ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ನವೆಂಬರ್ 24, 2012

ಬನ್ನಿ, ಜಾಗರಣ ಕಾರ್ಯದಲ್ಲಿ ಪಾಲುಗೊಳ್ಳಿ

ಆತ್ಮೀಯರೇ,
     ನನ್ನ ಸೇವಾಕಾಲದ ಅನುಭವಗಳನ್ನು 'ಸೇವಾಪುರಾಣ' ಶೀರ್ಷಿಕೆಯಲ್ಲಿ ಸರಣಿ ಲೇಖನಗಳಾಗಿ ಪ್ರಕಟಿಸಿದಾಗ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹವನ್ನು ನಾನು ಮರೆಯಲಾರೆ. ಅದರಲ್ಲೂ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳಿಗೆ ತೋರಲಾದ ಸ್ಪಂದನ,  ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮಾಡಿದ ಒತ್ತಾಯ ಸಹ ನನ್ನನ್ನು ಪುಳಕಿತಗೊಳಿಸಿತ್ತು. ಈಗ ಅದಕ್ಕೆ ಸಮಯ ಒದಗಿ ಬಂದಿದೆ. 'ಸರಳುಗಳ ಹಿಂದಿನ ಲೋಕ' ಎಂಬ ಹಿಂದಿನ ಶೀರ್ಷಿಕೆ ಬದಲಿಗೆ ಮಿತ್ರ ಹರಿಹರಪುರ ಶ್ರೀಧರ್ ಸಲಹೆಯಂತೆ  'ಆದರ್ಶದ ಬೆನ್ನು ಹತ್ತಿ . . " ಎಂಬ ಶೀರ್ಷಿಕೆ ಹೊತ್ತ ಪುಸ್ತಕ ದಿನಾಂಕ 29-11-2012 ರಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದ ಸಭಾಂಗಣದಲ್ಲಿ ಸಾ. 6-00ಕ್ಕೆ ಬಿಡುಗಡೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ಆಂತರಿಕ ಭದ್ರತಾ ಶಾಸನದ ಅನ್ವಯ ಬಂದಿಯಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಪುಸ್ತಕದ ಲೋಕಾರ್ಪಣೆ ಮಾಡಲಿದ್ದಾರೆ.
     ವಿಶೇಷವೆಂದರೆ, ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದವರೆಲ್ಲರನ್ನೂ ಒಟ್ಟುಗೂಡಿಸಿ ಅಂದು ಮ. 4-00 ರಿಂದ 6-00 ರವರೆಗೆ ಸಮಾವೇಶ ನಡೆಸಲು ನಮ್ಮದೇ ಆದ ಮಂಥನ ವೇದಿಕೆಯಿಂದ ವ್ಯವಸ್ಥೆಯಾಗಿದೆ. ರಾ.ಸ್ವ.ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ನೆನಪು ಮಾಡಿಕೊಡಲಿದ್ದಾರೆ. ಸಮಾವೇಶದಲ್ಲಿ ಪಾಲುಗೊಂಡವರು ತಮ್ಮ ಸಿಹಿ-ಕಹಿ ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.
      ಮಿತ್ರರೆಲ್ಲರಿಗೂ ಇದು ನನ್ನ ಆತ್ಮೀಯ ಆಹ್ವಾನ. ಬನ್ನಿ, ಜಾಗರಣ ಕಾರ್ಯದಲ್ಲಿ ಪಾಲುಗೊಳ್ಳಿ.

ಮಂಗಳವಾರ, ನವೆಂಬರ್ 20, 2012

ಕಾರ್ಯಕ್ರಮಕ್ಕೆ ಆಹ್ವಾನ - ತಪ್ಪದೇ ಬನ್ನಿ

ಆದರ್ಶದ ಬೆನ್ನು ಹತ್ತಿ . . .

     1975-77ರ ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿನ ಒಂದು ಕರಾಳ ಅಧ್ಯಾಯ. ಆ ಸಂದರ್ಭದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನೂ ಸಹ ಸರ್ಕಾರದ ವಿರುದ್ಧ ಸೊಲ್ಲೆತ್ತದಿರುವಂತಹ ಸನ್ನಿವೇಶವಿತ್ತು. 1970ರ ದಶಕದ ನಂತರ ಜನಿಸಿದವರಿಗೆ ಅದರ ಅರಿವು ಇರಲಾರದು. ತುರ್ತು ಪರಿಸ್ಥಿತಿಯ ಬಲಿಪಶುಗಳಲ್ಲೊಬ್ಬನಾಗಿ ಅನುಭವಿಸಿದ ಕಷ್ಟ-ನಷ್ಟಗಳು, ಪಡೆದ ಅನುಭವಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ದಿನಾಂಕ 29-11-2012ರ ಗುರುವಾರದಂದು ಹಾಸನದ ರವೀಂದ್ರನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಸಾ. 6-00ಕ್ಕೆ "ಆದರ್ಶದ ಬೆನ್ನು ಹತ್ತಿ . . ." ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಈ ಪುಸ್ತಕಕ್ಕೆ ರಾ.ಸ್ವ.ಸಂಘದ ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಸನ್ಮಾನ್ಯ ಶ್ರೀ ಸು. ರಾಮಣ್ಣನವರು ಮುನ್ನುಡಿ ಬರೆದಿದ್ದಾರೆ. ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲ ಶ್ರೀ ಸಿ.ಎಸ್. ಕೃಷ್ಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ತುರ್ತು ಪರಿಸ್ಥಿತಿ ಸಮಯದಲ್ಲಿ ಆಂತರಿಕ ಭದ್ರತಾ ಶಾಸನದ (ಮೀಸಾ) ಅನ್ವಯ ಬಂದಿಯಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು  ಪುಸ್ತಕದ ಲೋಕಾರ್ಪಣೆ ಮಾಡಲಿದ್ದಾರೆ.
     ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದ್ದವರ ಸಮಾವೇಶ ಅದೇ ದಿನ ಮ. 4-00 ರಿಂದ 6-00 ರವರೆಗೆ ನಡೆಯಲಿದೆ. 
      ತಾವು ಈ ಸಮಾರಂಭಕ್ಕೆ ಬರಬೇಕೆಂಬುದು ನನ್ನ ಅಪೇಕ್ಷೆ. ದಯಮಾಡಿ ಬನ್ನಿ. ಆಹ್ವಾನ ಪತ್ರಿಕೆ ಇದೋ ಇಲ್ಲಿ: 

-ಕ.ವೆಂ.ನಾಗರಾಜ್.

ಶುಕ್ರವಾರ, ನವೆಂಬರ್ 16, 2012

ಕರ್ಣಾಟಕವನ್ನು ಆಳಿದ್ದ ರಾಜಮನೆತನಗಳ ವಿವರಅವಧಿ - ರಾಜವಂಶ -  ಪ್ರಮುಖ ರಾಜರು (ಅನುಕ್ರಮವಾಗಿ)
3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು -ಶ್ರೀಮುಖ, ಗೌತಮಿಪುತ್ರ
ಕ್ರಿ.ಶ.325-540- ಕದಂಬರು - ಮಯೂರವರ್ಮ
325-999 -                            ಗಂಗರು -  ಅವಿನೀತ, ದುರ್ವಿನೀತ, ರಾಚಮಲ್ಲ
500-757 - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
757-923 -                            ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
973-1198 - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
1198-1312 -                        ದೇವಗಿರಿ ಯಾದವರು  - ಸಿಂಗಾಹನ
1000-1346 -                      ಹೊಯ್ಸಳರು - ವಿಷ್ಣುವರ್ಧನ
1336-1565 ವಿಜಯನಗರದ ಅರಸರು - ಕೃಷ್ೞದೇವರಾಯ
1347-1527 - ಬಹಮನಿ ಸುಲ್ತಾನರು - ಮಹಮದ್ ಷಾ ೧,೨
1490-1686  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್  ಷಾ, ಇಬ್ರಾಹಿಮ್ ಆದಿಲ್ ಷಾ
1500-1762- ಕೆಳದಿಯ ಅರಸರು - ಚೌಡಪ್ಪನಾಯಕ, ಸದಾಶಿವನಾಯಕ,ರಾಣಿ ಚನ್ನಮ್ಮ, ಶಿವಪ್ಪನಾಯಕ ಮುಂತಾದವರು
1399-1761 - ಮೈಸೂರು ಒಡೆಯರು -  ರಣಧೀರ ಕಂಠೀರವ, ಚಿಕ್ಕದೇವರಾಯ
1761-1799 - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
1800-1831 - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
1800 -                              ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಿಹೋಯಿತು.
1831-1881  ಬ್ರಿಟಿಷರು -  ಆಂಗ್ಲರ ಆಧಿಪತ್ಯ
1881-1950 - ಮೈಸೂರು ಒಡೆಯರು -  ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
೧೯೫೬ - ಇಂದಿನ ಕರ್ನಾಟಕದ ರಚನೆ
 ******************************
'ಕೆಳದಿ ನೃಪವಿಜಯ'ದಲ್ಲಿ ಬರುವ ಕರ್ಣಾಟಕದ ವರ್ಣನೆ

ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳ್  ನಾನಾವಿಧವರ್ಣಾಶ್ರಮಸುಖಸಂಪತ್ಸಮಾಜಕಾಸ್ಪದಮೆನಿಸಿ
ಮೆರೆವ   ಕನ್ಯಾಖಂಡಪ್ರದೇಶದೊಳ್
     ಅಗಣಿತತೀರ್ಥ ನದೀಜದ
     ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮೂ
     ಹಗಳಿಗೆಡೆಯೆನಿಸಿ ಮಿಗೆ ಝಗ
     ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ                   
          ಆ ಸಹ್ಯಾದ್ರಿಯೊಳೊಪ್ಪುವ
          ದೇಶಂಗಳೊಳಧಿಕಮೆನಿಸಿ ನಿರುಪಮಲಕ್ಷ್ಮೀ
          ಕೋಶಂ ವಿಲತ್ಪುಣ್ಯನಿ
           ವೇಶಂ ಕರ್ಣಾಟಕದೇಶಮುರೆ ರಂಜಿಸುಗುಂ              
     ಕೆರೆಯಿಂ ಕಾಳ್ಪುರದಿಂ ಕನತ್ಕುವಲಯಾಂಭೋಜಂಗಳಿಂ ಶೋಭಿಪೊ
     ಳ್ಸರದಿಂ ಪುಷ್ಪಲತಾಪ್ರತಾನ ಲಸದಾರಾಮ ಪ್ರದೇಶಂಗಳಿಂ
     ತೊರೆಂ ರಾಜಿಪ ಗಂಧಶಾಲಿವನದಿಂ ಕ್ರೀಡಾದ್ರಿಯಿಂ ಕಣ್ಗೆ ಭಾ
     ಸುರಮಾಗಿರ್ದುದು ದೇಶಮುನ್ನತಸುಖಾವಾಸಂ ದಲೇಂ ವರ್ಣಿಪೆಂ  

ಗುರುವಾರ, ನವೆಂಬರ್ 15, 2012

ಅರಿಯದೆ ಕುವರಿಯನಿತ್ತೆ . .


