ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಆಗಸ್ಟ್ 27, 2013

ನೀವು ಯಾವ ಜನ?

     "ನೀವು ಯಾವ ಜನ?" - ನಿಮ್ಮದು ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್, ಇತ್ಯಾದಿಗಳಿದ್ದರೆ, ಮರುಪ್ರಶ್ನೆ ಬರುತ್ತದೆ, "ಅದರಲ್ಲಿ ಯಾರು?" "ಸ್ಮಾರ್ತ, ವೈಷ್ಣವ, ಮಾಧ್ವ, ದಾಸಗೌಡ, ಮುಳ್ಳುಗೌಡ, ಪಂಚಮಸಾಲಿ, ಆರಾಧ್ಯ, ಶಿಯಾ, ಸುನ್ನಿ, ಪ್ರಾಟೆಸ್ಟೆಂಟ್, . . . ." - ಮರು ಉತ್ತರ ಹೀಗೆ ಸಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಆ ಒಳಜಾತಿಯಲ್ಲಿ ಒಳಪಂಗಡಗಳು, ಊರು, . ., ಹೀಗೆ ಕುಲಾನ್ವೇಷಣೆ ಮುಂದುವರೆಯುತ್ತದೆ. ಇಬ್ಬರದೂ ಒಂದೇ ಜಾತಿ, ಒಳಜಾತಿಗಳಾದರೆ ಆತ್ಮೀಯತೆಯ ಬಂಧ ಗಟ್ಟಿಯಾಗುತ್ತದೆ. ಏಕೆ ಹೀಗೆ? ನಮ್ಮವರು, ಇತರೆಯವರು ಎನ್ನುವ ಇಂತಹ ಭೇದ ಕೇವಲ ಜಾತಿಗೆ ಮಾತ್ರ ಸೀಮಿತವಲ್ಲ. ಮಾಡುವ ವೃತ್ತಿ, ರಾಜಕೀಯ, ಕಲಿಯುವ ಕಲಿಕೆ, ಊರು, ಸ್ವಭಾವ, ಅಂತಸ್ತು, ಇತ್ಯಾದಿಗಳಿಗೂ ಅನ್ವಯವಾಗುತ್ತದೆ. ಈ 'ನಮ್ಮವರು' ಪ್ರತಿಯೊಂದರಲ್ಲೂ 'ಇತರರಿಗಿಂತ' ಮುಂದಿರಬೇಕು ಎಂಬ ಭಾವನೆ ಎಲ್ಲರಲ್ಲೂ ಅಂತರ್ಗತವಾಗಿರುತ್ತದೆ. ಈ 'ನಮ್ಮವರು' ಭಾವನೆ ಪರಿಚಯವಿಲ್ಲದವರನ್ನೂ ಒಗ್ಗೂಡಿಸುತ್ತದೆ, 'ಇತರರು' ಎನ್ನುವ ಭಾವನೆಯೂ ಸಹ ಪರಿಚಯವಿರುವರನ್ನೂ ಸಂಶಯದಿಂದ ನೋಡುವಂತೆ ಮಾಡುತ್ತದೆ. 
     ಇಂದು ನಾವು ಕಾಣುತ್ತಿರುವ ದ್ವೇಷ, ಜಗಳ, ಭಿನ್ನಮತ, ಇತ್ಯಾದಿಗಳ ಮೂಲವೇ ಈ 'ನಮ್ಮವರು', 'ಇತರರು' ಅನ್ನುವ ಭಾವನೆ. ನಮ್ಮ ದೇವರೇ ಬೇರೆ, ನಮ್ಮ ಧರ್ಮವೇ ಬೇರೆ, ನಮ್ಮ ಜಾತಿಯೇ ಬೇರೆ, ನಮ್ಮ ಆಚಾರವೇ ಬೇರೆ, ನಮ್ಮ ವಿಚಾರವೇ ಬೇರೆ - ಹೀಗೆ ನಾವೇ ಬೇರೆ, ನೀವೇ ಬೇರೆಗಳನ್ನು ಬೆಳೆಸುತ್ತಾ, ಪೋಷಿಸುತ್ತಾ ಬಂದುದರ ಫಲವಿದು. ಈ ಬೇರೆಗಳು ಬೆಳೆಯುತ್ತಾ ಬೆಳೆಯುತ್ತಾ ನಮ್ಮವರಲ್ಲೇ ನಮ್ಮ ಒಳಗಿನವರು, ಒಳಗಿನ ಒಳಗಿನವರು ಸಹ ಬೆಳೆಯುತ್ತಾ ಹೋದರು. ಎಷ್ಟು ಧರ್ಮಗಳು, ಎಷ್ಟು ಜಾತಿಗಳು, ಎಷ್ಟು ಪಂಗಡಗಳು, ಒಳಪಂಗಡಗಳು!! ಒಂದೇ ಧರ್ಮ, ಜಾತಿ, ಪಂಗಡಗಳವರಲ್ಲೇ ವಿಭಿನ್ನ ರೀತಿಯ ಆಚಾರ-ವಿಚಾರಗಳು!! ನಮ್ಮವರುಗಳೇ ನಮಗೆ ಪರಕೀಯರಾಗುತ್ತಾ ಹೋದರು. ಈ ಭಾವನೆ ಪರಸ್ಪರರಲ್ಲಿ ದ್ವೇಷ, ವೈಮನಸ್ಸುಗಳನ್ನು ಉಂಟುಮಾಡಿ, ಒಂದಾಗದ ವಾತಾವರಣ ನಿರ್ಮಾಣವಾಯಿತು. ಈ ರೀತಿಯ ಒಳಜಗಳ, ದ್ವೇಷಾಸೂಯೆಗಳೇ ವಿದೇಶೀಯರು ನಮ್ಮ ದೇಶದ ಮೇಲೆ ಸಹಸ್ರ ವರ್ಷಗಳವರೆಗೆ ಹಿಡಿತ ಸಾಧಿಸಲು ಸಹಕಾರಿಯಾದವು. ಈ ರೀತಿ ಪರಸ್ಪರರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಇಬ್ಬರನ್ನೂ ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವ 'ಒಡೆದು ಆಳುವ' ನೀತಿಯನ್ನು ಬ್ರಿಟಿಷರು ಯಶಸ್ವಿಯಾಗಿ ನಮ್ಮ ದೇಶದ ಮೇಲೆ ಪ್ರಯೋಗಿಸಿದ್ದು ಈಗ ಇತಿಹಾಸ. 
     ನಮ್ಮಲ್ಲಿ ಈ 'ನಮ್ಮವರು', 'ಇತರರು' ಭಾವನೆ ಎಷ್ಟು ರಕ್ತಗತವಾಗಿದೆಯೆಂದರೆ ಯಾರಾದರೂ ದಾರ್ಶನಿಕರು, ಸಂತರು ಭೇದ ಭಾವಗಳನ್ನು ದೂರಮಾಡಿ ಜಾತಿಗಳನ್ನು ಒಂದುಗೂಡಿಸಲು ಮಾಡುವ ಪ್ರಯತ್ನಕ್ಕೆ ಓಗೊಟ್ಟು ಒಂದಾಗುವವರದ್ದೇ ಮತ್ತೊಂದು ಬೇರೆ ಧರ್ಮ/ಜಾತಿ ಆಗಿಬಿಡುತ್ತದೆ. ಇರುವ ಗುಂಪುಗಳ ಜೊತೆಗೆ ಮತ್ತೊಂದು ಹೊಸ ಗುಂಪು ಸೇರ್ಪಡೆಯಾಗುತ್ತದೆ. ಮಹಾನ್ ಮಾನವತಾವಾದಿ ಬಸವಣ್ಣನವರ ಜಾತಿಗಳನ್ನು ಒಗ್ಗೂಡಿಸುವ ಕರೆಗೆ ಓಗೊಟ್ಟು ಹಿಂಬಾಲಿಸಿದವರದ್ದೇ ಒಂದು ಪ್ರತ್ಯೇಕ ಜಾತಿಯಾದುದನ್ನು ಉದಾಹರಿಸಬಹುದು. ಇವರು ತಮ್ಮ ಧರ್ಮವೇ ಪ್ರತ್ಯೇಕವಾಗಿದ್ದು ಅದನ್ನು ಪ್ರತ್ಯೇಕ ಧರ್ಮ ಎಂದು ನಮೂದಿಸಬೇಕೆಂದು ರಾಷ್ಟ್ರೀಯ ಜನಗಣತಿ ಸಮಯದಲ್ಲಿ ಕರೆ ಕೊಡುವುದನ್ನೂ ಕಂಡಿದ್ದೇವೆ. ಶಂಕರಾಚಾರ್ಯರ ತತ್ವ, ಸಿದ್ಧಾಂತಗಳನ್ನು ಒಪ್ಪುವವರು ಸ್ಮಾರ್ತರೆನಿಸಿದರು. ಮಧ್ವಾಚಾರ್ಯರ ಅನುಯಾಯಿಗಳು ಮಾಧ್ವರಾದರು. ರಾಮಾನುಜರ ವಿಚಾರಗಳನ್ನು ಒಪ್ಪಿದವರು ವೈಷ್ಣವರೆನಿಸಿದರು. ಹೀಗೆ ಜಾತಿಗಳು ಹೆಚ್ಚುತ್ತಾ ಹೋದವು. ವಿಭಿನ್ನ ಆಚಾರ-ವಿಚಾರಗಳನ್ನು ರೂಢಿಸಿಕೊಂಡರು. ತಾವೇ ಹೆಚ್ಚು ಎಂದು ತರ್ಕ-ವಿತರ್ಕಗಳಲ್ಲಿ ಮುಳುಗಿಹೋದರು. ಜಾತಿಗಳು ಹೆಚ್ಚಿದಂತೆ ದೇವರುಗಳೂ ಹೆಚ್ಚಾಗುತ್ತಾ ಹೋದರು. ಸಮಾಜಕ್ಕೆ ಮಾರ್ಗದರ್ಶಿಯಾದ ಆದರ್ಶಪುರುಷರುಗಳನ್ನೂ, ಸಾಧು-ಸಂತರನ್ನೂ ದೇವರ ಮಟ್ಟಕ್ಕೆ ಏರಿಸಿ ದೇವರುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿರುವುದನ್ನೂ ಕಂಡಿದ್ದೇವೆ, ಕಾಣುತ್ತಲೂ ಇದ್ದೇವೆ. 
     ಒಂದು ರೀತಿಯಲ್ಲಿ ನೋಡಿದರೆ ಜಗತ್ತು ನಡೆದಿರುವುದೇ ಭಿನ್ನತೆಯಿಂದ! ಭಿನ್ನತೆಯಿರುವುದರಿಂದಲೇ ಜಗತ್ತಿಗೆ ಅರ್ಥ ಬಂದಿರುವುದು. ಆದರೆ ಈ ಭಿನ್ನತೆ ಪರಸ್ಪರರ ಉತ್ಕರ್ಷಕ್ಕೆ ಕಾರಣವಾಗಬೇಕೇ ಹೊರತು ಅವನತಿಗಲ್ಲ. ಆ ದೇವನ ಸೃಷ್ಟಿಯಲ್ಲೇ ಇರುವ ಭಿನ್ನತೆಗಳು ಪರಸ್ಪರರಿಗೆ ಪೂರಕವಾಗಿವೆ. ಆದರೆ ಮಾನವ ನಿರ್ಮಿತ ಭಿನ್ನತೆಗಳು ಅವನನ್ನು ಪಾತಾಳಕ್ಕೆ ತಳ್ಳುತ್ತಿವೆ. ಭಿನ್ನತೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಆಗದಿರುವುದನ್ನು ಅರ್ಥ ಮಾಡಿಕೊಂಡು ಭಿನ್ನತೆಗಳನ್ನು ಉನ್ನತಿಗೆ ಸಹಕಾರಿಯಾಗುವಂತೆ ಯಾರಿಗೂ ನೋವಾಗದಂತೆ ಸರ್ವ ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಬಳಸುವುದನ್ನು ಉತ್ತೇಜಿಸಬೇಕಿದೆ. 
     ಇಂದು ಪ್ರಚಲಿತವಿರುವ ಅನೇಕ ಜಾತಿಗಳಿಗೆ, ಜಾತಿಪದ್ಧತಿಗೆ ವೇದಗಳೇ ಮೂಲವೆಂದು ಆರೋಪಿಸಲಾಗುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಚಾತುರ್ವಣ್ಯಗಳನ್ನು ಜಾತಿಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಯಾವುದೋ ಸುದೀರ್ಘ ಹಿಂದಿನ ಕಾಲದಲ್ಲಿ ಜಾತಿಯನ್ನು ಹುಟ್ಟಿನಿಂದ ಬರುವುದೆಂದು ಪರಿಗಣಿಸಲ್ಪಟ್ಟು, ಅದೇ ಮುಂದುವರೆದುಕೊಂಡು ಬಂದಿದ್ದು, ಅದನ್ನು ಸಂಪ್ರದಾಯವಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪೋಷಿಸಿಕೊಂಡು ಬರುತ್ತಿರುವುದೂ ಸತ್ಯ. ಆದರೆ, ಸತ್ಯದ ಹಿನ್ನೆಲೆಯಲ್ಲಿ ಪೂರ್ವಾಗ್ರಹಪೀಡಿತರಾಗದೆ ಅಧ್ಯಯನ ಮಾಡುವವರಿಗೆ ವೇದಗಳಲ್ಲಿ ಜಾತಿಗಳು ಎಂದೂ ಹುಟ್ಟಿನಿಂದ ಬರುವುದೆಂದು ಪ್ರತಿಪಾದಿಸಿರುವುದು ಕಂಡುಬರುವುದಿಲ್ಲ. [ಇಂದಿನ ಆಡಳಿತ ವ್ಯವಸ್ಥೆಯೂ ಹುಟ್ಟಿನಿಂದ ಬರುವ ಜಾತಿಗೆ ಅನಗತ್ಯ ಪ್ರಾಧಾನ್ಯತೆ ನೀಡಿ, ಅಧಿಕಾರದ ಸಲುವಾಗಿ ಅದನ್ನು ಬಲಗೊಳಿಸುತ್ತಿರುವುದು ಕಠೋರ ಸತ್ಯ. ಇದರಿಂದಾಗಿ ದೇಶ ಸಂಕಟದ ಸಮಯಗಳಲ್ಲಿ ಒಂದಾಗಿ ನಿಲ್ಲುವುದೂ ದುಸ್ತರವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸುಳ್ಳಲ್ಲ.] ವಿಪ್ರ ಸಮುದಾಯದವರಲ್ಲೇ 'ನಾವು ಋಗ್ವೇದಿಗಳು', 'ನಾವು ಯಜುರ್ವೇದಿಗಳು', ಇತ್ಯಾದಿ ಹೇಳಿಕೊಳ್ಳುವುದನ್ನು ಕಾಣುತ್ತೇವೆ. ಋಗ್ವೇದಿಗಳೆಂದರೆ ಋಗ್ವೇದವನ್ನು ಅಭ್ಯಸಿಸಿದವರು, ಯಜುರ್ವೇದಿಗಳೆಂದರೆ ಯಜುರ್ವೇದವನ್ನು ಅಭ್ಯಸಿಸಿದವರು ಅಷ್ಟೆ. ಅವರೇ ಬೇರೆ, ಇವರೇ ಬೇರೆ ಅಂತಲ್ಲ. ಅದೇ ರೀತಿ ಎರಡು ವೇದಗಳನ್ನು ಅರಿತವರು ದ್ವಿವೇದಿಗಳು, ಮೂರು ಮತ್ತು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರು ಅನುಕ್ರಮವಾಗಿ ತ್ರಿವೇದಿ ಮತ್ತು ಚತುರ್ವೇದಿಗಳೆಂದು ಕರೆಯುತ್ತಾರೆ. ಆದರೆ ಋಗ್ವೇದಿ, ಯಜುರ್ವೇದಿ, ಇತ್ಯಾದಿ ಗುರುತಿಸಿಕೊಳ್ಳುವವರ ಪೈಕಿ ಎಷ್ಟು ಜನರು ನಿಜವಾಗಿಯೂ ಇಂದು ಆ ವೇದಗಳನ್ನು ಅಭ್ಯಸಿಸಿದ್ದಾರೆ?  
     ವೇದಗಳ ಮಂತ್ರಗಳನ್ನು ಅವುಗಳ ಗುಣ ಲಕ್ಷಣಗಳಿಗನುಸಾರವಾಗಿ ಮೂರು ವಿಧವಾಗಿ ಗುರುತಿಸುತ್ತಾರೆ. ಛಂದೋಬದ್ಧವಾದ ಮಂತ್ರಗಳನ್ನು 'ಋಕ್ಕು'ಗಳು ಎಂತಲೂ, ಗದ್ಯಮಯವಾದ ಮಂತ್ರಗಳನ್ನು 'ಯಜುಷ್' ಎಂತಲೂ ಮತ್ತು ಗೀತಾತ್ಮಕವಾಗಿ ಹೇಳಬಹುದಾದುದನ್ನು 'ಸಾಮ'ಗಳು ಎಂದು ಹೇಳುತ್ತಾರೆ. ಈ ಮೂರೂ ಪ್ರಕಾರಗಳು ನಾಲ್ಕು ವೇದಗಳಲ್ಲೂ ಕಾಣಸಿಗುತ್ತವೆ. ಋಗ್ವೇದ ಜ್ಞಾನಪ್ರಧಾನ, ಯಜುರ್ವೇದ ಕರ್ಮಪ್ರಧಾನ, ಸಾಮವೇದ ಉಪಾಸನಾಪ್ರಧಾನವಾಗಿದ್ದು, ಅಥರ್ವವೇದ ಈ ಮೂರೂ ಅಂಶಗಳನ್ನು ಒಳಗೊಂಡದ್ದಾಗಿದೆ. ಇವುಗಳಲ್ಲಿ ಯಾವುದು ಬೇಡ? ಜ್ಞಾನ ಮಾತ್ರ ಸಾಕು, ಕರ್ಮ ಮತ್ತು ಉಪಾಸನೆಗಳು ಬೇಡವೆನ್ನಬಹುದೇ? ಹಾಗೆಯೇ ಕೇವಲ ಉಪಾಸನೆ ಮಾಡೋಣ, ಜ್ಞಾನ ಮತ್ತು ಕರ್ಮಗಳು ಬೇಕಿಲ್ಲವೆನ್ನಲಾದೀತೆ? ನೈಜವಾಗಿ ಧಾರ್ಮಿಕನೆನಿಸಿಕೊಳ್ಳಲು ಜ್ಞಾನ, ಕರ್ಮ, ಉಪಾಸನೆಗಳು ಮೂರೂ ಅವಶ್ಯಕವೇ ಆಗಿದೆ. ಒಬ್ಬ ಋಗ್ವೇದಿ ಯಜುರ್ವೇದಿಯಾಗಬಾರದೆಂದೇನಿಲ್ಲ. ಇತರ ವೇದಗಳನ್ನು ಅಧ್ಯಯನ ಮಾಡಬಾರದೆಂದಿಲ್ಲ. ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ನಾಲ್ಕೂ ವೇದಗಳು ಪ್ರಜ್ಞಾವಂತರ ಅಧ್ಯಯನಕ್ಕೆ ಅತ್ಯಂತ ಯೋಗ್ಯವಾಗಿವೆ. 
     'ನಮ್ಮವರು', 'ಇತರರು' ಎಂಬವು ನಮ್ಮ ಸೃಷ್ಟಿಯಾಗಿವೆ, ಭಗವಂತನ ಸೃಷ್ಟಿಯಲ್ಲ. ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಒಂದು ಉದಾಹರಣೆ ನೋಡೋಣ. ಅನೇಕ ರೀತಿಯ ವೈದ್ಯಕೀಯ ಪದ್ಧತಿಗಳಿವೆ - ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಇತ್ಯಾದಿ, ಇತ್ಯಾದಿ. ಇವುಗಳಲ್ಲಿ ಯಾವುದು ಮೇಲು? ಯಾವುದು ಕೀಳು? ಎಲ್ಲಾ ವೈದ್ಯಕೀಯ ಶಾಸ್ತ್ರಗಳ ಉದ್ದೇಶ ಒಂದೇ - ಆರೋಗ್ಯಭಾಗ್ಯವನ್ನು ಕಾಪಾಡುವುದು. ಪ್ರತಿಯೊಂದು ವಿಧಾನಕ್ಕೂ ಈಗಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮುಂದುವರೆಯಲು ಅವಕಾಶಗಳು ಮುಕ್ತವಾಗಿವೆ. ವೈದ್ಯರುಗಳಲ್ಲೇ ಹಲವು ವಿಶೇಷ ತಜ್ಞವೈದ್ಯರಿದ್ದಾರೆ - ನರರೋಗ ತಜ್ಞ, ಹೃದಯರೋಗ ತಜ್ಞ, ನೇತ್ರ ತಜ್ಞ, ದಂತ ತಜ್ಞ, ಮನೋರೋಗ ತಜ್ಞ, ಹೀಗೆ ಹಲವಾರು ವಿಭಾಗಗಳಲ್ಲಿ ಪರಿಣತರಿದ್ದಾರೆ. ಇವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ? ಒಬ್ಬ ವೈದ್ಯರ ಮಗ ವೈದ್ಯನೇ ಆಗಬೇಕೆಂದಿದೆಯೇ? ವಕೀಲರ ಮಕ್ಕಳು ವಕೀಲರೇ ಆಗಿರುತ್ತಾರೆಯೇ? ಇದೇ ವಾದವನ್ನು ಜಾತಿಗಳ ವಿಚಾರದಲ್ಲೂ ಅನ್ವಯಿಸಬಹುದಲ್ಲವೇ? ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ನೀಡಿ, 'ಒಡೆದು ಆಳುವ' ವ್ಯವಸ್ಥೆ ಇರುವವರೆಗೂ ಜಾತಿ ಆಧಾರಿತ ಮೇಲು-ಕೀಳುಗಳಿಗೆ ಅವಕಾಶವಿದ್ದೇ ಇರುತ್ತದೆ. 
     ವಿವೇಕಾನಂದರ ಈ ನುಡಿ ಮಾನವತೆಯ ಹಂಬಲಿಗರಿಗೆ ಪ್ರೇರಕವಾಗಿದೆ: "ನಿಜವಾದ ಧರ್ಮವೆಂದರೆ ಮಾತಲ್ಲ, ಸಿದ್ಧಾಂತಗಳಲ್ಲ ಅಥವ ಶಾಸ್ತ್ರಗಳಲ್ಲ ಅಥವ ಮತವಲ್ಲ. ಅದು ಆತ್ಮ ಮತ್ತು ದೇವರ ನಡುವಣ ಸಂಬಂಧ. ಧರ್ಮವೆಂದರೆ ದೇವಸ್ಥಾನಗಳನ್ನು ಕಟ್ಟುವುದಲ್ಲ ಅಥವ ಚರ್ಚುಗಳನ್ನು ನಿರ್ಮಿಸುವುದಲ್ಲ ಅಥವ ಸಾಮೂಹಿಕವಾಗಿ ಪೂಜಿಸುವುದನ್ನು ಒಳಗೊಂಡಿಲ್ಲ. ಅದು ಪುಸ್ತಕಗಳಲ್ಲಿ ಅಥವ ಪದಗಳಲ್ಲಿ ಅಥವ ಉಪನ್ಯಾಸಗಳಲ್ಲಿ ಅಥವ ಸಂಸ್ಥೆಗಳಲ್ಲಿ ಕಾಣುವಂತಹುದಲ್ಲ. ನಾವು ದೇವರನ್ನು ಅರಿಯಬೇಕು, ಅನುಭವಿಸಬೇಕು, ದೇವರೊಡನೆ ಸಂಭಾಷಿಸಬೇಕು. ಅದು ಧರ್ಮ." ದೇವರನ್ನು ಅರಿಯುವ ಕ್ರಿಯೆಗೆ ಜ್ಞಾನ, ಕರ್ಮ, ಉಪಾಸನೆಗಳು ಸಾಧನಾಪಥಗಳು. ಈ ಜ್ಷಾನ ಕರ್ಮ, ಉಪಾಸನೆಗಳು ಯಾವುದೇ ಒಂದು ಜಾತಿಯ, ಒಂದು ವರ್ಗದ, ಒಂದು ಧರ್ಮದ ಸ್ವತ್ತಲ್ಲ. ಎಲ್ಲಾ ಮಾನವರ ಸ್ವತ್ತು ಅದು, ಆಸಕ್ತಿ ಇರುವ ಯಾರೇ ಆದರೂ ಅದನ್ನು ಪಡೆಯಬಹುದು, ಮಾಡಬಹುದು, ಅನುಷ್ಠಾನಕ್ಕೆ ತರಬಹುದು. ಈಗ ಹೇಳಿ, ನೀವು ಯಾವ ಜನ? 

ಶನಿವಾರ, ಆಗಸ್ಟ್ 17, 2013

ಭಾವಪೂರ್ಣ ಶ್ರದ್ಧಾಂಜಲಿ


ನೀನು ಇಲ್ಲವೆಂದು ಕಣ್ಣೀರು ಸುರಿಸಲೆ?
ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ?
ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ?
ನೀನು ಉಳಿಸಿದುದೇನೆಂದು ಹುಡುಕಲೆ?
ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ?
ಬದುಕು ಶೂನ್ಯವೆಂದು ವಿರಾಗಿಯಾಗಲೆ?
ಹೃದಯದಲಿ ನಿನ್ನ ನೆನಪು ತುಂಬಿದೆಯೆನ್ನಲೆ?
ಬೆನ್ನು ಹಾಕಿ ಹಿಂದಿನ ದಿನಗಳಲ್ಲೆ ಇರಲೆ?
ನಿನ್ನೆಯ ನೆನಪಿನಲಿ ನಾಳೆ ಹಸನಾಗಿಸಲೆ?
ನೀನು ಇಲ್ಲವೆಂದು ಮನ ಗಟ್ಟಿಗೊಳಿಸಲೆ?
ನಿನ್ನ ನೆನಪನ್ನು ಚಿರವಿರಿಸಿ ಬದುಕಲೆ?
ಅತ್ತು ಕರೆದು ಹಗುರಾಗಿ ಮರೆಯಲೆ?
ಪ್ರೇಮ ವಾತ್ಸಲ್ಯದಮಲಿನಲಿ ನಗುನಗುತಾ 
ನಿನ್ನಿಚ್ಛೆಯ ಕೆಲಸಗಳ ಮುನ್ನಡೆಸಲೆ?

-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 15, 2013

ರಾಷ್ಟ್ರೀಯ ಉತ್ಸವಗಳು ಮತ್ತು ನಾವು

   ರಾಷ್ಟ್ರೀಯ ಉತ್ಸವಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ರಾಷ್ಟ್ರೀಯ ಮಹತ್ವಗಳುಳ್ಳ ಆಚರಿಸುವ ಹಿನ್ನೆಲೆ, ಏಕೆ ಆಚರಿಸಬೇಕೆಂಬ ಮಹತ್ವವನ್ನು ಅರಿಯುವುದರೊಂದಿಗೆ ಅದನ್ನು ಸಾರ್ವಜನಿಕವಾಗಿಯೂ ಪ್ರಕಟಿಸುವುದು ಅಗತ್ಯವಾಗಿ ಆಗಬೇಕಾದ ಕೆಲಸವಾದರೂ, ಅದಕ್ಕೆ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲವೆನ್ನಿಸುತ್ತಿದೆ. ದೇಶ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಾಣುವುದು ಇಂತಹ ಆಚರಣೆಗಳ ಸಾರವಾಗಬೇಕು. ಆದರೆ, ಕೆಲವೆಡೆ ಚರ್ವಿತ ಚರ್ವಣದಂತೆ ಕಾರ್ಯಕ್ರಮಗಳು ನಡೆದರೆ, ಕೆಲವು ಕಡೆ ನವೀನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಒಂದಲ್ಲಾ ಒಂದು ರೀತಿಯಲ್ಲಿ ಸಾಮಾನ್ಯವಾಗಿ ಎಲ್ಲರೂ ಭಾಗಿಗಳಾಗಿರುತ್ತೇವೆ. ರಾಷ್ಟ್ರೀಯ ಉತ್ಸವಗಳಲ್ಲಿ ಅದರಲ್ಲೂ ಸಾರ್ವಜನಿಕವಾಗಿ ಆಚರಿಸಲಾಗುವ - ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಸರ್ಕಾರೀ -  ಕಾರ್ಯಕ್ರಮದಲ್ಲಿ ಭಾಗವಹಿಸುವವರ ಮನೋಭಾವದ ಬಗ್ಗೆ ಬರೆಯಬೇಕೆನ್ನಿಸುತ್ತಿದೆ. ಇಂತಹ ರಾಷ್ಟ್ರೀಯ ಉತ್ಸವಗಳನ್ನು ನಡೆಸುವ ಹೊಣೆಗಾರಿಕೆ ಹೊಂದಿದ್ದ ಅಧಿಕಾರಿಗಳಲ್ಲೊಬ್ಬನಾಗಿ ಈಗ ನಿವೃತ್ತನಾಗಿರುವ ನನಗೆ ಆಗಿರುವ ವಿವಿಧ ಮನೋಭಾವಗಳ ನಿಕಟ ಅನುಭವಗಳು ಇದನ್ನು ಬರೆಯಲು ಪ್ರೇರಿಸಿವೆ. 
     ಮೊದಲು ಸರ್ಕಾರದ ಅಧಿಕಾರಿಗಳ ದೃಷ್ಟಿಯಲ್ಲಿ ನೋಡೋಣ. ಇಂದಿನ ವ್ಯವಸ್ಥೆಯಲ್ಲಿ, ಕಾರ್ಯಕ್ರಮ ಸುಗಮವಾಗಿ ಕಳೆದರೆ ಸಾಕಪ್ಪಾ ಎಂಬ ಭಾವನೆ ನಡೆಸುವ ಹೊಣೆ ಹೊತ್ತವರದ್ದಾಗಿರುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಪೂರ್ವಭಾವಿಯಾಗಿ ಸುಮಾರು ಒಂದು ತಿಂಗಳ ಹಿಂದೆ ತಾಲ್ಲೂಕಿನಲ್ಲಿ ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಯವರು, ಉಪವಿಭಾಗ ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರರು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ತಹಸೀಲ್ದಾರರುಗಳು ಕಾರ್ಯಕ್ರಮದ ಹೊಣೆಗಾರಿಕೆ ಹೊರುತ್ತಾರೆ. ಸಾಮಾನ್ಯದ ಅನುಭವವೆಂದರೆ ಸಭೆಗಳಿಗೆ ಕೆಲವು ಅಧಿಕಾರಿಗಳು ಬಂದರೆ ಕೆಲವರು ಬರುವುದಿಲ್ಲ ಅಥವ ಕೈಕೆಳಗಿನ ಅಧಿಕಾರಿಗಳನ್ನು ನಿಯೋಜಿಸಿಬಿಡುತ್ತಾರೆ. ಬಲವಂತದ ಮಾಘಸ್ನಾನದಂತೆ ನಡೆಯುವ ಈ ಸಭೆಯಲ್ಲಿ ವ್ಯವಸ್ಥೆಯ ಬಗ್ಗೆ ವಿವಿಧ ಇಲಾಖೆಗಳಿಗೆ ವಿವಿಧ ರೀತಿಯ ಜವಾಬ್ದಾರಿ ವಹಿಸಿ ನಿರ್ಣಯವಾಗುತ್ತದೆ. ಅವರುಗಳಿಂದ ಬಲವಂತವಾಗಿ ವಹಿಸಿದ ಕೆಲಸಗಳನ್ನು ಮಾಡಿಸುವುದು ಸುಲಭವಲ್ಲ, ಆದರೆ ಕಾರ್ಯಕ್ರಮದ ಯಶಸ್ಸಿಗೆ ಅದು ಅನಿವಾರ್ಯ. ಹಣದ ಕೊರತೆಯೂ ಅಡ್ಡಿಯಾಗುತ್ತದೆ. ಉತ್ಸವಕ್ಕಾಗಿ ಸರ್ಕಾರದಿಂದ ಪಡೆಯಬಹುದಾದ ಮೊಬಲಗು ಎಷ್ಟು ಗೊತ್ತೇ? ಜಿಲ್ಲಾಧಿಕಾರಿಯವರಿಗೆ ರೂ. ೨೫೦/-, ತಹಸೀಲ್ದಾರರಿಗೆ ರೂ. ೭೫/-!! ಈಗ ಇದು ಎಷ್ಟಾಗಿದೆಯೋ ಗೊತ್ತಿಲ್ಲ. ಯಾರೂ ಈ ಹಣವನ್ನು ಡ್ರಾ ಮಾಡುವುದೇ ಇಲ್ಲ. ಕಾರಣ ವಿವರಿಸುವ ಅಗತ್ಯವೇ ಇಲ್ಲ. ಸರ್ಕಾರದ ಸಾಧನೆಗಳನ್ನು ತಮ್ಮ ಪಕ್ಷದ ಸಾಧನೆಗಳೆಂದು ತೋರಿಸುತ್ತಾ ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಜಾಹಿರಾತುಗಳಿಗೆ ಖರ್ಚು ಮಾಡುವವರು ರಾಷ್ಟ್ರೀಯ ಉತ್ಸವಗಳಿಗೆ ಬಿಡುಗಡೆ ಮಾಡುವ ಹಣವಿದು! ನಗರಸಭೆ, ಪಂಚಾಯಿತಿಗಳಿಂದ ಹಣದ ಸಹಕಾರ ಪಡೆಯಲಾಗುತ್ತದೆ. ಸರ್ಕಾರ ನಿಗದಿಪಡಿಸಿದಷ್ಟು ಮೊಬಲಗು ಮಾತ್ರ ಅವರುಗಳೂ ಖರ್ಚು ಮಾಡಬೇಕೆಂದಾದರೆ ಕಾರ್ಯಕ್ರಮ ನಡೆಸಲು ಆಗುವುದೇ ಇಲ್ಲ. ಬೇರೆ ರೀತಿಯಲ್ಲಿ ಖರ್ಚುಗಳನ್ನು ತೋರಿಸಿ ಹೊಂದಾಣಿಕೆ ಮಾಡುತ್ತಾರೆ. ನಮ್ಮನ್ನು ಸಭೆಗೆ ಆಹ್ವಾನಿಸಿಲ್ಲವೆಂದು ಕೆಲವು ಸಂಘ-ಸಂಸ್ಥೆಗಳು ಕಿರಿಕಿರಿ, ಪ್ರತಿಭಟನೆಗಳನ್ನೂ ಮಾಡುವುದುಂಟು. ಅವರುಗಳಿಂದ ಯಾವ ರೀತಿ ಸಹಾಯವಾಗುತ್ತಿತ್ತು ಎಂಬುದು ಅಷ್ಟರಲ್ಲೇ ಇರಲಿ, ಅವರಿಗೆ ಬೇಕಾಗಿರುವುದು ಗುರುತಿಸುವುದು, ಗೌರವಿಸುವುದು ಅಷ್ಟೇ ಮತ್ತು ರಾಜಕೀಯ ಕಾರಣಗಳೂ ಅದರಲ್ಲಿರುತ್ತವೆ. ಆಹ್ವಾನ ಪತ್ರಿಕೆಗಳು ತಲುಪಿಲ್ಲವೆಂದು ರಗಳೆ ಮಾಡುವ ಗಣ್ಯರುಗಳಿಗೆ ಸಹ ಕೊರತೆಯಿರುವುದಿಲ್ಲ. ಸಾಂದರ್ಭಿಕವಾಗಿ ಯಾವುದಾದರೂ ಪ್ರತಿಭಟನೆ, ಚಳುವಳಿಗಳು ನಡೆಯುವ ಸಂದರ್ಭದಲ್ಲಿ ಉತ್ಸವಗಳು ಬಂದರೆ ಅದನ್ನೂ ನಿಭಾಯಿಸಬೇಕು. ಭಾಗವಹಿಸುವ ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ, ಗಣ್ಯರುಗಳಿಗೆ ಸನ್ಮಾನ (ಇದರಲ್ಲೂ ರಾಜಕೀಯ ಬರುತ್ತದೆ), ಇತ್ಯಾದಿ, ಇತ್ಯಾದಿಗಳನ್ನು ಸಂಭಾಳಿಸಬೇಕು. ವೇದಿಕೆಯಲ್ಲಿ ಸರಿಯಾದ ಸ್ಥಾನ ಕೊಡಲಿಲ್ಲವೆಂದು ಸಿಟ್ಟು ಮಾಡಿಕೊಳ್ಳುವ ರಾಜಕೀಯದವರು, ಗಣ್ಯಾತಿಗಣ್ಯರುಗಳ ಕೆಂಗಣ್ಣುಗಳನ್ನು ಎದುರಿಸಬೇಕು. ತಮ್ಮ ತಮ್ಮ ಕಛೇರಿಗಳಲ್ಲಿ ಧ್ವಜ ಹಾರಿಸಿ, ಮುಖ ತೋರಿಸಿದಂತೆ ಮಾಡಿ ಮಾಯವಾಗುವ ಅಧಿಕಾರಿಗಳು ಮತ್ತು ಹೆಚ್ಚಿನ ನೌಕರರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಇರುವುದೇ ಇಲ್ಲ. ಭಾಗವಹಿಸದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದೆಂಬ ಎಚ್ಚರಿಕೆ ಮಾಮೂಲಾಗಿದ್ದು, ಅದು ಸಾಮಾನ್ಯವಾಗಿ ಜಾರಿ ಮಾಡುವುದು ಕಷ್ಟವೆಂದು ಎಲ್ಲರಿಗೂ ಗೊತ್ತಿದ್ದದ್ದೇ. ರಾಷ್ಟ್ರೀಯ ಉತ್ಸವದ ಜೊತೆಗೂಡಿ ಭಾನುವಾರ ಮತ್ತು ಇತರ ರಜಾದಿನಗಳು ಬಂದರಂತೂ ಖಾಸಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯಕ್ರಮದ ಕುರಿತು ಲೆಕ್ಕಿಸುವುದೇ ಇಲ್ಲ. ಆದರೂ ಕಾರ್ಯಕ್ರಮದ ಯಶಸ್ಸಿಗೆ ಕಂದಾಯ, ಪೋಲಿಸ್, ಶಿಕ್ಷಣ, ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪಾತ್ರ ಮಾತ್ರ ಗಮನಿಸಲೇಬೇಕು ಮತ್ತು ಮೆಚ್ಚಲೇಬೇಕು. [ಇಷ್ಟೆಲ್ಲಾ ಸಂಗತಿಗಳ ನಡುವೆ ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ತಾಲ್ಲೂಕು ದಂಡಾಧಿಕಾರಿಯಾಗಿ ಹಾರಿಸುವ ಪುಣ್ಯ ಕೆಲವು ವರ್ಷಗಳಾದರೂ ನನಗೆ ಸಿಕ್ಕಿದ್ದಕ್ಕಾಗಿ ಆ ದೇವರನ್ನು ನೆನೆಯುತ್ತೇನೆ. ಆ ಸಂತಸದ ಘಳಿಗೆಯಲ್ಲಿ ನನ್ನ ಕಷ್ಟಗಳೆಲ್ಲಾ, ಅನುಭವಿಸಿದ ನೋವುಗಳೆಲ್ಲಾ ಮರೆಯಾಗಿಬಿಡುತ್ತಿತ್ತು.] 'ತಾಯಿ ಭಾರತಿ, ನಿನಗೆ ಜಯವಾಗಲಿ.'
     ಇನ್ನು ಸಾಮಾನ್ಯರ ದೃಷ್ಟಿಯಲ್ಲಿ ನೋಡೋಣ. ಕೂಲಿಗಾರರು, ಅಂದಿನ ಊಟವನ್ನು ಅಂದೇ ದುಡಿದು ಗಳಿಸುವ ಸ್ಥಿತಿಯಿರುವವರು ಊಟವನ್ನು ಬಿಟ್ಟು ಭಾಗವಹಿಸಲು ಸಾಧ್ಯವಿದೆಯೇ? ಆದರೆ ಅವರಿಗಿಂತ ಮೇಲಿರುವವರಾದರೂ ಭಾಗವಹಿಸುತ್ತಾರೆಯೇ? ಹೇಗೂ ರಜೆ ಸಿಕ್ಕಿದೆ, ಮಜಾ ಮಾಡೋಣ, ಉಪಯೋಗಿಸಿಕೊಳ್ಳೋಣ ಎಂಬ ಮನೋಭಾವದವರೇ ಜಾಸ್ತಿ. ಇನ್ನು ಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿ ಉತ್ಸವಕ್ಕೆ ಕಳೆ ಕೊಡುತ್ತಿದ್ದಾರೆ. ಕಾಲೇಜು ಮೆಟ್ಟಲು ಹತ್ತಿದವರು ಹೆಚ್ಚಿನವರು ತಮ್ಮ ಹೆತ್ತವರು, ದೊಡ್ಡವರನ್ನು ಅನುಸರಿಸಿ ದೂರ ಉಳಿದುಬಿಡುತ್ತಾರೆ. ಖಾಸಗಿ ಸಂಸ್ಥೆಗಳವರು ಅಂದು ರಜೆ ಘೋಷಿಸಿ ಕರ್ತವ್ಯ ಮುಗಿಯಿತೆಂದುಕೊಳ್ಳುತ್ತಾರೆ. 'ತಾಯಿ ಭಾರತಿ, ನಿನ್ನ ಮಕ್ಕಳು ಇವರಮ್ಮಾ!'
     'ಏನು ಹೇಳುತ್ತಿದ್ದೀರಿ? ಯಾರಿಗೂ ದೇಶಪ್ರೇಮವಿಲ್ಲವೆನ್ನುತ್ತೀರಾ?' ಎಂದು ಸಿಟ್ಟಾಗುತ್ತೀರಿ ಎಂದು ನನಗೆ ಗೊತ್ತು. ಎಲ್ಲರಿಗೂ ದೇಶಪ್ರೇಮವಿದೆ. ಅದನ್ನು ವೈಭವದಿಂದ ತೋರಿಸುತ್ತಲೂ ಇದ್ದಾರೆ. ರಾಜಕೀಯ ಪಕ್ಷಗಳವರು ಪ್ರತ್ಯೇಕವಾಗಿ ತಮ್ಮ ತಮ್ಮ ಕಾರ್ಯಾಲಯಗಳಲ್ಲಿ ಧ್ವಜ ಹಾರಿಸಿ ಸಿಹಿ ಹಂಚಿ ತಿನ್ನುತ್ತಾರೆ. ವಿವಿಧ ಸಂಘಗಳು, ಸಂಸ್ಥೆಗಳು, ಸಂಘಟನೆಗಳು ಸಹ ಪ್ರತ್ಯೇಕವಾಗಿ ಉತ್ಸವಗಳನ್ನು ಜೋರಾಗಿಯೇ ಆಚರಿಸುತ್ತಾರೆ. ಎದ್ದು ಕಾಣುವಂತೆ ಪೆಂಡಾಲು ಹಾಕುತ್ತಾರೆ, ವಿವಿಧ ಆಟೋಟ-ಸ್ಪರ್ಧೆಗಳನ್ನು ನಡೆಸುತ್ತಾರೆ, ರೋಗಿಗಳಿಗೆ ಹಣ್ಣು-ಹಂಪಲು ಹಂಚುತ್ತಾರೆ, ರಕ್ತದಾನ ಮಾಡುತ್ತಾರೆ. ಖಾಸಗಿಯವರು ಖಾಸಗಿಯಾಗಿ ಆಚರಿಸುತ್ತಾರೆ. ಸಮಾನ ಮನೋಭಾವದವರು ಒಟ್ಟಾಗಿ ಸೇರಿ ಜೈ ಎನ್ನುತ್ತಾರೆ. ಎಲ್ಲರೂ ದೇಶಪ್ರೇಮಿಗಳೇ, ಎಲ್ಲರೂ ದೇಶಕ್ಕೆ, ದೇಶವಾಸಿಗಳಿಗೆ ಒಳ್ಳೆಯದಾಗಲಿ ಎನ್ನುವವರೇ. ಆದರೆ ಹಾಗೆ ಅನ್ನುವುದು ಪ್ರತ್ಯೇಕ ಪ್ರತ್ಯೇಕವಾಗಿ! 'ಅಮ್ಮಾ, ನಾನು ನಿನ್ನ ಪ್ರೀತಿಯ ಮಗ' ಎಂದು ಪ್ರತ್ಯೇಕವಾಗಿ ಹೇಳಿದರೆ ತಪ್ಪೇನೂ ಇಲ್ಲ. ಆದರೆ ಅದರೊಂದಿಗೆ ಎಲ್ಲಾ ಮಕ್ಕಳೂ ಒಟ್ಟಾಗಿ ಹೇಳಲು ಇರುವ ಅವಕಾಶವನ್ನೂ ಉಪಯೋಗಿಸಿಕೊಂಡರೆ 'ಅಮ್ಮ'ನಿಗೆ ಹಿತವಾಗುವುದಿಲ್ಲವೇ? ಸರ್ಕಾರೀ ಕಾರ್ಯಕ್ರಮವೆಂದು ಮೂಗು ಮುರಿಯಬೇಕಿಲ್ಲ. ಅಷ್ಟಾಗಿ ಸರ್ಕಾರ ಯಾರದ್ದು? ಅಧಿಕಾರಿಗಳದ್ದೇ? ರಾಜಕಾರಣಿಗಳದ್ದೇ? ನಮ್ಮದೇ ಅಲ್ಲವೇ? ನಮ್ಮ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಿದರೆ, ಅದರ ಯಶಸ್ಸಿಗೆ ಕೈಜೋಡಿಸಿದರೆ 'ಅಮ್ಮ'ನಿಗೆ ಹಿತವೆನಿಸೀತು.
     ಅವಕಾಶ ಮಾಡಿಕೊಂಡು -ಮನಸ್ಸು ಮಾಡಿದರೆ ಕಷ್ಟವೇನಲ್ಲ- ಸಾರ್ವಜನಿಕವಾಗಿ ಆಚರಿಸುವ ರಾಷ್ಟ್ರೀಯ ಉತ್ಸವಗಳಲ್ಲಿ ಪಾಲುಗೊಳ್ಳೋಣ, ಅದರ ಸವಿಯನ್ನು ಸವಿಯೋಣ, ಇತರರಿಗೂ ಹಂಚೋಣ. ಉತ್ಸಾಹದಿಂದ ಬಣ್ಣ ಬಣ್ಣದ ಉಡುಗೆಗಳು, ಯೂನಿಫಾರಂ ಧರಿಸಿ ಚಟುವಟಿಕೆಯಿಂದ ಪೆರೇಡಿನಲ್ಲಿ ಭಾಗವಹಿಸುವ ಚಂದದ ಪುಟಾಣಿಗಳಲ್ಲಿ ನಮ್ಮ ದೇಶದ ಭವಿಷ್ಯವಿದೆಯೆಂಬುದನ್ನು ಅರಿಯೋಣ. ಭಾಗವಹಿಸುವ ಪೋಲಿಸರು, ಹೋಮ್ ಗಾರ್ಡುಗಳು, ಎನ್‌ಸಿಸಿ, ಮುಂತಾದವರಿಗೆ ಹುರುಪು ಮೂಡುವಂತೆ ಮಾಡೋಣ. ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವ ಚಿಣ್ಣರನ್ನು ಕಂಡು ಸಂತೋಷಿಸೋಣ, ಪ್ರೋತ್ಸಾಹಿಸೋಣ. ಇಂತಹ ಕಾರ್ಯಕ್ರಮದಲ್ಲಿ ಜಾತೀಯತೆಯ ಸೋಂಕಿರುವುದಿಲ್ಲ, ಭಾಷೆಗಳ ಅಡ್ಡಗೋಡೆಗಳಿರುವುದಿಲ್ಲ, ಅಂತಸ್ತುಗಳ ತಾಕಲಾಟವಿರುವುದಿಲ್ಲ. ನಿಜವಾಗಿ ಆಗಬೇಕಿರುವುದೇನೆಂದರೆ ಸರ್ಕಾರದ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವುದಲ್ಲ, ಜನರ ಕಾರ್ಯಕ್ರಮದಲ್ಲಿ ಸರ್ಕಾರ ಭಾಗವಹಿಸುವುದು! ಮನಸ್ಸು ಮಾಡೋಣ, ರಾಷ್ಟ್ರೀಯ ಾ
ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸೋಣ, ಭಾಗವಹಿಸದಿರುವುದಕ್ಕೆ ಕಾರಣ ಕೊಡದಿರೋಣ. ಆಗ ಕಾಲೇಜುಗಳಿಗೆ ಹೋಗುವ ನಮ್ಮ ಮಕ್ಕಳೂ ಭಾಗವಹಿಸುತ್ತಾರೆ, ನಮ್ಮ ಸ್ನೇಹಿತರು, ಅಕ್ಕಪಕ್ಕದವರೂ ಭಾಗವಹಿಸುತ್ತಾರೆ, ಚಕ್ಕರ್ ಕೊಡುವ ಅಧಿಕಾರಿಗಳೂ ಭಾಗವಹಿಸುತ್ತಾರೆ. ಸೆಲೆಬ್ರಿಟಿಗಳೂ ಅನಿವಾರ್ಯವಾಗಿ ಭಾಗವಹಿಸಬೇಕಾಗುತ್ತದೆ. ಅಂತಹ ದಿನಗಳು ಬರಲಿ!
"ಎಲ್ಲಾ ಭೇದ ಮರೆತು, ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರೂ ಒಂದು ಇದುವೇ ನವಗಾನ!"
-ಕ.ವೆಂ.ನಾಗರಾಜ್.
**************
9-1-2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ:

2.7.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


     

ಬುಧವಾರ, ಆಗಸ್ಟ್ 14, 2013

ವಿವೇಕಾನಂದ - ಯುವಶಕ್ತಿಯ ಸಂಕೇತ

     ಯಜುರ್ವೇದದ ಒಂದು ಮಂತ್ರ ಹೇಳುತ್ತದೆ: ಜೀವೇಮ ಶರದಃ ಶತಂ - ನೂರು ವರ್ಷಗಳ ಕಾಲ ಜೀವಿಸೋಣ; ಪಶ್ಶೇಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ನೋಡೋಣ; ಶೃಣುಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ; ಪ್ರಬ್ರವಾಮ ಶರದಃ ಶತಂ - ನೂರು ವರ್ಷಗಳ ಕಾಲ ಒಳ್ಳೆಯ ಮಾತುಗಳನ್ನಾಡೋಣ; ಅದೀನಾ ಸ್ಯಾಮ ಶರದಃ ಶತಂ - ನೂರು ವರ್ಷಗಳ ಕಾಲ ಸ್ವತಂತ್ರವಾಗಿ, ಆತ್ಮಗೌರವದಿಂದ ಜೀವಿಸೋಣ; ಭೂಯಶ್ಚ ಶರದಃ ಶತಾತ್ - ಈ ರೀತಿಯಲ್ಲಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸಿರೋಣ. ಸ್ವಾಮಿ ವಿವೇಕಾನಂದರ ೧೫೦ನೆಯ ಜನ್ಮ ವರ್ಷಾಚರಣೆಯನ್ನು ದೇಶಾದ್ಯಂತ, ಅಷ್ಟೇ ಏಕೆ, ವಿದೇಶಗಳಲ್ಲೂ ಕೂಡ ಇಡೀ ವರ್ಷ ಆಚರಣೆ ಮಾಡುತ್ತಿದ್ದೇವೆ. ಜನ್ಮ ವರ್ಷಾಚರಣೆಯನ್ನು ವರ್ಷಕ್ಕೆ ಒಂದು ಸಲ ಮಾಡುತ್ತೇವೆ. ವಿವೇಕಾನಂದರು ಇಹಲೋಕ ತ್ಯಜಿಸಿ ೧೧೦ ವರ್ಷಗಳ ಮೇಲೆ ಆಗಿದೆ. ಇಂದಿಗೂ ಸಹ ಅವರನ್ನು ನೆನಪಿಸಿಕೊಳ್ಳುತ್ತೇವೆ.  ವೇದ ಮಂತ್ರ ಹೇಳುವಂತೆ ಅವರು ನೂರು ವರ್ಷಗಳಿಗಿಂತ ಹೆಚ್ಚು ಕಾಲ ಜೀವಿಸುವುದು ಎಂದರೆ ಇದೇ! ಬಹುಷಃ ಯಾವುದೇ ವ್ಯಕ್ತಿಯನ್ನು, ಶಕ್ತಿಯನ್ನು ವಿವೇಕಾನಂದರನ್ನು ಸ್ಮರಿಸಿಕೊಂಡಷ್ಟು ಸ್ಮರಿಸಿಕೊಂಡಿರಲಿಕ್ಕಿಲ್ಲ. ಅವರು ಬಾಳಿದ ರೀತಿ, ಜಗತ್ತಿಗೆ ಅವರು ನೀಡಿದ ಮಾರ್ಗದರ್ಶನ ವಿಭಿನ್ನ ರೀತಿಯದಾಗಿದ್ದು ಅಷ್ಟೊಂದು ಪ್ರಭಾವಿಯಾಗಿದ್ದುದರಿಂದಲೇ ಅವರು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವುದಕ್ಕೆ ಕಾರಣವಾಗಿದೆ. ಅವರ ಜನ್ಮದಿನವಾದ ಜನವರಿ ೧೨ ಅನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿವಸವಾಗಿ ಆಚರಣೆ ಮಾಡಲಾಗುತ್ತಿದೆ. ನಿಜಕ್ಕೂ ಇದು ಆ ಧೀರ ಸಂನ್ಯಾಸಿಗೆ ಸಲ್ಲತಕ್ಕಂತ, ಸಲ್ಲಬೇಕಾದ ಗೌರವವೇ ಆಗಿದೆ.
     ವಿವೇಕಾನಂದರು ಯುವಶಕ್ತಿಯ ಸಂಕೇತವಾಗಿದ್ದಾರೆ. ಯುವಕರಿಗೆ ಗೌರವದ ಸಂಕೇತವಾಗಿದ್ದಾರೆ. ಅವರ ವಿಚಾರಗಳು ಆಧ್ಯಾತ್ಮಿಕತೆ, ಆಧುನಿಕತೆ, ಮಾನವತೆ, ವಾಸ್ತವತೆಗಳ ಹದವಾದ ಮಿಶ್ರಣದಿಂದ ಕೂಡಿದ್ದು ಜನರ ಹೃದಯವನ್ನು ತಟ್ಟುವಂತಿರುವುದರಿಂದಲೇ ಅವರು ನಮ್ಮೆಲ್ಲರಿಗೆ ಅತ್ಯಂತ ಪ್ರಿಯರಾಗಿದ್ದಾರೆ. ಅವರ ಜೀವನದ ರೀತಿ ಮತ್ತು ಸಾಧನೆಗಳು ನಮ್ಮ ದೇಶದ ಯುವಪೀಳಿಗೆಗೆ ಸದಾ ಕಾಲ ಮಾರ್ಗದರ್ಶಿಯಾಗಿರುತ್ತವೆ. ಕೇವಲ ೩೯ ವರ್ಷಗಳು ಬಾಳಿದ ವಿವೇಕಾನಂದರು ವಯಸ್ಸಿನಲ್ಲಿ ಯುವಕರು, ಆದರೆ ವೈಚಾರಿಕತೆಯಲ್ಲಿ ಶಾಶ್ವತರು. ವಿವೇಕಾನಂದರು ಯುವಕರಿಗೆ ಆದರ್ಶಪ್ರಾಯರು ಅನ್ನಿಸಿಕೊಳ್ಳುವುದಕ್ಕೆ ಮುಖ್ಯವಾದ ಕಾರಣವೆಂದರೆ ಅವರು ವಿಶ್ವಮಾನವಧರ್ಮಿಯಾಗಿರುವುದು. ಅವರು ಸ್ವಧರ್ಮವನ್ನು ಪಾಲಿಸುವುದರೊಂದಿಗೆ, ಪ್ರೀತಿಸುವುದರೊಂದಿಗೆ ಇತರ ಧರ್ಮಗಳ ಕುರಿತೂ ವಿಶಾಲವಾದ ದೃಷ್ಟಿಕೋನವನ್ನು ಹೊಂದಿದ್ದೂ ಸಹ ಕಾರಣವಾಗಿದೆ. ಅವರ ಎಲ್ಲಾ ಉಪನ್ಯಾಸಗಳು ಪ್ರೀತಿ, ಮಾನವತೆ, ಧರ್ಮಗಳಲ್ಲಿ ಇರಬೇಕಾದ ಸಮನ್ವಯತೆ, ದುರ್ಬಲತೆಯ ಖಂಡನೆ, ಆಧ್ಯಾತ್ಮಿಕತೆ ಹಾಸುಹೊಕ್ಕಿರುವ ರಾಷ್ಟ್ರೀಯತೆಗಳನ್ನೇ ಒತ್ತಿಹೇಳುತ್ತವೆ. ಪ್ರಚಂಡ ದೇಶಪ್ರೇಮಿ ವಿವೇಕಾನಂದರದು ಅತ್ಯಂತ ಹೆಚ್ಚು ಯುವಕರಿಗೆ ಸರ್ವಸಮ್ಮತವಾಗಿ ಒಪ್ಪಿತವಾದಂತಹ ವ್ಯಕ್ತಿತ್ವ. ಅವರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು, "ಯಾವನೇ ಹಿಂದು ಮುಸ್ಲಿಮನಾಗಿ ಪರಿವರ್ತಿತನಾಗಬಾರದು ಮತ್ತು ಯಾವನೇ ಮುಸ್ಲಿಮ್ ಹಿಂದು ಆಗಬೇಕಿಲ್ಲ. ಒಬ್ಬ ಹಿಂದೂ ನೈಜ ಹಿಂದೂ, ಉತ್ತಮ ಹಿಂದೂ ಆಗಬೇಕು. ಹಾಗೆಯೇ ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮ್ ಆಗಬೇಕು. ಪ್ರತಿಯೊಂದು ಧರ್ಮವೂ ಇನ್ನೊಂದು ಧರ್ಮದ ಒಳ್ಳೆಯತನಕ್ಕೆ ಅವಕಾಶ ನೀಡುವ ಉದಾತ್ತತೆ ಹೊಂದಿರಬೇಕು." ಈಗಿನ ರಾಜಕಾರಣಿಗಳ ಕಪಟ ಜಾತ್ಯಾತೀತತೆಯನ್ನು ಕಂಡು ರೋಸಿಹೋಗಿರುವ ನಮಗೆ ವಿವೇಕಾನಂದರ ಈ ವಿಚಾರ ಬೆಳಕಿನಂತೆ ಕಾಣುತ್ತದೆ. ಒಂದು ಧರ್ಮದವರನ್ನು ಓಲೈಸಿ, ಪರಸ್ಪರರನ್ನು ಎತ್ತಿಕಟ್ಟುವ ರಾಜಕಾರಣಿಗಳು ತಾವೇ ಹೇಳುವ ಜಾತ್ಯಾತೀತತೆಗೆ ಕಪ್ಪುಚುಕ್ಕಿಗಳಾಗಿದ್ದಾರೆ.
     ನಮ್ಮ ದೇಶದ ಮಾನವನ್ನು ನಮ್ಮ ದೇಶದ ನಾಯಕರುಗಳು ಎನಿಸಿಕೊಂಡವರೇ ದೇಶ ವಿದೇಶಗಳಲ್ಲಿ ಹರಾಜು ಹಾಕುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಯುವಶಕ್ತಿ ಮೈಕೊಡವಿ ಮೇಲೇಳಬೇಕಾಗಿದೆ. ಅಮೆರಿಕಾದ ನಮ್ಮ ರಾಯಭಾರ ಕಛೇರಿಯಲ್ಲಿನ ಮಾಹಿತಿಗಳನ್ನು ಅಮೆರಿಕಾ ಸರ್ಕಾರ ಗೂಢಚಾರಿಕೆ ನಡೆಸಿ ಪಡೆದ ಕಾರ್ಯವನ್ನು ನಮ್ಮ ವಿದೇಶಾಂಗ ಸಚಿವರೇ ಸಮರ್ಥಿಸುತ್ತಾರೆ. ೧೯೬೨ರಲ್ಲಿ ಚೀನಾ ನಮ್ಮ ದೇಶದ ಬಹುದೊಡ್ಡ ಭಾಗವನ್ನು ಆಕ್ರಮಿಸಿಕೊಂಡಾಗ ಅಂದಿನ ನಮ್ಮ ಪ್ರಧಾನಿಯವರು 'ಆ ಭಾಗದಲ್ಲಿ ಹುಲ್ಲೂ ಸಹ ಬೆಳೆಯುವುದಿಲ್ಲ, ಅದಕ್ಕಾಗಿ ಚಿಂತಿಸಬೇಕಿಲ್ಲ' ಎಂದಿದ್ದರು. ಪಾಕ್ ಸೈನಿಕರು ನಮ್ಮ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರನ್ನು ಕೊಂದಾಗ, 'ಹಾಗೆ ಕೊಂದವರು ಪಾಕ್ ಸೈನಿಕರ ವೇಷದಲ್ಲಿದ್ದ ಉಗ್ರಗಾಮಿಗಳು' ಎಂದು ನಮ್ಮ ರಕ್ಷಣಾ ಸಚಿವರೇ ಲೋಕಸಭೆಯಲ್ಲಿ ಘೋಷಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ವಿವೇಕಾನಂದರ ನುಡಿಗಳು ಅತ್ಯಂತ ಪ್ರಸಕ್ತವೆನಿಸುತ್ತದೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯಿಲ್ಲ. ಯುವಕರ ಸುಪ್ತ ಚೈತನ್ಯವನ್ನು ಬಡಿದೆಬ್ಬಿಸಲು ವಿವೇಕಾನಂದರ ವಿಚಾರಗಳು, ರೀತಿ-ನೀತಿಗಳನ್ನು ನಮ್ಮ ಯುವಕರು ಅಧ್ಯಯನ ಮಾಡಬೇಕಿದೆ, ಪಾಲಿಸಬೇಕಾಗಿದೆ. ಒಬ್ಬ ಪ್ರಚಂಡ ದೇಶಪ್ರೇಮಿಯಾದ ವಿವೇಕಾನಂದರ ಬಗ್ಗೆ ವಿನೋಬಾ ಭಾವೆಯವರು ಹೇಳಿದಂತೆ, "ವಿವೇಕಾನಂದರು ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟವರು, ಹಾಗೆಯೇ ನಮ್ಮ ದೌರ್ಬಲ್ಯಗಳನ್ನೂ ಎತ್ತಿ ತೋರಿಸಿ ಅವುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕೆಂದು ಹೇಳಿಕೊಟ್ಟವರು". ಸ್ವತಃ ವಿವೇಕಾನಂದರೇ ಸಾರಿ ಸಾರಿ ಹೇಳುತ್ತಿದ್ದರು, "ನನ್ನ ನಂಬಿಕೆ ಇರುವುದು ಯುವಕರಲ್ಲಿ, ಹೊಸ ಪೀಳಿಗೆಯಲ್ಲಿ! ಎಲ್ಲಾ ಸಮಸ್ಯೆಗಳನ್ನು ಸಿಂಹಗಳಂತೆ ಎದುರಿಸಿ ಜಯಿಸುವವರು ಅವರೇ!" ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ಸಮರ ಸಾರಿದಾಗ ದೇಶದ ಯುವಜನತೆ ಎದ್ದು ನಿಂತಿದ್ದನ್ನು ಕಂಡಾಗ ನಮಗೆ ಏನೋ ಒಂದು ಆಶಾಭಾವನೆ ಚಿಗುರು ಒಡೆದಿತ್ತು. ಆದರೆ ಕಪ್ಫುಹಣದ ಪ್ರಾಬಲ್ಯ ಆ ಚಳುವಳಿಯನ್ನು ಮೆಟ್ಟಿನಿಂತಾಗ ಆ ಭರವಸೆಯ ಗುಳ್ಳೆ ಒಡೆದುಹೋಯಿತೇನೋ ಅನ್ನಿಸುತ್ತದೆ. ಹೋರಾಟದ ಕಿಚ್ಚು ನಮ್ಮ ಯುವಕರಲ್ಲಿ ಸುಪ್ತವಾಗಿದೆ ಅನ್ನುವುದಕ್ಕೆ ಆ ಚಳುವಳಿ ಸಾಕ್ಷಿಯಾಗಿದೆ. ನಮ್ಮ ಯುವಕರು ತಮಗೆ ಯೋಗ್ಯರಾದ ನಾಯಕರನ್ನು ಹುಡುಕುವ ಬದಲು ಒಬ್ಬೊಬ್ಬ ಯುವಕನೂ ಒಬ್ಬೊಬ್ಬ ನಾಯಕನಾಗಿ ತಯಾರಾದರೆ, ವಿವೇಕಾನಂದರು ಹೇಳಿದಂತೆ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಓಡಿಹೋಗುತ್ತವೆ. 
      ವಿವೇಕಾನಂದರ ೧೫೦ನೆಯ ಜನ್ಮವರ್ಷಾಚರಣೆಯನ್ನು ಒಂದು ಅಭಿಯಾನದಂತೆ ದೇಶಾದ್ಯಂತ ಆಚರಣೆ ಮಾಡುತ್ತಿದ್ದು, ಪ್ರಮುಖವಾಗಿ ಐದು ರೀತಿಗಳಲ್ಲಿ ಕಾರ್ಯಕ್ರಮಗಳನ್ನು ಜೋಡಿಸಿಕೊಳ್ಳಲಾಗಿದೆ. ಮೊದಲನೆಯದಾಗಿ 'ಯುವಶಕ್ತಿ' - ನಮ್ಮ ಯುವಕರಲ್ಲಿ -ಅವರು ವಿದ್ಯಾರ್ಥಿಗಳಾಗಿರಲಿ, ವಿದ್ಯಾರ್ಥಿಗಳಾಗಿರದಿರಲಿ, ಅನ್ಯಾನ್ಯ ವೃತ್ತಿಗಳಲ್ಲಿ ತೊಡಗಿರಲಿ, ೪೦ ವರ್ಷಗಳಿಗಿಂತ ಕಡಿಮೆ ವಯೋಮಾನದ  ತರುಣರಲ್ಲಿ- ಹುದುಗಿರುವ ಶಕ್ತಿಯ ಅರಿವನ್ನು ಮೂಡಿಸುವುದು. ಎರಡನೆಯದಾಗಿ ಶಿಕ್ಷಿತ ಮತ್ತು ಬುದ್ಧಿಜೀವಿ ಸಮೂಹದವರನ್ನು ಗಮನದಲ್ಲಿರಿಸಿಕೊಂಡು 'ಪ್ರಬುದ್ಧ ಭಾರತ', ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು 'ಗ್ರಾಮಾಯಣ', ಮಹಿಳಾ ಸಮುದಾಯವನ್ನು ರಾಷ್ಟ್ರನಿರ್ಮಾಣಕ್ಕೆ ಪ್ರೇರಿಸುವ ಸಲುವಾಗಿ 'ಸಂವರ್ಧಿನಿ' ಮತ್ತು ವನವಾಸಿಗಳನ್ನು ಗಮನದಲ್ಲಿರಿಸಿ 'ಅಸ್ಮಿತಾ' ಎಂಬ ಅಭಿದಾನಗಳ ಅಡಿಯಲ್ಲಿ ವರ್ಷಪೂರ್ತಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲುಗೊಳ್ಳುವುದು ಸೂಕ್ತವಾಗಿದೆ. 

ಗುರುವಾರ, ಆಗಸ್ಟ್ 8, 2013

ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ





   ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾವೇ, ಕೈಗಳ ಮುಗಿವೆ, ಹಾಲನ್ನೀವೆ, ಈಗಲೆ ಹೊರಗೆ ಪೋ ಪೋ ಪೋ ಪೋ' ಎಂಬ ಪದ್ಯ ಈಗಲೂ ನೆನಪಿಗೆ ಬರುತ್ತಿರುತ್ತದೆ.  ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
     ನಾಗರಪಂಚಮಿಯನ್ನು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸುತ್ತಾರಾದರೂ, ತುಳುನಾಡಿನಲ್ಲಿ 'ನಾಗ'ನಿಗೆ ವಿಶೇಷ ಮಹತ್ವ ನೀಡುತ್ತಾರೆ. ನಾಗಾರಾಧನೆಗೆ ಮಹತ್ವವಿರುವ ಅಲ್ಲಿ, 'ನಾಗಬನ'ಗಳ ಹೆಸರಿನಲ್ಲಾದರೂ ಸ್ವಲ್ಪಮಟ್ಟಿಗೆ ಹಸಿರು ಉಳಿದಿದೆ ಎನ್ನಲು ಅಡ್ಡಿಯಿಲ್ಲ. ಆದರೆ ಆ ನಾಗಬನಗಳನ್ನೂ ಕಾಂಕ್ರೀಟೀಕರಣ ಮಾಡುತ್ತಿರುವುದು ದುರ್ದೈವ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು. 
     ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದು ಎಂತಹ ವಿಪರ್ಯಾಸ!  ಉದ್ದೇಶ 'ನಾಗದೇವ'ನನ್ನು ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೆ ಆಗಿದ್ದಲ್ಲಿ ಹಬ್ಬವನ್ನು ಈ ರೀತಿ ಆಚರಿಸಬಹುದಲ್ಲವೇ?
೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ  ಸೂಕ್ತವೆನಿಸುವ  ಇತರ ಕಾರ್ಯಗಳನ್ನು ಕೈಗೊಳ್ಳಬಹುದು.
     ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಎಲ್ಲಾ ಪರಿಸರ ಪ್ರೇಮಿಗಳ ಪರವಾಗಿ ಈ 'ನಾಗರಾಜ'ನ ಆಶಯ!
*************
-ಕ.ವೆಂ.ನಾಗರಾಜ್.