ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||
ಒಂದು ಕಾಲವಿತ್ತು. ಯಾರಾದರೂ ಅತಿಥಿಗೆ, ಹಸಿದವರಿಗೆ, ಪ್ರಯಾಣಿಕರಿಗೆ ಊಟ ಹಾಕದೆ ಮನೆಯ ಯಜಮಾನ ಊಟ ಮಾಡುತ್ತಿರಲಿಲ್ಲ. ಯಾರೂ ಬರದಿದ್ದರೆ ಯಜಮಾನನೇ ಅಂತಹವರನ್ನು ಹುಡುಕಿಕೊಂಡು ಹೋಗುತ್ತಿದ್ದುದೂ ಉಂಟು. ಅನ್ನ ಮತ್ತು ವಿದ್ಯೆಗಳನ್ನು ಮಾರಾಟ ಮಾಡಬಾರದೆಂಬುದು ಅಂದು ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವಾಗಿತ್ತು. ಆಹಾರ ಮತ್ತು ಶಿಕ್ಷಣ ವ್ಯಾಪಾರದ ಸರಕಾಗಿರುವ ಇಂದಿನ ಕಾಲದಲ್ಲಿ ಇಂತಹ ಆಚಾರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ.
ಯಜ್ಞ ಎಂದಾಕ್ಷಣ ಹೋಮಕುಂಡದ ಮುಂದೆ ಕುಳಿತು ಮಂತ್ರ ಪಠಿಸುತ್ತಾ ಹವನ, ಹೋಮಗಳನ್ನು ನಡೆಸುವುದು ಮಾತ್ರ ಅಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಯಾವುದೆಲ್ಲಾ ಶ್ರೇಷ್ಠತಮವಾದ ಕಾರ್ಯಗಳೋ ಅವೆಲ್ಲವೂ ಯಜ್ಞವಾಗುತ್ತದೆ. ಬ್ರಹ್ಮಯಜ್ಞ (ಸಂಧ್ಯಾಕಾಲದಲ್ಲಿ, ಅಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮಾಡುವ ಸಂಧ್ಯಾವಂದನೆ), ದೇವಯಜ್ಞ (ಪಂಚಭೂತಗಳಾದ ಭೂಮಿ, ಆಕಾಶ, ವಾಯು, ಜಲ, ಅಗ್ನಿಗಳ ಸಂರಕ್ಷಣೆ, ಪೋಷಣೆಯ ಸಂಕಲ್ಪದೊಡನೆ ಮಾಡುವ ಪರಮಾತ್ಮನ ಸ್ತುತಿ), ಪಿತೃಯಜ್ಞ (ಹಿರಿಯರು ಸತ್ತ ನಂತರ ಮಾಡುವ ಶ್ರಾದ್ಧಕಾರ್ಯಗಳಾಗಿರದೆ ಅವರು ಬದುಕಿರುವಾಗ ಅವರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು), ಬಲಿವೈಶ್ವದೇವಯಜ್ಞ (ಮುಂದೆ ವಿವರಿಸಿದೆ) ಮತ್ತು ಅತಿಥಿ ಯಜ್ಞ (ಆಕಸ್ಮಿಕವಾಗಿ ಆಗಮಿಸುವ ಸಜ್ಜನರು, ಸಾಧು-ಸಂತರು, ವಿದ್ವಜ್ಜನರು, ಹಿರಿಯರು ಮುಂತಾದವರನ್ನು ಯಥೋಚಿತವಾಗಿ ಸತ್ಕರಿಸುವುದು) ಇವುಗಳನ್ನು ಪಂಚಮಹಾಯಜ್ಞಗಳೆಂದು ಹೆಸರಿಸಲಾಗಿದೆ.
ಪಂಚಮಹಾಯಜ್ಞಗಳಲ್ಲಿ ನಾಲ್ಕನೆಯದಾದ ಬಲಿವೈಶ್ವದೇವಯಜ್ಞ - ನಿಜಕ್ಕೂ ಒಂದು ಅದ್ಭುತ ವಿಚಾರ, ಉದಾತ್ತ ಕಲ್ಪನೆಗಳನ್ನೊಳಗೊಂಡ ಪ್ರತಿದಿನ ಮಾಡಬೇಕಾದ ಯಜ್ಞವಾಗಿದೆ. ಇದನ್ನು ಪ್ರತ್ಯಕ್ಷ ಆಚರಣೆಗೆ ತಂದಿರುವವರನ್ನು ನಾನು ಕಂಡಿಲ್ಲ. ಅಂತಹವರು ಇದ್ದರೆ ಅವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಈ ಯಜ್ಞದ ಆಚರಣೆಯ ಕ್ರಮ ಹೀಗಿದೆ. ಭೋಜನಕ್ಕಾಗಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಲ್ಲಿ ಹುಳಿ, ಉಪ್ಪು, ಖಾರ, ದ್ವಿದಳ ಧಾನ್ಯಗಳನ್ನು ಹೊರತುಪಡಿಸಿ ಉಳಿದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಪರಮಾತ್ಮನ ಸಾಕ್ಷಾತ್ಕಾರ ಮತ್ತು ಜಠರಾಗ್ನಿಯ ಪ್ರದೀಪ್ತತೆಗಾಗಿ, ಶಾಂತಿ, ಇತ್ಯಾದಿ ಸದ್ಗುಣಗಳ ಧಾರಣೆಗಾಗಿ, ಪ್ರಾಣಾಪಾನ ಪುಷ್ಟಿಗಾಗಿ, ವಿವಿಧ ಶಕ್ತಿಗಳ ಸಲುವಾಗಿ ಮತ್ತು ಸಮಸ್ತ ವಿದ್ವಜ್ಜನರ ಪ್ರಸನ್ನತೆಯ ಸಲುವಾಗಿ, ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯನ ಹಾಗೂ ರೋಗನಿರೋಧಕ ಶಕ್ತಿ ಪ್ರಾಪ್ತಿಗಾಗಿ, ಶರೀರಧಾರ್ಢ್ಯ ಪ್ರಾಪ್ತಿಗಾಗಿ, ಅಧ್ಯಯನಾನುಕೂಲ ವಿದ್ವಾಂಸರ ಪ್ರಸನ್ನತೆಗಾಗಿ, ನಮ್ಮ ಹಿರಿಯರು ಮತ್ತು ಪರಮಾತ್ಮನ ತೃಪ್ತಿಗಾಗಿ ಒಂದು ಮಂತ್ರಕ್ಕೆ ಒಂದು ಸಲದಂತೆ ಅಗ್ನಿಗೆ ಆಹುತಿ ನೀಡಬೇಕು. ಶಕ್ತಿಮೂಲವಾದ ಆಹಾರದ ಕಣಗಳು ಅಗ್ನಿಯಲ್ಲಿ ವಿಭಜಿತವಾಗಿ ವಾತಾವರಣದಲ್ಲಿ ಹರಡಿ ಸೇವಿಸುವವರಿಗೆ ಶಕ್ತಿಯನ್ನು ಉತ್ತೇಜಿಸುತ್ತವೆಯೆನ್ನಲಾಗಿದೆ. ಆ ಸಂದರ್ಭದಲ್ಲಿ ಹೇಳಲಾಗುವ 10 ಮಂತ್ರಗಳು:
ಓಂ ಅಗ್ನಯೇ ಸ್ವಾಹಾ|| ಓಂ ಸೋಮಾಯ ಸ್ವಾಹಾ|| ಓಂ ಅಗ್ನಿ ಸೋಮಾಭ್ಯಾಂ ಸ್ವಾಹಾ|| ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ|| ಓಂ ಧನ್ವಂತರಯೇ ಸ್ವಾಹಾ|| ಓಂ ಕುಹ್ವೈ ಸ್ವಾಹಾ|| ಓಂ ಅನುಮತ್ಯೈ ಸ್ವಾಹಾ|| ಓಂ ಪ್ರಜಾಪತಯೇ ಸ್ವಾಹಾ|| ಓಂ ಸಹ ದ್ವಾವಾ ಪೃಥಿವೀಭ್ಯಾಂ ಸ್ವಾಹಾ|| ಓಂ ಸ್ವಿಷ್ಟಕೃತೇ ಸ್ವಾಹಾ||
ನಂತರದಲ್ಲಿ ಒಂದು ಎಲೆಯ ಮೇಲೆ ಉಪ್ಪು ಹಾಕಲ್ಪಟ್ಟ ಸಿದ್ಧಪಡಿಸಿದ ಅನ್ನ, ಸಾರು, ಪಲ್ಯ, ರೊಟ್ಟಿ ಮುಂತಾದ ಆಹಾರಪದಾರ್ಥಗಳ ಒಂದು ಭಾಗವನ್ನು ಹರಡಿ, ಅದನ್ನು ಪುನಃ ಏಳು ಭಾಗಗಳಾಗಿ ವಿಂಗಡಿಸಿ, 'ಶ್ವಭ್ಯೋ ನಮಃ| ಪತಿತೇಭ್ಯೋ ನಮಃ| ಶ್ವಪಗ್ಯೋ ನಮಃ| ಪಾಪ ರೋಗಿಭ್ಯೋ ನಮಃ| ಗೋಭ್ಯೋ ನಮಃ| ವಾಯುಸೇಭ್ಯೋ ನಮಃ| ಕೃಮಿಭ್ಯೋ ನಮಃ|' ಎಂದು ಹೇಳಿ ಆ ಭಾಗಗಳನ್ನು ದೀನರಿಗೆ, ದುರ್ಬಲರಿಗೆ, ಹಸಿದವರಿಗೆ, ರೋಗಿಗಳಿಗೆ, ಗೋವು, ನಾಯಿ, ಮುಂತಾದ ಸಾಕುಪ್ರಾಣಿಗಳಿಗೆ, ಪಕ್ಷಿಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಕೊಡಬೇಕು. ನಂತರದಲ್ಲಿ ಸ್ವತಃ ಊಟ ಮಾಡುವುದು ಕ್ರಮ. ಸಾಮರಸ್ಯ, ಸ್ವಾರ್ಥತ್ಯಾಗ, ಪರಾರ್ಥ ಚಿಂತನೆಗೆ ಇಂಬು ಕೊಡುವ ಇಂತಹ ಕ್ರಿಯೆಯನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಮನುಷ್ಯ-ಮನುಷ್ಯರ ನಡುವೆಯೇ ಆ ಜಾತಿ, ಈ ಜಾತಿ, ಮೇಲು-ಕೀಳು, ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ, ಇತ್ಯಾದಿ ಭೇದ ಭಾವಗಳ ಮಹಾಪೂರವನ್ನೇ ಕಾಣುತ್ತಿರುವ ನಮಗೆ, ಮಾನವರಿರಲಿ, ಸಕಲ ಜೀವರಾಶಿಗಳ ಅಭ್ಯುದಯದ ಕಲ್ಪನೆ, ಮಾರ್ಗದರ್ಶನ ಮಾಡುವ ಈ ಕ್ರಿಯೆ ಅನುಕರಣೀಯವಾಗಿದೆ.
ನೋಡುವ ಕಣ್ಣುಗಳಿದ್ದರೆ ನಮಗೆ ಬಲಿವೈಶ್ವದೇವ ಯಜ್ಞದ ಉದ್ದೇಶವನ್ನು ಬದುಕಿನ ಅಂಗವಾಗಿಸಿಕೊಂಡ ಹಲವಾರು ಮಹನೀಯರು ಕಂಡುಬರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಶ್ರೀವೈಕುಂಠಮ್ ಕಲಾ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದ ಪಾಲಂ ಕಲ್ಯಾಣಸುಂದರಮ್ ತಮ್ಮ 30 ವರ್ಷಗಳ ಸೇವೆಯಲ್ಲಿ ಪಡೆದ ಸಂಬಳದ ಹಣವನ್ನು ಪೂರ್ಣವಾಗಿ ಬಡಬಗ್ಗರ ಸೇವೆಗಾಗಿ ವಿನಿಯೋಗಿಸಿದವರು. ಬ್ರಹ್ಮಚಾರಿಯಾಗಿದ್ದ ಇವರು ತಮ್ಮ ಅಗತ್ಯಗಳಿಗಾಗಿ ಹೋಟೆಲ್ ಮಾಣಿಯಂತಹ ಕೆಲಸಗಳನ್ನೂ ಮಾಡಿದವರು. ಪೆನ್ಶನ್ ಮತ್ತು ನಿವೃತ್ತಿ ಸಂಬಂಧವಾಗಿ ಬಂದ ಸುಮಾರು 10 ಲಕ್ಷ ರೂಗಳನ್ನೂ ಜಿಲ್ಲಾಧಿಕಾರಿಯವರ ನಿಧಿಗೆ ಕೊಟ್ಟು ನಿರಾಳರಾದವರು. ವಿಶ್ವಸಂಸ್ಥೆ ಇವರನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು, ಅಮೆರಿಕಾದ ಒಂದು ಸಂಸ್ಥೆ 'ಸಹಸ್ರಮಾನದ ಪುರುಷ', ಭಾರತ ಸರ್ಕಾರ 1990ರಲ್ಲಿ 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಇವರನ್ನು ಸನ್ಮಾನಿಸಿದೆ. 'ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು' ಎಂದು ಗುರುತಿಸಲ್ಪಟ್ಟವರಿವರು. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುನ್ನತ (noblest) ಉದಾತ್ತರಲ್ಲೊಬ್ಬರು' ಎಂದು ಗೌರವಿಸಿದೆ. ರೋಟರಿ ಇಂಟರ್‌ನ್ಯಾಷನಲ್ 2011ರಲ್ಲಿ ಇವರನ್ನು ಜೀವಮಾನದ ಸಾಧನೆಗಾಗಿ ಸನ್ಮಾನಿಸಿದೆ. ಸಹಸ್ರಮಾನದ ವ್ಯಕ್ತಿ ಎಂದು ಗೌರವಿಸಿದಾಗ ಇವರಿಗೆ ಕೊಡಲಾಗಿದ್ದ 30 ಕೋಟಿ ರೂ.ಗಳನ್ನೂ ಬಿಡಿಗಾಸೂ ಇಟ್ಟುಕೊಳ್ಳದೆ ಸಮಾಜಕ್ಕೇ ಧಾರೆ ಎರೆದುಬಿಟ್ಟ ಪುಣ್ಯಾತ್ಮ ಇವರು. ಯಾರು ಯಾರನ್ನೋ 'ಹೀರೋ'ಗಳು ಎಂದು ಭಾವಿಸುವ ನಮಗೆ ಕಲ್ಯಾಣಸುಂದರಮ್‌ರಂತಹವರು 'ಹೀರೋ'ಗಳಾಗಬೇಕು.
-ಕ.ವೆಂ.ನಾಗರಾಜ್.
T K Venkatarama Bharathy
ಪ್ರತ್ಯುತ್ತರಅಳಿಸಿoppide sir.. adare ee chithradalliya huduguarige dina oota needi batte kottu ashrya odagisidare... oodalu shalege theraluvare... (?)>>> naanu inthahavara hinde aneka sala hogi solanoppikondiddene.. adoo halligadina pradeshadalle alla nagaradalliyoo..
Yogish Belavadi
what a great thoughts in our culture.