ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಸೆಪ್ಟೆಂಬರ್ 23, 2017

ಸಮಾಜ ಸೇವೆಯಲ್ಲ, ಋಣ ತೀರಿಕೆ!


     'ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ' ಎಂದು ಓಟು ಕೇಳಲು ಬರುವ ರಾಜಕಾರಣಿಗಳು ಕೇಳುತ್ತಾರೆ. ಸಮಾಜಸೇವೆಗೇ ನನ್ನ ಬಾಳು ಮುಡಿಪು ಎಂದು ಹೇಳಿಕೊಳ್ಳುವವರೂ ಕಾಣಸಿಗುತ್ತಾರೆ. ಅಧಿಕಾರ, ಹಣಗಳಿಕೆ, ಸ್ವಾರ್ಥ, ಸ್ವಂತ ಕುಟುಂಬದ ಹಿತವನ್ನೇ ಪ್ರಧಾನವಾಗಿಸಿಕೊಂಡು ಸಮಾಜಸೇವೆಯ ಸೋಗು ಹಾಕುವವರು  ಸ್ವಮಜಾಸೇವೆಯೇ ಸಮಾಜಸೇವೆ ಎಂದು ಅರ್ಥ ಬರುವಷ್ಟರ ಮಟ್ಟಿಗೆ ಸಮಾಜಸೇವೆ ಎಂಬ ಪದವನ್ನು ಅಪಮೌಲ್ಯಗೊಳಿಸಿಬಿಟ್ಟಿದ್ದಾರೆ. ಸ್ವಾತಂತ್ರ್ಯ ಬಂದಾಗ ಚಿಕ್ಕ ಬಾಲಕರಾಗಿದ್ದವರೂ ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಳ್ಳುತ್ತಾರೆ ಮತ್ತು ಜನರಿಂದ ಗೌರವಿಸಲ್ಪಡುತ್ತಾ ಬೀಗುತ್ತಾರೆ. ಸಾಮಾಜಿಕ ಚಟುವಟಿಕೆಗಳಷ್ಟೇ ಸಮಾಜಸೇವೆ ಎಂದು ತಪ್ಪು ತಿಳಿದುಕೊಂಡಿರುವವರೂ ಇದ್ದಾರೆ. ಇಷ್ಟಕ್ಕೂ ಈ ಸಮಾಜಸೇವೆ ಅಂದರೇನು? ಸಮಾಜಸೇವೆ ಏಕೆ ಮಾಡಬೇಕು? ಇತ್ಯಾದಿ ವಿಷಯಗಳ ಒಳಹೊಕ್ಕರೆ, ಇದರ ಅರ್ಥ ತಿಳಿದುಕೊಂಡರೆ ಜನ ಢೋಂಗಿ ಸಮಾಜ ಸೇವಕರ ಬಗ್ಗೆ ಎಚ್ಚರ ವಹಿಸಿಯಾರು ಮತ್ತು ಆತ್ಮಾವಲೋಕನ ಮಾಡಿಕೊಂಡಾರು.
     ಶರೀರ ಮತ್ತು ಶರೀರದೊಳಗೆ ಜೀವ (ಆತ್ಮ) ಇರುವವರೆಗೆ ಆಹಾರ, ಪಾನೀಯ, ವಸ್ತ್ರ, ವಾಸಕ್ಕೆ ಮನೆ ಇತ್ಯಾದಿಗಳಿಗಾಗಿ ಶ್ರಮ ಪಡಲೇಬೇಕು ಮತ್ತು ಇದಕ್ಕಾಗಿ ಸಮಾಜವನ್ನು ಆಶ್ರಯಿಸಲೇಬೇಕು. ಇವುಗಳನ್ನೆಲ್ಲಾ ಪಡೆಯಲು ಸಮಾಜ ನಮಗೆ ಬೇಕು, ಆದರೆ ಪ್ರತಿಯಾಗಿ ಸಮಾಜಕ್ಕೆ ಏನೂ ಮಾಡುವುದಿಲ್ಲವೆಂದರೆ ಅದು ದ್ರೋಹವೂ, ಪಾಪವೂ ಆಗುತ್ತದೆ. ಸಮಾಜ ದ್ರೋಹಿಯಾದವನು ಆಧ್ಯಾತ್ಮಿಕ ಉನ್ನತಿಗೂ ಅನರ್ಹನೆಂದು ವೇದ ಸಾರುತ್ತದೆ. ಸಮಾಜದಿಂದ ಬೇಕಾದುದನ್ನು ಪಡೆದ ಮೇಲೆ ಸಮಾಜಕ್ಕೂ ಏನಾದರೂ ಕೊಡಲೇಬೇಕಾದುದು ಪ್ರತಿಯೊಬ್ಬನ ಕರ್ತವ್ಯ. ಇಲ್ಲದಿದ್ದರೆ ಸಮಾಜಕ್ಕೆ ಅವನು ಸಾಲಗಾರನೇ ಸರಿ. ಈ ಸಾಲ ತೀರಿಸಲು ಕರ್ಮ ಮಾಡಲೇ ಬೇಕು. 'ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ|' (ಯಜು.೪೦.೨.) (ಈ ಲೋಕದಲ್ಲಿ ಇಂತಹ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷಗಳವರೆಗೆ ಬದುಕಿರಲು ಬಯಸಲೇಬೇಕು.) ಸಮಾಜದ ಸಲುವಾಗಿ ಕರ್ಮ ಮಾಡದವನು ಜಗತ್ತಿಗೆ ಹೊರೆಯಾಗುತ್ತಾನೆ, ಸಮಾಜಕ್ಕೆ ಸಾಲಗಾರನಾಗುತ್ತಾನೆ, ಅನ್ನಶತ್ರುವಾಗುತ್ತಾನೆ. ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ - ಹೀಗೆ ಕರ್ಮದ ವ್ಯಾಪ್ತಿ ಹಿರಿದಾದುದು. ಇನ್ನೊಬ್ಬರಿಗೆ ಕೆಡುಕಾಗದಂತೆ ವೈಯಕ್ತಿಕ, ಪಾರಿವಾರಿಕ ಹಿತಸಾಧನೆಯೊಂದಿಗೆ ಎಲ್ಲರ ಹಿತ ಬಯಸುವ ಕರ್ಮಗಳು ಎಲ್ಲರೂ ಮಾಡಲೇಬೇಕಾದುದು. ಕುಟುಂಬದ ಹಿತಕ್ಕಾಗಿ ತನ್ನ ಹಿತ, ಗ್ರಾಮದ ಹಿತಕ್ಕಾಗಿ ಕುಟುಂಬದ ಹಿತ, ರಾಜ್ಯದ ಹಿತಕ್ಕಾಗಿ ಗ್ರಾಮದ ಹಿತ ಮತ್ತು ರಾಷ್ಟ್ರದ ಹಿತಕ್ಕಾಗಿ ಸರ್ವಹಿತವನ್ನು ತ್ಯಜಿಸಬೇಕೆಂದು ಒಂದು ಸುಭಾಷಿತ ಹೇಳುತ್ತದೆ. ಗಮನಿಸಿ, ಇವೆಲ್ಲಾ ಕರ್ತವ್ಯವೇ ಹೊರತು ಸೇವೆಯಲ್ಲ.
     ನಿಜವಾದ ಸಮಾಜಸೇವೆಯೆಂದರೆ ಹಸಿದವರಿಗೆ ಅನ್ನ ಸಿಗುವಂತೆ ಮಾಡುವುದು, ದೀನ ದಲಿತರ ಸೇವೆ ಮಾಡುವುದು. ಎಲ್ಲಿಯವರೆಗೆ ಅಸಂಖ್ಯಾತ ಜನರು ಹಸಿವು ಮತ್ತು ಅಜ್ಞಾನಗಳಿಂದ ಬಳಲುತ್ತಿರುತ್ತಾರೋ ಅಲ್ಲಿಯವರೆಗೆ, ಅಂತಹ ಜನರ ಹಣದಿಂದ ವಿದ್ಯಾವಂತರೆನಿಸಿ ಅವರಿಗೆ ಕನಿಷ್ಠ ಗಮನವನ್ನೂ ಕೊಡದ ಪ್ರತಿಯೊಬ್ಬರೂ ದ್ರೋಹಿಗಳು ಎಂಬುದು ವಿವೇಕಾನಂದರ ನೇರನುಡಿ. ಯಾರ ಹೃದಯಗಳು ಬಡವರಿಗಾಗಿ ಮರುಗುತ್ತದೋ ಅವರು ಮಹಾತ್ಮರು, ಇಲ್ಲವಾದರೆ ದುರಾತ್ಮರು. ಹಸಿದವರನ್ನು ಮುಂದಿಟ್ಟುಕೊಂಡು ಅವರಿಗೆ ಧರ್ಮದ ಬಗ್ಗೆ, ನೀತಿಯ ಬಗ್ಗೆ ಉಪದೇಶ ಮಾಡುವುದು, ಅವರ ಬಡತನ, ಹಸಿವುಗಳನ್ನು ಬಂಡವಾಳವಾಗಿಸಿಕೊಂಡು ಮತಾಂತರ ಮಾಡುವುದು, ಇತ್ಯಾದಿಗಳು ಅವರಿಗೆ ಮಾಡುವ ಅವಮಾನವಲ್ಲದೇ ಮತ್ತೇನೂ ಅಲ್ಲ.
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
     ಜೀವನದ ಪ್ರಾಥಮಿಕ ಅವಶ್ಯಕತೆಗಳು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಕಾರ್ಯಗಳು, ಚಟುವಟಿಕೆಗಳು ಮೊದಲನೆಯ ಸ್ತರದ ಸಮಾಜಸೇವೆಯೆನಿಸಿದರೆ, ಇಂತಹ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವ ಸಾಮಾಜಿಕ ಚಟುವಟಿಕೆಗಳು, ಸುಯೋಗ್ಯ ಶಿಕ್ಷಣ ನೀಡಿಕೆ, ಅಭಿವೃದ್ಧಿ ಕಾರ್ಯಗಳು, ನೈತಿಕ ಮೌಲ್ಯಗಳಿಗೆ ನೀಡುವ ಉತ್ತೇಜನ ಮೊದಲಾದವು ನಂತರದ ಸ್ತರಗಳ ಸಮಾಜ ಸೇವೆ ಎನ್ನಬಹುದು. ಈಗಂತೂ ಸೇವೆಯ ಸೋಗಿನಲ್ಲಿ ಸ್ವಪ್ರತಿಷ್ಠೆಯ ಮೆರೆದಾಟ, ಮತಾಂತರದ ಹಾವಳಿ,  ದೇಶವಿರೋಧಿ ಚಟುವಟಿಕೆಗಳಿಗೆ ಪೋಷಣೆ ಮಾಡುತ್ತಿರುವುದನ್ನೂ ಕಾಣುತ್ತಿದ್ದೇವೆ. ಇದಕ್ಕೆ ಕಾರಣ, ಬಡವರು ಮುಂದೆ ಬರಲು ಅವಕಾಶವಾಗದಿರುವುದು, ಆಲಸಿಕೆಯ ಮನೋಭಾವ, ಉತ್ತಮ ಶಿಕ್ಷಣದ ಕೊರತೆ, ಇತ್ಯಾದಿಗಳೇ ಆಗಿವೆ. ಬಡತನವನ್ನು ದುರುಪಯೋಗಪಡಿಸಿಕೊಳ್ಳುವವರ ಹುನ್ನಾರಗಳನ್ನು ತಡೆಗಟ್ಟುವುದು ಇಂದಿನ ಅಗತ್ಯವಾಗಿದೆ.
     ಸಮಾಜಕ್ಕಾಗಿ ದುಡಿದು ದುಡಿದು ದಣಿದಿದ್ದೇನೆ, ಜನರು ನನ್ನ ಕೆಲಸವನ್ನು ನೆನಪಿನಲ್ಲಿಟ್ಟುಕೊಳ್ಳಲಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಲವತ್ತುಕೊಂಡಿದ್ದ ಸಂದರ್ಭದಲ್ಲಿ ಗ್ರಾಮದ ಹಿರಿಯರೊಬ್ಬರು ಆ ನಾಯಕರ ಆರ್ಥಿಕ ಸ್ಥಿತಿ ಮೊದಲು ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಜ್ಞಾಪಿಸಿದಾಗ ನಾಯಕರಿಗೆ ಇರಸುಮುರುಸಾಗಿತ್ತು. ಸಮಾಜ ಸೇವೆ ಮಾಡುವುದು ಎಲ್ಲರ ಕರ್ತವ್ಯ. ಈ ಕರ್ತವ್ಯ ಮಾಡದಿರುವವರ ಸಂಖ್ಯೆ ಜಾಸ್ತಿ ಇರುವಾಗ ಮಾಡುವ ಕೆಲವೇ ಕೆಲವರು ದೊಡ್ಡವರಲ್ಲವೇ ಎಂಬ ವಾದವೂ ತರವಲ್ಲ. ಮಾಡದಿದ್ದವರು ಕರ್ತವ್ಯ ವಿಮುಖರು ಅಷ್ಟೆ. ಸಮಾಜ ಸೇವೆ ಅನ್ನುವುದು ಪ್ರಚಾರ ಪಡೆಯುವ ಸಾಧನವಾಗಬಾರದು. ದೇವಸ್ಥಾನದ, ಚರ್ಚಿನ, ಮಸೀದಿಯ ಮೆಟ್ಟಲಿನ ಮೇಲೆ ನಿಂತು, ಕೆಳಗೆ ಕುಳಿತಿರುವ ದೀನ ವ್ಯಕ್ತಿಗೆ ಐವತ್ತು ಪೈಸೆ, ಒಂದು ರೂಪಾಯಿ ನಾಣ್ಯ ಹಾಕಿ ತಮ್ಮನ್ನು ತಾವು ಕರುಣಾಮಯಿಗಳು ಎಂದು ಭಾವಿಸಿಕೊಳ್ಳಬೇಕಿಲ್ಲ. ಅಂತಹ ವ್ಯಕ್ತಿ ಇರುವುದರಿಂದಲೇ ಕೊಡುವವನಿಗೆ ದಾನ ಮಾಡಲು ಅವಕಾಶವಾಗಿದೆ. ಹಾಗಾಗಿ ಅಂತಹವರಿಗೆ ಕೃತಜ್ಞರಾಗಿರಬೇಕು, ಔದಾರ್ಯ, ಕರುಣೆ ತೋರುವ ಮೂಲಕ ತಮ್ಮನ್ನು ತಾವೇ ಉನ್ನತ ಸ್ಥಿತಿಗೆ ಏರಲು ಅವಕಾಶವಾದುದಕ್ಕೆ ಧನ್ಯತಾಭಾವ ಹೊಂದಬೇಕು.
     ವ್ಯಕ್ತಿತ್ವ ವಿಕಸನ ಶಿಬಿರಗಳು, ಸಂಸ್ಕಾರ ಶಿಬಿರಗಳು, ವಿವಿಧ ಸಾಮಾಜಿಕ ಚಟುವಟಿಕೆಗಳು  ವ್ಯಕ್ತಿಯನ್ನು ಸಮಾಜದ ಹಿತಕ್ಕಾಗಿ ಕಾರ್ಯ ಮಾಡಲು ಪ್ರೇರಿಸುವಂತಿರಬೇಕು. ಶಿಕ್ಷಣ ಪದ್ಧತಿಯಲ್ಲೂ ಬದಲಾವಣೆ ತಂದು ನೈತಿಕ ಮೌಲ್ಯಗಳು, ಸಾಮಾಜಿಕ ಕರ್ತವ್ಯಗಳ ಅಗತ್ಯ ಮತ್ತು ಮಹತ್ವವನ್ನು ಶಿಕ್ಷಾರ್ಥಿಗಳಿಗೆ ಒತ್ತಿ ಹೇಳುವಂತೆ ಮಾರ್ಪಡಿಸಬೇಕು. ಇಂದಿನ ಹೆಚ್ಚಿನ ಸಾಮಾಜಿಕ ಚಟುವಟಿಕೆಗಳು ವೈಯಕ್ತಿಕ ಸಾಧನೆಗೆ ಪ್ರೇರಿಸುವಂತಿವೆ ಮತ್ತು ಹಣ ಗಳಿಸುವ ಸಾಧನಗಳಾಗಿವೆ. ಉತ್ತಮ ಸಮಾಜಕಾರ್ಯಗಳನ್ನು ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ, ಪ್ರಶಸ್ತಿ, ಹಣ ಕೊಡುವ ಸಂಪ್ರದಾಯ ಒಳ್ಳೆಯದೇ ಆದರೂ, ಇದನ್ನು ಗಮನಿಸಿದಾಗ ಸಮಾಜಕಾರ್ಯ ಮಾಡುವವರ ಕೊರತೆ, ಸಮಾಜಕಾರ್ಯದ ಮಹತ್ವ ಅರಿಯದವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಕಳವಳವಾಗಬೇಕು. ಎಂತಹ ದುರ್ಭರ ಸನ್ನಿವೇಶದಲ್ಲೂ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಜಪಾನೀಯರು ಎಲ್ಲರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕೊಡಲಾಗುತ್ತಿರುವ ಶಿಕ್ಷಣದ ರೀತಿಯಾಗಿದೆ. ಭಾರತದಲ್ಲಿ ಇಂತಹ ಶಿಕ್ಷಣ ಪದ್ಧತಿ ಬರಬೇಕೆಂದರೂ ಅದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ತಡೆಯೊಡ್ಡುವ ಕೆಲಸ ಮಾಡುತ್ತವೆ. ನೈಜ ಸಮಾಜ ಹಿತಚಿಂತಕರು ಬದಲಾವಣೆ ತರಲು ಕಂಕಣಬದ್ಧರಾಗಬೇಕು.
     ಜೀವನದ ಕೊನೆಯಲ್ಲಿ ಗಣನೆಗೆ ಬರುವುದು ನಾವು ಎಷ್ಟು ಪದವಿಗಳನ್ನು ಗಳಿಸಿದೆವು, ಎಷ್ಟು ಪ್ರಶಸ್ತಿಗಳನ್ನು ಪಡೆದೆವು, ಎಷ್ಟು ಹಣ, ಆಸ್ತಿ, ಅಧಿಕಾರ ಸಂಪಾದಿಸಿದೆವು ಎಂಬುದಲ್ಲ. ನಾವು ಎಷ್ಟು ಹಸಿದ ಹೊಟ್ಟೆಗಳನ್ನು ತಣಿಸಿದೆವು, ಎಷ್ಟು ಜನರಿಗೆ ಜೀವನದಲ್ಲಿ ಮುಂದೆ ಬರಲು ಸಹಕರಿಸಿದೆವು ಎಂಬುದಷ್ಟೇ ಆಗಿದೆ. ದೊಡ್ಡ ದೊಡ್ಡ ಸೇವೆಗಳನ್ನು ಮಾಡಲು ಶಕ್ತಿಯಿಲ್ಲದಿರಬಹುದು, ಸಣ್ಣ ಸೇವೆಗಳನ್ನೇ ದೊಡ್ಡ ಪ್ರೀತಿಯಿಂದ ಮಾಡಬಲ್ಲೆವಾದರೆ ಅದೇ ಹೆಚ್ಚಿನದು. ಇತರರ ಸೇವೆಯಲ್ಲಿ ತೊಡಗಿಕೊಂಡಷ್ಟೂ ನಮಗೆ ನಮ್ಮತನದ ಅರಿವಾಗುತ್ತಾ ಹೋಗುತ್ತದೆ. ಸಮಾಜಸೇವೆಯೆಂದರೆ ನಮ್ಮ ಅಸ್ತಿತ್ವಕ್ಕಾಗಿ ನಾವು ಸಮಾಜಕ್ಕೆ ಕೊಡುವ ಬಾಡಿಗೆ. ಬಿಡುವಿರುವ ವೇಳೆಯಲ್ಲಿ ಮಾಡುವ ಕೆಲಸವಲ್ಲ, ಅದೇ ಜೀವನದ ನೈಜ ಕಾರ್ಯ. ದೇವರು ಕೊಟ್ಟಿರುವ ಅವಕಾಶ, ನಮ್ಮ ಸಾಮರ್ಥ್ಯಗಳನ್ನು ಅನುಸರಿಸಿ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿಯೇ ಇತರರಿಗೆ ಸಹಕಾರಿಯಾಗಿ ಬಾಳುವುದೇ ಸಮಾಜಸೇವೆ. ಇಷ್ಟಾದರೂ ನಾವು ಮಾಡಬಹುದಾಗಿದೆ. ಇದು ಇತರರಿಗೂ ಪ್ರೇರಣೆಯಾಗುತ್ತದೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