ನನ್ನ ಬಗ್ಗೆ

ನನ್ನ ಫೋಟೋ

ನಿವೃತ್ತ ತಹಸೀಲ್ದಾರ್, ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ.
ನನ್ನ ಕೃತಿಗಳು: 1.ಕವಿಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿ ಚಿತ್ರಣ), 2. ಮೂಢ ಉವಾಚ - ಮುಕ್ತಕಗಳು, 3. ಆದರ್ಶದ ಬೆನ್ನು ಹತ್ತಿ . .
ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 24, 2010

ಮೂಢ ಉವಾಚ -40

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂವಿಕಲನಾಗದಿರೆಲೋ ಮೂಢ ||


ವಿಷಯ ಬಿಟ್ಟವನು ಸಂನ್ಯಾಸಿಯೆನಿಸುವನು
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದರೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
*************
-ಕವಿನಾಗರಾಜ್.

ಸೋಮವಾರ, ಡಿಸೆಂಬರ್ 20, 2010

ಮೂಢ ಉವಾಚ -39 : ಅರಿವು

ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯಹುದು ಒಂದೆ
ಮನವೊಪ್ಪುವ ದಾರಿಯಲಿ ಸಾಗು ಮೂಢ ||


ಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥ
ಮನಕೊಪ್ಪುವ ಪಥದಿ ಸಾಗಲಿ ಸಕಲಜನ |
ಅವರ ದಾರಿ ಅವರಿಗಿರಲಿ ಗುರಿಯೊಂದೆ
ತಲುಪುವ ಗಮ್ಯವೊಂದೇ ಮೂಢ ||


ಬೆಳಕಿರುವೆಡೆಯಲ್ಲಿ ಕತ್ತಲೆಯು ಇದ್ದೀತೆ
ಜ್ಞಾನವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನವನು ಮೂಢ ||


ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||
**************
-ಕವಿನಾಗರಾಜ್.

ಶನಿವಾರ, ಡಿಸೆಂಬರ್ 18, 2010

ಮೂಢ ಉವಾಚ -38

ಸತ್ಯಧರ್ಮಕೆ ಹೆಸರು ಕೋದಂಡರಾಮ 
ಹಿಡಿದನಾಯುಧವ ನೀತಿಪಾಲನೆಗಾಗಿ|
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ||


ಅನುರೂಪ ದಾಂಪತ್ಯವಿರೆ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ|
ರಸಭಾವದನುರೂಪ ಶಬ್ದಗಳ ಜೋಡಿಸಲು
ಒಡಮೂಡುವುದುತ್ತಮ ಕಾವ್ಯ ಮೂಢ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು|
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನವನು ಮೂಢ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ|
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ||
********************
-ಕವಿನಾಗರಾಜ್.

ಸೇವಾ ಪುರಾಣ -31: ಹೀಗೊಬ್ಬ 'ಹೀರೋ' !

     ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ. ಒಂದು ದಿನ ಸ್ನೇಹಿತನೊಂದಿಗೆ ಸಾಯಂಕಾಲದ ಹೊತ್ತಿನಲ್ಲಿ ಸಿನೆಮಾ ನೋಡಲು ಹೋಗಿದ್ದ. ಸಿನೆಮಾ ಪ್ರಾರಂಭವಾಗಿ ಹತ್ತು ನಿಮಿಷಗಳಾಗಿರಬಹುದು. ಆ ಯುವಕ ಕುಳಿತಿದ್ದ ಸೀಟಿನ ಹಿಂದಿನ ಸಾಲಿನಲ್ಲಿ ಮೊದಲೇ ಯಾರೂ ಕುಳಿತುಕೊಳ್ಳದಂತೆ ನೋಡಿಕೊಂಡು ಕಾದಿರಿಸಿದ್ದ ಎರಡು ಸೀಟುಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಆತನ ಪತ್ನಿ ಆಸೀನರಾದರು. ಸಬ್‌ಇನ್ಸ್‌ಪೆಕ್ಟರ್ ಯೂನಿಫಾರಮ್ಮಿನಲ್ಲೇ ಇದ್ದರು. ಹಳೆಯ ಕಾಲದ ಟಾಕೀಸುಗಳಲ್ಲಿ ಆಸನಗಳ ವ್ಯವಸ್ಥೆ ಹೇಳಿಕೊಳ್ಳುವ ಮಟ್ಟದಲ್ಲಿದ್ದಿರದೆ ಹಿಂದೆ ಕುಳಿತವರಿಗೆ, ಅದರಲ್ಲೂ ಕುಳ್ಳರಿಗೆ, ಮುಂದಿನವರ ತಲೆಗಳು ಅಡ್ಡವಾಗಿ ಅಕ್ಕ ಪಕ್ಕ ಬಗ್ಗಿ ನೋಡುವ ಸಂದರ್ಭಗಳು ಸಾಮಾನ್ಯವಾಗಿತ್ತು. ರಮೇಶ ಮತ್ತು ಅವನ ಸ್ನೇಹಿತ ಪರಸ್ಪರ ನೋಡಿಕೊಂಡು ಮಾತನಾಡುತ್ತಾ ಸಿನೆಮಾ ನೋಡುತ್ತಿದ್ದರಿಂದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಅವನ ತಲೆ ಅಡ್ಡ ಬಂದು ಸಿನೆಮಾ ನೋಡಲು ಅಡಚಣೆಯಾಗುತ್ತಿತ್ತೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ತಮ್ಮ ಲಾಠಿಯಿಂದ ರಮೇಶನ ತಲೆ ಸರಿಸಿದರು. ರಮೇಶ ಹಿಂತಿರುಗಿ ದುರುಗುಟ್ಟಿ ನೋಡಿ ಸುಮ್ಮನಾದ. ಸಬ್‌ಇನ್ಸ್‌ಪೆಕ್ಟರ್ ರಮೇಶನ ಸೀಟಿನ ಹಿಂಭಾಗದ ಮೇಲೆ ಬೂಟುಕಾಲಿರಿಸಿ ಕುಳಿತಿದ್ದು ಅವನಿಗೆ ಅಸಹನೀಯವೆನಿಸಿದರೂ ಸುಮ್ಮನೆ ಇರಬೇಕಾಗಿದ್ದ ಸ್ಥಿತಿ ಅವನದಾಗಿತ್ತು. ಮತ್ತೆ ಹತ್ತು ಹದಿನೈದು ನಿಮಿಷಗಳಾಗಿರಬಹುದು. ಉದ್ದವಾಗಿ ಧೃಢಕಾಯನಾಗಿದ್ದ ರಮೇಶನ ಹಿಂದೆ ಕುಳಿತಿದ್ದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಸರಿಯಾಗಿ ಸಿನೆಮಾ ನೋಡಲಾಗದೆ ಚಡಪಡಿಸುತ್ತಿದ್ದರೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ಪುನಃ ಲಾಠಿಯಿಂದ ಸ್ವಲ್ಪ ಬಿರುಸಾಗಿ ಅವನ ತಲೆ ತಳ್ಳಿ 'ಸರಿಯಾಗಿ ಕೂತು ನೋಡಲೇ ಬದ್ಮಾಶ್' ಎಂದರಂತೆ. ರಮೇಶನಿಗೆ ತಲೆ ಕೆಟ್ಟುಹೋಯಿತು. ಎದ್ದು ತಿರುಗಿ ನಿಂತವನೇ ಸಬ್‌ಇನ್ಸ್‌ಪೆಕ್ಟರ್ ಕೈಲಿದ್ದ ಲಾಠಿ ಕಿತ್ತುಕೊಂಡವನೇ ಅವರಿಗೆ ಎರಡು ಬಾರಿಸಿಬಿಟ್ಟ. ಸಬ್‌ಇನ್ಸ್‌ಪೆಕ್ಟರ್ ಸಹ ಅವನಿಗೆ ಹೊಡೆದರು. ಜಗಳ ಜೋರಾಯಿತು. ರಮೇಶ ಸಬ್‌ಇನ್ಸ್‌ಪೆಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಹೊಡೆಯುತ್ತಾ ಅವರನ್ನು ಬಾಲ್ಕನಿಯಿಂದ ಕೆಳಕ್ಕೆ ಎಳೆದು ತಂದ. ಅವರ ಪತ್ನಿ ಇಬ್ಬರನ್ನೂ ಸುಮ್ಮನಿರಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಕೆ ಟಾಕೀಸಿನ ಹತ್ತಿರದಲ್ಲೇ ಇದ್ದ ಪೋಲಿಸ್ ಠಾಣೆಗೆ ಓಡಿಹೋಗಿ ಸುದ್ದಿ ಕೊಟ್ಟಿದ್ದೇ ತಡ ಧಾವಿಸಿ ಬಂದ ಪೋಲಿಸ್ ಪೇದೆಗಳು ರಮೇಶನನ್ನು ಬಂಧಿಸಿದರು. ಅಂದು ರಾತ್ರಿ ಠಾಣೆಯಲ್ಲಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಲಿಲ್ಲ ಎಂದರೆ ಯಾರೂ ಒಪ್ಪುವುದಿಲ್ಲ. ಮರುದಿನ ಬೆಳಿಗ್ಗೆ ಅವನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿ ಜೈಲಿಗೆ ದಾಖಲಿಸಿದರು. ಸ್ಥಳೀಯ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಮುಖವಾಗಿ ಪ್ರಕಟವಾಯಿತು. ಜನರು ಸಬ್‌ಇನ್ಸ್‌ಪೆಕ್ಟರ್‌ರ ದೌರ್ಜನ್ಯ ಖಂಡಿಸಿ  ಬಂದ್ ನಡೆಸಿದರು. ತಾಲ್ಲೂಕು ಕಛೇರಿಯ ಮುಂದೆ ಸಭೆ ನಡೆಸಿ ಭಾಷಣಗಳನ್ನು ಮಾಡಿ ರಮೇಶನನ್ನು ಬಿಡುಗಡೆಗೊಳಿಸಲು ಮನವಿ ಸಲ್ಲಿಸಿದರು. ಎರಡು ದಿನಗಳ ನಂತರ ಅವನು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ವೇಳೆಗಾಗಲೇ ಅವನು 'ಹೀರೋ' ಎನ್ನಿಸಿಕೊಂಡಿದ್ದ.
     ಧೃಢ ಮೈಕಟ್ಟಿನ ಆದರೆ ಹುಂಬನಾದ ರಮೇಶನ ವ್ಯಕ್ತಿತ್ವವೇ ಬದಲಾಗಿತ್ತು. ಅವನನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರಿಗೆ ಕಡಿಮೆಯಿರಲಿಲ್ಲ. ನಂತರದ ದಿನಗಳಲ್ಲಿ ಪೋಲಿಸರೂ, ರಾಜಕಾರಣಿಗಳೂ, ಬಲಾಢ್ಯರೂ ಅವನಿಂದ ಉಪಯೋಗ ಪಡೆಯಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಅವನ ಸ್ವಭಾವ ಬದಲಾಯಿತು. ಆಗಾಗ್ಯೆ ಪ್ರಕರಣಗಳು ದಾಖಲಾಗುತ್ತಿತ್ತು. ಒಮ್ಮೆ ಆತ ನನ್ನನ್ನು ಉದ್ದೇಶಿಸಿ "ಗುರುಗಳೇ, ಏನಾದರೂ ಕೆಲಸ ಇದ್ದರೆ ಸಂಕೋಚ ಮಾಡಿಕೊಳ್ಳದೆ ಕೇಳಿ. ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ಹೇಳಿ, ಹೆದರಬೇಡಿ, ನಾನಿದ್ದೇನೆ. ಅವರ ಬೆಂಡೆತ್ತಿಬಿಡುತ್ತೇನೆ" ಎಂದು ಹೇಳಿದ್ದ. ಮುಗುಳ್ನಗೆ ಮಾತ್ರ ನನ್ನ ಪ್ರತಿಕ್ರಿಯೆಯಾಗಿತ್ತು.

ಶುಕ್ರವಾರ, ಡಿಸೆಂಬರ್ 17, 2010

ಮೂಢ ಉವಾಚ -37 : ಗುರುಮಾರ್ಗ

ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು|
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಗುರುವಾಣಿ ಸುಜನವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||


ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ|
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ||
*************
-ಕವಿನಾಗರಾಜ್.

ಬುಧವಾರ, ಡಿಸೆಂಬರ್ 15, 2010

ಸೇವಾ ಪುರಾಣ -30: ಬಂದಿಯಾದ ಸಬ್‌ಇನ್ಸ್‌ಪೆಕ್ಟರರ ಕಥೆ


    ಸುಮಾರು 30 ವರ್ಷಗಳ ಹಿಂದಿನ ಘಟನೆಯಿದು. ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರದಲ್ಲಿನ ಪೋಲಿಸ್ ಠಾಣೆಗೆ ಬಂದಿದ್ದ ರೈತನಾಯಕರೊಬ್ಬರು ಸಬ್ ಇನ್ಸ್‌ಪೆಕ್ಟರರೊಂದಿಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರರ ರಿವಾಲ್ವರ್‌ನಿಂದ ಹಾರಿದ ಗುಂಡು ಆ ರೈತನಾಯಕನ ಪ್ರಾಣ ತೆಗೆದಿತ್ತು. ರಿವಾಲ್ವರ್ ಅನ್ನು ಕೈಬೆರಳಿನಲ್ಲಿ ಸಿಕ್ಕಿಸಿಕೊಂಡು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿತೆಂಬುದು ಸಬ್‌ಇನ್ಸ್‌ಪೆಕ್ಟರರ ವಾದವಾಗಿತ್ತು. ವಾದದ ಭರದಲ್ಲಿ ಸಿಟ್ಟಿನಿಂದ ಗುಂಡು ಹಾರಿಸಿ ಕೊಂದರೆಂದು ಜನರ ಅನಿಸಿಕೆಯಾಗಿತ್ತು. ಈ ವಿಚಾರದಲ್ಲಿ ಬಹಳ ಚರ್ಚೆ, ವಾದ-ವಿವಾದಗಳು, ಪ್ರತಿಭಟನೆಗಳು ನಡೆದವು. ಅಂತಿಮವಾಗಿ ಕೊಲೆ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರರನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ನ್ಯಾಯಾಂಗ ಬಂಧನಕ್ಕೆ ಒಳಗಾದ ಅವರಿಗೆ ಜಾಮೀನು ಸಿಗಲಿಲ್ಲ. ಅವರನ್ನು ವಾಸ್ತವವಾಗಿ ಹಾಸನದ ಜೈಲಿನಲ್ಲಿ ಇರಿಸಬೇಕಾಗಿತ್ತು. ಆದರೆ ಹೊಳೆನರಸಿಪುರದ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಿದರು. ಕಾರಣ ಅರ್ಥವಾಗದುದೇನಾಗಿರಲಿಲ್ಲ. ಹಾಸನದ ಜೈಲಿನ ಸಿಬ್ಬಂದಿ ಕಾರಾಗೃಹ ಇಲಾಖೆಗೆ ಸೇರಿದವರಾಗಿದ್ದರು. ಅವರ ಮೇಲೆ ಪೋಲಿಸ್ ಇಲಾಖೆಯ ನಿಯಂತ್ರಣ ಇರಲಿಲ್ಲ. ಹೊಳೆನರಸಿಪುರದ ಜೈಲಾದರೆ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು, ಜೈಲು ಸೂಪರಿಂಟೆಂಡೆಂಟ್ ಆಗಿದ್ದ ನಾನು ಕಂದಾಯ ಇಲಾಖೆಗೆ ಸೇರಿದವನಾಗಿದ್ದು, ಪದನಿಮಿತ್ತ ಆ ಹುದ್ದೆಯನ್ನು ಹೊಂದಿದ್ದೆ.ತಮ್ಮ ಇಲಾಖೆಯ ಅಧಿಕಾರಿಯನ್ನು ಚೆನ್ನಾಗಿ ನೋಡಿಕೊಳ್ಳಬಹುದೆಂಬುದು ಅವರ ಇರಾದೆಯಾಗಿತ್ತು. ಅದಕ್ಕೆ ತಕ್ಕಂತೆ ಆ ಬಂದಿ ಅಧಿಕಾರಿಯನ್ನು ಸಹೋದ್ಯೋಗಿಗಳು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಊಟ, ತಿಂಡಿಗಳು ಅಲ್ಲಿನ ಪೋಲಿಸರ ಮನೆಗಳಿಂದಲೇ ಬರುತ್ತಿತ್ತು. ಸಾಯಂಕಾಲದಲ್ಲಿ ಪೋಲಿಸ್ ಜೀಪಿನಲ್ಲಿ ಹೊರಗಡೆ ತಿರುಗಾಡಲೂ ಕರೆದೊಯ್ಯುತ್ತಿದ್ದರಂತೆ. ಒಂದು ಸಲ ಅವರನ್ನು ಸಿನೆಮಾ ಟಾಕೀಸಿಗೆ ಸಿನೆಮಾ ನೋಡಲೂ ಕರೆದುಕೊಂಡು ಹೋಗಿದ್ದರಂತೆ. ಸ್ಥಳೀಯ ಪತ್ರಿಕೆಗಳಲ್ಲಿ 'ಹೊಳೆನರಸಿಪುರದ ಜೈಲಿನಲ್ಲಿ ಕೈದಿ ಸಬ್ ಇನ್ಸ್‌ಪೆಕ್ಟರರಿಗೆ ರಾಜೋಪಚಾರ ಎಂದು ವರದಿಗಳೂ ಬಂದವು. ನನಗೆ ಇದೆಲ್ಲಾ ಇಷ್ಟವಾಗದೆ ಹೊಳೆನರಸಿಪುರದ ಸಬ್ ಇನ್ಸ್‌ಪೆಕ್ಟರರಿಗೆ ಇನ್ನು ಮುಂದೆ ಇಂತಹ ಸಂಗತಿಗಳಿಗೆ ಅವಕಾಶ ಕೊಡಬಾರದೆಂದು, ನನ್ನ ಗಮನಕ್ಕೆ ಬಂದರೆ ಡಿ.ಜಿ.ಪಿ.ರವರ ಗಮನಕ್ಕೆ ವರದಿ ಕೊಡಬೇಕಾಗುತ್ತದೆಂದು ತಿಳಿಸಿದೆ. ಗಾರ್ಡುಗಳಿಗೂ ಎಚ್ಚರಿಕೆ ನೀಡಿದೆ.
     ಪತ್ರಿಕೆಯಲ್ಲಿ ವರದಿ ಬಂದ ನಂತರ ನಾನು ಆಗಾಗ್ಗೆ ಜೈಲಿಗೆ ಭೇಟಿ ಕೊಟ್ಟು ಬರುತ್ತಿದ್ದೆ. ನನ್ನ ಕಣ್ಣು ತಪ್ಪಿಸಿ ಅವರು ಮೊದಲಿನ ಚಾಳಿ ಮುಂದುವರೆಸಿದ್ದರು. ಹೀಗಾಗಿ ನಾನು ಎರಡು ದಿನದ ನಂತರ ಸಾಯಂಕಾಲ ಮನೆಗೆ ಹೋದಂತೆ ಮಾಡಿ ಹತ್ತು ನಿಮಿಷ ಬಿಟ್ಟು ಪುನಃ ಅನಿರೀಕ್ಷಿತವಾಗಿ ಜೈಲಿಗೆ ಭೇಟಿ ಕೊಟ್ಟೆ. ಆ ಸಮಯದಲ್ಲಿ ಜೈಲಿನ ಒಳ ಆವರಣದಲ್ಲಿ ಇಡಲಾಗಿದ್ದ ಎರಡು ಬೆತ್ತದ ಕುರ್ಚಿಗಳಲ್ಲಿ ಒಂದರಲ್ಲಿ ಬಂದಿ ಅಧಿಕಾರಿ ಇನ್ನೊಂದರಲ್ಲಿ ಆಗ ಕ.ರಾ.ರ.ಸಾ.ಸಂಸ್ಥೆಯ ಡಿವಿಷನಲ್ ಕಂಟ್ರೋಲರ್ ಮತ್ತು ಉಪ ಜನರಲ್ ಮೇನೇಜರ್ ಆಗಿದ್ದ ವ್ಯಕ್ತಿ ಕುಳಿತು ಚಹ ಹೀರುತ್ತಾ ಕುಶಲೋಪರಿ ಮಾತುಕಥೆಗಳನ್ನಾಡುತ್ತಿದ್ದರು. ನನ್ನನ್ನು ನೋಡಿದ ಅವರು "ಬನ್ನಿ ಸಾಹೇಬರೇ, ಕುಳಿತುಕೊಳ್ಳಿ. ಏಯ್, ಸಾಹೇಬರಿಗೆ ಒಳ್ಳೆಯ ಟೀ ತೆಗೆದುಕೊಂಡು ಬನ್ನಿ" ಎಂದು ಅಲ್ಲಿದ್ದ ಗಾರ್ಡಿಗೆ ಹೇಳಿದರು. ನಾನು ಗಾರ್ಡ್ ಅನ್ನು ದುರುಗುಟ್ಟಿ ನೋಡಿದೆ. ಆತ ಪೆಚ್ಚಾಗಿ ನಿಂತಿದ್ದ. ನನಗೆ ಸಿಟ್ಟು ಬಂದಿತ್ತು. ನಾನು ಆ ಜಿಲ್ಲಾ ಮಟ್ಟದ ಅಧಿಕಾರಿಗೆ "ನೀವು ಜಿಲ್ಲಾ ಮಟ್ಟದ ಅಧಿಕಾರಿಯಿರಬಹುದು. ಆದರೆ ನಿಮ್ಮ ಅಧಿಕಾರ ವ್ಯಾಪ್ತಿ ಇಲ್ಲಿಲ್ಲ. ನೀವು ಇಲ್ಲಿ ಯಾರ ಅನುಮತಿ ಪಡೆದು ಒಳಗೆ ಬಂದಿರಿ? ನನ್ನ ಅನುಮತಿ ಪಡೆಯದೆ ಒಳಗೆ ಬಂದಿದ್ದಲ್ಲದೆ ನನ್ನ ಜೈಲಿನಲ್ಲೇ ನನಗೇ ಉಪಚಾರ ಮಾಡುವಷ್ಟು ಧೈರ್ಯ ನಿಮಗೆ ಹೇಗೆ ಬಂತು? ನಿಮ್ಮನ್ನು ನೀವು ಏನೆಂದು ತಿಳಿದುಕೊಂಡಿದ್ದೀರಿ? ಇದರ ಪರಿಣಾಮ ಏನು ಅನ್ನುವುದು ನಿಮಗೆ ಗೊತ್ತೆ?" ಎಂದೆಲ್ಲಾ ಹೇಳಿದ್ದಲ್ಲದೆ ಗುಮಾಸ್ತರನ್ನು ಕರೆಯಿಸಿ "ಈಗಲೇ ಅವರ ಹೇಳಿಕೆ ಪಡೆಯಿರಿ, ಅವರನ್ನು ಬಿಟ್ಟವರು ಯಾರು, ಏಕೆ ಬಿಟ್ಟರು, ಅವರು ಯಾವ ಉದ್ದೇಶಕ್ಕೆ ಬಂದರು, ಈ ಎಲ್ಲಾ ಅಂಶ ಬರುವಂತೆ ಹೇಳಿಕೆ ದಾಖಲಿಸಿಕೊಳ್ಳಿ" ಎಂದು ಸೂಚನೆ ಕೊಟ್ಟೆ. ಈ ಪ್ರಕರಣದ ಬಗ್ಗೆ ಡಿ.ಜಿ.ಪಿ.ರವರಿಗೂ ಒಂದು ವರದಿ ಸಿದ್ಧ ಮಾಡಿ ಎಂತಲೂ ಹೇಳಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಬಗ್ಗೆ ಅವರು ಗಾಬರಿಗೊಂಡಿದ್ದರು. ಮುಖದ ಬೆವರು ಒರೆಸಿಕೊಳ್ಳುತ್ತಾ 'ತಪ್ಪಾಗಿದೆ, ಕ್ಷಮಿಸಿ' ಎಂದು ಬೇಡಿಕೊಂಡರು. ಗಾರ್ಡುಗಳೂ 'ಇನ್ನುಮುಂದೆ ಹೀಗೆ ಮಾಡುವುದಿಲ್ಲ, ನಮ್ಮ ಮೇಲಾಧಿಕಾರಿಗಳ ಮಾತು ಕೇಳದಿದ್ದರೆ ನಮಗೆ ಉಳಿಗಾಲವಿಲ್ಲ, ಕೇಳಿದರೆ ನಿಮ್ಮಿಂದ ನಮಗೆ ಉಳಿಗಾಲವಿಲ್ಲ. ನಮಗೆ ಏನು ಮಾಡಬೇಕೋ ತೋಚುತ್ತಿಲ್ಲ. ಈಸಲಕ್ಕೆ ಕ್ಷಮಿಸಿ' ಎಂದು ಕೇಳಿಕೊಂಡಾಗ ಎಚ್ಚರಿಕೆ ನೀಡಿ ಮುಗಿಸಿದೆ. ಆ ಅಧಿಕಾರಿ ಬಿಟ್ಟರೆ ಸಾಕೆಂಬಂತೆ ಅಲ್ಲಿಂದ ಜಾಗ ಖಾಲಿ ಮಾಡಿದರು. ಬೆತ್ತದ ಕುರ್ಚಿಗಳನ್ನು ಎಲ್ಲಿಂದ ತಂದರೋ ಅಲ್ಲಿಗೆ ವಾಪಸು ಇಡಲು ಸೂಚಿಸಿದೆ. ಬಂದಿ ಸಬ್‌ಇನ್ಸ್‌ಪೆಕ್ಟರ್ ಮಾತಾಡದೇ ನನ್ನನ್ನು ದುರುಗುಟ್ಟಿಕೊಂಡು ನೋಡಿ ತಮ್ಮ ಸೆಲ್‌ಗೆ ಹೋದರು.
     ಈ ಬಂದಿಯನ್ನು ಇಲ್ಲಿ ಜೈಲಿನಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲವೆಂದು ನನಗೆ ತೋರಿತು. ಮರುದಿನ ಬೆಳಿಗ್ಗೆ ಬಂದವನೇ ಆರೋಪಿಯನ್ನು ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ಸಿದ್ಧಪಡಿಸಿ ಕೂಡಲೇ ಕಳುಹಿಸಲು ಸೂಚನೆ ಕೊಟ್ಟೆ. ಸರ್ಕಲ್ ಇನ್ಸ್‌ಪೆಕ್ಟರರು ನನ್ನನ್ನು ಭೇಟಿ ಮಾಡಿ ಬಂದಿಯನ್ನು ಹೊಳೆನರಸಿಪುರದ ಜೈಲಿನಲ್ಲೇ ಉಳಿಸುವಂತೆ ಕೋರಿದರು. ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಗೊತ್ತಿದ್ದೂ ಈ ಕೋರಿಕೆ ಎಷ್ಟರಮಟ್ಟಿಗೆ ಸರಿ? ಎಂದು ಕೇಳಿದ ನಾನು ನನ್ನ ನಿರ್ಧಾರಕ್ಕೆ ಬದ್ಧನಾದೆ. ನಂತರದಲ್ಲಿ ತಿಳಿದದ್ದೇನೆಂದರೆ ಎದೆನೋವಿನ ನೆಪ ಹೇಳಿ ಅವರನ್ನು ಪೋಲಿಸರು ಆಸ್ಪತ್ರೆಗೆ ಸೇರಿಸಿದ್ದರು. ಈ ಹಂತದಲ್ಲಿ ಅವರನ್ನು ವರ್ಗಾಯಿಸುವಂತಿರಲಿಲ್ಲ. ನಾನು ಸುಮ್ಮನಿರಬೇಕಾಯಿತು. ಎರಡು ದಿನದ ನಂತರ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಭೇಟಿ ಮಾಡಿ ರಹಸ್ಯವಾಗಿ ಚರ್ಚಿಸಿದೆ. ಅವರನ್ನು ಒಪ್ಪಿಸಿ ಎದೆ ನೋವಿಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಬಂದಿಯನ್ನು ಹಾಸನದ ಆಸ್ಪತ್ರೆಗೆ ಕಳಿಸಲು ಅವರಿಂದ ಪತ್ರ ಪಡೆದೆ. ಅದನ್ನು ಆಧರಿಸಿ ಬಂದಿಯನ್ನು ಹಾಸನದಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ನೀಡಿ ಅರ್ಧ ದಿನ ರಜೆ ಹಾಕಿ ಹಾಸನಕ್ಕೆ ಹೊರಟುಹೋದೆ. ಸರ್ಕಲ್ ಇನ್ಸ್‌ಪೆಕ್ಟರರು ಸಿಟ್ಟು ಮಾಡಿಕೊಂಡು ನನ್ನನ್ನು ನೋಡಿಕೊಳ್ಳುವುದಾಗಿ ಧಮಕಿ ಹಾಕಿದ್ದ ವಿಷಯ ನಂತರ ತಿಳಿಯಿತು. ವೈದ್ಯರ ಮೇಲೂ ಕೂಗಾಡಿದ್ದರಂತೆ. ನನ್ನನ್ನು ಹುಡುಕಿಕೊಂಡು ಪೋಲಿಸ್ ಸಿಬ್ಬಂದಿ ಹಲವಾರು ಸಲ ನನ್ನ ಮನೆಗೆ ಬಂದಿದ್ದರು. ಆಗ ಮೊಬೈಲ್ ದೂರವಾಣಿ ಬಳಕೆಗೆ ಬಂದಿರದಿದ್ದುದು ಒಳ್ಳೆಯದೇ ಆಗಿತ್ತು. ಇಂತಹ ಒತ್ತಡ ತಪ್ಪಿಸಿಕೊಳ್ಳುವ ಸಲುವಾಗೇ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಸಾಯಂಕಾಲ ಬಹು ಹೊತ್ತಾದರೂ ನಾನು ಸಿಗದಿದ್ದಾಗ ವಿಧಿಯಿಲ್ಲದೇ ಬಂದಿಯನ್ನು ಹಾಸನದ ಜೈಲಿಗೆ ಕರೆದುಕೊಂಡು ಹೋಗಿದ್ದರು. ಆ ವಿಷಯ ಖಚಿತಪಡಿಸಿಕೊಂಡ ನಂತರವೇ ನಾನು ಮರಳಿ ಬಂದದ್ದು.
     ಎರಡು ವಾಕ್ಯಗಳಲ್ಲಿ ಮುಂದಿನ ಬೆಳವಣಿಗೆ ಹೇಳಿ ಮುಗಿಸುವೆ. ಹಲವಾರು ತಿಂಗಳುಗಳ ಕಾಲ ಪ್ರಕರಣ ನಡೆದು ಆರೋಪ ಸಾಬೀತಾಗಲಿಲ್ಲವೆಂದು ಈ ಆರೋಪಿಯ ಬಿಡುಗಡೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದಿತು. ನಂತರದ ವರ್ಷಗಳಲ್ಲಿ ಅವರಿಗೆ ಬಡ್ತಿಗಳೂ ಸಿಕ್ಕಿದವು.

ಸೋಮವಾರ, ಡಿಸೆಂಬರ್ 13, 2010

ಮೂಢ ಉವಾಚ -36 : ದೇವ

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ|
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನ|
ಸರ್ವೋತ್ತಮರಲಿರುವವನವನೆ ಮೂಢ||


ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ
ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ|
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ||


ತಾಯಿಯು ಅವನೆ ತಂದೆಯು ಅವನ|
ಬಂಧುವು ಅವನೆ ಬಳಗವು ಅವನೆ|
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವವವನಲ್ಲದಿನ್ಯಾರು ಮೂಢ||


ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ
ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು|
ನಿರ್ಲಿಂಗಿಯೂ ಹೌದು ಏನಲ್ಲ ಏನಹುದು
ಎಲ್ಲವೂ ಅವನೆ ಅವನು ಅವನೆ ಮೂಢ||
****************
-ಕವಿನಾಗರಾಜ್.

ಶುಕ್ರವಾರ, ಡಿಸೆಂಬರ್ 10, 2010

ಸೇವಾಪುರಾಣ -29: ಒಂದು ಅಮಾನವೀಯ ವಿಕೃತ ಘಟನೆ     ಒಂದು ದಿನ ಮಧ್ಯಾಹ್ನ ಸುಮಾರು ಒಂದು ಘಂಟೆಯ ಸಮಯದಲ್ಲಿ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಅವಳು ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಬಂಧಿಸಿ ಮೊಕದ್ದಮೆ ಹೂಡಿದ್ದರು. ಆಕೆಯನ್ನು ದಾಖಲು ಮಾಡಿಕೊಂಡು ಮಧ್ಯಾಹ್ನ ಊಟ ಮಾಡಿಕೊಂಡು ಬಂದ ನಂತರ ಆಕೆಯನ್ನು ಹಾಸನದ ಜೈಲಿಗೆ ವರ್ಗಾಯಿಸಲು ವಾರೆಂಟ್ ಸಿದ್ಧಪಡಿಸಿಡಲು ಗುಮಾಸ್ತರಿಗೆ ತಿಳಿಸಿ ನಾನು ಮನೆಗೆ ಊಟಕ್ಕೆ ಹೋದೆ. ಮನೆಗೆ ಹೋಗಿ ಹತ್ತು ನಿಮಿಷವಾಗಿರಬಹುದು. ಗುಮಾಸ್ತ ಓಡುತ್ತಾ ಮನೆಗೆ ಬಂದವನು ಮಹಿಳಾ ಬಂದಿಯ ಆರೋಗ್ಯ ತುಂಬಾ ಕೆಟ್ಟಿದೆಯೆಂದೂ ಆಕೆಗೆ ಬಹಳ ಬ್ಲೀಡಿಂಗ್ ಆಗುತ್ತಿದೆಯೆಂದೂ ತಿಳಿಸಿದ. ಆಕೆಯನ್ನು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ಕೊಟ್ಟು ಡಾಕ್ಟರರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಮಾಡಲು ಕೋರಿದೆ. ನಾನೂ ಆಸ್ಪತ್ರ್ರೆಗೆ ಧಾವಿಸಿದೆ. ಆಕೆಗೆ ಗರ್ಭಪಾತವಾಗಿತ್ತು. ತಕ್ಷಣದಲ್ಲಿ ಆಕೆಗೆ ಚಿಕಿತ್ಸೆಯಾಗಿರದಿದ್ದಲ್ಲಿ ಆಕೆಯ ಜೀವಕ್ಕೆ ಅಪಾಯವಿತ್ತು. ಆಕೆಯನ್ನು ಹಾಸನದ ಜೈಲಿಗೆ ಕಳಿಸುವ ವಿಚಾರ ಬದಲಾಯಿಸಿ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲೆ ಇರಿಸಲು ನಿರ್ಧರಿಸಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಳಸಲು ಅವಕಾಶವಿದ್ದುದು ಇಪ್ಪತ್ತೈದು ರೂಪಾಯಿ ಮಾತ್ರ. ಹೆಚ್ಚಿನ ಮೊಬಲಗು ಬೇಕಾದರೆ ಡಿ.ಜಿ.ಪಿ.ರವರಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಬೇಕಿತ್ತು. ಆಕೆಯನ್ನು ನೋಡಲಾಗಲೀ, ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲಾಗಲೀ ಯಾರೂ ಬಂದಿರಲಿಲ್ಲ. ಆಕೆ ಚೇತರಿಸಿಕೊಳ್ಳಲು ಹನ್ನೆರಡು ದಿನಗಳೇ ಬೇಕಾಯಿತು. ಅಲ್ಲಿಯವರೆಗೆ ಅವಳಿಗೆ ನನ್ನ ಮನೆಯಿಂದಲೇ ಊಟ ತರಿಸಿಕೊಡುತ್ತಿದ್ದೆ. ಆಸ್ಪತ್ರೆಯಲ್ಲಿ ಸಿಗದಿದ್ದ ಔಷಧಿ ಹೊರಗೆ ಖರೀದಿಸಿಕೊಟ್ಟೆ. ಪ್ರತಿದಿನ ಸಾಯಂಕಾಲ ಆಕೆಯನ್ನು ಕಾಣಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಆಕೆ ತಿಳಿಸಿದ ವಿಷಯ ಆಘಾತಕರವಾಗಿತ್ತು, ಜಿಗುಪ್ಸೆ ಮೂಡಿಸುವಂತಿತ್ತು. ಸರಗಳ್ಳತನ ಮಾಡುತ್ತಿದ್ದಳೆಂದು ಪೋಲಿಸರು ಅವಳನ್ನು ಬಂಧಿಸಿದ ನಂತರ ೨೪ ಘಂಟೆಗಳ ಒಳಗೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಆಕೆಯನ್ನು ಎರಡು ರಾತ್ರಿಗಳು ಠಾಣೆಯಲ್ಲೇ ಬಂಧಿಸಿಟ್ಟಿದ್ದರಂತೆ. ಗರ್ಭಿಣಿಯಾಗಿದ್ದ ಆಕೆಯನ್ನು ಠಾಣೆಯಲ್ಲಿ ಇಡೀ ರಾತ್ರಿ ಸಮಯದಲ್ಲಿ ಬೆತ್ತಲೆಯಾಗಿರುವಂತೆ ಮಾಡಿ ಹಿಂಸಿಸಿ ವಿಕೃತವಾಗಿ ವರ್ತಿಸುತ್ತಿದ್ದುದಲ್ಲದೆ ಇಬ್ಬರು ಅತ್ಯಾಚಾರ ಮಾಡಿದ್ದರಂತೆ. ಆಕೆಯ ಮರ್ಮಾಂಗಕ್ಕೆ ಲಾಠಿ ತೂರಿಸಿದ್ದರಂತೆ. ಆಕೆಗೆ ಗರ್ಭಪಾತವಾಗಲು ಪೋಲಿಸರ ಹಿಂಸೆಯೇ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ವಿಚಾರಣಾ ದಿನಾಂಕದಂದು ನ್ಯಾಯಾಧೀಶರ ಮುಂದೆ ಈ ಎಲ್ಲಾ ಸಂಗತಿ ತಿಳಿಸುವಂತೆ ಆಕೆಗೆ ಸಲಹೆ ನೀಡಿದೆ. ಆದರೆ ಆಕೆ ಹಾಗೆ ಮಾಡುವಳೆಂದು ನನಗೆ ಅನ್ನಿಸಲಿಲ್ಲ. ಆಸ್ಪತ್ರೆಯಿಂದ ಹೊರಬಂದ ದಿನ ಆಕೆಯನ್ನು ಹಾಸನದ ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದ ಒಬ್ಬ ವ್ಯಕ್ತಿ ಆಕೆಯನ್ನು ಜಾಮೀನಿನ ಮೇಲೆ ಬಿಡುವ ಆದೇಶ ತಂದಿದ್ದರಿಂದ ಆಕೆಯನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸುವ ಸಂದರ್ಭದಲ್ಲಿ ನನ್ನ ಮುಂದೆ ಹಾಜರುಪಡಿಸಿ ರಿಜಿಸ್ಟರಿನಲ್ಲಿ ಆಕೆಯ ಸಹಿಯನ್ನು ಪಡೆಯುತ್ತಿದ್ದಾಗ ಆಕೆ ಇತರ ಸಿಬ್ಬಂದಿಯ ಎದುರಿಗೇ ನನಗೆ ಅಡ್ಡಬಿದ್ದು ನಮಸ್ಕಾರ ಮಾಡಿ "ಅಣ್ಣಾ, ನೀವು ನನ್ನ ಜೀವ ಕಾಪಾಡಿದ ದೇವರು. ನಿಮ್ಮನ್ನೆಂದೂ ಮರೆಯುವುದಿಲ್ಲ" ಎಂದು ಅಳುತ್ತಾ ಹೇಳಿದಾಗ ನನ್ನ ಕಣ್ಣು ತೇವವಾಯಿತು.
(ಕಾಲಘಟ್ಟ: 1982-83).

ಮೂಢ ಉವಾಚ -35 : ಸಾಧಕ

ಶ್ರದ್ಧೆಯಿರಬೇಕು ಧರ್ಮದಾಚರಣೆಯಲಿ
ಹಂಬಲವಿರಬೇಕು ಅರಿವ ಹಸಿವಿನಲಿ|
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿಯದು ಸಿಗದಿರದೆ ಮೂಢ||


ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು|
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ||


ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ|
ಗುರುವಿನಲಿ ಶ್ರದ್ಧೆ ಉತ್ತಮರ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ||


ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ|
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ||
*****************
-ಕವಿನಾಗರಾಜ್.

ಬುಧವಾರ, ಡಿಸೆಂಬರ್ 8, 2010

ಮೂಢ ಉವಾಚ -34 : ದೇವಸ್ವರೂಪ
ಜಗದ ಕಣ್ಣದುವೆ ಭಾಸ್ಕರನ ಬೆಳಕು
ರವಿಯ ಮಹತಿಗೆ ಕಾರಣವು ಪ್ರಭೆಯು|
ನರರು ನಮಿಪ ರವಿ ಕಿರಣದಣುವಣುವು
ದೇವನಂತಃಕರಣ ಸ್ಫುರಣ ಮೂಢ||ಮನಮುದಗೊಳಿಸುವ ಇಂದ್ರ ಆ ಚಂದ್ರ
ಸಕಲರಿಗಾಪ್ಯಾಯ ಮನಾಪಹರ ಶೀತಲ|
ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ
ಕಾಂತಿಯ ಮೂಲನವನೇ ತಿಳಿ ಮೂಢ||


ವಿಷಯಲೋಲುಪರಾಗಿ ಬಯಸುವರು ಸುಖ
ಕಾಣುವರು ಸುಖವನನುಸರಿಸಿ ಬಹ ದುಃಖ|
ವಿವೇಕಿ ಧೀರ ಗಂಭೀರ ಬುದ್ಧಿಕಾರಕ ಬುಧನ
ಜ್ಞಾನ ಪ್ರದಾತನ ಪರಿಯನರಿಯೋ ಮೂಢ||


ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗವನು ತೋರುವ ಗುರುವು|
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವವನೆ ದೇವಸ್ವರೂಪಿ ಮೂಢ||
****************
-ಕವಿನಾಗರಾಜ್.

ಮಂಗಳವಾರ, ಡಿಸೆಂಬರ್ 7, 2010

ಸೇವಾ ಪುರಾಣ -28: ಅರಕಲಗೂಡು ಕಿಟ್ಟಿ - ಹೀಗೊಬ್ಬ ಕಳ್ಳ!!

ಜೈಲಿನ ಸುಧಾರಣೆ
     ಕೈದಿಯಾಗಿದ್ದಾಗಿನ ನನ್ನ ಅನುಭವಗಳು ಜೈಲನ್ನು ಸುಧಾರಿಸುವತ್ತ ಸಹಾಯ ಮಾಡಿದವು. ಪುರಸಭೆ ಸಿಬ್ಬಂದಿ ನೆರವು ಪಡೆದು ಮೊದಲು ಜೈಲಿನ ನೀರಿನ ತೊಟ್ಟಿ, ಚರಂಡಿ ಸುತ್ತಮುತ್ತಲಿನ ಆವರಣವನ್ನು ಎಷ್ಟೋ ವರ್ಷಗಳ ನಂತರ ಸ್ವಚ್ಛಗೊಳಿಸಲಾಯಿತು. ಡಿ.ಜಿ.ಪಿ.ರವರೊಂದಿಗೆ ಪತ್ರವ್ಯವಹಾರ ನಡೆಸಿ ಕಟ್ಟಡದ ದುರಸ್ತಿಗೆ, ಸುಣ್ಣ ಬಣ್ಣಕ್ಕೆ ವ್ಯವಸ್ಥೆಯಾಯಿತು. ನಿಗದಿತ ಪ್ರಮಾಣದ ಆಹಾರ ಸಾಮಗ್ರಿಗಳು ಕೈದಿಗಳಿಗೆ ತಲುಪುತ್ತಿತ್ತು. ಆ ಜೈಲಿಗೆ ಹಳಬರಾಗಿದ್ದ ಕೆಲವು ಕೈದಿಗಳು ನನಗೆ 'ನಮ್ಮನ್ನೂ ಮನುಷ್ಯರಂತೆ ಕಂಡವರು ನೀವೇ ಸಾರ್' ಎಂದು ಹೇಳಿದಾಗ ನನಗೆ ಖುಷಿಯಾಗಿದ್ದು ಸತ್ಯ. ಜೈಲಿನಲ್ಲಿ ಸ್ಥಳಾವಕಾಶದ ಕೊರತೆಯಿದ್ದುದರಿಂದ ಎಂಟಕ್ಕಿಂತ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಇಡಲು ನಾನು ಒಪ್ಪುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಕೈದಿಗಳನ್ನು ಹಾಸನದ ಜೈಲಿಗೆ ವರ್ಗಾಯಿಸುತ್ತಿದ್ದೆ. ಮಹಿಳಾ ಕೈದಿಗಳು ಬಂದರೆ ಮಹಿಳಾ ಗಾರ್ಡುಗಳಿಲ್ಲವೆಂಬ ಕಾರಣ ತೋರಿಸಿ ಅವರನ್ನು ಕೂಡಲೇ ಹಾಸನ ಅಥವ ಮೈಸೂರು ಜೈಲಿಗೆ ಕಳುಹಿಸುತ್ತಿದ್ದೆ. ಈ ಉಪಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಡಲು ಅವಕಾಶವಿತ್ತು. ನ್ಯಾಯಾಲಯದಲ್ಲಿ ಕೈದಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ ಸಂದರ್ಭದಲ್ಲಿ ಅವರನ್ನು ಮೈಸೂರು ಅಥವ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗುತ್ತಿತ್ತು.
     ಕೈದಿಗಳನ್ನು ನೋಡಲು ಬರುವ ಬಂಧುಗಳು, ಸ್ನೇಹಿತರನ್ನು ಗಾರ್ಡುಗಳು ಹಣ ಪಡೆದು ನನ್ನ ಅನುಮತಿ ಪಡೆಯದೆ ಭೇಟಿಗೆ ಅವಕಾಶ ಕೊಡುತ್ತಿದ್ದುದನ್ನು ತಪ್ಪಿಸಿ ನನ್ನ ಅನುಮತಿ ಪಡೆದೇ ಭೇಟಿಗೆ ಅವಕಾಶ ಕೊಡುವಂತೆ ನಿರ್ಬಂಧಿಸಿದೆ. ಇದೂ ಪೋಲಿಸರ ಅಸಮಾಧಾನ ಹೆಚ್ಚಿಸಿತು. ವಾರಕ್ಕೊಮ್ಮೆ ಕೈದಿಗಳಿಗೆ ಮಾಂಸಾಹಾರ, ಮಾಂಸ ತಿನ್ನದವರಿಗೆ ಸಿಹಿ ಕೊಡಲು ಅವಕಾಶವಿದ್ದು ಸರಿಯಾಗಿ ತಲುಪುವಂತೆ ನೋಡಿಕೊಂಡೆ. ಮಜ್ಜಿಗೆ ಕೊಡಲು ಅವಕಾಶವಿರದಿದ್ದರೂ ಕೊಡಲು ಅನುಕೂಲ ಮಾಡಿದೆ. ಹಬ್ಬ ಹರಿದಿನಗಳಲ್ಲಿ ಕೈದಿಗಳಿಗೆ ನನ್ನ ಖರ್ಚಿನಲ್ಲಿ ಮನೆಯಿಂದ ಸಿಹಿ ಕಳುಹಿಸುತ್ತಿದ್ದೆ.
     ದಿನಕ್ಕೊಮ್ಮೆ ಅನಿರೀಕ್ಷಿತ ಸಮಯದಲ್ಲಿ ಜೈಲಿಗೆ ಭೇಟಿ ಕೊಟ್ಟು ವ್ಯವಸ್ಥೆ ಬಗ್ಗೆ ಗಮನಿಸುತ್ತಿದ್ದೆ. ಕೈದಿಗಳು ಗಾರ್ಡುಗಳಿಗೆ ಹಣ ನೀಡಿ ಬೀಡಿ, ಸಿಗರೇಟು, ಇಸ್ಪೀಟು ಎಲೆಗಳು, ಹೆಂಡಗಳನ್ನು ಪಡೆದುಕೊಳ್ಳುತ್ತಿದ್ದುದನ್ನು ಪತ್ತೆ ಹಚ್ಚಿ ಭೇಟಿ ನೀಡಿದಾಗ ವಶಪಡಿಸಿಕೊಳ್ಳುತ್ತಿದ್ದೆ. ಇದಕ್ಕೆ ನನ್ನದೇ ಆದ ಉಪಾಯವಿತ್ತು. ತಹಸೀಲ್ದಾರರ ಛೇಂಬರಿನ ಹಿಂದಿನ ಕಿಟಕಿಯ ಸಂದಿನಿಂದ ಜೈಲಿನ ಆವರಣ ಕಾಣುತ್ತಿತ್ತು. ನನ್ನ ಗುಮಾಸ್ತರನ್ನು ಜೈಲಿಗೆ ಹೋಗಿರಲು ತಿಳಿಸಿ ಹಿಂದೆಯೇ ಬರುತ್ತೇನೆಂದು ಹೇಳಿ ಕಿಟಕಿಯ ಸಂದಿನಿಂದ ಗಮನಿಸುತ್ತಿದ್ದೆ. ಗುಮಾಸ್ತ ಜೈಲಿನ ಬಾಗಿಲು ಬಡಿದ ಕೂಡಲೇ ಗಾರ್ಡುಗಳು ಕೈದಿಗಳಿಗೆ ಸನ್ನೆ ಮಾಡುತ್ತಿದ್ದರು. ಅವರು ಗಡಿಬಿಡಿಯಿಂದ ಬೀಡಿ, ಸಿಗರೇಟು, ಮದ್ಯದ ಬಾಟಲಿ, ಇತ್ಯಾದಿಯನ್ನು ಗಿಡದ ಸಂದಿ, ಚರಂಡಿ, ತಿಪ್ಪೆ ಮುಂತಾದ ಸಂದಿಗೊಂದಿಗಳಲ್ಲಿ ಮುಚ್ಚಿಟ್ಟು ಓಡಿ ಹೋಗಿ ಸಭ್ಯರಂತೆ ಜೈಲಿನ ಸೆಲ್‌ಗಳಲ್ಲಿ ಕುಳಿತಿರುತ್ತಿದ್ದರು. ನಂತರ ನಾನು ಹೋಗಿ ಮುಚ್ಚಿಟ್ಟ ಸ್ಥಳ ಬಿಟ್ಟು ಬೇರೆಡೆಗಳಲ್ಲಿ ಮೊದಲು ಹುಡುಕಿದಂತೆ ಮಾಡಿ ಕೊನೆಗೆ ಆ ಸ್ಥಳಗಳಲ್ಲಿರುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದೆ. ಈ ಗುಟ್ಟನ್ನು ನನ್ನ ಗುಮಾಸ್ತರಿಗೂ ತಿಳಿಸಿರಲಿಲ್ಲ. ಅವರಿಗೆಲ್ಲಾ ನಾನು ಹೇಗೆ ಕಂಡು ಹಿಡಿದೆನೆಂದು ಆಶ್ಚರ್ಯವಾಗುತ್ತಿತ್ತು. ಈ ಜೈಲಿಗೆ ಸಂಬಂಧಿಸಿದಂತೆ ನೆನಪಿನಲ್ಲಿ ಉಳಿದಿರುವ ಒಂದೆರಡು ಸಂಗತಿಗಳನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಅರಕಲಗೂಡು ಕಿಟ್ಟಿ
     ನಾನು ಜೈಲು ಸೂಪರಿಂಟೆಂಡೆಂಟ್ ಆದ ಎರಡನೆ ದಿನ ಒಬ್ಬ ಕೈದಿಯನ್ನು ಪೋಲಿಸರು ಕರೆತಂದಿದ್ದರು. ಅವನು "ನಮಸ್ಕಾರ ಹೊಸ ಸಾಹೇಬರಿಗೆ" ಎಂದು ಸಲ್ಯೂಟ್ ಹೊಡೆದು ನಕ್ಕ. ಪೋಲಿಸರು ಹೇಳಿದಂತೆ ಆತ ಜೈಲಿಗೆ ಬರುವುದು, ಹೋಗುವುದು ಸಾಮಾನ್ಯವಾಗಿತ್ತಂತೆ. ಜೈಲಿಗೆ ನಿತ್ಯದ ಭೇಟಿ ನೀಡಿದ ಸಂದರ್ಭದಲ್ಲಿ ಅವನನ್ನು ಮಾತನಾಡಿಸಿದೆ. ಅವನು ಹೇಳಿದ ಸಂಗತಿ ಆಶ್ಚರ್ಯಕರವಾಗಿತ್ತು. "ನನಗೆ ಗೊತ್ತು ಸಾರ್, ನೀವು ಒಳ್ಳೆಯವರು. ನಮ್ಮೂರಿನ ಅಳಿಯ" ಎಂದ ಅವನು ಹೇಳಿದ್ದೇನೆಂದರೆ "ಸಾರ್, ನಾನೊಬ್ಬ ಕಳ್ಳ, ನಿಜ. ಆದರೆ ನಿಜವಾಗಿ ತಪ್ಪು ಮಾಡಿದಾಗ ಪೋಲಿಸರು ನನ್ನನ್ನು ಹಿಡಿಯುವುದಿಲ್ಲ. ಅವರಿಗೆ ಆಗುವುದೂ ಇಲ್ಲ ಬಿಡಿ. ಇನ್ನು ಯಾವಾಗಲೋ ಅವರಿಗೆ ಕೇಸುಗಳನ್ನು ಹಾಕಬೇಕೆಂದನ್ನಿಸಿದಾಗ ಮಾಡದೆ ಇರುವ ತಪ್ಪು ಹೊರಿಸಿ ಸುಳ್ಳು ಕೇಸು ಹಾಕಿ ಕರೆದುಕೊಂಡು ಬರುತ್ತಾರೆ. ಎರಡು ದಿನ ಇರ್ತೀನಿ, ಹೋಗ್ತೀನಿ. ಮತ್ತೆ ಬರ್ತಾ ಇರ್ತೀನಿ." ಮುಂದುವರೆಸಿ "ನಾನು ಗ್ರಾಜುಯೇಟ್, ಸಾರ್. ನನ್ನ ಸರ್ಟಿಫಿಕೇಟ್ ತೋರಿಸಲಾ ಸಾರ್" ಎಂದು ಶರ್ಟು ಬಿಚ್ಚಿ ಮೈಮೇಲಿದ್ದ ಚಾಕು, ಚೂರಿಗಳ ಗಾಯಗಳ ಗುರುತುಗಳನ್ನು ತೋರಿಸಿದ. ನಾನು ಪ್ರತಿಕ್ರಿಯಿಸದೆ ಮುಗುಳ್ನಕ್ಕೆ.
     ಸುಮಾರು ಎರಡು ತಿಂಗಳ ನಂತರದಲ್ಲಿ ಒಂದು ದಿನ ಬೆಳಿಗ್ಗೆ ಒಂಬತ್ತು ಘಂಟೆಯಿರಬಹುದು, ಅರಕಲಗೂಡು ಕಿಟ್ಟಿ ನನ್ನ ಮನೆಗೇ ಬಂದವನು "ಸಾರ್, ತಪ್ಪು ತಿಳಿಯಬೇಡಿ. ನನಗೆ ಹೊಟ್ಟೆ ಹಸಿಯುತ್ತಿದೆ. ತಿಂಡಿ ತಿಂದಿಲ್ಲ. ಒಂದಿಪ್ಪತ್ತು ರೂಪಾಯಿ ಕೊಡಿ ಸಾರ್. ೨-೩ ಘಂಟೆಯ ಒಳಗೆ ನಿಮ್ಮ ಹಣ ವಾಪಸು ಕೊಡುತ್ತೇನೆ. ನಾನು ಕಳ್ಳ ಇರಬಹುದು ಸಾರ್. ಕಳ್ಳರಿಗೂ ನಿಯತ್ತು ಇರುತ್ತೆ. ಖಂಡಿತಾ ನಿಮ್ಮ ಹಣ ವಾಪಸು ಕೊಡುತ್ತೇನೆ" ಎಂದ. ನಾನು ಅವನಿಗೆ ಹಣ ಕೊಟ್ಟೆ. ಇನ್ನು ಮುಂದೆ ಮನೆಯ ಹತ್ತಿರ ಬರಬಾರದು ಎಂದು ಹೇಳಿದೆ. ಆ ದಿನ ಕಛೇರಿಯಲ್ಲಿದ್ದಾಗ ಸುಮಾರು ೧೧ ಘಂಟೆಯ ವೇಳೆಗೆ ಕಿಟ್ಟಿ ಬಂದೇ ಬಿಟ್ಟ. "ಸಾರ್, ನೀವು ಒಳ್ಳೆ ಮನಸ್ಸಿನಿಂದ ದುಡ್ಡು ಕೊಟ್ಟಿರಿ ಸಾರ್. ತಿಂಡಿ ತಿಂದವನೇ ಬಸ್ ಸ್ಟಾಂಡಿಗೆ ಹೋದೆ. ಒಂದು ಬಸ್ ಹತ್ತಿ ಇಳಿದೆ. ಇಳಿಯುವಾಗ ನನ್ನ ಕೈಯಲ್ಲಿ ಪರ್ಸ್ ಇತ್ತು. ಸಿಕ್ಕಿದ ಪರ್ಸ್‌ನಲ್ಲಿ ೧೫೫ ರೂಪಾಯಿ ಇತ್ತು. ಇನ್ನೊಂದೆರಡು ದಿನಕ್ಕೆ ಸಾಕು. ತೊಗೊಳಿ ಸಾರ್, ನಿಮ್ಮ ಇಪ್ಪತ್ತು ರೂಪಾಯಿ" ಎಂದ ಅವನ ಮಾತು ಕೇಳಿ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. 'ಆ ದುಡ್ಡು ನೀನೇ ಇಟ್ಟುಕೋ. ನನಗೆ ಬೇಡ. ಇನ್ನುಮುಂದೆ ಹೀಗೆಲ್ಲಾ ಹಣ ಕೇಳಲು ಬರಬೇಡ" ಎಂದೆ. ಹೋಗುವಾಗ ಅವನು "ಸಾರ್, ನಿಮ್ಮ ಕ್ಲರ್ಕ್ ಸರಿಯಿಲ್ಲ. ತರಲೆ. ಅದಕ್ಕೆ ಕಳೆದ ವರ್ಷ ಅವನ ಮನೆಯಲ್ಲಿ ಕಳ್ಳತನ ಮಾಡಿದ್ದೆ" ಎಂದು ಗುಟ್ಟಾಗಿ ಹೇಳಿದ್ದ. "ಹೇಗೂ ಕಳವಾಗಿದ್ದಕ್ಕೆ ದೂರು ಕೊಟ್ಟಿರುತ್ತಾರೆ. ಪೋಲಿಸರಿಗೆ ಹೇಳಿ ಕೇಸ್ ಹಾಕಿಸಿದರೆ?" ಎಂದರೆ ಅವನು "ನಾನೇ ನಿಮ್ಮ ಕ್ಲರ್ಕಿಗೆ, ಪೋಲಿಸರಿಗೆ ಬೇಕಾದರೆ ಹೇಳಲಾ? ಯಾರೂ ಏನೂ ಮಾಡಲ್ಲ" ಎಂದು ಉತ್ತರಿಸಿದ್ದ. "ಒಂದು ಮಾತು ಸಾರ್. ನೀವು ಏನು ಬೇಕಾದರೂ ಮಾಡಿ. ನನಗೆ ನಿಮ್ಮನ್ನು ಕಂಡರೆ ಗೌರವ. ಅದಕ್ಕೆ ನಿಮ್ಮ ಹತ್ತಿರ ಏನನ್ನೂ ಮುಚ್ಚಿಡುತ್ತಿಲ್ಲ" ಎಂದೂ ಹೇಳಿ ಹೋಗಿದ್ದ. ನಾನು ಅವನು ಹೋಗುವುದನ್ನೇ ನೋಡುತ್ತಾ ಕುಳಿತಿದ್ದೆ. ಕಿಟ್ಟಿ ಹೋದ ಮೇಲೆ ಗುಮಾಸ್ತನನ್ನು ಅವನ ಮನೆಯಲ್ಲಿ ಎಂದಾದರೂ ಕಳ್ಳತನವಾಗಿತ್ತೇ ಎಂದು ಕೇಳಿದರೆ "ಹೌದು ಸಾರ್, ಒಂದು ವರ್ಷದ ಹಿಂದೆ ಕ್ಯಾಶ್ ೫೦೦ ರೂಪಾಯಿ ಮತ್ತು ಒಂದು ಉಂಗುರ ಕಳುವಾಗಿತ್ತು" ಎಂಬ ಉತ್ತರ ಆತನಿಂದ ಬಂದಿತ್ತು!

ಸೋಮವಾರ, ಡಿಸೆಂಬರ್ 6, 2010

ಮೂಢ ಉವಾಚ -33 : ಬಲ್ಲಿದ

ಹುಟ್ಟು ಸಾವುಗಳ ಚಕ್ರ ತಿರುಗಿದೆ ನಿರಂತರ
ಸಕಲಜೀವಗಳಲುತ್ತಮವು ಮಾನವಜನ್ಮ|
ನಿಜಗುರಿಯನರಿಯದಲೆ ಭ್ರಮೆಗೆ ಪಕ್ಕಾಗಿ
ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ||


ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||


ಪದ್ಮಪತ್ರದ ಮೇಲಣ ಜಲಬಿಂದುವಿನೊಲು
ಸ್ಥಿರವಲ್ಲವೀ ಬದುಕಿನಾಸೆಗಳು ಬಯಕೆಗಳು|
ಮಿಂಚಿನೊಲು ಮೂಡಿ ಮರೆಯಾಗದೆ ಸುಖ
ಅರಿತವರು ಮನವನಚಲಗೊಳಿಸುವರು ಮೂಢ||


ಅವ ಕೀಳು ಇವ ಮೇಲು ಎಂದೆಣಿಸದೆ
ಬಡವ ಸಿರಿವಂತರೆನೆ ತರತಮವ ಮಾಡದೆ|
ಸಮಚಿತ್ತದಲಿ ನೋವು ನಲಿವುಗಳ ಕಂಡು
ಬಲ್ಲಿದರು ಬಾಳುವರು ಕಾಣು ಮೂಢ||
***************
-ಕವಿನಾಗರಾಜ್.

ಶನಿವಾರ, ಡಿಸೆಂಬರ್ 4, 2010

ಮೂಢ ಉವಾಚ -32 : ವೈರಾಗ್ಯ

ಅಕ್ಕರೆಯ ಪಡೆದವರು ಅರಿಗಳಂತಾಡಿರಲು
ಆಸರೆಯ ಪಡೆದವರು ದೂಡಿ ನಡೆದಿರಲು
ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು
ವೈರಾಗ್ಯವೆರಗದಿರೆ ಅಚ್ಚರಿಯು ಮೂಢ


ಮಸಣ ವೈರಾಗ್ಯವದು ಮರೆಯುವ ತನಕ
ಅಭಾವ ವೈರಾಗ್ಯವದು ದೊರೆಯುವ ತನಕ
ಇರುವುದೆ ಸಾಕೆಂಬ ಬೇಕೆಂದು ಕೊರಗದಿಹ
ರಾಗರಾಹಿತ್ಯ ನಿಜವೈರಾಗ್ಯ ಮೂಢ


ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ
ಸುಕಾಮಿಯೆನಿಸಲಿಲ್ಲ ಮುಕ್ತಿಪಥವರಿಯಲಿಲ್ಲ
ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು
ವಿಫಲತೆ ವೈರಾಗ್ಯ ತರದಿರದೆ ಮೂಢ


ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು
ಸುಕಾಮಿಯೆಂದೆನಿಸಿ ಜ್ಞಾನಸಾಧಕನಾಗಿಹನು
ನಿಜ ಪುರುಷನವನು ಮುಕ್ತಿಪಥದಲಿ ಸಾಗಿ
ನಿಜ ವೈರಾಗಿಯವನೆನಿಸುವನು ಮೂಢ
***************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 30, 2010

ಮೂಢ ಉವಾಚ -31

ಬಯಕೆಗಳಿರೆ ಬಡವ ಸಾಕೆಂದರದುವೆ ಸಿರಿ
ನಾನೆಂಬುದು ಅಜ್ಞಾನ ನನದೇನೆಂಬುದು ಜ್ಞಾನ|
ದಾಸನಾದರೆ ಹಾಳು ಒಡೆಯನಾದರೆ ಬಾಳು
ಮನದೊಡೆಯನಾದವನೆ ಮಾನ್ಯ ಮೂಢ||


ಬಯಸದಿರುವವರಿಹರೆ ಈ ಜಗದಿ ಸಂಪತ್ತು
ಪರರ ಮೀರಿಪ ಬಯಕೆ ತರದಿರದೆ ಆಪತ್ತು|
ಸಮಚಿತ್ತದಿಂ ನಡೆದು ಕರ್ಮಫಲದಿಂ ಪಡೆದ
ಜ್ಞಾನ ಸಂಪತ್ತಿಗಿಂ ಮಿಗಿಲುಂಟೆ ಮೂಢ ||


ಪ್ರೀತಿಯಂದಲೆ ನಲಿವು ಪ್ರೀತಿಯಿಂದಲೆ ನೋವು
ಪ್ರೀತಿಯಂದಲೆ ರಕ್ಷೆ ಪ್ರೀತಿಯಿಂದಲೆ ಭಯವು|
ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ
ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ||


ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು
ದುಃಖ ಭಯಗಳೆಲ್ಲಿ ಆಸೆಗಳ ತೊರೆದವಗೆ|
ಸಂತಸದ ಬೆನ್ನೇರಿ ದುಃಖ ಭಯ ಬರದಿರದೆ
ಬುದ್ಧವಾಣಿಯಿದು ಮರೆಯದಿರು ಮೂಢ||
***************
-ಕವಿನಾಗರಾಜ್.

ಸೇವಾ ಪುರಾಣ -27:ಜೈಲಿನ ಕೈದಿಯಾಗಿದ್ದವನು ಜೈಲು ಸೂಪರಿಂಟೆಂಡೆಂಟ್ ಆದದ್ದು

ಒಳಗೂ ನರಸಿಪುರ, ಹೊರಗೂ ನರಸಿಪುರ
     ತ್ರಿಕುಟಾಚಲವೆಂದು ಕರೆಯಲ್ಪಡುತ್ತಿದ್ದ ಹೊಳೆನರಸಿಪುರ ಪ್ರಸಿದ್ಧ ಹೇಮಾವತಿ ನದಿ ತಟದಲ್ಲಿರುವುದರಿಂದ ಮತ್ತು ಲಕ್ಷ್ಮಿನರಸಿಂಹನ ಭವ್ಯ ದೇವಾಲಯದ ಕಾರಣದಿಂದ ಊರಿಗೆ ನರಸಿಂಹಪುರ, ನರಸಿಪುರ, ಹೊಳೆನರಸಿಪುರ ಎಂಬ ಹೆಸರು ಬರಲು ಕಾರಣವಾಗಿದೆ. ಒಂದೊಮ್ಮೆ ಐತಿಹಾಸಿಕವಾಗಿ, ಪೌರಾಣಿಕವಾಗಿ, ಧಾರ್ಮಿಕವಾಗಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಗರವಾಗಿದ್ದ ಈ ಹೊಳೆನರಸಿಪುರ ಎಂದರೆ ಈಗ ಎಲ್ಲರಿಗೂ ನೆನಪಿಗೆ ಬರುವುದೆಂದರೆ ಅಲ್ಲಿನ ರಾಜಕೀಯ. ಇಷ್ಟವಿರಲಿ ಇಲ್ಲದಿರಲಿ ಆ ತಾಲ್ಲೂಕಿನ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಝಳ ತಾಕುತ್ತಲೇ ಇರುತ್ತದೆ. ಇಂತಹ ಸ್ಥಿತಿಗೆ ಕಾರಣಕರ್ತರಾದವರ ಬಗ್ಗೆ ಹೊಸದಾಗಿ ತಿಳಿಸುವ ಅಗತ್ಯ ಕಾಣುವುದಿಲ್ಲ. ಒಂದೊಂದು ಊರಿಗೆ ಅದರದೇ ಆದ ವೈಶಿಷ್ಟ್ಯವಿರುತ್ತದೆ, ಉದಾ: ಕಳ್ಳ ಅರಸಿಕೆರೆ, ಸುಳ್ಳು ಬಾಣಾವರ, ಹೊನ್ನಾಳಿ ಹೊಡೆತ, ಇತ್ಯಾದಿಗಳಂತೆ ಹೊಳೆನರಸಿಪುರಕ್ಕೆ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಖ್ಯಾತಿ ಅಂಟಿಕೊಂಡಿದೆ. ಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನ ವಿರುದ್ಧ ಆತನ ಆಪ್ತರೇ ಸಂಚು ಹೂಡಿ ಪಕ್ಕದ ಸಾಮಂತನೊಂದಿಗೆ ಕೈಜೋಡಿಸಿ ಯುದ್ಧ ನಡೆಯುವಂತೆ ಮಾಡಿದ್ದರು. ಪಾಳೆಯಗಾರ ಕೋಟೆಯ ರಕ್ಷಣೆಗಾಗಿ ಹೋರಾಡಲು ನೋಡಿದರೆ ವಿರುದ್ಧವಾಗಿ ಕಾದಾಡುವವರ ಜೊತೆಗೆ ನರಸಿಪುರದ ಸೈನಿಕರೂ ಇದ್ದರು. ತಮ್ಮವರ ಜೊತೆಗೆ ತಮ್ಮವರೇ ಕಾದಾಡಬೇಕಾಗಿ ಬಂದ ಪ್ರಸಂಗದಿಂದ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಮಾತು ಆಗ ಚಾಲ್ತಿಗೆ ಬಂದಿತು. ರಾಜಕೀಯ ನಾಯಕರುಗಳ ನಡವಳಿಕೆಗಳು ಈ ಮಾತಿಗೆ ಪುಷ್ಟಿ ನೀಡುತ್ತಿದೆಯಲ್ಲವೇ? ಈ ಖ್ಯಾತಿಯ ಹೊಳೆನರಸಿಪುರ ನನಗೆ ಅನೇಕ ರೀತಿಯ ಅನುಭವಗಳನ್ನು ನೀಡಿದ ಊರು.
ಜೈಲಿನ ಕೈದಿಯಾಗಿದ್ದವನು ಜೈಲು ಸೂಪರಿಂಟೆಂಡೆಂಟ್ ಆದದ್ದು
     ಹೊಳೆನರಸಿಪುರದ ತಾಲ್ಲೂಕು ಕಛೇರಿಯಲ್ಲಿ ಉಪತಹಸೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾದಾಗ ನನಗೆ ಇನ್ನೊಂದು ಜವಾಬ್ದಾರಿ ಸಹ ನಿರ್ವಹಿಸಬೇಕಾಯಿತು. ಅದೆಂದರೆ ಹೊಳೆನರಸಿಪುರದ ಜೈಲಿನ ಸೂಪರಿಂಟೆಂಡೆಂಟ್ ಕೆಲಸ. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೨ ಉಪಕಾರಾಗೃಹಗಳನ್ನು ಕಂದಾಯ ಇಲಾಖೆಯ ಮೇಲ್ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಪೈಕಿ ಹೊಳೆನರಸಿಪುರದ ಕಾರಾಗೃಹವೂ ಒಂದಾಗಿತ್ತು. ಉಪತಹಸೀಲ್ದಾರರು ಪದನಿಮಿತ್ತ ಜೈಲು ಸೂಪರಿಂಟೆಂಡೆಂಟ್ ಆಗಿರುತ್ತಿದ್ದರು. ಆ ಕೆಲಸಕ್ಕಾಗಿ ಅವರಿಗೆ ಗೌರವ ವೇತನವಾಗಿ ತಿಂಗಳಿಗೆ ೨೫ ರೂ. ಕೊಡಲಾಗುತ್ತಿತ್ತು. ಅವರಿಗೆ ಸಹಾಯಕನಾಗಿ ಒಬ್ಬ ತಾಲ್ಲ್ಲೂಕು ಕಛೇರಿಯ ನೌಕರರ ಸೇವೆಯನ್ನೇ ಬಳಸಿಕೊಳ್ಳಬೇಕಾಗಿದ್ದು ಅದಕ್ಕಾಗಿ ಆ ಸಹಾಯಕನಿಗೆ ಹತ್ತು ರೂ. ಸಂಭಾವನೆ ಕೊಡಲಾಗುತ್ತಿತ್ತು. ೧೩ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿದ ೬ ತಿಂಗಳು ಜೈಲಿನಲ್ಲಿ ಕಳೆದಿದ್ದ ಕೈದಿಯೊಬ್ಬ ಜೈಲಿನ ಸುಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ಅಂತಹ ಅವಕಾಶ ನನಗೆ ಒದಗಿತ್ತು. ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯಿಂದ ಎರವಲು ಸೇವೆಯ ಮೇಲೆ ಕೆಲಸ ಮಾಡುತ್ತಿದ್ದರು. ಕೈದಿಗಳಿಗೆ ಆಹಾರ ಸಾಮಗ್ರಿಗಳನ್ನು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಒದಗಿಸುತ್ತಿದ್ದರು. ಒಟ್ಟಿಗೆ ಎಂಟು ಕೈದಿಗಳಿಗೆ ಅಲ್ಲಿ ಸ್ಥಳಾವಕಾಶವಿತ್ತು.
ಪ್ರಾರಂಭಿಕ ಸಂಘರ್ಷ
     ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು ಠಾಣೆಯ ಸಬ್ ಇನ್ಸ್‌ಪೆಕ್ಟರರು ಸರತಿಯಂತೆ ಅವರನ್ನು ಬದಲಾಯಿಸುತ್ತಿದ್ದರು. ಗಾರ್ಡುಗಳ ವೇತನ ಠಾಣೆಯಲ್ಲಿಯೇ ಪಾವತಿಯಾಗುತ್ತಿತ್ತು. ಹೀಗಾಗಿ ಆಡಳಿತಾತ್ಮಕವಾಗಿ ಅವರನ್ನು ನಿಯಂತ್ರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೆಚ್ಚಾಗಿ ಜೈಲಿನ ಕೆಲಸ ಮಾಡಲು ಪೋಲಿಸರು ಇಷ್ಟಪಡುತ್ತಿರಲಿಲ್ಲ. ನಾನು ಜೈಲಿನ ಅಧೀಕ್ಷಕನಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಗಾರ್ಡುಗಳ ಕುಮ್ಮಕ್ಕಿನೊಂದಿಗೆ ಅಲ್ಲಿನ ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕೊಡುತ್ತಿದ್ದ ಆಹಾರ ಕಡಿಮೆ ಮತ್ತು ಕಳಪೆ ಎಂಬ ಕಾರಣದಿಂದ ಅಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ಕೈದಿಗಳನ್ನು ಅವರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆಂದು ಗಾರ್ಡುಗಳು ನನಗೆ ತಿಳಿಸಿದರು. ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೋಲಿಸರಿಗೆ ಕಷ್ಟವೇನಾಗಿರಲಿಲ್ಲ. ಆದರೆ ಅವರದೇ ಕುಮ್ಮಕ್ಕಿದ್ದುದರಿಂದ ಕರೆದೊಯ್ದಿರಲಿಲ್ಲ ಎಂದು ನನಗೆ ಅರ್ಥವಾಗಿತ್ತು. ಒಳ ಉದ್ದೇಶ ಜೈಲು ಸುಪರಿಂಟೆಂಡೆಂಟರು ತಾವು ಹೇಳಿದಂತೆ ಕೇಳುವಂತೆ ಮಾಡಬೇಕೆಂಬುದಾಗಿತ್ತು. ತಹಸೀಲ್ದಾರರ ಮಧ್ಯಪ್ರವೇಶಕ್ಕೆ ನಾನು ಕೋರಿದರೆ ಅವರು ನೀನುಂಟು, ನಿನ್ನ ಜೈಲುಂಟು ಎಂದಿದ್ದರು. ಮಧ್ಯಾಹ್ನದ ವೇಳೆಗೆ ನ್ಯಾಯಾಲಯದಿಂದ ನನಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಇದ್ದುದಕ್ಕೆ ಕಾರಣ ವಿವರಿಸಲು ನೋಟೀಸು ಬಂದಿತು. ನಾನು ಅಂದು ಸಾಯಂಕಾಲವೇ ನ್ಯಾಯಾಲಯದ ಕಲಾಪ ಮುಗಿದ ನಂತರ ನ್ಯಾಯಾಧೀಶರ ಅನುಮತಿ ಪಡೆದು ಅವರನ್ನು ಅವರ ಛೇಂಬರಿನಲ್ಲೇ ಭೇಟಿ ಮಾಡಿ ವಿವರಣೆ ನೀಡಿದೆ. ನಾನು ಆಗಿನ್ನೂ ಅಧಿಕಾರ ವಹಿಸಿಕೊಂಡಿದ್ದು ಸಂಬಂಧಿಸಿದವರೊಂದಿಗ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿಯೂ, ವಿಷಯ ಮುಂದುವರೆಸಬಾರದೆಂದು ಮಾಡಿಕೊಂಡ ಮನವಿಯನ್ನು ಅವರು ಪುರಸ್ಕರಿಸಿದರು. ಅಲ್ಲಿಂದ ಬಂದವನೇ ಪೋಲಿಸ್ ಇನ್ಸ್‌ಪೆಕ್ಟರರನ್ನು ಕಂಡು ಮಾತನಾಡಿದೆ. ವಿಷಯ ಅರಿತ ಅವರು ಗಾರ್ಡುಗಳಿಗೆ ಗದರಿಸಿದರಲ್ಲದೆ ಜೈಲಿನಲ್ಲಿದ್ದ ಕೈದಿಗಳಿಗೆ ಪೋಲಿಸ್ ಭಾಷೆಯಲ್ಲೇ ಧಮಕಿ ಹಾಕಿದಾಗ ಅವರು ತೆಪ್ಪಗಾದರು ಮತ್ತು ಸತ್ಯಾಗ್ರಹ(?) ಮುಗಿಸಿದರು. ನಂತರ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನನ್ನು ಕರೆದು ವಿಚಾರಿಸಿದೆ. ಸರಬರಾಜಾಗುವ ಆಹಾರ ಸಾಮಗ್ರಿಗಳಲ್ಲಿ ಪೋಲಿಸರಿಗೂ ಭಾಗ ಕೊಡಬೇಕಾಗಿದ್ದ ಬಗ್ಗೆ ಆತ ತಿಳಿಸಿದ. ಈ ಸಂಗತಿ ನನ್ನ ಅನುಭವದಿಂದಲೇ ತಿಳಿದಿದ್ದ ನಾನು ಕಟ್ಟುನಿಟ್ಟಾಗಿ ಯಾವುದೇ ಕಾರಣಕ್ಕೂ ಕೈದಿಗಳಿಗೆ ಕೊಡಬೇಕಾದ ಪ್ರಮಾಣ ಕಡಿತವಾಗಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ ನನ್ನ ಗುಮಾಸ್ತರಿಗೆ ಖುದ್ದಾಗಿ ಅಳತೆ/ತೂಕ ಮಾಡಿಸಿ ಒಳ್ಳೆಯ ಸಾಮಗ್ರಿ ಪಡೆದು ಕೈದಿಗಳಿಗೆ ಒದಗಿಸುವಂತೆ ಆದೇಶ ಮಾಡಿದೆ. ಪ್ರಾರಂಭದಲ್ಲಿ ಅಸಮಾಧಾನ, ಅಸಹಕಾರಗಳನ್ನು ಎದುರಿಸಬೇಕಾಯಿತಾದರೂ ಕ್ರಮೇಣ ಎಲ್ಲಾ ಸರಿಯಾಯಿತು.
(ಕಾಲಘಟ್ಟ:1982).

ಸೋಮವಾರ, ನವೆಂಬರ್ 29, 2010

ಮೂಢ ಉವಾಚ -30

ಪರರ ಮೆಚ್ಚಿಸಲು ಸಾಧ್ಯವೇ ಜಗದೊಳು
ಒಳ್ಳೆಯವ ರಕ್ಕಸ ಜಾಣನಹಂಕಾರಿಯೊಲು|
ತಾಳುವವ ದುರ್ಬಲ ಗಟ್ಟಿಗ ಕ್ರೂರಿಯೊಲು
ಕಾಣಲಚ್ಚರಿ ಪಡುವುದೇಕೋ ಮೂಢ ||


ಜೀವನದಲರ್ಧ ನಿದ್ದೆಯಲಿ ಕಳೆಯುವೆ
ಕಾಲುಭಾಗ ಬಾಲ್ಯ ಮುಪ್ಪಿನಲಿ ಕಳೆಯೆ|
ಕಷ್ಟ ಕೋಟಲೆ ಕಾಯಿಲೆ ಉದರಭರಣೆಗೆ
ಕಳೆದುಳಿದ ಬಾಳು ಹಾಳಾಗದಿರಲಿ ಮೂಢ||


ಒಂದು ಕಾಲದ ಭವ್ಯ ನಗರ ರಾಜರುಗಳೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲ್ಲಿ|
ಆ ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಮ್ಮ ಕಥೆಯದೇನು ಹೊರತೆ ಮೂಢ||


ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು|
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲಿಹರು ತಿಳಿಯೋ ಮೂಢ||
***************
-ಕವಿನಾಗರಾಜ್.

ಶನಿವಾರ, ನವೆಂಬರ್ 27, 2010

ಮೂಢ ಉವಾಚ -29: ಮುಪ್ಪು

ಮದಭರಿತ ಯೌವನವ ಮುಪ್ಪು ತಿನ್ನುವುದು
ಸಾಕೆಂಬ ಭಾವವನು ಬೇಕೆಂಬುದಳಿಸುವುದು|
ಗುಣವನಸೂಯೆ ತಿನ್ನುವುದು ಒಂದನಿನ್ನೊಂದು
ನುಂಗದಿರುವುದಿದೆಯೇ ಜಗದಿ ಮೂಢ||


ಸುಕ್ಕುಗಳು ಮೂಡಿಹವು ತಲೆಯು ನರೆತಿಹುದು
ಮುಪ್ಪು ಬಂದಡರಿ ಕೈಕಾಲು ನಡುಗಿಹುದು|
ರೋಗಗಳು ಮುತ್ತಿ ಬಳಲಿ ಬೆಂಡಾಗಿಹರು
ತೀರದಿಹ ಆಸೆಗೆ ಮುಪ್ಪಿಲ್ಲವೋ ಮೂಢ||


ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಂದವಾಗಿರಲು|
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ||


ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು|
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ||
****************
-ಕವಿನಾಗರಾಜ್.

ಶುಕ್ರವಾರ, ನವೆಂಬರ್ 26, 2010

ಸೇವಾಪುರಾಣ -26: ಮುಳುವಾದ ಹಣದ ದಾಹ

     ಅಭಿವೃದ್ಧಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನನ್ನ ಮದುವೆ ಆಯಿತು. ಒಂದೆರಡು ವರ್ಷಗಳಲ್ಲಿ ನನಗೆ ಉಪತಹಸೀಲ್ದಾರನಾಗಿ ಬಡ್ತಿ ಸಿಕ್ಕಿ ಮೈಸೂರು ಭೂಸುಧಾರಣೆ ವಿಶೇಷ ತಹಸೀಲ್ದಾರರ ಕಛೇರಿಗೆ ವರ್ಗಾವಣೆ ಆಯಿತು. ಮೈಸೂರಿನಲ್ಲಿ ಮನೆ ಬಾಡಿಗೆಗೆ ಹಣ ಜಾಸ್ತಿಯೆಂಬ ಕಾರಣದಿಂದ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಮನೆ ಬಾಡಿಗೆಗೆ ಹಿಡಿದು ಅಲ್ಲಿಂದ ಮೈಸೂರಿಗೆ ಓಡಾಡುತ್ತಿದ್ದೆ. ಮೈಸೂರಿನಲ್ಲಿ ಕೇವಲ ಎಂಟು ತಿಂಗಳು ಕೆಲಸ ಮಾಡಿದ್ದು, ವಿಶೇಷ ತಹಸೀಲ್ದಾರರ ಕಛೇರಿ ರದ್ದಾದ ಕಾರಣ ಅಲ್ಲಿಂದ ವರ್ಗಾವಣೆಯಾಗಿ ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಬಂದೆ.
ಮುಳುವಾದ ಹಣದ ದಾಹ
     ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಒಂದು ಘಟನೆ ನೆನಪಿನಲ್ಲಿದೆ. ತಾಲ್ಲೂಕು ಕಛೇರಿ ಮತ್ತು ವಿಶೇಷ ತಹಸೀಲ್ದಾರರ ಕಛೇರಿ ಒಂದೇ ಕಟ್ಟಡದಲ್ಲಿದ್ದವು. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.
(ಕಾಲಘಟ್ಟ: 1981, ಮೈಸೂರು).

ಬುಧವಾರ, ನವೆಂಬರ್ 24, 2010

ಮೂಢ ಉವಾಚ -28: ದೇಹ-2

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದಾದರೂ ಹೇಗೆ?|
ಶುದ್ಧ ಬುದ್ಧಿಯಲಿ ನೋಡೆ ತಿಳಿಯುವುದು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ||


ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮ ನೀನಲ್ಲದೆ
ತನುವು ನೀನಲ್ಲವೆಂಬುದರಿಯೋ ಮೂಢ||


ತನುವು ನೀನಲ್ಲವೆನೆ ಯಾವುದದು ನಿನದು?
ಆ ಜಾತಿ ಈ ಜಾತಿ ನಿನದಾವುದದು ಜಾತಿ?|
ಬಸವಳಿಯದಿರಳಿವ ದೇಹದಭಿಮಾನದಲಿ
ಜೀವರಹಸ್ಯವನರಿತವನೆ ಜ್ಞಾನಿ ಮೂಢ||


ಪರಮಾತ್ಮ ರಚಿಸಿಹನು ನವರಸದರಮನೆಯ
ನಡೆದಾಡುವೀ ಮಹಲಿನರಸನೆ ಜೀವಾತ್ಮ|
ಬುದ್ಧಿಯದು ಮಂತ್ರಿ ಮನವು ಸೇನಾಧಿಪತಿ
ಇಂದ್ರಿಯಗಳು ಕಾವಲಿಗಿಹವು ಮೂಢ||
****************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 23, 2010

ಮೂಢ ಉವಾಚ -27: ದೇಹ

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ|
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ||


ಈ ದೇಹವೆಂಬುದನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ|
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ||


ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು|
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ||


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು|
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ||
****************
-ಕವಿನಾಗರಾಜ್.

ಸೋಮವಾರ, ನವೆಂಬರ್ 22, 2010

ಸೇವಾ ಪುರಾಣ -25: ಮರಳಿ ಹಾಸನಕ್ಕೆ -3: ವಿಷಾದ ಉಳಿಯಿತು

ವಿಷಾದ ಉಳಿಯಿತು!
     ಅಮಾನತ್ತಾಗಿದ್ದ ಅವಧಿಯಲ್ಲಿ ಪೋಲಿಸ್ ಕೇಸುಗಳು ಬಿಟ್ಟರೆ ನನ್ನ ವಿರುದ್ಧ ಯಾವುದೇ ಇಲಾಖಾ ವಿಚಾರಣಾ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಹೀಗಾಗಿ ಕೇಸುಗಳು ನನ್ನ ಪರವಾಗಿ ಮುಗಿದ ನಂತರ ನಿಂತಿದ್ದ ನನ್ನ ಬಾಕಿ ವೇತನ, ವಾರ್ಷಿಕ ವೇತನ ಬಡ್ತಿಗಳನ್ನು ಕೊಡುವಂತೆ ಮನವಿ ಸಲ್ಲಿಸಿ ಹಿರಿಯ ವಯಸ್ಸಿನ ಸಿಬ್ಬಂದಿ ಗುಮಾಸ್ತರನ್ನು ಬೇಗ ಕೆಲಸ ಮಾಡಿಕೊಡುವಂತೆ ಕೋರಿದೆ. ನನಗೆ ಸುಮಾರು ನಾಲ್ಕು ವರ್ಷಗಳ ಬಾಕಿ ಬರಬೇಕಿತ್ತು. ಅವರು ನನ್ನಿಂದ ಹಣ ಬಯಸಿದ್ದರೋ, ಯಾವ ಕಾರಣಕ್ಕೋ ಬೇಗ ಕೆಲಸ ಮಾಡಿಕೊಡಲಿಲ್ಲ. ಕೇಳಿದಾಗಲೆಲ್ಲಾ ಕೆಲಸ ಜಾಸ್ತಿಯಿದೆ. ೮ ದಿನಗಳ ಒಳಗೆ ಮಾಡಿಕೊಡುತ್ತೇನೆ ಎಂತಲೇ ಹೇಳುತ್ತಿದ್ದರು. ನಾನೂ ಅವರು ಹೇಳಿದ ದಿನಗಳವರೆಗೆ ಕಾಯ್ದು ಭೇಟಿ ಮಾಡಿದರೆ ಪುನಃ ಸಬೂಬು ಹೇಳುತ್ತಿದ್ದರು. ಈ ರೀತಿ ಸುಮಾರು ಒಂದು ವರ್ಷದವರೆಗೆ ಸತಾಯಿಸಿದರು. ಅಲ್ಲಿಯವರೆಗೆ ನಾನು ತಾಳ್ಮೆಯಿಂದಲೇ ಅವರು ಹೇಳಿದ್ದನ್ನು ಕೇಳಿ ತಪ್ಪದೆ ಕೆಲಸ ಮಾಡಿಕೊಡುವಂತೆ ಕೋರುತ್ತಲೇ ಇದ್ದೆ ಮತ್ತು ಅವರು ಹೇಳಿದ ದಿನ ಬಂದು ವಿಚಾರಿಸುತ್ತಲೇ ಇದ್ದೆ. ಅಕ್ಕಪಕ್ಕ ಇದ್ದ ಗುಮಾಸ್ತರುಗಳು ಇದನ್ನು ನೋಡಿ ಸುಮ್ಮನಿರುತ್ತಿದ್ದರು. ನಂತರದಲ್ಲಿ ಒಂದು ದಿನ ಅವರು ಉದಾಸೀನದಿಂದ ಇದೇ ಉತ್ತರ ನೀಡಿದಾಗ ನನಗೆ ಕೆರಳಿಹೋಯಿತು. ಅನಾಮತ್ತಾಗಿ ಅವರ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಕುರ್ಚಿಯ ಆಚೆಗೆ ಎಳೆದುಕೊಂಡು "ಕೆಲಸ ಮಾಡಲು ಆಗುತ್ತದೆಯೋ, ಇಲ್ಲವೋ? ನಡಿ, ಜಿಲ್ಲಾಧಿಕಾರಿಯವರ ಹತ್ತಿರ ಹೋಗೋಣ. ಇವತ್ತು ಎರಡರಲ್ಲಿ ಒಂದು ಇತ್ಯರ್ಥವಾಗಲೇಬೇಕು"  ಎಂದಾಗ ಆತ ಗರಬಡಿದು ಹೋಗಿದ್ದ. ಉಳಿದವರೂ ಸುಮ್ಮನೇ ಇದ್ದರು. ಆತ "ತಪ್ಪಾಯಿತು, ತಕ್ಷಣ ಮಾಡುತ್ತೇನೆ" ಎಂದ. ನಾನು "ನಿನಗೆ ಒಂದು ದಿನ ಮಾತ್ರ ಅವಕಾಶ ಕೊಡುತ್ತೇನೆ. ನಾಳೆ ಬೆಳಿಗ್ಗೆ ನಾನು ಬರುವ ವೇಳೆಗೆ ಕೆಲಸ ಆಗದಿದ್ದರೆ ಏನು ಆಗುತ್ತದೆಯೋ ಆಗಲಿ, ಚಪ್ಪಲಿಯಲ್ಲಿ ಹೊಡೆಯುತ್ತೇನೆ" ಎಂದು ಗದರಿಸಿ ವಾಪಸು ನನ್ನ ಕೊಠಡಿಗೆ ಹೋದೆ. ಟಿಪ್ಪಣಿ ಬರೆದು ಅದೇಶ ಪಡೆಯುವುದು, ಬಿಲ್ಲು ಮಾಡುವುದು, ಸಹಿ ಪಡೆಯುವುದು, ಖಜಾನೆಗೆ ಕೊಟ್ಟು ಚೆಕ್ಕು ತರಿಸುವುದು, ಇತ್ಯಾದಿಗಳಿಗೆ ಸಾಮಾನ್ಯ ಸ್ಥಿತಿಯಲ್ಲಿ ಒಂದು ವಾರವಾದರೂ ಆಗುತ್ತದೆ. ಆತ ಹೇಗೆ ಮಾಡಿದನೋ ಗೊತ್ತಿಲ್ಲ, ಮರುದಿನ ಬೆಳಿಗ್ಗಯೇ ಆತನೇ ಖುದ್ದಾಗಿ ಬಂದು ನನಗೆ ಬರಬೇಕಾಗಿದ್ದ ನಾಲ್ಕು ವರ್ಷಗಳ ಬಾಕಿ ವೇತನದ ಹಣವನ್ನು ನನಗೆ ಕೊಟ್ಟು ಹೋದ. ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿದ ಆದೇಶ ಸಹ ಸಿಕ್ಕಿತು. ಧನ್ಯವಾದ ಹೇಳಿದೆ. ನನ್ನ ಧನ್ಯವಾದ ಆತನಿಗೆ ಬೇಕಿರಲಿಲ್ಲ. ಕೆಲಸ ಮಾಡಿಕೊಡದಿದ್ದರೆ ನಾನೇನಾದರೂ ಮಾಡಿಬಿಡುತ್ತಿದ್ದೆ, ಅದರಿಂದ ತಪ್ಪಿಸಿಕೊಂಡೆನಲ್ಲಾ ಎಂಬ ಭಾವ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು.
     ಆ ಹಿರಿಯ ಸಿಬ್ಬಂದಿ ಗುಮಾಸ್ತರು ಹೊಸದಾಗಿ ಮನೆ ಕಟ್ಟಿದ್ದರು. ಹೊಸಮನೆಗೆ ವಾಸ ಹೋಗದೆ ಅದನ್ನು ಬಾಡಿಗೆಗೆ ಕೊಟ್ಟು ತಾವು ಇದ್ದ ಹಳೆಯ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಮಳೆಗಾಲದಲ್ಲಿ ಒಂದು ದಿನ ಅವರ ಮಕ್ಕಳಿಬ್ಬರು ಮನೆಯಲ್ಲಿ ಓದುತ್ತಾ ಕುಳಿತಿದ್ದಾಗ ಗೋಡೆ ಕುಸಿದು ಇಬ್ಬರು ಮಕ್ಕಳೂ ಸ್ಥಳದಲ್ಲೇ ಸತ್ತರು. ತಾಯಿ ಉಪಾಧ್ಯಾಯಿನಿಯಾಗಿದ್ದು ಅವರೂ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ವಿಷಯ ತಿಳಿದು ಎದೆಯೊಡೆದು ಅವರೂ ಮೃತರಾದರು. ಆರು ತಿಂಗಳು ಕೊರಗಿನಲ್ಲೇ ಕಳೆದ ಹಿರಿಯ ಗುಮಾಸ್ತರೂ ಹ್ರದಯಾಘಾತದಿಂದ ಮೃತರಾದರು. ಇಡೀ ಸಂಸಾರ ನಿರ್ನಾಮವಾದ ಘಟನೆ ನನ್ನ ಮನಸ್ಸನ್ನು ತುಂಬಾ ಕಲಕಿತ್ತು. ಸಕಾರಣವಾಗಿಯಾದರೂ ಅವರ ವಿರುದ್ಧ ಒರಟಾಗಿ ಹಿಂದೊಮ್ಮೆ ನಡೆದುಕೊಂಡಿದ್ದ ಬಗ್ಗೆ ಮನಸ್ಸಿನಲ್ಲಿ ವಿಷಾದ ಉಳಿಯಿತು.

ಗುರುವಾರ, ನವೆಂಬರ್ 18, 2010

ಮೂಢ ಉವಾಚ -26

ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು|
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


ಕ್ಷಮಿಸುವರು ನರರು ಬಲಹೀನತೆಯಿಂದ
ಆಸೆ ಪಡದಿಹರು ದೊರೆಯದಿರುವುದರಿಂದ|
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ
ನಿರ್ಮೋಹತೆಗೆ ಬಲವುಂಟು ಮೂಢ||


ದೇವರನು ಅರಸದಿರಿ ಗುಡಿ ಗೋಪುರಗಳಲ್ಲಿ
ದೇವನಿರುವನು ನಮ್ಮ ಹೃದಯ ಮಂದಿರದಲ್ಲಿ|
ಹೃದಯವದು ಶುದ್ಧವಿರೆ ನಡೆಯು ನೇರವಿರೆ
ಪರಮಾತ್ಮನೊಲಿಯದಿಹನೇ ಮೂಢ||


ಕೋಲುಗಳು ಕಲ್ಲುಗಳು ದೇಹವನು ಘಾತಿಪವು
ಸಿಟ್ಟಿನಾ ಮಾತುಗಳು ಮನಸನು ನೋಯಿಪವು|
ಮಡುಗಟ್ಟಿದಾ ಮೌನ ಹೃದಯವನು ತಿಂದಿರಲು
ಕೆಡುಕನೆಣಿಸಿದವರಿಗೊಳಿತನೆ ಬಯಸು ಮೂಢ||
**************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 16, 2010

ಮೂಢ ಉವಾಚ -25:

ಉರಿಯುವ ಬೆಂಕಿಗೆ ಕೀಟಗಳು ಹಾರುವೊಲು
ಗಾಳದ ಹುಳುವಿಗೆ ಮತ್ಸ್ಯವಾಸೆ ಪಡುವೊಲು|
ವಿಷಯ ಲೋಲುಪರಾಗಿ ಬಲೆಗೆ ಸಿಲುಕುವರ
ಭ್ರಮೆಯದೆನಿತು ಬಲಶಾಲಿ ಮೂಢ||


ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳು ಎಷ್ಟೊಂದು|
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು
ಆತ್ಮಾಭಿಮಾನ ಮರೆಸುವುದಯ್ಯೋ ಮೂಢ||


ನಾಚಿಕೆಯ ಪಡದೆ ಏನೆಲ್ಲ ಮಾಡಿಹರು
ಆಸ್ತಿ ಅಂತಸ್ತಿಗಾಗಿ ಬಡಿದಾಡುತಿಹರು|
ಸುಖವನೇ ಹಂಬಲಿಸಿ ದುಃಖವನು ಕಾಣುವರು
ದುಃಖದ ಮೂಲವರಿಯರವರು ಮೂಢ||


ಗೊತ್ತಿಲ್ಲದವರನ್ನು ಹಾಡಿ ಹೊಗಳುವರು
ಪ್ರೀತಿಸುವ ಜನರನ್ನು ಘಾಸಿಗೊಳಿಸುವರು|
ನಂಬದವರನೋಲೈಸಿ ನಂಬಿದವರ ಹೀನೈಸಿ
ಪಡೆದುಕೊಂಬುವುದೇನೋ ಮೂಢ?||
****************
-ಕವಿನಾಗರಾಜ್.

ಸೋಮವಾರ, ನವೆಂಬರ್ 15, 2010

ಸೇವಾ ಪುರಾಣ -24: ಮರಳಿ ಹಾಸನಕ್ಕೆ-2: ಬಿಡದ ಪೋಲಿಸ್ ನಂಟು

ಜಿಲ್ಲಾಧಿಕಾರಿಯವರ ಮಾದರಿ
      ಜಿಲ್ಲಾಧಿಕಾರಿ ಶ್ರೀ ಬಿ.ಕೆ.ದಾಸ್ ರವರಿಗೆ ವರ್ಗವಾಗಿ ಅವರ ಸ್ಥಾನಕ್ಕೆ ಶ್ರೀ ಬಿ.ಎನ್. ಬೆಟ್‌ಕೆರೂರರವರು ಬಂದಿದ್ದರು. ಆಹಾರ ಶಾಖೆಯಲ್ಲಿ ನಾನು ಸುಮಾರು ನಾಲ್ಕು ತಿಂಗಳು ಮಾತ್ರ ಕೆಲಸ ಮಾಡಿದ್ದು ನನ್ನನ್ನು ಜಿಲ್ಲಾಧಿಕಾರಿಯವರ ಅಭಿವೃದ್ಧಿ ಶಾಖೆಗೆ ವರ್ಗಾಯಿಸಲಾಯಿತು. ಶ್ರೀಮತಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದ ಕೆಲಸ, ಜಿಲ್ಲಾ ಆಬಿವೃದ್ದಿ ಸಮಿತಿ ಮತ್ತು ಇತರ ಸಭೆಗಳಿಗೆ ಮಾಹಿತಿ ಮತ್ತು ಪ್ರಗತಿ ವರದಿ ಸಿದ್ಧಪಡಿಸುವ ಕೆಲಸ ನನಗೆ ಕೊಡಲಾಯಿತು. ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಮತ್ತು ಜಿಲ್ಲಾ ಮಟ್ಟದ ಸಭೆಗಳು ನಡೆಯುವ ಸಂದರ್ಭಗಳಲ್ಲಿ ಸಭಾಹ್ವಾನ ಪತ್ರ ಕಳಿಸುವುದು, ಸಭಾ ಸದಸ್ಯರುಗಳ ಮಾಹಿತಿಗೆ ಅಂಕಿ ಅಂಶಗಳ ಬುಕ್ ಲೆಟ್ ತಯಾರಿಸುವುದು ದೊಡ್ಡ ಕೆಲಸವೇ ಆಗುತ್ತಿತ್ತು. ಕಲ್ಲಚ್ಚು ಯಂತ್ರದಿಂದ ಭೌತಿಕವಾಗಿ ಪ್ರತಿಗಳನ್ನು ತೆಗೆದು ಜೋಡಿಸಿ ಸುಮಾರು ೨೦೦ ಪುಟಗಳನ್ನು ಪುಸ್ತಕರೂಪದಲ್ಲಿ (೨೦೦ ಪುಸ್ತಕಗಳು) ಸಿದ್ಧಪಡಿಸಬೇಕಿತ್ತು. ಮಾಹಿತಿಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ಸಭೆಯ ಹಿಂದಿನ ದಿನ ರಾತ್ರಿಯೆಲ್ಲಾ ಕೆಲಸ ಮಾಡಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಮಧ್ಯರಾತ್ರಿ ಸುಮಾರು ೧೨-೩೦ ಆಗಿರಬಹುದು. ಸಾಯಂಕಾಲ ೫-೩೦ರ ವೇಳೆಗೇ ಕಛೇರಿಯ ಜವಾನರು ಮತ್ತು ಇತರ ಸಹೋದ್ಯೋಗಿಗಳು ಹೊರಟು ಹೋಗಿದ್ದರು. ನಾನೊಬ್ಬನೇ ಕಲ್ಲಚ್ಚು ಯಂತ್ರದಿಂದ ಮರುದಿನದ ಸಭೆಗಾಗಿ ಪ್ರತಿಗಳನ್ನು ತೆಗೆಯುತ್ತಿದ್ದೆ. ಸೊಳ್ಳೆಗಳ ಕಾಟ ಬೇರೆ. ಪ್ರತಿ ಪ್ರತಿಯ ೨೦೦ ಪ್ರತಿಗಳನ್ನು ತೆಗೆದು ಜೋಡಿಸಬೇಕಾಗಿತ್ತು. ಒಟ್ಟು ಸುಮಾರು ೧೫೦ ಪುಟಗಳಷ್ಟು ಮಾಹಿತಿ ಒಟ್ಟುಗೂಡಿಸಬೇಕಿತ್ತು. ಕಛೇರಿಯ ಅಭಿವೃದ್ಧಿ ಶಾಖೆಯ ಕೊಠಡಿಯ ದೀಪ ಉರಿಯುತ್ತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿ ಶ್ರೀ ಬಿ.ಎನ್ ಬೆಟ್‌ಕೆರೂರ್‌ರವರು (ಜಿಲ್ಲಾಧಿಕಾರಿಯವರ ನಿವಾಸ ಕಛೇರಿಯ ಎದುರಿಗೇ ಇದೆ) ನಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ನನ್ನ ಹಿಂದೆ ನಿಂತುದನ್ನು ನಾನು ಗಮನಿಸಿರಲಿಲ್ಲ. ಮಧ್ಯರಾತ್ರಿಯಲ್ಲಿ ಏಕಾಏಕಿ ಅವರು ನನ್ನ ಭುಜದ ಮೇಲೆ ಕೈ ಹಾಕಿದಾಗ ನಾನು ಬೆಚ್ಚಿ ಬಿದ್ದಿದ್ದೆ. ಈ ಕೆಲಸ ಜವಾನರು ಏಕೆ ಮಾಡಲಿಲ್ಲವೆಂಬ ಅವರ ಪ್ರಶ್ನೆಗೆ ಜವಾನರು ಕಛೇರಿ ಅವಧಿಯವರೆಗೆ ಮಾತ್ರ ಕೆಲಸ ಮಾಡಿದರೆಂದೂ ನಂತರದಲ್ಲಿ ನಾನೇ ಮಾಡಬೇಕಾಗಿ ಬಂದಿತೆಂದೂ ತಿಳಿಸಿದೆ. ನನಗೆ ಆಶ್ಚರ್ಯವಾಗುವಂತೆ ಜಿಲ್ಲಾಧಿಕಾರಿಯವರು ಸ್ವತಃ ಕಲ್ಲಚ್ಚು ಯಂತ್ರದಿಂದ ಪ್ರತಿಗಳನ್ನು ತೆಗೆಯುವುದೂ ಸೇರಿದಂತೆ ಬುಕ್‌ಲೆಟ್ ಜೋಡಿಸಿ ಪೂರ್ಣಗೊಳ್ಳುವವರೆಗೂ ನನ್ನೊಂದಿಗೆ ಕೈಜೋಡಿಸಿದರು. ಕಲ್ಲಚ್ಚು ಯಂತ್ರದ ಕಪ್ಪು ಮಸಿ ಅವರ ಅಂಗಿಗೂ ಹತ್ತಿತು. ಮನೆಗೆ ದೂರವಾಣಿ ಮಾಡಿ ಎರಡು ಸಲ ಚಹ ಮಾಡಿಸಿ ತರಿಸಿ ನನ್ನೊಂದಿಗೆ ಕುಡಿದರು. ಎಲ್ಲಾ ಕೆಲಸ ಮುಗಿದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಒತ್ತಾಯ ಮಾಡಿ ಅವರ ಕಾರಿನಲ್ಲಿ ನನ್ನನ್ನು ಮನೆಗೆ ಕಳಿಸಿದ ಜಿಲ್ಲಾಧಿಕಾರಿಯವರು ಆ ದಿನ ಕಛೇರಿಗೆ ನಾನು ಬರುವ ಅಗತ್ಯವಿಲ್ಲವೆಂದೂ, ವಿಶ್ರಾಂತಿ ಪಡೆಯಬೇಕೆಂದೂ ತಿಳಿಸಿದ್ದು ಅವರ ಮಾನವೀಯ ಮುಖದ ಪರಿಚಯ ಮಾಡಿಸಿತ್ತಲ್ಲದೆ ನನ್ನ ಶ್ರಮಕ್ಕೆ ಅರ್ಥ ಕೊಟ್ಟ್ಕಿತ್ತು. ಜಿಲ್ಲಾಧಿಕಾರಿಯವರು ರಾತ್ರಿ ಸಮಯದಲ್ಲಿ ಸ್ವತಃ ನನ್ನೊಂದಿಗೆ ಕೆಲಸ ಮಾಡಿದ ವಿಷಯ ಕಛೇರಿಯ ಅಧಿಕಾರಿ ಮತ್ತು ಇತರರಿಗೆ ತಿಳಿದ ನಂತರ ಕಛೇರಿಯಲ್ಲಿ ನನ್ನ ಕೆಲಸ ಸುಲಭವಾಗತೊಡಗಿತು. ಹಣ ಇರದಿದ್ದರೂ ಆಡಿಟ್ ಆಕ್ಷೇಪಣೆ ಬರುತ್ತದೆಂದು ಗೊತ್ತಿದ್ದರೂ ಜಿಲ್ಲಾಧಿಕಾರಿಯವರು ಹಿಂದೆ ಮುಂದೆ ನೋಡದೆ ಬೇರೆ ಸಂಬಂಧಪಡದ ನಿಧಿಯಿಂದ ಯಾಂತ್ರೀಕೃತ ಬಹುಪ್ರತಿ ಸಿದ್ಧಪಡಿಸುವ ಯಂತ್ರ, ಜೆರಾಕ್ಸ್ ಯಂತ್ರ, ಇತ್ಯಾದಿಗಳನ್ನು ಮುಂದಿನ ಮೂರೇ ದಿನದಲ್ಲಿ ತರಿಸಿ ಅಭಿವೃದ್ಧಿ ಶಾಖೆಗೆ ಕೊಡಿಸಿದರು.
ಬಿಡದ ಪೋಲಿಸ್ ನಂಟು
     ತುರ್ತು ಪರಿಸ್ಥಿತಿ ಹೋಗಿ ಎರಡು ವರ್ಷಗಳಾಗಿದ್ದರೂ ಅದರ ಛಾಯೆ ಹೋಗಿರಲಿಲ್ಲ. ಕರ್ನಾಟಕದಲ್ಲಿನ್ನೂ ಕಾಂಗ್ರೆಸ್ ಸರ್ಕಾರವಿತ್ತು. ನಮಸ್ಕಾರ ಮಾಡದಿದ್ದಕ್ಕೆ ನನ್ನ ಮೇಲೆ ಕೇಸು ಹಾಕಲು ಹೋಗಿ ಮುಖಭಂಗ ಅನುಭವಿಸಿದ್ದ ಎ.ಎಸ್.ಐ. ಮಹಾಶಯನಿಗೆ ನನ್ನ ಮೇಲೆ ಮುನಿಸು ಹೋಗಿರಲಿಲ್ಲ. ೧೫ ದಿನಗಳಿಗೆ ಒಮ್ಮೆ ಕಾನೂನು-ಸುವ್ಯವಸ್ಥೆ ಬಗ್ಗೆ ಜಿಲ್ಲಾ ದಂಡಾಧಿಕಾರಿಯವರಿಗೆ ರಹಸ್ಯ ವರದಿಗಳು ಆರಕ್ಷಕ ಅಧಿಕಾರಿಗಳಿಂದ ಸಲ್ಲಿಕೆಯಾಗುತ್ತಿದ್ದು ಆ ವರದಿಗಳಲ್ಲಿ ನಾನು ಆರೆಸ್ಸೆಸ್ ಚಟುವಟಿಕಗಳಲ್ಲಿ ಭಾಗವಹಿಸುತ್ತಿದ್ದ ಬಗ್ಗೆ ಕಲ್ಪಿತ ವರದಿಗಳೂ ಇರುತ್ತಿದ್ದವು. ನನ್ನನ್ನು ೪ ತಿಂಗಳ ಅವಧಿಗೆ ಬೆಂಗಳೂರಿಗೆ ಲೆಕ್ಕಪತ್ರಗಳು, ಅಭಿವೃದ್ದಿ ನಿಯಮಗಳ ಕುರಿತು ತರಬೇತಿಗೆ ನಿಯೋಜಿಸಿದ್ದ ಅವಧಿಯಲ್ಲೂ ಹಾಸನದಲ್ಲಿ ವಿವಿಧ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಗ್ಗೆ ರಹಸ್ಯ ವರದಿಗಳಿದ್ದವು. ತರಬೇತಿ ಮುಗಿಸಿಕೊಂಡು ಬಂದ ನಂತರದಲ್ಲೂ ಇಂತಹ ವರದಿ ಮುಂದುವರೆಯುತ್ತಿದ್ದು ತಡವಾಗಿ ನನ್ನ ಗಮನಕ್ಕೆ ಬಂತು. ಆಗ ನಮ್ಮ ಕಛೇರಿಯ ವ್ಯವಸ್ಥಾಪಕರಾಗಿದ್ದವರು ಶ್ರೀ ರಮೇಶರಾವ್. ಅವರು ನನ್ನನ್ನು, ನನ್ನ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದವರು, ಪ್ರೀತಿ ವಿಶ್ವಾಸಗಳಿಂದ ಕಾಣುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರೂ ನನ್ನ ವಿರುದ್ಧದ ಪೋಲಿಸ್ ವರದಿಗಳ ಬಗ್ಗೆ ವಿಷಯ ತಿಳಿದು ನೊಂದುಕೊಂಡರು. ನನ್ನನ್ನು ಒಂದು ಭಾನುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಶ್ರೀ ಬೆಟ್‌ಕೆರೂರ್‌ರವರ ಮನೆಗೆ ಕರೆದುಕೊಂಡು ಹೋಗಿ ಸುಳ್ಳು ವರದಿಗಳ ಬಗ್ಗೆ ಗಮನಿಸಬೇಕೆಂದು ಕೋರಿದರು. ನನ್ನ ಒಳ್ಳೆಯತನದ ಬಗ್ಗೆ ಬಿಡಿಸಿ ಹೇಳುತ್ತಾ ಗದ್ಗದಿತರಾಗಿ ಕಣ್ಣೀರು ಹಾಕಿದ್ದು ಕಂಡು ನನಗೆ ಒಂದು ತರಹ ಮುಜುಗರವಾಯಿತು. ಅವರ ನಿಷ್ಕಳಂಕ ವಿಶ್ವಾಸದ ಪರಿಚಯ ನನಗಾಯಿತು. ನಾನೇ ಅಂತಹ ವರದಿ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಜಿಲ್ಲಾಧಿಕಾರಿಯವರಿಗೂ ನನ್ನ ಕೆಲಸದ ಬಗ್ಗೆ ಸದಭಿಪ್ರಾಯವಿತ್ತು. ತರಬೇತಿಗೆ ಬೆಂಗಳೂರಿಗೆ ಹೋಗಿದ್ದ ಅವಧಿಯಲ್ಲೂ ಸುಳ್ಳು ವರದಿ ಬಂದಿದ್ದುದನ್ನು ನೋಡಿ ಖಚಿತಪಡಿಸಿಕೊಂಡ ಜಿಲ್ಲಾಧಿಕಾರಿಯವರು ಆರಕ್ಷಕ ಅಧಿಕಾರಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಂಬಂಧಿಸಿದ ಪೋಲಿಸ್ ಮಹಾಶಯ ಮತ್ತೊಮ್ಮೆ ಛೀಮಾರಿ ಹಾಕಿಸಿಕೊಂಡನೆಂದು ತಿಳಿಯಿತು. ಅಂದಿನಿಂದ ನನ್ನ ವಿರುದ್ಧ ಬರುತ್ತಿದ್ದ ವರದಿಗಳಿಗೆ ಪೂರ್ಣವಿರಾಮ ಬಿದ್ದಿತ್ತು.
(ಕಾಲಘಟ್ಟ: 1978, ಸ್ಥಳ: ಹಾಸನ).

ಭಾನುವಾರ, ನವೆಂಬರ್ 14, 2010

ಮೂಢ ಉವಾಚ -24 : ನಾಯಕ

                ನಾಯಕ
ಕೆಲಸಕಾರ್ಯವ ನೋಡೆ ಒಂದು ಕೈಮೇಲು
ಧೃಢ ನಿಲುವು ಇರಲು ಕಾಲದ ಅರಿವು|
ಸರಳ ನಡೆಯೊಡನೆ ಜಾಣತನ ಮೇಳವಿಸೆ
ನಾಯಕನು ಉದಯಿಸುವ ಕಾಣು ಮೂಢ||


ನುಡಿದಂತೆ ನಡೆದು ಮಾದರಿಯು ತಾನಾಗಿ
ಪರರ ಮನವರಿತು ನಡೆದು ಕರುಣೆಯಿರಲಾಗಿ|
ಕೆಲಸ ಮಾಡಿಸುವ ಕಲೆಯು ಕರಗತವು ತಾನಾಗೆ
ನಾಯಕನು ಉದಯಿಸುವ ಕಾಣು ಮೂಢ||


ಅಚಲ ವಿಶ್ವಾಸ ಹಿಡಿದ ಕಾರ್ಯದಲಿರಲು
ಧೃಢವಾದ ಮಾತು ನಿರ್ಭೀತ ನಡೆನುಡಿಯು|
ಸ್ನೇಹಕ್ಕೆ ಬದ್ಧ ಸಮರಕೂ ಸಿದ್ಧನಿಹ
ಗುಣವಿರುವ ನಾಯಕನೆ ಗೆಲುವ ಮೂಢ||


ಮೊಂಡುವಾದಗಳಿಲ್ಲ ಗರ್ವ ಮೊದಲಿಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ|
ಸೋಲು ಗೆಲುವುಗಳ ಸಮನಾಗಿ ಕಾಣಬಲ್ಲ
ಧೀರನವನೆ ನಿಜನಾಯಕನು ಮೂಢ||
*****************
-ಕವಿನಾಗರಾಜ್.

ಶನಿವಾರ, ನವೆಂಬರ್ 13, 2010

ಸೇವಾ ಪುರಾಣ -23 : ಮರಳಿ ಹಾಸನಕ್ಕೆ -1: ಬದಲಾಗದ ವೈಖರಿ

ಮರಳಿ ಹಾಸನಕ್ಕೆ
      ಹಾಸನದ ಯಾವ ಕಛೇರಿಯಿಂದ ನನಗೆ ಗುಲ್ಬರ್ಗ ಜಿಲ್ಲೆಯ ಸೇಡಂಗೆ ವರ್ಗವಾಗಿತ್ತೋ ಅದೇ ಆಹಾರ ಶಾಖೆಗೆ ಪ್ರಥಮ ದರ್ಜೆ ಗುಮಾಸ್ತನಾಗಿ ಕರ್ತವ್ಯಕ್ಕೆ ಹಾಜರಾದೆ. ಯಾರು ನನ್ನನ್ನು ಹಿಂದೆ ಮಾತನಾಡಿಸಲೂ ಹಿಂಜರಿಯುತ್ತಿದ್ದರೋ ಅವರೆಲ್ಲಾ ನನ್ನನ್ನು ಅಭಿನಂದಿಸಿ ಹೊಗಳತೊಡಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ನನ್ನನ್ನು ಪ್ರಥಮವಾಗಿ ಬಂಧಿಸಿದ್ದ ಸಬ್‌ಇನ್ಸ್‌ಪೆಕ್ಟರರು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿ ಮಡಿಕೇರಿಯಲ್ಲಿದ್ದರು. ಕೋರ್ಟಿನ ಕೆಲಸಕ್ಕೆ ಹಾಸನಕ್ಕೆ ಬಂದಿದ್ದವರು ನನ್ನನ್ನು ಹುಡುಕಿಕೊಂಡು ಬಂದು ಕ್ಷಮೆ ಕೇಳಿಹೋಗಿದ್ದರು. ಜಿಲ್ಲಾಧಿಕಾರಿಯವರು ಮತ್ತು ಎಸ್.ಪಿ.ಯವರ ಆದೇಶದಂತೆ ಆ ಕೆಲಸ ಮಾಡಬೇಕಾಯಿತೆಂದು ತಿಳಿಸಿದ ಅವರು ನಾನು ಊಹಿಸಿದ್ದ ಸಂಗತಿ ಖಚಿತ ಪಡಿಸಿದರು. ನನ್ನ ತಂದೆಯವರು ನನ್ನನ್ನು ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರಲ್ಲಿಗೆ ಕರೆದುಕೊಂಡು ಹೋಗಿ ಇನ್ನು ಮುಂದಾದರೂ ಸರಿ(?)ಯಾಗಿರುವಂತೆ ಬುದ್ಧಿವಾದ ಹೇಳಿಸಿದರು. ತುರ್ತು ಪರಿಸ್ಥಿತಿ ವಿರುದ್ಧ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದ ಆರೆಸ್ಸೆಸ್ ಮತ್ತು ಪ್ರತಿಪಕ್ಷಗಳು ಎಲ್ಲ್ಲೆಡೆ ವಿಜಯೋತ್ಸವ ಆಚರಿಸಿದಂತೆ ಹಾಸನದಲ್ಲೂ ನಡೆಯಿತು.
ಬದಲಾಗದ ವೈಖರಿ
     ಕಛೇರಿಯಲ್ಲಿ ವಿಷಯನಿರ್ವಾಹಕರುಗಳು ಅನುಪಯುಕ್ತವೆಂದು ಭಾವಿಸಿದ ಮತ್ತು ಇಷ್ಟಪಡದ ವಿಷಯಗಳನ್ನು ನನಗೆ ನಿರ್ವಹಿಸಲು ಆದೇಶವಾಯಿತು. ಅದರಲ್ಲಿ ಕೋರ್ಟು ಪ್ರಕರಣಗಳೂ ಸೇರಿದ್ದವು. ನಾನು ಪ್ರಭಾರ ವಹಿಸಿಕೊಂಡಾಗ ಸುಮಾರು ೫೦ ಕೋರ್ಟು ಪ್ರಕರಣಗಳು ಇದ್ದು ಆ ಪೈಕಿ ಸುಮಾರು ೧೨-೧೫ ಪ್ರಕರಣಗಳಲ್ಲಿ ೧-೨ ವರ್ಷಗಳಿಂದ ಪ್ರಕರಣ ಮುಂದುವರೆದಿರಲೇ ಇಲ್ಲ. ಹಾಗೆಯೇ ಕಟ್ಟಿಡಲಾಗಿತ್ತು. ನಾನು ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕೆಂಬ ನಿರ್ದೇಶನ ಕೋರಿ ಫುಡ್ ಅಸಿಸ್ಟೆಂಟರ ಮೂಲಕ ಜಿಲ್ಲಾಧಿಕಾರಿಯವರಿಗೆ ಟಿಪ್ಪಣಿ ಕಳಿಸಿದೆ. ಮುಂದಿನ ವಿಚಾರಣಾ ದಿನಾಂಕ ನಿಗದಿಸಲು ಫುಡ್ ಅಸಿಸ್ಟೆಂಟರು ಮಾಡಿದ ಶಿಫಾರಸನ್ನು ಆಗ ಜಿಲ್ಲಾಧಿಕಾರಿಯವರಾಗಿದ್ದ ಶ್ರೀ ಬಿ.ಕೆ.ದಾಸ್‌ರವರು ಒಪ್ಪಿದರು. ನಿಗದಿತ ದಿನಾಂಕಗಳಲ್ಲಿ ಹಾಜರಾಗಲು ಸಂಬಂಧಿಸಿದವರಿಗೆ ತಿಳುವಳಿಕೆ ಕಳಿಸಿದೆ. ಜಿಲ್ಲಾಧಿಕಾರಿಯವರು ವಿಚಾರಣಾ ದಿನಾಂಕದಂದು ಮೊದಲು ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡಿದ ನಂತರ ಆಹಾರ ಪ್ರಕರಣಗಳನ್ನು ಕೈಗೆತ್ತಿಕೊಂಡರು. ಮೊದಲ ಪ್ರಕರಣವೇ ಹಳೆಯ ಪ್ರಕರಣವಾಗಿದ್ದು ಕಕ್ಷಿಗಾರರು ಹಾಜರಾದರು. ಅವರ ಪರ ಹಾಜರಾದ ಹಿರಿಯ ವಕೀಲರು ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಏಕಾಏಕಿ ಕೆದಕಲಾಗಿದೆಯೆಂದೂ, ತಮ್ಮ ಕಕ್ಷಿಗಾರರಿಗೆ ತೊಂದರೆ ಕೊಡುವ ಮತ್ತು ಹಣ ಕೀಳುವ ಉದ್ದೇಶದಿಂದ ನೋಟೀಸು ಕೊಡಲಾಗಿದೆಯೆಂದೂ ದೂರಿದರು. ಜಿಲ್ಲಾಧಿಕಾರಿಯವರು ಕಡತ ನೋಡಿದಾಗ ಹಿಂದಿನ ವಿಚಾರಣಾ ದಿನಾಂಕ ಎರಡು ವರ್ಷಗಳ ಹಿಂದಿನದಾಗಿತ್ತು. ಸಿಟ್ಟಿಗೆ ಹೆಸರಾಗಿದ್ದ ಜಿಲ್ಲಾಧಿಕಾರಿಯವರು ಕಡತವನ್ನು ರೊಯ್ಯನೆ ನನ್ನ ಹತ್ತಿರ ಎಸೆದರು. ಕಡತದ ಹಾಳೆಗಳು ಚೆಲ್ಲಾಪಿಲ್ಲಿಯಾದವು. ಕೋರ್ಟು ಹಾಲಿನಲ್ಲಿ ತುಂಬಿದ್ದ ಹಿರಿಯ, ಕಿರಿಯ ವಕೀಲರುಗಳು, ಕಕ್ಷಿಗಾರರು, ಸಿಬ್ಬಂದಿ, ಹೀಗೆ ಬಹಳ ಜನರಿದ್ದರೂ ಆ ಸಂದರ್ಭದಲ್ಲಿ ಮುಂದೇನಾಗುವುದೋ ಎಂದು ನಿರೀಕ್ಷಿಸಿ ನೀರವ ಮೌನ ಏರ್ಪಟ್ಟಿತು. ನನಗೆ ಅವಮಾನವಾದಂತಾಗಿತ್ತು. ಸುಮ್ಮನಿದ್ದೆ. ಪಕ್ಕದಲ್ಲಿದ್ದ ಶಿರಸ್ತೇದಾರರು ಕೆಳಗೆ ಬಿದ್ದಿದ್ದ ಕಡತವನ್ನು ಎತ್ತಿಕೊಳ್ಳಲು ಪಿಸುಮಾತಿನಲ್ಲಿ ನನಗೆ ಸೂಚಿಸಿದರೂ ನಾನು ಸುಮ್ಮನೇ ಕುಳಿತಿದ್ದೆ. ಜಿಲ್ಲಾಧಿಕಾರಿಯವರು ಎಲ್ಲಾ ಪ್ರಕರಣಗಳನ್ನು ಮುಂದೂಡಲಾಗಿದೆಯೆಂದು ತಿಳಿಸಿ ತಮ್ಮ ಛೇಂಬರಿಗೆ ಹೊರಟು ಹೋದರು. ನಾನೂ ಕಡತ ತೆಗೆದುಕೊಳ್ಳದೆ ನನ್ನ ಕಛೇರಿಗೆ ವಾಪಸು ಬಂದು ಕುರ್ಚಿಯಲ್ಲಿ ಕುಳಿತೆ. ಶಿರಸ್ತೇದಾರರು ಕಡತ ಜೋಡಿಸಿ ನನಗೆ ಕಳುಹಿಸಿದರು. ಅವರು, ಆಪ್ತ ಸಹಾಯಕರು, ಇತರೆ ಸಿಬ್ಬಂದಿ ಸಹ ನಾನು ಕಡತ ತೆಗೆದುಕೊಂಡು ಬರಬೇಕಿತ್ತ್ತೆಂದೂ, ನನ್ನನ್ನು ಸಸ್ಪೆಂಡ್ ಮಾಡುವುದು ಗ್ಯಾರೆಂಟಿ ಎಂತಲೂ ಮಾತಾಡಿಕೊಳ್ಳುತ್ತಿದ್ದರು. ನನ್ನದಲ್ಲದ ತಪ್ಪಿಗೆ ನಾನು ತಲೆಬಾಗುವಂತಹ ನಡವಳಿಕೆ ನನಗಿನ್ನೂ ಅಭ್ಯಾಸವಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿಯವರು ನನ್ನನ್ನು ಮತ್ತು ಫುಡ್ ಅಸಿಸ್ಟೆಂಟರನ್ನು ಕರೆಸಿದರು. ಫುಡ್ ಅಸಿಸ್ಟೆಂಟರು ಜಿಲ್ಲಾಧಿಕಾರಿಯವರಿಗೆ ಈ ತಪ್ಪು ಹಿಂದಿನ ವಿಷಯನಿರ್ವಾಹಕರದೆಂದೂ, ನಾನು ಬಂದು ಕೇವಲ ಇಪ್ಪತ್ತು ದಿನಗಳಾಯಿತೆಂದು ಹಾಗೂ ಟಿಪ್ಪಣಿ ಮೇಲೆ ಆದೇಶ ಪಡೆದೇ ವಿಚಾರಣೆಗೆ ಕಡತ ಇಡಲಾಗಿತ್ತೆಂದೂ ವಿವರಿಸಿ ಆದೇಶ ತೋರಿಸಿದಾಗ ಜಿಲ್ಲಾಧಿಕಾರಿಯವರು ಒಂದು ಕ್ಷಣ ಸುಮ್ಮನಿದ್ದರು. ನಂತರ ನನ್ನ ಮುಖ ನೋಡುತ್ತಾ 'ಸಾರಿ' ಎಂದರು. ಇಂತಹ ಕಡತಗಳನ್ನು ಫುಡ್ ಅಸಿಸ್ಟೆಂಟರು ಸ್ವತಃ ಇನ್ನೊಮ್ಮೆ ನೋಡಿ ಅಗತ್ಯವಿದ್ದರೆ ಮಾತ್ರ ನೋಟೀಸು ಕೊಡಲು ತಿಳಿಸಿದರು. ನಾನು ಮಾತನಾಡದೆ ಸುಮ್ಮನಿದ್ದು ಕೊನೆಗೆ ಫುಡ್ ಅಸಿಸ್ಟೆಂಟರೊಂದಿಗೆ ಛೇಂಬರಿನಿಂದ ಹೊರಬಂದಾಗ ಏನೋ ಆಗುವುದೆಂದು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿತ್ತು. ಸರಿ ಅನ್ನಿಸಿದುದನ್ನು ಪರಿಣಾಮ ಲೆಕ್ಕಿಸದೆ ಮಾಡಲು ಹೊರಟರೆ ತೊಂದರೆಯಾಗುವುದೆಂದು ಗೊತ್ತಿದ್ದರೂ ನನ್ನ ಕೆಲಸದ ವೈಖರಿ ಬದಲಿಸಿಕೊಳ್ಳಲು ನನಗೆ ಮನಸ್ಸು ಒಪ್ಪುತ್ತಿರಲಿಲ್ಲ. ಒಂದು ರೀತಿಯಲ್ಲಿ ಇದೂ ಒಂದು ನನ್ನ ದೌರ್ಬಲ್ಯ.
(ಕಾಲಘಟ್ಟ: 1977)                                                              .. ಮುಂದುವರೆಯುವುದು.

ಬುಧವಾರ, ನವೆಂಬರ್ 10, 2010

ಮೂಢ ಉವಾಚ -23: ಗೆಲುವು

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ|
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸುವುದು ಕಾಣು ಮೂಢ||


ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು
ಆಸೆ ಆಮಿಷಗಳು ದಾರಿ ತಪ್ಪಿಸಬಹುದು|
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ
ಅಡಿಯ ಮುಂದಿಡಲು ಗೆಲುವೆ ಮೂಢ||


ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ
ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ?|
ವೀರನಿಗೆ ಅವಕಾಶ ಹೇಡಿಗದು ನೆಪವು
ನಿಲುವು ಸರಿಯಿರಲು ಗೆಲುವೆ ಮೂಢ||


ಅನುಭವದ ನೆಲೆಯಲ್ಲಿ ಬುದ್ಧಿಯ ಒರೆಯಲ್ಲಿ
ಆತ್ಮವಿಶ್ವಾಸವದು ತುಂಬಿ ತುಳುಕಿರಲು|
ಅಪಾಯವೆದುರಿಸುವ ಗಟ್ಟಿತನವಿರಲು
ನಾಯಕನು ಉದಯಿಸುವ ಕಾಣು ಮೂಢ||
********************
-ಕವಿನಾಗರಾಜ್.

ಮೂಢ ಉವಾಚ -22

                    ಭಯ
ಕೆಡುಕಾಗುವ ಭಯ ಕೆಡುಕ ತಡೆದೀತು
ರೋಗದ ಭಯ ಚಪಲತೆಯ ತಡೆದೀತು|
ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು
ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||


ನರಕದ ಭಯ ಉಳಿಸೀತು ಸ್ವರ್ಗವ
ಭಯವಿರೆ ಮಾನವ ಇಲ್ಲದಿರೆ ದಾನವ|
ಭಯದಿಂ ವ್ಯಷ್ಟಿ ಸಮಷ್ಟಿಗೆ ಕ್ಷೇಮಭಾವ
ಲೋಕಹಿತ ಕಾರಕವು ಭಯವೆ ಮೂಢ||

               ಗೊಂದಲ
ಮನದಲ್ಲಿ ಒಂದು ಹೇಳುವುದು ಮತ್ತೊಂದು
ಹೇಳಿದ್ದು ಒಂದು ಮಾಡುವುದು ಮತ್ತೊಂದು|
ಒಂದನಿನ್ನೊಂದು ನುಂಗಿರಲು ಗೊಂದಲವು
ನೆಮ್ಮದಿಯ ನುಂಗುವುದು ಮೂಢ||

                ನಿಜವೈರಿ
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು|
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ||

****************
-ಕವಿನಾಗರಾಜ್.

ಸೋಮವಾರ, ನವೆಂಬರ್ 8, 2010

ಸೇವಾಪುರಾಣ22: ಗುಲ್ಬರ್ಗ ತೋರಿಸಿದರು-7 : ತುರ್ತು ಪರಿಸ್ಥಿತಿಯ ಕೊನೆಯ ದಿನಗಳು

ತುರ್ತು ಪರಿಸ್ಥಿತಿಯ ಕೊನೆಯ ದಿನಗಳು
     ತುರ್ತು ಪರಿಸ್ಥಿತಿ ವಿರುದ್ಧದ ಪ್ರತಿಭಟನೆಯ ಕಾವು ಹೆಚ್ಚಾದಂತೆ ಕೇಂದ್ರ ಸರ್ಕಾರದ ನಾಯಕರು ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡು ಲೋಕಸಭೆಗೆ ಚುನಾವಣೆ ಘೋಷಿಸಬೇಕಾಯಿತು. ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ವಿರುದ್ಧ ಹೇರಿದ್ದ ನಿಷೇಧ ರದ್ದಾಯಿತು. ಕಮ್ಯುನಿಷ್ಟರನ್ನು ಹೊರುಪಡಿಸಿ ಭಿನ್ನಮತೀಯ ಕಾಂಗ್ರಸ್ಸಿಗರೂ ಒಳಗೊಂಡಂತೆ ಎಲ್ಲಾ ಪ್ರಮುಖ ಪ್ರತಿಪಕ್ಷಗಳೂ ಒಗ್ಗೂಡಿ ಜನತಾಪಕ್ಷ ಎಂಬ ಹೊಸ ರಾಜಕೀಯ ಪಕ್ಷ ರಚಿಸಿಕೊಂಡು ಕಾಂಗ್ರೆಸ್ ವಿರುದ್ಧ ಚುನಾವಣೆಗೆ ಸಡ್ಡು ಹೊಡೆದವು. ಪ್ರಥಮ ಬಾರಿಗೆ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಪಡೆದು ಸ್ವಾತಂತ್ರ್ಯಾನಂತರದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಯಿತು. ಇಡೀ ಕರ್ನಾಟಕದಲ್ಲಿ ಜನತಾಪಕ್ಷದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಹಾಸನದಿಂದ ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು. ಉಳಿದ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಾಗಿರದಿದ್ದರೂ ಪರಿಸ್ಥಿತಿಯ ಕಾರಣದಿಂದ ಕಾಂಗ್ರೆಸ್ ಪಕ್ಷದ ಸೋಲನ್ನು ಬಯಸಿದ್ದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ, ಯಾರು ಅಭ್ಯರ್ಥಿ ಎಂಬುದೂ ಸಹ ಗೊತ್ತಿಲ್ಲದಿದ್ದ ನನ್ನ ತಾಯಿಯವರು ನಮ್ಮ ಮನೆಯ ಬೀದಿಯಲ್ಲಿದ್ದ ಎಲ್ಲಾ ಮನೆಗಳಿಗೆ ಅವರೊಬ್ಬರೇ ಹೋಗಿ 'ದಯವಿಟ್ಟು ಇಂದಿರಾಗಾಂಧಿಗೆ ಓಟು ಹಾಕಬೇಡಿ, ನನ್ನ ಮಗನಿಗೆ ತೊಂದರೆ ಕೊಟ್ಟಂತೆ ನಿಮ್ಮ ಮಕ್ಕಳಿಗೂ ತೊಂದರೆ ಕೊಡುತ್ತಾಳೆ' ಎಂದು ಕೈಮುಗಿದು ಕಣ್ಣೀರು ಹಾಕಿಕೊಂಡು ಹೇಳಿಬರುತ್ತಿದ್ದರು. ಹಾಸನದಿಂದ ಅಂಚೆ ಮತಪತ್ರ ತರಿಸಿಕೊಂಡು ನಾನೂ ನನ್ನ ಮತ ಚಲಾಯಿಸಿದ್ದೆ. ಸುಮಾರು 1000 ಮತಗಳ ಅಲ್ಪ ಬಹುಮತದಿಂದ ಹಾಸನದಲ್ಲಿ ಜನತಾಪಕ್ಷದ ಅಭ್ಯರ್ಥಿ ಜಯಗಳಿಸಿದ್ದು ನನಗೆ ಖುಷಿ ತಂದಿತ್ತು. ಅಂಚೆ ಮತಪ್ರಗಳೇ ಅವರಿಗೆ ಗೆಲುವು ತಂದಿತ್ತದ್ದು ವಿಶೇಷವಾಗಿತ್ತು.
ಚುನಾವಣೆ ಕೆಲಸ
     ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಹಿಂದಿನಿಂದಲೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಒಬ್ಬ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನನಗೂ ಚುನಾವಣೆ ಸಂಬಂಧದ ಬಿಡುವಿಲ್ಲದ ಕೆಲಸವಿತ್ತು. ಚುನಾವಣೆಯ ಹಿಂದಿನ ದಿನ ಎಲ್ಲಾ ಮತಗಟ್ಟೆ ಸಿಬ್ಬಂದಿಗಳನ್ನು ಅಗತ್ಯದ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ಸಾಗಹಾಕುವ ವೇಳೆಗೆ ನಮಗೆ ಸಾಕೋಸಾಕಾಗಿತ್ತು. ಅಂದು ಮಧ್ಯಾಹ್ನ ಸುಮಾರು 4-30ರ ವೇಳೆಗೆ ಇಟ್ಕಲ್ ಗ್ರಾಮದ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಿದ್ದ ಒಬ್ಬರು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಮತಗಟ್ಟೆ ಮುಂದೆ ನಿಂತಿದ್ದ ಸಮಯದಲ್ಲಿ ಯಾರೋ ಅಪರಿಚಿತರು ಬಂದು ಚೂರಿ ಹಾಕಿ ಕೊಲೆ ಮಾಡಿದ ಸುದ್ದಿ ಬಂದಿತು. ಇಟ್ಕಲ್ ಎಂಬುದು ಆಂಧ್ರ ಗಡಿಯಲ್ಲಿ ಇದ್ದ ಒಂದು ಹಳ್ಳಿ. ಅವರ ಬದಲಿಗೆ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಲು ಮೀಸಲು ಸಿಬ್ಬಂದಿಯವರು ಯಾರೂ ಸಿದ್ಧರಿರಲಿಲ್ಲ. ಆಗ ಅಸಿಸ್ಟೆಂಟ್ ಕಮಿಷನರರು ನನ್ನನ್ನು ಕರೆಸಿ ನಾನು ಅಲ್ಲಿಗೆ ಹೋಗಬೇಕೆಂದೂ ಏನೂ ಗಲಾಟೆಯಾಗದಂತೆ ಪೋಲಿಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ನಾನು ಒಪ್ಪಿ ಹೋದೆ. ಸುಗಮ ಚುನಾವಣೆಗಾಗಿ ಆ ಮತಗಟ್ಟೆಗೆ ಎಲ್ಲರೂ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಮತ್ತು ಬಲವಾದ ಪೋಲಿಸ್ ಬಂದೋಬಸ್ತು ಇದ್ದುದರಿಂದ ಶಾಂತಯುತವಾಗಿ ಮತದಾನವಾಗಿ ಆ ಮತಗಟ್ಟೆಯಲ್ಲಿ ಸುಮಾರು ಶೇ. 45ರಷ್ಟು ಮತದಾನವಾಗಿತ್ತು.
ಮರಳಿ ಹಾಸನಕ್ಕೆ
     ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಎಲ್ಲಾ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನೆಲ್ಲಾ ಹಿಂತೆಗೆದುಕೊಳ್ಳಲು ಆದೇಶ ಮಾಡಲಾಯಿತು. ನನ್ನ ವಿರುದ್ಧದ 13 ಮೊಕದ್ದಮೆಗಳ ಪೈಕಿ 6 ನನ್ನಂತೆ ಇತ್ಯರ್ಥವಾಗಿತ್ತು. ಆರೆಸ್ಸೆಸ್ ಮೇಲಿನ ನಿಷೇಧ ಹಿಂತೆಗೆದುಕೊಂಡಿದ್ದರಿಂದ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿದ್ದ 7 ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದುದನ್ನು ಒಪ್ಪಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ದಿನಾಂಕ 23-04-1977ರಲ್ಲಿ ಅನುಮತಿಸಿತು. ಹೀಗಾಗಿ ನಾನು ಸಂಪೂರ್ಣ ಆರೋಪಮುಕ್ತನಾದೆ. ಹೀಗಾಗಿ ನಾನು ಪುನಃ ಹಾಸನಕ್ಕೆ ಮರಳಿ ವರ್ಗಾಯಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಒಪ್ಪಿ ಸರ್ಕಾರದಿಂದ ಹಾಸನ ಯೂನಿಟ್ ಗೆ ವರ್ಗಾಯಿಸಿದ ಆದೇಶ ದಿನಾಂಕ 03-09-1977ರಲ್ಲಿ ಬಂದಿತು. ಇದೇ ಸಮಯದಲ್ಲಿ, ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ನನ್ನನ್ನು ಸೇಡಂ ತಾಲೂಕು ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾಯಿಸುವಂತೆ ಅಸಿಸ್ಟೆಂಟ್ ಕಮಿಷನರರು ಮಾಡಿದ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿಯವರಿಂದ ಅದೇ ರೀತಿ ವರ್ಗಾಯಿಸಿದ ಆದೇಶ ಸಹ ಬಂದಿತು. ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡಿ ನನ್ನನ್ನು ದಿನಾಂಕ 01-10-1977ರಲ್ಲಿ ಅಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ನಾನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ 03-10-1977ರಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಸೇಡಂನಿಂದ ವಾಪಸು ಬರುವಾಗ ತಹಸೀಲ್ದಾರ್ ಶ್ರೀ ಬಿ.ವಿ.ಸ್ವಾಮಿಯವರು ನನ್ನೊಂದಿಗೆ ಶೋರಾಪುರದವರೆಗೆ ಬಂದು (ಸೇಡಂನಿಂದ ಶೋರಾಪುರಕ್ಕೆ ಸುಮಾರು ನಾಲ್ಕು ಗಂಟೆ ಪ್ರಯಾಣ) ಅಲ್ಲಿನ ಹೋಟೆಲಿನಲ್ಲಿ ಊಟ ಹಾಕಿಸಿ  ಶುಭ ಹಾರೈಸಿ ಬೀಳ್ಕೊಟ್ಟಿದ್ದು ನಾನು ಮರೆಯಲಾರೆ. ಅವರು ನನ್ನ ತಂದೆಯವರಿಗೆ 01-05-1979ರಲ್ಲಿ ಬರೆದ ಪತ್ರದಲ್ಲಿ ಹೀಗೆ ಬರೆದಿದ್ದರು: 
     “ . . . I had the pleasure of working with your son  at Sedam for a very short period. There are no words in English language to describe your son’s efficiency, honesty, loyalty to his superiors, straightforwardness, promptness and sympathy towards poor people. In fact, I would have been very glad if he had been continued here till my transfer from this place. But that was not be. I have no doubt that with all the good qualities your son possesses, he would be a first class citizen of our country. …. ”
     ಈ ಪತ್ರವನ್ನು ನಾನು ಈಗಲೂ ನನ್ನ 'ಪ್ರಶಸ್ತಿ ಪತ್ರ'ವೆಂಬಂತೆ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇವರ ಮತ್ತು ಇಂತಹವರ ಆಶಯಗಳೇ ನನ್ನನ್ನು ಹಾದಿ ತಪ್ಪದಂತೆ ಕಾವಲು ಕಾಯುತ್ತಿರುವುದು!
    
                                                                                   ..ಮುಂದುವರೆಯುವುದು.

ಶನಿವಾರ, ನವೆಂಬರ್ 6, 2010

ಮೂಢ ಉವಾಚ -21: ಭಯ

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ||

ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ|
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ||

ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ|
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ||

ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

ಮಂಗಳವಾರ, ನವೆಂಬರ್ 2, 2010

ಸೇವಾಪುರಾಣ21: ಗುಲ್ಬರ್ಗ ತೋರಿಸಿದರು-6: ಭುಗಿಲೆದ್ದ ಸಿಟ್ಟು

ಭುಗಿಲೆದ್ದ ಸಿಟ್ಟು
     ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು ನನ್ನನ್ನು ಛೇಂಬರಿಗೆ ಕರೆಸಿ 4-5 ನಮೂನೆ ಲಗ್ನಪತ್ರಿಕೆಗಳನ್ನು ತೋರಿಸಿ ಯಾವುದು ಚೆನ್ನಾಗಿದೆ ಎಂದು ಆರಿಸಲು ಹೇಳಿದರು. ನಾನು ಒಂದನ್ನು ಆರಿಸಿದೆ. ಬಹುಷಃ ಅವರಿಗೂ ಅದೇ ಚೆನ್ನಾಗಿದೆ ಅನ್ನಿಸಿದ್ದಿರಬಹುದು. ತಮ್ಮ ಮಗಳ ಲಗ್ನ ಪತ್ರಿಕೆಯ ಕರಡನ್ನು ಕೊಟ್ಟು ಆರಿಸಿದ ಮಾದರಿಯಲ್ಲಿ 500 ಲಗ್ನಪತ್ರಿಕೆಗಳನ್ನು ಮುದ್ರಿಸಿಕೊಂಡು ತರಲು ನನಗೆ ತಿಳಿಸಿದರು. ನನ್ನ ತಂಗಿಯ ಮದುವೆಗೆ ರಜೆ ಕೊಡದಿದ್ದ ಅವರು ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಗಳನ್ನು ಮುದ್ರಿಸಿ ತರಲು ನನಗೆ ಹೇಳಿದ್ದು ನನ್ನಲ್ಲಿ ಅದುಮಿಟ್ಟಿದ್ದ ಸಿಟ್ಟು ಭುಗಿಲೇಳಲು ಕಾರಣವಾಯಿತು. ಅವರ ಮೇಜಿನ ಮೇಲೆ ಇದ್ದ ತ್ರಿಭುಜಾಕೃತಿಯ ಮರದ ಅವರ ನಾಮಫಲಕವನ್ನು ತೆಗೆದುಕೊಂಡು ಅವರಿಗೆ ಬಾರಿಸಲು ಮೇಲೆತ್ತಿದೆ. ಅದೇ ಸಮಯಕ್ಕೆ ಛೇಂಬರಿನ ಒಳಗೆ ಬಂದಿದ್ದ ಸಹೋದ್ಯೋಗಿಯೊಬ್ಬರು ಹಿಂದಿನಿಂದ ಕೂಡಲೇ ಆ ನಾಮಫಲಕವನ್ನು ಹಿಡಿದುಕೊಳ್ಳದೇ ಹೋಗಿದ್ದರೆ ತಹಸೀಲ್ದಾರರಿಗೆ ಬಲವಾದ ಪೆಟ್ಟೇ ಬಿದ್ದಿರುತ್ತಿತ್ತು. ನಾನು ಸಿಟ್ಟಿನಿಂದ ಬುಸುಗುಡುತ್ತಾ ತಹಸೀಲ್ದಾರರಿಗೆ ಬಯ್ಯುತ್ತಿದ್ದೆ. ಗದ್ದಲ ಕೇಳಿ ಉಳಿದ ಸಿಬ್ಬಂದಿ ಮತ್ತು ಜನರು ಗುಂಪುಕೂಡಿದರು. ಅಜಾನುಬಾಹು ತಹಸೀಲ್ದಾರರು ದಿಗ್ಭ್ರಮೆ ಮತ್ತು ಗಾಬರಿಯಿಂದ ಕುರ್ಚಿಯಲ್ಲಿ ಕುಸಿದು ಕುಳಿತು ನೋಡುತ್ತಿದ್ದರು. ನಮ್ಮ ಕಛೇರಿಯ ಎದುರಿಗೇ ಅಸಿಸ್ಟೆಂಟ್ ಕಮಿಷನರರ ಕಛೇರಿಯಿದ್ದು ಅವರಿಗೂ ವಿಷಯ ತಿಳಿದು ನನಗೆ ಕರೆಕಳುಹಿಸಿದರು. ಉಪವಿಭಾಗಾಧಿಕಾರಿ ಶ್ರೀ ಅಷ್ಟಮೂರ್ತಿಯವರು ನನ್ನನ್ನು ಉದ್ದೇಶಿಸಿ "ಅಯ್ಯೋ ಮುಠ್ಠಾಳ, ನಿನಗೇನಾದರೂ ತಲೆ ಕೆಟ್ಟಿದೆಯಾ?  ತಹಸೀಲ್ದಾರರಿಗೆ ಹೊಡೆದಿದ್ದರೆ ಮತ್ತೆ ಜೈಲಿಗೆ ಹೋಗುತ್ತಿದ್ದೆಯಲ್ಲೋ! ನಿನಗೇನಾದರೂ ತೊಂದರೆಯಾದರೆ ನನಗೆ ಬಂದು ಹೇಳು, ದುಡುಕಬೇಡ" ಎಂದು ಬುದ್ಧಿ ಹೇಳಿ ಕಳಿಸಿದರು. ತಹಸೀಲ್ದಾರರನ್ನೂ ಕರೆಯಿಸಿ ಅವರಿಗೆ ಪ್ರತ್ಯೇಕವಾಗಿ ಕಿವಿಮಾತು ಹೇಳಿದ್ದರು.

     ಮೇಲೆ ತಿಳಿಸಿದ ಘಟನೆ ನಡೆದ ಕೆಲವು ದಿನಗಳಲ್ಲೇ ತಹಸೀಲ್ದಾರರಿಗೆ ಬೇರೆ ಸ್ಥಳಕ್ಕೆ ವರ್ಗವಾಯಿತು. ಅವರು ಮನೆಯ ಸಾಮಾನುಗಳನ್ನು ಒಂದು ಲಾರಿಯಲ್ಲಿ ತುಂಬಿಸಿ ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಆ ಮಾರ್ಗವಾಗಿ ವಾಕಿಂಗ್ ಹೋಗುತ್ತಿದ್ದವನು ಹಾಗೆಯೇ ಸುಮ್ಮನೆ ಗಮನಿಸಿದಾಗಿ ಕೆಲವು ಕಛೇರಿಯ ಪೀಠೋಪಕರಣಗಳನ್ನು ಸಹ ಲಾರಿಯಲ್ಲಿ ಇಟ್ಟಿದ್ದುದನ್ನು ನೋಡಿದೆ. ನಾನು ಇದನ್ನು ಆಕ್ಷೇಪಿಸಿದಾಗ ತಹಸೀಲ್ದಾರರು ಮರುಮಾತಾಡದೆ ಅವನ್ನು ಕೆಳಗಿಳಿಸಿ ಕಛೇರಿಗೆ ಕಳಿಸಿಕೊಟ್ಟರು. ನಂತರ ಶ್ರೀ ಬಿ.ವಿ. ಸ್ವಾಮಿ ಎಂಬುವವರು ತಹಸೀಲ್ದಾರರಾಗಿ ಬಂದರು. ಅವರು ಆ ಸ್ಥಾನಕ್ಕೆ ಬರುವ ಮುನ್ನ ಗುಲ್ಬರ್ಗ ವಿಭಾಗಾಧಿಕಾರಿಯವರ ಆಪ್ತ ಸಹಾಯಕರಾಗಿದ್ದು ಬಡ್ತಿ ಹೊಂದಿ ಬಂದವರಾಗಿದ್ದರು. ಅವರು ಲಂಚ ತೆಗೆದುಕೊಳ್ಳುವವರಾಗಿರಲಿಲ್ಲ. ಹೀಗಾಗಿ ಅವರಿಗೂ ನನಗೂ ಹೊಂದಾಣಿಕೆಯಾಗುತ್ತಿತ್ತು. ಅವರೂ ನನ್ನನ್ನು ಸ್ನೇಹಿತನಂತೇ ಕಾಣುತ್ತಿದ್ದರು. ಸಾಯಂಕಾಲದ ಹೊತ್ತು ವಾಕಿಂಗ್ ಹೋಗುವಾಗ ನನ್ನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಬರುತ್ತಿದ್ದರು. ಅವರ ನಡವಳಿಕೆಯಿಂದ ನನಗೂ ಕೆಲಸ ಮಾಡಲು ಉತ್ಸಾಹ ಬರುತ್ತಿತ್ತು. ಒಮ್ಮೆ ಗುಲ್ಬರ್ಗದ ಅವರ ಮನೆಗೂ ನನ್ನನ್ನು ಕರೆದುಕೊಂಡು ಹೋಗಿ ಊಟ ಹಾಕಿಸಿದ್ದರು. (ಅವರು ನಿವೃತ್ತರಾಗಿ ಬಹಳ ವರ್ಷಗಳೇ ಆಗಿದ್ದು ನಿವೃತ್ತಿ ನಂತರದಲ್ಲಿ ಹಾಸನದಲ್ಲಿ ನೆಲೆಸಿದ್ದರು. ಹೆಂಡತಿ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿದ್ದು ಮಗ ದೂರದಲ್ಲೆಲ್ಲೋ ಕೆಲಸದಲ್ಲಿದ್ದು ಅವರು ಒಂಟಿಯಾಗಿದ್ದರು.) ಅವರ ಜೊತೆ ಕೆಲವು ತಿಂಗಳುಗಳಷ್ಟೇ ಕೆಲಸ ಮಾಡಿದ್ದರೂ ಅವರು ನನ್ನನ್ನು ಮರೆತಿರಲಿಲ್ಲ. ಕಂಡಾಗಲೆಲ್ಲಾ ಆಡಳಿತದಲ್ಲಿನ ಅವ್ಯವಸ್ಥೆ, ಹೊಲಸು ರಾಜಕೀಯದ ಬಗ್ಗೆ ಕಳವಳಿಸುತ್ತಿದ್ದರು. ನನ್ನ ಕೆಲಸದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದಷ್ಟೇ ಅಲ್ಲದೆ ಎಷ್ಟೇ ಕಷ್ಟವಾದರೂ ಅದೇ ರೀತಿ ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಅವರ ಭೇಟಿಯಾಗಿಲ್ಲ, ಅವರು ಎಲ್ಲಿದ್ದಾರೋ ತಿಳಿದಿಲ್ಲ. ಎಲ್ಲಾದರೂ ಇರಲಿ, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ.

ಮಂಗಳವಾರ, ಅಕ್ಟೋಬರ್ 26, 2010

ಸೇವಾಪುರಾಣ20: ಗುಲ್ಬರ್ಗ ತೋರಿಸಿದರು-5 : 20 ಅಂಶಗಳ ಕಾರ್ಯಕ್ರಮಗಳ ಭರಾಟೆ

ಅಮಲ್ದಾರರ ಇಂಗ್ಲಿಷ್!
     ಸೇಡಂನ ತಹಸೀಲ್ದಾರರು ಎಸ್ಸೆಸ್ಸೆಲ್ಸಿ ಸಹ ತೇರ್ಗಡೆಯಾಗಿರಲಿಲ್ಲ. ಹೈದರಾಬಾದ್ ಕರ್ನಾಟಕದ ಪ್ರದೇಶ ಕರ್ನಾಟಕದೊಂದಿಗೆ ವಿಲೀನವಾದಾಗ ಅಲ್ಲಿನ ನೌಕರರ ಸೇವೆ ಸಹ ಕರ್ನಾಟಕ ಸರ್ಕಾರದ ಸೇವೆಯೊಂದಿಗೆ ವಿಲೀನಗೊಂಡಿತ್ತು. ಆ ಸಂದರ್ಭದಲ್ಲಿ ಹಲವು ನೌಕರರಿಗೆ ಅನುಕೂಲವಾಗಿ ಬಡ್ತಿಗಳೂ ಸಿಕ್ಕಿದ್ದವು. ನಮ್ಮ ತಹಸೀಲ್ದಾರರೂ ಸಹ ಆ ರೀತಿ ಬಡ್ತಿ ಪಡೆದವರಾಗಿದ್ದರು. ತಹಸೀಲ್ದಾರರಾದ ಮೇಲೆ ಇಂಗ್ಲಿಷಿನಲ್ಲಿ ಮಾತನಾಡಲು, ಬರೆಯಲು ಪ್ರಯತ್ನಿಸುತ್ತಿದ್ದರು. ಆಗ ಕಛೇರಿಯ ವ್ಯವಹಾರಗಳು ಇಂಗ್ಲಿಷಿನಲ್ಲಿಯೂ ನಡೆಯುತ್ತಿತ್ತು. ಈಗಿನಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗದೇ ಇದ್ದುದೂ ಸಹ ಇದಕ್ಕೆ ಕಾರಣವಾಗಿತ್ತು. ಅವರು ಅಭಾಸಕರವಾಗಿ ಇಂಗ್ಲಿಷ್ ಬಳಸುತ್ತಿದ್ದುದನ್ನು ಕಂಡು ಇತರರು ಒಳಗೊಳಗೇ ನಗುತ್ತಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಅವರು ತಾವು ಚೆನ್ನಾಗಿಯೇ ಇಂಗ್ಲಿಷ್ ಮಾತನಾಡುತ್ತಿದ್ದೇನೆಂದು ಭಾವಿಸಿದ್ದರು. 'After coming to Sedam, I improved English' ಎಂದು ಆಗಾಗ್ಯೆ ಹೆಮ್ಮೆಯಿಂದ ಹೇಳುತ್ತಿದ್ದರು.

20 ಅಂಶಗಳ ಕಾರ್ಯಕ್ರಮಗಳ ಭರಾಟೆ
     ಇಂದಿರಾಗಾಂಧಿಯವರ 20 ಅಂಶಗಳ ಕಾರ್ಯಕ್ರಮದ ಪ್ರಚಾರದ ಭರಾಟೆ ಆಗ ಉತ್ತುಂಗ ಸ್ಥಿತಿಯಲ್ಲಿತ್ತು. ಇಂದಿರಾಗಾಂಧಿಯವರು ಬಡವರ ಬಂಧು ಎಂದು ತೋರಿಸಲು ಮತ್ತು ತುರ್ತು ಪರಿಸ್ಥಿತಿ ದೌರ್ಜನ್ಯಗಳನ್ನು ಮರೆಮಾಚಲು ಇದನ್ನು ಅಸ್ತ್ರವಾಗಿ  ಬಳಸುತ್ತಿದ್ದರು. ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಭಾಗವಹಿಸಿದ ಒಂದು ಬೃಹತ್ ಸಭೆ ಗುಲ್ಬರ್ಗದಲ್ಲಿಯೂ ಜನವರಿ, 1977ರಲ್ಲಿ ಏರ್ಪಾಡಾಗಿತ್ತು. ಎಲ್ಲಾ ತಾಲ್ಲೂಕುಗಳಿಂದಲೂ ಜನರನ್ನು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಲಾರಿಗಳಲ್ಲಿ ಕರೆತರಲು ಸೂಚನೆ ಕೊಟ್ಟಿದ್ದರು. ನನಗೆ ಸೇಡಂನಿಂದ 6 ಲಾರಿಗಳಲ್ಲಿ ಜನರನ್ನು ಮತ್ತು ಫಲಾನುಭವಿಗಳನ್ನು ಕರೆದೊಯ್ಯಲು ತಹಸೀಲ್ದಾರರು ಆದೇಶಿಸಿದ್ದರು. ನನಗೆ ಆಗುವುದಿಲ್ಲವೆಂದೂ ಫಲಾನುಭವಿಗಳಾದ 10 ಜನರನ್ನು ಮಾತ್ರ ಕರೆದೊಯ್ಯುವುದಾಗಿ ತಿಳಿಸಿದೆ. ತಹಸೀಲ್ದಾರರೇ ಇತರ ಸಿಬ್ಬಂದಿ ನೆರವಿನಿಂದ 3 ಲಾರಿಗಳನ್ನು ಕಳಿಸಲು ಏರ್ಪಾಡು ಮಾಡಿದರು. ನಾನೂ ಅಂತಹ ಒಂದು ಲಾರಿಯಲ್ಲಿ 10 ಫಲಾನುಭವಿಗಳೊಂದಿಗೆ ಗುಲ್ಬರ್ಗಕ್ಕೆ ಹೋಗಿದ್ದೆ. ಲಾರಿಗಳಲ್ಲಿ ಸಭೆ, ಸಮಾರಂಭಗಳಿಗೆ ಜನರನ್ನು ಆಯೋಜಕರು ಮತ್ತು ಅವರ ಪರ ಕೆಲಸ ಮಾಡುವವರು ಕರೆದೊಯ್ಯುವ ಪರಿಪಾಠ ಪ್ರಾರಂಭವಾಗಿದ್ದು ಆಕಾಲದಲ್ಲಿಯೇ. ಈಗ ಅದು ಅನಿವಾರ್ಯವಾಗಿದೆ ಮತ್ತು ಬೃಹತ್ತಾಗಿ ಬೆಳೆದಿದೆ.

ತಂಗಿಯ ಮದುವೆಗೆ ರಜ ಕೊಡಲಿಲ್ಲ
     ನಾನು ಸೇಡಂಗೆ ಹೋಗಿ ಕೆಲವು ತಿಂಗಳುಗಳಾಗಿದ್ದವು. ಹಾಸನದ ಶ್ರೀ ಶಂಕರಮಠದಲ್ಲಿ ದಿನಾಂಕ 06-02-1977ರಲ್ಲಿ ನನ್ನ ತಂಗಿಯ ಮದುವೆಗೆ ಏರ್ಪಾಡಾಗಿತ್ತು. ಹಿರಿಯ ಮಗನಾಗಿ ಮದುವೆ ಕೆಲಸಕಾರ್ಯಗಳಿಗಾಗಿ ಓಡಾಡಬೇಕಾಗಿದ್ದು ನನ್ನ ಕರ್ತವ್ಯವಾಗಿತ್ತು. ಅದಕ್ಕಾಗಿ 15 ದಿನಗಳ ರಜೆ ಕೋರಿದರೆ ತಹಸೀಲ್ದಾರರು ವಿನಾಕಾರಣ ನನ್ನ ಮನವಿ ತಿರಸ್ಕರಿಸಿದರು. ನಾನು ಗುಲ್ಬರ್ಗಕ್ಕೆ ಲಾರಿಯಲ್ಲಿ ಜನರನ್ನು ಕರೆದೊಯ್ಯಲು ಸಹಕರಿಸದಿದ್ದುದಕ್ಕೆ ಅವರಿಗೆ ನನ್ನ ಮೇಲೆ ಸಿಟ್ಟು ಬಂದಿದ್ದಿರಬಹದು.  ನಾನು ಯಾವುದೇ ಬಾಕಿ ಕೆಲಸಗಳನ್ನು ಉಳಿಸಿಕೊಂಡಿರಲಿಲ್ಲ. ತುರ್ತು ಕೆಲಸಗಳೂ ಇರಲಿಲ್ಲ. ಮರುದಿನ 14 ದಿನಗಳ ರಜೆ ಅರ್ಜಿ ಸಲ್ಲಿಸಿದರೆ ಅದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಖುದ್ದು ಮನವಿಗೂ ಬೆಲೆ ಕೊಡಲಿಲ್ಲ. ನಂತರದಲ್ಲಿ 13,12,10, 9,8,7,6 ದಿನಗಳಿಗೆ ರಜೆ ಕೋರಿ ಸಲ್ಲಿಸಿದ ರಜೆ ಅರ್ಜಿಗಳಿಗೂ ಅದೇ ಗತಿಯಾಯಿತು. ನನ್ನ ಹಾಸನದ ಆರೆಸ್ಸೆಸ್ ಮಿತ್ರರಿಗೆ ವಿಷಯ ತಿಳಿದು ಅವರುಗಳು ನನ್ನ ತಂದೆಯವರನ್ನು ಕಂಡು ತಾವು ಯಾವುದೇ ಕೆಲಸ ಮಾಡಲು ಸಿದ್ಧವಿರುವುದಾಗಿಯೂ ತಮ್ಮ ಸಹಾಯ ಪಡೆಯಬಹುದೆಂದೂ ಹೇಳಿದ್ದರು. ನನ್ನ ತಂದೆ ಅವರ ಸಹಾಯ ಪಡೆಯಲು ಇಷ್ಟಪಡಲಿಲ್ಲ. ತುರ್ತುಪರಿಸ್ಥಿತಿ ಇನ್ನೂ ಜಾರಿಯಲ್ಲಿದ್ದುದು ಕಾರಣವಿರಬಹುದು. ನನಗೆ ಅತ್ಯಂತ ಬೇಸರವಾಗಿತ್ತು. ಸೇಡಂನಿಂದ ಹಾಸನಕ್ಕೆ ಹೋಗಲು 2 ದಿನ, ಬರಲು 2ದಿನ ಬೇಕಿದ್ದು 5 ದಿನಗಳು ಸಾಂದರ್ಭಿಕ ರಜೆ ಹಾಕಿ ಹೊರಟುಬಿಟ್ಟೆ. ತಂಗಿಯ ಮದುವೆಗೆ ನೆಂಟನ ಹಾಗೆ ಬಂದು ಹೋಗಬೇಕಾಗಿ ಬಂದದ್ದಕ್ಕೆ ನನಗೆ ನನ್ನ ಮೇಲೇ ಜಿಗುಪ್ಸೆಯಾಗಿತ್ತು. ಅಲ್ಲಿಗೆ ಬಂದಾಗಲೂ ಮಫ್ತಿ ಪೋಲಿಸರ ಕಾಟ ತಪ್ಪಲಿಲ್ಲ. ಕಣ್ಣಿಗೆ ಕಂಡ ಇಬ್ಬರು ಮಫ್ತಿ ಪೋಲಿಸರಿಗೆ ಸಮಯಾಸಮಯದ ಅರಿವಿಲ್ಲದೆ ಬಂದ ಅವರ ನಡವಳಿಕೆ ಬಗ್ಗೆ ಚೆನ್ನಾಗಿ ಛೀಮಾರಿ ಹಾಕಿ ಊಟ ಮಾಡಿಕೊಂಡು ಹೋಗುವಂತೆ ತಿಳಿಸಿದ್ದೆ. 'ತಪ್ಪು ತಿಳಿಯಬಾರದೆಂದೂ, ಮದುವೆಗೆ ಬರಬಹುದಾದ ಆರೆಸ್ಸೆಸ್ ನಾಯಕರನ್ನು ಗಮನಿಸುವ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಬಂದಿದ್ದಾಗಿಯೂ' ಬೇಸರ ಮಾಡಿಕೊಳ್ಳಬಾರದೆಂದೂ ಅವರು ತಿಳಿಸಿದ್ದರು.

ಜಿಲ್ಲಾಧಿಕಾರಿಯವರ ಮಾನವೀಯತೆ
     ರಜೆ ಮುಗಿಸಿ ವಾಪಸು ಬಂದರೆ ಜಿಲ್ಲಾಧಿಕಾರಿಯವರ ಕಾರಣ ಕೇಳುವ ನೋಟೀಸು ನನಗಾಗಿ ಕಾಯುತ್ತಿತ್ತು. ತಹಸೀಲ್ದಾರರು ನಾನು ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿದ್ದೆನೆಂದು ಜಿಲ್ಲಾಧಿಕಾರಿಯವರಿಗೆ ಅರೆಸರ್ಕಾರಿ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿಯವರನ್ನು ಖುದ್ದಾಗಿ ಕಂಡು ವಿವರಣೆ ಕೊಡಬಯಸಿ ಅದಕ್ಕಾಗಿ ಅನುಮತಿಸಲು ಲಿಖಿತ ಮನವಿ ನೀಡಿದುದನ್ನೂ ತಹಸೀಲ್ದಾರರು ತಿರಸ್ಕರಿಸಿದರು. ಅಂತಹ ಸಮಯದಲ್ಲೂ ತಹಸೀಲ್ದಾರರು ನನ್ನ ರಜಾ ಅರ್ಜಿಗಳ ಮೇಲೆ ಇಂಗ್ಲಿಷಿನಲ್ಲಿ ಬರೆದಿದ್ದ ಷರಾಗಳನ್ನು ಕಂಡು ನಗು ಬರುತ್ತಿತ್ತು. ನಾನು 5 ದಿನಗಳ ಸಾಂದರ್ಭಿಕ ರಜೆ ಕೋರಿದ್ದ ಅರ್ಜಿ ಮೇಲೆ 'Put up the applicant. Where is he? Who is give permission to left the headqarters? Report D.C. Direct d.o.letter' ಎಂದು ಬರೆದಿದ್ದರು. ನಾನು ತಹಸೀಲ್ದಾರರು ತಿರಸ್ಕರಿಸಿದ್ದ ರಜೆ ಅರ್ಜಿಗಳನ್ನೆಲ್ಲವನ್ನೂ ತೆಗೆದುಕೊಂಡು ಜಿಲ್ಲಾಧಿಕಾರಿಯವರನ್ನು ಕಾಣಲು ಗುಲ್ಬರ್ಗಕ್ಕೆ ಮರುದಿನ ಹೊರಟೆ. ಅಂದು ಬೆಳಿಗ್ಗೆ ಜಿಲ್ಲಾಧಿಕಾರಿಯವರು ಕಛೇರಿಯಲ್ಲಿದ್ದರೂ ನನಗೆ ಭೇಟಿ ಮಾಡಲು ಅವಕಾಶ ಕೊಡಲಿಲ್ಲ. ನಾನು ಅಲ್ಲೇ ಕಾದಿದ್ದು ಮಧ್ಯಾಹ್ನ ಅವರ ಛೇಂಬರಿನ ಬಾಗಿಲಿನ ಬಳಿ ದಫೇದಾರ ಇಲ್ಲದ ಸಮಯ ಸಾಧಿಸಿ ಒಳಗೆ ಹೋಗಿ ಜಿಲ್ಲಾಧಿಕಾರಿಯವರಿಗೆ ನಮಸ್ಕರಿಸಿದೆ. ಆಗ ಮುನಿಸ್ವಾಮಿ ಎಂಬುವವರು ಜಿಲ್ಲಾಧಿಕಾರಿಯಾಗಿದ್ದರು. (ನಂತರದ ದಿನಗಳಲ್ಲಿ ಅವರು ಮೈಸೂರು ವಿಭಾಗಾಧಿಕಾರಿಯವರೂ ಆಗಿದ್ದರು. ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡು ಇಹಯಾತ್ರೆ ಮುಗಿಸಿದರು.) ಅವರು ನನ್ನನ್ನು ದುರುಗುಟ್ಟಿ ನೋಡಿದರು. ಕಾರಣ ಕೇಳಿದ ನೋಟೀಸಿಗೆ ಉತ್ತರ ಕೊಡಲು ಬಂದಿದ್ದೇನೆಂದು ಹೇಳಿದ್ದಕ್ಕೆ 'ಗೆಟ್ ಔಟ್' ಎಂದರು. ನಾನು ಪಟ್ಟು ಬಿಡದೆ ಕೇವಲ ಐದು ನಿಮಿಷಗಳ ಕಾಲಾವಕಾಶ ಕೋರಿದೆ. ಎಲ್ಲಾ ವಿಷಯ ವಿವರಿಸಿದೆ. ತಹಸೀಲ್ದಾರರು ತಿರಸ್ಕರಿಸಿದ್ದ ಎಲ್ಲಾ ರಜೆ ಅರ್ಜಿಗಳನ್ನೂ ಅವರ ಮುಂದಿಟ್ಟೆ. ತಂಗಿಯ ಮದುವೆಗೆ ಓಡಾಡಲಾರದ ನನ್ನ ಅಸಹಾಯಕತೆ ಹೇಳಿಕೊಳ್ಳುವಾಗ ಗಂಟಲುಬ್ಬಿ ಕಣ್ಣಂಚಿನಲ್ಲಿ ನೀರು ತುಳುಕಿತ್ತು. ವಿಷಯ ಅರ್ಥವಾದ ಜಿಲ್ಲಾಧಿಕಾರಿಯವರು ತಮ್ಮ ಕುರ್ಚಿಯಿಂದ ಎದ್ದುಬಂದು ನನ್ನನ್ನು ಬಲವಂತವಾಗಿ ಕುಳ್ಳಿರಿಸಿದರು. ಹೃದಯಪೂರ್ವಕವಾಗಿ ನನಗಾದ ತೊಂದರೆ ಬಗ್ಗೆ ನನ್ನ ಕ್ಷಮೆ ಕೇಳಿ ದೊಡ್ಡತನ ದರು. ದಫೇದಾರರನ್ನು ಕರೆದು ಚಹಾ ತರಿಸಿ ನನಗೆ ಕುಡಿಯುವಂತೆ ಕೋರಿದರು. ಆಪ್ತ ಸಹಾಯಕರನ್ನು ಕರೆಸಿ 'ಇದು ವಿನಾಕಾರಣ ತೊಂದರೆ ನೀಡಿದ ಸ್ಪಷ್ಟ ಪ್ರಕರಣವಾಗಿದ್ದು, ತಹಸೀಲ್ದಾರರ ವರ್ತನೆಗಾಗಿ ಅವರಿಗೆ ಎಚ್ಚರಿಕೆ' ನೀಡುವ ಬಗ್ಗೆ ಒಂದು ಪತ್ರವನ್ನು ಉಕ್ತಲೇಖನ ನೀಡಿದರು. ಪತ್ರ ಸಿದ್ಧವಾಗುವವರೆಗೆ ನನ್ನನ್ನು ಅಲ್ಲೇ ಕುಳ್ಳಿರಿಸಿ ನಂತರ ತಹಸೀಲ್ದಾರರಿಗೆ ಕೊಡಬೇಕಾದ ಪತ್ರದ ಪ್ರತಿಯನ್ನು ನನ್ನ ಕೈಲೇ ಕೊಟ್ಟು ಕಳಿಸಿದರು. ಪತ್ರದ ಪ್ರತಿಯನ್ನು ಜಿಲ್ಲೆಯ ಎಲ್ಲಾ ಕಂದಾಯಾಧಿಕಾರಿಗಳಿಗೂ ಮಾಹಿತಿಗಾಗಿ ಕಳಿಸಿದ್ದರು. ಅವರಿಗೆ ವಂದಿಸಿ ಹೊರಬಂದೆ.
(ಕಾಲಘಟ್ಟ: 1977).                                                                                 ..ಮುಂದುವರೆಯುವುದು.

ಬುಧವಾರ, ಅಕ್ಟೋಬರ್ 20, 2010

ಮೊರೆ

     'ವೇದುಸುಧೆ' ಅಂತರ್ಜಾಲ ತಾಣದ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನನ್ನ ಈ ರಚನೆಯನ್ನು ಶ್ರೀಮತಿ ಲಲಿತಾ ರಮೇಶರವರು ಸುಶ್ರಾವ್ಯವಾಗಿ ಹಾಡಿದ್ದರು. ನೀವೂ ಕೇಳಿ:ಸರಿಸಿಬಿಡು ಮೂಢಮನ ಆವರಿತ ಪೊರೆಯಾ
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು|
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ |
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ|
ಹುಲುಮನುಜ ನಾನಾಗಿ ಭಾವಬಂಧಿಯು ನಾನು
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.
http://vimeo.com/19814385

ಮೂಢ ಉವಾಚ -20: ಮತ್ಸರ


ಕೋಪಿಷ್ಠರೊಡನೆ ಬಡಿದಾಡಬಹುದು|
ಅಸಹನೀಯವದು ಮತ್ಸರಿಗರ ಪ್ರೇಮ||
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು|
ಉದರದುರಿಯನಾರಿಸುವವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ|*
ಕಂಡವರನು ಸುಡುವನೆ ಅಸೂಯಾಪರ||
ಶತಪಾಲು ಲೇಸು ಮಂಕರೊಡನೆ ಮೌನ|
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು|
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು||
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು|
ನರರ ಕುಬ್ಜರಾಗಿಸುವುದು ಮೂಢ||

[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕವಿನಾಗರಾಜ್.