ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 31, 2010

ಸೇವಾಪುರಾಣ -16: ಗುಲ್ಬರ್ಗ ತೋರಿಸಿದರು -1

ಮುಂದುವರೆದ ಕಿರುಕುಳ
     ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗಲೇ ತಿಳಿಸಿದ್ದೇನೆ. ಈ ಆದೇಶದ ವಿರುದ್ಧ ಸರ್ಕಾರದ ಪರವಾಗಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿ ಸಲ್ಲಿಸಲಾಗಿ ಅದನ್ನು ಉಚ್ಛನ್ಯಾಯಾಲಯವು ವಿಚಾರಣೆಗೇ ಅಂಗೀಕರಿಸಿರದೇ ಇದ್ದುದು ಸಂತಸದ ವಿಷಯವಾಗಿತ್ತು. ಇದೇ ಸಮಯದಲ್ಲಿ ಕೆಳ ಕೋರ್ಟಿನ ಆದೇಶದ ವಿರುದ್ಧ ರಿವಿಶನ್ ಮನವಿಯನ್ನು ಜಿಲ್ಲಾನ್ಯಾಯಾಲಯದಲ್ಲೂ ಸಲ್ಲಿಸಲಾಗಿತ್ತು. ಅದೂ ಸಹ              02-09-1976ರಲ್ಲಿ ವಜಾಗೊಂಡಿತು. ಜಿಲ್ಲಾ ನ್ಯಾಯಾಲಯದ ಈ ಆದೇಶವನ್ನೂ ಸಹ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಿ ಮೇಲುಮನವಿ ಸಲ್ಲಿತವಾಯಿತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಉಚ್ಛನ್ಯಾಯಾಲಯವು ಮೇಲುಮನವಿ ತಿರಸ್ಕರಿಸಿ 17-02-1977ರಲ್ಲಿ ಆದೇಶಿಸಿತು.
ಗುಲ್ಬರ್ಗಕ್ಕೆ ಕಳಿಸಿದರು
     ಹೊಸ ಜಿಲ್ಲಾಧಿಕಾರಿಯವರು ಬಂದಿದ್ದರಿಂದ ನಾನು 'ಮೀಸಾ' ಅನ್ವಯ ಬಂಧಿತನಾಗುವುದು ತಪ್ಪಿದ್ದ ಬಗ್ಗೆ ತಿಳಿಸಿದ್ದೇನೆ. ಆದರೆ ಹಿಂದಿನ ಜಿಲ್ಲಾಧಿಕಾರಿಯವರು ಹೋಗುವ ಮುನ್ನ ನನ್ನನ್ನು ಹಾಸನ ಜಿಲ್ಲೆಯಿಂದ ಹೊರಗಿಡುವುದು ಸೂಕ್ತವೆಂದೂ ಅದಕ್ಕಾಗಿ ನನ್ನ ಅಮಾನತ್ತನ್ನು ರದ್ದುಪಡಿಸಿ ಗುಲ್ಬರ್ಗ ವಿಭಾಗಕ್ಕೆ ವರ್ಗಾಯಿಸಲು ಸರ್ಕಾರಕ್ಕೆ ಶಿಫಾರಸು ಮಾಡಿ ದಿನಾಂಕ    15-05-1976ರಲ್ಲಿ ಪತ್ರ ಬರೆದು ಹೋಗಿದ್ದರು.ಆರು ತಿಂಗಳ ನಂತರದಲ್ಲಿ ದಿನಾಂಕ 03-02-1976ರಲ್ಲಿ ಆ ಶಿಫಾರಸನ್ನು ಒಪ್ಪಿ ಸರ್ಕಾರದ ಆದೇಶವೂ ಬಂದಿತು. ನನ್ನನ್ನು ಹಾಸನದ ಕಛೇರಿಯಿಂದ 24-12-1976ರಲ್ಲಿ ಬಿಡುಗಡೆಗೊಳಿಸಿ ಗುಲ್ಬರ್ಗ ವಿಭಾಗಾಧಿಕಾರಿಯವರನ್ನು ಕಂಡು ಮುಂದಿನ ಆದೇಶ ಪಡೆಯಲು ಸೂಚಿಸಲಾಯಿತು. ಹಾಸನದಿಂದ ದಾವಣಗೆರೆಗೆ ಹೋಗಿ ಅಲ್ಲಿಂದ ರಾತ್ರಿ ಗುಲ್ಬರ್ಗ ಬಸ್ಸಿನಲ್ಲಿ ಕುಳಿತು ಮರುದಿನ ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಗುಲ್ಬರ್ಗ ತಲುಪಿದೆ. ಬಸ್ಸು ಇಳಿಯಲು ನೋಡಿದಾಗ ನನ್ನ ಚಪ್ಪಲಿಗಳು ಕಾಣೆಯಾಗಿದ್ದವು. ನನ್ನ ಚಪ್ಪಲಿಗಳ ಜಾಗದಲ್ಲಿ ಒಂದು ಜೊತೆ ಹಳೆಯ ಮುರುಟಿಹೋಗಿದ್ದ ಚಪ್ಪಲಿ ಆಕಾರದ ಚಪ್ಪಲಿಗಳಿದ್ದವು. ನನ್ನ ಪಕ್ಕದಲ್ಲಿದ್ದವರು ಬಹುಷಃ ತಮ್ಮ ಚಪ್ಪಲಿ ಬಿಟ್ಟು ನನ್ನ ಚಪ್ಪಲಿ ಹಾಕಿಕೊಂಡು ಹೋಗಿದ್ದರು. ಗುಲ್ಬರ್ಗದಲ್ಲಿ ನಾನು ಮಾಡಿದ ಮೊದಲ ಕೆಲಸವೆಂದರೆ ಚಪ್ಪಲಿ ಅಂಗಡಿ ತೆರೆಯುವ ತನಕ ಕಾದಿದ್ದು ಹೊಸ ಚಪ್ಪಲಿ ಕೊಂಡದ್ದು. ತಿಂಡಿ ತಿಂದು ವಿಭಾಗಾಧಿಕಾರಿಯವರ ಕಛೇರಿ ಹುಡುಕಿಕೊಂಡು ಹೋಗಿ ವರದಿ ಮಾಡಿಕೊಂಡೆ. ಗುಲ್ಬರ್ಗ ವಿಭಾಗಕ್ಕೆ ಸೇರಿದಂತೆ ನಾಲ್ಕು ಜಿಲ್ಲೆಗಳು -ಬಳ್ಳಾರಿ, ರಾಯಚೂರು, ಗುಲ್ಬರ್ಗ ಮತ್ತು ಬೀದರ್ - ಇದ್ದು ಒಂದು ದಿನದ ನಂತರ ವಿಭಾಗಾಧಿಕಾರಿಯವರು ನನ್ನನ್ನು ಗುಲ್ಬರ್ಗ ಜಿಲ್ಲೆಗೆ ನಿಯೋಜಿಸಿ ಆದೇಶ ಮಾಡಿದರು. ಬಳ್ಳಾರಿ ಜಿಲ್ಲೆಗೆ ಹಾಕಿದ್ದರೆ ಹಾಸನಕ್ಕೆ ಸ್ವಲ್ಪ ಹತ್ತಿರವಾಗುತ್ತಿತ್ತು. ಗುಲ್ಬರ್ಗ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮುಂದಿನ ಆದೇಶ ಪಡೆಯಲು ಹಾಜರಾದರೆ ಹತ್ತು ದಿನಗಳು ಅಲೆದಾಡಿಸಿ ಕೊನೆಗೆ ಗುಲ್ಬರ್ಗದಿಂದ 80 ಕಿ.ಮೀ. ದೂರದ ಸೇಡಂ ತಾಲ್ಲೂಕಿನ ಭೂಸುಧಾರಣಾ ವಿಶೇಷ ತಹಸೀಲ್ದಾರರ ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನೇಮಕಾತಿ ಆದೇಶ ಕೊಟ್ಟರು.
ಸೇಡಂನಲ್ಲಿ
     ಸತ್ಯವಾಗಿ ಹೇಳುತ್ತೇನೆ, ಸೇಡಂ ಎಂಬ ಹೆಸರಿನ ಊರು ಕರ್ನಾಟಕದಲ್ಲಿ ಇದ್ದ ಬಗ್ಗೆ ಅದುವರೆಗೆ ನನಗೆ ಗೊತ್ತಿರಲಿಲ್ಲ. 06-01-77ರಲ್ಲಿ ಸೇಡಂನ ವಿಶೇಷ ತಹಸೀಲ್ದಾರರ ಮುಂದೆ ಕರ್ತವ್ಯಕ್ಕೆ ಹಾಜರಾದೆ. ಹಾಸನದಿಂದ ದೂರದ ಸೇಡಂಗೆ ವರ್ಗವಾಗಿ ಬರಬೇಕೆಂದರೆ ನಾನು ಏನೋ ಮಾಡಬಾರದ್ದು ಮಾಡಿ ಬಂದಿದ್ದೇನೆಂದು ತಹಸೀಲ್ದಾರರು ಆ ಸಮಯದಲ್ಲಿ ಉಡಾಫೆಯಿಂದ ಹೇಳಿದ್ದರು. ಭೂಸುಧಾರಣಾ ಶಾಸನದ ತ್ವರಿತ ಇತ್ಯರ್ಥದ ಸಲುವಾಗಿ ತೆರೆದಿದ್ದ ಆ ವಿಶೇಷ ಕಛೇರಿಯಲ್ಲಿ ಒಬ್ಬರು ನಿವೃತ್ತಿ ಅಂಚಿನಲ್ಲಿದ್ದ ಉಪತಹಸೀಲ್ದಾರರು, ಬಳ್ಳಾರಿಯಿಂದ ದೂರಿನ ಮೇಲೆ ವರ್ಗವಾಗಿ ಬಂದಿದ್ದ ಒಬ್ಬರು ಪ್ರಥಮ ದರ್ಜೆ ಗುಮಾಸ್ತರು, ಮೂವರು ದ್ವಿ.ದರ್ಜೆ ಗುಮಾಸ್ತರು ಮತ್ತು ಒಬ್ಬರು ಸರ್ವೆಯರರು ಇದ್ದರು.ಭೂನ್ಯಾಯ ಮಂಡಳಿಯ ಮುಂದೆ ಕಡತಗಳನ್ನು ಪರಿಶೀಲಿಸಿ ತನಿಖಾವರದಿ ಸಹಿತ ಮಂಡಿಸುವ ಮಹತ್ವದ ಕೆಲಸ ನನ್ನದಾಗಿತ್ತು. ಉಪವಿಭಾಗಾಧಿಕಾರಿ ದರ್ಜೆಯ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಗುಲ್ಬರ್ಗದ ಮಾಜಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಶೇರ್ ಖಾನ್ ಎಂಬುವವರೂ ಸೇರಿದಂತೆ ನಾಲ್ವರು ಕಾಂಗ್ರೆಸ್ಸಿಗರು ಭೂನ್ಯಾಯ ಮಂಡಳಿ ಸದಸ್ಯರಾಗಿದ್ದರು. ಸೇಡಂನಲ್ಲಿ ಸುಮಾರು ಒಂದು ವರ್ಷವಷ್ಟೇ ಕೆಲಸ ಮಾಡಿದ್ದರೂ ಅಲ್ಲಿನ ಕೆಲವು ನೆನಪುಗಳು ಅಚ್ಚಳಿಯದೆ ಉಳಿದಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಈಗಿನ ಭಾರತೀಯ ಜನತಾಪಕ್ಷದ ರಾಜ್ಯಮಟ್ಟದ ನಾಯಕರಲ್ಲಿ ಒಬ್ಬರಾಗಿರುವ (ಇವರು ಒಳ್ಳೆಯ ರಾಜಕಾರಣಿಯಾಗಿದ್ದು ಮಂತ್ರಿಯಾಗುವ ಅರ್ಹತೆ ಹೊಂದಿದ್ದರೂ ಆಗದಿರುವುದಕ್ಕೆ ಮತ್ತು ಮೂಲೆಗುಂಪು ಮಾಡಲ್ಪಟ್ಟಿರುವುದಕ್ಕೆ ಇಂದಿನ ಕೊಳಕು ವ್ಯವಸ್ಥೆ ಕಾರಣವಿರಬಹುದು)ಶಿಕ್ಷಣ ಕ್ಷೇತ್ರದಲ್ಲೂ ಹೆಸರು ಮಾಡಿರುವ ಶ್ರೀ ಬಸವರಾಜ ಪಾಟೀಲ ಸೇಡಂರವರು ಆಗಿನ್ನೂ ತರುಣರಾಗಿದ್ದು ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರು. ಅವರು ಕೊತ್ತಲ ಬಸವೇಶ್ವರ ಶಿಕ್ಷಣಾ ಸಂಸ್ಥೆ ನಡೆಸುತ್ತಿರಬಹುದೆಂದು ನೆನಪು. ಈಗ ಅದು ದೊಡ್ಡದಾಗಿ ಬೆಳೆದಿರಬಹುದು.ಆರೆಸ್ಸೆಸ್ ನ ಸಂಪರ್ಕ ಜಾಲ ತುರ್ತು ಪರಿಸ್ಥಿತಿ ಕಾಲದಲ್ಲೂ ಹೇಗಿತ್ತೆಂದರೆ ನಾನು ಸೇಡಂಗೆ ಬಂದ ಮರುದಿನವೇ ನನ್ನನ್ನು ಭೇಟಿ ಮಾಡಿ ಏನಾದರೂ ಸಹಾಯ ಅಗತ್ಯವಿದ್ದರೆ ಸಂಕೋಚ ಪಡದೆ ಕೇಳಬಹುದೆಂದು ಹೇಳಿದ್ದಲ್ಲದೆ ನನಗಾಗಿ ಬಾಡಿಗೆಗೆ ಒಂದು ಖೋಲಿ(ಕೊಠಡಿ)ಯನ್ನೂ ಕೊಡಿಸಿದ್ದರು. (ನಾನು ಬಂದ ಕೂಡಲೇ ಸೇಡಂನಲ್ಲಿದ್ದ ಒಂದೇ ಒಂದು ಕೊಳಕು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದೆ.)
ಭಾಷಾ ವೈವಿಧ್ಯ
     ಹೈದರಾಬಾದ್ ಕರ್ನಾಟಕಕ್ಕೆ ಸೇರಿದ್ದ ಪ್ರದೇಶವಾಗಿದ್ದರಿಂದ ಅಲ್ಲಿನ ಕನ್ನಡದಲ್ಲಿ ಉರ್ದು ಭಾಷೆಯ ಪ್ರಭಾವ ಗಮನಿಸಬಹುದಾಗಿತ್ತು. ಕೆಲವು ಹೊಸ ಪದಗಳ ಬಳಕೆ ನನಗೆ ತಿಳಿಯಿತು. ಪಟವಾರಿ, ಕುಲಕರ್ಣಿ(ಶ್ಯಾನುಭೋಗ), ಗಿರ್ದಾವರು(ರೆವಿನ್ಯೂ ಇನ್ಸ್ ಪೆಕ್ಟರ್), ದೌರಾ(ಪ್ರವಾಸ), ಹಾರೆ(ಇದ್ದಾರೆ), ಹಾನೆ(ಇದ್ದಾನೆ),ಇಂತಹ ಪದಪ್ರಯೋಗಗಳು ಬಳಕೆಯಿಂದ ತಿಳಿಯುತ್ತಾ ಹೋಯಿತು. ಪ್ರಾರಂಭದಲ್ಲಿ ಒಬ್ಬ ರಾಜಕೀಯ ಧುರೀಣ ಕಛೇರಿಗೆ ಬಂದು 'ಸಾಹೇಬ ಹಾನೇನೋ?' ಎಂದು ಕೇಳಿದ್ದಾಗ ಜವಾನ 'ಹಾರೆ' ಎಂಬ ಉತ್ತರ ಕೊಟ್ಟಿದ್ದು ನನಗೆ ಅರ್ಥವಾಗಿರಲಿಲ್ಲ. ಒಬ್ಬರು ವಕೀಲರ ಮನೆಯ ಮುಂದೆ ಹಾಕಿದ್ದ ನಾಮಫಲಕ ಈಗಲೂ ನೆನಪಿನಲ್ಲಿದೆ. ಆಯ. ಏಮ. ಬಬಲಾದಿ,ಬೀ.ಏ.ಎಲ.ಎಲ.ಬಿ., ಅಡವೋಕೇಟ ಎಂಬ ಆ ಹೆಸರನ್ನು ಹಳೆಯ ಮೈಸೂರು ಪ್ರದೇಶದಲ್ಲಾಗಿದ್ದರೆ ಐ.ಎಂ. ಬಬಲಾದಿ,ಬಿ.ಎ.ಎಲ್.ಎಲ್.ಬಿ., ಅಡ್ವೋಕೇಟ್ ಎಂದು ಬರೆಯುತ್ತಿದ್ದರು. ಇಂತಹ ವೈವಿದ್ಯತೆ ಕುರಿತು ವಿನೋದಕರವಾಗಿ ಚರ್ಚೆಗಳು ನಮ್ಮನಮ್ಮಲ್ಲಿ ನಡೆಯುತ್ತಿತ್ತು. 'ಮರ ಇಳೀಲಿಕ್ಕ ಹತ್ಯಾನ ಅಂತೀರಿ, ಮರ ಇಳೀಲಿಕ್ಕೆ ಏಕೆ ಹತ್ತಬೇಕು?' ಎಂಬ ನನ್ನ ಪ್ರಶ್ನೆಗೆ 'ನೀವ್ ಮೈಸೂರಮಂದಿ ಏನ ಭೇಷ ಶಾಣ್ಯಾರಂತ ಮಾಡೀರೇನ? ಪೋಲಿಸ ಕಳ್ಳನ್ನ ಹಿಡಿದುಬಿಟ್ಟ ಅಂತೀರಿ. ಬಿಡಲಿಕ್ಕೆ ಯಾಕಾರ ಹಿಡೀಬೇಕು? ಲಾರಿ ಹರಿದು ಒಬ್ಬನ ಸಾವು ಅಂತೀರಿ. ಲಾರಿ ಏನ ಕಾಗದಾ ಅಂತ ಮಾಡೀರೇನ ಹರೀಲಿಕ್ಕಾ?' ಎಂಬಂತಹ ಎದಿರೇಟುಗಳು ಸಿದ್ಧವಾಗಿರುತ್ತಿದ್ದವು.

