ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಮೇ 31, 2018

ಅಭಿವೃದ್ಧಿ ಎಂದರೆ ಏನು? ಮತ್ತು ಹೇಗೆ?


     ಅಭಿವೃದ್ಧಿಯೇ ನಮ್ಮ ಮಂತ್ರ, ವಿಕಾಸವೇ ನಮ್ಮ ತಂತ್ರ ಎಂಬ ಮಾತುಗಳನ್ನು ಧಾರಾಳವಾಗಿ ಬಳಸಲಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವಾಗ, ನಮ್ಮ ಅವದಿಯಲ್ಲಿ ಹೀಗೆ ಮಾಡಿದೆವು, ಹಾಗೆ ಮಾಡಿದೆವು ಎಂದು ದೊಡ್ಡ ಪಟ್ಟಿಯನ್ನೇ ಜನರ ಮುಂದಿಡುತ್ತಾರೆ. ಪತ್ರಿಕೆಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ತಮ್ಮ ಸಾಧನೆಗಳ ಕುರಿತು ಜಾಹಿರಾತುಗಳನ್ನು ಕೊಡುತ್ತಾರೆ. ತಹಸೀಲ್ದಾರನಾಗಿ ಹಲವು ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಜನರ ನಡುವಿನ ಸಂಪರ್ಕಕೊಂಡಿಯಂತೆ ಕೆಲಸ ಮಾಡಿದ, ಹಳ್ಳಿಗಳಲ್ಲಿ ಸುತ್ತಿ ಜನರ ಅಭಿಪ್ರಾಯಗಳನ್ನೂ ಹತ್ತಿರದಿಂದ ಕಂಡಿರುವ ನನಗೆ ಅಭಿವೃದ್ಧಿ ಎಂಬ ಪದದ ವ್ಯಾಖ್ಯೆ ಬದಲಾಗದೆ ನಿಜವಾದ ಅಭಿವೃದ್ಧಿ ಅಸಾಧ್ಯ ಎಂಬ ಭ್ರಮನಿರಸನವೂ ಕಾಡಿದೆ. 
ಯಾರ ಅಭಿವೃದ್ಧಿ? 
    ಜನರ ಪ್ರಾಥಮಿಕ ಅವಶ್ಯಕತೆಗಳನ್ನು ಅಂದರೆ ಕುಡಿಯುವ ನೀರು, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಇತ್ಯಾದಿ ಸಂಗತಿಗಳು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ಅಭಿವೃದ್ಧಿಯ ಮೂಲ ತತ್ವ ಆಗಿರಬೇಕು. ಈ ಮೂಲಭೂತ ವಿಷಯಗಳಲ್ಲಿ ರಾಜಿ ಇರಬಾರದು ಮತ್ತು ಇವುಗಳನ್ನು ಎಲ್ಲಾ ರಾಜಕೀಯ ಪಕ್ಷಗಳವರೂ ತಮ್ಮ ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ವಸತಿ ಯೋಜನೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ ಇಂದಿರಾಗಾಂಧಿ ಹೆಸರಿನಲ್ಲಿ, ರಾಜೀವಗಾಂಧಿ ಹೆಸರಿನಲ್ಲಿ, ವಾಜಪೇಯಿಯವರ ಹೆಸರಿನಲ್ಲಿ ಹೀಗೆ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರ ನಾಯಕರುಗಳ ಹೆಸರಿನಲ್ಲಿ ವಸತಿ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಬಡವರಿಗೆ ಸೂರು ಅನ್ನುವ ಈ ಉದ್ದೇಶದ ಕಾರ್ಯಕ್ರಮ ಪಕ್ಷದ್ದಂತೂ ಅಲ್ಲ. ಹಣ ಸರ್ಕಾರದ್ದು, ಹೆಸರು ಮಾತ್ರ ರಾಜಕೀಯ ನೇತಾರರದು. ಕಳೆದ ಆರು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾಧನೆ ಎಂದರೆ ಪ್ರತಿಯೊಂದು ಯೋಜನೆಗೂ ಅವರ ನೇತಾರರದೇ ಹೆಸರು! ಇಂದಿರಾಗಾಂಧಿ, ರಾಜೀವಗಾಂಧಿಯವರ ಹೆಸರಿನಲ್ಲಿ ಎಷ್ಟು ಯೋಜನೆಗಳಿವೆಯೋ, ಅವರ ಹೆಸರಿನಲ್ಲಿ ಇರುವ ಸರ್ಕಾರಿ, ಅರೆಸರ್ಕಾರಿ ಸಂಸ್ಥೆಗಳು ಎಷ್ಟೋ ಎಂಬುದನ್ನು ಲೆಕ್ಕ ಹಾಕುವುದೇ ಕಷ್ಟ. ವಸತಿ ಯೋಜನೆಗಳು (ನಿವೇಶನ ಮಂಜೂರಾತಿಯೂ ಸೇರಿ) ರಾಜಕೀಯ ಪಕ್ಷದವರ ಗುತ್ತಿಗೆಯಂತೆ ಆಗಿರುವುದು ವಿಷಾದಕರ. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿಜವಾಗಿಯೂ ಅಗತ್ಯವಿರುವವರಿಗೆ ಯೋಜನೆಗಳ ಫಲ ಸಿಗುವುದಕ್ಕೆ ಬದಲಾಗಿ ತಮ್ಮ ಅನುಯಾಯಿಗಳಿಗೆ, ಪಕ್ಷದ ಕಾರ್ಯಕರ್ತರುಗಳಿಗೆ, ಅನರ್ಹರಿಗೆ ದಕ್ಕುವಂತೆ ಮಾಡುತ್ತಿವೆ ಎಂದರೆ ಕಠಿಣವಾಗಿ ಕಂಡರೂ ಸತ್ಯವಾಗಿದೆ. ಜೊತೆಗೆ ರಾಜಕಾರಣಿಗಳು, ಅಧಿಕಾರಿಗಳು, ನೌಕರರು, ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣ ವಸೂಲಿಯಲ್ಲಿ ತೊಡಗುವುದೂ ಇದೆ. ಇಲ್ಲಿ ಅಭಿವೃದ್ಧಿ ಎಲ್ಲಾಯಿತು, ಯಾರದಾಯಿತು?
     ಕುಡಿಯುವ ನೀರಿನ ಯೋಜನೆಯಲ್ಲಿ  ರಾಜಕೀಯ ನುಸುಳಲೇಬಾರದು. ಆದರೆ ಆಗುತ್ತಿರುವುದೇನು? ಅವರಿಗೆ ಹೆಸರು ಬರುತ್ತದೆ ಎಂದು ಇವರು, ಇವರಿಗೆ ಕೆಟ್ಟ ಹೆಸರು ಬರಲಿ ಎಂದು ಅವರು ಪರಸ್ಪರ ಕಾಲೆಳೆಯುತ್ತಾ ಸಮಸ್ಯೆ ಇತ್ಯರ್ಥಕ್ಕಿಂತ ಹೆಚ್ಚು ಮಾಡುವುದರಲ್ಲೇ ರಾಜಕೀಯ ನೇತಾರರು ತೊಡಗಿರುವುದು ದುರದೃಷ್ಟ. ಕಾವೇರಿ, ಮಹದಾಯಿ, ಎತ್ತಿನಹೊಳೆ ಇತ್ಯಾದಿ ಸಮಸ್ಯೆಗಳು ಉಲ್ಬಣಗೊಂಡಿರುವುದೇ ರಾಜಕೀಯ ಪಕ್ಷಗಳ ನೇತಾರರ ಸಣ್ಣತನಗಳಿಂದ! ಕುಡಿಯುವ ನೀರಿನ, ನೀರಾವರಿಯ ವಿಷಯದಲ್ಲಿ ರಾಜಕೀಯ ಮಾಡದಿದ್ದರೆ ಅದೊಂದು ದೊಡ್ಡ ಸಾಧನೆ. ಇದನ್ನು ಸಾಧಿಸಲು ಸಾಧ್ಯವಾದರೆ ಇದೇ ಅಭಿವೃದ್ಧಿ! 
ಆ ಅಧಿಕಾರಿ ಏಕೆ ಆತ್ಮಹತ್ಯೆ ಮಾಡಿಕೊಂಡ?
     ಬಹಳ ವರ್ಷಗಳ ಹಿಂದಿನ ಘಟನೆಯಿದು. ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕಿನ ಸಹಾಯಕ ಕೃಷಿನಿರ್ದೇಶಕರೊಬ್ಬರು ಅಲ್ಲಿನ ಶಾಸಕರ ಆಜ್ಞಾನುವರ್ತಿಯಾಗಿ ಅವರ ಇಷ್ಟಾನಿಷ್ಟಗಳನ್ನು ಅನುಸರಿಸಿ ಕೆಲಸ ಮಾಡುತ್ತಿದ್ದರು. ಒಮ್ಮೆ ಶಾಸಕರು ಅವರಿಗೆ ಹಣದ ಬೇಡಿಕೆ ಇಟ್ಟಿದ್ದಲ್ಲದೆ ಅದನ್ನು ಹೊಂದಿಸಲು ಮಾರ್ಗವನ್ನೂ ತೋರಿಸಿದರು. ಅದೆಂದರೆ ನಡೆಯದ ಕಾಮಗಾರಿಗಳಿಗೆ ಸುಳ್ಳು ಬಿಲ್ಲುಗಳನ್ನು ಸೃಷ್ಟಿಸಿ ಹಣ ಹೊಂದಿಸುವುದು! ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಶಾಸಕರು ಭರವಸೆಯಿತ್ತಿದ್ದರು. ಸರಿ, ಹಣ ಹೊಂದಾಣಿಕೆಯಾಯಿತು. ಶಾಸಕರ ಮಾತಿನಂತೆ ಅಧಿಕಾರಿಗೆ ಯಾರಿಂದಲೂ ತೊಂದರೆ ಆಗಲಿಲ್ಲ. ಆದರೆ, ನಿಜವಾದ ತೊಂದರೆ ಶಾಸಕರಿಂದಲೇ ಆರಂಭವಾಗಿತ್ತು. ಶಾಸಕರು ಆಗಾಗ್ಗೆ ಹಣಕ್ಕೆ ಹೇಳಿಕಳಿಸುತ್ತಿದ್ದರು. ಕೊಡದಿದ್ದರೆ ಸುಳ್ಳುಬಿಲ್ಲುಗಳ ವಿಚಾರ ಹೊರತೆಗೆದು ಕೆಲಸಕ್ಕೆ ಸಂಚಕಾರ ತರುವುದಾಗಿ ಬೆದರಿಸುತ್ತಿದ್ದರು. ಬರುಬರುತ್ತಾ ಇದು ವಿಪರೀತಕ್ಕೆ ಇಟ್ಟುಕೊಂಡಾಗ ಆ ಅಧಿಕಾರಿ ಖಿನ್ನತೆಗೆ ಒಳಗಾಗಿ ಮೃತ್ಯುಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ವಿಷಯ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಯಿತು. ವಿಧಾನಸಭೆಯಲ್ಲೂ ಚರ್ಚೆಯಾಯಿತು. ಮುಂದೇನಾಯಿತು? ಏನೂ ಆಗಲಿಲ್ಲ! ಮೃತ ಅಧಿಕಾರಿಯದು ತಪ್ಪಿರಲಿಲ್ಲವೆನ್ನುವಂತಿಲ್ಲ. ಆದರೆ ಆ ತಪ್ಪಿಗೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ನಿಜವಾದ ಅಪರಾಧಿಗೆ ಶಿಕ್ಷೆ ಆಗಲೇ ಇಲ್ಲ. ಜನರೂ ತಮಗೆ ಇದು ಸಂಬಂಧಿಸಿದ್ದಲ್ಲವೆಂಬಂತೆ ಸುಮ್ಮನಿದ್ದರು!
     ಕಣ್ಣಿಗೆ ಕಾಣುವಂತಹ ಸಾರ್ವಜನಿಕ ಕಟ್ಟಡಗಳು, ಶಾಲಾ ಕಾಲೇಜುಗಳು, ವಸತಿ ನಿಲಯಗಳು, ಸರ್ಕಾರಿ ಕಟ್ಟಡಗಳು, ಇತ್ಯಾದಿ ನಿರ್ಮಾಣಗಳನ್ನು ಸಾಧನೆಯೆಂಬಂತೆ ರಾಜಕೀಯ ನೇತಾರರು ಚಿತ್ರಗಳ ಸಹಿತ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಶಂಕುಸ್ಥಾಪನೆಗೂ ಪ್ರಚಾರ, ಉದ್ಘಾಟನೆಗೂ ಪ್ರಚಾರ! ಇಂತಹ ಕಾರ್ಯಕ್ರಮಗಳಿಗೆ ಖರ್ಚನ್ನು ಅಧಿಕಾರಿಗಳು, ಗುತ್ತಿಗೆದಾರರೇ ಭರಿಸುತ್ತಾರೆ. ಆ ಖರ್ಚಿಗೆ ಭ್ರಷ್ಠಾಚಾರದ ಮಾರ್ಗದಲ್ಲೇ ಹಣ ಹೊಂದಾಣಿಕೆಯಾಗುತ್ತದೆ. ಈ ಪ್ರಚಾರಕ್ಕೆ ಬಳಸುವ ಹಣದಿಂದಲೇ ಅಂತಹ ಮತ್ತೊಂದು ಕಾಮಗಾರಿ ಆಗಬಹುದಾಗಿರುತ್ತದೆ. ಕಟ್ಟಡಗಳು ಪೂರ್ಣಗೊಂಡರೂ ಹಲವಾರು ಕಾರಣಗಳಿಂದ ಉದ್ಘಾಟನೆಯಾಗದೆ, ಉಪಯೋಗಕ್ಕೆ ಬರದೆ ಶಿಥಿಲವಾಗಿರುವುದೂ, ಅನೈತಿಕ ಚಟುವಟಿಕೆಗಳ ತಾಣವಾಗಿರುವುದೂ ಇದೆ. ಇದಕ್ಕೆ ವ್ಯಯವಾದ ಹಣ ಎಷ್ಟು, ನಷ್ಟ ಯಾರದು ಎಂಬ ಬಗ್ಗೆ ಜನಸಾಮಾನ್ಯರು ಪ್ರಶ್ನಿಸುವಂತಾದರೆ ಅದು ಅಭಿವೃದ್ಧಿ! ಪ್ರತಿ ಕಾಮಗಾರಿ, ಅದು ಕಟ್ಟಡವಿರಬಹುದು, ರಸ್ತೆಯಿರಬಹುದು, ಏನೇ ಇರಬಹುದು, ಅದರಲ್ಲಿ ಗುತ್ತಿಗೆದಾರನ ಲಾಭ, ಅಧಿಕಾರಿಗಳು, ರಾಜಕಾರಣಿಗಳಿಗೆ ಶೇಕಡಾವಾರು ಮಾಮೂಲು ಸಂದಾಯವಾಗದೆ ಸಾಧ್ಯವೇ ಇಲ್ಲ! ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ರಹಸ್ಯ. ಹೀಗಾಗಿ ಆ ಕಾಮಗಾರಿಗಳ ಗುಣಮಟ್ಟವನ್ನು ಪ್ರಶ್ನಿಸುವಂತೆಯೇ ಇಲ್ಲ. ಶೇ. ೪೦ರಿಂದ ೫೦ರಷ್ಟು ಹಣ ಕಾಮಗಾರಿಗಳಿಗೆ ನಿಜವಾಗಿ ಖರ್ಚಾದರೆ ಅದು ಉತ್ತಮವೆನ್ನುವ ಮಟ್ಟದಲ್ಲಿ ಇಂದಿನ ಸ್ಥಿತಿ ಇದೆ. ಎಷ್ಟೋ ಕಾಮಗಾರಿಗಳೇ ಆಗದೆ ಹಣ ಗುತ್ತಿಗೆದಾರರ, ರಾಜಕಾರಣಿಗಳ, ಅಧಿಕಾರಗಳ ಜೇಬು ಸೇರುತ್ತಿರುವುದು ಸುಳ್ಳಲ್ಲ. ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಆಗಿರುವ ಚರಂಡಿ ಕಾಮಗಾರಿಗಳ ಒಟ್ಟು ಉದ್ದ ಲೆಕ್ಕ ಹಾಕಿದರೆ ಅದು ಜಿಲ್ಲಾಕೇಂದ್ರದಿಂದ ರಾಜಧಾನಿ ಬೆಂಗಳೂರಿನವರೆಗೂ ತಲುಪುವ ಸಾಧ್ಯತೆ ಇದೆ. ಇದರ ಸತ್ಯಾಸತ್ಯತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದು. ಆದರೆ ಆ ಚರಂಡಿಗಳೇ ಇರುವುದಿಲ್ಲ.
ಇದು ಅಭಿವೃದ್ಧಿಯೇ?
     ಹಾಸನದ ಸ್ಟೇಡಿಯಮ್ಮಿನಲ್ಲಿ ಒಂದು ಹೈಟೆಕ್ ಶೌಚಾಲಯ ನಿರ್ಮಿಸಿ ಸುಮಾರು ೮ ವರ್ಷಗಳಾಗಿವೆ. ಆ ಸಮಯದಲ್ಲಿ ಆ ಕಾಮಗಾರಿಗೆ ಸುಮಾರು ೮ರಿಂದ೧೦ ಲಕ್ಷ ವೆಚ್ಚ ತೋರಿಸಿರಬಹುದು, ಅಥವ ಅದಕ್ಕೂ ಹೆಚ್ಚಾಗಿರಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲ ಎಂಬುದಕ್ಕೆ ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳಿವೆಯೇ ಎಂದರೆ ಅದೂ ಇಲ್ಲ. ಗಂಡಸರು ಆ ಶೌಚಾಲಯದ ಗೋಡೆಯ ಬಳಿಯೇ ತಮ್ಮ ಬಾಧೆ ತೀರಿಸಿಕೊಳ್ಳುತ್ತಾರೆ. ಹೆಂಗಸರು ತಮ್ಮ ಮನೆಗಳಿಗೇ ಹೋಗಬೇಕು. ಇಷ್ಟಾದರೂ ಯಾರೂ ಗೊಣಗಾಡುವುದಿಲ್ಲವೆಂದರೆ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಬಹುದೆ? ಪ್ರತಿನಿತ್ಯ ನೂರಾರು, ವಿಶೇಷ ದಿನಗಳಲ್ಲಿ ಸಾವಿರಾರು ಜನರು ಬಂದು ಹೋಗುವ ಸ್ಥಳದಲ್ಲಿನ ಪರಿಸ್ಥಿತಿಯೇ ಹೀಗಿದೆ. ಈ ಕಾಮಗಾರಿಗೆ ಆದ ವೆಚ್ಚ ವ್ಯರ್ಥವಾದಂತೆ ಅಲ್ಲವೆ? ಇದು ಅಭಿವೃದ್ಧಿಯೇ? ಜನ ಜಾಗೃತರಾಗಿದ್ದರೆ, ಆಗಿರುವ ವೆಚ್ಚ ಸರಿಯೇ ಎಂದು ಗಮನಿಸುತ್ತಿದ್ದರು, ಶೌಚಾಲಯ ತೆರೆಯುವಂತೆ ಮಾಡುತ್ತಿದ್ದರು, ತೆರೆದರೂ ಸ್ವಚ್ಚವಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು.
     ಹಣ, ಹೆಂಡ, ಸೀರೆ, ವಸ್ತುಗಳನ್ನು ಹಂಚದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಒಬ್ಬ ಪ್ರಾಮಾಣಿಕ ವ್ಯಕ್ತಿ ಚುನಾವಣೆಗೆ ನಿಂತರೆ ಠೇವಣಿ ಉಳಿಸಿಕೊಳ್ಳವುದೂ ಅನುಮಾನ. ಇಂತಹ ಪರಿಸ್ಥಿತಿಯಲ್ಲಿ ಗೆದ್ದವರ ಉದ್ದೇಶ ಮತ್ತಷ್ಟು ಹಣ ಬಾಚಿಕೊಳ್ಳುವುದೇ ಆಗುವುದು ಸಹಜ. ಹೀಗಿರುವಾಗ ಜನರ ಅಭಿವೃದ್ಧಿ ಹೇಗೆ ಸಾಧ್ಯ? ಭ್ರಷ್ಠಾಚಾರಕ್ಕೆ ಕಡಿವಾಣ ಬೀಳದೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಭ್ರಷ್ಠಾಚಾರ ನಿವಾರಣೆಗೆ ಪ್ರಧಾನಿ ಮೋದಿಯವರ ಹಲವಾರು ದಿಟ್ಟ ಕ್ರಮಗಳಿಗೆ ಜನಸಾಮಾನ್ಯನ ಮೆಚ್ಚುಗೆ ಇರುವುದರಿಂದಲೇ ಜನ ಅವರ ಪಕ್ಷಕ್ಕೆ ಒಲವು ತೋರಿಸುತ್ತಿದ್ದಾರೆ. ನಿಜವಾಗಿ ಅಭಿವೃದ್ಧಿ ಬಯಸುವುದಾದಲ್ಲಿ ಆಸಕ್ತ ಜನರು, ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ, ಹಿಂದುಳಿದ ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳಲ್ಲಿ ಆಮಿಷಕ್ಕೆ ಒಳಗಾಗದೆ ಮತ ನೀಡುವಂತಹ ಸ್ಥಿತಿ ತರಲು ಮತ್ತು ಭ್ರಷ್ಠಾಚಾರ ನಿಯಂತ್ರಣಕ್ಕೆ ಒತ್ತುಕೊಡಲು ಜನಜಾಗೃತಿ ಮೂಡಿಸುವುದೊಂದೇ ದಾರಿಯಾಗಿದೆ. ಭ್ರಷ್ಠಾಚಾರ ಹತ್ತಿಕ್ಕದೆ ಅಭಿವೃದ್ಧಿ ಕನಸುಮನಸಿನಲ್ಲೂ ಸಾಧ್ಯವಿಲ್ಲ. ಭ್ರಷ್ಠಾಚಾರವೇ ಅಭಿವೃದ್ಧಿಗೆ ಕಂಟಕ ಮತ್ತು ಸಕಲ ಸಮಸ್ಯೆಗಳ ತಾಯಿಯಾಗಿದೆ. ಜನಜಾಗೃತಿ ಮೂಡಿಸುವುದೇ ಇಂದಿನ ಆದ್ಯತೆಯ ಕೆಲಸವಾಗಬೇಕಿದೆ. 
-ಕ.ವೆಂ.ನಾಗರಾಜ್.
**************ಭಾನುವಾರ, ಏಪ್ರಿಲ್ 22, 2018

ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್


     ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂದೆ ವೈವಾಹಿಕ ಜೀವನದಲ್ಲಿಯೂ ಒಟ್ಟಿಗೆ ಮುಂದುವರೆಯಿತು. ೧೪ ವರ್ಷಗಳ ಬಾಲ್ಯದ ಒಡನಾಟ, ೩೩ ವರ್ಷಗಳ ವೈವಾಹಿಕ ಜೀವನದ ಸಂಗಾತಿಯಾಗಿ ಸುಖ-ದುಃಖಗಳೆಲ್ಲದರಲ್ಲಿ ಸಹಭಾಗಿಯಾಗಿದ್ದ ಚಂದ್ರಲೇಖಾ ಶಿಕ್ಷಕಿಯಾಗಿ ಮಕ್ಕಳ ಕಣ್ಮಣಿಯಾಗಿದ್ದರಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಯನ್ನೂ ಹೊಂದಿ ತನು-ಮನ-ಧನಗಳಿಂದ ತೊಡಗಿಕೊಂಡಿದ್ದವರು. ಇಂತಹ ಸುದೀರ್ಘ ಒಡನಾಟ ಅಕಾಲಿಕವಾಗಿ ಅಂತ್ಯಗೊಂಡಿದ್ದರಿಂದ ಸುಬ್ರಹ್ಮಣ್ಯ ವಿಚಲಿತರಾದರೂ, ಸಾವರಿಸಿಕೊಂಡು ಪತ್ನಿಯ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರ ಮಾಡಿದರು. ಅವರ ಪತ್ನಿ ತಮ್ಮ ಸೇವಾವಧಿಯಲ್ಲಿ ಗಳಿಸಿ ಉಳಿಸಿದ್ದ ಹಣವನ್ನು ನಿಗದಿತ ಠೇವಣಿಯಲ್ಲಿರಿಸಿ ಅದರಿಂದ ಬರುವ ಉತ್ಪತ್ತಿಯನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ನಿರ್ಧರಿಸಿದರು. ಪತ್ನಿಯ ಹೆಸರನ್ನು ಆ ಮೂಲಕ ಚಿರಸ್ಥಾಯಿಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ರಿಜಿಸ್ಟರ್ ಮಾಡಿಸಿದರು. ಬಡರೋಗಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ನೆರವು ಒದಗಿಸುವುದು ಟ್ರಸ್ಟಿನ ಮೂಲ ಧ್ಯೇಯೋದ್ದೇಶವಾಗಿದೆ. ಶ್ರೀ ಹೆಚ್.ಎಸ್.ಸುಬ್ರಹ್ಮಣ್ಯ ಟ್ರಸ್ಟಿನ ಅಧ್ಯಕ್ಷರು, ಶ್ರೀ ಹೆಚ್.ಆರ್.ರಂಗಸ್ವಾಮಿ ಉಪಾಧ್ಯಕ್ಷರು, ಶ್ರೀಮತಿ ನಾಗಶ್ರೀಚೇತನ್ ಕಾರ್ಯದರ್ಶಿ ಮತ್ತು ಶ್ರೀ ಹೆಚ್.ಆರ್.ವಿನಾಯಕ ಖಜಾಂಚಿಯಾಗಿದ್ದರೆ, ಶ್ರೀಯುತರಾದ ಕ.ವೆಂ.ನಾಗರಾಜ್, ಹೆಚ್.ಎಸ್.ರಾಮಸ್ವಾಮಿ, ಕೆ.ಎಸ್.ನಾಗರಾಜ್, ಹೆಚ್.ವಿ.ಗೋಪಾಲಕೃಷ್ಣ ಮತ್ತು ಶ್ರೀಮತಿ ಎಲ್.ಎಸ್. ಮಾಧುರಿಯವರುಗಳು ಟ್ರಸ್ಟಿನ ಸದಸ್ಯರುಗಳಾಗಿರುವಂತೆ ಟ್ರಸ್ಟ್ ರಚನೆಯಾಗಿದೆ.

