ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಜನವರಿ 4, 2016

ಆಕ್ಷೇಪಿಸುವುದೇಕೆ? ಒಪ್ಪಿಕೊಂಡುಬಿಡೋಣ!


     ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ ನಕ್ಷತ್ರಗಳನ್ನು ಕಂಡಾಗ ನಮಗೆ ಏನು ಅನ್ನಿಸುತ್ತದೆ? ನಮಗೆ ಆ ಕುರಿತು ಆಕ್ಷೇಪಣೆ ಮಾಡಬೇಕೆನ್ನಿಸುತ್ತೆಯೇ? ಹಕ್ಕಿ ಹಾಗೆ ಹಾರಬಾರದಿತ್ತು, ಹೀಗೆ ಹಾರಬೇಕಿತ್ತು, ನದಿ ಇನ್ನೂ ರಭಸವಾಗಿ ಹರಿಯಬೇಕಿತ್ತು, ದಿಕ್ಕು ಬದಲಾಯಿಸಿ ಹರಿಯಬೇಕಿತ್ತು, ಕಾಡಿನಲ್ಲಿ ಏನೇನೋ ಕಾಡುಗಿಡಮರಗಳು ಬೆಳೆಯುವ ಬದಲು ಕೇವಲ ಮಾವು, ಸಂಪಿಗೆಯಂತಹ ಮರಗಳೇ ಬೆಳೆಯಬೇಕಿತ್ತು, ಚಂದ್ರ ಯಾವಾಗಲೂ ಪೂರ್ಣ ರೀತಿಯಲ್ಲೇ ಇರಬೇಕಿತ್ತು ಎಂದು ಮುಂತಾಗಿ ಅನ್ನುತ್ತೇವೆಯೇ? ಇಲ್ಲ, ಅವು ಹೇಗಿವೆಯೋ ಹಾಗೆ ಅವನ್ನು ಒಪ್ಪಿಕೊಳ್ಳುತ್ತೇವೆ ಅಲ್ಲವೇ? ಅಂತಹ ಯಾವುದೇ ಆಕ್ಷೇಪಣೆಗಳು ಇಲ್ಲದ್ದರಿಂದಲೇ ಅವುಗಳನ್ನು ಕಂಡು ಮನಸ್ಸು ಸಂತೋಷಗೊಳ್ಳುತ್ತದೆ. ನಮ್ಮ ಸಂತೋಷದ ಮೂಲ ಇಲ್ಲಿದೆ, ಬದಲಾಯಿಸಲಾಗದುದನ್ನು ಬದಲಾಯಿಸಲು ಹೆಣಗಾಡದೆ ಇರುವುದನ್ನು ಇರುವಂತೆಯೇ ಒಪ್ಪಿಕೊಳ್ಳುವುದರಲ್ಲಿದೆ, ಅದರೊಂದಿಗೆ ಹೊಂದಿಕೊಳ್ಳುವುದರಲ್ಲಿದೆ.
     ಭಿನ್ನತೆ ಜಗದ ನಿಯಮವಾಗಿದೆ. ಭಿನ್ನತೆಯ ಕಾರಣದಿಂದಲೇ ಜಗತ್ತು ಅಸ್ತಿತ್ವದಲ್ಲಿದೆ. ಭಿನ್ನತೆಯಿರುವುದರಿಂದಲೇ ಜಗತ್ತಿನಲ್ಲಿ ಸ್ವಾರಸ್ಯವಿದೆ, ನವರಸಗಳಿಗೆ ಆಸ್ಪದವಿದೆ. ಎಲ್ಲವೂ ಒಂದೇ ರೀತಿಯಲ್ಲಿ ಇದ್ದರೆ ಅಲ್ಲಿ ಸುಖವೂ ಇರುವದಿಲ್ಲ, ದುಃಖವೂ ಇರುವುದಿಲ್ಲ, ಜಗತ್ತಿನ ಅಗತ್ಯವೂ ಇರುವುದಿಲ್ಲ. ನಿಧಾನವಾಗಿ ಯೋಚಿಸಿದರೆ ಇದರ ಸತ್ಯ ಅರಿವಾಗುತ್ತದೆ ಮತ್ತು ಇದನ್ನು ಅಕ್ಷೇಪಿಸದೆ ಒಪ್ಪಿಕೊಳ್ಳಬೇಕಾಗುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಬುದ್ಧಿವಂತರು ಅಥವ ದಡ್ಡರು, ಬಲಶಾಲಿಗಳು ಅಥವ ಕೃಷಕಾಯರು, ಆರೋಗ್ಯವಂತರು ಅಥವ ರೋಗಿಗಳು, ಶ್ರೀಮಂತರು ಅಥವ ಬಡವರು,  ಸುಂದರರು ಅಥವ ಕುರೂಪಿಗಳು, ಕೆಟ್ಟವರು ಅಥವ ಒಳ್ಳೆಯವರು ಆಗಿರಲು ಸಾಧ್ಯವೇ? ಇದೇ ಪ್ರಪಂಚ! ಇಂತಹ ಪ್ರಪಂಚದಲ್ಲಿ ಹೇಗಿರಬೇಕು ಎಂದು ವಿವೇಚಿಸಿ ನಡೆಯುವುದು ಸೂಕ್ತ.
     ಆಕ್ಷೇಪಣೆ ಮಾಡುವುದಾದರೂ ಏಕೆ? ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮ ವಿಚಾರವನ್ನೇ ಒಪ್ಪಬೇಕು, ತಮಗೆ ಅನುಕೂಲವಾಗಿರಬೇಕು ಎಂಬ ಅಂತರ್ಗತ ಅನಿಸಿಕೆಯೇ ಆಕ್ಷೇಪಿಸಲು ಮೂಲಕಾರಣ. ಇನ್ನೊಬ್ಬರ ವಿಚಾರಗಳನ್ನು ಒಪ್ಪದ ಮನೋಭಾವ ಇದಕ್ಕೆ ಪುಷ್ಟಿ ಕೊಡುತ್ತದೆ. ಈ ವಿಚಾರದಲ್ಲಿ ತಮ್ಮ ಮತ್ತು ಇತರರ ನಡುವೆ ಒಮ್ಮತ ಮೂಡದಿದ್ದಲ್ಲಿ ಅಲ್ಲಿ ಅಶಾಂತಿ ಮೂಡುತ್ತದೆ. ಪರಿಣಾಮವಾಗಿ ಸಂತೋಷಕ್ಕೆ ಅಲ್ಲಿ ಸ್ಥಾನ ಇರುವುದಿಲ್ಲ. ಇಲ್ಲಿ ಒಂದು ಪ್ರಯೋಗ ಮಾಡಿ ನೋಡಿ. ನಮ್ಮ ನಡವಳಿಕೆಗಳನ್ನು ಒಪ್ಪದವರು ನಮ್ಮ ಕುರಿತು ಟೀಕೆ, ಟಿಪ್ಪಣಿಗಳನ್ನು ಮಾಡಿದರೆ ವಿಚಲಿತಗೊಳ್ಳದೆ ಸ್ವೀಕರಿಸೋಣ. ನಾವೇನೂ ಬದಲಾಗಬೇಕಿಲ್ಲ, ನಮ್ಮ ಅಂತರಂಗ ಹೇಳಿದಂತೆ ಕೇಳಿ ಮುಂದುವರೆದರಾಯಿತು. ಇದರಿಂದ ನಮಗೂ ಅವರ ಕುರಿತು ವಿಮರ್ಶಿಸಲು ಸ್ವಾತಂತ್ರ್ಯ ಸಿಗುತ್ತದೆ. ಅವರೂ ಅದನ್ನು ಆಕ್ಷೇಪಿಸುವುದಿಲ್ಲ ಮತ್ತು ಅವರ ನಡವಳಿಕೆಗಳು ನಮ್ಮ ಮೇಲೆ ಏನೂ ಪ್ರಭಾವ ಬೀರಲಾರವು. ನಮ್ಮ ಹಲವು ಹಳೆಯ ಸಮಸ್ಯೆಗಳನ್ನು ಅವಲೋಕಿಸಿದರೆ ಗೋಚರವಾಗುವ ಸಂಗತಿಗಳು ಆಶ್ಚರ್ಯಕರವಾಗಿರುತ್ತವೆ. ಅಂತಹ ಕೆಟ್ಟ ಘಟನೆಗಳ ನೆನಪುಗಳು ಸಮಸ್ಯೆಗಳ ಬಗ್ಗೆ ನಾವೋ, ಇತರರೋ ನೀಡಿದ ಪ್ರತಿಕ್ರಿಯೆಗಳೇ ಆಗಿರುತ್ತವೆ! ಅಂತಹ ಪ್ರತಿಕ್ರಿಯೆಗಳನ್ನು ನೀಡಿರದಿದ್ದರೆ? ಕಹಿ ನೆನಪುಗಳು ಸಂಗ್ರಹಗೊಳ್ಳುತ್ತಲೇ ಇರುತ್ತಿರಲಿಲ್ಲ.
     ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಎಲ್ಲರೂ ಅವರಿದ್ದ ಹಾಗೆಯೇ ಇರಲಿ ಅಂದರೆ ಜಗತ್ತು ಕಳ್ಳಕಾಕರು, ಲೂಟಿಕೋರರು, ದುಷ್ಟರ ಆವಾಸವಾಗುತ್ತದೆ. ಜಗತ್ತಿನ ಒಳ್ಳೆಯವರ ಗತಿ ಏನು, ಧರ್ಮ, ಸತ್ಯ, ನ್ಯಾಯ, ಶಾಂತಿ, ಇತ್ಯಾದಿಗಳ ಗತಿ ಏನು ಅಂತೀರಾ? ದುಷ್ಟ ಶಿಕ್ಷಣ, ಶಿಷ್ಟ ರಕ್ಷಣಕಾರ್ಯಕ್ಕಾಗಿ ಸಜ್ಜನರು ಪ್ರಯತ್ನಿಸುತ್ತಲೇ ಇರಬೇಕು. ಇದು ನಿರಂತರವಾಗಿ ನಡೆಯಬೇಕಾದ ಕಾರ್ಯ. ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಿತ್ರರೊಬ್ಬರು ಒಮ್ಮೊಮ್ಮೆ ಹತಾಶೆಯಿಂದ ಹೇಳುತ್ತಿರುತ್ತಾರೆ: 'ಇಷ್ಟು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಏನು ಪ್ರಯೋಜನ ಆಗಿದೆ? ನಮ್ಮ ಜನರನ್ನು ತಿದ್ದುವುದು ಕಷ್ಟ.' ಬದಲಾಗಲಿಲ್ಲವೆಂದು ಧೃತಿಗೆಡಬೇಕಿಲ್ಲ. ನಿರಂತರ ಪ್ರಯತ್ನದ ಫಲ ನಿರೀಕ್ಷಿತ ಎಡೆಯಿಂದಲ್ಲವಾದರೂ ಬೇರೆ ಒಂದಲ್ಲಾ ಒಂದು ರೀತಿಯಲ್ಲಿ ಬಂದೇಬರುತ್ತದೆ. ಪಂಚತಂತ್ರದಲ್ಲಿ ಒಂದು ನೀತಿವಾಕ್ಯವಿದೆ: ಸರ್ಪಾನಾಂ ಚ ಕಲಾನಾಂ ಚ ಸರ್ವೇಷಾಂ ದುಷ್ಟಚೇತಸಾಂ | ಅಭಿಪ್ರಾಯಾಃ ನ ಸಿಧ್ಯಂತಿ ತೇನ ವರ್ತತೇ ಇದಂ ಜಗತ್ || -'ಸರ್ಪಗಳು, ಕುಟಿಲರು ಯಾವಾಗಲೂ ದುಷ್ಟಕಾರ್ಯಗಳಲ್ಲೇ ತೊಡಗಿರುತ್ತಾರೆ. ಆದರೆ ಅವರ ಇಚ್ಛೆಗಳು ಈಡೇರಲಾರವು, ಜಗತ್ತು ಹೀಗೆಯೇ ನಡೆಯುತ್ತಿರುತ್ತದೆ!'- ಎಂಬುದು ಇದರ ಅರ್ಥ. ರಾಮ-ರಾವಣರುಗಳು, ಕೃಷ್ಣ-ಕಂಸರುಗಳು ಸದಾ ಕಾಲ ಇದ್ದೇ ಇರುತ್ತಾರೆ, ಈಗಲೂ ಇದ್ದಾರೆ. ಅನೇಕ ಸಾಧು-ಸಂತರುಗಳು, ದಾರ್ಶನಿಕರು ಕಾಲಕಾಲಕ್ಕೆ ಸಮಾಜ ಒಳ್ಳೆಯ ರೀತಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಸಹ ಸಮಾಜ, ದೇಶ, ಧರ್ಮಗಳಿಗಾಗಿ ಸ್ವಂತದ ಸುಖ-ಸಂತೋಷಗಳನ್ನು ಬದಿಗೊತ್ತಿ ಪೂರ್ಣ ಜೀವನವನ್ನು ಮುಡುಪಿಟ್ಟ ಸಹಸ್ರ ಸಹಸ್ರ ಜನರಿದ್ದಾರೆ. ಇಂತಹವರ ಪ್ರಯತ್ನಗಳೇ ಸಮಾಜವನ್ನು ಇನ್ನೂ ಬದುಕಿಸಿರುವುದು! ಇಂತಹ ಸಾಧಕರುಗಳು ಸಮಾಜ ಬದಲಾಗಲಿಲ್ಲವೆಂದು ಹತಾಶೆಗೊಳಗಾಗುವುದಿಲ್ಲ, ಆಕ್ಷೇಪಿಸುವುದೂ ಇಲ್ಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಲೇ ಹೋಗುತ್ತಾರೆ. ಇವರ ಕಾರ್ಯದ ಫಲ ಸಾಮಾನ್ಯರಿಗೆ ಸಿಕ್ಕೇ ಸಿಗುತ್ತದೆ.
     ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ. ಆಕ್ಷೇಪಣೆ ಮಾಡುವುದರಿಂದ ಪ್ರಯೋಜನ ಕಡಿಮೆ. ಜಗತ್ತು ಹೇಗಿದೆಯೋ, ಜನರು ಹೇಗಿದ್ದಾರೋ ಹಾಗೆ ಅವರನ್ನು ಪ್ರಥಮತಃ ಒಪ್ಪಿಕೊಳ್ಳಬೇಕು. ನಂತರದಲ್ಲಿ ಸಮಾಜ, ದೇಶದ ಹಿತದೃಷ್ಟಿಯಿಂದ ಆಗಬೇಕಾದ ಬದಲಾವಣೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಸಾಗಬೇಕು. ಸಮಾನ ಮನಸ್ಕರನ್ನು ಒಟ್ಟುಗೂಡಿಸುವ ಕೆಲಸ ಸಾಗಬೇಕು. ಆಗ ಸಜ್ಜನಶಕ್ತಿ ಜಾಗೃತಗೊಳ್ಳುತ್ತದೆ. ದುಷ್ಟಶಕ್ತಿಗಳು ತಾವಾಗಿ ಮೂಲೆ ಸೇರುತ್ತವೆ. ಆಕ್ಷೇಪಣೆ ಮಾಡಿದರೆ ತಾನೇ ಅಶಾಂತಿ ಉಂಟಾಗುವುದು! ಮುಳ್ಳು ಚುಚ್ಚುತ್ತದೆಯೆಂದು ನೆಲಕ್ಕೆಲ್ಲಾ ಚರ್ಮ ಹಾಸುವ ಬದಲು ನಮ್ಮ ಕಾಲುಗಳಿಗೆ ನಾವು ಪಾದರಕ್ಷೆ ಧರಿಸಿದರೆ ಸಾಕು. ನಾವು ಬದಲಾದರೆ ಜಗತ್ತೂ ಬದಲಾಗುತ್ತದೆ.
-ಕ.ವೆಂ.ನಾಗರಾಜ್.
***************
ದಿನಾಂಕ 16.11.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌:

  1. Ramesh Kamath
    ತುಂಬ ಉಪಯುಕ್ತ ಲೇಖನ. ಎರಡೆರಡು ಭಾರಿ ಓದಿದೆ.ಮನನಮಾಡಿ ￿ಅದರಂತೆ ನಡೆದರೆ ಸದಾ ನೆಮ್ಮದಿಯ ಜೀವನ ನಡೆಸ ಬಹುದು.ಹಿರಿಯರೊಬ್ಬರ ಮಾತು ನೆನಪಿಗೆ ಬರುತ್ತಿದೆ "ಆಳಬೇಕು ಇಲ್ಲವೇ ಅದರೊಡನೆ ಬಾಳಬೇಕು".ಅದು ಸತ್ಯವೆಂದು ನನಗನಿಸಿತು.

    ಪ್ರತ್ಯುತ್ತರಅಳಿಸಿ