ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ನವೆಂಬರ್ 28, 2013

ಮೈಸೂರು ಅರಸರ ದೌರ್ಬಲ್ಯ - ಹೈದರಾಲಿಯ ಪ್ರಾಬಲ್ಯ

     ೧೮ನೆಯ ಶತಮಾನದ ಮಧ್ಯಭಾಗ  ಕರ್ನಾಟಕದ ಪಾಲಿಗೆ ಒಂದು ದುರದೃಷ್ಟಕರ ಅವಧಿಯೆನ್ನಬಹುದು. ಮೈಸೂರು ಸಂಸ್ಥಾನ ಅರಾಜಕತೆ ಮತ್ತು ಪಿತೂರಿಗಳಿಗೆ ಒಳಗಾಗಿ ಅಧಿಕಾರ ಕಳೆದುಕೊಂಡದ್ದು ಒಂದೆಡೆಯಾದರೆ, ಬಲಿಷ್ಠ ಸಂಸ್ಥಾನವಾಗಿದ್ದ ಕೆಳದಿ ಸಂಸ್ಥಾನದ ಆಳ್ವಿಕೆ ಸಹ ರಕ್ತಸಿಕ್ತ ಮತ್ತು ದುರಂತ ಅಂತ್ಯ ಕಂಡ ಸಮಯವದು. ಕನ್ನಡಿಗರ ಹೆಮ್ಮೆಯೆನಿಸಿದ್ದ ಈ ಎರಡೂ ಸಂಸ್ಥಾನಗಳ ನಾಶಕ್ಕೆ ಕಾರಣನಾದ ವ್ಯಕ್ತಿ ಒಬ್ಬನೇ! ಆತನೇ ಹೈದರಾಲಿ. ಮೈಸೂರು ಅರಸರ ದೌರ್ಬಲ್ಯ ಹೈದರಾಲಿಯ ಪ್ರಾಬಲ್ಯಕ್ಕೆ ಕಾರಣವಾಯಿತು. ಹೈದರಾಲಿಯ ತಂದೆ ಫತಾಹ್ ಮುಹಮದ್ ಕೋಲಾರದಲ್ಲಿ ಹುಟ್ಟಿದವನಾಗಿದ್ದು, ಕರ್ನಾಟಕದ ನವಾಬರ ಸೈನ್ಯದಲ್ಲಿ ೫೦ ಸೈನಿಕರ ಕಣ್ಗಾವಲು ಪಡೆಯ   ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದು, ನಂತರದಲ್ಲಿ ಮೈಸೂರು ಒಡೆಯರರ ಸೈನ್ಯಕ್ಕೆ ಸೇರಿ ಸೈನ್ಯದಲ್ಲಿ ಉನ್ನತ ಹುದ್ದೆ ಗಳಿಸಿದವನು. ಇವರ ಮೂಲ ವಂಶದ ಬಗ್ಗೆ ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪರ್ಷಿಯಾ ಮೂಲವಂಶಸ್ಥರೆಂದು ಒಂದು ವರದಿಯಿದ್ದರೆ, ಆಫ್ಘಾನಿಸ್ತಾನದ ಮೂಲದವರೆಂದು, ಅರಬರ ಖುರೇಷಿ ವಂಶಸ್ಥರೆಂದು ಸಹ ಹೇಳುತ್ತಾರೆ. ಫತಾ ಮುಹಮ್ಮದನ ಸೇವೆಯನ್ನು ಮೆಚ್ಚಿ ಒಡೆಯರರು ಬೂದಿಕೋಟೆಯನ್ನು ಆತನಿಗೆ ಜಹಗೀರಾಗಿ ನೀಡಿದ್ದು, ಅವನು ಅಲ್ಲಿನ ನಾಯಕನಾಗಿ ನೇಮಿತಗೊಂಡಿದ್ದನು. ಆ ಸಮಯದಲ್ಲಿ (ಸುಮಾರು ೧೭೧೭-೨೨ರಲ್ಲಿ) ಜನಿಸಿದ ಹೈದರಾಲಿ ಫತಾ ಮುಹಮ್ಮದನ ಐದನೆಯ ಮಗ ಹಾಗೂ ಮೂರನೆಯ ಹೆಂಡತಿಯ ಎರಡನೆಯ ಮಗನಾಗಿದ್ದನು. ಫತಾ ಮುಹಮದ್ ಕಾಳಗವೊಂದರಲ್ಲಿ ಮೃತನಾದ ನಂತರದಲ್ಲಿ ಆರ್ಕಾಟ್ ನವಾಬರ ಸೈನ್ಯಕ್ಕೆ ಸೋದರ ಶಾಬಾಜನೊಂದಿಗೆ ಸೇರಿದ ಹೈದರಾಲಿ ಅಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ. ನಂತರ ಶ್ರೀರಂಗಪಟ್ಟಣಕ್ಕೆ ಬಂದು ಅಲ್ಲಿ ಒಡೆಯರರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಹೈದರನ ಚಿಕ್ಕಪ್ಪನ ಮೂಲಕ ಇಮ್ಮಡಿ ಕೃಷ್ೞರಾಜ ಒಡೆಯರರ ಪ್ರಧಾನ ಅಮಾತ್ಯ, ಸೇನಾಧಿಪತಿ ಮತ್ತು ವಾಸ್ತವಿಕ ಆಳ್ವಿಕೆ ನಡೆಸುತ್ತಿದ್ದ ದೇವರಾಜ ಅರಸು ಮತ್ತು ಅವನ ಸಹೋದರ ನಂಜರಾಜ ಅರಸರ ಪರಿಚಯ ಮಾಡಿಕೊಂಡು, ಒಡೆಯರರ ಸೈನ್ಯದಲ್ಲಿ ಸೇರಿಕೊಂಡರು. ೧೦೦ ಅಶ್ವಾರೋಹಿಗಳು ಮತ್ತು ೨೦೦೦ ಪದಾತಿಗಳ ಮುಖ್ಯಸ್ಥನಾದ ಶಾಬಾಜನ ಕೈಕೆಳಗೆ ಹೈದರ್ ಸೇವೆ ಸಲ್ಲಿಸಿದ.
     ೧೭೪೮ರಲ್ಲಿ ಹೈದರಾಬಾದಿನ ನಿಜಾಮ ಖಮರುದ್ದಿನ್ ಖಾನ್ ಅಸಫ್ ಜಾ೧ ಮೃತನಾದಾಗ ಉತ್ತರಾಧಿಕಾರಕ್ಕಾಗಿ ಆತನ ಮಗ ನಾಸಿರ್ ಜಂಗ್ ಮತ್ತು ದಾಯಾದಿ ಮುಜಫ್ಫರ್ ಜಂಗ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನು ಎರಡನೆಯ ಕರ್ನಾಟಕ ಕದನವೆಂದು ಕರೆಯುತ್ತಾರೆ. ಸ್ಥಳೀಯ ಪಾಳೆಯಗಾರರಲ್ಲದೆ ಬ್ರಿಟಿಷರು ಮತ್ತು ಫ್ರೆಂಚರೂ ಸಹ ಇದರಲ್ಲಿ ಭಾಗಿಯಾಗಿದ್ದರು. ನಂಜರಾಜ ಅರಸನ ನಾಯಕತ್ವದಲ್ಲಿ ದೊಡ್ಡ ಮೈಸೂರು ಸೈನ್ಯವೇ ನಾಸಿರ್ ಜಂಗನ ಪರವಾಗಿ ಹೊರಟಿತ್ತು. ದೇವನಹಳ್ಳಿಗೆ ಬಂದು ಮುಜಫ್ಫರ್ ಜಂಗನ ಸೈನ್ಯದ ಹಿಡಿತದಲ್ಲಿದ್ದ ದೇವನಹಳ್ಳಿ ಕೋಟೆಯನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಮೈಸೂರು ಸೈನ್ಯವೂ ಸೇರಿತ್ತು. ಎಂಟು ತಿಂಗಳುಗಳ ಕಾಲ ನಡೆದ ಈ ಕೋಟೆಯ ಯಶಸ್ವಿ ಗ್ರಹಣ ಕಾರ್ಯದಲ್ಲಿ ಹೈದರ್ ಸೋದರರು ತೋರಿದ ಪರಾಕ್ರಮಕ್ಕೆ ಮೆಚ್ಚಿ ಅವರಿಗೆ ಹೆಚ್ಚಿನ ಅಧಿಕಾರ ವಹಿಸಿಕೊಡಲಾಯಿತು. ೧೭೫೫ರ ವೇಳೆಗೆ ಹೈದರಾಲಿ ೩೦೦೦ ಪದಾತಿಗಳ ಮತ್ತು ೧೫೦೦ ಅಶ್ವಾರೋಹಿಗಳ ಪಡೆಯ ನಾಯಕನಾಗಿದ್ದ. ಅಲ್ಲದೆ ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು ಹೇಳುತ್ತಾರೆ. ಅದೇ ವರ್ಷ ಆತನನ್ನು ದಿಂಡಿಗಲ್ಲಿನ ಫೌಜುದಾರನನ್ನಾಗಿಯೂ ನೇಮಿಸಲಾಯಿತು. ಆಗ ತನ್ನ ಸೈನ್ಯದ ತರಬೇತಿ ಮತ್ತು ಸಂಘಟನೆಯ ಸಲುವಾಗಿ ಫ್ರೆಂಚ್ ಸಲಹೆಗಾರರನ್ನೂ  ಉಳಿಸಿಕೊಂಡಿದ್ದ. ಜೊತೆಜೊತೆಗೆ ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು ನಂಬಲಾಗಿದೆ. ನವಾಬ  ಮುಹಮ್ಮದ್ ಅಲಿಖಾನ್ ವಲ್ಲಾಜಾನನ್ನು ನಂಬದ ಹೈದರಾಲಿ ಆತನನ್ನು ದ್ವೇಷಿಸತೊಡಗಿದ್ದ. ನಂತರದ ವರ್ಷಗಳಲ್ಲಿ ಬ್ರಿಟಿಷರೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಳ್ಳಲು ಹೈದರಾಲಿಗೆ ಮುಹಮ್ಮದ್ ಅಲಿಖಾನ್ ವಲ್ಲಾಜಾ ಪರಿಣಾಮಕಾರಿಯಾಗಿ ಅಡ್ಡಿಯಾದನೆಂದು ಹೈದರಾಲಿ ದೂರುತ್ತಿದ್ದ.
     ಹೈದರಾಬಾದಿನ ನಿಜಾಮರಿಂದ ಮತ್ತು ಮರಾಠರಿಂದ ದಾಳಿಗಳಾಗುವ ಸಾಧ್ಯತೆಯಿದ್ದುದರಿಂದ ಹೈದರಾಲಿಯನ್ನು ದೇವರಾಜಅರಸನಿಗೆ ಸಹಾಯ ಮಾಡುವ ಸಲುವಾಗಿ ಕರೆಸಲಾಯಿತು. ಆಗ ಮೈಸೂರಿನ ಸೈನ್ಯ ಅಸ್ತವ್ಯಸ್ತವಾಗಿದ್ದು ಸಂಬಳ ಪಾವತಿ ವಿಷಯದಲ್ಲಿ ದಂಗೆಯೇಳುವ ಹಂತದಲ್ಲಿತ್ತು. ದಾಳಿಗಳಾಗುವ ಅಪಾಯದಿಂದ ದೇವರಾಜಅರಸು ಪಾರಾದ. ಹ್ಶೆದರ್ ಸೈನ್ಯದವರಿಗೆ ಸಂಬಳ ಪಾವತಿಗೆ ವ್ಯವಸ್ಥೆ ಮಾಡಿದ್ದಲ್ಲದೆ ದಂಗೆ ಎಬ್ಬಿಸಲು ಸಂಚು ಮಾಡಿದ್ದವರನ್ನು ಬಂಧಿಸಿದ. ನಂತರ ಮಲಬಾರಿನ ನಾಯರರ ವಿರುದ್ಧದ ದಾಳಿಗಳಿಗೆ ಮೈಸೂರು ಸೈನ್ಯದ ನಾಯಕತ್ವ ವಹಿಸಿದ. ಇದರಲ್ಲಿ ಆತನ ಪಾತ್ರದ ಬಗ್ಗೆ ಮೆಚ್ಚಿದ ಕಿರಿಯ ದೊರೆ ಇಮ್ಮಡಿ ಕೃಷ್ೞರಾಜ ಒಡೆಯರರಿಂದ ಹೈದರಾಲಿಗೆ ಫತಾ ಹೈದರ್ ಬಹಾದುರ್ ಅಥವ ನವಾಬ್ ಹೈದರ್ ಅಲಿಖಾನ್ ಎಂಬ ಬಿರುದಿನೊಂದಿಗೆ ಬೆಂಗಳೂರಿನ ಜಹಗೀರು ಸಹ ಸಿಕ್ಕಿತು. ೧೭೫೮ರಲ್ಲಿ ಮರಾಠರ ಬೆಂಗಳೂರು ಕೋಟೆಯ ಮುತ್ತಿಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದ ಹೈದರ್ ೧೭೫೯ರ ಹೊತ್ತಿಗೆ ಪೂರ್ಣ ಮೈಸೂರು ಸೈನ್ಯದ ಹಿಡಿತ ಸಾಧಿಸಿದ್ದ. ಮರಾಠರೊಂದಿಗಿನ ಸತತ ಕಿರುಕುಳಗಳಿಂದಾಗಿ ಮೈಸೂರು ಸಂಸ್ಥಾನದ ಖಜಾನೆ ಹೆಚ್ಚುಕಡಿಮೆ ದಿವಾಳಿಯ ಹಂತದಲ್ಲಿತ್ತು. ಇದರಿಂದಾಗಿ ದೇವರಾಜಅರಸನ ನಿಧನಾನಂತರದಲ್ಲಿ ಮಂತ್ರಿಯಾಗಿದ್ದ ನಂಜರಾಜರಸನನ್ನು ರಾಜಮಾತೆ ಗಡೀಪಾರು ಮಾಡಬೇಕಾದ ಅನಿವಾರ್ಯತೆ ಬಂದೊದಗಿತು. ಆಸ್ಥಾನದಲ್ಲಿ ತನಗಿದ್ದ ಪ್ರಭಾವದಿಂದ ಇದನ್ನು ತನ್ನ ಪರವಾಗಿ ಬಳಸಿಕೊಂಡ ಚಾಣಾಕ್ಷ ಹ್ಶೆದರ್. ಹೈದರಾಲಿ ನಿರಕ್ಷರಕುಕ್ಷಿಯಾಗಿದ್ದರೂ ವ್ಯವಹಾರ ಚತುರ ಮತ್ತು ಚಾಣಾಕ್ಷನಾಗಿದ್ದ. ತನ್ನ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಖಂಡೇರಾವ್ ಎಂಬುವನನ್ನು ನೇಮಿಸಿಕೊಂಡಿದ್ದ. ಖಂಡೇರಾವ್ ಕರಾರುವಾಕ್ಕಾಗಿ ಲೆಕ್ಕಪತ್ರಗಳನ್ನು ಲೆಕ್ಕವಿಡುವ ಪದ್ಧತಿಯಿಂದ ಲೂಟಿ ಮಾಡಿದ ಹಣಕಾಸು, ಆಭರಣಗಳು, ವಸ್ತುಗಳು ಸೇರಿದಂತೆ ಎಲ್ಲದರ ಲೆಕ್ಕಗಳನ್ನು ಸರಿಯಾಗಿ ಇಡುವ ಮತ್ತು ಪರಿಶೀಲನೆ ಮಾಡುವ ರೀತಿಯಿಂದ ಯಾವುದೇ ಕಣ್ಣುತಪ್ಪಿಸುವ, ಮೋಸ ಮಾಡುವ ಅವಕಾಶ ಯಾರಿಗೂ ಇರಲಿಲ್ಲ. ಹೈದರಾಲಿಯ ಸಂಪತ್ತು ವೃದ್ಧಿ ಮತ್ತು ರಕ್ಷಣೆಗೆ ಆತನಿಂದ ಬಹಳ ಉಪಕಾರವಾಗಿದ್ದು, ಆತ ಅಧಿಕಾರದಲ್ಲಿ ಮೇಲೆ ಬರಲು ಇದೂ ಪ್ರಮುಖ ಪಾತ್ರ ವಹಿಸಿತ್ತು.
     ಹೈದರಾಲಿ ಮೇಲೆ ಬರುತ್ತಿದ್ದ ರೀತಿಯಿಂದ ರಾಜಮಾತೆ ಆತಂಕಿತಳಾಗಿದ್ದು, ಹೀಗೆಯೇ ಮುಂದುವರೆದರೆ ಅಧಿಕಾರಚ್ಯುತಿಯಾಗುವ ಸಂಭವ ಆಕೆಗೆ ಕಾಣಿಸುತ್ತಿತ್ತು. ಹೀಗಾಗಿ ೧೭೬೦ರಲ್ಲಿ ಖಂಡೇರಾಯನನ್ನು ಬಳಸಿಕೊಂಡು ಹೈದರನನ್ನು ಹೊರಹಾಕುವ ಸಂಚು ರೂಪಿತವಾಯಿತು. ಹ್ಶೆದರ್ ಅವಸರವಾಗಿ ಶ್ರೀರಂಗಪಟ್ಟಣವನ್ನು ಗೃಹಬಂಧನದಲ್ಲಿದ್ದ ಮಗ ಟಿಪ್ಪುಸುಲ್ತಾನ್ ಸೇರಿದಂತೆ ತನ್ನ ಸಂಸಾರವನ್ನು ಅಲ್ಲೇ ಬಿಟ್ಟು ಓಡಿಹೋಗಬೇಕಾಯಿತು. ಇದರಿಂದ ಹೈದರಾಲಿಗೆ ಹಿನ್ನಡೆಯಾಯಿತು. ತನ್ನ ಸೋದರ ಸಂಬಂಧಿ ಮಕ್ದುಮ್ ಆಲಿಯ ಸಹಕಾರದಿಂದ ಬಲ ವೃದ್ಧಿಸಿಕೊಂಡ ಆತ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರ ಸಹಾಯದಿಂದ ಶ್ರೀರಂಗಪಟ್ಟಣದೆಡೆಗೆ ಧಾವಿಸಿದ. ಆದರೆ, ಅಲ್ಲಿಗೆ ತಲುಪುವ ಮುನ್ನವೇ ೧೧೦೦೦ ಸೈನಿಕರ ಬಲದಿಂದ ಅವನನ್ನು ಎದುರಿಸಿದ ಖಂಡೇರಾಯನ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು. ಗಡೀಪಾರಾಗಿದ್ದ ನಂಜರಾಜರಸನ ಸಹಾಯ ಕೋರಿದ ಹೈದರನಿಗೆ ನಂಜರಾಜರಸ ತನ್ನ ಸೈನ್ಯವನ್ನೂ ಒದಗಿಸಿದ್ದಲ್ಲದೆ ದಳವಾಯಿ ಪಟ್ಟವನ್ನೂ  ವಹಿಸಿಕೊಟ್ಟನು. ಉತ್ತೇಜಿತನಾದ ಹೈದರ್ ಪುನಃ ಶ್ರೀರಂಗಪಟ್ಟಣದ ಮೇಲೇರಿ ಬಂದನು. ಸೈನ್ಯಗಳು ಮುಖಾಮುಖಿಯಾದಾಗ ಹೈದರ್ ನಡೆಸಿದ ಕುತಂತ್ರ ಫಲ ಕೊಟ್ಟಿತು. ಖಂಡೇರಾಯನ ಸೈನ್ಯದ ಪ್ರಮುಖ ಅಧಿಕಾರಿಗಳೊಂದಿಗೆ ಖಂಡೇರಾಯನನ್ನು ಹೈದರಾಲಿಗೆ ಹಿಡಿದುಕೊಡಲು ನಂಜರಾಜರಸನೊಂದಿಗೆ  ಒಪ್ಪಂದವಾಗಿರುವಂತೆ ಸೃಷ್ಟಿಸಿದ ಪತ್ರಗಳು ಖಂಡೇರಾಯನಿಗೆ ತಲುಪುವಂತೆ ಮಾಡಲಾಯಿತು. ಈ ಸಂಚಿನಿಂದ ಭಯಗೊಂಡ ಖಂಡೇರಾವ್ ಶ್ರೀರಂಗಪಟ್ಟಣಕ್ಕೆ ಓಡಿದ. ನಾಯಕನಿಲ್ಲದ ಸೈನ್ಯದೊಂದಿಗೆ ಸೆಣಸುವುದು ಕಷ್ಟವಾಗಲಿಲ್ಲ. ಹೈದರನಿಗೆ ಜಯವಾದ ನಂತರ ನಡೆದ ಮಾತುಕತೆಗಳ ಪರಿಣಾಮವಾಗಿ ಮೈಸೂರಿನ ಸಂಪೂರ್ಣ ಸೈನ್ಯದ ನಿಯಂತ್ರಣ ಹೈದರಾಲಿಗೆ ದಕ್ಕಿತು.
