ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಫೆಬ್ರವರಿ 27, 2013

ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ


     ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು. ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.
     ಕಳೆದ ವರ್ಷ ಪಾಕಿಸ್ತಾನದ ಹೈದರಾಬಾದಿನಲ್ಲಿ ಪ್ರೆಸ್ ಕ್ಲಬ್ ಎದುರಿಗೆ ಒಂದು ವಿನೂತನ ವಿವಾಹ ನಡೆಯಿತು. ಒಬ್ಬ ಹಿಂದೂ ಯುವಕ ಮುಖೇಶ್ ಮತ್ತು ಹಿಂದೂ ಯುವತಿ ಪದ್ಮಾ ಅಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಎರಡು ಉದ್ದೇಶಗಳು ಅಲ್ಲಿ ನಡೆದ ಮದುವೆಯಲ್ಲಿದ್ದವು; ಒಂದು, ತಾವು ಸತಿ-ಪತಿಗಳೆಂದು ಜಗತ್ತಿಗೆ ಸಾರುವುದು; ಮತ್ತೊಂದು, ಪಾಕಿಸ್ತಾನದಲ್ಲಿ ತಮ್ಮ ಮದುವೆಯನ್ನು ಪರಿಗಣಿಸಲು ಕಾನೂನು ರಚನೆಗೆ ಒತ್ತಾಯಿಸುವುದು. ಮದುವೆಗೆ ಬಂದಿದ್ದವರು ಸೂಕ್ತ ಕಾಯದೆ ರಚನೆಯಾಗುವವರೆಗೆ ತಮ್ಮ ವಿವಾಹಗಳನ್ನು ಸಿಂಧುವೆಂದು ಪರಿಗಣಿಸಿ ಆದೇಶ ಹೊರಡಿಸುವಂತೆ ಅಧ್ಯಕ್ಷ ಜರ್ದಾರಿಯವರನ್ನು ಒತ್ತಾಯಿಸಿ ಘೋಷಣೆಗಳನ್ನು ಹಾಕಿದರು. ಅಲ್ಲಿ ಹಾಜರಿದ್ದ ಸಪ್ನಾದೇವಿ ಎಂಬ ಮಹಿಳೆ ಹೇಳಿದ್ದೇನೆಂದರೆ: "ನನ್ನ ಮದುವೆ ಆಗಿ 17 ವರ್ಷಗಳಾಗಿವೆ. ನಮ್ಮ ಮದುವೆ ಸಿಂಧುವೆಂದು ಪರಿಗಣಿಸಿಲ್ಲ. ಒಂದು ವೇಳೆ ನನ್ನ ಗಂಡ ಸತ್ತರೆ, ದೇವರೇ ಹಾಗಾಗದಿರಲಿ, ಗಂಡನ ಆಸ್ತಿ ನನ್ನ ಹೆಸರಿಗೆ ಆಗುವುದಿಲ್ಲ." ಹೊಸದಾಗಿ ಮದುವೆಯಾದ ಹಿಂದೂಗಳ ಪೈಕಿಯ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದ ಈ ಸತಿ-ಪತಿ ಖೈರಪುರ ಜಿಲ್ಲೆಯವರಾಗಿದ್ದು, 'ಈ ಮದುವೆಯನ್ನು ಈ ರೀತಿ ಆಚರಿಸಿ ತಾವು ದಾಂಪತ್ಯಜೀವನಕ್ಕೆ ಕಾಲಿರಿಸಿದ್ದು, ಸೂಕ್ತ ಕಾನೂನು ವಂಚಿತರಾಗಿರುವುದನ್ನು ಪ್ರತಿಭಟಿಸುವ ಸಲುವಾಗಿ' ಎಂದು ಹೇಳಿದ್ದರು. 1998ರ ಜನಗಣತಿ ಪ್ರಕಾರ ಪಾಕಿಸ್ತಾನದಲ್ಲಿರುವ 3.4 ಮಿಲಿಯನ್ ಹಿಂದೂಗಳ ಪೈಕಿ ಮೂರನೆಯ ಒಂದು ಭಾಗಕ್ಕೂ ಹೆಚ್ಚು ಜನರು ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಎಂಟು ಸದಸ್ಯರಿದ್ದರೂ ಅವರ ಮಾತನ್ನು ಕೇಳುವವರೇ ಇಲ್ಲವಾಗಿದೆ. ದೇವರ ರಾಜ್ಯದಲ್ಲಿ ಮನುಷ್ಯರಿಗೆ ಬೆಲೆಯೇ ಇಲ್ಲವೇ? ಮಾನವತೆ ಅನ್ನುವುದು ಎಲ್ಲಾ ಧರ್ಮಗಳ ತಿರುಳು ಅನ್ನುತ್ತಾರೆ. ಹಾಗಿದ್ದರೆ ಅದರ ಹೆಸರಿನಲ್ಲೇ ಮಾನವತ್ವ ಕಳೆದುಕೊಳ್ಳುತ್ತಿರುವುದರ ಕಾರಣವಾದರೂ ಏನು? ಇದಕ್ಕೆ ಪರಿಹಾರವಾದರೂ ಏನು? ಮಾನವತ್ವ ಪೋಷಿಸುವ ಧರ್ಮ ಮಾತ್ರ ನಮಗಿರಲಿ. "ಸಬಕೋ ಸನ್ಮತಿ ದೇ ಭಗವಾನ್, ಅಲ್ಲಾಹ್, ಜೀಸಸ್, ಬುದ್ಧ, . . . .!"
-ಕ.ವೆಂ.ನಾಗರಾಜ್.
ಆಧಾರ: ಪಾಕಿಸ್ತಾನದ 'ಟ್ರಿಬ್ಯೂನ್' ಪತ್ರಿಕೆಯ ವರದಿ. ಚಿತ್ರ ಸಹ ಅಲ್ಲಿಯದೇ.
ಲಿಂಕ್:http://tribune.com.pk/story/206929/love-hurts-hindu-couple-marries-outside-press-club-as-a-sign-of-protest/

ಸೋಮವಾರ, ಫೆಬ್ರವರಿ 25, 2013

ಅತಿಥಿ ಸತ್ಕಾರ
     ಹಿಂದೊಂದು ಕಾಲವಿತ್ತು. ಯಾರಾದರೂ ಅತಿಥಿಗಳು, ಹಸಿದವರು ಬರುತ್ತಾರೆಯೋ ಎಂದು ಕಾದಿದ್ದು ಅವರಿಗೆ ಊಟ ನೀಡಿದ ನಂತರ ಊಟ ಮಾಡುವ ಪರಿಪಾಠ ಸಜ್ಜನರಲ್ಲಿತ್ತು. ನನಗೆ ಗೊತ್ತಿದ್ದಂತೆ ಕೆಲವು ದಶಕಗಳ ಹಿಂದೆ ಒಂದು ಹೋಟೆಲಿನ ಮಾಲಿಕರು ಕೇವಲ ಸಾಂಕೇತಿಕವೆನ್ನುವ ಅತ್ಯಂತ ಕಡಿಮೆ ದರವಿಟ್ಟು ಓದುವ ಬಡ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ಹಾಕುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಹಾಕುತ್ತಿದ್ದ ಒಂದೇ ನಿಬಂಧನೆಯೆಂದರೆ, 'ಎಷ್ಟು ಬೇಕಾದರೂ ತಿನ್ನಿ, ಬೇಕಾಗುವಷ್ಟನ್ನೇ ಹಾಕಿಸಿಕೊಂಡು ತಿನ್ನಿ, ಎಲೆಯಲ್ಲಿ ಮಾತ್ರ ಒಂದು ಅಗುಳನ್ನೂ ಉಳಿಸಬಾರದು, ಚೆನ್ನಾಗಿ ತಿನ್ನಿ, ಚೆನ್ನಾಗಿ ಓದಿ' ಎಂಬುದು ಮಾತ್ರ. ವಾರಾನ್ನ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೂ ಕಡಿಮೆಯಿರಲಿಲ್ಲ. ಇಂದು ಈ ಕಲ್ಪನೆಯೇ ಕಾಣೆಯಾಗುತ್ತಿದೆ. ಹಸಿದವರಿಗೆ, ಬಡವರಿಗೆ, ಅಶಕ್ತರಿಗೆ ಊಟ ಹಾಕುವ ಧರ್ಮಛತ್ರಗಳಿರುತ್ತಿದ್ದವು. ಈಗ? ಅತಿಥಿಗಳಿರಲಿ, ರಕ್ತಸಂಬಂಧಿಗಳೂ, ಬಂಧುಗಳೂ ಸಹ ಅಪರಿಚಿತರೆನಿಸಿಬಿಡುತ್ತಿದ್ದಾರೆ. ಈ ವ್ಯತ್ಯಾಸಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಸ್ಪಷ್ಟವಾಗಿ ಗೊತ್ತಾಗುವುದೆಂದರೆ ಪಾಶ್ಚಾತ್ಯ ಮೂಲದ ಹಣಸಂಪಾದನೆಯೇ ಪ್ರಮುಖವಾಗಿಸಿರುವ ಶಿಕ್ಷಣ ಪದ್ಧತಿ ಎಂಬುದು. ನೈತಿಕ ಶಿಕ್ಷಣದ ಕೊರತೆ, ಕೇಸರೀಕರಣದ ಗುಮ್ಮನನ್ನು ತೋರಿಸಿ ಸತ್‌ಸಂಸ್ಕಾರಗಳಿಗೆ ಅಡ್ಡಿ, ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ತಂದೆ-ತಾಯಿಯರಿಗೇ ಸಂಸ್ಕಾರದ ಕೊರತೆ, ಋಣಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ ಕೊಡುವ ಮಾಧ್ಯಮಗಳು, ಬುದ್ಧೂಜೀವಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿರುವುದು ಸುಳ್ಳಲ್ಲ. ನಾವು ಪ್ರತಿನಿತ್ಯ ಊಟ ಮಾಡಬಲ್ಲಷ್ಟು ಭಾಗ್ಯಶಾಲಿಗಳಾಗಿದ್ದೇವೆ. ಆದರೆ, ಇದೇ ಪರಿಸ್ಥಿತಿ ಹೆಚ್ಚಿನವರಿಗೆ ಇಲ್ಲ. ಅಂತಹ ಯಾರಾದರೂ ಒಬ್ಬ ಅರ್ಹರಿಗೆ ಊಟ ಹಾಕುವ ಕೆಲಸ ನಾವು ಮಾಡಬಹುದೇನೋ! ವೈದಿಕ ಪರಂಪರೆಯಲ್ಲಿ ಪ್ರತಿನಿತ್ಯ ಮಾಡಬೇಕಾದ ಪಂಚಮಹಾಯಜ್ಞಗಳ ಪೈಕಿ ಅತಿಥಿಯಜ್ಞವೂ ಒಂದು. ಈ ಕುರಿತು ಪಂ. ಸುಧಾಕರ ಚತುರ್ವೇದಿಯವರು ಹೇಳಿರುವುದು ಹೀಗೆ:   

      ಅತಿಥಿಯಜ್ಞ - ಇದೂ ಮುಖ್ಯತಃ ಗೃಹಸ್ಥರಿಗೇ ಸಂಬಂಧಿಸಿದ ಯಜ್ಞ. ಯಾವ ಪೂರ್ವ ನಿಶ್ಚಯವೂ ಇಲ್ಲದೆ, ಬರುವ ದಿನದ ಅರಿವು ಇಲ್ಲದೆ, ತಾವಾಗಿ ಬಂದ ಸಂನ್ಯಾಸಿಗಳನ್ನೂ, ಸದಾಚಾರಿ ವಿದ್ವಾಂಸರನ್ನೂ, ಆತ್ಮಜರನ್ನೂ ಅದರದಿಂದ ಸ್ವಾಗತಿಸಿ, ಅವರಿಂದ ಆತ್ಮೋದ್ಧಾರಕಾರವಾದ ಉಪದೇಶಗಳನ್ನು ಪಡೆದುಕೊಂಡು, ಅವರನ್ನು ಭೋಜನಾದಿಗಳಿಂದ ಸತ್ಕರಿಸುವುದೇ ಅತಿಥಿಯಜ್ಞ. ಅತಿಥಿಯಜ್ಞದ ಮಹತ್ವವನ್ನು ವರ್ಣಿಸುತ್ತಾ ಅಥರ್ವವೇದ ಹೇಳುತ್ತದೆ:-
ಅಶಿತಾವತ್ಯಥಾವಶ್ನೀಯಾದ್ಯಜಸ್ಯ ಸಾತ್ಮತ್ವಾಯ ಯಜ್ಞಸ್ಯಾವಿಚ್ಛೇದಾಯ ತದ್ ವ್ರತಮ್ || (ಅಥರ್ವ.೯.೬.೩೮) 
     [ಅತಿಥೌ ಅಶಿತಾವತಿ] ಅತಿಥಿಯು ಊಟ ಮಾಡಿದ ಮೇಲೆ, [ಅಶ್ನೀಯಾತ್] ಗೃಹಸ್ಥನು ಊಟ ಮಾಡಬೇಕು. [ಯಜ್ಞಸ್ಯ ಸಾತ್ಮತ್ವಾಯ] ಯಜ್ಞವು ಆತ್ಮವಂತವಾಗುವಂತೆ ಮಾಡುವುದಕ್ಕಾಗಿ [ಯಜ್ಞಸ್ಯ ಆವಿಚ್ಛೇದಾಯ] ಯಜ್ಞವು ನಿರಂತರ ನಡೆಯುವಂತೆ ಮಾಡುವುದಕ್ಕಾಗಿ (ಎಂಬುದಾಗಿ ತಿಳಿಯಬೇಕು). [ತದ್ ವ್ರತಮ್] ಅದೇ ವ್ರತ.
     ಯಜ್ಞವು ಜಳ್ಳಾಗದಂತೆ, ಕೇವಲ ತಿರುಳಿಲ್ಲದ ಆಡಂಬರವಾಗದಂತೆ, ಅದು ಚೈತನ್ಯದಾಯಕವಾಗುವಂತೆ ಮಾಡಲಿಕ್ಕಾಗಿ ಮತ್ತು ಅದು ಮುರಿದು ಬೀಳದಂತೆ, ಸತತವೂ ನಡೆದು ಬರುವಂತೆ ಮಾಡುವುದಕ್ಕಾಗಿ, ಜ್ಞಾನಿಯಾದ ಸತ್ಯಮಯವಾದ ಆಧ್ಯಾತ್ಮಿಕ ಪ್ರವಚನವನ್ನು ನೀಡಬಲ್ಲ ಅತಿಥಿಯನ್ನು ಮೊದಲು ಭೋಜನಾದಿಗಳಿಂದ ಸತ್ಕರಿಸಿ, ಆಮೇಲೆ ತಾನು ಭುಂಜಿಸುವುದು ಗೃಹಸ್ಥನ ವ್ರತವಾಗಿರಬೇಕು. ಅತಿಥಿಯ ಲಕ್ಷಣವನ್ನು ಹೇಳುತ್ತಾ ಅಥರ್ವವೇದ ಹೀಗೆನ್ನುತ್ತದೆ:-
ಏಷ ವಾ ಅತಿಥಿರ್ಯಚ್ಛೋತ್ರೀಯಸ್ತಸ್ಮಾತ್ಪೂರ್ವೋ ನಾಶ್ನೀಯಾತ್ || (ಅಥರ್ವ.೯.೬.೩೭)
     [ಯತ್ ಶ್ರೋತ್ರೀಯಃ] ಯಾವನು ವೇದವೇತ್ತನಾಗಿದ್ದಾನೋ, [ಏಷ ವಾ ಅತಿಥಿಃ] ಅವನೇ ಅತಿಥಿಯು. [ತಸ್ಮಾತ್ ಏವ ಪೂರ್ವಃ] ಆತನಿಗಿಂತಲೂ ಮೊದಲಿಗನಾಗಿ, [ನ ಅಶ್ನೀಯಾತ್] ಊಟ ಮಾಡಬಾರದು. 
     ಚತುರ್ವೇದ ಪಾರಂಗತನಾದ ವಿದ್ವಾಂಸನೇ ಗೃಹಸ್ಥರಿಗೆ ಪಾರಮಾರ್ಥಿಕ - ಲೌಕಿಕ - ಜ್ಞಾನಗಳನ್ನು ಕೊಡಬಲ್ಲನು. ಧರ್ಮ, ಮನೆಮನೆಯಲ್ಲಿಯೂ ಜೀವಂತವಾಗಿ ಮೆರೆಯಬೇಕಾದರೆ, ವಿದ್ವಾನ್ ಅತಿಥಿಗಳ ಆಗಮನ ಅನಿವಾರ್ಯ. ಅತಿಥಿಸತ್ಕಾರ ಮಾಡದೆ, ತಾನೇ ಮೊದಲು ತಿನ್ನುವ ಗೃಹಸ್ಥನ ಬಗೆಗೆ ಅಥರ್ವವೇದ ಹೇಳುತ್ತದೆ:- 
ಊರ್ಜಾಂ ಚ ವಾ ಏಷ ಸ್ಫಾತಿಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೩)
     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಊರ್ಜಂ ಚ ವಾ ಸ್ಫಾತಿಂ ಚ ಅಶ್ನಾತಿ] ಅವನು ಮನೆಯ ತೇಜಸ್ಸನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ.
ಶ್ರಿಯಂ ಚ ವಾ ಏಷ ಸಂವಿಧಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೬)
     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಶ್ರಿಯಂ ಚ ವಾ ಸಂವಿದಂ ಚ ಅಶ್ನಾತಿ] ಅವನು ಮನೆಯ ಸಂಪತ್ತನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ. 
     ಗೃಹಸ್ಥರ ಧರ್ಮ, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಲ್ಲ. ಮಾನವಮಾತ್ರರ ಉತ್ಕರ್ಷಕ್ಕಾಗಿ ಸದುಪದೇಶ ಮಾಡುತ್ತಾ, ತಿರುಗುವ ಜ್ಞಾನಿಗಳಿಗೂ ಆದರ, ಸತ್ಕಾರ ಸಲ್ಲಿಸಿ, ಸಾಮಾಜಿಕ ಹಿತದಲ್ಲಿಯೂ ಭಾಗವಹಿಸಬೇಕಾದುದು ಅವರ ಕರ್ತವ್ಯ. ಅಭ್ಯಾಗತರನ್ನು ಅಂದರೆ, ಕರೆಸಿಕೊಂಡು ಬಂದವರನ್ನು ಸತ್ಕರಿಸುವುದರಲ್ಲಿ ವಿಶೇಷವೇನೂ ಇಲ್ಲ. ಅತಿಥಿಸತ್ಕಾರದಿಂದಲೇ ಗೃಹಸ್ಥರ ಹೃದಯ ವಿಶಾಲವಾಗುವುದು. ವಿದ್ವತ್ಸಂಗದಿಂದ ಅಧ್ಯಾತ್ಮಜ್ಞಾನವೂ ಬೆಳೆದುಬರುವುದು. 

ಶುಕ್ರವಾರ, ಫೆಬ್ರವರಿ 22, 2013

ಸಹಸ್ರಮಾನದ ವ್ಯಕ್ತಿ - ಪಾಲಮ್ ಕಲ್ಯಾಣ ಸುಂದರಮ್


   ವಿಶ್ವಸಂಸ್ಥೆ ಈ ವ್ಯಕ್ತಿಯನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾ ಸರ್ಕಾರ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ತೂತ್ತುಕುಡಿ ಜಿಲ್ಲೆಯ ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ 30 ಕೋಟಿ ರೂ. ಹಣವನ್ನೂ ಸಹ ಬಿಡುಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರಿಗೆ ಇವರೇ ಸಾಟಿ, ಅನ್ಯರಿಲ್ಲ. ಇವರೇ ಪಾಲಮ್ ಕಲ್ಯಾಣ ಸುಂದರಮ್. ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ಇವರನ್ನು ತಮ್ಮ ದತ್ತು ತಂದೆಯನ್ನಾಗಿಸಿಕೊಂಡಿದ್ದಾರೆ.
     ಅದು ಭಾರತ-ಚೀನಾ ಯುದ್ಧದ ಸಂದರ್ಭ. ಇಡೀ ದೇಶವೇ ಒಂದಾಗಿ ಎದ್ದು ನಿಂತಿದ್ದ ಸಮಯ. ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದ ಸಮಯ. ಆಗ ರಾಜಕಾರಣಿಗಳ ನೈತಿಕತೆ ಇಷ್ಟೊಂದು ಪಾತಾಳ ಕಂಡಿರಲಿಲ್ಲ. ರಾಜಕಾರಣಿಗಳನ್ನು ಜನರು ನಂಬುತ್ತಿದ್ದ ಕಾಲ. ಅವರುಗಳಲ್ಲೂ ನಂಬಿಕೆ ಉಳಿಸಿಕೊಂಡಿದ್ದವರಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗೆ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರವರನ್ನು ಕಂಡು ವಿಷಯ ತಿಳಿಸಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು  ಕಳಿಸಿದ್ದು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವೂ ಸಮಾಜಕ್ಕೆ ಅರ್ಪಿಸಿದ ಆ ಪುಣ್ಯಾತ್ಮ ಅಸಾಮಾನ್ಯ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ. 1990ರಲ್ಲಿ ಪೆನ್ಶನ್ ಮತ್ತು ನಿವೃತ್ತಿ ಸಂಬಂಧದ ಹಣ ಸುಮಾರು 10 ಲಕ್ಷ ರೂ.ಗಳು ಬಂದಾಗ ಆ ಎಲ್ಲಾ ಹಣವನ್ನೂ ತಿರುನಲ್ವೇಲಿಯ ಕಲೆಕ್ಟರರ ನಿಧಿಗೆ ಕೊಟ್ಟು ನಿರಾಳರಾದ ಅವರನ್ನು, ಕಲೆಕ್ಟರರು ಅವರ ವಿರೋಧವನ್ನೂ ಲೆಕ್ಕಿಸದೆ ಸನ್ಮಾನಿಸಿದ್ದರು. ತಿರುನಲ್ವೇಲಿಯ ವೈದ್ಯಕೀಯ ಕಾಲೇಜಿಗೆ ಸತ್ತ ನಂತರದಲ್ಲಿ ತಮ್ಮ ಕಣ್ಣು ಮತ್ತು ದೇಹದಾನ ಪಡೆಯಲು ಅನುಮತಿಸಿ ಬರೆದುಕೊಟ್ಟಿರುವವರಿವರು. ಪಾಲಮ್ ಎಂಬ ಹೆಸರಿನ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿರುವ ಅವರು ಅದರ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆ ದಾನಿಗಳು ಮತ್ತು ಫಲಾನುಭವಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ದಾನಿಗಳು ಕೊಡುವ ವಸ್ತುಗಳು ಮತ್ತು ಹಣ ಯೋಗ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಚಂಡಮಾರುತ ಸಂತ್ರಸ್ತರಿಗೆ, ಮಹಾರಾಷ್ಟ್ರ ಮತ್ತು ಗುಜರಾತಿನ ಭೂಕಂಪ ಪೀಡಿತರಿಗೆ ಈ ಸಂಸ್ಥೆ ಸಹಾಯಹಸ್ತ ಚಾಚಿದೆ. 
     ತಿರುನಲ್ವೇಲಿ ಜಿಲ್ಲೆಯ ಮೇಲಕರಿವೇಲಾಂಕುಲಂನಲ್ಲಿ 1953ರ ಆಗಸ್ಟ್ ತಿಂಗಳಿನಲ್ಲಿ ಜನಿಸಿದ ಕಲ್ಯಾಣಸುಂದರಮ್ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದು, ಅವರಿಗೆ ಬಡವರ ಸೇವೆ ಮಾಡಲು ಪ್ರೇರಿಸಿದ್ದು ಅವರ ತಾಯಿ. ಲೈಬ್ರರಿ ಸೈನ್ಸಿನಲ್ಲಿ ಚಿನ್ನದ ಪದಕ ಗಳಿಸಿದ್ದ ಅವರು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲೂ ಅನುಪಮ ಸೇವೆ ಸಲ್ಲಿಸಿದವರು. ಮದ್ರಾಸ್ ವಿಶ್ವವಿದ್ಯಾಲಯದ ಸಾಹಿತ್ಯ ಮತ್ತು ಇತಿಹಾಸ ವಿಷಯಗಳಲ್ಲಿ ಮಾಸ್ಟರ್ ಪದವಿ ಹೊಂದಿದ್ದಾರೆ. ಗ್ರಂಥಪಾಲನೆ ಮಾಡುವ ಕ್ರಮದ ಅಭಿವೃದ್ಧಿಗೆ ಮಾರ್ಗಸೂಚಿಗಳನ್ನು ತೋರಿದವರು. ಅವರು ಖಾದಿ ತೊಡಲು ಪ್ರಾರಂಭಿಸಿದ ಹಿನ್ನೆಲೆ ಸ್ವಾರಸ್ಯಕರವಾಗಿದೆ. ಗಾಂಧೀಜಿ ವಿಚಾರಗಳ ಕುರಿತು ಅವರು ಕಾಲೇಜಿನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿತ್ತಂತೆ. ಗಾಂಧಿ ಕುರಿತು ಮಾತನಾಡುವಾಗ ಬೆಲೆ ಬಾಳುವ ಬಟ್ಟೆ ಧರಿಸಿ ಮಾತನಾಡುವುದು ಸರಿಕಾಣದೆ ಅವರು ಖಾದಿ ತೊಡಲು ಆರಂಭಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನವರಾಗಿದ್ದು, ಅವರಲ್ಲಿ ಅನೇಕರು ಪಾಲಮ್ ಸಂಸ್ಥೆಗೆ ಸೇರಿದ್ದಾರೆ. ರಾಷ್ಟ್ರೀಕೃತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಎಲ್ಲಾ ಸ್ತರದ ಜನರಿಗೆ ಅದರ ಉಪಯೋಗ ಕಲ್ಪಿಸುವ ಒಂದು ಗುರಿಯನ್ನೂ ಸಹ ಅವರ ಸಂಸ್ಥೆ ಹೊಂದಿದೆ. "ಕ್ರಿಯಾಸಿದ್ಧಿಃ ಸತ್ವೇಭವತಿ ಮಹತಾಂ ನೋಪಕರಣೇ" ಎಂಬ ವಾಕ್ಯದ ಅರ್ಥ ಇವರ ನಡೆ ನುಡಿಯಲ್ಲಿ ವ್ಯಕ್ತವಾಗಿದೆ.
     ಸರಳ ಜೀವನ, ಉನ್ನತ ಚಿಂತನೆಯ ಸಾಕಾರ ರೂಪ ಕಲ್ಯಾಣಸುಂದರಮ್. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಸಾಮಾಜಿಕ ಒಳಿತಿಗೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕಾಣಿಕೆ ಕೊಟ್ಟರೆ ಬದಲಾವಣೆ ಸಾಧ್ಯವೆಂದು ನಂಬಿರುವ ಅವರು ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೆಸರಿಗೆ ತಕ್ಕಂತೆ ಲೋಕಕಲ್ಯಾಣಕಾರಿಯಾಗಿರುವ, ಸುಂದರ ವಿಚಾರಗಳನ್ನು ಕಾರ್ಯರೂಪಕ್ಕಿಳಿಸಿರುವ ಕಲ್ಯಾಣಸುಂದರಮ್ ನಮ್ಮೆಲ್ಲರಿಗೆ ಆದರ್ಶವಾಗಲಿ. ಕೋಟಿ ಕೋಟಿ ಹಣ ಬಾಚುವ, ದೋಚುವ ರಾಜಕಾರಣಿಗಳು, ನುಂಗಣ್ಣರನ್ನು ವೈಭವೀಕರಿಸುವ ಜನರು ಮತ್ತು ಮಾಧ್ಯಮಗಳು ಇಂತಹವರ ಕಾರ್ಯಗಳ ಮೇಲೆ ಬೆಳಕು ಚೆಲ್ಲಲಿ, ಗೌರವಿಸಲಿ.  ಸಹಸ್ಯಮಾನದ ಈ ಅಪರೂಪದ ವ್ಯಕ್ತಿತ್ವಕ್ಕೆ ನಮೋನಮಃ. 
     ಈ ಲೇಖನಕ್ಕೆ ದಿ ಹಿಂದೂ ಪತ್ರಿಕೆಯ ಆನ್ ಲೈನ್ ಪ್ರತಿಯಲ್ಲಿರುವ ಲೇಖನ ಆಧಾರವಾಗಿದೆ. ಬಳಸಿರುವ ಚಿತ್ರ ಸಹ ಇಲ್ಲಿಯದೇ. ಲಿಂಕ್ ಇಲ್ಲಿದೆ:
 http://www.hindu.com/lf/2004/08/22/stories/2004082209260200.htm. ಯು ಟ್ಯೂಬಿನ ಸರ್ಚ್ ಅಂಕಣದಲ್ಲಿ ಇವರ ಹೆಸರು ನಮೂದಿಸಿ ಹುಡುಕಿದರೆ ಇವರ ಕುರಿತು ಕೆಲವು ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.
-ಕ.ವೆಂ.ನಾಗರಾಜ್.

ಮಂಗಳವಾರ, ಫೆಬ್ರವರಿ 19, 2013

ಗೋಲ್ ಮಾಲ್ ಟಿವಿ ರಿಪೋರ್ಟರ್ ಗೋವಿಂದ


    ಎಂದಿನಂತೆ ಮಂಕ, ಮೂಢರು ಸಂಜೆ ಸ್ಟೇಡಿಯಂನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಮಡ್ಡಿ ಮತ್ತು ಮುಠ್ಠಾಳರು ಮೆಟ್ಟಿಲ ಮೇಲೆ ಕುಳಿತು ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದುದನ್ನು ಕಂಡು ಇವರೂ ಸೇರಿಕೊಂಡರು. ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿದ್ದ ಮುಠ್ಠಾಳ ಹೆಡ್ ಮಾಸ್ಟರನ ಕಿರಿಕಿರಿ ಬಗ್ಗೆ ಕೊರಗುಟ್ಟುತ್ತಿದ್ದ. ರಜಾ ಕೇಳಿದರೆ ಕೊಡಲ್ಲ, ಲೇಟಾಗಿ ಬಂದರೆ ಸಿ.ಎಲ್. ಕಟ್ ಮಾಡ್ತಾನೆ, ಹಾಗೆ, ಹೀಗೆ ಅಂತ ಅಲವತ್ತುಕೊಳ್ಳುತ್ತಿದ್ದ.
ಮುಠ್ಠಾಳ: ಏನು ಮಾಡಬೇಕೋ ಗೊತ್ತಾಗ್ತಾ ಇಲ್ಲ ಕಣ್ರೋ. ಬೇರೆ ಸ್ಕೂಲಿಗೆ ಟ್ರಾನ್ಸ್‌ಫರ್ ಮಾಡಿಸ್ಕೊಳ್ಳೋಕೂ ನೋಡಿದೆ ಕಣೋ, ಅದಕ್ಕೂ ಕಲ್ಲು ಹಾಕಿದ ಕಣೋ. ಅವನಿಗೊಂದು ಗತಿ ಕಾಣಿಸ್ಬೇಕು.
ಮಂಕ:  ಶಿಕ್ಷಣಾಧಿಕಾರಿ ಹತ್ರ ಮಾತಾಡಬೇಕಿತ್ತು.
ಮುಠ್ಠಾಳ; ಅಯ್ಯೋ, ಅವನು ಅವರೆಲ್ಲರ ಹತ್ರ ಚೆನ್ನಾಗಿದಾನೆ. ನಾನು ಅವರ ಆಫೀಸಿನಲ್ಲಿ ಏನು ಮಾತಾಡಿದರೂ ಅವನಿಗೆ ಗೊತ್ತಾಗಿಹೋಗುತ್ತೆ. ಅವನು ಬಂದು ಕಡ್ಡಿ ಆಡಿಸಿ ಹೋಗ್ತಾನೆ. ನಾಲ್ಕು ತದುಕಿಬಿಡೋಣ ಅಂದರೆ ಅದೂ ಎಡವಟ್ಟಾಗುತ್ತೆ. ಏನಾದರೂ ದಾರಿ ಇದ್ರೆ ಹೇಳ್ರೋ.
     ಹಲ್ಲು ಕಡಿಯುತ್ತಾ ಧುಮುಗುಟ್ಟುತ್ತಿದ್ದ ಮುಠ್ಠಾಳನನ್ನು ಕಂಡು ಸ್ನೇಹಿತರಿಗೆ ಕನಿಕರವಾಯಿತು. ಏನೋ ಹೊಳೆದವನಂತೆ ಮಡ್ಡಿ ಪ್ರಕಾಶಮಾನನಾದ.
ಮಡ್ಡಿ:  ಸರ್ವ ರೋಗಕ್ಕೆ ಸಾರಾಯಿ ಮದ್ದು ಅನ್ನೋ ಹಾಗೆ ಸರ್ವಸಮಸ್ಯೆಗೆ ಪರಿಹಾರ ಕೊಡೋ ಗೋವಿಂದ ಇದಾನೆ. ಅವನ ಹತ್ರ ಹೋಗೋಣ. 
ಮೂಢ: ಆ ಗೋಲ್ ಮಾಲ್ ಚಾನೆಲ್ ರಿಪೋರ್ಟರ್ ಗೋವಿಂದಾನಾ? ನಿನ್ನ ದೂರದ ನೆಂಟ? ಅವನೇನು ಮಾಡ್ತಾನೋ?
ಮಡ್ಡಿ:  ಹೂಂ, ಅವನೇ. ಅವನು ಬಂದ ಅಂದರೆ ಆ ಹೆಡ್ ಮಾಸ್ಟರನಿಗೆ ಒಂದು ಗತಿ ಕಾಣಿಸ್ತಾನೆ. ಎಲ್ಲರೂ ಹೋದರೆ ಕೆಲಸ ಕೆಡುತ್ತೆ. ನಾನು ಮುಠ್ಠಾಳ ಇಬ್ರೇ ಹೋಗಿಬರ್ತೀವಿ. ಅವನಿಗೆ ಪುರುಸೊತ್ತೇ ಇರಲ್ಲ. ಅಪಾಯಿಂಟ್ ಮೆಂಟ್ ತೆಗೆದುಕೊಂಡೇ ಹೋಗಬೇಕು.
     ಪರಿಹಾರ ಕಂಡ ಖುಷಿಯಲ್ಲಿ ಅವತ್ತಿನ ಸಂಜೆಯ ತಿಂಡಿ, ಕಾಫಿಯ ಖರ್ಚನ್ನು ಮುಠ್ಠಾಳನೇ ವಹಿಸಿಕೊಂಡ. ಫೋನು ಮಾಡಿ ವಿಚಾರಿಸಿದಾಗ ಮೂರು ದಿನದ ನಂತರ ಮಧ್ಯಾಹ್ನ 4 ಘಂಟೆಗೆ ಅಪಾಯಿಂಟ್ ಮೆಂಟ್ ಸಿಕ್ಕಿತು. ಬೇರೆ ರಿಪೋರ್ಟರುಗಳು ಸುದ್ದಿಗಾಗಿ ಓಡಾಡುತ್ತಿದ್ದರೆ ಸುದ್ದಿಗಳೇ ತನ್ನಲ್ಲಿಗೆ ಬರುತ್ತವೆ ಎಂದು ಗೋವಿಂದ ಜಂಬದಿಂದ ಹೇಳುತ್ತಿದ್ದ. ಸಮಯಕ್ಕೆ ಸರಿಯಾಗಿ ಮಡ್ಡಿ, ಮುಠ್ಠಾಳರು ಗೋವಿಂದನ ಮನೆಗೆ ಹೋದರು. ಕೆಲವೇ ವರ್ಷಗಳ ಹಿಂದೆ ಒಂದು ಸಣ್ಣ ಮಂಗಳೂರು ಹೆಂಚಿನ ಬಾಡಿಗೆ ಮನೆಯಲ್ಲಿದ್ದ ಗೋವಿಂದ ಈಗ ಒಂದು ದೊಡ್ಡ ಬಂಗಲೆಯ ಒಡೆಯ. ವರಾಂಡಾದಲ್ಲಿ ಹಾಕಿದ್ದ ಸಾಲು ಕುರ್ಚಿಗಳಲ್ಲಿ ಏಳೆಂಟು ಜನ ಕುಳಿತಿದ್ದರು. ಟಿವಿಎಸ್ ಮೊಪೆಡ್ಡಿನಲ್ಲಿ ಓಡಾಡುತ್ತಿದ್ದವನು ಇಂದು ಇನೋವಾ ಕಾರಿನ ಮಾಲಿಕ. ಮಡ್ಡಿ, ಮುಠ್ಠಾಳರು ಗೋವಿಂದನನ್ನು ಕಂಡು ನಮಸ್ಕರಿಸಿದಾಗ ಅವನು ನೆಂಟ ಮಡ್ಡಿಯನ್ನು ಕುರಿತು, 'ಆರಾಮವಾಗಿ ಮಾತಾಡೋಣ, ಕೂತ್ಕೊಳಿ. ಬಂದಿರೋರನ್ನ ಬೇಗ ಕಳಿಸಿಬಿಡ್ತೀನಿ' ಅಂದು ಹೊರಗಿದ್ದವರನ್ನು ಒಬ್ಬೊಬ್ಬರಾಗಿ ಕರೆಸಿ ಅವರುಗಳಿಗೆ ಪರಿಹಾರ ಹೇಳಿ ಕಳಿಸಿದ.
ಗೋವಿಂದ:  ಈಗ ಹೇಳು ಮಡ್ಡಿ. ನಿಮ್ಮ ಸ್ನೇಹಿತರದೇನು ಸಮಸ್ಯೆ?
     ಮುಠ್ಠಾಳ ಪುನಃ ಮೊದಲಿನಿಂದ ಪೂರ್ಣವಾಗಿ ವರದಿ ಒಪ್ಪಿಸಿದ. ಕೇಳಿಕೊಂಡ ಗೋವಿಂದ ಐದು ನಿಮಿಷ ಸೀಲಿಂಗ್ ಫ್ಯಾನ್ ನೋಡುತ್ತಾ ಏನೋ ಲೆಕ್ಕ ಹಾಕುತ್ತಿದ್ದ. ಕೊನೆಗೆ ಬಾಯಿಬಿಟ್ಟ.
ಗೋವಿಂದ: ಇದು ಬಹಳ ಖರ್ಚಿನ ಬಾಬತ್ತು. ನಿಮ್ಮ ಹೆಸರು ಹೊರಗೆ ಬರದಂತೆ ನೋಡಿಕೊಳ್ಳಬೇಕು. ಜನರನ್ನು ಸೇರಿಸಬೇಕು. ನಮ್ಮ ಸಂಪಾದಕರನ್ನೂ ನೋಡಿಕೊಳ್ಳಬೇಕು. ನಿಮ್ಮ ಕೈಲಿ ಆಗಲಾರದು, ಬಿಡಿ.
ಮುಠ್ಠಾಳ:  ಎಷ್ಟು ಖರ್ಚಾದರೂ ಪರವಾಗಿಲ್ಲ. ಸಾಲ ಮಾಡಿಯಾದರೂ ಕೊಡುತ್ತೇನೆ. ಅವನು ತಲೆ ಮೇಲೆತ್ತಬಾರದು, ಹಾಗಾಗಬೇಕು.
ಗೋವಿಂದ: ಸರಿ ಹಾಗಾದರೆ ಈಗ ಇಪ್ಪತ್ತು ಸಾವಿರ ಅಡ್ವಾನ್ಸ್ ಕೊಡಿ. ಒಟ್ಟು ಎಷ್ಟು ಕೊಡಬೇಕು ಅನ್ನೋದನ್ನು ನಮ್ಮ ಸಂಪಾದಕರನ್ನು ಕೇಳಿ ಹೇಳ್ತೀನಿ. ಕೆಲಸ ಆಗೋ ದಿವಸ ಉಳಿದ ದುಡ್ಡು ಕೊಟ್ಟ ನಂತರವೇ ನಮ್ಮ ಕೆಲಸ ಶುರು ಆಗುತ್ತೆ. ಕೊಡಲಿಲ್ಲ ಅಂದರೆ ಕೆಲಸ ಆಗಲ್ಲ. ನಿಮ್ಮ ಅಡ್ವಾನ್ಸ್ ಹಣಾನೂ ವಾಪಸು ಸಿಗಲ್ಲ.
ಮುಠ್ಠಾಳ: ಈಗ ಹತ್ತು ಸಾವಿರ ಇದೆ. ಉಳಿದದ್ದು ಖಂಡಿತಾ ಕೊಡ್ತೀನಿ. ಕೆಲಸ ಮಾಡಿಕೊಡಿ. ಏನು ಮಾಡಬೇಕೂ ಅಂತ ಇದೀರಿ?
ಗೋವಿಂದ:  ಅದು ಪ್ರೊಫೆಶನಲ್ ಸೀಕ್ರೆಟ್. ಈಗ ಹೇಳಲ್ಲ. ಒಟ್ಟಿನಲ್ಲಿ ಅವನು ಇನ್ನುಮುಂದೆ ನಿಮ್ಮ ತಂಟೆಗೆ ಇರಲಿ, ಬೇರೆ ಯಾರ ತಂಟೆಗೂ ಹೋಗಕ್ಕಾಗಬಾರದು ಹಾಗೆ ಮಾಡ್ತೀವಿ.
ಮುಠ್ಠಾಳ: ನೀವು ಹೇಳೋ ಅಷ್ಟು ಹಣ ಕೊಡ್ತೀನಿ. ನಾಳೆ ನಾಡಿದ್ದರಲ್ಲಿ ಕೆಲಸ ಆಗಬೇಕು.
ಗೋವಿಂದ: ಇನ್ನು ಒಂದು ವಾರ ನಮಗೆ ಪುರುಸೊತ್ತಿಲ್ಲ. ಇಂದು ಸಂಜೆ ಲಾಯರ್ ಗುಂಡಣ್ಣನನ್ನು ಚಪ್ಪಲಿಯಲ್ಲಿ ಹೊಡೆಸುವ ಪ್ರೋಗ್ರಾಮ್ ಫಿಕ್ಸ್ ಆಗಿದೆ. ನಾಳೆ ತರಲಾಪುರದಲ್ಲಿ ಗಂಡ-ಹೆಂಡತಿ ಕಿತ್ತಾಟದ ರೆಕಾರ್ಡಿಂಗ್ ಇದೆ. ಸೋಮವಾರ ಗಲಾಟೆಹಳ್ಳಿಯಲ್ಲಿ ಜಮೀನು ವ್ಯವಹಾರಕ್ಕೆ ಅಪ್ಪ-ಮಕ್ಕಳ ಜಗಳಕ್ಕೆ ಡೇಟ್ ಫಿಕ್ಸ್ ಆಗಿದೆ. ಇನ್ನೂ ಮೂರು ಕೆಲಸಗಳಿಗೆ ಫೈನಲ್ ಟಚ್ ಕೊಡಬೇಕು. 23ನೆಯ ತಾರೀಕು ನಿಮ್ಮ ಕೆಲಸ ಆಗುತ್ತೆ. ಆಗುತ್ತಾ? ಅಷ್ಟು ಹೊತ್ತಿಗೆ ಹಣ ಹೊಂದಿಸಿಕೊಳ್ಳಿ.
     ಗೋವಿಂದ ಡೈರಿಯಲ್ಲಿ ಗುರುತು ಹಾಕಿಕೊಂಡ ಮೇಲೆ ಗೆಳೆಯರಿಬ್ಬರು ಹಿಂತಿರುಗಿದರು. ಮುಠ್ಠಾಳ ದಿನ ಲೆಕ್ಕ ಹಾಕುತ್ತಾ 23ನೆಯ ತಾರೀಕು ಎಂದು ಬರುತ್ತದೋ ಎಂದು ಕಾಯುತ್ತಿದ್ದ ದಿನ ಕೊನೆಗೂ  ಬಂದೇಬಿಟ್ಟಿತು. ಶಾಲೆಯಲ್ಲಿ ಪಾಠ ಮಾಡುತ್ತಿದ್ದವನಿಗೆ ಅದರ ಮೇಲೆ ಗಮನವೇ ಇರಲಿಲ್ಲ. ಅನ್ಯಮನಸ್ಕನಾಗಿದ್ದ ಅವನಿಗೆ ಗಂಟೆ ಹನ್ನೆರಡಾದರೂ ಏನೂ ಆಗದಿದ್ದುದು ಕಂಡು ತನ್ನ ಹಣ ಹಳ್ಳ ಹತ್ತಿತೇ ಎಂಬ ಯೋಚನೆ ಶುರುವಾಯಿತು. ಅಷ್ಟು ಹೊತ್ತಿಗೆ ಶಾಲೆಯ ಹೊರಗೆ ಗದ್ದಲ ಆಗುತ್ತಿದ್ದುದು ಕೇಳಿಸಿತು. ಸುಮಾರು 25-30 ಜನರ ಗುಂಪು 'ಕಾಮುಕ ಶಿಂಗಣ್ಣನಿಗೆ ಧಿಕ್ಕಾರ' ಎಂದು ಗಂಟಲು ಹರಿಯುವಂತೆ ಕಿರುಚುತ್ತಿತ್ತು. ಏನು ಗಲಾಟೆ ಎಂದು ನೋಡಲು ಹೊರಬಂದ ಶಿಂಗಣ್ಣನನ್ನು 4-5 ಜನರು ಎಳೆದುಕೊಂಡು ಹಿಗ್ಗಾಮುಗ್ಗಾ ಹೊಡೆಯತೊಡಗಿದರು. ಟಿವಿಯ ಕ್ಯಾಮರಾ ಎಲ್ಲಾ ದೃಷ್ಯಗಳನ್ನು ಸೆರೆಹಿಡಿಯುತ್ತಿತ್ತು. ಏಕೆ, ಏನು ಎಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗಿದ್ದ ಶಿಂಗಣ್ಣನ ಮೂಗು ಒಡೆದು ರಕ್ತ ಬರುತ್ತಿತ್ತು. ಎಡಗಣ್ಣು ಕಪ್ಪುಗಟ್ಟಿತ್ತು. ಒಬ್ಬ ಹೆಣ್ಣು ಮಗಳು ಎದೆ ಬಡಿದುಕೊಳ್ಳುತ್ತಾ ತನ್ನ ಮಗಳಿಗೆ ಶಿಂಗಣ್ಣ ಹೇಗೆ ಹಿಂಸೆ ಕೊಟ್ಟಿದ್ದ ಎಂದು ಅಳುತ್ತಾ ಹೇಳಿದ್ದು ಸಹ ರೆಕಾರ್ಡ್ ಆಯಿತು. ಇದನ್ನೆಲ್ಲಾ ನೋಡುತ್ತಿದ್ದ ಸುತ್ತ ಮುತ್ತಲಿನ ಜನ ಸಹ ಶಿಂಗಣ್ಣನನ್ನು ಮತ್ತೆ ಬಡಿದರು. ಅಷ್ಟು ಹೊತ್ತಿಗೆ ಬಂದ ಪೋಲಿಸರು ಶಿಂಗಣ್ಣನನ್ನು ಜೀಪಿನಲ್ಲಿ ಕೂರಿಸಿಕೊಂಡು ಹೋದರು. ಬಂದ ಆರೋಪ, ಬಿದ್ದ ಪೆಟ್ಟುಗಳಿಂದ ದಂಗುಬಡಿದಿದ್ದ ಶಿಂಗಣ್ಣನಿಗೆ ಮಾತೇ ಹೊರಡುತ್ತಿರಲಿಲ್ಲ. ಟಿವಿಯಲ್ಲಿ ಬರುತ್ತಿದ್ದ ಲೈವ್ ಕಾರ್ಯಕ್ರಮ ನೋಡುತ್ತಿದ್ದವರು ಶಿಂಗಣ್ಣನನ್ನು ಶಪಿಸುತ್ತಿದ್ದರು. 
     ನಂತರದ ಬೆಳವಣಿಗೆಯಲ್ಲಿ ಶಿಂಗಣ್ಣ ಸಸ್ಪೆಂಡ್ ಆದ, ಮುಠ್ಠಾಳನೇ ಇನ್ ಛಾರ್ಜ್ ಹೆಡ್ ಮಾಸ್ಟರ್ ಆದ. ಆದರೆ ಮುಠ್ಠಾಳನಿಗೆ ಶಾಂತಿಯಿರಲಿಲ್ಲ. ಹೆಡ್ ಮಾಸ್ಟರರಿಗೆ ಬುದ್ಧಿ ಕಲಿಸಬೇಕೆಂದು ಅವನಿಗೆ ಇತ್ತಾದರೂ ಈ ರೀತಿ ಆದದ್ದು ಸರಿ ಕಾಣಲಿಲ್ಲ. ಇನ್ನೇನು ಎರಡು ವರ್ಷಕ್ಕೆ ರಿಟೈರ್ ಆಗುತ್ತಿದ್ದ, ಮೊಮ್ಮಕ್ಕಳಿರುವ ಶಿಂಗಣ್ಣನಿಗೆ ಈ ಅಪವಾದ ಹೊರಿಸಬಾರದಿತ್ತು ಎಂದು ಹಳಹಳಿಸಿದ. ಶಿಂಗಣ್ಣ ಸ್ಟ್ರಿಕ್ಟ್ ಆಗಿದ್ದರೂ ಕಚ್ಚೆಹರುಕನಾಗಿರಲಿಲ್ಲ. ಯಾವ ವಿದ್ಯಾರ್ಥಿನಿ ಮೇಲೆ ಶಿಂಗಣ್ಣ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಹೇಳಲಾಗಿತ್ತೋ ಆ ಹುಡುಗಿ ಬಡಹುಡುಗಿಯಾಗಿದ್ದು, ಅವಳ ಚಿಕ್ಕಮ್ಮನಿಗೆ ದುಡ್ಡು ಕೊಟ್ಟು ಆ ರೀತಿ ಹೇಳಿಸಿದ್ದು ಎಂದು ಗೋವಿಂದ ನಂತರ ಗುಟ್ಟಾಗಿ ಹೇಳಿದ್ದ. ಒಬ್ಬರಿಗೆ 200 ರೂ. ನಂತೆ ಕೊಟ್ಟು 25 ಜನರನ್ನು ಹೊಡೆಸಲು ಕರೆಸಲಾಗಿತ್ತಂತೆ. ಶಿಂಗಣ್ಣನ ಮೇಲೆ ಸುತ್ತಮುತ್ತಲಿನ ಜನರಿಗೆ ತುಂಬಾ ಒಳ್ಳೆಯ ಅಭಿಪ್ರಾಯವಿತ್ತು. ಅವರಿಗೆ ಶಿಂಗಣ್ಣ ಹೀಗೆ ಮಾಡಿದ್ದನೆಂದರೆ ನಂಬಿಕೆ ಬರುತ್ತಿರಲಿಲ್ಲ. ಮುಠ್ಠಾಳ ಗೋವಿಂದನಿಗೆ ದೂರವಾಣಿ ಮೂಲಕ ಹೀಗೆ ಮಾಡಬಾರದಿತ್ತೆಂದು ಆಕ್ಷೇಪಿಸಿದ್ದಕ್ಕೆ ರೇಗಿದ ಗೋವಿಂದ, ಸುಮ್ಮನಿರದಿದ್ದರೆ ಮುಠ್ಠಾಳನೂ ಮನೆಗೆ ಹೋಗಬೇಕಾಗುತ್ತದೆಂದು ಎಚ್ಚರಿಸಿ ಬಾಯಿ ಮುಚ್ಚಿಸಿದ. ಶಿಂಗಣ್ಣನ ಆಪ್ತರು ಮನನೊಂದು ನಿಜ ತಿಳಿಯಲು ಸಂಬಂಧಿಸಿದ ಬಾಲಕಿಯ ಮನೆ ಪತ್ತೆ ಹಚ್ಚಿ ವಿಚಾರಿಸಿದಾಗ ಬಾಲಕಿಯ ತಾಯಿ ಹೆದರಿ ಬಾಯಿ ಬಿಟ್ಟಿದ್ದಳು. ಅವಳಿಗೆ ಹತ್ತು ಸಾವಿರ ಕೊಡುವುದಾಗಿ ಹೇಳಿದ್ದ ಗೋವಿಂದ ಎರಡು ಸಾವಿರ ಮಾತ್ರ ಕೊಟ್ಟಿದ್ದನಂತೆ. ವಿಷಯ ಬಾಯಿಂದ ಬಾಯಿಗೆ ಹರಡಿ ಜನ ರೊಚ್ಚಿಗೆದ್ದರು. ಶಿಂಗಣ್ಣನ ಒಳ್ಳೆಯತನ ಅವನ ಸಹಾಯಕ್ಕೆ ಬಂದಿತು. ಗೋವಿಂದ ಮನೆಯಿಂದ ಹೊರಗೆ ಬರುತ್ತಿದ್ದುದನ್ನೇ ಕಾದಿದ್ದ 10-15 ಜನರ ಗುಂಪು ಅವನು ಹೊರಬರುತ್ತಿದ್ದಂತೆ, ಅವನನ್ನು ಕಾರಿನಿಂದ ಹೊರಗೆಳೆದು ಮನಸೋ ಇಚ್ಛೆ ಥಳಿಸಿ ಪರಾರಿಯಾಯಿತು. ಅವನ ಕೈಕಾಲುಗಳ ಮೂಳೆಗಳು ಮುರಿದಿದ್ದವು. ಆಸ್ಪತ್ರೆಯಲ್ಲಿ ಮೈಪೂರಾ ಬ್ಯಾಂಡೇಜ್ ಹಾಕಿಸಿಕೊಂಡು ಮಲಗಿದ್ದ ಗೋವಿಂದನ ಚಿತ್ರ ತೋರಿಸಿ 'ಗೋಲ್ ಮಾಲ್ ರಿಪೋರ್ಟರ್ ಮೇಲೆ ಅಮಾನುಷ ಹಲ್ಲೆ' ಎಂದು ಬ್ರೇಕಿಂಗ್ ನ್ಯೂಸ್ ದಿನವಿಡೀ ಬಿತ್ತರವಾಯಿತು. ಅದನ್ನು ಖಂಡಿಸುವ ಗಣ್ಯರುಗಳ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡಲಾಯಿತು. ಗುಂಪು ಚರ್ಚಾಗೋಷ್ಠಿಗೆ ಭಾಗವಹಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದ ಮಾಧ್ಯಮಗಳ ಮಾಮೂಲಿ ಬುದ್ಧಿವಂತ ಗಣ್ಯರು ಎಂದಿನಂತೆ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದು ಘಟನೆಯನ್ನು ಖಂಡಿಸತೊಡಗಿದರು. 
     ಮರುದಿನ ಹುಳುಕೇಶನ ನೇತೃತ್ವದಲ್ಲಿ ಮಾಧ್ಯಮದ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸುಮಾರು 50 ಜನ ಮಾಧ್ಯಮದವರು ಧರಣಿ ಕುಳಿತಿದ್ದರು. ವ್ಹೀಲ್ ಛೇರಿನಲ್ಲಿ ಗೋವಿಂದನನ್ನೂ ಕೂರಿಸಿ ಕರೆತಂದಿದ್ದರು. ಅವರುಗಳು ಧರಣಿ ಕುಳಿತು ಸುಮಾರು ಅರ್ಧ ಘಂಟೆಯಾಗಿರಬಹುದು. ನೂರಾರು ಜನರು ಮಾಧ್ಯಮದವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬರುತ್ತಿದ್ದುದನ್ನು ಕಂಡು ಹುಳುಕೇಶನಾದಿಯಾಗಿ ಮಾದ್ಯಮದವರೆಲ್ಲರೂ ಕಾಲುಕಿತ್ತರು. ಓಡಲಾಗದ ಗೋವಿಂದನೊಬ್ಬ ರಕ್ಷಣೆಗಾಗಿ ಬಾಯಿ ಬಡಿದುಕೊಳ್ಳುತ್ತಿದ್ದ. ಇಬ್ಬರು ಪೋಲಿಸರು ಅಕ್ಕ ಪಕ್ಕ ನಿಂತಿದ್ದರೂ, ಸೇರಿದ್ದ ತನಗೆ ಜನ ಏನು ಮಾಡುತ್ತಾರೋ ಎಂದು ಅವನು ಹೆದರಿ ನಡುಗುತ್ತಿದ್ದ.  ಸಮಯ ಸರಿದಂತೆ ಪ್ರತಿಭಟಿಸುವ ಜನರ ಸಂಖ್ಯೆ ಬೆಳೆಯುತ್ತಾ ಹೋಯಿತು. ಜನರ ಒತ್ತಾಯಕ್ಕೆ ಮಣಿಯಲೇ ಬೇಕಾಗಿ ಬಂದ ಪೋಲಿಸರು ಗೋಲ್ ಮಾಲ್ ಚಾನೆಲ್ಲಿನ ರಿಪೋರ್ಟರ್ ಮತ್ತು ಸುದ್ದಿ ಸಂಪಾದಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡರು. ಗೋಲ್ ಮಾಲ್ ಚಾನೆಲ್ಲಿನ ಸುದ್ದಿ ಸಂಪಾದಕ ಸಂಪಾದಿಸಿದ್ದ ಅಕ್ರಮ ಸಂಪತ್ತಿನ ಬಗ್ಗೆ ಸಹ ವಿಚಾರಣೆ ನಡೆಸಲು ಲೋಕಾಯುಕ್ತರಿಗೆ ಜನಪರ ಹೋರಾಟಗಾರ ತಮ್ಮಣ್ಣ ದೂರು ಅರ್ಜಿ ಸಲ್ಲಿಸಿದ್ದನ್ನು ಕಂಡು ಇತರ ಮಾಧ್ಯಮಗಳವರು ಬೆಚ್ಚಿ ಬಿದ್ದರು. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಅಂದು ಮಧ್ಯಾಹ್ನ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಮಾಧ್ಯಮದವರು ಇನ್ನು ಮುಂದೆ ಸಾಂಸಾರಿಕ ಮತ್ತು ವೈಯಕ್ತಿಕ ವಿಷಯಗಳಿಗೆ ಮೂಗು ತೂರಿಸುವುದಿಲ್ಲವೆಂದು ಲಿಖಿತ ಮುಚ್ಚಳಿಕೆ ಬರೆದುಕೊಟ್ಟರು.
-ಕ.ವೆಂ.ನಾಗರಾಜ್.  

ಸೋಮವಾರ, ಫೆಬ್ರವರಿ 18, 2013

ಮುಸುಕಿನ ಗುದ್ದು


    ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಅವಳು ಹೇಳುತ್ತಿದ್ದಳು: 'ಆ ಶ್ಯಾಮಲನ್ನ ನೋಡಿದರೆ ಖುಷಿಯಾಗುತ್ತೆ ಕಣೆ. ಯಾವಾಗಲೂ ನಗುನಗುತ್ತಾ ಇರ್ತಾಳೆ. ಮುಖ ಗಂಟು ಹಾಕಿಕೊಂಡು ಗುಮ್ ಅಂತ ಇರೋರನ್ನ ಕಂಡರೆ ಮೈ ಉರಿಯುತ್ತೆ'. ಪೇಪರ್ ಓದುತ್ತಾ ಕುಳಿತಿದ್ದ ಗಂಡನ ಕಡೆಗೆ ಕಿರುನೋಟ ಬೀರಿ ನೋಡುತ್ತಾ  ಹೀಗೆ ಹೇಳಿದಾಗ ಬೆಳಿಗ್ಗೆ ನಡೆದ ಮಾತಿನ ಚಕಮಕಿಯಿಂದ ಮುಖ ದಪ್ಪಗೆ ಮಾಡಿಕೊಂಡಿದ್ದ ಅವನ ಮುಖ ಇನ್ನೂ ದಪ್ಪಗಾಯಿತು.
     ಅದೇ ಸಮಯಕ್ಕೆ ಪಕ್ಕದ ಮನೆ ಗಿರಿಜಮ್ಮ ಬಂದವರು, "ಮನೆಗೆ ನೆಂಟರು ಬಂದಿದ್ದಾರೆ. ಹಾಲೆಲ್ಲಾ ಮುಗಿದಿದೆ. ಸಂಜೆ ತರಿಸಿಕೊಡ್ತೀನಿ. ಸ್ವಲ್ಪ ಹಾಲಿದ್ದರೆ ಕೊಡಿ" ಎಂದು ಹದಿನೈದೇ ನಿಮಿಷ ಮಾತನಾಡಿದ್ದರು. ಗಂಡ ಕೊಡಿಸಿದ್ದ ಹೊಸ ಬಂಗಾರದ ಬಳೆ ತೋರಿಸಿಹೋಗೋದು ಮುಖ್ಯ ಕಾರಣ ಆಗಿತ್ತು. ಹೋಗುವಾಗ ಅವಳಿಂದ ಹಾಲಿನ ಜೊತೆಗೆ "ನೀವು ಬಿಡ್ರೀ ಗಿರಿಜಮ್ಮ, ಪುಣ್ಯವಂತರು. ಹೇಳಿದ್ದನ್ನು ಕೇಳೋದಿರಲಿ, ಮನಸ್ಸಿನಲ್ಲಿರೋದನ್ನೂ ಅರ್ಥ ಮಾಡಿಕೊಳ್ಳೋ ಗಂಡನನ್ನು ಪಡೆದಿದ್ದೀರಿ" ಎಂಬ ಶಹಭಾಸಗಿರಿಯನ್ನೂ ತೆಗೆದುಕೊಂಡು ಹೋದರು. ಅವಳು ಮತ್ತೊಂದು ಕೊಂಕುನೋಟ ಗಂಡನೆಡೆಗೆ ಬೀರಿದ್ದಳು. ತಿಂಡಿ ಆದ ಮೇಲೆ ಕಾಫಿಗಾಗಿ ಕಾಯುತ್ತಲೇ ಇದ್ದ ಅವನ ದಪ್ಪ ಮುಖ ಈ ಮಾತಿನಿಂದ ಕೆಂಪಗೂ ಆಯಿತು. ಗೆಳತಿಯೊಡನೆ ಹರಟುತ್ತಾ ಪುರುಸೊತ್ತು ಮಾಡಿಕೊಂಡು ಕಾಫಿ ಮಾಡಿದ ಅವಳು ಗೆಳತಿಗೆ ಕೊಟ್ಟು, ಗಂಡನ ಮುಂದೆಯೂ ಒಂದು ಲೋಟ ಕುಕ್ಕಿ ಪಿಸುಗುಟ್ಟಿದ್ದಳು: "ಉರಾ ಉರಾ ಅಂತಿರಬೇಡಿ. ಬಂದವರ ಎದುರಿಗಾದರೂ ನಗುನಗುತ್ತಾ ಇರಿ." ಕಾಫಿ ಗಟಗಟ ಕುಡಿದು ಎದ್ದು ರೂಮಿಗೆ ಹೋದ ಅವನು ಕನ್ನಡಿಯಲ್ಲಿ ಮುಖ ನೋಡಿಕೊಂಡ. ಬಲವಂತದ ನಗೆ ನಕ್ಕ ಅವನ ಮುಖ ಅವನಿಗೇ ವಿಚಿತ್ರವಾಗಿ ಕಂಡಿತು.

ಮಂಗಳವಾರ, ಫೆಬ್ರವರಿ 12, 2013

ಶ್ರಾದ್ಧ


ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದ ಬೆಳೆಯದ ನಾಶವಾಗದ 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಸಾಮಾನ್ಯವಾಗಿ ಶ್ರಾದ್ಧ ಎಂದಾಕ್ಷಣ ನೆನಪಿಗೆ ಬರುವುದು ಮೃತರಾದ ಹಿರಿಯರ ನೆನಪಿನಲ್ಲಿ ಮಾಡುವ ಕ್ರಿಯಾಕರ್ಮಗಳು. ಶ್ರಾದ್ಧ ಪದದ ಅರ್ಥವೆಂದರೆ ಶ್ರದ್ಧೆಯಿಂದ ಮಾಡುವುದು ಎಂದು. ನಾವು ಶ್ರಾದ್ಧದ ಹೆಸರಿನಲ್ಲಿ ಮಾಡುವ ಕ್ರಿಯಾಕರ್ಮಗಳಿಂದ ಮೃತರಿಗೆ ನಿಜವಾಗಿಯೂ ಉಪಯೋಗವಾಗುವುದೇ ಎಂಬುದು ವಿಚಾರಾರ್ಹ ವಿಷಯ. ಮಾಡಬಾರದ ಪಾಪಗಳನ್ನು ಮಾಡಿ ದೇವರಿಗೆ 'ಕ್ಷಮಿಸಪ್ಪಾ' ಎಂದು ಕೇಳಿಕೊಂಡಾಕ್ಷಣ ಪಾಪ ಪರಿಹಾರವಾಗುತ್ತದೆ ಎಂದು ನಂಬುವಂತಹವರಿಗೆ ಇದು ಚರ್ಚಾರ್ಹ ವಿಷಯವೇ ಅಲ್ಲ. ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ದೇಹ(ಹೆಣ)ವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ದೇಹವನ್ನು  ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ತನ್ನ ಕರ್ಮಾನುಸಾರವಾಗಿ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ, ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ವೈಯಕ್ತಿಕ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಶ್ರಾದ್ಧಾದಿ ಕಾರ್ಯಗಳು ಮಾಡುವವರು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯೆನ್ನಬಹುದಷ್ಟೆ. ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಈಗಿನ ರೂಢಿಗತ ಸಂಪ್ರದಾಯ ಬಲವಾಗಿ ಬೇರೂರಿರುವ ಕಾಲಮಾನದಲ್ಲಿ  ಮುಂದಕ್ಕೆ ಯೋಚಿಸುವವರು ಸಾಮಾನ್ಯವಾಗಿ ಅಪಾರ್ಥಕ್ಕೆ ಒಳಗಾಗುತ್ತಾರೆ ಎಂಬ ಅರಿವು ನನಗಿದೆ. ಅಪಾರ್ಥಕ್ಕೆ ಒಳಗಾದರೂ ಪರವಾಗಿಲ್ಲ, ಸತ್ತ ನಂತರದಲ್ಲಿ ನನ್ನ ಶ್ರಾದ್ಧವನ್ನು ನನ್ನ ಮಕ್ಕಳು ಮಾಡದಿರಲಿ, ಬೇಕಾದರೆ ಬದುಕಿದ್ದಾಗ ಮಾಡಲಿ ಎಂಬುದು ನನ್ನ ಆಶಯ.

     ಶ್ರಾದ್ಧದ ಕುರಿತು ಪಂ. ಸುಧಾಕರ ಚತುರ್ವೇದಿಯವರ ಏನು ಹೇಳಿದ್ದಾರೆ, ನೋಡೋಣ:
     ಪಿತೃಯಜ್ಞ - ಈ ವಿಷಯದಲ್ಲಿ ಜನಸಾಮಾನ್ಯಕ್ಕೆ ಬಹಳ ಭ್ರಾಂತಿಯಿದೆ. ತೀರಿಹೋದ ತಂದೆ-ತಾಯಿಗಳಿಗೆ ಶ್ರಾದ್ದ ಮಾಡಿ, ಪಿಂಡದಾನ - ತಿಲತರ್ಪಣ ಕೊಡುವುದೇ ಪಿತೃಯಜ್ಞವೆಂಬ ಬುದ್ಧಿವಿರುದ್ದವೂ, ಅವೈದಿಕವೂ ಆದ ನಂಬಿಕೆ ಬಹುಮಂದಿಗಿದೆ. ಪ್ರತಿಯೊಬ್ಬ ಜೀವನೂ ತನ್ನ ಸತ್ಕರ್ಮ - ದುಷ್ಕರ್ಮಗಳಿಗೆ ಉತ್ತರದಾತೃ; ಪ್ರತಿಯೊಬ್ಬ ಜೀವನಿಗೂ ಅವನವನ ಕರ್ಮಾನುಸಾರ ಜನ್ಮಾಂತರದಲ್ಲಿ ಊರ್ಧ್ವಗತಿ-ಅಧೋಗತಿಗಳು ಪ್ರಾಪ್ತವಾಗುತ್ತವೆ. ಈ ವಿಷಯದ ಬಗೆಗೆ ಅನ್ಯರು ಮಾಡುವ ಯಾವ ಕರ್ಮವೂ ಭಗವಂತನ ಕರ್ಮಫಲದಾನದ ನ್ಯಾಯಸಿದ್ಧಾಂತವನ್ನು ಪರಿವರ್ತಿಸಲಾರದು. ಮೃತರಾದ ತಂದೆ-ತಾಯಿಗಳು ಪುಣ್ಯಾತ್ಮರಾಗಿದ್ದ ಪಕ್ಷದಲ್ಲಿ ಅವರ ಊರ್ಧ್ವಗತಿಗೆ ಇಲ್ಲಿ ಹಾಕುವ ಪಿಂಡ, ತಿಲತರ್ಪಣಗಳು ಅನಾವಶ್ಯಕ. ಅವರು ಪಾಪಾತ್ಮರಾಗಿದ್ದ ಪಕ್ಷದಲ್ಲಿ, ಅವರ ಅಧೋಗತಿಯನ್ನು ಇಲ್ಲಿನ ಶ್ರಾದ್ಧಕರ್ಮಗಳಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗೆ ಮೃತರ ಶ್ರಾದ್ಧ ಒಂದು ಅರ್ಥರಹಿತವಾದ ಆಡಂಬರ ಕ್ರಿಯೆ ಮಾತ್ರ. 
     ಶ್ರಾದ್ಧ ಎಂದರೆ, ಶ್ರದ್ಧೆಯಿಂದ ಸಲ್ಲಿಸುವ ಸೇವೆ, ತರ್ಪಣ ಎಂದರೆ ತೃಪ್ತಿ ನೀಡುವ ಕಾರ್ಯ. ಇವೆರಡೂ ಸಶರೀರರಾದ ಜೀವಂತರಾದ ಮಾತಾ-ಪಿತೃಗಳಿಗೆ ಸಲ್ಲಬೇಕಾದ ಸೇವೆಗಳೇ ಹೊರತು, ಮೃತರಿಗಲ್ಲ. ಮೃತರಿಗೆ ನಾವು ಸದ್ಗತಿಯನ್ನು ಕೊಡಲಾರೆವು. ಅವರಿಂದ ನಮಗಾದ ಉಪಕಾರಗಳನ್ನು ಸ್ಮರಿಸುವುದು; ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಯಾವುದಾದರೂ ಸತ್ಕಾರ್ಯ ಮಾಡುವುದು ತಪ್ಪಲ್ಲ. ಆದರೆ ಕರ್ಮಗತಿಯನ್ನು ಪರಿವರ್ತಿಸಬಲ್ಲೆವೆಂದು ಮಾತ್ರ ಕನಸಿನಲ್ಲಿಯೂ ಭಾವಿಸಬಾರದು.
     ಪಿತೃಯಜ್ಞ, ವೈದಿಕ ಸಿದ್ಧಾಂತಾನುಸಾರ, ಜೀವಂತ ಮಾತಾ-ಪಿತೃಗಳಿಗೆ ಮಕ್ಕಳು ಸಲ್ಲಿಸುವ ಸೇವೆ. ಗುರುಕುಲದಲ್ಲಿರುವ ಬ್ರಹ್ಮಚಾರಿಗಳಿಗೂ, ವಾನಪ್ರಸ್ಥಿಗಳಿಗೂ, ಸಂನ್ಯಾಸಿಗಳಿಗೂ ಇದು ಸಂಬಂಧಿಸುವುದಿಲ್ಲ. ಇದು ಕೇವಲ ಗೃಹಸ್ಥರಿಗೆ ಮಾತ್ರ ಸಂಬಂಧಿಸಿದ ಯಜ್ಞ. ಋಗ್ವೇದ ಹೇಳುತ್ತಲಿದೆ:-
ಸ ವಹ್ನೀ ಪುತ್ರಃ ಪಿತ್ರೋಃ ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ || (ಋಕ್.೧.೧೬೦.೩)
[ಪಿತ್ರೋಃ] ಮಾತಾ-ಪಿತೃಗಳನ್ನು, ಸೇವಾಶುಶ್ರೂಷೆಗಳಿಂದ, [ವಹ್ನಿಃ] ಎತ್ತಿ ಹಿಡಿಯುವವನೇ, [ಪುತ್ರಃ] ನಿಜವಾದ ಮಗನು. [ಸ ಧೀರಃ] ಆ ಮಾತಾ-ಪಿತೃಸೇವಕನಾದ, ಬುದ್ಧಿಯಿಂದ ಪ್ರೇರಿತನಾದ ಸುಪುತ್ರನೇ, [ಮಾಯಯಾ] ತನ್ನ ಪ್ರಜ್ಞೆಯಿಂದ [ಪವಿತ್ರವಾನ್] ಪವಿತ್ರಶಕ್ತಿಯುತನಾಗಿ [ಭುವನಾನಿ ಪುನಾತಿ] ಲೋಕಗಳನ್ನು ಪವಿತ್ರಗೊಳಿಸುತ್ತಾನೆ. 
ಮಾತಾ-ಪಿತೃಗಳಿಗೆ ಭಕ್ತಿ ತೋರದ ಪುತ್ರ ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳೇ ಉದಿಸವು. ಇನ್ನು ಅವನು ಜಗತ್ತನ್ನು ಪಾವನಗೊಳಿಸುವುದಾದರೂ ಹೇಗೆ?
     ಗೃಹಸ್ಥ-ಗೃಹಿಣಿಯರು, ಮನೆಯಲ್ಲಿರುವ ತಂದೆ-ತಾಯಿಗಳನ್ನು ತ್ರಿಕರಣಶುದ್ಧಿ ಪೂರ್ವಕವಾಗಿ ಉಪಚರಿಸಬೇಕು. ಅವರ ಮನಸ್ಸಿಗೆ ನೋವಾಗದಂತೆ, ಶರೀರಗಳಿಗೆ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಪಾರಿವಾರಿಕ ಜೀವನವನ್ನು ಸುಖಮಯವಾಗಿ ಮಾಡಲು, ಅಥರ್ವವೇದ ಕೊಡುವ ಈ ಆದೇಶಗಳನ್ನು ನೆನಪಿನಲ್ಲಿಡಬೇಕಾದುದು ಆವಶ್ಯಕ.
ಅನುವ್ರತಃ ವಿತುಃ ಪುತ್ರೋ ಮಾತ್ರಾ ಭವತು ಸಂಮನಾ | 
ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್ || (ಅಥರ್ವ.೩.೩೦.೨)
     [ಪುತ್ರಃ] ಮಗನು, [ಪಿತುಃ ಅನುವ್ರತಃ] ತಂದೆಗೆ ಅನುಕೂಲವಾದ ಸಂಕಲ್ಪವುಳ್ಳವನೂ, [ಮಾತ್ರಾ] ತಾಯಿಯೊಂದಿಗೆ [ಸಮ್ಮನಾಃ] ಸಮಾನ ಚಿತ್ತನೂ, [ಭವತು] ಆಗಿರಲಿ. [ಜಾಯಾ] ಪತ್ನಿಯು [ಪತ್ಯೇ] ಪತಿಗೆ [ಮಧುಮತೀಂ ಶಂತಿವಾಂ ವಾಚಮ್] ಮಧುರವೂ, ಶಾಂತಿದಾಯಕವೂ ಆದ ಮಾತನ್ನು, [ವದತು] ಆಡಲಿ.
ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ | 
ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ || (ಅಥರ್ವ.೩.೩೦.೩)
     [ಭ್ರಾತಾ] ಸೋದರನು [ಭ್ರಾತರಮ್] ಸೋದರನನ್ನು [ಮಾ ದ್ವಿಕ್ಷತ್] ದ್ವೇಷಿಸದಿರಲಿ. [ಉತ] ಅಂತೆಯೇ [ಸ್ವಸಾರಮ್] ಸಹೋದರಿಯು [ಸ್ವಸಾ] ಸಹೋದರಿಯೊಂದಿಗೆ (ದ್ವೇಷಭಾವನೆ ಹೊಂದದಿರಲಿ). [ಸಮ್ಯಂಚಃ] ಪರಸ್ಪರ ಪ್ರೀತಿಯುಕ್ತರೂ [ಸವ್ರತಾಃ] ಒಂದೇ ಸಂಕಲ್ಪವುಳ್ಳವರೂ [ಭದ್ರಯಾ] ಶುಭವಾದ ರೀತಿಯಲ್ಲಿ [ವಾಚಂ ವದತ] ಮಾತನ್ನಾಡಿರಿ.
     ಪತಿ-ಪತ್ನಿಯರಲ್ಲಿ, ಸೋದರ-ಸೋದರಿಯರಲ್ಲಿ ಪರಸ್ಪರ ವೈಮನಸ್ಯವಿದ್ದರೆ, ಅವರು ಮಾತಾ-ಪಿತೃಗಳನ್ನು ಉಪಚರಿಸುವುದಾದರೂ ಎಂತು? ಗೃಹದ ವಾತಾವರಣವನ್ನು ಮಧುರವಾಗಿಟ್ಟುಕೊಂಡು, ಪ್ರತಿದಿನವೂ ಮಾತಾ-ಪಿತೃಗಳನ್ನು ಎಲ್ಲ ರೀತಿಯಲ್ಲಿಯೂ ಪ್ರಸನ್ನರಾಗಿಯೂ, ತೃಪ್ತರನ್ನಾಗಿಯೂ ಇಟ್ಟುಕೊಂಡಿರುವುದೇ ನಿಜವಾದ ಪಿತೃಯಜ್ಞ.
ಹಿಂದಿನ ಲೇಖನಕ್ಕೆ ಲಿಂಕ್ದೇವಯಜ್ಞ

ಶನಿವಾರ, ಫೆಬ್ರವರಿ 9, 2013

ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು     "ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು" - ಇದು ಅಮೆರಿಕಾದ ದಿ. ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು ಬಯಸಿದ, ಅಲ್ಲಿ ಪ್ರಚಲಿತವಿದ್ದ ಕಪ್ಪು-ಬಿಳಿ ಜನಾಂಗ ದ್ವೇಷದ ವಿರುದ್ಧ ಹೋರಾಡಿದ್ದ ವ್ಯಕ್ತಿಯ ಕನಸು. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ - ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ. 
     ವ್ಯಾವಹಾರಿಕವಾಗಿ ಸಮಾನತೆ ಅನ್ನುವುದು ಹೇಳುವಷ್ಟು ಸುಲಭವಲ್ಲ. ಸಮಾನತೆಯೆಂದರೆ ಒಬ್ಬ ಹೆಸರಾಂತ ಜಟ್ಟಿ/ಕುಸ್ತಿಪಟುವನ್ನು, ಒಬ್ಬ ಬಡಕಲು ದೇಹದವನನ್ನು ಮತ್ತು ಅನಾರೋಗ್ಯಪೀಡಿತನನ್ನು ಸಮಾನ ಬಲಶಾಲಿ ಎಂದು ಒಪ್ಪಿಕೊಳ್ಳಬೇಕೆಂದು ವಾದಿಸುವುದಲ್ಲ. ಒಬ್ಬ ವಿದ್ವಾಂಸನನ್ನೂ, ಓದು ತಲೆಗೆ ಹತ್ತದವನನ್ನೂ ಮತ್ತು ಮಾನಸಿಕ ವಿಕಲ್ಪನನ್ನು ಸಮಾನ ಜ್ಞಾನಿಗಳೆಂದು ಪರಿಗಣಿಸುವುದಲ್ಲ. ಜಾತಿಯ ಆಧಾರದಲ್ಲಿ ಒಬ್ಬರು ಶೇ. 50ರಷ್ಟು ಅಂಕ ಪಡೆದವರೂ, ಶೇ. 60 ಅಂಕ ಪಡೆದ ಇತರರಿಗೆ ಸಮ ಎಂದು ಪರಿಗಣಿಸುವುದರಲ್ಲಿ ಸಮಾನತೆ ಬರುವುದಿಲ್ಲ. 100  ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ 100 ಮೀ. ಓಡಿದವನನ್ನೂ, 80-90 ಮೀ. ಓಡಿದವರನ್ನೂ ಸಮರೆಂದು ಪರಿಗಣಿಸುವುದಲ್ಲ. ಬದಲಾಗಿ ಅಶಕ್ತರು, ಹಿಂದುಳಿದವರು ಎಂದು ಪರಿಗಣಿಸಲ್ಪಟ್ಟವರಿಗೆ ಅಗತ್ಯದ ಎಲ್ಲಾ ಅನುಕೂಲ, ಸೌಲಭ್ಯಗಳನ್ನು ಕಲ್ಪಿಸಿ ಅವರು ಮುಂದೆ ಬರಲು ಅವಕಾಶ ಕಲ್ಪಿಸುವುದರಲ್ಲಿ ಸಮಾನತೆ ಕಾಣಬೇಕು. ಎಲ್ಲರೂ ಒಂದೇ ಎತ್ತರದವರಾಗಬೇಕೆಂದು ಕೆಲವರ ತಲೆ, ಕಾಲುಗಳನ್ನು ಕತ್ತರಿಸುವುದು ಸಮಾನತೆಯಾಗಲಾರದು. ಅದು ಪ್ರಗತಿಯ ಲಕ್ಷಣವಲ್ಲ. ಸಮಾನತೆಯೆಂದರೆ ವಿವಿಧ ವಿಷಯಗಳನ್ನೆಲ್ಲಾ ಸಮಾನ ರೀತಿಯಲ್ಲಿ ನೋಡುವುದಲ್ಲ, ವಿವಿಧ ವಿಷಯಗಳನ್ನು ವಿವಿಧ ದೃಷ್ಟಿಯಿಂದ ನೋಡುವುದು. ಸಮಾನ ಅವಕಾಶಗಳಿಂದ ಯಾರೂ ವಂಚಿತರಾಗದೆ ಇರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ಎಲ್ಲರೂ ಒಂದೇ ರೀತಿಯಲ್ಲಿ ಇರಲು, ಅಂದರೆ ಆರೋಗ್ಯವಂತರಾಗಿರಲು, ಬಲಶಾಲಿಗಳಾಗಿರಲು, ಜ್ಞಾನಿಗಳಾಗಿರಲು, ಅಂಗವೈಕಲ್ಯತೆಯಿಲ್ಲದಿರಲು, ಒಂದೇ ಜಾತಿ/ಧರ್ಮದವರಾಗಿರಲು, ಒಂದೇ ವಿಚಾರ ಹೊಂದಿದವರೂ ಆಗಲು -ನಾವು, ನೀವು ಇಷ್ಟಪಟ್ಟರೂ- ಸಾಧ್ಯವಿದೆಯೇ? ಹೀಗಿರುವಾಗ ನಿಜವಾದ ಸಮಾನತೆಯೆಂದರೆ, ವ್ಯವಹರಿಸುವಾಗ ಪಕ್ಷಪಾತ, ದುರಾಗ್ರಹ, ಅಭಿಮಾನಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ತಾವು ಇಷ್ಟಪಡುವ, ಇರಬಯಸುವ ರೀತಿಯಲ್ಲಿ ಬಾಳಲು, ಬದುಕಲು ಸಹಕರಿಸುವುದು ಅನ್ನಬಹುದಷ್ಟೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಅರಿಯಬೇಕಿದೆ. ಇಲ್ಲಿ ದೇವರು ಎಂಬ ಪದವನ್ನು ಯಾವುದೇ ಜಾತಿ/ಮತಗಳವರ ದೇವರು ಎಂಬರ್ಥದಲ್ಲಿ ಬಳಸಿಲ್ಲ. ಜಾತಿಗೊಬ್ಬ ದೇವರು, ಮತಕ್ಕೊಬ್ಬ ದೇವರು ಎನ್ನುವುದು, ಅವರ ದೇವರನ್ನು ಇವರು, ಇವರ ದೇವರನ್ನು ಅವರು ನಿಂದಿಸುವ ಮನೋಭಾವಗಳು ಮಾನವನ ಸಂಕುಚಿತ ಭಾವನೆಯನ್ನು ತೋರಿಸುತ್ತದೆ. ಈ ರೀತಿಯ ತಾರತಮ್ಯವೆಸಗದ ಮನೋಭಾವನೆ ಬೆಳೆಸಿಕೊಂಡವರು ಮಾತ್ರ ಕೇವಲ ಮಾನವರಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಜೀವಿಗಳ ಕುರಿತು ಅಕ್ಕರೆ, ಅಕರಾಸ್ತೆ ಹೊಂದುತ್ತಾರೆ. ಪ್ರಪಂಚದಲ್ಲಿ ಒಂದೇ ಒಂದು ವಿಚಾರದಲ್ಲಿ ಮಾತ್ರ ಸಮಾನತೆಯಿದೆ. ಎಲ್ಲರೂ ಕೊನೆಗೆ ಸಾಯುತ್ತಾರೆ ಅನ್ನುವುದೇ ಆ ಸಮಾನತೆ. ಸಾವಿನಲ್ಲಿ ಮಾತ್ರ ಎಲ್ಲರೂ ಸಮಾನರು.
     ಸಮಾನತೆಯ ಇನ್ನೊಂದು ಆಯಾಮವನ್ನೂ ಗಮನಿಸಬೇಕು. ಅದು ಪ್ರಗತಿಗೆ ಅಡ್ಡಿಯಾಗಬಾರದು. ಎಲ್ಲರೂ ಯಾವುದಾದರೂ ಒಂದು ಸಂಗತಿಗೆ ಸಂಬಂಧಿಸಿದಂತೆ ಸಮಾನರಾದರು ಎಂದಿಟ್ಟುಕೊಳ್ಳೋಣ. ಮುಂದೆ? ಎಲ್ಲರೂ ಅಲ್ಲಿಯೇ ಉಳಿದುಬಿಡಬೇಕೇ? ಇರುವ ಸ್ಥಿತಿಗಿಂತ ಯಾರೂ ಮುಂದೆ ಹೋಗಬಾರದು ಎಂದರೆ ಪ್ರಗತಿ ಹೇಗೆ ಸಾಧ್ಯವಾದೀತು? ಮುಂದೆ ಹೋಗಲೇಬೇಕು. ಹಾಗೆ ಮುಂದೆ ಹೋಗುವಾಗ ಹಿಂದಿರುವವರನ್ನೂ ಜೊತೆಗೆ ಕರೆದೊಯ್ಯುವ ಮನಸ್ಸು ಮಾಡಬೇಕು. ಮುಂದೆ ಇರುವರನ್ನು ಸಮೀಪಿಸಿ ಅವರೊಡನೆ ಸಮರಾಗುವ ಪ್ರಯತ್ನ ಮಾಡಬೇಕು. ಮತ್ತೆ ಮುಂದುವರೆಯಬೇಕು. ಎಲ್ಲರೂ ಮುಂದೆ ಬರಬೇಕೆಂಬ ವಿಚಾರದಲ್ಲಿ ಮಾತ್ರ ಸಮಾನತೆಯಿರಲೇಬೇಕು. ಮುಂದಿರುವವರನ್ನು ದೂಷಿಸುವುದರಿಂದ ಹಿಂದಿರುವವರು ಮುಂದೆ ಬರಲಾರರು. ಮುಂದೆ ಬರಬೇಕೆಂದರೆ ಪ್ರಯತ್ನಪಟ್ಟು ಮುಂದೆ ಬರಬೇಕಷ್ಟೆ. ಈ ವೇದಮಂತ್ರ ನೆನಪಿನಲ್ಲಿಡಬೇಕಾದುದಾಗಿದೆ:
ಸಮಾನೀ ವ ಆಕೂತಿಃ ಸಮಾನಾ ಹೃದಯಾ ನ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || (ಋಕ್.10.191.4.)
ಇದರ ಅರ್ಥ ಹೀಗಿದೆ: "ನಮ್ಮ ಆಲೋಚನೆಗಳು, ಹೃದಯಗಳು, ಮನಸ್ಸುಗಳು ಸಮಾನವಾಗಿರಲಿ. ಹೀಗೆ, ನಮ್ಮ ೊಳಿತೂ ಸಹ ಒಟ್ಟಿಗೇ ಆಗುವುದು."
     ಆರ್ಥಿಕ ಸಮಾನತೆಯನ್ನೂ ಸಹ ವ್ಯಾವಹಾರಿಕವಾಗಿ ಉಳಿಸಿಕೊಂಡು ಬರುವುದು ದುಸ್ಸಾಧ್ಯ. ಒಂದು ಸಣ್ಣ ಕಾಲ್ಪನಿಕ ಉದಾಹರಣೆ ನೋಡೋಣ. ಒಂದು ಹಳ್ಳಿಯಲ್ಲಿ ಒಂದು ನೂರು ಕುಟುಂಬಗಳಿದ್ದು, ಅದರಲ್ಲಿ 30 ಕುಟುಂಬಗಳು ಶ್ರೀಮಂತ, 40 ಕುಟುಂಬಗಳು ಮಧ್ಯಮ ಮತ್ತು 40 ಕುಟುಂಬಗಳು ಬಡ ಕುಟುಂಬಗಳೆಂದು ಭಾವಿಸೋಣ. ಅವರಲ್ಲಿನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡು ಬಂದ ಹಣವನ್ನು -ಕುಟುಂಬಕ್ಕೆ ತಲಾ 15 ಲಕ್ಷ ರೂ. ಎಂದುಕೊಳ್ಳೋಣ- ಎಲ್ಲಾ ಕುಟುಂಬಗಳವರಿಗೆ ಹಂಚಲಾಯಿತು ಎಂದುಕೊಳ್ಳೋಣ. ಐದು ವರ್ಷಗಳು ಕಳೆದ ನಂತರ ಸಮೀಕ್ಷೆ ನಡೆಸಿದರೆ ಆ ಹಳ್ಳಿಯಲ್ಲಿ ಶ್ರೀಮಂತ, ಮಧ್ಯಮ ಮತ್ತು ಬಡ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚು-ಕಡಿಮೆ ಕಂಡುಬರಲಾರದು. ಇದಕ್ಕೆ ಮೂಲಕಾರಣ ಜನರ ಮನೋಭಾವ ಎನ್ನುವುದನ್ನು ತಿಳಿಯಲು ಕಷ್ಟವೇನಲ್ಲ. ಬುದ್ಧಿ ಮತ್ತು ಶ್ರಮ ಉಪಯೋಗಿಸಿಕೊಂಡವರು ಮತ್ತು ಹಣವನ್ನು ಸೂಕ್ತ ರೀತಿ ಉಪಯೋಗಿಸಿಕೊಂಡವರು ಶ್ರೀಮಂತರಾಗುತ್ತಾರೆ, ಅಲ್ಪ ಬುದ್ಧಿ, ಅಲ್ಪ ಶ್ರಮಪಡುವವರು ಮಧ್ಯಮವರ್ಗದವರಾಗುತ್ತಾರೆ. ದುಶ್ಚಟಗಳಿಗೆ ದಾಸರಾದವರು, ಸೋಮಾರಿಗಳು, ಹಣವನ್ನು ಸೂಕ್ತ ರೀತಿಯಲ್ಲಿ ಬಳಸಲು ಬರದವರು ತಮ್ಮ ಹಣವನ್ನು ಪೋಲು ಮಾಡಿ ಬಡವರಾಗುತ್ತಾರೆ. ಮತ್ತೆ ಸಮಾನತೆಯ ಕೂಗು ಬಂದರೆ ಪುನಃ ಎಲ್ಲರ ಹಣವನ್ನು ಕಸಿದು ಸಮಾನವಾಗಿ ಹಂಚಬೇಕೆ? ಇಲ್ಲಿ ಅಗತ್ಯವಿರುವುದು ಜನರನ್ನು ಶ್ರಮಜೀವಿಗಳಾಗಿಸುವುದಕ್ಕೆ, ದುಶ್ಚಟಗಳಿಂದ ದೂರವಿರಿಸುವುದಕ್ಕೆ ಬೇಕಾದ ಜ್ಞಾನದ ತಿಳಿವನ್ನು ಮೂಡಿಸುವುದಕ್ಕೆ, ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಿ ಮುಂದೆ ಬರಲು ಸಹಕರಿಸುವುದಕ್ಕೆ ಅಷ್ಟೆ. ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಪಡಿಸಿಕೊಳ್ಳುವವರಿಗೆ ಮಾತ್ರ ಸೌಲಭ್ಯ ನೀಡಿದರೆ ಮಾತ್ರ ಪ್ರಯೋಜನವಾದೀತು. ಇಲ್ಲದಿದ್ದರೆ ಅದು ಅಪಾತ್ರದಾನವಾಗುವುದು.
     ಇನ್ನೊಂದು ಪ್ರಮುಖ ಸಂಗತಿಯನ್ನು ನಾವು ಗಮನಿಸಬೇಕಿದೆ. ಅದೆಂದರೆ ಹಿಂದಿರುವುದಕ್ಕೆ ಅಥವ ಮುಂದೆ ಇರುವುದಕ್ಕೆ ಜಾತಿ ಎಂದೂ ಕಾರಣ ಅಲ್ಲವೇ ಅಲ್ಲ. ನಿಜವಾದ ಕಾರಣವೆಂದರೆ ಜೀವನಶೈಲಿ ಮಾತ್ರ ಹಿಂದೆ ಉಳಿಯುವುದರಲ್ಲಿ ಅಥವ ಮುಂದೆ ಬರುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಕುಟಿಲ ರಾಜಕಾರಣಿಗಳು ಅಧಿಕಾರದ ಸಲುವಾಗಿ ಸಂವಿಧಾನಾತ್ಮಕವಾದ ಈ ಜಾತ್ಯಾತೀತ ದೇಶದಲ್ಲಿ ಜಾತಿ ಜಾತಿಗಳಲ್ಲಿ ವಿಷಬೀಜ ಬಿತ್ತುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಪರ್ಯಾಸ. ರಾಜಕಾರಣಿಗಳ ಕೃಪಾಪೋಷಿತ ಮಾಧ್ಯಮಗಳೂ ಇದಕ್ಕೆ ನೀರೆರೆಯುತ್ತಿವೆ. ಜಾತಿ ವಿದ್ವೇಷ ಅಥವ ಜಾತಿಪ್ರೇಮವನ್ನೇ ಬಂಡವಾಳವಾಗಿಸಿಕೊಂಡ ಕೆಲವು ಸಾಹಿತಿಗಳೂ ಜಾತಿ-ಜಾತಿಗಳಲ್ಲಿ ವೈಮನಸ್ಯ ಪೋಷಿಸುತ್ತಿರುವುದು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಭಾರತದ ರಾಷ್ಟ್ರಪತಿಯಾಗಿದ್ದ  ಡಾ. ಝಾಕಿರ್ ಹುಸೇನರು ಹೇಳಿದ್ದ ಈ ಮಾತು ಇಲ್ಲಿ ಬಹಳ ಪ್ರಸ್ತುತವಾಗುತ್ತದೆ: "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ."
     ಎಲ್ಲರೂ ಎಲ್ಲಾ ವಿಷಯಗಳಲ್ಲಿ ಪ್ರವೀಣರಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾರರು. ಯಾರು ಯಾವ ವಿಷಯದಲ್ಲಿ ಪ್ರವೀಣರಾಗಿರುತ್ತಾರೋ ಆ ಕ್ಷೇತ್ರದಲ್ಲಿ ಬದುಕು ಕಾಣಬಲ್ಲರು. ಹೀಗಾಗಿ ಕೆಲವರು ಬೌದ್ಧಿಕ ಕ್ಷೇತ್ರ, ಕೆಲವರು ವಾಣಿಜ್ಯ ಕ್ಷೇತ್ರ, ಆಡಳಿತಾತ್ಮಕ ಕ್ಷೇತ್ರ, ಶಾರೀರಿಕ ಶ್ರಮದ ಕ್ಷೇತ್ರಗಳಲ್ಲಿ ತೊಡಗಿಕೊಂಡು ಜೀವನದ ದಾರಿ ಕಾಣುತ್ತಾರೆ. ನಿಜ ಸಮಾನತೆಯೆಂದರೆ ಈ ಎಲ್ಲಾ ಕೆಲಸಗಳಲ್ಲಿ ಉಚ್ಛ-ನೀಚ ಭಾವನೆಗಳಿಗೆ ಅವಕಾಶ ಕೊಡದಿರುವುದು. ಸಮಾನತೆಯಿರಬೇಕೆಂದು ಎಲ್ಲರೂ ವಕೀಲರಾಗಲಿ, ವೈದ್ಯರಾಗಲಿ, ಇಂಜನಿಯರರಾಗಲಿ, ಕಾರ್ಮಿಕರಾಗಿರಲಿ ಎಂದು ಬಯಸುವುದು ಉಚಿತವಾಗುವುದೇ? ಸ್ವಸ್ಥ ಸಮಾಜಕ್ಕೆ, ಸಮಾಜದ ಅಸ್ತಿತ್ವಕ್ಕೆ ಒಬ್ಬರಿಗೊಬ್ಬರು ಪೂರಕವಾದ ಈ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುವವರು ಇರಬೇಕು. ವಾಸ್ತವವಾಗಿ ನೋಡಿದರೆ ಯಾವ ಒಂದು ವಿಭಾಗವೂ ಚಿಕ್ಕದಲ್ಲ ಅಥವ ದೊಡ್ಡದಲ್ಲ. ಸಮಾಜದ ಅಸ್ತಿತ್ವಕ್ಕೆ ಈ ಎಲ್ಲವೂ ಇರಲೇಬೇಕು. ಯಾವುದೊಂದು ಇಲ್ಲದಿದ್ದರೂ ಆ ಸಮಾಜ ಅಂಗವಿಕಲವಾಗುತ್ತದೆ. ಈ ಕೆಲಸಗಳು ಸಂಬಂಧಿಸಿದ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯವನ್ನು, ಒಲವನ್ನೂ ಅವಲಂಬಿಸಿದವಾದ್ದರಿಂದ ಅವರುಗಳ ಆ ಕೆಲಸಗಳಿಗೆ ಮನ್ನಣೆ ನೀಡುವ ಮನೋಭಾವ ಬಂದಲ್ಲಿ ಅದು ಸಮಾನತೆಯೆನಿಸೀತು.
     ವಿಶ್ವಮಾನವ ಕಲ್ಪನೆ, ವಿಶ್ವಭ್ರಾತೃತ್ವ ಅನ್ನುವುದನ್ನೂ ಪರಸ್ಪರರಲ್ಲಿ ಸೋದರತೆ, ಸಮಾನತೆಗೆ ಪರ್ಯಾಯವಾಗಿ ಬಳಸುವುದನ್ನು ಕಂಡಿದ್ದೇವೆ. ಪ್ರಪಂಚದಲ್ಲಿ 196 ದೇಶಗಳಿವೆಯೆಂದು ಗುರುತಿಸುತ್ತಾರೆ. ಎಷ್ಟೋ ದೇಶಗಳ ಹೆಸರುಗಳೇ ನಮಗೆ ಗೊತ್ತಿಲ್ಲ. ವಿಶ್ವಭ್ರಾತೃತ್ವ ಸಾಧ್ಯವಿದ್ದರೆ ಈ ದೇಶಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಅಥವ ವಿವಿಧ ದೇಶಗಳ ನಡುವೆ ಸ್ನೇಹಭಾವವಿರುತ್ತಿತ್ತು. ಈಗಲಾದರೋ ದೇಶಗಳು ಒಡೆಯುತ್ತಿವೆ, ಆಕ್ರಮಣಕ್ಕೆ ಒಳಗಾಗುತ್ತವೆ, ಗಡಿರೇಖೆಗಳು ಬದಲಾಗುತ್ತವೆ. ಪ್ರಪಂಚವೇ ಒಂದು ಕುಟುಂಬ ಎಂಬ ವೇದವಾಣಿಯ ಸಾಕಾರಕ್ಕೆ ಪೂರಕ ವಾತಾವರಣವಿದೆಯೇ? ಈ 196 ದೇಶಗಳ ಪೈಕಿ 49 ದೇಶಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಾಗಿವೆ, ಕೆಲವು ಇಸ್ಲಾಮಿಕ್ ದೇಶಗಳೆಂದೇ-ಪಾಕಿಸ್ತಾನವೂ ಸೇರಿ- ಘೋಷಿಸಲ್ಪಟ್ಟ ದೇಶಗಳಾಗಿವೆ. 120 ದೇಶಗಳು ಕ್ರಿಶ್ಚಿಯನ್ ದೇಶಗಳೆಂದು ಗುರುತಿಸಲ್ಪಡುತ್ತವೆ. ಒಂದು ಅಂದಾಜಿನ ಪ್ರಕಾರ ಮತ/ಧರ್ಮದ ಅನುಸಾರ ಪ್ರಪಂಚದ ಜನಸಂಖ್ಯೆ ಸುಮಾರು ಹೀಗಿದೆ:
1. ಕ್ರಿಶ್ಚಿಯನ್ - 2 ಬಿಲಿಯನ್.
2. ಇಸ್ಲಾಮ್ -  1.3 ಬಿಲಿಯನ್,
3. ಹಿಂದೂ -  900 ಮಿಲಿಯನ್,
4. ಇತರರು -  850 ಮಿಲಿಯನ್,
5. ಬೌದ್ಧ -   360 ಮಿಲಿಯನ್,
6. ಚೀನಾ ಮೂಲವಾಸಿ - 225 ಮಿಲಿಯನ್,
7. ಆದಿವಾಸಿ ಪದ್ಧತಿ -   95 ಮಿಲಿಯನ್. 
8. ಯಹೂದ್ಯರು -     19 ಮಿಲಿಯನ್.
     ವಸ್ತುಸ್ಥಿತಿಯಂತೆ ವಿಶ್ಲೇಷಣೆ ಮಾಡಿದರೆ ಮತ/ಧರ್ಮಗಳೂ ಸಮಾನತೆಯ ಶತ್ರುಗಳಾಗಿ ಪರಿಣಮಿಸಿರುವುದು ಗೋಚರವಾಗದಿರದು. ಎಲ್ಲಿ ಪರಧರ್ಮ ಸಹಿಷ್ಣುತೆ ಇರುತ್ತದೋ ಅಲ್ಲಿ ಸಮಾನತೆಯ ಕನಸು ಕಾಣಬಹುದು. ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪ್ರಪಂಚದಲ್ಲಿ ಕೇವಲ ಸುಮಾರು 2013ವರ್ಷಗಳ ಹಿಂದೆ ಪ್ರಾರಂಭವಾದ ಕ್ರಿಶ್ಚಿಯನ್ ಮತವನ್ನು ಇಂದು ಪ್ರಪಂಚದ ಅತಿ ಹೆಚ್ಚು ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಸುಮಾರು 1400 ವರ್ಷಗಳ ಹಿಂದೆ ಜನಿಸಿದ ಇಸ್ಲಾಮ್ ಮತಾನುಯಾಯಿಗಳು ಎರಡನೆಯ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಕ್ಷಿಪ್ರ ಪ್ರಗತಿಯ ಹಿಂದೆ ತಮ್ಮ ತಮ್ಮ ಧರ್ಮಗಳನ್ನು ಅಗ್ರಣಿಗಳಾಗಿಸಲು ನಡೆದ ಪ್ರಯತ್ನಗಳದು ಸಿಂಹಪಾಲೆಂದರೆ ತಪ್ಪಾಗಲಾರದು. ಆಸೆ, ಆಮಿಷ, ಅನಿವಾರ್ಯತೆ, ಬಡತನ ಮತ್ತು ಅಜ್ಞಾನಗಳ ದುರುಪಯೋಗ, ಕುಟಿಲೋಪಾಯಗಳು, ದುರ್ಮಾರ್ಗಗಳು, ಬಲಪ್ರಯೋಗಗಳಿಂದ ಮಾಡಲಾದ ಮತಾಂತರಗಳ ಕೊಡುಗೆಯೂ ಇದರಲ್ಲಿದೆ. ಪ್ರಪಂಚವನ್ನೇ ಕ್ರಿಶ್ಚಿಯನ್/ಮುಸ್ಲಿಮ್ ಬಹುಸಂಖ್ಯಾತರನ್ನಾಗಿಸಲು ಪ್ರಯತ್ನಗಳು ಎಡೆಬಿಡದೆ ನಡೆಯುತ್ತಿದ್ದು, ಇದಕ್ಕಾಗಿ ಯುದ್ಧಗಳು ಸಂಭವಿಸಿವೆ, ಸಂಭವಿಸಲಿವೆ. ಆರೋಗ್ಯಕರ ಪೈಪೋಟಿ ಮಾನವನ ಅಭಿವೃದ್ಧಿಗೆ ಪೂರಕ. ಅನಾರೋಗ್ಯಕರ ಪೈಪೋಟಿ ಮಾನವನಿಗೆ ಮಾರಕ. ಪೈಪೋಟಿ ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವೆ ಯುದ್ಧಗಳು -ನೇರ ಮತ್ತು ಪರೋಕ್ಷ-  ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಧರ್ಮ/ಮತದ ಹೆಸರಿನಲ್ಲಿ ವೈಚಾರಿಕ ಮನೋಭಾವ. ಚಿಂತನೆಗಳಿಗೆ ಇರುವ ಅವಕಾಶಗಳಿಗೆ ಬೇಡಿ ತೊಡಿಸಲಾಗಿದೆ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ವಿರೋಧಿ ಮತ/ಧರ್ಮಗಳವರನ್ನು ನಿಂದಿಸುವವರೂ ಇದ್ದಾರೆ. ಯಾರಿಗೆ ಯಾವ ಧರ್ಮ ಇಷ್ಟವೋ ಅದನ್ನು ಅನುಸರಿಸಲು ಅವಕಾಶ ಕೊಟ್ಟರೆ, ಮತಾಂತರಕ್ಕೆ ಪ್ರೋತ್ಸಾಹ ಸಿಗದಿದ್ದರೆ, ಪ್ರಲೋಭನೆ ಒಡ್ಡದಿದ್ದರೆ ಸಮಾನತೆಯ, ವಿಶ್ವಭ್ರಾತೃತ್ವದ ಕನಸು ಕಾಣಲು ಅವಕಾಶವಿದೆ. ಈ ವಾತಾವರಣ ಬರಬಹುದೆಂದು ನಿರೀಕ್ಷಿಸಲಾದೀತೆ?
     ಪ್ರಪಂಚದಲ್ಲಿ 6000-7000 ಭಾಷೆಗಳು ಇವೆಯೆನ್ನಲಾಗಿದೆ. ಜನಸಂಖ್ಯಾವಾರು ಲೆಕ್ಕ ಹಾಕಿದರೆ, 2009ರ ಅಂಕಿ ಅಂಶಗಳಂತೆ ಚೈನೀಸ್ ಭಾಷೆಯನ್ನು 1213 ಮಿಲಿಯನ್ ಜನರು ಮಾತನಾಡುತ್ತಿದ್ದು ಪ್ರಥಮ ಸ್ಥಾನದಲ್ಲಿ ಬರುತ್ತದೆ. ಅನುಕ್ರಮವಾಗಿ2,3 ಮತ್ತು 4ನೆಯ ಸ್ಥಾನಗಳಲ್ಲಿ 329 ಮಿಲಿಯನ್ ಜನ ಮಾತನಾಡುವ ಸ್ಪಾನಿಷ್, 328 ಮಿಲಿಯನ್ ಜನರು ಮಾತನಾಡುವ ಇಂಗ್ಲಿಷ್ ಮತ್ತು 229 ಮಿಲಿಯನ್ ಜನರು ಮಾತನಾಡುವ ಅರೇಬಿಕ್ ಭಾಷೆಗಳು ಬರುತ್ತವೆ. 182 ಮಿಲಿಯನ್ ಜನರು ಮಾತನಾಡುವ ಹಿಂದಿ 5ನೆಯ ಸ್ಥಾನದಲ್ಲಿದೆ. ಭಾರತ ದೇಶವೊಂದರಲ್ಲೇ 1652 ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಬ್ರಿಟಿಷರ ಬಳುವಳಿಯಾಗಿ ಭಾರತಕ್ಕೆ ಬಂದ ಇಂಗ್ಲಿಷನ್ನು 1965ರವರೆಗೆ ಮಾತ್ರ ಉಳಿಸಿಕೊಳ್ಳಲು ಸಂವಿಧಾನದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವ ವಿಚಾರದಲ್ಲಿ ದಕ್ಷಿಣ ಭಾರತದಲ್ಲಿ ಉಗ್ರ ಚಳುವಳಿಗಳು ನಡೆದು ವಿಷಯ ತಣ್ಣಗಾಯಿತು. ಪ್ರಾದೇಶಿಕ ಭಾಷೆಗಳ ಜೊತೆಗೆ ಇಂಗ್ಲಿಷಿನ ಬದಲಿಗೆ ಹಿಂದಿಯನ್ನು ಒಪ್ಪಿಕೊಂಡಿದ್ದರೆ, ಇಂದು ಹಿಂದಿ ಮಾತನಾಡುವವರ ಸಂಖ್ಯೆ ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುತ್ತಿತ್ತು. ಈ ಅಂಕಿ ಅಂಶಗಳನ್ನು ಸಾಂದರ್ಭಿಕವಾಗಿ ಹೇಳಿದ್ದಷ್ಟೆ ಹೊರತು ಮುಖ್ಯ ವಿಷಯಕ್ಕೆ ಬರುತ್ತೇನೆ. ಸ್ವಭಾಷಾ ಪ್ರೇಮಕ್ಕಿಂತ ಇತರ ಭಾಷಾದ್ವೇಶ ಸಹ ಸೋದರತೆಯ ಭಾವನೆಗೆ ಕೊಡಲಿ ಪೆಟ್ಟು ಹಾಕಿದೆ. ಹಿಂದಿ ಭಾಷೆಯ ಮೇಲಿನ ದ್ವೇಶ ಗುಲಾಮಗಿರಿಯ ಬಳುವಳಿಯಾದ ಇಂಗ್ಲಿಷನ್ನು ಅನಿವಾರ್ಯವನ್ನಾಗಿ ಉಳಿಸಿತು. ಇಂಗ್ಲಿಷ್ ಇಲ್ಲದೆ ಬೆಳವಣಿಗೆ, ಪ್ರಗತಿ ಅಸಾಧ್ಯ ಅನ್ನುವುದು ಸರಿಯಲ್ಲ ಅನ್ನುವುದನ್ನು ಪ್ರಪಂಚದ ಭಾಷಾ ಅಂಕಿ ಸಂಖ್ಯೆಗಳು ಸಾರಿವೆ. ಭಾಷಾವಾರು ರಾಜ್ಯಗಳ ರಚನೆ ಸಹ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಭಾಷೆಯ ಹೆಸರಿನಲ್ಲಿ ಅಕ್ಕ ಪಕ್ಕದ ರಾಜ್ಯಗಳ ನಡುವೆ ಹಿಂಸಾತ್ಮಕ ಗಲಭೆಗಳಾಗಿವೆ, ಆಗುತ್ತಿವೆ. ನಮ್ಮ ಭಾಷೆಯೇ ಹೆಚ್ಚು ಎಂಬ ವಾದ ವಿವಾದಗಳು ಮಾನವರ ನಡುವೆ ಕಂದಕ ಉಂಟು ಮಾಡುತ್ತಿವೆ. ನಮ್ಮ ನಮ್ಮ ಭಾಷೆಗಳನ್ನು ಪ್ರೀತಿಸೋಣ, ಉಳಿಸೋಣ, ಬೆಳೆಸೋಣ; ಇತರ ಭಾಷೆಗಳನ್ನು ದ್ವೇಷಿಸದಿರೋಣ ಎಂಬ ಭಾವನೆ ಬರುವುದು ಸಾಧ್ಯವಾದಾಗ ಮಾತ್ರ ಸೋದರತೆ, ಸಮಾನತೆಗಳ ಮಾತನ್ನಾಡಲು ನಮಗೆ ಹಕ್ಕಿರುತ್ತದೆ. 
     ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ಸಮಯದಿಂದ ತಾರತಮ್ಯ ಪ್ರಾರಂಭವಾಗುತ್ತದೆ. ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಹೆಣ್ಣೂ ಸಹ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನೂ ತಳ್ಳಿಹಾಕಲಾಗದು. ಜಾತಿ, ಧರ್ಮದ ಕಟ್ಟುಪಾಡುಗಳಲ್ಲಿ ಆಕೆಯನ್ನು ಕಟ್ಟಿಹಾಕಿ ಶಿಕ್ಷಣ ಪಡೆಯುವ ಹಕ್ಕಿನಿಂದಲೂ ಅವರು ವಂಚಿತರಾಗಿರುವುದು ಸುಳ್ಳಲ್ಲ. ಅವರು ಧರಿಸುವ ವಸ್ತ್ರಗಳ ಬಗ್ಗೆ ಸಹ ಮತಾಂಧರು ಕಟ್ಟುನಿಟ್ಟು ಮಾಡಿರುವುದು ತಿಳಿದ ವಿಷಯ. ತಾನು ಬುದ್ಧಿವಂತಳೆಂದು ತಿಳಿದ ಮಹಿಳೆ ಪುರುಷನಿಗೆ ಸಮನಾದ ಹಕ್ಕುಗಳಿಗೆ ಒತ್ತಾಯಿಸುತ್ತಾಳೆ, ಆದರೆ ಬುದ್ಧಿವಂತ ಮಹಿಳೆ ಸುಮ್ಮನಿರುತ್ತಾಳೆ ಎಂಬುದು ಜನಜನಿತ. ಹೆಣ್ಣು ಎಷ್ಟು ಸುರಕ್ಷಿತ ಎಂಬುದು ಈಗ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೇ ಸಾಕ್ಷಿ ಹೇಳುತ್ತಿವೆ. ಅನೇಕ ಕಾರಣಗಳಿಂದಾಗಿ ಲಿಂಗಸಮಾನತೆ ಸಾಧ್ಯವಿರದಿರಬಹುದು, ಆದರೆ ಸಮಾನ ಅವಕಾಶಗಳಿಂದ ಹೆಣ್ಣು ವಂಚಿತಳಾಗಬಾರದು. ಇಲ್ಲಿ ಹಿಂದಿನ ಸಂಗತಿಗಳಲ್ಲಿ ವಿಶ್ಲೇಷಿಸಿದಂತೆ ಸಮಾನತೆ ಎಂದರೆ ಸಮಾನ ಅವಕಾಶಗಳು ಎಂದು. ಸಮಾನ ಅವಕಾಶಗಳಿದ್ದು ಹೆಣ್ಣು ಎಷ್ಟು ಸಾಧನೆ ಮಾಡಲು ಸಾಧ್ಯವೋ ಮಾಡಲು ಸಾಧ್ಯವಾಗುವಂತಾಗಬೇಕು. ಈಗ ಹೇಳಿ, ಸಮಾನತೆ, ಸೋದರತೆ, ವಿಶ್ವಭ್ರಾತೃತ್ವ ಎಂದೆಲ್ಲಾ ಮಾತನಾಡಲು ಯಾರಿಗೆ ಬಾಯಿ ಬಂದೀತು?
     ಸಮಾನತೆಯ ಬಗ್ಗೆ ಮಾತನಾಡುವವರು ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕಿದೆ. ಅದೆಂದರೆ ಯಾವುದೇ ವ್ಯಕ್ತಿ ಈಗ ತಾನು ಇರುವುದಕ್ಕಿಂತ ಮೇಲಿನ ಸ್ಥಿತಿಗೆ ತಲುಪಲು ಪ್ರಯತ್ನಿಸುತ್ತಲೇ ಇರುತ್ತಾನೆ. ಕಟು ವಾಸ್ತವವೆಂದರೆ ಮೊದಲು ನಾವು ನಮ್ಮನ್ನು ಇಷ್ಟಪಡುತ್ತೇವೆ, ನಂತರ ಬೇರೆಯವರನ್ನು! ಸಮಾನತೆಯನ್ನು ಯಾರೂ ಕೊಡುವುದಿಲ್ಲ, ನಾವು ಗಳಿಸಬೇಕು. ಬಡವ ಶ್ರೀಮಂತನಾಗಲು, ಆಟಗಾರ ಶ್ರೇಷ್ಠ ಆಟಗಾರನಾಗಲು, ಇರುವುದಕ್ಕಿಂತ ಉನ್ನತ ಅಧಿಕಾರ ಹೊಂದಲು ಬಯಸುತ್ತಲೇ ಇರುತ್ತಾರೆ. ಸಮಾನತೆಯೆಂದರೆ ಎಲ್ಲರೂ ಒಂದು ಹಂತದಲ್ಲೇ ಉಳಿದು ಸಮನಾಗಿ ಬಾಳುವುದಲ್ಲ. ಪದೇ ಪದೇ ಒತ್ತಿ ಹೇಳುತ್ತಿರುವಂತೆ ಇಲ್ಲೂ ಸಹ ಉನ್ನತ ಸ್ಥಿತಿ ತಲುಪಲು ಎಲ್ಲರಿಗೂ ಸಮಾನ ಅವಕಾಶವಿರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಆದರೆ ಈಗೇನಾಗುತ್ತಿದೆ? ಭ್ರಷ್ಟಾಚಾರ ಈ ಎಲ್ಲಾ ಸಮಾನ ಅವಕಾಶಗಳಿಗೆ ಕೊಕ್ಕೆ ಹಾಕಿದೆ. ಅಪಮಾರ್ಗಗಳನ್ನು ಬಳಸಿ ಮೇಲೇರುವ ಪ್ರಯತ್ನ, ಇತರರನ್ನು ಮುಂದೆ ಬರದಂತೆ ತಡೆಯುವ ಪ್ರಯತ್ನಗಳು ಮೇಲುಗೈ ಸಾಧಿಸಿವೆ. ಜನಸೇವೆಗಾಗಿ ಎಂದು ಕೈಮುಗಿದು ಅಧಿಕಾರಕ್ಕೇರುವ ನಾಯಕರು ಕೋಟಿ ಕೋಟಿ ಜನರ ಹಣ ಲೂಟಿ ಮಾಡುತ್ತಾರೆ. ಅಧಿಕಾರಕ್ಕಾಗಿ ದೇಶವನ್ನೇ ಮಾರಲು ಹಿಂದೆ ಮುಂದೆ ನೋಡದ, ಏನು ಮಾಡಲೂ ಹೇಸದವರ ಕೈಯಲ್ಲಿ ಅಧಿಕಾರ ಸಿಗುತ್ತದೆ. ಹಾಗಾದರೆ ಇದಕ್ಕೆ ಮುಕ್ತಿಯಿದೆಯೇ? ಮುಕ್ತಿಯಿದೆ, ಮಾರ್ಗವಿದೆ; ಸಮಾನತೆ, ವಿಶ್ವಭ್ರಾತೃತ್ವದ ಕನಸು ಕಾಣುವವರು ಮೊದಲು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಇತರರಿಗೆ ಅವರು ಮಾರ್ಗದರ್ಶಿಯಾಗಬಲ್ಲರು.
     ದೇಶಪ್ರೇಮ, ಧರ್ಮಪ್ರೇಮ, ಜಾತಿಪ್ರೇಮ, ಭಾಷಾಪ್ರೇಮ ಎಲ್ಲವೂ ಒಳ್ಳೆಯದೇ. ಅಸಮಾನತೆಗೆ ದೇಶ, ಧರ್ಮ, ಜಾತಿ, ಭಾಷೆಗಳು ಕಾರಣವಲ್ಲ. ಆದರೆ ದೇಶ, ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಅದೆಷ್ಟು ಮಾರಣಹೋಮಗಳಾಗಿವೆ! ನಿಜವಾದ ಕಾರಣ ನಿಮಗೆ ಈಗ ಗೊತ್ತಾಗಿರಬಹುದು. ಇತರ ದೇಶ/ಧರ್ಮ/ಜಾತಿ/ಭಾಷೆಗಳ ಮೇಲಿನ ದ್ವೇಷವೇ ಅದು! ಅದನ್ನು ತ್ಯಜಿಸಿದರೆ ನಾವು ವಿಶ್ವಮಾನವರೇ. ಅಸಮಾನತೆಯನ್ನು ಹೋಗಲಾಡಿಸಲು ಧರ್ಮ/ಜಾತಿಗಳು ಹುಟ್ಟಿದವು. ಆದರೆ ಮುಂದೆ ಅವೇ ಅಸಮಾನತೆಗೆ ಮೆಟ್ಟಲುಗಳಾದವು. ಸಮಾನತೆಯ ಸಾಧನೆಗೆ ಕೇವಲ ಸರ್ಕಾರವನ್ನು ನೆಚ್ಚಿ ಕುಳಿತುಕೊಳ್ಳುವಲ್ಲಿ, ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಕೇವಲ ಸಾಧನ ಮಾತ್ರ. ಆ ಸಾಧನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಮಾಡಬೇಕಾದವರು ನಾವುಗಳೇ. 
    ಸಮಾನತೆಯನ್ನು ಜನರ ಬುದ್ಧಿಶಕ್ತಿಯಲ್ಲಿ, ದೇಹಶಕ್ತಿಯಲ್ಲಿ, ಮನೋಭಾವದಲ್ಲಿ, ಭೌತಿಕ ಸೌಂದರ್ಯದಲ್ಲಿ, ಇತ್ಯಾದಿ ಹತ್ತು ಹಲವು ರೀತಿಗಳಲ್ಲಿ ತರುವುದು ಸಾಧ್ಯವಿದೆಯೇ? ಸಮಾನತೆಯನ್ನು ತರಲು ಸಾಧ್ಯವಿರುವಂತಹ ಸಂಗತಿಗಳಲ್ಲಿ ಮಾತ್ರ ಅದನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ. ಯಾವುದರಲ್ಲೋ ಸಮಾನತೆ ತರುತ್ತೇವೆಂದು ಮತ್ತಿನ್ಯಾವುದೋ ರೀತಿಯ ತಾರತಮ್ಯಗಳನ್ನು ಜನರ ನಡುವೆ ಉಂಟುಮಾಡುವ, ಸಮಾನತೆ ತರುವ ಹೆಸರಿನಲ್ಲಿ ಅಸಮಾನತೆ ಹೆಚ್ಚಿಸುವ ಸರ್ಕಾರದ ಇಂದಿನ ರೀತಿ-ನೀತಿಗಳು, ಕಾರ್ಯಕ್ರಮಗಳು ಬದಲಾದರೆ ಮಾತ್ರ ಏನನ್ನಾದರೂ ಒಳಿತನ್ನು ನಿರೀಕ್ಷಿಸಲು ಸಾಧ್ಯ. ಈ ವೇದಮಂತ್ರದ ಸಂದೇಶ ಪಾಲನೀಯವಾಗಿದೆ:
ಯೇ ಪಂಥಾನೋ ಬಹವೋ ದೇವಯಾನಾ ಅಂತರಾ ದ್ಯಾವಾಪೃಥಿವೀ ಸಂಚರಂತಿ | ತೇಷಾಮಜ್ಯಾನಿಂ ಯತಮೋ ವಹಾತಿ ತಸ್ಮೈಮಾದೇವಾಃ ಪರಿಧತ್ತೇಹ ಸರ್ವೇ | ಗ್ರೀಷ್ಮೋ ಹೇಮಂತಃ ಶಿಶಿರೋ ವಸಂತಃ ಶರದ್ವರ್ಷಾಃ ಸ್ವಿತೇನೋದಧಾತ | ಆನೋಗೋಷು ಭಜತಾಂ ಪ್ರಜಯಾಂ ನಿವಾತ ಇದ್ ವಃ ಶರಣೇಸ್ಯಾಮ | ಇದಾವತ್ಸರಾಯ ಪರಿವತ್ಸರಾಯ ಸಂವತ್ಸರಾಯ ಕೃಣುತಾ ಬೃಹನ್ನವಮ್ | ತೇಷಾಂ ವಯಂ ಸುಮತೌ ಯಜ್ಞಿಯಾನಾಮಪಿ ಭದೇ ಸೌಮನಸೇ ಸ್ಯಾಮ || (ಅಥರ್ವ.೬.೫೫.೧,೨)

     ಅರ್ಥ: ಜನರು ಒಳ್ಳೆಯವರಾಗಲು ಬಹಳಷ್ಟು ದಾರಿಗಳಿವೆ. ಯಾವ ದಾರಿ ಒಳ್ಳೆಯದೋ ಅದರಲ್ಲಿ ಮಾತ್ರ ಹೋಗಬೇಕು. ಒಳ್ಳೆಯ ದಾರಿಯ ಪಯಣ ಮತ್ತು ಒಳ್ಳೆಯದನ್ನೇ ಮಾಡುವುದರಿಂದ ಸದಾ ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ. ನಮಗಾಗಿ ಶ್ರಮಿಸುವ ಹಾಲು ಕೊಡುವ ಹಸುಗಳಿಗೆ, ಹೊಲ-ಗದ್ದೆಗಳಲ್ಲಿ ದುಡಿಯುವ ಎತ್ತುಗಳಿಗೆ, ಜೀವರಿಗೆ ನಾವು ಒಳಿತನ್ನೇ ಬಯಸಬೇಕು. ಮನೆಯಲ್ಲೂ, ಮನೆಯ ಹೊರಗೂ ಎಲ್ಲೆಡೆಯೂ, ಎಲ್ಲರೊಂದಿಗೂ ನಮ್ಮ ನಡವಳಿಕೆಗಳು ಪ್ರೇಮಭಾವದಿಂದ ಕೂಡಿರಬೇಕು. ಅನ್ನ, ಜಲ, ಅವಕಾಶಗಳು ಸಮೃದ್ಧಿಯಾಗಿರುವಂತೆ ನೋಡಿಕೊಂಡು, ಜ್ಞಾನಪ್ರಸಾರ, ಕೆಲಸಕಾರ್ಯಗಳು, ಸಮಾನ ಅವಕಾಶಗಳು ಸದಾ ಸಮೃದ್ಧವಾಗಿರುವಂತೆ ಇರಬೇಕು. ಹೀಗಿದ್ದರೆ ದೇಶದ ಉನ್ನತಿ, ಎಲ್ಲರಲ್ಲಿ ಭಾವೈಕ್ಯ ಮೂಡದೇ ಇದ್ದೀತೆ? ತಾರತಮ್ಯವಿರದ ಸಹೃದಯ ಪೂರ್ಣ ಸದ್ಗುಣಗಳು ಮಾತ್ರ ಸಮಾನತೆಗೆ ಪ್ರೇರಕ ಅಂಶಗಳು.
    ಪ್ರಗತಿ ಜೀವಂತಿಕೆಯ ಸಂಕೇತ. ಈಗ ಇರುವುದಕ್ಕಿಂತ ಮುಂದಿನ ಉತ್ತಮ ಸ್ಥಿತಿಗೆ ಮುಂದೆ ಹೋಗೋಣ. ಮುಂದೆ ಹೋದಾಗ ಹಿಂತಿರುಗಿ ನೋಡಿ, ಹಿಂದೆ ಬಿದ್ದವರನ್ನು ಮುಂದೆ ಬರಲು ಸಹಕರಿಸಿ ಕೈಹಿಡಿದು ಮುಂದೆ ತರೋಣ. ಮತ್ತೆ ಮುಂದೆ ಹೋಗೋಣ, ಮತ್ತೆ ಹಿಂದಿರುವವರನ್ನೂ ಮುಂದಕ್ಕೆ ತರೋಣ, ಮತ್ತೆ ಮುಂದೆ ಹೋಗೋಣ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇದು ನಿಜವಾದ ಸಮಾನತೆಯ, ನಿಜವಾದ ಮಾನವತೆಯ, ನಿಜವಾದ ವಿಶ್ವಭ್ರಾತೃತ್ವದ ಕಲ್ಪನೆ. ಈ ಕಲ್ಪನೆ ಸಾಕಾರವಾಗಬೇಕಾದರೆ ಇದಕ್ಕೆ ಪೂರಕವಾದ ಜ್ಞಾನದ ಅರಿವನ್ನು ಮೂಡಿಸುವ ಕಾರ್ಯ ಮುಂದೆ ಇರುವವರದಾಗಿದೆ. ಟೀಕೆ ಮಾಡುತ್ತಾ, ಒಬ್ಬರನ್ನೊಬ್ಬರು ದೂಷಿಸುತ್ತಾ ಕಾಲಹರಣ ಮಾಡುವುದರಿಂದ ಮುಂದೆ ಬರಲಾಗುವುದಿಲ್ಲ. ಮುಂದೆ ಬರಬೇಕೆಂದರೆ ಮುಂದೆ ಹೋಗಬೇಕಷ್ಟೆ. ಸಮಾನತೆ ಬೇಕೆಂದರೆ ಹಿಂದಿರುವವರನ್ನು ಮುಂದೆ ತರಬೇಕಷ್ಟೆ, ಮುಂದಿರುವವರನ್ನು ಹಿಂದೆ ತರುವುದಲ್ಲ. ಇದಕ್ಕೆ ಬೇರೆ ಅಡ್ಡದಾರಿಗಳಿಲ್ಲ. 'ಸಂ ಅಜತಿ ಇತಿ ಸಮಾಜಃ'- ಒಂದುಗೂಡಿ ಮುಂದುವರೆಯುವುದೇ ಸಮಾಜ. ಇಲ್ಲದಿದ್ದರೆ ಅದು ಸಮಾಜ ಅನ್ನಿಸಿಕೊಳ್ಳದೆ, 'ದುಃ ಅಜ' ಅರ್ಥಾತ್ ದುರಾಜ ಆಗುತ್ತದೆ. ಯೋಚಿಸಿ: ನಾವು, ನೀವು ಕೆಲವು ವಿಷಯಗಳಲ್ಲಿ ಮುಂದಿದ್ದೇವೆ. ಏಕೆಂದರೆ ನಮಗಿಂತ ಹಿಂದೆ ಇರುವವರು ಬಹಳ ಜನರಿದ್ದಾರೆ. ಅವರನ್ನೂ ನಮ್ಮ ಜೊತೆಗೆ ಮುಂದೆ ತಂದು, ನಮಗಿಂತ ಮುಂದೆ ಇರುವವರ ಜೊತೆಗೆ ಸಮನಾಗಿ ಹೋಗುವ ಪ್ರಯತ್ನ ಎಡೆಬಿಡದೆ ಮಾಡೋಣ, ಮುನ್ನಡೆಯೋಣ.  
-ಕ.ವೆಂ.ನಾಗರಾಜ್.
*****************
ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ:
ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ 6 ಮತ್ತು 13.8.2014ರಲ್ಲಿ ಪ್ರಕಟಿತ:

ಮಂಗಳವಾರ, ಫೆಬ್ರವರಿ 5, 2013

ಎದೆಯಾಳದ ಸ್ಪಂದನ


     40 ವರ್ಷಗಳ ಹಿಂದೆ ಅಂಚೆ ಇಲಾಖೆಯಲ್ಲಿ ನೌಕರಿ ಸಿಕ್ಕಿದ್ದಾಗ ಮೈಸೂರಿನಲ್ಲಿ ಮೂರು ತಿಂಗಳು ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ತರಬೇತಿ ಗೀತೆಯೆಂದು ನಮಗೆ ಹೇಳಿಕೊಡುತ್ತಿದ್ದ ಗೀತೆ, "ವತನ್ ಕಿ ರಾಹ ಮೇ ವತನ್ ಕಿ ನೌಜವಾನ್ ಶಹೀದ್ ಹೋ" ಎಂಬುದು. ಇದು ಭಗತ್ ಸಿಂಗನ ಕುರಿತಾದ 'ಶಹೀದ್' ಎಂಬ ಹಿಂದಿ ಚಲನಚಿತ್ರದಲ್ಲಿ ಭಗತಸಿಂಗನ ಬಲಿದಾನದ ನಂತರದಲ್ಲಿ ನಡೆದ ಶವಯಾತ್ರೆಯ ದೃಷ್ಯದ ಹಿನ್ನೆಲೆಯಾಗಿ ಮಹಮದ್ ರಫಿ ಮತ್ತು ಮಸ್ತಾನ್ ಹಾಡಿದ್ದ ಹಾಡು. ಪದ ಪದಗಳಲ್ಲಿ ದೇಶಭಕ್ತಿ ಚಿಮ್ಮಿಸುವ ಈ ಹಾಡು ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದು, ಅದನ್ನು ಇಂದಿಗೂ ಗುನುಗುನಿಸುತ್ತಿರುತ್ತೇನೆ. ಇದರ ಸ್ಫೂರ್ತಿಯಿಂದ ರಚಿಸಿರುವ ಹಾಡು ಇದು. ಇದು ಹಿಂದಿ ಗೀತೆಯ ಪದಶಃ ಅನುವಾದವಲ್ಲ.

                 ಭಗತಸಿಂಹನ ನೆನಪು
ಭರತಮಾತೆಯ ವರಸುಪುತ್ರರೇ ಜೀವ ಜ್ಯೋತಿಯನುರಿಸಿರಿ |
ಕಾಳ ಕತ್ತಲೆ ದೂರ ಸರಿಸಲು ಜೀವ ಒತ್ತೆಯನಿರಿಸಿರಿ ||ಪ||

ನಿನ್ನ ಬದುಕಿನ ತೈಲ ಸುರಿದಿಹೆ ಹಣತೆ ನಿರತವು ಉರಿಯಲು |
ರುಧಿರವಾಗಿದೆ ಜೀವಸೆಲೆಯು ನಾಡತೋಟಕೆ ಭದ್ರ ಬಲವು |
ನಿನ್ನ ಬಾಳಿನ ರಸವ ಹೀರಿ ಅರಳಿ ನಕ್ಕಿದೆ ಕುಸುಮವು || 

ಮೈಯ ಕೊಡವಿ ಮೇಲಕೆದ್ದು ವೈರಿಗಳ ಬಡಿದಟ್ಟಿಹೆ |
ಕರಗಳೆ ಕರವಾಳವಾಗಿ ಎದ್ದು ತೊಡೆಯನು ತಟ್ಟಿಹೆ |
ನಾಡಿನೊಳಿತಿಗೆ ಮಿಡಿದು ಮಡಿದಿಹೆ ಧನ್ಯ ನೀ ಅನನ್ಯನೆ ||

ಠೇಂಕಾರದ ಹೂಂಕಾರಕೆ ಗಿರಿಯೆ ಗಡಗಡ ನಡುಗಿದೆ |
ಹರಿದ ರಕುತವೆ ಬಣ್ಣದೋಕಳಿ ಚಿತ್ರ ಬಿಡಿಸಿದೆ ನಭದಲಿ |
ನೆಲವದಲ್ಲವು ಅಮರನಾಗು ನಿನ್ನ ನಾಡದು ಮೇಲಿದೆ ||

ಪ್ರಾಣಕಿಂತಲು ನಾಡಮಾನವೆ ಹಿರಿದು ಎಂದಿಹ ಧೀರನು |
ತೃಪ್ತ ಭಾವದಿ ನಗೆಯ ಸೂಸುತ ಹೆಜ್ಜೆ ಹಾಕಿಹ ಶೂರನು |
ಕೋಟಿ ತರುಣರ ಎದೆಯ ತಟ್ಟಲಿ ನಿನ್ನದೀ ಬಲಿದಾನವು ||

ಧೀರ ಭೂಮಿ ವೀರ ಭೂಮಿ ಪುಣ್ಯ ಭೂಮಿ ಭಾರತ |
ತರುಣರೆಲ್ಲರು ಭಗತರಾಗಲು ದೇಶ ಮೆರೆವುದು ಶಾಶ್ವತ |
ದುಷ್ಟ ಶಕ್ತಿಯ ಮೆಟ್ಟಿ ನಿಲುವ ಶಕ್ತಿ ಬರುವುದು ನಿಶ್ಚಿತ ||

ಮೂಲ ಗೀತೆ: ವತನ್ ಕೀ ರಾಹ್ ಮೇ. .
ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ|
ಪುಕಾರ್ ತೀ ಹೈ ಯಹ ಜಮೀನ್ -ಆಸ್ಮಾ(ನ್) ಶಹೀದ್ ಹೋ|| ||ಪ||

ಶಹೀದ್ ತೇರೀ ಮೌತ್ ಹಿ ತೇರೆ ವತನ್ ಕೀ ಜಿಂದಗೀ
ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ
ಖಿಲೇಂಗೇ ಫೂಲ್ ಉಸ್ ಜಗಹ್ ಪೆ ತು ಜಹಾನ್ ಶಹೀದ್ ಹೋ||  . .ವತನ್ ಕಿ. .

ಗುಲಾಮ್ ಉಠ್ ವತನ್ ಕೆ ದುಷ್ಮನೋಂಸೆ ಇಂತಖಾಮ್ ಲೇ
ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರೋಂಕಾ ಕಾಮ್ ಲೇ
ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‌ಬಾನ್ ಶಹೀದ್ ಹೋ|| . .ವತನ್ ಕಿ. .

ಪಹಾಡ್ ತಕ್ ಭೀ ಕಾಂಪನೇ ಲಗೇ ತೇರೇ ಜುನೂನ್ ಸೆ
ತೂ ಆಸ್ಮಾ(ನ್) ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ
ಜಮೀನ್ ನಹೀ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ||  . .ವತನ್ ಕಿ. .

ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ
ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ
ಇಸ್ ಏಕ್ ಜವಾನ್ ಕೀ ಖಾಕ್ ಪರ್ ಹರ್ ಏಕ್ ಜವಾನ್ ಶಹೀದ್ ಹೋ|| . .ವತನ್ ಕಿ. .

ಹೈ ಕೌನ್ ಖುಷ್‌ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ
ವೊ ಖುಷ್‌ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ
ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ|| . .ವತನ್ ಕಿ. .

ಸಾಂದರ್ಭಿಕ ಮಾಹಿತಿಗಾಗಿ:
         
    ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ 1961ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ 1947ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಬ್ರಿಟಿಷರ ದಬ್ಬಾಳಿಕೆಯ ನಡುವೆಯೂ, ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. 26-03-1931ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು. ಇತ್ತೀಚೆಗೆ ಭಗತ್ ಸಿಂಗನ 105ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಪಾಕ್ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗ. ಅವನಂತಹವರ ಬಲಿದಾನವಾಗಿರದಿದ್ದರೆ, ಜಿನ್ನಾನಂತಹವರು ಪಾಕಿಸ್ತಾನ ರಚನೆಗೆ ಒತ್ತಾಯಿಸುವಂತಹ ಸಂದರ್ಭ ಉತ್ಪನ್ನವಾಗುತ್ತಿತ್ತೇ? ಇವರಂತಹ ತರುಣರ ಬಲಿದಾನದ ಲಾಭ ಪಡೆದು ಪಾಕಿಸ್ತಾನದ ರಚನೆಗೆ ಒತ್ತಡ ಬಂದಾಗ ಗಾಂಧೀಜಿಯವರಂತಹ ನಾಯಕಮಣಿಗಳು ಮಣಿದುಬಿಟ್ಟರು. ದುರಂತಕರ ವಿಭಜನೆಯಾಯಿತು. ಅದರ ದುಶ್ಫಲವನ್ನು ನಾವು ಇಂದೂ ಉಣ್ಣುತ್ತಿದ್ದೇವೆ. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಮಾನವತೆಗೆ, ಇತಿಹಾಸಕ್ಕೆ ಅಪಚಾರ ಮಾಡುವವರು, ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಕಟು ವಾಸ್ತವ ಇತಿಹಾಸದ ಸಂಗತಿಗಳ ಕುರಿತು ಮಾತನಾಡಿದರೆ ಕೇಸರೀಕರಣವೆಂಬ ಗುಮ್ಮ ತೋರಿಸಿ, ನೈಜ ಇತಿಹಾಸದ ಮೇಲೆ ಪೊರೆ ಮುಸುಕಿಸುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ. 
-ಕ.ವೆಂ.ನಾಗರಾಜ್.

ಚಿತ್ರಗಳು:1.ಭಗತಸಿಂಗನ  ನೆನಪಿನ ಅಂಚೆ ಚೀಟಿ, 2. ಭಗತಸಿಂಗನ ಮರಣ ಪ್ರಮಾಣಪತ್ರ - ಎರಡನ್ನೂ ಅಂತರ್ಜಾಲದಿಂದ ಹೆಕ್ಕಲಾಗಿದೆ.