ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 28, 2012

ಭಗತ್ ಸಿಂಗ್ - ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ


      ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ. ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧi ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ. 
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮ ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ! ಅವನು ಎಂತಹ ವ್ಯಕ್ತಿತ್ವದವನು ಎಂಬುದಕ್ಕೆ ಈ ಉದಾಹರಣೆ ಸಾಕು. ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಿದ ಲಾಹೋರಿನ ಐತಿಹಾಸಿಕ ಜೈಲನ್ನು ಪಾಕಿಸ್ತಾನ1961ರಲ್ಲಿ ಕೆಡವಿ ಹಾಕಿತು. ಲಾಹೋರ್ ಜೈಲಿನ ಸಮೀಪದ ವೃತ್ತಕ್ಕೆ 1947ರವರೆಗೂ ಭಗತ್ ಸಿಂಗನ ಹೆಸರಿತ್ತು. ಪಾಕಿಸ್ತಾನದ ಉದಯದ ನಂತರ ಭಗತ್ ಸಿಂಗ್ ಮುಸ್ಲಿಮನಲ್ಲವೆಂಬ ಕಾರಣಕ್ಕೆ ಆ ಹೆಸರನ್ನು ಶಾದ್ ಮಾನ್ ಚೌಕವೆಂದು ಬದಲಿಸಲಾಯಿತು. ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಕದ್ದು ಮುಚ್ಚಿ ಗಲ್ಲಿಗೇರಿಸಿದ ನಂತರ ಬ್ರಿಟಿಷರು ಅವರ ದೇಹಗಳನ್ನು ಈಗ ಭಾರತದ ಭಾಗವಾಗಿರುವ ಫಿರೋಜಪುರ ಜಿಲ್ಲೆಯ ಗಾಂದಾ ಸಿಂಗಾವಾಲಾ ಎಂಬ ಗ್ರಾಮದಲ್ಲಿ ಸುಟ್ಟು ಹಾಕಿದ್ದರು. ಲಾಹೋರಿನ ಜನರು ಧಾವಿಸಿ ಅರೆಸುಟ್ಟ ದೇಹಗಳ ಅವಶೇಷಗಳು, ಬೂದಿಯನ್ನು ಲಾಹೋರಿಗೆ ತಂದು ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಇತಿಹಾಸ. ಆ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದವರ ಸಂಖ್ಯೆ ಐವತ್ತು ಸಾವಿರವಾಗಿತ್ತೆಂದರೆ ಅವನ ಕುರಿತು ಅಲ್ಲಿನವರು ಎಂತಹ ಭಾವನೆ ಹೊಂದಿದ್ದರೆಂದು ಸೂಚಿಸುತ್ತದೆ. 26-03-1931ರಂದು ಹುತಾತ್ಮರ ಗೌರವಾರ್ಥ ಲಾಹೋರ್ ಬಂದ್ ಆಚರಿಸಲಾಗಿತ್ತು.  ಇತ್ತೀಚೆಗೆ ಭಗತ್ ಸಿಂಗನ 105ನೆಯ ಹುಟ್ಟುಹಬ್ಬದ ನೆನಪಿನಲ್ಲಿ ಶಾದ್ ಮಾನ್ ಚೌಕಕ್ಕೆ ಭಗತ್ ಸಿಂಗನ ಹೆಸರಿಡಲು ತೀರ್ಮಾನಿಸಲಾಗಿತ್ತು. ಭಗತ್ ಸಿಂಗ್ ಮುಸ್ಲಿಮನಲ್ಲವಾದ್ದರಿಂದ ಅವನ ಹೆಸರನ್ನು ಇಡಬಾರದೆಂದು ಕಟ್ಟರ್ ಮತೀಯವಾದಿ ಸಂಘಟನೆ ಜಮಾ ಉದ್ ದವಾ ನೀಡಿದ ಎಚ್ಚರಿಕೆಗೆ ಮಣಿದ ಸರ್ಕಾರ ತೀರ್ಮಾನ ಕೈಬಿಟ್ಟಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಇತಿಹಾಸದ ಅವಿಭಾಜ್ಯ ಅಂಗವೆನ್ನುವುದನ್ನು ಮರೆಯಬಾರದು. ಯಾವುದೋ ಹೊರದೇಶದ ಸರ್ವಾಧಿಕಾರಿ ಗಡ್ಡಾಫಿಯ ಹೆಸರನ್ನು ಅವನು ಮುಸ್ಲಿಮನೆಂಬ ಕಾರಣಕ್ಕೆ ಸ್ಟೇಡಿಯಮ್ಮಿಗೆ  ಇಡುತ್ತಾರೆ. ಆದರೆ ದೇಶದವನೇ ಆದ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರನಿಗೆ ಅವನು ಮುಸ್ಲಿಮನಲ್ಲವೆಂಬ ಕಾರಣಕ್ಕೆ ಅಗೌರವಿಸುತ್ತಾರೆ. ಇದು ಮಾನವತೆಗೆ, ಇತಿಹಾಸಕ್ಕೆ ಮಾಡುವ ಅಪಚಾರ. ಇಂತಹ ಅಪಚಾರ ಮಾಡುವ ಜಾತ್ಯಾತೀತರು ಎಂದು ಕರೆದುಕೊಂಡು ಆ ಪದಕ್ಕೆ ಅವಮಾನ ಮಾಡುವವರು ನಮ್ಮಲ್ಲೂ ಇದ್ದಾರೆ. ಅಂಡಮಾನ್ ಜೈಲಿನಲ್ಲಿರುವ ಸ್ಮಾರಕದಲ್ಲಿರುವ ವೀರ ಸಾವರ್ಕರರ ಹೆಸರನ್ನು ಅಳಿಸುವ ಅಪಚಾರ ಮಾಡಿದವರು ಕೇಂದ್ರದ ಆಡಳಿತ ಪಕ್ಷದ ನಾಯಕಮಣಿಗಳಲ್ಲಿ ಒಬ್ಬರಾಗಿದ್ದಾರೆ! ಇಂತಹ ಸ್ಥಿತಿಗೆ ಮರುಗಿ ನಿಟ್ಟುಸಿರು ಬಿಟ್ಟರಷ್ಟೇ ಸಾಕೇ? ಚಿಂತಿಸಿ. ಭಗತ್ ಸಿಂಗ್, ರಾಜಗುರು, ಸುಖದೇವ್, ಸಾವರ್ಕರರಂತಹ ಅಸಂಖ್ಯ ಬಲಿದಾನಿಗಳಿಗೆ ಅಗೌರವ ಸಲ್ಲಿಸುವವರಿಗೆ ಪಾಠ ಕಲಿಸಬೇಕಿದೆ. ಆದರೆ . . . . . . . ??????
-ಕ.ವೆಂ.ನಾಗರಾಜ್.

ಗುರುವಾರ, ಡಿಸೆಂಬರ್ 20, 2012

ಕೆಳದಿ ರಾಮೇಶ್ವರ ದೇವಾಲಯ ನೋಡಿದ್ದೀರಾ?

     ಇತಿಹಾಸ ಮತ್ತು ಧಾರ್ಮಿಕ ಪರಂಪರೆಗಳನ್ನು ಥಳುಕು ಹಾಕಿಕೊಂಡಿರುವ, ಕೆಳದಿ ಅರಸರ ಮತ್ತು ಕವಿಮನೆತನದವರ ಆರಾಧ್ಯ ದೇವರಾದ ಕೆಳದಿ ರಾಮೇಶ್ವರ ದೇವಾಲಯ ಒಂದು ವೀಕ್ಷಿಸಬಹುದಾದ ಸ್ಥಳವಾಗಿದೆ. ಕೆಳದಿಯು ಶಿವಮೊಗ್ಗದಿಂದ 78 ಕಿ.ಮೀ. ಹಾಗೂ ಸಾಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಒಂದು ಪಂಚಾಯಿತಿ ಕೇಂದ್ರ. ಬೆಂಗಳೂರಿನಿಂದ ಸಾಗರಕ್ಕೆ ಬಸ್ಸು ಮತ್ತು ರೈಲುಗಳ ನೇರ ಸಂಪರ್ಕ ಸೌಲಭ್ಯವಿದೆ. ಕೆಳದಿ ಅರಸರ ಪ್ರಥಮ ರಾಜಧಾನಿಯಾಗಿದ್ದ ಕೆಳದಿಯಲ್ಲಿರುವ ರಾಮೇಶ್ವರ ದೇವಸ್ಥಾನದ ಉಗಮದ ಕುರಿತು ಇರುವ ಐತಿಹ್ಯವೆಂದರೆ, ಹಳ್ಳಿಬಯಲು ಗ್ರಾಮದಲ್ಲಿ ವಾಸವಿದ್ದ  ಕೆಳದಿಯ ಪ್ರಥಮ ದೊರೆ ಚೌಡಪ್ಪ ದೊರೆಯಾಗಿ ಪಟ್ಟಾಧಿಕಾರ ಹೊಂದುವ ಹಲವು ವರ್ಷಗಳ ಮೊದಲು ಆತನ ಕನಸಿನಲ್ಲಿ ಜಂಗಮನೊಬ್ಬ ಕಾಣಿಸಿಕೊಂಡು, ಕೆಳದಿಯ ಸೀಗೆವಟ್ಟಿ ಎಂಬಲ್ಲಿ ಸೀಗೆಮೆಳೆಯ ನಡುವಣ ಹುತ್ತದ ಕೆಳಗೆ ರಾಮೇಶ್ವರ ಲಿಂಗವಿರುವ ಕುರಿತು ತಿಳಿಸಿದ್ದನಂತೆ. ಮರುದಿನ ಆ ಸ್ಥಳಕ್ಕೆ ಹೋಗಿ ಮುಳ್ಳು ಕಂಟಿಗಳು, ಹಾಳುಗಿಡಗಳನ್ನು ಕಡಿದು, ಹುತ್ತವನ್ನು ಕಡಿದು, ಮಣ್ಣು ಸರಿಸಿ ನೋಡಿದರೆ, ಅಲ್ಲಿ ನಿಜಕ್ಕೂ ಲಿಂಗವಿದ್ದುದು ಗೊತ್ತಾಯಿತಂತೆ. ನಂತರದಲ್ಲಿ ಸುತ್ತಲಿನ ಪ್ರದೇಶವನ್ನು ಸಮತಟ್ಟುಗೊಳಿಸಿ, ಒಂದು ಹುಲ್ಲಿನ ಗುಡಿಸಲು ಕಟ್ಟಿ ತಾತ್ಕಾಲಿಕ ದೇವಸ್ಥಾನದ ರೂಪಕ್ಕೆ ಚೌಡಪ್ಪ ತಂದದ್ದಲ್ಲದೆ, ಅದನ್ನು ಪ್ರತಿದಿನ ಪೂಜಿಸುವ ಪರಿಪಾಠ ಬೆಳೆಸಿಕೊಂಡನಂತೆ. ಚೌಡಪ್ಪ ಕೆಳದಿ ಸಂಸ್ಥಾಪಕ ಅರಸನಾದ ಕೂಡಲೇ ದೇವಸ್ಥಾನದ ಗರ್ಭಗುಡಿಯನ್ನು ಕಲ್ಲುಕಟ್ಟಡವನ್ನಾಗಿಸಿದನು. ನಂತರದ ಅರಸರುಗಳೂ ಸಹ ಕಾಲಕಾಲಕ್ಕೆ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿಕೊಂಡು ಬಂದರು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಸಂರಕ್ಷಿತ ಸ್ಮಾರಕವೆಂದು ಪುರಾತತ್ವ ಇಲಾಖೆಯ ನಿಗಾವಣೆಯಲ್ಲಿದೆ. 
     ದೇವಸ್ಥಾನದ ಪ್ರಾಂಗಣದಲ್ಲಿ ಒಂದು ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳಿವೆ. ದೇವಾಲಯದ ಎದುರಿಗೆ ಇರುವ ಧ್ವಜಸ್ಥಂಭದಲ್ಲಿ ರಾಣಿ ಚೆನ್ನಮ್ಮ ಶರಣು ಬಂದಿದ್ದ ಶಿವಾಜಿಯ ಮಗ ರಾಜಾರಾಮನಿಗೆ ಅಭಯ ನೀಡಿದ್ದ ಕುರುಹಾಗಿ ಕೆತ್ತಿದ ಚೆನ್ನಮ್ಮ, ರಾಜಾರಾಮರ ಶಿಲ್ಪಗಳಿವೆ. ಕೆಳದಿಯ ರಕ್ಷಣೆಗಾಗಿ ಆತ್ಮ ಸಮರ್ಪಣೆ ಮಾಡಿಕೊಂಡ ಎಡವಮುರಾರಿ, ಬಲವಮುರಾರಿಯವರ ಕಾಷ್ಠ ಶಿಲ್ಪ, ಅಲಂಕಾರಿಕ ಕಾಷ್ಠಶಿಲ್ಪಗಳು, ದೇವಾಲಯದಲ್ಲಿರುವ ಕೆತ್ತನೆಗಳು ಆಕರ್ಷಕವಾಗಿವೆ. ಛಾವಣಿಯ ಭಾಗದಲ್ಲಿ ಕೆತ್ತಿರುವ ಗಂಡ ಭೇರುಂಡ ಕೆಳದಿ ಅರಸರ ಲಾಂಛನವಾಗಿತ್ತು. ಈಗಿನ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಗಂಡ ಭೇರುಂಡವೂ ಒಳಗೊಂಡಿದೆ. ಅನೇಕ ದೇವತಾ ವಿಗ್ರಹಗಳು, ವಾದ್ಯಗಾರರ ಶಿಲ್ಪಗಳು ಗಮನ ಸೆಳೆಯುತ್ತವೆ. ಪ್ರದಕ್ಷಿಣಾ ಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡದಾಗಿದ್ದು ಇದರ ಮೇಲೆ ಆರು ಕಂಬಗಳನ್ನು ನಿಲ್ಲಿಸಲಾಗಿದೆ. ಮೂರು ಪ್ರವೇಶ ದ್ವಾರಗಳಿವೆ. ದೇವಾಲಯದ ಹೊರಭಾಗದಲ್ಲಿರುವ ಗಜಹಂಸದ ಶಿಲ್ಪವನ್ನು ಲಕ್ಷ್ಮಿ ಮತ್ತು ಸರಸ್ವತಿಯರ ಸಂಕೇತವೆಂದು ಕುವೆಂಪು ವಿಶ್ವವಿದ್ಯಾಲಯವು ತನ್ನ ಲಾಂಛನವಾಗಿ ಬಳಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ನಾನು ತೆಗೆದಿದ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿರುವೆ. ನಿಮ್ಮನ್ನೂ ಕೆಳದಿಗೆ ಒಮ್ಮೆ ಭೇಟಿ ಕೊಡಲು ಪ್ರೇರೇಪಿಸಲು ಈ ಪ್ರಯತ್ನ.
-ಕ.ವೆಂ.ನಾಗರಾಜ್.


ಮಂಗಳವಾರ, ಡಿಸೆಂಬರ್ 18, 2012

ಸಂತಸದ ಕ್ಷಣದಲ್ಲಿ ಹೊರಬಂದ ಮಾತುಗಳು


      ದಿನಾಂಕ 29-11-2012ರಂದು ನಡೆದ "ಆದರ್ಶದ ಬೆನ್ನು ಹತ್ತಿ. . " ಪುಸ್ತಕದ ಬಿಡುಗಡೆ ಕಾರ್ಯಕ್ರಮ ನನಗೆ ತೃಪ್ತಿ ಮತ್ತು ಸಂತೋಷ ನೀಡಿದೆ. ನನ್ನ ಹಿಂದಿನ "ಕವಿ ಸುಬ್ರಹ್ಮಣ್ಯಯ್ಯ" ಮತ್ತು "ಮೂಢ ಉವಾಚ"ದ ಬಿಡುಗಡೆ ಸಂದರ್ಭಗಳಲ್ಲಿ ಇಂತಹ ಅನುಭವ ನನಗಾಗಿರಲಿಲ್ಲ. ಸನ್ಮಾನ್ಯ ಶ್ರೀ ಸು. ರಾಮಣ್ಣನವರ ಪ್ರೇರಣೆ, ಕಳಕಳಿ ಅದ್ಭುತ ಕೆಲಸ ಮಾಡಿಸಿದೆ. ಮಿತ್ರ ಹರಿಹರಪುರ ಶ್ರೀಧರ ಪ್ರತಿ ಹಂತದಲ್ಲಿ ನನ್ನೊಡನೆ ಸಹಕರಿಸಿದ್ದಾರೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಸಂತ್ರಸ್ತರಾಗಿದ್ದವರು, ಹೋರಾಡಿದ್ದವರು ಆ ಸಂದರ್ಭದಲ್ಲಿ ಸೇರಿದ್ದು ಅವಿಸ್ಮರಣೀಯವಾಗಿತ್ತು. ಒಬ್ಬ ಲೇಖಕನಾಗಿ ಅಂದಿನ ಸಮಾರಂಭದಲ್ಲಿ ನನ್ನಿಂದ ಹೊರಬಂದಿದ್ದ ಮಾತುಗಳಿವು:
      ನಾನೊಬ್ಬ ಭಾವಜೀವಿ. ನನಗೆ ಬಹಳ ಸಂತೋಷವಾಗಿದೆ. ಮನದ ಭಾವನೆಗಳನ್ನು ಹೊರಹಾಕುವ ಮಾಧ್ಯಮಗಳಲ್ಲಿ ಒಂದಾದ ಬರವಣಿಗೆಗೆ ಇತ್ತೀಚಿನ ಕೆಲವು ವರ್ಷಗಳಿಂದ ನಾನು ತೊಡಗಿಕೊಂಡಿದ್ದೇನೆ. ಒಳಗೇ ಇದ್ದ ಭಾವನೆಗಳ ಒತ್ತಡದಿಂದ ಪಾರಾಗಲು ನನಗೆ ನೆರವಾಗಿರುವುದೇ ಈ ಬರವಣಿಗೆ. ಕಲ್ಪನೆಯ ವಸ್ತುಗಳು, ಸಂಗತಿಗಳು ನನ್ನ ಬರಹದ ವಸ್ತುಗಳಲ್ಲ. ಈ ಜೀವನದ ಶಾಲೆ ನನಗೆ ಕಲಿಸಿದ ಅನೇಕ ರೀತಿಯ ಪಾಠಗಳೇ ನನ್ನ ಬರಹದ ಮೂಲ ವಸ್ತುಗಳಾಗಿವೆ. ಸುಮಾರು 350-400 ರಷ್ಟು ಬಿಡಿ ಲೇಖನಗಳು, ಕವನಗಳು ನನ್ನ ಸ್ವಂತದ ಕವಿಮನ, ವೇದಜೀವನ ಅಂತರ್ಜಾಲ ತಾಣಗಳಲ್ಲಿ, ಕರ್ನಾಟಕದ ಕನ್ನಡದ ಅತಿ ದೊಡ್ಡ ಸಮುದಾಯ ತಾಣವಾದ ಸಂಪದದಲ್ಲಿ ಪ್ರಕಟವಾಗಿದೆ. ಇವನ್ನು ಯಾವುದೇ ಪತ್ರಿಕೆಗಳಿಗೆ, ಮ್ಯಾಗಝೈನುಗಳಿಗೆ ಪ್ರಕಟಿಸಲು ಕೋರಿ ಕಳಿಸಿಲ್ಲ. ಈ ತಾಣಗಳಲ್ಲಿ ನನ್ನ ಸೇವಾಕಾಲದ ಅನುಭವಗಳನ್ನು ಕಂತುಗಳಲ್ಲಿ ಸೇವಾಪುರಾಣ ಎಂಬ ರ್ಶೀಕೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿದಾಗ ಸಿಕ್ಕ ಓದುಗರ ಪ್ರತಿಕ್ರಿಯೆಗಳು, ಮೆಚ್ಚುಗೆಗಳು ನನ್ನನ್ನು ಹೆಚ್ಚು ಬರೆಯಲು ಪ್ರೋತ್ಸಾಹ ಕೊಟ್ಟಿತು. ಇದು ಇನ್ನೂ ಮುಗಿದಿಲ್ಲ. ಈ ಸೇವಾಪುರಾಣ ಮಾಲಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳನ್ನು 'ಸರಳುಗಳ ಹಿಂದಿನ ಲೋಕ' ಎಂಬ ಶೀರ್ಷಿಕೆಯಲ್ಲಿ ದಾಖಲಿಸಿದ್ದೆ. ಈ ಭಾಗದ ಲೇಖನಗಳಿಗೆ ಸಿಕ್ಕ ಪ್ರೋತ್ಸಾಹ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಹೆಚ್ಚಿನವರು ಇದನ್ನು ಪುಸ್ತಕ ರೂಪದಲ್ಲಿ ಹೊರತರಲು ಒತ್ತಾಯಿಸಿದ್ದರು. ಅದಕ್ಕೆ ಈಗ ಸಮಯ ಬಂದಿದೆ. ಸರಳುಗಳ ಹಿಂದಿನ ಲೋಕ ಎಂಬುದರ ಬದಲಿಗೆ ಮಿತ್ರ ಶ್ರೀಧರ್ ಸೂಚಿಸಿದ 'ಆದರ್ಶದ ಬೆನ್ನು ಹತ್ತಿ . ." ಎಂಬ ರ್ಶೀಕೆಯಲ್ಲಿ ಪ್ರಕಟವಾಗಿದೆ. ಸನ್ಮಾನ್ಯ ಶ್ರೀ ಸು.ರಾಮಣ್ಣನವರು ಹಿಂದೊಮ್ಮೆ ಹಾಸನಕ್ಕೆ ಬಂದಿದ್ದಾಗ ಅವರಿಗೆ ಈ ವಿಷಯ ತಿಳಿಸಿ, ತುರ್ತು ಪರಿಸ್ಥಿತಿ ಕಾಲದ ಅನುಭವಗಳ ಕರಡನ್ನು ಅವರಿಗೆ ಕಳಿಸಿಕೊಟ್ಟು, ಪ್ರಕಟಿಸಲು ಯೋಗ್ಯವೆಂದು ಅನ್ನಿಸಿದರೆ ಮಾತ್ರ ಮುನ್ನುಡಿ ಬರೆದುಕೊಡಬೇಕೆಂದು ಕೋರಿದ್ದೆ. ಅವರು ಮುನ್ನುಡಿ ಬರೆದು ಮೆಚ್ಚುಗೆಯ ಮಾತನ್ನಾಡಿದ್ದರಿಂದ ಧೈರ್ಯ ಮಾಡಿ ಪ್ರಕಟಿಸಿರುವೆ. ಒಬ್ಬರು ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಅವರು ಆಗಾಗ್ಗೆ ಈ ಬಗ್ಗೆ ವಿಚಾರಿಸುತ್ತಿದ್ದುದಲ್ಲದೆ, ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದು ನನಗೆ ಅವರ ಬಗ್ಗೆ ಗೌರವ ನೂರ್ಮಡಿಯಾಗಿದೆ. ಅವರಿಗೆ ನನ್ನ ಹೃದಯದಾಳದ ಕೃತಜ್ಞತೆಗಳು.
     ಈ ಪುಸ್ತಕದಲ್ಲಿ ನನ್ನ ಅನುಭವಗಳ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿದ್ದ ಜನರ ಮನೋಭಾವ ಹೇಗಿತ್ತು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಠತೆ ದೇಶವನ್ನು ಹೇಗೆ ಅಧೋಗತಿಗೆ ಒಯ್ಯುತ್ತದೆ ಎಂಬುದರ ಅರಿವು ಮೂಡಿಸುವ ಯತ್ನವನ್ನೂ ಮಾಡಿದ್ದೇನೆ. ಇಡೀ ದೇಶದಲ್ಲಿ ನಡೆದಂತೆ ಕರ್ನಾಟಕದಲ್ಲೂ, ಹಾಸನದಲ್ಲೂ ನಡೆದ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಇತಿಹಾಸವನ್ನು ಜನರು ಮರೆತುಬಿಡಬಾರದು. ಈ ಜಿಲ್ಲೆಯಲ್ಲಿ 13 ಜನರು ಮೀಸಾ ಪ್ರಕಾರ ಬಂಧಿಗಳಾಗಿದ್ದು ಆ ಪೈಕಿ 7 ಜನರು ನಮ್ಮೊಂದಿಗೆ ಈಗ ಇಲ್ಲ. ಉಳಿದಿರುವ 6 ಜನರ ಪೈಕಿ ಅತಿ ಹಿರಿಯರೆಂದರೆ ಅರಸಿಕೆರೆಯ ಶ್ರೀ ದುರ್ಗಪ್ಪಶೆಟ್ಟರು ಮತ್ತು ಶ್ರೀ ಶ್ರೀನಿವಾಸಮೂರ್ತಿಗಳು. ಇನ್ನೂ ಮೀಸೆಯೇ ಬರದಿರುವ ಆಗಿನ್ನೂ 18-19 ವರ್ಷದ ತರುಣರಾಗಿದ್ದ ಪಾರಸಮಲ್ ಮತ್ತು ಪಟ್ಟಾಭಿರಾಮ ಸಹ ಮೀಸಾದಲ್ಲಿ ಬಂಧಿಗಳಾಗಿದ್ದವರು. ಬಹುಷಃ ಪಾರಸಮಲ್ ಕರ್ನಾಟಕದ ಮೀಸಾ ಬಂದಿಗಳ ಪೈಕಿ ಅತಿ ಕಿರಿಯ ವ್ಯಕ್ತಿ ಅನ್ನುವುದು ವಿಶೇಷ. ಸುಮಾರು 300 ಜನರು ಭಾರತ ರಕ್ಷಣಾ ಕಾಯದೆ ಪ್ರಕಾರ ಬಂದಿಗಳಾಗಿದ್ದರು. ಕ್ರಿಮಿನಲ್ ಪ್ರೊಸೀಜರ್ ಕೋಡಿನ ವಿವಿಧ ಕಲಮುಗಳ ಪ್ರಕಾರ ಸಾವಿರಾರು ಜನರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಈ ಪುಸ್ತಕದಲ್ಲಿ ನನ್ನ ಅನುಭವಗಳನ್ನು ಇಲ್ಲಿ ಹೇಳಿಕೊಂಡಿರುವುದು ನಿಮಿತ್ತ ಮಾತ್ರ. ನನ್ನೊಡನೆ ಸಹಬಂದಿಗಳಾಗಿದ್ದ ನೂರಾರು ಮಿತ್ರರುಗಳು ಅನುಭವಿಸಿದ ಕಷ್ಟ-ನಷ್ಟಗಳು, ನೋವುಗಳ ಮುಂದೆ ನನ್ನದು ಏನೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ ಅವರುಗಳ ತ್ಯಾಗ-ಬಲಿದಾನಗಳೇ ನನ್ನಂತಹವರು ನಂಬಿದ ಮಾರ್ಗವನ್ನು ಬಿಡದಿರಲು ಪ್ರೇರಿಸಿದ್ದು ಮತ್ತು ಹತಾಶೆಗೆ ಒಳಗಾಗದಂತೆ ಕಾಯ್ದಿದ್ದು. ಅವರೆಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ತಂದೆ-ತಾಯಿ, ಅಜ್ಜಿ, ನನ್ನ ಬಂಧುಗಳು ಆ ಸಂದರ್ಭದಲ್ಲಿ ತೋರಿಸಿದ ಅಕ್ಕರೆ, ವಿಶ್ವಾಸಗಳನ್ನು ನಾನು ನೆನೆಯಲೇ ಬೇಕು. ನನ್ನೊಡನೆ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳೂ ಸಹ ಮಾತನಾಡಲೂ ಹೆದರುತ್ತಿದ್ದರು. ನನ್ನನ್ನು ಮಾತನಾಡಿಸಿದರೆ ಅವರಿಗೆ ಎಲ್ಲಿ ತೊಂದರೆಯಾಗುತ್ತೋ ಅನ್ನುವ ಭಯ ಅವರಿಗೆ. ಹಾಗಾಗಿ ಆಗ ನನಗೆ ಸ್ನೇಹಿತರಾಗಿದ್ದವರೆಂದರೆ ಗ್ರಂಥಾಲಯದ ಪುಸ್ತಕಗಳು ಮಾತ್ರ. ಆದರೆ ಇಬ್ಬರು ಮಹನೀಯರನ್ನು ನಾನು ನೆನೆಯಲೇಬೇಕು. ನನ್ನ ಮಾತುಗಳನ್ನು ಆಗ ಸಾವಧಾನವಾಗಿ ಕೇಳುತ್ತಿದ್ದವರೆಂದರೆ ಖಾದಿ ಭಂಡಾರದ ನರಸಿಂಹಮೂರ್ತಿಗಳು ಮತ್ತು ಸೈಂಟ್ ಜೋಸೆಫ್ ಸ್ಕೂಲ್ ಎದುರಿಗೆ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಜನಾರ್ಧನ ಅಯ್ಯಂಗಾರರು ಮಾತ್ರ. ನನ್ನ ಒಳಗೇ ಹೂತು ಹೋಗುತ್ತಿದ್ದ ಮಾತುಗಳಿಗೆ ಔಟ್ ಲೆಟ್ ಆಗಿದ್ದ  ಅವರುಗಳು ಈಗ ಇಲ್ಲ. ತುರ್ತು ಪರಿಸ್ಥಿತಿ ಜಾರಿಗೆ ಬಂದಾಗ ನಾನು ಆಗಿನ್ನೂ ಸರ್ಕಾರಿ ಕೆಲಸಕ್ಕೆ ಸೇರಿ 2 ವರ್ಷಗಳಾಗಿತ್ತಷ್ಟೆ. ಆರೆಸ್ಸೆಸ್ಸಿನ ಕಾರ್ಯಕರ್ತ ಎಂಬ ಕಾರಣಕ್ಕಾಗಿ ನನ್ನ ಮೇಲೆ 13 ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದ್ದರು. ಬೇರೆ ಬೇರೆ ಕೇಸುಗಳು ಸೇರಿ ಒಟ್ಟು 6  ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿದ್ದೆ. ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗ ಮಾಡಿದ್ದರು. ಆ ಸಂದರ್ಭದಲ್ಲಿ ಅಂದರೆ 37 ವರ್ಷಗಳ ಹಿಂದೆ ಸೇಡಂನಲ್ಲಿ ನನಗೆ ತಹಸೀಲ್ದಾರರಾಗಿದ್ದ ಶ್ರೀ ಬಿ.ವಿ.ಸ್ವಾಮಿಯವರು ಈಗ ಹಾಸನದಲ್ಲೇ ಇದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದ ಅವರು ನನಗೆ ನೈತಿಕ ಬೆಂಬಲ ನೀಡಿದ್ದವರು. ಅವರಿಗೂ ಕೃತಜ್ಞ.
     ಈ ಪುಸ್ತಕದ ಬಿಡುಗಡೆಗೆ ಮತ್ತು ಜೆಲ್ಲೆಯ ಹೋರಾಟಗಾರರನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಹರಿಹರಪುರ ಶ್ರೀಧರ್, ಪಾರಸಮಲ್, ಶಾಸ್ತ್ರಿ, ಅರಸಿಕೆರೆಯ ಸತ್ಯನಾರಾಯಣ, ಬೇಲೂರಿನ ರವಿ, ರಾಜು, ಹೊಳೆನರಸಿಪುರದ ಭಗವಾನ್, ಶಂಕರಾಚಾರಿ, ಅರಕಲಗೂಡಿನ ಹಿರಿಯಣ್ಣ, ಸಕಲೇಶಪುರದ ಸತ್ಯನಾರಾಯಣ ಗುಪ್ತ, ಹೀಗೆ ಹತ್ತು ಹಲವಾರು ಜನರು ಕೈಗೂಡಿಸಿದ್ದಾರೆ. ಮಿತ್ರ ಶ್ರೀಧರ್ ಪ್ರತಿ ಹಂತದಲ್ಲಿ ನನ್ನೊಡನೆ ಇದ್ದು ಅಮೂಲ್ಯ ಸಹಕಾರ ನೀಡಿದ್ದಾರೆ. ಹೆಸರು ಹೇಳಿದವರು ಮಾತ್ರ ಈ ಕೆಲಸ ಮಾಡಿದ್ದಾರೆ ಅಂದುಕೊಳ್ಳಬಾರದು. ಸಂಘದ ಎಲ್ಲ ಕಾರ್ಯಕರ್ತರೂ ತಮ್ಮ ಸಹಕಾರ ನೀಡಿದ್ದಾರೆ. ನಾನು ಎಲ್ಲರ ಹೆಸರನ್ನು ಹೇಳಿಲ್ಲ ಅಂತ ಯಾರೂ ತಪ್ಪು ತಿಳಿಯಬಾರದು. ಮಾನ್ಯ ರಾಮಣ್ಣನವರು ಸ್ವತಃ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಲ್ಲದೆ, ದೂರವಾಣಿ ಮೂಲಕ ಸಹ ಜಿಲ್ಲೆಯ ಹಲವಾರು ಕಾರ್ಯಕರ್ತರಿಗೆ ನೆನಪಿಸಿದ್ದು, ಅವರ ಕಾಳಜಿ, ಕಳಕಳಿ ಬಗ್ಗೆ ನಾನು ಮೂಕನಾಗಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಸ್ಥಳದ ಜೊತೆಗೆ ಧನದ ಸಹಕಾರವನ್ನೂ ನೀಡಿದ್ದಾರೆ. ಪ್ರಕಾಶ ಯಾಜಿ, ನಾಗಭೂಷಣ, ರಾಜು, ಶಾಮಸುಂದರ್, ರಾಮಸ್ವಾಮಿ, ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟ ಬಾಲಾಜಿ ಪ್ರಿಂಟರ್ಸ್ ಪಾಂಡುರಂಗ, ಮೈಕ್ ಕುಮಾರಸ್ವಾಮಿ, ಪತ್ರಕರ್ತ ಪ್ರಭಾಕರ್ ಮುಂತಾದವರ ಸಹಕಾರಕ್ಕೆ ನನ್ನ ವಂದನೆಗಳನ್ನು ಸಲ್ಲಿಸುವುದು ನನ್ನ ಕರ್ತವ್ಯ. ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ನೀಡಿದ ಎಲ್ಲ ಪತ್ರಕರ್ತರಿಗೂ ನನ್ನ ವಂದನೆಗಳು. ನನ್ನ ಸಹಜ ಮರೆವಿನಿಂದ ಯಾರನ್ನಾದರೂ ಹೆಸರಿಸದೆ ಬಿಟ್ಟಿದ್ದರೆ ಅದು ಉದ್ದೇಶ ಪೂರ್ವಕ ಅಲ್ಲ, ಯಾರೂ ತಪ್ಪು ತಿಳಿಯದೆ ದೊಡ್ಡ ಮನಸ್ಸು ಮಾಡಬೇಕು. ಪ್ರತ್ಯಕ್ಞ, ಪರೋಕ್ಷ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ನನ್ನ ಕೃತಜ್ಞತೆಗಳು.
     ಈ ಜಿಲ್ಲೆಯ ಎಲ್ಲಾ ಹೋರಾಟಗಾರರು ತಮ್ಮ ತಮ್ಮ ಅನುಭವಗಳನ್ನು ದಾಖಲಿಸಿ, ಅವುಗಳೆಲ್ಲವನ್ನೂ ಸಂಗ್ರಹಿಸಿ ಜಿಲ್ಲೆಯ ಹೋರಾಟದ ಸಮಗ್ರ ಚಿತ್ರಣ ಹೊರತರಬೇಕು, ಆ ಮೂಲಕ ಅದು ಇತಿಹಾಸದ ಕಾಲಗರ್ಭದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಬಯಕೆ. ಈಗಾಗಲೇ ಹೆಚ್ಚಿನವರು ಸ್ವರ್ಗಸ್ಥರಾಗಿದ್ದಾರೆ. ಉಳಿದಿರುವವರೂ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಆದ್ದರಿಂದ ಈ ಕೆಲಸ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಗಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಆಸಕ್ತರು ಕೈಜೋಡಿಸಿದರೆ ಇದು ಕಷ್ಟವೇನಲ್ಲ. ಸಂಘದ ಜಿಲ್ಲೆಯ ಕಾರ್ಯಕರ್ತರು ಈ ಬಗ್ಗೆ ಗಮನಿಸುವುದು ಸಂಘದ ಕಾರ್ಯದೃಷ್ಟಿಯಿಂದ ಅಪೇಕ್ಷಣೀಯ. ಈಗಿನವರಿಗೆ ಇದು ಖಂಡಿತಾ ಪ್ರೇರಣೆ ನೀಡುತ್ತದೆ. ಈ ಕಾರ್ಯಕ್ಕೆ ನನ್ನ ಯಾವುದೇ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ನನ್ನ ಈ ಪುಸ್ತಕದ ಬಿಡುಗಡೆ ಇದಕ್ಕೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ. 
-ಕ.ವೆಂ.ನಾಗರಾಜ್.

ಸೋಮವಾರ, ಡಿಸೆಂಬರ್ 17, 2012

ಜ್ಞಾನೋದಯ


       ಅವನು ಸ್ಕೂಟರನ್ನು ಪಕ್ಕದ ರಸ್ತೆಗೆ ತಿರುಗಿಸುವ ಮುನ್ನ ಆಚೆ, ಈಚೆ ನೋಡಿ, ತೊಂದರೆಯಿಲ್ಲ ಹೋಗಬಹುದೆಂದು ಅಂದುಕೊಂಡು ತಿರುಗಿಸುತ್ತಿರುವಾಗ ಭರ್ರನೆ ಅತಿವೇಗದಿಂದ ಅವನ ಪಕ್ಕದಲ್ಲೇ ಬೈಕು ಓಡಿಸಿಕೊಂಡು ಹೋದ ಯುವಕನೊಬ್ಬ 'ಏಯ್, ಬುಡ್ಡಾ' ಎನ್ನುತ್ತಾ ಹೋದವನು ಕ್ಷಣಾರ್ಧದಲ್ಲಿ ಕಣ್ಣಿಗೆ ಕಾಣದಂತೆ ಭರ್ರನೆ ಮುಂದೆ ಹೋಗಿಬಿಟ್ಟಿದ್ದ. ಆ ಬುಡ್ಡ ಯಥಾಪ್ರಕಾರ ಹಿಂದೆ, ಮುಂದೆ, ಅಕ್ಕ, ಪಕ್ಕ ನೋಡಿಕೊಂಡು ೧೫-೨೦ ಕಿ.ಮೀ. ವೇಗದಲ್ಲೇ ಸಾಗಿದರೂ, ಯುವಕನ 'ಏಯ್, ಬುಡ್ಡಾ' ಎಂಬ ಮಾತು ಅವನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಕೊನೆಗೆ ಬುಡ್ಡನಿಗೂ ಬುದ್ಧನಂತೆ ಜ್ಞಾನೋದಯವಾಯಿತು. ಆ ಹುಡುಗ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, 'ತನಗೆ ವಯಸ್ಸಾಗಿದೆ, ಅದಕ್ಕೇ ಬುಡ್ಡ ಅಂದಿದ್ದಾನೆ. ಹುಷಾರಾಗಿ ಹೋಗಬೇಕಾದ್ದು ನಿನ್ನ ಕರ್ಮ, ಇಲ್ಲದಿದ್ದರೆ ಜನನಿಬಿಡ ರಸ್ತೆಗಳಲ್ಲೂ, ವಾಹನಗಳ ದಟ್ಟನೆಯಲ್ಲೂ ಮುಂದಿನ ಚಕ್ರವನ್ನು ಮೇಲೆತ್ತಿಕೊಂಡು ಸೈಲೆನ್ಸರ್ ತೆಗೆದು ಹಾಕಿದ್ದರಿಂದ ಕರ್ಕಶ ಶಬ್ದ ಮಾಡುವ ಬೈಕಿನಲ್ಲಿ ಅತಿವೇಗದಿಂದ ಸಾಗುವ ನನ್ನಂತಹವರ ಅಡಿಗೆ ಸಿಕ್ಕಿ ಪೇಪರಿನಲ್ಲಿ ಬರುವ ಸುದ್ದಿಯಾಗುತ್ತೀಯ' ಎಂಬ ಎಚ್ಚರಿಕೆ 'ಏಯ್, ಬುಡ್ಡಾ' ಎಂಬ ಮಾತಿನಲ್ಲಿದೆ ಎಂದು ಅವನಿಗೆ ಅರ್ಥವಾಯಿತು. 
-ಕ.ವೆಂ.ನಾಗರಾಜ್.

ಶನಿವಾರ, ಡಿಸೆಂಬರ್ 15, 2012

ಸ್ವಭಾವದ ಗುಟ್ಟು ಬಿಟ್ಟುಕೊಡುವ ಗಲ್ಲ

                                                                       ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಧೀಮಂತ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943, ನನ್ನ ಮುತ್ತಜ್ಜನ ತಮ್ಮ) ಅಸಾಮಾನ್ಯ ಚಿತ್ರಕಾರರಾಗಿಯೂ ಹೆಸರು ಮಾಡಿದವರು. ತಮ್ಮ Priniciples of Free Hand Drawing’ ಪುಸ್ತಕದಲ್ಲಿ ಗಲ್ಲದ ಆಕಾರ ಮನುಷ್ಯನ ಸ್ವಭಾವದ ದ್ಯೋತಕವೆಂದು ತಿಳಿಸಿದ್ದು ಅದನ್ನು ವಿವರಿಸಿರುವುದು ಹೀಗೆ:
1.ಬುದ್ಧಿವಂತ; ಸ್ವಂತದ ಕೆಲಸಕ್ಕೆ ಇತರರ ಕೆಲಸಕ್ಕಿಂತ ಮೊದಲ ಆದ್ಯತೆ ಕೊಡುವವನು; ಒಳ್ಳೆಯ ಸ್ನೇಹಿತನಲ್ಲ.
2. ಧೃಢ ಮತ್ತು ಗಡಸು; ಹೋರಾಡಲೂ ಹಿಂಜರಿಯದವರು.
3. ವಿದ್ಯಾವಂತ ಮತ್ತು ರಸಿಕ; ಚಂಚಲ ಸ್ವಭಾವದವನು.
4. ಹೆಂಗಸರಿಗೆ ಹೊಂದದವನು.
5. ವಿಧೇಯ; ದುಂದು ವೆಚ್ಚ ಮಾಡುವವನು; ಭಾವುಕ ಮತ್ತು ಪ್ರಾಮಾಣಿಕ; ನಂಬಿಕಸ್ಥ.
6. ವಿಧೇಯ; ಅತಿಯಾಗಿ ದುಂದು ವೆಚ್ಚ ಮಾಡುವವನು.
7. ಶಾಂತ ಮತ್ತು ಪ್ರಾಮಾಣಿಕ.
8. ಸದಾ ಚಿಂತಾಕ್ರಾಂತ.
9. ಚಂಚಲ ಮತ್ತು ಒರಟ.
10. ಸಭ್ಯ ಮತ್ತು ಪ್ರಾಮಾಣಿಕ; ಸದಾ ತಪ್ಪು ಕಾಣುವವನು.
11. ಸದಾ ಶಾಂತತೆ ಮತ್ತು ರಸಿಕತನ ಬಯಸುವವನು.
12. 10ರಲ್ಲಿ ತಿಳಿಸಿದಂತೆ.
13. ಭೌತಿಕವಾದಿ.
14. ಶಿಸ್ತುಗಾರ; ಇತರರಲ್ಲಿ ತಪ್ಪು ಕಾಣುವವನು.
15. ಕಪಟಿ.
16. ಕರುಣಾಳು ಮತ್ತು ಸಭ್ಯ ನಡವಳಿಕೆಯವನು.
17. ಅಸಭ್ಯ.
18. ಅತಿ ಸೂಕ್ಷ್ಮ ಮನಸ್ಸಿನವನು; ನ್ಯಾಯ ಪ್ರತಿಪಾದಕ, ಸ್ವಾಭಿಮಾನಿ
     ಅಪರಿಚಿತರಾದರೂ ಕೆಲವರನ್ನು ಕಂಡೊಡನೆ ಆತ್ಮೀಯ ಭಾವ ಅಥವ ಅಸಹನೆಯ ಭಾವ ಉಂಟಾಗಲು ಈ ಗಲ್ಲವೂ ಒಂದು ಕಾರಣವಿರಬಹುದೇ?     

-ಕ.ವೆಂ.ನಾಗರಾಜ್.

ಗುರುವಾರ, ಡಿಸೆಂಬರ್ 13, 2012

ಕೆಳದಿ ಮೂಲ ಸಂಸ್ಥಾನದ ಮನ್ನೆಯ ಚೌಡಪ್ಪನಾಯಕ


     17ನೆಯ ಶತಮಾನದ ಕವಿಲಿಂಗಣ್ಣ ಅನುಪಮ ರೀತಿಯಲ್ಲಿ ಮಾಡಿರುವ ಜಂಬೂದ್ವೀಪವನ್ನು ಸುತ್ತುವರೆದಿದ್ದ ಸಮುದ್ರದ ರಮ್ಯ ವರ್ಣನೆಯನ್ನು ಹಾಗೂ ಕವಿ ಕಂಡಿದ್ದ ಕರ್ಣಾಟಕ ದೇಶದ ವರ್ಣನೆಯನ್ನು ಹಿಂದಿನ ಲೇಖನಗಳಲ್ಲಿ ಮಾಡಿಕೊಟ್ಟಿರುವೆ. ಸಕಲ ಸಂಪದ್ಭರಿತವಾದ ಆ ಕರ್ಣಾಟಕ ದೇಶದ ಮುಖಕಮಲವಾಗಿ ಸ್ವರ್ಗಸಮಾನವಾಗಿ ಮೆರೆಯುತ್ತಿದ್ದ ಪಟ್ಟಣವೇ ಕೆಳದಿ. ಪ್ರಸ್ತುತ ಕೆಳದಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಸಾಗರದಿಂದ ೮ ಕಿ.ಮೀ. ದೂರದಲ್ಲಿರುವ ಒಂದು ಗ್ರಾಮ ಪಂಚಾಯಿತಿ ಕೇಂದ್ರವಾಗಿದೆ. 14ನೆಯ ಶತಮಾನದ ಕಾಲದ ಕಥೆಯಿದು. ಕೆಳದಿಯ ಪಕ್ಕದಲ್ಲಿದ್ದ ಹಳ್ಳಿಬಯಲು ಎಂಬ ಗ್ರಾಮದಲ್ಲಿ  ಬಸವಪ್ಪ - ಬಸವಮಾಂಬೆ ಎಂಬ ಶಿವಭಕ್ತ ದಂಪತಿ ವಾಸವಿದ್ದರು. ಬೇಸಾಯ ಮಾಡಿ ಜೀವಿಸಿದ್ದ ಅವರು ದೈವಭಕ್ತಿಯುಳ್ಳವರು, ಉತ್ತಮ ನಡೆ ನುಡಿಯುಳ್ಳವರಾಗಿ ಜನಾನುರಾಗಿಯಾಗಿದ್ದರು. ಸುಧಾಕರನ ಸದ್ರೂಪಿಯೆನಿಸಿದ ಚೌಡಪ್ಪ ಮತ್ತು 'ಇಂದುವಿನೊಡನುಜ್ವಲಿಸುವ ಮಂದಾರಂ ಜನಿಸಿದಂತೆ' ಭದ್ರಪ್ಪ ಎಂಬ ಇಬ್ಬರು ಮಕ್ಕಳನ್ನು ಪಡೆದ ಆ ದಂಪತಿ ಸುಖ-ಸಂತೋಷಾತಿಶಯದಿಂದ ಜೀವನ ನಡೆಸಿದ್ದರು. ಆ ಮಕ್ಕಳೂ ಸಹ ಉತ್ತಮ ರೀತಿಯಲ್ಲಿ ಬೆಳೆದು ವ್ಯವಸಾಯ, ವ್ಯಾಪಾರಗಳಲ್ಲಿ ತಂದೆ-ತಾಯಿಯರಿಗೆ ಸಹಕಾರಿಗಳಾಗಿ ಪ್ರವರ್ಧಮಾನಕ್ಕೆ ಬಂದದ್ದಲ್ಲದೆ, ಭುಜಬಲ ಪರಾಕ್ರಮಿಗಳಾಗಿಯೂ ಹೆಸರು ಗಳಿಸಿದರು. ಈ ಚೌಡಪ್ಪ ಮುಂದೆ ಕರ್ನಾಟಕದ ಹೆಮ್ಮೆಯ ಸಂಸ್ಥಾನವೊಂದರ ಸ್ಥಾಪಕನಾಗುವನೆಂದು ಆಗ ಯಾರೂ ಎಣಿಸಿರಲಿಲ್ಲ. 
     ಸಾಮಾನ್ಯ ಕುಟುಂಬದ ಕುಡಿಯೊಂದು ಕೆಳದಿ ಸಿಂಹಾಸನಾಧೀಶನಾದುದೇ ಒಂದು ರೋಚಕ ಕಥೆ. ವಿವಾಹ ಯೋಗ್ಯ ವಯಸ್ಸಿಗೆ ಬಂದಾಗ ಚೌಡಪ್ಪ, ಭದ್ರಪ್ಪರಿಗೆ ಬಸವಪ್ಪ-ಬಸವಮಾಂಬೆ ದಂಪತಿ ಉತ್ತಮ ಕುಲದ ಕನ್ಯೆಯರೊಂದಿಗೆ ಮದುವೆ ಮಾಡಿದರು. ಆ ಕಾಲಕ್ಕೆ ಅಗತ್ಯವಾಗಿದ್ದ ವಿದ್ಯಾಭ್ಯಾಸ, ಶಸ್ತ್ರಾಭ್ಯಾಸಗಳಲ್ಲೂ ಪರಿಣಿತರೆನಿಸಿದ, ಶಕ್ತಿಯಲ್ಲಿ, ಯುಕ್ತಿಯಲ್ಲಿ ಅಗ್ರಜರೆನಿಸಿದ ಚೌಡಪ್ಪ-ಭದ್ರಪ್ಪರು ಸಹಜವಾಗಿ ಗ್ರಾಮದಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದ್ದರು. ದಿನಗಳು ಸಾಗುತ್ತಿದ್ದವು. ಒಂದು ದಿನ  ಒಂದು ವಿಚಿತ್ರ ಸಂಗತಿ ಜರುಗಿತು. "ಮಗೂ, ಚವುಡಾ" ಎಂಬ ಆಪ್ಯಾಯಮಾನ ಧ್ವನಿ ಬಂದೆಡೆಗೆ ಚೌಡಪ್ಪ ಹಿಂತಿರುಗಿ ನೋಡಿದರೆ ಅಲ್ಲಿ ವೃದ್ಧನಾದರೂ ಧೃಢಕಾಯನಾದ, ತೇಜೋವಂತನಾದ ಜಂಗಮ ಮುಗುಳ್ನಗುತ್ತಾ ಅಲ್ಲಿ ನಿಂತಿದ್ದ. ಅವನ ಹೊಳಪು ಕಂಗಳು, ಸೆಳೆಯುವ ವ್ಯಕ್ತಿತ್ವ ಕಂಡು ಬೆರಗಾಗಿ ಮೂಕನಾಗಿ ನಿಂತಿದ್ದ ಚೌಡಪ್ಪನನ್ನು ಜಂಗಮನ ಪುನರುಚ್ಛರಿತ "ಮಗೂ, ಚವುಡಾ" ಎಂಬ ವಾಣಿ ಎಚ್ಚರಗೊಳಿಸಿತು. ಜಂಗಮನಿಗೆ ನಮಸ್ಕರಿಸಿದ ಚೌಡಪ್ಪ ಆತನ ಮುಂದಿನ ನುಡಿಗಳಿಗಾಗಿ ಕಾತರಿಸಿದ. ಕಂಚಿನ ಕಂಠದಿಂದ ಜಂಗಮ ನುಡಿದ, "ಮಗೂ, ಕೆಳದಿಯ ಸೀಗೆವಳ್ಳಿಯ ಸೀಗೆಮೆಳೆಯ ಮಧ್ಯದಲ್ಲಿ ಶ್ರೀ ರಾಮೇಶ್ವರ ನೆಲೆಸಿದ್ದಾನೆ. ಲಿಂಗರೂಪಿಯಾದ ಆ ಮೂರ್ತಿ ಹುತ್ತದಿಂದ ಮುಚ್ಚಿಹೋಗಿದೆ. ನಿನ್ನ ಮನೆಯ ಕಪಿಲೆ ಬಣ್ಣದ ಹಸು ತನ್ನ ಕರುವಿನೊಂದಿಗೆ ದಿನಾ ಅಲ್ಲಿಗೆ ಹೋಗಿ ಹಾಲು ಸುರಿಸಿ ಬರುತ್ತಿದೆ. ಅದೇ ನಿನಗೆ ಲಿಂಗವಿರುವ ಸ್ಥಳ ತೋರಿಸುತ್ತದೆ. ರಾಮೇಶ್ವರನಿಗೆ ನೀನು ಸದ್ಭಕ್ತಿಯಿಂದ ಪೂಜೆ ಸಲ್ಲಿಸಿದ್ದೇ ಆದಲ್ಲಿ ನೀನು ಭೂವಲ್ಲಭನಾಗುವೆ." ಮೂಕ ವಿಸ್ಮಿತ ಚೌಡಪ್ಪ ಜಂಗಮನಿಗೆ ಮತ್ತೆ ದೀರ್ಘದಂಡ ನಮಸ್ಕಾರ ಮಾಡಿ ಎದ್ದು ನೋಡಿದರೆ ಜಂಗಮ ಅಲ್ಲಿರಲಿಲ್ಲ. ಧಿಗ್ಗನೆ ಕಣ್ಣು ಬಿಟ್ಟ ಚೌಡಪ್ಪನಿಗೆ ಅದು ಕನಸು ಎಂದು ಅರಿವಾಗಲು ಸ್ವಲ್ಪ ಸಮಯವೇ ಆಯಿತು. ಬೆಳಗಿನ ಜಾವದ ಕನಸು ನನಸಾಗುತ್ತದೆ ಎಂದು ಕೇಳಿದ್ದ ಚೌಡಪ್ಪನಿಗೆ ಮತ್ತೆ ನಿದ್ರೆ ಬರಲಿಲ್ಲ. ಕನಸಿನ ವಿಚಾರವನ್ನು ತಾಯಿಗೆ ಹೇಳುವವರೆಗೂ ಅವನಿಗೆ ಸಮಾಧಾನವಿರಲಿಲ್ಲ. ಎಲ್ಲವನ್ನೂ ಕೇಳಿಸಿಕೊಂಡ ಬಸವಾಂಬಿಕೆ ಆನಂದತುಂದಿಲಳಾಗಿ, "ಚೌಡಾ, ನಿನ್ನ ಕನಸಿನಲ್ಲಿ ಬಂದವನು ಸಾಕ್ಷಾತ್ ಪರಶಿವನೇ ಸರಿ. ಶಿವ ಹೇಳಿದಂತೆ ಶ್ರೀ ರಾಮೇಶ್ವರನಿಗೆ ನಡೆದುಕೋ. ನಿನಗೆ ಖಂಡಿತಾ ಶುಭವಾಗುವುದು. ಇದರಲ್ಲಿ ಅನುಮಾನವೇ ಇಲ್ಲ" ಎಂದಳು. 
     ಮರುದಿನವೇ ಚೌಡಪ್ಪ ಕಪಿಲೆ ಬಣ್ಣದ ಹಸುವನ್ನು ಗಮನಿಸಲು ಆಳನ್ನಿಟ್ಟು ನೋಡಲಾಗಿ ಅದು ಹುತ್ತದ ಬಳಿಗೆ ಹೋಗಿ ಹಾಲು ಸುರಿಸಿ ಬಂದಿದ್ದು ನಿಜವೆಂದು ತಿಳಿದು ಆಶ್ಚರ್ಯಚಕಿತನಾದ. ಜಂಗಮ ಕನಸಿನಲ್ಲಿ ಹೇಳಿದಂತೆ ಹುತ್ತವನ್ನು ಅಗೆದು ಮಣ್ಣು ಸರಿಸಿ ನೋಡಿದರೆ ಅಲ್ಲಿ ಮಂಗಳಕರವಾಗಿ ಶೋಭಿಸುತ್ತಿದ್ದ ಲಿಂಗವನ್ನು ಕಂಡು ಭಯಭಕ್ತಿಂದ ನಮಿಸಿದರು. ತಡ ಮಾಡದೆ ಸುತ್ತ ಮುತ್ತಲಿನ ಜಾಗವನ್ನು ಹಬ್ಬಿದ್ದ ಪೊದೆ, ಬಳ್ಳಿ, ಮುಳ್ಳುಕಂಟಿಗಳಿಂದ ಮುಕ್ತಗೊಳಿಸಿ ಸಮತಟ್ಟುಗೊಳಿಸಿ, ಅಲ್ಲಿ ಒಂದು ಹುಲ್ಲಿನ ಗುಡಿಸಲನ್ನು ನಿರ್ಮಿಸಿ ಆ ಮೂರ್ತಿಗೆ ಪ್ರತಿ ದಿನ ಪೂಜೆ-ಪುನಸ್ಕಾರಗಳು ನಡೆಯುವಂತೆ ನೋಡಿಕೊಂಡದ್ದಲ್ಲದೆ ಚೌಡಪ್ಪ ತಾನೂ ಸಹ ಪ್ರತೀದಿನ ಹಳ್ಳಿಬಯಲಿನಿಂದ ಬಂದು ಲಿಂಗವನ್ನು ಪೂಜಿಸುವ ಕಟ್ಟಳೆ ರೂಢಿಸಿಕೊಂಡನು. [ಈಗಿನ ಕೆಳದಿ ರಾಮೇಶ್ವರ ದೇವಾಲಯದ ಉಗಮ ಈ ರೀತಿ ಆಗಿದ್ದೆಂದು ಪ್ರತೀತಿ.]
                                   ಕೆಳದಿ ರಾಮೇಶ್ವರ ದೇವಾಲಯ              
     ಹಲವು ದಿನಗಳ ನಂತರದಲ್ಲಿ ಎಂದಿನಂತೆ ಚೌಡಪ್ಪ ನಿತ್ಯಕರ್ಮಗಳು, ಪೂಜೆ ಮುಗಿಸಿಕೊಂಡು ತನ್ನ ಭತ್ತದ ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆತನ ದಾರಿಗಡ್ಡ ಬಂದ ಓತಿಕ್ಯಾತವೊಂದು ಹಲವಾರು ಸಲ ತಲೆಯನ್ನು  ಮೇಲಕ್ಕೆ ಕೆಳಕ್ಕೆ ಆಡಿಸತೊಡಗಿದ್ದನ್ನು ಕಂಡು ಅದನ್ನು ಓಡಿಸಿದರೂ ಅದು ಹತ್ತಿರದ ಮಾವಿನಮರವೇರಿ ಅದೇ ರೀತಿ ತಲೆಯಾಡಿಸತೊಡಗಿತ್ತು. ಆಶ್ಚರ್ಯವೆನಿಸಿದರೂ ಅದಕ್ಕೆ ಮಹತ್ವ ಕೊಡದೆ ಎಂದಿನ ಕೆಲಸ ಕಾರ್ಯಗಳನ್ನು ಮಾಡಿ ಆಯಾಸವಾದಾಗ ಮಾವಿನಮರದ ತಂಪಿನಲ್ಲಿ ಒರಗಿಕೊಂಡಾಗ ಆಗಿದ್ದ ಆಯಾಸ, ಬೀಸುತ್ತಿದ್ದ ತಂಗಾಳಿ ಸೇರಿಕೊಂಡು ಮೈಮರೆಯುವಂತಹ ನಿದ್ರೆ ಅವನನ್ನು ಆವರಿಸಿತು. ಮಗ ಬರಲು ತಡವಾದ್ದರಿಂದ ಕಳವಳಗೊಂಡ ತಾಯಿ ಬಸವಾಂಬೆ ಅವನನ್ನು ಹುಡುಕಿಕೊಂಡು ಹೊಲಕ್ಕೆ ಬಂದಾಗ ಕಂಡ ದೃಷ್ಯದಿಂದ ಅವಳ ಎದೆ ಝಲ್ಲೆನಿಸಿತ್ತು. ಮಗ ಗಾಢನಿದ್ರೆಯಲ್ಲಿ ಮಲಗಿದ್ದರೆ ಭಯಂಕರ ಸರ್ಪವೊಂದು ಆತನ ತಲೆಯ ಮೇಲೆ ಹೆಡೆಯಾಡಿಸುತ್ತಿತ್ತು. ಮಗನನ್ನು ಎಬ್ಬಿಸಲು ಹೋದರೆ ಅವನನ್ನು ಸರ್ಪ ಎಲ್ಲಿ ಕಚ್ಚೀತೋ ಎಂಬ ಭಯದೊಂದಿಗೆ ಹಾಗೂ ಅದನ್ನು ಓಡಿಸಲೂ ಬೇರೆ ಉಪಾಯಗಾಣದೆ ದಿಕ್ಕು ತೋಚದೆ ಎವೆಯಿಕ್ಕದೆ ಸರ್ಪವನ್ನೇ ನೋಡುತ್ತಾ ಅವಾಕ್ಕಾಗಿ ನಿಂತುಬಿಟ್ಟಿದ್ದಳು. ಸ್ವಲ್ಪ ಸಮಯದ ನಂತರ ಆ ಹಾವು ಮೆಲ್ಲನೇ ಸರಿದು ಹೋದದ್ದೇ ತಡ ಬಸವಾಂಬೆ ಮಗನನ್ನು ಎಬ್ಬಿಸಿ ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾ, "ನಮ್ಮ ಪುಣ್ಯ ಹಾಗೂ ದೇವರ ದಯೆಂದ ನೀನು ಬದುಕಿದೆ" ಎಂದು ಹೇಳಿ ನಡೆದ ಸಂಗತಿ ತಿಳಿಸಿ ಅಲ್ಲಿಯೇ ಸಮೀಪದಲ್ಲಿ ಮೆಲ್ಲನೆ ಹರಿದುಹೋಗುತ್ತಿದ್ದ ಹಾವನ್ನು ಬೆರಳು ಮಾಡಿ ತೋರಿಸಿದಳು. ಆ ಸರ್ಪವಾದರೋ ಗದ್ದೆಯೊಳಗೆ ಇಳಿದು ಸರಿದಾಡಿ ಇವರನ್ನೇ ತಿರುತಿರುಗಿ ನೋಡುತ್ತಾ ಬರುವಂತೆ ಸನ್ನೆ ಮಾಡಿ ಕರೆವಂತೆ ಹೋಗುತ್ತಿತ್ತು. ಇವರೂ ಮೆಲ್ಲನೆ ಹಿಂಬಾಲಿಸಲಾಗಿ ಒಂದು ಸ್ಥಳದಲ್ಲಿ ನಿಂತ ಆ ಸರ್ಪ ಆ ಸ್ಥಳವನ್ನು ಎರಡು ಮೂರು ಸಲ ತಲೆಯಿಂದ ಒತ್ತಿ ಒತ್ತಿ ತೋರಿಸಿತು. ನಂತರ ನೋಡ ನೋಡುತ್ತಿದ್ದಂತೆಯೇ ಆ ಸರ್ಪ ಎಲ್ಲಿಗೆ ಹೋಯಿತು ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಸರ್ಪ ಮುಟ್ಟಿ ತೋರಿಸಿದ್ದ ಸ್ಥಳವನ್ನು ಗುರುತಿಟ್ಟು ತಾ ಮಗ ಇಬ್ಬರೂ ಅದೇ ಘಟನೆಯ ಬಗ್ಗೆ ಚರ್ಚಿಸುತ್ತಾ ಮನೆಗೆ ಹಿಂತಿರುಗಿದರು. 
     ತಾವು ಕಂಡಿದ್ದ ಸರ್ಪ ಕಾರಣಸರ್ಪವೇ ಆಗಿದ್ದಿರಬೇಕೆಂದು ಭಾವಿಸಿದ ಅವರು ಆ ಸ್ಥಳವನ್ನು ಪರೀಕ್ಷಿಸಲು ನಿರ್ಧರಿಸಿದರು. ಸ್ನಾನ, ಪೂಜಾದಿಗಳನ್ನು ಮುಗಿಸಿಕೊಂಡು ಕೆಲವು ನಂಬಿಕಸ್ತ ಬಂಟರೊಂದಿಗೆ ಹೊಲಕ್ಕೆ ಹೋಗಿ ಗುರುತಿಸಿಟ್ಟಿದ್ದ ಸ್ಥಳದಲ್ಲಿ ಅಗೆದು ನೋಡಿದರೆ ಅವರ ಆಶ್ಚರ್ಯಕ್ಕೆ ಪಾರವೇ ಇಲ್ಲದಂತೆ ಒಂದು ದೊಡ್ಡ ನಿಕ್ಷೇಪವೇ ಇರುವ ಕೊಪ್ಪರಿಗೆಯೂ ನಾಗರಮರಿಯಂತೆ ಬಳುಕುವ ಒಂದು ಕತ್ತಿಯೂ ಅವರಿಗೆ ದೊರಕಿತು. ಆ ನಿಧಿಯನ್ನು ಅಡಗಿಸಿ ಇಟ್ಟುಕೊಂಡ ಅವರು ಆ ಸ್ಥಳದಲ್ಲಿ ಒಂದು ತಕ್ಕದಾದ ಮನೆಯನ್ನು ಕಟ್ಟಿಸಿಕೊಂಡು ಅಲ್ಲಿಯೇ ನೆಲೆ ನಿಂತರು. 
     ದಿನಗಳು ಕಳೆದಂತೆ ಒಂದು ಶುಭಘಳಿಗೆಯಲ್ಲಿ ಚೌಡಪ್ಪ ತಂದೆಯೆನಿಸಿದ. ಜಾತಕ ಫಲ ನೋಡಿಸಲಾಗಿ ರಾಜಯೋಗವಿರುವ, ಉಜ್ವಲ ಭವಿಷ್ಯದ ಪುತ್ರನೆಂದು ತಿಳಿದು ಸಂತೋಸಿದ ಅವರು ಪೂಜೆ, ಪುನಸ್ಕಾರಗಳು, ದಾನ-ಧರ್ಮಾದಿಗಳನ್ನು ಸಂತೋಷದಿಂದ ಮಾಡಿದರು. ಮಗನಿಗೆ ಸದಾಶಿವ ಎಂದು ನಾಮಕರಣ ಮಾಡಿ ಹರ್ಷಿಸಿದರು. ಸದಾಶಿವ ಹಿರಿಯರ ಒಲುಮೆ-ಬಲುಮೆಗಳಿಂದ ಬೆಳೆದು ಪ್ರಾಪ್ತ ವಯಸ್ಕನಾದಾಗ ಸತ್ಕುಲಜಾತೆಯರಾದ ವೀರಮಾಂಬೆ, ಭದ್ರಮಾಂಬೆ ಎಂಬ ಇಬ್ಬರು ಕನ್ಯಾಮಣಿಗಳನ್ನು ತಂದುಕೊಂಡು ಸದಾಶಿವನಿಗೆ ವಿವಾಹವನ್ನು ವೈಭವದಿಂದ ನೆರವೇರಿಸಿದರು. ಶ್ರೀ ರಾಮೇಶ್ವರ ದೇವಸ್ಥಾನವನ್ನು ಮರಮುಟ್ಟುಗಳಿಂದ ಅಲಂಕೃತಗೊಳಿಸಿ ಆನಂದಪಟ್ಟರು. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಚೌಡಪ್ಪ ಆಳು-ಕಾಳುಗಳು, ಸೈನಿಕರುಗಳು, ಅಂಗರಕ್ಷಕರು, ಪರಿಜನರನ್ನು ನಿಯಮಿಸಿಕೊಂಡದ್ದಲ್ಲದೆ ಅಕ್ಕ ಪಕ್ಕದ ಗ್ರಾಮಗಳನ್ರ್ನ ತನ್ನ ಅಧೀನಕ್ಕೊಳಪಡಿಸಿಕೊಂಡು ಭುಜಬಲ ಪರಾಕ್ರಮಿಯೆನಿಸಿದನು. ವೀರಶೈವ ಮತಾನುಯಾಯಾಗಿ ಸಚ್ಚಾರಿತ್ರ್ಯವಂತನಾಗಿ ದಾನಧರ್ಮಗಳನ್ನು ಮಾಡುತ್ತಾ ಹೆಸರುಗಳಿಸಿದನು,
     ಚೌಡಪ್ಪನ ಕೀರ್ತಿಯನ್ನು ಸಹಿಸದವರು ಅವನ ಕುರಿತು ಹೇಳಿದ ಚಾಡಿಮಾತುಗಳನ್ನು  'ವಿದ್ಯಾನಗರೀಕಾಂತಾಚ್ಯುತರಾಯಂ ಗುಣವಂತನಸೂಯಕರ ಮುಖದಿ ಕೇಳ್ದೀಕಥೆಯಂ' [ಕೆ.ನೃ.ವಿ.೧. ೫೪] ಮನದಲ್ಲೇ ಆಲೋಚಿಸುತ್ತಾನೆ. ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿ ಸಂಸ್ಥಾನಕ್ಕೂ ನಂಟು ಪ್ರಾರಂಭವಾಗುವುದು ಈ ಹಂತದಿಂದಲೇ. ಬಲಿಷ್ಠ ಚೌಡಪ್ಪನ ನೆರವಿನಿಂದ ಶತ್ರುಗಳಾದ ತುರುಕರೂ ಮತ್ತು ಬೇಡರನ್ನು ಎದುರಿಸುವ ಕೆಲಸ ಮಾಡಬಹುದೆಂದೂ, ಚಾಡಿಮಾತುಗಳನ್ನು ಕೇಳಿ ವೃಥಾ ಅನುಮಾನಿಸದೆ ಜಾಣ್ಮೆಯಿಂದ, ಉಪಾಯದಿಂದ ವ್ಯವಹರಿಸುವುದು ಉಚಿತವೆಂದು  ಭಾವಿಸಿದ ಅವನು ಹಳ್ಳಿಬಯಲಿಗೆ ಕುದುರೆ, ರಥ, ನಿಯೋಗಿ ಜನರನ್ನು ಕಳುಹಿಸಿ ಉಚಿತವಾದ ಆದರಗಳೊಂದಿಗೆ ಚೌಡಪ್ಪನನ್ನು ಬರಮಾಡಿಕೊಳ್ಳುತ್ತಾನೆ. 'ಸ್ವಸ್ತಿ ಶ್ರೀ ಸಮಸ್ತ ಭುವನಾಶ್ರಯ ಪೃಥ್ವೀವಲ್ಲಭ ಶ್ರೀಮನ್ಮಹಾರಾಜಾಧಿರಾಜ ಪರಮೇಶ್ವರಭಕ್ತ ಪರಮ ಭಟ್ಟಾರಕ ಸತ್ಯಾಶ್ರಯ ಪದವಾಕ್ಯ ಪ್ರಮಾಣ ಪಾರಾವಾರಪಾರೀಣ ಶ್ರೀಮನ್ಮಹಾಮಂಡಲೇಶ್ವರ ಪ್ರತ್ಯರ್ಥಿ ರಾಜ ವಿಭಾಡ ಶ್ರೀ ವಿರೂಪಾಕ್ಷ ಪಾದಪದ್ಮಾರಾಧಕ ಶ್ರೀ ವೀರಪ್ರತಾಪ ದಕ್ಷಿಣಸಮುದ್ರಾದಿ ನರ್ಮದಾನದ್ಯಂತ ಭೂಮಂಡಲೈಕಚ್ಛತ್ರಾದಿಪ ಸಕಲವರ್ಣಾಶ್ರಮಾಚಾರಧರ್ಮ ಪ್ರತಿಪಾಲಕ ಶ್ರೀ ವಿದ್ಯಾನಗರರಾಜಧಾನೀ ರತ್ನ ಸಿಂಹಾಸನಾಧೀಶ್ವರನಪ್ಪ' ಕೃಷ್ಣರಾಯ [ಗಮನಿಸಿ, ಇವು ವಿಜಯನಗರದ ಅರಸರ ಬಿರುದುಬಾವಲಿಗಳು!] ಮನದೊಳಗಣ ಮಾತುಗಳನ್ನು ಆಡುವ ಮುನ್ನ ಉಭಯಕುಶಲೋಪರಿ ಮಾತುಗಳನ್ನಾಡುತ್ತಾನೆ. ಕೆಳದಿನೃಪ ವಿಜಯದಲ್ಲಿ ಚೌಡಪ್ಪನನ್ನು  ಅಚ್ಯತರಾಯ ಕರೆಕಳುಹಿಸುತ್ತಾನೆ ಎಂದಿದ್ದು, ಅದರಲ್ಲೇ ಮುಂದಿನ ವಚನ ಭಾಗದಲ್ಲಿ ಕೃಷ್ಣರಾಯ ಚೌಡಪ್ಪನೊಂದಿಗೆ ಮಾತನಾಡುತ್ತಾನೆ ಎಂದಿರುವುದು ಕಂಡುಬರುತ್ತದೆ. ಅಚ್ಯುತರಾಯ ಕೇವಲ ೩ ವರ್ಷಗಳು ರಾಜ್ಯವಾಳಿದ್ದು, ನಂತರದಲ್ಲಿ ವಿಜಯನಗರ ಸಾಮ್ರಾಜ್ಯ ವೈಭವದ ಅತ್ಯುನ್ನತ ಕಾಲ ಕಂಡ ಕೃಷ್ಣದೇವರಾಯನ ಆಳ್ವಿಕೆಯಿತ್ತು. ಬಹುಷಃ ಸಂದಿಗ್ಧ ಕಾಲದಲ್ಲಿ, ಅಂದರೆ ಕೃಷ್ಣದೇವರಾಯ ರಾಜ್ಯಭಾರ ವಹಿಸಿಕೊಂಡ ತರುಣದಲ್ಲೇ ಚೌಡಪ್ಪ ಮತ್ತು ವಿಜಯನಗರದ ಅರಸರ ಮುಖಾಮುಖಿಯಾಗಿರಬೇಕು. 
     ರಾಜನೀತಿಯಲ್ಲಿ ನಿಷ್ೞಾತನಾಗಿದ್ದ ಕೃಷ್ೞದೇವರಾಯ ಚಾತುರ್ಯದಿಂದ, ಕುಶಲತೆಯಿಂದ ಚೌಡಪ್ಪ ಮತ್ತು ಅವನ ಸೋದರ ಭದ್ರಪ್ಪರನ್ನು ವಿಚಾರಿಸುವ ಮಾತುಗಳ ನಡುವೆ ಕೇಳಿದ: 
     "ಚೌಡಪ್ಪ, ಭದ್ರಪ್ಪರೇ, ನೀವು ಒಂದು ಕಾಲದಲ್ಲಿ ಸಾಮಾನ್ಯರಂತೆ ಬಾಳಿದ್ದವರು. ನೀವು ಇಷ್ಟೊಂದು ಬಲಾಢ್ಯ ಮತ್ತು ಶ್ರೀಮಂತರಾದುದಕ್ಕೆ ನಿಮಗೆ ಸಿಕ್ಕಿದ ನಿಧಿ ಕಾರಣವೆಂದು ಕೇಳಿದ್ದೇವೆ. ನಿಜವೆ? ಹಾಗೆ ಸಿಕ್ಕಿದ ನಿಧಿಯನ್ನು ರಾಜಭಂಡಾರಕ್ಕೆ ಒಪ್ಪಿಸಬೇಕಿದ್ದುದು ನಿಮ್ಮ ಕರ್ತವ್ಯವಾಗಿತ್ತಲ್ಲವೇ? ಹಾಗೆ ಮಾಡದೆ ನಿಮಗೆ ಏನೂ ಗೊತ್ತಿಲ್ಲವೆಂಬಂತೆ ನಡೆದುಕೊಳ್ಳುತ್ತಿರುವುದು ಸರಿಯೇ? ಆ ನಿಧಿಯನ್ನು ಒಪ್ಪಿಸಿ ನಿಮ್ಮ ಕೀರ್ತಿ, ಗೌರವಗಳನ್ನು ಉಳಿಸಿಕೊಳ್ಳುವಿರಲ್ಲವೇ?" 
     ಈ ನೇರ ಪ್ರಶ್ನೆಯಿಂದ ವಿಚಲಿತರಾಗದ ಚೌಡಪ್ಪ, ಭದ್ರಪ್ಪರು ತಾವು ಕೃಷಿ ಮತ್ತು ವ್ಯಾಪಾರ ಮೂಲದಿಂದ ಜೀವನ ನಿರ್ವಹಿಸುತ್ತಿದ್ದುದು, ಜಂಗಮ ಸ್ವಪ್ನದಲ್ಲಿ ನುಡಿದ ಮಾತಿನಂತೆ ರಾಮೇಶ್ವರ ಲಿಂಗ ಗೋಚರಿಸಿದುದು, ದೇವರ ಕೃಪೆಯಿಂದ ದೊರೆತ ನಿಧಿಯ ವಿವರಗಳನ್ನು ವಿಷದವಾಗಿ ಹೇಳಿದ್ದನ್ನು ಕೇಳಿದಾಗ ಆಶ್ಚರ್ಯಚಕಿತನಾದ ವಿಜಯನಗರದ ದೊರೆ, ಅವರ ಬಲಾಢ್ಯ ಆಕಾರ, ನಿರ್ಭೀತಿಯ ನಡೆನುಡಿಗಳು, ಹಸನ್ಮುಖ, ತೇಜಸ್ಸುಗಳಿಂದ ಪ್ರಭಾವಿತನಾದ. ಚಾಡಿಕೋರರ ಮಾತುಗಳನ್ನು ಕೇಳಿ ಅವರಗಳನ್ನು  ನೋಯಿಸುವುದು ಸರಿಯಲ್ಲವೆಂದು ಮನಗಂಡ ಕೃಷ್ೞದೇವರಾಯ ಅವರಿಂದ ತಮಗೆ ತೊಂದರೆ ಕೊಡುತ್ತಿದ್ದ ತುರುಕರು ಮತ್ತು ಬೇಡರ ಉಪಟಳವನ್ನು ಹಾಗೂ ಕಿರಿಕಿರಿ ಮಾಡುತ್ತಿದ್ದ ತುಂಡು ಪಾಳೆಯಗಾರರನ್ನು ನಿಗ್ರಹಿಸುವ ಕೆಲಸ ಮಾಡಿಸಬಹುದೆಂದು ಮನದಲ್ಲೇ ತೀರ್ಮಾನಿಸಿ ನುಡಿದ: "ಚೌಡಪ್ಪ, ಭದ್ರಪ್ಪರೇ, ನಿಮ್ಮ ಮಾತುಗಳು, ನಡೆನುಡಿಗಳು ನಮಗೆ ನೀವು ದೇವಕೃಪೆಯುಳ್ಳವರೆಂದು ಮನವರಿಕೆ ಮಾಡಿವೆ. ನಮಗೆ ಕೆಲವು ತುಂಡು ಪಾಳೆಯಗಾರರಿಂದ, ತುರುಕರಿಂದ ಮತ್ತು ಬೇಡರಿಂದ ಉಪದ್ರವಗಳಾಗುತ್ತಿದ್ದು ಅವರುಗಳ ನಿಗ್ರಹಕ್ಕೆ ನೀವು ನಮಗೆ ಅನುಕೂಲಿಗಳಾಗಿ, ಸಹಾಯಕರಾಗಿ ಕಾರ್ಯ ಮಾಡಬೇಕೆಂಬುದು ನಮ್ಮ ಬಯಕೆ."  ಚೌಡಪ್ಪ, ಭದ್ರಪ್ಪರು ಸಮ್ಮತಿಸಿದರು. ಚಾಡಿಮಾತುಗಳನ್ನು ಕೇಳಿ ಚೌಡಪ್ಪ, ಭದ್ರಪ್ಪರಿಗೆ ಸಿಕ್ಸಿದ ನಿಧಿ ರಾಜಬೊಕ್ಕಸಕ್ಕೆ ಸೇರಿಸಿಕೊಳ್ಳುವ ಕುರಿತು ನಿರ್ಧರಿಸಬೇಕಾಗಿದ್ದ ಆ ಭೇಟಿ ಸಂತೋಷದಾಯಕವಾದ ರೀತಿಯಲ್ಲಿ ಕೊನೆಗೊಂಡಿತು. ಅವರುಗಳಿಗೆ ಅನುಕೂಲವಾಗಿರಲೆಂಬ ಕಾರಣದಿಂದ ಕುದುರೆಗಳು, ರಥ, ಛತ್ರ, ಚಾಮರಾದಿಗಳನ್ನೂ ಮತ್ತು ಕೆಲವು ಕಾಲದವರೆಗೆ ಇರಲೆಂದು ಕೆಲವು ಸೈನಿಕರನ್ನೂ ಕೊಟ್ಟು, ಆಭರಣಗಳು, ತಾಂಬೂಲಗಳೊಂದಿಗೆ ಬೀಳ್ಕೊಡಲಾಯಿತು. 
     ಕೆಲ ಕಾಲಾನಂತರದಲ್ಲಿ ಬೇಡರು ಹಾಗೂ ಕೆಲವು ಪುಂಡು ಪಾಳೆಯಗಾರರು ವಿಜಯನಗರದ ಸೀಮೆಯಲ್ಲಿ ಒಟ್ಟಾಗಿ ಬಂಡೆದ್ದು ಪ್ರಜೆಗಳನ್ನು ಹಿಂಸಿಸತೊಡಗಿದಾಗ ರಾಯ ಚೌಡಪ್ಪ, ಭದ್ರಪ್ಪರಿಗೆ ಅವರನ್ನು ನಿಗ್ರಹಿಸಲು ಕೋರಿ ಸಹಾಯಕ್ಕೆ ಸೈನ್ಯವನ್ನೂ ಕೊಟ್ಟು ವೀಳೆಯ ನೀಡಿದನು. [ವೀಳೆಯ ನೀಡಿದ್ದನ್ನು ಸ್ವೀಕರಿಸಿದರೆ ಕೆಲಸ ಮಾಡಲು ಒಪ್ಪಿಕೊಂಡಂತೆ ಆಗಿ, ಅದಕ್ಕೆ ಬದ್ಧರಾಗಿ ನಡೆದುಕೊಳ್ಳುವುದು ಪದ್ಧತಿ. ಈಗ ಇದು 'ಸುಪಾರಿ'ಯಾಗಿ ಭೂಗತ ಲೋಕದಲ್ಲಿ ಚಾಲ್ತಿಯಲ್ಲಿರುವುದು ತಿಳಿದ ಸಂಗತಿ.] ವೀಳೆಯ ಪಡೆದ ಸೋದರರು ಒಪ್ಪಿದ ಕಾರ್ಯಕ್ಕೆ ಮುನ್ನುಗ್ಗಿದಾಗ ಉಭಯತರರಿಗೂ ಘೋರ ಕದನವೇರ್ಪಟ್ಟಿತು. ರಾಯನ ಸೈನಿಕರು ಅವರ ದಾಳಿಯನ್ನು ಎದುರಿಸಲಾರದೆ ಹಿಮ್ಮೆಟ್ಟುತ್ತಿರುವುದನ್ನು ಕಂಡ ಚೌಡಪ್ಪ ಅವರನ್ನು ಹುರಿದುಂಬಿಸಿ ತಾನೇ ಮುಂದಾಳಾಗಿ ಅರಿಭಯಂಕರನಾಗಿ 'ಕುಂತವನಾಂತರಿಸಂತತಿಯಂ ತಗುಳುತ್ತಾಂತ ಸುಭಟರಂ ತಿವಿತಿವಿದೋರಂತಂತಕನಂ ತೋರಿಸುತಿಂತಾ ಚೌಡೇಂದ್ರನಂಕದೊಳ್ ಸೈವರಿದಂ!' [ಕೆನೃವಿ.೧.೬೨] ಇನ್ನೊಂದೆಡೆ ಭದ್ರಪ್ಪ ತನ್ನ ಖಡ್ಗದಿಂದ ವೀರಾವೇಶದಿಂದ ಶತ್ರುಸಮೂಹವನ್ನು ಯಮಪುರಿಗೆ ಕಳುಹಿಸುತ್ತಿದ್ದನು. ಇವರುಗಳ ಆರ್ಭಟ, ಯುದ್ಧಕುಶಲತೆಗೆ ಶತ್ರುಪಡೆ ದಿಕ್ಕೆಟ್ಟು ಅಪಾರ ಸಾವು ನೋವುಗಳಿಗೆ ಪಕ್ಕಾಗಿ ಸೋತು ಶರಣಾಯಿತು. ರಾಯರಿಗೇ ಎದುರಿಸಲು ಕಷ್ಟವಾಗಿದ್ದ ಶತ್ರುಪಡೆಯನ್ನು ಮಣಿಸಿದ ಚೌಡಪ್ಪ-ಭದ್ರಪ್ಪರನ್ನು ಅತ್ಯಾನಂದದಿಂದ ಎದುರುಗೊಂಡ ಕೃಷ್ಣದೇವರಾಯ ಅವರನ್ನು ಅಪ್ಪಿಕೊಂಡು ಸ್ವಾಗತಿಸಿ ಅವರುಗಳ ಬಾಯಿಂದ ಯುದ್ಧದ ವಿವರಗಳನ್ನು ಮರಳಿ ಮರಳಿ ಕೇಳಿ ಸಂತೋಷಿಸಿದ. ಅವರುಗಳಿಗೆ ರಾಜೋಚಿತವಾದ ಉಡುಗೊರೆಗಳು, ಚಿನ್ನದ ಲೇಪನ ಮಾಡಿದ ಪಲ್ಲಕ್ಕಿ, ಮುಂತಾದುವನ್ನೂ ತಾಂಬೂಲದೊಂದಿಗೆ ನೀಡಿ ಅಭಿನಂದಿಸಿ, ಗೌರವ ಪೂರ್ವಕವಾಗಿ ಬೀಳ್ಕೊಟ್ಟ.
     ದಿನಗಳು ಮಧುರವಾಗಿ ಸಾಗುತ್ತಿದ್ದ ಸಂದರ್ಭದಲ್ಲೇ ವಿಜಯನಗರದ ಉತ್ತರದಲ್ಲಿದ್ದ ತುರುಕರು ಕುತಂತ್ರದಿಂದ ರಾಜ್ಯದ ಮೇಲೆ ಆಕ್ರಮಣ ಮಾಡುವರೆಂಬ ಸುದ್ದಿ ಗುಪ್ತಚಾರರಿಂದ ತಿಳಿದ ಕೃಷ್ಣದೇವರಾಯ ಅವರನ್ನು ತಡೆಯಲು ಚೌಡಪ್ಪ-ಭದ್ರಪ್ಪರೇ ಸಮರ್ಥರೆಂದು ಭಾವಿಸಿ ಆಪ್ತ ಮಂತ್ರಾಲೋಚನೆ ನಡೆಸಿ, ಒಂದು ನಿರ್ಧಾರಕ್ಕೆ ಬಂದನು. ಆ ನಿರ್ಧಾರ ಕೆಳದಿ ಸಂಸ್ಥಾನದ ಉದಯಕ್ಕೆ ನಾಂದಿ ಹಾಡಿತು. 
     ಚೌಡಪ್ಪ-ಭದ್ರಪ್ಪರನ್ನು ಆತ್ಮೀಯತೆ ಹಾಗೂ ಗೌರವಗಳಿಂದ ಆಹ್ವಾನಿಸಿ, ಅವರಿಗೆ ಆತಿಥ್ಯ ನೀಡಿ ಬಳಿಕ ಹತ್ತಿರ ಕುಳ್ಳಿರಿಸಿಕೊಂಡು ಕೃಷ್ಣದೇವರಾಯ ಹೇಳಿದ:
     "ಚೌಡಪ್ಪನವರೇ, ಭದ್ರಪ್ಪನವರೇ, ನೀವು ಬಲಶಾಲಿಗಳು, ಧೈರ್ಯಶಾಲಿಗಳು. ನಿಮ್ಮ ಸ್ನೇಹ ಮತ್ತು ಸಹಕಾರ ನಮಗೆ ಅಮೂಲ್ಯವಾಗಿದೆ. ನಮ್ಮ ಶತ್ರುಗಳನ್ನು ತಡೆಯುವ ಸಾಮರ್ಥ್ಯಶಾಲಿಗಳು ನೀವೇ ಆಗಿದ್ದೀರಿ. ನಮ್ಮ ರಾಜ್ಯದ ಚಂದ್ರಗುತ್ತಿ, ಕೆಳದಿಯ ಪ್ರದೇಶಗಳಲ್ಲಿ ಹೊರಪಾಳಯದಲ್ಲಿ ಸ್ವತಂತ್ರರಾಗಿ ಅಧಿಕಾರ ನಡೆಸುವ ಪರಮಾಧಿಕಾರ ನಿಮಗೆ ಕೊಡುವೆ. ಈ ಗೌರವಕ್ಕೆ ಪ್ರತಿಯಾಗಿ ನೀವುಗಳು ನಮ್ಮ ಸಹಕಾರಿಗಳಾಗಿ, ನಮ್ಮವರೇ ಆಗಿ ನಡೆದುಕೊಳ್ಳಬೇಕು. ನಿಮಗೆ ಕೆಳದಿ, ಇಕ್ಕೇರಿ, ಹೆಬ್ಬೈಲು, ಯಲಗಳಲೆ, ....., ಮೋದೂರು, ಕಲಿಸೆ ಮತ್ತು ಲಾತವಡಿ ಎಂಬ ಎಂಟು ಮಾಗಣೆಗಳನ್ನು ವಹಿಸಿಕೊಡುವೆ. ಈ ಎಂಟು ಭೂಪ್ರದೇಶಗಳನ್ನು ನೀವುಗಳು ವಂಶ ಪಾರಂಪರ್ಯವಾಗಿ ಅನುಭವಿಸಿಕೊಂಡು, ಸುಖದಿಂದ ಬಾಳಬೇಕು."
     ಅವರ ಸಮ್ಮುಖದಲ್ಲೇ ಈ ಕುರಿತು ಶಾಸನವನ್ನೂ ಬರೆಸಿ, ಉಚಿತವಾದ ಉಡುಗೊರೆಗಳು, ಚತುರಂಗ ಬಲ (ಆನೆ, ಕುದುರೆ, ರಥ, ಕಾಲಾಳುಗಳು)ವನ್ನೂ ಕೊಟ್ಟುದಲ್ಲದೆ, ಅರಿದಲೆ, ಶಂಖ, ಚಕ್ರ, ಕನಕಚೌರಿ, ಸೀಗುರಿ, ಉಭಯಚಮರ, ಸರನೇಜ ಎಂಬ ಬಿರುದುಗಳನ್ನೂ ಇತ್ತು ಸನ್ಮಾನಿಸಿದನು. ಇನ್ನು ಮುಂದೆ ಚೌಡಪ್ಪನನ್ನು 'ಕೆಳದಿ ಮೂಲ ಸಂಸ್ಥಾನದ ಮನ್ನೆಯ ಚೌಡಪ್ಪನಾಯಕ'ನೆಂದು ಸಂಬೋಧಿಸತಕ್ಕದ್ದೆಂದು ಸುತ್ತಮುತ್ತಲಿನ ರಾಜರುಗಳಿಗೆ ಸಂದೇಶ ಕಳುಹಿಸಲಾಯಿತು. ಕೆಳದಿ ಸಂಸ್ಥಾನದ ಉದಯಕ್ಕೆ ಇಲ್ಲಿ ನಾಂದಿಯಾಯಿತು. ರಾಜಮುದ್ರೆ, ಆಜ್ಞೆ, ಘೋಷಣೆ, ನಾಣ್ಯ ಚಲಾವಣೆ ಮುಂತಾದ ಅಧಿಕಾರಗಳನ್ನು  ಸ್ವತಂತ್ರವಾಗಿ ಚಲಾಸಲು ಚೌಡಪ್ಪನಿಗೆ ಅಧಿಕಾರ ಪ್ರಾಪ್ತವಾಯಿತು. ವಿಜಯನಗರದ ಅರಸರ ಕಾರ್ಯಗಳನ್ನು ತಮ್ಮ ಕಾರ್ಯಗಳೆಂದೇ ಭಾವಿಸಿ ಮಾಡಬೇಕೆಂದು ಸೂಚಿಸಲಾಯಿತು. ಅಮೂಲ್ಯ ಚಿನ್ನದಾಭರಣಗಳು, ವಸ್ತ್ರಗಳ ಸಹಿತವಾಗಿ ತಾಂಬೂಲವಿತ್ತು ಚೌಡಪ್ಪ-ಭದ್ರಪ್ಪರನ್ನು ಗೌರವದಿಂದ ಬೀಳ್ಕೊಡಲಾಯಿತು. ಬೀಗುತ್ತಾ ಕೆಳದಿಪುರವನ್ನು ಪ್ರವೇಶಿಸಿದ ಅವರು ಸುಂದರವಾದ ಅರಮನೆಯನ್ನು ನಿರ್ಮಿಸಿದರು. ಶಾಲಿವಾಹನ ಶಕ 1422ರ ಸಿದ್ಧಾರ್ಥಿ ಸಂವತ್ಸರದ ಮಾಘ ಶುದ್ಧ ತದಿಗೆಯಂದು (ಕ್ರಿ.ಶ. 1500) ವಿಧಿವತ್ತಾಗಿ ಚೌಡಪ್ಪನಾಯಕ ಕೆಳದಿ ಸಂಸ್ಥಾನದ  ಪ್ರಥಮ ರಾಜಪಟ್ಟವನ್ನು ಅಲಂಕರಿಸಿದನು. ತನ್ನ ಅಧೀನಕ್ಕೊಳಪಟ್ಟ ಕೆಳದಿ, ಇಕ್ಕೇರಿ, ಹೆಬ್ಬೈಲು, ಯಲಗಳಲೆ, ಮೋದೂರು, ಕಲಿಸೆ, ಮೊದಲಾದ ಎಂಟು ಮಾಗಣೆಗಳಲ್ಲಿನ ಪ್ರಜಾಪರಿವಾರದವರಿಂದ ಗೌರವ, ಮನ್ನಣೆ ಪಡೆದದ್ದಲ್ಲದೆ, ಸುತ್ತಮುತ್ತಲಿನ ರಾಜರುಗಳಿಗೆ ಉಚಿತವಾದ ಉಡುಗೊರೆಗಳ ಸಹಿತ ಪತ್ರಗಳನ್ನು ಬರೆಸಿ ಕೆಳದಿ ಸಂಸ್ಥಾನದ ಸ್ಥಾಪತ್ಯ ಸಾಧಿಸಿದನು. ವಿಜಯನಗರ ಸಾಮ್ರಾಜ್ಯದ ಗಡಿಗಳ ರಕ್ಷಣೆಯ ಕಾರಣಕ್ಕಾಗಿ ಕೃಷ್ೞದೇವರಾಯ ಕೆಳದಿ ಸಂಸ್ಥಾನದ ಉದಯಕ್ಕೆ ಕಾರಣನಾದರೂ ಸಹ, ಮುಂದೆ ವಿಜಯನಗರದ ಪತನಾನಂತರದಲ್ಲಿ ಕೆಳದಿ ಸಂಸ್ಥಾನವು ವಿಜಯನಗರದ ಐತಿಹಾಸಿಕ ಪರಂಪರೆ ಮುಂದುವರೆಸಿಕೊಂಡು ಬಂದು ಸ್ವತಂತ್ರ ಮತ್ತು ಬಲಾಢ್ಯ ಸಂಸ್ಥಾನವಾಗಿ ಪ್ರಸಿದ್ಧಿ ಹೊಂದಿತು.
     ರಾಮೇಶ್ವರನ ಕೃಪೆಯಿಂದ ಒದಗಿದ ಸೌಭಾಗ್ಯವನ್ನು ನೆನೆದು ದೇವಸ್ಥಾನದ ಗರ್ಭಗೃಹವನ್ನು ಕಲ್ಲಿನ ಕಟ್ಟಡವಾಗಿಸಿದನು. ದೇವಸ್ಥಾನ ಪೂಜಾ ಕೈಂಕರ್ಯಗಳಿಗಾಗಿ ಹಳ್ಳಿಬಯಲು ಗ್ರಾಮವನ್ನು ಉಂಬಳಿಯಾಗಿತ್ತನು. ಧಾರ್ಮಿಕ ಕಾರ್ಯಗಳ ಜೊತೆಗೆ ವಿಜಯನಗರದ ಅರಸರ ಅಪೇಕ್ಷೆಯ ಕೆಲಸಕಾರ್ಯಗಳನ್ನೂ ಜಯಪ್ರದಗೊಳಿಸುತ್ತಾ, ಪ್ರಜಾಪರಿವಾರದವರ ಮತ್ತು ವಿಜಯನಗರದ ಅರಸರ ಮನ್ನಣೆ ಪಡೆದು ವೈಭವದಿಂದ ಬಾಳು ಸಾಗುತ್ತಿತ್ತು.
     ಹೀಗಿರಲು ಒಮ್ಮೆ ಚೌಡಪ್ಪನಾಯಕ ತನ್ನ ಮಗ ಸದಾಶಿವನೊಡನೆ ಇಕ್ಕೇರಿಯಲ್ಲಿ ಸಂಚರಿಸುತ್ತಿದ್ದಾಗ ಮೊಲವೊಂದು ದೊಡ್ಡ ನಾಯಿಯನ್ನು ಓಡಿಸಿಕೊಂಡು ಹೋಗುತ್ತಿದ್ದುದನ್ನು ಕಂಡು ಆಶ್ಚರ್ಯಚಕಿತನಾಗಿ ಇದು ವಿಶೇಷವಾದ ಸ್ಥಳವೆಂದು ಮನಗಂಡು ಆ ಸ್ಥಳದಲ್ಲಿ ಭವ್ಯವಾದ ಅರಮನೆ ಕಟ್ಟಿಸಿದನು. ಅರಮನೆಗೆ ಅಗತ್ಯದ ಇನ್ನಿತರ ಸೌಲಭ್ಯಗಳನ್ನೆಲ್ಲಾ ಕಲ್ಪಿಸಿದ ನಂತರ ಇಕ್ಕೇರಿ ಪಟ್ಟಣದ ಅಭಿವೃದ್ಧಿಯನ್ನೂ ಮಾಡಿ, ಶಾಲಿವಾಹನ ಶಕ 1434ರ ಪ್ರಜೋತ್ಪತ್ತಿ ಸಂವತ್ಸರದ ಮಾಘ ಶುದ್ಧ ಪಂಚಮಿಯಂದು (ಕ್ರಿ.ಶ. 1512) ಕೆಳದಿಯಿಂದ ಇಕ್ಕೇರಿಗೆ ರಾಜಪರಿವಾರ ಸ್ಥಳಾಂತರಗೊಂಡಿತು. ಧರ್ಮಪರಿಪಾಲಕನಾಗಿ, ಪ್ರಜಾಪ್ರಿಯನಾಗಿ ಬಾಳಿದ ಕೆಳದಿ ಸಂಸ್ಥಾನದ ಮೂಲ ಅರಸ ಚೌಡಪ್ಪ ಶಾಲಿವಾಹನ ಶಕ 1436ರ ಶ್ರೀಮುಖ ಸಂವತ್ಸರದ ಶ್ರಾವಣ ಶುದ್ಧ ದ್ವಿತೀಯದವರೆಗೆ (ಕ್ರಿ.ಶ.1514) ಸುಮಾರು ಹದಿಮೂರುವರೆ ವರ್ಷಗಳವರೆಗೆ ರಾಜ್ಯವನ್ನಾಳಿ ಕೆಳದಿ ಸಂಸ್ಥಾನಕ್ಕೆ ಭದ್ರ ಬುನಾದಿಯಾದವನು. ಯಾವ ವಿಜಯನಗರದ ಸಂಸ್ಥಾನದ ಹಿತರಕ್ಷಣೆಯ ಸಲುವಾಗಿ ಕೆಳದಿಯ ಸ್ವತಂತ್ರ ಅಸ್ತಿತ್ವ ಉಂಟಾಗಿತ್ತೋ, ಆ ವಿಜಯನಗರ ಸಾಮ್ರಾಜ್ಯ ಕ್ರಿ.ಶ. 1565ರ ಸುಮಾರಿಗೆ ಪತನವಾಯಿತು. ಆ ನಂತರವೂ ಸುಮಾರು ಎರಡು ಶತಮಾನಗಳ ಕಾಲ ವಿಜಯನಗರದ ವೈಭವ, ಪರಂಪರೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಿ, ಕರ್ಣಾಟಕದ ಹೆಮ್ಮೆಯ ಸ್ವತಂತ್ರ ಮತ್ತು ವಿಶಾಲ ಸಂಸ್ಥಾನವಾಗಿ ಕೆಳದಿ ಸಂಸ್ಥಾನ ಬೆಳಗಿತು. ಈ ಕಾರಣದಿಂದಲೇ ಕೆಳದಿ ಮೂಲ ಸಂಸ್ಥಾನದ ಹೆಮ್ಮೆಯ ಮನ್ನೆಯ  ಚೌಡಪ್ಪನಾಯಕ ಗತಿಸಿ ಐದು ಶತಮಾನಗಳು ಉರುಳಿದರೂ ಅವನ ಹೆಸರು ಕರ್ಣಾಟಕದ ಇತಿಹಾಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ. 
-ಕ.ವೆಂ.ನಾಗರಾಜ್.
[ಆಧಾರ: ಲಿಂಗಣ್ಣ ಕವಿಯ 'ಕೆಳದಿನೃಪ ವಿಜಯ']
****************
ಕೆಳಗೆ ಕ್ಲಿಕ್ಕಿಸಿ ಹಿಂದಿನ ಲೇಖನಗಳನ್ನು ಓದಬಹುದು:
1. ಜಂಬೂದ್ವೀಪದ ಭರತ ಖಂಡ
2. 4 ಶತಮಾನಗಳ ಹಿಂದಿನ ಕರ್ಣಾಟಕ ದೇಶ - ಕವಿ ಕಂಡಿದ್ದಂತೆ      

ಮಂಗಳವಾರ, ಡಿಸೆಂಬರ್ 11, 2012

ಬಿದನೂರು ಕೋಟೆಯ ಅಳಲು ಕೇಳಿ!

     ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು ಹೇಳುತ್ತಿವೆ. ಈ ಬಿದನೂರು ಕೋಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಎಂಬಲ್ಲಿದೆ. ಹೊಸನಗರದಿಂದ  17 ಕಿ.ಮೀ. ದೂರದಲ್ಲಿರುವ ಈ ಸ್ಥಳ ಇತಿಹಾಸ ಪ್ರೇಮಿಗಳು ಸಂದರ್ಶಿಸಬೇಕಾದ ಸ್ಥಳ. ದರ್ಬಾರ್ ಸಭಾಂಗಣದ ಚಿತ್ರವನ್ನೂ ನಾನು ಸೆರೆ ಹಿಡಿಯಬೇಕಿತ್ತು. ಮುಂದೊಮ್ಮೆ ಅವಕಾಶವಾದರೆ  ತೆಗೆಯುವೆ.  ಆ ಸಭಾಂಗಣದಲ್ಲಿ ಕಟ್ಟೆ ಒಂದನ್ನು ಬಿಟ್ಟು ಈಗ ಏನೂ ಉಳಿದಿಲ್ಲ, ನಮ್ಮವರು 'ಉಳಿಸಿಲ್ಲ'! 
-ಕ.ವೆಂ.ನಾಗರಾಜ್.


ಭಾನುವಾರ, ಡಿಸೆಂಬರ್ 9, 2012

ವಾನಪ್ರಸ್ಥ - ಹೀಗೊಂದು ಚಿಂತನೆ      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. 
     ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ ಕೊಡುವವರೂ ಆಗಿರುತ್ತಾರೆ. ವಾನಪ್ರಸ್ಥದ ಅವಧಿಯಲ್ಲಿ ಮಕ್ಕಳು ಬೆಳೆದವರಾಗಿರುತ್ತಾರೆ ಮತ್ತು ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗುತ್ತದೆ. ಸಾಮಾಜಿಕ ಹಿತದ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ. ಈ ಅವದಿಯು ಕಿರಿಯರಿಗೆ, ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ಬಲವಾದ ಆಧಾರರೂಪಿಯಾಗಿರಲು ಸೂಕ್ತವಾಗಿರುತ್ತದೆ. ಜ್ಞಾನವನ್ನು ಸಂಪಾದಿಸಿ ದೇಶಕ್ಕೆ, ಸಮಾಜಕ್ಕೆ ಉಪಕಾರಿಯಾಗಿರಬೇಕಾದ ಹಂತವಿದು. ಕೆಲವರು ನೇರವಾಗಿ ಸಂನ್ಯಾಸಾಶ್ರಮಕ್ಕೆ ಪ್ರವೇಶಿಸಿ ನಂತರದಲ್ಲಿ ಪ್ರಾಪಂಚಿಕ ಆಕರ್ಷಣೆಗಳಿಗೆ ಒಳಗಾಗಿ ಕೆಳಗೆ ಬಿದ್ದಿರುವುದನ್ನೂ ಕಂಡಿದ್ದೇವೆ. ಹಾಗಾಗಿ ಗೃಹಸ್ಥ, ವಾನಪ್ರಸ್ಥದ ಅವಧಿಯನ್ನು ಪೂರ್ಣಗೊಳಿಸಿ ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾದ ನಂತರವೇ ಸಂನ್ಯಾಸಿಗಳಾಗುವುದು ಸಮಾಜದ ಮತ್ತು ಸ್ವಂತದ ಹಿತದಿಂದ ಒಳ್ಳೆಯದು. ವಾನಪ್ರಸ್ಥಕ್ಕೆ ತೆರಳುವವರಿಂದ ಇನ್ನೊಂದು ಲಾಭವೂ ಇದೆ. ವೃದ್ಧರ ನಿವೃತ್ತಿಯಿಂದ ಯುವಕರಿಗೆ ಸಹಜವಾಗಿ ಅಧಿಕಾರ, ಸಾಧನ ಸೌಲಭ್ಯಗಳು ಸಿಗುತ್ತವೆ. ಅಥರ್ವ ವೇದದ ಈ ಮಂತ್ರ ಹೀಗೆ ಹೇಳುತ್ತದೆ:
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಅರ್ಥ: ಓ ಗೃಹಸ್ಥ! ಈ ನಿನ್ನ ಆತ್ಮನನ್ನು ಮುನ್ನಡೆಸು. ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, ಚೆನ್ನಾಗಿ ಜ್ಞಾನ ಗಳಿಸಿ, ಪುಣ್ಯವಂತರ ಸ್ಥಿತಿಯನ್ನು ಮುಟ್ಟಲಿ. ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು ಅನ್ಯ ಸಾಧನೆಗಳಿಂದ, ಮಹಾ ಅಂಧಕಾರಗಳನ್ನು ದಾಟಿ, ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ಎಲ್ಲಾ ವಯೋವೃದ್ಧರಿಗೂ ಜೀವನದ ಅಂತಿಮ ದಿನಗಳನ್ನು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಾಗಿ ಕಳೆಯುವ ಮನಸ್ಸು ಬರಲಾರದು. ಒಂದು ಹಾಸ್ಯಪ್ರಸಂಗ ಇಲ್ಲಿ ನೆನಪಾಗುತ್ತಿದೆ. ಒಬ್ಬ ವ್ಯಾಪಾರಿ ಇನ್ನೇನು ಆಗಲೋ, ಈಗಲೋ ಎಂಬಂತೆ ಸಾಯುವ ಸ್ಥಿತಿಯಲ್ಲಿದ್ದಾಗ, ಅವನ ಹತ್ತಿರವಿರಲು ಮಗ ಮನೆಗೆ ಧಾವಿಸಿಬರುತ್ತಾನೆ. ಅವನಿಗೆ ಏನೋ ಹೇಳಬೇಕೆಂದು ಆ ವ್ಯಾಪಾರಿ ಬಯಸಿದರೂ ಗಂಟಲಿನಿಂದ ಸ್ವರ ಹೊರಡದೆ ಗೊರಗೊರ ಶಬ್ದ ಬರುತ್ತಿದೆ. ವೈದ್ಯರ ಶತಪ್ರಯತ್ನದಿಂದ ಕೊನೆಗೆ ಮಾತನಾಡಿದ ಅವನು ಮಗನಿಗೆ "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ?" ಎಂದು ಕೇಳಿದ್ದೇ ಅವನ ಜೀವನದ ಕೊನೆಯ ಮಾತಾಗಿತ್ತು! ಗೋಂದಾವಲೀ ಮಹಾರಾಜರು ಉಪನ್ಯಾಸವೊಂದರಲ್ಲಿ ಹೇಳಿದ ಪ್ರಸಂಗ (ಧ್ವನಿಮುದ್ರಿಕೆಯಲ್ಲಿ ಕೇಳಿದ್ದು) ಇಲ್ಲಿ ಉಲ್ಲೇಖಿಸಬಹುದು. ಒಬ್ಬ ಭಕ್ತರ ಮನೆಗೆ ಅವರು ಹೋಗಿದ್ದಾಗ ಆ ಮನೆಯಲ್ಲಿದ್ದ 90 ವರ್ಷ ದಾಟಿದ್ದ ವೃದ್ಧೆಯೊಬ್ಬರು ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ. ನಿಮ್ಮ ಪಾದದ ಕೆಳಗೆ ತಲೆಯಿಟ್ಟು ಈ ಜೀವನ ಮುಗಿಸಬೇಕು ಎಂಬುದೊಂದೇ ಆಸೆ" ಎಂದಳು. ಅದಕ್ಕೆ ಅವರು, "ಆಗಲಿ, ಅದಕ್ಕೇನಂತೆ? ಹಾಗೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಗಾಬರಿಯಾದ ಆ ವೃದ್ಧೆ, "ಅಯ್ಯೋ, ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವನ್ನು ಎತ್ತಿ ಮುದ್ದಾಡಬೇಕು. ನಾಮಕರಣ ಆಗಬೇಕು. ನಂತರ ನನ್ನ ಈ ಆಸೆ ಈಡೇರಿಸಿಕೊಳ್ಳುತ್ತೇನೆ" ಅಂದಳಂತೆ! ಸಾಯುವ ಕೊನೆಯ ಕ್ಷಣದವರೆಗೂ ರಾಜಕೀಯ ಮಾಡುತ್ತಾ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳೂ ಇದೇ ವರ್ಗಕ್ಕೆ ಸೇರಿದವರು. ಹಾಗಾಗಿ ಏನು ಬದಲಾವಣೆ ನಿರೀಕ್ಷಿಸಲಾದೀತು? ಇರಲಿ ಬಿಡಿ, ವಾನಪ್ರಸ್ಥ ಬಯಸದವರ ಮಾತನ್ನು ಮುಂದುವರೆಸುವುದಿಲ್ಲ. 
     ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 45-50ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಒಂದು ಗಾದೆಯಿದೆ, ಸಾವಿರ ಮೈಲುಗಳ ಪಯಣ ಪ್ರಾರಂಭವಾಗುವುದು ಒಂದು ಹೆಜ್ಜೆ ಮುಂದಿಡುವುದರಿಂದ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಚಿಂತನೆಗಳನ್ನು ಹೊಂದಿದವರ ಭಾವನೆಯನ್ನು ಗೌರವಿಸಿ ಸಹಕರಿಸುವ ಕುಟುಂಬದ ಇತರ ಸದಸ್ಯರೂ ಅಭಿನಂದನಾರ್ಹರಾಗುತ್ತಾರೆ. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
-ಕ.ವೆಂ.ನಾಗರಾಜ್.

ಸೋಮವಾರ, ಡಿಸೆಂಬರ್ 3, 2012

ಆ ಸ್ವತಂತ್ರ ಸ್ವರ್ಗಕೇ . .     ಅದೊಂದು ಬಲು ವಿಶೇಷ ಸಂದರ್ಭ! ಈ ಹಾಡು ಕೇಳಿ. ವೇದಿಕೆಯಲ್ಲಿರುವವರು ಮತ್ತು ಅವರೆದುರು ಕುಳಿತು ಅತ್ಯಂತ ಸ್ಫೂರ್ತಿಯಿಂದ ಹಾಡುತ್ತಿರುವವರ ಪರಿಚಯ ನಿಮಗಾದರೆ ನೀವು ವಾಹ್ ! ಎನ್ನದೆ ಇರಲಾರಿರಿ. 1975-77ರಲ್ಲಿ ನಮ್ಮ ದೇಶದ ಮೇಲೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ. ಈಗಿನ ಎಷ್ಟೋ ಜನರಿಗೆ ಅದರ ಅರಿವಿಲ್ಲ. ಆದರೆ ಅಂದು ದೇಶದ ನಾಗರೀಕರ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಆರ್.ಎಸ್.ಎಸ್.ಸಹಿತ ಹಲವಾರು ಸಂಘಟನೆಗ     ಳನ್ನು  ನಿಷೇಧಿಸಿ ಅವುಗಳ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಆಗ ಆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿ ಇನ್ನೂ ನಮ್ಮೊಡನಿರುವ ಹಾಸನ ಜಿಲ್ಲೆಯ ಹಿರಿಯರು ಇವರು!! ವೇದಿಕೆಯಲ್ಲಿ ಆರ್.ಎಸ್.ಎಸ್. ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರು. ಅಕ್ಕ ಪಕ್ಕದಲ್ಲಿ ಅರಸೀಕೆರೆಯ ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀ ದುರ್ಗಪ್ಪಶೆಟ್ಟರು ಮತ್ತು ಅರಸೀಕೆರೆಯ ತಾಲ್ಲೂಕು ಸಂಘಚಾಲಕರಾದ ಶ್ರೀ ಶ್ರೀನಿವಾಸಮೂರ್ತಿಯವರು[ರಾಮಣ್ಣನವರ ಬಲಬದಿ]-ಇಬ್ಬರೂ ಅಂದು 'ಮೀಸಾ' ಬಂದಿಗಳಾಗಿದ್ದವರು!
     ಎದುರು ಕುಳಿತು ಚಪ್ಪಾಳೆ ತಟ್ಟಿ ಹಾಡುತ್ತಿರುವವರೆಲ್ಲಾ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಧೀರರು. ಅಂದಿನ ಹಲವರು ಇಂದು ನಮ್ಮೊಡನಿಲ್ಲ. ಇನ್ನೂ ಬದುಕಿದ್ದು ಭಾರತಮಾತೆಯ ವೈಭವದ ದಿನಗಳಿಗಾಗಿ ಸಮಾಜಕಾರ್ಯದಲ್ಲಿ ಸಕ್ರಿಯರಾಗಿರುವ ಹಿರಿಯರು ತಮ್ಮ ಉತ್ಸಾಹವನ್ನು ಬತ್ತಲು ಬಿಡದೆ ಭಾವುಕರಾಗಿ ಹಾಡುತ್ತಿರುವ ಅಪೂರ್ವ ಕ್ಷಣಗಳು ಇವು!!
     ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರೂ ಕೂಡ ಅಂದು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರೀ ಕೆಲಸ ಕಳೆದುಕೊಂಡು ಜೈಲು ವಾಸ ಅನುಭವಿಸಿದವರು. ಅವರು ಬರೆದಿರುವ ತನ್ನ ಹೋರಾಟದ ಅನುಭವ ಕಥನ "ಆದರ್ಶದ ಬೆನ್ನುಹತ್ತಿ.." ಕೃತಿಯ ಬಿಡುಗಡೆಯ ಸಂದರ್ಭದಲ್ಲಿ ಇಂತಹ ಒಂದು ಅಪೂರ್ವ ಅವಕಾಶವು ಹಾಸನದ ಜನತೆಗೆ ಲಭಿಸಿತ್ತು. 
-ಹರಿಹರಪುರ ಶ್ರೀಧರ್.

ಶನಿವಾರ, ಡಿಸೆಂಬರ್ 1, 2012

"ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

     1975-77ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಹೇಗಿತ್ತು, ಜನರ, ಅಧಿಕಾರಸ್ಥರ ಮನೋಸ್ಥಿತಿ ಹೇಗಿತ್ತು, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದ್ದ ಆ ಕಾಲದಲ್ಲಿ ಅದನ್ನು ವಿರೋಧಿಸಿದವರನ್ನು ಹೇಗೆ ದಮನಿಸಲಾಗುತ್ತಿತ್ತು ಎಂಬುದರ ಕಿರುದರ್ಶನ ಮಾಡುವ ಕ.ವೆಂ.ನಾಗರಾಜರ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 29-11-2012ರಂದು ವಿಭಿನ್ನವಾಗಿ ಆಯೋಜಿಸಲಾಗಿತ್ತು. ಕೃತಿ ಬಿಡುಗಡೆಯ ಪೂರ್ವಭಾವಿಯಾಗಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಸತ್ಯಾಗ್ರಹ ಮಾಡಿದ್ದ, ಮೀಸಾ, ಭಾರತ ರಕ್ಷಣಾ ಕಾಯದೆಯನ್ವಯ ಬಂಧಿತರಾಗಿದ್ದವರ ಸಮಾವೇಶ ಏರ್ಪಡಿಸಿದ್ದು ವಿಶೇಷವೇ ಸರಿ. ಸುಮಾರು 80 ಸತ್ಯಾಗ್ರಹಿಗಳು ಸೇರಿದ್ದು, ಅಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ನೆರೆದಿದ್ದವರಿಗೆ ಒಂದು ವಿಶೇಷ ಅನುಭವ ಉಂಟು ಮಾಡಿತು.
     ಈ ಸಮಾವೇಶದ ನಂತರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅಂದು 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿಯವರು ಕೃತಿ ಬಿಡುಗಡೆ ಮಾಡಿ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕೃತಿಗಳು ಯುವಕರಿಗೆ ಮಾರ್ಗದರ್ಶನ ನೀಡಲು ಸಹಕಾರಿ ಮತ್ತು ಅಗತ್ಯವೆಂದರು. ಲೇಖಕ ನಾಗರಾಜ್ ಮಾತನಾಡುತ್ತಾ ತಮ್ಮ ಸೇವಾಕಾಲದ ಅನುಭವಗಳನ್ನು ಅಂತರ್ಜಾಲ ತಾಣಗಳಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದಾಗ ತುರ್ತು ಪರಿಸ್ಥಿತಿ ಕಾಲದ ತಮ್ಮ ಅನುಭವಗಳಿಗೆ ಬಂದ ಅನೇಕ ಪ್ರತಿಕ್ರಿಯೆಗಳು ಪುಸ್ತಕ ಪ್ರಕಟಣೆಗೆ ಪ್ರೇರಿಸಿತೆಂದು ಹೇಳಿದರು. ಜಿಲ್ಲೆಯ ಎಲ್ಲಾ ಹೋರಾಟಗಾರರು ನಡೆಸಿದ ಹೋರಾಟದ ಸಮಗ್ರ ಚಿತ್ರಣವಿರುವ ಕೃತಿ ರಚಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು ಈ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ಸಿದ್ದವೆಂದು ತಿಳಿಸಿದರು.
     ತುರ್ತು ಪರಿಸ್ಥಿತಿ ವಿರೋಧಿಸಿ ಕರ್ನಾಟಕದಲ್ಲಿ ನಡೆದ ಐತಿಹಾಸಿಕ ಆಂದೋಲನದ ಕುರಿತು ಮಾತನಾಡಿದ ಪ್ರಧಾನ ಭಾಷಣಕಾರರಾದ ರಾ. ಸ್ವ. ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಈ ಕೃತಿ ಯುವಜನರಿಗೆ ಪ್ರೇರಣೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ತಿಳಿಸಿದರಲ್ಲದೆ, ಇಂದಿನ ಕಲುಷಿತ ವಾತಾವರಣದಲ್ಲಿ ಭ್ರಷ್ಠ ವ್ಯವಸ್ಥೆ ವಿರುದ್ಧ ಜಾಗೃತರಾಗಿರಬೇಕೆಂದು ಕರೆ ನೀಡಿದರು. 'ಮೀಸಾ' ಕಾಯದೆಯನ್ವಯ ಬಂಧಿತರಾಗಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ.ಆರ್. ಶ್ರೀನಿವಾಸ ಮೂರ್ತಿ, ಹಾಸನದ ಶ್ರೀ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಪ್ರೇರಕರಾಗಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. ಲೇಖಕ ಶ್ರೀ ಕ.ವೆಂ.ನಾಗರಾಜರನ್ನು ಅಭಿನಂದಿಸಲಾಯಿತು. ಶ್ರೀ ಹರಿಹರಪುರ ಶ್ರೀಧರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಿಸಿದರು.

ಅಪೂರ್ವ ಸಮ್ಮಿಲನ ಹಾಗೂ "ಆದರ್ಶದ ಬೆನ್ನು ಹತ್ತಿ . ." ಕೃತಿ ಲೋಕಾರ್ಪಣೆ

"ಹಾಂ! ನೀನಿನ್ನೂ ಬದುಕಿದ್ದೀಯೇನೋ?"
"ನೀನೂ ಇದೀಯೇನೋ?"
      36-37 ವರ್ಷಗಳ ನಂತರದಲ್ಲಿ ಪ್ರಥಮತಃ ಭೇಟಿಯಾದ ವೃದ್ಧರಿಬ್ಬರ ನಡುವಣ ಉದ್ಗಾರಗಳಿವು. ಇದೇ ರೀತಿಯ ಅನುಭವ ಅಲ್ಲಿದ್ದ ಇನ್ನೂ ಹಲವರದು. ಕೆಲವರು ಭಾವಾತಿರೇಕದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಕೆಲವರ ಕಣ್ಣಿನಲ್ಲಿ ಆನಂದಾಶ್ರುಗಳು ತುಳುಕಿದವು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಇಂತಹ ಭಾವನೋತ್ತುಂಗದ ಕ್ಷಣಗಳಿಗೆ ಸಾಕ್ಷಿಯಾದದ್ದು ಹಾಸನದಲ್ಲಿ 29-11-2012ರಲ್ಲಿ ನಡೆದ 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರ, ತುರಂಗವಾಸ ಅನುಭವಿಸಿದವರ ಸಮಾವೇಶದಲ್ಲಿ. ಸುಮಾರು 80 ಹೋರಾಟಗಾರರು ಉಪಸ್ಥಿತರಿದ್ದ ಆ ಸಮಾವೇಶವನ್ನು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ನನ್ನ ಕೃತಿ "ಆದರ್ಶದ ಬೆನ್ನು ಹತ್ತಿ . ."ಯ ಬಿಡುಗಡೆಯ ಪೂರ್ವಭಾವಿಯಾಗಿ ಯೋಜಿಸಲಾಗಿತ್ತು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಗ್ರಹಣ ಹಿಡಿದಿದ್ದ, ಪತ್ರಿಕಾ ಸೆನ್ಸಾರ್ ಜಾರಿಯಲ್ಲಿದ್ದ, ದೇಶ ಕ್ರಮೇಣ ಸರ್ವಾಧಿಕಾರದೆಡೆಗೆ ಜಾರುತ್ತಿದ್ದ ಸಂದರ್ಭದಲ್ಲಿ ದೇಶದಲ್ಲಿ ಪುನಃ ಪ್ರಜಾಪ್ರಭುತ್ವ ಸ್ಥಾಪನೆಗೆ ಅನುವು ಮಾಡಿಕೊಟ್ಟದ್ದು ರಾ.ಸ್ವ.ಸಂಘ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ನಡೆಸಿದ ಅಭೂತಪೂರ್ವ ಆಂದೋಲನ. ಆ ಐತಿಹಾಸಿಕ ಆಂದೋಲನದ ವಿವರ 1970ರ ದಶಕದ ನಂತರದಲ್ಲಿ ಜನಿಸಿದವರಿಗೆ ಇರಲಾರದು. ಅಂದು ಕಷ್ಟ-ನಷ್ಟಗಳನ್ನು ಸಹಿಸಿ ನೋವನುಂಡವರ ತ್ಯಾಗ, ಬಲಿದಾನಗಳಿಂದ ಉಳಿದ ದೇಶದ ಪ್ರಜಾಸತ್ತೆಯನ್ನು ಇಂದಿನ ರಾಜಕಾರಣಿಗಳು ನೈತಿಕ ಅಧೋಗತಿಗೆ ಒಯ್ಯುತ್ತಿರುವುದನ್ನು ಕಂಡು ಅಂದಿನ ಹೋರಾಟಗಾರರು ಮರುಗದೇ ಇರಲಾರರು. ಭ್ರಷ್ಠಾಚಾರದ ವಿರುದ್ಧ, ಸರ್ವಾಧಿಕಾರದ ವಿರುದ್ಧ ಸೆಣಸಿದವರ ಅಂದಿನವರ ಮನೋಭಾವ ಇಂದಿನ ತರುಣರಿಗೆ ಮೂಡದಿದ್ದರೆ ಪರಿಸ್ಥಿತಿಯ ಸುಧಾರಣೆಯಾಗುವುದು ದುಸ್ತರವೇ ಸರಿ.
     ಹಾಸನ ಜಿಲ್ಲೆಯಲ್ಲಿ 13 ಜನರು ಆಂತರಿಕ ಭದ್ರತಾ ಶಾಸನದ ಅನ್ವಯ (ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲದೆ 2 ವರ್ಷಗಳ ಕಾಲ ಯಾರನ್ನೇ ಅಗಲಿ ಬಂಧಿಸಲು ಅವಕಾಶ ಕೊಟ್ಟಿದ್ದ ಕಾಯದೆ) ಬಂದಿಗಳಾಗಿದ್ದರು. ಸರಿಯಾಗಿ ಮೀಸೆಯೇ ಮೂಡಿರದಿದ್ದ ಆಗ 18-19 ವರ್ಷದ ತರುಣರಾದ ಹಾಸನದ ಪಾರಸಮಲ್ ಮತ್ತು ಅರಕಲಗೂಡಿನ ಪಟ್ಟಾಭಿರಾಮರೂ ಅವರಲ್ಲಿ ಸೇರಿದ್ದರು. ಆ ಪೈಕಿ 7 ಜನರು ಈಗ ದಿವಂಗತರು. ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರಕೈ ಸಹ ಮೀಸಾ ಬಂದಿಯಾಗಿದ್ದು, ಆಗ ಅನುಭವಿಸಿದ ಹಿಂಸೆಯ ಕಾರಣದಿಂದ ಕೆಲವು ವರ್ಷಗಳ ನಂತರದಲ್ಲಿ 30-32ರ ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಮೃತಪಟ್ಟವರು. 300ಕ್ಕೂ ಹೆಚ್ಚು ಜನರನ್ನು ಭಾರತ ರಕ್ಷಣಾ ಕಾಯದೆಯ ಅನ್ವಯ ಬಂಧಿಸಿದ್ದರು. ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಮೊಕದ್ದಮೆಗಳನ್ನು ಸಾವಿರಾರು ಜನರ ಮೇಲೆ ಹೂಡಿದ್ದರು. ಕೊನೆ ಕೊನೆಗೆ ಜೈಲುಗಳಲ್ಲಿ ಬಂದಿಗಳನ್ನು ಇಡಲು ಸಾಧ್ಯವಾಗದಾದಾಗ ಸತ್ಯಾಗ್ರಹಿಗಳನ್ನು ಬಂಧಿಸಿ, ಹೊಡೆದು, ಬಡಿದು ವಾಹನಗಳಲ್ಲಿ ಕರೆದೊಯ್ದು ದೂರದ ಸ್ಥಳಗಳಲ್ಲಿ ಬಿಟ್ಟು ಬರುತ್ತಿದ್ದ ಸಂದರ್ಭಗಳೂ ಬಂದಿದ್ದವು. ಅಂತಿಮವಾಗಿ ಜನತೆಯದೇ ಜಯವಾಯಿತು. ಜಿಲ್ಲೆಯಲ್ಲಿ ಅಂತಹ ಪ್ರೇರಣಾದಾಯಿ ಹೋರಾಟ ಮಾಡಿದವರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಲು ನಿರ್ಧರಿಸಿ ಮಿತ್ರ ಹರಿಹರಪುರ ಶ್ರೀಧರ ಮತ್ತು ನಾನು ಜಿಲ್ಲೆಯಲ್ಲಿ ಪ್ರವಾಸ ಮಾಡಿದೆವು. ಉತ್ತಮ ಸ್ಪಂದನ ಸಿಕ್ಕಿತು. ಅಂದು ಹೋರಾಡಿದ್ದ ಹಲವರು ಸ್ವರ್ಗವಾಸಿಗಳಾಗಿದ್ದರು. ಹಲವರು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯಲಿಲ್ಲ. ಹಲವರು ವೃದ್ಧಾಪ್ಯದ ಕಾರಣದ ಸಹಜ ಅನಾರೋಗ್ಯ ಕಾರಣದಿಂದ ಪ್ರಯಾಣ ಮಾಡಲು ಕಷ್ಟವಿರುವ ಸ್ಥಿತಿಯಲ್ಲಿದ್ದರು. ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಅಂದು ಬರಲು ಕಷ್ಟವಿತ್ತು. ಹಾಗಾಗಿ ನಮ್ಮ ಪ್ರಯತ್ನದ ಮಿತಿಯಲ್ಲಿ ಮಾಡಿದ ಪ್ರಯತ್ನಕ್ಕೆ ಅಂದು ಹಾಜರಿದ್ದ 80 ವೃದ್ಧತರುಣರು ಉಪಸ್ಥಿತರಿದ್ದುದು ಯಶಸ್ಸು ಸಿಕ್ಕಿತ್ತೆಂದೇ ಹೇಳಬಹುದು. ಕಾರ್ಯಕ್ರಮಕ್ಕೆ ಬರಲಾಗದಿದ್ದ ಹಲವರು ಅನೇಕ ಸಲ ದೂರವಾಣಿ ಮಾಡುತ್ತಾ, ಅದಕ್ಕಾಗಿ ಪೇಚಾಡಿಕೊಂಡು ಕಾರ್ಯಕ್ರಮದ ವಿವರ ಪಡೆಯುತ್ತಿದ್ದುದು ಅವರ ಕಳಕಳಿ ತೋರಿಸುತ್ತಿತ್ತು.
     ಜೈಲಿನಲ್ಲಿ ಬಂದಿಗಳು ಹೇಳಿಕೊಳ್ಳುತ್ತಿದ್ದ 'ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲಿ' ಎಂಬ ಸಮೂಹಗೀತೆಯನ್ನು ಎಲ್ಲರೂ ಒಕ್ಕೊರಳಿನಿಂದ ಎದೆ ಸೆಟೆಸಿ, ಚಪ್ಪಾಳೆ ಹಾಕುತ್ತಾ ಹೇಳಿದರು. ಬಂದಿದ್ದವರೆಲ್ಲರು ತಮ್ಮ ತಮ್ಮ ಅನುಭವಗಳ ಬುತ್ತಿಯನ್ನು ತೆರೆಯುತ್ತಿದ್ದಂತೆ ಕಾಲ 37 ವರ್ಷಗಳ ಹಿಂದಕ್ಕೆ ಸರಿದಿತ್ತು. ಅನುಭವಗಳನ್ನು ಹೇಳಿಕೊಳ್ಳುವಾಗ ಅವರ ಕಣ್ಣುಗಳಲ್ಲಿನ ಮಿಂಚು, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಆನಂದ, ಸಾರ್ಥಕ್ಯ ಭಾವವನ್ನು ಹೊರಸೂಸುತ್ತಿತ್ತು. ಅವರ ತಾರುಣ್ಯ ಮರುಕಳಿಸಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ರಾತ್ರಿ ಧ್ವಜಸ್ಥಂಭದ ಮೇಲೆ ಕಪ್ಪು ಧ್ವಜ ಹಾರಿಸಿ ಕೆಳಗೆ ಇಳಿದು ಬರುವಾಗ ಕಂಬಕ್ಕೆ ಗ್ರೀಸು ಹಚ್ಚಿ ಕೆಳಗೆ ಇಳಿದಿದ್ದ ಮತ್ತು ಆ ಕಾರಣಕ್ಕಾಗಿ ಪೋಲಿಸರ ಆತಿಥ್ಯ ಪಡೆದಿದ್ದ ಅರಕಲಗೂಡಿನ ಅನಂತ, ಹೊಳೆನರಸಿಪುರದ ಸಂತೆಯಲ್ಲಿ ಅಂದು ಪ್ರಸಾರ ಮಾಡುತ್ತಿದ್ದ ಭೂಗತ ಪತ್ರಿಕೆ 'ಕಹಳೆ'ಯನ್ನು ಟಾಂ ಟಾಂ ಹೊಡೆಯುತ್ತಾ ಹಂಚಿಸಿದ್ದಕ್ಕಾಗಿ ಪೋಲಿಸರಿಂದ ಹೊಡೆತ ತಿಂದಿದ್ದ ಭಗವಾನ್ ಮತ್ತು ಅವನ ಮಿತ್ರರು, ಸತ್ಯಾಗ್ರಹ ಮಾಡಿ ಬಂದಿಗಳಾಗಿದ್ದವರು, ಜೈಲಿನಲ್ಲಿ 10 ತಿಂಗಳುಗಳಿಗೂ ಹೆಚ್ಚು ಕಾಲವಿದ್ದು ಬಿಡುಗಡೆಯಾದ ನಂತರ ಮನೆಗೆ ಹೋಗದೆ ಮತ್ತೆ ಹೋರಾಟದ ಕೆಲಸಕ್ಕೆ ಆದ್ಯತೆ ನೀಡಿದ್ದ ಬೇಲೂರಿನ ರವಿ ಮತ್ತು ಗೆಳೆಯರು, ಅರಸಿಕೆರೆಯಲ್ಲಿ ನಡೆದ ರಂಗು ರಂಗಿನ ಸತ್ಯಾಗ್ರಹದ ವಿವರಗಳು, ಅನುಭವಿಸಿದ ಚಿತ್ರಹಿಂಸೆಗಳನ್ನು ತೆರೆದಿಟ್ಟ ರಾಮಚಂದ್ರ, ಗೋವಿಂದರಾಜು, ಬಸವರಾಜು, ಸತ್ಯನಾರಾಯಣ ಮುಂತಾದವರು, ಸಕಲೇಶಪುರದ ಸತ್ಯನಾರಾಯಣಗುಪ್ತ ನೀಡಿದ ರೋಚಕ ಮಾಹಿತಿಗಳು, ಹಾಸನದ ಪಾರಸಮಲ್, ನಾಗರಾಜ್, ಚಂದ್ರಶೇಖರ್, ಜಯಪ್ರಕಾಶ್ ಮುಂತಾದವರ ಅನುಭವಗಳು ನೆರೆದಿದ್ದವರನ್ನು ವಿಸ್ಮಿತಗೊಳಿಸಿದ್ದು ಸತ್ಯ. 
     ನಮ್ಮ ನಡುವೆ ಈಗ ಇಲ್ಲದ, ಸ್ವರ್ಗಸ್ಥರಾದವರ ಹೆಸರುಗಳನ್ನು ಹೇಳಲು ಬಂದವರನ್ನು ಕೋರಿದಾಗ ಸುಮಾರು 40 ಜನರ ಹೆಸರುಗಳು ಕೇಳಿಬಂದವು. ಅವರುಗಳು ಮಾಡಿದ ಕೆಲಸಗಳು ಮನಃಪಟಲದ ಮೇಲೆ ಮೂಡಿದವು. ಅಗಲಿದ ಆ ಎಲ್ಲಾ ಧೀರರಿಗೆ ಶ್ರದ್ಧಾಂಜಲಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಎಲ್ಲರ ಮಾತುಗಳನ್ನು ಕೇಳಿದ ನಂತರ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಮಾತನಾಡಿ ಸಂಕಟದ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಮಾಡಿದವರ ತ್ಯಾಗ, ಬಲಿದಾನಗಳು ಎಂದಿಗೂ ಮಾರ್ಗದರ್ಶಿಯಾಗಿ ಉಳಿಯುತ್ತದೆ ಎಂದರಲ್ಲದೆ, ಇಂದಿನ ರಾಜಕೀಯ ಪರಿಸ್ಥಿತಿಯಿಂದಾಗಿ ಧೃತಿಗೆಡದೆ ದೇಶಹಿತವನ್ನು ಮುಂದಿರಿಸಿಕೊಂಡು ಕೆಲಸ ಮಾಡಲು ಮತ್ತು ಯುವಕರಿಗೆ ಪ್ರೇರಿಸಲು ಕೇಳಿಕೊಂಡರು. ಹಿರಿಯರಾದ ಶ್ರೀ ಕೆ.ಎನ್. ದುರ್ಗಪ್ಪಶ್ರೇಷ್ಠಿಯವರು "ಆದರ್ಶದ ಬೆನ್ನು ಹತ್ತಿ . ." ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
     ಹಿಂದೆ ಮೀಸಾ ಬಂದಿಗಳಾಗಿದ್ದು, ಈಗ ನಮ್ಮ ನಡುವೆ ಇರುವ ಜಿಲ್ಲೆಯ 6 ಜನರ ಪೈಕಿ ಸಮಾವೇಶದಲ್ಲಿ ಹಾಜರಿದ್ದ ಅರಸಿಕೆರೆಯ ಶ್ರೀ ಕೆ.ಎನ್. ದುರ್ಗಪ್ಪ ಶ್ರೇಷ್ಠಿ, ಶ್ರೀ ಕೆ. ಆರ್. ಶ್ರೀನಿವಾಸ ಮೂರ್ತಿ, ಹಾಸನದ ಪಾರಸಮಲ್ ಮತ್ತು ಸಕಲೇಶಪುರದ ಶ್ರೀ ಸತ್ಯನಾರಾಯಣ ಗುಪ್ತರನ್ನು ಸನ್ಮಾನಿಸಲಾಯಿತು. ಮಾರ್ಗದರ್ಶಿ ಭಾಷಣ ಮಾಡಿದ ಮತ್ತು ಕಾರ್ಯಕ್ರಮಕ್ಕೆ ಪ್ರೇರೇಪಣೆ ನೀಡಿದ್ದ ಶ್ರೀ ಸು. ರಾಮಣ್ಣನವರನ್ನು ಗೌರವಿಸಲಾಯಿತು. 'ಆದರ್ಶದ ಬೆನ್ನು ಹತ್ತಿ . .' ಕೃತಿಯ ಲೇಖಕರನ್ನು ಅಭಿನಂದಿಸಲಾಯಿತು. ಹರಿಹರಪುರ ಶ್ರೀಧರ್ ಸಹಕರಿಸಿದ ಎಲ್ಲರಿಗೆ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮ ಬಂದಿದ್ದವರಿಗೆ ಸಂತೋಷ ನೀಡಿದ್ದರೆ, ಆಯೋಜಿಸಿದವರಿಗೆ ಧನ್ಯತಾಭಾವ ಮೂಡಿಸಿತ್ತು.

ಸಮಾವೇಶದ ಕೆಲವು ದೃಷ್ಯಗಳಿವು: