ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಇತಿಹಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಇತಿಹಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 7, 2018

ಕುತಂತ್ರಕ್ಕೆ ಬಲಿಯಾದ ವಿಜಯನಗರದ ಅರಸ ರಾಮರಾಯ - Ramaraya, King of Vijayanagar - victim of treachery


     ಯವನರ ಇತಿಹಾಸವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೆಂದರೆ, ಅವರು ನೇರ ಯುದ್ಧಗಳಲ್ಲಿ ಜಯಿಸಿರುವುದು ವಿರಳ. ಕುತಂತ್ರಗಳು, ಮೋಸದ ನಡೆಗಳಿಂದ ಅವರು ಮುನ್ನಡೆಯುವುದಕ್ಕೆ ಸಹಕರಿಸುವ ದ್ರೋಹಿಗಳೂ ದೊಡ್ಡ ಮಟ್ಟದಲ್ಲಿ ಅವರ ಗೆಲುವಿಗೆ ಕಾರಣರು. ದೆಹಲಿಯನ್ನಾಳುತ್ತಿದ್ದ ರಜಪೂತ ದೊರೆ ಪೃಥ್ವೀರಾಜ ಚೌಹಾನನ ಮೇಲಿನ ದ್ವೇಷದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದವನು ನೆರೆಯ ಕನೌಜದ ರಾಜ ಜಯಚಂದ್ರ. ಹೀಗೆ ಸಹಾಯ ಮಾಡಿದವನಾದರೂ ಉದ್ಧಾರವಾದನೇ? ಇಲ್ಲ, ಆ ಜಯಚಂದ್ರನೂ ಘೋರಿಯಿಂದ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಭಾರತ ಶತಮಾನಗಳವರೆಗೆ ಮೊಘಲರ ಆಳ್ವಿಕೆಗೆ ಒಳಗಾಗಬೇಕಾಯಿತು. ಇತ್ತೀಚಿನ ಹೈದರಾಲಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮೈಸೂರು ಒಡೆಯರರ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸರದಾರನಾಗಿದ್ದವನು ಪರಿಶ್ರಮದಿಂದ ಮುಂದೆ ಬಂದದ್ದೇನೋ ಸರಿ. ಆದರೆ ಆತ ಮೈಸೂರಿನ ಒಡೆಯನಾಗಲು ಪ್ರಯತ್ನಿಸಿದಾಗ ಎಚ್ಚೆತ್ತ ರಾಜಮಾತೆ ಮತ್ತು ನಿಷ್ಠರ ಸಹಾಯದಿಂದ ಸೋತು ಪಲಾಯನ ಮಾಡಬೇಕಾಗಿ ಬಂದಿತು. ಸೋದರ ಸಂಬಂಧಿ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರೊಂದಿಗೆ ಪುನಃ ದಾಳಿ ಮಾಡಿದಾಗ, ಖಂಡೇರಾಯನ ನೇತೃತ್ವದ ಸೈನ್ಯದಿಂದ ಪುನಃ ಸೋತುಹೋಗಿದ್ದ. ಆಗ ಹೈದರಾಲಿಯ ನೆರವಿಗೆ ಬಂದವನು ಒಡೆಯರರ ಸಂಬಂಧಿ, ಗಡೀಪಾರಾಗಿದ್ದ ನಂಜರಾಜ ಅರಸ. ಅವನು ತನ್ನ ಸೈನ್ಯದ ಸಹಾಯವನ್ನೂ ಹೈದರಾಲಿಗೆ ಒದಗಿಸಿದ. ಆ ಸೈನ್ಯದ ಸಹಾಯದೊಂದಿಗೆ ಹೈದರಾಲಿ ಮತ್ತೆ ದಂಡೆತ್ತಿ ಬಂದ.  ಖಂಡೇರಾಯನ ಅಧಿಕಾರಿಗಳೊಂದಿಗೆ ನಂಜರಾಜ ಅರಸ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರುವಂತೆ ಖಂಡೇರಾಯನನ್ನು ಹಿಡಿದು ಹೈದರಾಲಿಗೆ ಒಪ್ಪಿಸುವಂತೆ ಸೃಷ್ಟಿಸಿದ ನಕಲಿ ಪತ್ರಗಳು ಖಂಡೇರಾಯನಿಗೆ ಸಿಗುವಂತೆ ಹೈದರಾಲಿ ವ್ಯವಸ್ಥೆ ಮಾಡಿದ್ದ. ಇದರಿಂದ ಖಂಡೇರಾಯ ಹೆದರಿ ಓಡಿಹೋಗಿದ್ದ. ನಾಯಕನಿಲ್ಲದ ಸೈನ್ಯವನ್ನು ಹೈದರಾಲಿ ಸುಲಭವಾಗಿ ಸೋಲಿಸಿದ್ದಲ್ಲದೆ ಮೈಸೂರಿಗೆ ಒಡೆಯನೆನಿಸಿದ. ನಂಜರಾಜ ಅರಸ ನೆರವಿಗೆ ಬರದೇ ಇದ್ದಿದ್ದರೆ ಕರುನಾಡಿನಲ್ಲಿ ಹೈದರ್ ಮತ್ತು ಟಿಪ್ಪೂರ ಆಡಳಿತ ಇರುತ್ತಲೇ ಇರಲಿಲ್ಲ. ನಂತರ ಕೆಳದಿ ಸಂಸ್ಥಾನದ ರಾಜಧಾನಿ ಬಿದನೂರಿನ ಮೇಲೆ ದಾಳಿ ಮಾಡಿದಾಗಲೂ ಹೈದರ್ ರಾಣಿ ವೀರಮ್ಮಾಜಿಯಿಂದ ಸೋತಿದ್ದ. ಅದರೆ ನಾಡದ್ರೋಹಿ ಮಂತ್ರಿ ಲಿಂಗಣ್ಣ ಅರಮನೆಯ ರಹಸ್ಯದ್ವಾರದ ರಹಸ್ಯ ತಿಳಿದ ಹೈದರ್ ಆ ಮಾರ್ಗದ ಮೂಲಕ ರಾಣಿ ಮತ್ತು ರಾಜಕುಮಾರನನ್ನು ಸೆರೆಹಿಡಿದು ಅಪಮಾರ್ಗದಲ್ಲಿ ಯಶಸ್ಸು ಗಳಿಸಿದ್ದ. ವಿಜಯನಗರ ಸಾಮ್ರಾಜ್ಯದ ಪತನವೂ ಸಹ ಯವನರು ಹೆಣೆದ ಮೋಸದ ಬಲೆಯ ಕಾರಣದಿಂದ ಆಗಿತ್ತು. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಲಿಂಗಣ್ಣಕವಿಯ ಕೃತಿ 'ಕೆಳದಿ ನೃಪವಿಜಯ'ದಲ್ಲಿ ವಿಜಯನಗರದ ಪತನದ ಸನ್ನಿವೇಶವನ್ನು ವಿವರಿಸಿರುವ ಪರಿ ಹೀಗಿದೆ:   
    "ವ|| ಮತ್ತಮದಲ್ಲದೆ ಯೆಡೆಯೆಡೆಗೆಳ್ತಂದು ದಾಳಿವರಿಯುತಿರ್ದವಿದ್ಧಕರ್ಣರ್ಕಳದಟಂ ಮುರಿದು ಭುಜಬಲ ಪ್ರತಾಪದಿಂ ರಾಜ್ಯಂಗೆಯುತ್ತುಮಿರಲಾ ಕಾಲದೊಳ್ ರಾಮರಾಯರ್ ವಿದ್ಯಾನಗರಿಯಿಂ ತೆರಳ್ದು ತುರುಷ್ಕರ ಮೇಲೆ ದಂಡೆತ್ತಿ ಪೋಗಿರಲ್ ತದ್ರಕ್ತಾಕ್ಷಿ ಸಂವತ್ಸರದ ಮಾಘಮಾಸ ದೊಳ್ ತುರುಷ್ಕ ಸೈನ್ಯಕ್ಕಂ ರಾಯಸೈನ್ಯಕ್ಕಂ ಮಹಾದ್ಭುತಮಾದ ಯುದ್ಧಂ ಪಣ್ಣಿ ರಾಯಸೈನ್ಯಕ್ಕಿದಿರ್ಚಿ ನಿಲಲಶಕ್ಯಮಾಗಿ ಯವನ ಸೈನ್ಯಂ ಮುರಿದು ಹರಿಹಂಚಾಗಲ್ ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿಪಾತುಶಾಹನೆನಿಪ ನಿಜಾಮಶಾಹನುಂ ಇವರಿರ್ವರುಂ ಯುದ್ಧರಂಗದೊಳ್ಕೈಗೆಯ್ದು ನಿಂದು ನಿತ್ತರಿಸಲಮ್ಮದೆ ಪಲಾಯನಂ ಬಡೆದಿಂತು ರಾಯಸೈನ್ಯಮಂ ಮುರಿವುದಸಾಧ್ಯಮೆಂದಿರ್ವರ್ ಪಾತುಶಾಹರೊಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯ ತಂತ್ರದಿಂ ಪೊರತು ಗೆಲ್ವುದಸಾಧ್ಯವೆಂದು ನಿಶ್ಚಯಂಗೆಯ್ದು ರಾಯರ ಸಮೀಪದೊಳ್ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾಪುರದ ಅಲ್ಲಿ ಅದುಲಪಾತುಶಾಹಂಗೆ ಸಂಧಾನವನೊಡರ್ಚಿಸಿ ಜಾತ್ಯಭಿಮಾನ ಹೇತುಪಂಥಮಂ ಪುಟ್ಟಿಸಿ ಮಂತ್ರಂ ಭಿನ್ನಿಸದಂತು ಸ್ವಜಾತ್ಯಭಿಮಾನದೇವತಾಸಾಕ್ಷಿ ಪೂರ್ವಕವಾಗಿ ಖಡ್ಗಮಂ ಮುಟ್ಟಿಸಿ ಕ್ರಿಯಾಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ ಅದುಲಶಾಹನನೊಳಗು ಮಾಡಿಕೊಂಡು ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿನಿಜಾಮಶಾಹನುಂ ನಂಬುಗೆಯಾದೊಡೆ ಸಂಧಾನಮುಖದಿಂದೈತಂದು ಕಾಣ್ಬೆವೆಂದು ಹುಸಿಯ ವರ್ತಮಾನಮಂ ಪುಟ್ಟಿಸಿ ನಚ್ಚುಹಾಕಿ ರಾಯರಂ ಮೈಮರೆಸಿ ಸಮಯಸಾಧನೆಯಂ ರಚಿಸಿ ಬಳಿಕ್ಕಂ ವಿಜಾಪುರದ ಅಲ್ಲಿ ಅದುಲಶಾಹನ ಸಂಚಿನ ಮೇಲಾ ಪಾತುಶಾಹರೊಂದಾಗಿ ಮೋಸದ ಮೇಲೆ ಶಾಲಿವಾಹನ ಶಕ ವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ರಕ್ಕಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಶ್ಛೇದನಂಗೈದು ಆ ಶಿರಮಂ ಕಾಶಿಗೆ ಕಳುಹಿತತ್ತತ್ಸ್ಥಾನಂಗಳಿಗೆಲ್ಲಂ ತಾವೇ ಸ್ವತಂತ್ರಕರ್ತು ಗಳಾಗಿರಲಿತ್ತಂ ರಾಯಸಂಸ್ಥಾನಂ ವಿಸ್ಖಲಿತಮಾಗಿ ವಿದ್ಯಾನಗರಂ ಪಾಳಾಗಲಾ ರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನಭಂಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ ಕುಟುಂಬಸಹಿತಂ ತೆರಳ್ದೈತಂದು ಚಿಕ್ಕಸಂಕಣನಾಯಕರ ಪಾದಾರವಿಂದವನಾಶ್ರಯಿಸಲವರ್ಗೆ ಪರಮಾಧಿಕಾರ ಭಾಗ್ಯಂಗಳನಿತ್ತು ಪೋಷಿಸಿದನಂತುಮಲ್ಲದೆಯುಂ . . ."
ಡಾ. ಕೆಳದಿ ಗುಂಡಾಜೋಯಿಸರು ಸರಳಗನ್ನಡದಲ್ಲಿ ಮಾಡಿರುವ ಗದ್ಯಾನುವಾದದ ಭಾಗ:
