ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮೇ 23, 2011

ಹಿತೋಪದೇಶ

     ನೀತಿ, ನಿಯಮ, ನಿಯತ್ತು ಎಂದು ಅದಕ್ಕೇ ಜೋತು ಬಿದ್ದು ಕೆಲಸ ಮಾಡುತ್ತಿದ್ದ ಆ ಫುಡ್ ಇನ್ಸ್‌ಪೆಕ್ಟರನನ್ನು ಕಂಡು ಅವನ ಸಹೋದ್ಯೋಗಿಗಳು ಹಿಂದೆ ಮುಸಿ ಮುಸಿ ನಗುತ್ತಿದ್ದರು. ಬದುಕಲು ತಿಳಿಯದವನು, ನಾಲಾಯಕ್, ಇತ್ಯಾದಿ ಹಂಗಿಸುತ್ತಿದ್ದವರಿಗೆ ಮತ್ತು ಹಾವು ಹೊಡೆದು ಹದ್ದಿಗೆ ಹಾಕಬೇಕು ಎಂದು ಸಲಹೆ ಕೊಡುತ್ತಿದ್ದವರಿಗೆ ಬರವಿರಲಿಲ್ಲ. ಆತನ ಪ್ರಾಮಾಣಿಕತೆಯನ್ನು ಮೆಚ್ಚುತ್ತಿದ್ದವರೂ ಇದ್ದರು. ಅವನು ತಪಾಸಣೆಗೆ ಬಂದರೆ ಅಂಗಡಿಯವರು, ಸಹಕಾರ ಸಂಘಗಳವರು ಬೆಚ್ಚುತ್ತಿದ್ದರು. ತಪಾಸಣೆ ಕಾಲದಲ್ಲಿ ಕಂಡು ಬಂದ ದೋಷಗಳ ಪಟ್ಟಿಯೊಂದಿಗೆ ಮೇಲಾಧಿಕಾರಿಗೆ ಯಾವುದೇ ಮುಲಾಜಿಗೆ ಒಳಗಾಗದೆ ವರದಿ ನೀಡುತ್ತಿದ್ದ. ಮೇಲಾಧಿಕಾರಿಯಿಂದ ತಪ್ಪಿತಸ್ಥ ಅಂಗಡಿಗಳವರಿಗೆ ಏಕೆ ಪರವಾನಗಿ ರದ್ದುಗೊಳಿಸಬಾರದೆಂದು ನೋಟೀಸು ತಪ್ಪದೇ ಹೋಗುತ್ತಿತ್ತು. ಅಂಗಡಿಗಳವರು ಅಧಿಕಾರಿಗೆ ತಪ್ಪುಕಾಣಿಕೆ ಒಪ್ಪಿಸಿದ ಕೂಡಲೇ ಮುಂದಿನ ಯಾವುದೇ ಕ್ರಮವಿಲ್ಲದೆ ಪ್ರಕರಣ ಮುಕ್ತಾಯ ಕಾಣುತ್ತಿತ್ತು. ಫುಡ್ ಇನ್ಸ್‌ಪೆಕ್ಟರ್ ವರದಿಗಳನ್ನು ಕೊಡುತ್ತಿದ್ದಷ್ಟೂ ಮೇಲಾಧಿಕಾರಿಗೆ ಆದಾಯ ಜಾಸ್ತಿಯಾಗುತ್ತಿತ್ತು. ಇದರ ಪರಿಣಾಮವಾಗಿ ಅಂಗಡಿಗಳವರು ಫುಡ್ ಇನ್ಸ್‌ಪೆಕ್ಟರನನ್ನು ಹಿಂದಿನಿಂದ ಆಡಿಕೊಳ್ಳುವುದು ಸಾಮಾನ್ಯವಾಯಿತು. ತನ್ನ ಪ್ರಾಮಾಣಿಕತೆಯೂ ಅಧಿಕಾರಿಯ ಅಕ್ರಮ ಸಂಪಾದನೆಗೆ ಮಾರ್ಗವಾದುದನ್ನು ಕಂಡು ಅವನಿಗೆ ಬೇಸರವಾಯಿತು. ಒಮ್ಮೆ ಒಂದು ನ್ಯಾಯಬೆಲೆ ಅಂಗಡಿಯವನು ಎರಡು ಚೀಲ ಸಕ್ಕರೆ, ಐದು ಚೀಲ ಅಕ್ಕಿಯನ್ನು ಹೋಟೆಲ್ ಒಂದಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅವನ ಕೈಗೆ ಸಿಕ್ಕಿಬಿದ್ದ. ಮೇಲಾಧಿಕಾರಿಗೆ ವರದಿ ಮಾಡಿದರೆ ಪ್ರಯೋಜನವಾಗುವುದಿಲ್ಲವೆಂದು ಗೊತ್ತಿದ್ದರಿಂದ ಅಗತ್ಯ ವಸ್ತುಗಳ ಕಾಯದೆ ಪ್ರಕಾರ ಅವನಿಗೇ ಇದ್ದ ಅಧಿಕಾರ ಉಪಯೋಗಿಸಿ ನೇರವಾಗಿ ವಸ್ತುಗಳನ್ನು ಅಮಾನತ್ತು ಪಡಿಸಿ ಪೋಲೀಸ್ ಠಾಣೆಗೆ ದೂರು ನೀಡಿದ. ಮೇಲಾಧಿಕಾರಿ ಅವನನ್ನು ಕರೆಯಿಸಿ ಆ ರೀತಿ ಮಾಡಿದ್ದಕ್ಕೆ ಚೆನ್ನಾಗಿ ನಿಂದಿಸಿದ. ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಅಪರಾಧಿಗೆ ರೂ. ೫೦೦೦ ದಂಡ ವಿಧಿಸಲಾಯಿತು. ಅಂಗಡಿಯವನ ಪರವಾನಗಿ ಸಹ ರದ್ದಾಯಿತು. ಅಂಗಡಿಯವನ ತಪ್ಪಿಗೆ ತಕ್ಕ ಶಿಕ್ಷೆಯಾಯಿತೆಂದುಕೊಂಡ ಫುಡ್ ಇನ್ಸ್ ಪೆಕ್ಟರನಿಗೆ ತಾನು ಪ್ರಾಮಾಣಿಕತೆಯಿಂದ ನಡೆದುಕೊಂಡ ತಪ್ಪಿಗೂ ಶಿಕ್ಷೆಯಾಗಲಿರುವುದರ ಅರಿವಿರಲಿಲ್ಲ. ಒಂದೇ ವಾರದಲ್ಲಿ ಹೊಸ ಅಂಗಡಿಗೆ ಪರವಾನಗಿ ನೀಡಲಾಯಿತು. ಹೊಸ ಮಾಲೀಕ ಹಳೆಯ ಅಂಗಡಿ ಮಾಲೀಕನ ತಮ್ಮನೇ ಆಗಿದ್ದ. ಅಂಗಡಿಯ ಮಾಲಿಕ ಅವನನ್ನು ಹಂಗಿಸುವ ರೀತಿಯಲ್ಲಿ ನೋಡಿ ನಕ್ಕ. ಮಾರನೆಯ ದಿನ ಫುಡ್ ಇನ್ಸ್‌ಪೆಕ್ಟರನನ್ನು ಆಡಳಿತ ಹಿತದೃಷ್ಟಿಯಿಂದ ಗುಮಾಸ್ತನನ್ನಾಗಿ ವರ್ಗಾವಣೆ ಮಾಡಿದ ಆದೇಶವನ್ನು ಅಧಿಕಾರಿ ತನ್ನ ಸ್ವಹಸ್ತದಿಂದ ಅವನಿಗೆ ಕೊಟ್ಟು ಹಿತೋಪದೇಶ ಮಾಡಿದ.
-ಕ.ವೆಂ.ನಾಗರಾಜ್.

1 ಕಾಮೆಂಟ್‌:

  1. ಸತೀಶ್. ಎನ್ ನಾಸ
    ಕಥೆಯ ನೀತಿ " ಪ್ರಾಮಾಣಿಕವಾಗಿ ಕೆಲಸ ಮಾಡುವುದರಿಂದ ಮೇಲಾಧಿಕಾರಿಗಳಿಗೆ ಒಳ್ಳೆಯ ಆದಾಯಕ್ಕೆ ಬೆಂಬಲಿಸಿದಂತೆ ಹಾಗೆ ತನಗಿರುವ ಅಧಿಕಾರ ಉಪಯೋಗಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ" ಇದು ನನ್ನ ಅನುಭವ ಕೂಡ

    Kavi Nagaraj
    ಧನ್ಯವಾದ, ಸತೀಶರೇ, ಆ ಫುಡ್ ಇನ್ಸ್ ಪೆಕ್ಟರ್ ಬೇರೆ ಯಾರೂ ಅಲ್ಲ, 40 ವರ್ಷಗಳ ಹಿಂದಿನ ನಾನೇ!

    ಪ್ರತ್ಯುತ್ತರಅಳಿಸಿ