ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 21, 2013

ಹೈದರಾಲಿಯಿಂದ ಅಂತ್ಯವಾದ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನ


     ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿ, ಕಲೆ, ಸಾಹಿತ್ಯ, ಧಾರ್ಮಿಕ ವಿಚಾರಗಳ ಪೋಷಕರಾಗಿದ್ದಲ್ಲದೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದು ಜನಸಾಮಾನ್ಯರ ಮಟ್ಟಿಗೆ ನೆಮ್ಮದಿಯ ರಾಜ್ಯವೆನಿಸಿತ್ತು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ವಿಸ್ತಾರವನ್ನು ಹೊಂದಿದ್ದಾಗಿದ್ದು ಸಂಪದ್ಭರಿತ ಸಂಸ್ಥಾನವಾಗಿತ್ತು. ಸದಾಶಿವನಾಯಕ, ಸಂಕಣ್ಣನಾಯಕ, ವೆಂಕಟಪ್ಪನಾಯಕ, ಶಿವಪ್ಪನಾಯಕ, ಭದ್ರಪ್ಪನಾಯಕ, ಚೆನ್ನಮ್ಮಾಜಿ, ಬಸವಪ್ಪನಾಯಕ ಮುಂತಾದ ವೀರಾಗ್ರಣಿಗಳು ಆಳಿದ ಈ ಸಂಸ್ಥಾನದ ಅರಸುಮನೆತನದಲ್ಲಿ ಕೊನೆಯದಾಗಿ ಆಳಿದವಳು ರಾಣಿ ವೀರಮ್ಮಾಜಿ. ಹೈದರಾಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಕೆಲಸಕ್ಕೆ ಸೇರಿ ಕ್ರಮೇಣ ಬಲ ವೃದ್ಧಿಸಿಕೊಂಡು ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನವನ್ನೇ ತನ್ನ ಕೈವಶ ಮಾಡಿಕೊಂಡ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದೆ. ನಂತರದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಕಾರ್ಯಾಚರಣೆ ಕೈಗೊಂಡು ಕೆಳದಿ ಸಂಸ್ಥಾನದ ಪತನದಲ್ಲಿ ಯಶಸ್ವಿಯಾಗಿದ್ದು ಇತಿಹಾಸ. ಕನ್ನಡನಾಡಿನ ಎರಡು ಹೆಮ್ಮೆಯ ಸಂಸ್ಥಾನಗಳಾಗಿದ್ದ ಮೈಸೂರು ಮತ್ತು ಕೆಳದಿಯ ಅರಸೊತ್ತಿಗೆ ಹೀಗೆ ಅಂತ್ಯಗೊಂಡವು.
    ಕ್ರಿ.ಶ. ೧೭೩೯ರಿಂದ ೧೭೫೫ರವರೆವಿಗೆ ಕೆಳದಿಯ ಅರಸನಾಗಿದ್ದ ಬಸವಪ್ಪನಾಯಕ ಮತ್ತು ಆತನ ರಾಣಿ ವೀರಮ್ಮಾಜಿಗೆ ಪುತ್ರ ಸಂತಾನವಿಲ್ಲದಿದ್ದರಿಂದ ನಿರ್ವಾಣಯ್ಯ ಅನ್ನುವವರ ಮೊಮ್ಮಗನೂ, ಗುರುವಪ್ಪ ಅನ್ನುವವರ ಮಗನೂ ಆದ ಚನ್ನಪ್ಪ ಅನ್ನುವವನನ್ನು ದತ್ತು ತೆಗೆದುಕೊಂಡು ಆತನಿಗೆ ಚೆನ್ನಬಸವಪ್ಪನಾಯಕನೆಂದು ಹೆಸರಿಟ್ಟು ಯುವರಾಜನನ್ನಾಗಿ ಮಾಡಿಕೊಂಡರು. ಬಸವಪ್ಪನಾಯಕ ಮೃತನಾದ ನಂತರದಲ್ಲಿ, ಪಟ್ಟಾಭಿಷಿಕ್ತನಾದ ಚೆನ್ನಬಸವಪ್ಪನಾಯಕ ತಾಯಿ ವೀರಮ್ಮಾಜಿಯ ಮಾರ್ಗದರ್ಶನದಲ್ಲಿ ವಿವೇಕದಿಂದ, ಬುದ್ಧಿಚಾತುರ್ಯದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಚೆನ್ನಬಸವಪ್ಪ ತನ್ನ ಕಾಲದಲ್ಲಿ ಇಕ್ಕೇರಿಯ ಮೇಲೆ ದಾಳಿ ಮಾಡಿದ್ದ ನಾನಾಜಿರಾಯನ ಪ್ರೇರಣೆಯಿಂದ ದಾಳಿ ಮಾಡಿದ್ದ ಮಾಧೋಜಿ ಪುರಂಧರನ ಮತ್ತು ತದನಂತರದಲ್ಲಿ ಗೋಪಾಲರಾಯನ ಸೈನ್ಯವನ್ನು ಸಂಧಿನಿಗ್ರಹದ ಮೂಲಕ ನಿವಾರಿಸಿಕೊಂಡಿದ್ದನು. ಬೇಲೂರಿನ ಅರಸ ಕೃಷ್ಣಪ್ಪನಾಯಕ ಕೊಡಗರ ದೊರೆ ವೀರರಾಜನಿಂದ ರಾಜ್ಯಭ್ರಷ್ಠನಾಗಿ ಚೆನ್ನಬಸವಪ್ಪನಾಯಕನ ಮೊರೆ ಹೋದಾಗ, ಮೊರೆ ಬಂದವರನ್ನು ರಕ್ಷಿಸುವ ರಾಜಧರ್ಮದಂತೆ ತನ್ನ ಸೈನ್ಯವನ್ನು ಕಳಿಸಿ ಕೊಡಗರ ಸೈನ್ಯವನ್ನು ಹಿಮ್ಮೆಟ್ಟಿಸಿ, ಕೊಡಗರ ದೊರೆಯನ್ನು ಸಾಮ, ದಾನ, ಬೇಧಗಳಿಂದ ಒಡಂಬಡಿಸಿ ಕೃಷ್ಣಪ್ಪನನ್ನು ಮತ್ತೆ ಬೇಲೂರಿನ ಒಡೆಯನನ್ನಾಗಿಸಿದನೆಂದು ಲಿಂಗಣ್ಣಕವಿಯ ಐತಿಹಾಸಿಕ ಕೃತಿ 'ಕೆಳದಿನೃಪ ವಿಜಯ'ದಲ್ಲಿ ಉಲ್ಲೇಖಿತವಾಗಿದೆ. ಈ ಚೆನ್ನಬಸವಪ್ಪನಾಯಕ ರೋಗಬಾಧೆಯಿಂದ ಕ್ರಿ.ಶ.೧೭೫೭ರಲ್ಲಿ ತೀರಿಕೊಂಡ ನಂತರದಲ್ಲಿ ವೀರಮ್ಮಾಜಿಯು ತನ್ನ ಸೋದರಮಾವನ ಕಿರಿಯ ಮಗನನ್ನು ದತ್ತು ತೆಗೆದುಕೊಂಡು, ಸೋಮಶೇಖರನಾಯಕನೆಂದು ಹೆಸರಿಸಿ ಆತನಿಗೆ ಪಟ್ಟಾಭಿಷೇಕ ಮಾಡಿಸಿದಳು. ಆತ ಚಿಕ್ಕವನಾದ್ದರಿಂದ ವಾಸ್ತವವಾಗಿ ವೀರಮ್ಮಾಜಿಯೇ ರಾಜ್ಯಾಡಳಿತದ ಸೂತ್ರವನ್ನು ಹಿಡಿದಿದ್ದಳು. ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ ೧೪ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:
ಇರುತಿರುತುಂ ತದ್ಧರಣೀ
ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ
ತರದೊಳ್ ಪರಿಣಯಮಿಲ್ಲದೆ
ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)
     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ. ಆದರೆ ಹೇಗೋ ಸಾವಿನಿಂದ ಚೆನ್ನಬಸವನಾಯಕ ಪಾರಾದನೆಂದು, ಆತನಿಗೆ ಅಧಿಕಾರ ಮರಳಿಸುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಚಿತ್ರದುರ್ಗದ ಮದಕರಿನಾಯಕ ಪ್ರಯತ್ನಿಸಿ ವಿಫಲನಾದನೆಂದು, ನಂತರ ಇದೇ ರೀತಿಯ ಪ್ರಯತ್ನವನ್ನು ಹೈದರಾಲಿ ಮಾಡಿದನೆಂದು ಇವರುಗಳು ಬರೆಯುತ್ತಾರೆ. ಹೈದರ್ ನಾಮಾದ ಪ್ರಕಾರ ಚಿತ್ರದುರ್ಗದ ಮದಕರಿನಾಯಕ ಹೈದರಾಲಿಗೆ ಚೆನ್ನಬಸವನಾಯಕನ ವೃತ್ತಾಂತ ತಿಳಿಸಿ ಒಂದು ರಹಸ್ಯ ಕಾರ್ಯತಂತ್ರ ರೂಪಿಸಿದರು. ಅದರಂತೆ ಚೆನ್ನಬಸವಪ್ಪನಾಯಕನಿಗೆ ಕೆಳದಿಯ ರಾಜ್ಯದ ಅಧಿಕಾರ ಮರಳಿ ಕೊಡಿಸುವ ನೆಪದಲ್ಲಿ ನಕಲಿ ಚೆನ್ನಬಸವಪ್ಪನಾಯಕನನ್ನು ಮುಂದಿಟ್ಟುಕೊಂಡು ಮದಕರಿನಾಯಕ ಮತ್ತು ಹೈದರಾಲಿ ಬಿದನೂರು ಕೋಟೆಯೆಡೆಗೆ ಧಾವಿಸಿದರೆಂದು ಹೇಳಲಾಗಿದೆ. ಇದರಲ್ಲಿ ಚೆನ್ನಬಸವನಾಯಕನನ್ನು false Raja’  ಎಂದೇ ಉಲ್ಲೇಖಿಸಲಾಗಿದೆ. (ಹೈ.ನಾ. ೨೬-೨೭).
     ಡಿ ಲಾ ಟೂರ್ ಪ್ರಕಾರ ರಾಣಿ ವೀರಮ್ಮಾಜಿಯ ಮಗನೇ ಹೈದರಾಲಿಯನ್ನು ಆತನ ಬಿಸ್ನಗರ (ಬಸವಾಪಟ್ಟಣ) ಕೋಟೆಯಲ್ಲಿ ಭೇಟಿ ಮಾಡಿ ತಾನು ಈಗ ಪ್ರಾಪ್ರ ವಯಸ್ಸಿಗೆ ಬಂದರೂ ತನಗೆ ರಾಜ್ಯಾಧಿಕಾರ ಕೊಡದೇ ರಾಣಿಯೇ ಆಡಳಿತ ನಡೆಸುತ್ತಿರುವ ಬಗ್ಗೆ ದೂರಿ ಅಧಿಕಾರ ಪಡೆಯಲು ಸಹಕರಿಸಲು ಕೋರುತ್ತಾನೆ. ಹೈದರಾಲಿ ರಾಣಿ ವೀರಮ್ಮಾಜಿಗೆ ಪತ್ರ ಬರೆದು ತನ್ನ ಮುಂದೆ ಹಾಜರಾಗಿ ವಿವರಣೆ ಕೊಡಲು ಹೇಳುತ್ತಾನೆ. ರಾಣಿ ವೀರಮ್ಮಾಜಿ ತಾನೇ ರಾಣಿಯಾಗಿದ್ದು ತನ್ನ ಮೇಲೆ ಹಕ್ಕು ಚಲಾಯಿಸಲು ಇತರರಿಗೆ ಅಧಿಕಾರವಿಲ್ಲವೆಂದು ಉತ್ತರಿಸುತ್ತಾಳೆ. ಯುದ್ಧ ಸಂಭವಿಸುತ್ತದೆ. (೧.೮೧-೮೨).
     ರೋಬ್ಸನ್ ಹೇಳುವಂತೆ, ಮದಕರಿನಾಯಕನಿಂದ ಚೆನ್ನಬಸವನಾಯಕನ ವೃತ್ತಾಂತ ತಿಳಿದ ಹೈದರಾಲಿಗೆ ಬಿದನೂರು ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವೆಂದು ಕಂಡಿತು. ಮದಕರಿನಾಯಕ, ಹೈದರಾಲಿ ಮತ್ತು ಚೆನ್ನಬಸವನಾಯಕರ ನಡುವೆ ರಹಸ್ಯ ಒಪ್ಪಂದವೇರ್ಪಟ್ಟು, ಅದರಂತೆ ಚೆನ್ನಬಸವನಾಯಕನಿಗೆ ಕೆಳದಿ ರಾಜ್ಯಾಧಿಕಾರ ಕೊಡಿಸುವುದಕ್ಕೆ ಪ್ರತಿಯಾಗಿ ೪೦ ಲಕ್ಷ ರೂ.ಗಳನ್ನು ಆತ ಕೊಡಬೇಕೆಂದು ನಿಗದಿಯಾಯಿತು. ಚೆನ್ನಬಸವನಾಯಕ ಮರುಮಾತಿಲ್ಲದೆ ಒಪ್ಪಿ, ನಂತರ ಯುದ್ಧ ಸಂಭವಿಸಿತು.
     ಕಿರ್ಮಾನಿಯ ಪ್ರಕಾರ ರಾಣಿ ವೀರಮ್ಮಾಜಿ ವಿಷಯಾಸಕ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಉಂಟಾಗಿತ್ತು. ಹೈದರಾಲಿ ತನ್ನ ಗೂಢಚಾರರಿಂದ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಮದಕರಿನಾಯಕನ ಮಾಹಿತಿಯಂತೆ ಚೆನ್ನಬಸವನಾಯಕ ಬದುಕಿದ್ದಾನೆಂಬ ಸಂಗತಿಗೆ ಒತ್ತು ಕೊಟ್ಟು ಅವನಿಗೆ ರಾಜ್ಯಾಧಿಕಾರ ವಹಿಸಿಕೊಡುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶಮಾಡಿಕೊಳ್ಳಲು ನಿರ್ಧರಿಸಿದ.


     ಹೈದರಾಲಿ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಚಾಣಾಕ್ಷ. ತನ್ನ ಗೂಢಚಾರರಿಂದ ಕೆಳದಿಯಲ್ಲಿನ ರಾಜಪರಿವಾರದಲ್ಲಿನ ಭಿನ್ನಮತಗಳು, ಒಳಮಸಲತ್ತುಗಳ ವಿವರ ಸಂಗ್ರಹಿಸಿದ್ದಲ್ಲದೆ, ಕೆಳದಿ ಅರಸರಿಂದ ಪರಾಜಿತನಾಗಿದ್ದ ಚಿತ್ರದುರ್ಗದ ಮದಕರಿನಾಯಕನ ನೆರವಿನೊಂದಿಗೆ, ಚೆನ್ನಬಸವನಾಯಕ ಬದುಕಿದ್ದಾನೆಂದು ಸುದ್ದಿ ಹಬ್ಬಿಸಿ ಮಾರುವೇಷದ ಚೆನ್ನಬಸವನಾಯಕನನ್ನು ಮುಂದಿರಿಸಿಕೊಂಡು ಬಿದನೂರು ಕೋಟೆಯ ಮೇಲೆ ದಾಳಿ ಮಾಡಿದ. ರಾಜಮನೆತನಕ್ಕೆ ಕೇಡು ಬಯಸಿದ್ದ ಮಂತ್ರಿ ಲಿಂಗಣ್ಣ ಕುಂಸಿಯ ಸೆರೆಮನೆಯಲ್ಲಿದ್ದು, ಆತನ ಕಾರಸ್ಥಾನಗಳೂ ಹೈದರನ ನೆರವಿಗೆ ಬಂದಿತು. ವಿಲ್ಕ್ಸ್ ಪ್ರಕಾರ ಹೈದರನ ಸೈನ್ಯದಲ್ಲಿ ೬೦೦೦೦ ಪದಾತಿಗಳು ಮತ್ತು ಅಶ್ವದಳ, ೩೦೦ ಆನೆಗಳು, ಫ್ರೆಂಚ್ ಅಧಕಾರಿಗಳನ್ನೊಳಗೊಂಡಂತೆ ಒಂದು ಪ್ರೆಂಚ್ ಸೈನ್ಯದ ತುಕಡಿಯಿತ್ತು. ಯುದ್ಧದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ವೀರಮ್ಮಾಜಿ ಹೈದರನಿಗೆ ವರ್ಷಕ್ಕೆ ಒಂದು ಲಕ್ಷ ಪಗೋಡ ಕೊಡುವುದಾಗಿ ಹೇಳಿ ಸಂಧಿಗೆ ಆಹ್ವಾನಿಸಿದಳು. ಆದರೆ ಹೈದರ್ ವೀರಮ್ಮಾಜಿ ತನಗೆ ಶರಣಾದಲ್ಲಿ ಆಕೆಯನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಹಿರಿಯ ಸ್ಥಾನ ನೀಡಿ ಗೌರವದಿಂದ ಬಾಳಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು ಆಕೆಯ ಸ್ವಾಭಿಮಾನವನ್ನು ಕೆಣಕಿತು. ಯುದ್ಧಕ್ಕೆ ನಿರ್ಧರಿಸಿದ ಆಕೆಗೆ ಸವಣೂರಿನ ಹಕೀಂ ಖಾನನ ೨೦೦೦ ಅಶ್ವಗಳು ಮತ್ತು ೪೦೦೦ ಪದಾತಿ ದಳದ ನೆರವೂ ಸಿಕ್ಕಿತು. ವೀರಾವೇಶದಿಂದ ಕಾದಾಡಿದ ಅಕೆ ಹೈದರನನ್ನು ಸೋಲಿಸಿ ಹಿಮ್ಮೆಟ್ಟಿಸಿದಳು. ಯುದ್ಧದಲ್ಲಿ ನೇರವಾಗಿ ಗೆಲ್ಲಲು ಅಸಾಧ್ಯವೆಂದು ಮನಗಂಡ ಹೈದರಾಲಿ ಪೀರ್ ಜಾದೇರ ಮೂಲಕ, ರಾಜದ್ರೋಹಿಗಳ ನೆರವಿನಿಂದ ವೀರಮ್ಮಾಜಿಯನ್ನು ಮೋಸದಿಂದ ಸೆರೆ ಹಿಡಿದದ್ದರಿಂದ ಕೆಳದಿ ಸಾಮ್ರಾಜ್ಯ ಅಂತ್ಯ ಕಾಣುವಂತಾಯಿತು. ಕುಂಸಿಯಲ್ಲಿ ಸೆರೆಯಾಳಾಗಿದ್ದ ಮಂತ್ರಿ ಲಿಂಗಣ್ಣ ಬಿದನೂರು ಕೋಟೆಯ ರಹಸ್ಯ ಮಾರ್ಗವನ್ನು ಹೈದರನಿಗೆ ತಿಳಿಸಿದ್ದನೆಂದು ಹೇಳುತ್ತಾರೆ. ಕೆಳದಿಯ ಡಾ. ಗುಂಡಾಜೋಯಿಸರು ೮೦ ವಿವಿಧ ಆಕರ ಗ್ರಂಥಗಳನ್ನು ಪರಿಶೀಲಿಸಿ ಬರೆದ 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಎಂಬ ಅಧ್ಯಯನಾರ್ಹ ಪುಸ್ತಕ ಈ ವಿಚಾರದಲ್ಲಿ ಅಮೂಲ್ಯ ಮಾಹಿತಿಗಳನ್ನು  ಕ್ರೋಢೀಕರಿಸಿರುವುದು ಇತಿಹಾಸಾಸಕ್ತರಿಗೆ ಅನುಕೂಲವಾಗಿದೆ.
     ವೀರಮ್ಮಾಜಿ ಸೆರೆ ಸಿಕ್ಕ ನಂತರದಲ್ಲಿ ರಾಜನಿಷ್ಠ ಪ್ರಜೆಗಳು ಅಲ್ಲಲ್ಲಿ ಹೈದರನ ವಿರುದ್ಧ ದಂಗೆಯೆದ್ದಾಗ ಹೈದರ್ ದಂಗೆಯನ್ನಡಗಿಸಲು ವರ್ತಿಸಿದ ರೀತಿಯ ಬಗ್ಗೆ ರೋಬ್ಸನ್ ಹೇಳಿರುವುದು ಹೀಗೆ: He put to death one thousand of the principal inhabitants of Biddenoor, in the most cruel, inhuman  method he could invent; their mangled limbs were suspended on every tree in the environs of the city. His blood thirsty rage not being satisfied with the above cruelties, he ordered the chief  persons of every town or village of whom he had the least suspicion, to be butchered in like manner; besides many others, for the most trivial offences had their noses or ears cut off. . .”  ಇಂತಹ ಸ್ಥಿತಿಯಲ್ಲಿ ಸೆರೆ ಸಿಕ್ಕ ವೀರಮ್ಮಾಜಿಯನ್ನು ಹೇಗೆಲ್ಲಾ ಅವಮಾನಿತಗೊಳಿಸಲಾಯಿತೆಂದು ಊಹಿಸುವುದು ಕಷ್ಟವಾಗಲಾರದು. ಆಕೆ ಎಷ್ಟು ದೈಹಿಕ, ಮಾನಸಿಕ ಹಿಂಸೆಗಳನ್ನು ಅನುಭವಿಸಿರಬಹುದು, ಜರ್ಜರಿತಳಾಗಿರಬಹುದು, ಮೂಕವಾಗಿ ರೋದಿಸಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಅಶಕ್ಯವೇ ಸರಿ.
     ಬಿದನೂರು ಕೋಟೆಯನ್ನು ಕುಟಿಲತನದಿಂದ ವಶಪಡಿಸಿಕೊಂಡ ಹೈದರ್ ಸುಮಾರು ೬೩೦ ಕೋಟಿ  ಗದ್ಯಾಣಗಳನ್ನು ದೋಚಿದನೆಂದು ಇತಿಹಾಸ ಹೇಳುತ್ತದೆ. ಕೆಳದಿ ಎಷ್ಟು ಸಂಪದ್ಭರಿತವಾಗಿತ್ತೆಂಬುದು ಇದರಿಂದ ಗೊತ್ತಾಗುತ್ತದೆ. ಬಿದನೂರು ವಶವಾದ ನಂತರ ಆ ನಗರಕ್ಕೆ 'ಹೈದರ್ ನಗರ'ವೆಂದು ಮರುನಾಮಕರಣ ಮಾಡಿದ ಹೈದರ್ ಅದನ್ನು ತನ್ನ ಸೈನಿಕನೆಲೆಯಾಗಿಸಿಕೊಂಡನು. (ಮ.ಕೆ.ಸಾ.-ಪು.೮). ಟಿಪ್ಪು ಹತನಾದ ನಂತರದಲ್ಲಿ ಆ ಹೈದರ್ ನಗರ ಪುನಃ ಬಿದನೂರಾಯಿತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದ ಈ ಬಿದನೂರನ್ನು ನಗರ ಎಂತಲೂ ಈಗ ಕರೆಯುತ್ತಿದ್ದು, ಹೊಸನಗರದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿದೆ. ಈಗ ಅವಶೇಷವಾಗಿ ಉಳಿದಿರುವ ಕೋಟೆ ವೀಕ್ಷಣೀಯ ಸ್ಥಳವಾಗಿದ್ದು, ಒಂದೊಮ್ಮೆ ಹೇಗಿದ್ದಿರಬಹುದೆಂಬ ಕಲ್ಪನೆ ಕೊಡುತ್ತದೆ. ಕೋಟೆಯ ಕುರಿತು ಹೆಚ್ಚಿನ ವಿವರಣೆಯನ್ನು ಲೇಖನ ವಿಸ್ತಾರವಾಗುವ ಕಾರಣದಿಂದ ಇಲ್ಲಿ ಮುಂದುವರೆಸುವುದಿಲ್ಲ. ಬಿದನೂರು ಕೋಟೆಯ ಅವಶೇಷದ ಕೆಲವು ಚಿತ್ರಗಳನ್ನು ಗಮನಿಸಿ. (ಸುಮಾರು ೫-೬ ವರ್ಷಗಳ ಹಿಂದೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ತೆಗೆದಿದ್ದ ಫೋಟೋಗಳಿವು).
     ಹೈದರನಿಂದ ಶಿರಾ ಮತ್ತು ಮಧುಗಿರಿಗಳನ್ನು ಪೇಶ್ವೆಯವರು ವಶಪಡಿಸಿಕೊಂಡ ನಂತರದಲ್ಲಿ ಮಧುಗಿರಿಯಲ್ಲಿ ಬಂದೀಖಾನೆಯಲ್ಲಿದ್ದ ಕೆಳದಿ ರಾಣಿ ವೀರಮ್ಮಾಜಿ ಮತ್ತು ಯುವರಾಜನನ್ನು ಗೌರವಾದರಗಳಿಂದ ಬಿಡುಗಡೆಗೊಳಿಸಿದರೆಂದು ೨೩-೭-೧೭೬೭ರ ದಿನಾಂಕದ ದಾಖಲೆಯಿದೆ. ಈ ದಾಖಲೆಯಲ್ಲಿ ಕೆಳದಿಯ King and Queen’ ಎಂದು ಉಲ್ಲೇಖಿಸಲಾಗಿದೆ. ಮರಾಠರು ಕೆಳದಿಯ ಮೇಲೆ ಹಿಂದೆ ಪದೇ ಪದೇ ದಂಡೆತ್ತಿ ಬರುತ್ತಿದ್ದರೂ, ಅವರನ್ನು ಶತ್ರುಗಳಾಗಿ ಕಂಡಿದ್ದರೂ, ಸ್ತ್ರೀಯರನ್ನೂ, ಅಸಹಾಯಕರನ್ನೂ ಗೌರವದಿಂದ ಕಾಣುವ ಭಾರತೀಯ ಸಂಸ್ಕೃತಿಯ ಪರಿಪಾಲಕರಂತೆ ವೀರಮ್ಮಾಜಿಯನ್ನು ಗೌರವದಿಂದ ಕಂಡಿದ್ದು ಶ್ಲಾಘನೀಯವಾಗಿದೆ. ನಂತರದಲ್ಲಿ ವೀರಮ್ಮಾಜಿ ಪೂನಾಕ್ಕೆ ಹೋಗುವ ಮಾರ್ಗದಲ್ಲಿ ಬಳ್ಳಾರಿ ಜಿಲ್ಲೆಯ ಉಜನಿ ಎಂಬ ಗ್ರಾಮದಲ್ಲಿ ಅನಾಥಳಂತೆ ಇಹಲೋಕ ತ್ಯಜಿಸಿದಾಗ ವಿಷಯ ತಿಳಿದ ಗ್ರಾಮಸ್ಥರೇ ಆಕೆಯ ಅಂತ್ಯ ಸಂಸ್ಕಾರ ನಡೆಸಿ ಉಜನಿ ಮಠದ ಆವರಣದಲ್ಲಿ ಸಮಾಧಿ ಮಾಡಿದರು. ಈ ರೀತಿಯಲ್ಲಿ ಎರಡೂವರೆ ಶತಮಾನಗಳ ಕಾಲ ವೈಭವದಿಂದ ಬಾಳಿದ ಕೆಳದಿ ಸಂಸ್ಥಾನ ಮಣ್ಣುಪಾಲಾಯಿತು.
-ಕ.ವೆಂ.ನಾಗರಾಜ್.

ಆಧಾರ:
1. ಕವಿ ಲಿಂಗಣ್ಣನ ಕೆಳದಿನೃಪ ವಿಜಯ
4. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
5. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಲೇ. ಕೆಳದಿ ಗುಂಡಾಜೋಯಿಸ್)
6. ಮರೆಯಲಾಗದ ಕೆಳದಿ ಸಾಮ್ರಾಜ್ಯ (ಲೇ. ಡಾ. ವೆಂಕಟೇಶ ಜೋಯಿಸ್)
7. The glorious Keladi (Dr. Gundajois)
8. Shimoga District Gazetteer
9. Life of Hyder Ali (Robson Captain Francis)

ಗುರುವಾರ, ಡಿಸೆಂಬರ್ 19, 2013

ಸತ್ಯದ ಸುತ್ತ ಒಂದು ಸುತ್ತು

     'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' - ಇದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಂದ ಮಾಡಿಸಲಾಗುವ ಪ್ರಮಾಣವಚನ. ಆದರೆ ಆ ರೀತಿ ಪ್ರಮಾಣ ಮಾಡಿದವರೆಲ್ಲರೂ ಸತ್ಯ ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಇರಲಿ ಬಿಡಿ. ಅಷ್ಟಕ್ಕೂ ಈ ಸತ್ಯ ಎಂದರೆ ಏನು? ಸತ್ಯಕ್ಕೆ ಸಾಮಾನ್ಯ ಅರ್ಥ ಕೊಡಬೇಕೆಂದರೆ ವಾಸ್ತವ ಸಂಗತಿಗೆ ಅನುಗುಣವಾಗಿರುವುದು, ಒಂದು ಆದರ್ಶ ಅಥವ ಮಾನದಂಡ ಅಥವ ಮೂಲವಿಚಾರಕ್ಕೆ ಅನುರೂಪವಾಗಿರುವುದು ಎನ್ನಬಹುದು. ಸತ್ಯ ಎಂದು ತಿಳಿದಿರುವುದಕ್ಕೆ ವಿರುದ್ಧವಾದುದನ್ನು ಸುಳ್ಳು ಎನ್ನಬಹುದು. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ನಿಜವರಿತು ನಡೆವ ಹಿರಿಯ ಮೂಢ ||
     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
     ಎಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲವೋ ಅಲ್ಲಿ ಸತ್ಯಾನ್ವೇಷಣೆ ಕಷ್ಟ. ಸತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಧಾರ್ಮಿಕ ವಿಚಾರಗಳು ಜಗತ್ತು, ಜೀವ ಮತ್ತು ದೇವರ ಬಗ್ಗೆ ಕೆಲವು ಸಿದ್ಧಾಂತಗಳನ್ನು ಹೊಂದಿದ್ದು ಮಾನವನ ಧರ್ಮ ಎಂದರೆ ಏನು, ಅವನ ದೈನಂದಿನ ನಡವಳಿಕೆಗಳು ಹೇಗಿರಬೇಕು, ಯಾವ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಹೇಳುತ್ತವೆ. ಈ ವಿಚಾರಗಳು ಮತ್ತು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಪೈಕಿ ಕೆಲವು ಅರ್ಥಹೀನವೆನಿಸಿದರೂ, ಅಸಂಬದ್ಧವೆನಿಸಿದರೂ ಪಾಲಿಸಿಕೊಂಡು ಬರುತ್ತಿರುವವರೇ ಜಾಸ್ತಿ. ಇದೇನೇ ಇರಲಿ, 'ಇದು ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ಎಲ್ಲರೂ ಒಪ್ಪಲೇಬೇಕು, ಪಾಲಿಸಲೇಬೇಕು' ಎನ್ನುವವರ ವಾದ, ಒತ್ತಾಯದಿಂದ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುವುದಾಗುತ್ತದೆ. ಭಿನ್ನಾಭಿಪ್ರಾಯ, ಸಮಸ್ಯೆ, ಸಂಘರ್ಷ, ಕ್ರಾಂತಿಗಳಿಗೆ ಮೂಲ ಕಾರಣಗಳು ಇವೇ ಅಗಿವೆ. 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು.
     'ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಮಾತು ಸತ್ಯ ಹೇಳುವುದು ಮತ್ತು ಕೇಳುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ. ನಿಜ, ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ ಸರಿ. ಒಬ್ಬ ಕಳ್ಳ ಅಕಾಸ್ಮಾತ್ತಾಗಿ ಒಬ್ಬ ಪಂಡಿತರ ಉಪನ್ಯಾಸ ಕೇಳಿ ಪ್ರಭಾವಿತನಾದನಂತೆ. ಉಪನ್ಯಾಸದ ನಂತರ ಪಂಡಿತರಲ್ಲಿ ತನ್ನ ಕಷ್ಟ ಹೇಳಿಕೊಂಡ, "ಹೇಳಿ ಕೇಳಿ ನಾನೊಬ್ಬ ಕಳ್ಳ. ನಾನು ಸತ್ಯ ಹೇಳುವುದು ಹೇಗೆ?" ಪಂಡಿತರು ಹೇಳಿದರು, "ಏನೂ ಯೋಚನೆ ಮಾಡಬೇಡ, ಸತ್ಯವನ್ನೇ ಹೇಳು". ಒಂದು ದಿನ ಆತ ರಾತ್ರಿ ಹನ್ನೊಂದು ಘಂಟೆಯ ವೇಳೆಗೆ ಕಳ್ಳತನಕ್ಕೆಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಬೀಟ್ ಪೋಲಿಸಿನವನು  'ಎಲ್ಲಿಗೆ ಹೋಗುತ್ತಿದ್ದೀಯ?' ಎಂದು ವಿಚಾರಿಸಿದ. ಕಳ್ಳ ಒಂದು ನಿಮಿಷ ಯೋಚಿಸಿ ಸತ್ಯ ಹೇಳಿಬಿಟ್ಟ, "ಕಳ್ಳತನ ಮಾಡಕ್ಕೆ ಹೋಗ್ತಾ ಇದೀನಿ". ಪೋಲಿಸಪ್ಪ, "ತಮಾಷೆ ಮಾಡಬೇಡ, ಹೋಗು ಲೇಟಾಗಿದೆ, ಬೇಗ ಮನೆ ಸೇರಿಕೋ" ಎಂದು ನಗುತ್ತಾ ಕಳಿಸಿಕೊಟ್ಟ. ಇದು ತಮಾಷೆಗಾಗಿ ಹೇಳಿದ ಪ್ರಸಂಗವಷ್ಟೇ ಹೊರತು, ಇಂತಹ ಸತ್ಯ ಚಲಾವಣೆಯಾಗಲಾರದು. ಖ್ಯಾತ ಪತ್ರಕರ್ತ ಹಂಟರ್ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ: "ಕಳೆದ ಹತ್ತು ವರ್ಷಗಳಲ್ಲಿ ನನಗೆ ಗೊತ್ತಿರುವ ಎಲ್ಲಾ ಸತ್ಯಗಳ ಕುರಿತು ನಾನೇನಾದರೂ ಬರೆದಿದ್ದರೆ, ಸುಮಾರು ೬೦೦ ಜನರು, ನಾನೂ ಸೇರಿದಂತೆ, ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತು. ವೃತ್ತಿಪರ ಪತ್ರಿಕೋದ್ಯಮದಲ್ಲಿ ಪರಿಪೂರ್ಣ ಸತ್ಯ ಅತ್ಯಂತ ವಿರಳ ಮತ್ತು ಅಪಾಯಕಾರಿ ವಸ್ತು!"
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್' (ಸತ್ಯವನ್ನೇ ಹೇಳು, ಪ್ರಿಯವಾದದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ) ಎಂಬ ಮಾತನ್ನು ತಿಳಿದವರು ಹೇಳುತ್ತಾರೆ.  ಇದು ಸಮಯ, ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಸತ್ಯ. ಇಲ್ಲಿ ಸಾಮಾನ್ಯ ಹಿತ ಪ್ರಧಾನವಾಗುತ್ತದೆ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ, ಒಬ್ಬ ಪ್ರಾಣಭಯದಿಂದ ನಿಮ್ಮ ಮನೆಯಲ್ಲಿ ರಕ್ಷಣೆ ಪಡೆದಿದ್ದಾನೆಂದು ಇಟ್ಟುಕೊಳ್ಳಿ. ಅವನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ ವ್ಯಕ್ತಿ ನಿಮ್ಮನ್ನು ಆ ವ್ಯಕ್ತಿ ಮನೆಯಲ್ಲಿದ್ದಾನೆಯೇ ಎಂದು ಕೇಳಿದರೆ, ಸತ್ಯವನ್ನು ಮಾತ್ರ ಹೇಳುತ್ತೇನೆಂಬ ಹೆಮ್ಮೆಯಿಂದ ನೀವು 'ಹೌದು' ಎಂದು ಉತ್ತರಿಸಿದರೆ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣರಾಗುತ್ತೀರಿ. ಇದು ಸತ್ಯದ ಇನ್ನೊಂದು ಮುಖ!
     ಸತ್ಯ ಹೇಳಲು ಧೈರ್ಯವಿರಬೇಕು. ಅದು ತಿಳಿದಷ್ಟು ಸರಳವಲ್ಲ. ಮೌಲ್ಯಗಳು ಇರುವಲ್ಲಿ ಸತ್ಯಕ್ಕೆ ಬೆಲೆ ಇರುತ್ತದೆ. ಅದು ಇಲ್ಲದಲ್ಲಿ ಸತ್ಯ ಅನಾಥವಾಗುತ್ತದೆ. ಹಾಗೆಂದು ಸತ್ಯ ಹೇಳುವುದು ತಪ್ಪೇ ಎಂದರೆ ತಪ್ಪಲ್ಲ. ಮೌಲ್ಯಯುತ ಸಮಾಜವನ್ನು ಬಯಸುವುದಿಲ್ಲವೆನ್ನುವುದಾದರೆ ಸತ್ಯವನ್ನು ದೂರಕ್ಕೆ ಇಟ್ಟರಾಯಿತು. ಆದರೆ, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸಮಾಜ ಒಳ್ಳೆಯ ರೀತಿಯಲ್ಲಿ ಇರಬೇಕು, ಅನ್ಯಾಯ, ಮೋಸ ಆಗಬಾರದು ಎಂದು ಬಯಸುತ್ತಾರೆ. ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ದೇಶ ಇಂತಹ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯ. "ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?" ಎಂದರೆ ಸಿಗಬಹುದಾದ ಉತ್ತರವೆಂದರೆ, "ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಅವರದಾದರೋ ದೊಡ್ಡ ತಪ್ಪುಗಳು. ನಮ್ಮದಾದರೋ ಪರಿಸ್ಥಿತಿಯ ಒತ್ತಡದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು" ಎಂಬುದೇ! ಈ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತವೆ, ಇವೇ ಮುಂದೆ ಸಾಮಾಜಿಕ ನ್ಯಾಯ, ಮೌಲ್ಯ, ಸತ್ಯ, ಮುಂತಾದ ಬಗ್ಗೆ ಮಾತನಾಡದಂತೆ ಕಟ್ಟಿಹಾಕುತ್ತವೆ. ಒಂದಂತೂ ಸತ್ಯ, ಇತಿಹಾಸ ನಿರ್ಮಾಣ ಮಾಡುವವರು ಬಹುಸಂಖ್ಯಾತರಾದ ಸ್ವಾರ್ಥಿಗಳಲ್ಲ, ಅಲ್ಪಸಂಖ್ಯಾತರಾದ, ಸತ್ಯಕ್ಕೆ ಬೆಲೆ ಕೊಡುವ ಅಲ್ಪ ಸಂಖ್ಯಾತರೇ ಎಂಬುದನ್ನು ಮರೆಯಬಾರದು. ಈ ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ, ಎಲ್ಲರನ್ನೂ ನಾವು ನೆನೆಸಿಕೊಳ್ಳುತ್ತೇವೆಯೇ? ಹೊರಗಿನವರು ಬೇಡ, ನಮ್ಮ ಕುಟುಂಬದ ೩-೪ ತಲೆಮಾರುಗಳ ಹಿಂದಿನವರ ಹೆಸರುಗಳೇ ನಮಗೆ ನೆನಪಿರುವುದಿಲ್ಲ. ಆದರೆ. ರಾಮ, ಕೃಷ್ಣ, ಹರಿಶ್ಚಂದ್ರ, ವಿವೇಕಾನಂದ ಮುಂತಾದವರು ಸತ್ತು ಎಷ್ಟೋ ವರ್ಷಗಳಾದರೂ ಇಂದೂ ಜನಮಾನಸದಲ್ಲಿ ಜೀವಂತವಿದ್ದಾರೆ. ಏಕೆ? ಏಕೆಂದರೆ, ಅವರುಗಳು ಸತ್ಯಕ್ಕೆ ಬೆಲೆ ಕೊಟ್ಟರು, ಇತರರಿಗಾಗಿ ಬಾಳಿದರು. ಇತರರಿಗಾಗಿ ಬಾಳುವವರು ಮಹಾಪುರುಷರೆನಿಸುತ್ತಾರೆ. ಇದು ಸತ್ಯಕ್ಕೆ, ಸತ್ಯವಿಚಾರಕ್ಕೆ ಇರುವ ಮಹತ್ವ ತೋರಿಸುತ್ತದೆಯಲ್ಲವೇ? ಕೇವಲ ತಿಂದು, ಕುಡಿದು ಒಂದು ದಿನ ಕಂತೆ ಒಗೆದು, ಇಂತಹವನು ಒಬ್ಬನಿದ್ದ ಎಂದು ಯಾರೂ ನೆನೆಸಿಕೊಳ್ಳದಂತೆ ಕಣ್ಮರೆಯಾಗಬೇಕೇ ಅಥವ ಬದುಕಿದ್ದಾಗ ಏನನ್ನಾದರೂ ಸಾಧಿಸಿ ಹೆಜ್ಜೆ ಗುರುತು ಬಿಟ್ಟುಹೋಗಬೇಕೇ ಎಂಬುದು ನಮಗೇ ಬಿಟ್ಟಿದ್ದು.
     ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ಮಹಾನ್ ನೆನಪಿನ ಶಕ್ತಿಯ ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳನ್ನು ಅರಗಿಸಿಕೊಳ್ಳಲು ಆಗದೇ ಹೋಗಬಹುದು. ಹೃದಯ, ಆತ್ಮಗಳು ನಮ್ಮ ಪ್ರತಿಯೊಂದೂ ನಾವು ಮಾಡುವ ಕೆಲಸಗಳ ಹಿಂದೆ ಇರದಿದ್ದರೆ, ನಮ್ಮ ಬಾಯಿಯಿಂದ ಹೊರಡುವ ಮಾತುಗಳು ಖಾಲಿ ಖಾಲಿಯಾಗಿರುತ್ತವೆ ಮತ್ತು ಕಾರ್ಯಗಳೂ ಅರ್ಥಹೀನವಾಗಿರುತ್ತವೆ. ಸತ್ಯಕ್ಕೆ ಗೌರವ, ಬೆಲೆ ಕೊಡದವರನ್ನು ಯಾರೂ ನಂಬಲಾರರು. ಆದರೆ ಆತ್ಮ, ಹೃದಯಗಳು ಸಾಥ್ ನೀಡುವ ಕೆಲಸಗಳು ಸತ್ಯ, ಸತ್ವ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಇದರ ಪ್ರತಿಫಲವೇ ದೊರಕುವ ಸಂತೋಷ! ನಿರಾಯುಧವಾದ ಸತ್ಯ ಮತ್ತು ಷರತ್ತಿಲ್ಲದ ಪ್ರೀತಿಗಳ ಮಾತುಗಳದೇ ವಾಸ್ತವದಲ್ಲಿ ಕೊನೆಯ ಮಾತಾಗಿರುತ್ತದೆ. ಸತ್ಯಕ್ಕೆ ತಾತ್ಕಾಲಿಕವಾದ ಸೋಲುಂಟಾದರೂ, ಗೆಲುವಿನಿಂದ ಬೀಗಬಹುದಾದ ಸುಳ್ಳಿಗಿಂತಲೂ ಅದು ಹೆಚ್ಚು ಶಕ್ತಿಶಾಲಿಯಾದುದು. ವಿವೇಕಾನಂದರು ಹೇಳಿದಂತೆ, 'ಇತರರ ಅಭಿಪ್ರಾಯಗಳು, ಸಿದ್ಧಾಂತಗಳು ನಮ್ಮ ಒಳಗಿನ ಧ್ವನಿಯನ್ನು ಅದುಮಲು ಅವಕಾಶ ಕೊಡದಿರೋಣ'. ನಮ್ಮ ಅಂತರಂಗದ ದ್ವನಿಯನ್ನು ಆಲಿಸಿ, ಅದು ಹೇಳಿದಂತೆ ಕೇಳಿದರೆ, ಅದು ಕರೆದೊಯ್ಯುವುದು ಸತ್ಯಪಥದಲ್ಲೇ ಎಂಬ ಅರಿವು ಜಾಗೃತಗೊಳ್ಳಬೇಕಿದೆ. ಆಗ ಮಾತ್ರ 'ಸತ್ಯಮೇವ ಜಯತೇ' ಎಂಬ ಘೋಷವಾಕ್ಯ ಸಾರ್ಥಕ್ಯ ಕಾಣುತ್ತದೆ, 'ಸತ್ಯಮ್ ವದ ಧರ್ಮಮ್ ಚರ' (ಸತ್ಯವನ್ನೇ ಹೇಳು, ಧರ್ಮದಲ್ಲಿ ನಡೆ) ಎಂಬ ಸನಾತನವಾಣಿ ಅರ್ಥ ಕಂಡುಕೊಳ್ಳುತ್ತದೆ.
ಕೊನೆಯದಾಗಿ ಒಂದು ಮಾತು:
ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ!
-ಕ.ವೆಂ. ನಾಗರಾಜ್.

ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ

          ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.

ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂ ತನೋತು ತೇ ಸರ್ವದಾ ಮುದಂ

ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು

ಪುಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ
     'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ?  ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಕೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ?  (ಮೇಲಿನ ಹಾಡಿನ ಸ್ಫೂರ್ತಿಯಿಂದ ಇದನ್ನು ರಚಿಸಿದೆ).
ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||

ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ ||

ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ ||

ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||
     (ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
     ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
-ಕ.ವೆಂ.ನಾಗರಾಜ್.