     "ವ|| ಮತ್ತೆ ಅದೂ ಅಲ್ಲದೆ, ಆಗಾಗ ಬಂದು ದಾಳಿ ಮಾಡುತ್ತಿದ್ದ ತುರುಕರ ಪರಾಕ್ರಮವನ್ನು ಮುರಿದು, ತನ್ನ ಭುಜಬಲಪರಾಕ್ರಮದಿಂದ ರಾಜ್ಯವನ್ನು ರಕ್ಷಿಸುತ್ತಿದ್ದನು. ಆ ಕಾಲದಲ್ಲಿ ರಾಮರಾಯರು ವಿದ್ಯಾನಗರ(ವಿಜಯನಗರ)ದಿಂದ ಹೊರಟು, ತುರುಕರ ಮೇಲೆ ದಂಡೆತ್ತಿ ಹೋಗಿ, ರಕ್ತಾಕ್ಷಿ ಸಂವತ್ಸರದ ಮಾಘಮಾಸದಲ್ಲಿ ತುರುಕರ ಸೈನ್ಯಕ್ಕೂ ಹಾಗೂ ರಾಯರ ಪಡೆಗೂ ಅದ್ಭುತವಾದ ಯುದ್ಧವು ನಡೆದು ರಾಯರ ಸೈನ್ಯದ ಎದುರಿಗೆ ಮುಸಲ್ಮಾನ ಸೈನ್ಯವು ನಿಲ್ಲಲಾರದೆ ಚದುರಿ ಹೋಯಿತು. ಆ ಬಳಿಕ ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ಪಾತುಶಾಹನೆಂದು ಹೆಸರುಳ್ಳ ನಿಜಾಮಶಾಹ ಇವರಿಬ್ಬರೂ ಯುದ್ಧರಂಗದಲ್ಲಿ ಕೈಮಾಡಿದರೂ ನಿಲ್ಲಲಾಗದೆ ಪಲಾಯನ ಮಾಡಿದರು. ಈ ಈರ್ವರೂ ಬಾದುಷಾಹರೂ ಒಂದಾಗಿ ರಾಯರ ಸೈನ್ಯವನ್ನು ಸೋಲಿಸುವುದು ಅಸಾಧ್ಯವೆಂದು ಯೋಚಿಸಿ, ಮೋಸದಿಂದ ಹೊರತು ಬೇರೇನೂ ಉಪಾಯವು ನಡೆಯದೆಂದು ನಿಶ್ಚಯಿಸಿದರು. ರಾಯರ ಸಮೀಪದಲ್ಲಿ ಆಪ್ತ ಸೇವಕನಾಗಿದ್ದ ಬಿಜಾಪುರದ ಅಲ್ಲಿ ಆದುಲಬಾದಷಹನಿಗೆ ಸಂಧಾನದ ಮೂಲಕ ಮನವೊಪ್ಪಿಸಿ, ಜಾತ್ಯಭಿಮಾನಕ್ಕೆ ಕಾರಣವಾದ ಕಟ್ಟಾಣೆಯನ್ನು (ಪಂಥವನ್ನು) ಸೃಷ್ಟಿಮಾಡಿ, ಮಂತ್ರಾಲೋಚನೆಯು ವಿಫಲವಾಗದ ರೀತಿಯಲ್ಲಿ ತಮ್ಮ ಜಾತಿಯ ಅಭಿಮಾನದೇವರ ಸನ್ನಿಧಿಯಲ್ಲಿ, ಸಾಕ್ಷಿ ಪೂರ್ವಕವಾಗಿ ಕತ್ತಿಯನ್ನು ಮುಟ್ಟಿಸಿ, ಕಾರ್ಯವನ್ನು ಪೂರ್ತಿ ಮಾಡಲು ತಪ್ಪದ ರೀತಿಯಲ್ಲಿ ಭಾಷೆಯನ್ನು ತೆಗೆದುಕೊಂಡರು. ಈ ರೀತಿಯಿಂದ ಅಲ್ಲಿ ಆದುಲಶಾಹನನ್ನು ತಮ್ಮೊಳಗೆ ಮಾಡಿಕೊಂಡು ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ನಿಜಾಮಶಾಹ ಇವರಲ್ಲಿ ನಂಬಿಗೆ ಬಂದ ಕೂಡಲೇ ಸಂಧಾನ ಮುಖದಿಂದ ಕರೆತಂದು ಕಾಣುವೆವೆಂದು ಸುಳ್ಳು ಸಮಾಚಾರವನ್ನು ಹುಟ್ಟಿಸಿ, ರಾಯರನ್ನು ಮೈಮರೆಯುವಂತೆ ಮಾಡಿ, ನಂಬಿಸಿ, ಸಮಯಸಾಧನೆಯನ್ನು ಕೈಗೊಂಡರು. ಬಳಿಕ ಬಿಜಾಪುರದ ಅಲ್ಲಿ ಆದುಲಶಾಹನ ಹೊಂಚಿನ ಮೇಲೆ ಬಾದಷಹರೊಂದಾಗಿ, ಮೋಸದಿಂದ ಶಾಲಿವಾಹನ ಶಕವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ಕಸದಂಗಡಿ ಎಂಬ ಸ್ಥಳದಲ್ಲಿ ರಾಮರಾಯರನ್ನು ಹಿಡಿದುಕೊಂಡು ಶಿರಶ್ಚೇದನ ಮಾಡಿದರು. ಆ ತಲೆಯನ್ನು ಕಾಶಿಗೆ ಕಳುಹಿಸಿ, ಆಯಾ ಸ್ಥಾನಗಳಿಗೆಲ್ಲಾ ತಾವೇ ಸ್ವತಂತ್ರರಾಗಿ ಕಾರ್ಯಭಾರವನ್ನು ಕೈಗೊಳ್ಳುತ್ತಾ ಇದ್ದರು. ಈ ಕಡೆಯಲ್ಲಿ ರಾಯರ ಸಂಸ್ಥಾನವು ಹಾಳಾಗಿ ವಿಜಯನಗರವು ಧೂಳೀಪಟವಾಯಿತು. ರಾಯರ ಮನೆವಾರ್ತೆಯಾದ ಬೊಕ್ಕಸದ ಅಧಿಕಾರಿಯೂ, ಸೇನಬೋವನೂ (ಶಾನುಭೋಗನೂ) ಆದ ಚಿನ್ನಭಂಡಾರದ ನಾರಣಪ್ಪಯ್ಯನೆಂಬವನು ಅಲ್ಲಿ ನಿಲ್ಲಲಾರದೆ ಕುಟುಂಬ ಸಹಿತವಾಗಿ ಓಡಿಬಂದು ಚಿಕ್ಕಸಂಕಣ್ಣನಾಯಕರ ಆಶ್ರಯವನ್ನು ಬೇಡಿ ಮೊರೆಹೊಕ್ಕನು. ನಾಯಕನು ಅವರಿಗೆ ಹೆಚ್ಚಿನ ಅಧಿಕಾರವನ್ನು ಇತ್ತು ತನ್ನ ರಾಜ್ಯದಲ್ಲಿ ಪೋಷಿಸುತ್ತಿದ್ದನು."
     ಈ ಲೇಖನದೊಂದಿಗೆ ಇರುವ, ಮುಸ್ಲಿಮ್ ಇತಿಹಾಸಕಾರ ರಫಿಯುದ್ದೀನ್ ಶಿರಾಝಿಯ ಕೃತಿಯಲ್ಲಿ (ಅನುವಾದ-ಅಬ್ದುಲ್ ಗನಿ ಇಮಾರತವಾಲೆ) (Tazkiratul Muluk,  Rafiuddin Shirazi;  translated by Abdul Gani Imaratwale) ಕಂಡುಬರುವ ಚಿತ್ರದಲ್ಲಿ ಯವನರು ರಾಮರಾಯನ ಕೈಕಾಲುಗಳನ್ನು ಕಟ್ಟಿಹಾಕಿ ಶಿರಚ್ಛೇದ ಮಾಡುತ್ತಿರುವ ದೃಷ್ಯವೇ ಭೀಭತ್ಸವಾಗಿದ್ದು, ಅವರ ಕ್ರೂರತೆಯ ದರ್ಶನ ಮಾಡಿಸುತ್ತಿದೆ.
-ಕ.ವೆಂ.ನಾಗರಾಜ್.

ಸೋಮವಾರ, ಜುಲೈ 31, 2017

ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ

   

     ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. (ಭಾರತದಲ್ಲೂ ಗಾಂಧೀಜಿ ಮತ್ತು ಅವರ ಕಾಂಗ್ರೆಸ್ ಸಂಗಡಿಗರ ಹೊರತಾಗಿ ಉಳಿದವರ ತ್ಯಾಗ, ಬಲಿದಾನಗಳನ್ನು ಗೌಣವಾಗಿಸಿ ಬಿಂಬಿಸಲಾಗುತ್ತಿದೆ. ಸುಭಾಷ ಚಂದ್ರ ಬೋಸರ ಕುರಿತ ಎಷ್ಟೋ ಸತ್ಯಗಳು ಇನ್ನೂ ಕತ್ತಲ ಗರ್ಭದಲ್ಲೇ ಅಡಗಿರುವುದು ಒಂದು ಸಣ್ಣ ಉದಾಹರಣೆಯಷ್ಟೆ.) ಭಗತ್ ಸಿಂಗ್ ಮತ್ತು ಅವನ ಸಂಗಡಿಗರ ವಿರುದ್ಧ ವಿಚಾರಣೆ ನಡೆಯುವಾಗ ಅವರ ಪರವಾಗಿ ಧ್ವನಿ ಎತ್ತಲು ಗಾಂಧೀಜಿಯವರ ಮೇಲೆ ಜನರ ಒತ್ತಡ ಹೆಚ್ಚಿದ್ದರೂ ಗಾಂಧೀಜಿ ಒಪ್ಪಿರಲಿಲ್ಲ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ, ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಈಗ ಅಲ್ಲಿರುವ ಹಿಂದೂಗಳು ಶೇ.2ಕ್ಕಿಂತಲೂ ಕಡಿಮೆಯಿದ್ದು, ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧrfm ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ.
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮವನ್ನು ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ! ಅವನು ಎಂತಹ ವ್ಯಕ್ತಿತ್ವದವನು ಎಂಬುದಕ್ಕೆ ಈ ಉದಾಹರಣೆ ಸಾಕು. ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ ೧೯೬೧ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ ೧೯೪೭ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. ೨೬-೦೩-೧೯೩೧ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು. ಭಗತ್ ಸಿಂಗನ ೧೦೫ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗ. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಇದು ಮಾನವತೆಗೆ, ಇತಿಹಾಸಕ್ಕೆ ಮಾಡುವ ಅಪಚಾರ. ಇಂತಹ ಅಪಚಾರ ಮಾಡುವ ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಅಂಡಮಾನ್ ಜೈಲಿನಲ್ಲಿರುವ ಸ್ಮಾರಕದಲ್ಲಿರುವ ವೀರ ಸಾವರ್ಕರರ ಹೆಸರನ್ನು ಅಳಿಸುವ ಅಪಚಾರ ಮಾಡಿದವರು ಹಿಂದಿನ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಮಣಿಶಂಕರ ಐಯರ್ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂದು ಶಾಲಾಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಭಾರತಕ್ಕೆ ಗಾಂಧೀಜಿ ಮತ್ತು ಕಾಂಗ್ರೆಸ್ ಹೋರಾಟದಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಬೋಧಿಸಲಾಗುತ್ತಿದೆ. ಭಗತ್, ಚಂದ್ರಶೇಖರ ಆಜಾದ್, ಮದನಲಾಲ್ ಧಿಂಗ್ರಾ, ಕರ್ನಾಟಕದ ಸಂಗೊಳ್ಳಿ ರಾಯಣ್ಣ, ಧೊಂಡಿಯಾವಾಘ ಮೊದಲಾದ ಅಸಂಖ್ಯ ಶೂರವೀರ ಹೋರಾಟಗಾರರ ಬಲಿದಾನಗಳಿಗೆ ಕಿಮ್ಮತ್ತಿಲ್ಲವೇ? ಇಂತಹ ಸ್ಥಿತಿಗೆ ಮರುಗಿ ನಿಟ್ಟುಸಿರು ಬಿಟ್ಟರಷ್ಟೇ ಸಾಕೇ? ಚಿಂತಿಸಿ. ಅಸಂಖ್ಯ ಅಜ್ಞಾತ ಬಲಿದಾನಿಗಳನ್ನು ಅಗೌರವಿಸುವವರಿಗೆ ಪಾಠ ಕಲಿಸಬೇಕಿದೆ. ನೈಜ ಇತಿಹಾಸ ಹೊರಬರಬೇಕಿದೆ. ಸರ್ಕಾರಗಳು ಮಾಡಬೇಕಾದ ಈ ಕೆಲಸವನ್ನು ಮಾಡದಿದ್ದಲ್ಲಿ ಪ್ರಜ್ಞಾವಂತರೇ ಅದನ್ನು ಮಾಡಲು ಮುಂದೆ ಬರಬೇಕಿದೆ.
-ಕ.ವೆಂ.ನಾಗರಾಜ್.


