ಅಭಿವೃದ್ಧಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ನನ್ನ ಮದುವೆ ಆಯಿತು. ಒಂದೆರಡು ವರ್ಷಗಳಲ್ಲಿ ನನಗೆ ಉಪತಹಸೀಲ್ದಾರನಾಗಿ ಬಡ್ತಿ ಸಿಕ್ಕಿ ಮೈಸೂರು ಭೂಸುಧಾರಣೆ ವಿಶೇಷ ತಹಸೀಲ್ದಾರರ ಕಛೇರಿಗೆ ವರ್ಗಾವಣೆ ಆಯಿತು. ಮೈಸೂರಿನಲ್ಲಿ ಮನೆ ಬಾಡಿಗೆಗೆ ಹಣ ಜಾಸ್ತಿಯೆಂಬ ಕಾರಣದಿಂದ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಮನೆ ಬಾಡಿಗೆಗೆ ಹಿಡಿದು ಅಲ್ಲಿಂದ ಮೈಸೂರಿಗೆ ಓಡಾಡುತ್ತಿದ್ದೆ. ಮೈಸೂರಿನಲ್ಲಿ ಕೇವಲ ಎಂಟು ತಿಂಗಳು ಕೆಲಸ ಮಾಡಿದ್ದು, ವಿಶೇಷ ತಹಸೀಲ್ದಾರರ ಕಛೇರಿ ರದ್ದಾದ ಕಾರಣ ಅಲ್ಲಿಂದ ವರ್ಗಾವಣೆಯಾಗಿ ಹೊಳೆನರಸಿಪುರಕ್ಕೆ ಉಪತಹಸೀಲ್ದಾರನಾಗಿ ಬಂದೆ.
ಮುಳುವಾದ ಹಣದ ದಾಹ
ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಒಂದು ಘಟನೆ ನೆನಪಿನಲ್ಲಿದೆ. ತಾಲ್ಲೂಕು ಕಛೇರಿ ಮತ್ತು ವಿಶೇಷ ತಹಸೀಲ್ದಾರರ ಕಛೇರಿ ಒಂದೇ ಕಟ್ಟಡದಲ್ಲಿದ್ದವು. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.
(ಕಾಲಘಟ್ಟ: 1981, ಮೈಸೂರು).
ಶ್ರೀ ನಾಗರಾಜ್,
ಪ್ರತ್ಯುತ್ತರಅಳಿಸಿಒಂದೊಂದು ಘಟನೆಯೂ ಒಂದೊಂದು ಪಾಠಹೇಳುತ್ತವೆ.ಕೇಶವನಂತಹ ಅಧಿಕಾರಿಗಳು ಕಣ್ಮುಂದೆ ಹಲವರಿದ್ದಾರೆ. ಆದರೆ ಮುಂದಿನ ಪೀಳಿಗೆಗೆ ಅನುಕರಣೀಯವಾಗಿ ಕೆಲಸಮಾಡಿತೋರಿಸಿರುವ ನಿಮ್ಮ ಘಟನೆಗಳು ಮತ್ತು ಅಲ್ಲೊಬ್ಬ ಇಲ್ಲೊಬ್ಬ ನಿಮ್ಮಂತವರು ಮಾಡಿದರಬಹುದಾದ ಸತ್ಕಾರ್ಯಗಳಬಗ್ಗೆಯೂ ಬರೆಯಿರಿ.
ಪ್ರಯತ್ನಿಸುವೆ, ಶ್ರೀಧರ್.
ಪ್ರತ್ಯುತ್ತರಅಳಿಸಿ