ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 30, 2010

ಸೇವಾಪುರಾಣ19: ಗುಲ್ಬರ್ಗ ತೋರಿಸಿದರು-4: ನಾನು ಕಲ್ಲೇಶಿಯಾದದ್ದು!

      ಭೂನ್ಯಾಯ ಮಂಡಳಿ ಯಾರದ್ದಾದರೂ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾದುದು ತಹಸೀಲ್ದಾರರ ಕರ್ತವ್ಯ. ಒಂದು ಪ್ರಕರಣದಲ್ಲಿ ಒಬ್ಬರು ಸ್ವಾಮಿಗಳಿಗೆ ಸೇರಿದ್ದ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನವಾದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಿಬ್ಬಂದಿಯೊಂದಿಗೆ ಹೋಗಿದ್ದ ತಹಸೀಲ್ದಾರರು ಗ್ರಾಮಸ್ಥರ ವಿರೋಧದಿಂದಾಗಿ ಹಾಗೆಯೇ ಹಿಂತಿರುಗಿ ಬರಬೇಕಾಯಿತು. ಇದಾಗಿ ಸುಮಾರು ಆರು ತಿಂಗಳ ನಂತರ ಆ ಜಮೀನನ್ನು ಸ್ವಾಧೀನ ಪಡೆಯಲು ಜಿಲ್ಲಾಧಿಕಾರಿಯವರಿಂದ ಒತ್ತಾಯ ಬಂದಿದ್ದರಿಂದ ಆ ಜಮೀನನ್ನು ಸ್ವಾಧೀನ ಪಡೆಯಲು ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ಆಗತಾನೇ ಬಂದಿದ್ದ ನನ್ನನ್ನು ಅಧಿಕೃತಗೊಳಿಸಿ ತಹಸೀಲ್ದಾರರು ಆದೇಶಿಸಿ ಹಳ್ಳಿಗೆ ಹೋಗಲು ಸೂಚಿಸಿದರು. ಸಹೋದ್ಯೋಗಿಗಳು ಅಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ್ದು ಕೇಳಿ ಆ ಕೆಲಸದ ಕಷ್ಟದ ಅರಿವಾಯಿತು. ತಹಸೀಲ್ದಾರರು ಅಗತ್ಯ ಬಿದ್ದರೆ ಪೋಲಿಸ್ ನೆರವು ಪಡೆದು ಹೋಗಲು ತಿಳಿಸಿದರು.
     ಪೋಲಿಸ್ ಇನ್ಸ್ ಪೆಕ್ಟರರಿಗೂ ತಿಳಿಸಿ ಸಂಬಂಧಿಸಿದವರಿಗೆ ಪೂರ್ವಸೂಚನೆ ನೀಡಿ ಆ ಗ್ರಾಮಕ್ಕೆ ನಿಗದಿತ ದಿನ ಹೋದರೆ ಅಲ್ಲಿ ಗ್ರಾಮದ ಗಡಿಯಲ್ಲಿ ಸುಮಾರು 300-400 ಜನರು ದೊಣ್ಣೆ, ಮಚ್ಚು, ಕುಡುಗೋಲುಗಳನ್ನು ಹಿಡಿದುಕೊಂಡು ಗುಂಪು ಕೂಡಿದ್ದರು. ನನ್ನನ್ನು ತಡೆದು ಗ್ರಾಮಕ್ಕೆ ಬರಬಾರದೆಂದೂ, ಹಾಗೂ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಎಚ್ಚರಿಸಿದರು. 'ನೀವು ಹೋಗಿರಿ, ಹಿಂದೆ ಬರುತ್ತೇವೆ' ಎಂದು ಹೇಳಿದ್ದ ಪೋಲಿಸರ ಸುಳಿವಿರಲಿಲ್ಲ. ನಾನು ಹೇಳಿದ ಯಾವ ಮಾತುಗಳನ್ನೂ ಗ್ರಾಮಸ್ಥರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನನ್ನನ್ನು ಈಗ ತಡೆಯಬಹುದೆಂದೂ, ನನಗೆ ತೊಂದರೆಯಾದರೆ ನನ್ನ ಸ್ಥಾನದಲ್ಲಿ ಬೇರೊಬ್ಬರು ಹೆಚ್ಚಿನ ಪೋಲಿಸ್ ಸಹಾಯ ಪಡೆದು ಈ ಕೆಲಸ ಮಾಡುತ್ತಾರೆಂದೂ, ಕೆಲಸ ಪೂರ್ಣಗೊಳ್ಳುವವರೆಗೆ ಇದು ಮುಂದುವರೆಯುವುದೆಂದೂ ಹೇಳಿದರೂ ಯಾವುದೇ ಪರಿಣಾಮ ಎದುರಿಸಲು ಅವರುಗಳು ಸಿದ್ಧರಾಗಿದ್ದರು. ಕೊನೆಯ ಅಸ್ತ್ರವಾಗಿ ನಾನು ಜಮೀನನ್ನು ಈಗ ಸ್ವಾಧೀನ ಪಡೆಯುವುದಿಲ್ಲವೆಂದೂ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಕೊಡುವುದಾಗಿಯೂ ಒಮ್ಮೆ ಸ್ವಾಮಿಗಳನ್ನು ಭೇಟಿ ಮಾಡಿ ಹೋಗುವುದಾಗಿ ಹೇಳಿದರೆ ಅದಕ್ಕೂ ಅವರುಗಳು ಒಪ್ಪಲಿಲ್ಲ. ಬಹಳಷ್ಟು ಮನವರಿಕೆ ಮಾಡಿದ ನಂತರ ಕೊನೆಗೆ ಸ್ವಾಮಿಗಳನ್ನು ಭೇಟಿ ಮಾಡಲು ಅನುಮತಿ ಕೊಟ್ಟ ಗುಂಪು ನನ್ನೊಂದಿಗೆ ಮಠಕ್ಕೆ ಹಿಂಬಾಲಿಸಿತು.
     ದೊಡ್ಡ ಕಲ್ಲಿನ ಕಟ್ಟಡದಂತೆಯೇ ಇದ್ದ ಮಠಕ್ಕೆ ಬಂದು ಸ್ವಾಮಿಗಳನ್ನು ಕಂಡು ಅವರಿಗೆ ನಮಸ್ಕರಿಸಿದಾಗ ಅವರು ನನ್ನನ್ನೇ ನೆಟ್ಟ ನೋಟದಿಂದ ನೋಡುತ್ತಾ ನಿಂತಿದ್ದು ಕೆಲಕ್ಷಣದ ನಂತರ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದು ನನಗೆ ಆಶ್ಚರ್ಯ ತಂದಿತು. ನಾನು ಮಾತನಾಡಲು ಹೋದಾಗ ಸುಮ್ಮನಿರಲು ಸನ್ನೆ ಮಾಡಿದ ಅವರು ನಂತರ ಸ್ವಲ್ಪ ಸುಧಾರಿಸಿಕೊಂಡು ಮೊದಲು ಮಠದಲ್ಲಿ ಊಟ ಮಾಡಬೇಕೆಂದೂ, ಆಮೇಲೆ ಮಾತನಾಡಬಹುದೆಂದು ಹೇಳಿದರು. ಅವರು ಸಂಸಾರಿ ಸ್ವಾಮಿಯಾಗಿದ್ದರು. ನನಗೆ ಕೈಕಾಲು ತೊಳೆಯಲು ಅವರೇ ನೀರು ತುಂಬಿಕೊಟ್ಟರು. ಬಾಳೆಹಣ್ಣುಗಳು, ಹಲಸಿನಹಣ್ಣಿನ ತೊಳೆಗಳು ಮತ್ತು ಜೇನುತುಪ್ಪ ತಂದು ತಿನ್ನಲು ಕೊಟ್ಟರು. ಸುಮಾರು ಐವತ್ತು ವರ್ಷದವರಿರಬಹುದಾದ ಆ ಸ್ವಾಮಿಗಳು ಮಾಸಲು ಬಿಳಿಯ ಬಣ್ಣದ ತುಂಡು ಕಚ್ಚೆ ಪಂಚೆ ಉಟ್ಟಿದ್ದರು. ಹೆಗಲ ಮೇಲೆ ಅದೇ ಬಣ್ಣದ ಅಂಗವಸ್ತ್ರ ಇತ್ತು. ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಎದ್ದು ಕಾಣುತ್ತಿತ್ತು. ನನ್ನನ್ನು ನೋಡುವಾಗಲೆಲ್ಲಾ ಅವರ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಹೋಳಿಗೆ ಊಟ ಮಾಡಿಸಿ ಸ್ವತಃ ಅವರೇ ನನಗೆ ಬಡಿಸಿದರು. ನಾನು ಊಟ ಮಾಡುವಾಗ ಪಕ್ಕದಲ್ಲಿ ಕುಳಿತು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. ನನ್ನ ಬೆನ್ನು ಸವರುತ್ತಾ 'ಕಲ್ಲೇಶಿ, ಕಲ್ಲೇಶಿ' ಎಂದು ಗುಣುಗುಣಿಸುತ್ತಿದ್ದರು. ನನಗೂ ಏನು ಮಾತನಾಡಬೇಕೆಂದು ತೋಚುತ್ತಿರಲಿಲ್ಲ. ಅಲ್ಲಿದ್ದ ಜನರೂ ಸಹ ಸ್ತಬ್ಧರಾಗಿ ನೋಡುತ್ತಿದ್ದರು. ಅವರೂ ಸಹ 'ಹೌಂದು, ಕಲ್ಲೇಶಿ ಹಾಂಗೆ ಹಾನೆ' (ಹೌದು, ಕಲ್ಲೇಶಿ ಹಾಗೆ ಇದ್ದಾನೆ) ಎಂದು ಪಿಸುಮಾತನಾಡುತ್ತಿದ್ದು ನನಗೆ ಕೇಳಿಸುತ್ತಿತ್ತು. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಒಂದು ಕೊಠಡಿಗೆ ಕರೆದೊಯ್ದ ಅವರು ನನಗೆ "ನೀನು ನನ್ನ ಕಲ್ಲೇಶಿ, ದೇವರೇ ನಿನ್ನನ್ನು ಇಲ್ಲಿಗೆ ಕಳಿಸ್ಯಾನ" ಎಂದು ಹೇಳಿದರು. ನಾನು ಕಲ್ಲೇಶಿಯ ಬಗ್ಗೆ ವಿಚಾರಿಸಿದೆ. ಅವರಿಗೆ ಐವರು ಮಕ್ಕಳಿದ್ದರಂತೆ. ಕಲ್ಲೇಶಿ ಅವರ ಎರಡನೇ ಮಗ. ಒಳ್ಳೆಯ ಸ್ವಭಾವದವನಾಗಿ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ ಅವನು ಸುಮಾರು ಐದು ವರ್ಷಗಳ ಹಿಂದೆ ಕಾಯಿಲೆ ಬಂದು ಮೃತನಾದಾಗ ಅವನಿಗೆ 17 ವರ್ಷವಾಗಿತ್ತಂತೆ. ನೋಡಲು ನನ್ನಂತೆಯೇ ಇದ್ದನಂತೆ. ನಾನು ನಡೆಯುವುದು, ಮಾತನಾಡುವುದು, ಹಾವಭಾವಗಳು ಥೇಟ್ ಕಲ್ಲೇಶಿಯ ತರಹವೇ ಇದ್ದು ಕಲ್ಲೇಶಿಗೂ ನನಗೂ ಎಲ್ಲಾ ರೀತಿಯಲ್ಲೂ ಹೋಲಿಕೆಯಿದೆಯೆಂದು ಹೇಳಿದ ಅವರು ಗದ್ಗದಿತರಾಗಿ ನನ್ನನ್ನು ತಬ್ಬಿಕೊಂಡು 'ಕಲ್ಲೇಶಿ' ಎನ್ನುತ್ತಾ ಅಳತೊಡಗಿದರು. ನಾನು ಅವರ ಕೈಹಿಡಿದು ಸಮಾಧಾನಿಸಿ ಊಟ ಮಾಡಿಕೊಂಡು ಬರುವಂತೆ ಹೇಳಿದೆ. ಅವರು ಮಂತ್ರಮುಗ್ಧರಂತೆ ನಾನು ಹೇಳಿದಂತೆ ಮಾಡಿದರು. ಅಲ್ಲಿ ಸೇರಿದ್ದ ಜನರಿಗೂ ಮಠದಲ್ಲೇ ಊಟದ ವ್ಯವಸ್ಥೆಯಾಗಿತ್ತು. ಸ್ವಾಮಿಗಳ ವರ್ತನೆಯಿಂದ ಜನಗಳಿಗೂ ನನ್ನ ಮೇಲಿದ್ದ ರೋಷ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಸ್ವಾಮಿಗಳು ಏನೋ ನಿರ್ಧಾರಕ್ಕೆ ಬಂದಂತಿತ್ತು. ಊಟದ ನಂತರ ಬಂದ ಅವರು "ಮಗೂ, ಬಾಯಿಲ್ಲಿ, ಅದೇನು ಕಾಗದ ಕೊಡು, ಎಲ್ಲಿ ಸೈನು ಮಾಡಬೇಕು ಹೇಳು" ಎಂದರು. ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಅವರು ಸಿದ್ಧರಾಗಿದ್ದರು. ವಿರೋಧಿಸಿದ ಜನರನ್ನೂ ಅವರೇ ಸಮಾಧಾನಿಸಿ ಪರಿಸ್ಥಿತಿ ವಿವರಿಸಿ "ಎಂದಿದ್ದರೂ ಈ ಜಮೀನು ಕೈಬಿಟ್ಟು ಹೋಗುವುದಂತೂ ಸತ್ಯ. ಈಗ ನನ್ನ ಮಗನೇ ಬಂದಿದ್ದಾನೆ. ಅವನ ಮುಖಾಂತರವೇ ಹೋಗಲಿ ಬಿಡಿ" ಎಂದು ಅವರನ್ನು ಒಪ್ಪಿಸಿದರು. ಸಂಬಂಧಿಸಿದ ಕಾಗದ ಪತ್ರಗಳಿಗೆಲ್ಲಾ ಅವರೇ ಸಹಿ ಮಾಡಿದ್ದಲ್ಲದೆ ಅಲ್ಲಿದ್ದ ಪ್ರಮುಖರೆಲ್ಲರ ಸಾಕ್ಷಿ ಸಹಿ ಸಹ ಹಾಕಿಸಿದರು. ಬಲವಂತವಾಗಿ ಮಹಜರ್ ಮಾಡಿ ಕಾಗದದ ಮೇಲೆ ಜಮೀನು ಸ್ವಾಧೀನ ಪಡೆಯುವ, ಗಲಾಟೆ ಆಗುವ ಸಂಭವಗಳು, ಇತ್ಯಾದಿ ನಡೆಯುವ ಪ್ರಸಂಗವೇ ಬರಲಿಲ್ಲ. ಎಲ್ಲಾ ಕೆಲಸಗಳು ಮುಗಿದಾಗ ಹೊರಡಲು ಅನುವಾಗಿ ಅವರಿಗೆ ನಮಸ್ಕರಿಸಿದೆ. ಅವರು ಹೃದಯಪೂರ್ವಕವಾಗಿ ಆಶೀರ್ವದಿಸಿ 'ನಿನ್ನ ಎಲ್ಲಾ ಕಷ್ಟಗಳೂ ದೂರವಾಗಲಿ, ನೂರುಕಾಲ ಸುಖವಾಗಿ ಬಾಳು' ಎಂದು ಹೇಳಿ ಮತ್ತೆ ನನ್ನನ್ನು ತಬ್ಬಿಕೊಂಡರು. ಅವರ ಕಣ್ಣು ತೇವವಾಗಿತ್ತು. ಜನರ ಕೈಯಲ್ಲಿದ್ದ ದೊಣ್ಣೆ, ಮಚ್ಚುಗಳು ಮಾಯವಾಗಿದ್ದವು. ಅವರೂ ನನ್ನನ್ನು ಮೆಚ್ಚುಗೆಯಿಂದ ನೋಡುತ್ತಿದ್ದುದು ನನಗೆ ನಂಬಲಾಗದ ಸತ್ಯವಾಗಿ ಕಾಣುತ್ತಿತ್ತು. ಇಷ್ಟೆಲ್ಲಾ ನಡೆದರೂ ಸಹಾಯಕ್ಕೆ ಬರಬೇಕಿದ್ದ ಪೋಲಿಸರು ಬಂದಿರಲೇ ಇಲ್ಲ. ಅವರೂ 'ಬಂದರೂ ಗಲಾಟೆಯಾಗುತ್ತದೆ, ಸುಮ್ಮನೆ ವಾಪಸು ಬರಬೇಕು' ಎಂದು ಭಾವಿಸಿದ್ದಿರಬೇಕು. ಮಠಕ್ಕೆ ಸೇರಿದ ವಾಹನದಲ್ಲಿ ನನ್ನನ್ನು ಸೇಡಂಗೆ ಕಳಿಸಿಕೊಟ್ಟರು. ನನಗೆ ಆಗಾಗ್ಗೆ ಬಂದು ಹೋಗುತ್ತಿರಲು ಸ್ವಾಮಿಗಳು ತಿಳಿಸಿದರು. ನಂತರದ ದಿನಗಳಲ್ಲೂ ಅವರೇ ಎರಡು-ಮೂರು ಸಲ ಸೇಡಂಗೆ ಬಂದಾಗ ಕಛೇರಿಗೂ ಬಂದು ಆಶೀರ್ವದಿಸಿ ಹಣ್ಣು ಕೊಟ್ಟು ಹೋಗಿದ್ದರು. ನನ್ನ ಈ ಕೆಲಸದ ಬಗ್ಗೆ ಉಪವಿಭಾಗಾಧಿಕಾರಿಯವರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದ್ದರು. ಸ್ಥಳೀಯ ಪತ್ರಿಕೆಗಳಲ್ಲೂ ಈ ವಿಷಯ ಪ್ರಧಾನವಾಗಿ ಪ್ರಸ್ತಾಪವಾಗಿತ್ತು.
     ನಾನು ನಂತರದ ದಿನಗಳಲ್ಲಿ ಆಗಾಗ್ಗೆ ಹೋಗಿ ಸ್ವಾಮಿಗಳನ್ನು ಕಂಡು ಮಾತನಾಡಿಸಿ ಬರಬೇಕಾಗಿತ್ತು, ಅವರ ಪಾಲಿನ ಕಲ್ಲೇಶಿಯಾಗಬೇಕಿತ್ತು ಎಂದು ಈಗ ನನಗೆ ಅನ್ನಿಸುತ್ತಿದೆ. ಆದರೆ ಕಾಲ ಮಿಂಚಿದೆ. ಆ ಘಟನೆ ನಡೆದಾಗ ನನಗೆ 23 ವರ್ಷ ವಯಸ್ಸು, ಮದುವೆಯಾಗಿರಲಿಲ್ಲ. ತುರ್ತು ಪರಿಸ್ಥಿತಿ ಕಾಲದ ಕಷ್ಟಗಳು, ಅನಿರೀಕ್ಷಿತ ವರ್ಗಾವಣೆ, ಹುಡುಗುತನ, ಇತ್ಯಾದಿಗಳಿಂದಾಗಿ ನಾನು ಅವರನ್ನು ಭೇಟಿಯಾಗದೆ ಇದ್ದುದು ಸರಿಯಲ್ಲವೆಂದು ನಾನು ಈಗ ಅಂದುಕೊಂಡರೆ ಅದಕ್ಕೆ ಅರ್ಥವಿಲ್ಲ. ನಂತರದಲ್ಲಿ ಕೆಲವು ತಿಂಗಳುಗಳ ನಂತರ ತುರ್ತು ಪರಿಸ್ಥಿತಿ ಕೊನೆಗೊಂಡು ನನಗೆ ವಾಪಸು ಹಾಸನಕ್ಕೆ ವರ್ಗವಾಗಿ ಬಂದ ಮೇಲೆ ಈ ಕಲ್ಲೇಶಿ ಪ್ರಕರಣ ಮರೆತೇ ಬಿಟ್ಟು ತಪ್ಪು ಮಾಡಿದ ಮನೋಭಾವ ನನ್ನನ್ನು ಈಗ ಕಾಡಿದೆ. ಸ್ವಾಮಿಗಳ ಹೃದಯಪೂರ್ವಕವಾದ ಆಶೀರ್ವಾದ ನನ್ನನ್ನು ಕಷ್ಟಕಾಲಗಳಲ್ಲಿ ಕಾಪಾಡಿದೆ ಎಂಬುದು ನನಗೀಗ ಅರಿವಾಗಿದೆ.

ಶನಿವಾರ, ಸೆಪ್ಟೆಂಬರ್ 18, 2010

ಮೂಢ ಉವಾಚ -18: ಮೋಹ

ಧೃತರಾಷ್ಟ್ರನಾ ಮೋಹ ಮಕ್ಕಳನೆ ನುಂಗಿತು
ಪುತ್ರವ್ಯಾಮೋಹವದು ನೀತಿಯನೆ ತಿಂದಿತು|
ಮನಮೋಹಕ ಮೋಹ ಬಿಗಿದೀತು ಸಂಕಲೆಯ
ಸುತ್ತೀತು ಭವಬಂಧನದ ಪಾಶ ಹೇ ಮೂಢ||

ನನದೆಂಬ ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಗಳ ಮೂಲ|
ಸುರತಿಯಾಂತ್ಯದಲಿ ಹೆಣ್ಣು ಗಂಡುಜೇಡವನು
ತಿಂಬಂತೆ ಮೋಹ ಜೀವನವ ತಿಂದೀತು ಮೂಢ||

ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ|
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಕಾರಣವು ಮೂಢ||

ಮಾಯಾವಿ ಮೋಹಿನಿ ಜಗವನೆ ಕುಣಿಸುವಳು
ರಮಣೀಯ ಮೋಹದಾ ಬಲೆಯ ಬೀಸುವಳು|
ಮಾಯೆಗೆ ಮರುಳಾಗಿ ತಿಳಿದೂ ತಪ್ಪೆಸಗುವ ನರರ
ಆತ್ಮಸಾಕ್ಷಿಯದು ಮೋಹದಾ ಬಂಧಿ ಮೂಢ||
************
-ಕವಿನಾಗರಾಜ್.

ಗುರುವಾರ, ಸೆಪ್ಟೆಂಬರ್ 16, 2010

ಸೇವಾಪುರಾಣ-18 :ಗುಲ್ಬರ್ಗ ತೋರಿಸಿದರು-3: ಕಣ್ಣು ಹಾಕೀರಿ, ಹುಷಾರ್!

ಕಣ್ಣು ಹಾಕೀರಿ, ಹುಷಾರ್ !
     ಸೇಡಂ ತಾಲ್ಲೂಕಿನ ಜನರು ಸ್ವಭಾವತಃ ಸಜ್ಜನರು, ಬಡತನವಿದ್ದರೂ ಆತಿಥ್ಯ ನೀಡುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದವರು. ಮೈಸೂರು, ಮಂಗಳೂರು ಕಡೆಯ ಜನರನ್ನು ಗೌರವದಿಂದ ಕಾಣುವ ದೊಡ್ಡಸ್ತಿಕೆ ಅವರಲ್ಲಿತ್ತು. ಅಲ್ಲಿನ ಹವಾಮಾನದ ಕಾರಣದಿಂದಾಗಿ ಸ್ವಲ್ಪ ಆಲಸಿಗಳು. ಒಳ್ಳೆಯ ಸ್ವಭಾವದವರಾದರೂ ಕೇಡು ಬಗೆದವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಈ ಬಗ್ಗೆ ನನ್ನ ಅನುಭವವನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ನಾನು ಒಂದು ಹಳ್ಳಿಗೆ ಸ್ಥಳತನಿಖೆ ಸಲುವಾಗಿ ಹೋಗಿದ್ದೆ. ಆ ಹಳ್ಳಿಯ ಕುಲಕರ್ಣಿ (ಗ್ರಾಮಲೆಕ್ಕಿಗ) ನನಗೆ ಆತನ ಸ್ನೇಹಿತನ ಮನೆಯಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದ. ನಾನು, ಕುಲಕರ್ಣಿ, ಅವನ ಸ್ನೇಹಿತರು ಎಲ್ಲರೂ ಉಭಯಕುಶಲೋಪರಿ ಮಾತನಾಡುತ್ತಾ ಒಟ್ಟಿಗೆ ಊಟ ಮಾಡಿದೆವು. ನಾನು ಒಬ್ಬನೇ ಇದ್ದುದರಿಂದ ಉಳಿಯುವ ಸಂದರ್ಭಗಳಲ್ಲಿ ಹಳ್ಳಿಗಳಲ್ಲೇ ತಂಗುತ್ತಿದ್ದೆ. ಆ ಗ್ರಾಮದ ಕೆಲಸವಾದ ನಂತರ ನಾನು ಸಮೀಪದ ಮಳಖೇಡದ ರಾಯರ ಮಠಕ್ಕೆ ಹೋಗಿ ಅಲ್ಲಿನ ಕೊಠಡಿಯೊಂದರಲ್ಲಿ ಉಳಿದುಕೊಂಡೆ. ನನ್ನನ್ನು ಮಠಕ್ಕೆ ಬಿಟ್ಟು ಕುಲಕರ್ಣಿ ವಾಪಸು ಹಳ್ಳಿಗೆ ಹೋದ. ಮರುದಿನ ಬೆಳಿಗ್ಗೆ ನಾನು ಸೇಡಂಗೆ ಮರಳಿ ಬಂದು ಕಛೇರಿಗೆ ಹೋದಾಗ ಅಲ್ಲಿನ ಸಬ್ ಇನ್ಸ್ ಪೆಕ್ಟರರು ನನಗೆ ಕರೆಕಳುಹಿಸಿದರು. ಠಾಣೆಗೆ ಹೋದಾಗ ನನಗೆ ತಿಳಿದ ವಿಷಯ ನನ್ನನ್ನು ಬೆಚ್ಚಿಬೀಳಿಸಿತು. ಸಬ್ ಇನ್ಸ್ ಪೆಕ್ಟರರ ಟೇಬಲ್ ಮೇಲೆ ಒಂದು ಗಾಜಿನ ಬಾಟಲಿಯಲ್ಲಿ ಎರಡು ರಕ್ತಸಿಕ್ತ ಕಣ್ಣುಗಳಿದ್ದವು. ಲಾಕಪ್ಪಿನ ಸರಳುಗಳ ಹಿಂದೆ ಹಿಂದಿನ ದಿನ ನಾನು ಯಾರ ಮನೆಯಲ್ಲಿ ಊಟ ಮಾಡಿದ್ದೆನೋ ಆ ವ್ಯಕ್ತಿ ಮತ್ತು ಅವನ ಸಹೋದರರು ಇದ್ದುದು ಕಾಣಿಸಿತು. ವಿಷಯ ಗಂಭೀರವಾಗಿದೆಯೆಂದು ಭಾಸವಾಯಿತು. ಗ್ರಾಮಲೆಕ್ಕಿಗ ತನ್ನ ಸ್ನೇಹಿತನ ಮನೆಗೆ ಆಗಾಗ್ಗೆ ಹೋಗಿಬಂದು ಮಾಡುತ್ತಿದ್ದು ಕ್ರಮೇಣ ಗ್ರಾಮಲೆಕ್ಕಿಗನಿಗೂ ಅವನ ಸ್ನೇಹಿತನ ಪತ್ನಿಗೂ ಪರಸ್ಪರ ವಿಶ್ವಾಸ ಬೆಳೆದು ಅಕ್ರಮ ಸಂಬಂಧದವರೆಗೂ ಮುಂದುವರೆದಿತ್ತಂತೆ. ವಿಷಯ ತಿಳಿದ ಸ್ನೇಹಿತ ಗ್ರಾಮಲೆಕ್ಕಿಗನ ಮೇಲೆ ಸೇಡು ತೀರಿಸಿಕೊಳ್ಳಲು ಮುಹೂರ್ತಕ್ಕಾಗಿ ಕಾಯುತ್ತಿದ್ದನಂತೆ. ನಾನು ಹಳ್ಳಿಗೆ ಬಂದ ದಿನ ಊಟಕ್ಕೆ ವ್ಯವಸ್ಥೆ ಮಾಡಲು ಗ್ರಾಮಲೆಕ್ಕಿಗ ಹೇಳಿದಾಗ ಸ್ನೇಹಿತ ಕೂಡಲೇ ಒಪ್ಪಿ ಅಂದು ತನ್ನ ಮನೆಯಲ್ಲೇ ಉಳಿದುಕೊಳ್ಳಬಹುದೆಂದೂ ಹೇಳಿದ್ದನಂತೆ. ಮಧ್ಯರಾತ್ರಿಯಲ್ಲಿ ಅವನು ತನ್ನ ಸಹೋದರರೊಂದಿಗೆ ಒಟ್ಟಾಗಿ ಗ್ರಾಮಲೆಕ್ಕಿಗನ ಕೈಕಾಲು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿ ತನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಅವನ ಕಣ್ಣುಗಳನ್ನು ಕಿತ್ತಿದ್ದಲ್ಲದೆ ಅದನ್ನು ಬಾಟಲಿಯಲ್ಲಿ ಹಾಕಿಕೊಂಡು ಮರುದಿನ ಬೆಳಿಗ್ಗೆ ಬಂದು ಠಾಣೆಗೆ ಸ್ವತಃ ಬಂದು ಶರಣಾಗಿದ್ದನಂತೆ. ನಾನು ಅಂದು ಹತ್ತಿರದ ಮಳಖೇಡದ ರಾಯರ ಮಠ ನೋಡುವ ಮತ್ತು ಅಲ್ಲಿಯೇ ತಂಗುವ ಆಸಕ್ತಿ ತೋರಿರದಿದ್ದರೆ ಆ ಪ್ರಕರಣದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿಯಾಗಬೇಕಾಗುತ್ತಿತ್ತು. (ನನ್ನನ್ನು ಆರೋಪಿಗಳಲ್ಲಿ ಒಬ್ಬನಾಗಿಯೂ ಮಾಡಬಹುದಿತ್ತು!). ಮಳಖೇಡಕ್ಕೆ ಹೋಗಿದ್ದರಿಂದ ಠಾಣೆಗೆ ಹಾಜರಾಗಿ ಹೇಳಿಕೆ ಕೊಡುವಷ್ಟಕ್ಕೆ ಮಾತ್ರ ನನ್ನ ಪಾತ್ರ ಸೀಮಿತವಾಯಿತು. ಆಸ್ಪತ್ರೆಯಲ್ಲಿದ್ದ ಗ್ರಾಮಲೆಕ್ಕಿಗನನ್ನು ಕಂಡು ಸಾಂತ್ವನ ಹೇಳಿದೆ. ಆತನ ತಪ್ಪಿನ ವಿಮರ್ಶೆ ಮತ್ತು ಬುದ್ಧಿವಾದ ಹೇಳುವ ಸಂದರ್ಭ ಅದಾಗಿರಲಿಲ್ಲ. ದೃಷ್ಟಿಹೀನನಾದ ಆತನಿಗೆ ಆತನ ಹಕ್ಕಿನಲ್ಲಿದ್ದ ರಜೆ ಇರುವವರೆಗೆ ರಜೆ ಮಂಜೂರು ಮಾಡಿ ನಂತರದಲ್ಲಿ ಅವನನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಯಿತು.

ಮಂಗಳವಾರ, ಸೆಪ್ಟೆಂಬರ್ 14, 2010

ಸಂಬಂಧ

ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು


ಎಲ್ಲರೂ ಬೇಕೆಂಬವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು
*********
-ಕ.ವೆಂ.ನಾಗರಾಜ್.

ಶುಕ್ರವಾರ, ಸೆಪ್ಟೆಂಬರ್ 3, 2010

ಸೇವಾಪುರಾಣ-17: ಗುಲ್ಬರ್ಗ ತೋರಿಸಿದರು-2: ನಾನು ಕಂಡಿದ್ದ 35 ವರ್ಷಗಳ ಹಿಂದಿನ ಸೇಡಂ

ಅಚ್ಚರಿಯ ಸ್ವಾಗತ
     ಕೆಲಸದ ನಿಮಿತ್ತ ತಾಲ್ಲೂಕಿನ ಒಂದು ಹಳ್ಳಿಗೆ ಸಂಬಂಧಿಸಿದವರಿಗೆ ಪೂರ್ವಸೂಚನೆ ಕೊಟ್ಟು ಹೋಗಿದ್ದೆ. ಹಳ್ಳಿಗೆ ಬಸ್ ನಲ್ಲಿ ಹೋಗಿ ಇಳಿದಾಗ ಅಲ್ಲಿ ವಾದ್ಯ ಮೊಳಗುತ್ತಿತ್ತು. ಸುಮಾರು 30-40 ಜನರು ಇದ್ದರು. ನಾನು ಯಾವುದೋ ಮೆರವಣಿಗೆ ಇರಬೇಕು ಅಂದುಕೊಂಡು ಪಕ್ಕಕ್ಕೆ ಹೋದರೆ ಅಲ್ಲಿಗೂ ಆ ಗುಂಪು ವಾದ್ಯಸಹಿತ ನನ್ನ ಮುಂದೆಯೇ ಬಂದಿತು. ಒಬ್ಬರು ಬಂದು ನನಗೆ ಹಾರ ಹಾಕಿದಾಗ ನನಗೆ ಗಲಿಬಿಲಿಯಾಯಿತು. ಗ್ರಾಮದ ಕುಲಕರ್ಣಿ ಸಹ ಅಲ್ಲಿದ್ದು ಈ ಸ್ವಾಗತ ನನಗಾಗಿಯೇ ಎಂದಾಗ ಅಚ್ಚರಿಯಾಯಿತು. ನನಗೆ ಹಾರ ತೆಗೆಯಲು ಬಿಡದೆ ಹಾಗೆಯೇ ಮೆರವಣಿಗೆಯಲ್ಲಿ ಗ್ರಾಮದ ಚಾವಡಿಗೆ ಕರೆತರಲಾಯಿತು. ಅಲ್ಲಿ ಗ್ರಾಮದ ಮುಖ್ಯಸ್ಥ ಮಾತನಾಡಿ ತಮ್ಮ ಹಳ್ಳಿಗೆ ಅಧಿಕಾರಿಗಳು ಬರುವುದೇ ಇಲ್ಲವೆಂದೂ ನಾನು ಬಂದದ್ದು ಅವರಿಗೆಲ್ಲಾ ಸಂತೋಷವಾಗಿದೆಯೆಂದೂ ಹೇಳಿದಾಗ ನನಗೆ ಮರುಕವೆನಿಸಿತು. ಅಲ್ಲಿನ ಕೆಲಸ ಮುಗಿಸಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸಿ ಅಂದು ಅಲ್ಲಿಯೇ ತಂಗಿದ್ದು ಅವರಿಗೆ ತುಂಬಾ ಸಂತೋಷ ತಂದಿತ್ತು. ಆಗ ಹಳ್ಳಿಗಳಿಗೆ ಒಳ್ಳೆಯ ರಸ್ತೆಗಳಿರಲಿಲ್ಲ. ಅಧಿಕಾರಿಗಳು ತಮ್ಮ ಹಳ್ಳಿಗೆ ಬರಬಾರದೆಂದು ಬಂದರೆ ತಮಗೆ ಅನಗತ್ಯ ಕಿರುಕುಳವಾಗುತ್ತದೆಂದು ರಸ್ತೆ ಮಾಡುವುದನ್ನು ಅಡ್ಡಿಪಡಿಸಿದ್ದ ಕೆಲವು ಗ್ರಾಮಗಳೂ ಇದ್ದ ಬಗ್ಗೆ ಆಗ ನನಗೆ ತಿಳಿದು ಮಿಶ್ರಭಾವನೆಯುಂಟಾಗಿತ್ತು.
ನಾನು ಕಂಡಿದ್ದ 35 ವರ್ಷಗಳ ಹಿಂದಿನ ಸೇಡಂ
     ಸೇಡಂ ತಾಲ್ಲೂಕಿನ ಹಳ್ಳಿಗಳನ್ನು, ಅಲ್ಲಿನ ಜನರನ್ನು ಕಂಡು ನನಗೆ ಅಲ್ಲಿನ ಜನರ ಮುಗ್ಧತೆ, ಒಳ್ಳೆಯತನ, ಬಡತನಗಳ ದರ್ಶನವಾಯಿತು. ಆ ಹಳ್ಳಿಗಳನ್ನು ನೋಡಿದಾಗ ನಮ್ಮ ಹಳೆಯ ಮೈಸೂರಿನ ಪ್ರದೇಶ ಸ್ವರ್ಗಸದೃಶವೆಂದು ಅನ್ನಿಸಿದ್ದು ಸುಳ್ಳಲ್ಲ. ಬಿರುಬಿಸಿಲು, ದೊಡ್ಡ ಗಿಡಮರಗಳಿಲ್ಲದ ಬಯಲು ಪ್ರದೇಶ, ಕಲ್ಲುಮರಟಿಯ ಭೂಮಿ, ಆಳ ಬೇರುಗಳುಳ್ಳ ಗಿಡ ಮರಗಳು ಬೆಳೆಯಲು ಅಸಾಧ್ಯವಾದ  ನೆಲ.  ಜೋಳ, ತೊಗರಿ ಅಲ್ಲಿನ ಮುಖ್ಯ ಬೆಳೆ. ನಮ್ಮಲ್ಲಿ 2-3 ಎಕರೆ ಗದ್ದೆ ಇದ್ದವರು ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದರೆ ಅಲ್ಲಿ 40-50 ಎಕರೆ ಜಮೀನು ಹೊಂದಿರುವವರಿಗೆ ಕೆಲವು ಸಲ ಬೀಡಿ ಸೇದಲೂ ಕಾಸಿರುತ್ತಿರಲಿಲ್ಲ. ಕಡಪ ಕಲ್ಲಿನ ಕ್ವಾರಿಗಳು ಅಲ್ಲಿ ಸಾಮಾನ್ಯವಾಗಿದ್ದವು. ಮನೆಗಳಿಗೂ ಹೆಂಚಿನ ಬದಲಿಗೆ ಕಡಪ ಕಲ್ಲುಗಳನ್ನೇ ಬಳಸುತ್ತಿದ್ದರು. ಬಿರುಬಿಸಿಲಿನ ಝಳಕ್ಕೆ ಹಗಲಿನಲ್ಲಿ ಕಲ್ಲಿನ ಮನೆಗಳು ಹಗಲು ಹೊತ್ತಿನಲ್ಲಿ ತಂಪಾಗಿದ್ದರೂ, ಹಗಲು ಕಾದ ಕಾವಿನ ಝಳದಿಂದ ರಾತ್ರಿ ಹೊತ್ತು ಮನೆಗಳ ಮುಂಭಾಗದಲ್ಲಿ ಜನರು ಮಲಗುತ್ತಿದ್ದುದು ಸಾಮಾನ್ಯವಾಗಿತ್ತು. ಎಲ್ಲಾ ಮನೆಗಳಲ್ಲೂ ಶೌಚಾಲಯಗಳು ಇರುತ್ತಿರಲಿಲ್ಲ. ಬಂಗಲೆಯಂತಹ ಕಲ್ಲಿನ ಮನೆಗಳಲ್ಲಿಯೂ ಶೌಚಾಲಯಕ್ಕೆ ಆದ್ಯತೆ ಕೊಡದಿದ್ದು ಆಶ್ಚರ್ಯದ ವಿಷಯವಾಗಿತ್ತು. ಪ್ರಾತರ್ವಿಧಿಗಾಗಿ ಬೆಳಿಗ್ಗೆ ಬೇಗ ಎದ್ದು ನೀರಿನ ಚೊಂಬು ಹಿಡಿದು ಜನರು ಹೋಗುತ್ತಿದ್ದುದು ಸಾಮಾನ್ಯ ಸಂಗತಿಯಾಗಿತ್ತು. ಶೌಚಾಲಯಗಳಿದ್ದ ಮನೆಗಳಲ್ಲಿಯೂ ಇಂಗುಗುಂಡಿಗಳು ಇರುತ್ತಿರಲಿಲ್ಲ. ಸಂಗ್ರಹವಾಗುವ ಮಲ ಸಾಗಿಸುವ ಕೆಲಸವನ್ನು ಪೌರಕಾರ್ಮಿಕರು ಮಾಡುತ್ತಿದ್ದರು. ಜನರು ತಂಬಾಕು ಹಾಕಿಕೊಂಡು ಎಲ್ಲೆಂದರಲ್ಲಿ ಉಗಿಯುತ್ತಿದ್ದು ಕಂಡುಬರುತ್ತಿತ್ತು. ಕಟ್ಟಡಗಳ ಮೂಲೆಗಳು, ಮೆಟ್ಟಿಲುಗಳು, ಕಛೇರಿಗಳು, ಹೋಟೆಲುಗಳ ಆವರಣಗಳಲ್ಲಿ ಕೆಂಪು ಪಿಚಕಾರಿಯ ಗುರುತುಗಳು ರಾರಾಜಿಸುತ್ತಿದ್ದವು. ಸಾಂಕ್ರಾಮಿಕ ರೋಗಗಳು ಹರಡದಂತೆ ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದುಗಳನ್ನು ಶಾಲೆಗಳಲ್ಲಿ ಹಾಕಲಾಗುತ್ತಿತ್ತು. ಆಗ ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಕಾವಲು ಕಾಯುತ್ತಿದ್ದುದು, ರಸ್ತೆಗಳಲ್ಲಿ ಸಿಕ್ಕ ಮಕ್ಕಳನ್ನು ಹಿಡಿಹಿಡಿದು ಅವರ ಕೈಕಾಲುಗಳನ್ನು ಹಿಡಿದು ಚುಚ್ಚುಮದ್ದು ಹಾಕುತ್ತಿದ್ದ ದೃಶ್ಯ ನಾನು ಬೇರೆ ಊರುಗಳಲ್ಲಿ ಕಂಡಿರಲಿಲ್ಲ. ಆಗೆಲ್ಲಾ ಮಕ್ಕಳು ರಸ್ತೆಯಲ್ಲಿ ಕಾಣಸಿಗದೆ ಮನೆಯಲ್ಲಿ ಅಡಗಿ ಕೂರುತ್ತಿದ್ದುದು ನನಗೆ ವಿಶೇಷವಾಗಿ ತೋರುತ್ತಿತ್ತು. ಹಬ್ಬ ಹರಿದಿನಗಳನ್ನು ಬಡತನವಿದ್ದರೂ ಅಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದರು. ಹೋಳಿಹಬ್ಬದಂದು ಎತ್ತಿನಗಾಡಿಗಳಲ್ಲಿ ಬಣ್ಣದ ಓಕಳಿ ತುಂಬಿದ ಡ್ರಮ್ಮುಗಳನ್ನು ಹೇರಿಕೊಂಡು ದಾರಿಯಲ್ಲಿ ಎಲ್ಲರಿಗೂ ಓಕಳಿ ಹಾಕುತ್ತಿದ್ದುದು ನೆನಪಿನಲ್ಲಿ ಉಳಿದಿದೆ. ನಾನೂ ಸಹ ಆ ಸಂಭ್ರಮದಲ್ಲಿ ಭಾಗಿಯಾಗಿದ್ದು ನಾನು ಬಣ್ಣಬಣ್ಣದ ಓಕಳಿಯಲ್ಲಿ ನನ್ನ ಗುರುತು ನನಗೇ ಸಿಗದಂತೆ ಆಗಿತ್ತು.
     ಬಿಸಿಲಿನ ಪ್ರತಾಪ ಎಷ್ಟಿರುತ್ತಿದ್ದೆಂದರೆ ಬೇಸಿಗೆ ಕಾಲದಲ್ಲಿ 4 ತಿಂಗಳುಗಳು ಮುಂಜಾನೆ 8-00ರಿಂದ 12-00ರವರೆಗೆ ಮಾತ್ರ ಶಾಲಾ. ಕಾಲೇಜುಗಳು, ಕಛೇರಿಗಳು ನಡೆಯುತ್ತಿದ್ದು, ಆ ಸಮಯದ ನಂತರ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿರುತ್ತಿತ್ತು. ಒಮ್ಮೆ ಮಧ್ಯಾಹ್ನ ಹಳ್ಳಿಯಿಂದ ಬಂದವನು ತಣ್ಣೀರಿನ ಸ್ನಾನ ಮಾಡುವ ಸಲುವಾಗಿ ನಲ್ಲಿ ತಿರುಗಿಸಿ ತಲೆಯನ್ನು ನೀರಿಗೊಡ್ಡಿದಾಗ ತಲೆ ಬೆಂದುಹೋದಂತಾಗಿತ್ತು. 5-10 ನಿಮಿಷಗಳು ನೀರು ಹರಿಯಲು ಬಿಟ್ಟು ನಂತರ ಸ್ನಾನ ಮಾಡಬೇಕೆಂದು ಅಕ್ಕಪಕ್ಕದವರಿಂದ ಉಚಿತ ಸಲಹೆ ಕೇಳಬೇಕಾಯಿತು. ಮನೆಯ ಮುಂಭಾಗಕ್ಕೆ ನೀರು ಹಾಕಿದರೆ ಕಾವಿಗೆ ನೀರು ಬಿಸಿಯಾಗಿಬಿಡುತ್ತಿತ್ತು. 
     ಆನೆಕಾಲು ರೋಗದವರು ಅಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದರು. ಚಾ ದುಖಾನಿನಲ್ಲಿ ಚಹ ಕುಡಿಯಲು ಹೋದರೆ (ಅಲ್ಲಿ ಒಳ್ಳೆಯ ಕಾಫಿ ಸಿಗುತ್ತಿರಲಿಲ್ಲ, ಸಿಕ್ಕರೂ ಬ್ರೂ ಕಾಫಿ ಮಾತ್ರ) ಅಲ್ಲಿಯೂ 4-5 ಆನೆಕಾಲು ರೋಗಿಗಳು ಇರುತ್ತಿದ್ದು ಚಹ ಕುಡಿಯಲೂ ಮನಸ್ಸು ಬರುತ್ತಿರಲಿಲ್ಲ. ಆದರೆ ತಿಂಡಿ ತಿನ್ನಲು ಹೋಗಲೇಬೇಕಿತ್ತು.  ಸಿರಾ(ಕೇಸರಿಬಾತ್), ಇಡ್ಲಿ, ಉಪ್ಪಿಟ್ಟು ಅಲ್ಲಿ ಸಿಗುವ ಸಾಮಾನ್ಯ ತಿಂಡಿಗಳಾಗಿದ್ದವು. ಒಮ್ಮೆ ತಿಂಡಿ ಏನಿದೆಯೆಂದು ವಿಚಾರಿಸಿದಾಗ ತಿಂಡಿಯ ಪಟ್ಟಿಯಲ್ಲಿ ಪಂಚರಂಗಿ ಎಂಬ ಹೆಸರು ಕೇಳಿ ಅದೇನೆಂದು ಕೊಡಲು ಹೇಳಿದರೆ ಅದು ಚುರುಮುರಿಯಾಗಿತ್ತು. ನಾನು ಕಾಫಿ ಕುಡಿಯುವ ಸಲುವಾಗಿಯೇ ವಾರಕ್ಕೊಮ್ಮೆ ದೂರದ ಗುಲ್ಬರ್ಗಕ್ಕೆ ಹೋಗಿ ಅಲ್ಲಿದ್ದ ಕಾಮತ್ ಹೋಟೆಲಿನಲ್ಲಿ ಮಸಾಲೆ ದೋಸೆ, ಕಾಫಿ ತಿಂದು ಸಿನೆಮಾ ನೋಡಿ ಸೇಡಂಗೆ ವಾಪಸು ಬರುತ್ತಿದ್ದೆ. ಅಲ್ಲೆಲ್ಲಾ ಸಾಮಾನ್ಯವಾಗಿದ್ದ ಜೋಳದರೊಟ್ಟಿ, ಹುಚ್ಚೆಳ್ಳು ಚಟ್ನಿ, ಈರುಳ್ಳಿ, ಮೆಣಸಿನಕಾಯಿ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ. ಹಳ್ಳಿಗಳಲ್ಲಿ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವುದೇ ಕ್ಷೇಮಕರವಾಗಿತ್ತು. ಏಕೆಂದರೆ ನಾರುಹುಳದ ಕಾರಣದಿಂದ ನಾರುಹುಣ್ಣು ಉಂಟಾಗುವ ಸಾಧ್ಯತೆ ಇತ್ತು. ಕಾಲಿನಲ್ಲಿ ಅಥವ ಕೈನಲ್ಲಿ ಸಾಮಾನ್ಯವಾಗಿ ಗೋಚರಿಸುತ್ತಿದ್ದ ನಾರುಹುಣ್ಣು ಆದರೆ ಅದಕ್ಕೆ ಆಗ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಹುಣ್ಣು ಕೀವು ತುಂಬಿ ಹಣ್ಣಾದ ನಂತರ ಶರೀರದಲ್ಲಿ ಚೆನ್ನಾಗಿ ಬೆಳೆದ ನಾರುಹುಳ ಹುಣ್ಣನ್ನು ಕೊರೆದುಕೊಂಡು ಹೊರಗೆ ತಲೆ ಹಾಕಿದ ಸಂದರ್ಭದಲ್ಲಿ ಒಂದು ಸಣ್ಣ ಕಡ್ಡಿಯನ್ನು ಅದರ ಪಕ್ಕದಲ್ಲಿಟ್ಟು ಎರಡನ್ನೂ ಸೇರಿಸಿ ದಾರದಿಂದ ಹುಳ ಸಾಯದಂತೆ ನೋಡಿಕೊಂಡು ಕಟ್ಟಲಾಗುತ್ತಿತ್ತು. ಏಕೆಂದರೆ ಹುಳ ಮತ್ತೆ ಶರೀರದ ಒಳಗೆ ಹೋಗದಿರಲಿ ಎಂಬುದು ಅದರ ಉದ್ದೇಶವಿರುತ್ತಿತ್ತು. ಹುಳ ಹೊರಗೆ ಬಂದಹಾಗೆಲ್ಲಾ ದಾರ ಸುತ್ತುವುದನ್ನು ಮುಂದುವರೆಸಲಾಗುತ್ತಿತ್ತು. ಹುಳ ಪೂರ್ಣ ಹೊರಬರಲು 4-5 ದಿನಗಳಾಗುತ್ತಿದ್ದುದೂ ಉಂಟು. ಆಮೇಲೂ ಸಹ ಸುಧಾರಿಸಿಕೊಳ್ಳಲು ಕೆಲವು ದಿನಗಳೇ ಬೇಕಿತ್ತು. ಒಟ್ಟಾರೆಯಾಗಿ ನಾರುಹುಣ್ಣಾದರೆ ತಿಂಗಳುಗಟ್ಟಲೇ ನೋವಿನಿಂದ ನರಳಬೇಕಾಗುತ್ತಿತ್ತು.
(ಕಾಲಘಟ್ಟ- 1976-77).

ಬುಧವಾರ, ಸೆಪ್ಟೆಂಬರ್ 1, 2010

ಅಭಾಸ

ಬದುಕಿನಲಪರಿಮಿತ ಅಭಾಸಗಳ ನಾ ಕಂಡೆ
ಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆ||

ಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸ

ಹೀಗಳೆದು ಕಾಲೆಳೆದು ಮಾಡುವರು ಪರಿಹಾಸ||

ಹುಂಬರೊಟ್ಟಾಗಿ ಹಂಗಿಸುತ ಜರೆಯುವರು

ಮನೆಮಂದಿಯೇ ಬೆಂಬಲವ ನೀಡದಿಹರು||

ನಳನಳಿಸಿ ಚಿಗುರೊಡೆದ ಸಂಬಂಧವೃಕ್ಷದ ಬೇರು

ಹುಳು ಹತ್ತಿ ಧರೆಗುರುಳಿ ಮನಸು ಚೂರು ಚೂರು||

ಪೋಷಿಸುವ ಕರಗಳು ನೇಣು ಬಿಗಿದುದ ಕಂಡೆ

ಬೇರು ಮೇಲೆದ್ದು ಚಿಗುರ ನುಂಗಿದುದ ಕಂಡೆ||

ಗುರು ಹಿರಿಯರನು ಅವಮಾನಿಸಿದುದ ಕಂಡೆ

ನಂಬಿದವರೇ ಕೊರಳ ಕೊಯ್ದುದನು ಕಂಡೆ||

ಮುನ್ನಡೆಯಲಡಿಯಿಟ್ಟ ನೆಲ ಕುಸಿದುದನು ಕಂಡೆ

ನಡೆದೆಡವಿದ್ದೆ ತಪ್ಪೆಂದು ನಿಂದಿಸಲು ನೊಂದೆ||

-ಕ.ವೆಂ. ನಾಗರಾಜ್.