ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮೇ 28, 2015

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -1


ಹೆಜ್ಜೆ 1:
     ಜ್ಞಾನ ಜಂಬದಿಂದ ನುಡಿಯಿತು: "ನೀವು ಪುಣ್ಯವಂತರು. ಲಕ್ಷಾಂತರ ಜೀವಜಂತುಗಳಲ್ಲಿ ಮಾನವರಾಗಿ ಜನಿಸಿರುವ ನೀವು ಪುಣ್ಯವಂತರು. ಇದಕ್ಕೆ ಮುಂಚೆ ನೀವು ಏನೇನಾಗಿ ಜನಿಸಿದ್ದಿರೋ ನಿಮಗೆ ತಿಳಿಯದು. ನಿಮ್ಮ ಪೂರ್ವ ಕರ್ಮದ ಫಲವಾಗಿ ಈಗ ನರಜನ್ಮ ಪಡೆದಿದ್ದೀರಿ. ಇತರ ಜೀವಿಗಳಿಗೂ ನಿಮಗೂ ಒಂದು ಮುಖ್ಯ ವ್ಯತ್ಯಾಸವೆಂದರೆ ನಿಮಗೆ ವಿವೇಚನಾ ಶಕ್ತಿ ಇರುವುದು! ಸರಿ ಯಾವುದು, ತಪ್ಪು ಯಾವುದು, ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳುವಳಿಕೆ ನಿಮಗೆ ಇದೆ. ಇದನ್ನು ನೀವು ಸರಿಯಾಗಿ ಬಳಸಿಕೊಂಡರೆ ನೀವು ಉನ್ನತ ಸ್ಥಾನಕ್ಕೇರುವಿರಿ. ಇಲ್ಲದಿದ್ದರೆ ಕೆಳಗೆ ಬೀಳುವಿರಿ. ಇಷ್ಟಕ್ಕೂ ನಿಮಗೆ ಈ ವಿವೇಚನಾ ಶಕ್ತಿ ಬಂದಿರುವುದೇ ನನ್ನಿಂದ. ಹೃದಯಕ್ಕೂ, ಮೆದುಳಿಗೂ ಆಪ್ತವಾದ ಜ್ಞಾನ ಪಡೆಯುವವರು ಜ್ಞಾನಿಗಳೆನಿಸಿಕೊಳ್ಳುತ್ತಾರೆ. ನಾನು ಇಲ್ಲದಿದ್ದಿದ್ದರೆ ನಿಮ್ಮನ್ನು ಯಾರು ಲೆಕ್ಕಕ್ಕೆ ಇಟ್ಟುಕೊಳ್ಳುತ್ತಿದ್ದರು?"
     "ಹೌದು, ಹೌದು. ನಿನ್ನಿಂದಲೇ ಜಗತ್ತಿಗೆ ಬೆಳಕಾಗಿದೆ. ನೀನೇ ದೊಡ್ಡವನು" ಎಂದು ಎಲ್ಲರೂ ತಲೆದೂಗಿ ಜ್ಞಾನಕ್ಕೆ ನಮಸ್ಕರಿಸಿದರು.
ಹೆಜ್ಜೆ 2:
     ಜ್ಞಾನ ನುಡಿದುದನ್ನು ಕೇಳುತ್ತಿದ್ದ ಮಾತು ನಗುತ್ತಾ ಹೇಳಿತು: "ಜ್ಞಾನ ಹೇಳಿದ್ದು ಸರಿ. ಆದರೆ ಈ ಜ್ಞಾನ ಅನ್ನುವುದು ಬಂದಿದ್ದಾದರೂ ಎಲ್ಲಿಂದ ಎಂಬುದು ನಿಮಗೆ ಗೊತ್ತಿದೆಯೇ? ನಾನು ಇರದಿದ್ದರೆ ಜ್ಞಾನ ಅನ್ನುವುದು ಎಲ್ಲಿರುತ್ತಿತ್ತು? ನಿಮ್ಮ ಒಳಗೆ ಜನಿಸುವ ಭಾವನೆಗಳ ಪ್ರಕಟರೂಪವೇ ನಾನಾಗಿರುವೆ. ಅತ್ಯಂತ ಪುರಾತನವಾದ ಜ್ಞಾನಭಂಡಾರವಾದ ವೇದಗಳು ಮೊದಲು ಒಡಮೂಡಿದ್ದು ಮಾತಿನ ಮೂಲಕವೇ. ವೇದವಿರಲಿ, ಭಗವದ್ಗೀತೆ, ಬೈಬಲ್, ಕುರಾನ್, ಮುಂತಾದುವೆಲ್ಲಾ ಮೊದಲು ಮೂಡಿದ್ದು ನನ್ನಿಂದಲೇ. ಅರ್ಥವಾಗಲಿಲ್ಲವೇ? ವಿವರಿಸುವೆ ಕೇಳಿ. ಭಗವದ್ಗೀತೆಯಲ್ಲಿರುವುದೇನು? ಕೃಷ್ಣ ಹೀಗೆ ಹೇಳಿದ, ಅರ್ಜುನ ಹೀಗೆ ಕೇಳಿದ, ಸಂಜಯ ಈ ರೀತಿ ಹೇಳಿದ, ಇತ್ಯಾದಿಗಳಲ್ಲವೇ? ಮೊದಲು ಕೃಷ್ಣ, ಅರ್ಜುನ ಮುಂತಾದವರು ಮಾತನಾಡಿದ್ದರಿಂದಲೇ ಅಲ್ಲವೇ ಗೀತೆ ಹೊರಬಂದಿದ್ದು? ಈ ಜಗತ್ತು ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದು ನನ್ನಿಂದಲೇ! ಹಾಳಾಗುವುದೂ ನನ್ನಿಂದಲೇ! ಗೊತ್ತಾಯಿತೇ, ಜ್ಞಾನಕ್ಕಿಂತ ದೊಡ್ಡವನು ನಾನೇ!"
     "ಹೌದಲ್ಲವೇ? ಮಾತೇ ಜ್ಞಾನಕ್ಕಿಂತ ದೊಡ್ಡದು" ಎಂದು ಕೇಳಿದವರು ಮಾತನ್ನು ಸ್ತುತಿಸಿದರು.
ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ |
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ ||
ಹೆಜ್ಜೆ 3:
     "ಅಯ್ಯೋ ಹುಚ್ಚಪ್ಪಗಳಿರಾ, ಜ್ಞಾನ ಮತ್ತು ಮಾತಿನ ಮಾತುಗಳಿಗೆ ಮರುಳಾಗಿಬಿಟ್ಟಿರಾ?" -ಮನಸ್ಸು ನಗುತ್ತಾ ಪ್ರಶ್ನಿಸಿ ಮುಂದುವರೆಯಿತು: "ಈ ಜ್ಞಾನ ಮತ್ತು ಮಾತುಗಳ ಯಜಮಾನ ನಾನು ಎಂಬುದನ್ನು ಮರೆತುಬಿಟ್ಟಿರಾ? ನನ್ನೊಳಗೇ ಈ ಎರಡೂ ಇರುವುದು. ನೀವು ಏನೇ ಮಾಡಿರಿ, ಏನೇ ಮಾತನಾಡಿರಿ, ಹೀಗೆ ಮಾಡಬೇಕು, ಹೀಗೆ ಮಾತನಾಡಬೇಕು ಎಂದು ನಿರ್ಧರಿಸುವವನು ನಾನು! ಮನಸ್ಸು ಹೇಳಿದಂತೆ ನೀವು ಮಾಡುತ್ತೀರಿ, ಮಾತನಾಡುತ್ತೀರಿ. ನಾನು ಎಷ್ಟು ಪ್ರಭಾವಶಾಲಿ ಎಂದರೆ ನೀವು ನಿಮ್ಮನ್ನು ನಿಮ್ಮ ಮನಸ್ಸಿನೊಂದಿಗೇ ಗುರುತಿಸಿಕೊಳ್ಳುತ್ತೀರಿ. ನೀವು ಅಂದರೆ ನಿಮ್ಮ ಮನಸ್ಸೇ ಎಂದುಕೊಳ್ಳುತ್ತೀರಿ ಅಲ್ಲವೇ? ಪ್ರಪಂಚದಲ್ಲಿ ನೀವು ಏನು ಸಾಧಿಸುತ್ತೀರೋ ಅದಕ್ಕೆಲ್ಲಾ ನಾನೇ ಕಾರಣನಾಗಿದ್ದೇನೆ. ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ನಿಮ್ಮ ಮನಸ್ಸು ಕೆಲಸ ಮಾಡಿದೆ. ಎಲ್ಲಾ ಅನುಭವಗಳು ಮತ್ತು ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ನನ್ನಿಂದಲೇ! ಒಂದು ಅರ್ಥದಲ್ಲಿ ನಾನೇ ಪ್ರಪಂಚವಾಗಿರುವೆ. ಈಗ ಹೇಳಿ ಯಾರು ದೊಡ್ಡವರು?"
     ಕೇಳುತ್ತಿದ್ದವರಿಗೆ ಮನಸ್ಸಿನ ಮಾತನ್ನು ಒಪ್ಪದೇ ಬೇರೆ ದಾರಿ ಎಲ್ಲಿರುತ್ತದೆ? "ಹೌದು, ಜ್ಞಾನ ಮತ್ತು ಮಾತುಗಳಿಗಿಂತ ಮನಸ್ಸೇ ದೊಡ್ಡದು" ಎಂದು ತಲೆಯಾಡಿಸಿದರು.
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
ಹೆಜ್ಜೆ 4:
     ಗಹಗಹಿಸಿ ನಗುತ್ತಿದ್ದ ಶಬ್ದ ಬಂದ ಕಡೆಗೆ ತಿರುಗಿ ನೋಡಿದರೆ ಅಲ್ಲಿ ಇಚ್ಛಾಶಕ್ತಿ ಚಪ್ಪಾಳೆ ತಟ್ಟಿಕೊಂಡು ನಗುತ್ತಿದ್ದುದು ಕಾಣಿಸಿತು. ಅದು ಹೇಳಿತು: "ನೀವು ಮಾನವರು ದೊಡ್ಡವರು, ನಿಮಗೆ ವಿವೇಚನಾಶಕ್ತಿ ಇದೆ ಎಂದು ಜಂಬಪಟ್ಟುಕೊಳ್ಳುತ್ತೀರಿ. ಆದರೆ, ಯಾರು ಏನು ಹೇಳಿದರೂ ಅದಕ್ಕೆ ಕುರಿಗಳಂತೆ ತಲೆ ಆಡಿಸಿಬಿಡುತ್ತೀರಿ. ಇದೇನಾ ನಿಮ್ಮ ವಿವೇಚನಾಶಕ್ತಿ? ಬಲಶಾಲಿ ಮನಸ್ಸನ್ನೇ ನಿಯಂತ್ರಣ ಮಾಡುವವನು ನಾನು. ನಿಮಗೆ ನನ್ನ ನೆನಪಾಗಲಿಲ್ಲವೇ? ನಾನು ಇಲ್ಲದಿರುವ ಜಗತ್ತಿನ ಯಾವುದೇ ಸೃಷ್ಟಿ ಇಲ್ಲವೇ ಇಲ್ಲ. ಪಂಚಭೂತಗಳಿಗೂ ಸಹ ತಮ್ಮದೇ ಆದ ಇಚ್ಛಾಶಕ್ತಿ ಇದೆ. ನಾನು ಇರುವುದರಿಂದಲೇ ಎಲ್ಲವೂ ತಮ್ಮ ತಮ್ಮ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಂಡಿರುವುದು! ಇಲ್ಲದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಒಂದೇ ಆಗಿಬಿಡುತ್ತಿದ್ದವು. ನೀವು ಬದುಕಿರುವುದೂ, ನಿಮ್ಮಲ್ಲಿ ರಕ್ತಸಂಚಾರ ಸಾಗುವುದು, ಹೃದಯ ಬಡಿದುಕೊಳ್ಳುವುದು, ಉಸಿರಾಟ ನಡೆಯುವುದು, ಇತ್ಯಾದಿ ಎಲ್ಲವೂ ಒಂದು ನಿರ್ದಿಷ್ಟವಾದ ಇಚ್ಛಾಶಕ್ತಿಯಿಂದಲೇ ನಡೆಯುತ್ತಿಲ್ಲವೇ? ಇಷ್ಟೆಲ್ಲಾ ಶಕ್ತಿ ಇರುವ ನನಗೆ ನಿಮ್ಮ ಮನಸ್ಸನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಆದರೆ ಆ ಶಕ್ತಿಯನ್ನು ನೀವು ಉಪಯೋಗಿಸಿಕೊಳ್ಳದಿದ್ದರೆ ಅದು ನಿಮ್ಮ ಹುಚ್ಚುತನವೋ, ಪೆದ್ದುತನವೋ, ಮತ್ತೊಂದೋ ಮಾತ್ರ ಕಾರಣವಾಗಿದೆ. ನನ್ನನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನೀವು ಅದ್ಭುತವನ್ನೇ ಸಾಧಿಸಬಲ್ಲಿರಿ. ಕೃತಕ ಕಾಲುಗಳಿಂದ ಹಿಮಾಲಯವನ್ನೇ ಏರಿದ ತರುಣಿ ಅರುಣಿಮಾ ಸಿನ್ಹಳಂತಹ ವಿಶೇಷ ಸಾಧಕರು ನನ್ನನ್ನು ಬಳಸಿಕೊಂಡದ್ದರಿಂದಲೇ ಅದು ಅವರಿಗೆ ಸಾಧ್ಯವಾಗಿದೆ.
     ಮನಸ್ಸು ಚಂಚಲವಾಗಿದೆ. ನಿಮ್ಮನ್ನು ಪುಸಲಾಯಿಸಿ ಹಾಳು ಮಾಡುವುದು ಅದೇ. ಸಿಗರೇಟು ಸೇದುವುದು ಕೆಟ್ಟದ್ದು, ಕುಡಿಯುವುದು ಕೆಟ್ಟದ್ದು ಅಂತ ನಿಮಗೆ ಗೊತ್ತಿಲ್ಲವಾ? ಆದರೂ ಅದನ್ನು ಬಿಡಲೊಲ್ಲಿರೇಕೆ? 'ಇದೊಂದು ಸಲ', 'ಇದೊಂದು ಸಲ' ಅನ್ನುತ್ತಾ ಸದಾ ಕಾಲ ಆ ಚಟಗಳಿಗೇ ಅಂಟಿಕೊಳ್ಳುವಂತೆ ಮಾಡುವುದು ನಿಮ್ಮ ಮನಸ್ಸೇ ಅಲ್ಲವೇ? ನನ್ನನ್ನು ಒಮ್ಮೆ ಆಶ್ರಯಿಸಿ ನೋಡಿ, ಆಗ ನಿಮಗೆ ಗೊತ್ತಾಗುತ್ತದೆ ನನ್ನ ಕರಾಮತ್ತು! ಸಂಕಲ್ಪ ಮಾಡಿ, ಇಚ್ಛಾಶಕ್ತಿ ಧರಿಸಿ ಕೊಡವಿಕೊಂಡು ಮೇಲೆದ್ದರೆ ಮನಸ್ಸಿನ ಪ್ರಲೋಭನೆಗಳು ಹೇಳದೆ ಕೇಳದೇ ಓಡಿಬಿಡುತ್ತವೆ. ಆಗ ನಿಮಗೆ ನೀವೇ ಯಜಮಾನರಾಗುತ್ತೀರಿ. ಈಗ ಹೇಳಿ, ಯಾರು ದೊಡ್ಡವರು, ನಾನೋ ಆಥವ ಮನಸ್ಸೋ?"
     ಇಚ್ಛಾಶಕ್ತಿಯ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡು 'ಹೌದು, ಹೌದು' ಎಂದು ತಲೆದೂಗಿದರು.
ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಮೂಢ ||
ಹೆಜ್ಜೆ 5:
     ಇಚ್ಛಾಶಕ್ತಿಯನ್ನು ಪಕ್ಕಕ್ಕೆ ದೂಡಿ ಮುಂದೆ ನಿಂತ ಸ್ಮರಣಶಕ್ತಿ (ಚಿತ್ತ) ಕೇಳುಗರನ್ನು ಕುರಿತು ವಿಚಾರಿಸಿಕೊಳ್ಳಲಾರಂಭಿಸಿತು: "ಆಯಿತಾ? ಇನ್ನು ನನ್ನ ಮಾತು ಕೇಳಿ. ನಾನು ಇಲ್ಲದಿದ್ದರೆ ನಿಮ್ಮ ಇಚ್ಛಾಶಕ್ತಿ ಮೂರು ಕಾಸಿಗೂ ಬೆಲೆ ಬಾಳುವುದಿಲ್ಲ. ನೆನಪಿನ ಶಕ್ತಿಯೇ ಇಲ್ಲದಿದ್ದರೆ ಎಷ್ಟು ಪಾಂಡಿತ್ಯ ಇದ್ದರೆ ಏನು ಪ್ರಯೋಜನ? ಘಳಿಗೆಗೊಂದು ಮಾತನಾಡಿ, 'ಕ್ಷಣ ಚಿತ್ತ, ಕ್ಷಣ ಪಿತ್ತ' ಎಂದು ಉಗಿಸಿಕೊಳ್ಳುತ್ತೀರಿ. ನೆನಪಿಟ್ಟುಕೊಳ್ಳುವ ಮತ್ತು ಅದನ್ನು ಉಳಿಸಿಕೊಳ್ಳುವ ಶಕ್ತಿ ಇದ್ದರೆ ಮಾತ್ರ ಇಚ್ಛಾಶಕ್ತಿ ಕೆಲಸ ಮಾಡಬಲ್ಲದು, ಮನಸ್ಸು ಕೇಳಬಲ್ಲುದು, ಸರಿಯಾದ ಮಾತು ಹೊರಬರುವುದು ಮತ್ತು ಜ್ಞಾನಕ್ಕೆ ಅರ್ಥ ಬರುವುದು! ಒಂದು ಘಳಿಗೆಯ ಹಿಂದೆ ಏನಾಯಿತು ಎಂಬುದೇ ನೆನಪಿನಲ್ಲಿ ಇಟ್ಟುಕೊಳ್ಳಲಾಗದವನು, ಇಚ್ಛಾಶಕ್ತಿಯನ್ನು ಬಳಸಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಹಿಂದಿನ ಸಂಗತಿಗಳು, ಅನುಭವಗಳು, ನಿಶ್ಚಯಗಳು, ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿನಲ್ಲಿ ಸಂಕಲ್ಪ ಮೂಡಲು ಅತ್ಯಗತ್ಯವಾಗಿದೆ. ಸೋಲಿನ, ಅವಮಾನದ, ದೈಹಿಕ, ಮಾನಸಿಕ ಪೆಟ್ಟುಗಳ ನೆನಪು ಇದ್ದರೆ ಅವು ನಿಮ್ಮನ್ನು ಮುಂದೆ ಅಂತಹ ಪ್ರಸಂಗ ಬರದಂತೆ ಎಚ್ಚರಿಸುತ್ತವೆ ಮತ್ತು ಛಲದಿಂದ ಮುಂದೆಬರಲು, ಗೆಲ್ಲಲು, ಸಾಧಿಸಲು ಸಹಾಯಕವಾಗುತ್ತವೆ. ಇದಕ್ಕೆ ಎಷ್ಟು ಉದಾಹರಣೆಗಳು ಬೇಕು? ಇರಲಿ ಬಿಡಿ. ನನ್ನ ನೆನಪು ನಿಮಗಿದ್ದರೆ ನನ್ನ ಶಕ್ತಿಯನ್ನು ನೀವೇ ಅರ್ಥ ಮಾಡಿಕೊಳ್ಳುವಿರಿ".
     "ಹೌದು, ನಾವು ಮರೆತೇಬಿಟ್ಟಿದ್ದೆವು. ತಪ್ಪಾಯಿತು ಕ್ಷಮಿಸು. ನೆನಪಿನ ಶಕ್ತಿಯಾದ ಚಿತ್ತವೇ ದೊಡ್ಡದು" ಎಂದು ಎಲ್ಲರೂ ಆ ಶಕ್ತಿಗೆ ನಮಸ್ಕರಿಸಿದರು.
ಹೆಜ್ಜೆ 6:
     "ನಿಮಗೆ ಒಳ್ಳೆಯ ಜ್ಞಾನವಿರಬಹುದು, ವಾಕ್ಕೊಡೆಯರಾಗಿರಬಹುದು, ಒಳ್ಳೆಯ ಮನಸ್ಸಿರಬಹುದು, ಅಂದುಕೊಂಡಂತೆ ಮಾಡುವ ಇಚ್ಛಾಶಕ್ತಿಯಿರಬಹುದು. ನೀವು ತಿಳಿದಂತೆ ಇಚ್ಛಾಶಕ್ತಿಯೇ ಉಳಿದವುಗಳಿಗಿಂತ ದೊಡ್ಡದಿರಬಹುದು. ಇಚ್ಛಾಶಕ್ತಿಗೂ ಮಿಗಿಲಾದುದು ನೆನಪಿನ ಶಕ್ತಿ ಎಂಬುದನ್ನೂ ಒಪ್ಪುವೆ. ಇವುಗಳಿಗಿಂತ ಮಿಗಿಲಾದವನು ನಾನು ಎಂದು ನಾನು ಜಂಬ ಕೊಚ್ಚಿಕೊಳ್ಳುವುದಿಲ್ಲ. ನನ್ನ ಮಾತು ಕೇಳಿ ನೀವೇ ನಿರ್ಧರಿಸಿ"- ಶಾಂತ ಮತ್ತು ಧೃಢವಾದ ಕಂಚಿನ ಕಂಠದೊಂದಿಗೆ ಹೊರಬಂದ  ಮನೋಕೇಂದ್ರೀಕರಣ(ಧ್ಯಾನ)ದ ಈ ಮಾತು ಎಲ್ಲರನ್ನೂ ಅದರತ್ತ ಗಮನಿಸುವಂತೆ ಮಾಡಿತು.. ಅದು ಮುಂದುವರೆಸಿತು: "ಧೀ ಯಾನವೇ ಧ್ಯಾನ. ಅದೊಂದು ಉತ್ತಮವಾದ ಗುಣ. ನೀವು ನಿಮ್ಮ ಎಷ್ಟರಮಟ್ಟಿಗೆ ಕೇಂದ್ರೀಕರಿಸಲು ಸಾಧ್ಯವೋ, ಅರ್ಥಾತ್ ಧ್ಯಾನಿಸುತ್ತೀರೊ, ಅಷ್ಟರ ಮಟ್ಟಿಗೆ ಇತರರಿಗಿಂತ ಮೇಲಿರುತ್ತೀರಿ. ಕೇಂದ್ರೀಕರಿಸುವುದೆಂದರೆ ಮನಸ್ಸಿನ ಸ್ಥಿರತೆ ಹೊಂದುವುದು. ಎಲ್ಲೆಲ್ಲಿ ಯಾವುದೇ ರೀತಿಯ ಧೃಡತೆಯನ್ನು, ಯಾವುದೇ ರೀತಿಯ ಸ್ಥಿರತೆ ಕಾಣುವುದೋ ಅಲ್ಲಿ ಕೇಂದ್ರೀಕರಣ ಇರುತ್ತದೆ. ಮನಸ್ಸನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದು ಮತ್ತು ಆ ದಿಕ್ಕಿನಲ್ಲೇ ಸತತ ಪ್ರಯತ್ನದಿಂದ ಮನಸ್ಸನ್ನು ಆ ನಿರ್ದಿಷ್ಟ ವಿಚಾರದಿಂದ ಹೊರಳದಿರುವಂತೆ ನೋಡಿಕೊಳ್ಳುವುದೇ ಕೇಂದ್ರೀಕರಣ. ಒಂದು ನಿರ್ದಿಷ್ಟ ಸಂಗತಿಯೊಂದಿಗೆ ಕುರಿತು ಆತ್ಮಪೂರ್ವಕವಾಗಿ, ಬೇರೆ ಯೋಚನೆಗಳು ಬರದಂತೆ ನೋಡಿಕೊಂಡು, ಒಂದಾಗುವುದೇ ಕೇಂದ್ರೀಕರಣ. ಇದೇ ಧ್ಯಾನ! ಯಾರಾದರೂ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಿದ್ದರೆ, ಅದು ಕೇಂದ್ರೀಕರಿಸುವ ಶಕ್ತಿಯ ಕಾರಣದಿಂದ ಆದದ್ದಾಗಿದೆ. ಅದು ದೇವರೇ ಆಗಿರಬಹುದು, ಮನುಷ್ಯನೇ ಆಗಿರಬಹುದು, ಮನಸ್ಸು ಕೇಂದ್ರೀಕರಿಸಿ ಮಾಡಿದ ಕಾರಣದಿಂದಲೇ ಯಶಸ್ಸು ಲಭಿಸಿರುವುದಾಗಿದೆ. ಯೋಚನೆಯನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತೊಡಗಿಸುವುದೇ ಯಶಸ್ಸಿನ ಕಾರಣವಾಗಿದೆ. ನೀವು ಈ ರೀತಿ ಮಾಡಿದ್ದೇ ಆದಲ್ಲಿ, ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ನೆನಪಿನ ಶಕ್ತಿಗಳು ನಿಮ್ಮ ವಶವಾಗುವುದರಲ್ಲಿ ಅನುಮಾನವೇ ಇಲ್ಲ. ಯೋಚಿಸಿ, ಧ್ಯಾನಿಸಿ, ನಿರ್ಧರಿಸಿ."
ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ |
ಗುರುವಿನಲಿ ಶ್ರದ್ಧೆ ಸುಜನ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ ||
     ಕೇಳಿದವರೆಲ್ಲರೂ ತಮ್ಮ ತಲೆಗಳಿಗೆ ಕೆಲಸ ಕೊಟ್ಟರು. "ನಿಜ, ನಿಜ. ಮನೋಕೇಂದ್ರೀಕರಣದಿಂದ ನಮಗೆ ಯಶಸ್ಸು ಸಿಗುತ್ತದೆ" ಎನ್ನದಿರಲು ಅವರಿಗೆ ಸಾಧ್ಯವಾಗಲಿಲ್ಲ. ನಡೆಯಬೇಕಾದ ಇನ್ನೂ ಎಷ್ಟು ಹೆಜ್ಜೆಗಳಿವೆಯೋ ಎಂದು ಅವರ ಒಳಮನಸ್ಸುಗಳು ವಿಚಾರ ಮಾಡಲು ಪ್ರಾರಂಭಿಸಿದುದು ಒಳ್ಳೆಯ ಬೆಳವಣಿಗೆ ಎನ್ನಬಹುದಲ್ಲವೇ?
-ಕ.ವೆಂ.ನಾಗರಾಜ್.
**************
ದಿನಾಂಕ 25.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 24, 2015

ನಾವು ಯಾರು ಬಲ್ಲೆವೇನು?-2


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು |
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ ||

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಹಿಂದಿನ ಲೇಖನದಲ್ಲಿ ಜೀವಾತ್ಮದ ಸ್ವರೂಪದ ಕುರಿತ ಹಲವಾರು ವಾದಗಳ ಬಗ್ಗೆ ಚರ್ಚಿಸಿದೆವು. ತರ್ಕದ ಎದುರಿಗೆ ಜೀವಾತ್ಮ ಅನ್ನುವುದು ದೇವರ ಹೊಸ ಸೃಷ್ಟಿ, ಶೂನ್ಯದಿಂದ ಆದ ಸೃಷ್ಟಿ, ಪ್ರಕೃತಿಯ ಕೊಡುಗೆ, ಪರಮಾತ್ಮನ ಅಂಶ, ಶರೀರದ ಹುಟ್ಟಿನೊಂದಿಗೆ ಉದಯಿಸುವಂತಹದು, ಇತ್ಯಾದಿ ವಾದಗಳು ನಿಲ್ಲುವುದಿಲ್ಲವೆಂದು ಕಂಡುಕೊಂಡೆವು. ಇದಲ್ಲ, ಇದಲ್ಲ ಎಂದು ಒಂದೊಂದಾಗಿ ಹಲವು ವಾದಗಳನ್ನು ಒರೆಗೆ ಹಚ್ಚಿ ನೋಡಿ ತಿಳಿದ ನಂತರದಲ್ಲಿ ಉಳಿಯುವುದು ಒಂದೇ ವಾದ, ಅದೆಂದರೆ ಈ ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿಯಾದುದು ಮತ್ತು ಅನಂತವಾದುದು ಎಂಬ ವಾದ. ಇದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಪುಷ್ಟಿ ನೀಡುವುದು ವಿಶೇಷವಾಗಿದೆ.
     ಜೀವಾತ್ಮ ಅಥವ ಪ್ರಾಣಚೈತನ್ಯ ಅನಾದಿ ಮತ್ತು ಅನಂತವಾದುದು ಎಂಬ ವಾದಕ್ಕೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಹೇಗೆ ಪೂರಕವಾಗಿವೆ ಎಂಬುದನ್ನು ನೋಡೋಣ. ಈ ಲೋಕದಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಕೆಲವರು ಹುಟ್ಟುತ್ತಲೇ  ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಟರಾಗಿರುತ್ತಾರೆ. ಕೆಲವರು ದಡ್ಡರಾಗಿರುತ್ತಾರೆ, ಕೆಲವರು ಬುದ್ಧಿವಂತರಾಗಿರುತ್ತಾರೆ, ಕೆಲವರು ಸುಂದರರಾಗಿದ್ದರೆ, ಕೆಲವರು ಕುರೂಪಿಗಳಾಗಿರುತ್ತಾರೆ. ಏಕೆ? ನಾವು ಹುಟ್ಟಿದ್ದೇವೆ, ಇದ್ದೇವೆ ಎಂಬ ಸತ್ಯ ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ತಂದೆ-ತಾಯಿಗಳು ಇಂಥವರೇ ಆಗಿರಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲಿದೆಯೇ? ನಾವು ಹೀಗೆಯೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು ಎಂದು ಬಯಸಲು ಸಾಧ್ಯವಿದೆಯೇ? ಇಲ್ಲ. ಏಕೆ? ನಮ್ಮ ಯಾವುದೇ ತಪ್ಪಿಲ್ಲದೆ ಹೀನ, ದೀನ ಸ್ಥಿತಿಯಲ್ಲಿ ಹುಟ್ಟುವುದಾದರೆ ಅದನ್ನು ದೇವರು ಮಾಡಿದ ಪಕ್ಷಪಾತ ಎನ್ನಲೇಬೇಕಾಗುತ್ತದೆ. ದೇವರು ಪಕ್ಷಪಾತ ಮಾಡುತ್ತಾನೆ ಎಂದರೆ ಯಾರು ನಂಬುತ್ತಾರೆ? ದೇವರು ಪಕ್ಷಪಾತಿಯಲ್ಲ ಅನ್ನುವುದಾದರೆ ಈ ರೀತಿ ಹುಟ್ಟುವುದಕ್ಕೆ ಬೇರೆ ಏನೋ ಕಾರಣವಿರಲೇಬೇಕು. ಅದು ಏನು?
     ಪುನರ್ಜನ್ಮವನ್ನು ನಂಬುವುದಾದರೆ ಶರೀರ ಬೇರೆ ಮತ್ತು ಶರೀರದ ಚೈತನ್ಯಕ್ಕೆ ಕಾರಣವೆನಿಸಿದ ಜೀವಾತ್ಮ ಬೇರೆ ಅನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಸತ್ತ ನಂತರ ಶರೀರ ಅಂತ್ಯ ಸಂಸ್ಕಾರದ ಮೂಲಕ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಜೀವಾತ್ಮ ಜೀರ್ಣವಾದ ಬಟ್ಟೆಯನ್ನು ಎಸೆದು ಹೊಸ ಬಟ್ಟೆಯನ್ನು ತೊಡುವಂತೆ ಹೊಸ ಶರೀರದಲ್ಲಿ ಚೈತನ್ಯಶಾಲಿಯಾಗುತ್ತದೆ. ಇದನ್ನು ಒಪ್ಪುವುದಿಲ್ಲವೆಂದರೆ ಅಂತ್ಯ ಸಂಸ್ಕಾರದ ಜೊತೆಗೆ ಆತ್ಮವೂ ನಾಶವಾಗುತ್ತದೆ ಎನ್ನಬೇಕಾಗುತ್ತದೆ. ಯಾವುದು ಸರಿಯಿರಬಹುದು? ಪುನರ್ಜನ್ಮವಿಲ್ಲವೆಂದಾದರೆ ಹುಟ್ಟುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಡವ, ಶ್ರೀಮಂತ, ಹೀನ-ದೀನ, ಅಂಗವಿಕಲ, ಇತ್ಯಾದಿಯಾಗಿ ತಮ್ಮ ಯಾವುದೇ ತಪ್ಪಿಲ್ಲದೆ ಹುಟ್ಟುವುದಕ್ಕೆ ಸಮಂಜಸ ಕಾರಣ ಕೊಡುವುದು ಕಷ್ಟವಾಗುತ್ತದೆ. ಜೀವಾತ್ಮ ಅವಿನಾಶಿ, ಆದಿ-ಅಂತ್ಯಗಳಿಲ್ಲದುದು ಎಂದು ವೇದ ಹೇಳುತ್ತದೆ. ಮಾಡಿದ ಕರ್ಮಕ್ಕನುಸಾರವಾಗಿ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ವೇದ ಸಾರುತ್ತದೆ. ಕರ್ಮಫಲಭೋಗ ಅನಿವಾರ್ಯ ಎಂದು ಗೀತೆ ಘೋಷಿಸುತ್ತದೆ. ಅಥರ್ವ ವೇದದ ಈ ಮಂತ್ರ ನೋಡಿ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ ಸಹಾಯದಿಂದ ಮೋಕ್ಷ ಸಿಗುತ್ತದೆ ಎಂಬುದೂ ಕೂಡ ಇಲ್ಲ ಮತ್ತು ಇದಕ್ಕೆ ಆಧಾರವೂ ಇಲ್ಲ. ನಮ್ಮ ಈ ಒಡಕಿಲ್ಲದ, ಗೂಢವಾಗಿ ಇಡಲ್ಪಟ್ಟಿರುವ ಅಂತಃಕರಣದ ಪಾತ್ರೆಯಲ್ಲಿ  ಬೇಯಿಸಿದ ಅನ್ನವು (ಕರ್ಮಫಲವಿಪಾಕ) ಅದನ್ನು ಬೇಯಿಸಿದವನನ್ನು ಪುನಃ ಮರಳಿ ಸೇರಿಯೇ ತೀರುತ್ತದೆ ಎಂಬುದು ಈ ಮಂತ್ರದ ಆರ್ಥ. 'ಮಾಡಿದ್ದುಣ್ಣೋ ಮಹರಾಯ!' ಜೀವಿತ ಕಾಲದಲ್ಲಿ ಮಾಡಿದ ಒಳ್ಳೆಯ, ಕೆಟ್ಟ ಕಾರ್ಯಗಳಿಗೆ ಅಂತರ್ನಿಹಿತವಾದ ಮಾಪಕವಿದ್ದು, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ. ಅದಕ್ಕೆ ತಕ್ಕಂತೆ ಮುಂದಿನ ಜನ್ಮ ನಿರ್ಧರಿಸಲ್ಪಡುತ್ತದೆ. ಇದನ್ನು ಒಪ್ಪುವುದಾದರೆ, ಹುಟ್ಟುವಾಗಲೇ ಮೇಲೆ ಹೇಳಿದಂತೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದಕ್ಕೆ ಕಾರಣ ಸಿಗುತ್ತದೆ. ಇದಲ್ಲದೆ ಬೇರೆ ಕಾರಣಗಳು ಅಷ್ಟೊಂದು ಸಮಂಜಸವಾಗಿ ತೋರಲಾರವು.
     ತಮ್ಮ ಯಾವುದೇ ತಪ್ಪಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಜನಿಸುವುದೇ ಪುನರ್ಜನ್ಮವನ್ನು ಸಮರ್ಥಿಸಬಹುದಾದ ಒಂದು ಪ್ರಬಲ ಕಾರಣವೆನಿಸುತ್ತದೆ. ಇದಕ್ಕೆ ಪೂರಕವಾಗಿ ಒಬ್ಬರೇ ತಂದೆ-ತಾಯಿಗಳಿಗೆ ಜನಿಸಿದ ಎಲ್ಲಾ ಮಕ್ಕಳೂ ಒಂದೇ ರೀತಿಯ ಗುಣ-ಸ್ವಭಾವದವರಾಗಿರುವುದಿಲ್ಲ. ಪುನರ್ಜನ್ಮವಿಲ್ಲವೆಂದಾದರೆ ಒಬ್ಬ ತಂದೆ-ತಾಯಿಗಳಿಗೆ ಹುಟ್ಟಿದ, ಒಂದೇ ರೀತಿಯ ಪರಿಸರದಲ್ಲಿ ಬೆಳೆದ ಮಕ್ಕಳೆಲ್ಲರೂ ಒಂದೇ ರೀತಿಯ ಗುಣ-ಸ್ವಭಾವದವರಾಗಬೇಕಿತ್ತು. ಹೀಗೆ ಇರುವ ಸಂಭವ ಅತಿ ಕಡಿಮೆಯೆಂದೇ ಹೇಳಬೇಕು. ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು ಅಲ್ಲವೇ? ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ ಎಂಬ ವಾದವೂ ಮುಂದೆ ಬರುತ್ತದೆ. ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಈ ಜನ್ಮದ್ದೇ ಎಷ್ಟೋ ಸಂಗತಿಗಳು ನಮಗೆ ಮರೆತುಹೋಗುತ್ತದೆಯಲ್ಲವೇ? ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳನ್ನೂ ನಾವು ಕಾಣುತ್ತಿರುತ್ತೇವಲ್ಲವೆ?
     ಋಗ್ವೇದದ ಈ ಮಂತ್ರ ನೋಡಿ: ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್| ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ಅಂತಃಸ್ಥಿತವಾದ ಪರಮಾತ್ಮ ತತ್ವ ಅತ್ಯಂತ ಚೈತನ್ಯಯುತವಾಗಿದ್ದು, ಜೀವದಾನ ಮಾಡುವಲ್ಲಿ, ಲೋಕ ಲೋಕಾಂತರಗಳಲ್ಲಿ ಸಂಚರಿಸುವಲ್ಲಿ ಪ್ರಧಾನವಾಗಿದೆ. ಮೃತರಾದವರ ಜೀವಾತ್ಮಕ್ಕೆ ಸಾವಿಲ್ಲದೆ ಇದ್ದು, ನಂತರದಲ್ಲಿ ಅದು ಸಾವು ಇರುವ ಶರೀರದಲ್ಲಿ ಪ್ರವೇಶಿಸಿ, ತನಗೆ ಪ್ರಾರಬ್ಧ ರೀತಿಯಲ್ಲಿ (ಕರ್ಮ ಫಲಾನುಸಾರವಾಗಿ) ಸಿಕ್ಕಿದ ಪರಿಸರದಲ್ಲಿ ಸಂಚರಿಸುತ್ತಿರುತ್ತದೆ ಎಂಬುದು ಈ ಮಂತ್ರದ ಅರ್ಥ. ಈ ರೀತಿಯಲ್ಲಿ ಪ್ರತಿ ಜೀವಿಯೂ ಹಿಂದೆ ಎಷ್ಟು ಜನ್ಮಗಳನ್ನು ಹಾದು ಬಂದಿದೆಯೋ, ಮುಂದೆ ಎಷ್ಟು ಜನ್ಮಗಳನ್ನು ಎತ್ತಬೇಕಿದೆಯೋ ಯಾರಿಗೆ ಗೊತ್ತು? ಶಂಕರಾಚಾರ್ಯರ 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ' ಎಂಬ ಉಕ್ತಿ ಹೇಳುವುದೂ ಇದನ್ನೇ!
     ಪುರುಷರು ಪುರುಷರಾಗಿಯೇ ಜನಿಸುತ್ತಾರೆಯೇ? ಸ್ತ್ರೀ ಸ್ತ್ರೀಯಾಗಿಯೇ ಜನಿಸುತ್ತಾಳೆಯೇ? ಇಲ್ಲ, ವೇದದ ಪ್ರಕಾರ ಜೀವಾತ್ಮಕ್ಕೆ ಲಿಂಗ ಭೇದವಿಲ್ಲ, ಜೀವಭೇದವೂ ಇಲ್ಲ. ಗಳಿಸಿದ ಕರ್ಮಫಲಾನುಸಾರವಾಗಿ ಯಾವ ಜೀವಿಯಾಗಿಯಾದರೂ ಜನಿಸಬಹುದಾಗಿರುತ್ತದೆ. ಈ ಮಂತ್ರ ನೋಡಿ: ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ| ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭). ಜೀವಾತ್ಮವು ಸ್ತ್ರೀಯೂ ಆಗಿದೆ, ಪುರುಷನೂ ಆಗಿದೆ, ಕುಮಾರನೂ ಆಗಿದೆ, ಕುಮಾರಿಯೂ ಆಗಿದೆ. ವೃದ್ಧಾಪ್ಯದ ನಂತರದಲ್ಲಿ ಮೃತನಾದ ಮೇಲೆ ಮತ್ತೆ ಜನ್ಮವೆತ್ತಿ ಎಲ್ಲೆಡೆಯೂ ಪ್ರವೇಶಿಸುವುದಾಗಿದೆ ಎಂದು ಈ ಮಂತ್ರ ಹೇಳುತ್ತದೆ. ಲಿಂಗರಹಿತವಾದ ಜೀವಾತ್ಮವು ತಾನು ಹೊಂದಿದ ಶರೀರಕ್ಕೆ ಅನುಗುಣವಾಗಿ ಸ್ತ್ರೀ, ಪುರುಷ, ಕುಮಾರ ಅಥವ ಕುಮಾರಿ ಎಂದು ಕರೆಸಿಕೊಳ್ಳುತ್ತದೆ. ಜೀವಾತ್ಮವು ಅನೇಕ ಜನ್ಮಗಳನ್ನೆತ್ತುತ್ತಾ ವಿಕಾಸವಾಗುತ್ತಾ ಹೋಗಿ, ಜ್ಞಾನ, ಕರ್ಮ, ಉಪಾಸನೆಗಳ ಫಲವಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಾ ಸತ್ಕರ್ಮದ ಫಲವಾಗಿ ಮೋಕ್ಷ ಸ್ಥಿತಿ ತಲುಪುತ್ತದೆ ಎಂದು ವೇದ ಸಾರುತ್ತದೆ.
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
     ಒಂದಂತೂ ನಮಗೆ ಅರ್ಥವಾಗುತ್ತದೆ, ಅದೇನೆಂದರೆ ನಾವು ಇಂದು ಇರುವ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳು ಕಾರಣೀಭೂತವಾಗಿವೆ ಎನ್ನುವುದಾದರೆ, ಮುಂದೆ ಏನಾಗಬೇಕು ಎಂದು ನಾವು ಬಯಸುತ್ತೇವೆಯೋ ಅದಕ್ಕೆ ನಮ್ಮ ಇಂದಿನ ಕರ್ಮಗಳು ನೆರವಾಗುತ್ತವೆ ಅಲ್ಲವೇ? ಜನ್ಮ ಜನ್ಮಾಂತರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸುವೆ. ಜೀವಾತ್ಮ ಅವಿನಾಶಿ ಎಂದರೆ ನಾವು ಎಂದೆಂದೂ ಇದ್ದೆವು, ಮುಂದೆಯೂ ಇರುತ್ತೇವೆ ಅಲ್ಲವೇ? ಅಂದರೆ, ನಾವು ಈಗ ದೇವರೆಂದು ಪೂಜಿಸುವ ರಾಮ, ಕೃಷ್ಣ, ಶಿವರ ಕಾಲದಲ್ಲಿಯೂ ಇದ್ದೆವು. ನಾವು ಆಗ ರಾಮನೇ ಆಗಿದ್ದಿರಬಹುದು, ರಾವಣನೇ ಆಗಿರಬಹುದು, ವಾಲಿ, ಸುಗ್ರೀವರಾಗಿದ್ದಿರಬಹುದು ಅಥವ ಇನ್ನು ಯಾರೋ ಆಗಿದ್ದಿರಬಹುದು. ಬುದ್ಧ, ಮಹಾವೀರ, ಬಸವಣ್ಣ, ಏಸುಕ್ರಿಸ್ತರವರಂತವರುಗಳ ಕಾಲದಲ್ಲಿಯೂ ನಾವು ಯಾವುದೋ ರೀತಿಯಲ್ಲಿ ಇದ್ದೆವು ಅಲ್ಲವೇ? ರಾಮ ಒಳಿತಿನ ಸಂಕೇತ ಮತ್ತು ರಾವಣ ಕೆಡುಕಿನ ಸಂಕೇತವೆಂದು ಇಟ್ಟುಕೊಂಡರೆ, ರಾವಣತ್ವ ಕಳೆದುಕೊಂಡರೆ ರಾವಣನೂ ರಾಮ ಆಗುತ್ತಾನಲ್ಲವೇ? ರಾಮನಾಗುವುದೋ ಅಥವ ರಾವಣನಾಗುವುದೋ ಅಥವ ನಾವು ಬಯಸಿದಂತೆ ಮತ್ತೇನೋ ಆಗುವುದೋ ಎಂಬುದು ನಮ್ಮ ಕೈಯಲ್ಲಿಯೇ ಇದೆ.
-ಕ.ವೆಂ.ನಾಗರಾಜ್.
***************
ದಿನಾಂಕ 18.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಮೇ 20, 2015

ನಾವು ಯಾರು ಬಲ್ಲೆವೇನು? -1


ನಾನಾರು ಅವನಾರು ಜಗವೆಂದರೇನು
ಪ್ರಶ್ನತ್ರಯಗಳು ನರರ ಕಾಡದಿಹವೇನು |
ಹಿಂದಿದ್ದು ಈಗಿರುವ ಎಂದೆಂದು ಇಹವೀ
ಒಗಟಿಗುತ್ತರವ ತಿಳಿದಿಹೆಯ ಮೂಢ ||

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ನಾವು ಯಾರು? ಜಗತ್ತು ಅಂದರೆ ಏನು? ದೇವರು ಯಾರು? ಈ ಮೂರು ಪ್ರಶ್ನೆಗಳು ಅನಾದಿ ಕಾಲದಿಂದಲೂ ನರರನ್ನು ಕಾಡುತ್ತಲೇ ಇವೆ. ಮುಂದೂ ಕಾಡುತ್ತಲೇ ಇರುತ್ತವೆ. ದಾರ್ಶನಿಕರು, ಸಾಧು-ಸಂತರು, ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು, ಧರ್ಮಗ್ರಂಥಗಳು, ಇತ್ಯಾದಿಗಳೆಲ್ಲವೂ ಮತ್ತು ಎಲ್ಲರೂ ವಿವರಿಸಲು ಪ್ರಯತ್ನಿಸಿರುವುದು ಮತ್ತು ವಿವರಿಸಿರುವುದು ಈ ಮೂರು ಅಂಶಗಳ ಕುರಿತೇ ಆಗಿದೆ. ಬೈಬಲ್ಲು, ಕುರಾನು, ವಿವಿಧ ಪುರಾಣ/ಪುಣ್ಯ ಕಥೆಗಳು ಈ ಜಗತ್ತು, ಜೀವಿಗಳೆಲ್ಲವನ್ನೂ ಸೃಷ್ಟಿಸಿದ್ದು ದೇವರೇ ಎಂದು ಹೇಳುತ್ತವೆ. ಏಕದೇವವಾದ, ಬಹುದೇವವಾದ, ನಿರೀಶ್ವರವಾದ, ದ್ವೈತ, ಅದ್ವೈತ, ತ್ರೈತವಾದ, ಒಂದೇ, ಎರಡೇ? ಅಸಂಖ್ಯವಾದ ವಿಚಾರಗಳು, ತರ್ಕಗಳು, ಜಿಜ್ಞಾಸೆಗಳು, ಚರ್ಚೆಗಳು ಎಂದಿನಿಂದಲೂ ನಡೆಯುತ್ತಲೇ ಇವೆ, ಮುಂದೂ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಸತ್ಯ, ಮಿಕ್ಕಿದ್ದೆಲ್ಲವೂ ಸುಳ್ಳು ಎನ್ನುತ್ತಾರೆ. ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ನೂರೆಂಟು ತರ್ಕ-ವಿತರ್ಕಗಳ ಸಾಲಿನಲ್ಲಿ ಈ ಲೇಖನವೂ ಸೇರಿಕೊಂಡುಬಿಡಲಿ, ಏನಂತೀರಿ?
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ ||
     ಹಿಂದಿನ ಲೇಖನವೊಂದರಲ್ಲಿ 'ನಾವು' ಎಂದು ಅಂದುಕೊಂಡಿರುವ ಶರೀರವಾಗಲೀ, ನಮ್ಮ ಮನಸ್ಸಾಗಲೀ ವಾಸ್ತವವಾಗಿ 'ನಾವು' ಆಗಿರದೆ ನಮ್ಮೊಳಗಿನ ಪ್ರಾಣವೇ ವಸ್ತುಶಃ ನಾವಾಗಿರುತ್ತೇವೆ ಎಂಬ ಬಗ್ಗೆ ಚರ್ಚಿಸಿದೆವು. ದೇಹದಲ್ಲಿ ಪ್ರಾಣಚೈತನ್ಯ ಇರುವವರೆಗೆ ಆ ದೇಹಕ್ಕೆ ಬೆಲೆ, ಪ್ರಾಣ ಹೋದ ನಂತರ ಅದಕ್ಕೆ ಮೊದಲಿನ ಪ್ರಾಮುಖ್ಯತೆ ಇರುವುದಿಲ್ಲ. ನಾವು ಅಂದರೆ ನಮ್ಮೊಳಗಿನ ಪ್ರಾಣಚೈತನ್ಯ ಅಥವ ಜೀವಾತ್ಮ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಈ ಜೀವಾತ್ಮ ಅನ್ನುವುದಾದರೂ ಏನು? ನಮ್ಮೊಳಗಿನ ಕೌತುಕವನ್ನು ನಾವೇ ಪೂರ್ಣವಾಗಿ ಅರಿಯಲಾಗದಿರುವುದು ಕೌತುಕವೇ ಆಗಿದೆ.
ಕಾಣದದು ನಯನ ಕೇಳಿಸದು ಕಿವಿಗೆ
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? ||
     ಈ ಜೀವಾತ್ಮದ ಕುರಿತು ಹಲವಾರು ಧರ್ಮಗ್ರಂಥಗಳು ಹಲವು ರೀತಿ ತಿಳಿಸಿವೆ, ಹಲವರು ಹಲವು ರೀತಿಯಲ್ಲಿ ವಿವರಿಸುತ್ತಾರೆ. ಯಾವುದು ಸರಿ? ಈ ಕುರಿತು ವಿವಿಧ ವಿಚಾರಗಳ ಅಧ್ಯಯನ, ಮನನ, ಮಂಥನಗಳಿಂದ ನಮಗೊಪ್ಪುವ ವಿಚಾರವನ್ನು ನಾವು ಸತ್ಯಕ್ಕೆ ಹತ್ತಿರವೆಂದುಕೊಳ್ಳಬೇಕಾಗುತ್ತದೆ. ಏಕೆಂದರೆ 'ಇದು ಹೀಗೇನೇ' ಎಂದು ಖಚಿತವಾಗಿ ಸಾಧಿಸಿ ತೋರಿಸುವುದು ಮಾನವನ ಸೀಮಿತ ಬುದ್ಧಿಶಕ್ತಿಗೆ ಅಶಕ್ಯವಾಗಿದೆ. "ನಮ್ಮ ಗುರುಗಳು ದೊಡ್ಡ ಪಂಡಿತರು, ಅವರು ಹೀಗೆ ಹೇಳಿದ್ದಾರೆ ಎಂದ ಮೇಲೆ ಅದು ಸರಿಯಾಗಿಯೇ ಇರುತ್ತದೆ; ನಮ್ಮ ಧರ್ಮಶಾಸ್ತ್ರದಲ್ಲಿ ಹೀಗೆ ಹೇಳಿದೆ, ಅದನ್ನು ನಾವು ಒಪ್ಪಲೇಬೇಲ್ಲವೇ?" ಎಂಬಂತಹ ವಾದಗಳೂ ಕೇಳಿಬರುತ್ತವೆ. ತರ್ಕದಲ್ಲಿ ತೊಡಗುವ ಮನಸ್ಸೇ ಸತ್ಯ ಅನ್ವೇಷಿಸಲು ಸಾಧ್ಯ. ಪೂರ್ವಾಗ್ರಹ ಪೀಡಿತರಾಗದೆ, ನಾವು ನಂಬಿದ್ದೇ ಸತ್ಯವೆಂದು ವಾದಿಸಹೋಗದೆ ನಿಜಸತ್ಯವನ್ನು ತಿಳಿಯುವ ಕುತೂಹಲ, ಆಸಕ್ತಿ ಮತ್ತು ಅಧ್ಯಯನಗಳೇ ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿರುತ್ತವೆ. ಈ ವಿಷಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಈ ವೇದಮಂತ್ರದ ಕರೆ ಆಪ್ಯಾಯಮಾನವೆನಿಸುತ್ತದೆ: 'ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಛ ಶಸ್ಯತೇ | ವಿಶ್ವಸ್ಯ ತಸ್ಯ ಭವತಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತಃ || (ಋಕ್. ೫.೫೫.೮)' 'ಯಾವುದು ಪ್ರಾಚೀನವೋ, ಯಾವುದು ನವೀನವೋ, ಯಾವುದು ನಿಮ್ಮ ಅಂತಃಕರಣದಿಂದ ಉದ್ಭವಿಸುತ್ತದೋ ಮತ್ತು ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ, ಆ ಎಲ್ಲದಕ್ಕೂ ಕಿವಿಗೊಡಿ. ಆದರೆ ಕಲ್ಯಾಣಮಾರ್ಗದಲ್ಲಿ ನಡೆಯುವವರ ಹಿಂದೆ ನಿಮ್ಮ ಜೀವನ ರಥ ಸಾಗಲಿ' ಎಂಬುದು ಇದರ ಅರ್ಥ. ಇತಿಹಾಸದಿಂದ ಪಾಠ ಕಲಿಯೋಣ; ವರ್ತಮಾನದ ಸಂಗತಿಗಳನ್ನೂ ಅವಲೋಕಿಸೋಣ; ಯಾವುದು ಶಾಸ್ತ್ರಗಳಲ್ಲಿ ಹೇಳಲ್ಪಟ್ಟಿದೆಯೋ ಅದನ್ನೂ ಆಲಿಸೋಣ. ನಮ್ಮ ಅಂತರಂಗದ ಧ್ವನಿಗೂ ಕಿವಿಗೊಟ್ಟು ಒಳ್ಳೆಯ ದಾರಿಯಲ್ಲಿ ನಡೆಯುವವರ ಮಾರ್ಗವನ್ನು ಅನುಸರಿಸೋಣ ಎಂಬುದರಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಬೇಕೆಂಬ ಕರೆಯಿದೆ. ಈ ಮಂತ್ರವೂ ಸಹ ಹೇಳುತ್ತದೆ: 'ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)' ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ ಎಂಬುದು ಇದರ ಅರ್ಥ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ?
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
     ವಿಚಾರ ಮಾಡೋಣ. ಜೀವಿಗಳು ದೇವರ ಸೃಷ್ಟಿ, ದೇವರು ಸೃಷ್ಟಿಸುವ ಮುನ್ನ ಜೀವಿಗಳು ಇರಲಿಲ್ಲ ಎಂದು ಒಂದು ವಾದವಿದೆ. ಇಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ದೇವರು ಸೃಷ್ಟಿಸಿದ್ದಾದರೆ ಏಕೆ ಸೃಷ್ಟಿಸಿದ? ಸುಮ್ಮನೆ ಸೃಷ್ಟಿಸಿದನೆ? ತನಗೆ ಬೇಕಾಗಿತ್ತು, ಸೃಷ್ಟಿಸಿದ ಎಂದರೆ, 'ಬೇಕು/ಬೇಕಾಗಿತ್ತು' ಎಂಬ ಭಾವನೆ ಇದ್ದಲ್ಲಿ ಸೃಷ್ಟಿಕರ್ತನನ್ನು ದೇವರೆನ್ನಲಾಗುವುದಿಲ್ಲ. ಏಕೆಂದರೆ 'ಏನಾದರೂ ಬೇಕು' ಎಂದರೆ ಅವನಿಗೆ ಏನೋ ಕೊರತೆಯಿತ್ತು ಅನ್ನಿಸುವುದಿಲ್ಲವೇ? ಇದು ಸರ್ವತೃಪ್ತ ದೇವರಿಗೆ ವಿರುದ್ಧವಾದವಾಗುತ್ತದೆ.
     ದೇವರು ಏನು ಬೇಕಾದರೂ ಮಾಡಬಲ್ಲ, ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲ. ಜೀವಿಗಳನ್ನು ಸೃಷ್ಟಿಸಿದ್ದೂ ಹೀಗೆಯೇ ಅನ್ನುವವರಿದ್ದಾರೆ. ವಾದದ ಸಲುವಾಗಿ ಇದನ್ನು ಒಪ್ಪಿಕೊಂಡರೂ, ಹೀಗೆ ವಾದಿಸುವವರನ್ನು ನಾವು ಪ್ರಶ್ನಿಸಲು ಅವಕಾಶವಿದೆ. ದೇವರು ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲನಾದರೆ ಇನ್ನೊಬ್ಬ ದೇವರನ್ನು, ತನಗಿಂತ ಬಲಶಾಲಿಯಾದ ಇನ್ನೊಬ್ಬ ದೇವರನ್ನು ಸೃಷ್ಟಿಸಲು ಅವನಿಗೆ ಸಾಧ್ಯವಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಸರಿ. ಆಗ ಸರ್ವಶಕ್ತನಿಗಿಂತ ಸರ್ವಶಕ್ತ ಸೃಷ್ಟಿಯಾಗುವುದರಿಂದ ದೇವರನ್ನು ಸರ್ವಶಕ್ತ ಎನ್ನಲು ಕಷ್ಟವಾಗುತ್ತದೆ. ಶೂನ್ಯದಿಂದ ಸೃಷ್ಟಿ ಸಾಧ್ಯ ಅನ್ನುವುದು ವೈಜ್ಞಾನಿಕವಾಗಿ ವಿಚಾರ ಮಾಡಿದರೂ ನಿಲ್ಲುವಂತಹ ವಾದವಾಗುವುದಿಲ್ಲ.
     ಹಾಗಾದರೆ ಜೀವಿಗಳನ್ನು ದೇವರು ಜಡಪ್ರಕೃತಿಯಿಂದ ಸೃಷ್ಟಿಸಿದನೇ? ಇದೂ ಸಹ ಒಪ್ಪಲು ಕಷ್ಟವೆನಿಸುತ್ತದೆ. ಜಡ ವಸ್ತುಗಳಿಂದ ಮತ್ತೊಂದು ಜಡವಸ್ತುವನ್ನು ನಿರ್ಮಿಸಬಹುದೇ ಹೊರತು ಜೀವಚೈತನ್ಯ ಒಡಗೂಡಿದ ಜೀವಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಜಡವಸ್ತುಗಳಿಗೆ ಜೀವಚೈತನ್ಯದಿಂದ ಅರ್ಥ ಬಂದೀತೇ ಹೊರತು, ಜಡವಸ್ತುಗಳಿಂದ ಚೈತನ್ಯಶೀಲ ವಸ್ತುವಿನ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದೂ ಆಗದು. ಹಾಗಾದರೆ ಜೀವಿಯ ಸೃಷ್ಟಿ ಹೇಗೆ ಆಗಿರಬಹುದು?
     ಲೋಕದ ಜೀವಿಗಳೆಲ್ಲಾ ಪರಮಾತ್ಮನ ಅಂಶದಿಂದ ಸೃಷ್ಟಿಯಾಗಿದೆ ಎಂಬ ವಾದವೂ ಇದೆ. ಈ ವಿಚಾರದಲ್ಲಿ ತರ್ಕಿಸೋಣ. ಸುಮಾರು ೮೪ ಲಕ್ಷ ಬಗೆಯ ಜೀವಜಂತುಗಳಿವೆ ಎನ್ನುತ್ತಾರೆ. ಇದರಲ್ಲಿ ಮಾನವ ಜೀವಿಯೂ ಒಂದು ಜೀವಿಯಾಗಿದೆ. ಅದೆಷ್ಟು ಜೀವಿಗಳಿವೆಯೋ ಆ ದೇವರಿಗೇ ಗೊತ್ತು. ಈ ಜೀವಿಗಳನ್ನೆಲ್ಲಾ ದೇವರು ತನ್ನ ಅಂಶದಿಂದಲೇ ಸೃಷ್ಟಿಸಿದ ಎಂದರೆ ಆತನ ಎಷ್ಟು ಅಂಶ ಈ ಜೀವಿಗಳಲ್ಲಿ ಹಂಚಿಹೋಗಿರಬೇಕು! ಇಷ್ಟವಾಗದ ಪ್ರಶ್ನೆ ಇಲ್ಲಿ ಹುಟ್ಟುತ್ತದೆ, ಇಷ್ಟೆಲ್ಲಾ ಅಂಶವನ್ನು ಜೀವಿಗಳಲ್ಲಿ ಹಂಚಿದ ಮೇಲೂ ದೇವರು ಪರಿಪೂರ್ಣ ಎನ್ನಬಹುದೇ? ಪರಿಪೂರ್ಣನಲ್ಲವೆಂದರೆ ಆತನು ದೇವರಾಗಲಾರ ಅಲ್ಲವೇ? ಇಲ್ಲಿ ಇಂತಹ ಅನೇಕ ಉಪಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಇವುಗಳಿಗೆ ಸಮಂಜಸ ಉತ್ತರ ಕಲ್ಪಿಸಿಕೊಳ್ಳುವುದು ಕಷ್ಟ.
     'ಗೊಂಬೆಯಾಟವಯ್ಯಾ, ಈ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ'- ಲೋಕದ ಎಲ್ಲಾ ಸಂಗತಿಗಳಿಗೂ ದೇವರೇ ಕಾರಣ, ಆತನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡದು ಎಂಬ ಅರ್ಥದ ಮಾತುಗಳನ್ನು ಕೇಳುತ್ತೇವೆ. 'ನಮ್ಮ ಕೈಯಲ್ಲೇನಿದೆ, ಎಲ್ಲಾ ಅವನು ಹೇಳಿದಂತೆ ನಡೆಯುತ್ತದೆ' ಎಂದು ಹೇಳುತ್ತೇವೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
     ಜೀವಿಗಳಲ್ಲಿ ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಸುತರಾಂ ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಪುನರ್ಜನ್ಮವಿಲ್ಲವೆನ್ನುವ, ಇರುವುದೊಂದೇ ಜನ್ಮವೆನ್ನುವ ವಾದಗಳಿಗೆ ಇಂತಹ ನ್ಯೂನತೆಯಿಂದ ಒಡಗೂಡಿದ ಜೀವಜಂತುಗಳ ಸೃಷ್ಟಿಗಳಿಗೆ ಸ್ಪಷ್ಟನೆ ಕೊಡಲಾಗುವುದಿಲ್ಲ.
     ಇನ್ನೊಂದು ವಾದವಿದೆ. ಅದೆಂದರೆ 'ಜೀವಚೈತನ್ಯ ಅನ್ನುವುದು ಶರೀರಕ್ಕೆ ಸಂಬಂಧಿಸಿದುದೇ ಆಗಿದೆ., ಶರೀರದೊಂದಿಗೇ ಹುಟ್ಟುತ್ತದೆ ಮತ್ತು ಶರೀರದೊಂದಿಗೇ ಸಾಯುತ್ತದೆ' ಎಂಬುದೇ ಆಗಿದೆ. ಇಲ್ಲೂ ಸಂದೇಹಗಳು ಬರುತ್ತವೆ. ಈ ಪ್ರಾಣಚೈತನ್ಯ ಶರೀರದೊಂದಿಗೇ ಹುಟ್ಟುವುದಾಗಿದ್ದರೆ, ಶರೀರದೊಂದಿಗೇ ನಷ್ಟವಾಗಬೇಕು. ಅಂದರೆ, ಜೀವಿ ಸತ್ತಾಗ ಶರೀರ ಇರುತ್ತದೆ. ಚೈತನ್ಯವೂ ಇರಬೇಕಿತ್ತಲ್ಲವೇ? ಇದೆಂತಹ ಚೋದ್ಯ! ಈ ಚೈತನ್ಯ ಅನ್ನುವುದು ಶರೀರದ ಗುಣವೇ ಅಥವ ಹೊರಗಿನ ಮತ್ತಾವುದೋ ಸಂಗತಿಯೋ? ಶರೀರ ಜಡವಸ್ತುವಾಗಿದೆ. ಆದರೆ ಈ ಚೈತನ್ಯ ಜಡವಸ್ತುವಲ್ಲ. ಜಡವಸ್ತುವಿನಿಂದ ಚೈತನ್ಯಮಯಿ ವಸ್ತು ಜನಿಸುವುದಾದರೂ ಹೇಗೆ? ಅದು ಶರೀರದಿಂದ ಹೊರತಾದ ಸಂಗತಿಯಾಗಿದ್ದು ಶರೀರದೊಂದಿಗೆ ಸಂಯೋಜಿಸಲ್ಪಟ್ಟಿದೆಯೆಂದರೆ ಶರೀರಕ್ಕೂ ಅದಕ್ಕೂ ಸಂಬಂಧ ಹೇಗೆ? ಶರೀರಕ್ಕಾದರೋ ವಿವೇಚನಾಶಕ್ತಿಯಿಲ್ಲ, ಆದರೆ ಈ ಪ್ರಾಣಚೈತನ್ಯ ವಿವೇಚಿಸಬಲ್ಲದುದಾಗಿದೆ. ಹೇಗೆ ತರ್ಕಿಸಿದರೂ ಶರೀರದ ಭಾಗವಾಗಿ ಈ ಜೀವಾತ್ಮ ಹುಟ್ಟುತ್ತದೆ, ಶರೀರದೊಂದಿಗೇ ಸಾಯುತ್ತದೆ ಎಂಬುದು ನಿಲ್ಲುವಂತಹ ವಾದವಾಗದು.
     ಈ ಜೀವಾತ್ಮ ಅನ್ನುವುದು ದೇವರಿಂದ ಹೊಸದಾಗಿ ಸೃಷ್ಟಿಸಿದುದಲ್ಲ, ಶೂನ್ಯದಿಂದ ಸೃಷ್ಟಿಯಾದುದಲ್ಲ, ಜಡ ಪ್ರಕೃತಿಯ ನಿರ್ಮಿತವಲ್ಲ, ಪರಮಾತ್ಮನ ಅಂಶವಲ್ಲ, ಜೀವಿಗಳ ಎಲ್ಲಾ ಚಟುವಟಿಕೆಗಳಿಗೂ ದೇವರೇ ಹೊಣೆಯಲ್ಲ, ಹುಟ್ಟಿನ ರೀತಿಗೆ ದೇವರು ಕಾರಣನಲ್ಲ, ಶರೀರದ ಹುಟ್ಟಿನೊಂದಿಗೇ ಬರುವುದಲ್ಲವೆಂದರೆ ಅದರ ಅಸ್ತಿತ್ವಕ್ಕೆ ವಿವರಣೆ ಕೊಡುವುದಾದರೂ ಹೇಗೆ? ಒಂದು ಸಮಂಜಸವೆನ್ನಿಸುವ ವಾದವಿದೆ. ಜೀವಾತ್ಮ ಅನ್ನುವುದು ಪರಮಾತ್ಮ ತತ್ತ್ವದಂತೆ ಅನಾದಿ ಮತ್ತು ಅನಂತವಾದುದು ಎಂಬ ಈ ವಾದಕ್ಕೆ ಮೇಲಿನ ತರ್ಕಗಳು ಪುಷ್ಟಿ ನೀಡುತ್ತವೆ. ವಿಭಿನ್ನ ರೀತಿಯ ಹುಟ್ಟು, ಸ್ಥಿತಿ-ಗತಿಗಳಿಗೆ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳು ಸಮಂಜಸವೆನ್ನುವಂತಹ ವಿವರಣೆ ಕೊಡುತ್ತವೆ. ಜೀವಾತ್ಮನ ಕುರಿತು ಮತ್ತಷ್ಟು ವಿಷಯಗಳ ಬಗ್ಗೆ ಹಾಗೂ ಪುನರ್ಜನ್ಮ ಮತ್ತು ಕರ್ಮ ಸಿದ್ಧಾಂತಗಳ ಕುರಿತು ಇನ್ನೊಂದು ಲೇಖನದಲ್ಲಿ ಚರ್ಚಿಸೋಣ.
ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 11.05.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಮೇ 14, 2015

ಪರಿಪೂರ್ಣ ಆನಂದ


ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ತಾ ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ ||
    'ಆ ಆನಂದ ಪರಮೋಚ್ಛ, ಅದು ಪರಿಪೂರ್ಣ, ಅದು ಅಖಂಡ, ಶಾಶ್ವತ, ಅದು ಸಚ್ಚಿದಾನಂದ!'- ಪರಮಾತ್ಮನನ್ನು, ಪರಮಾನಂದನನ್ನು ಹೀಗೆ ವರ್ಣಿಸುತ್ತಾರೆ. ನಿಜವಾದ ಆನಂದ ಶಾಶ್ವತವಾದದ್ದಾದರೆ, ಅದೇ ಆನಂದ ಅನ್ನುವುದಾದರೆ ನಾವು ವಿಷಯೋಪಭೋಗಗಳಲ್ಲಿ, ಇನ್ನಿತರ ಬಾಹ್ಯ ಸಂಗತಿಗಳಲ್ಲಿ ಸಂತೋಷ ಕಾಣುತ್ತೇವಲ್ಲಾ, ಇದ ಹೇಗೆ? ಅಶಾಶ್ವತವಾದ ಸಂಗತಿಗಳಲ್ಲಿ ಆನಂದವಿರುವುದಿಲ್ಲವೆಂದಾದರೆ, ಅಂತಹುದರಲ್ಲಿ ಆನಂದ ಕಾಣಸಿಗುವುದರಲ್ಲಿ ಏನೋ ರಹಸ್ಯವಿರಬೇಕು. ಅದೇನಿರಬಹುದು? ನಶ್ವರವಾದ ಸಂಗತಿಗಳಲ್ಲಿ ಆನಂದ ಸಿಗುವುದೇ ಇಲ್ಲವೆಂದಾದರೆ ಯಾರೂ ಸಹ ಐಹಿಕ ಸುಖ-ಭೋಗಗಳಲ್ಲಿ ತೊಡಗುವುದೇ ಇಲ್ಲವಲ್ಲವೇ? ನಿಜಸಂಗತಿಯೆಂದರೆ, ಪರಮಾನಂದದ ಅಸ್ತಿತ್ವ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಕಂಡುಬರುತ್ತದೆ. ಈ ರೀತಿ ಕಂಡುಬರುವ ಸಂತೋಷ ಅಥವ ಆನಂದದ ಹಿಂದೆ ಆನಂದದ ದೊಡ್ಡ ಸಂಗ್ರಹವೇ ಇದೆಯೆಂದು ತೋರಿಸಿಕೊಡುವ ರೀತಿ ಇದಾಗಿದೆ. ನಶ್ವರವಾದ ವಿಷಯಗಳಲ್ಲಿ ಸಿಗುವ ಅಲ್ಪ ಮತ್ತು ಕ್ಷಣಿಕ ಆನಂದದ ಘಳಿಗೆಗಳಲ್ಲೂ ಆನಂದದ ಪರಿಪೂರ್ಣ ತೋರಿಕೆಯ ಅನುಭವವಾಗುತ್ತದೆ. ಪರಿಪೂರ್ಣ ಎಂದು ಅನ್ನಿಸುವ ಎಲ್ಲಾ ಸಂಗತಿಗಳಲ್ಲೂ ಆನಂದ ಎನ್ನುವುದು ಇದ್ದೇ ಇರುತ್ತದೆ.
     ಪ್ರಾಪಂಚಿಕ ಆನಂದ ಬಯಸುವವರು ಮತ್ತು ಬಯಸುವ ವಿಷಯದ ಸಂಗಮವಾದಾಗ ಅದನ್ನು ಹುಡುಕುತ್ತಿರುವ, ಆಶಿಸುತ್ತಿರುವ ಮನಸ್ಸಿಗೆ ತಾನು ಬಯಸಿದ್ದು ಸಿಕ್ಕಿತೆಂಬ ಸಂದೇಶ ರವಾನೆಯಾಗುತ್ತದೆ. ಆಗ ತನ್ನ ಗುರಿ ಈಡೇರಿತೆಂಬ ಭಾವದೊಂದಿಗೆ ಪರಿಪೂರ್ಣತೆಯ ತೃಪ್ತಿ ಲಭ್ಯವಾಗುತ್ತದೆ ಮತ್ತು ಪರಿಣಾಮವಾಗಿ ಆನಂದದ ಸುಖಾನುಭವವಾಗುತ್ತದೆ. ಮನಸ್ಸಿಗೆ ತಾನು ಕೇಳಿದ್ದು ಸಿಕ್ಕಿತೆಂದು ಸಂತೋಷವಾಗುತ್ತದೆ. ಆದರೆ, ಈ ಆನಂದ ಸ್ವಲ್ಪ ಕಾಲ ಮಾತ್ರ ಇರುತ್ತದೆ. ಆಗ ಮನಸ್ಸು ಅಶಾಂತಗೊಳ್ಳುತ್ತದೆ.  ಇನ್ನೊಂದು ಸಂತೋಷದ ಸಂಗತಿಗಾಗಿ ಹಾತೊರೆಯುತ್ತದೆ ಮತ್ತು ಚಡಪಡಿಕೆ ಮತ್ತೆ ಆರಂಭವಾಗುತ್ತದೆ. ಆ ಆನಂದ ಕ್ಷಣಿಕವಾಗಿ ಬರುವಂತಹದು ಮತ್ತು ಮರೆಯಾಗುವಂತಹದು. ಅಲ್ಲೇ ನೆಲೆಸುವಂತಹದು ಅಲ್ಲ. ಇದೇ ಸಮಸ್ಯೆ.  ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಅರಸುವವರು ಯಾರಲ್ಲೇ ಆಗಲಿ, ಅವರು ಆ ಆನಂದವನ್ನು ಸತತವಾಗಿ ಅನುಭವಿಸುತ್ತಿರುವವರನ್ನು ಯಾರನ್ನಾದರೂ ಕಂಡಿದ್ದೇವೆಯೇ? ಮನೆ ಕಟ್ಟಿಸುವುದಿರಬಹುದು, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ ಹೊಂದುವುದಾಗಿರಬಹುದು, ಅಧಿಕಾರ ಪಡೆಯುವುದಾಗಿರಬಹುದು, ಉತ್ತಮ ಸಂಗಾತಿಯನ್ನು ಹೊಂದುವುದಾಗಿರಬಹುದು, ಅದು ಏನೇ ಇರಬಹುದು, ಅಂತಹ ಇಚ್ಛೆ ಈಡೇರಿದಾಗಲೂ ಹೊಂದುವ ಆನಂದ ಪರಿಪೂರ್ಣವೆಂದು ಭಾವಿಸುವವರು ಮತ್ತು ಅದನ್ನು ಸದಾಕಾಲ ಆನಂದದ ಸ್ಥಿತಿಯಲ್ಲಿಯೇ ಆನುಭವಿಸುವವರು ಇರುತ್ತಾರೆ ಅಂದರೆ ಅದು ವಿಶೇಷವೇ ಸರಿ. ಏಕೆಂದರೆ ಮನಸ್ಸು ಪಡೆದಷ್ಟಕ್ಕೇ ಒಪ್ಪಿ ಸುಮ್ಮನಾಗವುದೇ ಇಲ್ಲ. ಅದು ಇನ್ನೂ ಹೆಚ್ಚಿನದನ್ನು ಬಯಸಲು ಪ್ರಾರಂಭಿಸುತ್ತದೆ. ಹೀಗೆ ಬಯಸುವ ಮತ್ತು ಬಯಸಿದ್ದು ಸಿಕ್ಕಿದಾಗ ಸಿಗುವ ಆನಂದದಲ್ಲಿ ಏನೋ ಒಂದು ಕೊರತೆ ಇರುತ್ತದೆ. ಗೀತೆ ಹೇಳುವಂತೆ ಪ್ರತಿ ಯೋಗದ ಹಿಂದೆ ವಿಯೋಗವೂ ಇದ್ದೇ ಇರುತ್ತದೆ. ಈ ಪ್ರಪಂಚದಲ್ಲಿ ಪ್ರಾಪಂಚಿಕ ಸಂಗತಿಗಳಲ್ಲಿ ಆನಂದವೆಂಬುದು ತೋರಿಕೆಗಾಗಿ ಕಾಣುವಂತಹುದಾಗಿದೆಯೆಂಬುದು ಅವುಗಳ ಅಲ್ಪಕಾಲಿಕ ಮತ್ತು ಕ್ಷಣಿಕ ಸ್ವರೂಪದಿಂದ ತಿಳಿದುಬರುವುದಿಲ್ಲವೇ? ಎಲ್ಲದರ ಹಿಂದೆ ಪರಮೋಚ್ಛ ಆನಂದದ ಪ್ರಭಾವ ಇರುವುದರಿಂದಲೇ ಕ್ಷಣಿಕವಾಗಿಯಾದರೂ ಪ್ರಾಪಂಚಿಕ ವಿಷಯಗಳಲ್ಲಿ ಆನಂದದ ಅನುಭವ ಜೀವಿಗಳಿಗೆ ಆಗುತ್ತಿರುತ್ತದೆ.
ಸುಖವು ಸ್ವಾಭಾವಿಕ ದುಃಖವಾಗಂತುಕನು
ಯೋಗವನುಸರಿಸುವುದು ನಿಜವಿಯೋಗ |
ದುಃಖ ಸಂಯೋಗ ವಿಯೋಗವೀವುದು ಸುಖ
ವಿಯೋಗವೆ ಯೋಗವೆನುವರು ಮೂಢ ||
     ಸಂಗಮದಲ್ಲಿ ಸುಖವಿದೆ, ಹೌದು, ಸಂಗಮದಲ್ಲಿ ಸುಖವಿದೆ. ನಾವು ಇದುವರೆವಿಗೂ ಹೇಳಿದ್ದು ಇದನ್ನೇ! ಬಯಸುವ ಮತ್ತು ಬಯಸಿದ್ದು ಸಿಗುವ ಸಂಗಮದಲ್ಲಿ ಸುಖವಿದೆ. ಅದು ವಸ್ತುವಾಗಬಹುದು, ವ್ಯಕ್ತಿಯಾಗಬಹುದು, ವ್ಯಕ್ತಿಗಳಾಗಬಹುದು, ಗುಂಪಾಗಬಹುದು, ಸಮಾಜವಾಗಬಹುದು. ಇಲ್ಲಿ ಪ್ರಧಾನ ಸಂಗತಿಯನ್ನು ಗುರುತಿಸೋಣ. ಆ ಪ್ರಧಾನ ಸಂಗತಿಯೆಂದರೆ 'ಒಂದಾಗುವುದು' ಆಗಿದೆ. ನೈಜವಾಗಿ ಒಂದಾಗಲು ಸಾಧ್ಯವಾದರೆ ಅಲ್ಲಿ ನೈಜ ಮತ್ತು ಪೂರ್ಣ ಆನಂದ ಸಿಗುತ್ತದೆ. ಯಾವುದಾದರೂ ವಸ್ತುವಿನೊಂದಿಗೆ ಪೂರ್ಣವಾಗಿ ಒಂದಾಗಲು ಸಾಧ್ಯವೇ? ವ್ಯಕ್ತಿಯೊಂದಿಗೆ ಒಂದಾಗಲು ಸಾಧ್ಯವೇ? ಒಂದಾಗಲು ಪ್ರಯತ್ನಿಸಿ ಬೇರೆಯಾಗುವುದರಿಂದ ಸಿಗುವ ಆನಂದ ಸಹ ಕ್ಷಣಿಕ ಮತ್ತು ಅಲ್ಪಕಾಲಿಕವಾಗಿರುತ್ತದೆ. ಯೋಗದೊಂದಿಗೇ, ಅದರ ಬೆನ್ನ ಹಿಂದೆಯೇ ವಿಯೋಗವೂ ಹಿಂಬಾಲಿಸುತ್ತದೆ. ಇನ್ನು ಸಾಮಾಜಿಕವಾಗಿ ಒಂದುಗೂಡುವಿಕೆ ಅನ್ನುವುದು ಒಂದುಗೂಡುವಿಕೆಯೇ ಅಲ್ಲ. ಭೌತಿಕವಾಗಿ, ಮಾನಸಿಕವಾಗಿ ಅಥವ ಸಾಮಾಜಿಕ ಪ್ರಜ್ಞೆಯ ಕಾರಣಗಳಿಂದ, ಧಾರ್ಮಿಕ ಕಾರಣಗಳಿಂದ ಒಂದಾಗಿರುವಂತೆ ತೋರಬಹುದಾದರೂ ಅದು ನಿಜವಾದ ಒಂದಾಗುವಿಕೆಯಂತೂ ಅಲ್ಲ. ಯಾರಾದರೂ ಇಬ್ಬರು ವ್ಯಕ್ತಿಗಳು ಅಥವ ಗುಂಪು ಅಥವ ಸಮಾಜ ಒಂದಾಗಿರುವುದನ್ನು ನಾವು ನೋಡಿಲ್ಲ. 'ಎರಡು ದೇಹ ಒಂದು ಆತ್ಮ' ಎಂಬಂತಹ ಮಾತುಗಳನ್ನು ಇಬ್ಬರ ನಡುವಿನ ಅನ್ಯೋನ್ಯತೆಯ ಸ್ನೇಹದ ಕಾರಣದಿಂದಾಗಿ ಹೇಳುವುದನ್ನು ಕೇಳಿದ್ದೇವೆ. ಆದರೆ ವಾಸ್ತವಿಕವಾಗಿ ಇಬ್ಬರೂ ಒಂದೇ ವ್ಯಕ್ತಿತ್ವದವರಾಗಿ ಹೊರಹೊಮ್ಮುವುದಂತೂ ಅಸಾಧ್ಯವೇ ಸರಿ. ಹೀಗೆ ಎಲ್ಲಿಯವರೆಗೆ ಎರಡು ಸಂಗತಿಗಳು 'ಒಂದಾಗುವುದು' ಸಾಧ್ಯವಿಲ್ಲವೋ ಅಲ್ಲಿಯವರೆಗೆ ಪರಿಪೂರ್ಣ ಆನಂದ ಅನ್ನುವುದು ಸಿಗುವುದು ಸಾಧ್ಯವಿಲ್ಲ.
     ಈ ಪ್ರಪಂಚದಲ್ಲಿ ಆನಂದಕ್ಕಾಗಿ ಅರಸುವುದು ಅಂದರೆ ಮರಳುಗಾಡಿನಲ್ಲಿ ನೀರಿನ ತೊರೆ ಅರಸಿದಂತೆಯೇ ಸರಿ. ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಸಿಗುವುದಿಲ್ಲವೆಂಬುದು ಖಚಿತವಾಯಿತು. ಪರಿಪೂರ್ಣತೆಯಲ್ಲಿ, ಸಚ್ಚಿದಾನಂದದಲ್ಲಿ ಒಂದಾದಾಗ ಮಾತ್ರ ನೈಜ ಆನಂದ ಸಿಗುತ್ತದೆ ಎಂದಾಯಿತು. ಅದೇನೋ ಸರಿ, ಆದರೆ ಈ ಪರಿಪೂರ್ಣತೆ, ಈ ಸಚ್ಚಿದಾನಂದ ಎಂದರೆ ಏನೆಂದು ತಿಳಿಯದೇ ಜೀವಿ ಅದರೊಂದಿಗೆ ಹೇಗೆ ಒಂದಾದೀತು?
ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ ||
     ಆತ್ಮ ಮತ್ತು ಪರಮಾತ್ಮಗಳ ಒಂದಾಗುವಿಕೆಯಿಂದ ಪರಮಾನಂದ ಸಿಗುತ್ತದೆ ಎನ್ನುತ್ತಾರೆಂದರೆ ಮೊದಲು ಆತ್ಮದ ಅರಿವು ನಮಗಾಗಬೇಕು. ನಮ್ಮ ಹುಡುಕಾಟ ಹೊರಗೆ ಬಿಟ್ಟು ಒಳಗೆ ನಡೆಯಬೇಕು. ನಮ್ಮ ಆನಂದದ ಅನುಭವ ಬರುವುದು, ಆಗುವುದು ಎರಡೂ ನಮ್ಮ ಒಳಗಿನಿಂದ. ನಮ್ಮ ಅಂತರಂಗ ಬಿಟ್ಟು ಬೇರೆ ಏನೂ ನಮಗೆ ಕಾಣುವುದಿಲ್ಲವೋ, ನಮ್ಮ ಅಂತರಂಗ ಹೇಳುವುದನ್ನು ಬಿಟ್ಟು ಬೇರೆ ಏನೂ ನಮಗೆ ಕೇಳುವುದಿಲ್ಲವೋ, ನಮ್ಮ ಅಂತರಂಗವನ್ನು ಬಿಟ್ಟು ಬೇರೆ ಏನೂ ನಮಗೆ ಅರ್ಥವಾಗುವುದಿಲ್ಲವೋ ಅದೇ ಪೂರ್ಣಸ್ಥಿತಿ. ಇದಕ್ಕೆ ವಿರುದ್ಧವಾಗಿ ನಮಗೆ ಅಂತರಂಗ ಬಿಟ್ಟು ಹೊರಗಿನ ಸಂಗತಿಗಳು ಮಾತ್ರ ಕಾಣುವುವೋ, ಕೇಳುವುವೋ, ಅರ್ಥವಾಗುವುವೋ ಅದು ಅಪೂರ್ಣಸ್ಥಿತಿ.
     ಪರಿಪೂರ್ಣ ಆನಂದ ಎನ್ನುವ ಆ ಪರಮಾತ್ಮ ಎಲ್ಲಿದ್ದಾನೆ? ಆಕಾಶ ಎಲ್ಲಿದೆ ಎಂಬ ಪ್ರಶ್ನೆಯಂತೆಯೇ ಈ ಪ್ರಶ್ನೆ ಇದೆ. ಆಕಾಶ ಇಲ್ಲದಿರುವ ಸ್ಥಳ ಇದೆಯೇ? ಹಾಗೆಯೇ ಈ ಪರಮಾತ್ಮ ಇಲ್ಲದಿರುವ ಸ್ಥಳವಿಲ್ಲ. ಎಲ್ಲಿದ್ದಾನೆ ಎಂಬ ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ. ಏಕೆಂದರೆ ಎಲ್ಲೆಲ್ಲೂ ಇರುವುದನ್ನು ಎಲ್ಲಿಯೋ ಇದೆ ಎಂದು ಭಾವಿಸಿ ಕೇಳಿದಂತೆ ಆಗುತ್ತದೆ ಮತ್ತು ಇರುವ ಸ್ಥಳ ಅದಕ್ಕೆ ಆಧಾರವಾಗಿದೆಯೆಂಬ ಭಾವ ಬರುತ್ತದೆ. ಎಲ್ಲದಕ್ಕೂ ಆಧಾರವಾಗಿರುವುದಕ್ಕೆ ಆಧಾರದ ಅಗತ್ಯವಿದೆಯೇ?  ಈ ಪ್ರಪಂಚದಲ್ಲಿ ಭವ್ಯವಾದ ಬಂಗಲೆಗಳು, ಹೇರಳವಾದ ಆಸ್ತಿ, ಲೆಕ್ಕವಿಲ್ಲದಷ್ಟು ಹಣ, ಸೇವೆ ಮಾಡಲು ಆಳು-ಕಾಳುಗಳು, ಐಷಾರಾಮಿ ಕಾರುಗಳು ಇರುವವರನ್ನು ಶ್ರೀಮಂತರು ಎಂದು ಭಾವಿಸುತ್ತಾರೆ. ಅವರ ಶ್ರೀಮಂತಿಕೆಗೆ, ಸುಖಕ್ಕೆ ಇವುಗಳೆಲ್ಲಾ ಆಧಾರವಾಗಿವೆ. ಆದರೆ ಪರಮಾತ್ಮನ ಪರಮಾನಂದದ ಸ್ಥಿತಿಗೆ ಇಂತಹ ಯಾವುದೇ ಆಧಾರಗಳ ಅಗತ್ಯವಿಲ್ಲ. ಅದು ಸ್ವಯಂ ಆಧಾರಿತ. ಜಗತ್ತಿನ ಎಲ್ಲಾ ಸಂಗತಿಗಳಿಗೆ ಆಧಾರವಾಗಿರುವ ಸಂಗತಿಗೆ ಪ್ರತ್ಯೇಕ ಆಧಾರದ ಅಗತ್ಯವಾದರೂ ಎಲ್ಲಿದೆ?
     ಈ ಪ್ರಪಂಚದಲ್ಲಿ ಯಾವುದೇ ಒಂದು ಸಂಗತಿ ಇನ್ನೊಂದಕ್ಕೆ ಆಧಾರವಾಗಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಹೀಗೆಯೇ ಪ್ರಪಂಚ ಸಾಗುತ್ತಿರುವುದು. ಆದರೆ ಯಾವುದೇ ಆಧಾರದ ಅಗತ್ಯವಿಲ್ಲದೆ ಇರುವುದೆಂದರೆ ಆ ಪರಮ, ಪರಿಪೂರ್ಣತೆ ಮಾತ್ರ. ಹೊರಗಿನ ಸಂಗತಿಗಳಲ್ಲಿ ಆನಂದ ಅರಸುವುದನ್ನು ಬಿಟ್ಟು, ಅದನ್ನು ಒಳಗೆ, ನಮ್ಮೊಳಗೆ, ನಮ್ಮ ಅಂತರಂಗದ ಒಳಗೆ ಅರಸಿದರೆ ನಮ್ಮ ಆತ್ಮದ ಅರಿವು ನಮಗೆ ಆಗದೇ ಇರದು. ಪರಮಾತ್ಮನೂ ಅಲ್ಲಿಯೇ ಸಿಕ್ಕಾನು! ಪರಮಾನಂದದ ಅನುಭವವೂ ಆದೀತು!!
-ಕ.ವೆಂ.ನಾಗರಾಜ್.
**************
ದಿನಾಂಕ 4-5-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 10, 2015

ಬೇಕೇ ಬೇಕು, ಆನಂದ ಬೇಕು!


     ಹಿಂದಿನ ಲೇಖನದಲ್ಲಿ, "ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ. ಮತಿಗೆ  ಸತ್ಯವಿದೆಯೆಂದು ನಂಬುವ ಶ್ರದ್ಧೆ/ನಂಬಿಕೆ ಸಾಥ್ ನೀಡುತ್ತದೆ. ಶ್ರದ್ಧೆಗೆ ನಿಷ್ಠೆ ಬೆನ್ನೆಲುಬಾಗುತ್ತದೆ" ಎಂಬ ಬಗ್ಗೆ ಚರ್ಚಿಸಿದೆವು. ಒಬ್ಬ ಸತ್ಯಾನ್ವೇಷಿ ಸಾಧಕ ಮುಂದುವರೆದಂತೆ ಅಂತರ್ಮುಖಿಯಾಗುತ್ತಾ ಹೋಗುತ್ತಾನೆ. ಬಹಿರ್ಮುಖವಾದ ಸಂಗತಿಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ವಿರಕ್ತಿಯೆನ್ನಬಹುದಾದ ಈ ಸ್ಥಿತಿ ಯಾವುದೇ ಬಾಹ್ಯ ಒತ್ತಡದಿಂದ, ಬಲವಂತದಿಂದ ಬಂದದ್ದಾಗಿರದೆ, ತನ್ನ ಸ್ವ ಇಚ್ಛೆಯಿಂದ ತಾನು ಸತ್ಯವಿಚಾರಕ್ಕೆ ಕೊಟ್ಟ ನಿಷ್ಠೆಯಿಂದ ಬಂದಿರುವಂತಹದಾಗಿರುತ್ತದೆ. ಪರಮಾತ್ಮ ತತ್ತ್ವಕ್ಕೆ ಸಮೀಕರಿಸಿಕೊಳ್ಳುವ ಈ ಪ್ರಯತ್ನ ಅವನನ್ನು 'ನಾನು', 'ನೀನು', 'ಅವನು', ಇತ್ಯಾದಿಗಳಿಂದ ದೂರ ಮಾಡಿಬಿಡುತ್ತದೆ. ಈ ನಾನು, ನೀನುಗಳು ಹೋದಾಗ ಏನೂ ಇರುವುದಿಲ್ಲ! ಆನಂದಮಯ ಸ್ಥಿತಿಯೆನ್ನಬಹುದಾದ ಈ ಸ್ಥಿತಿ ಸಾಧಕನೊಬ್ಬನ ಅತ್ಯುನ್ನತ ಸಾಧನೆಯಾಗಿರುತ್ತದೆಂದು ಉಪನಿಷತ್ತಿನಲ್ಲಿ ಹೇಳಲಾಗಿದೆ.
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖವ ಬಯಸದಿರೆ ದುಃಖವೆಲ್ಲಿ ಮೂಢ ||
     ಜೀವಿ ಸದಾ ಆನಂದವನ್ನು ಹಿಂಬಾಲಿಸುತ್ತಲೇ ಇರುತ್ತದೆ, ಸಿಗುತ್ತದೋ, ಇಲ್ಲವೋ ಅದು ಬೇರೆ ವಿಷಯ, ಆದರೆ ಆನಂದ ಪಡೆಯುವ ಪ್ರಯತ್ನ ಮಾತ್ರ ಸದಾ ಇರುತ್ತದೆ. ನಮ್ಮ ಎಲ್ಲಾ ಕ್ರಿಯೆಗಳು, ಆಸೆಗಳು, ಗುರಿಗಳ ಹಿಂದೆ ಆನಂದ ಪಡೆಯುವುದೇ ಉದ್ದೇಶವಾಗಿರುತ್ತದೆ. ವಿದ್ಯಾವಂತನಾಗಬೇಕು. ಒಳ್ಳೆಯ ಹೆಂಡತಿ/ಗಂಡ ಸಿಗಬೇಕು, ದೊಡ್ಡ ಮನೆ ಕಟ್ಟಿಸಬೇಕು, ನೌಕರಿಯಲ್ಲಿ ಬಡ್ತಿ ಸಿಗಬೇಕು, ದೊಡ್ಡ ಕಂಪೆನಿಯ ಮಾಲಿಕನಾಗಬೇಕು, ಹಣ ಬೇಕು, ಅಧಿಕಾರ ಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು, ಪ್ರಧಾನ ಮಂತ್ರಿ ಆಗಬೇಕು, ಇಡೀ ಜಗತ್ತು ನನ್ನ ಅಧೀನದಲ್ಲಿ ಬರಬೇಕು, ದೊಡ್ಡ ವ್ಯಕ್ತಿಯೆನ್ನಿಸಿಕೊಳ್ಳಬೇಕು, ಇತ್ಯಾದಿ ಬೇಕುಗಳಿಗೆ ಮಿತಿ ಇದೆಯೇ? ಇವೆಲ್ಲವೂ ಸಿಕ್ಕರೆ ನಮಗೆ ಆನಂದ ಸಿಗುತ್ತದೆ ಎಂದು ನಾವು ಭಾವಿಸುವುದಿಲ್ಲವೇ? ಆನಂದ ಸಿಗುತ್ತದೆಯೆಂಬ ಕಾರಣದಿಂದ ಈ ಜಗತ್ತಿನಲ್ಲಿ ಸೃಷ್ಟಿಯ ಎಲ್ಲಾ ಸಂಗತಿಗಳೂ, ಎಲ್ಲಾ ಕ್ರಿಯೆಗಳೂ ಮುಂದುವರೆಯುತ್ತಿವೆ. ಆದ್ದರಿಂದ ಈ ಆನಂದ ಅನ್ನುವುದು ಏನು ಎಂದು ತಿಳಿಯುವುದು ಅವಶ್ಯಕವಾಗಿದೆ.
     ಈ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ. ಲಯಗಳಿಗೆ, ವಿಕಾಸ ಮತ್ತು ಹಿನ್ನಡೆಗಳಿಗೆ, ಸಕಲ ಚಟುವಟಿಕೆಗಳ ಹಿಂದಿನ ಪ್ರೇರಕ ಶಕ್ತಿಯೇ ಆನಂದವಾಗಿದೆ. ಈ ಆನಂದವೇ ತನ್ನ ಉನ್ನತ ಸ್ಥಿತಿಯನ್ನು ತಲುಪಲು, ಉಚ್ಛ್ರಾಯ ಮಟ್ಟವನ್ನು ತಲುಪಲು ಪ್ರಯತ್ನಿಸುತ್ತಿರುತ್ತದೆ. ಜೀವಿಗಳಲ್ಲಿನ ಸುಪ್ತ ಬಯಕೆಗಳಿಗೆ ಮತ್ತು ಆ ಕಾರಣದಿಂದ ಮಾಡಲಾಗುವ ಚಟುವಟಿಕೆಗಳಿಗೆ ಇದೇ ಮೂಲವಾಗಿದೆ. ಜೀವ ವಿಕಾಸಕ್ಕೆ ಇದೇ ಹೇತುವಾಗಿದೆ. ಪ್ರತಿಯೊಂದರ ಹಿಂದೆ ಆನಂದವಿದೆ ಮತ್ತು ಆನಂದ ಮಾತ್ರ ಇದೆ.
     ನಾವು ಕ್ರಮೇಣ ನಮ್ಮ ಎಲ್ಲಾ ಕ್ರಿಯೆಗಳೂ ಆನಂದದ ಅಪೇಕ್ಷೆಯಿಂದ ಜರುಗುತ್ತವೆ ಎಂಬ ಅಂಶವನ್ನು ಒಪ್ಪುವ ಹಂತಕ್ಕೆ ಬಂದೆವು. ಇದು ಕೇವಲ ವಾಸ್ತವಿಕ ಸತ್ಯ ಮಾತ್ರವಾಗಿರದೆ ಮಾನಸ ಶಾಸ್ತ್ರದ ಪ್ರಕಾರವೂ ಸತ್ಯವಾಗಿದೆ. ಇಷ್ಟು ತಿಳಿದಾಕ್ಷಣ ಎಲ್ಲವನ್ನೂ ತಿಳಿದಂತಾಗಲಿಲ್ಲ. ದಿನನಿತ್ಯದ ಜೀವನದಲ್ಲಿ ಆನಂದವೆಂದರೆ ಕಷ್ಟಪಟ್ಟು ಮಾಡಿದ ಪ್ರಯತ್ನದಿಂದ ಸಿಗುವ ಸಾಧನೆ ಎಂದುಕೊಳ್ಳುತ್ತೇವೆ. ವಿಚಿತ್ರವೆಂದರೆ, ಹಲವರು ಹಲವು ರೀತಿಯ ಸಾಧನೆಗಳನ್ನು ಗುರಿಯಾಗಿರಿಸಿಕೊಂಡು ಮುಂದುವರೆಯುತ್ತಾರೆ ಮತ್ತು ಅದರಲ್ಲಿ ಆನಂದವನ್ನು ಕಾಣಬಯಸುತ್ತಾರೆ. ಆದರೆ, ವಾಸ್ತವತೆಯ ವ್ಯಂಗ್ಯವೆಂದರೆ ಆನಂದ ಅನ್ನುವುದು ಎಲ್ಲಾ ಸಂಗತಿಗಳಲ್ಲಿ ಇರುವಂತೆ ಗೋಚರವಾದರೂ ಅದನ್ನು ಎಲ್ಲರೂ ಆನಂದವೆಂದು ಪರಿಗಣಿಸಲಾರರು. ಸಾಧನೆಯಿಂದ ಆನಂದ ಸಿಗುವುದಾದರೂ ಅದನ್ನೇ ಪರಮ ಎಂದು ಮನಸ್ಸು ಒಪ್ಪಲಾರದು. ಅದಕ್ಕೇ ಆನಂದ ಎಲ್ಲಿದೆ ಎಂಬ ಬಗ್ಗೆ ಮನಸ್ಸಿನಲ್ಲಿ ಸಂದೇಹ ಉದ್ಭವಿಸುತ್ತದೆ.
     ಈ ಆನಂದ ಅನ್ನುವುದು ನಮ್ಮಲ್ಲಿಯೇ ಇದೆಯೇ ಅಥವ ಬೇರೆ ಯಾರಲ್ಲಾದರೂ ಇದೆಯೇ ಅಥವ ಯಾವುದರಲ್ಲಾದರೂ ಇದೆಯೇ? ಆನಂದ ಅನ್ನುವುದು ನಮ್ಮ ಮನಸ್ಸಿನ ಸ್ಥಿತಿ ಎಂದು ಹೇಳುವುದನ್ನು ಕೇಳಿದ್ದೇವೆ. ಮನೋವಿಜ್ಞಾನಿಗಳೂ ಇದನ್ನೇ ಹೇಳುತ್ತಾರೆ. ಆನಂದ ಅನ್ನುವುದು ನಮ್ಮ ಮನಸ್ಸಿನಲ್ಲೇ ಇರುವುದಾದರೆ ಅದನ್ನು ಹೊರಗೆ ಹುಡುಕಬೇಕಾದರೂ ಏಕೆ? ಆನಂದವನ್ನು ಹೊರಗಿನ ಸಂಗತಿಗಳಲ್ಲಿ, ಹೊರಗಿನ ವಿಷಯಗಳಲ್ಲಿ ಹುಡುಕುತ್ತೇವೆ ಎಂಬ ಸಂಗತಿಯೇ, ನಮ್ಮ ಮನಸ್ಸು ಮನಸ್ಸಿನಿಂದ ತೃಪ್ತವಾಗಿಲ್ಲ ಮತ್ತು ನಮ್ಮ ಮನಸ್ಸಿನಲ್ಲಿ ಏನೋ ಕೊರತೆ ಇದೆ ಎಂಬುದನ್ನು ತೋರಿಸುತ್ತದೆಯಲ್ಲವೇ? ಆನಂದವನ್ನು ತನ್ನಿಂದ ತಾನೇ ಕಾಣಲಾಗದ ಮನಸ್ಸಿನ ಅಸಾಮರ್ಥ್ಯವೇ, ಕೊರತೆಯೇ ಅದನ್ನು ಹೊರಗೆ ಹುಡುಕುವಂತೆ ಮಾಡುವ ಮೂಲ ಕಾರಣವಾಗಿದೆ. ಮನಸ್ಸಿನ ಚಂಚಲ ಸ್ಥಿತಿ, ನಮ್ಮ ಸುತ್ತಲಿನ ಪ್ರಪಂಚದಲ್ಲಿರುವ ಸಂಗತಿಗಳಲ್ಲಿ ಆನಂದವನ್ನು ಅರಸಬಯಸುವ ಮನೋಸ್ಥಿತಿ ಮನಸ್ಸೇ ಆನಂದದ ಮೂಲ ಎಂಬ ತತ್ವದಲ್ಲಿ ಏನೋ ದೋಷವಿದೆಯೆಂದು ಅನ್ನಿಸುವಂತೆ ಮಾಡುತ್ತದೆ.
     ಆನಂದದ ಮೂಲ ಈ ಪ್ರಪಂಚದಲ್ಲಿರುವ ಸಂಗತಿಗಳಲ್ಲಿದೆಯೇ ಎಂದು ನೋಡಿದರೆ ಅಲ್ಲೂ ನಿರಾಸೆಯೇ ಕಾಣಬರುತ್ತದೆ. ಇಲ್ಲಿನ ಯಾವುದೇ ಸಂಗತಿ ಪ್ರತಿಯೊಬ್ಬರ ಗಮನವನ್ನು ಏಕಕಾಲದಲ್ಲಿ ಮತ್ತು ಸದಾಕಾಲದಲ್ಲಿ ಸೆಳೆಯುವಂತಹದು ಅಲ್ಲ. ಆದ್ದರಿಂದ ಈ ಆನಂದ ಅನ್ನುವುದು ಪ್ರಾಪಂಚಿಕ ಸಂಗತಿಗಳಲ್ಲಿ ಇದೆ ಎಂದು ಭಾವಿಸುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿಯಿದ್ದರೂ, ಆನಂದ ಸಿಕ್ಕರೂ ಅದು ಸದಾ ಕಾಲಕ್ಕೆ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಆದರೆ, ಈ ಆನಂದ ಅನ್ನುವುದು ಎಲ್ಲೋ ಇರಲೇಬೇಕಲ್ಲಾ! ಏಕೆಂದರೆ ಮನಸ್ಸು ಅದಕ್ಕಾಗಿಯೇ ಚಡಪಡಿಸುತ್ತಿರುತ್ತದೆ. ಅದು ನಮ್ಮ ಮನಸ್ಸಿನೊಳಗೂ ಇಲ್ಲ, ಹೊರಗೂ ಇಲ್ಲವೆಂದರೆ ಅದು ರಹಸ್ಯವೇ ಸರಿ. ಸಮಗ್ರ ವಿಶ್ಲೇಷಣೆಯಿಂದ ಆನಂದ ಎಲ್ಲಿದೆಯೆಂದು ಹೇಳುವುದೂ ಸುಲಭವಲ್ಲ. ಸಾಂದರ್ಭಿಕವಾಗಿ ಒಳಮನಸ್ಸಿನ ಸ್ಥಿತಿ ಮತ್ತು ಹೊರಗಿನ ಸಂಗತಿಯ ತುಲನೆ ಮಾತ್ರ ಹಾಗೆ ಮಾಡಲು ಸಾಧ್ಯವಾಗುತ್ತದೆ. ಹಾಗಾದರೆ ಈ ಆನಂದವಾದರೂ ಎಲ್ಲಿರಬಹುದು?
     ಆನಂದ ಅನ್ನುವುದನ್ನು ಒಂದು ಸೀಮಿತ ವ್ಯಾಪ್ತಿಯ ವಸ್ತುವಾಗಿ ನೋಡುವುದೇ ಸರಿಯಾಗಲಾರದು. ಅದು ಮನಸ್ಸಿನ ಸ್ಥಿತಿಯೆಂದರೆ, ಅದು ಸೀಮಿತವಾದ ಸಂಗತಿಯಾಗಿಬಿಡುತ್ತದೆ. ಹೊರಗಿನ ಪ್ರಾಪಂಚಿಕವಾದ ಯಾವುದೇ ಸಂಗತಿ ಅಥವ ವಿಷಯ ಸಹ ಸೀಮಿತ ವ್ಯಾಪ್ತಿಯದಾಗಿರುತ್ತದೆ ಅರ್ಥಾತ್ ಆ ಆನಂದ ಶಾಶ್ವತ ಅಥವ ಸದಾ ಕಾಲ ಇರುವಂತಹದಲ್ಲ. ಸೀಮಿತ ವ್ಯಾಪ್ತಿಯ ಮನಸ್ಸು ಮತ್ತು ಸೀಮಿತ ವ್ಯಾಪ್ತಿಯ ಪ್ರಾಪಂಚಿಕ ಸಂಗತಿ ಎರಡೂ ಸೇರಿದರೂ ಸಹ ಒಟ್ಟು ಪರಿಣಾಮ ಸೀಮಿತವಾದದ್ದೇ ಆಗಿರುತ್ತದೆ. ಸೀಮಿತ ವ್ಯಾಪ್ತಿಯ ಎರಡು ಸಂಗತಿಗಳನ್ನು ಸೇರಿಸಿದರೆ ಅಥವ ಅಸಂಖ್ಯ ಸೀಮಿತ ವ್ಯಾಪ್ತಿಯ ಸಂಗತಿಗಳನ್ನೆಲ್ಲಾ ಸೇರಿಸಿದರೆ ಆಗಲೂ ಸಹ ಅದು ಅಸೀಮಿತವಾಗುವುದಿಲ್ಲ. ಇಡೀ ಪ್ರಪಂಚವನ್ನೇ ಒಟ್ಟಾಗಿಸಿದರೂ ಅದೂ ಸೀಮಿತವೇ ಆಗಿರುತ್ತದೆ. ಐಹಿಕ ಸುಖ-ಭೋಗಗಳಿರಬಹುದು, ಹಣ-ಸಂಪತ್ತುಗಳಿರಬಹುದು, ಅಧಿಕಾರ-ಹೆಸರು-ಕೀರ್ತಿಗಳಿರಬಹುದು, ಏನೇ ಇರಬಹುದು, ಅವುಗಳಲ್ಲಿ ಆನಂದ ಸಿಕ್ಕರೂ ಅದು ಶಾಶ್ವತವೆಂದು ಯಾರೂ ಹೇಳಲಾರರು. ಯಾರಾದರೂ ಸೀಮಿತವಾದ ಆನಂದ ಬಯಸುತ್ತಾರೆಯೇ? ಎಲ್ಲರಿಗೂ ನಿರಂತರವಾದ ಮತ್ತು ಸದಾ ಇರುವ ಆನಂದವೇ ಬೇಕು! ನಮ್ಮೊಳಗಿನ ಒಳತುಡಿತವೇ ಸದಾ ಆನಂದ ನಮಗೆ ಇರಬೇಕೆಂಬುದು! ಇದೇ ನಮ್ಮ ಪ್ರಶ್ನೆಗೆ, ಆನಂದ ಎಲ್ಲಿದೆಯೆಂಬ ಪ್ರಶ್ನೆಗೆ, ಉತ್ತರಿಸುತ್ತದೆ. ಮನಸ್ಸು ಸೀಮಿತವಾದ ಆನಂದದಿಂದ ತೃಪ್ತಗೊಳ್ಳುವುದೇ ಇಲ್ಲ. ನೈಜ ಆನಂದ ಅನ್ನುವುದು ಅಸೀಮಿತವಾದದ್ದಾಗಿದೆ, ಅದನ್ನು ಸೀಮಿತ ಸಂಗತಿಗಳಲ್ಲಿ ಹುಡುಕಿದರೆ ಸಿಗಲಾರದು!
     ನೈಜ ಆನಂದಕ್ಕೆ ಮಿತಿಯಿಲ್ಲ, ಅಂತ್ಯವಿಲ್ಲ ಅನ್ನುವುದಾದರೆ, ಅದು ಮನಸ್ಸಿನ ಒಳಗೆ ಮತ್ತು ಯಾವುದೇ ಸೀಮಿತ ವ್ಯಾಪ್ತಿಯ ವಸ್ತು/ಸಂಗತಿಗಳಲ್ಲಿ ಸಿಗುವುದಿಲ್ಲವೆಂದಾದರೆ ಅದು ಇರುವುದಾದರೂ ಎಲ್ಲಿ? ಅಂತಹ ಆನಂದಕ್ಕೆ ವಿವರಣೆ ಕೊಡುವುದಾಗಲೀ, ವಿವರಿಸುವುದಾಗಲೀ ಅಶಕ್ಯವೇ ಸರಿ. ಅದನ್ನು ಆಧ್ಯಾತ್ಮಿಕ ಪರಿಪೂರ್ಣತೆಯ ಸ್ಥಿತಿ ಎಂದಷ್ಟೇ ಹೇಳಬಹುದೇನೋ! ಅದನ್ನು ದಾರ್ಶನಿಕರು ಸಂಪೂರ್ಣತೆ, ಅತ್ಯುನ್ನತ ಸ್ಥಿತಿ ಎಂದರೆ, ಧಾರ್ಮಿಕರು ದೇವರು ಎನ್ನುತ್ತಾರೆ. ಮನೋಶಾಸ್ತ್ರಜ್ಞರು ಅದನ್ನು ಪರಮೋಚ್ಛ ಭಾವ ಎಂದಾರು! ಸಚ್ಚಿದಾನಂದ ಎಂದೂ ದೇವರನ್ನು ಸಂಬೋಧಿಸುತ್ತಾರೆ. ಸೀಮಿತ ಆನಂದದಿಂದ ಮನಸ್ಸು ತೃಪ್ತಗೊಳ್ಳುವುದಿಲ್ಲವೆಂದಾದರೆ ಅದನ್ನು ಅಸೀಮಿತವಾದ ಅಂತ್ಯವಿಲ್ಲದ ಆನಂದದಲ್ಲಿ, ಸಚ್ಚಿದಾನಂದದಲ್ಲೇ ಕಾಣುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ.
     ಇಂತಹ ಪರಮೋಚ್ಛ ಸ್ಥಿತಿಯನ್ನು ತಲುಪಲು ಸಾಧಕರಿಗೆ ಮಾತ್ರ ಸಾಧ್ಯವಿದೆ. ಆದರೆ, ಅಂತಹ ಸಾಧಕರಾಗಲು ಸಾಮಾನ್ಯರಿಗೂ ಅವಕಾಶವಿದೆ. ಅವಕಾಶವನ್ನು ಬಳಸಿಕೊಳ್ಳದೆ ಜೀವನದ ಜಂಜಾಟದಲ್ಲಿ, ಮಾಯೆಯ ಸುಳಿಯಲ್ಲಿ ಸಿಲುಕಿರುವ ನಮ್ಮಂತಹ ಸಾಮಾನ್ಯರು ಹೊಂದಿರುವಷ್ಟರಲ್ಲೇ ತೃಪ್ತಭಾವ ಹೊಂದಿದರೆ ಮಾತ್ರ ಆನಂದವನ್ನು ಅನುಭವಿಸಲು ಸಾಧ್ಯವಿದೆಯೆಂಬುದು ಸಮಾಧಾನದ ಸಂಗತಿ.
ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ ||
-ಕ.ವೆಂ.ನಾಗರಾಜ್.
**************
ದಿನಾಂಕ 20.04.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 3, 2015

ಸತ್ಯಾನ್ವೇಷಣೆ



ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!
     ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ ಶಿಖರ, ಜ್ಞಾನದ ಶಿಖರವಾಗಿರುತ್ತದೆ. ವಾಸ್ತವತೆಯನ್ನು ಆಧರಿಸಿ ನಮ್ಮ ಮಾತುಗಳಿದ್ದರೆ ಅದು ವಾಸ್ತವವಾಗಿ ಗೋಚರಿಸುತ್ತವೆ. ಸತ್ಯ ಮತ್ತು ಜ್ಞಾನಗಳು ಒಂದೇ ಆಗಿರುತ್ತವೆ. ಸತ್ಯದ ಜ್ಞಾನದ ಆಧಾರದಲ್ಲಿ ನಮ್ಮ ಮಾತುಗಳಿದ್ದರೆ ಅವು ನಿಜವಾಗುತ್ತವೆ. ವಾಸ್ತವತೆ ಅಥವ ಸತ್ಯ ಎಂದರೆ ಯಾವುದು? ಏನು? ಸತ್ಯ ಎಂದರೇನೆಂದು ತಿಳಿಯದೆ ನಮ್ಮ ಜ್ಞಾನವನ್ನು ಸತ್ಯದೊಂದಿಗೆ ಅಥವ ಸತ್ಯವನ್ನು ಜ್ಞಾನದೊಂದಿಗೆ ಗುರುತಿಸುವುದಾದರೂ, ತಿಳಿಯುವುದಾದರೂ ಹೇಗೆ? ಮತ್ತೆ ನಾವು ವಿಚಿತ್ರ ತರ್ಕದ ಸುಳಿಗೆ ಸಿಕ್ಕಿಬಿಟ್ಟೆವು. ಸತ್ಯ ಅನ್ನುವುದು ಹೇಗಿದೆಯೋ ಹಾಗೆ ಗೊತ್ತಾಗಬೇಕು, ಹೇಗೆ ಕಾಣಿಸುತ್ತದೆಯೋ ಹಾಗಲ್ಲ!
