ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶನಿವಾರ, ಅಕ್ಟೋಬರ್ 24, 2015

ಉತ್ತಮ ಸಂಬಂಧಕ್ಕೆ ಬೇಕು ಕ್ಷಮಿಸುವ ಗುಣ


     ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೆಲವರಿಗೆ ಅರಳು ಮರಳಿನ ಮಾತಿನಂತೆ ಕಂಡಿತ್ತು.  ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹದಿನೈದು ವರ್ಷಗಳ ಹಿಂದಿನ ಪ್ರಸಂಗವಿದು. ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮೃತ ವ್ಯಕ್ತಿ ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ವಿವಾದಕ್ಕೆ ಮೃತನ ಅಣ್ಣ ಕಾಲೇಜು ಪ್ರೊಫೆಸರರ ಪತ್ನಿಗೂ ಮೃತನ ಪತ್ನಿಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ಯಾವುದೋ ವಿಷಯಕ್ಕೆ ಜಗಳವಾಗಿದ್ದೇ ನೆಪವಾಗಿತ್ತು. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಂತಹ ಪ್ರಸಂಗಗಳು ಬರುವುದಿಲ್ಲ ಎಂದು ತಿಳಿಸುವ ಸಲುವಾಗಿ ಇದನ್ನು ಹೇಳಿದ್ದಷ್ಟೆ.
      ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡದಿರುವುದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರುವುದು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸದಿರುವುದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳುವುದು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡದಿರುವುದು. ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂದ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ. ಸ್ವಾಮಿ ವಿವೇಕಾನಂದರ ಈ ವಾಣಿ ಮನನೀಯವಾಗಿದೆ: "ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ."  ಎಂತಹ ಸತ್ವಯುತವಾದ, ಸತ್ಯವಾದ ಮಾತಿದು!
                              -ಕ.ವೆಂ. ನಾಗರಾಜ್.
*************
ದಿನಾಂಕ 5.10.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಭಾನುವಾರ, ಅಕ್ಟೋಬರ್ 18, 2015

ಅರವತ್ತೈದು . . .! ಈಗ ಅನಿಸುತಿಹುದು . . .!!


     ಅರವತ್ತೈದನೆಯ ವಯಸ್ಸಿಗೆ ಮುಂದಡಿಟ್ಟಿರುವ ಈ ಸಮಯದಲ್ಲಿ ಮೂಡಿರುವ ಕೆಲವು ಸಮ್ಮಿಶ್ರ ಭಾವಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿರುವೆ. ವಾನಪ್ರಸ್ಥಿಯಾಗಿ ಜೀವನ ಸಾಗಿಸಬೇಕಾದ ಅವಧಿಯಿದು. ತಕ್ಷಣದ ಮನಸ್ಥಿತಿಯ ಕುರಿತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ:
ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು
ಬಂದ ದಾರಿಯ ನಿಂತು ನೋಡಿದೆ ಮನವು |
ಗುಣಿಸಿ ಭಾಗಿಸಿ ಕೂಡಿ ಕಳೆದುಳಿದ ಶೇಷವು
ಸೋಲೋ ಗೆಲುವೋ ತಿಳಿಯದ  ವಿಷಣ್ಣಭಾವವು ||
     ಹುಟ್ಟಿದ ದಿನಾಂಕದಿಂದ ಲೆಕ್ಕ ಹಾಕಿದರೆ ಅರವತ್ತನಾಲ್ಕು ವರ್ಷಗಳು ಪೂರ್ಣಗೊಂಡಿವೆ.  ಮಾನಸಿಕವಾಗಿ ಲೆಕ್ಕ ಹಾಕಿದರೆ, ಇನ್ನೂ ಏನಾದರೂ ಮಾಡಬೇಕೆಂಬ ಮನಸ್ಸಿರುವುದರಿಂದ ಹತ್ತು ವರ್ಷ ಚಿಕ್ಕವನಿರಬಹುದು. ಆದರೆ ದೈಹಿಕವಾಗಿ ಕುಗ್ಗಿರುವೆ. ಅನುಭವಿಸಿದ ನೋವು-ನಲಿವುಗಳು, ಸುಖ-ದುಃಖಗಳು, ಬಿದ್ದ ದೈಹಿಕ-ಮಾನಸಿಕ ಪೆಟ್ಟುಗಳು, ಮಾನ-ಅವಮಾನಗಳು, ಪುರಸ್ಕಾರ-ತಿರಸ್ಕಾರಗಳು, ಈಡೇರಿದ ಮತ್ತು ಈಡೇರದ ಬಯಕೆಗಳು, ಮಾಡಬಯಸಿದರೂ ಮಾಡಲಾಗದ ಅಸಹಾಯಕತೆಯ ಪ್ರಸಂಗಗಳು, ವೈಯಕ್ತಿಕ ತಪ್ಪಿಲ್ಲದಿದ್ದರೂ ಅನುಭವಿಸಬೇಕಾಗಿ ಬಂದ ಮುಜುಗರದ ಪ್ರಸಂಗಗಳು, ಇತ್ಯಾದಿ ಕಾರಣಗಳಿಂದಾಗಿ ಭೌತಿಕ ದೇಹಕ್ಕೆ ಇನ್ನೂ ಹತ್ತು-ಹದಿನೈದು ವರ್ಷಗಳು ಜಾಸ್ತಿಯಾಗಿರಬಹುದು. ನನ್ನ ಪರಿಚಯದವರು, ಸ್ನೇಹಿತರು, ಸಹೋದ್ಯೋಗಿಗಳು ಯಾರಾದರೂ ನಿಧನರಾದಾಗಲೂ ಸರತಿಯ ಸಾಲಿನಲ್ಲಿ ಬದುಕಿನ ನಿಜಸತ್ಯವಾದ ಸಾವಿನೆಡೆಗೆ ಮುಂದುವರೆಯುತ್ತಿರುವಂತೆ ಭಾಸವಾಗುತ್ತಿದೆ. ಒಂದಂತೂ ಸತ್ಯ, ಸಾವು ನನ್ನನ್ನು ಹೆದರಿಸಿಲ್ಲ, ನಾನು ಹೆದರಿಯೂ ಇಲ್ಲ. ನಾನು ಅದು ಯಾವಾಗ ಬಂದರೂ ಸ್ವಾಗತಿಸಲು ಸಿದ್ಧನಿದ್ದೇನೆ. ಹಾಗೆಂದು ನಾನು ಸಾಯಬಯಸಿಲ್ಲ. ಸಾಯುವವರೆಗೂ ಬದುಕಿರಲು ಬಯಸಿರುವೆ. ಬದುಕಿರುವುದೆಂದರೆ ಅಂತಃಸಾಕ್ಷಿ ಒಪ್ಪುವಂತೆ ಬದುಕುವುದು ಮತ್ತು ಅಂತಹ ಪೂರಕ ಪರಿಸರಕ್ಕಾಗಿ ಶ್ರಮಿಸುವುದು, ಆಶಿಸುವುದು. ಸಾಯುವ ಮೊದಲು ಬಂಧುಗಳೆಲ್ಲರೂ ಸಾಮರಸ್ಯದಿಂದ ಇರುವುದನ್ನು ಕಾಣಬೇಕೆಂಬ ಬಯಕೆ ಜೀವಂತವಾಗಿದೆ. ಇದೊಂದು ವಿಚಿತ್ರ ಪ್ರಪಂಚ. ಯಾರ ಪರವಾಗಿಯೋ ಅಥವ ವಿರೋಧವಾಗಿಯೋ ಇರಬೇಕೆಂದು ಬಯಸುವವರೇ ಎಲ್ಲರೂ! ಎಲ್ಲರೂ ಚೆನ್ನಾಗಿರಲೆಂದು ಅಪೇಕ್ಷಿಸಿ ಎಲ್ಲರೊಡನೆ ಸಮಭಾವದಿಂದಿರಬಯಸಿದರೆ ಅವರ ಪರವೆಂದು ಇವರು, ಇವರ ಪರವೆಂದು ಅವರು, ಒಟ್ಟಾರೆಯಾಗಿ ಎಲ್ಲರೂ ತಿರಸ್ಕರಿಸಿಬಿಡುವರು! ನನ್ನ ಬಯಕೆ ಎಷ್ಟರ ಮಟ್ಟಿಗೆ ಈಡೇರೀತು ಎಂಬುದನ್ನು ಕಾಲವೇ ಹೇಳಲಿದೆ. ಸ್ವಭಾವತಃ ಆಶಾವಾದಿ ಮತ್ತು ಸುಲಭವಾಗಿ ಕೈಚೆಲ್ಲುವವನಲ್ಲವಾದರೂ, ಕಠಿಣ ವಾಸ್ತವತೆ ನನ್ನಲ್ಲಿ ಒಂದು ರೀತಿಯ ನಿರ್ಲಿಪ್ತಭಾವ ಪ್ರಧಾನವಾಗಿ ಆವರಿಸುವಂತೆ ಮಾಡುತ್ತಿದೆ. 
