ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಮೇ 31, 2016

ಮುಪ್ಪು ಶಾಪವಾಗದಿರಲಿ - 2


     ಎಷ್ಟು ವೈಪರೀತ್ಯ! ಪೋಷಕರು ತಮ್ಮ ಮಕ್ಕಳು ಮುಂದೆ ಬರಲಿ, ಸಮಾಜದಲ್ಲಿ ಪ್ರತಿಷ್ಠಿತರಾಗಲಿ ಎಂದು ಬಯಸಿ ಶ್ರಮಪಟ್ಟು ಮಕ್ಕಳನ್ನು ಬೆಳೆಸುತ್ತಾರೆ, ಏನೆಲ್ಲಾ ಕಷ್ಟ ಪಡುತ್ತಾರೆ! ತಮಗೆ ವಂಚನೆ ಮಾಡಿಕೊಂಡು, ಮಕ್ಕಳಿಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಮಕ್ಕಳು ತಮ್ಮನ್ನು ಮುಪ್ಪಿನಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ಆರಾಮವಾಗಿ ವಿಶ್ರಾಂತಿ ಪಡೆಯೋಣ ಎಂದು ಬಯಸುವ ಅವರಿಗೆ ಪ್ರತಿಯಾಗಿ ಮಕ್ಕಳು ತಮ್ಮನ್ನು ಹೊರೆ ಎಂಬಂತೆ ನೋಡಿದಾಗ ಆಗುವ ವೇದನೆ ಅವರ್ಣನೀಯ.
     ವೃದ್ಧಾಪ್ಯದ ಸಮಸ್ಯೆಗಳು ಆರ್ಥಿಕವಾಗಿ ಕೆಳಮಟ್ಟದವರು, ಮಧ್ಯಮವರ್ಗದವರು, ಮೇಲ್ಮಧ್ಯಮ ವರ್ಗದವರು ಮತ್ತು ಮೇಲ್ವರ್ಗದವರುಗಳಲ್ಲಿ ಭಿನ್ನ ರೀತಿಯವಾಗಿದ್ದರೂ ಅವರುಗಳು ಪಡುವ ಪರಿತಾಪಗಳು ಮಾತ್ರ ಸಂಬಂಧಿಸಿದವರಿಗೆ ಸಹಿಸಲು ಕಷ್ಟವಾಗಿರುತ್ತದೆ. ಉದಾಹರಣೆ ಕೊಟ್ಟರೆ ಅರ್ಥವಾದೀತು. ಅವರು ಒಬ್ಬ ನಿವೃತ್ತ ಹಿರಿಯ ಅಧಿಕಾರಿ. ಪತ್ನಿ ಮೃತಳಾಗಿ ಕೆಲವು ವರ್ಷಗಳಾಗಿದ್ದವು. ಪ್ರತಿನಿತ್ಯ ಬೆಳಿಗ್ಗೆ ೫.೩೦ಕ್ಕೆ ವಾಕಿಂಗಿಗೆ ಹೋಗುವಾಗ ಸಿಗುತ್ತಿದ್ದ ಕಾಫಿ ಈಗ ಸಿಗದು. ಕಾಫಿಗಾಗಿ ಕಾಯುತ್ತಾ ಕುಳಿತರೆ ವಾಕಿಂಗ್ ಸಮಯ ಮುಗಿದೇ ಹೋಗುತ್ತದೆ. ಪೇಪರ್ ಓದಲು ಸಿಗುವುದು ಎಲ್ಲರೂ ಓದಿದ ನಂತರವೇ. ಟಿವಿಯಲ್ಲಿ ತನಗೆ ಬೇಕಾದ ಚಾನೆಲ್ ವೀಕ್ಷಿಸುವ ಅವಕಾಶ ಸಿಗದು. ಇತರರು ನೋಡುವ ಚಾನೆಲ್ ಅನ್ನೇ ನೋಡಬೇಕು. ಮನೆಯ ಸಣ್ಣ ಪುಟ್ಟ ಕೆಲಸಗಳನ್ನು ಇವರಿಂದಲೇ ಮಾಡಿಸುತ್ತಿದ್ದರು - ಲೈಟ್ ಬಿಲ್ ಕಟ್ಟುವುದು, ಫೋನ್ ಬಿಲ್ ಕಟ್ಟುವುದು, ತರಕಾರಿ ತರುವುದು, ಮಕ್ಕಳನ್ನು ಶಾಲೆಗೆ ಬಿಡುವುದು, ಕರೆತರುವುದು, ಇತ್ಯಾದಿ. ಯಾವಾಗ ಇವರಿಗೆ ಓಡಾಡಲು ಕಷ್ಟವಾಗಿ ಇಂತಹ ಕೆಲಸ ಮಾಡುವುದು ದುಸ್ತರವಾಯಿತೋ ಇವರನ್ನು ಒಂದು ಹೊರೆಯೆಂಬಂತೆ ನೋಡಲಾರಂಭಿಸಿದ್ದರು. ತನ್ನದೇ ಮನೆಯಲ್ಲಿ ಊಟ, ತಿಂಡಿ, ಕಾಫಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಂದ ಮೇಲಂತೂ ತನ್ನ ಬಗ್ಗೆಯೇ ಆತನಿಗೆ ಜಿಗುಪ್ಸೆ ಮೂಡಿತ್ತು. ಈ ಕುರಿತು ಏನಾದರೂ ಹೇಳಿದರೆ ದೊಡ್ಡ ರಂಪ ರಾಮಾಯಣವೇ ಆಗಿಬಿಡುತ್ತಿತ್ತು. ಮೊದಲು ಇರುತ್ತಿದ್ದ ದೊಡ್ಡ ಬೆಡ್ ರೂಮಿನಲ್ಲಿ ಈಗ ಮಗ-ಸೊಸೆ ಇರುತ್ತಾರೆ. ಇವರ ಮಲಗುವ ಕೋಣೆ ಸ್ಟೋರ್ ರೂಮಿಗೆ ಬದಲಾಗಿದೆ. ಅವರು ಒಬ್ಬರೇ ಗೋಡೆ ನೋಡುತ್ತಾ ವಟಗುಟ್ಟುತ್ತಿರುತ್ತಾರೆ. ಈ ವಟಗುಟ್ಟುವಿಕೆ ವಿಚಾರದಲ್ಲಿ ಸಹ ಅವರು ಜಾಗೃತರಾಗಿರಬೇಕಿದೆ. ಯಾರಿಗೂ ಕೇಳದಂತೆ ಒಬ್ಬರೇ ಅಲವತ್ತುಗೊಳ್ಳಬೇಕು. ಇತರರಿಗೆ ಕೇಳಿದರೆ ಇವರ ಜನ್ಮ ಜಾಲಾಡಿಬಿಡುತ್ತಾರೆ. ದೊಡ್ಡ ಅಧಿಕಾರಿಯಾಗಿ ಎಲ್ಲರಿಂದಲೂ ಸಲಾಮ್ ಮಾಡಿಸಿಕೊಳ್ಳುತ್ತಿದ್ದವರಿಗೆ ಬಂದ ಇಂತಹ ಪರಿಸ್ಥಿತಿ ಕುರಿತು ಅಪರೂಪಕ್ಕೆ ಸಿಗುವ ಗೆಳೆಯರಲ್ಲಿ ಗೋಳಿಡುವ ಇವರು ಸಾವು ಬೇಗ ಬರಬಾರದೇ ಎಂದು ಕೊರಗುತ್ತಾರೆ.
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು |
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ ||
     ಇನ್ನೊಂದು ಪ್ರಸಂಗ ಗಮನಿಸೋಣ. ಸುಕ್ಕುಗಟ್ಟಿದ ಚರ್ಮ, ನರೆತ ತಲೆ, ಕುಗ್ಗಿದ, ಬಾಗಿದ ಶರೀರ, ಕಿವಿ ಕೇಳದ, ದೃಷ್ಟಿ ಮಂದವಿರುವ ಹಣ್ಣು ಮುದುಕಿ ಸಣ್ಣಮ್ಮ ತನ್ನ ಹಳ್ಳಿಯ ಮನೆಯ ಜಗಲಿಯ ಕಟ್ಟೆಯ ಮೇಲೆ ಗೋಣಿಚೀಲದ ಹಾಸಿನ ಮೇಲೆ ಕುಳಿತಿದ್ದಾಳೆ. ಅವಳು ರಾತ್ರಿ ಮಲಗುವುದೂ ಅಲ್ಲಿಯೇ! ಪೋಸ್ಟ್‌ಮನ್ ಬಂದವನು ಆಕೆಗೆ ವಿಧವಾವೇತನದ ಹಣ ಕೊಟ್ಟು ಫಾರಮ್ಮಿಗೆ ಸಹಿ ಹಾಕಿಸಿಕೊಂಡು ಹೋಗುತ್ತಾನೆ. ಕೊಡುವಾಗ ತನ್ನ ಮಾಮೂಲನ್ನೂ ಹಿಡಿದುಕೊಂಡು ಕೊಟ್ಟಿರುತ್ತಾನೆ. ಆಕೆಯ ಕೈಯಲ್ಲಿ ಇನ್ನೂ ಹಣ ಇರುವಂತೆಯೇ ಧಾವಿಸಿ ಬಂದ ಮಗರಾಯ ಆ ಹಣವನ್ನು ಕಿತ್ತುಕೊಂಡು ಜೇಬಿಗಿಟ್ಟುಕೊಂಡು ನಡೆಯುತ್ತಾನೆ. ಆಕೆ ಮೊದಲಿನಂತೆಯೇ ನಿರ್ಲಿಪ್ತ ನೋಟ ಬೀರುತ್ತಾ ಕುಳಿತೇ ಇರುತ್ತಾಳೆ. ಆಕೆಗೆ ಅದು ಅಭ್ಯಾಸವಾಗಿ ಹೋಗಿದೆ. ಜವರಾಯನನ್ನು ನೆನೆಯುತ್ತಾ ಮಣಮಣ ಗುನುಗುತ್ತಾ ತಿನ್ನಲು ಏನಾದರೂ ತಂಗಳು ಕೊಟ್ಟಾರೇನೋ ಎಂದು ಬಗ್ಗಿ ನೋಡುತ್ತಾಳೆ.
     ಇಂತಹುದೇ ಹಲವಾರು ಸಂಗತಿಗಳು ಎಲ್ಲರಿಗೂ ಅರಿವಿರುವಂತಹುದೇ ಆಗಿದೆ. ವೃದ್ಧಾಪ್ಯದಲ್ಲಿ ಗಂಡ-ಹೆಂಡತಿಯರು ಒಬ್ಬರೊಬ್ಬರಿಗೆ ಆಶ್ರಯವಾಗಿರುತ್ತಾರೆ. ಇಬ್ಬರನ್ನೂ ನೋಡಿಕೊಳ್ಳುವುದು ಕಷ್ಟವೆಂದು ತಂದೆಯನ್ನು ಒಬ್ಬ ಮಗ ಮತ್ತು ತಾಯಿಯನ್ನು ಇನ್ನೊಬ್ಬ ಮಗ ಪ್ರತ್ಯೇಕವಾಗಿ ತಮ್ಮ ಮನೆಗಳಲ್ಲಿ ಇರಿಸಿಕೊಂಡಿರುವ ಸಂದರ್ಭಗಳಲ್ಲಿ ಹಿರಿಯ ಜೀವಗಳಿಗೆ ಆಗುವ ನೋವಿನ ಅನುಭವ ಅನುಭವಿಸಿದವರಿಗೇ ಗೊತ್ತು. ಇಬ್ಬರಲ್ಲಿ ಒಬ್ಬರು ಮೃತರಾದರೆ ಉಳಿದವರಿಗೆ ಉಂಟಾಗುವ ಅನಾಥ ಭಾವದ ಶೂನ್ಯ ತುಂಬುವುದೂ ಕಷ್ಟವೇ. ೫-೬ ಮಕ್ಕಳಿದ್ದರೂ ಇರುವ ಒಬ್ಬ ತಂದೆ ಅಥವ ತಾಯಿಯನ್ನು ಯಾರು ನೋಡಿಕೊಳ್ಳಬೇಕೆಂಬ ವಿಷಯದಲ್ಲಿ ಜಗಳಗಳಾಗುತ್ತವೆ. ಒಬ್ಬೊಬ್ಬರ ಮನೆಯಲ್ಲಿ ಕೆಲವು ತಿಂಗಳುಗಳಂತೆ ಸರತಿಯಲ್ಲಿ ನೊಡಿಕೊಳ್ಳುವ ಕುಟುಂಬಗಳೂ ಅಪರೂಪವಲ್ಲ. ಆಗುವ ಖರ್ಚಿಗೂ ಲೆಕ್ಕ ಹಾಕಿ ಜಗಳವಾಡುವವರೂ ಇರುತ್ತಾರೆ. ಕೈ-ಕಾಲುಗಳು ಗಟ್ಟಿಯಾಗಿರುವ ಹಿರಿಯರನ್ನು ಮಕ್ಕಳು ತಮಗೆ ಅನುಕೂಲವಾಗುವರೆಂಬ ಕಾರಣದಿಂದ ಇರಿಸಿಕೊಳ್ಳುವವರೂ ಇರುತ್ತಾರೆ. ಮನೆಯ ಕೆಲಸಗಳಿಗಾಗಿ ಅವರುಗಳನ್ನು ಬಳಸಿಕೊಂಡರೂ ಅವರನ್ನು ಮನೆಯ ಉಪೇಕ್ಷಿತ ಸ್ಥಳದಲ್ಲಿ ಇರಿಸಲಾಗುತ್ತದೆ. ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗುವ ನಗರಗಳಲ್ಲಿ ಇದು ಸಾಮಾನ್ಯ. ಆದರೆ ಹಿರಿಯರಿಗೆ ಆರೋಗ್ಯ ಕೈಕೊಟ್ಟರೆ ನಿಜವಾದ ಸಮಸ್ಯೆ ಪ್ರಾರಂಭವಾಗುತ್ತದೆ. ಮಕ್ಕಳು ಹಿರಿಯರ ಅನಾರೋಗ್ಯದ ವಿಷಯದಲ್ಲಿ ತೀವ್ರವಾಗಿ ಅಸಹಿಷ್ಣುಗಳಾಗಿರುವುದು, ವಿಶೇಷವಾಗಿ ಸುಶಿಕ್ಷಿತರಿರುವ ನಗರಗಳಲ್ಲೇ ಹೀಗಾಗುತ್ತಿರುವುದು ಕಳವಳಕಾರಿಯಾಗಿದೆ.
     ವೃದ್ಧರು ತಮ್ಮದೇ ಸ್ವಂತದ ಮನೆ, ಆಸ್ತಿ-ಪಾಸ್ತಿ ಹೊಂದಿದ್ದರೂ ಅಭದ್ರತೆ ಕಾಡದಿರುವುದಿಲ್ಲ. ಮಕ್ಕಳು ಮನೆ, ಆಸ್ತಿಗಳಿಗಾಗಿ ಅವರನ್ನು ಗೋಳುಗುಟ್ಟಿಸುವ ಪ್ರಸಂಗಗಳು ಸಾಮಾನ್ಯವಾಗಿವೆ. ಅವರು ಹೊಂದಿದ್ದ ಆಸ್ತಿ, ಮನೆಗಳನ್ನು ತಮ್ಮ ಹೆಸರಿಗೆ ಬರೆಯಲು ಅಥವ ಮಾರಿ ಹಣ ಕೊಡಲು ಕಾಡುತ್ತಾರೆ, ಹಿಂಸಿಸುತ್ತಾರೆ. ಪ್ರತಿ ೧೦ರಲ್ಲಿ ೬ರಷ್ಟು ಹಿರಿಯರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯ. ಆಶ್ರಯ ತಪ್ಪಿದವರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯಬೇಕು ಅಥವ ಮಕ್ಕಳೇ ಅವರನ್ನು ಅಲ್ಲಿಗೆ ಕಳುಹಿಸಿಬಿಡುತ್ತಾರೆ. ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ವೇಳೆಯಲ್ಲಿ ಇಂತಹ ನೂರಾರು ಸಮಸ್ಯೆಗಳು ನನ್ನ ಮುಂದೆ ಬಂದಿದ್ದವು. ಮಕ್ಕಳು/ವಾರಸುದಾರರು ಇಲ್ಲದ ಪ್ರಕರಣಗಳಲ್ಲಿ ಅವರ ಅಶಕ್ತತೆಯನ್ನು ಬಳಸಿಕೊಂಡು ಅವರುಗಳನ್ನು ಮನೆಯಿಂದ ಹೊರದಬ್ಬಿ ಆಸ್ತಿಯನ್ನು ತಮ್ಮದಾಗಿಸಿಕೊಂಡ ಬಲಾಢ್ಯರೂ ಇರುತ್ತಾರೆ. ಇಂತಹ ಕಾರಣಕ್ಕಾಗಿಯೇ ಕೊಲೆಯಾಗುವ ಒಂಟಿ ವೃದ್ಧರುಗಳ ಕುರಿತೂ ಸುದ್ದಿ ಬರುತ್ತಿರುತ್ತದೆ. ಕುಟುಂಬದ ಗೌರವ ಕಾಪಾಡುವ ಸಲುವಾಗಿ ಬಹುತೇಕ ಹಿರಿಯರ ಸಮಸ್ಯೆಗಳು ಬೀದಿಗೆ ಬರುವುದಿಲ್ಲ. ಬಂದರೂ  ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗದು, ಪ್ರಯೋಜನಕ್ಕೆ ಬಾರದ ಅನುಕಂಪ ಸಿಗಬಹುದು. ಅನಾಯಾಸದ ಮರಣ ಮತ್ತು ದೈನ್ಯತೆಯಿಲ್ಲದ ಜೀವನ ಸಾಧ್ಯವಾಗುವ ಹಿರಿಯರು ಮಾತ್ರ ಭಾಗ್ಯಶಾಲಿಗಳೆನ್ನಬಹುದು. ಅಂತಹ ಭಾಗ್ಯ ಎಲ್ಲರಿಗೂ ಸಿಗಲಾರದು. ಈ ಸಮಸ್ಯೆಗಳಿಗೆ ಪರಿಹಾರವೇನು? ಮುಂದಿನ ಲೇಖನದಲ್ಲಿ ಗಮನಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 22-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಮೇ 30, 2016

ಮುಪ್ಪು ಶಾಪವಾಗದಿರಲಿ - 1


     ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ ಕೂಡಿಡುತ್ತಿದ್ದಾತ. ಕ್ರಮೇಣ ಆತನಿಗೆ ವಯಸ್ಸಾಯಿತು. ಮಕ್ಕಳು ಪ್ರವರ್ಧಮಾನಕ್ಕೆ ಬಂದು ಅಂಗಡಿಯ ಉಸ್ತುವಾರಿ ನೋಡಿಕೊಳ್ಳಹತ್ತಿದರು. ಅಪ್ಪನನ್ನು ಮನೆಯಲ್ಲೇ ಇರಲು ನಿರ್ಬಂಧಿಸಿದರು. ಒಂದೊಮ್ಮೆ ರಾಜನಂತೆ ಮೆರೆದಿದ್ದಾತ ಮನೆಯಲ್ಲಿ ಆಳಿನಂತೆ ಇರಬೇಕಾಗಿ ಬಂದು, ಸೊಸೆಯರ ಕಿರುಕುಳವೂ ಸೇರಿಕೊಂಡು ಮತಿಭ್ರಮಣೆಗೊಳಗಾದ. ಇದೇ ನೆವವಾಗಿ ಆತನನ್ನು ಮನೆಯ ಹಿಂದಿದ್ದ ಕೋಣೆಯೊಂದರಲ್ಲಿ ಕೂಡಿಡಲಾಯಿತು. ಕೊಟ್ಟಾಗ ಊಟ, ಇಲ್ಲದಿದ್ದರೆ ಉಪವಾಸ. ಶೌಚಕ್ರಿಯೆಯೂ ಅದೇ ಕೋಣೆಯೊಳಗೇ! ಹಿಂಸೆಯಿಂದ ಅವನ ಕಿರುಚಾಟ, ಕೂಗಾಟ, ಬಾಗಿಲು ಬಡಿಯುವಿಕೆ ಜೋರಾದಾಗ ಅವನನ್ನು ಸರಪಳಿ ಹಾಕಿ ನಾಯಿಯಂತೆ ಕಟ್ಟಿಹಾಕಲಾಗಿತ್ತು. ಕೆಲವೇ ತಿಂಗಳಲ್ಲಿ ಅವನು ಅದೇ ಸ್ಥಿತಿಯಲ್ಲಿ ಅಸು ನೀಗಿದಾಗ ಮಕ್ಕಳಿಗೆ ಗೊತ್ತಾದದ್ದು ಸತ್ತ ಎರಡನೆಯ ದಿನದಂದು! ನಂತರದಲ್ಲಿ ಮಕ್ಕಳು ವಿಜೃಂಭಣೆಯಿಂದ ತಿಥಿ ಮಾಡಿ ಊರಿನವರಿಗೆಲ್ಲಾ ಊಟ ಹಾಕಿದ್ದರು.
     ಜಿಲ್ಲಾ ಕೇಂದ್ರದಲ್ಲಿ ವಾಸವಿದ್ದ ಒಂದು ಶ್ರೀಮಂತ ಕುಟುಂಬದ ಕಥೆಯಿದು. ಇಬ್ಬರು ಗಂಡು ಮಕ್ಕಳು ಸುಖವಾಗಿ ಬೆಳೆದು ಇಂಜನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಅಧಿಕಾರಿಗಳಾಗಿ ಇಬ್ಬರೂ ಅಮೆರಿಕಾ ಸೇರಿಕೊಂಡರು. ಅಲ್ಲೇ ಸಂಸಾರಸ್ಥರಾಗಿ ಅಲ್ಲಿಯ ಪ್ರಜೆಗಳೇ ಆಗಿಬಿಟ್ಟರು. ಮಕ್ಕಳು ವಿದೇಶಕ್ಕೆ ಸೇರಿಕೊಂಡ ಕೆಲವು ವರ್ಷಗಳಲ್ಲಿ ಮನೆಯ ಯಜಮಾನ ತೀರಿಕೊಂಡ. ಹೃದ್ರೋಗಿಯಾದ ಮುಪ್ಪಿನ ತಾಯಿ ಒಬ್ಬರೇ ಆದರು. ಮಕ್ಕಳು ತಾಯಿಯನ್ನು ಕರೆಸಿಕೊಳ್ಳಲಿಲ್ಲ. ಎಷ್ಟು ಬೇಕೋ ಅಷ್ಟು ಹಣ ಕಳಿಸುತ್ತೇವೆ, ವೃದ್ಧಾಶ್ರಮಕ್ಕೆ ಸೇರಿಕೋ ಎಂದರು. ವಿಧಿಯಿಲ್ಲದೆ ವೃದ್ಧಾಶ್ರಮದ ನಿವಾಸಿಯಾದ ಆಕೆಯ ಕಣ್ಣೀರಿನ ನೋವು ಅರಿತವರು ಯಾರು? ಆಕೆಯಲ್ಲಿ ಸಾಕಷ್ಟು ಹಣವಿತ್ತು. ಆದರೆ ಆಕೆಗೆ ಬೇಕಾಗಿದ್ದದ್ದು ಹಣವಲ್ಲ. ಹಿಡಿಯಷ್ಟು ಪ್ರೀತಿ! ಜೀವನೋತ್ಸಾಹ ಬತ್ತಿದ ಆಕೆಯ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು. ಮುಂದೊಮ್ಮೆ ಶೂನ್ಯದಲ್ಲೇ ಆಕೆ ಲೀನವಾದಳು.
