ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಜನವರಿ 28, 2016

ಪಾದ ಪುರಾಣ - Paada Purana


     ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . .' ಮಂತ್ರ ಪಠಿಸುತ್ತಾ ಕರಗಳನ್ನು ನೋಡಿಕೊಂಡು ಕಣ್ಣಿಗೆ ಸ್ಪರ್ಷಿಸುತ್ತಾರೆ. ಹಾಗೆಯೇ ಭೂಮಿತಾಯಿಯನ್ನು ನೆನೆಯುತ್ತಾ 'ಪಾದಸ್ಪರ್ಷಂ ಕ್ಷಮಸ್ವಮೇ' ಎಂದು ತಮ್ಮ ಪಾದಗಳು ಭೂಮಿತಾಯಿಯನ್ನು ಸ್ಪರ್ಷಿಸುತ್ತಿರುವುದಕ್ಕೆ ಕ್ಷಮೆಯಿರಲಿ ಎಂದು ವಿನೀತರಾಗಿ ಪ್ರಾರ್ಥಿಸುತ್ತಾರೆ. ಹಾಗೆಂದು ಪಾದಗಳು ಭೂಮಿಯನ್ನು ಸ್ಪರ್ಷಿಸದೆ ಇರುವುದಕ್ಕೆ ಸಾಧ್ಯವೇ? ಪಾದಗಳು ಇರುವುದೇ ಆ ಕಾರ್ಯಕ್ಕಾಗಿ! ಕೈಯಿಂದ, ತಲೆಯಿಂದ ನಡೆಯುವುದಕ್ಕೆ ಆಗುತ್ತದೆಯೇ? ನೀವು ಹೆಮ್ಮೆಯಿಂದ ತಲೆ ಎತ್ತಿ ನಿಂತಿರಬಹುದು, ನಿಮ್ಮ ಕಣ್ಣುಗಳು ಆಕಾಶದಲ್ಲಿನ ಚಂದ್ರ, ನಕ್ಷತ್ರಗಳನ್ನು ದಿಟ್ಟಿಸುತ್ತಿರಬಹುದು, ನಿಮ್ಮ ಬಾಹುಗಳು ಚಾಚಿಕೊಂಡು ಎಲ್ಲವನ್ನೂ ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಿರಬಹುದು. ಆದರೆ, ಇವೆಲ್ಲವೂ ನಿಮಗೆ ಸಾಧ್ಯವಾಗುವುದು ನಿಮ್ಮ ಪಾದಗಳು ಭದ್ರವಾಗಿ ನೆಲದ ಮೇಲೆ ಊರಿ ನಿಂತಿರುವುದರಿಂದ ಎಂಬುದನ್ನು ಮರೆಯಲಾಗದು.
     ಆಹಾ! ಪಾದಗಳ ಹಿರಿಮೆಯೇ ಹಿರಿಮೆ! ಹಿರಿಯರಿಗೆ, ಗೌರವ ಸಲ್ಲಿಸಲು ಅರ್ಹರಾದವರಿಗೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ಸಂಪ್ರದಾಯ. ಅವರ ಕಾಲುಗಳನ್ನು ತೊಳೆದು ಪೂಜಿಸುವವರೂ ಇದ್ದಾರೆ. ಯಾರಾದರೂ ತಲೆಗೆ, ಹೊಟ್ಟೆಗೆ, ಬೆನ್ನಿಗೆ, ಕೈಕಾಲುಗಳಿಗೆ ನಮಸ್ಕಾರ ಮಾಡುತ್ತಾರೆಯೇ? ಯಾರಾದರೂ ಸತ್ತರೆ ದೇವರ ಪಾದ ಸೇರಿದ ಅನ್ನುತ್ತಾರೆ. ರಾಮ ವನವಾಸಕ್ಕೆ ಹೋದ ಸಂದರ್ಭದಲ್ಲಿ ಭರತ ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ತಂದು ರಾಮನ ಪ್ರತಿನಿಧಿಯೆಂಬಂತೆ ಅವನು ಬರುವವರೆಗೂ ರಾಜ್ಯವಾಳಿದ್ದ. 'ಕ್ಷಮಿಸುವವರೆಗೂ ನಿಮ್ಮ ಕಾಲು ಬಿಡುವುದಿಲ್ಲ' ಎಂದು ಬೇಡುವವರನ್ನೂ ಕಂಡಿದ್ದೇವೆ. ಅಪರಾಧ ಮಾಡಿದವರು ಕಾಲು ಹಿಡಿದುಕೊಂಡರೆ ಕ್ಷಮೆ ಸಿಕ್ಕೀತು! ತಲೆಯನ್ನೋ ಮತ್ತೇನನ್ನೋ ಹಿಡಿದರೆ ಏಟುಗಳು ಬಿದ್ದಾವು! ನಮ್ಮ ರಾಜಕೀಯ ಪುಡಾರಿಗಳನ್ನೇ ನೋಡಿ, ಅವರು ಬಿದ್ದರೆ ಕಾಲು ಹಿಡಿಯುತ್ತಾರೆ, ಎದ್ದರೆ ಎದೆಗೇ ಒದೆಯುತ್ತಾರೆ! ಎರಡರಲ್ಲೂ ಪ್ರಧಾನವಾಗಿರುವುದು ಕಾಲುಗಳೇ! ಇಂತಹ ಮಹಾಮಹಿಮ ಕಾಲುಗಳಿಗೆ ನಮಸ್ಕಾರ!
     ಹಿಂದೆ ಅವರವರ ವೃತ್ತಿ, ಕರ್ಮಗಳನ್ನು ಅನುಸರಿಸಿ ನಾಲ್ಕು ವರ್ಣಾಶ್ರಮಗಳನ್ನು -ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ- ಎಂದು ವಿಂಗಡಿಸಿದ್ದರು. ಯಾವುದೋ ನಮಗೆ ಗೊತ್ತಿಲ್ಲದಷ್ಟು ಹಿಂದಿನ ಕಾಲದಲ್ಲಿ ಇದು ವಿರೂಪಗೊಂಡು ಜಾತಿಗಳಾಗಿಬಿಟ್ಟವು. ವರ್ಣವ್ಯವಸ್ಥೆಯನ್ನು ಕುರೂಪಗೊಳಿಸಿ, ಸ್ವಾರ್ಥಕ್ಕೆ ಆದ್ಯತೆ ನೀಡಿ, ವ್ಯಕ್ತಿಯ ಘನತೆ ಗಾಂಭೀರ್ಯಗಳನ್ನು ಕಡೆಗಣಿಸಿ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯ ಕೊಟ್ಟಿರುವ ಇಂದಿನ ಜಾತಿಪದ್ಧತಿಗೂ, ವೈಜ್ಞಾನಿಕವೂ, ಬುದ್ಧಿಸಂಗತವೂ ಆದ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. ಮುಖದಿಂದ ಬ್ರಾಹ್ಮಣರೂ, ಉದರದಿಂದ ವೈಶ್ಯರೂ, ಬಾಹುಗಳಿಂದ ಕ್ಷತ್ರಿಯರೂ ಮತ್ತು ಪಾದಗಳಿಂದ ಶೂದ್ರರು ಜನಿಸಿದರೆಂದು ಹೇಳಿದ್ದರು. ಈ ವಿಭಾಗಗಳನ್ನು ಜಾತಿಸೂಚಕವಾಗಿ ನೋಡಬಾರದು. ಇದೊಂದು ರೂಪಕವಷ್ಟೆ. ಈ ಅಂಗಗಳಿಂದ ಜೀವಿಗಳ ಜನನವಾಗುವುದಿಲ್ಲವೆಂಬುದು ಸಿದ್ಧಸಂಗತಿ. ಪ್ರಪಂಚದಲ್ಲಿ ವಿಭಿನ್ನತೆ ಅನ್ನುವುದು ಸಹಜವಾದ ಸಂಗತಿ. ಎಲ್ಲರೂ ಒಂದೇ ರೀತಿಯ, ಒಂದೇ ಆಕಾರದ, ಒಂದೇ ವಿಚಾರದವರು ಇರಲು ಸಾಧ್ಯವಿದೆಯೇ? ವಿಭಿನ್ನತೆಯಲ್ಲಿ ಏಕತೆ, ಸಮಾನತೆಗಳನ್ನು ರೂಢಿಸಿಕೊಂಡಾಗಲೇ ಸಮಾಜ ಸ್ವಸ್ಥವಾಗಿರುತ್ತದೆ. ನಾಸ್ತಿಕವಾದದ ಕಮ್ಯೂನಿಸ್ಟ್ ದೇಶಗಳಲ್ಲಿ ಸಹ ವಿದ್ಯಾವಂತರು, ವ್ಯಾಪಾರಿಗಳು, ಸೈನಿಕರು ಮತ್ತು ಶ್ರಮಜೀವಿಗಳು ಇದ್ದೇ ಇರುತ್ತಾರೆ. ಅವರುಗಳಿಗೂ ಮೇಲೆ ಹೇಳಿದ ನಾಲ್ಕು ವಿಭಾಗಗಳು ಅನ್ವಯವಾಗುತ್ತದೆಯಲ್ಲವೇ? ಬ್ರಾಹ್ಮಣ, ಶೂದ್ರ ಇತ್ಯಾದಿ ಪದಗಳ ಬಳಕೆ ಅಪಥ್ಯವೆನಿಸಿದರೆ ಈ ನಾಲ್ಕು ವಿಭಾಗಗಳ ಹೆಸರನ್ನೇ ಇಟ್ಟುಕೊಳ್ಳಬಹುದು. ಶ್ರಮ ಅಥವ ಕರ್ಮ ಪ್ರಧಾನವಾದ ಸಂಗತಿಗಳಿಗೆ ಪಾದಗಳು ಅತ್ಯಾವಶ್ಯಕ. ಆಗಿರುವುದರಿಂದಲೇ ಉಳಿದ ವಿಭಾಗಗಳಿಗೆ ಬೆಲೆ ಅಥವ ಗೌರವ ಸಾಧ್ಯ. ಒಂದು ಕಟ್ಟಡ ಸುಂದರವಾಗಿರಬೇಕಾದರೆ ತಳಪಾಯ ಭದ್ರವಾಗಿರಬೇಕು. ಪಾದಗಳೂ ಸಹ ಶರೀರವೆಂಬ ಅರಮನೆಯ ತಳಪಾಯವೇ ಆಗಿವೆ. ಪಾದಗಳನ್ನು ಕೀಳು ಎಂಬ ಭಾವನೆಯಿಂದ ನೋಡಿದರೆ, ಅರ್ಥ ಮಾಡಿಕೊಂಡರೆ ಅದು ಅಲ್ಪಜ್ಞಾನದ ಸಂಕೇತವಲ್ಲದೆ ಮತ್ತೇನೂ ಅಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವುದೂ ಕೀಳಲ್ಲ, ಯಾರೂ ಕೀಳಲ್ಲ. ಎಲ್ಲವೂ ಉತ್ತಮವೇ, ಎಲ್ಲರೂ ಉತ್ತಮರೇ.
     ಸಮಾನತೆಯ ಪಾಠವನ್ನು ನಮ್ಮ ನಡೆಯುವ ರೀತಿ ನಮಗೆ ಕಲಿಸುತ್ತಿದೆ. ಒಂದು ಕಾಲು ಮುಂದಿಡಬೇಕಾದರೆ ಇನ್ನೊಂದು ಕಾಲು ನೆಲವನ್ನು ಭದ್ರವಾಗಿ ಊರಿ ಸಹಕರಿಸುತ್ತದೆ. ನಂತರದಲ್ಲಿ ಮುಂದೆ ಹೋದ ಕಾಲು ಊರಿ ನಿಂತು ಹಿಂದಿನ ಕಾಲನ್ನು ಮುಂದೆ ಹೋಗಲು ಅನುವು ಮಾಡಿಕೊಡುತ್ತದೆ. ಎಂತಹ ಹೊಂದಾಣಿಕೆ! ನಾವು ಮುಂದುವರೆಯಬೇಕು. ಜೊತೆಜೊತೆಗೆ ಹಿಂದಿರುವವರನ್ನು ಮುಂದೆ ಬರಲು ಸಹಕಾರ ನೀಡಬೇಕು, ಮತ್ತೆ ಮುಂದೆ ಹೋಗಬೇಕು, ಮತ್ತೆ ಹಿಂದಿರುವವರನ್ನು ಮುಂದೆ ಬರಲು ಪ್ರೇರಿಸಬೇಕು. ಇದು ನೈಜ ಸಮಾನತೆಯ ರೀತಿ. ಸಮಾನತೆ ಎಂದರೆ ಎಲ್ಲರೂ ಒಂದೇ ಕಡೆ ನಿಲ್ಲುವುದಲ್ಲ ಆಥವ ಮುಂದೆ ಹೋಗುವವರನ್ನು ತಡೆದು ನಿಲ್ಲಿಸುವುದಲ್ಲ. ಅಭಿವೃದ್ಧಿ ಹೊಂದಲು ಮುಂದೆ ಹೋಗಲೇಬೇಕು, ಹಿಂದುಳಿದವರನ್ನು ಮುಂದೆ ಬರಲು ಸಹಕರಿಸಲೇಬೇಕು. ಸಮಾಜದ ವಿಭಿನ್ನ ಅಂಗಗಳ ಪ್ರತಿನಿಧಿಗಳು ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ಬದಿಗಿರಿಸಿ, ಪರಸ್ಪರ ದ್ವೇಷಿಗಳಂತೆ ನೋಡದೆ ಒಬ್ಬರು ಇನ್ನೊಬ್ಬರಿಗೆ ಪೂರಕ ಅಥವ ಆಧಾರವಾಗಿದ್ದೇವೆಂಬುದನ್ನು ಕಂಡುಕೊಂಡರೆ ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸೀತು!
     ಕಾಲುಗಳ ಮಹಿಮೆಯನ್ನು ಹೇಳುವ ಕೆಲವು ಪದಬಳಕೆಗಳನ್ನು ಗಮನಿಸೋಣ. ಕಾಲೆಳೆಯುವುದು ಅಂದರೆ ಪ್ರಗತಿಗೆ ಅಡ್ಡಿಯಾಗುವುದು, ಕಾಲಿಗೆ ಬೀಳುವುದು ಅಂದರೆ ಶರಣಾಗುವುದು, ಅಡ್ಡಗಾಲು ಹಾಕುವುದು/ಕಾಲು ಕೊಡುವುದು ಅಂದರೆ ತೊಂದರೆ ಕೊಡುವುದು, ಕಾಲು ಮುರೀತೀನಿ ಅಂದರೆ ನನ್ನ ತಂಟೆಗೆ ಬಂದರೆ ಹುಷಾರ್ ಎನ್ನುವುದು, ಕಾಲು ಕಟ್ಟಿಕೊಳ್ಳುವುದು ಅಂದರೆ ಉಪಕಾರ ಬಯಸಿ ಬೇಡಿಕೊಳ್ಳುವುದು, ಕಾಲು ಚಾಚು ಅಂದರೆ ಆರಾಮವಾಗಿರುವುದು, ಹೆಜ್ಜೆಗೆ ಹೆಜ್ಜೆ ಸೇರಿಸು ಅಂದರೆ ಜೊತೆಯಾಗಿ ಹೋಗುವುದು, ಸ್ವಂತ ಕಾಲಿನ ಮೇಲೆ ನಿಲ್ಲುವುದು ಅಂದರೆ ಪರಾವಲಂಬಿಯಾಗದಿರುವುದು- ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಅವನು ಕಾಲಿಟ್ಟ ಕಡೆ ಸ್ಮಶಾನವಾಗುತ್ತದೆ ಎಂದು ದುಷ್ಟರ ಕುರಿತು ಹೇಳುವಂತೆ, ಅವರು ಕಾಲಿಟ್ಟಲ್ಲಿ ಒಳ್ಳೆಯ ಮಳೆ, ಬೆಳೆ ಆಗುತ್ತದೆ ಎಂದು ಸತ್ಪುರುಷರ ಕುರಿತು ಹೇಳುತ್ತಾರೆ. ಒಟ್ಟಿನಲ್ಲಿ ಕರ್ಮಯೋಗಿ ಪಾದಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಕಾಲುಗಳನ್ನು ಇಡುವ ಮುನ್ನ ಅದು ಸರಿಯಾದ ಸ್ಥಳವೇ ಎಂದು ಪರೀಕ್ಷಿಸಿ ಭದ್ರವಾಗಿ ಕಾಲೂರಿ ಮುಂದುವರೆಯೋಣ. ಆಗ ಸ್ವರ್ಗ ಕೇವಲ ನಮ್ಮ ತಲೆಯ ಮೇಲೆ ಮಾತ್ರ ಅಲ್ಲ, ನಮ್ಮ ಕಾಲುಗಳ ಅಡಿಯೂ ಇದೆ ಎಂಬ ಅರಿವು ಮೂಡದಿರದು.
-ಕ.ವೆಂ.ನಾಗರಾಜ್.
***************
ದಿನಾಂಕ 28.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಮಂಗಳವಾರ, ಜನವರಿ 26, 2016

ತಾಯಿ ಭಾರತಿಗೆ ನಮಿಸೋಣ!


     26.01.2016ಕ್ಕೆ ಭಾರತದ ಸಂವಿಧಾನವನ್ನು ಅಧಿಕೃತವಾಗಿ ಜಾರಿಗೆ ತಂದು 66 ವರ್ಷಗಳಾದವು.      ಇದರ ನೆನಪಿನಲ್ಲಿ ಪ್ರತಿವರ್ಷ ಈ ದಿನವನ್ನು ಗಣರಾಜ್ಯೋತ್ಸವವಾಗಿ ಅಚರಿಸಲಾಗುತ್ತಿದೆ. ಭಾರತದ ಸಂವಿಧಾನ ಭಾರತೀಯರೆಲ್ಲರಿಗೆ ಬಹಳ ಪವಿತ್ರವಾದ ಗ್ರಂಥವಾಗಿದೆ. ಸಂವಿಧಾನ ಮೊದಲು ಜಾರಿಗೆ ಬಂದಾಗ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಹೆಸರಿಸಲಾಗಿತ್ತು. 1975-77ರ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಇದಕ್ಕೆ ಸಮಾಜವಾದಿ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿ, ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಫ್ರಭುತ್ವವಾದಿ ಗಣರಾಜ್ಯವಾಗಿ ಮಾಡಲಾಯಿತು. ಸಂವಿಧಾನ ಪರಮೋಚ್ಛವಾದ ಸಂಗತಿಯಾಗಿದ್ದು ಭಾರತದ ಎಲ್ಲಾ ಕಾನೂನು, ಕಾಯದೆಗಳು, ಸರ್ಕಾರದ ನಡವಳಿಗಳು ಎಲ್ಲವೂ ಸಂವಿಧಾನದ ಆಶಯದಂತೆಯೇ ಇರಬೇಕಾಗಿದೆ. ಸಾರ್ವಭೌಮ ಎಂಬ ಪದದ ಅರ್ಥ ಭಾರತ ಯಾವುದೇ ವಿದೇಶೀ ಅಥವ ಬಾಹ್ಯ ಶಕ್ತಿಗಳ ನಿಯಂತ್ರಣದಲ್ಲಿರದೆ ತನ್ನದೇ ಆದ ಆಡಳಿತವನ್ನು ತನ್ನ ಪ್ರಜೆಗಳ ಮೂಲಕ ಆರಿಸಲ್ಪಟ್ಟ ಸರ್ಕಾರದ ಮೂಲಕ ನಡೆಸುತ್ತದೆ ಎಂದು. ಸಮಾಜವಾದಿ ಎಂಬ ಪದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಎಲ್ಲರಿಗೂ ಒದಗಿಸುವುದಾಗಿದೆ. ಸಾಮಾಜಿಕ ಸಮಾನತೆಯೆಂದರೆ ಯಾವುದೇ ಜಾತಿ, ಮತ, ಪಂಥ, ಲಿಂಗ ಅಥವ ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡದಿರುವುದು ಮತ್ತು ಆರ್ಥಿಕ ಸಮಾನತೆಯೆಂದರೆ ಎಲ್ಲರಿಗೂ ಯಾವುದೇ ತಾರತಮ್ಯ ಮಾಡದೆ ಸಮಾನ ಆರ್ಥಿಕ ಅವಕಾಶಗಳನ್ನು ಒದಗಿಸುವುದು ಮತ್ತು ಸಮಾನ ಜೀವನ ಮಟ್ಟವನ್ನು ಕಲ್ಪಿಸುವುದು ಎಂಬುದಾಗಿದೆ. ಇನ್ನು ಜಾತ್ಯಾತೀತ ಎಂದರೆ ಎಲ್ಲಾ ಧರ್ಮಗಳ ಕುರಿತು ಸಮಾನ ಧೋರಣೆ ಹೊಂದುವುದು ಎಂದು. ಸರ್ಕಾರ ಯಾವುದೇ ಒಂದು ಧರ್ಮದ ಪರ ಅಥವ ವಿರೋಧ ನಿಲುವು ತಳೆಯುವಂತಿಲ್ಲ. ಪ್ರಜಾಪ್ರಭುತ್ವವಾದಿ ಎಂದರೆ ಸರ್ಕಾರಗಳು ಜನರಿಂದ ನೇರವಾಗಿ ಚುನಾವಣೆ ಮೂಲಕ ಆರಿಸಲ್ಪಟ್ಟ ಪ್ರತಿನಿಧಿಗಳಿಂದ ಕೂಡಿರುವುದು. ಗಣರಾಜ್ಯವೆಂದರೆ ರಾಜಪ್ರಭುತ್ವವಿರದೆ ಮತ್ತು ವಂಶಪಾರಂಪರ್ಯ ಆಡಳಿತವಿರದೆ ಜನರಿಂದ ಆರಿಸಲಪ್ಟಟ್ಟವರಿಂದ ಆಡಳಿತವಿರುವ ವ್ಯವಸ್ಥೆ ಆಗಿದೆ. ಸಂವಿಧಾನ ರಚನೆಯಾದ ಮತ್ತು ಘೋಷಿತವಾದ ಸಂದರ್ಭದಲ್ಲಿ ಇದ್ದಂತೆ ಮೂಲ ಆಶಯದಲ್ಲಿದ್ದ ಸಂವಿಧಾನದ ವಿಧಿಗಳಲ್ಲಿ ಅನೇಕ ತಿದ್ದುಪಡಿಗಳಾಗಿದ್ದು ಮೂಲ ಆಶಯಕ್ಕೆ ವಿರೋಧವಾಗಿರುವ ಹಲವಾರು ಅಂಶಗಳು ಈಗ ಸೇರಿವೆ. ಕಳೆದ ಆಗಸ್ಟ್, 2015ರವರೆಗೆ ಬರೋಬ್ಬರಿ 100 ತಿದ್ದುಪಡಿಗಳನ್ನು ಸಂವಿಧಾನಕ್ಕೆ ತರಲಾಗಿದೆ. ತಿದ್ದುಪಡಿಗಳು ಜನಹಿತಕ್ಕೆ ಪೂರಕವಾಗಿದ್ದರೆ ಸ್ವಾಗತಾರ್ಹ. ಆದರೆ ಆಡಳಿತ ನಡೆಸುವವರ ಹಿತವೇ ಪ್ರಾಮುಖ್ಯವಾದ ತಿದ್ದುಪಡಿಗಳು ಸಂವಿಧಾನಕ್ಕೆ ಅಪಚಾರ ತರುತ್ತವೆ. ಉದಾಹರಣೆಗೆ ಹೇಳಬೇಕೆಂದರೆ 1975ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರನ್ನು ಭ್ರಷ್ಠಾಚಾರದ ಆರೋಪದ ಮೇಲೆ ಅಲಹಾಬಾದ್ ನ್ಯಾಯಾಲಯ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಅರ್ಹಗೊಳಿಸಿದಾಗ ಅಧಿಕಾರ ಉಳಿಸಿಕೊಳ್ಳಲು ಅವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ನಿರರ್ಥಕಗೊಳಿಸಿದರು. ಈ ತಿದ್ದುಪಡಿಗೆ ಆಗ ಕಾಂಗ್ರೆಸ್ ಅಧಿಕಾರದಲ್ಲಿದ್ದ 17 ರಾಜ್ಯಗಳು ಬೆಂಬಲಿಸಿದವು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಮೇಲೆ ನಿರ್ಬಂಧ ಹೇರುವ ಅಂಶಗಳನ್ನು ಅಳವಡಿಸಲಾಯಿತು. ಇಂದು ಸಾಮಾಜಿಕ ಆರ್ಥಿಕ ಸಮಾನತೆ, ಜಾತ್ಯಾತೀತತೆ ಅನ್ನುವುದು ನಗೆಪಾಟಲಿನ ಸಂಗತಿಗಳಾಗಿವೆ. ಜಾತಿ, ಮತ, ಪಂಥ, ಲಿಂಗ, ಭಾಷೆಗಳ ಆಧಾರದಲ್ಲಿ ತಾರತಮ್ಯ ಮಾಡಬಾರದೆಂದಿದ್ದರೂ ಇಂದು ಎಲ್ಲವೂ ಜಾತಿ, ಮತ ಮತ್ತು ಧರ್ಮದ ಆಧಾರದಲ್ಲೇ ನಡೆಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ. ಇರಲಿ ಬಿಡಿ.
     ಇದೇ ತಿಂಗಳು 12ನೆಯ ದಿನಾಂಕದಂದು ಸ್ವಾಮಿ ವಿವೇಕಾನಂದರ 153ನೆಯ ಜನ್ಮದಿನವನ್ನು ಆಚರಿಸಿದೆವು. ಒಳ್ಳೆಯ ಬದಲಾವಣೆಯನ್ನು ನಿರೀಕ್ಷಿಸುವ ಸಂಕ್ರಾಂತಿಯನ್ನು 15ನೆಯ ದಿನಾಂಕದಂದು ಆಚರಿಸಿದೆವು. ನಿಜಕ್ಕೂ ಭಾರತಕ್ಕೆ ಇದೊಂದು ಪರ್ವಕಾಲವಾಗಿದೆ, ಮಹತ್ವದ ಕಾಲಘಟ್ಟವಾಗಿದೆ. ಭಾರತ ವಿಶ್ವದ ಪ್ರಮುಖ ಶಕ್ತಿ ಆಗುವುದಕ್ಕೆ ಎಲ್ಲಾ ಅರ್ಹತೆ ಪಡೆದಿದ್ದರೂ ಅದನ್ನು ತಡೆಯುವಂತಹ ವಿದೇಶೀ ಶಕ್ತಿಗಳು ಮತ್ತು ನಮ್ಮ ನಡುವೆಯೇ ಇರುವ ವಿಚ್ಛಿದ್ರಕಾರಿ ಶಕ್ತಿಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿವೆ. ಇದನ್ನು ತಡೆಯಬೇಕಾದರೆ ನಮ್ಮ ನಿಮ್ಮ ಯೋಗದಾನವೂ ಈಗ ಅತ್ಯಂತ ಅಗತ್ಯವಾಗಿದೆ. ಪ್ರಪಂಚದ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯಿರುವ ದೊಡ್ಡ ಪ್ರಜಾಪ್ರಭುತ್ವವಾದಿ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾಸಂಸ್ಥೆಯ ಸದಸ್ಯತ್ವವಿಲ್ಲ. ಎಂತಹ ನಾಚಿಕೆಗೇಡು! ನಾವು ಮಾತ್ರ ಸಜ್ಜನ, ಸಂಭಾವಿತರಂತೆ 'ನಾವು ಯಾರ ತಂಟೆಗೂ ಹೋಗುವುದಿಲ್ಲ, ನಮ್ಮ ತಂಟೆಗೂ ಯಾರೂ ಬರುವುದು ಬೇಡ' ಎಂಬಂತೆ ಕುಳಿತುಕೊಂಡರೆ ಮುಂದೆ ಆಗುವ ಅಪಾಯಗಳನ್ನು ಎದುರಿಸಬೇಕಾದವರು, ಸಹಿಸಬೇಕಾದವರು ನಾವೇ ಎಂಬುದನ್ನು ಮರೆಯಬಾರದು. ನಾವು ಯಾರ ತಂಟೆಗೂ ಹೋಗದೇ ಇದ್ದರೂ ನಮ್ಮನ್ನು ಕೆಣಕುವ, ಅಪಮಾನಿಸುವ ಶಕ್ತಿಗಳು ಪ್ರಬಲವಾಗಿವೆ, ನಮ್ಮ ಸಹಜ ಸಹನೆಯ ಗುಣವನ್ನು ಹೇಡಿತನವೆಂಬಂತೆ ಬಿಂಬಿಸುವ ಘಟನೆಗಳು ನಡೆಯುತ್ತಿವೆ. 