1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]
ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ 1975ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಅತ್ಯಂತ ಪವಿತ್ರವೆಂದು ಭಾವಿಸಲಾಗಿರುವ ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಮಾರಕವೆನಿಸುವ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. 1975ರ ಜೂನ್ 26ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. 'ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಆಗಿಹೋಯಿತು. 'ಇಂದಿರಾಗಾಂಧಿಯ ಇಪ್ಪತ್ತಂಶದ ಕಾರ್ಯಕ್ರಮ, ಜನತೆಗೆ ಮಾಡಿದೆ ಬಾಳ್ ಸುಗಮ' ಎಂಬ ಜಾಹಿರಾತಿನ ಹಾಡು ಎಲ್ಲರಿಗೂ ಬಾಯಿಪಾಠವಾದಂತಾಗಿತ್ತು.
ಹಾಸನದಲ್ಲಿ ಆರೆಸ್ಸೆಸ್ ಕಾರ್ಯಾಲಯಕ್ಕೆ ಬೀಗಮುದ್ರೆ ಬಿದ್ದಿತು. ಅದಕ್ಕೆ ಮುಂಚೆಯೇ ಎಚ್ಚೆತ್ತಿದ್ದ ಸಂಘದ ಕಾರ್ಯಕರ್ತರು ಕಟ್ಟಡದಲ್ಲಿದ್ದ ವಸ್ತುಗಳನ್ನು ಬೇರೆಡೆಗ ಸಾಗಿಸಿಬಿಟ್ಟಿದ್ದರು. ಸಂಘದ ಪ್ರಚಾರಕರುಗಳು, ಹಿರಿಯ ನಾಯಕರು ಭೂಗತರಾಗಿದ್ದರು. ಆರೆಸ್ಸೆಸ್ ನಿಷೇಧದ ಹಿನ್ನೆಲೆಯಲ್ಲಿ ದಿ. ಬಿ.ಆರ್.ಕೃಷ್ಣಮೂರ್ತಿ, ದಿ. ಎಸ್.ವಿ.ಗುಂಡೂರಾವ್, ಕರಿಬಸಪ್ಪ, ಮುಂತಾದವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ತುರ್ತುಪರಿಸ್ಥಿತಿ ವಿರೋಧಿಸಲು ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಜನ್ಮ ತಾಳಿತು. ಅದರ ಬೆನ್ನೆಲುಬು ಆರೆಸ್ಸೆಸ್ಸೇ ಆಗಿತ್ತು. ಹಾಸನ ಜಿಲ್ಲೆಯಲ್ಲೂ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಚಟುವಟಿಕೆಗಳನ್ನು ಸಂಘದ ಕಾರ್ಯಕರ್ತರು ಆರಂಭಿಸಿದರು. 'ಕಹಳೆ' ಹೆಸರಿನಲ್ಲಿ ತುರ್ತು ಪರಿಸ್ಥಿತಿಯ ಕರಾಳ ಮುಖಗಳ ಅನಾವರಣ ಮಾಡುವ ಪತ್ರಿಕೆಯನ್ನು ಗುಪ್ತವಾಗಿ ಹಂಚುವ ಕೆಲಸ ಆರಂಭವಾಯಿತು. ಮುದ್ರಿತ ಪತ್ರಿಕೆಗಳನ್ನು ತರುವ, ವಿತರಿಸುವ ಕೆಲಸ ಬಂಧನವನ್ನು ಎದುರಿಸುವ ಭೀತಿಯಲ್ಲೇ ಜಿಲ್ಲೆಯ ಎಲ್ಲಾ ಮೂಲೆಗೂ ತಲುಪಿಸುವ ಕೆಲಸವನ್ನು ಅನಾಮಧೇಯ ಸಂಘದ ಹುಡುಗರು ಯಶಸ್ವಿಯಾಗಿ ಮಾಡುತ್ತಿದ್ದರು. 1975ರ ಜುಲೈ 4ರಂದು ಹಾಸನದ ಗ್ರಂಥಾಲಯದಲ್ಲಿ ಕಹಳೆ ಪತ್ರಿಕೆಯ ಪ್ರತಿ ಹಾಕುತ್ತಿದ್ದನೆಂದು ಶ್ರೀನಿವಾಸ ಎಂಬ ವಿದ್ಯಾರ್ಥಿಯ ಬಂಧನವಾಯಿತು. ಮರುದಿನ ಹಾಸನ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಫುಡ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಆರೆಸ್ಸೆಸ್ ಕಾರ್ಯಕರ್ತನಾಗಿ ದೇಶದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದೆನೆಂದು ಆರೋಪಿಸಿ ಬಂಧಿಸಿದರು. ನಾನು ಕೆಲಸಕ್ಕೆ ಸೇರಿ ಕೇವಲ ಎರಡು ವರ್ಷಗಳಾಗಿದ್ದು, ನನ್ನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. (ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ನಂತರದಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗಾಯಿಸಿದ್ದರು.) ಜಿಲ್ಲೆಯಲ್ಲಿ ಬಂಧನಗಳ ಸರಣಿಗೆ ಚಾಲನೆ ಚುರುಕುಗೊಂಡಿತು. ಪಾರಸಮಲ್ ಸೇರಿದಂತೆ ಹಲವರ ಬಂಧನ ಮುಂದಿನ ವಾರಗಳಲ್ಲಿ ಆಯಿತು. ನವೆಂಬರ್ 14ರಿಂದ ಸತ್ಯಾಗ್ರಹ ನಡೆಸಿ ಬಂಧನಕ್ಕೊಳಗಾಗುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲು ಲೋಕ ಸಂಘರ್ಷ ಸಮಿತಿ ನಿರ್ಧಾರದಂತೆ ಜಿಲ್ಲೆಯಲ್ಲೂ ಚಳುವಳಿ ಪ್ರಾರಂಭಿಸುವ ಬಗ್ಗೆ ಚರ್ಚಿಸಲು 9-11-1075ರಂದು ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಜನಾರ್ಧನ ಐಯಂಗಾರ್, ಕಛ್ ರಾಮಚಂದ್ರ, ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ ಇವರೆಲ್ಲರೂ ಚಂದ್ರಶೇಖರರ ಮನೆಯಲ್ಲಿ ಸೇರಿದ್ದಾಗ ನಮ್ಮ ಜೊತೆಯಲ್ಲೇ ಇದ್ದ ಇನ್ನೊಬ್ಬ ಸ್ನೇಹಿತ (ಆತನ ಹೆಸರನ್ನು ಉದ್ದೇಶಪೂರ್ವಕ ಉಲ್ಲೇಖಿಸಿಲ್ಲ) ಕೊಟ್ಟಿದ್ದ ಮಾಹಿತಿಯ ಆಧಾರದಲ್ಲಿ ರಾಷ್ಟ್ರೀಯ ಭದ್ರತಾ ಕಾಯದೆ ಅನ್ವಯ ಬಂಧಿಸಿ ಜೈಲಿಗೆ ತಳ್ಳಿದರು. ಮಾಹಿತಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸದೆ ಆತನನ್ನು ನಮ್ಮ ವಿರುದ್ಧ ಸಾಕ್ಷಿಯಾಗಿ ಪೋಲಿಸರು ಬಳಸಿಕೊಂಡರು. ಪೋಲಿಸರ ಭಯಕ್ಕೆ ಆತ ಕೋರ್ಟಿನಲ್ಲಿ ನಮ್ಮ ವಿರುದ್ಧ ಸಾಕ್ಷಿಯನ್ನೂ ಹೇಳಿದ್ದ. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗದ ಕಾರಣ ಪ್ರಕರಣ ಮುಗಿಯುವವರೆಗೂ ಹಲವು ತಿಂಗಳು ಹಾಸನದ ಜೈಲಿನಲ್ಲೆ ಕಳೆಯಬೇಕಾಯಿತು. ಚಳುವಳಿ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ಬಂಧಿತರಾದ ನಮ್ಮನ್ನು 'ಮಂಗಳಪಾಂಡೆ ತಂಡ' ಎಂದು ಹಾಸ್ಯ ಮಾಡುತ್ತಿದ್ದರು. ಹೀಗೆ ಘೋಷಿತ ದಿನಾಂಕದ ಮೊದಲೇ ಹಾಸನದಲ್ಲಿ ಚಳುವಳಿ ಉದ್ಘಾಟನೆಯಾದಂತಾಗಿತ್ತು.
ಹಾಸನದ ಜೈಲಿನ ಸ್ಥಿತಿ ಅನುಭವಿಸಿದವರಿಗಷ್ಟೇ ಗೊತ್ತು. ಬಂಧಿತರಾದವರ ಜನಿವಾರ, ಉಡುದಾರ, ಶಿವದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿಗಳನ್ನು ವಶಪಡಿಸಿಕೊಂಡು ಗಬ್ಬು ವಾಸನೆ ಬರುತ್ತಿದ್ದ ತಿಗಣೆಗಳು, ಕೂರೆಗಳು ಹರಿದಾಡುತ್ತಿದ್ದ ಹರಕು ಕಂಬಳಿ, ನೆಗ್ಗಿ ನುಗ್ಗೇಕಾಯಿ ಆಗಿರುತ್ತಿದ್ದ ಅಲ್ಯೂಮಿನಿಯಮ್ ಚಂಬು, ತಟ್ಟೆಗಳನ್ನು ಕೊಟ್ಟು ಬ್ಯಾರಕ್ಕಿನ ಒಳಗೆ ದಬ್ಬುತ್ತಿದ್ದರು. ಮಲಗಲು ಸಿಮೆಂಟಿನ ಒಂದು ಅಡಿ ಎತ್ತರದ ಕಟ್ಟೆಗಳಿದ್ದವು. ಇರಬೇಕಾದ ಸಂಖ್ಯೆಗಿಂತ ಹೆಚ್ಚಿನ ಕೈದಿಗಳು ಇದ್ದುದರಿಂದ ನಮ್ಮನ್ನು ಇತರ ಕಳ್ಳಕಾಕರು, ಕೊಲೆಗಾರರು, ಇತ್ಯಾದಿ ಅಪರಾಧಿಗಳೊಂದಿಗೇ ಕೂಡಿ ಹಾಕಿದ್ದರು. ಕಟ್ಟೆಗಳನ್ನು ಸಮಾಧಿ ಎನ್ನಲಾಗುತ್ತಿತ್ತು. ಕೈದಿಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಕಟ್ಟೆಗಳ ನಡುವಣ ಜಾಗದಲ್ಲೂ ಕೈದಿಗಳು ಮಲಗಬೇಕಾಗುತ್ತಿತ್ತು. ಅದನ್ನು ಸಮಾಧಿಯ ಒಳಗೆ ಅನ್ನುತ್ತಿದ್ದರು. ನನಗೆ ಸಮಾಧಿಯ ಒಳಗೆ ಜಾಗ ಸಿಕ್ಕಿತ್ತು. ಬ್ಯಾರಕ್ಕಿನ ಒಂದು ಮೂಲೆಯಲ್ಲಿ ಇದ್ದ ಬಾಗಿಲಿಲ್ಲದ ಶೌಚಾಲಯ ಕಟ್ಟಿಕೊಂಡು ಹೊರಗೆಲ್ಲಾ ತುಂಬಿಕೊಂಡಿದ್ದು, ಆ ಗಬ್ಬು ವಾಸನೆಯ ನಡುವೆಯೇ ಅಲ್ಲಿರಬೇಕಿತ್ತು. ಅದನ್ನು ನೆನೆಸಿಕೊಂಡರೆ ಈಗಲೂ ವಾಕರಿಕೆ ಬರುತ್ತದೆ. ಊಟಕ್ಕೆ ಬಿಟ್ಟಾಗ ಕೊಡುತ್ತಿದ್ದ ಅರ್ಧ ಇಟ್ಟಿಗೆ ಆಕಾರದ ಮುದ್ದೆ ಮತ್ತು ಅರ್ಧ ಸೌಟು ಅರ್ಧಂಬರ್ಧ ಬೆಂದ ಬೇಳೆ ಸಾರುಗಳನ್ನು ಹಸಿವು ತಡೆಯದೆ ತಿನ್ನಲೇಬೇಕಿತ್ತು. ಸ್ನಾನ ಮಾಡಲು, ತಟ್ಟೆ ತೊಳೆಯಲು, ಮುಖ ತೊಳಯಲು ಇದ್ದ ತೊಟ್ಟಿಯ ನೀರು ಚರಂಡಿಯ ನೀರಿನಂತೆ ಕಾಣುತ್ತಿತ್ತು. ಕಟ್ಟಿಸಿದಾಗಿನಿಂದ ಅದನ್ನು ಬಹುಷಃ ಶುಚಿ ಮಾಡಿರಲಿಕ್ಕಿಲ್ಲ.
ಹಾಸನ ಜಿಲ್ಲೆಯಲ್ಲೂ ನಿಗದಿತ ದಿನಾಂಕದಿಂದ ಚಳುವಳಿ ಆರಂಭವಾಗೇ ಬಿಟ್ಟಿತು. ಇಂತಹ ಸ್ಥಳದಲ್ಲಿ ಇಂತಹವರ ನಾಯಕತ್ವದಲ್ಲಿ ಚಳುವಳಿ ಮಾಡಲಾಗುವುದೆಂದು ಮೊದಲೇ ಕರಪತ್ರಗಳನ್ನು ಹಂಚಿ ಆ ಸಮಯಕ್ಕೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಳುವಳಿ ಮಾಡಲಾಗುತ್ತಿತ್ತು. ಹಾಸನದ ಗುಂಡೂರಾಯರು, ವೆಂಕಟರಮಣೇಗೌಡ, ಕರಿಬಸಪ್ಪ, ಅರಸಿಕೆರೆಯ ದುರ್ಗಪ್ಪಶೆಟ್ಟಿ, ಶ್ರೀನಿವಾಸಮೂರ್ತಿ, ಬಸವರಾಜು, ರಾಮಚಂದ್ರ, ಮರುಳಸಿದ್ದಪ್ಪ, ಛಾಯಾಪತಿ, ಆಲೂರಿನ ಮರಸು ಮಂಜುನಾಥ್, ಬಸವೇಗೌಡ, ಅರಕಲಗೂಡು ಹಿರಣ್ಣಯ್ಯ, ಅನಂತರಾಮು, ಬೇಲೂರಿನ ರವಿ, ನಾರಾಯಣ ಕಾಮತ್, ಚ.ರಾ.ಪಟ್ಟಣದ ಮಳಲಿಗೌಡ, ಸಕಲೇಶಪುರದ ಲೋಕೇಶಗೌಡ, ಹುರುಡಿ ವಿಶ್ವನಾಥ್, ಸತ್ಯನಾರಾಯಣ ಗುಪ್ತ, ವಿ.ಎಸ್.ಭಟ್, . . ಅಬ್ಬಾ, ಹೆಸರುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ, (ಎಲ್ಲರ ಹೆಸರುಗಳನ್ನು ನಮೂದಿಸಲಾಗದಿರುವುದಕ್ಕೆ ಕ್ಷಮೆಯಿರಲಿ) ಇವರೆಲ್ಲರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಚಳುವಳಿಗಳು ನಡೆದೇ ನಡೆದವು. ಬಂಧನಕ್ಕೊಳಗಾಗಿ ಸತ್ಯಾಗ್ರಹಿ ತಂಡಗಳು ಜೈಲಿಗೆ ಬರುತ್ತಿದ್ದಂತೆ ಒಳಗಿದ್ದ ಕೈದಿಗಳಿಂದ ಅವರಿಗೆ ವೀರೋಚಿತ ಸ್ವಾಗತ ಕಾದಿರುತ್ತಿತ್ತು. ಹಾಗೆಂದು ಇದೇನೂ ಸುಲಲಿತವಾಗಿ ನಡೆಯುತ್ತಿದ್ದ ಚಳುವಳಿಗಳೇನೂ ಅಲ್ಲ. ಭಾಗವಹಿಸಿದವರಿಗೆ ಪೋಲಿಸ್ ಠಾಣೆಯಲ್ಲಿ ಭಯಂಕರವಾದ, ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆತಿಥ್ಯ ಸಿಗುತ್ತಿತ್ತು. ಸಕಲೇಶಪುರದಲ್ಲಿ ಹುರುಡಿ ವಿಶ್ವನಾಥ್ ಮತ್ತು ಸಂಗಡಿಗರ ಮೇಲೆ ಪೋಲಿಸರು ಅಮಾನುಷವಾಗಿ ವರ್ತಿಸಿದ್ದರಿಂದ ಅವರುಗಳು ಹಲವು ದಿನಗಳವರೆಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. ಈರೀತಿ ಅಮಾನುಷವಾಗಿ ವರ್ತಿಸಿದ್ದ ಸಕಲೇಶಪುರದ ಪೋಲಿಸರ ವಿರುದ್ಧ ಪ್ರತಿಭಟಿಸಿದ್ದ ಹಲವರುಗಳನ್ನೂ ಸಹ ರಕ್ಷಣಾ ಕಾಯದೆ ಅನ್ವಯ ಬಂಧಿಸಿ ಸೆರೆಗೆ ತಳ್ಳಿದ್ದರು. ಚಳುವಳಿ ಮಾಡಿದ ಎಲ್ಲರನ್ನೂ ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಲಾಗುತ್ತಿತ್ತು. ವಿಚಾರಣೆ ವಿಳಂಬವಾಗಿ ಮಂದಗತಿಯಲ್ಲಿ ಸಾಗುತ್ತಿತ್ತು, ವರ್ಷಕ್ಕೂ ಮೀರಿದ ಅವಧಿಯವರೆಗೂ ವಿಚಾರಣೆಗಳು ಮುಂದುವರೆದಿದ್ದಿದೆ.
ಮೊದಲೇ ಚಳುವಳಿಯ ಸ್ಥಳ, ಸಮಯ ಮತ್ತು ಭಾಗವಹಿಸುವವರ ವಿವರಗಳನ್ನು ಪ್ರಕಟಿಸುತ್ತಿದ್ದರಿಂದ ಪೋಲಿಸರು ಚಳುವಳಿ ತಡೆಯಲು ಮತ್ತು ಚಳುವಳಿ ಮಾಡುವುದಕ್ಕೆ ಮೊದಲೇ ಬಂಧಿಸಲು ಸಹಾಯವಾಗುತ್ತಿದ್ದರಿಂದ ನಂತರದ ದಿನಗಳಲ್ಲಿ ತಂತ್ರ ಬದಲಿಸಿ ಬೇರೆ ಬೇರೆ ಸ್ಥಳಗಳಲ್ಲಿ ಚಳುವಳಿಗಳು ನಡೆಯುತ್ತಿದ್ದವು. ಲೇಖನ ವಿಸ್ತಾರದ ಭಯದಿಂದ ಒಂದೆರಡು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಮಾತ್ರ ಉಲ್ಲೇಖಿಸುವೆ. ಅರಸಿಕೆರೆಯಲ್ಲಿ ಒಂದು ಶವಯಾತ್ರೆ ನಡೆದಿತ್ತು. ದುಃಖತಪ್ತರು ವಾದ್ಯಸಮೇತ ಮೆರವಣಿಗೆಯಲ್ಲಿ ಸಾಗಿದ್ದರು. ಮೆರವಣಿಗೆ ಬಸ್ ಸ್ಟ್ಯಾಂಡ್ ಸಮೀಪ ಬರುತ್ತಿದ್ದಂತೆ ತುರ್ತು ಪರಿಸ್ಥಿತಿ ವಿರುದ್ಧ ಘೋಷಣೆಗಳು ಮೆರವಣಿಗೆಯಲ್ಲಿದ್ದವರಿಂದ ಮೊಳಗಲಾರಂಭಿಸಿದವು. ಪೋಲಿಸರಿಗೆ ಇದು ಸತ್ಯಾಗ್ರಹ ಎಂದು ಅರಿವಾಗಿ ಧಾವಿಸುವಷ್ಟರಲ್ಲಿ ಶವದ ಆಕಾರದ ಗೊಂಬೆಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿಬಿಟ್ಟಿದ್ದರು. ಆ ಬೊಂಬೆಯಲ್ಲಿ ಹುದುಗಿಸಿಟ್ಟಿದ್ದ ಸರಪಟಾಕಿಗಳು ಕಿವಿ ಗಡಚಿಕ್ಕುವ ಶಬ್ದ ಹೊರಡಿಸಲು ಪ್ರಾರಂಭಿಸಿದಾಗ ಪೋಲಿಸರು ಕಕ್ಕಾಬಿಕ್ಕಿಯಾಗಿದ್ದರು.
ಹಾಸನದ ನರಸಿಂಹರಾಜವೃತ್ತದಲ್ಲಿ ಸಕಲೇಶಪುರದ ಲೋಕೇಶಗೌಡರ ನೇತೃತ್ವದಲ್ಲಿ ಚಳುವಳಿ ನಡೆಯುವುದೆಂದು ಪ್ರಚುರವಾಗಿತ್ತು. ಅದನ್ನು ಶತಾಯ ಗತಾಯ ತಡೆಯಲು ಪೋಲಿಸರು ಎಲ್ಲೆಡೆ ಕಟ್ಟೆಚ್ಚರದಿಂದ ಕಾಯುತ್ತಿದ್ದರು. ಆ ರಸ್ತೆಯಲ್ಲಿ ಸಂಚಾರವನ್ನೇ ಸ್ಥಗಿತಗೊಳಿಸಿ ಬೇರೆ ದಾರಿಯಿಂದ ಸಂಚರಿಸಲು ವ್ಯವಸ್ಥೆ ಮಾಡಿದ್ದರು. ಜನರು ಒಟ್ಟಿಗೆ ಓಡಾಡದಂತೆ, ಅಲ್ಲಿ ನಿಂತುಕೊಳ್ಳದಂತೆ ಪೋಲಿಸರು ತಾಕೀತು ಮಾಡುತ್ತಿದ್ದರು. ಹೀಗಿದ್ದಾಗ ಅಲ್ಲಿಗೆ ಒಂದು ಮೆಟಡಾರ್ ಅಲ್ಲಿಗೆ ಬಂದಿತು. ಬೇರೆ ದಾರಿಯಲ್ಲಿ ಹೋಗುವಂತೆ ಪೋಲಿಸರು ಸೂಚಿಸುವಾಗ ಅವರಿಗೆ ಅದರಲ್ಲಿ ಮೈಗೆಲ್ಲಾ ಬ್ಯಾಂಡೇಜ್ ಹಾಕಿಕೊಂಡಿದ್ದರೂ ರಕ್ತ ಒಸರುತ್ತಿದ್ದ ಅಪಾಯ ಸ್ಥಿತಿಯಲ್ಲಿದ್ದ ವ್ಯಕ್ತಿ ಮತ್ತು ಆತನ ಬಂಧುಗಳಿದ್ದುದು ಕಂಡುಬಂದಿತ್ತು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದಾಗ ಮಾನವೀಯತೆಯಿಂದ ಆ ವಾಹನವನ್ನು ಮುಂದೆ ಹೋಗಲು ಬಿಟ್ಟರು. ಸ್ವಲ್ಪ ದೂರ ಹೋದ ಆ ವಾಹನ ಸರ್ಕಲ್ ಸಮೀಪದಲ್ಲೇ ಕೆಟ್ಟು ನಿಂತುಬಿಟ್ಟಿತು. ಬೇರೆ ವಾಹನ ತರುವುದಾಗಿ ಹೇಳಿ ವ್ಯಾನಿನಲ್ಲಿದ್ದವರು ನಾಲ್ಕು ಭಾಗಗಳಾಗಿ ನಾಲ್ಕು ರಸ್ತೆಗಳಲ್ಲಿ ಸ್ವಲ್ಪ ಮುಂದೆ ಸಾಗಿ ಅಂಗಿಯ ಒಳಗೆ ಹುದುಗಿಸಿಟ್ಟಿದ್ದ ಸರಪಟಾಕಿಗಳನ್ನು ಹಚ್ಚಿಬಿಟ್ಟರು. ವ್ಯಾನಿನ ಒಳಗೆ ಇದ್ದ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿ ಒಂದು ಕೈಯಲ್ಲಿ ಭಗವಾದ್ವಜ ಇನ್ನೊಂದು ಕೈಲ್ಲಿ ತ್ರಿವರ್ಣ ದ್ವಜ ಹಿಡಿದು ಹೊರಗೆ ಬಂದು ಸರ್ಕಲ್ಲಿನ ಮಧ್ಯದಲ್ಲಿ ನಿಂತು, 'ಭಾರತಮಾತಾ ಕಿ ಜೈ', 'ತುರ್ತು ಪರಿಸ್ಥಿತಿಗೆ ಧಿಕ್ಕಾರ' ಎಂದು ಘೋಷಿಸಲು ಪ್ರಾರಂಭಿಸಿತ್ತು. ಆತ ಮತ್ಯಾರೂ ಆಗಿರದೇ ಲೋಕೇಶಗೌಡರೇ ಆಗಿದ್ದರು! ಪೋಲಿಸರಿಗೆ ಕೆಲಕ್ಷಣ ಯಾರನ್ನು ಬಂಧಿಸಬೇಕು ಎಂದು ತಿಳಿಯದೆ ಪರದಾಡಿ, ಕೊನೆಗೆ ಎಲ್ಲರನ್ನೂ ಬಂಧಿಸಿ ಹಾಸನದ ಸೆರೆಮನೆಗೆ ಅಟ್ಟಿದ್ದರು.
ಅರಕಲಗೂಡಿನ ಅನಂತ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭ ಏರಿ ಅಲ್ಲಿ ಕಪ್ಪು ಬಾವುಟ ಹಾರಿಸಿ ಕೆಳಗೆ ಇಳಿದು ಬರುತ್ತಾ ಕಂಬಕ್ಕೆ ಗ್ರೀಸ್ ಮೆತ್ತಿ ಬಂದಿದ್ದ. ಮರುದಿನ ಬೆಳಿಗ್ಗೆ ಆ ಕಪ್ಪು ಬಾವುಟ ಇಳಿಸಿ ರಾಷ್ಟ್ರದ್ವಜ ಹಾರಿಸಲು ಅಧಿಕಾರಿಗಳು ಪಟ್ಟಿದ್ದ ಪಾಡು ಅಷ್ಟಲ್ಲ. ಹೊಳೆನರಸಿಪುರದ ಭಗವಾನ್ ಎಂಬ ಬಾಲಕ ಸಂತೆಯಲ್ಲಿ, 'ಕಹಳೆ ಓದಿ, ಇಂದಿರಾಗಾಂಧಿ ಮಾಡಿದ ಅವಾಂತರ ನೋಡಿ' ಎಂದು ಜನರಿಗೆ ಪತ್ರಿಕೆ ಹಂಚುತ್ತಿದ್ದುದನ್ನು ಕಂಡು ಪೋಲಿಸರು ಅವನನ್ನು ಬಂಧಿಸಿ ವಿಚಾರಿಸಿದಾಗ, 'ಯಾರು ಕೊಟ್ಟರೋ ಗೊತ್ತಿಲ್ಲ, ಹಂಚು ಅಂದರು, ಹಂಚುತ್ತಿದ್ದೆ' ಎಂದು ಉತ್ತರಿಸಿದ್ದ. ಇನ್ನೂ ಚಿಕ್ಕವನಾಗಿದ್ದರಿಂದ ಅವನಿಗೆ ಎಚ್ಚರಿಕೆ ಕೊಟ್ಟು ಹಿಂಭಾಗಕ್ಕೆ ಎರಡು ಬಾರಿಸಿ ಬಿಟ್ಟುಕಳಿಸಿದ್ದರು. ಇಂತಹ ಯಾವುದೇ ಸುದ್ದಿಗಳು ಆಕಾಶವಾಣಿಯಲ್ಲಾಗಲೀ, ಪತ್ರಿಕೆಯಲ್ಲಾಗಲೀ ಪ್ರಕಟವಾಗುತ್ತಲೇ ಇರಲಿಲ್ಲ. ಕೇವಲ ಭೂಗತ ಪತ್ರಿಕೆ 'ಕಹಳೆ'ಯ ಮೂಲಕ ಮಾತ್ರ ಸುದ್ದಿ ಹೊರಜಗತ್ತಿಗೆ ತಿಳಿಯುತ್ತಿತ್ತು. ಜನರು ಆ ಪತ್ರಿಕೆಯನ್ನು ಓದಲು, ಕೈಯಲ್ಲಿ ಹಿಡಿದುಕೊಳ್ಳಲೂ ಹೆದರುತ್ತಿದ್ದರೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಚಳುವಳಿಯಲ್ಲಿ ಅರಸಿಕೆರೆ ತಾಲ್ಲೂಕು ಮುಂಚೂಣಿಯಲ್ಲಿತ್ತು. ಬಂಧಿತರು, ಭಾಗವಹಿಸಿದವರಲ್ಲಿ ಅವರದೇ ಸಿಂಹಪಾಲು. ಉಳಿದ ತಾಲ್ಲೂಕುಗಳೂ ಗಣನೀಯ ಸಂಖ್ಯೆಯಲ್ಲಿ ಚಳುವಳಿಯಲ್ಲಿ ಭಾಗವಹಿಸಿದವು. ಆದರೆ ಇತರ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ ಹೊಳೆನರಸಿಪುರ ತಾಲ್ಲೂಕಿನಲ್ಲಿ ವ್ಯಕ್ತವಾದ ಪ್ರತಿಭಟನೆ ಸ್ವಲ್ಪ ಸಪ್ಪೆಯೆಂದೇ ಹೇಳಬೇಕಾಗುತ್ತದೆ.
ಭಾರತ ರಕ್ಷಣಾ ಕಾಯದೆ (ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್) ಅನ್ನು ಡಿಫೆನ್ಸ್ ಆಫ್ ಇಂದಿರಾ ರೂಲ್ಸ್ ಮತ್ತು ಆಂತರಿಕ ಭದ್ರತಾ ಶಾಸನ (ಮೀಸಾ-ಮೈಂಟೆನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ ಆಕ್ಟ್) ಅನ್ನು ಮೈಂಟೆನೆನ್ಸ್ ಆಫ್ ಇಂದಿರಾ ಸಂಜಯ್ ಆಕ್ಟ್ ಎಂದು ವ್ಯಂಗ್ಯವಾಗಿ ಆಡಿಕೊಳ್ಳಲಾಗುತ್ತಿತ್ತು. ಎರಡು ವರ್ಷಗಳ ಕಾಲ ಯಾವುದೇ ವಿಚಾರಣೆಯಿಲ್ಲದೆ, ನ್ಯಾಯಾಲಯಕ್ಕೆ ಯಾವುದೇ ಕಾರಣ ಕೊಡದೆ ಬಂಧಿಸಲು ಅವಕಾಶ ಕೊಡುವ ಮೀಸಾ ಕಾಯದೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಸರಿಯಾಗಿ ಮೀಸೆಯೇ ಬರದಿದ್ದ ವಿದ್ಯಾರ್ಥಿಗಳಾದ ಹಾಸನದ ಪಾರಸಮಲ್, ಅರಕಲಗೂಡಿನ ಪಟ್ಟಾಭಿರಾಮರನ್ನು ಬಂಧಿಸಿದ್ದರು. ಇತರ ಮೀಸಾ ಬಂದಿಗಳೆಂದರೆ, ದಿ. ಎಸ್.ವಿ.ಗುಂಡೂರಾವ್, ದಿ. ವೆಂಕಟರಮಣೇಗೌಡ, ದಿ. ಎನ್.ಕೆ.ಗಣಪಯ್ಯ, ಸಕಲೇಶಪುರದ ತರುಣ ಸತ್ಯನಾರಾಯಣಗುಪ್ತ, ಅರಸಿಕೆರೆಯ ಶ್ರೀನಿವಾಸಮೂರ್ತಿ, ದುರ್ಗಪ್ಪಶೆಟ್ಟಿ, ಆಲೂರು ತಾ.ನ ದಿ. ಬಸವೇಗೌಡ, ಮರಸು ಮಂಜುನಾಥ್, ಆರೆಸ್ಸೆಸ್ಸಿನ ಜಿಲ್ಲಾ ಪ್ರಚಾರಕ ದಿ. ಪ್ರಭಾಕರ ಕೆರೆಕೈ, ಅರೆಹಳ್ಳಿಯ ನಾರಾಯಣ ಕಾಮತ್, ಡಾ. ವಿ.ಎಸ್.ಭಟ್, ಸಕಲೇಶಪುರ. ಇವರ ಪೈಕಿ ಗಣಪಯ್ಯನವರು ಭಾರತೀಯ ಲೋಕದಳಕ್ಕೆ ಸೇರಿದವರಾಗಿದ್ದು ಉಳಿದವರೆಲ್ಲರೂ ಆರೆಸ್ಸೆಸ್ಸಿನವರು. ನನ್ನನ್ನೂ ಮೀಸಾ ಪ್ರಕಾರ ಬಂಧಿಸಲು ಆಗಿನ ಎಸ್.ಪಿ.ಯವರು ಶಿಫಾರಸು ಮಾಡಿದ್ದರೂ, ಆಗಿನ ಜಿಲ್ಲಾಧಿಕಾರಿ ಶ್ರೀ ಧೀರೇಂದ್ರಸಿಂಗರು ಅವರ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಮೀಸಾ ಬಂದಿಯಾಗಿಸಲು ಒಪ್ಪದ ಕಾರಣ ಮೀಸಾಬಂದಿಯಾಗಿ ಬಳ್ಳಾರಿ ಜೈಲಿಗೆ ಹೋಗುವುದು ತಪ್ಪಿತ್ತು. ದೇವೇಗೌಡರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಸರ್ಕಾರ ಮುಂಜಾಗ್ರತೆಯಾಗಿ ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಟ್ಟಿದ್ದು, ಹಾಸನ ಜಿಲ್ಲೆಯಲ್ಲಿ ಬಂಧಿತರಾದವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಭಾರತ ರಕ್ಷಣಾ ಕಾಯದೆಯನ್ವಯ ಜಿಲ್ಲೆಯಲ್ಲಿ ಸುಮಾರು ೩೦೦ ಜನರು ಬಂಧಿತರಾಗಿದ್ದು ಅವರೆಲ್ಲರೂ ಆರೆಸ್ಸೆಸ್ಸಿನ ಮೂಲದವರೇ ಆಗಿದ್ದು ವಿಶೇಷವೇ ಸರಿ. ಇದಲ್ಲದೆ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ವಿವಿಧ ಪ್ರಕರಣಗಳಲ್ಲಿ ಒಳಗೊಂಡವರು, ಜೈಲುಗಳಲ್ಲಿ ಸ್ಥಳವಿಲ್ಲದೆ ಹೆದರಿಸಿ, ಬೆದರಿಸಿ ಬಿಡಲ್ಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ವಿವಿಧ ಕಾಲೇಜಿನ ತರುಣರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ. ಬಂಧನಕ್ಕೆ ಒಳಗಾಗದೆ, ಭೂಗತರಾಗಿ ಚಳುವಳಿಗೆ ಪ್ರೇರಿಸುವ, ಜನಜಾಗೃತಿ ಮಾಡುವ ಆರೆಸ್ಸೆಸ್ಸಿನ ತರುಣರ, ಪ್ರಚಾರಕರುಗಳ ಸಂಖ್ಯೆ ಮತ್ತು ಅವರು ತುರ್ತು ಪರಿಸ್ಥಿತಿ ತೆರವಿಗೆ ಮಾಡಿದ ಕೆಲಸ ಶ್ಲಾಘನೀಯವಾದುದಾಗಿದೆ. ಬಂಧನದ ಕಾಲದಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಜಿಲ್ಲಾ ಪ್ರಚಾರಕ ಪ್ರಭಾಕರ ಕೆರೆಕೈ ನಂತರದಲ್ಲಿ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಮೃತಪಟ್ಟರು.
ದೇಶದೆಲ್ಲೆಡೆ ತುರ್ತುಪರಿಸ್ಥಿತಿ ವಿರುದ್ಧ ಜನರ ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ಇಂದಿರಾ ಸರ್ಕಾರ ತುರ್ತು ಪರಿಸ್ಥಿತಿ ತೆರವುಗೊಳಿಸಿ ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ಮೇಲಿನ ನಿಷೇಧ ರದ್ದು ಪಡಿಸಲೇಬೇಕಾತು. ಲೋಕಸಭೆ ವಿಸರ್ಜಿಸಿ ಚುನಾವಣೆ ನಡೆಸಿ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮದು ಸರಿಯಾದ ಕ್ರಮವಾಗಿತ್ತೆಂದು ಸಮರ್ಥಿಸಿಕೊಳ್ಳಬಹುದೆಂದು ಎಣಿಸಿದ್ದ ಅವರ ಎಣಿಕೆ ತಲೆಕೆಳಗಾಯಿತು. ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಒಗ್ಗೂಡಿ ಜನತಾಪಕ್ಷ ರಚಿಸಿಕೊಂಡು ಚುನಾವಣೆ ಎದುರಿಸಿ ಯಶಸ್ವಿಯಾದವು. ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ನೀಡಿತು. ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರ ಮತ್ತು ಹಾಸನದಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಹಾಸನದ ಎಸ್. ನಂಜೇಶಗೌಡರು ಅಲ್ಪ ಬಹುಮತದಿಂದ ಜಯಗಳಿಸಿದ್ದು ಜಿಲ್ಲೆಯ ಜನತೆಯ ಪ್ರಜಾಫ್ರಭುತ್ವದ ಒಲವನ್ನು ಎತ್ತಿ ತೋರಿಸಿತ್ತು, ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರಿಗೆ ಬೆಂಬಲಿಸಿದಂತಿತ್ತು.
ಸುಮಾರು 8 ವರ್ಷಗಳ ಹಿಂದೆ, ದಿನಾಂಕ 29-12-2012ರಂದು ತುರ್ತುಪರಿಸ್ಥಿತಿಯ ನೆನಪುಗಳಿಗೆ ಸಂಬಂಧಿಸಿದ ಲೇಖಕನ "ಆದರ್ಶದ ಬೆನ್ನು ಹತ್ತಿ. ." ಕೃತಿ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡವರ ಸಮಾವೇಶ ಏರ್ಪಡಿಸಲಾಗಿತ್ತು. (ಪುಸ್ತಕದ ಪ್ರತಿ ಬೇಕಿದ್ದವರು ಲೇಖಕರನ್ನು ಸಂಪರ್ಕಿಸಬಹುದು.) ಎಷ್ಟೋ ಜನರು ಸತ್ತೇ ಹೋಗಿದ್ದರು, ಎಷ್ಟೋ ಜನರು ಊರು ಬಿಟ್ಟು ಹೋಗಿದ್ದು ಅವರ ವಿಳಾಸ ತಿಳಿದಿರಲಿಲ್ಲ. ಹಾಗಾಗಿ ಅಂದು ತರುಣರಾಗಿದ್ದು, ಈಗ ಜೀವನ ಸಂಧ್ಯಾಕಾಲದಲ್ಲಿರುವ ಜಿಲ್ಲೆಯ ಸುಮಾರು 100 ಜನರನ್ನು ಶ್ರಮವಹಿಸಿ ಒಟ್ಟಿಗೆ ಸೇರಿಸಿದ್ದು ಮರೆಯಲಾಗದ ಅನುಭವ ನೀಡಿತ್ತು. 1975-77ರ ಅವಧಿಯಲ್ಲಿ ಬಂಧಿತರಾಗಿದ್ದಾಗ ಕಂಡಿದ್ದವರು ಸುಮಾರು 35 ವರ್ಷಗಳ ನಂತರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಅವರುಗಳಿಗೆ ಆದ ಅನುಭವ, ಆನಂದ ಅವರ್ಣನೀಯ. ಪರಸ್ಪರರನ್ನು ತಬ್ಬಿಕೊಂಡು, 'ಅಯ್ಯೋ, ನೀನಿನ್ನೂ ಬದುಕಿದ್ದೀಯೇನೋ, ಸತ್ತೇ ಹೋಗಿದ್ದಿಯೇನೋ ಅಂದುಕೊಂಡಿದ್ದೆ' ಎಂದು ಆನಂದಭಾಷ್ಪ ಸುರಿಸಿದ್ದರು. ಎಲ್ಲರೂ ಹಿಂದಿನ ತಾರುಣ್ಯದ ಕಾಲಕ್ಕೆ ಜಾರಿದ್ದರು. ಜೈಲಿನಲ್ಲಿ ಹಾಡುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಹಾಡನ್ನು ಎದೆಯುಬ್ಬಿಸಿ ಸಾಮೂಹಿಕವಾಗಿ ಹಾಡಿದಾಗ ಕಣ್ಣಂಚಿನಲ್ಲಿ ನೀರಾಡಿದ್ದವು. ನಿರಂತರ ಜಾಗೃತಿಯೇ ಪ್ರಜಾಪ್ರಭುತ್ವದ ಉಳಿವಿಗೆ ಕಾರಣ ಎಂಬ ಸಂದೇಶ ಬಿತ್ತರವಾಗಿತ್ತು.
-ಕ.ವೆಂ.ನಾಗರಾಜ್.
*****
ತುರ್ತು ಪರಿಸ್ಥಿತಿ ಹಿಂತೆಗೆತವಾಗಿ ಆರೆಸ್ಸೆಸ್ಸಿನ ಮೇಲಿನ ನಿಷೇಧ ತೆರವಾದಮೇಲೆ ಹಾಸನ ನಗರದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟಿಸಿ ಜೈಲುವಾಸ ಅನುಭವಿಸಿದ ಗೆಳೆಯರು ಒಟ್ಟಿಗೆ ತೆಗೆಸಿಕೊಂಡಿದ್ದ 43 ವರ್ಷಗಳ ಹಿಂದಿನ ಅಪರೂಪದ ಫೋಟೋ
ನಿಂತಿರುವವರು: ನಾಗಭೂಷಣ, ವಾಸುದೇವ, . . . . ,ರವಿಕುಮಾರ್, ಸತ್ಯಮೂರ್ತಿ, ಕುಮಾರ್, ಫಾಲಾಕ್ಷ, ಶ್ರೀರಾಮ, ಸುಬ್ರಹ್ಮಣ್ಯ, ಪ್ರಸನ್ನ, ಹಿರಿಯಣ್ಣ, ರಾಮಶಂಕರಬಾಬು, ಸುವರ್ಣ, ಪುರುಷೋತ್ತಮ
ಕುಳಿತಿರುವವರು: ಎ.ವಿ. ಚಂದ್ರಶೇಖರ್, ಶಿವರಾಮ್, ಬಸವರಾಜು, ಪಾರಸಮಲ್, ಜಯಪ್ರಕಾಶ್, ಕರಿಬಸಪ್ಪ, ಎಸ್.ವಿ. ಗುಂಡೂರಾವ್, ರಾಜಶೇಖರ್, ಜನಾರ್ಧನ ಐಯ್ಯಂಗಾರ್, ಚಂದ್ರಶೇಖರ್, ಶಾಂತಿಲಾಲ್, ಲೇಖಕ ಕ.ವೆಂ.ನಾಗರಾಜ್, ರಾಮಚಂದ್ರ.
****
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