ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಮಂಗಳವಾರ, ನವೆಂಬರ್ 23, 2010

ಮೂಢ ಉವಾಚ -27: ದೇಹ

ಪಂಚಭೂತಗಳಿಂದಾದುದೀ ಮಲಿನ ದೇಹ
ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ|
ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ
ಇಂತಪ್ಪ ದೇಹವನು ನಾನೆನಲೆ ಮೂಢ||


ಈ ದೇಹವೆಂಬುದನಂತ ಆಪತ್ತುಗಳ ತಾಣ
ಹೇಳದೆ ಕೇಳದೆ ಸಾವು ಬರುವುದು ಜಾಣ|
ದೇಹ ಚೈತನ್ಯ ಮೂಲಕೆ ಸಾವಿರದು ಕಾಣಾ
ಸಾಧು ಸಂತರ ಮಾತು ನೆನಪಿರಲಿ ಮೂಢ||


ತನುವು ಸುಂದರವೆಂದು ಉಬ್ಬದಿರು ಮನುಜ
ಹೊಳೆವ ಚರ್ಮದೊಳಗಿಹುದು ಹೊಲಸು|
ತನುವಿನೊಳಿಲ್ಲ ಬಣ್ಣದೊಳಿಲ್ಲ ಚೆಲುವು ಹೊರಗಿಲ್ಲ
ಒಳಗಿನ ಗುಣದಲ್ಲಿ ಚೆಲುವಿಹುದು ಮೂಢ||


ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು
ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು|
ದೇಹ ದೋಣಿಯಾಗಿಸಿ ಸಂಸಾರಸಾಗರವ
ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ||
****************
-ಕವಿನಾಗರಾಜ್.

4 ಕಾಮೆಂಟ್‌ಗಳು:

  1. [ಪಂಚಭೂತಗಳಿಂದಾದುದೀ ಮಲಿನ ದೇಹ|
    ಹೊಲಸು ತುಂಬಿರುವ ಕೊಳಕು ಚರ್ಮದ ಚೀಲ||
    ಬಣ್ಣಬಣ್ಣದ ಬಟ್ಟೆಯಲಿ ಮುಚ್ಚುವರು ಕೊಳಕ|
    ಇಂತಪ್ಪ ದೇಹವನು ನಾನೆನಲೆ ಮೂಢ]

    ಒಪ್ಪಲೊಲ್ಲೆನು ನಾನು ಮಲಿನವೀ ದೇಹ|
    ತಾಯೆದೆಯ ಹಾಲುಂಡು, ಸ್ವರ್ಗವಾ ಮೀರಿಸುವ
    ಹರಿಹದೆಯ ಲಗುಬಗೆಯ ಕಂಡ ಈ ದೇಹ
    ದೈವ ಕೃಪೆಯಲಿ ಮೋಕ್ಷ ಸಾಧನೆಗೆ ಮಾರ್ಗ||

    ಪ್ರತ್ಯುತ್ತರಅಳಿಸಿ
  2. ಒಪ್ಪಬಹುದು ಒಪ್ಪದಿರಬಹುದು ಆಯ್ಕೆ ನಿಮ್ಮದು|
    ವಿವರಣೆಯಿದು ಭೌತಿಕ ದೇಹಕ್ಕೆ ಸೀಮಿತವು||
    ಈ ದೇಹ ನಾನಲ್ಲವೆಂದೆನತಿಷ್ಟೆ ಹೇಳಿರುವೆ|
    ಪರಾಂಬರಿಸು ಗೆಳೆಯ ಮುಂದುವರೆದಿದೆ ಕಗ್ಗ||
    ಪ್ರಿಯ ಶ್ರೀಧರ್, ಪ್ರತಿಕ್ರಿಯೆಗೆ ವಂದನೆ. ದೇಹದ ಕುರಿತು ಇನ್ನೂ ನಾಲ್ಕು ಕಗ್ಗಗಳನ್ನೂ ಮೂಢ ಉವಾಚ-28ರಲ್ಲಿ ಮುಂದುವರೆಸಿರುವೆ.ವಿಮರ್ಶೆಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ
  3. ಭೌತಿಕ ದೇಹವು ಹೊಲಸೆಂದು ಒಮ್ಮೆ ನಮ್ಮ ಮನಸ್ಸಿಗೆ ಬಂದುಬಿಟ್ಟರೆ ನಮ್ ಬಗ್ಗೆ ನಮಗೆ ತಿರಸ್ಕಾರ ಮೂಡಿಬಿಟ್ಟೀತು!

    ಪ್ರತ್ಯುತ್ತರಅಳಿಸಿ