ಬೈಬಲ್ಲು ಹೇಳುವುದು ಜಗ ಜೀವ ದೇವ
ಕುರಾನು ಸಾರುವುದು ಜಗ ಜೀವ ದೇವ |
ಸಕಲ ಮತಗಳ ಸಾರ ಜಗ ಜೀವ ದೇವ
ಒಂದಲದೆ ಹಲವುಂಟೆ ಕಾಣೆ ಮೂಢ ||
ಜಗತ್ತು, ಜೀವ ಮತ್ತು ದೇವ - ಈ ಮೂರು ಅಂಶಗಳ ಸುತ್ತಲೇ ಬಹುತೇಕ ಎಲ್ಲಾ ಜಿಜ್ಞಾಸೆಗಳು, ಚರ್ಚೆಗಳು, ಸಿದ್ಧಾಂತಗಳು ಸುತ್ತುತ್ತಿರುತ್ತವೆ. ಈ ಮೂರು ಅಂಶಗಳ ಕುರಿತು ವಿವಿಧ ಸಿದ್ಧಾಂತಗಳು ವಿವಿಧ ಧರ್ಮಗ್ರಂಥಗಳಾದವು, ಅದಕ್ಕನುಸಾರವಾಗಿ ಜಾತಿ, ಮತಗಳು, ಪಂಥಗಳು ಉದಯಿಸಿದವು. ನಮ್ಮ ವಿಚಾರ, ಸಿದ್ಧಾಂತಗಳನ್ನು ಎಲ್ಲರೂ ಒಪ್ಪಬೇಕು ಅನ್ನುವವರು, ನಮ್ಮದೇ ಸರಿ ಅನ್ನುವವರು. ಅದಕ್ಕಾಗಿ ಸಂಘರ್ಷಗಳು, ರಕ್ತಪಾತಗಳು ಹಿಂದಿನಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ಈಗಲೂ ಮುಂದುವರೆಯುತ್ತಿವೆ. ಈ ಮೂರು ಅಂಶಗಳ ಪೈಕಿ ಜೀವಾತ್ಮ ಮತ್ತು ಪರಮಾತ್ಮರ ಬಗ್ಗೆ ಚರ್ಚೆಯಾದಷ್ಟು ಜಡಜಗತ್ತಿನ ಬಗ್ಗೆ ಹೆಚ್ಚು ಚರ್ಚೆಯಾದಂತಿಲ್ಲ. ಈ ಬಗ್ಗೆ ಈ ಇಲ್ಲಿ ಚರ್ಚಿಸೋಣ.
ನಾವು ಪ್ರಕೃತಿ ಎಂದು ಕರೆಯುವ ಈ ಜಡಜಗತ್ತು ಸೃಷ್ಟಿಯಾದುದಾದರೂ ಹೇಗೆ? ವ್ಶೆಜ್ಞಾನಿಕವಾಗಿ ಹೇಳುವುದಾದರೆ ಸುಖಾಸುಮ್ಮನೆ ಶೂನ್ಯದಿಂದ ಯಾವುದೇ ಸೃಷ್ಟಿ ಸಾಧ್ಯವೇ ಇಲ್ಲ. ಇರುವುದನ್ನು ರೂಪಾಂತರ ಮಾಡಿ ಇನ್ನೊಂದು ರೂಪಕ್ಕೆ ತರಬಹುದಷ್ಟೇ. ದೇವರು ಈ ಜಗತ್ತಿನ ಜನಕನೆಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಯಾವುದರಿಂದ ಸೃಷ್ಟಿಸಿದ? ಏಕೆ ಸೃಷ್ಟಿಸಿದ? ಹೇಗೆ ಸೃಷ್ಟಿಸಿದ? ತರ್ಕಬದ್ಧವಾಗಿ ನೋಡಿದರೆ ಈ ಜಡಜಗತ್ತಿನ ಸೃಷ್ಟಿ ಶೂನ್ಯದಿಂದಂತೂ ಆಗಿರಲಾರದು. ದೇವರ ಸೃಷ್ಟಿ ಶೂನ್ಯದಿಂದ ಸೃಷ್ಟಿಸಿದ ಎಂದು ವಾದದ ಸಲುವಾಗಿ ಒಪ್ಪಿಕೊಂಡರೂ, ಪ್ರಶ್ನೆ ಉದ್ಭವಿಸುತ್ತದೆ. ದೇವರು ಶೂನ್ಯದಿಂದ ಏನು ಬೇಕಾದರೂ ಸೃಷ್ಟಿಸಬಹುದಾದರೆ ಇನ್ನೊಬ್ಬ ತನ್ನಷ್ಟೇ ಅಥವ ತನಗಿಂತ ಬಲಿಷ್ಠ ದೇವರನ್ನು ಸೃಷ್ಟಿಸಬಲ್ಲನೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಹೀಗೆಯೇ ಈ ಜಗತ್ತೂ ಸಹ ಮೊದಲೂ ಇತ್ತು, ಈಗಲೂ ಇದೆ, ಆದರೆ ಬೇರೆ ರೂಪಾಂತರಗಳಲ್ಲಿ ಎನ್ನವುದು ಹೆಚ್ಚು ಸಮಂಜಸ ವಾದವಾಗುತ್ತದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಸಾಕ್ಷೀಭೂತನಾಗಿದ್ದು ಈ ಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವವನು ಭಗವಂತನೆನ್ನಬಹುದು.
ಮೊದಲೇ ಪ್ರಸ್ತಾಪಿಸಿದಂತೆ ಮೂರು ಅಂಶಗಳು, ಜಗತ್ತು ಅರ್ಥಾತ್ ಪ್ರಕೃತಿ, ಜೀವ ಮತ್ತು ದೇವ, ಇವುಗಳ ಅಸ್ತಿತ್ವದ ರೀತಿ ತರ್ಕಿಸುವವರಿಗೆ, ಜಿಜ್ಞಾಸೆ ಮಾಡುವವರಿಗೆ ಬಹು ದೊಡ್ಡ ಆಯಾಮವನ್ನು ಒದಗಿಸುತ್ತದೆ. ದೇವರು ಎಂಬ ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ, ಅದು ಗೋಚರವೋ, ಅಗೋಚರವೋ, ಆಕಾರವೋ, ನಿರಕಾರವೋ, ಏನೋ ಒಂದು ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ದೇವರ ಅಸ್ತಿತ್ವವನ್ನು ನಂಬದ ನಾಸ್ತಿಕರೂ ಸಹ ಅಗೋಚರ ನಿಯಂತ್ರಕ ಶಕ್ತಿಯ ಬಗ್ಗೆ ಒಪ್ಪುತ್ತಾರೆ. ಹಾಗಾದರೆ ಅಂತಹದೊಂದು ಇದೆ, ಅದು ಅನಂತ ಮತ್ತು ಅನೂಹ್ಯ, ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದು ಒಪ್ಪಬಹುದು. ಹಾಗೆಯೇ ಜೀವದ ಅಸ್ತಿತ್ವದ ಬಗ್ಗೆ ಸಹ ಹಿಂದೆ ಚರ್ಚಿಸಲಾಗಿದೆ. (ಲೇಖನ: ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!) ಈಗ ಜಡ ಪ್ರಕೃತಿಯ ಬಗ್ಗೆ ಹೇಳುವುದಾದರೆ ಮೇಲೆ ತಿಳಿಸಿದಂತೆ ಅದು ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ ಎಂಬುದನ್ನು ನಾವು ವ್ಶೆಜ್ಞಾನಿಕ ದೃಷ್ಟಿಯಿಂದ ಯೋಚಿಸಿದರೂ ಒಪ್ಪಲೇಬೇಕಾದ ಸಂಗತಿ. ಹೀಗೆ ಜಗತ್ತು, ಜೀವ ಮತ್ತು ದೇವ ಈ ಮೂರೂ ಸಂಗತಿಗಳು ಶಾಶ್ವತ, ಅನಂತವೆಂಬ ವಾದ ಅತ್ಯಂತ ಸಮಂಜಸವಾಗಿ ತೋರುತ್ತದೆ. ಶೂನ್ಯದಿಂದ ಏನೂ ಸೃಷ್ಟಿಸಲು ಸಾಧ್ಯವಿಲ್ಲವೆನ್ನುವುದನ್ನು ಒಪ್ಮ್ಪವುದಾದರೆ, ಜಡ ಪ್ರಕೃತಿಯಿಲ್ಲದಿದ್ದರೆ ಸ್ವತಃ ದೇವರೂ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲವೆಂದು ಒಪ್ಪಲೇಬೇಕಾಗುತ್ತದೆ. ಹಾಗಾಗಿ ಈ ಜಗತ್ತು ಮೊದಲಿನಿಂದಲೂ ಇತ್ತು, ಮುಂದೂ ಇರುತ್ತದೆ, ಎಂದೆಂದೂ ಇರುತ್ತದೆ, ಅದು ಜೀವ ಹಾಗೂ ದೇವರಂತೆ ಅನಂತ, ಶಾಶ್ವತ ಎಂದು ತಿಳಿಯಬೇಕಾಗುತ್ತದೆ.
ಇಂತಹ ಶಾಶ್ವತವಾದ ಜಗತ್ತಿನ ರಚನೆಯ ವಿಚಾರದಲ್ಲಿ ಋಗ್ವೇದ ಬೆಳಕು ಚೆಲ್ಲಿರುವುದು ಹೀಗೆ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
ಸೃಷ್ಟಿಯ ಮುನ್ನ ಶೂನ್ಯವಿರಲಿಲ್ಲ, ಈ ಲೋಕವಿರಲಿಲ್ಲ ಮತ್ತು ಆಕಾಶವೂ ಇರಲಿಲ್ಲ. ಆದರೆ ಎಲ್ಲವನ್ನೂ ಆವರಿಸುವ ಗಂಭೀರ ಮತ್ತು ಗಹನವಾದ ಯಾವುದೋ ಒಂದು ತತ್ವ ಅಥವ ಪದಾರ್ಥ ದೇವರ ಆಶ್ರಯದಲ್ಲಿತ್ತು ಎಂದು ಈ ಮಂತ್ರದ ಅರ್ಥವಾಗಿದ್ದು, ಜಡ ಪ್ರಕೃತಿಯ ಮೂಲ ಅಸ್ತಿತ್ವದ ಬಗ್ಗೆ ಹೇಳುತ್ತದೆ.
ಇನ್ನೊಂದು ಮಂತ್ರ ಹೇಳುತ್ತದೆ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
ಸಾವು ಇರಲಿಲ್ಲ, ಹಾಗಾಗಿ ಅಮರತ್ವವಿರಲಿಲ್ಲ, ರಾತ್ರಿ, ಹಗಲುಗಳು ಇರಲಿಲ್ಲ. ಆ ಒಂದು ತತ್ವ ಮಾತ್ರ ತನ್ನ ಬಲದಿಂದ ಗಾಳಿಯಿಲ್ಲದಿದ್ದರೂ ಪ್ರಾಣದಾಯಿಯಾಗಿತ್ತು, ಅದನ್ನು ಬಿಟ್ಟು ಬೇರೇನೂ ಇರಲಿಲ್ಲ ಎಂದು ಈ ಮಂತ್ರದ ಅರ್ಥ. ಪ್ರಳಯ, ಇತ್ಯಾದಿ ಕಾರಣಗಳಿಂದ ಜೀವಜಗತ್ತಿನ ಸರ್ವನಾಶವಾದರೆ ಜಗತ್ತಿನ ಸ್ಥಿತಿ ಹೀಗೆಯೇ ಇದ್ದಿರಬಹುದೇನೋ! ಆ ಸ್ಥಿತಿ ಹೇಗಿರಬಹುದು ಎಂದು ತಿಳಿಸುವ ಇನ್ನೊಂದು ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
ಈ ಮೊದಲು ಇವೆಲ್ಲವೂ ರೂಪ ಲಕ್ಷಣಗಳಿಲ್ಲದೆ, ರಹಸ್ಯಮಯ ಅಂಧಕಾರದಲ್ಲಿ ದ್ರವರೂಪದಲ್ಲಿ (ಹರಿಯುವ ರೀತಿಯಲ್ಲಿ) ಇದ್ದಿತು. ದೇವನ ಕೃಪೆಯಿಂದ ಅದು ಒಂದಾಯಿತು, ಅರ್ಥಾತ್ ಹೊಸ ಸೃಷ್ಟಿಯಾಯಿತು. ಅಥರ್ವವೇದದ ಮಂತ್ರ ಹೇಳುತ್ತದೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
ಅನಾದಿ ಕಾಲದಿಂದಲೇ ಇರುವ ಈ ಪ್ರಕೃತಿ ಸನಾತನವಾಗಿದ್ದು, ಎಲ್ಲಕ್ಕಿಂತಲೂ ಮೊದಲು ಇದ್ದುದಾಗಿದ್ದು, ದೇವರ ಇಚ್ಛೆಯಂತೆ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ, ಪ್ರತಿ ಜೀವಿಯ ಮೂಲಕವೂ ವ್ಯಕ್ತವಾಗುತ್ತದೆ. ಈ ಮಂತ್ರ ಜೀವಿಗಳ ಅಸ್ತಿತ್ವದ ಬಗ್ಗೆಯೂ ಬೆಳಕು ಚೆಲ್ಲಿದೆ.
ಸೃಷ್ಟಿ, ಸ್ಥಿತಿ. ಲಯಗಳು ಜಗದ ನಿಯಮ. ಸೃಷ್ಟಿಯಾಗುತ್ತಿರುತ್ತದೆ, ಇರುತ್ತದೆ, ನಾಶವಾಗುತ್ತದೆ - ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಇನ್ನು ಜೀವಿಗಳ ಅಸ್ತಿತ್ವಕ್ಕೂ ಪ್ರಕೃತಿ ಇರಲೇಬೇಕು. ಈ ದೇಹ ಪಂಚಭೂತಗಳಿಂದ -ನೆಲ, ಜಲ, ಆಕಾಶ, ವಾಯು, ಅಗ್ನಿ- ಆದುದು ಎಂಬುದು ಸರ್ವವಿದಿತ. ಈ ಪಂಚಭೂತಗಳಿಂದ ಸೃಷ್ಟಿಯಾದ ದೇಹದಲ್ಲಿರುವ ಜೀವದಿಂದ ಆ ದೇಹಕ್ಕೆ ಅರ್ಥ ಬರುತ್ತದೆ. ಸತ್ತಾಗ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ, ಅದರೊಳಗಿನ ಜೀವಾತ್ಮ ಇನ್ನೊಂದು ರೂಪದಲ್ಲಿ ಅಸ್ತಿತ್ವ ಹೊಂದುತ್ತದೆ. ಪ್ರತಿ ಮಾನವನೂ ಮೂರು ರೀತಿಯ ಋಣಗಳನ್ನು-ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ತೀರಿಸಬೇಕೆಂದು ಹೇಳುತ್ತಾರೆ. ಈ ದೇವಋಣವನ್ನು ತೀರಿಸುವುದಾದರೂ ಹೇಗೆ? ನಮಗೆ ಗೊತ್ತಿಲ್ಲದ, ತಿಳಿಯಲಾಗದ, ಅನಾದಿ, ಅನಂತ ದೇವರ ಋಣವನ್ನು ತೀರಿಸುವುದಾದರೂ ಹೇಗೆ? ಯಾವುದಾದರೂ ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ, ಹರಕೆ ಕಟ್ಟಿಕೊಂಡು ತೀರಿಸುವುದರಿಂದ, ವಜ್ರದ ಕಿರೀಟ, ಚಿನ್ನದ ರಥ ಮಾಡಿಸಿಕೊಡುವುದರಿಂದ, ದೇವರದೇ ಸೃಷ್ಟಿಯಾದ ಹಣ್ಣು, ಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದಷ್ಟೇ ದೇವಋಣ ತೀರುವುದೇ? ವಿಚಾರ ಮಾಡಬೇಕಾದ ಸಂಗತಿಯಿದಲ್ಲವೇ?
ಸಾಲವನು ಪಡೆದಿಹೆವು ಋಣಿಗಳಾಗಿಹೆವು
ಶರೀರವಿತ್ತ ದೇವಗೆ ಹೆತ್ತರ್ಗೆ ಹೊತ್ತರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
ನಿಜ, ಋಣಮುಕ್ತರಾಗದೆ ನಮಗೆ ಮುಕ್ತಿಯಿಲ್ಲ. ಪಂಚಭೂತಗಳಿಂದ, ಅರ್ಥಾತ್ ಪ್ರಕೃತಿಯಿಂದ, ಶರೀರ ಸೃಷ್ಟಿಯಾಗಿದ್ದು, ಪ್ರಕೃತಿಯಿಲ್ಲದಿದ್ದರೆ ಜೀವಗಳ ಉಗಮಕ್ಕೆ ಅವಕಾಶವೆಲ್ಲಿರುತ್ತಿತ್ತು? ಆದ್ದರಿಂದ ನಿಜವಾಗಿ ದೇವಋಣವನ್ನು ತೀರಿಸುವುದೆಂದರೆ ಪ್ರಕೃತಿಯ ರಕ್ಷಣೆಗೆ ನಮ್ಮ ಕೈಯಲ್ಲಾಗುವ ಕಾರ್ಯಗಳನ್ನು ಮಾಡುವುದು. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದನ್ನು ಹಾಳುಗೆಡವಿದರೆ ನಾಶವಾಗುವವರು ನಾವೇನೇ! ಇದೇ ನಮ್ಮ ಧರ್ಮ, ನಿಜವಾಗಿ ಪಾಲಿಸಬೇಕಾಗಿರುವ ಧರ್ಮ. ಆದರೆ, ಇಂದೇನಾಗುತ್ತಿದೆ? ಭೂದಾಹ ಅರಣ್ಯಗಳನ್ನು, ಅರಣ್ಯವನ್ನು ಆಶ್ರಯಿಸಿರುವ ಜೀವಸಂಕುಲವನ್ನು ನಾಶಮಾಡುತ್ತಿದೆ. ಅಂತರ್ಜಲವನ್ನು ನಮ್ಮ ದಾಹವನ್ನು ತಣಿಸಲು ಮಿತಿಮೀರಿ ಹೀರಲಾಗುತ್ತಿದೆ; ಅಂತರ್ಜಲದ ಮೂಲಗಳಾದ ಕೆರೆಕಟ್ಟೆಗಳನ್ನು ಮುಚ್ಚಲಾಗಿದೆ. ವಾಯುಮಾಲಿನ್ಯವನ್ನು ಎಗ್ಗಿಲ್ಲದೆ ಮಾಡುತ್ತಾ ಜೀವರಕ್ಷಕ ಓಜೋನ್ ಕವಚವನ್ನು ಛಿದ್ರಗೊಳಿಸಲಾಗುತ್ತಿದೆ. ಹೇಳತೀರದಷ್ಟು ಜಲಮಾಲಿನ್ಯ ಮಾಡಿ ಅನೇಕ ರೋಗ-ರುಜಿನಗಳಿಗೆ ಕಾರಣಕರ್ತರು ನಾವೇ ಆಗಿದ್ದೇವೆ. ಹೀಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಧರೆ ಹತ್ತಿ ಉರಿದೊಡೆ ನಿಲಲಹುದೆ? ಭೂಮಿಯ ಸಮತೋಲನ ತಪ್ಪಿ ಪ್ರಳಯವಾಗಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕಿಲ್ಲ. ನಾವು ಪ್ರಕೃತಿಯ ಸಮತೋಲನ ಕಾಪಾಡಲು ಶ್ರಮಿಸಬೇಕು. ನೆಲ, ಜಲ, ವಾಯುಗಳನ್ನು ಸಂರಕ್ಷಿಸಲು ನಾವು ಸಂಕಲ್ಪಿಸಬೇಕು; ಕನಿಷ್ಠ ಪಕ್ಷ ನಮ್ಮ ಮಕ್ಕಳು, ಮೊಮ್ಮಕ್ಕಳ ದೃಷ್ಟಿಯಿಂದಾದರೂ ಈ ಭೂಮಿಯನ್ನು ಕಾಪಾಡಬೇಕಾದುದು, ಯಾವ ಪ್ರಕೃತಿಯಿಂದ ನಮಗೆ ಅರ್ಥ ಬಂದಿದೆಯೋ, ನಾವು ಇದ್ದೇವೆಯೋ, ಆ ನಮ್ಮೆಲ್ಲರ ಆದ್ಯ ಕರ್ತವ್ಯ. ನಿಜವಾಗಿ ತೀರಿಸಬೇಕಾಗಿರುವ ದೇವಋಣವೆಂದರೆ ಇದೇ ಹೊರತು ಮತ್ತೊಂದಲ್ಲ.
ನೋಡುವ ಕಣ್ಣುಗಳಿದ್ದರೆ, ಕೇಳುವ ಕಿವಿಗಳಿದ್ದರೆ ಅತ್ಯಂತ ಕ್ಷಮಾಶೀಲ ಪ್ರಕೃತಿ ತನ್ನ ಮೇಲೆ ಮಾನವನಿಂದ ಆದ, ಆಗುತ್ತಿರುವ ಅತ್ಯಾಚಾರಗಳಿಗಾಗಿ ರೋದಿಸುತ್ತಿರುವುದು ಕಾಣುತ್ತದೆ, ಕೇಳುತ್ತದೆ. ಆದರೆ ಆ ರೋದನ ತನಗಾಗಿ ಅಲ್ಲ, ತನ್ನನ್ನು ಆಶ್ರಯಿಸಿರುವ ಜೀವಸಂಕುಲಕ್ಕಾಗಿ!
-ಕ.ವೆಂ.ನಾಗರಾಜ್
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದ್ದು.]
H A Patil on November 5, 2013 - 7:19pm
ಪ್ರತ್ಯುತ್ತರಅಳಿಸಿಕವಿ ನಾಗರಾಜ ರವರಿಗೆ ವಂದನೆಗಳು
"ಧರೆ ಹತ್ತಿ ಉರಿದೊಡೆ " ಓದುಗರನ್ನು ಚಿಂತನೆಗೆ ಹಚ್ಚುವ ಲೇಖನ. ದೇವರ ಋಣವನ್ನು ನಾವು ತೀರಿಸುವುದೆಂದರೆ ಪ್ರಕೃತಿಯನ್ನು ಕಾಪಾಢುವುದು ಅದು ಈಗ ಆಗುತ್ತಿಲ್ಲ. ಕಾಡು ಶೇಕಡಾ ಭೂಭಾಗದ 33 ರಷ್ಟು ಇರಬೇಕೆಂದು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ, ಆದರೆ ಈಗ ಶೇಕಡಾ 10 ರಷ್ಟೂ ಕಾಡು ಉಳಿದಿಲ್ಲ, ನೀವಂದಂತೆ ನಾವು ಈಗ ನೆಲ ಜಲ ಮತ್ತು ವಾಯು ಮೂಲಗಳನ್ನು ಕುಲುಷಿತ ಗೊಳಿಸುತ್ತ ಸಾಗಿದ್ದೇವೆ, ಇದು ಎಲ್ಲಿಂದ ಯಾರಿಂದ ಯಾವಾಗ ಪ್ರಾರಂಭವಾಗಬೇಕು ?ಬಗೆ ಹರಿಯಲಾರದ ಪ್ರಶ್ನೆ. ಉತ್ತಮ ಮೌಲಿಕ ಲೇಖನ ನೀಡಿದ್ದೀರಿ ಧನ್ಯವಾದಗಳು.
kavinagaraj on November 8, 2013 - 10:39am
ಅರ್ಥಪೂರ್ಣ ಪ್ರತಿಕ್ರಿಯೆಗೆ ವಂದನೆಗಳು, ಪಾಟೀಲರೇ. ನಮ್ಮಿಂದಲೇ ಆರಂಭವಾಗಬೇಕು, ಆಗಲಿ!
nageshamysore on November 6, 2013 - 12:37am
ಜಗತ್ತು-ಜೀವ-ದೈವದ ಜಿಜ್ಞಾಸೆಗೆ ಹೊರಟರೆ ಬಹುಶಃ ಒಂದನ್ನು ಬಿಟ್ಟು ಇನ್ನೊಂದನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವೆ ಆಗದಷ್ಟು ಸಮಷ್ಟಿ ರೂಪದಲ್ಲಿ ಪರಸ್ಪರ ಬೆಸೆದುಕೊಂಡಿವೆ. ನಮ್ಮ ಸುತ್ತಲಿನ ಪರಿಸರ ಈ ಸಮಷ್ಟಿಯ ಮೂರ್ತ ರೂಪ. ಅದು ಸಮತೋಲನದಲ್ಲಿರುವ ತನಕ ತನ್ನನ್ನು ಮಾತ್ರಚಲ್ಲದೆ ಎಲ್ಲವನ್ನು ಪೋಷಿಸಿ ಕಾಪಾಡಬಲ್ಲದು. ಆ ಸಮತೋಲ ಅಸ್ತ್ಯವ್ಯಸ್ತವಾಯ್ತೆಂದರೆ ಸೃಷ್ಟಿ ಸ್ಥಿತಿ ಲಯಗಳ ಚಕ್ರವೂ ಏರುಪೇರಿನ ಒತ್ತಡಕ್ಕೆ ಸಿಕ್ಕಿ ಕಂಗೆಡುತ್ತದೆ. ಅದರೆಲ್ಲ ಪರಿಣಾಮ ಕಾಣುವುದು ಮತ್ತು ಪ್ರಕಟವಾಗುವುದು ಮತ್ತೆ ಪರಿಸರ, ಪ್ರಕೃತಿಯ ಮುಖಾಂತರವೆ. ಇದೆಲ್ಲವನ್ನು ಆಧ್ಯಾತ್ಮಿಕ ಸ್ತರದಿಂದ, ಭೌತಿಕ ಸ್ತರದವರೆಗೆ ಎಳೆಎಳೆಯಾಗಿ ಬಿಡಿಸಿ ಚಿತ್ರಿಸಿದ ಕಾಳಜಿಪೂರ್ಣ ಲೇಖನ. ಲೇಖನಕ್ಕೆ ಕವಿನಾಗರಾಜರಿಗೆ ಧನ್ಯವಾದಗಳು.
kavinagaraj on November 8, 2013 - 10:40am
ಧನ್ಯವಾದ, ನಾಗೇಶರೇ. ಕಾಳಜಿ ಎಲ್ಲರಲ್ಲೂ ಜಾಗೃತಗೊಳಿಸಬೇಕಾದ ಕೆಲಸ ನಮ್ಮ ನಿಮ್ಮೆಲ್ಲರದೇ!
gunashekara murthy on November 6, 2013 - 10:12am
ಪ್ರೀತಿಯ ಸ್ನೇಹಿತರಾದ ಕವಿ ನಾಗರಾಜ್ ರವರೇ. ನೀವು ಹೇಳುವಂತೆ ಈ ಜಗತ್ತು ಜೀವವನ್ನು ದೇವರೇ ಸೃಷ್ಟಿಸಿದ ಎನ್ನುವುದು ಸರಿಯೆಂದೇ ಇಟ್ಟುಕೊಳ್ಳೋಣ. ಆ ದೇವರನ್ನು ಯಾರು ಸೃಷ್ಟಿದರು ಎಂಬ ಪ್ರೆಶ್ನೆಯೇ ಭೂತಾಕಾರವಾಗಿ ಈ ಪ್ರಪಂಚದಲ್ಲಿ ಹಾಗೆಯೇ ಕಾಲಾನುಕಾಲದಿಂದಲೂ ಉಳಿದಿರುವ ಉತ್ತರಿಸಲಾಗದ ಪ್ರಶ್ನೆಯು ಅದನ್ನು ಉತ್ತರಿಸಬೇಕಾದುದ್ದು ಯಾರೆಂದು ಅರಿಯದಾಗಿದೆ.ಬಲ್ಲವರಿದ್ದರೇ, ಉತ್ತರಿಸಲೀ............. ನನು ಕಾತರದಲ್ಲಿದ್ದೇನೆ. ಈ ಜೀವ ಹೋಗುವ ಮೊದಲು ಅದ ಕೇಳುವ ಹಂಬಲವೆನಗೇ
ಧನ್ಯ ವಾದಗಳು.
kavinagaraj on November 8, 2013 - 10:42am
ಮೂರೂ ಸಂಗತಿಗಳೂ ಮೊದಲಿನಿಂದಲೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ ಎಂಬುದು ಹೆಚ್ಚು ಸಮಂಜಸ ತರ್ಕ. ಧನ್ಯವಾದ, ಗುಣಶೇಖರಮೂರ್ತಿಯವರೇ.
RAMAMOHANA on November 8, 2013 - 4:33pm
ಕಾತರದಲ್ಲಿ ಕಾಯುತ್ತಿರುವ ``ನಾನು `` ಯಾರು ಎಂನಬುದನ್ನು ಕಂಡು ಕೊಂಡರೆ ನಿಮ್ಮ ಪ್ರಶ್ನೆಗೆ ಉತ್ತರ ತಾನಾಗಿಯೆ ಸಿಗುತ್ತದೆ. ಪ್ರಯತ್ನಿಸಿ ಗುಣಶೇಖರರೆ...
ರಾಮೋ.
swara kamath on November 7, 2013 - 6:56pm
ಕವಿ ನಾಗರಾರಿಗೆ ನಮಸ್ಕಾರಗಳು.
ಅತೀ ಮುಖ್ಯವಾದ ವಿಚಾರದ ಕುರಿತ ತಮ್ಮ ಈ ಲೇಖನ ಓದಿ ಸಂತೋಷ ವಾಯ್ತು. ನಾವು ಬದುಕ ಬೇಕು ಹಾಗೆಯೆ ನಮ್ಮಂತೆ ಪ್ರಾಣಿ ಪಕ್ಷಿ ಮರ ಗಿಡಸಂಕುಲಗಳು ಬದುಕುಳಿಯಬೇಕು ಎಂಬ ಅರಿವು ಮನಸ್ಸಿನಲ್ಲಿಟ್ಟುಕೋಂಡು, ಜೀವನಕ್ಕೆ ಉಚಿತವಾದನ್ನಷ್ಟನ್ನು ಮಾತ್ರ ಪ್ರಕೃತಿಯಿಂದ ಪಡೆದು ಅದರ ರಕ್ಷಣೆಯ ಬಗ್ಗೆ ನಾವು ಮಾದರಿಯಾಗಿ ನಮ್ಮ ಮುಂದಿನ ಪಿಳಿಗೆಗೆ ತೋರಿಸಿದರೆ ಅದೇ ನಾವು ಪ್ರಕೃತಿಗೆ ತೀರಿಸುವ ಋಣವಾದೀತು. ..........ರಮೇಶ ಕಾಮತ್.
kavinagaraj on November 8, 2013 - 10:43am
ನಿಜ, ರಮೇಶಕಾಮತರೇ. ನಮ್ಮ ಇತಿ-ಮಿತಿ ಅರಿತು ನಡೆದಲ್ಲಿ ಮುಂದಿನ ಪೀಳಿಗೆಗೆ ಅದೇ ನಮ್ಮ ಶ್ರೇಷ್ಠ ಕೊಡುಗೆ. ಧನ್ಯವಾದಗಳು.
RAMAMOHANA on November 8, 2013 - 4:37pm
ನಮಸ್ಕಾರ, ಉತ್ತಮ ವಿಚಾರ ಧಾರೆಗಾಗಿ ಧನ್ಯವಾದಗಳು ಮೂಢ ಕವಿಗಳಿಗೆ,
ರಾಮೋ.
kavinagaraj on November 8, 2013 - 6:09pm
ವಂದನೆಗಳು, ರಾಮೋರವರೇ.
partha1059 on November 8, 2013 - 5:30pm
ಅಳಿಸಿನಾಗರಾಜ ಸರ್
ಉತ್ತಮವಾದ ಬರಹ. ಎಲ್ಲ ಧರ್ಮಗಳ ಗುರಿಯು 'ಆ ದೈವ' ದತ್ತ ತಲುಪುವ ಮಾರ್ಗದ ಪರಿಶೀಲನೆ.
