ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮಾರ್ಚ್ 9, 2010

ಮೂಢನ ಕಥೆಗಳು - 2: ಪಾಪಶೇಷ

ಪಾಪಶೇಷ

     ದೇವಸ್ಥಾನದ ಅರ್ಚಕನಾಗಿದ್ದ ಮೂಢ ಬೆಳಿಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ. ದೇವಸ್ಥಾನದ ಮಾರ್ಗವಾಗಿ ಹೋಗುತ್ತಿದ್ದ ಮಂಕ ದೇವಸ್ಥಾನದ ಒಳಗೆ ಬಂದು ದೇವರಿಗೆ ನಮಸ್ಕಾರ ಮಾಡಿದ. ಆಳೆತ್ತರದ ದೇವರ ವಿಗ್ರಹದ ಹಿಂದೆ ಶುಚಿ ಕಾರ್ಯದಲ್ಲಿ ತೊಡಗಿದ್ದ ಮೂಢನನ್ನು ಮಂಕ ಗಮನಿಸಲಿಲ್ಲ. ಯಾರೂ ಇಲ್ಲವೆಂದುಕೊಂಡು ಮಂಕ ಕಣ್ಣು ಮುಚ್ಚಿ ಕೈಮುಗಿದು ಗಟ್ಟಿಯಾಗಿ ಪ್ರಾರ್ಥಿಸಿದ:
      "ಓ ದೇವರೇ, ನನಗೆ ಜೀವನವೇ ಬೇಸರವಾಗಿದೆ. ಯಾವುದೇ ವಿಷಯಕ್ಕೆ, ಲೋಪಕ್ಕೆ ತಪ್ಪಿರಲಿ, ಇಲ್ಲದಿರಲಿ, ನನ್ನ ಹೆಂಡತಿ ನನ್ನನ್ನೇ ದೋಷಗಾರನನ್ನಾಗಿ ಮಾಡುತ್ತಾಳೆ. ಮಕ್ಕಳ ಎದುರಿಗೆ, ಅವರಿವರ ಎದುರಿಗೆ ನನ್ನ ಬಗ್ಗೆ ಚುಚ್ಚಿ ಮಾತಾಡುತ್ತಾಳೆ, ಪರೋಕ್ಷವಾಗಿ ಹಂಗಿಸುತ್ತಾಳೆ. ಏನಾದರೂ ಹೇಳಹೋದರೆ ರಂಪ ರಾಮಾಯಣ ಮಾಡುತ್ತಾಳೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಅವಳಿಗೆ ನೀನೇ ಒಳ್ಳೆಯ ಬುದ್ಧಿ ಕೊಡಬೇಕು, ದೇವರೇ".
     ಮೂಢನಿಗೆ ನಗು ಬಂತು. ವಿಗ್ರಹದ ಹಿಂದಿನಂದಲೇ 'ವತ್ಸಾ' ಎಂದ. ಗಾಬರಿಯಿಂದ ಕಣ್ಣು ಬಿಟ್ಟು ನೋಡಿದ ಮಂಕನಿಗೆ ಯಾರೂ ಕಾಣಲಿಲ್ಲ. ದೇವರೇ ಮಾತನಾಡಿದನೇ ಎಂದುಕೊಂಡು ಕೈಮುಗಿದು ಬಾಯಿಬಿಟ್ಟುಕೊಂಡು ನೋಡುತ್ತಾ ನಿಂತ. ಅಶರೀರ ವಾಣಿ ಮುಂದುವರೆಯಿತು.
     "ಇದಕ್ಕೆ ನಿನ್ನ ಪೂರ್ವಜನ್ಮದ ಪಾಪಶೇಷವೇ ಕಾರಣ. ನೀನು ತಿರುಗಿ ಮಾತನಾಡುತ್ತಲೇ ಇದ್ದರೆ ನಿನ್ನ ನಿನ್ನ ಪೂರ್ವ ಕರ್ಮ ಕಳೆಯುವುದಿಲ್ಲ. ಹಿಂದಿನ ಜನ್ಮದ ದೋಷ ಹೋಗುವವರೆಗೆ ಸುಮ್ಮನಿದ್ದರೆ ನಿನಗೆ ಒಳ್ಳೆಯದಾಗುತ್ತದೆ. ಚಿಂತಿಸಬೇಡ".
      ಕಣ್ಣು ಕಣ್ಣು ಬಿಟ್ಟು ಬಾಯಿ ಬಿಟ್ಟುಕೊಂಡು ನಿಂತಿದ್ದ ಮಂಕ ಮತ್ತೊಮ್ಮೆ ದೇವರಿಗೆ ಅಡ್ಡಬಿದ್ದ. ಮನೆಗೆ ಹೋದೊಡನೆ ಪತ್ನಿ ಶುರು ಮಾಡಿದಳು . . "ಹಾಲು ತರಲು ಹೋದವರು ಬರಿಕೈಲಿ ಬಂದಿದೀರಲ್ರೀ. ಏನು ಹೇಳೋದು ನಿಮ್ಮ ಬುದ್ಧಿಗೆ....". ಮಂಕ ಮಾತನಾಡದೆ ಮತ್ತೆ ಹೋಗಿ ಹಾಲು ತಂದ. ಹೆಂಡತಿ ಏನೇ ಅಂದರೂ ಸುಮ್ಮನಿರುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವೇ ದಿನಗಳಲ್ಲಿ ಗಂಡ ತಾನು ಏನೇ ಅಂದರೂ ಸುಮ್ಮನಿರುವುದನ್ನು ಗಮನಿಸಿದ ಪತ್ನಿಗೆ ಕಸಿವಿಸಿಯಾಗತೊಡಗಿತು. ಗಂಡ ತನ್ನೊಡನೆ ಜಗಳಮಾಡಲಿ, ತನ್ನನ್ನು ಬಯ್ಯಲಿ ಎಂದು ಕಾಲು ಕೆರೆದು ಜಗಳ ತೆಗೆದರೂ ಆತ ಸುಮ್ಮನಿರುವುದನ್ನು ಕಂಡ ಪತ್ನಿಗೆ ಮುಜುಗುರವಾಯಿತು. 'ಇಂತಹ ಒಳ್ಳೆಯ ಗಂಡನಿಗೆ ಅನ್ನುತ್ತಿದ್ದೆನಲ್ಲಾ' ಎಂದು ಮರುಗಿದಳು. 'ದೇವರು' ಅಭಯ ಕೊಟ್ಟಿದ್ದಂತೆ ಮಂಕನಿಗೆ ಮುಂದೆ ಒಳ್ಳೆಯ ದಿನಗಳು ಬಂದವು.

5 ಕಾಮೆಂಟ್‌ಗಳು:

 1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 2. Rajeshwari
  29MAY2010 5:55
  "ಶಾಂತಿ" ಮಂತ್ರಕ್ಕೆ ಜಗ್ಗದವರಿಲ್ಲ.
  ಲೇಖನ ಹಾಸ್ಯ ಮಯವಾಗಿದೆ.

  Ksraghavendranavada
  29MAY2010 6:04
  ನನ್ನ೦ತಹ ಸ೦ಸಾರಿಗಳಿಗೆ ಒ೦ದು ಒಳ್ಳೆಯ ಪಾಠ ಕವಿನಾಗರಾಜರೇ.
  ಸ೦ಸಾರದಲ್ಲಿ ಸುಮ್ಮನಿರುವುದರಿ೦ದ ಸಾಕಷ್ಟನ್ನು ಸಾಧಿಸಬಹುದು!
  ನಮಸ್ಕಾರಗಳು.

  ಬೆಳ್ಳಾಲ ಗೋಪೀನಾಥ ರಾವ್
  29MAY2010 7:57
  ಸುಮ್ಮನೇ ಇದ್ದೂ ಸುಮಾರು ಸಾಧಿಸಬಹುದು!!
  ಚೆನ್ನಾಗಿದೇರಿ!!

  Bhaashapriya CS
  31MAY2010 9:34
  ಜಗಳ + ಜಗಳ = Sumಸಾರ.
  'ಮಾತು ಮನೆ ಕೆಡಸ್ತು ತೂತು ವಲೆಕೆಡಸ್ತು' ಗಾದೆ ನೆನಪಿಗೆಬರೊತ್ತೆ.

  Pavithra Prashanth
  31MAY2010 2:11
  ಚೆನ್ನಾಗಿದೆ ಸರ್........ಅದಕ್ಕೇ ಇರಬೇಕು ...ನನ್ ಅಮ್ಮ ಯಾವತ್ತು ......"ಮಾತು ಬೆಳ್ಳಿ ಮೌನ ಬ೦ಗಾರ"ಅನ್ನುವುದು...... :)

  ಪ್ರತ್ಯುತ್ತರಅಳಿಸಿ
 3. ಹಿಂದೂ ಓದಿದ್ದೆ, ಇಂದೂ ಮತ್ತೂ ಓದಿದೆ .ಮೂರು ವರ್ಷಕಳೆದರೂ ನನಗೆ ಬುದ್ಧಿ ಬರಲಿಲ್ಲವಲ್ಲಾ! ಓದಿ ಮರೆತುಬಿಡುವ ನನ್ನ ಬುದ್ಧಿಗೆ ಏನು ಹೇಳಲಿ? ತಂದೆ!!

  ಪ್ರತ್ಯುತ್ತರಅಳಿಸಿ