ರಾಗ: ಸಾವೇರಿ
ಅರಿಯದೆ ಕುವರಿಯನಿತ್ತೆ | ಸರ್ವ | ಸುರರೊಳು ಲಾಘವವೆತ್ತೆ | ಸರಸಿಜಭವ ಸುರ | ವರರು ಬೋಧಿಸೆ ಲೋಕ | ಗುರುವೆಂದು ಕೇಳ್ದತಿ | ಮರುಳಾಗಿ ಗೊರವಗಾನರಿಯದೆ  ||ಪ||

ವರ ವ್ಯಾಘ್ರ ಚರ್ಮವನ್ನುಟ್ಟು | ವಿಷ | ಧರ ಭೂಷಣಂಗಳನಿಟ್ಟು | ಕರಿಚರ್ಮಮಂ ಪೊದೆ | ದೊರಲುವ ತಲೆಯೋಡ | ಕರದಿ ಪಿಡಿದು ನಿಚ್ಚ | ಚರಿಸುವನಾಥನಿಗರಿಯದೆ              || ೧ ||

ಪಿಂಗದೆ ಪಳೆಯೆತ್ತನೇರಿ | ಮುದಿ | ಸಿಂಗಿಯ ವಿಷವನು | ಪೀರಿ ಕಂಗೊಳಿಸುವ ಶಬ | ರಾಂಗವ ಧರಿಸಿ ಕ | ರ್ಮಂಗಳ ವರ್ಜಿಸಿ | ದಿಂಗಳಗಣ್ಣಗಾನರಿಯದೆ                         || ೨ ||

ರೂಢಿಯರಿಯೆ ತಿರಿದುಂಡು | ಮೈಗೆ | ಕಾಡ ಬೂದಿಯ ಪೂಸಿ ಕೊಂಡು | ಕೋಡುಗಲ್ಲೊಳು ಗೂಡ | ಮಾಡಿ ಭೂತಗಳೊಡ | ನಾಡಿ ಬತ್ತಲೆ ಕುಣಿ | ದಾಡುವ ಮರುಳಗಾ | ನರಿಯದೆ || ೩ ||

ಊರೊಳಗಿರ್ಪುದ ಬಿಟ್ಟು | ಕಾಡ | ಸೇರಿ ಮೂರೂರ್ಗಳ ಸುಟ್ಟು | ಕ್ರೂರ ಬಾಣನ ಪಡಿ | ಹಾರನೆಂದೆನಿಸಿ ಪು | ನ್ನಾರಿರವನಾಂತು | ನಾರ ಪೊತ್ತಿರುವಗಾನರಿಯದೆ || ೪ ||

ಪಲವು ನಾಮಂಗಳ ನಾಂತು | ಎಲು | ದಲೆ ಮಾಲೆಗಳ ತಳೆದಿಂತು | ಸುಲಭನಲ್ಲದೆ ಮನವಳಿದು ಸಂಸಾರವ | ನುಳಿದು ಲೋಗರ ಶೂಲೆ | ಗೆಳಸುವ ಮರುಳಗಾನರಿಯದೆ     || ೫ ||


     ಇದು ೧೮ನೆಯ ಶತಮಾನದ ಲಿಂಗಣ್ಣಕವಿ (ಕವಿ ಮನೆತನದ ಮೂಲ ಪುರುಷ) ರಚಿಸಿದ ಖಂಡ ಕಾವ್ಯ  'ದಕ್ಷಾಧ್ವರ ವಿಜಯ' ಕೃತಿಯಲ್ಲಿ ದಕ್ಷನು ಪರಮೇಶ್ವರನಿಗೆ ತನ್ನ ಮಗಳನ್ನು ಕೊಟ್ಟ ಬಗ್ಗೆ ಹಳಹಳಿಸುವ, ಶಿವನನ್ನು ನಿಂದಿಸುವ ಸನ್ನಿವೇಶ. ತಾನೇ ಶ್ರೇಷ್ಠನೆಂಬ ಹಮ್ಮಿನಿಂದ ಬೀಗುತ್ತಿದ್ದ ದಕ್ಷನನ್ನು ಶಿವ ಎದ್ದು ಗೌರವಿಸಲಿಲ್ಲವೆಂಬ ಕಾರಣದಿಂದ ಸಿಟ್ಟಿಗೆದ್ದ ದಕ್ಷ ಶಿವನನ್ನು ನಿಂದಿಸುವ ಸನ್ನಿವೇಶದಲ್ಲಿ ಇದನ್ನು ಕವಿ ರಚಿಸಿದ್ದಾನೆ. ಕವಿಯೇ ಹೇಳಿಕೊಂಡಿರುವಂತೆ 

"ಪಳಗನ್ನಡದೊಳಚ್ಚ ಸಕ್ಕದಂಗಳೊಳುಸುರೆ |
ತಿಳಿಯಲ್ಕೆ ಕೆಲಬರ್ಗಸಾಧ್ಯಮೆಂದು ||
ತಿಳಿದುತದ್ಭವಮಿಶ್ರದೇಶೀಯವರ್ಣಕೋ |
ಜ್ವಲ ವಸ್ತುಕಾನ್ವಿತ ಸುಗಾನ ಭಣಿತೆಯೊಳು ||" ಇದನ್ನು ರಚಿಸಿದ್ದಾನೆ. 
ಇದು ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಬಹುಮುಖ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943) ರಚಿಸಿದ ಚಿತ್ರ -  'ವೀರಭದ್ರ ಸೃಷ್ಟಿ'ಸೋಮವಾರ, ನವೆಂಬರ್ 12, 2012

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು     ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಸಮಾಧಿ ಮಾಡಲು ಅವಕಾಶ ಕೊಡಬೇಕೇ, ಬೇಡವೇ ಎಂಬ ಬಗ್ಗೆ ದೀರ್ಘವಾದ ಮಂತ್ರಾಲೋಚನೆ ನಡೆದು, ಕೊನೆಗೆ ಶಹಾಜಿ ಮರಣ ಹೊಂದಿದ ಸ್ಥಳದಲ್ಲೇ ಸಮಾಧಿಯನ್ನು ಗೌರವೋಚಿತವಾಗಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಸಮಾಧಿಯನ್ನು ಕರ್ನಾಟಕ ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳೆಂದು ಹೇಳಿಕೊಂಡು ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ಬೆಳಗಾವಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ಈ ವಿಷಯವನ್ನು ಗಮನಿಸಬೇಕು. ಸ್ವಭಾಷಾಪ್ರೇಮ ಒಳ್ಳೆಯದು. ಆದರೆ ಅದು ಪರಭಾಷಾ ದ್ವೇಷವಾಗಿ ಬೆಳೆಯಬಾರದು, ಬೆಳೆಸಬಾರದು. ಒಂದು ಭಾಷೆ ಬೆಳೆಯುವುದು, ಅಳಿಯುವುದು ಅದನ್ನು ಬಳಸುವ ರೀತಿಯಿಂದ. ಅನ್ಯ ಭಾಷಿಗರೊಡನೆ ಹೋರಾಡುವುದರಿಂದ, ಕಚ್ಚಾಡುವುದರಿಂದ ಅಲ್ಲ.
-ಕ.ವೆಂ.ನಾಗರಾಜ್.
**********
[ಶಹಾಜಿಯ ಚಿತ್ರವನ್ನು ಅಂತರ್ಜಾಲದಿಂದ ಹೆಕ್ಕಿದೆ.]

ಬುಧವಾರ, ನವೆಂಬರ್ 7, 2012

ಬದುಕು ಧಾವಿಸದಿರಲಿ!


     ಬನ್ನಿ, ನಡೆಯೋಣ. ಓಡದಿರೋಣ, ಹಾರದಿರೋಣ, ಒಟ್ಟಿಗೇ ನಡೆಯೋಣ. ಈ ಬದುಕು ಇರುವುದು ನಡೆಯುವುದಕ್ಕೆ. ಓಡಿದರೆ, ಹಾರಿದರೆ ನಾವು ನೋಡುವುದನ್ನು ನೋಡದೇ ಹೋಗಬಹುದು. ನಡೆಯುತ್ತಾ ಹೋದರೆ ನಾವು ಸುತ್ತಲೂ ನೋಡುತ್ತಾ ಹೋಗಬಹುದು, ಅನುಭವಿಸಬಹುದು, ಆನಂದಿಸಬಹುದು, ಕಲಿಯಬಹುದು, ಕಲಿಸಬಹುದು, ಅಳಬಹುದು, ನಗಬಹುದು, ಒಟ್ಟಿನಲ್ಲಿ ಬದುಕಬಹುದು. 'ಜಗವಿದು ಜಾಣ, ಚೆಲುವಿನ ತಾಣ, ಎಲ್ಲೆಲ್ಲೂ ರಸದೌತಣ' ಎಂಬ ಕವಿವಾಣಿಯನ್ನು ಮೆಲುಕುತ್ತಾ ಮೈಮರೆಯಬಹುದು. ಅತಿ ವೇಗದಲ್ಲಿ ಧಾವಿಸಬೇಕಾಗಿರುವ ಇಂದಿನ ದಿನಗಳಲ್ಲಿ ಇದು ಅವಾಸ್ತವಿಕವಾಗಿ ತೋರಬಹುದು. ಆದರೆ, ಅತಿ ವೇಗದಲ್ಲಿ ನಾವೂ ಓಡಬೇಕಾಗಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಕಡಿಮೆಯೇನಲ್ಲ. ಈ ಅತಿವೇಗ ನಮ್ಮ ಸಮೀಪದಲ್ಲಿರುವವರನ್ನೂ ಕಾಣದಿರುವಂತೆ ಮಾಡುತ್ತದೆ. ನಾವು ಏನನ್ನು ಪಡೆಯಲು ಓಡುತ್ತಿದ್ದೇವೆಯೋ ಅದು ನಮ್ಮ ಸಮೀಪದಲ್ಲೇ ಇರುವುದನ್ನು ಕಾಣದೇ ಹೋಗುವಂತೆ ಮಾಡುತ್ತದೆ. ಓಡಿ ಓಡಿ ದಣಿದಾಗ ನಿಂತು ನೋಡಿದರೆ ನಾವು ಎಲ್ಲಿಂದ ಓಡಲು ಹೊರಟಿದ್ದೆವೋ ಆ ಜಾಗದಲ್ಲೇ ಇರುವುದನ್ನು ಕಂಡು ಅವಾಕ್ಕಾಗುತ್ತೇವೆ. ಅಷ್ಟಾಗಿದ್ದರೆ ಪರವಾಗಿಲ್ಲ, ಮೊದಲಿದ್ದ ಜಾಗದಿಂದ ಇನ್ನೂ ಹಿಂದಕ್ಕೆ ಹೋಗಿದ್ದರೆ? ಅಷ್ಟೊಂದೆಲ್ಲಾ ಓಡಿದ್ದು ವ್ಯರ್ಥವಾಯಿತಲ್ಲಾ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಇಲ್ಲಿ ನಡೆಯುವುದು/ಓಡುವುದು/ಹಾರುವುದುಗಳನ್ನು ನಮ್ಮ ಬದುಕಿನ ಶೈಲಿಗೆ ಪರ್ಯಾಯ ಪದಗಳಾಗಿ ಬಳಸಿರುವೆ.  ಒಂದು ಉದಾಹರಣೆ ಗಮನಿಸೋಣ. ಒಬ್ಬ ವ್ಯಕ್ತಿ ತೀರಾ ಬಡತನದಲ್ಲಿದ್ದವನು ಕಷ್ಟಪಟ್ಟು ಮುಂದೆ ಬರುತ್ತಾನೆಂದು ಇಟ್ಟುಕೊಳ್ಳೋಣ. ಅವನ ಗುರಿ ಹಣ ಮಾಡುವುದು, ಬೇಗ ಶ್ರೀಮಂತನಾಗುವುದು, ಅದಕ್ಕಾಗಿ ಆತ ಎಲ್ಲಾ ರೀತಿಗಳಲ್ಲಿ ಶ್ರಮವಹಿಸಿ ಯಶಸ್ವಿಯೂ ಆದನೆಂದುಕೊಳ್ಳೋಣ. ಹಣದ ಮದದಿಂದ ಎಲ್ಲಾ  ಬಂಧುಗಳಲ್ಲೂ ವಿರಸ/ದ್ವೇಷ ಕಟ್ಟಿಕೊಂಡನೆಂದುಕೊಳ್ಳೋಣ.ಅವನ ಕೊನೆಗಾಲದಲ್ಲಿ ಆತನ ದೈಹಿಕ ಸಾಮರ್ಥ್ಯವೂ ಕುಗ್ಗಿದ ದಿನಗಳಲ್ಲಿ ಯಾವುದೋ ಕಾರಣದಿಂದ ಆತ ಶ್ರೀಮಂತಿಕೆ ಕಳೆದುಕೊಂಡು ಬರಿಗೈದಾಸನಾದರೆ ಆತನಿಗೆ ಆಗುವ ಆಘಾತ ಊಹಿಸುವುದು ಕಷ್ಟ. ನಾವು ನಡೆಯುತ್ತಾ ಹೋದಂತೆ, ಮನುಷ್ಯನ ಅತಿ ಒಳ್ಳೆಯ ಮತ್ತು ಅತಿ ಕೆಟ್ಟ ಸ್ವಭಾವಗಳ - ಕೇವಲ ಬೇರೆಯವರದಲ್ಲ, ನಮ್ಮದೂ ಕೂಡ - ಪರಿಚಯವೂ ಆಗುತ್ತದೆ. ನಡೆಯುತ್ತಿದ್ದರೆ ಈ ಜಗತ್ತಿನ ಅಗಾಧತೆ, ವಿಶಾಲತೆ, ಪ್ರೀತಿಯ ಹರವನ್ನು ಕಣ್ಣಾರೆ ಕಂಡು ಅನುಭವಿಸಬಹುದು. ನಡೆಯುತ್ತಿದ್ದರೆ, ಸೂರ್ಯೋದಯ, ಸೂರ್ಯಾಸ್ತ, ಆಗಸದಲ್ಲಿನ ಚಂದ್ರ, ತಾರೆಗಳು, ನದಿಗಳು, ಸಮುದ್ರ, ಹಾರುವ ಹಕ್ಕಿಗಳನ್ನು ಕಂಡು ಕಣ್ತುಂಬಿಕೊಳ್ಳಬಹುದು. ಅತಿ ವೇಗ ಸಂಬಂಧಗಳನ್ನು ದೂರ ಮಾಡಬಹುದು; ಆದರೆ, ಸಾಮಾನ್ಯ ನಡಿಗೆ ಒಟ್ಟುಗೂಡಿಸಬಹುದು.
     ಅಗತ್ಯವಿರುವಷ್ಟು ಮಾತ್ರ ಹೊಂದುವುದರಲ್ಲಿನ ಸುಖ, ಸಂತೋಷಗಳು, ಬೇಕುಗಳನ್ನು ಹೆಚ್ಚಿಸಿಕೊಳ್ಳುವದರಲ್ಲಿ ಇರುವುದಿಲ್ಲವೆಂದು ಗೊತ್ತಾಗುವುದು ನಡೆಯುವುದರಿಂದ. ಏಕೆಂದರೆ ಕಡಿಮೆ ಭಾರವಿದ್ದಷ್ಟೂ ನಡೆಯುವುದು ಸುಲಭ. ಜೀವನ ಸರಳವಾಗಿದೆ, ಅದನ್ನು ಓಡಿ ಸಂಕೀರ್ಣಗೊಳಿಸಿಕೊಳ್ಳಬೇಕೇಕೆ? ಮೋಡ ಹೆಚ್ಚು ಮಳೆ ಸುರಿಸುವಂತೆ ನಾವು ಮಾಡಲಾರೆವು, ಸೂರ್ಯನ ಬಿಸಿಲಿನ ತಾಪ ಕಡಿಮೆಯಾಗುವಂತೆ ನಾವು ಮಾಡಲಾರೆವು. ಅವು ಪ್ರಕೃತಿಯ ಕೊಡುಗೆಗಳು, ಬೇಕಾದರೆ ತೆಗೆದುಕೊಳ್ಳಬಹುದು, ಬೇಡವಾದರೆ ಬಿಡಬಹುದು! ಅವನ್ನು ಕೊಡುಗೆಗಳು ಎಂದು ಭಾವಿಸಿದರೆ, ಅವು ಗುರಿಯೆಡೆಗಿನ ಸಾಧನಗಳಲ್ಲ, ಅವೇ ಗುರಿ ಮತ್ತು ಸಾಧನಗಳು ಎಂಬುದು ಅರಿವಾಗುತ್ತದೆ. ಇಂತಹ ಕೊಡುಗೆಗಳು ನಮಗೆ ಇಷ್ಟವಾಗಲಿ, ಇಲ್ಲದಿರಲಿ ಅವನ್ನು ಪ್ರೀತಿಸುವ, ಸಮಭಾವದಿಂದ ಸ್ವೀಕರಿಸುವ ಮನೋಭಾವ 'ನಡೆಯುವುದರಿಂದ' ಬರುತ್ತದೆ. ಹಳ್ಳಿಯ ಒಬ್ಬ ದನಗಾಹಿ ದನಗಳನ್ನು ತಂದೆಯ ಪ್ರೀತಿಯಿಂದ ಕಾಣುತ್ತಾನೆ, ಒಂದು ಮಗು ಆಗಸದಲ್ಲಿನ ನಕ್ಷತ್ರಗಳನ್ನು ಬಹಳ ಕಾಲ ತನ್ಮಯತೆಯಿಂದ ಕಂಡು ಸಂತಸಪಡುತ್ತದೆ. ಅಲ್ಲಿ ಬದುಕು 'ನಡೆಯುತ್ತದೆ', ಧಾವಿಸುವುದಿಲ್ಲ. 
     ನಡೆದಾಗ ದಣಿವಾಗುತ್ತದೆ, ನೀರಡಿಕೆಯಾಗುತ್ತದೆ, ಹಸಿವಾಗುತ್ತದೆ, ಗುರಿ ದೂರವೆನಿಸಿದಾಗ ನಿರಾಶೆಯೂ ಮೂಡುತ್ತದೆ. ಕೆಲವೊಮ್ಮೆ ನೀರೂ ಸಿಗದೆ ಬಸವಳಿಯಬೇಕಾಗುತ್ತದೆ. ಆಗ ನಾವು ಬದುಕಿನ ವಾಸ್ತವತೆಯನ್ನು  ಎದುರಿಸುವ ಶಕ್ತಿಯನ್ನು, ಒಳಗೆ ಹುದುಗಿರುವ ಚೇತನವನ್ನು ಎಬ್ಬಿಸುವ ಕಲೆಯನ್ನು ಕಲಿತುಕೊಳ್ಳುತ್ತೇವೆ. ಕೆಲವೊಮ್ಮೆ ಬೇಕಾಗಿದ್ದಕ್ಕಿಂತ ಹೆಚ್ಚು ಸಿಕ್ಕಾಗ ಹೃದಯ ಕೃತಜ್ಞತೆಯಿಂದ ಭಾರವಾಗುತ್ತದೆ. ಬದುಕನ್ನು ಅದು ಬಂದಂತೆ ಸ್ವೀಕರಿಸುವ ಕಲೆ ನಡೆಯುವವರದಾಗುತ್ತದೆ. ಕಷ್ಟವಾದರೂ, ನಷ್ಟವಾದರೂ ನಡೆಯುವುದನ್ನು ನಿಲ್ಲಿಸಬಾರದೆಂಬುದಕ್ಕೆ ಈ ಒಂದು ಪುಟ್ಟ ಕಥೆ ನಿದರ್ಶನವಾಗುತ್ತದೆ. ಪತಿ-ಪತ್ನಿ ಒಂದು ದೊಡ್ಡ ಬೆಟ್ಟವನ್ನು ಬೇರೆ ಬೇರೆ ದಿಕ್ಕುಗಳಿಂದ ಹತ್ತಲು ತೊಡಗಿರುತ್ತಾರೆ ಎಂದು ಭಾವಿಸೋಣ. ಅರ್ಧ ಬೆಟ್ಟ ಹತ್ತಿದಾಗ ಪತಿಗೆ ಇನ್ನು ಹತ್ತಲು ಸಾಧ್ಯವಿಲ್ಲವೆನ್ನಿಸಿ ಕುಳಿತುಕೊಳ್ಳುತ್ತಾನೆ. ಆಗ ಅಲ್ಲಿಗೆ ಹಾರಿ ಬಂದ ಗುಬ್ಬಚ್ಚಿಯೊಂದು ಉಲಿಯುತ್ತದೆ, "ಏಳು, ನಿಲ್ಲಬೇಡ. ಅಲ್ಲಿ ನಿನ್ನ ಹೆಂಡತಿ ನಿನ್ನನ್ನು ಬೆಟ್ಟದ ತುದಿಯಲ್ಲಿ ಕಾಣಲು ಕಾತರಿಸಿದ್ದಾಳೆ". ಅವನು ಗಡಬಡಿಸಿ ಎದ್ದು ಮುಂದೆ ಏರತೊಡಗುತ್ತಾನೆ. ಅತ್ತ ಕಡೆ ಅವನ ಹೆಂಡತಿ ಸಹ ಅರ್ಧ ದಾರಿಯಲ್ಲೇ ಬಸವಳಿದು ಇನ್ನು ಹತ್ತಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ತಲುಪಿರುತ್ತಾಳೆ. ಆ ಗುಬ್ಬಚ್ಚಿ ಅವಳ ಬಳಿ ಹೋಗಿ ಅದೇ ಸಂದೇಶ ಕೊಡುತ್ತದೆ. ಪತ್ನಿ ಸಹ ಚೈತನ್ಯ ಒಟ್ಟುಗೂಡಿಸಿಕೊಂಡು ಪುನಃ ಬೆಟ್ಟ ಏರತೊಡಗುತ್ತಾಳೆ. 'ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂಬ ವಿವೇಕವಾಣಿ ನೆನಪಾಗುತ್ತದಲ್ಲವೇ?