ಸೃಷ್ಟಿಯ ಬಗ್ಗೆ ಹೇಳುತ್ತ ಯಾವುದು ಶೂನ್ಯದಿಂದ ಬರಲಾಗದು ರೂಪ ಬದಲಾವಣೆ ಎಂದಿರುವಿರಿ. ನಿಜ. ಆದರೆ ಪೂರ್ಣ ಸೃಷ್ಟಿಗೆ ಪೂರ್ಣ ವಸ್ತುವು ಇರಬೇಕಿಲ್ಲ ಅಲ್ಲವೇ. ಒಂದೆ ಒಂದು ಕಣದಿಂದ ಜಗತ್ತು ಸೃಷ್ಟಿಯಾಗಿದೆ ಅನ್ನುವರು. ನಂಬುವದಿಲ್ಲ ಎನ್ನಲಾಗದು, ಅಷ್ಟೊಂದು ದೊಡ್ದ ಆಲದ ಮರ ಸೃಷ್ಟಿಯಾಗುವುದು ಸಹ ಕಣ್ಣಿಗೆ ಕಾಣದ ಅತಿ ಚಿಕ್ಕ ಬೀಜದಿಂದಲೆ. ವಿಜ್ಞಾನ ಬಿಡಿಸಲಾರದ ಪ್ರಶ್ನೆಗಳು ಬೇಕಷ್ಟಿವೆ. ಈಚೆಗೆ ವಿದೇಶದಲ್ಲಿ ಕಂಡು ಹಿಡಿದ ಅತಿ ಸಣ್ಣ ಕಣಕ್ಕೆ ’ದೇವ ಕಣ’ ಎಂದು ಹೆಸರು ಏಕೆ ಕೊಟ್ಟರು ? ದೇವರು ಅದನ್ನು ಸೃಷ್ಟಿಸಿದ್ದ ಅನ್ನುವ ಕಾರಣಕ್ಕೆ ?? . ನಮ್ಮ ಅರಿವಿಗೆ ಬರುವದನ್ನೆಲ್ಲ ನೋಡುತ್ತೇವೆ. ಅರಿವಿಗೆ ಬರಲಿಲ್ಲ ಎನ್ನುವ ಕಾರಣಕ್ಕೆ ಅದನ್ನು ನಿರಾಕರಿಸಲಾಗದು.
ಬಹಳಷ್ಟು ತರ್ಕಗಳ ಮೇಲೆ ನಮ್ಮ ಅರಿವು ನಿಂತಿರುತ್ತದೆ. ಒಮ್ಮೆ ತರ್ಕ ಸುಳ್ಳಾದರೆ ನಮ್ಮ ಜ್ಞಾನವು ಆಗ ಸುಳ್ಳಾಗುತ್ತದೆ.
ದೇವರೆನ್ನುವ ತರ್ಕವೂ ಹಾಗೆ ಯಾವುದು ಪ್ರಪಂಚದಲ್ಲಿ ತಾನಾಗೆ ಆಗುವದಿಲ್ಲ ಅನ್ನುವಾಗ ಸಂಪೂರ್ಣ ಸೃಷ್ಟಿಯ ಹಿಂದೆ ಯಾವುದೋ ಒಂದು ’ಸಂಕಲ್ಪವಿದೆ’ ಆ ಸಂಕಲ್ಪವೆ ದೇವರು ಅಂದುಕೊಳ್ಲಬೇಕು. ಅದನ್ನು ಹಿಂದೆ ತೃಣಮಪಿ ನಾ ಚಲತಿ.... ಎಂದೊ ಏನೊ ಹೇಳಿದ್ದಾರೆ ’ನಿನ್ನ ಸಂಕಲ್ಪವಿಲ್ಲದೆ ಒಂದು ಹುಲ್ಲು ಸಹ ಅಲುಗಾಡದು’ ಎಂದು.
ಕಡೆಗೆ ನಮ್ಮ ಪ್ರಶ್ನೆ ನಿಲ್ಲುತ್ತದೆ ದೇವರು ಎಲ್ಲವನ್ನು ಮಾಡಿರುವನ್ನು ಎನ್ನುವದಾದರೆ ’ದೇವರನ್ನು’ ಸೃಷ್ಟಿ ಮಾಡಿರುವುದು ಯಾರು.
ಆ ಪ್ರಶ್ನೆಯೆ ಅರ್ಥವಿಲ್ಲದ್ದು ಏಕೆಂದರೆ ’ಯಾವ ಎಲ್ಲವನ್ನು ಅವನೇ ಸೃಷ್ಟಿ ಮಾಡಿರುವನೊ , ಯಾವನನ್ನು ಯಾರು ಸೃಷ್ಟಿಸಲಾಗದೋ ಅಂತಹ ಸ್ವಯಂಭೂವೆ ದೇವರು"
ದೇವರನ್ನು ಯಾರು ಸೃಷ್ಟಿಸಲಾಗದು. ಅದು ಅಂತಿಮ. ನಮ್ಮ ಯಾವುದೆ ತರ್ಕಕ್ಕೆ ನಿಲುಕದ್ದು. ಮತ್ತು ನಮ್ಮ ಯೋಚನೆಗಳಿಗೆ ಅತೀತವಾದುದ್ದು.
ನಾನು ಹೇಳುತ್ತಿರುವ ದೇವರು ಬೇರೆ ಎಂದು ಅರ್ಥಮಾಡಿಕೊಂಡಲ್ಲಿ ವಾದಗಳಿರುವದಿಲ್ಲ. ಅವರವರ ನಂಭಿಕೆ ಅವರವರಿಗೆ ಬಿಟ್ಟಿರುವುದು.
ಇದನ್ನು ವಾದದಿಂದ ತರ್ಕದಿಂದ ಒಬ್ಬರನ್ನು ನಂಬಿಸಲಾಗದು. ಅವರ ಮನಸಿಗೆ ತೋಚಬೇಕು ಅಷ್ಟೆ ಅಲ್ಲವೆ ?
ವಂದನೆಗಳು
ಪಾರ್ಥಸಾರಥಿ
kavinagaraj on November 8, 2013 - 6:14pm
ನಮಸ್ಕಾರ, ಪಾರ್ಥರಿಗೆ. ಸಣ್ಣ ಬೀಜದಿಂದ ದೊಡ್ಡ ವೃಕ್ಷವಾಗುತ್ತದೆ, ನಿಜ. ಅದಕ್ಕೆ ಪೂರಕವಾಗಿ ಭೂಮಿಯ ಸತ್ವ, ನೀರು, ಜಲ, ಅಗ್ನಿ, ಆಕಾಸಗಳೂ ನೆರವಾಗುತ್ತವೆ. ಸಣ್ಣದೋ, ದೊಡ್ಡದೋ, ಇನ್ನೊಂದರ ಸೃಷ್ಟಿಗೆ ಆ 'ಒಂದು' ಇರಲೇಬೇಕೆನ್ನುವುದು ಸಾರ! ಆ 'ಒಂದು' ಇಲ್ಲದಿದ್ದರೆ 'ಇನ್ನೊಂದು' ಇರಲಾರದು!
smurthygr on November 9, 2013 - 6:24pm
ಅಳಿಸಿ<>
ಪಾರ್‍ಥರೇ ಈಗಾಗಲೇ ಅನೇಕರು ಸೂಚಿಸಿರುವಂತೆ ಅದು ದೇವ ಕಣ (God Particle) ಅಲ್ಲ. ಅದಕ್ಕೆ ಮೊದಲಿಟ್ಟ ಹೆಸರು (Goddamn Particle), ಒಂದು ಬೈಗಳ ಶಬ್ದ. ಹಾಗಾಗಿ ಇಲ್ಲಿ ಈ ರೀತಿ ವಾದಿಸುವುದು ಅಪ್ರಸ್ತುತವಾಗುತ್ತದೆ. ...
partha1059 on November 9, 2013 - 7:16pm
ಮೂರ್ತಿಗಳೆ ತಾವು ತಿಳಿಸಿದ ವಿಷಯಕ್ಕೆ ನನ್ನ ವಂದನೆಗಳು , ಗೊತ್ತಿರಲಿಲ್ಲ.
ಕನ್ನಡದಲ್ಲಿ ಎಲ್ಲ ಕಡೆ ಬರೆಯುವಾಗ ದೇವಕಣ ಎಂದೇ ಬರೆದಿದ್ದಾರೆ ಹಾಗಾಗಿ ನಾನು ಆ ರೀತಿ ಗ್ರಹಿಸಿದೆ.
ನಾಗರಾಜರ ಜೊತೆ ನನ್ನ ವಾದವೆ ?
ಇಲ್ಲ , ನನ್ನ ಮನಸಿಗೆ ತೋಚಿದ ಸಾಲುಗಳನ್ನು ಬರೆದಿದ್ದೆ ಅಷ್ಟೆ. :)
ನಾಗರಾಜರಿಗೆ ಅಂತದೆಲ್ಲ 'ವಾತಾಪಿ ಜೋರ್ಣೋಭವ' :)
smurthygr on November 10, 2013 - 10:06am
:). ನಾಗರಾಜರ ಜೊತೆ ವಾದ ಅನ್ನುವ ಅರ್ಥದಲ್ಲಿ ನಾನು ಬರೆದಿಲ್ಲ. ಒಳ್ಳೆಯ ವಾದ, ಚರ್ಚೆ ಅನ್ನುವ ಅರ್ಥದಲ್ಲಿ, ಅದರಲ್ಲಿ ತಪ್ಪು ನುಸುಳದಿರಲಿ, ಎಂದು ಬರೆದೆ. ಇಂತಹ ವಾದ, ಚರ್ಚೆಗಳಿಂದಲೇ ಅನೇಕ ಹೊಸ ವಿಷಯಗಳನ್ನು ತಿಳಿಯಲು ಸಾಧ್ಯ ಎಂದು ನನ್ನ ಅನಿಸಿಕೆ. ಮೊದಲಿನ ಸಂಪದದ ವಾದ ವಿವಾದಗಳು, ಹೆಚ್ಚಾಗಿ ಕನ್ನಡಕ್ಕೆ ಸಂಬಂಧಿಸಿದಂತೆ, ಇನ್ನೂ ನೆನಪಿನಲ್ಲಿವೆ.
kavinagaraj on November 11, 2013 - 12:07pm
ಶ್ರೀನಿವಾಸಮೂರ್ತಿ ಮತ್ತು ಪಾರ್ಥರಿಗೆ ವಂದನೆಗಳು. ಅರ್ಥಪೂರ್ಣ ಚರ್ಚೆಗಳು ಸದಾಕಾಲಕ್ಕೂ ಒಳ್ಳೆಯವೇ. ತಿಳಿಯುವುದು ಇದ್ದೇ ಇರುತ್ತದೆ.