ಗುರುವಾರ, ನವೆಂಬರ್ 3, 2016

ಹುಚ್ಚರಾಯಸ್ವಾಮಿ ದೇವಾಲಯ, ಶಿಕಾರಿಪುರ


     ಬ್ರಿಟಿಷರೊಂದಿಗೆ ಸೆಣೆಸಾಡಿ ನದಿ ಹಾರಿ ತಪ್ಪಿಸಿಕೊಂಡಿದ್ದ ಧೊಂಡಿಯ ಶಿಕಾರಿಪುರದ ದೈವ ಹುಚ್ಚರಾಯಸ್ವಾಮಿಗೆ ನಮಿಸಿ ರಕ್ಷಿಸಲು ಕೋರಿಕೊಂಡಿದ್ದಲ್ಲದೆ, ತಾನು ತಪ್ಪಿಸಿಕೊಂಡು ಹೋಗಲು ಸಾಧ್ಯವಾದರೆ ತನ್ನ ಖಡ್ಗವನ್ನು ದೇವರಿಗೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದ. ಹರಕೆಯನ್ನು ತೀರಿಸುವ ಸಲುವಾಗಿ ಅರ್ಪಿಸಿದ್ದ ಖಡ್ಗ ಈಗಲೂ ದೇವಸ್ಥಾನದಲ್ಲಿದೆ. ಪ್ರಾಸಂಗಿಕವಾಗಿ ದೇವಸ್ಥಾನದ ಸ್ಥಳ ಪುರಾಣ, ಪ್ರಚಲಿತ ವಿಚಾರದ ಕುರಿತೂ ಪ್ರಸ್ತಾಪಿಸುವೆ. ಶಿಕಾರಿಪುರದ ತಹಸೀಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಯಾಗಿ ಎರಡು ಅವಧಿಗಳಲ್ಲಿ ಕೆಲಸ ಮಾಡಿದ್ದರಿಂದ ಮುಜರಾಯಿ ಅಧಿಕಾರಿಯಾಗಿಯೂ ಈ ದೇವಸ್ಥಾನದ ಅಭಿವೃದ್ಧಿಗಾಗಿ ಕೆಲಸ ಮಾಡಿದ ಸದವಕಾಶವೂ ನನಗೆ ಸಿಕ್ಕಿದ್ದು ಪುಣ್ಯವಾಗಿದೆ. ಕೆಲಸ ಮಾಡಿದ ಅವಧಿಯಲ್ಲಿ ದೇವಸ್ಥಾನದ ಖಾತೆ ವಿವರ ಸ್ಥಳೀಯ ಪುರಸಭೆಯಲ್ಲಿ ಇಲ್ಲದಿದ್ದುದನ್ನು ಗಮನಿಸಿ ಹೊಸದಾಗಿ ಸರ್ವೆ ಮಾಡಿಸಿ ಖಾತೆ ವಿವರಗಳು ದಾಖಲಾಗುವಂತೆ ಮಾಡಿದ್ದು, ಒತ್ತುವರಿ ಮಾಡಿದ್ದವರನ್ನು ತೆರವುಗೊಳಿಸಿದ್ದು ಮತ್ತು ಹೊಸ ಒತ್ತುವರಿಗೆ ಅವಕಾಶವಿರದಂತೆ ಮಾಡಿದ್ದು ಹೇಳಿಕೊಳ್ಳಬಹುದಾದ ಸಂಗತಿಯಾಗಿದೆ. ಸಮೀಪದ ಹುಚ್ಚರಾಯ ಸ್ವಾಮಿಯ ಕೆರೆಯ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಮತ್ತು ಬೃಹತ್ ಈಶ್ವರನ ವಿಗ್ರಹ ಸ್ಥಾಪನೆಗೆ ಆಗ ರಾಜ್ಯದ ಉಪಮುಖ್ಯಮಂತ್ರಿ ಮತ್ತು ನಂತರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡಿಯೂರಪ್ಪನವರು ಆಸಕ್ತಿ ವಹಿಸಿದ್ದುದನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಆ ಅವಧಿಯಲ್ಲಿ ಈಗ ಈಶ್ವರನ ವಿಗ್ರಹವಿರುವ ಸ್ಥಳ ಮರಾಠ ಸಮಾಜದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಅವರಿಗೆ ವಾರಸುದಾರರಿಲ್ಲದ ಪ್ರಯುಕ್ತ ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕೆಲಸ ಆಗುವಂತೆ ಮಾಡಿದ್ದು ತಹಸೀಲ್ದಾರನಾಗಿ ನಾನು ಮಾಡಿದ್ದ ಕರ್ತವ್ಯವಾಗಿದ್ದರೂ ಈಗ ಆ ಸ್ಥಳ ಜನಾಕರ್ಷಣೆಯ ಕೇಂದ್ರವಾಗಿರುವುದು ನನಗೆ ಮುದ ನೀಡಿದ ಕೆಲಸವಾಗಿದೆ.
     ಸುಮಾರು 17ನೆಯ ಶತಮಾನಕ್ಕೆ ಸೇರಿದ ಈ ದೇವಸ್ಥಾನ ಈಗ ಜೀರ್ಣೋದ್ಧಾರಗೊಂಡು ಸುಂದರವಾಗಿ ಕಂಗೊಳಿಸಿದೆ. ವೀರಶೈವ ಮತದ ಹುಚ್ಚಪ್ಪಸ್ವಾಮಿ ಎಂಬುವರಿಂದ ನಿರ್ಮಾಣಗೊಂಡಿತೆನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಮಠದಿಂದ ಬಂದು ಶಿಕಾರಿಪುರದ ನೆಲವಾಗಿಲಿನಲ್ಲಿ ನೆಲೆಸಿದ್ದ ಹುಚ್ಚಪ್ಪಸ್ವಾಮಿ ಸ್ಥಳೀಯ ಬ್ರ್ರಾಹ್ಮಣ ಕುಟುಂಬಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿ ಬ್ರ್ರಾಹ್ಮಣ ದೀಕ್ಷೆ ಪಡೆದು ಮಠವೊಂದನ್ನು ಸ್ಥಾಪಿಸಿಕೊಂಡಿದ್ದನೆನ್ನಲಾಗಿದೆ. ಒಂದು ದಿನ ಹುಚ್ಚಪ್ಪಸ್ವಾಮಿಯ ಕನಸಿನಲ್ಲಿ ಹನುಮಂತ ದೇವರು ಕಾಣಿಸಿಕೊಂಡು ಊರಿನ ದೊಡ್ಡಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಠಾಪಿಸುವಂತೆ ಹೇಳಿದಂತೆ ಆಗುತ್ತದೆ. ಈ ವಿಷಯವನ್ನು ಹುಚ್ಚಪ್ಪಸ್ವಾಮಿ ಊರಿನ ಪ್ರಮುಖರಿಗೆ ತಿಳಿಸಲಾಗಿ ಕೆಲವರು ಅಪಹಾಸ್ಯ ಮಾಡಿ ನಕ್ಕರೂ, ಕೆಲವರಿಗೆ ಅದನ್ನು ಪರೀಕ್ಷಿಸುವ ಮನಸ್ಸಾಗುತ್ತದೆ. ಅವರು ಗ್ರಾಮಸ್ಥರ ನೆರವಿನೊಂದಿಗ ಹುಚ್ಚಪ್ಪಸ್ವಾಮಿ ಹೇಳಿದ ಸ್ಥಳದಲ್ಲಿ ಪರಿಶೀಲಿಸಿದಾಗ ಅಲ್ಲಿ ಕಲ್ಲಿನ ಬಾನಿಯೊಂದು ಮಗುಚಿಕೊಂಡಿರುವ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಅದನ್ನು ಮಗುಚಿ ನೋಡಿದಾಗ ಅಲ್ಲಿ ಮನೋಹರವಾದ ಆಂಜನೇಯನ ವಿಗ್ರಹ ಗೋಚರವಾಗುತ್ತದೆ. ಅದನ್ನು ಹೊರತೆಗೆದು ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬ ಬಗ್ಗೆ ಚರ್ಚೆಯಾಗುತ್ತದೆ. ಹುಚ್ಚಪ್ಪಸ್ವಾಮಿಯವರ ಮಠದಲ್ಲೇ ಪ್ರತಿಷ್ಠಾಪಿಸಬೇಕೆಂದು ತೀರ್ಮಾನವಾದಾಗ ದೇವರಿಗೆ ತನ್ನ ಹೆಸರನ್ನೇ ಇಡುವುದಾದರೆ ಅದಕ್ಕೆ ಅವಕಾಶ ಕೊಡುವುದಾಗಿ ಅವರು ಹೇಳುತ್ತಾರೆ. ಹೀಗಾಗಿ ಹುಚ್ಚರಾಯಸ್ವಾಮಿ ಎಂದೇ ಆಂಜನೇಯ ಇಲ್ಲಿ ಹೆಸರಾಗಿದ್ದಾನೆ. ಸುಮಾರು ಆರು ಅಡಿ ಉದ್ದ, ನಾಲ್ಕು ಅಡಿ ಅಗಲ ಮತ್ತು ಆಳವಿರುವ ಕಲ್ಲಿನ ಬಾನಿಯನ್ನು ಈಗಲೂ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಈ ಬಾನಿಯನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಸುತ್ತಲೂ ಸರಪಳಿ ಕಟಕಟೆ ನಿರ್ಮಿಸಿ ಅದಕ್ಕೆ ಹಾನಿಯಾಗದಂತೆ ಸಂರಕ್ಷಿಸಿಡುವುದು ಸೂಕ್ತವಾಗಿದೆ. ಹುಚ್ಚರಾಯ ಅನ್ನುವ ಹೆಸರು ಎಷ್ಟು ಜನಪ್ರಿಯವೆಂದರೆ ಈ ಹೆಸರನ್ನಿಟ್ಟುಕೊಂಡ ಬಹಳಷ್ಟು ಜನರು ಶಿಕಾರಿಪುರ ತಾಲ್ಲೂಕಿನಲ್ಲಿ ಕಾಣಸಿಗುತ್ತಾರೆ. 
     ಹುಚ್ಚರಾಯಸ್ವಾಮಿಯನ್ನು ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿ ಇರುವ ವಿಗ್ರಹದ ಮೂಗು ಸಾಲಿಗ್ರಾಮ ಶಿಲೆಯದ್ದಾಗಿದೆ. ಇಲ್ಲಿ ಪ್ರಚಲಿತವಿರುವ ಸಂಗತಿಯೆಂದರೆ ಸಾಲಿಗ್ರಾಮ ಹೊಂದಿರುವ ಮೂರು ದೇವರ ದರ್ಶನ ಮಾಡಿದರೆ ಮನೋಭೀಷ್ಠಗಳು ನೆರವೇರುತ್ತವೆ ಎಂಬ ನಂಬಿಕೆ. ಶಿಕಾರಿಪುರದ ಭ್ರಾಂತೇಶ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿರುವ ಕಾಂತೇಶ ಮತ್ತು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶರ ದರ್ಶನವನ್ನು ಒಂದೇ ದಿನ ಮಾಡಿದರೆ ಕಾಶಿಯಾತ್ರೆ ಮಾಡಿದಷ್ಟು ಪುಣ್ಯ ಸಿಗುತ್ತದೆಯೆಂದು ಜನರು ನಂಬುತ್ತಾರೆ. ವಿಶೇಷವೆಂದರೆ ಶಾಂತೇಶ ಮತ್ತು ಕಾಂತೇಶ ಸಹ ಆಂಜನೇಯನ ವಿಗ್ರಹಗಳೇ ಆಗಿದ್ದು ಅಲ್ಲಿನ ಸ್ಥಳಪುರಾಣಗಳೂ ಸಹ ಇದೇ ರೀತಿ ಇರುವುದೆನ್ನಲಾಗಿದೆ. ಶಿಕಾರಿಪುರದ ಭ್ರಾಂತೇಶನಿಗೆ ಮೂಗಿನಲ್ಲಿ ಸಾಲಿಗ್ರಾಮವಿದ್ದರೆ, ಕದರಮಂಡಲಗಿಯ ಕಾಂತೇಶನಿಗೆ ಕಣ್ಣುಗಳಲ್ಲಿ ಮತ್ತು ಸಾತೇನಹಳ್ಳಿಯ ಶಾಂತೇಶನಿಗೆ ಎದೆಯ ಮೇಲ್ಭಾಗದಲ್ಲಿ ಸಾಲಿಗ್ರಾಮ ಇದೆಯೆನ್ನಲಾಗಿದೆ. ಈ ಮೂರು ಸ್ಥಳಗಳು ದೂರದಲ್ಲಿದ್ದರೂ ಒಂದು ದಿನದಲ್ಲಿ ನೋಡಿಬರಲು ಅವಕಾಶವಿದ್ದು, ವಾಹನದ ವ್ಯವಸ್ಥೆ ಮಾಡಿಕೊಂಡು ಹೋಗಿಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯೇನಿಲ್ಲ. 
     ದಿನಾಂಕ 20.10.2016ರಂದು ಶಿಕಾರಿಪುರಕ್ಕೆ ಭೇಟಿ ನೀಡಿದ ಸಂದರ್ಭದ ಫೋಟೋಗಳಿವು.ನಿವೃತ್ತನಾಗಿ ಎಂಟು ವರ್ಷಗಳ ನಂತರದಲ್ಲೂ ರೆವಿನ್ಯೂ  ಇನ್ಸ್ ಪೆಕ್ಟರ್ ಮಂಜುನಾಥ್, ಕೃಷ್ನಮೂರ್ತಿ, ಕಛೇರಿಯ ಮತ್ತು ದೇವಸ್ಥಾನದ ಸಿಬ್ಬಂದಿ ತೋರಿದ ವಿಶ್ವಾಸಕ್ಕೆ ಮನತುಂಬಿಬಂದಿತು. ಹೊಸದಾಗಿ ಬಂದಿದ್ದ ತಹಸೀಲ್ದಾರ್ ಶ್ರೀ ಬಿ. ಶಿವಕುಮಾರರೂ ಧೊಂಡಿಯವಾಘನ ಕುರಿತು ಆಸಕ್ತಿ ತೋರಿಸಿದ್ದು ಸಂತಸವಾಯಿತು.
-ಕ.ವೆಂ.ನಾಗರಾಜ್. 
***************
ಈಗಿನ ತಹಸೀಲ್ದಾರ್ ಶ್ರೀ ಶಿವಕುಮಾರರೊಂದಿಗೆ ಧೊಂಡಿಯ ಕುರಿತು ಮಾತುಕತೆ



ಧೊಂಡಿಯವಾಘನ ಖಡ್ಗದೊಂದಿಗೆ


ದೇವಸ್ಥಾನದ ಆವರಣದಲ್ಲಿ 

ಅಭಿವೃದ್ಧಿಗೊಂಡ ಹುಚ್ಚರಾಯನಕೆರೆ ಆವರಣ
ಬೃಹತ ಶಿವನ ವಿಗ್ರಹ - ಇದರ ನಿರ್ಮಾಣದಲ್ಲಿ ನನ್ನ ಪಾಲೂ ಇದೆಯೆಂಬ ಹೆಮ್ಮೆ

ಶುಕ್ರವಾರ, ಅಕ್ಟೋಬರ್ 28, 2016

ಕೆಳದಿ ಚೆನ್ನಮ್ಮಾಜಿ ಮತ್ತು ಧೊಂಡಿಯವಾಘರನ್ನು ನೆನಪಿಸುವ ಚನ್ನಗಿರಿ

     ಚನ್ನಗಿರಿ - ಮೊದಲು ಶಿವಮೊಗ್ಗ ಜಿಲ್ಲೆಗೆ, ನಂತರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೇರಿದ ತಾಲ್ಲೂಕಾಗಿದ್ದು ತದನಂತರದಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿದ ಸಮೃದ್ಧ ತಾಲ್ಲೂಕು, ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹೆಸರುವಾಸಿಯಾದ ತಾಲ್ಲೂಕು. 17ನೆಯ ಶತಮಾನದಲ್ಲಿ ಕೆಳದಿ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಚನ್ನಗಿರಿ ಅದಕ್ಕೂ ಮೊದಲು ಗಂಗರು, ಕಲ್ಯಾಣಿ ಚಾಲುಕ್ಯರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಚನ್ನಗಿರಿಯ ಕೋಟೆಯ ಆವರಣದಲ್ಲಿ ಪ್ರಾಚ್ಯವಸ್ತು ಇಲಾಖೆಯವರು ಹಾಕಿರುವ ಫಲಕದಲ್ಲಿ ಈ ಪ್ರದೇಶದಲ್ಲಿ ಚೆನ್ನಮ್ಮಾಜಿಯು ಕೋಟೆಯನ್ನು ಕಟ್ಟಿಸಿದ ನಂತರ ಈ ಸ್ಥಳಕ್ಕೆ ಚನ್ನಗಿರಿ ಎಂಬ ಹೆಸರು ಬಂದಿತು ಎಂದು ಇದೆ. ಕೆಳದಿಯ ಕೆಚ್ಚೆದೆಯ ರಾಣಿ ಚೆನ್ನಮ್ಮಾಜಿ ಕ್ರಿ.ಶ. 1671ರಿಂದ 1698ರವರೆಗೆ ಆಳ್ವಿಕೆ ನಡೆಸಿದ್ದು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದವಳು. ಶಿವಾಜಿಯ ಮಗ ರಾಜಾರಾಮ ಔರಂಗಜೇಬನಿಂದ ಸೋಲಿಸಲ್ಪಟ್ಟು ರಕ್ಷಣೆ ಕೋರಿ ಬಂದಾಗ ರಕ್ಷಣೆ ನೀಡಿದವಳು. ಪಾರಂಪರಿಕವಾಗಿ ಮರಾಠರಿಗೂ ಕೆಳದಿಯರಸರಿಗೂ ಸಂಘರ್ಷಗಳು ನಡೆಯತ್ತಿದ್ದರೂ ಶರಣಾಗಿ ಬಂದವರಿಗೆ ರಕ್ಷಣೆ ನೀಡುವ ಹಿಂದೂ ಪರಂಪರೆಯನ್ನು ಎತ್ತಿಹಿಡಿದು ಅಪಾಯ ಎದುರಿಸಿದವಳು. ಕ್ರುದ್ಧ ಔರಂಗಜೇಬ ಕೆಳದಿಯನ್ನು ಆಕ್ರಮಿಸಲು ಮುಂದಾದಾಗ ನಡೆದ ಘೋರ ಕದನದಲ್ಲಿ ಅವನನ್ನು ಸೋಲಿಸಿ ಹಿಮ್ಮೆಟ್ಟಿಸಿದವಳು!
     ಕೆಳದಿ ಅರಸರ ಚರಿತ್ರೆ ತಿಳಿಸುವ ಲಿಂಗಣ್ಣಕವಿಯ ಐತಿಹಾಸಿಕ ಕಾವ್ಯ 'ಕೆಳದಿನೃಪ ವಿಜಯ'ದ ಒಂಬತ್ತನೆಯ ಆಶ್ವಾಸದ 62ನೆಯ ಪದ್ಯ ಮತ್ತು ನಂತರದ ವಚನದಲ್ಲಿ ಕವಿ ಚನ್ನಗಿರಿಯ ಕುರಿತು ಹೀಗೆ ಹೇಳಿದ್ದಾನೆ:
"ವ|| ಇಂತು ಸಂಗ್ರಾಮದೊಳ್ ಮೈಸೂರ ಮಹೀಶ್ವರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಣಪ್ಪನಂ ಕೈಸೆರೆವಿಡಿದು ಮರಳ್ದು ಕಳುಹಿಸಿ ಪರಮಪ್ರಖ್ಯಾತಿಯಂ ಪಡೆದು ತುಂಗಭದ್ರಾ ನದೀತೀರದೊಳ್
 ಕಂ || ತರುಣಿಯರ ಕುಲಶಿರೋಮಣಿ
ವರಚನ್ನಮ್ಮಾಜಿಯಾತ್ಮನಾಥನ ಪೆಸರೊಳ್
ಸ್ಥಿರಮಾದ ಸೋಮಶೇಖರ
ಪುರಮೆಂದೆನಿಪಗ್ರಹಾರಮಂ ವಿರಚಿಸಿದಳ್  || 62 ||
ವ|| ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಪೆಸರೊಳ್ ಸೋಮಶೇಖರಪುರಮೆಂದೆನಿಪಗ್ರಹಾರಮಂ ನಿರ್ಮಾಣಂಗೈಸಿ ಸ್ವಾಸ್ಥೆಕ್ಷೇತ್ರವೃತ್ತಿಗಳಂ ಕಲ್ಪಿಸಿ ಶ್ರೋತ್ರಿಯ ಬ್ರಾಹ್ಮಣರ್ಗೆ ಶಿವಾರ್ಪಿತಮಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟಣದ ಸೀಮಾಸನ್ನಿವೇಶದೊಳ್ ಹೂಲಿಕೆರೆಯೆಂಬ ಸ್ಥಳದೊಳ್ ವಿರಾಜಿಪ ಕೋಂಟೆಯಂ ಸ್ವಾಧೀನಂಗೈದದಕ್ಕೆ ಸ್ವನಾಮಾಂಕಿತಮಾದ ಚನ್ನಗಿರಿಯ ಕೋಂಟೆಯೆಂದು ಪೆಸರಿಟ್ಟು ತತ್ಪರಿಸ್ತರಣಮಂ ಬಲ್ಪುಗೈಸಿದಳಂತುಮಲ್ಲದೆಯುಂ"
     ಗದ್ಯಾರ್ಥ: ಯುದ್ಧದಲ್ಲಿ ಮೈಸೂರು ಅರಸರ ದಳವಾಯಿ ತಿಮ್ಮಪ್ಪನನ್ನು ಸೋಲಿಸಿ, ಅವನ ಮಗ ಕೃಷ್ಣಪ್ಪನನ್ನು ಸೆರೆಹಿಡಿದರೂ ಕ್ಷಮಿಸಿ ಮರಳಿ ಕಳುಹಿಸಿದ ಪ್ರಖ್ಯಾತಿ ಪಡೆದ ತರುಣಿಯರ ಕುಲಶಿರೋಮಣಿ ವರ ಚನ್ನಮ್ಮಾಜಿ ತನ್ನ ಗಂಡನ ಹೆಸರಿನಲ್ಲಿ ಸೋಮಶೇಖರಪುರವೆಂಬ ಅಗ್ರಹಾರ ನಿರ್ಮಾಣ ಮಾಡಿಸಿ ಶ್ರೋತ್ರೀಯ ಬ್ರಾಹ್ಮಣರಿಗೆ ಸ್ವಾಸ್ಥೆ, ಕ್ಷೇತ್ರ, ಉದ್ಯೋಗಗಳನ್ನು ಕಲ್ಪಿಸಿ ಶಿವಾರ್ಪಣವೆಂದು ಧಾರೆಯೆರೆದು ಶಾಶ್ವತ ಶಾಸನ ಬರೆಸಿಕೊಟ್ಟಳು. ಅದೂ ಅಲ್ಲದೆ ಬಸವಾಪಟ್ಟಣದ ಸೀಮೆಯ ಹತ್ತಿರ ಹೂಲಿಕೆರೆ(ಹುಲಿಕೆರೆ) ಎಂಬ ಸ್ಥಳದಲ್ಲಿ ಶೋಭಿಸುತ್ತಿದ್ದ ಕೋಟೆಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ತನ್ನ ಹೆಸರಿನ ಅಂಕಿತದೊಂದಿಗೆ 'ಚನ್ನಗಿರಿ ಕೋಟೆ' ಎಂದು ಹೆಸರಿಟ್ಟು ಆ ಕೋಟೆಯನ್ನು ಬಲಪಡಿಸಿದಳು.
     ಚೆನ್ನಮ್ಮಾಜಿ ಹೊಸದಾಗಿ ಕೋಟೆಯನ್ನು ಕಟ್ಟಿಸದೆ ಇದ್ದ ಕೋಟೆಯನ್ನೇ ಅಭಿವೃದ್ಧಿ ಪಡಿಸಿ ಬಲಗೊಳಿಸಿದ್ದಳೆಂದು ಇದರಿಂದ ತಿಳಿದುಬರುತ್ತದೆ. ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರ ಧೊಂಡಿಯವಾಘನ ಜನ್ಮಸ್ಥಳವಾದ ಚನ್ನಗಿರಿಗೆ ದಿನಾಂಕ 19.10.2016ರಂದು ಹೋಗಿ ಚನ್ನಗಿರಿ ಕೋಟೆಯನ್ನು ವೀಕ್ಷಿಸಿದ ಸಂದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಂದಿನ ಸ್ಥಿತಿಯನ್ನು ಬಿಂಬಿಸುತ್ತಿವೆ. ಕೋಟೆಯು ಇತರ ಪ್ರದೇಶಗಳಲ್ಲಿ ಕಂಡುಬರುವ ಕೋಟೆಗಳಷ್ಟು ವಿಶಾಲವಾದುದಾಗಿಲ್ಲ. ಎರಡು ಸುತ್ತು ಗೋಡೆಗಳನ್ನು ಹೊಂದಿರುವ ಕೋಟೆಯನ್ನು ಮಣ್ಣು, ಗಾರೆ ಮತ್ತು ಕಲ್ಲುಗಳನ್ನು ಅಳವಡಿಸಿ ನಿರ್ಮಿಸಲಾಗಿದೆ. ಅಂಡಾಕಾರವಾಗಿರುವ ಕೋಟೆಯಲ್ಲಿ ಏಳು ಬುರುಜುಗಳಿದ್ದು, ಎರಡು ಕಾವಲು ಗೋಪುರಗಳಿವೆ. ಒಂದು ಭಾಗದಲ್ಲಿ ಬಂಡೆಯನ್ನು ಕೊರೆದು ಮಾಡಿದ ಕೊಳವಿದ್ದು ಅದಕ್ಕೆ ಮೆಟ್ಟಲುಗಳಿವೆ. ಸಭಾಗೃಹವಿರಬಹುದೆಂದು ಹೇಳಬಹುದಾದ ಸ್ಥಳದ ಅಡಿಪಾಯ ಕಂಡುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದೆಯೆನ್ನಲಾದ ಕೋಟೆ ರಂಗನಾಥ ಸ್ವಾಮಿಯ ದೇವಾಲಯವನ್ನೂ ಕೋಟೆಯ ಭಾಗದಲ್ಲಿ ಕಾಣಬಹುದು. ಹಳೆಯ ರಥ ಶಿಥಿಲಾವಸ್ಥೆಯಲ್ಲಿದೆ. ಹೊಸ ರಥದ ಮನೆಯಿದೆ. ಚಿತ್ರಗಳು ಕಥೆಯನ್ನು ಮುಂದವರೆಸುತ್ತವೆ. 
-ಕ.ವೆಂ.ನಾಗರಾಜ್.