ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಜುಲೈ 26, 2023

ದೇವರೊಡನೆ ಸಂದರ್ಶನ - 14


ಗಣೇಶ: ದೇವರೇ, ನಾನು ಇದ್ದರೆ ನೀನು ಅನ್ನೋದು ನೀನೇ ಹೇಳಿಕೊಟ್ಟ ಮಾತು. ನನಗಂತೂ ಖುಷಿಯಾಯಿತು. ಮುಂದೇನು ಅಂತ ತಿಳಿಯುವ ಕುತೂಹಲ ಬಂದಿದೆ.
ದೇವರು: ಒಂದು ಮಾತು ಮನಸ್ಸಿನಲ್ಲಿರಲಿ, ಗಣೇಶ. ಯಾವುದು ಸತ್ಯ, ಯಾವುದು ಸರಿ ಅನ್ನುವುದನ್ನು ಕೊನೆಗೆ ನಿರ್ಧರಿಸಬೇಕಾದವನು ನೀನೇ! ಹಿಂದಿನ ಇತಿಹಾಸವನ್ನು ತಿಳಿ, ಧರ್ಮಗ್ರಂಥಗಳು, ಶಾಸ್ತ್ರಗಳು, ನೀವುಗಳೇ ಮಾಡಿಕೊಂಡಿರುವ ಕಟ್ಟಳೆಗಳು, ಸಂಪ್ರದಾಯಗಳ ಕುರಿತೂ ತಿಳಿದುಕೋ, ಕೇಳು, ಅಧ್ಯಯನ ಮಾಡು, ವಿಚಾರ ಮಾಡು, ಚರ್ಚೆ ಮಾಡು. ಯಾವುದನ್ನೂ ಕಣ್ಣು ಮುಚ್ಚಿಕೊಂಡು ಒಪ್ಪುವ ಅಗತ್ಯವೂ ಇಲ್ಲ, ಯಾರೋ ಹೇಳಿದರು ಅಂತ ಒಪ್ಪಲೇಬೇಕು ಅಂತಲೂ ಇಲ್ಲ. ಇಷ್ಟೆಲ್ಲಾ ಆದ ಮೇಲೆ ನಿನ್ನ ಅಂತರಂಗಕ್ಕೆ ಯಾವುದು ಸರಿ ಅನ್ನಿಸುತ್ತದೋ ಅದನ್ನು ನೀನೇ ಕಂಡುಕೊಳ್ಳಬೇಕು. ಅರಿತವರು ಎಂದು ನೀನು ಭಾವಿಸುವ ಸಜ್ಜನರು ಯಾವ ದಾರಿಯಲ್ಲಿ ಸಾಗುತ್ತಾರೋ ಅವರ ದಾರಿಯಲ್ಲೇ ನಿನ್ನ ಬಂಡಿಯೂ ಸಾಗಲಿ. ಗೊತ್ತಾಯಿತಾ, ಕೊನೆಗೆ ಸತ್ಯವನ್ನು ಕಂಡುಕೊಳ್ಳಬೇಕಿರುವುದು ನೀನೇ, ನೀನೇ, ನೀನೇ!
ಗಣೇಶ: ಅದೇನೋ ಸರಿ, ಆದರೆ ನಾನು ಕಂಡುಕೊಳ್ಳಬೇಕಾದ ಸತ್ಯ ಯಾವುದು ಅನ್ನೋದಾದರೂ ನನಗೆ ಅರ್ಥವಾಗಬೇಕಲ್ಲವಾ? ಸ್ವಲ್ಪ ಸುಳಿವು ಕೊಟ್ಟರೆ, ಕೈ ತೋರಿಸಿದರೆ ಆ ದಾರಿಯಲ್ಲಿ ನಡೆಯಬಹುದು. ಯಾಕೋ ನಿನ್ನೆಯ ಮಾತಿಗೂ ಇವತ್ತಿನ ಮಾತಿಗೂ ಏನು ಸಂಬಂಧ ಅನ್ನುವುದೂ ಅರ್ಥವಾಗುತ್ತಿಲ್ಲ. ನನ್ನ ಅಸ್ತಿತ್ವ ಇದ್ದರೆ ಮಾತ್ರ ಉಳಿದೆಲ್ಲಾ ಅಸ್ತಿತ್ವದ ಅರಿವು ನಮಗಾಗುತ್ತೆ ಅನ್ನೋದು ನಿನ್ನೆ ನೀನು ಹೇಳಿದ್ದು. ಅದನ್ನು ಮುಂದುವರೆಸು ದೇವರೇ.
ದೇವರು: ನಿನ್ನ ಅಸ್ತಿತ್ವ ಅನ್ನುವುದು ದೊಡ್ಡದು ಅಂತ ನಿನಗೆ ಆಗಿರುವ ಸಂತೋಷದಿಂದ ನೀನು ಇನ್ನೂ ಹೊರಬಂದಿಲ್ಲ. ಇರಲಿ, ನಿನ್ನ ಅಸ್ತಿತ್ವಕ್ಕೆ ಕಾರಣವಾದರೂ ಏನು ಅಂತ ಯೋಚಿಸಿದ್ದೀಯಾ? ನೀನು ಇದ್ದೀಯಾ ನಿಜ, ಆದರೆ ಏಕೆ ಇದ್ದೀಯಾ?
ಗಣೇಶ: ಗೊಂದಲವಾಗುತ್ತಿದೆ. ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳುವುದೂ ಕಷ್ಟವಾಗುತ್ತಿದೆ.
ದೇವರು: ನೇರವಾಗಿ ಕೇಳುತ್ತೇನೆ, ನಿನಗೆ ಇರಬೇಕು ಅನ್ನಿಸುತ್ತದೋ ಇಲ್ಲವೋ?
ಗಣೇಶ: ಇದೆಂತಹ ಪ್ರಶ್ನೆ? ಯಾರಿಗಾದರೂ ಇರಬಾರದು ಅನ್ನಿಸುತ್ತಾ? ಇದಕ್ಕೆ ಉತ್ತರವನ್ನು ಯಾವ ಮುಠ್ಠಾಳನಿಗೆ ಕೇಳಿದರೂ ಹೇಳುತ್ತಾನೆ.
ದೇವರು: ಈಗ ಹಿಂದಿನ ಪ್ರಶ್ನೆಗೆ ಮತ್ತೆ ಹಿಂತಿರುಗೋಣ. ಇರಬೇಕು ಅನ್ನಿಸುತ್ತದಲ್ಲಾ ಏಕೆ? ನಾನೇ ಹೇಳಿಬಿಡುತ್ತೇನೆ, ಕೇಳು. ನೀನು ಇರುವುದಕ್ಕಿಂತ ಇರಬೇಕು ಅನ್ನುವ ಆಸೆ ಇದೆಯಲ್ಲಾ ಅದು ದೊಡ್ಡದು. ನೀವುಗಳೇ ಏಕೆ, ಜಗತ್ತಿನ ಯಾವೊಂದೂ ಪ್ರಾಣಿ, ಕ್ರಿಮಿ-ಕೀಟ ಸಹ ಸಾಯಲು ಇಚ್ಛಿಸುವುದಿಲ್ಲ. ನೀವು ತಿಂದು ತೇಗುವ ಕುರಿ, ಕೋಳಿಗಳೇ ಮಾತನಾಡಲು ಬರುತ್ತಿದ್ದರೆ ತಮ್ಮ ಜೀವ ಉಳಿಸಲು ನಿಮ್ಮನ್ನು ಬೇಡಿಕೊಳ್ಳುತ್ತಿದ್ದವು. ಹೌದೋ ಅಲ್ಲವೋ? ಈ ಬದುಕಬೇಕು ಅನ್ನುವ ಆಸೆ ನಿಮ್ಮಗಳನ್ನು ಬದುಕಿಸಿದೆ. ಅದು ನಿಮ್ಮ ಒಳಗೇ ಇರುವ ಸಂಗತಿ. ಅದು ಒಂದು ರೀತಿಯ ಆಸೆ, ಭರವಸೆ, ನಿರೀಕ್ಷೆಗಳಿರಬಹುದು, ಅದು ನಿಮ್ಮನ್ನು ಬದುಕುವಂತೆ ಮಾಡುತ್ತಿದೆ. ಆ ಆಸೆ ಏನು ಗೊತ್ತಾ? ಈಗ ಇರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಆಸೆ. ಇದೇ ಎಲ್ಲಾ ಜೀವಿಗಳಲ್ಲೂ ಅಂತರ್ಗತವಾಗಿ ಹುದುಗಿದೆ. ವಿಚಾರ ಮಾಡಬಲ್ಲವರು ಇದನ್ನು ಆತ್ಮೋನ್ನತಿಯ ಆಸೆ ಅನ್ನುತ್ತಾರೆ.
ಗಣೇಶ: ನೀನು ಹೇಳುವುದು ಸ್ವಲ್ಪ ತಲೆಗೆ ಹೋಗುತ್ತಿದೆ. ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುವಂತೆ, ಸಹನೀಯವಾಗುವಂತೆ ಮಾಡುತ್ತದೆ. ಇದು ಏಕೆ ಹೀಗೆ?
ದೇವರು: ನಿಮ್ಮ ಅಸ್ತಿತ್ವಕ್ಕೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಅಂತರ್ಗತ ಪ್ರಜ್ಞೆಯಿಂದ ಅಂತ ಗೊತ್ತಾಯಿತಲ್ಲಾ? ಇದು ಹೊರನೋಟಕ್ಕೆ ಕಾಣುವುದಿಲ್ಲ. ಒಳಗೊಳಗೇ ಕಾಣದಂತೆ ಕೆಲಸ ಮಾಡುವ ಈ ಒಳಪ್ರಜ್ಞೆ ಜೀವಿಗಳ ವಿಚಿತ್ರ, ವಿಶಿಷ್ಟ ಗುಣವಾಗಿದೆ. ನಿನ್ನ ಶರೀರ ಅನ್ನುವುದು ಒಂದು ಬಂಡಿ ಎಂದುಕೊಂಡರೆ ಆ ಬಂಡಿಯ ಒಡೆಯನೂ ನೀನೇ, ಪ್ರಯಾಣಿಕನೂ ನೀನೇ! ಆ ಬಂಡಿ ಮುಂದಕ್ಕೆ ಹೋಗುತ್ತಿರಬೇಕು ಅಂದರೆ ಅದನ್ನು ಸರಿಯಾಗಿ ನಡೆಸಬೇಕು. ಆ ಪ್ರಯಾಣ ಏಕೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕಾದವನು ಪ್ರಯಾಣಿಕನೇ. ಈ ಬಂಡಿ, ಬಂಡಿಯ ಮಾಲೀಕ, ಬಂಡಿಯ ಪ್ರಯಾಣಿಕ ಎಲ್ಲವೂ ಒಂದು ರೀತಿಯ ವಿಸ್ಮಯವಾಗಿ ಕಾಣುತ್ತದೆಯಲ್ಲವೇ? ಪ್ರಯಾಣಿಸುತ್ತಾ ಹೋದಂತೆ ಗುಟ್ಟು ಬಯಲಾಗುತ್ತಾ ಹೋಗುತ್ತದೆ. ಆದರೆ ಇದು ಬಹು ದೀರ್ಘವಾದ ಪಯಣ. ಗೊತ್ತಿದ್ದೋ, ಗೊತ್ತ್ತಿಲ್ಲದೆಯೋ ನೀವು ಪ್ರಯಾಣ ಮಾಡುತ್ತಲೇ ಇರುತ್ತೀರಿ. ಇನ್ನೂ ಉತ್ತಮ ಸ್ಥಿತಿಗೆ ಏರಬೇಕು ಅನ್ನುವ ಬಯಕೆ ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತಿರುತ್ತದೆ. ವಿಶೇಷ ಅಂದರೆ ಹೋಗುತ್ತಾ ಹೋಗುತ್ತಾ ಉತ್ತಮ ಸ್ಥಿತಿ ಅಂದರೇನು ಅನ್ನುವ ನಿಮ್ಮ ಕಲ್ಪನೆ ಸಹ ಬದಲಾಗುತ್ತಾ ಹೋಗುತ್ತದೆ.
ಗಣೇಶ: ನೀನು ಹೇಳೋದು ಕೇಳಿದರೆ ಮುಂದಕ್ಕೆ ಹೋಗೋದು ಅಂದರೆ ಕೊನೆಗೊಮ್ಮೆ ಸ್ವರ್ಗಾನೋ, ಮೋಕ್ಷಾನೋ ಪಡೆಯುವವರೆಗೆ ಬದುಕುವ ಹೆಸರಿನಲ್ಲಿ ಒದ್ದಾಡೋದಾ?
ದೇವರು: ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ಶರೀರದ ಮೂಲಕ ಹೊಂದಿರುವ ಅಸ್ತಿತ್ವವನ್ನೇ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ಪ್ರಾಪ್ತಿ(ಸಾಮ್ರಾಜ್ಯ ಅಂದುಕೋ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ಜೀವಿಯ ಆಸೆಯಾಗಿದೆ. ಇದಕ್ಕಾಗಿಯೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ. ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಿಮ್ಮದಾಗಬೇಕೆಂಬವರೆಗೆ ಈ ಅಸೆ ಅಪ್ರಜ್ಞಾತ್ಮಕವಾಗಿ ಸುಪ್ತವಾಗಿರುತ್ತದೆ. ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ಎಂದು ಅಂದುಕೊಳ್ಳುತ್ತೀರಿ.
ಗಣೇಶ: ಅರ್ಥವಾಗಲಿಲ್ಲ.
ದೇವರು: ನೋಡು, ಹೆಚ್ಚು ಹೆಚ್ಚು ಗಳಿಸುತ್ತೀಯಾ, ಅದನ್ನು ಅನುಭವಿಸಲು ದೀರ್ಘಾಯಸ್ಸು ಬೇಕೆನ್ನುತ್ತೀಯಾ. ಈ ದೀರ್ಘಾಯಸ್ಸು ಅಂದರೆ ಏನು? ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಿಮಗೆ ಗೊತ್ತಿಲ್ಲದಂತೆಯೇ ಅದು ಏನೆಂದು ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೀರಿ. ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೀರಿ, ಅಲ್ಲವಾ? ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಈ ಶರೀರದಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಿಮಗೆ ಇರುತ್ತದೆ. ಆದರೂ ದೀರ್ಘಾಯಸ್ಸು ಬೇಕು!
ಗಣೇಶ: ಮತ್ತೂ ಅರ್ಥವಾಗಲಿಲ್ಲ.
ದೇವರು: ನಿನಗೆ ಈ ವಿಷಯದಲ್ಲಿ ಚಿಂತನೆ ನಡೆಸಿದರೆ ಸೂಕ್ಷ್ಮ ಅರ್ಥವಾಗುತ್ತಾ ಹೋಗುತ್ತದೆ. ಸೂತ್ರ ರೂಪದಲ್ಲಿ ಇಷ್ಟು ತಿಳಿದುಕೋ. ಬೇಕು, ಬೇಕು ಅನ್ನುವ ಒಳ ಆಸೆ ನಿಮ್ಮನ್ನು ಬದುಕುವಂತೆ ಮಾಡುತ್ತದೆ. ಈ ಬೇಕು ಅನ್ನುವ ಕಾಮ ದಾರಿ ತಪ್ಪಿಸಿದರೆ ನಿಮ್ಮ ಶತ್ರು, ಸರಿದಾರಿಯಲ್ಲಿ ನಡೆಸಿದರೆ ನೀವು ಹೇಳುವ ಪುರುಷಾರ್ಥ ಸಾಧನೆಗೆ ಸಹಕಾರಿ.
ಗಣೇಶ: ಹೌದು, ನೀನು ಹೇಳಿದಂತೆ ಅದು ಏನೇ ಇರಲಿ, ನಾನಂತೂ ಬದುಕಬೇಕು, ಹೆಚ್ಚು ಕಾಲ ಬದುಕಬೇಕು.  ಅದಕ್ಕಾದರೂ ಅವಕಾಶ ಕೊಡು.
ದೇವರು: (ನಗುತ್ತಾ) ಆಗಲಿ, ಗಣೇಶಾ. ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ. ಇದೇ ಸತ್ಯ! ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ಲಕ್ಷ್ಯವಿದ್ದರೆ ಶಾರೀರಿಕ ಅಸ್ತಿತ್ವ ಮೀರಿ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಬದುಕುವುದು ಅಂದರೆ ಇದೇ ಆಗಿದೆ. ನೀನೊಬ್ಬನೇ ಏನು, ಎಲ್ಲರೂ ಬದುಕಲಿ ಎಂಬುದೇ ನನ್ನ ಆಸೆ.
     "ಏನ್ರೀ ಇದು? ನಿಮ್ಮ ಮುಂದಿಟ್ಟಿದ್ದ ಚಹ ಆರಿ ತಣ್ಣಗಾಗಿಹೋಗಿದೆ. ಬಾಯಿ ಬಿಟ್ಟುಕೊಂಡು ಏನು ಯೋಚನೆ ಮಾಡುತ್ತಾ ಕೂತಿದ್ದೀರಿ?" ಎಂಬ ಪತ್ನಿಯ ಮಾತು ಕೇಳಿ ಎಚ್ಚರಗೊಂಡ ಗಣೇಶರು, "ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ, ಈಗ ನೀನು ಚಹ ಬಿಸಿ ಮಾಡಿಕೊಂಡು ತರಬೇಕು" ಎಂದರು. ದುರುಗುಟ್ಟಿ ನೋಡಿದ ಪತ್ನಿಯ ನೋಟವನ್ನು ನಗುತ್ತಾ ಸ್ವೀಕರಿಸಿದ ಗಣೇಶರು ಟಿವಿಯ ರಿಮೋಟಿನ ಗುಂಡಿ ಒತ್ತಿದರು. ಅವರ ದುರದೃಷ್ಟಕ್ಕೆ ಯಾರೋ ಉಪನ್ಯಾಸ ಮಾಡುತ್ತಾ ಹೇಳುತ್ತಿದ್ದರು:
     " . . . ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬಹುದೇ? ಕವಿ ಹೇಳುತ್ತಾನೆ:
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ || . . ."
     ಟಿವಿಯನ್ನು ಆಫ್ ಮಾಡಿದ ಗಣೇಶರು ಮಡದಿ ಮತ್ತೆ ಬಿಸಿ ಮಾಡಿ ತಂದ ಚಹವನ್ನು ಗುಟುಕರಿಸತೊಡಗಿದರು.
-ಕ.ವೆಂ.ನಾಗರಾಜ್.