ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ನವೆಂಬರ್ 30, 2011

ಛತ್ರಪತಿ ಶಿವಾಜಿಯ ತಂದೆಯ ಸಮಾಧಿಗೆ ಸ್ಥಳ ಒದಗಿಸಿದವರು ಕೆಳದಿಯರಸರು


     ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು ಹೋದಿಗ್ಗೆರೆಯಲ್ಲೇ ಸಮಾಧಿ ಮಾಡಲಾಯಿತು. ಆಗ ಹೋದಿಗ್ಗೆರೆ ಕೆಳದಿಯ ರಾಜ್ಯದ ಸೀಮೆಯಲ್ಲೇ ಬರುತ್ತಿದ್ದು, ಶಹಾಜಿಯನ್ನು ಆ ಗ್ರಾಮದಲ್ಲೇ ಸಮಾಧಿ ಮಾಡಲು ಅವಕಾಶ ಕೊಟ್ಟದ್ದು ಕೆಳದಿಯ ಅರಸರೇ. ಈ ಸಮಾಧಿಯನ್ನು ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಶಿವಾಜಿಯ ಅನುಯಾಯಿಗಳಾಗಿ ಈಗ ಬೆಳಗಾವಿ ಮುಂದಿಟ್ಟುಕೊಂಡು ಶಾಂತಿ ಕದಡಲು ಪ್ರಯತ್ನಿಸುತ್ತಿರುವವರು ವಾಸ್ತವವಾಗಿ ಕರ್ನಾಟಕಕ್ಕೆ ಕೃತಜ್ಞರಾಗಿರಬೇಕಲ್ಲವೇ?
********************
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 29, 2011

ಛತ್ರಪತಿ ಶಿವಾಜಿಯ ಮಗ ರಾಜಾರಾಮನನ್ನು ರಕ್ಷಿಸಿದ ಧೀರವನಿತೆ ಕೆಳದಿಯ ರಾಣಿ ಚೆನ್ನಮ್ಮ

ಭೂಮಹಿತ ಯವನರೊಳ್ ಸಂ
ಗ್ರಾಮದೆ ಮುರಿದೈದಿ ಪೊಕ್ಕ ಮನ್ನೆಯ ರಾಜೇ
ರಾಮನನುರೆ ಕಾಯ್ದು ನೃಪ
ಸ್ತೋಮದೊಳತ್ಯಧಿಕರ್ತಿಯಂ ಮಿಗೆ ಪಡೆದಳ್
 [ಕೆಳದಿನೃಪ ವಿಜಯ -೯.೯]
     ವೀರರೆನಿಸಿದ ಮೊಘಲರೊಂದಿಗೆ ನಡೆದ ಯುದ್ಧದಲ್ಲಿ ಸೋತು ಹೋಗಿ ತಪ್ಪಿಸಿಕೊಂಡು ರಕ್ಷಣೆ ಕೋರಿಬಂದ ರಾಜೇರಾಮನಿಗೆ ರಕ್ಷಣೆ ನೀಡಿ ರಾಜರ ಸಮೂಹದಲ್ಲಿ ಅತ್ಯಂತ ಹೆಚ್ಚಿನ ಗೌರವವನ್ನು ಪಡೆದಳು ಎಂಬುದು ಇದರ ಸಾರ. ಈ ರಾಜೇರಾಮ ಬೇರಾರೂ ಅಲ್ಲ, ವೀರ ಛತ್ರಪತಿ ಶಿವಾಜಿಯ ಮಗ ರಾಜಾರಾಮ. ರಕ್ಷಣೆ ನೀಡಿದ ರಾಣಿ ಕೆಳದಿಯ ಧೀರ ವನಿತೆ ಚೆನ್ನಮ್ಮಾಜಿ. ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು, ಸೋಮಶೇಖರನಾಯಕನ ಹೆಂಡತಿ ಹಾಗೂ ಶಿಸ್ತಿನ ಶಿವಪ್ಪನಾಯಕನ ಸೊಸೆಯಾಗಿದ್ದ ಚೆನ್ನಮ್ಮ ಕರ್ನಾಟಕದ ಹೆಮ್ಮೆ.
     ಶಿವಾಜಿಯ ನಂತರದಲ್ಲಿ ಪಟ್ಟಕ್ಕೇರಿದ ಮಗ ಸಾಂಬಾಜಿ ಸಹ ಬಲಿಷ್ಠನಾಗಿದ್ದು, ಅವನ ರಾಜ್ಯವನ್ನು ವಶಕ್ಕೆ ಪಡೆಯಲು ಮಾಡಿದ್ದ ಔರಂಗಜೇಬನ ಪ್ರಯತ್ನ ವಿಫಲವಾಗಿತ್ತು. ಈ ಸಂದರ್ಭದಲ್ಲಿ ಬಾದಷಹನ ಅಪಾರ ಹಣ, ಧಾನ್ಯ, ಜಾನುವಾರುಗಳು, ಬಟ್ಟೆ, ಇತ್ಯಾದಿಗಳು ಸಾಂಬಾಜಿಯ ಕೈಸೇರಿದ್ದವು. ಕುಟಿಲೋಪಾಯದಿಂದ ಮಾತ್ರ ಅವನನ್ನು ಮಣಿಸಬಹುದೆಂದು ಮನಗಂಡ ಔರಂಗಜೇಬ ಈ ಕೆಲಸಕ್ಕಾಗಿ ಕಬ್ಜಿ ಎಂದು ಕರೆಯಲ್ಪಡುತ್ತಿದ್ದ ಕವಿಕಳಸನೆಂಬುವನ್ನು ನಿಯೋಜಿಸಿದ್ದ. ಸರ್ವವಿದ್ಯಾಪಾರಂಗತನೆಂದು ಸಾಂಬಾಜಿಗೆ ಗೊತ್ತಾಗುವಂತೆ ಮಾಡಿಕೊಂಡು, ಅವನು ಅಭಿವೃದ್ಧಿ ಹೊಂದಲು ಅನೇಕ ಜಪ, ತಪ, ಇತ್ಯಾದಿಗಳನ್ನು ಮಾಡುವುದಾಗಿ ನಂಬಿಸಿ ಅನೇಕ ಗಿಡಮೂಲಿಕೆಗಳನ್ನು ಸೇವಿಸುವಂತೆ ಮಾಡಿದ್ದಲ್ಲದೆ ಅನೇಕ ರೀತಿಗಳಿಂದ ಸಾಂಬಾಜಿ ಮತಿಭ್ರಾಂತ ಹಾಗೂ ವಿಷಯಲೋಲುಪನಾಗುವಂತೆ ಮಾಡುವಲ್ಲಿ ಕವಿಕಳಸ ಯಶಸ್ವಿಯಾಗಿದ್ದ. ಒಮ್ಮೆ ಸಾಂಬಾಜಿ ಸಂಗಮೇಶ್ವರ ನದೀತೀರದಲ್ಲಿ ಸ್ತ್ರೀಯರ ಸಮೂಹದೊಂದಿಗೆ ವಿಹರಿಸುತ್ತಿದ್ದ ಸಂದರ್ಭದಲ್ಲಿ ಕಬ್ಜಿಯ ರಹಸ್ಯ ಸೂಚನೆಯಂತೆ ಔರಂಗಜೇಬ ಕಳುಹಿಸಿದ್ದ ಶೇಕು ನಿಜಾಮನಿಂದ ಸೆರೆಹಿಡಿಯಲ್ಪಟ್ಟ. ಸಾಂಬಾಜಿಯ ಕಾವಲುಭಟರೂ ತಮಗೆ ಸಿಕ್ಕಿದ ಹೇರಳ ಉಡುಗೊರೆಗಳಿಗೆ ಮರುಳಾಗಿ ದ್ರೋಹ ಬಗೆದಿದ್ದರು. ಸೆರೆಸಿಕ್ಕ ನಂತರದಲ್ಲಿ ಔರಂಗಜೇಬನ ಆಣತಿ ಧಿಕ್ಕರಿಸಿ ಸಲಾಮು ಮಾಡಲು ನಿರಾಕರಿಸಿದ ಸಾಂಬಾಜಿಗೆ ಮುಸಲ್ಮಾನನಾದರೆ ಬಿಡುಗಡೆ ಮಾಡುವುದಾಗಿ ತಿಳಿಸಲಾಯಿತು. ಔರಂಗಜೇಬನ ಮಗಳು ಬೇಗಮಳನ್ನು ಕೊಟ್ಟರೆ ಮುಸಲ್ಮಾನನಗುವುದಾಗಿ ಹೇಳಿದ ಸಾಂಬಾಜಿಗೆ ಮರಣದಂಡನೆ ವಿಧಿಸಲಾಯಿತು. ಸಾಂಬಾಜಿಯನ್ನು ಸೆರೆ ಹಿಡಿಯಲು ಸಹಕರಿಸಿದ ಕಬ್ಜಿಯ ತಲೆಯನ್ನೂ ಕನಿಕರವಿಲ್ಲದೆ ಕಡಿದುರುಳಿಸಿದ್ದರು.  (ಔರಂಗಜೇಬನ ಮಗಳೂ ಸಹ ಸಾಂಬಾಜಿಯನ್ನು ಕಂಡು ಅನುರಕ್ತಳಾಗಿದ್ದಳು. ಸಾಂಬಾಜಿಯ ಹತ್ಯೆಯ ನಂತರ ಅವಳೂ ಮದುವೆಯಾಗದೆ ಉಳಿದಿದ್ದಳು. ಸಾಂಬಾಜಿಯ ಮಗನನ್ನು ತನ್ನ ಮಗನಂತೆಯೇ ಸಲಹಿದ್ದಳು. ಮಗಳ ಮೇಲಿನ ಮೋಹದಿಂದ ಇದಕ್ಕೆ ಔರಂಗಜೇಬನ ಒಪ್ಪಿಗೆಯೂ ಸಿಕ್ಕಿತ್ತು).
   ಸಾಂಬಾಜಿ ಮೋಸದಿಂದ ಸೆರೆಸಿಕ್ಕು ಹತನಾದ ನಂತರ ರಾಜಾರಾಮ ಪಟ್ಟಾಭಿಷಿಕ್ತನಾದ. ಅವನನ್ನೂ ಸೆರೆಹಿಡಿಯಲು ಅಬ್ದುಲ್ ಖಾನನ ನೇತೃತ್ವದಲ್ಲಿ ಯವನರ ದೊಡ್ಡ ಸೈನ್ಯ ಪನ್ನಾಳಿಗೆ ಮುತ್ತಿಗೆ ಹಾಕಿದಾಗ ಆ ದೊಡ್ಡ ಸೈನ್ಯವನ್ನು ಎದುರಿಸಲಾರದೆ ರಾಜಾರಾಮ ಓಡಿಹೋಗಿ ಹೊನ್ನಾಳಿಗೆ ಬಂದು, ರಾಣಿ ಚೆನ್ನಮ್ಮಾಜಿಗೆ ಶರಣಾಗಿ ತನಗೆ ರಕ್ಷಣೆ ನೀಡಬೇಕೆಂದೂ ಹಾಗೂ ರಾಜ್ಯದ ಗಡಿ ದಾಟಲು ನೆರವಾಗಬೇಜೆಂದು ಕೋರಿದ. ಚೆನ್ನಮ್ಮ ರಾಣಿ ತನ್ನ ಆಪ್ತವರ್ಗದವರು, ಸಬುನೀಸ ಕೋಳೀವಾಡದ ಬೊಮ್ಮಯ್ಯ, ಬೊಕ್ಕಸದ ಸಿದ್ಧಬಸವಯ್ಯ ಮುಂತಾದ ಮಂತ್ರಿಗಳನ್ನು ಸೇರಿಸಿ ಮಂತ್ರಾಲೋಚನೆ ನಡೆಸಿ 'ಡಿಳ್ಳಿಯವರಂಗಜೇಬ ಪಾತುಶಾಹನೇ ಮುನಿದೈತಂದೆಮ್ಮ ಸಂಸ್ಥಾನಮಂ ತೆಗೆದುಕೊಂಡೊಡಂ ಕೊಳಲೇನಾದೊಡಂ ಮರೆಪೊಕ್ಕವನಂ ಕೊಡುವುದು ರಾಜಧರ್ಮಮಲ್ತೆಂದಿಂತು ಮತಮಂ ನಿಶ್ಚಯಂಗೈದು' (ಕೆ.ನೃ.ವಿ.-೯.೫೩.ವ.) ಮಾರುವೇಶದಲ್ಲಿ ರಾಜಾರಾಮನನ್ನು ಶಿವಮೊಗ್ಗ ಮಾರ್ಗವಾಗಿ ಗಾಜನೂರು ಹೊಳೆ ದಾಟಿಸಿ ಕಾಡುಮಾರ್ಗದ ಮೂಲಕ ಬೊರೆನೆಡೆಹಳ್ಳಿ, ಆಡುವಳ್ಳಿ, ಕಳಸ, ಖಾಂಡ್ಯ, ವಸುಧಾರೆ ಹಾದು ಚಂದಿಯಗಡ ತಲುಪಿಸಿದಳು.
     ಅಷ್ಟರಲ್ಲಿ ಹೊನ್ನಾಳಿಗೆ ಬೆನ್ನಟ್ಟಿಬಂದ ರಣಮಸ್ತಖಾನ ಮೊದಲಾದ ವಜೀರರು ರಾಜಾರಾಮನನ್ನು ತಮ್ಮ ವಶಕ್ಕೆ ಕೊಡಲು ಚನ್ನಮ್ಮಾಜಿಗೆ ಆಗ್ರಹಿಸಿದರು. ರಾಣಿ ಚೆನ್ನಮ್ಮನಾದರೋ ಆಲೋಚನೆ ಮಾಡಿ 'ತಮ್ಮ ರಾಷ್ಟ್ರಕ್ಕಾಗಿಯವಂ ಬಿಚ್ಚಾಳಾಗಿ ಪೋದುದಹುದಾವಾಳುತ್ತಿಳೆಯೊಳಿಲ್ಲ' (ಅವನು ತಮ್ಮ ರಾಜ್ಯದ ಮೂಲಕ ಹಾದು ಹೋದುದು ನಿಜವೆಂದೂ, ಅವನಿಗೆ ಅಡ್ಡಿಪಡಿಸಲಿಲ್ಲವೆಂದೂ, ಈಗ ಅವನು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿಲ್ಲವೆಂದೂ) ತಿಳಿಸಿದಳು. ಹಾಗೆ ಅವನು ಹೋದ ಸಂದರ್ಭದಲ್ಲಿ ವಶವಾದ ಆತನಿಗೆ ಸೇರಿದ ಬಟ್ಟೆ, ಆಭರಣ, ಕುದುರೆ, ಇತ್ಯಾದಿ ವಸ್ತುಗಳನ್ನು ಆ ವಜೀರರ ವಶಕ್ಕೆ ಕೊಟ್ಟಳು. ವಜೀರರಿಂದ ಬಂದ ವರ್ತಮಾನದಿಂದ ಕ್ರುದ್ಧನಾದ ಔರಂಗಜೇಬ ತನ್ನ ಮಗ ಅಜಮತಾರನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನೇ ಕಳುಹಿಸಿ ಕೆಳದಿಯನ್ನು ವಶಪಡಿಸಿಕೊಳ್ಳಲು ಕಳುಹಿಸಿದನು. ಮಹದೇವಪುರದ ಕೋಟೆ ವಶಪಡಿಸಿಕೊಂಡ ಮೊಘಲರು ಆನಂದಪುರ ಕೋಟೆ ವಶಪಡಿಸಿಕೊಳ್ಳಲು ಮುಂದುವರೆಯಿತು. ಚೆನ್ನಮ್ಮಾಜಿ ಭುವನಗಿರಿಯ ಮಾರ್ಗದಲ್ಲಿ ಹೇರಳವಾದ ಕಾಲ್ದಳದೊಂದಿಗೆ ಧಾವಿಸಿ ತುರುಕರ ಸೈನ್ಯವನ್ನು ಅವರು ಇತರ ಮಾರ್ಗಗಳಲ್ಲಿ ತಪ್ಪಿಸಿಕೊಂಡು ಹೋಗದಂತೆ ಕಂಡಿ, ಕಣಿವೆಗಳನ್ನೂ ಮುಚ್ಚಿಸಿ ಮದ್ಯದಲ್ಲಿ ಸಿಕ್ಕಿಸಿ ಉಗ್ರ ಹೋರಾಟ ನಡೆಸಿ ಧೂಳೀಪಟ ಮಾಡಿದಳು. ಔರಂಗಜೇಬನ ಸೈನ್ಯ ಸೋಲೊಪ್ಪಿ ಹಿಮ್ಮೆಟ್ಟಿತು. ಕೆಳದಿ ಸಂಸ್ಥಾನವೇ ಅಪಾಯಕ್ಕೆ ಸಿಲುಕುವ ಸಂಭವನೀಯತೆ ತಿಳಿದಿದ್ದೂ ಶರಣಾಗಿ ಬಂದ ರಾಜಾರಾಮನನ್ನು ರಕ್ಷಿಸಿ ರಾಜಧರ್ಮ ಪಾಲಿಸಿದ ಹೆಮ್ಮೆಯ ಕನ್ನಡ ಕುವರಿ ರಾಣಿ ಚೆನ್ನಮ್ಮ. ಮರಾಠೀ ಇತಿಹಾಸಕಾರರೂ ಚನ್ನಮ್ಮನ ಈ ಸಾಹಸವನ್ನು ಕೊಂಡಾಡಿದ್ದಾರೆ.
[ಆಧಾರ: ಲಿಂಗಣ್ಣಕವಿಯ ಕೆಳದಿನೃಪ ವಿಜಯ]
     ಕೆಳದಿಯ ವೀರಭದ್ರ ದೇವಾಲಯದ ಎದುರಿಗೆ ಇರುವ ಧ್ವಜಸ್ತಂಭದಲ್ಲಿರುವ ಶಿಲ್ಪ. ಇದರಲ್ಲಿ ಕೆಳದಿ ರಾಣಿ ಚೆನ್ನಮ್ಮ, ಶಿವಾಜಿಯ ಮಗ ರಾಜಾರಾಮ ಮತ್ತು ಅವನ ಸೇವಕ, ಸೇವಿಕೆಯರನ್ನು ಕಾಣಬಹುದು. ಕೆಳಗಿನ ಚಿತ್ರ ದ್ವಜಸ್ತಂಭ.
 (ದಿನಾಂಕ ೨೮.೧೧.೧೧ರಂದು ಕೆಳದಿಗೆ ಭೇಟಿ ನೀಡಿದಾಗ ತೆಗೆದ ಫೋಟೋ).
*******************
[ಸಾಂದರ್ಭಿಕವಾಗಿ ಲೇಖಕನ ಅನಿಸಿಕೆ: ಬೆಳಗಾವಿಯನ್ನು ಮುಂದಿಟ್ಟುಕೊಂಡು ಭಾಷಾಂದರು ನಡೆಸುತ್ತಿರುವ ಕೃತ್ಯಗಳಿಂದ ಕನ್ನಡ, ಮರಾಠಿ ಭಾಷಿಕರಿಗೂ, ಭಾಷೆಗಳಿಗೂ ಕೆಡುಕೇ ಹೊರತು ಒಳಿತಾಗಲಾರದು.]
***************
-ಕ.ವೆಂ.ನಾಗರಾಜ್.

ಶುಕ್ರವಾರ, ನವೆಂಬರ್ 25, 2011

ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -2

     ಈಗ ಘಟನೆಯ ವಿಷಯಕ್ಕೆ ನೇರವಾಗಿ ಬರುತ್ತೇನೆ. ಅದು ಫೆಬ್ರವರಿ ತಿಂಗಳಿನ ಒಂದು ದಿನ. ಮಂಗಳೂರು ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದ ಸಂದರ್ಭ. ಬೆಳ್ತಂಗಡಿ ತಾಲ್ಲೂಕು ಆಡಳಿತದ ವತಿಯಿಂದಲೂ ಧರ್ಮಸ್ಥಳದಲ್ಲಿ ಮಹಾರಾಷ್ಟ್ರ, ಒರಿಸ್ಸಾ ಮತ್ತು ಅಸ್ಸಾಂ ರಾಜ್ಯಗಳಿಂದ ಬಂದ ಕಲಾವಿದರಿಂದ ವೈವಿಧ್ಯಮಯ 'ಸಾಂಸ್ಕೃತಿಕ ರಸಸಂಜೆ' ಕಾರ್ಯಕ್ರಮ ಏರ್ಪಾಡಾಗಿತ್ತು. ಉತ್ಸವ ಸಮಿತಿಯ ಅಧ್ಯಕ್ಷನಾಗಿದ್ದ ನಾನು ಪೂರ್ವಭಾವಿಯಾಗಿ ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆ ನೋಡಿಕೊಂಡಿದ್ದೆ.  ಆದಿನ ಕಛೇರಿಯ ತುರ್ತು ಕೆಲಸಗಳನ್ನು ಮುಗಿಸಿ ಸಂಜೆ 5 ಘಂಟೆಯ ವೇಳೆಗೆ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಕಾರ್ಯಕ್ರಮದ ಅಂತಿಮ ವ್ಯವಸ್ಥೆ ನೋಡಲು ಹೊರಟೆ. ಸುಮಾರು 6 ಘಂಟೆಯ ಹೊತ್ತಿಗೆ ಧರ್ಮಸ್ಥಳದ ಗ್ರಾಮಲೆಕ್ಕಿಗರಿಗೆ ಒಂದು ದೂರವಾಣಿ ಕರೆ ಬಂತು. (ನನ್ನಲ್ಲಿ ಮೊಬೈಲ್ ಫೋನ್ ಇರಲಿಲ್ಲ). ಅದು ಕಛೇರಿಯ ದ್ವಿತೀಯ ದರ್ಜೆ ಗುಮಾಸ್ತ ವಿನಾಯಕ ಮತ್ತು ಶಿರಸ್ತೇದಾರ್ ಗೋಪಾಲನಾಯಕರು (ಹೆಸರುಗಳನ್ನು ಬದಲಿಸಿದೆ) ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತದ ಬಲೆಗೆ ಬಿದ್ದಿದ್ದ ಸುದ್ದಿಯಾಗಿತ್ತು. ನನಗೂ ಅಲ್ಲಿಗೆ ಬರಲು ಲೋಕಾಯುಕ್ತ ಇನ್ಸ್ ಪೆಕ್ಟರರು ಫೋನಿನ ಮೂಲಕ ತಿಳಿಸಿದರು. ಕಾರ್ಯಕ್ರಮ ನಡೆಯುತ್ತಿರುವುದರಿಂದ ಮುಗಿಸಿ ಬರುವುದಾಗಿ ಹೇಳಿದೆ. ನಾನು ಬೆಳ್ತಂಗಡಿ ಬಿಟ್ಟ ಸಮಯಕ್ಕೆ ಸರಿಯಾಗಿ ಲೋಕಾಯುಕ್ತ ಪೋಲಿಸರು ಕಛೇರಿಯಲ್ಲಿದ್ದು, ವಿಷಯ ತಿಳಿದೇ ನಾನು ಅಲ್ಲಿಂದ ಪರಾರಿಯಾಗಿದ್ದೆನೆಂದು ಸುದ್ದಿ ಹಬ್ಬಿತ್ತು. ನನ್ನನ್ನೂ ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರವಿದೆಯೆಂದೂ, ನಾನು ಕಛೇರಿಗೆ ಬರಬಾರದೆಂದು ಇನ್ನೊಬ್ಬ ನೌಕರರು ಕಛೇರಿಯ ಹೊರಗೆ ಬಂದು ಇತರರಿಗೆ ತಿಳಿಯದಂತೆ ಫೋನು ಮಾಡಿದ್ದರು. ನಿಜಕ್ಕೂ ನನಗೆ ಗಾಬರಿಯಾಗಿತ್ತು. ಪ್ರಕರಣ ಏನೆಂದೇ ಗೊತ್ತಿರದಿದ್ದ ನನ್ನನ್ನು ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಬಹುದೆಂದು ಅಂಜಿದ್ದೆ. ಏಕೆಂದರೆ ಇಂತಹ ಪ್ರಕರಣಗಳನ್ನು ನಾನು ಕಂಡಿದ್ದೆ. ನನ್ನ ಜಂಘಾಬಲವೇ ಉಡುಗಿತ್ತು. ಗ್ರಾಮಲೆಕ್ಕಿಗರ ಮೊಬೈಲ್ ಫೋನಿನಿಂದ ಜಿಲ್ಲಾಧಿಕಾರಿಯವರಿಗೆ ವಿಷಯ ತಿಳಿಸಿದೆ. ಯಾವ ಕಾರಣಕ್ಕಾಗಿ ನನ್ನ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೋ ಅನ್ನುವುದೂ ತಿಳಿಯದೆಂದೂ, ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಬಹುದೆಂಬ ಆತಂಕವನ್ನೂ, ತನ್ನನ್ನು ಬೆಳ್ತಂಗಡಿಗೆ ಬರಹೇಳಿರುವುದನ್ನೂ ಅವರ ಗಮನಕ್ಕೆ ತಂದೆ. ಜಿಲ್ಲಾಧಿಕಾರಿಯವರಿಗೆ ನನ್ನ ಬಗ್ಗೆ ವಿಶ್ವಾಸವಿತ್ತು. ಅವರು ಅಲ್ಲಿಗೆ ಹೋಗದಿರಲು ಸಲಹೆ ಕೊಟ್ಟರು. ಅಸಿಸ್ಟೆಂಟ್ ಕಮಿಷನರ್ ಅವರಿಗೂ (ನಂತರದಲ್ಲಿ ಅವರು ಶಿವಮೊಗ್ಗದಲ್ಲೂ ನನಗೆ ಜಿಲ್ಲಾಧಿಕಾರಿಯಾಗಿದ್ದರು, ಪ್ರಸ್ತುತ ಹುಬ್ಬಳ್ಳಿಯಲ್ಲಿ ಜೆಸ್ಕಾಮ್ ನಿರ್ದೇಶಕರಾಗಿದ್ದಾರೆ) ನನ್ನ ಆತಂಕವನ್ನು ಗಮನಕ್ಕೆ ತಂದೆ. ನನ್ನ ಕುರಿತು ಒಳ್ಳೆಯ ಅಭಿಪ್ರಾಯವಿದ್ದ ಅವರು ಜಿಲ್ಲಾದಿಕಾರಿಯವರೊಂದಿಗೂ ಮಾತನಾಡಿದರು ಮತ್ತು ನನ್ನನ್ನು ಅಂದು ಪುತ್ತೂರಿಗೆ ಬಂದು ಉಳಿದುಕೊಳ್ಳಲು ತಿಳಿಸಿದರು. ಅಂದು ರಾತ್ರಿ ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ಉಳಿದೆ. (ಸುಮಾರು ಹತ್ತು-ಹನ್ನೆರಡು ಸಲ) ಬೆಳ್ತಂಗಡಿಗೆ ಬರುವಂತೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಬೆದರಿಕೆ ಧ್ವನಿಯಲ್ಲಿ ಪದೇ ಪದೇ ಫೋನು ಮಾಡುತ್ತಿದ್ದರು. ನಾನು ಕಾರ್ಯಕ್ರಮ ಮುಗಿದಿಲ್ಲವೆಂದು ಸಬೂಬು ಹೇಳುತ್ತಾ ಇದ್ದೆ. ಮಹಜರ್, ಹೇಳಿಕೆ, ಇತ್ಯಾದಿಗಳನ್ನು ಮುಗಿಸುವಾಗ ರಾತ್ರಿ 8-30 ಘಂಟೆಯಾಗಿತ್ತೆಂದು ತಿಳಿಯಿತು. ಅಂದು ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲೆ ಉಳಿದಿರುವ ವಿಷಯವೂ ತಿಳಿಯಿತು. ಬಹುಷಃ ಅವರು ನನಗಾಗಿ ಕಾದಿದ್ದರು. ನನಗೆ ಅಂದು ರಾತ್ರಿಯೆಲ್ಲಾ ನಿದ್ದೆ ಬಂದಿರಲಿಲ್ಲ. ಆತಂಕ, ದುಗುಡದಲ್ಲೇ ಕಳೆದಿದ್ದೆ. ಮರುದಿನ ಬೆಳಿಗ್ಗೆ 11 ಘಂಟೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ಬಿಟ್ಟುಹೋದ ನಂತರದಲ್ಲಿ ನಾನು ಬೆಳ್ತಂಗಡಿಗೆ ಹೋದೆ. ಯಾವುದೇ ವಾಹನ ಎದುರಿಗೆ ಬಂದರೂ ಅದು  ಲೋಕಾಯುಕ್ತ ಅಧಿಕಾರಿಗಳು ಇರುವ ವಾಹನವೆಂದೇ ನನಗೆ ಭಾಸವಾಗುತ್ತಿತ್ತು.

     ನಾನು ಕಛೇರಿಯಲ್ಲೂ ಹೆಚ್ಚು ಹೊತ್ತು ಕುಳಿತಿರಲಾಗದೆ ತುರ್ತು ಕಾಗದ ಪತ್ರಗಳನ್ನು ನೋಡಿ ಹೊರಡುವವನಿದ್ದೆ. ಪ್ರಕರಣದ ಬಗ್ಗೆ ಗೊತ್ತಿದ್ದ ನೌಕರನೊಬ್ಬರಿಂದ ವಿವರ ತಿಳಿದೆ. ಅಷ್ಟರಲ್ಲಿ ಲೋಕಾಯುಕ್ತ ಕಛೇರಿಯ ಒಬ್ಬ ನೌಕರರು ಬಂದು ಪ್ರಕರಣದ ಕಡತವನ್ನು ನನ್ನ ಸ್ವೀಕೃತಿ ಪಡೆದು ಹಿಂತಿರುಗಿಸಿದರು. ನಾನು ಕೂಡಲೇ ಲೋಕಾಯುಕ್ತ ಕಛೇರಿಗೆ ಹೋಗಿ ಎಸ್.ಪಿ.ಯವರನ್ನು ಕಾಣಬೇಕೆಂದು ಹೇಳಿದರು. ಅದೇ ಸಮಯಕ್ಕೆ ನನಗೆ ದೂರವಾಣಿಯಲ್ಲೂ ಸಂಪರ್ಕಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ 'ನಾನು ಪಾತಾಳದಲ್ಲಿ ಅಡಗಿದ್ದರೂ ಎಳೆದು ತೆಗೆಯುತ್ತೇನೆಂದು' ಬೆದರಿಸಿದ್ದರು.  ನನ್ನ ಮಗಳ ಮದುವೆ ಸದ್ಯದಲ್ಲೇ ಮಾಡಬೇಕಿತ್ತು. ನನಗೇನಾದರೂ ತೊಂದರೆಯಾದರೆ ನನ್ನ ಮಕ್ಕಳ ಭವಿಷ್ಯಕ್ಕೂ ತೊಂದರೆ ಆಗಬಹುದಿತ್ತು. ಮಿಗಿಲಾಗಿ ನನ್ನ ಬಗ್ಗೆ ಸದಭಿಪ್ರಾಯ ಹೊಂದಿದ್ದ ಕುಟುಂಬದವರು, ಬಂಧುಗಳು, ಮಿತ್ರರು, ಇತರರ ಎಲ್ಲರ ಮುಂದೆ ನಾನು ತಲೆ ತಗ್ಗಿಸುವಂತಹ ಪರಿಸ್ಥಿತಿ ಬರುತ್ತಿತ್ತು. ಹಾಗೇನಾದರೂ ಆದರೆ ಸಾಯುವುದೇ ಮೇಲೆಂದು ಅಂದುಕೊಂಡಿದ್ದೆ. ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬದವರ ಗತಿಯೇನು ಎಂದೂ ಚಿಂತಿತನಾಗಿದ್ದೆ. ಆದರೆ ಮರ್ಯಾದೆ ಕಳೆದುಕೊಂಡು ಬದುಕುವ ಧೈರ್ಯ ಭಾವಜೀವಿಯಾದ ನನಗೆ ಇರಲಿಲ್ಲ. ಬೆಳ್ತಂಗಡಿಯಲ್ಲಿ ಆಗ ರಮೇಶಚಂದ್ರ (ಹೆಸರು ಬದಲಿಸಿದೆ) ಅನ್ನುವವರು ಪೋಲಿಸ್ ಇನ್ಸ್‌ಪೆಕ್ಟರ್ ಆಗಿದ್ದರು. ಅವರೂ ಒಬ್ಬರೇ ಇದ್ದು, ನಾನೂ ಸಹ ಬೆಳ್ತಂಗಡಿಯಲ್ಲಿ ಒಬ್ಬನೇ (ಹಾಸನದಲ್ಲಿ ನನ್ನ ಕುಟುಂಬವಿತ್ತು) ಇದ್ದುದರಿಂದ ರಾತ್ರಿ ಹೊತ್ತು ಪ್ರವಾಸಿ ಮಂದಿರದಲ್ಲಿ ಒಟ್ಟಿಗೇ ಊಟ ತರಿಸಿಕೊಂಡು ಕಷ್ಟ-ಸುಖ ಮಾತನಾಡಿಕೊಳ್ಳುತ್ತಿದ್ದೆವು. ಅವರಿಗೆ ನಾನು ಎಂಥವನು ಎಂಬ ಬಗ್ಗೆ ಗೊತ್ತಿತ್ತು. ಅದೃಷ್ಟವಶಾತ್ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮತ್ತು ಅವರು ಒಂದೇ ಬ್ಯಾಚಿನವರಾಗಿದ್ದು ಮಿತ್ರರಾಗಿದ್ದರು. ಅವರು ದೂರವಾಣಿ ಮೂಲಕ ಲೋಕಾಯುಕ್ತ ಇನ್ಸ್‌ಪೆಕ್ಟರರ ಹತ್ತಿರ ಮಾತನಾಡಿ ನನ್ನನ್ನು ಸುಖಾಸುಮ್ಮನೆ ಸಿಕ್ಕಿಸಬಾರದೆಂದೂ, ನಂಬಿಕೆಯಿಂದ ನನ್ನನ್ನು ಲೋಕಾಯುಕ್ತ ಕಛೇರಿಗೆ ಕಳುಹಿಸಿಕೊಡುವುದಾಗಿಯೂ ಹೇಳಿ ನನ್ನ ಸ್ವಭಾವದ ಬಗ್ಗೆ ವಿವರಿಸಿದ್ದರು. ನನಗೆ ಸ್ವಲ್ಪ ಹಣವನ್ನೂ ತೆಗೆದುಕೊಂಡು ಹೋಗಿ ಅಲ್ಲಿಗೆ ತಲುಪಿಸಲು ಸಲಹೆ ಕೊಟ್ಟರು. 'ಇಂದಿನ ಪರಿಸ್ಥಿತಿ ಹಾಗಿದೆ, ಉಳಿದುಕೊಳ್ಳಲು ಹೀಗೆ ಮಾಡಬೇಕಾದ ಅನಿವಾರ್ಯತೆಯಿದೆ' ಎಂದು ನನ್ನನ್ನು ಒಪ್ಪಿಸಿದ್ದರು. ನನಗೂ 'ಬದುಕ'ಬೇಕಿತ್ತು. ಎರಡು ದಿನಗಳ ನಂತರ ಲೋಕಾಯುಕ್ತ ಕಛೇರಿಗೆ ನಾನು ಬರಬೇಕೆಂದು ನನಗೆ ದೂರವಾಣಿಯಲ್ಲಿ ತಿಳಿಸಲಾಯಿತು. ಪ್ರಕರಣದ ಪೂರ್ಣ ವಿವರ ತಿಳಿಸುತ್ತಾ ಅದರಲ್ಲಿ ನನ್ನ ಪಾತ್ರವೇನೂ ಇರದ ಬಗ್ಗೆ ವಿಷದೀಕರಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಇಂತಹ ಸನ್ನಿವೇಶದಲ್ಲಿ ತನಗೆ ಕಡಬ ಮತ್ತು ಬೆಳ್ತಂಗಡಿ ಎರಡೂ ಕಡೆಯ ಕೆಲಸಗಳನ್ನು ನೋಡಿಕೊಳ್ಳುವುದು ಕಷ್ಟವೆಂದೂ, ಯಾರಾದರೂ ತಹಸೀಲ್ದಾರರನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆಯಲು ಕೋರಿಕೊಂಡೆ. ಜಿಲ್ಲಾಧಿಕಾರಿಯವರೂ ಸಹ ಲೋಕಾಯುಕ್ತ ಎಸ್.ಪಿ.ಯವರೊಂದಿಗೆ ಮಾತನಾಡಿ 'ಅನಗತ್ಯವಾಗಿ ತಹಸೀಲ್ದಾರರನ್ನು ಸಿಕ್ಕಿಸಬಾರದೆಂದೂ, ಅವರದು ನಿಜವಾಗಿಯೂ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ತಮ್ಮ ಅಭ್ಯಂತರವಿಲ್ಲ'ವೆಂದೂ ಹೇಳಿದ್ದರು. ಆ ನಾಲ್ಕು ದಿನಗಳಲ್ಲಿ ನಾನು ಅನುಭವಿಸಿದ ಮಾನಸಿಕ ಯಾತನೆ ನನಗೆ ಮಾತ್ರ ಗೊತ್ತು. ಊಟ, ತಿಂಡಿ ಸೇರುತ್ತಿರಲಿಲ್ಲ, ನಿದ್ದೆ ಬರುತ್ತಿರಲಿಲ್ಲ. ನಾನು ಕಡಬದ ವಿಶೇಷ ತಹಸೀಲ್ದಾರನೂ ಆಗಿದ್ದರಿಂದ ನನ್ನ ವಾಸ್ತವ್ಯ ಸುಬ್ರಹ್ಮಣ್ಯದಲ್ಲಿತ್ತು. ಸಂಜೆ ಸುಬ್ರಹ್ಮಣ್ಯ ದೇವಸ್ಥಾನದ ಜಗಲಿಯ ಮೇಲೆ ಕುಳಿತು ಈ ಪರಿಸ್ಥಿತಿಯಿಂದ ಪಾರುಮಾಡೆಂದು ಮನಸ್ಸಿನಲ್ಲೇ ಧ್ಯಾನಿಸುತ್ತಾ ಗಂಟೆಗಟ್ಟಲೆ ಕುಳಿತಿರುತ್ತಿದ್ದೆ. ಅದು 'ನಿಜವಾದ ಧ್ಯಾನ'ವಾಗಿತ್ತು, ಏಕೆಂದರೆ ಈ ವಿಚಾರ ಬಿಟ್ಟು ಬೇರೆ ಯಾವುದೇ ಸಂಗತಿ ನನ್ನ ತಲೆಯಲ್ಲಿರಲಿಲ್ಲ!
     ಒಂದು ಜಮೀನಿನ ಭೂಪರಿವರ್ತನೆಗೆ ಸಂಬಂಧಿಸಿದ ಪ್ರಕರಣ ಅದಾಗಿತ್ತು. ಇದರಲ್ಲಿ ತಹಸೀಲ್ದಾರರ ಗಮನಕ್ಕೇ ಬಾರದಂತೆ ಶಿರಸ್ತೇದಾರರು ಅರ್ಜಿ ಸ್ವೀಕರಿಸ್ದಿ, ಗುಮಾಸ್ತರಿಗೆ ನೇರವಾಗಿ ನೀಡಿದ್ದಲ್ಲದೆ, ಕೆಲವು ಆಕ್ಷೇಪಣೆಗಳನ್ನು ಹಾಕಿ ತಾವೇ 'ತಹಸೀಲ್ದಾರರ ಪರವಾಗಿ' ಎಂದು ಸಹಿ ಮಾಡಿದ್ದರು. ಭೂ ಪರಿವರ್ತನಾ ಶುಲ್ಕ ಕಟ್ಟಿಸಲು (ರೂ.55/-) ನನ್ನ ಆದೇಶಕ್ಕೆ ಇಟ್ಟಿದ್ದರು. ನನ್ನ ಗಮನಕ್ಕೇ ಬಾರದಂತೆ ನಡವಳಿಕೆಗಳನ್ನು ನಡೆಸಿದ್ದ ಬಗ್ಗೆ ತಿಳಿಯುವ ಸಲುವಾಗಿ 'ಚರ್ಚಿಸಿರಿ' ಎಂದು ಬರೆದಿದ್ದೆ. ಶಿರಸ್ತೇದಾರರು ಬಂದು 'ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದೂ, ಕ್ಷಮಿಸಬೇಕೆಂದೂ' ಕೋರಿದ್ದರ ಮೇರೆಗೆ ಎಚ್ಚರಿಕೆ ನೀಡಿ 'ಚರ್ಚಿಸಿದೆ, ಒಪ್ಪಿದೆ' ಎಂದು ಅದೇ ದಿನ ಆದೇಶಿಸಿದ್ದೆ. (ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಿದ್ದರೆ ನಾನು ಬರೆದ 'ಚರ್ಚಿಸಿ' ಷರಾ ಲಂಚ ಪಡೆಯುವ ಸಲುವಾಗಿ ಎಂದು ವಾದಿಸಲು ಅವಕಾಶವಿತ್ತು.) ಇದಾಗಿ ಸುಮಾರು ಇಪ್ಪತ್ತು ದಿನಗಳ ನಂತರ ಅವರುಗಳು ಸಿಕ್ಕಿಹಾಕಿಕೊಂಡಿದ್ದರು. ಬಲೆಗೆ ಸಿಕ್ಕಿಸುವ ಮುನ್ನ ರಹಸ್ಯವಾಗಿ ಗುಮಾಸ್ತರ, ಶಿರಸ್ತೇದಾರರ ಸಂಭಾಷಣೆಗಳನ್ನು ಧ್ವನಿಮುದ್ರಿಸಿಕೊಂಡಿದ್ದರಂತೆ. ನನ್ನನ್ನೂ ಕಂಡು ಮಾತನಾಡುವಂತೆ ದೂರುದಾರರಿಗೆ ತಿಳಿಸಿದ್ದರಂತೆ. ಆದರೆ ಹಿಂದಿನ ಎರಡು ದಿನಗಳು ನಾನು ಸಾಂದರ್ಭಿಕ ರಜೆಯಲ್ಲಿದ್ದರಿಂದ ಅವರಿಗೆ ನನ್ನನ್ನು ಸಂಪರ್ಕಿಸಲಾಗಿರಲಿಲ್ಲ. ಬಹುಷಃ ಅವರು ನನ್ನನ್ನು ಕಂಡಿದ್ದರೆ ನಾನು ಕಡತ ತೆಗೆಯಿಸಿ ಇತ್ಯರ್ಥ ಪಡಿಸಿರುತ್ತಿದ್ದೆನೇನೋ! ಆಗ ಇಂತಹ ಪ್ರಸಂಗ ಎದುರಾಗದೇ ಇದ್ದಿರಬಹುದಿತ್ತೋ ಏನೋ! ನಾನು ಅಂದು ಕಛೇರಿಯಿಂದ ಧರ್ಮಸ್ಥಳಕ್ಕೆ ಹೊರಟ ಸಮಯದಲ್ಲೇ ಲೋಕಾಯುಕ್ತ ಅಧಿಕಾರಿಗಳು ಕಛೇರಿಯಲ್ಲಿದ್ದು, (ಅವರು ಬಂದಿದ್ದ ವಿಷಯ ನನಗೆ ಗೊತ್ತಿರಲಿಲ್ಲ) ನಾನು ಹೊರಡುವುದು 2-3 ನಿಮಿಷಗಳು ತಡವಾಗಿದ್ದರೂ ನನಗೆ ತೊಂದರೆಯಾಗುವ ಎಲ್ಲಾ ಸಂಭವಗಳೂ ಇದ್ದವು. ಧರ್ಮಸ್ಥಳ ಮಂಜುನಾಥನೇ ನನ್ನನ್ನು ಕಾಪಾಡಿರಬೇಕು! ದೂರು ಅರ್ಜಿದಾರರು ಗುಮಾಸ್ತರಿಗೆ ರೂ. 6000/- ಹಣ ಕೊಟ್ಟಿದ್ದರು. ಸೋಡಿಯಂ ಕಾರ್ಬೋನೇಟ್ ಪುಡಿ ಬೆರೆಸಿದ ನೀರಿನಲ್ಲಿ ಅವರ ಕೈ ಅದ್ದಿಸಿದಾಗ ಅದು ನೇರಳೆ ಬಣ್ಣಕ್ಕೆ ತಿರುಗಿತ್ತು. ಅಂಗಿಯ ಜೇಬಿನಲ್ಲಿ ಇಟ್ಟುಕೊಂಡಿದ್ದ ಆ ಹಣ ಮತ್ತು ಅಂಗಿಯನ್ನೂ ವಶಪಡಿಸಿಕೊಂಡರು. ಅವರ ಹತ್ತಿರ ಈ ಹಣವಲ್ಲದೆ ಇನ್ನೂ ರೂ. 3930/- ಹಣ ಇದ್ದು ಆ ಪೈಕಿ ರೂ.30/- ವಾಪಸು ನೀಡಿ 3900/- ಅನ್ನೂ ಜಪ್ತಿ ಮಾಡಿಕೊಂಡಿದ್ದರು. ಶಿರಸ್ತೇದಾರರ ಬಳಿ ರೂ.2750/- ಮತ್ತು ಅವರ ಮೇಜಿನ ಡ್ರಾಯರಿನಲ್ಲಿ ರೂ. 1000/- ಇದ್ದು ಆ ಪೈಕಿ ರೂ.150/- ಅನ್ನು ಹಿಂತಿರುಗಿಸಿ ರೂ. 3600/- ಅನ್ನು ವಶಪಡಿಸಿಕೊಂಡರು. ಗುಮಾಸ್ತರಿಗೆ ಸ್ವ ಇಚ್ಛಾ ಹೇಳಿಕೆ ಬರೆದುಕೊಡಲು ಇನ್ಸ್‌ಪೆಕ್ಟರ್ ತಿಳಿಸಿದಾಗ ಅವರು ರಾಷ್ಟ್ರೀಯ ಉಳಿತಾಯ ಪತ್ರ ಖರೀದಿ ಸಲುವಾಗಿ ಹಣ ಪಡೆದಿತ್ತೆಂದೂ, ಅಂಚೆ ಕಛೇರಿಯ ಸಮಯವಾಗಿದ್ದರಿಂದ ಮರುದಿನ ಖರೀದಿಸುವ ಸಲುವಾಗಿ ಹಣ ಇಟ್ಟುಕೊಂಡಿದ್ದೆಂದು ಬರೆದುಕೊಟ್ಟರು. ಇನ್ಸ್‌ಪೆಕ್ಟರರು ಆ ಹೇಳಿಕೆ ಹರಿದು ಹಾಕಿ 'ತಹಸೀಲ್ದಾರರಿಗೆ ಕೊಡುವ ಸಲುವಾಗಿ ಪಡೆದಿದ್ದೆನೆಂದು ಬರೆದುಕೊಡು, ನಿನಗೆ ಅನುಕೂಲವಾಗುತ್ತದೆ' ಎಂದು ಸಲಹೆ ಕೊಟ್ಟಿದ್ದರು. (ಈ ಎಲ್ಲಾ ಸಂಗತಿಗಳು ನನಗೆ ನಂತರ ಕಛೇರಿಯ ನೌಕರರು ಮತ್ತು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದದ್ದು). ಆದರೆ ಪುನಃ ಗುಮಾಸ್ತರು ಮೊದಲಿನ ರೀತಿ ಬರೆದಿದ್ದಂತೆಯೇ ಬರೆದಾಗ ಇನ್ಸ್‌ಪೆಕ್ಟರ್ ಸಿಟ್ಟಿಗೆದ್ದು ಗುಮಾಸ್ತರ ಕಪಾಳಕ್ಕೆ ಬಾರಿಸಿ "ನಾನು ಹೇಳಿದಂತೆ ಬರೆದುಕೊಡು. ಬದುಕುವ ದಾರಿ ನೋಡಿಕೋ" ಎಂದು ಗದರಿಸಿ ಆ ಕಾಗದವನ್ನೂ ಹರಿದುಹಾಕಿದ್ದರಂತೆ. ಆಗ ಗುಮಾಸ್ತ ವಿನಾಯಕ "ಸಾರ್, ತಹಸೀಲ್ದಾರರ ಸಲುವಾಗಿ ಎಂದು ಬರೆದುಕೊಟ್ಟರೆ ಅವರಿಗೆ ಅನ್ಯಾಯವಾಗುತ್ತದೆ, ಅವರು ಒಳ್ಳೆಯವರು, ನನ್ನ ಮಕ್ಕಳಿಗೂ ಒಳ್ಳೆಯದಾಗುವುದಿಲ್ಲ. ನೀವು ಇಷ್ಟೊಂದು ಬಲವಂತ ಮಾಡುವುದಾದರೆ ನಾನೇ ಲಂಚ ತೆಗೆದುಕೊಂಡೆ ಎಂದು ಬರೆದುಕೊಡುತ್ತೇನೆ" ಎಂದು ಹೇಳಿದ್ದರಂತೆ. ಪುನಃ ತಾವು ಮೊದಲು ಬರೆದುಕೊಟ್ಟ ಹೇಳಿಕೆಯನ್ನೇ ಮೂರನೆಯ ಸಲವೂ ಬರೆದುಕೊಟ್ಟರಂತೆ. ಆ ಗುಮಾಸ್ತರನ್ನು ನಾನು ನೆನೆಸಿಕೊಳ್ಳುತ್ತಲೇ ಇರುತ್ತೇನೆ. ಅವರೇನಾದರೂ ಆ ರೀತಿ ಹೇಳಿಕೆ ಕೊಟ್ಟಿದ್ದರೆ ನನ್ನನ್ನೂ ಆ ಪ್ರಕರಣದಲ್ಲಿ ಖಂಡಿತಾ ಸಿಲುಕಿಸಿರುತ್ತಿದ್ದರು. ಗುಮಾಸ್ತರ ಆ ಮಾತು ನನ್ನ ಸೇವಾವಧಿಯ ಅತ್ಯುನ್ನತ ಪ್ರಶಸ್ತಿ ಎಂದು ನಾನು ಭಾವಿಸಿದ್ದೇನೆ. ಬೇರೆ ಯಾರೇ ಆದರೂ ಆ ಸಮಯದಲ್ಲಿ ದಿಕ್ಕು ತೋಚದೆ ಇನ್ಸ್‌ಪೆಕ್ಟರ್ ಹೇಳಿದಂತೆ ಬರೆದುಕೊಟ್ಟಿರುತ್ತಿದ್ದರು. ಶಿರಸ್ತೇದಾರರು ಬೆದರಿಕೆಗೆ ಮಣಿದು ಮೇಜಿನ ಡ್ರಾಯರಿನಲ್ಲಿದ್ದ ರೂ.1000/- ತಹಸೀಲ್ದಾರರಿಗೆ ಕೊಡುವ ಸಲುವಾಗಿತ್ತೆಂದು ಹೇಳಿಕೆ ಕೊಟ್ಟಿದ್ದುದು ಇದಕ್ಕೆ ಸಾಕ್ಷಿ. ಆದರೆ ಅದು ದೂರು ಅರ್ಜಿಗೆ ಸಂಬಂಧಿಸಿದ್ದಲ್ಲದ ಮತ್ತು ಯಾವ ಪ್ರಕರಣಕ್ಕೆ ಸಂಬಂಧಿಸಿದ್ದೆಂದು ಗೊತ್ತಿಲ್ಲದ ಹಣವಾಗಿದ್ದರಿಂದ ನನ್ನನ್ನು ಸೇರಿಸಲು ಅವಕಾಶವಿರಲಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಈ ಲಂಚದ ಪ್ರಕರಣದಲ್ಲಿ ಮಧ್ಯಸ್ತಿಕೆದಾರರಾಗಿ ಬೆಳ್ತಂಗಡಿಯ ನೋಟರಿ ಒಬ್ಬರು ದಳ್ಳಾಳಿಯ ಕೆಲಸ ಮಾಡಿದ್ದರು! ನೋಟರಿ ಮಹಾಶಯರು 'ತಹಸೀಲ್ದಾರರಿಗೆ, ಶಿರಸ್ತೇದಾರರಿಗೆ, ಗುಮಾಸ್ತರಿಗೆ, ಎಲ್ಲರಿಗೂ ಹಣ ಕೊಡಬೇಕು' ಎಂದು ದೂರು ಅರ್ಜಿದಾರರಿಗೆ ಹೇಳಿದ್ದ ಮಾತನ್ನು ರಹಸ್ಯವಾಗಿ ದ್ವನಿಮುದ್ರಿಸಿಕೊಳ್ಳಲಾಗಿತ್ತಂತೆ!
     ಎರಡು ದಿನಗಳ ನಂತರ ನನ್ನ ಮಿತ್ರ ಇನ್ಸ್‌ಪೆಕ್ಟರರ ಸಲಹೆಯಂತೆ 'ಹಣ' ಇಟ್ಟುಕೊಂಡು ಲೋಕಾಯುಕ್ತ ಇನ್ಸ್ ಪೆಕ್ಟರರನ್ನು ಅವರ ಕಛೇರಿಯಲ್ಲೆ ಕಂಡೆ. ಅವರು ವಿಶ್ವಾಸದಿಂದಲೇ ಮಾತನಾಡಿಸಿದರು. ಹಿಂದಿನ ದಿನ ಪುನಃ ಬೆಳ್ತಂಗಡಿಗೆ ಹೋಗಿ ನನ್ನ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರಂತೆ. ಹಿಂದಿನ ತಹಸೀಲ್ದಾರರ ಮೇಲೆ ಇದ್ದ ಹಲವಾರು ದೂರುಗಳಿಂದಾಗಿ ನನ್ನ ಬಗ್ಗೆ ಸಹ ತಪ್ಪು ಗ್ರಹಿಕೆಯಾಗಿತ್ತೆಂದೂ ಅನ್ಯಥಾ ಭಾವಿಸಬಾರದೆಂದೂ ಹೇಳಿದರು. ತಂದಿದ್ದ ಹಣವನ್ನು ಅವರು ಪಡೆದು ನನ್ನನ್ನೂ ಕರೆದುಕೊಂಡು ಹೋಗಿ ಎಸ್.ಪಿ.ಯವರಿಗೆ ಪರಿಚಯಿಸಿದರು. ಅವರೂ ನನ್ನೊಡನೆ ವಿಶ್ವಾಸದಿಂದಲೇ ಮಾತನಾಡಿದರು. ಇನ್ಸ್‌ಪೆಕ್ಟರರು ನನ್ನಿಂದ ಪಡೆದಿದ್ದ ಹಣವನ್ನು ನನ್ನ ಎದುರಿಗೇ ಎಸ್.ಪಿ.ಯವರಿಗೆ ಕೊಟ್ಟರು. ನಂತರ ನನಗೆ ಕೆಲವು ಪ್ರಶ್ನಾವಳಿ ಇರುವ ಪತ್ರ ನೀಡಿ ಅದಕ್ಕೆ ಉತ್ತರ ಕಳುಹಿಸಿಕೊಡುವಂತೆ ತಿಳಿಸಲಾಯಿತು. ನಂತರದಲ್ಲಿ ನಾನು ಇನ್ಸ್‌ಪೆಕ್ಟರರಿಗೆ "ಹಣ ಯಾರು ಯಾರಿಗೆ ಕೊಡಬೇಕೆಂಬ ಬಗ್ಗೆ ನನಗೆ ತಿಳುವಳಿಕೆ ಇರಲಿಲ್ಲ. ತಮಗೂ ತಲುಪಿಸುತ್ತೇನೆ" ಎಂದಾಗ ಅವರು "ನಿಮ್ಮಿಂದ ಹಣ ಪಡೆಯಬೇಕೆ? ನೀವು ನನಗೆಂದು ತಂದಿದ್ದರೂ ನಾನು ಪಡೆಯುತ್ತಿರಲಿಲ್ಲ. ತರುವುದೂ ಬೇಡ, ನಾನು ತೆಗೆದುಕೊಳ್ಳುವುದೂ ಇಲ್ಲ. ನೀವು ನೆಮ್ಮದಿಯಿಂದ ಹೋಗಿ" ಎಂದರು. ಈ ಪ್ರಕರಣದಲ್ಲಿ ಗುಮಾಸ್ತರು, ಶಿರಸ್ತೇದಾರರು ಲಂಚಕ್ಕೆ ಬೇಡಿಕೆ ಇಟ್ಟದ್ದು ನನಗೆ ಗೊತ್ತಿತ್ತೇ, ರಾಷ್ಟ್ರೀಯ ಉಳಿತಾಯ ಪತ್ರಕ್ಕಾಗಿ ಹಣ ಸಂಗ್ರಹಿಸಬಹುದೇ, ಗುಮಾಸ್ತರಿಗೆ ಬಡ್ತಿಯಾಗಿ ವರ್ಗಾವಣೆಯಾಗಿದ್ದರೂ ಅವರನ್ನು ಸೇವೆಯಿಂದ ಏಕೆ ಬಿಡುಗಡೆ ಮಾಡಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮಂಜಸ ಲಿಖಿತ ಉತ್ತರ ನೀಡಿ ನಿಟ್ಟುಸಿರು ಬಿಟ್ಟಿದ್ದೆ. 'ಇಂತಹ' ಸೇವೆ ಸಾಕು ಅನ್ನಿಸಿಬಿಟ್ಟಿತ್ತು. ನನ್ನನ್ನು ಕುತ್ತಿನಿಂದ ಪಾರು ಮಾಡಿದ ದೇವರು ಗುಮಾಸ್ತ ವಿನಾಯಕ, ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮಿಷನರ್, ಪೋಲಿಸ್ ಇನ್ಸ್‌ಪೆಕ್ಟರ್ ಮತ್ತು ಲೋಕಾಯುಕ್ತ ಇನ್ಸ್‌ಪೆಕ್ಟರರ ರೂಪಗಳಲ್ಲಿ ಪ್ರಕಟಗೊಂಡಿದ್ದನೆಂದರೆ ತಪ್ಪಿಲ್ಲ. ಮುಂದೆ 8-10 ದಿನಗಳಲ್ಲಿ ಬೆಳ್ತಂಗಡಿಗೆ ಬೇರೊಬ್ಬ ತಹಸೀಲ್ದಾರರು ಸರ್ಕಾರದಿಂದ ನೇಮಕವಾಗಿ ಬಂದಾಗ ಅವರಿಗೆ ಛಾರ್ಜು ವಹಿಸಿ 'ಅಧಿಕ'ಪ್ರಭಾರೆಯಿಂದ ಬಿಡುಗಡೆ ಹೊಂದಿದೆ! ಕಛೇರಿಯ ನೌಕರರು ನನಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಮನಸ್ಸಿರದಿದ್ದ ಕಾರಣದಿಂದ ಹೋಗಲಿಲ್ಲ.
*************
-ಕ.ವೆಂ.ನಾಗರಾಜ್.
*******************
ಹಿಂದಿನ ಲೇಖನಕ್ಕೆ ಲಿಂಕ್: ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -1:  http://kavimana.blogspot.com/2011/11/1.html

ನಾನು ಆತ್ಮಹತ್ಯೆ ಮಾಡುಕೊಳ್ಳುವವನಿದ್ದೆ -1

     ಲೋಕಾಯುಕ್ತ ದಾಳಿಗಳ ಕುರಿತು ನನ್ನ ಕೆಲವು ಅನುಭವಗಳನ್ನು ಹಂಚಿಕೊಂಡಿರುವೆ. ಒಮ್ಮೆ ಸಿಕ್ಕಿಬಿದ್ದು ಅಮಾನತ್ತುಗೊಂಡು ಕೆಲವು ಸಮಯದ ನಂತರ ವಿಚಾರಣೆ ಕಾಯ್ದಿರಿಸಿ ಪುನಹ ನೇಮಕಗೊಂಡ ನಂತರದಲ್ಲಿ ಹೇಗೂ ನೌಕರಿ ಹೋಗುತ್ತದೆ ಎಂಬ ಹತಾಶೆ ಮತ್ತು ಆತಂಕದೊಡನೆ ದುರಾಸೆ ಸೇರಿಕೊಂಡು, ಕೆಲಸ ಹೋಗುವ ಮುನ್ನ ಸಾದ್ಯವಾದಷ್ಟು ಹಣ ಮಾಡಿಕೊಂಡುಬಿಡೋಣವೆಂದು ಎರಡನೆಯ ಸಲ ಲೋಕಾಯುಕ್ತದ ಬಲೆಗೆ ಬಿದ್ದವರು, ನೌಕರಿ ಕಳೆದುಕೊಂಡವರನ್ನೂ ಕಂಡಿದ್ದೇನೆ. ಅಂತಹುದೇ ಪ್ರಕರಣಗಳ ವಿವರ ಕೊಡುತ್ತಾ ಹೋದರೆ ಚರ್ವಿತ ಚರ್ವಣದಂತೆ ಆಗುವುದರಿಂದ ಎಲ್ಲವನ್ನೂ ವಿವರಿಸಲು ಹೋಗುವುದಿಲ್ಲ. ಈಗ ನಾನು ಹೇಳಹೊರಟಿರುವ ಪ್ರಕರಣ ನನ್ನಲ್ಲಿ ಕಹಿ ನೆನಪನ್ನು ಉಳಿಸಿದೆ. ನಾನು ಆತ್ಮಹತ್ಯೆಗೆ ಚಿಂತಿಸುವಂತೆ ಮಾಡಿದ್ದ ಈ ಘಟನೆ ವಿವರಿಸುವ ಮುನ್ನ ಹಿನ್ನೆಲೆಯಾಗಿ ಕೆಲವು ವಿಷಯ ನಿಮ್ಮ ಗಮನಕ್ಕೆ ತರಬೇಕು.
     ಸುಮಾರು ೯ ವರ್ಷಗಳ ಹಿಂದಿನ ಪ್ರಸಂಗವಿದು. ಶ್ರೀ ಮಹಾದೇವಸ್ವಾಮಿ (ಹೆಸರು ಬದಲಿಸಿದೆ) ಮೂಲತಃ ವಿಧಾನಸೌಧದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದವರು. ಅವಕಾಶವಿರದಿದ್ದರೂ ಪ್ರಭಾವ ಉಪಯೋಗಿಸಿಕೊಂಡು ಬೆಳ್ತಂಗಡಿಯಲ್ಲಿ ತಹಸೀಲ್ದಾರರಾಗಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು. ವಿಧಾನಸೌಧದಲ್ಲಿ ಕೆಲಸ ಮಾಡುವ ಇಂತಹ ಕೆಲವು ಸೆಕ್ಷನ್ ಅಧಿಕಾರಿಗಳು ನೇಮಕಾತಿ ಪ್ರಾಧಿಕಾರ ಹಾಗೂ ರಾಜಕಾರಣಿಗಳ ಪ್ರಭಾವ ಉಪಯೋಗಿಸಿಕೊಂಡು ತಹಸೀಲ್ದಾರರಾಗಿ ನೇಮಕಗೊಳ್ಳುವ ಉದ್ದೇಶ ಅಧಿಕಾರ ಚಲಾವಣೆಯ ಹಂಬಲ ಅಥವ ಹಣ ಮಾಡುವ ಉದ್ದೇಶ ಅಥವ ಎರಡೂ ಇರಬಹುದು. ಇದರಿಂದಾಗಿ ಮೂಲ ಕಂದಾಯ ಇಲಾಖಾ ನೌಕರರು ಕೆಲವರು ನ್ಯಾಯಯುತವಾಗಿ ಪಡೆಯಬೇಕಾದ ಬಡ್ತಿಯಲ್ಲೂ ಅವಕಾಶವಂಚಿತರಾಗುತ್ತಾರೆ. ಬೆಳ್ತಂಗಡಿ ತಾಲ್ಲೂಕು (ಧರ್ಮಸ್ಥಳ ಈ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ) ಧಾರ್ಮಿಕವಾಗಿ ಹೇಗೆ ಪ್ರಸಿದ್ಧವೋ ಹಾಗೆ ರಾಜಕೀಯವಾಗಿಯೂ ಬಲಿಷ್ಠ ಸ್ಥಳವಾಗಿದ್ದು, ಅಧಿಕಾರಿಗಳಿಗೆ, ನೌಕರರಿಗೆ ಎಲ್ಲರನ್ನೂ ಸಂಭಾಳಿಸಿಕೊಂಡು ಕೆಲಸ ಮಾಡುವುದು ಕಷ್ಟವಾಗಿತ್ತು. ಶ್ರೀ ವಸಂತ ಬಂಗೇರರವರು (ಮಾಜಿ ವಿಧಾನಸಭಾಪತಿ) ಆಗ ಜಿಲ್ಲಾ ಜನತಾದಳದ ಅಧ್ಯಕ್ಷರಾಗಿದ್ದರು. ಅವರ ತಮ್ಮ ಶ್ರೀ ಪ್ರಭಾಕರ ಬಂಗೇರ ಬಿಜೆಪಿಯವರಾಗಿದ್ದು ಆಗಿನ ವಿಧಾನಸಭಾ ಸದಸ್ಯರಾಗಿದ್ದರು. ಅದೇ ತಾಲ್ಲೂಕಿನವರಾಗಿದ್ದ ಮಾಜಿ ಶಿಕ್ಷಣ ಸಚಿವ ಶ್ರೀ ಗಂಗಾಧರಗೌಡರು ಕಾಂಗ್ರೆಸ್ಸಿನ ಪ್ರಭಾವಿ ನಾಯಕರಾಗಿದ್ದರು.
     ಮಹಾದೇವಸ್ವಾಮಿಯವರ ಮೇಲೆ ಅನೇಕ ರೀತಿಯ ಕರ್ತವ್ಯಲೋಪ ಮತ್ತು ಭ್ರಷ್ಠಾಚಾರದ ಆರೋಪಗಳಿದ್ದು, ಅವರ ವಿರುದ್ಧ ಜನತಾದಳದಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿದ್ದು ವಸಂತ ಬಂಗೇರರು ನೇತೃತ್ವ ವಹಿಸಿದ್ದರು. ಪುತ್ತೂರಿನ ಅಸಿಸ್ಟೆಂಟ್ ಕಮಿಷನರರು ಮತ್ತು ಮಂಗಳೂರು ಜಿಲ್ಲಾಧಿಕಾರಿಯವರಿಗೂ ಸಹ ತಹಸೀಲ್ದಾರರ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನವಿದ್ದು ಹಲವಾರು ಸಲ ಎಚ್ಚರಿಕೆ ನೀಡಿದ್ದರು. ಆದರೂ ಅವರ ಕಾರ್ಯವೈಖರಿ ಬದಲಾಗಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ಕೆಲವು ಅಧಿಕಾರಿಗಳನ್ನು ಬೆಳ್ತಂಗಡಿಗೆ ಕಳುಹಿಸಿ ತನಿಖೆ ನಡೆಯಿಸಿ ಅಕ್ರಮಗಳು ನಡೆದಿವೆಯೆನ್ನಲಾದ ಕಡತಗಳನ್ನು ವಶಕ್ಕೆ ಪಡೆದು, ಮಹಾದೇವಸ್ವಾಮಿಯವರನ್ನು ಸರಕಾರದ ಆದೇಶದ ನಿರೀಕ್ಷಣೆ ಮೇರೆಗೆ ತಾವೇ ಕರ್ತವ್ಯದಿಂದ ಬಿಡುಗಡೆ ಮಾಡಿ ಆದೇಶಿಸಿ ಅವರ ಸ್ಥಾನಕ್ಕೆ ಕಡಬದ ವಿಶೇಷ ತಹಸೀಲ್ದಾರನಾಗಿದ್ದ ನನ್ನನ್ನು ಅದಿಕ ಪ್ರಭಾರೆ ಮೇಲೆ ಬೆಳ್ತಂಗಡಿ ತಹಸೀಲ್ದಾರನನ್ನಾಗಿ ನೇಮಕ ಮಾಡಿದ್ದರು. ನಾನು ಅದರಂತೆ ಪ್ರಭಾರೆ ವಹಿಸಿಕೊಂಡಾಗ ಜನತಾದಳದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ತಾಲ್ಲೂಕು ಕಛೇರಿ ಮುಂದೆ ಪಟಾಕಿ ಸಿಡಿಸಿ, ಸಭೆ  ನಡೆಸಿದ್ದರು. ಆದರೆ ಮುಂದೆ ಒಂದೇ ವಾರದಲ್ಲಿ ಶ್ರೀ ಗಂಗಾಧರಗೌಡರು ಆಗಿನ ಕಾಂಗ್ರೆಸ್ ಸರ್ಕಾರದ ಕಂದಾಯ ಮಂತ್ರಿಗಳಾಗಿದ್ದ ಶ್ರೀ ಹೆಚ್.ಸಿ. ಶ್ರೀಕಂಠಯ್ಯನವರನ್ನು ಓಲೈಸಿ ಮಹಾದೇವಸ್ವಾಮಿಯವರನ್ನು ಪುನಃ ಬೆಳ್ತಂಗಡಿಗೆ ನೇಮಿಸುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲಾಧಿಕಾರಿಯವರಿಗೆ (ಅವರು ಈಗ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ) ಮಹಾದೇವಸ್ವಾಮಿಯವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವುದು ಇಷ್ಟವಿರಲಿಲ್ಲ. ಅವರು ನನಗೆ ದೂರವಾಣಿ ಮೂಲಕ ನನಗೆ ಯಾವುದೇ ಕಾರಣಕ್ಕೂ ಮಹಾದೇವಸ್ವಾಮಿಯವರಿಗೆ ಛಾರ್ಜು ಕೊಡಬಾರದೆಂದು ಸ್ಪಷ್ಟ ಸೂಚನೆ ಕೊಟ್ಟಿದ್ದರು. ಅಂದು ಮಧ್ಯಾಹ್ನ ಸುಮಾರು ೪ ಘಂಟೆಯ ಹೊತ್ತಿಗೆ ಮಹಾದೇವಸ್ವಾಮಿ ಸರ್ಕಾರಿ ಆದೇಶ ಕೈಯಲ್ಲಿ ಹಿಡಿದುಕೊಂಡು ಬಂದರು. ಕಾಂಗ್ರೆಸ್ ಕಾರ್ಯಕರ್ತರು ಮಹಾದೇವಸ್ವಾಮಿ ಛಾರ್ಜು ತೆಗೆದುಕೊಂಡ ತಕ್ಷಣ ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧರಾಗಿದ್ದರು. ನಾನು ಛಾರ್ಜು ಕೊಡದಿದ್ದರೂ ಸರ್ಕಾರದ ಆದೇಶದಂತೆ ಅವರು ಸ್ವತಃ ಛಾರ್ಜು ವಹಿಸಿಕೊಂಡ ಬಗ್ಗೆ ಪ್ರಮಾಣಪತ್ರ ಸಿದ್ಧಪಡಿಸಿ ನನ್ನೊಂದಿಗೆ ಕುರ್ಚಿಗೆ ಪೈಪೋಟಿ ನಡೆಸಬಹುದಿತ್ತು, ಇದರಿಂದ ಪತ್ರಿಕೆಯವರಿಗೆ, ಮಾಧ್ಯಮದವರಿಗೆ ಸುದ್ದಿಗೆ ಗ್ರಾಸವಾಗಬಹುದಿತ್ತು. ಮೇಲಾಧಿಕಾರಿಗಳ ವಿರೋಧ ಕಟ್ಟಿಕೊಂಡು ಕೆಲಸ ಮಾಡುವುದು ಸೂಕ್ತವಾಗುವುದಿಲ್ಲವೆಂದು,  ಮೊದಲು ಜಿಲ್ಲಾಧಿಕಾರಿಯವರನ್ನು ಕಂಡು ಮಾತನಾಡಿಸಿ ಬರಬೇಕೆಂದೂ, ಮರುದಿನ ಬೆಳಿಗ್ಗೆ ಛಾರ್ಜು ತೆಗೆದುಕೊಳ್ಳಬಹುದೆಂದು ಅವರ ಮನವೊಲಿಸಿ ಕಳಿಸಿದೆ. ನಂತರ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ದೂರವಾಣಿಯಲ್ಲಿ ತಿಳಿಸಿದೆ. ಅಂದು ಕಛೇರಿಯ ಮುಂದೆ ಪಟಾಕಿ ಸಿಡಿಯಲಿಲ್ಲ. ವಿಷಯ ತಿಳಿದ ಪ್ರಭಾಕರ ಬಂಗೇರರವರು 'ಮಹಾದೇವಸ್ವಾಮಿಯವರೇನಾದರೂ ಛಾರ್ಜು ತೆಗೆದುಕೊಂಡರೆ ಕಛೇರಿಗೆ ದಿಗ್ಬಂಧನ ಹಾಕಿ ಅವರಿಗೆ ಕೆಲಸ ಮಾಡಲು ಬಿಡುವುದಿಲ್ಲ'ವೆಂದು ಘೋಷಿಸಿದ್ದು ಮರುದಿನದ ಸ್ಥಳೀಯ ಪತ್ರಿಕೆಗಳ ಪ್ರಮುಖ ಸುದ್ದಿಯಾಯಿತು. ಅಂದು ರಾತ್ರಿಯೇ ಜಿಲ್ಲಾಧಿಕಾರಿಯವರು ಬೆಂಗಳೂರಿಗೆ ಹೋದರು. ಕೇಂದ್ರಸ್ಥಾನಿಕ ಸಹಾಯಕರಿಗೆ ಸೂಚನೆ ನೀಡಿ ತನ್ನನ್ನು ಕಂಡ ನಂತರವೇ ಮಹಾದೇವಸ್ವಾಮಿಗೆ ಛಾರ್ಜು ತೆಗೆದುಕೊಳ್ಳಲು ತಿಳಿಸಲು ಹೇಳಿದ್ದರು. ಮರುದಿನ ಮ. ೧೨-೩೦ರ ವೇಳೆಗೆ ನನ್ನ ಕಛೇರಿಗೆ ಮಹಾದೇವಸ್ವಾಮಿಯವರನ್ನು ಅಮಾನತ್ತು ಪಡಿಸಿದ ಆದೇಶದ ಫ್ಯಾಕ್ಸ್ ತಲುಪಿತು. ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರ ಸೇವೆ ಅಮಾನತ್ತುಪಡಿಸುವ ಆದೇಶ ಹೊರಡಿಸಲು ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿದ್ದು ಸ್ಪಷ್ಟವಾಗಿತ್ತು. ಅದರಲ್ಲಿ ಅವರ ವೈಯಕ್ತಿಕ ದುರುದ್ದೇಶವಿರಲಿಲ್ಲ. ಒಳ್ಳೆಯ ರೀತಿಯಲ್ಲಿ ಕೆಲಸಕಾರ್ಯಗಳು ನಡೆಯಬೇಕೆಂಬುದು ಅವರ ಉದ್ದೇಶವಾಗಿತ್ತು. ಬೆಂಗಳೂರಿನಿಂದಲೇ ಜಿಲ್ಲಾಧಿಕಾರಿಯವರು ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಛಾರ್ಜು ಕೊಡದಿದ್ದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಜನತಾದಳದ ಕಾರ್ಯಕರ್ತರು ಮತ್ತೊಮ್ಮೆ ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಕಾಂಗ್ರೆಸ್ ಕಾರ್ಯಕರ್ತರ ಪಟಾಕಿ ಡಬ್ಬದಲ್ಲೇ ಉಳಿಯಿತು. ನಂತರ ೭-೮ ತಿಂಗಳವರೆಗೆ ಬೇರೆ ತಹಸೀಲ್ದಾರರ ನೇಮಕವಾಗದೆ ನಾನೇ ಅಧಿಕ ಪ್ರಭಾರೆಯಲ್ಲಿ ಕಾರ್ಯ ನಿರ್ವಹಿಸಿದೆ.
*******************
ಹಿಂದಿನ ಲೇಖನಗಳಿಗೆ ಲಿಂಕ್:
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -1:  http://kavimana.blogspot.com/2011/11/blog-post_13.html
ಲೋಕಾಯುಕ್ತ ದಾಳಿ- ನನ್ನ ಅನುಭವಗಳು -2:  http://kavimana.blogspot.com/2011/11/2.html

ಗುರುವಾರ, ನವೆಂಬರ್ 24, 2011

ಉತ್ತಮ ಬಾಂಧವ್ಯದೆಡೆಗೆ


     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.


     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ. 
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
***************
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 22, 2011

ಮೂಢ ಉವಾಚ - 81

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು
ತಿರುಳಿರದ ಫಲಕೆ ಸಮ ಅರಿವಿರದಕರ್ಮ |
ಕರ್ಮವಿರದಾ ಧರ್ಮ ಒಣಶುಷ್ಕ ಸಿದ್ಧಾಂತ
ನಿಜಧರ್ಮದ ಮರ್ಮ ಸತ್ಕರ್ಮ ಮೂಢ ||


ಅರಿವಿರದ ನರನಿರುವನೆ ದುರಿತದಿಂ ದೂರ
ಎಡವಿ ಜಾರುವನು ಕವಿಯೆ ಗೂಢಾಂಧಕಾರ |
ಬೆಳಗೀತು ಬಾಳು ಪಸರಿಸಲರಿವ ಬೆಳಕು
ವಿಕಸಿಸುವ ಹಾದಿ ತೋರೀತು ಮೂಢ ||ತಿಳಿದವರು ಯಾರಿಹರು ಆಗಸದ ನಿಜಬಣ್ಣ
ತುಂಬುವರು ಯಾರಿಹರು ಆಗಸದ ಶೂನ್ಯ |
ಆಗಸದ ನಿಜತತ್ವ ಅರಿತವರು ಯಾರಿಹರು 
ಗಗನದ ಗಹನತೆಗೆ ಮಿತಿಯೆಲ್ಲಿ ಮೂಢ || 


ಇವರಿಂತೆ ಅವರಂತೆ ಎಂತಿರಲಿ ಏನಂತೆ
ಇರುವೆ ನೀನೆಂತೆ ಬಿಟ್ಟುಬಿಡು ಪರಚಿಂತೆ |
ಹುಳುಕನೆತ್ತಾಡದಿರು ಕೆಡುಕು ನಿನಗಂತೆ
ಕೊಟ್ಟಿಗೆಯ ಶುನಕ*ನಾಗದಿರು ಮೂಢ ||

[*ಕೊಟ್ಟಿಗೆಯ ಶುನಕ: ಕೊಟ್ಟಿಗೆಯಲ್ಲಿ ನಾಯಿ ಇದ್ದರೆ ಅದು ತಾನಂತೂ ಹುಲ್ಲು ತಿನ್ನುವುದಿಲ್ಲ, ಆದರೆ ಹಸುವಿಗೂ ಹುಲ್ಲು ತಿನ್ನಲು ಬಿಡುವುದಿಲ್ಲ.]
**************************
-ಕ.ವೆಂ.ನಾಗರಾಜ್.ಶುಕ್ರವಾರ, ನವೆಂಬರ್ 18, 2011

ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2

      ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಹೊಳೆನರಸಿಪುರದ ವಿಶೇಷ ಭೂಸ್ವಾಧೀನಾಧಿಕಾರಿಯವರ ಕಛೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ನನ್ನ ಬಳಿ ಬಂದು ತನ್ನ ಹತ್ತಿರದ ಬಂಧು ಒಬ್ಬರು ತೀವ್ರ ಅನಾರೋಗ್ಯದಿಂದಿದ್ದಾರೆಂದು ಹೇಳಿ ಅವರಿಗೆ ಚಿಕಿತ್ಸೆ ಕೊಡಿಸಿ ಬರುವುದಾಗಿಯೂ, ತಡವಾಗಿ ಬರುವುದಾಗಿಯೂ ಕೇಳಿಕೊಂಡರು. ಮಾನವೀಯತೆಯ ಕಾರಣದಿಂದ ಒಪ್ಪಿ ಆದಷ್ಟು ಬೇಗ ಬರಬೇಕೆಂದು ತಿಳಿಸಿದ್ದೆ. ಮಧ್ಯಾಹ್ನದ ವೇಳೆಗೆ ಆತ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದ ಸುದ್ದಿ ಬಂತು. ನಿಜವಾಗಿ ನಡೆದದ್ದೇನೆಂದರೆ ಭೂಸ್ವಾಧೀನದ ಪರಿಹಾರದ ಚೆಕ್ ನೀಡಲು ಲಂಚ ಪಡೆಯುವ ಸಲುವಾಗಿ ಆತ ಬಂಧುವಿನ ಅನಾರೋಗ್ಯದ ಸುಳ್ಳು ಹೇಳಿದ್ದ. ಆತ ತರಬೇತಿಗೆ ಹಾಜರಾಗಿದ್ದಿದ್ದರೆ ಈ ಗತಿ ಬರುತ್ತಿರಲಿಲ್ಲ. ಸಾಯಂಕಾಲ ಹೊಳೆನರಸಿಪುರಕ್ಕೆ ನಾವು ಬರುವ ಸಮಯದಲ್ಲಿ ಲುಂಗಿ ಉಟ್ಟಿದ್ದ (ಪ್ಯಾಂಟನ್ನು ಜಪ್ತಿ ಮಾಡಿಕೊಂಡಿದ್ದರು) ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ಯಲಾಗುತ್ತಿತ್ತು. ತಲೆ ತಗ್ಗಿಸಿ ನಡೆಯುತ್ತಿದ್ದ ಆತನನ್ನು ಕಂಡು ಅಯ್ಯೋ ಅನ್ನಿಸಿತು.


     ಮೇಲಿನ ಘಟನೆ ನಡೆದು ಒಂದೆರಡು ವರ್ಷಗಳಾಗಿರಬಹುದು. ನಾನಾಗ ಸಕಲೇಶಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಒಂದು ದಿನ ರಾತ್ರಿ ಸುಮಾರು ೧೧ ಘಂಟೆಯಾಗಿತ್ತು. ಮನೆಯ ಬಾಗಿಲು ಬಡಿದ ಸದ್ದು ಕೇಳಿ ನೋಡಿದರೆ ಗಾಬರಿಯಲ್ಲಿದ್ದಂತೆ ಕಂಡು ಬಂದ ಸಕಲೇಶಪುರದ ಪಂಚಾಯಿತಿ ವಿಸ್ತರಣಾಧಿಕಾರಿ ಮಾತನಾಡಲು ತಡವರಿಸುತ್ತಿದ್ದರು. ಒಳಗೆ ಕರೆದು ನೀರು ಕುಡಿಯಲು ಕೊಟ್ಟೆ. ಸಮಾಧಾನವಾದ ನಂತರ ಅವರು ಹೇಳಿದ್ದೇನೆಂದರೆ ಹೊಳೆನರಸಿಪುರದ ಶಿರಸ್ತೇದಾರರೊಬ್ಬರನ್ನು ಲಂಚ ಸ್ವೀಕರಿಸುವಾಗ ಹಿಡಿಯಲು ತನ್ನನ್ನು ಸಾಕ್ಷಿಯಾಗಿ ಕರೆದುಕೊಂಡು ಹೋಗಿದ್ದರೆಂದೂ, ಅವರು ಮಧ್ಯಾಹ್ನ ರಜೆಯಲ್ಲಿದ್ದರಿಂದ ತನ್ನನ್ನು ವಾಪಸು ಕರೆದುಕೊಂಡು ಬಂದರೆಂದೂ ಹೇಳಿದರು. ಸಾಯಂಕಾಲ ೬ ಘಂಟೆಗೇ ವಾಪಸು ಬಂದರೂ ತನ್ನನ್ನು ಲೋಕಾಯುಕ್ತ ಕಛೇರಿಯಲ್ಲಿ ಈ ಕ್ಷಣದವರೆಗೂ ಕೂರಿಸಿಕೊಂಡಿದ್ದರೆಂದೂ, ಮರುದಿನ ಬೆಳಿಗ್ಗೆ ೫ ಘಂಟೆಗೇ ಬರಲು ಹೇಳಿದ್ದಾರೆಂದೂ ತಿಳಿಸಿದರು. ಬಹುಷಃ ಬೇರೆ ಯಾರಿಗೂ ಸುದ್ದಿ ತಿಳಿಯದಿರಲಿ ಎಂದು ಹಾಗೆ ಮಾಡಿದ್ದಿರಬೇಕು. ನಾನು ಹಿಂದೆ ಹೊಳೆನರಸಿಪುರದಲ್ಲಿ ಕೆಲಸ ಮಾಡಿದ್ದರಿಂದ ಅವರಿಗೆ ಹೇಗಾದರೂ ಮಾಡಿ ಸುದ್ದಿ ಕೊಡಲು ನನಗೆ ಕೋರಿಕೊಂಡರು. ಆ ಅಧಿಕಾರಿಗೆ ಹೊಳೆನರಸಿಪುರದ ಶಿರಸ್ತೇದಾರರ ಪರಿಚಯವಿರದೇ ಇದ್ದರೂ, ಅವರಿಗೆ ತೊಂದರೆಯಾಗಬಾರದೆಂಬ ಕಳಕಳಿಯಿತ್ತು. ನಾನು ಸುದ್ದಿ ತಲುಪಿಸಿದೆ. ಶಿರಸ್ತೇದಾರರು ನಂತರದ ಎರಡು ದಿನಗಳು ರಜೆ ವಿಸ್ತರಿಸಿ ಕಛೇರಿಗೇ ಬರಲಿಲ್ಲ. ರಜೆಯಲ್ಲಿದ್ದುಕೊಂಡೇ ಯಾರು ತನ್ನನ್ನು ಸಿಕ್ಕಿಸಲು ಪ್ರಯತ್ನಿಸುತ್ತಿದ್ದರೋ ಅವರ ಕೆಲಸ ಬೇಗ ಮಾಡಿಕೊಡುವಂತೆ ಇತರ ಸಹೋದ್ಯೋಗಿಗಳಿಗೆ ಹೇಳಿ ಮಾಡಿಸಿದರು. ಹೀಗಾಗಿ ಅವರು ಬಚಾವಾದರು. ಆ ಪಂಚಾಯಿತಿ ಅಧಿಕಾರಿ ಮತ್ತು ನಾನು ಮಾಡಿದ ಆ ಕೆಲಸ ಒಂದು ರೀತಿಯಲ್ಲಿ ಸರಿಯೂ ಆಗಿತ್ತು, ತಪ್ಪೂ ಆಗಿತ್ತು.


     ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದ ನನಗೆ ವರ್ಗಾವಣೆಯಾಗಿ ಶಿವಮೊಗ್ಗಕ್ಕೆ ಬಂದ ಒಂದೆರಡು ತಿಂಗಳಿನಲ್ಲಿ (ಸುಮಾರು ಮೂರು ವರ್ಷಗಳ ಹಿಂದೆ) ನಡೆದ ಘಟನೆಯಿದು. ಶಿಕಾರಿಪುರದ ತಾಲ್ಲೂಕು ಕಛೇರಿಯ ಗ್ರಾಮಲೆಕ್ಕಿಗ, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಒಬ್ಬ ಗುಮಾಸ್ತರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದರು. ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ರೂ. ೨೦೦೦/- ಹೆಚ್ಚಿನ ಹಣಕ್ಕೆ ಒತ್ತಾಯಿಸಿ ಸಿಕ್ಕಿಬಿದ್ದಿದ್ದರವರು. ಖಾತೆ ಆದೇಶವಾಗಿದ್ದರೂ ನಕಲು ಕೊಡಲು ಸತಾಯಿಸಿದ್ದ ಗುಮಾಸ್ತರ ಪಾತ್ರವೇ ಇದರಲ್ಲಿ ಹೆಚ್ಚಿನದಾಗಿತ್ತು. ಆ ಗುಮಾಸ್ತ ಅನುಕಂಪದ ಆಧಾರದಲ್ಲಿ ನೇಮಕವಾಗಿದ್ದ ತರುಣನಾಗಿದ್ದು ಸೇವೆಗೆ ಸೇರಿ ೬-೭ ವರ್ಷಗಳಾಗಿದ್ದಿರಬಹುದು.  ಆತನಿಗೆ ತಾನೇ ಬುದ್ಧಿವಂತನೆಂಬ ಮನೋಭಾವದೊಂದಿಗೆ ಇತರರನ್ನು ಕೀಳಾಗಿ ಕಾಣುವ, ಜನರನ್ನು ಸತಾಯಿಸುವ ಮನೋಭಾವ. ನಾನು ಅಧಿಕಾರಿಯಾಗಿದ್ದಾಗ ಆಗಾಗ್ಗೆ ಪರಿಶೀಲಿಸುತ್ತಿದ್ದುದು, ಎಚ್ಚರಿಕೆ ನೀಡುತ್ತಿದ್ದುದು ಅವನಿಗೆ ಇಷ್ಟವಾಗುತ್ತಿರಲಿಲ್ಲ. ಕೆಲಸ ಮಾಡದೆ ಇದ್ದುದಕ್ಕೆ ವಿಚಾರಿಸಿದರೆ ಮೊಂಡುವಾದ ಮಾಡುತ್ತಿದ್ದ. ಅವನ ಅಸಮರ್ಪಕ ಕೆಲಸಕ್ಕಾಗಿ ನೋಟೀಸು ನೀಡಿ ವಿವರಣೆ ಪಡೆದ ನಂತರ ಅವನ ವಿರುದ್ಧ ಶಿಸ್ತುಕ್ರಮಕ್ಕಾಗಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದೆ. ಆ ಸಂದರ್ಭದಲ್ಲೇ ನನಗೆ ವರ್ಗಾವಣೆಯಾಗಿದ್ದರಿಂದ ಆತ ಮುಂದಿನ ಶಿಸ್ತುಕ್ರಮ ನಡೆಯದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದ. ಹೇಗೆ ಎಂದು ವಿವರಿಸಬೇಕಿಲ್ಲವೆಂದುಕೊಳ್ಳುತ್ತೇನೆ. ಈ ಮಹಾಶಯನ ಹತ್ತಿರ ಹಣವಿದ್ದಾಗಲೇ ಲೋಕಾಯುಕ್ತ ಪೋಲಿಸರು ಅವನನ್ನು ಹಿಡಿದಿದ್ದರು. ಅವನು ತಕ್ಷಣ ಹಣವನ್ನು ಬಾಯಿಗೆ ಹಾಕಿಕೊಂಡು ಅಗಿದು ನುಂಗಲು ಪ್ರಾರಂಭಿಸಿದ. ಕೂಡಲೇ ಪೋಲಿಸರು ಅವನ ಕುತ್ತಿಗೆ ಮೇಲೆ ಹೊಡೆದು ಹಣ ಕಕ್ಕುವಂತೆ ಮಾಡಿ ಒದ್ದೆಮುದ್ದೆಯಾದ ಎಂಜಲು ನೋಟುಗಳನ್ನೇ ವಶಪಡಿಸಿಕೊಂಡಿದ್ದರು. ಅವನು ತನ್ನನ್ನು ಹಿಡಿದಿದ್ದ ಪೋಲಿಸರ ಕೈಯನ್ನೇ ಕಚ್ಚಿ, ಪರಚಿ, ಹೊಡೆದು ಓಡಿಹೋಗಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ಪ್ರಕರಣ ದಾಖಲಾಯಿತು. ಸಂಬಂಧಿಸಿದವರು ಅಮಾನತ್ತುಗೊಂಡರು. ೬ ತಿಂಗಳ ನಂತರ ಅಮಾನತ್ತು ರದ್ದಾಗಿ ಅವರುಗಳು ಈಗ ಬೇರೆ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಘಟನೆ ನಡೆದ ನಂತರದಲ್ಲಿ ಗುಮಾಸ್ತ ತನ್ನ ಸಹೋದ್ಯೋಗಿಗಳಿಗೆ "ಆ ಬೆಂಕಿ ಇದ್ದಿದ್ದರೆ ನಾನು ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ" ಎಂದು ಹೇಳಿದ್ದನಂತೆ. 'ಬೆಂಕಿ' ಅನ್ನುವುದು ಶಿಕಾರಿಪುರದ ತಾಲ್ಲೂಕು ಕಛೇರಿ ನೌಕರರು ನನಗೆ ಇಟ್ಟಿದ್ದ ಅಡ್ಡಹೆಸರಾಗಿತ್ತು. ಒಂದು ರೀತಿಯಲ್ಲಿ ಅದು ನಿಜವಿರಬಹುದು. ಏಕೆಂದರೆ ಪ್ರತಿದಿನ ಸಾಯಂಕಾಲ ೫-೦೦ರ ನಂತರದಲ್ಲಿ ನಾನು ಭೂಮಿ ಶಾಖೆಯಲ್ಲಿ (ಜಮೀನುಗಳ ಖಾತೆ ಮಾಡುವ ಗಣಕೀಕರಣ ಶಾಖೆ) ಬಾಕಿ ಉಳಿದ ಪ್ರಕರಣಗಳ ಸಮೀಕ್ಷೆ ನಡೆಸಿ ಅವಧಿ ಮೀರಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ರೆವಿನ್ಯೂ ಇನ್ಸ್‌ಪೆಕ್ಟರರಿಗೆ ಸೂಚನೆ ನೀಡುತ್ತಿದ್ದೆ. ಮರುದಿನವೇ ಅವರು ಖಾತೆ ಇತ್ಯರ್ಥ ಪಡಿಸಿದ ಬಗ್ಗೆ (ಮಂಜೂರು ಅಥವ ವಜಾ) ನನ್ನ ಗಮನಕ್ಕೆ ತರಲೇಬೇಕಿತ್ತು. ನಾನು ಶಿಕಾರಿಪುರದ ತಹಸೀಲ್ದಾರನಾಗಿದ್ದ ಎರಡು ಅವಧಿಗಳಲ್ಲಿ ಯಾವೊಬ್ಬ ನೌಕರರೂ ಲೋಕಾಯುಕ್ತ ಬಲೆಗೆ ಬಿದ್ದಿರಲಿಲ್ಲ ಅನ್ನುವುದು ವಿಶೇಷವೇ ಸರಿ. 
**************
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 15, 2011

ಕೆಳದಿ ಕವಿಮನೆತನ: ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ

ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ
     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ೫ನೆಯ ವಾರ್ಷಿಕ ಸಮಾವೇಶದ ಆಯೋಜಕರಾಗಿ ಕವಿ ಸುರೇಶರ ಸಲಹೆ, ಸೂಚನೆಗಳನ್ನು ಪಡೆದು ಉತ್ತಮ ವ್ಯವಸ್ಥೆ ಮಾಡಿದ್ದರು. ಕವಿ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಯುವಪೀಳಿಗೆ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ವಿಚಾರ ಮಂಡಿಸಿದವರು ಕವಿನಾಗರಾಜ್. ಇಂತಹ ಕಾರ್ಯಕ್ರಮ ಅನುಕರಣೀಯವೆಂದವರು ಮುಖ್ಯ ಅತಿಥಿ ಶ್ರೀ ಹರಿಹರಪುರ ಶ್ರೀಧರ್. ವಯೋವೃದ್ಧರೂ, ಮಾರ್ಗದರ್ಶಿಗಳಾದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಸಮಾರಂಭದಲ್ಲಿ ಹಾಜರಾಗಿ ಕುಟುಂಬ ಮಿಲನದ ಮಹತ್ವ  ತಿಳಿಸಿದವರು ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಶ್ರೀ ಪದ್ಮನಾಭ ಭಟ್ಟರು. ಆಶುಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಆಯೋಜಕರಿಗೆ ಅಭಿನಂದನೆ, ವಂದನಾರ್ಪಣೆಗಳೊಂದಿಗೆ ಸಮಾವೇಶ ಸಂಪನ್ನಗೊಂಡಿತು. ಕೆಲವು ಚಿತ್ರಗಳು ತಮ್ಮ ಮಾಹಿತಿಗೆ:
     ೬ನೆಯ ವಾರ್ಷಿಕ ಸಮಾವೇಶ ದಿನಾಂಕ ೨೫-೧೨-೨೦೧೧ರಂದು ಹಾಸನದಲ್ಲಿ ನಡೆಯಲಿದೆ.
ಹಿಂದಿನ ಲೇಖನಕ್ಕೆ ಲಿಂಕ್: ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ : http://kavimana.blogspot.com/2011/11/blog-post_05.html

ಭಾನುವಾರ, ನವೆಂಬರ್ 13, 2011

ಲೋಕಾಯುಕ್ತ ದಾಳಿ - ನನ್ನ ಅನುಭವಗಳು -1


ಘಟನೆ ೧:
     ಇದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ೧೯೮೧ರಲ್ಲಿ ನಡೆದ ಒಂದು ಘಟನೆ. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.
ಘಟನೆ ೨: 
     ೧೯೮೪ರಲ್ಲಿ ಹೊಳೆನರಸಿಪುರದ ಹಳ್ಳಿಮೈಸೂರು ನಾಡಕಛೇರಿಯಲ್ಲಿ ನಡೆದ ಪ್ರಸಂಗವಿದು. ಆಗ
ಪಹಣಿ ಪ್ರತಿಯನ್ನು ಕೈಯಲ್ಲಿ ಬರೆದು ಕೊಡುವ ಪದ್ಧತಿಯಿತ್ತು. ನಕಲು ಶುಲ್ಕವನ್ನು ಪಡೆದು ಅದನ್ನು ನಂತರ ಜಮಾ ಮಾಡುವ ಕ್ರಮವಿತ್ತು. ಒಂದು ಪಹಣಿಗೆ ಒಂದು ರೂ. ಶುಲ್ಕ. ಆದರೆ ಜನರು ಸಾಮಾನ್ಯವಾಗಿ ೫ ರಿಂದ ೧೦ ರೂ. ಕೊಟ್ಟು ನಕಲು ಪಡೆಯುತ್ತಿದ್ದರು. ಕೊಡದಿದ್ದವರಿಂದ ಗುಮಾಸ್ತ ಕೇಳಿ ಹೆಚ್ಚು ಪಡೆಯುವುದು ಎಲ್ಲರಿಗೂ ತಿಳಿದದ್ದೇ. ನಿರೀಕ್ಷಿಸಿದ ಮೊಬಲಗು ಸಿಗದಿದ್ದಾಗ ನಕಲು ಕೊಡಲು ಸತಾಯಿಸುವುದು, ತಡ ಮಾಡುವುದು ಆಗುತ್ತಿತ್ತು. ಒಂದು ದಿನ ಒಬ್ಬರು ಪಹಣಿ ನಕಲು ಕೇಳಲು ಬಂದವರು ೧೦ ರೂ. ಅನ್ನು ಗುಮಾಸ್ತ ಚಿಕ್ಕಯ್ಯರ ಬಳಿಯಿದ್ದ ದಪ್ಪ ಪಹಣಿ ಪುಸ್ತಕದ ಕೆಳಗೆ ಇಟ್ಟು ನಸುನಕ್ಕು ಹೊರಗೆ ಹೋದರು. ಕೆಲವೇ ನಿಮಿಷಕ್ಕೆ ಒಳನುಗ್ಗಿದ ಲೋಕಾಯುಕ್ತ ಪೋಲಿಸರನ್ನು ಕಂಡು ಗುಮಾಸ್ತ ಬೆಚ್ಚಿಬಿದ್ದ. ಅವನು ಹಣವನ್ನು ಮುಟ್ಟಿರಲಿಲ್ಲ. ಗುಮಾಸ್ತರ ಎರಡೂ ಕೈಗಳನ್ನು ಪೋಲಿಸರು ಹಿಡಿದುಕೊಂಡಾಗ ಅವನು ತನ್ನ ಕೈಗಳನ್ನು ಬೆನ್ನ ಹಿಂದಿರಿಸಿ ಬಿಗಿಯಾಗಿ ಮುಷ್ಟಿ ಕಟ್ಟಿದ್ದ. ತಾನು ಹಣ ಪಡೆದಿಲ್ಲವೆಂದು ಒತ್ತಿ ಒತ್ತಿ ಹೇಳುತ್ತಿದ್ದ. ಆಗ ಒಳಬಂದ ಲೋಕಾಯುಕ್ತ ಇನ್ಸ್ ಪೆಕ್ಟರರು ಅವರು ಹಣ ಮುಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಕೈಬಿಡಿ ಎಂದು ಸಹಾಯಕ ಪೋಲಿಸರ ಕೈಬಿಡಿಸಿ ತಮ್ಮನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಗುಮಾಸ್ತರ ಕೈ ಕುಲುಕಿದರು. "ಹಣ ಪಡೆಯದಿದ್ದ ಮೇಲೆ ಹೆದರಿಕೆಯೇಕೆ? ಪರೀಕ್ಷೆ ಮಾಡೋಣ. ಈ ದ್ರವದಲ್ಲಿ ಕೈ ಅದ್ದಿ. ದ್ರವ ಬಣ್ಣಕ್ಕೆ ತಿರುಗದಿದ್ದರೆ ಬಿಟ್ಟುಬಿಡುತ್ತೇವೆ" ಎಂದು ಆತನ ಕೈಯನ್ನು ಆಗ ಸಿದ್ಧಪಡಿಸಿದ ದ್ರವದಲ್ಲಿ ಅದ್ದಿಸಿದಾಗ ಅದು ಪಿಂಕ್ ಬಣ್ಣಕ್ಕೆ ತಿರುಗಿತು. ಆತ ಹಣ ಮುಟ್ಟಿರದಿದ್ದರೂ ದ್ರವ ರಾಸಾಯನಿಕ ಲೇಪಿಸಿದ ನೋಟು ಮುಟ್ಟಿದವರಂತೆ ಬಣ್ಣಕ್ಕೆ ತಿರುಗಿದ್ದು ಆಶ್ಚರ್ಯಕರವಾಗಿತ್ತು. ವಾಸ್ತವವಾಗಿ ಇನ್ಸ್ ಪೆಕ್ಟರರು ಗುಮಾಸ್ತರ ಕೈಕುಲುಕಿ ಗಟ್ಟಿಯಾಗಿ ಹಿಡಿದುಕೊಂಡಾಗ ಗುಮಾಸ್ತರ ಕೈಗೆ ಇನ್ಸ್ ಪೆಕ್ಟರರ ಕೈಯಿಂದ ರಾಸಾಯನಿಕ ಲೇಪನ ವರ್ಗಾವಣೆಯಾಗಿತ್ತು. ಹಣ ಮುಟ್ಟದಿದ್ದರೂ ಬಳಿಯಿದ್ದ ಮೇಜು, ಬೀರು, ಇತ್ಯಾದಿಗಳಲ್ಲಿ ಹಣ ಪತ್ತೆಯಾದರೂ ಪ್ರಕರಣ ದಾಖಲಿಸಲು ಸಾಕಿತ್ತು. ಆದರೆ ಕೇಸನ್ನು ಗಟ್ಟಿ ಮಾಡಲು ಈ ತಂತ್ರ ಬಳಕೆಯಾಗಿತ್ತು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಗುಮಾಸ್ತ ನಿರ್ದೋಷಿಯೆಂಬ ಆದೇಶ ನ್ಯಾಯಾಲಯದಿಂದ ಹೊರಬಂದಿತ್ತು. 
ಘಟನೆ ೩:
     ಬೇಲೂರು ತಾಲ್ಲೂಕು ಕಛೇರಿಯಲ್ಲಿ (೧೯೮೭-೮೮ರಲ್ಲಿರಬಹುದು) ಸಹೋದ್ಯೋಗಿ ಶಿರಸ್ತೇದಾರರು, ಗುಮಾಸ್ತರು ಮತ್ತು ಇಬ್ಬರು ಗ್ರಾಮಸ್ಥರು ಕಛೇರಿಯ ಹಿಂಬಾಗಿಲ ಸಮೀಪದಲ್ಲಿ ನಿಂತು ಮಾತನಾಡುತ್ತಿದ್ದುದು ನನಗೆ ನಾನು ಕುಳಿತ ಸ್ಥಳದಿಂದ ಕಾಣಿಸುತ್ತಿತ್ತು. ನಂತರ ಅವರುಗಳು ಸಮೀಪದ ಹೋಟೆಲಿಗೆ ಹೋಗಿ ಕಾಫಿ ಕುಡಿದು ಬಂದರು. ಆ ಶಿರಸ್ತೇದಾರರು ವಾಪಸು ಬಂದು ಕುರ್ಚಿಯಲ್ಲಿ ಕುಳಿತದ್ದೇ ತಡ ಧಡಕ್ಕೆಂದು ಬಂದ ಲೋಕಾಯುಕ್ತ ಪೋಲಿಸರು ಅವರ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಬಿಟ್ಟರು. ಶಿರಸ್ತೇದಾರರು, ಅಕ್ಕಪಕ್ಕದ ಗುಮಾಸ್ತರುಗಳು ಬೆಚ್ಚಿಬಿದ್ದರು. ಕೆಲವೇ ನಿಮಿಷದಲ್ಲಿ ಲೋಕಾಯುಕ್ತ ದಾಳಿಯಾಗಿದೆಯೆಂದು ಅರಿವಿಗೆ ಬಂತು. ಶಿರಸ್ತೇದಾರರು ಮಾತನಾಡುವ ಸ್ಥಿತಿಯಲ್ಲೇ ಇರಲಿಲ್ಲ. ವಾಸ್ತವವಾಗಿ ಹಿಂದೆ ಇದ್ದ ಶಿರಸ್ತೇದಾರರು ಈ ಪ್ರಕರಣದಲ್ಲಿ ಲಂಚ ಕೊಟ್ಟವರನ್ನು ಸತಾಯಿಸಿದ್ದರು. ಕೆಲವೇ ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈಗ ಸಿಕ್ಕಿಬಿದ್ದ ಶಿರಸ್ತೇದಾರರು ಕೆಲಸ ಮಾಡಲು ಬಂದಿದ್ದರು. ದೂರುದಾರರು ಗುಮಾಸ್ತರಿಗೆ ಲಂಚ ಕೊಟ್ಟಾಗ ಅವರು ಶಿರಸ್ತೇದಾರರಿಗೇ ಕೊಡಿ ಎಂದು ಹೇಳಿ ಶಿರಸ್ತೇದಾರರಿಗೆ ಕೊಡಿಸಿದ್ದರಂತೆ. ಶಿರಸ್ತೇದಾರರ ಪ್ಯಾಂಟಿನಲ್ಲಿ ಹಣ ಸಿಕ್ಕಿತು. ಗುಮಾಸ್ತರೊಬ್ಬರ ಮನೆಯಿಂದ ಲುಂಗಿ ತರಿಸಿಕೊಟ್ಟು ಶಿರಸ್ತೇದಾರರ ಪ್ಯಾಂಟನ್ನೂ ಸಹ ಅಮಾನತ್ತು ಪಡಿಸಿಕೊಂಡರು. ಈ ಹಂತದಲ್ಲಿ ಪೋಲಿಸರ ವರ್ತನೆಯೇ ಬದಲಾಗಿತ್ತು. ಅವರನ್ನು ಏಕವಚನದಲ್ಲಿ ಗದರಿಸುತ್ತಿದ್ದಲ್ಲದೇ ಕಪಾಳಕ್ಕೂ ಹೊಡೆದಿದ್ದರು. ಈ ಶಿರಸ್ತೇದಾರರಿಗೆ ರಾಜಕೀಯದವರ ಬೆಂಬಲವೂ ಇದ್ದಿದ್ದರಿಂದ ಕಛೇರಿಯಲ್ಲಿ ಬಹಳ ಜನ ಕೂಡಿ ಗಲಾಟೆ ಮಾಡಲು ಪ್ರಾರಂಭಿಸಿದರು. ದೂರು ನೀಡಿದ ವ್ಯಕ್ತಿಯನ್ನೂ ಜನರು ಹಿಗ್ಗಾಮುಗ್ಗಾ ಥಳಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಲೋಕಾಯುಕ್ತ ಪೋಲಿಸರು ಸ್ಥಳೀಯ ಪೋಲಿಸರ ಸಹಾಯ ಪಡೆದು ಜನರನ್ನು ಚದುರಿಸಿ ಪ್ರಕರಣ ದಾಖಲಿಸಿದರು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲರಾದರೆಂದು ನ್ಯಾಯಾಲಯದ ಆದೇಶ ಹೊರಬಂದಿತು. 


     ಇಂತಹ ಹಲವಾರು ಪ್ರಕರಣಗಳನ್ನು ನನ್ನ ಸೇವಾವಧಿಯಲ್ಲಿ ಗಮನಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿ ಲಂಚ ಪಡೆದವರು ಸೇವೆಯಿಂದ ವಜಾಗೊಂಡಿದ್ದಾರೆ. ಮೇಲಿನ ಮೂರನೆಯ ಘಟನೆ ನಡೆದ ನಂತರದಲ್ಲಿ ನಾನು ಗಮನಿಸಿದ ಬೆಳವಣಿಗೆಗಳನ್ನು ಹಂಚಿಕೊಳ್ಳಲೇಬೇಕು. ತಿಂಗಳಿಗೊಮ್ಮೆ ಲೋಕಾಯುಕ್ತ ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬಂದು ತಾಲ್ಲೂಕಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪರಿಶೀಲಿಸಲು, ವಿಚಾರಿಸಲು ಬರುತ್ತಿದ್ದರು. ಅಧಿಕಾರಿಗಳನ್ನು, ದೂರುದಾರರನ್ನು ಕರೆಸಿ ವಿಚಾರಿಸುತ್ತಿದ್ದರು. ಸಾಯಂಕಾಲ ಕಛೇರಿ ಅವಧಿಯ ನಂತರದಲ್ಲಿ ತಾಲ್ಲೂಕಿನ ಹಲವು ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಹೋಗಿ ಕಪ್ಪಕಾಣಿಕೆ ಸಲ್ಲಿಸಿಬರುತ್ತಿದ್ದರು. ಈ ಕೆಲಸ ನಿಯಮಿತವಾಗಿ ಪ್ರತಿತಿಂಗಳೂ ನಡೆಯುತ್ತಿತ್ತು. ನಾನು ಗಮನಿಸುವ ಮೊದಲಿನಿಂದಲೂ ಈ ಪದ್ಧತಿ ಇದ್ದಿರಬಹುದು. ಈ ಪ್ರಕರಣದ ನಂತರ ಮಾಮೂಲು ಒಪ್ಪಿಸುವ ಅಧಿಕಾರಿಗಳ ಸಂಖ್ಯೆ ಹೆಚ್ಚಿತ್ತು. ಕಪ್ಪ ಒಪ್ಪಿಸಿದ ಅಧಿಕಾರಿಗಳು ನಿಶ್ಚಿಂತರಾಗಿ ಅಭಯ ಪಡೆದು ಹಿಂತಿರುಗುತ್ತಿದ್ದರು. 

ಮೂಢ ಉವಾಚ - 80

ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ
ಸತಿಸುತರನಾರಿಸರು ಬಂಧುಗಳನಾರಿಸರು |
ಹಿರಿಯರನಾರಿಸರು ದೇವರದೇವನಾರಿಸರು
ತಾವೆ ಮಿಗಿಲೆಂಬರು ಇದು ಸತ್ಯ ಮೂಢ ||


ಸಕಲವನು ಬಯಸುವ ಲೋಭದ ಪರಿಯೇನು
ಅಹಮಿಕೆಯು ತಾನೆರಗಿ ಮೆರೆದಿಹ ಸಿರಿಯೇನು |
ಗೆಲ್ಲಹೊರಟಿಹುದೇನು ಬಾಳಲಾರದ ಮನುಜ
ಮಾಯೆಯ ಮುಸುಕು ಸರಿದೀತೆ ಮೂಢ || ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು
ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು |
ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು
ಸುಳ್ಳಿನ ಗುಳ್ಳೆಯೊಡೆದೀತು ಮೂಢ ||


ಮಾಯೆಯಲಿ ಸೊಗವು ಮಾಯೆಯಲಿ ಜಗವು
ಮಾಯೆಯಲಿ ನಲಿವು ಮಾಯೆಯಲಿ ನೋವು |
ಮಾಯಾವಿ ಮಾಯೆಯಿಂ ಜಗವು ನಡೆದಿಹುದು
ಮಾಯೆಯಿಲ್ಲದಿರೆ ಜಗವೆಲ್ಲಿ ಮೂಢ ||
****************
-ಕ.ವೆಂ.ನಾಗರಾಜ್.ಬುಧವಾರ, ನವೆಂಬರ್ 9, 2011

ಮೂಢ ಉವಾಚ - 79

ಏನಿದೇನಿದೀ ಮಾಯೆ ಏನಿದೇನಿದೀ ಚೋದ್ಯ
ಇರುವುದೇ ಮೂರು ದಿನ ಜಗವನೆ ಬಯಸಿಹರು |
ಚಿರಕಾಲ ಬದುಕೆಂದು ಭ್ರಮೆಯ ತಳೆದಿಹರು
ಈ ಜಗವ ನಡೆಸಿಹುದು ಮಾಯೆ ಮೂಢ || 


ನೂರು ಜನ್ಮವು ಅಲ್ಪ ತಿಳಿಯಲೀ ಜಗವ
ಅಲ್ಪಜ್ಞ ಕುಣಿವ ತೋರಿ ಪಂಡಿತನ ಭಾವ |
ಪರರ ಹೀಗಳೆದು ತಾನೆ ಸರಿಯೆನುವವನು
ಮಾಯೆಯ ಬಲೆಯಲಿಹ ಕೀಟ ಮೂಢ ||
***************
-ಕ.ವೆಂ.ನಾಗರಾಜ್.

ಪ್ರಾಸಂಗಿಕವಾಗಿ ಈ ಸುದ್ದಿ ತಮ್ಮ ಗಮನಕ್ಕಾಗಿ:
:

ರಸಿಕರಾಗೋಣ!

      ಈ ಮಾತು ಹೇಳಿದರೆ ಈ ವಯಸ್ಸಿನಲ್ಲಿ ಇದೇನು ಹೇಳುತ್ತಿದ್ದಾನೆ ಎಂದು ಅನ್ನಿಸಬಹುದು. ನಿಮಗೆ ಹೀಗೆ ಅನ್ನಿಸುವುದು ಸಹಜವೇ ಸರಿ. ಏಕೆಂದರೆ ರಸಿಕತೆ ಎಂದರೆ ವಿಲಾಸಪ್ರಿಯತೆ, ಸರಸವಾಗಿರುವಿಕೆ ಎಂಬ ಅರ್ಥವಿದೆ. ರಸಿಕನೆಂದರೆ ವಿಷಯಲಂಪಟನೆಂದೇ ತಿಳಿಯುವವರು ಹೆಚ್ಚು.  ೯೦ ವರ್ಷದ ಮುದುಕ ೧೮ ವರ್ಷದ ಹುಡುಗಿಯನ್ನು ಮದುವೆಯಾಗುವ ಸುದ್ದಿ, ನಿತ್ಯಾನಂದರ ಕುರಿತು ಅಗತ್ಯಕ್ಕಿಂತ ಹೆಚ್ಚು ಅಬ್ಬರದ ಕುಪ್ರಚಾರ, ಅನ್ಶೆತಿಕ ಸಂಬಂಧಗಳ ವರ್ಣರಂಜಿತ, ವೈಭವೀಕರಿಸಿದ ಸುದ್ದಿಗಳು ದೃಷ್ಯಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿವೆ. ಕೆಲವು ಸುದ್ದಿಗಳು ಮಾಧ್ಯಮದವರಿಂದಲೇ ಸೃಷ್ಟಿಯಾಗುತ್ತವೆ. ವಿಷಯಲಂಪಟತೆಯನ್ನು ಕೃಷ್ಣಲೀಲೆ ಎನ್ನುವುದು, ವಿಷಯಲಂಪಟರನ್ನು ಕೃಷ್ಣಪರಮಾತ್ಮ ಎಂದು ವ್ಯಂಗ್ಯವಾಗಿ ಹೋಲಿಸುವುದು, ಇತ್ಯಾದಿಗಳು ರಸಿಕತೆ ಪದ ಈಗ ಯಾವ ಅರ್ಥ ಪಡೆದುಕೊಂಡಿದೆಯೆಂಬುದರ ದ್ಯೋತಕ. ಧನಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ ಸಿಗದಿರುವುದು, ಕೇವಲ ಋಣಾತ್ಮಕ ಸಂಗತಿಗಳಿಗೆ ಸಿಗಬೇಕಾದಕ್ಕಿಂತ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದರಿಂದ ರಸಿಕತೆಯ ನಿಜವಾದ ಅರ್ಥ ಕಣ್ಮರೆಯಾಗಿದೆಯೇನೋ ಎಂದು ಭಾಸವಾಗುತ್ತಿದೆ. 
     ರಸವೆಂದರೆ ಸಾರ, ರಸಿಕನೆಂದರೆ ರಸಾಸ್ವಾದ ಮಾಡುವವನು ಎಂದಷ್ಟೇ ಅರ್ಥ. ರಸಿಕತೆಯೆಂದರೆ ಅದರಲ್ಲಿ ನಿಜವಾದ ಸುಖ, ಸಂತೋಷ ಸಿಗುವಂತಿರಬೇಕು. ಇಲ್ಲದಿದ್ದರೆ ಅದು ನ್ಶೆಜ ರಸಿಕತೆಯೆನಿಸಲಾರದು. ಚಾಕೊಲೇಟು, ಪೆಪ್ಪರಮೆಂಟುಗಳನ್ನು ಸವಿಯುವ ಮಕ್ಕಳನ್ನು ಗಮನಿಸಿದ್ದೀರಾ? ಎಲ್ಲಿ ಚಾಕೊಲೇಟು ಬೇಗ ಮುಗಿದು ಹೋಗುವುದೋ ಎಂದು ನಿಧಾನವಾಗಿ ರಸವನ್ನು ಚಪ್ಪರಿಸುತ್ತಾ ಆಗಾಗ್ಗೆ ಅದನ್ನು ಬಾಯಿಂದ ಹೊರತೆಗೆದು ನೋಡಿ ಖುಷಿಪಡುವ ಮಕ್ಕಳನ್ನು ಕೈ, ಬಾಯಿ ಎಲ್ಲವನ್ನೂ ಅಂಟು ಮಾಡಿಕೊಳ್ಳಬೇಡವೆಂದು ದೊಡ್ಡವರು ಗದರಿಸುತ್ತಾರಲ್ಲವೇ? ಆದರೆ, ಅದು ಯಾವುದನ್ನೂ ಲೆಕ್ಕಿಸದ ಮಗು ತನ್ನ ಪಾಡಿಗೆ ತಾನು ರಸಾಸ್ವಾದ ಮಾಡುತ್ತಿರುತ್ತದೆ, ಆನಂದಿಸುತ್ತಿರುತ್ತದೆ. ಅದು ರಸಿಕತೆ! ಎಳೆಯ ಕಂದಮ್ಮಗಳನ್ನು ಆಡಿಸಿದಾಗ ಅವು ಬೊಚ್ಚುಬಾಯಿ ಬಿಟ್ಟು ಕೇಕೆ ಹಾಕಿ ನಗುವುದರಲ್ಲಿ ರಸಿಕತೆಯಿದೆ, ಏಕೆಂದರೆ ಅಲ್ಲಿ ಕೃತಕತೆಯ ಸೋಂಕಿಲ್ಲ. ನಾವೂ ಅಷ್ಟೆ, ರುಚಿರುಚಿಯಾದ ಪದಾರ್ಥಗಳನ್ನು ಗಬಗಬನೆ ತಿನ್ನುವುದಿಲ್ಲ, ಕುಡಿಯುವುದಿಲ್ಲ. ಅದರ ಸವಿಯನ್ನು ಅನುಭವಿಸುತ್ತಾ ಸ್ವಲ್ಪ ಸ್ವಲ್ಪವಾಗಿ ತಿನ್ನುತ್ತೇವಲ್ಲಾ, ಕುಡಿಯುತ್ತೇವಲ್ಲಾ, ಅದರಲ್ಲಿ ರಸಿಕತೆಯಿದೆ. ರಸಿಕರಾಗೋಣ.
     ರಸಿಕತೆಯಲ್ಲಿ ತನ್ಮಯತೆಯಿದೆ. ಒಬ್ಬ ಚಿತ್ರಕಾರ, ಒಬ್ಬ ಬರಹಗಾರ ತಮ್ಮ ಕೃತಿಯನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದ ನಂತರ ಅದನ್ನು ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಳ್ಳುತ್ತಾರಲ್ಲಾ, ಆನಂದಿಸುತ್ತಾರಲ್ಲಾ, ಅದು ರಸಿಕತೆ! ಹೊಟ್ಟೆಪಾಡಿಗೆ ಮಾಡುವ ಕೆಲಸದಲ್ಲೂ ಆನಂದ ಕಾಣುವ ರಸಿಕರಿದ್ದಾರೆ. ಅಂತಹ ರಸಿಕರೇ ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ, ಚೊಕ್ಕವಾಗಿ ಮಾಡುವವರೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. ರಸಿಕರಾಗೋಣ.
     ರಸಿಕತೆಯೆಂದರೆ ಪ್ರೀತಿಸುವುದು, ಅದರಲ್ಲಿ ಪೂರ್ಣ ಸಂತೋಷ ಪಡೆಯುವುದು. ಕಳ್ಳತನದ ಕಾಮದಾಟವನ್ನು ರಸಿಕತೆಯೆನ್ನುವುದಾದರೆ ಅದು ಆ ಪದಕ್ಕೆ ಮಾಡುವ ಅಪಚಾರವೇ ಸರಿ. ಏಕೆಂದರೆ ಅಂತಹ ಕ್ರಿಯೆಯಲ್ಲಿ ಪೂರ್ಣ ಸಂತೋಷ ಸಿಗುವುದೆಂಬುದು ಭ್ರಮೆ. ಅಂತಹ ಕ್ರಿಯೆಯಲ್ಲಿ ಅಳುಕಿದೆ, ಆತಂಕವಿದೆ, ಭಯವಿದೆ. ಇನ್ನು ಆನಂದಕ್ಕೆ ಅರ್ಥವೆಲ್ಲಿ? ಯಾವ ಕ್ರಿಯೆಯಿಂದ ಅಳುಕಿಲ್ಲದ, ಆತಂಕವಿಲ್ಲದ ಆನಂದ ದೊರೆಯುವುದೋ ಅದನ್ನು ಮಾತ್ರ ರಸಿಕತೆಯೆನ್ನಬಹುದು. ನಿಜವಾದ ರಸಿಕ ಬಲವಂತ ಮಾಡಲಾರ. ರಾವಣ ಸಹ ಸಮಾಗಮಕ್ಕಾಗಿ ಸೀತೆಯ ಒಪ್ಪಿಗೆ ಪಡೆಯಲು ಪ್ರಯತ್ನಿಸಿದನೇ ಹೊರತು ಬಲಾತ್ಕಾರ ಮಾಡಲಿಲ್ಲ. ಪ್ರೀತಿಯೆಂದರೆ ಕೇವಲ ಗಂಡು-ಹೆಣ್ಣಿನ ಮಿಲನಕ್ಕೆ ಸೀಮಿತವಾಗಿರದೆ, ಅದಕ್ಕೂ ಮೀರಿರಬೇಕು.  ಗಂಡು-ಹೆಣ್ಣಿನ ಮಿಲನ ಸಹ ಪ್ರೀತಿಪೂರ್ವಕವಾಗಿರಬೇಕು. ಇಲ್ಲದಿದ್ದರೆ ಅದನ್ನು ಕಾಮವೆಂದು ಮಾತ್ರ ಹೇಳಬಹುದು. ಪಾಶ್ಚಾತ್ಯರಲ್ಲಿ ಕಂಡು ಬರುವ ಮುಕ್ತಕಾಮವನ್ನು  ಸ್ವೇಚ್ಛಾಚಾರದ ಸಾಲಿಗೆ ಸೇರಿಸಬಹುದೇ ಹೊರತು ರಸಿಕತೆಯೆನ್ನಲಾಗದು. ಅಲ್ಲಿ ದೈಹಿಕ ತೀಟೆ ತೀರಿಸಿಕೊಳ್ಳುವ ಕ್ರಿಯೆಯಿದೆಯೇ ಹೊರತು ಪ್ರೀತಿಯ ಸೋಂಕು ಕಡಿಮೆ. ನಿಜರಸಿಕರಾಗೋಣ.
     ತಾಯಿ-ಮಕ್ಕಳ ಪ್ರೀತಿ, ಮಕ್ಕಳನ್ನು ಮುದ್ದು ಮಾಡುವ ಹಿರಿಯರ ಪ್ರೀತಿ, ಮಕ್ಕಳು ದೊಡ್ಡವರನ್ನು ಪ್ರೀತಿಸುವ, ಗೌರವಿಸುವ ರೀತಿಯೂ ರಸಿಕತೆಯೇ! ನಾನು ಹೇಗಿದ್ದೇನೆ, ನನ್ನ ಆಕಾರ ಈಗ ಹೇಗಿದೆಯೆಂದು ನನಗೆ ಗೊತ್ತು. ಒಂದಾನೊಂದು ಕಾಲದಲ್ಲಿ ಸುಂದರನಾಗಿದ್ದೆನೇನೋ! ಆದರೂ ಈಗ ನನ್ನ ಮೊಮ್ಮಗಳು 'ಮೈ ತಾತಾ ಈಸ್ ವೆರಿ ವೆರಿ ವೆರಿ ಕ್ಯೂಟ್' ಅನ್ನುತ್ತಾಳೆ! ನಾನು ಅವಳನ್ನು ತುಂಬಾ ಹಚ್ಚಿಕೊಂಡಿದ್ದೇನೆ, ಮುದ್ದಿಸುತ್ತೇನೆ, ಪ್ರೀತಿಸುತ್ತೇನೆ, ಅದಕ್ಕೇ ಇರಬಹುದು. ರಸಿಕರಾಗೋಣ.
     ನಿಜವಾದ ರಸಿಕರೆಂದರೆ ವಿರಾಗಿಗಳೇ! ಆಶ್ಚರ್ಯಪಡಬೇಡಿ. (ಕಪಟಿ ಸನ್ಯಾಸಿಗಳನ್ನು, ನಿತ್ಯಾನಂದರನ್ನು ನೆನಪಿಸಿಕೊಳ್ಳಬೇಡಿ!) ವಿರಾಗಿಗಳು, ಸನ್ಯಾಸಿಗಳು ಬಯಕೆಗಳನ್ನು, ಆಸೆಗಳನ್ನು ಬಿಟ್ಟವರು ಎಂದು ಹೇಳಲಾಗದು. ಅವರು ಸಾಮಾನ್ಯರು ಬಯಸುವಂತಹ ಸಂಗತಿಗಳು, ಆಸೆಗಳನ್ನು ಬಯಸುವವರಲ್ಲ. ಅವರದು ಅತ್ಯುನ್ನತ ಬಯಕೆ, ಆಸೆ. ಅವರು ಅತ್ಯುನ್ನತ ಬಯಕೆಯಾದ ತಮ್ಮನ್ನು ತಾವು ಅರಿಯುವ, ಆ ಮೂಲಕ ಪರಮಾತ್ಮನನ್ನು ಅರಿಯುವ ಹಾಗೂ ಅದರಿಂದ ಅತ್ಯುನ್ನತ ಆನಂದಸ್ಥಿತಿಯಾದ ಸಚ್ಚಿದಾನಂದಭಾವವನ್ನು ಹೊಂದುವ ಹೆಬ್ಬಯಕೆ ಹೊಂದಿದವರು. ಭಾವಸಮಾಧಿ ಅನ್ನುತ್ತಾರಲ್ಲಾ, ಅದು ರಸಿಕತೆಯ ಉತ್ಕಟ ಸ್ಥಿತಿ. ರಸಿಕರಾಗಲು ಪ್ರಯತ್ನಿಸೋಣ, ರಸಿಕರಾಗೋಣ!
*************
-ಕ.ವೆಂ.ನಾಗರಾಜ್.

ಮಂಗಳವಾರ, ನವೆಂಬರ್ 8, 2011

'ಕವಿಮನ' ತಾಣವನ್ನು ವೀಕ್ಷಿಸಿದವರ ವಿವರ:


     'ಕವಿಮನ' ತಾಣಕ್ಕೆ ಭೇಟಿ ನೀಡಿ ಪರದೇಶದವರೂ, ರಶಿಯಾ, ಮಲೇಶಿಯಾ, ಜರ್ಮನಿ, ಕೊರಿಯಾ ದೇಶಗಳ ಆಸಕ್ತರೂ ಸೇರಿದಂತೆ 5009 ಪುಟವೀಕ್ಷಣೆಗಳಾಗಿರುವುದು ಸಂತಸದ ಸಂಗತಿಯಾಗಿದೆ. ಭಾರತದ, ವಿಶೇಷವಾಗಿ ಕರ್ನಾಟಕದ ವೀಕ್ಷಕರಿಂದ 3949 ಪುಟವೀಕ್ಷಣೆಗಳಾಗಿವೆ.  ಎಲ್ಲಾ ಓದುಗರಿಗೂ ಕೃತಜ್ಞತೆಯ ನಮನಗಳು.
ರಾಷ್ಟ್ರಗಳ ಪ್ರಕಾರವಾಗಿ ಪುಟದ ವೀಕ್ಷಣೆಗಳು
ಭಾರತ
೩,೯೪೯
ಅಮೇರಿಕಾ ಸಂಯುಕ್ತ ಸಂಸ್ಥಾನ
೬೬೮
ಮಲೇಶಿಯಾ
೮೦
ರಶಿಯಾ
೪೬
ಕೆನಡಾ
೩೭
ಜರ್ಮನಿ
೩೦
ಸಂಯುಕ್ತ ಅರಬ್ ಎಮಿರೇಟಸ್
೨೫
ದಕ್ಷಿಣ ಕೋರಿಯಾ
೨೫
ಲಾಟ್ವಿಯಾ
೧೩
ಬ್ರಿಟನ್/ಇಂಗ್ಲೆಂಡ್

ಸೋಮವಾರ, ನವೆಂಬರ್ 7, 2011

ಮೂಢ ಉವಾಚ - 78


ಹೆಸರು ಹೆಸರೆಂದು ಕೊಸರಾಡಿ ಫಲವೇನು
ನೆನೆಸುವರು ಚಿರರಿಹರೆ ಚಿರವೆ ಹೆಸರು? |
ಅರಿತವರೆ ಬಿಡದಿಹರು ಹೆಸರ ಹಂಬಲವ
ಹುಲುನರರ ಕಥೆಯೇನು ಹೇಳು ಮೂಢ ||


ಏನಿಲ್ಲ ಏನಿಹುದು ಪೂರ್ಣ ಜಗವಿಹುದು
ಶಕ್ತನಿರೆ ಪಡೆಯುವೆ ದೇವನ ಕರುಣೆಯಿದು |
ಪಡೆದಿರುವೆ ನೀನು ಕೊಡದಿರಲು ದ್ರೋಹ
ಕೊಟ್ಟಷ್ಟು ಪಡೆಯುವೆ ನಿಜವು ಮೂಢ ||ಹೊರಗಣ್ಣು ತೆರೆದಿದ್ದು ಒಳಗಣ್ಣು ಮುಚ್ಚಿರಲು
ಹೊರಗಿವಿ ಚುರುಕಿದ್ದು ಒಳಗಿವಿಯು ಇಲ್ಲದಿರೆ |
ಸುತ್ತೆಲ್ಲ ಹುಡುಕಾಡಿ ತನ್ನೊಳಗೆ ಇಣುಕದಿರೆ
ತಿರುಳಿರದ ಹಣ್ಣಿನ ಸಿಪ್ಪೆ ನೀ ಮೂಢ ||


ಎಲ್ಲರನು ಜಯಿಸಿದವ ವೀರನೆಂಬುದು ಸುಳ್ಳು
ತನ್ನ ತಾ ಜಯಿಸದಿರೆ ಅವನೊಂದು ಜೊಳ್ಳು |
ಎಲ್ಲವನು ಪಡೆದವನು ಹಿರಿತನವ ಪಡೆದಾನೆ
ತನದಲ್ಲವೆನುವವನೆ ಹಿರಿಯ ಮೂಢ ||
***************
-ಕ.ವೆಂ.ನಾಗರಾಜ್.

ಶನಿವಾರ, ನವೆಂಬರ್ 5, 2011

ದಿ.ಎಸ್.ಕೆ. ನಾರಾಯಣರಾಯರ ನೆನಪು


     ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.  (ನಮ್ಮ ಮುತ್ತ ಜ್ಜ  ಕವಿವೆಂಕಣ್ಣಯ್ಯನವರ ತಮ್ಮ ಸಾ.ಕ.ಲಿಂಗಣ್ಣಯ್ಯನವರ ಹಿರಿಯ ಮಗ). ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಅವರ ಮೊಮ್ಮಗ ಬೆಂಗಳೂರಿನ ಶ್ರೀ ಸತೀಶಕುಮಾರ್ ಕಳಿಸಿಕೊಟ್ಟಿರುವ ಅಪರೂಪದ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದೆ. ಶ್ರೀ ನಾರಾಯಣರಾಯರ ಕುರಿತು ಲೇಖನ ಮುಂದಿನ 'ಕವಿಕಿರಣ' ಸಂಚಿಕೆಯಲ್ಲಿ ಪ್ರಕಟವಾಗಲಿದೆ. 
ಪತ್ನಿ ದಿ. ಶ್ರೀಮತಿ ವರಲಕ್ಷ್ಮಮ್ಮನವರೊಂದಿಗೆ


ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ

"ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು
ಮುಂದಡಿಯನಿಟ್ಟೇವು ಸಾಧನೆಯ ಮಾಡೇವು"
     ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ರಂದು ನಡೆದ ಸಮಾವೇಶ ಸಹ ಕವಿಮನೆತನದವರ ಹಾಗೂ ಬಂಧು-ಬಳಗದವರಲ್ಲಿ ಪೂರ್ವಜರ ಸಾಧನೆಗಳನ್ನು ಗುರುತಿಸುವ, ಸ್ಮರಿಸುವ ಮತ್ತು ಆ ಮೂಲಕ ಸಜ್ಜನಶಕ್ತಿಯನ್ನು ಒಗ್ಗೂಡಿಸುವ ಮನೋಭಾವ ಜಾಗೃತಿಗೊಳಿಸುವಲ್ಲಿ ಸಫಲವಾಯಿತು. ೧೪-೦೫-೦೯ರಂದು ನಿಧನರಾದ ಶಿಕಾರಿಪುರದ ಶ್ರೀಮತಿ ವಿನೋದಾಯಿಗೋಪಾಲರಾವ್ ಮತ್ತು ೧೪-೦೭-೦೯ರಂದು ನಿಧನರಾದ ಕವಿಮನೆತನದ ಅತಿ ಹಿರಿಯ ಸದಸ್ಯರಾಗಿದ್ದ ಶ್ರೀ ಕವಿವೆಂಕಟಸುಬ್ಬರಾಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕವಿಕಿರಣದ ಡಿಸೆಂಬರ್,೨೦೦೯ರ ಸಂಚಿಕೆ ಬಿಡುಗಡೆಯಾಯಿತು.
     ಸಮಾವೇಶದ ಆಯೋಜಕರಾಗಿದ್ದ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ್ದ ಅನುಭವ ಹಂಚಿಕೊಂಡದ್ದು ಅವಿಸ್ಮರಣಿಯವಾಗಿತ್ತು. ಅವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಪಡೆದ ಸನ್ಮಾನ, ಪ್ರಶಸ್ತಿಗಳನ್ನು ಪ್ರದರ್ಶಿಸಲಾಗಿದ್ದು ಎಲ್ಲರಿಗೆ ಪ್ರೇರಣಾದಾಯಿಯಾಗಿತ್ತು. (ಸಾಧಕ ಶ್ರೀ ಶೇಷಾದ್ರಿ ದೀಕ್ಷಿತರ ಕುರಿತು ಹಿಂದೆ ಪ್ರಕಟಿಸಿದ್ದ ಲೇಖನವನ್ನು ಆಸಕ್ತರು ಗಮನಿಸಬಹುದು: http://kavimana.blogspot.com/2011/07/blog-post_29.html )
     ಶ್ರೀಮತಿಯರಾದ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್ ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶಜೋಯಿಸ್ ಇವರುಗಳು ಪ್ರಧಾನ ಸೂತ್ರಧಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಸೃಜನಾತ್ಮಕವಾಗಿದ್ದು ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದವು. ಸ್ವರಚನೆ ಮಾಡಿ ಹಾಡಲಾದ ಹಾಡುಗಳಿಗೆ ಚಿಕ್ಕವರು, ದೊಡ್ಡವರು ಎಂಬ ಭೇದವಿಲ್ಲದೆ ನೃತ್ಯ ಬಾರದಿದ್ದ ಸಭಿಕರೂ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವ ಸಂಕೇತವಾಗಿತ್ತು, ಸಮಾವೇಶವನ್ನು ಅರ್ಥಪೂರ್ಣಗೊಳಿಸಿತ್ತು. ಸಮಾವೇಶದ ಆಯೋಜಕರಾದ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತ್ ಸಹೋದರರು, ಕವಿಕಿರಣ ಸಂಚಿಕೆಯ ಪ್ರಾಯೋಜಕರನ್ನು ಅಭಿನಂದಿಸಲಾಯಿತು. ಶಿಕಾರಿಪುರದಲ್ಲಿ ಮುಂದಿನ ಸಮಾವೇಶ ನಡೆಸಲು ನಿರ್ಧರಿಸಲಾಯಿತು. ಸಮಾವೇಶದ ಕೆಲವು ಫೋಟೋಗಳು ನಿಮ್ಮ ಮಾಹಿತಿಗಾಗಿ.(ಹಿಂದಿನ ಲೇಖನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು:   http://kavimana.blogspot.com/2011/10/blog-post_30.html)

ಗುರುವಾರ, ನವೆಂಬರ್ 3, 2011

ಜಿಹಾದ್, ಜಿಹಾದ್!

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್|
ಒಳಗಿನ ಮೊರೆಯಿದು, ಜಿಹಾದ್ ಜಿಹಾದ್|


ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು,
ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು
ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ,
ಬುದ್ಧಿಯನ್ನು ದಹಿಸುವ ಕ್ರೋಧ ನಿನ್ನ ವೈರಿ,
ವೈರಿಗಳ ತರಿಯೋಣ ಜಿಹಾದ್ ಜಿಹಾದ್|


ನರರ ತರಿದು ಗೆಲ್ವೆನೆಂದು ಕಾಣದಿರು ಕನಸು
ಕಸುವಿದ್ದರೆ ಒಳಗಿರುವ ವೈರಿಯನ್ನು ಮಣಿಸು
ಮೋಹ ಕೊರಳಿಗುರುಳು ಕುಣಿಕೆಯನ್ನು ಸರಿಸು
ಹರಿಹರಿದು ತಿನ್ನುತಿಹ ಮದವ ಮೆಟ್ಟಿ ಕೊಲ್ಲು
ಕೊಲ್ಲೋಣ ಕೊಲ್ಲೋಣ ಜಿಹಾದ್ ಜಿಹಾದ್!


ಬಾಂಬು ಹಾಕಿ ವಿಷವನಿಕ್ಕಿ ಮಾಡಿದ್ದೇನು ನೀನು
ಮತ್ಸರದ ಕೊರಳನಮುಕಿ ಹಿಡಿಯಬಲ್ಲೆಯೇನು
ಅಡಗಿರುವ ಲೋಭವನ್ನು ಹುಡುಕಬಲ್ಲೆಯೇನು
ವೀರ ಶೂರನಾದರೆ ಹಿಡಿದು ಎಳೆದು ಸಾಯಿಸು
ಮೆಟ್ಟೋಣ ಕುಟ್ಟೋಣ ಜಿಹಾದ್ ಜಿಹಾದ್!
-ಕ.ವೆಂ.ನಾಗರಾಜ್.