ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಸೋಮವಾರ, ಮೇ 30, 2016

ಮುಪ್ಪು ಶಾಪವಾಗದಿರಲಿ - 1


     ಮೊದಲಿಗೆ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುವೆ. ಅದೊಂದು ಹೋಬಳಿ ಕೇಂದ್ರ. ಅಲ್ಲಿನ ದಿನಸಿ ಅಂಗಡಿಯ ಮಾಲಿಕ ಗ್ರಾಮದ ಅತಿ ದೊಡ್ಡ ಶ್ರೀಮಂತ. ಪ್ರತಿದಿನ ರಾತ್ರಿ ಮನೆಗೆ ನೋಟುಗಳ ಕಂತೆಗಳನ್ನೇ ಚೀಲದಲ್ಲಿ ಹೊತ್ತು ತಂದು ಎಣಿಸಿ ಕೂಡಿಡುತ್ತಿದ್ದಾತ. ಕ್ರಮೇಣ ಆತನಿಗೆ ವಯಸ್ಸಾಯಿತು. ಮಕ್ಕಳು ಪ್ರವರ್ಧಮಾನಕ್ಕೆ ಬಂದು ಅಂಗಡಿಯ ಉಸ್ತುವಾರಿ ನೋಡಿಕೊಳ್ಳಹತ್ತಿದರು. ಅಪ್ಪನನ್ನು ಮನೆಯಲ್ಲೇ ಇರಲು ನಿರ್ಬಂಧಿಸಿದರು. ಒಂದೊಮ್ಮೆ ರಾಜನಂತೆ ಮೆರೆದಿದ್ದಾತ ಮನೆಯಲ್ಲಿ ಆಳಿನಂತೆ ಇರಬೇಕಾಗಿ ಬಂದು, ಸೊಸೆಯರ ಕಿರುಕುಳವೂ ಸೇರಿಕೊಂಡು ಮತಿಭ್ರಮಣೆಗೊಳಗಾದ. ಇದೇ ನೆವವಾಗಿ ಆತನನ್ನು ಮನೆಯ ಹಿಂದಿದ್ದ ಕೋಣೆಯೊಂದರಲ್ಲಿ ಕೂಡಿಡಲಾಯಿತು. ಕೊಟ್ಟಾಗ ಊಟ, ಇಲ್ಲದಿದ್ದರೆ ಉಪವಾಸ. ಶೌಚಕ್ರಿಯೆಯೂ ಅದೇ ಕೋಣೆಯೊಳಗೇ! ಹಿಂಸೆಯಿಂದ ಅವನ ಕಿರುಚಾಟ, ಕೂಗಾಟ, ಬಾಗಿಲು ಬಡಿಯುವಿಕೆ ಜೋರಾದಾಗ ಅವನನ್ನು ಸರಪಳಿ ಹಾಕಿ ನಾಯಿಯಂತೆ ಕಟ್ಟಿಹಾಕಲಾಗಿತ್ತು. ಕೆಲವೇ ತಿಂಗಳಲ್ಲಿ ಅವನು ಅದೇ ಸ್ಥಿತಿಯಲ್ಲಿ ಅಸು ನೀಗಿದಾಗ ಮಕ್ಕಳಿಗೆ ಗೊತ್ತಾದದ್ದು ಸತ್ತ ಎರಡನೆಯ ದಿನದಂದು! ನಂತರದಲ್ಲಿ ಮಕ್ಕಳು ವಿಜೃಂಭಣೆಯಿಂದ ತಿಥಿ ಮಾಡಿ ಊರಿನವರಿಗೆಲ್ಲಾ ಊಟ ಹಾಕಿದ್ದರು.
     ಜಿಲ್ಲಾ ಕೇಂದ್ರದಲ್ಲಿ ವಾಸವಿದ್ದ ಒಂದು ಶ್ರೀಮಂತ ಕುಟುಂಬದ ಕಥೆಯಿದು. ಇಬ್ಬರು ಗಂಡು ಮಕ್ಕಳು ಸುಖವಾಗಿ ಬೆಳೆದು ಇಂಜನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪೆನಿಯಲ್ಲಿ ಅಧಿಕಾರಿಗಳಾಗಿ ಇಬ್ಬರೂ ಅಮೆರಿಕಾ ಸೇರಿಕೊಂಡರು. ಅಲ್ಲೇ ಸಂಸಾರಸ್ಥರಾಗಿ ಅಲ್ಲಿಯ ಪ್ರಜೆಗಳೇ ಆಗಿಬಿಟ್ಟರು. ಮಕ್ಕಳು ವಿದೇಶಕ್ಕೆ ಸೇರಿಕೊಂಡ ಕೆಲವು ವರ್ಷಗಳಲ್ಲಿ ಮನೆಯ ಯಜಮಾನ ತೀರಿಕೊಂಡ. ಹೃದ್ರೋಗಿಯಾದ ಮುಪ್ಪಿನ ತಾಯಿ ಒಬ್ಬರೇ ಆದರು. ಮಕ್ಕಳು ತಾಯಿಯನ್ನು ಕರೆಸಿಕೊಳ್ಳಲಿಲ್ಲ. ಎಷ್ಟು ಬೇಕೋ ಅಷ್ಟು ಹಣ ಕಳಿಸುತ್ತೇವೆ, ವೃದ್ಧಾಶ್ರಮಕ್ಕೆ ಸೇರಿಕೋ ಎಂದರು. ವಿಧಿಯಿಲ್ಲದೆ ವೃದ್ಧಾಶ್ರಮದ ನಿವಾಸಿಯಾದ ಆಕೆಯ ಕಣ್ಣೀರಿನ ನೋವು ಅರಿತವರು ಯಾರು? ಆಕೆಯಲ್ಲಿ ಸಾಕಷ್ಟು ಹಣವಿತ್ತು. ಆದರೆ ಆಕೆಗೆ ಬೇಕಾಗಿದ್ದದ್ದು ಹಣವಲ್ಲ. ಹಿಡಿಯಷ್ಟು ಪ್ರೀತಿ! ಜೀವನೋತ್ಸಾಹ ಬತ್ತಿದ ಆಕೆಯ ಕಣ್ಣುಗಳು ಶೂನ್ಯವನ್ನು ದಿಟ್ಟಿಸುತ್ತಿದ್ದವು. ಮುಂದೊಮ್ಮೆ ಶೂನ್ಯದಲ್ಲೇ ಆಕೆ ಲೀನವಾದಳು.
     ವೃದ್ಧಾಪ್ಯದ ತಾಪ, ಸಮಸ್ಯೆಗಳ ಕುರಿತು ಕಿರುನೋಟ ಬೀರುವ ಸಲುವಾಗಿ ಮೇಲಿನ ಎರಡು ಘಟನೆಗಳನ್ನು ಉದಾಹರಿಸಿದ್ದಷ್ಟೆ. ವೃದ್ಧರನ್ನು, ಮನೆಯ ಹಿರಿಯರನ್ನು ಗೌರವದಿಂದ, ಪ್ರೀತಿಯಿಂದ ಕಾಣುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತದಲ್ಲಿ ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಪೀಳಿಗೆಯಿದೆ, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜ, ಭಾರತದಲ್ಲಿ ಮೂರನೆಯ ಎರಡು ಭಾಗದಷ್ಟು ಸಂಖ್ಯೆಯ ೩೦ ವರ್ಷಗಳ ಒಳಗಿನ ಯುವಜನರಿದ್ದಾರೆ. ಇದರ ಅರ್ಥ ಮೂರನೆಯ ಒಂದರಷ್ಟು ಭಾಗ ವೃದ್ಧರಿದ್ದಾರೆ. ಈ ವೃದ್ಧರ ಸ್ಥಿತಿ-ಗತಿಗಳು ಹೇಗಿವೆ ಎಂಬುದೂ ಚಿಂತನಾರ್ಹ ವಿಷಯವಲ್ಲವೇ? ಕೆಲವೇ ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಯುವಪೀಳಿಗೆ ವೃದ್ಧರಾಗುತ್ತಾರೆ. ಹೆಚ್ಚಿನ ಕುಟುಂಬಗಳಲ್ಲಿ ಒಂದೊಂದೇ ಮಕ್ಕಳಿರುವುದರಿಂದ ಸಹಜವಾಗಿ ವೃದ್ಧರ ಸಂಖ್ಯೆಯೇ ಹೆಚ್ಚಾಗಲಿದೆ. ಭಾರತದಲ್ಲಿ ಸುಮಾರು ೮೦ ಮಿಲಿಯನ್ ವೃದ್ಧರ ಸಂಖ್ಯೆ ಇದ್ದು ಆ ಸಂಖ್ಯೆ ಮುಂದಿನ ೨೫ ವರ್ಷಗಳಲ್ಲಿ ೧೮೦ ಮಿಲಿಯನ್ ಆಗಲಿದೆಯೆನ್ನಲಾಗಿದೆ. ಈಗಿನ ಯುವಪೀಳಿಗೆ ವೃದ್ದರ ಕುರಿತ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದೆ ಅವರಿಗೇ ಅದು ತಿರುಗುಬಾಣವಾಗಿ ಬಾಧಿಸದೇ ಇರದು.
     ಹಿಂದಿನ ಕಾಲದಲ್ಲಿ ವೃದ್ಧಾಪ್ಯ ಒಂದು ಸಮಸ್ಯೆಯಾಗಿರಲಿಲ್ಲ. ಅವಿಭಕ್ತ ಕುಟುಂಬಗಳಿದ್ದ ಸಮಯದಲ್ಲಿ ವೃದ್ಧರನ್ನು ಗೌರವದಿಂದ ಕಾಣಲಾಗುತ್ತಿತ್ತು. ಅವರ ಆರೈಕೆ, ಶುಶ್ರ್ರೂಷೆಗಳನ್ನು ಒಬ್ಬರಲ್ಲಾ ಒಬ್ಬರು ಮುತುವರ್ಜಿಯಿಂದ ಮಾಡುತ್ತಿದ್ದರು. ಈಗಿನ ವೃದ್ಧರು ಅವಿಭಕ್ತ ಕುಟುಂಬಗಳನ್ನೂ ಕಂಡಿದ್ದವರು ಮತ್ತು ಇವರುಗಳ ಕಾಲಘಟ್ಟದಲ್ಲೇ ಕುಟುಂಬಗಳು ವಿಭಜನೆಯತ್ತ ಧಾವಿಸಿದ್ದುದಾಗಿದ್ದು ಬದಲಾವಣೆಗೆ ಹೊಂದಿಕೊಳ್ಳಲಾಗದ ಸ್ಥಿತಿಯಲ್ಲಿರುವವರು. ಈಗಿನ ಯುವಪೀಳಿಗೆಗೆ ಅವಿಭಕ್ತ ಕುಟುಂಬದ ಕಲ್ಪನೆಯೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಅವಿಭಕ್ತವಿರಲಿ, ವಿಭಕ್ತ ಕುಟುಂಬಗಳ ಅಡಿಪಾಯವೇ ಭದ್ರವಾಗಿಲ್ಲ. ಬೆಂಗಳೂರು ಭಾರತದಲ್ಲಿ ಅತಿ ಹೆಚ್ಚು ವಿವಾಹ ವಿಚ್ಛೇದನಗಳನ್ನು ಕಾಣುತ್ತಿರುವ ಎರಡನೆಯ ನಗರವಾಗಿದೆ. ರಾಜ್ಯದ ಉಳಿದೆಡೆಯಲ್ಲೂ ಇದರ ಹಾವಳಿ ಕಡಿಮೆಯೇನಲ್ಲ. ಹೀಗಿರುವಾಗ ವೃದ್ಧರ ಕಡೆ ಗಮನ ಹರಿಸುವವರಾದರೂ ಯಾರು? ಸ್ವಾರ್ಥವೇ ಪ್ರಧಾನವಾಗುತ್ತಿರುವ ಇಂದಿನ ಸ್ಥಿತಿಗೆ ಪಾಶ್ಚಾತ್ಯರ ಭೋಗವಾದದ ಪ್ರಭಾವ, ನೈತಿಕ ಮೌಲ್ಯಗಳನ್ನು ಕಡೆಗಣಿಸಿರುವ ಶಿಕ್ಷಣ ಪದ್ಧತಿ ಪ್ರಧಾನ ಕೊಡುಗೆ ಇತ್ತಿವೆ. ತಮ್ಮ ದುಸ್ಥಿತಿಗಾಗಿ ಗೋಳಿಡುತ್ತಿರುವ ಇಂದಿನ ವೃದ್ಧರು ತಮ್ಮ ಮಕ್ಕಳಿಗೆ ಸುಯೋಗ್ಯ ಶಿಕ್ಷಣ, ನೈತಿಕ ಶಿಕ್ಷಣ ನೀಡುವತ್ತ ಗಮನ ಹರಿಸದಿದ್ದುದೂ ಒಂದು ಕಾರಣವೆಂದರೆ ತಪ್ಪಿಲ್ಲ. ಮೈಯಲ್ಲಿ ಕಸುವಿದ್ದಾಗ ಆಡಿದ ಆಟಗಳು, ತೋರಿದ ದರ್ಪಗಳು ಸಹ ತಿರುಗುಬಾಣವಾಗಿ ವೃದ್ಧಾಪ್ಯದಲ್ಲಿ ಕಾಡುವಾಗ ಅದನ್ನು ಎದುರಿಸುವ ಶಕ್ತಿ, ಸಾಮರ್ಥ್ಯಗಳು ಅವರಲ್ಲಿರುವುದಿಲ್ಲ.  
ಮರಣಕಿಂತಲು ಘೋರ ಮುಪ್ಪೆಂಬ ಶಾಪ
ದೇಹ ದುರ್ಬಲವು ರೋಗ ರುಜಿನಗಳ ಕೂಪ |
ಅನ್ಯರನು ನೆಚ್ಚುವ ದೈನ್ಯತೆಯೆ ತಾಪ
ನರರ ಮಸ್ತಕದ ಲಿಖಿತವಿದು ಮೂಢ ||
     ವೃದ್ಧಾಪ್ಯದ ಸಮಸ್ಯೆಗಳ ಕುರಿತು ಹೇಳಬೇಕೆಂದರೆ ಮೂರು ಪ್ರಧಾನ ಸಮಸ್ಯೆಗಳು ಗೋಚರಿಸುತ್ತವೆ - ಆಶ್ರಯದ ಅಭದ್ರತೆ, ಆರ್ಥಿಕ ಅಭದ್ರತೆ ಮತ್ತು ಆರೋಗ್ಯದ ಸಮಸ್ಯೆ. ಮೂರೂ ಸಮಸ್ಯೆಗಳಿಗೆ ಮೂಲ ಕುಟುಂಬದ ಸದಸ್ಯರುಗಳು ಅವರುಗಳಿಗೆ ತೋರುತ್ತಿರುವ ಅಸಡ್ಡೆ ಅಥವ ಪ್ರೀತಿಯ ಕೊರತೆಯೆಂದರೆ ತಪ್ಪಿಲ್ಲ. ವೃದ್ಧರು, ಅಶಕ್ತರ ಗೋಳನ್ನು ಕೇಳಬೇಕಾದವರೇ ಕೇಳದಿರುವಾಗ, ಅವರ ನೋವಿನ ಕುರಿತು ಧ್ವನಿಯೆತ್ತುವವರಾದರೂ ಯಾರು? ಎತ್ತಿದರೂ ಪರಿಹಾರ ಅಂದುಕೊಂಡಷ್ಟು ಸುಲಭವಲ್ಲ. ನಾವು-ನೀವು ಕಂಡಿರುವ, ಕೇಳಿರುವ ಉದಾಹರಣೆಗಳೊಂದಿಗೆ ವೃದ್ಧರ ಸಮಸ್ಯೆಗಳು ಮತ್ತು ಅದರ ನಿವಾರಣೆಗೆ ಮಾಡಬಹುದಾದುದಾದರೂ ಏನು ಎಂಬ ಕುರಿತು ಮುಂದಿನ ಲೇಖನದಲ್ಲಿ ಚರ್ಚಿಸೋಣ.
-ಕ.ವೆಂ.ನಾಗರಾಜ್.
****************
ದಿನಾಂಕ 15-02-2016ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