     ವೃದ್ಧಾಪ್ಯದ ತಾಪ, ಸಮಸ್ಯೆಗಳ ಕುರಿತು ಕಿರುನೋಟ ಬೀರುವ ಸಲುವಾಗಿ ಮೇಲಿನ ಎರಡು ಘಟನೆಗಳನ್ನು ಉದಾಹರಿಸಿದ್ದಷ್ಟೆ. ವೃದ್ಧರನ್ನು, ಮನೆಯ ಹಿರಿಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತದಲ್ಲಿ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಪೀಳಿಗೆಯಿದೆ, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜ, ಭಾರತದಲ್ಲಿ ಮೂರನೆಯ ಎರಡು ಭಾಗದಷ್ಟು ಸಂಖ್ಯೆಯ ೩೦ ವರ್ಷಗಳ ಒಳಗಿನ ಯುವಜನರಿದ್ದಾರೆ. ಇದರ ಅರ್ಥ ಮೂರನೆಯ ಒಂದರಷ್ಟು ಭಾಗ ವೃದ್ಧರಿದ್ದಾರೆ. ಈ ವೃದ್ಧರ ಸ್ಥಿತಿ-ಗತಿಗಳು ಹೇಗಿವೆ ಎಂಬುದೂ ಚಿಂತನಾರ್ಹ ವಿಷಯವಲ್ಲವೇ? ಕೆಲವೇ ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಯುವಪೀಳಿಗೆ ವೃದ್ಧರಾಗುತ್ತಾರೆ. ಹೆಚ್ಚಿನ ಕುಟುಂಬಗಳಲ್ಲಿ ಒಂದೊಂದೇ ಮಕ್ಕಳಿರುವುದರಿಂದ ಸಹಜವಾಗಿ ವೃದ್ಧರ ಸಂಖ್ಯೆಯೇ ಹೆಚ್ಚಾಗಲಿದೆ. ಭಾರತದಲ್ಲಿ ಸುಮಾರು ೮೦ ಮಿಲಿಯನ್ ವೃದ್ಧರ ಸಂಖ್ಯೆ ಇದ್ದು ಆ ಸಂಖ್ಯೆ ಮುಂದಿನ ೨೫ ವರ್ಷಗಳಲ್ಲಿ ೧೮೦ ಮಿಲಿಯನ್ ಆಗಲಿದೆಯೆನ್ನಲಾಗಿದೆ. ಈಗಿನ ಯುವಪೀಳಿಗೆ ವೃದ್ದರ ಕುರಿತ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದೆ ಅವರಿಗೇ ಅದು ತಿರುಗುಬಾಣವಾಗಿ ಬಾಧಿಸದೇ ಇರದು.
     ಹಿಂದಿನ ಕಾಲದಲ್ಲಿ ವೃದ್ಧಾಪ್ಯ ಒಂದು ಸಮಸ್ಯೆಯಾಗಿರಲಿಲ್ಲ. ಅವಿಭಕ್ತ ಕುಟುಂಬಗಳಿದ್ದ ಸಮಯದಲ್ಲಿ ವೃದ್ಧರನ್ನು ಗೌರವದಿಂದ ಕಾಣಲಾಗುತ್ತಿತ್ತು. ಅವರ ಆರೈಕೆ, ಶುಶ್ರ್ರೂಷೆಗಳನ್ನು ಒಬ್ಬರಲ್ಲಾ ಒಬ್ಬರು ಮುತುವರ್ಜಿಯಿಂದ ಮಾಡುತ್ತಿದ್ದರು. ಈಗಿನ ವೃದ್ಧರು ಅವಿಭಕ್ತ ಕುಟುಂಬಗಳನ್ನೂ ಕಂಡಿದ್ದವರು ಮತ್ತು ಇವರುಗಳ ಕಾಲಘಟ್ಟದಲ್ಲೇ ಕುಟುಂಬಗಳು ವಿಭಜನೆಯತ್ತ ಧಾವಿಸಿದ್ದುದಾಗಿದ್ದು ಬದಲಾವಣೆಗೆ ಹೊಂದಿಕೊಳ್ಳಲಾಗದ ಸ್ಥಿತಿಯಲ್ಲಿರುವವರು. ಈಗಿನ ಯುವಪೀಳಿಗೆಗೆ ಅವಿಭಕ್ತ ಕುಟುಂಬದ ಕಲ್ಪನೆಯೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಅವಿಭಕ್ತವಿರಲಿ, ವಿಭಕ್ತ ಕುಟುಂಬಗಳ ಅಡಿಪಾಯವೇ ಭದ್ರವಾಗಿಲ್ಲ. ಬೆಂಗಳೂರು ಭಾರತದಲ್ಲಿ ಅತಿ ಹೆಚ್ಚು ವಿವಾಹ ವಿಚ್ಛೇದನಗಳನ್ನು ಕಾಣುತ್ತಿರುವ ಎರಡನೆಯ ನಗರವಾಗಿದೆ. ರಾಜ್ಯದ ಉಳಿದೆಡೆಯಲ್ಲೂ ಇದರ ಹಾವಳಿ ಕಡಿಮೆಯೇನಲ್ಲ. ಹೀಗಿರುವಾಗ ವೃದ್ಧರ ಕಡೆ ಗಮನ ಹರಿಸುವವರಾದರೂ ಯಾರು? ಸ್ವಾರ್ಥವೇ ಪ್ರಧಾನವಾಗುತ್ತಿರುವ ಇಂದಿನ ಸ್ಥಿತಿಗೆ ಪಾಶ್ಚಾತ್ಯರ ಭೋಗವಾದದ ಪ್ರಭಾವ, ನೈತಿಕ ಮೌಲ್ಯಗಳನ್ನು ಕಡೆಗಣಿಸಿರುವ ಶಿಕ್ಷಣ ಪದ್ಧತಿ ಪ್ರಧಾನ ಕೊಡುಗೆ ಇತ್ತಿವೆ. ತಮ್ಮ ದುಸ್ಥಿತಿಗಾಗಿ ಗೋಳಿಡುತ್ತಿರುವ ಇಂದಿನ ವೃದ್ಧರು ತಮ್ಮ ಮಕ್ಕಳಿಗೆ ಸುಯೋಗ್ಯ ಶಿಕ್ಷಣ, ನೈತಿಕ ಶಿಕ್ಷಣ ನೀಡುವತ್ತ ಗಮನ ಹರಿಸದಿದ್ದುದೂ ಒಂದು ಕಾರಣವೆಂದರೆ ತಪ್ಪಿಲ್ಲ. ಮೈಯಲ್ಲಿ ಕಸುವಿದ್ದಾಗ ಆಡಿದ ಆಟಗಳು, ತೋರಿದ ದರ್ಪಗಳು ಸಹ ತಿರುಗುಬಾಣವಾಗಿ ವೃದ್ಧಾಪ್ಯದಲ್ಲಿ ಕಾಡುವಾಗ ಅದನ್ನು ಎದುರಿಸುವ ಶಕ್ತಿ, ಸಾಮರ್ಥ್ಯಗಳು ಅವರಲ್ಲಿರುವುದಿಲ್ಲ.  
ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||
     ವೃದ್ಧಾಪ್ಯದ ಸಮಸ್ಯೆಗಳ ಕುರಿತು ಹೇಳಬೇಕೆಂದರೆ ಮೂರು ಪ್ರಧಾನ ಸಮಸ್ಯೆಗಳು ಗೋಚರಿಸುತ್ತವೆ - ಆಶ್ರಯದ ಅಭದ್ರತೆ, ಆರ್ಥಿಕ ಅಭದ್ರತೆ ಮತ್ತು ಆರೋಗ್ಯದ ಸಮಸ್ಯೆ. ಮೂರೂ ಸಮಸ್ಯೆಗಳಿಗೆ ಮೂಲ ಕುಟುಂಬದ ಸದಸ್ಯರುಗಳು ಅವರುಗಳಿಗೆ ತೋರುತ್ತಿರುವ ಅಸಡ್ಡೆ ಅಥವ ಪ್ರೀತಿಯ ಕೊರತೆಯೆಂದರೆ ತಪ್ಪಿಲ್ಲ. ವೃದ್ಧರು, ಅಶಕ್ತರ ಗೋಳನ್ನು ಕೇಳಬೇಕಾದವರೇ ಕೇಳದಿರುವಾಗ, ಅವರ ನೋವಿನ ಕುರಿತು ಧ್ವನಿಯೆತ್ತುವವರಾದರೂ ಯಾರು? ಎತ್ತಿದರೂ ಪರಿಹಾರ ಅಂದುಕೊಂಡಷ್ಟು ಸುಲಭವಲ್ಲ. ನಾವು-ನೀವು ಕಂಡಿರುವ, ಕೇಳಿರುವ ಉದಾಹರಣೆಗಳೊಂದಿಗೆ ವೃದ್ಧರ ಸಮಸ್ಯೆಗಳು ಮತ್ತು ಅದರ ನಿವಾರಣೆಗೆ ಮಾಡಬಹುದಾದುದಾದರೂ ಏನು ಎಂಬ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 15-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಮೇ 22, 2016

ಬ್ರಹ್ಮಚರ್ಯವೆಂದರೇನು? - 3


   ಬೇಬಿ ಸಿಟ್ಟಿಂಗ್, ಎಲ್.ಕೆ.ಜಿ., ಯು.ಕೆ.ಜಿ.ಗಳಿಗೆ ಸೇರಿಸಲು ವರ್ಷಗಳ ಮೊದಲೇ ಮುಂಗಡ ಬುಕಿಂಗ್ ಮಾಡಿರಬೇಕು, ಸಾಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು, ಲಕ್ಷಗಟ್ಟಲೆ ಡೊನೇಶನ್ ಕೊಡಬೇಕು. ಮಕ್ಕಳ ತಾಯಿ-ತಂದೆಯರ ಸಂದರ್ಶನವನ್ನೂ ಮಾಡಿ ಅವರು ವಿದ್ಯಾವಂತರಾಗಿದ್ದರೆ ಮಾತ್ರ ಮಕ್ಕಳನ್ನು ಸೇರಿಸಿಕೊಳ್ಳುವ ಪರಿಪಾಠವಿದೆ. ಇಷ್ಟಾಗಿಯೂ ಅಲ್ಲಿ ಹೇಳಿಕೊಡುವುದೇನು? ಪಾಶ್ಚಾತ್ಯ ಮಾದರಿಯ ಅಣಕು ಶಿಕ್ಷಣ, ಭಾರತೀಯ ಸಂಸ್ಕೃತಿಯ ಅವಹೇಳನ ಮತ್ತು ತಿರುಚಿದ ಇತಿಹಾಸದ ಕಲಿಕೆ! ನೈತಿಕ ಶಿಕ್ಷಣ, ಮೌಲ್ಯಗಳಿಗೆ ಅಲ್ಲಿ ಅವಕಾಶವೇ ಇಲ್ಲ, ಎಲ್ಲವೂ ವ್ಯವಹಾರ, ಹಣವೇ ಅಳತೆಗೋಲು! ಭಾರತೀಯರು ಮೆಕಾಲೆ ಹಿಂದೆ ನುಡಿದಿದ್ದ ಭವಿಷ್ಯದಂತೆ ಕರಿಚರ್ಮದ ಪಾಶ್ಚಾತ್ಯರಾಗಿದ್ದಾರೆ! ಇಷ್ಟಾಗಿಯೂ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಉದ್ದೇಶವೆಂದರೆ ಮುಂದೆ ತಮ್ಮ ಮಕ್ಕಳು ಡಾಕ್ಟರೋ, ಇಂಜನಿಯರೋ ಆಗಿ ಲಕ್ಷ ಲಕ್ಷ ಸಂಪಾದಿಸಲಿ ಎಂದು! ಶಿಕ್ಷಣವಿಂದು ವ್ಯಾಪಾರವಾಗಿದೆ, ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಕೇಂದ್ರಗಳಾಗಿವೆ. ಶಿಕ್ಷಣದ ಮೂಲ ಉದ್ದೇಶವೇ ನಾಶವಾಗಿದೆ. ಸೂಕ್ತ ಸೌಲಭ್ಯಗಳಿಲ್ಲದ, ಶಿಕ್ಷಕರ ಕೊರತೆಯಿರುವ, ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಲಿನಾಲಿ ಮಾಡುವವರೂ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. 
     ನೈತಿಕ ಶಿಕ್ಷಣವಿಲ್ಲದಿರುವುದರಿಂದ ಮತ್ತು ಎಲ್ಲೆಲ್ಲೂ ಸ್ಪರ್ಧಾತ್ಮಕ ಮನೋಭಾವವಿರುವುದರಿಂದ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕಡಿಮೆ ಅಂಕ ಬಂದರೆ ಬಯಸಿದ ಶಿಕ್ಷಣ ಪಡೆಯಲು ಅವಕಾಶವೇ ಇಲ್ಲದ ಸ್ಥಿತಿ ಇದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದರೂ ಮುಂದೆ ನೌಕರಿ ಸಿಗುವ ಸಾಧ್ಯತೆ ಕಡಿಮೆ. ಶ್ರೀಮಂತರು ಮಾತ್ರ ತಮ್ಮ ಮಕ್ಕಳಿಗೆ ಬಯಸಿದ ಶಿಕ್ಷಣ ಕೊಡಿಸಬಹುದು, ಬಡವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿರುವುದು ಅನುಮಾನ. ಹೀಗೆ ಶಿಕ್ಷಣದ ಮೂಲ ಉದ್ದೇಶವೇ ಅರ್ಥ ಕಳೆದುಕೊಂಡಿದೆ.      ಮಕ್ಕಳು ಇಂದು ಎಷ್ಟು ಒತ್ತಡದಲ್ಲಿರುತ್ತಾರೆಂದರೆ, ಪರೀಕ್ಷೆಗೆ ಮುನ್ನವೇ ಅಥವ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಬರುವ ಮುನ್ನವೇ ಅಥವ ನಿರೀಕ್ಷಿತ ಫಲಿತಾಂಶ ಬಾರದಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಆತ್ಮಸ್ಥೈರ್ಯವನ್ನೇ ಕಲಿಸದ ಶಿಕ್ಷಣವನ್ನು ಶಿಕ್ಷಣವೆನ್ನಬಹುದೇ? ಇದು ಒಂದು ಮಗ್ಗುಲಾದರೆ ಇನ್ನೊಂದು ಕರಾಳ ಮುಖವೂ ಇದೆ. ಅದೆಂದರೆ ಮಕ್ಕಳು ನೈತಿಕವಾಗಿ ಹಾದಿ ತಪ್ಪುತ್ತಿರುವುದು. ಚಿಕ್ಕ ವಯಸ್ಸಿನಲ್ಲೇ ಸಿಗರೇಟು ಸೇದುವುದು, ಮಾದಕದ್ರವ್ಯಗಳ ಸೇವನೆ, ಡ್ರಗ್ಸ್ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಪೋಷಕರ ನಿರ್ಲಕ್ಷ್ಯವೂ ಇವುಗಳಿಗೆ ಕೊಡುಗೆ ನೀಡಿದೆಯೆಂದರೆ ತಪ್ಪಲ್ಲ. ಹಣ ಕೊಟ್ಟು ಪದವಿ, ಡಾಕ್ಟರೇಟ್ ಕೊಂಡುಕೊಳ್ಳಬಹುದೆನ್ನುತ್ತಾರೆ. ನೈತಿಕತೆ ಕೊಡದ ಶಿಕ್ಷಣ ಒಂದು ಶಿಕ್ಷಣವೇ?
     ಹಾಗಾದರೆ ಇದಕ್ಕೆ ಪರಿಹಾರವೇನು? ಶಿಕ್ಷಣಪದ್ಧತಿಯಲ್ಲಿ ಸೂಕ್ತ ಪರಿವರ್ತನೆಯಾಗದೆ, ಪೋಷಕರ ಮನೋಭಾವ ಬದಲಾಗದೆ ಪರಿಹಾರ ಕಷ್ಟಸಾಧ್ಯ. ಹಿಂದಿನ ಬ್ರಹ್ಮಚರ್ಯಾಶ್ರಮ, ಗುರುಕುಲ ಪದ್ಧತಿಯ ಶಿಕ್ಷಣದ ಮಹತ್ವದ ಮತ್ತು ಉತ್ತಮ ಅಂಶಗಳನ್ನು ಒಳಗೊಂಡಂತೆ ಹೊಸ ಶಿಕ್ಷಣ ಪದ್ಧತಿ ಜಾರಿಗೆ ತರುವುದೇ ಇರುವ ಉತ್ತಮ ಪರಿಹಾರವಾಗಿದೆ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಭಾರತ ಮೂಲತಃ ಆಧ್ಯಾತ್ಮಿಕ ಪ್ರಧಾನ ದೇಶವಾಗಿದ್ದು, ಆಧ್ಯಾತ್ಮಿಕತೆಗೆ ಬಲ ಬಂದರೆ ಪುನಃ ಪರಿಸ್ಥಿತಿ ಬದಲಾಗಬಹುದು. ವಿವೇಕಾನಂದರು ಹೇಳಿದಂತೆ ಕೆಲವೊಮ್ಮೆ ಆಧ್ಯಾತ್ಮಿಕತೆ ಮೇಲುಗೈ ಪಡೆದರೆ, ಕೆಲವೊಮ್ಮೆ ಭೋಗವಾದ ಮೇಲುಗೈ ಪಡೆಯುತ್ತದೆ. ಸಮುದ್ರದ ಅಲೆಗಳಂತೆ ಒಂದನ್ನೊಂದು ಹಿಂಬಾಲಿಸುತ್ತವೆ. ಹೀಗಾಗಲೆಂದು ಹಾರೈಸೋಣ. ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಪ್ರತಿಷ್ಠೆಗಳನ್ನು ಬದಿಗಿಟ್ಟು ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪ್ಪಲೇಬೇಕೆಂದಿಲ್ಲ. ಆದರೆ, ವೈಚಾರಿಕತೆ ನಮ್ಮ ಮೂಲಮಂತ್ರ ಆಗಬೇಕು. ಈ ಮಂತ್ರ ಹೇಳುವುದು ಇದನ್ನೇ: ಯತ್ ಪೂರ್ವ್ಯಂ ಮರುತೋ ಯಚ್ಛ ನೂತನಂ ಯದುದ್ಯತೇ ವಸವೋ ಯಚ್ಚ ಶಸ್ಯತೇ| ವಿಶ್ವಸ್ಯ ತಸ್ಯ ಭವಥಾ ನವೇದಸಃ ಶುಭಂ ಯಾತಾಮನು ರಥಾ ಅವೃತ್ಸತ || (ಋಕ್.೫.೫೫.೮) ಹೇ ಮಾನವರೇ, ಯಾವುದು ಪ್ರಾಚೀನವೋ ಅದನ್ನೂ ಗಮನಿಸಿರಿ. ಇತಿಹಾಸದಿಂದ ಪಾಠ ಕಲಿಯಿರಿ. ಯಾವುದು ನೂತನವೋ ಅದನ್ನೂ ಕೇಳಿರಿ. ಯಾವುದು ಶಾಸ್ತ್ರ ರೂಪದಲ್ಲಿ ಹೇಳಿದೆಯೋ ಅದನ್ನೂ ಕೇಳಿ. ನಿಮ್ಮ ಅಂತರಂಗ ನಿಮಗೆ ಏನು ಹೇಳುತ್ತದೋ ಅದನ್ನೂ ಕೇಳಿ. ಯಾರು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೋ ಅವರ ಹಿಂದೆಯೇ ನಿಮ್ಮ ಜೀವನ ರಥಗಳೂ ಸಾಗಲಿ. ವಿವೇಚನೆ ಮಾಡಿ ಮುನ್ನಡೆಯಿರಿ ಎನ್ನುವ ಈ ಉದಾತ್ತತೆ ನಮ್ಮಲ್ಲಿ ಬೆಳೆಯಬೇಕು.
     ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯)      ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಜನರೇ, ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಸತ್ಯವನ್ನು ಕಂಡುಕೊಳ್ಳಿರಿ, ಅದನ್ನು ಹೊರಕ್ಕೆ ತನ್ನಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಶಕ್ತಿಯಿಂದ ತೊಡೆದುಹಾಕಿ. ಜಗತ್ತಿನಲ್ಲಿ ಇರುವ ಸುಮಾರು ೮೪ ಲಕ್ಷ ಜೀವಜಂತುಗಳ ಪೈಕಿ ಮಾನವನಿಗೆ ಮಾತ್ರ ವಿವೇಚನಾ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಅದನ್ನು ಬಳಸಿಕೊಂಡು ಸತ್ಯ ಯಾವದು, ಒಳ್ಳೆಯದು ಯಾವುದು ಎಂಬುದನ್ನು ಕಂಡುಕೊಂಡು ಕೆಟ್ಟದ್ದನ್ನು ದೂರ ಮಾಡಲು ನೀಡುವ ಕರೆ ಎಷ್ಟು ಸುಂದರ ಅಲ್ಲವೇ? ನೈತಿಕತೆಯನ್ನು ಬಲಪಡಿಸುವ, ಆತ್ಮಸ್ಥೈರ್ಯವನ್ನು ಕೊಡುವಂತಹ, ದೇಶ ಹಾಗೂ ಸಮಾಜದ ಹಿತ ಬಯಸುವ ಸತ್ಪ್ರಜೆಗಳನ್ನು ನಿರ್ಮಿಸುವಂತಹ ಶಿಕ್ಷಣದ ಅವಶ್ಯಕತೆ ಇಂದು ಇದೆ. ಆ ನಿಟ್ಟಿನಲ್ಲಿ ಜನನಾಯಕರು, ಪೋಷಕರು, ಮನೋಶಾಸ್ತ್ರಜ್ಞರು, ಶಿಕ್ಷಣತಜ್ಞರು ಚಿಂತಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ಕಾಲವೀಗ ಬಂದಿದೆ. 
-ಕ.ವೆಂ.ನಾಗರಾಜ್.
*********************
ದಿನಾಂಕ 01.02.2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: