ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಮಾರ್ಚ್ 17, 2010

ಮೂಢ ಉವಾಚ - 5
               
                             ಬಾಳು
ಬಾರದದು ಜನವು ಧನವು ಕಾಯದು 
ಕರೆ ಬಂದಾಗ ಅಡೆತಡೆಯು ನಡೆಯದು |
ಇರುವ ಮೂರು ದಿನ ಜನಕೆ ಬೇಕಾಗಿ 
ಜಗಕೆ ಬೆಳಕಾಗಿ ಬಾಳೆಲೋ ಮೂಢ ||


                   ತನ್ನತನ
ಸ್ವಾಭಿಮಾನಿಯ ಜಗವು ಗುರುತಿಪುದು 
ಹಸಿವಾದರೂ ಹುಲಿಯು ಹುಲ್ಲು ತಿನ್ನದು |
ಕೊಂಡಾಡಿದರೂ ಶಿರ ಚೆಂಡಾಡಿದರೂ 
ತನ್ನತನವ ಉಳಿಸಿಕೊಳ್ಳೆಲೋ ಮೂಢ ||


                    ನಡೆ ನುಡಿ
ಸಲ್ಲದ ನಡೆಯು ತೋರಿಕೆಯ ಜಪತಪವು 
ಪರರ ಮೆಚ್ಚಿಸಲು ಡಂಭದಾಚರಣೆಯು |
ಹಿತಕಾಯದು ಮರುಳೆ ಮತಿ ನೀಡದು 
ಕಪಟ ಫಲಕಾಗಿ ಬಳಲದಿರು ಮೂಢ ||


                    ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ 
ಕಥೆ ಕವನ ಸಾಹಿತ್ಯ ಬೇಡ ಬೇಡ |
ಬಳಲಿದ ಉದರವನು ಕಾಡಬೇಡ 
ಮುದದಿ ಆದರಿಸಿ ಮೋದಪಡು ಮೂಢ ||
-ಕ.ವೆಂ.ನಾಗರಾಜ್.

ಮಂಗಳವಾರ, ಮಾರ್ಚ್ 16, 2010

ಮೂಢ ಉವಾಚ - 4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ

***************
-ಕವಿನಾಗರಾಜ್.

ಭಾನುವಾರ, ಮಾರ್ಚ್ 14, 2010

ಮೂಢ ಉವಾಚ - 3


ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ


ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ


ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ


ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು \
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ

ಶುಕ್ರವಾರ, ಮಾರ್ಚ್ 12, 2010

ಮೂಢ ಉವಾಚ - 2


                       ಕೊರತೆ
ಗುಣವಿರದ ಹಣವಂತ ವಿನಯವಿಲ್ಲದ ವಿದ್ಯೆ |
ಗುರುವಿರದ ಗುರುಕುಲ ಒಡೆಯನಿಲ್ಲದ ಮನೆಯು ||
ಇದ್ದರೇನು ಇಲ್ಲದಿರೇನು ತಳವಿರದ ಮಡಕೆಯು |
ಲೋಕ ಕೊರತೆಯ ಸಂತೆ ಚಿಂತೆಯಾ ಕಂತೆ ಮೂಢ ||
                       ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು |
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು ||
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು |
ಇಂಥವರ ಸಂಗದಿಂ ದೂರವಿರು ಮೂಢ ||
                       ನಾನತ್ವ
ತಾವೆ  ಮೇಲೆಂಬರು ಇತರರನು ಹಳಿಯುವರು |
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು ||
ಅರಿಯರವರು ಇತರರಿಗೆ ಬಯಸುವ ಕೇಡದು |
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||
                        ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ |
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ ||
ಬಯಕೆ ಜೀವನವು ಬಯಸುವುದು ತಪ್ಪಲ್ಲ |
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

ಗುರುವಾರ, ಮಾರ್ಚ್ 11, 2010

ಮೂಢ ಉವಾಚ - 1
                                ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ !
ಏಕಮುಖ ಬಹುಮುಖ ಸುಮುಖ ಕುಮುಖ !!
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ !
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||


                  ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ |
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ ||
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ |
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||


                  ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು |
ಸೇವೆಯನು ಗೈಯುವರು ನಂಬಿಕೆಯ ನಟಿಸುವರು ||
ನೀನೆ ಗತಿ ನೀನೆ ಮತಿ ಪರದೈವವೆನ್ನುವರು |
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||


                 ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು|
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು ||
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು |
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.

ಬುಧವಾರ, ಮಾರ್ಚ್ 10, 2010

ದೇವರು ನನಗೆ ಹೇಳಿದ ಸುಪ್ರಭಾತ
ದೇವರು ನನಗೆ ಹೇಳಿದ ಸುಪ್ರಭಾತ


ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !
ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !
ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !
ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !
ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !
ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !
ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !
-ಕ.ವೆಂ.ನಾಗರಾಜ್.

ಮಂಗಳವಾರ, ಮಾರ್ಚ್ 9, 2010

ಪ್ರೀತಿಗೆ ಸಾಟಿಯುಂಟೇ?


 ಪ್ರೀತಿಗೆ  ವಿವರಣೆ ಏಕೆ ?

ಮೂಢನ ಕಥೆಗಳು - 2: ಪಾಪಶೇಷ

ಪಾಪಶೇಷ

     ದೇವಸ್ಥಾನದ ಅರ್ಚಕನಾಗಿದ್ದ ಮೂಢ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ. ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದ ಮಂಕ ದೇವಸ್ಥಾನದ ಒಳಗೆ ಬಂದು ದೇವರಿಗೆ ನಮಸ್ಕಾರ ಮಾಡಿದ. ಆಳೆತ್ತರದ ದೇವರ ವಿಗ್ರಹದ ಹಿಂದೆ ಶುಚಿ ಕಾರ್ಯದಲ್ಲಿ ತೊಡಗಿದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ಯಾರೂ ಇಲ್ಲವೆಂದುಕೊಂಡು ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ಪ್ರಾರ್ಥಿಸಿದ:
      "ಓ ದೇವರೇ, ನನಗೆ ಜೀವನವೇ ಬೇಸರವಾಗಿದೆ. ಯಾವುದೇ ವಿಷಯಕ್ಕೆ, ಲೋಪಕ್ಕೆ ತಪ್ಪಿರಲಿ, ಇಲ್ಲದಿರಲಿ, ನನ್ನ ಹೆಂಡತಿ ನನ್ನನ್ನೇ ದೋಷಗಾರನನ್ನಾಗಿ ಮಾಡುತ್ತಾಳೆ. ಮಕ್ಕಳ ಎದುರಿಗೆ, ಅವರಿವರ ಎದುರಿಗೆ ನನ್ನ ಬಗ್ಗೆ ಚುಚ್ಚಿ ಮಾತಾಡುತ್ತಾಳೆ, ಪರೋಕ್ಷವಾಗಿ ಹಂಗಿಸುತ್ತಾಳೆ. ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಅವಳಿಗೆ ನೀನೇ ಒಳ್ಳೆಯ ಬುದ್ಧಿ ಕೊಡಬೇಕು, ದೇವರೇ".
     ಮೂಢನಿಗೆ ನಗು ಬಂತು. ವಿಗ್ರಹದ ಹಿಂದಿನಂದಲೇ 'ವತ್ಸಾ' ಎಂದ. ಗಾಬರಿಯಿಂದ ಕಣ್ಣು ಬಿಟ್ಟು ನೋಡಿದ ಮಂಕನಿಗೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಕೈಮುಗಿದು ಬಾಯಿಬಿಟ್ಟುಕೊಂಡು ನೋಡುತ್ತಾ ನಿಂತ. ಅಶರೀರ ವಾಣಿ ಮುಂದುವರೆಯಿತು.
     "ಇದಕ್ಕೆ ನಿನ್ನ ಪೂರ್ವಜನ್ಮದ ಪಾಪಶೇಷವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ನಿನ್ನ ನಿನ್ನ ಪೂರ್ವ ಕರ್ಮ ಕಳೆಯುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ".
      ಕಣ್ಣು ಕಣ್ಣು ಬಿಟ್ಟು ಬಾಯಿ ಬಿಟ್ಟುಕೊಂಡು ನಿಂತಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ಮನೆಗೆ ಹೋದೊಡನೆ ಪತ್ನಿ ಶುರು ಮಾಡಿದಳು . . "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಬುದ್ಧಿಗೆ....". ಮಂಕ ಮಾತನಾಡದೆ ಮತ್ತೆ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವೇ ದಿನಗಳಲ್ಲಿ ಗಂಡ ತಾನು ಏನೇ ಅಂದರೂ ಸುಮ್ಮನಿರುವುದನ್ನು ಗಮನಿಸಿದ ಪತ್ನಿಗೆ ಕಸಿವಿಸಿಯಾಗತೊಡಗಿತು. ಗಂಡ ತನ್ನೊಡನೆ ಜಗಳಮಾಡಲಿ, ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ತೆಗೆದರೂ ಆತ ಸುಮ್ಮನಿರುವುದನ್ನು ಕಂಡ ಪತ್ನಿಗೆ ಮುಜುಗುರವಾಯಿತು. 'ಇಂತಹ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ' ಎಂದು ಮರುಗಿದಳು. 'ದೇವರು' ಅಭಯ ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು.

ಭಾನುವಾರ, ಮಾರ್ಚ್ 7, 2010

ಮೂಢನ ಕಥೆಗಳು - 1


                                                                          ಜಗಳ
     ಸಮಯವಿದ್ದುದರಿಂದ ಮೂಢ ತನ್ನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಆತನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೋ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆದಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆಂದಿದ್ದಾಗ ಅವನನ್ನು ನೋಡಿದ ಗೆಳೆಯ 'ಏಯ್, ಬಾರೋ' ಎಂದು ನಗುತ್ತಾ ಆಹ್ವಾನಿಸಿದ. 'ಊರಗಲ ಬಾಯಿ ಮಾಡಿಕೊಂಡು ಮಾತಾಡಿಸೋದು ನೋಡು'ಎಂದು ಮೂದಲಿಸಿದ ಪತ್ನಿ ಮೂಢನಿಗೆ 'ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತನಾಡುತ್ತಾರೆ. ನನ್ನ ಹತ್ತಿರ ಮುಖ ಗಂಟಿಕ್ಕಿಕೊಂಡು ಮಾತಾಡುತ್ತಾರೆ' ಎಂದು ದೂರಿದಳು. ಮೂಢ ಸುಮ್ಮನಿರಲಾರದೆ 'ಊರಿನವರು ನಗುತ್ತಾ ಮಾತಾಡಿಸಿದಾಗ ಇವನು ಸಿಟ್ಟು ಮಾಡಿಕೊಂಡು ಮಾತಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ' ಎಂದ. ಮಂಕನ ಪತ್ನಿ 'ಅದಕ್ಕೇ ನಿಮ್ಮನ್ನು ಎಲ್ಲರೂ ಮೂಢ ಅನ್ನುವುದು' ಎಂದು ಹೇಳಿ ಒಳಗೆ ಹೋದರೂ ಅವಳ ಒಳಮನಸ್ಸು 'ಅದೂ ನಿಜ' ಎಂದು ಹೇಳುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತಾಡಿದವು. ತಿಂಡಿಯ ರುಚಿ ಹೆಚ್ಚಾಯಿತು.
- ಕ.ವೆಂ.ನಾಗರಾಜ್.

ಪ್ರೀತಿಯ ಅಂತ್ಯ

    
                                                                   ಚಿತ್ರಕೃಪೆ: ಅಂತರ್ಜಾಲ

     ಒಂದು ಸುಂದರವಾದ ದ್ವೀಪವಿತ್ತು. ಅಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಬಾಳುತ್ತಿದ್ದವು. ಒಂದು ದಿನ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿ ಉಂಟಾಯಿತು. ಎಲ್ಲಾ ಭಾವನೆಗಳೂ ಜೀವಭಯದಿಂದ ತತ್ತರಿಸಿದವು. ಜೀವ ಉಳಿಸಿಕೊಳ್ಳಲು ಪರದಾಡಿದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಎಲ್ಲಾ ಭಾವನೆಗಳೂ ಜೀವ ಉಳಿದರೆ ಸಾಕೆಂದುಗಡಿಬಿಡಿಯಲ್ಲಿ ದೋಣಿ ಎರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿ ಇಳಿದು ಬಂದು ನೋಡಿದರೆ ದುರಭಿಮಾನ ಮುಖ ಊದಿಸಿಕೊಂಡು ಒಂದುಕಡೆ ಕುಳಿತಿತ್ತು. ಅದನ್ನು ದೋಣಿ ಹತ್ತಲು ಪ್ರೀತಿ ಒತ್ತಾಯಿಸಿದರೂ ಅದು ಹತ್ತಲಿಲ್ಲ. ಪರಿಪರಿಯಾದ ಓಲೈಕೆಗೂ ಅದು ಜಗ್ಗಲಿಲ್ಲ. ಪ್ರವಾಹ ಏರುತ್ತಲೇ ಇತ್ತು. ಉಳಿದ ಭಾವನೆಗಳು ದುರಭಿಮಾನವನ್ನು ಅಲ್ಲೇ ಬಿಟ್ಟು ದೋಣಿ ಹತ್ತಿ ಜೀವ ಉಳಿಸಿಕೊಳ್ಳಲು ಪ್ರೀತಿಯನ್ನು ಕೇಳಿಕೊಂಡವು. ಪ್ರೀತಿ ದುರಭಿಮಾನವನ್ನು ಪ್ರೀತಿಯಿಂದ ದೋಣಿ ಹತ್ತಲು ಕೇಳಿಕೊಳ್ಳುತ್ತಲೇ ಇತ್ತು. ಪ್ರವಾಹ ಹೆಚ್ಚಾಗಿ ದ್ವೀಪ ಮುಳುಗಿ ದುರಭಿಮಾನದೊಂದಿಗೆ ಪ್ರೀತಿಯೂ ಸತ್ತುಹೋಯಿತು.

ಶನಿವಾರ, ಮಾರ್ಚ್ 6, 2010

ಕವಿನುಡಿ

ಅತ್ಮೀಯರೇ,
ಇದೋ ನಿಮಗೆ ಪ್ರಥಮ ನಮನ. ನಿತ್ಯವೂ ಒಂದಿಷ್ಟು ಬರೆದುಹಂಚಿಕೊಳ್ಳಲಿರುವೆ ನನ್ನ ಮನದ ಮಾತುಗಳ. ಬನ್ನಿ, ಇಣುಕಿ ನೋಡಿ,