ಮರಳಿ ಹಾಸನಕ್ಕೆ
ಹಾಸನದ ಯಾವ ಕಛೇರಿಯಿಂದ ನನಗೆ ಗುಲ್ಬರ್ಗ ಜಿಲ್ಲೆಯ ಸೇಡಂಗೆ ವರ್ಗವಾಗಿತ್ತೋ ಅದೇ ಆಹಾರ ಶಾಖೆಗೆ ಪ್ರಥಮ ದರ್ಜೆ ಗುಮಾಸ್ತನಾಗಿ ಕರ್ತವ್ಯಕ್ಕೆ ಹಾಜರಾದೆ. ಯಾರು ನನ್ನನ್ನು ಹಿಂದೆ ಮಾತನಾಡಿಸಲೂ ಹಿಂಜರಿಯುತ್ತಿದ್ದರೋ ಅವರೆಲ್ಲಾ ನನ್ನನ್ನು ಅಭಿನಂದಿಸಿ ಹೊಗಳತೊಡಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ ನನ್ನನ್ನು ಪ್ರಥಮವಾಗಿ ಬಂಧಿಸಿದ್ದ ಸಬ್‌ಇನ್ಸ್‌ಪೆಕ್ಟರರು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿ ಮಡಿಕೇರಿಯಲ್ಲಿದ್ದರು. ಕೋರ್ಟಿನ ಕೆಲಸಕ್ಕೆ ಹಾಸನಕ್ಕೆ ಬಂದಿದ್ದವರು ನನ್ನನ್ನು ಹುಡುಕಿಕೊಂಡು ಬಂದು ಕ್ಷಮೆ ಕೇಳಿಹೋಗಿದ್ದರು. ಜಿಲ್ಲಾಧಿಕಾರಿಯವರು ಮತ್ತು ಎಸ್.ಪಿ.ಯವರ ಆದೇಶದಂತೆ ಆ ಕೆಲಸ ಮಾಡಬೇಕಾಯಿತೆಂದು ತಿಳಿಸಿದ ಅವರು ನಾನು ಊಹಿಸಿದ್ದ ಸಂಗತಿ ಖಚಿತ ಪಡಿಸಿದರು. ನನ್ನ ತಂದೆಯವರು ನನ್ನನ್ನು ಶ್ರೀ ಹಾರನಹಳ್ಳಿ ರಾಮಸ್ವಾಮಿ ಮತ್ತು ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರಲ್ಲಿಗೆ ಕರೆದುಕೊಂಡು ಹೋಗಿ ಇನ್ನು ಮುಂದಾದರೂ ಸರಿ(?)ಯಾಗಿರುವಂತೆ ಬುದ್ಧಿವಾದ ಹೇಳಿಸಿದರು. ತುರ್ತು ಪರಿಸ್ಥಿತಿ ವಿರುದ್ಧ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದ ಆರೆಸ್ಸೆಸ್ ಮತ್ತು ಪ್ರತಿಪಕ್ಷಗಳು ಎಲ್ಲ್ಲೆಡೆ ವಿಜಯೋತ್ಸವ ಆಚರಿಸಿದಂತೆ ಹಾಸನದಲ್ಲೂ ನಡೆಯಿತು.
ಬದಲಾಗದ ವೈಖರಿ
ಕಛೇರಿಯಲ್ಲಿ ವಿಷಯನಿರ್ವಾಹಕರುಗಳು ಅನುಪಯುಕ್ತವೆಂದು ಭಾವಿಸಿದ ಮತ್ತು ಇಷ್ಟಪಡದ ವಿಷಯಗಳನ್ನು ನನಗೆ ನಿರ್ವಹಿಸಲು ಆದೇಶವಾಯಿತು. ಅದರಲ್ಲಿ ಕೋರ್ಟು ಪ್ರಕರಣಗಳೂ ಸೇರಿದ್ದವು. ನಾನು ಪ್ರಭಾರ ವಹಿಸಿಕೊಂಡಾಗ ಸುಮಾರು ೫೦ ಕೋರ್ಟು ಪ್ರಕರಣಗಳು ಇದ್ದು ಆ ಪೈಕಿ ಸುಮಾರು ೧೨-೧೫ ಪ್ರಕರಣಗಳಲ್ಲಿ ೧-೨ ವರ್ಷಗಳಿಂದ ಪ್ರಕರಣ ಮುಂದುವರೆದಿರಲೇ ಇಲ್ಲ. ಹಾಗೆಯೇ ಕಟ್ಟಿಡಲಾಗಿತ್ತು. ನಾನು ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕೆಂಬ ನಿರ್ದೇಶನ ಕೋರಿ ಫುಡ್ ಅಸಿಸ್ಟೆಂಟರ ಮೂಲಕ ಜಿಲ್ಲಾಧಿಕಾರಿಯವರಿಗೆ ಟಿಪ್ಪಣಿ ಕಳಿಸಿದೆ. ಮುಂದಿನ ವಿಚಾರಣಾ ದಿನಾಂಕ ನಿಗದಿಸಲು ಫುಡ್ ಅಸಿಸ್ಟೆಂಟರು ಮಾಡಿದ ಶಿಫಾರಸನ್ನು ಆಗ ಜಿಲ್ಲಾಧಿಕಾರಿಯವರಾಗಿದ್ದ ಶ್ರೀ ಬಿ.ಕೆ.ದಾಸ್‌ರವರು ಒಪ್ಪಿದರು. ನಿಗದಿತ ದಿನಾಂಕಗಳಲ್ಲಿ ಹಾಜರಾಗಲು ಸಂಬಂಧಿಸಿದವರಿಗೆ ತಿಳುವಳಿಕೆ ಕಳಿಸಿದೆ. ಜಿಲ್ಲಾಧಿಕಾರಿಯವರು ವಿಚಾರಣಾ ದಿನಾಂಕದಂದು ಮೊದಲು ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ಮಾಡಿದ ನಂತರ ಆಹಾರ ಪ್ರಕರಣಗಳನ್ನು ಕೈಗೆತ್ತಿಕೊಂಡರು. ಮೊದಲ ಪ್ರಕರಣವೇ ಹಳೆಯ ಪ್ರಕರಣವಾಗಿದ್ದು ಕಕ್ಷಿಗಾರರು ಹಾಜರಾದರು. ಅವರ ಪರ ಹಾಜರಾದ ಹಿರಿಯ ವಕೀಲರು ಎರಡು ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಏಕಾಏಕಿ ಕೆದಕಲಾಗಿದೆಯೆಂದೂ, ತಮ್ಮ ಕಕ್ಷಿಗಾರರಿಗೆ ತೊಂದರೆ ಕೊಡುವ ಮತ್ತು ಹಣ ಕೀಳುವ ಉದ್ದೇಶದಿಂದ ನೋಟೀಸು ಕೊಡಲಾಗಿದೆಯೆಂದೂ ದೂರಿದರು. ಜಿಲ್ಲಾಧಿಕಾರಿಯವರು ಕಡತ ನೋಡಿದಾಗ ಹಿಂದಿನ ವಿಚಾರಣಾ ದಿನಾಂಕ ಎರಡು ವರ್ಷಗಳ ಹಿಂದಿನದಾಗಿತ್ತು. ಸಿಟ್ಟಿಗೆ ಹೆಸರಾಗಿದ್ದ ಜಿಲ್ಲಾಧಿಕಾರಿಯವರು ಕಡತವನ್ನು ರೊಯ್ಯನೆ ನನ್ನ ಹತ್ತಿರ ಎಸೆದರು. ಕಡತದ ಹಾಳೆಗಳು ಚೆಲ್ಲಾಪಿಲ್ಲಿಯಾದವು. ಕೋರ್ಟು ಹಾಲಿನಲ್ಲಿ ತುಂಬಿದ್ದ ಹಿರಿಯ, ಕಿರಿಯ ವಕೀಲರುಗಳು, ಕಕ್ಷಿಗಾರರು, ಸಿಬ್ಬಂದಿ, ಹೀಗೆ ಬಹಳ ಜನರಿದ್ದರೂ ಆ ಸಂದರ್ಭದಲ್ಲಿ ಮುಂದೇನಾಗುವುದೋ ಎಂದು ನಿರೀಕ್ಷಿಸಿ ನೀರವ ಮೌನ ಏರ್ಪಟ್ಟಿತು. ನನಗೆ ಅವಮಾನವಾದಂತಾಗಿತ್ತು. ಸುಮ್ಮನಿದ್ದೆ. ಪಕ್ಕದಲ್ಲಿದ್ದ ಶಿರಸ್ತೇದಾರರು ಕೆಳಗೆ ಬಿದ್ದಿದ್ದ ಕಡತವನ್ನು ಎತ್ತಿಕೊಳ್ಳಲು ಪಿಸುಮಾತಿನಲ್ಲಿ ನನಗೆ ಸೂಚಿಸಿದರೂ ನಾನು ಸುಮ್ಮನೇ ಕುಳಿತಿದ್ದೆ. ಜಿಲ್ಲಾಧಿಕಾರಿಯವರು ಎಲ್ಲಾ ಪ್ರಕರಣಗಳನ್ನು ಮುಂದೂಡಲಾಗಿದೆಯೆಂದು ತಿಳಿಸಿ ತಮ್ಮ ಛೇಂಬರಿಗೆ ಹೊರಟು ಹೋದರು. ನಾನೂ ಕಡತ ತೆಗೆದುಕೊಳ್ಳದೆ ನನ್ನ ಕಛೇರಿಗೆ ವಾಪಸು ಬಂದು ಕುರ್ಚಿಯಲ್ಲಿ ಕುಳಿತೆ. ಶಿರಸ್ತೇದಾರರು ಕಡತ ಜೋಡಿಸಿ ನನಗೆ ಕಳುಹಿಸಿದರು. ಅವರು, ಆಪ್ತ ಸಹಾಯಕರು, ಇತರೆ ಸಿಬ್ಬಂದಿ ಸಹ ನಾನು ಕಡತ ತೆಗೆದುಕೊಂಡು ಬರಬೇಕಿತ್ತ್ತೆಂದೂ, ನನ್ನನ್ನು ಸಸ್ಪೆಂಡ್ ಮಾಡುವುದು ಗ್ಯಾರೆಂಟಿ ಎಂತಲೂ ಮಾತಾಡಿಕೊಳ್ಳುತ್ತಿದ್ದರು. ನನ್ನದಲ್ಲದ ತಪ್ಪಿಗೆ ನಾನು ತಲೆಬಾಗುವಂತಹ ನಡವಳಿಕೆ ನನಗಿನ್ನೂ ಅಭ್ಯಾಸವಾಗಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಜಿಲ್ಲಾಧಿಕಾರಿಯವರು ನನ್ನನ್ನು ಮತ್ತು ಫುಡ್ ಅಸಿಸ್ಟೆಂಟರನ್ನು ಕರೆಸಿದರು. ಫುಡ್ ಅಸಿಸ್ಟೆಂಟರು ಜಿಲ್ಲಾಧಿಕಾರಿಯವರಿಗೆ ಈ ತಪ್ಪು ಹಿಂದಿನ ವಿಷಯನಿರ್ವಾಹಕರದೆಂದೂ, ನಾನು ಬಂದು ಕೇವಲ ಇಪ್ಪತ್ತು ದಿನಗಳಾಯಿತೆಂದು ಹಾಗೂ ಟಿಪ್ಪಣಿ ಮೇಲೆ ಆದೇಶ ಪಡೆದೇ ವಿಚಾರಣೆಗೆ ಕಡತ ಇಡಲಾಗಿತ್ತೆಂದೂ ವಿವರಿಸಿ ಆದೇಶ ತೋರಿಸಿದಾಗ ಜಿಲ್ಲಾಧಿಕಾರಿಯವರು ಒಂದು ಕ್ಷಣ ಸುಮ್ಮನಿದ್ದರು. ನಂತರ ನನ್ನ ಮುಖ ನೋಡುತ್ತಾ 'ಸಾರಿ' ಎಂದರು. ಇಂತಹ ಕಡತಗಳನ್ನು ಫುಡ್ ಅಸಿಸ್ಟೆಂಟರು ಸ್ವತಃ ಇನ್ನೊಮ್ಮೆ ನೋಡಿ ಅಗತ್ಯವಿದ್ದರೆ ಮಾತ್ರ ನೋಟೀಸು ಕೊಡಲು ತಿಳಿಸಿದರು. ನಾನು ಮಾತನಾಡದೆ ಸುಮ್ಮನಿದ್ದು ಕೊನೆಗೆ ಫುಡ್ ಅಸಿಸ್ಟೆಂಟರೊಂದಿಗೆ ಛೇಂಬರಿನಿಂದ ಹೊರಬಂದಾಗ ಏನೋ ಆಗುವುದೆಂದು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿತ್ತು. ಸರಿ ಅನ್ನಿಸಿದುದನ್ನು ಪರಿಣಾಮ ಲೆಕ್ಕಿಸದೆ ಮಾಡಲು ಹೊರಟರೆ ತೊಂದರೆಯಾಗುವುದೆಂದು ಗೊತ್ತಿದ್ದರೂ ನನ್ನ ಕೆಲಸದ ವೈಖರಿ ಬದಲಿಸಿಕೊಳ್ಳಲು ನನಗೆ ಮನಸ್ಸು ಒಪ್ಪುತ್ತಿರಲಿಲ್ಲ. ಒಂದು ರೀತಿಯಲ್ಲಿ ಇದೂ ಒಂದು ನನ್ನ ದೌರ್ಬಲ್ಯ.
(ಕಾಲಘಟ್ಟ: 1977) .. ಮುಂದುವರೆಯುವುದು.
nagaraj ravarige hardikavandhanegalu;
ಪ್ರತ್ಯುತ್ತರಅಳಿಸಿmundhinadannu paradeyamele nodi.
karnad.
ಧನ್ಯವಾದಗಳು, ಕಾರ್ನಾಡರೇ.
ಅಳಿಸಿ