ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ಏಪ್ರಿಲ್ 3, 2012

ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆದ, ಮ್ಯಾಜಿಸ್ಟ್ರೇಟನೂ ಆದ!!


     ಸುಮಾರು 39 ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ  ಜೈಲಿನಿಂದ ಹೊರಬಂದ  ಸುಮಾರು ನಾಲ್ಕು ವರ್ಷಗಳ ನಂತರ  ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.
      ಅವನು ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಂದಾಯ ಇಲಾಖೆಯ ಸೇವೆಗೆ ಪ್ರಥಮ ದರ್ಜೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ 1973ರಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಎರಡು ವರ್ಷ ಸೇವೆ ಸಲ್ಲಿಸಿಬಹುದು. 1975ರಲ್ಲಿ ಕರಾಳ ತುರ್ತು ಪರಿಸ್ಥಿತಿ ಜಾರಿಗೆ ಬಂದು ಆಗ ಆರೆಸ್ಸೆಸ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಅವನನ್ನೂ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣದ ಮೇಲೆ ಬಂಧಿಸಿ ಭಾರತ ರಕ್ಷಣಾ ಕಾಯದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿದಾಗ ಅವನನ್ನು ಸೇವೆಯಿಂದ ಅಮಾನತ್ತಿನಲ್ಲಿ ಇರಿಸಲಾಯಿತು. ಈ ಕಾರಣ ನೆಪಕ್ಕಾಗಿದ್ದು ನಿಜವಾದ ಕಾರಣ ಬೇರೆಯದೇ ಆಗಿತ್ತು. ಕಾಂಗ್ರೆಸ್ ಪಕ್ಷದ ಧುರೀಣರಾಗಿದ್ದ ಅರಸಿಕೆರೆಯ ವರ್ತಕರೊಬ್ಬರು ಪ್ರತಿವಾರ ಶಿವಮೊಗ್ಗದಿಂದ ಅರಸಿಕೆರೆಗೆ ೧೫ ಲಾರಿ ಲೋಡು ಅಕ್ಕಿ ತರಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ಅಂತರ ಜಿಲ್ಲಾ ಅಕ್ಕಿ ಸಾಗಣೆಗೆ ನಿರ್ಬಂಧವಿದ್ದ ಸಮಯವಾದ್ದರಿಂದ ಆತ ಅವರ ಅರ್ಜಿ ವಿಲೆಯಿಡಲು ಶಿಫಾರಸು ಮಾಡಿದ್ದ. ಆ ಧುರೀಣ ಅರ್ಜಿ ಸಲ್ಲಿಸುವಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಬಂದಿದ್ದನಂತೆ. ಅವರೂ ಒಪ್ಪಿದ್ದರಂತೆ. ವರ್ತಕನ ಮನವಿ ತಳ್ಳಿ ಹಾಕಲ್ಪಟ್ಟಾಗ ಆತ ಸಿಟ್ಟಾಗಿ ಫುಡ್ ಇನ್ಸ್‌ಪೆಕ್ಟರನಿಗೆ, "ಈಗ ತುರ್ತು ಪರಿಸ್ಥಿತಿ ಇರುವುದು ಗೊತ್ತಿಲ್ಲವಾ? ನಿನಗೊಂದು ಗತಿ ಕಾಣಿಸುತ್ತೇನೆ" ಎಂದು ಧಮಕಿ ಹಾಕಿದ್ದಲ್ಲದೆ ಜಿಲ್ಲಾಧಿಕಾರಿಯವರೊಂದಿಗೂ ತನ್ನ ಕೆಲಸ ಆಗದಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ. ಇದರ ಪರಿಣಾಮವೇ ಆರೆಸ್ಸೆಸ್ ಕಾರ್ಯಕರ್ತನೆಂಬ ನೆಪದಲ್ಲಿ ಅವನ ಬಂಧನವಾಗಿತ್ತು. ಅವನನ್ನು ಜೈಲಿಗೆ ಕಳಿಸಿದ ಬೆನ್ನ ಹಿಂದೆಯೇ ಅವನು ಬಂಧನದಲ್ಲಿ 48 ಘಂಟೆಗಳಿಗೂ ಹೆಚ್ಚು ಕಾಲ ಇದ್ದ ಕಾರಣ ನಮೂದಿಸಿ ಸೇವೆಯಿಂದ ಅಮಾನತ್ತುಗೊಳಿಸಿದ ಆದೇಶ ಅವನಿಗೆ ಬಂಧನವಾದ ಆರು ಘಂಟೆಗಳ ಒಳಗೇ ತಲುಪಿದ್ದು, ಅದು ಪೂರ್ವನಿರ್ಧರಿತ ಕ್ರಮವೆಂಬುದಕ್ಕೆ ಸಾಕ್ಷಿಯಾಗಿತ್ತು. ಅಂದೇ ಅವನು ಜಾಮೀನಿನ ಮೇಲೆ ಹೊರಬಂದು ಸುಳ್ಳು ಕಾರಣ ಕೊಟ್ಟು ಅಮಾನತ್ತಿನಲ್ಲಿರಿಸಿದ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಜಗಳವಾಡಿದ. ಅಮಾನತ್ತಿನಲ್ಲಿರಿಸುವುದೇ ಆದರೆ ಬೇರೆ ಕಾರಣ ನಮೂದಿಸಲು ಆಗ್ರಹಿಸಿದ. ಆತನ ಧಾರ್ಷ್ಟ್ಯದಿಂದ ಸಿಟ್ಟಾದ  ಜಿಲ್ಲಾಧಿಕಾರಿ ಎಸ್.ಪಿ.ಯವರೊಂದಿಗೆ ಮಾತನಾಡಿದರು.  ಪರಿಣಾಮ, ಇನ್ನೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅವನು ಆರೋಪಿಯಾಗಬೇಕಾಯಿತು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆಗಳು ದಾಖಲಾಗಿದ್ದು, ಅವನೊಬ್ಬ ವಿಧ್ವಂಸಕ ಕೃತ್ಯಗಳನ್ನು ಎಸಗಿದ ಭಯೋತ್ಪಾದಕನೆಂದು ಬಿಂಬಿಸಲಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧಿಸಿಡಲು ಅವಕಾಶವಿರುವ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ   (M.I.S.A.) ಪ್ರಕಾರ  ಜಿಲ್ಲಾ ಆರಕ್ಷಕ ಅಧಿಕಾರಿಯವರು ಅವನನ್ನು ಬಂಧಿಸಲು ಶಿಫಾರಸು ಮಾಡಿದ್ದರು. ಒಟ್ಟು 13 ಪ್ರಕರಣಗಳಲ್ಲಿ ಅವನನ್ನು ಆರೋಪಿಯನ್ನಾಗಿಸಲಾಯಿತು. ಒಂದು ಪ್ರಕರಣದಲ್ಲಿ ಜಾಮೀನು ಸಿಗದೆ ಸುಮಾರು 6 ತಿಂಗಳು ಹಾಸನದ ಜೈಲಿನಲ್ಲಿರಬೇಕಾಯಿತು. ಜೈಲಿನಿಂದ ಹೊರಗಿದ್ದಾಗ ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ಅವನನ್ನು ವಿಚಾರಣೆ ಕಾಯ್ದಿರಿಸಿ ಪುನರ್ನೇಮಕ ಮಾಡಿ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿದ್ದರು.  ಮತ್ತೆ ನೌಕರಿ ಸಿಗುವ ಆಸೆಯನ್ನೇ ಅವನು ಕೈಬಿಟ್ಟಿದ್ದ. ಮುಂದೆ ಜೀವನ ನಿರ್ವಹಣೆಗೆ ಏನು ಮಾಡಬೇಕೆಂದು ಜೈಲಿನ ಗೋಡೆಗೆ ಒರಗಿ ಚಿಂತಿಸುತ್ತಿದ್ದ.  ತುರ್ತು ಪರಿಸ್ಥಿತಿ ಹಿಂತೆಗೆತವಾದ ಮೇಲೆ ಇತ್ಯರ್ಥವಾಗದೇ ಇದ್ದ ಪ್ರಕರಣಗಳನ್ನು ಸರ್ಕಾರ ವಾಪಸು ಪಡೆದದ್ದರಿಂದ ಅವನು ದೋಷಮುಕ್ತನಾದ. ನ್ಯಾಯಾಲಯದ ಆದೇಶದಂತೆ ಅವನನ್ನು ಪುನಃ ಹಾಸನಕ್ಕೆ ಮರುವರ್ಗಾಯಿಸಿದರು. ಬರಬೇಕಾಗಿದ್ದ ಬಾಕಿ ವೇತನವೂ ಸಿಕ್ಕಿತು. ಆ ಬಾಕಿ ಹಣ ಅವನ ಮದುವೆಯ ವೆಚ್ಚಕ್ಕೆ ಸಹಾಯಕವಾಯಿತು.
      ಉಪತಹಸೀಲ್ದಾರ್ ಆಗಿ ಬಡ್ತಿ ಹೊಂದಿದ ಆತ ಮೈಸೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವನಿಗೆ ಹೊಳೆನರಸಿಪುರಕ್ಕೆ ವರ್ಗಾವಣೆಯಾಯಿತು. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೧ ಉಪಕಾರಾಗೃಹಗಳ ಮೇಲ್ವಿಚಾರಣೆ ಹೊಣೆಯನ್ನು ಕಂದಾಯ ಇಲಾಖೆಯ ಉಪತಹಸೀಲ್ದಾರರಿಗೆ ವಹಿಸಿದ್ದು, ಆ ಪೈಕಿ ಹೊಳೆನರಸಿಪುರದ ಉಪಕಾರಾಗೃಹವೂ ಒಂದಾಗಿತ್ತು. ಹೀಗಾಗಿ ಉಪತಹಸೀಲ್ದಾರನಾಗಿದ್ದ ಅವನು ಪದನಿಮಿತ್ತ ಅಲ್ಲಿನ ಜೈಲು ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುವ ಅವಕಾಶವೂ ಲಭ್ಯವಾಯಿತು. ಕೈದಿಯಾಗಿ ಅವರ ಕಷ್ಟ-ನೋವುಗಳ ಅರಿವಿದ್ದ ಅವನು ಅಲ್ಲಿನ ಒಳ್ಳೆಯ ಜೈಲು ಸೂಪರಿಂಟೆಂಡೆಂಟ್ ಅನ್ನಿಸಿಕೊಂಡು ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ. ಆಗ ಅಲ್ಲಿದ್ದ ಹಲವಾರು ಕೈದಿಗಳು ಈಗಲೂ ಅವನನ್ನು ಗೌರವದಿಂದ ಕಾಣುತ್ತಾರೆ.
     ಜೈಲು ಸೂಪರಿಂಟೆಂಡೆಂಟ್ ಆಗಿದ್ದಾಗಿನ ಅನೇಕ ಘಟನೆಗಳು ರೋಚಕವಾಗಿದ್ದು, ಒಂದು ಘಟನೆಯನ್ನು ಅವನು ಹಂಚಿಕೊಳ್ಳಬಯಸಿದ್ದಾನೆ.  ಒಂದು ಮಧ್ಯಾಹ್ನ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಆಕೆಯನ್ನು ದಾಖಲು ಮಾಡಿಕೊಂಡು, ಕಾರಾಗೃಹದಲ್ಲಿ ಮಹಿಳಾ ವಾರ್ಡನ್ನುಗಳು ಇಲ್ಲದಿದ್ದ ಕಾರಣದಿಂದ ಹಾಸನದ ಜೈಲಿಗೆ  ವರ್ಗಾಯಿಸಲು ವಾರೆಂಟ್ ಸಿದ್ಧಪಡಿಸಿಡಲು ಗುಮಾಸ್ತರಿಗೆ ತಿಳಿಸಿ ಅವನು ಮನೆಗೆ ಊಟಕ್ಕೆ ಹೋದ. ಹತ್ತು ನಿಮಿಷವಾಗಿರಬಹುದು. ಗುಮಾಸ್ತ ಓಡುತ್ತಾ ಮನೆಗೆ ಬಂದವನು ಮಹಿಳಾ ಬಂದಿಯ ಆರೋಗ್ಯ ತುಂಬಾ ಕೆಟ್ಟಿದೆಯೆಂದೂ ಆಕೆಗೆ ಬಹಳ ಬ್ಲೀಡಿಂಗ್ ಆಗುತ್ತಿದೆಯೆಂದೂ  ತಿಳಿಸಿದ. ಆಕೆಯನ್ನು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ಕೊಟ್ಟು ಅವನೂ ಆಸ್ಪತ್ರ್ರೆಗೆ ಧಾವಿಸಿದ. ಆಕೆಗೆ ಗರ್ಭಪಾತವಾಗಿತ್ತು. ತಕ್ಷಣದಲ್ಲಿ ಆಕೆಗೆ ಚಿಕಿತ್ಸೆಯಾಗಿರದಿದ್ದಲ್ಲಿ ಜೀವಕ್ಕೆ ಅಪಾಯವಿತ್ತು. ಆಕೆಯನ್ನು ಹಾಸನದ ಜೈಲಿಗೆ ಕಳಿಸುವ ವಿಚಾರ ಬದಲಾಯಿಸಿ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲೆ ಇರಿಸಲು ನಿರ್ಧರಿಸಿದ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಳಸಲು ಅವಕಾಶವಿದ್ದುದು ಇಪ್ಪತ್ತೈದು ರೂಪಾಯಿ ಮಾತ್ರ. ಹೆಚ್ಚಿನ ಮೊಬಲಗು ಬೇಕಾದರೆ ಡಿ.ಜಿ.ಪಿ.ರವರಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಬೇಕಿತ್ತು. ಆಕೆಯನ್ನು ನೋಡಲಾಗಲೀ, ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲಾಗಲೀ ಯಾರೂ ಬಂದಿರಲಿಲ್ಲ. ಆಕೆ ಚೇತರಿಸಿಕೊಳ್ಳಲು ಹನ್ನೆರಡು ದಿನಗಳೇ ಬೇಕಾಯಿತು. ಅಲ್ಲಿಯವರೆಗೆ ಅವಳಿಗೆ ಅವನ ಮನೆಯಿಂದಲೇ ಊಟ ತರಿಸಿಕೊಡುತ್ತಿದ್ದ. ಆಸ್ಪತ್ರೆಯಲ್ಲಿ ಸಿಗದಿದ್ದ ಔಷಧಿ ಹೊರಗೆ ಖರೀದಿಸಿಕೊಟ್ಟು ಆಕೆಯ ಚಿಕಿತ್ಸೆಗೆ ಮುತುವರ್ಜಿ ವಹಿಸಿದ. ಆ ಸಂದರ್ಭದಲ್ಲಿ ಆಕೆ ತಿಳಿಸಿದ ವಿಷಯ ಆಘಾತಕರವಾಗಿತ್ತು, ಜಿಗುಪ್ಸೆ ಮೂಡಿಸುವಂತಿತ್ತು. ಸರಗಳ್ಳತನ ಮಾಡುತ್ತಿದ್ದಳೆಂದು ಅವಳನ್ನು ಬಂಧಿಸಿದ ನಂತರ 24 ಘಂಟೆಗಳ ಒಳಗೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಆಕೆಯನ್ನು ಎರಡು ರಾತ್ರಿಗಳು ಠಾಣೆಯಲ್ಲೇ ಬಂಧಿಸಿಟ್ಟಿದ್ದರಂತೆ. ಗರ್ಭಿಣಿಯಾಗಿದ್ದ ಆಕೆಯನ್ನು ಇಡೀ ರಾತ್ರಿ ಬೆತ್ತಲೆಯಾಗಿರುವಂತೆ ಮಾಡಿ ಹಿಂಸಿಸಿ ವಿಕೃತವಾಗಿ ವರ್ತಿಸಿ ಇಬ್ಬರು ಅತ್ಯಾಚಾರ ಮಾಡಿದ್ದರಂತೆ. ಆಕೆಯ ಮರ್ಮಾಂಗಕ್ಕೆ ಲಾಠಿ ತೂರಿಸಿದ್ದರಂತೆ. ಆಕೆಗೆ ಗರ್ಭಪಾತವಾಗಲು ಈ ಹಿಂಸೆಯೇ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ವಿಚಾರಣಾ ದಿನಾಂಕದಂದು ನ್ಯಾಯಾಧೀಶರ ಮುಂದೆ ಈ ಎಲ್ಲಾ ಸಂಗತಿ ತಿಳಿಸುವಂತೆ ಆಕೆಗೆ ಸಲಹೆ ನೀಡಿದ. ಆದರೆ ಆಕೆ ಹಾಗೆ ಮಾಡುವಳೆಂದು ಅವನಿಗೆ ಅನ್ನಿಸಲಿಲ್ಲ. ಆಸ್ಪತ್ರೆಯಿಂದ ಹೊರಬಂದ ದಿನ ಆಕೆಯನ್ನು ಹಾಸನದ ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದ ಒಬ್ಬ ವ್ಯಕ್ತಿ ಆಕೆಯನ್ನು ಜಾಮೀನಿನ ಮೇಲೆ ಬಿಡುವ ಆದೇಶ ತಂದಿದ್ದರಿಂದ ಆಕೆಯನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸುವ ಸಂದರ್ಭದಲ್ಲಿ ರಿಜಿಸ್ಟರಿನಲ್ಲಿ ಆಕೆಯ ಸಹಿಯನ್ನು ಪಡೆಯುತ್ತಿದ್ದಾಗ ಆಕೆ ಇತರ ಸಿಬ್ಬಂದಿಯ ಎದುರಿಗೇ ಅವನಿಗೆ ಅಡ್ಡಬಿದ್ದು ನಮಸ್ಕಾರ ಮಾಡಿ "ಅಣ್ಣಾ, ನೀವು ನನ್ನ ಜೀವ ಕಾಪಾಡಿದ ದೇವರು. ನಿಮ್ಮನ್ನೆಂದೂ ಮರೆಯುವುದಿಲ್ಲ" ಎಂದು ಅಳುತ್ತಾ ಹೇಳಿದ್ದಳು.
      ಕೆಲವರ್ಷಗಳ ನಂತರದಲ್ಲಿ ಅವನಿಗೆ ಬಡ್ತಿ ಸಿಕ್ಕಿ ತಹಸೀಲ್ದಾರನೂ ಆದ. ತಾಲ್ಲೂಕು ದಂಡಾಧಿಕಾರಿಯಾಗಿ ಕಾನೂನು-ಸುವ್ಯವಸ್ಥೆ, ಶಾಂತಿಪಾಲನೆಯ ಹೊಣೆಗಾರಿಕೆ ಇದ್ದು, ಅಪರಾಧಗಳು ಘಟಿಸುವ ಮುನ್ನ ಅದನ್ನು ತಡೆಯುವ ಜವಾಬ್ದಾರಿ ಅವನ ಮೇಲಿತ್ತು. ಅಶಾಂತಿ ನಿರ್ಮಿಸುವವರ ವಿರುದ್ಧ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವವರ ವಿರುದ್ಧ ಕಠಿಣ ಮನೋಭಾವ ಹೊಂದಿದ್ದ ಆತ ಹಲವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಿದ್ದ. ರಾಷ್ಟ್ರೀಯ ಉತ್ಸವಗಳ ಸಂದರ್ಭದಲ್ಲಿ ರಾಷ್ಟ್ರದ್ವಜವನ್ನು ಹಾರಿಸಿ, ದ್ವಜವಂದನೆ ಮಾಡುವ, ಧ್ವಜವಂದನೆ ಸ್ವೀಕರಿಸುವ ಅವಕಾಶ ಒದಗಿಸಿದ್ದಕ್ಕಾಗಿ ಅವನು ದೇವರಿಗೆ ಆಭಾರಿಯಾಗಿದ್ದ, ಮಾಡಿದ ಕೆಲಸಗಳಲ್ಲಿ ಆತ್ಮತೃಪ್ತಿ ಹೊಂದಿದ್ದ. ೧೨ ವರ್ಷಗಳ ಕಾಲ ಆ ಹುದ್ದೆಯಲ್ಲಿ ಕೆಲಸ ಮಾಡಿ ಇನ್ನೇನು ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಸಿಗುತ್ತಿದ್ದ ಸಂದರ್ಭದಲ್ಲಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಹೊಂದಿದ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ.
     ಜೈಲಿನಲ್ಲಿ ಕೈದಿಯಾಗಿದ್ದ, ಜೈಲಿನ ಸೂಪರಿಂಟೆಂಡೆಂಟನೂ ಆದ ಮತ್ತು ಮುಂದೆ ತಾಲ್ಲೂಕು ದಂಡಾಧಿಕಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದ ಆ ವ್ಯಕ್ತಿ ಯಾರೆಂದು ತಿಳಿಯುವ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ನಾನೇ! ಬಹುಷಃ ಬೇರೆ ಯಾರಿಗೂ ಸಿಗದಿರಬಹುದಾದ ಇಂತಹ ಅಪರೂಪದ ಅವಕಾಶಗಳನ್ನು ನೀಡಿ, ಅನೇಕ ಅನುಭವಗಳನ್ನು ಹೊಂದುವಂತೆ ಮಾಡಿದ ಆ ದೇವರಿಗೆ ನಾನು ಋಣಿಯಾಗಿದ್ದೇನೆ.
-ಕ.ವೆಂ.ನಾಗರಾಜ್.
**************

                                         ಕೈದಿ >>>>>>>>>>>>>>>>>>>ಜೈಲು ಸೂಪರಿಂಟೆಂಡೆಂಟ್
                                              ತಾಲ್ಲೂಕು ದಂಡಾಧಿಕಾರಿಯಾಗಿ . .

[17.9.2014ರಂದು ಲೇಖನ ಪರಿಷ್ಕರಿಸಿದೆ.]
[ಒಬ್ಬ ಕೈದಿಯಾಗಿ, ಜೈಲು ಸೂಪರಿಂಟೆಂಡೆಂಟ್ ಆಗಿ ನನ್ನ ಅನುಭವಗಳನ್ನು 'ಸೇವಾಯಾತ್ರೆ' ಶೀರ್ಷಿಕೆಯಲ್ಲಿ ದಾಖಲಿಸಿರುವೆ. ಅಸಕ್ತರು ಓದಬಹುದು. ಲಿಂಕ್ ಇಲ್ಲಿದೆ:  http://kavimana.blogspot.in/search/label/%E0%B2%B8%E0%B3%87%E0%B2%B5%E0%B2%BE%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86 ]

ದಿನಾಂಕ 17.9.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

22 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜರೆ
    ನಿಮ್ಮ ಲೇಖನ ಓದುವಾಗ ಅನಿಸಿದ್ದು " ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೆ ಕೆಟ್ಟರೆ ಕೆಡಲಿ ". ಒಂದು ಆದರ್ಶವನ್ನು ಇಟ್ಟು ಅದಕ್ಕೆ ಬದ್ಧರಾಗಿ ನಡೆದುಕೊಂಡಾಗ ಖಂಡಿತ ಮೊಸವಾಗದು . " God sees the truth, but wait " ಇದು ನಿಮ್ಮ ಅನುಭವದಿಂದ ವೇದ್ಯ. ಇದು ನನಗೂ ಅನುಭವವಾಗಿದೆ. ಇಂತಹ ಅನುಭವದ ಘಟನೆಗಳು ನಮ್ಮನ್ನು ಹೆಚ್ಚು ಬಲಿಷ್ಟರನ್ನಾಗಿ ಮಾಡುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
    ಧನ್ಯವಾದಗಳು.
    ಪ್ರಕಾಶ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುರ್ತು ಪರಿಸ್ಥಿತಿ ಕಾಲದಲ್ಲಿ ಮಾನಸಿಕವಾಗಿ ಬಲಿಷ್ಠನಾಗಿದ್ದರಿಂದ ಇಂದು ನಿಮ್ಮ ನಡುವೆ ಇರಲು ನನಗೆ ಸಾಧ್ಯವಾಗಿದೆ. ಆ ದೇವರು ಕರುಣಾಮಯಿ. ಪ್ರತಿಕ್ರಿಯೆಗೆ ವಂದನೆ,ಪ್ರಕಾಶರೇ.

      ಅಳಿಸಿ
  2. ಸರ್ ,
    ಕಥೆಯ ತರಹ ಓದುತ್ತ ಹೋದೆ, ಕೊನೆಯಲ್ಲಿ ಅಚ್ಚರಿ ಕಾದಿತ್ತು! ನಿಜಕ್ಕೂ ನೀವೊಬ್ಬ ಜೀವನಾನುಭವಿ ಕವಿ :)

    ಪ್ರತ್ಯುತ್ತರಅಳಿಸಿ
  3. ಶ್ರೀ ನಾಗರಾಜ್ ಅವರು ಹಾಸನ ಜೈಲಿನಲ್ಲಿದ್ದರೆ, ಬೆಂಗಳೂರು ಜೈಲಿನಲ್ಲಿ ಅದೇ ಸಮಯದಲ್ಲಿ ಲಾಲ್ ಕೃಷ್ಣ ಅಧ್ವಾನಿ ಅಂತಹ ನೇತಾರರೂ ಕೈದಿ ಆಗೇ ಇದ್ದರು. ನಾವೆಲ್ಲಾ ಸೆರೆ ಸಿಕ್ಕದೆ ಗುಪ್ತವಾಗಿ ಓಡಾಡುತ್ತಾ ಅಂದಿನ ಇಂದಿರಾ ಸರ್ಕಾರದ ವಿರುದ್ಧ , ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದಲ್ಲಿ ಕಹಳೆ ಎಂಬ ಪತ್ರಿಕೆಯನ್ನು ಎಲ್ಲಾ ಅಧಿಕಾರಿಗಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೆವು. ನಾನು ಆಗ ಬೆಂಗಳೂರಿನ ದೂರವಾಣಿನಗರ, ಕೃಷ್ಣರಾಜಪುರ ಭಾಗದಲ್ಲಿ ಸಂಘದ ವಿಸ್ತಾರಕನಾಗಿ ಕೆಲಸ ಮಾಡುತ್ತಾ ಎಲ್ಲಾ ಅಧಿಕಾರಿಗಳ ಮನೆಗೆ ಕಹಳೆಯನ್ನು ತಲುಪಿಸುವ ಕೆಲಸವನ್ನು ರಾತ್ರೋ ರಾತ್ರಿ ಮಾಡುತ್ತಿದ್ದರೂ ಯಾವ ಅಧಿಕಾರಿಯೂ ಕಹಳೆ ಎಲ್ಲಿಂದ ಬಂತು? ಎಂಬ ಹುಡುಕಾಟಕ್ಕೆ ಹೋಗದೆ ಕಾತುರದಿಂದ ಕಹಳೆಯನ್ನು ಎದಿರು ನೋಡುತ್ತಿದ್ದರು. ಆ ದಿನಗಳನ್ನು ಸ್ಮರಣೆ ಮಾಡಿಕೊಂಡರೆ ಈಗ ಮೈ ಜುಂ ಎನ್ನುತ್ತೆ!!

    ಪ್ರತ್ಯುತ್ತರಅಳಿಸಿ
  4. ಹಾಸನದ ಗ್ರಂಥಾಲಯದಲ್ಲಿ 'ಕಹಳೆ' ಪತ್ರಿಕೆ ಹಾಕಿದ್ದೆನೆಂದು ಮತ್ತೊಂದು ಪ್ರಕರಣ ಸಹ ನನ್ನ ಮೇಲೆ ಇತ್ತು. ಬಹುಷಃ ನನ್ನ ನಿಷ್ಠುರ ವರ್ತನೆಯಿಂದ ಪೋಲಿಸರ ಮತ್ತು ಮೇಲಾಧಿಕಾರಿಯ ಕೆಂಗಣ್ಣಿಗೆ ಗುರಿಯಾಗಿದ್ದರ ಫಲವಿರಬಹುದು! ಪ್ರತಿಕ್ರಿಯೆಗೆ ವಂದನೆ, ಶ್ರೀಧರ್.

    ಪ್ರತ್ಯುತ್ತರಅಳಿಸಿ
  5. ಏಳು ಬೀಳಿನ ಜೀವನದಲ್ಲಿ ಮಿಂದೆದ್ದು ವಿಶ್ರಾಂತಿಯಲ್ಲಿರುವ ನೀವು ಇನ್ನು ಹೆಚ್ಚಿನ ಅನುಭವ ಮಂಟಪವನ್ನು ದಾರೆಯೆರೆಯಿರಿ ಎಂದು ನಮ್ಮ ಶುಭ ಹಾರೈಕೆ

    ಪ್ರತ್ಯುತ್ತರಅಳಿಸಿ
  6. ನೀವು ತಹಸೀಲ್ದಾರ್ ಆಗಿ ನಿವೃತ್ತಿ ಆದ ವಿಷಯ ತಿಳಿದಿತ್ತು. ಅದಕ್ಕೂ ಹಿಂದಿನ ವಿಚಾರ ಈಗ ತಿಳಿದು ಆಶ್ಚರ್ಯವಾಯಿತು. ಛಲಗಾರನಿಗೆ ಅಸಾಧ್ಯವಾದುದಿಲ್ಲ, ಛಲ ಸರಿಯಾದ ವಿಷಯದಲ್ಲಿರಬೇಕಷ್ಟೆ ಎಂಬ ಮಾತಿಗೆ ನೀವೇ ಸಾಕ್ಷಿ. ನಿಮ್ಮ ಈ ಜೀವನಾನುಭವ ಇತರರಿಗೆ ಪ್ರೇರಕವಾಗಲಿ.
    - ಸುಧಾಕರ ಶರ್ಮಾ.

    ಪ್ರತ್ಯುತ್ತರಅಳಿಸಿ
  7. ಮಾನ್ಯರೇ, ನಿಮ್ಮ ಪ್ರತಿಕ್ರಿಯೆ ನಿಜಕ್ಕೂ ಮುದ ನೀಡಿತು. ಧನ್ಯವಾದಗಳು, ಶರ್ಮಾಜಿಯವರೇ.

    ಪ್ರತ್ಯುತ್ತರಅಳಿಸಿ

  8. Sathya Charana S.M.
    ಹ..ಹ.. ಒಳ್ಳೇ ಸರ್ಪೈಸ್ ಕೊಟ್ರೀ ಸರ‍್.. :-)
    ಇದ್ಯಾಕಪ್ಪಾ ಇಂತಹ ಮನುಷ್ಯರ ಬಗ್ಗೆ ಬರಹ ಪೂರಾ ಏಕವಚನವೇ ನಡೆದು ಹೋಗ್ತಾ ಇದೆಯಲ್ಲಾ ಅಂತ ಅನ್ಕೋತಾ ಇದ್ದೆ. ಕೊನೆಗೆ ಕತೆ ತಿರುವು ಪಡ್ಕೋತು. :-) ಸಕ್ಕತ್ತಾಗಿದೆ ನಿಮ್ಮ ಕ್ಲೈಮಾಕ್ಸ್. ನಿಮ್ಮ ಈಗಿನ ನಿವೃತ್ತ ಜೀವನ ಚೆನ್ನಾಗಿ ನಡೆಯಲಿ.. :-)

    Ganesh K Apr 10 2012
    ನಿಜಕ್ಕೂ ನೀವು ಅಭಿನಂದಾರ್ಹರು. :-)
    ಗಣೇಶ್ ಕೆ.

    nandan Apr 10 2012
    good article sir .. thank u sir

    manjunatha.R Apr 11 2012
    ಸಾಮನ್ಯರಲ್ಲಿ ಅಸಾಮನ್ಯರು ಅಂದ್ರೆ ಇದೆನಾ ಗುರುಗಳೆ…………….. ನೀಮ್ಮ ದೂರವಾಣಿ ಸಂಖ್ಯೆ ನಮಗೆ ಬೇಕು.. ದಯಾವಿಟ್ಟು ನಮೂದಿಸಿ (ಸೇರಿಸಿ)……..

    Nanjundaraju Apr 11 2012
    ಮಾನ್ಯರೆ, ಲೇಖನ ತುಂಬಾ ಚೆನ್ನಾಗಿದೆ. ಈ ಹಿಂದೆ ನಿಮ್ಮ ಕವಿ ಮನ ಬ್ಲಾಗಿನಲ್ಲಿ ಸೇವಾ ಪುರಾಣ ಎಂಬ ಶೀರ್ಷಿಕೆಯಡಿಯಲ್ಲಿ ಸವಿವರವಾಗಿ ಪ್ರಸಾರವಾಗಿತ್ತು. ಈಗ ಲೇಖನ ಚುಟುಕಾಯಿತು. ಒಂದು ರೀತಿಯಲ್ಲಿ ಲೇಖನ ಆಶ್ಚರ್ಯಕರವಾಗಿದೆ. ಯಾರು ನಂಬುವುದಿಲ್ಲ. ಆದರೆ ಇದು ನಾನು ಕಂಡ ಮಟ್ಟಿಗೆ, ಪ್ರಪಂಚದಲ್ಲಿ ಅಲ್ಲದಿದ್ದರೂ, ದೇಶದಲ್ಲಿ ಅಪರೂಪದ ಘಟನೆ ಎನಿಸುತ್ತದೆ. ಒಬ್ಬ ಸಾಮಾನ್ಯ ಸರಕಾರೀ ನೌಕರ ಜೈಲು ಸೇರಿ ಪುನ: ಒಬ್ಬ ಜೈಲು ಅಧಿಕಾರಿಯಾಗಿ, ನಂತರ ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು. ವಿಧಿ ವಿಲಾಸವೇ ಸರಿ. ಇದು ಗಿನ್ನಿಸ್ ಅಥವಾ ಲಿಮ್ಕಾ ದಾಖಲೆ ಅಗಬೇಕಿತ್ತಲ್ಲವೇ. ಹೋಗಲಿ ಬಿಡಿ ನಮ್ಮ ಮನಸಿನಲ್ಲಂತೂ ಶಾಶ್ವತವಾಗಿ ಉಳಿದಿದೆ. ವಂದನೆಗಳೊಡನೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. 'ಮಿತ್ರ ರಾಕೇಶ ಶೆಟ್ಟರ 'ನಿಲುಮೆ'ಯಲ್ಲಿ ಪ್ರಕಟಿತವಾಗಿದ್ದ ಬರಹ ಸುಮಾರು 2 ವರ್ಷಗಳ ನಂತರದಲ್ಲಿ ಇಂದು ಕಣ್ಣಿಗೆ ಬಿತ್ತು. ಸಂತಸವಾಯಿತು. ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

      ಅಳಿಸಿ
  9. nAgarAja avarE,
    nIvu ishTella toMdare anubhavisi matte mEladhikaarigaLaagiddu shlaaghanIya.dhanyavaadagaLu.
    hiMdomme mechchuge baredidde.
    namaskaara,
    nimmava,
    kou la veM--milpITas, amerikaa.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಮೆಚ್ಚಿನ ಪ್ರತಿಕ್ರಿಯೆಗೆ ಧನ್ಯವಾದಗಳು, ಹಿರಿಯರಾದ ಶ್ರೀ ಕೌ.ಲ.ವೆಂಕಟಸುಬ್ಬಯ್ಯನವರೇ.

      ಅಳಿಸಿ
  10. ನಿಮ್ಮ ಕಥೆ ರೋಚಕವಾಗಿದೆ, ನಿಮ್ಮ ಬರವಣಿಗೆ ಶೇಲಿಯೂ ಕೂಡ. ನೀವೇಕೆ ನಿಮ್ಮ ಆತ್ಮಕಥೆ ಬರೆಯಬಾರದು? ಇತರರಿಗೂ ಸ್ಪೂರ್ತಿಯಾಗುತ್ತದೆ.

    ಪ್ರತ್ಯುತ್ತರಅಳಿಸಿ
  11. ಕವಿಗಳೇ ನಿಮ್ಮ ಬದುಕಿನ ವೈಕರಿಯ ಮುಂದೆ, ನಾನೆಷ್ಟು ಚಿಕ್ಕವನು,,,,,,, ಇದಷ್ಟೇ ಹೇಳಲು ಸಾಧ್ಯ,,,,,,, "ನಿಮ್ಮ ಬದುಕು ನನ್ನ ಶಕ್ತಿ ಹೆಚ್ಚಿಸಿದೆ, ನಿಮ್ಮ ಸಾನಿದ್ಯ ಸಿಕ್ಕಿದ್ದು ಭಾಗ್ಯವೇ ಸರಿ,,,,

    -ಜೀ ಕೇ ನವೀನ್ ಕುಮಾರ್

    ಪ್ರತ್ಯುತ್ತರಅಳಿಸಿ
  12. ಸರ್ ನಿಮ್ಮ ಕಥೆ ಓದಿದೆ ಅದರಲ್ಲಿ ಹೋಳೆನರಸಿಪುರದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಕೇಳಿ ತುಂಬಾ ನೋವಾಯಿತು
    ನಮ್ಮ ಊರಲ್ಲಿ ಇಂಥ ಘಟನೆಯ ಛೇ ಛೇ ...

    ಪ್ರತ್ಯುತ್ತರಅಳಿಸಿ
  13. ನಿಮ್ಮ ಕಥೆ ಓದಿ ನಮ್ಮ ಸಮಾಜದ ವ್ಯವಸ್ಥೆಯ ಮೇಲೆ ಇನ್ನೂ ಬೇಜಾರಾಯಿತು.ನಿಮ್ಮ ಸಿಟ್ಟಿಗೆ ಕಾರಣಗಳು ಸಮಂಜಸವೇ, ಇದರ ಮಧ್ಯೆ ನಿಮ್ಮ ಬದುಕಿನ ಬಗೆಗಿದ್ದ ಉತ್ಸಾಹ ಹೊಗಳಿಕೆಗೆ ಪಾತ್ರ. ಒತ್ತಡದಲ್ಲಿ, ಹತಾಶೆಯಲ್ಲಿ ಎಂಥೆಂಥವರೋ ಭ್ರಷ್ಟರಾಗುತ್ತಾರೆ. ನಿಮಗೆ ಅದು ಅಂಟದೇ ಇದ್ದುದು ಆಶ್ಚರ್ಯವಾಗುತ್ತದೆ ಹಾಗೂ ರೋಗಗ್ರಸ್ತ ವ್ಯವಸ್ಥೆಯ ಸೋಲಿಸಿ ನೀವು ಗೆದ್ದಂತೆ ಭಾಸವಾಗುತ್ತದೆ. ಇವೆಲ್ಲವುಗಳ ಮಧ್ಯೆ ನಿಮ್ಮ ಮಾನಸಿಕ ತೊಳಲಾಟ ನನ್ನ ಊಹೆಗೂ ನಿಲುಕದ್ದು. ಈ ನಿಮ್ಮ ಅನುಭವಗಳು ಯುವ ಪೀಳಿಗೆಗೆ ತಲುಪಬೇಕು. ಒಂದು ಆಡಿಯೋ ರೆಕಾರ್ಡಿಂಗ್ ಮಾಡಬಹುದೇ?ರೇಡಿಯೋಮಿರ್ಚಿಯ ಗಲಾಟೆಯಂತೆ ಎಮರ್ಜೆನ್ಸಿ ಮಿರ್ಚಿಯ ಖಾರವೂ ಈಗಿನ ಕಳೆದು ಹೋದ ಯುವಕರಿಗೆ ಬೇಕು
    ಡಾ ಅಶ್ವಿನಿ ರಾಮಸ್ವಾಮಿ

    ಪ್ರತ್ಯುತ್ತರಅಳಿಸಿ