ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 27, 2017

ದೊಡ್ಡ ವ್ಯಕ್ತಿ ಯಾರು?


     ದೊಡ್ಡ ಮನುಷ್ಯರೆಂದರೆ ಯಾರು? ಅಧಿಕಾರ ಇರುವವರೇ? ಹಣ, ಅಂತಸ್ತು ಹೊಂದಿರುವವರೇ? ದೊಡ್ಡ ದೇಹದ ಬಲಶಾಲಿಗಳೇ? ವಯಸ್ಸಿನಲ್ಲಿ ಹಿರಿಯರಾದವರೇ? ವಿದ್ವಾಂಸರೇ? ಹಿಂದಿನ ಕಾಲದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎನ್ನುತ್ತಿದ್ದರು. ಹಾಗೆಂದು, ಎಲ್ಲಾ ರಾಜರುಗಳೂ ದೇವರಂತೆ ಇರಲಿಲ್ಲ. ಈಗ ಅರಸೊತ್ತಿಗೆ ಇಲ್ಲ. ಜನರಿಂದ ಆಯ್ಕೆಗೊಂಡ ಪ್ರಜಾಪ್ರತಿನಿಧಿಗಳು ಆಳುವವರ ಸ್ಥಾನದಲ್ಲಿದ್ದಾರೆ. ಅವರಿಗೆ ಅಧಿಕಾರವಿದೆ, ಪೊಲೀಸ್ ಪಡೆಯಿದೆ, ಸೈನ್ಯವಿದೆ, ಕಾಯದೆ, ಕಾನೂನುಗಳ ನಿಯಂತ್ರಣ ಅವರುಗಳ ಕೈಯಲ್ಲೇ ಇದೆ. ಹಣಬಲವಿದೆ, ಜನಬಲವಿದೆ. ಅವರುಗಳು ದೊಡ್ಡವರೇ? ಕೆಲವರ ಬಳಿ ಅಧಿಕಾರವಿರುವುದಿಲ್ಲ, ಹಣ ಇರುವುದಿಲ್ಲ, ಹುಟ್ಟಿನ ಅಥವ ಜಾತಿಯ ಬೆಂಬಲವಿರುವುದಿಲ್ಲ. ಆದರೂ ಅವರನ್ನು ಜನ ದೊಡ್ಡವರೆಂದು ಗೌರವದಿಂದ ಕಾಣುತ್ತಾರೆ. ಅವರನ್ನು ಗೌರವದಿಂದ ಕಾಣುವಂತೆ ಮಾಡುವ ಸಂಗತಿಯೆಂದರೆ ಅವರ ಸುಸಂಸ್ಕೃತ ನಡವಳಿಕೆ ಹಾಗೂ ಸಮಾಜದ ಕುರಿತ ಅವರ ಕಳಕಳಿ. ಸಾಮಾನ್ಯರು ಸ್ವಂತದ ಬಗ್ಗೆ ಎಷ್ಟು ಕಾಳಜಿ, ಮುತುವರ್ಜಿ ವಹಿಸುತ್ತಾರೋ, ಅದಕ್ಕಿಂತ ಹೆಚ್ಚಿನ ಕಾಳಜಿಯನ್ನು ಅಂತಹವರು ಸಮಾಜದ ಸಹಜೀವಿಗಳ ಬಗ್ಗೆ ವಹಿಸುತ್ತಾರೆ. ಅವರಿಗೆ ಸ್ವಂತದ ಹಿತ, ಅಧಿಕಾರ, ಅಂತಸ್ತಿಗಿಂತ ಸಮುದಾಯದ ಹಿತವೇ ಉನ್ನತವಾದುದಾಗಿರುತ್ತದೆ. ಇತರರು ಅವರನ್ನು ಗೌರವಿಸುವಂತೆ ಮಾಡುವ ಅಂಶ ಇದೇ ಆಗಿದೆ.
     ಎಷ್ಟೋ ಜನರಿಗೆ ತಮ್ಮ ತಾತ, ಮುತ್ತಾತಂದಿರುಗಳ ಹೆಸರುಗಳೇ ತಿಳಿದಿರುವುದಿಲ್ಲ. ಆದರೆ ತಮ್ಮ ಕುಟುಂಬಕ್ಕೆ ಸಂಬಂಧವೇ ಇರದಿರುವ ವಿವೇಕಾನಂದ, ಭಗತ್‌ಸಿಂಗ್, ಮಹಾತ್ಮ ಗಾಂಧಿ, ಬಸವಣ್ಣ, ಅಂಬೇಡ್ಕರ್ ಮುಂತಾದವರ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಇವರುಗಳಿಗಿಂತ ಹಿಂದಿನವರಾದ, ಮಹಾಮಹಿಮರೆಂದು ಪರಿಗಣಿಸುವ ನೂರಾರು ಗಣ್ಯರುಗಳ ಬಗ್ಗೆ ಸಹ ನಮಗೆ ಗೌರವ ಇಂದಿಗೂ ಇರುತ್ತದೆ. ಏಕೆ? ಇದಕ್ಕೆ ಉತ್ತರ ಬಹಳ ಸರಳವಾಗಿದೆ. ಅವರುಗಳು ಯಾರೂ ಸ್ವಂತದ ಹಿತಕ್ಕೆ ಪ್ರಾಧಾನ್ಯ ಕೊಟ್ಟವರಲ್ಲ. ಸಮಾಜದ ಹಿತವೇ ಮುಖ್ಯವೆಂದು ಭಾವಿಸಿ ಸಮಾಜದ ಸಲುವಾಗಿಯೇ ಬಾಳಿ ತಮ್ಮ ಜೀವನವನ್ನು ಅರ್ಪಿಸಿದ್ದವರು. ಹುಟ್ಟಿದೆವು, ಹೇಗೋ ಬಾಳಿದೆವು, ಸಂಸಾರ ಸಾಗಿಸಿದೆವು, ಒಂದು ದಿನ ಕಂತೆ ಒಗೆದೆವು ಎನ್ನುವವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರುಗಳೇ ನೆನಪಿನಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಯಾರು ಇತರರ ಸಲುವಾಗಿ ಬಾಳುತ್ತಾರೋ ಅವರುಗಳನ್ನೇ ಜನರು ಸ್ಮರಿಸುವವರು. ಯಾರು ಜನಮಾನಸದ ಸ್ಮರಣೆಯಲ್ಲಿ ಬಹುಕಾಲ ಉಳಿಯುತ್ತಾರೋ ಅವರುಗಳೇ ದೊಡ್ಡವರು.
      ದೇವರು ನಮ್ಮೊಳಗೆ ಅದೇನನ್ನೋ ಹುದುಗಿಸಿ ಇಟ್ಟಿದ್ದಾನೆ. ಅದೇ ನಮ್ಮನ್ನು ಈಗಿರುವುದಕ್ಕಿಂತ ಉನ್ನತ ಸ್ಥಿತಿಗೆ ಏರುವ ತುಡಿತ. ಆ ಉನ್ನತ ಸ್ಥಿತಿ ಅಂದರೆ ನಮ್ಮ ದೃಷ್ಟಿಯಲ್ಲಿ ಏನು ಅನ್ನುವುದನ್ನು ಅವಲಂಬಿಸಿ ನಮ್ಮ ವ್ಯಕ್ತಿತ್ವಗಳು ರೂಪಿತಗೊಳ್ಳುತ್ತವೆ. ಕೆಲವರಿಗೆ ಅಧಿಕಾರದ ಹಂಬಲ, ಕೆಲವರಿಗೆ ಹಣ, ಆಸ್ತಿ ಮಾಡಿಕೊಳ್ಳುವ ಹಂಬಲ, ಕೆಲವರಿಗೆ ಸಕಲ ಮೋಜುಗಳನ್ನೂ ಅನುಭವಿಸುವ ಹಂಬಲ, ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ದೊಡ್ಡವರೆನ್ನಿಸಿಕೊಳ್ಳುವ ಹಂಬಲ ಇರುತ್ತದೆ. ಕೆಲವರು ತಮ್ಮ ಇಚ್ಛೆ, ಬಯಕೆಗಳಂತೆ ದೊಡ್ಡ ಸ್ಥಿತಿಗೆ ಏರಲೂಬಹುದು. ಆದರೆ, ಆ ಎಲ್ಲಾ ದೊಡ್ಡವರುಗಳನ್ನು ಜನರು ನೆನೆಯುವುದಿಲ್ಲ. ಮೊದಲೇ ಹೇಳಿದಂತೆ ಅವರ ದೊಡ್ಡತನಗಳಲ್ಲಿ ಸಂಕುಚಿತ ಸ್ವಾರ್ಥದ ಪ್ರಮಾಣ ಕಡಿಮೆಯಿದ್ದಷ್ಟೂ ಅವರುಗಳು ಜನರ ದೃಷ್ಟಿಯಲ್ಲೂ ದೊಡ್ಡವರೆನ್ನಿಸಿಕೊಳ್ಳುತ್ತಾ ಹೋಗುತ್ತಾರೆ.
     ಎಲ್ಲರೂ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿಯೇ ದುಡಿಯಲಿ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಇದ್ದುದರಲ್ಲಿಯೇ, ನಮ್ಮ ಕಾರ್ಯಕ್ಷೇತ್ರದಲ್ಲಿಯೇ ನಿಸ್ಪೃಹರಾಗಿದ್ದರೆ ಅದೂ ದೊಡ್ಡತನವೇ. ಅಂದರೆ, ವಿದ್ಯಾರ್ಥಿಯಿರಲಿ, ನೌಕರನಿರಲಿ, ರಾಜಕಾರಣಿಯಿರಲಿ, ರೈತನಿರಲಿ, ಕಾರ್ಮಿಕನಿರಲಿ, ಮಾಲಿಕನಿರಲಿ ತಮ್ಮ ತಮ್ಮ ಜವಾಬ್ದಾರಿಯನ್ನು ನಾಗರಿಕ ಪ್ರಜ್ಞೆಯಿಂದ, ಸಮೂಹ ಹಿತದೃಷ್ಟಿಯಿಂದ ಪಾಲಿಸಿದಲ್ಲಿ ಅವರುಗಳೂ ದೊಡ್ಡವರೇ. ಉತ್ತಮ ತಾಯಿ, ಉತ್ತಮ ತಂದೆ, ಉತ್ತಮ ಶಿಕ್ಷಕ, ಉತ್ತಮ ಸ್ನೇಹಿತ, ಉತ್ತಮ ಆಟಗಾರ ಆಗಲು ಶ್ರಮಿಸುವುದೂ ದೊಡ್ಡವರಾಗುವ ಪ್ರಯತ್ನವೇ ಸರಿ. ಕೆಲವರು ದೊಡ್ಡವರಾಗಲು ಅಡ್ಡದಾರಿ ಹಿಡಿಯುತ್ತಾರೆ. ಅದರಿಂದ ಅವರಿಗೂ ಮತ್ತು ಸಮಾಜಕ್ಕೂ ಹಿತವಾಗಲಾರದು. ರಾಜಕಾರಣಿಗಳು ತಾವು ದೊಡ್ಡವರು ಎಂದು ತೋರಿಸಿಕೊಳ್ಳುವುದಕ್ಕೆ ಇತರರು ಕೆಟ್ಟವರು, ಕೀಳು ಎಂದು ಬಿಂಬಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇನ್ನು ಕೆಲವರಿಗೆ ಇತರರ ದೋಷ, ದೌರ್ಬಲ್ಯಗಳನ್ನು ಎತ್ತಿ ಆಡುತ್ತಾ ತಾವು ಹಾಗಿಲ್ಲ, ಸಂಭಾವಿತ ಎಂದು ಪರೋಕ್ಷವಾಗಿ ತೋರಿಸಿಕೊಳ್ಳುವ ಚಟವಿರುತ್ತದೆ. ಅವರುಗಳು ಸಂಭಾವಿತರಾಗಿದ್ದರೂ ಸಹ, ಅವರ ಈ ಚಟದಿಂದ ಅವರು ಕುಬ್ಜರಾಗಿಬಿಡುತ್ತಾರೆ. 
     ದೊಡ್ಡತನದ ಕುರಿತು ಸಂಕ್ಷಿಪ್ತವಾಗಿ ಹೇಳಬಹುದಾದುದೇನೆಂದರೆ:
೧. ದೊಡ್ಡತನವನ್ನು ದೈಹಿಕ ಶಕ್ತಿಯಿಂದ ಅಳೆಯಲಾಗದು, ಗುಣಗಳ ಶಕ್ತಿಯಿಂದ ನಿರ್ಧರಿಸಬಹುದು.
೨. ದೊಡ್ಡತನ ಆಸ್ತಿ, ಅಂತಸ್ತು ಸಂಪಾದಿಸುವುದರಲ್ಲಿಲ್ಲ, ಸೇವೆ ಸಲ್ಲಿಸುವುದರಲ್ಲಿದೆ.
೩. ಸ್ವಲಾಭ ಹೊಂದುವುದರಲ್ಲಿ ದೊಡ್ಡತನವಿಲ್ಲ, ತ್ಯಾಗ ಮಾಡುವುದರಲ್ಲಿದೆ, ಪಡೆಯುವುದರಲ್ಲಿಲ್ಲ, ಕೊಡುವುದರಲ್ಲಿದೆ.
೪. ಚಂಚಲತೆಯಲ್ಲಿರದೆ ಧೃಢತೆ, ನಂಬಿಕೆ, ಸ್ಥಿರತೆ, ಸಾತತ್ಯತೆಗಳಲ್ಲಿ ದೊಡ್ಡತನವಿದೆ. 
     ನಾವೂ ದೊಡ್ಡವರಾಗಲು ಸರಳ ಮಾರ್ಗವಿದೆ. ಅದೆಂದರೆ, ಆತ್ಮವತ್ ಸರ್ವಭೂತೇಷು- ಎಲ್ಲರನ್ನೂ ನಮ್ಮಂತೆಯೇ ಭಾವಿಸುವುದು! ಸರ್ವಜ್ಞ ಹೇಳಿದಂತೆ, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು, ಮಹಾವೀರ ಹೇಳಿದಂತೆ, ಬಾಳು, ಬಾಳಗೊಡು ತತ್ವ ಅಳವಡಿಸಿಕೊಳ್ಳುವುದು. ನಮ್ಮಂತೆ ಇತರರನ್ನು ಭಾವಿಸುವುದೆಂದರೆ, ನಮಗೆ ಯಾರಾದರೂ ಹಿಂಸಿಸಿದರೆ ನಮಗೆ ಎಷ್ಟು ನೋವಾಗುತ್ತದೆಯೋ, ಅಷ್ಟೇ ನೋವು ನಾವು ಇನ್ನೊಬ್ಬರನ್ನು ಹಿಂಸಿಸಿದಾಗ ಅವರಿಗೆ ಆಗುತ್ತದೆ ಎಂಬ ಅರಿವು ಹೊಂದಿರುವುದು. ನಮಗೆ ಸಾಧ್ಯವಾಗುವುದಾದರೆ ಇನ್ನೊಬ್ಬರಿಗೆ ಉಪಕಾರ ಮಾಡೋಣ, ಅಪಕಾರವನ್ನಂತೂ ಮಾಡದಿರೋಣ. ಇನ್ನೊಬ್ಬರಿಗೆ ಉಪಕಾರ ಮಾಡಲು ಸಾಧ್ಯವಿದ್ದು, ಉಪಕಾರ ಮಾಡಿದರೆ, ಅದು ನಮಗೆ ನಾವೇ ಉಪಕಾರ ಮಾಡಿಕೊಂಡಂತೆ! ಅಥರ್ವ ವೇದದ ಈ ಮಂತ್ರ ಹೀಗಿದೆ: 'ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ| ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ||'  - ನೂರು ಕೈಗಳಿಂದ ಸಂಪಾದಿಸಿ, ಸಾವಿರ ಕೈಗಳಿಂದ ಹಂಚು, ಈ ರೀತಿ ನಿನ್ನ ಕಾರ್ಯ ವಿಸ್ತಾರ ಸಾಧಿಸಿಕೋ ಎನ್ನುವ ಈ ಮಂತ್ರ ಸಮಾಜದ ಹಿತ ಪರಮವೆಂದು ಒತ್ತಿ ಹೇಳಿದೆ. ನಾನಾ ರೀತಿಯಲ್ಲಿ, ಸಾಧ್ಯವಾದ ಎಲ್ಲಾ ನ್ಯಾಯಯುತ ಮಾರ್ಗಗಳಲ್ಲಿ ಸಂಪಾದನೆ ಮಾಡಿ, ಅದನ್ನು ಸಮಾಜದ ಅರ್ಹರಿಗೆ, ದೀನ-ದಲಿತರಿಗೆ ಸಹಾಯ ಮಾಡಲು ಪ್ರೇರೇಪಿಸುವ ಈ ದಾರಿ ದೊಡ್ಡವರಾಗಬಯಸುವವರಿಗೆ ಮಾರ್ಗದರ್ಶಿಯಾಗಿದೆ.  
-ಕ.ವೆಂ.ನಾಗರಾಜ್.

ಸೋಮವಾರ, ಸೆಪ್ಟೆಂಬರ್ 25, 2017

ಅಹಮಿಕೆ (Ego)


     ಅಹಮಿಕೆ, ನಾನತ್ವ, ಅಹಂಕಾರ, ಜಂಭ ಇತ್ಯಾದಿಗಳೆಲ್ಲವೂ ಒಂದೇ ಅರ್ಥ ಕೊಡುವುದಾಗಿದ್ದರೂ, ಅಹಂಕಾರ, ಜಂಭ ಎಂಬ ಪದಗಳನ್ನು ಟೀಕಿಸುವ ಸಲುವಾಗಿ ಬಳಸಲಾಗುತ್ತಿದೆ. ಇಂಗ್ಲಿಷಿನಲ್ಲಿ ಇದನ್ನು ಇಗೊ(ego) ಎನ್ನುವರು. ಸ್ವಾಭಿಮಾನ, ಸ್ವಪ್ರಾಮುಖ್ಯತೆ, ಸ್ವಗೌರವ, ಸ್ವಮಹತ್ವ, ಸ್ವವಿಶ್ವಾಸ, ಸ್ವನಂಬಿಕೆ, ಸ್ವಪ್ರಶಂಸೆ ಇತ್ಯಾದಿ ಸ್ವಂತದ ಕುರಿತ ವಿಷಯಗಳಲ್ಲಿ ಆದ್ಯತೆ ಅಹಮಿಕೆಯ ಪ್ರಮುಖ ಲಕ್ಷಣಗಳು. ಈ ಅಹಮಿಕೆ ಜಾಗೃತ ಮತ್ತು ಸುಪ್ತ ಮನಸ್ಸುಗಳ ನಡುವಿನ ಮಧ್ಯಸ್ಥಗಾರನಾಗಿದ್ದು, ಸ್ವಂತದ ವ್ಯಕ್ತಿತ್ವ ರೂಪಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಯಾರ ಬಗ್ಗೆಯಾದರೂ, ಅವನಿಗೆ ಅಹಂಕಾರ ಜಾಸ್ತಿ ಎಂದರೆ ಅವನು ಸ್ವಾರ್ಥಿ, ಅವನದೇ ಹೆಚ್ಚುಗಾರಿಕೆಯಿರಬೇಕೆಂದು ಬಯಸುವವನು ಎಂದು ಹೇಳಿದಂತೆ. ಈ ನಾನತ್ವ ಅಥವ ಅಹಮಿಕೆ ಜಾಗೃತ ಮನಸ್ಸಿನ ಭಾಗವಾಗಿದ್ದು, ಹೊರಗಿನ ಆಗು-ಹೋಗುಗಳಿಗೆ, ಅನುಭವಗಳಿಗೆ ಪ್ರತಿಕ್ರಿಯಿಸುವ ರೀತಿಯನ್ನು ನಿರ್ದೇಶಿಸುತ್ತದೆ. ಮೂಲ ಸಂಸ್ಕೃತ ಪದವಾದ ಅಹಂ ಎಂಬುದರ ಅರ್ಥ ನಾನು ಎಂದು!
     ಅಹಮಿಕೆಯ ಲಕ್ಷಣಗಳು ಚಿಕ್ಕಂದಿನಿಂದಲೇ ಕಾಣಬರುತ್ತದೆ. ಚಿಕ್ಕ ಮಕ್ಕಳು ತಮ್ಮ ಆಟಿಕೆಗಳನ್ನು ಇತರರು ಮುಟ್ಟುವುದನ್ನು ಇಷ್ಟಪಡದಿರುವುದು, ತಾಯಿ ಇತರ ಮಕ್ಕಳನ್ನು ಎತ್ತಿಕೊಂಡು ಆಡಿಸಿದರೆ ಅತ್ತು ರಂಪ ಮಾಡುವುದು, ಇತ್ಯಾದಿಗಳನ್ನು ಉದಾಹರಿಸಬಹುದು. ಬೆಳೆಯುತ್ತಾ ಹೋದಂತೆ, ತಮ್ಮನ್ನು ಗುರುತಿಸುವ, ತಮಗೆ ಮಹತ್ವ ಕೊಡುವ ಮಕ್ಕಳೊಂದಿಗೆ ಮಾತ್ರ ಬೆರೆಯುತ್ತಾರೆ. ಈ ಲಕ್ಷಣ ಹದಿವಯಸ್ಸಿಗೆ, ಪ್ರೌಢ ವಯಸ್ಸಿಗೆ ಬಂದಂತೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಹಣ, ಅಧಿಕಾರ, ಅವಕಾಶಗಳು ಅಹಮಿಕೆಯನ್ನು ಪೋಷಿಸುವುದರಲ್ಲಿ, ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತವೆ. ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆಯೇ ಎಲ್ಲವೂ ಆಗಬೇಕು ಎಂದು ಬಯಸುವುದು ಅಹಮಿಕೆಯ ತುದಿಯಾಗುತ್ತದೆ. ಇಂತಹ ಮನೋಭಾವದವರು ತಮ್ಮನ್ನು ಗೌರವಿಸದವರನ್ನು ಹಳಿಯುವ, ಅವರಿಗೆ ತೊಂದರೆ ಕೊಡುವ ಮನಸ್ಥಿತಿಗೆ ತಲುಪುತ್ತಾರೆ. ಈ ಮನೋಭಾವ ಎಷ್ಟೋ ಮನೆಗಳನ್ನು ಹಾಳು ಮಾಡಿದೆ, ಎಷ್ಟೋ ಕುಕೃತ್ಯಗಳಿಗೆ ಪ್ರೇರೇಪಣೆ ನೀಡಿದೆ.
     ಈ ಅಹಮಿಕೆ ಒಳ್ಳೆಯದೋ, ಕೆಟ್ಟದ್ದೋ? ಇದು ಇರಬೇಕೋ ಬೇಡವೋ? ಈ ಪ್ರಶ್ನೆಗೆ ಎರಡೂ ಉತ್ತರಗಳು ಸಮಂಜಸವಾಗುತ್ತವೆ. ಅಂದರೆ, ಅಹಮಿಕೆ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಹಾಗೆಯೇ, ಅಹಮಿಕೆ ಇರಲೂ ಬೇಕು, ಇರಲೂ ಬಾರದು! ವಿಚಾರ ಮಾಡೋಣ. ವಿವಿಧ ಜೀವಜಂತುಗಳ ಪೈಕಿ ದೇವರು ಮಾನವನಿಗೆ ಮಾತ್ರ ವಿವೇಚನೆ ಮಾಡುವ ಶಕ್ತಿ ಕೊಟ್ಟಿದ್ದಾನೆ. ಅವನಿಗೆ ಏನನ್ನಾದರೂ ಮಾಡಬಲ್ಲ, ಮಾಡದಿರಬಲ್ಲ, ಬೇರೇನನ್ನೋ ಮಾಡಬಲ್ಲ ಶಕ್ಯತೆಯಿದೆ. ಅಹಮಿಕೆ ಸ್ವಂತದ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯಾದ್ದರಿಂದ ಅಹಮಿಕೆ ಇರಲೇಬೇಕು. ಅತಿಯಾದರೆ ಅಮೃತವೂ ವಿಷವಾಗುವಂತೆ, ಅಹಮಿಕೆ ಒಂದು ಮಿತಿಯಲ್ಲಿದ್ದರೆ ಉತ್ತಮ. ಒಬ್ಬ ವ್ಯಕ್ತಿ ಅಧಮನೋ, ಸಾಮಾನ್ಯನೋ, ಉತ್ತಮನೋ, ಒಳ್ಳೆಯವನೋ, ಕೆಟ್ಟವನೋ ಎಂಬುದು ಅವನು ಹೊಂದಿರುವ ಅಹಮಿಕೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ.
     ಸ್ವಂತ ವ್ಯಕ್ತಿತ್ವಕ್ಕೆ ಮಹತ್ವ ಕೊಟ್ಟುಕೊಳ್ಳದಿದ್ದವರು ದುರ್ಬಲರಾಗಿರುತ್ತಾರೆ. ವಿವೇಕಾನಂದರು ಬಲಶಾಲಿಗಳಾಗಲು, ಸ್ವಾಭಿಮಾನಿಗಳಾಗಲು ಒತ್ತಾಸೆ ನೀಡುತ್ತಿದ್ದವರು. ದುರ್ಬಲರಾಗಿರುವುದು ಪಾಪವೆಂದೇ ಅವರು ಹೇಳುತ್ತಿದ್ದರು. ವೇದವಂತೂ 'ಅದೀನಾ ಸ್ಯಾಮ ಶರದಃ ಶತಮ್'- ದೈನ್ಯತೆಯಿಲ್ಲದಂತೆ ನೂರು ವರ್ಷಗಳ ಕಾಲ ಬಾಳಬೇಕು ಎಂದಿದೆ. ಕಾರಣಗಳೇನೇ ಇರಲಿ, ವಿವೇಚನೆ ಮಾಡಿ ನಡೆಯುವ ಶಕ್ತಿಯ ಕೊರತೆಯಿರುವವರ ಅಹಮಿಕೆ ಕೆಳಮಟ್ಟದಲ್ಲಿರುತ್ತದೆ ಮತ್ತು ಅವರು ಇತರರಿಗೆ ಅಧೀನರಾಗಿ ಅವರು ಹೇಳಿದಂತೆ ನಡೆದುಕೊಳ್ಳುವುದು ಅವಮಾನವೆಂದು ಭಾವಿಸಲಾರರು. ಅಭ್ಯರ್ಥಿಗಳ ಯೋಗ್ಯತೆ, ಭವಿಷ್ಯದಲ್ಲಿ ಆಗುವ ಪರಿಣಾಮಗಳ ಚಿಂತೆಯಿಲ್ಲದೆ, ಅಲ್ಪ ಲಾಭದ ಸಲುವಾಗಿ ಚುನಾವಣೆಗಳಲ್ಲಿ ಹಣ ಕೊಟ್ಟವರು, ಹೆಂಡ ಕುಡಿಸಿದವರು ಹೇಳಿದವರಿಗೆ ಓಟು ಹಾಕುವವರನ್ನು ಇಂತಹವರ ಸಾಲಿಗೆ ಸೇರಿಸಬಹುದು.
ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು
ಇರುವುದಾದರೆ ಪಾಪ ದುರ್ಬಲತೆಯೊಂದೆ |
ದುರ್ಬಲತೆ ಪಾಪ ದುರ್ಬಲತೆಯೇ ಸಾವು
ವಿವೇಕವಾಣಿಯಿದು ನೆನಪಿರಲಿ ಮೂಢ ||
     ಸ್ವಾಭಿಮಾನಿಗಳ ಅಹಮಿಕೆ ಸಾಧನೆಗೂ ದಾರಿಯಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಇದಕ್ಕೆ ಪ್ರಬಲ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ 11.4.2011ರಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಂಡಿದ್ದಲ್ಲದೆ, ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆಯಿತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಕಾಲುಗಳನ್ನು ಕಳೆದುಕೊಂಡರೂ ಹತಾಶಳಾಗದೆ ಏನನ್ನಾದರೂ ಸಾಧಿಸಬೇಕೆಂಬ ಛಲ ಅವಳದಾಯಿತು.  ಆಸ್ಪತ್ರೆಯಲ್ಲಿದ್ದಾಗಲೇ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡಳು.  ಅಗತ್ಯದ ತರಬೇತಿ ಮತ್ತು ಮಾರ್ಗದರ್ಶನ ಪಡೆದು ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯಿಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಕೃತಜ್ಞತೆಯಾಗಿತ್ತು. ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಛಲ! ಗೆಲ್ಲಲೇಬೇಕೆಂಬ ಛಲ ಹೊತ್ತ ಅನೇಕ ಆಟಗಾರರುಗಳು ಕಾಣಸಿಗುತ್ತಾರೆ. ಅವರುಗಳಲ್ಲಿ ಇರುವುದು ತಮ್ಮ ಸ್ವಂತ ಶಕ್ತಿಯ ಮೇಲಿನ ನಂಬಿಕೆ, ಭರವಸೆಗಳು! ಅಹಮಿಕೆಗೆ, ಸ್ವಾಭಿಮಾನಕ್ಕೆ ಬೀಳುವ ಪೆಟ್ಟುಗಳು ಸಾಧನೆಗೆ ಕಾರಣವಾಗುವಂತೆ ಅನರ್ಥಗಳಿಗೂ ಎಡೆ ಮಾಡಿಕೊಡುವ ಸಾಧ್ಯತೆಯೂ ಇರುತ್ತದೆ. ಸಾಧಿಸಿ ತೋರಿಸಲು ಸಾಧ್ಯವಾಗದಿದ್ದವರು ಖಿನ್ನತೆಯಿಂದ, ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳೂ ಕಾಣಸಿಗುತ್ತವೆ.
    ಸಂಪತ್ತು, ಯಶಸ್ಸು, ಅಧಿಕಾರ, ಕೀರ್ತಿ, ಇತ್ಯಾದಿಗಳು ಅಹಮಿಕೆ ಹೆಚ್ಚಿಸುವ ಸಾಧನಗಳು. ಸಮಚಿತ್ತದವರು, ಸಾಧಕರು ಈ ಸಂಗತಿಗಳಿಂದ ವಿಚಲಿತರಾಗದೆ ಎಂದಿನಂತೆ ಇರುತ್ತಾರೆ. ಹೆಚ್ಚಿನವರು ಮೆರೆಯಲು ಪ್ರಾರಂಭಿಸುತ್ತಾರೆ. ಈ ಹಂತದಲ್ಲಿಯೇ ಅವರು ಜಾರತೊಡಗುವುದು. ಇಂತಹವರು ಎಲ್ಲರೂ ತಮ್ಮನ್ನು ಗೌರವಿಸಬೇಕು, ಪ್ರಶಂಸಿಸಬೇಕು ಎಂದು ಬಯಸುತ್ತಾರೆ. ತಮ್ಮ ಕುರಿತ ಸಣ್ಣ ಟೀಕೆಯನ್ನೂ ಅವರು ಸಹಿಸಲಾರರು. ಆತ್ಮೀಯರಾದವರು ಅವರ ಒಳ್ಳೆಯದಕ್ಕಾಗಿಯೇ ಹೇಳುವ ಹಿತನುಡಿಗಳನ್ನೂ ಅವರು ಸಹಿಸರು. ಈ ಅಹಮಿಕೆ ಅತಿಯಾದಾಗ ಅವರ ನಡವಳಿಕೆಯಲ್ಲಿ ದರ್ಪ, ಅಹಂಕಾರ, ಇತರರ ಕುರಿತ ತಿರಸ್ಕಾರಗಳು ವಿಜೃಂಭಿಸತೊಡಗುತ್ತವೆ. ಹಿರಿಯರು, ಜ್ಞಾನಿಗಳನ್ನೂ ಸಹ ಅವಮಾನಿಸಲು ಅವರು ಹಿಂಜರಿಯುವುದಿಲ್ಲ. ಸ್ವಾರ್ಥಕ್ಕಾಗಿ ಏನು ಮಾಡಲೂ, ಯಾವ ಹಂತಕ್ಕೆ ಹೋಗಲೂ ಅವರು ಹಿಂಜರಿಯುವುದಿಲ್ಲ. ಇಂದಿನ ಬಹುತೇಕ ರಾಜಕಾರಣಿಗಳ ನಡವಳಿಕೆಗಳು ಇಂತಹ ಪ್ರವೃತ್ತಿಗೆ ಸಾಕ್ಷಿಗಳಾಗಿವೆ.
     ಅಹಮಿಕೆ ಇಲ್ಲದವರ, ಇರುವವರ, ಪ್ರಮಾಣದಲ್ಲಿ ಹೆಚ್ಚು-ಕಡಿಮೆಯಾದವರಲ್ಲಿ ಆಗುವ ಬದಲಾವಣೆಗಳ ಸಂಕ್ಷಿಪ್ತ ನೋಟ ಹರಿಸಿದೆವು. ಇನ್ನೊಂದು ಅತ್ಯುನ್ನತ ಸ್ಥಿತಿಯೊಂದಿದೆ. ಸಾಧಕರು, ಸಂತರು, ಜ್ಞಾನಿಗಳು, ದೇವಮಾನವರಲ್ಲಿ ಇದನ್ನು ಗುರುತಿಸಬಹುದು. ಅದು ಸಂತೃಪ್ತ, ಆನಂದಮಯ ಸ್ಥಿತಿ. ಅವರಿಗೆ ನಿಂದೆ, ಸ್ತುತಿ, ಸಮೃದ್ಧಿ, ಕೊರತೆ ಇತ್ಯಾದಿಗಳೆಲ್ಲದರ ಬಗ್ಗೆ ಆದರವೂ ಇರುವುದಿಲ್ಲ, ಅನಾದರವೂ ಇರುವುದಿಲ್ಲ. ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅರ್ಥ ಮಾಡಿಕೊಳ್ಳೋಣ, ನಮ್ಮ ಅಹಮಿಕೆ ಇತರರ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ. ಅವರು ನಮ್ಮನ್ನು ಪ್ರಶಂಸಿಸಲೆಂದು ಅವರನ್ನು ತೃಪ್ತಿಗೊಳಿಸಲು ಪ್ರಯತ್ನಿಸುತ್ತೇವೆ ಮತ್ತು ಆ ಮೂಲಕ ನಮ್ಮ ಅಹಮಿಕೆಯನ್ನು ಶೃಂಗರಿಸಿಕೊಳ್ಳಲು ಶ್ರಮಿಸುತ್ತಿರುತ್ತೇವೆ. ಬದಲಾಗಿ, ನಮ್ಮ ಅಂತರಂಗವನ್ನು ತೃಪ್ತಿಗೊಳಿಸುವ ಪ್ರಯತ್ನ ಮಾಡತೊಡಗಿದಾಗ ಒಳಗಣ್ಣು ತೆರೆಯತೊಡಗುತ್ತದೆ, ಆತ್ಮವಿಕಾಸವಾಗುತ್ತಾ ಹೋಗುತ್ತದೆ. ನಮಗೆ ತಿಳಿಯದಂತೆಯೇ ಅಹಮಿಕೆ ಸೊರಗುತ್ತದೆ, ನಾವು ಬೆಳೆಯುತ್ತೇವೆ. ಜ್ಞಾನೋತ್ತುಂಗದಲ್ಲಿ ಅಹಮಿಕೆಯ ಅಂತ್ಯವಿದೆ.
-ಕ.ವೆಂ.ನಾಗರಾಜ್.

ಶನಿವಾರ, ಸೆಪ್ಟೆಂಬರ್ 23, 2017

ಸಮಾಜ ಸೇವೆಯಲ್ಲ, ಋಣ ತೀರಿಕೆ!


     'ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ' ಎಂದು ಓಟು ಕೇಳಲು ಬರುವ ರಾಜಕಾರಣಿಗಳು ಕೇಳುತ್ತಾರೆ. ಸಮಾಜಸೇವೆಗೇ ನನ್ನ ಬಾಳು ಮುಡಿಪು ಎಂದು ಹೇಳಿಕೊಳ್ಳುವವರೂ ಕಾಣಸಿಗುತ್ತಾರೆ. ಅಧಿಕಾರ, ಹಣಗಳಿಕೆ, ಸ್ವಾರ್ಥ, ಸ್ವಂತ ಕುಟುಂಬದ ಹಿತವನ್ನೇ ಪ್ರಧಾನವಾಗಿಸಿಕೊಂಡು ಸಮಾಜಸೇವೆಯ ಸೋಗು ಹಾಕುವವರು  ಸ್ವಮಜಾಸೇವೆಯೇ ಸಮಾಜಸೇವೆ ಎಂದು ಅರ್ಥ ಬರುವಷ್ಟರ ಮಟ್ಟಿಗೆ ಸಮಾಜಸೇವೆ ಎಂಬ ಪದವನ್ನು ಅಪಮೌಲ್ಯಗೊಳಿಸಿಬಿಟ್ಟಿದ್ದಾರೆ. ಸ್ವಾತಂತ್ರ್ಯ ಬಂದಾಗ ಚಿಕ್ಕ ಬಾಲಕರಾಗಿದ್ದವರೂ ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಳ್ಳುತ್ತಾರೆ ಮತ್ತು ಜನರಿಂದ ಗೌರವಿಸಲ್ಪಡುತ್ತಾ ಬೀಗುತ್ತಾರೆ. ಸಾಮಾಜಿಕ ಚಟುವಟಿಕೆಗಳಷ್ಟೇ ಸಮಾಜಸೇವೆ ಎಂದು ತಪ್ಪು ತಿಳಿದುಕೊಂಡಿರುವವರೂ ಇದ್ದಾರೆ. ಇಷ್ಟಕ್ಕೂ ಈ ಸಮಾಜಸೇವೆ ಅಂದರೇನು? ಸಮಾಜಸೇವೆ ಏಕೆ ಮಾಡಬೇಕು? ಇತ್ಯಾದಿ ವಿಷಯಗಳ ಒಳಹೊಕ್ಕರೆ, ಇದರ ಅರ್ಥ ತಿಳಿದುಕೊಂಡರೆ ಜನ ಢೋಂಗಿ ಸಮಾಜ ಸೇವಕರ ಬಗ್ಗೆ ಎಚ್ಚರ ವಹಿಸಿಯಾರು ಮತ್ತು ಆತ್ಮಾವಲೋಕನ ಮಾಡಿಕೊಂಡಾರು.
     ಶರೀರ ಮತ್ತು ಶರೀರದೊಳಗೆ ಜೀವ (ಆತ್ಮ) ಇರುವವರೆಗೆ ಆಹಾರ, ಪಾನೀಯ, ವಸ್ತ್ರ, ವಾಸಕ್ಕೆ ಮನೆ ಇತ್ಯಾದಿಗಳಿಗಾಗಿ ಶ್ರಮ ಪಡಲೇಬೇಕು ಮತ್ತು ಇದಕ್ಕಾಗಿ ಸಮಾಜವನ್ನು ಆಶ್ರಯಿಸಲೇಬೇಕು. ಇವುಗಳನ್ನೆಲ್ಲಾ ಪಡೆಯಲು ಸಮಾಜ ನಮಗೆ ಬೇಕು, ಆದರೆ ಪ್ರತಿಯಾಗಿ ಸಮಾಜಕ್ಕೆ ಏನೂ ಮಾಡುವುದಿಲ್ಲವೆಂದರೆ ಅದು ದ್ರೋಹವೂ, ಪಾಪವೂ ಆಗುತ್ತದೆ. ಸಮಾಜ ದ್ರೋಹಿಯಾದವನು ಆಧ್ಯಾತ್ಮಿಕ ಉನ್ನತಿಗೂ ಅನರ್ಹನೆಂದು ವೇದ ಸಾರುತ್ತದೆ. ಸಮಾಜದಿಂದ ಬೇಕಾದುದನ್ನು ಪಡೆದ ಮೇಲೆ ಸಮಾಜಕ್ಕೂ ಏನಾದರೂ ಕೊಡಲೇಬೇಕಾದುದು ಪ್ರತಿಯೊಬ್ಬನ ಕರ್ತವ್ಯ. ಇಲ್ಲದಿದ್ದರೆ ಸಮಾಜಕ್ಕೆ ಅವನು ಸಾಲಗಾರನೇ ಸರಿ. ಈ ಸಾಲ ತೀರಿಸಲು ಕರ್ಮ ಮಾಡಲೇ ಬೇಕು. 'ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ|' (ಯಜು.೪೦.೨.) (ಈ ಲೋಕದಲ್ಲಿ ಇಂತಹ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷಗಳವರೆಗೆ ಬದುಕಿರಲು ಬಯಸಲೇಬೇಕು.) ಸಮಾಜದ ಸಲುವಾಗಿ ಕರ್ಮ ಮಾಡದವನು ಜಗತ್ತಿಗೆ ಹೊರೆಯಾಗುತ್ತಾನೆ, ಸಮಾಜಕ್ಕೆ ಸಾಲಗಾರನಾಗುತ್ತಾನೆ, ಅನ್ನಶತ್ರುವಾಗುತ್ತಾನೆ. ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಕರ್ಮದ ವ್ಯಾಪ್ತಿ ಹಿರಿದಾದುದು. ಇನ್ನೊಬ್ಬರಿಗೆ ಕೆಡುಕಾಗದಂತೆ ವೈಯಕ್ತಿಕ, ಪಾರಿವಾರಿಕ ಹಿತಸಾಧನೆಯೊಂದಿಗೆ ಎಲ್ಲರ ಹಿತ ಬಯಸುವ ಕರ್ಮಗಳು ಎಲ್ಲರೂ ಮಾಡಲೇಬೇಕಾದುದು. ಕುಟುಂಬದ ಹಿತಕ್ಕಾಗಿ ತನ್ನ ಹಿತ, ಗ್ರಾಮದ ಹಿತಕ್ಕಾಗಿ ಕುಟುಂಬದ ಹಿತ, ರಾಜ್ಯದ ಹಿತಕ್ಕಾಗಿ ಗ್ರಾಮದ ಹಿತ ಮತ್ತು ರಾಷ್ಟ್ರದ ಹಿತಕ್ಕಾಗಿ ಸರ್ವಹಿತವನ್ನು ತ್ಯಜಿಸಬೇಕೆಂದು ಒಂದು ಸುಭಾಷಿತ ಹೇಳುತ್ತದೆ. ಗಮನಿಸಿ, ಇವೆಲ್ಲಾ ಕರ್ತವ್ಯವೇ ಹೊರತು ಸೇವೆಯಲ್ಲ.
     ನಿಜವಾದ ಸಮಾಜಸೇವೆಯೆಂದರೆ ಹಸಿದವರಿಗೆ ಅನ್ನ ಸಿಗುವಂತೆ ಮಾಡುವುದು, ದೀನ ದಲಿತರ ಸೇವೆ ಮಾಡುವುದು. ಎಲ್ಲಿಯವರೆಗೆ ಅಸಂಖ್ಯಾತ ಜನರು ಹಸಿವು ಮತ್ತು ಅಜ್ಞಾನಗಳಿಂದ ಬಳಲುತ್ತಿರುತ್ತಾರೋ ಅಲ್ಲಿಯವರೆಗೆ, ಅಂತಹ ಜನರ ಹಣದಿಂದ ವಿದ್ಯಾವಂತರೆನಿಸಿ ಅವರಿಗೆ ಕನಿಷ್ಠ ಗಮನವನ್ನೂ ಕೊಡದ ಪ್ರತಿಯೊಬ್ಬರೂ ದ್ರೋಹಿಗಳು ಎಂಬುದು ವಿವೇಕಾನಂದರ ನೇರನುಡಿ. ಯಾರ ಹೃದಯಗಳು ಬಡವರಿಗಾಗಿ ಮರುಗುತ್ತದೋ ಅವರು ಮಹಾತ್ಮರು, ಇಲ್ಲವಾದರೆ ದುರಾತ್ಮರು. ಹಸಿದವರನ್ನು ಮುಂದಿಟ್ಟುಕೊಂಡು ಅವರಿಗೆ ಧರ್ಮದ ಬಗ್ಗೆ, ನೀತಿಯ ಬಗ್ಗೆ ಉಪದೇಶ ಮಾಡುವುದು, ಅವರ ಬಡತನ, ಹಸಿವುಗಳನ್ನು ಬಂಡವಾಳವಾಗಿಸಿಕೊಂಡು ಮತಾಂತರ ಮಾಡುವುದು, ಇತ್ಯಾದಿಗಳು ಅವರಿಗೆ ಮಾಡುವ ಅವಮಾನವಲ್ಲದೇ ಮತ್ತೇನೂ ಅಲ್ಲ.
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
     ಜೀವನದ ಪ್ರಾಥಮಿಕ ಅವಶ್ಯಕತೆಗಳು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಕಾರ್ಯಗಳು, ಚಟುವಟಿಕೆಗಳು ಮೊದಲನೆಯ ಸ್ತರದ ಸಮಾಜಸೇವೆಯೆನಿಸಿದರೆ, ಇಂತಹ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವ ಸಾಮಾಜಿಕ ಚಟುವಟಿಕೆಗಳು, ಸುಯೋಗ್ಯ ಶಿಕ್ಷಣ ನೀಡಿಕೆ, ಅಭಿವೃದ್ಧಿ ಕಾರ್ಯಗಳು, ನೈತಿಕ ಮೌಲ್ಯಗಳಿಗೆ ನೀಡುವ ಉತ್ತೇಜನ ಮೊದಲಾದವು ನಂತರದ ಸ್ತರಗಳ ಸಮಾಜ ಸೇವೆ ಎನ್ನಬಹುದು. ಈಗಂತೂ ಸೇವೆಯ ಸೋಗಿನಲ್ಲಿ ಸ್ವಪ್ರತಿಷ್ಠೆಯ ಮೆರೆದಾಟ, ಮತಾಂತರದ ಹಾವಳಿ,  ದೇಶವಿರೋಧಿ ಚಟುವಟಿಕೆಗಳಿಗೆ ಪೋಷಣೆ ಮಾಡುತ್ತಿರುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಾರಣ, ಬಡವರು ಮುಂದೆ ಬರಲು ಅವಕಾಶವಾಗದಿರುವುದು, ಆಲಸಿಕೆಯ ಮನೋಭಾವ, ಉತ್ತಮ ಶಿಕ್ಷಣದ ಕೊರತೆ, ಇತ್ಯಾದಿಗಳೇ ಆಗಿವೆ. ಬಡತನವನ್ನು ದುರುಪಯೋಗಪಡಿಸಿಕೊಳ್ಳುವವರ ಹುನ್ನಾರಗಳನ್ನು ತಡೆಗಟ್ಟುವುದು ಇಂದಿನ ಅಗತ್ಯವಾಗಿದೆ.
     ಸಮಾಜಕ್ಕಾಗಿ ದುಡಿದು ದುಡಿದು ದಣಿದಿದ್ದೇನೆ, ಜನರು ನನ್ನ ಕೆಲಸವನ್ನು ನೆನಪಿನಲ್ಲಿಟ್ಟುಕೊಳ್ಳಲಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಲವತ್ತುಕೊಂಡಿದ್ದ ಸಂದರ್ಭದಲ್ಲಿ ಗ್ರಾಮದ ಹಿರಿಯರೊಬ್ಬರು ಆ ನಾಯಕರ ಆರ್ಥಿಕ ಸ್ಥಿತಿ ಮೊದಲು ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಜ್ಞಾಪಿಸಿದಾಗ ನಾಯಕರಿಗೆ ಇರಸುಮುರುಸಾಗಿತ್ತು. ಸಮಾಜ ಸೇವೆ ಮಾಡುವುದು ಎಲ್ಲರ ಕರ್ತವ್ಯ. ಈ ಕರ್ತವ್ಯ ಮಾಡದಿರುವವರ ಸಂಖ್ಯೆ ಜಾಸ್ತಿ ಇರುವಾಗ ಮಾಡುವ ಕೆಲವೇ ಕೆಲವರು ದೊಡ್ಡವರಲ್ಲವೇ ಎಂಬ ವಾದವೂ ತರವಲ್ಲ. ಮಾಡದಿದ್ದವರು ಕರ್ತವ್ಯ ವಿಮುಖರು ಅಷ್ಟೆ. ಸಮಾಜ ಸೇವೆ ಅನ್ನುವುದು ಪ್ರಚಾರ ಪಡೆಯುವ ಸಾಧನವಾಗಬಾರದು. ದೇವಸ್ಥಾನದ, ಚರ್ಚಿನ, ಮಸೀದಿಯ ಮೆಟ್ಟಲಿನ ಮೇಲೆ ನಿಂತು, ಕೆಳಗೆ ಕುಳಿತಿರುವ ದೀನ ವ್ಯಕ್ತಿಗೆ ಐವತ್ತು ಪೈಸೆ, ಒಂದು ರೂಪಾಯಿ ನಾಣ್ಯ ಹಾಕಿ ತಮ್ಮನ್ನು ತಾವು ಕರುಣಾಮಯಿಗಳು ಎಂದು ಭಾವಿಸಿಕೊಳ್ಳಬೇಕಿಲ್ಲ. ಅಂತಹ ವ್ಯಕ್ತಿ ಇರುವುದರಿಂದಲೇ ಕೊಡುವವನಿಗೆ ದಾನ ಮಾಡಲು ಅವಕಾಶವಾಗಿದೆ. ಹಾಗಾಗಿ ಅಂತಹವರಿಗೆ ಕೃತಜ್ಞರಾಗಿರಬೇಕು, ಔದಾರ್ಯ, ಕರುಣೆ ತೋರುವ ಮೂಲಕ ತಮ್ಮನ್ನು ತಾವೇ ಉನ್ನತ ಸ್ಥಿತಿಗೆ ಏರಲು ಅವಕಾಶವಾದುದಕ್ಕೆ ಧನ್ಯತಾಭಾವ ಹೊಂದಬೇಕು.
     ವ್ಯಕ್ತಿತ್ವ ವಿಕಸನ ಶಿಬಿರಗಳು, ಸಂಸ್ಕಾರ ಶಿಬಿರಗಳು, ವಿವಿಧ ಸಾಮಾಜಿಕ ಚಟುವಟಿಕೆಗಳು  ವ್ಯಕ್ತಿಯನ್ನು ಸಮಾಜದ ಹಿತಕ್ಕಾಗಿ ಕಾರ್ಯ ಮಾಡಲು ಪ್ರೇರಿಸುವಂತಿರಬೇಕು. ಶಿಕ್ಷಣ ಪದ್ಧತಿಯಲ್ಲೂ ಬದಲಾವಣೆ ತಂದು ನೈತಿಕ ಮೌಲ್ಯಗಳು, ಸಾಮಾಜಿಕ ಕರ್ತವ್ಯಗಳ ಅಗತ್ಯ ಮತ್ತು ಮಹತ್ವವನ್ನು ಶಿಕ್ಷಾರ್ಥಿಗಳಿಗೆ ಒತ್ತಿ ಹೇಳುವಂತೆ ಮಾರ್ಪಡಿಸಬೇಕು. ಇಂದಿನ ಹೆಚ್ಚಿನ ಸಾಮಾಜಿಕ ಚಟುವಟಿಕೆಗಳು ವೈಯಕ್ತಿಕ ಸಾಧನೆಗೆ ಪ್ರೇರಿಸುವಂತಿವೆ ಮತ್ತು ಹಣ ಗಳಿಸುವ ಸಾಧನಗಳಾಗಿವೆ. ಉತ್ತಮ ಸಮಾಜಕಾರ್ಯಗಳನ್ನು ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ, ಪ್ರಶಸ್ತಿ, ಹಣ ಕೊಡುವ ಸಂಪ್ರದಾಯ ಒಳ್ಳೆಯದೇ ಆದರೂ, ಇದನ್ನು ಗಮನಿಸಿದಾಗ ಸಮಾಜಕಾರ್ಯ ಮಾಡುವವರ ಕೊರತೆ, ಸಮಾಜಕಾರ್ಯದ ಮಹತ್ವ ಅರಿಯದವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಕಳವಳವಾಗಬೇಕು. ಎಂತಹ ದುರ್ಭರ ಸನ್ನಿವೇಶದಲ್ಲೂ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಜಪಾನೀಯರು ಎಲ್ಲರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕೊಡಲಾಗುತ್ತಿರುವ ಶಿಕ್ಷಣದ ರೀತಿಯಾಗಿದೆ. ಭಾರತದಲ್ಲಿ ಇಂತಹ ಶಿಕ್ಷಣ ಪದ್ಧತಿ ಬರಬೇಕೆಂದರೂ ಅದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ತಡೆಯೊಡ್ಡುವ ಕೆಲಸ ಮಾಡುತ್ತವೆ. ನೈಜ ಸಮಾಜ ಹಿತಚಿಂತಕರು ಬದಲಾವಣೆ ತರಲು ಕಂಕಣಬದ್ಧರಾಗಬೇಕು.
     ಜೀವನದ ಕೊನೆಯಲ್ಲಿ ಗಣನೆಗೆ ಬರುವುದು ನಾವು ಎಷ್ಟು ಪದವಿಗಳನ್ನು ಗಳಿಸಿದೆವು, ಎಷ್ಟು ಪ್ರಶಸ್ತಿಗಳನ್ನು ಪಡೆದೆವು, ಎಷ್ಟು ಹಣ, ಆಸ್ತಿ, ಅಧಿಕಾರ ಸಂಪಾದಿಸಿದೆವು ಎಂಬುದಲ್ಲ. ನಾವು ಎಷ್ಟು ಹಸಿದ ಹೊಟ್ಟೆಗಳನ್ನು ತಣಿಸಿದೆವು, ಎಷ್ಟು ಜನರಿಗೆ ಜೀವನದಲ್ಲಿ ಮುಂದೆ ಬರಲು ಸಹಕರಿಸಿದೆವು ಎಂಬುದಷ್ಟೇ ಆಗಿದೆ. ದೊಡ್ಡ ದೊಡ್ಡ ಸೇವೆಗಳನ್ನು ಮಾಡಲು ಶಕ್ತಿಯಿಲ್ಲದಿರಬಹುದು, ಸಣ್ಣ ಸೇವೆಗಳನ್ನೇ ದೊಡ್ಡ ಪ್ರೀತಿಯಿಂದ ಮಾಡಬಲ್ಲೆವಾದರೆ ಅದೇ ಹೆಚ್ಚಿನದು. ಇತರರ ಸೇವೆಯಲ್ಲಿ ತೊಡಗಿಕೊಂಡಷ್ಟೂ ನಮಗೆ ನಮ್ಮತನದ ಅರಿವಾಗುತ್ತಾ ಹೋಗುತ್ತದೆ. ಸಮಾಜಸೇವೆಯೆಂದರೆ ನಮ್ಮ ಅಸ್ತಿತ್ವಕ್ಕಾಗಿ ನಾವು ಸಮಾಜಕ್ಕೆ ಕೊಡುವ ಬಾಡಿಗೆ. ಬಿಡುವಿರುವ ವೇಳೆಯಲ್ಲಿ ಮಾಡುವ ಕೆಲಸವಲ್ಲ, ಅದೇ ಜೀವನದ ನೈಜ ಕಾರ್ಯ. ದೇವರು ಕೊಟ್ಟಿರುವ ಅವಕಾಶ, ನಮ್ಮ ಸಾಮರ್ಥ್ಯಗಳನ್ನು ಅನುಸರಿಸಿ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿಯೇ ಇತರರಿಗೆ ಸಹಕಾರಿಯಾಗಿ ಬಾಳುವುದೇ ಸಮಾಜಸೇವೆ. ಇಷ್ಟಾದರೂ ನಾವು ಮಾಡಬಹುದಾಗಿದೆ. ಇದು ಇತರರಿಗೂ ಪ್ರೇರಣೆಯಾಗುತ್ತದೆ.
-ಕ.ವೆಂ.ನಾಗರಾಜ್.

ಬುಧವಾರ, ಸೆಪ್ಟೆಂಬರ್ 20, 2017

ಭೂತ ಕಾಡದಿರಲಿ!


     ಒಂದೆರಡು ವರ್ಷಗಳ ಹಿಂದೆ ಬೆಂಗಳೂರಿನ ವಿ.ಆರ್. ಭಟ್ ಎನ್ನುವವರು ವಿವಾದಗಳಿಂದಲೇ ಪ್ರಸಿದ್ಧರಾದ ಪ್ರಭಾ ಬೆಳವಂಗಲರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಟೀಕಿಸಿದ್ದರೆಂದು ಪ್ರಭಾ ಮತ್ತು ಅವರ ಬೆಂಬಲಿಗರು ದೊಡ್ಡ ಹಗರಣವನ್ನಾಗಿಸಿ, ಮುಖ್ಯಮಂತ್ರಿಗಳ ಸಲಹೆಗಾರರೇ ಅವರ ಬೆನ್ನಿಗೆ ನಿಂತು, ಭಟ್ಟರನ್ನು ಗೂಂಡಾ ಕಾಯಿದೆಯನ್ವಯ ಬಂಧಿಸುವಲ್ಲಿ ಅಂತ್ಯವಾಗಿತ್ತು. ಆವೇಶದಲ್ಲಿ ಮಾಡಿದ್ದ ಟೀಕೆಯೊಂದು ಅವರನ್ನು ಜೈಲಿಗೆ ದೂಡಿತ್ತು. ಈಗ ಸ್ವತಃ ಪ್ರಭಾ ಬೆಳವಂಗಲರವರೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಬಗ್ಗೆ ಅಶ್ಲೀಲ ಚಿತ್ರ ಪ್ರಕಟಿಸಿ, ಟೀಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಅವರನ್ನೂ ಪ್ರಕರಣ ದಾಖಲಿಸಿ ಬಂಧಿಸಲು ಜಾಲತಾಣಗಳಲ್ಲಿ ಪ್ರಬಲ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಗಾಜಿನ ಮನೆಯಲ್ಲಿರುವವರು ಇನ್ನೊಬ್ಬರ ಮನೆಯ ಮೇಲೆ ಕಲ್ಲೆಸೆಯಬಾರದೆಂಬ ಅರಿವು ಮರೆವಾಗಿ ಅವರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ವೈಚಾರಿಕ ಅಸಹನೆಗಳು ವೈಚಾರಿಕವಾಗಿ ಸಭ್ಯವಾಗಿ ಚರ್ಚಿಸಲ್ಪಡಬೇಕೇ ಹೊರತು ಕೀಳು ಮಟ್ಟಕ್ಕೆ ಇಳಿಯಬಾರದೆಂಬುದಕ್ಕೆ ಇದು ಎಲ್ಲರಿಗೂ ಪಾಠವಾಗಬೇಕು. ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣರಾಗುತ್ತಿರುವ ಪ್ರಭಾರವರ ಭೂತವೇ ಅವರನ್ನು ವರ್ತಮಾನದಲ್ಲಿ ಕಾಡುತ್ತಿದೆ.
     ಸಾಂದರ್ಭಿಕವಾಗಿ ಇದನ್ನು ಉದಾಹರಿಸಿದ್ದರೂ ನಾನು ಹೇಳಹೊರಟಿರುವುದು ಭೂತದ ಚೇಷ್ಟೆ ಮತ್ತು ಕಾಟಗಳ ಬಗ್ಗೆ. ಹಿಂದೆ ನಡೆದ ಪೇಚಿನ ಪ್ರಸಂಗಗಳು, ಅವಮಾನಿತರಾಗುವ ಪ್ರಸಂಗಗಳು, ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಟ್ಟ ಮತ್ತು ಕಹಿ ಘಟನೆಗಳು ಸಾಮಾನ್ಯವಾಗಿ ಭೂತವಾಗಿ ಕಾಡುತ್ತವೆ. ಅವನಿ(ಳಿ)ಗೆ ಭೂತ ಮೆಟ್ಟಿಕೊಂಡಿದೆ ಎಂಬಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜವಾಗಿ ನೋಡಿದರೆ ಮೆಟ್ಟಿಕೊಂಡಿರುವುದು ಹೊರಗಿನ ಭೂತವಲ್ಲ, ಒಳಗಿನ ಭೂತವೇ ಆಗಿರುತ್ತದೆ. ಒಬ್ಬರೇ ತಮ್ಮಷ್ಟಕ್ಕೆ ತಾವೇ ಗುಣುಗುಣಿಸುತ್ತಾ ಹೋಗುವವರು, ಏನನ್ನೋ ನೆನೆಸಿಕೊಂಡು ತಮ್ಮಷ್ಟಕ್ಕೆ ತಾವೇ ನಗುವವರು, ಅಳುವವರು ಮುಂತಾದವರು ಇಂತಹ ಭೂತಚೇಷ್ಟೆಗೆ ಒಳಗಾದವರೇ!
     ಭೂತ ಎಂದಾಕ್ಷಣ ದೆವ್ವ, ಪ್ರೇತ, ಪಿಶಾಚಿ, ಇತ್ಯಾದಿಗಳ ಕಲ್ಪನೆಯ ರೂಪ ಕಣ್ಣು ಮುಂದೆ ಬರುತ್ತದೆ. ಆದರೆ ವಾಸ್ತವಿಕವಾಗಿ ಭೂತ ಎಂದರೆ ಹಿಂದೆ ನಡೆದದ್ದು ಎಂದು ಅರ್ಥ. ಹಾಗಾದರೆ ಈ ಭೂತ ಕಾಡುವುದು ಅಂದರೆ? ನಾವು ಸಾಮಾನ್ಯವಾಗಿ ವರ್ತಮಾನದಲ್ಲಿರುವುದು ಕಡಿಮೆ. ಒಂದೋ, ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುತ್ತೇವೆ, ಮುಳುಗಿಹೋಗಿರುತ್ತೇವೆ ಅಥವ ಮುಂದೆ ಆಗಬಹುದಾದ ಭವಿಷ್ಯತ್ತಿನ ವಿಷಯಗಳ ಕುರಿತು ಕಲ್ಪನೆ, ಊಹಾಪೋಹಗಳಲ್ಲಿ ಕಳೆದುಹೋಗಿರುತ್ತೇವೆ. ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುವದೇ ಭೂತ ನಮ್ಮನ್ನು ಕಾಡುವುದು ಎಂದು ತಿಳಿಯಬೇಕು. ಕಳೆದುಹೋದುದನ್ನು ಸರಿಪಡಿಸಲಾಗುವುದಿಲ್ಲ. ಕಾಲವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವೇ? ಹೀಗಿರುವಾಗ ಹಿಂದಿನ ಸಂಗತಿಗಳ ಕುರಿತು ತಲೆ ಕೆಡಿಸಿಕೊಳ್ಳುವುದೇ ಭೂತಚೇಷ್ಠೆ. ಹಿಂದಿನ ಸಂಗತಿಗಳಿಂದ ಪಾಠ ಕಲಿಯದೆ ಅದನ್ನು ಕುರಿತೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುವುದೇ ಭೂತದ ಕಾಟ. ವರ್ತಮಾನದಲ್ಲಿ ಹೇಗಿರಬೇಕು ಎಂಬ ಬಗ್ಗೆ ಜಾಗೃತರಾಗಿರಬೇಕೇ ಹೊರತು, ಏನೂ ಮಾಡಲು ಸಾಧ್ಯವಿಲ್ಲದ ಭೂತಕಾಲದ ಬಗ್ಗೆ ಚಿಂತಿಸದೆ, ಬದಲಾಯಿಸಲು ಆಗದ ಅದನ್ನು ಹೇಗಿದೆಯೋ ಹಾಗಿ ಒಪ್ಪಿಕೊಂಡು ಸುಮ್ಮನಿರಬೇಕು. ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುವುದು ತರವಲ್ಲ. ಏಕೆಂದರೆ ಅದು ನಿರ್ಭರವಾಗಿರುವುದು ವರ್ತಮಾನದ ನಮ್ಮ ನಡೆನುಡಿಗಳಿಂದ ಮಾತ್ರ.
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
     ಜೀವನದಲ್ಲಿ ಮಾಡುವ ತಪ್ಪುಗಳು ಭೂತವಾಗಿ ಕಾಡುತ್ತವೆ. ತಪ್ಪುಗಳು ಜೀವನದಲ್ಲಿ ಸರಿಯಾಗಿ ಹೇಗೆ ಮುನ್ನಡೆಯಬೇಕೆಂಬುದನ್ನು ಕಲಿಸುವ ಗುರುಗಳು. ಈಜು ಕಲಿಯಬೇಕಾದರೆ ಮೊದಲು ತಪ್ಪು ಮಾಡುತ್ತೇವೆ. ಆ ತಪ್ಪು ಮಾಡದಿರಲು ಹೋಗಿ ಬೇರೆ ತಪ್ಪುಗಳನ್ನು ಮಾಡುತ್ತೇವೆ. ಕೊನೆಗೆ ಎಲ್ಲಾ ತಪ್ಪುಗಳನ್ನು ಮಾಡಿ, ಹಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಮುಳುಗದಿರುವಂತೆ ನೋಡಿಕೊಂಡು ಈಜು ಕಲಿತುಬಿಡುತ್ತೇವೆ. ಈ ಜೀವನವೂ ಈಜುವುದನ್ನು ಕಲಿಯುವ ಹಾಗೇನೇ! ಹಲವಾರು ತಪ್ಪುಗಳನ್ನು ಮಾಡುತ್ತೇವೆ, ಪಾಠ ಕಲಿಯುತ್ತೇವೆ. ಹೇಗೆ ಬದುಕಬೇಕೆಂಬುದಕ್ಕೆ ಬೇರೆ ದಾರಿಯಿಲ್ಲ. ತಪ್ಪುಗಳನ್ನು ಮಾಡುತ್ತಾ, ಪೆಟ್ಟು ತಿನ್ನುತ್ತಾ ಬದುಕುವುದನ್ನು ಕಲಿಯಬೇಕಾಗುತ್ತದೆ. ಪರಿಪೂರ್ಣವಾಗಿರುವುದಕ್ಕಿಂತ ಹೆಚ್ಚು ಮೌಲ್ಯಯುತವಾದುದನ್ನು ತಪ್ಪುಗಳು ಕಲಿಸುತ್ತವೆ.
     ಭೂತಗಳು ಕಾಡದಿರಲು ಏನು ಮಾಡಬೇಕು? ಹಿಂದಿನದನ್ನು ಮರುಮಾತಾಡದೆ ಒಪ್ಪಿಕೊಂಡುಬಿಡಬೇಕು. ಹಿಂದಿನ ನಮ್ಮ ಮತ್ತು ಇತರರ ತಪ್ಪುಗಳನ್ನು ಮರೆತು ಕ್ಷಮಿಸಿ, ಆ ತಪ್ಪುಗಳಿಂದ ಪಾಠಗಳನ್ನು ಕಲಿತು, ಅವನ್ನು ನಮ್ಮ ಮುಂದಿನ ಯಶಸ್ಸಿಗೆ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು. ನಮಗೆ ಎರಡು ಅವಕಾಶಗಳಿರುತ್ತವೆ: ತಪ್ಪುಗಳಿಂದ ಪಾಠ ಕಲಿಯಬೇಕು ಅಥವ ಸಮಸ್ಯೆಗಳಿಂದ ಓಡಿಹೋಗಬೇಕು. ಭೂತದ ಕಾಟ ಬೇಡವೆಂದರೆ ಮೊದಲನೆಯದನ್ನು ಆರಿಸಿಕೊಳ್ಳಬೇಕು. ಇಂದು ನಾಳೆಗೆ ಭೂತವಾಗುವುದರಿಂದ ಇಂದು ಸರಿಯಾಗಿರುವಂತೆ ಎಚ್ಚರದಿಂದಿರಬೇಕು. ಬುದ್ಧಿವಂತರು ಇತರರ ತಪ್ಪುಗಳಿಂದ ಕಲಿತುಕೊಳ್ಳುತ್ತಾರಾದರೆ, ದಡ್ಡರು ತಮ್ಮದೇ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪುಗಳು ನಾವು ಏನನ್ನು ಕಲಿಯಬೇಕಿದೆ ಎಂಬುದನ್ನು ತೋರಿಸುತ್ತವೆ.      ಈ ಜೀವನವೇ ಅಂತಹದು, ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಕಳ್ಳನನ್ನು ಕಳ್ಳ ಎಂದರೆ ಅವನಿಗೆ ಏನೂ ಅನ್ನಿಸುವುದಿಲ್ಲ. ಸುಳ್ಳನನ್ನು, ಲಂಪಟನನ್ನು ಸುಳ್ಳ, ಲಂಪಟ ಎಂದರೆ ಬೇಸರವಾಗುವುದಿಲ್ಲ. ಕಳ್ಳ, ಸುಳ್ಳ, ಲಂಪಟರಲ್ಲದವರು ಸುಖಾಸುಮ್ಮನೆ ಇಂತಹ ಅಪವಾದಗಳಿಗೆ ಒಳಗಾದರೆ ವರ್ಣನಾತೀತ ನೋವನ್ನು ಅನುಭವಿಸುತ್ತಾರೆ. ನಿಧಾನವಾಗಿ ಯೋಚಿಸಿದರೆ, ಇದೂ ಒಂದು ರೀತಿಯಲ್ಲಿ ಭೂತದ ಕಾಟವೇ ಆಗಿರುತ್ತದೆ. ಹಿಂದಿನ ಯಾವುದೋ ಘಟನೆಗಳು, ಸಂಗತಿಗಳು, ವೈಯಕ್ತಿಕ ದ್ವೇಷಗಳು ಈ ರೀತಿಯ ಸುಳ್ಳು ಆಪಾದನೆಗಳಿಗೆ ಪ್ರೇರಣೆಯಾಗಿರುತ್ತವೆ. ತಮಗೆ ಆಗದವರ ಪ್ರತಿಯೊಂದು ನಡೆಯೂ ತಪ್ಪಾಗಿ ಗೋಚರಿಸುವುದರ ಫಲ ಇಂತಹ ಆಪಾದನೆಗಳು. ಆಗುವ ನೋವು, ನಿರಾಶೆ, ಹತಾಶೆಗಳನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಂಡು ಹಗುರವಾಗಬಹುದು. ಹೀಗೆ ಮಾಡುವುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಾರದು. ಅವರಿಂದ ಅನುಕಂಪ ಸಿಗಬಹುದು. ಪರಿಹಾರ ಸಿಗದು ಎಂಬಂತಹ ಸಂಗತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ನೋವಿನ ತೀವ್ರತೆ ಕಡಿಮೆಯಾಗಬೇಕೆಂದರೆ ಮನಸ್ಸಿಗೆ ತಿಳುವಳಿಕೆ ಹೇಳಬೇಕಾಗುತ್ತದೆ: ನೋಡು, ಅವರು ಏನು ಹೇಳಿದರು, ಏನು ಮಾಡಿದರು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಮರೆತುಬಿಡು. ನಿನ್ನನ್ನು ಅಲಕ್ಷ್ಯಿಸಿದ, ಅವಮಾನಿಸಿದ ಸಂಗತಿಗಳನ್ನು ಮನಸ್ಸಿನಿಂದ ತೆಗೆದುಹಾಕಿಬಿಡು. ನೀನು ಸರಿಯಾಗಿರುವೆ ಎಂದು ನಿನಗೆ ಗೊತ್ತಿದ್ದರೆ ಅಷ್ಟು ಸಾಕು. ನಿನ್ನ ಕುರಿತ ಅವರ ಭಾವನೆಗಳು ಬದಲಾಗುವುದೇ ಇಲ್ಲವೆನಿಸಿದರೆ ಅವರನ್ನು ಮರೆತುಬಿಡು. ನೋಯುತ್ತಿರುವುದು ನಿನ್ನ ಹೃದಯ. ನೀನೇ ಸಂತಯಿಸಿಕೋ. ಅಳುತ್ತಿರುವುದು ನಿನ್ನ ಕಣ್ಣು. ನೀನೇ ಒರೆಸಿಕೋ.. ಜೀವ ನಿನ್ನದು, ಜೀವನ ನಿನ್ನದು. ನಿನ್ನ ಆತ್ಮ ಒಪ್ಪುವಂತೆ ಜೀವಿಸು. ತಪ್ಪಿದ್ದರೆ ಸರಿಪಡಿಸಿಕೋ. ತಪ್ಪಿಲ್ಲದಿದ್ದರೆ ಚಿಂತಿಸಬೇಡ. ಎದ್ದು ನಿಲ್ಲು. ಮುಂದೆ ನಡೆ, ಎಲ್ಲರಿಗೂ ನೀನು ಏನು ಎಂಬುದನ್ನು ತೋರಿಸು. ಆತ್ಮಾವಲೋಕನ ಮಾಡಿಕೊಂಡು, ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಸರಿಯಾಗಿ ನಡೆದರೆ ಯಾವ ಭೂತಕಾಟವೂ ನಮ್ಮನ್ನು ಕಾಡಿಸದು. ಭವಿಷ್ಯತ್ತೂ ಸುಂದರವಾಗಿರುವುದು. ದುರ್ಬಲತೆಗಳ ಅರಿವಿರುವವರು ಬಲಶಾಲಿಯಾಗುವರು; ಲೋಪಗಳನ್ನು ಒಪ್ಪಿಕೊಳ್ಳುವವರು ಒಳ್ಳೆಯವರೆನಿಸುವರು; ತಪ್ಪುಗಳನ್ನು ತಿದ್ದಿಕೊಂಡು ನಡೆವವರು ಬುದ್ಧಿವಂತರೆನಿಸುವರು. 
-ಕ.ವೆಂ.ನಾಗರಾಜ್.

ಗುರುವಾರ, ಸೆಪ್ಟೆಂಬರ್ 14, 2017

ಮಾಡಿದ್ದುಣ್ಣೋ ಮಹರಾಯ!


     ಈ ವೇದಮಂತ್ರ ನನಗೆ ಬಹಳ ಪ್ರಿಯವಾದುದಾಗಿದೆ: 'ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಮ್ ನಿಹಿತಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||' - ಯಾವುದೇ ಕಲ್ಮಶವಿಲ್ಲದ, ನ್ಯೂನತೆಯಿಲ್ಲದ ಪಾತ್ರೆ ನಮ್ಮಲ್ಲಿ ಅಂತರ್ನಿಹಿತವಾಗಿದೆ. ಈ ಪಾತ್ರೆಯಲ್ಲಿ ಬೇಯಿಸಲಾಗುವ ಪದಾರ್ಥ ಬೇಯಿಸಿದವನನ್ನು ತಪ್ಪದೆ ಸೇರಿಕೊಳ್ಳುತ್ತದೆ. ಯಾರಾದರೂ ಮಿತ್ರರು, ಹಿತೈಷಿಗಳು ಇದನ್ನು ತಪ್ಪಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ ಎಂದು ಸಾರುವ ಈ ಮಂತ್ರ ಕರ್ಮ ಸಿದ್ಧಾಂತವನ್ನು ಎತ್ತಿ ಹಿಡಿದಿದೆ. ನಾವು ಮಾಡುವ ಕರ್ಮಗಳ ಫಲವನ್ನು ನಾವೇ ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳಿಲ್ಲ. ನಮ್ಮ ಹಿತೈಷಿಗಳು, ಸ್ನೇಹಿತರು, ಗುರುಗಳು, ಬಂಧುಗಳು, ಮಧ್ಯವರ್ತಿಗಳು, ಪುರೋಹಿತರು ಇತ್ಯಾದಿ ಯಾರೂ ಸಹ ನಮ್ಮನ್ನು ನಮ್ಮ ಕರ್ಮಗಳ ಫಲವನ್ನು ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅವರುಗಳ ಬೆಂಬಲವಿದೆಯೆಂದು ನಾವು ಆಡಿದ್ದೇ ಆಟ ಎಂದು ಮೆರೆಯಲು ಆಗುವುದಿಲ್ಲ. ಗುರುಗಳ ಪಾದಪೂಜೆ ಮಾಡಿದರಾಗಲೀ, ದೇವರ ಮೂರ್ತಿಗೆ ಚಿನ್ನದ ಕಿರೀಟವನ್ನು ಮಾಡಿಸಿಕೊಟ್ಟರಾಗಲೀ ಬೆನ್ನಿಗಂಟಿದ ಕರ್ಮ ಬೆನ್ನು ಬಿಡುವುದೇ ಇಲ್ಲ. ಅದನ್ನು ಅನುಭವಿಸಿ ಕಳೆದುಕೊಳ್ಳಲು ಮಾತ್ರ ಸಾಧ್ಯ, ತಪ್ಪಿಸಿಕೊಳ್ಳಲು ಅಡ್ಡದಾರಿಗಳು ಇಲ್ಲವೇ ಇಲ್ಲ.  ಸ್ವತಃ ದೇವರೂ ಸಹ ನಮ್ಮ ಹಣೆಯ ಬರಹವನ್ನು ಬದಲಾಯಿಸಲಾರ ಎಂದರೆ ಕಠಿಣವಾಧ ಮಾತಾದರೂ ಸತ್ಯ. ನಮ್ಮ ಹಣೆಬರಹವನ್ನು ತಿದ್ದಬಲ್ಲವರು, ಬದಲಾಯಿಸಬಲ್ಲವರು ಯಾರಾದರೂ ಇದ್ದರೆ ಅದು ನಾವು ಮಾತ್ರ, ಅನ್ಯರಲ್ಲವೇ ಅಲ್ಲ, ದೇವರೂ ಅಲ್ಲ. ಸರಳವಾಗಿ ಹೇಳಬೇಕೆಂದರೆ, ಮಾಡಿದ್ದುಣ್ಣೋ ಮಹರಾಯ!    
     ನಿಮಗೆ ಈ ವಿಚಾರ, ಸಿದ್ಧಾಂತ ಇಷ್ಟವಾಗಿದೆ. ಅದಕ್ಕೇ ಹೀಗೆ ಹೇಳುತ್ತೀರಿ. ಇದು ಸತ್ಯವಲ್ಲ. ನೀವು ಹೇಳುವುದೇ ನಿಜವಾಗಿದ್ದಲ್ಲಿ ಕೆಟ್ಟವರು ಏಕೆ ವಿಜೃಂಭಿಸುತ್ತಿದ್ದಾರೆ? ಒಳ್ಳೆಯವರಿಗೆ ಏಕೆ ಅಷ್ಟೊಂದು ಕಷ್ಟ ಬರುತ್ತದೆ? ಎಂದು ಕೇಳಬಹುದು. ನಿಜ, ನನಗೆ ಈ ವಿಚಾರ ಪ್ರಿಯವಾಗಿದೆ ಮತ್ತು ಇದು ಹೀಗೆಯೇ ಇರಬೇಕೆಂಬುದು ನನ್ನ ಅಪೇಕ್ಷೆ ಕೂಡಾ ಆಗಿದೆ. ಪ್ರಿಯವಾಗಲು ಕಾರಣ, ಇದು ಸತ್ಯಕ್ಕೆ ಹತ್ತಿರವಾಗಿದೆ ಮತ್ತು ತರ್ಕಕ್ಕೆ ನಿಲುಕುವಂತಹುದಾಗಿದೆ. ಈ ಪ್ರಶ್ನೆಗೆ ಆಧ್ಯಾತ್ಮ, ವೈಚಾರಿಕತೆ ಮತ್ತು ತರ್ಕಗಳನ್ನು ಬಳಸಿ ಉತ್ತರ ಕಂಡುಕೊಳ್ಳಬೇಕು. ಒಳ್ಳೆಯದು, ಕೆಟ್ಟದ್ದು, ಸುಖ, ದುಃಖ ಇತ್ಯಾದಿಗಳು ಮಾನಸಿಕ ಸ್ಥಿತಿಗಳು. ಆಯಾ ವ್ಯಕ್ತಿಗಳನ್ನು, ಅವರ ಮಾನಸಿಕ ಸ್ಥಿತಿಗಳನ್ನು ಅವಲಂಬಿಸಿ ಈ ಸ್ಥಿತಿಗಳು ಅನುಭವಕ್ಕೆ ಬರುತ್ತವೆ. ಉದಾಹರಣೆಗೆ, ದೊಡ್ಡ ಶ್ರೀಮಂತ, ಅಧಿಕಾರದ ಉನ್ನತ ಹುದ್ದೆ ಹೊಂದಿರುವವ, ಹೆಜ್ಜೆ ಹೆಜ್ಜೆಗೆ ಆಳು-ಕಾಳುಗಳನ್ನು ಹೊಂದಿರುವ ವ್ಯಕ್ತಿಯೊಬ್ಬ ಹವಾನಿಯಂತ್ರಿತ ಕೊಠಡಿಯಲ್ಲಿ ಸುಪ್ಪತ್ತಿಗೆಯಲ್ಲಿ ಮಲಗಿ ನಿದ್ರೆ ಮಾತ್ರೆ ತೆಗೆದುಕೊಂಡರೂ ನಿದ್ರೆ ಬರದೆ ಅಶಾಂತಿಯಿಂದ ಹೊರಳಾಡುತಿದ್ದರೆ, ಜೋಪಡಿಯಲ್ಲಿ ಮಲಗಿದ ಕಷ್ಟಪಟ್ಟು ದುಡಿದು ಬಂದ ಬಡವನೊಬ್ಬ ಮೈಮೇಲೆ ಎಚ್ಚರವಿರದಂತೆ ನಿದ್ರೆಯ ಸುಖ ಅನುಭವಿಸುತ್ತಾನೆ.
     ಕರ್ಮ ಸಿದ್ಧಾಂತವನ್ನು ಒರೆಗೆ ಹಚ್ಚಬೇಕೆಂದರೆ ಇದರ ಜೊತೆಗೆ ದೇವರು ಮತ್ತು ನಮ್ಮ ಅಸ್ತಿತ್ವಗಳನ್ನೂ ವಿಚಾರಣೆಯ ಕಟಕಟೆಗೆ ತರಬೇಕಾಗುತ್ತದೆ, ಜೊತೆಗೆ ಪುನರ್ಜನ್ಮ ಸಿದ್ಧಾಂತವನ್ನೂ ಒಪ್ಪಬೇಕಾಗುತ್ತದೆ. ವಿಚಾರ ಮಾಡೋಣ, ತರ್ಕಿಸೋಣ, ಸರಿ ಅನ್ನಿಸಿದರೆ ಒಪ್ಪೋಣ. ಪುನರ್ಜನ್ಮವಿಲ್ಲವೆಂದಾದರೆ, ಇರುವುದು ಈಗಿರುವ ಒಂದೇ ಜನ್ಮ ಅನ್ನುವುದಾದರೆ ಕೆಲವರು ಶ್ರೀಮಂತರ ಮನೆಯಲ್ಲಿ, ಕೆಲವರು ಬಡವರ ಮನೆಯಲ್ಲಿ, ಕೆಲವರು ಆರೋಗ್ಯವಂತ, ಧೃಢಕಾಯರಾಗಿ. ಕೆಲವರು ಅಂಗವಿಕಲರಾಗಿ, ರೋಗಿಷ್ಠರಾಗಿ ಜನಿಸುವುದೇಕೆ? ಎಲ್ಲರೂ ಮನುಷ್ಯರಾಗಿಯೇ ಹುಟ್ಟುವುದಿಲ್ಲವೇಕೆ? ಹದ್ದು, ಗೂಬೆ, ಬೆಕ್ಕು, ಇಲಿ, ಇತ್ಯಾದಿ ಸುಮಾರು ೮೪ ಲಕ್ಷ ವಿವಿಧ ಜೀವಸಂಕುಲಗಳು ಏಕೆ ಹುಟ್ಟಬೇಕು? ಮಾನವನಿಗೆ ಮಾತ್ರ ವಿವೇಚನಾ ಶಕ್ತಿ ಏಕಿರಬೇಕು? ತಮ್ಮ ಯಾವುದೇ ತಪ್ಪಿಲ್ಲದೆ ಹೀಗೆ ಹುಟ್ಟುವುದಾದರೆ, ಪುನರ್ಜನ್ಮವಿಲ್ಲವೆಂದಾದರೆ ದೇವರನ್ನು ಪಕ್ಷಪಾತಿ ಎನ್ನಲೇಬೇಕಾಗುತ್ತದೆ. ಸಂಯೋಗ ಫಲವಾಗಿ ಇಂತಹ ಜನನವಾಗುತ್ತದೆ ಎಂದರೆ ಒಂದೇ ತಂದೆ-ತಾಯಿಗೆ ಹುಟ್ಟಿದ ಹಲವು ಮಕ್ಕಳು ಒಂದೇ ರೀತಿ ಇರದೆ ಗುಣ-ಸ್ವಭಾವಗಳಲ್ಲಿ ವ್ಯತ್ಯಾಸವಿರುವುದೇಕೆ? ಜೀವಿಯು ತನ್ನ ಜೀವಿತ ಕಾಲದಲ್ಲಿ ಮಾಡುವ ಪಾಪ/ಪುಣ್ಯ ಕಾರ್ಯಗಳಿಗನುಸಾರವಾಗಿ ಮುಂದಿನ ಜನ್ಮದಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಅಥವ ಹೀನ-ದೀನ ಸ್ಥಿತಿಯಲ್ಲಿ ಜನಿಸುತ್ತಾನೆ ಎಂದರೆ ಒಪ್ಪಬಹುದು. ಒಪ್ಪದಿದ್ದರೆ, ಅಂತಹ ಸ್ಥಿತಿಯಲ್ಲಿ ಹುಟ್ಟಲು ದೇವರೊಬ್ಬನೇ ಕಾರಣ ಎನ್ನುವುದಾದರೆ ಜೀವಿಯು ಮುಂದೆ ತಾನು ಮಾಡುವ ಒಳ್ಳೆಯ/ಕೆಟ್ಟ ಕಾರ್ಯಗಳಿಗೆ ದೇವರೇ ಹೊಣೆಗಾರ ಎನ್ನಬೇಕಾಗುತ್ತದೆಯೇ ಹೊರತು ಜೀವಿಯನ್ನು ಹೊಣೆ ಮಾಡಲಾಗದು. ಅರ್ಥಾತ್ ಒಬ್ಬ ಕೊಲೆ ಮಾಡಿದರೂ ಅದಕ್ಕೆ ಅಂತಹ ಬುದ್ಧಿ ಕೊಟ್ಟ ದೇವರನ್ನೇ ಹೊಣೆ ಮಾಡಬೇಕಾಗುತ್ತದೆ. ಇದು ತರ್ಕಕ್ಕಾಗಲೀ, ವೈಜ್ಞಾನಿಕವಾಗಲೀ, ಧಾರ್ಮಿಕವಾಗಲೀ ಅಥವ ಇನ್ನಾವುದೇ ವಾದಕ್ಕಾಗಲೀ ಸಮಂಜಸವಾಗಿ ಕಾಣುವುದಿಲ್ಲ. ಅದೂ ಅಲ್ಲದೆ, ಧರ್ಮ, ಮೋಕ್ಷ, ಸನ್ನಡತೆ, ದುರ್ನಡತೆ, ಇತ್ಯಾದಿಗಳಿಗೆ ಅರ್ಥವೇ ಇರುವುದಿಲ್ಲ. ಆಸ್ತಿಕ ಮನಸ್ಸುಗಳು ಇದನ್ನು ಒಪ್ಪುವುದಿಲ್ಲ, ನಾಸ್ತಿಕರಲ್ಲಿ ಈ ವೈಪರೀತ್ಯಗಳಿಗೆ ಉತ್ತರವಿರುವುದಿಲ್ಲ.
     ಪುನರ್ಜನ್ಮವಿದೆ ಅನ್ನುವುದಾದರೆ ಹಿಂದಿನ ಜನ್ಮಗಳ ನೆನಪು ಏಕೆ ಇರುವುದಿಲ್ಲ? ಒಂದು ವೇಳೆ ನೆನಪು ಇದ್ದಿದ್ದರೆ ಏನಾಗಬಹುದಿತ್ತು? ಹಿಂದಿನ ಜನ್ಮದಲ್ಲಿ ಹೆಂಡತಿಯಾಗಿದ್ದವಳು ನಂತರದಲ್ಲಿ ಅಕ್ಕನೋ, ತಂಗಿಯೋ ಅಥವ ಮಗಳೋ ಆಗಿ ಹುಟ್ಟಿದ್ದರೆ ಮತ್ತು ಅದರ ಅರಿವು ಜೀವಿಗೆ ಇದ್ದರೆ ಆಗುವ ಮನೋವೇದನೆಗಳು/ಭಾವಗಳು ತರ್ಕಕ್ಕೆ ನಿಲುಕದು. ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದು, ಈಗ ಬಡವನ ಮನೆಯಲ್ಲಿ ಜನಿಸಿದ್ದರೆ ಮತ್ತು ಅದರ ಅರಿವಿದ್ದರೆ ಏನಾಗುತ್ತಿತ್ತು? ತಾನು ಹಿಂದಿದ್ದ ಮನೆಗೆ ಹೋಗಿ ಅವರಿಂದ ಪಾಲು ಪಡೆಯಲು ಹೋದರೆ ಏನಾಗಬಹುದು? ಕೇವಲ ಉದಾಹರಣೆಗಾಗಿ ಇವನ್ನು ಹೇಳಿದ್ದಷ್ಟೇ. ಇಂತಹ ಅನೂಹ್ಯ ಪ್ರಸಂಗಗಳು ಎದುರಾಗಿ ಬದುಕು ದುರ್ಭರವೆನಿಸುವ ಸಾಧ್ಯತೆಗಳೇ ಜಾಸ್ತಿ. ಆದ್ದರಿಂದ ಹಿಂದಿನ ಜನ್ಮದ ನೆನಪು ಇಲ್ಲದಿರುವುದೇ ಒಂದು ರೀತಿಯಲ್ಲಿ ದೇವರ ಕರುಣೆಯೆನ್ನಬೇಕು. ಹಿಂದಿನ ಜನ್ಮದ ಸಂಸ್ಕಾರ/ಪ್ರಭಾವ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪು ಇರುವ ಹಲವಾರು ಪ್ರಕರಣಗಳು ಕಾಣಸಿಗುತ್ತವೆ.
     ಸೀಮಿತ ವ್ಯಾಪ್ತಿಯಲ್ಲಿ ಇಂತಹ ವಿಸ್ತಾರದ ವಿಷಯವನ್ನು ಮಂಡಿಸುವುದು, ಅರ್ಥೈಸಿಕೊಳ್ಳುವುದು ಕಷ್ಟ. ಆಸಕ್ತರು ಆಧ್ಯಾತ್ಮಿಕವಾಗಿ ಉನ್ನತ ಸ್ತರದಲ್ಲಿರುವ ವ್ಯಕ್ತಿಗಳ ವಿಚಾರಗಳು, ಉಪದೇಶಗಳನ್ನು ಅಧ್ಯಯನ ಮಾಡಿ ವೈಚಾರಿಕ ಹಸಿವನ್ನು ತಣಿಸಿಕೊಳ್ಳಲು ಪ್ರಯತ್ನಿಸಬಹುದು. ಸನಾತನಿಗಳು ವಿವೇಚನಾ ಶಕ್ತಿ ಹೊಂದಿರುವ ಮನುಷ್ಯ ಕರ್ಮಜೀವಿಯೆಂದೂ, ವಿವೇಚನಾ ಶಕ್ತಿಯಿರದ ಇತರ ಪ್ರಾಣಿ-ಪಕ್ಷಿ ಸಂಕುಲಗಳು ಭೋಗಜೀವಿಗಳೆಂದೂ ತಿಳಿಯುತ್ತಾರೆ. ತಮ್ಮ ಕರ್ಮಫಲಗಳಿಗನುಸಾರವಾಗಿ ಇಂತಹ ಜನ್ಮಗಳು ಬರುತ್ತಿರುತ್ತವೆ, ಇದು ಒಂದು ರೀತಿಯಲ್ಲಿ ಪಾಪಶೇಷವನ್ನು ಕಳೆದುಕೊಳ್ಳುವ, ಪ್ರಾಯಶ್ಚಿತ್ತವನ್ನು ಅನುಭವಿಸುವ ಅವಧಿಯೆಂದು ತಿಳಿದವರು ಹೇಳುತ್ತಾರೆ. ವಿವೇಚನಾಶಕ್ತಿಯಿರುವ ಮನುಷ್ಯನ ಕರ್ಮಗಳು ಆತನ ಹಣೆಯಬರಹವನ್ನು ನಿರ್ಧರಿಸುತ್ತವೆ. ಮಾನವ ಜನ್ಮ ಅಷ್ಟು ಸುಲಭವಾಗಿ ಸಿಗುವಂತಹುದಲ್ಲ. ಅದನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳದೆ ಉನ್ನತ ಸ್ಥಿತಿಗೆ ಏರಲು ಪ್ರಯತ್ನಿಸಬೇಕಾದುದು ವಿವೇಕದ ನಡೆಯಾಗುತ್ತದೆ.
ಪೂರ್ವಕರ್ಮಗಳ ಫಲವ ಅನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ ||
     ಆದಿ ಶಂಕರರು ತಮ್ಮ ಸಾಧನಾ ಪಂಚಕದಲ್ಲಿ 'ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ ಪ್ರಾರಬ್ಧಂ ತ್ವಿಹ ಭುಜ್ಯತಾಂ||' ಎಂದಿದ್ದಾರೆ. ಪೂರ್ವಾರ್ಜಿತ ಕರ್ಮಗಳ ಫಲವನ್ನು ಅನುಭವಿಸಿ ಕಳೆದುಕೊಳ್ಳಬೇಕು ಮತ್ತು ಬರುವ ಕಷ್ಟ-ನಷ್ಟಗಳನ್ನು ಹೆದರದೆ ಎದುರಿಸಿ ಮುನ್ನಡೆಯಬೇಕು ಎಂಬ ಅರ್ಥ ಹೊರಡಿಸುವ ಈ ಸಂದೇಶದಲ್ಲಿ ಒಳ್ಳೆಯ ಹಾದಿಯಲ್ಲಿ ನಡೆಯಬೇಕೆಂಬ ಸೂಕ್ಷ್ಮವಿದೆ. ಶೃಂಗೇರಿಯ ಮಹಾಸ್ವಾಮಿಯವರು ಒಂದು ಉಪನ್ಯಾಸದಲ್ಲಿ ಹೇಳಿದ ಈ ಮಾತುಗಳು ಮನನೀಯ: 'ವಿಶುದ್ಧವಾದ ಕೆಲಸಗಳನ್ನು ಅಂದರೆ ಪಾಪಕೃತ್ಯಗಳನ್ನು ಮಾಡಿದರೆ ವಿಶೇಷವಾದ ದುಃಖವನ್ನು ಅನುಭವಿಸಬೇಕಾಗಿ ಬರುತ್ತದೆ. ನಮಗೆ ಯಾರಿಗೂ ಬೇಡದ ಪದಾರ್ಥ ಅಂದರೆ ದುಃಖ. ಎಲ್ಲರಿಗೂ ಬೇಕಾದ ಪದಾರ್ಥ ಅಂದರೆ ಸುಖ. ಸುಖ ಬೇಕು, ದುಃಖ ಬೇಡ ಇದು ಪ್ರತಿಯೊಬ್ಬರ ಬಯಕೆ. ಇವೆರಡಕ್ಕೂ ಸಾಧನವೇನು? ಸುಖ ಬೇಕು ಅಂದರೆ ಧರ್ಮವನ್ನು ಮಾಡಬೇಕು. ದುಃಖ ಬೇಡವೆಂದರೆ ಅಧರ್ಮವನ್ನು ಮಾಡಬಾರದು. ಧರ್ಮ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ಅಧರ್ಮ ಬಿಡುವುದಕ್ಕೂ ಮನಸ್ಸು ಬರುವುದಿಲ್ಲ. ಆದರೆ ಸುಖ ಬೇಕು, ದುಃಖ ಮಾತ್ರ ಬೇಡ. ಇದು ಹೇಗೆ ಸಾಧ್ಯ?' ಯೋಚಿಸಬೇಕಾದ ವಿಚಾರವಲ್ಲವೇ? ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಮಾಡಿದರೆ ಕೆಟ್ಟದ್ದಾಗುತ್ತದೆ ಎಂಬುದು ಸರಳ ನಿಯಮ. ಈ ಸರಳ ನಿಯಮವನ್ನು ಒಪ್ಪಿ ಬಾಳುವುದಾದರೆ ನಾವೂ ನೆಮ್ಮದಿಯಾಗಿರುತ್ತೇವೆ, ಸಮಾಜವೂ ನೆಮ್ಮದಿಯಾಗಿರುತ್ತದೆ. ವೈಚಾರಿಕತೆಯ ಉತ್ತುಂಗದಲ್ಲಿ ಈ ಸತ್ಯ ಗೋಚರವಾಗುತ್ತದೆ. ಯಾರು ಒಪ್ಪಲಿ, ಬಿಡಲಿ, ಇಷ್ಟವಿರಲಿ, ಇಲ್ಲದಿರಲಿ, ಈ ನಿಯಮ ಜಾರಿಯಲ್ಲಿರುತ್ತದೆ ಮತ್ತು ಪ್ರಪಂಚ ಹೀಗೆಯೇ ಸಾಗುತ್ತಿರುತ್ತದೆ.
-ಕ.ವೆಂ.ನಾಗರಾಜ್.


ಬುಧವಾರ, ಸೆಪ್ಟೆಂಬರ್ 13, 2017

ಸಾವು ಮತ್ತು ಪ್ರೀತಿ


ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||
     ವಿಷಯಕ್ಕೆ ಪೂರಕವಾಗಿ ಮನ ಕಲಕಿದ ಒಂದು ಘಟನೆ ಹಂಚಿಕೊಳ್ಳುವೆ. ಐದು ವರ್ಷದ ಮಗು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರವಾಗಿತ್ತು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:
ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ.
ಹೌದಾ ಪುಟ್ಟಾ, ಪಾಪ.
ಮಮ್ಮಿ, ಎಲ್ರೂ ಸಾಯ್ತಾರಾ?
ಹೌದು ಪುಟ್ಟಿ, ವಯಸ್ಸಾದ ಮೇಲೆ ಎಲ್ರೂ ಸಾಯ್ತಾರೆ.
ನನ್ ತಾತಾನೂ ಸಾಯ್ತಾರಾ?
    ಅಮ್ಮನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಮಗು ಕೇಳಿದಾಗ ತಕ್ಷಣ ಏನು ಉತ್ತರಿಸಿಯಾಳು? ಸಾವರಿಸಿಕೊಂಡು ಹೇಳಿದಳು: ಇನ್ನೂ ತುಂಬಾ ವರ್ಷ ಪುಟ್ಟೂ. ಹಂಡ್ರಡ್ ವರ್ಷ ಆದ ಮೇಲೆ ಎಲ್ರೂ ಸಾಯ್ತಾರೆ. ಈ ವಿಷಯ ಎಲ್ಲಾ ಮಾತಾಡಬಾರದು. ಹೋಗ್ಲಿ ಬಿಡು, ಸ್ಕೂಲಲ್ಲಿ ಇವತ್ತು ಏನು ಹೇಳಿಕೊಟ್ರು?
    ಮಗು ಪಟ್ಟು ಬಿಡದೆ ಕೇಳಿತು: ಮಮ್ಮಿ, ನಾನೂ ಸಾಯ್ತೀನಾ?
     ಮಗುವಿನ ಬಾಯಿಯ ಮೇಲೆ ಕೈಮುಚ್ಚಿ ತಾಯಿ ಅವಳನ್ನು ಅಪ್ಪಿಕೊಂಡು ಹೇಳಿದಳು:
ನಾನು ಆಗಲೇ ಹೇಳಲಿಲ್ಲವಾ? ಹೀಗೆಲ್ಲಾ ಮಾತಾಡಬೇಡ. ನಿನಗಿನ್ನೂ ಐದೇ ವರ್ಷ. ಒಳ್ಳೆಯವರು ಸಾಯುವುದಿಲ್ಲ. ಆ ವಿಷಯ ಇನ್ನು ಸಾಕು. ನಡಿ, ಕೈಕಾಲು ಮುಖ ತೊಳೆಸುತ್ತೀನಿ. ಊಟ ಮಾಡುವಂತೆ.
ಮಗುವಿಗೆ ಸಮಾಧಾನವಾಗಿರಲಿಲ್ಲ. ಪ್ರಶ್ನೆ ಕೇಳಿತು: ಹಾಗಾದ್ರೆ ಸತ್ತೋರೆಲ್ಲಾ ಬ್ಯಾಡ್ ಬಾಯ್ಸಾ?
     ತಾಯಿ ಏನು ಉತ್ತರಿಸಿಯಾಳು? ಸುಮ್ಮನೆ ಮಗುವನ್ನು ಬಚ್ಚಲಮನೆಗೆ ಕರೆದುಕೊಂಡು ಹೋಗಿ ಮುಖ ತೊಳೆಸಿದಳು. ಬೇರೆ ಬೇರೆ ವಿಷಯ ಮಾತನಾಡಿ ಗಮನ ಬೇರೆಡೆಗೆ ಸೆಳೆಯಲು ಅಮ್ಮನ ಪ್ರಯತ್ನ ಸಾಗಿತ್ತು. ಮಗುವಿನ ಮುಖವನ್ನು ಟವೆಲಿನಿಂದ ಒರೆಸುತ್ತಿದ್ದಾಗ ಮಗು ಗಂಭೀರವಾಗಿ ಆತಂಕದಿಂದ ಹೇಳಿತು:
ಮಮ್ಮಿ, ಪ್ಲೀಸ್, ಐ ಡೋಂಟ್ ವಾಂಟ್ ಟು ಡೈ.
     ಮಗುವಿನಲ್ಲಿ ಅಮ್ಮ ಏನಾದರೂ ಮಾಡಲೆಂಬ ನಿರೀಕ್ಷೆಯಿತ್ತು, ಏನಾದರೂ ಮಾಡಬಹುದೆಂಬ ಭರವಸೆಗಾಗಿ ಕಾದಿತ್ತು. ಮಗಳ ಮಾತು ಕೇಳಿ ಅವಾಕ್ಕಾದ ಅಮ್ಮನ ಕಣ್ಣಂಚಿನಲ್ಲಿ ನೀರು ತುಳುಕಿತು. ಮಗುವನ್ನು ಅಪ್ಪಿ ಬಿಗಿಯಾಗಿ ಹಿಡಿದುಕೊಂಡಳು. ಇಲ್ಲಾ ಕಂದಾ, ನೀನು ಸಾಯುವುದಿಲ್ಲ. ನಿನ್ನನ್ನು ನಾನು ಸಾಯಲು ಬಿಡುವುದಿಲ್ಲ. ನೀನು ಸಾಯುವುದೇ ಇಲ್ಲ. ಏಕೆಂದರೆ ನೀನು ಒಳ್ಳೆಯವಳು. ನೀನು ತುಂಬಾ, ತುಂಬಾ, ತುಂಬಾ ಗುಡ್ ಗರ್ಲ್.      ಹೀಗೆ ಹೇಳುತ್ತಾ ಮಗುವನ್ನು ಮುದ್ದಿಸಿದಾಗ ಮಗುವಿಗೆ ಸಮಾಧಾನವಾಗಿತ್ತು, ಸಂತೋಷವಾಗಿತ್ತು. ತಾಯಿಯ ಪ್ರೀತಿ ಮಗಳ ಸಾವಿನ ಭಯವನ್ನು ದೂರ ಮಾಡಿತ್ತು. ನಂತರದಲ್ಲಿ ಮಗು ಸ್ಕೂಲಿನ ಅಂದಿನ ಆಟ ಪಾಠದ ಬಗ್ಗೆ ಕಣಿ ಹೇಳಲು ಶುರು ಮಾಡಿತು.
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಪ್ರೀತಿ ಸಾವಿನ ಭಯವನ್ನೂ ಹಿಂದಿಕ್ಕಬಲ್ಲದು. ಪ್ರೀತಿ ಇರುವಲ್ಲಿ ಸಾವಿನ ಭಯ ಸುಳಿಯದು. ಇಂದು ವಯಸ್ಸಾದ ಹಿರಿಯ ಜೀವಗಳನ್ನು ಮಾತನಾಡಿಸಿದರೆ ಈ ಮಾತಿನ ಅಂತರಾರ್ಥ ತಿಳಿಯುತ್ತದೆ. ವಯಸ್ಸಾಗಿ ಮೂಲೆಗೆ ಸರಿಯುವ ಮುನ್ನ ಅವರು ಮಕ್ಕಳಿಗಾಗಿ ಏನೆಲ್ಲಾ ಮಾಡಿದ್ದರೂ, ಜೀವ ಸವೆಸಿದ್ದರೂ ಕೊನೆಗಾಲದಲ್ಲಿ ಮಕ್ಕಳು ಅವರನ್ನು ಕಡೆಗಣಿಸಿದರೆ ಅವರಿಗೆ ಆಗುವ ನೋವು ವರ್ಣನಾತೀತ. ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಲಿ ಎಂಬ ಅವರ ಹಂಬಲಿಕೆ ಮರಳುಗಾಡಿನಲ್ಲಿ ಬಾಯಿ ಒಣಗಿ ನೀರು ಅರಸುವವರ ರೀತಿಯಲ್ಲಿರುತ್ತದೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಸಾವು ನಮಗೂ ಬರುತ್ತದೆ, ನಾವೂ ಸಾಯುತ್ತೇವೆ ಎಂಬ ಅರಿವು ಜಾಗೃತವಾಗಿದ್ದರೆ ಅಲ್ಲಿ ಪ್ರೀತಿಯ ಸೆಲೆ ನೆಲೆ ಕಂಡುಕೊಳ್ಳುತ್ತದೆ. ಆಗ ನಾವು ನಿಜವಾಗಿ ಬದುಕುತ್ತೇವೆ. ಸಾವು ಅಂಜಿಕೆ ತರುವ ಸಂಗತಿಯಾಗಬಾರದು. ಸಾವು ಬದುಕುವುದನ್ನು ಕಲಿಸುವ ಗುರುವಾಗಬೇಕು. ನಾವು ಸದ್ಯಕ್ಕೆ ಸಾಯವುದಿಲ ಎಂಬ ಭ್ರಮೆಯಿಂದ ಮುಸುಕಿಹೋಗಿರುವ ನಾವು ಬದುಕನ್ನು ಬದುಕಬೇಕಾದ ರೀತಿಯಲ್ಲಿ ಬದುಕುವುದಿಲ್ಲ ಎಂಬುದು ಕಟು ಸತ್ಯವಾಗಿದೆ. ಅದೇ ಒಂದು ವೇಳೆ ಸದ್ಯದಲ್ಲಿ ನಾವು ಸಾಯಲಿದ್ದೇವೆ ಎಂಬುದು ತಿಳಿದರೆ ಆಗ ನಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳೋಣ. ಅಗ ನಮ್ಮ ನಡವಳಿಕೆ ಹೇಗಿರುತ್ತದೆಯೋ ಹಾಗೆ ಈಗಿನಿಂದಲೇ ಇರಲು ಪ್ರಯತ್ನಿಸಬಾರದೇಕೆ? ಸಾವು ಯಾವಾಗ ಬರುತ್ತದೋ ಯಾರಿಗೆ ಗೊತ್ತು? ನಾವು ಸಾವನ್ನು, ಅರ್ಥಾತ್ ಬದುಕನ್ನು, ಪ್ರೀತಿಯ ಆಧಾರದಲ್ಲಿ ಬರಮಾಡಿಕೊಂಡರೆ ನಮಗೆ ಅಂಜಿಕೆಯಾಗಲೀ, ಅಳುಕಾಗಲೀ ಇರಲು ಅವಕಾಶವೇ ಇರುವುದಿಲ್ಲ. ನೂರು ಕಾಲ ಬಾಳೋಣ, ನಗುನಗುತ್ತಾ, ನಗಿಸುತ್ತಾ ಬಾಳೋಣ, ನಗುನಗುತ್ತಾ ಹೋಗೋಣ.
ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು |
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
-ಕ.ವೆಂ. ನಾಗರಾಜ್.