದನ್ನು ದೋಣಿ ಹತ್ತಲು ಪ್ರೀತಿ ಒತ್ತಾಯಿಸಿದರೂ ಅದು ಹತ್ತಲಿಲ್ಲ. ಪರಿಪರಿಯಾದ ಓಲೈಕೆಗೂ ಅದು ಜಗ್ಗಲಿಲ್ಲ. ಪ್ರವಾಹ ಏರುತ್ತಲೇ ಇತ್ತು. ಉಳಿದ ಭಾವನೆಗಳು ದುರಭಿಮಾನವನ್ನು ಅಲ್ಲೇ ಬಿಟ್ಟು ದೋಣಿ ಹತ್ತಿ ಜೀವ ಉಳಿಸಿಕೊಳ್ಳಲು ಪ್ರೀತಿಯನ್ನು ಕೇಳಿಕೊಂಡವು. ಪ್ರೀತಿ ದುರಭಿಮಾನವನ್ನು ಪ್ರೀತಿಯಿಂದ ದೋಣಿ ಹತ್ತಲು ಕೇಳಿಕೊಳ್ಳುತ್ತಲೇ ಇತ್ತು. ಪ್ರವಾಹ ಹೆಚ್ಚಾಗಿ ದ್ವೀಪ ಮುಳುಗಿ ದುರಭಿಮಾನದೊಂದಿಗೆ ಪ್ರೀತಿಯೂ ಸತ್ತುಹೋಯಿತು.