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
     ನಮ್ಮ ಮುಂದೆ ವಿಧ-ವಿಧವಾದ ಸತ್ಯಗಳು ಕಂಡುಬರುತ್ತವೆ. ಒಬ್ಬರು ಹೇಳುತ್ತಾರೆ, "ಇದೇ ಸತ್ಯ". ಇನ್ನೊಬ್ಬರು, "ಅದು ಸತ್ಯ" ಎನ್ನುತ್ತಾರೆ. "ಎಲ್ಲವೂ ಸತ್ಯ" ಎಂದು ಮತ್ತೊಬ್ಬರು ಹೇಳುತ್ತಾರೆ. ಆದರೆ ಅಂತಿಮ ಸತ್ಯ ಯಾವುದು? ಅಂತಿಮ ಸತ್ಯ ಯಾವುದು ಎಂಬುದನ್ನು ಅರಿಯಲು ನಮಗೆ ಅಗತ್ಯವಾದ ಸ್ಪಷ್ಟವಾದ ಜ್ಞಾನ ಹೊಂದಿರಬೇಕಾಗುತ್ತದೆ. ಇಡೀ ಪ್ರಪಂಚವೇ ಮಾಯೆ, ಅದೇ ಅಂತಿಮ ಸತ್ಯವಲ್ಲ ಅನ್ನುತ್ತಾರೆ. ಹಾಗಾದರೆ ಈ ಪ್ರಪಂಚದಲ್ಲಿನ ಯಾವುದನ್ನೇ ಆಗಲಿ ಸತ್ಯವೆಂದು ಹೇಗೆ ಹೇಳುವುದು? ನಾವು ಏನು ಮಾತನಾಡುತ್ತೇವೋ ಅದೂ ಸತ್ಯವಾಗಲಾರದು! ಓಹ್! ಎಷ್ಟೊಂದು ಗೋಜಲಾಯಿತು, ಈ ಸಿಕ್ಕು ಬಿಡಿಸುವುದಾದರೂ ಹೇಗೆ? ಸತ್ಯವೆಂದರೇನು ಎಂಬ ಜ್ಞಾನ ಇಲ್ಲಿ ಅಗತ್ಯವಾಗುತ್ತದೆ. ನಮಗೆ ಜ್ಞಾನ ಬೇಕು, ಏಕೆಂದರೆ ಅದೇ ಸತ್ಯದೆಡೆಗೆ ನಮ್ಮನ್ನು ಕರೆದೊಯ್ಯುವುದು. ಯಾವುದು ಜ್ಞಾನ ಮತ್ತು ಯಾವುದು ಸತ್ಯ ಎಂಬ ಕ್ಲಿಷ್ಟ ವಿಷಯದೆಡೆಗೆ ನಾವೀಗ ಹೊರಳುತ್ತಿದ್ದೇವೆ.
     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ ||
     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
     ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಅವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ. ಇದನ್ನು 'ಮತಿ' ಎಂದೂ ಹೇಳುತ್ತಾರೆ. ಸತ್ಯ ಅನ್ನುವುದು ಅತ್ಯಂತ ಉನ್ನತ ಸ್ತರದಲ್ಲಿ ನಮ್ಮ ಮೆದುಳು ಗ್ರಹಿಸಬಹುದಾದಕ್ಕಿಂತ ಮೇಲಿರುತ್ತದೆ, ಯಾವುದು ಮೇಲುನೋಟಕ್ಕೆ ಕಂಡುಬರುತ್ತದೋ ಅದಕ್ಕಿಂತ ಭಿನ್ನವಾಗಿರಬಹುದು. ಅಂತಹ ಸ್ಥಿತಿಯಲ್ಲಿ ನಾವು ಏನು ಮಾತನಾಡುತ್ತೇವೋ, ಏನನ್ನು ಕೇಳುತ್ತೇವೋ ನಮಗೇ ಗೊತ್ತಾಗುವುದಿಲ್ಲ.
     ಹಿಂದಿನ ಒಂದು ಲೇಖನದಲ್ಲಿ ಬದುಕುವ ಆಸೆ ನಮ್ಮನ್ನು ಬದುಕಿಸುತ್ತದೆ ಎಂಬ ಬಗ್ಗೆ ಚರ್ಚಿಸಿದೆವು. ಈಗಿನ ಸ್ಥಿತಿಗಿಂತ ಉನ್ನತ ಸ್ಥಿತಿಗೆ ಏರುತ್ತೇವೆಂಬ ಒಳ ಆಸೆ ನಮ್ಮಲ್ಲಿ ಜಾಗೃತವಾಗಿದ್ದು ಬದುಕಿಗೆ ಪ್ರೇರಿಸುತ್ತದೆ ಎಂಬ ಸತ್ಯವನ್ನು ಅರಿತೆವಲ್ಲವೇ? ಇದರ ಮುಂದುವರೆದ ಸ್ಥಿತಿಯೇ ಆತ್ಮ ಪರಮಾತ್ಮನಾಗುವ, ಪರಮಾತ್ಮನೆಡೆಗೆ ಧಾವಿಸುವ, ಪರಮಾತ್ಮನನ್ನು ಅರಿಯುವ ಕ್ರಿಯೆಯಾಗಿದ್ದು, ಇದು ಸುಪ್ತವಾಗಿರುತ್ತದೆ. ಇದೇ ಸತ್ಯಾನ್ವೇಷಣೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿದ್ದು ಅವರವರ ಸಾಧನೆ ಅನುಸರಿಸಿ ಮುನ್ನಡೆಯುತ್ತಿರುತ್ತದೆ. ಇದು ನಿರಂತರ ಕ್ರಿಯೆಯಾಗಿದೆ. ಈ ದೇವರನ್ನು ಕಾಣುವ, ಕಾಣಬೇಕೆನ್ನಿಸುವ, ಅರಿಯಬೇಕೆನ್ನಿಸುವ, ಸತ್ಯ ತಿಳಿಯಬೇಕೆನ್ನುವ ವಿಚಾರವನ್ನು ನಮ್ಮ ತಲೆಯಲ್ಲಿ ತುರುಕಿದವರು ಯಾರು? ಈ ವಿಷಯದಲ್ಲಿ ಅನೇಕ ಮಹಾಮಹಿಮರು, ಸಾಧು-ಸಂತರು, ದಾರ್ಶನಿಕರು, ಧಾರ್ಮಿಕರು ಅನೇಕ ರೀತಿಯ ಮಾರ್ಗದರ್ಶನಗಳು, ವಿಚಾರಗಳನ್ನು ನೀಡಿದ್ದಾರೆ, ನೀಡುತ್ತಿರುತ್ತಾರೆ. ಸಾಧಕರು ಇವೆಲ್ಲವನ್ನೂ ಜ್ಞಾನ ಗಳಿಸುವ ಸಲುವಾಗಿ ತಿಳಿದುಕೊಳ್ಳುತ್ತಾರೆ, ಮನನ ಮಾಡಿಕೊಳ್ಳುತ್ತಾರೆ, ಮಥಿಸುತ್ತಾರೆ, ಧ್ಯಾನಿಸುತ್ತಾರೆ, ಅಂತಿಮವಾಗಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತಿಳಿದಷ್ಟಕ್ಕೇ ಸಾಕು ಅಂದುಕೊಳ್ಳುವವರು, ತಿಳಿದದ್ದೇ ಸತ್ಯ ಎಂದ ವಾದಿಸುವವರು, 'ನಮ್ಮ ಗುರುಗಳು ಹೇಳಿದ್ದಾರಲ್ಲಾ, ಅವರು ಹೇಳಿದ ಮೇಲೆ ಮುಗಿಯಿತು, ಅದು ಸತ್ಯವೇ' ಎಂದು ವಿಚಾರ ಮಾಡದಿರುವವರು, ತಿಳಿಯುವ ಕುತೂಹಲವನ್ನೇ ತೋರದವರು, ಎಲ್ಲಾ ಸುಳ್ಳು ಅನ್ನುವವರು, ತಿಳಿಯಲು ಇಚ್ಛಿಸದವರು, ಹೀಗೆ ವಿವಿಧ ವಿಚಾರಿಗಳಿರುತ್ತಾರೆ. ಆದರೆ, ಒಂದಂತೂ ನಿಜ, ಯಾವ ಪ್ರಮಾಣದಲ್ಲೇ ಆಗಲಿ, 'ಇದು ಏನು?' ಎಂದು ತಿಳಿಯುವ ಕುತೂಹಲವಂತೂ ಸುಪ್ತವಾಗಿ ವಿವಿಧ ಪ್ರಮಾಣಗಳಲ್ಲಿ ಅಂತರ್ಗತವಾಗಿರುವುದಂತೂ ಸತ್ಯ. ನಾವೀಗ ಚರ್ಚಿಸುತ್ತಿರುವುದು ಸುಪ್ತ ಕುತೂಹಲವನ್ನು ತಣಿಸಿಕೊಳ್ಳಬಯಸುವ ಮನೋಸ್ಥಿತಿಯವರ ಕುರಿತು.
     ಸತ್ಯವನ್ನು ತಿಳಿಯುವ ಬಯಕೆ ಅಂತರಂಗದಲ್ಲಿ ಸುಪ್ತವಾಗಿರುತ್ತದೆ ಎಂದೆವು. ಈ ಬಯಕೆ ಬಂದಿದ್ದಾದರೂ ಹೇಗೆ? ಎಲ್ಲಿಂದ ಬಂದದ್ದು? ಎಂಬುದು ಯಾರಿಗೂ ಗೊತ್ತಿಲ್ಲ. ಅದು ನಮ್ಮ ಪ್ರಯತ್ನದಿಂದ ಬಂದದ್ದಂತೂ ಅಲ್ಲ. ಏಕೆಂದರೆ ಜ್ಞಾನವಿದ್ದರೆ ತಾನೇ ಪ್ರಯತ್ನದ ಪ್ರಶ್ನೆ ಉದ್ಭವಿಸುವುದು! ಹಾಗಾದರೆ ಈ ಜ್ಞಾನದ ಉಗಮವಾದರೂ ಹೇಗಾಯಿತು? ಯಾವುದರ ಬಗ್ಗೆ ಮೂಲಕಾರಣ ಗೊತ್ತಿಲ್ಲವೋ ಅದನ್ನು 'ಈಶ್ವರಾನುಗ್ರಹ' ಅಥವ 'ದೇವರ ಕೃಪೆ' ಅನ್ನೋಣವೇ? ತಿಳಿಯಬೇಕೆಂಬ ಒಳತುಡಿತವಿದೆ. ಹೇಗೆ ತಿಳಿಯಬೇಕು ಮತ್ತು ಅದು ಏನು ಎಂಬುದರ ಬಗ್ಗೆ ನಿಜವಾದ ಸಾಧಕ ತನ್ನದೇ ಆದ ಪಥದಲ್ಲಿ ಮುಂದಡಿಯಿಡುತ್ತಾನೆ. ಈ ಅಂತರ್ಗತ ತುಡಿತವೇ ಜೀವಿಯನ್ನು ಸತ್ಯಾನ್ವೇಷಣೆಗೆ ಮುನ್ನಡೆಯುವಂತೆ ಮಾಡುವ ಶಕ್ತಿಯಾಗಿದೆ. ಸತ್ಯ ಯಾವುದು, ಅಸತ್ಯ ಯಾವುದು ಎಂದು ವಿವೇಚಿಸುವ ಕ್ರಿಯೆಯನ್ನು 'ಮತಿ' ಎನ್ನುತ್ತಾರೆ.
     ಈಗ ಇನ್ನೊಂದು ಅಂಶವನ್ನೂ ಗಮನಿಸಬೇಕಿದೆ. ಸತ್ಯವನ್ನು ತಿಳಿಯುವ ಸುಪ್ತ ಆಸೆ ಅಂತರ್ಗತವಾಗಿ ಇರುತ್ತದೆ ಎಂದಾದರೆ ಆ ಸತ್ಯ ಅನ್ನುವುದು ಇದೆ ಎಂಬುದನ್ನು ಒಪ್ಪಬೇಕಾಗುತ್ತದೆ. ಹಾಗೆ ಒಪ್ಪಿ ಮುಂದುವರೆಯುವುದೇ ಸತ್ಯದಲ್ಲಿ ಇರುವ ನಂಬಿಕೆ ಅಥವ ಶ್ರದ್ಧೆಯನ್ನು ವ್ಯಕ್ತಪಡಿಸಿದಂತೆ! ಈ ಮತಿ ಮತ್ತು ಶ್ರದ್ಧೆ ಅನ್ನುವುದು ಒಂದಕ್ಕೊಂದಕ್ಕೆ ಪೂರಕವಾದುದು. ಸತ್ಯ ಇದೆ ಎಂದು ಹೇಗೆ ನಂಬುವುದು? ಅದು ನಮ್ಮ ಮನಸ್ಸಿನಲ್ಲಿ ಇರುವ ನಂಬಿಕೆಯಾಗಿದೆ. ಸತ್ಯವನ್ನು ತಿಳಿಯುವ ಒಳಬಯಕೆಯೇ ನಂಬಿಕೆಯಾಗಿ, ಶ್ರದ್ಧೆಯಾಗಿ ತನ್ನನ್ನು ತಾನು ಅರಿಯುವ ಕ್ರಿಯೆಯಾಗಿ ಮುಂದುವರೆಯುತ್ತದೆ. ಹೀಗಾಗಿ ನಂಬಿಕೆ ಅನ್ನುವುದು ಚಿಂತನೆ ಮತ್ತು ಅರಿವಿಗಿಂತ ಉನ್ನತವಾದುದಾಗುತ್ತದೆ. ಅದು ಕುರುಡು ನಂಬಿಕೆಯೆಂದು ನಾವು ಹೇಳುವಂತಹದಲ್ಲ, ಬದಲಾಗಿ ಸತ್ಯ ಇದೆ ಅನ್ನುವ ನಿಗ್ರಹಿಸಲಾಗದ ಭಾವನೆಯಾಗಿದೆ. ಅದು ಇರಲೇಬೇಕು. ಸತ್ಯದೆಡೆಗೆ ತುಡಿಯುವ ಒಳಮನಕ್ಕಿಂತ ಅಂದರೆ ಮತಿಗಿಂತ, ಸತ್ಯವಿದೆಯೆಂದು ನಂಬುವ ಶ್ರದ್ಧೆ ಅನ್ನುವುದು ಹಿರಿದೆಂದು ತಿಳಿದವರು ಹೇಳುತ್ತಾರೆ. ಸಾಮಾನ್ಯವಾದ ನಂಬಿಕೆಗಿಂತ ಇಲ್ಲಿ ಪ್ರಸ್ತಾಪಿಸಿದ ಅಚಲ ನಂಬಿಕೆಯಿದ್ದರೆ ಅದು 'ನಮ್ಮನ್ನು ನಾವು ಅರಿಯುವುದಕ್ಕೆ' ಸಹಕಾರಿಯಾಗುತ್ತದೆ. ಎಂತಹ ಉನ್ನತವಾದ ಪಾಂಡಿತ್ಯವಿದ್ದರೂ ನಂಬಿಕೆಯಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ.
     ಅಚಲ ನಂಬಿಕೆ ಬರಬೇಕೆಂದರೆ ನಿಷ್ಠೆ ಇರಬೇಕಾಗುತ್ತದೆ. ನಂಬಿದ ಸತ್ಯದಲ್ಲಿ ನಿಷ್ಠೆ ಹೊಂದಿದವನು ಸತ್ಯದೊಂದಿಗೆ ಒಂದಾಗಿರುತ್ತಾನೆ. ನಿಷ್ಠೆಯಿದ್ದಲ್ಲಿ ಶ್ರದ್ಧೆ ಇರುತ್ತದೆ, ಶ್ರದ್ಧೆ ಇರುವಲ್ಲಿ ಸತ್ಯದೆಡೆಗೆ ಧಾವಿಸುವ ತವಕವಾದ ಮತಿ ಇರುತ್ತದೆ. ಈ ನಿಷ್ಠೆ ಅನ್ನುವುದಾದರೂ ಏನು? ನಿಷ್ಠೆ ಅಂದರೆ ನಂಬಿದ್ದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಒಪ್ಪದ ಮನೋಸ್ಥಿತಿ ಅನ್ನಬಹುದು. ಮನಸ್ಸು ತಾನು ನಂಬಿದ ಸತ್ಯವನ್ನು ಮಾತ್ರ ಕುರಿತು ಯೋಚಿಸುತ್ತದೆ, ಮತ್ತೇನನ್ನೂ ಯೋಚಿಸುವುದಿಲ್ಲ. ಮನಸ್ಸಿನ ಕ್ರಿಯೆಯೇ ಒಂದು ರೀತಿಯಲ್ಲಿ ಟ್ಯೂನ್ ಮಾಡಿದಂತೆ ಆಗಿಬಿಟ್ಟಿರುತ್ತದೆ. ಅಚಲ ನಂಬಿಕೆ ಇಂತಹ ನಿಷ್ಠೆಯನ್ನು ಸೃಷ್ಟಿಸುತ್ತದೆ.
     ಮುಂದಿನ ಭಾಗದಲ್ಲಿ ಮತ್ತಷ್ಟು ವಿಚಾರಗಳನ್ನು ಗಮನಿಸೋಣ. ಈ ಭಾಗವನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ: ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ. ಮತಿಗೆ  ಸತ್ಯವಿದೆಯೆಂದು ನಂಬುವ ಶ್ರದ್ಧೆ/ನಂಬಿಕೆ ಸಾಥ್ ನೀಡುತ್ತದೆ. ಶ್ರದ್ಧೆಗೆ ನಿಷ್ಠೆ ಬೆನ್ನೆಲುಬಾಗುತ್ತದೆ. ಪ್ರಾರಂಭದ ವಾಕ್ಯದೊಂದಿಗೇ ಮುಕ್ತಾಯಗೊಳಿಸುವೆ: ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!
-ಕ.ವೆಂ.ನಾಗರಾಜ್.
**************
ದಿನಾಂಕ 13.04.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: