ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ನವೆಂಬರ್ 25, 2011

ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -1

     ಲೋಕಾಯುಕ್ತ ದಾಳಿಗಳ ಕುರಿತು ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿರುವೆ. ಒಮ್ಮೆ ಸಿಕ್ಕಿಬಿದ್ದು ಅಮಾನತ್ತುಗೊಂಡು ಕೆಲವು ಸಮಯದ ನಂತರ ವಿಚಾರಣೆ ಕಾಯ್ದಿರಿಸಿ ಪುನಹ ನೇಮಕಗೊಂಡ ನಂತರದಲ್ಲಿ ಹೇಗೂ ನೌಕರಿ ಹೋಗುತ್ತದೆ ಎಂಬ ಹತಾಶೆ ಮತ್ತು ಆತಂಕದೊಡನೆ ದುರಾಸೆ ಸೇರಿಕೊಂಡು, ಕೆಲಸ ಹೋಗುವ ಮುನ್ನ ಸಾದ್ಯವಾದಷ್ಟು ಹಣ ಮಾಡಿಕೊಂಡುಬಿಡೋಣವೆಂದು ಎರಡನೆಯ ಸಲ ಲೋಕಾಯುಕ್ತದ ಬಲೆಗೆ ಬಿದ್ದವರು, ನೌಕರಿ ಕಳೆದುಕೊಂಡವರನ್ನೂ ಕಂಡಿದ್ದೇನೆ. ಅಂತಹುದೇ ಪ್ರಕರಣಗಳ ವಿವರ ಕೊಡುತ್ತಾ ಹೋದರೆ ಚರ್ವಿತ ಚರ್ವಣದಂತೆ ಆಗುವುದರಿಂದ ಎಲ್ಲವನ್ನೂ ವಿವರಿಸಲು ಹೋಗುವುದಿಲ್ಲ. ಈಗ ನಾನು ಹೇಳಹೊರಟಿರುವ ಪ್ರಕರಣ ನನ್ನಲ್ಲಿ ಕಹಿ ನೆನಪನ್ನು ಉಳಿಸಿದೆ. ನಾನು ಆತ್ಮಹತ್ಯೆಗೆ ಚಿಂತಿಸುವಂತೆ ಮಾಡಿದ್ದ ಈ ಘಟನೆ ವಿವರಿಸುವ ಮುನ್ನ ಹಿನ್ನೆಲೆಯಾಗಿ ಕೆಲವು ವಿಷಯ ನಿಮ್ಮ ಗಮನಕ್ಕೆ ತರಬೇಕು.
     ಸುಮಾರು ೯ ವರ್ಷಗಳ ಹಿಂದಿನ ಪ್ರಸಂಗವಿದು. ಶ್ರೀ ಮಹಾದೇವಸ್ವಾಮಿ (ಹೆಸರು ಬದಲಿಸಿದೆ) ಮೂಲತಃ ವಿಧಾನಸೌಧದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದವರು. ಅವಕಾಶವಿರದಿದ್ದರೂ ಪ್ರಭಾವ ಉಪಯೋಗಿಸಿಕೊಂಡು ಬೆಳ್ತಂಗಡಿಯಲ್ಲಿ ತಹಸೀಲ್ದಾರರಾಗಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು. ವಿಧಾನಸೌಧದಲ್ಲಿ ಕೆಲಸ ಮಾಡುವ ಇಂತಹ ಕೆಲವು ಸೆಕ್ಷನ್ ಅಧಿಕಾರಿಗಳು ನೇಮಕಾತಿ ಪ್ರಾಧಿಕಾರ ಹಾಗೂ ರಾಜಕಾರಣಿಗಳ ಪ್ರಭಾವ ಉಪಯೋಗಿಸಿಕೊಂಡು ತಹಸೀಲ್ದಾರರಾಗಿ ನೇಮಕಗೊಳ್ಳುವ ಉದ್ದೇಶ ಅಧಿಕಾರ ಚಲಾವಣೆಯ ಹಂಬಲ ಅಥವ ಹಣ ಮಾಡುವ ಉದ್ದೇಶ ಅಥವ ಎರಡೂ ಇರಬಹುದು. ಇದರಿಂದಾಗಿ ಮೂಲ ಕಂದಾಯ ಇಲಾಖಾ ನೌಕರರು ಕೆಲವರು ನ್ಯಾಯಯುತವಾಗಿ ಪಡೆಯಬೇಕಾದ ಬಡ್ತಿಯಲ್ಲೂ ಅವಕಾಶವಂಚಿತರಾಗುತ್ತಾರೆ. ಬೆಳ್ತಂಗಡಿ ತಾಲ್ಲೂಕು (ಧರ್ಮಸ್ಥಳ ಈ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ) ಧಾರ್ಮಿಕವಾಗಿ ಹೇಗೆ ಪ್ರಸಿದ್ಧವೋ ಹಾಗೆ ರಾಜಕೀಯವಾಗಿಯೂ ಬಲಿಷ್ಠ ಸ್ಥಳವಾಗಿದ್ದು, ಅಧಿಕಾರಿಗಳಿಗೆ, ನೌಕರರಿಗೆ ಎಲ್ಲರನ್ನೂ ಸಂಭಾಳಿಸಿಕೊಂಡು ಕೆಲಸ ಮಾಡುವುದು ಕಷ್ಟವಾಗಿತ್ತು. ಶ್ರೀ ವಸಂತ ಬಂಗೇರರವರು (ಮಾಜಿ ವಿಧಾನಸಭಾಪತಿ) ಆಗ ಜಿಲ್ಲಾ ಜನತಾದಳದ ಅಧ್ಯಕ್ಷರಾಗಿದ್ದರು. ಅವರ ತಮ್ಮ ಶ್ರೀ ಪ್ರಭಾಕರ ಬಂಗೇರ ಬಿಜೆಪಿಯವರಾಗಿದ್ದು ಆಗಿನ ವಿಧಾನಸಭಾ ಸದಸ್ಯರಾಗಿದ್ದರು. ಅದೇ ತಾಲ್ಲೂಕಿನವರಾಗಿದ್ದ ಮಾಜಿ ಶಿಕ್ಷಣ ಸಚಿವ ಶ್ರೀ ಗಂಗಾಧರಗೌಡರು ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾಗಿದ್ದರು.
     ಮಹಾದೇವಸ್ವಾಮಿಯವರ ಮೇಲೆ ಅನೇಕ ರೀತಿಯ ಕರ್ತವ್ಯಲೋಪ ಮತ್ತು ಭ್ರಷ್ಠಾಚಾರದ ಆರೋಪಗಳಿದ್ದು, ಅವರ ವಿರುದ್ಧ ಜನತಾದಳದಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿದ್ದು ವಸಂತ ಬಂಗೇರರು ನೇತೃತ್ವ ವಹಿಸಿದ್ದರು. ಪುತ್ತೂರಿನ ಅಸಿಸ್ಟೆಂಟ್ ಕಮಿಷನರರು ಮತ್ತು ಮಂಗಳೂರು ಜಿಲ್ಲಾಧಿಕಾರಿಯವರಿಗೂ ಸಹ ತಹಸೀಲ್ದಾರರ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನವಿದ್ದು ಹಲವಾರು ಸಲ ಎಚ್ಚರಿಕೆ ನೀಡಿದ್ದರು. ಆದರೂ ಅವರ ಕಾರ್ಯವೈಖರಿ ಬದಲಾಗಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ಕೆಲವು ಅಧಿಕಾರಿಗಳನ್ನು ಬೆಳ್ತಂಗಡಿಗೆ ಕಳುಹಿಸಿ ತನಿಖೆ ನಡೆಯಿಸಿ ಅಕ್ರಮಗಳು ನಡೆದಿವೆಯೆನ್ನಲಾದ ಕಡತಗಳನ್ನು ವಶಕ್ಕೆ ಪಡೆದು, ಮಹಾದೇವಸ್ವಾಮಿಯವರನ್ನು ಸರಕಾರದ ಆದೇಶದ ನಿರೀಕ್ಷಣೆ ಮೇರೆಗೆ ತಾವೇ ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶಿಸಿ ಅವರ ಸ್ಥಾನಕ್ಕೆ ಕಡಬದ ವಿಶೇಷ ತಹಸೀಲ್ದಾರನಾಗಿದ್ದ ನನ್ನನ್ನು ಅದಿಕ ಪ್ರಭಾರೆ ಮೇಲೆ ಬೆಳ್ತಂಗಡಿ ತಹಸೀಲ್ದಾರನನ್ನಾಗಿ ನೇಮಕ ಮಾಡಿದ್ದರು. ನಾನು ಅದರಂತೆ ಪ್ರಭಾರೆ ವಹಿಸಿಕೊಂಡಾಗ ಜನತಾದಳದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ತಾಲ್ಲೂಕು ಕಛೇರಿ ಮುಂದೆ ಪಟಾಕಿ ಸಿಡಿಸಿ, ಸಭೆ  ನಡೆಸಿದ್ದರು. ಆದರೆ ಮುಂದೆ ಒಂದೇ ವಾರದಲ್ಲಿ ಶ್ರೀ ಗಂಗಾಧರಗೌಡರು ಆಗಿನ ಕಾಂಗ್ರೆಸ್ ಸರ್ಕಾರದ ಕಂದಾಯ ಮಂತ್ರಿಗಳಾಗಿದ್ದ ಶ್ರೀ ಹೆಚ್.ಸಿ. ಶ್ರೀಕಂಠಯ್ಯನವರನ್ನು ಓಲೈಸಿ ಮಹಾದೇವಸ್ವಾಮಿಯವರನ್ನು ಪುನಃ ಬೆಳ್ತಂಗಡಿಗೆ ನೇಮಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲಾಧಿಕಾರಿಯವರಿಗೆ (ಅವರು ಈಗ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ) ಮಹಾದೇವಸ್ವಾಮಿಯವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಅವರು ನನಗೆ ದೂರವಾಣಿ ಮೂಲಕ ನನಗೆ ಯಾವುದೇ ಕಾರಣಕ್ಕೂ ಮಹಾದೇವಸ್ವಾಮಿಯವರಿಗೆ ಛಾರ್ಜು ಕೊಡಬಾರದೆಂದು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಅಂದು ಮಧ್ಯಾಹ್ನ ಸುಮಾರು ೪ ಘಂಟೆಯ ಹೊತ್ತಿಗೆ ಮಹಾದೇವಸ್ವಾಮಿ ಸರ್ಕಾರಿ ಆದೇಶ ಕೈಯಲ್ಲಿ ಹಿಡಿದುಕೊಂಡು ಬಂದರು. ಕಾಂಗ್ರೆಸ್ ಕಾರ್ಯಕರ್ತರು ಮಹಾದೇವಸ್ವಾಮಿ ಛಾರ್ಜು ತೆಗೆದುಕೊಂಡ ತಕ್ಷಣ ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧರಾಗಿದ್ದರು. ನಾನು ಛಾರ್ಜು ಕೊಡದಿದ್ದರೂ ಸರ್ಕಾರದ ಆದೇಶದಂತೆ ಅವರು ಸ್ವತಃ ಛಾರ್ಜು ವಹಿಸಿಕೊಂಡ ಬಗ್ಗೆ ಪ್ರಮಾಣಪತ್ರ ಸಿದ್ಧಪಡಿಸಿ ನನ್ನೊಂದಿಗೆ ಕುರ್ಚಿಗೆ ಪೈಪೋಟಿ ನಡೆಸಬಹುದಿತ್ತು, ಇದರಿಂದ ಪತ್ರಿಕೆಯವರಿಗೆ, ಮಾಧ್ಯಮದವರಿಗೆ ಸುದ್ದಿಗೆ ಗ್ರಾಸವಾಗಬಹುದಿತ್ತು. ಮೇಲಾಧಿಕಾರಿಗಳ ವಿರೋಧ ಕಟ್ಟಿಕೊಂಡು ಕೆಲಸ ಮಾಡುವುದು ಸೂಕ್ತವಾಗುವುದಿಲ್ಲವೆಂದು,  ಮೊದಲು ಜಿಲ್ಲಾಧಿಕಾರಿಯವರನ್ನು ಕಂಡು ಮಾತನಾಡಿಸಿ ಬರಬೇಕೆಂದೂ, ಮರುದಿನ ಬೆಳಿಗ್ಗೆ ಛಾರ್ಜು ತೆಗೆದುಕೊಳ್ಳಬಹುದೆಂದು ಅವರ ಮನವೊಲಿಸಿ ಕಳಿಸಿದೆ. ನಂತರ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ದೂರವಾಣಿಯಲ್ಲಿ ತಿಳಿಸಿದೆ. ಅಂದು ಕಛೇರಿಯ ಮುಂದೆ ಪಟಾಕಿ ಸಿಡಿಯಲಿಲ್ಲ. ವಿಷಯ ತಿಳಿದ ಪ್ರಭಾಕರ ಬಂಗೇರರವರು 'ಮಹಾದೇವಸ್ವಾಮಿಯವರೇನಾದರೂ ಛಾರ್ಜು ತೆಗೆದುಕೊಂಡರೆ ಕಛೇರಿಗೆ ದಿಗ್ಬಂಧನ ಹಾಕಿ ಅವರಿಗೆ ಕೆಲಸ ಮಾಡಲು ಬಿಡುವುದಿಲ್ಲ'ವೆಂದು ಘೋಷಿಸಿದ್ದು ಮರುದಿನದ ಸ್ಥಳೀಯ ಪತ್ರಿಕೆಗಳ ಪ್ರಮುಖ ಸುದ್ದಿಯಾಯಿತು. ಅಂದು ರಾತ್ರಿಯೇ ಜಿಲ್ಲಾಧಿಕಾರಿಯವರು ಬೆಂಗಳೂರಿಗೆ ಹೋದರು. ಕೇಂದ್ರಸ್ಥಾನಿಕ ಸಹಾಯಕರಿಗೆ ಸೂಚನೆ ನೀಡಿ ತನ್ನನ್ನು ಕಂಡ ನಂತರವೇ ಮಹಾದೇವಸ್ವಾಮಿಗೆ ಛಾರ್ಜು ತೆಗೆದುಕೊಳ್ಳಲು ತಿಳಿಸಲು ಹೇಳಿದ್ದರು. ಮರುದಿನ ಮ. ೧೨-೩೦ರ ವೇಳೆಗೆ ನನ್ನ ಕಛೇರಿಗೆ ಮಹಾದೇವಸ್ವಾಮಿಯವರನ್ನು ಅಮಾನತ್ತು ಪಡಿಸಿದ ಆದೇಶದ ಫ್ಯಾಕ್ಸ್ ತಲುಪಿತು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರ ಸೇವೆ ಅಮಾನತ್ತುಪಡಿಸುವ ಆದೇಶ ಹೊರಡಿಸಲು ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿದ್ದು ಸ್ಪಷ್ಟವಾಗಿತ್ತು. ಅದರಲ್ಲಿ ಅವರ ವೈಯಕ್ತಿಕ ದುರುದ್ದೇಶವಿರಲಿಲ್ಲ. ಒಳ್ಳೆಯ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯಬೇಕೆಂಬುದು ಅವರ ಉದ್ದೇಶವಾಗಿತ್ತು. ಬೆಂಗಳೂರಿನಿಂದಲೇ ಜಿಲ್ಲಾಧಿಕಾರಿಯವರು ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಛಾರ್ಜು ಕೊಡದಿದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಜನತಾದಳದ ಕಾರ್ಯಕರ್ತರು ಮತ್ತೊಮ್ಮೆ ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಕಾಂಗ್ರೆಸ್ ಕಾರ್ಯಕರ್ತರ ಪಟಾಕಿ ಡಬ್ಬದಲ್ಲೇ ಉಳಿಯಿತು. ನಂತರ ೭-೮ ತಿಂಗಳವರೆಗೆ ಬೇರೆ ತಹಸೀಲ್ದಾರರ ನೇಮಕವಾಗದೆ ನಾನೇ ಅಧಿಕ ಪ್ರಭಾರೆಯಲ್ಲಿ ಕಾರ್ಯ ನಿರ್ವಹಿಸಿದೆ.
*******************
ಹಿಂದಿನ ಲೇಖನಗಳಿಗೆ ಲಿಂಕ್:
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -1:  http://kavimana.blogspot.com/2011/11/blog-post_13.html
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -2:  http://kavimana.blogspot.com/2011/11/2.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