     ಹೌದು, ಈಗ ಲೆಕ್ಕ ಹಾಕುವ ಹೊತ್ತು. ಈ ದೇಹ ಧರಿಸಿ ಇದುವರೆಗೆ ಸಾಧಿಸಿದ್ದೇನು ಎಂದು ಅವಲೋಕಿಸುವ ಹೊತ್ತು. ಗಳಿಸಿದ್ದೇನು, ಕಳೆದಿದ್ದೇನು, ಉಳಿಸಿದ್ದೇನು, ಕೊಟ್ಟಿದ್ದೇನು, ಪಡೆದಿದ್ದೇನು ಎಂಬುದನ್ನು ಪರೀಕ್ಷಿಸುವ ಹೊತ್ತು. ಅಥರ್ವ ವೇದದಲ್ಲಿನ ಒಂದು ಮಂತ್ರ ಹೇಳುತ್ತದೆ:
ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |
ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)
    ಋಣರಹಿತರಾಗಿ ಬ್ರಹ್ಮಚರ್ಯದಲ್ಲಿರೋಣ. ಗಾರ್ಹಸ್ಥ್ಯದಲ್ಲಿಯೂ, ಋಣರಹಿತರಾಗಿರೋಣ. ಮೂರನೆಯದಾದ ವಾನಪ್ರಸ್ಥದಲ್ಲಿಯೂ, ಋಣರಹಿತರಾಗಿರೋಣ. ಯಾವ ಆಧ್ಯಾತ್ಮಿಕ ಗತಿಯ ಮತ್ತು ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, ಆ ಎಲ್ಲಾ ಮಾರ್ಗಗಳನ್ನೂ ಋಣರಹಿತರಾಗಿ ಸಂಕ್ರಮಿಸೋಣ. ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ ಎಂಬುದು ಇದರ ಕರೆ.
     ಮಾತೃಋಣ, ಪಿತೃಋಣ, ಗುರುಋಣ, ಸಮಾಜಋಣ - ಈ ನಾಲ್ಕನ್ನು ಪ್ರಧಾನವಾಗಿ ಪ್ರತಿ ವ್ಯಕ್ತಿ ಹೊಂದಿರುತ್ತಾನೆ. ಆಯಾ ವ್ಯಕ್ತಿಯ ಗುಣಾವಗುಣಗಳು, ಸಾಧನೆಗಳು ಅವನು ಎಷ್ಟರಮಟ್ಟಿಗೆ ಋಣರಹಿತನಾಗಿದ್ದಾನೆ ಎಂಬುದನ್ನು ನಿರ್ಧರಿಸುತ್ತದೆ. ಎಷ್ಟರಮಟ್ಟಿಗೆ ಋಣರಹಿತರಾಗಿ ಬಾಳಲು ಸಾಧ್ಯ ಎಂಬುದು ವಿಚಾರಾರ್ಹ ಸಂಗತಿ. ಈ ಜನ್ಮದ ಶೇಷ ಆಯಸ್ಸಿನಲ್ಲಿ ಯಾರು ಯಾರಿಗೆ ಎಷ್ಟು ಋಣಿಯಾಗಿದ್ದೇನೋ ಅವರುಗಳ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಎಷ್ಟರಮಟ್ಟಿಗೆ ಋಣಮುಕ್ತನಾದೇನು ಎಂಬುದು ಗೊತ್ತಿಲ್ಲ. ಋಣಮುಕ್ತನಾಗುವ, ಮೇಲೇರುವ ಇಚ್ಛೆಯಂತೂ ಇದ್ದು, ಈ ದಿಸೆಯಲ್ಲಿ ಕ್ರಮಿಸಬೇಕಾದ ಹಾದಿ ಸುಲಭವಲ್ಲವೆಂಬ ಅರಿವು ನನಗಿದೆ. ಋಣಮುಕ್ತನಾಗಿಸೆಂದು ದೇವನಲ್ಲಿ ನನ್ನ ಮೊರೆಯಿದೆ.  
     ಮಾನಸಿಕವಾಗಿ ವಾನಪ್ರಸ್ಥ ಜೀವನದ ಬಗ್ಗೆ ಆಸಕ್ತಭಾವವಿದೆ. ವಾನಪ್ರಸ್ಥವೆಂದರೆ ಕಾಡಿಗೆ ಹೋಗಿ ಧ್ಯಾನ, ತಪಸ್ಸಿಗೆ ತೊಡಗುವುದೆಂದಲ್ಲ. ಮೋಕ್ಷ ಮತ್ತು ಧರ್ಮದ ಕುರಿತು ಚಿಂತನೆ ನಡೆಸುವುದು, ಆ ಹಾದಿಯಲ್ಲಿ ಕ್ರಮಿಸುವುದು, ಲೌಕಿಕ ಸಂಗತಿಗಳಲ್ಲಿ ಆಸಕ್ತಿ ಕಡಿಮೆ ಮಾಡಿಕೊಳ್ಳುವುದು. ಅಷ್ಟೆ.  ನನ್ನ ದೃಷ್ಟಿಯಲ್ಲಿ ಧರ್ಮ ಮತ್ತು ಮೋಕ್ಷದ ಚಿಂತನೆಯೆಂದರೆ ಸಮಾಜಮುಖಿಯಾಗಿ, ದೇಶಮುಖಿಯಾಗಿ ಅಂತರಂಗ  ಯಾವುದನ್ನು ಒಳ್ಳೆಯದು ಎಂದು ಹೇಳುತ್ತದೋ ಆ ಹಾದಿಯಲ್ಲಿ ಸಾಗುವುದು, ಪ್ರಯತ್ನಪೂರ್ವಕವಾಗಿ ಧನಾತ್ಮಕವಾಗಿರುವುದು(ಪಾಸಿಟಿವ್),  ಋಣಾತ್ಮಕ(ನೆಗೆಟಿವ್)  ವಿಚಾರಗಳಿಂದ ದೂರವಿರುವುದು. ಈ ಪಥ ಬದಲಾವಣೆ ಸುಲಭವಾದುದಲ್ಲವಾದರೂ ಈಗ ಆಗದಿದ್ದರೆ ಮತ್ತೆ ಯಾವಾಗ? 