      ಮನೆಯ ಯಜಮಾನನ ಕೃಪೆಯಿಂದ ವಾಸಿಸಲು ಪಡೆದಿದ್ದ ಮನೆಯ ಯಜಮಾನಿಕೆಯನ್ನು ಕ್ರಮೇಣ ಆಶ್ರಯ ಪಡೆದವನೇ ಪಡೆದರೆ ಹೇಗಿರುತ್ತದೋ ಹಾಗೆಯೇ ಇಲ್ಲಿಯೂ ಆಯಿತೆನ್ನಬಹುದು. ದೂರದಲ್ಲಿರುವ ಮತ್ತು ಎದುರಿನಲ್ಲಿರುವ ಶತ್ರುವನ್ನು ಎದುರಿಸಬಹುದು. ಆದರೆ ಜೊತೆಯಲ್ಲೇ ಇದ್ದು ತಂತ್ರ-ಕುತಂತ್ರಗಳಿಂದ ಮೇಲೆ ಬರುವ ಹಿತಶತ್ರುಗಳನ್ನು ಎದುರಿಸುವುದು ಕಷ್ಟವೇ ಸರಿ. ಮೈಸೂರು ಸಂಸ್ಥಾನದ ರಾಜಮಾತೆ ಮತ್ತು ಸಂಸ್ಥಾನಕ್ಕೆ ನಿಷ್ಠರಾದವರು ಎದುರಿಸಿದ್ದ ಪರಿಸ್ಥಿತಿ ಇದೇ ಆಗಿತ್ತು. ಖಂಡೇರಾಯನನ್ನು ವಶಕ್ಕೊಪ್ಪಿಸುವುದೂ ಒಪ್ಪಂದದಲ್ಲಿ ಸೇರಿದ್ದರಿಂದ, ಅವನನ್ನು ವಶಕ್ಕೆ ಪಡೆದ ಹೈದರ್ ಬೆಂಗಳೂರಿನಲ್ಲಿ ಸೆರೆಯಲ್ಲಿರಿಸಿದ. ಖಂಡೇರಾಯನ ಬಂಧನದ ರೀತಿಯ ಬಗ್ಗೆ Maistre de La Tour ತನ್ನ The History of Hyder Shah, Alias Hyder Ali Kan Bahadur  ಎಂಬ ಪುಸ್ತಕದಲ್ಲಿ   ಈ ರೀತಿ ಹೇಳಿದ್ದಾನೆ: By virtue of his power as regent, Hyder spared his life and commuted  his  punishment into that of being shut up in an iron cage in the middle of  the most public place of Bangalore; where it is still to be seen, with the bones of this unhappy favourite, who lived two years in the cage, exposed to the insults of a populace that adored Hyder”.   ಹೈದರ್ ತನ್ನ ರಾಜಕೀಯ ಬಂದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೆ. ಒಟ್ಟಾರೆಯಾಗಿ, ೧೭೬೧ರಲ್ಲಿ ಅನಧಿಕೃತವಾಗಿ ಮೈಸೂರು ಸಂಸ್ಥಾನದ ಆಡಳಿತ ಹೈದರಾಲಿಯ ಕೈಗೆ ಬಂದು ಮೈಸೂರಿನ ಅನಭಿಷಿಕ್ತ ದೊರೆಯಾಗಿ ಆಳತೊಡಗಿದ. ಇದಾದ ಐದು ವರ್ಷಗಳಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ದೇಹಾವಸಾನ ೨೫-೪-೧೭೬೬ರಲ್ಲಿ ಶ್ರೀರಂಗಪಟ್ಟಣದಲ್ಲಿ ಆಯಿತು. ನಂತರದಲ್ಲಿ ಮೈಸೂರು ಸುಲ್ತಾನರ ಆಡಳಿತ ಘೋಷಣೆ ಮಾಡಿ ತನ್ನನ್ನು ಸುಲ್ತಾನ್ ಹೈದರ್ ಅಲಿಖಾನ್ ಎಂದು ಹೆಸರಿಸಿಕೊಂಡ. ಹೈದರಾಬಾದಿನ ನಿಜಾಮರೊಂದಿಗೆ ವ್ಯವಹರಿಸುವಾಗ ಆತ ಎಚ್ಚರಿಕೆಯಿಂದಿರುತ್ತಿದ್ದ, ಏಕೆಂದರೆ ಮುಘಲರ ಅಧಿಕೃತ ಫರ್ಮಾನಿನಂತೆ ದಕ್ಷಿಣ ಭಾರತದ ಎಲ್ಲಾ ಮುಸ್ಲಿಮ್ ಆಡಳಿತದ ಪ್ರದೇಶಗಳಿಗೆ ಹೈದರಾಬಾದ್ ನಿಜಾಮರೇ ಪ್ರಮುಖರೆಂದು ಹೇಳಲಾಗಿತ್ತು. ನಂತರದ ಕೆಲವು ವರ್ಷಗಳಲ್ಲಿ ಉತ್ತರ ಭಾಗದಲ್ಲೂ ತನ್ನ  ರಾಜ್ಯದ ವಿಸ್ತಾರ ಮಾಡಿದ. 
     ವಿಜಯನಗರದ ಸಾಮಂತ ಸಂಸ್ಥಾನವಾಗಿ ೧೩೯೯ರಿಂದ ೧೫೫೩ರವರೆಗೆ ಇದ್ದ ಮೈಸೂರಿನ ಅರಸೊತ್ತಿಗೆ, ಸ್ವತಂತ್ರವಾಗಿ ೧೫೫೩ರಿಂದ ೧೭೬೬ರವರೆಗೆ ವಿಜೃಂಭಿಸಿದ್ದು, ಈ ಕಾಲದಲ್ಲಿ ಕನ್ನಡನಾಡು ವೈಭವಯುತವಾಗಿ ಬೆಳಗಿತ್ತು. ಅನಧಿಕೃತವಾಗಿ ೧೭೬೧ರಲ್ಲಿ ಹೈದರಾಲಿ ಹಿಡಿತಕ್ಕೆ ಬಂದ ಈ ಅರಸೊತ್ತಿಗೆ, ೧೭೬೬ರಲ್ಲಿ ಇಮ್ಮಡಿ ಕೃಷ್ೞರಾಜ ಒಡೆಯರರ ನಿಧನದೊಂದಿಗೆ ಅದಿಕೃತವಾಗಿ ಆತನ ತೆಕ್ಕೆಗೆ ಬಂದಿತು. ನಂತರ ಒಡೆಯರರ ಉತ್ತರಾಧಿಕಾರಿಗಳು ಸ್ವತಂತ್ರವಾಗಿ ಸಂಸ್ಥಾನದ ಆಡಳಿತ ವಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಅವರ ದೌರ್ಬಲ್ಯವಲ್ಲದೇ ಮತ್ತೇನೂ ಅಲ್ಲ. ೧೭೬೧ರಿಂದ ೧೭೯೬ರವರೆಗೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಅಧೀನತೆಯಲ್ಲಿ ಇದ್ದ ಅರಸು ಮನೆತನದವರೆಂದರೆ, ಇಮ್ಮಡಿ ಕೃಷ್ೞರಾಜ ಒಡೆಯರ್ (೧೭೩೪-೧೭೬೬), ನಂಜರಾಜ ಒಡೆಯರ್ (೧೭೬೬-೧೭೭೨), ೭ನೆಯ ಚಾಮರಾಜ ಒಡೆಯರ್(೧೭೭೨-೧೭೭೬) ಮತ್ತು ೮ನೆಯ ಚಾಮರಾಜ ಒಡೆಯರ್(೧೭೭೬-೧೭೯೬). ನಂತರದಲ್ಲಿ ಬ್ರಿಟಿಷರ ಆಡಳಿತದ ಕಾಲದಲ್ಲಿದ್ದವರೆಂದರೆ, ಮುಮ್ಮಡಿ ಕೃಷ್ೞರಾಜ ಒಡೆಯರ್(೧೭೯೯-೧೮೬೮), ೯ನೆಯ ಚಾಮರಾಜ ಒಡೆಯರ್ (೧೮೮೧-೧೮೯೪), ನಾಲ್ಮಡಿ ಕೃಷ್ೞರಾಜ ಒಡೆಯರ್ (೧೮೯೪-೧೯೪೦) ಮತ್ತು ಜಯಚಾಮರಾಜ ಒಡೆಯರ್(೧೯೪೦-೧೯೫೦).
     ಹೈದರಾಲಿಗೆ ಓದು-ಬರಹ ಬರುತ್ತಿರಲಿಲ್ಲವಾದರೂ ಆತ ಒಬ್ಬ ನಿಪುಣ ಯೋಧ. ಸಂದರ್ಭ, ಪರಿಸ್ಥಿತಿಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದ ಕುಶಲ ಚಾಣಾಕ್ಷ. ಬ್ರಿಟಿಷರ ವಿರುದ್ದವಾಗಿ ಫ್ರೆಂಚರೊಂದಿಗೆ ಕೈಜೋಡಿಸಿದ್ದವನು. ತನ್ನ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭದಲ್ಲಿ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಆತನ ಇಚ್ಛೆ ಮಾತ್ರ ಕೈಗೂಡಲಿಲ್ಲ. ಆತ ಪರ್ಷಿಯನ್, ಕನ್ನಡ, ತೆಲುಗು, ಹಿಂದೂಸ್ತಾನಿ, ಮರಾಠಿ ಮತ್ತು ತಮಿಳು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲವನಾಗಿದ್ದ. ಸಾಂಪ್ರದಾಯಿಕ ಮುಸಲ್ಮಾನರಂತೆ ಗಡ್ಡ ಬಿಡದಿದ್ದ ಆತ ಗಿಡ್ಡ ಮೂಗು, ದಪ್ಪ ಕೆಳತುಟಿ ಹೊಂದಿದ್ದವನಾಗಿದ್ದು, ಸುಂದರನಲ್ಲದಿದ್ದರೂ ಆತ್ಮವಿಶ್ವಾಸ ಅವನಲ್ಲಿ ಎದ್ದು ಕಾಣುತ್ತಿತ್ತು. ಡಿಸೆಂಬರ್ ೧೭೮೨ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಆತನ ಅಂತ್ಯವಾಯಿತು. 
-ಕ.ವೆಂ.ನಾಗರಾಜ್.

3. The History of Hyder Shah, Alias Hyder Ali Kan Bahadur: Or, New Memoirs ...  By M. M. D. L. T. (Maistre de La Tour)
********************
ದಿನಾಂಕ 12.11.2015ರ ಜನಹಿತ ಪತ್ರಿಕೆಯಲ್ಲಿ ಪ್ರಕಟಿತ:


8 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. hariharapurasridhar on November 29, 2013 - 7:43am
      ಬಲು ತಾಳ್ಮೆಯಿಂದ ಬರೆದಿದ್ದೀರಿ, ನಾಗರಾಜ್.ನಿಮ್ಮ ತಾಳ್ಮೆಯ ಅಧ್ಯಯನಕ್ಕೆ ಶರಣು.

      kavinagaraj on December 7, 2013 - 12:50pm
      ಅನಗತ್ಯವಾಗಿ ಹೈದರ್ ಮತ್ತು ಟಿಪ್ಪೂರವರನ್ನು ಜಾತ್ಯಾತೀತತೆಯ ಸಂಕೇತವೆಂದು ಜ್ಞಾನಪೀಠಿಗಳು ಹೊಗಳುತ್ತಿದ್ದುದನ್ನು ಕಂಡು ಸತ್ಯ ತಿಳಿಯಲು ಪ್ರಯತ್ನಿಸಿದ ಕಾರಣ ಈ ಬರಹ. ಧನ್ಯವಾದ, ಶ್ರೀಧರ್.

      H A Patil on November 29, 2013 - 6:54pm
      ಕವಿ ನಾಗರಾಜ ರವರಿಗೆ ವಂದನೆಗಳು
      ನಮಗೆ ಹೈದರಾಲಿ ಮತ್ತು ಟಿಪ್ಪು ಸುಲ್ತಾನರನ್ನು ಬಿಟ್ಟರೆ ಅವರ ಮೂಲದ ಮಾಹಿತಿ ಗೊತ್ತಿರಲೆ ಇಲ್ಲ, ಅವರ ವಂಶದ ಮೂಲ ವಿವರ ಗಳೊಂದಿಗೆ ಅವರ ಬೆಳವಣಿಗೆಯ ಪಥವನ್ನು ಸಂಕ್ಷೀಪ್ತವಾಗಿ ವಿವರಸಿದ್ದೀರಿ, ನಿಮ್ಮ ಅಧ್ಯನದ ಹರವು ಗಹನವಾದುದು, ಮೈಸೂರು ಒಡೆಯರ ಸ್ಥಿತಿ ಮತ್ತು ಹೈದರಾಲಿಯ ಮಹತ್ವಾಕಾಂಕ್ಷೆಯನ್ನು ಮನ ಮುಟ್ಟುವಂತೆ ವಿವರಿಸಿದ್ದೀರಿ ಧನ್ಯವಾದಗಳು.
      kavinagaraj on December 7, 2013 - 12:52pm
      ಧನ್ಯವಾದಗಳು, ಪಾಟೀಲರೇ. ಹೈದರಾಲಿಯ ಮಹತ್ವಾಕಾಂಕ್ಷೆಗೆ ನೀರೆರೆದವರು ನಮ್ಮವರೇ ಎಂಬುದು ಗಮನಾರ್ಹ. ಜಯಚಂದ್ರರ ಸಂತತಿ ಇಂದೂ ಮುಂದುವರೆದಿದೆ. ನಿಜವಾದ ಅಪಾಯ ನಮ್ಮವರಿಂದಲೇ!!

      nageshamysore on November 30, 2013 - 2:49am
      ಕವಿ ನಾಗರಾಜರೆ, ಟಿಪ್ಪುವಿನ ಬಗ್ಗೆ ತುಸು ಹೆಚ್ಚು ಓದಿ ಅರಿವಿತ್ತಾದರೂ ಹೈದರಾಲಿಯ ಕುರಿತು ಹೆಚ್ಚು ವಿವರ ತಿಳಿದಿರಲಿಲ್ಲ. ತಮ್ಮ ಲೇಖನದಿಂದ ಅದೆಲ್ಲಾ ಹಿನ್ನಲೆ ತಿಳಿದುಬಂತು, ಧನ್ಯವಾದಗಳು.

      ಧನ್ಯವಾದಗಳೊಂದಿಗೆ
      ನಾಗೇಶ ಮೈಸೂರು

      kavinagaraj on December 7, 2013 - 12:53pm
      ವಂದನೆಗಳು, ನಾಗೇಶರೇ.

      sathishnasa on December 2, 2013 - 8:57pm
      ತಿಳಿಯದಿದ್ದ ಮಾಹಿತಿ ಇದು, ನಿಮ್ಮ ಮಾಹಿತಿಗೆ ಧನ್ಯವಾದಗಳು ನಾಗರಾಜ್ ರವರೇ
      ..........ಸತೀಶ್

      kavinagaraj on December 7, 2013 - 12:53pm
      ವಂದನೆಗಳು, ಸತೀಶರೇ.

      partha1059 on December 3, 2013 - 1:41pm
      ಉತ್ತಮ‌ ಮಾಹಿತಿ !

      Amaresh patil on December 3, 2013 - 7:30pm
      ನಾಗರಾಜರವರೆ, ಹೈದರಾಲಿಯವರ ಗುಣ ಆವಗುಣಗಳನ್ನು ಇತಿಹಾಸದಿಂದ ಹುಡುಕಿತೆಗೆದು ನಿಖರವಾದ ದಿನಾಂಕಗಳೊಂದಿಗೆ ಪ್ರಸ್ತುತ ಪಡಿಸಿದ್ದಿರಿ, ಹೈದರಾಲಿಯವರನ್ನು ಮೀರಿಸುವ ಕುತಂತ್ರಿಗಳು ಇಂದುಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೈದರಾಲಿಯವರು ನೀರಕ್ಷರಿಯಾದರು ರಾಜಕಿಯ ಚತುರಾರಿಗದ್ದರು ಹಾಗೂ ಮಹಾತ್ವಕಾಂಕ್ಷಿಯಾಗಿದ್ದರು ಎನ್ನುವದನ್ನು ಉಲ್ಲೇಖಿಸಿದ್ದಿರಿ ಆವರಾದರೋ ತಮ್ಮನ್ನು ನಂಬಿದ ಒಂದು ಪ್ರಭಲ ಕುಟುಂಬಕ್ಕೆ ದ್ರೋಹವೆಸಗಿದ್ದಾರೆ, ಆದರೆ ಈಗಿನ ರಾಜರಾದ ಕೆಲ ಬ್ರಷ್ಟ ಚುನಾಹಿತ ಪ್ರತಿನಿಧಿಗಳು ತಮ್ಮನ್ನು ಚುನಾಯಿಸಿದ ಜನಸಾಮಾನ್ಯರಿಗೆ ನಿರಂತರ ದ್ರೋಹವೆಸಗುತ್ತಿದ್ದಾರೆ ಖಂಡಿತ ನಾವು ಜನಸಾಮಾನ್ಯರು ಇತಿಹಾಸದಿಂದ ಪಾಠಕಲಿಯೋಣ
      ನಿಮ್ಮ ಲೇಖನ ತುಂಬಾಸೋಗಸಾಗಿದೆ ಹಾಗೆ ಕರ್ನಾಟಕದ ಇತಿಹಾಸದಲ್ಲಿ ಬರುವ ಅನೆಕ ರಾಜಮನೆತನಗಳ ಇತಿಹಾಸದ ಬಗ್ಗೆ ಬರೆಯಿರಿ ಧನ್ಯವಾಧಗಳು.

      kavinagaraj on December 7, 2013 - 12:56pm
      ನೀವನ್ನುವುದು ನಿಜ, ಅಮರೇಶರೇ. ಟಿಪ್ಪೂ ವಿಶ್ವವಿದ್ಯಾಲಯ ಆಗಬೇಕು, ಸಂಸ್ಕೃತ ವಿಶ್ವವಿದ್ಯಾಲಯ ಆಗಬಾರದು ಅನ್ನುತ್ತಿರುವವರು ಟಿಪ್ಪು ಪ್ರಶಸ್ತಿ ವಿಜೇತರಾದ ನಮ್ಮ ಜ್ಞಾನಪೀಠಿಗಳೇ ಅನ್ನುವುದು ಗಮನಾರ್ಹ.

      ಅಳಿಸಿ
    2. abdul on December 7, 2013 - 8:52pm
      ಹೈದರಲಿ, ಟಿಪ್ಪೂ ಸುಲ್ತಾನ್ ದೇಶ ಕಂಡ ಅಪ್ರತಿಮ ವೀರರು. ಟಿಪ್ಪೂ ದೇಶನಿಷ್ಠೆ ಅನುಕರಣೀಯ ಮಾತ್ರವಲ್ಲ ಆದರ್ಶ ಕೂಡಾ. ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ವಿದೇಶೀಯರ ಬೆಂಬಲ ಯಾಚಿಸಿ ಆ ಬೆಂಬಲ ಸಿಗದೇ ಇದ್ದಾಗ ಬೆರಳೆಣಿಕೆ ಯಷ್ಟು ಸೈನಿಕರನ್ನು ಕಟ್ಟಿ ಕೊಂಡು ಹೋರಾಡಿ ರಣರಂಗದಲ್ಲಿ ಹುತಾತ್ಮನಾದ ಟಿಪ್ಪೂ ವನ್ನು ಎಷ್ಟು ಸ್ಮರಿಸಿದರೂ ಸಾಲದು. ಟಿಪ್ಪೂ ರವರ ರಾಷ್ಟ್ರ ನಿಷ್ಠೆಯನ್ನು ಪ್ರಯತ್ನಿಸುವವರೂ ನಮ್ಮ ದೇಶದಲ್ಲಿರುವುದು ದುಃಖಕರ.

      ಹೈದರಲಿ ಚರಿತ್ರೆ ಎಷ್ಟು ಸತ್ಯವೋ ಗೊತ್ತಿಲ್ಲ. ಬರಹ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗಿದೆ. ಅಂತೆ ಕಂತೆ ಗಳನ್ನು ಅವಲಂಬಿಸಿದ ಈ ಬರಹವನ್ನ ನುರಿತ ಬರಹಗಾರರೊಬ್ಬರಿಂದ ನಿರೀಕ್ಷಿಸಿರಲಿಲ್ಲ.

      ಕೆಳಗಿನ ಉದಾಹರಣೆ ಗಮನಿಸಿ..

      "ತನ್ನ ಗುರಿಯ ಸಾಧನೆಗಾಗಿ ಲೂಟಿಕಾರ್ಯದಲ್ಲೂ ತೊಡಗಿ ತನ್ನ ಬಲವನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದನೆಂದು 'ಹೇಳುತ್ತಾರೆ'.

      "ಫ್ರೆಂಚರ ಸೇವೆಯನ್ನೂ ಮಾಡಿದ್ದ ಹೈದರಾಲಿ ಮುಜಫ್ಫರ್ ಜಂಗ್ ಮತ್ತು ಚಂದಾ ಸಾಹೇಬರನ್ನೂ ಭೇಟಿಯಾಗಿದ್ದನೆಂದು 'ನಂಬ'ಲಾಗಿದೆ".

      ಹೈದರಾಲಿ ತನ್ನ ಪರಾಕ್ರಮ, ಚಾಣಕ್ಷತನದಿಂದ ರಾಜನಾದ. ಲೂಟಿ, ಕಳ್ಳತನಗಳನ್ನು ತಡೆಯಲು ಖಂಡೇರಾವ ನನ್ನು ನೇಮಕ ಮಾಡಿದ. ಸೈನಿಕರಿಗೆ ಸಂಬಳ ಕೊಡದೆ ದ್ರೋಹ ಮಾಡಿದವರನ್ನು ಮೂಲೆ ಗುಂಪು ಮಾಡಿದ. ಇವು ಈ ಬರಹದಲ್ಲಿ ಅಡಕವಾದ ಅಂಶಗಳು. ಇನ್ನು,ಹೈದರಾಲಿ ಯವರ ತಂದೆ ಕೋಲಾರದವರು, ಹೈದರಾಲಿ ಕನ್ನಡಿಗ. ಹೈದರಾಲಿ ಯವರ ಹೆಸರು "ಬೇರೆ" ಅಥವಾ "ಅನ್ಯ" ವಾಗಿ ತೋರುವ ಕಾರಣ ಅವರಿಗೆ ಕರ್ನಾಟಕದ ಅರಸನಾಗುವ ಯೋಗ್ಯತೆ ಇಲ್ಲ ಎನ್ನುವಂತೆ ಇದೆ ಈ ಲೇಖನ. ಅವನ್ಯಾವನೋ ಪರಂಗಿ ಬರೆದ ಇತಿಹಾಸದ ಎಳೆ ಹಿಡಿದು ಕೊಂಡು ಬರೆಯುತ್ತಾ ಹೋದರೆ ಅದೇ 'ಒಡೆದು ಆಳುವ ನೀತಿ' ಗೆ ಹಾಲೆರೆಯುವ ಪರಿಸ್ಥಿತಿ ಮತ್ತೊಮ್ಮೆ ಬರುತ್ತದೆ. ಸಮಯ ಸಿಕ್ಕಾಗ ಯಾವ ಯಾವ ರೀತಿ ಪರಂಗಿ ಇತಿಹಾಸ್ಯಕಾರ ನಮ್ಮ ಇತಿಹಾಸ ತಿರುಚಿ, ಹಿಂದೂ ಮುಸ್ಲಿಮರ ಮಧ್ಯೆ ಒಡಕು ತಂದ ಎನ್ನುವುದರ ಕುರಿತು ಮುಂದೊಂದು ದಿನ ಬರೆಯುತ್ತೇನೆ. ಧನ್ಯವಾದಗಳು, ನಾಗರಾಜರಿಗೆ.

      kavinagaraj on December 10, 2013 - 3:48pm
      ನಮಸ್ತೆ, ಅಬ್ದುಲ್ಲರೇ. ಇಂತಹ ಒಂದೂ ಪ್ರತಿಕ್ರಿಯೆ ಬರಲಿಲ್ಲವೆಂದು ಆಶ್ಚರ್ಯವಾಗಿತ್ತು. ನನ್ನ ಲೇಖನದಲ್ಲಿ ನನ್ನದೇ ಎಂದು ಸೇರಿಸಿದ ಅಂಶಗಳು ಯಾವುದೂ ಇಲ್ಲ. ಆಧಾರಗಳ ಕುರಿತು ಉಲ್ಲೇಖಿಸಿರುವೆ. ನೀವೇ ಸ್ವತಃ ಪರಿಶೀಲಿಸಿ. ಬರೆಯಲೇಬೇಕೆಂದರೆ ಸತ್ಯ ಸಂಗತಿಗಳು ಎಲ್ಲರಿಗೂ ಒಪ್ಪಿತವಾಗಲಾರವು, ಏಕೆಂದರೆ ಸತ್ಯಸಂಗತಿಗಳು ಮತ್ತಷ್ಟು ಘೋರವಾಗಿವೆ. ಆ ಕುರಿತೂ ಸಹ ಮುಂದೊಮ್ಮೆ ಬರೆಯುವೆ. ಆಧಾರರಹಿತ ಸಂಗತಿಗಳನ್ನು ಬರೆಯುವ ಉದ್ದೇಶ ನನಗಿಲ್ಲ. ಇತಿಹಾಸವನ್ನು ಇತಿಹಾಸವಾಗಿಯೇ ನೋಡೋಣ. ಅದಕ್ಕೆ ಜಾತಿ/ಧರ್ಮದ ಸೋಂಕು ತಗಲಿಸದಿರೋಣ.

      ಅಳಿಸಿ
    3. ಗಣೇಶ on December 22, 2013 - 11:28pm
      --ಹೈದರಲಿ, ಟಿಪ್ಪೂ ಸುಲ್ತಾನ್ ದೇಶ ಕಂಡ ಅಪ್ರತಿಮ ವೀರರು. ಟಿಪ್ಪೂ ದೇಶನಿಷ್ಠೆ ಅನುಕರಣೀಯ ಮಾತ್ರವಲ್ಲ ಆದರ್ಶ ಕೂಡಾ.
      -ಇಬ್ಬರೂ ವೀರರೇ. ಎರಡನೇ ವಾಕ್ಯ ಮಾತ್ರ- ಟಿಪ್ಪೂ ಧರ್ಮನಿಷ್ಠೆ ಎಂದಾಗಬೇಕು. http://en.wikipedia.org/wiki/Religious_violence_in_India
      http://voiceofdharma.org/books/tipu/ch04.htm
      ರಾಜನಾದ ಮೇಲೆ ಆ ಕಾಲದಲ್ಲಿ ಯಾರನ್ನಾದರೂ ಕೊಲ್ಲುವುದು/ಉಳಿಸುವುದು ಆತನ ಮರ್ಜಿ. ಬೇರೆ ಜಾತಿಯವರಿಗೆ ಟ್ಯಾಕ್ಸ್, ತನ್ನವರಿಗೆ ರಿಯಾಯಿತಿ ಕೊಡುವುದೂ ಅವನಿಚ್ಛೆ. ಅದೇ ಈಗ..ಈ ಕಾಲದಲ್ಲಿ ಶಾದಿಭಾಗ್ಯ!? ಕೇವಲ ವೋಟಿಗಾಗಿ, ಒಂದು ಜಾತಿಯ ತುಷ್ಟೀಕರಣ ಮಾಡುವುದರಲ್ಲಿ ಈಗಿನ ರಾಜಕಾರಣಿಗಳು ಟಿಪ್ಪು/ಹೈದರ್‌ಗಿಂತ ಕಮ್ಮಿ ಇಲ್ಲ.
      ವಾಕ್ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ.. ಹಿಂದೂ ದೇವತೆಗಳನ್ನು ನಿಂದಿಸುವಾಗಲೂ ಬಾಯಿಮುಚ್ಚಿ ಸುಮ್ಮನಿರುವ ನಮಗೆ ಟಿಪ್ಪು/ಹೈದರನ್ನು ಬೈಯುವ ಹಕ್ಕಿಲ್ಲ. ಆ ಕಾಲದಲ್ಲಿ ನಾವಿರುತ್ತಿದ್ದರೆ ಟಿಪ್ಪು ಹೇಳುವ ಮೊದಲೇ ಆತನ ಜಾತಿಗೆ ಕನ್ವರ್ಟ್ ಆಗಿರುತ್ತಿದ್ದ ಹೇಡಿಗಳಲ್ಲಿ ನಾವೇ ಮೊದಲಿರುತ್ತಿದ್ದೆವು. :(
      kavinagaraj on December 31, 2013 - 10:15am
      ನಮಸ್ತೆ, ಗಣೇಶರೇ. ಹೈದರ್ ಮತ್ತು ಟಿಪ್ಪೂರವರು ಫ್ರೆಂಚರೊಡನೆ ಸಖ್ಯವಿದ್ದವರು ಮತ್ತು ಅವರ ಸಹಯೋಗದೊಂದಿಗೇ ಯುದ್ಧಗಳನ್ನು ನಡೆಸಿದವರು. ಮರಾಠರ ವಿರುದ್ಧವಾಗಿ ಬ್ರಿಟಿಷರ ಸಹಕಾರ ಪಡೆಯುವ ಅವರುಗಳ ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಅಕ್ಕಪಕ್ಕದ ರಾಜರುಗಳ ರಾಜ್ಯಗಳನ್ನು ಆಕ್ರಮಿಸಿಕೊಳ್ಳಲು ಮತ್ತು ಅವರೊಡನೆ ಇದ್ದ ಶತ್ರುತ್ವದ ಕಾರಣದಿಂದ ಬ್ರಿಟಿಷರು ಮತ್ತು ಫ್ರೆಂಚರ ಸಹಾಯ ಬಯಸಿದ ನಮ್ಮವರೇ ನಮ್ಮ ಸ್ವಾತಂತ್ರ್ಯಹರಣಕ್ಕೆ ಕಾರಣರಾದವರು. ಒಡೆದು ಆಳಲು ಪ್ರಶಸ್ತವಾದ ಸನ್ನಿವೇಶ ಒದಗಿಸಿದ್ದವರು ನಾವೇನೇ! ಇತಿಹಾಸದಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗದಿರುವ, ಸಂಗೊಳ್ಳಿ ರಾಯಣ್ಣನಂತೆಯೇ ಅಪ್ರತಿಮ ವೀರನಾಗಿದ್ಕದವನೊಬ್ಥನ ಕಥನವೊಂದನ್ನು ಮುಂದೊಮ್ಮೆ ಹಂಚಿಕೊಳ್ಳುವೆ.

      gunashekara murthy on December 31, 2013 - 1:49pm
      . ಹಿಂದೂ ದೇವತೆಗಳನ್ನು ನಿಂದಿಸುವಾಗಲೂ ಬಾಯಿಮುಚ್ಚಿ ಸುಮ್ಮನಿರುವ ನಮಗೆ ಟಿಪ್ಪು/ಹೈದರನ್ನು ಬೈಯುವ ಹಕ್ಕಿಲ್ಲ.

      ಸ್ನೇಹಿತ ಗಣೇಶ ನಾನು ಬರೆದಿರುವ ನನ್ನ ಸ್ವಂತಕಥೆ ರಚನೆಯಲ್ಲವೆಂದು ಮುಂಚೆಯೇ ಹೇಳಿದ್ದೇನೆ. ಅಲ್ಲಿಯೇ ಆಧಾರವನ್ನು ತೋರಿದ್ದೇನೆ. ನಮ್ಮ ದೇವರನ್ನು ಹುಡುಕುವಾಗ ನಾವುಗಳು ತಪ್ಪು ಮಾಡಿದ್ದೇವೆ. ಸರಿಯಾದ ಉತ್ತಮವಾದ ನ್ಯಾಯಯುತ ನೀತಿವಂತ ದೇವರನ್ನು ಹುಡುಕಬೇಕಿತ್ತು. ನಾನೊಬ್ಬ ಉತ್ತಮ ದೇವರನು ದೇವರನ್ನೇ ಹುಡುಕುವ ಆಕಾಂಕ್ಷಿ ಎಂಬುದ ಮರೆಯದಿರಿ. ಈಗಲೂ ಹುಡುಕುತ್ತಲೇ ಇರುವೆ................
      gunashekara murthy on December 31, 2013 - 2:17pm
      ಭಾರತದಲ್ಲಿ ನಮ್ಮ ಒಂದೇ ಚರಿತ್ರೆಯನ್ನು ಎರಡು ವಿಧದಲ್ಲಿ ಭಾಗವಾಗಿ ನೋಡಬಹುದು ಕೇಸರಿ ಬಣ್ಣದಿಂದಲೂ ಸಾಮಾನ್ಯ ನಿಜದ ಬಣ್ಣ ಬಿಳಿಬಣ್ಣದಲ್ಲಿಯು ನೋಡಬಹುದು. ಸಾಮಾನ್ಯ ಜನರು ಬಿಳಿಬಣ್ಣದ ಚರಿತ್ರೆಯನ್ನೇ ಇಚ್ಚಿಸುತ್ತಾರೆ. ಅದನ್ನು ಬ್ರೀಟಿಷರು ಮತ್ತು ನಮ್ಮದೇಶದ ಚರಿತ್ರಾಕಾರರೇ ಬರೆದಿರುತ್ತಾರೆ. ಆದರೇ ಕೇಸರಿ ಬಣ್ಣದ ಚರಿತ್ರೆಯನ್ನು ಕೆಲವೇ ಕೆಲವು ಸಂಘಟನೆಗಳು ಸಂಭಂಧ ಪಟ್ಟವರೇ ಬರೆಯುತ್ತಿವೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗೆ ಈ ಕಥೆಯು ಎಂದು ಭಾವಿಸಬೇಕಿದೆ. ಕಾರಣ, ನಾನು ಓದಿರುವುದು ಟಿಪ್ಪು ಮೈಸೂರಿನ ಹುಲಿ ಎಂದು. ಶಿವಾಜಿಯನ್ನು ಬೆಟ್ಟದ ಇಲಿ ಎಂದೇ ಓದಿದ್ದೇವೆ. ಕಾರಣ, ಶಿವಾಜಿ ಆತ ಎದುರು ನಿಂತು ಹೋರಾಡಿಲ್ಲ ಬೆಟ್ಟಗಳಲ್ಲಿ ಅವಿತು ಹೊಡೆದುಬಿಟ್ಟು ಬೆಟ್ಟಗಳಲ್ಲಿಯೇ ನಾವು ಕಂಡಂತೆ ಅಲ್ಲಿ ಬೆಟ್ಟಗಳೇ ಹೆಚ್ಚಿರುವ ಪ್ರದೇಶ ತಪ್ಪಿಸಿಕೊಳ್ಳುತ್ತಿದ್ದ.ಆದರೇ, ಈ ಕಥೆಯಲ್ಲಿ ವ್ಯತ್ಯಾಸವಾಗಿದೆ. ಇದನ್ನು ಬಿಳಿ ಬಣ್ಣದ ಚರಿತ್ರೆಕಾರರು ಉತ್ತರಿಸಲಿ. ಕೆಲವರು ಙ್ಞಾನಪೀಠಿಗಳು ಉತ್ತರಿಸಿರುವುದು ಸರಿಯಿದೆ ಎಂದು ಭಾವಿಸುತ್ತೇನೆ.
      ಉದಾಹರಣೆಗೆ, ತಾಜ್ ಮಹಲ್ ಒಂದು ಹಿಂದು ದೇವಲಯ‌, ಬಾಬಾಬುಡನ್ ಗಿರಿ ದತ್ತಪೀಠ‌, 17,28,000 ವರ್ಷದ‌ ರಾಮ‌ ಜನ್ಮಭೂಮಿ ಇಲ್ಲೇ ರಾಮಹುಟ್ಟಿದ‌ ಎನ್ನು ಹೀಗೆತಿರಿಚಿರುವ‌ ದೊಡ್ಡಪಟ್ಟಿಯೇ ಇದೆ.
      kavinagaraj on January 4, 2014 - 7:05pm
      ಇತಿಹಾಸವನ್ನು ಇತಿಹಾಸವಾಗಿಯೇ ಅಭ್ಯಸಿಸದೆ ಅದಕ್ಕೆ ಹಲವಾರು - ಜಾತ್ಯಾತೀತ, ಕೇಸರಿ, ಕೋಮುವಾದಿ, ಇತ್ಯಾದ ಹಣೆಪಟ್ಟಿ ಹಚ್ಚದೆ, ಇರುವುದನ್ನು ಇದ್ದಂತೆ ಅಭ್ಯಸಿಸಿದರೆ ದೇಶದ ಹಿತದೃಷ್ಟಿಯಿಂದ ಒಳಿತು. ಜಾತ್ಯಾತೀತತೆ ಎಂದು ಅಬ್ಬರಿಸುವವರಲ್ಲಿ ಹೆಚ್ಚಿನವರು ಜಾತಿವಾದಿಗಳೇ ಎಂಬುದು ವಿಪರ್ಯಾಸ.

      ಅಳಿಸಿ
    4. gunashekara murthy on January 4, 2014 - 9:55pm
      ಪ್ರೀತಿಯ‌ ಸ್ನೇಹಿತರಾದ‌ ಕವಿನಾಗರಾಜ್ ರವರೇ, ನಿಮಗೆ ಪ್ರತಿಕ್ರಿಯೆ ಬರೆದವರು ಜಾತಿವಾದಿಯೆಂದೇ ಇಟ್ಟುಕೊಳ್ಳಿ ಚಿಂತೆಯಿಲ್ಲ‌. ನಾನು ಯಾರೇ ಆದರೂ ಮುಚ್ಚುಮರೆಯಿಲ್ಲದೇ ಹೇಳುವವನು ನಿಮ್ಮ‌ ಬರಹವನ್ನು ನೋಡುತ್ತಿದ್ದೇನೆ ಅದರಲ್ಲಿ ಅದರ ಆ ಸೊಂಕು ಅಡಗಿದೆ ಎನ್ನುವುದರಲ್ಲಿ ಯಾವ‌ ಸಂಶಯವಿಲ್ಲ‌. ಜೋತೆಗೆ ನಿಮ್ಮ ಮನಸಾಕ್ಷಿಯಾಗಿ ಹೇಳಿ ಕೇಸರಿಗೆ ಚಡ್ಡಿಗೆ ತಾವು ಅಂಟಿಲ್ಲವೆಂದು ಆಗ‌ ನಿಮ್ಮ‌ ಮಾತು ಒಪ್ಪುವೇ...
      ಗಣೇಶ on January 6, 2014 - 12:55am
      >ನಿಮ್ಮ ಮನಸಾಕ್ಷಿಯಾಗಿ ಹೇಳಿ ಕೇಸರಿಗೆ ಚಡ್ಡಿಗೆ ತಾವು ಅಂಟಿಲ್ಲವೆಂದು ಆಗ‌ ನಿಮ್ಮ‌ ಮಾತು ಒಪ್ಪುವೇ..
      ಚಡ್ಡಿ ಸ್ಪೆಷಲಿಸ್ಟ್‌ರೆ, :)
      ನನಗೆ ಕವಿನಾಗರಾಜರ ಒಂದು ಕವನ ನೆನಪಾಯಿತು. ನಿಮಗಾಗಿ..( ಹಾಗೇ ಈ ನಿಮ್ಮ ದುರಭ್ಯಾಸವ ಬಿಟ್ಟು ಅವರು ಸೇವೆಯಲ್ಲಿರುವಾಗ ನಡೆದ ರೀತಿಯ ಬಗ್ಗೆ ಅವರೇ ಬರೆದ ಲೇಖನಗಳ ಸರಣಿ ಓದಿ)

      ನಿಂದಕರ ವಂದಿಸುವೆ ನಡೆಯ ತೋರಿಹರು|

      ಮನೆಮುರುಕರಿಂ ಮನವು ಮಟ್ಟವಾಗಿಹುದು||

      ಕುಹಕಿಗಳ ಹರಸುವೆ ಮತ್ತೆ ಪೀಡಕರ|

      ಜರೆವವರು ಗುರುವಾಗರೇ ಓ ಮೂಢ||
      ಕವಿನಾಗರಾಜರು ಒಳ್ಳೆಯ ಗುಣದವರು. ಅವರು ನಿಮಗೆ ಏನೂ ಹೇಳರು.
      ಶಿವಾಜಿ ಬಗ್ಗೆ ಏನು ಬರೆದಿದ್ದೀರಿ- " ಶಿವಾಜಿಯನ್ನು ಬೆಟ್ಟದ ಇಲಿ ಎಂದೇ ಓದಿದ್ದೇವೆ. ಕಾರಣ, ಶಿವಾಜಿ ಆತ ಎದುರು ನಿಂತು ಹೋರಾಡಿಲ್ಲ ಬೆಟ್ಟಗಳಲ್ಲಿ ಅವಿತು ಹೊಡೆದುಬಿಟ್ಟು ಬೆಟ್ಟಗಳಲ್ಲಿಯೇ ನಾವು ಕಂಡಂತೆ ಅಲ್ಲಿ ಬೆಟ್ಟಗಳೇ ಹೆಚ್ಚಿರುವ ಪ್ರದೇಶ ತಪ್ಪಿಸಿಕೊಳ್ಳುತ್ತಿದ್ದ."
      ಇಲಿ,!
      ಮೊದಲಿಗೆ ನಾನು ನಿಮ್ಮ ಬಳಿ ಕೇಳಿದ್ದೆ- ಧರ್ಮದಿಂದ ನಿಮಗೆ ಯಾವ ತೊಂದರೆಯಾಯಿತು ಅಂತ (ಯಾವಾಗ ಅಂತ ಕೇಳಬೇಡಿ- ನಿಮ್ಮ ಲೇಖನಗಳನ್ನು ಪುನಃ ಓದಿ ಹುಡುಕುವ ಕೆಲಸ ಮಾಡಲಾರೆ) ಕೇಳಿದಾಗ ಹಾರಿಕೆಯ ಉತ್ತರ ಕೊಟ್ಟಿರಿ.
      ಅದರ ನಂತರ ಮಗುವಿಗೆ ವಿವರಿಸುವ ಹಾಗೇ ರಾಮಮೋಹನರು ಬುದ್ಧಿ ಮಾತು ಹೇಳಿದರು- ಆಗಲು ಚರ್ಚೆ ಮುಂದುವರಿಸದೇ ಜಾರಿದಿರಿ. ಶಿವಾಜಿಯ ಚರಿತ್ರೆ ಈ ವಯಸ್ಸಲ್ಲಿ ನಿಮಗೆ ಮರೆತು ಹೋಗಿರಬಹುದು- ಪುನಃ ಒಮ್ಮೆ ನಿಮಗಾಗಿ ಸಂಕ್ಷಿಪ್ತವಾಗಿ ವಿಕಿಪೀಡಿಯಾದಲ್ಲಿ -http://en.wikipedia.org/wiki/Shivaji ; ನೀವು ಓದುವುದಿಲ್ಲ. ಯಾಕೆಂದರೆ ಇಲಿತರಹ ಓಡುವ ಅಭ್ಯಾಸ ನಿಮಗಿರುವುದು-ಶಿವಾಜಿಗಲ್ಲ.
      ಟಿಪ್ಪು ಮೈಸೂರಿನ ಹುಲಿ. ನಾವೂ ವಿರೋಧಿಸಿಲ್ಲ. ಆತನಿಂದಾದ ಅನ್ಯಾಯಗಳನ್ನು ಇತಿಹಾಸದಲ್ಲಿದ್ದಂತೆ ವರದಿ ಮಾಡಿದ್ದು. ಸಾಕ್ಷ್ಯಕ್ಕೆ ಅಲ್ಲಿ ಕೊಂಡಿಯೂ ಕೊಟ್ಟಿದ್ದಾರೆ. ಅಲ್ಲಿ ಎಲ್ಲೆಲ್ಲಿ ತಪ್ಪಾಗಿದೆ ಎಂದು ಪುರಾವೆ ಸಹಿತ ತಿಳಿಸಿ. ನಾವೂ ತಿದ್ದಿಕೊಳ್ಳುವೆವು. ಅದು ಬಿಟ್ಟು ಕವಿನಾಗರಾಜರು ಯಾವ ಚಡ್ಡಿಹಾಕಿಕೊಂಡರು ಅಂತ ಸಂಶೋಧನೆಗೆ ಹೊರಟಿದ್ದೀರಲ್ಲಾ? ನಾಚಿಕೆಯಾಗುವುದಿಲ್ಲವಾ? :)

      ಮರುಭೂಮಿಯಲೊಂದು ತರುವ ಕಾಣಲಹುದೆ?|

      ಖೂಳತನದ ಖಳರೊಳಿತು ಮಾಡುವರೇ?||
      ಕೊಂಕರಸುವ ಡೊಂಕ ಮನವೊಡೆವ ಕೆಡುಕನ|
      ಹುಣ್ಣನರಸುವ ನೊಣನೆಂದೆಣಿಸು ಮೂಢ||
      ಗುಣಶೇಕರರೆ, ಸಂಪದಿಗರೆಲ್ಲರೂ ಮಾನವತಾವಾದಿಗಳೇ..ಹಿಂದೆಯೂ ದೇವರ ಬಗ್ಗೆ ಅನೇಕ ಚರ್ಚೆಗಳೂ ಆಗಿವೆ. ಹೊಸದೊಂದು (ಹದಿನಾಲ್ಕು ಕಿಡ್ನಿಗಳ!) ದೇವರನ್ನು ಸೃಷ್ಟಿಯೂ ಮಾಡಿ, ಚಿತ್ರವೂ ಪ್ರಕಟವಾಗಿ, ಮಂತ್ರ ಭಜನೆ ಸಹ ಮಾಡಿದ್ದೇವೆ!:)
      ನಿಮ್ಮ ವರ್ತನೆ ಬದಲಾಯಿಸಿ, ಎಲ್ಲರನ್ನೂ ನಿಮ್ಮ ಹಳದಿ ಕಣ್ಣಲ್ಲಿ ನೋಡಬೇಡಿ. ಮೊದಲಿಗೆ ಕವಿನಾಗರಾಜರಲ್ಲಿ ಕ್ಷಮೆ ಕೇಳಿ.
      gunashekara murthy on January 6, 2014 - 10:17pm
      ಪ್ರೀತಿಯ‌ ಗಣೇಶ‌, ನಾನು ಮತ್ತು ಕವಿ ನಾಗರಾಜ್ ರವರು ಕನ್ನಡ‌ ಬ್ಲಾಗರ್ಸ್ ನಿಂದಲೂ ಪರಿಚಯ‌ ಇಲ್ಲಿಂದ‌ ಮಾತ್ರವಲ್ಲ‌. ಒಂದು ನಾನು ಅವರು ಬರೆದಿರುವುದನ್ನು ನೋಡುತ್ತಲೇ ಬಂದಿರುವೆ. ಒಬ್ಬ‌ ವ್ಯಕ್ತಿಯ‌ ಬರವಣೀಗೆಯಲ್ಲಿ ಬರಹದಲ್ಲೇ ಅವರ‌ ಗುಣಗಳನ್ನು ತಿಳಿಯಬಹುದು ಹಾಗೇಯೇ ನಿಮ್ಮನ್ನು ನಾ ತಿಳಿದದ್ದು. ಅವರ‌ ಕೆಲವು ವಿಚಾರಗಳನ್ನು ಒಪ್ಪಲೇಬೇಕು ಒಪ್ಪುವುದಿದೆ. ಕೆಲವು ಒಪ್ಪಲಾಗದು. ಎಲ್ಲರು ಎಲ್ಲವನ್ನು ಒಪ್ಪಲೇಬೇಕೆಂದಿಲ್ಲ‌. ತಪ್ಪನ್ನು ತಪ್ಪೆಂದು ಹೇಳುವ ಹಕ್ಕಿದೆ ಅಲ್ಲವೇ......?.
      kavinagaraj on January 7, 2014 - 12:07pm
      ಪ್ರಿಯ ಗಣೇಶರೇ, ನಿಮ್ಮ ಪ್ರತಿಕ್ರಿಯೆ ಮತ್ತು ಮಿತ್ರ ಗುಣಶೇಖರಮೂರ್ತಿಯವರ ಅನಿಸಿಕೆಗಳನ್ನು ಇದೀಗ ಗಮನಿಸಿದೆ. ಇಬ್ಬರಿಗೂ ವಂದನೆಗಳು. ನನಗೆ ಅನ್ನಿಸಿದ್ದು:
      1. ಚೆಡ್ಡಿ ಹಾಕಿಕೊಳ್ಳುವವರು (ಆರೆಸ್ಸೆಸ್ ನವನು ಎನ್ನಲು ಪರ್ಯಾಯವಾಗಿ ಬಳಸುವುದು) ಹೇಳುವುದೆಲ್ಲವೂ ಸುಳ್ಳು ಎಂದು ಭಾವಿಸುವುದು ಪೂರ್ವಾಗ್ರಹವಾಗುತ್ತದೆ. ಸತ್ಯ ಯಾರೇ ಹೇಳಲಿ, ಆತ ಶತ್ರುವೇ ಇರಲಿ, ಒಪ್ಪಿಕೊಳ್ಳುವ ಮನೋಭಾವದವನು ನಾನು.
      2. ನಾನು ಹೇಳಿದ್ದೆಲ್ಲವನ್ನೂ ಎಲ್ಲರೂ ಒಪ್ಪಲೇಬೇಕೆಂದು ಎಂದೂ ಹೇಳಲಾರೆ. ನಾನು ಹೇಳಬೇಕೆನಿಸಿದ್ದನ್ನು ಹೇಳಿರುವೆ. ಸರಿಯಿದ್ದರೆ ಒಪ್ಪಬಹುದು, ಇಲ್ಲದಿದ್ದರೆ ಎಕೆ ಸರಿಯಿಲ್ಲ ಎಂದು ತೋರಿಸಿದರೆ ಅವರು ತೋರಿಸುವ ಸತ್ಯವಿಚಾರ ಒಪ್ಪಿಕೊಳ್ಳುವೆ.
      3. ಒಮ್ಮೆ ಒಪ್ಪಿದ ವಿಚಾರವನ್ನು ಮುಂದೆ ಅದು ತಪ್ಪು ಎಂದು ತಿಳಿದರೂ ಬದಲಾಯಿಸಿಕೊಳ್ಳದಿರುವುದು ಪ್ರಗತಿಪರವೆನಿಸುವುದಿಲ್ಲ. ವಯಸ್ಸು, ಬುದ್ಧಿ, ಅನುಭವ ವಿಸ್ತಾರವಾಗುತ್ತಾ ಹೋದಂತೆ ನಮ್ಮ ಅರಿವಿಗೆ ಬರುವ ವಿಚಾರಗಳು ಬದಲಾಗಬಹುದು. ನಾನು ಬಾಲ್ಯದಲ್ಲಿ ಹೊಂದಿದ್ದ ವಿಚಾರಗಳೇ ವೃದ್ಧಾಪ್ಯದಲ್ಲೂ ಇರಬೇಕಿಲ್ಲ ಅಲ್ಲವೇ?
      4. ವಿಷಯಕ್ಕೆ ಸಂಬಂಧಿಸಿದಂತೆ ಅದಕ್ಕೆ ಸೀಮಿತವಾಗಿ ಪೂರಕ ಆಧಾರ, ದಾಖಲೆಗಳೊಂದಿಗೆ ಚರ್ಚೆ ನಡೆದರೆ ಓದುಗರೆಲ್ಲರಿಗೂ ಉಪಕಾರವಾಗುತ್ತದೆ

      ಅಳಿಸಿ
    5. partha1059 on January 6, 2014 - 7:47am
      ಗಣೇಶರೆ
      ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬಾರದು ಅಂತ‌ ಪುನೀತ್ ಹಾಡಿದ್ದಾರೆ !
      kavinagaraj on January 7, 2014 - 12:08pm
      :)

      ಅಳಿಸಿ
    6. Venu Gopal
      Adbhutavada charitreya Parichaya madidderi.aanantha Vandanegalu,Nimagay

      Chandra Kumar
      ಹೆಚ್ಚಿನ ಮಾಹಿತಿಯನ್ನೊಮ್ಮೆ ಬರೆಯಿರಿ...ಸಾಹೇಬರೇ.

      ಅಳಿಸಿ