ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಬುಧವಾರ, ಸೆಪ್ಟೆಂಬರ್ 13, 2017

ಸಾವು ಮತ್ತು ಪ್ರೀತಿ


ಜನಿಸಿದವನೆಂದು ಸಾಯದಿಹನೇನು
ಚಿಂತಿಸಿದೊಡೆ ಓಡಿ ಪೋಪುದೆ ಸಾವು |
ಸಾವಿನ ಭಯಮರೆತು ಸಂತಸವ ಕಾಣು
ಅರಿವಿನಿಂ ಬಾಳಲದುವೆ ಬದುಕು ಮೂಢ ||
     ವಿಷಯಕ್ಕೆ ಪೂರಕವಾಗಿ ಮನ ಕಲಕಿದ ಒಂದು ಘಟನೆ ಹಂಚಿಕೊಳ್ಳುವೆ. ಐದು ವರ್ಷದ ಮಗು ಅಂದು ಶಾಲೆಯಿಂದ ಮರಳಿ ಬಂದಾಗ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಗಂಭೀರವಾಗಿತ್ತು. ಮಗಳ ಯೂನಿಫಾರಮ್ ಕಳಚಿ ಬೇರೆ ಬಟ್ಟೆ ಹಾಕುತ್ತಿದ್ದ ತಾಯಿಗೆ ಮಗು ಹೇಳಿತು:
ಮಮ್ಮಿ, ನನ್ನ ಫ್ರೆಂಡ್ ಪಿಂಕಿ ತಾತ ಸತ್ತು ಹೋದರಂತೆ.
ಹೌದಾ ಪುಟ್ಟಾ, ಪಾಪ.
ಮಮ್ಮಿ, ಎಲ್ರೂ ಸಾಯ್ತಾರಾ?
ಹೌದು ಪುಟ್ಟಿ, ವಯಸ್ಸಾದ ಮೇಲೆ ಎಲ್ರೂ ಸಾಯ್ತಾರೆ.
ನನ್ ತಾತಾನೂ ಸಾಯ್ತಾರಾ?
    ಅಮ್ಮನಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ತನ್ನ ತಂದೆಯ ಸಾವಿನ ಬಗ್ಗೆ ಮಗು ಕೇಳಿದಾಗ ತಕ್ಷಣ ಏನು ಉತ್ತರಿಸಿಯಾಳು? ಸಾವರಿಸಿಕೊಂಡು ಹೇಳಿದಳು: ಇನ್ನೂ ತುಂಬಾ ವರ್ಷ ಪುಟ್ಟೂ. ಹಂಡ್ರಡ್ ವರ್ಷ ಆದ ಮೇಲೆ ಎಲ್ರೂ ಸಾಯ್ತಾರೆ. ಈ ವಿಷಯ ಎಲ್ಲಾ ಮಾತಾಡಬಾರದು. ಹೋಗ್ಲಿ ಬಿಡು, ಸ್ಕೂಲಲ್ಲಿ ಇವತ್ತು ಏನು ಹೇಳಿಕೊಟ್ರು?
    ಮಗು ಪಟ್ಟು ಬಿಡದೆ ಕೇಳಿತು: ಮಮ್ಮಿ, ನಾನೂ ಸಾಯ್ತೀನಾ?
     ಮಗುವಿನ ಬಾಯಿಯ ಮೇಲೆ ಕೈಮುಚ್ಚಿ ತಾಯಿ ಅವಳನ್ನು ಅಪ್ಪಿಕೊಂಡು ಹೇಳಿದಳು:
ನಾನು ಆಗಲೇ ಹೇಳಲಿಲ್ಲವಾ? ಹೀಗೆಲ್ಲಾ ಮಾತಾಡಬೇಡ. ನಿನಗಿನ್ನೂ ಐದೇ ವರ್ಷ. ಒಳ್ಳೆಯವರು ಸಾಯುವುದಿಲ್ಲ. ಆ ವಿಷಯ ಇನ್ನು ಸಾಕು. ನಡಿ, ಕೈಕಾಲು ಮುಖ ತೊಳೆಸುತ್ತೀನಿ. ಊಟ ಮಾಡುವಂತೆ.
ಮಗುವಿಗೆ ಸಮಾಧಾನವಾಗಿರಲಿಲ್ಲ. ಪ್ರಶ್ನೆ ಕೇಳಿತು: ಹಾಗಾದ್ರೆ ಸತ್ತೋರೆಲ್ಲಾ ಬ್ಯಾಡ್ ಬಾಯ್ಸಾ?
     ತಾಯಿ ಏನು ಉತ್ತರಿಸಿಯಾಳು? ಸುಮ್ಮನೆ ಮಗುವನ್ನು ಬಚ್ಚಲಮನೆಗೆ ಕರೆದುಕೊಂಡು ಹೋಗಿ ಮುಖ ತೊಳೆಸಿದಳು. ಬೇರೆ ಬೇರೆ ವಿಷಯ ಮಾತನಾಡಿ ಗಮನ ಬೇರೆಡೆಗೆ ಸೆಳೆಯಲು ಅಮ್ಮನ ಪ್ರಯತ್ನ ಸಾಗಿತ್ತು. ಮಗುವಿನ ಮುಖವನ್ನು ಟವೆಲಿನಿಂದ ಒರೆಸುತ್ತಿದ್ದಾಗ ಮಗು ಗಂಭೀರವಾಗಿ ಆತಂಕದಿಂದ ಹೇಳಿತು:
ಮಮ್ಮಿ, ಪ್ಲೀಸ್, ಐ ಡೋಂಟ್ ವಾಂಟ್ ಟು ಡೈ.
     ಮಗುವಿನಲ್ಲಿ ಅಮ್ಮ ಏನಾದರೂ ಮಾಡಲೆಂಬ ನಿರೀಕ್ಷೆಯಿತ್ತು, ಏನಾದರೂ ಮಾಡಬಹುದೆಂಬ ಭರವಸೆಗಾಗಿ ಕಾದಿತ್ತು. ಮಗಳ ಮಾತು ಕೇಳಿ ಅವಾಕ್ಕಾದ ಅಮ್ಮನ ಕಣ್ಣಂಚಿನಲ್ಲಿ ನೀರು ತುಳುಕಿತು. ಮಗುವನ್ನು ಅಪ್ಪಿ ಬಿಗಿಯಾಗಿ ಹಿಡಿದುಕೊಂಡಳು. ಇಲ್ಲಾ ಕಂದಾ, ನೀನು ಸಾಯುವುದಿಲ್ಲ. ನಿನ್ನನ್ನು ನಾನು ಸಾಯಲು ಬಿಡುವುದಿಲ್ಲ. ನೀನು ಸಾಯುವುದೇ ಇಲ್ಲ. ಏಕೆಂದರೆ ನೀನು ಒಳ್ಳೆಯವಳು. ನೀನು ತುಂಬಾ, ತುಂಬಾ, ತುಂಬಾ ಗುಡ್ ಗರ್ಲ್.      ಹೀಗೆ ಹೇಳುತ್ತಾ ಮಗುವನ್ನು ಮುದ್ದಿಸಿದಾಗ ಮಗುವಿಗೆ ಸಮಾಧಾನವಾಗಿತ್ತು, ಸಂತೋಷವಾಗಿತ್ತು. ತಾಯಿಯ ಪ್ರೀತಿ ಮಗಳ ಸಾವಿನ ಭಯವನ್ನು ದೂರ ಮಾಡಿತ್ತು. ನಂತರದಲ್ಲಿ ಮಗು ಸ್ಕೂಲಿನ ಅಂದಿನ ಆಟ ಪಾಠದ ಬಗ್ಗೆ ಕಣಿ ಹೇಳಲು ಶುರು ಮಾಡಿತು.
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ ||
     ಪ್ರೀತಿ ಸಾವಿನ ಭಯವನ್ನೂ ಹಿಂದಿಕ್ಕಬಲ್ಲದು. ಪ್ರೀತಿ ಇರುವಲ್ಲಿ ಸಾವಿನ ಭಯ ಸುಳಿಯದು. ಇಂದು ವಯಸ್ಸಾದ ಹಿರಿಯ ಜೀವಗಳನ್ನು ಮಾತನಾಡಿಸಿದರೆ ಈ ಮಾತಿನ ಅಂತರಾರ್ಥ ತಿಳಿಯುತ್ತದೆ. ವಯಸ್ಸಾಗಿ ಮೂಲೆಗೆ ಸರಿಯುವ ಮುನ್ನ ಅವರು ಮಕ್ಕಳಿಗಾಗಿ ಏನೆಲ್ಲಾ ಮಾಡಿದ್ದರೂ, ಜೀವ ಸವೆಸಿದ್ದರೂ ಕೊನೆಗಾಲದಲ್ಲಿ ಮಕ್ಕಳು ಅವರನ್ನು ಕಡೆಗಣಿಸಿದರೆ ಅವರಿಗೆ ಆಗುವ ನೋವು ವರ್ಣನಾತೀತ. ಏನು ಮಾಡದಿದ್ದರೂ ಪರವಾಗಿಲ್ಲ, ಪ್ರೀತಿಯಿಂದ ಮಾತನಾಡಿಸಲಿ ಎಂಬ ಅವರ ಹಂಬಲಿಕೆ ಮರಳುಗಾಡಿನಲ್ಲಿ ಬಾಯಿ ಒಣಗಿ ನೀರು ಅರಸುವವರ ರೀತಿಯಲ್ಲಿರುತ್ತದೆ ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಸಾವು ನಮಗೂ ಬರುತ್ತದೆ, ನಾವೂ ಸಾಯುತ್ತೇವೆ ಎಂಬ ಅರಿವು ಜಾಗೃತವಾಗಿದ್ದರೆ ಅಲ್ಲಿ ಪ್ರೀತಿಯ ಸೆಲೆ ನೆಲೆ ಕಂಡುಕೊಳ್ಳುತ್ತದೆ. ಆಗ ನಾವು ನಿಜವಾಗಿ ಬದುಕುತ್ತೇವೆ. ಸಾವು ಅಂಜಿಕೆ ತರುವ ಸಂಗತಿಯಾಗಬಾರದು. ಸಾವು ಬದುಕುವುದನ್ನು ಕಲಿಸುವ ಗುರುವಾಗಬೇಕು. ನಾವು ಸದ್ಯಕ್ಕೆ ಸಾಯವುದಿಲ ಎಂಬ ಭ್ರಮೆಯಿಂದ ಮುಸುಕಿಹೋಗಿರುವ ನಾವು ಬದುಕನ್ನು ಬದುಕಬೇಕಾದ ರೀತಿಯಲ್ಲಿ ಬದುಕುವುದಿಲ್ಲ ಎಂಬುದು ಕಟು ಸತ್ಯವಾಗಿದೆ. ಅದೇ ಒಂದು ವೇಳೆ ಸದ್ಯದಲ್ಲಿ ನಾವು ಸಾಯಲಿದ್ದೇವೆ ಎಂಬುದು ತಿಳಿದರೆ ಆಗ ನಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳೋಣ. ಅಗ ನಮ್ಮ ನಡವಳಿಕೆ ಹೇಗಿರುತ್ತದೆಯೋ ಹಾಗೆ ಈಗಿನಿಂದಲೇ ಇರಲು ಪ್ರಯತ್ನಿಸಬಾರದೇಕೆ? ಸಾವು ಯಾವಾಗ ಬರುತ್ತದೋ ಯಾರಿಗೆ ಗೊತ್ತು? ನಾವು ಸಾವನ್ನು, ಅರ್ಥಾತ್ ಬದುಕನ್ನು, ಪ್ರೀತಿಯ ಆಧಾರದಲ್ಲಿ ಬರಮಾಡಿಕೊಂಡರೆ ನಮಗೆ ಅಂಜಿಕೆಯಾಗಲೀ, ಅಳುಕಾಗಲೀ ಇರಲು ಅವಕಾಶವೇ ಇರುವುದಿಲ್ಲ. ನೂರು ಕಾಲ ಬಾಳೋಣ, ನಗುನಗುತ್ತಾ, ನಗಿಸುತ್ತಾ ಬಾಳೋಣ, ನಗುನಗುತ್ತಾ ಹೋಗೋಣ.
ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು
ಹೇಡಿ ಸಾಯುವನು ವೀರನೂ ಸಾಯುವನು |
ದೇವ ನಿಯಮವಿದು ಎಲ್ಲರೂ ಸಾಯುವರು
ಬದುಕಿ ಸಾಯುವರ ನೆನೆಯೋ ಮೂಢ ||
-ಕ.ವೆಂ. ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