     ಕಳೆದ ಆರು-ಏಳು  ವರ್ಷಗಳಿಂದ ಬರವಣಿಗೆಯ ಕಾರ್ಯದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿದ್ದು  ಮನದ ಭಾವನೆಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುತ್ತಿವೆ. ನನಗೆ ಮಾನಸಿಕ ಶಕ್ತಿ ನೀಡುತ್ತಿರುವುದೂ ಇದೇ ಆಗಿದೆ. ಮೂರು ವರ್ಷಗಳಿಂದ ಹಾಸನ ಜಿಲ್ಲಾ ಪತ್ರಿಕೆ ಜನಮಿತ್ರದಲ್ಲಿ 'ಚಿಂತನ' ಅಂಕಣ ಕಾಲಂ ಮತ್ತು ಜನಹಿತ ಪತ್ರಿಕೆ ಪ್ರಾರಂಭವಾದಾಗಿನಿಂದ 'ಜನಕಲ್ಯಾಣ' ಅಂಕಣ ಕಾಲಮ್ಮುಗಳಲ್ಲಿ ಲೇಖನಗಳು ಪ್ರಕಟಗೊಳ್ಳುತ್ತಿವೆ. ಹಾಸನದ ಆಕಾಶವಾಣಿಯಲ್ಲಿ ನನ್ನ ಹಲವಾರು 'ಚಿಂತನ'ಗಳು ಬಿತ್ತರಗೊಂಡಿವೆ. ನಮ್ಮ ಕವಿಮನೆತನದ ಕುಟುಂಬ ಪತ್ರಿಕೆ 'ಕವಿಕಿರಣ'ದ ಸಂಪಾದಕನಾಗಿ ಇಲ್ಲಿಯವರೆಗೆ 15 ಅರ್ಧವಾರ್ಷಿಕ ಸಂಚಿಕೆಗಳು ಹೊರಬಂದಿದ್ದು ಮೆಚ್ಚುಗೆ ಗಳಿಸಿವೆ. ಕಾಲಾನಂತರದಲ್ಲಿ ನನ್ನದಾಗಿ ಏನಾದರೂ ಅಲ್ಪ ಸ್ವಲ್ಪ ಉಳಿದರೆ ಅದು ನನ್ನ ಬರವಣಿಗೆ ಮಾತ್ರ. ಅದೂ ನಂತರದ ಕೆಲವು ಅವಧಿಯವರೆಗೆ ಮಾತ್ರ ಹಾಗೂ ಯಾರಾದರೂ ಗುರುತಿಸಿದಾಗ ಮಾತ್ರ ಎಂಬುದರ ಅರಿವಿದೆ. ಮುನಿಶ್ರೀ ತರುಣಸಾಗರಜಿಯವರು ಹೇಳಿದ ಮಾತೊಂದು ನನ್ನಲ್ಲಿ ಅಚ್ಚೊತ್ತಿದೆ. ಅದೆಂದರೆ "ಸತ್ತ ನಂತರವೂ ಜನ ನಿಮ್ಮನ್ನು ಮರೆಯಬಾರದು ಎಂದು ನೀವು ಭಾವಿಸುವುದಾದರೆ ಎರಡರಲ್ಲಿ ಒಂದು ಕೆಲಸವನ್ನಾದರೂ ಖಂಡಿತವಾಗಿ ಮಾಡಿ. ಓದಲು ಸಾಧ್ಯವಿರುವ ಯಾವುದನ್ನಾದರೂ ಬರೆದುಬಿಡಿ ಅಥವಾ ಬರೆಯಲು ಸಾಧ್ಯವಿರುವಂಥದ್ದನ್ನು ಏನಾದರೂ ಬರೆದುಬಿಡಿ. ಓದಲು ಲಾಯಕ್ಕಾಗಿರುವಂಥಹದೇನಾದರೂ ಬರೆಯಿರಿ ಅಥವಾ ಬರೆಯುವುದಕ್ಕೆ ಲಾಯಕ್ಕಾಗಿರುವಂತಹ ಕೆಲಸವನ್ನೇನಾದರೂ ಮಾಡಿಬಿಡಿ. ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನು ಆತನ ಬಹುಮೂಲ್ಯ ಕೃತಿಗಳಿಗಾಗಿ ಅಥವಾ ಕೃತ್ಯಗಳಿಗಾಗಿ ಮಾತ್ರ ನೆನಪು ಮಾಡಿಕೊಳ್ಳಲಾಗುತ್ತದೆ."  ವಿವಿಧ ಹುದ್ದೆಗಳಲ್ಲಿ ಮತ್ತು ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅದು ದೇವರು ನನಗೆ ಸಾರ್ವಜನಿಕ ಸೇವೆ ಮಾಡಲು ಕೊಟ್ಟ ಸದವಕಾಶವೆಂದು ಭಾವಿಸಿ ಕೆಲಸ ಮಾಡಿರುವೆ. ಸ್ವಇಚ್ಛಾ ನಿವೃತ್ತಿ ಪಡೆದಿರದಿದ್ದರೆ ಹಿರಿಯ ಅಸಿಸ್ಟೆಂಟ್ ಕಮಿಷನರರಾಗಿ ನಿವೃತ್ತನಾಗಬಹುದಿತ್ತು. ನನ್ನ ಮನ ಹಗುರ ಮಾಡಿಕೊಳ್ಳಲೂ ಈ ಬರವಣಿಗೆ ನನಗೆ ನೆರವಾಗಿದೆ. ಅರಳು-ಮರಳು ಆವರಿಸುವ ಮುನ್ನ, ಶಕ್ತಿ ಕುಂದುವ ಮುನ್ನ, ಮರೆವು ಬರುವ ಮುನ್ನ, ಮನ ನುಡಿದಿದ್ದನ್ನು ಕಪ್ಪು-ಬಿಳಿಯಲ್ಲಿ ಮೂಡಿಸುವ ಬಯಕೆಯಿದೆ. ಮುಪ್ಪಿನಲ್ಲಿ 'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಎಂಬ ಭಾವ ಬರುವ ಮುನ್ನ ತೋಚಿದ್ದನ್ನು ಗೀಚಬೇಕೆನ್ನಿಸಿದೆ. ನಾನೊಬ್ಬ ಪಂಡಿತ, ದೊಡ್ಡ ಬರಹಗಾರನೆಂದಲ್ಲ, ನನಗೆ ಪಾಂಡಿತ್ಯವಿದೆಯೆಂದೂ ನಾನು ಅಂದುಕೊಂಡಿಲ್ಲ. ಇದನ್ನು ಮನದೊಳಗಣ ತುಂಬಿದ ಭಾವನೆಗಳನ್ನು ಹೊರಹಾಕಿ ಹಗುರಗೊಳ್ಳುವ ಇರಾದೆಯೆನ್ನಬಹುದು. 'ಬಿಟ್ಟರೂ ಬಿಡದೀ ಮಾಯೆ' ಅನ್ನುವುದು ಇದಕ್ಕೇ ಇರಬೇಕು. ಈ ಪ್ರವೃತ್ತಿಯನ್ನು ಸಮಾಜಮುಖಿಯಾಗಿ ಉಪಯೋಗಿಸಿಕೊಳ್ಳವುದೂ ವಾನಪ್ರಸ್ಥದ ಭಾಗವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. 
     ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಲ್ಲಿ ಸತ್ತನಂತರದಲ್ಲಿ ಅವನ ಇಚ್ಛೆಯಂತೆ ಮೃತ ಶರೀರವನ್ನು ವಿಲೇವಾರಿ ಮಾಡಿದರೆ ತಪ್ಪಿಲ್ಲವೆಂದು ನನ್ನ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಬಯಸಿದಲ್ಲಿ ಮಾಡಬಹುದು ಅಥವ ಬಿಡಬಹುದು. ಶ್ರಾದ್ಧಾದಿ ಕಾರ್ಯಗಳು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯಾಗಿದ್ದು, ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವಾಗ, ಅವನಿಗೆ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಆದ್ದರಿಂದ ನನ್ನ ಮರಣಾನಂತರ ನನ್ನ ದೇಹದ ಉಪಯೋಗಕ್ಕೆ ಬರುವಂತಹ ಅಂಗಗಳನ್ನು ತೆಗೆದು ಯಾರಿಗಾದರೂ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಲು ಮತ್ತು ನನ್ನ ದೇಹವನ್ನು ಸಹ ಹತ್ತಿರದ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮನಸ್ಸನ್ನು ಸಂಬಂಧಿಕರು ಮಾಡಬೇಕೆಂದು ಬಯಸುವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ನನ್ನ ಉಯಿಲು ಎಂದು ಭಾವಿಸಬಹುದು. ನನ್ನ ಸಂಬಂಧಿಕರಿಗಾಗಲೀ, ಮಿತ್ರರಿಗಾಗಲೀ ಈ ಅಭಿಪ್ರಾಯದಿಂದ ನೋವಾಗದಿರಲಿ ಎಂಬುದು ಮನದಾಳದ ಬಯಕೆ. ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು. 
