ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 2, 2010

ಸೇವಾಪುರಾಣ21: ಗುಲ್ಬರ್ಗ ತೋರಿಸಿದರು-6: ಭುಗಿಲೆದ್ದ ಸಿಟ್ಟು

ಭುಗಿಲೆದ್ದ ಸಿಟ್ಟು
     ನನ್ನ ತಂಗಿಯ ಮದುವೆಗೆ ತಹಸೀಲ್ದಾರರು ರಜೆ ಕೊಡದೆ ಸತಾಯಿಸಿದ್ದ ಮತ್ತು ಜಿಲ್ಲಾಧಿಕಾರಿಯವರ ಮಾನವೀಯತೆ ಕುರಿತು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದೆ. ಈ ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ ತಹಸೀಲ್ದಾರರು ನನ್ನನ್ನು ಛೇಂಬರಿಗೆ ಕರೆಸಿ 4-5 ನಮೂನೆ ಲಗ್ನಪತ್ರಿಕೆಗಳನ್ನು ತೋರಿಸಿ ಯಾವುದು ಚೆನ್ನಾಗಿದೆ ಎಂದು ಆರಿಸಲು ಹೇಳಿದರು. ನಾನು ಒಂದನ್ನು ಆರಿಸಿದೆ. ಬಹುಷಃ ಅವರಿಗೂ ಅದೇ ಚೆನ್ನಾಗಿದೆ ಅನ್ನಿಸಿದ್ದಿರಬಹುದು. ತಮ್ಮ ಮಗಳ ಲಗ್ನ ಪತ್ರಿಕೆಯ ಕರಡನ್ನು ಕೊಟ್ಟು ಆರಿಸಿದ ಮಾದರಿಯಲ್ಲಿ 500 ಲಗ್ನಪತ್ರಿಕೆಗಳನ್ನು ಮುದ್ರಿಸಿಕೊಂಡು ತರಲು ನನಗೆ ತಿಳಿಸಿದರು. ನನ್ನ ತಂಗಿಯ ಮದುವೆಗೆ ರಜೆ ಕೊಡದಿದ್ದ ಅವರು ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಗಳನ್ನು ಮುದ್ರಿಸಿ ತರಲು ನನಗೆ ಹೇಳಿದ್ದು ನನ್ನಲ್ಲಿ ಅದುಮಿಟ್ಟಿದ್ದ ಸಿಟ್ಟು ಭುಗಿಲೇಳಲು ಕಾರಣವಾಯಿತು. ಅವರ ಮೇಜಿನ ಮೇಲೆ ಇದ್ದ ತ್ರಿಭುಜಾಕೃತಿಯ ಮರದ ಅವರ ನಾಮಫಲಕವನ್ನು ತೆಗೆದುಕೊಂಡು ಅವರಿಗೆ ಬಾರಿಸಲು ಮೇಲೆತ್ತಿದೆ. ಅದೇ ಸಮಯಕ್ಕೆ ಛೇಂಬರಿನ ಒಳಗೆ ಬಂದಿದ್ದ ಸಹೋದ್ಯೋಗಿಯೊಬ್ಬರು ಹಿಂದಿನಿಂದ ಕೂಡಲೇ ಆ ನಾಮಫಲಕವನ್ನು ಹಿಡಿದುಕೊಳ್ಳದೇ ಹೋಗಿದ್ದರೆ ತಹಸೀಲ್ದಾರರಿಗೆ ಬಲವಾದ ಪೆಟ್ಟೇ ಬಿದ್ದಿರುತ್ತಿತ್ತು. ನಾನು ಸಿಟ್ಟಿನಿಂದ ಬುಸುಗುಡುತ್ತಾ ತಹಸೀಲ್ದಾರರಿಗೆ ಬಯ್ಯುತ್ತಿದ್ದೆ. ಗದ್ದಲ ಕೇಳಿ ಉಳಿದ ಸಿಬ್ಬಂದಿ ಮತ್ತು ಜನರು ಗುಂಪುಕೂಡಿದರು. ಅಜಾನುಬಾಹು ತಹಸೀಲ್ದಾರರು ದಿಗ್ಭ್ರಮೆ ಮತ್ತು ಗಾಬರಿಯಿಂದ ಕುರ್ಚಿಯಲ್ಲಿ ಕುಸಿದು ಕುಳಿತು ನೋಡುತ್ತಿದ್ದರು. ನಮ್ಮ ಕಛೇರಿಯ ಎದುರಿಗೇ ಅಸಿಸ್ಟೆಂಟ್ ಕಮಿಷನರರ ಕಛೇರಿಯಿದ್ದು ಅವರಿಗೂ ವಿಷಯ ತಿಳಿದು ನನಗೆ ಕರೆಕಳುಹಿಸಿದರು. ಉಪವಿಭಾಗಾಧಿಕಾರಿ ಶ್ರೀ ಅಷ್ಟಮೂರ್ತಿಯವರು ನನ್ನನ್ನು ಉದ್ದೇಶಿಸಿ "ಅಯ್ಯೋ ಮುಠ್ಠಾಳ, ನಿನಗೇನಾದರೂ ತಲೆ ಕೆಟ್ಟಿದೆಯಾ?  ತಹಸೀಲ್ದಾರರಿಗೆ ಹೊಡೆದಿದ್ದರೆ ಮತ್ತೆ ಜೈಲಿಗೆ ಹೋಗುತ್ತಿದ್ದೆಯಲ್ಲೋ! ನಿನಗೇನಾದರೂ ತೊಂದರೆಯಾದರೆ ನನಗೆ ಬಂದು ಹೇಳು, ದುಡುಕಬೇಡ" ಎಂದು ಬುದ್ಧಿ ಹೇಳಿ ಕಳಿಸಿದರು. ತಹಸೀಲ್ದಾರರನ್ನೂ ಕರೆಯಿಸಿ ಅವರಿಗೆ ಪ್ರತ್ಯೇಕವಾಗಿ ಕಿವಿಮಾತು ಹೇಳಿದ್ದರು.

     ಮೇಲೆ ತಿಳಿಸಿದ ಘಟನೆ ನಡೆದ ಕೆಲವು ದಿನಗಳಲ್ಲೇ ತಹಸೀಲ್ದಾರರಿಗೆ ಬೇರೆ ಸ್ಥಳಕ್ಕೆ ವರ್ಗವಾಯಿತು. ಅವರು ಮನೆಯ ಸಾಮಾನುಗಳನ್ನು ಒಂದು ಲಾರಿಯಲ್ಲಿ ತುಂಬಿಸಿ ಸಾಗಿಸಲು ವ್ಯವಸ್ಥೆ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಆ ಮಾರ್ಗವಾಗಿ ವಾಕಿಂಗ್ ಹೋಗುತ್ತಿದ್ದವನು ಹಾಗೆಯೇ ಸುಮ್ಮನೆ ಗಮನಿಸಿದಾಗಿ ಕೆಲವು ಕಛೇರಿಯ ಪೀಠೋಪಕರಣಗಳನ್ನು ಸಹ ಲಾರಿಯಲ್ಲಿ ಇಟ್ಟಿದ್ದುದನ್ನು ನೋಡಿದೆ. ನಾನು ಇದನ್ನು ಆಕ್ಷೇಪಿಸಿದಾಗ ತಹಸೀಲ್ದಾರರು ಮರುಮಾತಾಡದೆ ಅವನ್ನು ಕೆಳಗಿಳಿಸಿ ಕಛೇರಿಗೆ ಕಳಿಸಿಕೊಟ್ಟರು. ನಂತರ ಶ್ರೀ ಬಿ.ವಿ. ಸ್ವಾಮಿ ಎಂಬುವವರು ತಹಸೀಲ್ದಾರರಾಗಿ ಬಂದರು. ಅವರು ಆ ಸ್ಥಾನಕ್ಕೆ ಬರುವ ಮುನ್ನ ಗುಲ್ಬರ್ಗ ವಿಭಾಗಾಧಿಕಾರಿಯವರ ಆಪ್ತ ಸಹಾಯಕರಾಗಿದ್ದು ಬಡ್ತಿ ಹೊಂದಿ ಬಂದವರಾಗಿದ್ದರು. ಅವರು ಲಂಚ ತೆಗೆದುಕೊಳ್ಳುವವರಾಗಿರಲಿಲ್ಲ. ಹೀಗಾಗಿ ಅವರಿಗೂ ನನಗೂ ಹೊಂದಾಣಿಕೆಯಾಗುತ್ತಿತ್ತು. ಅವರೂ ನನ್ನನ್ನು ಸ್ನೇಹಿತನಂತೇ ಕಾಣುತ್ತಿದ್ದರು. ಸಾಯಂಕಾಲದ ಹೊತ್ತು ವಾಕಿಂಗ್ ಹೋಗುವಾಗ ನನ್ನ ಜೊತೆ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಬರುತ್ತಿದ್ದರು. ಅವರ ನಡವಳಿಕೆಯಿಂದ ನನಗೂ ಕೆಲಸ ಮಾಡಲು ಉತ್ಸಾಹ ಬರುತ್ತಿತ್ತು. ಒಮ್ಮೆ ಗುಲ್ಬರ್ಗದ ಅವರ ಮನೆಗೂ ನನ್ನನ್ನು ಕರೆದುಕೊಂಡು ಹೋಗಿ ಊಟ ಹಾಕಿಸಿದ್ದರು. (ಅವರು ನಿವೃತ್ತರಾಗಿ ಬಹಳ ವರ್ಷಗಳೇ ಆಗಿದ್ದು ನಿವೃತ್ತಿ ನಂತರದಲ್ಲಿ ಹಾಸನದಲ್ಲಿ ನೆಲೆಸಿದ್ದರು. ಹೆಂಡತಿ ಚಿಕ್ಕ ವಯಸ್ಸಿನಲ್ಲೇ ತೀರಿಹೋಗಿದ್ದು ಮಗ ದೂರದಲ್ಲೆಲ್ಲೋ ಕೆಲಸದಲ್ಲಿದ್ದು ಅವರು ಒಂಟಿಯಾಗಿದ್ದರು.) ಅವರ ಜೊತೆ ಕೆಲವು ತಿಂಗಳುಗಳಷ್ಟೇ ಕೆಲಸ ಮಾಡಿದ್ದರೂ ಅವರು ನನ್ನನ್ನು ಮರೆತಿರಲಿಲ್ಲ. ಕಂಡಾಗಲೆಲ್ಲಾ ಆಡಳಿತದಲ್ಲಿನ ಅವ್ಯವಸ್ಥೆ, ಹೊಲಸು ರಾಜಕೀಯದ ಬಗ್ಗೆ ಕಳವಳಿಸುತ್ತಿದ್ದರು. ನನ್ನ ಕೆಲಸದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದಷ್ಟೇ ಅಲ್ಲದೆ ಎಷ್ಟೇ ಕಷ್ಟವಾದರೂ ಅದೇ ರೀತಿ ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಕಳೆದೆರಡು ವರ್ಷಗಳಿಂದ ಅವರ ಭೇಟಿಯಾಗಿಲ್ಲ, ಅವರು ಎಲ್ಲಿದ್ದಾರೋ ತಿಳಿದಿಲ್ಲ. ಎಲ್ಲಾದರೂ ಇರಲಿ, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