ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಭಾನುವಾರ, ಏಪ್ರಿಲ್ 29, 2012

ಮೂಢ ಉವಾಚ - 83


ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..೨೮೫


ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು |
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ || ..೨೮೬


ಒಳಗಣ್ಣು ಮುಚ್ಚಿದ್ದು ಹೊರಗಣ್ಣು ತೆರೆದಿರಲು
ಕಣ್ಣಿದ್ದು ಕುರುಡನೆನಿಸುವೆಯೋ ನೀನು |
ಒಳಗಿವಿ ಮುಚ್ಚಿದ್ದು ಹೊರಗಿವಿ ತೆರೆದಿರಲು
ನಿನ್ನ ದನಿಯೇ ನಿನಗೆ ಕೇಳಿಸದು ಮೂಢ || ..೨೮೭


ಸಜ್ಜನರು ಹಿತವಾಗಿ ಧೀಬಲವು ಮೇಳವಿಸಿ
ಜ್ಞಾನಿಗಳ ಹಿತನುಡಿಯು ನಾಯಕಗೆ ನೆರವಾಗೆ |
ಅಂತಿಪ್ಪ ನಾಡು ಪುಣ್ಯವಂತರ ಬೀಡು
ಸಜ್ಜನರ ಒಡನಾಟ ಹಿತಕಾರಿ ಮೂಢ || ..೨೮೮
************
-ಕ.ವೆಂ.ನಾಗರಾಜ್.

ಶುಕ್ರವಾರ, ಏಪ್ರಿಲ್ 27, 2012

ಮಕ್ಕಳು ಆಚರಿಸಿದ ಬಸವ ಜಯಂತಿ

     ಬಸವ ಜಯಂತಿಯ ಹಿಂದಿನ ದಿನ ಮೊಮ್ಮಗಳು ಅಕ್ಷಯ 'ಬಸವ ಜಯಂತಿ' ಅಂದರೇನು ತಾತಾ? ಎಂದು ಪ್ರಶ್ನಿಸಿದಾಗ ಅವರೊಬ್ಬರು ನಮ್ಮ ದೇಶದ ಮಹಾಪುರುಷರು, ನಾಳೆ ಅವರ ಜನ್ಮದಿನ ಎಂದು ಹೇಳಿದೆ. ನಾವೂ ಅವರ ಬರ್ತ್ ಡೇ ಮಾಡೋಣ ಎಂದಾಗ 'ಆಗಲಿ, ನಿನ್ನ ಸ್ನೇಹಿತರನ್ನೆಲ್ಲಾ ಕರಿ, ಒಟ್ಟಿಗೇ ಮಾಡೋಣ' ಎಂದಾಗ ಅವಳಿಗೆ ಖುಷಿಯೋ ಖುಷಿ. ಬೆಳಿಗ್ಗೆ ಬೇಗ ಎದ್ದು  ಸ್ನಾನ ಮುಗಿಸಿ ತನ್ನ ಸ್ನೇಹಿತರನ್ನೆಲ್ಲಾ ಸೇರಿಸಿಯೇ ಬಿಟ್ಟಳು. ಬಸವಣ್ಣನವರ ಫೋಟೋ ಕೊಟ್ಟಾಗ ಅವಳು, ಅವಳ ಸ್ನೇಹಿತರೇ ಸೇರಿ ಅಲಂಕಾರ ಮಾಡಿದರು.  ದೀಪ ಹಚ್ಚಿ, ಹೂವು ಏರಿಸಿ, ಗಂಧದ ಕಡ್ಡಿಗಳನ್ನು ಬೆಳಗಿ ಸಂಭ್ರಮಿಸಿದರು. ತಾತ, ಅಜ್ಜಿ  ಹೇಳಿದಂತೆ ಮಾಡಿದ ಆ ಪುಟ್ಟ ಮಕ್ಕಳ ಸಂಭ್ರಮದ ಘಳಿಗೆಗಳನ್ನು ಸೆರೆಹಿಡಿದಿರುವೆ. ಈ ಕೆಳಗಿನ ಆರು ವಿಡಿಯೋಗಳ ಒಟ್ಟು ಅವಧಿ ಕೇವಲ 6-7 ನಿಮಿಷಗಳಷ್ಟೆ. ಅವರ ಖುಷಿ ಮಾತ್ರ ಬೆಟ್ಟದಷ್ಟು. ನೀವೂ ಅವರ ಸಂಭ್ರಮದಲ್ಲಿ ಪಾಲುದಾರರಾಗುವಿರಾ?

ದೀಪ ಹಚ್ಚಿದರು:
           
ಅಕ್ಷಯಳ ಪ್ರಾರ್ಥನೆ
           

ಸುಮನ್ವಿತಾಳಿಂದ ಸಂದೇಶ
          

ನಿತಿನ್ ಹಾಡಿದ ವಚನ
           

ಅಕ್ಷಯಳಿಂದ ವಚನ
           

ಕೊನೆಯಲ್ಲಿ ಬೀದಿಯಲ್ಲಿ ಘೋಷಣೆಗಳೊಡನೆ ಪುಟ್ಟ ಮೆರವಣಿಗೆ
           
     ನಂತರ ಆಟೋಟಗಳನ್ನು ಮುಗಿಸಿ ಅಜ್ಜಿ, ತಾತ ಕೊಟ್ಟ ಬಹುಮಾನ, ಪ್ರಸಾದ ಪಡೆದ ಮಕ್ಕಳು ಇಟ್ಟ ಕೋರಿಕೆ:
 "ನಾಡಿದ್ದು  'ಶಂಕರ ಜಯಂತಿ'ಯಂತೆ. ಅದನ್ನೂ ಮಾಡೋಣವಾ?"

ಸೋಮವಾರ, ಏಪ್ರಿಲ್ 23, 2012

ಅಪ್ರತಿಮ ಚಿತ್ರ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ (೧೮೭೯-೧೯೪೩)


     ಕೆಲವರು ಬದುಕಿಯೂ ಸತ್ತಂತಿರುತ್ತಾರೆ. ಕೆಲವರು ಸತ್ತರೂ ಜನಮಾನಸದಲ್ಲಿ ಬದುಕಿಯೇ ಇರುತ್ತಾರೆ. ಅಂತಹ ಕೆಲವು ಅಪರೂಪದ ಜೀವಂತ ವ್ಯಕ್ತಿತ್ವ ಹೊಂದಿದವರ ಪೈಕಿ ಒಬ್ಬರು ಸಾಗರದ ಕವಿ ಲಿಂಗಣ್ಣಯ್ಯನವರು. ಯಾವುದೇ ವ್ಯಕ್ತಿಯನ್ನು ಜನ ನೆನೆಯುವುದು ಅವರ ಕೃತಿಗಳಿಂದಲೇ ಹೊರತು ಅವರು ಮಾಡಿಟ್ಟಿದ್ದ ಆಸ್ತಿ-ಪಾಸ್ತಿಗಳಿಂದಲ್ಲ. ಕೆಳದಿ ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದವರಾದ ಲಿಂಗಣ್ಣಯ್ಯ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದವರು. ಸಂಬಂಧದಲ್ಲಿ ನನಗೆ ಅವರು ನನ್ನ ಮುತ್ತಜ್ಜ ಕವಿ ವೆಂಕಣ್ಣನವರ ತಮ್ಮ - ಅಂದರೆ ಚಿಕ್ಕ ಮುತ್ತಜ್ಜ - ಆಗಬೇಕು. ಬೆಂಗಳೂರಿನ ಅಠಾರಾ ಕಛೇರಿಯಲ್ಲಿ (ಈಗಿನ ಉಚ್ಛ ನ್ಯಾಯಾಲಯದ ಕಟ್ಟಡ) ಸ್ಟಾಂಪ್ ಸೂಪರ್‌ವೈಸರ್ ಆಗಿ ವೃತ್ತಿ ಪ್ರಾರಂಭಿಸಿದ್ದ ಇವರು ಸೊರಬದಲ್ಲಿ ಸಬ್ ರಿಜಿಸ್ಟ್ರಾರರೂ ಆಗಿದ್ದರು. ಒಳ್ಳೆಯ ಸಂಗೀತಗಾರರು, ವೀಣಾ ವಿದ್ವಾಂಸರು ಸಹ ಆಗಿದ್ದ ಇವರು ಬೆಂಗಳೂರಿನ ವಿಶ್ವೇಶ್ವರಪುರ ಸಜ್ಜನರಾವರ ವೃತ್ತದ ಸಮೀಪದಲ್ಲಿ ರೋಷನ್ ಬಾಗ್ ರಸ್ತೆ (ಬುರುಗಲ್ ಮಠ ರಸ್ತೆ)ಯಲ್ಲಿ ಶ್ರೀ ಕಾಂತರಾಜಾ ಕ್ರೋಮೋ ಲಿಥೋ ಮುದ್ರಣಾಲಯ ಸ್ಥಾಪಿಸಿ ವಾಣಿಜ್ಯೋದ್ಯಮಿಯಾಗಿಯೂ ಹೆಸರು ಮಾಡಿದ್ದವರು. ಶಾಲಾ ಕಾಲೇಜುಗಳಿಗೆ ವಿವಿಧ ಭೂಪಟಗಳನ್ನು ಸ್ವತಃ ತಾವೇ ಸಿದ್ದಪಡಿಸಿ ಒದಗಿಸುತ್ತಿದ್ದವರು. ಜ್ಯೋತಿಷ್ಯ, ವೈದ್ಯಕೀಯ, ಫೋಟೋಗ್ರಫಿ, ಮುಂತಾಧ ರಂಗಗಳಲ್ಲೂ ಗುರುತಿಸಿಕೊಂಡಿದ್ದವರು. ಒಳ್ಳೆಯ ಸಾಹಿತಿಯೂ ಆಗಿದ್ದರು. ಇವರ ಸಾಧನೆಯ ಒಂದೊಂದು ಕ್ಷೇತ್ರದ ಕುರಿತೂ ವಿವರಿಸ ಹೊರಟರೆ ಒಂದು ದೊಡ್ಡ ಉದ್ಗ್ರಂಥವೇ ಆಗುತ್ತದೆ. ಒಳ್ಳೆಯ ಚಿತ್ರ ಕಲಾವಿದರಾಗಿದ್ದ ಇವರ ಕೆಲವು ಕೃತಿಗಳ ಫೋಟೋಗಳನ್ನು ತಮ್ಮ ಅವಲೋಕನಕ್ಕಾಗಿ ಕೊಟ್ಟಿರುವೆ.
     ವರ್ಣಚಿತ್ರಗಳಿಗೆ ಲಿಂಗಣ್ಣಯ್ಯನವರು ಬಳಸಿರುವ ಬಣ್ಣಗಳು ಪರಿಸರ ಸ್ನೇಹಿ ಮತ್ತು ಸ್ವಯಂ ನಿರ್ಮಿತವಾದದ್ದು ಎಂಬುದು ವಿಶೇಷ. ಆ ಕಾಲದಲ್ಲಿ ಪ್ರಚಲಿತವಿದ್ದ ಹೆಸರುವಾಸಿ ಬಣ್ಣಗಳು ವಿದೇಶಿಯಾಗಿದ್ದು ದುಬಾರಿ ಬೆಲೆಯದಾಗಿದ್ದವು. ಇವರೇ ಸ್ವತಃ ಗ್ರಂದಿಗೆ ಅಂಗಡಿಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಸಿದ್ಧಪಡಿಸಿದ ಬಣ್ಣಗಳು ಯಾವುದೇ ವಿದೇಶೀ ಬಣ್ಣಗಳಿಗಿಂತಲೂ ಕಡಿಮೆಯಲ್ಲ ಮತ್ತು ಕಡಿಮೆ ದರದಲ್ಲಿ ಸಿದ್ಧಪಡಿಸಲು ಸಾಧ್ಯವೆಂದು ತೋರಿಸಿಕೊಟ್ಟವರಿವರು. ರಾಮಾಯಣವನ್ನು ಸುಮಾರು ೭೦೦ ಚಿತ್ರಗಳ ಮೂಲಕ ರಚಿಸಿ ರಾಮಾಯಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದವರು. ಭಾಗವತವನ್ನೂ ಸಹ ಚಿತ್ರಗಳ ಮೂಲಕ ತೆರೆದಿಟ್ಟವರು. ಪೂರ್ಣ ಭಗವದ್ಗೀತೆಯ ಶ್ಲೋಕಗಳನ್ನೇ ಬಳಸಿಕೊಂಡು ರಚಿಸಿದ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಬೃಹತ್ ವರ್ಣಚಿತ್ರ ಇವರ ಸಾಧನೆಗೆ ಹಿಡಿದ ಕನ್ನಡಿ. ವಾಯುಸ್ತುತಿ (ದೇವನಾಗರಿ ಮತ್ತು ಕನ್ನಡ ಲಿಪಿಗಳಲ್ಲಿ ಪ್ರತ್ಯೇಕವಾಗಿ) ಬಳಸಿ ರಚಿಸಿದ ಮಾರುತಿ, ಲಲಿತಾ ಸಹಸ್ರನಾಮ ಬಳಸಿ ರಚಿಸಿದ ಲಲಿತಾ ತ್ರಿಪುರ ಸುಂದರಿ, ವಿಷ್ಣು ಸಹಸ್ರನಾಮ ಬಳಸಿ ರಚಿಸಿದ ವಿಷ್ಣು, ಮುಂತಾದುವುಗಳನ್ನು ಈಗಿನಷ್ಟು ಸೌಲಭ್ಯಗಳು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ರಚಿಸಿರುವುದು ಇವರ ಅಗಾಧ ಕರ್ತೃತ್ವ ಮತ್ತು ತಾಳ್ಮೆಗೆ ಉದಾಹರಣೆಗಳಾಗಿವೆ. ಶ್ರೀರಾಮ ಪಟ್ಟಾಭಿಷೇಕ. ವಿಶ್ವರೂಪದರ್ಶನದ ಚಿತ್ರಪಟಗಳೂ ನಿಬ್ಬೆರಗಾಗಿಸುತ್ತವೆ. ಸೂರ್ಯ ಮುಳುಗದ ಸಾಮ್ರಾಜ್ಯವೆನಿಸಿದ್ದ ಇಂಗ್ಲೆಂಡಿನ ಆಗಿನ ಎಲ್ಲೆಗಳನ್ನು ತೋರಿಸುವ ದಿ ಗಾರ್ಡಿಯನ್ ಏಂಜೆಲ್ ಆಫ್ ದಿ ಬ್ರಿಟಿಷ್ ಎಂಪೈರ್ ಚಿತ್ರ ವಿದೇಶೀಯರೂ ಸೇರಿದಂತೆ ಎಲ್ಲರನ್ನೂ ಆಕರ್ಷಿಸಿದೆ. ಇದರಲ್ಲಿ ಮುಖಭಾಗ ಇಂಗ್ಲೆಂಡ್ ಆಗಿದ್ದರೆ, ಕೈಗಳಲ್ಲಿ ಆಸ್ಟ್ರೇಲಿಯಾ, ಕೆನಡಾ, ತೊಡೆಯಲ್ಲಿ ಅಮೆರಿಕಾ ಪ್ರಾಂತಗಳು, ಹೂ ಮುಡಿದಂತೆ ತೋರುವ ಐರ‍್ಲೆಂಡ್, ಕಿರೀಟದಲ್ಲಿ ಸ್ಕಾಟ್ಲೆಂಡ್, ಇತ್ಯಾದಿಗಳನ್ನು ತೋರಿಸಿದ್ದರೆ ಹೃದಯ ಭಾಗದಲ್ಲಿ ಭಾರತವನ್ನು ತೋರಿಸಲಾಗಿದೆ. ಇವರ ಅನೇಕ ಕೃತಿಗಳು ಈಗ ಅಲಭ್ಯವಾಗಿವೆ. ಇರುವ ಕೃತಿಗಳೂ ಜೀರ್ಣವಾಗಿ ಅಳಿಯುವ ಹಂತದಲ್ಲಿವೆ. ಹಲವಾರು ಕೃತಿಗಳು ಸಂಬಂಧಿಗಳ ಮನೆಯಲ್ಲಿವೆ. ಹಲವನ್ನು ಕೆಳದಿ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು. ಇವರ ರಚನೆಗಳನ್ನು ಸಂರಕ್ಷಿಸುವ ಕೆಲಸವನ್ನು ಈಗ ಕುವೆಂಪು ವಿಶ್ವ ವಿದ್ಯಾನಿಲಯದ ಆಡಳಿತಕ್ಕೊಳಪಟ್ಟ ಕೆಳದಿ ವಸ್ತು ಸಂಗ್ರಹಾಲಯ ಮಾಡಬೇಕಿರುವುದು ಇಂದಿನ ಅಗತ್ಯವಾಗಿದೆ. ಸಂಬಂಧಿಸಿದವರು ಈ ಕೆಲಸ ಮಾಡುವರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.
-ಕ.ವೆಂ.ನಾಗರಾಜ್.
ಆಧಾರ: ಕೆಳದಿ ಗುಂಡಾಜೋಯಿಸರ ಕೃತಿ: ಚಿತ್ರ ಕಲಾವಿದ ಕವಿ ಲಿಂಗಣ್ಣಯ್ಯ ಮತ್ತು ಸೋದರ
            ಕವಿಸುರೇಶರ ಕೃತಿ: Karmayogi Kalavallabha S.K. LINGANNAIYA’
****************












ಮಂಗಳವಾರ, ಏಪ್ರಿಲ್ 17, 2012

ಮೂಢ ಉವಾಚ - 82


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ || ..೨೮೧


ಹಿರಿಯ ಪರ್ವತದ ಬದಿಯೆ ಕಂದಕವು
ಮೂಢರಿರಲಾಗಿ ಬುದ್ಧಿವಂತಗೆ ಬೆಲೆಯು |
ಸುಖವ ಬಯಸಿರಲು ಜೊತೆಗಿರದೆ ದುಃಖ
ಒಂದರಿಂದಾಗಿ ಮತ್ತೊಂದು ಮೂಢ || ..೨೮೨


ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || ..೨೮೩


ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲ
ಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|
ಇರುವುದು ಸಾಕೆಂಬ ಭಾವ ಸಂತೋಷ
ಅರಿತವನೆ ಪರಮಸುಖಿ ಕಾಣು ಮೂಢ || ..೨೮೪
*************
-ಕ.ವೆಂ.ನಾಗರಾಜ್.

ಶನಿವಾರ, ಏಪ್ರಿಲ್ 14, 2012

ಪುಣ್ಯವೆನ್ನಿರಿ



ಕಾಣಿರೋ ಕಾಣಿರೋ ನೀವು ಕಾಣಿರೋ
ನರಜನ್ಮ ಸಿಕ್ಕಿಹುದು ಪುಣ್ಯವೆನ್ನಿರೋ |
ಪಶು ಪಕ್ಷಿ ಕ್ರಿಮಿ ಕೀಟ ಅಲ್ಲ ಕಾಣಿರೋ
ಯೋಚಿಸುವ ಶಕ್ತಿಯಿದೆ ಧನ್ಯರೆನ್ನಿರೋ ||


ನೂರಾರು ಜನ್ಮಗಳ ಫಲವು ತಿಳಿಯಿರೋ
ಏರುವುದು ಕಷ್ಟವಿದೆ ಜಾರಬೇಡಿರೋ |
ಜ್ಞಾನದ ಬೆಳಕಿನಲ್ಲಿ ಸತ್ಯ ಅರಿಯಿರೋ
ಅಟ್ಟಡುಗೆಯುಣಬೇಕು ವಿಧಿಯಿಲ್ಲವೋ ||


ಜ್ಞಾನಿಗಳ ಅರಿತವರ ನುಡಿಯ ಕೇಳಿರೋ
ಅನುಭವವೇ ದೊಡ್ಡ ಗುರು ನಿಜವ ಕಾಣಿರೋ |
ಸಂಪ್ರದಾಯದುರುಳಲ್ಲಿ ಸಿಕ್ಕಬೇಡಿರೋ
ಅರ್ಥವರಿತು ಪಾಲಿಸುವ ಮನಸ ಮಾಡಿರೋ ||


ದೇವನಿರದ ಜಾಗವಿಲ್ಲ ಅವಗೆ ನಮಿಸಿರೋ
ಹೃದಯವೇ ಅವನಿರುವ ಮೂಲಸ್ಥಾನವೋ |
ಮಠ ಮಂದಿರ ಚರ್ಚುಗಳ ಹಂಗಿಲ್ಲವೋ
ಜ್ಞಾನಜ್ಯೋತಿ ಬೆಳಗುವುದೆ ಪೂಜೆ ಕಾಣಿರೋ ||


ಹೊಗಳಿಕೆಗೆ ಉಬ್ಬನು ತೆಗಳಿಕೆಗೆ ಕುಗ್ಗನೋ
ಸ್ತುತಿ ನಿಂದೆ ಎಲ್ಲಾ ಒಂದೆ ನಿರ್ವಿಕಾರನವನೋ |
ಜಾತಿ ಭೇದ ಅವಗಿಲ್ಲ ನಿಮಗದು ಮತ್ತೇತಕೋ
ವಿಶ್ವಪ್ರಿಯನ ಮಕ್ಕಳಾಗಿ ಪ್ರಿಯರಾಗಿ ಬಾಳಿರೋ ||


ಹೀನ ದೀನ ಆರ್ತರ ಕಣ್ಣೀರು ಒರೆಸಿರೋ
ಇದಕಿಂತ ಪರಮ ಪೂಜೆ ಬೇರಿಲ್ಲ ತಿಳಿಯಿರೋ |
ಬರಿಗೈಲಿ ಬಂದವರು ಏನ ಹೊತ್ತೊಯ್ಯುವಿರೋ
ಇರುವುದೇ ಮೂರು ದಿನ ನಗುನಗುತಾ ಬಾಳಿರೋ ||
***********
-ಕ.ವೆಂ.ನಾಗರಾಜ್.

ಸೋಮವಾರ, ಏಪ್ರಿಲ್ 9, 2012

ಸತ್ಯ ಮುಚ್ಚಿಟ್ಟ ಸಾವಿತ್ರಿ

     ಇದು ಸುಮಾರು ೬ ವರ್ಷಗಳ ಹಿಂದೆ ನಡೆದ ಸತ್ಯ ಘಟನೆ. [ಹೆಸರುಗಳನ್ನು ಬದಲಿಸಿದೆ.]  ಬಸವಣ್ಣಪ್ಪನಿಗೆ ನಾಲ್ವರು -ಇಬ್ಬರು ಗಂಡು, ಇಬ್ಬರು ಹೆಣ್ಣು- ಮಕ್ಕಳು. ಹಿರಿಯ ಮಗ ಮತ್ತು ಹಿರಿಯ ಮಗಳಿಗೆ ಮದುವೆಯಾಗಿತ್ತು. ಎರಡನೆಯ ಮಗಳು ಸಾವಿತ್ರಿಗೆ ಆಗಲೇ ೨೩ ವರ್ಷವಾಗಿದ್ದು ಮದುವೆಗೆ ಗಂಡು ನೋಡುತ್ತಿದ್ದರು. ಪರಿಚಯದವರೊಬ್ಬರು ಸಮೀಪದ ಗ್ರಾಮದ ಈಶ್ವರಪ್ಪನ ಮಗ ಗಣೇಶನಿಗೆ ಏಕೆ ಕೊಡಬಾರದೆಂದು ಪ್ರಸ್ತಾಪಿಸಿದಾಗ ಪರಸ್ಪರರು ಭೇಟಿ ಮಾಡಿ ಮಾತುಕತೆ ನಡೆಸಿದರು. ಉಭಯತ್ರರಿಗೂ ಒಪ್ಪಿಗೆಯಾದಾಗ ಗಂಡು-ಹೆಣ್ಣು ನೋಡುವ, ಕೊಡುವ-ಬಿಡುವ ಮಾತು, ಶಾಸ್ತ್ರಗಳು ಜರುಗಿದವು. ಮಾಡಬೇಕಾದ ವರೋಪಚಾರಗಳನ್ನೂ ಮಾಡುವುದರೊಂದಿಗೆ ಸಾಂಪ್ರದಾಯಿಕವಾಗಿ ಮದುವೆಯೂ ಆಯಿತು. ನೆಂಟರ, ಬೀಗರ ಔತಣಗಳು ಎಲ್ಲವೂ ಸುಸೂತ್ರವಾಗಿ ಮುಗಿದು, ಗಣೇಶ-ಸಾವಿತ್ರಿ ಸತಿಪತಿಗಳೆನಿಸಿದರು.
     ನಿಜವಾದ ಕಥೆ ಪ್ರಾರಂಭವಾಗುವುದೇ ಈಗ. ಶುಭದಿನವೊಂದನ್ನು ನೋಡಿ ಪ್ರಸ್ತಕ್ಕೆ ಪ್ರಶಸ್ತ ದಿನ ಆರಿಸಿದರು. ಅಂದು ರಾತ್ರಿ ಸಾವಿತ್ರಿ ತುಂಬಾ ಹೊಟ್ಟೆನೋವು ಬಂದು ಒದ್ದಾಡಲು ಪ್ರಾರಂಭಿಸಿದ್ದನ್ನು ಕಂಡ ಗಣೇಶ ಕಕ್ಕಾಬಿಕ್ಕಿಯಾದ. ಸಂಕೋಚದಿಂದಲೇ ಬಾಗಿಲು ತೆರೆದು ಹೊರಬಂದ ಅವನು ಮನೆಯವರಿಗೆ ವಿಷಯ ತಿಳಿಸಿದ. ಗುರುತಿದ್ದ ಪಕ್ಕದ ಹಳ್ಳಿಯ ಡಾಕ್ಟರರಿಗೆ ಫೋನು ಮಾಡಿದರೆ ಅವರು ಕರೆದುಕೊಂಡು ಬರಲು ತಿಳಿಸಿದರು. ಗಣೇಶ ಹೆಂಡತಿಯನ್ನು ಮೋಟಾರ್ ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಪರೀಕ್ಷೆ ಮಾಡಿದ ವೈದ್ಯರು ಗಣೇಶನ ಬೆನ್ನು ತಟ್ಟಿ 'ನೀನು ತಂದೆಯಾಗುತ್ತಿದ್ದೀಯಾ, ನಿನ್ನ ಹೆಂಡತಿಗೆ ಈಗ ಎರಡೂವರೆ ತಿಂಗಳು' ಎಂದು ಶಹಭಾಶಗಿರಿ ಹೇಳಿದಾಗ ಅವನು ಕುಸಿದು ಹೋಗಿದ್ದ. ಮಾತನಾಡದೆ ಪತ್ನಿಯನ್ನು ಮನೆಗೆ ವಾಪಸು ಕರೆತಂದ. ಅವನ ಸ್ವಪ್ನ ಸೌಧ ಬಿದ್ದು ಹೋಗಿತ್ತು. ನಂತರ ಏನು ನಡೆಯಬಹುದೋ ಅದೇ ನಡೆಯಿತು. ಮೋಸ ಮಾಡಿ ಮದುವೆ ಮಾಡಿದ ಬಗ್ಗೆ ಗಣೇಶನ ಮನೆಯವರು ಕ್ರುದ್ಧರಾಗಿದ್ದರು. ಸಾವಿತ್ರಿಗೆ ಕಿರುಕುಳ ಪ್ರಾರಂಭವಾಯಿತು. 
     ಮಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ತಂದೆ ಬಸವಣ್ಣಪ್ಪನಿಗೆ ಗೊತ್ತಾಗಿ ಆತ ತನ್ನ ಇನ್ನೊಬ್ಬ ಬೀಗರಾದ ಕುಳ್ಳಪ್ಪನನ್ನು ಕರೆದುಕೊಂಡು ಗಣೇಶನ ಮನೆಗೆ ಹೋಗಿ ಮಾತನಾಡಿದ್ದರು, ಸಹಜವಾಗಿ ಅವರಿಗೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ಇದಾಗಿ ಕೆಲವು ದಿನಗಳ ನಂತರ ಗಣೇಶ, ಅವನ ತಂದೆ,ತಾಯಿ ಮತ್ತು ಕೆಲವರು ಹಿರಿಯರು ಸೇರಿ ಬಸವಣ್ಣಪ್ಪನ ಮನೆಗೆ ನ್ಯಾಯ ಪಂಚಾಯಿತಿ ಮಾಡಲು ಬಂದರು. 'ಈ ಊರಿನಲ್ಲಿ ಪಂಚಾಯಿತಿ ಮಾಡುವುದು ಬೇಡ, ಚೆನ್ನಾಗಿರುವುದಿಲ್ಲ, ನಾವೇ ನಿಮ್ಮೂರಿಗೆ ಬರುತ್ತೇವೆ' ಎಂದು ಹೇಳಿದ ಬಸವಣ್ಣಪ್ಪ ಪಂಚಾಯಿತಿಗೆ ಒಪ್ಪಲಿಲ್ಲ. ಸಾವಿತ್ರಿಯನ್ನು ತಂದೆಯ ಮನೆಯಲ್ಲೇ ಬಿಟ್ಟು ಬಂದವರು ಮರಳಿದರು.      
     ಒಂದೆರಡು ತಿಂಗಳು ಕಳೆಯಿತು. ಒಂದಲ್ಲಾ ಒಂದು ಕಾರಣದಿಂದ ಪಂಚಾಯಿತಿ ಸರಿಯಾಗಿ ನಡೆಯಲೇ ಇಲ್ಲ. ಒಂದು ದಿನ ಗಣೇಶನೇ ಮಾವನಿಗೆ ಫೋನು ಮಾಡಿ 'ನೀವೇನೂ ಪಂಚಾಯಿತಿ ಮಾಡುವುದು ಬೇಡ, ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ' ಎಂದು ತಿಳಿಸಿದ. ಬಸವಣ್ಣಪ್ಪ ಸಾವಿತ್ರಿಯನ್ನು ಕರೆದುಕೊಂಡು ಹೋಗಿ ಬೀಗರ ಮನೆಗೆ ಬಿಟ್ಟು ಬಂದ. ಎಲ್ಲವೂ ಸರಿಹೋದೀತು ಎಂಬುದು ಅವನ ನಿರೀಕ್ಷೆಯಾಗಿತ್ತು. ಇಷ್ಟಾದರೂ ಸಾವಿತ್ರಿ ತುಟಿ ಬಿಚ್ಚಿರಲಿಲ್ಲ, ಏನನ್ನೂ ಹೇಳಿರಲಿಲ್ಲ. 
     ಸುಮಾರು ೧೦-೧೨ ದಿನಗಳ ನಂತರ ಬೈಕಿನಲ್ಲಿ ಸಾವಿತ್ರಿಯನ್ನು ಕೂರಿಸಿಕೊಂಡು ಮಾವನ ಮನೆಗೆ ಬಂದ ಗಣೇಶ ಅಂದು ಮಧ್ಯಾಹ್ನ ಅಲ್ಲಿಯೇ ಊಟ ಮಾಡಿದರು. 'ಕೂಲಿ ಕೆಲಸಕ್ಕೆ ದಾವಣಗೆರೆಗೆ ಹೋಗುತ್ತಿದ್ದೇವೆ, ಸ್ವಲ್ಪ ದಿವಸ ಊರಿಗೆ ಹೋಗುವುದಿಲ್ಲ' ಎಂದು ಹೇಳಿದವನು ಅಂದು ಮಧ್ಯಾಹ್ನವೇ ಊಟದ ನಂತರ ಅಲ್ಲಿಂದ ಬೈಕಿನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಹೊರಟ. ಸಾಯಂಕಾಲ ಸುಮಾರು ೭.೩೦ರ ಸಮಯದಲ್ಲಿ ಬಸವಣ್ಣಪ್ಪನ ಪಕ್ಕದ ಮನೆಗೆ ಫೋನು ಮಾಡಿ ದಾವಣಗೆರೆಯಲ್ಲಿ ಇರುವುದಾಗಿಯೂ, ಏನೂ ತೊಂದರೆಯಿಲ್ಲವೆಂದೂ, ಚೆನ್ನಾಗಿದ್ದೇವೆಂದೂ ಗಣೇಶ ಮತ್ತು ಸಾವಿತ್ರಿ ಇಬ್ಬರೂ ತಿಳಿಸಿದರು.
      ಮರುದಿನ ಬೆಳಿಗ್ಗೆ ಬಸವಣ್ಣಪ್ಪ ಎಂದಿನಂತೆ ಜಮೀನಿನ ಕೆಲಸದಲ್ಲಿ ತೊಡಗಿಕೊಂಡಿದ್ದ. ಅಗ ಅವನ ಪರಿಚಯಸ್ಥರು ಓಡುತ್ತಾ ಬಂದು ಬಸವಣ್ಣಾ, ಬೇಗ ಹೊರಡು, ನಿನ್ನ ಅಳಿಯ ವಿಷ ಕುಡಿದಿದ್ದಾನೆ, ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ತಿಳಿಸಿದಾಗ ಗಾಬರಿಗೊಂಡ ಅವನು ಮಿತ್ರರ ಬೈಕಿನಲ್ಲಿ ಅಳಿಯನ ಊರಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ. ಅಲ್ಲಿ ಗಣೇಶನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ತಿಳಿಯಿತು. ಮಗಳ ಕುರಿತು ವಿಚಾರಿಸಿದರೆ ಯಾರೂ ಸ್ಪಷ್ಟ ಮಾಹಿತಿ ಕೊಡಲಿಲ್ಲ, ತಮಗೆ ಗೊತ್ತಿಲ್ಲವೆಂದರು. ಶಿವಮೊಗ್ಗ ಆಸ್ಪತ್ರೆಗೂ ಹೋಗಿ ನೋಡಿದರೆ ಅಳಿಯ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಮಗಳ ಸುಳಿವಿರಲಿಲ್ಲ. ಮರುದಿನ ಬೆಳಿಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ 'ತಮ್ಮ ಮಗಳ ಪತ್ತೆಯಿಲ್ಲ, ಹುಡುಕಿಕೊಡಿ' ಎಂದು ಬಸವಣ್ಣಪ್ಪ ದೂರು ದಾಖಲಿಸಿದ. ಸ್ವಲ್ಪ ಸಮಯದ ನಂತರದಲ್ಲಿ ಊರ ಹೊಳೆಯ ಹತ್ತಿರ ಯಾರದೋ ಚಪ್ಪಲಿ, ವಾಚು ಬಿದ್ದಿದೆ ಅಂತ ಊರಿನವರು ಮಾತನಾಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದು, ಉಳಿದವರೊಂದಿಗೆ ಅವನೂ ಹೊಳೆಯ ಹತ್ತಿರ ಹೋಗಿ ನೋಡಿದರೆ, ಅವು ಬಸವಣ್ಣಪ್ಪನ ಮಗಳದ್ದೇ ಆಗಿದ್ದವು. ಹುಡುಕಿ ನೋಡಿದರೆ ಅಲ್ಲಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾಳು ಕಸ ಕಡ್ಡಿ, ಬಳ್ಳಿಗಳು ತುಂಬಿದ್ದ ಹೊಳೆಯ ಹತ್ತಿರದ ಹಳುವಿನಲ್ಲಿ ಅಂಗಾತವಾಗಿ ಸಿಕ್ಕಿಕೊಂಡಿದ್ದ ಹೆಣ ಕಂಡು ಬಂತು. ಹೆಣ ಕೆಸರಿನಲ್ಲಿದ್ದು ಗುರುತು ಹಿಡಿಯುವುದು ಕಷ್ಟವಾಗಿದ್ದರೂ, ಬಟ್ಟೆಯ ಆಧಾರದಲ್ಲಿ ಅದು ಮಗಳು ಸಾವಿತ್ರಿಯದೇ ಎಂದು ಬಸವಣ್ಣಪ್ಪ ಕಂಡುಕೊಂಡ. ತಲೆಯ ಮೇಲೆ ಕೈಹೊತ್ತು ಕುಸಿದು ಕುಳಿತ. 
     ಘಟನೆ ನಡೆದ ತಾಲ್ಲೂಕಿನ ತಹಸೀಲ್ದಾರರು ಸಾಂದರ್ಭಿಕ ರಜೆಯಲ್ಲಿದ್ದರಿಂದ ಪಕ್ಕದ ತಾಲ್ಲೂಕಿನಲ್ಲಿ ತಹಸೀಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿದ್ದ ನನ್ನನ್ನು ಪೋಲಿಸ್ ಕೋರಿಕೆಯಂತೆ ಶವತನಿಖೆಗೆ ಅಧಿಕೃತಗೊಳಿಸಿ ಅಸಿಸ್ಟೆಂಟ್ ಕಮಿಷನರರು ಫ್ಯಾಕ್ಸ್ ಸಂದೇಶ ಕಳಿಸಿದರು. ನಾನು ತಕ್ಷಣ ಸಂಬಂಧಿಸಿದ ಗುಮಾಸ್ತರನ್ನು ಕರೆದುಕೊಂಡು ಹೊರಟರೂ ತಲುಪುವ ವೇಳೆಗೆ ಸಾಯಂಕಾಲವಾಗುವ ಸಂಭವವಿದ್ದುದರಿಂದ ಪೆಟ್ರೋಮ್ಯಾಕ್ಸ್ ಲೈಟುಗಳಿಗೆ ವ್ಯವಸ್ಥೆ ಮಾಡಿರಲು ಹಾಗೂ ಸರ್ಕಾರೀ ವೈದ್ಯರಿಗೂ ಸೂಚಿಸಿ ಬಂದಿರಲು ತಿಳಿಸಿರಲು ಫೋನ್ ಮೂಲಕವೇ ಸೂಚನೆ ಕೊಟ್ಟೆ. ಅರ್ಧ ದಾರಿಯಲ್ಲಿ ಅಲ್ಲಿನ  ಸರ್ಕಲ್ ಇನ್ಸ್‌ಪೆಕ್ಟರರು, ಅವರ ಸಿಬ್ಬಂದಿ ಜೊತೆಗೂಡಿದರು. ಶವವಿದ್ದ ಸ್ಥಳ ಇನ್ನೂ ಸುಮಾರು ೩ ಕಿ.ಮೀ. ಇದ್ದಂತೆಯೇ ಜೀಪು ಹೋಗಲು ದಾರಿಯಿಲ್ಲದೆ ನಡೆದೇ ಹೋಗಬೇಕಿತ್ತು. ಮಳೆಗಾಲವಾಗಿದ್ದು ಮೋಡ ಮುಸುಕಿ ಜಿಟಿ ಜಿಟಿ ಮಳೆ ಬೀಳುತ್ತಿದ್ದಂತೆಯೇ ನಮ್ಮ ಸವಾರಿ ಮುಂದುವರೆಯಿತು. ನಾಟಿ ಮಾಡಿದ್ದ ಜಾರುತ್ತಿದ್ದ ಬದಿಗಳಲ್ಲಿ ಎಚ್ಚರಿಕೆಯಿಂದ ಬೀಳದಂತೆ ಹೆಜ್ಜೆಯಿಟ್ಟು ನಡೆಯಬೇಕಿತ್ತು. ನಮ್ಮ ಗ್ರಾಮಸಹಾಯಕನೊಬ್ಬ ನನಗೆ ಟಾರ್ಚು ಹಿಡಿದು ದಾರಿ ತೋರಿಸಲು ತಿರಿತಿರುಗಿ ನೋಡುತ್ತಾ ಹೋಗುತ್ತಿದ್ದಾಗ ಜಾರಿಬಿದ್ದು ಮೈಕೈಯೆಲ್ಲಾ ಕೆಸರು ಮಾಡಿಕೊಂಡಿದ್ದು ಅಂತಹ ವಿಷಾಧದ ಸಂದರ್ಭದಲ್ಲೂ ಎಲ್ಲರಿಗೆ ನಗು ತರಿಸಿತ್ತು. ಅವನು ಬಿದ್ದದ್ದು ಉಳಿದವರು ಇನ್ನೂ ಎಚ್ಚರಿಕೆಯಿಂದ ನಡೆಯುವಂತೆ ಮಾಡಿತ್ತು. ಆ ಕತ್ತಲೆಯ ಸಂಜೆಯಲ್ಲಿ ಗದ್ದೆಯ ಬದಿಯಲ್ಲಿ ಪೆಟ್ರೋಮ್ಯಾಕ್ಸ್ ಲೈಟುಗಳು, ಹಗ್ಗಗಳು, ಗಳುಗಳು, ಛತ್ರಿಗಳು, ಇತ್ಯಾದಿಗಳನ್ನು ಹಿಡಿದುಕೊಂಡು ನಾವುಗಳು ಹೋಗುತ್ತಿದ್ದುದನ್ನು ದೂರದಿಂದ ನೋಡಿದವರಿಗೆ ಕೊಳ್ಳಿದೆವ್ವಗಳಂತೆ ಕಂಡಿರಲೂ ಸಾಕು. ಪಾಪ, ಡಾಕ್ಟರರೂ ತಮ್ಮ ಒಬ್ಬ ಸಹಾಯಕನೊಂದಿಗೆ ಸಲಕರಣೆಗಳನ್ನು ಹಿಡಿದುಕೊಂಡು ನಮ್ಮೊಂದಿಗೆ ಹೆಜ್ಜೆ ಹಾಕಿದ್ದರು. 
     ಅಂತೂ ಶವವಿದ್ದ ಸ್ಥಳ ತಲುಪಿದೆವು. ಶವವೋ ಅಲ್ಲಿದ್ದ ಹಳುಗಳ ನಡುವೆ ಸಿಕ್ಕಿಕೊಂಡಿದ್ದು ಕಾಣಿಸುತ್ತಿದ್ದರೂ, ಅದನ್ನು ಅಲ್ಲಿಂದ ಬಿಡಿಸಿ ಹೊರತರಲು ಕೆಳಗಿನ ಸಿಬ್ಬಂದಿ ಸುಮಾರು ಒಂದು ಗಂಟೆಯ ಕಾಲ ಹೆಣಗಬೇಕಾಯಿತು. ಶವಕ್ಕೆ ಕೆಸರು ಮೆತ್ತಿದ್ದರಿಂದ ನೀರು ಸುರಿದು ಸ್ವಚ್ಛಗೊಳಿಸಬೇಕಾಯಿತು. ಆ ದೃಷ್ಯ ಭೀಕರವಾಗಿತ್ತು, ದುರ್ವಾಸನೆ ತಡೆಯುವಂತಿರಲಿಲ್ಲ. ಸುಮಾರು ೨-೩ ದಿನಗಳು ನೀರಿನಲ್ಲೇ ಕೊಳೆತಿದ್ದ ಆ ಶವದ ನಾಲಿಗೆ ಹೊರಚಾಚಿ ಕಚ್ಚಿಕೊಂಡಿದ್ದು, ನಾಲಿಗೆ ಊದಿದ್ದರಿಂದ ಬಾಯಿಯಲ್ಲಿ ಬಲೂನು ಇಟ್ಟುಕೊಂಡಿದ್ದಂತೆ ಕಾಣುತ್ತಿತ್ತು. ತಲೆಯಲ್ಲಿ ಕೂದಲು ಇರಲಿಲ್ಲ, ತಲೆಯಚರ್ಮ ಕೊಳೆತಿದ್ದರಿಂದ ಕಳಚಿಹೋಗಿತ್ತು. ಎರಡೂ ಕೈಗಳು ಶೆಟಗೊಂಡಿದ್ದವು. ಬಲಗೈ ಮಣಿಕಟ್ಟಿನ ಹತ್ತಿರ ಸುಮಾರು ಮೂರು ಇಂಚು ಉದ್ದ, ಎರಡೂವರೆ ಇಂಚು ಅಗಲದ ಕಡಿತದಿಂದಾದ ರೀತಿಯ ಗಾಯವಿತ್ತು. ಹೊಟ್ಟೆಯಿಂದ ಕರುಳು ಹೊರಬಂದಿದ್ದು, ಇಡೀ ದೇಹ ಊದಿಕೊಂಡಿತ್ತು. ದೇಹದ ಅಲ್ಲಲ್ಲಿ ಜಲಚರಗಳು ದೇಹವನ್ನು ತಿಂದಿದ್ದವು. ಈ ಲೇಖನ ಬರೆಯುತ್ತಿರುವಾಗಲೂ ಆ ದೃಷ್ಯ ಕಣ್ಣ ಮುಂದೆ ರಾಚಿದಂತೆ ಇದೆ. ಗಮನಿಸಿದ ಸಂಗತಿಗಳನ್ನು ಪಂಚರ ಸಮಕ್ಷಮದಲ್ಲಿ ದಾಖಲಿಸಿ ಸಂಬಂಧಿಸಿದ ಎಲ್ಲರ ಸಹಿ ಪಡೆದೆ. ಮೃತಳ ತಂದೆಯ ಮತ್ತು ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡೆ. ಪ್ರಾರಂಭದಲ್ಲಿ ಹೇಳಿದ ಸಂಗತಿಗಳು ದಾಖಲಿಸಿಕೊಂಡ ಹೇಳಿಕೆಗಳಲ್ಲಿವೆ. ನಂತರದಲ್ಲಿ ಸರ್ಕಾರಿ ವೈದ್ಯರಿಗೆ ಪೋಸ್ಟ್ ಮಾರ್ಟಮ್ ಮಾಡಿ ವರದಿಯನ್ನು ಪೋಲಿಸರಿಗೆ ತಲುಪಿಸಲು ಹಾಗೂ ಆ ನಂತರದಲ್ಲಿ ವಾರಸುದಾರರಿಗೆ ಶವವನ್ನು ಅಂತ್ಯ ಸಂಸ್ಕಾರಕ್ಕೆ ತಲುಪಿಸಲು ಸೂಚನೆ ನೀಡಿ ಹೊರಬಂದೆ. ಇದು ಶೀಲ ಶಂಕಿಸಿ ನಡೆದ ಕೊಲೆಯೆಂದು ಮೇಲುನೋಟಕ್ಕೆ ಗೋಚರವಾಗುವಂತಹ ಸಂಗತಿಯಾಗಿತ್ತು. ಕೊಲೆ ಮಾಡಿ ನದಿಗೆ ಎಸೆಯಲಾಗಿದ್ದ ಶವ ಕೊಚ್ಚಿಕೊಂಡು ಹೋಗಿ ಸುಮಾರು ಎರಡು ಕಿ.ಮೀ. ದೂರದ ಹಳುವಿನಲ್ಲಿ ಸಿಕ್ಕಿಕೊಂಡಿತ್ತು. ಸತ್ಯ ಮುಚ್ಚಿಟ್ಟು ಮದುವೆ ಮಾಡಿರದಿದ್ದರೆ ಬಹುಷಃ ಹೀಗೆ ಆಗುತ್ತಿರಲಿಲ್ಲವೇನೋ! ಮನೆಗೆ ಬಂದು ತಲುಪಿದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು.  ಆಗ ಸ್ನಾನ ಮಾಡಿ ಬಂದವನಿಗೆ ಊಟ ಮಾಡುವುದಿರಲಿ, ಮಡದಿ ಕೊಟ್ಟ ಕಾಫಿ ಸಹ ಕುಡಿಯಬೇಕೆನ್ನಿಸಲಿಲ್ಲ. ಸೂರನ್ನು ದಿಟ್ಟಿಸುತ್ತಾ ಮಲಗಿದವನಿಗೆ ಅದು ಯಾವಾಗಲೋ ನಿದ್ರೆ ಬಂದಿತ್ತು. 
-ಕ.ವೆಂ.ನಾಗರಾಜ್.
**********************
[ಪೂರಕ ಮಾಹಿತಿ:
     ಯಾವುದೇ ಹೆಣ್ಣುಮಗಳು ಮದುವೆಯಾದ ೭ ವರ್ಷಗಳ ಒಳಗೆ ಮೃತಳಾದರೆ ಅದನ್ನು ವರದಕ್ಷಿಣೆಗಾಗಿ ಆದ ಸಾವೆಂಬ ಹಿನ್ನೆಲೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರು ಅಥವ ಮೇಲ್ಪಟ್ಟ ಅಧಿಕಾರಿ ಶವತನಿಖೆ ನಡೆಸಬೇಕಾಗಿರುತ್ತದೆ. ಪೋಲಿಸರಿಂದ ಪ್ರಥಮ ವರ್ತಮಾನ ವರದಿಯೊಡನೆ ಶವತನಿಖೆಗೆ ಕೋರಿಕೆ ಸ್ವೀಕರಿಸಿದ ನಂತರ ತನಿಖೆ ಮಾಡಲಾಗುತ್ತದೆ. ವರದಿಯನ್ನು ನ್ಯಾಯಾಲಯಕ್ಕೆ ಕಳಿಸಿಕೊಡಲಾಗುತ್ತದೆ. ಇದು ಪೋಲಿಸ್ ತನಿಖೆಗೆ ಪರ್ಯಾಯವಲ್ಲ. ಇದು ಕೇವಲ ಹೆಚ್ಚುವರಿ ತನಿಖೆಯಾಗಿರುತ್ತದೆ. ಇತರ ಕೊಲೆ/ಸಾವುಗಳ ಪ್ರಕರಣಗಳಲ್ಲಿ ನಡೆಯುವಂತೆ ಪೋಲಿಸರೇ ಪೂರ್ಣ ತನಿಖೆ ನಡೆಸಿ ಮೊಕದ್ದಮೆ ದಾಖಲು ಮಾಡುತ್ತಾರೆ ಮತ್ತು ಪ್ರಕರಣ ಸಾಬೀತು ಪಡಿಸುವ ಹೊಣೆಗಾರಿಕೆ ಅವರದ್ದು ಮತ್ತು ಸರ್ಕಾರಿ ಅಭಿಯೋಜಕರುಗಳದ್ದಾಗಿರುತ್ತದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ತಹಸೀಲ್ದಾರರನ್ನೂ ಸಾಕ್ಷಿಯಾಗಿ ಕರೆಸಲಾಗುತ್ತದೆ.] 
ಹಿಂದಿನ ಲೇಖನ: 'ಕ್ರೌರ್ಯ  ಕೇಕೆ  ಹಾಕಿತು'ಗೆ ಲಿಂಕ್: 

ಶನಿವಾರ, ಏಪ್ರಿಲ್ 7, 2012

ಕೆಟ್ಟವರಿರಬೇಕು


ಕೆಟ್ಟವರಿರಬೇಕ . . ಜಗದಿ. .  ಕೆಟ್ಟವರಿರಬೇಕ. .
ಕೆಟ್ಟವರಿದ್ದರೆ ಒಳಿತಿಗೆ ಬೆಲೆಯು ಕೆಟ್ಟವರಿರಬೇಕ. .



ರಕ್ಕಸರಿರಬೇಕ . . ಹಿಂಸೆಯು
ಮಿತಿಯ ಮೀರಬೇಕ . .
ಸುಮ್ಮನೆ ಕುಳಿತಿಹ ಸಜ್ಜನ
ಶಕ್ತಿ ಮೇಲೆ ಏಳಲಾಕ . .


ರಾವಣರಿರಬೇಕ . . ನೀತಿಯು
ಶೋಕಿಸುತಿರಬೇಕ . .
ರಾಮರು ಬಂದು ಶಿರಗಳ ತರಿದು
ನ್ಯಾಯವ ತರಲಾಕ . .


ಕಷ್ಟವು ಬರಬೇಕ . . ಬಂದು
ನಷ್ಟವ ತರಬೇಕ . .
ಕಷ್ಟ ನಷ್ಟಗಳು ಜೀವವ ಮಾಗಿಸಿ
ದೇವನ ನೆನಿಲಾಕ . .


ಸೋಲು ಕಾಡಬೇಕ . . ಸೋತು
ಸುಣ್ಣವಾಗಬೇಕ . .
ಸೋಲನು ಮೆಟ್ಟಿ ಗೆಲ್ಲುವ
ಛಲವೆ ನಮ್ಮದಾಗಬೇಕ . . 


ಬೆಂಕಿ ಚಿಮ್ಮಬೇಕ . . ಚಿಮ್ಮಿ
ಕೆಡುಕ ನುಂಗಬೇಕ. .
ಜಲವು ಉಕ್ಕಬೇಕ . . ಪಾಪವ
ಮುಕ್ಕಿ ಮುಗಿಸಲಾಕ . .
***********
-ಕ.ವೆಂ.ನಾಗರಾಜ್.

ಮಂಗಳವಾರ, ಏಪ್ರಿಲ್ 3, 2012

ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆದ, ಮ್ಯಾಜಿಸ್ಟ್ರೇಟನೂ ಆದ!!


     ಸುಮಾರು 39 ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ  ಜೈಲಿನಿಂದ ಹೊರಬಂದ  ಸುಮಾರು ನಾಲ್ಕು ವರ್ಷಗಳ ನಂತರ  ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.
      ಅವನು ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಂದಾಯ ಇಲಾಖೆಯ ಸೇವೆಗೆ ಪ್ರಥಮ ದರ್ಜೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ 1973ರಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಎರಡು ವರ್ಷ ಸೇವೆ ಸಲ್ಲಿಸಿಬಹುದು. 1975ರಲ್ಲಿ ಕರಾಳ ತುರ್ತು ಪರಿಸ್ಥಿತಿ ಜಾರಿಗೆ ಬಂದು ಆಗ ಆರೆಸ್ಸೆಸ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಅವನನ್ನೂ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣದ ಮೇಲೆ ಬಂಧಿಸಿ ಭಾರತ ರಕ್ಷಣಾ ಕಾಯದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿದಾಗ ಅವನನ್ನು ಸೇವೆಯಿಂದ ಅಮಾನತ್ತಿನಲ್ಲಿ ಇರಿಸಲಾಯಿತು. ಈ ಕಾರಣ ನೆಪಕ್ಕಾಗಿದ್ದು ನಿಜವಾದ ಕಾರಣ ಬೇರೆಯದೇ ಆಗಿತ್ತು. ಕಾಂಗ್ರೆಸ್ ಪಕ್ಷದ ಧುರೀಣರಾಗಿದ್ದ ಅರಸಿಕೆರೆಯ ವರ್ತಕರೊಬ್ಬರು ಪ್ರತಿವಾರ ಶಿವಮೊಗ್ಗದಿಂದ ಅರಸಿಕೆರೆಗೆ ೧೫ ಲಾರಿ ಲೋಡು ಅಕ್ಕಿ ತರಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ಅಂತರ ಜಿಲ್ಲಾ ಅಕ್ಕಿ ಸಾಗಣೆಗೆ ನಿರ್ಬಂಧವಿದ್ದ ಸಮಯವಾದ್ದರಿಂದ ಆತ ಅವರ ಅರ್ಜಿ ವಿಲೆಯಿಡಲು ಶಿಫಾರಸು ಮಾಡಿದ್ದ. ಆ ಧುರೀಣ ಅರ್ಜಿ ಸಲ್ಲಿಸುವಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಬಂದಿದ್ದನಂತೆ. ಅವರೂ ಒಪ್ಪಿದ್ದರಂತೆ. ವರ್ತಕನ ಮನವಿ ತಳ್ಳಿ ಹಾಕಲ್ಪಟ್ಟಾಗ ಆತ ಸಿಟ್ಟಾಗಿ ಫುಡ್ ಇನ್ಸ್‌ಪೆಕ್ಟರನಿಗೆ, "ಈಗ ತುರ್ತು ಪರಿಸ್ಥಿತಿ ಇರುವುದು ಗೊತ್ತಿಲ್ಲವಾ? ನಿನಗೊಂದು ಗತಿ ಕಾಣಿಸುತ್ತೇನೆ" ಎಂದು ಧಮಕಿ ಹಾಕಿದ್ದಲ್ಲದೆ ಜಿಲ್ಲಾಧಿಕಾರಿಯವರೊಂದಿಗೂ ತನ್ನ ಕೆಲಸ ಆಗದಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ. ಇದರ ಪರಿಣಾಮವೇ ಆರೆಸ್ಸೆಸ್ ಕಾರ್ಯಕರ್ತನೆಂಬ ನೆಪದಲ್ಲಿ ಅವನ ಬಂಧನವಾಗಿತ್ತು. ಅವನನ್ನು ಜೈಲಿಗೆ ಕಳಿಸಿದ ಬೆನ್ನ ಹಿಂದೆಯೇ ಅವನು ಬಂಧನದಲ್ಲಿ 48 ಘಂಟೆಗಳಿಗೂ ಹೆಚ್ಚು ಕಾಲ ಇದ್ದ ಕಾರಣ ನಮೂದಿಸಿ ಸೇವೆಯಿಂದ ಅಮಾನತ್ತುಗೊಳಿಸಿದ ಆದೇಶ ಅವನಿಗೆ ಬಂಧನವಾದ ಆರು ಘಂಟೆಗಳ ಒಳಗೇ ತಲುಪಿದ್ದು, ಅದು ಪೂರ್ವನಿರ್ಧರಿತ ಕ್ರಮವೆಂಬುದಕ್ಕೆ ಸಾಕ್ಷಿಯಾಗಿತ್ತು. ಅಂದೇ ಅವನು ಜಾಮೀನಿನ ಮೇಲೆ ಹೊರಬಂದು ಸುಳ್ಳು ಕಾರಣ ಕೊಟ್ಟು ಅಮಾನತ್ತಿನಲ್ಲಿರಿಸಿದ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಜಗಳವಾಡಿದ. ಅಮಾನತ್ತಿನಲ್ಲಿರಿಸುವುದೇ ಆದರೆ ಬೇರೆ ಕಾರಣ ನಮೂದಿಸಲು ಆಗ್ರಹಿಸಿದ. ಆತನ ಧಾರ್ಷ್ಟ್ಯದಿಂದ ಸಿಟ್ಟಾದ  ಜಿಲ್ಲಾಧಿಕಾರಿ ಎಸ್.ಪಿ.ಯವರೊಂದಿಗೆ ಮಾತನಾಡಿದರು.  ಪರಿಣಾಮ, ಇನ್ನೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅವನು ಆರೋಪಿಯಾಗಬೇಕಾಯಿತು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆಗಳು ದಾಖಲಾಗಿದ್ದು, ಅವನೊಬ್ಬ ವಿಧ್ವಂಸಕ ಕೃತ್ಯಗಳನ್ನು ಎಸಗಿದ ಭಯೋತ್ಪಾದಕನೆಂದು ಬಿಂಬಿಸಲಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧಿಸಿಡಲು ಅವಕಾಶವಿರುವ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ   (M.I.S.A.) ಪ್ರಕಾರ  ಜಿಲ್ಲಾ ಆರಕ್ಷಕ ಅಧಿಕಾರಿಯವರು ಅವನನ್ನು ಬಂಧಿಸಲು ಶಿಫಾರಸು ಮಾಡಿದ್ದರು. ಒಟ್ಟು 13 ಪ್ರಕರಣಗಳಲ್ಲಿ ಅವನನ್ನು ಆರೋಪಿಯನ್ನಾಗಿಸಲಾಯಿತು. ಒಂದು ಪ್ರಕರಣದಲ್ಲಿ ಜಾಮೀನು ಸಿಗದೆ ಸುಮಾರು 6 ತಿಂಗಳು ಹಾಸನದ ಜೈಲಿನಲ್ಲಿರಬೇಕಾಯಿತು. ಜೈಲಿನಿಂದ ಹೊರಗಿದ್ದಾಗ ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ಅವನನ್ನು ವಿಚಾರಣೆ ಕಾಯ್ದಿರಿಸಿ ಪುನರ್ನೇಮಕ ಮಾಡಿ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿದ್ದರು.  ಮತ್ತೆ ನೌಕರಿ ಸಿಗುವ ಆಸೆಯನ್ನೇ ಅವನು ಕೈಬಿಟ್ಟಿದ್ದ. ಮುಂದೆ ಜೀವನ ನಿರ್ವಹಣೆಗೆ ಏನು ಮಾಡಬೇಕೆಂದು ಜೈಲಿನ ಗೋಡೆಗೆ ಒರಗಿ ಚಿಂತಿಸುತ್ತಿದ್ದ.  ತುರ್ತು ಪರಿಸ್ಥಿತಿ ಹಿಂತೆಗೆತವಾದ ಮೇಲೆ ಇತ್ಯರ್ಥವಾಗದೇ ಇದ್ದ ಪ್ರಕರಣಗಳನ್ನು ಸರ್ಕಾರ ವಾಪಸು ಪಡೆದದ್ದರಿಂದ ಅವನು ದೋಷಮುಕ್ತನಾದ. ನ್ಯಾಯಾಲಯದ ಆದೇಶದಂತೆ ಅವನನ್ನು ಪುನಃ ಹಾಸನಕ್ಕೆ ಮರುವರ್ಗಾಯಿಸಿದರು. ಬರಬೇಕಾಗಿದ್ದ ಬಾಕಿ ವೇತನವೂ ಸಿಕ್ಕಿತು. ಆ ಬಾಕಿ ಹಣ ಅವನ ಮದುವೆಯ ವೆಚ್ಚಕ್ಕೆ ಸಹಾಯಕವಾಯಿತು.
      ಉಪತಹಸೀಲ್ದಾರ್ ಆಗಿ ಬಡ್ತಿ ಹೊಂದಿದ ಆತ ಮೈಸೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವನಿಗೆ ಹೊಳೆನರಸಿಪುರಕ್ಕೆ ವರ್ಗಾವಣೆಯಾಯಿತು. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೧ ಉಪಕಾರಾಗೃಹಗಳ ಮೇಲ್ವಿಚಾರಣೆ ಹೊಣೆಯನ್ನು ಕಂದಾಯ ಇಲಾಖೆಯ ಉಪತಹಸೀಲ್ದಾರರಿಗೆ ವಹಿಸಿದ್ದು, ಆ ಪೈಕಿ ಹೊಳೆನರಸಿಪುರದ ಉಪಕಾರಾಗೃಹವೂ ಒಂದಾಗಿತ್ತು. ಹೀಗಾಗಿ ಉಪತಹಸೀಲ್ದಾರನಾಗಿದ್ದ ಅವನು ಪದನಿಮಿತ್ತ ಅಲ್ಲಿನ ಜೈಲು ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುವ ಅವಕಾಶವೂ ಲಭ್ಯವಾಯಿತು. ಕೈದಿಯಾಗಿ ಅವರ ಕಷ್ಟ-ನೋವುಗಳ ಅರಿವಿದ್ದ ಅವನು ಅಲ್ಲಿನ ಒಳ್ಳೆಯ ಜೈಲು ಸೂಪರಿಂಟೆಂಡೆಂಟ್ ಅನ್ನಿಸಿಕೊಂಡು ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ. ಆಗ ಅಲ್ಲಿದ್ದ ಹಲವಾರು ಕೈದಿಗಳು ಈಗಲೂ ಅವನನ್ನು ಗೌರವದಿಂದ ಕಾಣುತ್ತಾರೆ.
     ಜೈಲು ಸೂಪರಿಂಟೆಂಡೆಂಟ್ ಆಗಿದ್ದಾಗಿನ ಅನೇಕ ಘಟನೆಗಳು ರೋಚಕವಾಗಿದ್ದು, ಒಂದು ಘಟನೆಯನ್ನು ಅವನು ಹಂಚಿಕೊಳ್ಳಬಯಸಿದ್ದಾನೆ.  ಒಂದು ಮಧ್ಯಾಹ್ನ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಆಕೆಯನ್ನು ದಾಖಲು ಮಾಡಿಕೊಂಡು, ಕಾರಾಗೃಹದಲ್ಲಿ ಮಹಿಳಾ ವಾರ್ಡನ್ನುಗಳು ಇಲ್ಲದಿದ್ದ ಕಾರಣದಿಂದ ಹಾಸನದ ಜೈಲಿಗೆ  ವರ್ಗಾಯಿಸಲು ವಾರೆಂಟ್ ಸಿದ್ಧಪಡಿಸಿಡಲು ಗುಮಾಸ್ತರಿಗೆ ತಿಳಿಸಿ ಅವನು ಮನೆಗೆ ಊಟಕ್ಕೆ ಹೋದ. ಹತ್ತು ನಿಮಿಷವಾಗಿರಬಹುದು. ಗುಮಾಸ್ತ ಓಡುತ್ತಾ ಮನೆಗೆ ಬಂದವನು ಮಹಿಳಾ ಬಂದಿಯ ಆರೋಗ್ಯ ತುಂಬಾ ಕೆಟ್ಟಿದೆಯೆಂದೂ ಆಕೆಗೆ ಬಹಳ ಬ್ಲೀಡಿಂಗ್ ಆಗುತ್ತಿದೆಯೆಂದೂ  ತಿಳಿಸಿದ. ಆಕೆಯನ್ನು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ಕೊಟ್ಟು ಅವನೂ ಆಸ್ಪತ್ರ್ರೆಗೆ ಧಾವಿಸಿದ. ಆಕೆಗೆ ಗರ್ಭಪಾತವಾಗಿತ್ತು. ತಕ್ಷಣದಲ್ಲಿ ಆಕೆಗೆ ಚಿಕಿತ್ಸೆಯಾಗಿರದಿದ್ದಲ್ಲಿ ಜೀವಕ್ಕೆ ಅಪಾಯವಿತ್ತು. ಆಕೆಯನ್ನು ಹಾಸನದ ಜೈಲಿಗೆ ಕಳಿಸುವ ವಿಚಾರ ಬದಲಾಯಿಸಿ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲೆ ಇರಿಸಲು ನಿರ್ಧರಿಸಿದ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಳಸಲು ಅವಕಾಶವಿದ್ದುದು ಇಪ್ಪತ್ತೈದು ರೂಪಾಯಿ ಮಾತ್ರ. ಹೆಚ್ಚಿನ ಮೊಬಲಗು ಬೇಕಾದರೆ ಡಿ.ಜಿ.ಪಿ.ರವರಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಬೇಕಿತ್ತು. ಆಕೆಯನ್ನು ನೋಡಲಾಗಲೀ, ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲಾಗಲೀ ಯಾರೂ ಬಂದಿರಲಿಲ್ಲ. ಆಕೆ ಚೇತರಿಸಿಕೊಳ್ಳಲು ಹನ್ನೆರಡು ದಿನಗಳೇ ಬೇಕಾಯಿತು. ಅಲ್ಲಿಯವರೆಗೆ ಅವಳಿಗೆ ಅವನ ಮನೆಯಿಂದಲೇ ಊಟ ತರಿಸಿಕೊಡುತ್ತಿದ್ದ. ಆಸ್ಪತ್ರೆಯಲ್ಲಿ ಸಿಗದಿದ್ದ ಔಷಧಿ ಹೊರಗೆ ಖರೀದಿಸಿಕೊಟ್ಟು ಆಕೆಯ ಚಿಕಿತ್ಸೆಗೆ ಮುತುವರ್ಜಿ ವಹಿಸಿದ. ಆ ಸಂದರ್ಭದಲ್ಲಿ ಆಕೆ ತಿಳಿಸಿದ ವಿಷಯ ಆಘಾತಕರವಾಗಿತ್ತು, ಜಿಗುಪ್ಸೆ ಮೂಡಿಸುವಂತಿತ್ತು. ಸರಗಳ್ಳತನ ಮಾಡುತ್ತಿದ್ದಳೆಂದು ಅವಳನ್ನು ಬಂಧಿಸಿದ ನಂತರ 24 ಘಂಟೆಗಳ ಒಳಗೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಆಕೆಯನ್ನು ಎರಡು ರಾತ್ರಿಗಳು ಠಾಣೆಯಲ್ಲೇ ಬಂಧಿಸಿಟ್ಟಿದ್ದರಂತೆ. ಗರ್ಭಿಣಿಯಾಗಿದ್ದ ಆಕೆಯನ್ನು ಇಡೀ ರಾತ್ರಿ ಬೆತ್ತಲೆಯಾಗಿರುವಂತೆ ಮಾಡಿ ಹಿಂಸಿಸಿ ವಿಕೃತವಾಗಿ ವರ್ತಿಸಿ ಇಬ್ಬರು ಅತ್ಯಾಚಾರ ಮಾಡಿದ್ದರಂತೆ. ಆಕೆಯ ಮರ್ಮಾಂಗಕ್ಕೆ ಲಾಠಿ ತೂರಿಸಿದ್ದರಂತೆ. ಆಕೆಗೆ ಗರ್ಭಪಾತವಾಗಲು ಈ ಹಿಂಸೆಯೇ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ವಿಚಾರಣಾ ದಿನಾಂಕದಂದು ನ್ಯಾಯಾಧೀಶರ ಮುಂದೆ ಈ ಎಲ್ಲಾ ಸಂಗತಿ ತಿಳಿಸುವಂತೆ ಆಕೆಗೆ ಸಲಹೆ ನೀಡಿದ. ಆದರೆ ಆಕೆ ಹಾಗೆ ಮಾಡುವಳೆಂದು ಅವನಿಗೆ ಅನ್ನಿಸಲಿಲ್ಲ. ಆಸ್ಪತ್ರೆಯಿಂದ ಹೊರಬಂದ ದಿನ ಆಕೆಯನ್ನು ಹಾಸನದ ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದ ಒಬ್ಬ ವ್ಯಕ್ತಿ ಆಕೆಯನ್ನು ಜಾಮೀನಿನ ಮೇಲೆ ಬಿಡುವ ಆದೇಶ ತಂದಿದ್ದರಿಂದ ಆಕೆಯನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸುವ ಸಂದರ್ಭದಲ್ಲಿ ರಿಜಿಸ್ಟರಿನಲ್ಲಿ ಆಕೆಯ ಸಹಿಯನ್ನು ಪಡೆಯುತ್ತಿದ್ದಾಗ ಆಕೆ ಇತರ ಸಿಬ್ಬಂದಿಯ ಎದುರಿಗೇ ಅವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿ "ಅಣ್ಣಾ, ನೀವು ನನ್ನ ಜೀವ ಕಾಪಾಡಿದ ದೇವರು. ನಿಮ್ಮನ್ನೆಂದೂ ಮರೆಯುವುದಿಲ್ಲ" ಎಂದು ಅಳುತ್ತಾ ಹೇಳಿದ್ದಳು.
      ಕೆಲವರ್ಷಗಳ ನಂತರದಲ್ಲಿ ಅವನಿಗೆ ಬಡ್ತಿ ಸಿಕ್ಕಿ ತಹಸೀಲ್ದಾರನೂ ಆದ. ತಾಲ್ಲೂಕು ದಂಡಾಧಿಕಾರಿಯಾಗಿ ಕಾನೂನು-ಸುವ್ಯವಸ್ಥೆ, ಶಾಂತಿಪಾಲನೆಯ ಹೊಣೆಗಾರಿಕೆ ಇದ್ದು, ಅಪರಾಧಗಳು ಘಟಿಸುವ ಮುನ್ನ ಅದನ್ನು ತಡೆಯುವ ಜವಾಬ್ದಾರಿ ಅವನ ಮೇಲಿತ್ತು. ಅಶಾಂತಿ ನಿರ್ಮಿಸುವವರ ವಿರುದ್ಧ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವವರ ವಿರುದ್ಧ ಕಠಿಣ ಮನೋಭಾವ ಹೊಂದಿದ್ದ ಆತ ಹಲವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಿದ್ದ. ರಾಷ್ಟ್ರೀಯ ಉತ್ಸವಗಳ ಸಂದರ್ಭದಲ್ಲಿ ರಾಷ್ಟ್ರದ್ವಜವನ್ನು ಹಾರಿಸಿ, ದ್ವಜವಂದನೆ ಮಾಡುವ, ಧ್ವಜವಂದನೆ ಸ್ವೀಕರಿಸುವ ಅವಕಾಶ ಒದಗಿಸಿದ್ದಕ್ಕಾಗಿ ಅವನು ದೇವರಿಗೆ ಆಭಾರಿಯಾಗಿದ್ದ, ಮಾಡಿದ ಕೆಲಸಗಳಲ್ಲಿ ಆತ್ಮತೃಪ್ತಿ ಹೊಂದಿದ್ದ. ೧೨ ವರ್ಷಗಳ ಕಾಲ ಆ ಹುದ್ದೆಯಲ್ಲಿ ಕೆಲಸ ಮಾಡಿ ಇನ್ನೇನು ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಸಿಗುತ್ತಿದ್ದ ಸಂದರ್ಭದಲ್ಲಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಹೊಂದಿದ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ.
     ಜೈಲಿನಲ್ಲಿ ಕೈದಿಯಾಗಿದ್ದ, ಜೈಲಿನ ಸೂಪರಿಂಟೆಂಡೆಂಟನೂ ಆದ ಮತ್ತು ಮುಂದೆ ತಾಲ್ಲೂಕು ದಂಡಾಧಿಕಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದ ಆ ವ್ಯಕ್ತಿ ಯಾರೆಂದು ತಿಳಿಯುವ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನಾನೇ! ಬಹುಷಃ ಬೇರೆ ಯಾರಿಗೂ ಸಿಗದಿರಬಹುದಾದ ಇಂತಹ ಅಪರೂಪದ ಅವಕಾಶಗಳನ್ನು ನೀಡಿ, ಅನೇಕ ಅನುಭವಗಳನ್ನು ಹೊಂದುವಂತೆ ಮಾಡಿದ ಆ ದೇವರಿಗೆ ನಾನು ಋಣಿಯಾಗಿದ್ದೇನೆ.
-ಕ.ವೆಂ.ನಾಗರಾಜ್.
**************

                                         ಕೈದಿ >>>>>>>>>>>>>>>>>>>ಜೈಲು ಸೂಪರಿಂಟೆಂಡೆಂಟ್
                                              ತಾಲ್ಲೂಕು ದಂಡಾಧಿಕಾರಿಯಾಗಿ . .

[17.9.2014ರಂದು ಲೇಖನ ಪರಿಷ್ಕರಿಸಿದೆ.]
[ಒಬ್ಬ ಕೈದಿಯಾಗಿ, ಜೈಲು ಸೂಪರಿಂಟೆಂಡೆಂಟ್ ಆಗಿ ನನ್ನ ಅನುಭವಗಳನ್ನು 'ಸೇವಾಯಾತ್ರೆ' ಶೀರ್ಷಿಕೆಯಲ್ಲಿ ದಾಖಲಿಸಿರುವೆ. ಅಸಕ್ತರು ಓದಬಹುದು. ಲಿಂಕ್ ಇಲ್ಲಿದೆ:  http://kavimana.blogspot.in/search/label/%E0%B2%B8%E0%B3%87%E0%B2%B5%E0%B2%BE%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86 ]

ದಿನಾಂಕ 17.9.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಏಪ್ರಿಲ್ 2, 2012

ಜಗತ್ತು ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು!! ಹೇಗೆ??

     ಈ ಜಗತ್ತು, ಬದಲಾಗಬೇಕು, ಸಮಾಜ ಸುಧಾರಣೆಯಾಗಬೇಕು, ನಮಗೆ ಈ ಪ್ರಪಂಚ ಸಹನೀಯವೆನಿಸಬೇಕು, ಎಂಬುದೇ ನಮ್ಮ, ನಿಮ್ಮ, ಎಲ್ಲರ ಆಸೆ, ಆಕಾಂಕ್ಷೆ. ಆದರೆ, ಅದು ಹೇಗೆ? ಸಮಾಜವನ್ನು ಬದಲಿಸಬಹುದಾದ, ಬದಲಿಸಬೇಕಾದ ಸಮಾಜ ಸುಧಾರಣೆಯ ಪ್ರಾರಂಭ ಎಲ್ಲಿಂದ ಆಗಬೇಕು? ಕೇಳಿ,  ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ವಿಚಾರ ಹೀಗಿದೆ:
[ಶ್ರೀ ಶರ್ಮರವರ ನಿವಾಸದಲ್ಲಿ ಚರ್ಚಿಸಿದ ಸಂದರ್ಭದಲ್ಲಿ ದಾಖಲಿಸಿಕೊಂಡದ್ದು].
-ಕ.ವೆಂ.ನಾಗರಾಜ್.

ಭಾನುವಾರ, ಏಪ್ರಿಲ್ 1, 2012

ರಾಮಭಕ್ತರಾಗೋಣ

     ಇಂದು ಶ್ರೀರಾಮನವಮಿ. ಮರ್ಯಾದಾ ಪುರುಷೋತ್ತಮ, ದೇವಮಾನವ ಶ್ರೀರಾಮಚಂದ್ರನ ಜನ್ಮದಿನ. ಈ ತಿಂಗಳು ಶ್ರೀ ರಾಮೋತ್ಸವದ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ಹರಿಕಥೆ, ಪ್ರವಚನಗಳು, ಭಜನೆ, ಸಂಗೀತ ಕಾರ್ಯಕ್ರಮಗಳು ನಡೆದು ರಾಮಭಕ್ತರ ಮನತಣಿಸುವ ತಿಂಗಳು. ಶ್ರೀರಾಮನನ್ನು ಗುಡಿಯಲ್ಲಿಟ್ಟು ಪೂಜಿಸಿ, ತೀರ್ಥ, ಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾದೆವೆಂದು ಭಾವಿಸುತ್ತೇವೆ. ರಾಮಾಯಣ ಪ್ರವಚನವನ್ನು ಕೇಳಿ ಪುನೀತರಾದೆವೆಂದು ಅಂದುಕೊಳ್ಳುತ್ತೇವೆ. ರಾಮಾಯಣವೆಂದರೆ ಪದಶಃ ಅರ್ಥ ತೆಗೆದುಕೊಂಡರೆ ರಾಮ ನಡೆದ ದಾರಿ ಎಂದು. ಯಾರನ್ನೇ ಆಗಲಿ, ನಿಜವಾಗಿ ಗೌರವಿಸುವುದೆಂದರೆ, ಪೂಜಿಸುವುದೆಂದರೆ, ಮೆಚ್ಚಿಸುವುದೆಂದರೆ ಅವರು ನಡೆದ ಹಾದಿಯಲ್ಲಿ ನಡೆಯುವುದಕ್ಕಿಂತ ಉತ್ತಮ ದಾರಿ ಯಾವುದು? ಈ ಹಿನ್ನೆಲೆಯಲ್ಲಿ ರಾಮಭಕ್ತರೆಂದರೆ ಯಾರು ಎಂದು ಮನಸ್ಸು ವೈಚಾರಿಕ ತಾಕಲಾಟದ ಬಲೆಯಲ್ಲಿ ಸಿಲುಕಿಕೊಂಡಿತು.
* ಶ್ರೀರಾಮ ಏಕ ಪತ್ನಿ ವ್ರತಸ್ಥ. ೨-೩ ಹೆಂಡಿರ ಮುದ್ದಿನ ಗಂಡರು ರಾಮದೇಗುಲಕ್ಕೆ ಹೋಗಿ ಅಡ್ಡಬಿದ್ದರೆ ಅವರನ್ನು ರಾಮಭಕ್ತರೆನ್ನಬಹುದೇ?
* ಶ್ರೀರಾಮ ಚಂಚಲತೆಗೆ ಒಳಗಾಗದವನು. ಅವನನ್ನು ಮೋಹಿಸಿ ಬಂದ ಶೂರ್ಪನಖಿ, ಮುಂತಾದವರನ್ನು ತಿರಸ್ಕರಿಸಿದವನು. ಪರನಾರೀಮೋಹ ಅಳಿಯುವವರೆಗೆ ರಾಮಭಕ್ತನ ಸ್ಥಾನ ಸಿಗಲಾರದು.
* ಶ್ರೀರಾಮ ಎಂತಹ ಸ್ಥಿತಿಯಲ್ಲೂ ಸಮಚಿತ್ತ ಕಾಯ್ದುಕೊಂಡವನು. ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದವನು. ಇಂತಹ ಸಮಚಿತ್ತ ಪಡೆಯುವುದು ಸುಲಭವಲ್ಲ.
* ಶ್ರೀರಾಮ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ, ಅವರ ಸೂಚನೆಗಳನ್ನು ಸ್ವಂತ ಹಿತ ಬದಿಗಿಟ್ಟು ಪಾಲಿಸಿದವನು. ಸ್ವಂತ ಹಿತಕ್ಕೆ ಮೊದಲ, ಉಳಿದದ್ದಕ್ಕೆಲ್ಲಾ ಎರಡನೆಯ ಪ್ರಾಶಸ್ತ್ಯ ಕೊಡುವ ನಾವು ಸುಧಾರಿಸಬೇಕಿದೆ.
* ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ತೆಗೆದುಕೊಂಡ ನಿರ್ಧಾರಕ್ಕೆ [ವನವಾಸ ಪ್ರಸಂಗ] ಅಂಟಿಕೊಂಡವನು, ಹಿಂದೆ ಸರಿಯದವನು. ಕಷ್ಟ, ಅಸಾಧ್ಯವೆಂದುಕೊಂಡು, ತೆಗೆದುಕೊಂಡ ನಿರ್ಧಾರವನ್ನು ಬದಲಿಸುವ ಸ್ವಭಾವದ ನಾವು ಅದಕ್ಕೆ ವಿವರಣೆ ಕೊಡುತ್ತೇವೆ, ಸಮರ್ಥಿಸಿಕೊಳ್ಳುತ್ತೇವೆ.
* ಶ್ರೀರಾಮ ಜಾತಿ ಭೇದ ಮಾಡಲಿಲ್ಲ. ನಾವು ಜಾತಿಗೆ ಅಂಟಿಕೊಂಡಿದ್ದೇವೆ.
* ಶ್ರೀರಾಮ ನ್ಯಾಯ ಪಕ್ಷಪಾತಿ. ಸ್ವಂತಕ್ಕೆ ದುಃಖವಾದರೂ, ಅನ್ಯಾಯವಾದರೂ ಹಿಂದೆ ಮುಂದೆ ನೋಡದವನು. ನಾವು ಸ್ವಂತಹಿತಕ್ಕಾಗಿ ನ್ಯಾಯವನ್ನೇ ತಿರುಚುವವರು.
* ಶ್ರೀರಾಮ ಅಧಿಕಾರ, ಅಂತಸ್ತು, ಸಂಪತ್ತುಗಳಿಗೆ ಅಂಟಿಕೊಂಡವನಲ್ಲ. ಅಧಿಕಾರ, ಅಂತಸ್ತು, ಸಂಪತ್ತುಗಳಿಗಾಗಿ ನಾವು ಏನು ಬೇಕಾದರೂ ಮಾಡುವವರಾಗಿದ್ದೇವೆ. ಅಧಿಕಾರಕ್ಕಾಗಿ ರಾಮನನ್ನೇ ಪರ-ವಿರೋಧದ ದಾಳವಾಗಿಸಿಕೊಳ್ಳುತ್ತೇವೆ.
* ವಿಗ್ರಹಗಳಿಗೆ ಚಿನ್ನದ ಕಿರೀಟ, ಆಭರಣ, ಉಡುಗೆ-ತೊಡುಗೆಗಳನ್ನು ಮಾಡಿಸಿಕೊಡುವವರೆಲ್ಲಾ ಭಕ್ತರೆನಿಸುವುದಿಲ್ಲ. ಅವರಲ್ಲಿ ನಿಜಭಕ್ತರೂ ಇರಬಹುದು, ಆದರೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತರೂಪದಲ್ಲಿ ಮಾಡಿಸಿಕೊಡುವವರೇ ಕಣ್ಣಿಗೆ ಬೀಳುತ್ತಿದ್ದಾರೆ. 
* ಶ್ರೀರಾಮ ಸಜ್ಜನಶಕ್ತಿ ಒಗ್ಗೂಡಿಸಿದವನು, ದುಷ್ಟರನ್ನು ಸದೆ ಬಡಿದವನು. ನಾವು ಕಷ್ಟ, ತೊಂದರೆಗಳ ಕಾರಣವೊಡ್ಡಿ ಅಂತಹ ಕಾರ್ಯಗಳಿಂದ ದೂರ ಉಳಿಯುವವರು, ಆ ಮಾರ್ಗದಲ್ಲಿ ನಡೆಯುವವರ ಸ್ಥೈರ್ಯಗೆಡಿಸುವವರು, ಕನಿಷ್ಠ ಪಕ್ಷ ಅವರಿಗೆ ನೈತಿಕ ಬೆಂಬಲವನ್ನೂ ತೋರಿಸದವರು.
 * . . . . . . . . 
     ಇಂತಹ ಹಲವಾರು ಸಂಗತಿಗಳ ಪಟ್ಟಿ ಬೆಳೆಸುತ್ತಾ ಹೋಗಬಹುದು. . . . . . . . ಒಟ್ಟಿನಲ್ಲಿ. . . . ನಿಜವಾದ ರಾಮಭಕ್ತರಾಗಲು ಪ್ರಯತ್ನಿಸೋಣ. ಎಲ್ಲರಿಗೂ ಶ್ರೀರಾಮನವಮಿ ಶುಭಾಶಯಗಳು.
-ಕ.ವೆಂ.ನಾಗರಾಜ್.