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತದ ಬಹುದೊಡ್ಡ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತು. ಆಗಿನ ಪ್ರಧಾನಿ ನೆಹರೂ 'ಅಲ್ಲಿ ಹುಲ್ಲೂ ಸಹ ಬೆಳೆಯುವುದಿಲ್ಲ, ಅದಕ್ಕಾಗಿ ಏಕೆ ಚಿಂತಿಸಬೇಕು?' ಎಂಬ ಹೇಳಿಕೆ ನೀಡಿದ್ದರು. ನೆರೆಯ ಪಾಕಿಸ್ತಾನ ಕಾಶ್ಮೀರದ ದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿದೆ. ಆಯಕಟ್ಟಿನ ಪ್ರದೇಶವನ್ನು ಚೀನಾಕ್ಕೆ ಧಾರೆ ಎರೆದಿದೆ. ಚೀನಾ ಈಗಲೂ ಸಹ ಭಾರತದ ಪ್ರದೇಶದ ಮೇಲೆ ಹತೋಟಿ ಸಾಧಿಸುವ ಪ್ರಯತ್ನ ನಡೆಸುತ್ತಲೇ ಇದೆ, ಯಶಸ್ವಿಯೂ ಆಗುತ್ತಿದೆ. ಜನರನ್ನು ಇಂತಹ ವಿಷಯಗಳಲ್ಲಿ ರಾಷ್ಟ್ರೀಯ ಹಾಗೃತಿ ಉಂಟು ಮಾಡಬೇಕಾದ ಮಾಧ್ಯಮಗಳು ಶಾರುಕ್ ಖಾನ್, ಅಮೀರ್ ಖಾನ್ ಮುಂತಾದ ಕಡೆಗೆ ಹೊರಳಿಸಿ ದಿಕ್ಕು ತಪ್ಪಿಸುತ್ತಿವೆ. ಮತಾಂತರಗಳಿಂದ ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಉತ್ತರ ಭಾರತದ ಏಳು ರಾಜ್ಯಗಳಲ್ಲಿ ಕ್ರೈಸ್ತ ಮತಾವಲಂಬಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪ್ರತ್ಯೇಕ ರಾಜ್ಯ, ದೇಶಗಳಾಗುವ ಹಂಬಲ ಹೊಂದಿವೆ. ಪಕ್ಕದ ಕೇರಳ ಮತ್ತು ಪಶ್ಚಿಮ ಬಂಗಾಳಗಳು ಹೊಸ ಕಾಶ್ಮೀರಗಳಾಗುವತ್ತ ದಾಪುಗಾಲಿಡುತ್ತಿವೆ. ಇದಕ್ಕೆ ಪೋಷಕರಾಗಿ, ಬೆಂಬಲವಾಗಿ ಜಾತ್ಯಾತೀತತೆಯ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕೀಯ ಪಕ್ಷಗಳು ನಿಂತಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ಇದ್ದುಕೊಂಡು ನಮಗೇ ದ್ರೋಹ ಬಗೆಯುತ್ತಿರುವ ಮತಾಂಧರುಗಳು ಭಯೋತ್ಪಾದಕರುಗಳಿಗೆ ರಾಜಾರೋಷವಾಗಿ ಬೆಂಬಲ ಕೊಡುತ್ತಿದ್ದಾರೆ. 15 ನಿಮಿಷಗಳ ಕಾಲ ಪೋಲಿಸರು ಸುಮ್ಮನಿದ್ದರೆ 25 ಕೋಟಿ ಮುಸ್ಲಿಮರು 75 ಕೋಟಿ ಹಿಂದೂಗಳನ್ನು ಹೊಸಕಿಹಾಕಿಬಿಡುತ್ತಾರೆ ಎಂಬಂತಹ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುವಷ್ಟು ಧಾರ್ಷ್ಟ್ಯ ಅವರಿಗೆ ಇದೆ. ಅವರು ನಮ್ಮ ಲೋಕಸಭಾ ಸದಸ್ಯರೂ ಆಗಿದ್ದಾರೆ ಎಂಬುದು ಆಘಾತಕಾರಿ ಸಂಗತಿಯಾಗಿದೆ. ಪ್ರಚೋದನಕಾರೀ ಭಾಷಣಕ್ಕಾಗಿ ಅವರನ್ನು ಬಂಧಿಸಿದಾಗ ಸಾವಿರಾರು ಜನ ಮತಾಂಧರು ಅವರ ಪರವಾಗಿ ಬೀದಿಗಿಳಿದು ಪ್ರತಿಭಟಿಸುತ್ತಾರೆ!
     ಇತಿಹಾಸದಿಂದ ನಾವು ಪಾಠ ಕಲಿಯುವುದೇ ಇಲ್ಲವೆನ್ನುವುದು ದೊಡ್ಡ ದುರಂತ. ಹಿಂದೆ ಪೃಥ್ವೀರಾಜನ ಏಳಿಗೆ ಸಹಿಸದ ನೆರೆಯ ರಾಜ ಜಯಚಂದ್ರ ಅವನ್ನು ಮಟ್ಟ ಹಾಕಬೇಕೆಂದು ಮಹಮದ್ ಘೋರಿಗೆ ಎಲ್ಲಾ ನೆರವು ನೀಡಿದ್ದ. ಪರಿಣಾಮ ಇಡೀ ಭಾರತ ಮುಂದಿನ ಎಂಟು ಶತಮಾನಗಳ ಮೊಘಲರ ಗುಲಾಮಗಿರಿಗೆ ಒಳಗಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ಮಂತ್ರಿ ಮಣಿಶಂಕರ ಐಯರ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಟಿವಿಯಲ್ಲಿ ಸಂದರ್ಶನ ನೀಡುತ್ತಾ ಹೇಳುತ್ತಾರೆ: "ಮೋದಿಯರನ್ನು ಅಧಿಕಾರದಿಂದ ಇಳಿಸಲು ನಮಗೆ ಸಹಾಯ ಮಾಡಿ." ನಮ್ಮದೇ ಸರ್ಕಾರವನ್ನು, ಜನರಿಂದ ಆಯ್ಕೆಗೊಂಡ ಸರ್ಕಾರವನ್ನು, ಕೆಳಗಿಳಿಸಲು ಶತ್ರುರಾಷ್ಟ್ರದ ಸಹಕಾರ ಕೇಳುವ ಇಂತಹ ದೇಶದ್ರೋಹಿಗಳ ಸಂಖ್ಯೆ ಕಡಿಮೆಯೇನಲ್ಲ. ಜಯಚಂದ್ರನ ಸಂತತಿಯವರಾದ ಇವರಿಗೆ ಅಧಿಕಾರ ಮುಖ್ಯವೇ ಹೊರತು, ದೇಶದ ಹಿತ ಮುಖ್ಯವಲ್ಲ. ಅಧಿಕಾರಕ್ಕಾಗಿ ಯಾವ ಕೆಳಮಟ್ಟಕ್ಕೂ ಇವರು ಹೋಗಬಲ್ಲರು. ನಮ್ಮ ಕೆಲವು ಮಾಧ್ಯಮಗಳೂ ಸಹ ಹಣದ ಆಸೆಗೆ ಬಲಿಯಾಗಿ ದೇಶದ ಗೌರವಕ್ಕೆ ಧಕ್ಕೆ ತರುವಂತಹ ಸುಳ್ಳು ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿರುವುದು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿರುವುದು ಎದ್ದು ಕಾಣುತ್ತಿದೆ.
     ಇಂತಹ ಸಂದರ್ಭದಲ್ಲಿ ಸಜ್ಜನಶಕ್ತಿಯನ್ನು ಜಾಗೃತಿಗೊಳಿಸುವ ಕೆಲಸವನ್ನು ನಾವು-ನೀವೇ ಮಾಡಬೇಕಿದೆ. ಈ ಕೆಲಸ ಈಗಲೇ ಆಗಬೇಕೆನ್ನುವುದಕ್ಕೆ ಮಹತ್ವದ ಕಾರಣವೂ ಇದೆ. ಭಾರತದಲ್ಲಿ ಈಗ ಯುವಜನರ ಸಂಖ್ಯೆ ಒಟ್ಟು ಜನಸಂಖ್ಯೆಯ 3/2 ರಷ್ಟಿದೆ. ಇನ್ನು 25 ವರ್ಷಗಳಲ್ಲಿ ಯುವಭಾರತ ವೃದ್ಧಭಾರತ ಆಗಿಬಿಡುತ್ತದೆ. ಆಗ ವೃದ್ಧರ ಸಂಖ್ಯೆಯೇ ಜಾಸ್ತಿಯಾಗಿರುತ್ತದೆ. ಆದ್ದರಿಂದ ಈಗ ಮಾಡದಿದ್ದರೆ ಮುಂದೆ ಮಾಡಲಾಗುವುದಿಲ್ಲ. ಒಂದು ವೇದಮಂತ್ರ ಹೇಳುತ್ತದೆ: ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.) 'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಕಾರ್ಯಪ್ರವೃತ್ತವಾಗುತ್ತವೋ, ಎಲ್ಲಿ ಸಜ್ಜನರಾದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ! ಆ ಶಕ್ತಿ ಈಗ ಒಟ್ಟಗೂಡಿ ಕೆಲಸ ಮಾಡುವಂತಹ ಪರ್ವಕಾಲ ಇದೇ ಆಗಿದೆ. ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ | ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.  

ಬುಧವಾರ, ಜನವರಿ 20, 2016

ಅನ್ಯಾಯದ ವಿರುದ್ಧ ಯುವಶಕ್ತಿ ಧ್ವನಿ ಎತ್ತಿದರೆ ತಡೆಯುವವರು ಯಾರು?


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ!
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಈ ಜಗತ್ತು ಭಿನ್ನತೆಗಳ ಗೂಡು. ಭಿನ್ನತೆಯಿಂದಲೇ ಜಗತ್ತು ನಡೆಯಲು ಸಾಧ್ಯ. ಎಲ್ಲರೂ ಬುದ್ಧಿವಂತರು, ಜ್ಞಾನವಂತರಾಗಬೇಕು ಎಂದು ಬಯಸಿದರೂ ಅದು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿರುತ್ತಾರೆಯೇ? ಎಲ್ಲರೂ ಶಕ್ತಿವಂತರಾಗಿರುತ್ತಾರೆಯೇ? ಎಲ್ಲರೂ ವ್ಯಾಪಾರಿಗಳಾಗಲು ಸಾಧ್ಯವೇ? ಎಲ್ಲರೂ ಧೃಢಕಾಯರಾಗಿರುವ ಯೋಧರಾಗಬೇಕೆಂದು ಇಷ್ಟಪಟ್ಟರೂ ಆಗುತ್ತದೆಯೇ? ಹೀಗಿರುವಾಗ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಪರಸ್ಪರ ಪೂರಕರಾಗಿ ಕೆಲಸ ಮಾಡಿದರೆ ದೇಶಕ್ಕೆ ಒಳಿತಲ್ಲವೇ? ಇವರೆಲ್ಲರನ್ನೂ ಸಮನ್ವಯದಿಂದ ಕರೆದೊಯ್ಯಬಲ್ಲ ಆಡಳಿತವೇ ಉತ್ತಮ ಆಡಳಿತವೆನಿಸಿಕೊಳ್ಳುತ್ತದೆ. ಸ್ವಾರ್ಥಕ್ಕಾಗಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದರೆ ಅಥವ ಅಂತಹವರೇ ಆಡಳಿತಗಾರರಿಗೆ ಸಲಹೆ ಕೊಡುವವರಾದರೆ ದೇಶ ಅಧಃಪತನದ ಹಾದಿ ಹಿಡಿದಂತೆಯೇ! ಆಡಳಿತ ಮಾಡುವ ಸ್ಥಾನದಲ್ಲಿರುವವರು ತಾವು ಪ್ರತಿನಿಧಿಸುವ ಸಮೂಹದ ಅಥವ ಜನಾಂಗದ ಅಥವ ತಮ್ಮನ್ನು ಬೆಂಬಲಿಸುವವರ ಹಿತವನ್ನು ಮಾತ್ರ ಪ್ರಧಾನವಾಗಿರಿಸಿಕೊಂಡರೆ ಉಳಿದವರು ಸಹಜವಾಗಿ ಅಸಂತುಷ್ಟರಾಗುತ್ತಾರೆ. ಶಾಸನಾಧೀಶರು ಇಡೀ ಸಮಾಜದ ಹಿತವನ್ನು ಸಮಾನವಾಗಿ ನೋಡುವವರಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ದ್ವನಿಯೆತ್ತಿದಾಗ ದೇಶದ ವಿದ್ವಜ್ಜನರು ಮತ್ತು ಪ್ರಚಂಡ ಯುವಶಕ್ತಿ ಅವರ ಬೆನ್ನಿಗೆ ನಿಂತಿತ್ತು. ದೇಶದಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆಂದು ಬಹುಜನರು ನಿರೀಕ್ಷಿಸಿದ್ದರು. ಆದರೆ ಆಡಳಿತಶಾಹಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ಚಳುವಳಿಯನ್ನು ಹತ್ತಿಕ್ಕಿಬಿಟ್ಟಿತು. ಅದರ ಪರಿಣಾಮವನ್ನು ಆಡಳಿತ ಪಕ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಸೋಲುವ ಮೂಲಕ ಅನುಭವಿಸಿತು.
     ಅಧಿಕಾರದ ಬಲದಿಂದ ಬಹುಜನರ ಅಭಿಪ್ರಾಯಗಳನ್ನು ಮೀರಿ ನಡೆದುಕೊಳ್ಳುವ ನಡವಳಿಕೆಗಳನ್ನು ಆಡಳಿತಗಾರರಲ್ಲಿ ಕಾಣುತ್ತಿದ್ದೇವೆ. ಭ್ರಷ್ಠಾಚಾರದ ಆರೋಪಗಳನ್ನು ಹೊತ್ತ ಮಂತ್ರಿಗಳು, ಶಾಸಕರನ್ನು ರಾಜಾರೋಷಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಎಲ್ಲರನ್ನೂ ಸಮನಾಗಿ ಕಾಣಬೇಕಾದ ಕಾನೂನುಗಳನ್ನು ಸರ್ಕಾರದ ಕ್ರಮಗಳನ್ನು ಒಪ್ಪದವರ ವಿರುದ್ಧ ಕಠಿಣವಾಗಿ ಬಳಸುವುದನ್ನು ಮತ್ತು ಸಮರ್ಥಕರ ಅಪರಾಧಗಳನ್ನು ಕಾಣದಂತಿರುವುದು ಅಥವ ಮುಚ್ಚಿ ಹಾಕುವ ಪ್ರಯತ್ನಗಳನ್ನು ಎಗ್ಗಿಲ್ಲದೆ ಮಾಡುವುದನ್ನು ಕಾಣುತ್ತಿದ್ದೇವೆ. ಭ್ರಷ್ಠಾಚಾರ ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಠಾಚಾರದ ಕೂಪವಾಗುವುದಕ್ಕೆ ಆಡಳಿತದಲ್ಲಿರುವವರು ಸಹಕಾರಿಗಳಲ್ಲವೆಂದು ಹೇಳಲಾಗುವುದಿಲ್ಲ. ತನಿಖಾ ಸಂಸ್ಥೆಗಳು, ಆಯೋಗಗಳು ಆಡಳಿತದ ಮರ್ಜಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡೂ ಕಾಣದಂತೆ ಇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಗೆ ಆಡಳಿತಗಾರರಿಗೆ ಸಲಹೆ ಕೊಡುವವರ, ಅವರ ಬೆನ್ನಿಗೆ ನಿಂತಿರುವ ಸ್ವಹಿತಾಸಕ್ತಿ ಪ್ರಧಾನ ಶಕ್ತಿಗಳ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿವೆ. ಇಂದು ಅಸಹನೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಅಸಹನೆ ಅನ್ನುವುದು ಒಮ್ಮುಖವಾಗಿಲ್ಲ ಎಂಬುದನ್ನು ಅಸಹನೆಯನ್ನು ದಾಳವಾಗಿ ಬಳಸುತ್ತಿರುವವರ ವಿರುದ್ಧದ ಅಸಹನೆಯೂ ಪ್ರಖರವಾಗಿರುವುದು ತೋರಿಸುತ್ತಿದೆ.
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಇಂದು ಅಂತರ್ಜಾಲ ತಾಣಗಳು ಪ್ರಭಾವಿಯಾಗಿವೆ. ಸಮಯಸಾಧಕರ ಬಂಡವಾಳಗಳು ಬಯಲಾಗುತ್ತಿವೆ. ಇದರ ಮುಂದೆ ಎಷ್ಟೋ ಸಲ ಮಾಧ್ಯಮಗಳೂ ಮಂಕಾಗಿವೆ. ನಮ್ಮ ಗೋಳು ಕೇಳುವವರಾರು ಎಂದು ಹತಾಶೆಗೊಳ್ಳುತ್ತಿದ್ದ ಸ್ಥಿತಿ ಈಗ ಬದಲಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.
***************
ದಿನಾಂಕ 31.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜನವರಿ 15, 2016

ಕಳೆಯುವುದು ಸಮಯವಲ್ಲ, ಜೀವನ!


ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಅಷ್ಟಕ್ಕೂ ಈ 'ಪುರುಸೊತ್ತು' ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೂ ನಮಗೆ ಸಮಯವಿರುವುದಿಲ್ಲ! ಈ ಸಮಯ ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ 24 ಗಂಟೆ, ಇನ್ನೊಬ್ಬರಿಗೆ 20 ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ್‍ವೇದಿಯವರು, ನರೇಂದ್ರ ಮೋದಿ ಮುಂತಾದವರಿಗೂ ಇರುವುದು ಇತರ ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಬಲಿತರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ.
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರಾಗಿರುತ್ತಾರೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತಾಸ ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಸಮಯ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎಂದಲ್ಲ. ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ!
     'ಹೇಗೋ ಜೀವನ ನಡೆಸಿದರಾಯಿತು' ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. 'ಹುಟ್ಟಿದ, ಇದ್ದ, ಒಂದು ದಿನ ಸತ್ತ' ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ 80ರಿಂದ90 ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುವಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ. ನಿಜವಾದ ಸಂಗತಿಯೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
     'ಹೊತ್ತೇ ಹೋಗುವುದಿಲ್ಲ' ಎನ್ನುವವರು, 'ಟೈಮ್ ಕಳೆಯಲು' ಏನಾದರೂ ಮಾಡಬೇಕಲ್ಲಾ ಅನ್ನುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆ ಕಂಡುಬರುತ್ತಾರೆ. ಇವರಿಗೆ 'ಮಾಡಬೇಕಾದ' ಕೆಲಸಗಳಿಗೆ ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಟೈಮ್ ಪಾಸ್ ಅಲ್ಲ, ಲೈಫ್ ಲಾಸ್! ಇದರಿಂದಾಗಿ ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ 'ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ' ಆಗಿರುತ್ತದೆ. 'ನಮ್ಮ ಟೈಮೇ ಸರಿಯಿಲ್ಲ' ಎಂದು ಉದ್ಗರಿಸುತ್ತಾರೆ. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, 'ದುಡಿಯದೇ' ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.      'ಕಾಲಾಯ ತಸ್ಮೈ ನಮಃ'. ಕನಸು ನನಸಾಗಬೇಕಾದರೆ ಅದಕ್ಕಾಗಿ ನಿಶ್ಚಿತ ಸಮಯವನ್ನು ಕೊಡಲೇಬೇಕು.
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.
***************
ದಿನಾಂಕ 14.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಜನವರಿ 12, 2016

ಯಾರು ನಿಜವಾದ ರಾಕ್ಷಸರು?


     ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು, ರಕ್ತಪಿಪಾಸು ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ರಾಕ್ಷಸರು ನಿಜವಾಗಿ ಹೀಗಿರುತ್ತಾರೆಯೇ?
     ರಕ್ಷಃ ಅಥವ ರಕ್ಷಸ್ ಅಂದರೆ ಶತ್ರುಗಳು, ದುರ್ಭಾವನೆ, ದುರ್ವಿಚಾರ ಎಂದರ್ಥ. ಯಾರು ರಕ್ಷಸ್ಸುಗಳನ್ನು, ಅಂದರೆ ದುರ್ಭಾವನೆಗಳನ್ನು, ದುರ್ವಿಚಾರಗಳನ್ನು ಹೊಂದಿರುತ್ತಾರೋ, ದುಷ್ಕಾರ್ಯಗಳನ್ನು ಮಾಡುತ್ತಾರೋ ಅವರೇ ರಾಕ್ಷಸರು. ರಾಕ್ಷಸತ್ವಕ್ಕೆ ಯಾವುದೇ ಜಾತಿಯ ಕಟ್ಟಿಲ್ಲ. ರಾಕ್ಷಸನೂ ಒಬ್ಬ ಮಾನವ ಜೀವಿಯೇ ಹೊರತು ಬೇರೆಯಲ್ಲ. ಒಬ್ಬ ರಾಕ್ಷಸನಾಗುವುದು ಅಥವ ಮಾನವನಾಗುವುದು ನಡವಳಿಕೆಯಿಂದ ಅಷ್ಟೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹಗಳೇ ರಕ್ಷಸ್ಸುಗಳು. ಅದಕ್ಕೆ ಬಲಿಯಾಗಿ ಕುಕೃತ್ಯಗಳನ್ನು ಎಸಗುವವರೇ ರಾಕ್ಷಸರು.
     ಧೃತರಾಷ್ಟ್ರನ ಪುತ್ರಮೋಹ ಅವನ ನೂರು ಮಕ್ಕಳನ್ನೂ ಅವನು ಬದುಕಿದ್ದಾಗಲೇ ಬಲಿ ತೆಗೆದುಕೊಂಡಿತು. ದೃಷ್ಟಿಹೀನನಾಗಿದ್ದ ಆತ ದುರ್ಯೋಧನನ ಮೇಲಿನ ಅತಿಯಾದ ಮೋಹದಿಂದ ನ್ಯಾಯ, ನೀತಿ, ಧರ್ಮಗಳ ವಿಷಯದಲ್ಲೂ ಸಹ ಕುರುಡನಾಗಿದ್ದ. ಮತಾಂಧರು ಸಹಮಾನವರನ್ನೇ ಕಿಂಚಿತ್ತೂ ಕರುಣೆಯಿಲ್ಲದೆ ಹಿಂಸಾತ್ಮಕವಾಗಿ ಬಲಿ ತೆಗೆದುಕೊಳ್ಳುತ್ತಿರುವುದನ್ನೂ ಕಾಣುತ್ತಿದ್ದೇವೆ. ಅಜ್ಞಾನದ ಪರಮಾವಧಿಯೆನ್ನಬಹುದಾದ ಈ ಮೋಹ ಮಾನವನನ್ನು ದಾನವನನ್ನಾಗಿ ಮಾಡುತ್ತದೆ.
     ಕೋಪದಿಂದಾಗಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ವಿವೇಚಿಸುವ ಶಕ್ತಿಯನ್ನು ಹೊಸಕಿಹಾಕಿ ಪಶುವಿನಂತೆ ವರ್ತಿಸುವ ವ್ಯಕ್ತಿಗೆ ಸ್ನೇಹಿತ-ವೈರಿ, ತನ್ನವರು-ಬೇರೆಯವರು, ಸೋದರ-ಸೋದರಿ, ಹಿರಿಯರು-ಕಿರಿಯರು ಮುಂತಾದ ಯಾವ ವ್ಯತ್ಯಾಸವೂ ಗೊತ್ತಾಗದು. ಗೊತ್ತಾಗುವಷ್ಟರಲ್ಲೇ ಅನಾಹುತ ಜರುಗಿಬಿಟ್ಟಿರುತ್ತದೆ. ಸಭ್ಯತೆ, ಸಂಸ್ಕೃತಿ, ಸ್ಥಾನ-ಮಾನಗಳ ಪರಿವೆಯೂ ಕೋಪಿಷ್ಠನಿಗೆ ಇರುವುದಿಲ್ಲ. ಕೋಪವೆಂಬ ರಕ್ಕಸನಿಂದ ಎಲ್ಲೆಲ್ಲೂ ಅಪಕಾರ, ಎಲ್ಲೆಲ್ಲೂ ಹಾಹಾಕಾರ!
     ಮತ್ಸರದ ಕುರಿತು ಹೇಳಲೇಬೇಕಿಲ್ಲ. ಪೃಥ್ವೀರಾಜನ ಏಳಿಗೆ ಸಹಿಸದ ಜಯಚಂದ್ರನ ಮತ್ಸರ ಭಾರತವನ್ನು ಶತಮಾನಗಳ ಕಾಲ ದಾಸ್ಯಕ್ಕೆ ದೂಡಿತು. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಮತ್ಸರ ಅನ್ನುವುದು ನಮ್ಮ ಒಳಗಿನ ಕಲ್ಮಶ, ನಿವಾರಿಸಿಕೊಂಡರೆ ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
     ಇನ್ನು ಕಾಮದ ವಿಷಯ ಹೇಳುವುದೇ ಬೇಡ. ರಾವಣನ ವಧೆಯಾದ ಸಂದರ್ಭದಲ್ಲಿ ಮಂಡೋದರಿ ಶೋಕಿಸಿದ ಪರಿ ಇದು: 'ನೀನು ಮೊದಲು ಇಂದ್ರಿಯಗಳನ್ನು ಜಯಿಸಿ ಮೂಲೋಕಗಳಿಗೆ ಒಡೆಯನಾದೆ. ಆ ಇಂದ್ರಿಯಗಳು ಅದನ್ನು ನೆನಪಿನಲ್ಲಿಟ್ಟುಕೊಂಡಿದ್ದವೋ ಎಂಬಂತೆ ನಿನ್ನ ಮೇಲೆ ದ್ವೇಷ ಸಾಧಿಸಿ ನಿನ್ನನ್ನು ಗೆದ್ದವು.' ಜೀವನಕ್ಕೆ ಬೇಕಾದ ಅಮೂಲ್ಯ ಪಾಠ ಈ ಮಾತಿನಲ್ಲ್ಲಿದೆ. ಕಾಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.
     ಮದ ಸೊಕ್ಕಿ ಮೆರೆಯುವವರನ್ನು ಯಾರು ಇಷ್ಟಪಡುತ್ತಾರೆ? ಮದಕ್ಕೆ ಹಲವು ರೂಪಗಳಿವೆ- ಸಂಪತ್ತಿನ ಮದ, ಅಧಿಕಾರ ಮದ, ರೂಪ ಮದ, ಯೌವನದ ಮದ, ತಿಳಿದವನೆಂಬ ಮದ, ಇತ್ಯಾದಿ. ಸಿಗಬೇಕಾದ ಸಂಸ್ಕಾರ ಸಿಗದಿದ್ದಾಗ ಮದದ ಠೇಂಕಾರಕ್ಕೆ ಮಿತಿ ಇರುವುದಿಲ್ಲ. ಮದದ ಕಾಯಿಲೆಯಿಂದ ನರಳುತ್ತಿರುವವರಿಂದ ದೂರವಿರುವುದೇ ಕ್ಷೇಮ.
     ಲೋಭಿಗಳಿಗೆ ಯಾವುದೇ ನೀತಿ, ನಿಯಮಗಳು, ಸಿದ್ಧಾಂತಗಳು ಪಥ್ಯವಾಗುವುದಿಲ್ಲ. ಅವರ ಒಂದೇ ಗುರಿ ಎಲ್ಲವೂ ತಮಗಿರಲಿ ಎಂಬುದಷ್ಟೇ. ಇದರಿಂದಾಗಿ ಆಸ್ತಿಕತೆ, ಧಾರ್ಮಿಕತೆ, ಒಳ್ಳೆಯ ವಿಚಾರಗಳು, ನಡೆಗಳು, ಒಟ್ಟಾರೆಯಾಗಿ ಸತ್ಪ್ರವೃತ್ತಿಗಳು ಮರೆಯಾಗುತ್ತವೆ. ಕ್ರೂರ ಪಶುಗಳಿಗೂ ಅವರಿಗೂ ವ್ಯತ್ಯಾಸ ಇರದೆ, ಸಮಾಜ ದುಸ್ಥಿತಿಗೆ ಜಾರುತ್ತದೆ. ಲೋಭಿ ತಾನು ಕೆಡುವುದಲ್ಲದೆ, ಸಮಾಜವನ್ನೂ ಕೆಡಿಸುತ್ತಾನೆ. ಲೋಭಿಯಾದವರು ಯಾವ ಮಾರ್ಗದಲ್ಲೇ ಆಗಲಿ, ತನಗೆ ಹಣ ಬಂದರಾಯಿತು ಎಂಬ ಮನೋಭಾವದವನಾಗಿದ್ದು, ಈ ಕಾರಣದಿಂದಲೇ ಕಪ್ಪು ಹಣ, ಭ್ರಷ್ಠಾಚಾರ, ಕಾಳಸಂತೆ, ಜೂಜು, ಬೆಟ್ಟಿಂಗ್, ಕಲಬೆರಕೆ, ಮಾದಕ ದ್ರವ್ಯಗಳ ವ್ಯಾಪಾರ. ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ, ದೇಶದ್ರೋಹದ ಚಟುವಟಿಕೆಗಳು, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಮುಂತಾದವುಗಳು ವಿಜೃಂಭಿಸುತ್ತವೆ.
     ರಾಕ್ಷಸರು ಹೊರಗೆ ಎಲ್ಲೋ ಇಲ್ಲ. ನಮ್ಮೊಳಗೇ ಇದ್ದಾರೆ. ಅವರನ್ನು ಹತ್ತಿಕ್ಕಬೇಕಾದವರು ನಾವೇ! ಅವಿವೇಕದ ರಕ್ಕಸನನ್ನು ಹತ್ತಿಕ್ಕಲು ವಿವೇಕದ ಪರಮಾತ್ಮನೇ ಬರಬೇಕು. ವಿವೇಚಿಸಿ ನಡೆಯುವುದು, ಸತ್ಸಂಗ, ಸಜ್ಜನ ಸಹವಾಸ, ಸಾತ್ವಿಕ ಆಹಾರ, ಸಂಸ್ಕಾರಯುತ ಮನೆ, ಉತ್ತಮ ಮಾರ್ಗದರ್ಶನ, ನೈತಿಕ ಮೌಲ್ಯ ಬೋಧಿಸುವ ಶಿಕ್ಷಣ- ಇವು ಒಳಗಿನ ರಾಕ್ಷಸರನ್ನು ಹತ್ತಿಕ್ಕಲು ಇರುವ ಪರಿಣಾಮಕಾರಿ ಆಯುಧಗಳಾದರೆ, ಹೊರಗಿನ ರಾಕ್ಷಸರನ್ನು ನಿಯಂತ್ರಿಸಲು ಉಪಯೋಗಿಸಬಹುದಾದ ಆಯುಧಗಳೆಂದರೆ ಸಾಮ, ದಾನ, ಭೇದ ಮತ್ತು ದಂಡ. ಒಬ್ಬ ದುರ್ಜನನನ್ನು ಮನ ಪರಿವರ್ತಿಸಿ, ಯೋಗ್ಯ ತಿಳುವಳಿಕೆ ನೀಡಿ ಸಜ್ಜನನನ್ನಾಗಿಸಿದರೆ, ಒಬ್ಬ ರಾಕ್ಷಸ ಕಡಿಮೆಯಾಗುವುದರ ಜೊತೆಗೆ ಒಬ್ಬ ಸಜ್ಜನನ ಸಂಖ್ಯೆ ಹೆಚ್ಚಾಗುತ್ತದೆ. ಮನ ಪರಿವರ್ತನೆ ಸಾಧ್ಯವೇ ಇಲ್ಲ, ಅವನಿಂದ ಸಮಾಜಕ್ಕೆ ಹಾನಿ ತಪ್ಪಿದ್ದಲ್ಲ ಅನ್ನಿಸಿದರೆ, ಸಾಮ, ದಾನ, ಭೇದದ ಪ್ರಯೋಗಗಳು ಉಪಯೋಗಕ್ಕೆ ಬರದಿದ್ದರೆ ದಂಡಪ್ರಯೋಗ ಸಮಾಜದ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ. ಮೌಲ್ಯಯುತ ಆಡಳಿತ ಬಂದರೆ ಇದೂ ಸಹ ಸಾಧ್ಯ.
-ಕ.ವೆಂ.ನಾಗರಾಜ್.
****************
ದಿನಾಂಕ 7.12.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:





ಗುರುವಾರ, ಜನವರಿ 7, 2016

ಏನಿದು ಅಸಹಿಷ್ಣುತೆ . . .?


     ಭಾರತದಲ್ಲಿ ಈಗ ಅಸಹಿಷ್ಣುತೆಯ ಬಗ್ಗೆ ದೊಡ್ಡ ಗುಲ್ಲೆದ್ದಿದೆ. ಇದನ್ನು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗಂಭೀರವಾದ ಸಮಸ್ಯೆಯೆಂಬಂತೆ ಕೆಲವು ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರುಗಳು ಬಿಂಬಿಸುತ್ತಿರುವದಲ್ಲದೆ ಹಲವರು ತಾವು ಪಡೆದಿದ್ದ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಬಲವಾಗಿ ಖಂಡಿಸುವವರ ಸಂಖ್ಯೆಯೂ ಗಣನೀಯವಾಗಿದೆ. ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು ಬರೆದ ಪುಸ್ತಕಗಳನ್ನು ಅವರಿಗೇ ಹಿಂತಿರುಗಿಸುವ ಚಳುವಳಿಯೂ ಆರಂಭವಾಗಿದೆ. ಒಂದಂತೂ ನಿಜ, ಪ್ರಪಂಚದ ಇತರ ದೇಶಗಳತ್ತ ಕಣ್ಣು ಹಾಯಿಸಿದರೆ ಕಾಣುವುದೇನೆಂದರೆ ಭಾರತದಂತಹ ಸಹಿಷ್ಣುತೆ ಮೈಗೂಡಿಸಿಕೊಂಡಿರುವ ದೇಶ ಮತ್ತೊಂದು ಇಲ್ಲವೆಂಬುದು! ಆದರೂ ಹೀಗೇಕೆ ಎಂಬುದಕ್ಕೆ ಪರ-ವಿರೋಧದ ಹೇಳಿಕೆಗಳು, ಲೇಖನಗಳು ಸಾಕಷ್ಟು ಬೆಳಕು ಕಂಡಿವೆ. ಈ ಕೊಂಡಿಗೆ ಮತ್ತೊಂದು ಲೇಖನದ ಸೇರ್ಪಡೆ ಮಾಡದೆ ಮೂಲ ವಿಷಯವಾದ ಅಸಹಿಷ್ಣುತೆ ಎಂದರೇನು ಎಂಬ ಕುರಿತು ಇಲ್ಲಿ ತಡಕಾಡಿರುವೆ.
     ಅಸಹಿಷ್ಣುತೆ ಕುರಿತು ಮಾತನಾಡುವ ಮುನ್ನ ಸಹಿಷ್ಣುತೆಯ ಬಗ್ಗೆ ತಿಳಿದುಕೊಳ್ಳಬೇಕು. ಸಹಿಸಿಕೊಳ್ಳಲಾಗದಿದ್ದಾಗ ಅಸಹನೆ ಜನಿಸುತ್ತದೆ. ಸಹನೆ ಸಜ್ಜನರ ಆಸ್ತಿ ಮತ್ತು ಅವರ ಆಯುಧವೂ ಕೂಡಾ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ. ಸಮಾಜದ ಹಿತಕ್ಕೆ ಇದು ಅಗತ್ಯವಾದುದಾಗಿದೆ.
     ಅಸಹನೆ ದುರ್ಬಲತೆಯ ದ್ಯೋತಕ ಮತ್ತು ಇತರರಿಗಿಂತ ಕೀಳು ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಅಸಹಿಷ್ಣುಗಳು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಒತ್ತಡವನ್ನು ಸಹಿಸರು. ತಾಳ್ಮೆ ಕಳೆದುಕೊಂಡು ಉದ್ರಿಕ್ತರಾಗುತ್ತಾರೆ, ವಿವೇಕ ಮರೆಯಾಗಿ ತಮ್ಮ ಒಳಗಿನ ಅಸಹನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಗೆಡವುತ್ತಾರೆ ಮತ್ತು ಇದರಿಂದಾಗಿ ಇತರರ ಎದುರಿಗೆ ಹಗುರವಾಗಿಬಿಡುತ್ತಾರೆ. ವಿಚಿತ್ರವೆಂದರೆ ಅಸಹಿಷ್ಣುಗಳು ಮತ್ತು ಸಣ್ಣ ಮನಸ್ಸಿನ ವ್ಯಕ್ತಿಗಳೇ ತಮ್ಮ ಸಹನಾಶೀಲತೆ ಮತ್ತು ವಿಶಾಲ ಮನೋಭಾವದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ! ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದವರೊಬ್ಬರು ನೆರೆಯ ಶತ್ರುದೇಶಕ್ಕೆ ಹೋಗಿ ಅಲ್ಲಿನ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ನಾಚಿಕೆಯಿಲ್ಲದೆ ಹೇಳಿಬಿಡುತ್ತಾರೆ. ಇದು ಅವರ ಅಧಿಕಾರದ ಹಪಾಹಪಿ ಮತ್ತು ಅಸಹಿಷ್ಣುತೆ ಪರಾಕಾಷ್ಠೆಯ ಮಟ್ಟ ತಲುಪಿರುವುದನ್ನು ತೋರಿಸುತ್ತದೆ. ಸ್ವಂತ ದೇಶದ ಜನರಿಂದ ಚುನಾಯಿತವಾದ ಸರ್ಕಾರದ ಪದಚ್ಯುತಿಗೆ ಶತ್ರುದೇಶದ ಸಹಾಯ ಬಯಸುವ ಮನಸ್ಥಿತಿಯಿಂದ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆಂದೂ ಅವರಿಗೆ ಅನ್ನಿಸದು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಅಸಹಿಷ್ಣುತೆ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳ್ಳಬೇಕಿದೆ. ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾವು ಮೂರ್ಖರೇ ಸರಿ.
     ಮತೀಯ ಅಥವ ಧಾರ್ಮಿಕ ಅಸಹಿಷ್ಣುತೆ ಇಂದು ಜಾಗತಿಕ ಭಯೋತ್ಪಾದನೆಯ ರೂಪದಲ್ಲಿ ಕಾಡುತ್ತಿದೆ. ಧರ್ಮ ಅಥವ ಮತದ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಎಳೆಯ ಕಂದಮ್ಮಗಳನ್ನೂ ನಿರ್ದಯದಿಂದ ಹೊಸಕಿಹಾಕುತ್ತಿರುವ ವಿಡಿಯೋಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತವೆ. ಅದನ್ನು ಬೆಂಬಲಿಸುವ ವಿಕೃತರ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಉಗ್ರರು ಯಾವಾಗ ಎಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಜ್ಞಾವಂತರ ಆತಂಕವಾಗಿದೆ. ೪೦ ದೇಶಗಳಿಂದ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಸರಬರಾಜಾಗುತ್ತಿದೆಯಂತೆ. ನಮ್ಮ ದೇಶದಲ್ಲೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವ, ಸಹಾಯ ಮಾಡುವ ಜನರಿಗೆ ಕೊರತೆಯಿಲ್ಲ. ವಿವಿಧ ರಾಜಕೀಯ ಪಕ್ಷಗಳೂ ವೋಟಿನ ಸಲುವಾಗಿ ಮಾಡುವ ಮತೀಯ ಓಲೈಕೆ ಭಯೋತ್ಪಾದನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಜನನಾಯಕರುಗಳಿಗೆ ದೇಶ ಮತ್ತು ಜನಸಾಮಾನ್ಯರ ಹಿತ ಮುಖ್ಯವೆನ್ನುವ ಪರಿಸ್ಥಿತಿ ಬಂದರೆ ಮಾತ್ರ ಸುಧಾರಣೆ ಕಾಣಬಹುದು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ರಾಜಕಾರಣಿಗಳೇ ಇಂದು ಹೆಚ್ಚಾಗಿರುವುದು ಸುಳ್ಳಲ್ಲ. ಸಹಿಷ್ಣುತೆ ಒಮ್ಮುಖದ ದಾರಿಯಾದರೆ ಅದು ಸಾಂಸ್ಕೃತಿಕ ಆತ್ಮಹತ್ಯೆಯಾಗುತ್ತದೆ. ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳನ್ನು ಟೀಕಿಸಿದರೆ ಸಹಿಸಿಕೊಳ್ಳಬೇಕು ಎಂದು ಬಯಸುವವರು ಇದೇ ನೀತಿಯನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಅನ್ವಯಿಸುವರೇ ಎಂದರೆ ಅದಕ್ಕೆ ಉತ್ತರ ಸಿಗದು. ಇಂತಹ ತಾರತಮ್ಯವೂ ಅಸಹಿಷ್ಣುತೆಗೆ ಪ್ರಚೋದನೆಯಾಗುತ್ತದೆ.
     ಜಾತಿ ಆಧಾರಿತ ರಾಜಕೀಯ ಸಂವಿಧಾನದ ಜಾತ್ಯಾತೀತತೆಗೆ ಕೊಡಲಿಪೆಟ್ಟು ಹಾಕುತ್ತಿದೆ. ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನು ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಇದನ್ನು ರಾಜಕೀಯ ಅಧಿಕಾರ ಗಳಿಕೆಗೆ ಬಳಸುವ ರಾಜಕಾರಣಿಗಳು ಜಾತೀಯತೆಯನ್ನು ಪೋಷಿಸುತ್ತಿವೆ. ಪ್ರತಿಭಾ ಪಲಾಯನ, ಜಾತಿ-ಜಾತಿಗಳಲ್ಲಿ ವೈಮನಸ್ಯ, ಸಂಘರ್ಷಗಳು, ಅಸಹಿಷ್ಣುತೆ ಈ ಜಾತಿ ರಾಜಕೀಯದ ಫಲಗಳಾಗಿವೆ. ಸಹಿಷ್ಣುತೆ ಭಾರತೀಯರ ರಕ್ತದಲ್ಲಿ ಬಂದ ಗುಣವಾಗಿದೆ. ಅದನ್ನು ಕುಟಿಲ ರಾಜಕಾರಣಿಗಳು, ಅವಕಾಶವಾದಿ ಸಾಹಿತಿಗಳು, ಕಲಾವಿದರುಗಳು ಹಾಳು ಮಾಡದಿರುವಂತೆ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ, ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿರುವ ದೇಶಗಳಲ್ಲಿ, ಇಸ್ಲಾಮ್ ಧರ್ಮೀಯ ರಾಷ್ಟ್ರಗಳಲ್ಲಿ ಭಿನ್ನ ವಿಚಾರಗಳನ್ನು ಹೊಂದಿರುವವರನ್ನು ಹಿಂಸಿಸಲಾಗುತ್ತ್ತದೆ, ಬಲವಂತವಾಗಿ ವಿರುದ್ಧ ವಿಚಾರ ಒಪ್ಪುವಂತೆ ಮಾಡಲಾಗುತ್ತದೆ, ಗಡೀಪಾರು ಮಾಡಲಾಗುತ್ತದೆ, ಅವಮಾನಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂಬುದಕ್ಕೆ ಹೇರಳ ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಭಾರತದ ಉದಾತ್ತತೆಯಾದ ಸಹಿಷ್ಣುತಾ ಗುಣವನ್ನು ಗುರುತಿಸೋಣ, ಗೌರವಿಸೋಣ, ಉಳಿಸೋಣ.
ಸಹಿಷ್ಣುತೆಯೆಂದರೆ ನೀವು ನಿಮಗೆ ಏನು ಬೇಕೆನ್ನುತ್ತೀರೋ, ಯಾವ ಹಕ್ಕು ಇರಬೇಕೆನ್ನುತ್ತೀರೋ ಅವು ಇತರರಿಗೂ ಇರಬೇಕೆನ್ನುವುದು! ನಿಮಗೆ ಮಾತ್ರ ಇರಲಿ ಇತರರಿಗೆ ಬೇಡ ಅನ್ನುವುದೇ ಅಸಹಿಷ್ಣುತೆ!
-ಕ.ವೆಂ.ನಾಗರಾಜ್.
****************
ದಿನಾಂಕ 16.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


ಸೋಮವಾರ, ಜನವರಿ 4, 2016

ಆಕ್ಷೇಪಿಸುವುದೇಕೆ? ಒಪ್ಪಿಕೊಂಡುಬಿಡೋಣ!


     ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ ನಕ್ಷತ್ರಗಳನ್ನು ಕಂಡಾಗ ನಮಗೆ ಏನು ಅನ್ನಿಸುತ್ತದೆ? ನಮಗೆ ಆ ಕುರಿತು ಆಕ್ಷೇಪಣೆ ಮಾಡಬೇಕೆನ್ನಿಸುತ್ತೆಯೇ? ಹಕ್ಕಿ ಹಾಗೆ ಹಾರಬಾರದಿತ್ತು, ಹೀಗೆ ಹಾರಬೇಕಿತ್ತು, ನದಿ ಇನ್ನೂ ರಭಸವಾಗಿ ಹರಿಯಬೇಕಿತ್ತು, ದಿಕ್ಕು ಬದಲಾಯಿಸಿ ಹರಿಯಬೇಕಿತ್ತು, ಕಾಡಿನಲ್ಲಿ ಏನೇನೋ ಕಾಡುಗಿಡಮರಗಳು ಬೆಳೆಯುವ ಬದಲು ಕೇವಲ ಮಾವು, ಸಂಪಿಗೆಯಂತಹ ಮರಗಳೇ ಬೆಳೆಯಬೇಕಿತ್ತು, ಚಂದ್ರ ಯಾವಾಗಲೂ ಪೂರ್ಣ ರೀತಿಯಲ್ಲೇ ಇರಬೇಕಿತ್ತು ಎಂದು ಮುಂತಾಗಿ ಅನ್ನುತ್ತೇವೆಯೇ? ಇಲ್ಲ, ಅವು ಹೇಗಿವೆಯೋ ಹಾಗೆ ಅವನ್ನು ಒಪ್ಪಿಕೊಳ್ಳುತ್ತೇವೆ ಅಲ್ಲವೇ? ಅಂತಹ ಯಾವುದೇ ಆಕ್ಷೇಪಣೆಗಳು ಇಲ್ಲದ್ದರಿಂದಲೇ ಅವುಗಳನ್ನು ಕಂಡು ಮನಸ್ಸು ಸಂತೋಷಗೊಳ್ಳುತ್ತದೆ. ನಮ್ಮ ಸಂತೋಷದ ಮೂಲ ಇಲ್ಲಿದೆ, ಬದಲಾಯಿಸಲಾಗದುದನ್ನು ಬದಲಾಯಿಸಲು ಹೆಣಗಾಡದೆ ಇರುವುದನ್ನು ಇರುವಂತೆಯೇ ಒಪ್ಪಿಕೊಳ್ಳುವುದರಲ್ಲಿದೆ, ಅದರೊಂದಿಗೆ ಹೊಂದಿಕೊಳ್ಳುವುದರಲ್ಲಿದೆ.
     ಭಿನ್ನತೆ ಜಗದ ನಿಯಮವಾಗಿದೆ. ಭಿನ್ನತೆಯ ಕಾರಣದಿಂದಲೇ ಜಗತ್ತು ಅಸ್ತಿತ್ವದಲ್ಲಿದೆ. ಭಿನ್ನತೆಯಿರುವುದರಿಂದಲೇ ಜಗತ್ತಿನಲ್ಲಿ ಸ್ವಾರಸ್ಯವಿದೆ, ನವರಸಗಳಿಗೆ ಆಸ್ಪದವಿದೆ. ಎಲ್ಲವೂ ಒಂದೇ ರೀತಿಯಲ್ಲಿ ಇದ್ದರೆ ಅಲ್ಲಿ ಸುಖವೂ ಇರುವದಿಲ್ಲ, ದುಃಖವೂ ಇರುವುದಿಲ್ಲ, ಜಗತ್ತಿನ ಅಗತ್ಯವೂ ಇರುವುದಿಲ್ಲ. ನಿಧಾನವಾಗಿ ಯೋಚಿಸಿದರೆ ಇದರ ಸತ್ಯ ಅರಿವಾಗುತ್ತದೆ ಮತ್ತು ಇದನ್ನು ಅಕ್ಷೇಪಿಸದೆ ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಬುದ್ಧಿವಂತರು ಅಥವ ದಡ್ಡರು, ಬಲಶಾಲಿಗಳು ಅಥವ ಕೃಷಕಾಯರು, ಆರೋಗ್ಯವಂತರು ಅಥವ ರೋಗಿಗಳು, ಶ್ರೀಮಂತರು ಅಥವ ಬಡವರು,  ಸುಂದರರು ಅಥವ ಕುರೂಪಿಗಳು, ಕೆಟ್ಟವರು ಅಥವ ಒಳ್ಳೆಯವರು ಆಗಿರಲು ಸಾಧ್ಯವೇ? ಇದೇ ಪ್ರಪಂಚ! ಇಂತಹ ಪ್ರಪಂಚದಲ್ಲಿ ಹೇಗಿರಬೇಕು ಎಂದು ವಿವೇಚಿಸಿ ನಡೆಯುವುದು ಸೂಕ್ತ.
     ಆಕ್ಷೇಪಣೆ ಮಾಡುವುದಾದರೂ ಏಕೆ? ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮ ವಿಚಾರವನ್ನೇ ಒಪ್ಪಬೇಕು, ತಮಗೆ ಅನುಕೂಲವಾಗಿರಬೇಕು ಎಂಬ ಅಂತರ್ಗತ ಅನಿಸಿಕೆಯೇ ಆಕ್ಷೇಪಿಸಲು ಮೂಲಕಾರಣ. ಇನ್ನೊಬ್ಬರ ವಿಚಾರಗಳನ್ನು ಒಪ್ಪದ ಮನೋಭಾವ ಇದಕ್ಕೆ ಪುಷ್ಟಿ ಕೊಡುತ್ತದೆ. ಈ ವಿಚಾರದಲ್ಲಿ ತಮ್ಮ ಮತ್ತು ಇತರರ ನಡುವೆ ಒಮ್ಮತ ಮೂಡದಿದ್ದಲ್ಲಿ ಅಲ್ಲಿ ಅಶಾಂತಿ ಮೂಡುತ್ತದೆ. ಪರಿಣಾಮವಾಗಿ ಸಂತೋಷಕ್ಕೆ ಅಲ್ಲಿ ಸ್ಥಾನ ಇರುವುದಿಲ್ಲ. ಇಲ್ಲಿ ಒಂದು ಪ್ರಯೋಗ ಮಾಡಿ ನೋಡಿ. ನಮ್ಮ ನಡವಳಿಕೆಗಳನ್ನು ಒಪ್ಪದವರು ನಮ್ಮ ಕುರಿತು ಟೀಕೆ, ಟಿಪ್ಪಣಿಗಳನ್ನು ಮಾಡಿದರೆ ವಿಚಲಿತಗೊಳ್ಳದೆ ಸ್ವೀಕರಿಸೋಣ. ನಾವೇನೂ ಬದಲಾಗಬೇಕಿಲ್ಲ, ನಮ್ಮ ಅಂತರಂಗ ಹೇಳಿದಂತೆ ಕೇಳಿ ಮುಂದುವರೆದರಾಯಿತು. ಇದರಿಂದ ನಮಗೂ ಅವರ ಕುರಿತು ವಿಮರ್ಶಿಸಲು ಸ್ವಾತಂತ್ರ್ಯ ಸಿಗುತ್ತದೆ. ಅವರೂ ಅದನ್ನು ಆಕ್ಷೇಪಿಸುವುದಿಲ್ಲ ಮತ್ತು ಅವರ ನಡವಳಿಕೆಗಳು ನಮ್ಮ ಮೇಲೆ ಏನೂ ಪ್ರಭಾವ ಬೀರಲಾರವು. ನಮ್ಮ ಹಲವು ಹಳೆಯ ಸಮಸ್ಯೆಗಳನ್ನು ಅವಲೋಕಿಸಿದರೆ ಗೋಚರವಾಗುವ ಸಂಗತಿಗಳು ಆಶ್ಚರ್ಯಕರವಾಗಿರುತ್ತವೆ. ಅಂತಹ ಕೆಟ್ಟ ಘಟನೆಗಳ ನೆನಪುಗಳು ಸಮಸ್ಯೆಗಳ ಬಗ್ಗೆ ನಾವೋ, ಇತರರೋ ನೀಡಿದ ಪ್ರತಿಕ್ರಿಯೆಗಳೇ ಆಗಿರುತ್ತವೆ! ಅಂತಹ ಪ್ರತಿಕ್ರಿಯೆಗಳನ್ನು ನೀಡಿರದಿದ್ದರೆ? ಕಹಿ ನೆನಪುಗಳು ಸಂಗ್ರಹಗೊಳ್ಳುತ್ತಲೇ ಇರುತ್ತಿರಲಿಲ್ಲ.
     ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಎಲ್ಲರೂ ಅವರಿದ್ದ ಹಾಗೆಯೇ ಇರಲಿ ಅಂದರೆ ಜಗತ್ತು ಕಳ್ಳಕಾಕರು, ಲೂಟಿಕೋರರು, ದುಷ್ಟರ ಆವಾಸವಾಗುತ್ತದೆ. ಜಗತ್ತಿನ ಒಳ್ಳೆಯವರ ಗತಿ ಏನು, ಧರ್ಮ, ಸತ್ಯ, ನ್ಯಾಯ, ಶಾಂತಿ, ಇತ್ಯಾದಿಗಳ ಗತಿ ಏನು ಅಂತೀರಾ? ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಕಾರ್ಯಕ್ಕಾಗಿ ಸಜ್ಜನರು ಪ್ರಯತ್ನಿಸುತ್ತಲೇ ಇರಬೇಕು. ಇದು ನಿರಂತರವಾಗಿ ನಡೆಯಬೇಕಾದ ಕಾರ್ಯ. ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಿತ್ರರೊಬ್ಬರು ಒಮ್ಮೊಮ್ಮೆ ಹತಾಶೆಯಿಂದ ಹೇಳುತ್ತಿರುತ್ತಾರೆ: 'ಇಷ್ಟು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಏನು ಪ್ರಯೋಜನ ಆಗಿದೆ? ನಮ್ಮ ಜನರನ್ನು ತಿದ್ದುವುದು ಕಷ್ಟ.' ಬದಲಾಗಲಿಲ್ಲವೆಂದು ಧೃತಿಗೆಡಬೇಕಿಲ್ಲ. ನಿರಂತರ ಪ್ರಯತ್ನದ ಫಲ ನಿರೀಕ್ಷಿತ ಎಡೆಯಿಂದಲ್ಲವಾದರೂ ಬೇರೆ ಒಂದಲ್ಲಾ ಒಂದು ರೀತಿಯಲ್ಲಿ ಬಂದೇಬರುತ್ತದೆ. ಪಂಚತಂತ್ರದಲ್ಲಿ ಒಂದು ನೀತಿವಾಕ್ಯವಿದೆ: ಸರ್ಪಾನಾಂ ಚ ಕಲಾನಾಂ ಚ ಸರ್ವೇಷಾಂ ದುಷ್ಟಚೇತಸಾಂ | ಅಭಿಪ್ರಾಯಾಃ ನ ಸಿಧ್ಯಂತಿ ತೇನ ವರ್ತತೇ ಇದಂ ಜಗತ್ || -'ಸರ್ಪಗಳು, ಕುಟಿಲರು ಯಾವಾಗಲೂ ದುಷ್ಟಕಾರ್ಯಗಳಲ್ಲೇ ತೊಡಗಿರುತ್ತಾರೆ. ಆದರೆ ಅವರ ಇಚ್ಛೆಗಳು ಈಡೇರಲಾರವು, ಜಗತ್ತು ಹೀಗೆಯೇ ನಡೆಯುತ್ತಿರುತ್ತದೆ!'- ಎಂಬುದು ಇದರ ಅರ್ಥ. ರಾಮ-ರಾವಣರುಗಳು, ಕೃಷ್ಣ-ಕಂಸರುಗಳು ಸದಾ ಕಾಲ ಇದ್ದೇ ಇರುತ್ತಾರೆ, ಈಗಲೂ ಇದ್ದಾರೆ. ಅನೇಕ ಸಾಧು-ಸಂತರುಗಳು, ದಾರ್ಶನಿಕರು ಕಾಲಕಾಲಕ್ಕೆ ಸಮಾಜ ಒಳ್ಳೆಯ ರೀತಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಸಹ ಸಮಾಜ, ದೇಶ, ಧರ್ಮಗಳಿಗಾಗಿ ಸ್ವಂತದ ಸುಖ-ಸಂತೋಷಗಳನ್ನು ಬದಿಗೊತ್ತಿ ಪೂರ್ಣ ಜೀವನವನ್ನು ಮುಡುಪಿಟ್ಟ ಸಹಸ್ರ ಸಹಸ್ರ ಜನರಿದ್ದಾರೆ. ಇಂತಹವರ ಪ್ರಯತ್ನಗಳೇ ಸಮಾಜವನ್ನು ಇನ್ನೂ ಬದುಕಿಸಿರುವುದು! ಇಂತಹ ಸಾಧಕರುಗಳು ಸಮಾಜ ಬದಲಾಗಲಿಲ್ಲವೆಂದು ಹತಾಶೆಗೊಳಗಾಗುವುದಿಲ್ಲ, ಆಕ್ಷೇಪಿಸುವುದೂ ಇಲ್ಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಲೇ ಹೋಗುತ್ತಾರೆ. ಇವರ ಕಾರ್ಯದ ಫಲ ಸಾಮಾನ್ಯರಿಗೆ ಸಿಕ್ಕೇ ಸಿಗುತ್ತದೆ.
     ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ. ಆಕ್ಷೇಪಣೆ ಮಾಡುವುದರಿಂದ ಪ್ರಯೋಜನ ಕಡಿಮೆ. ಜಗತ್ತು ಹೇಗಿದೆಯೋ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರಥಮತಃ ಒಪ್ಪಿಕೊಳ್ಳಬೇಕು. ನಂತರದಲ್ಲಿ ಸಮಾಜ, ದೇಶದ ಹಿತದೃಷ್ಟಿಯಿಂದ ಆಗಬೇಕಾದ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಸಾಗಬೇಕು. ಸಮಾನ ಮನಸ್ಕರನ್ನು ಒಟ್ಟುಗೂಡಿಸುವ ಕೆಲಸ ಸಾಗಬೇಕು. ಆಗ ಸಜ್ಜನಶಕ್ತಿ ಜಾಗೃತಗೊಳ್ಳುತ್ತದೆ. ದುಷ್ಟಶಕ್ತಿಗಳು ತಾವಾಗಿ ಮೂಲೆ ಸೇರುತ್ತವೆ. ಆಕ್ಷೇಪಣೆ ಮಾಡಿದರೆ ತಾನೇ ಅಶಾಂತಿ ಉಂಟಾಗುವುದು! ಮುಳ್ಳು ಚುಚ್ಚುತ್ತದೆಯೆಂದು ನೆಲಕ್ಕೆಲ್ಲಾ ಚರ್ಮ ಹಾಸುವ ಬದಲು ನಮ್ಮ ಕಾಲುಗಳಿಗೆ ನಾವು ಪಾದರಕ್ಷೆ ಧರಿಸಿದರೆ ಸಾಕು. ನಾವು ಬದಲಾದರೆ ಜಗತ್ತೂ ಬದಲಾಗುತ್ತದೆ.
-ಕ.ವೆಂ.ನಾಗರಾಜ್.
***************
ದಿನಾಂಕ 16.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: