ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಮೇ 28, 2011

ಪಂ. ಸುಧಾಕರಚತುರ್ವೇದಿಯವರ ವಿಚಾರಧಾರೆ - 2: ಒಳ್ಳೆಯ ರೀತಿ ಬಾಳೋಣ

ಒಳ್ಳೆಯ ರೀತಿ ಬಾಳೋಣ


     ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು ಸಲ ಅವನು ನನ್ನ ಹತ್ತಿರ ಬಂದು ಹೇಳಿದ್ದ - ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ. ನಾನು ಹೇಳಿದೆ ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದಿದ್ದೆ. ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ ಎಂದು ನಾನು ಅಂಕ ಸೇರಿಸಿಕೊಟ್ಟು ನನ್ನ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿರಲಿಲ್ಲ.
     ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. 'ಸೋಮ' ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು 'ಮಥನ ಮಾಡು' ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು. ಇನ್ನೊಂದು 'ವಿಚಾರ ಮಾಡುವ ಶಕ್ತಿ', ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ. ನನಗೆ ಚೆನ್ನಾಗಿ ಜ್ಞಾಪಕವಿದೆ. ನನ್ನ ತಂದೆಯವರು ಸಂಪ್ರದಾಯಸ್ಥ ಬ್ರಾಹ್ಮಣರು. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಶೂದ್ರರು ಬರುವಂತೇ ಇಲ್ಲ, ಬ್ರಾಹ್ಮಣರಲ್ಲೂ ಅದರಲ್ಲೂ ಯಾರೋ ಸ್ಮಾರ್ತರು, ಆಚಾರ್ಯರು, ಶಾಸ್ತ್ರಿಗಳು ಬಂದರೆ 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡೋರು, ಅವರು ಹೋದ ನಂತರ ಪುನಃ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು ಶುಚಿಯಾದೆ ಅಂದುಕೊಂಡು ಬರುತ್ತಿದ್ದರು. ನಮ್ಮಪ್ಪಂದೇ ಈ ಗತಿ. ನನ್ನನ್ನು ಕಂಡು 'ಯಾವ ಪಾಪದ ಫಲವಾಗಿ ನೀನು ನಮ್ಮ ಮನೆಯಲ್ಲಿ ಹುಟ್ಟಿದೆಯೋ, ನೀನೊಂದು ಪಾಪದ ಮುದ್ದೆ, ನಮ್ಮ ಮನೆಯಲ್ಲಿ ಏಕೆ ಹುಟ್ಟಿದೆ, ನಮ್ಮ ಮನೆಯ ಹೆಸರು ಕೆಡಿಸುತ್ತೀಯಾ' ಎನ್ನುತ್ತಿದ್ದರು. ಅವರದು ಭಾರೀ ಮಡಿ. ನಾನು ಬೆಳಿಗ್ಗೆ ಏಳುವಾಗ 'ಶಂಭೋ, ಮಹಾದೇವಾ, ಕಾಪಾಡಪ್ಪಾ' ಅಂತಿದ್ದರೆ ಅವರಿಗೆ ಮೈ ಉರಿ, ಮಾಧ್ವರ ಮನೆಯಲ್ಲಿ ಹುಟ್ಟಿ ಶೈವರ ದೇವರ ಹೆಸರು ಹೇಳುತ್ತಾನಲ್ಲಾ ಅಂತ. ಅವರು ಎರಡು ಹೊತ್ತು ವಿಷ್ಣು ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಹೂವು ಬಿಡುತ್ತಿರಲಿಲ್ಲ, ಪಕ್ಕದ ಮನೆಯಲ್ಲಿ ಬಿಡುತ್ತಿದ್ದ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡಿದರೆ ಪುಣ್ಯ ಬರುತ್ತದೆಯೇ ಎಂದು ನಾನು ಅಪ್ಪನನ್ನು ಕೇಳುತ್ತಿದ್ದೆ. ಅದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ ಆ ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ. ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರುತ್ತೇನೋ! ಹೂವನ್ನು ಕಿತ್ತು ಮುಡಿದುಕೊಳ್ಳುವುದೂ ಸರಿಯಲ್ಲ. ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ.
     ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ - ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು (ಮಠದ ಮತ್ತು ಮುಖ್ಯಸ್ಥರ ಹೆಸರನ್ನು ಚತುರ್ವೇದಿಯವರು ಹೇಳಿದ್ದರು, ಆದರೆ ಇಲ್ಲಿ ಅದನ್ನು ಬಳಸಿಲ್ಲ -ಲೇ.) ಕೇಳಿದೆ: 'ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ?' ಅವರು ಹೇಳಿದರು: ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ. ನಾನು ಹೇಳಿದೆ - 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ ಕಣಯ್ಯಾ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀನು ಹೇಗೆ ಮನುಷ್ಯ?' ಎಂದು ಹೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ, ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು.
     ಭಗವಂತ ಐಶ್ವರ್ಯ ಕೊಡುತ್ತಾನೆ, ಯಾರಿಗೆ? ಯಾರು ನೂರು ಕೈಗಳಿಂದ ದುಡಿದು ಸಾವಿರ ಕೈಗಳಿಂದ ದಾನ ಮಾಡುತ್ತಾನೋ ಅವರಿಗೆ! ನಾನು ಒಬ್ಬನೇ ತುಪ್ಪ ತಿಂದರೆ ನನಗೊಬ್ಬನಿಗೆ ಲಾಭ ಆಗಬಹುದು, ಅದನ್ನು ಯಜ್ಞ ಮಾಡುವಾಗ ಅಗ್ನಿಗೆ ಹಾಕಿದರೆ ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಮಾರ್ಪಟ್ಟು ವಾಯುಮಂಡಲದಲ್ಲಿ ಹರಡುತ್ತೆ, ಅದರ ಲಾಭ ಎಲ್ಲರಿಗೂ ಸಿಕ್ಕುತ್ತೆ, ಈ ವೈಜ್ಞಾನಿಕ ಸತ್ಯವನ್ನು ಯಾರೂ ಯೋಚನೆ ಮಾಡುವುದಿಲ್ಲ, ನಿಮಗೆ ಗೊತ್ತಿದೆ, ಬೆಂಕಿಗೆ ಮಾತ್ರ ಆ ಶಕ್ತಿ ಇರೋದು, ಬೆಂಕಿಗೆ ತನಗೆ ಸಿಗುವ ಎಲ್ಲಾ ವಸ್ತುಗಳನ್ನು ದಹಿಸಿ, ಛಿನ್ನ ಭಿನ್ನಗೊಳಿಸಿ ಎಲ್ಲಾ ಕಡೆ ಹರಡುವ ಶಕ್ತಿ ಇದೆ, ಅದು ಒಳ್ಳೆಯದನ್ನೂ ಕೊಟ್ಟರೂ ಮಾಡುತ್ತೆ, ಕೆಟ್ಟದನ್ನು ಕೊಟ್ಟರೂ ಮಾಡುತ್ತೆ. ನೀರಿನಲ್ಲಿ ಹೋಮ ಮಾಡಿದರೆ ಏನೂ ಪ್ರಯೋಜನವಿಲ್ಲ. ಸೋಮ ಪದಕ್ಕೆ ಇರುವ ಮತ್ತೊಂದು ಅರ್ಥ ಸಾರಭೂತವಾದದ್ದು ಅಂತ. ಉದಾಹರಣೆಗೆ ಹೇಳಬೇಕೆಂದರೆ ಸೋಮ ಅನ್ನುವ ಬಳ್ಳಿ ಇದೆ, ಅದರಲ್ಲೂ ಬಿಡುವುದು ಒಂದೇ ಎಲೆ, ಅದರಲ್ಲಿ ೪೧ ವಿಧವಾದ ಔಷಧೀಯ ಗುಣಗಳಿವೆ. ಅದನ್ನು ಉಪಯೋಗಿಸಿ ಮಾಡುವ ಯಜ್ಞಕ್ಕೆ ಸೋಮಯಾಗ ಅನ್ನುತ್ತಾರೆ, ಸೋಮದ ಎಲೆ ಅಂತ ಯಾವುದೋ ಕಡ್ಡಿ ಹಾಕುತ್ತಾರೆ, ಹಾಕಬೇಕಾದ್ದನ್ನು ಹಾಕದೆ ಬೇರೆ ಏನೋ ಹಾಕಿ ಹಾಕಿದೆವೆಂದು ಅಂದುಕೊಳ್ಳುತ್ತಾರೆ. ಪುರೋಹಿತರು ಅಂತಾರಲ್ಲಾ ಅವರು ಪುರೋಹತರೇ! ಆತ್ಮಶುದ್ಧಿಯಿಲ್ಲದೆ ಪೂಜೆ ಮಾಡಿಸುವ ಪುರೋಹಿತರೆಲ್ಲಾ ಪುರೋಹತರೇ! ಸೋಮ ಅನ್ನುವ ಪದಕ್ಕೆ 'ಪ್ರಸವೈಶ್ವರ್ಯ' ಅನ್ನುವ ಹೆಸರೂ ಇದೆ. ಯಾವತ್ತೂ ವೇದ ಬಡವರಾಗಿರಿ ಎಂದು ಹೇಳುವುದಿಲ್ಲ, ತಾವಾಗೇ ಬಡತನ ಬಯಸಿದರೆ ಪರವಾಗಿಲ್ಲ, ವಿನೋಬಾ ಬಾವೆಯವರಂತೆ! ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ? ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು,' ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ, ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ' ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ. ಕಸ್ತೂರಿಬಾ ಬಹಳ ಕಾಯಿಲೆಯಿಂದ ನರಳಿದವರು. ಅವರು ಸಾಯುವ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಡೆದ ಘಟನೆ. ಅವರು ಆಯುರ್ವೇದದ ಔಷಧಿ ಮಾತ್ರ ಬಳಸುತ್ತಿದ್ದರು, ಇಂಗ್ಲಿಷ್ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಹತ್ತಿರವಿದ್ದವರಲ್ಲಿ ಏನೋ ಒಂದು ಆಸೆ, ಅಲ್ಲಿದ್ದ ವೈದ್ಯರೊಬ್ಬರು ಪೆನ್ಸಿಲಿನ್ ಇಂಜೆಕ್ಷನ್ ತಂದು ಕಸ್ತೂರಿಬಾರಿಗೆ ಕೊಡಲೇ ಎಂದು ಕೇಳಿದರು. ಅವರು ಗಾಂಧೀಜಿಯನ್ನು ಕೇಳಿಬಿಡಿ ಅಂದರು. ಆ ಗಾಂಧೀಜಿಯೂ ಇಂಗ್ಲಿಷ್ ಔಷಧಿ ಬಳಸುತ್ತಿರಲಿಲ್ಲ. ಅವರನ್ನು ಕೇಳುವುದೂ ಒಂದೆ, ಬಿಡುವುದೂ ಒಂದೇ ಎಂದು ಸುಮ್ಮನಾದರು. ಆ ಗಾಂಧೀಜೀನೋ, ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರಷ್ಟೇ ಎತ್ತರ ಬೆಳೆಯಬೇಕು. ಅವರನ್ನು ಬಯ್ಯುವುದು ಸುಲಭ.
     ನಾವು ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ ನಾವು ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. ಗೋಬ್ರಾಹ್ಮಣೇಭ್ಯಃ ಶುಭಂಭವತು ಅಂತೀವಿ, ಗೋವು, ಬ್ರಾಹಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ನಮ್ಮ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. 'ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ' ಅನ್ನುತ್ತಿದ್ದರು. 'ಅದು ಯಾವ ಶಾಸ್ತ್ರ?' ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, 'ಶಾಸ್ತ್ರ ಶಾಸ್ತ್ರ ಕಣಯ್ಯಾ' ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ? ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ. ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ, ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮನ್ನೂ ಹಾಳು ಮಾಡುತ್ತಾರೆ, ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ, ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು, ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ -ದೊಡ್ಡ ಆರ್ಯಸಮಾಜಿ ಪರಿವಾರ ಅದು- ಅವರ ಮನೆಯಲ್ಲಿ ಒಮ್ಮೆ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು, ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ನನಗೆ ಹೇಳಿದ್ದರು, ನೀನು ನಾಸ್ತಿಕ ಕಣಯ್ಯಾ ಅಂತ. ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೆ ಇರುತ್ತೇನೆ ಎಂದು ಉತ್ತರಿಸಿದ್ದೆ. ಅಷ್ಟೆಲ್ಲಾ ಸಂಪ್ರದಾಯಸ್ಥರಾಗಿದ್ದ ನನ್ನ ತಂದೆ ಸಾಯುವ ಕಾಲಕ್ಕೆ ಆಸ್ಪತ್ರೆಯಲ್ಲಿದ್ದಾಗ ನಾನು ಹೊರಗೆ ಇದ್ದೆ. ನನ್ನ ತಂದೆ ನರ್ಸ್‌ಗೆ ಹೇಳಿ ನನ್ನನ್ನು ಕರೆಸಿದರು. ನನ್ನ ಕೈಹಿಡಿದು 'ಮಗೂ, ನಿನಗೆ ನಾನು ಸಿಕ್ಕಾಪಟ್ಟೆ ಬೈದುಬಿಟ್ಟಿದ್ದೀನಿ. ಮರೆತುಬಿಡು, ನೀನು ದೊಡ್ಡ ಮನುಷ್ಯ ಆಗುತ್ತೀಯ, ನಿನ್ನಿಂದ ನಮ್ಮ ಕುಲಕ್ಕೆ ಒಳ್ಳೆ ಹೆಸರು ಬರಬೇಕು' ಎಂದು ಹೇಳಿದ್ದರು. ಶಾಪ ಕೊಟ್ಟಿದ್ದ ತಂದೆಯಿಂದ ನನಗೆ ಆಶೀರ್ವಾದ ಸಿಕ್ಕಿತು, ನನಗೆ ತೃಪ್ತಿ. ಅವರು ಆಶೀರ್ವಾದ ಕೊಡದೇ ಹೋಗಿದ್ದರೂ ನನ್ನ ತೃಪ್ತಿಯಲ್ಲಿ ಕೊರತೆಯಾಗುತ್ತಿರಲಿಲ್ಲ. ನನ್ನ ತಂದೆ ನನಗೆ ಪೂಜ್ಯರು ಹೌದು, ಆದರೆ ಯಾರಿಗೆ ಗೊತ್ತು, ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೋ ಏನೋ, . . . ಹಳ್ಳಿಯಲ್ಲಿ ಇದ್ದಾಗ ಪಟೇಲರು, ಶಾನುಭೋಗರು, ಅವರು, ಇವರು ತರಕಾರಿ, ಎಣ್ಣೆ, ತುಪ್ಪ, ಅಕ್ಕಿ, ಬೇಳೆ ತಂದು ಕೊಡುತ್ತಿದ್ದರು. ನಾನು ಕೇಳುತ್ತಿದ್ದೆ, 'ಅಪ್ಪಾ, ಇದಕ್ಕೆ ನೀವು ದುಡ್ಡು ಕೊಡುತ್ತೀರಾ?' ಅಂತ. 'ಇಲ್ಲ, ಅವರು ಶ್ರದ್ಧೆಯಿಂದ ಕೊಡ್ತಾರೆ' ಅಂತಿದ್ದರು. 'ಅವರು ಶ್ರದ್ಧೆಯಿಂದ ಕೊಡ್ತಾರೆ, ನೀವು ಶ್ರದ್ಧೆಯಿಂದ ತೊಗೋತೀರಾ?' ಅದಕ್ಕೆ ಅವರು ಉತ್ತರಿಸುತ್ತಿರಲಿಲ್ಲ. ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ, ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ.

ಗುರುವಾರ, ಮೇ 26, 2011

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 1: ಬದುಕೋಣ, ಸಾಯದಿರೋಣಆತ್ಮೀಯರೇ,
                 ಅಪ್ಪಟ ಕನ್ನಡಿಗರಾದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರು ತಮ್ಮ ೧೩ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಈಗ ೧೧೫ ವರ್ಷಗಳಾಗಿರುವ ಚತುರ್ವೇದಿಯವರ ಜೀವನೋತ್ಸಾಹ ನಿಜಕ್ಕೂ ಬತ್ತದ ಚಿಲುಮೆ. ಇವರು ಬೆಂಗಳೂರಿನ ಜಯನಗರ ೫ನೆಯ ಬ್ಲಾಕಿನ ಶ್ರೀ ಕೃಷ್ಣಸೇವಾಶ್ರಮ ರಸ್ತ್ರೆಯ ಮನೆ ನಂ. ೨೮೬/ಸಿ ಯಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ೫-೩೦ಕ್ಕೆ ಸರಿಯಾಗಿ ಇವರ ಮನೆಯಲ್ಲಿ ಸತ್ಸಂಗ ನಡೆಯುತ್ತಿದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ಭಾಗವಹಿಸಲು ಪರಿಚಯವಿರಬೇಕಾದ ಮತ್ತು ಆಹ್ವಾನಿಸಬೇಕಾದ ಅಗತ್ಯವಿಲ್ಲ. ಅವರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಎಲ್ಲವನ್ನೂ ಆಲೋಚಿಸಿ, ವಿಮರ್ಶಿಸಿಯೇ ಒಪ್ಪಬೇಕೆಂಬುದೇ ಅವರ ಆಗ್ರಹ. ನೀವೂ ಈ ಅಪರೂಪದ ಸಾಧಕರನ್ನು ಭೇಟಿ ಮಾಡಬೇಕು ಮತ್ತು ಅವರ ಮಾತುಗಳನ್ನು ಆಲಿಸಬೇಕು ಎಂಬುದು ನನ್ನ ಆಶಯ.
     ಕಳೆದ ೧೪-೦೫-೨೦೧೧ರಂದು ನಡೆದ ಸತ್ಸಂಗದಲ್ಲಿ ಪಂ. ಚತುರ್ವೇದಿಯವರು ಮುಂದಿಟ್ಟ ವಿಚಾರಗಳನ್ನು ಎರಡು ಕಂತುಗಳಲ್ಲಿ ತಮ್ಮ ಮುಂದಿಟ್ಟಿದೆ. ಅವರು ಮಧ್ಯೆ ಮಧ್ಯೆ ವೇದದ ಮಂತ್ರಗಳನ್ನು ಉಲ್ಲೇಖಿಸುತ್ತಿದ್ದು ಅವುಗಳನ್ನು ಪದಬಳಕೆಯಲ್ಲಿ ಎಲ್ಲಿ ತಪ್ಪಾದೀತೋ ಎಂಬ ಭಾವನೆಯಿಂದ ಈ ಲೇಖನದಲ್ಲಿ ಹಾಕಿಲ್ಲ. ಇಲ್ಲಿರುವುದೆಲ್ಲಾ ಅವರದೇ ಮಾತುಗಳು. ಪ್ರತಿಕ್ರಿಯೆಗೆ ಸ್ವಾಗತ.
-ಕ.ವೆಂ.ನಾಗರಾಜ್.
*************
ಬದುಕೋಣ, ಸಾಯದಿರೋಣ
     ಋಗ್ವೇದದ ಒಂದು ಮಂತ್ರದಲ್ಲಿ ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಎಂದು ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. 'ವಿಶ್ವಾನಿ ದೇವ ಸವಿತರ್. . . . . 'ಎಂಬ ಮಂತ್ರದಲ್ಲಿ ಭಗವಂತ, ಜಗತ್ ಶ್ರೇಯಕ, ಜಗದುತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಹೇಳಿದೆ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮಗಳ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?' ಅದಕ್ಕೆ ನಾವು ಎರಡು ಕಾರಣ ಕೊಡುತ್ತೇವೆ - ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಹಳೆಯ ಜನ್ಮದ್ದಿರಲಿ, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬರುತ್ತಾ ಇದ್ದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು. ಭೀಷ್ಮಾಚಾರ್ಯರಿಗೆ, ಅಶ್ವತ್ಥಾಮರಿಗೆ ಇಚ್ಛಾಮರಣಿತ್ವದ ವರ ಇತ್ತೆಂದು ಹೇಳುತ್ತಾರೆ. ಯಾವಾಗ ಸಾಯಬೇಕು ಅನ್ನಿಸುವುದೋ ಆವಾಗ ಸಾಯುವ ಶಕ್ತಿ! ಅದೇನೋ ನನಗೆ ಅರ್ಥವಾಗುವುದಿಲ್ಲ, ಬದುಕಬೇಕಾದರೇನೋ ಕಷ್ಟ ಇದೆ, ಸಾಯುವುದಕ್ಕೇನು? ಬೆಳಿಗ್ಗೆ ಎದ್ದಾಗ ನ್ಯೂಸ್ ಪೇಪರ್ ನೋಡಿದರೆ ಆ ಹುಡುಗ ವಿಷ ತಿಂದು ಸತ್ತ, ಈ ಹುಡುಗಿ ನೇಣು ಹಾಕಿಕೊಂಡು ಸತ್ತಳು, ಅಂತೆಲ್ಲಾ ಓದುತ್ತೀವಿ. ನಮಗೆ ಮೊದಲೇ ಗೊತ್ತಿದ್ದರೆ, ಇಂತಹ ದಿನವೇ ಸಾವು ಬರುತ್ತದೆ ಎಂದು ಗೊತ್ತಿದ್ದರೆ ಬದುಕುವುದಕ್ಕೆ ಉತ್ಸಾಹವೇ ಇರುತ್ತಿರಲಿಲ್ಲ.
     ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತಿರಬೇಕಾದರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಪ್ಲಾನಿಲ್ಲ. ಏಕೆ ಹೇಳಿದೆನೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು. ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ - ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. ಜೀವೇದ ಶರದಶ್ಶತಮ್ ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ 'ಶತಾಯುರ್ ವಯ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು! ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ, ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself! - ಆಶಾವಾದ ನಿಜವಾದ ಜೀವನ, ನಿರಾಶಾವಾದ ಸಾವು! ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಆಗ ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಜೀವ ತೆಗೆದುಕೊಂಡು ಹೋಗಲು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.

ಮಂಗಳವಾರ, ಮೇ 24, 2011

ಎಳ್ಳು ನೀರು


     ಮೂವರು ಸ್ನೇಹಿತರು -ಮೂಢ, ಮಂಕ, ಮುಠ್ಠಾಳ-  ಒಮ್ಮೆ ಒಟ್ಟಿಗೆ ಬಾಡಿಗೆ ಟ್ಯಾಕ್ಸಿ ಮಾಡಿಕೊಂಡು ಮಂಕನ ನೇತೃತ್ವದಲ್ಲಿ ಪ್ರವಾಸಕ್ಕೆ ಹೊರಟರು. ಮುಠ್ಠಾಳನಿಗೆ ದಾರಿಯಲ್ಲಿ ಬಾಯಾರಿಕೆಯಾಯಿತು. ಮಂಕ ಎಳನೀರು ಮಾರುತ್ತಿದ್ದ ಸ್ಥಳದಲ್ಲಿ ಟ್ಯಾಕ್ಸಿ ನಿಲ್ಲಿಸಿದ. ಮುಠ್ಠಾಳ ಟ್ಯಾಕ್ಸಿಯಲ್ಲೇ ಕುಳಿತಿದ್ದ. ಎಳನೀರು ಕೊಳ್ಳಲು ಮಂಕ ಇಳಿದಾಗ ಮೂಢನೂ ಅವನೊಂದಿಗೆ ಹೋದ. ನಾಲ್ಕು ಎಳನೀರು ಕೆತ್ತಲು ಹೇಳಿದ ಮಂಕ. ಕೆತ್ತಿದ ಮೊದಲ ಎಳನೀರನ್ನು ಮಂಕ ತೆಗೆದುಕೊಂಡು ಟ್ಯಾಕ್ಸಿಯಲ್ಲಿ ಕುಳಿತಿದ್ದ ಮುಠ್ಠಾಳನಿಗೆ ಕೊಟ್ಟು ಬಂದ. ಎರಡನೆಯ ಎಳನೀರನ್ನು ಟ್ಯಾಕ್ಸಿ ಚಾಲಕನಿಗೆ ಕೊಟ್ಟ. ಮೂರನೆಯ ಎಳನೀರು ಕೆತ್ತಿದಾಗ ತನಗೆ ಕೊಡುತ್ತಾನೆಂದು ಮೂಢ ತೆಗೆದುಕೊಳ್ಳಲು ಕೈ ಮುಂದು ಮಾಡುತ್ತಿದ್ದಾಗ ಮಂಕ ಆ ಎಳನೀರನ್ನು ಅವನಿಗೆ ಕೊಡದೆ ತಾನೇ ಗಟಗಟ ಕುಡಿದ. ವಯಸ್ಸಿನಲ್ಲಿ ಹಿರಿಯನಾದ ಮೂಢನಿಗೆ ನಾಚಿಕೆ ಮತ್ತು ಕಸಿವಿಸಿಯಾಯಿತು. ಎಳನೀರು ಕುಡಿಯಲು ಮನಸ್ಸಾಗಲಿಲ್ಲ. ಅಷ್ಟರಲ್ಲಿ ನಾಲ್ಕನೆಯ ಎಳನೀರನ್ನು ಕೆತ್ತಿದ್ದ ಮಾರುವವನು ಅದನ್ನು ಮೂಢನ ಮುಂದೆ ಹಿಡಿದ. ಕುಡಿಯಲೂ ಆಗದೆ ಬಿಡಲೂ ಆಗದೆ ಮನಸ್ಸಿಲ್ಲದ ಮನಸ್ಸಿನಿಂದ ಮೂಢ ಕುಡಿದ ಎಳನೀರು ಕಹಿಯಾಗಿತ್ತು.
(ಚಿತ್ರ ಕೃಪೆ: ಅಂತರ್ಜಾಲ)

ಸೋಮವಾರ, ಮೇ 23, 2011

ಹಿತೋಪದೇಶ

     ನೀತಿ, ನಿಯಮ, ನಿಯತ್ತು ಎಂದು ಅದಕ್ಕೇ ಜೋತು ಬಿದ್ದು ಕೆಲಸ ಮಾಡುತ್ತಿದ್ದ ಆ ಫುಡ್ ಇನ್ಸ್‌ಪೆಕ್ಟರನನ್ನು ಕಂಡು ಅವನ ಸಹೋದ್ಯೋಗಿಗಳು ಹಿಂದೆ ಮುಸಿ ಮುಸಿ ನಗುತ್ತಿದ್ದರು. ಬದುಕಲು ತಿಳಿಯದವನು, ನಾಲಾಯಕ್, ಇತ್ಯಾದಿ ಹಂಗಿಸುತ್ತಿದ್ದವರಿಗೆ ಮತ್ತು ಹಾವು ಹೊಡೆದು ಹದ್ದಿಗೆ ಹಾಕಬೇಕು ಎಂದು ಸಲಹೆ ಕೊಡುತ್ತಿದ್ದವರಿಗೆ ಬರವಿರಲಿಲ್ಲ. ಆತನ ಪ್ರಾಮಾಣಿಕತೆಯನ್ನು ಮೆಚ್ಚುತ್ತಿದ್ದವರೂ ಇದ್ದರು. ಅವನು ತಪಾಸಣೆಗೆ ಬಂದರೆ ಅಂಗಡಿಯವರು, ಸಹಕಾರ ಸಂಘಗಳವರು ಬೆಚ್ಚುತ್ತಿದ್ದರು. ತಪಾಸಣೆ ಕಾಲದಲ್ಲಿ ಕಂಡು ಬಂದ ದೋಷಗಳ ಪಟ್ಟಿಯೊಂದಿಗೆ ಮೇಲಾಧಿಕಾರಿಗೆ ಯಾವುದೇ ಮುಲಾಜಿಗೆ ಒಳಗಾಗದೆ ವರದಿ ನೀಡುತ್ತಿದ್ದ. ಮೇಲಾಧಿಕಾರಿಯಿಂದ ತಪ್ಪಿತಸ್ಥ ಅಂಗಡಿಗಳವರಿಗೆ ಏಕೆ ಪರವಾನಗಿ ರದ್ದುಗೊಳಿಸಬಾರದೆಂದು ನೋಟೀಸು ತಪ್ಪದೇ ಹೋಗುತ್ತಿತ್ತು. ಅಂಗಡಿಗಳವರು ಅಧಿಕಾರಿಗೆ ತಪ್ಪುಕಾಣಿಕೆ ಒಪ್ಪಿಸಿದ ಕೂಡಲೇ ಮುಂದಿನ ಯಾವುದೇ ಕ್ರಮವಿಲ್ಲದೆ ಪ್ರಕರಣ ಮುಕ್ತಾಯ ಕಾಣುತ್ತಿತ್ತು. ಫುಡ್ ಇನ್ಸ್‌ಪೆಕ್ಟರ್ ವರದಿಗಳನ್ನು ಕೊಡುತ್ತಿದ್ದಷ್ಟೂ ಮೇಲಾಧಿಕಾರಿಗೆ ಆದಾಯ ಜಾಸ್ತಿಯಾಗುತ್ತಿತ್ತು. ಇದರ ಪರಿಣಾಮವಾಗಿ ಅಂಗಡಿಗಳವರು ಫುಡ್ ಇನ್ಸ್‌ಪೆಕ್ಟರನನ್ನು ಹಿಂದಿನಿಂದ ಆಡಿಕೊಳ್ಳುವುದು ಸಾಮಾನ್ಯವಾಯಿತು. ತನ್ನ ಪ್ರಾಮಾಣಿಕತೆಯೂ ಅಧಿಕಾರಿಯ ಅಕ್ರಮ ಸಂಪಾದನೆಗೆ ಮಾರ್ಗವಾದುದನ್ನು ಕಂಡು ಅವನಿಗೆ ಬೇಸರವಾಯಿತು. ಒಮ್ಮೆ ಒಂದು ನ್ಯಾಯಬೆಲೆ ಅಂಗಡಿಯವನು ಎರಡು ಚೀಲ ಸಕ್ಕರೆ, ಐದು ಚೀಲ ಅಕ್ಕಿಯನ್ನು ಹೋಟೆಲ್ ಒಂದಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವನ ಕೈಗೆ ಸಿಕ್ಕಿಬಿದ್ದ. ಮೇಲಾಧಿಕಾರಿಗೆ ವರದಿ ಮಾಡಿದರೆ ಪ್ರಯೋಜನವಾಗುವುದಿಲ್ಲವೆಂದು ಗೊತ್ತಿದ್ದರಿಂದ ಅಗತ್ಯ ವಸ್ತುಗಳ ಕಾಯದೆ ಪ್ರಕಾರ ಅವನಿಗೇ ಇದ್ದ ಅಧಿಕಾರ ಉಪಯೋಗಿಸಿ ನೇರವಾಗಿ ವಸ್ತುಗಳನ್ನು ಅಮಾನತ್ತು ಪಡಿಸಿ ಪೋಲೀಸ್ ಠಾಣೆಗೆ ದೂರು ನೀಡಿದ. ಮೇಲಾಧಿಕಾರಿ ಅವನನ್ನು ಕರೆಯಿಸಿ ಆ ರೀತಿ ಮಾಡಿದ್ದಕ್ಕೆ ಚೆನ್ನಾಗಿ ನಿಂದಿಸಿದ. ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಅಪರಾಧಿಗೆ ರೂ. ೫೦೦೦ ದಂಡ ವಿಧಿಸಲಾಯಿತು. ಅಂಗಡಿಯವನ ಪರವಾನಗಿ ಸಹ ರದ್ದಾಯಿತು. ಅಂಗಡಿಯವನ ತಪ್ಪಿಗೆ ತಕ್ಕ ಶಿಕ್ಷೆಯಾಯಿತೆಂದುಕೊಂಡ ಫುಡ್ ಇನ್ಸ್ ಪೆಕ್ಟರನಿಗೆ ತಾನು ಪ್ರಾಮಾಣಿಕತೆಯಿಂದ ನಡೆದುಕೊಂಡ ತಪ್ಪಿಗೂ ಶಿಕ್ಷೆಯಾಗಲಿರುವುದರ ಅರಿವಿರಲಿಲ್ಲ. ಒಂದೇ ವಾರದಲ್ಲಿ ಹೊಸ ಅಂಗಡಿಗೆ ಪರವಾನಗಿ ನೀಡಲಾಯಿತು. ಹೊಸ ಮಾಲೀಕ ಹಳೆಯ ಅಂಗಡಿ ಮಾಲೀಕನ ತಮ್ಮನೇ ಆಗಿದ್ದ. ಅಂಗಡಿಯ ಮಾಲಿಕ ಅವನನ್ನು ಹಂಗಿಸುವ ರೀತಿಯಲ್ಲಿ ನೋಡಿ ನಕ್ಕ. ಮಾರನೆಯ ದಿನ ಫುಡ್ ಇನ್ಸ್‌ಪೆಕ್ಟರನನ್ನು ಆಡಳಿತ ಹಿತದೃಷ್ಟಿಯಿಂದ ಗುಮಾಸ್ತನನ್ನಾಗಿ ವರ್ಗಾವಣೆ ಮಾಡಿದ ಆದೇಶವನ್ನು ಅಧಿಕಾರಿ ತನ್ನ ಸ್ವಹಸ್ತದಿಂದ ಅವನಿಗೆ ಕೊಟ್ಟು ಹಿತೋಪದೇಶ ಮಾಡಿದ.
-ಕ.ವೆಂ.ನಾಗರಾಜ್.

ಸೋಮವಾರ, ಮೇ 16, 2011

ತೊಳಲಾಟ

     ಅವನೊಬ್ಬ  ಫುಡ್‌ಇನ್ಸ್‌ಪೆಕ್ಟರ್ ಆಗಿದ್ದ. ಸಾಕಷ್ಟು ಕಮಾಯಿ ಬರುವ ಆ ಹುದ್ದೆಯಲ್ಲಿದ್ದರೂ ಅವನೊಬ್ಬ ನೀತಿ ನಿಯತ್ತಿನ ಪ್ರಾಣಿಯಾಗಿದ್ದು ಲಂಚಕ್ಕೆ ಕೈ ಒಡ್ಡುತ್ತಿರಲಿಲ್ಲ. ಹಾಗೆಂದು ಅವನ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವೇನಾಗಿರಲಿಲ್ಲ. ಕೆಳಮಧ್ಯಮ ವರ್ಗಕ್ಕೆ ಸೇರಿಸಬಹುದಾದ ಕುಟುಂಬ ಅವನದು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವದ ಅವನಿಗೆ ತಿಂಗಳ ಕೊನೆಯ ಭಾಗದಲ್ಲಿ ಇನ್ನೂ ಸಂಬಳ ಬರಲು ಎಷ್ಟು ದಿನ ಎಂದು ಲೆಕ್ಕ ಹಾಕಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಆತ ಒಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ತಪಾಸಣೆಗೆ ಹೋದ. ಅಂಗಡಿಯ ಮಾಲಿಕನ ಲೆಕ್ಕಪತ್ರಗಳನ್ನು ನೋಡಿ ಹೊರಡುವ ಸಂದರ್ಭದಲ್ಲಿ ಅವನ ಸ್ವಭಾವದ ಅರಿವಿದ್ದ ಮಾಲೀಕ "ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಲಂಚ ಅಲ್ಲ. ಮನೆಗೆ ಹಣ್ಣು ತೆಗೆದುಕೊಂಡು ಹೋಗಿ ಸ್ವಾಮಿ" ಎಂದು ಐವತ್ತು ರೂಪಾಯಿ ಕೊಡಬಂದಾಗ 'ಬೇಡ' ಎಂದರೂ ಬಲವಂತವಾಗಿ ಆತನ ಜೇಬಿಗೆ ಹಾಕಿದ. ಅವನಿಗೆ ಹಣದ ಅಗತ್ಯವಿತ್ತು. ಮನಸ್ಸು ಡೋಲಾಯಮಾನಸ್ಥಿತಿಯಲ್ಲಿತ್ತು. ಹಾಗಾಗಿ ಸುಮ್ಮನೆ ಹೊರಬಂದ. ಜೇಬಿನಲ್ಲಿ ಹಣವಿದೆ. ಯಾತಕ್ಕಾದರೂ ಉಪಯೋಗಕ್ಕೆ ಆಗುತ್ತದೆ ಎಂದು ಅನ್ನಿಸುತ್ತಿದ್ದರೂ ಅವನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಸರಿಯಾಗಿ ಊಟ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ. ಬಹಳಷ್ಟು ಯೋಚಿಸಿ ಆ ಹಣ ಹಿಂತಿರುಗಿಸಲು ನಿರ್ಧರಿಸಿದ ಮೇಲಷ್ಟೇ ಅವನಿಗೆ ನಿದ್ದೆ ಬಂದಿದ್ದು. ಬೆಳಿಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿ ಹೋದರೆ ಅಂಗಡಿಯ ಬಾಗಿಲು ಇನ್ನೂ ತೆರೆದಿರಲಿಲ್ಲ. ಮಾಲೀಕನಿಗೆ ಕಾಯುತ್ತಾ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ. ಸ್ವಲ್ಪ ಸಮಯದ ನಂತರ ಬಂದ ಮಾಲೀಕನಿಗೆ ಫುಡ್ ಇನ್ಸ್‌ಪೆಕ್ಟರ್ ಅಂಗಡಿಯ ಬಳಿ ಕಾಯುತ್ತಿದ್ದುದನ್ನು ನೋಡಿ ಗಾಬರಿಗೊಂಡ. ಏನೋ ಗ್ರಹಚಾರ ಕಾದಿದೆ ಅಂದುಕೊಂಡವನಿಗೆ ಅವನು ಐವತ್ತು ರೂಪಾಯಿ ಹಿಂತಿರುಗಿಸಿ "ನೀವು ಹಣ ಕೊಟ್ಟಾಗ ನನ್ನ ಮನಸ್ಸು ಚಂಚಲವಾಯಿತು. ಇನ್ನೊಮ್ಮೆ ದಯವಿಟ್ಟು ಈ ರೀತಿ ಮಾಡಬೇಡಿ" ಎಂದು ಹೇಳಿ ವಾಪಸು ನಿರಾಳ ಮನಸ್ಸಿನಲ್ಲಿ ಹಿಂತಿರುಗಿದ. ಅಂಗಡಿಯವನೂ ನಿಟ್ಟುಸಿರು ಬಿಟ್ಟ.
-ಕ.ವೆಂ.ನಾಗರಾಜ್.
[ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]