ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ
ಅನುಭವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅನುಭವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜೂನ್ 25, 2015

1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]


     ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ 1975ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಅತ್ಯಂತ ಪವಿತ್ರವೆಂದು ಭಾವಿಸಲಾಗಿರುವ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾರಕವೆನಿಸುವ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. 1975ರ ಜೂನ್ 26ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. 'ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಆಗಿಹೋಯಿತು. 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ' ಎಂಬ ಜಾಹಿರಾತಿನ ಹಾಡು ಎಲ್ಲರಿಗೂ ಬಾಯಿಪಾಠವಾದಂತಾಗಿತ್ತು.
     ಹಾಸನದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಬೀಗಮುದ್ರೆ ಬಿದ್ದಿತು. ಅದಕ್ಕೆ ಮುಂಚೆಯೇ ಎಚ್ಚೆತ್ತಿದ್ದ ಸಂಘದ ಕಾರ್ಯಕರ್ತರು ಕಟ್ಟಡದಲ್ಲಿದ್ದ ವಸ್ತುಗಳನ್ನು ಬೇರೆಡೆಗ ಸಾಗಿಸಿಬಿಟ್ಟಿದ್ದರು. ಸಂಘದ ಪ್ರಚಾರಕರುಗಳು, ಹಿರಿಯ ನಾಯಕರು ಭೂಗತರಾಗಿದ್ದರು. ಆರೆಸ್ಸೆಸ್ ನಿಷೇಧದ ಹಿನ್ನೆಲೆಯಲ್ಲಿ ದಿ. ಬಿ.ಆರ್.ಕೃಷ್ಣಮೂರ್ತಿ, ದಿ. ಎಸ್.ವಿ.ಗುಂಡೂರಾವ್, ಕರಿಬಸಪ್ಪ, ಮುಂತಾದವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ತುರ್ತುಪರಿಸ್ಥಿತಿ ವಿರೋಧಿಸಲು ಲೋಕನಾಯಕ ಜಯಪ್ರಕಾಶ ನಾರಾಯಣರ  ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಜನ್ಮ ತಾಳಿತು. ಅದರ ಬೆನ್ನೆಲುಬು ಆರೆಸ್ಸೆಸ್ಸೇ ಆಗಿತ್ತು. ಹಾಸನ ಜಿಲ್ಲೆಯಲ್ಲೂ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಚಟುವಟಿಕೆಗಳನ್ನು ಸಂಘದ ಕಾರ್ಯಕರ್ತರು ಆರಂಭಿಸಿದರು. 'ಕಹಳೆ' ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅನಾವರಣ ಮಾಡುವ ಪತ್ರಿಕೆಯನ್ನು ಗುಪ್ತವಾಗಿ ಹಂಚುವ ಕೆಲಸ ಆರಂಭವಾಯಿತು. ಮುದ್ರಿತ ಪತ್ರಿಕೆಗಳನ್ನು ತರುವ, ವಿತರಿಸುವ ಕೆಲಸ ಬಂಧನವನ್ನು ಎದುರಿಸುವ ಭೀತಿಯಲ್ಲೇ ಜಿಲ್ಲೆಯ ಎಲ್ಲಾ ಮೂಲೆಗೂ ತಲುಪಿಸುವ ಕೆಲಸವನ್ನು ಅನಾಮಧೇಯ ಸಂಘದ ಹುಡುಗರು ಯಶಸ್ವಿಯಾಗಿ ಮಾಡುತ್ತಿದ್ದರು. 1975ರ ಜುಲೈ 4ರಂದು ಹಾಸನದ ಗ್ರಂಥಾಲಯದಲ್ಲಿ ಕಹಳೆ ಪತ್ರಿಕೆಯ ಪ್ರತಿ ಹಾಕುತ್ತಿದ್ದನೆಂದು ಶ್ರೀನಿವಾಸ ಎಂಬ ವಿದ್ಯಾರ್ಥಿಯ ಬಂಧನವಾಯಿತು. ಮರುದಿನ ಹಾಸನ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಫುಡ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದೆನೆಂದು ಆರೋಪಿಸಿ ಬಂಧಿಸಿದರು. ನಾನು ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದು, ನನ್ನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. (ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ನಂತರದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗಾಯಿಸಿದ್ದರು.) ಜಿಲ್ಲೆಯಲ್ಲಿ ಬಂಧನಗಳ ಸರಣಿಗೆ ಚಾಲನೆ ಚುರುಕುಗೊಂಡಿತು. ಪಾರಸಮಲ್ ಸೇರಿದಂತೆ ಹಲವರ ಬಂಧನ ಮುಂದಿನ ವಾರಗಳಲ್ಲಿ ಆಯಿತು. ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಲೋಕ ಸಂಘರ್ಷ ಸಮಿತಿ ನಿರ್ಧಾರದಂತೆ ಜಿಲ್ಲೆಯಲ್ಲೂ ಚಳುವಳಿ ಪ್ರಾರಂಭಿಸುವ ಬಗ್ಗೆ ಚರ್ಚಿಸಲು  9-11-1075ರಂದು ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಜನಾರ್ಧನ ಐಯಂಗಾರ್, ಕಛ್ ರಾಮಚಂದ್ರ, ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ ಇವರೆಲ್ಲರೂ ಚಂದ್ರಶೇಖರರ ಮನೆಯಲ್ಲಿ ಸೇರಿದ್ದಾಗ ನಮ್ಮ ಜೊತೆಯಲ್ಲೇ ಇದ್ದ ಇನ್ನೊಬ್ಬ ಸ್ನೇಹಿತ (ಆತನ ಹೆಸರನ್ನು ಉದ್ದೇಶಪೂರ್ವಕ ಉಲ್ಲೇಖಿಸಿಲ್ಲ) ಕೊಟ್ಟಿದ್ದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯದೆ ಅನ್ವಯ ಬಂಧಿಸಿ ಜೈಲಿಗೆ ತಳ್ಳಿದರು. ಮಾಹಿತಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸದೆ ಆತನನ್ನು ನಮ್ಮ ವಿರುದ್ಧ ಸಾಕ್ಷಿಯಾಗಿ ಪೋಲಿಸರು ಬಳಸಿಕೊಂಡರು. ಪೋಲಿಸರ ಭಯಕ್ಕೆ ಆತ ಕೋರ್ಟಿನಲ್ಲಿ ನಮ್ಮ ವಿರುದ್ಧ ಸಾಕ್ಷಿಯನ್ನೂ ಹೇಳಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದ ಕಾರಣ ಪ್ರಕರಣ ಮುಗಿಯುವವರೆಗೂ ಹಲವು ತಿಂಗಳು ಹಾಸನದ ಜೈಲಿನಲ್ಲೆ ಕಳೆಯಬೇಕಾಯಿತು. ಚಳುವಳಿ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ಬಂಧಿತರಾದ ನಮ್ಮನ್ನು 'ಮಂಗಳಪಾಂಡೆ ತಂಡ' ಎಂದು ಹಾಸ್ಯ ಮಾಡುತ್ತಿದ್ದರು. ಹೀಗೆ ಘೋಷಿತ ದಿನಾಂಕದ ಮೊದಲೇ ಹಾಸನದಲ್ಲಿ ಚಳುವಳಿ ಉದ್ಘಾಟನೆಯಾದಂತಾಗಿತ್ತು.
     ಹಾಸನದ ಜೈಲಿನ ಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು. ಬಂಧಿತರಾದವರ ಜನಿವಾರ, ಉಡುದಾರ, ಶಿವದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ನಮ್ಮನ್ನು ಇತರ ಕಳ್ಳಕಾಕರು, ಕೊಲೆಗಾರರು, ಇತ್ಯಾದಿ ಅಪರಾಧಿಗಳೊಂದಿಗೇ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಸಮಾಧಿ ಎನ್ನಲಾಗುತ್ತಿತ್ತು. ಕೈದಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ನನಗೆ ಸಮಾಧಿಯ ಒಳಗೆ ಜಾಗ ಸಿಕ್ಕಿತ್ತು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಅಲ್ಲಿರಬೇಕಿತ್ತು. ಅದನ್ನು ನೆನೆಸಿಕೊಂಡರೆ ಈಗಲೂ ವಾಕರಿಕೆ ಬರುತ್ತದೆ. ಊಟಕ್ಕೆ ಬಿಟ್ಟಾಗ ಕೊಡುತ್ತಿದ್ದ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ಅರ್ಧಂಬರ್ಧ ಬೆಂದ ಬೇಳೆ ಸಾರುಗಳನ್ನು ಹಸಿವು ತಡೆಯದೆ ತಿನ್ನಲೇಬೇಕಿತ್ತು. ಸ್ನಾನ ಮಾಡಲು, ತಟ್ಟೆ ತೊಳೆಯಲು, ಮುಖ ತೊಳಯಲು ಇದ್ದ ತೊಟ್ಟಿಯ ನೀರು ಚರಂಡಿಯ ನೀರಿನಂತೆ ಕಾಣುತ್ತಿತ್ತು. ಕಟ್ಟಿಸಿದಾಗಿನಿಂದ ಅದನ್ನು ಬಹುಷಃ ಶುಚಿ ಮಾಡಿರಲಿಕ್ಕಿಲ್ಲ.
     ಹಾಸನ ಜಿಲ್ಲೆಯಲ್ಲೂ ನಿಗದಿತ ದಿನಾಂಕದಿಂದ ಚಳುವಳಿ ಆರಂಭವಾಗೇ ಬಿಟ್ಟಿತು. ಇಂತಹ ಸ್ಥಳದಲ್ಲಿ ಇಂತಹವರ ನಾಯಕತ್ವದಲ್ಲಿ ಚಳುವಳಿ ಮಾಡಲಾಗುವುದೆಂದು ಮೊದಲೇ ಕರಪತ್ರಗಳನ್ನು ಹಂಚಿ ಆ ಸಮಯಕ್ಕೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಳುವಳಿ ಮಾಡಲಾಗುತ್ತಿತ್ತು. ಹಾಸನದ ಗುಂಡೂರಾಯರು, ವೆಂಕಟರಮಣೇಗೌಡ, ಕರಿಬಸಪ್ಪ, ಅರಸಿಕೆರೆಯ ದುರ್ಗಪ್ಪಶೆಟ್ಟಿ, ಶ್ರೀನಿವಾಸಮೂರ್ತಿ, ಬಸವರಾಜು, ರಾಮಚಂದ್ರ, ಮರುಳಸಿದ್ದಪ್ಪ, ಛಾಯಾಪತಿ, ಆಲೂರಿನ ಮರಸು ಮಂಜುನಾಥ್, ಬಸವೇಗೌಡ, ಅರಕಲಗೂಡು ಹಿರಣ್ಣಯ್ಯ, ಅನಂತರಾಮು, ಬೇಲೂರಿನ ರವಿ, ನಾರಾಯಣ ಕಾಮತ್, ಚ.ರಾ.ಪಟ್ಟಣದ ಮಳಲಿಗೌಡ, ಸಕಲೇಶಪುರದ ಲೋಕೇಶಗೌಡ, ಹುರುಡಿ ವಿಶ್ವನಾಥ್, ಸತ್ಯನಾರಾಯಣ ಗುಪ್ತ, ವಿ.ಎಸ್.ಭಟ್, . . ಅಬ್ಬಾ, ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, (ಎಲ್ಲರ ಹೆಸರುಗಳನ್ನು ನಮೂದಿಸಲಾಗದಿರುವುದಕ್ಕೆ ಕ್ಷಮೆಯಿರಲಿ) ಇವರೆಲ್ಲರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚಳುವಳಿಗಳು ನಡೆದೇ ನಡೆದವು. ಬಂಧನಕ್ಕೊಳಗಾಗಿ ಸತ್ಯಾಗ್ರಹಿ ತಂಡಗಳು ಜೈಲಿಗೆ ಬರುತ್ತಿದ್ದಂತೆ ಒಳಗಿದ್ದ ಕೈದಿಗಳಿಂದ ಅವರಿಗೆ ವೀರೋಚಿತ ಸ್ವಾಗತ ಕಾದಿರುತ್ತಿತ್ತು. ಹಾಗೆಂದು ಇದೇನೂ ಸುಲಲಿತವಾಗಿ ನಡೆಯುತ್ತಿದ್ದ ಚಳುವಳಿಗಳೇನೂ ಅಲ್ಲ. ಭಾಗವಹಿಸಿದವರಿಗೆ ಪೋಲಿಸ್ ಠಾಣೆಯಲ್ಲಿ ಭಯಂಕರವಾದ, ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆತಿಥ್ಯ ಸಿಗುತ್ತಿತ್ತು. ಸಕಲೇಶಪುರದಲ್ಲಿ ಹುರುಡಿ ವಿಶ್ವನಾಥ್ ಮತ್ತು ಸಂಗಡಿಗರ ಮೇಲೆ ಪೋಲಿಸರು ಅಮಾನುಷವಾಗಿ ವರ್ತಿಸಿದ್ದರಿಂದ ಅವರುಗಳು ಹಲವು ದಿನಗಳವರೆಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. ಈರೀತಿ ಅಮಾನುಷವಾಗಿ ವರ್ತಿಸಿದ್ದ ಸಕಲೇಶಪುರದ ಪೋಲಿಸರ ವಿರುದ್ಧ ಪ್ರತಿಭಟಿಸಿದ್ದ ಹಲವರುಗಳನ್ನೂ ಸಹ ರಕ್ಷಣಾ ಕಾಯದೆ ಅನ್ವಯ ಬಂಧಿಸಿ ಸೆರೆಗೆ ತಳ್ಳಿದ್ದರು. ಚಳುವಳಿ ಮಾಡಿದ ಎಲ್ಲರನ್ನೂ ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಲಾಗುತ್ತಿತ್ತು. ವಿಚಾರಣೆ ವಿಳಂಬವಾಗಿ ಮಂದಗತಿಯಲ್ಲಿ ಸಾಗುತ್ತಿತ್ತು, ವರ್ಷಕ್ಕೂ ಮೀರಿದ ಅವಧಿಯವರೆಗೂ ವಿಚಾರಣೆಗಳು ಮುಂದುವರೆದಿದ್ದಿದೆ.
     ಮೊದಲೇ ಚಳುವಳಿಯ ಸ್ಥಳ, ಸಮಯ ಮತ್ತು ಭಾಗವಹಿಸುವವರ ವಿವರಗಳನ್ನು ಪ್ರಕಟಿಸುತ್ತಿದ್ದರಿಂದ ಪೋಲಿಸರು ಚಳುವಳಿ ತಡೆಯಲು ಮತ್ತು ಚಳುವಳಿ ಮಾಡುವುದಕ್ಕೆ ಮೊದಲೇ ಬಂಧಿಸಲು ಸಹಾಯವಾಗುತ್ತಿದ್ದರಿಂದ ನಂತರದ ದಿನಗಳಲ್ಲಿ ತಂತ್ರ ಬದಲಿಸಿ ಬೇರೆ ಬೇರೆ ಸ್ಥಳಗಳಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಲೇಖನ ವಿಸ್ತಾರದ ಭಯದಿಂದ ಒಂದೆರಡು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮಾತ್ರ ಉಲ್ಲೇಖಿಸುವೆ. ಅರಸಿಕೆರೆಯಲ್ಲಿ ಒಂದು ಶವಯಾತ್ರೆ ನಡೆದಿತ್ತು. ದುಃಖತಪ್ತರು ವಾದ್ಯಸಮೇತ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆ ಬಸ್ ಸ್ಟ್ಯಾಂಡ್ ಸಮೀಪ ಬರುತ್ತಿದ್ದಂತೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳು ಮೆರವಣಿಗೆಯಲ್ಲಿದ್ದವರಿಂದ ಮೊಳಗಲಾರಂಭಿಸಿದವು. ಪೋಲಿಸರಿಗೆ ಇದು ಸತ್ಯಾಗ್ರಹ ಎಂದು ಅರಿವಾಗಿ ಧಾವಿಸುವಷ್ಟರಲ್ಲಿ ಶವದ ಆಕಾರದ ಗೊಂಬೆಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿಬಿಟ್ಟಿದ್ದರು. ಆ ಬೊಂಬೆಯಲ್ಲಿ ಹುದುಗಿಸಿಟ್ಟಿದ್ದ ಸರಪಟಾಕಿಗಳು ಕಿವಿ ಗಡಚಿಕ್ಕುವ ಶಬ್ದ ಹೊರಡಿಸಲು ಪ್ರಾರಂಭಿಸಿದಾಗ ಪೋಲಿಸರು ಕಕ್ಕಾಬಿಕ್ಕಿಯಾಗಿದ್ದರು. 
     ಹಾಸನದ ನರಸಿಂಹರಾಜವೃತ್ತದಲ್ಲಿ ಸಕಲೇಶಪುರದ ಲೋಕೇಶಗೌಡರ ನೇತೃತ್ವದಲ್ಲಿ ಚಳುವಳಿ ನಡೆಯುವುದೆಂದು ಪ್ರಚುರವಾಗಿತ್ತು. ಅದನ್ನು ಶತಾಯ ಗತಾಯ ತಡೆಯಲು ಪೋಲಿಸರು ಎಲ್ಲೆಡೆ ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಆ ರಸ್ತೆಯಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಿ ಬೇರೆ ದಾರಿಯಿಂದ ಸಂಚರಿಸಲು ವ್ಯವಸ್ಥೆ ಮಾಡಿದ್ದರು. ಜನರು ಒಟ್ಟಿಗೆ ಓಡಾಡದಂತೆ, ಅಲ್ಲಿ  ನಿಂತುಕೊಳ್ಳದಂತೆ ಪೋಲಿಸರು ತಾಕೀತು ಮಾಡುತ್ತಿದ್ದರು. ಹೀಗಿದ್ದಾಗ ಅಲ್ಲಿಗೆ ಒಂದು ಮೆಟಡಾರ್ ಅಲ್ಲಿಗೆ ಬಂದಿತು. ಬೇರೆ ದಾರಿಯಲ್ಲಿ ಹೋಗುವಂತೆ ಪೋಲಿಸರು ಸೂಚಿಸುವಾಗ ಅವರಿಗೆ ಅದರಲ್ಲಿ ಮೈಗೆಲ್ಲಾ ಬ್ಯಾಂಡೇಜ್ ಹಾಕಿಕೊಂಡಿದ್ದರೂ ರಕ್ತ ಒಸರುತ್ತಿದ್ದ ಅಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿ ಮತ್ತು ಆತನ ಬಂಧುಗಳಿದ್ದುದು ಕಂಡುಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದಾಗ ಮಾನವೀಯತೆಯಿಂದ ಆ ವಾಹನವನ್ನು ಮುಂದೆ ಹೋಗಲು ಬಿಟ್ಟರು. ಸ್ವಲ್ಪ ದೂರ ಹೋದ ಆ ವಾಹನ ಸರ್ಕಲ್ ಸಮೀಪದಲ್ಲೇ ಕೆಟ್ಟು ನಿಂತುಬಿಟ್ಟಿತು. ಬೇರೆ ವಾಹನ ತರುವುದಾಗಿ ಹೇಳಿ ವ್ಯಾನಿನಲ್ಲಿದ್ದವರು ನಾಲ್ಕು ಭಾಗಗಳಾಗಿ ನಾಲ್ಕು ರಸ್ತೆಗಳಲ್ಲಿ ಸ್ವಲ್ಪ ಮುಂದೆ ಸಾಗಿ ಅಂಗಿಯ ಒಳಗೆ ಹುದುಗಿಸಿಟ್ಟಿದ್ದ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ವ್ಯಾನಿನ ಒಳಗೆ ಇದ್ದ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿ ಒಂದು ಕೈಯಲ್ಲಿ ಭಗವಾದ್ವಜ ಇನ್ನೊಂದು ಕೈಲ್ಲಿ ತ್ರಿವರ್ಣ ದ್ವಜ ಹಿಡಿದು ಹೊರಗೆ ಬಂದು ಸರ್ಕಲ್ಲಿನ ಮಧ್ಯದಲ್ಲಿ ನಿಂತು, 'ಭಾರತಮಾತಾ ಕಿ ಜೈ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಎಂದು ಘೋಷಿಸಲು ಪ್ರಾರಂಭಿಸಿತ್ತು. ಆತ ಮತ್ಯಾರೂ ಆಗಿರದೇ ಲೋಕೇಶಗೌಡರೇ ಆಗಿದ್ದರು! ಪೋಲಿಸರಿಗೆ ಕೆಲಕ್ಷಣ ಯಾರನ್ನು ಬಂಧಿಸಬೇಕು ಎಂದು ತಿಳಿಯದೆ ಪರದಾಡಿ, ಕೊನೆಗೆ ಎಲ್ಲರನ್ನೂ ಬಂಧಿಸಿ ಹಾಸನದ ಸೆರೆಮನೆಗೆ ಅಟ್ಟಿದ್ದರು. 
     ಅರಕಲಗೂಡಿನ ಅನಂತ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭ ಏರಿ ಅಲ್ಲಿ ಕಪ್ಪು ಬಾವುಟ ಹಾರಿಸಿ ಕೆಳಗೆ ಇಳಿದು ಬರುತ್ತಾ ಕಂಬಕ್ಕೆ ಗ್ರೀಸ್ ಮೆತ್ತಿ ಬಂದಿದ್ದ. ಮರುದಿನ ಬೆಳಿಗ್ಗೆ ಆ ಕಪ್ಪು ಬಾವುಟ ಇಳಿಸಿ ರಾಷ್ಟ್ರದ್ವಜ ಹಾರಿಸಲು ಅಧಿಕಾರಿಗಳು ಪಟ್ಟಿದ್ದ ಪಾಡು ಅಷ್ಟಲ್ಲ. ಹೊಳೆನರಸಿಪುರದ ಭಗವಾನ್ ಎಂಬ ಬಾಲಕ ಸಂತೆಯಲ್ಲಿ, 'ಕಹಳೆ ಓದಿ, ಇಂದಿರಾಗಾಂಧಿ ಮಾಡಿದ ಅವಾಂತರ ನೋಡಿ' ಎಂದು ಜನರಿಗೆ ಪತ್ರಿಕೆ ಹಂಚುತ್ತಿದ್ದುದನ್ನು ಕಂಡು ಪೋಲಿಸರು ಅವನನ್ನು ಬಂಧಿಸಿ ವಿಚಾರಿಸಿದಾಗ, 'ಯಾರು ಕೊಟ್ಟರೋ ಗೊತ್ತಿಲ್ಲ, ಹಂಚು ಅಂದರು, ಹಂಚುತ್ತಿದ್ದೆ' ಎಂದು ಉತ್ತರಿಸಿದ್ದ. ಇನ್ನೂ ಚಿಕ್ಕವನಾಗಿದ್ದರಿಂದ ಅವನಿಗೆ ಎಚ್ಚರಿಕೆ ಕೊಟ್ಟು ಹಿಂಭಾಗಕ್ಕೆ ಎರಡು ಬಾರಿಸಿ ಬಿಟ್ಟುಕಳಿಸಿದ್ದರು. ಇಂತಹ ಯಾವುದೇ ಸುದ್ದಿಗಳು ಆಕಾಶವಾಣಿಯಲ್ಲಾಗಲೀ, ಪತ್ರಿಕೆಯಲ್ಲಾಗಲೀ ಪ್ರಕಟವಾಗುತ್ತಲೇ ಇರಲಿಲ್ಲ. ಕೇವಲ ಭೂಗತ ಪತ್ರಿಕೆ 'ಕಹಳೆ'ಯ ಮೂಲಕ ಮಾತ್ರ ಸುದ್ದಿ ಹೊರಜಗತ್ತಿಗೆ ತಿಳಿಯುತ್ತಿತ್ತು. ಜನರು ಆ ಪತ್ರಿಕೆಯನ್ನು ಓದಲು, ಕೈಯಲ್ಲಿ ಹಿಡಿದುಕೊಳ್ಳಲೂ ಹೆದರುತ್ತಿದ್ದರೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಚಳುವಳಿಯಲ್ಲಿ ಅರಸಿಕೆರೆ ತಾಲ್ಲೂಕು ಮುಂಚೂಣಿಯಲ್ಲಿತ್ತು. ಬಂಧಿತರು, ಭಾಗವಹಿಸಿದವರಲ್ಲಿ ಅವರದೇ ಸಿಂಹಪಾಲು. ಉಳಿದ ತಾಲ್ಲೂಕುಗಳೂ ಗಣನೀಯ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದವು. ಆದರೆ ಇತರ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ  ಹೊಳೆನರಸಿಪುರ ತಾಲ್ಲೂಕಿನಲ್ಲಿ ವ್ಯಕ್ತವಾದ ಪ್ರತಿಭಟನೆ ಸ್ವಲ್ಪ ಸಪ್ಪೆಯೆಂದೇ ಹೇಳಬೇಕಾಗುತ್ತದೆ.
     ಭಾರತ ರಕ್ಷಣಾ ಕಾಯದೆ (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು ಡಿಫೆನ್ಸ್ ಆಫ್ ಇಂದಿರಾ ರೂಲ್ಸ್ ಮತ್ತು ಆಂತರಿಕ ಭದ್ರತಾ ಶಾಸನ (ಮೀಸಾ-ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಅನ್ನು ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್ ಎಂದು ವ್ಯಂಗ್ಯವಾಗಿ ಆಡಿಕೊಳ್ಳಲಾಗುತ್ತಿತ್ತು. ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆಯಿಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಕಾರಣ ಕೊಡದೆ ಬಂಧಿಸಲು ಅವಕಾಶ ಕೊಡುವ ಮೀಸಾ ಕಾಯದೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಮೀಸೆಯೇ ಬರದಿದ್ದ ವಿದ್ಯಾರ್ಥಿಗಳಾದ ಹಾಸನದ ಪಾರಸಮಲ್, ಅರಕಲಗೂಡಿನ ಪಟ್ಟಾಭಿರಾಮರನ್ನು ಬಂಧಿಸಿದ್ದರು. ಇತರ ಮೀಸಾ ಬಂದಿಗಳೆಂದರೆ, ದಿ. ಎಸ್.ವಿ.ಗುಂಡೂರಾವ್, ದಿ. ವೆಂಕಟರಮಣೇಗೌಡ, ದಿ. ಎನ್.ಕೆ.ಗಣಪಯ್ಯ, ಸಕಲೇಶಪುರದ ತರುಣ ಸತ್ಯನಾರಾಯಣಗುಪ್ತ, ಅರಸಿಕೆರೆಯ ಶ್ರೀನಿವಾಸಮೂರ್ತಿ, ದುರ್ಗಪ್ಪಶೆಟ್ಟಿ, ಆಲೂರು ತಾ.ನ ದಿ. ಬಸವೇಗೌಡ, ಮರಸು ಮಂಜುನಾಥ್, ಆರೆಸ್ಸೆಸ್ಸಿನ ಜಿಲ್ಲಾ ಪ್ರಚಾರಕ ದಿ. ಪ್ರಭಾಕರ ಕೆರೆಕೈ, ಅರೆಹಳ್ಳಿಯ ನಾರಾಯಣ ಕಾಮತ್, ಡಾ. ವಿ.ಎಸ್.ಭಟ್, ಸಕಲೇಶಪುರ. ಇವರ ಪೈಕಿ ಗಣಪಯ್ಯನವರು ಭಾರತೀಯ ಲೋಕದಳಕ್ಕೆ ಸೇರಿದವರಾಗಿದ್ದು ಉಳಿದವರೆಲ್ಲರೂ ಆರೆಸ್ಸೆಸ್ಸಿನವರು. ನನ್ನನ್ನೂ ಮೀಸಾ ಪ್ರಕಾರ ಬಂಧಿಸಲು ಆಗಿನ ಎಸ್.ಪಿ.ಯವರು ಶಿಫಾರಸು ಮಾಡಿದ್ದರೂ, ಆಗಿನ ಜಿಲ್ಲಾಧಿಕಾರಿ ಶ್ರೀ ಧೀರೇಂದ್ರಸಿಂಗರು ಅವರ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಮೀಸಾ ಬಂದಿಯಾಗಿಸಲು ಒಪ್ಪದ ಕಾರಣ ಮೀಸಾಬಂದಿಯಾಗಿ ಬಳ್ಳಾರಿ ಜೈಲಿಗೆ ಹೋಗುವುದು ತಪ್ಪಿತ್ತು. ದೇವೇಗೌಡರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಸರ್ಕಾರ ಮುಂಜಾಗ್ರತೆಯಾಗಿ ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಭಾರತ ರಕ್ಷಣಾ ಕಾಯದೆಯನ್ವಯ ಜಿಲ್ಲೆಯಲ್ಲಿ ಸುಮಾರು ೩೦೦ ಜನರು ಬಂಧಿತರಾಗಿದ್ದು ಅವರೆಲ್ಲರೂ ಆರೆಸ್ಸೆಸ್ಸಿನ ಮೂಲದವರೇ ಆಗಿದ್ದು ವಿಶೇಷವೇ ಸರಿ. ಇದಲ್ಲದೆ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಒಳಗೊಂಡವರು, ಜೈಲುಗಳಲ್ಲಿ ಸ್ಥಳವಿಲ್ಲದೆ ಹೆದರಿಸಿ, ಬೆದರಿಸಿ ಬಿಡಲ್ಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ವಿವಿಧ ಕಾಲೇಜಿನ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಬಂಧನಕ್ಕೆ ಒಳಗಾಗದೆ, ಭೂಗತರಾಗಿ ಚಳುವಳಿಗೆ ಪ್ರೇರಿಸುವ, ಜನಜಾಗೃತಿ ಮಾಡುವ ಆರೆಸ್ಸೆಸ್ಸಿನ ತರುಣರ, ಪ್ರಚಾರಕರುಗಳ ಸಂಖ್ಯೆ ಮತ್ತು ಅವರು ತುರ್ತು ಪರಿಸ್ಥಿತಿ ತೆರವಿಗೆ ಮಾಡಿದ ಕೆಲಸ ಶ್ಲಾಘನೀಯವಾದುದಾಗಿದೆ. ಬಂಧನದ ಕಾಲದಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಜಿಲ್ಲಾ ಪ್ರಚಾರಕ ಪ್ರಭಾಕರ ಕೆರೆಕೈ ನಂತರದಲ್ಲಿ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಮೃತಪಟ್ಟರು. 
     ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರುದ್ಧ ಜನರ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಇಂದಿರಾ ಸರ್ಕಾರ ತುರ್ತು ಪರಿಸ್ಥಿತಿ ತೆರವುಗೊಳಿಸಿ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಮೇಲಿನ ನಿಷೇಧ ರದ್ದು ಪಡಿಸಲೇಬೇಕಾತು. ಲೋಕಸಭೆ ವಿಸರ್ಜಿಸಿ ಚುನಾವಣೆ ನಡೆಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮದು ಸರಿಯಾದ ಕ್ರಮವಾಗಿತ್ತೆಂದು ಸಮರ್ಥಿಸಿಕೊಳ್ಳಬಹುದೆಂದು ಎಣಿಸಿದ್ದ ಅವರ ಎಣಿಕೆ ತಲೆಕೆಳಗಾಯಿತು. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಜನತಾಪಕ್ಷ ರಚಿಸಿಕೊಂಡು ಚುನಾವಣೆ ಎದುರಿಸಿ ಯಶಸ್ವಿಯಾದವು. ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ನೀಡಿತು. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ಹಾಸನದಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಹಾಸನದ ಎಸ್. ನಂಜೇಶಗೌಡರು ಅಲ್ಪ ಬಹುಮತದಿಂದ ಜಯಗಳಿಸಿದ್ದು ಜಿಲ್ಲೆಯ ಜನತೆಯ ಪ್ರಜಾಫ್ರಭುತ್ವದ ಒಲವನ್ನು ಎತ್ತಿ ತೋರಿಸಿತ್ತು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬೆಂಬಲಿಸಿದಂತಿತ್ತು.
     ಸುಮಾರು ಮೂರು ವರ್ಷಗಳ ಹಿಂದೆ, ದಿನಾಂಕ 29-12-2012ರಂದು ತುರ್ತುಪರಿಸ್ಥಿತಿಯ ನೆನಪುಗಳಿಗೆ ಸಂಬಂಧಿಸಿದ ಲೇಖಕನ "ಆದರ್ಶದ ಬೆನ್ನು ಹತ್ತಿ. ." ಕೃತಿ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರ ಸಮಾವೇಶ ಏರ್ಪಡಿಸಲಾಗಿತ್ತು. (ಪುಸ್ತಕದ ಪ್ರತಿ ಬೇಕಿದ್ದವರು ಲೇಖಕರನ್ನು ಸಂಪರ್ಕಿಸಬಹುದು.) ಎಷ್ಟೋ ಜನರು ಸತ್ತೇ ಹೋಗಿದ್ದರು, ಎಷ್ಟೋ ಜನರು ಊರು ಬಿಟ್ಟು ಹೋಗಿದ್ದು ಅವರ ವಿಳಾಸ ತಿಳಿದಿರಲಿಲ್ಲ. ಹಾಗಾಗಿ ಅಂದು ತರುಣರಾಗಿದ್ದು, ಈಗ ಜೀವನ ಸಂಧ್ಯಾಕಾಲದಲ್ಲಿರುವ ಜಿಲ್ಲೆಯ ಸುಮಾರು 100 ಜನರನ್ನು ಶ್ರಮವಹಿಸಿ ಒಟ್ಟಿಗೆ ಸೇರಿಸಿದ್ದು ಮರೆಯಲಾಗದ ಅನುಭವ ನೀಡಿತ್ತು. 1975-77ರ ಅವಧಿಯಲ್ಲಿ ಬಂಧಿತರಾಗಿದ್ದಾಗ ಕಂಡಿದ್ದವರು ಸುಮಾರು 35 ವರ್ಷಗಳ ನಂತರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಅವರುಗಳಿಗೆ ಆದ ಅನುಭವ, ಆನಂದ ಅವರ್ಣನೀಯ. ಪರಸ್ಪರರನ್ನು ತಬ್ಬಿಕೊಂಡು, 'ಅಯ್ಯೋ, ನೀನಿನ್ನೂ ಬದುಕಿದ್ದೀಯೇನೋ, ಸತ್ತೇ ಹೋಗಿದ್ದಿಯೇನೋ ಅಂದುಕೊಂಡಿದ್ದೆ' ಎಂದು ಆನಂದಭಾಷ್ಪ ಸುರಿಸಿದ್ದರು. ಎಲ್ಲರೂ ಹಿಂದಿನ ತಾರುಣ್ಯದ ಕಾಲಕ್ಕೆ ಜಾರಿದ್ದರು. ಜೈಲಿನಲ್ಲಿ ಹಾಡುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಹಾಡನ್ನು ಎದೆಯುಬ್ಬಿಸಿ ಸಾಮೂಹಿಕವಾಗಿ ಹಾಡಿದಾಗ ಕಣ್ಣಂಚಿನಲ್ಲಿ ನೀರಾಡಿದ್ದವು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಉಳಿವಿಗೆ ಕಾರಣ ಎಂಬ ಸಂದೇಶ ಬಿತ್ತರವಾಗಿತ್ತು.
-ಕ.ವೆಂ.ನಾಗರಾಜ್.
*****
ತುರ್ತು ಪರಿಸ್ಥಿತಿ ಹಿಂತೆಗೆತವಾಗಿ ಆರೆಸ್ಸೆಸ್ಸಿನ ಮೇಲಿನ ನಿಷೇಧ ತೆರವಾದಮೇಲೆ ಹಾಸನ ನಗರದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸಿದ ಗೆಳೆಯರು ಒಟ್ಟಿಗೆ ತೆಗೆಸಿಕೊಂಡಿದ್ದ 38 ವರ್ಷಗಳ ಹಿಂದಿನ ಅಪರೂಪದ ಫೋಟೋ  

ನಿಂತಿರುವವರು: ನಾಗಭೂಷಣ, ವಾಸುದೇವ, . . . . ,ರವಿಕುಮಾರ್, ಸತ್ಯಮೂರ್ತಿ, ಕುಮಾರ್, ಫಾಲಾಕ್ಷ, ಶ್ರೀರಾಮ, ಸುಬ್ರಹ್ಮಣ್ಯ, ಪ್ರಸನ್ನ, ಹಿರಿಯಣ್ಣ, ರಾಮಶಂಕರಬಾಬು, ಸುವರ್ಣ, ಪುರುಷೋತ್ತಮ
ಕುಳಿತಿರುವವರು: ಎ.ವಿ. ಚಂದ್ರಶೇಖರ್, ಶಿವರಾಮ್, ಬಸವರಾಜು, ಪಾರಸಮಲ್, ಜಯಪ್ರಕಾಶ್, ಕರಿಬಸಪ್ಪ, ಎಸ್.ವಿ. ಗುಂಡೂರಾವ್, ರಾಜಶೇಖರ್, ಜನಾರ್ಧನ ಐಯ್ಯಂಗಾರ್, ಚಂದ್ರಶೇಖರ್, ಶಾಂತಿಲಾಲ್, ಲೇಖಕ ಕ.ವೆಂ.ನಾಗರಾಜ್, ರಾಮಚಂದ್ರ.
****
     ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಾಸನದಲ್ಲಿ 28-02-2014 ಮತ್ತು 01-03-2014ರಂದು ನಡೆದ 14ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿನ  ವಿಶೇಷ ತ್ರೈಮಾಸಿಕ 'ಹೊಯ್ಸಳ ಸಿರಿ'ಯಲ್ಲಿ ಪ್ರಕಟ:


ದಿನಾಂಕ 25.6.2015ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ:



ಗುರುವಾರ, ಮಾರ್ಚ್ 20, 2014

ತುರ್ತುಪರಿಸ್ಥಿತಿ-ಆರೆಸ್ಸೆಸ್-ಗಾಂಧೀಜಿ ಹಾಗೂ ನಾವು!

     ಎತ್ತಣೆತ್ತಣ ಸಂಬಂಧ! ಯಾವುದೇ ಪೀಠಿಕೆ, ಹಿನ್ನೆಲೆ ಇಲ್ಲದೆ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅಂದು ದಿನಾಂಕ ೯-೧೧-೧೯೭೫. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾವು ವ್ಯಾಪಿಸಿತ್ತು. ಪ್ರಜಾಪ್ರಭುತ್ವಕ್ಕೆ ಹಿಡಿದಿದ್ದ ಗ್ರಹಣ ಮುಕ್ತಿಗಾಗಿ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ 'ಲೋಕ ಸಂಘರ್ಷ ಸಮಿತಿ' ಜನ್ಮ ತಾಳಿತ್ತು. ೧೪-೧೧-೧೯೭೫ರಿಂದ ಸತ್ಯಾಗ್ರಹ ನಡೆಸಿ 'ಜೈಲ್ ಭರೋ' ಚಳುವಳಿ ನಡೆಸಲು ನಿರ್ಧರಿತವಾಗಿತ್ತು. ಅದೇ ರೀತಿ ಹಾಸನ ಜಿಲ್ಲೆಯಲ್ಲೂ ಸತ್ಯಾಗ್ರಹದ ರೂಪರೇಷೆ ನಿರ್ಧರಿಸಲು ನಾವು ಕೆಲವು ತರುಣರು ಒಂದು ಮನೆಯಲ್ಲಿ ಸೇರಿದ್ದೆವು. ಹೀಗೆ ಸೇರಿದ್ದ '೧೨ ಜನ ಬುದ್ಧಿವಂತ'ರಲ್ಲಿ ೧೧ ಜನರು ಯಾರೆಂದರೆ ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ಕಛ್ ರಾಮಚಂದ್ರ (ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಆತನಿಗೆ ಕಛ್ ಎಂಬ ಪೂರ್ವನಾಮ ಅಂಟಿತ್ತು), ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ. ೧೨ನೆಯವನ ಹೆಸರು ಹೇಳುವುದಿಲ್ಲ. ನನ್ನನ್ನು ೫ ತಿಂಗಳುಗಳ ಹಿಂದೆಯೇ ಒಮ್ಮೆ ಆರೆಸ್ಸೆಸ್ ಚಟುವಟಿಕೆ ಮಾಡುತ್ತಿದ್ದೆನೆಂಬ ಆರೋಪದ ಮೇಲೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಹಾಗಾಗಿ ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸೇವೆಯಿಂದ ಅಮಾನತ್ತು ಮಾಡಿದ್ದರು. ನಾವುಗಳು ಚಂದ್ರಶೇಖರರ ಮನೆಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಾತನಾಡುತ್ತಿದ್ದಾಗ ಪೋಲಿಸರ ಸಮೂಹವೇ ಮನೆಗೆ ಮುತ್ತಿಗೆ ಹಾಕಿಬಿಟ್ಟಿತ್ತು. ಏನೆಂದು ತಿಳಿಯುವುದರೊಳಗೆ ಮನೆಯೊಳಗೆ ನುಗ್ಗಿ ನಮ್ಮನ್ನು ಸುತ್ತುವರೆದುಬಿಟ್ಟಿದ್ದರು. ಇನ್ನು ಮಾಮೂಲಾಗಿ ಮನೆ ತಲಾಷ್, ನಮ್ಮಲ್ಲಿದ್ದ ಕಾಗದ ಪತ್ರಗಳ ಜಪ್ತು, ಮಹಜರ್, ಇತ್ಯಾದಿಗಳೆಲ್ಲಾ ಮುಗಿದು ನಮ್ಮನ್ನು ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಾಗ ರಾತ್ರಿ ಹನ್ನೊಂದು ಹೊಡೆದಿತ್ತು. ನಮ್ಮ ಜೊತೆಯಲ್ಲಿದ್ದ ೧೨ನೆಯವನನ್ನು ಬಂಧಿಸಲಿಲ್ಲ. ಆತನನ್ನು ಮಾಹಿತಿದಾರನಾಗಿ ಬಳಸಿಕೊಂಡ ಪೋಲಿಸರು ನಮ್ಮ ವಿರುದ್ಧ ಸಾಕ್ಷಿಯಾಗಿ ಹೆಸರಿಸಿದ್ದರು. ಮರುದಿನ ನಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹಾಸನದ ಜೈಲಿಗೆ ತಳ್ಳಿದ್ದರು. ಪೋಲಿಸರ ಭಯಕ್ಕೆ ಆತ ನಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿಯನ್ನೂ ಹೇಳಿದ. ಚಂದ್ರಶೇಖರರ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಅಟ್ಲಾಸ್ ಸೈಕಲ್ಲನ್ನು ೧೫ ದಿನಗಳ ನಂತರ ನನ್ನ ತಮ್ಮ ಮನೆಗೆ ತೆಗೆದುಕೊಂಡು ಹೋದ. ನಮ್ಮ ಎಲ್ಲರ ಮನೆಗಳಲ್ಲೂ ಗೋಳಾಟ. ಕೇಳುವವರು ಯಾರು? ನಮಗೆ ಜಾಮೀನು ಸಿಗಲಿಲ್ಲ. ಪ್ರಕರಣ ಮುಗಿಯುವವರೆಗೆ ನಾವುಗಳು ಜೈಲಿನಲ್ಲಿಯೇ ಸುಮಾರು ಮೂರು ತಿಂಗಳುಗಳ ಕಾಲ ಇರಬೇಕಾಯಿತು.


     ಇಷ್ಟಕ್ಕೂ ಇಷ್ಟೊಂದು ದೊಡ್ಡ ಸಾಹಸ ಮಾಡಿದ್ದ ಪೋಲಿಸರು ನಮ್ಮಿಂದ ಜಪ್ತು ಮಾಡಿದ ವಸ್ತುಗಳು ಏನು ಗೊತ್ತೇ? 'ಸತ್ತ ಕತ್ತೆಯ ಕಥೆ' ಎಂಬ ಕವನದ ಮೂರು ಪ್ರತಿಗಳು, ಎರಡು ಮಹಾತ್ಮ ಗಾಂಧಿಯವರ ಭಾವಚಿತ್ರಗಳು ಮತ್ತು ಎರಡು 'ಕಹಳೆ' ಪತ್ರಿಕೆಯ ಪ್ರತಿಗಳು. ನ್ಯಾಯಾಲಯದಿಂದ ಪಡೆದಿರುವ ಪ್ರಮಾಣಿತ ಪ್ರತಿಯಲ್ಲಿ ಈ ದಾಖಲಾತಿಗಳ ವಿವರವಿದೆ. (ಚಿತ್ರ ಗಮನಿಸಿ). ಸತ್ತ ಕತ್ತೆಯ ಕಥೆ ಎಂಬ ಕವನದಲ್ಲಿ ಭಾರತದ ಆಗಿನ ಪ್ರಜಾಸತ್ತೆಯನ್ನು ಒಂದು ಸತ್ತ ಕತ್ತೆಗೆ ಹೋಲಿಸಿ ವಿಡಂಬನೆ ಮಾಡಲಾಗಿತ್ತು. ನ್ಯಾಯಾಲಯ ಅದನ್ನು ರಾಷ್ಟ್ರದ್ರೋಹದ ದಾಖಲೆ ಎಂಬ ಪೋಲಿಸರ ವಾದವನ್ನು ಒಪ್ಪಲಿಲ್ಲ. ಕಹಳೆ ಪತ್ರಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ಪೋಲಿಸರ ದೌರ್ಜನ್ಯದ ವಿವರಗಳಿದ್ದು ಅದನ್ನೂ ನ್ಯಾಯಾಲಯವು ಪ್ರತೀಕೂಲ ದಾಖಲೆ ಎಂದು ಒಪ್ಪಲಿಲ್ಲ. ನನ್ನ ಪರವಾಗಿ ಆಗ ಹೆಸರಾಂತ ಹಿರಿಯ ವಕೀಲರಾದ ಮತ್ತು ಕಾಂಗ್ರೆಸ್ಸಿನ ಕಟ್ಟಾಧುರೀಣರಾಗಿದ್ದ ದಿ. ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಮತ್ತು ಅವರ ಕಿರಿಯ ವಕೀಲರಾದ ದಿ. ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರು ವಾದಿಸಿದ್ದರು. ಗಾಂಧೀಜಿಯವರ ಭಾವಚಿತ್ರ ಪ್ರತೀಕೂಲ ಸಾಕ್ಷ್ಯವೆಂಬ ಬಗ್ಗೆ ಅವರು ಸಬ್ ಇನ್ಸ್ ಪೆಕ್ಟರರ ವಿರುದ್ಧ ನಡೆಸಿದ ಪಾಟೀಸವಾಲು ಸ್ವಾರಸ್ಯಕರವಾಗಿತ್ತು. ಅದು ಹೀಗಿತ್ತು:
ವಕೀಲರು: ಸ್ವಾಮಿ ಸಬ್ಬಿನಿಸ್ಪೆಕ್ಟರೇ, ಹಾಸನದಲ್ಲಿ ಸುಮಾರು ಎಷ್ಟು ಮನೆಗಳಿವೆ?
ಸ.ಇ.: ಗೊತ್ತಿಲ್ಲ.
ವ: ಅಂದಾಜು ಹೇಳಿ, ಪರವಾಗಿಲ್ಲ. ಸುಮಾರು ೨೦೦೦೦ ಮನೆ ಇರಬಹುದಾ?
ಸ.ಇ.: ಇರಬಹುದು.
ವ: ಎಷ್ಟು ಮನೆಗಳಲ್ಲಿ ಗಾಂಧೀಜಿ ಫೋಟೋ ಇರಬಹುದು? ಅಂದಾಜು ೨೦೦೦ ಮನೆಗಳಲ್ಲಿ ಇರಬಹುದಾ? ಬೇಡ, ೧೦೦೦ ಮನೆಗಳಲ್ಲಿ ಇರಬಹುದಾ?
ಸ.ಇ.: ಇರಬಹುದು.
ವ: ಹಾಗಾದರೆ ಅವರನ್ನೂ ಏಕೆ ಬಂಧಿಸಲಿಲ್ಲ? ಇವರನ್ನು ಏಕೆ ಬಂಧಿಸಿದಿರಿ?
ಸ.ಇ.: ಇವರ ಹತ್ತಿರ ಇರುವ ಗಾಂಧೀಜಿ ಫೋಟೋದಲ್ಲಿ ಪ್ರಚೋದನಾತ್ಮಕ ಹೇಳಿಕೆ ಇದೆ.
ವ: ಏನು ಹೇಳಿಕೆ ಇದೆ? ಯಾರು ಆ ಹೇಳಿಕೆ ಕೊಟ್ಟಿದ್ದು?
ಸ.ಇ.: 'ಅಸತ್ಯ ಅನ್ಯಾಯಗಳ ವಿರುದ್ಧ ತಲೆ ಬಾಗುವುದು ಹೇಡಿತನ' ಎಂಬ ಹೇಳಿಕೆ ಇದೆ. ಅದನ್ನು ಗಾಂಧೀಜಿಯೇ ಹೇಳಿದ್ದು.
ವ: ಹಾಗಾದರೆ ಗಾಂಧೀಜಿಯವರು ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದರು. ಅವರೂ ಅಪರಾಧಿಗಳೇ ಹಾಗಾದರೆ! ಹೋಗಲಿ ಬಿಡಿ, ಈ ಹೇಳಿಕೆಯಲ್ಲಿ ಏನು ಪ್ರಚೋದನಾತ್ಮಕ ಅಂಶ ಇದೆ?
     ಈ ಪ್ರಶ್ನೆಗೆ ಸಬ್ಬಿನಿಸ್ಪೆಕ್ಟರರಿಗೆ ಉತ್ತರಿಸಲಾಗಿರಲಿಲ್ಲ. ಈ ಹಂತದಲ್ಲಿ ನ್ಯಾಯಾಲಯದಲ್ಲಿ ಕುತೂಹಲದಿಂದ ಕಿಕ್ಕಿರಿದು ಸೇರಿದ್ದ ಜನರೊಂದಿಗೆ ನ್ಯಾಯಾಧೀಶರೂ ಗೊಳ್ಳೆಂದು ನಕ್ಕಿದ್ದರು. ಈ ಸಾಕ್ಷ್ಯವೂ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಮೂರು ತಿಂಗಳ ನಂತರದಲ್ಲಿ ನಾವುಗಳೆಲ್ಲರೂ ನಿರ್ದೋಷಿಗಳೆಂದು ಬಿಡುಗಡೆಯಾಯಿತು. ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಬಾಗಿಲ ಬಳಿಯೇ ನಮ್ಮ ಪೈಕಿ ಪಾರಸಮಲ್, ಪಟ್ಟಾಭಿರಾಮ ಮತ್ತು ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈರವರನ್ನು ಪುನಃ ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಲು ಅವಕಾಶವಿರುವ 'ಮೀಸಾ' ಕಾಯದೆಯನ್ವಯ ಬಂಧಿಸಿದರು. ನನ್ನನ್ನೂ ಮೀಸಾ ಕಾಯದೆಯಡಿಯಲ್ಲಿ ಬಂಧಿಸಬೇಕೆಂಬ ಎಸ್.ಪಿ.ಯವರ ಶಿಫಾರಸಿಗೆ ಅಂದಿನ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಬಂಧಿಸಲು ಒಪ್ಪಿರದಿದ್ದ ಕಾರಣ ಮೀಸಾ ಬಲೆಯಿಂದ ನಾನು ತಪ್ಪಿಸಿಕೊಂಡಿದ್ದೆ. ವಿಷಾದದ ಸಂಗತಿಯೆಂದರೆ, ತುರ್ತು ಪರಿಸ್ಥಿತಿ ಹಿಂತೆಗೆತದ ನಂತರ ಬಿಡುಗಡೆಯಾದ ಪ್ರಭಾಕರ ಕೆರೆಕೈ ನಂತರದ ಕೆಲವು ವರ್ಷಗಳಷ್ಟೇ ಬದುಕಿದ್ದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಅನುಭವಿಸಿದ ಹಿಂಸೆಗಳ ಕಾರಣದಿಂದ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಅವರು ಮೃತರಾದುದು ದುರ್ದೈವ. ಅವರ ಆತ್ಮಕ್ಕೆ ಶಾಂತಿ ಇರಲಿ. ಅವರ ಮತ್ತು ಅವರಂತಹವರ ಹೋರಾಟ ವ್ಯರ್ಥವಾಗದಿರಲಿ.
     ಆರೆಸ್ಸೆಸ್ ಮತ್ತು ಗಾಂಧೀಜಿ ವಿಚಾರದಲ್ಲಿ ಚರ್ಚೆ, ವಾದ-ವಿವಾದಗಳು ಈಗಲೂ ನಿಂತಿಲ್ಲ. ಇವುಗಳ ಸಾಲಿಗೆ ಇದೂ ಸೇರಿಬಿಡಲಿ ಎಂದು ನಿಮ್ಮೊಡನೆ ಹಂಚಿಕೊಂಡಿರುವೆ.

ಸೋಮವಾರ, ಡಿಸೆಂಬರ್ 17, 2012

ಜ್ಞಾನೋದಯ


       ಅವನು ಸ್ಕೂಟರನ್ನು ಪಕ್ಕದ ರಸ್ತೆಗೆ ತಿರುಗಿಸುವ ಮುನ್ನ ಆಚೆ, ಈಚೆ ನೋಡಿ, ತೊಂದರೆಯಿಲ್ಲ ಹೋಗಬಹುದೆಂದು ಅಂದುಕೊಂಡು ತಿರುಗಿಸುತ್ತಿರುವಾಗ ಭರ್ರನೆ ಅತಿವೇಗದಿಂದ ಅವನ ಪಕ್ಕದಲ್ಲೇ ಬೈಕು ಓಡಿಸಿಕೊಂಡು ಹೋದ ಯುವಕನೊಬ್ಬ 'ಏಯ್, ಬುಡ್ಡಾ' ಎನ್ನುತ್ತಾ ಹೋದವನು ಕ್ಷಣಾರ್ಧದಲ್ಲಿ ಕಣ್ಣಿಗೆ ಕಾಣದಂತೆ ಭರ್ರನೆ ಮುಂದೆ ಹೋಗಿಬಿಟ್ಟಿದ್ದ. ಆ ಬುಡ್ಡ ಯಥಾಪ್ರಕಾರ ಹಿಂದೆ, ಮುಂದೆ, ಅಕ್ಕ, ಪಕ್ಕ ನೋಡಿಕೊಂಡು ೧೫-೨೦ ಕಿ.ಮೀ. ವೇಗದಲ್ಲೇ ಸಾಗಿದರೂ, ಯುವಕನ 'ಏಯ್, ಬುಡ್ಡಾ' ಎಂಬ ಮಾತು ಅವನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಕೊನೆಗೆ ಬುಡ್ಡನಿಗೂ ಬುದ್ಧನಂತೆ ಜ್ಞಾನೋದಯವಾಯಿತು. ಆ ಹುಡುಗ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, 'ತನಗೆ ವಯಸ್ಸಾಗಿದೆ, ಅದಕ್ಕೇ ಬುಡ್ಡ ಅಂದಿದ್ದಾನೆ. ಹುಷಾರಾಗಿ ಹೋಗಬೇಕಾದ್ದು ನಿನ್ನ ಕರ್ಮ, ಇಲ್ಲದಿದ್ದರೆ ಜನನಿಬಿಡ ರಸ್ತೆಗಳಲ್ಲೂ, ವಾಹನಗಳ ದಟ್ಟನೆಯಲ್ಲೂ ಮುಂದಿನ ಚಕ್ರವನ್ನು ಮೇಲೆತ್ತಿಕೊಂಡು ಸೈಲೆನ್ಸರ್ ತೆಗೆದು ಹಾಕಿದ್ದರಿಂದ ಕರ್ಕಶ ಶಬ್ದ ಮಾಡುವ ಬೈಕಿನಲ್ಲಿ ಅತಿವೇಗದಿಂದ ಸಾಗುವ ನನ್ನಂತಹವರ ಅಡಿಗೆ ಸಿಕ್ಕಿ ಪೇಪರಿನಲ್ಲಿ ಬರುವ ಸುದ್ದಿಯಾಗುತ್ತೀಯ' ಎಂಬ ಎಚ್ಚರಿಕೆ 'ಏಯ್, ಬುಡ್ಡಾ' ಎಂಬ ಮಾತಿನಲ್ಲಿದೆ ಎಂದು ಅವನಿಗೆ ಅರ್ಥವಾಯಿತು. 
-ಕ.ವೆಂ.ನಾಗರಾಜ್.

ಭಾನುವಾರ, ಆಗಸ್ಟ್ 12, 2012

ಬದನೆಕಾಯಿ ಮತ್ತು ಪ್ರಖ್ಯಾತ ಹಿಂದೂಸ್ತಾನಿ ಗಾಯಕ



     ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ ಕಾರ್ಯಕ್ರಮ ಏರ್ಪಾಡಾಗಿತ್ತು. ತಾಲ್ಲೂಕಿಗೆ ಬರುವ ಗಣ್ಯರ, ಕಲಾವಿದರುಗಳ, ಹಿರಿಯ ಅಧಿಕಾರಿಗಳ ಶಿಷ್ಟಾಚಾರದ ವ್ಯವಸ್ಥೆಯ - ಸ್ವಾಗತ, ವಸತಿ ಮತ್ತು ಊಟೋಪಚಾರಗಳು ಸೇರಿದಂತೆ - ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಯವರು ನನಗೆ ವಹಿಸಿದ್ದರು. ಪುಷ್ಪಗಿರಿಯಲ್ಲಿ (ಹಳೇಬೀಡಿನಿಂದ ಸುಮಾರು 5 ಕಿ.ಮೀ. ದೂರವಿರುವ ಒಂದು ಗ್ರಾಮ) ಅಂದು ಸಂಜೆ ಹೆಸರುವಾಸಿಯಾದ ಹಿಂದುಸ್ತಾನೀ ಗಾಯಕರಿಂದ ಗಾಯನದ ಕಾರ್ಯಕ್ರಮ ನಡೆದಿತ್ತು. ಅವರೊಡನೆ ಅವರ ಮಗಳೂ ಹಾಡುತ್ತಿದ್ದಳು. ಸ್ಥಳೀಯರಿಗೆ ಅದು ರುಚಿಸುತ್ತಿರಲಿಲ್ಲ. ಗಾಯಕರು ಆಲಾಪನೆ ಮಾಡುತ್ತಿದ್ದಂತೆ ಸೇರಿದ್ದ ಗ್ರಾಮಸ್ಥರೂ ರಾಗ ತೆಗೆಯುತ್ತಿದ್ದರು. ಜಿಲ್ಲಾಧಿಕಾರಿಯವರು ಹಿಂದೂಸ್ತಾನೀ ಗಾಯನವನ್ನು ಇಷ್ಟಪಡುತ್ತಿದ್ದು, ಸ್ವತಃ ಆಸಕ್ತಿ ವಹಿಸಿ ಅವರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದರಲ್ಲದೆ ತಮ್ಮ ಕುಟುಂಬವರ್ಗದ ಸಹಿತ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದು ಜನರ ಪ್ರತಿಕ್ರಿಯೆ ಅವರಿಗೆ ಮುಜುಗರ ಉಂಟುಮಾಡಿತ್ತು. ನಮ್ಮನ್ನೆಲ್ಲಾ ಕರೆಸಿ ಜನಗಳ ನಡುವೆ ಅಲ್ಲಲ್ಲಿ ಇದ್ದು ರಸಭಂಗ ಉಂಟುಮಾಡುವುದನ್ನು ತಡೆಯಲು ತಾಕೀತು ಮಾಡಿದರು. ನಮ್ಮ ಸಿಬ್ಬಂದಿಗೆ ಗಾಯಕರ ರಾಗಕ್ಕೆ ತಮ್ಮದೇ ರಾಗ ಸೇರಿಸುತ್ತಿದ್ದ ಜನರನ್ನು ತಡೆದು ಹೊರಗೆ ಕಳಿಸುವುದೇ ಕೆಲಸವಾಯಿತು. ನಮ್ಮೆಲ್ಲರ ಶ್ರಮದಿಂದ ತಕ್ಕಮಟ್ಟಿಗೆ ಪರಿಸ್ಥಿತಿ ಹದಕ್ಕೆ ಬಂದಿತು. 
      ಕಾರ್ಯಕ್ರಮ ಮುಗಿಯುವ  ವೇಳೆಗೆ ಗಾಯಕರಿಗೆ ಊಟದ ವ್ಯವಸ್ಥೆ ಆಗಬೇಕಿತ್ತು. ಊಟಕ್ಕೆ ಏನು ಬಯಸುತ್ತಾರೆಂದು ಕೇಳಿ ಅವರು ಹೇಳಿದ ಪದಾರ್ಥವನ್ನು (ಅದರ ಹೆಸರು ನನಗೆ ನೆನಪಿಲ್ಲ) ತರಲು 40 ಕಿ.ಮೀ. ದೂರದ ಹಾಸನಕ್ಕೆ ಕಾರಿನಲ್ಲಿ ಹೋದ ರಾಜಸ್ವ ನಿರೀಕ್ಷಕರು ಹಾಸನದ ಹಾಸನ ಮೊಟೆಲ್ (ಅರೆಸರ್ಕಾರಿ ಒಡೆತನದ ಸ್ಟಾರ್ ಹೋಟೆಲ್)ನಿಂದ 3 ಪ್ಲೇಟಿಗಾಗುವಷ್ಟು ಆ ಪದಾರ್ಥವನ್ನು ಹಾಟ್ ಬಾಕ್ಸಿನಲ್ಲಿ ಇರಿಸಿಕೊಂಡು ತಂದಿದ್ದರು. ಅದರ ಬೆಲೆ ರೂ. 850/- ಆಗಿತ್ತಂತೆ. ಅದೆಂಥಹಾ ಪದಾರ್ಥವೆಂದು ನಾನು ಕುತೂಹಲದಿಂದ ನೋಡಿದರೆ ಅದು ದಪ್ಪ ಗಾತ್ರದ ಗುಂಡು ಬದನೆಕಾಯಿಯನ್ನು ಬೇಯಿಸಿ ಮಸಾಲೆ ಸೇರಿಸಿ ಕಮಲದ ಹೂವಿನಂತೆ ಕತ್ತರಿಸಿ ಅಂದವಾಗಿ ಜೋಡಿಸಿದ ತಿಂಡಿಯಾಗಿತ್ತು. ಬದನೆಕಾಯಿ ಪಲ್ಯದ ವಾಸನೆ ಬರುತ್ತಿತ್ತು. ಇದಕ್ಕೆ 850/- ರೂಪಾಯಿಯೇ ಎಂದು ಅಚ್ಚರಿಪಟ್ಟಿದ್ದೆ. ದೊಡ್ಡವರ ಸಹವಾಸ ಸಾಕು ಅನ್ನಿಸಿತ್ತು. ಊಟಕ್ಕೆ ಆ ಗಾಯಕರು ತಮ್ಮ ಮಗಳೊಂದಿಗೆ ಕುಳಿತು ನನಗೆ ಕೇಳಿದ್ದ ಪ್ರಶ್ನೆ ಇದು: "ರೋಡ್ ಸೈಡ್ ಡಾಬಾ ಸೇ ಲಾಯಾ ಕ್ಯಾ?" ಒಳಗೊಳಗೆ ಸಿಟ್ಟು ಉಕ್ಕಿ ಬರುತ್ತಿದ್ದರೂ ನಿರ್ವಿಕಾರ ಮುಖಭಾವದಿಂದ ಒಂದು ನಿಮಿಷ ಬಿಟ್ಟು ನಾನು ಕೊಟ್ಟಿದ್ದ ಉತ್ತರ 'ನಹಿ' ಎಂದು ಮಾತ್ರ. ದೊಡ್ಡವರೆನಿಸಿಕೊಂಡವರ ಸಣ್ಣತನದ ದರ್ಶನ ನನಗಾಗಿತ್ತು. 

ಸೋಮವಾರ, ಜೂನ್ 25, 2012

ಸಂಧ್ಯಾಕಾಲದಲ್ಲಿರುವವರೊಂದಿಗೆ ಸ್ವಲ್ಪ ಸಮಯ



     ನನ್ನ ಮೊಮ್ಮಗಳು ಚಿ. ಅಕ್ಷಯಳ 6ನೆಯ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ಬೆಂಗಳೂರಿನ ಮನೆಯಲ್ಲಿ ಸರಳವಾಗಿ ಆಚರಿಸಿದರು. ಆ ಸಂದರ್ಭದಲ್ಲಿ ಯಾವುದಾದರೂ ಸಾಮಾಜಿಕ ಚಟುವಟಿಕೆಗೆ ಧನಸಹಾಯ ಮಾಡಲು ಅಪೇಕ್ಷಿಸಿದ್ದ ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಮನೆಯ ಸಮೀಪದಲ್ಲಿ ವಿಸ್ತರಣೆಯಾಗುತ್ತಿದ್ದ ದೇವಸ್ಥಾನದ ಕಟ್ಟಡಕ್ಕೆ ಹಣ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಅದರ ಬದಲು ಯಾವುದಾದರೂ ವೃದ್ಧಾಶ್ರಮದ ನಿವಾಸಿಗಳಿಗೆ ಅವರ ಅಗತ್ಯ ನೋಡಿ ಏನಾದರೂ ಸಹಾಯ ಮಾಡಬಹುದೆಂದು ಕೊಟ್ಟ ಸಲಹೆಯನ್ನು ತಕ್ಷಣ ಒಪ್ಪಿದ ಅವರು ಹಾಸನದಲ್ಲೇ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿಚಾರಿಸಿ ತಿಳಿಸುವ ಹೊಣೆಯನ್ನು ನನಗೇ ವಹಿಸಿದರು. ಆ ಕಾರಣದಿಂದ ನಾನು ಮಿತ್ರ ಹರಿಹರಪುರ ಶ್ರೀಧರರನ್ನೂ ಕರೆದುಕೊಂಡು ಹಾಸನ ನಗರದ ಜೊರವಲಯದಲ್ಲಿರುವ ಗವೇನಹಳ್ಳಿಯಲ್ಲಿರುವ ವೃದ್ಧಾಶ್ರಮ ಚೈತನ್ಯ ಮಂದಿರಕ್ಕೆ ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಅಲ್ಲಿದ್ದ ಹಿರಿಯರೊಡನೆ ಕಳೆದೆವು.  
     ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಂಗ ಸಂಸ್ಥೆ ಚೈತನ್ಯ ಮಂದಿರದಲ್ಲಿ ಈಗ 32 ವೃದ್ಧೆಯರು ಮತ್ತು 10 ವೃದ್ಧರು ಆಶ್ರಯ ಪಡೆದಿದ್ದಾರೆ. ಮೊದಲು 13 ವೃದ್ಧರಿದ್ದು ಅವರ ಪೈಕಿ ಮೂವರು ಕಳೆದ 15 ದಿನಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ವಿಷಯ ತಿಳಿದು ಮನಸ್ಸು ಭಾರವಾಯಿತು. ವೃದ್ಧಾಶ್ರಮದಲ್ಲಿ ಬಡವರಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ಅಗತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವಾಗಿದ್ದು, ಅಸಹಾಯಕತೆ ಹಾಗೂ ಅನಿವಾರ್ಯತೆಯ ಕಾರಣ ಇರಬಯಸುವ ವೃದ್ಧ, ವೃದ್ಧೆಯರಿಗೂ ಇಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ಕಟ್ಟಿಸಿಕೊಂಡು ಮಾಸಿಕ ರೂ. 1500/- ಅನ್ನು ಊಟೋಪಚಾರದ ವೆಚ್ಚವಾಗಿ ಪಡೆದು ಇರಲು ಅನುಕೂಲ ಕಲ್ಪಿಸಿದ್ದಾರೆ. ಅಂತಹ 4-5 ವೃದ್ಧರೂ ಇಲ್ಲಿದ್ದಾರೆ. ಆರು ಶಿಶುಗಳನ್ನೂ ಅಲ್ಲಿ ಪಾಲಿಸಲಾಗುತ್ತಿದೆ. ಮೂರು ಮಕ್ಕಳು 2-3 ವರ್ಷದವರಾಗಿದ್ದರೆ ಮೂರು ಶಿಶುಗಳು ಇನ್ನೂ ಹಾಲು ಕುಡಿಯುವ ಕೆಲವೇ ತಿಂಗಳುಗಳ ಎಳೆ ಕಂದಮ್ಮಗಳು. ಒಂದು ಶಿಶುವಂತೂ ಜನಿಸಿ ಕೇವಲ 2-3 ದಿನಗಳಾಗಿದ್ದು ಸಕಲೇಶಪುರ ತಾಲ್ಲೂಕು ಹುರುಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾಗಿದ್ದು ಇಲ್ಲಿ ಆಶ್ರಯ ಪಡೆದಿದೆ. ಬೆಳಿಗ್ಗೆ ಮತ್ತು ಸಾಯಂಕಾಲ ಕಾಫಿ, ಟೀ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಡಾ. ಗುರುರಾಜ ಹೆಬ್ಬಾರರು ಸಂಸ್ಥೆಯ ಅಧ್ಯಕ್ಷರು ಹಾಗೂ ಬೆನ್ನೆಲುಬಾಗಿದ್ದಾರೆ. ಉತ್ತಮ ಸಹಕಾರಿಗಳು ಅವರೊಡನಿದ್ದಾರೆ. 
     ಗಂಡ ಮತ್ತು ಮಕ್ಕಳು ಇಲ್ಲದ ಕಾರಣ ಅನಿವಾರ್ಯವಾಗಿ ಅಲ್ಲಿರಬೇಕಾಗಿ ಬಂದವರು ಕೆಲವರಾದರೆ, ಕೆಲವರು ಪರಸ್ಪರರಲ್ಲಿನ ಹೊಂದಾಣಿಕೆಯ ಕೊರತೆ, ಅಸಹನಾ ಮನೋಭಾವ, ವೈಯಕ್ತಿಕ ಸ್ವಪ್ರತಿಷ್ಠೆ, ಸ್ವಾಭಿಮಾನ, ಬಡತನ, ಇತ್ಯಾದಿಗಳ ಕಾರಣದಿಂದ ಅಲ್ಲಿರುವುದು ಕೆಲವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ. ಹೊಂದಿಕೊಂಡು ಹೋಗದ ಅವರುಗಳ ಸ್ವಭಾವದಿಂದ ವೃದ್ಧಾಶ್ರಮದಲ್ಲೂ ಕಿರಿಕಿರಿಯಾಗುವ ಬಗ್ಗೆ ಸಹ ಗೊತ್ತಾಯಿತು. ಒಬ್ಬ ವೃದ್ಧೆಯನ್ನು ಮಕ್ಕಳ ಬಗ್ಗೆ ಕೇಳಿದಾಗ, "ಮಕ್ಕಳು ಅವ್ರೆ, ಸತ್ತಿಲ್ಲ, ಬದುಕವ್ರೆ" ಎಂದು ಸಿಡಿಮಿಡಿಗೊಂಡಿದ್ದಳು. ಆರು ವರ್ಷಗಳಿಂದ ಇಲ್ಲಿರುವ ಇನ್ನೊಬ್ಬ ವೃದ್ಧೆ ಹಿಂದೆ ಅಂಗಡಿ ನಡೆಸುತ್ತಿದ್ದು, ಆಕೆ ಕಷ್ಟಪಟ್ಟು ಉಳಿಸಿದ್ದ  1ಲಕ್ಷ ರೂಪಾಯಿ ಇತರರ ಪಾಲಾಯಿತೆಂದು ಹಲುಬಿದ್ದಳು. ಹಾಸನ ನಗರದ ಒಬ್ಬ ಪ್ರತಿಷ್ಠಿತ ವ್ಯಕ್ತಿಯ (ಈಗ ದಿವಂಗತ) ಪತ್ನಿ ಸಹ ಪಾವತಿ ಆಧಾರದ ಮೇಲೆ ಇಲ್ಲಿನ ನಿವಾಸಿಯಾಗಿದ್ದಾರೆ. ಅವರ ಮಕ್ಕಳು ಅಮೆರಿಕಾದಲ್ಲಿದ್ದಾರೆ. ವಿಶೇಷವೆಂದರೆ ವೃದ್ಧಾಶ್ರಮದ ಒಂದು ಕೊಠಡಿಯನ್ನು (ಸುಮಾರು 2.00ಲಕ್ಷ ಇರಬಹುದು) ಅವರೇ ಕಟ್ಟಿಸಿಕೊಟ್ಟಿದ್ದಾರೆ. ಸಿರಸಿ, ತಿಪಟೂರು, ಬೆಂಗಳೂರು, ಇತ್ಯಾದಿ ಹಲವಾರು ಊರುಗಳಿಂದ ಬಂದವರೂ ಇಲ್ಲಿದ್ದಾರೆ, ಇಲ್ಲಿನವರೂ ಇದ್ದಾರೆ. ಹೆಚ್ಚಿನವರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನಗಳು ಬರುತ್ತಿವೆ. ವಿಳಾಸ ಬದಲಾವಣೆ, ಊರಿನಲ್ಲಿಲ್ಲ, ಇತ್ಯಾದಿ ಕಾರಣಗಳಿಂದ ಬರುತ್ತಿದ್ದ ವೇತನ ನಿಂತು ಹೋಗಿದ್ದನ್ನು ಮತ್ತೆ ಬರುವಂತೆ ಮಾಡಲು ಕೆಲವರು ನಮ್ಮನ್ನು ಕೋರಿದರು. ಮತ್ತೊಮ್ಮೆ ಬರುವುದಾಗಿಯೂ, ವಿವರಗಳನ್ನು ಪಡೆದು ಸಂಬಂಧಿಸಿದವರೊಡನೆ ವ್ಯವಹರಿಸುವುದಾಗಿ ತಿಳಿಸಿದೆವು. ಎಲ್ಲರನ್ನೂ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ಕೋರಿ ಅಲ್ಲಿ ಒಟ್ಟಿಗೆ ಕೆಲವು ಭಜನೆಗಳನ್ನು ಹಾಡಿದೆವು. ಶ್ರೀಧರ್ ಸಹ ಎರಡು ಭಜನೆಗಳನ್ನು ಹೇಳಿಕೊಟ್ಟು ಹೇಳಿಸಿದರು. ವೃದ್ಧಾಶ್ರಮಗಳ ಅಗತ್ಯ ಬಾರದಂತೆ ಹೊಂದಿಕೊಂಡು ಹೋಗುವ ಮನೋಭಾವವನ್ನು ಎಲ್ಲರಿಗೂ ಕರುಣಿಸುವಂತೆ 'ಸನ್ಮತಿ ದೇ, ಹೇ ಭಗವಾನ್' ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆವು. ಸ್ವಾರ್ಥ ಇಲ್ಲೂ ಬಿಡಲಿಲ್ಲ, 'ನನಗೆ ದೈನ್ಯತೆಯಿಲ್ಲದೆ ಬಾಳುವ ಅವಕಾಶ, ಅನಾಯಾಸದ ಮರಣ ಬರಲಿ' ಎಂದೂ ಕೇಳಿಕೊಂಡೆ.
     ಸ್ನಾನ ಆದ ನಂತರ ತಮ್ಮ ತಮ್ಮ ಇಷ್ಟದ ದೇವರ ಫೋಟೋಗೆ (ತಮ್ಮ ಮಂಚದ ಬಳಿ ಹಾಕಿಕೊಂಡಿರುವುದು) ಮತ್ತು ಪ್ರಾರ್ಥನಾ ಮಂದಿರದಲ್ಲಿರುವ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುವವರು ಸಲ್ಲಿಸುತ್ತಾರೆ. ಸಾಯಂಕಾಲ ಎಲ್ಲರೂ ಒಟ್ಟಿಗೆ ಭಜನೆ ಮಾಡುತ್ತಾರೆ. ಬೆಂಗಳೂರಿನ ರುದ್ರಮ್ಮ ಭಜನೆ ಹೇಳಿಕೊಡುತ್ತಾರೆ. ಟಿ.ವಿ. ಇದೆ. ಕೆಲವು ಧಾರಾವಾಹಿಗಳನ್ನು ನೋಡುತ್ತಾರೆ. ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು ಮಾತನಾಡುತ್ತಾರೆ. ರಾತ್ರಿ ಊಟ ಆದ ನಂತರ ಮಲಗುತ್ತಾರೆ. ಮಕ್ಕಳ ಹುಟ್ಟು ಹಬ್ಬ, ಮದುವೆ, ಇತ್ಯಾದಿ ಶುಭ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಊಟ, ತಿಂಡಿಗಾಗಿ ದಾನ ಕೊಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಚ್ಛುಕರು ರೂ. 5000/- ದಾನ ನೀಡಿದರೆ ಆ ದಿನದ ತಿಂಡಿ ಮತ್ತು ಎರಡು ಊಟಗಳ ವ್ಯವಸ್ಥೆಯಾಗುತ್ತದೆ. ಕೇವಲ ಒಂದು ಹೊತ್ತಿನ ತಿಂಡಿಗಾದರೆ ರೂ.1000/-, ಒಂದು ಹೊತ್ತಿನ ಊಟಕ್ಕಾದರೆ ರೂ. 2000/- ದಾನ ಕೊಡಬಹುದಾಗಿರುತ್ತದೆ.  ಕೆಲವು ಹಸುಗಳನ್ನೂ ಇಲ್ಲಿ ಸಾಕಿದ್ದು ನೋಡಿಕೊಳ್ಳಲು ಒಬ್ಬ ಗೋಪಾಲಕ ಇದ್ದಾರೆ. ಇಳಿ ವಯಸ್ಸಿನಲ್ಲಿ ಜೀವನದ ಸಿಹಿಕಹಿಗಳನ್ನು ಉಂಡು ಸೋತಿರುವ ಇಲ್ಲಿನ ಜೀವಗಳಿಗೆ ಅಗತ್ಯವಾಗಿರುವುದು ಆಧ್ಯಾತ್ಮಿಕ ಚಿಂತನೆ ಮತ್ತು ಪ್ರೀತಿಯ ಮಾತುಗಳು. ಆಗಾಗ್ಗೆ ಇಲ್ಲಿ ಸತ್ಸಂಗಗಳನ್ನು ಏರ್ಪಡಿಸುವ ಬಗ್ಗೆ ಶ್ರೀಧರ್ ಮತ್ತು ನಾನು ಮಾತನಾಡಿಕೊಂಡೆವು. ಮಳೆಗಾಲವಾದ್ದರಿಂದ ಮತ್ತು ಮುಂಬರುವ ಚಳಿಗಾಲದ ಕಾರಣದಿಂದ ಅವರುಗಳಿಗೆ ಸ್ವೆಟರ್‌ಗಳನ್ನು ಒದಗಿಸುವುದು ಸೂಕ್ತವೆಂದು ಅನ್ನಿಸಿ ವ್ಯವಸ್ಥೆ ಮಾಡಲು ಮಗಳಿಗೆ ದೂರವಾಣಿ ಕರೆ ಮಾಡಿದೆ. 
-ಕ.ವೆಂ.ನಾಗರಾಜ್.
- - - - - - - - - - - - - - - - - - - - - - - - - -
ವೃದ್ಧಾಶ್ರಮದ ಕೆಲವು ಫೋಟೋಗಳು:










     . 
        



ಸೋಮವಾರ, ಏಪ್ರಿಲ್ 9, 2012

ಸತ್ಯ ಮುಚ್ಚಿಟ್ಟ ಸಾವಿತ್ರಿ

     ಇದು ಸುಮಾರು ೬ ವರ್ಷಗಳ ಹಿಂದೆ ನಡೆದ ಸತ್ಯ ಘಟನೆ. [ಹೆಸರುಗಳನ್ನು ಬದಲಿಸಿದೆ.]  ಬಸವಣ್ಣಪ್ಪನಿಗೆ ನಾಲ್ವರು -ಇಬ್ಬರು ಗಂಡು, ಇಬ್ಬರು ಹೆಣ್ಣು- ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಎರಡನೆಯ ಮಗಳು ಸಾವಿತ್ರಿಗೆ ಆಗಲೇ ೨೩ ವರ್ಷವಾಗಿದ್ದು ಮದುವೆಗೆ ಗಂಡು ನೋಡುತ್ತಿದ್ದರು. ಪರಿಚಯದವರೊಬ್ಬರು ಸಮೀಪದ ಗ್ರಾಮದ ಈಶ್ವರಪ್ಪನ ಮಗ ಗಣೇಶನಿಗೆ ಏಕೆ ಕೊಡಬಾರದೆಂದು ಪ್ರಸ್ತಾಪಿಸಿದಾಗ ಪರಸ್ಪರರು ಭೇಟಿ ಮಾಡಿ ಮಾತುಕತೆ ನಡೆಸಿದರು. ಉಭಯತ್ರರಿಗೂ ಒಪ್ಪಿಗೆಯಾದಾಗ ಗಂಡು-ಹೆಣ್ಣು ನೋಡುವ, ಕೊಡುವ-ಬಿಡುವ ಮಾತು, ಶಾಸ್ತ್ರಗಳು ಜರುಗಿದವು. ಮಾಡಬೇಕಾದ ವರೋಪಚಾರಗಳನ್ನೂ ಮಾಡುವುದರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯೂ ಆಯಿತು. ನೆಂಟರ, ಬೀಗರ ಔತಣಗಳು ಎಲ್ಲವೂ ಸುಸೂತ್ರವಾಗಿ ಮುಗಿದು, ಗಣೇಶ-ಸಾವಿತ್ರಿ ಸತಿಪತಿಗಳೆನಿಸಿದರು.
     ನಿಜವಾದ ಕಥೆ ಪ್ರಾರಂಭವಾಗುವುದೇ ಈಗ. ಶುಭದಿನವೊಂದನ್ನು ನೋಡಿ ಪ್ರಸ್ತಕ್ಕೆ ಪ್ರಶಸ್ತ ದಿನ ಆರಿಸಿದರು. ಅಂದು ರಾತ್ರಿ ಸಾವಿತ್ರಿ ತುಂಬಾ ಹೊಟ್ಟೆನೋವು ಬಂದು ಒದ್ದಾಡಲು ಪ್ರಾರಂಭಿಸಿದ್ದನ್ನು ಕಂಡ ಗಣೇಶ ಕಕ್ಕಾಬಿಕ್ಕಿಯಾದ. ಸಂಕೋಚದಿಂದಲೇ ಬಾಗಿಲು ತೆರೆದು ಹೊರಬಂದ ಅವನು ಮನೆಯವರಿಗೆ ವಿಷಯ ತಿಳಿಸಿದ. ಗುರುತಿದ್ದ ಪಕ್ಕದ ಹಳ್ಳಿಯ ಡಾಕ್ಟರರಿಗೆ ಫೋನು ಮಾಡಿದರೆ ಅವರು ಕರೆದುಕೊಂಡು ಬರಲು ತಿಳಿಸಿದರು. ಗಣೇಶ ಹೆಂಡತಿಯನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಪರೀಕ್ಷೆ ಮಾಡಿದ ವೈದ್ಯರು ಗಣೇಶನ ಬೆನ್ನು ತಟ್ಟಿ 'ನೀನು ತಂದೆಯಾಗುತ್ತಿದ್ದೀಯಾ, ನಿನ್ನ ಹೆಂಡತಿಗೆ ಈಗ ಎರಡೂವರೆ ತಿಂಗಳು' ಎಂದು ಶಹಭಾಶಗಿರಿ ಹೇಳಿದಾಗ ಅವನು ಕುಸಿದು ಹೋಗಿದ್ದ. ಮಾತನಾಡದೆ ಪತ್ನಿಯನ್ನು ಮನೆಗೆ ವಾಪಸು ಕರೆತಂದ. ಅವನ ಸ್ವಪ್ನ ಸೌಧ ಬಿದ್ದು ಹೋಗಿತ್ತು. ನಂತರ ಏನು ನಡೆಯಬಹುದೋ ಅದೇ ನಡೆಯಿತು. ಮೋಸ ಮಾಡಿ ಮದುವೆ ಮಾಡಿದ ಬಗ್ಗೆ ಗಣೇಶನ ಮನೆಯವರು ಕ್ರುದ್ಧರಾಗಿದ್ದರು. ಸಾವಿತ್ರಿಗೆ ಕಿರುಕುಳ ಪ್ರಾರಂಭವಾಯಿತು. 
     ಮಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ತಂದೆ ಬಸವಣ್ಣಪ್ಪನಿಗೆ ಗೊತ್ತಾಗಿ ಆತ ತನ್ನ ಇನ್ನೊಬ್ಬ ಬೀಗರಾದ ಕುಳ್ಳಪ್ಪನನ್ನು ಕರೆದುಕೊಂಡು ಗಣೇಶನ ಮನೆಗೆ ಹೋಗಿ ಮಾತನಾಡಿದ್ದರು, ಸಹಜವಾಗಿ ಅವರಿಗೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದಾಗಿ ಕೆಲವು ದಿನಗಳ ನಂತರ ಗಣೇಶ, ಅವನ ತಂದೆ,ತಾಯಿ ಮತ್ತು ಕೆಲವರು ಹಿರಿಯರು ಸೇರಿ ಬಸವಣ್ಣಪ್ಪನ ಮನೆಗೆ ನ್ಯಾಯ ಪಂಚಾಯಿತಿ ಮಾಡಲು ಬಂದರು. 'ಈ ಊರಿನಲ್ಲಿ ಪಂಚಾಯಿತಿ ಮಾಡುವುದು ಬೇಡ, ಚೆನ್ನಾಗಿರುವುದಿಲ್ಲ, ನಾವೇ ನಿಮ್ಮೂರಿಗೆ ಬರುತ್ತೇವೆ' ಎಂದು ಹೇಳಿದ ಬಸವಣ್ಣಪ್ಪ ಪಂಚಾಯಿತಿಗೆ ಒಪ್ಪಲಿಲ್ಲ. ಸಾವಿತ್ರಿಯನ್ನು ತಂದೆಯ ಮನೆಯಲ್ಲೇ ಬಿಟ್ಟು ಬಂದವರು ಮರಳಿದರು.      
     ಒಂದೆರಡು ತಿಂಗಳು ಕಳೆಯಿತು. ಒಂದಲ್ಲಾ ಒಂದು ಕಾರಣದಿಂದ ಪಂಚಾಯಿತಿ ಸರಿಯಾಗಿ ನಡೆಯಲೇ ಇಲ್ಲ. ಒಂದು ದಿನ ಗಣೇಶನೇ ಮಾವನಿಗೆ ಫೋನು ಮಾಡಿ 'ನೀವೇನೂ ಪಂಚಾಯಿತಿ ಮಾಡುವುದು ಬೇಡ, ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ' ಎಂದು ತಿಳಿಸಿದ. ಬಸವಣ್ಣಪ್ಪ ಸಾವಿತ್ರಿಯನ್ನು ಕರೆದುಕೊಂಡು ಹೋಗಿ ಬೀಗರ ಮನೆಗೆ ಬಿಟ್ಟು ಬಂದ. ಎಲ್ಲವೂ ಸರಿಹೋದೀತು ಎಂಬುದು ಅವನ ನಿರೀಕ್ಷೆಯಾಗಿತ್ತು. ಇಷ್ಟಾದರೂ ಸಾವಿತ್ರಿ ತುಟಿ ಬಿಚ್ಚಿರಲಿಲ್ಲ, ಏನನ್ನೂ ಹೇಳಿರಲಿಲ್ಲ. 
     ಸುಮಾರು ೧೦-೧೨ ದಿನಗಳ ನಂತರ ಬೈಕಿನಲ್ಲಿ ಸಾವಿತ್ರಿಯನ್ನು ಕೂರಿಸಿಕೊಂಡು ಮಾವನ ಮನೆಗೆ ಬಂದ ಗಣೇಶ ಅಂದು ಮಧ್ಯಾಹ್ನ ಅಲ್ಲಿಯೇ ಊಟ ಮಾಡಿದರು. 'ಕೂಲಿ ಕೆಲಸಕ್ಕೆ ದಾವಣಗೆರೆಗೆ ಹೋಗುತ್ತಿದ್ದೇವೆ, ಸ್ವಲ್ಪ ದಿವಸ ಊರಿಗೆ ಹೋಗುವುದಿಲ್ಲ' ಎಂದು ಹೇಳಿದವನು ಅಂದು ಮಧ್ಯಾಹ್ನವೇ ಊಟದ ನಂತರ ಅಲ್ಲಿಂದ ಬೈಕಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಹೊರಟ. ಸಾಯಂಕಾಲ ಸುಮಾರು ೭.೩೦ರ ಸಮಯದಲ್ಲಿ ಬಸವಣ್ಣಪ್ಪನ ಪಕ್ಕದ ಮನೆಗೆ ಫೋನು ಮಾಡಿ ದಾವಣಗೆರೆಯಲ್ಲಿ ಇರುವುದಾಗಿಯೂ, ಏನೂ ತೊಂದರೆಯಿಲ್ಲವೆಂದೂ, ಚೆನ್ನಾಗಿದ್ದೇವೆಂದೂ ಗಣೇಶ ಮತ್ತು ಸಾವಿತ್ರಿ ಇಬ್ಬರೂ ತಿಳಿಸಿದರು.
      ಮರುದಿನ ಬೆಳಿಗ್ಗೆ ಬಸವಣ್ಣಪ್ಪ ಎಂದಿನಂತೆ ಜಮೀನಿನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಗ ಅವನ ಪರಿಚಯಸ್ಥರು ಓಡುತ್ತಾ ಬಂದು ಬಸವಣ್ಣಾ, ಬೇಗ ಹೊರಡು, ನಿನ್ನ ಅಳಿಯ ವಿಷ ಕುಡಿದಿದ್ದಾನೆ, ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿಸಿದಾಗ ಗಾಬರಿಗೊಂಡ ಅವನು ಮಿತ್ರರ ಬೈಕಿನಲ್ಲಿ ಅಳಿಯನ ಊರಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಗಣೇಶನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ತಿಳಿಯಿತು. ಮಗಳ ಕುರಿತು ವಿಚಾರಿಸಿದರೆ ಯಾರೂ ಸ್ಪಷ್ಟ ಮಾಹಿತಿ ಕೊಡಲಿಲ್ಲ, ತಮಗೆ ಗೊತ್ತಿಲ್ಲವೆಂದರು. ಶಿವಮೊಗ್ಗ ಆಸ್ಪತ್ರೆಗೂ ಹೋಗಿ ನೋಡಿದರೆ ಅಳಿಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗಳ ಸುಳಿವಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ 'ತಮ್ಮ ಮಗಳ ಪತ್ತೆಯಿಲ್ಲ, ಹುಡುಕಿಕೊಡಿ' ಎಂದು ಬಸವಣ್ಣಪ್ಪ ದೂರು ದಾಖಲಿಸಿದ. ಸ್ವಲ್ಪ ಸಮಯದ ನಂತರದಲ್ಲಿ ಊರ ಹೊಳೆಯ ಹತ್ತಿರ ಯಾರದೋ ಚಪ್ಪಲಿ, ವಾಚು ಬಿದ್ದಿದೆ ಅಂತ ಊರಿನವರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದು, ಉಳಿದವರೊಂದಿಗೆ ಅವನೂ ಹೊಳೆಯ ಹತ್ತಿರ ಹೋಗಿ ನೋಡಿದರೆ, ಅವು ಬಸವಣ್ಣಪ್ಪನ ಮಗಳದ್ದೇ ಆಗಿದ್ದವು. ಹುಡುಕಿ ನೋಡಿದರೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾಳು ಕಸ ಕಡ್ಡಿ, ಬಳ್ಳಿಗಳು ತುಂಬಿದ್ದ ಹೊಳೆಯ ಹತ್ತಿರದ ಹಳುವಿನಲ್ಲಿ ಅಂಗಾತವಾಗಿ ಸಿಕ್ಕಿಕೊಂಡಿದ್ದ ಹೆಣ ಕಂಡು ಬಂತು. ಹೆಣ ಕೆಸರಿನಲ್ಲಿದ್ದು ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಟ್ಟೆಯ ಆಧಾರದಲ್ಲಿ ಅದು ಮಗಳು ಸಾವಿತ್ರಿಯದೇ ಎಂದು ಬಸವಣ್ಣಪ್ಪ ಕಂಡುಕೊಂಡ. ತಲೆಯ ಮೇಲೆ ಕೈಹೊತ್ತು ಕುಸಿದು ಕುಳಿತ. 
     ಘಟನೆ ನಡೆದ ತಾಲ್ಲೂಕಿನ ತಹಸೀಲ್ದಾರರು ಸಾಂದರ್ಭಿಕ ರಜೆಯಲ್ಲಿದ್ದರಿಂದ ಪಕ್ಕದ ತಾಲ್ಲೂಕಿನಲ್ಲಿ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿದ್ದ ನನ್ನನ್ನು ಪೋಲಿಸ್ ಕೋರಿಕೆಯಂತೆ ಶವತನಿಖೆಗೆ ಅಧಿಕೃತಗೊಳಿಸಿ ಅಸಿಸ್ಟೆಂಟ್ ಕಮಿಷನರರು ಫ್ಯಾಕ್ಸ್ ಸಂದೇಶ ಕಳಿಸಿದರು. ನಾನು ತಕ್ಷಣ ಸಂಬಂಧಿಸಿದ ಗುಮಾಸ್ತರನ್ನು ಕರೆದುಕೊಂಡು ಹೊರಟರೂ ತಲುಪುವ ವೇಳೆಗೆ ಸಾಯಂಕಾಲವಾಗುವ ಸಂಭವವಿದ್ದುದರಿಂದ ಪೆಟ್ರೋಮ್ಯಾಕ್ಸ್ ಲೈಟುಗಳಿಗೆ ವ್ಯವಸ್ಥೆ ಮಾಡಿರಲು ಹಾಗೂ ಸರ್ಕಾರೀ ವೈದ್ಯರಿಗೂ ಸೂಚಿಸಿ ಬಂದಿರಲು ತಿಳಿಸಿರಲು ಫೋನ್ ಮೂಲಕವೇ ಸೂಚನೆ ಕೊಟ್ಟೆ. ಅರ್ಧ ದಾರಿಯಲ್ಲಿ ಅಲ್ಲಿನ  ಸರ್ಕಲ್ ಇನ್ಸ್‌ಪೆಕ್ಟರರು, ಅವರ ಸಿಬ್ಬಂದಿ ಜೊತೆಗೂಡಿದರು. ಶವವಿದ್ದ ಸ್ಥಳ ಇನ್ನೂ ಸುಮಾರು ೩ ಕಿ.ಮೀ. ಇದ್ದಂತೆಯೇ ಜೀಪು ಹೋಗಲು ದಾರಿಯಿಲ್ಲದೆ ನಡೆದೇ ಹೋಗಬೇಕಿತ್ತು. ಮಳೆಗಾಲವಾಗಿದ್ದು ಮೋಡ ಮುಸುಕಿ ಜಿಟಿ ಜಿಟಿ ಮಳೆ ಬೀಳುತ್ತಿದ್ದಂತೆಯೇ ನಮ್ಮ ಸವಾರಿ ಮುಂದುವರೆಯಿತು. ನಾಟಿ ಮಾಡಿದ್ದ ಜಾರುತ್ತಿದ್ದ ಬದಿಗಳಲ್ಲಿ ಎಚ್ಚರಿಕೆಯಿಂದ ಬೀಳದಂತೆ ಹೆಜ್ಜೆಯಿಟ್ಟು ನಡೆಯಬೇಕಿತ್ತು. ನಮ್ಮ ಗ್ರಾಮಸಹಾಯಕನೊಬ್ಬ ನನಗೆ ಟಾರ್ಚು ಹಿಡಿದು ದಾರಿ ತೋರಿಸಲು ತಿರಿತಿರುಗಿ ನೋಡುತ್ತಾ ಹೋಗುತ್ತಿದ್ದಾಗ ಜಾರಿಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡಿದ್ದು ಅಂತಹ ವಿಷಾಧದ ಸಂದರ್ಭದಲ್ಲೂ ಎಲ್ಲರಿಗೆ ನಗು ತರಿಸಿತ್ತು. ಅವನು ಬಿದ್ದದ್ದು ಉಳಿದವರು ಇನ್ನೂ ಎಚ್ಚರಿಕೆಯಿಂದ ನಡೆಯುವಂತೆ ಮಾಡಿತ್ತು. ಆ ಕತ್ತಲೆಯ ಸಂಜೆಯಲ್ಲಿ ಗದ್ದೆಯ ಬದಿಯಲ್ಲಿ ಪೆಟ್ರೋಮ್ಯಾಕ್ಸ್ ಲೈಟುಗಳು, ಹಗ್ಗಗಳು, ಗಳುಗಳು, ಛತ್ರಿಗಳು, ಇತ್ಯಾದಿಗಳನ್ನು ಹಿಡಿದುಕೊಂಡು ನಾವುಗಳು ಹೋಗುತ್ತಿದ್ದುದನ್ನು ದೂರದಿಂದ ನೋಡಿದವರಿಗೆ ಕೊಳ್ಳಿದೆವ್ವಗಳಂತೆ ಕಂಡಿರಲೂ ಸಾಕು. ಪಾಪ, ಡಾಕ್ಟರರೂ ತಮ್ಮ ಒಬ್ಬ ಸಹಾಯಕನೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು. 
     ಅಂತೂ ಶವವಿದ್ದ ಸ್ಥಳ ತಲುಪಿದೆವು. ಶವವೋ ಅಲ್ಲಿದ್ದ ಹಳುಗಳ ನಡುವೆ ಸಿಕ್ಕಿಕೊಂಡಿದ್ದು ಕಾಣಿಸುತ್ತಿದ್ದರೂ, ಅದನ್ನು ಅಲ್ಲಿಂದ ಬಿಡಿಸಿ ಹೊರತರಲು ಕೆಳಗಿನ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಹೆಣಗಬೇಕಾಯಿತು. ಶವಕ್ಕೆ ಕೆಸರು ಮೆತ್ತಿದ್ದರಿಂದ ನೀರು ಸುರಿದು ಸ್ವಚ್ಛಗೊಳಿಸಬೇಕಾಯಿತು. ಆ ದೃಷ್ಯ ಭೀಕರವಾಗಿತ್ತು, ದುರ್ವಾಸನೆ ತಡೆಯುವಂತಿರಲಿಲ್ಲ. ಸುಮಾರು ೨-೩ ದಿನಗಳು ನೀರಿನಲ್ಲೇ ಕೊಳೆತಿದ್ದ ಆ ಶವದ ನಾಲಿಗೆ ಹೊರಚಾಚಿ ಕಚ್ಚಿಕೊಂಡಿದ್ದು, ನಾಲಿಗೆ ಊದಿದ್ದರಿಂದ ಬಾಯಿಯಲ್ಲಿ ಬಲೂನು ಇಟ್ಟುಕೊಂಡಿದ್ದಂತೆ ಕಾಣುತ್ತಿತ್ತು. ತಲೆಯಲ್ಲಿ ಕೂದಲು ಇರಲಿಲ್ಲ, ತಲೆಯಚರ್ಮ ಕೊಳೆತಿದ್ದರಿಂದ ಕಳಚಿಹೋಗಿತ್ತು. ಎರಡೂ ಕೈಗಳು ಶೆಟಗೊಂಡಿದ್ದವು. ಬಲಗೈ ಮಣಿಕಟ್ಟಿನ ಹತ್ತಿರ ಸುಮಾರು ಮೂರು ಇಂಚು ಉದ್ದ, ಎರಡೂವರೆ ಇಂಚು ಅಗಲದ ಕಡಿತದಿಂದಾದ ರೀತಿಯ ಗಾಯವಿತ್ತು. ಹೊಟ್ಟೆಯಿಂದ ಕರುಳು ಹೊರಬಂದಿದ್ದು, ಇಡೀ ದೇಹ ಊದಿಕೊಂಡಿತ್ತು. ದೇಹದ ಅಲ್ಲಲ್ಲಿ ಜಲಚರಗಳು ದೇಹವನ್ನು ತಿಂದಿದ್ದವು. ಈ ಲೇಖನ ಬರೆಯುತ್ತಿರುವಾಗಲೂ ಆ ದೃಷ್ಯ ಕಣ್ಣ ಮುಂದೆ ರಾಚಿದಂತೆ ಇದೆ. ಗಮನಿಸಿದ ಸಂಗತಿಗಳನ್ನು ಪಂಚರ ಸಮಕ್ಷಮದಲ್ಲಿ ದಾಖಲಿಸಿ ಸಂಬಂಧಿಸಿದ ಎಲ್ಲರ ಸಹಿ ಪಡೆದೆ. ಮೃತಳ ತಂದೆಯ ಮತ್ತು ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡೆ. ಪ್ರಾರಂಭದಲ್ಲಿ ಹೇಳಿದ ಸಂಗತಿಗಳು ದಾಖಲಿಸಿಕೊಂಡ ಹೇಳಿಕೆಗಳಲ್ಲಿವೆ. ನಂತರದಲ್ಲಿ ಸರ್ಕಾರಿ ವೈದ್ಯರಿಗೆ ಪೋಸ್ಟ್ ಮಾರ್ಟಮ್ ಮಾಡಿ ವರದಿಯನ್ನು ಪೋಲಿಸರಿಗೆ ತಲುಪಿಸಲು ಹಾಗೂ ಆ ನಂತರದಲ್ಲಿ ವಾರಸುದಾರರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಲುಪಿಸಲು ಸೂಚನೆ ನೀಡಿ ಹೊರಬಂದೆ. ಇದು ಶೀಲ ಶಂಕಿಸಿ ನಡೆದ ಕೊಲೆಯೆಂದು ಮೇಲುನೋಟಕ್ಕೆ ಗೋಚರವಾಗುವಂತಹ ಸಂಗತಿಯಾಗಿತ್ತು. ಕೊಲೆ ಮಾಡಿ ನದಿಗೆ ಎಸೆಯಲಾಗಿದ್ದ ಶವ ಕೊಚ್ಚಿಕೊಂಡು ಹೋಗಿ ಸುಮಾರು ಎರಡು ಕಿ.ಮೀ. ದೂರದ ಹಳುವಿನಲ್ಲಿ ಸಿಕ್ಕಿಕೊಂಡಿತ್ತು. ಸತ್ಯ ಮುಚ್ಚಿಟ್ಟು ಮದುವೆ ಮಾಡಿರದಿದ್ದರೆ ಬಹುಷಃ ಹೀಗೆ ಆಗುತ್ತಿರಲಿಲ್ಲವೇನೋ! ಮನೆಗೆ ಬಂದು ತಲುಪಿದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು.  ಆಗ ಸ್ನಾನ ಮಾಡಿ ಬಂದವನಿಗೆ ಊಟ ಮಾಡುವುದಿರಲಿ, ಮಡದಿ ಕೊಟ್ಟ ಕಾಫಿ ಸಹ ಕುಡಿಯಬೇಕೆನ್ನಿಸಲಿಲ್ಲ. ಸೂರನ್ನು ದಿಟ್ಟಿಸುತ್ತಾ ಮಲಗಿದವನಿಗೆ ಅದು ಯಾವಾಗಲೋ ನಿದ್ರೆ ಬಂದಿತ್ತು. 
-ಕ.ವೆಂ.ನಾಗರಾಜ್.
**********************
[ಪೂರಕ ಮಾಹಿತಿ:
     ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರು ಅಥವ ಮೇಲ್ಪಟ್ಟ ಅಧಿಕಾರಿ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ವರದಿಯನ್ನು ನ್ಯಾಯಾಲಯಕ್ಕೆ ಕಳಿಸಿಕೊಡಲಾಗುತ್ತದೆ. ಇದು ಪೋಲಿಸ್ ತನಿಖೆಗೆ ಪರ್ಯಾಯವಲ್ಲ. ಇದು ಕೇವಲ ಹೆಚ್ಚುವರಿ ತನಿಖೆಯಾಗಿರುತ್ತದೆ. ಇತರ ಕೊಲೆ/ಸಾವುಗಳ ಪ್ರಕರಣಗಳಲ್ಲಿ ನಡೆಯುವಂತೆ ಪೋಲಿಸರೇ ಪೂರ್ಣ ತನಿಖೆ ನಡೆಸಿ ಮೊಕದ್ದಮೆ ದಾಖಲು ಮಾಡುತ್ತಾರೆ ಮತ್ತು ಪ್ರಕರಣ ಸಾಬೀತು ಪಡಿಸುವ ಹೊಣೆಗಾರಿಕೆ ಅವರದ್ದು ಮತ್ತು ಸರ್ಕಾರಿ ಅಭಿಯೋಜಕರುಗಳದ್ದಾಗಿರುತ್ತದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ತಹಸೀಲ್ದಾರರನ್ನೂ ಸಾಕ್ಷಿಯಾಗಿ ಕರೆಸಲಾಗುತ್ತದೆ.] 
ಹಿಂದಿನ ಲೇಖನ: 'ಕ್ರೌರ್ಯ  ಕೇಕೆ  ಹಾಕಿತು'ಗೆ ಲಿಂಕ್: 

ಬುಧವಾರ, ಮಾರ್ಚ್ 28, 2012

ಕೇಕೆ ಹಾಕಿತು ಕ್ರೌರ್ಯ!

     [ಇದು ನಡೆದ ಸತ್ಯ ಕಥೆ. ಹೆಸರುಗಳನ್ನು ಬದಲಿಸಿದ್ದೇನೆ.]
     ನಾಗಾನಾಯ್ಕ ಮತ್ತು ಸರಸ್ವತೀಬಾಯಿ ಬಹಳಷ್ಟು ಚರ್ಚೆಯ ನಂತರ ಕೊನೆಗೂ ತಮ್ಮ ಒಬ್ಬಳೇ ಮಗಳು ದೀಪಾಳನ್ನು ನಾಗಾನಾಯ್ಕನ ಅಕ್ಕ ಲಕ್ಷ್ಮಮ್ಮನ ಕಿರಿಯ ಮಗ ಸೂರ್ಯನಿಗೆ ಕೊಡಲು ನಿರ್ಧರಿಸಿದರು. ಸೂರ್ಯ ನಿರುದ್ಯೋಗಿಯಾಗಿದ್ದರೂ ಅವನ ತಂದೆ ರಾಮಾನಾಯ್ಕ ನಿವೃತ್ತ ಶಿರಸ್ತೇದಾರರಾಗಿದ್ದು ಒಳ್ಳೆಯ ಆಸ್ತಿ, ಜಮೀನು ಹೊಂದಿದ ಸ್ಥಿತಿವಂತರಾಗಿದ್ದರು. ಸೂರ್ಯನ ಅಣ್ಣಂದಿರೂ ಪ್ರತಿಷ್ಠಿತ ಹುದ್ದೆಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದು, ಸೂರ್ಯ ಸಹ ಕೆಲಸದ ಹುಡುಕಾಟದಲ್ಲಿದ್ದ. ಒಂದಲ್ಲಾ ಒಂದು ಕೆಲಸ ಸಿಕ್ಕೇ ಸಿಗುತ್ತದೆ, ಸಿಗದಿದ್ದರೂ ಜೀವನಕ್ಕೆ ಏನೂ ತೊಂದರೆಯಿಲ್ಲವೆಂಬ ಅನಿಸಿಕೆ ಈ ನಿರ್ಧಾರಕ್ಕೆ ಪುಷ್ಟಿ ಕೊಟ್ಟಿತ್ತು. ಸಾಮಾನ್ಯ ರೂಪಿನ ದೀಪಾ ಸಹ ಸೂರ್ಯನನ್ನು ನೋಡಿದ್ದು ಅವಳು ಹಿರಿಯರ ಅಭಿಪ್ರಾಯಕ್ಕೆ ಸಮ್ಮತಿಸಿದ್ದಳು. ಎರಡೂ ಮನೆಯವರ ನಡುವೆ ಮಾತುಕತೆಗಳಾದವು. ಮದುವೆ ಸಂದರ್ಭದಲ್ಲಿ ಇಪ್ಪತ್ತು ತೊಲ ಬಂಗಾರ ಮತ್ತು ಕೇವಲ ನಾಲ್ಕು ಲಕ್ಷ ರೂಪಾಯಿ ನಾಗಾನಾಯ್ಕ ಕೊಡಬೇಕೆಂದು ಒಪ್ಪಂದವಾಗಿ ನಿಶ್ಚಿತಾರ್ಥವೂ ಸಂಭ್ರಮದಿಂದ ನಡೆಯಿತು. ನಂತರದ ಒಂದೇ ತಿಂಗಳಿನಲ್ಲಿ ಧಾಂ ಧೂಂ ಆಗಿ ಮದುವೆಯೂ ಆಗಿಹೋಯಿತು. ಒಪ್ಪಂದದಂತೆ ವರದಕ್ಷಿಣೆಯಾಗಿ ಆ ನಿರುದ್ಯೋಗಿಯ ತಂದೆ-ತಾಯಿಯವರಿಗೆ ನಾಲ್ಕು ಲಕ್ಷ ರೂ. ಹಣ, ಬಂಗಾರವೂ ದಕ್ಕಿತು. ಯಾವುದೇ ಲೋಪವಾಗದಂತೆ ಮದುವೆ ಮಾಡಿದ ಸಮಾಧಾನ ದೀಪಾಳ ತಂದೆ-ತಾಯಿಯವರದಾಯಿತು.
     ಮದುವೆ ನಂತರದಲ್ಲಿ ಒಂದು ವಾರ ನೂತನ ದಂಪತಿಗಳು ಆ ಊರು, ಈ ಊರು ತಿರುಗಿ ಹಳ್ಳಿಯ ಮನೆಗೆ ಬಂದು ಇದ್ದರು. ಹಳ್ಳಿಯ ಮನೆಯಲ್ಲಿ ೧೫-೨೦ ದಿನಗಳು ಇದ್ದು, ಸೂರ್ಯ ಕೆಲಸ ಹುಡುಕುವ ಸಲುವಾಗಿ ದೀಪಾಳನ್ನೂ ಕರೆದುಕೊಂಡು ಬೆಂಗಳೂರಿನ ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿದ್ದ ಅಣ್ಣ ಚಂದ್ರನ ಮನೆಗೆ ಬಂದ. ಸೂರ್ಯನಿಗೆ ಕೆಲಸ ಸಿಗಲಿಲ್ಲ. ದೀಪಾಳಿಗೆ ಸೂರ್ಯನ ಅತ್ತಿಗೆಯಿಂದ ಮೂದಲಿಕೆ ತಪ್ಪಲಿಲ್ಲ. ಬಿಟ್ಟಿ ಕೂಳು ಹಾಕುವುದಕ್ಕೆ ನಿಮ್ಮಪ್ಪ ಏನು ನಮಗೆ ಹಣ ಕೊಟ್ಟಿದ್ದಾನಾ? ಎಂದು ಪ್ರಾರಂಭವಾದ ಮಾತು ಕೊನೆ ಕೊನೆಗೆ ದೀಪಾಳ ಮೇಲೆ ಕೈ ಮಾಡುವಷ್ಟು ಮುಂದುವರೆಯಿತು. ಒಂದು ತಿಂಗಳ ನಂತರ ಇನ್ನು ಸಹಿಸುವುದು ಸಾದ್ಯವೇ ಇಲ್ಲವೆಂದಾದಾಗ ದೀಪಾಳ ಗೋಳಾಟ ನೋಡಲಾರದೆ ಗಂಡ ಸೂರ್ಯ ಅವಳನ್ನು ಅವಳ ತಂದೆಯ ಮನೆಗೆ ಕರೆದುಕೊಂಡು ಬಂದು ಅಲ್ಲಿ ಒಂದು ವಾರವಿದ್ದು ನಂತರ ಅವನೊಬ್ಬನೇ ಕೆಲಸ ಹುಡುಕುವುದಾಗಿ ಹೇಳಿ ಬೆಂಗಳೂರಿಗೆ ಹೋದ. ಮತ್ತೂ ಒಂದು ತಿಂಗಳು ಕಳೆಯಿತು. ಉಂಡಾಡಿ ಗುಂಡನಂತೆ ಬೆಳೆದಿದ್ದ ಸೋಮಾರಿತನವೇ ಮೈವೆತ್ತಿದ್ದ ಸೂರ್ಯ ಕೆಲಸ ಸಿಗಲಿಲ್ಲವೆಂದು ಮಾವನ ಮನೆಗೆ ಬಂದು ಕೆಲವು ದಿನವಿದ್ದು ನಂತರ ಪತ್ನಿ ದೀಪಾಳನ್ನು ಕರೆದುಕೊಂಡು ವಾಪಸು ಹಳ್ಳಿಯ ಮನೆಗೆ ಬಂದು ಅಲ್ಲಿಯೂ ಕೆಲವು ದಿನಗಳವರೆಗೆ ಕಾಲ ಕಳೆದರು. ಪುನಃ ಪುಸಲಾಯಿಸಿ ಪತ್ನಿಯನ್ನೂ ಕರೆದುಕೊಂಡು ಬೆಂಗಳೂರಿನ ಅಣ್ಣನ ಮನೆಗೆ ಹೋಗಿ ಒಂದು ತಿಂಗಳು ಅಲ್ಲಿದ್ದ ಸೂರ್ಯನ ಭಂಡತನಕ್ಕೆ ಏನೆನ್ನಬೇಕೋ ಗೊತ್ತಿಲ್ಲ. ಯಥಾಪ್ರಕಾರ ದೀಪಾ ಮತ್ತು ಸೂರ್ಯನ ಅತ್ತಿಗೆಯರ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ದೀಪಾ ಕಣ್ಣೀರಿನಲ್ಲೇ ಕೈ ತೊಳೆಯುವಂತಹ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಯಿತು. ತನಗೆ ಕೆಲಸ ಸಿಕ್ಕ ಮೇಲೆ ಎಲ್ಲಾ ಸರಿಯಾಗುತ್ತದೆ ಎಂದು ಸಮಾಧಾನ ಮಾಡಿದ ಸೂರ್ಯ ಪತ್ನಿಯನ್ನು ಕರೆದುಕೊಂಡು ಹೋಗಿ ದಾವಣಗೆರೆಯಲ್ಲಿದ್ದ ತನ್ನ ಅಕ್ಕನ ಮನೆಯಲ್ಲಿ ಬಿಟ್ಟು ತಾನೊಬ್ಬನೇ ಬೆಂಗಳೂರಿಗೆ ವಾಪಸು ಹೋದ. ಹಂಗಿನ ಕೂಳು ತಿನ್ನುತ್ತಿದ್ದ ದೀಪಾ ದಾವಣಗೆರೆಯಲ್ಲಿ ಒಂದು ತಿಂಗಳು ಇದ್ದು, ತಂದೆಯನ್ನು ಕರೆಸಿಕೊಂಡು ತವರು ಮನೆಗೇ ಬಂದಳು.
     ತವರುಮನೆಯಲ್ಲಿ ಎರಡು ತಿಂಗಳು ಕಳೆಯಿತು. ಅಳಿಯ ಮಹಾಶಯ ನಂತರ ಬಂದವನು ಪತ್ನಿಯನ್ನು ಕರೆದುಕೊಂಡು ಹೋಗಿ ಶಿವಮೊಗ್ಗದಲ್ಲಿದ್ದ ಇನ್ನೊಬ್ಬ ಅಣ್ಣನ ಮನೆಗೆ ಬಂದ. ಅಲ್ಲೂ ೧೦-೧೫ ದಿನಗಳು ಇದ್ದರು. ಆ ನಂತರದಲ್ಲಿ ಪತ್ನಿ ಮತ್ತು ತಾಯಿಯನ್ನೂ ಕರೆದುಕೊಂಡು ಪುನಃ ಬೆಂಗಳೂರಿನ ದೀಪಾಳ ಪಾಲಿನ ನರಕದ ಮನೆಗೆ ಹೋದ. ೧೦-೧೫ ದಿನಗಳಲ್ಲಿ ಹೆಂಗಸರುಗಳ ನಡುವಣ ಜಗಳ ಬಗೆಹರಿಯದಷ್ಟು ತಾರಕಕ್ಕೇರಿದಾಗ ಗಂಡ-ಹೆಂಡತಿ ಇಬ್ಬರೂ ಗಂಟು ಮೂಟೆ ಕಟ್ಟಿಕೊಂಡು ನಾಗಾನಾಯ್ಕನ ಮನೆಗೆ ಬಂದರು. ನಾಗಾನಾಯ್ಕ ಇಬ್ಬರಿಗೂ ಬುದ್ಧಿ ಹೇಳಿ ಒಂದು ದಿನ ತಮ್ಮ ಮನೆಯಲ್ಲಿ ಇರಿಸಿಕೊಂಡು ಇಬ್ಬರನ್ನೂ ವಾಪಸು ಬೆಂಗಳೂರಿಗೇ ಕಳಿಸಿದ. ಬೆಂಗಳೂರಿಗೆ ಹೋಗಿ ಕೆಲವು ದಿನಗಳಾಗಿರಬಹುದು. ಒಂದು ರಾತ್ರಿ ನಾಗಾನಾಯ್ಕನ ಅಕ್ಕ ಫೋನು ಮಾಡಿ ನಿನ್ನ ಮಗಳು ಸಿಟ್ಟು ಮಾಡುತ್ತಿರುತ್ತಾಳೆ, ಅವಳನ್ನು ಕರೆದುಕೊಂಡು ಹೋಗು ಎಂದು ತಿಳಿಸಿದ್ದಾಳೆ. ಮಗಳ ಹತ್ತಿರ ಮಾತನಾಡಿದರೆ ಅವಳು ಅಪ್ಪಾ, ನಾನು ಈಗಲೇ ಹೊರಟುಬರುತ್ತಿದ್ದೇನೆ. ಬೆಳಿಗ್ಗೆ ಶಿವಮೊಗ್ಗದ ರೈಲ್ವೇ ಸ್ಟೇಷನ್ನಿನ ಹತ್ತಿರ ಬಾ ಎಂದಿದ್ದಾಳೆ. ರಾತ್ರಿ ಬರುವುದು ಬೇಡ, ಬೆಳಿಗ್ಗೆ ಬಾ ಎಂದು ಹೇಳಿದ ಅವನು ಅಳಿಯನಿಗೂ ಬೆಳಿಗ್ಗೆ ಕರೆದುಕೊಂಡು ಬರುವಂತೆ ಹೇಳಿದ್ದಾನೆ. ಮರುದಿನ ಬೆಳಗಿನ ಜಾವ ೫.೩೦ಕ್ಕೆ ಪುನಃ ಅಪ್ಪನಿಗೆ ಫೋನು ಮಾಡಿದ ದೀಪಾ ತಾನು ಹೊರಟು ಬರುತ್ತಿರುವುದಾಗಿಯೂ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಬರಬೇಕೆಂದೂ ತಿಳಿಸಿದ್ದಾಳೆ. ಅವಳು ಬರುವುದು ಬೇಡವೆಂದೂ, ತಾನೇ ಬೆಂಗಳೂರಿಗೆ ಬರುತ್ತಿರುವುದಾಗಿ ನಾಗಾನಾಯ್ಕ ಹೇಳಿದಾಗ ಅಪ್ಪಾ, ನೀನು ಬೇಗ ಬಾ, ಇಲ್ಲದಿದ್ದರೆ ನನ್ನನ್ನು ಸಾಯಿಸಿಬಿಡುತ್ತಾರೆ ಎಂದು ಅಳುತ್ತಾ ಹೇಳಿದ್ದಾಳೆ. ಆದರೂ ನಾಗಾನಾಯ್ಕ ಹೊಲದ ಹತ್ತಿರದ ಕೆಲಸ ಮುಗಿಸಿ ೧೧ ಕ್ಕೆ ಫೋನು ಮಾಡಿ ವಿಚಾರಿಸಿದ್ದಾನೆ. ಅವನ ಅಕ್ಕ ನಿನ್ನ ಮಗಳನ್ನು ಕರೆದುಕೊಂಡು ಹೋಗಿಬಿಡು ಎಂದು ತಿಳಿಸಿದ್ದಾಳೆ. ೧೨ ಗಂಟೆಗೆ ಹೊರಟು ಶಿವಮೊಗ್ಗ ತಲುಪಿ ಅಲ್ಲಿಂದ ರೈಲಿನಲ್ಲಿ ಹೊರಟ ನಾಗಾನಾಯ್ಕ ಬೆಂಗಳೂರಿನ ಮನೆ ತಲುಪಿದಾಗ ರಾತ್ರಿ ೯.೩೦ ಆಗಿತ್ತು.
      ನಾಗಾನಾಯ್ಕನಿಗೆ ಆ ಮನೆಯಲ್ಲಿ ತಣ್ಣನೆಯ ಸ್ವಾಗತ ದೊರೆಯಿತು. ಕುಶಾಲಿಗಾಗಿ ಎಲ್ಲರ ಯೋಗಕ್ಷೇಮ ವಿಚಾರಿಸಿದ ನಂತರ ಮಗಳ ಬಗ್ಗೆ ಕೇಳಿದ್ದಾನೆ. ಅಕ್ಕ ಲಕ್ಷ್ಮಮ್ಮ ನಿನ್ನ ಮಗಳು ಉರುಳು ಹಾಕಿಕೊಂಡಿದ್ದಾಳೆ ಎಂಬ ಉತ್ತರ ಕೊಟ್ಟಾಗ ನಾಗಾನಾಯ್ಕ ಹೌಹಾರಿದ್ದಾನೆ. ಸುಸ್ತಾಗಿ ಕುಸಿದು ಬಿದ್ದ ಅವನನ್ನು ಉಪಚರಿಸುವವರು ಅಲ್ಲಿ ಯಾರೂ ಇರಲಿಲ್ಲ. ಮಗಳ ಹೆಣವನ್ನೂ ನೋಡಲು ಅವನಿಗೆ ಧೈರ್ಯವಿರಲಿಲ್ಲ. ಅಂದು ಮಧ್ಯರಾತ್ರಿ ಸುಮಾರು ೧.೩೦ರ ವೇಳೆಗೆ  ಸೂರ್ಯನ ಮೂವರು ಅಣ್ಣಂದಿರು ಮತ್ತು ಇಬ್ಬರು ಸ್ಥಳೀಯ ಮುಖಂಡರು ಸೇರಿಕೊಂಡು ಹೆಣವನ್ನು ಹಳ್ಳಿಗೆ ಸಾಗಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಒಂದು ಕೆಂಪು ಮಾರುತಿ ಒಮ್ನಿ ವಾಹನವನ್ನು ಊರಿನಿಂದಲೇ ತಂದಿದ್ದರು. ನಾಗಾನಾಯ್ಕ ಆಗ ಹೆಣವಿದ್ದ ಕೊಠಡಿಯ ಬಾಗಿಲಿಗೆ ಅಡ್ಡವಾಗಿ ನಿಂತು, ಪೋಳಿಸರಿಗೆ ದೂರು ಕೊಟ್ಟು ಅವರು ಬರುವವರೆಗೂ ದೇಹ ಸಾಗಿಸಬಾರದು ಎಂದು ಅವರಿಗೆ ಸುಮಾರು ಒಂದೂವರೆ ಗಂಟೆಯ ಕಾಲ ಅಡ್ಡಿಪಡಿಸಿದ್ದಾನೆ. ಎಲ್ಲರೂ ಸೇರಿ ಅವನನ್ನು ಸಮಾಧಾನ ಪಡಿಸಿ ಊರಿಗೆ ಹೋದ ಮೇಲೆ ಅಲ್ಲೇ ಪೋಲಿಸರಿಗೆ ದೂರು ಕೊಟ್ಟು, ಅವರು ತನಿಖೆ ನಡೆಸಿದ ಮೇಲೇ ಮುಂದಿನ ಕಾರ್ಯ ಮಾಡೋಣ ಎಂದು ಒಪ್ಪಿಸಿ ಹೆಣವನ್ನು ವ್ಯಾನಿನಲ್ಲಿ ಹಾಕಿಕೊಂಡು ಹೊರಟಿದ್ದಾರೆ. ಅದೇ ವ್ಯಾನಿನಲ್ಲಿ ನಾಗಾನಾಯ್ಕ ಬಂದರೂ ಮಗಳ ಹೆಣವನ್ನು ನೋಡುವ ಧೈರ್ಯ ಆಗಲೂ ಮಾಡಿರಲಿಲ್ಲ. ಆ ವ್ಯಾನು ಹಳ್ಳಿ ತಲುಪಿದ್ದು ಮಧ್ಯಾಹ್ನ ೧೨.೩೦ರ ವೇಳೆಗೆ.
     ಇಲ್ಲಿಯವರೆಗಿನ ಕಥೆ ದೀಪಾಳ ತಂದೆ, ತಾಯಿ ಮತ್ತು ಅಣ್ಣ ಹೇಳಿದ್ದು. ಮುಂದಿನ ಕಥೆಯನ್ನು ನಾನು ಮುಂದುವರೆಸುತ್ತೇನೆ.ಏಕೆಂದರೆ, ಇಲ್ಲಿಂದ ಮುಂದೆ ಪ್ರಕರಣದಲ್ಲಿ ನನ್ನ ಪ್ರವೇಶವಾಯಿತು.
     ಅಂದು ಸಾಯಂಕಾಲ ೭ ಗಂಟೆಯ ವೇಳೆಗೆ ಮನೆಗೆ ಸುಸ್ತಾಗಿ ಬಂದವನು ಬಟ್ಟೆ ಬದಲಾಯಿಸುತ್ತಿದ್ದ ವೇಳೆಗೆ ಪೋಲಿಸ್ ಇನ್ಸ್‌ಪೆಕ್ಟರರು ಫೋನಿನಲ್ಲಿ ವಿಷಯ ತಿಳಿಸಿ ಶವತನಿಖೆ ನಡೆಸಿಕೊಡಲು ಕೋರಿದ್ದರು. ಲಿಖಿತ ವರದಿ ಮತ್ತು ಕೋರಿಕೆ ಕಳುಹಿಸಿಕೊಡಲು ಹಾಗೂ ಕತ್ತಲಾದ್ದರಿಂದ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡಲೂ ತಿಳಿಸಿದ್ದೆ. ಅರ್ಧ ಗಂಟೆ ಬಿಟ್ಟು ಕಛೇರಿಗೆ ಫೋನು ಮಾಡಿ ವಿಚಾರಿಸಿದರೆ ಇನ್ನೂ ಪೋಲಿಸರಿಂದ ಕೋರಿಕೆ ಬಂದಿರಲಿಲ್ಲವೆಂದು ತಿಳಿಯಿತು. ಅಷ್ಟರಲ್ಲಿ ಮೃತಳ ಊರಿನಿಂದ ಟ್ರ್ಯಾಕ್ಟರುಗಳಲ್ಲಿ ಜನ ಬಂದು ಹಳ್ಳಿಯಲ್ಲಿದ್ದಾರೆಂದೂ ಗಲಾಟೆಯಾಗುವ ಸಂಭವವಿದೆಯೆಂದೂ ನನಗೆ ಮಾಹಿತಿ ಸಿಕ್ಕಿತು. ಸಬ್‌ಇನ್ಸ್ ಪೆಕ್ಟರರಿಗೆ ಫೋನು ಮಾಡಿ ವರದಿ ಬಗ್ಗೆ ಪುನಃ ವಿಚಾರಿಸಿದೆ. ಬರವಣಿಗೆ ಕೆಲಸ ಆಗುತ್ತಿದೆ, ದೂರು ತಡವಾಗಿ ಕೊಟ್ಟಿದ್ದಾರೆ, ಇನ್ನು ಅರ್ಧ ಗಂಟೆಯ ಒಳಗೆ ಆಗುತ್ತದೆ ಎಂಬ ಉತ್ತರ ಬಂದಿತು. ರಾತ್ರಿ ೯.೦೦ರ ವೇಳೆಯಾದರೂ ಕೋರಿಕೆಯ ಸುಳಿವಿರದ ಕಾರಣ ಪುನಃ ಫೋನು ಮಾಡಿ ಈಗಾಗಲೇ ತಡವಾಗಿದೆ, ಅಲ್ಲಿ ಗಲಾಟೆಗೆ ಅವಕಾಶ ಕೊಡುವುದು ಬೇಡ. ಅಗತ್ಯದ ಸಿಬ್ಬಂದಿಯೊಂದಿಗೆ ಬನ್ನಿ, ನಾನು ಈಗ ಹೊರಟಿದ್ದೇನೆ ಎಂದಾಗ ಅವರು ಹಿಂದೆಯೇ ತಾವೂ ಬರುವುದಾಗಿ ತಿಳಿಸಿದರು. ಹತ್ತು ನಿಮಿಷ ನೋಡಿ ಒಬ್ಬರು ಗುಮಾಸ್ತರು ಮತ್ತು ಒಬ್ಬರು ಜವಾನರನ್ನು ಕರೆದುಕೊಂಡು ಪೋಲಿಸ್ ಠಾಣೆಯ ಮುಂದೆಯೇ ಹೋಗಿ ಅವರನ್ನು ಹೊರಡಲು ಸೂಚಿಸಿದೆ. ಕೆಲವರು ಸಿಬ್ಬಂದಿ ಕರೆದುಕೊಂಡು ಬರುವುದಾಗಿ ಹೇಳಿದಾಗ ನಾನು ಹಳ್ಳಿಗೆ ಹೊರಟೆ. ಹೆಣವನ್ನು ಮನೆಯ ಮುಂಭಾಗದಲ್ಲಿ ಒಂದು ಹಳೆಯ ಮಂಚದ ಮೇಲೆ ಮಲಗಿಸಲಾಗಿತ್ತು. ಜನ ಗುಂಪು ಕೂಡಿದ್ದರು. ಅಲ್ಲಿದ್ದವರಲ್ಲಿ ಹೆಚ್ಚಿನವರು ಮೃತಳ ಊರಿನವರಾಗಿದ್ದು, ಸ್ಥಳೀಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಮೃತಳ ಗಂಡನಾಗಲೀ, ಅವನ ಅಣ್ಣಂದಿರಾಗಲೀ ಅಲ್ಲಿ ಇರಲಿಲ್ಲ. ಭಯದಿಂದ ಜಾಗ ಖಾಲಿ ಮಾಡಿದ್ದಿರಬೇಕು. ಹಳ್ಳಿ ತಲುಪಿದ ಅರ್ಧ ಗಂಟೆ ನಂತರ ಬಂದ ಪೋಲಿಸ್ ಜೀಪಿನಲ್ಲಿ ಒಬ್ಬರು ಹೆಡ್ ಕಾನ್ಸ್ ಟೇಬಲ್ ಮತ್ತು ಒಬ್ಬರು ಪೇದೆ ಮಾತ್ರ ಇದ್ದುದು ಕಂಡು ನನಗೆ ಸಿಟ್ಟು ಬಂದರೂ ತೋರಿಸಿಕೊಳ್ಳಲಿಲ್ಲ. ಸಬ್ ಇನ್ಸ್‌ಪೆಕ್ಟರ್ ಎಲ್ಲಿ? ವರದಿ ಎಲ್ಲಿ? ಎಂದು ಕೇಳಿದರೆ ಲೆಟರ್ ಕಛೇರಿಗೆ ಕೊಟ್ಟಿದ್ದೇವೆ ಎಂಬ ಉತ್ತರ ಬಂತು. ಕಛೇರಿಗೆ ಫೋನು ಮಾಡಿ ಕೇಳಿದರೆ ಅಲ್ಲಿದ್ದ ಕಾವಲುಗಾರ ಯಾವ ಪೋಲಿಸರೂ ಬಂದಿಲ್ಲ, ಯಾರೂ ಲೆಟರ್ ಕೊಟ್ಟಿಲ್ಲ ಎಂದು ಹೇಳಿದ್ದ. ಅದಿಕೃತ ಕೋರಿಕೆ ಇಲ್ಲದೆ ಶವತನಿಖೆ ಮಾಡುವಂತಿಲ್ಲ, ಅಲ್ಲಿಂದ ವಾಪಸೂ ಬರುವ್ಲಂತಿಲ್ಲ, ಹಾಗೆ ಬಂದಿದ್ದರೆ ಅದು ತಪ್ಪು ಸಂಧೇಶ ರವಾನಿಸುತ್ತಿತ್ತು ಮತ್ತು ಗಲಾಟೆಗೆ ಅವಕಾಶವಾಗುತ್ತಿತ್ತು. ನಾನು ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಫೋನಿನಲ್ಲಿ ಸಬ್ ಇನ್ಸ್‌ಪೆಕ್ಟರರಿಗೆ ಕಠಿಣವಾಗಿ ನಿಂದಿಸಿದೆ. ಅವರು ರಾತ್ರಿ ಕತ್ತಲಾದ್ದರಿಂದ ಬೆಳಿಗ್ಗೆ ಶವತನಿಖೆ ಮಾಡಬಹುದೆಂಬ ಕಾರಣದಿಂದ ಹೀಗೆ ಮಾಡಿದ್ದೆಂದು ಹೇಳಿ ಮತ್ತಷ್ಟು ಬೈಸಿಕೊಂಡರು.  ನಾನು ಶವತನಿಖೆ ಮಾಡಿದ ನಂತರ ಮೃತರ ಸಂಬಂಧಿಗಳನ್ನು ವಿಚಾರಿಸಿ ಹೇಳಿಕೆ ಪಡೆಯುತ್ತಿದ್ದೆ. ಆದರೆ ಈ ಪ್ರಕರಣದಲ್ಲಿ ಪೋಲಿಸರ ಕೋರಿಕೆ ಬರುವವರೆಗೆ ಆ ಕೆಲಸವನ್ನಾದರೂ ಮಾಡಬಹುದೆಂದು ಶವದ ಪಕ್ಕದಲ್ಲಿಯೇ ಕುರ್ಚಿ ತರಿಸಿ ಹಾಕಿಕೊಂಡು ಮೃತೆಯ ತಂದೆ, ತಾಯಿ, ಅಣ್ಣ ಮತ್ತು ಗ್ರಾಮಸ್ಥರ ಹೇಳಿಕೆಗಳನ್ನು ಪಡೆಯಲು ಪ್ರಾರಂಭಿಸಿದೆ. ಅದು ಸಾಮಯಿಕ ಮತ್ತು ಸಾಂದರ್ಭಿಕವಾಗಿ ತೆಗೆದುಕೊಂಡಿದ್ದ ಅಗತ್ಯದ ನಿರ್ಧಾರವಾಗಿತ್ತು. ಇದರಿಂದ ಅಲ್ಲಿದ್ದ ಯಾರಿಗೂ ಯಾವುದೇ ಸಂಶಯ ಬರಲು ಅವಕಾಶವಾಗಲಿಲ್ಲ. ಕೋರಿಕೆ ಪತ್ರ ಹಿಡಿದು ಸಬ್‌ಇನ್ಸ್‌ಪೆಕ್ಟರ್ ಧಾವಿಸಿ ಬಂದ ನಂತರವೇ ಶವತನಿಖೆ ಪ್ರಾರಂಭಿಸಿದ್ದು. ನಾನು ಪ್ರಾರಂಭದಲ್ಲಿ ಹೇಳಿರುವ ಎಲ್ಲಾ ಸಂಗತಿಗಳೂ ದಾಖಲಿಸಿಕೊಂಡಿರುವ ಹೇಳಿಕೆಗಳಲ್ಲಿ ಇರುವುದಾಗಿದೆ.
     ನಾನು ದೀಪಾಳ ಶವದ ಪಕ್ಕದಲ್ಲಿಯೇ ಕುಳಿತಿದ್ದರೂ ತನಿಖೆಯ ದೃಷ್ಟಿ ಬೀರಿದ್ದು ನಿಯಮದ ರೀತ್ಯಾ ಶವತನಿಖೆಯ ಕೋರಿಕೆ ಪತ್ರ ಕೈಸೇರಿದ ನಂತರವೇ. ೨೪ ವರ್ಷದ, ಮದುವೆಯಾದ ಕೇವಲ ೯ ತಿಂಗಳಲ್ಲಿ ಅಂತ್ಯ ಕಂಡಿದ್ದ, ಆ ೯ ತಿಂಗಳುಗಳಲ್ಲೂ ಕೇವಲ ನರಕವನ್ನೇ ಕಂಡಿದ್ದ, ಅವರಿವರ ಮನೆಗಳಲ್ಲಿ ಹಂಗಿನ ಕೂಳಿಗಾಗಿ ಕೈಯೊಡ್ಡಬೇಕಾಗಿ ಬಂದಿದ್ದ ದೀಪಾಳ ಪ್ರಾಣದೀಪ ನಂದಿಹೋಗಿತ್ತು. ಆ ೯ ತಿಂಗಳುಗಳಲ್ಲೇ ಎರಡು ಸಲ ಮಕ್ಕಳು ಈಗಲೇ ಬೇಡವೆಂದು ಅತ್ತೆಯ ಮನೆಯಲ್ಲಿ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದರೆಂದು ಮತ್ತು ಮಕ್ಕಳಾಗದಂತೆ ಬಲವಂತವಾಗಿ ಮಾತ್ರೆಗಳನ್ನು ನುಂಗಿಸುತ್ತಿದ್ದರೆಂದು ದೀಪಾಳ ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಳು.  ಇನ್ನೂ ಅರಳಬೇಕಾಗಿದ್ದ ಹೂವೊಂದನ್ನು ಅರಳುವ ಮುನ್ನವೇ ಹೊಸಕಿ ಹಾಕಿದ್ದ ಕಟುಕರನ್ನು ಮನದಲ್ಲೇ ಶಪಿಸಿದೆ. ಶವ ಇರುವ ಜಾಗದ ಸುತ್ತಲೂ ಚಾಪೆ, ಸೀರೆಗಳಿಂದ ಪರದೆ ಕಟ್ಟಿಸಿದೆ. ಸಂದಿಯಿಂದ ಇಣುಕಿ ನೋಡುತ್ತಿದ್ದವರನ್ನು ಗದರಿಸಿ ಕಳಿಸಬೇಕಾಯಿತು. ನನ್ನ ಸಿಟ್ಟು ತಣಿದಿರದಿದ್ದ ಕಾರಣ, ಪಕ್ಕ ನಿಂತುಕೊಂಡಿದ್ದ ಪೇದೆಗೆ ಏನು ಮಿಕಿಮಿಕಿ ನೋಡುತ್ತಿದ್ದೀರಿ? ಜನರನ್ನು ದೂರ ಕಳಿಸಿ ಎಂದು ಸಿಡುಕಿದೆ. ನಿಯಮದಂತೆ ಶವತನಿಖೆ ನಡೆಸಿ ಕಂಡು ಬಂದ ಸಂಗತಿಗಳನ್ನು ಗುಮಾಸ್ತರಿಗೆ ಹೇಳಿ ಬರೆಸುತ್ತಿದ್ದೆ. ಶವದ ಮೂಗು, ಬಾಯಿ, ಕಣ್ಣುಗಳಿಂದ ರಕ್ತ ಜಿನುಗಿತ್ತು. ಬಲ ಕೆನ್ನೆ ಮತ್ತು ಎದೆಯ ಭಾಗ ಊದಿತ್ತು. ಕಿವಿಯಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಬಲ ಕಂಕುಳಿನ ಕೆಳಭಾಗದಲ್ಲಿ, ಬಲಪಕ್ಕೆಗಳ ಭಾಗದಲ್ಲಿ ರಕ್ತನಾಳಗಳು ಒಡೆದು ರಕ್ರ ಹೆಪುಗಟ್ಟಿದ ಗುರುತುಗಳಿದ್ದವು. ಎಡಭಾಗದಲ್ಲೂ ಹೀಗೆಯೇ ಗುರುತುಗಳಿದ್ದವು. ಸೊಂಟದ ಭಾಗದಲ್ಲಿ ಮತ್ತು ತೊಡೆಗಳಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತುಗಳು ಕಂಡವು. ಸಾಯುವ ಮುನ್ನ ಅವಳು ಅನುಭವಿಸಿರಬಹುದಾದ ಚಿತ್ರಹಿಂಸೆಯನ್ನು ನೆನೆದು ಇಂತಹ ವಿಕೃತರೂ ಇರುತ್ತಾರೆಯೇ ಎಂದು ನೊಂದುಕೊಂಡೆ. ಎಡಗೈ ರಟ್ಟೆ, ಮೊಣಕೈ, ಬಲ ಮೊಣಕಾಲಿನ ಕೆಳಗೆ ಎಳೆದಾಡಿದ, ಚರ್ಮ ಕಿತ್ತುಬಂದ ತರಚಿದ ಗುರುತುಗಳಿದ್ದು, ಬಹುಶಃ ಅವು ಶವವನ್ನು ವ್ಯಾನಿನಲ್ಲಿ ಇಡುವಾಗ, ಪ್ರಯಾಣಿಸುವಾಗ,  ಇಳಿಸುವಾಗ ಆಗಿರಬಹುದಾದ ತರಚು ಗಾಯಗಳಿರಬೇಕು. ಪಂಚರ ಸಮಕ್ಷಮದಲ್ಲಿ ಈ ಕೆಲಸ ಮುಗಿಸಿ, ಅವರುಗಳ ಸಹಿಯನ್ನೂ ಪಡೆದು, ಶವಪರೀಕ್ಷೆ ನಡೆಸಿ ವರದಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದೆ. ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕಾಗಿ ಒಪ್ಪಿಸಲು ಮತ್ತು ಮುಂದಿನ ಅಗತ್ಯದ ತನಿಖೆ ಮುಂದುವರೆಸಲು ಸಬ್ ಇನ್ಸ್‌ಪೆಕ್ಟರರಿಗೆ ತಿಳಿಸಿ ಅಲ್ಲಿಂದ ಹೊರಟುಬಂದೆ. ಶವಪರೀಕ್ಷೆ ನಡೆಸಲು ವೈದ್ಯಾಧಿಕಾರಿಯವರಿಗೆ ಸೂಚನಾಪತ್ರ ಕಳಿಸಿದ ಮೂರು ಗಂಟೆಯ ನಂತರದಲ್ಲಿ ಅವರಿಂದ ಶವ ಕೊಳೆಯಲು ಪ್ರಾರಂಭಿಸಿರುವುದರಿಂದ ಶವಪರೀಕ್ಷೆಯನ್ನು ಮಾಡುವುದು ಕಷ್ಟವೆಂದು ತಿಳಿಸಿದ್ದರಿಂದ ಜಿಲ್ಲಾ ಆಸ್ಪತ್ರೆಯಿಂದ ಫೋರೆನ್ಸಿಕ್ ತಜ್ಞರನ್ನು ಕಳಿಸಿ ಶವಪರೀಕ್ಷೆ ಮಾಡುವಂತೆ ಪತ್ರ ಕಳುಹಿಸಿದೆ. ಅವರು ಬಂದು ತನಿಖೆ ನಡೆಸುವ ಹೊತ್ತಿಗೆ ಸಂಜೆಯಾಗಿತ್ತು. ಅವರು ಏನು ವರದಿಯನ್ನು ಪೋಲಿಸರಿಗೆ ಸಲ್ಲಿಸಿದರು ಎಂಬುದು ನನಗೆ ತಿಳಿದಿಲ್ಲ. ಕೊಲೆ ಮಾಡಿ ಕಲ್ಲು ಕಟ್ಟಿ ನೀರಿನಲ್ಲಿ ಹಲವಾರು ದಿನಗಳು ಇದ್ದು ಜಲಚರಗಳು ತಿಂದು ಅಕರಾಳ ವಿಕರಾಳವಾಗಿದ್ದ ಶವದ ಪರೀಕ್ಷೆಯನ್ನೇ ವೈದ್ಯರು ಮಾಡಿದ್ದ ಸಂಗತಿ ನನ್ನ ಅನುಭವದ ಬುತ್ತಿಯಲ್ಲಿದೆ. ಹಾಗಿರುವಾಗ ಈ ಶವದ ಪರೀಕ್ಷೆಗೆ ವೈದ್ಯರು ಏಕೆ ಹಿಂಜರಿದರು ಎಂಬ ಬಗ್ಗೆ ಅಧಿಕೃತವಾಗಿ ನಾನು ಹೇಳಲು ನಾನು ವೈದ್ಯಕೀಯ ವಿಷಯಗಳ ತಜ್ಞನಲ್ಲವಾದ್ದರಿಂದ ಸಾಧ್ಯವಿಲ್ಲ. ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ನ್ಯಾಯಾಲಯಕ್ಕೆ ಶವತನಿಖಾ ವರದಿಯನ್ನು ದಾಖಲಿಸಿದ್ದ ಹೇಳಿಕೆಗಳು ಹಾಗೂ ನನ್ನ ಅನಿಸಿಕೆಗಳೊಂದಿಗೆ ಕಳುಹಿಸಿದೆ. ತನಿಖೆ ಕಾಲದಲ್ಲಿ ನನ್ನ ಜೊತೆಯೇ ಹಲವಾರು ಗಂಟೆಗಳ ಕಾಲ ಇರಬೇಕಾಗಿ ಬಂದಿದ್ದ ಗುಮಾಸ್ತ ಛಳಿಜ್ವರ ಬಂದು ಮೂರು ದಿನ ರಜಾ ಹಾಕಿದ್ದ. ಟಿವಿ ೯ರಲ್ಲಿ ಈ ಪ್ರಕರಣದ ಸುದ್ದಿಯನ್ನು ರಂಜಿತವಾಗಿ ತೋರಿಸಲಾಯಿತು. ಆ ಸುದ್ದಿ ಒಳ್ಳೆಯ ಮತ್ತು ಪ್ರಸಾರ ಮಾಡಬೇಕಾಗಿದ್ದ ರೀತಿಯಲ್ಲಿ ಇರಲಿಲ್ಲವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
     ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯಗಳು ರಚಿತವಾಗಿರುವುದರಿಂದ ಮೊದಲಿಗಿಂತ ಪರವಾಗಿಲ್ಲವೆಂಬಂತೆ ಪ್ರಕರಣಗಳು ಇತ್ಯರ್ಥವಾಗುತ್ತಿದೆ. ಈ ಘಟನೆ ನಡೆದ ಸ್ಥಳ ಬೆಂಗಳೂರು ಆಗಿದ್ದರಿಂದ ಅಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ನನಗೆ ಸಾಕ್ಷಿ ಹೇಳಿಕೆ ನೀಡಲು ಸಮನ್ಸ್ ಬಂದಿತು. ಹೇಳಿಕೆ ನೀಡಲು ಹೋದ ಸಂದರ್ಭದಲ್ಲಿ ಕಟಕಟೆಯಲ್ಲಿ ನಿಂತಿದ್ದ, ಸುಮಾರು ಎರಡು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪ್ರಥಮ ದರ್ಶನ ನನಗಾಯಿತು. ಹೇಳಿಕೆ ನೀಡುವ ಮುನ್ನ ಕಡತವನ್ನು ನೋಡಲು ಮತ್ತು ಚರ್ಚಿಸಲು ಸರ್ಕಾರಿ ವಕೀಲರನ್ನು ಭೇಟಿಯಾದ ಸಂದರ್ಭದಲ್ಲಿ ಯಾವ ಪಂಚರ ಸಮಕ್ಷಮದಲ್ಲಿ ನಾನು ಶವತನಿಖೆ ನಡೆಸಿದ್ದೆನೋ ಅವರೆಲ್ಲರೂ ತಮಗೇನೂ ಗೊತ್ತಿಲ್ಲವೆಂಬಂತೆ ಸಾಕ್ಷ್ಯ ಹೇಳಿದ್ದ ವಿಷಯ ತಿಳಿಯಿತು. ಪೋಲಿಸರು ಹೆಸರಿಸಿದ್ದ ಇತರ ಕೆಲವು ಸಾಕ್ಷಿಗಳೂ ಪ್ರತೀಕೂಲ ಹೇಳಿಕೆ ನೀಡಿದ್ದುದೂ ತಿಳಿಯಿತು. ಸರ್ಕಾರಿ ವಕೀಲರು 'ಮೃತಳ ತಂದೆ ಸರಿಯಿಲ್ಲ, ಪಾಪ, ಆ ಕಾಲೇಜು ಲೆಕ್ಚರರ್ ಎರಡು ವರ್ಷಗಳಿಂದ ಜೈಲಿನಲ್ಲಿರಬೇಕಾಗಿ ಬಂದಿದೆ' ಎಂದಾಗ ಪ್ರಕರಣ ಸಾಗುತ್ತಿದ್ದ ರೀತಿಯ ಕಲ್ಪನೆ ನನಗಾಗಿತ್ತು. ನಾನು ನನ್ನ ಹೇಳಿಕೆ ನೀಡಿ ನಾನು ಮಾಡಿದ ತನಿಖೆಯನ್ನು ಸಮರ್ಥಿಸಿಕೊಂಡು, ಆರೋಪಿಗಳ ಪರ ವಕೀಲರ ಅಡ್ಡಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಟ್ಟಿದ್ದೆ. ಮುಂದೇನಾಯಿತು ಎಂಬ ವಿಷಯ ನನಗೆ ತಿಳಿಯಲಿಲ್ಲ. ಪ್ರಿಯ ದೀಪಾ, ಮುಂದಿನ ಜನ್ಮದಲ್ಲಾದರೂ ನಿನಗೆ ಸುಖ, ನ್ಯಾಯ ಸಿಗಲಿ ಎಂದು ಹಾರೈಸುವೆ.
     ಪ್ರಪಂಚವನ್ನು ನೋಡುವ ನಮ್ಮ ದೃಷ್ಟಿ ಬದಲಾಗಬೇಕೆಂದು ತಿಳಿದವರು ಹೇಳುತ್ತಾರೆ. ಎಲ್ಲಾ ವಿಷಯದಲ್ಲೂ ಒಳ್ಳೆಯದನ್ನು ಕಾಣಬೇಕೆನ್ನುತ್ತಾರೆ. ಈ ಪ್ರಕರಣದಲ್ಲಿ ಒಳ್ಳೆಯ ಸಂಗತಿ ಹುಡುಕಲು ನಾನು ವಿಫಲನಾಗಿರುವೆ. ನನ್ನ ನೋಟದಲ್ಲೇ ಏನೋ ತಪ್ಪಿರಬೇಕು!
-ಕ.ವೆಂ.ನಾಗರಾಜ್.
************
ಹಿಂದಿನ ಅನುಭವ ಕಥನ - 'ಶವಗಳೊಡನೆ ಸಂಭಾಷಣೆ'ಗೆ ಲಿಂಕ್: http://kavimana.blogspot.in/2012/03/blog-post_26.html

ಸೋಮವಾರ, ಮಾರ್ಚ್ 26, 2012

ಶವಗಳೊಡನೆ ಸಂಭಾಷಣೆ


     ಸುಮಾರು ೧೦ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಕೊಣನೂರಿನ ಸಬ್ ಇನ್ಸ್‌ಪೆಕ್ಟರರಿಂದ ಫೋನು ಬಂದಿತು. ಹಿಂದಿನ ದಿನ ಕೇರಳಾಪುರದಲ್ಲಿ ಒಬ್ಬ ಹೆಣ್ಣುಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆಂದೂ, ಕೂಡಲೇ ಬಂದು ಶವತನಿಖೆ ನಡೆಸಿಕೊಡಬೇಕೆಂದೂ ಅವರು ಕೋರಿದ್ದರು. ಸರಿ, ಭಾನುವಾರದ ಕಥೆ ಮುಗಿಯಿತು ಎಂದು ಅಂದುಕೊಂಡು ಬಟ್ಟೆ ಹಾಕಿಕೊಂಡು ಜೀಪಿಗೆ ಕರೆಕಳುಹಿಸಿದೆ. ಗುಮಾಸ್ತರೊಬ್ಬರನ್ನು ಜೊತೆಗೆ ಕರೆದುಕೊಂಡು ಕೇರಳಾಪುರ ತಲುಪಿದಾಗ ಅಲ್ಲಿನ ಒಂದು ಮನೆಯ ಮುಂದೆ ಜನರ ದೊಡ್ಡ ಗುಂಪು ಕೂಡಿತ್ತು. ಪೋಲಿಸರು ಜನರನ್ನು ನಿಯಂತ್ರಿಸುತ್ತಿದ್ದರು. ನಾನು ಜೀಪಿನಿಂದ ಇಳಿದ ತಕ್ಷಣ ಜನರ ಗುಂಪು 'ಸಾಹೇಬರು ಬಂದರು' ಎನ್ನುತ್ತಾ ಅಕ್ಕ ಪಕ್ಕ ಸರಿದು ನನಗೆ ಮನೆಯ ಒಳಗೆ ಹೋಗಲು ದಾರಿ ಮಾಡಿಕೊಟ್ಟರು. ನಾನು ಮನೆಯ ಒಳಗೆ ಹೋದಾಗ ನನ್ನ ಹಿಂದೆ ಒಬ್ಬ ಪೋಲಿಸ್ ಪೇದೆ, ಗುಮಾಸ್ತ ಮತ್ತು ಒಬ್ಬ ಫೋಟೋಗ್ರಾಫರ್ ಬಂದರು. ನಾನು ಮನೆಯ ಒಳ ಕೊಠಡಿಗೆ ಹೋಗುತ್ತಾ ಬಾಗಿಲ ಪಕ್ಕದಲ್ಲಿ ನಿಂತಿದ್ದ ಒಬ್ಬ ಹೆಂಗಸಿಗೆ "ಎಲ್ಲಮ್ಮಾ?" ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟವನು ಗಕ್ಕನೆ ನಿಂತು ಹಿಂತಿರುಗಿದೆ. ನಾನು ಯಾರನ್ನು ವಿಚಾರಿಸಿ ಮುಂದೆ ಹೋಗಿದ್ದೆನೋ ಅದೇ ಹೆಣವಾಗಿತ್ತು. ಮನೆಯಲ್ಲಿ ನೀರವ ಮೌನ ಆವರಿಸಿತ್ತು. 
     ವಿಷಯ ಮುಂದುವರೆಸುವ ಮುನ್ನ ಕೆಲವು ಅಂಶಗಳನ್ನು ಓದುಗರ ಗಮನಕ್ಕೆ ತರುವುದು ಅಗತ್ಯವಾಗಿದೆ. ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟರು ಮತ್ತು ಮೇಲ್ಪಟ್ಟ ಅಧಿಕಾರಿಯಿಂದ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ಕೆಲವು ಪ್ರಕರಣಗಳನ್ನು ಯಾರ ಗಮನಕ್ಕೂ ಬರದಂತೆ ಮುಚ್ಚಿಹಾಕುವುದು, ಹಣದ ವಿನಿಮಯ, ರಾಜಕಾರಣಿಗಳ ಮಧ್ಯಪ್ರವೇಶದಿಂದ ರಾಜಿ ಮಾಡಿಕೊಂಡು ಬಿಡುವುದು, ಇತ್ಯಾದಿಗಳೂ ನಡೆಯುತ್ತವೆ. ಕೆಲವು ವೈದ್ಯರುಗಳೂ ಸಹ ಹಣದ ಪ್ರಭಾವದಿಂದ ಸುಳ್ಳು ಪೋಸ್ಟ್ ಮಾರ್ಟಮ್ ವರದಿ ಕೊಟ್ಟ ಪ್ರಕರಣಗಳೂ ಇಲ್ಲವೆನ್ನಲಾಗುವುದಿಲ್ಲ. ಪ್ರಕರಣ ಮುಚ್ಚಿಹಾಕಲು ಕೆಲವು ಪ್ರಕರಣಗಳಲ್ಲಿ ಪೋಲಿಸರ ಸಹಕಾರ ಸಹ ಇಲ್ಲವೆಂದು ಹೇಳಲಾಗುವುದಿಲ್ಲ. ಮುಖ್ಯವಾಗಿ ಪ್ರಕರಣ ಮುಚ್ಚಿಹಾಕುವಂತಹ ಪ್ರಸಂಗದಲ್ಲಿ ಪ್ರಮುಖ ಪಾತ್ರ ವಹಿಸುವುದು ರಾಜಕಾರಣ ಮತ್ತು ಹಣ ಎಂಬುದಂತೂ ಗೊತ್ತಿರುವ ಸತ್ಯ. ಈಗ ಇಷ್ಟು ಮಾಹಿತಿ ಸಾಕು. ಮೂಲ ವಿಷಯ ಮುಂದುವರೆಸುವೆ.
     ಎಲ್ಲರ ಗಮನ ನನ್ನ ಮೇಲಿತ್ತು. ನಾನು ಶವವನ್ನು, ಶವವಿದ್ದ ಸ್ಥಿತಿಯನ್ನು ಗಮನಿಸಿದೆ. ಬಾಗಿಲಿನ ಪಕ್ಕದಲ್ಲಿದ್ದ ತೊಲೆಯಿಂದ ಪ್ಲಾಸ್ಟಿಕ್ ಹಗ್ಗದಲ್ಲಿ ನೇತಾಡುತ್ತಿದ್ದ ಶವದ ಕಾಲುಗಳು ಮುಂಚಾಚಿ ಇನ್ನೇನು ನೆಲವನ್ನು ಸೋಕುವಂತಿತ್ತು. ನೇಣು ಹಾಕಿಕೊಳ್ಳುವವರು ಅಷ್ಟು ಕಡಿಮೆ ಎತ್ತರದಿಂದ ನೇಣು ಹಾಕಿಕೊಳ್ಳಲಾರರು ಎಂದು ನನ್ನ ಮನಸ್ಸು ಹೇಳುತ್ತಿತ್ತು. ನಾನು ಪರೀಕ್ಷಿಸಲು ಅನುಕೂಲವಾಗುವಂತೆ ಪೋಲಿಸ್ ಪೇದೆ ಶವವನ್ನು ಪಕ್ಕಕ್ಕೆ ಸರಿಸಿದ್ದರಿಂದ ಅಲ್ಲಾಡುತ್ತಿದ್ದ ಶವ ನೀವಂದುಕೊಂಡಿರುವುದು ಸರಿ ಎಂದು ಹೇಳುವಂತಿತ್ತು. ಶವದ ನಾಲಿಗೆ ಹೊರಚಾಚಿದ್ದು ಹಲ್ಲುಗಳಿಂದ ಕಚ್ಚಿಕೊಂಡಿದ್ದು, ಬಾಯಿಯಿಂದ ನೊದ್ಲೆ ಹೊರಬಂದಿತ್ತು. ತೊಲೆಯಿಂದ ನೆಲಕ್ಕೆ ಇದ್ದ ಅಂತರ ಸುಮಾರು ೭ ಅಡಿ ಇತ್ತು. ಹೆಣದ ಕುತ್ತಿಗೆಯ ಗಂಟಿಗೂ ತೊಲೆಗೂ ಇದ್ದ ಅಂತರ ಸುಮಾರು ಎರಡೂವರೆ ಅಡಿ ಇದ್ದು, ಕೆಳಗಿನ ಪಾದಕ್ಕೂ ನೆಲಕ್ಕೂ ಇದ್ದ ಅಂತರ ಸುಮಾರು ಒಂದೂವರೆ ಇಂಚು ಇತ್ತು. ತೊಲೆಗೆ ಮೂರು ಎಳೆಯಲ್ಲಿ ಸುತ್ತಿ ಹಗ್ಗವನ್ನು ಗಂಟು ಹಾಕಲಾಗಿತ್ತು. ಶವದ ಕುತ್ತಿಗೆಯಲ್ಲಿದ್ದ ಹಗ್ಗವೂ ಮೂರು ಎಳೆಯಿಂದ ಸುತ್ತಿ ಗಂಟು ಹಾಕಿದ್ದಾಗಿತ್ತು. ಆ ಸ್ಥಿತಿಯಲ್ಲಿ ಕೆಲವು ಫೋಟೋಗಳನ್ನು ಸ್ಥಳೀಯ ಫೋಟೋಗ್ರಾಫರನ ಸಹಾಯದಿಂದ ತೆಗೆಸಿದೆ. ಹೆಣದ ಫೋಟೋ ತೆಗೆಯಲು ಹೆದರುತ್ತಿದ್ದ ಅವನಿಗೆ ಗದರಿಸಿ ಧೈರ್ಯ ಹೇಳಬೇಕಾಯಿತು. ನಂತರದಲ್ಲಿ ಹೆಣವನ್ನು ಕೆಳಗೆ ಇಳಿಸಿ ಒಂದು ಚಾಪೆಯ ಮೇಲೆ ಮಲಗಿಸಿ ಹಲವು ಕೋನಗಳಿಂದ ಫೋಟೋ ತೆಗೆಸಿದೆ. ಕುತೂಹಲದಿಂದ ಗುಂಪು ಕೂಡಿದ್ದ ಜನರನ್ನು ಹೊರಕಳುಹಿಸಿ ಒಬ್ಬರು ಹೆಂಗಸನ್ನು ಕರೆಸಿ ಶವದ ಬಟ್ಟೆ ಸರಿಸಿಸಿ ದೇಹದಲ್ಲಿ ಏನಾದರೂ ಗಾಯಗಳಾಗಿವೆಯೇ, ಗಮನಿಸುವಂತಹ ಅಸಹಜ ಸಂಗತಿಗಳಿವೆಯೇ ಎಂಬುದನ್ನು ನೋಡಿದೆ. ಅದು ನನ್ನ ಕರ್ತವ್ಯವಾಗಿತ್ತು. ಕುತ್ತಿಗೆಯ ಬಲಭಾಗದಿಂದ ಗಂಟಲವರೆಗೆ ಸುಮಾರು ೧೦ ಇಂಚು ಉದ್ದ, ಅರ್ಧ ಇಂಚು ಆಳ ಕೊರೆದಿರುವ ಲಿಗೇಚರ್ ಮಾರ್ಕು ಇತ್ತು. ಕುತ್ತಿಗೆಯ ಎಡಭಾಗದಲ್ಲೂ ಸುಮಾರು ೯ ಇಂಚು ಉದ್ದ, ಅರ್ಧ ಇಂಚು ಆಳದ ಕೊರೆದ ಗುರುತು ಇತ್ತು. ಎರಡು ಕೈಗಳೂ ದೇಹಕ್ಕೆ ಅಂಟಿಕೊಂಡಂತೆ ಇದ್ದು ನೀಳವಾಗಿದ್ದವು. ಮರ್ಮಸ್ಥಾನಗಳಿಂದ ತ್ಯಾಜ್ಯ ಹೊರಬಂದಿರಲಿಲ್ಲ. ಬಲಗೈಯಲ್ಲಿ ಒಂದು ಕೇಸರಿ ಬಣ್ಣದ ಗಾಜಿನ ಬಳೆಯಿತ್ತು. ಘಟನೆ ನಡೆದ ಸ್ಥಳಸಹಿತ ಪೂರ್ಣ ಮನೆಯ ಸ್ಥಿತಿ ಗಮನಿಸಿದೆ. ಮುಂಭಾಗದ ಕೊಠಡಿಯಲ್ಲಿ ಒಂದೆರಡು ಕೇಸರಿ ಬಳೆಗಳ ಚೂರುಗಳಿದ್ದುದನ್ನು ಗಮನಿಸಿದೆ. ಮೃತೆ ಸುಮಾರು ೨೨ ವರ್ಷದವಳಾಗಿದ್ದು ಮದುವೆಯಾಗಿ ಕೇವಲ ೯ ತಿಂಗಳಾಗಿತ್ತು. ಮದುವೆಗೆ ಮುನ್ನ ಆಗಿದ್ದ ಮಾತುಕಥೆಯಂತೆ ಹುಡುಗಿಯ ಮನೆಯವರು ೧೦೦ ಗ್ರಾಮ್ ಚಿನ್ನ ಮತ್ತು ರೂ. ೧,೦೦,೦೦೦/- ನಗದು ಕೊಡಬೇಕಾಗಿದ್ದು, ಅವರು ೧೦೦ ಗ್ರಾಮ್ ಚಿನ್ನ ಮತ್ತು ೭೫೦೦೦/- ಹಣ ಕೊಟ್ಟಿದ್ದರಂತೆ. ಉಳಿದ ರೂ. ೨೫೦೦೦/- ಕೊಡಲು ಒತ್ತಾಯಿಸಿ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರಂತೆ. ಮೃತಳ ತಾಯಿ, ತಮ್ಮರೂ ಸೇರಿದಂತೆ ಕೆಲವರ ಹೇಳಿಕೆ ಪಡೆದೆ. ಪಂಚರ ಸಮಕ್ಷಮದಲ್ಲಿ ವಿವರವಾದ ಶವತನಿಖಾ ವರದಿ ಬರೆಸಿದೆ. ಅಗತ್ಯದ ಇತರ ನಿಗದಿತ ನಮೂನೆಗಳಲ್ಲಿ ಮಾಹಿತಿ ಸಿದ್ಧಪಡಿಸಿ, ಶವಪರೀಕ್ಷೆ ನಡೆಸಿ ವರದಿ ಕೊಡಲು ಕೇರಳಾಪುರದ ಸರ್ಕಾರೀ ವೈದ್ಯಾಧಿಕಾರಿಗೆ ಸೂಚಿಸಿದೆ. ಮುಂದಿನ ತನಿಖೆ ನಡೆಯಿಸಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿ, ಶವತನಿಖಾ ವರದಿಯನ್ನು ನನ್ನ ಅನಿಸಿಕೆಯೊಂದಿಗೆ ಜ್ಯುಡಿಶಿಯಲ್ ನ್ಯಾಯಾಧೀಶರಿಗೆ ಕಳಿಸಿದೆ. 
     ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬವಾದಷ್ಟೂ ನ್ಯಾಯಕ್ಕೆ ಅನ್ಯಾಯವಾಗುತ್ತದೆ ಎಂಬುದು ಸತ್ಯ. ವಿಳಂಬಕ್ಕೆ ನಾನಾ ಕಾರಣಗಳಿರುತ್ತವೆ. ಈ ಪ್ರಕರಣದಲ್ಲಿ ಸುಮಾರು ಮೂರು ವರ್ಷಗಳ ನಂತರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನನಗೆ ಸಾಕ್ಷಿ ಹೇಳಲು ಸಮನ್ಸ್ ಬಂದಿತ್ತು. ಸಾಕ್ಷಿ ಹೇಳಿಕೆ ಕೊಟ್ಟಿದ್ದೆ. ಸರ್ಕಾರಿ ವಕೀಲರು ಖಾಸಗಿಯಾಗಿ ನನಗೆ ದೂರು ಅರ್ಜಿದಾರರು ಮತ್ತು ಆರೋಪಿಗಳು ರಾಜಿಯಾಗಿದ್ದಾರೆಂದು ಹೇಳಿದ್ದರು. ಕೊನೆಯಲ್ಲಿ ನ್ಯಾಯಾಲಯದ ತೀರ್ಪು ಏನಾಯಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. 
     ನನ್ನ ಸೇವಾವಧಿಯಲ್ಲಿ ಇಂತಹ ಸುಮಾರು ೭೦-೮೦ ಶವತನಿಖೆಗಳನ್ನು ಮಾಡಿದ್ದೇನೆ. ಅವುಗಳು ಹೇಳಿದ ದಾರುಣ ಕಥೆಗಳಿಗೆ ಕಿವಿ ಕೊಟ್ಟಿದ್ದೇನೆ, ಅನುಭವಿಸಿದ ನೋವುಗಳನ್ನು, ಯಾತನೆಗಳನ್ನು ವಿವರಿಸಿದಾಗ ಮರುಗಿ ಒಳಗೇ ಕಣ್ಣೀರು ಹಾಕಿದ್ದೇನೆ. ನನ್ನ ಮಿತಿಯಲ್ಲಿ ಅವು ಹೇಳಿದ ಸಂಗತಿಗಳನ್ನು ದಾಖಲಿಸಿಕೊಂಡು, ನನ್ನ ಕೈಲಾದಷ್ಟು ನಿಮಗೆ ನ್ಯಾಯ ಒದಗಿಸಲು ಪ್ರಯತ್ನಿಸುವೆನೆಂದು ಆಶ್ವಾಸನೆ ಕೊಟ್ಟಿದ್ದೇನೆ. ಹಾಗೂ ನ್ಯಾಯ ಸಿಗದಿದ್ದರೆ ಅದರಲ್ಲಿ ನನ್ನ ಪಾತ್ರವಿರುವುದಿಲ್ಲವೆಂದೂ ಒಪ್ಪಿಸಿದ್ದೇನೆ. ಶವತನಿಖೆಗಳನ್ನು ನಡೆಸಿದ ಸಂದರ್ಭಗಳಲ್ಲಿ ದಾರುಣ ಅಂತ್ಯವನ್ನು ಕಣ್ಣಾರೆ ಕಂಡು ಒಂದೆರಡು ದಿನಗಳು ಸರಿಯಾಗಿ ಊಟ, ತಿಂಡಿ ಮಾಡಲಾಗದೆ ಇದ್ದುದೂ ಇದೆ. ಅಗಲಿದ ಆತ್ಮಗಳೇ, ನಿಮ್ಮನ್ನು ನೆನೆಸಿಕೊಂಡು, ನಿಮಗೆ ಸದ್ಗತಿ ಕೋರುವ ಸಲುವಾಗಿ ಈ ಕೆಲವು ಸಾಲುಗಳನ್ನು ಬರೆದಿರುವೆ.  
-ಕ.ವೆಂ.ನಾಗರಾಜ್.    

ಶುಕ್ರವಾರ, ನವೆಂಬರ್ 25, 2011

ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -2

     ಈಗ ಘಟನೆಯ ವಿಷಯಕ್ಕೆ ನೇರವಾಗಿ ಬರುತ್ತೇನೆ. ಅದು ಫೆಬ್ರವರಿ ತಿಂಗಳಿನ ಒಂದು ದಿನ. ಮಂಗಳೂರು ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದ ಸಂದರ್ಭ. ಬೆಳ್ತಂಗಡಿ ತಾಲ್ಲೂಕು ಆಡಳಿತದ ವತಿಯಿಂದಲೂ ಧರ್ಮಸ್ಥಳದಲ್ಲಿ ಮಹಾರಾಷ್ಟ್ರ, ಒರಿಸ್ಸಾ ಮತ್ತು ಅಸ್ಸಾಂ ರಾಜ್ಯಗಳಿಂದ ಬಂದ ಕಲಾವಿದರಿಂದ ವೈವಿಧ್ಯಮಯ 'ಸಾಂಸ್ಕೃತಿಕ ರಸಸಂಜೆ' ಕಾರ್ಯಕ್ರಮ ಏರ್ಪಾಡಾಗಿತ್ತು. ಉತ್ಸವ ಸಮಿತಿಯ ಅಧ್ಯಕ್ಷನಾಗಿದ್ದ ನಾನು ಪೂರ್ವಭಾವಿಯಾಗಿ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆ ನೋಡಿಕೊಂಡಿದ್ದೆ.  ಆದಿನ ಕಛೇರಿಯ ತುರ್ತು ಕೆಲಸಗಳನ್ನು ಮುಗಿಸಿ ಸಂಜೆ 5 ಘಂಟೆಯ ವೇಳೆಗೆ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಕಾರ್ಯಕ್ರಮದ ಅಂತಿಮ ವ್ಯವಸ್ಥೆ ನೋಡಲು ಹೊರಟೆ. ಸುಮಾರು 6 ಘಂಟೆಯ ಹೊತ್ತಿಗೆ ಧರ್ಮಸ್ಥಳದ ಗ್ರಾಮಲೆಕ್ಕಿಗರಿಗೆ ಒಂದು ದೂರವಾಣಿ ಕರೆ ಬಂತು. (ನನ್ನಲ್ಲಿ ಮೊಬೈಲ್ ಫೋನ್ ಇರಲಿಲ್ಲ). ಅದು ಕಛೇರಿಯ ದ್ವಿತೀಯ ದರ್ಜೆ ಗುಮಾಸ್ತ ವಿನಾಯಕ ಮತ್ತು ಶಿರಸ್ತೇದಾರ್ ಗೋಪಾಲನಾಯಕರು (ಹೆಸರುಗಳನ್ನು ಬದಲಿಸಿದೆ) ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತದ ಬಲೆಗೆ ಬಿದ್ದಿದ್ದ ಸುದ್ದಿಯಾಗಿತ್ತು. ನನಗೂ ಅಲ್ಲಿಗೆ ಬರಲು ಲೋಕಾಯುಕ್ತ ಇನ್ಸ್ ಪೆಕ್ಟರರು ಫೋನಿನ ಮೂಲಕ ತಿಳಿಸಿದರು. ಕಾರ್ಯಕ್ರಮ ನಡೆಯುತ್ತಿರುವುದರಿಂದ ಮುಗಿಸಿ ಬರುವುದಾಗಿ ಹೇಳಿದೆ. ನಾನು ಬೆಳ್ತಂಗಡಿ ಬಿಟ್ಟ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಪೋಲಿಸರು ಕಛೇರಿಯಲ್ಲಿದ್ದು, ವಿಷಯ ತಿಳಿದೇ ನಾನು ಅಲ್ಲಿಂದ ಪರಾರಿಯಾಗಿದ್ದೆನೆಂದು ಸುದ್ದಿ ಹಬ್ಬಿತ್ತು. ನನ್ನನ್ನೂ ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರವಿದೆಯೆಂದೂ, ನಾನು ಕಛೇರಿಗೆ ಬರಬಾರದೆಂದು ಇನ್ನೊಬ್ಬ ನೌಕರರು ಕಛೇರಿಯ ಹೊರಗೆ ಬಂದು ಇತರರಿಗೆ ತಿಳಿಯದಂತೆ ಫೋನು ಮಾಡಿದ್ದರು. ನಿಜಕ್ಕೂ ನನಗೆ ಗಾಬರಿಯಾಗಿತ್ತು. ಪ್ರಕರಣ ಏನೆಂದೇ ಗೊತ್ತಿರದಿದ್ದ ನನ್ನನ್ನು ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಬಹುದೆಂದು ಅಂಜಿದ್ದೆ. ಏಕೆಂದರೆ ಇಂತಹ ಪ್ರಕರಣಗಳನ್ನು ನಾನು ಕಂಡಿದ್ದೆ. ನನ್ನ ಜಂಘಾಬಲವೇ ಉಡುಗಿತ್ತು. ಗ್ರಾಮಲೆಕ್ಕಿಗರ ಮೊಬೈಲ್ ಫೋನಿನಿಂದ ಜಿಲ್ಲಾಧಿಕಾರಿಯವರಿಗೆ ವಿಷಯ ತಿಳಿಸಿದೆ. ಯಾವ ಕಾರಣಕ್ಕಾಗಿ ನನ್ನ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೋ ಅನ್ನುವುದೂ ತಿಳಿಯದೆಂದೂ, ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಬಹುದೆಂಬ ಆತಂಕವನ್ನೂ, ತನ್ನನ್ನು ಬೆಳ್ತಂಗಡಿಗೆ ಬರಹೇಳಿರುವುದನ್ನೂ ಅವರ ಗಮನಕ್ಕೆ ತಂದೆ. ಜಿಲ್ಲಾಧಿಕಾರಿಯವರಿಗೆ ನನ್ನ ಬಗ್ಗೆ ವಿಶ್ವಾಸವಿತ್ತು. ಅವರು ಅಲ್ಲಿಗೆ ಹೋಗದಿರಲು ಸಲಹೆ ಕೊಟ್ಟರು. ಅಸಿಸ್ಟೆಂಟ್ ಕಮಿಷನರ್ ಅವರಿಗೂ (ನಂತರದಲ್ಲಿ ಅವರು ಶಿವಮೊಗ್ಗದಲ್ಲೂ ನನಗೆ ಜಿಲ್ಲಾಧಿಕಾರಿಯಾಗಿದ್ದರು, ಪ್ರಸ್ತುತ ಹುಬ್ಬಳ್ಳಿಯಲ್ಲಿ ಜೆಸ್ಕಾಮ್ ನಿರ್ದೇಶಕರಾಗಿದ್ದಾರೆ) ನನ್ನ ಆತಂಕವನ್ನು ಗಮನಕ್ಕೆ ತಂದೆ. ನನ್ನ ಕುರಿತು ಒಳ್ಳೆಯ ಅಭಿಪ್ರಾಯವಿದ್ದ ಅವರು ಜಿಲ್ಲಾದಿಕಾರಿಯವರೊಂದಿಗೂ ಮಾತನಾಡಿದರು ಮತ್ತು ನನ್ನನ್ನು ಅಂದು ಪುತ್ತೂರಿಗೆ ಬಂದು ಉಳಿದುಕೊಳ್ಳಲು ತಿಳಿಸಿದರು. ಅಂದು ರಾತ್ರಿ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಉಳಿದೆ. (ಸುಮಾರು ಹತ್ತು-ಹನ್ನೆರಡು ಸಲ) ಬೆಳ್ತಂಗಡಿಗೆ ಬರುವಂತೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಬೆದರಿಕೆ ಧ್ವನಿಯಲ್ಲಿ ಪದೇ ಪದೇ ಫೋನು ಮಾಡುತ್ತಿದ್ದರು. ನಾನು ಕಾರ್ಯಕ್ರಮ ಮುಗಿದಿಲ್ಲವೆಂದು ಸಬೂಬು ಹೇಳುತ್ತಾ ಇದ್ದೆ. ಮಹಜರ್, ಹೇಳಿಕೆ, ಇತ್ಯಾದಿಗಳನ್ನು ಮುಗಿಸುವಾಗ ರಾತ್ರಿ 8-30 ಘಂಟೆಯಾಗಿತ್ತೆಂದು ತಿಳಿಯಿತು. ಅಂದು ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲೆ ಉಳಿದಿರುವ ವಿಷಯವೂ ತಿಳಿಯಿತು. ಬಹುಷಃ ಅವರು ನನಗಾಗಿ ಕಾದಿದ್ದರು. ನನಗೆ ಅಂದು ರಾತ್ರಿಯೆಲ್ಲಾ ನಿದ್ದೆ ಬಂದಿರಲಿಲ್ಲ. ಆತಂಕ, ದುಗುಡದಲ್ಲೇ ಕಳೆದಿದ್ದೆ. ಮರುದಿನ ಬೆಳಿಗ್ಗೆ 11 ಘಂಟೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಬಿಟ್ಟುಹೋದ ನಂತರದಲ್ಲಿ ನಾನು ಬೆಳ್ತಂಗಡಿಗೆ ಹೋದೆ. ಯಾವುದೇ ವಾಹನ ಎದುರಿಗೆ ಬಂದರೂ ಅದು  ಲೋಕಾಯುಕ್ತ ಅಧಿಕಾರಿಗಳು ಇರುವ ವಾಹನವೆಂದೇ ನನಗೆ ಭಾಸವಾಗುತ್ತಿತ್ತು.

     ನಾನು ಕಛೇರಿಯಲ್ಲೂ ಹೆಚ್ಚು ಹೊತ್ತು ಕುಳಿತಿರಲಾಗದೆ ತುರ್ತು ಕಾಗದ ಪತ್ರಗಳನ್ನು ನೋಡಿ ಹೊರಡುವವನಿದ್ದೆ. ಪ್ರಕರಣದ ಬಗ್ಗೆ ಗೊತ್ತಿದ್ದ ನೌಕರನೊಬ್ಬರಿಂದ ವಿವರ ತಿಳಿದೆ. ಅಷ್ಟರಲ್ಲಿ ಲೋಕಾಯುಕ್ತ ಕಛೇರಿಯ ಒಬ್ಬ ನೌಕರರು ಬಂದು ಪ್ರಕರಣದ ಕಡತವನ್ನು ನನ್ನ ಸ್ವೀಕೃತಿ ಪಡೆದು ಹಿಂತಿರುಗಿಸಿದರು. ನಾನು ಕೂಡಲೇ ಲೋಕಾಯುಕ್ತ ಕಛೇರಿಗೆ ಹೋಗಿ ಎಸ್.ಪಿ.ಯವರನ್ನು ಕಾಣಬೇಕೆಂದು ಹೇಳಿದರು. ಅದೇ ಸಮಯಕ್ಕೆ ನನಗೆ ದೂರವಾಣಿಯಲ್ಲೂ ಸಂಪರ್ಕಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ 'ನಾನು ಪಾತಾಳದಲ್ಲಿ ಅಡಗಿದ್ದರೂ ಎಳೆದು ತೆಗೆಯುತ್ತೇನೆಂದು' ಬೆದರಿಸಿದ್ದರು.  ನನ್ನ ಮಗಳ ಮದುವೆ ಸದ್ಯದಲ್ಲೇ ಮಾಡಬೇಕಿತ್ತು. ನನಗೇನಾದರೂ ತೊಂದರೆಯಾದರೆ ನನ್ನ ಮಕ್ಕಳ ಭವಿಷ್ಯಕ್ಕೂ ತೊಂದರೆ ಆಗಬಹುದಿತ್ತು. ಮಿಗಿಲಾಗಿ ನನ್ನ ಬಗ್ಗೆ ಸದಭಿಪ್ರಾಯ ಹೊಂದಿದ್ದ ಕುಟುಂಬದವರು, ಬಂಧುಗಳು, ಮಿತ್ರರು, ಇತರರ ಎಲ್ಲರ ಮುಂದೆ ನಾನು ತಲೆ ತಗ್ಗಿಸುವಂತಹ ಪರಿಸ್ಥಿತಿ ಬರುತ್ತಿತ್ತು. ಹಾಗೇನಾದರೂ ಆದರೆ ಸಾಯುವುದೇ ಮೇಲೆಂದು ಅಂದುಕೊಂಡಿದ್ದೆ. ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬದವರ ಗತಿಯೇನು ಎಂದೂ ಚಿಂತಿತನಾಗಿದ್ದೆ. ಆದರೆ ಮರ್ಯಾದೆ ಕಳೆದುಕೊಂಡು ಬದುಕುವ ಧೈರ್ಯ ಭಾವಜೀವಿಯಾದ ನನಗೆ ಇರಲಿಲ್ಲ. ಬೆಳ್ತಂಗಡಿಯಲ್ಲಿ ಆಗ ರಮೇಶಚಂದ್ರ (ಹೆಸರು ಬದಲಿಸಿದೆ) ಅನ್ನುವವರು ಪೋಲಿಸ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರೂ ಒಬ್ಬರೇ ಇದ್ದು, ನಾನೂ ಸಹ ಬೆಳ್ತಂಗಡಿಯಲ್ಲಿ ಒಬ್ಬನೇ (ಹಾಸನದಲ್ಲಿ ನನ್ನ ಕುಟುಂಬವಿತ್ತು) ಇದ್ದುದರಿಂದ ರಾತ್ರಿ ಹೊತ್ತು ಪ್ರವಾಸಿ ಮಂದಿರದಲ್ಲಿ ಒಟ್ಟಿಗೇ ಊಟ ತರಿಸಿಕೊಂಡು ಕಷ್ಟ-ಸುಖ ಮಾತನಾಡಿಕೊಳ್ಳುತ್ತಿದ್ದೆವು. ಅವರಿಗೆ ನಾನು ಎಂಥವನು ಎಂಬ ಬಗ್ಗೆ ಗೊತ್ತಿತ್ತು. ಅದೃಷ್ಟವಶಾತ್ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮತ್ತು ಅವರು ಒಂದೇ ಬ್ಯಾಚಿನವರಾಗಿದ್ದು ಮಿತ್ರರಾಗಿದ್ದರು. ಅವರು ದೂರವಾಣಿ ಮೂಲಕ ಲೋಕಾಯುಕ್ತ ಇನ್ಸ್‌ಪೆಕ್ಟರರ ಹತ್ತಿರ ಮಾತನಾಡಿ ನನ್ನನ್ನು ಸುಖಾಸುಮ್ಮನೆ ಸಿಕ್ಕಿಸಬಾರದೆಂದೂ, ನಂಬಿಕೆಯಿಂದ ನನ್ನನ್ನು ಲೋಕಾಯುಕ್ತ ಕಛೇರಿಗೆ ಕಳುಹಿಸಿಕೊಡುವುದಾಗಿಯೂ ಹೇಳಿ ನನ್ನ ಸ್ವಭಾವದ ಬಗ್ಗೆ ವಿವರಿಸಿದ್ದರು. ನನಗೆ ಸ್ವಲ್ಪ ಹಣವನ್ನೂ ತೆಗೆದುಕೊಂಡು ಹೋಗಿ ಅಲ್ಲಿಗೆ ತಲುಪಿಸಲು ಸಲಹೆ ಕೊಟ್ಟರು. 'ಇಂದಿನ ಪರಿಸ್ಥಿತಿ ಹಾಗಿದೆ, ಉಳಿದುಕೊಳ್ಳಲು ಹೀಗೆ ಮಾಡಬೇಕಾದ ಅನಿವಾರ್ಯತೆಯಿದೆ' ಎಂದು ನನ್ನನ್ನು ಒಪ್ಪಿಸಿದ್ದರು. ನನಗೂ 'ಬದುಕ'ಬೇಕಿತ್ತು. ಎರಡು ದಿನಗಳ ನಂತರ ಲೋಕಾಯುಕ್ತ ಕಛೇರಿಗೆ ನಾನು ಬರಬೇಕೆಂದು ನನಗೆ ದೂರವಾಣಿಯಲ್ಲಿ ತಿಳಿಸಲಾಯಿತು. ಪ್ರಕರಣದ ಪೂರ್ಣ ವಿವರ ತಿಳಿಸುತ್ತಾ ಅದರಲ್ಲಿ ನನ್ನ ಪಾತ್ರವೇನೂ ಇರದ ಬಗ್ಗೆ ವಿಷದೀಕರಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಇಂತಹ ಸನ್ನಿವೇಶದಲ್ಲಿ ತನಗೆ ಕಡಬ ಮತ್ತು ಬೆಳ್ತಂಗಡಿ ಎರಡೂ ಕಡೆಯ ಕೆಲಸಗಳನ್ನು ನೋಡಿಕೊಳ್ಳುವುದು ಕಷ್ಟವೆಂದೂ, ಯಾರಾದರೂ ತಹಸೀಲ್ದಾರರನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆಯಲು ಕೋರಿಕೊಂಡೆ. ಜಿಲ್ಲಾಧಿಕಾರಿಯವರೂ ಸಹ ಲೋಕಾಯುಕ್ತ ಎಸ್.ಪಿ.ಯವರೊಂದಿಗೆ ಮಾತನಾಡಿ 'ಅನಗತ್ಯವಾಗಿ ತಹಸೀಲ್ದಾರರನ್ನು ಸಿಕ್ಕಿಸಬಾರದೆಂದೂ, ಅವರದು ನಿಜವಾಗಿಯೂ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ತಮ್ಮ ಅಭ್ಯಂತರವಿಲ್ಲ'ವೆಂದೂ ಹೇಳಿದ್ದರು. ಆ ನಾಲ್ಕು ದಿನಗಳಲ್ಲಿ ನಾನು ಅನುಭವಿಸಿದ ಮಾನಸಿಕ ಯಾತನೆ ನನಗೆ ಮಾತ್ರ ಗೊತ್ತು. ಊಟ, ತಿಂಡಿ ಸೇರುತ್ತಿರಲಿಲ್ಲ, ನಿದ್ದೆ ಬರುತ್ತಿರಲಿಲ್ಲ. ನಾನು ಕಡಬದ ವಿಶೇಷ ತಹಸೀಲ್ದಾರನೂ ಆಗಿದ್ದರಿಂದ ನನ್ನ ವಾಸ್ತವ್ಯ ಸುಬ್ರಹ್ಮಣ್ಯದಲ್ಲಿತ್ತು. ಸಂಜೆ ಸುಬ್ರಹ್ಮಣ್ಯ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಈ ಪರಿಸ್ಥಿತಿಯಿಂದ ಪಾರುಮಾಡೆಂದು ಮನಸ್ಸಿನಲ್ಲೇ ಧ್ಯಾನಿಸುತ್ತಾ ಗಂಟೆಗಟ್ಟಲೆ ಕುಳಿತಿರುತ್ತಿದ್ದೆ. ಅದು 'ನಿಜವಾದ ಧ್ಯಾನ'ವಾಗಿತ್ತು, ಏಕೆಂದರೆ ಈ ವಿಚಾರ ಬಿಟ್ಟು ಬೇರೆ ಯಾವುದೇ ಸಂಗತಿ ನನ್ನ ತಲೆಯಲ್ಲಿರಲಿಲ್ಲ!
     ಒಂದು ಜಮೀನಿನ ಭೂಪರಿವರ್ತನೆಗೆ ಸಂಬಂಧಿಸಿದ ಪ್ರಕರಣ ಅದಾಗಿತ್ತು. ಇದರಲ್ಲಿ ತಹಸೀಲ್ದಾರರ ಗಮನಕ್ಕೇ ಬಾರದಂತೆ ಶಿರಸ್ತೇದಾರರು ಅರ್ಜಿ ಸ್ವೀಕರಿಸ್ದಿ, ಗುಮಾಸ್ತರಿಗೆ ನೇರವಾಗಿ ನೀಡಿದ್ದಲ್ಲದೆ, ಕೆಲವು ಆಕ್ಷೇಪಣೆಗಳನ್ನು ಹಾಕಿ ತಾವೇ 'ತಹಸೀಲ್ದಾರರ ಪರವಾಗಿ' ಎಂದು ಸಹಿ ಮಾಡಿದ್ದರು. ಭೂ ಪರಿವರ್ತನಾ ಶುಲ್ಕ ಕಟ್ಟಿಸಲು (ರೂ.55/-) ನನ್ನ ಆದೇಶಕ್ಕೆ ಇಟ್ಟಿದ್ದರು. ನನ್ನ ಗಮನಕ್ಕೇ ಬಾರದಂತೆ ನಡವಳಿಕೆಗಳನ್ನು ನಡೆಸಿದ್ದ ಬಗ್ಗೆ ತಿಳಿಯುವ ಸಲುವಾಗಿ 'ಚರ್ಚಿಸಿರಿ' ಎಂದು ಬರೆದಿದ್ದೆ. ಶಿರಸ್ತೇದಾರರು ಬಂದು 'ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದೂ, ಕ್ಷಮಿಸಬೇಕೆಂದೂ' ಕೋರಿದ್ದರ ಮೇರೆಗೆ ಎಚ್ಚರಿಕೆ ನೀಡಿ 'ಚರ್ಚಿಸಿದೆ, ಒಪ್ಪಿದೆ' ಎಂದು ಅದೇ ದಿನ ಆದೇಶಿಸಿದ್ದೆ. (ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಿದ್ದರೆ ನಾನು ಬರೆದ 'ಚರ್ಚಿಸಿ' ಷರಾ ಲಂಚ ಪಡೆಯುವ ಸಲುವಾಗಿ ಎಂದು ವಾದಿಸಲು ಅವಕಾಶವಿತ್ತು.) ಇದಾಗಿ ಸುಮಾರು ಇಪ್ಪತ್ತು ದಿನಗಳ ನಂತರ ಅವರುಗಳು ಸಿಕ್ಕಿಹಾಕಿಕೊಂಡಿದ್ದರು. ಬಲೆಗೆ ಸಿಕ್ಕಿಸುವ ಮುನ್ನ ರಹಸ್ಯವಾಗಿ ಗುಮಾಸ್ತರ, ಶಿರಸ್ತೇದಾರರ ಸಂಭಾಷಣೆಗಳನ್ನು ಧ್ವನಿಮುದ್ರಿಸಿಕೊಂಡಿದ್ದರಂತೆ. ನನ್ನನ್ನೂ ಕಂಡು ಮಾತನಾಡುವಂತೆ ದೂರುದಾರರಿಗೆ ತಿಳಿಸಿದ್ದರಂತೆ. ಆದರೆ ಹಿಂದಿನ ಎರಡು ದಿನಗಳು ನಾನು ಸಾಂದರ್ಭಿಕ ರಜೆಯಲ್ಲಿದ್ದರಿಂದ ಅವರಿಗೆ ನನ್ನನ್ನು ಸಂಪರ್ಕಿಸಲಾಗಿರಲಿಲ್ಲ. ಬಹುಷಃ ಅವರು ನನ್ನನ್ನು ಕಂಡಿದ್ದರೆ ನಾನು ಕಡತ ತೆಗೆಯಿಸಿ ಇತ್ಯರ್ಥ ಪಡಿಸಿರುತ್ತಿದ್ದೆನೇನೋ! ಆಗ ಇಂತಹ ಪ್ರಸಂಗ ಎದುರಾಗದೇ ಇದ್ದಿರಬಹುದಿತ್ತೋ ಏನೋ! ನಾನು ಅಂದು ಕಛೇರಿಯಿಂದ ಧರ್ಮಸ್ಥಳಕ್ಕೆ ಹೊರಟ ಸಮಯದಲ್ಲೇ ಲೋಕಾಯುಕ್ತ ಅಧಿಕಾರಿಗಳು ಕಛೇರಿಯಲ್ಲಿದ್ದು, (ಅವರು ಬಂದಿದ್ದ ವಿಷಯ ನನಗೆ ಗೊತ್ತಿರಲಿಲ್ಲ) ನಾನು ಹೊರಡುವುದು 2-3 ನಿಮಿಷಗಳು ತಡವಾಗಿದ್ದರೂ ನನಗೆ ತೊಂದರೆಯಾಗುವ ಎಲ್ಲಾ ಸಂಭವಗಳೂ ಇದ್ದವು. ಧರ್ಮಸ್ಥಳ ಮಂಜುನಾಥನೇ ನನ್ನನ್ನು ಕಾಪಾಡಿರಬೇಕು! ದೂರು ಅರ್ಜಿದಾರರು ಗುಮಾಸ್ತರಿಗೆ ರೂ. 6000/- ಹಣ ಕೊಟ್ಟಿದ್ದರು. ಸೋಡಿಯಂ ಕಾರ್ಬೋನೇಟ್ ಪುಡಿ ಬೆರೆಸಿದ ನೀರಿನಲ್ಲಿ ಅವರ ಕೈ ಅದ್ದಿಸಿದಾಗ ಅದು ನೇರಳೆ ಬಣ್ಣಕ್ಕೆ ತಿರುಗಿತ್ತು. ಅಂಗಿಯ ಜೇಬಿನಲ್ಲಿ ಇಟ್ಟುಕೊಂಡಿದ್ದ ಆ ಹಣ ಮತ್ತು ಅಂಗಿಯನ್ನೂ ವಶಪಡಿಸಿಕೊಂಡರು. ಅವರ ಹತ್ತಿರ ಈ ಹಣವಲ್ಲದೆ ಇನ್ನೂ ರೂ. 3930/- ಹಣ ಇದ್ದು ಆ ಪೈಕಿ ರೂ.30/- ವಾಪಸು ನೀಡಿ 3900/- ಅನ್ನೂ ಜಪ್ತಿ ಮಾಡಿಕೊಂಡಿದ್ದರು. ಶಿರಸ್ತೇದಾರರ ಬಳಿ ರೂ.2750/- ಮತ್ತು ಅವರ ಮೇಜಿನ ಡ್ರಾಯರಿನಲ್ಲಿ ರೂ. 1000/- ಇದ್ದು ಆ ಪೈಕಿ ರೂ.150/- ಅನ್ನು ಹಿಂತಿರುಗಿಸಿ ರೂ. 3600/- ಅನ್ನು ವಶಪಡಿಸಿಕೊಂಡರು. ಗುಮಾಸ್ತರಿಗೆ ಸ್ವ ಇಚ್ಛಾ ಹೇಳಿಕೆ ಬರೆದುಕೊಡಲು ಇನ್ಸ್‌ಪೆಕ್ಟರ್ ತಿಳಿಸಿದಾಗ ಅವರು ರಾಷ್ಟ್ರೀಯ ಉಳಿತಾಯ ಪತ್ರ ಖರೀದಿ ಸಲುವಾಗಿ ಹಣ ಪಡೆದಿತ್ತೆಂದೂ, ಅಂಚೆ ಕಛೇರಿಯ ಸಮಯವಾಗಿದ್ದರಿಂದ ಮರುದಿನ ಖರೀದಿಸುವ ಸಲುವಾಗಿ ಹಣ ಇಟ್ಟುಕೊಂಡಿದ್ದೆಂದು ಬರೆದುಕೊಟ್ಟರು. ಇನ್ಸ್‌ಪೆಕ್ಟರರು ಆ ಹೇಳಿಕೆ ಹರಿದು ಹಾಕಿ 'ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆನೆಂದು ಬರೆದುಕೊಡು, ನಿನಗೆ ಅನುಕೂಲವಾಗುತ್ತದೆ' ಎಂದು ಸಲಹೆ ಕೊಟ್ಟಿದ್ದರು. (ಈ ಎಲ್ಲಾ ಸಂಗತಿಗಳು ನನಗೆ ನಂತರ ಕಛೇರಿಯ ನೌಕರರು ಮತ್ತು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದದ್ದು). ಆದರೆ ಪುನಃ ಗುಮಾಸ್ತರು ಮೊದಲಿನ ರೀತಿ ಬರೆದಿದ್ದಂತೆಯೇ ಬರೆದಾಗ ಇನ್ಸ್‌ಪೆಕ್ಟರ್ ಸಿಟ್ಟಿಗೆದ್ದು ಗುಮಾಸ್ತರ ಕಪಾಳಕ್ಕೆ ಬಾರಿಸಿ "ನಾನು ಹೇಳಿದಂತೆ ಬರೆದುಕೊಡು. ಬದುಕುವ ದಾರಿ ನೋಡಿಕೋ" ಎಂದು ಗದರಿಸಿ ಆ ಕಾಗದವನ್ನೂ ಹರಿದುಹಾಕಿದ್ದರಂತೆ. ಆಗ ಗುಮಾಸ್ತ ವಿನಾಯಕ "ಸಾರ್, ತಹಸೀಲ್ದಾರರ ಸಲುವಾಗಿ ಎಂದು ಬರೆದುಕೊಟ್ಟರೆ ಅವರಿಗೆ ಅನ್ಯಾಯವಾಗುತ್ತದೆ, ಅವರು ಒಳ್ಳೆಯವರು, ನನ್ನ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ. ನೀವು ಇಷ್ಟೊಂದು ಬಲವಂತ ಮಾಡುವುದಾದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ" ಎಂದು ಹೇಳಿದ್ದರಂತೆ. ಪುನಃ ತಾವು ಮೊದಲು ಬರೆದುಕೊಟ್ಟ ಹೇಳಿಕೆಯನ್ನೇ ಮೂರನೆಯ ಸಲವೂ ಬರೆದುಕೊಟ್ಟರಂತೆ. ಆ ಗುಮಾಸ್ತರನ್ನು ನಾನು ನೆನೆಸಿಕೊಳ್ಳುತ್ತಲೇ ಇರುತ್ತೇನೆ. ಅವರೇನಾದರೂ ಆ ರೀತಿ ಹೇಳಿಕೆ ಕೊಟ್ಟಿದ್ದರೆ ನನ್ನನ್ನೂ ಆ ಪ್ರಕರಣದಲ್ಲಿ ಖಂಡಿತಾ ಸಿಲುಕಿಸಿರುತ್ತಿದ್ದರು. ಗುಮಾಸ್ತರ ಆ ಮಾತು ನನ್ನ ಸೇವಾವಧಿಯ ಅತ್ಯುನ್ನತ ಪ್ರಶಸ್ತಿ ಎಂದು ನಾನು ಭಾವಿಸಿದ್ದೇನೆ. ಬೇರೆ ಯಾರೇ ಆದರೂ ಆ ಸಮಯದಲ್ಲಿ ದಿಕ್ಕು ತೋಚದೆ ಇನ್ಸ್‌ಪೆಕ್ಟರ್ ಹೇಳಿದಂತೆ ಬರೆದುಕೊಟ್ಟಿರುತ್ತಿದ್ದರು. ಶಿರಸ್ತೇದಾರರು ಬೆದರಿಕೆಗೆ ಮಣಿದು ಮೇಜಿನ ಡ್ರಾಯರಿನಲ್ಲಿದ್ದ ರೂ.1000/- ತಹಸೀಲ್ದಾರರಿಗೆ ಕೊಡುವ ಸಲುವಾಗಿತ್ತೆಂದು ಹೇಳಿಕೆ ಕೊಟ್ಟಿದ್ದುದು ಇದಕ್ಕೆ ಸಾಕ್ಷಿ. ಆದರೆ ಅದು ದೂರು ಅರ್ಜಿಗೆ ಸಂಬಂಧಿಸಿದ್ದಲ್ಲದ ಮತ್ತು ಯಾವ ಪ್ರಕರಣಕ್ಕೆ ಸಂಬಂಧಿಸಿದ್ದೆಂದು ಗೊತ್ತಿಲ್ಲದ ಹಣವಾಗಿದ್ದರಿಂದ ನನ್ನನ್ನು ಸೇರಿಸಲು ಅವಕಾಶವಿರಲಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಈ ಲಂಚದ ಪ್ರಕರಣದಲ್ಲಿ ಮಧ್ಯಸ್ತಿಕೆದಾರರಾಗಿ ಬೆಳ್ತಂಗಡಿಯ ನೋಟರಿ ಒಬ್ಬರು ದಳ್ಳಾಳಿಯ ಕೆಲಸ ಮಾಡಿದ್ದರು! ನೋಟರಿ ಮಹಾಶಯರು 'ತಹಸೀಲ್ದಾರರಿಗೆ, ಶಿರಸ್ತೇದಾರರಿಗೆ, ಗುಮಾಸ್ತರಿಗೆ, ಎಲ್ಲರಿಗೂ ಹಣ ಕೊಡಬೇಕು' ಎಂದು ದೂರು ಅರ್ಜಿದಾರರಿಗೆ ಹೇಳಿದ್ದ ಮಾತನ್ನು ರಹಸ್ಯವಾಗಿ ದ್ವನಿಮುದ್ರಿಸಿಕೊಳ್ಳಲಾಗಿತ್ತಂತೆ!
     ಎರಡು ದಿನಗಳ ನಂತರ ನನ್ನ ಮಿತ್ರ ಇನ್ಸ್‌ಪೆಕ್ಟರರ ಸಲಹೆಯಂತೆ 'ಹಣ' ಇಟ್ಟುಕೊಂಡು ಲೋಕಾಯುಕ್ತ ಇನ್ಸ್ ಪೆಕ್ಟರರನ್ನು ಅವರ ಕಛೇರಿಯಲ್ಲೆ ಕಂಡೆ. ಅವರು ವಿಶ್ವಾಸದಿಂದಲೇ ಮಾತನಾಡಿಸಿದರು. ಹಿಂದಿನ ದಿನ ಪುನಃ ಬೆಳ್ತಂಗಡಿಗೆ ಹೋಗಿ ನನ್ನ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರಂತೆ. ಹಿಂದಿನ ತಹಸೀಲ್ದಾರರ ಮೇಲೆ ಇದ್ದ ಹಲವಾರು ದೂರುಗಳಿಂದಾಗಿ ನನ್ನ ಬಗ್ಗೆ ಸಹ ತಪ್ಪು ಗ್ರಹಿಕೆಯಾಗಿತ್ತೆಂದೂ ಅನ್ಯಥಾ ಭಾವಿಸಬಾರದೆಂದೂ ಹೇಳಿದರು. ತಂದಿದ್ದ ಹಣವನ್ನು ಅವರು ಪಡೆದು ನನ್ನನ್ನೂ ಕರೆದುಕೊಂಡು ಹೋಗಿ ಎಸ್.ಪಿ.ಯವರಿಗೆ ಪರಿಚಯಿಸಿದರು. ಅವರೂ ನನ್ನೊಡನೆ ವಿಶ್ವಾಸದಿಂದಲೇ ಮಾತನಾಡಿದರು. ಇನ್ಸ್‌ಪೆಕ್ಟರರು ನನ್ನಿಂದ ಪಡೆದಿದ್ದ ಹಣವನ್ನು ನನ್ನ ಎದುರಿಗೇ ಎಸ್.ಪಿ.ಯವರಿಗೆ ಕೊಟ್ಟರು. ನಂತರ ನನಗೆ ಕೆಲವು ಪ್ರಶ್ನಾವಳಿ ಇರುವ ಪತ್ರ ನೀಡಿ ಅದಕ್ಕೆ ಉತ್ತರ ಕಳುಹಿಸಿಕೊಡುವಂತೆ ತಿಳಿಸಲಾಯಿತು. ನಂತರದಲ್ಲಿ ನಾನು ಇನ್ಸ್‌ಪೆಕ್ಟರರಿಗೆ "ಹಣ ಯಾರು ಯಾರಿಗೆ ಕೊಡಬೇಕೆಂಬ ಬಗ್ಗೆ ನನಗೆ ತಿಳುವಳಿಕೆ ಇರಲಿಲ್ಲ. ತಮಗೂ ತಲುಪಿಸುತ್ತೇನೆ" ಎಂದಾಗ ಅವರು "ನಿಮ್ಮಿಂದ ಹಣ ಪಡೆಯಬೇಕೆ? ನೀವು ನನಗೆಂದು ತಂದಿದ್ದರೂ ನಾನು ಪಡೆಯುತ್ತಿರಲಿಲ್ಲ. ತರುವುದೂ ಬೇಡ, ನಾನು ತೆಗೆದುಕೊಳ್ಳುವುದೂ ಇಲ್ಲ. ನೀವು ನೆಮ್ಮದಿಯಿಂದ ಹೋಗಿ" ಎಂದರು. ಈ ಪ್ರಕರಣದಲ್ಲಿ ಗುಮಾಸ್ತರು, ಶಿರಸ್ತೇದಾರರು ಲಂಚಕ್ಕೆ ಬೇಡಿಕೆ ಇಟ್ಟದ್ದು ನನಗೆ ಗೊತ್ತಿತ್ತೇ, ರಾಷ್ಟ್ರೀಯ ಉಳಿತಾಯ ಪತ್ರಕ್ಕಾಗಿ ಹಣ ಸಂಗ್ರಹಿಸಬಹುದೇ, ಗುಮಾಸ್ತರಿಗೆ ಬಡ್ತಿಯಾಗಿ ವರ್ಗಾವಣೆಯಾಗಿದ್ದರೂ ಅವರನ್ನು ಸೇವೆಯಿಂದ ಏಕೆ ಬಿಡುಗಡೆ ಮಾಡಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಲಿಖಿತ ಉತ್ತರ ನೀಡಿ ನಿಟ್ಟುಸಿರು ಬಿಟ್ಟಿದ್ದೆ. 'ಇಂತಹ' ಸೇವೆ ಸಾಕು ಅನ್ನಿಸಿಬಿಟ್ಟಿತ್ತು. ನನ್ನನ್ನು ಕುತ್ತಿನಿಂದ ಪಾರು ಮಾಡಿದ ದೇವರು ಗುಮಾಸ್ತ ವಿನಾಯಕ, ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮಿಷನರ್, ಪೋಲಿಸ್ ಇನ್ಸ್‌ಪೆಕ್ಟರ್ ಮತ್ತು ಲೋಕಾಯುಕ್ತ ಇನ್ಸ್‌ಪೆಕ್ಟರರ ರೂಪಗಳಲ್ಲಿ ಪ್ರಕಟಗೊಂಡಿದ್ದನೆಂದರೆ ತಪ್ಪಿಲ್ಲ. ಮುಂದೆ 8-10 ದಿನಗಳಲ್ಲಿ ಬೆಳ್ತಂಗಡಿಗೆ ಬೇರೊಬ್ಬ ತಹಸೀಲ್ದಾರರು ಸರ್ಕಾರದಿಂದ ನೇಮಕವಾಗಿ ಬಂದಾಗ ಅವರಿಗೆ ಛಾರ್ಜು ವಹಿಸಿ 'ಅಧಿಕ'ಪ್ರಭಾರೆಯಿಂದ ಬಿಡುಗಡೆ ಹೊಂದಿದೆ! ಕಛೇರಿಯ ನೌಕರರು ನನಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಮನಸ್ಸಿರದಿದ್ದ ಕಾರಣದಿಂದ ಹೋಗಲಿಲ್ಲ.
*************
-ಕ.ವೆಂ.ನಾಗರಾಜ್.
*******************
ಹಿಂದಿನ ಲೇಖನಕ್ಕೆ ಲಿಂಕ್: ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -1:  http://kavimana.blogspot.com/2011/11/1.html

ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -1

     ಲೋಕಾಯುಕ್ತ ದಾಳಿಗಳ ಕುರಿತು ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿರುವೆ. ಒಮ್ಮೆ ಸಿಕ್ಕಿಬಿದ್ದು ಅಮಾನತ್ತುಗೊಂಡು ಕೆಲವು ಸಮಯದ ನಂತರ ವಿಚಾರಣೆ ಕಾಯ್ದಿರಿಸಿ ಪುನಹ ನೇಮಕಗೊಂಡ ನಂತರದಲ್ಲಿ ಹೇಗೂ ನೌಕರಿ ಹೋಗುತ್ತದೆ ಎಂಬ ಹತಾಶೆ ಮತ್ತು ಆತಂಕದೊಡನೆ ದುರಾಸೆ ಸೇರಿಕೊಂಡು, ಕೆಲಸ ಹೋಗುವ ಮುನ್ನ ಸಾದ್ಯವಾದಷ್ಟು ಹಣ ಮಾಡಿಕೊಂಡುಬಿಡೋಣವೆಂದು ಎರಡನೆಯ ಸಲ ಲೋಕಾಯುಕ್ತದ ಬಲೆಗೆ ಬಿದ್ದವರು, ನೌಕರಿ ಕಳೆದುಕೊಂಡವರನ್ನೂ ಕಂಡಿದ್ದೇನೆ. ಅಂತಹುದೇ ಪ್ರಕರಣಗಳ ವಿವರ ಕೊಡುತ್ತಾ ಹೋದರೆ ಚರ್ವಿತ ಚರ್ವಣದಂತೆ ಆಗುವುದರಿಂದ ಎಲ್ಲವನ್ನೂ ವಿವರಿಸಲು ಹೋಗುವುದಿಲ್ಲ. ಈಗ ನಾನು ಹೇಳಹೊರಟಿರುವ ಪ್ರಕರಣ ನನ್ನಲ್ಲಿ ಕಹಿ ನೆನಪನ್ನು ಉಳಿಸಿದೆ. ನಾನು ಆತ್ಮಹತ್ಯೆಗೆ ಚಿಂತಿಸುವಂತೆ ಮಾಡಿದ್ದ ಈ ಘಟನೆ ವಿವರಿಸುವ ಮುನ್ನ ಹಿನ್ನೆಲೆಯಾಗಿ ಕೆಲವು ವಿಷಯ ನಿಮ್ಮ ಗಮನಕ್ಕೆ ತರಬೇಕು.
     ಸುಮಾರು ೯ ವರ್ಷಗಳ ಹಿಂದಿನ ಪ್ರಸಂಗವಿದು. ಶ್ರೀ ಮಹಾದೇವಸ್ವಾಮಿ (ಹೆಸರು ಬದಲಿಸಿದೆ) ಮೂಲತಃ ವಿಧಾನಸೌಧದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದವರು. ಅವಕಾಶವಿರದಿದ್ದರೂ ಪ್ರಭಾವ ಉಪಯೋಗಿಸಿಕೊಂಡು ಬೆಳ್ತಂಗಡಿಯಲ್ಲಿ ತಹಸೀಲ್ದಾರರಾಗಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು. ವಿಧಾನಸೌಧದಲ್ಲಿ ಕೆಲಸ ಮಾಡುವ ಇಂತಹ ಕೆಲವು ಸೆಕ್ಷನ್ ಅಧಿಕಾರಿಗಳು ನೇಮಕಾತಿ ಪ್ರಾಧಿಕಾರ ಹಾಗೂ ರಾಜಕಾರಣಿಗಳ ಪ್ರಭಾವ ಉಪಯೋಗಿಸಿಕೊಂಡು ತಹಸೀಲ್ದಾರರಾಗಿ ನೇಮಕಗೊಳ್ಳುವ ಉದ್ದೇಶ ಅಧಿಕಾರ ಚಲಾವಣೆಯ ಹಂಬಲ ಅಥವ ಹಣ ಮಾಡುವ ಉದ್ದೇಶ ಅಥವ ಎರಡೂ ಇರಬಹುದು. ಇದರಿಂದಾಗಿ ಮೂಲ ಕಂದಾಯ ಇಲಾಖಾ ನೌಕರರು ಕೆಲವರು ನ್ಯಾಯಯುತವಾಗಿ ಪಡೆಯಬೇಕಾದ ಬಡ್ತಿಯಲ್ಲೂ ಅವಕಾಶವಂಚಿತರಾಗುತ್ತಾರೆ. ಬೆಳ್ತಂಗಡಿ ತಾಲ್ಲೂಕು (ಧರ್ಮಸ್ಥಳ ಈ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ) ಧಾರ್ಮಿಕವಾಗಿ ಹೇಗೆ ಪ್ರಸಿದ್ಧವೋ ಹಾಗೆ ರಾಜಕೀಯವಾಗಿಯೂ ಬಲಿಷ್ಠ ಸ್ಥಳವಾಗಿದ್ದು, ಅಧಿಕಾರಿಗಳಿಗೆ, ನೌಕರರಿಗೆ ಎಲ್ಲರನ್ನೂ ಸಂಭಾಳಿಸಿಕೊಂಡು ಕೆಲಸ ಮಾಡುವುದು ಕಷ್ಟವಾಗಿತ್ತು. ಶ್ರೀ ವಸಂತ ಬಂಗೇರರವರು (ಮಾಜಿ ವಿಧಾನಸಭಾಪತಿ) ಆಗ ಜಿಲ್ಲಾ ಜನತಾದಳದ ಅಧ್ಯಕ್ಷರಾಗಿದ್ದರು. ಅವರ ತಮ್ಮ ಶ್ರೀ ಪ್ರಭಾಕರ ಬಂಗೇರ ಬಿಜೆಪಿಯವರಾಗಿದ್ದು ಆಗಿನ ವಿಧಾನಸಭಾ ಸದಸ್ಯರಾಗಿದ್ದರು. ಅದೇ ತಾಲ್ಲೂಕಿನವರಾಗಿದ್ದ ಮಾಜಿ ಶಿಕ್ಷಣ ಸಚಿವ ಶ್ರೀ ಗಂಗಾಧರಗೌಡರು ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾಗಿದ್ದರು.
     ಮಹಾದೇವಸ್ವಾಮಿಯವರ ಮೇಲೆ ಅನೇಕ ರೀತಿಯ ಕರ್ತವ್ಯಲೋಪ ಮತ್ತು ಭ್ರಷ್ಠಾಚಾರದ ಆರೋಪಗಳಿದ್ದು, ಅವರ ವಿರುದ್ಧ ಜನತಾದಳದಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿದ್ದು ವಸಂತ ಬಂಗೇರರು ನೇತೃತ್ವ ವಹಿಸಿದ್ದರು. ಪುತ್ತೂರಿನ ಅಸಿಸ್ಟೆಂಟ್ ಕಮಿಷನರರು ಮತ್ತು ಮಂಗಳೂರು ಜಿಲ್ಲಾಧಿಕಾರಿಯವರಿಗೂ ಸಹ ತಹಸೀಲ್ದಾರರ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನವಿದ್ದು ಹಲವಾರು ಸಲ ಎಚ್ಚರಿಕೆ ನೀಡಿದ್ದರು. ಆದರೂ ಅವರ ಕಾರ್ಯವೈಖರಿ ಬದಲಾಗಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ಕೆಲವು ಅಧಿಕಾರಿಗಳನ್ನು ಬೆಳ್ತಂಗಡಿಗೆ ಕಳುಹಿಸಿ ತನಿಖೆ ನಡೆಯಿಸಿ ಅಕ್ರಮಗಳು ನಡೆದಿವೆಯೆನ್ನಲಾದ ಕಡತಗಳನ್ನು ವಶಕ್ಕೆ ಪಡೆದು, ಮಹಾದೇವಸ್ವಾಮಿಯವರನ್ನು ಸರಕಾರದ ಆದೇಶದ ನಿರೀಕ್ಷಣೆ ಮೇರೆಗೆ ತಾವೇ ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶಿಸಿ ಅವರ ಸ್ಥಾನಕ್ಕೆ ಕಡಬದ ವಿಶೇಷ ತಹಸೀಲ್ದಾರನಾಗಿದ್ದ ನನ್ನನ್ನು ಅದಿಕ ಪ್ರಭಾರೆ ಮೇಲೆ ಬೆಳ್ತಂಗಡಿ ತಹಸೀಲ್ದಾರನನ್ನಾಗಿ ನೇಮಕ ಮಾಡಿದ್ದರು. ನಾನು ಅದರಂತೆ ಪ್ರಭಾರೆ ವಹಿಸಿಕೊಂಡಾಗ ಜನತಾದಳದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ತಾಲ್ಲೂಕು ಕಛೇರಿ ಮುಂದೆ ಪಟಾಕಿ ಸಿಡಿಸಿ, ಸಭೆ  ನಡೆಸಿದ್ದರು. ಆದರೆ ಮುಂದೆ ಒಂದೇ ವಾರದಲ್ಲಿ ಶ್ರೀ ಗಂಗಾಧರಗೌಡರು ಆಗಿನ ಕಾಂಗ್ರೆಸ್ ಸರ್ಕಾರದ ಕಂದಾಯ ಮಂತ್ರಿಗಳಾಗಿದ್ದ ಶ್ರೀ ಹೆಚ್.ಸಿ. ಶ್ರೀಕಂಠಯ್ಯನವರನ್ನು ಓಲೈಸಿ ಮಹಾದೇವಸ್ವಾಮಿಯವರನ್ನು ಪುನಃ ಬೆಳ್ತಂಗಡಿಗೆ ನೇಮಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲಾಧಿಕಾರಿಯವರಿಗೆ (ಅವರು ಈಗ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ) ಮಹಾದೇವಸ್ವಾಮಿಯವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಅವರು ನನಗೆ ದೂರವಾಣಿ ಮೂಲಕ ನನಗೆ ಯಾವುದೇ ಕಾರಣಕ್ಕೂ ಮಹಾದೇವಸ್ವಾಮಿಯವರಿಗೆ ಛಾರ್ಜು ಕೊಡಬಾರದೆಂದು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಅಂದು ಮಧ್ಯಾಹ್ನ ಸುಮಾರು ೪ ಘಂಟೆಯ ಹೊತ್ತಿಗೆ ಮಹಾದೇವಸ್ವಾಮಿ ಸರ್ಕಾರಿ ಆದೇಶ ಕೈಯಲ್ಲಿ ಹಿಡಿದುಕೊಂಡು ಬಂದರು. ಕಾಂಗ್ರೆಸ್ ಕಾರ್ಯಕರ್ತರು ಮಹಾದೇವಸ್ವಾಮಿ ಛಾರ್ಜು ತೆಗೆದುಕೊಂಡ ತಕ್ಷಣ ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧರಾಗಿದ್ದರು. ನಾನು ಛಾರ್ಜು ಕೊಡದಿದ್ದರೂ ಸರ್ಕಾರದ ಆದೇಶದಂತೆ ಅವರು ಸ್ವತಃ ಛಾರ್ಜು ವಹಿಸಿಕೊಂಡ ಬಗ್ಗೆ ಪ್ರಮಾಣಪತ್ರ ಸಿದ್ಧಪಡಿಸಿ ನನ್ನೊಂದಿಗೆ ಕುರ್ಚಿಗೆ ಪೈಪೋಟಿ ನಡೆಸಬಹುದಿತ್ತು, ಇದರಿಂದ ಪತ್ರಿಕೆಯವರಿಗೆ, ಮಾಧ್ಯಮದವರಿಗೆ ಸುದ್ದಿಗೆ ಗ್ರಾಸವಾಗಬಹುದಿತ್ತು. ಮೇಲಾಧಿಕಾರಿಗಳ ವಿರೋಧ ಕಟ್ಟಿಕೊಂಡು ಕೆಲಸ ಮಾಡುವುದು ಸೂಕ್ತವಾಗುವುದಿಲ್ಲವೆಂದು,  ಮೊದಲು ಜಿಲ್ಲಾಧಿಕಾರಿಯವರನ್ನು ಕಂಡು ಮಾತನಾಡಿಸಿ ಬರಬೇಕೆಂದೂ, ಮರುದಿನ ಬೆಳಿಗ್ಗೆ ಛಾರ್ಜು ತೆಗೆದುಕೊಳ್ಳಬಹುದೆಂದು ಅವರ ಮನವೊಲಿಸಿ ಕಳಿಸಿದೆ. ನಂತರ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ದೂರವಾಣಿಯಲ್ಲಿ ತಿಳಿಸಿದೆ. ಅಂದು ಕಛೇರಿಯ ಮುಂದೆ ಪಟಾಕಿ ಸಿಡಿಯಲಿಲ್ಲ. ವಿಷಯ ತಿಳಿದ ಪ್ರಭಾಕರ ಬಂಗೇರರವರು 'ಮಹಾದೇವಸ್ವಾಮಿಯವರೇನಾದರೂ ಛಾರ್ಜು ತೆಗೆದುಕೊಂಡರೆ ಕಛೇರಿಗೆ ದಿಗ್ಬಂಧನ ಹಾಕಿ ಅವರಿಗೆ ಕೆಲಸ ಮಾಡಲು ಬಿಡುವುದಿಲ್ಲ'ವೆಂದು ಘೋಷಿಸಿದ್ದು ಮರುದಿನದ ಸ್ಥಳೀಯ ಪತ್ರಿಕೆಗಳ ಪ್ರಮುಖ ಸುದ್ದಿಯಾಯಿತು. ಅಂದು ರಾತ್ರಿಯೇ ಜಿಲ್ಲಾಧಿಕಾರಿಯವರು ಬೆಂಗಳೂರಿಗೆ ಹೋದರು. ಕೇಂದ್ರಸ್ಥಾನಿಕ ಸಹಾಯಕರಿಗೆ ಸೂಚನೆ ನೀಡಿ ತನ್ನನ್ನು ಕಂಡ ನಂತರವೇ ಮಹಾದೇವಸ್ವಾಮಿಗೆ ಛಾರ್ಜು ತೆಗೆದುಕೊಳ್ಳಲು ತಿಳಿಸಲು ಹೇಳಿದ್ದರು. ಮರುದಿನ ಮ. ೧೨-೩೦ರ ವೇಳೆಗೆ ನನ್ನ ಕಛೇರಿಗೆ ಮಹಾದೇವಸ್ವಾಮಿಯವರನ್ನು ಅಮಾನತ್ತು ಪಡಿಸಿದ ಆದೇಶದ ಫ್ಯಾಕ್ಸ್ ತಲುಪಿತು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರ ಸೇವೆ ಅಮಾನತ್ತುಪಡಿಸುವ ಆದೇಶ ಹೊರಡಿಸಲು ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿದ್ದು ಸ್ಪಷ್ಟವಾಗಿತ್ತು. ಅದರಲ್ಲಿ ಅವರ ವೈಯಕ್ತಿಕ ದುರುದ್ದೇಶವಿರಲಿಲ್ಲ. ಒಳ್ಳೆಯ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯಬೇಕೆಂಬುದು ಅವರ ಉದ್ದೇಶವಾಗಿತ್ತು. ಬೆಂಗಳೂರಿನಿಂದಲೇ ಜಿಲ್ಲಾಧಿಕಾರಿಯವರು ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಛಾರ್ಜು ಕೊಡದಿದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಜನತಾದಳದ ಕಾರ್ಯಕರ್ತರು ಮತ್ತೊಮ್ಮೆ ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಕಾಂಗ್ರೆಸ್ ಕಾರ್ಯಕರ್ತರ ಪಟಾಕಿ ಡಬ್ಬದಲ್ಲೇ ಉಳಿಯಿತು. ನಂತರ ೭-೮ ತಿಂಗಳವರೆಗೆ ಬೇರೆ ತಹಸೀಲ್ದಾರರ ನೇಮಕವಾಗದೆ ನಾನೇ ಅಧಿಕ ಪ್ರಭಾರೆಯಲ್ಲಿ ಕಾರ್ಯ ನಿರ್ವಹಿಸಿದೆ.
*******************
ಹಿಂದಿನ ಲೇಖನಗಳಿಗೆ ಲಿಂಕ್:
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -1:  http://kavimana.blogspot.com/2011/11/blog-post_13.html
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -2:  http://kavimana.blogspot.com/2011/11/2.html