     ನಡೆಯುತ್ತಾ ಹೋದಂತೆ, ವಿಶಾಲ ವಿಶ್ವದ ಎದುರು ಅಲ್ಪಚೇತನರಾದ ನಮ್ಮತನದ ಅರಿವಾಗುತ್ತದೆ, ಅಂತರಂಗ ಚುರುಕಾಗುತ್ತಾ ಹೋಗುತ್ತದೆ. ದೇವನ ಕರುಣೆಯನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ. ಅವನ ಪ್ರತಿಫಲಾಪೇಕ್ಷೆಯಿಲ್ಲದ ಶುದ್ಧ ಪ್ರೀತಿಯ ಅನುಭವವಾಗುತ್ತದೆ. ಏನನ್ನಾದರೂ ಕೊಡಬೇಕೆಂದರೆ ನಮ್ಮಲ್ಲಿ ಏನಾದರೂ ಇರಬೇಕು. ಎಲ್ಲಾ ವಸ್ತುಗಳಿಗೂ ಬೆಲೆದೆ. ಆದರೆ, ಕರುಣೆ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವನ್ನಾದರೂ ಕೊಡುವ ಮನಸ್ಸು ಬರುವುದು 'ನಡೆಯುವುದರಿಂದಲೇ'! 'ನಡೆಯುವ' ಹಳ್ಳಿಗಳಲ್ಲಿ ಅಪರಿಚಿತರಿಗೂ ಅವು ಸಿಗುತ್ತವೆ. 'ಓಡುವ' ನಗರಗಳಲ್ಲಿ ಪರಿಚಿತರಿಗೂ ಅವು ಅಲಭ್ಯ. ತಮಗೇ ಊಟಕ್ಕೆ ತೊಂದರೆಯಿದ್ದರೂ, ಹಳ್ಳಿಗರು ಸಾಲ ತಂದಾದರೂ ಆತಿಥ್ಯ ಮಾಡುತ್ತಾರೆ. ನಗರಿಗರು ಯಾರಾದರೂ ಬರುವ ಸೂಚನೆ ಕಂಡರೆ, ಅವರು ಬಾರದಂತೆ ನೆಪಗಳನ್ನು ಮುಂದೊಡ್ಡುವುದು ವಿಶೇಷವಲ್ಲ. ಇರುವುದನ್ನು ಹಂಚಿಕೊಳ್ಳಬಹುದು, ಇಲ್ಲದಿದ್ದರೆ? ನಮ್ಮಲ್ಲೇ ಪ್ರೀತಿಯ ಕೊರತೆಯಿದ್ದರೆ ಕೊಡುವುದಾದರೂ ಹೇಗೆ? ನಗರದಲ್ಲಿ ಕಸಕ್ಕೂ 'ಬೆಲೆ'ಯಿದೆ. ಬೆಲೆ ತೆರದೇ ಅಲ್ಲಿ ಏನೂ ಸಿಗುವುದಿಲ್ಲ. ಆದರೆ, ಹಳ್ಳಿಯ ಒಬ್ಬ ಬಡ ಹಣ್ಣಿನ ವ್ಯಾಪಾರಿ ಬಳಲಿದ ಅಪರಿಚಿತ ದಾರಿಹೋಕನನ್ನು ಕಂಡರೆ ಕರುಣೆಯಿಂದ ಒಂದು ಹಣ್ಣನ್ನು ಕೊಡುವ ಮನಸ್ಸು ಹೊಂದಿರುತ್ತಾನೆ. 
     ಸಾಧು-ಸಂತರು ಹೇಳುತ್ತಾ ಬಂದಿರುವ ಸಂದೇಶವೆಂದರೆ, 'ಇತರರಿಗೆ ಪ್ರತಿಫಲಾಪೇಕ್ಷೆಯಿಲ್ಲದ ಪ್ರೀತಿ, ವಿಶ್ವಾಸಗಳನ್ನು ಕೊಡಬಲ್ಲೆವಾದರೆ, 'ನಾನು'ವಿನಿಂದ 'ನಾವು'ಗೆ ಬದಲಾಗುತ್ತೇವೆ ಮತ್ತು ಪರಸ್ಪರ ಹೆಚ್ಚು ಆತ್ಮೀಯರಾಗುತ್ತೇವೆ'. ಸುತ್ತಮುತ್ತಲಿನವರೊಡನೆ ಸೌಹಾರ್ದತೆಯಿಂದ ಬಾಳುವುದರ ಸಂತೋಷ ಹೆಚ್ಚಿನದು. ಆ ಸೌಹಾರ್ದತೆ ಹೇಗಿರಬೇಕೆಂದರೆ 'ನಡೆಯುವ' ಕಾಲುಗಳಂತಿರಬೇಕು. ಗಮನಿಸಿದ್ದೀರಾ? ಒಂದು ಕಾಲು ನಡೆಯುತ್ತಿದ್ದರೆ, ಇನ್ನೊಂದು ಕಾಲು ಆ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತದೆ. ಸಮನ್ವಯದ ತತ್ವ 'ನಡೆಯುವುದರಲ್ಲಿದೆ'. ಒಬ್ಬ ಅರ್ಹ ವ್ಯಕ್ತಿಗೆ ಸಹಾಯ ಮಾಡಿದೆವೆಂದು ಇಟ್ಟುಕೊಳ್ಳೋಣ. ಈಗ ಹೇಳಿ, ಹಾಗೆ ಮಾಡಿ ನಾವು ಸಹಾಯ ಮಾಡಿದೆವೋ, ಮಾಡಿಕೊಂಡೆವೋ? ಇನ್ನೂ ಅರ್ಥವಾಗಬೇಕೆಂದರೆ ಈ ಸಂದರ್ಭ ನೆನಪಿಸಿಕೊಳ್ಳೋಣ. ಒಂದು ಮಗುವಿಗೆ ಅದು ಇಷ್ಟಪಡುವ ಚಾಕೊಲೇಟನ್ನು ಕೊಟ್ಟೆವು ಅಂದುಕೊಳ್ಳೋಣ. ಆ ಮಗುವಿಗೆ ಆಗುವ ಸಂತೋಷ, ಅದರ ಕಣ್ಣಿನ ಹೊಳಪನ್ನು ಕಂಡು ನಮಗೆ ಖುಷಿಯಾಗುವುದೋ, ಇಲ್ಲವೋ? ಅದು ನಾವು ಕೊಟ್ಟದ್ದೋ, ಪಡೆದದ್ದೋ? 