ಶನಿವಾರ, ಆಗಸ್ಟ್ 21, 2010

ಸೇವಾ ಪುರಾಣ -೧೫: ಸರಳುಗಳ ಹಿಂದಿನ ಲೋಕ -೮: ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆ

ತಂದೆಯ ನೌಕರಿಗೂ ಬಂದಿದ್ದ ಕುತ್ತು
     ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದ್ದ ಪ್ರಥಮ ದರ್ಜೆ ಮುಖ್ಯನ್ಯಾಯಿಕ ದಂಡಾಧಿಕಾರಿಯವರಾಗಿದ್ದ ಶ್ರೀ ಎಸ್.ಆರ್.ಪುರಾಣಿಕ್ ರವರು ವರ್ಗಾವಣೆ ಹೊಂದಿ ಅವರ ಸ್ಥಾನಕ್ಕೆ ಬೇರೊಬ್ಬರು ನ್ಯಾಯಾಧೀಶರಾಗಿ ಬಂದಿದ್ದರು.ಅವರು ನನ್ನ ಮೇಲಿದ್ದ ಹಲವಾರು ಪ್ರಕರಣಗಳನ್ನು ಗಮನಿಸಿ ನನ್ನ ತಂದೆಯವರು ಕೋರ್ಟಿನ ಶಿರಸ್ತೇದಾರರೆಂದು ತಿಳಿದು 'ಮನೆಯಲ್ಲಿ ನಿಷೇಧಿತ ಆರೆಸ್ಸೆಸ್ಸಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂದೂ, ಆ ಕಾರಣಕ್ಕಾಗಿ ನನ್ನ ತಂದೆಯವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಬೇಕೆಂದೂ' ಶಿಫಾರಸು ಮಾಡಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರಂತೆ. ಆಗ ಜಿಲ್ಲಾ ನ್ಯಾಯಾಧೀಶರಾಗಿ ಶ್ರೀ ಕೋ.ಚನ್ನಬಸಪ್ಪನವರು ಇದ್ದು ನನ್ನ ತಂದೆಯವರನ್ನು ಬಲ್ಲವರಾಗಿದ್ದರು.ಅವರು ನನ್ನ ತಂದೆಯವರನ್ನು ಕರೆಸಿ ವಿಷಯ ತಿಳಿಸಿ ಎಚ್ಚರಿಕೆ ನೀಡಿ ವರದಿಯನ್ನು ಹರಿದು ಹಾಕಿದ್ದರಂತೆ.ಅಂತಹ ವರದಿ ತಮ್ಮ ವಿರುದ್ಧ ಹೋಗಿದ್ದ ಬಗ್ಗೆ ಅವರು ವಿಚಾರಿಸಿದ ಮೇಲೆಯೇ ನನ್ನ ತಂದೆಗೆ ಗೊತ್ತಾಗಿದ್ದಂತೆ! ಶ್ರೀ ಕೋ.ಚನ್ನಬಸಪ್ಪನವರು ಬರೆದಿರುವ 'ನ್ಯಾಯಾಲಯದ ಸತ್ಯಕಥೆಗಳು' ಎಂಬ ಪುಸ್ತಕದಲ್ಲಿ ನಮಗೆ ಸಂಬಂಧಿಸಿದ ಎರಡು ಘಟನೆಗಳು ಕಥೆಯಾಗಿ ಉಲ್ಲೇಖಿತಗೊಂಡಿವೆ!
ಶಹಭಾಷ್ ಎಂದಿದ್ದ ಜಿಲ್ಲಾಧಿಕಾರಿ!
     ನಾನೊಬ್ಬ ಭಯಂಕರ ಅಪರಾಧಿಯೆಂದೂ, ನನ್ನಿಂದ ಕಾಯದೆ ಹಾಗೂ ಶಾಂತಿಭಂಗವಾಗುತ್ತದೆಂದೂ ನನ್ನನ್ನು 'ಮೀಸಾ' ಕಾಯದೆಯಡಿ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲು ಶಿಫಾರಸು ಮಾಡಿ ಜಿಲ್ಲಾ ಆರಕ್ಷಕ ಅಧಿಕಾರಿಯವರು ಶಿಫಾರಸು ಮಾಡಿ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಿದ್ದರು. ಮೊದಲಿನ ಜಿಲ್ಲಾಧಿಕಾರಿಯವರೇ ಇದ್ದಿದ್ದರೆ ಆ ಶಿಫಾರಸನ್ನು ಖಂಡಿತಾ ಅನುಮೋದಿಸಿ ಕಳುಹಿಸುತ್ತಿದ್ದರು. ಆಗ ಹೊಸ ಜಿಲ್ಲಾಧಿಕಾರಿಯವರಾಗಿ ಶ್ರೀ ಧೀರೇಂದ್ರ ಸಿಂಗ್ ಎಂಬುವವರು ಬಂದಿದ್ದರು. ಅವರು ತಮ್ಮ ಕಛೇರಿಯ ನೌಕರನಾಗಿದ್ದ ನನ್ನ ಬಗ್ಗೆ ಆಸಕ್ತಿ ವಹಿಸಿ ಕಛೇರಿಯ ಇತರ ನೌಕರರುಗಳಿಂದ ವಿಚಾರಿಸಿ ಮಾಹಿತಿ ಪಡೆದರು. ನಾನು ನೇರ ನಡೆನುಡಿಯವನೆಂದೂ, ನನಗೆ ಅನ್ಯಾಯವಾಗಿದೆಯೆಂದೂ, ಪೋಲಿಸರು ತಿಳಿಸಿದಂತಹ ವ್ಯಕ್ತಿತ್ವದವನಲ್ಲವೆಂದು ನನ್ನ ಸಹೋದ್ಯೋಗಿಗಳು ಕೊಟ್ಟ ಮಾಹಿತಿ ಪಡೆದ ಅವರು ಹಾಸನದ ಜೈಲಿಗೂ ತಪಾಸಣೆಯ ನೆಪದಲ್ಲಿ ಭೇಟಿ ನೀಡಿದರು. ನನ್ನನ್ನು ಕರೆಯಿಸಿ ಮಾತನಾಡಿದರು. ನನ್ನ ಮಾತುಗಳನ್ನೆಲ್ಲಾ ಸಾವಧಾನವಾಗಿ ಕೇಳಿದ ಅವರು ನನ್ನನ್ನು ಬೆನ್ನು ತಟ್ಟಿ 'ಐ ಆಮ್ ಪ್ರೌಡ್ ಆಫ್ ಯು, ಮೈ ಬಾಯ್' ಎಂದರು. ಜೈಲರರಿಗೆ ನನಗೆ ತೊಂದರೆಯಾಗದಂತೆ ಸರಿಯಾಗಿ ನೋಡಿಕೊಳ್ಳಲು ಸೂಚನೆ ಕೊಟ್ಟರು. ಅವರು ತಪಾಸಣೆಯ ನೆಪದಲ್ಲಿ ಕಾರಾಗೃಹಕ್ಕೆ ಬಂದಿದ್ದು ನನ್ನನ್ನು 'ಮೀಸಾ'ಗೆ ಒಳಪಡಿಸಬೇಕೇ, ಬೇಡವೇ ಎಂದು ನಿರ್ಧರಿಸುವ ಸಲುವಾಗಿತ್ತೆಂದು ನನಗೆ ನಂತರ ಗೊತ್ತಾಯಿತು.ಎಸ್.ಪಿ.ಯವರ ಶಿಫಾರಸನ್ನು ಅವರು ಮಾನ್ಯ ಮಾಡಲಿಲ್ಲ. ಹಾಗಾಗಿ ನಾನು ಬಳ್ಳಾರಿ ಜೈಲು ನೋಡುವುದು ತಪ್ಪಿತ್ತು.
ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆ
     ಸಾಮಾನ್ಯವಾಗಿ ತಪ್ಪು ಮಾಡಿದವರು ತಮಗೆ ಒದಗಬಹುದಾದ ಶಿಕ್ಷೆಗೆ ಮಾನಸಿಕವಾಗಿ ಸಿದ್ಧರಿರುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ಶಿಕ್ಷೆ ಸಿಕ್ಕರೆ ಅಥವಾ ತಪ್ಪೇ ಮಾಡದೆ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಅಪರಾಧಿಗಳು ಉದಯಿಸುತ್ತಾರೆ. ನನ್ನ ವೈಯಕ್ತಿಕ ಅನುಭವದಿಂದ ಹೇಳಬೇಕೆಂದರೆ ಇಂದಿನ ಸ್ಥಿತಿಯಲ್ಲಿ ಪೋಲಿಸ್ ಠಾಣೆಗಳು ಮತ್ತು ಕಾರಾಗೃಹಗಳು ಅಪರಾಧ ನಿಯಂತ್ರಣಕ್ಕೆ ಸಹಕಾರಿಯಾಗಿರುವಂತೆ ಅಪರಾಧಿಗಳ ಉಗಮಕ್ಕೂ ಕಾರಣಗಳಾಗಿವೆ.ಇಂದಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯ ವೈಖರಿ ಸಹ ಇದಕ್ಕೆ ಸಹಕಾರಿಗಳಾಗಿವೆ.
     ಶಾಸಕಾಂಗದ ಆಧಾರಸ್ತಂಭಗಳೆನಿಸಿರುವ ಕೊಳಕು ರಾಜಕಾರಣಿಗಳು ಇಂದಿನ ಈ ಹದಗೆಟ್ಟ ಸ್ಥಿತಿಗೆ ಪ್ರಮುಖ ಕಾರಣ. ಕಾಂಗ್ರೆಸ್ಸಿನ ಯುವನಾಯಕ ಶ್ರೀ ರಾಹುಲಗಾಂಧಿಯವರು (ಇವರನ್ನು ಮುಂದಿನ ಭಾರತದ ಪ್ರಧಾನಿ ಮಾಡಲು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ) ಕರ್ನಾಟಕದ ಪ್ರವಾಸದ ಸಂದರ್ಭದಲ್ಲಿ 'ಇಂದಿನ ಪ್ರಮುಖವಾದ ಸಮಸ್ಯೆ ಏನು?' ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬರು 'ರಾಜಕಾರಣಿಗಳು, ಭ್ರಷ್ಠ ರಾಜಕಾರಣಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು' ಎಂದು ಸರಿಯಾಗಿಯೇ ಉತ್ತರಿಸಿದ್ದಾರೆ. 'ಯಥಾ ರಾಜಾ ತಥಾ ಪ್ರಜಾ' ಎಂಬಂತೆ ನಮ್ಮನ್ನಾಳುತ್ತಿರುವ ರಾಜಕಾರಣಿಗಳ ನೈತಿಕ ಮಟ್ಟ ಅಧೋಗತಿಗೆ ಇಳಿಯುತ್ತಿರುವಂತೆಯೇ ದೇಶದ ಸ್ಥಿತಿ ಸಹ ಅಧೋಗತಿಗೆ ಜಾರುತ್ತಿದೆ. ನೈತಿಕತೆ, ಮೌಲ್ಯಗಳಿಗೆ ಗೌರವ ಕೊಡುವವರು ರಾಜಕೀಯಕ್ಕೆ ಸಕ್ರಿಯರಾಗಿ ಬರಲು ಸಾಧ್ಯವೇ ಇಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಬಂದರೂ ಅವರನ್ನು ತುಳಿದುಬಿಡುತ್ತಾರೆ. ವಲ್ಲಭಭಾಯಿ ಪಟೇಲ್,ಲಾಲಬಹದೂರ ಶಾಸ್ತ್ರಿ, ಶ್ಯಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಗುಲ್ಜಾರಿಲಾಲ ನಂದರವರಂತಹ ನಾಯಕರು ಈಗೆಲ್ಲಿ? ಗಾಂಧೀಜಿ ಒಂದುವೇಳೆ ಬದುಕಿದ್ದು ಚುನಾವಣೆಗೆ ಸ್ಪರ್ಧಿಸಬಯಸಿದರೆ ಅವರನ್ನು ಚುನಾವಣೆಗೆ ನಿಲ್ಲಲೂ ಸಾಧ್ಯವಾಗದಂತೆ ಮಾಡುತ್ತಿದ್ದರು. ಹಾಗೂ ಸ್ಪರ್ಧಿಸಿದರೆ ಅವರು ಗೆಲ್ಲುತ್ತಲೂ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರನ್ನು ಬಹುದೊಡ್ಡ ಕಳಂಕಿತ ವ್ಯಕ್ತಿಯಂತೆ ಬಿಂಬಿಸಿಬಿಡಲಾಗುತ್ತಿತ್ತು. ಇತ್ತೀಚಿನ ಉದಾಹರಣೆಯೆಂದರೆ ಸರಳ, ಸಜ್ಜನ, ದೇಶಭಕ್ತ ರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಮರು ಇನ್ನೊಂದು ಅವಧಿಗೆ ರಾಷ್ಟ್ರಪತಿಗಳಾಗಬೇಕೆಂದು ಒತ್ತಾಯ ಬಂದ ಸಂದರ್ಭದಲ್ಲಿ ಅವರ ವ್ಯಕ್ತಿತ್ವಕ್ಕೆ ಕೆಸರೆರೆಚುವ ಕಾರ್ಯ ಕಾಂಗ್ರೆಸ್ಸಿಗರಿಂದ ಆಗಲೇ ಪ್ರಾರಂಭವಾಗಿಬಿಟ್ಟಿತ್ತಲ್ಲವೇ? ಈ ವಿಷಯ ಚರ್ಚಿಸುತ್ತಾ ಹೋದರೆ ದೊಡ್ಡ ಪ್ರಬಂಧವನ್ನೇ ರಚಿಸಬಹುದು. ಕಟುವಾಸ್ತವವೆಂದರೆ ಈ ರಾಜಕಾರಣಿಗಳು, ಲೋಕಾಯುಕ್ತ ಅಥವ ಇನ್ನಾವುದೇ ಭ್ರಷ್ಠಾಚಾರ ನಿಯಂತ್ರಕ ವ್ಯವಸ್ಥೆಯ ವ್ಯಾಪ್ತಿಯಿಂದ ತಮ್ಮನ್ನು ತಾವೇ ಹೊರಗಿಟ್ಟುಕೊಂಡಿರುವ ಈ ಕೊಳಕು ರಾಜಕಾರಣಿಗಳು ನಮ್ಮನ್ನಾಳುವವರು ಮತ್ತು ಶಾಸನಗಳನ್ನು ರೂಪಿಸುವವರು! ಇಂತಹವರ ಮರ್ಜಿ ಅನುಸರಿಸಿ ಪೋಲಿಸರು ಮತ್ತು ಇತರ ಅಧಿಕಾರಗಳು ಕೆಲಸ ಮಾಡಬೇಕು. ಆಳುವವರೇ ಭ್ರಷ್ಠಾಷಾರಿಗಳಾದರೆ ಭ್ರಷ್ಠಾಚಾರ ನಿಯಂತ್ರಣ ಸಾಧ್ಯವೇ? ಹೀಗಾಗಿ ಎಲ್ಲಾ ಇಲಾಖೆಗಳೂ ಭ್ರಷ್ಠಾಚಾರದ ಕೊಂಪೆಗಳಾಗಿವೆ, ಆಗಲೇ ಬೇಕಾಗಿವೆ! ದೇಶದ ಪರಮೋಚ್ಛ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯೂ ಸೇರಿದಂತೆ ಪ್ರತಿಯೊಬ್ಬರೂ ಒಂದಿಲ್ಲೊಂದು ಭ್ರಷ್ಠಾಚಾರ ನಿಯಂತ್ರಣ ವ್ಯವಸ್ಥೆಗೆ ಒಳಪಡಲೇಬೇಕು. ಇಲ್ಲದಿದ್ದರೆ ಈ ಹೀನ ರಾಜಕಾರಣಿಗಳು ಅಧಿಕಾರಿಗಳನ್ನು ಹೆದರಿಸಿ,ಬೆದರಿಸಿ ಅವರಿಂದ ಅಕ್ರಮಗಳನ್ನು ಮಾಡಿಸಿ ಅವರನ್ನೇ ದೂರುವ ಕಾಯಕ ಅಬಾಧಿತವಾಗಿ ನಡೆಯುತ್ತಲೇ ಇರುತ್ತದೆ.ಜಾತ್ಯಾತೀತತೆ ಹೆಸರಿನಲ್ಲೇ ಜಾತೀಯತೆಯನ್ನು ಈ ಕೊಳಕರು ಬಲಪಡಿಸುತ್ತಿದ್ದಾರೆ. 'ಜಾತಿ ಬಿಡಿ, ಮತ ಬಿಡಿ, ಮಾನವತೆಗೆ ಜೀವ ಕೊಡಿ' ಎನ್ನುತ್ತಲೇ ಜಾತಿ ಆಧಾರಿತ ಮೀಸಲಾತಿ, ಒಳಮೀಸಲಾತಿ ಬಯಸುತ್ತಾರೆ. ಸಾವಿರಾರು ಕೋಟಿ ಹಣ ಮಾಡಿ(ದೋಚಿ)ರುವವರೂ ದಲಿತರು, ಹಿಂದುಳಿದವರು, ಮಣ್ಣಿನ ಮಕ್ಕಳು, ಬಡವರ ಪ್ರತಿನಿಧಿಗಳು, ಇತ್ಯಾದಿ ಎನ್ನಿಸಿಕೊಳ್ಳಲು ಭಾರತದಲ್ಲಿ ಮಾತ್ರ ಸಾಧ್ಯ. ಎಲ್ಲಾ ಸಾಮಾಜಿಕ ಅಪರಾಧಗಳ ನಿಯಂತ್ರಣಕ್ಕೆ ಸೂಕ್ತ ಕಾಯದೆ, ಕಾನೂನುಗಳಿವೆ. ಅವನ್ನು ಪ್ರಾಮಾಣಿಕವಾಗಿ ಜಾರಿಗೆ ತರಬೇಕು. ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ನೈಜ ಮತ್ತು ಪ್ರಾಮಾಣಿಕ ಜಾತ್ಯಾತೀತತೆ ಅನುಷ್ಠಾನಗೊಳ್ಳಬೇಕು. ಪ್ರಾಮಾಣಿಕತೆ ಮತ್ತು ನೈತಿಕತೆಯುಳ್ಳ ಸಮಾಜಸೇವಾಸಕ್ತ (ಅಧಿಕಾರಾಕಾಂಕ್ಷಿಗಳಲ್ಲ) ರಾಜಕಾರಣಿಗಳು ಪ್ರಬುದ್ಧಮಾನಕ್ಕೆ ಬರುವಂತಹ ವಾತಾವರಣ ನಿರ್ಮಾಣವಾಗಬೇಕು. ಹೀಗಾಗಬೇಕಾದರೆ ಕೊಳಕು ರಾಜಕಾರಣಿಗಳನ್ನು ಜನರು ಹದ್ದುಬಸ್ತಿನಲ್ಲಿ ಇಡುವಂತಹ ಕ್ರಾಂತಿಯಾಗಬೇಕು. ಇದು ಸಾಧ್ಯವಾದೀತೆ? ಆಗಲಿ ಎಂಬುದು ನನ್ನಂತಹವರ ಅಪೇಕ್ಷೆ ಮತ್ತು ನಿರೀಕ್ಷೆ.
ನುಡಿನಮನ
     ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ವಿರೋಧಿಗಳನ್ನು ಜೈಲಿಗೆ ತಳ್ಳಿ, ಕಂಡರಿಯದ ದರ್ಪ, ದಬ್ಬಾಳಿಕೆಗಳ ಪರ್ವವಾಗಿ ದೇಶ ಸರ್ವಾಧಿಕಾರದ ಕಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಅಭೂತ ಪೂರ್ವ ಚಳುವಳಿ ನಡೆದು ಪ್ರಜಾಸತ್ತೆ ಪುನರ್ ಸ್ಥಾಪಿತವಾದದ್ದು ಈಗ ಇತಿಹಾಸ. ಈಗ ಹಣ ಸುರಿದು ಬಾಡಿಗೆ ಜನರನ್ನು ಕರೆತಂದು ಸಭೆ, ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸುವುದನ್ನು ಇಂದು ಕಾಣುತ್ತಿದ್ದೇವೆ. ಆಗ ಮಾತನಾಡಲೂ ಅಂಜುವಂತಹ ಪರಿಸ್ಥಿತಿಯಲ್ಲಿ ಸೆಟೆದೆದ್ದು ನಿಂತವರು ಆರೆಸ್ಸೆಸ್ಸಿನ ಕಾರ್ಯಕರ್ತರು. ಚಳುವಳಿಗೆ ಬೆನ್ನೆಲುಬಾಗಿದ್ದವರೇ ಅವರು. ಇದನ್ನು ಎಲ್ಲರೂ ಒಪ್ಪಿದ್ದ ಸಂಗತಿ. ಈಗ ಆರೆಸ್ಸೆಸ್ಸನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವವರೇ ತುರ್ತು ಪರಿಸ್ಥಿತಿ ತೆರುವಾದ ಸಂದರ್ಭದಲ್ಲಿ ಆರೆಸ್ಸೆಸ್ಸನ್ನು ಹಿಗ್ಗಾ ಮುಗ್ಗಾ ಹೊಗಳಿದ್ದರು. ರಾಜಕಾರಣಿಗಳೇ ಹಾಗೆ. ಈಗ ಮಾಧ್ಯಮಗಳೂ ಜೊತೆಗೆ ಸೇರಿಕೊಂಡಿವೆ. ಇರಲಿ ಬಿಡಿ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೀವಗಳನ್ನು ಕಳೆದುಕೊಂಡವರೆಷ್ಟೋ, ಎಷ್ಟು ಸಂಸಾರಗಳು ಹಾಳಾದವೋ, ಲೆಕ್ಕ ಇಟ್ಟವರಾರು? ಎಷ್ಟು ಜನರು ಅಂಗವಿಕಲರಾದರೋ, ಎಷ್ಟು ಜನರು ಸಮಾಜಘಾತಕರಾದರೋ ತಿಳಿಯದು. ದೇಶಹಿತಕ್ಕಾಗಿ ಸೆರೆವಾಸ, ಚಿತ್ರಹಿಂಸೆ ಅನುಭವಿಸಿ, ಮತಿವಿಕಲರಾಗಿ ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ನಮ್ಮ ಜೊತೆಯಲ್ಲೇ ಬಂದಿಯಾಗಿದ್ದ ಆರೆಸ್ಸೆಸ್ಸಿನ ಹಾಸನ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಮತ್ತು ಅವರಂತೆಯೇ ಪ್ರಾಣ ಕಳೆದುಕೊಂಡ ಎಲ್ಲಾ ಮಹನೀಯರಿಗೂ ಈ ಮೂಲಕ ನನ್ನ ಹೃದಯಪೂರ್ವಕ ನುಡಿನಮನಗಳನ್ನು ಅರ್ಪಿಸುತ್ತೇನೆ.ಇಂದಿನ ಕೊಳಕು ರಾಜಕೀಯವನ್ನು ತಹಬಂದಿಗೆ ತರುವ, ಅಧಿಕಾರಕ್ಕಾಗಿ ಹಪಗಪಿಸುವವರನ್ನು ಮೂಲೆಗೆ ತಳ್ಳಿ ಸರ್ವ ಜನರ ಹಿತ ಬಯಸುವ ನೈಜ ಕಳಕಳಿಯ ಮತ್ತು ದೇಶಹಿತವನ್ನು ಪ್ರಾಮುಖ್ಯವಾಗಿ ಪರಿಗಣಿಸುವ ಸರ್ಕಾರ ಬರಲಿ ಎಂಬುದೇ ನನ್ನಂತಹವರ ಪ್ರಾರ್ಥನೆ.
-ಕ.ವೆಂ.ನಾಗರಾಜ್.

ಬುಧವಾರ, ಆಗಸ್ಟ್ 18, 2010

ಮೂಢ ಉವಾಚ -17

ಭುಗಿಲೆದ್ದ ಜ್ವಾಲಾಗ್ನಿ ಮನೆಯನ್ನೆ ಸುಟ್ಟೀತು
ಹದವರಿತ ಬೆಂಕಿಯದು ಅಟ್ಟುಣಬಡಿಸೀತು|
ಕ್ರೋಧಾಗ್ನಿ ತರದಿರದೆ ಬಾಳಿನಲಿ ವಿರಸ?
ಹದವರಿತ ಕೋಪವದು ಹಿತಕಾರಿ ಮೂಢ||

ದುಷ್ಟ ಶಿಕ್ಷಣಕಾಗಿ ಶಿಷ್ಟ ರಕ್ಷಣೆಗಾಗಿ
ಸಮಾಜಹಿತಕಾಗಿ ಧರ್ಮ ರಕ್ಷಣೆಗಾಗಿ|
ರಾಷ್ಟ್ರ ಭದ್ರತೆಗಾಗಿ ಆತ್ಮಸಮ್ಮಾನಕಾಗಿ
ಕೋಪವದುಕ್ಕುಕ್ಕಿ ಬರಲಿ ಮೂಢ||

ಬರುವುದೆಲ್ಲದಕು ಹಿಡಿಯುವುದು ಗ್ರಹಣ
ಕೂಡಿಡುವ ಬಚ್ಚಿಡುವ ನಿಪುಣ ತಾ ಕೃಪಣ|
ಕೈಯೆತ್ತಿ ಕೊಡಲಾರ ಬಂದದ್ದು ಬಿಡಲಾರ
ಲೋಭಿಯಾ ಲೋಭಕೆ ಮದ್ದುಂಟೆ ಮೂಢ||

ದೃಷ್ಟಿಭೋಗಕ್ಕುಂಟು ವಿನಿಯೋಗಕಿಲ್ಲ
ಅಪಹಾಸ್ಯ ನಿಂದೆಗಳಿಗಂಜುವುದೆ ಇಲ್ಲ|
ಪ್ರಾಣವನೆ ಬಿಟ್ಟಾನು ಕೈಯೆತ್ತಿ ಕೊಡನು
ಲೋಭಿಯಾ ಲೋಭಕೆ ಮದ್ದುಂಟೆ ಮೂಢ||


-ಕ.ವೆಂ.ನಾಗರಾಜ್.

ಮಂಗಳವಾರ, ಆಗಸ್ಟ್ 17, 2010

ಕೆಂಪು ಬೆಳೆ

ಸ್ವಾರ್ಥದಾ ಭೂಮಿಗೆ ಚಾಡಿಮಾತುಗಳ ಮಳೆ ಬಿದ್ದು
ಕ್ಷೇತ್ರವದು ನಳನಳಿಸಿ ಕಂಗೊಳಿಸುತಿಹುದು|

ಅಸಹನೆ ಮತ್ಸರದುಪಕರಣದಿಂ ಉತ್ತಿರಲು
ದ್ವೇಷದಾ ಕಿಡಿಗಳೆಂಬೋ ಬೀಜವನು ಬಿತ್ತಿಹರು|

ಸಂಶಯದ ಗೊಬ್ಬರವ ಕಾಲಕಾಲಕೆ ಹಾಕಿ
ಶಾಂತಿ ಸಹನೆಯ ಕಳೆಯ ಚಿವುಟಿ ಹಾಕಿಹರು|

ವೈಮನಸ್ಸಿನ ಬೆಳೆಯು ಅಬ್ಬರದಿ ಬೆಳೆದಿರಲು
ಆಹಾ ಎಲ್ಲಿ ನೋಡಿದರಲ್ಲಿ ಕೆಂಪಿನೋಕುಳಿಯು

ಬೆಳೆಯ ಬೆಳೆದವರು ಬೆಳೆಯನುಂಡವರು
ಅಯ್ಯೋ ಕೆಂಗಣ್ಣರಾಗಿ ಮತಿಯ ಮರೆತಿಹರು|

ಪತಿ ಪತ್ನಿಯರ ನಡುವೆ ಹೆತ್ತವರ ನಡುವೆ
ವಿರಸದುರಿಯದು ಹೊತ್ತಿ ಜ್ವಲಿಸುತಿಹುದು|

ಅತ್ತೆ ಸೊಸೆಯರ ನಡುವೆ ಸೋದರರ ನಡುವೆ
ಮತ್ಸರದ ಬೆಂಕಿ ತಾ ಹೊಗೆಯಾಡುತಿಹುದು|

ಬದುಕು ಶಾಶ್ವತವಲ್ಲ ದ್ವೇಶ ಬಿಡಿ ಎಂದವರ
ನಾಲಗೆಯ ಕತ್ತರಿಸಿ ಕರುಳ ಬಗೆದೆಳೆದಿಹರು||

************
-ಕವಿ ನಾಗರಾಜ್.

ಭಾನುವಾರ, ಆಗಸ್ಟ್ 15, 2010

ಸೇವಾ ಪುರಾಣ -೧೪: ಸರಳುಗಳ ಹಿಂದಿನ ಲೋಕ -೭: ನಾನೇಕೆ ಉಗ್ರಗಾಮಿಯಾಗಲಿಲ್ಲ?

ಕೈಕೋಳದ ಕಥೆ
     ವಿಚಾರಣೆಗಾಗಿ ನಮ್ಮನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನಮಗೆ ಕೈಕೋಳಗಳನ್ನು ಹಾಕಿ ಕರೆದೊಯ್ಯಲಾಗುತ್ತಿತ್ತು. ನಮ್ಮ ವಿಚಾರಣೆ ಆಗಿ ವಾಪಸು ಜೈಲು ತಲುಪುವವರೆಗೂ ಕೈಕೋಳಗಳು ಇರುತ್ತಿದ್ದವು. ನಮ್ಮ ಸ್ನೇಹಿತರು, ಬಂಧುಗಳು, ಪರಿಚಯದವರು ನಮ್ಮನ್ನು ಆ ಸ್ಥಿತಿಯಲ್ಲಿ ನೋಡಿದಾಗ ಅವರುಗಳಿಗೆ ಏನನ್ನಿಸುತ್ತಿತ್ತೋ ಗೊತ್ತಿಲ್ಲ. ನಮ್ಮ ಸಮಾಧಾನವೆಂದರೆ ಪೋಲಿಸರ ಮತ್ತು ಕಾಂಗ್ರೆಸ್ಸಿಗರ ದೃಷ್ಟಿಯಲ್ಲಿ ನಾವು ಸಮಾಜಘಾತಕರೆನಿಸಿಕೊಂಡಿದ್ದರೂ ನಾವು ಸಮಾಜಘಾತಕ ಕೆಲಸಗಳನ್ನು ಮಾಡಿ ಜೈಲಿಗೆ ಹೋಗಿರಲಿಲ್ಲ ಎಂಬುದು. ನನ್ನ ತಂದೆಯವರ ದುರಾದೃಷ್ಟವೋ, ನನ್ನ ಗ್ರಹಚಾರವೋ ಗೊತ್ತಿಲ್ಲ, ಯಾವ ನ್ಯಾಯಾಲಯಕ್ಕೆ ಆರೋಪಿಯಾಗಿ ನನ್ನನ್ನು ಕರೆದೊಯ್ಯಲಾಗುತ್ತಿತ್ತೋ ಅದೇ ನ್ಯಾಯಾಲಯದಲ್ಲಿ ನನ್ನ ತಂದೆ ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದುದು! ನನ್ನ ವಿಚಾರಣಾ ದಿನಾಂಕಗಳಂದು ತಂದೆಯವರು ಸಾಂಧರ್ಭಿಕ ರಜೆ ಹಾಕಿಬಿಡುತ್ತಿದ್ದರು. ಒಮ್ಮೆ ವಿಚಾರಣೆ ಅಪೂರ್ಣವಾಗಿ ಮಧ್ಯಾಹ್ನ ಊಟವಿಲ್ಲದೆ (ವಿಚಾರಣೆ ಮುಗಿದು ಜೈಲಿಗೆ ವಾಪಸು ಹೋದಾಗಲೇ ನಮಗೆ ಊಟ) ನ್ಯಾಯಾಲಯದ ಆವರಣದಲ್ಲಿ ಕೈಕೋಳಗಳೊಂದಿಗೆ ಕುಳಿತಿದ್ದಾಗ ತಂದೆಯ ಸಹೋದ್ಯೋಗಿಯೊಬ್ಬರು ನಮಗೆಲ್ಲಾ ಬಾಳೆಹಣ್ಣು ತರಿಸಿಕೊಟ್ಟಿದ್ದರು. ಪರಿಚಯದ ಕೋರ್ಟಿನ ಬೆರಳಚ್ಚುಗಾರ್ತಿಯೊಬ್ಬರು ನನ್ನನ್ನು ನೋಡಿ ಕಣ್ಣು ಒರೆಸಿಕೊಂಡರು. ನನ್ನ ಪರಿಸ್ಥಿತಿ ಕಂಡು ಮರುಗಿದರೋ ಅಥವಾ 'ಎಂಥ ಅಪ್ಪನಿಗೆ ಎಂಥ ಮಗ' ಎಂತಲೋ ಗೊತ್ತಿಲ್ಲ. ಕೈಕೋಳಗಳನ್ನು ಹಾಕಿಕೊಂಡು ವ್ಯಾನು ಹತ್ತುವ ಮುನ್ನ ಕೋಳಗಳನ್ನು ಹಾಕಿದ ಕೈಗಳನ್ನು ಮೇಲೆತ್ತಿ 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಇತ್ಯಾದಿ ಘೋಷಣೆಗಳನ್ನು ಹಾಕಿ ಸುತ್ತಮುತ್ತಲಿದ್ದ ಜನರ ಗಮನ ಸೆಳೆಯುತ್ತಿದ್ದೆವು.
     ಹೀಗೆಯೇ ಒಮ್ಮೆ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನನ್ನ ಎಡಗೈ ಮತ್ತು ಅರಕಲಗೂಡಿನ ಪಟ್ಟಾಭಿರಾಮ ಎಂಬ ವಿದ್ಯಾರ್ಥಿಯ ಬಲಗೈ ಸೇರಿಸಿ ಬೇಡಿ ಹಾಕಿದ್ದರು. ಇಬ್ಬರೂ ಸಣಕಲರಾಗಿದ್ದು ಬೀಗ ಹಾಕಿದ್ದಂತೆಯೇ ನಮ್ಮ ಬೇಡಿಗಳನ್ನು ಕೈಯಿಂದ ತೆಗೆದುಬಿಡಬಹುದಿತ್ತು. ವ್ಯಾನಿನಲ್ಲಿ ಬರುವಾಗ ನರಸಿಂಹರಾಜವೃತ್ತದ ಸಮೀಪದ ತಗ್ಗು ಪ್ರದೇಶವಿದ್ದು (ಈಗ ಅಲ್ಲಿ ಅಂಗಡಿಗಳಿವೆ)ಅದರ ಸಮೀಪ ಬಂದಾಗ ನಮ್ಮ ಬೇಡಿಯನ್ನು ತೆಗೆದು ಪೋಲಿಸರಿಗೆ ತೋರಿಸಿ ವ್ಯಾನಿನ ಕಿಂಡಿಯಿಂದ ಆ ತಗ್ಗಿಗೆ ಎಸೆದುಬಿಟ್ಟೆವು. ಪೋಲಿಸರು ತಕ್ಷಣ ವ್ಯಾನು ನಿಲ್ಲಿಸಿ ನಮ್ಮನ್ನು ಬಯ್ಯುತ್ತಾ ಒಬ್ಬರು ಪೇದೆಯನ್ನು ಬೇಡಿ ಹುಡುಕಿ ತರಲು ಕಳಿಸಿದರು. ತಗ್ಗಿನಲ್ಲಿ ಕುರುಚಲು ಗಿಡಗಳು, ಹುಲ್ಲು, ಕೊಚ್ಚೆ ಇದ್ದು ಬೇಡಿಯನ್ನು ಹುಡುಕುವುದು ಸುಲಭವಾದ ಕೆಲಸವಾಗಿರಲಿಲ್ಲ. ಆ ಸಂದರ್ಭ ಉಪಯೋಗಿಸಿಕೊಂಡು ನಾವು ಮಾಮೂಲು ಘೋಷಣೆಗಳು 'ತುರ್ತು ಪರಿಸ್ಥಿತಿಗೆ ಧಿಕ್ಕಾರ', 'ಇಂದಿರಾಗಾಂಧಿಗೆ ಧಿಕ್ಕಾರ', ಇತ್ಯಾದಿಗಳನ್ನು ಹಾಕತೊಡಗಿದೆವು. ಅಲ್ಲಿ ಓಡಾಡುತ್ತಿದ್ದ ಜನರು ಕುತೂಹಲದಿಂದ ಗುಂಪು ಕೂಡಿ ನೋಡುತ್ತಿದ್ದರು. ಪಕ್ಕದಲ್ಲೇ ಎಸ್.ಪಿ. ಕಛೇರಿಯಿದ್ದು ಅಲ್ಲಿಂದ ಹಿರಿಯ ಅಧಿಕಾರಿಯೊಬ್ಬರು ಧಾವಿಸಿ ಬಂದು ನಮ್ಮನ್ನು ಮತ್ತು ಪೋಲಿಸರನ್ನು ಬೈದು ಬೇರೆ ಇಬ್ಬರು ಪೋಲಿಸರನ್ನು ಜೊತೆ ಮಾಡಿ ನಮ್ಮನ್ನು ಕೂಡಲೇ ನ್ಯಾಯಾಲಯಕ್ಕೆ ಕರೆದೊಯ್ಯುವಂತೆ ಮಾಡಿದರು. ಕೊನೆಗೂ ನಾವು ಎಸೆದಿದ್ದ ಬೇಡಿ ಸಿಕ್ಕಿತೋ ಇಲ್ಲವೋ ಗೊತ್ತಾಗಲಿಲ್ಲ. ಆ ವಿಷಯ ಅವತ್ತಿನ ಮಟ್ಟಿಗೆ ನಮಗೆ ಜೈಲಿನಲ್ಲಿ ಖುಷಿಯಾಗಿ ಚರ್ಚಿಸುವ ವಿಷಯವಾಯಿತು.
ಜೈಲಿನಲ್ಲಿ ನನ್ನ ಮನಸ್ಥಿತಿ
     ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು ನನ್ನ ನೌಕರಿಯ ಸ್ಥಿತಿ ಅತಂತ್ರವಾಗಿದ್ದಾಗ ಜೈಲಿನಲ್ಲಿ ನನ್ನ ಮನಸ್ಥಿತಿ ಹೇಗಿದ್ದಿರಬಹುದು! ನಿವೃತ್ತಿಯ ಅಂಚಿನಲ್ಲಿದ್ದ ತಂದೆ, ಅಮ್ಮ, ಮದುವೆಯಾಗಬೇಕಿದ್ದ ತಂಗಿ, ಇನ್ನೂ ಓದುತ್ತಿದ್ದ ಮೂವರು ತಮ್ಮಂದಿರು ಇವರ ಬಗ್ಗೆ ಯೋಚಿಸುವಾಗ ಮನಸ್ಸು ಕ್ಷೋಭೆಗೊಳ್ಳುತ್ತಿತ್ತು. ನೀರಿನಲ್ಲಿ ಮುಳುಗಿದಂತಾಗಿ ಈಜು ಬಾರದಿದ್ದರೂ ಕೈಕಾಲು ಬಡಿಯಲೇಬೇಕಿತ್ತು. ಅಂತರ್ಮುಖಿಯಾಗಿ ಗಂಟೆಗಟ್ಟಲೆ ಸುಮ್ಮನೆ ಒಂದೆಡೆ ಕುಳಿತು ಚಿಂತಿಸುತ್ತಿದ್ದೆ. ನೌಕರಿ ಹೋದರೆ ಬದಲಿ ಏನು ಮಾಡಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆ. ಬಾಳೆಹಣ್ಣು ಮಾರುವುದು, ಕಾಫಿಪುಡಿ ಅಂಗಡಿ ಇಡುವುದು, ಟ್ಯೂಶನ್ ಮಾಡುವುದು, ಇತ್ಯಾದಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೆ. ಏನು ಮಾಡಬೇಕೆಂದು ಸ್ಪಷ್ಟಗೊಳ್ಳದೆ ಗೊಂದಲಮಯವಾಗುತ್ತಿತ್ತು. ಜೊತೆಜೊತೆಗೆ ನನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡಿಗೆ ಮನಸ್ಸು ತಹತಹಿಸುತ್ತಿತ್ತು. ನನಗೆ ವಿನಾಕಾರಣ ತೊಂದರೆ ಕೊಟ್ಟ 12 ಜನರ ಮುಖಗಳು ಮನಃಪಟಲದ ಎದುರಿಗೆ ಬಂದು ಗಹಗಹಿಸಿ ನಗುತ್ತಿರುವಂತೆ ತೋರುತ್ತಿತ್ತು. ಅವರನ್ನು ಕೊಲ್ಲಬೇಕು ಎಂದುಕೊಳ್ಳುತ್ತಿದ್ದೆ. ಯಾರನ್ನು ಹೇಗೆ ಕೊಲ್ಲಬೇಕು ಎಂದು ಮನಸ್ಸು ಲೆಕ್ಕ ಹಾಕುತ್ತಿತ್ತು. ಹಾಗೆ ಮಾಡಿದರೆ ನನ್ನ ಮನೆಯವರಿಗೆ ತೊಂದರೆಯಾಗುತ್ತದೆ ಎಂದೂ ನನ್ನ ಒಳಮನಸ್ಸು ಎಚ್ಚರಿಕೆ ಕೊಡುತ್ತಿತ್ತು. ಇದಕ್ಕೆ ಪರಿಹಾರವಾಗಿ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಒಂದೆರಡು ವರ್ಷಗಳು, ಕಣ್ಮರೆಯಾಗಿ ಹೋಗಿಬಿಡುವುದು, ಪೋಲಿಸರು, ಅಷ್ಟೇ ಏಕೆ, ಮನೆಯವರೂ ಸಹ ನನ್ನನ್ನು ಮರೆತುಬಿಡಬೇಕು, ಅಲ್ಲಿಯವರೆಗೆ ಪರಿಚಯದವರು, ಸ್ನೇಹಿತರು, ಯಾರ ಕಣ್ಣಿಗೂ ಕಾಣಿಸಿಕೊಳ್ಳಬಾರದು; ನಂತರದಲ್ಲಿ ವೇಷ ಮರೆಸಿಕೊಂಡು ಬಂದು ಒಬ್ಬೊಬ್ಬರನ್ನೂ ನಾನು ಅಂದುಕೊಂಡಿದ್ದ ರೀತಿಯಲ್ಲಿ ಕೊಂದುಬಿಡಬೇಕು ಎಂದೆಲ್ಲಾ ನನ್ನ ದಗ್ಧ ಮನಸ್ಸು ಯೋಚಿಸುತ್ತಿತ್ತು.
ನಾನೇಕೆ ಉಗ್ರಗಾಮಿಯಾಗಲಿಲ್ಲ?
     ಜೈಲಿನ ಒಳಗಡೆ ತುರ್ತು ಪರಿಸ್ಥಿತಿ ವಿರುದ್ಧ ಹೇಗೆ ಹೋರಾಡಬೇಕು ಎಂಬ ಚರ್ಚೆ ನಡೆಯುತ್ತಿದ್ದಾಗ ಎರಡು ಬಣಗಳಾಗುತ್ತಿದ್ದವು. ಅಹಿಂಸಾತ್ಮಕವಾಗಿ ಹೋರಾಡಬೇಕು ಎಂದು ಹೆಚ್ಚಿನವರು ಅಭಿಪ್ರಾಯಪಡುತ್ತಿದ್ದರು. ಹಿಂಸಾತ್ಮಕ ಹೋರಾಟವೇ ಪರಿಹಾರ ಎಂಬ ಬಣದಲ್ಲಿ ನಾನಿರುತ್ತಿದ್ದೆ ಮತ್ತು ಅದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದೆ. ಉದ್ವೇಗದಿಂದ ವಾದಿಸುವಾಗ ನಾನು ನಾನಾಗಿರುತ್ತಿರಲಿಲ್ಲ. ಶಾಂತನಾದಾಗ ಅಹಿಂಸಾತ್ಮಕ ಹೋರಾಟವೇ ಉತ್ತಮವೆಂದು ಅನ್ನಿಸುತ್ತಿದ್ದರೂ ನನಗಾದ ಕಟು ಅನುಭವಗಳು ನನ್ನನ್ನು ಹಿಂಸಾತ್ಮಕ ಹೋರಾಟಕ್ಕೆ ಪ್ರೇರಿಸುತ್ತಿದ್ದವು. ಒಂದು ವೇಳೆ:
1. ನನ್ನ ವಿರುದ್ಧ ಹಾಕಲಾಗಿದ್ದ ಹಲವು ಕ್ರಿಮಿನಲ್ ಮೊಕದ್ದಮೆಗಳ ಪೈಕಿ ಯಾವುದಾದರೂ ಒಂದರಲ್ಲಿ ಆರೋಪ ರುಜುವಾತಾಗಿ ನನಗೆ ಶಿಕ್ಷೆಯಾಗಿದ್ದರೆ,
2. ನನ್ನ ನೌಕರಿ ಹೋಗಿದ್ದರೆ,
3. ನನ್ನ ಕುಟುಂಬದ ಸದಸ್ಯರುಗಳಿಗೆ ನನ್ನ ಕಾರಣದಿಂದ ತೊಂದರೆಯಾಗಿದ್ದರೆ,
4. ತುರ್ತು ಪರಿಸ್ಥಿತಿ ಅನಿರ್ದಿಷ್ಟ ಕಾಲ ಮುಂದುವರೆದಿದ್ದರೆ,
5. ವಿನಾಕಾರಣ ಕಿರುಕುಳಗಳು ಮುಂದುವರೆದಿದ್ದರೆ,
6. ಮೀಸಾ ಕಾಯದೆಯಂತೆ ವಿನಾಕಾರಣ ನನ್ನನ್ನು ಬಂಧನದಲ್ಲಿಟ್ಟಿದ್ದರೆ,
ನಾನೊಬ್ಬ ಸಮಾಜಘಾತಕ ವ್ಯಕ್ತಿಯಾಗುತ್ತಿದ್ದ್ದುದರಲ್ಲಿ ಅನುಮಾನವಿರಲಿಲ್ಲ. ಮೇಲೆ ತಿಳಿಸಿದ ಕಾರಣಗಳ ಪೈಕಿ ಯಾವುದಾದರೂ ಒಂದು ಕಾರಣ ನಾನು ಹಿಂಸಾತ್ಮಕ ಹೋರಾಟದಲ್ಲಿ ವಿಶ್ವಾಸವಿಡುವ ಉಗ್ರಗಾಮಿಯಾಗಲು ಸಾಕಾಗಿತ್ತು.
ನಾನು ಉಗ್ರಗಾಮಿಯಾಗದೇ ಇರುವುದಕ್ಕೆ ಸಹ ಕಾರಣಗಳಿದ್ದವು:
1. ನನ್ನ ಮನೆಯ ವಾತಾವರಣ, ನನಗಿದ್ದ ಸದ್ವಿಚಾರವುಳ್ಳ ಸ್ನೇಹಿತರು, ಬಂಧುಗಳು,
2. ಕೆಲವು ಮೊಕದ್ದಮೆಗಳು ನನ್ನ ಪರವಾಗಿ ಇತ್ಯರ್ಥಗೊಂಡರೆ ಉಳಿದ ಪ್ರಕರಣಗಳನ್ನು ತುರ್ತು ಪರಿಸ್ಥಿತಿ ಹೋದ ನಂತರದಲ್ಲಿ ಸರ್ಕಾರ ವಾಪಸು ಪಡೆದಿದ್ದು,
3. ನನ್ನ ನೌಕರಿ ಹೋಗದಿದ್ದುದು,
4. 1977ರಲ್ಲಿ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದದ್ದು,
5. ಎಸ್.ಪಿ.ಯವರು ನನ್ನನ್ನು ಮೀಸಾ ಕಾಯದೆಯನ್ವಯ ಬಂಧಿಸಿಡಲು ಶಿಫಾರಸು ಮಾಡಿದ್ದರೂ ಹೊಸದಾಗಿ ಬಂದಿದ್ದ ಜಿಲ್ಲಾಧಿಕಾರಿಯವರು ನನ್ನನ್ನು ಮೀಸಾ ಕಾಯದೆಯಲ್ಲಿ ಬಂಧಿಸಲು ಅನುಮತಿ ಕೊಡದಿದ್ದುದು,
6. ಆರೆಸ್ಸೆಸ್ಸಿನ ವಿಚಾರಗಳು ಮತ್ತು ಅಲ್ಲಿನ ಹಿರಿಯರ ನಡವಳಿಕೆಗಳಿಂದ ಪ್ರಭಾವಿತನಾದದ್ದು; ದೇಶಹಿತಕ್ಕೆ ಸ್ವಂತದ ಕಷ್ಟನಷ್ಟಗಳು ಮಾರಕವಾಗಬಾರದೆಂಬ ಅವರ ವಾದ ಮತ್ತು ಅಹಿಂಸಾಮಾರ್ಗವನ್ನು ಅವರು ಸಮರ್ಥಿಸುತ್ತಿದ್ದ ರೀತಿ; ಹೆಚ್ಚಾಗಿ ನಾನು ನಂಬಿದ ಧ್ಯೇಯ ಮತ್ತು ಮಾರ್ಗಗಳನ್ನು ಅವರು ಪ್ರೊತ್ಸಾಹಿಸಿದ್ದು,
7. ಹಿಂಸಾ ಮಾರ್ಗ ಹಿಡಿದಲ್ಲಿ ನನ್ನ ಕುಟುಂಬದವರಿಗೆ ತೊಂದರೆಯಾಗಬಹುದು ಎಂಬ ಅನಿಸಿಕೆ,
8. ನನ್ನನ್ನು ಕುಟುಂಬದವರು, ಸ್ನೇಹಿತರು ಮತ್ತು ಸುತ್ತಲಿನ ಸಮಾಜ ದೂರೀಕರಿಸಬಹುದೆಂಬ ಅನಿಸಿಕೆ,
9. ದೀರ್ಘ ಕಾಲದಲ್ಲಿ ಅದರಿಂದ ಸಮಾಜಕ್ಕೆ ಆಗುವ ಉಪಯೋಗದ ಬಗ್ಗೆ ಅನುಮಾನ ಹಾಗೂ ಸ್ವಂತಕ್ಕೆ ಆಗಬಹುದಾದ ನಷ್ಟ ಮತ್ತು ನಾನು ಜೀವ ಕಳೆದುಕೊಳ್ಳಬೇಕಾಗಿ ಬರುವ ಸಂಭಾವ್ಯತೆ,
10. ಅಂತಃಸಾಕ್ಷಿ.
ಹೀಗೆ ಹಲವಾರು ಸಂಗತಿಗಳು ನಾನು ದಾರಿ ತಪ್ಪದಿರಲು ನೆರವಾದವು. ಈಗ ಆ ಕುರಿತು ನೆನಪಾದಾಗಲೆಲ್ಲಾ 'ದೇವರು ದೊಡ್ಡವನು' ಎಂದುಕೊಳ್ಳುತ್ತಿರುತ್ತೇನೆ.
(ಕಾಲಘಟ್ಟ:1976) ..ಮುಂದುವರೆಯುವುದು.

ಗುರುವಾರ, ಆಗಸ್ಟ್ 12, 2010

ಮೂಢ ಉವಾಚ -16

ಕೋಪವೆಂಬುದು ಕೇಳು ವಂಶದಾ ಬಳುವಳಿಯು
ಸಜ್ಜನರ ಸಹವಾಸ ಪರಿಹಾರದಮೃತವು|
ಕೋಪದ ತಾಪದಿಂ ಪಡದಿರಲು ಪರಿತಾಪ
ಶಾಂತಚಿತ್ತದಲಿ ಅಡಿಯನಿಡು ಮೂಢ||


ದೇಹದೌರ್ಬಲ್ಯವದು ಸಿಡಿಮಿಡಿಗೆ ಕಾರಣವು
ಅಸಹಾಯಕತೆ ತಾ ಕೋಪಾಗ್ನಿಗದು ಘೃತವು|
ದೇಹಧಾರ್ಢ್ಯವನು ಕಾಪಿಟ್ಟು ಧೃಢಚಿತ್ತದಲಿ
ಮುನ್ನಡೆದು ವ್ಯಗ್ರತೆಯ ನಿಗ್ರಹಿಸು ಮೂಢ||


ಕೀಳರಿಮೆಯದು ತಾ ಸಿಟ್ಟಿಗದು ಹೇತುವು
ಅಭಿಮಾನಕಾಘಾತ ಕಿಚ್ಚಿಗದು ಕಾರಣವು|
ಬಲಶಾಲಿಗಳೊಡನಾಡಿ ಧೀಶಕ್ತಿ ನೀಗಳಿಸು
ಛಲದಿಂದ ಬಲಗಳಿಸಿ ಮೇಲೇರು ಮೂಢ||


ರಾಷ್ಟ್ರ ರಾಷ್ಟ್ರದ ನಡುವೆ ರಾಜ್ಯ ರಾಜ್ಯದ ನಡುವೆ
ಗ್ರಾಮ ಗ್ರಾಮದ ನಡುವೆ ಜಾತಿ ಜಾತಿಯ ನಡುವೆ|
ಮನುಜ ಮನುಜರನಡುವೆ ಧಗಧಗಿಸುವ ದ್ವೇಷದ
ಮೂಲ ಕ್ರೋಧಾಗ್ನಿಯಲ್ಲದೆ ಮತ್ತೇನು ಮೂಢ||
***************
-ಕವಿನಾಗರಾಜ್.

ಮಂಗಳವಾರ, ಆಗಸ್ಟ್ 10, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!


ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?


ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!


ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?


ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!


ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಸೇವಾ ಪುರಾಣ -೧೩: ಸರಳುಗಳ ಹಿಂದಿನ ಲೋಕ -೬: ಹೀಗೊಂದು ಸತ್ಯಾಗ್ರಹ

ಸ್ವಾರಸ್ಯಕರ ಘಟನೆಗಳು
     ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ದೇಶಾದ್ಯಂತ ಕಾವೇರತೊಡಗಿ ಹಾಸನ ಜಿಲ್ಲೆಯಲ್ಲಿಯೂ ಪ್ರ್ರತಿಭಟನೆ ನಡೆಸಿ ಜೈಲು ಸೇರಿದವರಿಗೆ ಕಡಿಮೆಯಿರಲಿಲ್ಲ.ಹೆಚ್ಚಿನ ಸತ್ಯಾಗ್ರಹಿಗಳು ಆರೆಸ್ಸೆಸ್ ನವರಾಗಿದ್ದರು. ನಂತರದವರು ಜನಸಂಘದವರು. ಇತರ ವಿರೋಧ ಪಕ್ಷಗಳವರು ಪ್ರತಿಭಟನೆಯಲ್ಲಿ ಪಾಲ್ಗೊಂಡರೂ ಸಂಖ್ಯಾತ್ಮಕವಾಗಿ ಸಾಂಕೇತಿಕವಾಗಿತ್ತು ಎಂದೇ ಹೇಳಬಹುದು. ಆದರೆ ಪ್ರಚಾರ ಪಡೆದುಕೊಂಡವರಲ್ಲಿ ಅವರೇ ಮೊದಲಿಗರು. ಹಾಸನದಲ್ಲಂತೂ ಬೇರೆ ವಿರೋಧಪಕ್ಷಗಳವರು ಯಾರೂ ಇರಲಿಲ್ಲ. ಶ್ರೀ ದೇವೇಗೌಡರನ್ನು ಬೆಂಗಳೂರಿನಲ್ಲಿ ಸರ್ಕಾರವೇ ಬಂಧಿಸಿಟ್ಟಿತ್ತು. ಅವರು ಚಳುವಳಿ ಮಾಡಿ ಬಂಧಿತರಾಗಿದ್ದ ಬಗ್ಗೆ ನೆನಪು ನನಗಿಲ್ಲ. ಸತ್ಯಾಗ್ರಹ ಮಾಡುವವರು ಮೊದಲೇ ಇಂತಹ ಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆಂದು ಜನರಿಗೆ ಕರಪತ್ರಗಳ ಮೂಲಕ ತಿಳಿಸಿ ಪ್ರತಿಭಟಿಸಿ ಬಂಧನಕ್ಕೊಳಗಾಗುತ್ತಿದ್ದರು. ಸತ್ಯಾಗ್ರಹ ತಪ್ಪಿಸಲು ಪೋಲಿಸರು ಮೊದಲೇ ಕೆಲವರನ್ನು ಬಂಧಿಸಿದರೂ ಬೇರೆಯವರು ಅಲ್ಲಿ ಸತ್ಯಾಗ್ರಹ ನಡೆಸುತ್ತಿದ್ದರು. ಕೆಲವೊಮ್ಮೆ ಪೋಲಿಸರನ್ನು ದಾರಿ ತಪ್ಪಿಸುವ ಸಲುವಾಗಿ ಬೇರೆ ಜನನಿಬಿಡ ಸ್ಥಳಗಳಲ್ಲಿ -ಅಂದರೆ, ಬಸ್ ನಿಲ್ದಾಣ, ಸಂತೆ,ಇತ್ಯಾದಿ- ಸತ್ಯಾಗ್ರಹ ನಡೆಸುತ್ತಿದ್ದರು. ಆಗ ಪೋಲಿಸರ ಪರದಾಟ ನೋಡಬೇಕಿತ್ತು. ಏನೇ ಆಗಲಿ ಚಳುವಳಿಗಳನ್ನು ಕಠಿಣವಾಗಿ ಹತ್ತಿಕ್ಕಲೇ ಬೇಕೆಂದು ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಕಟ್ಟಪ್ಪಣೆ ಮಾಡಿದ್ದವು. ಅನೇಕ ಸ್ವಾರಸ್ಯಕರ ಘಟನೆಗಳು ಚಳುವಳಿ ಕಾಲದಲ್ಲಿ ನಡೆಯುತ್ತಿದ್ದು ಹೋರಾಟಕ್ಕೆ ಜನಬೆಂಬಲ ಸಿಗತೊಡಗಿತ್ತು.
ಹೀಗೊಂದು ಸತ್ಯಾಗ್ರಹ
     ಸಕಲೇಶಪುರದ ದೇವಾಲದಕೆರೆ ಲೋಕೇಶಗೌಡರು ತಮ್ಮ ಹತ್ತು ಜನರ ತಂಡದೊಂದಿಗೆ ಹಾಸನದ ನರಸಿಂಹರಾಜ ವೃತ್ತದಲ್ಲಿ ತುರ್ತು ಪರಿಸ್ಥಿತಿ ಪ್ರತಿಭಟಿಸಿ ಸತ್ಯಾಗ್ರಹ ಮಾಡಲಿರುವ ಬಗ್ಗೆ ಮೂರು ದಿನಗಳ ಮೊದಲೇ ಪ್ರಚುರಪಡಿಸಿದ್ದರು. ಪೋಲಿಸರು ಪೂರ್ವಭಾವಿಯಾಗಿ ಬಂಧಿಸಲು ನೋಡಿದರೆ ಎಲ್ಲರೂ ತಲೆ ಮರೆಸಿಕೊಂಡಿದ್ದರು. ಪೋಲಿಸರು ಶತಾಯ ಗತಾಯ ಪ್ರತಿಭಟನೆ ನಡೆಯದಿರುವಂತೆ ನೋಡಿಕೊಳ್ಳಲು ಸಂಕಲ್ಪ ಮಾಡಿದ್ದಂತೆ ಅಂದು ರಸ್ತೆಯಲ್ಲಿ ಸಂಚಾರವನ್ನೇ ನಿರ್ಬಂಧಿಸಿಬಿಟ್ಟಿದ್ದರು. ಯಾರಾದರೂ ಆ ರಸ್ತೆಯಲ್ಲಿ ಕಾರಣವಿಲ್ಲದೆ ನಿಲ್ಲುವಂತೆಯೇ ಇರಲಿಲ್ಲ. ಬರುವ ವಾಹನಗಳನ್ನೆಲ್ಲಾ ಹಿಂದಿನ ಮತ್ತು ಮುಂದಿನ ರಸ್ತೆಗಳಲ್ಲಿ ತಡೆದು ಪರಿಶೀಲಿಸಿ ಬೇರೆ ರಸ್ತೆಗಳಲ್ಲಿ ಹೋಗುವಂತೆ ನಿರ್ದೇಶಿಸುತ್ತಿದ್ದರು. ಅನುಮಾನ ಬಂದವರನ್ನು ಹಿಡಿದಿರಿಸಿಕೊಳ್ಳುತ್ತಿದ್ದರು. ಆ ಸಮಯಕ್ಕೆ ಒಂದು ಮೆಟಡಾರ್ ಅಲ್ಲಿಗೆ ಬಂತು. ಅಪಾಯಸ್ಥಿತಿಯಲ್ಲಿ ಗಾಯಗೊಂಡು ಮೈಯೆಲ್ಲಾ ಬ್ಯಾಂಡೇಜು ಹಾಕಿದ್ದರೂ ರಕ್ತ ಒಸರುತ್ತಿದ್ದ ಗಾಯಾಳುವನ್ನು ಬಂಧುಗಳು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದುದನ್ನು ನೋಡಿದ ಪೋಲಿಸರು ಮಾನವೀಯತೆ ತೋರಿಸಿ ಆ ರಸ್ತೆಯಲ್ಲೇ ಹೋಗಲು ಬಿಟ್ಟರು. ದುರದೃಷ್ಟಕ್ಕೆ ಆ ವ್ಯಾನು ಸರ್ಕಲ್ಲಿನಲ್ಲೇ ಕೆಟ್ಟು ನಿಂತುಬಿಟ್ಟಿತು. ಅದನ್ನು ಪಕ್ಕಕ್ಕೆ ನಿಲ್ಲಿಸಲು ಬಂಧುಗಳು ಇಳಿದಾಗ ಪೋಲಿಸರೂ ತಳ್ಳಿ ಸಹಕರಿಸಿದರು. ಬೇರೆ ವಾಹನ ತರುವುದಾಗಿ ಹೇಳಿ ನಾಲ್ವರು ನಾಲ್ಕು ರಸ್ತೆಗಳಲ್ಲಿ ಹೊರಟು ಅಲ್ಲಿ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ಪೋಲಿಸರು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ ಗಾಯಾಳು ಒಂದು ಕೈಯಲ್ಲಿ ಕೇಸರಿ ದ್ವಜ ಮತ್ತು ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ವ್ಯಾನಿನಿಂದ ಕೆಳಗೆ ಧುಮುಕಿ 'ಭಾರತಮಾತಾ ಕಿ ಜಯ್', 'ವಂದೇ ಮಾತರಂ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ', ಇತ್ಯಾದಿ ಘೋಷಣೆಗಳನ್ನು ಹಾಕತೊಡಗಿದ. ಉಳಿದವರೂ ಧ್ವನಿಗೂಡಿಸಿದರು. ಕರಪತ್ರಗಳನ್ನು ತೂರಾಡಿದರು. ಅದು ಮೈಗೆಲ್ಲಾ ಬ್ಯಾಂಡೇಜು ಹಾಕಿಕೊಂಡು ಕೆಂಪು ಇಂಕು ಸುರಿದುಕೊಂಡು ಪೋಲಿಸರನ್ನು ಏಮಾರಿಸಿದ ಲೋಕೇಶಗೌಡ ಮತ್ತು ಅವರ ತಂಡದವರು ನಡೆಸಿದ ಸತ್ಯಾಗ್ರಹದ ಪರಿಯಾಗಿತ್ತು.
     ಇಂತಹುದೇ ಚಳುವಳಿಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿತ್ತು. ನಿಜವಾದ ಶವದಂತೇ ಸಿಂಗರಿಸಿದ್ದ ಗೊಂಬೆಯ ಒಳಗೆ ಪಟಾಕಿಗಳನ್ನು ತುಂಬಿ ಶವಮೆರವಣಿಗೆಯಂತೆ ಯಾರಿಗೂ ಅನುಮಾನ ಬರದಂತೆ ಹೊತ್ತೊಯ್ದು ರಸ್ತೆಯ ಮಧ್ಯಭಾಗದಲ್ಲಿಟ್ಟು ಪಟಾಕಿಗೆ ಬೆಂಕಿ ಹಚ್ಚಿಬಿಡುತ್ತಿದ್ದರು. ಘೋಷಣೆಗಳನ್ನು ಹಾಕಿ ಕರಪತ್ರಗಳನ್ನು ಹಂಚುತ್ತಿದ್ದರು. ವಿಪರ್ಯಾಸವೆಂದರೆ ಜನ ಕರಪತ್ರಗಳನ್ನು ಬಹಿರಂಗವಾಗಿ ಓದಲು ಹೆದರುತ್ತಿದ್ದರು. ಕದ್ದುಮುಚ್ಚಿ ಓದುತ್ತಿದ್ದರು. ಸತ್ಯಾಗ್ರಹಗಳು ಹೆಚ್ಚಾದಂತೆ ಜೈಲುಗಳು ತುಂಬಿ ತುಳುಕಲಾರಂಭಿಸಿದವು. ಹೆಚ್ಚಾದವರನ್ನು ಬಳ್ಳಾರಿ, ಮೈಸೂರು, ಬೆಳಗಾಂ ಜೈಲುಗಳಿಗೆ ಕಳಿಸುತ್ತಿದ್ದರು. ಅಲ್ಲೂ ಸ್ಥಳವಿಲ್ಲದೆ ಕಳಿಸಬಾರದೆಂದು ಅಲ್ಲಿಂದ ಸೂಚನೆಗಳು ಬರಹತ್ತಿದವು. ಹೀಗಾಗಿ ಚಳುವಳಿ ಮಾಡಿದವರನ್ನು ಒಂದು ದಿನ ಠಾಣೆಯಲ್ಲಿರಿಸಿಕೊಂಡು ಹೊಡೆದು, ಬಡಿದು, ಎಚ್ಚರಿಕೆ ಕೊಟ್ಟು ಬಿಟ್ಟುಕಳಿಸುತ್ತಿದ್ದರು. ಹೇಗೂ ಬಿಟ್ಟುಬಿಡುತ್ತಾರೆಂದು ಸತ್ಯಾಗ್ರಹದಲ್ಲಿ ಭಾಗವಹಿಸಿದವರನ್ನು ಬಂಧಿಸಿ ಜೈಲಿಗೆ ತಂದು ಬಿಟ್ಟ ಸಂದರ್ಭಗಳಲ್ಲಿ ಅವರ ಗೋಳು ಕಂಡು ನಮಗೆ ನಗು ಬರುತ್ತಿತ್ತು.
ಜೈಲಿನಲ್ಲಿ ತಿಥಿ ಊಟ!
     ಜೈಲಿನಲ್ಲಿ ರಾಜಕೀಯ ಬಂದಿಗಳ ಸಂಖ್ಯೆ ಜಾಸ್ತಿಯಾದಂತೆ ಜೈಲು ಸಿಬ್ಬಂದಿಗೆ ಕೆಲಸ ಕಷ್ಟವಾಯಿತು. ಜೈಲಿನ ಒಳಗಡೆ ಸ್ಥಳಾವಕಾಶ ಬೇರೆ ಕಡಿಮೆಯಿತ್ತು. ಹೀಗಾಗಿ ರಾತ್ರಿ ಹೊತ್ತು ಮಾತ್ರ ನಮ್ಮ ಬ್ಯಾರಕ್ ಗೆ ಬೀಗ ಹಾಕುತ್ತಿದ್ದರು. ಜೈಲಿನ ಒಳ ಆವರಣದಲ್ಲಿ ಹಗಲಿನಲ್ಲಿ ನಾವು ಆರಾಮವಾಗಿ ಓಡಾಡಿಕೊಂಡಿದ್ದೆವು. ಎಲ್ಲರಲ್ಲೂ ಒಳಗೆ ಹುದುಗಿದ್ದ ಪ್ರತಿಭೆ -ಅಂದರೆ ಹಾಡು ಹೇಳುವುದು, ಕಥೆ ಹೇಳುವುದು, ಮಿಮಿಕ್ರಿ ಮಾಡುವುದು, ಚರ್ಚೆ ಮಾಡುವುದು, ಇತ್ಯಾದಿ- ಹೊರಬರಲು ಜೈಲು ಅವಕಾಶ ಮಾಡಿಕೊಟ್ಟಿತು. ಇಲ್ಲದಿದ್ದರೆ ಸಮಯ ಕಳೆಯಬೇಕಲ್ಲಾ! ಯಾವುದೂ ಬೇಕಿಲ್ಲದೆ ಒಂದೆಡೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲೂ ಸಮಯವಿತ್ತು. ಒಮ್ಮೆ ಇಂದಿರಮ್ಮನ ತಿಥಿ ಊಟ ಮಾಡಬೇಕನ್ನಿಸಿ ಜೈಲರರನ್ನು ಕೋರಿಕೊಂಡು ನಿತ್ಯ ಕೊಡುವ ಆಹಾರ ಸಾಮಗ್ರಿಗಳ ಬದಲಿಗೆ ಬೇರೆ ಸಾಮಗ್ರಿ ತರಿಸಿಕೊಂಡು ವಡೆ, ಪಾಯಸ ಮಾಡಿದ್ದೆವು. ಜೈಲರರೂ ಮತ್ತು ಜೈಲು ಸಿಬ್ಬಂದಿ ಸಹ ನಮ್ಮೊಡನೆ ಊಟ ಮಾಡಿದರು. ಆಗ ಆವರಣದಲ್ಲಿದ್ದ ಒಣ ತೆಂಗಿನಗರಿಗಳು, ಒಣಗಿದ ಎಲೆ, ಪುಳ್ಳೆಗಳನ್ನು ಸೇರಿಸಿ ಬೆಂಕಿ ಹಾಕಿ ಸುತ್ತಲೂ ಕುಣಿದಿದ್ದೆವು. ಆಗ ಬಂದಿಗಳೆಲ್ಲಾ ಬಾಯಿ ಬಾಯಿ ಬಡಿದುಕೊಂಡು 'ಸತ್ತಳಪ್ಪ ಸತ್ತಳೋ, ಇಂದಿರವ್ವ ಸತ್ತಳೋ', 'ಅಯ್ಯಯ್ಯೋ ಸತ್ತಳೋ' ಎಂದು ಗಟ್ಟಿಯಾಗಿ ಅಳುತ್ತಿದ್ದಂತೆ ಮಾಡುತ್ತಿದ್ದ ದೃಷ್ಯ ಮರೆಯಲಾಗಿಲ್ಲ.ಇನ್ನೊಂದು ಬ್ಯಾರಕ್ಕಿನಲ್ಲಿದ್ದ ಇತರೆ ಕೈದಿಗಳೂ ಸಹ ಒಳಗಿನಿಂದಲೇ ನಮ್ಮೊಡನೆ ಬಾಯಿ ಬಡಿದುಕೊಂಡು ಬೆಂಬಲ ಕೊಟ್ಟಿದ್ದರು. ಇಂದಿರಾಗಾಂಧಿಯವರ ಅಭಿಮಾನಿಗಳಿಗೆ ಈ ಘಟನೆ ಇಷ್ಟವಾಗದಿರಬಹುದು. ಆಕೆ ಒಬ್ಬ ದಕ್ಷ ಆಡಳಿತಗಾರ್ತಿಯಾಗಿದ್ದಿರಬಹುದು. ಆದರೆ ಅಧಿಕಾರದಲ್ಲಿ ಏನನ್ನೂ ಮಾಡಲು ಹೇಸದಿದ್ದ ಆಕೆಯ ವರ್ತನೆಯ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಅರ್ಥವಿತ್ತು ಎಂಬುದು ನನ್ನ ಭಾವನೆ. ಅಲ್ಲದೆ ನಾನು ನಡೆದಿದ್ದ ಘಟನೆಯ ನಿರೂಪಣೆ ಮಾಡುತ್ತಿದ್ದೇನಷ್ಟೆ. 1975ರ ಆಸುಪಾಸಿನಲ್ಲಿ ಜನಿಸಿದವರಿಗೆ ತುರ್ತು ಪರಿಸ್ಥಿತಿಯ ಕರಾಳತೆಯ ಅರಿವಿಲ್ಲದಿರಬಹುದು. ಇಂದಿರಾಗಾಂಧಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ರುಜುವಾತಾಗಿ ಆಕೆ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅಲಹಾಬಾದ್ ಉಚ್ಛನ್ಯಾಯಾಲಯದ ಆದೇಶದ ನಂತರದಲ್ಲಿ ಆಕೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು.ಹಲವಾರು ಸಂಘ ಸಂಸ್ಥೆಗಳನ್ನು ನಿಷೇಧಿಸಿದರು. ಅಧಿಕಾರದಲ್ಲಿ ಮುಂದುವರೆಯಲು ಲೋಕಸಭೆಯ ಅವಧಿಯನ್ನೇ 5 ವರ್ಷಗಳಿಂದ 7ವರ್ಷಗಳಿಗೆ ವಿಸ್ತರಿಸಲಾಯಿತು. ಪತ್ರಿಕಾ ಸೆನ್ಸಾರ್ ಜಾರಿಗೆ ಬಂತು. ದೇಶದ ಹೆಚ್ಚಿನ ಪತ್ರಿಕೆಗಳು ಸಂಪಾದಕೀಯದ ಭಾಗವನ್ನು ಖಾಲಿ ಬಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದವು. ಕಾಂಗ್ರೆಸ್ ವಿರೋಧಿ ಸುದ್ದಿಗಳು ಬರಲು ಅವಕಾಶವೇ ಇರಲಿಲ್ಲ. ಸರ್ಕಾರಿ ಮಾಧ್ಯಮಗಳು, ಆಕಾಶವಾಣಿ ಕಾಂಗ್ರಸ್ ತುತ್ತೂರಿಗಳಾಗಿದ್ದವು. ರಾತ್ರೋರಾತ್ರಿ ನೂರಾರು ವಿರೋಧ ಪಕ್ಷಗಳ ನಾಯಕರುಗಳನ್ನು, ಸಂಘ, ಸಂಸ್ಥೆಗಳ- ವಿಶೇಷವಾಗಿ ಆರೆಸ್ಸೆಸ್ಸಿನ- ಕಾರ್ಯಕರ್ತರನ್ನು ಬಂಧಿಸಲಾಯಿತು. ಬಂಧನ ಕಾರ್ಯ ನಿರಂತರವಾಗಿತ್ತು. ಕಾಂಗ್ರೆಸ್ ವಿರುದ್ಧ ಯಾರೂ ಸೊಲ್ಲೆತ್ತಬಾರದೆಂಬುದು ಉದ್ದೇಶವಾಗಿತ್ತು. ಸಾಮಾನ್ಯ ಜನರೂ ಸಹ ಮುಕ್ತವಾಗಿ ಮಾತನಾಡಲು ಅಂಜುವಂತಹ ವಾತಾವರಣ ನಿರ್ಮಿತವಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿಡಲು ಅವಕಾಶ ಕೊಡುವ ಕರಾಳ 'ಮೀಸಾ' ಕಾಯದೆ ಜಾರಿಗೊಳಿಸಲಾಯಿತು. ಈಗ ಓದುಗರಿಗೆ ಬಂಧಿಗಳ ಆಕ್ರೋಶ ಅರ್ಥವಾಗಿರಬಹುದು.

(ಕಾಲಘಟ್ಟ: 1976) .. ಮುಂದುವರೆಯುವುದು.

ಶನಿವಾರ, ಆಗಸ್ಟ್ 7, 2010

ಸೇವಾಪುರಾಣ -೧೨: ಸರಳುಗಳ ಹಿಂದಿನ ಲೋಕ -೫: ಒಡೆದ ಆಕ್ರೋಶದ ಕಟ್ಟೆ

ಒಡೆದ ಆಕ್ರೋಶದ ಕಟ್ಟೆ
     ನ್ಯಾಯಾಲಯದಲ್ಲಿ ವಿಚಾರಣೆಯಿದ್ದಾಗ ನಮ್ಮನ್ನು ಕಾರಾಗೃಹದಿಂದ ಪೋಲಿಸ್ ವ್ಯಾನಿನಲ್ಲಿ ಭದ್ರತೆಯೊಂದಿಗೆ ಕರೆದೊಯ್ಯಲಾಗುತ್ತಿತ್ತು. ದಾರಿಯುದ್ದಕ್ಕೂ 'ಎಲ್ಲಿಗಪ್ಪ ಎಲ್ಲಿಗೆ? ಇಂದಿರಮ್ಮನ ಜೈಲಿಗೆ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ', ಇತ್ಯಾದಿ ಘೋಷಣೆಗಳನ್ನು ಮಾಡುತ್ತಾ ಹೋಗುತ್ತಿದ್ದೆವು.ಆಗ ಭಾರತ ರಕ್ಷಣಾ ಕಾನೂನು (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು 'ಡಿಫೆನ್ಸ್ ಆಫ್ ಇಂದಿರಾ ರೂಲ್ಸ್' ಎಂತಲೂ ಆಂತರಿಕ ರಕ್ಷಣಾ ನಿರ್ವಹಣಾ ಕಾಯದೆ (ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್)'ಮೀಸಾ' ಅನ್ನು 'ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್' ಎಂತಲೂ ಅಪಹಾಸ್ಯ ಮಾಡಲಾಗುತ್ತಿತ್ತು. ಮೀಸಾ ಪ್ರಕಾರ ಯಾರನ್ನೇ ಆಗಲಿ ಯಾವುದೇ ವಿಚಾರಣೆಯಿಲ್ಲದೆ ಎರಡು ವರ್ಷಗಳವರೆಗೆ ಬಂಧನದಲ್ಲಿಡಲು ಅವಕಾಶವಿತ್ತು. ನೂರಾರು ಜನರನ್ನು ಅದರಂತೆ ಬಂಧಿಸಿಡಲಾಗಿತ್ತು.ಒಮ್ಮೆ ನ್ಯಾಯಾಲಯದ ಕಲಾಪ ಮುಗಿದು ನಮ್ಮನ್ನು ಜೈಲಿಗೆ ಕರೆದುಕೊಂಡು ಹೋಗುವ ವೇಳೆಗೆ ಮಧ್ಯಾಹ್ನ 1-30 ಆಗಿತ್ತು. ನಾವು ಹನ್ನೆರಡು ಜನ ಬಂದಿಗಳಿದ್ದೆವು. ಬರುವಾಗ ಮೂವರು ಪೋಲಿಸರು ನಮ್ಮನ್ನು ಕರೆತಂದಿದ್ದರು. ವಾಪಸು ಹೋಗಲು ನಾವು ವ್ಯಾನು ಹತ್ತಲು ನೋಡಿದರೆ ವ್ಯಾನಿನ ಭರ್ತಿ ಪೋಲಿಸರು ಇದ್ದು ನಮ್ಮನ್ನು ಅವರ ಬೂಟುಗಾಲುಗಳ ಮುಂದೆ ಕೆಳಗೆ ಕುಳಿತುಕೊಳ್ಳಲು ಹೇಳಿದರು. ನಮ್ಮಲ್ಲಿಬ್ಬರು ಆಗಲೇ ವ್ಯಾನು ಹತ್ತಿದ್ದರು. ನಾನು ಅವರ ಕಾಲುಗಳ ಮುಂದೆ ಕುಳಿತುಕೊಳ್ಳುವುದಿಲ್ಲವೆಂದೂ ಸೀಟಿನ ಮೇಲೆ ಕೂರಿಸಿ ಕರೆದೊಯ್ಯುವುದಾದರೆ ಮಾತ್ರ ವ್ಯಾನು ಹತ್ತುತ್ತೇನೆಂದೂ ಇಲ್ಲದಿದ್ದರೆ ಹತ್ತುವುದಿಲ್ಲವೆಂದು ವ್ಯಾನಿನ ಕೆಳಗೆ ನೆಲದ ಮೇಲೆ ಕುಳಿತುಬಿಟ್ಟೆ. ಇಬ್ಬರು ನನ್ನನ್ನು ಅನುಸರಿಸಿ ನನ್ನೊಂದಿಗೆ ನೆಲದ ಮೇಲೆ ಕುಳಿತರು. ಉಳಿದವರು ನಿಂತಿದ್ದರು. ಆಗ ಸಬ್ ಇನ್ಸ್ ಪೆಕ್ಟರ್ ಒಬ್ಬರು ನನ್ನ ರಟ್ಟೆ ಹಿಡಿದು ವ್ಯಾನಿನ ಒಳಗೆ ದಬ್ಬಲು ಹೋದಾಗ ನಾನು ಸಿಟ್ಟು ತಡೆಯದೆ ತಿರುಗಿ ನಿಂತು ಅವರ ಕಪಾಳಕ್ಕೆ ಬಾರಿಸಿಬಿಟ್ಟೆ. ಪೋಲಿಸರಿಂದ ಅದುವರೆಗೆ ಅನುಭವಿಸಿದ ಕಿರುಕುಳದಿಂದ ಬೇಸತ್ತಿದ್ದ ನನ್ನಲ್ಲಿ ಮಡುಗಟ್ಟಿದ್ದ ಆಕ್ರೋಶ ಭುಗಿಲೆದ್ದು ಆಗ ಹೊರಹೊಮ್ಮಿತ್ತು. ನನ್ನ ಜೊತೆಗಿದ್ದವರೂ ಕೂಗಾಡಲು ಪ್ರಾರಂಭಿಸಿದರು. ಊಟದ ಸಮಯವಾಗಿದ್ದು ಹತ್ತಿರದಲ್ಲಿದ್ದ ಜಿಲ್ಲಾಧಿಕಾರಿ ಮತ್ತು ಇತರ ಕಛೇರಿಗಳಿಂದ ಹೊರಬರುತ್ತಿದ್ದ ನೌಕರರು, ವಕೀಲರುಗಳು, ಜನರು ಗುಂಪುಕೂಡಿದರು.ದೊಡ್ಡ ಗುಂಪೇ ಸೇರಿಬಿಟ್ಟಿತು. ನನ್ನ ಸಹೋದ್ಯೋಗಿಗಳಾಗಿದ್ದ ಜಿಲ್ಲಾಧಿಕಾರಿ ಕಛೇರಿ ನೌಕರರು 'ಹೇಗಿದ್ದ ನಾಗರಾಜ ಹೇಗಾಗಿಬಿಟ್ಟ' ಎಂಬಂತೆ ನೋಡುತ್ತಿದ್ದರು. ನನ್ನ ತಂದೆಯವರೂ ದೂರದಿಂದ ನನ್ನನ್ನು ನೋಡುತ್ತಿದ್ದವರು ಹತ್ತಿರ ಬಂದು ಗಾಬರಿಯಿಂದ 'ರಾಜೂ, ರಾಜೂ' ಎನ್ನುತ್ತಿದ್ದರು. ಪೇದೆಯೊಬ್ಬ ಅವರನ್ನು ದೂರ ತಳ್ಳಿದಾಗ ಅವರು ಬೀಳುವಂತಾಗಿದ್ದು ಕಂಡು ನನ್ನ ಹೊಟ್ಟೆಯಲ್ಲಿ ತಳಮಳವಾಯಿತು. ಗಲಾಟೆ ಕೇಳಿ ಅಲ್ಲಿಗೆ ಧಾವಿಸಿದ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ಇನ್ನೊಂದು ವ್ಯಾನು ತರಿಸಿದಾಗಲೇ ನಾವು ಹೊರಡಲನುವಾಗಿದ್ದು. ಆ ಸಂದರ್ಭದಲ್ಲಿ ನಮ್ಮೊಡನೆ ಬಂದಿಯಾಗಿದ್ದ ಆರೆಸ್ಸೆಸ್ ಪ್ರಚಾರಕ ಪ್ರಭಾಕರ ಕೆರೆಕೈರವರು ಒಂದು ಪುಟ್ಟ ಭಾಷಣ ಮಾಡಿ "ನಮ್ಮ ಹೋರಾಟ ತುರ್ತು ಪರಿಸ್ಥಿತಿ ವಿರುದ್ಧವೇ ಹೊರತು ಪೋಲಿಸರ ವಿರುದ್ಧವಲ್ಲ. ಪೋಲಿಸರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು" ಎಂದು ಹೇಳಿದರು ಅವರು 'ಪೋಲಿಸ್, ಸೇನಾ' ಎಂದು ಹೇಳಿದಾಗ ಎಲ್ಲರೂ 'ಭಾಯಿ ಭಾಯಿ' ಎಂದು ಮರುಘೋಷಣೆ ಮಾಡಿದರು. ನನಗೆ ಸಿಟ್ಟು ತಣಿದಿರದೆ ಅವರು ಭಾಯಿ ಭಾಯಿ ಎಂದಾಗಲೆಲ್ಲಾ 'ಧಿಕ್ಕಾರ' ಎಂದು ಅರಚುತ್ತಿದ್ದೆ. ದಾರಿಯುದ್ದಕ್ಕೂ ಉಳಿದವರು ಭಾಯಿ ಭಾಯಿ ಎಂದರೆ ನಾನೊಬ್ಬನೇ ಶಕ್ತಿ ಮೀರಿ 'ಧಿಕ್ಕಾರ' ಎಂದು ಹೇಳುತ್ತಿದ್ದೆ. ನಾನು ಎಷ್ಟು ಜೋರಾಗಿ ಧಿಕ್ಕಾರ ಹೇಳುತ್ತಿದ್ದೆನೆಂದರೆ ಜೈಲು ತಲುಪುವ ವೇಳೆಗೆ ನನ್ನ ಗಂಟಲು ಕಟ್ಟಿಹೋಗಿ ಧ್ವನಿಯೇ ಹೊರಡುತ್ತಿರಲಿಲ್ಲ. ಗಂಟಲಿನಿಂದ ಸ್ವರವೇ ಹೊರಡದಿದ್ದ ನನ್ನನ್ನು ಉಳಿದವರು ಸಮಾಧಾನಿಸುತ್ತಿದ್ದರು.
ಬಿಡುಗಡೆ
     ನಾನೂ ಸೇರಿದಂತೆ 11 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದಿದ್ದ ವಿಷಯ ಹಿಂದೆಯೇ ಹೇಳಿದ್ದೇನೆ. ಈ ಪ್ರಕರಣದಲ್ಲಿ ನಮ್ಮ ವಿರುದ್ಧ 15 ಜನರನ್ನು ಸಾಕ್ಷಿದಾರರೆಂದು ಹೆಸರಿಸಿದ್ದರಾದರೂ 8 ಜನರನ್ನು ಮಾತ್ರ ಸಾಕ್ಷಿ ವಿಚಾರಣೆ ಮಾಡಿಸಿದರು. ಬಹುಶಃ ಉಳಿದ 7 ಜನರ ಬಗ್ಗೆ ಪೋಲಿಸರಿಗೆ ವಿಶ್ವಾಸ ಬರಲಿಲ್ಲವೆಂದು ತೋರುತ್ತದೆ. ನಮ್ಮ ವಿರುದ್ಧ ಹಾಜರು ಪಡಿಸಿದ್ದ ದಾಖಲೆಗಳೆಂದರೆ 1. ಮಹಾತ್ಮ ಗಾಂಧೀಜಿಯವರ ಭಾವಚಿತ್ರ, 2.ಸತ್ತ ಕತ್ತೆಯ ಕಥೆ ಎಂಬ ಕವನ, 3. ಕಹಳೆ ಪತ್ರಿಕೆ, 4. ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಹೊರಡಿಸಿದ್ದ ಕರಪತ್ರ. ವಿಚಾರಣೆ ಸಂದರ್ಭದಲ್ಲಿ ನಮ್ಮ ಬಂಧುಗಳು, ಸ್ನೇಹಿತರು ಏನಾಗುತ್ತದೋ ಎಂಬ ಕುತೂಹಲದಿಂದ ನ್ಯಾಯಾಲಯಕ್ಕೆ ಬರುತ್ತಿದ್ದರು. ನ್ಯಾಯಾಲಯ ಭರ್ತಿಯಾಗಿರುತ್ತಿತ್ತು. ನಮ್ಮ ವಕೀಲರಾದ ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರು ವಾದಿಸುತ್ತಿದ್ದ ರೀತಿ ಮೆಚ್ಚುವಂತಿತ್ತು. ಸಬ್ ಇನ್ಸ್ ಪೆಕ್ಟರರನ್ನು ಪಾಟಿಸವಾಲು ಮಾಡಿದ ಸ್ಯಾಂಪಲ್ ಹೀಗಿತ್ತು:
ವಕೀಲರು: ಸ್ವಾಮಿ, ಸಬ್ಬಿನಿಸ್ಪೆಕ್ಡರೇ, ಹಾಸನದಲ್ಲಿ ಒಟ್ಟು ಎಷ್ಟು ಮನೆಗಳಿರಬಹುದು?
ಸ.ಇ.: ಗೊತ್ತಿಲ್ಲ.
ವ: ಅಂದಾಜು ಹೇಳಿ, ಪರವಾಗಿಲ್ಲ. ಸುಮಾರು 20000 ಮನೆಗಳು ಇರಬಹುದಾ?
ಸ.ಇ.: ಇರಬಹುದು.
ವ: ಆ ಪೈಕಿ ಎಷ್ಟು ಮನೆಗಳಲ್ಲಿ ಗಾಂಧೀಜಿ ಫೋಟೋ ಇರಬಹುದು? ಅಂದಾಜು 2000 ಮನೆಗಳಲ್ಲಿ , ಬೇಡ, 1000 ಮನೆಗಳಲ್ಲಿ ಇರಬಹುದಾ?
ಸ.ಇ.: ಇರಬಹುದು.
ವ: ಹಾಗಾದರೆ ಅವರನ್ನೆಲ್ಲಾ ಏಕೆ ಬಂಧಿಸಲಿಲ್ಲ? ಇವರನ್ನೇಕೆ ಬಂಧಿಸಿದಿರಿ?
ಸ.ಇ.: ಇವರ ಹತ್ತಿರ ಇರುವ ಗಾಂಧೀಜಿ ಫೋಟೋದಲ್ಲಿ ಪ್ರಚೋದನಾತ್ಮಕ ಹೇಳಿಕೆ ಇದೆ.
ವ: ಏನು ಹೇಳಿಕೆ ಇದೆ? ಯಾರು ಹೇಳಿದ್ದು?
ಸ.ಇ.: ಅಸತ್ಯ, ಅನ್ಯಾಯಗಳ ವಿರುದ್ಧ ತಲೆಬಾಗುವುದು ಹೇಡಿತನ ಎಂಬ ಹೇಳಿಕೆ ಇದೆ. ಅದನ್ನು ಗಾಂಧೀಜಿಯೇ ಹೇಳಿದ್ದು.
ವ: ಹಾಗಾದರೆ ಗಾಂಧೀಜಿಯವರೇ ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದರು. ಗಾಂಧೀಜಿಯವರೂ ಅಪರಾಧಿಗಳೇ. ಸರಿ, ಇದರಲ್ಲಿ ಏನು ಪ್ರಚೋದನಾತ್ಮಕ ಅಂಶ ಇದೆ?
     ಈ ಹಂತದಲ್ಲಿ ನ್ಯಾಯಾಲಯದಲ್ಲಿ ಸೇರಿದ್ದ ಜನರು, ವಕೀಲರುಗಳು ಎಲ್ಲರೂ ಗೊಳ್ಳೆಂದು ನಕ್ಕಿದ್ದರು. ನ್ಯಾಯಾಧೀಶರಿಗೂ ನಗು ತಡೆಯಲಾಗಿರಲಿಲ್ಲ. ಸಬ್ ಇನ್ಸ್ ಪೆಕ್ಟರರಿಗೆ ಅವಮಾನವಾದಂತಾಗಿತ್ತು. ಸತ್ತ ಕತ್ತೆಯ ಕಥೆ ಎಂಬ ಕವನದಲ್ಲಿ ತುರ್ತು ಪರಿಸ್ಥಿತಿ ಕಾಲದ ಪ್ರಜಾಸತ್ತೆಯನ್ನು ಸತ್ತ ಕತ್ತೆಗೆ ಹೋಲಿಸಲಾಗಿತ್ತು. ಅದನ್ನು ನ್ಯಾಯಾಲಯವು ನಮ್ಮ ವಿರುದ್ಧದ ದಾಖಲೆಯೆಂದು ನ್ಯಾಯಾಲಯ ಒಪ್ಪಲಿಲ್ಲ.ಕಹಳೆ ಪತ್ರಿಕೆಯಲ್ಲಿ ಪೋಲಿಸ್ ದೌರ್ಜನ್ಯಗಳ ವಿವರ ಇದ್ದು ಅದನ್ನೂ ನ್ಯಾಯಾಲಯವು ನಮಗೆ ಪ್ರತೀಕೂಲವಾದ ದಾಖಲೆಯೆಂದು ಒಪ್ಪುವಂತಹುದಾಗಿರಲಿಲ್ಲ. ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಹೊರಡಿಸಿದ ಕರಪತ್ರದಲ್ಲಿ ಜನರಿಗೆ ತುರ್ತು ಪರಿಸ್ಥಿತಿ ವಿರೋಧಿಸಲು ಕರೆ ನೀಡಲಾಗಿತ್ತು. ಇದನ್ನು ದೇಶದ್ರೋಹಿ ಚಟುವಟಿಕೆ ಎಂದು ಹೇಗೆ ಪರಿಗಣಿಸಬಹುದು ಎಂಬುದಕ್ಕೆ ಯಾವ ಸಾಕ್ಷಿಗಳಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಧೀಶರು ದಿನಾಂಕ 04-02-1976ರ ಆದೇಶದಲ್ಲಿ ನಮ್ಮನ್ನೆಲ್ಲಾ ಆರೋಪಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಲು 21 ಪುಟಗಳ ಆದೇಶ ಹೊರಡಿಸಿದರು. ನಮ್ಮ ಬಿಡುಗಡೆಯಾಯಿತು. ಆದರೆ ಇಷ್ಟರಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿ ಈಗಾಗಲೇ ಮೂರು ತಿಂಗಳು ಕಳೆದಿದ್ದವು.
(ಕಾಲಘಟ್ಟ: 1975-76) .. ಮುಂದುವರೆಯುವುದು.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು

ಬಾಳಸಂಜೆಯಲಿ ನಿಂತಿಹೆನು ನಾನಿಂದು |
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು ||

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು |
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು ||


ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ |
ಸಂಬಂಧ ಉಳಿಸುವ ಕಳಕಳಿಯ ಮಾತು ||


ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ |
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು ||


ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು |
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು ||


ದಾರಿಯದು ಸರಿಯಿರಲಿ ಅನೃತವನಾಡದಿರಿ |
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ ||


ಗೌರವಿಸಿ ಹಿರಿಯರ ಕಟುಮಾತನಾಡದಿರಿ |
ಅಸಹಾಯಕರ ಶಾಪ ತಂದೀತು ಪರಿತಾಪ |


ದೇವರನು ಅರಸದಿರಿ ಗುಡಿಗೋಪುರಗಳಲ್ಲಿ |
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ ||


ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು |
ಹೃದಯಗಳ ಜೋಡಿಸಿರಿ ಆಗುವುದು ಮನೆಯು ||


ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ? |
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ ||
-ಕ.ವೆಂ.ನಾಗರಾಜ್.

ಬುಧವಾರ, ಆಗಸ್ಟ್ 4, 2010

ಸೇವಾ ಪುರಾಣ -11: ಸರಳುಗಳ ಹಿಂದಿನ ಲೋಕ -4: ಜೇಬುಗಳ್ಳನಾದೆ!

ದೂರು ಕೊಡಬಂದವನ ಪಾಡು
     ಪೋಲಿಸ್ ಠಾಣೆಯಲ್ಲಿ ನನ್ನನ್ನು ವಿಚಾರಣೆಗೆ ಕರೆಸಿದ್ದ ಸಂದರ್ಭದಲ್ಲಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರರನ್ನು ಕಾಯುತ್ತಾ ಕುಳಿತಿದ್ದ ಸಮಯದಲ್ಲಿ ತನ್ನ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ಕೊಡಲು ವ್ಯಕ್ತಿಯೊಬ್ಬರು ಬಂದಿದ್ದರು. ಸಬ್ ಇನ್ಸ್ ಪೆಕ್ಟರ್ ರೌಂಡ್ಸ್ ಗೆ ಹೋಗಿದ್ದಾರೆಂದೂ ಕಾಯಬೇಕೆಂದೂ ಅಲ್ಲಿದ್ದ ಪೇದೆ ಹೇಳಿದಾಗ ಅವರು ಬೆಂಚಿನ ಮೇಲೆ ನನ್ನ ಪಕ್ಕದಲ್ಲಿ ಕುಳಿತುಕೊಂಡರು. ಆಗ ರಾತ್ರಿ ಸುಮಾರು 8-00 ಘಂಟೆಯಾಗಿರಬೇಕು. ಠಾಣೆಯಲ್ಲಿದ್ದ ಪೇದೆಯ ಡ್ಯೂಟಿಯ ಅವಧಿ ಮುಗಿದು ಆತ ಹೊರಗೆ ಹೋದಾಗ ಇನ್ನೊಬ್ಬ ಪೇದೆ ತನ್ನ ಪಾಳಿಯ ಡ್ಯೂಟಿಗಾಗಿ ಬಂದ. ಎಲೆ ಅಡಿಕೆ ಮೆಲ್ಲುತ್ತಾ ಬಂದ ಅವನ ಕಣ್ಣುಗಳು ಕೆಂಪಗಿದ್ದವು. ಆತ ಬಂದವನೇ ನನ್ನ ಪಕ್ಕ ಕುಳಿತಿದ್ದವರಿಗೆ ಕಪಾಳಕ್ಕೆ ಫಟಾರನೆ ಹೊಡೆದ ರಭಸಕ್ಕೆ ಅವರು ತತ್ತರಿಸಿ ಕೆಳಗೆ ಬಿದ್ದರು. ಅವರು ಹೆದರಿ ಹೋಗಿ 'ಯಾಕೆ ಸಾರ್?' ಅಂದರು. (ಸಾರ್ ಎಂಬ ಪದ ಬಳಕೆಗೆ ಆ ಪೇದೆ ಅರ್ಹನಾಗಿರಲಿಲ್ಲ. ಆದರೆ ಭಯ ಗೌರವ ಕೊಡಿಸಿತ್ತು.) ಕಳ್ಳತನದ ಬಗ್ಗೆ ದೂರು ಕೊಡಲು ಬಂದ ವಿಷಯ ತಿಳಿದಾಗ 'ಮೊದಲೇ ಹೇಳಬಾರದಿತ್ತೇನ್ರೀ?' ಎಂದು ಅವರದೇ ತಪ್ಪೆಂಬಂತೆ ಹೇಳಿದ. ಇದು ಅವರ ದೃಷ್ಟಿಯಲ್ಲಿ ಠಾಣೆಯಲ್ಲಿ ಡ್ಯೂಟಿ ಮಾಡುವ ರೀತಿ! ಅವರ ದೃಷ್ಟಿಯಲ್ಲಿ ಠಾಣೆಗೆ ಬರುವವರೆಲ್ಲರೂ 'ಬದ್ಮಾಶ್'ಗಳು! ಸಬ್ ಇನ್ಸ್ ಪೆಕ್ಟರ್ ಬಂದಾಗ ಅವರು ಹೆದರುತ್ತಲೇ ಕಳ್ಳತನದ ವಿಷಯ ತಿಳಿಸಿದರು. ಅದನ್ನು ನಿರ್ವಿಕಾರವಾಗಿ ಕೇಳಿಸಿಕೊಂಡ ಸಬ್ ಇನ್ಸ್ ಪೆಕ್ಟರರು ಕಪಾಳಕ್ಕೆ ಹೊಡೆದಿದ್ದ ಪೇದೆಗೇ ದೂರು ಪಡೆಯಲು ಹೇಳಿದರು. ಅಷ್ಟರಲ್ಲಾಗಲೇ ದೂರು ಕೊಡಬಂದಿದ್ದವರಿಗೆ ತಮ್ಮ ದೂರಿನ ಗತಿ ಏನಾಗಬಹುದೆಂಬ ಅರಿವಾಗಿರಬೇಕು! ದೂರು ದಾಖಲಿಸಿ ಹೊರಬಂದರೆ ಸಾಕೆಂಬ ಮನಸ್ಥಿತಿಯಲ್ಲಿ ಅವರಿದ್ದಂತೆ ತೋರುತ್ತಿತ್ತು!
ಜೇಬುಗಳ್ಳನಾದೆ!
     ಮಾಮೂಲಿನಂತೆ ಒಂದು ದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಿ ಹೊರಬರುವಾಗ ಅಕಾಸ್ಮಾತ್ತಾಗಿ ನನ್ನ ದೃಷ್ಟಿ ಠಾಣೆಯ ಹೊರಭಾಗದಲ್ಲಿದ್ದ ಸೂಚನಾ ಫಲಕದ ಮೇಲೆ ಬಿತ್ತು. ಅಲ್ಲಿ ನನ್ನ ಫೋಟೋ ಸಹ ಕಂಡು ಆಶ್ಚರ್ಯಚಕಿತನಾಗಿ ಹತ್ತಿರ ಹೋಗಿ ನೋಡಿದರೆ "ಜೇಬುಗಳ್ಳರಿದ್ದಾರೆ, ಎಚ್ಚರಿಕೆ" ಎಂಬ ಶೀರ್ಷಿಕೆ ಕೆಳಗಡೆ ಹಲವಾರು ಫೋಟೋಗಳ ಜೊತೆಗೆ ನನ್ನ ಫೋಟೋ ಸಹ ಅಂಟಿಸಿದ್ದರು. ನನಗೆ ಸಿಟ್ಟು ಬಂದಿತಾದರೂ ತೋರಿಸಿಕೊಳ್ಳುವಂತಿರಲಿಲ್ಲ. ನಮಸ್ಕಾರ ಮಾಡದಿದ್ದಕ್ಕೆ ನನಗೆ ಬುದ್ಧಿ ಕಲಿಸಲು ಸುಳ್ಳು ಕೇಸು ಹಾಕಲು ಪ್ರಯತ್ನಿಸಿ ಮುಖಭಂಗಿತನಾಗಿದ್ದ ಹೆಡ್ ಕಾನ್ಸ್ ಟೇಬಲ್ಲನ ಕೆಲಸವೇ ಇದೆಂದು ಊಹಿಸಲು ನನಗೆ ಕಷ್ಟವೇನಿರಲಿಲ್ಲ. ನಾನು ನಗರ ಠಾಣೆಯಿರುವ ಕಟ್ಟಡದ ಮೊದಲ ಅಂತಸ್ತಿನಲ್ಲಿದ್ದ ಪೋಲಿಸ್ ಸೂಪರಿಂಟೆಂಡೆಂಟರನ್ನು ಭೇಟಿ ಮಾಡಲು ಹೋದೆ. ಎಸ್.ಪಿ.ಯವರು ಕಛೇರಿಯಲ್ಲೇ ಇದ್ದರು. ಬಾಗಿಲಲ್ಲಿ ನಿಂತಿದ್ದ ಸೆಂಟ್ರಿಗೆ ನನ್ನ ಪರಿಚಯ ಇದ್ದು ಆತ ನನ್ನನ್ನು ಒಳಗೆ ಹೋಗಲು ಬಿಡಲಿಲ್ಲ. ನನಗೂ ಅವನಿಗೂ ವಾದ-ವಿವಾದ ನಡೆಯುತ್ತಿತ್ತು. ಒಳಗಿದ್ದ ಎಸ್.ಪಿ.ಯವರು 'ಏನದು ಗಲಾಟೆ? ಅವನನ್ನು ಒಳಗೆ ಕಳಿಸು' ಎಂದರು. ನಾನು ಒಳಗೆ ಹೋಗಿ ಅವರಿಗೆ ನಮಸ್ಕರಿಸಿದೆ. ಅವರು 'ಏನು?' ಎಂಬರ್ಥದಲ್ಲಿ ನನ್ನನ್ನು ದೃಷ್ಟಿಸಿದರು. ನಾನು "ಇಂದಿನಿಂದ ಹೊಸ ಉದ್ಯೋಗ ಮಾಡಬೇಕೆಂದಿರುವುದಾಗಿಯೂ ಅದನ್ನು ಅವರೇ ಉದ್ಘಾಟಿಸಬೇಕೆಂದೂ" ಕೋರಿದೆ. ಅವರು ಆಗಲೂ ಮಾತನಾಡದೆ 'ಏನು?' ಎಂಬರ್ಥದಲ್ಲಿ ದಿಟ್ಟಿಸಿದರು. "ನಾನು ಪಿಕ್ ಪಾಕೆಟರ್ ಆಗಬಯಸಿರುವುದಾಗಿಯೂ ಮೊದಲನೆಯ ಪಾಕೆಟ್ ಅನ್ನು ತಮ್ಮದನ್ನೇ ಹಾರಿಸಲು ಬಯಸಿರುವುದಾಗಿಯೂ, ದಯವಿಟ್ಟು ಸಹಕರಿಸಬೇಕೆಂದು" ಹೇಳುತ್ತಿದ್ದ ಹಾಗೆ ಅವಡುಗಚ್ಚಿದ ಅವರ ಕೈ ಸಹಜವೆಂಬಂತೆ ಟೇಬಲ್ಲಿನ ಮೇಲಿದ್ದ ಲಾಠಿ ಹಿಡಿದುಕೊಂಡಿತು. ತಡ ಮಾಡಿದರೆ ಕೆಲಸ ಕೆಡುತ್ತದೆಂದು ನಾನು ಅವಸರ ಅವಸರವಾಗಿ ಠಾಣೆಯ ನೋಟಿಸ್ ಬೋರ್ಡಿನಲ್ಲಿ ಜೇಬುಗಳ್ಳನೆಂದು ನನ್ನ ಫೋಟೊ ಅಂಟಿಸಿರುವ ಬಗ್ಗೆ ಹೇಳಿದೆ. ಅವರು ಧಡಕ್ಕನೆ ಕುರ್ಚಿಯಿಂದ ಮೇಲೆದ್ದು ಕೆಳಗಿಳಿದು ಬಂದು ನೋಟಿಸ್ ಬೋರ್ಡು ನೋಡಿದರು. ಅವರು ಧಡಕ್ಕನೆ ಎದ್ದಾಗ ನನಗೆಲ್ಲಿ ಹೊಡೆಯುವರೋ ಎಂದು ನಾನು ಭಯಪಟ್ಟಿದ್ದು ಸುಳ್ಳಲ್ಲ. ನನ್ನ ಫೋಟೋ ಕಂಡು ಸಿಟ್ಟಿಗೆದ್ದ ಅವರು ಅಲ್ಲಿಗೆ ಓಡಿಬಂದ ಎಎಸ್ಸೈರವರ ಕಪಾಳಕ್ಕೆ ಬಾರಿಸಿ ನನ್ನ ಫೋಟೋ ಅಲ್ಲಿಂದ ತೆಗೆಯಲು ಆದೇಶಿಸಿದರು. ನನಗೆ 'ಸಾರಿ' ಎಂದು ಹೇಳುತ್ತಾ ತಿರುಗಿ ನೋಡದೆ ಮೆಟ್ಟಿಲು ಹತ್ತಿ ಹೋದರು. ಅಲ್ಲಿದ್ದ ಪೋಲಿಸರಿಗೆ ನನ್ನ ಮೇಲೆ ಸಿಟ್ಟು ಬಂದಿರುವುದು ಗೊತ್ತಾಯಿತು. ನಾನು ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿದೆ.
ಅಪ್ಪ-ಅಮ್ಮರ ಮಮತೆ
     ತುರ್ತು ಪರಿಸ್ಥಿತಿ ಕಾಲದ ದೌರ್ಜನ್ಯಗಳ ಬಗ್ಗೆ ಸುದ್ದಿಗಳು ಕಿವಿಗೆ ಬೀಳುತ್ತಿದ್ದವು. ಜೈಲಿಗೆ ಹೊಸ ಹೊಸ ಕೈದಿಗಳು ಬರುತ್ತಿದ್ದಂತೆಯೇ ಹೊಸ ಹೊಸ ದೌರ್ಜನ್ಯಗಳ ಬಗ್ಗೆ ತಿಳಿದುಬರುತ್ತಿದ್ದವು. ಕೆಲವು ನಮ್ಮನ್ನು ಹತಾಶೆಗೊಳಿಸುತ್ತಿದ್ದರೆ ಕೆಲವು ಘಟನೆಗಳು ನಮ್ಮಲ್ಲಿ ಉತ್ಸಾಹ ತುಂಬುತ್ತಿದ್ದವು. ನನ್ನ ಅಜ್ಜಿ (ತಾಯಿಯ ತಾಯಿ) ಜೈಲಿಗೆ ಬಂದು ಜೈಲರರನ್ನು ಕಾಡಿ ಬೇಡಿ ನನ್ನನ್ನು ಭೇಟಿ ಮಾಡಲು ಅವಕಾಶ ಪಡೆದು ನನ್ನನ್ನು ಮಾತನಾಡಿಸಿದ್ದುದನ್ನು ನಾನು ಮರೆಯಲಾರೆ. ಬರುವಾಗ ಅಜ್ಜಿ ನಾಲ್ಕು ಕಿತ್ತಳೆಹಣ್ಣನ್ನು ತಂದಿದ್ದು ನಾನು "ಅಜ್ಜಿ, ಒಳಗೆ ನನ್ನಂತಹವರು ನೂರಾರು ಜನ ಇದ್ದಾರೆ,ನನಗೊಬ್ಬನಿಗೇ ಹಣ್ಣು ತಂದರೆ, ನಾನು ತೆಗೆದುಕೊಂಡರೆ ಸರಿಯಾಗುವುದಿಲ್ಲ" ಎಂದು ಹೇಳಿದ್ದುದನ್ನು ಅಜ್ಜಿ ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದರು. ನನ್ನ ತಂದೆಯವರೂ ಸಹ ಆಗಾಗ್ಗೆ ಜೈಲಿಗೆ ಬಂದು ಜೈಲು ಸಿಬ್ಬಂದಿಗೆ ಲಂಚ ಕೊಟ್ಟು 'ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಹೇಳಿಹೋಗುತ್ತಿದ್ದರಂತೆ. ಆದರೆ ಎಂದೂ ಅವರು ನನ್ನನ್ನು ಕರೆಸಿ ಮಾತನಾಡಲಿಲ್ಲ. ಬರುವಾಗ ಒಂದು ದೊಡ್ಡ ಫ್ಲಾಸ್ಕಿನ ಭರ್ತಿ ಗಟ್ಟಿ ಹಾಲು ಹಾಕಿ ಮಾಡಿದ ಹಾರ್ಲಿಕ್ಸ್ ಅನ್ನು ತಂದು ಮಗನಿಗೆ ಕೊಡಲು ಹೇಳುತ್ತಿದ್ದರಂತೆ. ಜೈಲಿನ ಗಾರ್ಡು ನನಗೆ ಕೊಡುವುದಾಗಿ ಹೇಳಿ ಒಳಕ್ಕೆ ಹೋಗಿ ತಾನೇ ಎಲ್ಲವನ್ನೂ ಕುಡಿದು ಖಾಲಿ ಫ್ಲಾಸ್ಕನ್ನು ತಂದೆಗೆ ವಾಪಸು ಕೊಡುತ್ತಿದ್ದನಂತೆ. ಈ ವಿಷಯ ಬಹಳ ಸಮಯದ ನಂತರ ನನಗೆ ಗೊತ್ತಾಯಿತು. (ಕಾಕತಾಳೀಯವೆಂಬಂತೆ ಲೇಖನದ ಈ ಭಾಗ ಬರೆಯುತ್ತಿದ್ದ ಸಮಯದಲ್ಲೇ ಹಾಸನ ಜಿಲ್ಲಾ ಉಪಕಾರಾಗೃಹದ ವಾರ್ಡನ್ ಗಳಾದ ಶೋಭಾ, ಸಿದ್ಧಲಿಂಗಪ್ಪ, ವಾಹನ ಚಾಲಕ ಭಾನುಪ್ರಕಾಶ್ ಮತ್ತು ಹಣ ವಸೂಲಿಗೆ ಸಹಕರಿಸುತ್ತಿದ್ದ ಕೊಲೆ ಆರೋಪಿ ಸುರೇಶರನ್ನು ಲೋಕಾಯುಕ್ತ ಪೋಲಿಸರು ಕೈದಿಯೊಬ್ಬರ ಭೇಟಿಗೆ ಅವಕಾಶ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂಧಿಸಿದ ವಿಷಯ ದಿನಾಂಕ 30-07-2010ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದಿದೆ. ಆರೋಪಿ ಸುರೇಶನ ಬಳಿಯಿದ್ದ ನೂರು ರೂ. ಜೈಲರ್ ನಲ್ಲಪ್ಪರೆಡ್ಡಿಯವರಿಗೆ ಕೊಡುವ ಸಲುವಾಗಿದ್ದೆಂದು ಜೈಲರರನ್ನೂ ಬಂಧಿಸಿದ ಬಗ್ಗೆ ದಿನಾಂಕ 31-07-2010ರ ಪತ್ರಿಕೆಯಲ್ಲಿ ಸುದ್ದಿಯಿದೆ.)

-ಕ.ವೆಂ.ನಾಗರಾಜ್.