ಆತ್ಮೀಯರೇ ಪ್ರಣಾಮಗಳು, ಕವಿಮನದಾಳದ ಮಾತುಗಳಿಗಾಗಿ ಕವಿಮನಕ್ಕೆ ತಮಗೆ ಹೃತ್ಪೂರ್ವಕ ಸ್ವಾಗತ

ಶುಕ್ರವಾರ, ಡಿಸೆಂಬರ್ 24, 2010

ಮೂಢ ಉವಾಚ -40

ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂವಿಕಲನಾಗದಿರೆಲೋ ಮೂಢ ||


ವಿಷಯ ಬಿಟ್ಟವನು ಸಂನ್ಯಾಸಿಯೆನಿಸುವನು
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||


ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||


ಮನಶುದ್ಧಿಯಿರದೆ ತಪವ ಮಾಡಿದೊಡೇನು
ದೇಹ ದಂಡಿಸಿದರೇನು ಅಂತರಂಗವ ಮರೆತು |
ಉಪವಾಸದಿಂ ಫಲವೇನು ವಿವೇಕವಿರದಲ್ಲಿ
ಆಚಾರದೊಳು ವಿಚಾರವಿರಲಿ ಮೂಢ ||
*************
-ಕವಿನಾಗರಾಜ್.

ಸೋಮವಾರ, ಡಿಸೆಂಬರ್ 20, 2010

ಮೂಢ ಉವಾಚ -39 : ಅರಿವು

ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ |
ದಾರಿ ಹಲವಿರಲು ಗುರಿಯಹುದು ಒಂದೆ
ಮನವೊಪ್ಪುವ ದಾರಿಯಲಿ ಸಾಗು ಮೂಢ ||


ಇರಲೆಮಗೆ ನಮ್ಮ ಪಥ ಬೇಕಿಲ್ಲ ಪರಪಥ
ಮನಕೊಪ್ಪುವ ಪಥದಿ ಸಾಗಲಿ ಸಕಲಜನ |
ಅವರ ದಾರಿ ಅವರಿಗಿರಲಿ ಗುರಿಯೊಂದೆ
ತಲುಪುವ ಗಮ್ಯವೊಂದೇ ಮೂಢ ||


ಬೆಳಕಿರುವೆಡೆಯಲ್ಲಿ ಕತ್ತಲೆಯು ಇದ್ದೀತೆ
ಜ್ಞಾನವಿರುವೆಡೆಯಲ್ಲಿ ಅಜ್ಞಾನ ಸುಳಿದೀತೆ |
ಅರಿವು ಬರಲಾಗಿ ತರತಮವು ಮಾಯ
ಅಭೇದಭಾವಿ ಅಮರನವನು ಮೂಢ ||


ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||
**************
-ಕವಿನಾಗರಾಜ್.

ಶನಿವಾರ, ಡಿಸೆಂಬರ್ 18, 2010

ಮೂಢ ಉವಾಚ -38

ಸತ್ಯಧರ್ಮಕೆ ಹೆಸರು ಕೋದಂಡರಾಮ 
ಹಿಡಿದನಾಯುಧವ ನೀತಿಪಾಲನೆಗಾಗಿ|
ಮನುಕುಲಕೆ ದಾರಿದೀವಿಗೆಯು ರಾಮ
ಬೆಳಕು ಕಂಡೆಡೆಯಲ್ಲಿ ಸಾಗು ನೀ ಮೂಢ||


ಅನುರೂಪ ದಾಂಪತ್ಯವಿರೆ ಮನೆಯು ಸ್ವರ್ಗ
ಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ|
ರಸಭಾವದನುರೂಪ ಶಬ್ದಗಳ ಜೋಡಿಸಲು
ಒಡಮೂಡುವುದುತ್ತಮ ಕಾವ್ಯ ಮೂಢ||


ಬಿಟ್ಟುಬಿಡುವನು ಸಾಧಕನು ತೊರೆಯುವನು
ಹೊರಮನದ ಕೋರಿಕೆಯನಲ್ಲಗಳೆಯುವನು|
ಅಂತರಂಗದ ಕರೆಯನುಸರಿಸಿ ಬಾಳುವನು
ಸಮಚಿತ್ತದಲಿ ಸಾಗುವನವನು ಮೂಢ||


ಸರ್ವಭೂತಾತ್ಮ ದೇವ ಸರ್ವರಿಗೆ ಸಮನು
ಮಿತ್ರರಾರೂ ಇಲ್ಲ ಶತ್ರುಗಳು ಮೊದಲಿಲ್ಲ|
ಜೀವಿಗಳಿವರು ಸಂಚಿತಾರ್ಜಿತ ಕರ್ಮಗಳಿಂ
ಭಿನ್ನ ಫಲ ಪಡೆದಿಹರೋ ಮೂಢ||
********************
-ಕವಿನಾಗರಾಜ್.

ಸೇವಾ ಪುರಾಣ -31: ಹೀಗೊಬ್ಬ 'ಹೀರೋ' !

     ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ. ಒಂದು ದಿನ ಸ್ನೇಹಿತನೊಂದಿಗೆ ಸಾಯಂಕಾಲದ ಹೊತ್ತಿನಲ್ಲಿ ಸಿನೆಮಾ ನೋಡಲು ಹೋಗಿದ್ದ. ಸಿನೆಮಾ ಪ್ರಾರಂಭವಾಗಿ ಹತ್ತು ನಿಮಿಷಗಳಾಗಿರಬಹುದು. ಆ ಯುವಕ ಕುಳಿತಿದ್ದ ಸೀಟಿನ ಹಿಂದಿನ ಸಾಲಿನಲ್ಲಿ ಮೊದಲೇ ಯಾರೂ ಕುಳಿತುಕೊಳ್ಳದಂತೆ ನೋಡಿಕೊಂಡು ಕಾದಿರಿಸಿದ್ದ ಎರಡು ಸೀಟುಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಆತನ ಪತ್ನಿ ಆಸೀನರಾದರು. ಸಬ್‌ಇನ್ಸ್‌ಪೆಕ್ಟರ್ ಯೂನಿಫಾರಮ್ಮಿನಲ್ಲೇ ಇದ್ದರು. ಹಳೆಯ ಕಾಲದ ಟಾಕೀಸುಗಳಲ್ಲಿ ಆಸನಗಳ ವ್ಯವಸ್ಥೆ ಹೇಳಿಕೊಳ್ಳುವ ಮಟ್ಟದಲ್ಲಿದ್ದಿರದೆ ಹಿಂದೆ ಕುಳಿತವರಿಗೆ, ಅದರಲ್ಲೂ ಕುಳ್ಳರಿಗೆ, ಮುಂದಿನವರ ತಲೆಗಳು ಅಡ್ಡವಾಗಿ ಅಕ್ಕ ಪಕ್ಕ ಬಗ್ಗಿ ನೋಡುವ ಸಂದರ್ಭಗಳು ಸಾಮಾನ್ಯವಾಗಿತ್ತು. ರಮೇಶ ಮತ್ತು ಅವನ ಸ್ನೇಹಿತ ಪರಸ್ಪರ ನೋಡಿಕೊಂಡು ಮಾತನಾಡುತ್ತಾ ಸಿನೆಮಾ ನೋಡುತ್ತಿದ್ದರಿಂದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಅವನ ತಲೆ ಅಡ್ಡ ಬಂದು ಸಿನೆಮಾ ನೋಡಲು ಅಡಚಣೆಯಾಗುತ್ತಿತ್ತೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ತಮ್ಮ ಲಾಠಿಯಿಂದ ರಮೇಶನ ತಲೆ ಸರಿಸಿದರು. ರಮೇಶ ಹಿಂತಿರುಗಿ ದುರುಗುಟ್ಟಿ ನೋಡಿ ಸುಮ್ಮನಾದ. ಸಬ್‌ಇನ್ಸ್‌ಪೆಕ್ಟರ್ ರಮೇಶನ ಸೀಟಿನ ಹಿಂಭಾಗದ ಮೇಲೆ ಬೂಟುಕಾಲಿರಿಸಿ ಕುಳಿತಿದ್ದು ಅವನಿಗೆ ಅಸಹನೀಯವೆನಿಸಿದರೂ ಸುಮ್ಮನೆ ಇರಬೇಕಾಗಿದ್ದ ಸ್ಥಿತಿ ಅವನದಾಗಿತ್ತು. ಮತ್ತೆ ಹತ್ತು ಹದಿನೈದು ನಿಮಿಷಗಳಾಗಿರಬಹುದು. ಉದ್ದವಾಗಿ ಧೃಢಕಾಯನಾಗಿದ್ದ ರಮೇಶನ ಹಿಂದೆ ಕುಳಿತಿದ್ದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಸರಿಯಾಗಿ ಸಿನೆಮಾ ನೋಡಲಾಗದೆ ಚಡಪಡಿಸುತ್ತಿದ್ದರೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ಪುನಃ ಲಾಠಿಯಿಂದ ಸ್ವಲ್ಪ ಬಿರುಸಾಗಿ ಅವನ ತಲೆ ತಳ್ಳಿ 'ಸರಿಯಾಗಿ ಕೂತು ನೋಡಲೇ ಬದ್ಮಾಶ್' ಎಂದರಂತೆ. ರಮೇಶನಿಗೆ ತಲೆ ಕೆಟ್ಟುಹೋಯಿತು. ಎದ್ದು ತಿರುಗಿ ನಿಂತವನೇ ಸಬ್‌ಇನ್ಸ್‌ಪೆಕ್ಟರ್ ಕೈಲಿದ್ದ ಲಾಠಿ ಕಿತ್ತುಕೊಂಡವನೇ ಅವರಿಗೆ ಎರಡು ಬಾರಿಸಿಬಿಟ್ಟ. ಸಬ್‌ಇನ್ಸ್‌ಪೆಕ್ಟರ್ ಸಹ ಅವನಿಗೆ ಹೊಡೆದರು. ಜಗಳ ಜೋರಾಯಿತು. ರಮೇಶ ಸಬ್‌ಇನ್ಸ್‌ಪೆಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಹೊಡೆಯುತ್ತಾ ಅವರನ್ನು ಬಾಲ್ಕನಿಯಿಂದ ಕೆಳಕ್ಕೆ ಎಳೆದು ತಂದ. ಅವರ ಪತ್ನಿ ಇಬ್ಬರನ್ನೂ ಸುಮ್ಮನಿರಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಕೆ ಟಾಕೀಸಿನ ಹತ್ತಿರದಲ್ಲೇ ಇದ್ದ ಪೋಲಿಸ್ ಠಾಣೆಗೆ ಓಡಿಹೋಗಿ ಸುದ್ದಿ ಕೊಟ್ಟಿದ್ದೇ ತಡ ಧಾವಿಸಿ ಬಂದ ಪೋಲಿಸ್ ಪೇದೆಗಳು ರಮೇಶನನ್ನು ಬಂಧಿಸಿದರು. ಅಂದು ರಾತ್ರಿ ಠಾಣೆಯಲ್ಲಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಲಿಲ್ಲ ಎಂದರೆ ಯಾರೂ ಒಪ್ಪುವುದಿಲ್ಲ. ಮರುದಿನ ಬೆಳಿಗ್ಗೆ ಅವನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿ ಜೈಲಿಗೆ ದಾಖಲಿಸಿದರು. ಸ್ಥಳೀಯ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಮುಖವಾಗಿ ಪ್ರಕಟವಾಯಿತು. ಜನರು ಸಬ್‌ಇನ್ಸ್‌ಪೆಕ್ಟರ್‌ರ ದೌರ್ಜನ್ಯ ಖಂಡಿಸಿ  ಬಂದ್ ನಡೆಸಿದರು. ತಾಲ್ಲೂಕು ಕಛೇರಿಯ ಮುಂದೆ ಸಭೆ ನಡೆಸಿ ಭಾಷಣಗಳನ್ನು ಮಾಡಿ ರಮೇಶನನ್ನು ಬಿಡುಗಡೆಗೊಳಿಸಲು ಮನವಿ ಸಲ್ಲಿಸಿದರು. ಎರಡು ದಿನಗಳ ನಂತರ ಅವನು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ವೇಳೆಗಾಗಲೇ ಅವನು 'ಹೀರೋ' ಎನ್ನಿಸಿಕೊಂಡಿದ್ದ.
     ಧೃಢ ಮೈಕಟ್ಟಿನ ಆದರೆ ಹುಂಬನಾದ ರಮೇಶನ ವ್ಯಕ್ತಿತ್ವವೇ ಬದಲಾಗಿತ್ತು. ಅವನನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರಿಗೆ ಕಡಿಮೆಯಿರಲಿಲ್ಲ. ನಂತರದ ದಿನಗಳಲ್ಲಿ ಪೋಲಿಸರೂ, ರಾಜಕಾರಣಿಗಳೂ, ಬಲಾಢ್ಯರೂ ಅವನಿಂದ ಉಪಯೋಗ ಪಡೆಯಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಅವನ ಸ್ವಭಾವ ಬದಲಾಯಿತು. ಆಗಾಗ್ಯೆ ಪ್ರಕರಣಗಳು ದಾಖಲಾಗುತ್ತಿತ್ತು. ಒಮ್ಮೆ ಆತ ನನ್ನನ್ನು ಉದ್ದೇಶಿಸಿ "ಗುರುಗಳೇ, ಏನಾದರೂ ಕೆಲಸ ಇದ್ದರೆ ಸಂಕೋಚ ಮಾಡಿಕೊಳ್ಳದೆ ಕೇಳಿ. ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ಹೇಳಿ, ಹೆದರಬೇಡಿ, ನಾನಿದ್ದೇನೆ. ಅವರ ಬೆಂಡೆತ್ತಿಬಿಡುತ್ತೇನೆ" ಎಂದು ಹೇಳಿದ್ದ. ಮುಗುಳ್ನಗೆ ಮಾತ್ರ ನನ್ನ ಪ್ರತಿಕ್ರಿಯೆಯಾಗಿತ್ತು.

ಶುಕ್ರವಾರ, ಡಿಸೆಂಬರ್ 17, 2010

ಮೂಢ ಉವಾಚ -37 : ಗುರುಮಾರ್ಗ

ಮನಶುದ್ಧಿಯಿಲ್ಲದಿರೆ ವೇದಾಂತದಿಂದೇನು
ಗುರುಭಕ್ತಿಯಿಲ್ಲದಿರೆ ವಿವೇಕ ಬಹುದೇನು|
ಸುಜನರೊಡನಾಡದಿರೆ ಶುದ್ದಮನವೆಲ್ಲಿಯದು
ಸರಿಯಿರದ ದಾರಿಯಲಿ ಗುರಿ ದೂರ ಮೂಢ||


ತನ್ನ ತಾನರಿಯೆ ಗುರುಕೃಪೆಯು ಬೇಕು
ಅರಿತುದನು ವಿಚಾರ ಮಾಡುತಿರಬೇಕು|
ವಿಚಾರ ಮಥನದ ಫಲವೆ ನಿತ್ಯ ಸತ್ಯ
ವೇದವಿದಿತ ಸತ್ಯ ತತ್ವವಿದು ಮೂಢ||


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಗುರುವಾಣಿ ಸುಜನವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||


ಸ್ವರ್ಗ ಶಾಶ್ವತವಲ್ಲ ನರಕ ಶಾಶ್ವತವಲ್ಲ
ಶಾಶ್ವತವದೊಂದೆ ಸಚ್ಚಿದಾನಂದ ಭಾವ|
ಗುರುಮಾರ್ಗವನುಸರಿಸಿ ಸಾಧನೆಯ ಮಾಡೆ
ಭದ್ರಪದವೊಲಿಯುವುದು ಮೂಢ||
*************
-ಕವಿನಾಗರಾಜ್.

ಬುಧವಾರ, ಡಿಸೆಂಬರ್ 15, 2010

ಸೇವಾ ಪುರಾಣ -30: ಬಂದಿಯಾದ ಸಬ್‌ಇನ್ಸ್‌ಪೆಕ್ಟರರ ಕಥೆ


    ಸುಮಾರು 30 ವರ್ಷಗಳ ಹಿಂದಿನ ಘಟನೆಯಿದು. ಹಾಸನ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರದಲ್ಲಿನ ಪೋಲಿಸ್ ಠಾಣೆಗೆ ಬಂದಿದ್ದ ರೈತನಾಯಕರೊಬ್ಬರು ಸಬ್ ಇನ್ಸ್‌ಪೆಕ್ಟರರೊಂದಿಗೆ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಸಬ್‌ಇನ್ಸ್‌ಪೆಕ್ಟರರ ರಿವಾಲ್ವರ್‌ನಿಂದ ಹಾರಿದ ಗುಂಡು ಆ ರೈತನಾಯಕನ ಪ್ರಾಣ ತೆಗೆದಿತ್ತು. ರಿವಾಲ್ವರ್ ಅನ್ನು ಕೈಬೆರಳಿನಲ್ಲಿ ಸಿಕ್ಕಿಸಿಕೊಂಡು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿತೆಂಬುದು ಸಬ್‌ಇನ್ಸ್‌ಪೆಕ್ಟರರ ವಾದವಾಗಿತ್ತು. ವಾದದ ಭರದಲ್ಲಿ ಸಿಟ್ಟಿನಿಂದ ಗುಂಡು ಹಾರಿಸಿ ಕೊಂದರೆಂದು ಜನರ ಅನಿಸಿಕೆಯಾಗಿತ್ತು. ಈ ವಿಚಾರದಲ್ಲಿ ಬಹಳ ಚರ್ಚೆ, ವಾದ-ವಿವಾದಗಳು, ಪ್ರತಿಭಟನೆಗಳು ನಡೆದವು. ಅಂತಿಮವಾಗಿ ಕೊಲೆ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರರನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ನ್ಯಾಯಾಂಗ ಬಂಧನಕ್ಕೆ ಒಳಗಾದ ಅವರಿಗೆ ಜಾಮೀನು ಸಿಗಲಿಲ್ಲ. ಅವರನ್ನು ವಾಸ್ತವವಾಗಿ ಹಾಸನದ ಜೈಲಿನಲ್ಲಿ ಇರಿಸಬೇಕಾಗಿತ್ತು. ಆದರೆ ಹೊಳೆನರಸಿಪುರದ ಜೈಲಿನಲ್ಲಿ ಇಡಲು ವ್ಯವಸ್ಥೆ ಮಾಡಿದರು. ಕಾರಣ ಅರ್ಥವಾಗದುದೇನಾಗಿರಲಿಲ್ಲ. ಹಾಸನದ ಜೈಲಿನ ಸಿಬ್ಬಂದಿ ಕಾರಾಗೃಹ ಇಲಾಖೆಗೆ ಸೇರಿದವರಾಗಿದ್ದರು. ಅವರ ಮೇಲೆ ಪೋಲಿಸ್ ಇಲಾಖೆಯ ನಿಯಂತ್ರಣ ಇರಲಿಲ್ಲ. ಹೊಳೆನರಸಿಪುರದ ಜೈಲಾದರೆ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು, ಜೈಲು ಸೂಪರಿಂಟೆಂಡೆಂಟ್ ಆಗಿದ್ದ ನಾನು ಕಂದಾಯ ಇಲಾಖೆಗೆ ಸೇರಿದವನಾಗಿದ್ದು, ಪದನಿಮಿತ್ತ ಆ ಹುದ್ದೆಯನ್ನು ಹೊಂದಿದ್ದೆ.ತಮ್ಮ ಇಲಾಖೆಯ ಅಧಿಕಾರಿಯನ್ನು ಚೆನ್ನಾಗಿ ನೋಡಿಕೊಳ್ಳಬಹುದೆಂಬುದು ಅವರ ಇರಾದೆಯಾಗಿತ್ತು. ಅದಕ್ಕೆ ತಕ್ಕಂತೆ ಆ ಬಂದಿ ಅಧಿಕಾರಿಯನ್ನು ಸಹೋದ್ಯೋಗಿಗಳು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಊಟ, ತಿಂಡಿಗಳು ಅಲ್ಲಿನ ಪೋಲಿಸರ ಮನೆಗಳಿಂದಲೇ ಬರುತ್ತಿತ್ತು. ಸಾಯಂಕಾಲದಲ್ಲಿ ಪೋಲಿಸ್ ಜೀಪಿನಲ್ಲಿ ಹೊರಗಡೆ ತಿರುಗಾಡಲೂ ಕರೆದೊಯ್ಯುತ್ತಿದ್ದರಂತೆ. ಒಂದು ಸಲ ಅವರನ್ನು ಸಿನೆಮಾ ಟಾಕೀಸಿಗೆ ಸಿನೆಮಾ ನೋಡಲೂ ಕರೆದುಕೊಂಡು ಹೋಗಿದ್ದರಂತೆ. ಸ್ಥಳೀಯ ಪತ್ರಿಕೆಗಳಲ್ಲಿ 'ಹೊಳೆನರಸಿಪುರದ ಜೈಲಿನಲ್ಲಿ ಕೈದಿ ಸಬ್ ಇನ್ಸ್‌ಪೆಕ್ಟರರಿಗೆ ರಾಜೋಪಚಾರ ಎಂದು ವರದಿಗಳೂ ಬಂದವು. ನನಗೆ ಇದೆಲ್ಲಾ ಇಷ್ಟವಾಗದೆ ಹೊಳೆನರಸಿಪುರದ ಸಬ್ ಇನ್ಸ್‌ಪೆಕ್ಟರರಿಗೆ ಇನ್ನು ಮುಂದೆ ಇಂತಹ ಸಂಗತಿಗಳಿಗೆ ಅವಕಾಶ ಕೊಡಬಾರದೆಂದು, ನನ್ನ ಗಮನಕ್ಕೆ ಬಂದರೆ ಡಿ.ಜಿ.ಪಿ.ರವರ ಗಮನಕ್ಕೆ ವರದಿ ಕೊಡಬೇಕಾಗುತ್ತದೆಂದು ತಿಳಿಸಿದೆ. ಗಾರ್ಡುಗಳಿಗೂ ಎಚ್ಚರಿಕೆ ನೀಡಿದೆ.
     ಪತ್ರಿಕೆಯಲ್ಲಿ ವರದಿ ಬಂದ ನಂತರ ನಾನು ಆಗಾಗ್ಗೆ ಜೈಲಿಗೆ ಭೇಟಿ ಕೊಟ್ಟು ಬರುತ್ತಿದ್ದೆ. ನನ್ನ ಕಣ್ಣು ತಪ್ಪಿಸಿ ಅವರು ಮೊದಲಿನ ಚಾಳಿ ಮುಂದುವರೆಸಿದ್ದರು. ಹೀಗಾಗಿ ನಾನು ಎರಡು ದಿನದ ನಂತರ ಸಾಯಂಕಾಲ ಮನೆಗೆ ಹೋದಂತೆ ಮಾಡಿ ಹತ್ತು ನಿಮಿಷ ಬಿಟ್ಟು ಪುನಃ ಅನಿರೀಕ್ಷಿತವಾಗಿ ಜೈಲಿಗೆ ಭೇಟಿ ಕೊಟ್ಟೆ. ಆ ಸಮಯದಲ್ಲಿ ಜೈಲಿನ ಒಳ ಆವರಣದಲ್ಲಿ ಇಡಲಾಗಿದ್ದ ಎರಡು ಬೆತ್ತದ ಕುರ್ಚಿಗಳಲ್ಲಿ ಒಂದರಲ್ಲಿ ಬಂದಿ ಅಧಿಕಾರಿ ಇನ್ನೊಂದರಲ್ಲಿ ಆಗ ಕ.ರಾ.ರ.ಸಾ.ಸಂಸ್ಥೆಯ ಡಿವಿಷನಲ್ ಕಂಟ್ರೋಲರ್ ಮತ್ತು ಉಪ ಜನರಲ್ ಮೇನೇಜರ್ ಆಗಿದ್ದ ವ್ಯಕ್ತಿ ಕುಳಿತು ಚಹ ಹೀರುತ್ತಾ ಕುಶಲೋಪರಿ ಮಾತುಕಥೆಗಳನ್ನಾಡುತ್ತಿದ್ದರು. ನನ್ನನ್ನು ನೋಡಿದ ಅವರು "ಬನ್ನಿ ಸಾಹೇಬರೇ, ಕುಳಿತುಕೊಳ್ಳಿ. ಏಯ್, ಸಾಹೇಬರಿಗೆ ಒಳ್ಳೆಯ ಟೀ ತೆಗೆದುಕೊಂಡು ಬನ್ನಿ" ಎಂದು ಅಲ್ಲಿದ್ದ ಗಾರ್ಡಿಗೆ ಹೇಳಿದರು. ನಾನು ಗಾರ್ಡ್ ಅನ್ನು ದುರುಗುಟ್ಟಿ ನೋಡಿದೆ. ಆತ ಪೆಚ್ಚಾಗಿ ನಿಂತಿದ್ದ. ನನಗೆ ಸಿಟ್ಟು ಬಂದಿತ್ತು. ನಾನು ಆ ಜಿಲ್ಲಾ ಮಟ್ಟದ ಅಧಿಕಾರಿಗೆ "ನೀವು ಜಿಲ್ಲಾ ಮಟ್ಟದ ಅಧಿಕಾರಿಯಿರಬಹುದು. ಆದರೆ ನಿಮ್ಮ ಅಧಿಕಾರ ವ್ಯಾಪ್ತಿ ಇಲ್ಲಿಲ್ಲ. ನೀವು ಇಲ್ಲಿ ಯಾರ ಅನುಮತಿ ಪಡೆದು ಒಳಗೆ ಬಂದಿರಿ? ನನ್ನ ಅನುಮತಿ ಪಡೆಯದೆ ಒಳಗೆ ಬಂದಿದ್ದಲ್ಲದೆ ನನ್ನ ಜೈಲಿನಲ್ಲೇ ನನಗೇ ಉಪಚಾರ ಮಾಡುವಷ್ಟು ಧೈರ್ಯ ನಿಮಗೆ ಹೇಗೆ ಬಂತು? ನಿಮ್ಮನ್ನು ನೀವು ಏನೆಂದು ತಿಳಿದುಕೊಂಡಿದ್ದೀರಿ? ಇದರ ಪರಿಣಾಮ ಏನು ಅನ್ನುವುದು ನಿಮಗೆ ಗೊತ್ತೆ?" ಎಂದೆಲ್ಲಾ ಹೇಳಿದ್ದಲ್ಲದೆ ಗುಮಾಸ್ತರನ್ನು ಕರೆಯಿಸಿ "ಈಗಲೇ ಅವರ ಹೇಳಿಕೆ ಪಡೆಯಿರಿ, ಅವರನ್ನು ಬಿಟ್ಟವರು ಯಾರು, ಏಕೆ ಬಿಟ್ಟರು, ಅವರು ಯಾವ ಉದ್ದೇಶಕ್ಕೆ ಬಂದರು, ಈ ಎಲ್ಲಾ ಅಂಶ ಬರುವಂತೆ ಹೇಳಿಕೆ ದಾಖಲಿಸಿಕೊಳ್ಳಿ" ಎಂದು ಸೂಚನೆ ಕೊಟ್ಟೆ. ಈ ಪ್ರಕರಣದ ಬಗ್ಗೆ ಡಿ.ಜಿ.ಪಿ.ರವರಿಗೂ ಒಂದು ವರದಿ ಸಿದ್ಧ ಮಾಡಿ ಎಂತಲೂ ಹೇಳಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಬಗ್ಗೆ ಅವರು ಗಾಬರಿಗೊಂಡಿದ್ದರು. ಮುಖದ ಬೆವರು ಒರೆಸಿಕೊಳ್ಳುತ್ತಾ 'ತಪ್ಪಾಗಿದೆ, ಕ್ಷಮಿಸಿ' ಎಂದು ಬೇಡಿಕೊಂಡರು. ಗಾರ್ಡುಗಳೂ 'ಇನ್ನುಮುಂದೆ ಹೀಗೆ ಮಾಡುವುದಿಲ್ಲ, ನಮ್ಮ ಮೇಲಾಧಿಕಾರಿಗಳ ಮಾತು ಕೇಳದಿದ್ದರೆ ನಮಗೆ ಉಳಿಗಾಲವಿಲ್ಲ, ಕೇಳಿದರೆ ನಿಮ್ಮಿಂದ ನಮಗೆ ಉಳಿಗಾಲವಿಲ್ಲ. ನಮಗೆ ಏನು ಮಾಡಬೇಕೋ ತೋಚುತ್ತಿಲ್ಲ. ಈಸಲಕ್ಕೆ ಕ್ಷಮಿಸಿ' ಎಂದು ಕೇಳಿಕೊಂಡಾಗ ಎಚ್ಚರಿಕೆ ನೀಡಿ ಮುಗಿಸಿದೆ. ಆ ಅಧಿಕಾರಿ ಬಿಟ್ಟರೆ ಸಾಕೆಂಬಂತೆ ಅಲ್ಲಿಂದ ಜಾಗ ಖಾಲಿ ಮಾಡಿದರು. ಬೆತ್ತದ ಕುರ್ಚಿಗಳನ್ನು ಎಲ್ಲಿಂದ ತಂದರೋ ಅಲ್ಲಿಗೆ ವಾಪಸು ಇಡಲು ಸೂಚಿಸಿದೆ. ಬಂದಿ ಸಬ್‌ಇನ್ಸ್‌ಪೆಕ್ಟರ್ ಮಾತಾಡದೇ ನನ್ನನ್ನು ದುರುಗುಟ್ಟಿಕೊಂಡು ನೋಡಿ ತಮ್ಮ ಸೆಲ್‌ಗೆ ಹೋದರು.
     ಈ ಬಂದಿಯನ್ನು ಇಲ್ಲಿ ಜೈಲಿನಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲವೆಂದು ನನಗೆ ತೋರಿತು. ಮರುದಿನ ಬೆಳಿಗ್ಗೆ ಬಂದವನೇ ಆರೋಪಿಯನ್ನು ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ಸಿದ್ಧಪಡಿಸಿ ಕೂಡಲೇ ಕಳುಹಿಸಲು ಸೂಚನೆ ಕೊಟ್ಟೆ. ಸರ್ಕಲ್ ಇನ್ಸ್‌ಪೆಕ್ಟರರು ನನ್ನನ್ನು ಭೇಟಿ ಮಾಡಿ ಬಂದಿಯನ್ನು ಹೊಳೆನರಸಿಪುರದ ಜೈಲಿನಲ್ಲೇ ಉಳಿಸುವಂತೆ ಕೋರಿದರು. ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಗೊತ್ತಿದ್ದೂ ಈ ಕೋರಿಕೆ ಎಷ್ಟರಮಟ್ಟಿಗೆ ಸರಿ? ಎಂದು ಕೇಳಿದ ನಾನು ನನ್ನ ನಿರ್ಧಾರಕ್ಕೆ ಬದ್ಧನಾದೆ. ನಂತರದಲ್ಲಿ ತಿಳಿದದ್ದೇನೆಂದರೆ ಎದೆನೋವಿನ ನೆಪ ಹೇಳಿ ಅವರನ್ನು ಪೋಲಿಸರು ಆಸ್ಪತ್ರೆಗೆ ಸೇರಿಸಿದ್ದರು. ಈ ಹಂತದಲ್ಲಿ ಅವರನ್ನು ವರ್ಗಾಯಿಸುವಂತಿರಲಿಲ್ಲ. ನಾನು ಸುಮ್ಮನಿರಬೇಕಾಯಿತು. ಎರಡು ದಿನದ ನಂತರ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಭೇಟಿ ಮಾಡಿ ರಹಸ್ಯವಾಗಿ ಚರ್ಚಿಸಿದೆ. ಅವರನ್ನು ಒಪ್ಪಿಸಿ ಎದೆ ನೋವಿಗೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಬಂದಿಯನ್ನು ಹಾಸನದ ಆಸ್ಪತ್ರೆಗೆ ಕಳಿಸಲು ಅವರಿಂದ ಪತ್ರ ಪಡೆದೆ. ಅದನ್ನು ಆಧರಿಸಿ ಬಂದಿಯನ್ನು ಹಾಸನದಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಹಾಸನದ ಜೈಲಿಗೆ ವರ್ಗಾಯಿಸಿದ ವಾರೆಂಟ್ ನೀಡಿ ಅರ್ಧ ದಿನ ರಜೆ ಹಾಕಿ ಹಾಸನಕ್ಕೆ ಹೊರಟುಹೋದೆ. ಸರ್ಕಲ್ ಇನ್ಸ್‌ಪೆಕ್ಟರರು ಸಿಟ್ಟು ಮಾಡಿಕೊಂಡು ನನ್ನನ್ನು ನೋಡಿಕೊಳ್ಳುವುದಾಗಿ ಧಮಕಿ ಹಾಕಿದ್ದ ವಿಷಯ ನಂತರ ತಿಳಿಯಿತು. ವೈದ್ಯರ ಮೇಲೂ ಕೂಗಾಡಿದ್ದರಂತೆ. ನನ್ನನ್ನು ಹುಡುಕಿಕೊಂಡು ಪೋಲಿಸ್ ಸಿಬ್ಬಂದಿ ಹಲವಾರು ಸಲ ನನ್ನ ಮನೆಗೆ ಬಂದಿದ್ದರು. ಆಗ ಮೊಬೈಲ್ ದೂರವಾಣಿ ಬಳಕೆಗೆ ಬಂದಿರದಿದ್ದುದು ಒಳ್ಳೆಯದೇ ಆಗಿತ್ತು. ಇಂತಹ ಒತ್ತಡ ತಪ್ಪಿಸಿಕೊಳ್ಳುವ ಸಲುವಾಗೇ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಸಾಯಂಕಾಲ ಬಹು ಹೊತ್ತಾದರೂ ನಾನು ಸಿಗದಿದ್ದಾಗ ವಿಧಿಯಿಲ್ಲದೇ ಬಂದಿಯನ್ನು ಹಾಸನದ ಜೈಲಿಗೆ ಕರೆದುಕೊಂಡು ಹೋಗಿದ್ದರು. ಆ ವಿಷಯ ಖಚಿತಪಡಿಸಿಕೊಂಡ ನಂತರವೇ ನಾನು ಮರಳಿ ಬಂದದ್ದು.
     ಎರಡು ವಾಕ್ಯಗಳಲ್ಲಿ ಮುಂದಿನ ಬೆಳವಣಿಗೆ ಹೇಳಿ ಮುಗಿಸುವೆ. ಹಲವಾರು ತಿಂಗಳುಗಳ ಕಾಲ ಪ್ರಕರಣ ನಡೆದು ಆರೋಪ ಸಾಬೀತಾಗಲಿಲ್ಲವೆಂದು ಈ ಆರೋಪಿಯ ಬಿಡುಗಡೆಯಾದ ಸುದ್ದಿ ಪತ್ರಿಕೆಗಳಲ್ಲಿ ಬಂದಿತು. ನಂತರದ ವರ್ಷಗಳಲ್ಲಿ ಅವರಿಗೆ ಬಡ್ತಿಗಳೂ ಸಿಕ್ಕಿದವು.

ಸೋಮವಾರ, ಡಿಸೆಂಬರ್ 13, 2010

ಮೂಢ ಉವಾಚ -36 : ದೇವ

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ
ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ|
ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನ|
ಸರ್ವೋತ್ತಮರಲಿರುವವನವನೆ ಮೂಢ||


ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ
ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ|
ಅಚ್ಚರಿಯ ಆಕಾಶಗಳೆಲ್ಲದರ ಕಾರಕನು
ಪ್ರೇರಕನು ಅವನಲ್ಲವೇನು ಮೂಢ||


ತಾಯಿಯು ಅವನೆ ತಂದೆಯು ಅವನ|
ಬಂಧುವು ಅವನೆ ಬಳಗವು ಅವನೆ|
ವಿದ್ಯೆಯು ಅವನೆ ಸಕಲಸಿರಿಯವನೆ
ಸಕಲ ಸರ್ವವವನಲ್ಲದಿನ್ಯಾರು ಮೂಢ||


ಪುಲ್ಲಿಂಗಿಯಲ್ಲ ಸ್ತ್ರೀಲಿಂಗಿಯಲ್ಲ ನಿರ್ಲಿಂಗಿಯಲ್ಲ
ಪುಲ್ಲಿಂಗಿಯೂ ಹೌದು ಸ್ತ್ರೀಲಿಂಗಿಯೂ ಹೌದು|
ನಿರ್ಲಿಂಗಿಯೂ ಹೌದು ಏನಲ್ಲ ಏನಹುದು
ಎಲ್ಲವೂ ಅವನೆ ಅವನು ಅವನೆ ಮೂಢ||
****************
-ಕವಿನಾಗರಾಜ್.

ಶುಕ್ರವಾರ, ಡಿಸೆಂಬರ್ 10, 2010

ಸೇವಾಪುರಾಣ -29: ಒಂದು ಅಮಾನವೀಯ ವಿಕೃತ ಘಟನೆ



     ಒಂದು ದಿನ ಮಧ್ಯಾಹ್ನ ಸುಮಾರು ಒಂದು ಘಂಟೆಯ ಸಮಯದಲ್ಲಿ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಅವಳು ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಬಂಧಿಸಿ ಮೊಕದ್ದಮೆ ಹೂಡಿದ್ದರು. ಆಕೆಯನ್ನು ದಾಖಲು ಮಾಡಿಕೊಂಡು ಮಧ್ಯಾಹ್ನ ಊಟ ಮಾಡಿಕೊಂಡು ಬಂದ ನಂತರ ಆಕೆಯನ್ನು ಹಾಸನದ ಜೈಲಿಗೆ ವರ್ಗಾಯಿಸಲು ವಾರೆಂಟ್ ಸಿದ್ಧಪಡಿಸಿಡಲು ಗುಮಾಸ್ತರಿಗೆ ತಿಳಿಸಿ ನಾನು ಮನೆಗೆ ಊಟಕ್ಕೆ ಹೋದೆ. ಮನೆಗೆ ಹೋಗಿ ಹತ್ತು ನಿಮಿಷವಾಗಿರಬಹುದು. ಗುಮಾಸ್ತ ಓಡುತ್ತಾ ಮನೆಗೆ ಬಂದವನು ಮಹಿಳಾ ಬಂದಿಯ ಆರೋಗ್ಯ ತುಂಬಾ ಕೆಟ್ಟಿದೆಯೆಂದೂ ಆಕೆಗೆ ಬಹಳ ಬ್ಲೀಡಿಂಗ್ ಆಗುತ್ತಿದೆಯೆಂದೂ ತಿಳಿಸಿದ. ಆಕೆಯನ್ನು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ಕೊಟ್ಟು ಡಾಕ್ಟರರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಮಾಡಲು ಕೋರಿದೆ. ನಾನೂ ಆಸ್ಪತ್ರ್ರೆಗೆ ಧಾವಿಸಿದೆ. ಆಕೆಗೆ ಗರ್ಭಪಾತವಾಗಿತ್ತು. ತಕ್ಷಣದಲ್ಲಿ ಆಕೆಗೆ ಚಿಕಿತ್ಸೆಯಾಗಿರದಿದ್ದಲ್ಲಿ ಆಕೆಯ ಜೀವಕ್ಕೆ ಅಪಾಯವಿತ್ತು. ಆಕೆಯನ್ನು ಹಾಸನದ ಜೈಲಿಗೆ ಕಳಿಸುವ ವಿಚಾರ ಬದಲಾಯಿಸಿ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲೆ ಇರಿಸಲು ನಿರ್ಧರಿಸಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಳಸಲು ಅವಕಾಶವಿದ್ದುದು ಇಪ್ಪತ್ತೈದು ರೂಪಾಯಿ ಮಾತ್ರ. ಹೆಚ್ಚಿನ ಮೊಬಲಗು ಬೇಕಾದರೆ ಡಿ.ಜಿ.ಪಿ.ರವರಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಬೇಕಿತ್ತು. ಆಕೆಯನ್ನು ನೋಡಲಾಗಲೀ, ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲಾಗಲೀ ಯಾರೂ ಬಂದಿರಲಿಲ್ಲ. ಆಕೆ ಚೇತರಿಸಿಕೊಳ್ಳಲು ಹನ್ನೆರಡು ದಿನಗಳೇ ಬೇಕಾಯಿತು. ಅಲ್ಲಿಯವರೆಗೆ ಅವಳಿಗೆ ನನ್ನ ಮನೆಯಿಂದಲೇ ಊಟ ತರಿಸಿಕೊಡುತ್ತಿದ್ದೆ. ಆಸ್ಪತ್ರೆಯಲ್ಲಿ ಸಿಗದಿದ್ದ ಔಷಧಿ ಹೊರಗೆ ಖರೀದಿಸಿಕೊಟ್ಟೆ. ಪ್ರತಿದಿನ ಸಾಯಂಕಾಲ ಆಕೆಯನ್ನು ಕಾಣಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಆಕೆ ತಿಳಿಸಿದ ವಿಷಯ ಆಘಾತಕರವಾಗಿತ್ತು, ಜಿಗುಪ್ಸೆ ಮೂಡಿಸುವಂತಿತ್ತು. ಸರಗಳ್ಳತನ ಮಾಡುತ್ತಿದ್ದಳೆಂದು ಪೋಲಿಸರು ಅವಳನ್ನು ಬಂಧಿಸಿದ ನಂತರ ೨೪ ಘಂಟೆಗಳ ಒಳಗೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಆಕೆಯನ್ನು ಎರಡು ರಾತ್ರಿಗಳು ಠಾಣೆಯಲ್ಲೇ ಬಂಧಿಸಿಟ್ಟಿದ್ದರಂತೆ. ಗರ್ಭಿಣಿಯಾಗಿದ್ದ ಆಕೆಯನ್ನು ಠಾಣೆಯಲ್ಲಿ ಇಡೀ ರಾತ್ರಿ ಸಮಯದಲ್ಲಿ ಬೆತ್ತಲೆಯಾಗಿರುವಂತೆ ಮಾಡಿ ಹಿಂಸಿಸಿ ವಿಕೃತವಾಗಿ ವರ್ತಿಸುತ್ತಿದ್ದುದಲ್ಲದೆ ಇಬ್ಬರು ಅತ್ಯಾಚಾರ ಮಾಡಿದ್ದರಂತೆ. ಆಕೆಯ ಮರ್ಮಾಂಗಕ್ಕೆ ಲಾಠಿ ತೂರಿಸಿದ್ದರಂತೆ. ಆಕೆಗೆ ಗರ್ಭಪಾತವಾಗಲು ಪೋಲಿಸರ ಹಿಂಸೆಯೇ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ವಿಚಾರಣಾ ದಿನಾಂಕದಂದು ನ್ಯಾಯಾಧೀಶರ ಮುಂದೆ ಈ ಎಲ್ಲಾ ಸಂಗತಿ ತಿಳಿಸುವಂತೆ ಆಕೆಗೆ ಸಲಹೆ ನೀಡಿದೆ. ಆದರೆ ಆಕೆ ಹಾಗೆ ಮಾಡುವಳೆಂದು ನನಗೆ ಅನ್ನಿಸಲಿಲ್ಲ. ಆಸ್ಪತ್ರೆಯಿಂದ ಹೊರಬಂದ ದಿನ ಆಕೆಯನ್ನು ಹಾಸನದ ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದ ಒಬ್ಬ ವ್ಯಕ್ತಿ ಆಕೆಯನ್ನು ಜಾಮೀನಿನ ಮೇಲೆ ಬಿಡುವ ಆದೇಶ ತಂದಿದ್ದರಿಂದ ಆಕೆಯನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸುವ ಸಂದರ್ಭದಲ್ಲಿ ನನ್ನ ಮುಂದೆ ಹಾಜರುಪಡಿಸಿ ರಿಜಿಸ್ಟರಿನಲ್ಲಿ ಆಕೆಯ ಸಹಿಯನ್ನು ಪಡೆಯುತ್ತಿದ್ದಾಗ ಆಕೆ ಇತರ ಸಿಬ್ಬಂದಿಯ ಎದುರಿಗೇ ನನಗೆ ಅಡ್ಡಬಿದ್ದು ನಮಸ್ಕಾರ ಮಾಡಿ "ಅಣ್ಣಾ, ನೀವು ನನ್ನ ಜೀವ ಕಾಪಾಡಿದ ದೇವರು. ನಿಮ್ಮನ್ನೆಂದೂ ಮರೆಯುವುದಿಲ್ಲ" ಎಂದು ಅಳುತ್ತಾ ಹೇಳಿದಾಗ ನನ್ನ ಕಣ್ಣು ತೇವವಾಯಿತು.
(ಕಾಲಘಟ್ಟ: 1982-83).

ಮೂಢ ಉವಾಚ -35 : ಸಾಧಕ

ಶ್ರದ್ಧೆಯಿರಬೇಕು ಧರ್ಮದಾಚರಣೆಯಲಿ
ಹಂಬಲವಿರಬೇಕು ಅರಿವ ಹಸಿವಿನಲಿ|
ಸಂಯತೇಂದ್ರಿಯನಾಗಿ ಅಂತರಂಗವನರಿಯೆ
ನಿಜಶಾಂತಿಯದು ಸಿಗದಿರದೆ ಮೂಢ||


ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ ಕ್ಷಮಿಪ ಗುಣದವನು|
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ||


ಜಗದೊಡೆಯ ಪರಮಾತ್ಮನಲಿ ಭಕ್ತಿ
ಏಕಾಂತದಲಿ ಧ್ಯಾನ ಆತ್ಮಾನುಸಂಧಾನ|
ಗುರುವಿನಲಿ ಶ್ರದ್ಧೆ ಉತ್ತಮರ ಸಹವಾಸ
ಸಾಧಕರ ದಾರಿಯಿದು ನೋಡು ಮೂಢ||


ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ|
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸನ್ಯಾಸಿ ಮೂಢ||
*****************
-ಕವಿನಾಗರಾಜ್.

ಬುಧವಾರ, ಡಿಸೆಂಬರ್ 8, 2010

ಮೂಢ ಉವಾಚ -34 : ದೇವಸ್ವರೂಪ




ಜಗದ ಕಣ್ಣದುವೆ ಭಾಸ್ಕರನ ಬೆಳಕು
ರವಿಯ ಮಹತಿಗೆ ಕಾರಣವು ಪ್ರಭೆಯು|
ನರರು ನಮಿಪ ರವಿ ಕಿರಣದಣುವಣುವು
ದೇವನಂತಃಕರಣ ಸ್ಫುರಣ ಮೂಢ||



ಮನಮುದಗೊಳಿಸುವ ಇಂದ್ರ ಆ ಚಂದ್ರ
ಸಕಲರಿಗಾಪ್ಯಾಯ ಮನಾಪಹರ ಶೀತಲ|
ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ
ಕಾಂತಿಯ ಮೂಲನವನೇ ತಿಳಿ ಮೂಢ||


ವಿಷಯಲೋಲುಪರಾಗಿ ಬಯಸುವರು ಸುಖ
ಕಾಣುವರು ಸುಖವನನುಸರಿಸಿ ಬಹ ದುಃಖ|
ವಿವೇಕಿ ಧೀರ ಗಂಭೀರ ಬುದ್ಧಿಕಾರಕ ಬುಧನ
ಜ್ಞಾನ ಪ್ರದಾತನ ಪರಿಯನರಿಯೋ ಮೂಢ||


ತಿಮಿರಾಂಧಕಾರವನು ಓಡಿಸುವ ಗುರುವು
ಸಾಧನೆಯ ಮಾರ್ಗವನು ತೋರುವ ಗುರುವು|
ಸಂದೇಹ ಪರಿಹರಿಸಿ ತಿಳಿವು ಪಸರಿಸುವ
ಸದ್ಗುರುವವನೆ ದೇವಸ್ವರೂಪಿ ಮೂಢ||
****************
-ಕವಿನಾಗರಾಜ್.

ಮಂಗಳವಾರ, ಡಿಸೆಂಬರ್ 7, 2010

ಸೇವಾ ಪುರಾಣ -28: ಅರಕಲಗೂಡು ಕಿಟ್ಟಿ - ಹೀಗೊಬ್ಬ ಕಳ್ಳ!!

ಜೈಲಿನ ಸುಧಾರಣೆ
     ಕೈದಿಯಾಗಿದ್ದಾಗಿನ ನನ್ನ ಅನುಭವಗಳು ಜೈಲನ್ನು ಸುಧಾರಿಸುವತ್ತ ಸಹಾಯ ಮಾಡಿದವು. ಪುರಸಭೆ ಸಿಬ್ಬಂದಿ ನೆರವು ಪಡೆದು ಮೊದಲು ಜೈಲಿನ ನೀರಿನ ತೊಟ್ಟಿ, ಚರಂಡಿ ಸುತ್ತಮುತ್ತಲಿನ ಆವರಣವನ್ನು ಎಷ್ಟೋ ವರ್ಷಗಳ ನಂತರ ಸ್ವಚ್ಛಗೊಳಿಸಲಾಯಿತು. ಡಿ.ಜಿ.ಪಿ.ರವರೊಂದಿಗೆ ಪತ್ರವ್ಯವಹಾರ ನಡೆಸಿ ಕಟ್ಟಡದ ದುರಸ್ತಿಗೆ, ಸುಣ್ಣ ಬಣ್ಣಕ್ಕೆ ವ್ಯವಸ್ಥೆಯಾಯಿತು. ನಿಗದಿತ ಪ್ರಮಾಣದ ಆಹಾರ ಸಾಮಗ್ರಿಗಳು ಕೈದಿಗಳಿಗೆ ತಲುಪುತ್ತಿತ್ತು. ಆ ಜೈಲಿಗೆ ಹಳಬರಾಗಿದ್ದ ಕೆಲವು ಕೈದಿಗಳು ನನಗೆ 'ನಮ್ಮನ್ನೂ ಮನುಷ್ಯರಂತೆ ಕಂಡವರು ನೀವೇ ಸಾರ್' ಎಂದು ಹೇಳಿದಾಗ ನನಗೆ ಖುಷಿಯಾಗಿದ್ದು ಸತ್ಯ. ಜೈಲಿನಲ್ಲಿ ಸ್ಥಳಾವಕಾಶದ ಕೊರತೆಯಿದ್ದುದರಿಂದ ಎಂಟಕ್ಕಿಂತ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಇಡಲು ನಾನು ಒಪ್ಪುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಕೈದಿಗಳನ್ನು ಹಾಸನದ ಜೈಲಿಗೆ ವರ್ಗಾಯಿಸುತ್ತಿದ್ದೆ. ಮಹಿಳಾ ಕೈದಿಗಳು ಬಂದರೆ ಮಹಿಳಾ ಗಾರ್ಡುಗಳಿಲ್ಲವೆಂಬ ಕಾರಣ ತೋರಿಸಿ ಅವರನ್ನು ಕೂಡಲೇ ಹಾಸನ ಅಥವ ಮೈಸೂರು ಜೈಲಿಗೆ ಕಳುಹಿಸುತ್ತಿದ್ದೆ. ಈ ಉಪಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಡಲು ಅವಕಾಶವಿತ್ತು. ನ್ಯಾಯಾಲಯದಲ್ಲಿ ಕೈದಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ ಸಂದರ್ಭದಲ್ಲಿ ಅವರನ್ನು ಮೈಸೂರು ಅಥವ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗುತ್ತಿತ್ತು.
     ಕೈದಿಗಳನ್ನು ನೋಡಲು ಬರುವ ಬಂಧುಗಳು, ಸ್ನೇಹಿತರನ್ನು ಗಾರ್ಡುಗಳು ಹಣ ಪಡೆದು ನನ್ನ ಅನುಮತಿ ಪಡೆಯದೆ ಭೇಟಿಗೆ ಅವಕಾಶ ಕೊಡುತ್ತಿದ್ದುದನ್ನು ತಪ್ಪಿಸಿ ನನ್ನ ಅನುಮತಿ ಪಡೆದೇ ಭೇಟಿಗೆ ಅವಕಾಶ ಕೊಡುವಂತೆ ನಿರ್ಬಂಧಿಸಿದೆ. ಇದೂ ಪೋಲಿಸರ ಅಸಮಾಧಾನ ಹೆಚ್ಚಿಸಿತು. ವಾರಕ್ಕೊಮ್ಮೆ ಕೈದಿಗಳಿಗೆ ಮಾಂಸಾಹಾರ, ಮಾಂಸ ತಿನ್ನದವರಿಗೆ ಸಿಹಿ ಕೊಡಲು ಅವಕಾಶವಿದ್ದು ಸರಿಯಾಗಿ ತಲುಪುವಂತೆ ನೋಡಿಕೊಂಡೆ. ಮಜ್ಜಿಗೆ ಕೊಡಲು ಅವಕಾಶವಿರದಿದ್ದರೂ ಕೊಡಲು ಅನುಕೂಲ ಮಾಡಿದೆ. ಹಬ್ಬ ಹರಿದಿನಗಳಲ್ಲಿ ಕೈದಿಗಳಿಗೆ ನನ್ನ ಖರ್ಚಿನಲ್ಲಿ ಮನೆಯಿಂದ ಸಿಹಿ ಕಳುಹಿಸುತ್ತಿದ್ದೆ.
     ದಿನಕ್ಕೊಮ್ಮೆ ಅನಿರೀಕ್ಷಿತ ಸಮಯದಲ್ಲಿ ಜೈಲಿಗೆ ಭೇಟಿ ಕೊಟ್ಟು ವ್ಯವಸ್ಥೆ ಬಗ್ಗೆ ಗಮನಿಸುತ್ತಿದ್ದೆ. ಕೈದಿಗಳು ಗಾರ್ಡುಗಳಿಗೆ ಹಣ ನೀಡಿ ಬೀಡಿ, ಸಿಗರೇಟು, ಇಸ್ಪೀಟು ಎಲೆಗಳು, ಹೆಂಡಗಳನ್ನು ಪಡೆದುಕೊಳ್ಳುತ್ತಿದ್ದುದನ್ನು ಪತ್ತೆ ಹಚ್ಚಿ ಭೇಟಿ ನೀಡಿದಾಗ ವಶಪಡಿಸಿಕೊಳ್ಳುತ್ತಿದ್ದೆ. ಇದಕ್ಕೆ ನನ್ನದೇ ಆದ ಉಪಾಯವಿತ್ತು. ತಹಸೀಲ್ದಾರರ ಛೇಂಬರಿನ ಹಿಂದಿನ ಕಿಟಕಿಯ ಸಂದಿನಿಂದ ಜೈಲಿನ ಆವರಣ ಕಾಣುತ್ತಿತ್ತು. ನನ್ನ ಗುಮಾಸ್ತರನ್ನು ಜೈಲಿಗೆ ಹೋಗಿರಲು ತಿಳಿಸಿ ಹಿಂದೆಯೇ ಬರುತ್ತೇನೆಂದು ಹೇಳಿ ಕಿಟಕಿಯ ಸಂದಿನಿಂದ ಗಮನಿಸುತ್ತಿದ್ದೆ. ಗುಮಾಸ್ತ ಜೈಲಿನ ಬಾಗಿಲು ಬಡಿದ ಕೂಡಲೇ ಗಾರ್ಡುಗಳು ಕೈದಿಗಳಿಗೆ ಸನ್ನೆ ಮಾಡುತ್ತಿದ್ದರು. ಅವರು ಗಡಿಬಿಡಿಯಿಂದ ಬೀಡಿ, ಸಿಗರೇಟು, ಮದ್ಯದ ಬಾಟಲಿ, ಇತ್ಯಾದಿಯನ್ನು ಗಿಡದ ಸಂದಿ, ಚರಂಡಿ, ತಿಪ್ಪೆ ಮುಂತಾದ ಸಂದಿಗೊಂದಿಗಳಲ್ಲಿ ಮುಚ್ಚಿಟ್ಟು ಓಡಿ ಹೋಗಿ ಸಭ್ಯರಂತೆ ಜೈಲಿನ ಸೆಲ್‌ಗಳಲ್ಲಿ ಕುಳಿತಿರುತ್ತಿದ್ದರು. ನಂತರ ನಾನು ಹೋಗಿ ಮುಚ್ಚಿಟ್ಟ ಸ್ಥಳ ಬಿಟ್ಟು ಬೇರೆಡೆಗಳಲ್ಲಿ ಮೊದಲು ಹುಡುಕಿದಂತೆ ಮಾಡಿ ಕೊನೆಗೆ ಆ ಸ್ಥಳಗಳಲ್ಲಿರುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದೆ. ಈ ಗುಟ್ಟನ್ನು ನನ್ನ ಗುಮಾಸ್ತರಿಗೂ ತಿಳಿಸಿರಲಿಲ್ಲ. ಅವರಿಗೆಲ್ಲಾ ನಾನು ಹೇಗೆ ಕಂಡು ಹಿಡಿದೆನೆಂದು ಆಶ್ಚರ್ಯವಾಗುತ್ತಿತ್ತು. ಈ ಜೈಲಿಗೆ ಸಂಬಂಧಿಸಿದಂತೆ ನೆನಪಿನಲ್ಲಿ ಉಳಿದಿರುವ ಒಂದೆರಡು ಸಂಗತಿಗಳನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಅರಕಲಗೂಡು ಕಿಟ್ಟಿ
     ನಾನು ಜೈಲು ಸೂಪರಿಂಟೆಂಡೆಂಟ್ ಆದ ಎರಡನೆ ದಿನ ಒಬ್ಬ ಕೈದಿಯನ್ನು ಪೋಲಿಸರು ಕರೆತಂದಿದ್ದರು. ಅವನು "ನಮಸ್ಕಾರ ಹೊಸ ಸಾಹೇಬರಿಗೆ" ಎಂದು ಸಲ್ಯೂಟ್ ಹೊಡೆದು ನಕ್ಕ. ಪೋಲಿಸರು ಹೇಳಿದಂತೆ ಆತ ಜೈಲಿಗೆ ಬರುವುದು, ಹೋಗುವುದು ಸಾಮಾನ್ಯವಾಗಿತ್ತಂತೆ. ಜೈಲಿಗೆ ನಿತ್ಯದ ಭೇಟಿ ನೀಡಿದ ಸಂದರ್ಭದಲ್ಲಿ ಅವನನ್ನು ಮಾತನಾಡಿಸಿದೆ. ಅವನು ಹೇಳಿದ ಸಂಗತಿ ಆಶ್ಚರ್ಯಕರವಾಗಿತ್ತು. "ನನಗೆ ಗೊತ್ತು ಸಾರ್, ನೀವು ಒಳ್ಳೆಯವರು. ನಮ್ಮೂರಿನ ಅಳಿಯ" ಎಂದ ಅವನು ಹೇಳಿದ್ದೇನೆಂದರೆ "ಸಾರ್, ನಾನೊಬ್ಬ ಕಳ್ಳ, ನಿಜ. ಆದರೆ ನಿಜವಾಗಿ ತಪ್ಪು ಮಾಡಿದಾಗ ಪೋಲಿಸರು ನನ್ನನ್ನು ಹಿಡಿಯುವುದಿಲ್ಲ. ಅವರಿಗೆ ಆಗುವುದೂ ಇಲ್ಲ ಬಿಡಿ. ಇನ್ನು ಯಾವಾಗಲೋ ಅವರಿಗೆ ಕೇಸುಗಳನ್ನು ಹಾಕಬೇಕೆಂದನ್ನಿಸಿದಾಗ ಮಾಡದೆ ಇರುವ ತಪ್ಪು ಹೊರಿಸಿ ಸುಳ್ಳು ಕೇಸು ಹಾಕಿ ಕರೆದುಕೊಂಡು ಬರುತ್ತಾರೆ. ಎರಡು ದಿನ ಇರ್ತೀನಿ, ಹೋಗ್ತೀನಿ. ಮತ್ತೆ ಬರ್ತಾ ಇರ್ತೀನಿ." ಮುಂದುವರೆಸಿ "ನಾನು ಗ್ರಾಜುಯೇಟ್, ಸಾರ್. ನನ್ನ ಸರ್ಟಿಫಿಕೇಟ್ ತೋರಿಸಲಾ ಸಾರ್" ಎಂದು ಶರ್ಟು ಬಿಚ್ಚಿ ಮೈಮೇಲಿದ್ದ ಚಾಕು, ಚೂರಿಗಳ ಗಾಯಗಳ ಗುರುತುಗಳನ್ನು ತೋರಿಸಿದ. ನಾನು ಪ್ರತಿಕ್ರಿಯಿಸದೆ ಮುಗುಳ್ನಕ್ಕೆ.
     ಸುಮಾರು ಎರಡು ತಿಂಗಳ ನಂತರದಲ್ಲಿ ಒಂದು ದಿನ ಬೆಳಿಗ್ಗೆ ಒಂಬತ್ತು ಘಂಟೆಯಿರಬಹುದು, ಅರಕಲಗೂಡು ಕಿಟ್ಟಿ ನನ್ನ ಮನೆಗೇ ಬಂದವನು "ಸಾರ್, ತಪ್ಪು ತಿಳಿಯಬೇಡಿ. ನನಗೆ ಹೊಟ್ಟೆ ಹಸಿಯುತ್ತಿದೆ. ತಿಂಡಿ ತಿಂದಿಲ್ಲ. ಒಂದಿಪ್ಪತ್ತು ರೂಪಾಯಿ ಕೊಡಿ ಸಾರ್. ೨-೩ ಘಂಟೆಯ ಒಳಗೆ ನಿಮ್ಮ ಹಣ ವಾಪಸು ಕೊಡುತ್ತೇನೆ. ನಾನು ಕಳ್ಳ ಇರಬಹುದು ಸಾರ್. ಕಳ್ಳರಿಗೂ ನಿಯತ್ತು ಇರುತ್ತೆ. ಖಂಡಿತಾ ನಿಮ್ಮ ಹಣ ವಾಪಸು ಕೊಡುತ್ತೇನೆ" ಎಂದ. ನಾನು ಅವನಿಗೆ ಹಣ ಕೊಟ್ಟೆ. ಇನ್ನು ಮುಂದೆ ಮನೆಯ ಹತ್ತಿರ ಬರಬಾರದು ಎಂದು ಹೇಳಿದೆ. ಆ ದಿನ ಕಛೇರಿಯಲ್ಲಿದ್ದಾಗ ಸುಮಾರು ೧೧ ಘಂಟೆಯ ವೇಳೆಗೆ ಕಿಟ್ಟಿ ಬಂದೇ ಬಿಟ್ಟ. "ಸಾರ್, ನೀವು ಒಳ್ಳೆ ಮನಸ್ಸಿನಿಂದ ದುಡ್ಡು ಕೊಟ್ಟಿರಿ ಸಾರ್. ತಿಂಡಿ ತಿಂದವನೇ ಬಸ್ ಸ್ಟಾಂಡಿಗೆ ಹೋದೆ. ಒಂದು ಬಸ್ ಹತ್ತಿ ಇಳಿದೆ. ಇಳಿಯುವಾಗ ನನ್ನ ಕೈಯಲ್ಲಿ ಪರ್ಸ್ ಇತ್ತು. ಸಿಕ್ಕಿದ ಪರ್ಸ್‌ನಲ್ಲಿ ೧೫೫ ರೂಪಾಯಿ ಇತ್ತು. ಇನ್ನೊಂದೆರಡು ದಿನಕ್ಕೆ ಸಾಕು. ತೊಗೊಳಿ ಸಾರ್, ನಿಮ್ಮ ಇಪ್ಪತ್ತು ರೂಪಾಯಿ" ಎಂದ ಅವನ ಮಾತು ಕೇಳಿ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. 'ಆ ದುಡ್ಡು ನೀನೇ ಇಟ್ಟುಕೋ. ನನಗೆ ಬೇಡ. ಇನ್ನುಮುಂದೆ ಹೀಗೆಲ್ಲಾ ಹಣ ಕೇಳಲು ಬರಬೇಡ" ಎಂದೆ. ಹೋಗುವಾಗ ಅವನು "ಸಾರ್, ನಿಮ್ಮ ಕ್ಲರ್ಕ್ ಸರಿಯಿಲ್ಲ. ತರಲೆ. ಅದಕ್ಕೆ ಕಳೆದ ವರ್ಷ ಅವನ ಮನೆಯಲ್ಲಿ ಕಳ್ಳತನ ಮಾಡಿದ್ದೆ" ಎಂದು ಗುಟ್ಟಾಗಿ ಹೇಳಿದ್ದ. "ಹೇಗೂ ಕಳವಾಗಿದ್ದಕ್ಕೆ ದೂರು ಕೊಟ್ಟಿರುತ್ತಾರೆ. ಪೋಲಿಸರಿಗೆ ಹೇಳಿ ಕೇಸ್ ಹಾಕಿಸಿದರೆ?" ಎಂದರೆ ಅವನು "ನಾನೇ ನಿಮ್ಮ ಕ್ಲರ್ಕಿಗೆ, ಪೋಲಿಸರಿಗೆ ಬೇಕಾದರೆ ಹೇಳಲಾ? ಯಾರೂ ಏನೂ ಮಾಡಲ್ಲ" ಎಂದು ಉತ್ತರಿಸಿದ್ದ. "ಒಂದು ಮಾತು ಸಾರ್. ನೀವು ಏನು ಬೇಕಾದರೂ ಮಾಡಿ. ನನಗೆ ನಿಮ್ಮನ್ನು ಕಂಡರೆ ಗೌರವ. ಅದಕ್ಕೆ ನಿಮ್ಮ ಹತ್ತಿರ ಏನನ್ನೂ ಮುಚ್ಚಿಡುತ್ತಿಲ್ಲ" ಎಂದೂ ಹೇಳಿ ಹೋಗಿದ್ದ. ನಾನು ಅವನು ಹೋಗುವುದನ್ನೇ ನೋಡುತ್ತಾ ಕುಳಿತಿದ್ದೆ. ಕಿಟ್ಟಿ ಹೋದ ಮೇಲೆ ಗುಮಾಸ್ತನನ್ನು ಅವನ ಮನೆಯಲ್ಲಿ ಎಂದಾದರೂ ಕಳ್ಳತನವಾಗಿತ್ತೇ ಎಂದು ಕೇಳಿದರೆ "ಹೌದು ಸಾರ್, ಒಂದು ವರ್ಷದ ಹಿಂದೆ ಕ್ಯಾಶ್ ೫೦೦ ರೂಪಾಯಿ ಮತ್ತು ಒಂದು ಉಂಗುರ ಕಳುವಾಗಿತ್ತು" ಎಂಬ ಉತ್ತರ ಆತನಿಂದ ಬಂದಿತ್ತು!

ಸೋಮವಾರ, ಡಿಸೆಂಬರ್ 6, 2010

ಮೂಢ ಉವಾಚ -33 : ಬಲ್ಲಿದ

ಹುಟ್ಟು ಸಾವುಗಳ ಚಕ್ರ ತಿರುಗಿದೆ ನಿರಂತರ
ಸಕಲಜೀವಗಳಲುತ್ತಮವು ಮಾನವಜನ್ಮ|
ನಿಜಗುರಿಯನರಿಯದಲೆ ಭ್ರಮೆಗೆ ಪಕ್ಕಾಗಿ
ಜೀವ ಹಾನಿ ಮಾಡಿಕೊಳ್ಳದಿರೆಲೆ ಮೂಢ||


ವಿಷಯಲೋಲುಪತೆ ವಿಷಕಿಂತ ಘೋರ
ಮೊಸಳೆಯ ಬೆನ್ನೇರಿ ದಡವ ದಾಟಲುಬಹುದೆ?|
ಅಂತರಂಗದ ದನಿಯು ಹೊರದನಿಯು ತಾನಾಗೆ
ಹೊರಬರುವ ದಾರಿ ತೋರುವುದು ಮೂಢ||


ಪದ್ಮಪತ್ರದ ಮೇಲಣ ಜಲಬಿಂದುವಿನೊಲು
ಸ್ಥಿರವಲ್ಲವೀ ಬದುಕಿನಾಸೆಗಳು ಬಯಕೆಗಳು|
ಮಿಂಚಿನೊಲು ಮೂಡಿ ಮರೆಯಾಗದೆ ಸುಖ
ಅರಿತವರು ಮನವನಚಲಗೊಳಿಸುವರು ಮೂಢ||


ಅವ ಕೀಳು ಇವ ಮೇಲು ಎಂದೆಣಿಸದೆ
ಬಡವ ಸಿರಿವಂತರೆನೆ ತರತಮವ ಮಾಡದೆ|
ಸಮಚಿತ್ತದಲಿ ನೋವು ನಲಿವುಗಳ ಕಂಡು
ಬಲ್ಲಿದರು ಬಾಳುವರು ಕಾಣು ಮೂಢ||
***************
-ಕವಿನಾಗರಾಜ್.

ಶನಿವಾರ, ಡಿಸೆಂಬರ್ 4, 2010

ಮೂಢ ಉವಾಚ -32 : ವೈರಾಗ್ಯ

ಅಕ್ಕರೆಯ ಪಡೆದವರು ಅರಿಗಳಂತಾಡಿರಲು
ಆಸರೆಯ ಪಡೆದವರು ದೂಡಿ ನಡೆದಿರಲು
ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು
ವೈರಾಗ್ಯವೆರಗದಿರೆ ಅಚ್ಚರಿಯು ಮೂಢ


ಮಸಣ ವೈರಾಗ್ಯವದು ಮರೆಯುವ ತನಕ
ಅಭಾವ ವೈರಾಗ್ಯವದು ದೊರೆಯುವ ತನಕ
ಇರುವುದೆ ಸಾಕೆಂಬ ಬೇಕೆಂದು ಕೊರಗದಿಹ
ರಾಗರಾಹಿತ್ಯ ನಿಜವೈರಾಗ್ಯ ಮೂಢ


ಧರ್ಮದ ಅರಿವಿಲ್ಲ ಅರ್ಥ ಸುಳಿದಿಲ್ಲ
ಸುಕಾಮಿಯೆನಿಸಲಿಲ್ಲ ಮುಕ್ತಿಪಥವರಿಯಲಿಲ್ಲ
ಪುರುಷಾರ್ಥ ಸಾಧಿಸಲಾಪದಾ ಕೊರಗಿರಲು
ವಿಫಲತೆ ವೈರಾಗ್ಯ ತರದಿರದೆ ಮೂಢ


ಧರ್ಮದರಿವಿಹುದು ಸಕಲ ಸಂಪತ್ತುಗಳಿಹುದು
ಸುಕಾಮಿಯೆಂದೆನಿಸಿ ಜ್ಞಾನಸಾಧಕನಾಗಿಹನು
ನಿಜ ಪುರುಷನವನು ಮುಕ್ತಿಪಥದಲಿ ಸಾಗಿ
ನಿಜ ವೈರಾಗಿಯವನೆನಿಸುವನು ಮೂಢ
***************
-ಕವಿನಾಗರಾಜ್.