ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಡಿಸೆಂಬರ್ 21, 2013

ಹೈದರಾಲಿಯಿಂದ ಅಂತ್ಯವಾದ ಕನ್ನಡದ ಹೆಮ್ಮೆಯ ಕೆಳದಿ ಸಂಸ್ಥಾನ


     ೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿ, ಕಲೆ, ಸಾಹಿತ್ಯ, ಧಾರ್ಮಿಕ ವಿಚಾರಗಳ ಪೋಷಕರಾಗಿದ್ದಲ್ಲದೆ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದು ಜನಸಾಮಾನ್ಯರ ಮಟ್ಟಿಗೆ ನೆಮ್ಮದಿಯ ರಾಜ್ಯವೆನಿಸಿತ್ತು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ವಿಸ್ತಾರವನ್ನು ಹೊಂದಿದ್ದಾಗಿದ್ದು ಸಂಪದ್ಭರಿತ ಸಂಸ್ಥಾನವಾಗಿತ್ತು. ಸದಾಶಿವನಾಯಕ, ಸಂಕಣ್ಣನಾಯಕ, ವೆಂಕಟಪ್ಪನಾಯಕ, ಶಿವಪ್ಪನಾಯಕ, ಭದ್ರಪ್ಪನಾಯಕ, ಚೆನ್ನಮ್ಮಾಜಿ, ಬಸವಪ್ಪನಾಯಕ ಮುಂತಾದ ವೀರಾಗ್ರಣಿಗಳು ಆಳಿದ ಈ ಸಂಸ್ಥಾನದ ಅರಸುಮನೆತನದಲ್ಲಿ ಕೊನೆಯದಾಗಿ ಆಳಿದವಳು ರಾಣಿ ವೀರಮ್ಮಾಜಿ. ಹೈದರಾಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಕೆಲಸಕ್ಕೆ ಸೇರಿ ಕ್ರಮೇಣ ಬಲ ವೃದ್ಧಿಸಿಕೊಂಡು ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನವನ್ನೇ ತನ್ನ ಕೈವಶ ಮಾಡಿಕೊಂಡ ಬಗ್ಗೆ ಹಿಂದಿನ ಲೇಖನದಲ್ಲಿ ವಿವರಿಸಿದೆ. ನಂತರದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಕಾರ್ಯಾಚರಣೆ ಕೈಗೊಂಡು ಕೆಳದಿ ಸಂಸ್ಥಾನದ ಪತನದಲ್ಲಿ ಯಶಸ್ವಿಯಾಗಿದ್ದು ಇತಿಹಾಸ. ಕನ್ನಡನಾಡಿನ ಎರಡು ಹೆಮ್ಮೆಯ ಸಂಸ್ಥಾನಗಳಾಗಿದ್ದ ಮೈಸೂರು ಮತ್ತು ಕೆಳದಿಯ ಅರಸೊತ್ತಿಗೆ ಹೀಗೆ ಅಂತ್ಯಗೊಂಡವು.
    ಕ್ರಿ.ಶ. ೧೭೩೯ರಿಂದ ೧೭೫೫ರವರೆವಿಗೆ ಕೆಳದಿಯ ಅರಸನಾಗಿದ್ದ ಬಸವಪ್ಪನಾಯಕ ಮತ್ತು ಆತನ ರಾಣಿ ವೀರಮ್ಮಾಜಿಗೆ ಪುತ್ರ ಸಂತಾನವಿಲ್ಲದಿದ್ದರಿಂದ ನಿರ್ವಾಣಯ್ಯ ಅನ್ನುವವರ ಮೊಮ್ಮಗನೂ, ಗುರುವಪ್ಪ ಅನ್ನುವವರ ಮಗನೂ ಆದ ಚನ್ನಪ್ಪ ಅನ್ನುವವನನ್ನು ದತ್ತು ತೆಗೆದುಕೊಂಡು ಆತನಿಗೆ ಚೆನ್ನಬಸವಪ್ಪನಾಯಕನೆಂದು ಹೆಸರಿಟ್ಟು ಯುವರಾಜನನ್ನಾಗಿ ಮಾಡಿಕೊಂಡರು. ಬಸವಪ್ಪನಾಯಕ ಮೃತನಾದ ನಂತರದಲ್ಲಿ, ಪಟ್ಟಾಭಿಷಿಕ್ತನಾದ ಚೆನ್ನಬಸವಪ್ಪನಾಯಕ ತಾಯಿ ವೀರಮ್ಮಾಜಿಯ ಮಾರ್ಗದರ್ಶನದಲ್ಲಿ ವಿವೇಕದಿಂದ, ಬುದ್ಧಿಚಾತುರ್ಯದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಚೆನ್ನಬಸವಪ್ಪ ತನ್ನ ಕಾಲದಲ್ಲಿ ಇಕ್ಕೇರಿಯ ಮೇಲೆ ದಾಳಿ ಮಾಡಿದ್ದ ನಾನಾಜಿರಾಯನ ಪ್ರೇರಣೆಯಿಂದ ದಾಳಿ ಮಾಡಿದ್ದ ಮಾಧೋಜಿ ಪುರಂಧರನ ಮತ್ತು ತದನಂತರದಲ್ಲಿ ಗೋಪಾಲರಾಯನ ಸೈನ್ಯವನ್ನು ಸಂಧಿನಿಗ್ರಹದ ಮೂಲಕ ನಿವಾರಿಸಿಕೊಂಡಿದ್ದನು. ಬೇಲೂರಿನ ಅರಸ ಕೃಷ್ಣಪ್ಪನಾಯಕ ಕೊಡಗರ ದೊರೆ ವೀರರಾಜನಿಂದ ರಾಜ್ಯಭ್ರಷ್ಠನಾಗಿ ಚೆನ್ನಬಸವಪ್ಪನಾಯಕನ ಮೊರೆ ಹೋದಾಗ, ಮೊರೆ ಬಂದವರನ್ನು ರಕ್ಷಿಸುವ ರಾಜಧರ್ಮದಂತೆ ತನ್ನ ಸೈನ್ಯವನ್ನು ಕಳಿಸಿ ಕೊಡಗರ ಸೈನ್ಯವನ್ನು ಹಿಮ್ಮೆಟ್ಟಿಸಿ, ಕೊಡಗರ ದೊರೆಯನ್ನು ಸಾಮ, ದಾನ, ಬೇಧಗಳಿಂದ ಒಡಂಬಡಿಸಿ ಕೃಷ್ಣಪ್ಪನನ್ನು ಮತ್ತೆ ಬೇಲೂರಿನ ಒಡೆಯನನ್ನಾಗಿಸಿದನೆಂದು ಲಿಂಗಣ್ಣಕವಿಯ ಐತಿಹಾಸಿಕ ಕೃತಿ 'ಕೆಳದಿನೃಪ ವಿಜಯ'ದಲ್ಲಿ ಉಲ್ಲೇಖಿತವಾಗಿದೆ. ಈ ಚೆನ್ನಬಸವಪ್ಪನಾಯಕ ರೋಗಬಾಧೆಯಿಂದ ಕ್ರಿ.ಶ.೧೭೫೭ರಲ್ಲಿ ತೀರಿಕೊಂಡ ನಂತರದಲ್ಲಿ ವೀರಮ್ಮಾಜಿಯು ತನ್ನ ಸೋದರಮಾವನ ಕಿರಿಯ ಮಗನನ್ನು ದತ್ತು ತೆಗೆದುಕೊಂಡು, ಸೋಮಶೇಖರನಾಯಕನೆಂದು ಹೆಸರಿಸಿ ಆತನಿಗೆ ಪಟ್ಟಾಭಿಷೇಕ ಮಾಡಿಸಿದಳು. ಆತ ಚಿಕ್ಕವನಾದ್ದರಿಂದ ವಾಸ್ತವವಾಗಿ ವೀರಮ್ಮಾಜಿಯೇ ರಾಜ್ಯಾಡಳಿತದ ಸೂತ್ರವನ್ನು ಹಿಡಿದಿದ್ದಳು. ಚೆನ್ನಬಸವಪ್ಪನಾಯಕನ ಅಂತ್ಯದ ಕುರಿತು ಆತ ರೋಗಬಾಧೆಯಿಂದ ತನ್ನ ೧೪ನೆಯ ವಯಸ್ಸಿನಲ್ಲೇ ಮೃತನಾದನೆಂದು ಕೆಳದಿ ಸಂಸ್ಥಾನದ ಇತಿಹಾಸವನ್ನು ಎಳೆ ಎಳೆಯಾಗಿ ವಿವರಿಸುವ ಕೆಳದಿನೃಪ ವಿಜಯದಲ್ಲಿ ಈ ರೀತಿ ಹೇಳಿದೆ:
ಇರುತಿರುತುಂ ತದ್ಧರಣೀ
ಶ್ವರನುರುವಿಧಿವಶದೆ ತಾಂ ಚತುರ್ದಶವರ್ಷಾಂ
ತರದೊಳ್ ಪರಿಣಯಮಿಲ್ಲದೆ
ನೆರೆ ರೋಗಾರ್ತಿಯೊಳ್ ಶಿವನೊಳೈಕ್ಕಂಬಡೆದಂ || (ಕೆ.ನೃ.ವಿ. ೧೧.೫೨)
     ಆದರೆ ಕೆಲವು ಇತಿಹಾಸಕಾರರು (ಡಿ ಲಾ ಟೂರ್, ರೋಬ್ಸನ್, ಕಿರ್ಮಾನಿ, ವಿಲ್ಕ್ಸ್) ಚೆನ್ನಬಸವನಾಯಕನನ್ನು ರಾಣಿ ವೀರಮ್ಮಾಜಿಯೇ ಕೊಲ್ಲಿಸಿದಳೆಂದು ಹೇಳುತ್ತಾರೆ. ಆದರೆ ಹೇಗೋ ಸಾವಿನಿಂದ ಚೆನ್ನಬಸವನಾಯಕ ಪಾರಾದನೆಂದು, ಆತನಿಗೆ ಅಧಿಕಾರ ಮರಳಿಸುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಚಿತ್ರದುರ್ಗದ ಮದಕರಿನಾಯಕ ಪ್ರಯತ್ನಿಸಿ ವಿಫಲನಾದನೆಂದು, ನಂತರ ಇದೇ ರೀತಿಯ ಪ್ರಯತ್ನವನ್ನು ಹೈದರಾಲಿ ಮಾಡಿದನೆಂದು ಇವರುಗಳು ಬರೆಯುತ್ತಾರೆ. ಹೈದರ್ ನಾಮಾದ ಪ್ರಕಾರ ಚಿತ್ರದುರ್ಗದ ಮದಕರಿನಾಯಕ ಹೈದರಾಲಿಗೆ ಚೆನ್ನಬಸವನಾಯಕನ ವೃತ್ತಾಂತ ತಿಳಿಸಿ ಒಂದು ರಹಸ್ಯ ಕಾರ್ಯತಂತ್ರ ರೂಪಿಸಿದರು. ಅದರಂತೆ ಚೆನ್ನಬಸವಪ್ಪನಾಯಕನಿಗೆ ಕೆಳದಿಯ ರಾಜ್ಯದ ಅಧಿಕಾರ ಮರಳಿ ಕೊಡಿಸುವ ನೆಪದಲ್ಲಿ ನಕಲಿ ಚೆನ್ನಬಸವಪ್ಪನಾಯಕನನ್ನು ಮುಂದಿಟ್ಟುಕೊಂಡು ಮದಕರಿನಾಯಕ ಮತ್ತು ಹೈದರಾಲಿ ಬಿದನೂರು ಕೋಟೆಯೆಡೆಗೆ ಧಾವಿಸಿದರೆಂದು ಹೇಳಲಾಗಿದೆ. ಇದರಲ್ಲಿ ಚೆನ್ನಬಸವನಾಯಕನನ್ನು false Raja’  ಎಂದೇ ಉಲ್ಲೇಖಿಸಲಾಗಿದೆ. (ಹೈ.ನಾ. ೨೬-೨೭).
     ಡಿ ಲಾ ಟೂರ್ ಪ್ರಕಾರ ರಾಣಿ ವೀರಮ್ಮಾಜಿಯ ಮಗನೇ ಹೈದರಾಲಿಯನ್ನು ಆತನ ಬಿಸ್ನಗರ (ಬಸವಾಪಟ್ಟಣ) ಕೋಟೆಯಲ್ಲಿ ಭೇಟಿ ಮಾಡಿ ತಾನು ಈಗ ಪ್ರಾಪ್ರ ವಯಸ್ಸಿಗೆ ಬಂದರೂ ತನಗೆ ರಾಜ್ಯಾಧಿಕಾರ ಕೊಡದೇ ರಾಣಿಯೇ ಆಡಳಿತ ನಡೆಸುತ್ತಿರುವ ಬಗ್ಗೆ ದೂರಿ ಅಧಿಕಾರ ಪಡೆಯಲು ಸಹಕರಿಸಲು ಕೋರುತ್ತಾನೆ. ಹೈದರಾಲಿ ರಾಣಿ ವೀರಮ್ಮಾಜಿಗೆ ಪತ್ರ ಬರೆದು ತನ್ನ ಮುಂದೆ ಹಾಜರಾಗಿ ವಿವರಣೆ ಕೊಡಲು ಹೇಳುತ್ತಾನೆ. ರಾಣಿ ವೀರಮ್ಮಾಜಿ ತಾನೇ ರಾಣಿಯಾಗಿದ್ದು ತನ್ನ ಮೇಲೆ ಹಕ್ಕು ಚಲಾಯಿಸಲು ಇತರರಿಗೆ ಅಧಿಕಾರವಿಲ್ಲವೆಂದು ಉತ್ತರಿಸುತ್ತಾಳೆ. ಯುದ್ಧ ಸಂಭವಿಸುತ್ತದೆ. (೧.೮೧-೮೨).
     ರೋಬ್ಸನ್ ಹೇಳುವಂತೆ, ಮದಕರಿನಾಯಕನಿಂದ ಚೆನ್ನಬಸವನಾಯಕನ ವೃತ್ತಾಂತ ತಿಳಿದ ಹೈದರಾಲಿಗೆ ಬಿದನೂರು ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವೆಂದು ಕಂಡಿತು. ಮದಕರಿನಾಯಕ, ಹೈದರಾಲಿ ಮತ್ತು ಚೆನ್ನಬಸವನಾಯಕರ ನಡುವೆ ರಹಸ್ಯ ಒಪ್ಪಂದವೇರ್ಪಟ್ಟು, ಅದರಂತೆ ಚೆನ್ನಬಸವನಾಯಕನಿಗೆ ಕೆಳದಿ ರಾಜ್ಯಾಧಿಕಾರ ಕೊಡಿಸುವುದಕ್ಕೆ ಪ್ರತಿಯಾಗಿ ೪೦ ಲಕ್ಷ ರೂ.ಗಳನ್ನು ಆತ ಕೊಡಬೇಕೆಂದು ನಿಗದಿಯಾಯಿತು. ಚೆನ್ನಬಸವನಾಯಕ ಮರುಮಾತಿಲ್ಲದೆ ಒಪ್ಪಿ, ನಂತರ ಯುದ್ಧ ಸಂಭವಿಸಿತು.
     ಕಿರ್ಮಾನಿಯ ಪ್ರಕಾರ ರಾಣಿ ವೀರಮ್ಮಾಜಿ ವಿಷಯಾಸಕ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ಉಂಟಾಗಿತ್ತು. ಹೈದರಾಲಿ ತನ್ನ ಗೂಢಚಾರರಿಂದ ಮಾಹಿತಿ ಸಂಗ್ರಹಿಸಿದ್ದಲ್ಲದೆ, ಮದಕರಿನಾಯಕನ ಮಾಹಿತಿಯಂತೆ ಚೆನ್ನಬಸವನಾಯಕ ಬದುಕಿದ್ದಾನೆಂಬ ಸಂಗತಿಗೆ ಒತ್ತು ಕೊಟ್ಟು ಅವನಿಗೆ ರಾಜ್ಯಾಧಿಕಾರ ವಹಿಸಿಕೊಡುವ ನೆಪದಲ್ಲಿ ಕೆಳದಿ ರಾಜ್ಯವನ್ನು ಕೈವಶಮಾಡಿಕೊಳ್ಳಲು ನಿರ್ಧರಿಸಿದ.


     ಹೈದರಾಲಿ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಚಾಣಾಕ್ಷ. ತನ್ನ ಗೂಢಚಾರರಿಂದ ಕೆಳದಿಯಲ್ಲಿನ ರಾಜಪರಿವಾರದಲ್ಲಿನ ಭಿನ್ನಮತಗಳು, ಒಳಮಸಲತ್ತುಗಳ ವಿವರ ಸಂಗ್ರಹಿಸಿದ್ದಲ್ಲದೆ, ಕೆಳದಿ ಅರಸರಿಂದ ಪರಾಜಿತನಾಗಿದ್ದ ಚಿತ್ರದುರ್ಗದ ಮದಕರಿನಾಯಕನ ನೆರವಿನೊಂದಿಗೆ, ಚೆನ್ನಬಸವನಾಯಕ ಬದುಕಿದ್ದಾನೆಂದು ಸುದ್ದಿ ಹಬ್ಬಿಸಿ ಮಾರುವೇಷದ ಚೆನ್ನಬಸವನಾಯಕನನ್ನು ಮುಂದಿರಿಸಿಕೊಂಡು ಬಿದನೂರು ಕೋಟೆಯ ಮೇಲೆ ದಾಳಿ ಮಾಡಿದ. ರಾಜಮನೆತನಕ್ಕೆ ಕೇಡು ಬಯಸಿದ್ದ ಮಂತ್ರಿ ಲಿಂಗಣ್ಣ ಕುಂಸಿಯ ಸೆರೆಮನೆಯಲ್ಲಿದ್ದು, ಆತನ ಕಾರಸ್ಥಾನಗಳೂ ಹೈದರನ ನೆರವಿಗೆ ಬಂದಿತು. ವಿಲ್ಕ್ಸ್ ಪ್ರಕಾರ ಹೈದರನ ಸೈನ್ಯದಲ್ಲಿ ೬೦೦೦೦ ಪದಾತಿಗಳು ಮತ್ತು ಅಶ್ವದಳ, ೩೦೦ ಆನೆಗಳು, ಫ್ರೆಂಚ್ ಅಧಕಾರಿಗಳನ್ನೊಳಗೊಂಡಂತೆ ಒಂದು ಪ್ರೆಂಚ್ ಸೈನ್ಯದ ತುಕಡಿಯಿತ್ತು. ಯುದ್ಧದಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ವೀರಮ್ಮಾಜಿ ಹೈದರನಿಗೆ ವರ್ಷಕ್ಕೆ ಒಂದು ಲಕ್ಷ ಪಗೋಡ ಕೊಡುವುದಾಗಿ ಹೇಳಿ ಸಂಧಿಗೆ ಆಹ್ವಾನಿಸಿದಳು. ಆದರೆ ಹೈದರ್ ವೀರಮ್ಮಾಜಿ ತನಗೆ ಶರಣಾದಲ್ಲಿ ಆಕೆಯನ್ನು ಶ್ರೀರಂಗಪಟ್ಟಣದ ಕೋಟೆಯಲ್ಲಿ ಹಿರಿಯ ಸ್ಥಾನ ನೀಡಿ ಗೌರವದಿಂದ ಬಾಳಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದು ಆಕೆಯ ಸ್ವಾಭಿಮಾನವನ್ನು ಕೆಣಕಿತು. ಯುದ್ಧಕ್ಕೆ ನಿರ್ಧರಿಸಿದ ಆಕೆಗೆ ಸವಣೂರಿನ ಹಕೀಂ ಖಾನನ ೨೦೦೦ ಅಶ್ವಗಳು ಮತ್ತು ೪೦೦೦ ಪದಾತಿ ದಳದ ನೆರವೂ ಸಿಕ್ಕಿತು. ವೀರಾವೇಶದಿಂದ ಕಾದಾಡಿದ ಅಕೆ ಹೈದರನನ್ನು ಸೋಲಿಸಿ ಹಿಮ್ಮೆಟ್ಟಿಸಿದಳು. ಯುದ್ಧದಲ್ಲಿ ನೇರವಾಗಿ ಗೆಲ್ಲಲು ಅಸಾಧ್ಯವೆಂದು ಮನಗಂಡ ಹೈದರಾಲಿ ಪೀರ್ ಜಾದೇರ ಮೂಲಕ, ರಾಜದ್ರೋಹಿಗಳ ನೆರವಿನಿಂದ ವೀರಮ್ಮಾಜಿಯನ್ನು ಮೋಸದಿಂದ ಸೆರೆ ಹಿಡಿದದ್ದರಿಂದ ಕೆಳದಿ ಸಾಮ್ರಾಜ್ಯ ಅಂತ್ಯ ಕಾಣುವಂತಾಯಿತು. ಕುಂಸಿಯಲ್ಲಿ ಸೆರೆಯಾಳಾಗಿದ್ದ ಮಂತ್ರಿ ಲಿಂಗಣ್ಣ ಬಿದನೂರು ಕೋಟೆಯ ರಹಸ್ಯ ಮಾರ್ಗವನ್ನು ಹೈದರನಿಗೆ ತಿಳಿಸಿದ್ದನೆಂದು ಹೇಳುತ್ತಾರೆ. ಕೆಳದಿಯ ಡಾ. ಗುಂಡಾಜೋಯಿಸರು ೮೦ ವಿವಿಧ ಆಕರ ಗ್ರಂಥಗಳನ್ನು ಪರಿಶೀಲಿಸಿ ಬರೆದ 'ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ' ಎಂಬ ಅಧ್ಯಯನಾರ್ಹ ಪುಸ್ತಕ ಈ ವಿಚಾರದಲ್ಲಿ ಅಮೂಲ್ಯ ಮಾಹಿತಿಗಳನ್ನು  ಕ್ರೋಢೀಕರಿಸಿರುವುದು ಇತಿಹಾಸಾಸಕ್ತರಿಗೆ ಅನುಕೂಲವಾಗಿದೆ.
     ವೀರಮ್ಮಾಜಿ ಸೆರೆ ಸಿಕ್ಕ ನಂತರದಲ್ಲಿ ರಾಜನಿಷ್ಠ ಪ್ರಜೆಗಳು ಅಲ್ಲಲ್ಲಿ ಹೈದರನ ವಿರುದ್ಧ ದಂಗೆಯೆದ್ದಾಗ ಹೈದರ್ ದಂಗೆಯನ್ನಡಗಿಸಲು ವರ್ತಿಸಿದ ರೀತಿಯ ಬಗ್ಗೆ ರೋಬ್ಸನ್ ಹೇಳಿರುವುದು ಹೀಗೆ: He put to death one thousand of the principal inhabitants of Biddenoor, in the most cruel, inhuman  method he could invent; their mangled limbs were suspended on every tree in the environs of the city. His blood thirsty rage not being satisfied with the above cruelties, he ordered the chief  persons of every town or village of whom he had the least suspicion, to be butchered in like manner; besides many others, for the most trivial offences had their noses or ears cut off. . .”  ಇಂತಹ ಸ್ಥಿತಿಯಲ್ಲಿ ಸೆರೆ ಸಿಕ್ಕ ವೀರಮ್ಮಾಜಿಯನ್ನು ಹೇಗೆಲ್ಲಾ ಅವಮಾನಿತಗೊಳಿಸಲಾಯಿತೆಂದು ಊಹಿಸುವುದು ಕಷ್ಟವಾಗಲಾರದು. ಆಕೆ ಎಷ್ಟು ದೈಹಿಕ, ಮಾನಸಿಕ ಹಿಂಸೆಗಳನ್ನು ಅನುಭವಿಸಿರಬಹುದು, ಜರ್ಜರಿತಳಾಗಿರಬಹುದು, ಮೂಕವಾಗಿ ರೋದಿಸಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಅಶಕ್ಯವೇ ಸರಿ.
     ಬಿದನೂರು ಕೋಟೆಯನ್ನು ಕುಟಿಲತನದಿಂದ ವಶಪಡಿಸಿಕೊಂಡ ಹೈದರ್ ಸುಮಾರು ೬೩೦ ಕೋಟಿ  ಗದ್ಯಾಣಗಳನ್ನು ದೋಚಿದನೆಂದು ಇತಿಹಾಸ ಹೇಳುತ್ತದೆ. ಕೆಳದಿ ಎಷ್ಟು ಸಂಪದ್ಭರಿತವಾಗಿತ್ತೆಂಬುದು ಇದರಿಂದ ಗೊತ್ತಾಗುತ್ತದೆ. ಬಿದನೂರು ವಶವಾದ ನಂತರ ಆ ನಗರಕ್ಕೆ 'ಹೈದರ್ ನಗರ'ವೆಂದು ಮರುನಾಮಕರಣ ಮಾಡಿದ ಹೈದರ್ ಅದನ್ನು ತನ್ನ ಸೈನಿಕನೆಲೆಯಾಗಿಸಿಕೊಂಡನು. (ಮ.ಕೆ.ಸಾ.-ಪು.೮). ಟಿಪ್ಪು ಹತನಾದ ನಂತರದಲ್ಲಿ ಆ ಹೈದರ್ ನಗರ ಪುನಃ ಬಿದನೂರಾಯಿತು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದ ಈ ಬಿದನೂರನ್ನು ನಗರ ಎಂತಲೂ ಈಗ ಕರೆಯುತ್ತಿದ್ದು, ಹೊಸನಗರದಿಂದ ಸುಮಾರು ೧೨ ಕಿ.ಮೀ. ದೂರದಲ್ಲಿದೆ. ಈಗ ಅವಶೇಷವಾಗಿ ಉಳಿದಿರುವ ಕೋಟೆ ವೀಕ್ಷಣೀಯ ಸ್ಥಳವಾಗಿದ್ದು, ಒಂದೊಮ್ಮೆ ಹೇಗಿದ್ದಿರಬಹುದೆಂಬ ಕಲ್ಪನೆ ಕೊಡುತ್ತದೆ. ಕೋಟೆಯ ಕುರಿತು ಹೆಚ್ಚಿನ ವಿವರಣೆಯನ್ನು ಲೇಖನ ವಿಸ್ತಾರವಾಗುವ ಕಾರಣದಿಂದ ಇಲ್ಲಿ ಮುಂದುವರೆಸುವುದಿಲ್ಲ. ಬಿದನೂರು ಕೋಟೆಯ ಅವಶೇಷದ ಕೆಲವು ಚಿತ್ರಗಳನ್ನು ಗಮನಿಸಿ. (ಸುಮಾರು ೫-೬ ವರ್ಷಗಳ ಹಿಂದೆ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದಾಗ ತೆಗೆದಿದ್ದ ಫೋಟೋಗಳಿವು).
     ಹೈದರನಿಂದ ಶಿರಾ ಮತ್ತು ಮಧುಗಿರಿಗಳನ್ನು ಪೇಶ್ವೆಯವರು ವಶಪಡಿಸಿಕೊಂಡ ನಂತರದಲ್ಲಿ ಮಧುಗಿರಿಯಲ್ಲಿ ಬಂದೀಖಾನೆಯಲ್ಲಿದ್ದ ಕೆಳದಿ ರಾಣಿ ವೀರಮ್ಮಾಜಿ ಮತ್ತು ಯುವರಾಜನನ್ನು ಗೌರವಾದರಗಳಿಂದ ಬಿಡುಗಡೆಗೊಳಿಸಿದರೆಂದು ೨೩-೭-೧೭೬೭ರ ದಿನಾಂಕದ ದಾಖಲೆಯಿದೆ. ಈ ದಾಖಲೆಯಲ್ಲಿ ಕೆಳದಿಯ King and Queen’ ಎಂದು ಉಲ್ಲೇಖಿಸಲಾಗಿದೆ. ಮರಾಠರು ಕೆಳದಿಯ ಮೇಲೆ ಹಿಂದೆ ಪದೇ ಪದೇ ದಂಡೆತ್ತಿ ಬರುತ್ತಿದ್ದರೂ, ಅವರನ್ನು ಶತ್ರುಗಳಾಗಿ ಕಂಡಿದ್ದರೂ, ಸ್ತ್ರೀಯರನ್ನೂ, ಅಸಹಾಯಕರನ್ನೂ ಗೌರವದಿಂದ ಕಾಣುವ ಭಾರತೀಯ ಸಂಸ್ಕೃತಿಯ ಪರಿಪಾಲಕರಂತೆ ವೀರಮ್ಮಾಜಿಯನ್ನು ಗೌರವದಿಂದ ಕಂಡಿದ್ದು ಶ್ಲಾಘನೀಯವಾಗಿದೆ. ನಂತರದಲ್ಲಿ ವೀರಮ್ಮಾಜಿ ಪೂನಾಕ್ಕೆ ಹೋಗುವ ಮಾರ್ಗದಲ್ಲಿ ಬಳ್ಳಾರಿ ಜಿಲ್ಲೆಯ ಉಜನಿ ಎಂಬ ಗ್ರಾಮದಲ್ಲಿ ಅನಾಥಳಂತೆ ಇಹಲೋಕ ತ್ಯಜಿಸಿದಾಗ ವಿಷಯ ತಿಳಿದ ಗ್ರಾಮಸ್ಥರೇ ಆಕೆಯ ಅಂತ್ಯ ಸಂಸ್ಕಾರ ನಡೆಸಿ ಉಜನಿ ಮಠದ ಆವರಣದಲ್ಲಿ ಸಮಾಧಿ ಮಾಡಿದರು. ಈ ರೀತಿಯಲ್ಲಿ ಎರಡೂವರೆ ಶತಮಾನಗಳ ಕಾಲ ವೈಭವದಿಂದ ಬಾಳಿದ ಕೆಳದಿ ಸಂಸ್ಥಾನ ಮಣ್ಣುಪಾಲಾಯಿತು.
-ಕ.ವೆಂ.ನಾಗರಾಜ್.

ಆಧಾರ:
1. ಕವಿ ಲಿಂಗಣ್ಣನ ಕೆಳದಿನೃಪ ವಿಜಯ
4. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
5. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಲೇ. ಕೆಳದಿ ಗುಂಡಾಜೋಯಿಸ್)
6. ಮರೆಯಲಾಗದ ಕೆಳದಿ ಸಾಮ್ರಾಜ್ಯ (ಲೇ. ಡಾ. ವೆಂಕಟೇಶ ಜೋಯಿಸ್)
7. The glorious Keladi (Dr. Gundajois)
8. Shimoga District Gazetteer
9. Life of Hyder Ali (Robson Captain Francis)

ಗುರುವಾರ, ಡಿಸೆಂಬರ್ 19, 2013

ಸತ್ಯದ ಸುತ್ತ ಒಂದು ಸುತ್ತು

     'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' - ಇದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರಿಂದ ಮಾಡಿಸಲಾಗುವ ಪ್ರಮಾಣವಚನ. ಆದರೆ ಆ ರೀತಿ ಪ್ರಮಾಣ ಮಾಡಿದವರೆಲ್ಲರೂ ಸತ್ಯ ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಇರಲಿ ಬಿಡಿ. ಅಷ್ಟಕ್ಕೂ ಈ ಸತ್ಯ ಎಂದರೆ ಏನು? ಸತ್ಯಕ್ಕೆ ಸಾಮಾನ್ಯ ಅರ್ಥ ಕೊಡಬೇಕೆಂದರೆ ವಾಸ್ತವ ಸಂಗತಿಗೆ ಅನುಗುಣವಾಗಿರುವುದು, ಒಂದು ಆದರ್ಶ ಅಥವ ಮಾನದಂಡ ಅಥವ ಮೂಲವಿಚಾರಕ್ಕೆ ಅನುರೂಪವಾಗಿರುವುದು ಎನ್ನಬಹುದು. ಸತ್ಯ ಎಂದು ತಿಳಿದಿರುವುದಕ್ಕೆ ವಿರುದ್ಧವಾದುದನ್ನು ಸುಳ್ಳು ಎನ್ನಬಹುದು. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೆ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿರುತ್ತದೆ ಎಂಬುದೇ ಸತ್ಯ!
     ಗುಣಗಳ ತಾಯಿಯೆನ್ನಲಾಗುವ ಸತ್ಯವನ್ನು ವಿವಿಧ ಹಿನ್ನೆಲೆಗಳಲ್ಲಿ ಚರ್ಚಿಸಲಾಗುತ್ತಿದೆ, ವಿಮರ್ಶಿಸಲಾಗುತ್ತಿದೆ. ಅದು ತತ್ವದರ್ಶನವಾಗಬಹುದು, ಧಾರ್ಮಿಕವಾಗಬಹುದು, ವೈಜ್ಞಾನಿಕವಾಗಿ ಆಗಬಹುದು ಅಥವ ದಿನನಿತ್ಯದ ಜೀವನದ ಅನುಭವಗಳಾಗಬಹುದು. ಸತ್ಯದ ವಿವಿಧ ಮಗ್ಗಲುಗಳು ವಿದ್ವಾಂಸರ, ದಾರ್ಶನಿಕರ, ಧಾರ್ಮಿಕ ಪಂಡಿತರ ಚರ್ಚೆಯ ವಿಷಯವಾಗಿದೆ. ಸತ್ಯ ಯಾವುದು, ಅದನ್ನು ಕಾಣುವುದು ಹೇಗೆ ಎಂಬ ಬಗ್ಗೆ ಸಹ ತಿಳಿದವರು ಉಪದೇಶಿಸುವುದನ್ನು ಕಾಣುತ್ತೇವೆ. ಜೀವನದ ಉದ್ದೇಶವೇ ಸತ್ಯದ ಹುಡುಕಾಟ ಎನ್ನುವುದನ್ನೂ ಕೇಳಿದ್ದೇವೆ. ಒಟ್ಟಾರೆಯಾಗಿ ಈ ಸತ್ಯ ಅನ್ನುವುದು ಪರೀಕ್ಷೆಗೆ ಒಳಪಟ್ಟಷ್ಟು ಇತರ ಸಂಗತಿಗಳು ಒಳಪಟ್ಟಿರಲಾರವು. ವಿಚಿತ್ರವೆಂದರೆ, ನಿಜವಾದ ಸತ್ಯ ಸತ್ಯವಾಗಿಯೇ ಇರುತ್ತದೆ, ಅದನ್ನು ಸುಳ್ಳಾಗಿ ಅರ್ಥೈಸಿದರೂ ಅರ್ಥೈಸಿದವರಿಗೆ ಅದರ ಲಾಭ/ನಷ್ಟಗಳೇ ಹೊರತು ಸತ್ಯಕ್ಕೆ ಅದರಿಂದ ಏನೂ ಬಾಧಕವಿಲ್ಲ. ಎಂತಹ ವಿಚಿತ್ರ ಸತ್ಯವಿದು! ಒಂದು ಉದಾಹರಣೆ ನೋಡೋಣ. ಬೆಂಕಿ ಸುಡುತ್ತದೆ, ಏಕೆಂದರೆ ತನ್ನ ಸಂಪರ್ಕಕ್ಕೆ ಬಂದುದನ್ನು ಸುಡುವುದೇ ಅದರ ಗುಣ. ಒಂದು ದೇಶದಲ್ಲಿ ಮಾತ್ರ ಸುಡುತ್ತದೆ, ಇನ್ನೊಂದು ದೇಶದಲ್ಲಿ ಸುಡುವುದಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಎಲ್ಲೆಡೆಯಲ್ಲೂ ಅದೇ ಗುಣವಿರುತ್ತದೆ. 'ಇಲ್ಲ, ಬೆಂಕಿ ಸುಡುವುದಿಲ್ಲ, ಸುಡಬಾರದು' ಎಂದು ಎಷ್ಟೇ ಪ್ರಖರವಾಗಿ ವಾದ ಮಾಡಿದರೂ ಬೆಂಕಿಯ ಸುಡುವ ಗುಣ ಬದಲಾಗದು. 'ಬೆಂಕಿ ಇನ್ನು ಮುಂದೆ ನಮ್ಮ ದೇಶದಲ್ಲಿ ಸುಡಬಾರದು' ಎಂದು ಒಂದು ದೇಶದ ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ, ಸರ್ಕಾರ ಆದೇಶ ಮಾಡಿದರೂ ಬೆಂಕಿ ಸುಡದೇ ಇರುತ್ತದೆಯೇ? ಹೀಗಾಗಿ ಬೆಂಕಿ ಸುಡುತ್ತದೆ ಎಂಬುದು ಪ್ರತ್ಯಕ್ಷವಾಗಿ, ಪ್ರಮಾಣವಾಗಿ ಕಂಡು ಬರುವ, ಅನುಭವಕ್ಕೆ ಸಿಗುವ, ಯಾವುದೇ ಕಾರಣಕ್ಕೂ ಬದಲಾಗದ ಸತ್ಯ. ಬೆಂಕಿಯ ವಿಷಯದಲ್ಲಿ ಹೇಳಿದಂತೆ 'ಇದೇ ಸತ್ಯ' ಎಂದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಹೇಳಲಾಗದಿರುವುದು ಸಮಸ್ಯೆಗಳ ಉದ್ಭವಕ್ಕೆ ಕಾರಣ ಎಂಬುದೂ ಸಹ ಸತ್ಯವೇ!
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ನಿಜವರಿತು ನಡೆವ ಹಿರಿಯ ಮೂಢ ||
     ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ನಿರ್ಧರಿಸಲು ಯಾವುದಾದರೂ ಮಾನದಂಡವಿರಬೇಕು. ಅಂತಹ ಮಾನದಂಡ ಯಾವುದು? ಇನ್ನೊಂದು ಸಮಸ್ಯೆಯೂ ಇಲ್ಲಿ ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪದಿರಬಹುದು. ಆಳವಾಗಿ ವಿಶ್ಲೇಷಿಸಿದರೆ ಇಂತಹ ಹಲವಾರು ಮಾನದಂಡಗಳು ಯಾವುದೋ ಒಬ್ಬ ಪ್ರಚಂಡ ಬುದ್ಧಿಮತ್ತೆಯುಳ್ಳ ವ್ಯಕ್ತಿಯ ಅಥವ ಸಮೂಹದ ಮಥನ-ಮಂಥನಗಳಿಂದ ಒಡಮೂಡಿದ್ದಾಗಿರುತ್ತದೆ ಎಂಬುದನ್ನು ಗುರುತಿಸುವುದು ಕಷ್ಟವಲ್ಲ. ಮಾನವನಿರ್ಮಿತ ಮಾನದಂಡಗಳು ಸದಾಕಾಲಕ್ಕೆ ನಿಲ್ಲಲಾರವು ಅಥವ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತವೆ. ಈ ವಿಶಾಲ ಬ್ರಹ್ಮಾಂಡ, ಜೀವವೈವಿಧ್ಯ ಮತ್ತು ದೇವರುಗಳಿಗೆ ಕುರಿತಂತೆ ಇದೇ ಸತ್ಯವೆಂದು ನಿಖರವಾಗಿ ಹೇಳುವುದು ಕಷ್ಟವೇ ಸರಿ. ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ತಾರ್ಕಿಕವಾಗಿ ಪುಟ್ಟ ಮೆದುಳಿನ ಮನುಷ್ಯ ಇವುಗಳ ಕುರಿತು ತಿಳಿಯಲು ಪ್ರಯತ್ನಿಸುತ್ತಲೇ ಇದ್ದಾನೆ. ಪೂರ್ಣ ಸತ್ಯವೆನ್ನುವುದು ಇನ್ನೂ ಗೊತ್ತಾಗಬೇಕಿದೆ. ವೈಜ್ಞಾನಿಕವಾಗಿಯೂ ಸಹ ಬೃಹತ್ ಬ್ರಹ್ಮಾಂಡದ ವಿಸ್ತಾರ, ವಿಸ್ಮಯಗಳನ್ನು ತಿಳಿಯಲಾಗಿಲ್ಲ. ಹೀಗಿರಬಹುದು ಎಂಬ ಕಲ್ಪನೆ ಮಾತ್ರ ಮಾಡಬಹುದು. ಧಾರ್ಮಿಕವಾಗಿ ಸಹ ಜಗತ್ತು, ಜೀವ, ದೇವರನ್ನು ಸಂಪೂರ್ಣ ಸ್ಪಷ್ಟವಾಗಿ ಅರಿಯಲಾಗಿಲ್ಲವೆಂದೇ ಹೇಳಬೇಕು. ವಿವಿಧ ಧರ್ಮಗಳು, ಪಂಥಗಳು, ಪಂಗಡಗಳು ವಿವಿಧ ರೀತಿಗಳಲ್ಲಿ ಇವುಗಳನ್ನು ವಿಶ್ಲೇಷಿಸುತ್ತಿರುವುದೇ ಇದಕ್ಕೆ ಉದಾಹರಣೆ.
     ಎಲ್ಲಿ ವೈಚಾರಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲವೋ ಅಲ್ಲಿ ಸತ್ಯಾನ್ವೇಷಣೆ ಕಷ್ಟ. ಸತ್ಯವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಧಾರ್ಮಿಕ ವಿಚಾರಗಳು ಜಗತ್ತು, ಜೀವ ಮತ್ತು ದೇವರ ಬಗ್ಗೆ ಕೆಲವು ಸಿದ್ಧಾಂತಗಳನ್ನು ಹೊಂದಿದ್ದು ಮಾನವನ ಧರ್ಮ ಎಂದರೆ ಏನು, ಅವನ ದೈನಂದಿನ ನಡವಳಿಕೆಗಳು ಹೇಗಿರಬೇಕು, ಯಾವ ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಹೇಳುತ್ತವೆ. ಈ ವಿಚಾರಗಳು ಮತ್ತು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯಗಳ ಪೈಕಿ ಕೆಲವು ಅರ್ಥಹೀನವೆನಿಸಿದರೂ, ಅಸಂಬದ್ಧವೆನಿಸಿದರೂ ಪಾಲಿಸಿಕೊಂಡು ಬರುತ್ತಿರುವವರೇ ಜಾಸ್ತಿ. ಇದೇನೇ ಇರಲಿ, 'ಇದು ನಿಜವಾದ ಧರ್ಮ, ನಾವು ನಂಬಿರುವ ದೇವರೇ ನಿಜವಾದ ದೇವರು. ಇದನ್ನು ಎಲ್ಲರೂ ಒಪ್ಪಲೇಬೇಕು, ಪಾಲಿಸಲೇಬೇಕು' ಎನ್ನುವವರ ವಾದ, ಒತ್ತಾಯದಿಂದ ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುವುದಾಗುತ್ತದೆ. ಭಿನ್ನಾಭಿಪ್ರಾಯ, ಸಮಸ್ಯೆ, ಸಂಘರ್ಷ, ಕ್ರಾಂತಿಗಳಿಗೆ ಮೂಲ ಕಾರಣಗಳು ಇವೇ ಅಗಿವೆ. 'ಋಷಿ ಮೂಲ, ನದಿ ಮೂಲಗಳನ್ನು ಹುಡುಕಬಾರದು' ಎಂಬ ಸವಕಲಾದರೂ, ಪ್ರಚಲಿತವಾದ ಮಾತಿನಲ್ಲಿ ಏಕೆ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದಂತಹ ಸಂಪ್ರದಾಯಗಳನ್ನು ಪ್ರಶ್ನಿಸಬಾರದು ಎಂಬ ಧ್ವನಿ ಹೊರಡುತ್ತದೆಯಲ್ಲವೇ? ವೈಚಾರಿಕತೆಗೆ ಅಡ್ಡಿಯಾದಾಗ ಸತ್ಯ ಕಾಣದಾಗುತ್ತದೆ. ನಿಜ, ಮಾನವನಿಗಿರುವ ಇತಿಮಿತಿಗಳಲ್ಲಿ ಎಲ್ಲವನ್ನೂ ಒರೆಗೆ ಹಚ್ಚಲಾಗುವುದಿಲ್ಲ, ಇದು ಹೀಗೆಯೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ ಇದುವರೆವಿಗೆ ಹಿಂದಿನವರು ಹೇಳಿದ, ಒಪ್ಪಿದ ಸಂಗತಿಗಳನ್ನು ಅನುಭವದೊಂದಿಗೆ ಸೇರಿಸಿಕೊಂಡು ಆತ್ಮ ಒಪ್ಪಿದ ರೀತಿಯಲ್ಲಿ ನಡೆಯುವುದು ಸರಿಯಾದ ಮಾರ್ಗ. ಆತ್ಮ ಒಪ್ಪುವ ರೀತಿಯಲ್ಲಿ ನಡೆಯುವುದಕ್ಕೂ ಒಂದು ಮಾನದಂಡವಿರಲೇಬೇಕು, ಅದೇ ಸತ್ಯ. ಆತ್ಮ ಒಪ್ಪುವ ರೀತಿ ಯಾವುದೆಂದು ತಿಳಿಯಲು ಮಾಡುವ ಪ್ರಯತ್ನವೇ ಸತ್ಯಾನ್ವೇಷಣೆ. ಶ್ರವಣ, ಮನನ, ಮಥನಗಳೊಂದಿಗೆ ಅನುಭವ ಸೇರಿದರೆ ಸತ್ಯಕ್ಕೆ ಹತ್ತಿರವಾದ ಸಂಗತಿ ಗೋಚರವಾದೀತು.
     'ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ' ಎಂಬ ಮಾತು ಸತ್ಯ ಹೇಳುವುದು ಮತ್ತು ಕೇಳುವುದು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ. ನಿಜ, ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ ಸರಿ. ಒಬ್ಬ ಕಳ್ಳ ಅಕಾಸ್ಮಾತ್ತಾಗಿ ಒಬ್ಬ ಪಂಡಿತರ ಉಪನ್ಯಾಸ ಕೇಳಿ ಪ್ರಭಾವಿತನಾದನಂತೆ. ಉಪನ್ಯಾಸದ ನಂತರ ಪಂಡಿತರಲ್ಲಿ ತನ್ನ ಕಷ್ಟ ಹೇಳಿಕೊಂಡ, "ಹೇಳಿ ಕೇಳಿ ನಾನೊಬ್ಬ ಕಳ್ಳ. ನಾನು ಸತ್ಯ ಹೇಳುವುದು ಹೇಗೆ?" ಪಂಡಿತರು ಹೇಳಿದರು, "ಏನೂ ಯೋಚನೆ ಮಾಡಬೇಡ, ಸತ್ಯವನ್ನೇ ಹೇಳು". ಒಂದು ದಿನ ಆತ ರಾತ್ರಿ ಹನ್ನೊಂದು ಘಂಟೆಯ ವೇಳೆಗೆ ಕಳ್ಳತನಕ್ಕೆಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಬೀಟ್ ಪೋಲಿಸಿನವನು  'ಎಲ್ಲಿಗೆ ಹೋಗುತ್ತಿದ್ದೀಯ?' ಎಂದು ವಿಚಾರಿಸಿದ. ಕಳ್ಳ ಒಂದು ನಿಮಿಷ ಯೋಚಿಸಿ ಸತ್ಯ ಹೇಳಿಬಿಟ್ಟ, "ಕಳ್ಳತನ ಮಾಡಕ್ಕೆ ಹೋಗ್ತಾ ಇದೀನಿ". ಪೋಲಿಸಪ್ಪ, "ತಮಾಷೆ ಮಾಡಬೇಡ, ಹೋಗು ಲೇಟಾಗಿದೆ, ಬೇಗ ಮನೆ ಸೇರಿಕೋ" ಎಂದು ನಗುತ್ತಾ ಕಳಿಸಿಕೊಟ್ಟ. ಇದು ತಮಾಷೆಗಾಗಿ ಹೇಳಿದ ಪ್ರಸಂಗವಷ್ಟೇ ಹೊರತು, ಇಂತಹ ಸತ್ಯ ಚಲಾವಣೆಯಾಗಲಾರದು. ಖ್ಯಾತ ಪತ್ರಕರ್ತ ಹಂಟರ್ ಮಾತು ಇಲ್ಲಿ ಪ್ರಸ್ತುತವೆನಿಸುತ್ತದೆ: "ಕಳೆದ ಹತ್ತು ವರ್ಷಗಳಲ್ಲಿ ನನಗೆ ಗೊತ್ತಿರುವ ಎಲ್ಲಾ ಸತ್ಯಗಳ ಕುರಿತು ನಾನೇನಾದರೂ ಬರೆದಿದ್ದರೆ, ಸುಮಾರು ೬೦೦ ಜನರು, ನಾನೂ ಸೇರಿದಂತೆ, ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತು. ವೃತ್ತಿಪರ ಪತ್ರಿಕೋದ್ಯಮದಲ್ಲಿ ಪರಿಪೂರ್ಣ ಸತ್ಯ ಅತ್ಯಂತ ವಿರಳ ಮತ್ತು ಅಪಾಯಕಾರಿ ವಸ್ತು!"
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್' (ಸತ್ಯವನ್ನೇ ಹೇಳು, ಪ್ರಿಯವಾದದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ) ಎಂಬ ಮಾತನ್ನು ತಿಳಿದವರು ಹೇಳುತ್ತಾರೆ.  ಇದು ಸಮಯ, ಸಂದರ್ಭಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕಾದ ಸತ್ಯ. ಇಲ್ಲಿ ಸಾಮಾನ್ಯ ಹಿತ ಪ್ರಧಾನವಾಗುತ್ತದೆ. ಇದಕ್ಕೆ ಉದಾಹರಣೆ ಕೊಡಬೇಕೆಂದರೆ, ಒಬ್ಬ ಪ್ರಾಣಭಯದಿಂದ ನಿಮ್ಮ ಮನೆಯಲ್ಲಿ ರಕ್ಷಣೆ ಪಡೆದಿದ್ದಾನೆಂದು ಇಟ್ಟುಕೊಳ್ಳಿ. ಅವನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ ವ್ಯಕ್ತಿ ನಿಮ್ಮನ್ನು ಆ ವ್ಯಕ್ತಿ ಮನೆಯಲ್ಲಿದ್ದಾನೆಯೇ ಎಂದು ಕೇಳಿದರೆ, ಸತ್ಯವನ್ನು ಮಾತ್ರ ಹೇಳುತ್ತೇನೆಂಬ ಹೆಮ್ಮೆಯಿಂದ ನೀವು 'ಹೌದು' ಎಂದು ಉತ್ತರಿಸಿದರೆ ಒಬ್ಬ ವ್ಯಕ್ತಿಯ ಹತ್ಯೆಗೆ ಕಾರಣರಾಗುತ್ತೀರಿ. ಇದು ಸತ್ಯದ ಇನ್ನೊಂದು ಮುಖ!
     ಸತ್ಯ ಹೇಳಲು ಧೈರ್ಯವಿರಬೇಕು. ಅದು ತಿಳಿದಷ್ಟು ಸರಳವಲ್ಲ. ಮೌಲ್ಯಗಳು ಇರುವಲ್ಲಿ ಸತ್ಯಕ್ಕೆ ಬೆಲೆ ಇರುತ್ತದೆ. ಅದು ಇಲ್ಲದಲ್ಲಿ ಸತ್ಯ ಅನಾಥವಾಗುತ್ತದೆ. ಹಾಗೆಂದು ಸತ್ಯ ಹೇಳುವುದು ತಪ್ಪೇ ಎಂದರೆ ತಪ್ಪಲ್ಲ. ಮೌಲ್ಯಯುತ ಸಮಾಜವನ್ನು ಬಯಸುವುದಿಲ್ಲವೆನ್ನುವುದಾದರೆ ಸತ್ಯವನ್ನು ದೂರಕ್ಕೆ ಇಟ್ಟರಾಯಿತು. ಆದರೆ, ವೈಯಕ್ತಿಕವಾಗಿ ಪ್ರತಿಯೊಬ್ಬರೂ ಸಮಾಜ ಒಳ್ಳೆಯ ರೀತಿಯಲ್ಲಿ ಇರಬೇಕು, ಅನ್ಯಾಯ, ಮೋಸ ಆಗಬಾರದು ಎಂದು ಬಯಸುತ್ತಾರೆ. ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ದೇಶ ಇಂತಹ ಸ್ಥಿತಿಗೆ ಬಂದಿದೆ ಎಂದು ದೂರುವುದು ಸಾಮಾನ್ಯ. "ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ?" ಎಂದರೆ ಸಿಗಬಹುದಾದ ಉತ್ತರವೆಂದರೆ, "ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಅವರದಾದರೋ ದೊಡ್ಡ ತಪ್ಪುಗಳು. ನಮ್ಮದಾದರೋ ಪರಿಸ್ಥಿತಿಯ ಒತ್ತಡದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು" ಎಂಬುದೇ! ಈ ಸಣ್ಣ ಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯವಾಗುತ್ತವೆ, ಇವೇ ಮುಂದೆ ಸಾಮಾಜಿಕ ನ್ಯಾಯ, ಮೌಲ್ಯ, ಸತ್ಯ, ಮುಂತಾದ ಬಗ್ಗೆ ಮಾತನಾಡದಂತೆ ಕಟ್ಟಿಹಾಕುತ್ತವೆ. ಒಂದಂತೂ ಸತ್ಯ, ಇತಿಹಾಸ ನಿರ್ಮಾಣ ಮಾಡುವವರು ಬಹುಸಂಖ್ಯಾತರಾದ ಸ್ವಾರ್ಥಿಗಳಲ್ಲ, ಅಲ್ಪಸಂಖ್ಯಾತರಾದ, ಸತ್ಯಕ್ಕೆ ಬೆಲೆ ಕೊಡುವ ಅಲ್ಪ ಸಂಖ್ಯಾತರೇ ಎಂಬುದನ್ನು ಮರೆಯಬಾರದು. ಈ ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ, ಎಲ್ಲರನ್ನೂ ನಾವು ನೆನೆಸಿಕೊಳ್ಳುತ್ತೇವೆಯೇ? ಹೊರಗಿನವರು ಬೇಡ, ನಮ್ಮ ಕುಟುಂಬದ ೩-೪ ತಲೆಮಾರುಗಳ ಹಿಂದಿನವರ ಹೆಸರುಗಳೇ ನಮಗೆ ನೆನಪಿರುವುದಿಲ್ಲ. ಆದರೆ. ರಾಮ, ಕೃಷ್ಣ, ಹರಿಶ್ಚಂದ್ರ, ವಿವೇಕಾನಂದ ಮುಂತಾದವರು ಸತ್ತು ಎಷ್ಟೋ ವರ್ಷಗಳಾದರೂ ಇಂದೂ ಜನಮಾನಸದಲ್ಲಿ ಜೀವಂತವಿದ್ದಾರೆ. ಏಕೆ? ಏಕೆಂದರೆ, ಅವರುಗಳು ಸತ್ಯಕ್ಕೆ ಬೆಲೆ ಕೊಟ್ಟರು, ಇತರರಿಗಾಗಿ ಬಾಳಿದರು. ಇತರರಿಗಾಗಿ ಬಾಳುವವರು ಮಹಾಪುರುಷರೆನಿಸುತ್ತಾರೆ. ಇದು ಸತ್ಯಕ್ಕೆ, ಸತ್ಯವಿಚಾರಕ್ಕೆ ಇರುವ ಮಹತ್ವ ತೋರಿಸುತ್ತದೆಯಲ್ಲವೇ? ಕೇವಲ ತಿಂದು, ಕುಡಿದು ಒಂದು ದಿನ ಕಂತೆ ಒಗೆದು, ಇಂತಹವನು ಒಬ್ಬನಿದ್ದ ಎಂದು ಯಾರೂ ನೆನೆಸಿಕೊಳ್ಳದಂತೆ ಕಣ್ಮರೆಯಾಗಬೇಕೇ ಅಥವ ಬದುಕಿದ್ದಾಗ ಏನನ್ನಾದರೂ ಸಾಧಿಸಿ ಹೆಜ್ಜೆ ಗುರುತು ಬಿಟ್ಟುಹೋಗಬೇಕೇ ಎಂಬುದು ನಮಗೇ ಬಿಟ್ಟಿದ್ದು.
     ಸತ್ಯ ಹೇಳುವುದಕ್ಕೆ ಆತ್ಮವಿಶ್ವಾಸ ಇದ್ದರೆ ಸಾಕು. ಆದರೆ ಸುಳ್ಳು ಹೇಳಲು ಮಹಾನ್ ನೆನಪಿನ ಶಕ್ತಿಯ ಜೊತೆಗೆ ಅದನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆಯೂ ಇರಬೇಕು. ಇಲ್ಲದಿದ್ದರೆ ಹೇಳಿದ ಸುಳ್ಳನ್ನು ಅರಗಿಸಿಕೊಳ್ಳಲು ಆಗದೇ ಹೋಗಬಹುದು. ಹೃದಯ, ಆತ್ಮಗಳು ನಮ್ಮ ಪ್ರತಿಯೊಂದೂ ನಾವು ಮಾಡುವ ಕೆಲಸಗಳ ಹಿಂದೆ ಇರದಿದ್ದರೆ, ನಮ್ಮ ಬಾಯಿಯಿಂದ ಹೊರಡುವ ಮಾತುಗಳು ಖಾಲಿ ಖಾಲಿಯಾಗಿರುತ್ತವೆ ಮತ್ತು ಕಾರ್ಯಗಳೂ ಅರ್ಥಹೀನವಾಗಿರುತ್ತವೆ. ಸತ್ಯಕ್ಕೆ ಗೌರವ, ಬೆಲೆ ಕೊಡದವರನ್ನು ಯಾರೂ ನಂಬಲಾರರು. ಆದರೆ ಆತ್ಮ, ಹೃದಯಗಳು ಸಾಥ್ ನೀಡುವ ಕೆಲಸಗಳು ಸತ್ಯ, ಸತ್ವ ಮತ್ತು ಆತ್ಮವಿಶ್ವಾಸದಿಂದ ಕೂಡಿರುತ್ತವೆ ಮತ್ತು ಇದರ ಪ್ರತಿಫಲವೇ ದೊರಕುವ ಸಂತೋಷ! ನಿರಾಯುಧವಾದ ಸತ್ಯ ಮತ್ತು ಷರತ್ತಿಲ್ಲದ ಪ್ರೀತಿಗಳ ಮಾತುಗಳದೇ ವಾಸ್ತವದಲ್ಲಿ ಕೊನೆಯ ಮಾತಾಗಿರುತ್ತದೆ. ಸತ್ಯಕ್ಕೆ ತಾತ್ಕಾಲಿಕವಾದ ಸೋಲುಂಟಾದರೂ, ಗೆಲುವಿನಿಂದ ಬೀಗಬಹುದಾದ ಸುಳ್ಳಿಗಿಂತಲೂ ಅದು ಹೆಚ್ಚು ಶಕ್ತಿಶಾಲಿಯಾದುದು. ವಿವೇಕಾನಂದರು ಹೇಳಿದಂತೆ, 'ಇತರರ ಅಭಿಪ್ರಾಯಗಳು, ಸಿದ್ಧಾಂತಗಳು ನಮ್ಮ ಒಳಗಿನ ಧ್ವನಿಯನ್ನು ಅದುಮಲು ಅವಕಾಶ ಕೊಡದಿರೋಣ'. ನಮ್ಮ ಅಂತರಂಗದ ದ್ವನಿಯನ್ನು ಆಲಿಸಿ, ಅದು ಹೇಳಿದಂತೆ ಕೇಳಿದರೆ, ಅದು ಕರೆದೊಯ್ಯುವುದು ಸತ್ಯಪಥದಲ್ಲೇ ಎಂಬ ಅರಿವು ಜಾಗೃತಗೊಳ್ಳಬೇಕಿದೆ. ಆಗ ಮಾತ್ರ 'ಸತ್ಯಮೇವ ಜಯತೇ' ಎಂಬ ಘೋಷವಾಕ್ಯ ಸಾರ್ಥಕ್ಯ ಕಾಣುತ್ತದೆ, 'ಸತ್ಯಮ್ ವದ ಧರ್ಮಮ್ ಚರ' (ಸತ್ಯವನ್ನೇ ಹೇಳು, ಧರ್ಮದಲ್ಲಿ ನಡೆ) ಎಂಬ ಸನಾತನವಾಣಿ ಅರ್ಥ ಕಂಡುಕೊಳ್ಳುತ್ತದೆ.
ಕೊನೆಯದಾಗಿ ಒಂದು ಮಾತು:
ಸತ್ಯವನ್ನು ಬಗ್ಗಿಸಬಹುದು, ತಿರುಚಬಹುದು, ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸತ್ಯವನ್ನು ದೇವರೂ ಬದಲಾಯಿಸಲಾರ!
-ಕ.ವೆಂ. ನಾಗರಾಜ್.

ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ

          ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.

ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂ ತನೋತು ತೇ ಸರ್ವದಾ ಮುದಂ

ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು

ಪುಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ
     'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ?  ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಕೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ?  (ಮೇಲಿನ ಹಾಡಿನ ಸ್ಫೂರ್ತಿಯಿಂದ ಇದನ್ನು ರಚಿಸಿದೆ).
ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||

ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ ||

ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ ||

ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||
     (ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
     ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
-ಕ.ವೆಂ.ನಾಗರಾಜ್.

ಗುರುವಾರ, ನವೆಂಬರ್ 28, 2013

ಮೈಸೂರು ಅರಸರ ದೌರ್ಬಲ್ಯ - ಹೈದರಾಲಿಯ ಪ್ರಾಬಲ್ಯ

     ೧೮ನೆಯ ಶತಮಾನದ ಮಧ್ಯಭಾಗ  ಕರ್ನಾಟಕದ ಪಾಲಿಗೆ ಒಂದು ದುರದೃಷ್ಟಕರ ಅವಧಿಯೆನ್ನಬಹುದು. ಮೈಸೂರು ಸಂಸ್ಥಾನ ಅರಾಜಕತೆ ಮತ್ತು ಪಿತೂರಿಗಳಿಗೆ ಒಳಗಾಗಿ ಅಧಿಕಾರ ಕಳೆದುಕೊಂಡದ್ದು ಒಂದೆಡೆಯಾದರೆ, ಬಲಿಷ್ಠ ಸಂಸ್ಥಾನವಾಗಿದ್ದ ಕೆಳದಿ ಸಂಸ್ಥಾನದ ಆಳ್ವಿಕೆ ಸಹ ರಕ್ತಸಿಕ್ತ ಮತ್ತು ದುರಂತ ಅಂತ್ಯ ಕಂಡ ಸಮಯವದು. ಕನ್ನಡಿಗರ ಹೆಮ್ಮೆಯೆನಿಸಿದ್ದ ಈ ಎರಡೂ ಸಂಸ್ಥಾನಗಳ ನಾಶಕ್ಕೆ ಕಾರಣನಾದ ವ್ಯಕ್ತಿ ಒಬ್ಬನೇ! ಆತನೇ ಹೈದರಾಲಿ. ಮೈಸೂರು ಅರಸರ ದೌರ್ಬಲ್ಯ ಹೈದರಾಲಿಯ ಪ್ರಾಬಲ್ಯಕ್ಕೆ ಕಾರಣವಾಯಿತು. ಹೈದರಾಲಿಯ ತಂದೆ ಫತಾಹ್ ಮುಹಮದ್ ಕೋಲಾರದಲ್ಲಿ ಹುಟ್ಟಿದವನಾಗಿದ್ದು, ಕರ್ನಾಟಕದ ನವಾಬರ ಸೈನ್ಯದಲ್ಲಿ ೫೦ ಸೈನಿಕರ ಕಣ್ಗಾವಲು ಪಡೆಯ   ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದು, ನಂತರದಲ್ಲಿ ಮೈಸೂರು ಒಡೆಯರರ ಸೈನ್ಯಕ್ಕೆ ಸೇರಿ ಸೈನ್ಯದಲ್ಲಿ ಉನ್ನತ ಹುದ್ದೆ ಗಳಿಸಿದವನು. ಇವರ ಮೂಲ ವಂಶದ ಬಗ್ಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪರ್ಷಿಯಾ ಮೂಲವಂಶಸ್ಥರೆಂದು ಒಂದು ವರದಿಯಿದ್ದರೆ, ಆಫ್ಘಾನಿಸ್ತಾನದ ಮೂಲದವರೆಂದು, ಅರಬರ ಖುರೇಷಿ ವಂಶಸ್ಥರೆಂದು ಸಹ ಹೇಳುತ್ತಾರೆ. ಫತಾ ಮುಹಮ್ಮದನ ಸೇವೆಯನ್ನು ಮೆಚ್ಚಿ ಒಡೆಯರರು ಬೂದಿಕೋಟೆಯನ್ನು ಆತನಿಗೆ ಜಹಗೀರಾಗಿ ನೀಡಿದ್ದು, ಅವನು ಅಲ್ಲಿನ ನಾಯಕನಾಗಿ ನೇಮಿತಗೊಂಡಿದ್ದನು. ಆ ಸಮಯದಲ್ಲಿ (ಸುಮಾರು ೧೭೧೭-೨೨ರಲ್ಲಿ) ಜನಿಸಿದ ಹೈದರಾಲಿ ಫತಾ ಮುಹಮ್ಮದನ ಐದನೆಯ ಮಗ ಹಾಗೂ ಮೂರನೆಯ ಹೆಂಡತಿಯ ಎರಡನೆಯ ಮಗನಾಗಿದ್ದನು. ಫತಾ ಮುಹಮದ್ ಕಾಳಗವೊಂದರಲ್ಲಿ ಮೃತನಾದ ನಂತರದಲ್ಲಿ ಆರ್ಕಾಟ್ ನವಾಬರ ಸೈನ್ಯಕ್ಕೆ ಸೋದರ ಶಾಬಾಜನೊಂದಿಗೆ ಸೇರಿದ ಹೈದರಾಲಿ ಅಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ. ನಂತರ ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿ ಒಡೆಯರರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಹೈದರನ ಚಿಕ್ಕಪ್ಪನ ಮೂಲಕ ಇಮ್ಮಡಿ ಕೃಷ್ೞರಾಜ ಒಡೆಯರರ ಪ್ರಧಾನ ಅಮಾತ್ಯ, ಸೇನಾಧಿಪತಿ ಮತ್ತು ವಾಸ್ತವಿಕ ಆಳ್ವಿಕೆ ನಡೆಸುತ್ತಿದ್ದ ದೇವರಾಜ ಅರಸು ಮತ್ತು ಅವನ ಸಹೋದರ ನಂಜರಾಜ ಅರಸರ ಪರಿಚಯ ಮಾಡಿಕೊಂಡು, ಒಡೆಯರರ ಸೈನ್ಯದಲ್ಲಿ ಸೇರಿಕೊಂಡರು. ೧೦೦ ಅಶ್ವಾರೋಹಿಗಳು ಮತ್ತು ೨೦೦೦ ಪದಾತಿಗಳ ಮುಖ್ಯಸ್ಥನಾದ ಶಾಬಾಜನ ಕೈಕೆಳಗೆ ಹೈದರ್ ಸೇವೆ ಸಲ್ಲಿಸಿದ.
     ೧೭೪೮ರಲ್ಲಿ ಹೈದರಾಬಾದಿನ ನಿಜಾಮ ಖಮರುದ್ದಿನ್ ಖಾನ್ ಅಸಫ್ ಜಾ೧ ಮೃತನಾದಾಗ ಉತ್ತರಾಧಿಕಾರಕ್ಕಾಗಿ ಆತನ ಮಗ ನಾಸಿರ್ ಜಂಗ್ ಮತ್ತು ದಾಯಾದಿ ಮುಜಫ್ಫರ್ ಜಂಗ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಎರಡನೆಯ ಕರ್ನಾಟಕ ಕದನವೆಂದು ಕರೆಯುತ್ತಾರೆ. ಸ್ಥಳೀಯ ಪಾಳೆಯಗಾರರಲ್ಲದೆ ಬ್ರಿಟಿಷರು ಮತ್ತು ಫ್ರೆಂಚರೂ ಸಹ ಇದರಲ್ಲಿ ಭಾಗಿಯಾಗಿದ್ದರು. ನಂಜರಾಜ ಅರಸನ ನಾಯಕತ್ವದಲ್ಲಿ ದೊಡ್ಡ ಮೈಸೂರು ಸೈನ್ಯವೇ ನಾಸಿರ್ ಜಂಗನ ಪರವಾಗಿ ಹೊರಟಿತ್ತು. ದೇವನಹಳ್ಳಿಗೆ ಬಂದು ಮುಜಫ್ಫರ್ ಜಂಗನ ಸೈನ್ಯದ ಹಿಡಿತದಲ್ಲಿದ್ದ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಮೈಸೂರು ಸೈನ್ಯವೂ ಸೇರಿತ್ತು. ಎಂಟು ತಿಂಗಳುಗಳ ಕಾಲ ನಡೆದ ಈ ಕೋಟೆಯ ಯಶಸ್ವಿ ಗ್ರಹಣ ಕಾರ್ಯದಲ್ಲಿ ಹೈದರ್ ಸೋದರರು ತೋರಿದ ಪರಾಕ್ರಮಕ್ಕೆ ಮೆಚ್ಚಿ ಅವರಿಗೆ ಹೆಚ್ಚಿನ ಅಧಿಕಾರ ವಹಿಸಿಕೊಡಲಾಯಿತು. ೧೭೫೫ರ ವೇಳೆಗೆ ಹೈದರಾಲಿ ೩೦೦೦ ಪದಾತಿಗಳ ಮತ್ತು ೧೫೦೦ ಅಶ್ವಾರೋಹಿಗಳ ಪಡೆಯ ನಾಯಕನಾಗಿದ್ದ. ಅಲ್ಲದೆ ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು ಹೇಳುತ್ತಾರೆ. ಅದೇ ವರ್ಷ ಆತನನ್ನು ದಿಂಡಿಗಲ್ಲಿನ ಫೌಜುದಾರನನ್ನಾಗಿಯೂ ನೇಮಿಸಲಾಯಿತು. ಆಗ ತನ್ನ ಸೈನ್ಯದ ತರಬೇತಿ ಮತ್ತು ಸಂಘಟನೆಯ ಸಲುವಾಗಿ ಫ್ರೆಂಚ್ ಸಲಹೆಗಾರರನ್ನೂ  ಉಳಿಸಿಕೊಂಡಿದ್ದ. ಜೊತೆಜೊತೆಗೆ ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು ನಂಬಲಾಗಿದೆ. ನವಾಬ  ಮುಹಮ್ಮದ್ ಅಲಿಖಾನ್ ವಲ್ಲಾಜಾನನ್ನು ನಂಬದ ಹೈದರಾಲಿ ಆತನನ್ನು ದ್ವೇಷಿಸತೊಡಗಿದ್ದ. ನಂತರದ ವರ್ಷಗಳಲ್ಲಿ ಬ್ರಿಟಿಷರೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಳ್ಳಲು ಹೈದರಾಲಿಗೆ ಮುಹಮ್ಮದ್ ಅಲಿಖಾನ್ ವಲ್ಲಾಜಾ ಪರಿಣಾಮಕಾರಿಯಾಗಿ ಅಡ್ಡಿಯಾದನೆಂದು ಹೈದರಾಲಿ ದೂರುತ್ತಿದ್ದ.
     ಹೈದರಾಬಾದಿನ ನಿಜಾಮರಿಂದ ಮತ್ತು ಮರಾಠರಿಂದ ದಾಳಿಗಳಾಗುವ ಸಾಧ್ಯತೆಯಿದ್ದುದರಿಂದ ಹೈದರಾಲಿಯನ್ನು ದೇವರಾಜಅರಸನಿಗೆ ಸಹಾಯ ಮಾಡುವ ಸಲುವಾಗಿ ಕರೆಸಲಾಯಿತು. ಆಗ ಮೈಸೂರಿನ ಸೈನ್ಯ ಅಸ್ತವ್ಯಸ್ತವಾಗಿದ್ದು ಸಂಬಳ ಪಾವತಿ ವಿಷಯದಲ್ಲಿ ದಂಗೆಯೇಳುವ ಹಂತದಲ್ಲಿತ್ತು. ದಾಳಿಗಳಾಗುವ ಅಪಾಯದಿಂದ ದೇವರಾಜಅರಸು ಪಾರಾದ. ಹ್ಶೆದರ್ ಸೈನ್ಯದವರಿಗೆ ಸಂಬಳ ಪಾವತಿಗೆ ವ್ಯವಸ್ಥೆ ಮಾಡಿದ್ದಲ್ಲದೆ ದಂಗೆ ಎಬ್ಬಿಸಲು ಸಂಚು ಮಾಡಿದ್ದವರನ್ನು ಬಂಧಿಸಿದ. ನಂತರ ಮಲಬಾರಿನ ನಾಯರರ ವಿರುದ್ಧದ ದಾಳಿಗಳಿಗೆ ಮೈಸೂರು ಸೈನ್ಯದ ನಾಯಕತ್ವ ವಹಿಸಿದ. ಇದರಲ್ಲಿ ಆತನ ಪಾತ್ರದ ಬಗ್ಗೆ ಮೆಚ್ಚಿದ ಕಿರಿಯ ದೊರೆ ಇಮ್ಮಡಿ ಕೃಷ್ೞರಾಜ ಒಡೆಯರರಿಂದ ಹೈದರಾಲಿಗೆ ಫತಾ ಹೈದರ್ ಬಹಾದುರ್ ಅಥವ ನವಾಬ್ ಹೈದರ್ ಅಲಿಖಾನ್ ಎಂಬ ಬಿರುದಿನೊಂದಿಗೆ ಬೆಂಗಳೂರಿನ ಜಹಗೀರು ಸಹ ಸಿಕ್ಕಿತು. ೧೭೫೮ರಲ್ಲಿ ಮರಾಠರ ಬೆಂಗಳೂರು ಕೋಟೆಯ ಮುತ್ತಿಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಹೈದರ್ ೧೭೫೯ರ ಹೊತ್ತಿಗೆ ಪೂರ್ಣ ಮೈಸೂರು ಸೈನ್ಯದ ಹಿಡಿತ ಸಾಧಿಸಿದ್ದ. ಮರಾಠರೊಂದಿಗಿನ ಸತತ ಕಿರುಕುಳಗಳಿಂದಾಗಿ ಮೈಸೂರು ಸಂಸ್ಥಾನದ ಖಜಾನೆ ಹೆಚ್ಚುಕಡಿಮೆ ದಿವಾಳಿಯ ಹಂತದಲ್ಲಿತ್ತು. ಇದರಿಂದಾಗಿ ದೇವರಾಜಅರಸನ ನಿಧನಾನಂತರದಲ್ಲಿ ಮಂತ್ರಿಯಾಗಿದ್ದ ನಂಜರಾಜರಸನನ್ನು ರಾಜಮಾತೆ ಗಡೀಪಾರು ಮಾಡಬೇಕಾದ ಅನಿವಾರ್ಯತೆ ಬಂದೊದಗಿತು. ಆಸ್ಥಾನದಲ್ಲಿ ತನಗಿದ್ದ ಪ್ರಭಾವದಿಂದ ಇದನ್ನು ತನ್ನ ಪರವಾಗಿ ಬಳಸಿಕೊಂಡ ಚಾಣಾಕ್ಷ ಹ್ಶೆದರ್. ಹೈದರಾಲಿ ನಿರಕ್ಷರಕುಕ್ಷಿಯಾಗಿದ್ದರೂ ವ್ಯವಹಾರ ಚತುರ ಮತ್ತು ಚಾಣಾಕ್ಷನಾಗಿದ್ದ. ತನ್ನ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಖಂಡೇರಾವ್ ಎಂಬುವನನ್ನು ನೇಮಿಸಿಕೊಂಡಿದ್ದ. ಖಂಡೇರಾವ್ ಕರಾರುವಾಕ್ಕಾಗಿ ಲೆಕ್ಕಪತ್ರಗಳನ್ನು ಲೆಕ್ಕವಿಡುವ ಪದ್ಧತಿಯಿಂದ ಲೂಟಿ ಮಾಡಿದ ಹಣಕಾಸು, ಆಭರಣಗಳು, ವಸ್ತುಗಳು ಸೇರಿದಂತೆ ಎಲ್ಲದರ ಲೆಕ್ಕಗಳನ್ನು ಸರಿಯಾಗಿ ಇಡುವ ಮತ್ತು ಪರಿಶೀಲನೆ ಮಾಡುವ ರೀತಿಯಿಂದ ಯಾವುದೇ ಕಣ್ಣುತಪ್ಪಿಸುವ, ಮೋಸ ಮಾಡುವ ಅವಕಾಶ ಯಾರಿಗೂ ಇರಲಿಲ್ಲ. ಹೈದರಾಲಿಯ ಸಂಪತ್ತು ವೃದ್ಧಿ ಮತ್ತು ರಕ್ಷಣೆಗೆ ಆತನಿಂದ ಬಹಳ ಉಪಕಾರವಾಗಿದ್ದು, ಆತ ಅಧಿಕಾರದಲ್ಲಿ ಮೇಲೆ ಬರಲು ಇದೂ ಪ್ರಮುಖ ಪಾತ್ರ ವಹಿಸಿತ್ತು.
     ಹೈದರಾಲಿ ಮೇಲೆ ಬರುತ್ತಿದ್ದ ರೀತಿಯಿಂದ ರಾಜಮಾತೆ ಆತಂಕಿತಳಾಗಿದ್ದು, ಹೀಗೆಯೇ ಮುಂದುವರೆದರೆ ಅಧಿಕಾರಚ್ಯುತಿಯಾಗುವ ಸಂಭವ ಆಕೆಗೆ ಕಾಣಿಸುತ್ತಿತ್ತು. ಹೀಗಾಗಿ ೧೭೬೦ರಲ್ಲಿ ಖಂಡೇರಾಯನನ್ನು ಬಳಸಿಕೊಂಡು ಹೈದರನನ್ನು ಹೊರಹಾಕುವ ಸಂಚು ರೂಪಿತವಾಯಿತು. ಹ್ಶೆದರ್ ಅವಸರವಾಗಿ ಶ್ರೀರಂಗಪಟ್ಟಣವನ್ನು ಗೃಹಬಂಧನದಲ್ಲಿದ್ದ ಮಗ ಟಿಪ್ಪುಸುಲ್ತಾನ್ ಸೇರಿದಂತೆ ತನ್ನ ಸಂಸಾರವನ್ನು ಅಲ್ಲೇ ಬಿಟ್ಟು ಓಡಿಹೋಗಬೇಕಾಯಿತು. ಇದರಿಂದ ಹೈದರಾಲಿಗೆ ಹಿನ್ನಡೆಯಾಯಿತು. ತನ್ನ ಸೋದರ ಸಂಬಂಧಿ ಮಕ್ದುಮ್ ಆಲಿಯ ಸಹಕಾರದಿಂದ ಬಲ ವೃದ್ಧಿಸಿಕೊಂಡ ಆತ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರ ಸಹಾಯದಿಂದ ಶ್ರೀರಂಗಪಟ್ಟಣದೆಡೆಗೆ ಧಾವಿಸಿದ. ಆದರೆ, ಅಲ್ಲಿಗೆ ತಲುಪುವ ಮುನ್ನವೇ ೧೧೦೦೦ ಸೈನಿಕರ ಬಲದಿಂದ ಅವನನ್ನು ಎದುರಿಸಿದ ಖಂಡೇರಾಯನ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು. ಗಡೀಪಾರಾಗಿದ್ದ ನಂಜರಾಜರಸನ ಸಹಾಯ ಕೋರಿದ ಹೈದರನಿಗೆ ನಂಜರಾಜರಸ ತನ್ನ ಸೈನ್ಯವನ್ನೂ ಒದಗಿಸಿದ್ದಲ್ಲದೆ ದಳವಾಯಿ ಪಟ್ಟವನ್ನೂ  ವಹಿಸಿಕೊಟ್ಟನು. ಉತ್ತೇಜಿತನಾದ ಹೈದರ್ ಪುನಃ ಶ್ರೀರಂಗಪಟ್ಟಣದ ಮೇಲೇರಿ ಬಂದನು. ಸೈನ್ಯಗಳು ಮುಖಾಮುಖಿಯಾದಾಗ ಹೈದರ್ ನಡೆಸಿದ ಕುತಂತ್ರ ಫಲ ಕೊಟ್ಟಿತು. ಖಂಡೇರಾಯನ ಸೈನ್ಯದ ಪ್ರಮುಖ ಅಧಿಕಾರಿಗಳೊಂದಿಗೆ ಖಂಡೇರಾಯನನ್ನು ಹೈದರಾಲಿಗೆ ಹಿಡಿದುಕೊಡಲು ನಂಜರಾಜರಸನೊಂದಿಗೆ  ಒಪ್ಪಂದವಾಗಿರುವಂತೆ ಸೃಷ್ಟಿಸಿದ ಪತ್ರಗಳು ಖಂಡೇರಾಯನಿಗೆ ತಲುಪುವಂತೆ ಮಾಡಲಾಯಿತು. ಈ ಸಂಚಿನಿಂದ ಭಯಗೊಂಡ ಖಂಡೇರಾವ್ ಶ್ರೀರಂಗಪಟ್ಟಣಕ್ಕೆ ಓಡಿದ. ನಾಯಕನಿಲ್ಲದ ಸೈನ್ಯದೊಂದಿಗೆ ಸೆಣಸುವುದು ಕಷ್ಟವಾಗಲಿಲ್ಲ. ಹೈದರನಿಗೆ ಜಯವಾದ ನಂತರ ನಡೆದ ಮಾತುಕತೆಗಳ ಪರಿಣಾಮವಾಗಿ ಮೈಸೂರಿನ ಸಂಪೂರ್ಣ ಸೈನ್ಯದ ನಿಯಂತ್ರಣ ಹೈದರಾಲಿಗೆ ದಕ್ಕಿತು.
      ಮನೆಯ ಯಜಮಾನನ ಕೃಪೆಯಿಂದ ವಾಸಿಸಲು ಪಡೆದಿದ್ದ ಮನೆಯ ಯಜಮಾನಿಕೆಯನ್ನು ಕ್ರಮೇಣ ಆಶ್ರಯ ಪಡೆದವನೇ ಪಡೆದರೆ ಹೇಗಿರುತ್ತದೋ ಹಾಗೆಯೇ ಇಲ್ಲಿಯೂ ಆಯಿತೆನ್ನಬಹುದು. ದೂರದಲ್ಲಿರುವ ಮತ್ತು ಎದುರಿನಲ್ಲಿರುವ ಶತ್ರುವನ್ನು ಎದುರಿಸಬಹುದು. ಆದರೆ ಜೊತೆಯಲ್ಲೇ ಇದ್ದು ತಂತ್ರ-ಕುತಂತ್ರಗಳಿಂದ ಮೇಲೆ ಬರುವ ಹಿತಶತ್ರುಗಳನ್ನು ಎದುರಿಸುವುದು ಕಷ್ಟವೇ ಸರಿ. ಮೈಸೂರು ಸಂಸ್ಥಾನದ ರಾಜಮಾತೆ ಮತ್ತು ಸಂಸ್ಥಾನಕ್ಕೆ ನಿಷ್ಠರಾದವರು ಎದುರಿಸಿದ್ದ ಪರಿಸ್ಥಿತಿ ಇದೇ ಆಗಿತ್ತು. ಖಂಡೇರಾಯನನ್ನು ವಶಕ್ಕೊಪ್ಪಿಸುವುದೂ ಒಪ್ಪಂದದಲ್ಲಿ ಸೇರಿದ್ದರಿಂದ, ಅವನನ್ನು ವಶಕ್ಕೆ ಪಡೆದ ಹೈದರ್ ಬೆಂಗಳೂರಿನಲ್ಲಿ ಸೆರೆಯಲ್ಲಿರಿಸಿದ. ಖಂಡೇರಾಯನ ಬಂಧನದ ರೀತಿಯ ಬಗ್ಗೆ Maistre de La Tour ತನ್ನ The History of Hyder Shah, Alias Hyder Ali Kan Bahadur  ಎಂಬ ಪುಸ್ತಕದಲ್ಲಿ   ಈ ರೀತಿ ಹೇಳಿದ್ದಾನೆ: By virtue of his power as regent, Hyder spared his life and commuted  his  punishment into that of being shut up in an iron cage in the middle of  the most public place of Bangalore; where it is still to be seen, with the bones of this unhappy favourite, who lived two years in the cage, exposed to the insults of a populace that adored Hyder”.   ಹೈದರ್ ತನ್ನ ರಾಜಕೀಯ ಬಂದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೆ. ಒಟ್ಟಾರೆಯಾಗಿ, ೧೭೬೧ರಲ್ಲಿ ಅನಧಿಕೃತವಾಗಿ ಮೈಸೂರು ಸಂಸ್ಥಾನದ ಆಡಳಿತ ಹೈದರಾಲಿಯ ಕೈಗೆ ಬಂದು ಮೈಸೂರಿನ ಅನಭಿಷಿಕ್ತ ದೊರೆಯಾಗಿ ಆಳತೊಡಗಿದ. ಇದಾದ ಐದು ವರ್ಷಗಳಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ದೇಹಾವಸಾನ ೨೫-೪-೧೭೬೬ರಲ್ಲಿ ಶ್ರೀರಂಗಪಟ್ಟಣದಲ್ಲಿ ಆಯಿತು. ನಂತರದಲ್ಲಿ ಮೈಸೂರು ಸುಲ್ತಾನರ ಆಡಳಿತ ಘೋಷಣೆ ಮಾಡಿ ತನ್ನನ್ನು ಸುಲ್ತಾನ್ ಹೈದರ್ ಅಲಿಖಾನ್ ಎಂದು ಹೆಸರಿಸಿಕೊಂಡ. ಹೈದರಾಬಾದಿನ ನಿಜಾಮರೊಂದಿಗೆ ವ್ಯವಹರಿಸುವಾಗ ಆತ ಎಚ್ಚರಿಕೆಯಿಂದಿರುತ್ತಿದ್ದ, ಏಕೆಂದರೆ ಮುಘಲರ ಅಧಿಕೃತ ಫರ್ಮಾನಿನಂತೆ ದಕ್ಷಿಣ ಭಾರತದ ಎಲ್ಲಾ ಮುಸ್ಲಿಮ್ ಆಡಳಿತದ ಪ್ರದೇಶಗಳಿಗೆ ಹೈದರಾಬಾದ್ ನಿಜಾಮರೇ ಪ್ರಮುಖರೆಂದು ಹೇಳಲಾಗಿತ್ತು. ನಂತರದ ಕೆಲವು ವರ್ಷಗಳಲ್ಲಿ ಉತ್ತರ ಭಾಗದಲ್ಲೂ ತನ್ನ  ರಾಜ್ಯದ ವಿಸ್ತಾರ ಮಾಡಿದ. 
     ವಿಜಯನಗರದ ಸಾಮಂತ ಸಂಸ್ಥಾನವಾಗಿ ೧೩೯೯ರಿಂದ ೧೫೫೩ರವರೆಗೆ ಇದ್ದ ಮೈಸೂರಿನ ಅರಸೊತ್ತಿಗೆ, ಸ್ವತಂತ್ರವಾಗಿ ೧೫೫೩ರಿಂದ ೧೭೬೬ರವರೆಗೆ ವಿಜೃಂಭಿಸಿದ್ದು, ಈ ಕಾಲದಲ್ಲಿ ಕನ್ನಡನಾಡು ವೈಭವಯುತವಾಗಿ ಬೆಳಗಿತ್ತು. ಅನಧಿಕೃತವಾಗಿ ೧೭೬೧ರಲ್ಲಿ ಹೈದರಾಲಿ ಹಿಡಿತಕ್ಕೆ ಬಂದ ಈ ಅರಸೊತ್ತಿಗೆ, ೧೭೬೬ರಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ನಿಧನದೊಂದಿಗೆ ಅದಿಕೃತವಾಗಿ ಆತನ ತೆಕ್ಕೆಗೆ ಬಂದಿತು. ನಂತರ ಒಡೆಯರರ ಉತ್ತರಾಧಿಕಾರಿಗಳು ಸ್ವತಂತ್ರವಾಗಿ ಸಂಸ್ಥಾನದ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಅವರ ದೌರ್ಬಲ್ಯವಲ್ಲದೇ ಮತ್ತೇನೂ ಅಲ್ಲ. ೧೭೬೧ರಿಂದ ೧೭೯೬ರವರೆಗೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಅಧೀನತೆಯಲ್ಲಿ ಇದ್ದ ಅರಸು ಮನೆತನದವರೆಂದರೆ, ಇಮ್ಮಡಿ ಕೃಷ್ೞರಾಜ ಒಡೆಯರ್ (೧೭೩೪-೧೭೬೬), ನಂಜರಾಜ ಒಡೆಯರ್ (೧೭೬೬-೧೭೭೨), ೭ನೆಯ ಚಾಮರಾಜ ಒಡೆಯರ್(೧೭೭೨-೧೭೭೬) ಮತ್ತು ೮ನೆಯ ಚಾಮರಾಜ ಒಡೆಯರ್(೧೭೭೬-೧೭೯೬). ನಂತರದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿದ್ದವರೆಂದರೆ, ಮುಮ್ಮಡಿ ಕೃಷ್ೞರಾಜ ಒಡೆಯರ್(೧೭೯೯-೧೮೬೮), ೯ನೆಯ ಚಾಮರಾಜ ಒಡೆಯರ್ (೧೮೮೧-೧೮೯೪), ನಾಲ್ಮಡಿ ಕೃಷ್ೞರಾಜ ಒಡೆಯರ್ (೧೮೯೪-೧೯೪೦) ಮತ್ತು ಜಯಚಾಮರಾಜ ಒಡೆಯರ್(೧೯೪೦-೧೯೫೦).
     ಹೈದರಾಲಿಗೆ ಓದು-ಬರಹ ಬರುತ್ತಿರಲಿಲ್ಲವಾದರೂ ಆತ ಒಬ್ಬ ನಿಪುಣ ಯೋಧ. ಸಂದರ್ಭ, ಪರಿಸ್ಥಿತಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಕುಶಲ ಚಾಣಾಕ್ಷ. ಬ್ರಿಟಿಷರ ವಿರುದ್ದವಾಗಿ ಫ್ರೆಂಚರೊಂದಿಗೆ ಕೈಜೋಡಿಸಿದ್ದವನು. ತನ್ನ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭದಲ್ಲಿ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಆತನ ಇಚ್ಛೆ ಮಾತ್ರ ಕೈಗೂಡಲಿಲ್ಲ. ಆತ ಪರ್ಷಿಯನ್, ಕನ್ನಡ, ತೆಲುಗು, ಹಿಂದೂಸ್ತಾನಿ, ಮರಾಠಿ ಮತ್ತು ತಮಿಳು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲವನಾಗಿದ್ದ. ಸಾಂಪ್ರದಾಯಿಕ ಮುಸಲ್ಮಾನರಂತೆ ಗಡ್ಡ ಬಿಡದಿದ್ದ ಆತ ಗಿಡ್ಡ ಮೂಗು, ದಪ್ಪ ಕೆಳತುಟಿ ಹೊಂದಿದ್ದವನಾಗಿದ್ದು, ಸುಂದರನಲ್ಲದಿದ್ದರೂ ಆತ್ಮವಿಶ್ವಾಸ ಅವನಲ್ಲಿ ಎದ್ದು ಕಾಣುತ್ತಿತ್ತು. ಡಿಸೆಂಬರ್ ೧೭೮೨ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಆತನ ಅಂತ್ಯವಾಯಿತು. 
-ಕ.ವೆಂ.ನಾಗರಾಜ್.

3. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
********************
ದಿನಾಂಕ 12.11.2015ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ:


ಸೋಮವಾರ, ನವೆಂಬರ್ 25, 2013

ಆತ್ಮಾವಲೋಕನ

     "ಛೇ! ಎಂತಹ ಕೆಲಸವಾಯಿತು! ನಾನು ಹೀಗೆ ಮಾಡಬಾರದಿತ್ತು" -ಈ ರೀತಿ ತಮಗೆ ತಾವೇ ಹೇಳಿಕೊಳ್ಳುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಬಾಳಿನಲ್ಲಿ ಘಟಿಸುತ್ತಿರುತ್ತವೆ. ಸ್ವಸ್ಥ ಮನಸ್ಥಿತಿಯಲ್ಲಿ ನಡೆದ ಘಟನೆಯನ್ನು/ಪರಿಸ್ಥಿತಿಯನ್ನು ಅವಲೋಕಿಸಿದಾಗ ಮೂಡುವ ಭಾವನೆಗಳಿವು. ಈ ಅವಲೋಕಿಸುವ, ವಿವೇಚಿಸುವ ಶಕ್ತಿ ಮಾನವಜೀವಿಗಳಿಗೆ ಮಾತ್ರ ಅನ್ನುವುದು ವಿಶೇಷ. ಮಾನವ ಪಶು-ಪಕ್ಷಿಗಳಿಗಿಂತ, ಕ್ರಿಮಿ-ಕೀಟಗಳಿಗಿಂತ ಭಿನ್ನವಾಗಿರುವುದು ಈ ವಿಷಯದಿಂದಲೇ. ಒಂದು ಹಸು ತನ್ನ ಹಸಿವು ಹಿಂಗಿಸಿಕೊಳ್ಳುವ ಮುನ್ನ ತಾನು ಸಸ್ಯಾಹಾರಿಯಾಗಿಯೇ ಇರಲೋ, ಮಾಂಸಾಹಾರಿಯಾಗಿರಲೋ ಎಂದು ಯೋಚಿಸುತ್ತಾ ಕೂರುವುದಿಲ್ಲ. ಹಾಗೆಯೇ ಒಂದು ಮಾಂಸಾಹಾರಿ ಪ್ರಾಣಿ ಇನ್ನೊಂದು ಪ್ರಾಣಿಯ ಪ್ರಾಣವನ್ನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ತೆಗೆಯುವುದು ನ್ಯಾಯವೇ ಎಂದು ಚಿಂತಿಸುತ್ತಾ ಕೂರುವುದಿಲ್ಲ. ಈ ಕೆಲಸ ಸರಿಯೋ, ತಪ್ಪೋ ಎಂದು ಯೋಚಿಸುವ, ಯಾವುದೇ ಸಂಗತಿಯನ್ನು ಅದು ಹಾಗೆ ಏಕೆ, ಹೀಗೆ ಏಕಿರಬಾರದು, ಇತ್ಯಾದಿ ತರ್ಕ ಮಾಡುವ ವಿಕಾಸದ ಸ್ಥಿತಿ ಮಾನವನಿಗೆ ಮಾತ್ರ ಲಭ್ಯವಾದ ವರವಾಗಿದೆ.
ಅದು ಏಕೆ ಹೇಗೆಂದು ಭೂತಕಾಲವ ಕೇಳಿ
ಸರಿಯಿಲ್ಲವೆಂದು ವರ್ತಮಾನವ ದೂರಿ |
ಭವಿಷ್ಯವನು ನೆನೆದು ಭಯಪಡುವ ಪರಿಯ
ನರರಿಗಿತ್ತಿಹನವನು ಹಿರಿದಚ್ಚರಿಯ ಮೂಢ || 
     ವಿವೇಚನೆ ಮಾಡಲು ಜಾಗೃತ ಮನಸ್ಸು ಇರಬೇಕು, ಯಾವುದು ಸರಿ ಎಂದು ತರ್ಕಿಸುವ ಶಕ್ತಿ ಇರಬೇಕು, ಮೇಲಾಗಿ ಅನುಭವಿಯಾಗಿರಬೇಕು, ಸೂಕ್ತ ನಿರ್ಣಯ ತೆಗೆದುಕೊಳ್ಳುವ ಇಚ್ಛೆಯಿರಬೇಕು. ಹೀಗಿದ್ದಲ್ಲಿ ಫಲಿತಾಂಶ ಒಳ್ಳೆಯದಾಗಿರುತ್ತದೆ. ಇಲ್ಲದಿದ್ದಲ್ಲಿ ಮತ್ತು ಮೇಲೆ ತಿಳಿಸಿದ ಯಾವುದೊಂದರಲ್ಲಿ ಕೊರತೆಯಿದ್ದಲ್ಲಿ ಅಷ್ಟರ ಮಟ್ಟಿಗೆ ಫಲಿತಾಂಶವೂ ಭಿನ್ನವಾಗಿರುತ್ತದೆ. ಯಾವುದೇ ಕೆಲಸ ಪ್ರಾರಂಭಿಸುವ ಮುನ್ನ ಅದರ ಮುಂದಿನ ಸಾಧ್ಯಾಸಾಧ್ಯತೆ ಬಗ್ಗೆ ಯೋಚಿಸಿ ಪ್ರಾರಂಭಿಸಿದಲ್ಲಿ ಕೆಲಸದಲ್ಲಿ ಅನಿರೀಕ್ಷಿತ ತೊಡಕುಗಳು ಬಂದಲ್ಲಿ ನಿವಾರಿಸಿಕೊಳ್ಳಲು ಸುಲಭವಾಗುತ್ತದೆ. ಚಿಂತಿಸುವ ಕೆಲಸಕ್ಕೆ ಚಾಲನೆ ಕೊಡುವುದು ಹೃದಯ ಅನ್ನುವುದು ಎಷ್ಟು ಜನರಿಗೆ ತಿಳಿದಿದೆ? ಜ್ಞಾನ ಮತ್ತು ಬುದ್ಧಿ ಹೊರ ತೋರಿಕೆಯವು, ಮೇಲ್ಭಾಗ ಕೇವಲ ಹೊಳೆಯುತ್ತದೆ, ಅದರೆ ಎಲ್ಲಾ ಶಕ್ತಿಯ ಸ್ಥಾನ ಹೃದಯವೇ ಆಗಿದೆ. ಅರಿವು, ಶಕ್ತಿ ಮತ್ತು ಚಟುವಟಿಕೆಗಳನ್ನು ಹೊಂದಿರುವ ಆತ್ಮದ ನೆಲೆ ಇರುವುದು ಮೆದುಳಿನಲ್ಲಲ್ಲ, ಹೃದಯದಲ್ಲಿ. ಮೊದಲು ಹೃದಯ ಏನು ಮಾಡಬೇಕೆಂದು ನಿರ್ಧರಿಸುತ್ತದೆ ಮತ್ತು ನಂತರ ತಲೆಗೆ ಅ ಕೆಲಸ ಹೇಗೆ ಸರಿ ಎಂಬುದನ್ನು ಸಮರ್ಥಿಸಲು ಕಾರಣಗಳನ್ನು ಹುಡುಕಲು ಹೇಳುತ್ತದೆ! ಮಾನವನ ಒಂದು ಸ್ವಭಾವವೆಂದರೆ ತಾನು ಹೊಂದಿರುವ ನಂಬಿಕೆಗಳು, ಅನಿಸಿಕೆಗಳಿಗೆ ಪೂರಕವಾದ ವಿಚಾರಗಳು, ವಾದಗಳನ್ನು ಹುಡುಕುತ್ತಾ ಹೋಗುವುದು. ಈ ಕಾರಣಕ್ಕಾಗಿಯೇ ವಿವಿಧ ಮತಗಳು, ಧರ್ಮಗಳನ್ನು ಅನುಸರಿಸುವವರು ತಮ್ಮದೇ ಸರಿ ಹೇಗೆ ಎಂದು ಸಮರ್ಥಿಸಿಕೊಳ್ಳಲು ಹೆಣಗುತ್ತಲೇ ಇರುತ್ತಾರೆ. ಒಂದಂತೂ ಸತ್ಯ, ದೇವರು ಕೊಟ್ಟಿರುವ ವಿವೇಚನಾಶಕ್ತಿಯನ್ನು ಬಳಸಿಕೊಳ್ಳಲು ಅವಕಾಶವಿರುವ ಧರ್ಮವೇ ನಿಜವಾದ ಧರ್ಮ. ಸತ್ಯಾನ್ವೇಷಣೆಗೆ ಇರುವ ನಿಜವಾದ ತೊಡಕೆಂದರೆ ಚಿಂತಿಸುವ ಶಕ್ತಿಯಲ್ಲಿನ, ಗ್ರಹಿಸುವ ಶಕ್ತಿಯಲ್ಲಿನ ಕೊರತೆಯಲ್ಲ, ಕಾಣುವ ಸಂಗತಿಗಳ ವೈಪರೀತ್ಯವಲ್ಲ, ಬದಲಾಗಿ ಹೊಂದಿರುವ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು! ಸತ್ಯಾನ್ವೇಷಣೆಗೆ ಸರಿಯಾದ ದಾರಿಯೆಂದರೆ ಶ್ರವಣ, ಮನನ, ಮಥನಗಳಿಂದ ಮತ್ತು  ಅನುಭವಗಳಿಂದ ಮನಸ್ಸು ಕಂಡುಕೊಳ್ಳುವ ತೀರ್ಮಾನವನ್ನು ಒಪ್ಪುವುದು.   
     ಏನು, ಏಕೆ, ಹೇಗೆ ಎಂಬ ಪ್ರಶ್ನೆಗಳು, ತರ್ಕಗಳಿಂದಲೇ ಇಂದು ವಿಜ್ಞಾನ ವಿಜೃಂಭಿಸಿರುವುದು. ಮಾನವನ ಅತಿ ಕನಿಷ್ಠ ಅಗತ್ಯತೆಯಿಂದ ಹಿಡಿದು ಗಗನಚುಂಬಿ ಕಟ್ಟಡಗಳವರೆಗೆ ಮತ್ತು ಅತ್ಯುನ್ನತ ಧಾರ್ಮಿಕ ನಂಬಿಕೆಗಳವರೆಗೆ, ನಾವು ಈಗ ಏನಾಗಿದ್ದೇವೋ, ಏನೆಲ್ಲಾ ಹೊಂದಿದ್ದೇವೋ ಇವೆಲ್ಲವೂ ಬಂದಿರುವುದು ಮಾನವನ ಸಣ್ಣ ಮೆದುಳಿನ ಚಿಂತನೆಯ, ಮಾನಸಿಕ ಅನ್ವೇಷಣೆಯ ಫಲಗಳು. ನಮ್ಮ ಅದ್ಭುತ ಚಿಂತನೆ ಕೊನೆಗೆ ಎಲ್ಲಿಗೆ ತಲುಪುತ್ತದೆಂದರೆ, ಈ ಬೃಹತ್ ಬ್ರಹ್ಮಾಂಡದಲ್ಲಿ ಮಾನವ ಎಷ್ಟು ಸಣ್ಣವನು ಎಂಬುದರ ಅರಿವಿನಲ್ಲಿ! 
     ವಿವೇಕರಹಿತ ವ್ಯಕ್ತಿ ತಾನು ನಾಶ ಹೊಂದುವುದಲ್ಲದೆ ಇತರರಿಗೂ ಹಾನಿಯುಂಟುಮಾಡುತ್ತಾನೆ. ಇದೇ ತತ್ವ ಒಂದು ಸಮಾಜಕ್ಕೂ, ದೇಶಕ್ಕೂ ಅನ್ವಯವಾಗುತ್ತದೆ. ತಾನು ಹೊಂದಿರುವ ನಂಬಿಕೆಯನ್ನೇ ಇತರರು ಹೊಂದಬೇಕು ಎಂದು ಬಯಸುವ ವ್ಯಕ್ತಿಗಳು, ಧರ್ಮ/ಮತಾವಲಂಬಿಗಳು, ದೇಶಗಳು ವೈಚಾರಿಕತೆಗೆ ಕಂಟಕರಾಗುತ್ತಾರೆ. ಇದು ಸಂಘರ್ಷ, ರಕ್ತಪಾತಗಳಿಗೆ ಎಡೆ ಮಾಡುತ್ತವೆ. ಜೀವಿಮಾತ್ರರಲ್ಲಿ ಯಾರಿಗೂ ಇಲ್ಲದ ವಿಚಾರ ಮಾಡುವ ಶಕ್ತಿಯನ್ನು ಹೊಂದಿರುವ ಏಕೈಕ ಜೀವಿಯಾದ ಮಾನವನ ವೈಚಾರಿಕತೆಗೆ ಅಂಕುಶ ಹಾಕುವ ಯಾವುದೇ ವ್ಯಕ್ತಿಯ, ಸಮಾಜದ, ಧರ್ಮದ, ದೇಶದ ಪ್ರಯತ್ನಗಳು ಮಾನವಕುಲಕ್ಕೆ ಹಾನಿ ಮಾಡುವಂತಹವು ಎಂಬುದು ಪೂರ್ವಾಗ್ರಹ ಪೀಡಿತರಾಗದೆ ವಿವೇಚಿಸುವ ಎಲ್ಲರಿಗೂ ಅರ್ಥವಾಗುವ ಸಂಗತಿ.
     ಸಿಂಹಾವಲೋಕನ ಎಂಬ ಪದವನ್ನು ನಾವು ಕೇಳಿರುತ್ತೇವೆ. ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಹಿಂತಿರುಗಿ ತಾನು ಬಂದ ದಾರಿಯನ್ನು ಒಮ್ಮೆ ವೀಕ್ಷಿಸಿ ಮತ್ತೆ ಗಂಭೀರವಾಗಿ ಮುಂದೆ ಸಾಗುತ್ತದೆ. ಮುಂದೆ ಸಾಗುವ ಮುನ್ನ ಹಿಂದಿನ ದಾರಿಯನ್ನು ಅವಲೋಕಿಸಿ ಮುಂದಿನ ದಾರಿಯನ್ನು ನಿರ್ಧರಿಸಬೇಕು ಎಂಬುದು ಇದರ ಸಾರ. ನಾವು ಸಾಗಿದ ದಾರಿಯನ್ನು ಅವಲೋಕಿಸುವುದಕ್ಕೆ ಆತ್ಮಾವಲೋಕನ ಎನ್ನುತ್ತೇವೆ. ಈ ಆತ್ಮಾವಲೋಕನ ನಮ್ಮ ತಪ್ಪು ನಡೆಗಳನ್ನು ತಿದ್ದಿಕೊಳ್ಳುವುದಕ್ಕೆ, ಮುಂದೆ ತಪ್ಪಾಗದಂತೆ ನೋಡಿಕೊಳ್ಳುವುದಕ್ಕೆ ಅತ್ಯಾವಶ್ಯಕ. ಹರೆಯದ ಹುಮ್ಮಸ್ಸಿನಲ್ಲಿ ಈ ವಿವೇಚನಾಶಕ್ತಿ ಕಡಿಮೆಯಿರುತ್ತದೆ ಅಥವ ಇದ್ದರೂ ಅದಕ್ಕೆ ಕೊಡುವ ಮಹತ್ವ ಕಡಿಮೆ. ಮಧ್ಯವಯಸ್ಸಿನಲ್ಲಿ ಮತ್ತು ಇಳಿ ವಯಸ್ಸಿನಲ್ಲಿ ಈ ಶಕ್ತಿ ಪ್ರಬುದ್ಧಮಾನ ಸ್ಥಿತಿಯಲ್ಲಿರುತ್ತದೆ. ಮಧ್ಯ ವಯಸ್ಸಿನಲ್ಲಿದ್ದಾಗಲೂ ವಿವೇಚನಾಶಕ್ತಿಗೆ ಕೆಲಸ ಕೊಡದಿದ್ದರೆ, ಇಳಿವಯಸ್ಸಿನಲ್ಲಿ ಶೋಕ ಕಟ್ಟಿಟ್ಟ ಬುತ್ತಿಯೇ ಸರಿ. 
ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಈ ಸಮಾಜದಲ್ಲಿ ಬದುಕುವ ಪ್ರತಿ ಜೀವಿಯೂ ಮೂರು ಋಣಗಳನ್ನು ತೀರಿಸಲೇಬೇಕಿರುತ್ತದೆ - ದೇವಋಣ, ಪಿತೃಋಣ ಮತ್ತು ಆಚಾರ್ಯಋಣ. ದೇವಋಣವೆಂದರೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗಿ ಪೂಜೆ ಮಾಡಿ ಕಾಣಿಕೆ ಅರ್ಪಿಸುವುದಲ್ಲ. ಪಂಚಭೂತಗಳಿಂದ ಆದ ಈ ಶರೀರದಲ್ಲಿರುವ ಆತ್ಮದ ಸಹಾಯದಿಂದ ಜೀವನ ನಡೆಸಿರುವ ನಾವು ಈ ಪಂಚಭೂತಗಳು -ಭೂಮಿ, ಆಕಾಶ, ನೀರು, ಅಗ್ನಿ, ವಾಯು- ಇವುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ. ಇದು ದೇವ ಋಣವನ್ನು ತೀರಿಸುವ ರೀತಿ. ಅದೇ ರೀತಿ ನಮ್ಮನ್ನು ಪೋಷಿಸಿ ಸಲಹಿದ ಮಾತಾ-ಪಿತೃಗಳು, ಹಿರಿಯರುಗಳ ಸೇವೆ ಮಾಡುವುದು ಪಿತೃಋಣ ತೀರಿಸುವ ಪರಿಯಾದರೆ, ನಮಗೆ ಜ್ಞಾನ ನೀಡಿ ದಾರಿ ತೋರಿದ ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ತಿಳಿದ ಜ್ಞಾನವನ್ನು ಇತರರಿಗೆ ಹಂಚುವುದು ಗುರುಋಣ ತೀರಿಸಲು ಸಹಕಾರಿ. ಈ ವೇದಮಂತ್ರ ಗಮನಿಸೋಣ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ. ಈ ಕೆಲಸವನ್ನು ನಾವು ಮಾಡುತ್ತಿದ್ದೇವೆಯೇ ಎಂಬುದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. 
     ಅವಲೋಕನದಿಂದ ಸುತ್ತಮುತ್ತಲಿನ ಆಗುಹೋಗುಗಳ ಓರೆಕೋರೆಗಳು ಗೋಚರವಾಗುತ್ತವೆ; ಆತ್ಮಾವಲೋಕನದಿಂದ ಆ ಓರೆಕೋರೆಗಳ ಮೂಲ ನಾವೇ ಆಗಿರುವುದು ತಿಳಿಯುತ್ತದೆ. ಅದು ಹಾಗಿರಬೇಕು, ಅವರು ಹಾಗಿರಬೇಕು, ಇವರು ಹೀಗಿರಬೇಕು ಎಂದು ಇತರರಲ್ಲಿ ಬಯಸುವ ಗುಣಗಳು ಮೊದಲು ನಮ್ಮಲ್ಲಿ ಇವೆಯೇ ಎಂಬುದನ್ನು ನೋಡಿಕೊಳ್ಳಬೇಕು. ನಾವು ಮಾತ್ರ ಬೇರೆ ರೀತಿಯಲ್ಲಿ ಇದ್ದು, ಇತರರು ಮಾತ್ರ ಸರಿಯಾಗಿರಬೇಕು ಎಂದು ಬಯಸುವುದರಲ್ಲಿಯೇ ಲೋಪವಿದೆಯೆಂದು ನಮಗೆ ಅರಿವಾಗುವುದು ಆತ್ಮಾವಲೋಕನದಿಂದ ಮಾತ್ರ. ಸಮಾಜದಲ್ಲಿ ಏನಾದರೂ ಬದಲಾವಣೆಯಾಗಬೇಕೆಂದು ಬಯಸುವುದು ತರವಲ್ಲ. ಬದಲಾಗಬೇಕಾದವರು ನಾವು ಮಾತ್ರ. ನಾವು ಕೇಳಬೇಕಾಗಿರುವುದು ಇತರರ ಮಾತುಗಳನ್ನಲ್ಲ, ನಮ್ಮ ಹೃದಯದ ಮಾತುಗಳನ್ನು! ನಾವು ಬದಲಾದರೆ ಸಮಾಜವನ್ನು ನಾವು ನೋಡುವ ದೃಷ್ಟಿಯೂ ಬದಲಾಗುತ್ತದೆ. ಸಮಾಜದಲ್ಲಿ ಒಳಿತೂ ಇರುತ್ತದೆ, ಕೆಡಕೂ ಇರುತ್ತದೆ. ಒಳಿತಾಗಬೇಕೆಂದು ನಾವು ಬಯಸುವುದಾದರೆ ನಾವು ಒಳ್ಳೆಯ ಸಂಗತಿಗಳನ್ನು ಮಾತ್ರ ಗಮನಿಸಬೇಕು, ಅದಕ್ಕೆ ಮಾತ್ರ ಮಹತ್ವ ಕೊಡಬೇಕು. ವಿವೇಕಾನಂದರ ಈ ಮಾತನ್ನು ನೆನಪಿನಲ್ಲಿಡಬೇಕು: "ಪ್ರಪಂಚ ನಮಗೆ ಏನಾಗಿ ತೋರುವುದೋ ಅದಕ್ಕೆ ಕಾರಣ ನಮ್ಮದೇ ಆದ ನಮ್ಮ ಮನಸ್ಸಿನ ಸ್ಥಿತಿ. ನಮ್ಮ ಯೋಚನೆಗಳು ಸಂಗತಿಗಳನ್ನು ಸುಂದರಗೊಳಿಸುತ್ತವೆ; ನಮ್ಮ ಯೋಚನೆಗಳೇ ಸಂಗತಿಗಳನ್ನು ಕುರೂಪಿಯನ್ನಾಗಿಸುತ್ತವೆ. ಇಡೀ ಪ್ರಪಂಚ ನಮ್ಮ ಮನಸ್ಸುಗಳಲ್ಲೇ ಇದೆ." ಆತ್ಮಾವಲೋಕನ ಮಾಡಿಕೊಳ್ಳೋಣ.
ಪರರೆಂತಿರಬೇಕೆಂದು ಬಯಸುವುದು ನೀನು?
ಅಂತಪ್ಪ ಮಾದರಿಯು ನೀನೆ ಮೊದಲಾಗು |
ಬದಲಾಗು ಮೊದಲು ಬದಲಾಗು ನೀನು
ಬದಲಾಯಿಸುವ ಗುಟ್ಟು ಇಲ್ಲಿಹುದು ಮೂಢ ||
-ಕ.ವೆಂ.ನಾಗರಾಜ್.
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ್ದು]
******************************
28.11.2013ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.

10.09.2014ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಗುರುವಾರ, ನವೆಂಬರ್ 21, 2013

ಶಿಕ್ಷಣ: ದಾರಿ ತಪ್ಪುತ್ತಿದೆಯೇ?

     ಮಾನವ ಜೀವನದಲ್ಲಿ ೧೬ ಸಂಸ್ಕಾರಗಳು ಒಬ್ಬ ಆದರ್ಶವ್ಯಕ್ತಿಯಾಗಿ ರೂಪುಗೊಳ್ಳಲು ಅವಶ್ಯಕವೆಂದು ಹೇಳುತ್ತಾರೆ. ಅವೆಂದರೆ, ೧. ಗರ್ಭಾದಾನ, ೨. ಪುಂಸವನ, ೩. ಸೀಮಂತೋನ್ನಯನ, ೪. ಜಾತಕರ್ಮ, ೫. ನಾಮಕರಣ, ೬. ನಿಷ್ಕ್ರಮಣ, ೭. ಅನ್ನಪ್ರಾಶನ, ೮. ಮುಂಡನ, ೯. ಕರ್ಣವೇಧ, ೧೦. ಉಪನಯನ, ೧೧. ವೇದಾರಂಭ, ೧೨. ಸಮಾವರ್ತನ, ೧೩. ವಿವಾಹ, ೧೪. ವಾನಪ್ರಸ್ಥ, ೧೫. ಸಂನ್ಯಾಸ, ೧೬. ಅಂತ್ಯೇಷ್ಟಿ. ಇವುಗಳಲ್ಲಿ ಮೊದಲ ಮೂರು ಸಂಸ್ಕಾರಗಳು ಹುಟ್ಟುವ ಮುನ್ನದ ಸಂಸ್ಕಾರಗಳಾಗಿದ್ದು, ಇವನ್ನು ಉತ್ತಮ ಸಂತಾನವನ್ನು ಪಡೆಯುವ ಸಲುವಾಗಿ ಆಚರಿಸುತ್ತಾರೆ. ಇನ್ನು ಮೂರು ಸಂಸ್ಕಾರಗಳಾದ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳು ಎಲ್ಲರಿಗೂ ಕಡ್ಡಾಯವಲ್ಲ. ಈ ಸಂಸ್ಕಾರಗಳು ಅರ್ಹತೆ ಮತ್ತು ಆಸಕ್ತಿಯಿರುವರಿಗೆ ಮಾತ್ರ. ಅಂತ್ಯೇಷ್ಟಿ ಸಂಸ್ಕಾರ ಮೃತರಾದ ನಂತರ ಮಾಡುವಂತಹದು. ಇವುಗಳನ್ನು ಹೊರತುಪಡಿಸಿ ಉಳಿಯುವ ೯ ಸಂಸ್ಕಾರಗಳು ಮಕ್ಕಳಿಗೆ ಸಂಬಂಧಿಸಿದವು. ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಈ ಸಂಸ್ಕಾರಗಳಿಗೆ ಹಿಂದೆ ಎಷ್ಟು ಪ್ರಾಧಾನ್ಯತೆಯಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಇಂದಿನ ಅವಸರದ ಪ್ರಪಂಚದಲ್ಲಿ ಮಕ್ಕಳ ಬೆಳವಣಿಗೆಗೆ ಕೊಡಬೇಕಾದಷ್ಟು ಗಮನವನ್ನು ಕೊಡುತ್ತಿದ್ದೇವೆಯೇ ನೋಡೋಣ.
     ಹಿಂದಿನ ಕಾಲದಲ್ಲಿ ಹೆರಿಗೆಗಳನ್ನು ಮನೆಗಳಲ್ಲೇ ಮಾಡುತ್ತಿದ್ದು ಸೂಲಗಿತ್ತಿಯರೆಂದು ಕರೆಯುವ ನಿಪುಣ ಸ್ತ್ರೀಯರು ಈ ಕೆಲಸ ಮಾಡುತ್ತಿದ್ದರು. ಈಗ ಸಾಮಾನ್ಯವಾಗಿ ಆಸ್ಪತ್ರೆಗಳಲ್ಲೇ ನುರಿತ ವೈದ್ಯರು, ದಾದಿಯರು ಮಾಡುತ್ತಾರೆ. ಮಗುವಿಗೆ ಹೆಸರಿಡುವಾಗ ಒಳ್ಳೆಯ ಅರ್ಥ ಕೊಡುವ, ಒಳ್ಳೆಯದನ್ನು ಸೂಚಿಸುವ ಹೆಸರುಗಳನ್ನು ಇಟ್ಟರೆ ಆ ಹೆಸರುಗಳನ್ನು ಕರೆಯುವವರಿಗೆ ಮತ್ತು ಕರೆಸಿಕೊಳ್ಳುವವರಿಗೆ ಹೆಸರಿಗೆ ತಕ್ಕಂತೆ ಇರಲು ಪ್ರೇರಿಸಿದಂತಾಗುತ್ತದೆ. ಕೆಲವರು ಅರ್ಥವೇ ತಿಳಿಯದ ಹೆಸರುಗಳನ್ನೂ ಇಡುವುದನ್ನು ಕಾಣುತ್ತಿದ್ದೇವೆ. ಮಗುವನ್ನು ಮೊದಲ ಸಲ ಹೊರಗೆ ಕರೆದೊಯ್ಯುವಾಗ ನಿಷ್ಕ್ರಮಣ, ತಾಯ ಹಾಲಿನ ಜೊತೆಗೆ ಬೇರೆ ಆಹಾರದ ಅಭ್ಯಾಸ ಪ್ರಾರಂಭದ ಸಮಯದಲ್ಲಿ ಅನ್ನಪ್ರಾಶನ (ಸಾಮಾನ್ಯವಾಗಿ ಹಲ್ಲು ಬರುವ ಸಮಯದಲ್ಲಿ), ಮಗುವಿಗೆ ಸುಮಾರು ಮೂರು ವರ್ಷವಾದಾಗ, ಅಂದರೆ ಮೃದುವಾಗಿದ್ದ ತಲೆಬುರುಡೆ ಸ್ವಲ್ಪ ಗಟ್ಟಿಯಾದಾಗ, ಚೂಡಾಕರ್ಮ, ಕಿವಿ ಚುಚ್ಚುವುದು (ಕಿವಿ ಚುಚ್ಚುವುದರಿಂದ ಹರ್ನಿಯಾ ಸಮಸ್ಯೆ ನಿವೃತ್ತಿಯಾಗುವುದೆಂದು ಶಲ್ಯತಂತ್ರ(ಸರ್ಜರಿ)ದಲ್ಲಿ ಸುಪ್ರಸಿದ್ಧನಾದ ಸುಶ್ರುತನ ಅಭಿಪ್ರಾಯ), ಮುಂತಾದವು ಮಗುವಿಗೆ ಮಾಡಲಾಗುವ ಪ್ರಾರಂಭಿಕ ಸಂಸ್ಕಾರಗಳು.                  
     ಮುಂದಿನ ಹಂತ ಮಗುವಿನ ವಿದ್ಯಾಭ್ಯಾಸಕ್ಕೆ ಅನುವು ಮಾಡುವುದು. ಇಲ್ಲೇ ನಾವು ದಾರಿ ತಪ್ಪುತ್ತಿದ್ದೇವೇನೋ ಅನ್ನಿಸುತ್ತದೆ. ಮೆಕಾಲೆಯ ಶಿಕ್ಷಣನೀತಿಯ ಬಲಿಪಶುಗಳಾಗಿ ವಿಷವರ್ತುಲದಿಂದ ಹೊರಬರಲಾರದೆ ಇದ್ದೇವೆ. ಹಿಂದಿನ ಗುರುಕುಲ ಪದ್ಧತಿಯ ವ್ಯವಸ್ಥೆಯಲ್ಲಿ ಮಗುವಿಗೆ ಸಾಮಾನ್ಯವಾಗಿ ೭-೮ ವರ್ಷಗಳಾದಾಗ ಮಗುವಿಗೆ ಉಪನಯನ ಸಂಸ್ಕಾರ ಮಾಡಿ ತಮಗೆ ಅನುಕೂಲವೆನ್ನಿಸುವ ಗುರುಕುಲಕ್ಕೆ ಮಕ್ಕಳನ್ನು ಬಿಡುತ್ತಿದ್ದರು. ಉಪನಯನದ ಜೊತೆಗೇ ವೇದಾರಂಭ ಸಂಸ್ಕಾರವನ್ನೂ ಮಾಡುತ್ತಿದ್ದರು. ಉಪ ಎಂದರೆ ಹತ್ತಿರಕ್ಕೆ, ನಯನವೆಂದರೆ ಕರೆದೊಯ್ಯುವುದು ಎಂದರ್ಥ. ಮಗುವನ್ನು ವಿದ್ಯಾಭ್ಯಾಸದ ಸಲುವಾಗಿ ಗುರುಗಳ ಬಳಿಗೆ ಕರೆದೊಯ್ಯುವುದೇ ಉಪನಯನ. ಆಗ ಸಂಕಲ್ಪದ ರೂಪದಲ್ಲಿ ಧರಿಸಲಾಗುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಋಷಿಋಣ, ಪಿತೃಋಣಗಳನ್ನು ಸಂಕೇತಿಸುತ್ತವೆ. ಇದು ಬಹು ಹಿಂದೆ ಜಾತಿಸೂಚಕವಾದ ಚಿಹ್ನೆಯಾಗಿರಲಿಲ್ಲ. ವೇದಾರಂಭವೆಂದರೆ ಕೇವಲ ವೇದಮಂತ್ರಗಳನ್ನು ಕಲಿಯುವುದಲ್ಲ, ಇನ್ನಿತರ ವಿದ್ಯೆಗಳನ್ನೂ-ಗಣಿತ, ವಿಜ್ಞಾನ, ಶಸ್ತ್ರವಿದ್ಯೆ, ತರ್ಕ, ಮುಂತಾದ- ಕಲಿಯುವುದಾಗಿತ್ತು. ವೇದ ಎಂಬ ಪದದ ಅರ್ಥ ಜ್ಞಾನ ಎಂದೇ ಹೊರತು ಬೇರೆಯಲ್ಲ. ಗುರುಕುಲಗಳಲ್ಲಿ ಸಕಲವಿದ್ಯೆಗಳನ್ನೂ ಕಲಿಸಲಾಗುತ್ತಿತ್ತು. ರಾಮ, ಕೃಷ್ಣ, ಪಾಂಡವರೇ ಮೊದಲಾದವರು ಗುರುಕುಲಗಳಲ್ಲಿ ಶಸ್ತ್ರ-ಶಾಸ್ತ್ರ ಪ್ರವೀಣರಾದ ಉದಾಹರಣೆಗಳನ್ನು ನಾವು ಕಾಣುತ್ತೇವೆ. ಗುರುಕುಲಗಳಲ್ಲಿ ಜಾತಿಭೇದವಿರಲಿಲ್ಲ, ಉಚ್ಛ-ನೀಚ ಭಾವನೆಗಳಿರಲಿಲ್ಲ. ರಾಜರ ಮಕ್ಕಳೂ, ಸಾಮಾನ್ಯರ ಮಕ್ಕಳೂ ಒಟ್ಟಿಗೇ ಗುರುಕುಲಗಳಲ್ಲಿ ವಾಸವಿದ್ದು ಸಮಾನಭಾವದಲ್ಲಿ ಅಲ್ಲಿ ವಿದ್ಯೆ ಕಲಿಯಬೇಕಿತ್ತು. ಸಮಾಜದ ಋಣದಲ್ಲಿ ನಡೆಯುತ್ತಿದ್ದ ಗುರುಕುಲಗಳಿಗೆ ಶಿಕ್ಷಾರ್ಥಿಗಳು ಭಿಕ್ಷೆ ಸಂಗ್ರಹಿಸಿ ಆಚಾರ್ಯರಿಗೆ ನೀಡುತ್ತಿದ್ದರು. ಶಿಕ್ಷಾರ್ಥಿಗಳು ಅವರ ಶಕ್ತ್ಯಾನುಸಾರ ಮತ್ತು ಆಸಕ್ತಿಗಳಿಗನುಸಾರವಾಗಿ ಶಿಕ್ಷಣ ಪಡೆದು ಪ್ರವೀಣರೆನಿಸಿದ ನಂತರ ಸಮಾವರ್ತನ (ಬೀಳ್ಕೊಡುಗೆ ಕಾರ್ಯಕ್ರಮವೆಂದರೆ ಅರ್ಥವಾದೀತು) ಸಂಸ್ಕಾರ ನಡೆಯುತ್ತದೆ. ಈ ಸಮಯದಲ್ಲಿ ಗುರುವು ತನ್ನ ಶಿಷ್ಯರಿಗೆ ವಿಶೇಷವಾದ ಉಪದೇಶ ನೀಡಿ ಸತ್ಪ್ರಜೆಗಳಾಗಲು ಹರಸಿ ಬೀಳ್ಕೊಡುತ್ತಾರೆ. ಗುರುಕುಲದಲ್ಲಿದ್ದಷ್ಟು ಕಾಲವೂ ಗುರುವು ನೀಡಿದ್ದು ಉಪದೇಶವೇ ಆಗಿದ್ದರೂ, ಸಮಾವರ್ತನ ಕಾಲದಲ್ಲಿ ಅವೆಲ್ಲವನ್ನೂ ಸಾರರೂಪದಲ್ಲಿ ಸಂಗ್ರಹವಾಗಿ ತಿಳಿಸುತ್ತಾರೆ. ಹಾಗೆ ಸ್ನಾತಕರೆನಿಸಿಕೊಂಡ ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿದಾಗ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ, ಸ್ವಸಾಮರ್ಥ್ಯದಲ್ಲಿ ಬದುಕುವ, ಸಮಾಜಕ್ಕೆ ಒದಗುವ ಯಾವುದೇ ಅಪಾಯದ ವಿರುದ್ಧ ಸೆಟೆದುನಿಲ್ಲುವ, ರಕ್ಷಿಸುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಗುರು-ಹಿರಿಯರಿಗೆ ಗೌರವ ತೋರಿಸುವವರಾಗಿರುತ್ತಾರೆ.
     ಮೇಲಿನದು ಬಹಳ ಹಿಂದಿನ ಕಾಲದ ಮಾತಾಯಿತು. ಹಲವು ದಶಕಗಳ ಹಿಂದಿನ ಸ್ಥಿತಿ ಗಮನಿಸಿದರೆ ಆಗ ಪ್ರತಿ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುತ್ತಿದ್ದವು, ಅವಿಭಕ್ತ ಕುಟುಂಬಗಳಿದ್ದವು, ಟಿವಿ ಇರಲಿಲ್ಲ, ಮನೆಯಲ್ಲಿ ಒಟ್ಟಾಗಿ ಬಾಳುವ ಮನೋಭಾವವಿರುತ್ತಿತ್ತು, ಸಂಬಂಧಗಳಿಗೆ ಮಾನ್ಯತೆಯಿತ್ತು, ನೈತಿಕ ಮೌಲ್ಯಗಳು ಅಷ್ಟಾದರೂ ಇದ್ದವು. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಒಟ್ಟಾಗಿ ಭಜನೆ, ಪ್ರಾರ್ಥನೆ ಮಾಡುವ ಪರಿಪಾಠವಿತ್ತು. ಒಟ್ಟಾರೆಯಾಗಿ ಸಂತೋಷಕ್ಕೆ ಕೊರತೆಯಿರಲಿಲ್ಲ. ಕುಟುಂಬದ ಸದಸ್ಯರು ಯಾರೊಬ್ಬರು ದುರ್ಬಲರಾಗಿದ್ದರೂ ಉಳಿದವರು ಅವರನ್ನು ಕೈಹಿಡಿದು ಎತ್ತುತ್ತಿದ್ದರು. ಹಣದಲ್ಲಿ ಬಡತನವಿದ್ದರೂ ಆತ್ಮಸ್ಥೈರ್ಯಕ್ಕೆ ಬಡತನವಿರಲಿಲ್ಲ.
     ಈಗ ಇಂದಿನ ಕಾಲದ ಶಿಕ್ಷಣದ ಬಗ್ಗೆ ನೋಡೋಣ. ಇಂದಿನ ಮಕ್ಕಳ ಪರಿಸ್ಥಿತಿ ನೋಡಿದರೆ ಮರುಕವಾಗುತ್ತದೆ. ವೈವಾಹಿಕ ಸಂಬಂಧಗಳೇ ಮಹತ್ವ ಕಳೆದುಕೊಳ್ಳುತ್ತಿರುವ, ಇಂದು ಮದುವೆ ಮತ್ತು ನಾಳೆ ವಿಚ್ಛೇದನ ಎಂಬಂತಹದು ಸಾಮಾನ್ಯವಾಗುತ್ತಿರುವ, ಒಪ್ಪಂದ ಆಧಾರದ ಸಂಬಂಧಗಳು ಹೆಚ್ಚುತ್ತಿರುವಾಗ,  ವಿಚ್ಛೇದನದ ಕಾರಣದಿಂದ ಮತ್ತು ಪತಿ-ಪತ್ನಿಯರ ನಡುವಣ ಸಾಮರಸ್ಯದ ಕೊರತೆಯಿಂದ ಅನಾಥಪ್ರಜ್ಞೆಯಿಂದ ನರಳುವ ಮಕ್ಕಳನ್ನು ಕಂಡರೆ ದಿಗಿಲಾಗುತ್ತದೆ. ಮಕ್ಕಳಿಗೆ ಸುಮಾರು ೬ ವರ್ಷಗಳಾಗುವವರೆಗೆ, ಮೆದುಳು ಇನ್ನೂ ಬಲಿಯಬೇಕಾಗಿರುವುದರಿಂದ, ಅವರಿಗೆ ಕಲಿಕೆಯ ಶ್ರಮ ಕೊಡಬಾರದೆಂದು ಮನೋಶಾಸ್ತ್ರಜ್ಞರು ಮತ್ತು ಶಿಕ್ಷಣತಜ್ಞರು ಹೇಳುತ್ತಾರೆ. ಆದರೆ, ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ದುಡಿಯಲು ಹೋಗುವವರಾದರೆ ಇನ್ನೂ ತಾಯ ಮಡಿಲಿನಲ್ಲೇ ಪಿಳಿಪಿಳಿ ಕಣ್ಣು ಬಿಟ್ಟು ಆಟವಾಡಬೇಕಾದ ಮಕ್ಕಳನ್ನೂ ಶಿಶುಕೇಂದ್ರ(ಬೇಬಿ ಕೇರ್)ಗಳಲ್ಲಿ ಬಿಟ್ಟುಹೋಗುತ್ತಾರೆ. ಅಲ್ಲಿ ಮಕ್ಕಳನ್ನು ಸುಧಾರಿಸಲಾಗದೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸುತ್ತಾರೆಂದೂ ದೂರುಗಳಿವೆ. ಒಂದು ಶಿಶುಕೇಂದ್ರದಲ್ಲಂತೂ ಮಕ್ಕಳಿಗೆ ಹರಕುಬಟ್ಟೆ ಹಾಕಿ ಭಿಕ್ಷಾಟನೆಗೆ ಕರೆದೊಯ್ಯಲು ಬಾಡಿಗೆಗೆ ಒದಗಿಸುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ಬಂದಿತ್ತು. ಹುಟ್ಟುತ್ತಲೇ ಬೇಬಿ ಸಿಟ್ಟಿಂಗ್, ೨-೩ ವರ್ಷವಾಗುತ್ತಲೇ ಎಲ್.ಕೆ.ಜಿ., ನಂತರ ಯು.ಕೆ.ಜಿ., ನಂತರ ಒಂದನೆಯ ತರಗತಿಗೆ ಮಕ್ಕಳನ್ನು ದಾಖಲಿಸುವುದು (ಅದೂ ಆಂಗ್ಲ ಮಾಧ್ಯಮದ ಶಾಲೆಗಳಿಗೆ) ಕಾಣುತ್ತಿದ್ದೇವೆ. ಶಾಲೆಗಳಲ್ಲೂ 'ಡೇ ಕೇರ್' ಸೌಲಭ್ಯವಿದ್ದು ತಂದೆ/ತಾಯಿ ಕೆಲಸ ಮುಗಿಸಿಕೊಂಡು ಬರುವವರೆಗೂ ಶಾಲೆ ಮುಗಿದ ನಂತರವೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ನಗರಗಳಲ್ಲಿದೆ. ಮೊದಲ ಪಾಠಶಾಲೆಯಾಗಬೇಕಾಗಿದ್ದ ಮನೆಯೇ ಮಕ್ಕಳನ್ನು ಮನೆಯಿಂದ ಹೊರಗೆ ಹಾಕುವ ಪ್ರಕ್ರಿಯೆಗೆ ಹುಟ್ಟುತ್ತಲೇ ಚಾಲನೆ ಕೊಡುತ್ತಿದೆ. ಮೊದಲ ಪಾಠಶಾಲೆಯೇ ಇಂದಿನ ಮಕ್ಕಳಿಗೆ ಇಲ್ಲ. ಮೊದಲ ಶಿಕ್ಷಕರಾದ ತಾಯಿ-ತಂದೆಯರಿಗೆ ಪುರುಸೊತ್ತೇ ಇಲ್ಲ.
     ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಟಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 
     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ 'ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ.' ಹೀಗಾಗಲೆಂದು ಹಾರೈಸೋಣ. ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣ ಕಾರಣ|
ಆವರಣ ಹೂರಣ ಚೆಂದವಿರೆ ಲಕ್ಷಣ
ಬದುಕು ಸುಂದರ ಪಯಣ ಮೂಢ||
-ಕ.ವೆಂ.ನಾಗರಾಜ್
[ಚಿತ್ರಗಳು: ಅಂತರ್ಜಾಲದಿಂದ ಹೆಕ್ಕಿದವು]
*****************************
8.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ.

21.11.2013ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.





ಬುಧವಾರ, ನವೆಂಬರ್ 13, 2013

ಬೆಳ್ತಂಗಡಿ ತಾಲ್ಲೂಕಿನಲ್ಲಿ ನಕ್ಸಲರ ಚಟುವಟಿಕೆ

     ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿ ಸುಮಾರು ೧೪-೧೫ ನಕ್ಸಲರ ಗುಂಪು ಕಂಡು ಬಂದ ಬಗ್ಗೆ ಮತ್ತು ಕೆಲವು ವಾಹನಗಳು, ಆಸ್ತಿ-ಪಾಸ್ತಿಗೆ ಅವರು ಹಾನಿ ಮಾಡಿದ ಬಗ್ಗೆ ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದನ್ನು ನೋಡಿ ಸುಮಾರು ೧೦ ವರ್ಷಗಳ ಹಿಂದೆ ಕಡಬದ ವಿಶೇಷ ತಹಸೀಲ್ದಾರ್ ಮತ್ತು ಹೆಚ್ಚುವರಿ ಪ್ರಭಾರೆಯಾಗಿ ಬೆಳ್ತಂಗಡಿಯ ತಹಸೀಲ್ದಾರ್ ಆಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ನಕ್ಸಲ್ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಶ್ರಮಿಸಿದ ದಿನಗಳು ನೆನಪಾದವು. ಆ ಸಮಯದಲ್ಲಿ ಬೆಳ್ತಂಗಡಿಯ ಗಡಿಯ ಸಮೀಪದ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಕ್ಸಲರಾದ ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಆಗಿತ್ತು. ಈದು ಗ್ರಾಮಕ್ಕೆ ಹೋಗಬೇಕಾದರೆ ಬೆಳ್ತಂಗಡಿಯ ಗ್ರಾಮಗಳನ್ನು ಹಾದು ಹೋಗಬೇಕಾಗಿತ್ತು. ಎನ್ ಕೌಂಟರ್ ಆಗಿದ್ದ ಸ್ಥಳ ಮತ್ತು ಮನೆಗೆ ನಾನೂ ಭೇಟಿ ಕೊಟ್ಟಿದ್ದೆ. ಅದೊಂದು ಪುಟ್ಟ ಗುಡಿಸಲು ರೀತಿಯ ಮನೆಯಾಗಿತ್ತು.
     ಬೆಳ್ತಂಗಡಿಯ ಕುತ್ಲೂರು, ನಾರಾವಿ, ಮುಂತಾದ ಗ್ರಾಮಗಳಿಗೆ ಹೊಂದಿಕೊಂಡಂತಿದ್ದ ಅಭಯಾರಣ್ಯದ ಪ್ರದೇಶಗಳಲ್ಲಿ ನಕ್ಸಲರ ಚಟುವಟಿಕೆಗಳು ಇದ್ದ ಬಗ್ಗೆ ತಿಳಿದುಬರುತ್ತಿತ್ತು. ನಕ್ಸಲರು ಅರಣ್ಯ ಪ್ರದೇಶಗಳಲ್ಲಿ ಮತ್ತು ಸಮೀಪದ ಸ್ಥಳಗಳಲ್ಲಿ ಇರುವ ಜನರ ಸಮಸ್ಯೆಗಳನ್ನು ನೆಪಮಾಡಿಕೊಂಡು ಜನರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ಎತ್ತಿಕಟ್ಟುವುದು ಅವರ ಒಂದು ತಂತ್ರ. ಪ್ರಚಲಿತ ಅರಣ್ಯ ಕಾಯದೆ, ಕಾನೂನುಗಳು ಆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ರಸ್ತೆ, ದೀಪ, ಆರೋಗ್ಯ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲು ಅಡ್ಡಿಯಾಗುತ್ತಿದ್ದುದು ಅವರಿಗೆ ವರದಾನವಾದಂತಿತ್ತು. ನಕ್ಸಲರಿಗೆ ಮುಖ್ಯವಾಗಿ ಬೇಕಾಗಿದ್ದುದು ಅಡಗುತಾಣವಾದ್ದರಿಂದ ಅವರುಗಳು ಸಾಮಾನ್ಯವಾಗಿ ಅರಣ್ಯಪ್ರದೇಶಗಳನ್ನೇ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆ ಪ್ರದೇಶದ ಸಮೀಪದಲ್ಲಿ ವಾಸಿಸುವ ಜನರನ್ನು ಹೆದರಿಸಿ ಬಾಯಿಬಿಡದಂತೆ ನೋಡಿಕೊಳ್ಳುತ್ತಾರೆ. ಪೋಲಿಸರಿಗೆ ಮಾಹಿತಿ ನೀಡುತ್ತಾರೆಂದು ಅನುಮಾನ ಕಂಡುಬಂದವರನ್ನು ಹಿಂಸಿಸುತ್ತಾರೆ. ವಿಪರ್ಯಾಸವೆಂದರೆ ಗ್ರಾಮಗಳ ಕೆಲವು ನಿರುದ್ಯೋಗಿ ಯುವಕ-ಯುವತಿಯರು (ಹೆಚ್ಚಿನವರು ಒಂದಲ್ಲಾ ಒಂದು ರೀತಿಯಲ್ಲಿ ಇಂದಿನ ಭ್ರಷ್ಠ ವ್ಯವಸ್ಥೆಯಲ್ಲಿ ನೊಂದವರು) ಅವರೊಂದಿಗೆ ಕೈಜೋಡಿಸಿ ನೆರವಾಗುತ್ತಾರೆ. ನಕ್ಸಲರು ಅರಣ್ಯ ಪ್ರದೇಶಗಳನ್ನು ತಮ್ಮ ರಕ್ಷಣೆಯ ಸಲುವಾಗಿ ಮತ್ತು ನಕ್ಸಲ್ ವಿಚಾರದಿಂದ ಪ್ರಭಾವಿತರಾದವರಿಗೆ ತರಬೇತಿ ಕೊಡಲು ಬಳಸಿಕೊಳ್ಳುತ್ತಾರೆ.
     ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳವರಿಗೆ ಸಹಜವಾಗಿ ಕೆಲವು ಮೂಲಭೂತ ಸಮಸ್ಯೆಗಳಿರುತ್ತವೆ. ರಸ್ತೆ, ದೀಪಗಳು, ಅನಾರೋಗ್ಯದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಕೊರತೆ, ಮುಂತಾದವು ಅವರನ್ನು ಕಾಡುತ್ತವೆ. ಅರಣ್ಯ ಕಾಯದೆಯಂತೆ ಅವರಿಗೆ ಬೇರೆ ಸೌಕರ್ಯ ಕಲ್ಪಿಸಿ ಅಲ್ಲಿಂದ ತೆರವುಗೊಳಿಸುವ ಪ್ರಯತ್ನಗಳು ನಡೆದರೂ ಫಲ ಕಡಿಮೆ. ತಲೆತಲಾಂತರಗಳಿಂದ ಅಲ್ಲಿ ವಾಸಿಸುತ್ತಾ ಬಂದವರನ್ನು ತೆರವುಗೊಳಿಸಲೂ ಆಗದು. ಹಾಗೆಂದು ಹೊಸದಾಗಿ ಅಲ್ಲಿ ಸೇರಿಕೊಂಡವರನ್ನು ಅಲ್ಲಿ ಇರಲು ಅವಕಾಶ ಕೊಡುವುದೂ ಸರಿಯಲ್ಲ. ಹೀಗಾಗಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಸಮೀಕ್ಷೆಯನ್ನು ನಮ್ಮ ಮತ್ತು ಪಂಚಾಯಿತಿ ಸಿಬ್ಬಂದಿಗಳ ನೆರವಿನಿಂದ ಮಾಡಿಸಲಾಯಿತು. ಅವರ ಕುಟುಂಬದ ಸದಸ್ಯರುಗಳ ವಿವರ, ವಿದ್ಯಾಭ್ಯಾಸ, ಉದ್ಯೋಗ, ಹೊಂದಿರುವ ಜಮೀನುಗಳ ವಿವರ, ಆರ್ಥಿಕ ಸ್ಥಿತಿ-ಗತಿಗಳ ಬಗ್ಗೆಯೂ ವಿವರ ಸಂಗ್ರಹಿಸಲಾಯಿತು. ೨೦೦೧ರ ಜನಗಣತಿ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯೂ ನೆರವಿಗೆ ಬಂದಿತು. ಒಟ್ಟು ೨೯೨ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ವಾಸವಿದ್ದವು. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ನಮ್ಮ ಇಬ್ಬರು ಸಿಬ್ಬಂದಿಗೆ ನಕ್ಸಲರೆಂದು ಹೇಳಿಕೊಂಡಿದ್ದ ಕೆಲವರು ಹೆದರಿಸಿದ್ದರಿಂದ ಅವರು ಹೆದರಿ ಓಡಿಬಂದಿದ್ದರು. ನಂತರ ಪೋಲಿಸ್ ರಕ್ಷಣೆಯನ್ನೂ ಸಿಬ್ಬಂದಿಗೆ ಒದಗಿಸಲಾಗಿತ್ತು. ಅವರುಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತೂ ವಿವರ ಪಡೆಯಲಾಯಿತು. ಕುತೂಹಲಕರ ವಿಷಯಗಳೂ ತಿಳಿದುಬಂದವು. ಕೆಲವರಿಗೆ ಅರಣ್ಯ ಪ್ರದೇಶದ ಹೊರಗೆ ಬೇರೆ ಸ್ವಂತದ ಮನೆಗಳಿದ್ದವು. ಪಟ್ಟಣದಲ್ಲಿ ವಾಸಿಸುತ್ತಿದ್ದ ಕೆಲವರು ಐಷಾರಾಮಿ ಜೀವನ ನಡೆಸುವವರು, ಕಾರುಗಳನ್ನು ಹೊಂದಿದ್ದವರಾಗಿದ್ದರು. ಆದರೆ ಅವರು ಕಾಡಿನಲ್ಲಿದ್ದ ಮನೆಗಳನ್ನು ಬಿಡಲು ತಯಾರಿರಲಿಲ್ಲ. ಹೆಚ್ಚಿನವರು ಬಡತನದಲ್ಲಿದ್ದವರಾಗಿದ್ದರೂ, ಹೇಳಿಕೊಳ್ಳುವಂತಹ ಆರ್ಥಿಕ ದುಸ್ಥಿತಿ ಇರಲಿಲ್ಲ. ಅಲ್ಲದೆ, ಅವರು ಬಿಳಿಗಿರಿರಂಗನಬೆಟ್ಟದಲ್ಲಿ ವಾಸಿಸುವ ಮೂಲ ಅರಣ್ಯವಾಸಿಗಳಂತೆ ಪಟ್ಟಣದಿಂದ ದೂರವಿದ್ದವರಾಗಿರಲಿಲ್ಲ. ಬೇಕೆಂದಾಗ ಮತ್ತು ಅವಶ್ಯಕತೆಯಿದ್ದಾಗ ಪಟ್ಟಣಕ್ಕೆ ಹೋಗಿ ಬಂದು ಮಾಡುವವರಾಗಿದ್ದರು. ಅರಣ್ಯದಲ್ಲೇ ಇರಲು ಇಷ್ಟಪಡುತ್ತಿದ್ದ ಕಾರಣವೆಂದರೆ ಅಲ್ಲಿ ಅವರಿಗೆ ವ್ಯವಸಾಯ ಮಾಡಲು ಅವಕಾಶವಿರುವುದರೊಂದಿಗೆ ಅರಣ್ಯ ಉತ್ಪತ್ತಿಗಳನ್ನು ಸಂಗ್ರಹಿಸಿ ಅದನ್ನು ಮಾರಿ ಹಣ ಮಾಡಿಕೊಳ್ಳಲು ಅನುಕೂಲವಾಗಿದ್ದುದಾಗಿತ್ತು.
     ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಆ ಪ್ರದೇಶದ ಕುಟುಂಬಗಳಿಗೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಗ್ರಾಮಗಳವರಿಗೆ ಒದಗಿಸಿಕೊಡಲೇಬೇಕಾದ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿಯವರಾದ ಶ್ರೀ ಅರವಿಂದ ಶ್ರೀವಾಸ್ತವ ಮತ್ತು ಸಹಾಯಕ ಕಮಿಷನರ್ ಶ್ರೀ ಪಂಕಜಕುಮಾರ ಪಾಂಡೆಯವರು ಸಭೆಯ ನೇತೃತ್ವ ವಹಿಸುತ್ತಿದ್ದರು. ಅರಣ್ಯ ಕಾಯದೆ ಅಡ್ಡಿ ಬರುತ್ತಿದ್ದರೂ ರಸ್ತೆಯನ್ನು ತಕ್ಕಮಟ್ಟಿಗಾದರೂ ಉಪಯೋಗಕ್ಕೆ ಬರುವಂತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಕುತ್ಲೂರು, ನಾರಾವಿ ಸೇರಿದಂತೆ ೮-೧೦ ಗ್ರಾಮಗಳಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಾಯಿತು. ಸಾಧ್ಯವಾದಷ್ಟು ಅವರು ಅರ್ಜಿ ಸಲ್ಲಿಸಿ ಬಾಕಿ ಉಳಿದಿದ್ದ ಹಲವಾರು ಪ್ರಕರಣಗಳನ್ನು ಸಭೆಗಳಲ್ಲಿಯೇ ಇತ್ಯರ್ಥಪಡಿಸಲಾಯಿತು. ಪಾರ್ವತಿ ಮತ್ತು ಹಾಜಿಮಾರ ಎನ್ ಕೌಂಟರ್ ಬಳಿಕ ಸರ್ಕಾರವೂ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಸರ್ಕಾರದ ಅರಣ್ಯ, ಕಂದಾಯ, ಪಂಚಾಯಿತಿ ಮತ್ತು ಹಣಕಾಸು ಕಮಿಷನರರೂ ಈ ಸಂಪರ್ಕಸಭೆಗಳಲ್ಲಿ ಖುದ್ದಾಗಿ ಭಾಗವಹಿಸಿದ್ದರು. ಸಂಪರ್ಕ ಸಭೆಗಳಲ್ಲಿ ಎಲ್ಲಾ ಕುಟುಂಬಗಳವರಿಗೆ ಉಚಿತವಾಗಿ ಸೋಲಾರ್ ದೀಪ ಮುಂತಾದ ಅಗತ್ಯದ ಪರಿಕರಗಳನ್ನು ಒದಗಿಸಲಾಯಿತು. ಧರ್ಮಸ್ಥಳದ ಶ್ರೀಕ್ಷೇತ್ರದ ವತಿಯಿಂದಲೂ ಸಹಕಾರ ಸಿಕ್ಕಿತ್ತು. ಕುತ್ಲೂರು ಗ್ರಾಮದ ಕೆಲವು ಯುವಕ-ಯುವತಿಯರು ಸಂಪರ್ಕ ಸಭೆಗಳಿಗೆ ಜನರು ಹೋಗಬಾರದೆಂದು ಪ್ರಚೋದಿಸುತ್ತಿದ್ದರೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲ್ಲೂಕಿನ ಒಂದು ಸಂಘ ಅಪರೋಕ್ಷವಾಗಿ ನಕ್ಸಲರಿಗೆ ಸಹಕಾರಿಯಾಗಿದ್ದು, ಬೆಂಬಲಿಸುತ್ತದೆಯೆಂಬ ಮಾತು ಕೇಳಿಬರುತ್ತಿತ್ತು. ಪೋಲಿಸರಿಗೆ ಆ ಕುರಿತು ನಿಗಾ ಇಟ್ಟಿರಲು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕರೆ ಬಂದಾಗ ಧಾವಿಸಲು ಅನುಕೂಲವಾಗುವಂತೆ ೨ ಸಂಚಾರಿ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಿದ್ದು ಜನರಿಗೆ ಆ ಬಗ್ಗೆ ತಿಳುವಳಿಕೆ ಕೊಡಲಾಗಿತ್ತು.


ಜನಸಂಪರ್ಕ ಸಭೆಗಳ ಮತ್ತು ಹಿರಿಯ ಅಧಿಕಾರಿಗಳ ಪೂರ್ವಭಾವಿ ಸಮಾಲೋಚನೆಯ ದೃಷ್ಯಗಳು

     ನಂತರದಲ್ಲಿ ಹಲವಾರು ವರ್ಷಗಳವರೆಗೆ ಆ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಕಂಡಿರಲಿಲ್ಲ. ಇದೀಗ ಮತ್ತೆ ಚಟುವಟಿಕೆಗಳು ಗರಿಗೆದರಿರುವಂತೆ ತೋರುತ್ತಿದೆ. ಸಮಸ್ಯೆಯ ನಿಜವಾದ ಮೂಲವನ್ನು ಗುರುತಿಸಲು ಹೋದರೆ ಕಾಣಸಿಗುವುದು ಭ್ರಷ್ಠಾಚಾರವೆಂಬ ಪೆಡಂಬೂತ ಮತ್ತು ಅದಕ್ಕೆ ನೀರೆರೆಯುವ ಭ್ರಷ್ಠ ರಾಜಕಾರಣಿಗಳು, ಅಧಿಕಾರಿಗಳು. ವ್ಯವಸ್ಥೆ ಸರಿಯಿದ್ದರೆ, ಭ್ರಷ್ಠಾಚಾರಕ್ಕೆ ಅವಕಾಶವಿಲ್ಲದಿರುತ್ತಿದ್ದರೆ ನಕ್ಸಲ್ ಸಮಸ್ಯೆಯೂ ಸೇರಿದಂತೆ ಬಹುತೇಕ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಕಾಣದಾಗುತ್ತಿದ್ದವು. ಬಹುತೇಕ ನಕ್ಸಲರ ಹಿಡಿತದಲ್ಲಿರುವ ಮತ್ತು ನಕ್ಸಲ್ ವಿಚಾರಗಳಿಂದ ಪ್ರೇರಿತರಾದವರು ಒಂದಲ್ಲಾ ಒಂದು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾದವರೇ ಆಗಿರುವುದು ಇದಕ್ಕೆ ಸಾಕ್ಷಿ. ನಕ್ಸಲ್ ವಾದಿಗಳಾಗಿ ಅತಂತ್ರವಾಗಿ ಕಾಡುಮೇಡುಗಳಲ್ಲಿ ಅಲೆದು ತಮಗೂ ನೆಮ್ಮದಿಯಿಲ್ಲದೆ, ಇತರರನ್ನೂ ನೆಮ್ಮದಿಯಿಂದಿರಲು ಬಿಡದ, ಅರಾಜಕತೆ ಪ್ರೇರಿಸುವ ಅವರ ಸ್ಥಿತಿಗೆ ನಿಜವಾದ ಕಾರಣವೇ ಈ ಭ್ರಷ್ಠಾಚಾರದ ವ್ಯವಸ್ಥೆ. ಸಣ್ಣದಾಗಲೀ, ದೊಡ್ಡದಾಗಲೀ ಭ್ರಷ್ಠಾಚಾರವನ್ನು ಕಿತ್ತು ಹಾಕಲು ಯುವಜನತೆ ಮುಂದಾಗುವ ಅನಿವಾರ್ಯತೆ ಇಂದು ಇದೆ. ರಾಜಕಾರಣಿಗಳಿಂದಂತೂ ಈ ಕೆಲಸ ಆಗದು. ಅವರನ್ನೂ ನಿಯಂತ್ರಿಸುವ ಶಕ್ತಿ ಯುವಜನತೆಗೆ ಮಾತ್ರ ಇದ್ದು, ಈ ಕೆಲಸ ಮಾಡಲು ಅವರಿಗೆ ಪ್ರೇರಣೆ ಸಿಗಲೆಂದು ಹಾರೈಸೋಣ.
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 5, 2013

ಧರೆ ಹತ್ತಿ ಉರಿದೊಡೆ . . .?

ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
     ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ನಮ್ಮ ವಿಚಾರ, ಸಿದ್ಧಾಂತಗಳನ್ನು ಎಲ್ಲರೂ ಒಪ್ಪಬೇಕು ಅನ್ನುವವರು, ನಮ್ಮದೇ ಸರಿ ಅನ್ನುವವರು. ಅದಕ್ಕಾಗಿ ಸಂಘರ್ಷಗಳು, ರಕ್ತಪಾತಗಳು ಹಿಂದಿನಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಈಗಲೂ ಮುಂದುವರೆಯುತ್ತಿವೆ. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆಯಾದಷ್ಟು ಜಡಜಗತ್ತಿನ ಬಗ್ಗೆ ಹೆಚ್ಚು ಚರ್ಚೆಯಾದಂತಿಲ್ಲ. ಈ ಬಗ್ಗೆ ಈ ಇಲ್ಲಿ ಚರ್ಚಿಸೋಣ.
     ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ?  ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ  ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ,  ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು. 
     ಮೊದಲೇ ಪ್ರಸ್ತಾಪಿಸಿದಂತೆ ಮೂರು ಅಂಶಗಳು, ಜಗತ್ತು ಅರ್ಥಾತ್ ಪ್ರಕೃತಿ, ಜೀವ ಮತ್ತು ದೇವ, ಇವುಗಳ ಅಸ್ತಿತ್ವದ ರೀತಿ ತರ್ಕಿಸುವವರಿಗೆ, ಜಿಜ್ಞಾಸೆ ಮಾಡುವವರಿಗೆ ಬಹು ದೊಡ್ಡ ಆಯಾಮವನ್ನು ಒದಗಿಸುತ್ತದೆ. ದೇವರು ಎಂಬ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ, ಅದು ಗೋಚರವೋ, ಅಗೋಚರವೋ, ಆಕಾರವೋ, ನಿರಕಾರವೋ, ಏನೋ ಒಂದು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ದೇವರ ಅಸ್ತಿತ್ವವನ್ನು ನಂಬದ ನಾಸ್ತಿಕರೂ ಸಹ ಅಗೋಚರ ನಿಯಂತ್ರಕ ಶಕ್ತಿಯ ಬಗ್ಗೆ ಒಪ್ಪುತ್ತಾರೆ. ಹಾಗಾದರೆ ಅಂತಹದೊಂದು ಇದೆ, ಅದು ಅನಂತ ಮತ್ತು ಅನೂಹ್ಯ, ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದು ಒಪ್ಪಬಹುದು. ಹಾಗೆಯೇ ಜೀವದ ಅಸ್ತಿತ್ವದ ಬಗ್ಗೆ ಸಹ ಹಿಂದೆ ಚರ್ಚಿಸಲಾಗಿದೆ. (ಲೇಖನ: ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!) ಈಗ ಜಡ ಪ್ರಕೃತಿಯ ಬಗ್ಗೆ ಹೇಳುವುದಾದರೆ ಮೇಲೆ ತಿಳಿಸಿದಂತೆ ಅದು ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ ಎಂಬುದನ್ನು ನಾವು ವ್ಶೆಜ್ಞಾನಿಕ ದೃಷ್ಟಿಯಿಂದ ಯೋಚಿಸಿದರೂ ಒಪ್ಪಲೇಬೇಕಾದ ಸಂಗತಿ. ಹೀಗೆ ಜಗತ್ತು, ಜೀವ ಮತ್ತು ದೇವ ಈ ಮೂರೂ ಸಂಗತಿಗಳು ಶಾಶ್ವತ, ಅನಂತವೆಂಬ ವಾದ ಅತ್ಯಂತ ಸಮಂಜಸವಾಗಿ ತೋರುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಮ್ಪವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ. 
     ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
     ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
    ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ. 
     ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಈ ದೇಹ ಪಂಚಭೂತಗಳಿಂದ -ನೆಲ, ಜಲ, ಆಕಾಶ, ವಾಯು, ಅಗ್ನಿ- ಆದುದು ಎಂಬುದು ಸರ್ವವಿದಿತ. ಈ ಪಂಚಭೂತಗಳಿಂದ ಸೃಷ್ಟಿಯಾದ ದೇಹದಲ್ಲಿರುವ ಜೀವದಿಂದ ಆ ದೇಹಕ್ಕೆ ಅರ್ಥ ಬರುತ್ತದೆ. ಸತ್ತಾಗ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ, ಅದರೊಳಗಿನ ಜೀವಾತ್ಮ ಇನ್ನೊಂದು ರೂಪದಲ್ಲಿ ಅಸ್ತಿತ್ವ ಹೊಂದುತ್ತದೆ. ಪ್ರತಿ ಮಾನವನೂ ಮೂರು ರೀತಿಯ ಋಣಗಳನ್ನು-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ತೀರಿಸಬೇಕೆಂದು ಹೇಳುತ್ತಾರೆ. ಈ ದೇವಋಣವನ್ನು ತೀರಿಸುವುದಾದರೂ ಹೇಗೆ? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ವಿಚಾರ ಮಾಡಬೇಕಾದ ಸಂಗತಿಯಿದಲ್ಲವೇ?

ಸಾಲವನು ಪಡೆದಿಹೆವು ಋಣಿಗಳಾಗಿಹೆವು 
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||

     ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ, ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ ಇದೇ ಹೊರತು ಮತ್ತೊಂದಲ್ಲ. 
     ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಪ್ರಕೃತಿ ತನ್ನ ಮೇಲೆ ಮಾನವನಿಂದ  ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ!
-ಕ.ವೆಂ.ನಾಗರಾಜ್
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]

ಗುರುವಾರ, ಅಕ್ಟೋಬರ್ 31, 2013

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

     ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು ಅಧಿಕಾರಕ್ಕೆ ಬಂದದ್ದು, ಅದು ತಮ್ಮ ಕರ್ತವ್ಯ ಎಂಬುದನ್ನು ಮರೆಯುತ್ತಾರೆ. ಇಷ್ಟಕ್ಕೂ ಆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಜನರ ಹಣದಿಂದಲೇ ಹೊರತು, ಪಕ್ಷದ ಅಥವ ನಾಯಕರುಗಳ ಹಣದಿಂದಲ್ಲ ಅಲ್ಲವೇ? ಜನರ ಅಭಿವೃದ್ಧಿಯ ಸಲುವಾಗಿ ಮಾಡಲೇಬೇಕಾದ ಕಾರ್ಯಕ್ರಮಗಳನ್ನು ತಮ್ಮದೇ ಕಾರ್ಯಕ್ರಮ, ತಮ್ಮ ಪಕ್ಷದ್ದೇ ಕಾರ್ಯಕ್ರಮ ಎಂದು ಬಿಂಬಿಸುವ ಪರಂಪರೆ ಪ್ರಧಾನಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರ ಅಧಿಕಾರಾವಧಿಯಿಂದ ವಿಜೃಂಭಿತವಾಗಲಾರಂಭವಾಗಿ ಈಗ ಆ ಪದ್ಧತಿ ಉತ್ತುಂಗ ಸ್ಥಿತಿಗೆ ತಲುಪಿದೆ. ದೇಶ ಅಭಿವೃದ್ಧಿಯ ಬದಲಿಗೆ ಅಧೋಗತಿಗೆ ತಲುಪುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಆಗ 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ'- ಎಂಬ ಪ್ರಚಾರಗೀತೆ ಎಲ್ಲರಿಗೂ ಬಾಯಿಪಾಠವಾಗಿತ್ತು. ಆ ಇಪ್ಪತ್ತಂಶದ ಕಾರ್ಯಕ್ರಮಗಳಿಗೆ ಬೇಕಾದ ಹಣ ಬರುತ್ತಿದ್ದುದು ಸರ್ಕಾರದ ಖಜಾನೆಯಿಂದ. ನಂತರದಲ್ಲಿ, ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಘೋಷಿಸುವ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದ ನಂತರದಲ್ಲಿ ತಮ್ಮ ನೇತಾರರುಗಳ ಹೆಸರಿನಲ್ಲಿ ಜಾರಿಗಳಿಸಲು ಪ್ರಾರಂಭಿಸಿದವು. ಹಿಂದಿದ್ದ ಯೋಜನೆ, ಕಾರ್ಯಕ್ರಮಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ತಮ್ಮದೇ ಕಾರ್ಯಕ್ರಮವೆಂಬಂತೆ ಬಿಂಬಿಸತೊಡಗಿದವು. ಇಂದು ಇಂದಿರಾಗಾಂಧಿ ಮತ್ತು ರಾಜೀವಗಾಂಧಿಯವರ ಹೆಸರಿನಲ್ಲಿ ದೇಶದಲ್ಲಿ ಎಷ್ಟು ಸರ್ಕಾರಿ ಸಂಸ್ಥೆಗಳು, ಯೋಜನೆಗಳು, ಕಟ್ಟಡಗಳು ಇವೆಯೋ ಅದರ ಲೆಕ್ಕ ಯಾರಿಗೂ ತಿಳಿದಿರಲಾರದು. ಕಾಂಗ್ರೆಸ್ಸೇತರ ಸರ್ಕಾರಗಳ ಕಥೆಯೂ ಇದೇ. ರಾಜ್ಯ ಸರ್ಕಾರಗಳೂ ಕೇಂದ್ರ ಸರ್ಕಾರದ ಹಿರಿಯಕ್ಕನ ಚಾಳಿಯನ್ನೇ ಮುಂದುವರೆಸಿಕೊಂಡು ಬರುತ್ತಿವೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮದೇ ಕಾರ್ಯಕ್ರಮವೆಂಬಂತೆ ಚುನಾವಣೆಯಲ್ಲಿ ಮತಗಳಿಕೆಯ ದೃಷ್ಟಿಯಿಂದ ಪತ್ರಿಕೆಗಳಲ್ಲಿ, ದೃಷ್ಯಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಮಾಡುವ ಸಲುವಾಗಿಯೇ ವೆಚ್ಚ ಮಾಡುವ ಕೋಟಿ ಕೋಟಿ ಸರ್ಕಾರದ ಹಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಜನಸಾಮಾನ್ಯನ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವುದಾದರೂ, ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸುವುದಾದರೂ ಅವುಗಳಿಗೆ ಪಕ್ಷಗಳ ಸಾಧನೆಯೆಂಬಂತೆ ಬಿಂಬಿಸುವ ಪ್ರವೃತ್ತಿ ದೇಶದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. 
     ಜನಸಾಮಾನ್ಯರ ಪ್ರಾಥಮಿಕ ಅಗತ್ಯತೆಗಳಾದ ಕುಡಿಯುವ ನೀರು ಒದಗಿಸುವುದು, ಉತ್ತಮ ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು, ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು, ಚರಂಡಿಗಳ ನಿರ್ಮಾಣ ಮತ್ತು ನಿವಃಹಣೆ, ಉತ್ತಮ ಆರೋಗ್ಯ ಪಾಲನೆ ಮತ್ತು ಸುಯೋಗ್ಯ ಚಿಕಿತ್ಸಾ ವ್ಯವಸ್ಥೆ, ಇತ್ಯಾದಿ ಹತ್ತು ಹಲವು ಪ್ರಾಥಮಿಕ ಅಂಶಗಳನ್ನು ಮುಂದಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳವರೂ ಒಟ್ಟಾಗಿ ದೇಶಕ್ಕೆ ಒಂದು ಸಾಮಾನ್ಯ ಕಾರ್ಯಕ್ರಮ ರೂಪಿಸಬೇಕು. ಯಾವುದೇ ಪಕ್ಷದ ಸರ್ಕಾರ ಬಂದರೂ ಈ ಸಾಮಾನ್ಯ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕಾದುದು ಅವುಗಳ ಮೂಲಭೂತ ಜವಾಬ್ದಾರಿಯಾಗಬೇಕು. ಈ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿ ಕಾಂಗ್ರೆಸ್ ಕಾರ್ಯಕ್ರಮ, ಬಿಜೆಪಿ ಕಾರ್ಯಕ್ರಮ, ಕಮ್ಯುನಿಸ್ಟ್ ಕಾರ್ಯಕ್ರಮ ಎಂದೆಲ್ಲಾ ಹೇಳಬಾರದು. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ಈ ಸಾಮಾನ್ಯ ಕಾರ್ಯಕ್ರಮಗಳಿಗೆ ಬದ್ಧರಾಗಿರುತ್ತೇವೆಂದು ಸಹಿ ಮಾಡಬೇಕು. ನಮ್ಮ ಚುನಾವಣಾ ಆಯೋಗ ಇದನ್ನು ಏಕೆ ಕಡ್ಡಾಯ ಮಾಡಬಾರದು? ಚುನಾವಣಾ ಸಮಯಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಆಗ ಗಣನೀಯವಾಗಿ ಕಡಿಮೆಯಾದಾವು. ಜನರನ್ನು ಸೋಮಾರಿಗಳನ್ನಾಗಿಸುವ ಅಗ್ಗದ ಕಾರ್ಯಕ್ರಮಗಳಿಗೆ ಕಡಿವಾಣ ಬೀಳಬೇಕು. ಇಂತಹ ಚುನಾವಣೆಯಲ್ಲಿ ಮತಗಳಿಕೆ ಉದ್ದೇಶದಿಂದ ಸರ್ಕಾರದ ಹಣದಲ್ಲಿ ಜಾರಿಗೆ ತರುವ ಅಗ್ಗದ ಜನಪ್ರಿಯ ಕಾರ್ಯಕ್ರಮಗಳಿಂದ ದೇಶದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದಲ್ಲದೆ, ರೂಪಾಯಿ ಮೌಲ್ಯ ಕುಸಿಯುವುದಕ್ಕೂ ಕಾರಣವಾಗುತ್ತದೆ. ಒಂದು ವೇಳೆ ತಮ್ಮದೇ ಆದ, ತಮ್ಮ ಪಕ್ಷದ್ದೇ ಆದ ಹೊಸದಾದ, ಜನಸಾಮಾನ್ಯರ ಮೇಲೆ ಪರೋಕ್ಷ ಅಥವ ಅಪರೋಕ್ಷ ಆರ್ಥಿಕ ಹೊರೆ ಬೀಳುವಂತಹ ಕಾರ್ಯಕ್ರಮಗಳು, ಯೋಜನೆಗಳನ್ನು ಮಾಡಬಯಸಿದರೆ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಅವರದೇ ಹಣ ಬಳಸಿ ಮಾಡಲಿ ಮತ್ತು ಅವರ ಹೆಸರುಗಳನ್ನೇ ಬಳಸಲಿ. 
     ಯಾವುದೇ ಒಬ್ಬ ವ್ಯಕ್ತಿ ಹಳ್ಳಿಯೊಂದರಲ್ಲಿ ಸಾಯುವ ಸ್ಥಿತಿಯಲ್ಲಿದ್ದಾನೆ ಎಂದರೆ ಅವನನ್ನು ರಕ್ಷಿಸುವ ಹೊಣೆ ಸರ್ಕಾರದ್ದಾಗಿರುತ್ತದೆ. ಅವನು ಕಾಂಗ್ರೆಸ್ ಪಕ್ಷದವನು, ಬಿಜೆಪಿಯವನು, ಕಮ್ಯೂನಿಸ್ಟ್, ಸಮಾಜವಾದಿ ಪಕ್ಷದವನು, ಆ ಜಾತಿಯವನು, ಈ ಧರ್ಮದವನು, ನಮಗೆ ಮತ ನೀಡಿದವನು/ನೀಡದವನು,  ಇತ್ಯಾದಿ ನೋಡಬೇಕೇ? ಉತ್ತಮ ನೈರ್ಮಲ್ಯ ಪಾಲನೆಗೂ, ಒಳ್ಳೆಯ ಸಂಪರ್ಕ ಸಾಧನಗಳನ್ನು ಕಲ್ಪಿಸುವುದಕ್ಕೂ ರಾಜಕೀಯ ಬೆರೆಸಬೇಕೇ? ಕೆಲವು ಮಕ್ಕಳು ಕಾರುಗಳಲ್ಲಿ ಶಾಲೆಗಳಿಗೆ ಹೋಗುತ್ತಿದ್ದರೆ, ಕೆಲವರು ಶಿಕ್ಷಣ ವಂಚಿತರಾಗಿ ತುತ್ತು ಕೂಳಿಗೂ ಪರದಾಡುವ ಸ್ಥಿತಿಯಲ್ಲಿರಬೇಕೇ? ಹೆಚ್ಚಿನ ಆರೋಗ್ಯದ ಸಮಸ್ಯೆಗಳು ಉಂಟಾಗುವುದು ಒಳ್ಳೆಯ ಕುಡಿಯುವ ನೀರಿನ ಪೂರೈಕೆಯ ಕೊರತೆಯಿಂದಲ್ಲವೇ? ಕುಡಿಯುವ ನೀರಿನ ಪೂರೈಕೆ ಒದಗಿಸುವುದು ಎಲ್ಲಾ ಸರ್ಕಾರಗಳ ಕರ್ತವ್ಯವಲ್ಲವೇ? ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ  ನೀಡಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿ ಮತ ಕೇಳುವುದು ಎಷ್ಟು ಸರಿ? ನೈರ್ಮಲ್ಯದ ಸಮಸ್ಯೆಗೆ ಪರಿಹಾರ ರೂಪಿಸುವುದಕ್ಕೆ ಯಾವ ಕಾನೂನು ಬೇಕು? ಯಾವ ಕ್ರಾಂತಿ ಆಗಬೇಕು? ಮಾಡಬೇಕೆಂಬ ಮನಸ್ಸು ಇದ್ದರೆ ಸಾಕಲ್ಲವೇ? ಇಂತಹ ಸಂಗತಿಗಳನ್ನು ಸೇರಿಸಿ ಒಂದು ಸಾಮಾನ್ಯ ರಾಷ್ಟ್ರೀಯ ಕಾರ್ಯಕ್ರಮ ರೂಪಿಸಲು ಒತ್ತಡ ತರಬೇಕಿದೆ. ರಾಜಕೀಯ ಧುರೀಣರ, ಸರ್ಕಾರದ ಹಣ ಬಳಸಿ ಜಾರಿಯಾಗುವ ವಿವಿಧ ಸರ್ಕಾರಿ ಯೋಜನೆಗಳಿಗೆ ಪಕ್ಷದ ನೇತಾರರುಗಳ ಹೆಸರಿಡುವುದನ್ನು ಮೊದಲು ನಿಷೇಧಿಸಬೇಕು. ಈಗ ಅಂತಹ ರಾಜಕೀಯ ನಾಯಕರುಗಳ ಹೆಸರಿನಲ್ಲಿ ಇರುವ ಸರ್ಕಾರೀ ಸಂಸ್ಥೆಗಳ ಹೆಸರುಗಳಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ ನಾಯಕರ ಹೆಸರುಗಳನ್ನು ಕಿತ್ತುಹಾಕಬೇಕು. ಚುನಾವಣಾ ಆಯೋಗ ಮತ್ತು ಜನಸಾಮಾನ್ಯರ ಹಿತ ಬಯಸುವ ನೇತಾರರು ಇತ್ತ ಗಮನ ಹರಿಸಬೇಕು.
     ಅಗ್ಗದ ಪ್ರಚಾರ ಪಡೆದುಕೊಳ್ಳುವ ಪ್ರವೃತ್ತಿ ಇಂದು ಯಾವ ಹಂತಕ್ಕೆ ತಲುಪಿದೆಯೆಂದರೆ ಸಂಸದರ, ಶಾಸಕರ ಹೆಸರಿನಲ್ಲಿ ಸರ್ಕಾರಿ ಅನುದಾನಗಳು ಬಿಡುಗಡೆಯಾಗುತ್ತವೆ. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿಯೂ ಕೂಡ ಸದಸ್ಯರ ಹೆಸರುಗಳಲ್ಲಿ, ಅವರುಗಳು ಬಯಸಿದಂತೆ ಅನುದಾನಗಳು ಬಿಡುಗಡೆಯಾಗುತ್ತವೆಯೇ ಹೊರತು ಜನರ ಅಗತ್ಯ, ಅವಶ್ಯಕತೆಗಳಿಗನುಸಾರವಾಗಿ ಅಲ್ಲ. ಅದರಲ್ಲೂ ರಾಜಕೀಯ ತಾರತಮ್ಯವಿರುತ್ತದೆ. ಅವರುಗಳು ಬಯಸುವ ಕಾರ್ಯಕ್ರಮಗಳಿಗೆ ಅವುಗಳು ಬಳಕೆಯಾಗುತ್ತಿವೆ. ಸಂಸದರ, ಶಾಸಕರ ಹೆಸರುಗಳು ಸರ್ಕಾರಿ ಹಣದಿಂದ ಕಟ್ಟಲಾದ ಬಸ್ ನಿಲ್ದಾಣಗಳು, ಕಟ್ಟಡಗಳು, ಮುಂತಾದುವುಗಳ ಮೇಲೆ ರಾರಾಜಿಸುತ್ತವೆ. ಸಮುದಾಯ ಭವನದ ಹೆಸರಿನಲ್ಲಿ ಕಟ್ಟುವ ಕಟ್ಟಡಗಳಿಗೂ ಸಹ ಅಂತಹ ಹಣ ಹೋಗುತ್ತಿದೆ. ನಂತರದಲ್ಲಿ ಅವು ಕಲ್ಯಾಣ ಮಂಟಪಗಳಾಗಿ ಖಾಸಗಿಯವರು ಹಣ ಮಾಡಿಕೊಳ್ಳುವುದರಲ್ಲಿ ಅಂತ್ಯವಾಗುತ್ತಿದೆ. ಈ ರೀತಿಯಲ್ಲಿ ಸರ್ಕಾರಿ ಹಣ ಸಂಬಂಧಿಸಿದ ಸಂಸದರು, ಶಾಸಕರುಗಳು ತಮಗೆ ಮತ ನೀಡಿದವರು, ತಮ್ಮ ಬೆಂಬಲಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೊಳಿಸುವ ಕಾಮಗಾರಿಗಳಿಗೆ ಬಳಕೆಯಾಗುತ್ತವೆ. ತಮಗೆ ಮತ ನೀಡದವರ ಮತ್ತು ವಿರೋಧಿಪಕ್ಷದವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುವುದೇ ಇಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಲ್ಲದ ನಡೆಯಾಗುತ್ತದೆ. ಇವುಗಳನ್ನು ಸಾಮಾನ್ಯ ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಕಾರ್ಯಕ್ರಮಗಳು ಎನ್ನಲಾಗದು. ಚುನಾಯಿತ ಪ್ರತಿನಿಧಿಗಳು ಹಣ ಮಾಡುವ ಸಲುವಾಗಿಯೇ ರಾಜಕೀಯ ಮಾಡುತ್ತಿರುವುದು ಮತ್ತು ಕೇವಲ ರಾಜಕೀಯ ಮಾಡಿಕೊಂಡಿದ್ದರೂ ಅವರ ಸಂಪತ್ತು ವೃದ್ಧಿಯಾಗುತ್ತಿರುವುದು ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿರುವ ಸತ್ಯ. ಕೇವಲ ಮತಗಳಿಕೆ ದ್ಟೃಂದ ಅಗ್ಗದ ಜನಪ್ರಿಯ ಕಾರ್ಯಕ್ರಮಗಳು ಜಾರಿಯಾಗುತ್ತಿದ್ದು, ಅವುಗಳಿಂದ ಸರ್ಕಾರದ ಬೊಕ್ಕಸದಿಂದ ಜನಸಾಮಾನ್ಯರ ಕೋಟಿಗಟ್ಟಲೆ ಹಣ ಲೂಟಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನೈಜ ಫಲಾನುಭವಿಗಳಿಗೆ ತಲುಪುವುದರಲ್ಲಿ ಎಷ್ಟರಮಟ್ಟಿಗೆ ಸಫಲವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದದ್ದೇ.
     ದೇಶ ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ತಾಯಿಬೇರು ಭ್ರಷ್ಠಾಚಾರ. ಇದನ್ನು ತಡೆಗಟ್ಟಿದರೆ ಇತರ ಹಲವಾರು ಸಮಸ್ಯೆಗಳು ತಾವಾಗಿಯೇ ಕಣ್ಮರೆಯಾಗುತ್ತವೆ. ಜಾರಿಯಾಗುತ್ತಿರುವ ಅಭಿವೃದ್ಧಿ ಕಾರ್ಯಗಳೂ ಅಕ್ರಮ ಹಣ ಮಾಡುವ ಸಾಧನಗಳಾಗಿವೆ. ಪ್ರತಿ ಹಂತದಲ್ಲಿ ಹಣ ಸೋರಿಕೆಯಾಗಿ ಸಾಮಾನ್ಯ ಜನರವರೆಗೆ ತಲುಪುವ ಭಾಗ ಎಷ್ಟು ಎಂದು ಪರಿಶೀಲಿಸಿದರೆ ಗಾಬರಿಯಾಗುವ ಅಂಶಗಳು ಹೊರಬೀಳುತ್ತವೆ. ಸಾಮಾನ್ಯ ಜನರು ನಡೆಯುವ ಅಭಿವೃದ್ಧಿ ಕಾರ್ಯಗಳು ಮತ್ತು ಯೋಜನೆಗಳು ಮಂಜೂರಾಗಿ ಪೂರ್ಣವಾಗುವವರೆಗೆ ಗಮನಿಸಿ ಅವು ಸರಿಯಾದ ರೀತಿಯಲ್ಲಿ ಜಾರಿಯಾಗುತ್ತಿವೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಂಡರೆ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ನಮ್ಮ ಜನರು ಎಷ್ಟರಮಟ್ಟಿಗೆ ಜಾಗೃತರಾಗಿದ್ದಾರೆ ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ ಸಾಕು. ಹಾಸನದ ಸ್ಟೇಡಿಯಮ್ಮಿನಲ್ಲಿ ಹಲವಾರು ಲಕ್ಷಗಳ ವೆಚ್ಚದಲ್ಲಿ ಒಂದು ಸುಂದರವಾದ ಸಾರ್ವಜನಿಕ ಶೌಚಾಲಯದ ಕಟ್ಟಡ ನಿರ್ಮಾಣವಾಗಿ ಹಲವಾರು ವರ್ಷಗಳೇ ಸಂದಿವೆ. ಪ್ರತಿನಿತ್ಯ ಸ್ಟೇಡಿಯಮ್ಮಿಗೆ ನೂರಾರು, ಕೆಲವೊಮ್ಮೆ ಸಾವಿರಾರು ಜನರು ಬಂದು ಹೋಗುತ್ತಾರೆ. ಅವರ ಪೈಕಿ ಯಾರಾದರೂ ಈ ಶೌಚಾಲಯಕ್ಕೆ ಎಷ್ಟು ವೆಚ್ಚ ಮಾಡಿದ್ದಾರೆ, ಇದನ್ನು ಸಾರ್ವಜನಿಕರ ಉಪಯೋಗಕ್ಕೆ ಇದುವರೆವಿಗೂ ಏಕೆ ಬಿಟ್ಟುಕೊಟ್ಟಿಲ್ಲ ಎಂದು ಸ್ಟೇಡಿಯಮ್ಮಿನ ಕಟ್ಟಡದಲ್ಲೇ ಇರುವ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದ್ದಾರೆಯೇ? ಈ ಸುಂದರ ಶೌಚಾಲಯಕ್ಕಾಗಿ ಮಾಡಿದ ವೆಚ್ಚ ವ್ಯರ್ಥವೆಂದು ಯಾರಿಗಾದರೂ ಅನ್ನಿಸಿದೆಯೇ? 
     ಶ್ರೀ ಎಸ್.ಎಮ್. ಕೃಷ್ಣರವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ ಜಲಸಂವರ್ಧಿನಿ ಯೋಜನೆಯನ್ನು ಉದ್ಘಾಟಿಸಿದ್ದ ಶ್ರೀ ಅಣ್ಣಾ ಹಜಾರೆಯವರು ಆ ಸಂದರ್ಭದಲ್ಲಿ ಮಾತನಾಡುತ್ತಾ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಎಂದರೆ ಏನು?" ಎಂದು ಪ್ರಶ್ನಿಸಿ ತಾವೇ ಕೊಟ್ಟಿದ್ದ ಉತ್ತರವೆಂದರೆ, "ಆಡಳಿತದಲ್ಲಿ ಜನರು ಪಾಲುಗೊಳ್ಳುವುದು ಅನ್ನುವುದು ಸರಿಯಲ್ಲ; ಜನರ ಕಾರ್ಯಕ್ರಮದಲ್ಲಿ ಸರ್ಕಾರ ಪಾಲುಗೊಳ್ಳುವುದು ಅನ್ನಬೇಕು." ಎಷ್ಟು ಸತ್ಯ! ಹೀಗಾಗಬೇಕೆಂದರೆ ಜನರು ಜಾಗೃತರಾಗಿರಬೇಕು. ರಾಜಕೀಯ ನಾಯಕರುಗಳು ಜನರ 'ನಾಯಕ'ರಾಗದೆ, 'ಸೇವಕ'ರಾಗಬೇಕು. ಸರ್ವಸಮ್ಮತ, ಮೂಲಭೂತ ಅತ್ಯಗತ್ಯ ಜನಪರ ಕಾರ್ಯಕ್ರಮಗಳು ಯಾವುದೇ ರಾಜಕೀಯ ಪಕ್ಷದ, ನೇತಾರರ ಕಾರ್ಯಕ್ರಮಗಳೆನಿಸದೆ ರಾಷ್ಟ್ರೀಯ ಕಾರ್ಯಕ್ರಮಗಳೆನಿಸಲಿ; ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಎಲ್ಲಾ ಪ್ರಜ್ಞಾವಂತರು ಮಾಡಲಿ ಎಂದು ಆಶಿಸೋಣ.
-ಕ.ವೆಂ.ನಾಗರಾಜ್,

ಸೋಮವಾರ, ಅಕ್ಟೋಬರ್ 28, 2013

ನಿಜ ರಸಿಕರಾಗೋಣ!

      ರಸಿಕರಾಗೋಣ!
      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ಕಪಟ ಸಂನ್ಯಾಸಿಗಳ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು 'ಕೃಷ್ಣಪರಮಾತ್ಮ' ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು 'ರಸಿಕತೆ' ಎಂಬ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ, ಸುಕೃತಿಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ, ವಿಕೃತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿರುವುದರಿಂದ 'ರಸಿಕತೆ'ಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. ಈ ಕಾರಣದಿಂದ ರಸಿಕತೆಯ ಕೆಲವು ಮಗ್ಗಲುಗಳನ್ನು ವಿವೇಚಿಸುವುದು ಈ ಬರಹದ ಉದ್ದೇಶ.
     ರಸವೆಂದರೆ 'ಸಾರ', ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು 'ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡ'ವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ತನಗೆ ಖುಷಿ ಕೊಡುವ ಚಾಕೋಲೇಟನ್ನು ತೆಗೆತೆಗದು ನೋಡಿ ಕಣ್ತುಂಬಿಕೊಳ್ಳುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ಟಿವಿಯನ್ನು ನೋಡುತ್ತಾ ರುಚಿಯನ್ನು ಅನುಭವಿಸದೆ ತಿಂದು, ಕುಡಿದು ಮಾಡುವವರು ನೈಜಸ್ವಾದವನ್ನು ಅನುಭವಿಸಲಾರರು. ನ್ಶೆಜಸವಿಯನ್ನು ಸವಿಯೋಣ, ನಿಜರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಧಾರ್ಮಿಕ ಸಮಾರಂಭದಲ್ಲಿ, ದೇವಸ್ಥಾನಗಳಲ್ಲಿ ಸಾಮೂಹಿಕ ಭಜನೆ ನಡೆಯುವ ಸಂದರ್ಭದಲ್ಲಿ ಕೆಲವರು ತಮ್ಮನ್ನೇ ಮರೆತು ತನ್ಮಯರಾಗಿ ಭಾವಪರವಶತೆಯಿಂದ, ಆನಂದಾನುಭವ ಹೊಂದುವುದನ್ನು  ಗಮನಿಸಿರಬಹುದು, ಆನಂದಾನುಭವ ನೀಡುವ ಆ ತನ್ಮಯತೆಯೇ ರಸಿಕತೆ! ಮನಸ್ಸಿಗೆ ಹಿತವಾಗುವ ಸಂಗೀತ, ಕಾರ್ಯಕ್ರಮಗಳೂ ಸಹ ಇಂತಹ ರಸಾನುಭೂತಿಗೆ ನೆರವಾಗುತ್ತವೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ, ಒಬ್ಬ ಶಿಲ್ಪಿ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಲ್ಲ. ಇಂತಹವರಿಂದಲೇ ಏನನ್ನಾದರೂ ಸಾಧಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಮಾತು ಮನನೀಯ: "ಒಂದು ವಿಚಾರವನ್ನು ತೆಗೆದುಕೊಳ್ಳಿ. ಆ ವಿಚಾರವನ್ನು ನಿಮ್ಮ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಕನಸು ಕಾಣಿ, ಅದರಲ್ಲೇ ಜೀವಿಸಿ. ನಿಮ್ಮ ಮೆದುಳು, ಸ್ನಾಯು, ನರಮಂಡಲ ಮತ್ತು ದೇಹದ ಎಲ್ಲಾ ಭಾಗಗಳೂ ಆ ವಿಚಾರದಲ್ಲೇ ಮುಳುಗಿರಲಿ. ಇತರ ಎಲ್ಲಾ ವಿಚಾರಗಳನ್ನೂ ಬದಿಗೆ ಸರಿಸಿ. ಅದು ಯಶಸ್ಸಿಗೆ ದಾರಿ. ದೊಡ್ಡ ಸಾಧಕರುಗಳು ಸಿದ್ಧಗೊಳ್ಳುವುದು ಹೀಗೆಯೇ." ಶ್ರದ್ಧಾಪೂರ್ವಕವಾಗಿ ಮನವೊಪ್ಪುವ ಕೆಲಸಗಳಲ್ಲಿ ತೊಡಗಿಕೊಂಡು, ಅದರಿಂದ ಸಿಗುವ ಹಿತಾನಂದವನ್ನು ಅನುಭವಿಸುವ ರಸಿಕರಾಗೋಣ.
ದೇಹ ದೇಹದ ಬೆಸುಗೆಯೆನಿಸುವುದು ಕಾಮ
ಹೃದಯಗಳ ಮಿಲನದಿಂದರಳುವುದು ಪ್ರೇಮ |
ಆತ್ಮ ಆತ್ಮಗಳೊಂದಾಗೆ ಆತ್ಮಾಮೃತಾನಂದ
ಅಂತರಂಗದ ಸುಖವೆ ಸುಖವು ಮೂಢ ||
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು, ಗುತ್ತಿಗೆಯ ಪ್ರೇಮದಾಟಗಳು, ಕರಾರಿನ ವಿವಾಹಗಳು, ಇತ್ಯಾದಿಗಳನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಅಂಶ ಕಾಣಲಾಗದು. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ಕ್ಯೂಟ್" ಅನ್ನುತ್ತಾಳೆ! ಸುಂದರತೆ ಅನ್ನುವುದು ಹೊರರೂಪದಲ್ಲಿ ಕಾಣುವುದಾಗಿದ್ದರೆ ಅವಳು ನನ್ನನ್ನು ಕ್ಯೂಟ್ ಅನ್ನಲು ಸಾಧ್ಯವಿರಲಿಲ್ಲ. ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಹಾಗೆ ಹೇಳಿರಬಹುದು. ನಿಷ್ಕಳಂಕವಾಗಿ ಪ್ರೀತಿಸುವ ಮತ್ತು ಆ ಮೂಲಕ ಸಿಗುವ ಅದ್ಭುತ ಆನಂದವನ್ನು ಪಡೆಯುವಂತಹ ರಸಿಕರಾಗೋಣ.
ಸುಖವನಾಳೆ ಭೋಗಿ ಮನವನಾಳೆ ಯೋಗಿ 
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ನಿಜರಸಿಕನವನೆ ತಿಳಿಯೊ ನೀ ಮೂಢ ||
      ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. ಕಪಟಿ ಸನ್ಯಾಸಿಗಳನ್ನೂ ನೆನಪಿಸಿಕೊಳ್ಳಬೇಡಿ! ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ಆತ್ಮವನ್ನು  ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಧ್ಯಾನದಿಂದ ಇಂತಹ ಸ್ಥಿತಿಯನ್ನು ತಲುಪಬಹುದೆನ್ನುತ್ತಾರೆ. ಹಿತವಾದ ಆನಂದಾನುಭವ ನೀಡುವ ಇದನ್ನೇ ಭಾವಸಮಾಧಿ ಅನ್ನುತ್ತಾರೆ. ಇದು ರಸಿಕತೆಯ ಉತ್ಕಟ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಆನಂದಾನುಭವ ಹೊರತುಪಡಿಸಿ ಬೇರೆ ಏನೂ ಬೇಕೆನ್ನಿಸುವುದಿಲ್ಲ. ಆ ಸಂದರ್ಭದಲ್ಲಿ ಏನೇ ಆದರೂ ಪರವಾಗಿಲ್ಲವೆಂಬ ಸ್ಥಿತಿ ತಲುಪಿರುತ್ತಾರೆ, ದೇಹದ ಪರಿವೆಯೂ ಇರುವುದಿಲ್ಲ. ದೈವಿಕ ಆನಂದದ ಸ್ಥಿತಿಯಲ್ಲಿ ತತ್ತ ಬೇಕಿರುವುದಿಲ್ಲ, ಸಿದ್ಧಾಂತಗಳ ಅಗತ್ಯವಿರುವುದಿಲ್ಲ, ಮುಕ್ತಿ, ಮೋಕ್ಷ ಇತ್ಯಾದಿಗಳೂ ಬೇಕೆನ್ನಿಸುವುದಿಲ್ಲ. ಇದು ರಸಿಕತೆಯ ಮಹತ್ವ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!
-ಕ.ವೆಂ.ನಾಗರಾಜ್.