     ಹಿರಿಯ ನಾಗರಿಕರ ಸಾಲಿಗೆ ಸೇರಿ ದೈಹಿಕ ಶಕ್ತಿ ಕುಂದಲು ಮತ್ತು ಮುಪ್ಪು ತನ್ನ ಇರುವನ್ನು ತೋರಿಸಲು ಪ್ರಾರಂಭಿಸಿರುವ ಸಮಯವಿದು. ನಿಂದಾಸ್ತುತಿಗಳಿಗೆ ಪಕ್ಕಾಗುವ, ಅದನ್ನು ಯೋಗ್ಯತಾನುಸಾರ ಪಡೆಯುವ, ನಿಂದೆ, ಹೀಗಳಿಕೆಗಳನ್ನು ಎದುರಿಸಲು/ಪ್ರತಿಭಟಿಸಲು ಮನಸ್ಸಿದ್ದರೂ ವಸ್ತುಸ್ಥಿತಿ ವಿರುದ್ಧವಾಗಿರುವ, ಮೌನವಾಗಿ ನುಂಗಬೇಕಾಗಿ ಬರುವ ಸಮಯವಿದು. ಕಸುವು ಇದ್ದಾಗ ಮತ್ತು ಕಸುವು ಇಲ್ಲದಾಗ, ಅಧಿಕಾರವಿದ್ದಾಗ ಮತ್ತು ಇಲ್ಲದಿದ್ದಾಗ, ಆರೋಗ್ಯವಿದ್ದಾಗ ಮತ್ತು ಇಲ್ಲದಿದ್ದಾಗ, ವಯಸ್ಕನಾಗಿದ್ದಾಗ ಮತ್ತು ಮುಪ್ಪಡರಿದಾಗ ವ್ಯಕ್ತಿಯ ಬಗ್ಗೆ ಇತರರ ಮನೋಭಾವ ಹೇಗಿರುತ್ತದೆ, ಹೇಗೆ ಬದಲಾಗುತ್ತದೆ ಎಂಬುದರ ಅರಿವು ನನಗಿದೆ. ಇದನ್ನು ಸರಿ-ತಪ್ಪುಗಳ ಅಳತೆಗೋಲಿನಲ್ಲಿ ಅಳೆಯಲಾಗುವುದಿಲ್ಲ. ವಾಸ್ತವತೆಯ ಬೆಳಕಿನಲ್ಲಿ ನೋಡಬೇಕು. ವಯಸ್ಸಿದ್ದಾಗ ಆಶ್ರಯ ಕೊಡುತ್ತಿದ್ದವರು ಮುಪ್ಪಿನಲ್ಲಿ ಆಶ್ರಯ ಬಯಸುವಂತಹ ಸ್ಥಿತಿ ಬರುತ್ತದೆ. ನನಗೆ ಇಂತಹ ಸ್ಥಿತಿ ಬಂದಿದೆಯೆಂದು ನಾನು ಹೇಳುತ್ತಿಲ್ಲ. ವಸ್ತುಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದೇನಷ್ಟೆ. 'ಅದೀನಾ ಸ್ಯಾಮ ಶರದಃ ಶತಮ್' ಎಂಬಂತೆ ಇರುವಷ್ಟು ಕಾಲ ಯಾರಿಗೂ ಹೊರೆಯೆನಿಸದಂತೆ, ದೈನ್ಯತೆ ಬಾರದಂತೆ ಬಾಳಬೇಕೆಂಬ ಬಯಕೆ ಈಡೇರಲಿ ಎಂದು ಆ ದೇವನಲ್ಲಿ ನನ್ನ ಬೇಡಿಕೆಯಿದೆ. 
     ಇದು ಎಲ್ಲರಿಗೂ ಶುಭವ ಬಯಸುವ ಹೊತ್ತು, ಎಲ್ಲದರಲ್ಲೂ ಶುಭವ ಕಾಣುವ ಹೊತ್ತು. 
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||

'ಸರ್ವೇ ಜನಾಃ ಸುಖಿನೋ ಭವನ್ತು'
-ಕ.ವೆಂ.ನಾಗರಾಜ್.

ಶುಕ್ರವಾರ, ಅಕ್ಟೋಬರ್ 16, 2015

ಸತ್ಸಂಗದ ಸತ್ಯ



     "ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು:
'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.'
'ಮನಸ್ಸು ಹಗುರವಾಗುತ್ತದೆ.'
'ಮನೆ, ಕಛೇರಿಗಳ ಜಂಜಾಟದಿಂದ ರೋಸಿದ ಮನಸ್ಸಿಗೆ ಶಾಂತಿ ಸಿಗುತ್ತದೆ.'
     ಇದೇ ಅರ್ಥದ ಹಲವು ಉತ್ತರಗಳು ಬಂದರೆ, ಒಬ್ಬರು ಮಾತ್ರ, 'ಟೈಮ್ ಪಾಸ್ ಅಗುತ್ತದೆ' ಅಂದಿದ್ದರು. ಸತ್ಸಂಗದ ಅಂತರಂಗಕ್ಕಿಳಿಯಲು ಈ ಉತ್ತರಗಳು ಪ್ರೇರಿಸಿದವು. 'ಸತ್ಸಂಗ' ಎಂಬದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ 'ಸತ್ಯದೊಡನೆ ಇರುವುದು', 'ಸತ್ಯಕ್ಕಾಗಿ ಒಗ್ಗೂಡುವುದು' ಅರ್ಥಾತ್ ಸತ್ಯದ ಸಂಗ ಮಾಡುವುದು ಎಂದಾಗುತ್ತದೆ. ವ್ಯಾವಹಾರಿಕ ಬಳಕೆಯಲ್ಲಿ ಸದ್ವಿಚಾರಗಳನ್ನು ಪ್ರೇರಿಸುವ, ಪ್ರಸರಿಸುವ ಸಜ್ಜನರ ಕೂಟವೇ ಸತ್ಸಂಗ. ಅದು ಒಟ್ಟಿಗೆ ಭಜನೆ ಮಾಡುವುದಿರಬಹುದು, ಉಪನ್ಯಾಸಗಳನ್ನು ಕೇಳುವುದಿರಬಹುದು, ವಿಚಾರ ಕಮ್ಮಟವಿರಬಹುದು, ಧಾರ್ಮಿಕ/ಸಾಂಸ್ಕೃತಿಕ/ಸಾಹಿತ್ಯಿಕ ವಿಷಯಗಳ ಕಾರ್ಯಕ್ರಮಗಳಿರಬಹುದು, ಒಟ್ಟಾರೆಯಾಗಿ ಧನಾತ್ಮಕ ಅಂಶಗಳಿಗೆ ಒತ್ತು ಕೊಡುವ ಯಾವುದೇ ಚಟುವಟಿಕೆಗಳನ್ನು ಸತ್ಸಂಗದ ವ್ಯಾಪ್ತಿಯಲ್ಲಿ ತರಬಹುದು.
     ನಾನು ಭಾಗವಹಿಸಿರುವ ಒಂದು ಮಾದರಿ ಸತ್ಸಂಗದ ಬಗ್ಗೆ ಉದಾಹರಿಸಿ ವಿಷಯ ಮುಂದುವರೆಸುವೆ. ಬೆಂಗಳೂರಿನಲ್ಲಿರುವ 118ವರ್ಷಗಳ ಪಂ. ಸುಧಾಕರ ಚತುರ್‍ವೇದಿಯವರ ಮನೆಯಲ್ಲಿ ಪ್ರತಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಸತ್ಸಂಗ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ಸರಳ ಅಗ್ನಿಹೋತ್ರ ನಡೆಯುತ್ತದೆ. ದಿವ್ಯ ಮತ್ತು ಹಿತಕರ ವಾತಾವರಣ ಉಂಟುಮಾಡುವ ಈ ಅಗ್ನಿಹೋತ್ರ ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ. ನಂತರದಲ್ಲಿ ಎರಡು ವೈದಿಕ ಭಜನೆಗಳನ್ನು ಸಾಮೂಹಿಕವಾಗಿ ಹಾಡಲಾಗುತ್ತದೆ. ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಆಸಕ್ತರು ಭಾಗವಹಿಸುತ್ತಾರೆ. ನಂತರದಲ್ಲಿ ಪಂ. ಸುಧಾಕರ ಚತುರ್‍ವೇದಿಯವರು ಸುಮಾರು 40 ನಿಮಿಷಗಳ ಕಾಲ ಮಾತನಾಡುತ್ತಾರೆ. ಯಾವುದಾದರೂ ಒಂದು ವೇದಮಂತ್ರದ ಅರ್ಥ, ವಿಸ್ತಾರ ತಿಳಿಸುತ್ತಾ, ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಾ ಮನುಕುಲ ಬಾಳಬೇಕಾದ ರೀತಿಯ ಕುರಿತು ಹೇಳುವ ಅವರ ಮಾತುಗಳು ಹೃದಯಸ್ಪರ್ಷಿಯಾಗಿರುತ್ತವೆ. ಕೊನೆಯಲ್ಲಿ ಬಂದವರ ಪೈಕಿಯೇ ಯಾರಾದರೂ ಒಬ್ಬರು ತಂದಿರುವ ಸಿಹಿ ಅಥವ ಪ್ರಸಾದವನ್ನು ಎಲ್ಲರಿಗೂ ಹಂಚುವುದರೊಂದಿಗೆ ಸತ್ಸಂಗ ಮುಗಿಯುತ್ತದೆ. ನನಗಂತೂ ಅವರ ಮಾತುಗಳು ಅಂತರಂಗವನ್ನು ಬಡಿದೆಬ್ಬಿಸಿವೆ, ಎಚ್ಚರಿಸಿವೆ, ಸರಿದಾರಿಯನ್ನು ತೋರಿಸಿವೆ. ನನ್ನಂತೆಯೇ ಹಲವರ ಅಭಿಪ್ರಾಯವೂ ಇದೇ ಆಗಿವೆ.
     ಸತ್ಸಂಗದ ಪೂರ್ಣ ಲಾಭ ಸಿಗಬೇಕೆಂದರೆ ಬಾಗಿಲ ಬಳಿಯಲ್ಲಿಯೇ ನಮ್ಮ ದಿನನಿತ್ಯದ ಚಿಂತೆಗಳು, ಮನದಲ್ಲಿ ಮೂಡುವ ವಿಚಾರಗಳು, ಹಳೆಯ ಎಲ್ಲಾ ಸಂಗತಿಗಳನ್ನು ಮರೆತು ಒಬ್ಬ ಹೊಸ ವಿದ್ಯಾರ್ಥಿಯಂತೆ, ಏನೂ ಗೊತ್ತಿಲ್ಲದವರಂತೆ, ಹೊಸದಾಗಿ ತಿಳಿಯಲು ಉತ್ಸುಕನಾಗಿ ಒಳಪ್ರವೇಶಿಸುವುದು ಉತ್ತಮ. ಯಾವಾಗಲೂ ಹೊಸಬರಂತೆ ಮತ್ತು ಹೊಸಬರಂತೆಯೇ ಇರಲು ಅಭ್ಯಾಸ ಮಾಡಿಕೊಂಡರೆ ಉತ್ತಮ ಅನುಭವ ನಮ್ಮದಾಗುವುದು. ಸತ್ಸಂಗದಲ್ಲಿ ಸಮಾನ ಮನಸ್ಕರು ಒಂದು ಸಮಾನ ಧನಾತ್ಮಕ ವಿಷಯದ ಸಲುವಾಗಿ ಒಟ್ಟುಗೂಡುತ್ತಾರೆ. ಈ ರೀತಿಯ ಒಟ್ಟುಗೂಡುವಿಕೆಯೇ ಪರಿಣಾಮಕಾರಿಯಾಗಿರುತ್ತದೆ. ಸುಮ್ಮನೆ ಸಮಯ ಕಳೆಯಲು ಬರುವವರಿಂದಲೂ ಉಪಯೋಗವಿದೆ. ಕನಿಷ್ಠ ಸತ್ಸಂಗ ನಡೆಯುವ ಒಂದು, ಒಂದೂವರೆ ಗಂಟೆಯವರೆಗಾದರೂ ಅವರು ಋಣಾತ್ಮಕ ವಿಷಯಗಳಿಂದ ದೂರವಿರುತ್ತಾರಲ್ಲಾ! ಅಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮ, ಭಜನೆ, ಇತ್ಯಾದಿಗಳಿಂದ ಒಂದು ಅಲೌಕಿಕ, ಸಂತಸಕರ, ಹಿತಕರ ತರಂಗಗಳು ಉಂಟಾಗುತ್ತವೆ. ಈ ತರಂಗಗಳು ಅಲ್ಲಿ ಸೇರಿದವರ ಮೇಲೆ ಒಳ್ಳೆಯ ಪ್ರಭಾವ ಬೀರಿ ಆನಂದವನ್ನುಂಟುಮಾಡುತ್ತವೆ. ಒಳ್ಳೆಯ ವಿಚಾರಗಳ ಕುರಿತು ಯೋಚಿಸುವಂತೆ, ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅಲ್ಲಿ ಪ್ರೇರೇಪಣೆ ಸಿಗುತ್ತದೆ. ಸತ್ಸಂಗದ ಯಶಸ್ಸು ಇರುವುದು ಇಲ್ಲಿಯೇ!
     ಆದಿ ಶಂಕರಾಚಾರ್ಯರ ಭಜಗೋವಿಂದಮ್ ಸ್ತೋತ್ರದ ಒಂಬತ್ತನೆಯ ಶ್ಲೋಕ ಹೀಗಿದೆ:
ಸತ್ಸಂಗತ್ವೇ ನಿಸ್ಸಂಗತ್ವಮ್ ನಿಸ್ಸಂಗತ್ವೇ ನಿರ್ಮೋಹತ್ವಮ್
ನಿರ್ಮೋಹತ್ವೇ ನಿಶ್ಚಲತತ್ತ್ವಮ್ ನಿಶ್ಚಲತತ್ವೇ ಜೀವನ್ಮುಕ್ತಿಃ||
     ಉತ್ತಮರಾದ ವಿದ್ವಜ್ಜನರ ಸಹವಾಸದಿಂದ ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತನಾಗುತ್ತಾನೆ, ಈ ರೀತಿಯಾಗಿ ಭ್ರಮೆಗಳಿಂದ ಹೊರಬಂದವನು ತಪ್ಪುದಾರಿಯಲ್ಲಿ ಹೋಗುವದಿಲ್ಲ, ಸರಿದಾರಿಯಲ್ಲೇ ನಡೆಯುತ್ತಾನೆ. ಈ ನಿರ್ಮೋಹತ್ವದಿಂದ ಮನಸ್ಸು ಚಂಚಲವಾಗುವುದಿಲ್ಲ, ಪ್ರಾಪಂಚಿಕ ಆಕರ್ಷಣೆಗಳಿಂದ ವಿಚಲಿತಗೊಳ್ಳುವುದಿಲ್ಲ. ಈ ಗುಣದಿಂದಾಗಿ ಮುಕ್ತಿಯನ್ನು ಸಾಧಿಸುತ್ತಾನೆ ಎಂಬುದು ಈ ಶ್ಲೋಕದ ಅರ್ಥ. ಸತ್ಸಂಗದ ಉದ್ದೇಶ ಅರ್ಥಪೂರ್ಣವಾಗಿ, ಸಮರ್ಥವಾಗಿ ಈ ಶ್ಲೋಕದಲ್ಲಿ ಚುಟುಕಾಗಿ ಬಿಂಬಿತಗೊಂಡಿದೆ.
     ಈ ವೇದಮಂತ್ರದ ಆಶಯವೂ ಇದೇ ಆಗಿದೆ:
ಓಂ ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಛರತ್| ಪಶ್ಶೇಮ ಶರದಃ ಶತಂ ಜೀವೇಮ ಶರದದಃ ಶತಗ್ಂ ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮದೀನಾಃ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್|| (ಯಜು.೩೬.೨೪.)
     ಅರ್ಥ: ವಿದ್ವಜ್ಜನರಿಗೆ ಹಿತಕಾರಿಯಾದ, ವಿದ್ವಜ್ಜನರಿಂದ ಪೂಜಿತನಾದ ಪರಮಾತ್ಮ ನಮ್ಮ ಮುಂದೆ ವಿರಾಜಿಸುತ್ತಿದ್ದಾನೆ. ಆ ಪರಮಾತ್ಮನ ಕೃಪೆಯಿಂದ ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ನೋಡುತ್ತಿರೋಣ, ನೂರು ವರ್ಷಗಳ ಕಾಲ (ಒಳ್ಳೆಯ ರೀತಿಯಲ್ಲಿ) ಜೀವಿಸೋಣ, ನೂರು ವರ್ಷಗಳ ಕಾಲ (ಒಳ್ಳೆಯದನ್ನೇ) ಕೇಳುತ್ತಿರೋಣ, ನೂರು ವರ್ಷಗಳ ಕಾಲ ದಾಸ್ಯತನಕ್ಕೆ ಒಳಪಡದೆ ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬಾಳೋಣ ಮತ್ತು ಈ ರೀತಿಯಾಗಿ ನೂರು ವರ್ಷಗಳಿಗೂ ಹೆಚ್ಚು ಕಾಲ ಜೀವಿಸೋಣ.
-ಕ.ವೆಂ.ನಾಗರಾಜ್.
***************
ದಿನಾಂಕ ರ 28.09.2015ರಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಅಕ್ಟೋಬರ್ 6, 2015

ನಿಂದಕರಿಗೆ ನಮಸ್ಕಾರ!


     ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾಗಿ ಜನರು ತಪ್ಪು ಮಾಡಬಯಸುವುದಿಲ್ಲ. ದೂರುವುದು, ದೂಷಿಸುವುದು ಒಂದು ಹಂತದವರೆಗೆ ಒಳ್ಳೆಯದು. ತಪ್ಪನ್ನು ಸರಿಯಾಗಿಸುವ ದೃಷ್ಟಿಯಿಂದ ಮಾಡುವ ನಿಂದನೆಗಳು ಒಳ್ಳೆಯದು. ಆದರೆ ನಿಂದನೆ, ದೂಷಣೆಗಳನ್ನೇ ಹವ್ಯಾಸವಾಗಿರಿಸಿಕೊಂಡ, ದೂಷಣೆಯಲ್ಲೇ ಮತ್ತು ಅದರಿಂದ ಇತರರಿಗೆ ಆಗುವ ಹಿಂಸೆಯಿಂದಲೇ ಸಂತೋಷ ಪಡುವ ಮನೋಭಾವ ಹೊಂದಿದ ಕೆಲವು ವಿಕ್ಷಿಪ್ತ ಮನಸ್ಕರಿಂದ ಸಮಸ್ಯೆಗೆ ಪರಿಹಾರ ಸಿಗುವುದಿರಲಿ, ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ತಪ್ಪು ಕಂಡು ಹಿಡಿಯುವುದು ಸುಲಭ; ದೂರುವುದೂ ಸುಲಭ; ಆದರೆ ಅದಕ್ಕೆ ಪರಿಹಾರದ ದಾರಿಯನ್ನು ಸೂಚಿಸುವುದು ಮತ್ತು ಅದರಂತೆ ನಡೆಯುವುದು ಉತ್ತಮವಾದ ನಡವಳಿಕೆಯೆನಿಸುತ್ತದೆ. ಮನಸ್ಸು ಶಾಂತ ಸ್ಥಿತಿಯಲ್ಲಿ ಇರಬೇಕೆಂದರೆ ಮೊದಲು ಇತರರಲ್ಲಿ ತಪ್ಪು ಕಂಡು ಹಿಡಿಯಲು ಹೋಗದೆ, ತಮ್ಮ ತಪ್ಪುಗಳನ್ನು ಗುರುತಿಸಿಕೊಂಡು ತಿದ್ದಿ ನಡೆಯುವುದನ್ನು ಅಭ್ಯಸಿಸಬೇಕು. ಇತರರ ತಪ್ಪುಗಳ ಬಗ್ಗೆಯೇ ಚಿಂತಿಸುವುದು ಮತ್ತು ಎತ್ತಿ ಆಡುವುದರಿಂದ ನೆಮ್ಮದಿ ಹಾಳಾಗುತ್ತದೆ. ನೆಮ್ಮದಿ ಹಾಳಾಗುವುದೆಂದರೆ ನಾಶದ ಹಾದಿ ಹಿಡಿದಂತೆಯೇ ಸರಿ.
     ಅಷ್ಟಕ್ಕೂ ಒಬ್ಬರನ್ನೊಬ್ಬರು ದೂರುವುದಾದರೂ ಏಕೆ? ಈ ಪ್ರಪಂಚದಲ್ಲಿ ಒಬ್ಬರು ಇದ್ದಂತೆ ಇನ್ನೊಬ್ಬರು ಇರುವುದಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಎಲ್ಲರೂ ತಮ್ಮಂತೆಯೇ ಇರಬೇಕು, ತಮ್ಮಂತೆಯೇ ವಿಚಾರ ಹೊಂದಿರಬೇಕು, ತಮ್ಮ ವಿಚಾರವನ್ನು ಎಲ್ಲರೂ ಒಪ್ಪಬೇಕು ಎಂಬ ಅಂತರ್ಗತ ಅನಿಸಿಕೆಯೇ ದೂರುವುದಕ್ಕೆ ಮೂಲ. ಒಂದೇ ಕುಟುಂಬದ ಸದಸ್ಯರುಗಳೂ, ಒಂದೇ ಸಂಘ-ಸಂಸ್ಥೆಯ ಸದಸ್ಯರುಗಳೂ, ಆತ್ಮೀಯರೆಂದು ಭಾವಿಸುವ ಸ್ನೇಹಿತರ ವಲಯದಲ್ಲೂ ಪರಸ್ಪರ ಹೊಂದಾಣಿಕೆ ಆಗದ ಅನೇಕ ಸಂಗತಿಗಳು ಇರುತ್ತವೆ. ಆದರೂ ಇವರುಗಳು ಹೊಂದಿಕೊಂಡು ಹೋಗುವುದಕ್ಕೆ ಹೆಚ್ಚಿನ ಸಂಗತಿಗಳು ಪರಸ್ಪರರಿಗೆ ಒಪ್ಪಿಗೆಯಾಗುವುದೇ ಕಾರಣ. ನಾವು ಇತರರೊಂದಿಗೆ ಹೊಂದಿಕೊಂಡುಹೋಗುತ್ತೇವೆಂದರೆ ಅವರ ನ್ಯೂನತೆಗಳನ್ನು ನಾವು ಸಹಿಸಿಕೊಳ್ಳುತ್ತೇವೆ ಎಂದು ಅರ್ಥ. ಹಾಗೆಯೇ, ಇತರರು ನಮ್ಮೊಂದಿಗೆ ವಿಶ್ವಾಸವಾಗಿರುತ್ತಾರೆಂದರೆ ಅವರು ನಮ್ಮ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ ಎಂದು ಅರ್ಥ.