'ಪಡೆಯುವುದಕ್ಕಾಗಿ ಕೊಟ್ಟದ್ದು' ಎಂದರೆ ಹೆಚ್ಚು ಅರ್ಥಪೂರ್ಣವೆನಿಸೀತು. ತುಂಬಿ ತುಳುಕಿರುವ ಬಸ್ಸಿನಲ್ಲಿ ಕಷ್ಟಪಟ್ಟು ನಿಂತಿರುವ ಒಬ್ಬ ವೃದ್ಧರಿಗೆ ಕುಳಿತ ಸೀಟಿನಿಂದ ಎದ್ದು ಅವರಿಗೆ ಕುಳಿತುಕೊಳ್ಳಲು ಅನುಕೂಲ ಮಾಡಿಕೊಡುವುದರಲ್ಲೂ 'ಕೊಟ್ಟು ಪಡೆಯುವ' ಸುಖವಿದೆ, ಏನೋ ಒಳ್ಳೆಯದು ಮಾಡಿದೆವೆಂದು ಮನ ಹಿಗ್ಗುವ/ಸಮಾಧಾನವಾಗುವ ಕ್ರಿಯೆಯಿದೆ. ನಡೆಯುವುದು ಎಂದರೆ ಮುಂದೆ ಹೋಗುವುದು. ನಡೆಯುವುದರಿಂದ ಕೇವಲ ಬದುಕಿನಲ್ಲಿ ಮುನ್ನಡೆಯುವುದಿಲ್ಲ, ಬೆಳೆಯುತ್ತಾ ಮುಂದೆ ಹೋಗುತ್ತೇವೆ. 
     ಮನುಷ್ಯನ ಮನಸ್ಸು ಈಗಿರುವ ಸ್ಥಿತಿಗಿಂತ ಮುಂದುವರೆಯಲು ಚಡಪಡಿಸುತ್ತಿರುತ್ತದೆ. ಆಗ ಅಂತರಂಗದ ಅನಿಸಿಕೆಗಳಿಗೆ ಮಹತ್ವ ಕೊಡದೆ, ಬೇರೆಯದೇ ಆದ ಯೋಜನೆಗಳು, ನಡೆಗಳು ರೂಪುಗೊಳ್ಳುತ್ತವೆ. ಅಂದರೆ ನಡೆಯುವ ದಾರಿ ತಪ್ಪುತ್ತದೆ. ಕಾಲ ಸರಿದಂತೆ ಮನಸ್ಸು ಕಲುಷಿತಗೊಳ್ಳುತ್ತದೆ, ಮೊದಲು ಹೊಂದಿದ್ದ ನಂಬಿಕೆಗಳು, ಮೌಲ್ಯಗಳು ಸವಕಲಾಗುತ್ತವೆ. ಹಿಂದೆ ಹಿರಿಯರು ಇರುವೆ ಗೂಡುಗಳ ಬಳಿ ಸಕ್ಕರೆ, ಹಿಟ್ಟುಗಳನ್ನು ಉದುರಿಸುತ್ತಿದ್ದುದನ್ನು ಕಂಡಿದ್ದೇನೆ. ಈಗ ಅದೇ ಗೂಡುಗಳಿಗೆ ಇಂದಿನವರು ಡಿ.ಡಿ.ಟಿ./ಗೆಮಾಕ್ಸಿನ್ ಪುಡಿ ಹಾಕುವುದನ್ನೂ ಕಂಡಿರುವೆ. ಆದರೆ, ಸರಿದಾರಿಯಲ್ಲಿ  ನಡೆಯುತ್ತಾ ಹೋದಂತೆ ಜಗತ್ತು ಸ್ಪಷ್ಟವಾಗುತ್ತಾ ಹೋಗುತ್ತದೆ. ನಾನು ಮತ್ತು ನಾವುಗಳ, ಅಂತರಂಗದ ಮತ್ತು ಬಹಿರಂಗದ, ಸ್ವಾರ್ಥದ ಮತ್ತು ಸ್ವಾರ್ಥರಾಹಿತ್ಯದ ವ್ಯತ್ಯಾಸಗಳ ಕುರಿತು ಹೊಂದಿದ್ದ ಮೊದಲಿನ ಅನಿಸಿಕೆಗಳು ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ನಡೆಯುತ್ತಾ ಹೋದಂತೆ ಹಲವಾರು ಪ್ರಶ್ನೆಗಳು, ಸಮಸ್ಯೆಗಳು ಎದುರಾಗುತ್ತವೆ. ಆ ಪ್ರಶ್ನೆಗಳು, ಸಮಸ್ಯೆಗಳಿಗೆ ನಾವು ಕೊಡುವ ಉತ್ತರಗಳು ನಾವು ಪ್ರಪಂಚವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ, ನಮ್ಮ ಸ್ಥಾನ ಎಲ್ಲಿದೆ ಅನ್ನುವುದನ್ನು ನಿರ್ಧರಿಸುತ್ತವೆ. ಒಂದು ವಿಚಿತ್ರ ಆದರೂ ಸತ್ಯವೆಂದರೆ, ಸರಿಯಾಗಿ ನಡೆಯುವವರು ಓಡುವವರಿಗಿಂತ, ಹಾರುವವರಿಗಿಂತ ಮುಂದೆ ಇರುತ್ತಾರೆ! 'Slow and steady wins the race!' ಬನ್ನಿ, ನಾವು ಬದಲಾಗೋಣ, ಜಗತ್ತು ತಂತಾನೇ ಬದಲಾದೀತು! ಬದಲಾಗುತ್ತದೋ, ಇಲ್ಲವೋ, ನಮ್ಮ ಕಣ್ಣಿಗಂತೂ ಬದಲಾಗುತ್ತದೆ! ನಡೆಯೋಣ, ಒಟ್ಟಿಗೇ ನಡೆಯೋಣ!! ನಡೆಯುವಾಗ ಈ ವೇದ ಮಂತ್ರ ನಮಗೆ ದಾರಿ ದೀಪವಾಗಲಿ.
ಓಂ ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ |
ಯದ್ಭದ್ರಂ ತನ್ನ ಆ ಸುವ ||  [ಯಜು.೩೦.೩.]
ಅರ್ಥ: ಜಗದುತ್ಪಾದಕನಾದ ಸರ್ವದಾತಾ ಪ್ರಭುವೇ, ಸಮಸ್ತ ದುರ್ನಡತೆಗಳನ್ನೂ, ಪಾಪಗಳನ್ನೂ ದೂರ ಮಾಡು. ಯಾವುದು ಒಳ್ಳೆಯದೋ, ಕಲ್ಯಾಣಕರವೋ ಅದನ್ನು ನಮ್ಮಲ್ಲಿ ಉಂಟುಮಾಡು.
-ಕ.ವೆಂ.ನಾಗರಾಜ್.