ತುರ್ತು ಪರಿಸ್ಥಿತಿಯ ಕೊನೆಯ ದಿನಗಳು
ತುರ್ತು ಪರಿಸ್ಥಿತಿ ವಿರುದ್ಧದ ಪ್ರತಿಭಟನೆಯ ಕಾವು ಹೆಚ್ಚಾದಂತೆ ಕೇಂದ್ರ ಸರ್ಕಾರದ ನಾಯಕರು ತುರ್ತು ಪರಿಸ್ಥಿತಿ ಹಿಂತೆಗೆದುಕೊಂಡು ಲೋಕಸಭೆಗೆ ಚುನಾವಣೆ ಘೋಷಿಸಬೇಕಾಯಿತು. ಆರೆಸ್ಸೆಸ್ ಸೇರಿದಂತೆ ವಿವಿಧ ಸಂಘಟನೆಗಳ ವಿರುದ್ಧ ಹೇರಿದ್ದ ನಿಷೇಧ ರದ್ದಾಯಿತು. ಕಮ್ಯುನಿಷ್ಟರನ್ನು ಹೊರುಪಡಿಸಿ ಭಿನ್ನಮತೀಯ ಕಾಂಗ್ರಸ್ಸಿಗರೂ ಒಳಗೊಂಡಂತೆ ಎಲ್ಲಾ ಪ್ರಮುಖ ಪ್ರತಿಪಕ್ಷಗಳೂ ಒಗ್ಗೂಡಿ ಜನತಾಪಕ್ಷ ಎಂಬ ಹೊಸ ರಾಜಕೀಯ ಪಕ್ಷ ರಚಿಸಿಕೊಂಡು ಕಾಂಗ್ರೆಸ್ ವಿರುದ್ಧ ಚುನಾವಣೆಗೆ ಸಡ್ಡು ಹೊಡೆದವು. ಪ್ರಥಮ ಬಾರಿಗೆ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಪಡೆದು ಸ್ವಾತಂತ್ರ್ಯಾನಂತರದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಯಿತು. ಇಡೀ ಕರ್ನಾಟಕದಲ್ಲಿ ಜನತಾಪಕ್ಷದಿಂದ ಇಬ್ಬರು ಮಾತ್ರ ಆಯ್ಕೆಯಾಗಿದ್ದು, ಹಾಸನದಿಂದ ಎಸ್. ನಂಜೇಶಗೌಡ ಆಯ್ಕೆಯಾಗಿದ್ದರು. ಉಳಿದ ಎಲ್ಲಾ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗನಾಗಿರದಿದ್ದರೂ ಪರಿಸ್ಥಿತಿಯ ಕಾರಣದಿಂದ ಕಾಂಗ್ರೆಸ್ ಪಕ್ಷದ ಸೋಲನ್ನು ಬಯಸಿದ್ದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ, ಯಾರು ಅಭ್ಯರ್ಥಿ ಎಂಬುದೂ ಸಹ ಗೊತ್ತಿಲ್ಲದಿದ್ದ ನನ್ನ ತಾಯಿಯವರು ನಮ್ಮ ಮನೆಯ ಬೀದಿಯಲ್ಲಿದ್ದ ಎಲ್ಲಾ ಮನೆಗಳಿಗೆ ಅವರೊಬ್ಬರೇ ಹೋಗಿ 'ದಯವಿಟ್ಟು ಇಂದಿರಾಗಾಂಧಿಗೆ ಓಟು ಹಾಕಬೇಡಿ, ನನ್ನ ಮಗನಿಗೆ ತೊಂದರೆ ಕೊಟ್ಟಂತೆ ನಿಮ್ಮ ಮಕ್ಕಳಿಗೂ ತೊಂದರೆ ಕೊಡುತ್ತಾಳೆ' ಎಂದು ಕೈಮುಗಿದು ಕಣ್ಣೀರು ಹಾಕಿಕೊಂಡು ಹೇಳಿಬರುತ್ತಿದ್ದರು. ಹಾಸನದಿಂದ ಅಂಚೆ ಮತಪತ್ರ ತರಿಸಿಕೊಂಡು ನಾನೂ ನನ್ನ ಮತ ಚಲಾಯಿಸಿದ್ದೆ. ಸುಮಾರು 1000 ಮತಗಳ ಅಲ್ಪ ಬಹುಮತದಿಂದ ಹಾಸನದಲ್ಲಿ ಜನತಾಪಕ್ಷದ ಅಭ್ಯರ್ಥಿ ಜಯಗಳಿಸಿದ್ದು ನನಗೆ ಖುಷಿ ತಂದಿತ್ತು. ಅಂಚೆ ಮತಪ್ರಗಳೇ ಅವರಿಗೆ ಗೆಲುವು ತಂದಿತ್ತದ್ದು ವಿಶೇಷವಾಗಿತ್ತು.
ಚುನಾವಣೆ ಕೆಲಸ
ಚುನಾವಣೆ ಕಾರ್ಯದಲ್ಲಿ ಕಂದಾಯ ಇಲಾಖೆ ಹಿಂದಿನಿಂದಲೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಒಬ್ಬ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ನನಗೂ ಚುನಾವಣೆ ಸಂಬಂಧದ ಬಿಡುವಿಲ್ಲದ ಕೆಲಸವಿತ್ತು. ಚುನಾವಣೆಯ ಹಿಂದಿನ ದಿನ ಎಲ್ಲಾ ಮತಗಟ್ಟೆ ಸಿಬ್ಬಂದಿಗಳನ್ನು ಅಗತ್ಯದ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ಸಾಗಹಾಕುವ ವೇಳೆಗೆ ನಮಗೆ ಸಾಕೋಸಾಕಾಗಿತ್ತು. ಅಂದು ಮಧ್ಯಾಹ್ನ ಸುಮಾರು 4-30ರ ವೇಳೆಗೆ ಇಟ್ಕಲ್ ಗ್ರಾಮದ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಿದ್ದ ಒಬ್ಬರು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಮತಗಟ್ಟೆ ಮುಂದೆ ನಿಂತಿದ್ದ ಸಮಯದಲ್ಲಿ ಯಾರೋ ಅಪರಿಚಿತರು ಬಂದು ಚೂರಿ ಹಾಕಿ ಕೊಲೆ ಮಾಡಿದ ಸುದ್ದಿ ಬಂದಿತು. ಇಟ್ಕಲ್ ಎಂಬುದು ಆಂಧ್ರ ಗಡಿಯಲ್ಲಿ ಇದ್ದ ಒಂದು ಹಳ್ಳಿ. ಅವರ ಬದಲಿಗೆ ಪ್ರಿಸೈಡಿಂಗ್ ಅಧಿಕಾರಿಯಾಗಿ ಹೋಗಲು ಮೀಸಲು ಸಿಬ್ಬಂದಿಯವರು ಯಾರೂ ಸಿದ್ಧರಿರಲಿಲ್ಲ. ಆಗ ಅಸಿಸ್ಟೆಂಟ್ ಕಮಿಷನರರು ನನ್ನನ್ನು ಕರೆಸಿ ನಾನು ಅಲ್ಲಿಗೆ ಹೋಗಬೇಕೆಂದೂ ಏನೂ ಗಲಾಟೆಯಾಗದಂತೆ ಪೋಲಿಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ನಾನು ಒಪ್ಪಿ ಹೋದೆ. ಸುಗಮ ಚುನಾವಣೆಗಾಗಿ ಆ ಮತಗಟ್ಟೆಗೆ ಎಲ್ಲರೂ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಮತ್ತು ಬಲವಾದ ಪೋಲಿಸ್ ಬಂದೋಬಸ್ತು ಇದ್ದುದರಿಂದ ಶಾಂತಯುತವಾಗಿ ಮತದಾನವಾಗಿ ಆ ಮತಗಟ್ಟೆಯಲ್ಲಿ ಸುಮಾರು ಶೇ. 45ರಷ್ಟು ಮತದಾನವಾಗಿತ್ತು.
ಮರಳಿ ಹಾಸನಕ್ಕೆ
ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ಎಲ್ಲಾ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನೆಲ್ಲಾ ಹಿಂತೆಗೆದುಕೊಳ್ಳಲು ಆದೇಶ ಮಾಡಲಾಯಿತು. ನನ್ನ ವಿರುದ್ಧದ 13 ಮೊಕದ್ದಮೆಗಳ ಪೈಕಿ 6 ನನ್ನಂತೆ ಇತ್ಯರ್ಥವಾಗಿತ್ತು. ಆರೆಸ್ಸೆಸ್ ಮೇಲಿನ ನಿಷೇಧ ಹಿಂತೆಗೆದುಕೊಂಡಿದ್ದರಿಂದ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿದ್ದ 7 ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಅನುಮತಿ ಕೋರಿ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದುದನ್ನು ಒಪ್ಪಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ದಿನಾಂಕ 23-04-1977ರಲ್ಲಿ ಅನುಮತಿಸಿತು. ಹೀಗಾಗಿ ನಾನು ಸಂಪೂರ್ಣ ಆರೋಪಮುಕ್ತನಾದೆ. ಹೀಗಾಗಿ ನಾನು ಪುನಃ ಹಾಸನಕ್ಕೆ ಮರಳಿ ವರ್ಗಾಯಿಸಲು ಸರ್ಕಾರಕ್ಕೆ ಮನವಿ ಮಾಡಿಕೊಂಡೆ. ನನ್ನ ಮನವಿಯನ್ನು ಒಪ್ಪಿ ಸರ್ಕಾರದಿಂದ ಹಾಸನ ಯೂನಿಟ್ ಗೆ ವರ್ಗಾಯಿಸಿದ ಆದೇಶ ದಿನಾಂಕ 03-09-1977ರಲ್ಲಿ ಬಂದಿತು. ಇದೇ ಸಮಯದಲ್ಲಿ, ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ನನ್ನನ್ನು ಸೇಡಂ ತಾಲೂಕು ಕಛೇರಿಗೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ವರ್ಗಾಯಿಸುವಂತೆ ಅಸಿಸ್ಟೆಂಟ್ ಕಮಿಷನರರು ಮಾಡಿದ ಶಿಫಾರಸಿನ ಮೇರೆಗೆ ಜಿಲ್ಲಾಧಿಕಾರಿಯವರಿಂದ ಅದೇ ರೀತಿ ವರ್ಗಾಯಿಸಿದ ಆದೇಶ ಸಹ ಬಂದಿತು. ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡಿ ನನ್ನನ್ನು ದಿನಾಂಕ 01-10-1977ರಲ್ಲಿ ಅಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿದರು. ನಾನು ಹಾಸನ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ 03-10-1977ರಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ. ಸೇಡಂನಿಂದ ವಾಪಸು ಬರುವಾಗ ತಹಸೀಲ್ದಾರ್ ಶ್ರೀ ಬಿ.ವಿ.ಸ್ವಾಮಿಯವರು ನನ್ನೊಂದಿಗೆ ಶೋರಾಪುರದವರೆಗೆ ಬಂದು (ಸೇಡಂನಿಂದ ಶೋರಾಪುರಕ್ಕೆ ಸುಮಾರು ನಾಲ್ಕು ಗಂಟೆ ಪ್ರಯಾಣ) ಅಲ್ಲಿನ ಹೋಟೆಲಿನಲ್ಲಿ ಊಟ ಹಾಕಿಸಿ ಶುಭ ಹಾರೈಸಿ ಬೀಳ್ಕೊಟ್ಟಿದ್ದು ನಾನು ಮರೆಯಲಾರೆ. ಅವರು ನನ್ನ ತಂದೆಯವರಿಗೆ 01-05-1979ರಲ್ಲಿ ಬರೆದ ಪತ್ರದಲ್ಲಿ ಹೀಗೆ ಬರೆದಿದ್ದರು:
“ . . . I had the pleasure of working with your
son at Sedam for a very short period.
There are no words in English language to describe your son’s efficiency,
honesty, loyalty to his superiors, straightforwardness, promptness and sympathy
towards poor people. In fact, I would have been very glad if he had been
continued here till my transfer from this place. But that was not be. I have no
doubt that with all the good qualities your son possesses, he would be a first
class citizen of our country. …. ”
ಈ ಪತ್ರವನ್ನು ನಾನು ಈಗಲೂ ನನ್ನ 'ಪ್ರಶಸ್ತಿ ಪತ್ರ'ವೆಂಬಂತೆ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇವರ ಮತ್ತು ಇಂತಹವರ ಆಶಯಗಳೇ ನನ್ನನ್ನು ಹಾದಿ ತಪ್ಪದಂತೆ ಕಾವಲು ಕಾಯುತ್ತಿರುವುದು!
..ಮುಂದುವರೆಯುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