ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಡಿಸೆಂಬರ್ 18, 2012

ಸಂತಸದ ಕ್ಷಣದಲ್ಲಿ ಹೊರಬಂದ ಮಾತುಗಳು


      ದಿನಾಂಕ 29-11-2012ರಂದು ನಡೆದ "ಆದರ್ಶದ ಬೆನ್ನು ಹತ್ತಿ. . " ಪುಸ್ತಕದ ಬಿಡುಗಡೆ ಕಾರ್ಯಕ್ರಮ ನನಗೆ ತೃಪ್ತಿ ಮತ್ತು ಸಂತೋಷ ನೀಡಿದೆ. ನನ್ನ ಹಿಂದಿನ "ಕವಿ ಸುಬ್ರಹ್ಮಣ್ಯಯ್ಯ" ಮತ್ತು "ಮೂಢ ಉವಾಚ"ದ ಬಿಡುಗಡೆ ಸಂದರ್ಭಗಳಲ್ಲಿ ಇಂತಹ ಅನುಭವ ನನಗಾಗಿರಲಿಲ್ಲ. ಸನ್ಮಾನ್ಯ ಶ್ರೀ ಸು. ರಾಮಣ್ಣನವರ ಪ್ರೇರಣೆ, ಕಳಕಳಿ ಅದ್ಭುತ ಕೆಲಸ ಮಾಡಿಸಿದೆ. ಮಿತ್ರ ಹರಿಹರಪುರ ಶ್ರೀಧರ ಪ್ರತಿ ಹಂತದಲ್ಲಿ ನನ್ನೊಡನೆ ಸಹಕರಿಸಿದ್ದಾರೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಸಂತ್ರಸ್ತರಾಗಿದ್ದವರು, ಹೋರಾಡಿದ್ದವರು ಆ ಸಂದರ್ಭದಲ್ಲಿ ಸೇರಿದ್ದು ಅವಿಸ್ಮರಣೀಯವಾಗಿತ್ತು. ಒಬ್ಬ ಲೇಖಕನಾಗಿ ಅಂದಿನ ಸಮಾರಂಭದಲ್ಲಿ ನನ್ನಿಂದ ಹೊರಬಂದಿದ್ದ ಮಾತುಗಳಿವು:
      ನಾನೊಬ್ಬ ಭಾವಜೀವಿ. ನನಗೆ ಬಹಳ ಸಂತೋಷವಾಗಿದೆ. ಮನದ ಭಾವನೆಗಳನ್ನು ಹೊರಹಾಕುವ ಮಾಧ್ಯಮಗಳಲ್ಲಿ ಒಂದಾದ ಬರವಣಿಗೆಗೆ ಇತ್ತೀಚಿನ ಕೆಲವು ವರ್ಷಗಳಿಂದ ನಾನು ತೊಡಗಿಕೊಂಡಿದ್ದೇನೆ. ಒಳಗೇ ಇದ್ದ ಭಾವನೆಗಳ ಒತ್ತಡದಿಂದ ಪಾರಾಗಲು ನನಗೆ ನೆರವಾಗಿರುವುದೇ ಈ ಬರವಣಿಗೆ. ಕಲ್ಪನೆಯ ವಸ್ತುಗಳು, ಸಂಗತಿಗಳು ನನ್ನ ಬರಹದ ವಸ್ತುಗಳಲ್ಲ. ಈ ಜೀವನದ ಶಾಲೆ ನನಗೆ ಕಲಿಸಿದ ಅನೇಕ ರೀತಿಯ ಪಾಠಗಳೇ ನನ್ನ ಬರಹದ ಮೂಲ ವಸ್ತುಗಳಾಗಿವೆ. ಸುಮಾರು 350-400 ರಷ್ಟು ಬಿಡಿ ಲೇಖನಗಳು, ಕವನಗಳು ನನ್ನ ಸ್ವಂತದ ಕವಿಮನ, ವೇದಜೀವನ ಅಂತರ್ಜಾಲ ತಾಣಗಳಲ್ಲಿ, ಕರ್ನಾಟಕದ ಕನ್ನಡದ ಅತಿ ದೊಡ್ಡ ಸಮುದಾಯ ತಾಣವಾದ ಸಂಪದದಲ್ಲಿ ಪ್ರಕಟವಾಗಿದೆ. ಇವನ್ನು ಯಾವುದೇ ಪತ್ರಿಕೆಗಳಿಗೆ, ಮ್ಯಾಗಝೈನುಗಳಿಗೆ ಪ್ರಕಟಿಸಲು ಕೋರಿ ಕಳಿಸಿಲ್ಲ. ಈ ತಾಣಗಳಲ್ಲಿ ನನ್ನ ಸೇವಾಕಾಲದ ಅನುಭವಗಳನ್ನು ಕಂತುಗಳಲ್ಲಿ ಸೇವಾಪುರಾಣ ಎಂಬ ರ್ಶೀಕೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿದಾಗ ಸಿಕ್ಕ ಓದುಗರ ಪ್ರತಿಕ್ರಿಯೆಗಳು, ಮೆಚ್ಚುಗೆಗಳು ನನ್ನನ್ನು ಹೆಚ್ಚು ಬರೆಯಲು ಪ್ರೋತ್ಸಾಹ ಕೊಟ್ಟಿತು. ಇದು ಇನ್ನೂ ಮುಗಿದಿಲ್ಲ. ಈ ಸೇವಾಪುರಾಣ ಮಾಲಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳನ್ನು 'ಸರಳುಗಳ ಹಿಂದಿನ ಲೋಕ' ಎಂಬ ಶೀರ್ಷಿಕೆಯಲ್ಲಿ ದಾಖಲಿಸಿದ್ದೆ. ಈ ಭಾಗದ ಲೇಖನಗಳಿಗೆ ಸಿಕ್ಕ ಪ್ರೋತ್ಸಾಹ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಹೆಚ್ಚಿನವರು ಇದನ್ನು ಪುಸ್ತಕ ರೂಪದಲ್ಲಿ ಹೊರತರಲು ಒತ್ತಾಯಿಸಿದ್ದರು. ಅದಕ್ಕೆ ಈಗ ಸಮಯ ಬಂದಿದೆ. ಸರಳುಗಳ ಹಿಂದಿನ ಲೋಕ ಎಂಬುದರ ಬದಲಿಗೆ ಮಿತ್ರ ಶ್ರೀಧರ್ ಸೂಚಿಸಿದ 'ಆದರ್ಶದ ಬೆನ್ನು ಹತ್ತಿ . ." ಎಂಬ ರ್ಶೀಕೆಯಲ್ಲಿ ಪ್ರಕಟವಾಗಿದೆ. ಸನ್ಮಾನ್ಯ ಶ್ರೀ ಸು.ರಾಮಣ್ಣನವರು ಹಿಂದೊಮ್ಮೆ ಹಾಸನಕ್ಕೆ ಬಂದಿದ್ದಾಗ ಅವರಿಗೆ ಈ ವಿಷಯ ತಿಳಿಸಿ, ತುರ್ತು ಪರಿಸ್ಥಿತಿ ಕಾಲದ ಅನುಭವಗಳ ಕರಡನ್ನು ಅವರಿಗೆ ಕಳಿಸಿಕೊಟ್ಟು, ಪ್ರಕಟಿಸಲು ಯೋಗ್ಯವೆಂದು ಅನ್ನಿಸಿದರೆ ಮಾತ್ರ ಮುನ್ನುಡಿ ಬರೆದುಕೊಡಬೇಕೆಂದು ಕೋರಿದ್ದೆ. ಅವರು ಮುನ್ನುಡಿ ಬರೆದು ಮೆಚ್ಚುಗೆಯ ಮಾತನ್ನಾಡಿದ್ದರಿಂದ ಧೈರ್ಯ ಮಾಡಿ ಪ್ರಕಟಿಸಿರುವೆ. ಒಬ್ಬರು ಅಖಿಲ ಭಾರತ ಮಟ್ಟದ ಹಿರಿಯ ಪ್ರಚಾರಕರಾದ ಅವರು ಆಗಾಗ್ಗೆ ಈ ಬಗ್ಗೆ ವಿಚಾರಿಸುತ್ತಿದ್ದುದಲ್ಲದೆ, ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದು ನನಗೆ ಅವರ ಬಗ್ಗೆ ಗೌರವ ನೂರ್ಮಡಿಯಾಗಿದೆ. ಅವರಿಗೆ ನನ್ನ ಹೃದಯದಾಳದ ಕೃತಜ್ಞತೆಗಳು.
     ಈ ಪುಸ್ತಕದಲ್ಲಿ ನನ್ನ ಅನುಭವಗಳ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿದ್ದ ಜನರ ಮನೋಭಾವ ಹೇಗಿತ್ತು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಠತೆ ದೇಶವನ್ನು ಹೇಗೆ ಅಧೋಗತಿಗೆ ಒಯ್ಯುತ್ತದೆ ಎಂಬುದರ ಅರಿವು ಮೂಡಿಸುವ ಯತ್ನವನ್ನೂ ಮಾಡಿದ್ದೇನೆ. ಇಡೀ ದೇಶದಲ್ಲಿ ನಡೆದಂತೆ ಕರ್ನಾಟಕದಲ್ಲೂ, ಹಾಸನದಲ್ಲೂ ನಡೆದ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಇತಿಹಾಸವನ್ನು ಜನರು ಮರೆತುಬಿಡಬಾರದು. ಈ ಜಿಲ್ಲೆಯಲ್ಲಿ 13 ಜನರು ಮೀಸಾ ಪ್ರಕಾರ ಬಂಧಿಗಳಾಗಿದ್ದು ಆ ಪೈಕಿ 7 ಜನರು ನಮ್ಮೊಂದಿಗೆ ಈಗ ಇಲ್ಲ. ಉಳಿದಿರುವ 6 ಜನರ ಪೈಕಿ ಅತಿ ಹಿರಿಯರೆಂದರೆ ಅರಸಿಕೆರೆಯ ಶ್ರೀ ದುರ್ಗಪ್ಪಶೆಟ್ಟರು ಮತ್ತು ಶ್ರೀ ಶ್ರೀನಿವಾಸಮೂರ್ತಿಗಳು. ಇನ್ನೂ ಮೀಸೆಯೇ ಬರದಿರುವ ಆಗಿನ್ನೂ 18-19 ವರ್ಷದ ತರುಣರಾಗಿದ್ದ ಪಾರಸಮಲ್ ಮತ್ತು ಪಟ್ಟಾಭಿರಾಮ ಸಹ ಮೀಸಾದಲ್ಲಿ ಬಂಧಿಗಳಾಗಿದ್ದವರು. ಬಹುಷಃ ಪಾರಸಮಲ್ ಕರ್ನಾಟಕದ ಮೀಸಾ ಬಂದಿಗಳ ಪೈಕಿ ಅತಿ ಕಿರಿಯ ವ್ಯಕ್ತಿ ಅನ್ನುವುದು ವಿಶೇಷ. ಸುಮಾರು 300 ಜನರು ಭಾರತ ರಕ್ಷಣಾ ಕಾಯದೆ ಪ್ರಕಾರ ಬಂದಿಗಳಾಗಿದ್ದರು. ಕ್ರಿಮಿನಲ್ ಪ್ರೊಸೀಜರ್ ಕೋಡಿನ ವಿವಿಧ ಕಲಮುಗಳ ಪ್ರಕಾರ ಸಾವಿರಾರು ಜನರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಈ ಪುಸ್ತಕದಲ್ಲಿ ನನ್ನ ಅನುಭವಗಳನ್ನು ಇಲ್ಲಿ ಹೇಳಿಕೊಂಡಿರುವುದು ನಿಮಿತ್ತ ಮಾತ್ರ. ನನ್ನೊಡನೆ ಸಹಬಂದಿಗಳಾಗಿದ್ದ ನೂರಾರು ಮಿತ್ರರುಗಳು ಅನುಭವಿಸಿದ ಕಷ್ಟ-ನಷ್ಟಗಳು, ನೋವುಗಳ ಮುಂದೆ ನನ್ನದು ಏನೂ ಅಲ್ಲವೇ ಅಲ್ಲ. ನಿಜ ಹೇಳಬೇಕೆಂದರೆ ಅವರುಗಳ ತ್ಯಾಗ-ಬಲಿದಾನಗಳೇ ನನ್ನಂತಹವರು ನಂಬಿದ ಮಾರ್ಗವನ್ನು ಬಿಡದಿರಲು ಪ್ರೇರಿಸಿದ್ದು ಮತ್ತು ಹತಾಶೆಗೆ ಒಳಗಾಗದಂತೆ ಕಾಯ್ದಿದ್ದು. ಅವರೆಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ತಂದೆ-ತಾಯಿ, ಅಜ್ಜಿ, ನನ್ನ ಬಂಧುಗಳು ಆ ಸಂದರ್ಭದಲ್ಲಿ ತೋರಿಸಿದ ಅಕ್ಕರೆ, ವಿಶ್ವಾಸಗಳನ್ನು ನಾನು ನೆನೆಯಲೇ ಬೇಕು. ನನ್ನೊಡನೆ ಸ್ನೇಹಿತರು, ಬಂಧುಗಳು, ಸಹೋದ್ಯೋಗಿಗಳೂ ಸಹ ಮಾತನಾಡಲೂ ಹೆದರುತ್ತಿದ್ದರು. ನನ್ನನ್ನು ಮಾತನಾಡಿಸಿದರೆ ಅವರಿಗೆ ಎಲ್ಲಿ ತೊಂದರೆಯಾಗುತ್ತೋ ಅನ್ನುವ ಭಯ ಅವರಿಗೆ. ಹಾಗಾಗಿ ಆಗ ನನಗೆ ಸ್ನೇಹಿತರಾಗಿದ್ದವರೆಂದರೆ ಗ್ರಂಥಾಲಯದ ಪುಸ್ತಕಗಳು ಮಾತ್ರ. ಆದರೆ ಇಬ್ಬರು ಮಹನೀಯರನ್ನು ನಾನು ನೆನೆಯಲೇಬೇಕು. ನನ್ನ ಮಾತುಗಳನ್ನು ಆಗ ಸಾವಧಾನವಾಗಿ ಕೇಳುತ್ತಿದ್ದವರೆಂದರೆ ಖಾದಿ ಭಂಡಾರದ ನರಸಿಂಹಮೂರ್ತಿಗಳು ಮತ್ತು ಸೈಂಟ್ ಜೋಸೆಫ್ ಸ್ಕೂಲ್ ಎದುರಿಗೆ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ಜನಾರ್ಧನ ಅಯ್ಯಂಗಾರರು ಮಾತ್ರ. ನನ್ನ ಒಳಗೇ ಹೂತು ಹೋಗುತ್ತಿದ್ದ ಮಾತುಗಳಿಗೆ ಔಟ್ ಲೆಟ್ ಆಗಿದ್ದ  ಅವರುಗಳು ಈಗ ಇಲ್ಲ. ತುರ್ತು ಪರಿಸ್ಥಿತಿ ಜಾರಿಗೆ ಬಂದಾಗ ನಾನು ಆಗಿನ್ನೂ ಸರ್ಕಾರಿ ಕೆಲಸಕ್ಕೆ ಸೇರಿ 2 ವರ್ಷಗಳಾಗಿತ್ತಷ್ಟೆ. ಆರೆಸ್ಸೆಸ್ಸಿನ ಕಾರ್ಯಕರ್ತ ಎಂಬ ಕಾರಣಕ್ಕಾಗಿ ನನ್ನ ಮೇಲೆ 13 ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದ್ದರು. ಬೇರೆ ಬೇರೆ ಕೇಸುಗಳು ಸೇರಿ ಒಟ್ಟು 6  ತಿಂಗಳುಗಳ ಕಾಲ ಹಾಸನದ ಜೈಲಿನಲ್ಲಿದ್ದೆ. ಒಂದೂವರೆ ವರ್ಷದ ಕಾಲ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ವಿಚಾರಣೆ ಕಾಯ್ದಿರಿಸಿ ನನ್ನನ್ನು ದೂರದ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿಗೆ ವರ್ಗ ಮಾಡಿದ್ದರು. ಆ ಸಂದರ್ಭದಲ್ಲಿ ಅಂದರೆ 37 ವರ್ಷಗಳ ಹಿಂದೆ ಸೇಡಂನಲ್ಲಿ ನನಗೆ ತಹಸೀಲ್ದಾರರಾಗಿದ್ದ ಶ್ರೀ ಬಿ.ವಿ.ಸ್ವಾಮಿಯವರು ಈಗ ಹಾಸನದಲ್ಲೇ ಇದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದ ಅವರು ನನಗೆ ನೈತಿಕ ಬೆಂಬಲ ನೀಡಿದ್ದವರು. ಅವರಿಗೂ ಕೃತಜ್ಞ.
     ಈ ಪುಸ್ತಕದ ಬಿಡುಗಡೆಗೆ ಮತ್ತು ಜೆಲ್ಲೆಯ ಹೋರಾಟಗಾರರನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಹರಿಹರಪುರ ಶ್ರೀಧರ್, ಪಾರಸಮಲ್, ಶಾಸ್ತ್ರಿ, ಅರಸಿಕೆರೆಯ ಸತ್ಯನಾರಾಯಣ, ಬೇಲೂರಿನ ರವಿ, ರಾಜು, ಹೊಳೆನರಸಿಪುರದ ಭಗವಾನ್, ಶಂಕರಾಚಾರಿ, ಅರಕಲಗೂಡಿನ ಹಿರಿಯಣ್ಣ, ಸಕಲೇಶಪುರದ ಸತ್ಯನಾರಾಯಣ ಗುಪ್ತ, ಹೀಗೆ ಹತ್ತು ಹಲವಾರು ಜನರು ಕೈಗೂಡಿಸಿದ್ದಾರೆ. ಮಿತ್ರ ಶ್ರೀಧರ್ ಪ್ರತಿ ಹಂತದಲ್ಲಿ ನನ್ನೊಡನೆ ಇದ್ದು ಅಮೂಲ್ಯ ಸಹಕಾರ ನೀಡಿದ್ದಾರೆ. ಹೆಸರು ಹೇಳಿದವರು ಮಾತ್ರ ಈ ಕೆಲಸ ಮಾಡಿದ್ದಾರೆ ಅಂದುಕೊಳ್ಳಬಾರದು. ಸಂಘದ ಎಲ್ಲ ಕಾರ್ಯಕರ್ತರೂ ತಮ್ಮ ಸಹಕಾರ ನೀಡಿದ್ದಾರೆ. ನಾನು ಎಲ್ಲರ ಹೆಸರನ್ನು ಹೇಳಿಲ್ಲ ಅಂತ ಯಾರೂ ತಪ್ಪು ತಿಳಿಯಬಾರದು. ಮಾನ್ಯ ರಾಮಣ್ಣನವರು ಸ್ವತಃ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಲ್ಲದೆ, ದೂರವಾಣಿ ಮೂಲಕ ಸಹ ಜಿಲ್ಲೆಯ ಹಲವಾರು ಕಾರ್ಯಕರ್ತರಿಗೆ ನೆನಪಿಸಿದ್ದು, ಅವರ ಕಾಳಜಿ, ಕಳಕಳಿ ಬಗ್ಗೆ ನಾನು ಮೂಕನಾಗಿದ್ದೇನೆ. ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಸ್ಥಳದ ಜೊತೆಗೆ ಧನದ ಸಹಕಾರವನ್ನೂ ನೀಡಿದ್ದಾರೆ. ಪ್ರಕಾಶ ಯಾಜಿ, ನಾಗಭೂಷಣ, ರಾಜು, ಶಾಮಸುಂದರ್, ರಾಮಸ್ವಾಮಿ, ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟ ಬಾಲಾಜಿ ಪ್ರಿಂಟರ್ಸ್ ಪಾಂಡುರಂಗ, ಮೈಕ್ ಕುಮಾರಸ್ವಾಮಿ, ಪತ್ರಕರ್ತ ಪ್ರಭಾಕರ್ ಮುಂತಾದವರ ಸಹಕಾರಕ್ಕೆ ನನ್ನ ವಂದನೆಗಳನ್ನು ಸಲ್ಲಿಸುವುದು ನನ್ನ ಕರ್ತವ್ಯ. ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ನೀಡಿದ ಎಲ್ಲ ಪತ್ರಕರ್ತರಿಗೂ ನನ್ನ ವಂದನೆಗಳು. ನನ್ನ ಸಹಜ ಮರೆವಿನಿಂದ ಯಾರನ್ನಾದರೂ ಹೆಸರಿಸದೆ ಬಿಟ್ಟಿದ್ದರೆ ಅದು ಉದ್ದೇಶ ಪೂರ್ವಕ ಅಲ್ಲ, ಯಾರೂ ತಪ್ಪು ತಿಳಿಯದೆ ದೊಡ್ಡ ಮನಸ್ಸು ಮಾಡಬೇಕು. ಪ್ರತ್ಯಕ್ಞ, ಪರೋಕ್ಷ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ನನ್ನ ಕೃತಜ್ಞತೆಗಳು.
     ಈ ಜಿಲ್ಲೆಯ ಎಲ್ಲಾ ಹೋರಾಟಗಾರರು ತಮ್ಮ ತಮ್ಮ ಅನುಭವಗಳನ್ನು ದಾಖಲಿಸಿ, ಅವುಗಳೆಲ್ಲವನ್ನೂ ಸಂಗ್ರಹಿಸಿ ಜಿಲ್ಲೆಯ ಹೋರಾಟದ ಸಮಗ್ರ ಚಿತ್ರಣ ಹೊರತರಬೇಕು, ಆ ಮೂಲಕ ಅದು ಇತಿಹಾಸದ ಕಾಲಗರ್ಭದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಬಯಕೆ. ಈಗಾಗಲೇ ಹೆಚ್ಚಿನವರು ಸ್ವರ್ಗಸ್ಥರಾಗಿದ್ದಾರೆ. ಉಳಿದಿರುವವರೂ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಆದ್ದರಿಂದ ಈ ಕೆಲಸ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಗಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಆಸಕ್ತರು ಕೈಜೋಡಿಸಿದರೆ ಇದು ಕಷ್ಟವೇನಲ್ಲ. ಸಂಘದ ಜಿಲ್ಲೆಯ ಕಾರ್ಯಕರ್ತರು ಈ ಬಗ್ಗೆ ಗಮನಿಸುವುದು ಸಂಘದ ಕಾರ್ಯದೃಷ್ಟಿಯಿಂದ ಅಪೇಕ್ಷಣೀಯ. ಈಗಿನವರಿಗೆ ಇದು ಖಂಡಿತಾ ಪ್ರೇರಣೆ ನೀಡುತ್ತದೆ. ಈ ಕಾರ್ಯಕ್ಕೆ ನನ್ನ ಯಾವುದೇ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ. ನನ್ನ ಈ ಪುಸ್ತಕದ ಬಿಡುಗಡೆ ಇದಕ್ಕೆ ನಾಂದಿಯಾಗಲಿ ಎಂದು ಹಾರೈಸುತ್ತೇನೆ. 
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