     ದಿನಾಂಕ ೧೯.೪.೨೦೧೮ರಂದು ಶ್ರೀ ಸುಬ್ರಹ್ಮಣ್ಯರವರ ಪತ್ನಿಯ ವೈಕುಂಠ ಸಮಾರಾಧನೆಯ ದಿನದಂದು ಹಾಸನದ ಸಂಗಮೇಶ್ವರ ಬಡಾವಣೆಯ ಶ್ರೀ ಶಿವಪಾರ್ವತಿ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬಂದಿದ್ದ ಬಂಧುಗಳು, ಸ್ನೇಹಿತರುಗಳ ಸಮ್ಮುಖದಲ್ಲಿ ಟ್ರಸ್ಟಿನ ಔಪಚಾರಿಕ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜೀವನಾದರ್ಶಗಳು, ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ೬೩ ಚಿಂತನಗಳ ಗುಚ್ಛ ತ್ರಿಷಷ್ಟಿ ಸಿಂಚನ ಹೆಸರಿನ ಪುಸ್ತಕದ ಬಿಡುಗಡೆಯಾಯಿತು. ಪ್ರೊ. ವಿ ನರಹರಿ (೧೦), ಶ್ರೀ ಕ.ವೆಂ.ನಾಗರಾಜ್ (೩೧), ಶ್ರೀಮತಿ ಸುಶೀಲಾ ಸೋಮಶೇಖರ್ (೧೫) ಮತ್ತು ಶ್ರೀ ಜಿ.ಎಸ್.ಮಂಜುನಾಥ್ (೭) ರವರುಗಳ ಲೇಖನಗಳ ಸಂಗ್ರಹವೇ ತ್ರಿಷಷ್ಟಿ ಚಿಂತನ. ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಲೇಖಕರುಗಳು ಮತ್ತು ಪುಸ್ತಕ ಮುದ್ರಿಸಿದ ಬಾಲಾಜಿ ಪ್ರಿಂಟರ್ಸಿನ ಶ್ರೀ ಪಾಂಡುರಂಗರವರನ್ನು ಸನ್ಮಾನಿಸಲಾಯಿತು.

     ಇದೇ ಸಂದರ್ಭದಲ್ಲಿ ಟ್ರಸ್ಟಿನ ಉದ್ದೇಶಕ್ಕೆ ಪೂರಕವಾಗಿ ಪ್ರಾರಂಭಿಕ ನಡೆಯಾಗಿ ಸಕಲೇಶಪುರ ತಾ. ಬಾಗೆ, ಜಮ್ಮನಹಳ್ಳಿ ಮತ್ತು ಅಂಬೇಡ್ಕರ್ ನಗರದ ೧೮೦ ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ತಲುಪಿಸುವ ಸಲುವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಕೊಡಲಾಯಿತು. ಹಳೇಬೀಡಿನ ಶ್ರೀ ಕೇಶವಮೂರ್ತಿಯವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಅವರಿಗೆ ನೆರವಾಗುವ ಸಲುವಾಗಿ ರೂ. ೧೫೦೦೦/- ಚೆಕ್ ನೀಡಲಾಯಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾ. ಗರ್ತಿಕೆರೆಯ ರಾ.ಸ್ವ.ಸಂ. ಪ್ರೇರಿತ ಶಾಲೆಯ ಉಪಯೋಗಕ್ಕೆ ಯು.ಪಿ.ಎಸ್. ಖರೀದಿಸಲು ರೂ. ೧೫೦೦೦/- ಚೆಕ್ ಅನ್ನು ಶಾಲೆಯ ಕಾರ್ಯದರ್ಶಿ ಶ್ರೀ ರಾಘವೇಂದ್ರರವರಿಗೆ ನೀಡಲಾಯಿತು. ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ಕುರಿತು ಶ್ರೀ ಕ.ವೆಂ. ನಾಗರಾಜ್ ಮಾತನಾಡಿದರು. ಪ್ರೊ. ನರಹರಿಯವರು ಟ್ರಸ್ಟಿನ ಉದ್ದೇಶವನ್ನು ಮನಸಾರೆ ಶ್ಲಾಘಿಸಿ ಎಲ್ಲರೂ ಈ ಕಾರ್ಯದಲ್ಲಿ ಜೊತೆಗೂಡಲು ಕರೆ ನೀಡಿದರು. ಭಾವುಕರಾಗಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಪತ್ನಿಯ ನೆನಪನ್ನು ಉಳಿಸುವ ಮತ್ತು ಆಕೆಯ ಆಶಯದಂತೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆ, ಬಡ ರೋಗಿಗಳು ಮತ್ತು ಅಸಹಾಯಕರಿಗೆ ನೆರವು ನೀಡುವ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಎಲ್ಲಾ ಬಂಧುಗಳು ಮತ್ತು ಸ್ನೇಹಿತರ ಸಹಕಾರ ಕೋರಿದರು. ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ರೀ ಸುಬ್ರಹ್ಮಣ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
-ಕ.ವೆಂ.ನಾಗರಾಜ್.
                              ಸಮಾರಂಭದ ಕೆಲವು ದೃಷ್ಯಗಳು:


ಭಾನುವಾರ, ಏಪ್ರಿಲ್ 8, 2018

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ- ಗೌರವ ಸಾಕು, ಗೌರವಧನ ಬೇಡ!


     1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ 12-13 ವರ್ಷದ ಬಾಲಕನಾಗಿದ್ದವರಿಗೂ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಮತ್ತು ಪಿಂಚಣಿ ಸಿಗುತ್ತದೆ. ಆ ಸಮಯದಲ್ಲಿ ಮತ್ತಾವುದೋ ಕಾರಣಕ್ಕಾಗಿ ಜೈಲಿನಲ್ಲಿದ್ದವರೂ ಪ್ರಮಾಣ ಪತ್ರ ಪಡೆದು ಸ್ವಾತಂತ್ರ್ಯ ಹೋರಾಟಗಾರರೆನಿಸಿಕೊಂಡ ಬಗ್ಗೆಯೂ ಜನರು ಆಡಿಕೊಂಡದ್ದನ್ನು ಕೇಳಿದ್ದೇನೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಶಿಫಾರಸಿನ ಆಧಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಪಡೆದವರ ಸಂಖ್ಯೆಯೇ ಹೆಚ್ಚು ಎಂಬುದು ವಿಪರ್ಯಾಸ. ಇಂತಹ ಶಿಫಾರಸುಗಳ ಬಲದಿಂದ ಖೊಟ್ಟಿ ಸ್ವಾತಂತ್ರ್ಯ ಹೋರಾಟಗಾರರು ಸವಲತ್ತುಗಳ ಲಾಭ ಪಡೆಯಲು ಅವಕಾಶವಿದೆ, ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಇದನ್ನು ಪ್ರಸ್ತಾಪಿಸುತ್ತಿರುವ ಉದ್ದೇಶವೆಂದರೆ ಈಗ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೂ ಪಿಂಚಣಿ ಕೊಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಬಿಹಾರ, ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡುತ್ತಿದ್ದಾರೆ, ಕರ್ನಾಟಕದಲ್ಲೂ ಕೊಡಬೇಕೆಂದು ಒತ್ತಾಯ ಮಾಡುವ ಪ್ರಯತ್ನಗಳು ಆರಂಭವಾಗಿದೆ. ವೈಯಕ್ತಿಕವಾಗಿ ನನಗೆ ಇಂತಹ ಪ್ರಯತ್ನ ಒಳ್ಳೆಯದಲ್ಲವೆಂದು ಅನ್ನಿಸುತ್ತಿದೆ. ಅದಕ್ಕೆ ಪೂರಕವಾಗಿ ನನ್ನ ವಿಚಾರಗಳನ್ನು ಮಂಡಿಸುತ್ತಿರುವೆ. 
     'ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಪಿಂಚಣಿ ಕೊಡಬಾರದೆಂದು ಹೇಳಲು ನೀವು ಯಾರು?' ಎಂಬ ಪ್ರಶ್ನೆಗೆ  ಉತ್ತರ ಕೊಟ್ಟು ಮುಂದುವರೆಸುವೆ. ಸ್ವತಃ ನಾನೂ ಒಬ್ಬ 1975-77ರ ತುರ್ತು ಪರಿಸ್ಥಿತಿಯ ಸಂತ್ರಸ್ತನಾಗಿದ್ದವನು. ಆಗ ನಾನು 23-24ರ ತರುಣ. (ಈಗ ನನಗೆ 67 ವರ್ಷಗಳು.) ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದವು. ಆ ಸಮಯದಲ್ಲಿ ನಿಷೇಧಕ್ಕೆ ಒಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೆಂಬ ಕಾರಣದಿಂದ ನನ್ನನ್ನು ರಾಷ್ಟ್ರೀಯ ಭದ್ರತಾ ನಿಯಮಗಳ ಅನುಸಾರ ಬಂಧಿಸಿ ಹಾಸನದ ಜೈಲಿಗೆ ಅಟ್ಟಿದ್ದರು. ನೌಕರಿಯಿಂದ ಅಮಾನತ್ತು ಮಾಡಿದ್ದರು. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗಿದ್ದವನು. ಒಂದೂವರೆ ವರ್ಷಗಳ ಕಾಲ ಸೇವೆಯಿಂದ ಅಮಾನತ್ತಿನಲ್ಲಿ ಇದ್ದವನನ್ನು ವಿಚಾರಣೆಯ ಫಲಿತಾಂಶಕ್ಕೆ ಒಳಪಟ್ಟು ಹಾಸನದಿಂದ ದೂರದ ಗುಲ್ಬರ್ಗ ಜಿಲ್ಲೆಯ ಸೇಡಮ್ ತಾಲ್ಲೂಕಿಗೆ ವರ್ಗಾಯಿಸಿದ್ದರು ಅನ್ನುವ ಬದಲು ಒಗಾಯಿಸಿದ್ದರು ಅನ್ನಬಹುದು. ನನ್ನ ತಂದೆಯವರು ಆಗ ಹಾಸನದ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ನ್ಯಾಯಾಲಯಕ್ಕೇ ನಾನು ವಿಚಾರಣೆಗೆ ಹಾಜರಾಗಬೇಕಾಗಿ ಬರುತ್ತಿತ್ತು. ಅಂತಹ ದಿನಗಳಲ್ಲಿ ತಂದೆಯವರು ಕರ್ತವ್ಯಕ್ಕೆ ರಜೆ ಹಾಕುತ್ತಿದ್ದರು, ನ್ಯಾಯಾಲಯಕ್ಕೆ ಬರುತ್ತಿರಲಿಲ್ಲ. ಇಷ್ಟೇ ಸಾಲದೆಂಬಂತೆ, ಮನೆಯಲ್ಲಿ ನಿಷೇಧಿತ ಸಂಸ್ಥೆಯ ಚಟುವಟಿಕೆಗಳಿಗೆ ಆಸ್ಪದ ಕೊಡುತ್ತಿದ್ದರೆಂದು ಕಾರಣ ನೀಡಿ ತಂದೆಯವರು ಕೆಲಸ ಮಾಡುತ್ತಿದ್ದ ನ್ಯಾಯಾಲಯದ ನ್ಯಾಯಾಧೀಶರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪ್ರಸ್ತಾವನೆ ಸಲ್ಲಿಸಿ ನನ್ನ ತಂದೆಯನ್ನೂ ಕೆಲಸದಿಂದ ಕಡ್ಡಾಯ ನಿವೃತ್ತಿಗೊಳಿಸಲು ಶಿಫಾರಸು ಮಾಡಿದ್ದರು. ಆಗ ಶ್ರೀ ಕೋ. ಚೆನ್ನಬಸಪ್ಪನವರು ಜಿಲ್ಲಾ ಜಡ್ಜ್ ಆಗಿದ್ದು ಪ್ರಸ್ತಾವನೆಯನ್ನು ಒಪ್ಪದಿದ್ದುದರಿಂದ ನನ್ನ ತಂದೆಯವರ ನೌಕರಿ ಉಳಿದಿತ್ತು. ಜೈಲಿನ ಗೋಡೆಗೆ ಒರಗಿ ಕುಳಿತು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ನನಗೆ ಮುಂದೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಿದ್ದೆ. ನನ್ನ ನೌಕರಿ ಮರಳಿ ಸಿಗುವ ಭರವಸೆ ನನಗಿರಲಿಲ್ಲ. ನನಗೆ, ನನ್ನ ಕುಟುಂಬದವರಿಗೆ ಅನಗತ್ಯ ಕಿರುಕುಳ ಕೊಟ್ಟಿದ್ದ ಹಲವಾರು ಜನರನ್ನು ಕೊಂದುಹಾಕುವ ಬಗ್ಗೆಯೂ ರೋಷತಪ್ತ ಮನಸ್ಸು ಚಿಂತಿಸುತ್ತಿತ್ತು. ಯಾರು ಯಾರನ್ನು ಹೇಗೆ ಕೊಲ್ಲಬೇಕೆಂಬ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಿತ್ತು. ಆದರೆ ರಾ.ಸ್ವ.ಸಂಘದ ಹಿರಿಯರು ಮತ್ತು ಸುಮನಸ್ಕರ ಸಹವಾಸಗಳಿಂದ ಬಂದಿದ್ದ ಸಂಸ್ಕಾರ ನನ್ನನ್ನು ದಾರಿ ತಪ್ಪಲು ಬಿಡಲಿಲ್ಲ. ಇಂತಹ ಸಂಸ್ಕಾರ ಇಲ್ಲದೇ ಇದ್ದಿದ್ದರೆ ನಾನೊಬ್ಬ ಉಗ್ರ ಹಿಂಸಾವಾದಿಯಾಗುತ್ತಿದ್ದುದರಲ್ಲಿ ಸಂದೇಹವಿಲ್ಲ. ನನ್ನ ಮುಂದಿನ ಭವಿಷ್ಯವೇ ಮಸುಕಾಗಿದ್ದ ಸಂದರ್ಭವನ್ನು ಎದುರಿಸಿ ಬಂದಿದ್ದ ನಾನು ಅದಕ್ಕಾಗಿ ಈಗ ಪ್ರತಿಫಲರೂಪವಾಗಿ ಪಿಂಚಣಿಯನ್ನೋ, ಗೌರವಧನವನ್ನೋ ನಿರೀಕ್ಷಿಸಿದರೆ, ಅದೂ 40 ವರ್ಷಗಳ ನಂತರದಲ್ಲಿ, ಅದು ನನಗೆ ನಾನೇ ಮಾಡಿಕೊಳ್ಳುವ ಅವಮಾನವೆಂಬುದು ನನ್ನ ವೈಯಕ್ತಿಕ ಅನಿಸಿಕೆ. ನಾನಂತೂ ಅದನ್ನು ನಿರೀಕ್ಷಿಸುವುದಿಲ್ಲ ಮತ್ತು ಅದಕ್ಕಾಗಿ ಕೋರುವುದೂ ಇಲ್ಲ.
     ನಿಜ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೆಷ್ಟು ಜನರು ಪ್ರಾಣ ಕಳೆದುಕೊಂಡರೋ, ಅದೆಷ್ಟು ಕುಟುಂಬಗಳು ಬೀದಿಗೆ ಬಿದ್ದವೋ, ಅದೆಷ್ಟು ಜನರು ಶಾಶ್ವತವಾಗಿ ಅಂಗವಿಕಲರಾದರೋ ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಅಂತಹವರನ್ನು ಸ್ಮರಿಸುವುದು, ನಿಜಕ್ಕೂ ಆಸರೆ ಅಗತ್ಯವಿರುವವರಿಗೆ ಆಸರೆ ಒದಗಿಸುವುದು ಉತ್ತಮವಾದ ಕಾರ್ಯವೇ. ಅಂತಹವರನ್ನು ಗುರುತಿಸಿ ಅವರಿಗೆ ಸಹಾಯಹಸ್ತ ಚಾಚಿದರೆ ಅದು ಮೆಚ್ಚುವ ಕಾರ್ಯ. ನಾನು ಹಾಸನ ಜಿಲ್ಲೆಯನ್ನೇ ಉದಾಹರಣೆಯಾಗಿಟ್ಟುಕೊಂಡು ನನಗೆ ತಿಳಿದ ಮಾಹಿತಿಯನ್ನು ಹೇಳುವುದಾದರೆ, ಆ ಸಂದರ್ಭದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿಡಬಹುದಾಗಿದ್ದ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ (ಮೀಸಾ) ಅನ್ವಯ ಬಂಧಿತರಾಗಿದ್ದವರು 13 ಜನರು. ಅವರಲ್ಲಿ 10 ಜನರು ಈಗಾಗಲೇ ಮೃತರಾಗಿದ್ದಾರೆ ಮತ್ತು ಅವರ ಕುಟುಂಬಗಳು ಆರ್ಥಿಕ ಸುಸ್ಥಿತಿಯಲ್ಲಿವೆ. ಮೀಸಾ ಬಂದಿಯಾಗಿದ್ದ ರಾ.ಸ್ವ.ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಗಳ ಕಾರಣದಿಂದ ತುರ್ತು ಪರಿಸ್ಥಿತಿ ಹಿಂತೆಗೆತವಾದ ಕೆಲವು ವರ್ಷಗಳ ನಂತರದಲ್ಲಿ ಮತಿಭ್ರಮಣೆಗೊಳಗಾಗಿ ಮೃತಿ ಹೊಂದಿದ್ದರು. ಉಳಿದ ಮೂವರೂ ಮೀಸಾ ಬಂಧಿತರಾಗಿದ್ದವರು ಸಹ ಒಳ್ಳೆಯ ಆರ್ಥಿಕ ಸ್ಥಿತಿಯವರಾಗಿದ್ದಾರೆ. ಭಾರತ ರಕ್ಷಣಾ ನಿಯಮಗಳ ಅನುಸಾರ ಬಂಧಿತರಾಗಿದ್ದವರು ಸುಮಾರು 300 ಜನರು. ಅವರಲ್ಲಿಯೂ ಬಹುತೇಕರು ಮೃತರಾಗಿದ್ದಾರೆ ಮತ್ತು ಹಲವರು ಈಗ ಪರಸ್ಥಳಗಳಲ್ಲಿದ್ದು ಎಲ್ಲಿದ್ದಾರೋ ತಿಳಿದಿಲ್ಲ. ಇರುವ ಉಳಿದವರೂ ಸಹ ಪಿಂಚಣಿ ಅವಲಂಬಿಸಿಯೇ ಜೀವನ ಸಾಗಿಸಬೇಕು ಎಂಬ ಸ್ಥಿತಿಯಲ್ಲಿರುವವರು ಬಹುಷಃ ಯಾರೂ ಇಲ್ಲವೆನ್ನಬೇಕು. ಇನ್ನು ಸಾವಿರಾರು ಜನರು ಪ್ರತಿಭಟನೆಯಲ್ಲಿ ತೊಡಗಿದ್ದರೂ, ಜೈಲುಗಳಲ್ಲಿ ಸ್ಥಳಾವಕಾಶವಿಲ್ಲದಿದ್ದರಿಂದ ಪೊಲೀಸರು ಅವರನ್ನು ಹೊಡೆದು, ಬಡಿದು ಹಿಂಸಿಸಿ ಬಿಟ್ಟುಬಿಟ್ಟಿದ್ದರು. ಇನ್ನು ಭೂಗತ ಚಟುವಟಿಕೆಗಳಲ್ಲಿ ತೊಡಗಿ ಚಳುವಳಿಯನ್ನು ಜೀವಂತವಾಗಿರಿಸಿದ್ದವರ ಸಂಖ್ಯೆಯೂ ದೊಡ್ಡದಿದೆ. ಅವರುಗಳಿಗೆ ಗೌರವಧನ ನೀಡಲು ಶಿಫಾರಸು ಪತ್ರಗಳೇ ಆಧಾರವಾಗುತ್ತವೆ. ಹೆಚ್ಚಿನ ರಾ.ಸ್ವ. ಸಂಘದ ಪ್ರಚಾರಕರು, ಕಾರ್ಯಕರ್ತರು ಶಿಫಾರಸಿನ ಗೋಜಿಗೇ ಹೋಗಲಾರರು. ಆಗ ಹೋರಾಟದಿಂದ ದೂರವಿದ್ದ ಹಲವರು ಇಂತಹ ಶಿಫಾರಸಿನ ಲಾಭ ಪಡೆಯುವುದಿಲ್ಲ ಎಂದೂ ಹೇಳಲಾಗದು. ಹೋರಾಟದಲ್ಲಿ ಪಾಲುಗೊಂಡಿದ್ದವರು  ಸ್ವಪ್ರೇರಣೆಯಿಂದ, ಪ್ರಜಾಪ್ರಭುತ್ವದ ಮತ್ತು ದೇಶದ ಹಿತದೃಷ್ಟಿಯಿಂದ ಮಾಡಿದ್ದರೇ ಹೊರತು ಯಾವುದೇ ಫಲಾಪೇಕ್ಷೆಯ ನಿರೀಕ್ಷೆ ಅವರಲ್ಲಿರಲಿಲ್ಲ. 
     ಪಿಂಚಣಿಯೋ, ಗೌರವಧನವೋ ಬರುತ್ತದೆಯೆಂದರೆ, ಬಂದರೆ ಬರಲಿ ಎಂಬ ಮನೋಭಾವದವರೂ ಇರುತ್ತಾರೆ. ತುಂಬಾ ಅನುಕೂಲ ಸ್ಥಿತಿಯಲ್ಲಿರುವ ಒಬ್ಬ ಸ್ನೇಹಿತರು ಹೇಳಿದ್ದೇನೆಂದರೆ, ಒಂದು ಐದು ಸಾವಿರ ಕೊಟ್ಟರೆ ಕೊಡಲಿ ಬಿಡಿ. ನಾವು ತೆಗೆದುಕೊಳ್ಳದೆ ಅದನ್ನು ಬೇರೆ ಯಾವುದೋ ಅಗತ್ಯವಿರುವ ಸಂಸ್ಥೆಗೆ ಅಥವ ಜನರಿಗೆ ಸಿಗುವಂತೆ ಮಾಡಿದರಾಯಿತು! ಹಣದ ಪ್ರಲೋಭನೆಯೇ ಅಂತಹದು. ಯಾರೋ ಕೊಡುವ ಹಣವನ್ನು ಇನ್ನು ಯಾರಿಗೋ ದಾನ ಮಾಡುವ ಬದಲು, ಸಾಧ್ಯವಾದರೆ ನಮ್ಮಲ್ಲಿರುವ ಹಣದಿಂದಲೇ ಸಹಾಯ ಮಾಡೋಣ. ಸರ್ಕಾರದಿಂದ ಪಡೆದು ಏಕೆ ಕೊಡಬೇಕು? ಈಗ ಮಾಡಬಹುದಾದುದೇನೆಂದರೆ, ದೀನಸ್ಥಿತಿಯಲ್ಲಿ ಇರಬಹುದಾದವರನ್ನು ಗುರುತಿಸಿ ಅಂತಹವರಿಗೆ ಮಾತ್ರ ಅವರ ಅಗತ್ಯ ಅನುಸರಿಸಿ ಸಹಾಯ ಸಿಗುವಂತೆ ನೋಡಿಕೊಳ್ಳಬೇಕು, ಅಷ್ಟೆ. ಅಂದು ಹೋರಾಟ ಮಾಡಿದವರೆಲ್ಲರೂ ಈಗ 60 ವರ್ಷಗಳನ್ನು ಮೀರಿದವರೇ ಆಗಿದ್ದಾರೆ. ಅವರಿಗೆ ಗೌರವಧನ ಬೇಡ, ಗೌರವ ಸಾಕು. ಅವರ ವಯಸ್ಸು, ಅನುಭವಗಳನ್ನು ಆಧರಿಸಿ, ಅವರವರ ಶಕ್ತಿ, ಸಾಮರ್ಥ್ಯ ಅನುಸರಿಸಿ ಅವರ ಸೇವೆ, ಮಾರ್ಗದರ್ಶನಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಅದು ನಿಜವಾಗಿ ಅವರುಗಳಿಗೆ ಸಲ್ಲಿಸಬಹುದಾದ ಗೌರವವಾಗುತ್ತದೆ. 
-ಕ.ವೆಂ.ನಾಗರಾಜ್.

ಪಾಠ ಮರೆತುಹೋಯಿತು!

     

     ಆ ಮಗು ಒಂದನೆಯ ತರಗತಿಯಲ್ಲಿ ಓದುತ್ತಿದ್ದಾಗ ಅವನ ಶಾಲೆಯ ಮಾಸ್ತರು ಬಸವಣ್ಣನವರ ವಿಚಾರ ಹೇಳುತ್ತಾ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕೆಂದು ಹೇಳಿದ್ದರು. ಶಾಲೆ ಮುಗಿಸಿ ಮರಳಿ ಬರುವಾಗ ಮಳೆ ಪ್ರಾರಂಭವಾದುದರಿಂದ ಒಂದು ಮನೆಯ ಮುಂಭಾಗದಲ್ಲಿ ನಿಂತಿತ್ತು. ಆಗ ಓಡಿ ಬಂದ ನಾಯಿಯೊಂದೂ ಸಹ ರಕ್ಷಣೆಗಾಗಿ ಅದೇ ಮನೆಯ ಬಳಿ ಬಂದು ನಿಂತಿತು. ಇವನು ನಿಂತಿದ್ದರಿಂದ ನಾಯಿಗೆ ಜಾಗ ಸಾಲದಾಗಿ ಅರ್ಧ ನೆನೆಯುತ್ತಿತ್ತು. ಮಗು ಯೋಚಿಸಿತು, "ನನಗಾದರೆ ಮನೆಯಿದೆ, ಬಟ್ಟೆಯಿದೆ. ಪಾಪ, ಈ ನಾಯಿಗೆ ಏನಿದೆ?" ನಾಯಿಗೆ ಜಾಗ ಬಿಟ್ಟು ನೆನೆದುಕೊಂಡೇ ಮನೆಗೆ ವಾಪಸು ಬಂದ ಮಗನನ್ನು ಕಂಡ ತಾಯಿಗೆ ನೆನೆದುಕೊಂಡು ಬಂದ ಕಾರಣ ತಿಳಿಸಿತು.ನೆನೆದಿದ್ದ ಮಗುವನ್ನು ಒರೆಸಿ ಬೇರೆ ಬಟ್ಟೆ ಹಾಕಿದ ತಾಯಿ ಮಗುವನ್ನು ಮುದ್ದಾಡಿದಳು. ವಿಷಯ ತಿಳಿದ ತಂದೆಯೂ ಖುಷಿಪಟ್ಟು ಮಗುವಿಗೆ ಹೊಸ ಬಟ್ಟೆ, ಚಾಕೊಲೇಟ್ ಕೊಡಿಸಿದ. ಕಾಲ ಸರಿಯಿತು, ಮಗು ದೊಡ್ಡದಾಗುತ್ತಾ ಹೋದಂತೆ ಆ ಮಾಸ್ತರ ಪಾಠ ಮರೆತುಹೋಗುತ್ತಾ ಒಂದೊಮ್ಮೆ ಪೂರ್ತಿ ಮರೆತೇಹೋಯಿತು.
-ಕ.ವೆಂ.ನಾಗರಾಜ್.

ಸೋಮವಾರ, ಮಾರ್ಚ್ 26, 2018

ಒಳ್ಳೆಯ ದಿನಗಳು ಬರಲಿವೆ!


     ಹೌದು, ಒಳ್ಳೆಯ ದಿನಗಳು ಬರಲಿವೆ! ಈ ಮಾತನ್ನು ಯಾವುದೇ ರಾಜಕೀಯ ನಾಯಕರನ್ನು ಸಮರ್ಥಿಸಲು ಬರೆಯುತ್ತಿಲ್ಲ ಅಥವ ಈ ಮಾತಿಗೆ ರಾಜಕೀಯ ಮಹತ್ವವನ್ನೂ ಕೊಡಬೇಕಿಲ್ಲ. ನಾನು ಸಹಜವಾದ ವಿಷಯವನ್ನು ಸಹಜವಾಗಿ ಪ್ರಸ್ತಾಪಿಸುವ ಸಲುವಾಗಿ ಈ ವಾಕ್ಯವನ್ನು ಆರಿಸಿಕೊಂಡಿರುವೆ, ಅಷ್ಟೆ. ಪ್ರತಿಯೊಬ್ಬರೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದುಕೊಂಡೇ ಜೀವಿಸುತ್ತಾರೆ ಎಂಬುದು ಸತ್ಯ. ಈಗ ಇರುವುದಕ್ಕಿಂತ ಉತ್ತಮ ಸ್ಥಿತಿಯಲ್ಲಿ ಬಾಳಬೇಕು ಎಂಬುದೇ ಎಲ್ಲರ ಪ್ರಬಲವಾದ ಇಚ್ಛೆಯಾಗಿರುವುದರಿಂದ, ಈಗ ಇರುವ ಕಷ್ಟದ, ದುಃಖದ ಸ್ಥಿತಿಯನ್ನು ಸಹಿಸಿಕೊಂಡು ಮುಂದುವರೆಯುವುದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಿಂದ! ಒಳ್ಳೆಯ ದಿನಗಳಿಗಾಗಿ ನಮ್ಮ ಪ್ರಯತ್ನ ಅಚಲವಾಗಿದ್ದರೆ, ಸತತವಾಗಿದ್ದರೆ ಆ ದಿನಗಳು ಬಂದೇ ಬರುತ್ತವೆ. 
      ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಆಸೆಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ ಆಸೆ!      ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.
     ಒಂದು ಅರ್ಥದಲ್ಲಿ ನೋಡಿದರೆ ನಾವು ಬದುಕಿರುವ, ಉಸಿರಾಡುತ್ತಿರುವ ಪ್ರತಿದಿನವೂ ಒಳ್ಳೆಯ ದಿನವೇ! ಏಕೆಂದರೆ ಮತ್ತಷ್ಟು ಒಳ್ಳೆಯದನ್ನು ನೋಡಲು, ಕಾಣಲು ಪ್ರತಿದಿನವೂ ಅವಕಾಶ ಮಾಡಿಕೊಡುತ್ತದೆ. ಕೆಲವು ದಿನಗಳು ಕೆಟ್ಟ, ಕಷ್ಟದ, ದುಃಖದ ದಿನಗಳೆಂದು ನಮಗೆ ಅನ್ನಿಸಬಹುದು. ಒಳ್ಳೆಯ ದಿನಗಳ, ಸಂತೋಷದ ಕ್ಷಣಗಳ ಉತ್ಕಟ ಅನುಭವವಾಗಬೇಕಾದರೆ ದುಃಖ, ಕಷ್ಟಗಳ ಅನುಭವವೂ ಆಗಬೇಕು. ಬೆಳಿಗ್ಗೆ ಎದ್ದಾಗ ನಮ್ಮ ಭುಜಗಳ ಮೇಲೆ ತಲೆ ಇದ್ದರೆ, ಇಂದು ಶುಭದಿನ, ಶುಭವಾಗಲಿದೆ ಎಂದೇ ದಿನವನ್ನು ಪ್ರಾರಂಭಿಸಿದರೆ ಆ ದಿನ ಶುಭವಾಗಿಯೇ ಇರುತ್ತದೆ. 1975-77ರಲ್ಲಿ ಅಂದಿನ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರಾಳ ತುರ್ತು ಪರಿಸ್ಥಿತಿ ಹೇರಿ, ಪ್ರಜಾಫ್ರಭುತ್ವಕ್ಕೆ ಕಳಂಕ ತಂದಿದ್ದ ಸಂದರ್ಭದಲ್ಲಿ ಅದೆಷ್ಟು ಅಮಾಯಕರು ಜೀವ ಕಳೆದುಕೊಂಡರೋ, ಕಷ್ಟ-ನಷ್ಟಗಳನ್ನು ಅನಭವಿಸಿದರೋ ಲೆಕ್ಕವಿಲ್ಲ. ಸ್ವತಃ ನಾನೂ ಹಾಸನದ ಜೈಲಿನಲ್ಲಿ ಭಾರತ ರಕ್ಷಣಾ ಕಾಯದೆಯ ಅಡಿಯಲ್ಲಿ ಬಂಧಿಸಲ್ಪಟ್ಟಿದ್ದೆ. 13 ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ನನ್ನ ಮೇಲೆ ಹೂಡಲಾಗಿತ್ತು. ನನ್ನನ್ನು ನೌಕರಿಯಿಂದ ತೆಗೆದಿದ್ದರು. ಆಗ ಜೈಲಿನ ಗೋಡೆಯನ್ನು ಒರಗಿಕೊಂಡು ಅನಿಶ್ಚಿತ ಭವಿಷ್ಯದ ಕುರಿತು ಚಿಂತಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಇಂದಿನ ಪ್ರತಿಯೊಂದು ದಿನವೂ ನನಗೆ ಸಂತೋಷದ ದಿನವಾಗಿ ಕಾಣುತ್ತದೆ. ಅಂದಿನ ಕಷ್ಟದ ದಿನಗಳು ಮುಂದೆ ನನ್ನನ್ನು ಮಾನಸಿಕವಾಗಿ ಮತ್ತಷ್ಟು ಬಲಿಷ್ಠನನ್ನಾಗಿ ಮಾಡಿದವು ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಕೆಟ್ಟ ದಿನಗಳನ್ನು ನಿಭಾಯಿಸಬಲ್ಲವನು ಒಳ್ಳೆಯ ದಿನಗಳನ್ನು ಕಾಣಬಲ್ಲ. ಜೀನ್ ಸೈಮನ್ಸ್ ಎಂಬಾಕೆ ಬರೆಯುತ್ತಾಳೆ, "ನನ್ನ ತಾಯಿಯ ಜೀವನ ನರಕವಾಗಿತ್ತು. ಆಕೆ 14 ವರ್ಷದವಳಾಗಿದ್ದಾಗ ನಾಝಿಗಳ ಯಾತನಾಶಿಬಿರದಲ್ಲಿ ಬಂದಿಯಾಗಿದ್ದಳು. ಈಗ ಜೀವನದ ಬಗ್ಗೆ ಅವಳ ಅನಿಸಿಕೆಯೆಂದರೆ, ಭೂಮಿಯ ಮೇಲಿನ ಪ್ರತಿಯೊಂದು ದಿನವೂ ಶುಭದಿನವೇ!" ಮೃತ್ಯುವಿನ ದರ್ಶನ ಮಾಡಿಬಂದು ಬದುಕುಳಿದವರೆಲ್ಲರ ಅನುಭವವೂ ಸಾಮಾನ್ಯವಾಗಿ ಇದೇ ಆಗಿರುತ್ತದೆ.
     ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾವಾದವೇ ಜೀವನ; ಅಯ್ಯೋ, ಎಲ್ಲವೂ ಮುಗಿಯಿತು ಎನ್ನುವ ನಿರಾಶಾವಾದವೇ ಮರಣ. ಆಶಾವಾದಕ್ಕೆ ದುರ್ಯೋಧನ ಉತ್ತಮ ಉದಾಹರಣೆಯಾಗಿದ್ದಾನೆ. ತಾನೊಬ್ಬನೇ ಹಸ್ತಿನಾಪುರವನ್ನು ಆಳಬೇಕು, ಪಾಂಡವರನ್ನು ಸೋಲಿಸಲೇಬೇಕು ಎಂಬ ಛಲದಿಂದ ಕುರುಕ್ಷೇತ್ರದ ಯುದ್ದದಲ್ಲಿ ತೊಡಗಿದ್ದಾಗ, ಅವನ ಕಣ್ಣಮುಂದೆಯೇ ಅವನ ಸಹೋದರರು ಹತರಾದರು, ದ್ರೋಣ, ಭೀಷ್ಮ, ಕರ್ಣರಂತಹ ಅತಿರಥ, ಮಹಾರಥರೆಲ್ಲರೂ ಧರೆಗುರುಳಿದರು. ಆದರೂ ಅವನಿಗೆ ವಿಶ್ವಾಸವಿತ್ತು, ಶಕುನಿ ಇನ್ನೂ ಇದ್ದಾನೆ, ಯುದ್ಧದಲ್ಲಿ ಗೆಲ್ಲುವಂತೆ ಮಾಡುತ್ತಾನೆ. ಸ್ವತಃ ತಾನು ಸಾಯುವವರೆಗೂ ತಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಟ್ಟುಕೊಂಡೇ ಸತ್ತವನು ಅವನು. ದುರ್ಯೋಧನನ ಜೀವನ ನಮಗೆ ಆದರ್ಶವಲ್ಲದಿದ್ದರೂ, ಅವನ ಎಡೆಬಿಡದ ಆಶಾವಾದ, ಛಲಗಳು ಅನುಕರಣೀಯವಾಗಿವೆ.
     ಕೇವಲ ಆಸೆ, ಭರವಸೆ, ನಿರೀಕ್ಷೆಗಳೇ ನಮ್ಮ ಒಳ್ಳೆಯ ದಿನಗಳ ನಿರೀಕ್ಷೆಗೆ ಸಾಕಾಗುವುದಿಲ್ಲ. ನಮ್ಮ ಒಳ್ಳೆಯ ದಿನಗಳನ್ನು ಬೇರೆ ಯಾರೋ ತಂದುಕೊಡುತ್ತಾರೆ ಎಂದು ನಿರೀಕ್ಷಿಸುವುದೂ ತರವಲ್ಲ. ನಾವು ಯಾರೋ ನಮಗೆ ಒಳ್ಳೆಯ ದಿನಗಳನ್ನು ತಂದುಕೊಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಕೈಕಟ್ಟಿ ಕುಳಿತರೆ ಹಿಂದೆ ಉಳಿಯುವವರು, ಭ್ರಮನಿರಸನಕ್ಕೆ ಪಕ್ಕಾಗುವವರು ನಾವೇನೇ. ನಮ್ಮ ಒಳ್ಳೆಯ ದಿನಗಳಿಗಾಗಿ ನಾವೇ ಶ್ರಮಿಸಬೇಕು. ವಿವೇಕಾನಂದರು ಹೇಳಿದಂತೆ, ನಮ್ಮ ಏಳಿಗೆಯ ಶಿಲ್ಪಿಗಳು ನಾವೇ! ಪರದೇಶದ ಒಬ್ಬ ಯಾತ್ರಿಕ ಒಮ್ಮೆ ಒಬ್ಬ ಸನ್ಯಾಸಿಯನ್ನು ಭೇಟಿ ಮಾಡಿದನಂತೆ. ಒಂದು ಸಣ್ಣ ಗುಡಿಸಲಿನಲ್ಲಿದ್ದ ಆ ಸನ್ಯಾಸಿಯ ಹತ್ತಿರ ಇದ್ದುದು ಒಂದು ಚಾಪೆ ಮತ್ತು ಒಂದು ಕುಡಿಯುವ ನೀರಿನ ಪಾತ್ರೆ ಅಷ್ಟೆ. ಆಶ್ಚರ್ಯಗೊಂಡ ಯಾತ್ರಿಕ ಸನ್ಯಾಸಿಯನ್ನು ಕೇಳಿದನಂತೆ: "ಸ್ವಾಮಿ, ನಿಮ್ಮ ಪೀಠೋಪಕರಣಗಳು ಎಲ್ಲಿ?" ಸನ್ಯಾಸಿಯಿಂದ ಮರುಪ್ರಶ್ನೆ ಬಂದಿತು: "ನಿಮ್ಮ ಪೀಠೋಪಕರಣಗಳು ಎಲ್ಲಿ?" ಯಾತ್ರಿಕ ಹೇಳಿದ, "ಸ್ವಾಮಿ, ನಾನೊಬ್ಬ ಯಾತ್ರಿಕ. ನನ್ನ ಪೀಠೋಪಕರಣಗಳು ನನ್ನ ಊರಿನಲ್ಲಿವೆ". ಸನ್ಯಾಸಿ ಹೇಳಿದನಂತೆ, "ನಾನೂ ಒಬ್ಬ ಯಾತ್ರಿಕ!" ಜೀವನದ ಪಾಠ ಇಲ್ಲಿದೆ. ಜನರು ತಾವು ಶಾಶ್ವತವಾಗಿರುತ್ತೇವೆಂದುಕೊಂಡು ಮೂರ್ಖರಂತೆ ಬಾಳುತ್ತಾರೆ. ಅರ್ಥ ಮಾಡಿಕೊಂಡರೆ ನಮ್ಮ ಜೀವನದ ಪ್ರತಿದಿನವೂ ಶುಭದಿನ ಆಗಿರಲೇಬೇಕು! ಎಲ್ಲರಿಗೂ, ಎಲ್ಲಾ ದಿನಗಳೂ ಶುಭದಿನಗಳಾಗಲೆಂದು ಆಶಿಸೋಣ. ನಿಜ ಅಲ್ಲವೇ? ಒಳ್ಳೆಯ ದಿನಗಳು ಖಂಡಿತಾ ಬರಲಿವೆ! ಸ್ವಾಗತಿಸಲು ಸಿದ್ಧರಾಗೋಣ. 
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 21, 2018

ಬಸವಣ್ಣನವರ ಜಾತಿ ಸರ್ಟಿಫಿಕೇಟು!


"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ".
ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು,
"ಏನ್ಸಾರ್ ಇದು? ಬಸವಣ್ಣನವರ ಜಾತಿ ಸರ್ಟಿಫಿಕೇಟಾ? ಯು ಮೀನ್ ಜಗಜ್ಯೋತಿ ಬಸವೇಶ್ವರ?"
"ಯಸ್, ಈ ಮೀನ್ ಜಗಜ್ಯೋತಿ ಬಸವೇಶ್ವರ. ಅವರ ತಂದೆ, ತಾಯಿ ಹೆಸರು, ಅವರ ಜಾತಿಯ ಬಗ್ಗೆ ಅಧಿಕೃತವಾದ ಮಾಹಿತಿ ಇರುವ ಪ್ರಮಾಣಿತ ದಾಖಲೆಗಳು ಎಲ್ಲಾ ಕೊಟ್ಟಿದ್ದೇನೆ. ಇವುಗಳ ಆಧಾರದಲ್ಲಿ ನನಗೆ ಜಾತಿ ಸರ್ಟಿಫಿಕೇಟ್ ಕೊಡಿ".
ದೇಶಾವರಿ ನಗೆ ನಗುತ್ತಾ ತಹಸೀಲ್ದಾರರು,
"ತಮಾಷೆ ಮಾಡ್ತಾ ಇದೀರಾ ಸಾರ್? ಅವರ ಜಾತಿ ಸರ್ಟಿಫಿಕೇಟ್ ಈಗ ಕೊಡೊಕ್ಕಾಗುತ್ತಾ?"
"ಏಕೆ ಕೊಡಕ್ಕಾಗಲ್ಲ? ಸತ್ತು ಹೋದವರಿಗೆ ಯಾವುದೇ ಸರ್ಟಿಫಿಕೇಟ್ ಕೊಡಬಾರದು ಅಂತ ಕಾನೂನು ಇನ್ನೂ ಬಂದಿಲ್ಲ."
"ಹಾಗಲ್ಲಾ ಸಾರ್. ಅಷ್ಟಕ್ಕೂ ನಿಮಗೆ ಹೇಗೆ ಕೊಡೊಕ್ಕಾಗತ್ತೆ? ನಿಮಗೂ ಅವರಿಗೂ ಏನು ಸಂಬಂಧ?"
"ಏನ್ರೀ ಅರ್ಥ? ಬಸವಣ್ಣನವರಿಗೂ ನಮಗೂ ಸಂಬಂಧವಿಲ್ಲ ಅಂದರೆ ಅವರು ಇನ್ನು ಯಾರಿಗೆ ಸಂಬಂಧ? ಬಸವಣ್ಣನವರು ಎಲ್ಲರಿಗೂ ಸಂಬಂಧಪಟ್ಟವರು."
ತಹಸೀಲ್ದಾರರು ಮೌನವಾಗಿ ಕುಳಿತಾಗ ರಾಯರೇ ಮುಂದುವರೆಸಿದರು,
"ನೋಡಿ, ಸರ್ಕಾರ ಲಿಂಗಾಯತರು ಹಿಂದೂಗಳಲ್ಲ, ಅವರೇ ಬೇರೆ ಅಂತ ಬೇರೆ ಧರ್ಮ ಘೋಷಣೆ ಮಾಡಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ನಾನು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅಪೀಲು ಮಾಡಿದ್ದೇನೆ. ಆ ಕೇಸಿಗೆ ಸಂಬಂಧಪಟ್ಟಂತೆ ಬಸವಣ್ಣನವರ ಜಾತಿ ದಾಖಲೆಯೂ ಬೇಕಾಗುತ್ತೆ. ಅದನ್ನು ತಹಸೀಲ್ದಾರರಿಂದ ಪಡೆದುಕೊಳ್ಳಬೇಕು ಎಂಬ ಮನವಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಕೋರ್ಟಿನಿಂದಲೂ ತಮಗೆ ಸೂಚನೆ ಬರುತ್ತೆ. ನಾನೇ ಕೇಳಿದರೆ ಕಿರಿಕಿರಿ ಮಾಡಬಹುದು, ಕೊಡದೇ ಇರಬಹುದು ಎಂಬ ಸತ್ಯವೂ ನನಗೆ ಗೊತ್ತಿದ್ದರಿಂದ ಹೀಗೆ ಮಾಡಿದ್ದೇನೆ. ನನ್ನ ಪ್ರಯತ್ನವನ್ನೂ ಮಾಡೋಣ ಅಂತ ನಿಮ್ಮ ಹತ್ತಿರ ಬಂದಿದ್ದೇನೆ".
"ಸಾರ್, ನಮ್ಮನ್ನು ಮಧ್ಯಕ್ಕೆ ಸಿಕ್ಕಿಸಿಹಾಕುತ್ತಿದ್ದೀರ. ನಾನು ಎಷ್ಟಾದರೂ ನಿಮ್ಮ ಶಿಷ್ಯ. ನಿಮ್ಮಿಂದಲೇ ಪಾಠ ಕಲಿತವನು. ನೀವೇ ಒಂದು ದಾರಿ ತೋರಿಸಿಬಿಡಿ."
"ಬಸವಣ್ಣನವರ ಕಾಲದಲ್ಲಿ ಈಗಿನ ಜಾತಿ ಕಾನೂನು ಇರಲಿಲ್ಲ. ಅದಕ್ಕೇ ಅವರು ಅವರದೇ ಹೊಸಜಾತಿ ಕಟ್ಟಿದರು. ಬೇರೆ ಯಾವುದೇ ಜಾತಿಯವರು ಅವರ ಜಾತಿಗೆ ಸೇರಿಕೊಳ್ಳಲು ಅವಕಾಶವಿತ್ತು. ಸೇರಿಸಿಯೂಕೊಂಡರು. ಈಗ? ನಮ್ಮ ಅಪ್ಪ-ಅಮ್ಮನ ಜಾತಿ ಯಾವುದೋ ಅದೇ ನಮ್ಮ ಜಾತಿ! ಕಲಬೆರಕೆ ಆದರೆ ತಂದೆಯ ಜಾತಿಯೇ ಮಕ್ಕಳದೂ ಜಾತಿ. ಮುಸ್ಲಿಮ್ ಆಗಿಯೋ, ಕ್ರಿಶ್ಚಿಯನ್ ಆಗಿಯೋ ಮತಾಂತರ ಆದರೆ, ಯಾವುದೋ ವಶೀಲಿಬಾಜಿಯಿಂದ ಅವರಿಗೆ ಆ ಜಾತಿ ಸರ್ಟಿಫಿಕೇಟ್ ಕೊಡ್ತೀರಿ. ನನ್ನ ಮಗ ಮಾತೆ ಮಾದೇವಿಯಿಂದ ದೀಕ್ಷೆ ಪಡೆದುಕೊಂಡಿದ್ದಾನೆ ಅಂತ ದಾಖಲೆ ತೋರಿಸಿದರೆ ನೀವು ಅವನಿಗೆ ಲಿಂಗಾಯತ ಅಂತ ಸರ್ಟಿಫಿಕೇಟ್ ಕೊಡ್ತೀರಾ?"
"ಸಾರ್. ಅದೆಲ್ಲಾ ಬಿಟ್ಬಿಡಿ ಸಾರ್. ಈಗ ನಾನು ಏನು ಮಾಡಬಹುದು ಅನ್ನೋದಕ್ಕೆ ದಾರಿ ತೋರ್ಸಿ ಸಾರ್."
"ನೋಡಿ, ಬಸವಣ್ಣನವರು ಬ್ರಾಹ್ಮಣ ಅನ್ನೋದಕ್ಕೆ ದಾಖಲೆ ಇದೆ, ಲಿಂಗಾಯತ ಅನ್ನೋದಕ್ಕೆ ದಾಖಲೆ ಇದೆ. ವೀರಶೈವ ಅನ್ನೋದಕ್ಕೆ ದಾಖಲೆ ಇದೆ. ನಿಮಗೆ ಯಾವ ಸರ್ಟಿಫಿಕೇಟ್ ಕೊಡಬೇಕು ಅನ್ಸುತ್ತೋ ಅದನ್ನು ಕೊಡಿ."
"ಈಗಿನ ಕಾನೂನು ಪ್ರಕಾರ ಬಸವಣ್ಣನವರು ಬ್ರಾಹ್ಮಣ ಅಂತ ಕೊಡೋಕೆ ಅವಕಾಶವಿದೆ. ಹಾಗೆ ಕೊಟ್ಟರೆ ಸಿಎಮ್ ಸಾಹೇಬರು, ಮಿನಿಸ್ಟ್ರು ಪಾಟೀಲರು ಫುಟ್ ಬಾಲ್ ಆಡಿಬಿಡ್ತಾರೆ. ಲಿಂಗಾಯತ ಅಂತ ಕೊಟ್ಟರೆ ವೀರಶೈವರು ಮೇಲೆ ಬೀಳ್ತಾರೆ. ವೀರಶೈವ ಅಂತ ಕೊಟ್ರೆ ಲಿಂಗಾಯತರು ಸುಮ್ಮನಿರ್ತಾರಾ? ಒಟ್ಟಿನಲ್ಲಿ ಜನರ ಕೈಲಿ ಹೊಡೆಸಿಕೊಳ್ಳೋ ಕೆಲಸ."
"ಸರ್ಟಿಫಿಕೇಟ್ ಕೊಡಕ್ಕಾಗಲ್ಲ ಅಂತನಾದರೂ ಕೊಡಿ. ನನಗೆ ಎಂಥದೋ ಒಂದು ಸರ್ಟಿಫಿಕೇಟ್ ಬೇಕು ಅಷ್ಟೆ."
ಸಮಾಲೋಚನೆಗಾಗಿ ಕರೆಸಿದ್ದ ಡೆಪ್ಯುಟಿ ತಹಸೀಲ್ದಾರರು, 'ಎಸಿಯಿಂದ ಕ್ಲಾರಿಫೀಕೇಶನ್ ಪಡೆಯೋಣ ಸಾರ್,'ಎಂದು ಸಲಹೆ ಕೊಟ್ಟರು.
"ಪ್ರಯೋಜನ ಇಲ್ಲಾ ಕಣ್ರೀ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ನಮಗೇ ವಾಪಸು ಹಾಕಿಬಿಡ್ತಾರೆ."
ಇವರ ಪೇಚಾಟ ನೋಡಿದ ರಾಯರು, "ನಿಧಾನವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಾನು ನಾಲ್ಕು ದಿನ ಬಿಟ್ಟು ಬರ್ತೇನೆ. ನೀವು ನನಗೆ ಉತ್ತರ ಕೊಡದೇ ಇದ್ದರೂ ಕೋರ್ಟಿಗಂತೂ ಉತ್ತರ ಹೇಳಲೇಬೇಕಾಗುತ್ತೆ. ನಮಸ್ಕಾರ."
ತಹಸೀಲ್ದಾರರು, 'ಈ ದರಿದ್ರ ಸರ್ಕಾರ' ಅಂತ ಏನೋ ಹೇಳಲು ಹೊರಟವರು ತುಟಿ ಕಚ್ಚಿಕೊಂಡು ಸುಮ್ಮನಾದರು. ತಲೆ ಮೇಲೆ ಕೈಹೊತ್ತು ಕುಳಿತರು.
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 7, 2018

ಕುತಂತ್ರಕ್ಕೆ ಬಲಿಯಾದ ವಿಜಯನಗರದ ಅರಸ ರಾಮರಾಯ - Ramaraya, King of Vijayanagar - victim of treachery


     ಯವನರ ಇತಿಹಾಸವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೆಂದರೆ, ಅವರು ನೇರ ಯುದ್ಧಗಳಲ್ಲಿ ಜಯಿಸಿರುವುದು ವಿರಳ. ಕುತಂತ್ರಗಳು, ಮೋಸದ ನಡೆಗಳಿಂದ ಅವರು ಮುನ್ನಡೆಯುವುದಕ್ಕೆ ಸಹಕರಿಸುವ ದ್ರೋಹಿಗಳೂ ದೊಡ್ಡ ಮಟ್ಟದಲ್ಲಿ ಅವರ ಗೆಲುವಿಗೆ ಕಾರಣರು. ದೆಹಲಿಯನ್ನಾಳುತ್ತಿದ್ದ ರಜಪೂತ ದೊರೆ ಪೃಥ್ವೀರಾಜ ಚೌಹಾನನ ಮೇಲಿನ ದ್ವೇಷದಿಂದ ಮಹಮದ್ ಘೋರಿಗೆ ಸಹಾಯ ಮಾಡಿದ್ದವನು ನೆರೆಯ ಕನೌಜದ ರಾಜ ಜಯಚಂದ್ರ. ಹೀಗೆ ಸಹಾಯ ಮಾಡಿದವನಾದರೂ ಉದ್ಧಾರವಾದನೇ? ಇಲ್ಲ, ಆ ಜಯಚಂದ್ರನೂ ಘೋರಿಯಿಂದ ಕೊಲ್ಲಲ್ಪಟ್ಟ. ಇದರ ಪರಿಣಾಮವಾಗಿ ಭಾರತ ಶತಮಾನಗಳವರೆಗೆ ಮೊಘಲರ ಆಳ್ವಿಕೆಗೆ ಒಳಗಾಗಬೇಕಾಯಿತು. ಇತ್ತೀಚಿನ ಹೈದರಾಲಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮೈಸೂರು ಒಡೆಯರರ ಸೈನ್ಯದಲ್ಲಿ ಒಬ್ಬ ಸಾಮಾನ್ಯ ಸರದಾರನಾಗಿದ್ದವನು ಪರಿಶ್ರಮದಿಂದ ಮುಂದೆ ಬಂದದ್ದೇನೋ ಸರಿ. ಆದರೆ ಆತ ಮೈಸೂರಿನ ಒಡೆಯನಾಗಲು ಪ್ರಯತ್ನಿಸಿದಾಗ ಎಚ್ಚೆತ್ತ ರಾಜಮಾತೆ ಮತ್ತು ನಿಷ್ಠರ ಸಹಾಯದಿಂದ ಸೋತು ಪಲಾಯನ ಮಾಡಬೇಕಾಗಿ ಬಂದಿತು. ಸೋದರ ಸಂಬಂಧಿ ಮಕ್ದುಮ್ ಅಲಿಯ ೬೦೦೦ ಸೈನಿಕರು ಮತ್ತು ಬೆಂಗಳೂರಿನಲ್ಲಿದ್ದ ತನ್ನ ೩೦೦೦ ಸೈನಿಕರೊಂದಿಗೆ ಪುನಃ ದಾಳಿ ಮಾಡಿದಾಗ, ಖಂಡೇರಾಯನ ನೇತೃತ್ವದ ಸೈನ್ಯದಿಂದ ಪುನಃ ಸೋತುಹೋಗಿದ್ದ. ಆಗ ಹೈದರಾಲಿಯ ನೆರವಿಗೆ ಬಂದವನು ಒಡೆಯರರ ಸಂಬಂಧಿ, ಗಡೀಪಾರಾಗಿದ್ದ ನಂಜರಾಜ ಅರಸ. ಅವನು ತನ್ನ ಸೈನ್ಯದ ಸಹಾಯವನ್ನೂ ಹೈದರಾಲಿಗೆ ಒದಗಿಸಿದ. ಆ ಸೈನ್ಯದ ಸಹಾಯದೊಂದಿಗೆ ಹೈದರಾಲಿ ಮತ್ತೆ ದಂಡೆತ್ತಿ ಬಂದ.  ಖಂಡೇರಾಯನ ಅಧಿಕಾರಿಗಳೊಂದಿಗೆ ನಂಜರಾಜ ಅರಸ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿರುವಂತೆ ಖಂಡೇರಾಯನನ್ನು ಹಿಡಿದು ಹೈದರಾಲಿಗೆ ಒಪ್ಪಿಸುವಂತೆ ಸೃಷ್ಟಿಸಿದ ನಕಲಿ ಪತ್ರಗಳು ಖಂಡೇರಾಯನಿಗೆ ಸಿಗುವಂತೆ ಹೈದರಾಲಿ ವ್ಯವಸ್ಥೆ ಮಾಡಿದ್ದ. ಇದರಿಂದ ಖಂಡೇರಾಯ ಹೆದರಿ ಓಡಿಹೋಗಿದ್ದ. ನಾಯಕನಿಲ್ಲದ ಸೈನ್ಯವನ್ನು ಹೈದರಾಲಿ ಸುಲಭವಾಗಿ ಸೋಲಿಸಿದ್ದಲ್ಲದೆ ಮೈಸೂರಿಗೆ ಒಡೆಯನೆನಿಸಿದ. ನಂಜರಾಜ ಅರಸ ನೆರವಿಗೆ ಬರದೇ ಇದ್ದಿದ್ದರೆ ಕರುನಾಡಿನಲ್ಲಿ ಹೈದರ್ ಮತ್ತು ಟಿಪ್ಪೂರ ಆಡಳಿತ ಇರುತ್ತಲೇ ಇರಲಿಲ್ಲ. ನಂತರ ಕೆಳದಿ ಸಂಸ್ಥಾನದ ರಾಜಧಾನಿ ಬಿದನೂರಿನ ಮೇಲೆ ದಾಳಿ ಮಾಡಿದಾಗಲೂ ಹೈದರ್ ರಾಣಿ ವೀರಮ್ಮಾಜಿಯಿಂದ ಸೋತಿದ್ದ. ಅದರೆ ನಾಡದ್ರೋಹಿ ಮಂತ್ರಿ ಲಿಂಗಣ್ಣ ಅರಮನೆಯ ರಹಸ್ಯದ್ವಾರದ ರಹಸ್ಯ ತಿಳಿದ ಹೈದರ್ ಆ ಮಾರ್ಗದ ಮೂಲಕ ರಾಣಿ ಮತ್ತು ರಾಜಕುಮಾರನನ್ನು ಸೆರೆಹಿಡಿದು ಅಪಮಾರ್ಗದಲ್ಲಿ ಯಶಸ್ಸು ಗಳಿಸಿದ್ದ. ವಿಜಯನಗರ ಸಾಮ್ರಾಜ್ಯದ ಪತನವೂ ಸಹ ಯವನರು ಹೆಣೆದ ಮೋಸದ ಬಲೆಯ ಕಾರಣದಿಂದ ಆಗಿತ್ತು. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಲಿಂಗಣ್ಣಕವಿಯ ಕೃತಿ 'ಕೆಳದಿ ನೃಪವಿಜಯ'ದಲ್ಲಿ ವಿಜಯನಗರದ ಪತನದ ಸನ್ನಿವೇಶವನ್ನು ವಿವರಿಸಿರುವ ಪರಿ ಹೀಗಿದೆ:   
    "ವ|| ಮತ್ತಮದಲ್ಲದೆ ಯೆಡೆಯೆಡೆಗೆಳ್ತಂದು ದಾಳಿವರಿಯುತಿರ್ದವಿದ್ಧಕರ್ಣರ್ಕಳದಟಂ ಮುರಿದು ಭುಜಬಲ ಪ್ರತಾಪದಿಂ ರಾಜ್ಯಂಗೆಯುತ್ತುಮಿರಲಾ ಕಾಲದೊಳ್ ರಾಮರಾಯರ್ ವಿದ್ಯಾನಗರಿಯಿಂ ತೆರಳ್ದು ತುರುಷ್ಕರ ಮೇಲೆ ದಂಡೆತ್ತಿ ಪೋಗಿರಲ್ ತದ್ರಕ್ತಾಕ್ಷಿ ಸಂವತ್ಸರದ ಮಾಘಮಾಸ ದೊಳ್ ತುರುಷ್ಕ ಸೈನ್ಯಕ್ಕಂ ರಾಯಸೈನ್ಯಕ್ಕಂ ಮಹಾದ್ಭುತಮಾದ ಯುದ್ಧಂ ಪಣ್ಣಿ ರಾಯಸೈನ್ಯಕ್ಕಿದಿರ್ಚಿ ನಿಲಲಶಕ್ಯಮಾಗಿ ಯವನ ಸೈನ್ಯಂ ಮುರಿದು ಹರಿಹಂಚಾಗಲ್ ಬಳಿಕ್ಕಂ ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿಪಾತುಶಾಹನೆನಿಪ ನಿಜಾಮಶಾಹನುಂ ಇವರಿರ್ವರುಂ ಯುದ್ಧರಂಗದೊಳ್ಕೈಗೆಯ್ದು ನಿಂದು ನಿತ್ತರಿಸಲಮ್ಮದೆ ಪಲಾಯನಂ ಬಡೆದಿಂತು ರಾಯಸೈನ್ಯಮಂ ಮುರಿವುದಸಾಧ್ಯಮೆಂದಿರ್ವರ್ ಪಾತುಶಾಹರೊಂದಾಗಿ ಮಂತ್ರಾಲೋಚನೆಯಂ ರಚಿಸಿ ಮಾಯ ತಂತ್ರದಿಂ ಪೊರತು ಗೆಲ್ವುದಸಾಧ್ಯವೆಂದು ನಿಶ್ಚಯಂಗೆಯ್ದು ರಾಯರ ಸಮೀಪದೊಳ್ ಮುಖ್ಯಸೇವಕನಾಗಿ ವರ್ತಿಸುತಿರ್ದ ವಿಜಾಪುರದ ಅಲ್ಲಿ ಅದುಲಪಾತುಶಾಹಂಗೆ ಸಂಧಾನವನೊಡರ್ಚಿಸಿ ಜಾತ್ಯಭಿಮಾನ ಹೇತುಪಂಥಮಂ ಪುಟ್ಟಿಸಿ ಮಂತ್ರಂ ಭಿನ್ನಿಸದಂತು ಸ್ವಜಾತ್ಯಭಿಮಾನದೇವತಾಸಾಕ್ಷಿ ಪೂರ್ವಕವಾಗಿ ಖಡ್ಗಮಂ ಮುಟ್ಟಿಸಿ ಕ್ರಿಯಾಪೂರ್ವಕವಾಗಿ ತಪ್ಪದಂತು ಭಾಷೆಯಂ ತೆಗೆದುಕೊಂಡೀಪ್ರಕಾರದಿಂ ಅಲ್ಲಿ ಅದುಲಶಾಹನನೊಳಗು ಮಾಡಿಕೊಂಡು ಗೋಲುಕೊಂಡೆಯದ ಕುತುಬಶಾಹನುಂ ಅಮದಾನಗರದ ಭೈರಿನಿಜಾಮಶಾಹನುಂ ನಂಬುಗೆಯಾದೊಡೆ ಸಂಧಾನಮುಖದಿಂದೈತಂದು ಕಾಣ್ಬೆವೆಂದು ಹುಸಿಯ ವರ್ತಮಾನಮಂ ಪುಟ್ಟಿಸಿ ನಚ್ಚುಹಾಕಿ ರಾಯರಂ ಮೈಮರೆಸಿ ಸಮಯಸಾಧನೆಯಂ ರಚಿಸಿ ಬಳಿಕ್ಕಂ ವಿಜಾಪುರದ ಅಲ್ಲಿ ಅದುಲಶಾಹನ ಸಂಚಿನ ಮೇಲಾ ಪಾತುಶಾಹರೊಂದಾಗಿ ಮೋಸದ ಮೇಲೆ ಶಾಲಿವಾಹನ ಶಕ ವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ರಕ್ಕಸದಂಗಡಿಯೆಂಬ ಸ್ಥಳದಲ್ಲಿ ರಾಮರಾಯರಂ ಪಿಡಿದು ಶಿರಶ್ಛೇದನಂಗೈದು ಆ ಶಿರಮಂ ಕಾಶಿಗೆ ಕಳುಹಿತತ್ತತ್ಸ್ಥಾನಂಗಳಿಗೆಲ್ಲಂ ತಾವೇ ಸ್ವತಂತ್ರಕರ್ತು ಗಳಾಗಿರಲಿತ್ತಂ ರಾಯಸಂಸ್ಥಾನಂ ವಿಸ್ಖಲಿತಮಾಗಿ ವಿದ್ಯಾನಗರಂ ಪಾಳಾಗಲಾ ರಾಯರ ಮನೆವಾರ್ತೆ ಬೊಕ್ಕಸದ ಸೇನಬೋವ ಚಿನ್ನಭಂಡಾರದ ನಾರಣಪ್ಪಯ್ಯನೆಂಬಾತನಲ್ಲಿ ನಿತ್ತರಿಸಲಮ್ಮದೆ ಕುಟುಂಬಸಹಿತಂ ತೆರಳ್ದೈತಂದು ಚಿಕ್ಕಸಂಕಣನಾಯಕರ ಪಾದಾರವಿಂದವನಾಶ್ರಯಿಸಲವರ್ಗೆ ಪರಮಾಧಿಕಾರ ಭಾಗ್ಯಂಗಳನಿತ್ತು ಪೋಷಿಸಿದನಂತುಮಲ್ಲದೆಯುಂ . . ."
ಡಾ. ಕೆಳದಿ ಗುಂಡಾಜೋಯಿಸರು ಸರಳಗನ್ನಡದಲ್ಲಿ ಮಾಡಿರುವ ಗದ್ಯಾನುವಾದದ ಭಾಗ:
     "ವ|| ಮತ್ತೆ ಅದೂ ಅಲ್ಲದೆ, ಆಗಾಗ ಬಂದು ದಾಳಿ ಮಾಡುತ್ತಿದ್ದ ತುರುಕರ ಪರಾಕ್ರಮವನ್ನು ಮುರಿದು, ತನ್ನ ಭುಜಬಲಪರಾಕ್ರಮದಿಂದ ರಾಜ್ಯವನ್ನು ರಕ್ಷಿಸುತ್ತಿದ್ದನು. ಆ ಕಾಲದಲ್ಲಿ ರಾಮರಾಯರು ವಿದ್ಯಾನಗರ(ವಿಜಯನಗರ)ದಿಂದ ಹೊರಟು, ತುರುಕರ ಮೇಲೆ ದಂಡೆತ್ತಿ ಹೋಗಿ, ರಕ್ತಾಕ್ಷಿ ಸಂವತ್ಸರದ ಮಾಘಮಾಸದಲ್ಲಿ ತುರುಕರ ಸೈನ್ಯಕ್ಕೂ ಹಾಗೂ ರಾಯರ ಪಡೆಗೂ ಅದ್ಭುತವಾದ ಯುದ್ಧವು ನಡೆದು ರಾಯರ ಸೈನ್ಯದ ಎದುರಿಗೆ ಮುಸಲ್ಮಾನ ಸೈನ್ಯವು ನಿಲ್ಲಲಾರದೆ ಚದುರಿ ಹೋಯಿತು. ಆ ಬಳಿಕ ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ಪಾತುಶಾಹನೆಂದು ಹೆಸರುಳ್ಳ ನಿಜಾಮಶಾಹ ಇವರಿಬ್ಬರೂ ಯುದ್ಧರಂಗದಲ್ಲಿ ಕೈಮಾಡಿದರೂ ನಿಲ್ಲಲಾಗದೆ ಪಲಾಯನ ಮಾಡಿದರು. ಈ ಈರ್ವರೂ ಬಾದುಷಾಹರೂ ಒಂದಾಗಿ ರಾಯರ ಸೈನ್ಯವನ್ನು ಸೋಲಿಸುವುದು ಅಸಾಧ್ಯವೆಂದು ಯೋಚಿಸಿ, ಮೋಸದಿಂದ ಹೊರತು ಬೇರೇನೂ ಉಪಾಯವು ನಡೆಯದೆಂದು ನಿಶ್ಚಯಿಸಿದರು. ರಾಯರ ಸಮೀಪದಲ್ಲಿ ಆಪ್ತ ಸೇವಕನಾಗಿದ್ದ ಬಿಜಾಪುರದ ಅಲ್ಲಿ ಆದುಲಬಾದಷಹನಿಗೆ ಸಂಧಾನದ ಮೂಲಕ ಮನವೊಪ್ಪಿಸಿ, ಜಾತ್ಯಭಿಮಾನಕ್ಕೆ ಕಾರಣವಾದ ಕಟ್ಟಾಣೆಯನ್ನು (ಪಂಥವನ್ನು) ಸೃಷ್ಟಿಮಾಡಿ, ಮಂತ್ರಾಲೋಚನೆಯು ವಿಫಲವಾಗದ ರೀತಿಯಲ್ಲಿ ತಮ್ಮ ಜಾತಿಯ ಅಭಿಮಾನದೇವರ ಸನ್ನಿಧಿಯಲ್ಲಿ, ಸಾಕ್ಷಿ ಪೂರ್ವಕವಾಗಿ ಕತ್ತಿಯನ್ನು ಮುಟ್ಟಿಸಿ, ಕಾರ್ಯವನ್ನು ಪೂರ್ತಿ ಮಾಡಲು ತಪ್ಪದ ರೀತಿಯಲ್ಲಿ ಭಾಷೆಯನ್ನು ತೆಗೆದುಕೊಂಡರು. ಈ ರೀತಿಯಿಂದ ಅಲ್ಲಿ ಆದುಲಶಾಹನನ್ನು ತಮ್ಮೊಳಗೆ ಮಾಡಿಕೊಂಡು ಗೋಲ್ಕೊಂಡೆಯ ಕುತುಬಶಾಹ, ಅಹಮ್ಮದಾನಗರದ ಭೈರಿ ನಿಜಾಮಶಾಹ ಇವರಲ್ಲಿ ನಂಬಿಗೆ ಬಂದ ಕೂಡಲೇ ಸಂಧಾನ ಮುಖದಿಂದ ಕರೆತಂದು ಕಾಣುವೆವೆಂದು ಸುಳ್ಳು ಸಮಾಚಾರವನ್ನು ಹುಟ್ಟಿಸಿ, ರಾಯರನ್ನು ಮೈಮರೆಯುವಂತೆ ಮಾಡಿ, ನಂಬಿಸಿ, ಸಮಯಸಾಧನೆಯನ್ನು ಕೈಗೊಂಡರು. ಬಳಿಕ ಬಿಜಾಪುರದ ಅಲ್ಲಿ ಆದುಲಶಾಹನ ಹೊಂಚಿನ ಮೇಲೆ ಬಾದಷಹರೊಂದಾಗಿ, ಮೋಸದಿಂದ ಶಾಲಿವಾಹನ ಶಕವರ್ಷ ೧೪೮೭ನೆಯ ರಕ್ತಾಕ್ಷಿ ಸಂವತ್ಸರದ ಮಾಘ ಬಹುಳದಲ್ಲಿ ರಕ್ಕಸದಂಗಡಿ ಎಂಬ ಸ್ಥಳದಲ್ಲಿ ರಾಮರಾಯರನ್ನು ಹಿಡಿದುಕೊಂಡು ಶಿರಶ್ಚೇದನ ಮಾಡಿದರು. ಆ ತಲೆಯನ್ನು ಕಾಶಿಗೆ ಕಳುಹಿಸಿ, ಆಯಾ ಸ್ಥಾನಗಳಿಗೆಲ್ಲಾ ತಾವೇ ಸ್ವತಂತ್ರರಾಗಿ ಕಾರ್ಯಭಾರವನ್ನು ಕೈಗೊಳ್ಳುತ್ತಾ ಇದ್ದರು. ಈ ಕಡೆಯಲ್ಲಿ ರಾಯರ ಸಂಸ್ಥಾನವು ಹಾಳಾಗಿ ವಿಜಯನಗರವು ಧೂಳೀಪಟವಾಯಿತು. ರಾಯರ ಮನೆವಾರ್ತೆಯಾದ ಬೊಕ್ಕಸದ ಅಧಿಕಾರಿಯೂ, ಸೇನಬೋವನೂ (ಶಾನುಭೋಗನೂ) ಆದ ಚಿನ್ನಭಂಡಾರದ ನಾರಣಪ್ಪಯ್ಯನೆಂಬವನು ಅಲ್ಲಿ ನಿಲ್ಲಲಾರದೆ ಕುಟುಂಬ ಸಹಿತವಾಗಿ ಓಡಿಬಂದು ಚಿಕ್ಕಸಂಕಣ್ಣನಾಯಕರ ಆಶ್ರಯವನ್ನು ಬೇಡಿ ಮೊರೆಹೊಕ್ಕನು. ನಾಯಕನು ಅವರಿಗೆ ಹೆಚ್ಚಿನ ಅಧಿಕಾರವನ್ನು ಇತ್ತು ತನ್ನ ರಾಜ್ಯದಲ್ಲಿ ಪೋಷಿಸುತ್ತಿದ್ದನು."
     ಈ ಲೇಖನದೊಂದಿಗೆ ಇರುವ, ಮುಸ್ಲಿಮ್ ಇತಿಹಾಸಕಾರ ರಫಿಯುದ್ದೀನ್ ಶಿರಾಝಿಯ ಕೃತಿಯಲ್ಲಿ (ಅನುವಾದ-ಅಬ್ದುಲ್ ಗನಿ ಇಮಾರತವಾಲೆ) (Tazkiratul Muluk,  Rafiuddin Shirazi;  translated by Abdul Gani Imaratwale) ಕಂಡುಬರುವ ಚಿತ್ರದಲ್ಲಿ ಯವನರು ರಾಮರಾಯನ ಕೈಕಾಲುಗಳನ್ನು ಕಟ್ಟಿಹಾಕಿ ಶಿರಚ್ಛೇದ ಮಾಡುತ್ತಿರುವ ದೃಷ್ಯವೇ ಭೀಭತ್ಸವಾಗಿದ್ದು, ಅವರ ಕ್ರೂರತೆಯ ದರ್ಶನ ಮಾಡಿಸುತ್ತಿದೆ.
-ಕ.ವೆಂ.ನಾಗರಾಜ್.