ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಗುರುವಾರ, ಸೆಪ್ಟೆಂಬರ್ 30, 2010

ಸೇವಾಪುರಾಣ19: ಗುಲ್ಬರ್ಗ ತೋರಿಸಿದರು-4: ನಾನು ಕಲ್ಲೇಶಿಯಾದದ್ದು!

      ಭೂನ್ಯಾಯ ಮಂಡಳಿ ಯಾರದ್ದಾದರೂ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾದುದು ತಹಸೀಲ್ದಾರರ ಕರ್ತವ್ಯ. ಒಂದು ಪ್ರಕರಣದಲ್ಲಿ ಒಬ್ಬರು ಸ್ವಾಮಿಗಳಿಗೆ ಸೇರಿದ್ದ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನವಾದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸಿಬ್ಬಂದಿಯೊಂದಿಗೆ ಹೋಗಿದ್ದ ತಹಸೀಲ್ದಾರರು ಗ್ರಾಮಸ್ಥರ ವಿರೋಧದಿಂದಾಗಿ ಹಾಗೆಯೇ ಹಿಂತಿರುಗಿ ಬರಬೇಕಾಯಿತು. ಇದಾಗಿ ಸುಮಾರು ಆರು ತಿಂಗಳ ನಂತರ ಆ ಜಮೀನನ್ನು ಸ್ವಾಧೀನ ಪಡೆಯಲು ಜಿಲ್ಲಾಧಿಕಾರಿಯವರಿಂದ ಒತ್ತಾಯ ಬಂದಿದ್ದರಿಂದ ಆ ಜಮೀನನ್ನು ಸ್ವಾಧೀನ ಪಡೆಯಲು ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ಆಗತಾನೇ ಬಂದಿದ್ದ ನನ್ನನ್ನು ಅಧಿಕೃತಗೊಳಿಸಿ ತಹಸೀಲ್ದಾರರು ಆದೇಶಿಸಿ ಹಳ್ಳಿಗೆ ಹೋಗಲು ಸೂಚಿಸಿದರು. ಸಹೋದ್ಯೋಗಿಗಳು ಅಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ್ದು ಕೇಳಿ ಆ ಕೆಲಸದ ಕಷ್ಟದ ಅರಿವಾಯಿತು. ತಹಸೀಲ್ದಾರರು ಅಗತ್ಯ ಬಿದ್ದರೆ ಪೋಲಿಸ್ ನೆರವು ಪಡೆದು ಹೋಗಲು ತಿಳಿಸಿದರು.
     ಪೋಲಿಸ್ ಇನ್ಸ್ ಪೆಕ್ಟರರಿಗೂ ತಿಳಿಸಿ ಸಂಬಂಧಿಸಿದವರಿಗೆ ಪೂರ್ವಸೂಚನೆ ನೀಡಿ ಆ ಗ್ರಾಮಕ್ಕೆ ನಿಗದಿತ ದಿನ ಹೋದರೆ ಅಲ್ಲಿ ಗ್ರಾಮದ ಗಡಿಯಲ್ಲಿ ಸುಮಾರು 300-400 ಜನರು ದೊಣ್ಣೆ, ಮಚ್ಚು, ಕುಡುಗೋಲುಗಳನ್ನು ಹಿಡಿದುಕೊಂಡು ಗುಂಪು ಕೂಡಿದ್ದರು. ನನ್ನನ್ನು ತಡೆದು ಗ್ರಾಮಕ್ಕೆ ಬರಬಾರದೆಂದೂ, ಹಾಗೂ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಎಚ್ಚರಿಸಿದರು. 'ನೀವು ಹೋಗಿರಿ, ಹಿಂದೆ ಬರುತ್ತೇವೆ' ಎಂದು ಹೇಳಿದ್ದ ಪೋಲಿಸರ ಸುಳಿವಿರಲಿಲ್ಲ. ನಾನು ಹೇಳಿದ ಯಾವ ಮಾತುಗಳನ್ನೂ ಗ್ರಾಮಸ್ಥರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನನ್ನನ್ನು ಈಗ ತಡೆಯಬಹುದೆಂದೂ, ನನಗೆ ತೊಂದರೆಯಾದರೆ ನನ್ನ ಸ್ಥಾನದಲ್ಲಿ ಬೇರೊಬ್ಬರು ಹೆಚ್ಚಿನ ಪೋಲಿಸ್ ಸಹಾಯ ಪಡೆದು ಈ ಕೆಲಸ ಮಾಡುತ್ತಾರೆಂದೂ, ಕೆಲಸ ಪೂರ್ಣಗೊಳ್ಳುವವರೆಗೆ ಇದು ಮುಂದುವರೆಯುವುದೆಂದೂ ಹೇಳಿದರೂ ಯಾವುದೇ ಪರಿಣಾಮ ಎದುರಿಸಲು ಅವರುಗಳು ಸಿದ್ಧರಾಗಿದ್ದರು. ಕೊನೆಯ ಅಸ್ತ್ರವಾಗಿ ನಾನು ಜಮೀನನ್ನು ಈಗ ಸ್ವಾಧೀನ ಪಡೆಯುವುದಿಲ್ಲವೆಂದೂ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಕೊಡುವುದಾಗಿಯೂ ಒಮ್ಮೆ ಸ್ವಾಮಿಗಳನ್ನು ಭೇಟಿ ಮಾಡಿ ಹೋಗುವುದಾಗಿ ಹೇಳಿದರೆ ಅದಕ್ಕೂ ಅವರುಗಳು ಒಪ್ಪಲಿಲ್ಲ. ಬಹಳಷ್ಟು ಮನವರಿಕೆ ಮಾಡಿದ ನಂತರ ಕೊನೆಗೆ ಸ್ವಾಮಿಗಳನ್ನು ಭೇಟಿ ಮಾಡಲು ಅನುಮತಿ ಕೊಟ್ಟ ಗುಂಪು ನನ್ನೊಂದಿಗೆ ಮಠಕ್ಕೆ ಹಿಂಬಾಲಿಸಿತು.
     ದೊಡ್ಡ ಕಲ್ಲಿನ ಕಟ್ಟಡದಂತೆಯೇ ಇದ್ದ ಮಠಕ್ಕೆ ಬಂದು ಸ್ವಾಮಿಗಳನ್ನು ಕಂಡು ಅವರಿಗೆ ನಮಸ್ಕರಿಸಿದಾಗ ಅವರು ನನ್ನನ್ನೇ ನೆಟ್ಟ ನೋಟದಿಂದ ನೋಡುತ್ತಾ ನಿಂತಿದ್ದು ಕೆಲಕ್ಷಣದ ನಂತರ ನನ್ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದು ನನಗೆ ಆಶ್ಚರ್ಯ ತಂದಿತು. ನಾನು ಮಾತನಾಡಲು ಹೋದಾಗ ಸುಮ್ಮನಿರಲು ಸನ್ನೆ ಮಾಡಿದ ಅವರು ನಂತರ ಸ್ವಲ್ಪ ಸುಧಾರಿಸಿಕೊಂಡು ಮೊದಲು ಮಠದಲ್ಲಿ ಊಟ ಮಾಡಬೇಕೆಂದೂ, ಆಮೇಲೆ ಮಾತನಾಡಬಹುದೆಂದು ಹೇಳಿದರು. ಅವರು ಸಂಸಾರಿ ಸ್ವಾಮಿಯಾಗಿದ್ದರು. ನನಗೆ ಕೈಕಾಲು ತೊಳೆಯಲು ಅವರೇ ನೀರು ತುಂಬಿಕೊಟ್ಟರು. ಬಾಳೆಹಣ್ಣುಗಳು, ಹಲಸಿನಹಣ್ಣಿನ ತೊಳೆಗಳು ಮತ್ತು ಜೇನುತುಪ್ಪ ತಂದು ತಿನ್ನಲು ಕೊಟ್ಟರು. ಸುಮಾರು ಐವತ್ತು ವರ್ಷದವರಿರಬಹುದಾದ ಆ ಸ್ವಾಮಿಗಳು ಮಾಸಲು ಬಿಳಿಯ ಬಣ್ಣದ ತುಂಡು ಕಚ್ಚೆ ಪಂಚೆ ಉಟ್ಟಿದ್ದರು. ಹೆಗಲ ಮೇಲೆ ಅದೇ ಬಣ್ಣದ ಅಂಗವಸ್ತ್ರ ಇತ್ತು. ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಎದ್ದು ಕಾಣುತ್ತಿತ್ತು. ನನ್ನನ್ನು ನೋಡುವಾಗಲೆಲ್ಲಾ ಅವರ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಹೋಳಿಗೆ ಊಟ ಮಾಡಿಸಿ ಸ್ವತಃ ಅವರೇ ನನಗೆ ಬಡಿಸಿದರು. ನಾನು ಊಟ ಮಾಡುವಾಗ ಪಕ್ಕದಲ್ಲಿ ಕುಳಿತು ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದರು. ನನ್ನ ಬೆನ್ನು ಸವರುತ್ತಾ 'ಕಲ್ಲೇಶಿ, ಕಲ್ಲೇಶಿ' ಎಂದು ಗುಣುಗುಣಿಸುತ್ತಿದ್ದರು. ನನಗೂ ಏನು ಮಾತನಾಡಬೇಕೆಂದು ತೋಚುತ್ತಿರಲಿಲ್ಲ. ಅಲ್ಲಿದ್ದ ಜನರೂ ಸಹ ಸ್ತಬ್ಧರಾಗಿ ನೋಡುತ್ತಿದ್ದರು. ಅವರೂ ಸಹ 'ಹೌಂದು, ಕಲ್ಲೇಶಿ ಹಾಂಗೆ ಹಾನೆ' (ಹೌದು, ಕಲ್ಲೇಶಿ ಹಾಗೆ ಇದ್ದಾನೆ) ಎಂದು ಪಿಸುಮಾತನಾಡುತ್ತಿದ್ದು ನನಗೆ ಕೇಳಿಸುತ್ತಿತ್ತು. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಒಂದು ಕೊಠಡಿಗೆ ಕರೆದೊಯ್ದ ಅವರು ನನಗೆ "ನೀನು ನನ್ನ ಕಲ್ಲೇಶಿ, ದೇವರೇ ನಿನ್ನನ್ನು ಇಲ್ಲಿಗೆ ಕಳಿಸ್ಯಾನ" ಎಂದು ಹೇಳಿದರು. ನಾನು ಕಲ್ಲೇಶಿಯ ಬಗ್ಗೆ ವಿಚಾರಿಸಿದೆ. ಅವರಿಗೆ ಐವರು ಮಕ್ಕಳಿದ್ದರಂತೆ. ಕಲ್ಲೇಶಿ ಅವರ ಎರಡನೇ ಮಗ. ಒಳ್ಳೆಯ ಸ್ವಭಾವದವನಾಗಿ ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ ಅವನು ಸುಮಾರು ಐದು ವರ್ಷಗಳ ಹಿಂದೆ ಕಾಯಿಲೆ ಬಂದು ಮೃತನಾದಾಗ ಅವನಿಗೆ 17 ವರ್ಷವಾಗಿತ್ತಂತೆ. ನೋಡಲು ನನ್ನಂತೆಯೇ ಇದ್ದನಂತೆ. ನಾನು ನಡೆಯುವುದು, ಮಾತನಾಡುವುದು, ಹಾವಭಾವಗಳು ಥೇಟ್ ಕಲ್ಲೇಶಿಯ ತರಹವೇ ಇದ್ದು ಕಲ್ಲೇಶಿಗೂ ನನಗೂ ಎಲ್ಲಾ ರೀತಿಯಲ್ಲೂ ಹೋಲಿಕೆಯಿದೆಯೆಂದು ಹೇಳಿದ ಅವರು ಗದ್ಗದಿತರಾಗಿ ನನ್ನನ್ನು ತಬ್ಬಿಕೊಂಡು 'ಕಲ್ಲೇಶಿ' ಎನ್ನುತ್ತಾ ಅಳತೊಡಗಿದರು. ನಾನು ಅವರ ಕೈಹಿಡಿದು ಸಮಾಧಾನಿಸಿ ಊಟ ಮಾಡಿಕೊಂಡು ಬರುವಂತೆ ಹೇಳಿದೆ. ಅವರು ಮಂತ್ರಮುಗ್ಧರಂತೆ ನಾನು ಹೇಳಿದಂತೆ ಮಾಡಿದರು. ಅಲ್ಲಿ ಸೇರಿದ್ದ ಜನರಿಗೂ ಮಠದಲ್ಲೇ ಊಟದ ವ್ಯವಸ್ಥೆಯಾಗಿತ್ತು. ಸ್ವಾಮಿಗಳ ವರ್ತನೆಯಿಂದ ಜನಗಳಿಗೂ ನನ್ನ ಮೇಲಿದ್ದ ರೋಷ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಸ್ವಾಮಿಗಳು ಏನೋ ನಿರ್ಧಾರಕ್ಕೆ ಬಂದಂತಿತ್ತು. ಊಟದ ನಂತರ ಬಂದ ಅವರು "ಮಗೂ, ಬಾಯಿಲ್ಲಿ, ಅದೇನು ಕಾಗದ ಕೊಡು, ಎಲ್ಲಿ ಸೈನು ಮಾಡಬೇಕು ಹೇಳು" ಎಂದರು. ಜಮೀನನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಅವರು ಸಿದ್ಧರಾಗಿದ್ದರು. ವಿರೋಧಿಸಿದ ಜನರನ್ನೂ ಅವರೇ ಸಮಾಧಾನಿಸಿ ಪರಿಸ್ಥಿತಿ ವಿವರಿಸಿ "ಎಂದಿದ್ದರೂ ಈ ಜಮೀನು ಕೈಬಿಟ್ಟು ಹೋಗುವುದಂತೂ ಸತ್ಯ. ಈಗ ನನ್ನ ಮಗನೇ ಬಂದಿದ್ದಾನೆ. ಅವನ ಮುಖಾಂತರವೇ ಹೋಗಲಿ ಬಿಡಿ" ಎಂದು ಅವರನ್ನು ಒಪ್ಪಿಸಿದರು. ಸಂಬಂಧಿಸಿದ ಕಾಗದ ಪತ್ರಗಳಿಗೆಲ್ಲಾ ಅವರೇ ಸಹಿ ಮಾಡಿದ್ದಲ್ಲದೆ ಅಲ್ಲಿದ್ದ ಪ್ರಮುಖರೆಲ್ಲರ ಸಾಕ್ಷಿ ಸಹಿ ಸಹ ಹಾಕಿಸಿದರು. ಬಲವಂತವಾಗಿ ಮಹಜರ್ ಮಾಡಿ ಕಾಗದದ ಮೇಲೆ ಜಮೀನು ಸ್ವಾಧೀನ ಪಡೆಯುವ, ಗಲಾಟೆ ಆಗುವ ಸಂಭವಗಳು, ಇತ್ಯಾದಿ ನಡೆಯುವ ಪ್ರಸಂಗವೇ ಬರಲಿಲ್ಲ. ಎಲ್ಲಾ ಕೆಲಸಗಳು ಮುಗಿದಾಗ ಹೊರಡಲು ಅನುವಾಗಿ ಅವರಿಗೆ ನಮಸ್ಕರಿಸಿದೆ. ಅವರು ಹೃದಯಪೂರ್ವಕವಾಗಿ ಆಶೀರ್ವದಿಸಿ 'ನಿನ್ನ ಎಲ್ಲಾ ಕಷ್ಟಗಳೂ ದೂರವಾಗಲಿ, ನೂರುಕಾಲ ಸುಖವಾಗಿ ಬಾಳು' ಎಂದು ಹೇಳಿ ಮತ್ತೆ ನನ್ನನ್ನು ತಬ್ಬಿಕೊಂಡರು. ಅವರ ಕಣ್ಣು ತೇವವಾಗಿತ್ತು. ಜನರ ಕೈಯಲ್ಲಿದ್ದ ದೊಣ್ಣೆ, ಮಚ್ಚುಗಳು ಮಾಯವಾಗಿದ್ದವು. ಅವರೂ ನನ್ನನ್ನು ಮೆಚ್ಚುಗೆಯಿಂದ ನೋಡುತ್ತಿದ್ದುದು ನನಗೆ ನಂಬಲಾಗದ ಸತ್ಯವಾಗಿ ಕಾಣುತ್ತಿತ್ತು. ಇಷ್ಟೆಲ್ಲಾ ನಡೆದರೂ ಸಹಾಯಕ್ಕೆ ಬರಬೇಕಿದ್ದ ಪೋಲಿಸರು ಬಂದಿರಲೇ ಇಲ್ಲ. ಅವರೂ 'ಬಂದರೂ ಗಲಾಟೆಯಾಗುತ್ತದೆ, ಸುಮ್ಮನೆ ವಾಪಸು ಬರಬೇಕು' ಎಂದು ಭಾವಿಸಿದ್ದಿರಬೇಕು. ಮಠಕ್ಕೆ ಸೇರಿದ ವಾಹನದಲ್ಲಿ ನನ್ನನ್ನು ಸೇಡಂಗೆ ಕಳಿಸಿಕೊಟ್ಟರು. ನನಗೆ ಆಗಾಗ್ಗೆ ಬಂದು ಹೋಗುತ್ತಿರಲು ಸ್ವಾಮಿಗಳು ತಿಳಿಸಿದರು. ನಂತರದ ದಿನಗಳಲ್ಲೂ ಅವರೇ ಎರಡು-ಮೂರು ಸಲ ಸೇಡಂಗೆ ಬಂದಾಗ ಕಛೇರಿಗೂ ಬಂದು ಆಶೀರ್ವದಿಸಿ ಹಣ್ಣು ಕೊಟ್ಟು ಹೋಗಿದ್ದರು. ನನ್ನ ಈ ಕೆಲಸದ ಬಗ್ಗೆ ಉಪವಿಭಾಗಾಧಿಕಾರಿಯವರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದ್ದರು. ಸ್ಥಳೀಯ ಪತ್ರಿಕೆಗಳಲ್ಲೂ ಈ ವಿಷಯ ಪ್ರಧಾನವಾಗಿ ಪ್ರಸ್ತಾಪವಾಗಿತ್ತು.
     ನಾನು ನಂತರದ ದಿನಗಳಲ್ಲಿ ಆಗಾಗ್ಗೆ ಹೋಗಿ ಸ್ವಾಮಿಗಳನ್ನು ಕಂಡು ಮಾತನಾಡಿಸಿ ಬರಬೇಕಾಗಿತ್ತು, ಅವರ ಪಾಲಿನ ಕಲ್ಲೇಶಿಯಾಗಬೇಕಿತ್ತು ಎಂದು ಈಗ ನನಗೆ ಅನ್ನಿಸುತ್ತಿದೆ. ಆದರೆ ಕಾಲ ಮಿಂಚಿದೆ. ಆ ಘಟನೆ ನಡೆದಾಗ ನನಗೆ 23 ವರ್ಷ ವಯಸ್ಸು, ಮದುವೆಯಾಗಿರಲಿಲ್ಲ. ತುರ್ತು ಪರಿಸ್ಥಿತಿ ಕಾಲದ ಕಷ್ಟಗಳು, ಅನಿರೀಕ್ಷಿತ ವರ್ಗಾವಣೆ, ಹುಡುಗುತನ, ಇತ್ಯಾದಿಗಳಿಂದಾಗಿ ನಾನು ಅವರನ್ನು ಭೇಟಿಯಾಗದೆ ಇದ್ದುದು ಸರಿಯಲ್ಲವೆಂದು ನಾನು ಈಗ ಅಂದುಕೊಂಡರೆ ಅದಕ್ಕೆ ಅರ್ಥವಿಲ್ಲ. ನಂತರದಲ್ಲಿ ಕೆಲವು ತಿಂಗಳುಗಳ ನಂತರ ತುರ್ತು ಪರಿಸ್ಥಿತಿ ಕೊನೆಗೊಂಡು ನನಗೆ ವಾಪಸು ಹಾಸನಕ್ಕೆ ವರ್ಗವಾಗಿ ಬಂದ ಮೇಲೆ ಈ ಕಲ್ಲೇಶಿ ಪ್ರಕರಣ ಮರೆತೇ ಬಿಟ್ಟು ತಪ್ಪು ಮಾಡಿದ ಮನೋಭಾವ ನನ್ನನ್ನು ಈಗ ಕಾಡಿದೆ. ಸ್ವಾಮಿಗಳ ಹೃದಯಪೂರ್ವಕವಾದ ಆಶೀರ್ವಾದ ನನ್ನನ್ನು ಕಷ್ಟಕಾಲಗಳಲ್ಲಿ ಕಾಪಾಡಿದೆ ಎಂಬುದು ನನಗೀಗ ಅರಿವಾಗಿದೆ.

10 ಕಾಮೆಂಟ್‌ಗಳು:

 1. swamy, neevu A swamygalige mosa madidiri, praanhoguva sandarba bandaga kapaadida adakku migilaagi nanna magane banda endu Alangisi attaru mattu nimmalli avra kalleshiyanne kandu santoshapattaralla avra runa teerisalu nimmindaagallilla I lekanadinda namagu novaguttade. Enadru uttarakarnataka janare haage estu hortaro aste Bhavanajeevigalu avrige namma namskarakalu. Adaru A Ghataneyannu nenasi paschatapa pattiralla adu manakakuvantaddu. inti Nanjundaraju.

  ಪ್ರತ್ಯುತ್ತರಅಳಿಸಿ
 2. ಹೌದು. ನಿಮ್ಮ ಅಭಿಪ್ರಾಯ ಒಪ್ಪುತ್ತೇನೆ. ಆ ಕೊರಗು ನನ್ನಲ್ಲಿ ಉಳಿದಿದೆ.ಪ್ರತಿಕ್ರಿಯೆಗೆ ವಂದನೆಗಳು, ನಂಜುಂಡರಾಜುರವರೇ.

  ಪ್ರತ್ಯುತ್ತರಅಳಿಸಿ
 3. maanyare neevu kalleshiyadaddu sari. mundenadiri bega heli. nanage kuthuhala hechuttide. dayavittu tilisi swamy. vandanegalondige, inti Nanjunda Raju

  ಪ್ರತ್ಯುತ್ತರಅಳಿಸಿ
 4. ಒಬ್ಬರಂತೆ ಒಬ್ಬರಿರುವ ಅಪರೂಪದ ಸಾಧ್ಯತೆಗಳಿವೆ.ಆದರೆ ನಿಮ್ಮ ಕೇಸ್ ನಲ್ಲಿ ಆ ಸ್ವಾಮೀಜಿ ನಿಮ್ಮನ್ನು ತಮ್ಮ ಸ್ವಂತ ಮಗನೆಂದೇ ಭಾವಿಸುವ ಮಟ್ಟಿಗೆ ಘಟನೆ ನಡೆದಿದೆ.ಆಗಾಗಲೇ ೩೫ ವರ್ಷಗಳಾಗಿರಬಹುದು. ಈಗ ಆಸ್ವಾಮೀಜಿ ಬದುಕಿದ್ದಾರಾ? ಹೇಗೆ ಸ್ವಲ್ಪವಿಚಾರಿಸಿ.

  ಪ್ರತ್ಯುತ್ತರಅಳಿಸಿ
 5. ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ
  30SEP2010 10:05
  ನಾಗರಾಜರವರೇ,
  ಇನ್ನೊಂದು ರಸವತ್ತಾದ ಅನುಭವ. ನಿಮ್ಮ ಅನುಭವಗಳು ಅದೆಷ್ಟು ಸಮೃದ್ಧ! ನೀವು ಜೀವನದಲ್ಲಿ ಕಂಡರಿಯದ, ಅನುಭವಿಸದ ಸಂಗತಿ ಇದೆಯೇ ಎಂದು ಯೋಚಿಸುವಂತಾಗುತ್ತದೆ. :-)

  Kavinagaraj
  01OCT2010 10:24
  ಶಾಸ್ತ್ರಿಗಳೇ, ನಿಮ್ಮ ರಸಭರಿತ ಪ್ರತಿಕ್ರಿಯೆಗೆ ವಂದನೆ.

  ಬೆಳ್ಳಾಲ ಗೋಪೀನಾಥ ರಾವ್
  01OCT2010 7:30
  ಕವಿಯವರೇ
  ಹೌದು ನೀವು ಕಲ್ಲೇಶಿಯ ಹಾಗೇ ಇರುವಿರಿ!!!!

  Kavinagaraj
  01OCT2010 10:26
  ಆದರೆ ಕಲ್ಲೇಶಿಯಾಗಲಿಲ್ಲವಲ್ಲಾ ಎಂಬ ಅಳುಕು ಇದೆ. ಪ್ರತಿಕ್ರಿಯೆಗೆ ಕೃತಜ್ಞ, ಗೋಪಿನಾಥರೇ.

  Ksraghavendranavada
  01OCT2010 8:17
  ಮನಸ್ಸಿಗೆ ಮುದ ನೀಡಿದ ಬರಹದ ಶೈಲಿ, ಚೆ೦ದದ ನಿರೂಪಣೆ. ಮು೦ದಿನ ಕ೦ತಿಗೆ ಕಾಯುವ೦ತೆ ಮಾಡಿದೆ.
  ನನಗೂ ಹಾಗೆಯೇ ಅನ್ನಿಸಿತು. ನೀವು ಆಮೇಲೆ ಆ ಸ್ವಾಮಿಗಳನ್ನು ಆಗಾಗ ಭೇಟಿಯಾಗುತ್ತಿದ್ದರೆ ಚೆನ್ನಿತ್ತು ಎ೦ದು. ಪಿತೃಹೃದಯಕ್ಕೆ ಸ್ವಲ್ಪವಾದರೂ ಸಾ೦ತ್ವನ ಸಿಗುತ್ತಿತ್ತೇನೋ? ಇರಲಿ ಈಗೆಲ್ಲಾ ಅದಕ್ಕೆ ಚಿ೦ತಿಸಿದರೆ ಫಲವಿಲ್ಲ. ಮು೦ದುವರೆಯಲಿ ಸೇವಾ ಪುರಾಣ.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  Kavinagaraj
  01OCT2010 10:36
  ರಾಘವೇಂದ್ರರೇ, ನಿಮ್ಮ ಕಳಕಳಿಯ ಪ್ರತಿಕ್ರಿಯೆ ಸಂತಸ ನೀಡಿದೆ. ಸ್ವಾಮಿಗಳನ್ನು ನಂತರ ಭೇಟಿ ಮಾಡದಿದ್ದ ಬಗ್ಗೆ ನನಗೂ ಕೊರಗು ಉಳಿದಿದೆ.

  ಗೋಪಾಲ್ ಮಾ ಕುಲಕರ್ಣಿ
  01OCT2010 9:32
  ಸೂಪರ್.. ತುಂಬಾ ಚೆನ್ನಾಗಿದೆ.

  Kavinagaraj
  01OCT2010 10:36
  ಧನ್ಯವಾದಗಳು, ಗೋಪಾಲರೇ.

  ಪ್ರಮೋದ್ ಶ್ರೀನಿವಾಸ
  01OCT2010 10:01
  ಮಾನ್ಯರೆ, ನಾನು ಬಹಳ ಕುತೂಹಲದಿಂದ ಕಾದು ಓದುವ ಅಂಕಣಗಳಲ್ಲಿ ನಿಮ್ಮದು ಒಂದು ... ನಿಮ್ಮ ಅನುಭವ ರಸವತ್ತಾಗಿದೆ ...ನಡೆದ ಘಟನೆಗಳನ್ನು ಕೇಳುವುದಕ್ಕಿಂತ ಓದುವುದು ಬಹಳ ಖುಶಿ ಕೊಡುತ್ತೆ ...
  ಮತ್ತಷ್ಟು ಹೆಚ್ಚಿನ ಆಸಕ್ತಿಯಿಂದ ಮುಂದಿನ ಲೇಖನಕ್ಕೆ ಕಾಯುವೆ
  ನಿಮ್ಮ ಓದುಗ
  ಪ್ರಮೋದ್

  Kavinagaraj
  01OCT2010 10:39
  ಆತ್ಮೀಯ ಪ್ರಮೋದರೇ, ನಿಮ್ಮ ಅಭಿಮಾನ ನನ್ನನ್ನು ಪುಳಕಿತಗೊಳಿಸಿದೆ. ಕೃತಜ್ಞತೆಗಳು.

  Raghu S P
  01OCT2010 10:41
  ನಿಮ್ಮ ಅನುಭವಗಳು ಓದಲಿಕ್ಕೆ ಒಳ್ಳೆ ಹಲಸನ್ನು ಜೇನಿನಲ್ಲಿ ಹದ್ಡಿದ ಹಾಗಿರುತ್ತದೆ

  Kavinagaraj
  01OCT2010 10:43
  ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು, ರಘುರವರೇ.

  ಹೊಳೆ ನರಸೀಪುರ ಮಂಜುನಾಥ
  01OCT2010 1:36
  ಕವಿ ನಾಗರಾಜರೆ, ಇದು ಮಾತ್ರ ಸಕತ್ ಅನುಭವ, ನಿಮ್ಮ ರೂಪ, ಸ್ವಾಮಿಗಳ ಹೃದಯಾ೦ತರಾಳದಲ್ಲಿದ್ದ ಮಾನವೀಯತೆ ನಿಮಗೆ ’ಸಾಥ್’ ನೀಡಿದೆ. ಹ್ಯಾಟ್ಸಾಫ್!

  Kavinagaraj
  01OCT2010 3:04
  ನೀವು ಹೇಳಿರುವುದು ಸತ್ಯ, ಮಂಜು. ಪ್ರತಿಕ್ರಿಯೆಗೆ ವಂದನೆಗಳು.

  ಪ್ರತ್ಯುತ್ತರಅಳಿಸಿ
 6. ತುಂಬಾ ಹಚ್ಚಿಕೊಂಡವರು ದೂರವಾದಾಗ, ಅವರ ನೆನಪುಗಳು ಕಾಡುತ್ತಿರುತ್ತವೆ. ಹಾಗೆಯೇ ನೀವು ಕಲ್ಲೆಶಿಯ ಹೋಲುತ್ತಿದ್ದರಿಂದ ಅವರ ಸ್ವಲ್ಪ ಮಟ್ಟಿಗೆ ಸಂತೋಷ ಆಗಿರಬೇಕು. ಇದು ಬರಿ ಕತೆನಾ ಅನ್ನೊ ಭ್ರಾಂತಿ ಮೂಡುತ್ತಿತ್ತು. ನಿಮ್ಮ ನಿರುಪಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು, ಸುನಿಲ ಅಗಡಿಯವರೇ. ಅವರ ನೆನಪು ನನ್ನನ್ನು ಕಾಡುತ್ತಿರುತ್ತದೆ.

   ಅಳಿಸಿ
 7. ನೀವು, ನಿಮ್ಮಂತವರೆಲ್ಲಾ ಹೀಗೆಲ್ಲಾ ದೇಶಸೇವೆ ಅಂತೇಳಿ ಸರ್ಕಾರಕ್ಕೆ ಮಾಡಿಕೊಟ್ಟ ಜಾಗಗಳು ನೋಟಿಪಿಕೇಶನ್ ಡಿನೋಟಿಪಫಿಕೇಸನ್ ಗಳಾಗಿ ಯಾರ್ಯಾರ ಹೊಟ್ಟೆ ಸೇರಿವೆಯೋ!

  ಪ್ರತ್ಯುತ್ತರಅಳಿಸಿ