     ಕೆಲವರು ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಗದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅಂತಹವರು ಮುಂದೊಮ್ಮೆ ತಮ್ಮ ಅಭಿಪ್ರಾಯ ತಪ್ಪೆಂದು ಕಂಡಾಗಲೂ ತಿದ್ದಿಕೊಳ್ಳಲು ಮನಸ್ಸು ಮಾಡುವುದಿಲ್ಲ. ತಾವು ತಿಳಿದಿರುವುದೇ ಸತ್ಯ, ಇತರರು ಹೇಳುವುದೆಲ್ಲಾ ಸುಳ್ಳು, ತಪ್ಪು ಎಂದೇ ವಾದಿಸುತ್ತಾರೆ. ಉದ್ವೇಗದಿಂದ ಅನುಚಿತ ಪದಗಳನ್ನೂ ಬಳಸುತ್ತಾರೆ. ಇದು ಹಲವರ ಮನಸ್ಸನ್ನು ನೋಯಿಸುತ್ತದೆ. ಇದಕ್ಕೆ ಮದ್ದಿಲ್ಲ. 'ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲಾ ಹಳದಿ' ಎನ್ನುವಂತೆ ಅವರ ವರ್ತನೆ ಇರುತ್ತದೆ. ಪ್ರಪಂಚವನ್ನು ಅದು ಇದ್ದಂತೆಯೇ ನೋಡುವ, ಒಪ್ಪುವ ಮನಸ್ಸು ಇರಬೇಕು. ಮುಕ್ತ ಮನಸ್ಸಿನಿಂದ ಅಭಿಪ್ರಾಯಿಸಬೇಕು. ತಿದ್ದುವ, ತಿದ್ದಿಕೊಳ್ಳುವ  ಕೆಲಸವನ್ನು ಮೊದಲು ನಮ್ಮಿಂದಲೇ ಆರಂಭಿಸಬೇಕು. ಯಾರನ್ನಾದರೂ ದೂಷಿಸಿ, ಹಂಗಿಸಿ ಬದಲಾಯಿಸುತ್ತೇವೆ ಎನ್ನುವುದು ಅಸಾಧ್ಯದ ಮಾತು. ಪ್ರೀತಿಸುವವರ ಮಾತನ್ನು ಎಲ್ಲರೂ ಗೌರವಿಸುತ್ತಾರೆ, ದ್ವೇಷಿಸುವವರ ಮಾತನ್ನು ಯಾರೂ ಕೇಳಲಾರರು. ಬದಲಾವಣೆ ಹೃದಯದಿಂದ ಬರಬೇಕು, ಶುದ್ಧ ಮನಸ್ಸಿನಿಂದ ಬರಬೇಕು. ಶುದ್ಧ ಹೃದಯ, ಮನಸ್ಸುಗಳು ಇರುವವರಿಗೆ ಇತರರು ಅಶುದ್ಧರು ಎಂದು ಅನ್ನಿಸುವುದೇ ಇಲ್ಲ. ನಮ್ಮಲ್ಲೇ ಇಲ್ಲದುದನ್ನು ಇತರರಿಂದ ನಿರೀಕ್ಷಿಸಲಾಗುವುದೇ?
     ಇನ್ನು ಕೆಲವರು ಇರುತ್ತಾರೆ. ಅವರು ಪ್ರತಿ ವಿಷಯದಲ್ಲೂ ಮೂಗು ತೂರಿಸುವವರು, ಪ್ರತಿ ವಿಷಯದಲ್ಲೂ ಒಂದಲ್ಲಾ ಒಂದು ತಪ್ಪು ಕಂಡು ಹಿಡಿಯುವ ಮನೋಭಾವದವರು. ಸಾಮಾನ್ಯವಾಗಿ ತಾವೊಬ್ಬ ಪಂಡಿತ, ಹಿರಿಯ, ಹೆಚ್ಚು ತಿಳಿದವನು ಎಂದುಕೊಂಡಿರುವವರಲ್ಲಿ ಈ ಸ್ವಭಾವ ಕಾಣಬರುತ್ತದೆ. ತಮ್ಮ ಪಾಂಡಿತ್ಯದ ಕುರಿತು ಇತರರ ಗಮನ ಸೆಳೆಯುವುದು ಅವರ ಉದ್ದೇಶವಿರಬಹುದು. ದೂಷಿಸುವವರು ಒಂದು ರೀತಿಯಲ್ಲಿ ಒಳ್ಳೆಯದನ್ನೇ ಮಾಡುತ್ತಾರೆ.  ಸದುದ್ದೇಶದಿಂದ, ತಪ್ಪನ್ನು ಸರಿ ಮಾಡುವ ಕಾರಣದಿಂದ ಮಾಡುವ ದೂರು ಒಳಿತು ಮಾಡುತ್ತದೆ, ತಿದ್ದಿಕೊಂಡು ನಡೆಯಲು ಸಹಕಾರಿಯಾಗುತ್ತದೆ. ಮುಂದೆ ಎಚ್ಚರಿಕೆಯಿಂದ ನಡೆಯಬೇಕೆಂಬುದನ್ನು ಕಲಿಸುತ್ತದೆ. ಪೂರ್ವಾಗ್ರಹದ ಮತ್ತು ದುರುದ್ದೇಶದ ದೂರುಗಳೂ ಸಹ ನಮ್ಮ ಅನುಭವದ ಖಜಾನೆ ತುಂಬಲು ಸಹಕಾರಿಯಾಗುತ್ತವೆ. ಬೆಳೆಯುವ ಲಕ್ಷಣವೆಂದರೆ, ಇತರರ ತಪ್ಪುಗಳನ್ನು ಗಮನಿಸಿ ದೂರುವ ಪ್ರವೃತ್ತಿ ಬಿಟ್ಟು, ನಮ್ಮ ಸ್ವಂತದ ತಪ್ಪುಗಳನ್ನು ಗುರುತಿಸಿ ತಿದ್ದಿಕೊಂಡು ನಡೆಯಲು ಪ್ರಯತ್ನಿಸುವುದು. ನಾವು ನಮ್ಮ ಹಿರಿಯರನ್ನು, ಸೋದರ-ಸೋದರಿಯರನ್ನು, ಸಮಾಜವನ್ನು ದೂರುತ್ತೇವೆ, ನಮ್ಮನ್ನು ಮಾತ್ರ ದೂರಿಕೊಳ್ಳುವುದಿಲ್ಲ. ಬದಲಾಗಬೇಕಾದುದು ಅವರುಗಳಲ್ಲ, ನಾವೇ ಎಂಬ ಅರಿವು ಮೂಡಿದರೆ ನಾವು ಇತರರನ್ನು ದೂರುವುದಿಲ್ಲ. ನಮ್ಮ ಅತ್ಯಂತ ಘೋರವಾದ ತಪ್ಪುಗಳನ್ನೂ ನಾವು ಕ್ಷಮಿಸಿಕೊಂಡುಬಿಡುತ್ತೇವೆ. ಹಾಗಿರುವಾಗ, ಇತರರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸುವಷ್ಟಾದರೂ ನಾವು ದೊಡ್ಡವರಾಗಬಾರದೆ?  ದೂರುಗಳಿಂದ ಪಾಠ ಕಲಿಯೋಣ, ಪೂರ್ವಾಗ್ರಹದ ದೂರುಗಳನ್ನು ನಿರ್ಲಕ್ಷಿಸೋಣ, ಇತರರನ್ನು ದೂರದಿರೋಣ.
ನಿಂದಕರ ವಂದಿಸುವೆ ನಡೆಯ ತೋರಿಹರು
ಮನೆಮುರುಕರಿಂ ಮನವು ಮಟ್ಟವಾಗಿಹುದು |
ಕುಹಕಿಗಳ ಹರಸುವೆ ಮತ್ತೆ ಪೀಡಕರ
ಜರೆವವರು ಗುರುವಾಗರೇ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 21-09-2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಅಕ್ಟೋಬರ್ 2, 2015

ಉದಾತ್ತ ವಿಚಾರದ ಬಲಿವೈಶ್ವದೇವಯಜ್ಞ


ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
     ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ ಮಾಡುತ್ತಿರಲಿಲ್ಲ. ಯಾರೂ ಬರದಿದ್ದರೆ ಯಜಮಾನನೇ ಅಂತಹವರನ್ನು ಹುಡುಕಿಕೊಂಡು ಹೋಗುತ್ತಿದ್ದುದೂ ಉಂಟು. ಅನ್ನ ಮತ್ತು ವಿದ್ಯೆಗಳನ್ನು ಮಾರಾಟ ಮಾಡಬಾರದೆಂಬುದು ಅಂದು ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವಾಗಿತ್ತು. ಆಹಾರ ಮತ್ತು ಶಿಕ್ಷಣ ವ್ಯಾಪಾರದ ಸರಕಾಗಿರುವ ಇಂದಿನ ಕಾಲದಲ್ಲಿ ಇಂತಹ ಆಚಾರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ.
     ಯಜ್ಞ ಎಂದಾಕ್ಷಣ ಹೋಮಕುಂಡದ ಮುಂದೆ ಕುಳಿತು ಮಂತ್ರ ಪಠಿಸುತ್ತಾ ಹವನ, ಹೋಮಗಳನ್ನು ನಡೆಸುವುದು ಮಾತ್ರ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೆಲ್ಲಾ ಶ್ರೇಷ್ಠತಮವಾದ ಕಾರ್ಯಗಳೋ ಅವೆಲ್ಲವೂ ಯಜ್ಞವಾಗುತ್ತದೆ. ಬ್ರಹ್ಮಯಜ್ಞ (ಸಂಧ್ಯಾಕಾಲದಲ್ಲಿ, ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮಾಡುವ ಸಂಧ್ಯಾವಂದನೆ), ದೇವಯಜ್ಞ (ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಜಲ, ಅಗ್ನಿಗಳ ಸಂರಕ್ಷಣೆ, ಪೋಷಣೆಯ ಸಂಕಲ್ಪದೊಡನೆ ಮಾಡುವ ಪರಮಾತ್ಮನ ಸ್ತುತಿ), ಪಿತೃಯಜ್ಞ (ಹಿರಿಯರು ಸತ್ತ ನಂತರ ಮಾಡುವ ಶ್ರಾದ್ಧಕಾರ್ಯಗಳಾಗಿರದೆ ಅವರು ಬದುಕಿರುವಾಗ ಅವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು), ಬಲಿವೈಶ್ವದೇವಯಜ್ಞ (ಮುಂದೆ ವಿವರಿಸಿದೆ) ಮತ್ತು ಅತಿಥಿ ಯಜ್ಞ (ಆಕಸ್ಮಿಕವಾಗಿ ಆಗಮಿಸುವ ಸಜ್ಜನರು, ಸಾಧು-ಸಂತರು, ವಿದ್ವಜ್ಜನರು, ಹಿರಿಯರು ಮುಂತಾದವರನ್ನು ಯಥೋಚಿತವಾಗಿ ಸತ್ಕರಿಸುವುದು) ಇವುಗಳನ್ನು ಪಂಚಮಹಾಯಜ್ಞಗಳೆಂದು ಹೆಸರಿಸಲಾಗಿದೆ.
     ಪಂಚಮಹಾಯಜ್ಞಗಳಲ್ಲಿ ನಾಲ್ಕನೆಯದಾದ ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ, ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಶಕ್ತಿಮೂಲವಾದ ಆಹಾರದ ಕಣಗಳು ಅಗ್ನಿಯಲ್ಲಿ ವಿಭಜಿತವಾಗಿ ವಾತಾವರಣದಲ್ಲಿ ಹರಡಿ ಸೇವಿಸುವವರಿಗೆ ಶಕ್ತಿಯನ್ನು ಉತ್ತೇಜಿಸುತ್ತವೆಯೆನ್ನಲಾಗಿದೆ. ಆ ಸಂದರ್ಭದಲ್ಲಿ ಹೇಳಲಾಗುವ 10 ಮಂತ್ರಗಳು:
     ಓಂ ಅಗ್ನಯೇ ಸ್ವಾಹಾ|| ಓಂ ಸೋಮಾಯ ಸ್ವಾಹಾ|| ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ|| ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ|| ಓಂ ಧನ್ವಂತರಯೇ ಸ್ವಾಹಾ|| ಓಂ ಕುಹ್ವೈ ಸ್ವಾಹಾ|| ಓಂ ಅನುಮತ್ಯೈ ಸ್ವಾಹಾ|| ಓಂ ಪ್ರಜಾಪತಯೇ ಸ್ವಾಹಾ|| ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ|| ಓಂ ಸ್ವಿಷ್ಟಕೃತೇ ಸ್ವಾಹಾ||
     ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, 'ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ|' ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ.
     ನೋಡುವ ಕಣ್ಣುಗಳಿದ್ದರೆ ನಮಗೆ ಬಲಿವೈಶ್ವದೇವ ಯಜ್ಞದ ಉದ್ದೇಶವನ್ನು ಬದುಕಿನ ಅಂಗವಾಗಿಸಿಕೊಂಡ ಹಲವಾರು ಮಹನೀಯರು ಕಂಡುಬರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದ ಪಾಲಂ ಕಲ್ಯಾಣಸುಂದರಮ್ ತಮ್ಮ 30 ವರ್ಷಗಳ ಸೇವೆಯಲ್ಲಿ ಪಡೆದ ಸಂಬಳದ ಹಣವನ್ನು ಪೂರ್ಣವಾಗಿ ಬಡಬಗ್ಗರ ಸೇವೆಗಾಗಿ ವಿನಿಯೋಗಿಸಿದವರು. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಅಗತ್ಯಗಳಿಗಾಗಿ ಹೋಟೆಲ್ ಮಾಣಿಯಂತಹ ಕೆಲಸಗಳನ್ನೂ ಮಾಡಿದವರು. ಪೆನ್ಶನ್ ಮತ್ತು ನಿವೃತ್ತಿ ಸಂಬಂಧವಾಗಿ ಬಂದ ಸುಮಾರು 10 ಲಕ್ಷ ರೂಗಳನ್ನೂ ಜಿಲ್ಲಾಧಿಕಾರಿಯವರ ನಿಧಿಗೆ ಕೊಟ್ಟು ನಿರಾಳರಾದವರು. ವಿಶ್ವಸಂಸ್ಥೆ ಇವರನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು,  ಅಮೆರಿಕಾದ ಒಂದು ಸಂಸ್ಥೆ 'ಸಹಸ್ರಮಾನದ ಪುರುಷ',  ಭಾರತ ಸರ್ಕಾರ 1990ರಲ್ಲಿ 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಇವರನ್ನು ಸನ್ಮಾನಿಸಿದೆ. 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲ್ಪಟ್ಟವರಿವರು. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುನ್ನತ (noblest) ಉದಾತ್ತರಲ್ಲೊಬ್ಬರು' ಎಂದು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ 2011ರಲ್ಲಿ ಇವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಸಹಸ್ರಮಾನದ ವ್ಯಕ್ತಿ ಎಂದು ಗೌರವಿಸಿದಾಗ ಇವರಿಗೆ ಕೊಡಲಾಗಿದ್ದ 30 ಕೋಟಿ ರೂ.ಗಳನ್ನೂ ಬಿಡಿಗಾಸೂ ಇಟ್ಟುಕೊಳ್ಳದೆ ಸಮಾಜಕ್ಕೇ ಧಾರೆ ಎರೆದುಬಿಟ್ಟ ಪುಣ್ಯಾತ್ಮ ಇವರು. ಯಾರು ಯಾರನ್ನೋ 'ಹೀರೋ'ಗಳು ಎಂದು ಭಾವಿಸುವ ನಮಗೆ ಕಲ್ಯಾಣಸುಂದರಮ್‌ರಂತಹವರು 'ಹೀರೋ'ಗಳಾಗಬೇಕು.
-ಕ.ವೆಂ.ನಾಗರಾಜ್.
***************
ದಿನಾಂಕ 14.09.2015ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: