ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 20, 2018

ಮೂಢ ನಂಬಿಕೆ


     ಹಲವು ವರ್ಷಗಳ ಹಿಂದಿನ ಸಂಗತಿ. ಹಳೇಬೀಡಿನ ತುಂಬು ಕುಟುಂಬದ ಪ್ರಧಾನ ವ್ಯಕ್ತಿಯಾದ ನಮ್ಮ ತಾಯಿ ಲಕ್ಷ್ಮಮ್ಮನವರು ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಗೆಯೊಂದು ಅವರ ತಲೆಯ ಮೇಲೆ ಕುಳಿತುಹೋಗಿತ್ತು. ತಾಯಿಯವರಿಗೆ ಗಾಬರಿಯಾಗಿ ಒಳಕ್ಕೆ ಓಡಿ ಬಂದವರು ಸ್ವಲ್ಪ ಹೊತ್ತು ಕುಳಿತು ಸುಧಾರಿಸಿಕೊಂಡರು. ನಮ್ಮ ಊರಿನ ಪ್ರಮುಖ ಪುರೋಹಿತರು ಮತ್ತು ಜ್ಯೋತಿಷಿಗಳ ಬಳಿಗೆ ಹೋಗಿ ವಿಚಾರಿಸಿದರೆ 'ಕಾಗೆ ತಲೆಯ ಮೇಲೆ ಕುಳಿತರೆ ಮರಣದ ಸೂಚನೆ' ಎಂದುಬಿಟ್ಟರು. ಮೊದಲೇ ಆತಂಕಿತರಾಗಿದ್ದ ನಮ್ಮ ತಾಯಿಗೆ ಜ್ವರ ಬಂದಿತು. ಇದಾಗಿ ಏಳೆಂಟು ದಿನಗಳಾಗಿರಬಹುದು. ಹಲ್ಲಿಯೊಂದು ಸಹ ಅವರ ತಲೆಯ ಮೇಲೆ ಬಿದ್ದುಬಿಟ್ಟಿತು. ಮೊದಲೇ ಹೆದರಿದ್ದ ಅವರು ಇನ್ನೂ ಹೆದರಿಬಿಟ್ಟರು. ನಮ್ಮ ಜೋಯಿಸರು ಪಂಚಾಂಗ ಹರಡಿಕೊಂಡು ತಲೆ ಆಡಿಸಿ ಹೇಳಿದರು: "ಇನ್ನು ಆರು ತಿಂಗಳಲ್ಲಿ ಮರಣ". ನಮ್ಮ ತಾಯಿ ಕುಸಿದುಹೋಗಿ ಹಾಸಿಗೆ ಹಿಡಿದುಬಿಟ್ಟರು. ಕೆಲವು ದಿನಗಳಲ್ಲಿ ಹಾಸಿಗೆ ಬಿಟ್ಟು ಏಳಲೂ ಆಗದಷ್ಟು ನಿಶ್ಶಕ್ತಿ ಅವರನ್ನು ಆವರಿಸಿತು. ಅವರಿಗೆ ತಾವು ಸಾಯುವುದು ಖಂಡಿತ ಅನ್ನಿಸಿಬಿಟ್ಟಿತ್ತು. ನಾನು ಬೇಲೂರಿನ ನನ್ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ ಹೇಗೆಲ್ಲಾ ಧೈರ್ಯ ಹೇಳಬೇಕೆಂದು ಹೇಳಿಕೊಟ್ಟು ಮನೆಗೆ ಕರೆದುಕೊಂಡು ಬಂದೆ. ಅವನೂ ಕಚ್ಚೆಪಂಚೆ, ಸಿಲ್ಕ್ ಜುಬ್ಬಾ ಧರಿಸಿ ಢಾಳಾಗಿ ವಿಭೂತಿ ಪಟ್ಟೆ, ಕುಂಕುಮ ಹಚ್ಚಿಕೊಂಡು ಬಂದಿದ್ದ. ಅಮ್ಮನಿಗೆ, "ಇವರು ಪ್ರಸಿದ್ಧ ಜ್ಯೋತಿಷಿ. ನಾಲ್ಕು ವರ್ಷ ಕೇರಳದಲ್ಲಿ ಅಧ್ಯಯನ ಮಾಡಿದ್ದಾರೆ. ಇವರನ್ನೂ ಭವಿಷ್ಯ ಕೇಳೋಣ ಅಂತ ಕರಕೊಂಡು ಬಂದಿದೀನಿ" ಎಂದು ಹೇಳಿ ನನ್ನ ಸ್ನೇಹಿತನಿಗೆ ಮುಂದುವರೆಸುವಂತೆ ಸೂಚನೆ ಕೊಟ್ಟೆ. ಆಗಿನ ಸಂಭಾಷಣೆ:
ಸ್ನೇಹಿತ: ಅಮ್ಮಾ, ಕಾಗೆ ತಲೆಯ ಮೇಲೆ ಕುಳಿತದ್ದು ಎಂದು? ಎಷ್ಟು ಹೊತ್ತಿಗೆ?
ಅಮ್ಮ: ಶನಿವಾರ, ಬೆಳಿಗ್ಗೆ ೮ ಗಂಟೆ ಇರಬಹುದು.
ಸ್ನೇಹಿತ: (ಕಣ್ಣುಮುಚ್ಚಿ ಏನೋ ಮಣಮಣಿಸಿ, ನಂತರ ಕವಡೆಗಳನ್ನು ಹಾಕಿ ಎಣಿಸಿ, ಗುಣಿಸಿದಂತೆ ಮಾಡಿ) ಶನಿವಾರ. ಹೂಂ. ಶನಿದೇವರ ವಾರ. ಶನಿಯ ವಾಹನ ಕಾಕರಾಜ ನಿಮ್ಮ ತಲೆಯ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಾನೆ. ನಿಮಗೆ ಅಭಯ ನೀಡಿದ್ದಾನೆ. ಸಂತೋಷಪಡಿ.
ಅಮ್ಮ: ಆದರೆ ತಲೆ ಮೇಲೆ ಹಲ್ಲಿ ಬಿದ್ದಿತ್ತಲ್ಲಾ?
ಸ್ನೇಹಿತ: ಆಮೇಲೆ ಏನಾಯಿತು?
ಅಮ್ಮ: ಪರಕೆಯಲ್ಲಿ ಹಲ್ಲಿಗೆ ಹೊಡೆದೆ. ಅದು ಸತ್ತುಹೋಯಿತು. ಹೊರಗೆ ಹಾಕಿದೆ.
ಸ್ನೇಹಿತ: (ಜೋಳಿಗೆಯ ಚೀಲದಿಂದ ಪಂಚಾಂಗ ತೆಗೆದು ನೋಡಿ ಏನೋ ಲೆಕ್ಕಾಚಾರ ಹಾಕಿದಂತೆ ಮಾಡಿ): ಸರಿಯಾಗಿಯೇ ಇದೆ. ಹಲ್ಲಿ ಬಿದ್ದರೆ ಮರಣ. ಹಲ್ಲಿ ತಲೆ ಮೇಲೆ ಬಿತ್ತು. ಸತ್ತು ಹೋಯಿತು. ನಿಮಗೆ ಶನಿದೇವನ ಆಶೀರ್ವಾದ ಗಟ್ಟಿಯಾಗಿದೆ. ನಿಮಗೆ ಪೂರ್ಣ ಆಯಸ್ಸಿದೆ. ನಿಮ್ಮ ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ನಿಮಗೆ ಸಾವಿಲ್ಲ. ತಾಯಿ, ಪುಣ್ಯವಂತರು ನೀವು. ಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿಬನ್ನಿ.
     ನಂತರದಲ್ಲಿ ಖುಷಿಯಿಂದ ಹಾಸಿಗೆಯಿಂದ ಎದ್ದ ಅಮ್ಮ ಕೈಕಾಲು ತೊಳೆದುಕೊಂಡು ದೇವರ ಮುಂದೆ ದೀಪ ಹಚ್ಚಿದ್ದರು. ಗೆಲುವಾಗಿದ್ದರು. ನನ್ನಿಂದಲೇ ಐವತ್ತು ರೂಪಾಯಿ (ಆಗ ಆ ಹಣ ದೊಡ್ಡ ಮೊತ್ತವೇ ಆಗಿತ್ತು.) ದಕ್ಷಿಣೆ ಹಣವನ್ನು ತಾಂಬೂಲದೊಂದಿಗೆ ಅವನಿಗೆ ಕೊಡಿಸಿದ್ದರು. ಅವನನ್ನು ಬಸ್ಸು ಹತ್ತಿಸಿ ಬರಲು ಅವನೊಂದಿಗೆ ಹೋದಾಗ ಅವನು ಹೇಳಿದ್ದು: "ಈ ಸುಳ್ಳು ಜ್ಯೋತಿಷ್ಯ ಹೇಳಿದ್ದು ಎಷ್ಟು ಸರೀನೋ ಗೊತ್ತಿಲ್ಲ. ನಿನಗೋಸ್ಕರ ಬಂದೆ. ಬಂದದ್ದಕ್ಕೂ ಲಾಭ ಅಯಿತು ಬಿಡು". "ಜ್ಯೋತಿಷ್ಯ ಸುಳ್ಳೋ, ನಿಜಾನೋ ನನಗೆ ಮುಖ್ಯ ಅಲ್ಲ. ಅಮ್ಮ ಗೆಲುವಾದಳಲ್ಲ, ಅದು ಮುಖ್ಯ" ಎಂದು ನಾನು ಹೇಳುತ್ತಿದ್ದಾಗ ಬೇಲೂರು ಬಸ್ಸು ಬಂದಿತ್ತು. ಅವನನ್ನು ಕಳಿಸಿ ಮನೆಗೆ ಬಂದರೆ ಅಮ್ಮ ಅದಾಗಲೇ ಹಾಸಿಗೆ ಮಡಿಸಿಟ್ಟಾಗಿತ್ತು. ಕೆಲವೇ ದಿನಗಳಲ್ಲಿ ಮೊದಲಿನಂತೆ ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. ಈ ಘಟನೆ ನಡೆದ ನಂತರದಲ್ಲೂ ಮುಂದಿನ ೨೫ ವರ್ಷಗಳವರೆಗೆ ನಮ್ಮಮ್ಮ ಬದುಕಿದ್ದರು. 
-ಹೆಚ್.ಎಸ್. ಪುಟ್ಟರಾಜು, ಜಾವಗಲ್.
***
ಮಾಹಿತಿಗೆ: ಇದು ಡಿಸೆಂಬರ್, 2014ರ ಕವಿಕಿರಣ ಸಂಚಿಕೆಯಲ್ಲಿ ಪ್ರಕಟಿತ ಲೇಖನ. ಪುಟ್ಟರಾಜು ಹೇಳಿದ್ದ ವಿಚಾರವನ್ನು ಲೇಖನವಾಗಿಸಿ ಪ್ರಕಟಿಸಿದೆ.

ಪುಟ್ಟರಾಜು, ಹೋಗಿ ಬಾ!



     ನಂಬುವುದು ಕಷ್ಟವಾಯಿತು. 'ಪುಟ್ಟರಾಜು ಹೋಗಿಬಿಟ್ಟ' ಎಂಬ ಸುದ್ದಿ ದೂರವಾಣಿ ಮೂಲಕ ತಿಳಿದಾಗ ಗರಬಡಿದುಬಿಟ್ಟಂತಾಯಿತು. ನನ್ನ ತಾಯಿಯ ತಮ್ಮ, ನನ್ನದೇ ವಯಸ್ಸಿನವನು ಕಣ್ಮರೆಯಾದ ಎಂದು ತಿಳಿದಾಗ ಆಘಾತವಾಗಿತ್ತು. ಆದರೆ, ಸತ್ಯ ಸತ್ಯವೇ. ಬಾಲ್ಯದ ಗೆಳೆತನದ ತಾಳಿಕೆ ಬಹಳ ದೀರ್ಘವಾಗಿರುತ್ತದೆ. ಆದರೆ ನನ್ನ ಮತ್ತು ಪುಟ್ಟರಾಜುವಿನದು ಅದಕ್ಕೂ ಮೀರಿದ ಹುಟ್ಟಿನಿಂದಲೂ ಬಂದ ಗೆಳೆತನ. ಹುಟ್ಟಿನಿಂದ ಬಂದ ಗೆಳೆತನಕ್ಕೆ ಎಂದೂ ಚ್ಯುತಿ ಬರಲೇ ಇಲ್ಲ. ಕೊನೆತನಕ ಮಧುರ ವಿಶ್ವಾಸ ಯಾವುದೇ ಚುಕ್ಕೆಯಿಲ್ಲದಂತೆ ಉಳಿದಿತ್ತು. ಒಂದು ಸಣ್ಣ ಸ್ವರೂಪದ ಮನಸ್ತಾಪವಾಗಲೀ, ಕಿತ್ತಾಟವಾಗಲೀ, ಜಗಳವಾಗಲೀ ಹುಡುಗಾಟಕ್ಕಾದರೂ, ಬಾಲ್ಯದ ಹುಡುಗಾಟದ ದಿನಗಳಲ್ಲೂ ಆಗಿರಲೇ ಇಲ್ಲ. ಇಬ್ಬರೂ ಹುಟ್ಟಿದ್ದು ಹಳೇಬೀಡಿನ ಮನೆಯಲ್ಲಿಯೇ! ಅವನು ಹುಟ್ಟಿದ ಕೆಲವು ತಿಂಗಳುಗಳಲ್ಲೇ ನಾನೂ ಈ ಭೂಮಿಗೆ ಬಂದಿದ್ದು. ಅಜ್ಜ ಪುಟ್ಟಯ್ಯನವರ ನೆನಪಿನಲ್ಲಿ ಅವನಿಗೆ ಪುಟ್ಟರಾಜು ಎಂದು ಹೆಸರಿಟ್ಟಿದ್ದರು. ನನಗೆ ನಾಗರಾಜ ಎಂಬ ಹೆಸರು ಬರಲು ಕಾರಣ ನನ್ನ ತಾಯಿಯ ಅಣ್ಣ ಶ್ರೀನಿವಾಸಮೂರ್ತಿಯವರು. "ಭಾವ, ಮಗುವಿಗೆ ನಾಗರಾಜ ಎಂದು ಹೆಸರಿಡಿ" ಎಂದು ಅವರು ನನ್ನ ತಂದೆಯವರಿಗೆ ಬರೆದಿದ್ದ ಪೋಸ್ಟ್ ಕಾರ್ಡನ್ನು ನನಗೆ ಓದಲು, ಬರೆಯಲು ಬಂದ ನಂತರದಲ್ಲಿ ನಾನೇ ಓದಿದ್ದೆ. ಹಿಂದೆಲ್ಲಾ ಬರುತ್ತಿದ್ದ ಪೋಸ್ಟ್ ಕಾರ್ಡುಗಳನ್ನು ತೊಲೆಗೋ, ಕಿಟಿಕಿಯ ಸರಳಿಗೋ ಕಟ್ಟುತ್ತಿದ್ದ ಒಂದು ಕೊಕ್ಕೆಯ ತಂತಿಗೆ ಚುಚ್ಚಿ ಇಡುತ್ತಿದ್ದರು. ಎಷ್ಟೋ ವರ್ಷಗಳವರೆಗೆ ಅವು ಇರುತ್ತಿದ್ದವು. ಹೀಗಾಗಿ ಆ ಕಾರ್ಡು ನನಗೆ ಓದಲು ಸಿಕ್ಕಿತ್ತು. ಪುಟ್ಟರಾಜುವನ್ನು ಪುಟ್ಟ ಎಂದು ಕರೆಯುತ್ತಿದ್ದರೆ, ನನ್ನನ್ನು ಈಗಲೂ ರಾಜು ಎಂತಲೇ ನನ್ನ ಬಂಧುಗಳು, ಹತ್ತಿರದವರು ಕರೆಯುತ್ತಾರೆ. ಪುಟ್ಟರಾಜು ಎಂಬ ಹೆಸರಿನಲ್ಲಿಯೇ ಪುಟ್ಟ ಮತ್ತು ರಾಜು ಎರಡೂ ಇವೆ. ಇದು ನಮ್ಮ ಅಕಳಂಕಿತ ಸ್ನೇಹದ ಗುರುತಾಗಿ ಭಾವಿಸುತ್ತೇನೆ. 
     ನನ್ನ ಮತ್ತು ಪುಟ್ಟರಾಜವಿನ ಸ್ನೇಹ ಸಂಬಂಧಗಳ ಬಗ್ಗೆ ಈ ಸಂದರ್ಭದಲ್ಲಿ ಹಂಚಿಕೊಂಡು ನೋವು ಮರೆಯಬಯಸುವ, ಸಮಾಧಾನ ಪಟ್ಟುಕೊಳ್ಳುವ ಸಣ್ಣ ಪ್ರಯತ್ನವಿದು. ಚಿಕ್ಕಂದಿನಲ್ಲಿ ಬೇಸಿಗೆಯ ರಜೆ ಬಂತೆಂದರೆ ನನ್ನ ವಾಸ ಹಳೇಬೀಡಿನ ಅಜ್ಜಿಯ ಮನೆಯಲ್ಲಿಯೇ. ಬೇಸಿಗೆ ರಜ ಏನು, ಯಾವುದೇ ರಜಾದಿನಗಳು, ಸಣ್ಣಪುಟ್ಟ ಸಮಾರಂಭಗಳು ಇತ್ಯಾದಿ ದಿನಗಳಲ್ಲೂ ಹಳೇಬೀಡಿನಲ್ಲೇ ಇರುತ್ತಿದ್ದುದು. ಹಳೇಬೀಡಿನ ಮನೆಯೋ ಮಕ್ಕಳ ಸಾಮ್ರಾಜ್ಯ. ಅಲ್ಲಿಯ ಮಕ್ಕಳು, ಊರಿನ ಮಕ್ಕಳು ಸೇರಿ ಬೀದಿಗಳಲ್ಲಿ ಆಡುತ್ತಿದ್ದರೆ ಅದೊಂದು ದೊಡ್ಡ ಸೈನ್ಯಗಳ ನಡುವಿನ ಕಾದಾಟವೇನೋ ಎಂಬಂತಿರುತ್ತಿತ್ತು. ಹಳೇಬೀಡಿನ ಬಹುತೇಕರು ನನ್ನ ಪರಿಚಿತರು, ವಿಶ್ವಾಸಿಗಳು ಆಗಿರುವುದು ಇದೇ ಕಾರಣಕ್ಕೆ. ಕಳ್ಳ-ಪೋಲಿಸ್ ಆಟ, ಚಿನ್ನಿ-ದಾಂಡು, ಬುಗುರಿ, ಲಗೋರಿ, ಗೋಲಿಯಾಟ, ಚೆಂಡಾಟ, ಇತ್ಯಾದಿ ಯಾವುದೇ ಆಟವಿರಲಿ, ಪುಟ್ಟರಾಜುವಿನ ಗುಂಪಿನಲ್ಲೇ ನಾನಿರಬೇಕು. ಆಟದ ನಡುವೆ ಇತರರೊಂದಿಗೆ ಜಗಳಗಳಾದಾಗ ಅವನು ನನ್ನ ಪಕ್ಷಪಾತಿಯಾಗಿರುತ್ತಿದ್ದ. ನನಗೆ ಅವನದೇ ಭೀಮಬಲವಾಗಿರುತ್ತಿತ್ತು. ಗೋಲಿ, ಚಿನ್ನಿ-ದಾಂಡು, ಬುಗುರಿ ಇತ್ಯಾದಿಗಳಲ್ಲಿ ಚುರುಕಾಗಿದ್ದ ನನ್ನನ್ನು ಸೇರಿಸಬಾರದೆಂದು ಹೇಳುತ್ತಿದ್ದ ಕೆಲವು ಹುಡುಗರ ಬಾಯಿ ಮುಚ್ಚಿಸುತ್ತಿದ್ದವನು ಪುಟ್ಟರಾಜು. ಗೋಲಿಯಾಟದಲ್ಲಿ ಎರಡು ದೊಡ್ಡ ಡಬ್ಬಿಗಳಷ್ಟು ಗೋಲಿಗಳನ್ನು ಗೆದ್ದು ಪುಟ್ಟರಾಜುವಿಗೆ ಕೊಟ್ಟಿದ್ದೆ. ಇಬ್ಬರೂ ಸೇರಿ ಬುಗುರಿಯಾಟದಲ್ಲಿ ಎಷ್ಟು ಜೊತೆಗಾರರ ಬುಗುರಿಗಳಿಗೆ ಗುನ್ನ ಹಾಕಿ ಒಡೆದಿದ್ದೆವೋ ಲೆಕ್ಕವಿಲ್ಲ. ದೇವಸ್ಥಾನದ ಮೇಲ್ಭಾಗದಲ್ಲೆಲ್ಲಾ ಹತ್ತಿ ಕುಣಿಯುತ್ತಿದ್ದೆವು. ಯಾರ ಯಾರದೋ ಮನೆಯ ಅಟ್ಟಗಳು, ಸಂದಿ-ಗೊಂದಿಗಳಲ್ಲಿ ಅಡಗಿ ಆಟವಾಡುತ್ತಿದ್ದೆವು. ೫೦-೬೦ ಮಕ್ಕಳು ಒಟ್ಟಿಗೇ ಧಡಗುಟ್ಟಿಕೊಂಡು ಆಟವಾಡುವಾಗ ಅದೊಂದು ರಣರಂಗವೇನೋ ಎಂಬಂತೆ ಕಾಣುತ್ತಿತ್ತು. ಮನೆಯವರಿಗೆ ಮಕ್ಕಳನ್ನು ಹಿಡಿದು ಸ್ನಾನ, ತಿಂಡಿ, ಊಟ ಮಾಡಿಸುವುದೆಂದರೆ ಹರಸಾಹಸವಾಗುತ್ತಿತ್ತು. ರಜೆ ಮುಗಿದು ವಾಪಸು ಹೋಗುವಾಗ ಹೋಗಬೇಕಲ್ಲಾ ಎಂಬ ಸಂಕಟದೊಂದಿಗೆ ಮರಳುತ್ತಿದ್ದೆ. 
     ಪ್ರಾಥಮಿಕ ಶಾಲಾದಿನಗಳಲ್ಲಿ ಕೆಲವೊಮ್ಮೆ ಅವನೊಂದಿಗೆ ಅವನ ತರಗತಿಗೂ ಹೋಗಿ ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲಾ ಮಾಸ್ತರುಗಳು ಇದಕ್ಕೆ ಆಕ್ಷೇಪಿಸುತ್ತಿರಲಿಲ್ಲ. ಅಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಅವರು ಕಲಿತಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಮಾಸ್ತರರು ಪರೀಕ್ಷಿಸುವ ವಿಧಾನವೂ ವಿಚಿತ್ರವಾಗಿತ್ತು. ಒಂದು ಪ್ರಶ್ನೆ ಕೇಳಿದಾಗ ಉತ್ತರ ಹೇಳದ ವಿದ್ಯಾರ್ಥಿ ನಿಂತುಕೊಂಡಿರಬೇಕಿತ್ತು. ನಂತರ ಪಕ್ಕದ ವಿದ್ಯಾರ್ಥಿಯ ಸರದಿ. ಹೀಗೆ ಸರಿಯುತ್ತರ ಬರುವವರೆಗೂ ಮುಂದುವರೆಯುತ್ತಿತ್ತು. ಸರಿಯುತ್ತರ ಹೇಳಿದ ವಿದ್ಯಾರ್ಥಿಯಿಂದ ಉತ್ತರ ಹೇಳದ ಸಹಪಾಠಿಗಳ ಮೂಗು ಹಿಡಿಸಿ ಕೆನ್ನೆಗೆ ಹೊಡೆಸುತ್ತಿದ್ದರು. ಹೀಗೆಯೇ ಒಂದು ಸಲ ಸುಮಾರು ೧೦-೧೨ ಹುಡುಗರು ಉತ್ತರ ಹೇಳದೇ ನಿಂತುಕೊಂಡರು. ಪುಟ್ಟರಾಜುವೂ ಉತ್ತರ ಹೇಳದೆ ನಿಂತುಕೊಂಡ. ಪಕ್ಕದಲ್ಲಿದ್ದ ನಾನು ಉತ್ತರ ಹೇಳಿದೆ. ಪುಟ್ಟರಾಜು ನನ್ನ ಕಿವಿಯಲ್ಲಿ ಮೆಲ್ಲಗೆ ಪಿಸುಗುಟ್ಟಿದ್ದ: "ಆ ಕೊನೆಯಲ್ಲಿ ನಿಂತಿದ್ದಾಳಲ್ಲಾ ಅವಳಿಗೆ ಜೋರಾಗಿ ಬಾರಿಸು. ನನಗೆ ಎರಡು ಸಲ ಹೊಡೆದಿದ್ದಾಳೆ". ಆ ಹುಡುಗಿಯ ಹೆಸರನ್ನು ಗೀತಾನೋ. ಲೀಲಾನೋ ಏನೋ ಹೇಳಿದ್ದ, ನನಗೆ ನೆನಪಿಲ್ಲ. ನಾನು ಹಾಗೆಯೇ ಮಾಡಿದ್ದೆ. ಏಟಿನ ರಭಸಕ್ಕೆ ಆ ಹುಡುಗಿಯ ಕಣ್ಣಿನಲ್ಲಿ ನೀರು ತುಳುಕಿತ್ತು.
     ಚಿಕ್ಕಂದಿನಲ್ಲಿ ಮಕ್ಕಳು ಒಬ್ಬರೊಬ್ಬರಿಗೆ ಅಡ್ಡಹೆಸರುಗಳನ್ನು ಇಟ್ಟು ಚುಡಾಯಿಸುವುದು, ರೇಗಿಸುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ದೊಡ್ಡವರೂ ಅದೇ ಹೆಸರಿನಿಂದ ಅವರುಗಳನ್ನು ರೇಗಿಸುತ್ತಿದ್ದುದು ತಮಾಷೆಯಾಗಿರುತ್ತಿತ್ತು, ಕಂಕಭಟ್ಟ, ಕಾಳಂಭಟ್ಟ, ಪೆದ್ದಂಭಟ್ಟ, ತಿಮ್ಮಿ, ದಾಸಿ, ಬೋಂಡ, ಪಾಯಸ, ರವೆ ಉಂಡೆ, ಹೀಗೆ ಅಡ್ಡ ಹೆಸರುಗಳಿರುತ್ತಿದ್ದವು. ಪುಟ್ಟರಾಜುವಿಗಿದ್ದ ಅಡ್ಡ ಹೆಸರು ಕಾಳಂಭಟ್ಟ! ಒಮ್ಮೊಮ್ಮೆ ಮನೆಯಲ್ಲಿ ಎಲ್ಲರೊಡನೆ ಕುಳಿತು ಅಜ್ಜಿಯೋ, ಅತ್ತೆ ಪ್ರಭಾಮಣಿಯವರೋ ಕೈತುತ್ತು ಹಾಕುತ್ತಿದ್ದಾಗಿನ ತುತ್ತಿನ ರುಚಿಯನ್ನು, ಅದು ಕೆಂಪುಮೆಣಸಿನಕಾಯಿ, ತೆಂಗಿನಕಾಯಿ ತುರಿ, ಉಪ್ಪು ಸೇರಿಸಿ ರುಬ್ಬಿದ ಚಟ್ನಿ ಕಲಸಿದ ಅನ್ನವಾದರೂ, ಈಗಲೂ ನೆನಪಿಸಿಕೊಳ್ಳುವಂತಾಗುತ್ತದೆ. ಹತ್ತು-ಹನ್ನೆರಡು ಜನರಿಗೆ ಕೈತುತ್ತು ಹಾಕುವಾಗ ಮತ್ತೆ ನಮ್ಮ ಸರದಿ ಬರುವವರೆಗೆ ಕೈಯೊಡ್ಡಿ ಕುಳಿತಿರುತ್ತಿದ್ದೆವು. ಹಂಚಿ ತಿನ್ನುವ ಅಭ್ಯಾಸ ಬರಬೇಕೆಂದರೆ ಒಟ್ಟು ಕುಟುಂಬದಲ್ಲಿ ಇರಬೇಕು, ಒಟ್ಟಾಗಿ ಇರಬೇಕು. ಊಟವಾದ ಮೇಲೆ ರಾಮಸ್ವಾಮಿ ಹೇಳುವ ಬಾಯಿ ಬಿಟ್ಟುಕೊಂಡು ಕೇಳುವಂತಿದ್ದ ಸ್ವಾರಸ್ಯಕರ ಕಟ್ಟುಕಥೆಗಳನ್ನು ಕೇಳಿ ಮಲಗುತ್ತಿದೆವು. 
     ಹಳೇಬೀಡಿನ ಮನೆಯಲ್ಲಿ ನನಗೆ ಅಜ್ಜನೆಂದರೆ ಭಯಮಿಶ್ರಿತ ಪ್ರೀತಿ ಮತ್ತು ಗೌರವ. ಆಸ್ತಮಾ ಕಾರಣದಿಂದ ನರಳುತ್ತಿದ್ದ ಮತ್ತು ಸದಾ ಗಂಭೀರವಾಗಿರುತ್ತಿದ್ದ ಶಾನುಭೋಗ ಸುಬ್ಬರಾಯರಿಗೆ ಸಿಟ್ಟು ಜಾಸ್ತಿ. ಒಮ್ಮೆ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಪುಟ್ಟರಾಜ ಯಾವ ಕಾರಣಕ್ಕೋ ಹಟ ಮಾಡುತ್ತಿದ್ದ. ಅವನ ಗಲಾಟೆ ಗಮನಿಸುತ್ತಿದ್ದ ನನ್ನಜ್ಜ ಪಕ್ಕದಲ್ಲಿದ್ದ ಹಿತ್ತಾಳೆ ಲೋಟವನ್ನು ಅವನೆಡೆಗೆ ಬೀಸಿದ್ದರು. ಠಣ್ಣನೆ ಶಬ್ದ ಮಾಡುತ್ತಾ ಅದು ಪುಟ್ಟರಾಜುವಿನ ತಲೆಗೆ ಅಪ್ಪಳಿಸಿತ್ತು. ಅವನು ನೋವಿನಿಂದ ಊಟ ಬಿಟ್ಟು ಅಳುತ್ತಾ ಹೊರಗೆ ಓಡಿದಾಗ ಅಜ್ಜಿ ಅವನನ್ನು ಹಿಂಬಾಲಿಸಿ ಓಡಿಹೋಗಿ ಅವನನ್ನು ಸಮಾಧಾನಿಸಿ ಊಟ ಮಾಡುವಂತೆ ಮಾಡಿದ್ದರು. ನಾನೂ ಹೆದರಿ ಗಬಗಬನೆ ಊಟ ಮಾಡಿ ಮೇಲೆದ್ದಿದ್ದೆ. ತಾಯಿಯ ಇತರ ತಮ್ಮಂದಿರಾದ ಸೂರ, ಗೋಪಾಲ, ಶಂಕರ, ರಾಮಸ್ವಾಮಿಯವರನ್ನೂ ಸಹ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರಾಗಿದ್ದರೂ ಅವರೊಡನೆ ಇರುವ ಸಲಿಗೆ, ಪ್ರೀತಿ, ವಿಶ್ವಾಸಗಳಿಂದಾಗಿ ಏಕವಚನದಲ್ಲೇ ಚಿಕ್ಕಂದಿನಿಂದಲೂ ಮಾತನಾಡಿಸುತ್ತಾ ಬಂದಿರುವೆ. ತಿಳುವಳಿಕೆ ಬಂದ ಮೇಲೂ ಈ ಸ್ವಭಾವ ಮುಂದುವರೆದಿದ್ದು ಇದನ್ನು ಯಾರೂ ತಪ್ಪಾಗಿ ಭಾವಿಸಿಲ್ಲ. ನಾನು ಬಹುವಚನ ಬಳಸುತ್ತಿದ್ದುದು ತಾಯಿಯ ಅಣ್ಣ ದಿ. ಶ್ರೀನಿವಾಸಮೂರ್ತಿಯವರನ್ನು ಕುರಿತು ಮಾತ್ರ. ನನ್ನ ಅಜ್ಜ ಕಾಯಿಲೆಯಿಂದ ವಿಧಿವಶರಾದಾಗ ನನ್ನ ಮತ್ತು ಪುಟ್ಟರಾಜುವಿನ ವಯಸ್ಸು ೧೦ ವರ್ಷಗಳಷ್ಟೆ ಆಗಿತ್ತು. ಪ್ರಜಾವಾಣಿ ಪತ್ರಿಕೆಯ ೩ನೆಯ ಪುಟದಲ್ಲಿ, 'ಹಳೇಬೀಡಿನ ಹುಲಿ ಎಂದು ಪ್ರಸಿದ್ಧರಾಗಿದ್ದ ಶ್ಯಾನುಭೋಗ್ ಹೆಚ್.ಪಿ. ಸುಬ್ಬರಾಯರು ನಿಧನರಾದರು' ಎಂಬ ಸಣ್ಣ ಸುದ್ದಿ ಪ್ರಕಟವಾಗಿತ್ತು.
     ಒಂದು ಸಲ ಅವನಿಗೆ ನಾಲ್ಕಾಣೆ ಪಾವಲಿ ಸಿಕ್ಕಿತ್ತು. ಆಗ ನಾಲ್ಕಾಣೆ ಎಂದರೆ ದೊಡ್ಡ ಹಣವೇ! ಆಗ ಆಣೆ ರೂಪಾಯಿ ಕಾಲ. ಒಂದು ಆಣೆಗೆ ಹನ್ನೆರಡು ಕಾಸು. ಒಂದು ರೂಪಾಯಿಗೆ ೧೬ ಆಣೆ. ೬ ಕಾಸು ಒಂದು ತೂತಿನ ಬಿಲ್ಲೆ ನಾಣ್ಯ, ೩ ಕಾಸು ದೊಡ್ಡ ತಾಮ್ರದ ನಾಣ್ಯ. ಒಂದೊಂದು ಕಾಸಿಗೂ ಬೆಲೆ ಇತ್ತು. ಚಿಲ್ಲರೆ ಸಮಸ್ಯೆ ಇರಲಿಲ್ಲ. ಈಗ ೨೫ ಪೈಸೆ, ೫೦ ಪೈಸೆಗಳಿಗೂ ಬೆಲೆಯೇ ಇಲ್ಲ, ಸಿಗುವುದೂ ಇಲ್ಲ. ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗಿ ಕಡಲೆಕಾಯಿ ತಂದ. ಒಂದು ದೊಡ್ಡ ಚೀಲದ ತುಂಬಾ ಕಡಲೆಕಾಯಿ ಬಂತು. ನನ್ನನ್ನು ಅಲ್ಲೇ ನಿಲ್ಲಿಸಿ ಮನೆಗೆ ಓಡಿಹೋಗಿ ಜೇಬಿನಲ್ಲಿ ಒಂದೆರಡು ಅಚ್ಚು ಬೆಲ್ಲವನ್ನೂ ಇಟ್ಟುಕೊಂಡು ಬಂದ. ಇಬ್ಬರೂ ಶಾಲೆಯ ಮೆಟ್ಟಿಲ ಮೇಲೆ ಕುಳಿತು ಸಾಕಾಗುವಷ್ಟು ತಿಂದೆವು. ಆದರೂ ಮುಕ್ಕಾಲು ಚೀಲ ಕಡಲೆಕಾಯಿ ಉಳಿದಿತ್ತು. ಏನು ಮಾಡುವುದು? ಮನೆಯಲ್ಲಿ ಹೇಳಿದರೆ ಬೈತಾರೆ. ಮೆಲ್ಲಗೆ ಮನೆಯ ಹಿತ್ತಲ ಗೋಡೆಯ ಬಳಿಯಿಂದ ಬಂದವನು ಅಲ್ಲಿ ಚೀಲ ಇಟ್ಟ. ಮುಂಬಾಗಿಲಿಂದ ಇಬ್ಬರೂ ಬಂದೆವು. ಯಾರೂ ನೋಡದಂತೆ ಚೀಲವನ್ನು ಅಟ್ಟಕ್ಕೆ ಸಾಗಿಸಿದ. ನನ್ನನ್ನು  ಕೆಳಗೆ ಇರಲು ಹೇಳಿ ಅವನು ಅಟ್ಟ ಹತ್ತಿದ. "ನಾನು ಮೊದಲು ಹೋಗಿ ತಿನ್ನುತ್ತೇನೆ. ಆಮೇಲೆ ನೀನು ಹೋಗಿ ತಿನ್ನು. ಇವತ್ತು ಅದನ್ನು ಮುಗಿಸಿಬಿಡಬೇಕು" ಎಂದು ಹೇಳಿದ. ಹಾಗೆ ಹೋದವನು ಎಷ್ಟು ಹೊತ್ತಾದರೂ ಕೆಳಗೆ ಬರಲೇ ಇಲ್ಲ. ಊಟದ ಸಮಯ ಆಯಿತು. ಎಲ್ಲರೂ ಬಂದರೂ ಪುಟ್ಟನ ಸುಳಿವಿಲ್ಲ. ಅವನನ್ನು ಹುಡುಕಲು ಶುರು ಮಾಡಿದರು. ನನ್ನನ್ನು ಕೇಳಿದರು. ನನಗೆ ಉಭಯಸಂಕಟ. ಹೇಳುವಂತಿಲ್ಲ, ಬಿಡುವಂತಿಲ್ಲ. ಗೊತ್ತಿಲ್ಲ ಎಂದುಬಿಟ್ಟೆ. ಊರಲ್ಲೆಲ್ಲಾ ಹುಡುಕಾಡಿದರೂ ಅವನು ಸಿಗದಾದಾಗ ಅಜ್ಜಿ ಆತಂಕದಿಂದ ಅಳತೊಡಗಿದರು. ನನಗೆ ಅವರು ಅಳುವುದನ್ನು ನೋಡಲಾಗದೆ ಪುಟ್ಟ ಅಟ್ಟದಲ್ಲಿ ಇರುವುದನ್ನು ಹೇಳಿಬಿಟ್ಟೆ. ಮೇಲೆ ಹತ್ತಿ ನೋಡಿದರೆ ಅವನು ಕಡಲೆಕಾಯಿ ತಿಂದೂ ತಿಂದೂ ಸುಸ್ತಾಗಿ ಮಲಗಿಬಿಟ್ಟಿದ್ದ. ನಿದ್ದೆ ಬಂದಿತ್ತು. ಎಷ್ಟು ತಿಂದರೂ ಚೀಲ ಖಾಲಿಯಾಗಿರಲಿಲ್ಲ. ಇನ್ನೂ ಅರ್ಧ ಚೀಲ ಕಡಲೆಕಾಯಿ ಉಳಿದಿತ್ತು. ಅವನ ಪರಿಸ್ಥಿತಿ ನೋಡಿ ಯಾರೂ ಅವನನ್ನು ಬೈಯಲಿಲ್ಲ. ಮರುದಿನವೆಲ್ಲಾ ಭೇದಿ ಕಿತ್ತುಕೊಂಡಿತ್ತು. ನಾನೂ ಹೊಟ್ಟೆನೋವಿನಿಂದ ಒದ್ದಾಡಿದ್ದೆ. ಹೆಚ್ಚಾಗಿದ್ದ ಕಡಲೆಕಾಯಿಯನ್ನು ಏನು ಮಾಡಬೇಕಿತ್ತೆಂದು ನಮ್ಮಿಬ್ಬರಿಗೂ ಹೊಳೆಯದೆ ಈ ಫಜೀತಿಯಾಗಿತ್ತು. ಅಲ್ಲದೆ ಈಗಿನಂತೆ ಪದಾರ್ಥಗಳನ್ನು ದಂಡ ಮಾಡುವ ಮನಸ್ಥಿತಿ ಆಗಿನ ಕಾಲದಲ್ಲಿ ಇರಲಿಲ್ಲ.
     ಬಾಲ್ಯ, ಯೌವನದ ದಿನಗಳಲ್ಲಿನ ಆಟ, ಹುಡುಗಾಟ, ತುಂಟಾಟಗಳನ್ನು ಯಾವ ಮುಚ್ಚುಮರೆ ಇಲ್ಲದೆ ಇಬ್ಬರೂ ಹಂಚಿಕೊಳ್ಳುತ್ತಿದ್ದೆವು. ಹಳೇಬೀಡಿನ ದೊಡ್ಡಕೆರೆಗೆ ಊರಿನ ಹೆಚ್ಚಿನ ಹೆಂಗಸರು ಬಟ್ಟೆಗಳನ್ನು ಒಗೆಯಲು ಬುಟ್ಟಿಗಳಲ್ಲಿ ಇಟ್ಟುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಒಟ್ಟಿಗೇ ಮಾತನಾಡಲು, ಕಷ್ಟ-ಸುಖಗಳನ್ನು ಹಂಚಿಕೊಳ್ಳಲೂ ಅವಕಾಶವಾಗುತ್ತಿದ್ದುದೂ ಇದಕ್ಕೆ ಒಂದು ಕಾರಣವಾಗಿದ್ದಿರಬಹುದು. ಪುಟ್ಟರಾಜು ಜೊತೆಗೆ ಓದುತ್ತಿದ್ದ ಕೆಲವು ಹುಡುಗಿಯರೂ ಅಲ್ಲಿ ಬಟ್ಟೆ ಒಗೆಯಲು ಹೋಗುತ್ತಿದ್ದರಂತೆ. ಪುಟ್ಟರಾಜು ಆಗ ಕೆರೆಯಲ್ಲಿ ಈಜಾಡಲು ಹೋಗುತ್ತಿದ್ದನಂತೆ. ಆ ಹುಡುಗಿಯರು ಬರಿಯ ಚಡ್ಡಿಯಲ್ಲಿ ಈಜುತ್ತಿದ್ದ ಇವನನ್ನು ನೋಡುತ್ತಾ ಮುಸಿ ಮುಸಿ ನಗುತ್ತಿದ್ದರಂತೆ. ಅವನೂ ಆ ಹುಡುಗಿಯರನ್ನು ಮೆಚ್ಚಿಸಲು ಕೆರೆಯ ಮಧ್ಯಭಾಗದವರೆಗೂ ಈಜಿಕೊಂಡು ಹೋಗಿಬರುತ್ತಿದ್ದನಂತೆ. ಒಂದು ಸಲ ನನ್ನನ್ನೂ ಕರೆದುಕೊಂಡು ಹೋಗಿ ಆ ರೀತಿ ಈಜಾಡಿದ್ದ. ಈಜು ಬಾರದ ನಾನು ಕೆರೆಯ ದಂಡೆಯಲ್ಲಿ ನಿಂತು ನೋಡುತ್ತಿದ್ದೆ. ಅವನ ಕಟ್ಟುಮಸ್ತಾಗಿದ್ದ ಶರೀರ ನೀರಿನಲ್ಲಿ ತೊಯ್ದು ಬಿಸಿಲಿನಲ್ಲಿ ಮಿರಮಿರನೆ ಹೊಳೆಯುತ್ತಿತ್ತು. ಅವನು ಹೇಳಿದ್ದ ಸಂಗತಿ ನಿಜವಾಗಿತ್ತು. ಕೆಲವು ಹುಡುಗಿಯರು ಅವನು ಈಜುವುದನ್ನು ನೋಡುತ್ತಾ ನೆಪ ಮಾತ್ರಕ್ಕೆ ಬಟ್ಟೆ ಒಗೆಯುತ್ತಿದ್ದುದನ್ನು ಗಮನಿಸಿದ್ದೆ. 
     ಪುಟ್ಟರಾಜನಿಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅದು ಹೇಗೋ ಎಸ್ಸೆಸ್ಸೆಲ್ಸಿವರೆಗೆ ಬಂದಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಹಲವಾರು ಸಲ ನಪಾಸಾಗಿದ್ದ. ೯-೧೦ ಸಲ ಸಪ್ಲಿಮೆಂಟರಿ ಪರೀಕ್ಷೆಗೆ ನಾಮಕಾವಸ್ಥೆಗೆ ಹೋಗಿಬಂದಿದ್ದ. ಅನೇಕ ಸಲ ಪಠ್ಯಪುಸ್ತಕಗಳು ಬದಲಾಗಿದ್ದರಿಂದ ಹಳೆಯ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಪರೀಕ್ಷಾಪತ್ರಿಕೆಗಳನ್ನು ಮಂಡಳಿ ಸಿದ್ಧಪಡಿಸಬೇಕಾಗಿತ್ತು. ಹೀಗಾಗಿ ಅತಿ ಹಳೆಯ ಸ್ಕೀಮಿನ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡುವ ನಿರ್ಧಾರವನ್ನು ಮಂಡಳಿ ಒಮ್ಮೆ ತೆಗೆದುಕೊಂಡಿತ್ತು. ಈ ವಿಷಯ ಪೇಪರಿನಲ್ಲಿ ಬಂದಿದ್ದನ್ನು ಓದಿದ್ದ ನಾನು, ಪುಟ್ಟನಿಗೆ, "ಈ ಸಲ ನೀನು ಪಾಸಾಗುತ್ತೀಯ" ಎಂದಿದ್ದೆ. ಅವನು, "ಅದು ಹೇಗೆ ಸಾಧ್ಯ? ಉತ್ತರಪತ್ರಿಕೆಯಲ್ಲಿ ಒಂದಕ್ಷರವನ್ನೂ ನಾನು ಬರೆದೇ ಇಲ್ಲ" ಎಂದಿದ್ದ. ಕೊನೆಗೂ ಅವನು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗಿಯೇಬಿಟ್ಟ! ಹೀಗೆ ಪಾಸಾದವರನ್ನು 'ಗಾಂಧಿ ಪಾಸು' ಎನ್ನುತ್ತಿದ್ದರು. ಗಾಂಧಿ ಹೆಸರನ್ನು ಇಂತಹದಕ್ಕೆಲ್ಲಾ ಏಕೆ ಬಳಸುತ್ತಾರೋ ಗೊತ್ತಿಲ್ಲ. ಅವನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇರಬಹುದು. ಆದರೆ ಅವನ ವ್ಯವಹಾರ ಜ್ಞಾನ, ಲೋಕಸಂಗ್ರಹ ಶಕ್ತಿ, ಧೈರ್ಯ ಇತರರನ್ನು ಮೀರಿಸುವಂತಿತ್ತು.
     'ಶ್ರೀ ಕೃಷ್ಣ ಸೋಡಾ ಫ್ಯಾಕ್ಟರಿ' -  ಹಳೇಬೀಡು ಕುಟುಂಬದ ಕೊಡುಗೆ ಮತ್ತು ಕುಟುಂಬವನ್ನು ಭದ್ರ ನೆಲೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಸೂರ, ಗೋಪಾಲ, ಶಂಕರ, ರಾಮು, ಪುಟ್ಟ, ಚಿದ ಎಲ್ಲರೂ ಇಲ್ಲಿ ಕೆಲಸ ಮಾಡಿದ್ದಾರೆ, ಗೋಲಿ ಸೋಡಾಬಾಟಲುಗಳಿಗೆ ಗ್ಯಾಸ್ ತುಂಬಿಸಿದ್ದಾರೆ, ಬಣ್ಣ ಬಣ್ಣದ ಸಿಹಿನೀರಿನ ಕ್ರಶ್ ಬಾಟಲುಗಳನ್ನು ಸಿದ್ಧಪಡಿಸಿದ್ದಾರೆ, ಹೊತ್ತು ಇತರ ಅಂಗಡಿಗಳಿಗೆ ಮಾರಾಟಕ್ಕೆ ಕೊಟ್ಟಿದ್ದಾರೆ, ಬಸ್‌ಗಳು ಬಂದಾಗ ಕ್ರೇಟುಗಳನ್ನು ಹೆಗಲ ಮೇಲೆ ಹೊತ್ತು 'ಸೋಡಾ, ಸೋಡಾ' ಎಂದು ಮಾರಾಟ ಮಾಡಿ ಸಂಪಾದಿಸಿದ್ದಾರೆ, ಬಾಟಲುಗಳನ್ನು ತೊಳೆದಿದ್ದಾರೆ, ಲಿಂಬು ಶರಬತ್ತು ಮಾಡಿದ್ದಾರೆ. ಅಜ್ಜಿ ಶರಬತ್ತಿನ ಕಾನ್ಸೆಂಟ್ರೇಟ್ಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ನಾನು ಅಂಗಡಿಯಲ್ಲಿ ಕುಳಿತು ಇವರೆಲ್ಲರ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಮನೆಯ ಮುಂದಿನ ಸೋಡಾ ರೂಂನಲ್ಲಿ ಸಹ ಸೋಡಾ, ಕ್ರಶ್‌ಗಳನ್ನು ತಯಾರಿಸುವುದು, ಇತ್ಯಾದಿ ಮಾಡಲಾಗುತ್ತಿತ್ತು. ಬಾಟಲುಗಳನ್ನು ತೊಳೆಯುವುದು, ದೊಡ್ಡ ಕ್ರೇಟುಗಳಲ್ಲಿ ಬಾಟಲುಗಳನ್ನು ಸಾಗಿಸಲು ಒಂದು ಕೈಗಾಡಿಯಿತ್ತು. ಆ ಗಾಡಿಯಲ್ಲಿ ನಾವುಗಳೂ ಕುಳಿತು ದೂಡಿಕೊಂಡು ಹೋಗಿ ಆಟವಾಡುತ್ತಿದ್ದೆವು. ಸೂರ, ಗೋಪಾಲ, ಶಂಕರ, ರಾಮು, ಚಿದ ಎಲ್ಲರೂ ತಮ್ಮದೇ ಆದ ವೃತ್ತಿಜೀವನ ಆರಿಸಿಕೊಂಡು ಹೋದಾಗ, ಸೋಡಾ ಫ್ಯಾಕ್ಟರಿಯನ್ನು ಅಭಿವೃದ್ಧಿ ಪಡಿಸಿ ಕೊನೆಯವರೆಗೂ ಮುಂದುವರೆಸಿ, ನಂತರ ಬೇಕರಿಯನ್ನೂ ಪ್ರಾರಂಭಿಸಿ ಉಚ್ಛ್ರಾಯ ಸ್ಥಿತಿಗೆ ತಂದವನೇ ಪುಟ್ಟರಾಜು! ಒಂದು ಘಟನೆ ನೆನಪಿಗೆ ಬರುತ್ತಿದೆ. ಈ ಸೋಡಾ ಫ್ಯಾಕ್ಟರಿ ಎದುರಿಗೆ ಮತ್ತೊಬ್ಬರು ತಮ್ಮದೇ ಆದ ಸೋಡಾ ಫ್ಯಾಕ್ಟರಿ ಇಟ್ಟರು. ಆಗ ಗೋಲಿ ಸೋಡಾದ ಬೆಲೆ ೧೫ ಪೈಸೆ ಇದ್ದಿರಬಹುದು. ಪುಟ್ಟರಾಜ ತಾನು ಮಾರುವ ಸೋಡಾದ ಬೆಲೆ ೧೨ ಪೈಸೆಗೆ ಇಳಿಸಿದ. ಪ್ರತಿಸ್ಪರ್ಧಿಯೂ ೧೨ ಪೈಸೆಗೆ ಮಾರತೊಡಗಿದಾಗ, ೧೦ ಪೈಸೆಗೆ ಇಳಿಸಿದ. ಹೀಗೆ ಪೈಪೋಟಿ ನಡೆದು ೮ ಪೈಸೆಗೆ ಇಬ್ಬರೂ ಮಾರತೊಡಗಿದರು. ಪುಟ್ಟರಾಜು ೫ ಪೈಸೆಗೆ ಇಳಿಸಿದಾಗ ಇನ್ನೊಂದು ಅಂಗಡಿಯವನು ಕೈಚೆಲ್ಲಲೇಬೇಕಾಯಿತು. ಕೊನೆಗೆ ಉಳಿದದ್ದು ಇವನ ಸೋಡಾ ಫ್ಯಾಕ್ಟರಿಯೇ! ಎಲ್ಲರೂ ಹಳೇಬೀಡು ಬಿಟ್ಟರೂ, ಇವನು ಮಾತ್ರ ಅಲ್ಲಿಯೇ ಬಹಳ ವರ್ಷಗಳ ಕಾಲ ಇದ್ದವನು. ಈಚೆಗೆ ಕೆಲವು ವರ್ಷಗಳ ಹಿಂದೆ ವ್ಯಾಪಾರದ ಸ್ಥಳವನ್ನು ಜಾವಗಲ್ಲಿಗೆ ಸ್ಥಳಾಂತರಿಸಿ ಮಗನನ್ನು ಉದ್ಯಮದಲ್ಲಿ ಪ್ರತಿಷ್ಠಾಪಿಸಿದವನು. ಯಾವ ಟೆಕ್ಕಿಗೂ ಕಡಿಮೆಯಿಲ್ಲದಂತೆ ಸಂಪಾದನೆ ಮಾಡುವ, ಹಲವು ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿರುವ ಉದ್ಯಮದ ಈ ಸ್ಥಿತಿಯ ಹಿನ್ನೆಲೆಯಲ್ಲಿ ಪುಟ್ಟರಾಜುವಿನ ಮತ್ತು ಅವನಿಗೆ ಜೊತೆಯಾಗಿ, ತಕ್ಕಂತೆ ಕೈಜೋಡಿಸಿ ಮುನ್ನಡೆಸುತ್ತಿರುವ ಮಗ ರಾಘವೇಂದ್ರನ ಶ್ರಮವಿದೆ. ಬೆಂಗಳೂರಿನಲ್ಲೂ ಮನೆ ಕಟ್ಟಿಸಿದ್ದಾನೆ. ಅಲ್ಲಿಯೂ ಒಂದು ಬೇಕರಿ, ಕಾಂಡಿಮೆಂಟ್ಸ್ ಅಂಗಡಿ ತೆರೆದಿದ್ದ. ಆದರೆ ನಿರ್ವಹಣಾ ವೆಚ್ಚ ಜಾಸ್ತಿಯಾಗಿದ್ದರಿಂದ ಅದನ್ನು ಮುಚ್ಚಬೇಕಾಯಿತು. ಅದಕ್ಕೆ ಪುಟ್ಟರಾಜು ನನ್ನ ಮಗಳೊಂದಿಗೆ ಮಾತನಾಡುತ್ತಾ ನೀಡಿದ್ದ ಪ್ರತಿಕ್ರಿಯೆಯೆಂದರೆ, "ನನಗೆ ನಷ್ಟವಾಗಲಿಲ್ಲ. ಬೆಂಗಳೂರಿನಲ್ಲಿ ಹೇಗೆ ವ್ಯಾಪಾರ ಮಾಡಬೇಕೆಂಬುದು ಗೊತ್ತಾಯಿತು. ಮತ್ತೆ ಬೆಂಗಳೂರಿನಲ್ಲಿ ಅಂಗಡಿ ತೆರೆಯುತ್ತೇನೆ"- ಇದು ಪುಟ್ಟರಾಜನ ರೀತಿ, ನೀತಿ!
     ಪುಟ್ಟರಾಜುಗೆ ರಾ.ಸ್ವ.ಸಂಘದ ನಿಕಟ ಸಂಬಂಧವಿತ್ತು. ೧೯೭೦ರ ದಶಕದಲ್ಲಿ ಎರಡು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ವಿಸ್ತಾರಕ್ ಆಗಿ ಕೆಲಸ ಮಾಡಿದ್ದ. ನಾನು ಆಗ ಬಿಎಸ್‌ಸಿ ಓದುತ್ತಿದ್ದೆ. ಆಗ ನಾನು ಯಾವ ದೊಡ್ಡ ಮನುಷ್ಯನಾಗಿದ್ದೆನೋ ಗೊತ್ತಿಲ್ಲ, ಅವನಿಗೆ ಉಪದೇಶ ಮಾಡಿದ್ದೆ, "ಮೊದಲು ಮನೆಯ ಕಡೆ ಗಮನ ಕೊಡು, ಆಮೇಲೆ ದೇಶದ ಕೆಲಸ". ಅವನು ನಕ್ಕು ಸುಮ್ಮನಾಗಿದ್ದ. ನನಗೂ ಚಿಕ್ಕಂದಿನಿಂದಲೂ ಸಂಘದ ಸಂಪರ್ಕವಿದ್ದರೂ, ಅತಿ ಹೆಚ್ಚು ಸಂಪರ್ಕಕ್ಕೆ ಬರಲು ಪುಟ್ಟರಾಜುವೇ ಕಾರಣವೆಂದರೆ ತಪ್ಪಿಲ್ಲ. ಸಂಘದ ಪ್ರಚಾರಕರುಗಳು ಹಳೇಬೀಡಿನ ಮನೆಗೆ ಸಂಪರ್ಕಕ್ಕೆ, ಊಟಕ್ಕೆ ಬಂದಾಗ 'ಬಿಟ್ಟಿ ಊಟದವರು' ಎಂದು ಪುಟ್ಟರಾಜುವಿನೊಡನೆ ನಾನು ಹೇಳಿದ್ದುದೂ ಇದೆ. ಆಗಲೂ ಅವನು ನನ್ನೊಡನೆ ಚರ್ಚೆ ಮಾಡಿರಲಿಲ್ಲ. ಮುಗುಳ್ನಕ್ಕಿದ್ದ. ಆದರೆ, ಆ 'ಬಿಟ್ಟಿ ಊಟದವರ' ಹಿರಿಮೆ, ಗರಿಮೆಗಳ ಅರಿವು ನನಗೆ ಆಗಲು ಹೆಚ್ಚು ಸಮಯ ಆಗಲಿಲ್ಲ. ಆ ಬಿಟ್ಟಿ ಊಟದವರು ಇತರರ ಸಲುವಾಗಿ ತಮ್ಮ ಸ್ವಂತದ ಜೀವನವನ್ನೇ 'ಬಿಟ್ಟಿರುವುದು' ನನ್ನ ಕಣ್ಣು ತೆರೆಸಿತು. ನಂತರದಲ್ಲಿ ನಾನೂ ಕಟ್ಟರ್ ಸಂಘಿಯಾಗಿ ಬದಲಾದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪುಟ್ಟರಾಜು ಭೂಗತ ಕೆಲಸಗಳನ್ನು ಮಾಡಿದರೆ, ನಾನು ಬಂದಿಯಾಗಿ ಸೆರೆಮನೆಯಲ್ಲಿದ್ದೆ. ಆಗ ಪ್ರಾಂತ ಪ್ರಚಾರಕರಾಗಿದ್ದ ಶ್ರೀ ಹೊ.ವೆ. ಶೇಷಾದ್ರಿಯವರೂ ಸೇರಿದಂತೆ ಹಲವರು ಹಳೇಬೀಡಿನ ಮನೆಗೆ ಬಂದು ಹೋಗಿದ್ದಿದೆ. ಅಲ್ಲಿನ ಸಬ್‌ಇನ್ಸ್‌ಪೆಕ್ಟರರು ಮಫ್ತಿಯಲ್ಲಿ ಒಮ್ಮೆ ಇವನ ಮನೆಗೆ ಬಂದಿದ್ದಾಗ ಇವನು ಮನೆಯಲ್ಲಿರಲಿಲ್ಲ. ನನ್ನ ಅಜ್ಜಿಗೆ ಅವರು ಸಬ್‌ಇನ್ಸ್‌ಪೆಕ್ಟರ್ ಎಂದು ಗೊತ್ತಿಲ್ಲ. ಯಾರೋ ಸಂಘದವರು ಎಂದೇ ತಿಳಿದುಕೊಂಡು ಮನೆಯಲ್ಲಿದ್ದ ಕಡಲೆಕಾಯಿಯನ್ನು ಅವರ ಮುಂದಿನ ಬೆಂಚಿನ ಮೇಲೆ ಸುರಿದು, ಬೆಲ್ಲವನ್ನೂ ಕೊಟ್ಟು ಮಾತನಾಡಿಸತೊಡಗಿದರು. "ನನ್ನ ಮೊಮ್ಮಗ ಜೈಲಿನಲ್ಲಿದ್ದಾನೆ. ಇವನಿಗೂ ಒಂದು ಸ್ವಲ್ಪ ಬುದ್ಧಿ ಹೇಳಿ. ಎಲ್ಲಾ ಸರಿ ಆಗುವವರೆಗೆ ಸುಮ್ಮನಿರಲು ಹೇಳಿ" ಎಂದು ಅವರಿಗೇ ಹೇಳಿದ್ದರು. ಕಡಲೆಕಾಯಿ, ಬೆಲ್ಲ ಕೆಲಸ ಮಾಡಿತ್ತು. ಅವರು, "ಏನು ಮಾಡ್ತಾನಮ್ಮಾ?" ಎಂದು ಕೇಳಿದ್ದರು. ಅಜ್ಜಿ, "ಏನು ಮಾಡ್ತಾನೆ? ಸರ್ಕಾರ ಸರಿಯಿಲ್ಲ. ಜನರಿಗೆ ಬುದ್ಧಿ ಬರೋವರೆಗೂ ಸರಿಯಾಗಲ್ಲ" ಅಂತಿರ್ತಾನೆ. ಇದನ್ನು ಬಿಟ್ಟು ಇನ್ನೇನು ಮಾಡ್ತಾನೆ ಅಂದಿದ್ದರು. ಸಬ್‌ಇನ್ಸ್‌ಪೆಕ್ಟರ್, "ಪರಿಸ್ಥಿತಿ ಸತಿಯಿಲ್ಲ ಕಣಮ್ಮಾ. ನಿಮ್ಮ ಮಗನಿಗೆ ಹುಷಾರಾಗಿರಲು ಹೇಳಿ. ಪೊಲೀಸ್ನೋರು ಅರೆಸ್ಟ್ ಮಾಡಿದರೆ ಕಷ್ಟ" ಎಂದು ಹೇಳಿಹೋಗಿದ್ದರು. ಮುಂದೊಮ್ಮೆ ಜನಾಂದೋಲನದಿಂದಾಗಿ ತುರ್ತುಪರಿಸ್ಥಿತಿ ಕೊನೆಗೊಳ್ಳಲೇಬೇಕಾಗಿ ಬಂದಿತ್ತು. ಎಲ್ಲಾ ಸರಿಹೋಗತೊಡಗಿತ್ತು.
     ದಿನಗಳು ಉರುಳಿದವು. ಒಂದು ಸಲ ಹಳೇಬೀಡಿಗೆ ಹೋಗಿದ್ದಾಗ ಪುಟ್ಟ, "ರಾಜು, ನಾನು ಮದುವೆ ಆಗೋ ಹುಡುಗೀನ ತೋರಿಸ್ತೀನಿ ಬಾ" ಎಂದು ಪೇಟೆ ಬೀದಿಯಲ್ಲಿಯೇ ಇದ್ದ ರತ್ನಮ್ಮನವರ ಮನೆಗೆ ಕರೆದುಕೊಂಡು ಹೋಗಿ ಸತ್ಯವತಿಯನ್ನು ತೋರಿಸಿದ್ದ. ನನ್ನ ಸಂಕೋಚದ ಸ್ವಭಾವದಿಂದಾಗಿ ಸತ್ಯವತಿಯನ್ನು ದಿಟ್ಟಿಸಿ ನೋಡಲಾಗದಿದ್ದರೂ ನೋಡಿದ್ದೆ. ನನಗೆ ಅವರು ಕುಡಿಯಲು ಹಾಲು ಕೊಟ್ಟರು. ನನ್ನ ಪರಿಚಯವನ್ನೂ ಅವರಿಗೆ ಮಾಡಿಕೊಟ್ಟ. ನನಗೆ ಕಕ್ಕಾಬಿಕ್ಕಿಯಾಗಿತ್ತು. ನನಗೆ ಅವರೊಡನೆ ಏನು ಮಾತನಾಡಲಿಕ್ಕಿದೆ? ಏನೋ ತೊದಲಿದ್ದೆ. ಹೊರಗೆ ಬಂದಾಗ ಪುಟ್ಟ ಕೇಳಿದ್ದ, "ಹೇಗಿದ್ದಾಳೆ?" ನಾನು, "ಚೆನ್ನಾಗಿದ್ದಾಳೆ" ಎಂದಿದ್ದೆ. ಮುಂದೊಂದು ದಿನ ಅವರುಗಳ ಸರಳ ವಿವಾಹವಾಯಿತು. 
     ನನ್ನದೂ ಮದುವೆಯಾಯಿತು. ನೌಕರಿಯ ನಿಮಿತ್ತವಾಗಿ ಹಲವಾರು ಊರುಗಳಿಗೆ ವರ್ಗಾವಣೆಯಾಗಿ ಊರೂರು ಸುತ್ತಿದೆ. ಹೀಗಾಗಿ ನಮ್ಮಿಬ್ಬರ ಭೇಟಿ ಅಪರೂಪವಾಗಿತ್ತಾದರೂ, ಸಮಾರಂಭಗಳು, ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿತ್ತು. ಬೇಲೂರಿನಲ್ಲಿ ನೌಕರಿಯ ಸಲುವಾಗಿ ಬಂದಾಗ ಮತ್ತೆ ವಾರಕ್ಕೊಮ್ಮೆಯಾದರೂ ಸಿಗುತ್ತಿದ್ದೆವು. ಇಬ್ಬರ ಬಾಂಧವ್ಯ ಸ್ಥಿರವಾಗಿಯೇ ಮುಂದುವರೆದಿತ್ತು. ನನ್ನ ಎಲ್ಲಾ ಚಟುವಟಿಕೆಗಳನ್ನೂ ಅವನು, ಅವನದನ್ನು ನಾನೂ ಮೆಚ್ಚುತ್ತಿದ್ದೆವು. ಸೇವೆಯಿಂದ ಸ್ವಯಂನಿವೃತ್ತಿ ಹೊಂದಿ ಹಾಸನಕ್ಕೆ ಬಂದಾಗ, ಹಾಸನಕ್ಕೆ ಯಾವುದೇ ಕಾರಣಕ್ಕೆ ಬಂದರೂ ನನ್ನ ಮನೆಗೆ ಅವನು ಬರದೇ ಹೋಗುತ್ತಿರಲಿಲ್ಲ. ನಮ್ಮಿಬ್ಬರಲ್ಲಿ ಫೋನಿನಲ್ಲಾದರೂ ನಿರಂತರವಾಗಿ ಸಂಪರ್ಕ ಇದ್ದೇ ಇತ್ತು. ಎಲ್ಲರೊಡನೆ ಸಹಜವಾಗಿ, ಮುಕ್ತವಾಗಿ, ನಿಸ್ಸಂಕೋಚವಾಗಿ ಮಾತನಾಡುವ ಅವನ ಸ್ವಭಾವ ಯಾರಿಗೆ ತಾನೇ ಮೆಚ್ಚುಗೆಯಾಗದಿರದು? 
     ನಮ್ಮ ಕುಟುಂಬ ಸಮಾವೇಶಗಳಿಗೂ ತಪ್ಪದೆ ಬರುತ್ತಿದ್ದ. ನಮ್ಮ ಪತ್ರಿಕೆ ಕವಿಕಿರಣದ ಒಬ್ಬ ಒಳ್ಳೆಯ ಓದುಗ ಇವನೇ ಆಗಿದ್ದ. ಮೊದಲ ಸಂಚಿಕೆಯನ್ನು ನನ್ನ ತಮ್ಮ ಅನಂತ ಪ್ರಾಯೋಜಿಸಿದ್ದರೆ, ಎರಡನೆಯ ಸಂಚಿಕೆಯನ್ನು ಪ್ರಾಯೋಜಿಸಿದ್ದವನು ಇವನೇ. ಪ್ರತಿ ಸಂಚಿಕೆ ತಲುಪಿದಾಗ, "ಪತ್ರಿಕೆ ತಲುಪಿತು. ತುಂಬಾ ಚೆನ್ನಾಗಿದೆ" ಎನ್ನುತ್ತಾ ಅದರಲ್ಲಿದ್ದ ಲೇಖನಗಳ ಬಗ್ಗೆ ಮಾತನಾಡುತ್ತಿದ್ದ. ಕೊನೆಯ ಸಲ ಅವನು ನನಗೆ ಭೇಟಿಯಾಗಿದ್ದು ಒಂದೂವರೆ ತಿಂಗಳ ಹಿಂದೆ ಅನಸೂಯತ್ತೆಯ ೮೦ನೆಯ ಹುಟ್ಟುಹಬ್ಬ ಮತ್ತು ಮುರಳಿ-ಉಮಾರ ೨೫ನೆಯ ವಿವಾಹ ವಾರ್ಷಿಕೋತ್ಸವದ ಸಮಾರಂಭದಲ್ಲಿ. ಬಹಳ ಹೊತ್ತು ಒಟ್ಟಿಗೇ ಕುಳಿತು ಮಾತನಾಡಿದೆವು, ಒಟ್ಟಿಗೇ ಊಟ ಮಾಡಿದೆವು. ನಮ್ಮ ಕವಿಕಿರಣ ಟ್ರಸ್ಟ್ ಮತ್ತು ಪತ್ರಿಕೆಯ ಹೊಸ ಸ್ವರೂಪದ ಬಗ್ಗೆ ತಿಳಿಸಿದಾಗ ಅವನು, "ನಾನು ಏನು ಮಾಡಬೇಕು, ಹೇಳು, ಮಾಡುತ್ತೇನೆ" ಎಂದಿದ್ದ. ನಂತರ ಅವನನ್ನು ನೋಡಿದ್ದು, ಅವನು ಶಾಂತನಾಗಿ ಚಿರನಿದ್ರೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ! ಅಯ್ಯೋ ವಿಧಿಯೇ!! 
     ಅವನು ಬರೆಯುತ್ತಿರಲಿಲ್ಲವಾದರೂ, ಓದುವ ಹವ್ಯಾಸ ಇತ್ತು. ಮಹರ್ಷಿ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಓದಿ ಪ್ರಭಾವಿತನಾಗಿದ್ದ. ಗೊಡ್ಡು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ಅನುಸರಿಸುತ್ತಿರಲಿಲ್ಲ. ಹಾಗೆಂದು ಮನೆಯ ಯಾರೊಬ್ಬರ ಭಾವನೆಗಳಿಗೂ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಒಳಗೊಂದು, ಹೊರಗೊಂದು ಎಂಬ ಸ್ವಭಾವ, ನಡವಳಿಕೆಗಳು ಅವನದಾಗಿರಲಿಲ್ಲ. ಮುಚ್ಚುಮರೆ, ಕಪಟತನಗಳಿರಲಿಲ್ಲ. ಪುಟ್ಟರಾಜು ಬರೆಯದಿದ್ದರೂ, ಅವನು ನನ್ನೊಡನೆ ಹಂಚಿಕೊಂಡಿದ್ದ ಒಂದು ವಿಷಯವನ್ನು ಅವನ ಹೆಸರಿನಲ್ಲೇ 'ಮೂಢನಂಬಿಕೆ' ಎಂಬ ಶೀರ್ಷಿಕೆಯಲ್ಲಿ ಲೇಖನವಾಗಿಸಿ ಡಿಸೆಂಬರ್, ೨೦೧೪ರ ಕವಿಕಿರಣದಲ್ಲಿ ಪ್ರಕಟಿಸಿದ್ದೆ. ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತಲೇ ಇವೆ. ಬಡಬಡಿಕೆ ನಿಲ್ಲುವುದೇ ಇಲ್ಲ. ಇದು ನನಗಾಗಿ ನಾನು ಬಡಬಡಿಸಿರುವುದು. ಕ್ಷಮಿಸಿ.
     ವೈಯಕ್ತಿಕವಾಗಿ ಏನೇ ಸಮಸ್ಯೆಗಳು ಬಂದರೂ ಎದೆಗುಂದದೆ, ಅದಕ್ಕಾಗಿ ಯಾರನ್ನೂ ದೂಷಿಸದೆ, ದ್ವೇಷಿಸದೆ ನಿರ್ಲಿಪ್ತನಾಗಿ ಬಂದದ್ದನ್ನು ಬಂದಂತೆ ಸ್ವೀಕರಿಸುವ ಅವನ ನಿರ್ಲಿಪ್ತತೆ ಎಲ್ಲರಿಗೂ ಬರುವುದು ಕಷ್ಟ. ಎಷ್ಟೋ ಸಲ ನೋವು ನುಂಗಿ ನಗುವ ನಂಜುಂಡನಾಗಿ ಅವನು ನನಗೆ ಕಂಡಿದ್ದಾನೆ. ಕರ್ಮಯೋಗಿಯಂತೆ ಬಾಳಿದ್ದಾನೆ. ದಸರಾ ಉತ್ಸವ ನೋಡಲು ಪತ್ನಿ, ಸೊಸೆ ಮತ್ತು ಮೊಮ್ಮಗಳು ಮೈಸೂರಿಗೆ ಹೋಗಿದ್ದಾರೆ. ಅಂದು ಆಯುಧಪೂಜೆ. ಎಂದಿನಂತೆ ಕೆಲಸ ಕಾರ್ಯಗಳನ್ನು ಮಾಡಿದ್ದಾನೆ. ಅಡುಗೆ ಮಾಡಿ, ತಾನು ಊಟ ಮಾಡಿ ಮಗನಿಗೂ ಬಡಿಸಿದ್ದಾನೆ. ಸ್ವಲ್ಪ ಸಮಯದ ನಂತರ ಎದೆನೋವು ಕಾಣಿಸಿಕೊಂಡಿದೆ. ಮಗ ತಕ್ಷಣ ವೈದ್ಯರ ಬಳಿ ಕರೆದೊಯ್ದಿದ್ದಾನೆ. ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲು ಸಿದ್ಧನಾದ ಸಂದರ್ಭದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಎಲ್ಲಾ ಮುಗಿಯಿತು! ಅವನ ಅನಿರೀಕ್ಷಿತ ಅಂತ್ಯದ ಕುರಿತು ಇತರರಿಗಿರಲಿ, ಸ್ವತಃ ಪುಟ್ಟರಾಜುವಿಗೂ ಗೊತ್ತಿತ್ತೋ ಇಲ್ಲವೋ! ಇದರಲ್ಲಿ ನಮಗೆ ಒಂದು ಸಂದೇಶವೂ ಇದೆ, "ಮುಂದೆ ಮಾಡಬೇಕು ಎಂದುಕೊಂಡಿರುವ ಕೆಲಸಗಳನ್ನು ಮುಂದಕ್ಕೆ ಹಾಕದೆ ಇಂದೇ ಮಾಡಿ" ಎಂಬುದೇ ಆ ಸಂದೇಶ, ಆದೇಶ!  
     "ನ ಕಿಲ್ಬಿಷಮತ್ರ ನಾಧಾರೋ ಅಸ್ತಿ, ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಂ ನಿಹಿತಿಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||" - ಆ ಪರಮಾತ್ಮನ ನ್ಯಾಯವಿಧಾನದಲ್ಲಿ ನ್ಯೂನತೆಯೆಂಬುದೇ ಇಲ್ಲ. ಗೂಢವಾಗಿ ಇರಿಸಲ್ಪಟ್ಟ ದೋಷವಿಲ್ಲದ ಪಾತ್ರೆಯಲ್ಲಿ ಬೇಯುತ್ತಿರುವ ಆಹಾರವನ್ನು ಬೇಯಿಸಿದವನೇ ಉಣ್ಣಬೇಕಿದೆ. 'ಮಾಡಿದ್ದುಣ್ಣೋ ಮಹರಾಯ' ಎಂಬುದೇ ಈ ವೇದಮಂತ್ರದ ಅರ್ಥ. 'ಕರ್ಮಕ್ಕೆ ತಕ್ಕ ಫಲವಿದೆ' ಎಂಬುದು ಭಗವದ್ಗೀತೆಯ ಸಾರ. ಪುಟ್ಟರಾಜು, ನೀನೊಬ್ಬ ಕರ್ಮಯೋಗಿ. ಕರ್ಮ ಮಾಡುತ್ತಲೇ ಜೀವನ ಮುಗಿಸಿದೆ. ಒಳ್ಳೆಯ ಕರ್ಮಗಳ ರಾಶಿಯೇ ನಿನ್ನ ಬೆನ್ನಿಗಿದೆ. ಪುಟ್ಟರಾಜುವಾಗಿ ನಿನ್ನ ಕರ್ಮಪಥ ಅಂತ್ಯವಾಗಿದೆ. ಮುಂದೆ ನೀನು 'ದೊಡ್ಡ'ರಾಜುವಾಗಿ ಮತ್ತೊಂದು ರೀತಿಯಲ್ಲಿ ಮುನ್ನಡೆಯುವ ಬಗ್ಗೆ ನಮಗೆ ಅದಮ್ಯ ವಿಶ್ವಾಸವಿದೆ. ಆದರೆ, ದೇವರ ಆಟ ಹೇಗಿದೆಯೆಂದರೆ ಹಿಂದೆ ಹೇಗಿದ್ದೆವು, ಮುಂದೆ ಹೇಗಾಗುತ್ತೇವೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ, ಅವನ ಸಂದೇಶ ಮಾತ್ರ ಸ್ಪಷ್ಟ, 'ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತದೆ'. ನಮ್ಮ ಸನಾತನ ಧರ್ಮದ ತಿರುಳೂ ಇದೇ ಆಗಿದೆಯೆಂಬುದು ಆಧ್ಯಾತ್ಮಿಕ ಶ್ರೇಷ್ಠರೆಲ್ಲರ ಮಾತು! ಅದೇನೇ ಇರಲಿ, ಪ್ರೀತಿಯ ಪುಟ್ಟರಾಜು, ನನ್ನ ಪಾಲಿಗೆ, ನಿನ್ನನ್ನು ನಂಬಿರುವವರ, ನಿನ್ನನ್ನು ಪ್ರ್ರೀತಿಸುವವರ, ನಿನ್ನ ಬಂಧುಗಳು, ಸ್ನೇಹಿತರು, ವಿಶ್ವಾಸಿಗಳೆಲ್ಲರ ಪಾಲಿಗೆ ನೀನೊಂದು ದೊಡ್ಡ ಶೂನ್ಯ ನಿರ್ಮಿಸಿ ಹೋಗಿರುವೆ. ಅದನ್ನು ಸಹಿಸುವ ಶಕ್ತಿಯನ್ನು ದೇವರು ಎಲ್ಲರಿಗೂ ಕೊಡಲಿ. ಹೋಗಿ ಬಾ, ಪುಟ್ಟರಾಜು! ನಿನ್ನ ಮುಂದಿನ ಪಯಣ ಸುಖಮಯವಾಗಿರಲಿ, ಆನಂದದಾಯಕವಾಗಿರಲಿ.
-ಕ.ವೆಂ.ನಾಗರಾಜ್.

ಮಂಗಳವಾರ, ಅಕ್ಟೋಬರ್ 2, 2018

ಷಣ್ಮುಖರಾಗೋಣ!


     ನಾವು ಆರು ಜನರು ಕವಿಕಿರಣ ವಿಶ್ವಸ್ತ ಮಂಡಳಿಯ ಸದಸ್ಯರು - ಷಣ್ಮುಖರು! ಆರು ಜನರಿಗೂ ಅವರದೇ ಆದ ಕೆಲಸ ಕಾರ್ಯಗಳು! ಅದು ಅವರವರು ಇಷ್ಟಪಡುವ ಸಾಮಾಜಿಕ ಕಾರ್ಯಗಳಿರಬಹುದು, ಹವ್ಯಾಸಗಳಿರಬಹುದು, ವೃತ್ತಿಯಲ್ಲಿ ವ್ಯಸ್ತರಿರಬಹುದು, ಕೌಟುಂಬಿಕ ಸಮಸ್ಯೆಗಳು, ಜವಾಬ್ದಾರಿಗಳಿರಬಹುದು, ಇನ್ನಿತರ ಒತ್ತಡಗಳಿರಬಹುದು, ಏನೋ ಇರಬಹುದು! ಆದರೂ, ಈ ಕಾರ್ಯ ಮಾಡಲು ಮುಂದೆ ಬಂದಿದ್ದೇವೆ. ಇದಕ್ಕೆ ಸಮಯ ಹೊಂದಾಣಿಕೆ ಹೇಗೆ? ಏನು ಮಾಡಬಹುದು? ಒಂದೆರಡು ಸಣ್ಣ ಟಿಪ್ಸ್, ನಮಗಾಗಿ!!
೧. ಮನಸ್ಸು ಮಾಡೋಣ: 
     ನಮ್ಮ ಮನಸ್ಸು ಒಪ್ಪುವ ಕೆಲಸಕ್ಕೆ ಸಮಯ ಹೊಂದಾಣಿಕೆ ಆಗಿಯೇ ಆಗುತ್ತದೆ. ಮೊದಲು ನಮ್ಮ ಮನಸ್ಸನ್ನು ಅಣಿ ಮಾಡಿಕೊಳ್ಳೋಣ. ಬಲವಂತದಿಂದ ಆಗುವ ಕೆಲಸ ಇದಲ್ಲ. ನಮ್ಮ ಮನಸ್ಸಿಗೇ ಬರಬೇಕು. ಇದಕ್ಕಾಗಿ ಮಾಡುವ ಕೆಲಸದ ವಿವರ ಮತ್ತು ಪರಿಜ್ಞಾನ ಹೊಂದಬೇಕು. ವಿಶ್ವಸ್ತ ಮಂಡಳಿಯ ಕೆಲಸ ಸದಾ ಕಾಲ ಇರುವುದಿಲ್ಲ. ಮತ್ತು ಇದನ್ನು ಪ್ರತಿನಿತ್ಯ ಮಾಡಲೇಬೇಕು ಎಂಬುದೂ ಇಲ್ಲ. ನಮ್ಮ ದಿನನಿತ್ಯದ, ವೃತ್ತಿ, ಹವ್ಯಾಸ, ಕೌಟುಂಬಿಕ, ಸಾಮಾಜಿಕ ವಿಷಯಗಳಿಗೆ ಮತ್ತು ಇಂತಹ ಇನ್ನಿತರ ಸಂಗತಿಗಳಿಗೆ ಸಂಬಂಧಿಸಿದ ಕರ್ತವ್ಯಗಳ ನಿರ್ವಹಣೆ ಮಾಡಿ ಉಳಿಯುವ ಸ್ವಲ್ಪ ಸಮಯವನ್ನಾದರೂ ಈ ಕೆಲಸಕ್ಕೆ ನೀಡಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು. ಸಮಯ, ಸಂದರ್ಭ, ಅಗತ್ಯತೆ ಅನುಸರಿಸಿ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಮಯವನ್ನು ವಿಶೇಷವಾಗಿ ಹೊಂದಿಸಿಕೊಳ್ಳಲು ಮನಸ್ಸು ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಒಂದು ಪ್ರಧಾನ ಅಂಶವೆಂದರೆ, ಇದು ಆರು ಜನರ ಪೈಕಿ ಯಾರೊಬ್ಬರೂ ಇನ್ನೊಬ್ಬರ ಸಲುವಾಗಿ, ಅವರ ಉಪಕಾರಕ್ಕಾಗಿ ಮಾಡುತ್ತಿರುವ ಕೆಲಸವಾಗಿಲ್ಲ. ಎಲ್ಲರೂ ಮಾಡುತ್ತಿರುವುದು ಒಂದು ಯಜ್ಞವೆಂಬ ಭಾವನೆಯಿಂದ! ಹೇಳುವ ಮಂತ್ರ - ಇದಂ ನಮಮ - ಇದು ನಮಗಾಗಿ ಅಲ್ಲ! ಎಲ್ಲರಿಗಾಗಿ!! ಆತ್ಮ ಸಂತೋಷದ ಸಲುವಾಗಿ!! ಪರಮಾತ್ಮನ ಪ್ರೀತ್ಯರ್ಥದ ಸಲುವಾಗಿ!!
೨. ವಿಶ್ವಸ್ತ ಮಂಡಳಿಯ ವಿಶ್ವಸನಾ ಪತ್ರ (ಟ್ರಸ್ಟ್ ಡೀಡ್) ಓದೋಣ!
     ನಾವು ಮಾಡುವ ಕೆಲಸದ ಅರಿವು ನಮಗಿರಬೇಕು; ಅದಕ್ಕಾಗಿ ಟ್ರಸ್ಟ್ ಡೀಡ್ ಅನ್ನು ಸಮಯ ಮಾಡಿಕೊಂಡು ಓದೋಣ, ಮನನ ಮಾಡಿಕೊಳ್ಳೋಣ! ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಓದುತ್ತಾ ಹೋದಂತೆ ನಮಗೆ ವಿವಿಧ ಭಾವಗಳು ಮೂಡಬಹುದು: ಇದೆಂತಹ ಹುಚ್ಚು ಕಲ್ಪನೆ, ಇದು ನಮ್ಮಂತಹವರಿಂದ ಸಾಧ್ಯವೇ? ಮಾಡಲು ಕೆಲಸವಿಲ್ಲ, ನಮಗೆ ಈಗಿರುವ ಕೆಲಸಕಾರ್ಯಗಳೇ ಹಾಸಿ ಹೊದೆಯುವಷ್ಟಿರುವಾಗ ಇದಕ್ಕೆಲ್ಲಾ ಎಲ್ಲಿ ಸಮಯ ಕೊಡುವುದು? ಹೀಗೆ ಸಮ್ಮಿಶ್ರ ವಿಚಾರಗಳು ಮನಸ್ಸಿನಲ್ಲಿ ಮೂಡಬಹುದು. ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ: ಈ ಉದ್ದೇಶ ಸರ್ವ ಸಾಮಾನ್ಯನ ಹಿತದ ಸಲುವಾಗಿ ಇದೆಯೇ, ಇಲ್ಲವೇ? ಬರುವ ಉತ್ತರ ಇದೆಯೆಂದೇ ಆಗಿರುತ್ತದೆ. ಎರಡನೆಯ ಪ್ರಶ್ನೆ: ನಮ್ಮಿಂದ ಈ ಕೆಲಸ ಸಾಧ್ಯವೇ? ಉತ್ತರ: ಖಂಡಿತಾ ಸಾಧ್ಯ! ಇಂತಹ ಕೆಲಸಗಳನ್ನು ಹಿಂದೆ ಮಾಡಿದ್ದವರು, ಈಗ ಮಾಡುತ್ತಿರುವವರು ಮತ್ತು ಮುಂದೆ ಮಾಡುವವರೂ ನಮ್ಮ ನಿಮ್ಮಂತಹ ಸಾಮಾನ್ಯರೇ. ಬೇಕಾಗಿರುವುದು ಮಾನಸಿಕ ಬಲ ಮತ್ತು ಮಾಡಬೇಕೆಂಬ ಮನಸ್ಸು, ಅಷ್ಟೇ! ಇರುವ ಆರು ಜನರೂ ಸಂಘ ಪರಿವಾರದ ಮೂಲದವರು, ಅವರ ವಿಚಾರಗಳಿಂದ ಪ್ರೇರಿತರಾದವರು ಮತ್ತು ಇದೇ ಉದ್ದೇಶದ ಚಟುವಟಿಕೆಗಳಲ್ಲಿ ಒಂದಲ್ಲಾ, ಒಂದು ರೀತಿಯಲ್ಲಿ ತೊಡಗಿಸಿಕೊಂಡವರೇ! ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ರೂಪದಲ್ಲಿ ಮಾಡುತ್ತಿದ್ದೇವೆ ಅಷ್ಟೇ! ಮನಸ್ಸು ಮಾಡಿದರೆ ನಮ್ಮ ಕಣ್ಣ ಮುಂದೆಯೇ ಉದ್ದೇಶ ಈಡೇರುವುದನ್ನು ಕಾಣುವ ಸೌಭಾಗ್ಯ ನಮ್ಮದಾಗುತ್ತದೆ, ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯಂತೂ ಖಂಡಿತಾ ಕಾಣುತ್ತದೆ. ನಮ್ಮ ತೊಡಗುವಿಕೆಯ ರೀತಿ ಇದನ್ನು ಅವಲಂಬಿಸಿದೆ. 
೩. ಕವಿಕಿರಣ ಪತ್ರಿಕೆಯ ಪ್ರಭೆ ಬೆಳಗಿಸುವುದು:
     ಟ್ರಸ್ಟಿನ ಮೊದಲ ಹೆಜ್ಜೆಯಾಗಿ ಕವಿಕಿರಣ ಪತ್ರಿಕೆಯನ್ನು ಬೆಳೆಸುವತ್ತ ಗಮನ ನೀಡಿದರೆ ಜೊತೆ ಜೊತೆಗೆ ಟ್ರಸ್ಟಿನ ಇತರ ಉದ್ದೇಶಗಳೂ ಈಡೇರುವುದನ್ನು ಕಾಣಲು ಸಾಧ್ಯವಿದೆ. ಇರುವ ಆರು ಜನರೂ ಸಂಪನ್ಮೂಲ ವ್ಯಕ್ತಿಗಳೇ, ಶಕ್ತಿಯುಳ್ಳವರೇ ಆಗಿದ್ದಾರೆ. ಆದರೆ ಅವರ ಶಕ್ತಿ ಪ್ರತ್ಯೇಕವಾಗಿ ಹರಿದು ಹಂಚದಿರುವಂತೆ, ಸಂಘಟಿತವಾಗಿ ಪ್ರವಹಿಸಿದರೆ ಅನಿರೀಕ್ಷಿತ ಫಲ ಸಿಗುತ್ತದೆಂಬುದರಲ್ಲಿ ಅನುಮಾನವಿಲ್ಲ. ಯಾವುದೇ ಕೆಲಸವನ್ನು ಸಣ್ಣದು ಎಂಬ ದೃಷ್ಟಿಯಿಂದ ನೋಡದೆ ಮಾಡಲು ಗಮನ ಕೊಡೋಣ. ಸಣ್ಣ ಸಣ್ಣ ಕೆಲಸಗಳು ಅಡೆತಡೆಯಿಲ್ಲದೆ ಚೆನ್ನಾಗಿ ಆದರೆ, ದೊಡ್ಡ ದೊಡ್ಡ ಕೆಲಸಗಳು ಮತ್ತಷ್ಟು ಚೆನ್ನಾಗಿ ಮತ್ತು ಸುಲಭವಾಗಿ ಆಗುತ್ತವೆ. ದೊಡ್ಡ ಕೆಲಸಗಳಿಗೆ ಸಣ್ಣ ಕೆಲಸಗಳೇ ತಳಪಾಯ. ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ ಎಂಬ ಭಾವನೆಯಿಂದ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿರಿಸಿ ಕೆಲಸ ಮಾಡುವ ಮನೋಭಾವ ಎಲ್ಲರಲ್ಲೂ ಬರಬೇಕು. ಇನ್ನು ಎರಡು, ಎರಡೂವರೆ ತಿಂಗಳಲ್ಲಿ ತ್ರೈಮಾಸಿಕ ಕವಿಕಿರಣದ ಹೊಸ ರೂಪ ಅವತರಿಸಬೇಕು. ಅದಕ್ಕಾಗಿ ನಾವು ಸಹಕರಿಸಬೇಕು. ಕವಿಮನೆತನದವರು ಮತ್ತು ಬಂಧುಗಳನ್ನು ಚಂದಾದಾರರು, ಪೋಷಕರುಗಳನ್ನಾಗಿಸಲು ಮೊದಲ ಹಂತದಲ್ಲಿ ಕೆಲಸ ಪ್ರಾರಂಭವಾಗಬೇಕು. ಪರಿಚಯವಿರುವ ಸ್ನೇಹಿತರು, ಹಿತೈಷಿಗಳನ್ನೂ ಮಾತನಾಡಿಸಬೇಕು. ಇನ್ನೊಬ್ಬರನ್ನು ಈ ಬಗ್ಗೆ ಪ್ರೇರಿಸುವ ಮೊದಲು ನಾವು ಆ ಕೆಲಸ ಮಾಡಿರಬೇಕು, ನಮ್ಮ ದೇಣಿಗೆಯನ್ನು ನಾವು ಮೊದಲು ಸಕಾಲದಲ್ಲಿ ನೀಡೋಣ ಮತ್ತು ಆಗ ನಮಗೆ ನೈತಿಕ ಬಲ ಸಹಜವಾಗಿ ಇರುತ್ತದೆ. ಕೆಲಸ ವೇಗವಾಗಿ ಆಗುತ್ತದೆ. ಟ್ರಸ್ಟಿನ ಒಂದು ಔಪಚಾರಿಕ ಉದ್ಘಾಟನೆ ಮತ್ತು ಕವಿಕಿರಣ ಪರಿಚಯಿಸುವ ಸಮಾರಂಭವನ್ನು ನವೆಂಬರ್ ತಿಂಗಳಿನಲ್ಲಿ ಅಥವ ಡಿಸೆಂಬರ್ ಮೊದಲ ವಾರದ ಒಳಗೆ ಮಾಡಿದರೆ ಕಾರ್ಯಕ್ಕೆ ಅನುಕೂಲವಾಗಬಹುದು. ಇದಕ್ಕೆಲ್ಲಾ ಬೇಕಾಗುವ ಸಮಯವನ್ನು, ಮೊದಲೇ ಹೇಳಿದಂತೆ ನಮ್ಮ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡ ನಂತರ ಉಳಿಯುವ ಸಮಯದಲ್ಲಿ ಕೊಡಲು ಸಾಧ್ಯವಿದೆ. 
     ಷಣ್ಮುಖರಾಗೋಣ! ಭಿನ್ನ ವಿಚಾರಗಳು, ಭಿನ್ನ ಕೆಲಸ ಕಾರ್ಯಗಳಿದ್ದರೂ ಒಂದು ಸಮಾನ ಭಾವದ, ಸರ್ವಹಿತದ ಕೆಲಸಕ್ಕಾಗಿ, ಆರು ತಲೆಗಳಿದ್ದರೂ, ಒಂದೇ ದೇಹದೊಂದಿಗೆ ಚಲಿಸುವ ಷಣ್ಮುಖನಂತೆ ಮುಂದೆ ಸಾಗೋಣ!
-ಕ.ವೆಂ. ನಾಗರಾಜ್.